ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜೂನ್ 18, 2023

ಪದ್ಮಸಾಲೆ ತಿಮ್ಮಣ್ಣ ಕವಿ ವಿರಚಿತ ಕುಮಾರ ಕಾಳಗ ಸಾಂಗತ್ಯ

 ಪದ್ಮಸಾಲೆ ತಿಮ್ಮಣ್ಣ ಕವಿ ವಿರಚಿತ ಕುಮಾರ ಕಾಳಗ ಸಾಂಗತ್ಯ 


ಕುಮಾರ ಕಾಳಗವನ್ನು ಬರೆದವನು ಪದ್ಮಸಾಲೆ ತಿಮ್ಮಣ್ಣನೆಂಬ ಕವಿ. ಕುಮಾರಕಾಳಗವೆಂದರೆ ಷಣ್ಮುಖನಿಗೂ ಪದ್ಮಾಸುರನಿಗೂ ನಡೆದ ಯುದ್ಧವಲ್ಲ. ಶ್ರೀರಾಮನಿಗೂ ಅವನ ಮಕ್ಕಳಾದ ಲವ-ಕುಶರಿಗೂ ನಡೆದ ಯುದ್ಧದ ಸನ್ನೆವೇಶ. ಇದನ್ನು ಕವಿ ಕುಮಾರಕಾಳಗವೆಂದು ಕರೆದಿದ್ದಾನೆ.ಇವನ ಕಾಲ ೧೮ ನೆಯ ಶತಮಾನದ ಕೊನೆ ಅಥವಾ ೧೯ ನೆಯ ಶತಮಾನದ ಆರಂಭದ ಭಾಗವಾಗಿರಬಹುದು. ಈತನ ವಾಸಸ್ಥಾನ ರಾಯಚೂರು ಜಿಲ್ಲೆಯ ಎಲಬುರ್ಗಿ.ಈತ ವೈಷ್ಣವ ಭಕ್ತನಾಗಿದ್ದನು. ಕವಿಯ ಹೆಸರು ಪದ್ಮಸಾಲೆ ತಿಮ್ಮಣ್ಣ ಎಂದಿದೆ. 


ತಾಟಕಿ ಕೊರವಂಜಿ ವೇಶಧರಿಸಿ ಸೀತಾದೇವಿಯ ಅಂತಃಪುರವನ್ನು ಪ್ರವೇಶಿಸಿದಳು.ನಿನ್ನಶಗಂಡನು ರಾವಣನನ್ನು ಕೊಂದದ್ದರಿಂದ ಬ್ರಹ್ಮಹತ್ಯಾ ದೋಷ ಬಂದಿದೆ. ಅದನ್ನು ಹೋಗಲಾಡಿಸಲು ಪಾಪಿಯಾದ ರಾವಣನ ಚಿತ್ರಪಟವನ್ನು ಪೂಜಿಸು. ನಿನಗೆ ಪೀಡೆ ಪರಿಹಾರವಾಗುವುದು. ಮತ್ತೆ ಆ ಪಾಪಿಯಾದ ರಾವಣನ ಹೆಸರನ್ನೆತ್ತುವೆಯಾ ಎಂದು ಸೀತೆ ಕೋಪಗೊಂಡಳು.ಆಗ ತಾಟಕಿ ಆ ಚಿತ್ರಪಟವನ್ನು ಅಲ್ಲಿಯೇ ಬಿಟ್ಟು ಮಾಯವಾದಳು. 


ಬೇಟೆಯಿಂದ ಹಿಂದಿರುಗಿದ ರಾಮನಿಗೆ ಖಳ ರಾವಣನ ಚಿತ್ರಪಟ ಕಾಣಿಸಿತು. ಶ್ರೀರಾಮನು ಕೋಪಗೊಂಡನು.ಹೆಣ್ಣು ಒಳ್ಳಿದಳೆಂದು ನಂಬಲಿಬೇಡ, ಎಂದು ಹೇಳಿ ಸೀತೆಯನ್ನು ಕೊಲ್ಲುವ ಏರ್ಪಾಡು ಮಾಡಿದನು. ಲಕ್ಷ್ಮಣನು ಇಂದ್ರಾಯುಧದಿಂದ ಅವಳನ್ನು ಹೊಡೆದನು. ಊದು ಅವಳ ಕಂಠಕ್ಕೆ ಸುತ್ತಿಕೊಂಡಿತು.ಅದರಲ್ಲಿ ಲಕ್ಷ್ಮಣನು ಪಿಂಡವನ್ನು ಕಂಡನು.ಇಂದ್ರಾಯುಧವನ್ನು ತೆಗೆದುಕೊಂಡು ನೀನು ಎಲ್ಲಿಯಾದರೂ ಹೋಗು ಎಂದು ಸೀತೆಗೆ ಹೇಳಿ ತಾನು ಊಯೋಧ್ಯೆಗೆ ಹೋದನು. ಇಲ್ಲಿ ಸೀತೆಯಪರಿತ್ಯಾಗವು ರಜಕನ ನಿಂದೆಯಿಂದಲ್ಲದೆ ರಾವಣನ ಚಿತ್ರಪಟದಿಂದಾಗಿದೆ.


ಲಕ್ಷ್ಮಣನಿಂದ ಪರಿತ್ಯಕ್ತಳಾದ ಸೀತೆ ಕಾಡಿನಲ್ಲಿ ಅಲೆಯುತ್ತಿದ್ದಳು. ಹೂಕೊಯ್ಯಲು ಜನಕನು ಅದೇ ಕಾಡಿಗೆ ಬಂದಿದ್ದನು. ತನ್ನ ಆಶ್ರಮದಲ್ಲಿಯೆ ಇರಲು ಅವಳಿಗೆ ಹೇಳಿದನು.ಆಗ ಸೀತೆಗೆ ಸ್ವಲ್ಪ ನೆಮ್ಮದಿಯಾಯಿತು. ನವಮಾಸ ತುಂಬಿ ಒಂದು ಮಗುವನ್ನು ಹೆತ್ತಳು. ಅದಕ್ಕೆ ಲವನೆಂದು ನಾಮಕರಣ ಮಾಡಿದರು. ( ಇಲ್ಲಿ ಲವಕುಶರು ಅವಳಿ ಮಕ್ಕಳಲ್ಲ) ಒಮ್ಮೆ ಜಾನಕಿ ಪೂಜೆಮಾಡುತ್ತಿದ್ದ ತಂದೆಗೆ, ಮಗುವನ್ನು ನೋಡಿಕೊಂಡಿರುವಂತೆ ಹೇಳಿ ಹೊಳೆಗೆ ಹೋದಳು.ದಾರಿಯಲ್ಲಿ ಕೆಲವು ಕಪಿಗಳು ಮರಿಗಳನ್ನು ಕಚ್ಚಿಕೊಂಡು ಹೋಗುತ್ತಿದ್ದುವು. ಆಕೆಗೂ ಆಸೆಯಾಗಿ, ಮನೆಗೆ ಹಿಂದಿರುಗಿ,ತಂದೆಗೆ ಹೇಳದೆ, ಮಗುವನ್ನು ಎತ್ತಿಕೊಂಡು ಹೋದಳು.


ಇತ್ತ ಜನಕ ಪೊಜೆ ಮುಗಿಸಿಕೊಂಡು ಬಂದು ನೋಡಿದಾಗ ತೊಟ್ಟಿಲಲ್ಲಿ ಮಗುವಿರಲಿಲ್ಲ.ಮಗುವೆಲ್ಲದುದನ್ನು ನೋಡಿ ಸೀತೆ ದುಃಖಿಸುವಳೆಂದು ಬಗೆದ ಜನಕನು ಒಂದು ದರ್ಭೆಯನ್ನು ಮಂತ್ರಿಸಿದ. ಅದು ಮಗುವಾಯಿತು. ಅದಕ್ಕೆ ಕುಶನೆಂದು ಹೆಸರಿಟ್ಟು ತೊಟ್ಟಿಲಲ್ಲಿ ಹಾಕಿ ತೂಗುತ್ತ ಕುಳಿತಿದ್ದನು.( ಇಲ್ಲಿ ಕುಶನ ಹುಟ್ಟು ಈ ರೀತಿಯಲ್ಲಿ ) ಸೀತೆ ಹೊಳೆಯಿಂದ ಮನೆಗೆ ಬಂದಳು. ತೊಟ್ಟಿಲಲ್ಲಿ ಮತ್ತೊಂದು ಮಗುವನ್ನು ನೋಡಿ ಆಶ್ಚರ್ಯಪಟ್ಟಳು. ಈ ಮಗು ಎಲ್ಲಿತ್ತೆಂದು ತಂದೆಯನ್ನು ಕೇಳಿದಳು. " ನೀನು ಹಡೆದುದು ಎರಡು ಮಕ್ಕಳೆಂದೂ ಒಂದನ್ನು ಇಲ್ಲಿಯವರೆಗೆ ಬಚ್ಚಿಟ್ಟಿದ್ದಾಗಿ " ತಿಳಿಸಿದನು. ಸೀತೆಗೆ ಪರಮಾನಂದವಾಯಿತು. ಆಕೆಯು ಎರಡನ್ನೂ ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು.


ಮೊದಲನೆಯ ಸಂಧಿ,


ಶ್ರೀಲಕ್ಷ್ಮೀಕಾಂತನೆಶೇಷಾವತಾರನೆ

ಶೀಲದೊಳ್ ಶಿಶುವು ಕೊಂಡಯ್ಯ 

ಎಲುಬುರಿಗೆಯ ಗ್ರಾಮದಿ ಸಮೆಯನಾಗಿರ್ದನು 

ಬಲದ ಕಂಬದ ರಾಯನೊರದಿ॥೧॥ 


ಧರೆಯೊಳು ಕಲಿಕೆರೆಯ ಪುರದ ಹುನುಗುಂದವು 

ವರದುರ್ಗ ಬಂಕಾಪುರದಿ 

ಇರೆ ಸಮೆಯನಾಗಿ ಹರಿಶರಣ ಕೊಂಡಯ್ಯ 

ಹರಿಕೃಪೆಯಲಾವಿರಲು ॥೨॥ 


ಲಕ್ಷ್ಮಿಯ ಕಾಂತನು ವೀಕ್ಷಿಸಿ ಕೊಂಡನ 

ಆಕ್ಷಣದಿ ಬಾಯೆಂದು ಕರೆದು 

ಇಕ್ಷು ಮಧುವೆರಸಿದಂತೆ ಕೊಂಡಯ್ಯನು 

ಮೋಕ್ಷಕೆ ಸಾರಿ ತಾನೆಯ್ದಿದ ॥೩॥ 


ದಾತ ಕೊಂಡಯ್ಯನ ಅನುಜ ವಾಬಯ್ಯನು 

ಸುತನು ಗಂಟೆಯ ಕೋನಯ್ಯ 

ಆತನ ಸೂನು ವಾಬಯ್ಯಗೆ ಜನಿಸಿದ 

ಸತ್ಯದ ಸುತ ಗಂಟೆ ತಿಮ್ಮ ॥೪॥ 


ಮನುಧರ್ಮ ಸತ್ಯ ಸಂಬಂಧ ಆಚಾರ್ಯನ 

ಘನಶಕ್ತಿ ಪಾದವ ನಂಬಿ 

ಮುನಿಪ ರಹಸ್ಯರ ಬಂಟರ ಕೃಪೆಯಿಂದ 

ಮನದೊಳು ಮಂತ್ರದೊಳಿರಲು ॥೫॥ 


ತೀರ್ಥವೆ ಮೋಕ್ಷವು ತೀರ್ಥವಕ್ಷಯವು 

ತೀರ್ಥರಾಮಗೆ ಜಯಮುನಿಯು 

ತೀರ್ಥಲೋಕಾರ್ಯನ ತೀರ್ಥವಿಶೇಷವು

ತೀರ್ಥವೆ ಕಾಮಿತ ಪದವು ॥೬॥ 


ಧೀರ ತಿರುಮಲಗಿರಿಯ ಮೆರೆವ ತಾತಯ್ಯನ 

ವರಗುರು ಪಾದಕೊಂದಿಸುವೆ

ತಿರಿಕೊಮಲೊರ ಗುರುವು ರಾಮನುರಾಜ್ಯ 

ತರುಣ ಲೋಕಾರ್ಯಗೆ ಶರಣು ॥೭॥


ಧೀರ ಶ್ರೀರಂಗನು ಧರಿಸಿಹ ಕೀರ್ತಿಯ 

ಮೆರೆವವೀರೇಳು ಲೋಕದಲಿ 

ವರದಂಘ್ರಿಗೊಂದಿಸಿ ಗುರುಪಾದಕೊಂದಿಪೆ 

ಪರುಷ ಸೋಂಕಿದ ಪರರಡಿಯ॥೮॥ 


ಧರಿಸಲು ಸರ್ವ ಪರದಲ್ಲಿ ಗುರುರಾಯ 

ಪರದಲ್ಲಿ ಹೊರೆದ ಗಂಟೆಗನಾ 

ಪರಮ ಭಾಗವತರ ವರದಾಶ್ರಮದಾಸಿ 

ಇರುತಿರೆ ಧರ್ಮದ ಒಳಗೆ॥೯॥ 


ಶೇಷ ಲಕ್ಷ್ಮಿಯ ವೃಂದ ಶಿಶುವು ಗಂಟೆಯ ತಿಮ್ಮ 

ದಾಸ ತಲೆ ಅರಿರಾಯಕೊಂಡ 

ವಸುದೇವನಾತ್ಮ ಕೇಶವಕೃಷ್ಣನೊರದಿಂದ

ಬಸುರ ಶಿಶು ಗಂಟೆ ತಿಮ್ಮ॥೧೦॥


ದೈವಶಿರೋಮಣಿ ಭುವನ ಹದಿನಾಲ್ಕನು 

ಮೈವೊಡಲೊಳಿಕ್ಕಿಹನು

ಶಿವನ ಪ್ರಾಣೇಶನ ಪೊತ್ತುವಾರುತ ಬಹ 

ಸುವರ್ಣಪುರದ ರಕ್ಷಿಸು ಎನ್ನ॥೧೧॥ 


ಗರುವ ವೈಕುಂಠನ ಸನ್ನಿಧಿ ಪಿಂತಿಯರು

ಪರುಷದ ಕಣಿ ಸನ್ನಿಧಿಗಳು 

ಮರುತಾದಿ ದೇವರು ತರುವುಡಿ ಕೃಪೆಯಾಗಿ 

ಗುರುಮೂರ್ತಿ ರಕ್ಷಿಸು ಎನ್ನ॥೧೨॥ 


ಗರುಡ ಗಂಧರ್ವರ ಕರತಳ ಸಿಲೆನಿಟ್ಟ 

ಪೊರಡಿಸಿ ಕೋಯೆಂದು ಪೇಳ್ದ 

ಧರೆಯೊಳು ಕದುರುವಿಂಡಿಲಿಗೆಯ ಹನುಮಂತ 

ಮರೆಯದೆ ಸ್ವಾಮಿ ರಕ್ಷಿಪುದು॥೧೩॥ 


ಮೋದಕೆ ಚಿನಿಪಾಲು ಮಧುರಾದಿ ರಸದಾಳಿ 

ಮುದದಿಂದ ಚಿಗುಳಿ ತಂಬಿಟ್ಟು

ಒದಗಿಸಿ ನಿನಗೆ ನಾತಂದೀವೆ ವಿನಾಯಕ

ಮಧುರದಿ ಮತಿಯ ಕೊಡೆನಗೆ ॥೧೪॥ 


ಓಲೆ ಮೂಗುತಿ ಕೊಪ್ಪು ಪಟ್ಟಿಗೆ ಬಂದಿಯು 

ಮೇಲುಮಾಣಿ ಕವಿದ್ಯಸರದ 

ಮಾಲೆ ಮೋಹಿಸು ಮುದ್ದು ಮೊಗದಳೆ ಚಮಕಿಲಿ 

ಪಾಲೆಸು ಶಾರದದೇವಿ॥೧೫॥


ಪರಿವ ಸೂರ್ಯನ ಪ್ರಭೆಯೇರಿ ತೀವಿಚರಿಸಿದ 

ಪರಿಯಂತ ವರಕವಿ ಜನರು 

ಧರೆಸಿಕೊಂಡೆಮ್ಮನು ಗುರುಲಘು ವಸ್ತ್ರ ಸು 

ಪರ್ಬಿಸಿ ಕೃತಿಯವನೆಯಲಿ ॥೧೬॥ 


ಮನಸೋಕ್ತಿಯಾದಿ ಸತ್ಕೀರ್ತಿಯು ಕ್ರಿಯಾಶಕ್ತಿಯೆ 

ನೀ ನಿಚ್ಚಶಕ್ತಿ ನಾಲ್ವರು 

ವನಿತೆಯರು ನೀವು ಉಮ್ಮಯದಿ ಬಂದಿರೆ 

ತನುವಿನ ತಾಪವ ಕಳೆವೆ ॥೧೭॥ 


ಧವಳ ಸರೋಜನೇತ್ರೆಯೆ ಜ್ಞಾನಶಕ್ತಿಯೆ 

ವಿವರಿಸು ಅಡಿಯನಾ ಮನದಿ 

ತವಕದಿ ಲೆಂಕೆಲಿ ಹವಣಿಸಿ ಕೊಳುತಲಿ 

ಅವನೆನ್ನ ಬೆನ್ನಲ್ಲವೆಂದು ॥೧೮॥ 


ಕಡುಗೋಪದಲ್ಲಿ ತಾಟಕಿ ಮನವಿಟ್ಟಳು 

ಪೊಡವಿಪ ರಾಮರ ಮೇಲೆ 

ಮೃಡನ ಪೆಸರಿನ ಒಡಲಾಂತು ಸಂಭವನ 

ಕಡಿದವನ ಪೀಡಿಪೆನೆಂದು ॥೧೯॥ 


ವಾಯುವೇಗದಿ ಬಂದು ಅಯೋಧ್ಯೆ ಹೊಕ್ಕಳು

ಮಾಯದ ವಿದ್ಯವ ತಾಳಿದಳು 

ಸಾಯ ಕೊಲ್ಲುವೆನೆಂದು ಅಯೋದ್ಯೆ ಪೊಕ್ಕಳುಶ

ಮಾಯದಿ ಕರಿಯಾಗಿ ನಿಂದು ॥೨೦॥ 


ಕೋಟೆ ಕೊತ್ತಳಗಳ ದೂಟಿಸಿ ಕೆಡಹುತ 

ಮೀಟಿದ ಮನೆಗಳ ಮುರಿದು

ದೂಟಿಸಿ ಅಗುಸೆಯ ಮುರಿದೊಳಪೊಕ್ಕಳು

ಆಟವ ನೋಡಿಚ್ಚಶಕ್ತಿ ॥೨೧॥ 


ಪೊಸ ಪೊನ್ನ ಕಳಸದ ಚಂದ್ರಶಾಲೆಯ 

ಮಿಸುಕದವೊಲು ಮುರಿದಳು 

ಹೊಸ ಹೊನ್ನ ಪುತ್ಥಳಿರಾಸ್ಮೆದ ಮನೆಗಳ 

ಕುಶಲದ ಮನೆಗಳ ಮುರಿದು ॥೨೨॥ 


ಮುತ್ತಿನ ರಂಗವಾಲೆಯ ನೇತ್ರದ ಮನೆಗಳ 

ಹೊತ್ತು ಮುರಿದು ಬಿಸುಡುತಲಿ 

ತತ್ತನೆದರಿವುತ ಉತ್ತಮ ನಿಳಯವ 

ನೆತ್ತಿಲಿ ಹೊತ್ತು ಕೆಡಹುತಲಿ ॥೨೩॥ 


ಸೋಮಸೂರಿಯ ವೀದಿ ಹೇಮಕಳಸವ 

ಕಾಮಿತ ಮನೆಗಳ ಮುರಿದು 

ಆ ಮಹಾ ಪ್ರಜೆಯೆಲ್ಲ ಭೂಮಿಗೆಯೊರಗಲು

ಭೀಮರು ಇರಿದು ಅಟ್ಟಿದರು ೨೪॥ 


ಬೆಳಗಿ ಅಗುಸೆಯ ಬಲಿಸಿ ನಿಳಯವ ಬಲಿಸಲು 

ಒಳಿತಾಗಿ ಕೋಟೆಯ ಬಲಿಸಲು 

ಅಳುತಲಿ ಪ್ರಜೆಗಳು ಅಳಿದವರನು ಸುಡಹಾಕಿ 

ನಳಿನಾಭಗೆ ದೂರ ಪೇಳಿದರು ॥೨೫॥ 


ಲಕ್ಷ್ಮಿಯಕಾಂತಗೆ ರಾಕ್ಷಸ ವೈರಿಗೆ 

ಲಕ್ಷಜನರು ಕೈಯ ಮುಗಿದು 

ರಕ್ಷಿಸು ಜೀಯ ಆಕ್ಷಣ ಅಯೋದ್ಯೆಯು 

ವೃಕ್ಷ ಬಿದ್ದಂತೆ ಜನರೆಲ್ಲ ॥೨೬॥ 


ನಾಗಶಯನನೆ ಕೇಳು ಭಗದತ್ತನೆಂಬಾನೆ 

ಈಗ ಕೋಟೆಯ ಕೆಡಹಿತು 

ರಾಘವೇಶ್ವರನೆಂದ ಈಗ ಆಯಿವರವನ 

ಬೇಗದಿ ಕರಿ ತುರಗವ ಕಟ್ಟೆಂದ ॥೨೭॥ 


ಬೇಟೆಯ ರಾಮಣ್ಣ ನೀಟಿಲಿ ಹೊರಡಲು 

ಕೂಟದ ಮನ್ನೆಯರು ನೆರೆದರು 

ದೂಟಿಸಿ ಮದಕರಿ ಬೇಟೆಯನಾಡಲು

ಜೂಟ ರಾಮನ ದಂಡು ಬರಲು ॥೨೮॥ 


ಅತ್ತ ಹೋಗಲಿ ಬಿಟ್ಟು ಇತ್ತಲಿ ತಾಟಕಿ 

ಮತ್ತೆ ಕೊರವಂಜಿಯಾಗುತಲಿ 

ನೆತ್ತಿಮೇಲಣ ಪುಟ್ಟಿ ಮತ್ತೆ ಮುಳ್ಳಿನ ಕೊನೆ

ಸುತ್ತಿದ ನಡುವಿನಿಂದೆಸೆಯೆ॥೨೯॥ 


ಕಂಚಿನ ಕಂಕಣ ಮಿಂಚುವ ಸುಲಿಪಲ್ಲು

ವಂಚನೆಯಿಂದ ನಡೆದಳು 

ಕಂಚಿನ ವಾಲೆಯು ಮಿಂಚುಳ್ಳ ರವಿಕೆಯು 

ಹಂಚಿನಂಥ ಕೊರವಿ ಬರಲು ॥೩೦॥ 


ಪುರದ ಬೀದಿಗಳೊಳು ತಿರುಗಲು ಕೊರವಂಜಿ 

ಕರೆಕರೆದವಳನು ಕೇಳುವರು 

ತುರುಬಿನಕ್ಕ ಕೇಳೆ ಹರಿಸತಿಗೆ ಬಾಹದು 

ಹರಿಸತಿಯ ಬಾಳ್ವೆ ಹೋಹದು॥೩೧॥ 


ಇಂದಿನ ಶಕುನವ ನಾನೆಂದಿಗೆ ಕಾಬೆನು 

ಒಂದು ಭಯವುಂಟು ಮನದೊಳಗೆ 

ನೊಂದೆನು ಫಲವಿಲ್ಲ ತಂದೆ ಮತ್ತೊಬ್ಬಳ 

ಮುಂದಣ ಸ್ವಪನವೆಂತಮ್ಮ ॥೩೨॥ 


ಇಚ್ಛಾಶಕ್ತಿಯು ನಿನ್ನಯಿಚ್ಛೇಲಿ ಎಳೆತಂದೆ 

ಮಚ್ಚರಿಸಿ ತಾಟಕಿ ಮನದಲ್ಲಿ 

ಅಚ್ಯುತ ಸೀತೆಗೆ ಕಿಚ್ಚನಿಕ್ಕಲು ಬಂದೆ 

ಹುಚ್ಚೆದ್ದ ಶುನಕನಂಥವಳೆ ॥೩೩॥ 


ಸತ್ಯಳು ಸೀತೆಗೆ ಹತ್ತದು ನಿನ್ನಿಚ್ಛೆ 

ಎಚ್ಚತ್ತು ನಡೆ ಮುಂದೆ ಮುಂದೆ 

ಹತ್ಯೆಯಲಿ ಪೀಡಿಸೆ ಸತ್ಯ ಸೀತೆಯ ಸುತ 

ಉತ್ರಿಸಿ ಮೊಲೆ ಮೂಗು ಕಿವಿಯ ॥೩೪॥ 


ಬೀಳುವೆ ಮನದೊಳು ಪೇಳೆ ಜ್ಞಾನಶಕ್ತಿ 

ಕೇಳದೆ ಬಂದಿಚ್ಛಶಕ್ತಿ

ಬೇಳುವೆ ನೀನು ಪೇಳಿದ ಮಾತನು 

ಕಾಲವಾಗನೆ ನಿಮ್ಮಣ್ಣ ॥೩೫॥ 


ಮೀರಿ ಹೋಗಲು ಹಾರಿ ಅಯೋಧ್ಯೆದಿ 

ಚರಣ ಸಂಕೋಲೆಯಿಂದವನು 

ಮೊರೆದು ಆರ್ಭಟಿಸುತ ಪೊಯಿವನು ನಿನ್ನ 

ಮೂರಾರು ತುಂಡಾಗಿ ಹೋಹೆ ॥೩೬॥ 


ಉಂಡ ಊಟವ ಬಲ್ಲೊ ಕಂಡ ಕನಸ ಬಲ್ಲೊ 

ಮಂಡಲದ ಕೊರವಿ ನಾನಲ್ಲ 

ಗಂಡರೆಂಬವರಿಲ್ಲ ರಂಡೆಯವಳು ಮತ್ತೆ 

ಕೆಂಡಗಣ್ಣನ ಪುರದ ಸುದ್ಧಿಯ ॥೩೭॥ 


ನೊಂದೆನು ಎಂಬುತ ನಿಂದುವೆ ಕೇಳಲು 

ನೊಂದು ಆಪತ್ತ ಪೇಳುವೆನು 

ನೊಂದೆಯೊಬ್ಬನಿಂದ ಹಿಂದಕೆ ಜಾನಕಿ 

ಚಂದದ ಶಿರವ ಮಡುಹಿದೆ ॥೩೮॥ 


ಕೊಂದ ಶಾಪಂಗಳು ಇಂದು ನಿಮಗಾದವು 

ಮುಂದೆ ನಿನ್ನ ಜೀವಕೆ ಬಹುದು 

ಅಂದಿನವರ ಶಾಪಯಿಂದು ಪೀಡಿಸುತಿವೆ 

ಮುಂದೆ ನಾ ಪೇಳಲಮ್ಮಾಜಿ ॥೩೯॥ 


ಶಾಪವ ಕಳೆಯಲುಪಾಯವ ಪೇಳ್ವೆನು 

ಕೋಪವ ಬಿಡು ಎನ್ನಮ್ಮಾ 

ಪಾಪಿ ರಾವಣನ ರೂಪಿಸಿ ಬರೆಯಲು 

ಶಾಪದ ಬೀಜ ಸುಡುವವು॥೪೦॥


ತೊತ್ತಿನ ಮಗನ ಮತ್ತೇನ ನೆನದೀಯೆ 

ಕತ್ತೆಯ ಕಾವ ಗುಲಾಮನ 

ತೊತ್ತಿನ ಶಾಪವು ಸತ್ಯರಾಮರಿಗುಂಟೆ 

ಮಿತ್ರೆ ನೀ ಪೋಗು ಪೋಗೆಂದು॥೪೧॥ 


ದಶಕಂಠನ ರೂಪ ಹಸನಾಗಿ ಬರೆದಳು 

ಶಶಿಯ ಕಿರೀಟ ಮಗುಟವ 

ಶಶಿಮುಖಿ ಸೀತೆಯು ಬಿಸುಟರೆ ಪೋಗದೆ 

ಹಸನಾದ ಸೆಳೆಮಂಚ ಬಿಡಬೇಡ ॥೪೨॥ 


ಪಟವ ಹಾಕುತಲಿ ಮಮ್ಮಟ ಮಾಯವಾದಳು 

ಕುಟಿಲದ ಕೊರವಿಯೆಂದರಿಯ 

ತುಟಿಯಲ್ಲಿ ಅಣಕಿಸಿ ಪುಟ ಪುಟದಾಡಲು 

ಕಟಕಟ ಕೆಟ್ಟೆನೆಂದಳು ॥೪೩॥ 


ಬಿಟ್ಟು ಬನ್ನಿರೆಯೆನ್ನ ನೀಟಾದ ಪಟವನು 

ಜೂಟ ರಾಮನು ಅಚ್ಯುತನು 

ತಾಟಕಿ ಮಾಡಿದ ಮಾಟವಿದಲ್ಲದೆ 

ತೋಟದೊಳೊಗೆಯಿದ ಹುಗಿಯೆಂದು ॥೪೪॥ 


ತಂದು ಹುಗಿಯೆ ಮತ್ತೆ ಕೊಂದು ಕದ್ದವಳನು 

ಅಂದು ರಾಮನ ಸೆಳೆಮಂಚಕೆ 

ಬಂದ ಪಟವನು ಕಂಡು ನೊಂದಳು ಜಾನಕಿ 

ಮುಂದೇನ ಮಾಡುವೆಯೆಂದಳು ೪೫॥ 


ಅಗ್ನಿಯ ತಂದಳು ಬೇಗನೆ ಸುಟ್ಟಳು 

ಸಾಗಿ ರಾಮರ ಮಂಚಕೆ 

ಅಗ್ನಿಯಲಿ ಸುಡುವರೆ ಮಗ್ಗಿಸುವೆನು ಸೊಕ್ಕ 

ಬಗೆಯ ಪಟವು ಮಾತಾಡಿತು ॥೪೬॥ 


ದಿಟ್ಟ ಮಾತದ ಕೇಳಿ ಕೆಟ್ಟೆನೆಂದಳು ಸೀತೆ 

ಸುಟ್ಟರೆ ಸುಡದೀ ಪಟವು 

ಕೊಟ್ಟಳು ದೂತಿಗೆ ಕಟ್ಟಿದ ಪಟವನು 

ಮೆಟ್ಟಿ ನೀರೊಳು ತುಳಿ ಎಂದು ॥೪೭॥ 


ಕೊಡದೊಳು ತಂದಳು ಎಡಗೈಲಿ ತೆಗೆದರು 

ಮಡಿಯೆಂಬುತ ತುಳಿದರು 

ಎಡಗಾಲ ಹಿಡಕೊಂಡು ಕೆಡಹಿತು ನೀರೊಳು 

ನಡೆಯಿತು ರಾಮರ ಮಂಚಕೆ ॥೪೮॥ 


ಬರುವುದ ಕಾಣುತ ಹರಿದು ಬಿಸುಟಳು 

ಹರಿವುದು ಹತ್ತಿ ಕೊಂಬುದದು 

ಮುರರಿಪು ಬಹನು ತರವಲ್ಲವೆನುತಲಿ 

ಒರಗುಮುಡಿಯಲಿ ಮಡುಗಿದಳು॥೪೯॥ 


ಪಲ್ಲಕ್ಕಿಯನೇರಿ ನಿಲ್ಲದೆ ರಾಘವ 

ಬಲ್ಲಿದ ಬಂದರರಮನೆಗೆ 

ನಲ್ಲಂಗೆ ಬೆಳಗುತ ಹುಲ್ಲೆಗಂಗಳ ಸೀತೆ 

ಜಲ್ಲಿಯ ಮೃಗ ಬೇಂಟೆಕಾರಂಗೆ ॥೫೦॥ 


ನಳಿನನಾಭ ಪವಡಿಸೆ ಸೆಳೆಮಂಚದಮೇಲೆ 

ತಲೆಗಿಂಬಿನಲಿಯುಬ್ಬುತಲಿ 

ತಲೆಗಿಂಬು ಎತ್ತುತ ಹೊಳೆವಡಿದೇನೆಂದು 

ಖಳನ ರೂಪುಗಳ ಕಂಡನು ॥೫೧॥ 


ಹೆಣ್ಣು ಒಳ್ಳಿದಳೆಂದು ಇನ್ನು ನಂಬಲಿಬೇಡ 

ತನ್ನ ಲೇಸುಗಳ ನೋಡೆಂದ 

ಚೆನ್ನ ನಳಿನನಾಭನು ಇನ್ನಿವಳ ಕೊಲ್ಲೆಂದು 

ತನ್ನ ತಮ್ಮನಿಗೆ ಪೇಳಿದನು ॥೫೨॥ 


ಇಲ್ಲಿ ಕೊಲ್ಲಲಿಬೇಡ ಎಲ್ಲರು ಕಂಡಾರು

ಹುಲಿ ಕರಡಿಯಿಹ ಮಲೆಯೊಳು 

ಕೊಲ್ಲೆಂದ ನುಡಿಗೇಳಿ ಬಲ್ಲಿದ ಲಕ್ಷ್ಮಣ 

ಅಲ್ಲಿ ಸೀತೆಯ ಕರೆದನು ॥೫೩॥ 


ಅಡವಿ ಅಡವಿಯು ಗಿಡ ಗಿಡದೊಳು 

ತಡೆಯದೆ ಸೀತೆಯನೊಯ್ದನು 

ಕಡಿಯಪ್ಪ ಎಂದೆನುತ ನುಡಿದಳು ಸೀತೆಯು

ಕಡಿವೆನು ನಡಿ ಮುಂದಕೆನುತ ॥೫೪॥ 


ಅಲ್ಲಿ ಹೋಗುವ ದೇಹ ಇಲ್ಲಿ ಹೋಗದೇನಪ್ಪ 

ಕೊಲ್ಲೆಂದು ಸೀತೆ ನುಡಿದಳು

ಬಲ್ಲಿದ ಶಾರ್ದೂಲ ಅಲ್ಲಿ ಸಿಂಹಗಳುಂಟು 

ಇಲ್ಲಿ ಕೊಲೂಲಯ್ಯ ಮೈದುನನೆ ॥೫೫॥ 


ಎನ್ನ ಕೊಂದ ಕೊಲೆ ನಿನ್ನ ಕೊಲ್ಲದೇನಯ್ಯ 

ಚೆನ್ನ ಲಕ್ಷ್ಮಣ ಕೇಳೆಂದು 

ಹನ್ನೆರಡು ಹೆಜ್ಜೆಯ ಕನ್ನೆಯ ನಡೆಸಿದ 

ಚೆನ್ನ ಸೀತೆಯ ಕುಳ್ಳಿರಿಸಿ ॥೫೬॥ 


ಇನ್ನು ಸಾವುತಲಿದ್ದೆ ನಿನ್ನವರ ನೆನೆಯೆಂದು 

ಮನ್ನಿಸಿ ಚೆನ್ನ ಲಕ್ಷ್ಮಣ್ಣ 

ಚೆನ್ನ ನಳಿನನಾಭನು ಇನ್ನೊಂದು ಜನ್ಮಕೆ 

ಎನ್ನ ಪುರುಷನಾಗಲೆಂದು॥೫೭॥ 


ಹೆತ್ತವರ ನೆನೆವೆನು ಅತ್ತೆ ಮಾವಂದಿರನು 

ಮತ್ತವರು ಎನ್ನ ಬಳಗವು 

ಉತ್ತಮ ಲಕ್ಷ್ಮಣ್ಣ ಮತ್ತ ಬರುತವತ್ತ 

ಮುತ್ತಿನಂಥವರೆನ್ನ ಬಳಗ॥೫೮॥ 


ಕರದ ಚಂದ್ರಾಯುಧವ ತಿರುಹಿ ಹೊಡೆದರಿಂತು 

ಹೆರಸಾರಿ ಬಂದು ಹಿಂದಕೆ ಹೋಗಿ 

ಪರಿಯ ನೋಡೆನ್ನುತ ಮರಳೊಮ್ಮೆ ಹೊಡೆಯಲು 

ಕೊರಳಿಗೆ ಸುತ್ತಾಲೆ ಸುತ್ತಿ ॥೫೯॥ 


ಸುತ್ತಿಕೊಂಡದರೊಳು ಮತ್ತೆ ಪಿಂಡವು ಪೊಳೆಯೆ 

ಉತ್ತಮ ಲಕ್ಷ್ಮಣ್ಣ ಕಂಡನು 

ಸುತ್ತಿದ ಚಂದ್ರಾಯುಧವ ಮತ್ತೊಮ್ಮೆ ಬಿಡಿಸಿದ 

ಇತ್ತ ಹೋಗೆಂದು ಕಳುಹಿದ ॥೬೦॥ 


ಅಡವಿ ಮಿಕವ ಕರೆದು ನುಡಿಸಿ ಮಾತಾಡಿಸಿ 

ಗಡಿಯ ನಿಮ್ಮವ ಪಾಲಿಸಿ ಕಳುಹೆಂದ 

ನಡೆದು ಹೋಗುತೆ ಸೀತೆ ಹುಡಿಯೊಳು ಹೊರಳುತ 

ಮಡಿದರೆ ಪುಣ್ಯಗೈವೆನೆನುತಲಿ ॥೬೧॥ 


ಅಡವಿಯ ಹುಲಿಗಳು ಗಡಿಗಳ ಹಾಸುತ 

ಪೊಡವಿಗೊಡೆಯಳೆಂದು ಕಳುಹುತ 

ಅಡಿಯಲಿ ಬಿದ್ದರೆ ನುಡಿಸಿತು ಎಕ್ಕಲ 

ಗಡಿಯನು ಹಾಸಿ ಕಳುಹಿತು ॥೬೨॥ 


ಸುರನರಸಿಯು ಮೇಲುರಿವುತಪೋಗಲು 

ಕರಿ ಬಂದು ನೆಳಲ ಮಾಡಿದುವು 

ಕರಡಿಮರಿಗಳು ಕಂಡು ಶರಣೆಂದು ಸೀತೆಗೆ 

ಕರೆದೊಯ್ದು ಗಡಿಯ ದಾಟಿಸಿತು॥೬೩॥ 


ಉಡುವು ಮುಂಗಲಿಗಳು ಗುಡುಗುಟ್ಟಿ ಬರುವಾಗ 

ಉಡುವಣ್ಣ ದಾರಿ ತೋರೆಂದು 

ಅಡವಿಯೊಳಗೆಯಿವೆ ನುಡಿಸಲೇತಕೆಯಮ್ಮ 

ಉಡುವೆ ದಾರಿಯ ಕಾಣೆವೆನುತ ॥೬೪॥ 


ಕಂಡು ಕಾಣದ ಕಣ್ಣು ಕಂಡರೆ ಮುಚ್ಚಲು 

ಕಂಡರೆ ನಿನ್ನ ಬಳಿಯಲಿ 

ಪುಂಡಿನಾರಿನಂತೆ ಲಂಡವುಡುವಿನ ಬಾ 

ಲ್ದಂಡದಿ ಕೊರಳ ತಟ್ಟುತಲಿ ॥೬೫॥ 


ನುಡಿದ ನಾಲಗೆ ಸೀಳಿ ಸುಡುತಲಿ ದೇಹದಿ 

ನಡೆದರೆ ಪ್ರಾಣ ಹೋಗುತಲಿ 

ಉಡುವಿಗೆ ಶಾಪವ ಕೊಡುತಲಿ ನಡೆಯಲು 

ಬಡನಡುವಿನ ಜಾನಕಿಯು ॥೬೬॥ 


ಅಣಿಲೆಯ ಕೇಳಲು ಕುಣಿದಾಡುತಲಿ ಬಂದು 

ಅಣಿಲೆ ತೋರುವದು ದಾರಿಯನು 

ತನಗೆ ದಾರಿಯ ತೋರಲು ಅಣಿಲೆಯ ಮೈಯನು 

ಮನದಣಿಯೆ ನೇವರಿಸಿ ನಡೆಯೆ ॥೬೭॥ 


ಹೊರಳುತಲೇಳುತ ಶಿರವೆತ್ತಿ ನೋಡುತ 

ವರವ ಬೇಡುವೆನೆಂದು ನರಿಯ 

ಕರೆದು ಕಂಜಮುಖಿ ನರಿಯ ದಾರಿಯ ಕೇಳೆ 

ಹಿರಿಯ ಮಾರ್ಗಗಳನೆ ತೋರೆ ॥೬೮॥


ಹರಕೆಯ ಹಿಡಿಯೆಂದು ಕರುಣಿಸಿದಳು ಸೀತೆ 

ಸಿರಿಯಂತೆ ನಾನ್ನ ಕಾಬುವದು 

ನರಿಯೆಂದರೆ ಬಿಡದೆಶಶಿರಕೆ ಪೊಯ್ಯಲು ನಮ್ಮ 

ನರಿ ನಿನ್ನೆಂತು ಮಾಡುವನಮ್ಮ ॥೬೯॥ 


ಅಟ್ಟುತ ಬಂದರೆ ಬೆಟ್ಟಕೆ ಹೋಹದು 

ಬೆಟ್ಟಕೆ ಬಂದರಿಳಿವದು 

ಕಟ್ಟಿಸಿ ಬಿಡುವಾಗ ಕೆಟ್ಟೆನು ಎಂದರೆ 

ದಿಟ್ಟಕೆ ಭೂಮಿ ಬಾಯ್ದೆರೆಯೆ ॥೭೦॥ 


ನವಿಲಾಡುವದ ಕಂಡು ಸವಿನೀರ ಕೇಳಲು 

ನವಿಲೊಯಿದವು ತಮ್ಮ ಡೊಣೆಗಾಗಿ 

ಸವಿದಳು ಪನ್ನೀರ ಕುವರನಾದರೆ ನಿನ್ನೆ 

ನವಿಲೆ ನಿನ್ನ ಪೆಸರ್ಗೊಂಡು ಕರೆವೆ॥೭೧॥ 


ಒಲೆವುತಲೋಡಾಡು ನಲಿವುತ ಕುಣಿದಾಡು 

ಮಲೆಯೊಳು ನೀ ತಿರುಗಾಡು 

ಹೊಲಬುತಪ್ಪಿದೆನೆಂದು ಉಲಿದು ಪೇಳಲು ಸೀತೆ 

ಚೆಲುವು ಪವುಸೆಗಳು ಕೇಳುತಲಿ ॥೭೨॥ 


ಕುಸುಮ ಹೊನ್ನೆಯ ಕಡಿದು ಶಶಿಮುಖಿಯ ಸೀತೆಯ 

ಎಸೆವ ನೇತ್ರದಂತೆ ಮಾಡಿ 

ಬಿಸಿಲ ತೆಗೆಸಿದನು ಶಶಿಕುಲದ ಲಕ್ಷ್ಮಣನು 

ದಶರಥರಾಮನ ಕಂಡು ॥೭೪॥ 


ಹೊತ್ತಾರೆ ಹೋದಯ್ಯ ಕತ್ತಲೆಯಾದಾವು 

ಅತ್ತೇನ ಮಾಡಿದೊ ಲಕ್ಷ್ಮಯ್ಯ 

ಇತ್ತಲಿ ದಾರಿಯ ಎತ್ತಲು ಕಾಣದೆ 

ಸುತ್ತಿದೆ ನಟ್ಟನಡವಿಯನು॥॥೭೫॥ 


ಕೊಂದ ಕುರುಹನು ತಂದು ಮುಂದೆ ತಂದಿಡಲಿಕೆ 

ನೊಂದನು ಕಂಜನಾಭನು 

ಬಂದ ಕೋಪದಲಿ ಒಂದು ಮಾತಾಡಲಿ 

ಕೊಂದು ಬಹರೆ ತಮ್ಮ ನೀನು ॥೭೬॥ಷ


ಬಳಗವಿಲ್ದವಳ ಕೊಲುವರೆ ತಮ್ಮನೆ 

ಬಲುಗೋಪ ತಿಳಿದಿಂತೆಂದನು

ಹೊಲೆಗೋಪ ತಪ್ಪಿಸಿ ತಲೆಗಾಯಬೇಕೆಂದು 

ಕೊಲುವರೆಯೆನ್ನ ಲಕ್ಷ್ಮಣ್ಣ ॥೭೭॥ 


ಕದನ ಬಂದವೆಂದು ಹದನನೆಲ್ಲವ ಕಂಡು 

ಪದುಳದಿ ಲಕ್ಷ್ಮಣ್ಣಸತಿಯ 

ಮದುವೆಯಾದ ಸತಿಯಳ ಮಸೆದು ಕೊಲಿಸಿದೆ 

ಮೊದಲ ಸಂಧಿಗೆ ಶರಣಾರ್ಥಿ ॥೭೮॥


ಆರನೆಯ ಸಂಧಿ: 


ಮಿಸಲಿ ಕುಚದಕ್ಷಿಕ ಸಸಿಮೊಲೆಯಳೆ 

ಎಸೆವಕುಮುದನೇತ್ರೆ ಬಾಲೆ 

ದಶರಥರಾಮನ ಹಸನಾದ ವಾಕ್ಯವ 

ವಿಸ್ತೀರ್ಣಕೇಳಿಚ್ಛ ಶಕ್ತಿ ॥೧॥ 


ಸುರರು ದೇವೇಂದ್ರನು ಹರನ ದೂಸದಿ 

ಹರುಷದಿ ಸಿಂಹಪಟ್ಟದಲಿ 

ಹರಿ ಸೀತೆ ಲಕ್ಷುಮಣ್ಣತರಳ ಲವಕುಶರನು 

ಅರ್ಥಿಲಿ ಬಿಜಯಮಾಡಿದರು॥೨॥ 


ಹರಿಯ ಕೆಲಬಲದಲಿ ಬರುತ ಕ್ಷತ್ರಿಯರು 

ತಿರುಹಿ ಚವುರವಡಾಳಿಸುತ

ಸುರರು ದಿಕ್ಪಾಲರು ಸೂರ್ಯ ನವಗ್ರಹಗಳು 

ಹರಿಗೆ ಕನಕ ಸ್ನಾನವ ಮಾಡಿ ॥೩॥ 


ದಿವ್ಯ ಪೀತಾಂಬರ ಹರಿ ತುಷ್ಟಿಯ ಮಾಡಿ 

ಹೂವಿನ ಮಳೆಯ ಸುರಿದರು

ದೇವರದೇವಂಗೆ ರಾವಣವೈರಿಗೆ 

ದೇವತೆಗಳು ಏಕಾರತಿಯ॥೪॥ 


ಚರೈವ ಚೆಲ್ಲಾಡಿ ಹರಿಯ ಸೇವೆಯ ಮಾಡಿ 

ತಿರುಹೋಮದಿಂದ ನೆತ್ಯವನು 

ತೀರ್ಥಪ್ರಸಾದವ ಅಮೃತಗಳನುಂಡು 

ಹರಿಯ ಸೇವಿಸುತಿರೆ ಸುರರು॥೫॥ 


ಬಾಳೆ ಹೇರಿಳೆ ನಿಂಬೆ ದಾಳಿಂಬ ಮಾದಲು 

ಬೆಳೆದಿರ್ದ ಪಲಸುವಣ್ಣುಗಳ 

ಮೆಳೆಯೊಳು ಬೆಳೆದಿರ್ದ ಜೇನು ಸಕ್ಕರೆ ಚಿನಿ 

ಪಾಲ ತಳಿರ್ವಾಸಿನೊಳಿಕ್ಕಿ ॥೬॥ 


ಸೀತೆ ರಾಮಾನುಜಗೆ ನೀತಿಯಲಿ ಕಾಣಿಕೆಯ 

ಆತ ಬಾಗಿ ಕೈಮುಗಿದ 

ಸತ್ಪುರುಷಗಳು ಸತ್ಯ ಓಲಗದೊಳು

ಮೂರ್ತಿಗೊಳಿಸಿ ಹನುಮಂತ ॥೭॥ 


ತಾಮಜ ಕಲ್ಪಜ ರೋಮಜ ಬೆಪ್ಪಜ

ಸಾಮರ್ಥ್ಯ ಡೊಂಕಜ ಮುನಿಯ 

ಭೂಮಿಯ ಮೇಲಿರ್ದ ಕಾಮಿತ ಫಲಗಳ 

ರಾಮಚಂದ್ರಂಗೆ ಕಾಣಿಕೆಯ ॥೮॥ 


ಅಂಧತಮಸಹಿತಾನು ತೀರ್ಥ ಪ್ರಸಾದ ನಿಃ 

ಚಿಂತರಾಗಿ ಎತ್ತಿಕೊಳಲು 

ಇಂತಿವರಂತಾನು ಶಾಂತವ ರಾಮನು 

ಭ್ರಾಂತಗೊಂಡು ನೋಡುತಿರಲು॥೯॥ 


ಧರ್ಮ ಕೆರೆಯಲ್ಲಿ ಎರೆಯೊಳಗೆ ನಿಮ್ಮ 

ಧರೂಮ ತಿರುವಡಿಯ  ತೀರ್ಥವನು 

ವರ್ಮಿಸಿ ಕಾಲುವೆ ಪರಿಸ್ತಾನ ಜನಕೆಲ್ಲ

ಕರ್ಮದ ಕಶ್ಮಲ ತೆಗೆದು॥೧೦॥


ಪದಿನೆಂಟು ಜಾತಿಯ ಚದುರ ನೀ ಬೆಳೆಸದೆ 

ಮಧುರದಿ ಕುಲಕೊಂದು ಮರನ 

ಪದುಮಸಾಲೆಯ ತಿಮ್ಮ ಇದರೊಗಿಹನು 

ಒದೆದ ಕಂಟಕವ ಪರಿಹರೆಸಿ ॥೧೧॥ 


ಪರಮಪುರುಷ ಪುರಂದರನು ರಂಗರಾಯ 

ಮೂರುಲೋಕವುವೊಂದೆ ಮುಂದೆ 

ಮರ್ತ್ಯದ ಗಂಟೆಗಸುರರಿಗೆ ಅರುವರೆ 

ಹರಿ ನಿಮ್ಮ ಕಾವ್ಯಧರ್ಮವನು॥೧೨॥ 


ವಿರಚಿಸಿ ಮುಗ್ಧರು ಸುರಲೋಕ ಕಂಡೆವು 

ವರರ ಬಂಧುವನು ಗಂಟೆಗನ 

ತಿರುವ ತೀರ್ಥಪ್ರಸಾದವ ಕೈ ಕೊಂಡು

ವರವೀರ ಹನುಮಂತ ತಂದ॥೧೩॥ 


ಪರಮಭಾಗವತ ವರದ ಗಂಟೆಗನಿತ್ತ 

ಶರಣೆಂದು ಅಡಿಯ ತಕ್ಕೊಂಡ 

ಶರಣು ಶರಣುದೇವ ಶರಣ ದಾಸಾನುದಾಸಿ 

ಹರಿನೋಡಿ ಕೃಪೆಯಾದ ಬಲೆ ॥೧೪॥ 


ರಾಮ ಸೇನೆಗೆ ಮುಳ್ಳಮೊನೆಯಲ್ಲಿ ಕೊಟ್ಟನು 

ಕಾಮಿತ ಪದವುಂಟು ಎಂದ 

ಸೋಮ ಸೂರ್ಯನ ನವಗ್ರಹದಿ ಕುಲಪಾಲರಿಗೆ 

ರೋಮಕೋಟಿ ಹನುಮಂತ ॥೧೫॥ 


ಸುರರು ಮುನ್ನೂರು ಕೋಟಿಗೆ ತೀರ್ಥವಾಯಿತು

ಪರಮಋಷಿಗಳಿಗೆಲ್ಲ ಕೊಟ್ಟ 

ಸಾರದಿ ಸುರ ಜ್ಯೇಷ್ಠೆಗೆ ಗುರು ಪತ್ರವಿತ್ತನು 

ಸುರಜ್ಯೇಪ್ಠನ ಪ್ರಜೆಗೆಲ್ಲ॥ ೧೬॥ 

 

ಗಿರಿಸುತೆಯ ಪತಿ ಶರಣರಿಗೆ ಇತ್ತನು 

ವರುಣ ದಿಕ್ಪಾಲ ಪ್ರಜೆಗೆಲ್ಲ 

ಗೈರುಸ್ತೋಮ ಹನುಮಂತ ಮರೆಯದೆ ಕೊಟ್ಟನು

ಗುರು ಶಿವನಿಗೆ ರಾಮ ವಂದಿಸಿದ ॥೧೭॥ 


ಹರಿಯ ಶ್ರೀಹಸ್ತದಿ ತೀರ್ಥಪ್ರಸಾದವ

ಪರಮಭಾಗವತ ಹನುಮ 

ಗುರುವಿನೋಲಗದೊಳು ಪ್ರಭಕ್ತಿವೆಡಿದನು

ತಿರುಮಣು ಶ್ರೀಚೂರ್ಣ ಮುಖದಿ ॥೧೮॥ 


ಚರದಲ್ಲಿ ರತ್ನದ ಲೆತ್ತವ ಪಿಡಿದನು 

ಗುರುವಿನೋಲಗದ ಸಮ್ಮುಖದಿ 

ಅರುವತ್ತು ಸಾವಿರ ಹಗಲು ಪಂಜೆಸೆದವು

ದೊರೆ ರಾಮಚಂದ್ರನೋಲಗದಿ ॥೧೯॥ 


ಪರಿಪರೆ ವಾದ್ಯದ ಭೋರೆಂಬ ರಭಸಕೆ 

ಧರಿತ್ರಿ ಭುಗಿಭುಗಿಲೆನಲು

ಹರಿಪುತ್ರ ಹನುಮಂತ ವಾರಿಯ ಬಿಡಿಸುತ 

ಸುರನಾರಿಯರು ಪಾತ್ರವಾಡೆ॥೨೦॥ 


ಗರುಡವಾಹನ ಪಟ ಮೀನಕೂರ್ಮನ ಪಟ 

ವರನರಸಿಂಹನ ಪಟವು 

ಮೂರು ಪಾದದ ಪಟ ತೀರ್ಥವಳಿದ ಪಟ 

ಪರಮ ರಾಮನ ಪಟವಿರಲಿ॥೨೧॥ 


ರಾಮಚಂದ್ರನ ಪಟ ಕೆಲಬಲದಲ್ಲಿಹ 

ಭೂಮಿಚಕ್ರವು ಶಂಖಪಟವು 

ಸೋಮ ಸೂರಿಯಪಾನ ಛತ್ರಮಾಯಿ ಮುರುತಾಪವು

ರಾಮಚಂದ್ರನ ವಾಲಗದಿ ॥೨೨॥ 


ಬುರುಗುಚಿನ್ನಗಳೆ ಚೀರುವ ಶಂಖವು 

ಮೆರೆವ ಸತ್ತಿಗೆ ಸಾವಿರವು 

ದೊರೆಗಳ ಸತ್ತಿಗೆ ಅರುನೂರು ಸಾವಿರ 

ಸರೈವರ ಸತ್ತಿಗೆ ಮಿತಿಯಿಲ್ಲ ॥೨೩॥ 


ವೃಲೆ ಮೂಗುತಿ ಕೊಪ್ಪು ಒಳ್ಳೆಯ ಬಂದಿಯು 

ಸಾಲು ಮುತ್ತಿನ ಮುಡಿಯ ಬಾಲೆಯರು 

ಪೇಳುವೆ ನಿನಗೆ ನಾ ಜ್ಞಾನಶಕ್ತಿಯರಲ್ಲಿ

ಲಾಲೆಸು ನಿನ್ನ ಕರ್ಣದಲಿ ॥೨೪॥ 


ಪೇಳು ನೀ ಗಂಟೆಗನ ನಳಿನನಾಭನನರ್ತಿಯ 

ನಾಲ್ವರು ನೀವು ಕೇಳುವುದು 

ಲಾಲಿಪೆ ಕರ್ಣದಿ ಪೇಳು ನಿನಗತಿಯನು 

ಗಾಳಿಲಿ ತೋರೆಂದು ನಮ್ಮ ॥೨೫॥ 


ಇಮ್ಮನವಿಲ್ಲದೆಯೊಮ್ಮನದಿ ಕೇಳು 

ಬ್ರಹ್ಮನಯ್ಯನ ಕೀರ್ತಿಯನು 

ನಮ್ಮಳವಲ್ಲವು ಹಮ್ಮಿಲ್ಲ ಜ್ಞಾನಶಕ್ತಿ 

ಘಮ್ಮನೆ ಗತಿಯ ಪಾಲಿಪುದು॥೨೬॥ 


ಮೇಲೆವೆ ಕೂಟದಿ ನೀಲಾಂಬರದೊಳು 

ಪೇಳುತ ಕಮಲಾಶ್ರೀ ಮಾತ 

ನೀಲಲೋಹಿತ ವಿಧಿಯ ಆಳಿದ ಅಮರರ 

ಕೇಳಿಯವನಿಂದಲಿ ನೊಂದೆ ॥೨೭॥ 


ಸೆರೆಹೋದ ಕಾರಣ ವರ ರಘುಪತೀಶ್ವರ 

ತರುತಿಹ ಎನಗೆ ಕಂಟಕವ 

ಇರಲಾರೆ ಧರೆಯೊಳು ಕರಸಿ ನಿಮ್ಮಂಘ್ರಿಯ 

ಚರಣ ಸಾಗರವ ಸೇರಿಸೆನ್ನ ॥೨೮॥ 


ಲೆಂಡೆ ನಿಮ್ಮೊಳು ಕಪ್ಪು ಕಂಡರೆ ಸೇರೆನು 

ಪುಂಡರೀಕಾಕ್ಷ ಇಂತೆಂದ 

ಕಂಡಭೂಪತಿ ಕೆಳಕಂಡಸೂರ್ಯನ ಕೇಳಿ 

ಕಾಂತ ರವಿಸುತೆ ಮಾತೆ ಕೇಳಿ ॥೨೯॥ 


ಯಮರವಿ ಭೂಮಿಸತಿ ಕಮಲಶ್ರೀಕಾಂತೆಯಲಿ 

ಗಮನಿಸಿಯೆನಲು ಇಂತೆನ್ನ 

ತೆಲಸ್ತ್ರೀವಿತ್ತಿಯ ಗಮನವ ನೋಡಿರೆ 

ನಮಗರುಹುವುದೆಂದ ರಂಗ॥೩೦॥ 


ಪುರಸ್ತೋಮ ಗಮನಿಸಿ ನರಲೋಕ ತಿಳಿದನು 

ಹರಿಯೊಂದು ಮಾಯ ರೂಪಾದ 

ನರದಲೆ ನರೆಗಡ್ಡ ಸಿರ ನಡುಬಾಗಿ 

ಕರದಲ್ಲಿ ಊರುಗೋಲು ಪಿಡಿದು॥೩೧॥ 


ಸುರಿವುತ ದೃಗರೋಜ ಒರೆಸುತ ನಯನವ 

ಧರಿಸಿದ ನಾಮ ಲಾಂಛನವ 

ಬರಿಗಾಲು ಬಿಸಿಲೊಳು ಬರುತಿಹ ನಡೆಸುತ 

ಅರಸು ರಾಮರ ದಂಡಿನೊಳಗೆ ॥೩೨॥ 


ಏಳುತ ಬೀಳುತ ಕೇಳುತ ರಾಮರ 

ಸೋಲುತ ಸೊರಗುತ ಮುದುಕ 

ಕೇಳುತ ಹನುಮಯ್ಯ ಬೀಳುವ ಮುದುಕನ 

ಹೇಳಿ ನೀವೆತ್ತಣಿಂದೆನಲು ॥೩೩॥ 


ಕೇಳಿ ಬಂದೆನು ಹನುಮ ಪೇಳುವರೆಲ್ಲರು 

ಮೇಲು ದೇಶದಲಿ ಕೀರ್ತಿಯನು 

ಕಾಲಲಿ ಶಿಲೆಯನು ಬಾಲೆಮಿಂಡಯ ಮಾಡಿ 

ಮೇಲೆ ರಾಕ್ಷಸಂಗೆ ಸ್ಥಿರಪಟ್ಟ ॥೩೪॥ 


ಮೊದಲೊಬ್ಬ ಮುನಿಶಿಶು ನದಿಯೊಳಗೆ ನೆಗಳ್ನುಂಗೆ 

ಅದು ತಂದು ಬದುಕಿಸಿಕೊಟ್ಟ 

ಅದ ಕೇಳಿ ಬಂದೆನು ಮುದುಕತನ ಪೋಗಿ 

ಬದುಕುವೆ ಕೇಳ್ಮೋಕ್ಷೆಯಾಗಾ ॥೩೫॥ 


ನಡೆಯಲಾರೆನು ಮಗನೆ ಪಿಡಿದೆತ್ತಿಕೊಂಡೊಯ್ಯೊ 

ಒಡನೆ ಪಿಡಿದೆತ್ತಿ ದಯಾಳ 

ಬಡವಾಸ್ಪತಿ ನಿನ್ನಗಡಣೆಗೊಳದೆಯೊಳ 

ಕಡುಭಕ್ತಿ ಮಾಡೆಂದ ಬಾಲ ॥೩೬॥ 


ಕಣಕಾಲ ಹಿಡಿಕೊಂಡ ದುರಸಾಗಿ ಎತ್ತಲು 

ಧರೆಯ ಬಿಟ್ಟೇಳನು ಮುದುಕ 

ಕರೆದು ತನ್ನಯ ಬಾಲ ಸರಸರನೆ ಸುತ್ತಿದ

ಸರುವ ಶಕ್ತಿಂದ ಎತ್ತೆಂದ ॥೩೭॥ 


ಒಡೆಮುರಿದೆತ್ತಲು ಪೊಡವಿ ಬಿಟ್ಟೇಳಲು 

ಕಡುನೊಂದು ಮತ್ತೆ ಚಿಂತಿಸಿದ 

ಪೊಡವಿ ತೂಚದಿ ಬಡ ಮುದುಕನಿಹನು 

ನಡೆದನು ರಾಮನಿದ್ದೆಡೆಗೆ ॥೩೮॥ 


ಕರವೆತ್ತಿ ನೊಸಲಲ್ಲಿ ಮುರರಿಪು ಕೇಳಯ್ಯ 

ಧರೆಯ ತೂಕದ ಮುದುಕನು 

ಬಿರುದು ಕೇಳಿದನಂತೆ ಸಿರಿ ನಿಮ್ಮಂಘ್ರಿಯ 

ನೆರೆಪೋಗಿ ಕರೆತಾಹೆನೆನುತ ॥೩೯॥ 


ಹನುಮ ಪೇಳಲು ರಾಮ ಮನದೊಳು ತಿಳಿದನು

ಘನ ಮಹಿಮನಹನೆಂದು ನಡೆದ 

ತನುವನೀಡಾಡುತ ವನಮಾಲೆ ಚರಣಕೆ

ದನುಜಮರ್ದನ ರಾಮಚಂದ್ರ ॥೪೦॥ 


ಅಡಿಗಡಿಗೊಂದಿಸುತ ನಡೆದನನುಜ ಸಹ 

ಮಡದಿ ಮಕ್ಕಳ ಸಹಮುದದಿಂದ

ನಡುಗುವ ಮಕ್ಕಳ ಪಶುಪತಿ ಬಿಡದಡಿಗೆರಗುತ 

ನಡೆಯಯ್ಯ ವೈಕುಂಠಕೆನಲು ॥೪೧॥ 


ಗರುಡವಾಹನ ಧವ ಚರಣಸಾಗರದಿ ರಾಮ 

ಅರ್ತಿಯಲೇಸಾಡುತ್ತಿರಲು 

ಗುರುವೆ ಪರದೈವ ಪರಬ್ರಹ್ಮ ಶ್ರೀಪತಿ 

ಹರುಷದಿ ತನುವನೀಡಾಡಿ ॥೪೨॥


 ಹರನೆ ಹರಿಯೆ ಸಂಕರ್ಷಣ ಪುರುಷೋತ್ತಮನೆ 

ದುರಿತ ವಿಭಾಡ ಮಹೇಶ 

ಶರಣಾಗತ ರಕ್ಷಾಮಣಿಯೆ ಸಲಹೆಂದು ಬೇಗದಿ 

ಹರಿ ರಾಮಚಂದ್ರ ಎರಗಿದನು ॥೪೩॥ 


ಆದಿ ವಿಚ್ಛೇದನ ಆದಿಗನಾದಿಯೆ 

ಆದಿ ಬ್ರಹ್ಮನ ಪೆತ್ತ ಆದಿ 

ಆದಿ ತ್ರಿವಿಕ್ರಮ ಆದಿ ಭೂಸತೆರಮಣ 

ಆದಿಕ್ಷೀರಾಂಬುಧಿ ಶಯನ ॥೪೪॥ 


ಶರಣು ಜನಾರ್ದನ ಶರಣು ಪರಬ್ರಹ್ಮನೆ 

ಶರಣು ಧ್ರುವರಾಜ ಮುಕ್ತಿಕದನೆ 

ಶರಣರ ವಿಘ್ನಕೆ ಕರುಣಿಪೆ ಮುಕ್ತಿಯ 

ಶರಣು ನಾಗಾಂತಕ ಧ್ವಜನೆ ॥೪೫॥ 


ರುಕುಮಾಂಗದ ರಾಯಗೆ ಮುಕುತಿ ಪದವಿಯ ಕೊಟ್ಟೆ 

ಮುಕುತಿ ಶ್ರೀ ಕೃಷ್ಣಚಾರ್ಯರಿಗೆ

ಯುಕ್ತಿಯಲಿ ಭೃಗುವಿನ ಶಕ್ತಿಯ ಮುರಿದಯ್ಯ 

ಮುಕ್ತಿಲಾಂಛನವಿತ್ತೆಯವಗೆ ॥೪೬॥ 


ಮರೆ ಹೊಕ್ಕರೆ ಕಾಯ್ವೆನು ಮಾರಾಂತರ ಕೊಲುವೆನು

ಶರಣಾಗತರ ಶ್ರೀಪಂಜರನೆ 

ಮರೆಹೊಕ್ಕ ರಾಕ್ಷಸಂಗೆ ಸ್ಥಿರಪಟ್ಟವೊಲಿದಿತ್ತೆ 

ಕೊರವ ಕಪೋತ ಜನಕೆ ಮುಕ್ತಿಯ ॥೪೭॥ 


ತ್ರಾಹಿ ವಿಮಲೈಕ್ಯನೆ ತ್ರಾಹಿ ಚಿದ್ರೂಪನೆ 

ತ್ರಾಹಿ ಆನತರೂಪನೆ 

ತ್ರಾಹಿ ಶಶಿರೂಪ ತ್ರಾಹಿ ಲಕ್ಷ್ಮೀಕಾಂತ 

ತ್ರಾಹಿ ಎನುತ ರಾಮಚಂದ್ರ ॥೪೮॥


ರಾಮಚಂದ್ರ ನರಸಿಂಹ ನಾಮದ ಕ್ರಮವನು 

ಭೂಮಿಯೊಳಧಿಕವ ಪೇಳ್ವ 

ನಾಮದಂಘ್ರಿಯ ಸೇರಿ ಕಾಮಿತ ಪದವಿಯ 

ರಾಮನ ಪಡೆಯೆ ಬಂದುದನು॥೪೯॥ 


ನಾ ನಿಮ್ಮ ಕಾಣಲು ನೀ ನಮ್ಮ ನಾಚಿಕೆ 

ಏನು ಕಾರಣ ರಾಮಚಂದ್ರ 

ಜಾಣರ ನೃಪತಿ ಕೇಳ ಮೋನದಿ ನೆನೆವುತ 

ನೇನಿಟ್ಟಂತೆ ಎಹೆನು ಸ್ವಾಮಿ ॥೫೦॥


ಕುಸಿಯಿಂದ ಪರಬ್ರಹ್ಮ ನಸುನಗೆ ನಗುತಲಿ 

ಪೆಸರುಳ್ಳ ನಿಜರೂಪದೋರಿ 

ವಸುಧೆಯಂಬರಕೆ ಪಸರಿಸಿ ನಿಂತನು 

ರಸಿಮೆಯದೋರಿ ಭೂರಮಣ॥೫೧॥ 


ಅಡಿಯಲ್ಲಿ ಜಲಪ್ರಳಯ ಮಡದಲ್ಲಿ ಅಂಬುಜ 

ಅಡಿಯ ಬೆರಳಲ್ಲಿ ನದಿಗಳು 

ಅಡಿಯ ಮೇಗಲಲ್ಲಿ ಪಡೆದ ಶೂದ್ರರ ತೋರಿ

ನುಡಿ ಪುಟ್ಟಿತು ಕಣಕಾಲಲ್ಲಿ॥೫೨॥ 


ತರುಗಿರಿ ಕೆರೆಬಾವಿಯುರಗ ಮೊಳಕಾಲಲ್ಲಿ 

ಕರಿಹರಿ ಮೃಗಜಾತಿಯೆಸೆಯೆ 

ಹರಿಯ ಜಂಘೆಗಳಲ್ಲಿ ಋಷಿ ತಾಪಸಿಶಕ್ತಿಯು 

ತೋರಿದ ಕಟಿಯಲ್ಲಿ ಮುಂದೆ॥೫೩॥ 


ಉರಗರು ನೆರೆಯರು ಪುರುಷದಾಲ್ಯಸ್ಮರು 

ತೋರಿ ಬೆನ್ನಲಿ ವಾಸ ನಿಕರ 

ಬೆರಳು ತೋಳುಗಳಲ್ಲಿ ಸುರಪತಿ ಖಚರರು 

ಸುರ ಜ್ಯೇಷ್ಠನು ನಾಭಿಯಲಿ॥೫೪॥ 


ಉರದಲ್ಲಿ ಹರಿಹರ ಗರುಡ ಗಂಧರ್ವರು 

ಕೊರಳಲ್ಲಿ ಸಿದ್ಧ ವಿದ್ಯಾಧರರು 

ಕೊರಳ ಕಂದರದಲ್ಲಿ ಮೆರೆವುತಲಾಳ್ವರು 

ವರುಣ ದಿಕ್ಪಾಲರು ಭುಜದಿ॥೫೫॥ 


ಮೊಗದಲ್ಲಿ ಅಮರರು ದೃಗದಲ್ಲಿ ರವಿ ಶಶಿ 

ಸುಗುಣ ಕಿನ್ನರರು ಕರ್ಣದಲ್ಲಿ 

ಖಗ ನಂದಿಕೇಶರ ಪೆಗಲಲ್ಲಿ ಮೆರೆವುತ 

ಸುಗುಣೀಶರು ಜಿಹ್ವೆಯಲಿ॥೫೬॥ 


ನಾರದ ತುಂಬುರ ಮುದದಿಂದ ಮೂಗಲಿ 

ಉದರಿ ವಾಯಾಗ್ನಿ ಕಿಡಿಕಿಡಿಯು 

ಮುದದಿಂದಬ್ದದಲಿ ರುದ್ರ ಪ್ರಮಥರು 

ಉದಯವಾದರು ಕೆರೆಯಲ್ಲಿ॥೫೭॥ 


ದ್ವಯಮೂರ್ತಿ ಮಂತ್ರವ ಊವ ಮುನ್ನ ತೋರಿದ 

ಎವೆಯಲ್ಲಿ ಉಡಗ ರಂಜಿಸಿತು 

ರವಿ ಶಶಿ ಶತಕೋಟಿ ಅವು ರೋಮರೋಮಕೆ 

ದೈವ ತಾನೊಲಿದು ತೋರಿಸಿದ ॥೫೮॥ 


ಮೆಲುಕಿಲಿ ಭೂದೇವಿ ಹಲುಕಿಲಿ ಮಾತನು 

ಚೆಲುವೆ ತುಲಸಿಯು ಕವುಸ್ತುಭದಿ 

ಅಲತಿಗೆರಗಿದ ಅಳಿಯಂಬು ಪುರ್ಬಿಲಿ 

ಬಲು ಕಾಮಿತದ ಮೋಕ್ಷಗಳ॥೫೯॥ 


ಶ್ರುತಿವೇದ ಪಣೆಯಲ್ಲಿ ಪ್ರತಿವಾರಿ ಕಿವಿಯಲ್ಲಿ 

ಘೃತವೆಂಬ ಶ್ರುತಿ ಸಾರುತಿರಲು 

ಶ್ರುತಿಸಾರಿ ಧ್ರುವಲೋಕ ಮಸ್ತಕದಿ ತೋರಿದ

ಸ್ವಸಾತಿಯೆಂದವರಿಗೆ ಮುಕ್ತಿ॥೬೦॥ 


ಅರಳಮಳೆ ಭೋರೆಂದು ಸುರಿವುತ ಧರೆಯೊಳು 

ಮೊರೆದ ದುಂದುಭಿ ಡಿಂಡಿಮವು 

ಚೀರುವ ಶಂಖ ಭೋರೆಂದು ಜೇಂಕರಿಸುತ 

ಧರೆಸಹಿತ ಉಬ್ಬಿ ನಲಿದಾಡಿ ॥೬೧॥ 


ಕರಿಕಮಠರು ಉಬ್ಬುತ ಉರಗ ನಲಿದಾಡುತ 

ಪರಬ್ರಹ್ಮ ಸಾಸಿರ ಮೊಗದೋರಿ 

ಹರಿ ತನ್ನ ಕರದ ಸುದರ್ಶನ ಧರೆಯುತ್ತು

ಕರದಲಿ ಕೌಮೋದಿಕೆಯ ॥೬೨॥ 


ಪರಬ್ರಹ್ಮವಾದರೆ ನವ ತೆರೆದು ಹೋಯಿದರು 

ಧರೆ ಕಂಡುದೀರೇಳು ಭುವನ 

ಪರವೇರ ರಾಘವ ತರುಣಿ ಜಾನಕಿ ಸಹ 

ಪರಬ್ರಹ್ಮನೊಳೈಕ್ಯವಾಗಿ॥೬೩॥ 


ಸುಲಿದು ರಸದಾಳಿಯ ಚಿನಿಪಾಲು ಸಕ್ಕರೆ 

ಒಲಿದು ಜೇನೊಡನಿಕ್ಕಿದಂತೆ 

ಕುಲಜ ಲಕ್ಷುಮಣ್ಣನು ನಲವಿಂದ ಪರಬ್ರಹ್ಮ 

ನೊಲುಮೆಯ ಉರಗನೊಳೈಕ್ಯ॥೬೪॥ 


ಮಾವಭಾವಯ್ಯ ಸಹದೇವದಳ ಬಂದಡೆ 

ನಾವು ಬಂದೆವು ಕೇಳಯ್ಯು

 ಭಾವಿಸಿ ಪರಬ್ರಹ್ಮ ನೀವು ದಳ ಸಹ ಬನ್ನಿ 

ಕಾವನ ಜನಪ ಇಂತೆಂದ॥೬೫॥ 


ಧರೆಯನಾಳುವೆನೆಂಬ ಹರುಷದಲೆಂದನು

 ದೊರೆ ನಿಮ್ಮ ಕಮಲವ ನಿಲಿಸಿ 

ಚರವ ಮಂಡೆಯೊಳಿಟ್ಟು ಸ್ಥಿರಪಟ್ಟಗಟ್ಟಿದ 

ನರಲೋಚವನೀ ನಾಳು॥೬೬॥ 


ಹರಿ ಪರಬ್ರಹ್ಮನು ನರನು ಲಕ್ಷುಮಣ್ಣನು 

ಭರತ ಕ್ಷತ್ರಿಯ ಲವಕುಶ 

ವರವೇರ ಹನುಮ ಅಂಗಜ ಜಾಂಬವ ಸುಗ್ರೀವ 

ಪರಶಿವನಡಿಗೆರಗಿದರು॥೬೭॥ 


ಎನ್ನೊಡೆಯನೆ ಎನ್ನ ರಕ್ಷಿಪ ಕರ್ತನೆ 

ನಿಮ್ಮ ಕೃಪೆಯಿಂದಲಿ ನಾವು 

ಇನ್ನು ಜಗವೆಲ್ಲವನು ರಕ್ಷಿಸುವಡೆ 

ನಮ್ಮಳವೇನಯ್ಯ ಶಿವನೆ॥೬೮॥ 


ಹರಗಣಂಗಳು ದೇವಗಣಂಗಳು 

ವರ ನಂದಿ ಭೃಂಗೇಶ ವೀರೇಶ 

ಶರಣರು ಸಹವಾಗಿ ಹರಿಗೆ ಅಪ್ಪಣೆಗೊಟ್ಟು 

ತೆರಳಿದ ಕೈಲಾಸಪುರಕೆ॥೬೯॥ 


ದೇವದುಂದುಭಿ ಶೇಕು ಜೀರುವ ಜಾಂಕಿಯು 

ಭೋರೆಂದು ಕೂಚಮಾಡಿ ಬಂದವು 

ಊರ ಪೊಕ್ಕರು ಬೇಗ ನಾರಿ ಪಾರ್ವತಿ ಗಂಗೆ

ಭೋರನೆತ್ತಿದರು ಆರತಿಯ ॥೭೦॥ 


ಅತ್ತಲಿ ಗಣಸ್ತೋಮ ಕೈಲಾಸಕೆ ಪೋಗಲು 

ಇತ್ತಲಿ ಹರಿಯು ಪಾಳೆಯದಿ 

ಮೊತ್ತದ ಬಲಕೆಲ್ಲ ಮುಕ್ತಿ ಸಾಧನವಿತ್ತು 

ಅತ್ತ ಹೇಳಿದನು ಹನುಮನಿಗೆ॥೭೧॥ 


ನರರ ಕಂಟಕವನು ಪರೆಹರೆಸಿ ಕೊಂಬುತ 

ಪುರವಿದರಲಿಯಿರು ಹನುಮ

ಶರಣೆನ್ನದ ಸೀಮೆಯವರ ಪುರುಷರನ್ನೆಲ್ಲ 

ಮರಣವನೊಡ ಗರ್ಜಿಸುತ॥೭೨॥ 


ಹರಿಪುಣ್ಯಕ್ಷೇತ್ರಕೆ ಪರುಷೆಯ ಕರೆತಂದು 

ಕರುಣೆ ಕರೆದೊಯ್ಯೊ ಹನುಮ 

ಕರಿಯ ಮಲ್ಲಿಗೆ ಪುಷ್ಪ ಧರೆಯ ಮೇಲಿಳುಹಿದ 

ಪರಬ್ರಹ್ಮ ಹನುಮಯ್ಯನ ಕರೆದ॥೭೩॥ 


ಅಲ್ಲಿಗೆ ಬಂದೆಡೆಯಿಲ್ಲಿ ಪುಸಿಯಹುದು 

ಮೆಲ್ಲನೆ ಹನುಮನಿಂತೆಂದ 

ಅಲ್ಲಿ ನೀ ನೆನೆಯೆ ಇಲ್ಲಿ ಸರ್ವಸಿದ್ಧಿ 

ಇಲೂಲಿ ನೀನಿರಬೇಡ ನಡೆಯೆಂದ॥೭೪॥ 


ಕರುಣದಿ ಹನುಮಂತ ಕರೆದನು ಮುನಿಗಳ 

ಶರಣೆಂದು ಪುಷ್ಪಕವೇರಿ 

ತರಳ ಲವಕುಶಲನ ಇರಿಸಿದೈ ಅಯೋಧಿಯಲಿ

ಪರೆವಾರವೇರಿ ತಮತಮಗೆ॥೭೫॥ 


ರಣವೀರ ಹನುಮನ ಪೆಣನ ಬಿಟ್ಟೇಳನು 

ಫಣಿಮುಖ ಪರಬ್ರಹ್ಮ ಕಂಡ 

ಪೆಣನ ಕಾದಿರಬೇಡ ಪೆಣನ ಜೀವಕೆ ಮುಕ್ತಿ 

ಎಣಿಕೆಯ ಕೊಟ್ಟ ವೈಕುಂಠ॥೭೬॥ 


ಕುಸಿಯಿಂದ ಹನುಮಂತ ನಸುನಕ್ಕು ಇಂತೆಂದ 

ಬಿಸಜಲೋಚನ ರೃಮರೆಲ್ಲಿ 

ಪೆಸರೆರಡೆ ರಾಮರ ಪೆಸರ ನೀ ಕೇಳಿದೆ 

ಬಿಸಜಲೋಚನ ರಾಮನನು॥೭೭॥ 


ಎರಡುಕೈಯಲಿ ಗಲ್ಲಹರಿವಂತೆ ಬಡುಕೊಂಡು 

ಶರಣೆಂದ ಪರಬ್ರಹ್ಮನಡಿಗೆ 

ಹರಸಿ ಹನುಮಂತನ ಶಿರವ ಪಿಡಿದೆತ್ತಿದ 

ಪರಬ್ರಹ್ಮ ನಸುನಕ್ಕರಂದು॥೭೮॥ 


ಮಾವ ಮೈದುನ ಸಹದೇವರ ನೆನಹುತ 

ತಾವು ಹತ್ತಿದರು ಪುಷ್ಪಕವ 

ದೇವ ಜಯ ಪರಬ್ರಹ್ಮದೇವ ಶ್ರೀವಿಕ್ರಮ 

ದೇವ ಹರಿಹರ ಒಂದೆ ಪ್ರಾಣ॥೭೯॥ 


ನೆನಕೆ: 

ಕರ್ತೃ : ಪದ್ಮಸಾಲೆ ತಿಮ್ಮಣ್ಣ,  

ಸಂಪಾದಕ: 

ಕೆ. ರಾಘವೇಂದ್ರ ರಾವ್;

ಪ್ರಕಾಶಕರು: 

ಕನ್ನಡ ಅಧ್ಯಯನ ಸಂಸ್ಥೆ; 

ಮೈಸೂರು ವಿಶ್ವವಿದ್ಯಾನಿಲಯ,