ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಮಾರ್ಚ್ 18, 2017

ಪಂಪ ಭಾರತ / ವಿಕ್ರಮಾರ್ಜುನ ವಿಜಯ

ಪಂಪ ಭಾರತ ದಿಂದ ಆಯ್ದ ಕಾವ್ಯಸಂಗ್ರಹ

ಪ್ರಥಮಾಶ್ವಾಸಂ


ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿರಂ
ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ
ತ್ಮೀಯ ಸುಪುಷ್ಪವೃಷ್ಟಿಯ ನೊಡಂಬಡೆ ತಾಳ್ದಿಯುಮಿಂತುದಾತ್ತನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ

ಮುಳಿಸು ಲಲಾಟ ನೇತ್ರ ಶಿಖಿ ಮೆಚ್ಚೆ ವಿನೂತರಸ ಪ್ರಸಾದಮು
ಜ್ಜಳ ಜಸಮಂಗ ಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ
ರ್ಮಳ ಮಣಿಭೂಷಣಂ ಫಣಿ ವಿಭೂಷಣಮಾಗೆ ನೆಗಳ್ತೆಯಂ ಪುದುಂ
ಗೊಳಿಸಿದನೀಶ್ವರಂ ನೆಗಳ್ದುದಾರ ಮಹೇಶ್ವರನೀಗೆ ಭೋಗಮಂ

ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ
ಚ್ಛಿನ್ನ ದಾನಮಿದಾಗಳುಂ ವಿಬುದಾಶ್ರಯಂ ಗೆಲೆವಂದನ
ನ್ನನ್ನಿಜೋನ್ನತಿಯಿಂದಮೀ ಪತಿಯೆಂದು ಮೆಚ್ಚಿ ವಿನಾಯಕಂ
ತಾನ್ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ

ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ
ಚ್ಛಿನ್ನ ದಾನಮಿದಾಗಳುಂ ವಿಬುದಾಶ್ರಯಂ ಗೆಲೆವಂದನೆ
ನ್ನನ್ನಿಜೋನ್ನತಿಯಿಂದಮೀ ಪತಿಯೆಂದು ಮೆಚ್ಚಿ ವಿನಾಯಕಂ
ತಾನ್ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ

ಚಂಡವಿರೋಧಿ ಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ
ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗ ಕೋಟಿ ಕೈ
ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವಪ್ರಚಂಡಮಾ
ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ

ಸಹಜದ ಚೆಲ್ವಿನೊಳ್ರತಿಯ ಸೋಲದ ಕೇಳಿಕೆಯೊಳ್ ಪೊದಳ್ದು ಸ
ನ್ನಹಿತವೆನಿಪ್ಪಪೂರ್ವ ಶುಭ ಲಕ್ಷಣ ದೇಹದೊಳೊಳ್ಪನಾಳ್ದು ಸಂ
ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ
ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ

ಕ್ಷಯಮಣಮಿಲ್ಲ ಕೇಳ್ದು ಕಡೆಗಂಡವನಾವನುಮಿಲ್ಲೆನಲ್ ತದ
ಕ್ಷಯ ನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ
ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮ ರಂಗದೇ
ಳ್ಗೆಯನೆಡೆಗೊಂಡುಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ

ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗು
ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆಬಾಳಮೃಣಾಳಮಾಗೆ ಮಿ
ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾರಿಸುತಿಂತೆ ತನ್ನ ಕೂ
ರಸಿಯೊಳಡರ್ತು ಕೊಂದಸಿಯಳಿರ್ಕಸಿಯೊಳ್ ಪಡೆ ಮೆಚ್ಚೆ ಗಂಡನಾ

ಬಗೆ ಪೊಸತಪ್ಪುದಾಗಿ ಮೃದು ಬಂಧದೊಳೊಂದುವುದೊಂದಿ ದೇಹಿಯೊಳ್
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯ ಬಂಧಮೊ
ಪ್ಪುಗುಮೆಳಮಾವು ಕೆಂಶದಳಿರ ಪೂವಿನ ಬಳ್ಪೊಱೆಯಿಂ ಬಳಲ್ದು ತುಂ
ಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳೊಪ್ಪುವವಂತೆವೋಲ್

ಆ ಸಕಳಾರ್ಥ ಸಂಯುತಳಂಕೃಥಿಯುಕ್ತಮುದಾತ್ತವೃತ್ತಿ ವಿ
ನ್ಯಾಸಮನೇಕ ಲಕ್ಷಣ ಗುಣ ಪ್ರಭವಂ ಮೃದು ಪಾದಮಾದ ವಾ
ಕ್ಶ್ರೀ ಸುಭಗಂ ಕಳಾಕಲಿತಮೆಂಬ ನೆಗಲ್ತೆಯನಾಲ್ದ ಕಬ್ಬಮಂ
ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೆ

ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಂ
ಕವಿ ನೃಪನೀತನೊಳ್ಳಿದನೆನಲ್ ದೊರಯಲ್ತು ನೆಗಳ್ತೆವೆತ್ತ ಸ
ತ್ಕವಿಗಳ ಷೋಡಶಾವನಿಪರೋಳಿಯೊಳಂಕವಿತಾ ಗುಣಾರ್ಣವಂ
ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುಮೀ ಗುಣಾರ್ಣವಂ

ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ
ರತಮನಪೂರ್ವಮಾಗೆ ಸಲೆ ಪೇಳ್ದ ಕವೀಶ್ವರರಿಲ್ಲ ವರ್ಣಕಂ
ಕತೆಯೊಳೊಡಂಬಡಂ ಪಡೆಯೆ ಪೇಳ್ವೊಡೆ ಪಂಪನೆ ಪೇಳ್ಗುಮೆಂದು ಪಂ
ಡಿತರೆ ತಗುಳ್ದು ಬಿಚ್ಚಳಿಸೆ ಪೇಳಲೊಡರ್ಚಿದೆನೀ ಪ್ರಬಂಧಮಂ

ಲಲಿತ ಪದಂ ಪ್ರಸನ್ನ ಕವಿತಾ ಗುಣಮಿಲ್ಲದೆ ಪೂಣ್ದು ಪೇಳ್ದ ಬೆ
ಳ್ಗಳ ಕೃತಿಬಂಧಮುಂಬರೆಪಕಾಱನ ಕೈಗಳ ಕೇಡು ನುಣ್ಣನ
ಪ್ಪಳಕದ ಕೇಡು ಪೇಳಿಸಿದದೊಡರ್ಥದ ಕೇಡೆನೆ ಪೇಳ್ದು ಬೀಗಿ ಪೊ
ಟ್ಟಳಿಸಿ ನೆಗಳ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ

ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನೀಸುವೆಂ ಕವಿ
ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ
ವಾಸಮನೆಯ್ದೆ ಪೇಳ್ದಪೆನಲ್ಲದೆ ಗರ್ವಮೆ ದೋಷಮಳ್ತಿಗಂ
ದೋಷಮೆ ಕಾಣೆನೆನ್ನರಿವ ಮಾಳ್ಕೆಯೆ ಪೇಳ್ವೆನಿದಾವ ದೋಷಮೊ

ವಿಪುಳ ಯಶೋ ವಿತಾನ ಗುಣಮಿಲ್ಲದನಂ ಪ್ರಭು ಮಾಡಿ ಪೂರ್ವ ಭೂ
ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಭೂ
ಮಿಪರುಮನೊಳಪಿನೊಳ್ ತಗುಳೆವಂದೊಡೆಯೀ ಕಥೆಯೊಳ್ ತಗುಳ್ಚಿ ಪೋ
ಲಿಪೊಡೆನಗಳ್ತಿಯಾದುದು ಗುಣಾರ್ಣವ ಭೂಭುಜನ ಕಿರೀಟಿಯೊಳ್

ಜಲ ಜಲನೊಳ್ಕುತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆ
ಯ್ದಿಲ ಪೊಸವೂ ಪೊದಳ್ದ ಪೊಸ ನೆಯ್ದಿಲ ಕಂಪನೆ ಬೀರಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ ನವಶಾಳಿಗೆ ಪಾಯ್ವ ಶುಕಾಳಿ ತೋರೆ ಕೆ
ಯ್ವೊಲಗಳಿನೊಪ್ಪಿತೋರಿ ಸಿರಿ ನೋಡುಗುಮಾ ವಿಷಯಾಂತರಾಳದೊಳ್

ಬೆಳೆದೆರಗಿರ್ದ ಕೆಯ್ಶೊಲನಂ ಬಳಸಿರ್ದ ಪೂತ ಪೂ
ಗೋಳಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ
ವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂ
ಗಳೆ ವಿಷಯಾಂಗನಾ ಲುಳಿತ ಕುಂತಳದಂತೆವೋಲೊಪ್ಪಿ ತೋರುಗುಂ

ಆವಲರುಂ ಪಣ್ಣುಂ ಬೀ
ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ
ಮ್ಮಾವುಗಳುಮೆಅಂದೊಡಿನ್ ಪೆಱ
ತಾವುದು ಸಂಸಾರ ಸಾರ ಸರ್ವಸ್ವ ಫಲಂ

ಮಿಡಿದೊಡೆ ತನಿಗರ್ವು ರಸಂ
ಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ
ಗಿಡುವುವು ತುಂಬಿಗಳಳ್ಕಮೆ
ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್

ಸುತ್ತಿಱಿದ ರಸದ ತೊಱೆಗಳೆ
ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ
ನ್ಮತ್ತ ಮದಕರಿ ವನಂಗಳೆ
ಸುತ್ತಲುಮಾ ನೆಲದ ಸಿರಿಯನೇನಂ ಪೊಗಳ್ವೆಂ


ಭೇದಿಸಲೆಂದೆ ದಲ್ ನುಡೀದರೆನ್ನದಿರೊಯ್ಯನೆ ಕೇಳ ಕರ್ಣ ನಿ
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್
ಸೋದರರೆಯ್ದೆ ಮಯ್ದುನನೆನಾಂ ಪೆಱತೇಂ ಪಡೆಮಾತೊ ನಿನ್ನದೀ
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ

ಗಂಗೆಗೆ ಕೆಯ್ಯೆಡೆಯೆಂದು
ತ್ತುಂಗ ಸ್ತನಿ ಕೊಟ್ಟು ಪೋಗೆ ಸೂತಂ ಕಂಡಾ
ತ್ಮಾಂಗನೆಗೆ ರಾಧೆಗಿತ್ತು ಮ
ನಂಗೊಳೆ ರಾಧೇಯನೆನಿಸಿ ಸೂತಜನಾದೈ

ನಿನ್ನುತ್ಪತ್ತಿಯನಿಂತೆಂ
ದೆನ್ನರುಮಣಮಱಿವೆನಾಂ ಸಹದೇವಂ
ಪನ್ನಗಕೇತು ದಿನೇಶಂ
ನಿನ್ನಂಬಿಕೆ ಕುಂತಿಯಿಂತಿವರ್ ನೆಱೆ ಬಲ್ಲರ್


ವ॥ ದುರ್ಯೋಧನಂ ನಿನ್ನನೇತಱೊಳ್ ನಂಬಿದನೆಂದೊಡೆ ನೀನುಂನೀನುಂ ತಾನುಮೊರ್ಮೆ ಗಂಗಾನದೀ ತೀರದೊಳ್ ಬೇಂಟೆಯಾಡುವಲ್ಲಿ ತತ್ಸಮೀಪದ ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯ ಜ್ಞಾನಿಗಳಂ ಕಂಡು ಪೊಡೆವಟ್ಟೀರ್ವರುಮಂ ಪರಸಿ ನಿನಗೆ ಮುನ್ನಮೇಱಲ್ ತರಿಸಿದೊಡೆ ಸೂಯೋಧನನೇವಯಿಸಿ ನಿನ್ನಂ ಪೋಗಲ್ವೇಳ್ದು

ಆನಿರೆ ನೀಮಿದೇಕೆ ದಯೆಗೆಯ್ದಿರೊ ಮೀಂಗುಲಿಗಂಗೆ ಪೇಳಿಮೆಂ
ದಾ ನರನಾಥಂ ತಿಳಿಪೆ ತನ್ಮುನಿ ಭೂಭುಜನೆಯ್ದೆ ನಂಬಿ ಕಾ
ನೀನ ಸಮಂತು ಪಾಟಿಸುವೆನೊಯ್ಯನೆ ಮುಳ್ಳೊಳೆ ಮುಳ್ಳನೆಂದು ತಾ
ನೀ ನಯದಿಂದೆ ಪೆರ್ಚಿ ಪೊರೆದಳ್ಕಱೊಳಂದೊಡನುಂಡನಲ್ಲನೇ

ಎನೆಯೆನೆ ಬಾಷ್ಪವಾರಿ ಪುಳಕಂಬೆರಸೊರ್ಮೆಯೆ ಪೊಣ್ಮೆ ಮುನ್ನೆ ನೀ
ವೆನಗಿದನೇಕೆ ಪೇಳ್ದಿರೊ ನೆಗಳ್ತೆ ಪೊಗಳ್ತೆಯನಾಂಪಿನಂ ಸುಯೋ
ಧನನೆನಗೊಳ್ಳಿಕೆಯ್ದ ಕೃತಮಂ ಪೆರಗಿಕ್ಕಿ ನೆಗಳ್ತೆ ಮಾಸೆ ನ
ಣ್ಪಿನ ನೆವದಿಂದೆ ಪಾಂಡವರನಾನೊಳವೊಕ್ಕೊಡೆ ನೀಮೆ ಪೇಸಿರೇ

ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ
ಡುತ್ತಿರೆ ಲಂಬಣಂ ಪಳಿಯೆ ಮುತ್ತಿನ ಕೇಡನೆ ನೋಡಿ ನೋಡಿ, ಬ
ಳ್ಕುತ್ತಿರೆಯೇವವಮಿಲ್ಲದಿವನಾಯ್ವುದೊ ತಪ್ಪದೆ ಪೇಳಿಮೆಂಬ ಭೂ
ಪೋತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ- ಬೇಡನಲ್ಲನೇ

ವ॥ ಎಂಬುದುಂ ಕರ್ಣಂ ತನಗೆಂತುಮೊಡಂಬಡದುದಂ ನಿರ್ಣಯಮಾಗಱಿದು ಮಗುಳಲ್ವೇಳ್ದು ನಾರಾಯಣಂ ಪೋದನಿತ್ತಲಂಗರಾಜನು ಮಾತ್ಮಾಲಯಕ್ಕೆ ವಂದು ಚಿಂತಾಕ್ರಾಂತನಾಗಿ

ಕುರುಪತಿಗಿಲ್ಲ ದೈವಬಲಮಾಜಿಗೆ ಮೇಲ್ಮಲೆಗೆಯ್ವರಾಗಳುಂ
ಗುರು ಗುರುಪುತ್ರ ಸಿಂಧುಸುತರಾಳ್ದನುಮೆನ್ನನೆ ನಚ್ಚಿ ಪೆರ್ಚಿ ಮುಂ
ಪೊರಹಹೆದನಿದಿರ್ಚಿ ಕಾದುವರುಮೆನ್ನಯ ಸೋದರರೆಂತು ನೋಡಿ ಕೊ ಕ್ಕರಿಸದೆ ಕೊಲ್ವೆನೆನ್ನೊಡಲನಾಂ ತವಿಪೆಂ ರಣರಂಗ ಭೂಮಿಯೊಳ್

ಅಱಿದೆಂ ಸೋದರರೆಂದು ಪಾಂಢವರನಿನ್ನೆಂತೆನ್ನರಂ ಕೊಲ್ವೆನ
ಳ್ಕಱೊಳೆನ್ನಂ ಪೊರೆದೆಯ್ದೆ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ
ತಱಿಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತ
ಳ್ತಿಱಿದೆನ್ನಾಳ್ದನನಿನಾನೆ ಮುಂಚಿ ನಿಱಿಪೆಂ ಕೆಯ್ಕೊಂಡು ಕಟ್ಟಾಯಮಂ

ಸಂಗತ ತರಂಗಯುತೆಯಂ
ಮಂಗಳ ಲಕ್ಷಣೆಯಂನಂದು ಭೋಂಕನೆ ಕಂಡು
ಗಂಗಾಂಗನೆಯಂ ಕಾಣ್ಬವೊ
ಲಂಗನೃಪಂ ಮುಂದೆ ನಿಂದ ಕೊಂತಿಯನಾ

ವ॥ಅಂತು ಕಂಡು ಮನದೊಳಾದೆಱಕದಿಂ ಸಾಷ್ಟಾಂಗಮೆಱಗಿ ಪೊಡವಟ್ಟು ನಿಜ ನಂದನನಳ್ಕಱಿಂದಪ್ಪಿಕೊಂಡು ಪರಮಾಶೀರ್ವಚನಂಗಳಿಂ ಪರಸಿ

ತೊರೆದಕುಚಯುಗಳವಂದಂ
ಬಿರಿವಿಡೆ ಮೊಲೆವಾಲನಳ್ಕುಱಿಂದಂ ಮೆಯ್ಯಂ
ಕುರಿಸೆ ಸುರಿವಶ್ರುಜಲಮು
ಬ್ಬರಿಸಿ ಪೊನಲ್ ಪೊನಲನಟ್ಟೆ ಜನನುತೆಗಾಗಳ್

ಆಗಳೆ ಮಗನಂ ಪೆತ್ತವೊ
ಲಾಗಿ ಲತಾಲಲಿತೆ ನೊಸಲ ಕಣ್ಬೆತ್ತವೊಲಂ
ತಾಗಡೆ ರಾಗಕಾಕಾಗರ
ಮಾಗೆ ದಿನಾಧಿಪ ತನೂಜನೊಸೆದಿರ್ಪಿನೆಗಂ

ವ॥ ಗಂಗಾದೇವಿಯುಂ ದಿವ್ಯಮೂರ್ತಿಯಂ ಕೆಯ್ಕೊಂಡು ಬಂದು

ಒಪ್ಪಿಸಿದೆಂ ಕೆಯ್ಯೆಡೆಯೆಂ
ದಪ್ಪೈಸಿದನಿನ್ನ ಮಗನೀಗಳೆ ನಿನಗೆಂ
ದಪ್ಪೈಸಿಗಂಗೆ ಪೋಪುದು
ಮೊಪ್ಪುವ ನಿಜ ಬಿಂಬದೊಳಗಣಿಂದಂ ದಿನಪಂ

ಪೊಱಮಟ್ಟುಬರಲ್ ತನ್ನಡಿ
ಗೆರಗಿದ ನಿಜ ಸುತನನಳ್ಕುಱಿಂ ಪರಸಿ ಮನಂ
ಮಱುಗಿ ರವಿ ನುಡಿದನೆನ್ನು ಮ
ನುಱದೆ ಮರುಳ್ಮಗನೆ ಹರಿಗೆ ಕವಚವನಿತ್ತೈ

ನುಡಿಯೆನಿದಂ ನಿನ್ನಂಬಿಕೆ
ಪಡೆ ಮಾತೇಂ ಕೊಂತಿ ಹರಿಯ ಮತದಿಂ ಕಾಯ
ಲ್ಕೊಡರಿಸಿಬಂದಳ್ ಸುತರಂ
ಕುಡದಿರ್ ಪುರಿಗಣೆಯನೆನಿತು ಲಲ್ಲೈಹಸಿದೊಡಂ

ಎಂದರವಿಂದ ಪ್ರಿಯ ಸಖ
ನಂದಂಬರತಳಮನಡರ್ವುದುಂ ಕೆಯ್ಮುಗಿದಿಂ
ತೆಂದಂ ಕುಂತಿಯನಬ್ಬೇಂ
ವಂದಿರ್ಪುದದೆನಗೆ ಸಯ್ಪು ಬರ್ಪಂಯೀಗಳ್

ಚಲಮುಂ ಚಾಗಮುಮಳವುಂ
ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೊಳ್
ನೆಲಸಿದುವು ನಿಮ್ಮ ಕರುಣಾ
ಬಲದಿಂ ನೀವೆನ್ನನಿಂದು ಮಗನೆಂದುದಱಿಂ

ಪಡೆದರ್, ತಾಯುಂ ತಂದೆಯು
ಮೊಡಲಂ ಪ್ರಾಣಮುಮನವರವವು ಕೆಯ್ಯೆಡೆಯಂ
ಕುಡುವುದರಿದಾಯ್ತೆ ನೀಮೆನ
ಗೆಡೆ ಮಡಗದೆ ಬೆಸೆಪ ತೊಳ್ತುವೆಸನಂ ಬೆಸಸಿಂ

ಎಂಬುದುಮಂಬಿಕೆ ಮಗನೆ ಮ
ನಂಬೆಳಱದೆ ನೀನುಮಿತ್ತೆಯಾನುಂ ಪೆತ್ತೆಂ
ನಂಬಿದ ನೆನ್ನನುಜರ್ ನಿ
ನ್ನಂ ಬೆಸಕೆಯೆ ನೀನೆ ನೆಲನನಳ್ವುದುಕಂದಾ

ನಿನಗಪ್ಪರಸಂ ದುರ್ಯೋ
ನನನೊಲವಂ ಮುಂದುಗೆಯ್ದು ಬೆಸಕೆಯ್ವುರೆ ನಿ
ನ್ನನುಜರೆರಳ್ದೆಸೆಗಂ ಕಿಸು
ಱಿನಿಸಾಗದು ಮಗನೆ ನೀನೊಡಂಬಡವೇಳ್ಕುಂ

ದಶಮಶ್ವಾಸಂ

ಭೀಷ್ಮ ಪಟ್ಟಾಭಿಷೇಕ ನಂತರ ಕರ್ಣನ ಅನಿಸಿಕೆ

ಭಗವತಿಯೇಱುವೇಱ್ವ ತೆರದಿಂ ಕಥೆಯಾಯ್ತಿವರೇಱು ನೀನಿದಂ
ಬಗೆದಿವರಿನ್ನು ಮಾಂತಿಱಿವರೆಂದು ವಿಮೋಹಿಸಿ ವೀರಪಟ್ಟಮಂ
ಬಗೆಯದೆ ಕಟ್ಟಿದೈ ಗುರುಗಳಂ ಕುಲವೃದ್ಧರನಾಜಿಗುಯ್ದು ಕೆ
ಮ್ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನ

ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುಱಿವೊಡೆನಗೆ ಪಟ್ಟಂಗಟ್ಟಾ

ಆದಿಯೊಳವರಂ ಪಿರಿದೊಂ
ದಾದರದಿಂ ನಡಪಿದಜ್ಜರಪ್ಪುದಱಿಂದಂ
ಕಾದರಿವರವರೊಳವರುಂ
ಕಾದರ್ ನರೆದಿವರೊಳೆಂತು ನಂಬುವೆ ನೃಪತಿ

ವಚನ ॥ಎಂಬುದುಮಾ ನುಡಿಗೆ ಸಿಡಿಲ್ದು ಕುಂಭಸಂಭವನಿಂತೆಂದಂ

ಸಿಂಗದ ಮುಪ್ಪುಂ ನೆಗಳ್ದೀ
ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ ವನಮಾ
ತಂಗಂಗಳಿನಸುಹೃಚ್ಚ ತು
ರಂಗ ಬಲಂಗಳಿನದೆಂತುಮಂಗಾಧಿಪತೀ

ಕುಲಜರನುದ್ಧತರಂ ಭುಜ
ಬಲಯುತರಂ ಹಿತರನೀ ಸಭಾ ಮಧ್ಯದೊಳ
ಗ್ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲುಱದೆ ನೀಂ ಕೆಡೆ ನುಡಿವೈ

ವಚನ ॥ ಎಂದು ನುಡಿದ ಗುರುವಿನ ಕರ್ಣಕಠೋರ ವಚನಂಗಳ್ಗೆ ಕರ್ಣಂಕಿನಿಸಿ

ಕುಲಮನೆ ಮುನ್ನ ಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂಗುಣಂ
ಕುಲಮಭಿಮಾನಮೊಂದೆ ಕುಲಮಣ್ಮುಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಂ ನಿಮಗುಂಟುಮಾಡುಗುಂ

ಗಂಗಾಸುತಂ ಪೃಥಾಸುತ
ರಂ ಗೆಲ್ದೊಡೆ ತಪಕೆ ಪೋಪೆನವರ್ಗಳ ಕೆಯ್ಯೊಳ್
ಗಾಂಗೇಯನಳಿದೊಡಹಿತರ
ನಾಂ ಗೆಲೆ ತಳ್ತಿಱಿವೆನನೆಗಂ ಬಿಲ್ವಿಡಿಯೆಂ

ತ್ರಯೋದಶಾಶ್ವಂ

ಭೂತ ಪ್ರೇತ ಪಿಶಾಚ ನಿಚಯವೃತ್ತ

ಬೇಡ ವಿರೋಧಮೆಂತುಮರಿಕೇಸರಿಯೊಳ್ ಸಮಸಂದು ಸಂಧಿಯಂ
ಮಾಡೆನೆ ಮಾಡಲೊಲ್ಲದೆಸುಹೃದ್ಬಲಮೆಲ್ಲನಿಕ್ಕಿ ಯುದ್ಧಮಂ
ಮಾಡಿದ ಜಾತಿ ಬೆಳ್ ನಿನಗದೇವಿರಿದೀಯೆಡಱೆಂದು ಮುಂದೆ ಬಂ
ದೇಡಿಸುವಂತಿರಾಡಿದುದದೊಂದು ಮರುಳ್ ಫಣಿರಾಜಕೇತುವಂ

ಮರುಳೆನೆ ಲೋಕದೊಳ್ ನಗಳ್ದು ಕೊಳ್ಗುಳದೊಳ್ ಮರುಳಾಟವಾಡುವಾಂ
ಮರುಳೆನೊ ವಿಕ್ರಮಾರ್ಜುನನೊಳೊಲ್ಲದೆ ಸಂಧಿಯನುರ್ಕೀ ಕೆಟ್ಟ ನೀಂ
ಮರುಳಯೊ ಪೇಳ ಪೇಳದೊಡೆ ಪೋಗದಿರೀಶ್ವರನಾಣೆಯೆಂದು ಪು
ಲ್ಮರುಳಿನಿಸಾನುಂ ತೆಗೆದು ಕಾಡಿದುದಲ್ಲಿ ಫಣೀಂದ್ರ ಕೇತುವ

ಪಿಡಿದೆಡಗೈ ಚಾಮರದ ದಕ್ಷಿಣ ಹಸ್ತದ ಪದ್ಮದೊಳ್ಪೊಡಂ
ಬಡೆ ನಸು ಮಾಸಿ ಪಾಡಳಿದ ರೂಪಿನೊಳುಣ್ಮುವ ಗಾಡಿ ನಾಡೆ ಕ
ಣ್ಗೆಡಱೆ ತೊಡಂಕಿ ಪೀಱಿದ ಕುರುಳ್ಗಳೆ ಚಿತ್ತದೊಳಾದ ಬೇಸರಂ
ನುಡಿವವೊಲಾಗೆ ಬರ್ಪ ಕಮಳಾಯತ ನೇತ್ರೆಯನಿಂದುವಕ್ತ್ರೆಯಂ

ವಚನ॥ ಕಂಡು ನೀನಾರ್ಗೇನೆಂಬೆಯೆಲ್ಲಿಗೆ ಪೋದಪೆಯೆನೆ

ಪೆಸರೊಳ್ ಲಕ್ಷ್ಮಿಯೆನಿನ್ನೆಗಂ ನೆಲಸಿ ತಾಂ ದುರ್ಯೋಧನೋರುಸ್ಸ್ಥಳಾ
ವಸಥಂ ದ್ರೋಣ ನದೀಜ ಕರ್ಣ ಭುಜವೀರ್ಯಾವೇಷ್ಟಿತಂ ಮಾಡೆ ಸಂ
ತಸದಿರ್ದೆಂ ಬಿಸುಟಾ ಧರಾಧಿಪತಿಯಂ ನಾರಾಯಣಾದೇಶಮೊ
ಡ್ಡಿಸೆ ಪಾಂಡು ಪ್ರಿಯ ಪುತ್ರರೊಳ್ನೆರೆಯಲೆಂದಿಂತೀಗಳಾಂ ಪೋದಪೆಂ

ವಚನ ॥ಎಂಬುದುಮಶ್ವತ್ಥಾಮನಿಂತೆಂದಂ

ಪೊಸತಲರ್ದಂಬುಜಗಳೆಸಳೊಳ್ ನಡೆಪಾಡುವಳೇಂ ಪಯೋಧಿಯಂ
ಪೊಸೆದೊಡೆ ಪುಟ್ಟಿದೈ ಮುರವಿರೋಧಿಯ ಪತ್ನಿಯೆ ಮಿಂಚುತಿರ್ಪಕೂ
ರಸಿಗಳ ಮೇಲೆ ಸಂಚರಿಪೆ ವೈರಿ ನರಾಧಿಪ ಸೈನ್ಯ ವಾರ್ಧಿಯಂ
ಪೊಸೆದೊಡೆ ಪುಟ್ಟಿದೀ ನಿನಗೆ ವಕ್ರಿಸಲೆನ್ನನದೆಂತು ತೀರ್ಗುಮೋ

ಕುರು ವಂಶಾಂಬರ ಭಾನುವಂ ಬಿಸುಡಿಸಲ್ಕಾನುಳ್ಳಿನಂ ತೀರದಾ ಮ
ನಿರೆ ನಾರಾಯಣನೆಂಬನುಂ ಪ್ರಭುವೆ ಪೇಳ್ ನೀನೀ ಮರುಳ್ಮಾತನಂ
ಬುರುಹಾಕ್ಷೀ ಬಿಸುಡಂಜದಿರು ನಡೆ ಕುರುಕ್ಷ್ಮಾಪಾಳನಿರ್ಧಲ್ಲಿಗೆಂ
ದರವಿಂದಾಲಯೆಯಂ ಮಗುಳ್ಚಿದನದೇನಾ ದ್ರ್ಣೌಣಿ ಶೌರ್ಯಾರ್ಥಿ

ಮಗನಳಲೊಳ್ ಕರಂ ಮಱಗುತಿರ್ಪಿನಮೆನ್ನ ತನೂಜನಾಳ್ವ ಸಾ
ಮಿಗಮಳಿವಾಗೆ ಶೋಕ ರಸಮಿರ್ಮಡಿಸಿತ್ತು ಜಳಪ್ರವೇಶಮಿ
ಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನನಾಥನಾಗಿ ತೊ
ಟ್ಟಗೆ ಮುಳುಪಂತೆವೊಲ್ ಮುಳುಗಿದಂ ಕಡೂಕೆಯ್ದಪರಾಂಬುರಾಶಿಯೊಳ್

ಇದಱೊಳ್ ಶ್ವೇತಾತಪತ್ರ ಸ್ಥಗಿತ ದಶ ದಿಶಾಮಂಡಲಂರಾಜಚಕ್ರಂ
ಪುದಿದಳ್ಕಾಡಿತ್ತಡಂಗಿತ್ತಿದಱೊಳೆ ಕುರು ರಾಜಾನ್ವಯಂ ಮತ್ಪ್ರತಾಪ
ಕ್ಕಿದಱಿಂದಂ ನೋಡಗುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತ
ಬ್ಜ ದಳಾಕ್ಷಿ ಪೇಳ ಸಾಮಾನ್ಯಮೆ ಭವತ್ಕೇಶಪಾಶ ಪ್ರಪಂಚಂ


ನೆಲನಂ ಕೊಟ್ಟನಿನಾತ್ಮಜಾತನೆನಗಾಂ ತಕ್ಕೂರ್ಮೆಯಿಂದಂ ಜಳಾಂ
ಜಲಿಯಂ ಕೊಟ್ಟೆನುಮಿಲ್ಲ ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷ
ದ್ಬಲಮಂ ಸುಟ್ಟನುದಾತ್ತ ಪುಣ್ಯನವನಂ ಚೈತಾಗ್ನಿಯಿಂ ಸುಟ್ಟೆನಿ
ಲ್ಲೊಲವಿಂದಿಂತೆರ್ದೆ ಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ

ಕೊಟ್ಟೈ ಕಿರ್ಚನುದಗ್ರ ಶೋಕ ಶಿಖಿಯಿಂ ಕಣ್ಣೀರ್ಗಳಿಂದೆಯ್ದೆ ನೀ
ರ್ಗೊಟ್ಟೈ ಸೂರ್ಯ ಸುತಂಗೆ ಲೌಕಿಕಮನೇನಿಂ ದಾಂಟಿದೈ ಪೋಳ್ದು ಸೀ
ಳ್ದೊಟ್ಟಿಂ ವೈರಿಯನೊಡ್ಡಿ ತತ್ಪಿಶಿತದಿಂದಾತಂಗೆ ನೀಂ ಕೂರ್ಪೊಡೇ
ಗೆಟ್ಟತ್ತಿನ್ನಡೆ ಮಾಡು ತದ್ವ್ದಿಜಗಣಕ್ಕಾಹಾರಮಂ ಭೂಪತೀ


ನೆಗೆಯೆ ಪೊದಳ್ದ ಬೊಬ್ಬುಳಿಕೆಗಳ್ ನೆಗೆದಂತೆರಡುಂ ಕೆಲಕ್ಕೆ ನೀ
ರುಗಿಯೆ ಗದಾಭಿಘಾತ ಪರಿಪೂರಿತ ತೋಯಜ ಷಂಡಮಲ್ಲಿಗ
ಲ್ಲಿಗೆ ಕದಡೇಳೆ ಭೀಮ ಭುಜ ಮಂದರ ಘಟ್ಟನೆಯಿಂದಮಲ್ಲಿ ತೊ
ಟ್ಟಗೆ ಕೊಳೆ ಕಾಳಕೂಟಮೊಗೆದಂತೋಗೆದಂ ಫಣಿರಾಜ ಕೇತನಂ


ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದಳ್ವಿ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾಳ್ವರಂ
ಕದಡದಿರಿತ್ತ ಬಾರದಿರು ಸಾರದಿರೆಂವೊಲಾದುದೆತ್ತಮು
ನ್ಮದ ಕಳಹಂಸ ಕೋಕ ನಿಕರ ಧ್ವನಿ ರುಂದ್ರ ಫಣೀಂದ್ರ ಕೇತುವಂ

ಬೆಳಗಿ ಸಮಸ್ತ ಭೂವಳಯಮಂ ನಿಜ ತೇಜದಿನಾಂತದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬಳಲ್ದಪರಾಂಬುರಾಶಿಯೊಳ್
ಮುಳುಗುವ ತೀವ್ರ ದೀಧಿತಿವೊಲಾ ಕೊಳದೊಳ್ ಫಣಿರಾಜ ಕೇತನಂ
ಮುಳುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ