ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜನವರಿ 27, 2019

ಶಾಸನ ಪದ್ಯ ಮಂಜರಿ

ಶಾಸನ ಪದ್ಯ ಮಂಜರಿ

ಕರ್ನಾಟಕದಲ್ಲಿ ದೊರಕುವ ಇಪ್ಪತ್ತು ಸಾವಿರಕ್ಕೆ ಮೇಲ್ಪಟ್ಟ ಶಾಸನಗಳನ್ನು ಹೇಗೆ ವರಾಗೀಕರಿಸಬಹುದೆಂಬುದು ಇನ್ನೂ ನಿರ್ಧಾರವಾಗಿಲ್ಲ. ಶಾಸನಗಳು ಒಂದು ಅಕ್ಷಯ ಪಾತ್ರೆಯಿದ್ದಂತೆ. ಅವರವರಿಗೆ ಏನೇನು ಬೇಕು ಅದೆಲ್ಲವೂ ಅಲ್ಲಿ ಸೀಗುತ್ತದೆ. ಆದರೆ ಅದರಿಂದ ಸ್ವೀಕರಿಸಿದರೂ ಅದು ತುಂಬಿಯೇ ಇರುತ್ತದೆ.

ಶಾಸನಗಳ ಉಪಯೋಗವನ್ನು ಮಾಡಿಕೊಳ್ಳುತ್ತಿರುವವರು ಇತಿಹಾಸಕಾರರು.  ಶಾಸನಗಳಲ್ಲಿ ಬೇರೆ ಬೇರೆ ಕಾಲದ ರಾಜರ ರಾಜವಂಶಗಳ ಹೆಸರುಗಕ್ಷೂ ತೇದೀಗಳೂ ದೊಲಕುವುದರಿಂದ ಭಾರತೀಯ ಇತಿಹಾಸದ ಪುನಾಲಚನೆಯಲ್ಲಿ ಶಾಸನಗಳ ಪಾತ್ರ ಪ್ರಮುಖವಾದುದಾಗಿದೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ಅರಿಯುವಲ್ಲಿ ಶಾಸನಗಳು ಬಹು ಒಳ್ಳೆಯ ಆಕರಗಳಾಗಿವೆ. ಸಾಹಿತ್ಯ ಕೃತಿಗಳಿಗಿಂತ ಶಾಸನಗಳಲ್ಲಿ ಆಯಾ ಕಾಲದ ಆಡು ಭಾಷೆ ತನ್ನ ಸ್ವಸ್ವರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.  ಕನ್ನಡ ಭಾಷೆಯ ಇತಿಹಾಸವನ್ನು ಚಿತ್ರಿಸುವವರಿಗೆ ಶಾಸನಗಳಿಂದ ಒದಗುವ ಸಹಾಯ ಅಪಾರ. ಈ ದೋಷ್ಟಿಗಳಿಂದ ಶಾಸನಗಳನ್ನು ವಿದ್ವಾಂಸರು ಬಳಸಿಕೊಂಡಿದ್ದಾರೆ. ಅವುಗಳ ಕೆಚ್ಚಲಿನಿಂದ ಹಾಲನ್ನು ಹಿಂಡಿ ಕೊಟ್ಟಿದ್ದಾರೆ. ಅನೇಕ ಶಾಸನಗಳ ಭಾಷೆ ಕೇವಲ ವರದಿಯಂತಿರದೆ ಕಾವ್ಯದ ಮಟ್ಟಕ್ಕೂ ಏರಿರುತ್ತದೆ. ಒಂದೂವರೆ ಸಹಸ್ರ ವರ್ಷಗಳ ಕನ್ನಡಿಗರ ಲೌಕಿಕ, ಮಾನಸಿಕ, ಆಧ್ಯಾತ್ಮಿಕ ಇತಿಹಾಸವನ್ನು ಅವು ಒಳಗೊಂಡಿವೆ.

ಶಾಸನಗಳನ್ನು ಸ್ಥೂಲವಾಗಿ ಶಿಲಾಶಾಸನ, ತಾಮ್ರಶಾಸನಗಳೆಂದೂ  ಎರಡು ದೊಡ್ಡ ವರ್ಗಗಳಾಗಿ ವಿಂಗಡಿಸಬಹುದು. ಶಿಲಾಶಾಸನಗಳ ಮಹತ್ವವೇನೆಂದರೆ ಅವುಗಳ ನೈಜತೆ. ಶಿಲಾಶಾಸನಗಳ ಮೇಲಿರುವ ಬರಹಗಳಪ್ರಾಮಾಣಿಕತೆಯನ್ನು ಸಾಮಾನ್ಯವಾಗಿ ಯಾರೂ ಶಂಕಿಸುವುದಿಲ್ಲ. ಶಾಸನಗಳನ್ನು ಕಾವ್ಯವಾಗಲಿ ಎಂಬ ಉದ್ದೇಶದಿಂದ ರಚಿಸಿಲ್ಲ. ಯಾವುದೋ ದಾನವನ್ನೋ, ವೀರನ ಶೌರ್ಯವನ್ನೋ, ಮಹಾಸತಿಯ ಪತಿ ಭಕ್ತಿಯನ್ನೋ ವರ್ಣಿಸುವುದು ಶಾಸನ ಕವಿಗಳ ಉದ್ದೇಶ
ವಾಗಿರುತ್ತದೆ. ಶಾಸನ ಪಾಠಗಳನ್ನು ಸಿದ್ಧಪಡಿಸಿದವರಲ್ಲಿ ರನ್, ನಾಗಚಂದ್ರ, ಶಾಂತಿನಾಥ, ಜನ್ನ, ಮಧುರ ಮುಂತಾದ ಸುಪ್ರಸಿದ್ಧ ಕವಿಗಳಿದ್ದಾರೆ.

ಶಾಸನಗಳು ಭಾಷೆ ಮತ್ತು ರಚನೆಯ ದೃಷ್ಟಿಯಿಂದ ಚಂಪೂ ಕಾವ್ಯಗಳನ್ನು ತಮ್ಮ ಆದರ್ಶವಾಗಿಟ್ಟುಕೊಂಡವು. ಚಂಪೂ ಕೃತಿಗಳು ಕನ್ನಡದಲ್ಲಿ ದೊರಕುವ ಮೊದಲೇ ಕನ್ನಡದಲ್ಲಿ ಒಳ್ಳೆಯ ಕಾವ್ಯಗುಣಗಳುಳ್ಳ ಶಾಸನಗಳು ರಚಿತವಾಗಿದ್ದುವು.ಪಂಪ ಪೂರ್ವಕಾಲಕ್ಕೆ ಸೇರುವ ಸು. ಕ್ರಿ. ಶ. ೯೩೦ ರ ಕಳಸ ಶಾಸನದ ಭಾಷೆ ಚಂಪೂ ಭಾಷೆಯಷ್ಟೇ ಪ್ರೌಢವೂ, ಪಕ್ವವೂ ಆಗಿದೆ. ಆ ಹೊತ್ತಿಗಾಗಲೇ ಕನ್ನಡದಲ್ಲಿ ಕವಿಗಳ ರಾಜಮಾರ್ಗವು ನಿರ್ಮಾಣವಾಗಿ, ಆ ಪರಂಪರೆಯಲ್ಲೆ ಸಾಕಷ್ಟು ಸಂಖ್ಯೆಯ ಕೃತಿಗಳು ರಚನೆಯಾಗಿದ್ದುವು. ಕನ್ನಡ ಭಾಷೆಯನ್ನು ಕಾವ್ಯರಚನೆಗಾಗಿಹದಗೊಳಿಸಿದ್ದರು.

1 ) ಶ್ರವಣಬೆಳಗೊಳ 27.( ಸು. 7೦೦)

ಇದರಲ್ಲಿ ಮಾಸೇನರು ನೋಂತು ಸ್ವರ್ಗಕ್ಕೆ ಹೋದರೆಂದು ಹೇಳಿದೆ.

ಮಾಸೇನರ್ ಪರಮಪ್ರಭಾವಋಷಿಯರ್ ಕೞ್ವಪ್ಪಿನಾ ವೆಟ್ಟದುಳ್ ।
ಶ್ರೀಸಂಘಂಗಳ ಪೇೞ್ದ ಸಿದ್ಧ ಸಮಯಂ ತಪ್ಪಾದೆ ನೋಂತಿಂಬಿನಿನ್॥
ಪ್ರಾಸಾದಾಂತರಮಾನ್ ವಿಚಿತ್ರ ಕನಕಪ್ರಜ್ವಲ್ಯದಿನ್ ಮಿಕ್ಕುದಾನ್।
ಸಾಸಿರ್ವರ್ ವರಪೂಜೆದಂದುಯೆಅವರ್ ಸ್ವರ್ಗಾಗ್ರಮಾನೇಱಿದಾರ್॥ 1॥

3) ಶ್ರವಣಬೆಳಗೊಳ.  88. ( ಸು. 7೦೦)

ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಱವೋಲ್ ಮಂಜುವೋಲ್ ತೋಱಿ ಬೇಗಂ।
ಪಿರಿಗುಂ ಶ್ರೀರೂಪಲೀಲಾಧನವಿಭವಮಹಾರಾಶಿಗಳ್ನಿಲ್ಲವಾರ್ಗಂ॥
ಪರಮಾರ್ಥಂ ಮೆಚ್ಚೆನಾನೀ ಧರಣಿಯುಳಿರವಾನೆಂದು ಸನ್ಯಾಸನಂಗೆ ।
ಯ್ದುರುಸತ್ವನ್ ನಂದಿಸೇನಪ್ರವರಮುನಿವರನ್ ದೇವಲೋಕಕ್ಕೆ ಸಂದಾನ್॥3॥

4) ಬಾದಾಮಿಯ ಶಾಸನ [ ಸು.700]
(ಇಂಡಿಯನ್ ಆಂಟಿಕ್ವರಿ. ×, 61)

ಇದರಲ್ಲಿ ಕಲಿಯುಗವಿಪರೀತನ್ ಎಂಬ ಬಿರುದುಳ್ಳ ಕಪ್ಪೆ ಅರಭಟ್ಟನ  ಸ್ತುತಿ ಇದೆ.

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ।
ಬಾಧಿಪ್ಪ ಕಲಿಗೆ ಕಲಿಯುಗ।
ವಿಪರೀತನ್ ಮಾಧವನೀತನ್ ಪೆಱನಲ್ಲ॥4॥

ಒಳ್ಳಿತ್ತ ಕೆಯ್ವೊರಾರ್ ಪೊಲ್ಲದುಮದಱಂತೆ ।
ಬಲ್ಲಿತ್ತು ಕಲಿಗೆ ವಿಪರೀತಾ।
ಪುರಾಕೃತಮಿಲ್ಲಿ ಸಂಧಿಕ್ಕುಮದು ಬಂದು॥5॥

ಕಟ್ಟಿದ ಸಿಂಘಮನ್ ಕೆಟ್ಟೊದೇನೆಮಗೆಂದು।
ಬಿಟ್ಟವೋಲ್ ಕಲಿಗೆ ವಿಪರೀತಂ।
ಗಹಿತರ್ಕಳ್ ಕೆಟ್ಟರ್ ಮೇಣ್ ಸತ್ತರವಿಚಾರಂ॥6॥

5) ಮುಳಬಾಗಿಲು 38 ( ಸು. 900)

ಇದರಲ್ಲಿ ನೊಳಂಬರಾಜನಾದ ವೀರಮಹೇಂದ್ರನ ಪರೋಕ್ಷದಲ್ಲಿ ದೀವಬ್ಬರಸಿ ದೀವಬ್ಬೆಸಮುದವನ್ನೂ, ದೇವಸ್ಥಾನಗಳನ್ನೂ ಕಟ್ಟಿಸಿ ದತ್ತಿಯನ್ನು ಬಿಟ್ಟಂತೆ ಹೇಳಿದೆ.

ವಿದಿತಂ ಲೋಕಕ್ಕೆ ಮುನ್ನಂ ರಘುಕುಳದಹನೋಧವನುಗ್ರೇಷುವಿಂ ಕಾಯ್ದು ತಿಣ್ಣಂ ।
ಕುದಿಗೊಂಡೞ್ಕಿತ್ತಗಸ್ತ್ಯಂ ಕುಡಿಯುತುಗುೞ್ದನಿಂ ಕಟ್ಟುಪಟ್ಟಿರ್ದುದಿಂತ ॥
ಪ್ಪುದು ಪೆಂಪಂ ತಾಳ್ದಿತೆಂದಱಿಯರೆ ಲವಣಾಂಬೋಧಿಯಂ ಪೋಲಿಸಲ್ವೇ।
ಡಿದುವೆತ್ತಾನೆತ್ತಲೆಂಬಂತತಿಬಹಳಜಳಂ ದೀವಳಬ್ಬಾಸಮುದ್ರಂ॥7॥

7) ಮಂಡ್ಯ 41 (949)
ಇದರಲ್ಲಿ ರಾಷ್ಟ್ರಕೂಟರಾಜನಾದ 3ನೆಯ ಕೃಷ್ಣರಾಜನಿಗೂ ಚೋಳರಾಜನಾದ ರಾಜಾದಿತ್ಯನಿಗೂ ನಡೆದ ಯುದ್ಧದಲ್ಲಿ ಮಡಿದ ಸಂಗತಿ ಹೇಳಿದೆ. ರಾಷ್ಟ್ರಕೂಟರ ಪಕ್ಷವಾಗಿ ಯುದ್ಧಮಾಡಿದ ಮಣಲೇರನ ಶೌರ್ಯವು ಕೆಳಗಣ ಪದ್ಯಗಳಲ್ಲಿ ವರ್ಣಿಸಿದೆ.

ಉಱದಿದಿರಾಂತ ಚೋೞಚತುರಂಗಬಲಂಗಳನಟ್ಟಿ ಮುಟ್ಟಿ ತ।
ಳ್ತಿಱಿವೆಡೆಗೊರ್ವರಪ್ಪೊಡಮಿದಿರ್ಚಿ ಗಂಡರನಾಂಪೆವೆಂದು ಪೊ॥
ಚ್ಚಱಿಸುವ ಬೀರರಂ ನೆಱೆಯೆ ಕಾಣೆಮೆ ಚೋಱನೆ ಸಕ್ಕಿಯಾಗೆ ತ।
ಳ್ತಿಱಿದುದನಾಮೆ ಕಂಡೆವೆನೆ ಮೆಚ್ಚದೊರಾರ್ ಸಗರತ್ರಿಣೇತ್ರನಂ ॥11॥

ನರಪತಿ ಬೆನ್ನೊಳಿರ್ದೊನಿದಿರಾಂತುದು ವೈರಿಸಮೂಹಮಿಲ್ಲಿ ಮ।
ಚ್ಚರಿಸುವರೆಲ್ಲರುಂ ಸೆರಗುವಾರ್ದಪೊರಿನ್ನಿರೆನೆಂದು ಸಿಂಗದಂ॥
ತಿರೆ ಹರಿ ಬೀರಲಕ್ಷ್ಮಿ ನೆರವಾಗಿರೆ ಚೋೞನ ಕೋಟೆಯೆಂಬ ಸಿಂಗದಂ॥
ಧುರದ ಶಿರೋಗ್ರಮಂ ಬಿರಿಯೆ ಪೊಯ್ದಿಱಿದಂಕದನೈಕಶೂದ್ರಕಂ॥12॥

8) ಶ್ರವಣಬೆಳಗೊಳ  139 ( ಸು. 950)

ಇದರಲ್ಲಿ ಬಾಯಿಕನ ಮಗಳೂ ಲೋಕವಿದ್ಯಾಧರನ ಹೆಂಡತಿಯೂ ಆದ ಸಾವಿಯಬ್ಬೆ ಸತ್ತಳೆಂದು ಹೇಳಿದೆ.

ಬಾಯಿಕ
ಶ್ರೀಯುವತಿಗೆ ನಿಜವಿಜಯ । ಶ್ರೀಯುವತಿಯೆ ಸವತಿಯೆನಿಸೆ ರಣಮೂರ್ಖನೃಪಾ।
ಮ್ನಾಯದೊಳಾಯದ ಮೆಯ್ಗಲಿ। ಬಾಯಿಕನೆಂಬನ್ ನೆಗೞ್ತೆಯಂ ಪ್ರಕಟಿಸಿದನ್॥13॥

ಅವರೊಡವುಟ್ಟಿದೊಳಱಿವಿನ। ತವರೆನೆ ಧರ್ಮದದಗುಂತಿಯೆನೆನೆಗೞ್ದಳ್ ಭೂ।
ಭುವನಕ್ಕೆ ಸಾವಿಯಬ್ಬೆಗ। ಮವನಿಜೆಗಂ ದೊರೆಯೆನಲ್ಕೆ ಪೆಂಡಿರುಮೊಳರೇ॥14॥

ಶ್ರಾವಕಧರ್ಮದೊಳ್ ದೊರೆಯೆನಲ್ ಪೆಱರಿಲ್ಲೆನೆ ಸಂದ ರೇವತೀ।
ಶ್ರಾವಕಿತಾನೆ ಸಜ್ಜನಿಕೆಯೊಳ್ ಜನಕಾತ್ಮಜೆ ತಾನೆ ರೂಪಿನೊಳ್॥
ದೇವಕಿ ತಾನೆ ಪೆಂಪಿನೊಳರುಂಧತಿ ತಾನೆ ಜಿನೇಂದ್ರಭಕ್ತಿ ಸ।
ದ್ಭಾವದೆ ಸಾವಿಯಬ್ಬೆ ಜಿನಶೃಸನದೇವತೆ ತಾನೆ ಕಾಣಿರೇ॥15॥

10) ಬೇಲೂರು 123 (952)
ಇದರಲ್ಲಿ ಗಂಗರಾಜನಾದ ಬೂತುಗನ ಆಳಿಕೆಯಲ್ಲಿ ಮೋನಿ ಭಟಾರರಿಗೆ ಕಿರಿಯ ಮೋನಿಭಟಾರರು ನಿಸಿದಿಗೆಯನ್ನು ನಿಲಿಸಿದರೆಂದು ಹೇಳಿದೆ.
ಮೋನಿಭಟಾರ
ಪೇನಿಗಳಂ ಪೊಗೞದಿರಭಿ। ಮಾನಿಗಳಂ ಗುಣದ ಕಣಿಗಳಂ ವಸುಮತಿಯೊಳ್।
ದಾನಿಗಳನೂನಮಿಲ್ಲದ। ಮೋನಿಗಳಂ ಪೋಗಿ ಪೊಗೞ ಕೆಲ್ಲಂಗೆರೆಯೊಳ್॥19॥

ತಾಂ ಗಡ ಕೊಳ್ವೊನೆಂದು ಬಲಗರ್ವದ ಬಲ್ಲಪನಲ್ಲಿ ಪೋಗಿ ಕಾ।
ಯ್ವೊಂಗೆಡೆಯಾಗದಂತು ನುಡಿದಾರ್ಪಿನೆ ಮೆಚ್ಚಿಸಿ ಕೊಂಡರಿಂತು ಕೆ॥
ಲ್ಲಂಗೆಱೆಯಂ ಪಲರ್ ಪೊಗೞೆ ಮೋನಿಭಟಾರರೆನುತ್ತೆ ಲೋಕಮೆ ।
ಲ್ಲಂ ಗೆಡೆಗೊಂಡು ಕೊಂಡು ಕೊನೆದಪ್ಪುದು ಸಾಹಸಮೇನನೂನಮೋ॥20॥

11) ಶ್ರವಣಬೆಳಗೊಳ  59 (974)

ಇದರಲ್ಲಿ ಗಂಗರಾಜನಾದ ನೊಳಂಬಕುಲಾಂತಕಮಾರಸಿಂಹನು ಸಂನ್ಯಸನವಿಧಿಯಿಂದ ಸ್ವರ್ಗವನ್ನು ಪಡೆದಂತೆ ಹೇಳಿದೆ.

ಕಾಳನೊ ರಾವಣನೋ ಶಿಶು। ಪಾಳನೊ ತಾನೆನಿಸಿ ನೆಗೞ್ದ ನರಗನ ತಲೆ ತ।
ನ್ನಾಳನ ಕೆಯ್ಗೆವಂದುದು। ಹೇಳಾಸಾಧ್ಯದೊಳೆ ಗಂಗಚೂಡಾಮಣಿಯಾ॥ 21॥   [ಕಾವ್ಯಾವಲೋಕನಂ( ಪುಟ. 9)
ಶಬ್ಧಮಣಿದರ್ಪಣಂ (ಪುಟ 68) ಅನುವಾದ ಮಾಡಲ್ಪಟ್ಟಿದೆ.]

ನುಡಿದನೆ ಕಾವುದನೇ ಎರ್ದೆ । ಗಿಡದಿರು ಜವನಿಟ್ಟ ರಕ್ಕೆ ನಿನಗೀವುದನೇಂ।
ನುಡಿದನೆ ಏ ಅದು ಕೆಯ್ಯದು । ನುಡಿದುದು ತಪ್ಪುಗುಮೆಗಂಗಚೂಡಾಮಣಿಯಾ॥22॥

ತುಂಗ ಪರಾಕ್ರಮಂ ಪಲವುಕಾಲಮಗುರ್ವಿಸೆ ಸುತ್ತಿ ಮುತ್ತಿ ಬಿ।
ಟ್ಟಂ ಗಡ ಕಾಡುವಟ್ಟಿ ಕೊಳಲಾಱನೆ ಮುನ್ನಮೆನಿಪ್ಪ ಪೆಂಪಿನು॥
ಚ್ಚಂಗಿಯ ಕೋಟೆಯಂ ಜಂಗಮಸುಂಗೊಳೆ ಕೊಂಡ ನೆಗೞ್ತೆ ಮೂರಱುಲೋ।
ಕಂಗಳೊಳಂ ಪೊಗೞ್ತೆಗೆಡೆಯಾದುದುಗುತ್ತಿಯ ಗಂಗಭೂಪನಾ॥23॥

ಓಳಿಯೆ ಕೋದು ಪಲ್ಲವರ ಪಂದಲೆಯೆಲ್ಲಮನೆಯ್ದೆ ದಟ್ಟಿ ಕಾ।
ಪಾಳಿಕರೂಪಿ ಸಾಱಿ ಪರಮಂಡಳಿಕರ್ಕಳನಮ್ಮ ನೀವುಮೀ ॥
ಯೋಳಿಗೆ ನಿಮ್ಮ ಪಂದಲೆಗಳಂ ಬರಲೀಯದೆ ಕಂಡು ಬಾೞ್ವುದಾ।
ಳೋಳಿಯೊಳೆಂಬಿನಂ ನೆಗೞ್ದದೊಟ್ಟಜೆ ಮಂಡಳಿಕ ತ್ರಿಣೇತ್ರನಾ॥24॥

12) ತಿರುಮಕೂಡಲು ನರಸೀಪುರ  69 ( ಸು. 980)

ಇದರಲ್ಲಿ ಗಂಗರಾಜನಾದ ಮಾರಸಿಂಹನ ಸಾಮಂತ ಗೋವಿಂದಮಯ್ಯನ ಸಂತತಿ ಹೇಳಿದೆ.

ಪರಮಶ್ರೀಯಂ ತಳೆದೊಗೆ। ದೆಱೆಯೊಂ ಪರಮೋಪಕಾರಿ ಧರೂಮಜ್ಞಂ ಸುಂ।
ದರತೇಜನೆನಿಸಿ ನೆಗೞ್ದಂ ।ಧರೆಯೊಳ್ ಗೋವಿಂದಯ್ಯನೆಂಬುರ್ವೀಶಂ॥25॥

ಎನೆ ನೆಗೞ್ದ ಮಾಬಳಯ್ಯಂ । ಗನೇಕ ಗುಣರತ್ನರಾಶಿ ಮನುಮುನಿಚರಿತಂ।
ವಿನಯವಿಭೂಷಣನೊಳ್ಪಿಂ। ಗಿನಿಯಂ ಮೊದಲೆನಿಸಿ ಪುಟ್ಟಿದೊಂ ಚಾವುಂಡಂ॥26॥

13) ಶ್ರವಣಬೆಳಗೊಳ  133 (982)

ಇದರಲ್ಲಿ ರಾಷ್ಟ್ರಕೂಟರಾಜನಾದ ಇಂದ್ರರಾಜನು ಸಂನ್ಯಸನವಿಧಿಯಿಂದ ಮುಡಿಪಿದಂತೆ ಹೇಳಿದೆ.
ಇಂದ್ರರಾಜ
ಪರಮಭೂಮೀಶ್ವರಭೀಕರಂ ಕರನಿಶಾತೋಗ್ರಾಸಿ ಶತ್ರುಕ್ಷಿತೀ।
ಶ್ವರವಿಧ್ವಂಸಪರಂ ಪರಾಕ್ರಮಗುಣಾಟೋಪಂ ವಿಪಕ್ಷಾವನೀ ॥
ಶ್ವರಪಕ್ಷ  ಕ್ಷಯಕಾರಣಂ ರಣಜಯೋದ್ಯೋಗಂ ದ್ವಿಷನ್ಮೇದಿನೀ।
ಶ್ವರಸಂಹಾರಹವಿರ್ಭುಜಂ ಭುಜಬಳಂ ಶ್ರೀರಾಜಮಾರ್ತಾಂಡನಾ॥27॥

ಇಱಿಯಲ್ಕಣ್ಮುವರೀಯಲಾಱರರೆಬರೂ ಪೂಣ್ದೀವರಾರಾನುಮಾಂ ।
ತಿಱಿಯಲ್ಕಣ್ಮರದಾವ ಗಂಡಗುಣಮಾವೌದಾರ್ಯಮೆಂದಳ್ಕದಾಂ॥
ತಿಱಿವಣ್ಮುಂ ಪಿರಿದೀವ ಪೆಂಪುಮೆಸೆದೊಪ್ಪಿರ್ದಪ್ಪುವಾರ್ ಬಣ್ಣಿಸಲ್ ।
ನೆಱೆವರ್ ಬೀರದ ಚಾಗದುನ್ನತಿಕೆಯಂ ಶ್ರೀರಾಜಮಾರ್ತಾಂಡನೃ॥28॥

ಕಿಡದ ಜಸಕ್ಕೆ ತಾನೆ ಗುಱಿಯಾದ ಚಲಂ ನೆಱೆದರ್ಥಿಗರ್ಥಮಂ।
ಕುಡುವ ಚಲಂ ತೊದಳ್ನುಡಿಯದಿರ್ಪ ಚಲಂ ಪರವೆಣ್ಣೊಳೋತೊಡಂ॥
ಬಡದ ಚಲಂ ಶರಣ್ಗೆವರೆ ಕಾವ ಚಲಂ ಪರಸೈನ್ಯಮಂ ಪೆಱಂ ।
ಗೆಡೆಗುಡದಟ್ಟಿ ಕೊಲ್ವ ಚಲಮಾಳ್ದ ಚಲಂ ಚಲದಂಕಕಾಱನಾ॥29॥

ಇರು ಪೆಱದೇನನಿಂ ಪೊಗೞುತಿರ್ದಪುದೀವ ನೆಗೞ್ತೆ ಕಲ್ಪಭೂ।
ಮಿರುಹದಿನಗ್ಗಳಂ ನುಡಿ ಸುರಾಚಳದಿಂದಚಳಂ ಪರಾಕ್ರಮಂ॥
ಖರಕರತೇಜದಿಂ ಬಿಸಿದು ಚಾಗದ ನನ್ನಿಯ ಬೀರದಂದಮೀ।
ದೊರೆತೆನೆ ಬಣ್ಣಿಸಲ್ ನೆಱೆವರಾರಳವಂ ಚಲದಂಕಕಾರನಾ ॥30॥

ದುಸ್ಥಿತಲೋಕಕಲ್ಪತರುವೆಂಬುದು ವೈರಿನರೇಂದ್ರ ಕುಂಭಿಕುಂ।
ಭಸ್ಥಳಪಾಟನಪ್ರಣವಕೇಸರಿಯೆಂಬುದು ಕಾಮಿನೀಜನೋ॥
ರಸ್ಥಳಹಾರಮೆಂಬುದು ಮಹಾಕವಿಚಿತ್ತಸರೋರುಹಾಕರಾ।
ವಸ್ಥಿತಹಂಸನೆಂಬುದು ಸಮಸ್ತಮಹೀಜನಮಿಂದ್ರರಾಜನಾ॥31॥

ಪುಸಿವದೆ ತಕ್ಕು ಕೊಟ್ಟಳಿಪಿ ಕೊಳ್ವುದೆ ಮಂತಣಮನ್ಯನಾರಿಗಾ।
ಟಿಸುವುದೆ ಚಿತ್ತಮೀಯದುದೆ ಬಿನ್ನಣಮಾರುಮನೆಯ್ದೆ ಕೂರ್ತು ಬಂ॥
ಚಿಸುವುದೆ ಕಲ್ತ ಕಲ್ಪಿಯೆನೆ ಮತ್ತವರಂ ಪೆಸರ್ಗೊಂಡದೆಂತು ಪೋ।
ಲಿಸುವುದೊ ಪೇೞಿಮೀಗಡಿನ ರಾಜತನೂಜರೊಳಿಂದ್ರರಾಜನಂ॥32॥

ನಿಖಿಳವಿನಮನ್ನರೇಶ್ವರ । ಮುಖಾಬ್ಜನೇತ್ರೋತ್ಪಳಾಳಕಾಳೋಳಶಿಳೀ।
ಮುಖನಿಕರದಿನೆಸೆವುದು ಪದ। ನಖಕಮಳಾಕರವಿಳಾಸಮಹಿತರ ಜವನಾ॥33॥

ಮನ್ನಿಸಿ ಪಿರಿದೀವಂ ತೊದ। ಳನ್ನುಡಿಯಂ ತೊಡರ್ದು ಮಾಣನಳಱಿಂದಮಿದೇ।
ನುನ್ನತಿವಡೆದುದೋ ಚಾಗದ। ನನ್ನಿಯ ಬೇರದ ನೆಗೞ್ತೆ ಚಳದಗ್ಗೞಿಯಾ॥34

ಶರದಮೃತಕಿರಣರೈಚಿಯಿಂ। ಚರಾಚರವ್ಯಾಪ್ತಿಯಿಂ ಜಗಜ್ಜನನುತಿಯಿಂ ।
ಕರಮೆಸೆದಿರ್ದಪುದೇನೀ।ಶ್ವರಮೂರ್ತಿಯ ಕೀರ್ತಿ ಕೀರ್ತಿನಾರಾಯಣನಾ॥35॥

ನುಡಿವರ್ ಬೀರಮನೊಂದುಗಂಡು ಸೆಡೆವರ್ ಚಾಗಕ್ಕೆ ಮುಯ್ವಾಂಪರೀ ।
ವೊಡೆ ಪಲ್ಗರ್ಚುವರಾಮೆ ಸೋಚಿಗಳೆಮೆಂದಿರ್ಪರ್ ಪರಸ್ತ್ರೀಯರೊಳ್ ॥
ಗಡಣಂ ನನ್ನಿಗೆ ಬೀಗುವರ್ ನುಡಿ ತೊದಳ್ ದೋಸಕ್ಕೆ ಪಕ್ಕಾದ… ।
ಬಡಗಂಡರ್ ಕಲಿಕಾಲದೊಳ್ ಕಲಿಗಳೊಳ್ಗಂಡಂ ಪೆಱಂ ಗಂಡನೇ॥36॥

14) ಹೂಲಿಯ ಶಾಸನ ( ಎ. 985)
(ಎಪಿಗ್ರಾಪಿಯಾ ಇಂಡಿಕ. ×18, 171)
ಈ ವೀರಗಲ್ಲಿನಲ್ಲಿ ಕೆಂದರ ಕೇತನು ಸೋಭನಯ್ಯನ ಪೆರ್ಗ್ಗಡೆ ದಡ್ಡಪಯ್ಯನೊಡನೆ ಕಾದಿ ಸತ್ತಂತೆ ಹೇಳಿದೆ.

ಧುರದೊಳ್ ಕಾಯ್ದು ಕಡಂಗಿ ಪೊಂಗಿ ಮಲೆದೋರಂತಿರ್ದನೆಯ್ತಂದು ಮ ।
ಚ್ಚರದಿಂದಾಂತೊರನಂತಕಂಗಿರದೆ ಕೊಲ್ಚಂದಿಕ್ಕಿ ಮಿಕ್ಕೀ ವಸುಂ॥
ಧರೆಯೊಳ್ ತನ್ನದಟಂ ಪ್ರತಾಪಮುಮದಾ ರಾಜೋತ್ತಮಂ ಪೆರ್ಚ್ಚೆ ಕೆಂ।
ದರ ಕೇತಂ ವರ ವಾಸವಾಂಗನೆಯರೊಳ್ ಕೂಡಿರ್ದ್ದನಾಸ್ವರ್ಗದೊಳ್॥37॥

ತೋಡುಂ ಬೀಡುಮದುಡುಗದೆ । ಪಾಡಱಿದೆಚ್ಚಾಜಿ ರಂಗದೊಳ್ ವಾಜಿಯನ॥
ೞ್ಕಾಡಿ ಸುರಾಂಗನೆಯರೊಳಂ। ಕೂಡಿದೊನೇಂ ಕಲಿಯೊ ನೆಗೞ್ದ ಕೆಂದರ ಕೇತಂ॥ 38॥

15) ಶ್ರೀರಂಗಪಟ್ಟಣ  140 (1012)
ಇದರಲ್ಲಿ ಚೋಳರಾಜನಾದ ರಾಜರಾಜನ ದಂಡನಾಯಕ ಪಂಚವಮಹಾರಾಯನು ಬಲಮುರಿ ಕ್ಷೇತ್ರದ ದೇವರಿಗೆ ಭೂಮಿಯನ್ನು ಬಿಟ್ಟಂತೆ ಹೇಳಿದೆ.

ಪಂಚವಮಹಾರಾಯ

ಶ್ರೀರಮಣೀಯನೀತಿ ಜಯಮೂರ್ತಿ ಸುಲಕ್ಷಣಲಕ್ಷಿತಾಂಗನ।
ಬ್ಜಾರಿಕರೋಪಮಂ...ರಂ ಮುಳಿದಂದರಾತಿಸಂ॥
ಹಾರಲಯಾಗ್ನಿಯಂತಕನ ಕಾಯ್ಪುಮಾ…...।
ಮಾರಿಯ ಮೂರಿಯೆಂದಱಿಗೆಮುಮ್ಮುಡಿಚೋೞನ ಗಂಧವಾರಣಂ॥ 39॥

16) ಶಿಕಾರಿಪುರ  125 ( 1019)

ಇದರಲ್ಲಿ ಚಾಳುಕ್ಯರಾಜನಾದ ಜಯಸಿಂಹನ ಸಾಮಂತ ಕುಂದಮರಸನು ಬಲಿಪುರದ ನಂದಿಕೇಶ್ವರ ದೇವರಿಗೆ ಭೂಮಿಯನ್ನು ಬಿಟ್ಟಂತೆ ಹೇಳಿದೆ.  

ತ್ರಿಮೂರ್ತಿಗಳು

ಶ್ರೀಪತಿ ಚಕ್ರಧಾರಿ ಗರುಡಾಸನನಂಬುರುಹಾಕ್ಷನದ್ರಿಜಾ ।
ತಾಪತಿ ಶೂಲಧಾರಿ ವೃಷಭಾಸನನಭ್ಯಧಿಕೇಕ್ಷಣಂ ವಚ॥
ಶ್ಯ್ರೀಪತಿ ಪಾಶಧಾರಿ ಕಳಹಂಸಗನಷ್ಟಮಿತಾಕ್ಷನೆಂದಿವರ್ ।
ತ್ರೈಪುರುಷರ್ ತ್ರಿಲೋಕಜನಪೂಜಿತರೀಗೆಮಗಿಷ್ಟಸಿದ್ಧಿಯಂ॥40॥

ಜಯಸಿಂಹ

ಪಸರಿಸಿ ಪರ್ಬಿ ಗೊಂದಳಿಸಿ ನಿಂದ ತಮಸ್ತಮಮಂ ತೆರಳ್ಚಿ ಬಂ।
ದೊಸೆದಿನನೇಱುವಂತುದಯಪರ್ವತಮಂ ಕಲಿಕಾಲದೇೞ್ಗೆಯಂ॥
ದೆಸೆಗಿಡೆ ತೂಳ್ದಿ ತಾಳ್ದಿ ಕೃತಲಕ್ಷ್ಮಿಯನೊಳ್ಪಿನ ತೆಳ್ಪುಗಳ್ ಜಗ।
ಕ್ಕೆಸೆದಿರೆ ಸಿಂಹವಿಷ್ಟರಮನೇಱಿದನಾ ಜಯಸಿಂಹವಲ್ಲಭಂ ॥41॥

17) ಬೇಲೂರು ಶಾಸನ  (1022)
ಇಂಡಿಯನ್ ಆಂಟಿಕ್ವರಿ (18, 273)
ಇದರಲ್ಲಿ ಚಾಳುಕ್ಯರಾಜನಾದ ಜಯಸಿಂಹನ ಆಳಿಕೆಯಲ್ಲಿ ಅವನ ಅಕ್ಕನಾದ ಅಕ್ಕಾದೇವಿ ಪೇರೂರು ಅಗ್ರಹಾರವನ್ನು ಸ್ಥಾಪಿಸಿ ಅಲ್ಲಿ ತ್ರಿಮೂರ್ತಿಗಳ ದೇವಸ್ಥಾನವನ್ನು  ಕಟ್ಟಿಸಿದಂತೆ ಹೇಳಿದೆ.

ಅಕ್ಕಾದೇವಿ

ಶ್ರೀವನಿತೆಯೆನಿಸಿದಕ್ಕಾ। ದೇವಿಗೆ ವಾಗ್ದೇವಿಗಖಿಳಜನನುತ ಸೀತಾ।
ದೇವಿಗೆ ಮಾದೇವಿಗೆ ಭೂ। ದೇವಿಗೆ ಸಮನೆಂಬ ನೃಪಸುತಾಸಮುದಯಮಂ॥42॥

ಗುಣದ ಬೆಡಂಗಿಯೆನಲ್ ಸ। ದ್ಗುಣಮಂನೆಗೞ್ದೇಕವಾಕ್ಯೆಯೆನೆ ಸೂನೃತಮಂ।
ರಣಭೈರವಿಯೆನೆ ಶೌರ್ಯದ । ಗುಣಮನದೇನೆಂದು ಬಣ್ಣಿಪೆಂ ನೃಪಸುತೆಯಾ॥43॥

ಅವಿನಮ್ರಾರಿನೃಪಾಳಕಪ್ರಳಯಸಂಪಾದಕ್ಷಮೋಚ್ಚಂಡಭೈ।
ರವಿ ತಾನಾಗಿಯುಮೆಯ್ದೆ ಶಾಂತತರರೂಪಾನ್ವೀತೆ ನಿರ್ಭರ್ತ್ಸನಾ॥
ರವಸಿಂಹಾಗ್ರಜೆಯಾಗಿಯುಂ ಮದಗಜೋದ್ಯದ್ಯಾನೆಯೆಂದಂದು ಧಾ।
ತವಿಚಿತ್ರಂ ನೆಗೞ್ದೇಕವಾಕ್ಯೆಯ ಚರಿತ್ರಂ ಭೂರಿಭೂಚಕ್ರದೊಳ್॥44॥

18) ರೋಣ ಶಾಸನ ( 1022)
( ಎಪಿಗ್ರಾಪಿಯಾ ಇಂಡಿಕಾ, 19, 222)

ಇದರಲ್ಲಿ ಚಾಳುಕ್ಯರಾಜನಾದ ಒಂದನೆಯ ಜಗದೇಕಮಲ್ಲ ಜಯಸಿಂಹನ ಆಳಿಕೆಯಲ್ಲಿ ಸಂಕಿಮಯ್ಯನು ರೋಣದಲ್ಲಿ ಮೂಲಸ್ಥಾನ ದೇವಸ್ಥಾನವನ್ನು ಕಟ್ಟಿಸಿದಂತೆಯೂ ಅವನ ಸಹೋದರನಾದ ಮಾಚಿಮಯ್ಯನು ಸತ್ರವನ್ನು ಕಟ್ಟಿಸಿ ಬಾವಿಯನ್ನು ತೋಡಿಸಿದಂತೆಯೂ ಹೇಳಿದೆ.

ರೋಣ
ಶ್ರೀರಮಣೀಪ್ರಿಯ ( ನಿಲಯ)। ದ್ವಾರಾವತಿಗಂ ಸುರೇಂದ್ರನಮರಾವತಿಗಂ॥
ಸಾರಂ ಧರಣೀ ವನಿತೆಯ । ಹಾರಂ ಶ್ರೀ ರೋಣಮೊಪ್ಪುಗುಂ ವಸುಮತಿಯೊಳ್॥ 45॥

ಆಯ್ತವರ್ಮನ ಮಗ ಸಂಕಿಮಯ್ಯ

ಆತಂಗೆ ಸುಜನ ಜನ ವಿ। ಖ್ಯಾತಂಗೆ ಜಗಜ್ಜನೈಕ ನುತ ಚರಿತಂ ನೆ॥
ರ್ಧೂತಾಘನಿಚಯನುರ್ವೀ। ಖ್ಯಾತಂ ಶ್ರೀ ಸಂಕಿಮಯ್ಯನಾದಂ ತನಯಂ॥46॥

ಕ್ಷಿತಿವಳಯಂ ಬಣ್ಣಿಸಲು। ನ್ನತಿಯಂ ಮಾಡಿಸಿದನೆಸೆವಿನಂ ರೋಣದೊಳು॥
ನ್ನತಮೆನೆ ಮೂಲಸ್ಥಾನಾ। ಯತನಮನಾ ಸಂಕಿಮಯ್ಯನೆನೆಪೊಗೞದರಾರ್॥47॥

ಮಾಚಿಮಯ್ಯ
ಒಡಲುಂ ತಾಂ ಸುಚರಿತ್ರದೊಳ್ ಧನಮನುದ್ಯದ್ದಾನದೊಳ್ ನನ್ನಿಯಂ॥
ನುಡಿಯೊಳ್ ಭಕ್ತಿಯನೆಯ್ದೆ ತಂದೆಯೊಳುದಗ್ರಂ ಚಿತ್ತಮಂ ಸಂತತಂ॥
ಮೃಡಪಾದಾಬ್ಜದೊಳಾವಗಂ ಬಸನಮಂ ಸದ್ಧರ್ಮದೊಳ್ ತಾಳ್ದಿದಂ ।
ಗಡದೇವಣ್ಣಿಪೆನಣ್ಣ ಸಚ್ಚರಿತಮಂ ಶ್ರೀ ಮಾಚಯ್ಯಾಂಕನಾ॥48॥

ಜಗತೀಜನಹಿತಮಂ ವಿಬು। ಧಗಣಾಗ್ರಣಿಮಾಚಿಮಯ್ಯನುರ್ವೀವಳಯಂ॥
ಪೊಗೞಲ್ ರೋಣದಮಣಿಯರ । ನೆಗೞ್ದಾರಮೆಯೊಳಗೆಬಾವಿಯಂ ತೋಡಿಸಿದಂ॥ 49॥

19) ಬೆಳಗಿಮಿ ಶಾಸನ ( 1024)
( ಮೈಸೂರು ಶಾಸನದ ಇಲಾಖೆಯ 1929ನೆಯ ವರ್ಷದ ವರದಿ: ಶಾಸನ ಸಂಖ್ಯೆ 65,ಪೂರ್ವಭಾಗ)
ಇದರಲ್ಲಿ, ಚಾಳುಕ್ಯರಾಜನಾದ ಜಗದೇಕಮಲ್ಲನು ಕುಂದರಾಜನ ವಿಜ್ಞಾಪನದಿಂದ ಕಲಿದೇವೇಶ್ವರ ಸ್ವಯಂಭು ದೇವರಿಗೋಸ್ಕರ ಶಿವಶಕ್ತಿ ಪಂಡಿತರಿಂದ ಕಾಲಂ ಕರ್ಚಿ ಭೂಮಿಯನ್ನು ಬಿಟ್ಟಂತೆ ಹೇಳಿದೆ.

ಜಗದೇಕಮಲ್ಲ( ಜಯಸಿಂಹ )

ಉಱದಿದಿರೆತ್ತಿಬಂದ ಮಧುರಾಂತಕ ಚೋಳನ ಸೈನ್ಯಮೆಲ್ಲಮಂ।
ಕಿಱುದೊಱೆ ಕಟ್ಟೆಗಟ್ಟುವಿನಮಳ್ಕುಱೆಕೂರಸಿಯಿಂದಡುರ್ತು ತ ॥
ತ್ತಱಿದಱಿದೊಟ್ಟಿ ಕಂಚಿ ಗುಱಿಯಪ್ಪಿನೆಗಂ ಬೆದಱಟ್ಟಿ ಚೋಳನಂ ।
ಮೆರೆದನುದಗ್ರಬಾಹುಬಳಮಂ ಜಯಸಿಂಹ ಮಹಾ ಮಹೀಭುಜಂ॥50॥

20) ಕುಳೇನೂರ್ ಶಾಸನ (1028)
( ಎಪಿಗ್ರಾಪಿಯಾ ಇಂಡಿಕ 15, 329)

ಈ ಶಾಸನದಲ್ಲಿ ಚಾಳುಕ್ಯರಾಜನಾದ ಜಯಸಿಂಹನ ಆಳಿಕೆಯಲ್ಲಿ ಕುಂದರಾಜನ ಹೆಂಡತಿ ಕುಂದಲದೇ ವಿಕುಳೇನೂರ್ ದೇವಸ್ಥಾನಕ್ಕೆ ಭೂಮಿಯನ್ನು ಬಿಟ್ಟಂತೆ ಹೇಳಿದೆ.  

ಕುಂದರಾಜ
ಮಲೆಪರ ಪೊಂಗಡಂಗಿದುದು ಮನ್ನೆಯರುರ್ಕ ಕೞಲ್ದುದನ್ಯಮಂ।
ಡಲಿಕರ ದರ್ಪಮೋಗಡಿಸಿತಾಂತು ಬಿಗುರ್ತರಿವರ್ಗಮಳ್ಕಿ ಬಾ॥
ೞ್ದಲೆಗಳನಿತ್ತು ಕಂಡು ಬೆಸಗೆಯ್ದಪರೀ ದೊರೆತುಗ್ರಮಪ್ಪ ತೋ।
ಳ್ವಲದ ಪೊಡರ್ಪುಮೊಮೊಟ್ಟಜಿಯುಮುನ್ನತಿಯುಂ ಸಲೆ ಕುಂದರಾಜನ ॥51॥

ಕುಂದಲದೇವಿ
ಸರಸಿರುಹದಲರ ನಡುವಣ । ಸಿರಿಯವೊಲತ್ಯಂತಮಪ್ಪ ತೇಜದಿನಂತಃ।
ಪುರಮನಲಂಕರಿಪುದಱಿಂ । ಧರೆ ಸವತಿತಳಪ್ರಹಾರಿಯೆನೆ ಸಲೆ ನೆಗೞ್ದಳ್॥52॥

.ಸರಸತಿಗೆ ರತಿಗೆ ರಂಭೆಗೆ । ಗಿರಿಜೆಗರುಂಧತಿಗೆ ರಘುಕುಲೇಶನ ಸತಿಗಂ।
ದೊರೆ ಪಾಸಟಿ ಮಿಗಿಲೆಂದೀ ।ಧರೆ ಪೊಗೞ್ವುದು ನೆಗೞ್ದ ಸವತಿಗಜಕೇಸರಿಯಂ॥53॥

21) ಮಂಜರಾಬಾದ್ 45 ( ಸು. 1030)
ಇದರಲ್ಲಿ ವಾಮಶಿವದೇವನ ಮಗ ಚಾಮನ ಸ್ತುತಿರೂಪವಾದ ಪದ್ಯಗಳಿವೆ?.

ಶ್ರೀಮಚ್ಛಶಾಂಕಧರಸ । ತ್ಕೋಮಳಪದಪದ್ಮಭೃಂಗನಘರಿಪುಸಿಂಗಂ
ವಾಮಶಿವದೇವಪುತ್ರಂ। ಚಾಮಂ ಕಾದಂಬರಾಜ್ಯಮೂಳಸ್ತಂಭಂ॥54॥

ಅಳವಱಿವು ನನ್ನಿ ಪೆಂಪ। ಸ್ಖಳಿತಗುಣಂ ಪತಿಹಿತಿಕ್ಕೆಯೆಂಬಿವು ತನ್ನೊಳ್ ।
ಬಳೆದು ಪುದಿದಿರೆ ಸುಪುತ್ತಃ । ಕುಳದೀಪಕ ಎನಿಸಿ ಚಾವವೆಗ್ಗಡೆ ನೆಗೞ್ದಂ॥55 ॥

ಶಿಷ್ಟಜನವತ್ಸಳಂ ಧ। ರ್ಮಿಷ್ಟಂ ನಿಜಕುಳಪವಿತ್ರನಮಳಚರಿತ್ರಂ ।
ದುಷ್ಟಜನದೂರನೆಂದೀ । ಸೃಷ್ಟಿ ಸಲಲ್ ಪೊಗೞೆ ನೆಗೞೆ ಚಾವನೆ ಬಲ್ಲಂ ॥56॥

22) ಸೊರಬ 184 ( 1032)

ಈ ಶಾಸನದಲ್ಲಿ ಚಾಳುಕ್ಯರಾಜನಾದ ಜಯಸಿಂಹನ ಆಳಿಕೆಯಲ್ಲಿ ಮಹಾ ಸಾಮಂತಾಧಿಪತಿ ಆಲಯ್ಯನು ಕುಪ್ಪಗಡ್ಡೆಯಲ್ಲಿ ಮಂಡಲಿಕ ಕುಂದಮನೊಡನೆ ಕಾದಿ ಸಾಯಲು ಅವನ ಮಗ ಜಯಸಿಂಗನು ತಂದೆಯ ಹೆಸರಿನಲ್ಲಿ ಆಲೇಶ್ವರ ದೇವಸ್ಥಾನವನ್ನು ಕಟ್ಟಿಸಿ ಭೂಮಿಯನ್ನು ಬಿಟ್ಟಂತೆ ಹೇಳಿದೆ.  

ಆಲಯ್ಯ
ಬಳವದರಾತಿಸೇನೆ ಕಿಡೆ ವಾಜಿಬಳಂ ಪೆಱಪಿಂಗೆ ಹಸ್ತಿ ಸಂ ।
ಕುಳಮಳಿರ್ವಳ್ಕೆ ಬಳ್ಕೆ ತನಗಾಂತಧಿಕೋಗ್ರ ವಿರೋಧಿಸಾಧನಂ ॥
ವಳಿಕೆ ಬೞಲ್ಚಿ ನುರ್ಗಿ ಪಲರಂ ತವೆ ಕೊಂದು ಮಹಾಜಿರಂಗದೊಳ್ ।
ತೊಲಗದ ಗಂಡನಾಂತಿಱಿಯೆ ಭುಂಭುಕಮದ್ಭುತಮಾದುದೆತ್ತಲುಂ ॥57॥

ಜಯಸಿಂಗ
ಮುಳಿಸತ್ಯದ್ಭುತಮಾಯಮೆಂದುಮಚಳಂ ದಾನಂ ಬುಧಾಹ್ಲಾದಿ ಕೇ।
ವಳಮಲ್ತುನ್ನತಸತ್ಯಶೌಚಮಱಿತಂ ಲೋಕೋತ್ತರಂ ಕೀರ್ತಿ ದಿ॥
ಗ್ವಳಯಾಂತಂ ನುಡಿ ಮೇರುಶೈಲಲಿಖಿತಂ ಧರ್ಮಂ ಜಗನ್ಮುದ್ರೆ ಭೂ।
ತಳವಂದ್ಯಂ ಚರಿತಂ ನಯಂ ಜನನುತಂ ಶ್ರೀಸಿಂಹಭೂಪಾಳನಾ॥58॥

23) ಗದಗು ಶಾಸನ (1037)
(ಎಪಿಗ್ರಾಪಿಯಾ ಇಂಡಿಕ,  19, 217 )
ಇದರಲ್ಲಿ ಚಾಳುಕ್ಯರಾಜನಾದ 1ನೆಯ ಜಗದೇಕಮಲ್ಲ ಜಯಸಿಂಹನ ಆಳಿಕೆಯಲ್ಲಿ ದಾಮೋದರ ಸೆಟ್ಟಿ ಊರೊಡೆಯ ಮದ್ದಿಮಯ್ಯನಿಂದ ಭೂಮಿಯನ್ನು ಕೊಂಡು ತ್ರೈಪುರುಷ ದೇವರಿಗೆ ಬಿಟ್ಟಂತೆ ಹೇಳಿದೆ.  

ದಾಮೋದರ ಸೆಟ್ಟಿ
ಶ್ರೀಕಾಂತಾ ಕಮನೀಯಮಾದುದು ವಿಶಾಲೋರುಸ್ಥಲಂ ತನ್ನ ವಾಕ್ ।
ಶ್ರೀಕಾಂತಾ ಕಮನೀಯಮಾದುದು ಮುಖಾಂಭೋಜಾತಮುದ್ಯಜ್ಜಯ ॥
ಶ್ರೀಕಾಂತಾ ಕಮನೀಯಮಾದುದು ಭುಜಾ ದಂಡಂ ದಿಗಂತಂ ಯಶಃ ।
ಶ್ರೀಕಾಂತಾ ಕಮನೀಯಮಾದುದದಱಿಂದೇಂ ದಾಮನುದ್ದೃಮನೋ॥59॥

ಸುರ ರಾಜೇಂದ್ರ ಮದೇಭ ಮಸ್ತಕದೊಳಾ ದಿಗ್ದಂತಿ ದಂತಂಗಳೊಳ್ ।
ಹರನುಗ್ರಾಸಿಯೊಳಿಂದ್ರಕೀಲತಟದೊಳ್ ನೀರೇಜಪುತ್ರಾಂಡದೊಳ್ ॥
ವರ ನಾಗಾಲಯದೊಳ್ ಮುರಾರಿಯ ಗೃಹೋದ್ಯದ್ವಾರಬಂಧಂಗಳೊಳ್ ।
ಬರೆದಳ್ ವಾಗ್ವಧು ದಾವಲಂ ಶುಚಿ ಮಹಾ ದಾನಾಢ್ಯನೆಂಬಂಕಮಂ ॥60॥

ಸುರ ರಾಜಾದ್ರೀಂದ್ರ ಹೇಮಾಚಲ ಮಲಯ ನಗೋಪಾಂತದಲ್ಲಿ ವನಾಭ್ಯಂ ।
ತರದೊಳ್ ನಾನಾ ವಿನೋದಂಗಳೊಳೆ ನೆಲಸಿ ವಿದ್ಯಾಧರ ಸ್ತ್ರೀಯರುಂ ಮೇಣ್॥
ಸುರಕಾಂತಾನೀಕಮುಂ ಪನ್ನಗ ಯೈವತಿಯರುಂ ಪಾಡುವರ್ ಕೂಡೆ ದಾಮೋ।
ದರ ಕೀರ್ತಿಶ್ರೀಯನೆಂದಂದದಱಿಂ ಮಹಿಮೆಯಂ ಬಣ್ಣಿಸಲ್ಕಾರ್ಪನಾವಂ॥61॥

ಮೊಳೆವೋಯ್ತರೂಕಜನಿಂ ಪಸುರ್ಪುವಡೆದತ್ತಾ ವಿಕ್ರಮಾದಿತ್ಯ ಭೂ।
ತಳ ನಾಥಾಗ್ರಣಿಯಿಂದೆ ಮತ್ತೆ ತಳಿರಾಯ್ತೆತ್ತಂ ಹರಿಶ್ಚಂದ್ರನಿಂ ॥
ನಳನಿಂ ಪೂತುದು ಚಾರುದತ್ತ ವಿಭುವಿಂದಂ ಕಾತುದೀ ಭೂರಿ ಭೂ।
ತಳದೊಳ್ ದಾಮನಿನಗ್ಗಳಂ ಫಲಿತಮಾಯ್ತೀ ದಾನಕಲ್ಪದ್ರುಮಂ॥62॥

24) ಸಾಗರ ಶಾಸನ 109 (1042)

ಇದರಲ್ಲಿ ಚಾಳುಕ್ಯರಾಜನಾದ 1 ನೆಯ ಜಯಸಿಂಹನ ದಂಡನಾಯಕ ಗೋನರಸನು ಕೆರೆಗಳನ್ನೂ, ದೇವಸ್ಥಾನಗಳನ್ನೂ ಕಟ್ಟಿಸಿ ಒಂದು ಅಗ್ರಹಾರವನ್ನು ಮಾಡಿ ಬ್ರಾಹ್ಮಣರಿಗೆ ಬಿಟ್ಟಂತ ಹೇಳಿದೆ.

ಹರನ ನಿಟಿಲಾಕ್ಷಿ ವಹ್ನಿ। ಸ್ಫುರಣ ಮುರಹರನ ಚಕ್ರಮಬ್ಜಪಾಶಂ ॥
ಸುರರಾಜವಜ್ರಮೆನಿಪುದು। ಧುರದೊಳ್ ರಿಪುನೃಪರ್ಗೆ ಗೋನಭೂಪನ ಕರವಾಳ್॥63 ॥

ಅರಿಭೂಪಾಳೋಗ್ರ ವೀರಪ್ರಮುಖಮನಿಱಿದಾಟಂದಪಂ ಕೊಂದಪಂ ಮ ।
ಮಚ್ಚರದಿಂದೆೞ್ಬಟ್ಟಿಪಂ ಮುಟ್ಟಿಪನತಿಭರದಿಂ ನೇರ್ದಪಂ ಸೀಳ್ದಪಂ ಕೋ॥
ವರಚಕ್ರಾಕಾರದಿಂ ತಿಱ್ಱನೆ ತಿರಿಪಿದಪಂ ಸುತ್ತಿಪಂ ಮುತ್ತಿಪಂ ಸಂ।
ಗರದೊಳ್ ಶ್ರೀಗೋನಭೂಪಂ ಪ್ರಳಯಶಿಖಿಶಿಖಾಟೋಪಕೋಪಪ್ರತಾಪಂ॥64॥

ಪಱಿದ ಶಿರಂಗಳಿಂ ಕೆದಱಿ ಬಿಳ್ದ ಗಜಂಗಳಿನಾಡುವಟ್ಟೆಯಿಂ।
ಸುಱಿದರುಣಾಂಬುವಿಂ ನಲಿವ ರಾಮೆಯರಿಂ ಪೆಣದತ್ತ ಸಾರ್ವ ಪೆಂ॥
ತೆಱೆಯರಿನಲ್ಲಿ ಮಾಂಸರಸಮಂ ಸವಿದಾಡುವ ರಕ್ಕಸರ್ಗೆ ಪ।
ಲ್ದೆಱೆವ ಮರುಳ್ಗಳಿಂ ಸಮರಮಾಸುರಮಾದುದು ಗೋನಭೂಪನಿಂ॥65॥   

ಅರಿಭೂಭೃದ್ಬಳಕಾಳದಂಡನೊಹೊಹೋ ಕೊಂದಿಕ್ಕಿಪಂ ಮುಕ್ಕಿಪಂ।
ನಿರುತಂ ಪೋರ್ದಪನೀೞ್ದು ಪೀರ್ದಪನೆಲೇ ಮದ್ರಕ್ತಮಂ ಕೂಡೆ ಕಿಂ ॥
ಕರರಪ್ಪಂ ಶರಣೆಂಬಮಾತನನಿಳಾವಿಖ್ಯಾತನಂ ನಿಚ್ಚಮೆಂ ।
ದರಿವರ್ಗಂ ಕುದಿಯುತ್ತುಮಿರ್ದಪುದಿದಕ್ಕುಂ ಗೋನನಾಡಂಬರಂ॥66॥

ರಣದೊಳರಾತಿಭೂಭುಜಬಲಂಗಳನುಗ್ರಭುಜಾಸಿಯೊಳ್ ಖಣಿಲ್।
ಖಣಿಲೆನೆ ತಳ್ತು ಪೊಯ್ದು ಪಡಲಿಟ್ಟವೊಲಾಗಿರೆ ಮಾಡಿ ಸಂದ ಬ॥
ಲ್ಕಣಿಗಳ ನೆತ್ತರಿಂ ನೆಣದಿನಳ್ಗರುಳಿಂದಮೆ ಭೂತಕೋಟಿಯಂ ।
ತಣಿಪಿ ನೆಗೞ್ತೆಯಂ ಪಡೆದನೀ ಧರೆಯೊಳ್ ಸಲೆ ಗೋನಭೂಮಿಪಂ॥67॥

ಧುರದೊಳ್ ಗೋನುಗಭೂಪ ನಿನ್ನ ನಿಶಿತಾಸ್ತ್ರಾಘಾತದಿಂ ಸತ್ತ ಭೂ।
ಪರ ಪೆಂಡಿರ್ ಬಿಸುಸುಯ್ಯೆ ನೀಳ್ವ ಶಿಖಿತನ್ನಂ ಮುಟ್ಟೆ ನೊಂದಿಂದು ನಿ॥
ತ್ತರಿಸಲ್ ತಾನಣಮಾಱದೀಶ್ವರ ಜಟಾಜೂಟಾಟವೀಸಿಂಧುಸೀ।
ವರಮಂ ಸೇವಿಸಲಿರ್ದನುಂತು ಶಶಿಗಂ ದೇವಂಗಮೇ ಸಮ್ಮದಂ॥68॥

ತೊಡರ್ವ ವಿರೋಧಿಗೆಂಟೆರ್ದೆಯೆ ಮೀಱುವ ವೈರಿಗೆ ಮೂಱು ಕಣ್ಣೆ ಮಾ।
ರ್ನುಡಿವವನೇಂ ಚತುರ್ಭುಜನೆ ಮಚ್ಚರಿಪಣ್ಣಲೆ ಬರ್ಮನೊಳ್ ಬರಂ ॥
ಬಿಡಿದನೆ ಮೀಱಿ ಬಾೞ್ವೊಡವನೇಂ ಜವನೇ ಕಡಿಕೆಯ್ದು ಕಾದಲೆಂ ।
ದೊಡರಿಸುವಾತನೇಂ ಭುಜಗಮರ್ದನನೇ ಕಲಿಗೋನಭೂನೊಳ್॥69॥

ಎಲೆ ಕೇಳ್ ಗೋನಮಹೀಪ ನಿನ್ನ ಯಶಮಂ ಶ್ರೀಕಾಂತೆಯಾಶಾಂತದೊಳ್ ।
ನೆಲಸಿರ್ದುನ್ಮದದಂತಿದಂತಯುಗಳದೊಳ್ ತನ್ನೞ್ತಿಯಿಂ ಕಟ್ಟಿದು॥
ಯ್ಯಲನಾನಂದದೊಳೇಱಿ ದಿಗ್ವನಿತೆಯರ್ ತೂಗಲ್ಕೆ ನಿನ್ನೊಳ್ಗುಣಂ।
ಗಳನಾಲೋಳಮದಾಳಿಮಂದ್ರಮಧುರಪ್ರಧ್ವಾನದಿಂ ಪಾಡಿದಳ್॥70॥

25)ಹೂಲಿಯ ಶಾಸನ ಬಿ. (1043)
(ಎಪಿಗ್ರಾಪಿಯಾ ಇಂಡಿಕ,  18, 174)

ಈ ಶಾಸನದಲ್ಲಿ ಚಾಳುಕ್ಯರಾಜನಾದ ಆಹವಮಲ್ಲನ (2ನೆಯ ಸೋಮೇಶ್ವರನ) ಆಳಿಕೆಯಲ್ಲಿ ಅವನ ಸಾಮಂತಕಾಲಡಿಯ ಬೋಳಗಡಿಯ ಮಗ ಸಾಯಿಮ್ಮನ ಮಗಳು ಲಚ್ಚಿಯಬ್ಬೆ ಪೂಲಿಯೊಳಗೆ 1043 ರಲ್ಲೆ ಒಂದು ಬಸದಿಯನ್ನು ಕಟ್ಟಿಸಿ ಭೂಮಿಯನ್ನು ಬಿಟ್ಟಂತೆ ಹೇಳಿದೆ.  

ಕಾಲಡಿಯ ಬೋಳಗಡಿ
ಮೇಲೆೞ್ದ ಪಗೆವರಂ ನಿ। ರ್ಮೂಲಿಸಿ ಜಸಮಂ ನಿಮಿರ್ಚಿ ದಿಗ್ಭಿತ್ತಿವರಂ ॥
ಕಾಲಡಿಯ ಬೋಳಗಡೆ ಸಲೆ । ಪಾಲಿಸಿದಂ ತೊಂಬತಾಱುಮಂ ಭುಜಬಳದಿ॥71॥

ಲಚ್ಚಿಯಬ್ಬೆ
ಇಷ್ಟಜನಕ್ಕೆ ಚಟ್ಟಸಮಯಕ್ಕೆ ಮಹಾಜನಭೋಜನಕ್ಕೆಯು।
ತ್ಕೃಷ್ಟ ತಪೋಧನರ್ಗೆಯಳಿದಾಯವನಕ್ಕೆ ಸಕನ್ಯಾ ಕಾಳಿಕಾ॥
ಗಿಷ್ಟಗೆಗೆಯ್ದೆ ನಾಲ್ಕು ಸಮಯಕ್ಕನುರಾಗದೆ ಬೇಗವಿಂತು ಸಂ।
ತುಷ್ಟತೆ ಲಚ್ಚಿಯಬ್ಬರಸಿಗಾರ್ ಸರಯೀ ಸಚರಾಚರೋರ್ವಿಯೊಳ್॥72॥

ಸಕಲ ಧಾತ್ರಿಯೊಳ್ ನೆಗೞ್ದ ವಂದಿಜನಂ ಸಲೆ ರೂಪಿನೇೞ್ಗೆಯಂ ।
ಪ್ರಕಟತೆವೆತ್ತ ಗಾನ ಗುಣಮಂ ಕುಲದುನ್ನತಿಯುಂ ಜನಾಂಘ್ರಿಗ ॥
ಳ್ಗಕುಟಿಲ ಚಿತ್ತಮಂ ಪೊಗೞುತ್ತಿರ್ಪ್ಪುದು ಕೂಂಡಿಯ ಬಿಂಕದಂಕ ಪಾ।
ಲಕನ ಕುಲೋತ್ತಮಾಂಗನೆಯನರ್ಥಿಯೆ ಲಚ್ಚಲದೇವಿಯಂ ಜಗಂ॥73॥

ಪೂಲಿ
ಶರನಿಧಿ ಮೇಖಲಾವೃತ ವಸುಂಧರೆಯೆಂಬ ವಿಲಾಸಿನೀ ಮುಖಾಂ।
ಬುರುಹದವೋಲ್ ವಿರಾಜಿಸುವ ಬೆಳ್ವಲನಾೞ್ಕೆ ಪೊದೞ್ದ ಶೋಭೆಗಾ ॥
ಗರಮೆನೆಸಿರ್ಪ ಪೂಲಿ ತಿಲಕಾಕೃತಿಯಿಂದೆಸೆದಿರ್ಪ್ಪುದಾ ಪುರಂ ।
ಸುರಪುರಮಂ ಕುಬೇರನಳಕಾಪುರಮಂ ನಗುಗುಂ ವಿಳಾಸದಿಂ॥74॥

ಪೂಲಿಯ ಸಾಸಿರ್ವರ್
ಸಕಲ ವ್ಯಾಕರಣಾರ್ಥಶಾಸ್ತ್ರ ಚಯದೊಳ್ ಕಾವ್ಯಂಗಳೊಳ್ ಸಂದ ನಾ ।
ಟಕದೊಳ್ ವರ್ಣ ಕವಿತ್ವದೊಳ್ ನೆಗೞ್ದ ವೇದಾಂತಾಂಗದೊಳ್ ಪಾರಮಾ॥
ರ್ಥಿಕದೊಳ್ ಲೌಕಿಕದೊಳ್ ಸಮಸ್ತ ಕಳೆಯೊಳ್ ವಾಗೀಶನಿಂದಂ ಯಶೋ।
ಧಿಕರಾದರ್ ಪೊಗೞ್ವಲ್ಲಿಗಾರಳವೋ ಪೇೞ್ ಸಾಸಿರ್ವರ ಖ್ಯಾತಿಯಂ ॥75॥

63) ಶಿಕಾರಿಪುರ  311 (1100)

ಇದರಲ್ಲಿ ಚಾಳುಕ್ಯರಾಜನಾದ ವಿಕ್ರಮಾದಿತ್ಯನ ಆಳಿಕೆಯಲ್ಲಿ ಸೋಮನೃಪನ  ಕುಮಾರಿಯರು ಒಂದು ಜಿನಾಲಯವನ್ನು ಕಟ್ಟಿಸಿದಂತೆ ಹೇಳಿದೆ.

ತೊಡರೆ ತೊಡಂಕು ಮಚ್ಚರಿಸೆ ಗಂಟಲ ಸಿಲ್ಕಿದ ಗಾಳಮುರ್ಕಿ ಮಾ ।
ರ್ನುಡಿದೊಡೆ ಜಿಹ್ವಮಂ ಪಿಡಿದು ಕೀೞ್ವ ತೊಡರ್ಪಿನ ಪಾಶಮೆಂದೊಡೆಂ॥
ತೆಡಱುವರೆಂತು ಮಚ್ಚರಿಪರೆಂತುಕರಂ ಕಡುಕೆಯ್ದು ದರ್ಪಮಂ।
ನುಡಿದಪರಣ್ಣ ಬಾಪ್ಪು ಮುಳಿದಂಬದ ಜೂಜನೊಳನ್ಯಭೂಭುಜರ್॥268॥

69) ತೀರ್ಥಹಳ್ಳಿ 192, (1103)
ಇದರಲ್ಲಿ ಚಾಳುಕ್ಯರಾಜನಾದ ವಿಕ್ರಮಾದಿತ್ಯನ ಆಳಿಕೆಯಲ್ಲಿ ತ್ರಿಭುವನಮಲ್ಲ ಸಾಂತರನು ಆನಂದೂರಲ್ಲಿ ಬಸ್ತಿಯನ್ನು ಕಟ್ಟಿಸಿ ದತ್ತಿಯನ್ನು ಬಿಟ್ಟಂತೆ ಹೇಳಿದೆ.  

ತ್ರಿಭುವನಮಲ್ಲ ಸಾಂತರ ( ತೈಲ)
ಕನಕಾದ್ರೀಂದ್ರಕ್ಕಮಂಭೋನಿಧಿಗಮವನಿಗಂ ಪೆಂಪಿನೊಳ್  ಗುಣ್ಪಿನೊಳ್ ತಿ।
ಣ್ಪಿನೊಳೆಂತುಂ ತಾನೆ ಪೋ ಪಾಸಟಿ ಸರಿ ಸಮನೆಂದಂದದಾವಂ ಸಮಸ್ಕಂ॥
ಧನದಾವಂ ಪೋಲ್ವನಾವಂ ಪಡಿಯೆನಿಸುವವಂ ರಾಜಸರ್ವಜ್ಞನೊಳ್ ತೈ।
ಲನೊಳರ್ಥಿಸ್ಥೋಮಚಿಂತಾಮಣಿಯೊಳಖಿಳಭೂಭಾಗದೊಳ್ ನೋೞ್ಪೊಡೆಂತುಂ॥300॥

ಅದಟಿನಿದಿರಾಂತ ಭೂಪರ। ನದಟಲೆದೆರೆದರ್ಥಿನಿಕರಮಂ ತಣಿಪಿ ಜಗ।
ದ್ವಿದಿತಯಶಂ ನೆಗೞ್ದಂ ಭೂ। ಪದಿಳೀಪಂ ವೈರಿವೀರಕಾಳಂ ತೈಳಂ॥ 301॥

ಚಾಗದದುಗುಂತಿ ಯಾಚಕ ।ರಾಗಿಸಿದುದು ಪಲಬರರಸರಂ ಬೀರದದೊಂ॥
ದೋಗಡಿಸದೇೞ್ಗೆ ವನಚರ।  ರಾಗಿಸಿದುದು ಪಲಬರಹಿತರಂ ತೈಲುಗನಾ॥302॥

93) ಶ್ರವಣಬೆಳಗೊಳ 128. ( 1121)

ಇದರಲ್ಲಿ ಗಂಗರಾಜನ ಹೆಂಡತಿ ಲಕ್ಷ್ಮಿ  ಸಾಯಲು ಅವಳಿಗೆ ಗಂಗರಾಜನು ನಿಸಿದಿಗೆಯನ್ನು ನಿಲಿಸಿದಂತೆ ಹೇಳಿದೆ.

ಲಕ್ಷ್ಮಿ
ಪರಮಪದಾರ್ಥನಿರ್ಣಯಮನಾಂತ ವಿದಗ್ಧತೆ ದುರ್ನಯಂಗಳೊಳ್ ।
ಪರಿಚಯಮೆಂದೈಮಿಲ್ಲದತಿಮುಗ್ಧತೆ ತನ್ನಿನಿಯಂಗೆ ಚಿತ್ತದೊಳ್ ॥
ಪಿರಿದನುರಾಗಮಂ ಪಡೆವ ರೂಪು ವಿನೇಯಜನಾಂತರಂಗದೊಳ್ ।
ನಿರುಪಮಭಕ್ತಿಯಂ ಪಡೆವ ಪೆಂಪಿವು ಲಕ್ಷ್ಮಲೆಗೆಂದುಮನ್ವಿತಂ॥429॥

ಸೌಭಾಗ್ಯದೊಳಮರ್ದಾದಂ । ಶೋಭಾಸ್ಪದಮಾದ ರೂಪಿನೊಳ್ಪಿಂ ಪ್ರತ್ಯ।
ಕ್ಷೀಭೂತಲಕ್ಷ್ಮಿಯೆಂದಪು। ದೀಭೂತಳಮಿನಿತುಮೆಯ್ದೆ ಲಕ್ಷ್ಮೀಮತಿಯಂ॥430॥

ವಿತರಣಗುಣಮದೆ ವನಿತಾ। ಕೃತಿಯಂ ಕೆಯ್ಕೊಂಡುದೆನಿಪ ಮಹಿಮೆಯ ಲಕ್ಷ್ಮೀ।
ಮತಿಯೆಲವೊ ದೇವತಾಧಿ । ಷ್ಠಿತೆಯಲ್ಲದೆ ಕೇವಳಂ ಮನುಷ್ಯಾಂಗನೆಯೇ ॥431॥

230) ತರೀಕೆರೆ 15 ( 1184)

ಇದರಲ್ಲಿ ಹೊಯ್ಸಳ ರಾಜನಾದ 2ನೆಯ ಬಲ್ಲಾಳನು ಚಿಕ್ಕಬಮ್ಮಲದೇವಿಗೆ ಶಾಂತ್ಯರ್ಥವಾಗಿ ಯೋಗೇಶ್ವರದೇವಿಗೆ ಭೂಮಿಯನ್ನು ಬಿಟ್ಟಂತೆ ಹೇಳಿದೆ.  

ವಿಷ್ಣುವರ್ಧನ
ಪೆರ್ದೊಱೆ ಸೇತು ಪಶ್ಚಿಯಪಯೋನಿಧಿ ಮೂಡಪಯೋಧಿ ಮೇರೆಯಾ ।
ಗಿರ್ದ ಧರಿತ್ರಿಯಂ ತನಗೆ ತೋಳ್ವಲದಿಂ ನೆಱೆ ಮಾಡಿ ದುಷ್ಟರಂ ॥
ಮರ್ದಿಸಿ ತುಷ್ಟಿಯಂ ಪಡೆದು ಶಿಷ್ಟಜನಪ್ರಕರಕ್ಕೆ ರಾಮನಂ।
ತಿರ್ದನಪಾರಪೌರುಷಮೆ ತನ್ನೊಳೊಡಂಬಡೆ ವಿಷ್ಣುವರ್ಧನಂ ॥1304॥

ಬಲ್ಲಾಳ ೨
ಆ ದಂಪತಿಗೆ ತನೂಭವ । ನಾದಂ ರಿಪುನೃಪತಿಮಕುಟಘಟ್ಟಿತಪದಲ।
ಕ್ಷ್ಮೀ ದಯಿತನಧಿಕಬಳನುದಿ। ತೋದಿತಪುಣ್ಯ ಪ್ರಭಾವನೀ ಬಲ್ಲಾಳಂ॥1305॥

263) ಅರಸಿಯಕೆರೆ 130 ( ಸು. 1200)

ಇದರಲ್ಲಿ ರೇವಣನು ತಳಿರೂರಗ್ರಹಾರದಲ್ಲಿ ವಿಷ್ಣುದೇವಸ್ಥಾನವನ್ನು ಕಟ್ಟಿಸಿದಂತೆ ಹೇಳಿದೆ.  

ರೇವಣ.
ಪರಹಿತದೊಳ್ ಚಲಮಂತಾ। ಸುರಗೃಹಮಂ ಮಾಡಿ ಕೀರ್ತಿವಡೆಯಲ್ ಚಲಮು।
ರ್ವರೆಯೊಳ್ ಬುಧರಂ ದ್ವಿಜರಂ । ಪೊರೆವೆಡೆಯೊಳ್ ರೇವಣಂಗೆ ಚಲಮೆಸೆದಿರ್ಕುಂ ॥1457॥

ವನನಿಧಿಪರಿವೃತವಿಶ್ಶಾ। ವನಿತಳದೊಳಗಿದು ವಿಚಿತ್ರಮೆಂಬಂದದೆ ಸ ।
ಜ್ಜನವಿನುತರೇವಣಾರ್ಯಂ। ಮನುಚರಿತಂ ವಿಷ್ಣುಭವನಮಂ ಮಾಡಿಸಿದಂ॥1458॥

278) ಸೊರಬ 276 ( 1215)

ಇದರಲ್ಲಿ ಸೇವುಣರಾಜನಾದ ಸಿಂಹಣನ ಆಳಿಕೆಯಲ್ಲಿ ಅವನ ಅಧಿಕಾರಿಗಳೊಳಗೆ ಹಲವರು ಕುಪ್ಪಟೂರು ಕೋಟಿನಾಥ ದೇವರಿಗೆ ದತ್ತಿಯನ್ನು ಬಿಟ್ಟಂತೆ ಹೇಳಿದೆ.  

ಕುಪ್ಪಟೂರು
ಅಳಿಗಿಳಿವಿಂಡಿನಿಂದುಲಿವ ನಂದನದಿಂ ಕಳಹಂಸಮತ್ತಕೋ।
ಕಿಳಕಳನಾದದಿಂದೆಸೆವಲರ್ಗ್ಗೊಳನಿಂಶಬೆಳೆದೊಪ್ಪಿ ತೋರ್ಪ ಕೆ॥
ಯ್ವೊಲನಿನೇಕರತ್ನ ಮಣಿಕೂಟದಿನೊಪ್ಪುವ ದೇವತಾಲಯಂ ।
ಗಳಿನುಱೆ ಕುಪ್ಪಟೂರ್ ಕರಮೆ ರಂಜಿಸುಗುಂ ಧರಣೀತಳಾಗ್ರದೊಳ್ ॥1539॥

ಸಿಂಹಣ
ಚಲದಿಂ ಧಾತ್ರಿಯೊಳುಳ್ಳ ಭೂಭುಜರುಮಂ ದೋರ್ವಿಕ್ರಮೋದ್ಯಚ್ಛಿಖೋ।
ಜ್ವಳನಿಂದಂ ನೆಱೆ ಸುಟ್ಟು ವೈರಿಲಲನಾವೈಧವ್ಯಮಂ ಮಾಡಿ ಕುಂ॥
ದಲತಾಂತತೋಜ್ವಳಕೀರ್ತಿಯಂ ಮೆಱೆದು ಪಾರಾವಾರಪರ್ಯಂತ ಮಾ।
ರ್ತಲೆಯಿಲ್ಲೆಂಬ ನೆಗೞ್ತೆವೆತ್ತನತುಳಂ ಶ್ರೀಸಿಂಹಣೋರ್ವೀಶ್ವರಂ॥1540॥

307) ಕುಪ್ಪಗುಡ್ಡೆ ವೀರಗಲ್ಲು (1254)
(ಮೈಸೂರು ಶಾಸನದ ಇಲಾಖೆಯ 1929ನೆಯ ವರ್ಷದ ವರದಿ : ಶಾಸನ ಸಂಖ್ಯೆ 72)
ಇದರಲ್ಲಿ ಬೀರದೇವರಸನಿಗೂ ಬಿದಿರೂರ ಈಡುಸಾಮಂತನಿಗೂ ನಡೆದ ಯುದ್ಧದಲ್ಲಿ ಮಾಳಿಗನು ಪರಾಕ್ರಮವನ್ನು ತೋರಿಸಿ ಸುರಲೋಕಪ್ರಾಪ್ತನಾದನೆಂದು ಹೇಳದೆ.

ಬಿರುದರ ಬಿಂಕಮಂ ಮುಱಿದು ಬಿಂಕದ ಗಂಡರನೊಕ್ಕಲಿಕ್ಕಿ ಸಂ।
ಗರದೆಡೆಯಲ್ಲಿ ಮಾರ್ಮಲೆವ ವೈರಿ ಶಿರಂಗಳ ಸೆಂಡನಾಡಿ ತ ॥
ತ್ತುರಗ ಖುರ ಪ್ರಘಾತದೆಡೆ ತೂಳ್ದು ತೆರಳ್ಚಿದನಂದು ಮೆಚ್ಚುತುಂ।
ಧರೆ ಪೊಗೞಲ್ಕೆ ವೀರವರನಗ್ಗದ ಮಾಳಿಗನಾಜಿ ರಂಗದೊಳ್ ॥1723॥

322) ಹೊಳೆನರಸೀಪುರ 112{ ( ಅನುಬಂಧ) 1282}

ಇದರಲ್ಲಿ ಹೊಯ್ಸಳ ರಾಜನಾದ 3ನೆಯ ನಾರಸಿಂಹನು ಮಾವನೂರಲ್ಲಿ ದೇವರಸನ ಹೆಸರಿನಲ್ಲಿ ಅವನ ತಮ್ಮ ಅಪ್ಪರಸನು ಕಟ್ಟಿಸಿದ ದೇವೇಶ್ವರ, ಅಪ್ಪರಸನ ಹೆಸರಿನಲ್ಲಿ ಅವನ ಹೆಂಡತಿ ದೇವವೂವೆ ಕಟ್ಟಿಸಿದ ಅಪ್ಪೇಶ್ವರ ಎಂಬ ಎರಡು ದೇವಸ್ಥಾನ-
ಗಳಿಗಾಗಿ ದೇವವ್ವೆಗೆ ತವನಿಧಿ ಎಂಬ ಗ್ರಾಮವನ್ನು ಕೊಟ್ಟಂತೆ ಹೇಳಿದೆ.

ಮಾವನೂರೊಡೆಯ ದೇವರಸ
ಜಡೆ ಮುಡಿಯೊಳ್ ಸುರಾಪಗೆಯನಾಂತ ಮಹೇಶ್ವರನೊಲ್ದ ಶೈವ ಸಂ ।
ಗಡಿಗನ ಪುಣ್ಯ ಪೋಷಕನ ವೀತ ಗುಣೌಘನ ಮರ್ತ್ಯಲೋಕದೊಳ್ ॥
ನಡೆವ ಶಶಾಂಕ ಶೇಖರನ ಸರ್ವ ಸಮೈಕನ ಚಾರು ಮಾವನೂ।
ರೊಡೆಯರೆನಿಪ್ಪ ದೇವರಸನುನ್ನತ ಶೀಳಮಿಳಾ ವಿಭೊಷಣಂ॥೧೭೯೪॥

ಅಪ್ಪರಸ ದೇವರಸರು
ಸ್ವಸ್ತಿ ಸಮಸ್ತ ಸಮುದ್ರ ಮುದ್ರಿಯಮಪ್ಪ ಧರಾಕಾಂತೆಯ ಶಿರಃಕಂಜದಂತೆ, ಪುರತ್ರಯ ವಿಪಿನ ದಹನ ದಾವಾನಳನ ಸುಕೃತ ಸರ್ವಸ್ವದ ಗಸವಣಿಗೆಯಂತೆ, ಸಕಳ ಭಕ್ತರ ಪುಣ್ಯಶಾಲೆಯಂತೆ, ಮುಕ್ತ್ಯಂಗನೆಯ ತಾಯ್ವನೆಯಂತೆ, ಧರ್ಮಾರ್ಥ ಕಾಮ ಮೋಕ್ಷಂಗಳಪ್ಪ ಚತುರ್ವಿಧ ಪುರುಷಾರ್ಥಂಗಳ ಜನ್ಮಕ್ಷೇತ್ರದಂತೆ, ಮೆಱೆವ ಶ್ರೀ ಪರ್ವತದ ಮೇಲೆ ಮೂಜಗಕೆ ಸೋಜಿಗಮಪ್ಪೋಜೆಯಿಂ ರಾಜಿಸುವ ರಾಜೇಂದ್ರ ಚೂಡಾಮಣಿಯ, ಮನ್ಮಥ ಮತ್ತೇಭ, ಮೃಗಾಧಿಪನ , ಕೀನಾಶ ಬಳ ಬಳಾಹಕ, ಮಹಾಬಳನ, ಶಾರ್ದೂಲ ದೈತ್ಯಧ್ವಾಂತ ಪ್ರದ್ಯೋತನ, ದರ್ಪಿಷ್ಟ ಕುಂಜರಾ ಸುರ ಮರಾಳ ಹರ್ಷ ವಿಳಯ ಜಳದ ಗರ್ದನನ,ಸುರ ಸರಿತ್ಸಮುದ್ಭೂತ ಲೋಲತರ ಕಲ್ಲೋಲ ಮಾಲಾ ಸಂಘಟ್ಟಿತ ಜಟಾಜಾಲನ, ಶ್ರೀ ಪರ್ವತಾಧೀಶನಪ್ಪ ಮಲ್ಲಿಕಾರ್ಜುನನ ಕಾರುಣ್ಯಕಾಂತಿ ಕಾಯಮಂ ತಳೆದಂತೆ ಜನಿಯಿಸಿದ ಪರ್ವತಯ್ಯ ಚಂದ್ರನುದಯದಿಂ ಮುನ್ನಂ ಬೆಳ್ದಿಂಗಳೊಗೆವಂತೆ, ಫಳ ರಸಮನೀಂಟುವುದಱಿಂ ಮುನ್ನಂ ಸವಿ ಜಿಹ್ವೆಯಂ ಮುತ್ತುವಂತೆ, ತನಗೆ ಗುರೈಪ್ರಾಪ್ತಿಯಪ್ಪುದಱಿಂ ಮುನ್ನಮೆ ಪೂರ್ವ ವಾಸನಾ ಸಂಬಂಧದಿಂದುರ್ವಿಕೊರ್ವಿ ಪರ್ವತಮನೇಱಿ ಶ್ರೀಮಲ್ಲಿಕಾರ್ಜುನನಂ ಸುತ್ತಿ ಮುತ್ತಿ ಪತ್ತಿ ಪರಿದು ನೆರೆದಾಲಿಂಗಿಸಿ ತನ್ನ ಚಿತ್ತವನೀಶಾಂಘ್ರಿಯೊಳ್ ಸೆಱೆಯಿಟ್ಟ ನೇಹಮಂ ಕಂಡು ಶ್ರೀ ಮಲ್ಲಿಕಾರ್ಜುನಂಕಾರುಣ್ಯಂ ಮಾಡೆ ಗುರು ಕಾರುಣ್ಯಂ ಬಡೆದು ಶಾಂತಿಯಂ ತಳೆದ ನಿರ್ಮಳ ಜ್ಯೋತಿಯಂತೆ ಮೆಱೆಯುತ್ತಿರೆ, ಶಿವನುಭಯ ನೇತ್ರದಿಂ ಚಂದ್ರ ಸೂರ್ಯರೊಗೆದಂತೆ ಪರ್ವತಯ್ಯನುಭಯವಹ ಕಾರುಣ್ಯ ಕಟಾಕ್ಷದಿಂದುದಯಿಸಿದ ಅಪ್ಪರಸ ದೇವರಸರ್ಗೆ ಚಂದ್ರಂಗೆ ಬೆಳ್ದಿಂಗಳಂ ಬೆಳ್ದಿಂಗಳಿಂಗೆ ಪರಿಮಳಮಂ ಪರಿಮಳಕ್ಕೆ ಸವಿಯಂ ಸವಿಗೆ ರೂಪಂ ರೂಪಿಂಗೆ ಸೌಂದರ್ಯಮಂ ಕೊಡುವಂತೆ ಉಪದೇಶಂ ಮಾಡೆ, ಕೈಕೊಂಡ ಅಪ್ಪರಸ ದೇವರಸರ್ ಪುಟವಿಟ್ಟ ಪುಣ್ಯಂ ಪುರುಷಾಕಾರವಾದಂತೆ, ಶಾಂತಿ ಸಾಕಾರವೆತ್ತಂತೆ, ಪರಮಾರ್ಥಂ ಶರೀರವಡೆದಂತೆ, ಭಕ್ತಿ ಜ್ಞಾನಂ ಸಂಸಾರವಂ ಸವಿವಂತೆ, ಮೆಱೆಯುತ್ತೆ, ಲೋಭವಡಿಯಿಡದ ಕರ ಪಲ್ಲವಂಗಳ, ಅನೃತವಂಕುರಿಸದ ರಸನಾಪ್ರದೇಶದ, ಸಂಸ್ಕೃತಿ ಸರಸವಾಡದ ಚರಿತ ಶುದ್ಧಿಯ, ಕಾಮನ ಡಾಮರಕೊಳಸೋರದ ಮನದ ಬಿನದದ, ಮಾಯೆಯಾಜ್ಞೆಯನುಲ್ಲಂಘಿಸಿದ ಚಿತ್ತವೃತ್ತಿಯ, ಶಬ್ದ, ಸ್ಪರ್ಶ, ರೂಪ, ರಸ, ಗಂಧಾದಿ ಭೋಗಕ್ಕೆಳಸದ ಕರಾವಳಿಯ ಮಹಾಮಹಿಮರೆನೆಸಿ, ತಿಲ ಮಧ್ಯದೊಳಿರ್ಪ ತೈಲದಂತೆ, ಕಾಷ್ಠಮಧ್ಯದೊಳಿರ್ಪ ಅಗ್ನಿಯಂತೆ, ಜಲಮಧ್ಯದೊಳಿರ್ಪ ಕಮಳದಂತೆ, ತಾಂ ಮಾನುಷ ಚರಿತರಪ್ಪುದಱಿಂ ಸಂಸಾರಮಂ ಸೋಂಕದೆ ಅನವರತಂ ಶಿವನೊಳವಿರಳ ಪೂಜೆಯಂ ಮಾಡುತಂ ಮೂಲೋಕಮಂ ತೀವಿದ ಶೈವ ಕೀರ್ತಿಯಂ ತಳೆದು ಸುಖದೊಳಿರ್ದರ್॥1795॥

332) ಚಾಮರಾಜನಗರ  64 ( 1380)

ವಿಜಯನಗರದ ರಾಜನಾದ 2 ನೆಯ ಹರಿಹರನ ಆಳಿಕೆಯಲ್ಲಿ ಹೊಮ್ಮದ ಮಹಾಜನಗಳು ಆವೂರ ಮೂಲಸ್ಥಾನದ ದೇವರಿಗೆ ಭೂಮಿಯನ್ನು ಬಿಟ್ಟುದಾಗಿ ಈ ಶಾಸನದಲ್ಲಿ ಹೇಳಿದೆ.

ಹೊಮ್ಮ

ತುಂಗತರಂಗಕಾಂಚನನದೀತಟಸಂಭವನಾಳಿಕೇರನಾ ।
ರಂಗಸುಪೂಗಚೂತವರಚಂಪಕಬಂಧುರನಂದನಾಳಿಯಿಂ ॥
ಪಿಂಗದ ನೀಲನೀರರುಹಪಂಕಜಸೌರಭಸಾರಲೋಲಸ।
ದ್ಭೃಂಗದಿನೊಪ್ಪುಗುಂ ಭರದೆ ಹೊಮ್ಮಮೆನಿಪ್ಪ ಪುರಂ ನಿರಂತರಂ ॥1814॥

ಅದಱೊಳ್ ಬಂದೋದಿ ವಾಚಸ್ಪತಿ ಸುರಪತಿಯಾಸ್ಥಾನದೊಳ್ ಸಂದನಾರ್ಪಿಂ ।
ದದಱೊಳ್ ಬಂದಿರ್ದು ವಾಣೀಸತಿ ಸರಸಕಲಾಪ್ರೌಢೆಯಾದಳ್ ಶಶಾಂಕಂ॥
ಅದಱುದ್ಯದ್ಧರ್ಮ್ಯರುಕ್ಸಂಗದಿನೆಸೆವ ಕಳಾಭೂಷನಾದಂ ಮಹೀಭಾ।
ಗದೊಳೆಂದಂದಾರ್ದು ತದ್ಗ್ರಾಮದ ಮಹಿಮೆಯನಿಂ ಬಣ್ಣಿಸಲೂ ಬಲ್ಲನಾವಂ॥1815॥

ಧರ್ಮಪಾಲನ
ಇದನಾದಂ ನೋಡಿ ಸಂತೋಷದೆ ನಡಸಿದ ಭೂಪಾಲವಕ್ಷಸ್ಥಳವಾ ।
ಸದೊಳಿರ್ಪೆಂ ನಾಂ ಸಮಂತಲ್ಲದೆಯಿದಕುಱೆ ಕಾಯ್ದಿರ್ದನಾವಾಸದೊಳ್ ಮಾ॥
ಣದೆ ನಿಲ್ವಳ್ ತಾನದೆನ್ನಗ್ರಜೆಯೆನುತೆ ರಮಾದೇವಿ ಕೀರ್ತ್ಯಂಗನಾ ಹ।
ಸ್ತದೆ  ದಿಕ್ಪಾಲವ್ರಜಾಧ್ಯಕ್ಷದೊಳನವರತಂ ಡಂಗುರಂಬೊಯ್ಸುತಿರ್ಪಳ್॥1816॥

338) ಸೊರಬ 329 ( 1415)
ಈ ನಿಷಿಧಿಗಲ್ಲಿನಲ್ಲಿ ಅಭಯಚಂದ್ರ ಸಿದ್ಧಾಂತದೇವನ ಶಿಷ್ಯನಾದ ಭಾರಂಗಿಯ ಗೋಪಣ್ಣನು ಸಮಾಧಿವಿಧಿಯಿಂದ ಮುಡಿಪಿದನೆಂದು ಹೇಳಿದೆ.  

ಫಲಭರವಾಂತ ಶಾಳಿ ತಳಿರೇಱಿದ ಚೂತಕುಜಾಳಿ ತೆಂಗು ಕ।
ಣ್ಗೊಳಿಸುವ ಕೌಂಗು ಪೂತ ಲತೆ ಪೂಗಿಡು ಪೂಮರದೋಳಿ ಪಲ್ಲವಂ॥
ಗಳ ಪೊಳಪೊಂದಿ ತಾಂ ನಿಮಿರ್ವಶೋಕಕುಜಂ ತಿಳಿನೀರ್ಗೊಳಂಗಳಿಂ ।
ಸುಲಲಿತಮಾಗಿ ರಂಜಿಪುದು ನಾಗರಖಂಡಮದೆತ್ತ ನೋೞ್ಪೊಡಂ॥1833॥

ಗೋಪಣ್ಣ
ಗೋಪತಿವಾಹನಪ್ರಭೆಯನೇಳಿಸಿ ಗೋಪತಿವಾಹನಾಂಶುವಂ।
ರೂಪುಗಿಡಲ್ಕೆ ತಾಂ ಜಱೆದು ಗೋಪತಿವಾಹನಕಾಂತಿಯಂ ಮಹಾ॥
ಟೋಪದೆ ತಾನೆ ನಿಂದಿಸಿ ಮನೋಹರದೇೞ್ಗೆಯೊಳೊಪ್ಪುತುಂ ಬಹು।
ದ್ವೀಪಮನೆಯ್ದೆ ಪರ್ವಿದುದು ಗೋಪಣನಗ್ಗದ ಕೀರ್ತಿ ಪಾಂಡುರಂ॥1834॥

344) ಮೂಡಬಿದರೆಯ ಹೊಸ ಬಸ್ತಿಯ 5ನೆಯ ಶಾಸನ( ಪಂಚಕಜ್ಜಾಯ, ಪುಟ. 153-163) ( ಸು.1550)
ಈ ಶಾಸನವು ಅಸಮಗ್ರವಾಗಿದೆ. ಇದರಲ್ಲಿ ಸಾಳ್ವಮಲ್ಲ ಎಂಬ ದೊರೆಯ ಶೌರ್ಯ ಪ್ರತಾಪಗಳು ವರ್ಣಿತವಾಗಿವೆ.

ಸಾಳ್ಲಮಲ್ಲ

ಯ॥ ಪುರುಳೀತಂ ಮರುಳೀತನೀತನುರು ಶಾಸ್ತ್ರೋತ್ತುಂಗನೀತಂ ನಿರ ।
ಕ್ಷರನೀತಂ ಸುಚರಿತ್ರನುಱೆ ದುಶ್ಚಾರಿತ್ರನೀತಂ ಗುಣೋ॥
ತ್ಕರನೀತಂ ಗುಣಹೀನನೆಂದವರ್ಗಳಂ ಕಂಡಾಕ್ಷಣಂ ಬಲ್ಲನೀ ।
ಧರೆಯೊಳ್  ಸಾಳುವಮಲ್ಲರಾಯನೆ ವಲಂ ಭಾವಜ್ಞ ಚಕ್ರೇಶ್ವರಂ॥ 1854॥

ಜಗದೊಳ್ ಕ್ಷತ್ರಿಯ ರತ್ನನಂ ಯದು ನೃಪಾಲೋತ್ತಂಸ ಮಾಣಿಕ್ಯನಂ ।
ಮೃಗಲಕ್ಷ್ಮಾನ್ವಯನಂ ಜಿನೇಂದ್ರ ಪದ ಪೂಜಾ ಶಕ್ರನಂ ಚಾಗ ಪೆಂ ॥
ಪಿಗನಂ ಕಾಶ್ಯಪ ಗೋತ್ರನಂ ಸುಗುಣನಂ ಶ್ರೀ ಸಾಳ್ವಮಲ್ಲೇಶನಂ ।
ಪೊಗೞ್ವೀ ನಾಲಗೆಯನ್ಯರಂ ಪೊಗೞ್ವುದೇ ಪಾಲುಂಡು ಮೇಲುಂಬುದೇ॥1855॥

ಬಲಿಯಿಂ ಕರ್ನನೆ ಚಾಗಿಯಾ ಬಲಿಯಿನುದ್ಯತ್ಕರ್ನನಿಂ ಭೋಜನಾ।
ಬಲಿಯಿಂ ಕರ್ನನಿನಂತೆ ಭೋಜ ವಿಭುವಿಂ ಮಾಂಧಾತನೀ ಲೋಕದೊಳ್ ॥
ಬಲಿಯಿಂ ಕರ್ನನಿನಂತೆ ಭೋಜ ವಿಭುವಿಂ ಮಾಂಧಾತನಿಂ ಚಾಗದ ।
ಗ್ಗಲನಾದ ಕಲಿ ಸಾಳ್ವಮಲ್ಲನವನಂತಾರ್ ನೋಂತರೀ ಧಾತ್ರಿಯೊಳ್॥1856॥

ಚಂ॥ ಪರಮ ಜಿನೇಂದ್ರ ಭಕ್ತಿಗೆ ಸುದುಕ್ತಿಗೆ ಚಾಗಕೆ ಭೋಗಕಾತನೊಳ್ ।
ಸಿರಿಗೆ ಪರಾಕ್ರಮಕ್ಕೆ ಕಡು ನನ್ನಿಗೆ ಸತ್ಕಳೆಗಂ ತ್ರಿಲೋಕದೊಳ್ ॥
ಸರಿ ದೊರೆ ಪಾಡು ತೋಡು ಪಡಿ ಪಾಸಟಿಯೀಡೆಣೆಯಿಲ್ಲೆನೈತ್ತಹಂ।
ಕರಿಸಿ ಪೊಗೞ್ದು ಬಾಜಿಸಿತು ಸಾಳುವ ಮಲ್ಲನ ಕೀರ್ತಿ ಡಿಂಡಿಮಂ॥1857॥
 
ಕೃತಜ್ಞತೆಗಳು,  
ಆರ್. ನರಸಿಂಹಾಚಾರ್ಯ
ಪರಿಷ್ಕೃತ ಸಂಪಾದನೆ:
ಎಂ. ಚಿದಾನಂದಮೂರ್ತಿ,

ಪ್ರಕಾಶನ:
ಬೆಂಗಳೂರು ವಿಶ್ವವಿದ್ಯಾಲಯ.
ಬೆಂಗಳೂರು