ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜನವರಿ 20, 2019

ಸರ್ವಜ್ಞನ ವಚನಗಳು

ಸರ್ವಜ್ಞನ ವಚನಗಳು
ಸರ್ವಜ್ಞನ ತ್ರಿಪದಿ
( ಸರ್ವಜ್ಞಮೂರ್ತಿ ವಚನಗಳು)

ನಂದಿಯನು ಏರಿದನ। ಚಂದಿರನ ಸೂಡಿದನ।
ಕಂದನನು ಬೇಡಿ ನಲಿದಾನು ನೆನೆವುತ್ತ।
ಮುಂದೆ ಪೇಳುವೆನು ಸರ್ವಜ್ಞ॥೧॥

ಅಂದಿನ ಪೂದತ್ತ ।ಬಂದ ವರರುಚಿಯಾಗಿ।
ಮುಂದೆ ಅವ ಸಾಲೆ ಸರ್ವಜ್ಞನೆಂದೆನಿಸಿ।
ನಿಂದವನು ನಾನೆ ಸರ್ವಜ್ಞ ॥೪॥

ಗಂಡಾಗಬೇಕೆಂದು । ಪಿಂಡವನು ನುಂಗಲದು।
ರಂಡೆ ಮಾಳವ್ವೆಯೊಳು ಬರುವದೆಂತೆನಲು।
ಕಂಡದನು ಪೇಳ್ದೆ ಸರ್ವಜ್ಞ॥೭॥

ಅಂಬಲೂರೊಳಗೆಸೆವ । ಕುಂಬಾರ ಸಾಲೆಯಲಿ।
ಇಂಬಿನ ಕಳೆಯ ಮಾಳಿಯೊಳು ಬಸವರಸ।
ನಿಂಬಿಟ್ಟನೆನ್ನ ಸರ್ವಜ್ಞ॥೯॥

ತಾ ಯೆಂಬೆನಲ್ಲದೆ । ತಾಯಿ ನಾನೆಂಬೆನೆ?
ತಾಯಿಯೆಂದಾನು ನುಡಿದೇನು ಪರಸ್ತ್ರೀಯ।
ತಾಯಿಯೆಂದೆಂಬೆ ಸರ್ವಜ್ಞ॥೧೫॥

ಮಾಸಿನೊಳು ಮುಸುಕಿರ್ದು। ಸೂಸಿ ಬಹುದಾಸನದಿ।
ಹೇಸಿಕೆಯ ಮಲವು ಸೂಸುವುದ ಕಂಡು ಕುಲ।
ದಾಸೆಯನು ಬಿಡರು ಸರ್ವಜ್ಞ॥೨೨॥

ಸರ್ವಜ್ಞನೆಂಬುವನು । ಗರ್ವದಿಂದಾದವನೆ?।
ಸರ್ವರೊಳೊಂದೊಂದು ನುಡಿಗಲಿತು ವಿದ್ಯದ ।
ಪರ್ವತವೆ ಆದ ಸರ್ವಜ್ಞ॥೨೫॥

ಎಲ್ಲ ಬಲ್ಲವರಿಲ್ಲ । ಬಲ್ಲವರು ಬಹಳಿಲ್ಲ ।
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ ।
ವೆಲ್ಲರಿಗಿಲ್ಲ ಸರ್ವಜ್ಞ ॥೨೯॥

ಹರ ತನ್ನೊಳಿರ್ದು ಗುರು। ತೋರದಿರೆ ತಿಳಿವುದೆ?।
ಮರದೊಳಗೆ ಅಗ್ನಿ ಇರುತಿರ್ದು ತನ್ನತಾ।
ನರಿಯದೇಕೆಂದ ಸರ್ವಜ್ಞ ॥೩೧॥

ಊರಿಂಗೆ ದಾರಿಯನು । ಆರು ತೋರಿದಡೇನು ।
ಸಾರಾಯದ ನಿಜವ ತೋರುವ ಗುರುವು ತಾ।
ನಾರಾದಡೇನು ಸರ್ವಜ್ಞ ॥೩೮॥

ಒಂದೂರೊಳಿರಲು ಗುರು। ವಂದನೆಯ ಮಾಡದಲೆ।
ಸಂದಿಸಿ ಕೂಳನುಣುತಿಪ್ಪವನ ಬದುಕು।
ಹಂದಿಯಂತೆಂದ ಸರ್ವಜ್ಞ ॥೫೩॥

ಮೊಲೆವಾಲನುಂಬುದನು । ಮೊಲೆಗೂಸು ಬಲ್ಲುದೆ?।
ಮೊಲೆಗೂಸಿನಂತಿಪ್ಪ ಶಿಷ್ಯಂಗೆ ಗುರುಬೋಧೆ ।
ಮೊಲೆವಾಲು ಕಾಣೊ ಸರ್ವಜ್ಞ ॥೬೧॥

ಸಾಣೆ ಕಲ್ಲೊಳು ಗಂಧ । ಮಾಣದಲೆ ಎಸೆವಂತೆ ।
ಜಾಣಸದ್ಗುರುವಿನುಪದೇಶದಿಂ ಮುಕ್ತಿ॥
ಕಾಣಿಸುತ್ತಿಹುದು ಸರ್ವಜ್ಞ ॥೬೭॥

ಒಂದರೊಳಗೆಲ್ಲವೂ। ಸಂದಿಸಿರುವದನು ಗುರು।
ಚೆಂದದಿ ತೋರಿ ಕೊಡದಿರೆ ಶಿಷ್ಯನಂ।
ಕೊಂದೆನೆಂದರಿಗು ಸರ್ವಜ್ಞ ॥೭೨॥

ಭಕ್ತಿಯಿಲ್ಲದ ಶಿಷ್ಯ। ಗೊತ್ತಿ ಕೊಟ್ಟುಪದೇಶ।
ಬತ್ತಿದ ಕೆರೆಯ ಬಯಲಲ್ಲಿ ರಾಜಾನ್ನ ।
ಬಿತ್ತಿ ಬೆಳೆದಂತೆ ಸರ್ವಜ್ಞ ॥೭೬॥

ಹೊಲಬನರಿಯದ ಗುರುವು। ತಿಳಿಯಲರಿಯದ ಶಿಷ್ಯ।
ನೆಲೆಯನಾರಯ್ಯದುಪದೇಶ ಅಂಧಕನು ।
ಕೊಳನ ಹೊಕ್ಕಂತೆ ಸರ್ವಜ್ಞ॥೮೩॥

ಗುರುವೆ ನಿಮ್ಮನು ನೆನೆದು। ಉರಿವ ಕಿಚ್ಚನು ಹೊಗಲು ।
ಉರಿ ತಗ್ಗಿ ಉದಕ ಕಂಡಂತೆ ನಿಮ್ಮಯ।
ಕರುಣವುಳ್ಳರಿಗೆ ಸರ್ವಜ್ಞ ॥೮೯॥  

ಸೊಣಗನಂದಣವೇರಿ । ಕುಣಿದು ಪೋಪುದು ಮಲಕೆ।
ಸೊಣಗನ ಗುಣವು ಎನ್ನಲ್ಲಿ ಗುರುರಾಯ ।
ಟೊಣೆದು ಬಿಡಬೇಡ ಸರ್ವಜ್ಞ ॥೧೦೮॥

ಆಗಿಲ್ಲ ಹೋಗಿಲ್ಲ । ಮೇಗಿಲ್ಲ ಕೆಳಗಿಲ್ಲ ।
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕೆ।
ದೇಗುಲವೆ ಇಲ್ಲ ಸರ್ವಜ್ಞ ॥೧೫೭॥

ಹುಸಿದು ಮಾಡುವ ಪೂಜೆ । ಮಸಿವಣ್ಣವೆಂತೆನಲು।
ಮುಸುಕಿರ್ದ ಮಲವನೊಳಗಿರಿಸಿ ಪೃಷ್ಠವನು ।
ಹಿಸುಕಿ ತೊಳೆದಂತೆ ಸರ್ವಜ್ಞ ॥೧೭೧॥

ಓದು ವಾದಗಳೇಕೆ । ಗಾದೆಯ ಮಾತೇಕೆ।
ವೇದ ಪುರಾಣ ನಿನಗೇಕೆ ಲಿಂಗದ।
ಹಾದಿಯರಿಯದಲೆ ಸರ್ವಜ್ಞ ॥೧೮೨॥

ಹಿಡಿಹಣ್ಣು ಕುಂಬಳಕೆ। ಮಿಡಿಹಣ್ಣು ಆಲಕ್ಕೆ ।
ಅಡಿನೆಳಲೊಳಿಪ್ಪ ಪಾಂಥ ತಾ ಕೆಡದಂತೆ ।
ಮೃಡನು ಮಾಡಿಹನು ಸರ್ವಜ್ಞ ॥೧೯೨॥

ಕಳ್ಳಿಯೊಳು ಹಾಲು, ಮುಳು। ಗಳ್ಳಿಯೊಳು ಹೆಜ್ಜೇನು ।
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ।
ಸುಳ್ಳೆನ್ನಬಹುದೆ? ಸರ್ವಜ್ಞ ॥೧೯೪॥

ನರನಬೇಡುವ ದೈವ । ವರವೀಯಬಲ್ಲುದೇ।
ತಿರಿವರನಡರಿ ತಿರಿವರೇನಿದನರಿದು ।
ಹರನ ಬೇಡುವುದು ಸರ್ವಜ್ಞ ॥೧೯೭॥

ಪ್ರಾಣನೂ ಪರಮನೂ । ಕಾಣದಲೆ ಒಳಗಿರಲು ।
ಮಾಣದಲೆ ಸಿಲೆಯ ಹಿಡಿದದಕೆ ಮೂರ್ಖ ತಾ ।
ಪ್ರಾಣಾತ್ಮನೆಂಬ ಸರ್ವಜ್ಞ ॥೨೦೬॥

ಕನಕದಿಂ ಹಿರಿದಿಲ್ಲ। ದಿನಪನಿಂ ಬೆಳಗಿಲ್ಲ।
ಬೆನಕನಿಂದಧಿಕ ಗಣವಿಲ್ಲ;ಪರದೈವ ।
ತ್ರಿಣಯನಿಂದಿಲ್ಲ ಸರ್ವಜ್ಞ॥೨೨೬॥


ಭಾಷೆಯಿಂ ಮೇಲಿಲ್ಲ।ದಾಸನಿಂ ಕೀಳಿಲ್ಲ।
ಮೋಸದಿಂದಧಿಕ ಕೇಡಿಲ್ಲ; ಪರದೈವ।
ಈಶನಿಂದಿಲ್ಲ ಸರ್ವಜ್ಞ ॥೨೨೯॥

ಖುಲ್ಲ ಮಾನವ ಬೇಡೆ। ಕಲ್ಲು ತಾ ಕೊಡುವನೇ? ।
ಸೊಲ್ಲರಿವ ಶಿವನ ಬೇಡಿದಡೆ ಬಯಸಿದು।
ದೆಲ್ಲವನು ಕೊಡುವ ಸರ್ವಜ್ಞ ॥೨೪೨॥

ಕಂಡವರು ಕೆರಳುವರು। ಹೆಂಡತಿಯು ಕನಲುವಳು।
ಖಂಡಿತದಿ ಲಕ್ಷ್ಮಿ ತೊಲಗುವಳು, ಶಿವನೊಲುಮೆ।
ಕಂಡು ಕೊಳದಿರಲು ಸರ್ವಜ್ಞ ॥ ೨೪೮॥

ಚಿತ್ತವಿಲ್ಲದೆ ಗುಡಿಯ । ಸುತ್ತಿದಡೆ ಫಲವೇನು।
ಎತ್ತು ಗಾಣವನು ಹೊತ್ತು ತಾ ನಿತ್ಯದಿ।
ಸುತ್ತಿಬಂದಂತೆ ಸರ್ವಜ್ಞ ॥೨೫೭॥

ತನುವನ್ನು ಗುರುವಿಂಗೆ। ಮನವನು ಲಿಂಗಕ್ಕೆ।
ಧನವ ಜಂಗಮಕೆ ವಂಚಿಸದ ಭಕ್ತಂಗೆ।
ಅನಘ ಪದವಹುದು ಸರ್ವಜ್ಞ ॥೨೬೯॥

ಸಾಲುವೇದವನೋದಿ। ಶೀಲದಲಿ ಶುಚಿಯಾಗಿ।
ಶೂಲಿಯ ಪದವನರಿಯದೊಡೆ ಗಿಳಿಯೋದಿ।
ಹೇಲತಿಂದಂತೆ ಸರ್ವಜ್ಞ ॥೨೭೪॥

ಲಿಂಗದ ಗುಡಿ ಲೇಸು। ಗಂಗೆಯ ತಡಿ ಲೇಸು।
ಲಿಂಗಸಂಗಿಗಳ ನುಡಿ ಲೇಸು, ಶರಣರ।
ಸಂಗವೇ ಲೇಸು ಸರ್ವಜ್ಞ ॥೨೮೨॥

ಕಣ್ಣು ನಾಲಿಗೆ ಮನವ। ಪನ್ನಗಧರ ಕೊಟ್ಟ।
ಚೆನ್ನಾಗಿ ಮನವ ತೆರೆದು ನೀ ಬಿಡದೆ ಶ್ರೀ।
ಚೆನ್ನನ ನೆನೆಯೊ ಸರ್ವಜ್ಞ ॥೩೦೧॥

ಕಚ್ಚೆ ಕೈ ಬಾಯಿಗಳು। ಇಚ್ಛೆಯಲಿ ಇದ್ದಿಹರೆ।
ಅಚ್ಯುತನಪ್ಪ ಅಜನಪ್ಪ ಲೋಕದಲಿ।
ನಿಶ್ಚಿಂತನಪ್ಪ ಸರ್ವಜ್ಞ ॥೩೧೦॥

ಜ್ಞಾನದಿಂ ಮೇಲಿಲ್ಲ। ಶ್ವಾನನಿಂ ಕೀಳಿಲ್ಲ।
ಭಾನುವಿಂದಧಿಕ ಬೆಳಗಿಲ್ಲ, ಜಗದೊಳಗೆ।
ಜ್ಞಾನವೇ ಮಿಗಿಲು ಸರ್ವಜ್ಞ॥೩೧೭॥

ಕ್ಷೀರದಲ್ಲಿ ಘೃತ, ವಿಮಲ। ನೀರಿನೊಳು ಶಿಖಿಯಿರ್ದು।
ಆರಿಗೂ ತೋರದದರಂತೆ ಎನ್ನೊಳಗೆ।
ಸಾರಿಹನು ಶಿವನು ಸರ್ವಜ್ಞ॥೩೨೮॥

ಸತ್ತು ಹುಟ್ಟುವರೆಂಬ। ಮಿಥ್ಯದ ನುಡಿಯೇಕೆ?
ಬಿತ್ತಿದರೆ ಬೀಜ ಬೆಳೆವಂತೆ ವೃಕ್ಷ ತಾ।
ಸತ್ತು ಹುಟ್ಟುವುದೆ? ಸರ್ವಜ್ಞ ॥೩೫೩॥

ಆನೆ ಮುಕುರದೊಳಡಗಿ। ಭಾನು ಸರಸಿಯೊಳಡಗಿ।
ಆನೆನ್ನ ಗುರುವಿನೊಳಗಡಗಿ ಸಂಸಾರ ।
ತಾನೆತ್ತಣದು? ಸರ್ವಜ್ಞ, ॥೩೬೩॥

ಆನೆ ಮೇಲಿದ್ದವನು । ಸೋನ ಕಂಡೋಡುವನೆ।
ಜ್ಞಾನ ಹೃದಯದಲಿ ನೆಲಸಿದ ಶಿವಯೋಗಿ ।
ಹೀನಗಂಜುವನೆ ಸರ್ವಜ್ಞ ॥೩೭೧॥

ವಾರಣಾಸಿಗೆ ಹೋಹ । ಕಾರಣವದೇನಯ್ಯ।
ಕಾರಣಿಕ ಪುರುಷನೊಳಗಿರಲು ಅಲೆವುದಕೆ।
ಕಾರಣವ ಹೇಳು ಸರ್ವಜ್ಞ॥೩೭೫॥

ಬಲ್ಲೆನೆಂದೆಂಬುವವ । ರೆಲ್ಲವರು ಹಿರಿಯರೆ?।
ಸೊಲ್ಲಿನ ಭೇದವರಿದೊಡೆ ಕಿರಿಯ ತಾ।
ನೆಲ್ಲರಿಗೆ ಹಿರಿಯ ಸರ್ವಜ್ಞ ॥೩೮೨॥

ಬೊಮ್ಮವನು ಅರಿದಿಹರೆ। ಸುಮ್ಮನಿದ್ದಿರಬೇಕು।
ಬೊಮ್ಮವನು ಅರಿದು ಉಸುರಿದರೆ ಕಳಹೋಗಿ।
ಕೆಮ್ಮಿ ಸತ್ತಂತೆ ಸರ್ವಜ್ಞ ॥೩೮೬॥

ಕೋತಿಂಗೆ ಗುಣವಿಲ್ಲ। ಮಾತಿಂಗೆ ಕೊನೆಯಿಲ್ಲ।
ಸೋತುಹೋದವಗೆ ಜಗವಿಲ್ಲ, ಅರಿದಂಗೆ।
ಜಾತಿಯೇ ಇಲ್ಲ ಸರ್ವಜ್ಞ ॥೩೯೬॥

ಹೇಲು ಮೈಮೆತ್ತಿದ । ಬಾಲನಂತಿರಬೇಕು।
ಬಾಲೆಯರ ಜಾಲಕೊಳಬೀಳದಾ ಜ್ಞಾನಿ।
ಶೂಲಿಯಂತಕ್ಕು ಸರ್ವಜ್ಞ ॥೪೦೦॥

ತನ್ನ ತಾನರಿದಿಹನು । ಸನ್ನುತನು ಆಗಿಹನು।
ತನ್ನ ತಾನರಿಯದಿರುವವನು ಹಾಳೂರ।
ಕುನ್ನಿಯಂತಕ್ಕು  ಸರ್ವಜ್ಞ॥೪೧೧॥

ಅಟ್ಟಡಿಗೆಯ ರುಚಿಯ। ಸಟ್ಟುಗವು ಬಲ್ಲುದೇ ?।
ಶ್ರೇಷ್ಠರುಗಳು ಎಂದೆನಬೇಡ, ಅರುಹಿನ।
ಬಟ್ಟೆ ಬೇರೆಂದ  ಸರ್ವಜ್ಞ ॥೪೨೦॥

ಜ್ಞಾನವುಳ್ಳವನೊಡಲು। ಭಾನುಮಂಡಲದಂತೆ।
ಜ್ಞಾನವಿಲ್ಲದನ ಬರಿಯೊಡಲು ಹಾಳೂರ ।
ಸ್ಥಾನದಂತಿಕ್ಕು ಸರ್ವಜ್ಞ ॥೪೨೭॥

ಕರ್ಮಿಗೆ ತತ್ವದ । ಮರ್ಮ ದೊರಕೊಂಬುದೆ ?।
ಚರ್ಮವನು ತಿಂಬ ಶುನಕಂಗೆ ಪಾಯಸದ ।
ಕೂರ್ಮೆಯೇಕಯ್ಯ ಸರ್ವಜ್ನ॥೪೩೩॥

ಕಂಬಳಿಯ ಹೊದೆವ ತಂ। ನಿಂಬಿನೊಳಗಿರಬೇಕು।
ಕಂಬಳಿಯು ಬೆನ್ನು ಬಿಡದಿರಲು ನರಕದ ।
ಕುಂಭದೊಳಗಿಹನು ಸರ್ವಜ್ಞ ॥೪೫೪॥

ಅಕ್ಕರವು ಲೕಖಕ್ಕೆ । ತರ್ಕ ತಾ ವಾದಕ್ಕೆ ।
ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕೆರ।
ಡಕ್ಕರವೆ ಸಾಕು, ಸರ್ವಜ್ಞ ॥೪೬೧॥

ಹೊಲೆಯಿಲ್ಲ ಅರಿದಂಗೆ। ಬಲವಿಲ್ಲ ಬಡವಂಗೆ।
ತೊಲೆಕಂಬವಿಲ್ಲ ಗಗನಕ್ಕೆ, ಯೋಗಿಗೆ।
ಕುಲವೆಂಬುದಿಲ್ಲ ಸರ್ವಜ್ಞ ॥೪೮೨॥

ಯತಿಗೇಕೆ ಕೋಪ? ದು। ರ್ಮತಿಗೇಕೆ ಪರತತ್ವ?।
ಪತಿವ್ರತೆಗೇಕೆ ಪರನೋಟ? ಯೋಗಿಗೆ ।
ಸ್ತುತಿ ನಿಂದೆಯೇಕೆ? ಸರ್ವಜ್ಞ ॥೪೯೨॥

ಕರದಿ ಕಪ್ಪರವುಂಟು । ಹಿರಿದೊಂದು ನಾಡುಂಟು।
ಹರನೆಂಬ ದೈವ ನಮಗುಂಟು ತಿರಿವರಿಂ।
ಸಿರಿವಂತರಾರು? ಸರ್ವಜ್ಞ ॥೫೧೦॥


ಒಡಲೆಂಬ ಹುತ್ತಕ್ಕೆ। ನುಡಿವ ನಾಲಿಗೆ ಸರ್ಪ।
ಕಡುರೋಷವೆಂಬ ವಿಷವೇರಿ ಸಮತೆ ಗಾ।
ರುಡಿಗನಂತಕ್ಕು ಸರ್ವಜ್ಞ ॥೫೧೪॥

ಅಂತಿರ್ದ ಇಂತಿರ್ದ । ಎಂತಿರ್ದನೆನಬೇಡ।
ಕಂತೆಯನು ಹೊದ್ದು ತಿರಿದುಂಬ ಶಿವಯೋಗಿ।
ಎಂತಿರ್ದಡೇನು ಸರ್ವಜ್ಞ ॥೫೨೩॥

ಬೆಣ್ಣೆ ಬೆಂಕಿಯ ನಡುವೆ। ತಣ್ಣಗಿಲಬಲ್ಲುದೇ?।
ಹೆಣ್ಣಿರ್ದ ಮನೆಗೆ ಎಡತಾಕಿ ಶಿವಯೋಗಿ।
ಮಣ್ಣು ಮಸಿಯಾದ ಸರ್ವಜ್ಞ॥೫೩೪॥

ಅತ್ತಿಗೆ ಹೂವಿಲ್ಲ। ಕತ್ತೆಗೆ ಹೊಲೆಯಿಲ್ಲ।
ಬತ್ತಲಿದ್ದವಗೆ ಭಯವಿಲ್ಲ ಯೋಗಿಗೆ।
ಕತ್ತಲೆಯೇ ಇಲ್ಲ ಸರ್ವಜ್ಞ ॥೫೫೧॥

ಬಿಂದು ನಾದಗಳಳಿದು । ಒಂದಾಗಿ ಶಿವನಲ್ಲಿ।
ಬಂಧುರದ ಬೆಳಗ ಕಂಡ ಶಿವಯೋಗಿಗೆ।
ಬಂಧನವು ಬಯಲು ಸರ್ವಜ್ಞ ॥೫೫೮॥

ಎಣ್ಣೆ ಬತ್ತಿಯನೇರಿ। ನುಣ್ಬೆಳಗನೀವಂತೆ।
ಸಣ್ಣಾಗಿ ಸುಟ್ಟು ಬೆಳಗೀವ ಶಿವಯೋಗಿ।
ಸಣ್ಣಾತನೇನು ಸರ್ವಜ್ಞ ॥೫೬೫॥

ಕತ್ತೆ ಬೂದಿಲಿ ಹೊರಳಿ।ಮತ್ತೆ ಯತಿಯಪ್ಪುದೇ।
ತತ್ವವರಿಯದಲೆ ಭಸಿತವಿಟ್ಟವ ಶುದ್ಧ।
ಕತ್ತೆಯಂತೆಂದ ಸರ್ವಜ್ಞ ॥೫೭೫॥

ಒಡಲ ದಂಡಿಸಿ ಮುಕ್ತಿ। ಪಡೆವೆನೆಂಬುವನೆಗ್ಗ।
ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ।
ಮಡಿದಿಹುದೆ ಹೇಳು ಸರ್ವಜ್ಞ ॥೫೮೫॥

ನಿತ್ಯ ನೇಮಗಳೇಕೆ? । ಮತ್ತೆ ಪೂಜೆಗಳೇಕೆ?।
ನೆತ್ತಿ ಬೋಳೇಕೆ? ಜಡೆಯೇಕೆ? ಅರಿದು ನೆರೆ।
ಸತ್ಯವುಳ್ಳರಿಗೆ ! ಸರ್ವಜ್ಞ ॥೫೯೨॥

ಈವಂಗೆ ದೇವಂಗೆ! ಆವುದಂತರವಯ್ಯ?।
ದೇವನು ಜಗಕೆ ಕೊಡುತಿಹನು, ಕೈಯಾರೆ।
ಈವನೇ ದೇವ ! ಸರ್ವಜ್ಞ ॥೫೯೮॥

ಸ್ವಾತಿಯ ಹನಿ ಬಿದ್ದು । ಜಾತಿ ಮುತ್ತಾದಂತೆ।
ಸಾತ್ವಿಕನು ಅಪ್ಪಯತಿಗಿಕ್ಕೆ ಪಂಚಮಾ ।
ಪಾತಕವು ಕೆಡುಗು ಸರ್ವಜ್ಞ ॥೬೦೭॥

ಕೊಟ್ಟು ಕುದಿಯಲಿ ಬೇಡ। ಕೊಟ್ಟಾಡಿಕೊಳಬೇಡ।
ಕೊಟ್ಟು ನಾ ಕೆಟ್ಟೆನೆನಬೇಡ ! ಶಿವನಲ್ಲಿ।
ಕಟ್ಟಿಹುದು ಬುತ್ತಿ ಸರ್ವಜ್ಞ ॥೬೧೮॥

ಆಡದೆ ಕೊಡುವವನು। ರೂಢಿಯೊಳಗುತ್ತಮನು।
ಆಡಿಕೊಡುವವನು ಮಧ್ಯಮನಧಮ ತಾ।
ನಾಡಿ ಕೊಡದವನು ಸರ್ವಜ್ಞ ॥೬೩೫॥

ಉಣ್ಣೆ ಕೆಚ್ಚಲೊಳಿರ್ದು। ಉಣ್ಣದದು ನೊರೆವಾಲ।
ಪುಣ್ಯವ ಮಾಡಿ ಉಣಲೊಲ್ಲದವನಿರವು।
ಉಣ್ಣೆಗು ಕಷ್ಟ ಸರ್ವಜ್ಞ ॥೬೬೦॥

ಕಳ್ಳರಿಗೆ ಸುಳ್ಳರಿಗೆ। ಡೊಳ್ಳರಿಗೆ ಡೊಂಬರಿಗೆ।
ಸುಳ್ಳುಗೊರವರಿಗೆ ಕೊಡುವವರು ಧರ್ಮಕ್ಕೆ।
ಎಳ್ಳಷ್ಟು ಕೊಡರು ಸರ್ವಜ್ಞ ॥೬೭೩॥

ಉಳ್ಳಲ್ಲಿ ಉಣಲಿಲ್ಲ। ಉಳ್ಳಲ್ಲಿ ಉಡಲಿಲ್ಲ।
ಉಳ್ಳಲ್ಲಿ ದಾನ ಕೊಡಲೊಲ್ಲದವನೊಡವೆ ।
ಕಳ್ಳಗೆ ನೃಪಗೆ ಸರ್ವಜ್ಞ ॥೬೮೩॥

ಖಂಡಿಸದೆ ಕರಣವನು। ದಂಡಿಸದೆ ದೇಹವನು।
ಉಂಡುಂಡು ಸ್ವರ್ಗಕೆಯ್ದಲ್ಲಕೆ ಅದನೇನು।
ರಂಡೆಯಾಳುವಳೇ? ಸರ್ವಜ್ಞ ॥೬೮೮॥

ಹಿರಿಯರಿಲ್ಲದ ಮನೆಯು। ಗುರುವು ಇಲ್ಲದ ಮಠವು।
ಅರಸುತನವಳಿದ ಅರಮನೆಯು ಹಣಹೋದ।
ಹರದನಂತಕ್ಕು ಸರ್ವಜ್ಞ ॥೭೦೨॥

ಬಲೆಯು ಹರಿದರೆ ಹೊಲ್ಲ। ಮೊಲೆಯು ಬಿದ್ದರೆ ಹೊಲ್ಲ।
ತಲೆ ಹೊಲ್ಲ ಮೂಗುಹರಿದರೆ, ಕಲಿಗೆ ತಾ।
ನಿಮ್ಮೆ ಸಾವುಂಟೆ? ಸರ್ವಜ್ಞ ॥೭೧೪॥

ಕೋಟೆ ಕದನಕೆ ಲೇಸು। ಬೇಟೆಯರಸಿಗೆ ಲೇಸು।
ನೀಟಾದ ಹೆಣ್ಣು ತರಲೇಸು,ಸುಜನರೊಡ।
ನಾಟವೇ ಲೇಸು ಸರ್ವಜ್ಞ ॥೭೨೦॥

ಅಜ್ಜಿ ಇಲ್ಲದ ಮನೆಯು। ಮಜ್ಜಿಗಿಲ್ಲದ ಊಟ।
ಕೊಜ್ಜೆಯರಿಲ್ಲದರಮನೆಯು, ಇವು ಮೂರು।
ಲಜ್ಜೆಗೇಡೆಂದ ಸರ್ವಜ್ಞ ॥೭೫೦॥

ತಾಗದ ಬಿಲು ಹೊಲ್ಲ। ಆಗದ ಮಗ ಹೊಲ್ಲ।
ಆಗೀಗಲೆಂಬ ನುಡಿ ಹೊಲ್ಲ, ರಣಕೆ ಇದಿ।
ರಾಗದವ ಹೊಲ್ಲ ಸರ್ವಜ್ಞ ॥೭೬೪॥

ಬಂದವರ ಕರೆಯಿಸನು। ನಿಂದವರ ನುಡಿಯಿಸನು।
ಹಂದಿಯು, ಗಜವು ಒಂದೆಂಬನೋಲಗವು।
ಎಂದಿಗೂ ಬೇಡ ಸರ್ವಜ್ಞ ॥೭೭೦॥

ಹೇಡಿಂಗೆ ಹಿರಿತನವು। ಮೂಢಂಗೆ ಗುರುತನವು।
ನಾಡ ನೀಚಂಗೆ ದೊರೆತನವು, ದೊರೆತಿಹರೆ।
ನಾಡೆಲ್ಲ ಕೆಡುಗು ಸರ್ವಜ್ಞ ॥೭೮೫॥

ಬಲ್ಲವರ ಒಡನಾಟ। ಬೆಲ್ಲವನು ಮೆದ್ದಂತೆ।
ಅಲ್ಲದಹುದೆಂಬ ಅಜ್ಞಾನಿಯೊಡನಾಟ।
ಕಲ್ಲು ಹಾದಂತೆ ಸರ್ವಜ್ಞ॥೮೧

ದಂತಪಂಕ್ತಿಯ ನಡುವೆ। ಎಂತಿಪ್ಪುದದು ಜಿಹ್ವೆ।
ಅಂತು ದುರ್ಜನರ ಬಳಸಿನಲಿ ಸಜ್ಜನನು ।
ನಿಂತಿಹನು ನೋಡ ಸರ್ವಜ್ಞ ॥೮೨೧॥

ಒಳ್ಳಿದರ ಒಡನಾಡಿ। ಕಳ್ಳನೊಳ್ಳಿದನಕ್ಕು।
ಒಳ್ಳಿದನು ಕಳ್ನರೊಡನಾಡಿ  ಅವ ಶುದ್ಧ।
ಕಳ್ಳ ತಾನಕ್ಕು ಸರ್ವಜ್ಞ ॥೮೨೩॥

ಕೂಡಿ ತಪ್ಪಲು ಬೇಡ। ಓಡಿ ಸಿಕ್ಕಲು ಬೇಡ।
ಆಡಿ ತಪ್ಪಿದರೆಇರಬೇಡ, ದುರುಳರನು।
ಕೂಡಬೇಡೆಂದ ಸರ್ವಜ್ಞ ॥೮೩೪॥

ಕೋಡಗಾದನು ಹರಿಯು। ಆಡಾದನಾ ಅಜನು।
ನೋಡಿದರೆ ಹರನು ನರಿಯಾದನುಳಿದವರ।
ಪಾಡೇನು ಹೇಳು ಸರ್ವಜ್ಞ ॥ ೮೪೫॥

ಹೆತ್ತಾತನರ್ಜುನನು। ಮುತ್ತಯ್ಯ ದೇವೇಂದ್ರ।
ಮತ್ತೆ ಮಾತುಲನು ಹರಿಯಿರಲು ಅಭಿಮನ್ಯು।
ಸತ್ತನೇಕಯ್ಯ ಸರ್ವಜ್ಞ ॥೮೬೭॥

ಪ್ರಾರಬ್ಧ ಕರ್ಮವದು।ಆರನೂ ಬಿಡದಯ್ಯ।
ಮಾರಾಂತನಪ್ಪ ಯೋಗಿಯ ಒಡಲಲ್ಲಿ।
ಊರಿಕೊಂಡಿಹುದು ಸರ್ವಜ್ಞ ॥೮೮೬॥

ಹಾದರದ ಕಥೆಯನ್ನು । ಸೋದರರ ವಧೆಯನ್ನು।
ಆದರಿಸಿ ಪುಣ್ಯ ಕಥೆಯೆಂದು ಕೇಳುವರು॥
ಮಾದಿಗರು ನೋಡ ಸರ್ವಜ್ಞ ॥೯೧೨॥

ನಿತ್ಯ ನೀರ್ಮುಳುಗುವನು।ಹತ್ತಿದಡೆ ಸ್ವರ್ಗವನು।
ಎತ್ತಿ ಜನ್ಮವನು ಜಲದೊಳಿಪ್ಪಾ ಕಪ್ಪೆ।
ಹತ್ತದೇಕೆಂದ ಸರ್ವಜ್ಞ ॥೯೨೨॥

ಮೂರೆಳೆಯನುಟ್ಟಾತ । ಹಾರುವಡೆ ಸ್ವರ್ಗಕ್ಕೆ ।
ನೂರೆಂಟು ಎಳೆಯ ಕವುದಿಯನು ಹೊದ್ದಾತ ।
ಹಾರನೇಕಯ್ಯ ಸರ್ವಜ್ಞ ॥೯೨೭॥

ಕನ್ನೆಯಾಡನು ತಂದು। ಬನ್ನಬಡಿಸುತ ಕೊಂದು।
ಉನ್ನತವ ಪಡೆದ ವಿಪ್ರನಿಂ ಅಗಸರ ।
ಕುನ್ನಿ ಲೇಸೆಂದ ಸರ್ವಜ್ಞ ॥೯೩೪॥

ಒಂದಾಡ ತಿಂಬಾತ । ಹೊಂದಿದಡೆ ಸ್ವರ್ಗವನು।
ಎಂದೆಂದು ಅಜನ ಕಡಿದು ತಿಂಬ ಕಟಿಗ ತಾ ।
ನಿಂದ್ರನೇಕಾಗ ಸರ್ವಜ್ಞ ॥೯೩೯॥

ಇಂಗು ತಿಂಬಾತಂಗೆ । ಕೊಂಬೇನು ಕೊಳಗೇನು।
ಸಿಂಗಳಿಕವೇನು, ಹಂಗೇನು? ಬೇಲಿಯ।
ಮುಂಗಲಿಯದೇನು ಸರ್ವಜ್ಞ ॥೯೪೪॥

ಅಕ್ಕವನರಿಯದ। ನಿಷ್ಕರುಣಿಯುಣುತಿಪ್ಪ।
ಅಕ್ಕರವರಿದು ಅಜನುಂಬ ದ್ವಿಜ ತನ್ನ।
ಮಕ್ಕಳನೆ ತಿಂದ ಸರ್ವಜ್ಞ ॥೯೪೮॥

ಕುಲವಿಲ್ಲ ಯೋಗಿಗೆ। ಛಲವಿಲ್ಲ ಜ್ಞಾನಿಗೆ।
ತೊಲೆ ಕಂಬವಿಲ್ಲ ಗಗನಕ್ಕೆ, ಸ್ವರ್ಗದಲಿ ।
ಹೊಲಗೇರಿಯಿಲ್ಲ ಸರ್ವಜ್ಞ ॥೯೫೬॥

ಮುಟ್ಟಾದ ಹೊಲೆಯೊಳಗೆ । ಹುಟ್ಟಿಹುದು ಜಗವೆಲ್ಲ।
ಮುಟ್ಟಬೇಡೆಂದು ತೊಲಗುವ ಹಾರುವನು।
ಹುಟ್ಟಿದನು ಎಲ್ಲಿ ಸರ್ವಜ್ಞ ॥೯೬೧॥

ಕುಡಿವ ನೀರನು ತಂದು। ಅಡಿಗೆ ಮಾಡಿದ ಮೇಲೆ।
ಒಡನುಣ್ಣಲಾಗದಿಂತೆಂಬ ಮನುಜರ ।
ಒಡನಾಟವೇಕೆ ಸರ್ವಜ್ಞ ॥೯೭೩॥

ಯಾತರದು ಹೂವೇನು। ನಾತರದು ಸಾಲದೇ?।
ಜಾತಿ ವಿಜಾತಿಯೆನಬೇಡ, ದೇವನೊಲಿ।
ದಾತನೇ ಜಾತ ಸರ್ವಜ್ಞ ॥೯೭೮॥

ಒಳಗೊಂದು ಕೋರುವನು। ಹೊರಗೊಂದು ತೋರುವನು।
ಕೆಳಗೆಂದು ಬೀಳ, ಹಾರುವನ, ಸರ್ಪನ ।
ಸುಳುಹು ಬೇಡೆಂದ ಸರ್ವಜ್ಞ ॥೯೮೮॥

ಅರ್ಥ ಸಿಕ್ಕರೆ ಬಿಡರು। ವ್ಯರ್ಥದಿ ಶ್ರಮಬಡರ।
ನರ್ಥಕೆ ಪರರ ನೂಂಕಿಪರು, ವಿಪ್ರರಿಂ।
ಸ್ವಾರ್ಥರಿನ್ನಿಲ್ಲ ಸರ್ವಜ್ಞ ॥೯೯೩॥

ಕಟ್ಟ ಹಾಲಿಂದ ಹುಳಿ। ಯಿಟ್ಟಿರ್ದ ತಿಳಿ ಲೇಸು।
ಕೆಟ್ಟ ಹಾರುವನ ಬದುಕಿಂದ ಹೊಲೆಯನು।
ನೆಟ್ಟನೇ ಲೇಸು ಸರ್ವಜ್ಞ ॥೧೦೦೦॥

ಹೆಂಡಕ್ಕೆ ಹೊಲೆಯನು। ಕಂಡಕ್ಕೆ ಕಟುಗನು।
ದಂಡಕ್ಕೆ ಕೃಷಿಕನು, ಹಾರುವನು, ದುಡಿದು ತಾ ।
ಪಿಂಡಕ್ಕೆ ಇಡುವ ಸರ್ವಜ್ಞ ॥೧೦೦೩॥

ಮೊಸರು ಇಲ್ಲದ ಊಟ। ಪಸರವಿಲ್ಲದ ಹರದ।
ಹಸನವಿಲ್ಲದವಳ ರತಿಕೂಟ, ಜಿನನ ಬಾಯ್।
ಕಿಸುಕುಳದಂತೆ ಸರ್ವಜ್ಞ ॥೧೦೧೬॥

ಒಲೆಗುಂಡನೊಬ್ಬನೆ । ಮೆಲಬಹುದು ಎಂದಿರೆ।
ಮೆಲಬಹುದು ಎಂಬುವನೆ ಜಾಣ, ಮೂರ್ಖನ।
ಗೆಲಲಾಗದಯ್ಯ ಸರ್ವಜ್ಞ ॥೧೦೩೪॥

ಒಂದನ್ನು ಎರಡೆಂಬ। ಹಂದಿ ಹೆಬ್ಬುಲಿಯೆಂಬ।
ನಿಂದ ದೇಗುಲವು ಮರನೆಂಬ ಮೂರ್ಖ ತಾ।
ನೆಂದಂತೆ ಎನ್ನಿ ಸರ್ವಜ್ಞ ॥೧೦೩೯॥

ಧಾರುಣಿಯು ನಡುಗುವುದು। ಮೇರುವಲ್ಲಾಡುವುದು।
ವಾರಿನಿಧಿ ಬತ್ತಿ ಬಯಲಹುದು, ಶಿವಭಕ್ತಿ।
ಏರದಿಹುದಂದು ಸರ್ವಜ್ಞ ॥೧೦೫೧॥

ಇಕ್ಕೇರಿ ಸೀಮೆಯ । ಲೆಕ್ಕವನು ಹೇಳುವೆನು।
ಇಕ್ಕೇರಿಯಳಿದ ದಶವರುಷದಂತ್ಯಕ್ಕೆ।
ಮುಕ್ಕಣ್ಣ ಬರುವ ಸರ್ವಜ್ಞ ॥೧೦೫೬॥

ಸೂಳೆಯಲಿ ಮಗ ಹುಟ್ಟಿ। ಆಳುವನು ಮುನೆಪುರವ।
ಕಾಳಗವಿಲ್ಲದವ ಮಡಿಯೆ ಪುರವೆಲ್ಲ।
ಕೋಳು ಹೋದೀತು ಸರ್ವಜ್ಞ ॥೧೦೭೬॥

ಮುತ್ತೊಡೆದು ಹತ್ತಿರಲು । ಮತ್ತಾನೆ ಸತ್ತಿರಲು।
ಹುತ್ತವನೇರಿ ನರಿ ಕೂಗೆ ಜಗಕೆಲ್ಲ ।
ಕುತ್ತು ಕಾಣಯ್ಯ ಸರ್ವಜ್ಞ ॥೧೦೯೫॥

ಹೆಂಗಸರ ಹೋಲುವ । ಮಂಗನ ತಲೆಯವರು।
ಸಂಗಮಕ್ಕೆ ಬಂದು ನಿಂದಿರುತ ರಾಜ್ಯವನು।
ನುಂಗಿ ಬಿಟ್ಟಾರು ಸರ್ವಜ್ಞ ॥೧೧೦೭॥

ಹಂಗಿನ ಹಾಲಿನಿಂ । ದಂಬಲಿಯ ತಿಳಿ ಲೇಸು।
ಭಂಗಬಟ್ಟುಂಬ ಬಿಸಿಯಿಂದ ತಿರಿವರ।
ಸಂಗವೇ ಲೇಸು ಸರ್ವಜ್ಞ ॥೧೧೧೪॥

ಮಜ್ಜಿಗೂಟಕೆ ಲೇಸು। ಮಜ್ಜನಕೆ ಮಡಿ ಲೇಸು।
ಕಜ್ಜಾಯ ತುಪ್ಪ ಉಣಲೇಸು, ಮನೆಗೊಬ್ಬ।
ಅಜ್ಜಿ ಲೇಸೆಂದ ಸರ್ವಜ್ಞ ॥೧೧೨೨॥

ಇಂಬಿನ ಮನೆ ಲೇಸು। ಶಂಭುವಿನ ದಯೆ ಲೇಸು।
ನಂಬುಗೆಯನೇವ ನೃಪ ಲೇಸು, ಕೆರೆ ಬಾವಿ।
ತುಂಬಿರಲು ಲೇಸು ಸರ್ವಜ್ಞ ॥೧೧೨೭॥

ಗಿಡ್ಡ ಹೆಂಡತಿ ಲೇಸು। ಮಡ್ಡಿ ಕುದುರೆಗೆ ಲೇಸು।
ಬಡ್ಡಿಯ ಸಾಲ ಕೊಡಲೇಸು, ಹಿರಿಯರಿಗೆ।
ಗಡ್ಡ ಲೇಸೆಂದ ಸರ್ವಜ್ಞ ॥೧೧೩೩॥

ಜ್ಞಾನಿಗೆ ಗುಣ ಲೇಸು। ಮಾನಿನಿಗೆ ಪತಿ ಲೇಸು।
ಸ್ವಾನುಭಾವಿಗಳ ನುಡಿ ಲೇಸು, ಎಲ್ಲಕು ನಿ।
ಧಾನಿಯೆ ಲೇಸು ಸರ್ವಜ್ಞ ॥೧೧೩೬॥

ಅಗಸೆ ಊರಿಗೆ ಲೇಸು। ಸೊಗಸು ಬಾಳುವೆ ಲೇಸು।
ಬೊಗಸೆಯುಳ್ಳವರ ಕೆಳೆ ಲೇಸು ಊರಿಂಗೆ।
ಅಗಸ ಲೇಸೆಂದ ಸರ್ವಜ್ಞ ॥೧೧೪೨॥

ಸೋರುವ ಮನೆ ಹೊಲ್ಲ। ಜಾರೆ ಸತಿಯಿರಹೊಲ್ಲ।
ಹೋರುವ ಸೊಸೆಯ ನೆರೆ ಹೊಲ್ಲ, ಕನ್ನದ ।
ಸೂರೆಯೇ ಹೊಲ್ಲ ಸರ್ವಜ್ಞ ॥೧೧೫೧॥

ಬಿತ್ತದ ಹೊಲ ಹೊಲ್ಲ। ಮೆತ್ತದ ಮನೆ ಹೊಲ್ಲ।
ಎತ್ತ ಬಂದತ್ತ ತಿರುಗುವ ಮಗ ಹೊಲ್ಲ।
ಬತ್ತಲಿರ ಹೊಲ್ಲ ಸರ್ವಜ್ಞ ॥೧೧೬೦॥

ಅರಿತು ಮಾಡಿದ ಪಾಪ । ಮರೆತರದು ಪೋಪುದೇ?
ಮರೆತರೆ ಮರವ ಬಿಡಿಸುವುದು, ಕೊರತೆಯದು ।
ಅರಿತು ನೋಡೆಂದ ಸರ್ವಜ್ಞ॥ ೧೧೬೮॥

ಕುಂದನಳಿದವ ದೈವ। ಬಂಧ ಕಳೆದವ ದೈವ।
ನೊಂದು ತಾ ನೋಯಿಸದವ ದೈವ ಹುಸಿಯದನು।
ಇಂದುಧರನೆಂದ ಸರ್ವಜ್ಞ ॥೧೧೭೫॥

ದಿಟವೆ ಪುಣ್ಯದ ಪುಂಜ। ಸಟೆಯೆ ಪಾಪದ ಬೀಜ।
ಕುಟಿಲ ವಂಚನೆಗೆ ಪೋಗದಿರು, ನಿಜದಿ ಪಿಡಿ ।
ಘಟವನೆಚ್ಚರದಿ ಸರ್ವಜ್ಞ॥೧೧೮೦॥

ಬಲವಂತರಾದವರು। ಕಲಹದಿಂ ಕೆಟ್ಟಿಹರು।
ಬಲವಂತ ಬಲಿಯು ದುರ್ಯೋಧನಾದಿಗಳು।
ಛಲದಲುಳಿದಿಹರೆ?ಸರ್ವಜ್ಞ ॥೧೧೯೩॥

ಈರೈದು ತಲೆಯುಳ್ಳ । ಧೀರ ರಾವಣ ಮಡಿದ।
ವೀರ ಕೀಚಕನು ಗಡ ಸತ್ತ, ಪರಸತಿಯ।
ಸಾರ ಬೇಡೆಂದ ಸರ್ವಜ್ಞ ॥೧೧೯೯॥

ತುರುಕನ  ನೆರೆ ಹೊಲ್ಲ। ಹರದನ ಕೆಳೆ ಹೊಲ್ಲ।
ತಿರಿಗೂಳನಟ್ಟು ಉಣಲೊಲ್ಲ,ಪರಸತಿಯ।
ಸರಸವೇ ಹೊಲ್ಲ ಸರ್ವಜ್ಞ ॥೧೨೦೮॥

ಅನ್ಯ ಪುರುಷನ ಕಂಡು। ತನ್ನ ಪಡೆದವನೆಂದು।
ಮನ್ನಿಸಿ ನಡೆವ ಸತಿಯಳಿಗೆ ಸ್ವರ್ಗದೊಳು।
ಹೊನ್ನಿನ ಮನೆಯು ಸರ್ವಜ್ಞ ॥೧೨೨೦॥

ಮಾಡಿದುದನೊಪ್ಪದನ। ಮೂಢನಾಗಿಪ್ಪವನ।
ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ ।
ನೋಡಿದರೆ ತೊಲಗು ಸರ್ವಜ್ಞ ॥೧೨೨೮॥

ಎರಡು ಹಣವುಳ್ಳನಕ। ದಿನಕರನವೋಲಕ್ಕು।
ಧನಕನಕ ಹೋದ ಮರುದಿನ ಹಾಳೂರ ।
ಶುನಕನಂತಕ್ಕು ಸರ್ವಜ್ಞ ॥೧೨೩೭॥

ಮುನಿವವರನು ನೆನೆಯುತಿರು। ವಿನಯದಲಿ ನಡೆಯುತಿರು।
ವನಿತೆಯರ ಬಲೆಗೆ ಸಿಲುಕದಿರು । ಸಿರಿ ಸುಖವು।
ಮನದಣಿಯಲಕ್ಕು ಸರ್ವಜ್ಞ ॥೧೨೪೪॥

ಎಂತಿರಲು ಪರರ ನೀ। ಮುಂತೆ ನಂಬಲು ಬೇಡ।
ಕುಂತಿ ಹೆಮ್ಮಗನ ಕೊಲಿದಳು, ಮಾನವರ।
ನೆಂತು ನಂಬುವದು ಸರ್ವಜ್ಞ ॥೧೨೫೨॥

ಬಲ್ಲಿದನು ನುಡಿದಿಹರೆ। ಬೆಲ್ಲವನು ಮೆದ್ದಂತೆ।
ಇಲ್ಲದ ಬಡವ ನುಡಿದರೆ ಬಾಯಿಂದ।
ಜೊಲ್ಲು ಬಿದ್ದಂತೆ ಸರ್ವಜ್ಞ ॥೧೨೬೪॥

ವಚನದೊಳಗೆಲ್ಲವರು । ಶುಚಿ, ವೀರ, ಸಾಧುಗಳು।
ಕುಚ, ಶಸ್ತ್ರ, ಹೇಮ, ಸೋಂಕಿದರೆ ಲೋಕದೊಳ।
ಗಚಲದವರಾರು ಸರ್ವಜ್ಞ ॥೧೨೭೧॥

ಚೆಲುವನಾದಡದೇನು । ಬಲವಂತನಾಗೇನು।
ಕುಲವೀರನಾಗಿ ಫಲವೇನು? ಮಹಲಕ್ಷ್ಮಿ ।
ತೊಲಗಿ ಹೋಗಿರಲು ಸರ್ವಜ್ಞ ॥೧೨೭೫॥

ಕಣ್ಣಿನಿಂದಲೆ ಪುಣ್ಯ । ಕಣ್ಣಿನಿಂದಲೆ ಪಾಪ।
ಕಣ್ಣಿನಿಂದಿಹವು ಪರವಕ್ಕು, ಲೋಕಕ್ಕೆ ।
ಕಣ್ಣೆ ಕಾರಣವು ಸರ್ವಜ್ಞ ॥೧೨೭೯॥

ಸುರೆಯ ಹಿರಿದುಂಡವಗೆ। ಉರಿಯ ಮೇಲ್ದುಡುಕುವಗೆ।
ಹರಿಯುವ ಹಾವು, ಪರನಾರಿ ಪಿಡಿದಂಗೆ।
ಮರಣದ ನೆರಳು ಸರ್ವಜ್ಞ ॥೧೨೯೭॥

ಗಾಳಿ ದೂಳಿಯ ದಿನಕೆ। ಮಾಳಿಗೆಯ ಮನೆ ಲೇಸು।
ಹೋಳಿಗೆ ತುಪ್ಪ ಉಣಲೇಸು, ಬಾಯಿಗೆ।
ವೀಳೆಯವು ಲೇಸು ಸರ್ವಜ್ಞ ॥೧೩೦೬॥

ಆಡಿ ನಳ ಕೆಟ್ಟ ಮ । ತ್ತಾಡಿ ಧರೂಮಜ ಕೆಟ್ಟ।
ನೋಡಿದ ನಾಲ್ವರು ತಿರಿದುಣಲು ನೆತ್ತವನು ।
ಆಡಬೇಡೆಂದ ಸರ್ವಜ್ಞ ॥೧೩೧೧॥

ವನಕೆ ಕೋಕಿಲೆ ಲೇಸು। ಮನಕೆ ಹರುಷವೈ ಲೇಸು।
ಕನಕವುಳ್ಳವನ ಕೆಳೆ ಲೇಸು, ವಿದ್ಯಕೆ।
ವಿನಯ ಲೇಸೆಂದ ಸರ್ವಜ್ಞ ॥೧೩೨೪॥

ಅಲಸಿಕೆಯಲಿರುವಂಗೆ। ಕಲಸಲಂಬಲಿಯಿಲ್ಲ।
ಕೆಲಸಕ್ಕೆ ಅಲಸದಿರುವಂಗೆಬೇರಿಂದ।
ಹಲಸು ಕಾತಂತೆ ಸರ್ವಜ್ಞ ॥೧೩೨೮॥

ಮಾತು ಬಲ್ಲಾತಂಗೆ। ಯೇತವದು ಸುರಿದಂತೆ।
ಮಾತಾಡಲರಿಯದಾತಂಗೆ ಬರಿಯೇತ।
ನೇತಾಡಿದಂತೆ ಸರ್ವಜ್ಞ ॥೧೩೪೪॥

ಕತ್ತೆಯರಚಿದಡಲ್ಲಿ। ತೊತ್ತು ಹಾಡಿದಡಲ್ಲಿ।
ಮತ್ತೆ ಕುಲರಸಿಕನಿರುವಲ್ಲಿ ಕಡು ನಗೆಯ।
ಹುತ್ತ ಕಾಣಯ್ಯ ಸರ್ವಜ್ಞ ॥೧೩೫೬॥

ಬೆಕ್ಕು ಮನೆಯೊಳು ಲೇಸು। ಮುಕ್ಕು ಕಲ್ಲಿಗೆ ಲೇಸು।
ನಕ್ಕು ನಗಿಸುವ ನುಡಿ ಲೇಸು, ಊರಿಂಗೆ।
ಒಕ್ಕಲಿಗ ಲೇಸು ಸರ್ವಜ್ಞ ॥೧೩೬೪॥

ಒಡಕು ಮಡಿಕೆಯು ಹೊಲ್ಲ। ಕುಡಿಕ ನೆರೆಯೊಳು ಹೊಲ್ಲ।
ಒಡಕಿನ ಮನೆಯೊಳಿರಹೊಲ್ಲ, ಬಡವಗೆ।
ಸಿಡುಕು ತಾ ಹೊಲ್ಲ ಸರ್ವಜ್ಞ ॥ ೧೩೭೨॥

ಅಕ್ಕಿಯೆನು ಬೀಯೆಂಬ। ಬೆಕ್ಕನ್ನು ಪಿಲ್ಲೆಂಬ।
ಚೊಕ್ಕಟದತೇಜಿ ಗುರ್ರೆಂಬ ತೆಲುಗನ।
ಸೊಕ್ಕ ನೋಡೆಂದ ಸರ್ವಜ್ಞ ॥೧೩೮೨॥

ಕಾಯಿಗೆ ಕರಿಯೆಂಬ। ಕೋಳಿಗೆ ಚೋರೆಂಬ ।
ಮಾಯದ ಮಕ್ಕಳುಡು ಎಂಬ ತಿಗಳರ।
ಗಾಳಿ ಬೇಡೆಂದ ಸರ್ವಜ್ಞ ॥೧೩೮೪॥

ಮುತ್ತು ಮೂಗುತಿಯೇಕೆ। ಮತ್ತೆ ಹರಳುಗಳೇಕೆ।
ಕತ್ತೆಯ ಕೊಳೆಗೆ ಮಡಿಯೇಕೆ, ದೊರೆತನವು।
ತೊತ್ತಿಗೇಕೆಂದ ಸರ್ವಜ್ಞ ॥೧೨೮೯॥

ಬೆಂಡಿರದೆ ಮುಳುಗಿದರು। ಗುಂಡೆದ್ದು ತೇಲಿದರು।
ಬಂಡಿಯನೊಗವು ಚಿಗಿತರೂ ಸಾಲಿಗನು।
ಕೊಂಡದ್ದು ಕೊಡನು ಸರ್ವಜ್ಞ ॥೧೩೯೭॥

ಗಡ್ಡವಿಲ್ಲದ ಮೋರೆ। ದುಡ್ಡು ಇಲ್ಲದ ಚೀಲ।
ಬಡ್ಡಿಯ ಸಾಲ ತೆರುವವನ, ಬಾಳುವೆಯು।
ಅಡ್ಡಕ್ಕು ಬೇಡ ಸರ್ವಜ್ಞ ॥೧೪೦೪॥

ಎಳ್ಳು ಗಾಣಿಗ ಬಲ್ಲ। ಸುಳ್ಳು ಸಿಂಪಿಗ ಬಲ್ಲ।
ಕಳ್ಳರನು ಬಲ್ಲ ತಳವಾರ, ಬಣಜಿಗನು।
ಎಲ್ಲವನು ಬಲ್ಲ ಸರ್ವಜ್ಞ ॥೧೪೨೦॥

ಹರದನ ಮಾತನ್ನು। ಹಿರಿದು ನಂಬಲು ಬೇಡ।
ಗರಗಸದೊಡನೆ ಮರ ಹೋರಿ ತನ್ನ ತಾ ।
ನಿರಿದುಕೊಂಡಂತೆ ಸರ್ವಜ್ಞ ॥೧೪೨೪॥

ಕಳ್ಳನೂ ಒಳ್ಳಿದನು। ಎಲ್ಲ ಜಾತಿಯೊಳಿಹರು।
ಕಳ್ಳನೊಂದೆಡೆಗೆ ಉಪಕಾರಿ, ಪಂಚಾಳ।
ನೆಲ್ಲರಲಿ ಕಳ್ಳ! ಸರ್ವಜ್ಞ ॥೧೪೨೬॥

ಗಾಣಿಗನು ಈಶ್ವರನ । ಕಾಣೆನೆಂಬುದು ಸಹಜ।
ಏಣಂಕಧರನು  ಧರೆಗಿಳಿಯಲವನಿಂದ ।
ಗಾಣವಾಡಿಸುವ ಸರ್ವಜ್ಞ ॥೧೪೩೪॥

ತುಪ್ಪಾದ ತುರುಕನ । ಒಪ್ಪಾದ ಹಾರುವನ।
ಸಪ್ಪಗಿರುತಿಪ್ಪ ಬೇಡನ ಮಾತಿಂಗೆ।
ಒಪ್ಪಲೇ ಬೇಡ ಸರ್ವಜ್ಞ ॥೧೪೪೨॥

ಕತ್ತೆಗಂ ಕೋಡಿಲ್ಲ। ತೊತ್ತಿಗಂ ಗುಣವಿಲ್ಲ।
ಹತ್ತಿಯ ಹೊಲಕೆ ಗಿಳಿಯಿಲ್ಲ ಡೊಂಬನಿಗೆ।
ವೃತ್ತಿಯೇ ಇಲ್ಲ ಸರ್ವಜ್ಞ ॥೧೪೪೮॥

ಬಂಡಿಯಚ್ಚಿಗೆ ಭಾರ। ಮಿಂಡೆ ಮುದುಕಗೆ ಭಾರ।
ಗುಂಡುಗಳು ಭಾರ ಭೈತ್ರಕ್ಕೆ, ಲೋಕಕ್ಕೆ ।
ಕೊಂಡೆಯನೆ ಭಾರ ಸರ್ವಜ್ಞ ॥೧೪೫೧॥

ಹನುಮನಿಂ ಲಂಕೆ ಫ। ಲ್ಗುಣನಿಂದ ಖಾಂಡವನ।
ತ್ರಿಣಯನಿಂ ತ್ರಿಪುರ ಕೆಟ್ಟಂತೆ ಜಗವು ಕುಂ।
ಟಣಿಯಿಂದ ಕೆಡುಗು ಸರ್ವಜ್ಞ ॥೧೪೫೬॥

ಗಂಗೆಯಲಿ ಹೊಲೆಯಿಲ್ಲ। ಲಿಂಗಕ್ಕೆ ಕಡೆಯಿಲ್ಲ।
ಕಂಗಳಿಗೆ ಬೆಳಗುಬೇಗಿಲ್ಲ ಸಾಯುವಗೆ।
ಸಂಗಡಿಗರಿಲ್ಲ ಸರ್ವಜ್ಞ ॥೧೪೬೬॥

ಅಂಡೆಬಾಯಿಯನೊಬ್ಬ । ಕಂಡು ಮುಚ್ಚಲು ಬಹುದು।
ಮುಂಡೆಗಳ ಬಾಯ ಮುಚ್ಚಲು ಸಲ್ಲದಿದು।
ಕಂಡಿತವು ನೋಡ ಸರ್ವಜ್ಞ ॥೧೪೬೮॥

ಅಲ್ಲಪ್ಪನೂರಲ್ಲಿ। ಬಲ್ಲಪ್ಪ ನಲ್ಲಪ್ಪ।
ಬಲ್ಲಪ್ಪನಿಲ್ಲದೂರಲ್ಲಿ ಅಲ್ಲಪ್ಪ।
ಬಲ್ಲಪ್ಪನಪ್ಪ ಸರ್ವಜ್ಞ ॥೧೪೭೨॥

ಪುಷ್ಪವಿಲ್ಲದ ಪೂಜೆ। ಅಶ್ವವಿಲ್ಲದ ಅರಸು।
ಅಪ್ಪಲೊಲ್ಲದಳ ನಗೆನುಡಿಯು ಇವು ಮೂರು।
ಚಪ್ಪೆ ಕಾಣಯ್ಯ ಸರ್ವಜ್ಞ ॥೧೪೮೫॥

ಒಕ್ಕಲಿಲ್ಲದ ಊರು। ಮಕ್ಕಳಿಲ್ಲದ ಮನೆಯು।
ಲೆಕ್ಕವಿಲ್ಲದನ ಬೇಹಾರ, ಇವು ಮೂರು।
ದುಕ್ಕ ಕಾಣಯ್ಯ ಸರ್ವಜ್ಞ ॥೧೪೯೦॥

ಕರೆಯದಲೆ ಬರುವವನ। ಬರೆಯದಲೆ ಓದುವವನ।
ಬರೆಗಾಲಿಂದ ನಡೆವವನ ಕರೆತಂದು ।
ಕೆರದಿ ಹೊಡೆಯೆಂದ  ಸರ್ವಜ್ಞ ॥೧೫೧೧॥

ವಿದ್ಯೆ ಕಲಿಸದ ತಂದೆ। ಬುದ್ಧಿ ಹೇಳದ ಗುರುವು।
ಬಿದ್ದಿರಲು ಬಂದು ನೋಡದ ತಾಯಿಯು।
ಶುದ್ಧ ವೈರಿಗಳು ಸರ್ವಜ್ಞ ॥೧೫೧೨॥

ನಲ್ಲ ಒಲ್ಲಿಯನೊಲ್ಲ। ನೆಲ್ಲಕ್ಕಿ ಬೋನೊಲ್ಲ।
ಅಲ್ಲವನು ಒಲ್ಲ ಮೊಸರೊಲ್ಲ, ಯಾಕೊಲ್ಲ।
ಇಲ್ಲ, ಅದಕೊಲ್ಲ ಸರ್ವಜ್ಞ ॥೧೫೧೮॥

ಹೆತ್ತ ತಾಯನು ಮಾರಿ। ತೊತ್ತ ತಂದಾ ತೆರದಿ।
ತುತ್ತಿನಾತುರಕೆ ತತ್ವವನು ತೊರೆದಿಹನು।
ಕತ್ತೆ ತಾನೆಂದ ಸರ್ವಜ್ಞ ॥೧೫೩೧॥

ಗವುಡನೊಳು ಹಗೆತನವು। ಕಿವುಡನೊಳು ಏಕಾಂತ।
ಪ್ರವುಡನೊಳು ಮೂಢನುಪದೇಶ ಹಸಿದೆದ್ದು।
ತವುಡು ತಿಂದಂತೆ ಸರ್ವಜ್ಞ ॥೧೫೪೨॥

ಹೊತ್ತಾರೆ ನೆರೆಯುವುದು। ಹೊತ್ತೇರಿ ಹರಿಯುವುದು।
ಕತ್ತೆಯ ಬಣ್ಣ ಮುಗಿಲಾಗೆ ಮಳೆಯು ತಾ ।
ನೆತ್ತಣದಿ ಬಕ್ಕು ಸರ್ವಜ್ಞ ॥೧೫೭೫॥

ಅಡರಿ ಮೂಡಲು ಮಿಂಚೆ। ಪಡುವಲಕೆ ಧನುವೇಳೆ।
ಬಡಗಣದಿ ಗಾಳಿ ಕಡು ಬೀಸೆ ಮಳೆಯು ತಾ ।
ತಡೆಯದೆ ಬಕ್ಕು ಸರ್ವಜ್ಞ ॥೧೫೭೮॥

ಕುಂಭಕ್ಕೆ ಗುರು ಬರಲು । ತುಂಬುವುವು ಕೆರೆ ಬಾವಿ।
ಅಂಬರದ ವರೆಗೆ ಬೆಳೆಯೆದ್ದು ಜಗದೊಳಗೆ।
ಸಂಭ್ರಮವಹುದು ಸರ್ವಜ್ಞ ॥೧೫೯೦॥

ಏನು ಮನ್ನಿಸದಿರಲು । ಸೀನು ಮನ್ನಿಸಬೇಕು ।
ಸೀನು ಮನ್ನಿಸದೆ ಹೋಗಿಹರೆ ಹೋದಲ್ಲಿ।
ಹಾನಿಯೇ ಬಕ್ಕು ಸರ್ವಜ್ಞ ॥೧೬೦೧॥

ಹಸಿದಿಹರೆ ಉಣಲಿಲ್ಲ। ಒಸೆದೇಳ ಹೊತ್ತಿಲ್ಲ।
ಬೆಸಗೊಂಬುವುದಕೆ ಗಡಿಯಿಲ್ಲ, ಜೋಯಿಸರ।
ಘಸಣೆಯೇ ಸಲ್ಲ ಸರ್ವಜ್ಞ ॥೧೬೦೬॥

ಅಗ್ಗ ಸುಗ್ಗಿಗಳುಂಟು । ಡೊಗ್ಗೆ ಮಜ್ಜಿಗೆಯುಂಟು।
ಹೆಗ್ಗುಳದ ಕಾಯಿ ಮೆಲಲುಂಟು ಮೂಢನಾ।
ಡೆಗ್ಗೆನ್ನಬಹುದೆ ಸರ್ವಜ್ಞ ॥೧೬೦೯॥

ಊರು ಸನಿಹದಲಿಲ್ಲ। ನೀರೊಂದು ಗಾವುದವು।
ಸೇರಿ ನಿಲ್ಲುವರೆ ನೆಳಲಿಲ್ಲ, ಬಡಗಲ ।
ದಾರಿ ಬೇಡೆಂದ ಸರ್ವಜ್ಞ ॥೧೬೧೧॥

ರಾಗವೇ ಮೂಡಲು। ಯೋಗವೇ ಬಡಗಲು।
ರೋಗವದು ಶುದ್ಧ ಪಡುವಲು, ತೆಂಕಲು।
ಭೋಗದ ಬೀಡು ಸರ್ವಜ್ಞ ॥೧೬೧೩॥

ಅಟ್ಟುಂಬುದು ಮೂಡಲು। ಸುಟ್ಟುಂಬುದು ಬಡಗಲು।
ತಟ್ಟೆಲುಂಬುದು ಪಡುವಲು, ತೆಂಕಲದು।
ಮುಷ್ಟಿಲುಂಬುವದು ಸರ್ವಜ್ಞ ॥೧೬೧೪೫

ಜೋಳದ ಬೋನಕ್ಕೆ । ಬೇಳೆಯ ತೊಗೆಯಾಗಿ।
ಕಾಳೆಮ್ಮೆ ಕರೆದ ಹಯನಾಗಿ ಬೆಳವಲ।
ಮೇಳ ನೋಡೆಂದ ಸರ್ವಜ್ಞ ॥೧೬೧೯॥

ಕಿಚ್ಚುಂಟು ಕೆಸರುಂಟು।ಬೆಚ್ಚನ ಮನೆಯುಂಟು।
ಇಚ್ಛೇಗೆ ಬರುವ ಸತಿಯುಂಟು, ಮಲೆನಾಡ ।
ಮೆಚ್ಚು ನೋಡೆಂದ ಸರ್ವಜ್ಞ ॥೧೬೨೪॥

ತನ್ನ ಸಿರಿಯನು ತಾನು। ಕನ್ನಡಿಯು ಕಿಬುದೇ? ।
ತನ್ನ ಸಿರಿಯರಿವು ಸಕ್ಕದಕೆ , ಕನ್ನಡವು ।
ಕನ್ನಡಿಯ ತೆರನು ಸರ್ವಜ್ಞ ॥೧೬೨೮॥

ಮೂಡಲದು ಹಸ್ತಿನಿಗೆ। ಬಡಗಲದು ಚಿತ್ತಿನಿಗೆ ।
ಪಡುವಲದು ಶುದ್ಧ ಶಂಖಿನಿಗೆ, ತೆಂಕಲಿನ।
ಬೀಡು ಪದ್ಮಿನಿಗೆ ಸರ್ವಜ್ಞ ॥೧೬೩೦॥

ಒಲೆಯುವಳು ಹಸ್ತಿನಿಯು। ಮಲೆಯುವಳು ಚಿತ್ತಿನಿಯು।
ತಲೆವಾಗಿ ನಡೆಯುವಳು ಶಂಖಿನಿಯು, ಪದ್ಮಿನಿಯು।
ಸುಲಭವಾಗಿಹಳು ಸರ್ವಜ್ಞ ॥೧೬೩೪॥

ಮದವೆದ್ದ ಮದಗಜದ। ಹದದಂದದಿರುತಿರ್ದು।
ವಿಧವಿಧದ ಪ್ರೌಢನುಡಿಗಳನು ನುಡಿವವನು।
ಪದ್ಮಿನಿಗೆ ಮೇಳ ಸರ್ವಜ್ಞ॥೧೬೪೦॥

ಮುಂಗುರುಳು ಪಿಡಿದಾಡಿ। ಭಂಗಿಸುತ ಕವಿಕವಿದು।
ರಂಗುದುಟಿಗಳನು ಕಚ್ಚಿದರೆ ಪದ್ಮಿನಿಯು।
ಸಂಗವನು ಬಿಡಳು ಸರ್ವಜ್ಞ ॥೧೬೪೪॥

ಹೆಣ್ಣಿನ ಹೃದಯದ।ತಣ್ಣಗಿಹ ನೀರಿನ।
ಬಣ್ಣಿಸುತ ಕುಣಿವ ಕುದುರೆಯ ನೆಲೆಯ ಬ।
ಲ್ಲಣ್ಣಗಳು ಯಾರು ಸರ್ವಜ್ಞ ॥೧೬೫೦॥

ತಗ್ಗಿನ ಕುಣಿಯೆಂದು। ಅಗ್ಗವಾಡಲು ಬೇಡ।
ಭಗ್ಗ ಮೊದಲಾದ ದೈವಗಳು ಅದರೊಳಗೆ।
ಮುಗ್ಗಿರುವರಯ್ಯ ಸರ್ವಜ್ಞ ॥೧೬೬೦॥

ನೋಡಿದರೆ ಎರಡೂರು । ಕೂಡಿದಾ ಮಧ್ಯದಲಿ।
ಮೂಡಿಹ ಸ್ಮರನ ಮನೆಯಲ್ಲಿ ಜಗವು ಬಿ ।
ದ್ದಾಡುತಲಿಹುದು ಸರ್ವಜ್ಞ ॥೧೬೬೫॥

ಗಂಜಳದ ಬಾವಿಯಲಿ । ಗಂಜಳವು ಬೆಳೆದಿಹುದು।
ಗುಂಜುಂಟು ಕೆಸರು ಒಳಗುಂಟು, ಆ ಬಾವಿ।
ಗಂಜದವರಾರು ಸರ್ವಜ್ಞ ॥೧೬೭೦॥

ಉರಿಯದೆ ಮೆರೆಯದಲೆ। ಶಿರನೆತ್ತಿ ನೋಡದಲೆ ।
ಸರಿ ಬಂದ ಸ್ಥಾನದಿರುವವಳು ದೊರಕುವುದು।
ಗುರುಕರುಣವೆಂದ ಸರ್ವಜ್ಞ ॥೧೬೭೯॥

ಗಂಡನಿಲ್ಲದ ನಾರಿ। ಮಿಂಡನಿಲ್ಲದ ಸೂಳೆ।
ಬಂಡವಿಲ್ಲದ ಬೇಹಾರ, ಮುದಿನಾಯ ।
ಕುಂಡೆಯಂತಿಕ್ಕು ಸರ್ವಜ್ಞ ॥೧೬೮೬॥

ರೊಕ್ಕವಿಲ್ಲದ ಬಾಳ್ವೆ। ಮಕ್ಕಳಿಲ್ಲದ ಮನೆಯು
ಅಕ್ಕರವಿರದ ತವರೂರು, ಇವು ಮೂರು।
ದುಕ್ಕ ಕಾಣಯ್ಯ ಸರ್ವಜ್ಞ॥೧೬೯೨॥

ಒಲ್ಲದವಳೊಡನಾಡಿ। ಚೆಲ್ಲವಾಡುವನೆಗ್ಗ ।
ಕಲ್ಲ ಪುತ್ಥಳಿಯ  ಬಿಗಿದಪ್ಪಿ ಚುಂಬಿಸಲು।
ಹಲ್ಲು ಹೋದಂತೆ ಸರ್ವಜ್ಞ ॥೧೭೦೭॥

ಬೆಚ್ಚನೆಯ ಮನೆಯಾಗಿ। ವೆಚ್ಚಕ್ಕೆ ಹೊನ್ನಾಗಿ।
ಇಚ್ಚೆಯನು ಅರಿವ ಸತಿಯಾಗಿ, ಸ್ವರ್ಗಕ್ಕೆ ।
ಕಿಚ್ಚು ಹಚ್ಚೆಂದ ಸರ್ವಜ್ಞ ॥೧೭೧೧॥

ಮೊಸರು ಇಲ್ಲದ ಊಟ। ಕೆಸರು ಇಲ್ಲದ ಗದ್ದೆ।
ಹಸನವಿಲ್ಲದಳ ಮನೆವಾರ್ತೆ, ತಿಪ್ಪೆಯ।
ಕಸದಂತೆ ಇಹುದು ಸರ್ವಜ್ಞ ॥೧೭೨೪॥

ಕಾಸು ಇಲ್ಲದಳ ಬಾಳು। ಭಾಷೆಯರಿಯದ ಆಳು।
ಹೇಸಿಯಾದವಳ ಮನೆವಾರ್ತೆ ಕತ್ತೆಯ।
ಹೂಸಿನಂತಕ್ಕು ಸರ್ವಜ್ಞ ॥೧೭೩೦ ॥

ಎರೆಯಿಲ್ಲದಾರಂಬ । ದೊರೆಯು ಇಲ್ಲದ ಊರು ।
ಹರೆಯ ಹೋದವಳ ಒಡನಾಟ, ನಾಯಿ ಹಳೆ।
ಕೆರವ  ಕಡಿದಂತೆ ಸರ್ವಜ್ಞ ।॥ ೧೭೩೫॥

ಸೋರುವ ಮನೆಯಿಂದ ।ದಾರಿಯ ಮರ ಲೇಸು।
ಹೋರುವ ಸತಿಯ ಬದುಕಿಂದ ಹೊಡೆದೊಯ್ವ ।
ಮಾರಿ ಲೇಸೆಂದ ಸರ್ವಜ್ಞ ॥೧೭೪೬॥

ಬರಡಾದ ಹಯನಾಗಿ । ಜರಿಯುವ ಮಗನಾಗಿ।
ಕರೆದರೋಯೆನದ ಸೊಸೆಯಾದರಾ ಮನೆಯು।
ಉರಿಯಲಿದ್ದಂತೆ ಸರ್ವಜ್ಞ ॥೧೭೫೨॥

ಜಲದ ಒಳಗಿನ ಕಣ್ಣು। ಸಲೆ ಬೆಮರ ಬಲ್ಲುದೇ।
ಲಲನೆಯರೊಲುಮೆ ತನಗೆಂಬ ಮನುಜಂಗೆ।
ಮಲನಾಗರೆಂದ ಸರ್ವಜ್ಞ ॥ ೧೭೬೦ ॥

ಅಲ್ಲ ಸಿಹಿಯಾದಂದು। ನೆಲ್ಲಿ ಹಣ್ಣಾದಂದು।
ಕಲ್ಲು ಪ್ರತಿಮೆಗಳು ಕುಣಿದಂದು, ಸತಿಯರ।
ಸೊಲ್ಲ ನಂಬುವದು ಸರ್ವಜ್ಞ ॥೧೭೭೨॥

ಹೆಣ್ಣಿನ ಗುಣವರಿಯೆ। ಕಣ್ಣಿಗದು ಕಾಂಬುದೆ?।
ಸುಣ್ಣದ ಕಲ್ಲಿನೊಳಡಗಿ ಸುಡುಗಿಚ್ಚು।
ತಣ್ಣಗಿದ್ದಂತೆ ಸರ್ವಜ್ಞ ॥೧೭೭೫॥

ಕರೆವಾಸೆ ಗೊಲ್ಲಂಗೆ । ನಿರಿಯಾಸೆ ಸೂಳೆಗೆ।
ಒರೆಯಾಸೆ ಕತ್ತಿಯಲಗಿಂಗೆ, ಹಾದರಕೆ।
ಮರೆಯಾಟದಾಸೆ, ಸರ್ವಜ್ಞ ॥೧೭೮೧॥

ಮುದಿನಾಯಿ ಮೊಲವ ಕಂ। ಡದು ಬೆನ್ನ ಹತ್ತಿದೋಲ್।
ಮುದುಕ ಜವ್ವನೆಯನೊಡಗೂಡೆ,ಮುದಿಗೂಬೆ।
ಯೊದರಿಕೊಂಡಂತೆ ಸರ್ವಜ್ಞ ॥೧೮೦೩॥

ಅತ್ತ ಸೂಳೆಯ ಸಂಗ। ಇತ್ತ ಬೋಳಿಯ ಸಂಗ।
ಮತ್ತೆ ಪಶುಸಂಗದಿರುವಂಗೆ ಭವಭವದಿ।
ಕತ್ತೆಯ ಜನುಮ ಸರ್ವಜ್ಞ ॥೧೮೨೧॥

ಕೆಂಬಾಯಿ ತೆರೆಯುತ್ತ । ಕೆಂಬಲ್ಲ ತೋರುತ್ತ।
ಕಂಬವನೊರಗಿ ಮುರುಕಿಪಳು, ಹಾದರದ।
ಬೊಂಬೆ ಕಾಣಯ್ಯ ಸರ್ವಜ್ಞ ॥೧೮೩೭॥

ಒಂದೆಲಗ ಮೆಲಹೊಲ್ಲ। ನಿಂದಕರ ನೆರೆ ಹೊಲ್ಲ।
ತಂದೆಯನು ಜರಿವ ಮಗ ಹೊಲ್ಲ, ಸೂಳೆಯ।
ದಂದುಗವೌ ಹೊಲ್ಲ ಸರ್ವಜ್ಞ ॥೧೯೦೦॥

ಸಾಲವನು ಮಾಡುವದು । ಹೇಲ ತಾ ಬಳಿಸುವುದು।
ಕಾಲಿನ ಕೆಳಗೆ ಹಾಕುವುದು, ತುತ್ತಿನ ।
ಚೀಲ ನೋಡಯ್ಯ ಸರ್ವಜ್ಞ ॥೧೯೮೨॥

ನಿದ್ದೆಗಳು ಬಾರವು। ಬುದ್ಧಿಗಳು ತೋರವು।
ಮುದ್ದಿನ ಮಾತು ಸೊಗಸವು, ಬೋನದ।
ಮುದ್ದೆ ತಪ್ಪಿದರೆ ಸರ್ವಜ್ಞ ॥೧೯೯೬॥

ತಿತ್ತಿ ಹೊಟ್ಟೆಗೆ ಒಂದು। ತುತ್ತು ತಾ ಹಾಕುವುದು।
ತುತ್ತೆಂಬ ಶಿವನ ತೊರೆದಿಹರೆ ಸುಡುಗಾಡಿ।
ಗೆತ್ತಬೇಕೆಂದ ಸರ್ವಜ್ಞ ॥೨೦೦೬॥

ಉಂಡು ಕೆಂಡವ ಕಾಸಿ। ಉಂಡು ಶತಪದ ನಡೆದು ।
ಉಂಡೆಡದ ಮಗ್ಗುಲಲಿಮಲಗೆ ವೈದ್ಯನ ।
ಭಂಡಾಟವಿಲ್ಲ ಸರ್ವಜ್ಞ ॥೨೦೦೮॥

ರಾಗಿಯನು ಉಂಬುವ ನಿ। ರೋಗಿ ಎಂದೆನೆಸುವನು।
ರಾಗಿಯು ಭೋಗಿಗಳಿಗಲ್ಲ, ಬಡವರಿ।
ಗಾಗಿ ಬೆಳೆದಿಹುದು ಸರ್ವಜ್ಞ ॥೨೦೨೨॥

ಬೆಡಗಿನ ಪದ್ದತಿ
ವಿವಿಧ ಒಗಟುಗಳು

ಕಲ್ಲರಳಿ ಹೂವಾಗಿ । ಎಲ್ಲರಿಗೆ ಬೇಕಾಗಿ।
ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ।
ಬಲ್ಲವರು ಹೇಳಿ ಸರ್ವಜ್ಞ ॥೨೦೨೬॥ ( ಸುಣ್ಣ)

ಮರನೊತ್ತಿ ಬೇಯುವದು। ಉರಿತಾಗಿ ಬೇಯದದು।
ಪುರಗಳ ನುಂಗಿ ಬೊಗಳುವದು ಲೋಕದೊಳು।
ನರನಿದೇನಿಹುದು ಸರ್ವಜ್ಞ ॥೨೦೨೭॥

ಉರಿ ಬಂದು ಬೇಲಿಯನು । ಹರಿದು ಹೊಕ್ಕುದ ಕಂಡೆ।
ಅರಿಯದದು ಬಗೆಗೆ ಕವಿಕುಲದ ಶ್ರೇಷ್ಠರುಗ।
ಳರಿದರಿದ ಪೇಳಿ ಸರ್ವಜ್ಞ ॥೨೦೨೮॥

ಕಾಲಿಲ್ಲದಲೆ ಹರಿಗು।  ತೋಳಿಲ್ಲದೆ ಹೊರುಗು।
ನಾಲಿಗಿಲ್ಲದೆ ಉಲಿವುದು ಕವಿಕುಲದ।
ಮೇಲುಗಳು ಪೇಳಿ ಸರ್ವಜ್ಞ ॥೨೦೨೯॥

ಇರಿದರೆಯು ಹೇರಲ್ಲ। ಹರಿದರೆಯು ಸೀಳಿಲ್ಲ।
ತಿರಿಗೂಳ ಕೊಂಡು ಋಣವಿಲ್ಲ,ಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ ॥೨೦೩೦॥

ಆಡೆಂದರಾಡದದು। ಆಡ ಮರನೇರುವದು।
ಕೂಡದೆ ಕೊಂಕಿ ನಡೆಯುವದು ಕಡಿದರೆ।
ಬಾಡದದು ಪೇಳಿ ಸರ್ವಜ್ಞ ॥೨೦೩೧॥

ಕತ್ತಿಗದು ಹರಿದಿಹುದು। ಮತ್ತೆ ಬರುತೇಳುವದು।
ಕಿತ್ತು ಬಿಸಾಡಲದು ನಡದು,ಕವಿಜನರು ।
ಅರ್ತಿಯಿಂ ಪೇಳಿ ಸರ್ವಜ್ಞ ॥೨೦೩೨॥

ಕಚ್ಚಿದರೆ ಕಚ್ಚುವುದು। ಕಿಚ್ಚಲ್ಲ ಚೇಳಲ್ಲ।
ಆಶ್ಚರ್ಯವಲ್ಲ ,ಹರಿದಲ್ಲ ಈ ಮಾತು ।
ನಿಶ್ಚಯವೆಂದ ಸರ್ವಜ್ಞ ॥೨೦೩೩॥

ಹತ್ತು ಸಾಸಿರ ಕಣ್ಣು ।ನೆತ್ತಿಲಾದರು ಬಾಲ।
ಹುತ್ತಿನ ಹುಳುವ ಹಿಡಿಯುವದು ಕವಿಜನರ।
ಮೊತ್ತವಿದ ಪೇಳಿ ಸರ್ವಜ್ಞ ॥೨೦೩೪॥

ತನ್ನ ಸುತ್ತಲು ಮಣಿಯು।ಬೆಣ್ಣೆ ಕುಡಿವಾಲುಗಳ।
ತಿನ್ನದಲೆ ಹಿಡಿದು ತರುತಿಹುದು ಕವಿಗಳಿದ ।
ನನ್ನಿಯಿಂ ಪೇಳಿ ಸರ್ವಜ್ಞ ॥೨೦೩೫॥

ಬಟ್ಟಲದ ಬಾಯಂತೆ। ಹುಟ್ಟುವುದು ಜಗದೊಳಗೆ।
ಮುಟ್ಟದದು ತನ್ನ ಹೆಂಡಿರನು, ಕವಿಗಳಲಿ।
ದಿಟ್ಟರಿದ ಪೇಳಿ ಸರ್ವಜ್ಞ ॥೨೦೩೬॥

ಹಲ್ಲು ನಾಲಿಗೆಯಿಲ್ಲ। ಸೊಲ್ಲು ಸೋಜಿಗವಲ್ಲ।
ಕೊಲ್ಲದೆ ಮೃಗವ ಹಿಡಿಯುವುದು, ಲೋಕದೊಳ।
ಗೆಲ್ಲ ಠಾವಿನೊಳು ಸರ್ವಜ್ಞ ॥೨೦೩೭॥

ಆಸನದಲುಂಬುವದು। ಸೂಸುವುದು ಬಾಯಲ್ಲಿ।
ಬೇಸರದ ಹೊತ್ತು ಕೊಲ್ಲುವುದು, ಕವಿಗಳಲಿ।
ಸಾಸಿಗಳು ಪೇಳಿ ಸರ್ವಜ್ಞ ॥೨೦೩೮॥

ಹಲವು ಮಕ್ಕಳ ತಂದೆ। ತಲೆಯಲ್ಲಿ ಜುಟ್ಟವಗೆ।
ಸಲೆ ಗಳಿಗೆ ಜಾವವರಿವನ ಹೆಂಡತಿಗೆ।
ಮೊಲೆಯಿಲ್ಲ ನೋಡ ಸರ್ವಜ್ಞ ॥೨೦೩೯॥

ಮಣಿಯ ಮಾಡಿದನೊಬ್ಬ । ಹೆಣೆದು ಕಟ್ಟಿದನೊಬ್ಬ।
ಕುಣಿದಾಡಿ ಸತ್ತನವನೊಬ್ಬ ಸಂತೆಯೊಳು।
ಹೆಣನ ಮಾರಿದನು ಸರ್ವಜ್ಞ ॥೨೦೪೦॥

ಎಂಟು ಬಳ್ಳದ ನಾಮ। ಗಂಟಲಲಿ ಮುಳ್ಳುಂಟು।
ಬಂಟರನು ಹಿಡಿದು ಬಡಿಸುವದು, ಕವಿಗಳಲಿ।
ಬಂಟರಿದ ಪೇಳೆ ಸರ್ವಜ್ಞ ॥೨೦೪೧॥

ನೆತ್ತಿಯಲಿ ಉಂಬುವದು । ಸುತ್ತಲೂ ಸುರಿಸುವುದು।
ಎತ್ತಿದರೆ ಎರಡು ಹೋಳಹುದು, ಕವಿಗಳಿದ।
ಕುತ್ತರವ ಪೇಳಿ ಸರ್ವಜ್ಞ ॥೨೦೪೨॥

ಮಂಡೆ ಬಾಯೊಳಗಿಕ್ಕು। ಚಂಡಿಕೆಯು ಹೊರಗಿಕ್ಕು।
ಹೆಂಡತಿಯು ಕಡೆಯೆ ಬರುತಿಕ್ಕು, ಕಡೆಗೊಂದು।
ಉಂಡೆಯಂತಕ್ಕು ಸರ್ವಜ್ಞ ॥೨೦೪೩॥

ಕೋಡಗವು ಕುದುರೆಯಲಿ। ನೋಡನೋಡುತ ಹುಟ್ಟಿ।
ಕಾಡಾನೆಗೆರಡು ಗರಿ ಮೂಡಿ ಗಗನದಿರಿ।
ದಾಡುವುದ ಕಂಡೆ ಸರ್ವಜ್ಞ ॥೨೦೪೪॥

ಧರೆಯಲ್ಲಿ ಹುಟ್ಟಿ ಅಂ। ತರದಲ್ಲಿತಿರುಗುವುದು।
ಮೊರೆದೇರಿ ಕಿಡಿಯನುಗುಳುವುದುಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ ॥೨೦೪೫॥

ಕಾಲುಂಟು ನಡೆಯದದು। ಮೂಲೆಯಲೆ ಕಟ್ಟಿಹುದು।
ಬಾಲಕರ ಸೊಮ್ಮ ಹೊರುತಿಹುದು,ಕವಿಗಳಲಿ।
ಬಾಲರಿದ ಪೇಳಿ ಸರ್ವಜ್ಞ ॥೨೦೪೬॥

ಅರಮನೆಯಲಿರುತಿಹುದು। ಕರದಲ್ಲಿ ಬರುತಿಹುದು।
ಕೊರೆದು ವಂಶಜರ ತಿನುತಿಹುದು, ಕವಿಗಳಲಿ।
ದೊರೆಗಳಿದ ಪೇಳಿ ಸರ್ವಜ್ಞ ॥೨೦೪೭॥

ಪಾತಾಳಕಿಳಿಯುವದು। ಸೀತಳವ ತರುತಿಹುದು।
ಭೂತಳದ ಮೇಲೆ ಇರುತಿಹುದು ಅದು ತಾನು।
ಏತರದು ಪೇಳಿ ಸರ್ವಜ್ಞ ॥ ೨೦೪೮॥

ಕರ್ಪುರದಿ ಹುಟ್ಟೆಹುದು। ಕರ್ಪುರವು ತಾನಲ್ಲ।
ಕರ್ಪುರವು ಅಹುದು ಬಿಳಿಯಲ್ಲ, ಈ ಮಾತು।
ಕರ್ಪುರದಲುಂಟು ಸರ್ವಜ್ಞ ॥೨೦೪೯॥

ನಾಡೆಲೆಯ ಮೆಲ್ಲುವಳ । ಕೂಡೆ ಬೆಳ್ಳಗೆ ಬಾಯಿ॥
ಊಡಿದ ಅರುವೆ ಮೊಲೆಕಟ್ಟಿನಾಕೆಯನು।
ಕಾಡಬೇಡೆಂದ ಸರ್ವಜ್ಞ ॥೨೦೫೦॥

ಹತ್ತೇಳುತಲೆ ಕೆಂಪು। ಮತ್ತಾರುತಲೆ ಕಪ್ಪು।
ಹೆತ್ತವ್ವನೊಡಲನುರಿಸುವದು,ಕವಿಗಳಿದ।
ರರ್ಥವನು ಪೇಳಿ ಸರ್ವಜ್ಞ ॥ ೨೦೫೧॥

ಎಂತುಂಬರಂಬಲಿಯ। ಮುಂತೊಬ್ಬನೈದಾನೆ।
ಅಂತಕನಲ್ಲ, ಅಜನಲ್ಲ,ಈ ತುತ್ತ।
ನೆಂತುಂಬರಯ್ಯ ಸರ್ವಜ್ಞ॥೨೦೫೨॥

ಅತ್ತಲಂಬಲಿಯೊಳಗೆ । ಇತ್ತೊಬ್ಬನೈದಾನೆ।
ಅತ್ತವನ ನೋಡ ಜವನಲ್ಲ, ಅಂಬಲಿಯ !।
ನೆತ್ತುಂಬನಯ್ಯ ಸರ್ವಜ್ಞ ॥೨೦೫೩॥

ಮುಂಗೈಯೊಳಾಡುವದು। ಹಿಂಗುವದು ಹೊಂಗುವದು।
ಸಿಂಗಿಯಲಿ ಸಿಳ್ಳ ಬಿಡುತಿಹುದು, ಆಸ ಮಿಗದ।
ಸಂಗವನು ನೋಡು ಸರ್ವಜ್ಞ ॥೨೦೫೪॥

ಅಂಬಾಳ ನೆಲೆಯೆಂದು । ನಂಬಿ ಬೆನ್ನಲಿ ಬಂದು।
ಅಂಬೆಂದು ಬೆನ್ನ ಗರಿ ತೋರ್ಪುದಾ ಮಿಗವ ।
ನಿಂಬರಿದು ಪೇಳಿ ಸರ್ವಜ್ಞ ॥೨೦೫೫॥

ಕರಚರಣವದಕಿದ್ದು । ಕರೆದಲ್ಲಿ ಬಾರದದು।
ಕರದಲ್ಲಿ ಹುಟ್ಟಿ ಸ್ಥಿರವಾಗಿ ಇರುವದಿದ॥
ರಿರವರಿದು ಪೇಳಿ ಸರ್ವಜ್ಞ ॥೨೦೫೬॥

ಕೆನ್ನೆಯಲಿ ಕುಡಿವಾಲ। ತನ್ನ ಸುತ್ತಲು ಮಣಿಯು।
ತನ್ನ ದೇಹವನು ಹಣ್ಣುವದು, ಕವಿಗಳಲಿ।
ಚೆನ್ನರಿದ ಪೇಳಿ,ಸರ್ವಜ್ಞ ॥೨೦೫೭॥

ಬಂದಿಹೆನು ನಾನೊಮ್ಮೆ । ಬಂದು ಹೋಗುವೆನೊಮ್ಮೆ।
ಬಂದೊಮ್ಮೆ ಹೋಗಿ ನಾ ಬಾರೆ ಕವಿಗಳಲಿ।
ವಂದ್ಯರಿದ ಪೇಳಿ ಸರ್ವಜ್ಞ ॥೨೦೫೮॥

ಮೂರು ಕಾಲಲಿ ನಿಂತು । ಗೀರಿ ತಿಂಬುದು ಮರನ ।
ಆರಾರಿ ನೀರ ಕುಡಿದಿಹುದು ಕವಿಗಳಲಿ।
ಧೀರರಿದ ಪೇಳಿ ಸರ್ವಜ್ಞ ॥೨೦೫೯॥

ಅರೆ ಕಲ್ಲಿನ ಮೇಲೆ । ಮರವು ಹುಟ್ಟಿದ ಕಂಡೆ।
ಮರದ ಮೇಲೆರಡು ಕರ ಕಂಡೆ, ವಾಸನೆಯು।
ಬರುತಿಹುದ ಕಂಡೆ ಸರ್ವಜ್ಞ ॥೨೦೬೦॥

ಒಣಗಿದ ಮರ ಚಿಗಿತು । ಬಿಣಿಲು ಬಿಡುವುದ ಕಂಡೆ।
ತಣಿಗೆಯ ತಾಣಕದು ಬಹುದು ಕವಿಗಳಲಿ।
ಗುಣಯುತರು ಪೇಳಿ ಸರ್ವಜ್ಞ ॥೨೦೬೧॥

ಅಟ್ಟರಾವೃಡಿಗನ । ಸುಟ್ಟಿಹರು ಕುಂಟಿಗೆಯ।
ಹುಟ್ಟಿಯ ಮೂಗ ಹರಿದರೀ ಮೂರು ಭವ।
ಗೆಟ್ಟು ಕೂಡಿದರು ಸರ್ವಜ್ಞ ॥೨೦೬೨॥

ಇನ್ನು ಬಲ್ಲರೆ ಕಾಯಿ। ಮುನ್ನೂರ ಅರವತ್ತು।
ಹಣ್ಣು ಹನ್ನೆರಡು ಗೊನೆ ಮೂರು, ತೊಟ್ಟೊಂದು।
ಚೆನ್ನಾಗಿ ಪೇಳಿ ಸರ್ವಜ್ಞ ॥೨೦೬೩॥

ಕಡೆ ಬಿಳಿದು ನಡುಗಪ್ಪು। ಉಡುವ ವಸ್ತ್ರವದಲ್ಲ।
ಬಿಡದೆ ನೀರುಂಟು ಮಡುವಲ್ಲ, ಕವಿಗಳೀ।
ಬೆಡಗ ಪೇಳುವದು ಸರ್ವಜ್ಞ ॥೨೦೬೪॥

ಕರವುಂಟು ಕಾಲಿಲ್ಲ । ಶಿರ ಹರಿದ ಮುಂಡವದು।
ನರದಿ ಬಿಗಿದಾರು ತುಂಡದಕೆ, ಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ ॥೨೦೬೫॥

ಕೂತು ಮಾತಾಡುತ್ತ। ಯಾತವನು ಹೊಡೆದಿಹರೆ।
ಕಾತ ಕಾಯಿಗಳು ಹೆಡಗೆಯಲಿ ಮಿಸುಪ ಮಿಡಿ।
ಸೌತೆಯಂತಿಹವು ಸರ್ವಜ್ಞ ॥೨೦೬೬॥

ಹತ್ತು ಸಾಸಿರ ಕಣ್ಣು । ಕತ್ತಿನಲೆ ಕಿರಿ ಬಾಲ।
ತುತ್ತನೆ ಹಿಡಿದು ತರುತಿಹುದು ಕವಿಗಳಿದ।
ರರ್ಥವನು ಪೇಳಿ ಸರ್ವಜ್ಞ ॥೨೦೬೭॥

ಅರವತ್ತು ಸಿಂಹ ಒಂ। ದಿರುವೆ ಕಚ್ಚಿದ ಕಂಡೆ।
ಕೆರೆಯ ಕೋಡೊಡೆದುಧರೆ ಬೆಂದು ಕೈಲಾಸ।
ಉರಿವುದನು ಕಂಡೆ ಸರ್ವಜ್ಞ ॥೨೦೬೮॥

ನಲ್ಲ ದೇವಾಸಾಲೆ। ಹುಲ್ಲೆಗೊಂಬತ್ತು ಮುಖ।
ಬೆಳ್ಳಿಲಿಗೆ ನಾಲ್ಕು ತನಿಗೋಡು, ಮೂಡಿದ್ದ।
ನಿಲ್ಲಿಯೇ ಕಂಡೆ ಸರ್ವಜ್ಞ ॥೨೦೬೯॥

ತೆಂಗು ಬಟ್ಟಲು ನುಂಗಿ। ಮುಂಗುಲಿಯನಿಲಿನುಂಗಿ।
ಗಂಗೆವಾಳುಕರ ಹರ ನುಂಗಿ ಜಗವು ಬೆಳ।
ದಿಂಗಳಂತಿಕ್ಕು ಸರ್ವಜ್ಞ ॥೨೦೭೦॥

ಜಲದ ಒಳಗಣ ಮೀನು। ಹೊಳೆವ ಕೊಂಬಿನ ಮೇಲೆ।
ಬೆಳೆದ ಗಿರಿ ಕಂಡುಕೊಳುತಿರ್ಕು ಕನ್ನಡದ ।
ಒಳಗನಾರ್ಬಲ್ಲ ಸರ್ವಜ್ಞ ॥೨೦೭೧॥

ಚಟುಲ ಲೋಚನೆಯಂತೆ। ಕುಟಿಲಕುಂತಳೆಯಂತೆ।
ವಿಟಹೆಣ್ಣಿನಂತೆ ಹಗಲಲ್ಲಿ,ಇರುಳು ಸಂ।
ಗಟಿನ ಕಾಯಂತೆ,ಸರ್ವಜ್ಞ ॥೨೦೭೨॥

ಸಣ್ಣ ದೊಡ್ಡವನಲ್ಲ। ಅಣ್ಣನಿರುವುದು ಅಲ್ಲ।
ಹಣ್ಣಿಕ್ಕು ಲೋಕದೊಳಗೆಲ್ಲ ಇದನು ಬ।
ಬಲ್ಲಣ್ಣಗಳು ಪೇಳಿ ಸರ್ವಜ್ಞ ॥೨೦೭೩॥

ಅಡವಿಯಲಿ ಹುಟ್ಟಿಹುದು। ಗಿಡಮರನು ಆಗಿಹುದು।
ಕಡಿದರೆ ಕಂಪ ಕೊಡುತಿಹುದು, ಇದನೊಡೆದು।
ತಡೆಯದೆ ಪೇಳಿ ಸರ್ವಜ್ಞ ॥೨೦೭೪॥

ಗಣಿಕೆಯ ಮೂಗಿನಲಿ । ಮೊಣಕಾಲ ಹುಟ್ಟಿಹುದು।
ತೃಣನುಂಡು ನೀರನುಣಲೊಲ್ಲದಂತದಕೆ ।
ಎಣಿಕೆಯಿಲ್ಲೆಂದ ಸರ್ವಜ್ಞ ॥೨೦೭೫॥

ಆಕೆಯನು ತಾ ಹೋಗೆ। ಈಕೆ ಬಾರದ ಕಂಡು।
ಆಕೆ ಮರೆ ಸಾರಿ ನೆರೆದುತಾ ಮರಳಿ ಮ।
ತ್ತಾಕೆಯನೆ ತಂದ ಸರ್ವಜ್ಞ ॥೨೦೭೬॥

ಸೃಷ್ಟಿಯನು ಆಳುವಗೆ । ಹುಟ್ಟಿಹನು ಮಗನೊಬ್ಬ।
ಅಟ್ಟೆಯದು ಬೇರೆ,ತಲೆ ಬೇರೆ, ಅವನಿಗೆ।
ಕೊಟ್ಟ ವರ ಬೇರೆ ಸರ್ವಜ್ಞ ॥೨೦೭೭॥

ಬೆಟ್ಟದಂತಾನೆಯದು। ಬಟ್ಟಯಲಿ ಬರೆ ಕಂಡು।
ಕಟ್ಟಿಟ್ಟ ಕಣ್ಣಿ ಹರಿಯಲದು ಕಂಚಿಯನು।
ಮುಟ್ಟಿದುದ ಕಂಡೆ ಸರ್ವಜ್ಗ॥೨೦೭೮॥

ಎತ್ತುಗಾಣವ ನುಂಗು। ಕತ್ತರಿಯ ಕಣಿ ನುಂಗು।
ಸುತ್ತಿ ಹೊಡೆಯುವನ ನೊಗ ನುಂಗು ,ಈ ಮಾತು।
ಸತ್ಯ ತಾ ನೆಂದ ಸರ್ವಜ್ಞ ॥೨೦೭೯॥

ನೂರಮುವತ್ತು ಗುರಿ। ಬೇರೆ ಇನ್ನೊಂದು ತಲೆ।
ಊರಿದವು ಎರಡು ಸಮಪಾದ,ಮತ್ತೆರಡ।
ನೂರದೇಕೆಂದ ಸರ್ವಜ್ಞ ॥೨೦೮೦॥

ಕಾಯುವರು ಹಲಬರು।ಕಾವ ಗೊಲ್ಲರ ಕಾಣೆ।
ಮೇಯುವದು ಮರನ ನುಣ್ಣಗದು ಕವಿಗಳಲಿ।
ಗಾವಿಲರು ಪೇಳಿ ಸರ್ವಜ್ಞ ॥೨೦೮೧॥

ಅಂತರದಲಡಿ ನಾಲ್ಕು । ಸ್ವಂತವಿಟ್ಟವು ನಾಲ್ಕು ।
ಮುಂತೆರಡು ಕೋಡು ಕಿವಿಯಾರು, ಕಣ್ಣೇಳು।
ಎಂತ ಮೃಗವಯ್ಯ ಸರ್ವಜ್ಞ ॥೨೦೮೨॥

ಏರಿಯ ಕೆಳಗಿಲ್ಲ। ಬೇರೆ ತೋಟದಲಿಲ್ಲ।
ದಾರಿಯಲಿ ಇಲ್ಲ, ಬಿಸಿಲಿಲ್ಲ, ಈ ಮಾತು।
ಯಾರಿಗರಿದಿಲ್ಲ ಸರ್ವಜ್ಞ ॥೨೦೮೩॥

ಕಾಲು ನಾಲ್ಕುಂಟದಕೆ। ಹೇಳುವರೆ ಮೃಗವಲ್ಲ।
ಮೇಲೆ ತಲೆ ಮೂರುಅಜನಲ್ಲ, ಕವಿಗಳಲಿ।
ಬಾಲರಿದ ಪೇಳಿ ಸರ್ವಜ್ಞ ॥೨೦೮೪॥

ಹರೆಯಲ್ಲಿ ಹಸುರಾಗಿ। ನೆರೆಯಲ್ಲಿ ಕಿಸುವಾಗಿ।
ಸುರರರಿಯದಮೃತವು ನರರಿಂಗೆ ದೊರೆದಿಹುದು।
ಅರಿದರಿದ ಪೇಳಿ ಸರ್ವಜ್ಞ ॥೨೦೮೫॥

ಕಾಲಿಲ್ಲ ಕೊಂಬುಂಟು। ಬಾಲದ ಪಕ್ಷೆಯದು।
ಮೇಲೆ ಹಾರುವದು ಹದ್ದಲ್ಲ, ಕವಿಗಳಲಿ।
ಬಾಲರಿದ ಪೇಳಿ ಸರ್ವಜ್ಞ ॥೨೦೮೬॥

ಮೀನು ಮುಟ್ಟದ ವಾರಿ। ದಾನವಾರಿಯು ತಾನು।
ಮಾನವರಿಗಾಗಿ ಬೆಳೆಸಿಹನು ಕವಿಗಳಲಿ।
ಮಾನಿಸರು ಪೇಳಿ ಸರ್ವಜ್ಞ ॥೨೦೮೭॥

ಒರೆಯುಂಟು ಒರೆಯದದು। ಒರೆತಿಹರೆ ಒರೆಯುವದು।
ಕೆರೆಬಾವಿಯೊರತೆ ತಾನಲ್ಲ,ಕವಿಜನಗ।
ಳರಿತಿದನುಪೇಳಿ ಸರ್ವಜ್ಞ ॥೨೦೮೮॥

ಸಂದ ಮೇಲ್ಸುಡುತಿಹುದು । ಬೆಂದ ಮೇಲುರಿದಿಹುದು।
ಬಂಧುಗಳನೆದ್ದು ಬಡಿದಿಹುದು, ಕವಿಗಳಲಿ।
ನಂದನರು ಪೇಳಿ ಸರ್ವಜ್ಞ ॥೨೦೮೯॥

ಕಣ್ಣುಂಟು ಕಾಣದದು। ಕಣ್ದೆರೆದು ನೋಡುವುದು।
ಮಣ್ಣಿನಲಿ ಹುಟ್ಟಿ ಬೆಳಗಿಹುದು, ಇದನು ಬ।
ಲ್ಲಣ್ಣಗಳು ಪೇಳಿ ಸರ್ವಜ್ಞ ॥೨೦೯೦॥

ಹಲ್ಲುಂಟು ಮೃಗವಲ್ಲ। ಸೊಲ್ಲು ಸೋಜಿಗವಲ್ಲ।
ಕೊಲ್ಲುವುದು ತನ್ನ ನಂಬಿದರ, ಅರಿದರಿದ।
ಬಲ್ಲವರು ಪೇಳಿ ಸರ್ವಜ್ಞ ॥೨೦೯೧॥

ಅರಸು ಬೆಟ್ಟವನು ಸ । ಮ್ಬರಿಸಿ ಬೆಸಳಿಗೆ ತುಂಬಿ।
ಉರಿವ ಕಿಚ್ಚಿನಲಿ ತಾನಿರಿಸಿ ಪರಿವಾರ।
ಕರೆದಿಹುದ ಕಂಡೆ ಸರ್ವಜ್ಞ ॥೨೦೯೨॥

ಗೂಡನ್ನು ಕಡಿದಿಹರೆ। ಓಡೆಲ್ಲ ಮಡಿಕೆಗಳು।
ಓಡಿ ಬಡಿದಿಹರೆ ಮಡಿಕೆಯೊಂದರ ಮೇಲೆ।
ಅಡಕಿರುವುದೇನು? ಸರ್ವಜ್ಞ ॥೨೦೯೩॥

ನೀರಿನಲಿ ತಾ ಹುಟ್ಟಿ । ನೀರ ನೆರೆ ನಂಬದದು।
ನಾರಿಯರ ನಂಬಿ ಕೆಟ್ಟಿಹುದು ಈ ಮಾತು।
ಆರಿಗರಿದಿಲ್ಲ ಸರ್ವಜ್ಞ ॥೨೦೯೪॥

ಕಪ್ಪು ಬಣ್ಣದ ನೀರೆ । ಒಪ್ಪುವಳು ಗಗನದಲಿ।
ಕಪ್ಪಿನ ಸೀರೆಬಿಳಿಯಾಗೆ ಅವಳನ್ನು।
ಅಪ್ಪುವವರಿಲ್ಲ ಸರ್ವಜ್ಞ ॥೨೦೯೫॥

ಹುಟ್ಟಿದ ಮನೆ ಬಿಟ್ಟು । ಸಿಟ್ಟಿನಲಿ ಹೊರಟಿಹಳು।
ಸಿಟ್ಟಳಿದು ಮನೆಗೆ ಬರುತಿಹಳು ಕವಿಗಳಲಿ।
ದಿಟ್ಟರಿದ ಪೇಳಿ ಸರ್ವಜ್ಞ ॥೨೦೯೬॥

ಬೆಳ್ಳಗೆ ಇರುತಿಹುದು। ಉಳ್ಳಾಡಿ ಬರುತಿಹುದು।
ಸುಳ್ಳಲ್ಲ ಸತಿಯರಳಿಸುವದು, ಕವಿಗಳಲಿ।
ಉಳ್ಳವರು ಪೇಳಿ ಸರ್ವಜ್ಞ ॥೨೦೯೭॥

ನಳಿದೋಳಿನಾಕೆ ತಾ। ಸುಳಿದೆಗೆದು ಬೆಳೆದಿಹಳು।
ಕಳೆಯುಳ್ಳ ಹಸುಳೆ ಹಲವಾಗೆ, ತಾನಾಗಿ।
ಅಳಿದು ಹೋಗುವಳು ಸರ್ವಜ್ಞ ॥೨೦೯೮॥

ಬಂದಿಹೆನು ಮತ್ತೊಮ್ಮೆ । ಬಂದಂತೆ ಹೋಗಿಹೆನು।
ನಿಂದಿಹೆನು ಎಂದು ಇರಲೊಲ್ಲೆ, ಹೋಗಿಹರೆ।
ಬಂದಿಹೆನು ಬಾರೆ ಸರ್ವಜ್ಞ ॥೨೦೯೯॥

ಪ್ರಥಮದಲಿ ಹುಲಿಯಂತೆ। ದ್ವಿತಿಯದಲಿ ಇಲಿಯಂತೆ।
ತೃತಿಯದಲಿ ತಾನು ಕಪಿಯಂತೆ, ಕವಿಗಳಲಿ ।
ಮತಿವಂತರರುಹಿ ಸರ್ವಜ್ಞ ॥೨೧೦೦॥

ಯಚರಮಕಾಲ : ಸರ್ವಜ್ಞನು ಎಷ್ಟು ವರುಷ ಬದುಕಿದನು? ಯಾವ ಊರಲ್ಲಿ ತೀರಿಕೊಂಡನು ಎಂಬುದರ ಬಗ್ಗೆ ಚರಿತ್ರಾಧಾರವಿಲ್ಲ. ಆದರೆ ಅವನ ಅಂತ್ಯವನ್ನು ಹೇಳುವ ಸಂಪ್ರದಾಯದ ಕಥೆಯು ಹೀಗಿದೆ. ಸರ್ವಜ್ಞನು ಒಮ್ಮೊ ತನ್ನ ಅಕ್ಕನ ಮನೆಯಲ್ಲಿ ಅವಳು ಮಸಾಲೆಯನ್ನು ಅರೆಯುತ್ತಿದ್ದಾಗ ಹೇಗೋ ಅವಳ ಮರ್ಮಾಂಗವನ್ನು ಕಂಡು -

ಅಸಿಗಲ್ಲು ಅಡಿಯಾಗಿ ಮಸಗಲ್ಲು ಮೇಲಾಗಿ।
ಗಸಗಸನೆ ಅರೆವ ಅಕ್ಕನ ಮೋಣಿನ ।
ಕುಶಲವನು ನೋಡ ಸರ್ವಜ್ಞ ॥
ಎಂದು ಅಂದನು.
ಅದಕ್ಕವಳು ಎಚ್ಚತ್ತು ಮರ್ಯಾದೆಯಿಂದ ಕುಳಿತು-

ಉಚ್ಚೆಯಾ ಬಚ್ಚಲವ ತುಚ್ಛವೆಂದೆನಬೇಡ।
ಅಚ್ಚುತ ಬಿದ್ದನಜಬಿದ್ದ ದೇವೇಂದ್ರ।
ನೆಚ್ಚೆತ್ತು ಬಿದ್ದ ಸರ್ವಜ್ಞ ॥

ಎಂದು ಪ್ರತ್ಯುತ್ತರ ಕೊಟ್ಟಳಂತೆ.
ಸಂಗಡಲೆ ಅವನ ತಲೆ ಸೀಳಿ ಸಹಸ್ರ ಹೋಳಾಗಿ ಶೂನ್ಯತ್ವವನ್ನಯ್ದಿದನಂತೆ. ಅವನಿಗೆ ಯಾರಾದರೂ ಪ್ರತ್ಯುತ್ತರ ಕೊಟ್ಟಲ್ಲಿ ಅವನು ಸಾಯಬೇಕೆಂದು ಈಶ್ವರ ಸಂಕಲ್ಪವಿದ್ದರಿಂದ ಹೀಗಾಯಿತೆಂದು ಹೇಳಿಕೆ.

ಅನಂತ ಕೃತಜ್ಞತೆಗಳು
ಸಂಪಾದಕರು: ಚನ್ನಪ್ಪ ಉತ್ತಂಗಿ
ಪ್ರಕಾಶನ: ಕನ್ನಡ ಸಾಹಿತ್ಯ ಪರಿಷತ್ತು,
ಚಾಮರಾಜಪೇಟೆ,
ಬೆಂಗಳೂರು-೫೬೦೦೧೮

ಢಣ

1 ಕಾಮೆಂಟ್‌: