ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಏಪ್ರಿಲ್ 28, 2018

ಭಾವಾರ್ಥದೊಂದಿಗೆ ರನ್ನನ ಗದಾಯುದ್ಧ ಅಥವಾ ಸಾಹಸಭೀಮ ವಿಜಯ

ರನ್ನನ ಗದಾಯುದ್ಧ ಅಥವಾ ಸಾಹಸಭೀಮ  ವಿಜಯ

ಪ್ರಥಮಾಶ್ವಾಸಂ

ಶ್ರೀಯುವತೀಪ್ರಿಯಂ ಬಲಯುತಂ ಬಲಿದರ್ಪಹರಂ ಜಿತಾರಿದೈ
ತೇಯನನಂತಭೋಗನಿಲಯಂ ಪ್ರತಿಪಾಲಿತಧರ್ಮಚಕ್ರನ
ಬ್ಜಜಾಯತನೇತ್ರನಾದಿಪುರುಷಂ ಪುರುಷೋತ್ತಮನೀಚಳುಕ್ಯನಾ
ರಾಯಣದೇವನೀಗೆಮಗೆ ಮಂಗಳಕಾರಣಮುತ್ಸವಂಗಳಂ||೧||

ಕನ್ನಡದ ಆದಿಕವಿ, ಅಗ್ರಕವಿ,ನಾಡೋಜನೆಂದು ಪ್ರಸಿದ್ಧಿಗೆ ಬಂದ ಪಂಪನ ಮಾರ್ಗಾನುಗಾಮಿಯಾದ ಶ್ರೀ ಕವಿರನ್ನನು ಗ್ರಂಥಾರಂಭದಲ್ಲಿ ಶ್ರೀಮನ್ನಾರಾಯಣನನ್ನು ಪ್ರಾರ್ಥಿಸುವ ಪದ್ಯದಲ್ಲಿ ಅಭೇದ ಪ್ರತಿಪತ್ತಿಯಿಂದ ತನ್ನ ಆಶ್ರಯದಾತನಾದ
ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯದೇವನನ್ನೂ ಸ್ತುತಿಸಿರುವನು. ಈ ಪದ್ಯದಲ್ಲಿ ಪಂಪಭಾರತದ ಪ್ಥಮ ಪದ್ಯದ ಛಾಯೆ ಸುಸ್ಪಷ್ಟವಾಗಿ ಗೋಚರಿಸುತ್ತದೆ.

ಮೊದಲು ನಾರಾಯಣ ಪರವಾದ ಪ್ರಾರ್ಥನೆ.

ಶ್ರೀಯುವತೀಪ್ರಿಯಂ= ಲಕ್ಷ್ಮಿಯೆಂಬ ಜವ್ವನೆಯ ಪ್ರಿಯತಮನು, ಬಲಯುತಂ= ಬಲರಾಮಸಹಿತನು, ಬಲಿದರ್ಪಹರಂ= ಬಲಿಚಕ್ರವರ್ತಿಯ ಅಹಂಕಾರವನ್ನು ನಾಶಪಡಿಸಿದವನು, ಜಿತಾರಿದೈತೇಯಂ= ಶತ್ರುಗಳಾದ ರಾಕ್ಷಸರನ್ನು ಜಯಿಸಿದವನು, ಅನಂತಭೋಗನಿಲಯಂ= ಅನಂತನೆಂಬ ಸರ್ಪವನ್ನು ಮನೆಯನ್ನಾಗಿ ಮಾಡಿಕೊಂಡವನು, ಪ್ರತಿಪಾಲಿತ=ಸಂರಕ್ಷಿಸಲ್ಪಟ್ಟ, ಧರ್ಮಚಕ್ರಂ = ಧರ್ಮಸಂರಕ್ಷಣಾರ್ಥವಾಗಿ ಕರದಲ್ಲಿ ಧರಿಸಿರುವ ಸುದರ್ಶನ ಚಕ್ರವುಳ್ಳವನು, ಅಬ್ಜಾಯತನೇತ್ರಂ= ಕಮಲದಂತೆ ನೀಳವಾದ ಕಣ್ಣುಗಳುಳ್ಳವನು, ಆದಿಪುರುಷಂ = ಮೂಲಪುರುಷನು, ಪುರುಷೋತ್ತಮಂ= ಪುರುಷಶ್ರೇಷ್ಠನಾದವನು, ಎಮಗೆ=ನಮಗೆ, ಮಂಗಳಕಾರಣಂ = ಮಂಗಳವನ್ನುಂಟುಮಾಡುವುಟದಕ್ಕಾಗಿ, ಉತ್ಸವಂಗಳಂ=ಉತ್ಸಾಹಗಳನ್ನು, ಈಗೆ= ಅನುಗ್ರಹಿಸಲಿ.
ತಾತ್ಪರ್ಯ :- ಲಕ್ಷ್ಮೀರಮಣನೂ, ಬಲರಾಮಸಹಾಯನೂ, ಬಲಿಚಕ್ರವರ್ತಿಯ ಗರ್ವವನ್ನು ಭಂಗಿಸಿದವನೂ, ಶತ್ರುಗಳಾದ ದಾನವರನ್ನು ಜಯಿಸಿದವನೂ, ಅನಂತವೆಂಬ ಸರ್ಪವನ್ನು ಮನೆಯನ್ನಾಗಿ ಮಾಡಿಕೊಂಡವನೂ, ಧರ್ಮ ಸಂರಕ್ಷಣಾರ್ಥವಾಗಿ ಸುದರ್ಶನ ಚಕ್ರವನ್ನು ಧರಿಸಿದವನೂ, ಕಮಲನೇತ್ರನೂ, ಆದಿಪುರುಷನೂ, ಪುರುಷೋತ್ತಮನು ನಮಗೆ ಮಂಗಳವಾಗುವಂತೆ ಸ್ಫೂರ್ತಿಯನ್ನು ಅನುಗ್ರಹಿಸಲಿ.

ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯದೇವನ ಪರವಾದ ಸ್ತುತಿಯನ್ನು ಗಮನಿಸೋಣ-

ಶ್ರೀಯುವತಿಪ್ರಿಯಂ= ಸಂಪದಧಿದೇವತೆಯಾದಲಕ್ಷ್ಮೀಪತಿಯೂ, ಅರ್ಥಾತ್ ಶ್ರೀಮಂತನೂ, ಬಲಯುತಂ= ಚತುರಂಗಸೈನ್ಯವುಳ್ಳವನು, ಬಲಿದರ್ಪಹರಂ=ಬಲಿಷ್ಠರಾದಶತ್ರುಗಳನ್ನುನಾಶಮಾಡಿದವನೂ,ಜಿತಾರಿದೈತೇಯಂ=
ದೈತ್ಯಸದೃಶರ ವೈರಿಗಳನ್ನು ಗೆದ್ದವನೂ, ಅನಂತಭೋಗನಿಲಯಂ= ಅಪರಿಮಿತ ಸುಖಭೋಗಗಳಿಗೆ ನೆಲೆಯಾದವನೂ,
ಪ್ರತಿಪಾಲಿತ ಧರ್ಮಚಕ್ರಂ = ಸಂರಕ್ಷಿಸಲ್ಪಟ್ಟ ಧರ್ಮ ಸಾಮ್ರಾಜ್ಯವುಳ್ಳವನೂ,ಅಬ್ಜಾಯತನೇತ್ರಂ= ಕಮಲದಂತೆ ವಿಶಾಲವಾದ ಕಣ್ಣುಗಳುಳ್ಳವನೂ, ಆದಿಪುರುಷಂ= ಪ್ರಥಮಪ್ರಜೆ, ಪುರುಷೋತ್ತಮಂ= ಗಂಡರ ಗಂಡನು, ಚಳುಕ್ಯನಾರಾಯಣದೇವಂ = ನಾರಾಯಣಸದೃಶನಾಗಿರುವ ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯ ದೇವನು, ಮಂಗಳ ಕಾರಣಂ= ಶುಭನಿಮಿತ್ತವಾಗಿ, ಉತ್ಸವಂಗಳಂ= ಸಂತೋಷಗಳನ್ನು , ಈಗೆ=ದಯೆಗೈಯಲಿ.

ತಾತ್ಪರ್ಯ:- ಆಗರ್ಭ ಶ್ರೀಮಂತನೂ,ಚತುರಂಗ ಸೈನ್ಯವುಳ್ಳವನೂ, ಬಲಿಷ್ಠರನ್ನೂ ದುಷ್ಟರನ್ನೂ ನಾಶಮಾಡಿದವನೂ, ಅಪರಿಮಿತ ಸುಖಾನುಭವಿಯೂ, ಧರ್ಮಸಾಮ್ರಾಜ್ಯರಕ್ಷಕನೂ,ಕಮಲನೇತ್ರನೂ, ಪ್ರಥಮ ಪ್ರಜೆಯೂ, ಮಹಾವೀರನೂ, ಆದ ಚಾಳುಕ್ಯ ನಾರಾಯಣದೇವನು (ಸತ್ಯಾಶ್ರಯ ದೇವನು) ನಮಗೆ ಸುಖಸಂತೋಷಗಳನ್ನುಂಟುಮಾಡಲಿ.

ಅಲಂಕಾರ:- ಶ್ಲೇಷೆ, ರೂಪಕ.

ತರುಣೋತ್ತುಂಗಶಶಾಂಕಖಂಡಮೆ ಭುಜಂಗೇಂದ್ರನಂ
ಕುರಮುನ್ಮೀಲಿತಮಟ್ಟಹಾಸಮೆ ದಳಾನೀಕಂ ವೃಷಂ ಪುಷ್ಪ ಮೀ
ಶ್ವರಶೈಲಂ ಫಲಮಾಗೆ ಕೋಮಲಮುಖೀಗೌರೀಲತಾಶ್ಲಿಷ್ಟ ಶಂ
ಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯನಾರಾಯಣಂ||೨||

ಈ ಪದ್ಯದಲ್ಲಿ ಕವಿ, ಶಿವನನ್ನು ಸ್ತುತಿಸುವುದರೊಂದಿಗೆ ಶಿವಸದೃಶನಾದ ಚಾಳುಕ್ಯ ನಾರಾಯಣನನ್ನು ಕೊಂಡಾಡಿರುವನು. ಇಲ್ಲಿನ ಶಿವನ ಕಲ್ಪನೆ ದಿವ್ಯ ಭವ್ಯ; ಶಂಕರನು ಅರ್ಧನಾರೀಶ್ವರ; ಅದಕ್ಕನುಗುಣವಾಗಿ ಕೋಮಲಮುಖಿಯಾದ ಗೌರಿಯೆಂಬಲತೆಯಿಂದ ತಬ್ಬಿಕೊಂಡ ಶಂಕರನೆಂಬ ಕಲ್ಪವೃಕ್ಷವೆಂದು ಆತನನ್ನು ವರ್ಣಿಸಲಾಗಿದೆ.

ತರುಣ ಉತ್ತುಂಗ ಶಶಾಂಕ ಖಂಡಮೆ= ಶ್ರೇಷ್ಠವಾದ ಬಾಲಚಂದ್ರನೇ, ಸುಧಾಬೀಜಂ= ಅಮೃತದ ಬಿತ್ತು, ಭುಜಗೇಂದ್ರನ್= ಶ್ರೇಷ್ಠ ಸರ್ಪಗಳೇ, ಅಂಕುರಂ= ಮೊಳಕೆಗಳಾಗಲು, ಉನ್ಮೀಲಿತಂ= ವಿಕಸಿತವಾದ, ಅಟ್ಟಹಾಸಮೆ= ವೀರಾಟ್ಹಾಸವೇ, ದಳಾನೀಕಂ= ಎಲೆಗಳ ಸಮೂಹ, ವೃಷಂ= ಬಸವನೇ, ಪುಷ್ಪಂ= ಹೂವಾಗಲು, ಈಶ್ವರಶೈಲಂ=ಕೈಲಾಸಪರವತವೇ, ಫಲಮಾಗೆ=ಹಣ್ಣುಗಳಾಗಲುಕೋಮಲಮುಖೀಗೌರೀಲತಾಶ್ಲಿಷ್ಟಶಂಕರಕಲ್ಪದ್ರುಮಂ=ಕೋಮಲಮುಖಿಯಾದ ಗೌರಿಯೆಂಬ ಬಳ್ಳಿಯಿಂದ ಆಲಿಂಗಿಸಲ್ಪಟ್ಟ ಶಂಕರನೆಂಬ ಕಲ್ಪವೃಕ್ಷವಾದ, ಚಾಳುಕ್ಯನಾರಾಯಣಂ= ಸತ್ಯಾಶ್ರಯದೇವನು, ಅಭೀಷ್ಟಫಲಮಂ= ನಾವು ಬಯಸಿದ ಫಲವನ್ನು, ಈಗೆ= ಅನುಗ್ರಹಿಸಲಿ.

ತಾತ್ಪರ್ಯ:- ಬಾಲಚಂದ್ರನೇ ಅಮೃತದ ಬೀಜವಾಗಲು, ಸರ್ಪಗಳೇ ಅಂಕುರಗಳಾಗಲು, ವೀರಾಟ್ಟಹಾವೇ ಎಲೆಗಳ ಸಮೂಹವಾಗಲು, ಬಸವನೇ ಹೂವಾಗಲು. ಕೈಲಾಸವೇ ಫಲವಾಗಲು, ಕೋಮಲಮುಖಿಯಾದ ಗೌರಿಯೆಂಬ ಬಳ್ಳಿಯಿಂದ ಆಲಿಂಗಿಸಲ್ಪಟ್ಟ ಶಂಕರನೆಂಬ ಕಲ್ಪವೃಕ್ಷವು ನಾವು ಬಯಸಿದ ಫಲವನ್ನು ದಯಪಾಲಿಸಲಿ.

ಸತ್ಯಾಶ್ರಯದೇವನ ಚಿಹ್ನೆಗಳಾದ ಬಾಲಚಂದ್ರ, ಬಸವ, ಸರ್ಪ, ಪರ್ವತಗಳನ್ನು ಶಿವನ ಚಿಹ್ನೆಗಳೊಂದಿಗೆ ಏಕೀಭವಿಸಿ ಚಾಬಳುಕ್ಯನಾರಾಯಣನಿಗೂ ಶಂಕರನಿಗೂ ಅಭೇದವನ್ನು ಕಲ್ಪಿಸಲಾಗಿದೆ. ಶಂಕರನಿಗೆ ಸಮಾನವಾದ ಕಲ್ಪವೃಕ್ಷಕ್ಕೆ ಸಮನಾದ ಚಾಳುಕ್ಯನಾರಾಯಣನು ನಮ್ಮ ಅಭೀಷ್ಟವನ್ನು ಕರುಣಿಸಲಿ.

ಅಲಂಕಾರ:- ಶ್ಲೇಷೆ, ರೂಪಕ.

ವರಪದ್ಮಾಸನದೊಳ್ ಕನನ್ಮಣಿಮಯಂ ಸಿಂಹಾಸನಂ ಬ್ರಾಹ್ಮಿಯೊಳ್
ಪರಮಶ್ರೀ ಗಣನಾಕ್ಷಸೂತ್ರಮಣಿಯೊಳ್ ರತ್ನೋಜ್ವಲಂ ಭೂಷಣಂ
ದೊರೆಯಿಗಿರ್ಪಿನಮೊಂದುಗುಂದದಖಿಲಂ ವಿಜ್ಞಾನದಿಂದಂ ಜಗ
ದ್ಗುರುವಾದಂ ನಮಗೀಗೆ ಬೇೞ್ಪವರಮಂ ಶ್ರೀರಾಜಕಂಜಾಸನಂ||೩||

ಬ್ರಾಹ್ಮಿಯೊಳ್= ಪ್ರಾತಃಕಾಲದಲ್ಲಿ, ವರಪದ್ಮಾಸನದೊಳ್ == ಶ್ರೇಷ್ಠವಾದ ಕಮಲಾಸನದಲ್ಲಿ, ಕನನ್ಮಣಿಮಯಂ = ಥಳಥಳಿಸುವರತ್ನಗಳಿಂದ ಕೂಡಿದ, ಸಿಂಹಾಸನಂ= ಸಿಂಹಾಸನದಲ್ಲಿ, ಪರಮಶ್ರೀಗಣನಾಕ್ಷಸೂತ್ರ ಮಣಿಯೊಳ್ = ಪರಬ್ರಹ್ಮನ ನಾಮಸ್ಮರಣೆಯನ್ನು ಎಣಿಸುವ ರತ್ನಮಾಲೆಯಲ್ಲಿ, ರತ್ನೋಜ್ವಲಭೂಷಣಂ= ಶ್ರೇಷ್ಠವಾದ ರತ್ನಾಭರಣಗಳು, ದೊರೆಯಾಗಿರ್ಪಿನಂ = ಚೆನ್ನಾಗಿ ಹೊಂದಿಕೊಂಡಿರಲು, ಒಂದುಗುಂದದೆ= ಯಾವ ಕೊರತೆಯೂ ಇಲ್ಲದೆ, ಅಖಿಲ ವಿಜ್ಞಾನದಿಂ=ಸಮಸ್ತ ಕೌಶಲದಿಂದ ಕೂಡಿದವನಾಗಿ,ಜಗದ್ಗುರುವಾದಂ= ಲೋಕಪೂಜ್ಯನಾದ, ಶ್ರೀರಾಜ ಕಂಜಾಸನಂ = ತೇಜಃಪೂರ್ಣನಾದ ಬ್ರಹ್ಮನು, ನಮಗೆ ಬೇಳ್ಪ ವರಮಂ = ನಾವು ಬೇಡುವ ವರವನ್ನು ಕರುಣಿಸಲಿ.

ತಾತ್ಪರ್ಯ:- ಪ್ರಾತಃಕಾಲದಲ್ಲಿ ನಳನಳಿಸುವ ಕಮಲದಮೇಲೆ ಶೋಭಿಸುವ ರತ್ನಮಯವಾದ ಸಿಂಹಾಸನದಲ್ಲಿ ಮಂಡಿಸಿ ಪರಬ್ರಹ್ಮನ ನಾಮಸ್ಮರಣೆಯನ್ನು ಎಣಿಸುವ ರತ್ನಹಾರವನ್ನು ಕರದಲ್ಲಿ ಧರಿಸಿ, ಉಜ್ವಲ ರತ್ನಾಭರಣಗಳಿಂದ ಶೋಭಿಸುವ
ಸಕಲ ಗುಣಸಂಪನ್ನನಾದ, ಸಮಸ್ತ ಕೌಶಲದಿಂದ ಕೂಡಿದ, ಲೋಕಗುರುವಾದ ತೇಜೋವಂತನಾದ, ಬ್ರಹ್ಮನು ನಮ್ಮ ಇಷ್ಟಾರ್ಥಗಳನ್ನು ಈಡೇರಿಸಲಿ.

ಇನ್ನು ಶ್ರೀರಾಜಬ್ರಹ್ಮನಾದ ಸತ್ಯಾಶ್ರಯನ ಪ್ರಶಂಸೆಯನ್ನು ನೋಡೋಣ -

ಉಷಃಕಾಲದಲ್ಲಿ ಹೊಳೆಹೊಳೆಯುವ ರತ್ನಮಯವಾದ ಸಿಂಹಾಸನದಲ್ಲಿ ಪದ್ಮಾಸನಸ್ಥನಾಗಿ  ದೇವದೇವನ ನಾಮಸ್ಮರಣೆಯನ್ನೆಣಿಸುವ ರತ್ನಮಾಲೆಯನ್ನು ಕರದಲ್ಲಿ ಹಿಡಿದು, ಉತ್ಕೃಷ್ಟವಾದ ರತ್ನಾಭರಣಗಳಿಂದ ಭೂಷಿತನಾಗಿ, ಉಜ್ವಲ ಪ್ರಭೆಯಿಂದ ಬೆಳಗುವ, ಸದ್ಗುಣನಿಧಿಯಾದ, ವಿಶಿಷ್ಟಜ್ಞಾನದಿಂದ ಲೋಕ ಪೂಜ್ಯನಾದ, ರಾಜಬ್ರಹ್ಮನಾದ, ಸತ್ಯಾಶ್ರಯದೇವನು, ನಮ್ಮ ಅಭೀಷ್ಟವನ್ನು ಕರುಣಿಸಲಿ.

ಅಲಂಕಾರ:- ಶ್ಲೇಷೆ, ರೂಪಕ.

ಬಲವದ್ವೈರಿತಮೋಹರಾತಿಪಟುಗಳ್ ಪದ್ಮಾಸನಸ್ಪರ್ಶಸ
ಲ್ಲಲಿತಂಗಳ್ ಜಿತಚಕ್ರವಾಕನಿವಹಪ್ರೇಮಾಹವಂಗಳ್ ಮಹೀ
ವಲಯೋದ್ದ್ಯೋತಕರಂಗಳಾನತ ಜನಕ್ಕಾನಂದಮಂ ಮಾೞ್ಕೆ ಮಂ
ಗಲಮುಚ್ಚಂಡಕರಂ ಮಹೀವಲಯದೊಳ್ ಚಾಳುಕ್ಯಮಾರ್ತಾಂಡನಾ||೪||

ಈ ಪದ್ಯದಲ್ಲಿ ಶ್ಲೇಷೆಯಿಂದ ಸೂರ್ಸಯನನ್ನೂ ಚಾಳುಕ್ಯ ಸೂರ್ಯನನ್ನೂ ಸ್ತುತಿಸುತ್ತಾನೆ.

ಬಲವತ್ ವೈರಿ ತಮಸ್ ಹರ ಅತಿಪಟುಗಳ್= ಬಲಿಷ್ಠವಾದ ಶತ್ರುವೆನಿಸಿದ ಅಂಧಕಾರವನ್ನು ನಾಶಪಡಿಸುವ ಸಾಮರ್ಥ್ಯವುಳ್ಳ , ಪದ್ಮಾಸನಸ್ಪರ್ಶಲ್ಲಲಿತಂಗಳ್= ಕಮಲಗಳನನು ಮುಟ್ಟಿ ಸಂತೋಷಪಡಿಸುವಂಥ,
ಜಿತಚಕ್ರವಾಕನಿವಹಪ್ರೇಮಾವಹಂಗಳ್= ಚಕ್ರವಾಕ ಸಮೂಹಗಳಪ್ರೇಮವನ್ನು ಗೆದ್ದಂಥ, ಮಹೀವಳಯ
ಉದ್ಯೋತಕರಂಗಳ್ = ಭೂವಲಯವನ್ನು ಪ್ರಕಾಶಿಸುವ ಕಿರಣಗಳುಳ್ಳ, ಮಂಗಲಂ ಉಚ್ಚಂಡಕರಂ =
ಮಂಗಳವನ್ನುಂಟುಮಾಡುವ ತೀಕ್ಷ್ಣ ಕಿರಣಗಳುಳ್ಳ ಸೂರ್ಯನು, ಮಹೀವಳಯದೊಳ್ = ಭೂವಲಯದಲ್ಲಿ ,
ಆನತಜನಕ್ಕೆ= ಸಜ್ಜನರಿಗೆ, ಆನಂದಮಂಮಾಳ್ಕೆ= ಸಂತೋಷವನ್ನುಂಟುಮಾಡಲಿ.

ತಾತ್ಪರ್ಯ:- ಪ್ರಬಲ ಶತ್ರುವಾದ ಕತ್ತಲೆಯನ್ನು ನ್ಶಪಡಿಸುವ ಸಾಮರ್ಥ್ಯವುಳ್ಳವನೂ, ಕಮಲಗಳನ್ನು ಮುಟ್ಟಿ ಸಂತೋಷಪಡಿಸುವವನೂ, ಚಕ್ರವಾಕ ಸಮೂಹಗಳ ಪ್ರೀತಿಯನ್ನು ಗೆದ್ದವನೂ, ಭೂವಲಯವನ್ನು ತನ್ನ ಕಿರಣಗಳಿಂದ ಬೆಳಗುವವನೂ, ಆದ ಸೂರ್ಯನು ಜನತೆಗೆ ಆನಂದವನ್ನುಂಟುಮಾಡಲಿ.

ಇದು ಮಾರ್ತಾಂಡನ ಪರವಾದ ಸ್ತುತಿ.

ಈಗ ಚಾಳುಕ್ಯ ಮಾರ್ತಾಂಡನ ಪ್ರಶಂಸೆ.

ಬಲವದ್ವೈರಿತಮೋಹರಾತಿಪಟುಗಳ್ = ಬಲಿಷ್ಟರಾದ ಶತ್ರುಗಳೆಂಬ ಅಂಧಕಾರವನ್ನು ನಾಶಪಡಿಸುವ ಸಾಮರ್ಥ್ಯವುಳ್ಳ ,
ಪದ್ಮಾಸನಸ್ಪರ್ಶಸಲ್ಲಲಿತಂಗಳ್ = ಪದ್ಮವಿಷ್ಟರ ಸ್ಪರ್ಶದಿಂದ ಮನೋಹರವಾದ, ಜಿತಚಕ್ರವಾಕನಿವಹಪ್ರೇಮಾವಹಂಗಳ್ = ಜೈಸಿದ ರಾಜ್ಯಗಳ ಪ್ರಜಾನುರಾಗಕ್ಕೆ ಪಾತ್ರವಾದ, ಮಹೀವಳಯೋದ್ದ್ಯೋತಕರಂಗಳ್ = ಭೂವಲಯವನ್ನು ಬೆಳಗುವ ತೇಜಸ್ಸುಳ್ಳ, ಚಾಳುಕ್ಯಮಾರ್ತಾಂಡನಾ= ಚಾಳುಕ್ಯ ಮನೆತನಕ್ಕೆ ಸೂರ್ಯನಂತಿರುವ ಸತ್ಯಾಶ್ರಯನ, ಮಂಗಲಮುಚ್ಚಂಡಕರಂ = ಶುಭವನ್ನುಂಟುಮಾಡುವ ಬಲಿಷ್ಠವಾದ ಬಾಹುಗಳು, ಮಹೀವಲಯದೊಳ್ = ಭೂಮಂಡಲದಲ್ಲಿ , ಆನತಜನಕ್ಕೆ= ಶರಣಾಗತರಾದ ಜನರಿಗೆ, ಆನಂದಮಂ ಮಾಳ್ಕೆ= ಸಂತೋಷವನ್ನುಂಟುಮಾಡಲಿ.

ತಾತ್ಪರ್ಯ:- ಬಲಿಷ್ಠರಾದ ಶತ್ರುಗಳನ್ನು ನಾಶಪಡಿಸುವ, ಸಿಂಹಾಸನ ಸ್ಪರ್ಶದಿಂದ ಮನೋಹರವಾದ, ಗೆದ್ದರಾಜ್ಯಗಳ ಪ್ರಜೆಗಳ ಪ್ರೀತಿಯನ್ನು ಸಂಪಾದಿಸಿದ, ಭೂವಲಯವನ್ನು ಬೆಳಗುವ ತೇಜಸ್ಸುಳ್ಳ, ಚಾಳುಕ್ಯಮಾರ್ತಾಂಡನಾದ ಸತ್ಯಾಶ್ರಯನ ಮಂಗಲಕರವಾದ ಬಲಿಷ್ಠ ಬಾಹುಗಳು ಲೋಕದ ಜನಕ್ಕೆ ಆನಂದವನ್ನುಂಟುಮಾಡಲಿ.

ಅಲಂಕಾರ :- ಶ್ಲೇಷೆ, ರೂಪಕ.


ಕೂರಿಸಿ ವೀರ ಶ್ರೀಯಂ
ಕೂರದರಂ ಕೊಂದು ಸಮರಜಯಮಂ ಮಾಡಲ್
ಕೂರಸಿಯೊಳ್ ನೆಲಸುಗೆ ಕಂ
ಠೀರವವಾಹನೆ ಚಳುಕ್ಯಕಂಠೀರವನಾ||೫||

ವೀರಶ್ರೀಯಂ = ವೀರಾಂಗನೆಯನ್ನು, ಕೂರಿಸಿ= ಒಲಿಸಿ, ಕೂರದರಂ ಕೊಂದು = ಶತ್ರುಗಳನ್ನ ಸಂಹರಿಸಿ, ಸಮರಜಯಮಂ ಮಾಡಲ್ = ಯುದ್ಧದಲ್ಲಿ ಜಯವನ್ನು ಗಳಿಸಲು, ಕಂಠಿರವವಾಹನೆ = ಸಿಂಹವು ವಾಹನವಾಗಿ ಉಳ್ಳವಳು, ( ದುರ್ಗೆ) ಚಳುಕ್ಯ ಕಂಠೀರವನಾ = ಚಳುಕ್ಯ ಸಿಂಹನಾದ ಸತ್ಯಾಶ್ರಯನ, ಕೂರಸಿಯೊಳ್ = ಹರಿತವಾದ ಖಡ್ಗದಲ್ಲಿ, ನೆಲಸುಗೆ = ಸ್ಥಿರವಾಗಿ ನಿಲ್ಲಲಿ.

ತಾತ್ಪರ್ಯ:- ವೀರಲಕ್ಷ್ಮಿಯನ್ನು ಒಲಿಸಿ ಅವಳ ಸಹಾಯದಿಂದ ಶತ್ರುಗಳನ್ನು ಸಂಹರಿಸಿ ಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಕಂಠೀರವವಾಹನೆಯಾದ ದುರ್ಗೆಯು ಚಳುಕ್ಯ ಕಂಠೀರವನಾದ ಸತ್ಯಾಶ್ರಯನ ಮೊನಚಾದ ಖಡ್ಗದಲ್ಲಿ ನಿಲ್ಲಲಿ.

ಕಂಠೀರವವಾಹನೆ ಚಳುಕ್ಯ ಕಂಠೀರವನ ಖಡ್ಗವಾಹನೆಯಾಗಲಿ ಎಂಬುದು ಕವಿಯ ಪ್ರಾರ್ಥನೆ.

ನೆಗೞ್ದುದು ರಾಮಾಯಣಮುಂ
ನೆಗೞ್ದುದು ಭಾರತಮುಮಾಮಹಾ ಕವಿಗಳಿನಾ
ನೆಗೞ್ದರ್ ವ್ಯಾಸರ್ ವಾಲ್ಮೀ
ಕಿಗಳೆನೆ ನೆಗೞ್ದುಭಯ ಕವಿಗಳೆಮಗಭಿವಂದ್ಯರ್||೮||

ಆ ಮಹಾಕವಿಗಳಿನ್ = ಮಹಾಕವಿಗಳಾದ ಆ ವಾಲ್ಮೀಕಿ ವ್ಯಾಸರಿಂದ, ರಾಮಾಯಣಮುಂ= ಶ್ರೀಮದ್ರಾಮಾಯಣವೂ,ನೆಗೞ್ದುದು = ಖ್ಯಾತಿಯನ್ನು ಪಡೆಯಿತು, ಭಾರತಮುಂ =ಮಹಾಭಾರತವೂ ನೆಗೞ್ದುದು= ಖ್ಯಾತಿಯನ್ನು ಪಡೆಯಿತು, ವ್ಯಾಸರ್ ವಾಲ್ಮೀಕಿಗಳ್ ನೆಗೞ್ದರ್ ಎನೆ = ಮಹಾಕಾವ್ಯ ಕರ್ತೃಗಳಾದ ವ್ಯಾಸರೂ, ವಾಲ್ಮೀಕಿಯರೂ ಕೀರ್ತಿವಂತರಾದರು ಎಂದ ಮೇಲೆ, ನೆಗೞ್ದ ಉಭಯ ಕವಿಗಳ್ = ವಿಖ್ಯಾತರಾದ ಕವಿದ್ವಯರೂ, ಎಮಗೆ ಅಭಿವಂದ್ಯರ್= ನಮಗೆ ಪೂಜನೀಯರು.

ತಾತ್ಪರ್ಯ :-  ಪ್ರಸಿದ್ಧವಾದ ಶ್ರೀಮದ್ರಾಮಾಯಣವನ್ನೂ, ಭಾರತವನ್ನೂ ರಚಿಸಿ ಕೀರ್ತಿಶಾಲಿಗಳಾದ ವಾಲ್ಮೀಕಿ ವ್ಯಾಸರೆಂಬ ಮಹಾಕವಿದ್ವಯರು ನಮಗೆ ಪೂಜಾರ್ಹರು.

ವಿಚಾರ :- ಕವಿರನ್ನನು ವಾಲ್ಮೀಕಿ ವ್ಯಾಸರನ್ನು ಅಭಿನಂದಿಸುವ ಸಂದರ್ಭದಲ್ಲಿ ಬರುವ ‘ಉಭಯಕವಿಗಳ್ ‘ ಎಂಬುದು ಇಬ್ಬರು ಕವಿಗಳು ಎಂಬ ಅರ್ಥದಲ್ಲಿ ಬಳಸಲಾಗಿದ್ದರೂ, ‘ ಉಭಯ ಕವಿ ‘ ಎಂದರೆ ಉಭಯ ಭಾಷಾ ಕವಿ ಎಂಬ ಅರ್ಥವೇ ಪ್ರಸಿದ್ಧವಾಗಿದೆ. ದೇಶ ಭಾಷೆ ಮತ್ತು ದೇವ ಭಾಷೆಯಾದ ಸಂಸ್ಕೃತ- ಈ ಎರಡು ಭಾಷೆಗಳಲ್ಲಿ ಕಾವ್ಯರಚನೆ ಮಾಡುವ ಸಾಮರ್ಥ್ಯವುಳ್ಳವರನ್ನು ಉಭಯ ಕವಿಗಳೆಂದು ಕರೆಯುವುದು ರೂಢಿ.

ಮೃದು ಪದ್ಯರಚನೆಯೊಳ್ ಕಾ
ಳಿದಾಸನುಂ ಗದ್ಯರಚನೆಯೊಳ್ ಬಾಣನುಮಂ
ಕದ ಕವಗಳೆನಿಸಿ ನೆಗೞ್ದಿ
ರ್ದುದಱಿಂ ಸತ್ಕವಿಗಳಿರ್ವರೆಮಗಭಿವಂದ್ಯರ್||೯||

ಮೃದುಪದಪದ್ಯರಚನೆಯೊಳ್ = ಲಲಿತವಾದ ಪದ್ಯ ರಚನೆಯಲ್ಲಿ, ಕಾಳಿದಾಸನುಂ= ಮಹಾಕವಿಕಾಳಿದಾಸನೂ, ಗದ್ಯರಚನೆಯೊಳ್ = ಗದ್ಯ ಕಾವ್ಯ ರಚನೆಯಲ್ಲಿ, ಬಾಣನುಂ=ಬಾಣಭಟ್ಟನೂ, ಅಂಕದಕವಿಗಳೆನಿಸಿನೆಗೞ್ದಿರ್ದುದಱಿಂ= ಶ್ರೇಷ್ಠ ಕವಿಗಳೆಂದು ಪ್ರಸಿದ್ಧರಾಗಿದ್ದುದರಿಂದ, ಸತ್ಕವಿಗಳಿರ್ವರ್ = ಈ ವರಕವಿಗಳಿಬ್ಬರೂ, ಎಮಗೆ ಅಭಿವಂದ್ಯರ್= ನಮಗೆ ಪೂಜಾರ್ಹರು.

ಲಲಿತವೂ ಮಧುರವೂ ಆದ ಪದ್ಯ ಕಾವ್ಯಗಳನ್ನು ರಚಿಸಿ ಕಾಳಿದಾಸನೂ ಗದ್ಯಕಾವ್ಯವನ್ನು ರಚಿಸಿ ಬಾಣಭಟ್ಟನೂ ಶ್ರೇಷ್ಠಕವಿಗಳೆಂದು ಪ್ರಸಿದ್ಧರಾಗಿರುವುದರಿಂದ ಈ ವರಕವಿಗಳಿಬ್ಬರೂ ನಮಗೆ ಪೂಜನೀಯರು.

ಮದಮಣಮಿಲ್ಲ ದಾನಗುಣದಿಂ ನೆಗೞ್ದುಂ ನೃಪಸಿಂಹನಾಗಿಯುಂ
ವಿದಿತವಿಶುದ್ಧಭದ್ರಗುಣನಂತೆ ವಿರುದ್ಧಮಿದೆಂಬಿನಂ ನಿಜಾ
ಭ್ಯುದಯನಿವೇದದೀರ್ಘಕರಮೊಪ್ಪೆ ಜಗತ್ಪ್ರಿಯವಾದ ದೇವನಂ
ಕದ ಗಣನಾಯಕಂ ವರದನಕ್ಕಮಗಮ್ಮನಗಂಧವಾರಣಂ||೧೦||

ದಾನಗುಣದಿಂ ನೆಗೞ್ದುಂ = ದಾನಮಾಡುವ ಗುಣದಿಂದ ಪ್ರಸಿದ್ಧನಾಗಿಯೂ, ಮದಮಣಮಿಲ್ಲ= ಸ್ವಲ್ಪವೂ ಅಹಂಕಾರವಿಲ್ಲ, ನೃಪಸಿಂಹನಾಗಿಯುಂ= ರಾಜಸಿಂಹನಾಗಿಯೂ, ವಿದಿತ ವಿಶುದ್ಧ ಭದ್ರಗುಣನ್=ಪ್ರಸಿದ್ಧವೂ ನಿರ್ಮಲವೂ ಮಂಗಲಕರವೂ ಆದ ಗುಣವುಳ್ಳವನು, ಅಂತೆ ವಿರುದ್ಧ ಇದು ಎಂಬಿನಂ = ಹಾಗೆ ಪರಸ್ಪರ ವಿರುದ್ಧವಾದ ಗುಣಗಳಿಂದ ಕೂಡಿದವನು ಎನ್ನುವಂತೆ ತೋರುತ್ತಿರಲು, ನಿಜಾಭ್ಯುದಯನಿವೇದದೀರ್ಘಕರಂ ಒಪ್ಪೆ = ತನ್ನ ಶ್ರೇಯಸ್ಸನ್ನು ತಿಳಿಸುವ ನೀಳವಾದ ಬಾಹುಗಳು ಚೆನ್ನಾಗಿ ಶೋಭಿಸುತ್ತಿರಲು, ( ದೀರ್ಘಕರ =ನೀಳವಾದ ಸೊಂಡಿಲು ) ,ಜಗತ್ಪ್ರಿಯನಾದ ದೇವನ್ = ಲೋಕಕ್ಕೆ ಪ್ರಿಯನಾಗಿರುವ ಸ್ವಾಮಿಯು, (ದೇವನು) ಅಂಕದಗಣನಾಯಕಂ= ಪ್ರಸಿದ್ಧನಾದ ಸೇನಾಪತಿಯು,( ಶಿವಗಣಗಳ ನಾಯಕನಾದ ಗಣಪತಿಯು) ವರದನ್ ಅಕ್ಕೆ ಎಮಗೆ= ನಮಗೆ ಅನುಗ್ರಹವನ್ನುಂಟುಮಾಡಲಿ.

ತಾತ್ಪರ್ಯ :- ದಾನಮಾಡುವ ಗುಣದಿಂದ ಪ್ರಸಿದ್ಧನಾಗಿ ಸ್ವಲ್ಪವೂ ಮದವಿಲ್ಲದವನು, ರಾಜಕಂಠೀರವನಾಗಿ ಶುಭನಿರ್ಮಲಗುಣಗಳಿಂದ ಪ್ರಸಿದ್ಧನು, ಹೀಗೆ ವಿರುದ್ಧ ಗುಣಗಳಿಂದ ಕೂಡಿದವನೋ ಎಂಬಂತೆ ತೋರುತ್ತಿರುವ, ತನ್ನ ಅಭ್ಯುದಯವನ್ನು ಸಾರುತ್ತಿರುವ ದೀರ್ಘಬಾಹುಗಳಿಂದ ಶೋಭಿಸುತ್ತಿರುವ ಲೋಕಪ್ರಿಯನಾದ ಒಡೆಯನೂ, ಶ್ರೇಷ್ಠಸೇನಾಧಿಪತಿಯೂ, ತಂದೆಯಾದ ತೈಲಪನ ಮುದ್ದಿನ ಮದ್ದಾನೆಯೂ ಆದ ಸತ್ಯಾಶ್ರಯದೇವನು ನಮ್ಮನ್ನು ಅನುಗ್ರಹಿಸಲಿ.

“ಅಮ್ಮನ ಗಂಧವಾರಣ” ಎಂಬುದು ಸತ್ಯಾಶ್ರಯನ ಬಿರುದುಗಳಲ್ಲೊಂದು.

ಮದಜಲವನ್ನು ಸುರಿಸುತ್ತಿದ್ದರೂ ಗರ್ವವಿಲ್ಲದವನೂ, ರಾಜರಿಗೆಲ್ಲ ಸಿಂಹಪ್ರಾಯನಾಗಿದ್ದರೂ ನಿರ್ಮಲಾಂತಃಕರಣ ಮಂಗಳಗುಣಾನ್ವಿತನೂ, ತನ್ನ ಉನ್ನತಿಯನ್ನು ಸೂಚಿಸುವ ಉದ್ದವಾದ ಸೊಂಡಿಲುಳ್ಳವನೂ, ಲೋಕಪ್ರಿಯನೂ,ದೇವತಾಸ್ವರೂಪಿಯೂ, ಗಣನಾಯಕನೂ, ಶಿವಕುಮಾರನೂ ಆದ ಗಜಮುಖನು ನಮ್ಮ ಅಭೀಷ್ಟವನ್ನು ನೆರವೇರಿಸಲಿ.
( ವಿನಾಯಕ ಸ್ತುತಿ)

ಅಲಂಕಾರ :- ವಿರೋಧಾಭಾಸ, ಶ್ಲೇಷೆ.

ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು ಮೆಱೆವನಿಱಿವ ಬೆಡಂಗಂ||೩೦||

ಬೆಳಗುವ ಸೊಡರೊಳ್= ಪ್ರಕಾಶಿಸುತ್ತಿರುವ ದೀಪದಿಂದ, ಸೊಡರಂ = ದೀಪಗಳನ್ನು, ಬೆಳಗಿ= ಹೊತ್ತಿಸಿ, ಪಲರ್= ಹಲವರು , ಕೊಂಡುಪೋಗೆಯುಂ = ಕೊಂಡುಹೋದರೂ, ಕುಂದದೆ = ಪ್ರಕಾಶವು ಕಡಿಮೆಯಾಗದೆ, ಪಜ್ಜಳಿಸುವವೊಲ್ = ಪ್ರಜ್ವಲಿಸುವಂತೆ, ಜಗಮೆಲ್ಲಂ = ಲೋಕದ ಜನರೆಲ್ಲ, ಕೊಳಲುಂ = ತೆಗೆದುಕೊಂಡುಹೋದರೂ ( ಕೊಳ್ +ಅಲು) ತವದೆ ಇತ್ತು = ಕ್ಷಯವಾಗದೆ ದಾನಮಾಡಿ , ಇಱಿವ ಬೆಡಂಗಂ = ಸತ್ಯಾಶ್ರಯನು, ಮೆರೆವಂ = ಶೋಭಿಸುತ್ತಾನೆ.

ತಾತ್ಪರ್ಯ:- ಉಜ್ವಲವಾಗಿ ಪ್ರಕಾಶಿಸುತ್ತಿರು ದೀಪದಿಂದ ತಂತಮ್ಮ ದೀಪಗಳನ್ನು ಹಚ್ಚಿ ಬೆಳಗಿಸಿ ಹಲವರು ತೆಗೆದುಕೊಂಡು ಹೋದರೂ ಆ ದೀಪವು ಎಂದಿನಂತೆ ಪ್ರಕಾಶಿಸುವಹಾಗೆ, ಯಾಚಕರಾಗಿ ಬಂದವರಿಗೆಲ್ಲಯಥೇಷ್ಟ ದಾನಮಾಡಿದರೂ ತನ್ನ ಭಂಡಾರವು ಕ್ಷಯವಾಗದಿರಲು, ಇಱಿವ ಬೆಡಂಗನು ಅತಿ ವೈಭವದಿಂದ ಶೋಭಿಸಿದನು.

‘ ಸೊಡರ್ ‘ ಈ ತಿಳಿಗನ್ನಡ ಶಬ್ಧ ಇಂದು ಬಳಕೆಯಲ್ಲಿಲ್ಲ. ಕನ್ನಡದ ಸೊಡರ್ ನಂದಿಹೋಗಿದೆ.

ಅಲಂಕಾರ :- ಉಪಮೆ

ಕೃತಿ ನೆಗೞ್ದಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ||೩೨||

ಕೃತಿ ನೆಗೞ್ದ ಗದಾಯುದ್ಧಂ= ಕಾವ್ಯವು ಪ್ರಸಿದ್ಧವಾದ ಗದಾಯುದ್ಧ, ಕೃತಿಗೆ ಈಶಂ = ಕಾವ್ಯಕ್ಕೆ ನಾಯಕನು , ಚಕ್ರವರ್ತಿ ಸಾಹಸ ಭೀಮಂ = ಚಕ್ರೇಶ್ವರನಾದ ಸಾಹಸ ಭೀಮನು ( ಚಕ್ರವರ್ತಿಯಾದ ಭೀಮಸಾಹಸವುಳ್ಳ ಸತ್ಯಾಶ್ರಯನು) ಅಲಂಕೃತಿಯಂ ಕೃತಿಯಂ ವಿರಚಿಸಿದಂ = ಕಾವ್ಯಗಳಿಗೆಲ್ಲ ಅಲಂಕಾರಪ್ರಾಯವಾದ ಈ ಮಹಾಕಾವ್ಯವನ್ನು ರಚಿಸಿದವನು, ಕವಿರತ್ನನ್ = ಕವಿಗಳಲ್ಲಿ ರತ್ನ ಪ್ರಾಯನಾದ ರನ್ನನು, ಎಂದೊಡೆ = ಎಂದಾಗ, ಏವಣ್ಣಿಪುದೋ = ಏನೆಂದು ವರ್ಣಿಸುವುದೋ !

ತಾತ್ಪರ್ಯ:- ಪ್ರಸಿದ್ಧವಾದ ಗದಾಯುದ್ಧವೇ ಕಾವ್ಯ.ಕಾವ್ಯ ನಾಯಕನು ಚಕ್ರೇಶ್ವರನಾದ ಸಾಹಸಭೀಮನು ( ಭೀಮಸಾಹಸಿಯಾದ ಸತ್ಯಾಶ್ರಯನು.) ಸರಸ್ವತಿಗೆ ಭೂಷಣಪ್ರಾಯವಾದ ಈ ಮಹಾಕಾವ್ಯವನ್ನು ರಚಿಸಿದವನು ಮಹಾಕವಿರತ್ನನು ಎಂದಾಗ ಅದರ ಮಹಿಮಾತಿಶಯವನ್ನು ಏನೆಂದು ವರ್ಣಿಸಲಿ ! ಎಷ್ಟು ಬಣ್ಣಿಸಿದರೂ ಸಾಲದೆಂಬ ಭಾವ.

ಪಡೆಯೆಡೆಯ ಕಡೆಯ ಬಡವರ್
ಕುಡೆ ಪಡೆದನೊ ಚಕ್ರವರ್ತಿಯೊಳ್ ತೈಲಪನೊಳ್
ಪಡೆದಂ ಮಹಿಮೋನ್ನತಿಯಂ
ಪಡೆದಂ ಕವಿಚಕ್ರವರ್ತಿವೆಸರಂ ರನ್ನಂ||೩೭||

ರನ್ನಂ = ರನ್ನನು, ಪಡೆಯೆಡೆಯ= ಸೈನ್ಯದಲ್ಲಿರುವ, ಕಡೆಯ ಬಡವರ್= ಕೆಳಗಿನ ದರ್ಜೆಯಬಡಪಾಯಿಗಳು, ಕುಡೆ ಪಡೆದನೊ= ( ಬಿರುದನ್ನು) ಕೊಡಲು ಪಡೆದನೇ ? ಇಲ್ಲ. ಚಕ್ರವರ್ತಿಯೊಳ್ ತೈಲಪನೊಷಳ್= ಚಕ್ರೇಶ್ವರನಾದ ತೈಲಪನಿಂದ, ಮಹಿಮೋನ್ನತಿಯಂ ಪಡೆದಂ= ಉನ್ನತ ಯಶಸ್ಸನ್ನು ಪಡೆದನು, ಕವಿಚಕ್ರವರ್ತಿವೆಸರಂ = ಕವಿಚಕ್ರವರ್ತಿ ಎಂಬ ಬಿರುದನ್ನು, ಪಡೆದಂ= ಗಳಿಸಿದನು.

ತಾತ್ಪರ್ಯ :- ಸೈನ್ಯದಲ್ಲಿರುವ ಸಾಮಾನ್ಯ ಯೋಧರಿಂದ  “ ಕವಿಚಕ್ರವರ್ತಿ “ ಎಂಬ ಬಿರುದನ್ನು ಪಡೆದವನಲ್ಲ ರನ್ನ. ಚಕ್ರೇಶ್ವರನಾದ ತೈಲಪನ ಅನುಗ್ರಹದಿಂದ ವಿಭವೋನ್ನತಿಯನ್ನೂ , ‘ಕವಿಚಕ್ರವರ್ತಿ ‘ ಬಿರುದನ್ನೂ(ಖ್ಯಾತಿಯನ್ನೂ) ಪಡೆದು ಕವಿತಾ ಸಾಮ್ರಾಜ್ಯದ ಉತ್ತುಂಗ ಶಿಖರಕ್ಕೇರಿದವನು ರನ್ನ.

ಅರಾತೀಯ ಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ||೩೮||

ಅರಾತೀಯ = ಪ್ರಾಚೀನ, ಕವೀಶ್ವರರ್ = ಕವಿ ಪುಂಗವರು, ಆರುಂ = ಯಾರೊಬ್ಬರೂ, ಮುಂ ಆರ್ತರಿಲ್ಲ= ( ತನಗಿಂತ) ಮೊದಲು ಸಮರ್ಥರಾಗಲಿಲ್ಲ. ಕವಿರತ್ನಂ=ಕವಿ ರನ್ನನು, ಸಾರಸ್ವತಮೆನಿಪಕವಿತೆಯೊಳ್ = ವಾಕ್ಪಟುತ್ವವುಳ್ಳ ಸರಸ್ವತಿಗೆ ಅತ್ಯಂತ ಪ್ರಿಯವಾದ ಕವಿತೆಯಲ್ಲಿ (ಕಾವ್ಯ ರಚನೆಯಲ್ಲಿ ) ವಾಗ್ದೇವಿಯಭಂಡಾರದ ಮುದ್ರೆಯನ್ ಒಡೆದಂ = ವಾಗ್ದೇವಿಯ ಶಬ್ದಭಂಡಾರದ ಬೀಗಮುದ್ರೆಯನ್ನು ಒಡೆದನು.

ತಾತ್ಪರ್ಯ :- ತನಗಿಂತ ಹಿಂದಿನ ಕವೀಶ್ವರರಾರೂ ವಾಗ್ದೇವಿಯ ಭಂಡಾರದ ಮುದ್ರೆಯನ್ನು ಮುರಿಯಲು ಸಮಮರ್ಥರಾಗಿಲ್ಲ. ಕಾವ್ಯ ಪ್ರಪಂಚದಲ್ಲಿ ಅತ್ಯುತ್ಕೃಷ್ಟವಾದ ಕಾವ್ಯವನ್ನು ರಚಿಸುವಲ್ಲಿ ಕವಿರತ್ನನು ವಾಗ್ದೇವಿಯ ಭಂಡಾರದ ಬೀಗಮುದ್ರೆಯನ್ನೇ ಮುರಿದನು.

ಕನ್ನಡಮೆರಡಱುನೂಱಱ
ಕನ್ನಡಮಾತಿರುಳ ಕನ್ನಡಂ ಮಧುರಮ್ಯೋ
ತ್ಪನ್ನಂ ಸಂಸ್ಕೃತಮೆನೆ ಸಂ
ಪನ್ನಂ ನೆಗೞ್ದುಭಯ ಕವಿತೆಯೊಳ್ ಕವಿರನ್ನಂ||೪೨||

ಕನ್ನಡಂ ಎರಡಱುನೂಱಱ ಕನ್ನಡಂ = ( ತನ್ನ ) ಕನ್ನಡವೆಂದರೆ ಪುಲಿಗೆರೆ ಮೂನೂಱು, ಬಳ್ವೊಲ ಮೂನೂಱು ಎಂಬ ಎರಡು ಪ್ರದೇಶಗಳ ಆರುನೂರು ಗ್ರಾಮಗಳಲ್ಲಿರೂಢವಾಗಿರುವ ಕನ್ನಡ, ಆ ತಿರುಳ ಕನ್ನಡಂ = ಅದೇ ತಿರುಳ್ಗನ್ನಡ,  (ಸಾರವತ್ತಾದ ಕನ್ನಡ ) . ಸಂಸ್ಕೃತಂಮಧುರಮ್ಯೋತ್ಪನ್ನಂ ಎನೆ = ತನ್ನ ಸಂಸ್ಕೃತವು ಜೇನಿನಂತೆ ಸಿಹಿಯಾದುದು ಎಂದ ಮೇಲೆ, ನೆಗೞ್ದ ಉಭಯ ಕವಿತೆಯೊಳ್ = ಕನ್ನಡ ಸಂಸ್ಕೃತ ಭಾಷೆಗಳಲ್ಲಿ ಪ್ರಸಿದ್ಧವಾದ ಕಾವ್ಯಗಳನ್ನು ರಚಿಸುವಲ್ಲಿ, ಕವಿರತ್ನಂ ಸಂಪನ್ನಂ = ಕವಿರತ್ನನು ಸಮರ್ಥನು, ( ದುರದೃಷ್ಟವಶಾತ್ ರನ್ನನ ಸಂಸ್ಕೃತ ಕಾವ್ಯಗಳಾವುವೂ ಇದುವರೆಗೆ ದೊರೆತಿಲ್ಲ)

ತಾತ್ಪರ್ಯ :- ಪುಲಿಗೆರೆ ಬೆಳ್ವೊಲಗಳ ಆರುನೂರು ಗ್ರಾಮಗಳಲ್ಲಿ ವಾಡಿಕೆಯಾಗಿರುವ ತಿರುಳ್ಗನ್ನಡವೇತನ್ನ ಕಾವ್ಯದಲ್ಲಿ ಬಳಸಿದ ಕನ್ನಡ. ತನ್ನ ಸಂಸ್ಕೃತವು ಜೇನಿನಂತೆ ಆಸ್ವಾದನಕಾರಿಯಾದುದು ಎಂದ ಮೇಲೆ ಈ ಉಭಯ ಭಾಷೆಗಳಲ್ಲಿಯೂ
ಕಾವ್ಯಗಳನ್ನು ರಚಿಸುವಲ್ಲಿ ಕವಿರತ್ನನು ಸಮರ್ಥನೇ ಸರಿ.

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇಱ್ ಪರೀಕ್ಷಿಪಂಗೆಂಟೆರ್ದೆಯೇ||೪೪||

ಆಂ ರತ್ನ ಪರೀಕ್ಷಕನ್ = ನಾನು ರತ್ನಗಳನ್ನು ಚೆನ್ನಾಗಿ ಪರೀಕ್ಷಿಸುವವನು ( ರತ್ನ ವ್ಯಾಪಾರಿ) ಆಂ ಕೃತಿರತ್ನಪರೀಕ್ಷಕನೆನ್= ನಾನು ಕಾವ್ಯರತ್ನವನ್ನು ಪರೀಕ್ಷೆಮಾಡಿ, ವಿಮರ್ಶಿಸಿ ನೋಡುವವನೇ , ( ನಾನು ಉತ್ತಮ ವಿಮರ್ಶಕನೇ) ಎಂದು = ಎಂಬುದಾಗಿ ಹೇಳಿಕೊಂಡು, ಫಣಿಪತಿಯ = ಮಹಾಶೇಷನ, ಫಣಾರತ್ನಮುಮಂ = ಹೆಡೆಗಳಲ್ಲಿರುವ ರತ್ನಗಳನ್ನೂ, ರನ್ನನ ಕೃತಿರತ್ನಮುಮಂ= ರನ್ನನ ಕಾವ್ಯರತ್ನವನ್ನೂ, ಪರೀಕ್ಷಿಪಂಗೆ = ಪರೀಕ್ಷೆಮಾಡುವ ವ್ಯಕ್ತಿಗ, ಎಂಟೆರ್ದೆಯೇ ಪೇಳ್ = ಎಂಟೆದೆಗಳುಂಟೆ ಹೇಳು, ಎಂದರೆ ಅಷ್ಟೊಂದುಎದೆಗಾರಿಕೆಯೇ? ಈ ಕಾರ್ಯಗಳಿಗೆ ಕೈಯಿಕ್ಕುವ ರತ್ನಪರೀಕ್ಷಕನಿಗೂ ಕಾವ್ಯ ವಿಮರ್ಶಕನಿಗೂ ಒಂದೊಂದೆದೆ ಇದ್ದರೆ ಸಾಲದು, ಎಂಟು ಮಡಿ ಕೆಚ್ಚಿರಬೇಕು ಎಂಬ ಭಾವ.

ಅಲಂಕಾರ :- ಯಥಾಸಂಖ್ಯೆ, ಯಮಕ.

ಒಳಪೊಕ್ಕು ನೋಡೆ ಭಾರತ
ದೊಳಗಣ ಕಥೆಯೆಲ್ಲಮೀ ಗದಾಯುದ್ಧದೊಳಂ
ತೊಳಕೊಂಡತ್ತೆನೆ ಸಿಂಹಾ
ವಳೋಕನಕ್ರಮದಿನಱಿಪಿದಂ ಕವಿರನ್ನಂ||೪೫||

ಒಳಪೊಕ್ಕು ನೋಡೆ = ಕಾವ್ಯದ ಅಂತರಾಳವನ್ನು ಪ್ರವೇಶಿಸಿ ನೋಡಿದಾಗ, ಈ ಗದಾಯುದ್ಧದೊಳ್ ಅಂತು ಭಾರತದೊಳಗಣ ಕಥೆಯೆಲ್ಲಂ ಒಳಕೊಂಡತ್ತು ಎನೆ= ಈ ಗದಾಯುದ್ಧದಲ್ಲಿ ಭಾರತದ ಸಮಗ್ರ ಕಥೆಯೂ ಸಂಕ್ಷಿಪ್ತವಾಗಿ ಒಳಗೊಂಡಿದೆ ಎನ್ನುವಂತೆ , ಸಿಂಹಾವಳೋಕನ ಕ್ರಮದಿಂ= ಸಿಂಹಾವಲೋಕನ ರೀತಿಯಲ್ಲಿ( ಹಕ್ಕಿ ನೋಟ) ಕವಿರನ್ನಂ ಅಱಿಪಿದಂ= ಕವಿ ರನ್ನನು ಕಾವ್ಯವನ್ನು ರಚಿಸಿದನು.

ತಾತ್ಪರ್ಯ :- ಸ್ಥೂಲದೃಷ್ಟಿಗೆ ಈ ಕಾವ್ಯವು ಗದಾಯುದ್ಧವಾದರೂ ಸೂಕ್ಷ್ಮದೃಷ್ಟಿಗೆ ಮಹಾಭಾರತವೇ ! ಕವಿರನ್ನನು ಜಾಣ್ಮೆಯಿಂದ ಭಾರತದ ಪ್ರಮುಖ ಘಟನೆಗಳನ್ನೆಲ್ಲ ಸಂದರ್ಭೋಚಿತವಾಗಿಬೇರೆಬೇರೆ ಪಾತ್ರಗಳ ಮೂಲಕವೂ ನೇರವಾಗಿಯೂ, ಸೂಚಿಸುತ್ತಾ ಅತ್ಯಲ್ಪ ಕಥಾಭಾಗವುಳ್ಳ ಗದಾಯುದ್ಧವನ್ನು ಸಂಕ್ಷಿಪ್ತ ಭಾರತವನ್ನಾಗಿ ಮಾಡಿದ್ದೇನೆ ಎನ್ನುತ್ತಾನೆ.

ಗುಣಮನೆ ತೋರ್ಪಂ ದೋಷದ
ಗುಣಂಗಳನೆ ನೆಗೞ್ದು ತೋರ್ಪ ದುರ್ಜನನುಮದೇಂ
ಗುಣಗಣನೆಗೆ ತೋರ್ಪಂ ಕೃತಿ
ಗುಣದೋಷ ಪರೀಕ್ಷೆಗಾರನಾರ್ ಬಾಱಿಪರೋ||೪೮||

ಗುಣಮನೆ ತೋರ್ಪಂ = ಕಾವ್ಯದ ಉತ್ತಮಾಂಶಗಳನ್ನು ಮಾತ್ರವೇ ಎತ್ತಿ ತೋರಿಸುವವನೂ, ದೋಷದ = ಕಾವ್ಯದ ನ್ಯೂನತೆಯ, ಗುಣಂಗಳನೆ = ದಾರಗಳನ್ನಷ್ಟೇ, ನೆಗೞ್ದು ತೋರ್ಪ = ಸ್ಪಷ್ಟಪಡಿಸುವ ದುರ್ಜನನುಂ = ದುಷ್ಟನೂ, ಗುಣಗಣನೆಗೆ= ಕಾವ್ಯಗಳ ಯೋಗ್ಯತೆಯನ್ನು ತಿಳಿಯುವುದಕ್ಕೆ, ಅದೇಂ ತೋರ್ಪಂ = ಅದೇನನ್ನು ತಾನೆ ತೋರಿಸಬಲ್ಲನು? ಕೃತಿ ಗುಣದೋಷ ಪರೀಕ್ಷೆಗೆ = ಕಾವ್ಯದ ಗುಣದೋಷ ವಿಮರ್ಶೆಗೆ , ಆರನಾರ್ ಬಾಱಿಪರೋ = ಯಾರನ್ನು ಯಾರು ತಡೆಯುತ್ತಾರೋ ?

ತಾತ್ಪರ್ಯ:- ಕಾವ್ಯದ ಒಳ್ಳೆಯ ಗುಣಗಳನ್ನು ಮಾತ್ರವೇ ತೋರಿಸುವವನೂ, ಕೇವಲ ಕೊರತೆಗಳ ಮಾಲೆಯನ್ನೇ ಎತ್ತಿ ತೋರಿಸುವವನೂ, ಆ ಕಾವ್ಯದ ಯೋಗ್ಯತೆಯನ್ನು ತೂಕಮಾಡಬಲ್ಲನೇ ? ಈ ಕೃತಿಯ ಗುಣದೋಷಗಳೆರಡನ್ನೂ ನಿಷ್ಪಕ್ಷಪಾತ ದೃಷ್ಟಿಯಿಂದ ಪರಿಶೀಲಿಸುವವನನ್ನು ಯಾರೂ ನಿಷೇಧಿಸುವುದಿಲ್ಲ. ಅಂತಹ ವಿಮರ್ಶಕರೇ ಸ್ವಾಗತಾರ್ಹರು.

ಅಲಂಕಾರ :- ಯಮಕ

ದ್ವಿತೀಯಾಶ್ವಾಸಂ

ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ಲುದ್ರಾವತಾರಂ ಗಡಂ
ನೊಸಲೊಳ್ ಕಣ್ಗಡಮೆಂದು ನಚ್ಚಿ ಪೊರೆದೆಂ ತಾನಕ್ಕೆ ತಮ್ಮಮ್ಮನ
ಕ್ಕಿಸಲಂಬಂ ತಿರುವಾಯ್ಗೆ ತಂದಱಿವರೇ ತಾಮಿರ್ವರುಂ ಕಯ್ದುವಂ
ಬಿಸುಟರ್ ಜೋಳದ ಪಾೞಿಯಂ ಬಗೆದರಿಲ್ಲಾದ್ರೌಣಿಯುಂ ದ್ರೋಣನುಂ||೧೧||

ಅಸುಹೃತ್ಸೇನೆಗೆ ಒರ್ವನೆ ಸಾಲ್ವಂ ಗಡ = ಶತ್ರು ಸೇನೆಯನ್ನು ನಾಶಪಡಿಸಲು ಇವನೊಬ್ಬನೇ ಸಾಕಂತೆ ! ರುದ್ರವತಾರಂ ಗಡಂ = ರುದ್ರನ ಅಪರಾವತಾರವಂತೆ ! ಅಶ್ವತ್ತಾಮನು ತ್ರಿಣೇತ್ರನ ಅಂಶದಿಂದ ಹುಟ್ಟಿದವನೆಂದು ಪಂಪಭಾರತದಲ್ಲಿ ಹೇಳಿದೆ.( ಆಶ್ವಾಶ .೨. ೪೩ವ) ಭಾರತದಲ್ಲಿಯೂ ಇದಕ್ಕೆ ಆಧಾರವಿದೆ. ನೊಸಲೊಳ್ ಕಣ್ ಗಡಂ = ಶಿವನಂತೆ ಹಣೆಯಲ್ಲಿ ಕಣ್ಣುಂಟಂತೆ, ( ಹೀಗೆ ಜನಜನಿತವಾಗಿದ್ದುದರಿಂದ ) ನಚ್ಚಿ ಪೊರೆದೆಂ = ಪ್ರೀತಿಯಿಂದ ಸಲಹಿದೆ, ತಾನಕ್ಕೆ ತಮ್ಮಮ್ಮನಕ್ಕೆ= ತಾನಾಗಲೀ ತನ್ನ ತಂದೆಯಾಗಲಿ, ಅಂಬು ಇಸಲ್ = ಬಾಣವನ್ನು ಪ್ರಯೋಗಿಸುವುದಕ್ಕೆ, ತಿರುವಾಯ್ಗೆ= ಹೆದೆಯ ಮಧ್ಯಭಾಗಕ್ಕೆ , ತಂದು ಅಱಿವರೇ = ಜೋಡಿಸಲೂ ಬಲ್ಲರೇ ? ತಾವಿರ್ವರುಂ = ತಾವಿಬ್ಬರೂ, ಕಯ್ದುವಂ ಬಿಸುಟರ್ = ಆಯುಧವನ್ನು ತೊರೆದರು, ಜೋಳದ ಪಾೞಿಯಂ ಬಗೆದರಿಲ್ಲ ಆ ದ್ರೌಣಿಯುಂ ದ್ರೋಣನುಂ = ಆ ರೀತಿಯಲ್ಲಿ ಪ್ರಸಿದ್ಧನಾಗಿದ್ದ ಅಶ್ವತ್ಥಾಮನಾಗಲಿ,ಬಿಲ್ಲೋಜನಾದ ದ್ರೋಣನಾಗಲಿ ಅನ್ನದ ಋಣವನ್ನು ಕೂಡ ಭಾವಿಸಲಿಲ್ಲ.

ತಾತ್ಪರ್ಯ :- ಶತ್ರು ಸಂಹಾರಕ್ಕೆ ಅವನೊಬ್ಬನೇ ಸಾಕು; ಅವನು ರುದ್ರಾವತಾರ. ಹಣೆಯಲ್ಲಿ ಕಣ್ಣುಳ್ಳವನು ಎಂಬುದಾಗಿ ಪ್ರಸಿದ್ಧನಾಗಿದ್ದ ಅಶ್ವತ್ಥಾಮನನ್ನು ಪ್ರೀತಿಯಿಂದ ಸಲಹಿದೆ. ಆದರೇನು? ಅವನಿಗಾಗಲಿ ಅವನ ತಂದೆಗಾಗಲಿ ಬಿಲ್ಲಿಗೆ ಬಾಣವನ್ನು ಜೋಡಿಸುವುದಕ್ಕೂ ಗೊತ್ತಿಲ್ಲ; ಗೊತ್ತಿದ್ದರೆ ಇಬ್ಬರೂ ಆಯುಧವನ್ನು ತೊರೆಯುತ್ತಿದ್ದರೇ ? ನನ್ನ ಅನ್ನದ ಋಣವನ್ನು ತೀರಿಸುವುದಕ್ಕಾದರೂ ಯುದ್ಧ ಮಾಡಬಹುದಿತ್ತಲ್ಲ ; ಇವರೆಂತ ಕೃತಘ್ನರು !

ದುರ್ಯೋಧನನಿಗೆ ದ್ರೋಣಾಶ್ವತ್ಥಮರ ಧನುರ್ವಿದ್ಯಾ ಪ್ರಭಾವದ ಮಹಿಮೆಯು ಚೆನ್ನಾಗಿ ತಿಳಿದಿದ್ದರೂಉದ್ವೇಗದ ಭರದಲ್ಲಿ ಇಂತಹ ಕಟೂಕ್ತಿಗಳು ಅವನಿಂದ ಹೊರಹೊಮ್ಮಿದುವೆಂದು ಸಮಾಧಾನ ತಂದುಕೊಳ್ಳಬೇಕು. ದ್ರೋಣನು ರಣರಂಗದಲ್ಲಿ ಪುತ್ರವ್ಯಾಮೋಹಕ್ಕೊಳಗಾಗಿ ಧನುರ್ಬಾಣಗಳನ್ನು ಕೆಳಗಿಟ್ಟರೆ ಅಶ್ವತ್ಥಾಮನು ಕರ್ಣನೊಂದಿಗೆ ಸೇನಾಪತಿ ಪಟ್ಟಕ್ಕಾಗಿ ಜಗಳವಾಡಿ , ಕರ್ಣನು ಸಾಯದೆ ಆಯುಧವನ್ನು ಹಿಡಿಯೆನೆಂದು ಪ್ರತಿಜ್ಞೆಮಾಡಿ ಕೈಯಲ್ಲಿದ್ದ ಖಡ್ಗವನ್ನು ಎಸೆದನು.

ಮುಳಿದಾಂಪರ್ ಧರಣೀಶ್ವರರ್ ಮಿಗೆ ಪೆಱರ್ ಬಿಲ್ಗೊಂಡುಮೇಗೆಯ್ವರೆ
ನ್ನೊಳಮಿಂ ತೀರದ ಕಾರ್ಯಭರಮಂ ತೀರ್ಚಲ್ ಪೆಱರ್ ಗಂಡರಿ
ನ್ನೊಳರೇ ಪಾಂಡವರೆಂಬರೇಗಹನಮೆಂಬಾದರ್ಪದಂತಾಜಿಯೊಳ್
ಸುಳರಂಬೆತ್ತಿರೆ ಸತ್ತರೆನ್ನಿನಿಬರುಂ ತಮ್ಮಂದಿರುಂ ಮಕ್ಕಳುಂ  ॥೧೨॥

ಪೆಱರ್ ಧರಣೀಶ್ವರರ್ ಮಿಗೆ ಮುಳಿದು ಆಂಪರ್= ಶತ್ರುರಾಜರು ವಿಶೇಷವಾಗಿ ಕೋಪಗೊಂಡು ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ, ಬಿಲ್ಗೊಂಡು ಏಗೆಯ್ವರ್ ಎನ್ನೊಳಂ =ಧನುಸ್ಸನ್ನು ಹಿಡಿದಿದ್ದರೂ ಅವರು ನನ್ನನ್ನೇನು ಮಾಡಬಲ್ಲರು ? ಇನ್ ತೀರದ ತನ್ನ ಕಾರ್ಯಭರಮಂ = ನನ್ನಿಂದ ತೀರಿಸುವುದಕ್ಕೆ ಅಸಾಧ್ಫಯವಾದ ನಿನ್ನ ಕಾರ್ಯದ ಹೊರೆಯನ್ನು, ತೀರ್ಚಲ್ ಪೆಱರ್ ಗಂಡರ್ ಇನ್ ಒಳರೇ = ಪೂರೈಸಲು ಬೇರೆ ಪರಾಕ್ರಮಿಗಳು ನಮ್ಮ ಪಕ್ಷದಲ್ಲಿ ಇದ್ದಾರೆಯೇ?
( ಇಲ್ಲವೆಂಬ ಭಾವ) , ಪಾಂಡವರೆಂಬರ್ ಏಗಹನಂ= ಪಾಂಡವರೆಂಬವರು ನನಗೆ ಗಣ್ಯವೇ ? ಎಂಬ ಆ ದರ್ಪ ಅದು ಅಂತೆ = ಹೀಗೆ ಹೇಳುತ್ತಿದ್ದ ಆ ಪೌರುಷದ ಮಾತು ಹಾಗೆಯೇ ಉಳಿಯಿತಷ್ಟೆ ! ಆಜಿಯೊಳ್ = ಯುದ್ಧದಲ್ಲಿ , ಸುಳರಂ ಬೆತ್ತಿರೆ = ಮುದುಡಿಕೊಂಡಿರಲು, ಎನ್ ಇನಿಬರುಂ ತಮ್ಮಂದಿರುಂ ಮಕ್ಕಳುಂ ಸತ್ತರ್ = ನನ್ನ ಇಷ್ಟೊಂದು ಮಂದಿ ತಮ್ಮಂದಿರೂ ಮಕ್ಕಳೂ ಸತ್ತು ಹೋದರು.

“ ಶತ್ರು ರಾಜರು ಅತ್ಯಂತ ಕೋಪಗೊಂಡು ಯುದ್ಧಕ್ಕೆ ಪ್ರತಿಭಟಿಸಿ ನಿಂತಿದ್ದಾರಲ್ಲವೇ ? ಅವರು ಧನುರ್ಧಾರಿಗಳಾಗಿದ್ದ ಮಾತ್ರಕ್ಕೆ ನನ್ನನ್ನು ಏನು ಮಾಡಬಲ್ಲರು ? ದುರ್ಯೋಧನ ! ನನ್ನಿಂದ ನಿರ್ವಹಿಸಲಾಗದ ನಿನ್ನ ಕಾರ್ಯಗೌರವವನ್ನು ಪೂರೈಸಲು ದಕ್ಷರಾದ ಬೇರೆ ಪರಾಕ್ರಮಿಗಳುಇದ್ದಾರೆಯೇ ? ಈ ಪಾಂಡವರು ನನಗೆ ಗಣ್ಯವೇ ? “ ಹೀಗೆ ಆಚಾರ್ಯನು ಹೆಗ್ಗಳಿಕೆಯನ್ನು ಕೊಚ್ಚಿಕೊಂಡದ್ದು ಮಾತ್ರ ಹಾಗೇ ಉಳಿಯಿತು; ಯುದ್ಧಾವಸರದಲ್ಲಿ ಯಾವುದೋ ನೆಪವೊಡ್ಡಿ ನುಣುಚಿಕೊಂಡನು. ಇದರ ಫಲವಾಗಿ ನನ್ನ ಇಷ್ಟೊಂದು ಮಂದಿ ತಮ್ಮಂದಿರೂ ಮಕ್ಕಳೂ ತೀರಿಕೊಂಡರು.

ಆಚಾರ್ಯನು ಆಡಿದಂತೆ ಮಾಡಿದ್ದರೆ ಈ ಅಪಾರ ನಷ್ಟ ಸಂಭವಿಸುತ್ತಿತ್ತೇ ? ಇದೆಲ್ಲ ಕೇವಲ ಬಡಿವಾರವಲ್ಲದೆ ಮತ್ತೀನು ಎಂಬ ಭಾವ.

ಪದುಳಂ ಕುಳ್ಳಿರ್ದೆಮಗಾ
ಯದ ಮಾತಂ ತಗುಳೆ ಗೞಪಿ ಪೋದಂ ಸಂಧಿ
ರ್ದದಟರೊಳಿಱಿದಱಿಯಂ ತ
ಪ್ಪದೆ ಕಮ್ಮಱಿಯೋಜನೆನಿಸಿದಂ ಬಿಲ್ಲೋಜಂ ॥೧೩॥

ಪದುಳಂ ಕುಳ್ಳಿರ್ದು = ತಾನು ಸುಖವಾಗಿ ಕುಳಿತುಕೊಂಡು, ಎಮಗೆ = ನಮಗೆಲ್ಲ, ಆಯದ ಮಾತಂ = ಶೌರ್ಯೋಕ್ತಿಯನ್ನು, ತಗುಳೆ= ಮನಸ್ಸಿಗೆ ಹಿಡಿಸುವಂತೆ, ಗೞಪಿ = ಹರಟೆ ಕೊಚ್ಚಿ, ಪೋದಂ = ಸತ್ತೇಹೋದನು, ಸಂದಿರ್ದ ಅಧಟರೊಳ್ = ಹೆಸರಾಂತ ಪರಾಕ್ರಮಿಗಳೊಂದಿಗೆ, ಇಱಿದು ಅಱಿಯಂ = ಯುದ್ಧಮಾಡಿ ತಿಳಿಯನು, ತಪ್ಪದೆ =ನಿಜಕ್ಕೂ, ಬಿಲ್ಲೋಜಂ= ಧನುರ್ವಿದ್ಯಾ ಗುರು ದ್ರೋಣನು ಕಮ್ಮಱಿಯೋಜನೆನಿಸಿದಂ = ಕಮ್ಮಾರಗುರುವೆನಿಸಿಕೊಂಡನು.

ಆಚಾರ್ಯ ದ್ರೋಣನು ಸುಖವಾಗಿ ಕುಳಿತುಕೊಂಡು ನಮಗೆಲ್ಲ ತನ್ನ ಪರಾಕ್ರಮದ ಹೆಗ್ಗಳಿಕೆಯನ್ನು ಮನಮೆಚ್ಚುವಂತೆ ಹರಟಿ ಯುದ್ಧಮಾಡದೆ ಸತ್ತೇ ಹೋದನು. ಪ್ರಸಿದ್ಧರಾದ ಶೂರರಲ್ಲಿ ಹೋರಾಡಿ ಅರಿಯರು. ನಿಜಕ್ಕೂ ಬಿಲ್ಲೋಜನು
ಕಮ್ಮರಿಯೋಜನೆ ಆದನು.

ಅರಸಂಗರಗಜ್ಜದೊಳಂ
ಧುರದೊಳಮರಿಸೇನೆಗೆಂಬರದು ಪುಸಿಯಾಯ್ತಂ
ತೆರಡಱೊಳೊಂದಱಫಲಮುಂ
ಪರಿಣತಿಗಾಯ್ತಿಲ್ಲನರ್ಥಕಂ ವಾಕ್ಯಾರ್ಥಂ॥೧೪॥

ಅರಸಂಗೆ= ರಾಜನಾದ ದುರ್ಯೋಧನನಿಗೆ, ಅರಗಜ್ಜದೊಳಂ = ರಾಜಕಾರ್ಯದಲ್ಲಿಯೂ, ಧುರದೊಳಂ = ಯುದ್ಧದಲ್ಲಿಯೂ, ಅರಿಸೇನೆಗೆ = ಶತ್ರು ಸೇನೆಗೆ, ಎಂಬರ್ = ಎನ್ನುತ್ತಿದ್ದರು, ಅದು ಪುಸಿಯಾಯ್ತು= ಅದು ಸುಳ್ಳಾಯ್ತು, ಅಂತು =ಹಾಗೆ, ಎರಡಱೊಳೊಂದರಫಲಮುಂ = ಎರಡರಲ್ಲಿ ಒಂದರ ಪ್ರಯೋಜನವೂ, ಪರಿಣತಿಗೆ ಆಯ್ತಿಲ್ಲ = ಕೊನೆಯಲ್ಲಿ ಇಲ್ಲದಾಯಿತು, ವಾಕ್ಯಾರ್ಥಂ = ವಾಕ್ಯದ ಅರ್ಥ ,ವಾದ, ಅನರ್ಥಕಂ = ಅರ್ಥವಿಲ್ಲದ್ದು,

ಅರಸನೇ ! ನಿನ್ನ ರಾಜಕಾರ್ಯದಲ್ಲಿಯೂ ಶತ್ರುಸೇನೆಯೊಂದಿಗೆ ಯುದ್ಧಮಾಡುವುದಕ್ಕೂ ನಾನು ಸಿದ್ಧನಾಗಿದ್ದೇನೆ ಎಂಬುದಾಗಿ  ದ್ರೋಣಾಚಾರ್ಯರು ಯಾವಾಗಲೂ ಹೇಳುತ್ತಿದ್ದರು. ಅವರಾಡಿದ್ದ ಮಾತು ಸುಳ್ಳಾಯಿತು. ಅವರ ಎರಡು ಆಶ್ವಾಸನೆಗಳಲ್ಲಿ ಒಂದಾದರೂ ಕೊನೆಯಲ್ಲಿ ಫಲಿಸದೆ ಹೋಯಿತು ! ಈ ವಿಚಾರದಲ್ಲಿ ಇನ್ನು ವಾದಮಾಡಿ ಏನು ಪ್ರಯೋಜನ ?

ಒಸೆದರ್ಜುನಂಗೆ ಮುಂ ಕಳ
ಶಸಂಭವಂ ಮಾನ್ಯಪದವಿಯಂ ಮಾಡಿದೊಡಂ
ಬೆಸುಗೆಗಿಡೆ ಪಾೞಿಗಿಡೆ ತ
ನ್ನಸುವಂ ತೆಲ್ಲಟಿಗೆಗುಡುವ ತೆಱದೊಳ್ ಕೊಟ್ಟಂ॥೧೫॥

ಮುಂ ಕಳಶಸಂಭವಂ ಅರ್ಜುನಂಗೆ ಒಸೆದು = ಹಿಂದೆ ಧನುರ್ವಿದ್ಯಾಭ್ಯಾಸ ಕಾಲದಲ್ಲಿ ಅರ್ಜುನನನ್ನು ವಿಶೇಷವಾಗಿ ಪ್ರೀತಿಸಿ , ಮಾನ್ಯಪದವಿಯಂ ಮಾಡಿದೊಡಂ = ತನ್ನ ಪಟ್ಟದ ಶಿಷ್ಯನನ್ನಾಗಿ ಮಾಡಿದರೂ, ಬೆಸುಗೆ ಕಿಡೆ = ಗುರುಶಿಷ್ಯ ಸಂಬಂಧವನ್ನು ಕೆಡಿಸಿದರೂ, ಪಾೞಿ ಕಿಡೆ= ಕ್ರಮ ತಪ್ಪಿ ನಡೆದರೂ, ತೆಲ್ಲಟಿಗೆ ಕುಡುವ ತೆಱದೊಳ್ = ಉಡುಗೊರೆಯನ್ನು ಕೊಡುವಂತೆ , ತನ್ನ ಅಸುವಂ ಕೊಟ್ಟಂ = ತನ್ನ ಪ್ರಾಣವನ್ನೇ ಅರ್ಪಿಸಿದನು.

ತಾತ್ಪರ್ಯ :- ಹಿಂದೆ ಕೌರವ ಪಾಂಡವರ ಧನುರ್ವಿದ್ಯಾವಸರದಲ್ಲಿ ದ್ರೋಣನು ತನ್ನ ಶಿಷ್ಯರಲ್ಲಿ ಅರ್ಜುನನೇ ಶ್ರೇಷ್ಠನೆಂದು ಅವನನ್ನು ವಿಶೇಷವಾಗಿ ಪ್ರೀತಿಸಿ ಪಟ್ಟದ ಶಿಷ್ಯನನ್ನಾಗಿ ಮಾಡಿದ್ದರೂ ಅದೊಂದನ್ನೂ ಗಣನೆಗೆ ತಾರದೆ ಅನ್ಯಾಯವಾಗಿ ಗುರುಶಿಷ್ಯ ಸಂಬಂಧವನ್ನೂ ನಾಶಮಾಡಿದ ಅರ್ಜುನನಿಗೆ ತನ್ನ ಪ್ರಾಣವನ್ನೇ ಉಡುಗೊರೆಯಾಗಿ ಕೊಟ್ಟನಲ್ಲವೇ ?

ಎಂತಹ ಗುರುಶಿಷ್ಯ ಸಂಬಂಧ.

ಈಯಲಿಱಿಯಲ್ ಶರಣ್ಬುಗೆ
ಕಾಯಲ್ ಕ್ಷತ್ರಿಯರೆ ಬಲ್ಲರಬ್ರಹ್ಮಣ್ಯಂ
ಭೋಯೆನಲುಂ ಬ್ರಾಹ್ಮಣರವಿ
ಧಾಯೆನಲುಂ ಬಲ್ಲರಿಱಿರಲವರೆಂತಱಿವರ್॥೧೬॥,

ಈಯಲ್= ದಾನಮಾಡುವುದಕ್ಕೂ, ಇಱಿಯಲ್=ಯುದ್ಧಮಾಡುವುದಕ್ಕೂ, ಶರಣ್ಬುಗೆ= ಮರೆಹೊಕ್ರರೆ,(ಅವರನ್ನು) ಕಾಯಲ್= ರಕ್ಷಿಸುವುದಕ್ಕೂ, ಕ್ಷತ್ರಿಯರೆ ಬಲ್ಲರ್=ಕ್ಷತ್ರಿಯರೇ ಸಮರ್ಥರು, ಬ್ರಾಹ್ಮಣರ್ ಅಬ್ರಹ್ಮಣ್ಯಂ= ಬ್ರಾಹ್ಮಣರಿಗೆ ಅನುಚಿತವಾದದ್ದು,( ಕೊಲ್ಲಕೂಡದು) ಭೋಃ = ಅಯ್ಯಾ, ಎನಲುಂ =ಎನ್ನಲೂ, ಬಲ್ಲರ್ = ನಿಪುಣರು, ಇಱಿಯಲ್ ಅವರ್ ಎಂತು ಅಱಿವರ್= ಅವರು ಹೇಗೆ ಯುದ್ಧ ಮಾಡಬಲ್ಲರು?

ತಾತ್ಪರ್ಯ :- ದಾನ, ಯುದ್ಧ, ಶರಣಾಗತ ರಕ್ಷಣೆಗಳನ್ನು ಮಾಡಲು ಕ್ಷತ್ರಿಯರೇ ದಕ್ಷರು. ಬ್ರಾಹ್ಮಣರು “ಅಯ್ಯಾಕೊಲ್ಲಕೂಡದು, ಅಯ್ಯೋ ಮಹಾಪಾಪ “ ಎಂದೆಲ್ಲ ಮೊರೆಯಿಡುವುದಕ್ಕೆ ಗಟ್ಟಿಗರೇ ಹೊರತು ಯುದ್ಧಮಾಡುವುದಕ್ಕೆ ಅವರೇನು ಸಮರ್ಥರೇ ?

ಬ್ರಾಹ್ಮಣನಾದ ದ್ರೋಣನು ಕ್ಷಾತ್ರವೃತ್ತಿಯನ್ನು ಅವಲಂಬಿಸಿದ್ದು ಕ್ಷತ್ರಿಯ ಧರ್ಮಕ್ಕೇ ಅನ್ಯಾಯಮಾಡಿದಂತಾಯಿತೆಂದು ಭಾವ.

ಚಾತುರ್ವಣ್ ರ್ಣ್ಯದೊಳಂ ದ್ವಿಜ
ಜಾತಿಗೆ ದರ್ಭಾಧಿಕಾರಮಲ್ಲದೆ ವಂಶೋ
ದ್ಭೂತ ನೃಪೋಚಿತಮರಿಯಂ
ಘಾತಿಪ ಶಸ್ತ್ರಾಸ್ತ್ರಮವರ್ಗೆ ಜಾತಿವಿರುದ್ಧಂ॥೧೭॥

ಚಾತುರ್ವರ್ಣ್ಯದೊಳಂ = ಬ್ರಹ್ಮ,ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣಗಳಲ್ಲಿ, ದ್ವಿಜಜಾತಿಗೆ=ಬ್ರಾಹ್ಮಣರಿಗೆ, ದರ್ಭಾಧಿಕಾರಂ ಅಲ್ಲದೆ=ದರ್ಭೆಯನ್ನು ಕೈಯಲ್ಲಿ ಹಿಡಿಯುವ ಅಧಿಕಾರವಲ್ಲದೆ, ವಂಶೋದ್ಭೂತ= ಕ್ಷತ್ರಿಯವಂಶಜನ್ಯವಾದ, ನೃಪೋಚಿತ=ರಾಜೋಚಿತವಾದ, ಅರಿಯಂ ಘಾತಿಪ= ಶತ್ರುಗಳನ್ನುವಧಿಸುವ, ಶಸ್ತ್ರಾಸ್ತ್ರಂ=ಧನುರ್ಬಾಣಗಳು, ಅವರ್ಗೆ=ಆ ಬ್ರಾಹ್ಮಣರಿಗೆ, ಜಾತಿವಿರುದ್ಧಂ=ಕುಲಧರ್ಮಕ್ಕೆ ವಿರೋಧವಾದುದು.

ಆಚಾರ್ಯನು ತಾನೂ ಕೆಟ್ಟ, ತನ್ನ ಕುಲಧರ್ಮವನ್ನೂಕೆಡಿಸಿದನೆಂದು ದುರ್ಯೋಧನನ ಆರೋಪ.

ಓಜಂ ಗಡ ಚಿಃ ಭಾರ
ದ್ವಾಜಂ ಗಡ ಬಿಲ್ಲ ಬಲ್ಮೆಯುಂ ಕುಲಮುಂ ನಿ
ರ್ವ್ಯಾಜಂ ಮಸುೞ್ದುವು ಪಾಂಡುತ
ನೂಜರ ಪಕ್ಕದೊಳೆ ಪಾೞಿಗಿಡೆ ನೆಗ಼ೞ್ದುದಱಿಂ॥೧೮॥

ಓಜಂಗಡ=ಆಚಾರ್ಯನಂತೆ, ಚಿಃ=ತಿರಸ್ಕಾರ ಸೂಚಕಶಬ್ಧ, ಭಾರದ್ಜಾಜಂಗಡ=ಭರದ್ಜಾಜನಪುತ್ರ, ದ್ರೋಣನಂತೆ, ಪಾಂಡುತನೂಜರ ಪಕ್ಕದೊಳೆ=ಪಾಂಡವರ ಪಕ್ಷಪಾತಿಗಳಾಗಿ, ಪಾೞಿಗಿಡೆ ನೆಗೞ್ದುದಱಿಂ=ಕ್ರಮಗೆಟ್ಟು ವರ್ತಿಸಿದ್ದರಿಂದ, ಬಿಲ್ಲ ಬಲ್ಮೆಯುಂ ಕುಲಮುಂ = ಧನುರ್ವಿದ್ಯಾಪ್ರೌಢಿಮೆಯೂ ಕುಲಗೌರವವೂ, ನಿರ್ವ್ಯಾಜಂ= ನಿಷ್ಕಾರಣವಾಗಿ, ಮಸುೞ್ದುವು=ಮಾಸಿಹೋದುವು, ಮಸುಕಾದುವು.

ದ್ರೋಣನ ನಡವಳಿಯ ಬಗ್ಗೆ ಒಳಗೊಳಗೆ ಕುದಿಯುತ್ತಿದ್ದ ದುರ್ಯೋಧನನ ರೋಷಾಗ್ನಿ ಒಮ್ಮೆಗೇ ಸ್ಫೋಟಗೊಂಡು “ಚಿಃ” ಎಂಬ ತಿರಸ್ಕಾರೋದ್ಗಾರಹೊರಹೊಮ್ಮುತ್ತದೆ!ತನ್ನ ಪಕ್ಷದಲ್ಲಿದ್ದರೂ ಪಾಂಡವರ ಪಕ್ಷವನ್ನು ವಹಿಸಿ ಸ್ವಾಮಿನಿಷ್ಠೆಗೆ ಭಂಗಬರುವಂತೆ ವರ್ತಿಸಿದುದರಿಂದ ದ್ರೋಣನು ಅನ್ಯಾಬಯವಾಗಿ ತನ್ನ ಕುಲಶೌರ್ಯಗಳ ಹಿರಿಮೆಯನ್ನೆಲ್ಲ ಕೆಡಿಸಿಕೊಂಡನು. ಇಂಥವನು ಗುರುಪೀಠಕ್ಕೆ ಅನರ್ಹನು.

ಪ್ರಿಯಮಿತ್ರನೆನಗೆ ಕಮಲ
ಪ್ರಿಯನಂದನನವನನೆನ್ನ ಪಕ್ಕದೆ ಪೞಿದ
ಪ್ರಿಯಮಂ ಮಾಡಿದನಾ ಕಳ
ಶಯೋನಿ ನೆಗ಼ೞ್ದಿಂದ್ರಸುತನಿನೇಗುಂದಿದನೋ॥೧೯॥

ಕಮಲಪ್ರಿಯನಂದನನ್=ಕಮಲಬಾಂಧವನಾದ ಸೂರ್ಯ ಸುತನು, ಕರ್ಣನು, ಎನಗೆ ಪ್ರಿಯಮಿತ್ರನ್= ನನ್ನ ಆಪ್ತಮಿತ್ರನು, ಆ ಕಳಶಯೋನಿ=ಕುಂಭೋದ್ಭವನು, ದ್ರೋಣ, ಅವನನ್ ಎನ್ನ ಪಕ್ಕದೆ ಪೞಿದು ಅಪ್ರಿಯಮಂ ಮಾಡಿದನ್=ಅವನನ್ನು ನನ್ನ ಸಮಕ್ಷಮದಲ್ಲಿ ನಿಂದಿಸಿ ಅಪ್ರಿಯವನ್ನುಂಟುಮಾಡಿದನು, ನೆಗೞ್ದ= ಪ್ರಸಿದ್ಧನಾದ, ಇಂದ್ರಸುತನಿಂ =ಅರ್ಜುನನಿಗಿಂತ, ಏಕುಂದಿದನೋ= (ಪರಾಕ್ರಮದಲ್ಲಿ) ಏನು ಕಡಿಮೆಯಾದವನೋ?

ತಾತ್ಪರ್ಯ :- ಸೂರ್ಯಸುತನಾದ ಕರ್ಣನುನನ್ನ ಜೀವದ ಗೆಳೆಯ. ಅವನನ್ನು ಈ ದ್ರೋಣನು ನನ್ನ ಎದುರಿನಲ್ಲೇ ನಿಂದಿಸಿ ಇಬ್ಬರಿಗೂ ಅನ್ಯಾಯವನ್ನು ಮಾಡಿಬಿಟ್ಟನು. ಅವನು ಪ್ರಸಿದ್ಧನಾದ ಅರ್ಜುನನಿಗಿಂತ ಪರಾಕ್ರಮದಲ್ಲಿ ಕಡಿಮೆಯಾದವನೇನು?

ತಪನಸುತಂ ಬೇಱಾಂ ಬೇ
ಱೆ ಪೊಲ್ಲದಂ ನುಡಿದನಾವಗಂ ರ
ಕ್ಷಿಪ ಕಯ್ದುವನೆನಲಾ ಮಱೆ
ಯಪಾಂಡವಂ ಬಗೆದು ನೋೞ್ಪೊಡಶ್ವತ್ಥಾಮಂ॥೨೦॥

ತಪನಸುತಂ ಬೇಱೆ= ಸೂರ್ಯಸುತ ಕರ್ಣನು ಬೇರೆ, ಆಂ ಬೇಱೆ=ನಾನು ಬೇರೆ, (ಎಂಬುದಾಗಿ) ಆವಗಂ=ಯಾವಾಗಲೂ, ಪೊಲ್ಲದಂ ನುಡಿದಂ=ಕೆಟ್ಟ ಮಾತನ್ನೇ ಆಡಿದನು, ರಕ್ಷಿಪ ಕಯ್ದುವಂ ಬಿಸುಟಂ=ನಮ್ಮ ರಕ್ಷಣೆಗಾಗಿ ಹಿಡಿದಿದ್ದ ಆಯುಧವನ್ನು ಬೀಸಾಡಿದನು. ಎನಲ್=ಎಂದಮೇಲೆ, ಬಗೆದು ನೋೞ್ಪೊಡೆ=ವಿಚಾರಿಸಿನೋಡಿದರೆ, ಅಶ್ವತ್ಥಾಮಂ=ಅಶ್ವತ್ಥಾಮನು,ಮಱೆಯ ಪಾಂಡವಂ=ರಹಸ್ಯವಾಗಿ ಪಾಂಡವರ ಪಕ್ಷದವನೇ ಸರಿ.

ತಾತ್ಪರ್ಯ :- ಕರ್ಣನು ಬೇರೆ, ನಾನು ಬೇರೆ. ಕರ್ಣನೆಲ್ಲಿ ನಾನೆಲ್ಲಿ? ನನಗೂ ಕರ್ಣನಿಗೂ ಯಾವ ನಂಟು?ಈ ರೀತಿಯಲ್ಲಿ ಸದಾ ಕೆಟ್ಟ ಮಾತುಗಳನ್ನಾಡುತ್ತಾ ಮಿತ್ರಭೇದವನ್ನು ಮಾಡುವುದಕ್ಕೆ ಯತ್ನಿಸುತ್ತಿದ್ದ ಅಶ್ವತ್ಥಾಮನು, ನಮ್ಮ ರಕ್ಷಣೆಗೆಂದು ಹಿಡಿದಿದ್ದ ಆಯುಧವನ್ನು ತೊರೆದನು! ವಿಚಾರಿಸಿ ನೋಡಿದರೆ ನಿಜವಾಗಿಯೂ ಆತನು ಪ್ರಚ್ಚನ್ನ ಪಾಂಡವನೇ ಸರಿ.

ಗೆಲಲಾರ್ಪೊಡಿಱಿದು ಗೆಲ್ವುದು
ಗೆಲಲಾಱದೊಡಣ್ಮಿ ಸಾವುದಾಳ್ಗಿನಿತೆ ಗುಣಂ
ಗೆಲಲುಂ ಸಾಯಲುಮಾಱದೆ
ತೊಲಗಿದೊಡೆ ನೆಗೞ್ತೆ ತೊಲಗದಿರ್ಕುಮೆ ಮೈಯ್ಯಂ॥೨೧॥

ಗೆಲಲಾರ್ಪೊಡೆ=ಜಯಿಸಲು ಸಾಮರ್ಥ್ಯವಿದ್ದರೆ, ಇಱಿದು ಗೆಲ್ವುದು=ಯುದ್ಧಮಾಡಿ ಜಯಿಸುವುದು, ಗೆಲಲ್ ಆಱದೊಡೆ =
ಗೆಲ್ಲುವುದಕ್ಕೆ ಅಸಾಧ್ಯವಾದರೆ, ಅಣ್ಮಿ=ಶೌರ್ಯವನ್ನು ತೋರಿಸಿ, ಸಾವುದು=ಸಾಯುವುದು, ಆಳ್ಗೆ ಇನಿತೆ ಗುಣಂ=ವೀರಯೋಧನಲ್ಲಿರಬೇಕಾದ ಗುಣವು ಇಷ್ಟೇ, ಗೆಲಲುಂ ಸಾಯಲುಂ ಆಱದೆ=ಜಯಿಸುವುದಕ್ಕೂ ಸಾಯುವುದಕ್ಕೂ ಆಗದೆ, ತೊಲಗಿದೊಡೆ=ದೂರ ಸರಿದರೆ, ನೆಗೞ್ತೆ=ಕೀರ್ತಿಯು, ಮೈಯ್ಯಂತೊಲಗದಿರ್ಕುಮೆ=ವ್ಯಕ್ತಿಯನ್ನು ಬಿಟ್ಟು ಹೋಗದಿರುವುದೇ?

ತಾತ್ಪರ್ಯ :- ಗೆಲ್ಲಲು ಸಾಮರ್ಥ್ಯವಿದ್ದರೆ ಯುದ್ಧಮಾಡಿ ಗೆಲ್ಲುವುದೂ, ಗೆಲ್ಲುವುದಕ್ಕೆ ಅಸಾಧ್ಯವಾದರೆ ಯುದ್ಧಮಾಡುತ್ತಾ ಸಾಯುವುದೂ ವೀರಯೋಧನ ಧರ್ಮ. ಗೆಲ್ಲುವುದಕ್ಕೂ ಆಗದೆ, ಸಾಯುವುದಕ್ಕೂ ಮನಸ್ಸಿಲ್ಲದೆ ಹಿಂಜರಿದರೆ ಅಂಥವನನ್ನು ಕೀರ್ತ್ಯಂಗನೆಯು ಬಿಟ್ಟು ಹೋಗದಿರುವಳೇ?

ಇಲ್ಲಿ ಸಾಮಾನ್ಯ ಯೋಧನ ಧರ್ಮವು ಉಕ್ತವಾಗಿದ್ದರೂ ವಿಚಾರವನ್ನು ಅಶ್ವತ್ಥಾಮನ ಪರವಾಗಿಯೇ ಆಡಿದುದೆಂದು ಗ್ರಹಿಸಬೇಕು.

ಕರವಾಳಂ ಮಸೆವಂದದೆ
ಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂ
ಪೊರೆದೊಡೆ ಕೂರ್ಪಂ ತೋರ್ಪಂ
ತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್॥೨೩॥

ಕರವಾಳಂ = ಖಡ್ಗವನ್ನು ,ಮಸೆವಂದದೆ= ತಿಕ್ಕಿ ಹರಿತಮಾಡುವಂತೆ,ಮರವಾಳಂ=ಮರದ ಖಡ್ಗವನ್ನು,ಮಸೆಯೆ=ಹರಿತ ಮಾಡಿದರೆ , ಕೂರಿತು ಅಕ್ಕುಮೆ= ಹರಿತವಾಗುತ್ತದೆಯೇ? ಕಲಿಯಂ ಪೊರೆದೊಡೆ= ವೀರನನ್ನು ಪೋಷಿಸಿದರೆ, ಪತಿಗೆ= ಒಡೆಯನಿಗೆ, ಸಂಗರದೆಡೆಯೊಳ್= ಯುದ್ಧದಲ್ಲಿ, ಕೂರ್ಪಂ ತೋರ್ಪಂತಿರೆ= ಶೌರ್ಯವನ್ನು ತೋರಿಸುವ ಹಾಗೆ, ಪಂದೆ= ಹೇಡಿಯು, ತೋರ್ಕುಮೆ= ತೋರಿಸುವನೇ?

ತಾತ್ಪರ್ಯ :- ಉಕ್ಕಿನಿಂದ ಮಾಡಿದ ಖಡ್ಗವನ್ನು ಮಸೆಯುವ ಹಾಗೆ ಮರದಿಂದ ಮಾಡಿದ ಖಡ್ಗವನ್ನು ಮಸೆದರೂ ಅದು ಹರಿತವಾಗುತ್ತದೆಯೇ? ಉಕ್ಕಿನ ಖಡ್ಗವನ್ನು ಮಸೆದಷ್ಟೂ ಅದರ ತೀಕ್ಷ್ಣತೆಯು ಹೆಚ್ಚುತ್ತಾ ಹೋಗುತ್ತದೆ. ಮರದ ಖಡ್ಗವನ್ನು ಮಸೆಯುತ್ತಾ ಹೋದರೆ ಅದು ಹರಿತವಾಗುವುದರ ಬದಲು ಸವೆಯುತ್ತಾ ಹೋಗಿ ಕೊನೆಗೆ ಖಡ್ಗವೇ ಇಲ್ಲದಾಗುತ್ತದೆ. ಸ್ವಭಾವತಃ ಶೂರನಾದವನನ್ನು ಸಾಕಿ ಸಲಹಿದರೆ ಅವನು ಒಡೆಯನಿಗೆ ಯುದ್ಧರಂಗದಲ್ಲಿ ತನ್ನ ಪರಾಕ್ರಮವನ್ನು ಪ್ರದರ್ಶಿಸುವುದರೊಂದಿಗೆ ಸ್ವಾಮಿಭಕ್ತಿಯನ್ನೂ ತೋರ್ಪಡಿಸುತ್ತಾನೆ. ಹೇಡಿಯನ್ನು ಸಲಹಿದರೆ ಅವನು ಶೂರನಂತೆ ವರ್ತಿಸಲು ಸಾಧ್ಯವೇ? ಹೇಡಿಯು ಯುದ್ಧರಂಗದಲ್ಲಿಪಲಾಯನ ಮಾಡುವನೇ ಹೊರತು ಶತ್ರುವನ್ನು ಪ್ರತಿಭಟಿಸುವನೇ? ( ಈ ವಾಗ್ಬಾಣವು ಅಶ್ವತ್ಥಾಮನಿಗೆ ಗುರಿಯಿಟ್ಟದ್ದು)

“ ಅಶ್ವತ್ಥಾಮನು ನಿಜಕ್ಕೂ ಹೇಡಿಯೇ? ಇವನನ್ನು ಸಾಕಿಸಲಹಿದ್ದು ನಿಷ್ಫಲವಾಯಿತು. ಅಶ್ವತ್ಥಾಮನು ಮರದ ಬಾಳಿನಂತೆಯೇ ಸರಿ. ಎಂಬುದು ದುರ್ಯೋಧನನ ನಿರ್ಧಾರ.

ತುಱುಗೋಳೊಳ್ ಪೆಣ್ಬುಯ್ಯಲೊ
ಳಱಿವೆಸದೊಳ್ ನಂಟನೆಡಱೊಳೂರೞಿವಿನೊಳಂ
ತಱಿಸಂದು ಗಂಡುತನಮನೆ
ನೆಱಪದವಂ ಗಂಡನಲ್ಲನೆಂತುಂ ಷಂಡಂ॥೨೪॥

ತುಱುಗೋಳೊಳ್= ಗೋಗ್ರಹಣದಲ್ಲಿ, ಪೆಣ್ಬುಯ್ಯಲೊಳ್= ಸ್ತ್ರೀಯರು ಮೊರೆಯಿಡುತ್ತಿರುವಲ್ಲಿ , ಅಱಿವೆಸದೊಳ್=ಜ್ಞಾನಾರ್ಜನೆಯಲ್ಲಿ, ನಂಟನ= ಬಂಧುವಿನ, ಎಡಱೊಳ್ = ಸಂಕಷ್ಟದಲ್ಲಿ, ಊರ ಅೞಿವಿನೊಳ್= ಗ್ರಾಮದ ಹಾನಿಯಲ್ಲಿ, ತಱಿಸಂದು=ನೀಶಾಚಯಿಸಿ, ಗಂಡುತನಮನೆ= ಪೌರುಷವನ್ನು, ನೆಱಪದವಂ= ಸಂಪೂರ್ಣಗೊಳಿಸದವನು,ಗಂಡನಲ್ಲಂ= ಶೂರನಲ್ಲ.

ತಾತ್ಪರ್ಯ :- ಗೋವುಗಳನ್ನು ಬಂಧಿಸಿ ಕೊಂಡೊಯ್ಯುವಾಗ, ಹೆಂಗಸರು ಮೊರೆಯಿಡುವಾಗ, ವಿದ್ಯಾರ್ಜನೆಯನ್ನು ಮಾಡುತ್ತಿರುವಾಗ, ನಂಟನು ಸಂಕಟದಲ್ಲಿರುವಾಗ, ಗ್ರಾಮವು ಹಾನಿಗೊಳಗಾದಾಗ ಈ ಸಂದರ್ಭಗಳಲ್ಲೆಲ್ಲ ವಿಚಲಿತನಾಗದೆ ಧೈರ್ಯದಿಂದ ಸ್ವಶಕ್ತಿಯನ್ನೆಲ್ಲ ಒಂದು ಗೂಡಿಸಿ ಉದ್ದೇಶಿಸಿದ ಕಾರ್ಯವನ್ನು ಪರಿಪೂರ್ಣಗೊಳಿಸದವನು , ಶೂರನಲ್ಲ. ಎಂತಿದ್ದರೂ ಅವನು ನಪುಂಸಕನೇ ಸರಿ.

ಈ ಪದ್ಯದಲ್ಲಿ ದುರ್ಯೋಧನನು ಸ್ವಾನುಭವವನ್ನೇ ಉದಾಹರಿಸಿದ್ದಾನೆಂದರೆ ತಪ್ಪಾಗದು. ಗೋಗ್ರಹಣವನ್ನು ಮಾಡಿಸಿ, ದ್ರೌಪದಿಯನ್ನು ಮೊರೆಯಿಡಿಸಿ, ಪಾಂಡವರನ್ನು ನವೆಯಿಸಿ, ಕುರುಕ್ಷೇತ್ರವನ್ನು ರಣಕ್ಷೇತ್ರವನ್ನಾಗಿಸಿ, ಅಪರಿಮಿತ ಜನಹಾನಿಯನ್ನಾಗಿಸಿ, ತನ್ನ ಶೌರ್ಯವನ್ನು ಪ್ರದರ್ಶಿಸಿದವನಲ್ಲವೇ ದುರ್ಯೋಧನ ! ಇವನಂತಹ ಗಂಡರು ಬೇರೆ ಯಾರಿದ್ದಾರೆ ? ಯಾರೂ ಇಲ್ಲ!!

ವಿಚಾರ :- “ ಅಱಿವೆಸದೊಳ್ “ ಇಲ್ಲಿ ಹೆಚ್ಚಿನ ಮಟ್ಟಿಗೆ “ ಇಱಿವೆಸದೊಳ್ “ ಎಂದಿದ್ದಿರಬೇಕು. ( ಇಱಿಯುವ ಬೆಸ= ಯುದ್ಧ )

ನೆಗೞ್ದೇಕಾದಶರುದ್ರನಿದಿಪುರುಷಂ ದೇವಂ ಲಲಾಟೇಕ್ಷಣಂ
ನಗರಾಜಪ್ರಿಯನಂದನಾ ಪ್ರಿಯತಮಂ ದ್ರೋಣಂಗೆ ಕಾರ್ಯಾರ್ಥದಿಂ
ಮಗನಾದಂ ಸ್ಮರಘಸ್ಮರಂ ದಯೆಯಿನಶ್ವತ್ಥಾಮನೆಂದೆಂದೊಡಾ
ತ್ಮಗತಂ ಸತ್ತ್ವದಿನೇಂ ಪರೀಕ್ಷಿಪನೊ ಪಿಂಗಾಕ್ಷಂ ವಿರೂಪಾಕ್ಷನಂ॥೨೫॥

ಪದ್ಯ ೨೫ ರಿಂದ ೨೯ ರ ವರೆಗೆ ಸಂಜಯ ತನ್ನ ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಾನೆ.( ಸ್ವಗತ )

ಏಕಾದಶರುದ್ರಂ, ಆದಿಪುರುಷಂ, ದೇವಂ, ಲಲಾಟೇಕ್ಷಣಂ = ಹಣೆಗಣ್ಣನು, ನಗರಾಜಪ್ರಿಯನಂದನಾಪ್ರಿಯತಮಂ= ಹಿಮವಂತನ ಪ್ರೀತಿಯ ಮಗಳಾದ ಪಾರ್ವತಿಯ ಗಂಡ, ಸ್ಮರಘಸ್ಮರಂ=ಮನ್ಮಥನನ್ನು ನಾಶಪಡಿಸಿದವನು, ದಯೆಯಿಂ=ಕರುಣೆಯಿಂದ, ದ್ರೋಣಂಗೆ= ದ್ರೋಣನಿಗೆ, ಕಾರ್ಯಾರ್ಥದಿಂ= ಉದ್ದೇಶಪೂರ್ವಕವಾಗಿ, ಮಗನಾದಂ= ಮಗನಾದನು,ಇವನೇ, ಅಶ್ವತ್ಥಾಮನ್= ಅಶ್ವತ್ಥಾಮನು, ಎಂದೆಂದೊಡೆ= ಎಂದು ಲೋಕವೇ ಹೇಳುತ್ತಿರಲು ಪಿಂಗಾಕ್ಷಂ= ದುರ್ಯೋಧನನು, ಆತ್ಮಗತಸತ್ವದಿಂ= ತನ್ನಲ್ಲಿರುವ ಸತ್ವದಿಂದ, ವಿರೂಪಾಕ್ಷನಂ= ಅಶ್ತ್ಥಾಮರೂಪಿಯಾದ ವಿರೂಪಾಕ್ಷನನ್ನು, ಏಂ ಪರೀಕ್ಷಿಪನೋ = ಏನು ಪರೀಕ್ಷೆ ಮಾಡಬಲ್ಲನೋ ? !

ತಾತ್ಪರ್ಯ:- ಏಕಾದಶರುದ್ರ , ಆದಿಪುರುಷ ,ದೇವ , ಮುಕ್ಕಣ್ಣ, ಸ್ಮರಹರ, ಇತ್ಯಾದಿ ಹೆಸರುಗಳಿಂದ ಪ್ರಸಿದ್ಧನಾದ ವಿರೂಪಾಕ್ಷನೇ ಉದ್ದೇಶಪೂರ್ವಕವಾಗಿ ದ್ರೋಣನಿಗೆ ಮಗನಾಗಿ ಜನಿಸಿದನು. ಇವನೇ ಅಶ್ವತ್ಥಾಮನೆಂದು ಲೋಕವೇ ಹೇಳುತ್ತಿರಲು, ದುರ್ಯೋಧನನು ಆತ್ಮಸತ್ವದಿಂದ ರುದ್ರಾವತಾರನಾದ ಅಶ್ವತ್ಥಾಮನನ್ನು ಏನುಪರೀಕ್ಷೆ ಮಾಡಬಲ್ಲನು !
(ಅವಿವೇಕಿ)

ಅಶ್ವತ್ಥಾಮನನ್ನು ಕೆಣಕಿದರೆ ರುದ್ರನನ್ನು ಕೆಣಕಿದಂತೆಯೇ ಪರಿಣಾಮ ನೆಟ್ಟಗಾಗಲಿಕ್ಕಿಲ್ಲವೆಂಬ ಭಾವ.

ಪಗೆ ಚಿತ್ರಿಂಗದನುಯ್ಯಲ್
ಗಗನದೊಳುಱೆ ತನ್ನ ತಂದ ಬಾಂಧವಕೃತಮಂ
ಬಗೆಯದಹಿತಮನೆ ಬಗೆದಂ
ಪುಗದಿರ್ಕುಮೆ ಪೋಗಿ ಕೌರವಂ ರೌರವಮಂ॥೨೬॥

ಪಗೆ ಚಿತ್ರಾಂಗದನ್= ಶತ್ರುವಾದ ಚಿತ್ರಾಂಗದನೆಂಬ ಗಂಧರ್ವನು , ಗಗನದೊಳ್ ಉಱೆ ಉಯ್ಯಲ್= ಆಕಾಶಮಾರ್ಗದಲ್ಲಿ ವೇಗವಾಗಿ ಎಳೆದೊಯ್ಯುತ್ತಿರುವಾಗ, ತನ್ನ ತಂದ = ತನ್ನನ್ನು ಬಿಡಿಸಿ ತಂದ, ಬಾಂಧವ ಕೃತಮಂ= ಬಂಧು ಮಾಡಿದ ಉಪಕಾರವನ್ನು , ಬಗೆಯದೆ=ಭಾವಿಸದೆ, ಅಹಿತಮನೆ= ದ್ವೇಷವನ್ನೇ , ಬಗೆದಂ= ಎಣಿಸಿದನು. ( ಇಂತಹ ಕೃತಘ್ನನಾದ ) ಕೌರವನು, ರೌರವಮಂ= ಘೋರವಾದ ರೌರವವೆಂಬ ನರಕವನ್ನು ,ಪೋಗಿ ಪುಗದಿರ್ಕುಮೆ= ಹೋಗಿ ಪ್ರವೇಶಿಸದಿರುವನೇ?

ತಾತ್ಪರ್ಯ :- ಶತ್ರುವಾದ ಚಿತ್ರಾಂಗದನು ತನ್ನನ್ನು ಬಂಧಿಸಿ ಆಕಾಶದತ್ತ ಸೆಳೆದೊಯ್ಯುತ್ತಿದ್ದಾಗ ಅರ್ಜುನನು ಅವನೊಂದಿಗೆ ಹೋರಾಡಿ ಸೆರೆಯಿಂದ ಬಿಡಿಸಿ ತಂದನು. ಆ ಮಹೋಪಕಾರವನ್ನು ಸ್ಮರಿಸದೆ ಕೇವಲ ದ್ವೇಷವನ್ನೇ ಭಾವಿಸಿದ ಕೌರವನು ಭಯಂಕರವಾದ ರೌರವ ನರಕವನ್ನು ಹೋಗಿ ಸೇರದಿರುವನೇ ?

ಸಂಜಯನು ಆಗಲೇ ತೀರ್ಮಾನವನ್ನಿತ್ತಿದ್ದಾನೆ ಕೌರವನಿಗೆ ರೌರವ ನರಕವೇ ಗತಿಯೆಂದು.

ಕಾರ್ಯಸಖಂ ಶಕುನಿ ಗಡಾ
ಶೌರ್ಯಸಖಂ ಸೂತಜಂ ಗಡಾ ಭೀಷ್ಮ ಶರಾ
ಚಾರ್ಯರ ನುಡಿ ಕಯ್ಪೆ ಗಡಮ
ಕಾರ್ಯಂಗಹಿಕೇತನಂಗೆ ವಿಧಿವಿಳಸನದಿಂ॥೨೭॥

ಅಕಾರ್ಯಂಗೆ= ದುಷ್ಕರ್ಮಿಯಾದ, ಅಹಿಕೇತನಂಗೆ= ಸರ್ಪಧ್ವಜನಾದ ದುರ್ಯೋಧನನಿಗೆ, ಕಾರ್ಯಸಖಂ= ರಾಜಕಾರ್ಯದಲ್ಲಿ ಸಲಹೆಯನ್ನು ಕೊಡುವ ಮಿತ್ರನು, ಶಕುನಿ ಗಡಾ=ಶಕುನಿಯಲ್ಲವೇ ? ಶೌರ್ಯಸಖಂ=ಶೌರ್ಯವನ್ನು ಪ್ರದರ್ಶಿಸುವ ಯುದ್ಧಕಾರ್ಯದಲ್ಲಿ ಉಪದೇಶಕನು, ಸೂತಜಂ ಗಡಾ= ಸೂತಪುತ್ರನಾದ ಕರ್ಣನಲ್ಲವೇ? ಭೀಷ್ಮ ಶರಾಚಾರ್ಯರ ನುಡಿ= ಭೀಷ್ಮ ದ್ರೋಣರ ಹಿತೋಕ್ತಿ , ಕಯ್ಪೆ ಗಡ= ಕಹಿಯಲ್ಲವೇ ? ವಿಧಿವಿಲಸನದಿಂ= ವಿಧಿಯ ವಿಲಾಸದಿಂದಲೇ ಹೀಗಾಗಿರಬೇಕು.

ತಾತ್ಪರ್ಯ :- ದುಷ್ಕರ್ಮಿಯಾದ ದುರ್ಯೋಧನನಿಗೆ ರಾಜಕಾರ್ಯದಲ್ಲಿ ಸಲಹೆಯನ್ನು ಕೊಡುವ ಆಪ್ತನು ಶಕುನಿಯಲ್ಲವೇ! ಯುದ್ಧಕಾರ್ಯದಲ್ಲಿ ಸೂಕ್ತ ಆಲೋಚನೆಯನ್ನು ಹೇಳುವವನು ಸೂತಪುತ್ರನಾದ ಕರ್ಣನಲ್ಲವೇ ! ಮಭೀಷ್ಮ ದ್ರೋಣರ ಹಿತೋಕ್ತಿ ಈತನಿಗೆ ಕಹಿಯಲ್ಲವೇ ! ಇದು ವಿಧಿಯ ವಿಕಟ ವಿಲಾಸವಲ್ಲದೆ ಮತ್ತೇನು ?

“ ಅಕಾರ್ಯಂಗೆ ಅಹಿಕೇತನಂಗೆ “ ಇಲ್ಲಿ  ‘ಅಹಿಕೇತನಂಗೆ’ ಎಂಬ ಪದ ಭಾವಗರ್ಭಿತವಾಗಿದೆ.

ಗುರು ಕವಚಂ ಕರ್ಣಂ ಬಾ
ಹುರಕ್ಕೆ ಸುರಸಿಂಧುನಂದನಂ ಸೀಸಕಮಾ
ಗಿರೆ ಮೆಯ್ಗೆ ಮುಳಿಯಲಱಿಯದೆ
ಕುರುರಾಜನ ತೊಡೆಯನುಡಿವೆನೆಂದಂ ಭೀಮಂ॥೨೮॥

ಗುರು ಕವಚಂ=ದ್ರೋಣನೇ ಕವಚ, ಕರ್ಣಂ ಬಾಹುರಕ್ಕೆ=ಕರ್ಣನೇ ಭುಜರರಕ್ಷೆ, ಸುರಸಿಂಧುನಂದನಂ= ದೇವಗಂಗಾತ್ಮಜನಾದ ಭೀಷ್ಮನೇ, ಸೀಸಕಂ= ಶಿರಸ್ತ್ರಾಣ, ಆಗಿರೆ=ಆಗಿರಲು, ಮೆಯ್ಗೆ ಮುಳಿಯಲಱಿಯದೆ= (ಕೌರವನ) ದೇಹದಮೇಲೆಕೋಪವನ್ನು ತೋರಲು ತಿಳಿಯದೆ,ಭೀಮಂ ಕುರುರಾಜನ ತೊಡೆಯನ್ ಉಡಿವೆನೆಂದಂ= ಭೀಮನು ಕೌರವನ ತೊಡೆಗಳನ್ನು ಮುರಿಯುತ್ತೇನೆಂದು ಆಣೆಯಿಟ್ಟನು.

ತಾತ್ಪರ್ಯ :- ದ್ರೋಣ,ಕರ್ಣ,ಭೀಷ್ಮರು ಕೌರವನ ಕವಚ,ಭುಜರಕ್ಷೆ,ಶಿರಸ್ತ್ರಾಣವಾಗಿರಲು ಆತನ ದೇಹದ ಭಾಗಗಳಮೇಲೆ ತನ್ನ ಕೋಪವನ್ನು ತೀರಿಸಲು ತಿಳಿಯದೆ ಭೀಮನು ತೊಡೆಗಳನ್ನು ಮುರಿಯುತ್ತೇನೆಂದು ಪ್ರತಿಜ್ಞೆಮಾಡಿದನು.

ಭೀಷ್ಮ ,ದ್ರೋಣ , ಕರ್ಣರು ದುರ್ಯೋಧನನ ದೇಹರಕ್ಷಕರಂತಿರ್ದುದರಿಂದಲೇ ಭೀಮನು ನಿರುಪಾಯನಾಗಿ, ಯಾರ ರಕ್ಷಣೆಯೂ ಇಲ್ಲದ ಆತನ ತೊಡೆಗಳನ್ನು ಮುರಿಯುತ್ತೇನೆಂದು ಹೇಳಿದನು ಎಂಬುದಾಗಿ ಭೀಮಪ್ರತಿಜ್ಞೆಗೆ ಸಹೃದಯ ರಂಜಕವಾದ ಕಾರಣವನ್ನು ಕೊಟ್ಟಿದ್ದಾನೆ ಸಂಜಯ.

ಅಲಂಕಾರ :- ರೂಪಕ,ಕಾವ್ಯಲಿಂಗ.

ಧೃತರಾಷ್ಟ್ರಂ ದ್ರುಮಮಾದುದು
ಶತಶಾಖಂ ಪಂಚಶಾಖಮಾದುದು ಪಾಂಡು
ಕ್ಷಿತಿರುಹಮಕ್ಷಯಮಾಯ್ತಾ
ದ್ವಿತೀಯಮಾಯ್ತೇಕಶಾಖಮಿವನಿಂದಾದ್ಯಂ॥೨೯॥

ಧೃತರಾಷ್ಠ್ರಂ ದ್ರುಮಂ=ಧೃತರಾಷ್ಠ್ರನೆಂಬ ವೃಕ್ಷಕ್ಕೆ, ಶತಶಾಖಂ ಆದುದು= ನೂರು ಕೊಂಬೆಗಳಾದುವು, ಪಾಂಡುಕ್ಷಿತಿರುಹಂ= ಪಾಂಡುವೆಂಬವೃಕ್ಷಕ್ಕೆ , ಪಂಚಶಾಖಂ ಆದುದು= ಐದು ಕೊಂಬೆಗಳಾದುವು, ಆ ದ್ವಿತೀಯಂ= ಆ ಎರಡನೆಯದು, ಅಕ್ಷಯಮಾಯ್ತು= ಶಾಶ್ವತವಾಯ್ತು , ಆದ್ಯಂ= ಮೊದಲನೆಯದು, ಇವನಿಂದೆ= ಈ ದುರ್ಯೋಧನನಿಂದ, ಏಕ ಶಾಖಂ ಆಯ್ತು= ಒಂದೇ ಕೊಂಬೆಯುಳ್ಳದ್ದಾಯ್ತು.

ಅಲಂಕಾರ :- ರೂಪಕ.

ತೃತೀಯಾಶ್ವಾಸಂ  

ತೃತೀಯಾಶ್ವಾಸಂ  

ನೆಗೞ್ದಾಭಾರತಮಲ್ಲ ಶಕ್ರಸುತ ಬಾಣಾಘಾತದಿಂ ಭೀಮಭೀ
ಮಗದಾದಂಡವಿಘಾತದಿಂ ಕುರುನೃಪಾನೀಕಂ ಪಡಲ್ವಟ್ಟು ಜೀ
ರಿಗೆಯೋಕ್ಕಲ್ಗೆಣೆಯಾಗಿ ಬಿೞ್ದಭಟರಿಂ ಬಿೞ್ದಶ್ವದಿಂ ಬಿೞ್ದದಂ
ತಿಗಳಿಂದಂ ಜವನುಂಡು ಕಾಱಿದವೊಲಾಯ್ತೆತ್ತಂ ಕುರುಕ್ಷೇತ್ರದೊಳ್॥೨॥

ನೆಗೞ್ದ= ಪ್ರಸಿದ್ಧವಾದ, ಆ ಭಾರತಮಲ್ಲ=ಆ ಭಾರತಯುದ್ಧದಲ್ಲಿ ವೀರನೆನಿಸಿದ,ಶಕ್ರಸುತ= ದೇವೇಂದ್ರಕುಮಾರನಾದ ಅರ್ಜುನನ, ಬಾಣಾಘಾತದಿಂ= ಬಾಣಗಳ ಹೊಡೆತದಿಂದಲೂ, ಭೀಮ=ಭೀಮನ, ಭೀಮಗದಾದಂಡ= ಭಯಂಕರವಾದ ಗದಾಯುಧದ, ವಿಘಾತದಿಂ= ವಿಶೇಷವಾದ ಹೊಡೆತದಿಂದಲೂ, ಕುರುನೃಪಾನೀಕಂ= ಕುರುರಾಜನಾದ ದುರ್ಯೋಧನನ ಸೈನ್ಯವು, ಪಡಲ್ವಟ್ಟು=ನೆಲಸಮವಾಗಿ ಬಿದ್ದು, ಜೀರಿಗೆಯೊಕ್ಕಲ್ಗೆ= ಜೀರಿಗೆಯನ್ನು ಜಜ್ಜಿದುದಕ್ಕೆ,ಎಣೆಯಾಗಿ=ಸಮಾನವಾಗಿ, ಆ ಕುರುಕ್ಷೇತ್ರದೊಳೆತ್ತಂ= ಕುರುಕ್ಷೇತ್ರದಲ್ಲಿ ಎಲ್ಲೆಲ್ಲೂ, ಬಿೞ್ದ ಭಟರಿಂ= ಸತ್ತು ಬಿದ್ದ ಯೋಧರಿಂದಲೂ, ಬಿೞ್ದ ಅಶ್ವದಿಂ= ಕೆಡೆದ ಕುದುರೆಗಳಿಂದಲೂ, ಬಿೞ್ದದಂತಿಗಳಿಂ= ಸತ್ತ ಆನೆಗಳಿಂದಲೂ, ಜವನ್ = ಯಮನು, ಉಂಡು=ಊಟಮಾಡಿ, ಕಾಱಿದವೊಲ್= ವಾಂತಿಮಾಡಿದನೋ ಎಂಬಂತೆ ಆಯಿತು.

ತಾತ್ಪರ್ಯ :- ಭಾರತಮಹಾಮಲ್ಲನೆಂದು ಪ್ರಸಿದ್ಧನಾದ, ಇಂದ್ರಸೂನುವಾದ ಪಾರ್ಥನ ಬಾಣಗಳ ಹೊಡೆತಗಳಿಂದಲೂ, ಭೀಮನ ಭೀಕರವಾದ ಗದಾದಂಡದ ಏಟಿನಿಂದಲೂ ದುರ್ಯೋಧನನ ಸೈನ್ಯವು ನಾಶವಾಗಿ ಜೀರಿಗೆಯನ್ನು ಅರೆದುದಕ್ಕೆ ಸಮಾನವಾಯಿತು. ಕುರುಕ್ಷೇತ್ರದಲ್ಲಿ ಎತ್ತೆತ್ತಲೂ ಸತ್ತುಬಿದ್ದ ಯೋಧರಿಂದಲೂ, ಕುದುರೆಗಳಿಂದಲೂ, ಆನೆಗಳಿಂದಲೂ ಯಮನು ಮಿತಿಮೀರಿ ಉಂಡು ಜೀರ್ಣಿಸಿಕೊಳ್ಳಲಾರದೆ ವಾಂತಿಮಾಡಿದನೋ ಎಂಬಂತಾಯಿತು.

ಈ ಪದ್ಯದಲ್ಲಿ “ ಜೀರಿಗಯೊಕ್ಕಲ್ಗೆಣೆಯಾಗಿ “ ಎಂಬಲ್ಲಿ ಉಪಮಾಲಂಕಾರವೂ, “ಜವನುಂಡು ಕಾಱಿದವೊಲ್ “ ಎಂಬಲ್ಲಿ ಉತ್ಪ್ರೇಕ್ಷಾಲಂಕಾರವೂ, ಬೀಭತ್ಸರಸವೂ ಇದೆ.ಯುದ್ಧದ ಭೀಕರ ಪರಿಣಾಮವನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾನೆ ಮಹಾಕವಿ ರನ್ನ.

ಅಲಂಕಾರ ;- ಉಪಮಾ, ಉತ್ಪ್ರೇಕ್ಷಾ
ರಸ :- ಬೀಭತ್ಸ .

ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನು
ರ್ಗುಣದಿಂದಂ ಬಿಡುವಲ್ಲಿ ನೂರು ಪಪಱಿವಾಗಳ್ ಸಾಸಿರಂ ವೈರಿಮಾ
ರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್
ಗಣನಾತೀತಮಿದೆಂದೊಡೇವೊಗೞ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥

ದೊಣೆಯಿಂದಂ= ಬತ್ತಳಿಕೆಯಿಂದ, ತೆಗೆವಾಗಳ್= ತೆಗೆಯುವಾಗ, ಒಂದು=ಒಂದು ಬಾಣ, ತುಡುವಾಗಳ್=ಬಿಲ್ಲಿಗೆ ಜೋಡಿಸುವಾಗ, ಪತ್ತು ಬಾಣಂ=ಹತ್ತು ಬಾಣಗಳು,ಧನುರ್ಗುಣದಿಂದಂ= ಬಿಲ್ಲಿನ ಹಗ್ಗದಿಂದ, ಬಿಡುವಲ್ಲಿ= ಬಿಡುವಾಗ,ನೂಱು=ನೂರು ಬಾಣಗಳು, ಪರಿವಾಗಳ್= ನೆಗೆಯುವಾಗ, ಸಾಸಿರಂ=ಸಾವಿರ ಬಾಣಗಳು, ವೈರಿ ಮಾರ್ಗಣಮಂ= ಶತ್ರುಗಳ ಬಾಣಗಳನ್ನು, ಛೇದಿಸುವಲ್ಲಿ=ತುಂಡರಿಸುವಾಗ, ಲಕ್ಕೆ= ಲಕ್ಷ ಬಾಣಗಳು, ನಡುವಾಗಳ್= ನಾಟುವಾಗ,ಕೋಟಿ= ಕೋಟಿಬಾಣಗಳು, ಸೇನಾಂಗದೊಳ್= ಸೈನಿಕರ ದೇಹಗಳಲ್ಲಿ, ಗಣನಾತೀತಂ ಇದು= ಅಸಂಖ್ಯಾತವಾದುದು ಇದು , ಎಂದೊಡೆ=ಎಂದಮೇಲೆ, ಪಾರ್ಥನಾ= ಅರ್ಜುನನ,ಬಿಲ್ಬಲ್ಮೆಯಂ=ಬಿಲ್ಲಿನ ಸಾಮರ್ಥ್ಯವನ್ನು ಏವೊಗೞ್ವುದೋ= ಏನೆಂದು ಹೊಗಳುವುದೋ ! ಎಷ್ಟು ಹೊಗಳಿದರೂ ಸಾಲದು ಎಂಬ ಭಾವ

ತಾತ್ಪರ್ಯ :- ಬತ್ತಳಿಕೆಯಿಂದ ತೆಗೆದ ಒಂದು ಬಾಣ ಬಿಲ್ಲಿಗೆ ಜೋಡಿಸುವಾಗ ಹತ್ತು ಬಾಣಗಳಾಗಿ, ಬಿಲ್ಲಿನಿಂದ ಬಿಡುವಾಗ ನೂರಾಗಿ , ವೈರಿಗಳ ಕಡೆಗೆ ಧಾವಿಸುವಾಗ ಸಾವಿರವಾಗಿ, ವೈರಿಗಳ ಬಾಣಗಳನ್ನು ಖಂಡಿಸುವಾಗ ಲಕ್ಷವಾಗಿ, ಶತ್ರುಗಳ ಎದೆಗೆ ನಾಟುವಾಗ ಕೋಟಿಯಾಗಿ ಪರಿಣಮಿಸಲು ಈ ಬಾಣಗಳು ಎಣಿಕೆಮೀರಿದಷ್ಟಾದುವು,ಎನ್ನುವಾಗ ಪಾರ್ಥನ ಬಿಲ್ವಿದ್ಯೆಯ ಸಾಮರ್ಥ್ಯವನ್ನು ಏನೆಂದು ಹೊಗಳುವುದು ?

ಅಲಂಕಾರ :ಅತಿಶಯೋಕ್ತಿ

ಕೆಲರಂ ನುಣ್ಣನೆ ನೊಣೆದಂ
ಕೆಲರಂ ಪಿಡಿದಡಸಿ ನುಂಗಿದಂ ಕುರುಕುಲರಂ
ಕೆಲರಂ ಸೌಳನೆ ಸೀಳ್ದಂ
ಕೆಲರಂ ಮಾರುತಿ ಜವಂಗೆ ಬಾಣಸುಗೆಯ್ದಂ॥೯॥

ಮಾರುತಿ=ಭೀಮನು, ಕುರುಕುಲರಂ= ಕುರುಸೇನೆಯಲ್ಲಿ, ಕೆಲರಂ= ಕೆಲವರನ್ನು , ನುಣ್ಣನೆ=ನಯವಾಗಿ, ನೊಣೆದಂ= ನುಂಗಿದನು, ಕೆಲರಂ=ಹಲವರನ್ನು, ಪಿಡಿದು ಅಡಸಿ= ಮೇಲೆ ಬಿದ್ದುಹಿಡಿದು, ನುಂಗಿದಂ=ತಿಂದನು,ಕೆಲರಂ ಸೌಳನೆ ಸೀಳ್ದು= ಕೆಲವರನ್ನು ಸೌಳನೆ ಸೀಳಿಹಾಕಿದನು. ಕೆಲರಂ ಜವಂಗೆ ಬಾಣಸುಗೆಯ್ದಂ= ಕೆಲವರನ್ನು ಯಮನಿಗೆ ಅಡುಗೆ ಮಾಡಿದನು,

ನೊಣೆ,ನುಂಗು,ಸೀಳ್,ಜವಂಗೆ ಬಾಣಸುಗೆಯ್ ಎಂಬಿವು “ಕೊಲ್” ಎಂಬುದರ ಪರ್ಯಾ ಪದಗಳು.

ತಾತ್ಪರ್ಯ :- ಭೀಮನು ಕುರುಸೈನ್ಯದಲ್ಲಿ ಕೆಲವರನ್ನು ಸದ್ದಿಲ್ಲದೆ ಕೊಂದನು. ಕೆಲವರನ್ನು ಬಲಾತ್ಕಾರದಿಂದ ಹಿಡಿದು ಕೊಂದನು. ಕೆಲವರನ್ನು ಸೌಳನೆ ಸೀಳಿಹಾಕಿದನು. ಕೆಲವರನ್ನು ಯಮನಿಗೆ ಅಡುಗೆಮಾಡಿದನು.

ಇಲ್ಲಿ ಭೀಮನು ಯಮನಿಗೆ ಅಡುಗೆ ಮಾಡಿದನೆಂಬುದರಲ್ಲಿ ತುಂಬಾ ಔಚಿತ್ಯವಿದೆ. ವಿರಾಟರಾಜನಲ್ಲಿ ಅಡುಗೆ ಮಾಡಿ ಪಳಗಿದವನಲ್ಲವೇ ಭೀಮ.

ಅಲಂಕಾರ : ಯಮಕ

ಕೆಲರಂ ಕುಱುದಱಿದಱಿದಂ
ಕೆಲಂಬರಂ ಸಂಧಿಸಂಧಿಯಂ ಪಱಿಯೆಚ್ಚಂ
ಕೆಲರಂ ದೆಸೆವಲಿಗೆಯ್ದಂ
ಕೆಲರಂ ಭುಜಬಲದಿನಱೆದು ಶಿಲೆಯೊಳ್ ಪೊಯ್ದಂ॥೧೦||

ಕುಱುದಱಿದಱಿದಂ= ಸಣ್ಣಗೆ ಕಡಿಕಡಿದು ಹಾಕಿದನು, ( ಕುಱು ತಱಿ ತಱಿದಂ=ಕುರಿಯನ್ನು ಕೊಚ್ಚುವಂತೆ ಕತ್ತರಿಸಿದನು)
ಸಂಧಿಸಂಧಿಯಂ=ಸಂದುಸಂದುಗಳನ್ನು, ಪಱಿಯೆಚ್ಚನ್= ತುಂಡಾಗಿ ಬೀಳುವಂತೆ ಬಾಣಪ್ರಯೋಗವನ್ನು ಮಾಡಿದನು, ದೆಸೆವಲಿ=ದಿಗ್ಭಲಿ,ಗೆಯ್ದಂ= ಮಾಡಿದನು,ಭುಜಬಲದಿನ್= ಭುಜಶಕ್ತಿಯಿಂದ, ಅಱಿದು= ತಿಕ್ಕಿ, ಶಿಲೆಯೊಳ್= ಶಿಲೆಯಲ್ಲಿ, ಪೊಯ್ದನ್= ಅಪ್ಪಳಿಸಿದನು.

ತಾತ್ಪರ್ಯ : ಸೈನಿಕರಲ್ಲಿ ಕೆಲವರನ್ನು ತುಂಡುತುಂಡಾಗಿ ಕತ್ತರಿಸಿ ಹಾಕಿದನು ಅಥವಾ ಕುರಿಗಳನ್ನು ಕೊಚ್ಚುವಂತೆ ಕೊಚ್ಚಿದನು. ಕೆಲವರ ಸಂದು ಸಂದುಗಳು ಹರಿದು ಹೋಗುವಂತೆ ಬಾಣಗಳನ್ನು ಬಿಟ್ಟನು. ಕೆಲವರನ್ನು ದಿಕ್ಕು ದಿಕ್ಕಿಗೆ ಬಲಿಹಾಕಿದನು. ಕೆಲವರನ್ನು ಬಾಹುಬಲದಿಂದ ತಿಕ್ಕಿ ಶಿಲೆಗೆ ಅಪ್ಪಳಿಸಿದನು.

ಬಡಿಗೊಂಡು ಗೋಣಿಪಣ್ಣಂ
ಬಡಿವಂತಿರೆ ಪವನಸೂನು ಪೆಂಕುಳಿನಾಯಂ
ಬಡಿವಂತಿರೆ ಪಾೞುಡುವಂ
ಬಡಿವಂತಿರೆ ಬಡಿದನನಿಬರಂ ಕೌರವರಂ॥೧೧॥

ಬಡಿಯಂಗೊಂಡು=ಬಡಿಗೆಯನ್ನು ಹಿಡಿದು, ಗೋಣಿಪಣ್ಣಂ= ಆಲದ ಹಣ್ಣುಗಳನ್ನು, ಬಡಿವಂತಿರೆ= ಹೊಡೆದು ಉರುಳಿಸುವಂತೆ, ಪೆಂಕುಳಿನಾಯಂ= ಹುಚ್ಚು ನಾಯಿಯನ್ನು, ಬಡಿವಂತಿರೆ=ಹೊಡೆಯುವಂತೆ, ಪಾೞುಡುವಂ= ಕೆಟ್ಟ ಉಡುವನ್ನು, ಬಡಿವಂತಿರೆ= ಹೊಡೆಯುವಹಾಗೆ, ಪವನಸೂನು= ವಾಯುಪುತ್ರನು, ಅನಿಬರಂ ಕೌರವರಂ=ಅಷ್ಟು ಮಂದಿ ಕೌರವರನ್ನು , ಬಡಿಗೊಂಡು= ಗದೆಗೊಂಡು,ಬಡಿದಂ=ಹೊಡೆದು ಕೊಂದನು.

ತಾತ್ಪರ್ಯ : ಬಡಿಗೆಯಿಂದ ಹೊಡೆದು ಗೋಳಿಮರದ ಹಣ್ಣುಗಳನ್ನು ಉರುಳಿಸುವಂತೆ , ಹುಚ್ಚು ನಾಯಿಯನ್ನು ಹೊಡೆಯುವಂತೆ, ಕೆಟ್ಟ ಉಡುವನ್ನು ಕೆಡಹುವಂತೆ,ಭೀಮನು ಅಷ್ಟೊಂದು ಮಂದಿ ಕೌರವರನ್ನು ಗದೆಯಿಂದ ಹೊಡೆದಿಕ್ಕಿದನು.

ಅಲಂಕಾರ : ಮಾಲೋಪಮೆ, ಯಮಕ.

ಇಲ್ಲಿ ಕೊಟ್ಟಿರುವ ಉಪಮೆ ಹೀನೋಪಮೆ ಎಂಬ ಅಭಿಪ್ರಾಯವಿದೆ. ಆದರೆ ಭೀಮನ ದೃಷ್ಟಿಕೋನದಿಂದ ನೋಡಿದರೆ ಇದು ಹೀನೋಪಮೆಯಾಗಲಾರದು. ಹುಚ್ಚು ನಾಯಿ, ಕೆಟ್ಟ ಉಡು ಲೋಕಕ್ಕೆ ಕಂಟಕಪ್ರಾಯ. ಅದರಂತೆ ಕೌರವರೂ ಆಗಿದ್ದಾರೆ ಭೀಮನ ಪಾಲಿಗೆ. ( ಉಡು ಒಂದು ಕೆಟ್ಟ ಪ್ರಾಣಿಯೆಂದು ನಂಬಿಕೆ. ಇದು ಹೊಕ್ಕ ಮನೆಯು ನಾಶವಾಗುತ್ತದಂತೆ.)

ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾ
ಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂ
ಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದದಾ ಮೃಷಾಪಾತಕಂ
ಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ॥೨೩॥

ಸಂಜಯನು ಸುದೀರ್ಘವಾಗಿ ಮಾಡಿದ ಪಾಂಡವ ಪ್ರಶಂಸೆಯನ್ನು ಸಹಿಸಲಾರದೆ ಒಳಗೊಳಗೇ ಕುದಿಯುತ್ತಿದ್ದ ದುರ್ಯೋಧನನ ಆಕ್ರೋಶವು ಒಮ್ಮೆಗೇ ಸ್ಫೋಟಗೊಳ್ಳುತ್ತದೆ. ಇಲ್ಲಿಂದ ಮುಂದೆ ಸಂಜಯನ ಮಾತುಗಳನ್ನು ನೇರವಾಗಿ ಖಂಡಿಸುತ್ತಾನೆ.

ಸ್ಥಿರಸತ್ಯವ್ರತಿ= ಸ್ಥಿರವಾದ ಸತ್ಯವ್ರತವುಳ್ಳವನು, ಧರ್ಮರುಚಿ= ಧರ್ಮಾಸಕ್ತನು, ಧರ್ಮಪುತ್ರಂ= ಯಮಧರ್ಮನ ಮಗನು, ದಯಾಪರನ್= ಅನುಕಂಪೆಯುಳ್ಳವನು,ಎಂದು=ಎಂಬುದಾಗಿ, ಎಲ್ಲರ ಪೇೞ್ದ ಮಾತು=ಎಲ್ಲರೂ ಹೇಳಿದ ಮಾತು, ಈ ಕಾರ್ಮುಕಾಚಾರ್ಯನಂ= ಈ ಬಿಲ್ಲೋಜನನ್ನು,ಗುರುವಂ=ಗುರುವನ್ನು,ಬ್ರಾಹ್ಮಣನಂ= ಬ್ರಾಹ್ಮಣನನ್ನು,ತೊದಳ್ನುಡಿದು=ಸುಳ್ಳಾಡಿ,ಕೊಂದಂದು=ಕೊಂದದಿನವೇ,ಪುಸಿಯಾಯ್ತು=ಸುಳ್ಳಾಯಿತು,ಮೃಷಾಪಾತಕಂ=ಸುಳ್ಳಾಡಿದುದರಿಂದ ಬರುವ ದೋಷವು,ಪರಂ=ಅಮೋಘವಾದುದು,ಎಂಬೀನುಡಿಯಿಂ=ಎಂಬ ಈ ಹೇಳಿಕೆಯಂತೆ,ಪೃಥಾಪ್ರಿಯಸುತಂ=ಕುಂತಿಯ ಔರಸಪುತ್ರನಾದ ಧರ್ಮರಾಯನು,ಪಾಪಕ್ಕೆ=ದೋಷಕ್ಕೆ,ಪಕ್ಕಾಗನೇ=ಒಳಗಾಗುವುದಿಲ್ಲವೇ ?

ತಾತ್ಪರ್ಯ : ಸ್ಥಿರವಾದ ಸತ್ಯವ್ರತವುಳ್ಳವನು, ಧರ್ಮಾನುರಾಗವುಳ್ಳವನು,ಧರ್ಮತನಯನು,ದಯಾಪರನು ಎಂಬಿತ್ಯಾದಿಯಾಗಿ ಎಲ್ಲರೂ ಕೊಂಡಾಡುತ್ತಿದ್ದ ಮಾತು,ಬಿಲ್ಲೋಜನಾದ ಗುರುವನ್ನು ಅದರಲ್ಲಿಯೂ ಬ್ರಾಹ್ಮಣನನ್ನು ಹುಸಿದು ಕೊಂದಂದಿನಿಂದ ಸುಳ್ಳಾಯಿತು.  “ ಸುಳ್ಳಾಡಿದುದರಿಂದಬರುವ ದೋಷವು ಅನಂತ “ ಎಂಬ ಉಕ್ತಿಯಂತೆ ಕುಂತಿಯ ಚೊಚ್ಚಲ ಕಂದನಾದ ಧರ್ಮರಾಯನು ಪಾಪಕ್ಕೆ ಒಳಗಾಗುವುದಿಲ್ಲವೇ ?

ದ್ರೋಣನನ್ನು ಹುಸಿದು ಕೊಂದುದರಿಂದ ಸತ್ಯವ್ರತಕ್ಕೆ ಭಂಗ; ಅಧರ್ಮದಿಂದ ಕೊಂದುದರಿಂದ ಧರ್ಮರುಚಿ ಕೆಟ್ಟಿತು. ಧರ್ಮತನಯನು ಅಧರ್ಮಿಯಾದನು;ದಯಾಪರನು ಕ್ರೂರಿಯಾದನು. ಪಾತಕವು ಒಂದೇ ಎರಡೇ? ಗುರು ಹತ್ಯೆ, ಬ್ರಹ್ಮ ಹತ್ಯೆ, ಸತ್ಯವ್ರತಭಂಗ,ಇತ್ಯಾದಿ ಪಾಪಗಳ ಹೊರೆಯನ್ನೇ ಹೊತ್ತಿಲ್ಲವೇ ನಿನ್ನ ನೆಚ್ಚಿನ ಧರ್ಮರಾಯನು ಎಂದು ಮೂದಲಿಸುತ್ತಾನೆ ದುರ್ಯೋಧನ !

ತನಗೆ ಹತೋಶ್ವತ್ಥಾಮೋ
ಯೆನಲಕ್ಕು‌ಮೆ ಯಮಪುರಕ್ಕೆ ಗುರು ಪೋಪೆಡೆಯೊಳ್
ಘನಕುಂಜರ ಎಂದೆಂಗುಮೇ
ಜನರಂಜನೆಗಱಿಯಲಾದುದಿಲ್ಲಱಮಗನಂ||೨೪||

ತನಗೆ=ತಾನು,ಹತೋಶ್ವತ್ಥಾಮೋ= ಅಶ್ವತ್ಥಾಮನು ಹತನಾದನು, ( ಎಂದು) ಎನಲಕ್ಕುಮೇ= ಹೇಳಬಹುದೇ? ಗುರು=ದ್ರೋಣನು, ಯಮಪುರಕ್ಕೆ= ಯಮನ ನಗರಕ್ಕೆ, ಪೋಪೆಡೆಯೊಳ್ = ಹೋಗುತ್ತಿರುವಾಗ,ಜನರಂಜನೆಗೆ= ಜನರನ್ನು ಸಂತೋಷಪಡಿಸುವುದಕ್ಕೆ, ಘನಕುಂಜರ= ದೊಡ್ಡ ಆನೆ, ಎಂದೆಂಗುಮೆ= ( ಎಂದು ಎಂಗುಮೆ ) ಎಂದ ಹೇಳುವುದೇ ? ಅಱಮಗನಂ= ಧರ್ಮಪುತ್ರನನ್ನು, ಅಱಿಯಲ್=ತಿಳಿಯಲು, ( ಅರ್ಥಮಾಡಿಕೊಳ್ಳಲು ) ಆದುದಿಲ್ಲ=ಸಾಧ್ಯವಾಗಿಲ್ಲ.

ತಾತ್ಪರ್ಯ : ಧರ್ಮರಾಯನು, ಅಶ್ವತ್ಥಾಮನು ಹತನಾದನು ಎನ್ನಬಹುದೇ ? ಇದರ ಸತ್ಯಾಸತ್ಯತೆಯನ್ನು ತಿಳಿಯುವುದಕ್ಕೆಂದು ದ್ರೋಣನು ಯಮಪುರಕ್ಕೆ ಹೊರಟುಹೋದಮೇಲೆ “ ದೊಡ್ಡ ಆನೆ “ ಎಂದು ಹೇಳುವುದೇ ? ಈ ಮಾತು ಕೇವಲ ಜನರನ್ನು ರಂಜಿಸುವುದಕ್ಕಲ್ಲವೇ ? ಸಂಜಯಾ ! ನೀನಿನ್ನೂ ಧರ್ಮರಾಯನನ್ನು ಚೆನ್ನಾಗಿ ಅರ್ಥಮಾಡಿಕೊಂಡಿಲ್ಲ.

ಈ ದೊರೆಯಱಮಗನುಂ ಮೃಷ
ವಾದಂ ನೋಡೆಂದು ಧರ್ಮನಂ ಮೂದಲಿಸಲ್
ಪೋದಂ ಪುತ್ರನಱಸಲ್
ಪೋದನೆ ಯಮಪುರಕೆ ಮುಕ್ಥಬಾಣಂ ದ್ರೋಣಂ॥೨೫॥

ಈ ದೊರೆಯ= ಇಂತಹ ಯೋಗಯತೆ ಯುಳ್ಳ, ಅಱಮಗನುಂ= ಧರ್ಮಪುತ್ರನೂ, ಮೃಷವಾದಂ= ಸುಳ್ಳುಗಾರನಾದನು, ನೋಡೆಂದು=ತಿಳಿದುಕೋ ಎಂಬುದಾಗಿ, ಧರ್ಮನಂ=ಯಮನನ್ನು, ಮೂದಲಿಸಲ್= ಮೂದಲಿಸುವುದಕ್ಕಾಗಿ,  ( (ನಿಂದಿಸುವುದಕ್ಕಾಗಿ )ಪೋದಂ=ಹೋದನಲ್ಲದೆ, ಮುಕ್ತಬಾಣಂ= ಶರವನ್ನು ತೊರೆದ, ದ್ರೋಣಂ= ದ್ರೋಣಾಚಾರ್ಯನು, ಯಮಪುರಕೆ= ಯಮನ ನಗರಕ್ಕೆ , ಪುತ್ರನನ್=ಮಗನನ್ನು, ಅಱಸಲ್= ಹುಡುಕುವುದಕ್ಕಾಗಿ,ಪೋದನೇ =ಹೋದನೇ

ತಾತ್ಪರ್ಯ :- ದ್ರೋಣಾಚಾರ್ಯನು ಶರಚಾಪಗಳನ್ನು ತೊರೆದು ಯಮನ ಪಟ್ಟಣಕ್ಕೆ ಮಗನನ್ನು ಹುಡುಕುವುದಕ್ಕಾಗಿ ಹೋದುದಲ್ಲ. ಮತ್ತೇಕೆಂದು ಕೇಳುವೆಯಾ? ಸತ್ಯವ್ರತಿ, ಧರ್ಮರುಚಿ, ದಯಾಪರ ಎಂದು ಎಲ್ಲರಿಂದ ಹೊಗಳಿಸಿಕೊಂಡಂತಹ ನಿನ್ನ ಮಗ ಧರ್ಮರಾಯನೂ ಸುಳ್ಳನ್ನಾಡಿ ಮಹಾಪಾತಕಿಯಾದನು ಎಂಬುದನ್ನು ಯಮನಿಗೆ ತಿಳಿಸಿ ಮೂದಲೆಸುವುದಕ್ಕಾಗಿಯೇ ಹೋದನು.

ಈ ವಾದ ದುರ್ಯೋಧನನ ನೂತನ ಸಂಶೋಧನೆ.

ಕಳಶಜನನಿಂತು ಕೊಲಿಸಿದ
ಖಳನೆ ಗಡಂ ಧರ್ಮನಂದನಂ ಕ್ರೂರದಿನಂ
ಗಳ ಪೆಸರಂ‌ ಮಱೆಯಿಸಿ ಮಂ
ಗಳವಾರಂ ಕಡ್ಡವಾರಮೆಂಬಂತೆ ವಲಂ॥೨೬॥

ಇಂತು=ಹೀಗೆ, ( ಮೋಸದಿಂದ ) ಕಳಶಜನಂ= ದ್ರೋಣನನ್ನು, ಕೊಲಿಸಿದ=ಕೊಲೆ ಮಾಡಿಸಿದ, ಧರ್ಮನಂದನಂ= ಧರ್ಮಪುತ್ರನು,ಖಳನೇ=ದುಷ್ಟನೇ, ಗಡಂ=ನಿಶ್ಚಯ, ಕ್ರೂರದಿನಂಗಳ= ಕೆಟ್ಟ ದಿನಗಳ, ಪೆಸರಂ ಮಱೆಯಿಸಿ=ಹೆಸರನ್ನು ಮರೆಮಾಡಿ, ಮಂಗಳವಾರಂ= ಮಂಗಳವಾರವು, ಕಡ್ಡವಾರಂ= ಕೆಟ್ಟವಾರ , ಎಂಬಂತೆವೊಲ್= ಎಂದು ಹೇಳುವಂತೆಯೇ ಸರಿ, ಕೆಟ್ಟವಾರವು=ಅಮಂಗಳವಾರ, ಅದನ್ನೇ ಮಂಗಳವಾರ ಎನ್ನುವುದಿಲ್ಲವೇ ?

ತಾತ್ಪರ್ಯ :- ಗುರುವಾದ ದ್ರೋಣಾಚಾರ್ಯನನ್ನು ಹೀಗೆ ವಂಚಿಸಿ ಕೊಲೆಗೈಸಿದ ಧರ್ಮರಾಜನು ನಿಜಕ್ಕೂ ದುಷ್ಟನೇ, ಅಧರ್ಮಿಯೇ ! ಇದನ್ನು ಸಮರ್ಥಿಸುವುದಕ್ಕೆ  ಒಂದು ದೃಷ್ಟಾಂತವನ್ನು ಕೊಡುತ್ತಾನೆ ದುರ್ಯೋಧನ. ಕೆಟ್ಟದಿನಗಳ ಹೆಸರುಗಳನ್ನು ಮರೆಮಾಡಿ ಅಮಂಗಳವಾರವನ್ನು ಮಂಗಳವಾರ ಎಂದು ಕರೆಯುವುದಿಲ್ಲವೇ? ಇದರಂತೆಯೇ ಧರ್ಮರಾಯನು ಕೂಡ.

ಮುಂದಿನ ಮೂರು ಪದ್ಯಗಳಲ್ಲಿ ಭೀಮನ ಗಂಡುಗಲಿತನವನ್ನು ಅಪಹಾಸ್ಯ ಮಾಡುತ್ತಾನೆ ದುರ್ಯೋಧನ.

ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾ
ಗನೆ ಭಗದತ್ತನಾನೆ ಬರಿಯೆಲ್ವುಡಿವನ್ನೆಗಮೊತ್ತೆ ಗಂಡನಾ
ಗನೆ ಕೊಲಲೊಲ್ಲದಂಗಪತಿ ಬಿಲ್ಲೊಳೆ ಕೊಂಡೆೞೆವಲ್ಲಿ ಗಂಡನಾ
ಗನೆ ಕುರುಬಾಲಸಂಹರಣ ಮಾತ್ರದೆ ಮಾರುತಿ ಗಂಡನಾದನೇ॥೨೭॥

ವನಿತೆಯ ಕೇಶಮಂ= ದ್ರೌಪದಿಯ ಸಿರಿಮುಡಿಯನ್ನು, ಸಭೆಯೊಳ್ = ತುಂಬಿದ ಸಭೆಯಲ್ಲಿ, ಎನ್ನನುಜಂ= ನನ್ನ ತಮ್ಮ ದುಶ್ಯಾಸನನು, ತೆಗೆವಲ್ಲಿ= ಸೆಳೆಯುತ್ತಿರುವಾಗ, ಗಂಡನಾಗನೆ= ಗಂಡನಾಗಲಿಲ್ಲ, ( ಪೌರುಷವನ್ನು ತೋರಿಸಲಿಲ್ಲ)ಭಗದತ್ತನ ಆನೆ= ಭಗದತ್ತನ ಸುಪ್ರತೀಕವು,ಬರಿಯೆಲ್ವು= ಪಕ್ಕೆಲುಬುಗಳು, ಉಡಿವನ್ನೆಗಂ= ಮುರಿಯುವಂತೆ, ಒತ್ತೆ= ಒತ್ತುತ್ತಿರಲು, ಗಂಡನಾಗನೆ= ಪರಾಕ್ರಮಿಯಾಗಲಿಲ್ಲ, ಕೊಲಲ್= ಕೊಲ್ಲಲು, ಒಲ್ಲದೆ= ಮನಸ್ಸಿಲ್ಲದೆ, ಅಂಗಪತಿ=ಕರ್ಣನು, ಬಿಲ್ಲೊಳೆ= ಬಿಲ್ಲಿನಲ್ಲಿ, ಕೊಂಡು= ಹಿಡಿದು, ಎೞೆವಲ್ಲಿ=ಎಳೆಯುತ್ತಿರುವಾಗ,ಗಂಡನಾಗನೆ=  ವೀರನಾಗಲಿಲ್ಲ, ಕುರುಬಾಲ ಸಂಹರಣ ಮಾತ್ರದೆ= ನನ್ನ ತಮ್ಮಂದಿರನ್ನು ಸಂಹರಿಸಿದ ಮಾತ್ರಕ್ಕೆ, ಮಾರುತಿ= ಭೀಮನು, ಗಂಡನಾದನೇ= ಮಹಾಶೂರನಾಗಿಬಿಟ್ಟನೇ? “ ಗಂಡನಾಗನೆ “ ಈ ಪದವನ್ನು ೧) ಅವಧಾರಣಾರ್ಥವಾಗಿಯೂ, ೨) ಪ್ರಶ್ನಾರ್ಥಕವಾಗಿಯೂ
೩) ವ್ಯಂಗಾರ್ಥವಾಗಿಯೂ, ಹೊಂದಿಸಬಹುದು  

೧) ಗಂಡನ್ ಆಗನ್ ಎ = ಗಂಡನಾಗಲೇ ಇಲ್ಲ . ( ೨ ) ಗಂಡನ್ ಆಗನೆ = ಗಂಡನಾಗಿರಲಿಲ್ಲವೇ ?  ( ೩ ) ಗಂಡನ್ ಆಗನೆ=
ಗಂಡನಾಗಲಿಲ್ಲವೇ !

ತಾತ್ಪರ್ಯ :- ತುಂಬಿದ ಸಭೆಯಲ್ಲಿ ನನ್ನ ತಮ್ಮ ದುಶ್ಯಾಸನನು ದ್ರೌಪದಿಯ ತುರುಬಿಗೆ ಕೈಯಿಕ್ಕಿ ಸೆಳೆಯುತ್ತಿರುವಾಗ ಗಂಡನಾಗಲಿಲ್ಲ. ಭಗದತ್ತನ ಸುಪ್ರತೀಕವೆಂಬ ಭಯಂಕರವಾದ ಆನೆಯು ತನ್ನ ಪಕ್ಕೆಲೈಬುಗಳು ಮುರಿಯುವಂತೆ ಒತ್ತಿ ಮೆಟ್ಟುತ್ತಿರುವಾಗ ಗಂಡನಾಗಲಿಲ್ಲ. ಕೊಲ್ಲುವುದಕ್ಕೆ ಮನಸ್ಸಿಲ್ಲದೆ ಕರ್ಣನು ತನ್ನ ಬಿಲ್ಲಿನಲ್ಲಿ ಹಿಡಿದು ಎಳೆಯುತ್ತಿರುವಾಗ ಗಂಡನಾಗಲಿಲ್ಲ .
ಬಾಲಕರಾದ ನನ್ನ ತಮ್ಮಂದಿರನ್ನು ಸಂಹರಿಸಿದ ಮಾತ್ರಕ್ಕೆ ಭೀಮನು ಗಂಡನಾಗಿಬಿಟ್ಟನೇ ? ಎಲ್ಲೆಲ್ಲ ತನ್ನ ಗಂಡನ್ನು ಪ್ರದರ್ಶಿಸಬೇಕಾಗಿತ್ತೋ ಅಲ್ಲೆಲ್ಲ ಷಂಡನಾಗಿದ್ದಾತನು ಕುರುಬಾಲಕರ ವಧಾ ಮಾತ್ರದಿಂದ ಗಂಡನಾದನೇ ? ಮಕ್ಕಳನ್ನು ಕೊಂದವನು ಗಂಡನೇ ? ಅಲ್ಲ. ಭಂಡನೇ ಸರಿ.

ಒಡವುಟ್ಟಿದರಂ ಕೊಂದವ
ರಡಗಂ ತಿಂದವರ ನೆತ್ತರಂ ಬೆಲಗಸೆಯೊಳ್
ಕುಡಿವೀ ನಿಸ್ತ್ರಿಂಶತೆಯಂ
ಹಿಡಿಂಬಿಯಂ ಪೊರ್ದಿ ಕಲ್ತನಾಗನೆ ಭೀಮಂ॥೨೮॥

ಒಡಹುಟ್ಟಿದರಂ= ಒಡನೆ ಪುಟ್ಟಿದರಂ = ಒಡಹುಟ್ಟಿದವರನ್ನು, ಕೊಂದು ಅವರ ಅಡಗಂ= ಅವರ ಮಾಂಸವನ್ನು , ತಿಂದು , ಅವರ ನೆತ್ತರಂ= ಅವರ ರಕ್ತವನ್ನು, ಬೆಲಗಸೆಯೊಳ್= ಬೊಗಸೆಯಲ್ಲಿ ( ಮೊಗೆದು ಮೊಗೆದು ) ಕುಡಿಯುವ, ಈ ನಿಸ್ತ್ರಿಂಶತೆಯಂ= ಈ ರಾಕ್ಷಸಕೃತ್ಯವನ್ನು , ಹಿಡಿಂಬಿಯಂ= ಹಿಡಿಂಬಿಯೆಂಬ ರಾಕ್ಷಸಿಯನ್ನು, ಪೊರ್ದಿ= ಸೇರಿ, ಭೀಮಂಕಲ್ತನಾಗನೆ= ಭೀಮನು ಕಲಿತಿರಬೇಕಲ್ಲವೇ?

ತಾತ್ಪರ್ಯ :- ಒಡಹುಟ್ಟಿದ ತಮ್ಮಂದಿರನ್ನು ಕೊಂದು ಅವರ ಮಾಂಸವನ್ನು ತಿಂದು, ಅವರ ರಕ್ತವನ್ನು ಬೊಗಸೆಯಲ್ಲಿ ಮೊಗೆಮೊಗೆದು ಕುಡಿಯುವ ಈ ರಾಕ್ಷಸ ಸ್ವಭಾವವನ್ನು ಭೀಮನು ಹಿಡಿಂಬೆಯ ಒಡನಾಟದಿಂದ ಕಲಿತಿರಬೇಕಲ್ಲವೇ ?

ಈ ಮಾತುಗಳನ್ನಾಡುತ್ತಿರುವಾಗ ದುಶ್ಯಾಸನನ ಅಮಾನುಷ ವಧಾದೃಶ್ಯವು ದುರ ಅಯೋಧನನ ಕಣ್ಣ ಮುಂದೆ ಸುಳಿದಿರಬೇಕು .
,,,
ಎನಗಾಜೂದಿನೊಳಗ್ರಜಾನುಜಸಮೇತಂ ಗಂಡುದೊೞ್ತಾಗಿ ಕಾ
ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ,
ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇ
ವನನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ॥೨೯॥

ಎನಗೆ ಆ ಜೂದಿನೊಳ್ = ನನಗೆ ಆ ಮಹತ್ವದ ದ್ಯೂತದಲ್ಲಿ , ಅಗ್ರಜಾನುಜಸಮೇತಂ= ಅಣ್ಣತಮ್ಮಂದಿರು ಸಹಿತನಾಗಿ, ಗಂಡುದೊೞ್ತಾಗಿ=ವೀರದಾಸನಾಗಿ, ಕಾನನದೊಳ್= ಕಾಡಿನಲ್ಲಿ, ವಲ್ಕಲಧಾರಿಯಾಗಿ= ನಾರುಡೆಯುಟ್ಟು, ಹರನೊಳ್=ಶಿವನಲ್ಲಿ, ದಿವ್ಯಾಸ್ತ್ರಮಂ ಬೇಡೆ= ಅಮೋಘಾಸ್ತ್ರಗಳನ್ನು ಯಾಚಿಸಲು, ಬೆಳ್ತನದಿಂ= ಭ್ರಾಂತಿಯಿಂದ,
( ತಿಳಿಗೇಡಿತನದಿಂದ) ತಾಪಸನಾಗಿ= ಸನ್ಯಾಸಿಯಾಗಿ, ಮತ್ಸ್ಯಾವಾಸದೊಳ್= ಮತ್ಸ್ಯದೇಶಾಧಿಪ ವಿರಾಟನ ಅರಮನೆಯಲ್ಲಿ, ಪೇಡಿಯೆನೆ= ಹೇಡಿಯಂತೆ, ( ನಪುಂಸಕನಂತೆ) ನಟನಾಗಿ= ನಾಟ್ಯ ಗುರುವಾಗಿ, ವಾಸುದೇವನ= ಕೃಷ್ಣನ, ನಂಟಂ= ಬಂಧುವಾದ, ಪೃಥಾನಂದನಂ= ಪಾರ್ಥನು, ಬಾರದ ಭವಂ ಬಂದಂ = ಬರಬಾರದ ಜನ್ಮವನ್ನು ಪಡೆದನು,

ತಾತ್ಪರ್ಯ :- ಸುಪ್ರಸಿದ್ಧ ( ಕುಪ್ರಸಿದ್ಧ ) ವಾದ ಆ ಜೂಜಾಟದಲ್ಲಿ ಅಣ್ಣತಮ್ಮಂದಿರು ಸಹಿತನಾಗಿ ಸೋತು, ವೀರನು ಸೇವಕನಾಗಿ, ಕಾಡಿನಲ್ಲಿ ನಾರುಬಟ್ಟೆಯುಟ್ಟು, ಶಿವನಿಂದ ದಿವ್ಯಾಸ್ತ್ರಗಳನ್ನು ಬೇಡುವುದಕ್ಕಾಗಿ ಮೂಢತೆಯಿಂದ ಸನ್ಯಾಸಿಯಾಗಿ, ಹೇಡಿಯಂತೆ ( ನಪುಂಸಕನಾಗಿ) ವಿರಾಟನ ಅರಮನೆಯಲ್ಲಿ ನಾಟ್ಯಾಚಾರ್ಯನಾಗಿ ವಾಸುದೇವನ ನಂಟನಾದ ಪಾರ್ಥನು ಪಡಬಾರದ ಪಾಡುಪಟ್ಟನು. ಇಲ್ಲಿ ಬಾರದ ಭವಬಂದಂ ಎಂದರೆ ಹುಟ್ಟುವಾಗ ಇಲ್ಲದೆ ಮತ್ತೆ ಬಂದ ಜನ್ಮ ಅರ್ಥಾತ್ ನಪುಂಸಕತ್ವ ಎಂದೂ ಆಗಬಹುದು.

ಈ ಪದ್ಯದಲ್ಲಿ ಅರ್ಜುನನ ದೈನ್ಯಾವಸ್ಥೆಯನ್ನು ಚಿತ್ರಿಸುತ್ತಾನೆ ದುರ್ಯೋಧನ.

ದೊರೆ ಯಮಪುತ್ರನಿರ್ದಿರವು ವಾಯುಜನಿರ್ದಿರವಗ್ನಿಪುತ್ರಿಯಿಎ
ರ್ದಿರವಮಳರ್ಕಳಿರ್ದಿರವು ಮತ್ಸ್ಯನಿವಾಸದೊಳೆಲ್ಲ‌ಮಂತೆ ಮೆ
ಯ್ಗರೆದಿರೆ ಗಂಡುಗೆಟ್ಟುಬಳೆದೊಟ್ಟು ಬೃಹನ್ನಳೆಯಾಗಿ ಪಾರ್ಥನಿ
ರ್ದಿರವುಮೆನಲ್ಕೆ ಪಾರ್ಥನದು ರಂಭೆಯ ಶಾಪಮೊ ತನ್ನ ಪಾಪಮೋ॥೩೦॥

ಮತ್ಸ್ಯಾವಾಸದೊಳ್= ವಿರಾಟರಾಜನ ಅರಮನೆಯಲ್ಲಿ, ದೊರೆ= ರಾಜನಾದ, ಯಮಪುತ್ರನ್= ಧರ್ಮಪುತ್ರನು, ಇರ್ದ ಇರವು= ಇದ್ದ ರೀತಿ, ವಾಯುಜಂ= ಭೀಮನು, ಅಗ್ನಿಪುತ್ರಿ= ದ್ರೌಪದಿ, ಯಮಳರ್ಕಳ್= ನಕುಲ ಸಹದೇವರು, ಇರ್ದ ಇರವು= ಇದ್ದ ಬಗೆ, ಎಲ್ಲಂ= ಎಲ್ಲವೂ, ಅಂತೆ= ಯಥಾಪ್ರಕಾರವಾಗಿ, ಮೆಯ್ಗರೆದಿರೆ= ಅಡಗಿರಲು, ಪಾರ್ಥನಿರ್ದಿರವು= ಅರ್ಜುನನಿದ್ದರೀತಿ, ಗಂಡುಗೆಟ್ಟು= ನಪುಂಸಕನಾಗಿ,ಬಳೆದೊಟ್ಟು= ಬಳೆಗಳನ್ನು ಧರಿಸಿ, ಎನಲ್ಕೆ= ಎಂದಲ್ಲಿ, ಅದು= ಆ ದುರವಸ್ಥೆಯು ಬಂದುದು, ರಂಭೆಯ= ಇಂದ್ರನ ನರ್ತನಸ್ತ್ರೀಯರಲ್ಲಿ ಒಬ್ಬಳಾದ ರಂಭೆಯ, ಶಾಪಮೊ= ಶಾಪದ ಫಲದಿಂದಲೋ, ತನ್ನ ಪಾಪಮೋ= ತನ್ನ ಪಾಪ ಕಾರ್ಯದ ಫಲದಿಂದಲೋ, ಯಾರಿಗೆ ಗೊತ್ತು ?

ತಾತ್ಪರ್ಯ :- ವಿರಾಟರಾಜನಲ್ಲಿ ಧರ್ಮರಾಯ, ಭೀಮ,ದ್ರೌಪದಿ,ನಕುಲಸಹದೇವರೆಲ್ಲರೂ ಯಾವ ದೈಹಿಕ ವ್ಯತ್ಯಾಸಗಳಿಲ್ಲದೆ ಸಹಜವಾಗಿ ಅಡಗಿಕೊಂಡಿದ್ದರೆ ಅರ್ಜುನನೊಬ್ಬನು ಪುರುಷತ್ವವನ್ನು ಕಳೆದುಕೊಂಡು ನಪುಂಸಕತ್ಫವವನ್ನು ಪಡಕೊಂಡು, ಬಳೆಗಳನ್ನು ತೊಟ್ಟುಕೊಂಡು ಅಡಗಿದ್ದನು ಎಂದಾಗ ಅದಕ್ಕೆ ಕಾರಣ ರಂಭೆಯ ಶಾಪವೋ ಅಥವಾ ತನ್ನ ಪಾಪವೋ? ವ್ಯಾಸಭಾರತದಂತೆ ಅರ್ಜುನನಿಗೆ ಶಾಪಕೊಟ್ಟವಳು ರಂಭೆಯಲ್ಲ, ಊರ್ವಶಿ.

ಗುರುವಂ ದ್ವಿಜನ್ಮನಂ ಸುತ
ವಿರಹಾಗ್ನಿಗ್ರಸ್ತನಂ ನಿರಾಯುಧನಂ ಸಂ
ಹರಿಸಿದ ಶಕ್ರಸುತಂಗಾ
ಗುರುವಧಮೆ ಯಶೋವಧಕ್ಕೆ ಕಾರಣಮಲ್ತೆ॥೩೧॥

ಗುರುವಂ= ತನಗೆ ಗುರುವಾದ ದ್ರೋಣಾಚಾರ್ಯನನ್ನು, ದ್ವಿಜನ್ಮನಂ= ಬ್ರಾಹ್ಮಣನನ್ನು, ಸುತವಿರಹಾಗ್ನಿಗ್ರಸ್ತನಂ= ಪುತ್ರಶೋಕವೆಂಬ ಅಗ್ನಿಯಿಂದ ಆವರಿಸಲ್ಪಟ್ಟವನನ್ನುನಿರಾಯುಧನಂ= ಆಯುಧವನ್ನು ಹಿಡಿಯದಿದ್ದವನನ್ನು , ಸಂಹರಿಸಿದ= ಕೊಂದಂತಹ, ಶಕ್ರಸುತಂಗೆ= ಅರ್ಜುನನಿಗೆ,ಆ ಗುರುವಧಮೆ= ಗುರುವನ್ನು ವಧಿಸಿದುದೇ, ಯಶೋವಧಕ್ಕೆ= ಕೀರ್ತಿಯ ನಾಶಕ್ಕೆ, ಕಾರಣಮಲ್ತೇ=ಕಾರಣಂ ಅಲ್ತೇ=ಕಾರಣವಲ್ಲವೇ ?

ತಾತ್ಪರ್ಯ :- ತನಗೆ ಧನುರ್ವಿದ್ಯೆಯನ್ನು ಕಲಿಸಿಕೊಟ್ಟ ಗುರುವನ್ನು, ಬ್ರಾಹ್ಮಣನನ್ನು, ಪುತ್ರಶೋಕಾಗ್ನಿಯಿಂದ ಬೇಯುತ್ತಿದ್ದವನನ್ನು, ಅದರಲ್ಲಿಯೂ ಆಯುಧವನ್ನು ಧರಿಸದಿದ್ದವನನ್ನು ವಧಿಸಿದಂತಹ ಅರ್ಜುನನಿಗೆ ಆ ಗುರುವಿನ ಕೊಲೆಯೇ ತನ್ನ ಕೀರ್ತಿಯ ಕೊಲೆಗೆ ಕಾರಣವಾಗಲಿಲ್ಲವೇ ?

ಅರ್ಜುನನಿಗೆ ಗುರುಹತ್ಯೆ, ಬ್ರಹ್ಮಹತ್ಯೆ, ನಿರಾಯುಧನ ಹತ್ಯೆ ಹೀಗೆ ಒಬ್ಬನ ವಧೆಯಿಂದ ತ್ರಿವಿಧ ಪಾಪಗಳು ಒಂದಾಗಿ ಆತನ ಕೀರ್ತಿಯನ್ನು ನಾಶಪಡಿಸಿತೆಂಬ ಭಾವ.

ಎನಗಿದಯುಕ್ತಮೆಂದಿರದೆ ಪೆರ್ಬುಸಿಯೊಳ್ ಪುದಿದಿರ್ದ ಧರ್ಮನಂ
ದನನನೆ ಧರ್ಮನಂದನನೆನಲ್ ದೊರೆ ದಿಗ್ಗಜಮೊತ್ತೆ ಬಿರ್ದು ಬಿ
ರ್ದಿನಿಸಗಿದಿರ್ದ ಭೀಮನನೆ ಭೀಮನೆನಲ್ ದೊರೆ ಪೇಡಿಯಾಗಿ ಮ
ತ್ಸ್ಯನ ಮನೆವೊಕ್ಕ ಪಾರ್ಥನನೆ ಪಾರ್ಥನೆನಲ್ ದೊರೆ ಗಂಡರೆಂಬರೇ॥೩೨॥

ಎನಗೆ ಇದು ಅಯುಕ್ತಂ ಎಂದು ಇರದೆ= ನನ್ನಂಥವನು ಸುಳ್ಳಾಡುವುದು ಯುಕ್ತವಲ್ಲವೆಂದು ಭಾವಿಸದೆ, ಪೆರ್ಬುಸಿಯೊಳ್= ದೊಡ್ಡ ಸುಳ್ಳಿನಿಂದ, ಪುದಿದಿರ್ದ=ಆವರಿಸಿದ್ದ, ಧರ್ಮನಂದನನ್= ಧರ್ಮಪುತ್ರನನ್ನು,ಅಧರ್ಮನಂದನನ್=ಅಧರ್ಮಪುತ್ರನು, ಎನಲ್ ದೊರೆ= ಎನ್ನುವುದೇ ಉಚಿತ, ದಿಗ್ಗಜಂ ಒತ್ತೆ= ಭಯಂಕರವಾದ ಆನೆ ಒದೆಯುಲು, ಬಿರ್ದು ಬಿರ್ದು= ಬಿದ್ದು ಬಿದ್ದು, ಇನಿಸು ಅಗಿದಿರ್ದ= ಇಷ್ಟೊಂದು ಹೆದರಿದ್ದ, ಭೀಮನನ್= ಭೀಮನನ್ನು, ಅಭೀಮನ್ ಎನಲು ದೊರೆ= ಹೇಡಿ ಎಂದರೆ ಚೆನ್ನು, ಪೇಡಿಯಾಗಿ= ನಪುಂಸಕನಾಗಿ, ಮತ್ಸ್ಯನ= ವಿರಾಟನ, ಮನೆವೊಕ್ಕ= ಮನೆಯನ್ನು ಹೊಕ್ಕ, ಪಾರ್ಥನನ್= ಅರ್ಜುನನನ್ನು, ಅಪಾರ್ಥನ್ ಎನಲ್ ದೊರೆ= ಅಪಾರ್ಥನೆಂದು ಕರೆಯುವುದೇ ಯೋಗ್ಯ, ( ಇಂಥವರನ್ನು ) ಗಂಡರ್ = ಶೂರರು, ಎಂಬರೇ= ಹೇಳುವರೇ ?

ತಾತ್ಪರ್ಯ :- ಸುಳ್ಳಾಡುವುದು ನನ್ನಂಥ ಸತ್ಯಸಂಧನಿಗೆ ಹೇಳಿದ ಕೆಲಸವಲ್ಲವೆಂದು ಬಗೆಯದೆ ಸುಳ್ಳಾಡಿದ ಆ ದೊಡ್ಡ ಸುಳ್ಳಿನಿಂದ ತುಂಬಿದ್ದ ಧರ್ಮಪುತ್ರನನ್ನು ಅಧರ್ಮಪುತ್ರನೆಂದು ಕರೆಯುವುದೇ ಉಚಿತ. ಭೀಕರವಾದ ಆನೆಯ ತುಳಿತಕ್ಕೆ ಸಿಕ್ಕಿಬಿದ್ದು ಇಷ್ಟೊಂದು ಅಂಜಿದ್ದ ಭೀಮನನ್ನು ಅಭೀಮನು ಎಂದರೆ ಉತ್ತಮ. ನಪುಂಸಕನಾಗಿ ವಿರಾಟನ ಅರಮನೆಯನ್ನು ಪ್ರವೇಶಿಸಿದ ಪಾರ್ಥನನ್ನು ಅಪಾರ್ಥನು ( ದರಿದ್ರನು ) ಎನ್ನುವುದೇ ಚೆನ್ನು. ಇಂಥವರನ್ನು ಯಾರಾದರೂ ಶೂರರು ಎಂದು ಕರೆಯುವರೇ ? ಈ ಮೂವರೂ ದುರ್ನಡತೆಯಿಂದ ತಮ್ಮ ಹೆಸರನ್ನೇ ಕೆಡಿಸಿಕೊಂಡರೆಂಬ ಭಾವ.

ಗುರುವಂ ಪ್ರೋ ಜ್ಝಿತಚಾಪನಂ ಪುಸಿದುಕೊಂದಾ ಭೀರಮಂ ಭೀಷ್ಮರಂ
ಶರಶಯ್ಯಾಗತರಂ ಕಱುತ್ತು ಗುಱಿಯೆಚ್ಚಾ ಪೊಚ್ಚಱಂ ಕರ್ಣನಂ
ವಿರಥಜ್ಯಾಯುಧನೆನ್ನದೆಚ್ಚು ತಲೆಗೊಂಡಾ ಶೌರ್ಯಮಂ ಪಾಂಡುಪು
ತ್ರರೆ ಬಲ್ಲರ್ ಮೆಱೆಯಲ್ಕೆ ಸಾಹಸಧನಂ ಧುರ್ಯೋಧನಂ ಬಲ್ಲನೇ॥೩೩॥

ಪ್ರೋಜ್ಜಿತಚಾಪನಂ= ಪ್ರ ಉಜ್ಜಿತ ಚಾಪನಂ = ಸಂಪೂರ್ಣವಾಗಿ ತೊರೆದ ಧನುಸ್ಸುಳ್ಳವನಾದ, ( ಬಿಲ್ಲನ್ನು ಬಿಸುಟ ) ಗುರುವಂ= ದ್ರೋಣಾಚಾರ್ಯನನ್ನು, ಪುಸಿದು = ಸುಳ್ಳಾಡಿ,ಕೊಂದ, ಆ ಭೀರಮಂ= ಆ ಪರಾಕ್ರಮವನ್ನು, ಶರಶಯ್ಯಾಗತರಂ=ಬಾಣಗಳ ಹಾಸುಗೆಯಲ್ಲಿ ಕೆಡೆದಿರುವವರಾದ, ಭೀಷ್ಮರಂ= ಭೀಷ್ಮ ಪಿತಾಮಹರನ್ನು, ಕಱುತ್ತು = ಸ್ಫೂರ್ತಿಯಿಂದ, ಗುರಿಯೆಚ್ಚ= ಗುರಿಯಿಟ್ಟು ಬಾಣಗಳನ್ನು ಎಸೆದ, ಪೊಚ್ಚರಂ= ಗರ್ವವನ್ನು, ಹೆಮ್ಮೆಯನ್ನು, (ಪೊಚ್ಚರು=ಗರ್ವ, ಹೆಮ್ಮೆ, ಜಂಭ ) ವಿರಥಜ್ಯಾಯುಧನ್= ರಥ ಬಿಲ್ಲು ಬಾಣಗಳಿಲ್ಲದಂಥವನು, ಎನ್ನದೆ= ಹೇಳದೆ, ಕರ್ಣನಂ= ಕರ್ಣನನ್ನು, ಎಚ್ಚು = ಬಾಣಗಳನ್ನು ಪ್ರಯೋಗಿಸಿ, ತಲೆಗೊಂಡ= ತಲೆಯಂ ಕೊಂಡ=ತಲೆಯನ್ನು ತೆಗೆದ,
( ತಲೆಯನ್ನು ಕತ್ತರಿಸಿದ) ಆ ಶೌರ್ಯಮಂ= ಅಂತಹ ಸಾಹಸವನ್ನು, ಮೆಱೆಯಲ್ಕೆ= ಪ್ರದರ್ಶಿಸುವುದಕ್ಕೆ, ಪಾಂಡುಪುತ್ರರೆ=
ಪಾಂಡವರೆ,ಬಲ್ಲರ್=ಸಮರ್ಥರು, ಸಾಹಸಧನಂ= ಸಾಹಸವೇ ಧನವಾಗಿರುವವನ, ದುರ್ಯೋಧನಂ= ದುರ್ಯೋಧನನು, ಬಲ್ಲನೇ= ಸಮರ್ಥನೆ ? ( ಅರಿತವನೇ ? ಅಲ್ಲ ) ಸಾಹಸಧನಂ, ಅಭಿಮಾನಧನಂ ಈ ವಿಶೇಷಣಗಳು ದುರ್ಯೋಧನನಿಗೆ
ಬಹುಪ್ರಿಯವಾದುವು.

ತಾತ್ಪರ್ಯ :- ಧನುರ್ಬಾಣಗಳನ್ನು ಬಿಸುಟ ದ್ರೋಣನನ್ನು ಸುಳ್ಳು ಹೇಳಿ ಕೊಂದ ಶೌರ್ಯ, ಶರಶಯನದಲ್ಲಿ ಕೆಡೆದಿದ್ದ ಭೀಷ್ಮರಮೇಲೆ ಬಾಣಗಳನ್ನು ಗುರಿಯಿಟ್ಟು ಹೊಡೆಯುವ ಎದೆಗಾರಿಕೆ, ರಥಧನುಸ್ಸುಗಳಿಲ್ಲದವನೆಂಬುದನ್ನೂ ಲೆಕ್ಕಿಸದೆ ಬಾಣಗಳನ್ನೆಸೆದು ಕರ್ಣನ ತಲೆಯನ್ನು ಕತ್ತರಿಸಿದ ಸಾಹಸ, ಇವೆಲ್ಲಾ ಪಾಂಡವರಿಗೇ ಗೊತ್ತು. ಸಾಹಸವೇ ಸರ್ವಸ್ವವೆಂದು ಭಾವಿಸುವ ದುರ್ಯೋಧನನಿಗೆ ಈ ವಿದ್ಯೆಯ ಅನುಭವವಿಲ್ಲ. ಇಂತಹ ಹೇಯ ಕಾರ್ಯವನ್ನು ಮಾಡುವಲ್ಲಿ ಅವನು ಅಸಮರ್ಥನೇ ಸರಿ.

ಇಲ್ಲಿ ಹೊಗಳಿಕೆ ತೆಗಳಿಕೆಯಾಗಿ ಪರಿಣಮಿಸಿದೆ.

ಅಲಂಕಾರ :- ವ್ಯಾಜಸ್ತುತಿ.

ಸೊಕಮಿರ್ಕಕ್ಕಟ ದರ್ಭಪಾಣಿ ಯಮಜಂ ದರ್ವೀಕರ ವಾಯುಪು
ತ್ರಕನುಂ ಜರ್ಜರಹಸ್ತನಿಂದ್ರತನಯಂ ದಸ್ರಾತ್ಮಜರ್ ದಂಡಮು
ಷ್ಟಿಕರರ್ ಶಸ್ತ್ರವಿಡಂಬಮೇವುದವರ್ಗೆ ಪಾಂಚಾಲಿಯುಂ ಗಂಧದಾ
ಯಕಿಯಾಗಿರ್ಪಿನಮಂದು ಮತ್ಸ್ಯಗೃಹದಿಂದೀನಿಗ್ರಹಂ ಪೊಲ್ಲದೇ॥೩೪॥

ದರ್ಭಪಾಣಿ= ದರ್ಭೆಯನ್ನು ಕೈಯಲ್ಲಿ ಹಿಡಿದವನಾದ, ಯಮಜಂ= ಧರ್ಮರಾಯನೂ, ದರ್ವೀಕರ= ಸೌಟನ್ನು ಕೈಯಲ್ಲಿ ಹಿಡಿದವವನಾದ, ವಾಯುಪುತ್ರಕನುಂ= ಭೀಮನೂ, ಜರ್ಜರಹಸ್ತನ್= ಕಂಜರವನ್ನು ಹಿಡಿದಿದ್ದವನಾದ,ಇಂದ್ರತನಯಂ= ಅರ್ಜುನನೂ, ದಂಡಮುಷ್ಠಿಕರ್= ಬಡಿಗೆಯನ್ನು ಕೈಯಲ್ಲಿ ಮುಷ್ಠಿಹಿಡಿದವರಾದ, ದಸ್ರಾತ್ಮಜರ್= ದಸ್ರ ಆತ್ಮಜರ್= ಅಶ್ವಿನೀ ದೇವತೆಗಳ ಮಕ್ಕಳಾದ ನಕುಲ ಸಹದೇವರೂ, ಗಂಧದಾಯಕಿ=ಸುಗಂಧವನ್ನು ತೇದು ಕೊಡುವ ಸೇವಕಿಯಾದ, ಪಾಂಚಾಲಿಯುಂ= ದ್ರೌಪದಿಯು ಕೂಡ, ಅಂದು= ಹಿಂದೆ, ಮತ್ಸ್ಯಗೃಹದೊಳ್= ವಿರಾಟನ ಅರಮನೆಯಲ್ಲಿ, ಸೊಕಮಿರ್ಕೆ= ಸುಖವಾಗಿ ಇರುತ್ತಿರಲು, ಅಕ್ಕಟ= ಅಯ್ಯೋ ಪಾಪ, ಅವರ್ಗಂ= ಅಂಥವರಿಗೂ, ಶಸ್ತ್ರವಿಡಂಬಂ= ಆಯುಧಗಳನ್ನು ಹಿಡಿಯುವ, ವಿನೋದಂ= ಚಪಲ, ಏವುದು= ಏನಂ ಗೆಯ್ವುದು= ಏನುಮಾಡುವುದು. ಇಂದು=ಈಗಲಾದರೋ, ಈ ನಿಗ್ರಹಂ= ಈ ನಿಗ್ರಹಿಸುವ ( ಕೊಲೆಗೈಯುವ ಕಾರ್ಯ ) ಪೊಲ್ಲದೇ= ಕೆಟ್ಟದ್ದೇ, ಸೊಕಮಿರ್ಕೆ= ಸುಖವಾಗಿರಲಿ.

ತಾತ್ಪರ್ಯ :- ದರ್ಭೆಯನ್ನು ಹಿಡಿದು ಪೂಜೆಮಾಡಿಕೊಂಡಿದ್ದ ಧರ್ಮರಾಯ, ಸೌಟನ್ನು ಹಿಡಿದು ಅಡುಗೆಮಾಡುತ್ತಿದ್ದ ಭೀಮ, ಕಂಜರವನ್ನು ಹಿಡಿದು ತಾಳಹಾಕುತ್ತಿದ್ದ ಅರ್ಜುನ, ಬಡಿಗೆಯನ್ನು ಹಿಡಿದು ಅಶ್ವಪಾಲಕನಾಗಿದ್ದ ನಕುಲ, ಬೆತ್ತವನ್ನು ಹಿಡಿದು ಗೋಪಾಲಕನಾಗಿದ್ದ ಸಹದೇವ, ಗಂಧವನ್ನು ತೇಯುತ್ತಿದ್ದ ದ್ರೌಪದಿ ಇವರೆಲ್ಲರೂ ಅಂದು ವಿರಾಟನ ಅರಮನೆಯಲ್ಲಿ ಸುಖವಾಗಿ ಇರುತ್ತಿರಲು, ಅಯ್ಯೋ ಪಾಪ ! ಅಂಥವರಿಗೂ ಇಂದು ಶಸ್ತ್ರವನ್ನು ಹಿಡಿಯುವ ಚಪಲ. ಹಾಗೆ ಹಿಡಿದು ಮಾಡುವುದಾದರೂ ಏನು ? ನಿಜಕ್ಕೂ ಈ ಯುದ್ಧವು ಅವರಿಗೆ ಕೆಟ್ಟದ್ದೇ. ದರ್ಭೆ, ಸೌಟು, ಕಂಜರ, ಬಡಿಗೆ, ಬೆತ್ತ, ಇವನ್ನು ಹಿಡಿದು ಅಭ್ಯಾಸವಾದ ಕೈಯಲ್ಲಿ ಆಯುಧವನ್ನು ಹಿಡಿಯುವುದು ಆಯುಧಕ್ಕೇ ಅಪಮಾನ. ಇದು ಹಾಸ್ಯಾಸ್ಪದವಲ್ಲವೇ ? ಯಾಕೆ ಬೇಕಿತ್ತು ಇವರಿಗೆ ಈ ಬೇಡದ ಕೆಲಸ.

ಅಧಿಕಾರಿಗಳೆನೆ ಸೈರಿಸೆ
ವಧಿಕಾಕಾರಿಗಳಾಗಿ ಬಾೞ್ಗೆ ಬಡುವುಗಳವರ್ಗಾ
ಯುಧಭಾರಮೇಕೆ ಬಗೆಯ
ಲ್ಕೆ ಧರ್ಮದಿಂ, ಕ್ಷತ್ರಧರ್ಮಮವರ್ಗೆ ವಿರುದ್ಧಂ॥೩೫॥

ಅಧಿಕಾರಿಗಳೆನೆ = ಅಧಿಕ ಅರಿಗಳ್ ಎನೆ = ಬಲಿಷ್ಠರಾದ ಶತ್ರುಗಳು ಎಂದು ಹೇಳಿದರೆ, ಸೈರಿಸೆವು= ಸಹಿಸಲಾರೆವು, ಅಧಿಕಾರಿಗಳಾಗಿ= ಯಾವುದೇ ಅಧಿಕಾರವನ್ನು ವಹಿಸಿಕೊಂಡು, ಬಡವುಗಳ್= ಬಡಪಾಯಿಗಳು, ಬಾೞ್ಗೆ=ಬದುಕಿಕೊಳ್ಳಲಿ, ಅವರ್ಗೆ=ಆ ಪಾಂಡವರಿಗೆ, ಆಯುಧಭಾರಂ= ಆಯುಧದ ಭಾರವು, ( ಆಯುಧದ ಹೊಣೆಗಾರಿಕೆಯು) ಏಕೆ=ಯಾಕೆ, ಧರ್ಮದಿಂ= ಕುಲಧರ್ಮದಿಂದ, ಬಗೆಯಲ್ಕೆ=ನೋಡಿದರೆ, ಅವರ್ಗೆ=ಅವರಿಗೆ, ಕ್ಷತ್ರಧರ್ಮಂ= ಕ್ಷತ್ರಿಯರ ಧರ್ಮವಾದ ಯುಧ್ದವು, ವಿರುದ್ಧಂ= ವಿರೋಧವಾದುದು,( ವಿಪರೀತವಾದುದು )

ತಾತ್ಪರ್ಯ :- ಸಂಜಯಾ ! ಆ ಪಾಂಡವರು ನನ್ನ ಬಲಿಷ್ಠರಾದ ಶತ್ರುಗಳು, ಬಲವದ್ವೈರಿಗಳುಎಂದು ನೀನು ಹೇಳಿದರೆ ನಾವು ಅದನ್ನು ಎಷ್ಟು ಮಾತ್ರಕ್ಕೂ ಸಹಿಸಲಾರೆವು. ಬೇಕಾದರೆ ಆ ಬಡಪಾಯಿಗಳು, ದರಿದ್ರರು ಯಾವುದಾದರೂ ಅಧಿಕಾರವನ್ನು ವಹಿಸಿಕೊಂಡು ಬದುಕಿಕೊಳ್ಳಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಅಂಥವರಿಗೆ ಆಯುಧವನ್ನು ಹಿಡಿಯುವ ಜವಾಬ್ದಾರಿ ಯಾಕೆ ? ವಿಚಾರಿಸಿ ನೋಡುವುದಿದ್ದರೆ ಕುಲಧರ್ಮದಿಂದಲೂ ಅವರಿಗೆ ಕ್ಷಾತ್ರಧರ್ಮವಾದ ಯುದ್ಧವು ವಿರೋಧವಾದುದೇ.

ದುರ್ಯೋಧನನ ದೃಷ್ಟಿಯಲ್ಲಿ ಕೌಂತೇಯರು ಕ್ಷತ್ರಿಯರೇ ಅಲ್ಲ. ಅವರಲ್ಲಿ ಕ್ಷತ್ರಿಯ ರಕ್ತವೇ ಇಲ್ಲ ಎಂಬ ಭಾವ.

ಅಲಂಕಾರ :- ಯಮಕ.

ಸಭೆಯೊಳ್ ತಮ್ಮಯ ಪಕ್ಕದೆನ್ನನುಜನಾ ಪಾಂಚಾಲಿಯಂ ಪಂಚವ
ಲ್ಲಭೆಯಂ ಮೋದೆಯುಮಲ್ಲಿ ಮಿಳ್ಮಿಳನೆ ನೋಡುತಿರ್ದ ಬಲ್ಲಾಳ್ಗಳಿ
ಲ್ಲಿ ಭರಂಗೆಯ್ದಪರೀಪರಾಕ್ರಮಮುಮೀಪೆರ್ಮಾತುಮೀಗಂಡುಮೀ
ಸುಭಟಾಲಾಪಮುಮೆಲ್ಲಮಾನೃಪತಿಗಳ್ಗೇನೆಂಬೆನೆಲ್ಲರ್ದುದೋ॥೩೬॥

ಸಭೆಯೊಳ್= ರಾಜಸಭೆಯಲ್ಲಿ, ತಮ್ಮಯ ಪಕ್ಕದೆ= ತಮ್ಮ ಬಳಿಯಲ್ಲೇ, ಎನ್ನನುಜಂ= ನನ್ನ ತಮ್ಮನಾದ ದುಶ್ಯಾಸನನು, ಆ ಪಾಂಚಾಲಿಯಂ= ಆ ದ್ರೌಪದಿಯನ್ನು, ಪಂಚವಲ್ಲಭೆಯಂ=ಐವರ ಮಡದಿಯನ್ನು, ಮೋದೆಯುಂ=ಹೊಡೆಯುತ್ತಿದ್ದಾಗಲೂ, ಅಲ್ಲಿ =ಆ ಸಂದರ್ಭದಲ್ಲಿ, ಮಿಳ್ಮಿಳನೆ ನೋಡುತ್ತಿರ್ದ= ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ, ಬಲ್ಲಾಳ್ಗಳ್= ಪರಾಕ್ರಮಿಗಳು, ಇಲ್ಲಿ= ಈ ಕುರುಕ್ಷೇತ್ರದಲ್ಲಿ, ಭರಂಗೆಯ್ದಪರ್= ಆರ್ಭಟಿಸುತ್ತಾರೆ, ಈ ಪರಾಕ್ರಮಮುಂ = ಈ ಪೌರುಷವೂ, ಈ ಪೆರ್ಮಾತುಂ= ಈ ಹೆಗ್ಗಳಿಕೆಯೂ, ಈ ಗಂಡುಂ = ಈ ಶೌರ್ಯವೂ, ಈಈ ಸುಭಟಾಲಾಪಮುಂ= ಈ ವೀರಾಲಾಪವೂ, ಎಲ್ಲಂ= ಎಲ್ಲವೂ, ಆ ನೃಪತಿಗಳ್ಗೆ = ಆ ರಾಜರೆನ್ನಿಸಿಕೊಂಡವರಿಗೆ, ಏನೆಂಬೆಂ= ಏನೆಂದ ಹೇಳಲಿ, ಎಲ್ಲಿರ್ದುದೋ= ಎಲ್ಲಿ ಹೋಗಿತ್ತೋ ?

ತಾತ್ಪರ್ಯ:- ರಾಜಸಭೆಯಲ್ಲಿ ಬಳಿಯಲ್ಲೇ ಮಂಡಿಸಿದ್ದ ನನ್ನ ತಮ್ಮ ದುಶ್ಯಾಸನನು, ಐವರ ಮಡದಿಯಾದ ಪಾಂಚಾಲಿಯನ್ನು ಸದೆಬಡಿಯುತ್ತಿದ್ದಾಗ ಅಲ್ಲಿ ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ ಮಹಾವೀರರು ಅರ್ಥಾತ್ ಹೇಡಿಗಳು,
ಇಲ್ಲಿ ಈ ಕುರುಕ್ಷೇತ್ರದಲ್ಲಿ ವೀರಾವೇಶವನ್ನು ತೋರ್ಪಡಿಸುತ್ತಾರೆ. ಈ ಪರಾಕ್ರಮ, ಈ ಹೆಗ್ಗಳಿಕೆಯ ಮಾತು, ಈಶೌರ್ಯ, ಈ ವೀರಾಲಾಪ ಇವೆಲ್ಲ ಆ ರಾಜಪುತ್ರರಿಂದ ಏನೆನ್ನಲಿ, ಎಲ್ಲಿ ಹೋಗಿದ್ದುವೋ ( ಇವೆಲ್ಲ ಆ ರಾಜಪುತ್ರರಿಂದ ಅಂದು ಎಲ್ಲಿ ಹೊಕ್ಕು ಅಡಗಿದ್ದುವೋ ?

ಯಮವಾಯುತ್ರಿದಶಾಶ್ವಿನನೀತನಯರುಂ ತಾವಾದರೀಯಯ್ವರುಂ
ಹಿಮಕೃದ್ವಂಶಕಳಂಕರಂತವರ್ಗಮಾ ಪಾಂಚಾಲ ಭೂಪಾಲ ಪು
ತ್ರಿಮನೋವಲ್ಲಭೆಯಾದಳೆಂದೊಡೆ ಗಡಂ ಕೇಳಲ್ಕದೇಂ ಕ್ಷತ್ರಧ
ರ್ಮಮೊ ಭೂಲೋಕಕೆ ಪೇೞಿಮೀ ದೊರೆಯ ಚಾರಿತ್ರಂ ಪೃಥಾಪುತ್ರರಾ॥೩೭॥

ಯಮವಾಯುತ್ರಿದಶಾಶ್ವಿನೀತನಯರುಂ= ಧರ್ಮರಾಯ , ಬೀಮ, ಅರ್ಜುನ,ನಕುಲ,ಸಹದೇವರು , ಈಐವರುಂ= ಈ ಐದುಮಂದಿಯೂ, ತಾವ್=ತಾವು, ಹಿಮಕೃದ್ವಂಶಕಳಂಕರ್= ಚಂದ್ರವಂಶಕ್ಕೆ ಕಳಂಕಪ್ರಾಯರು, ಅವರ್=ಅವರು, ಅಂತು= ಹಾಗೆ, ಅವರ್ಗಂ=ಅವರಿಗೆ, ಆ ಪಾಂಚಾಲಭೂಪಾಲಪುತ್ರಿ= ದ್ರೌಪದಿಯು, ಮನೋವಲ್ಲಭೆಯಾದಳ್= ಮೆಚ್ಚಿನ ಮಡದಿಯಾದಳು, ಎಂದೊಡೆ=ಎಂದು ಹೇಳಿದರೆ, ಕೇಳಲ್ಕೆ=ಕೇಳುವುದಕ್ಕಾದರೂ, ಅದೇಂಗಡಂ=ಅದೇನಂತೆ, ಪೃಥಾಪುತ್ರರಾ=ಕುಂತೀಪುತ್ರರ, ಈ ದೊರೆಯ=ಇಂಥ,ಚಾರಿತ್ರಂ=ನಡತೆಯು, ಭೂಲೋಕಕೆ= ಭೂಲೋಕದಲ್ಲಿ, ಕ್ಷತ್ರಧರ್ಮಮೊ= ಕ್ಷಾತ್ರಧರ್ಮವೋ, ಪೇೞಿಂ= ಹೇಳಿರಿ.

ತಾತ್ಪರ್ಯ:- ಕುಂತಿಗೆ ಯಮ ವಾಯು ಇಂದ್ರರಿಂದ ಜನಿಸಿದ ಧರ್ಮರಾಯ ಭೀಮ ಅರ್ಜುನರೂ, ಮಾದ್ರಿಗೆ ಅಶ್ವಿನೀದೇವತೆಗಳಿಂದ ಜನಿಸಿದ ನಕುಲ ಸಹದೇವರೂ, ಈ ಐವರೂ ಚಂದ್ರವಂಶಕ್ಕೆ ಕಳಂಕವನ್ನು ತಂದವರು. ಅಂಥವರಿಗೆ ಪಾಂಚಾಲರಾಜಕುಮಾರಿ ಹೆಂಡತಿಯಾದವಳು ಎಂದ ಮೇಲೆ ನಿಜಕ್ಕೂ ಕೇಳುವುದೇನಿದೆ ? ನೀವೇ ಹೇಳಿರಿ
ಕುಂತೀಪುತ್ರರ ಇಂತಹ ಹೇಯವರ್ತನೆ ಭೂಲೋಕದಲ್ಲಿ ಕ್ಷತ್ರಿಯರು ಅನುಸರಿಸಬೇಕಾದ ಧರ್ಮವೋ ?

ಪಸೆಯೊಳ್ ಪಸುರ್ವಂದರೊಳ
ಗ್ನಿಸಾಕ್ಷಿಯೊಳ್ ಕೊಂಡ ಪಾಂಡುಪತಿಯಿರೆ ದೋಷಾ
ವಸಥರ್ ಪಾದರದಿಂ ಜನಿ
ಯಿಸಿದರ್ ಪಾಂಡವರೊಳಲ್ಲದೆಮ್ಮೊಳಮುಂಟೆ॥೩೮॥

ಪಸೆಯೊಳ್= ಹಸೆಯಲ್ಲಿ, ಪಸುರ್ವಂದರೊಳ್=ಹಸಿರು ಚಪ್ಪರದಲ್ಲಿ, ಅಗ್ನಿ ಸಾಕ್ಷಿಯೊಳ್= ಅಗ್ನಿ ಸಾಕ್ಷಿಯಲ್ಲಿ, ಕೊಂಡ= ಸ್ವೀಕರಿಸಿದ, ಪಾಂಡುಪತಿಯಿರೆ= ಪಾಂಡುರಾಜನಿರಲು, ದೋಷಾವಸಥರ್= ದೋಷಕ್ಕೆ ನೆಲೆಯಾದವರು, ಪಾದರದಿಂ= ಹಾದರದಿಂದ, ( ವ್ಯಭಿಚಾರದಿಂದ ) ಜನಿಯಿಸಿದರ್= ಹುಟ್ಟಿದಂಥವರು, ಪಾಂಡವರೊಳಲ್ಲದೆ= ಪಾಂಡವರಲ್ಲಿ ಅಲ್ಲದೆ,
ಅಂಥವರು ನಮ್ಮಲ್ಲಿ ಯಾರಿದ್ದಾರೆ ಹೇಳು ಸಂಜಯ!

ತಾತ್ಪರ್ಯ :- ಹಸುರು ಚಪ್ಪರದಲ್ಲಿ ಹಸೆಯಲ್ಲಿ ಕುಳಿತು ಅಗ್ನಿ ಸಾಕ್ಷಿಯಾಗಿ ಸ್ವೀಕರಿಸಿದ ಪಾಂಡುರಾಜನಿರುತ್ತಿರಲು, ವ್ಯಭಿಚಾರದಿಂದ ಜನಿಸಿ ದೋಷಕ್ಕೆ ನೆಲೆಯಾದವರು ಪಾಂಡವರಲ್ಲದೆ, ಅಂಥವರು ನಮ್ಮಲ್ಲಿ ಯಾರಿದ್ದೃರೆಹೇಳು ಸಂಜಯ

ಬಿಡದಾರಾಧಿಸೆ ಮುನ್ನಮೆ
ಕುಡಲಾಱದೆ ಬೞಿಕೆ ಗಂಟಲಂ ಮೆಟ್ಟಿದೊಡಿ
ಟ್ಟೆಡೆಯೊಳ್ ಕೊಟ್ಟಂ ಗೆಲ್ಲಂ
ಗುಡುವಂತೆ ನರಂಗೆ ಪಾಶುಪತಮನೆ ರುದ್ರಂ॥೩೯॥

ಬಿಡದೆ= ಎಡೆಬಿಡದೆ, ಆರಾಧಿಸೆ= ಪೂಜಿಸಲು, ಮುನ್ನಮೇ= ಮೊದಲೇ, ಕುಡಲಾಱದೆ= ಕೊಡುವುದಕ್ಕೆ ಮನಸ್ಸಿಲ್ಲದೆ, ಬೞಿಕೆ=ಆ ಮೇಲೆ ಗಂಟಲಂ ಮೆಟ್ಟಿದೊಡೆ = ಕೆಡಹಿ ಗಂಟಲನ್ನು ಒತ್ತಿ ಮೆಟ್ಟಿದಾಗ, ಇಟ್ಟೆಡೆಯೊಳ್= ಇಕ್ಕಟ್ಟೆನಲ್ಲಿ, ಗೆಲ್ಲಂಗುಡುವಂತೆ=ಬಹುಮಾನವನ್ನು ಕೊಡುವ ಹಾಗೆ ನರಂಗೆ= ಅರ್ಜುನನಿಗೆ, ರುದ್ರಂ= ಶಿವನು ಪಾಶುಪತಮನೆ= ಪಾಶುಪತಮನೆ , ಕೊಟ್ಟಂ=ಕೊಟ್ಟನು,

ತಾತ್ಪರ್ಯ :- ಎಡೆಬಿಡದೆ= ಆರಾಧಿಸಿದರೂ ಮುಂದಾಗಿ ಕೊಡಲು ಮನಸ್ಸಿಲ್ಲದಿದ್ದಾಗ, ತನ್ನ ಕತ್ತನ್ನು ಮೆಟ್ಟಿ ಉಸಿರು ಕಟ್ಟಿಸಿದಾಗ, ಆ ಇಕ್ಕಟ್ಟಿನಲ್ಲಿ, ಸಿಕ್ಕಿಬಿದ್ದು ರುದ್ರನು ಬಳಿಕ ನೆರ್ವಾಹವಿಲ್ಲದೆ, ಅರೂಜುನನು ತನ್ನನ್ನು ಗೆದ್ದುದಕ್ಕೆ ಬಹುಮಾನವನ್ನು ಕೊಡುವಂತೆ ಪಾಶುಪತಾಸ್ತ್ರವನ್ನು ಕೊಟ್ಟನು.

, ತನಯನೆನಗೆಂದು ಮನ್ನಿಸಿ
ತನಗುರುಗಜ್ಜಕ್ಕೆ ಪಾಕಶಾಸನನರ್ಧಾ
ಸನಮೇಱಿಸಿ ನೀಱೇಱಿಸಿ
ಮನುಜಂಗಂ ಮಾನ್ಯ ಪದವಿಯಂ ಮಾಡಿದನೇ॥೪೦॥

ತನಯನೆನಗೆಂದು =ತನ್ನ ಮಗನೆಂದು, ಮನ್ನಿಸಿ= ಆದರಿಸಿ, ತನಗುರುಗಜ್ಜಕ್ಕೆ= ತನ್ನ ಘನವಾದ ಕಾರ್ಯವನ್ನು ನೆರವೇರಿಸುವುದಕ್ಕೆ, ಪಾಕಶಾಸನನ್= ಇಂದ್ರನು, ಅರ್ಧಾಸನಮೇಱಿಸಿ=ಅರ್ಧಾಸನದಲ್ಲಿ ಕುಳ್ಳಿರಿಸಿ, ನೀಱೇಱಿಸಿ= ರೋಮಾಂಚನಗೊಳಿಸಿ, ಮನುಜಂಗಂ= ನರನಿಗೂ, ಮಾನ್ಯ ಪದವಿಯಂ= ಬಿರುದುಬಾವಲಿಗಳನ್ನು, ಮಾಡಿದನೇ= ಮಾಡಿದನಷ್ಟೇ !

ತಾತ್ಪರ್ಯ :- ಇಂದ್ರನು ನರನನ್ನು ತನ್ನ ಮಗನೆಂದು ಆದರಿಸಿ , ತನ್ನಿಂದ ನಿಗ್ರಹಿಸುವುದಕ್ಕೆ ಅಸಾಧ್ಯರಾದ ನಿವಾತಕವಚ, ಕಾಲಕೇಯ, ಪೌಲೋಮ, ತಳತಾಳುಕರೇ ಮೊದಲಾದ ಅರುವತ್ತು ಕೋಟಿ ದಾನವರನ್ನು ನಿಗ್ರಹಿಸಿದ ಬಳಿಕವೇ ಅವನನ್ನು ಅರ್ಧಾಸನದಲ್ಲಿ ಕುಳ್ಳಿರಿಸಿ ಪುಳಕಿತನನ್ನಾಗಿಮಾಡಿ ಬಿರುದು ಬಾವಲಿಗಳನ್ನಿತ್ತನಷ್ಟೇ!

ಪವನಂಗೆ ಪುಟ್ಟಿದಂ ರಾ
ಘವನಣುಗಾಳ್ ತ್ರಿಣಯನಾಂಶಮೆನಿಪಣುವಂ ಪಾಂ
ಡವಕೇತುದಂಡದೊಳ್ ನೆಲ
ಸುವುದಾವಗ್ಗಳಿಕೆ ಕಪಿಗೆ ಚಪಲತೆ ಸಹಜಂ॥೪೧॥

ಪವನಂಗೆ ಪುಟ್ಟಿದಂ= ವಾಯುವಿಗೆ ಹುಟ್ಟಿದವನೂ, ರಾಘವನ= ಶ್ರೀರಾಮನ, ಅಣುಗಾಳ್= ಶ್ರೀರಾಮನ ಸೇವಕನಾದವನೂ, ತ್ರಿಣಯನಾಂಶನ್= ಮುಕ್ಕಣ್ಣನ ಅಂಶವುಳ್ಳವನೂ, ತ್ರಿಣಯನಾಂಶನ್= ತ್ರಿನಯನಾಂಶನೆನಿಪ
ಅಣುವಂ=ಹನುಮಂತನು, ಪಾಂಡವಕೇತುದಂಡದೊಳ್= ಅರ್ಜುನನ ಧ್ವಜಸ್ತಂಭದಲ್ಲಿ, ನೆಲಸುವುದು=ಇರುವುದು, ಆವ ಅಗ್ಗಳಿಕೆ= ಯಾವ ಅತಿಶಯ, ಕಪಿಗೆ ಚಪಲತೆ ಸಹಜಂ= ಮಂಗನಿಗೆ ಚಾಪಲ್ಯ ಸಹಜವೇ !

ವಾಯುಪುತ್ರನೆಂದೂ, ರಾಮನ ನೆಚ್ಚಿನ ಸೇವಕನೆಂದೂ, ಶಿವನಅಂಶವುಳ್ಳವನೆಂದೂ ಜನಜನಿತನಾಗಿದ್ದ ಹನುಮಂತನು ಅರ್ಜುನನ ಧ್ವಜಸ್ತಂಭದಲ್ಲಿ ಕುಳಿತುಕೊಳ್ಳುವುದರಲ್ಲಿ ಆಶ್ಚರ್ಯವೇನಿದೆ? ಕಪಿಗೆ ಚಪಲತೆ ಸಹಜವಲ್ಲವೇ?

ಅಲಂಕಾರ :- ಅರ್ಥಾಂತರನ್ಯಾಸ. ( ಸಹಜ ಮನೋಜ್ಞ! )

ಅನುಜೇಯನಿತ್ತು ನರಂಗಾ
ತನ ತನಯಂಗಿತ್ತು ತನ್ನ ಮಗಳಂ ತಾನಾ
ತನ ರದಮನೆಸಗಿ ಧರ್ಮಜ
ನನುಜನ ನೆವದಿಂದ‌ಮರಸುಗೆಯ್ವಂ ಕೃಷ್ಣಂ॥೪೨॥

ನರಂಗೆ= ಅರ್ಜುನನಿಗೆ, ಅನುಜೆಯನ್= ತಂಗಿಯಾದ ಸುಭದ್ರೆಯನ್ನು, ಇಟ್ಟು= ಮದುವೆಮಾಡಿಸಿ,ಅವನತನಯಂಗೆ= ಅವನ ಮಗನಾದ ಅಭಿಮನ್ಯುವಿಗೆ, ತನ್ನ ಮಗಳಂ= ತನ್ನ ಅಣ್ಣ ಬಲಭದ್ರನ ಮಗಳಾದ ವತ್ಸಲೆಯನ್ನು, ಇತ್ತು= ವಿವಾಹಮಾಡಿಸಿ, ತಾನ್=ತಾನು, ಆತನ=ಅರ್ಜುನನ, ರಥಮನೆಸಗಿ= ರಥವನ್ನು ಓಡಿಸಿ, ಧರ್ಮಜನ= ಧರ್ಮರಾಯನ,ಅನುಜನ= ತಮ್ಮನ, ನೆವದಿಂದ, ಅರಸುಗೆಯ್ವಂ= ರಾಜ್ಯವನ್ನಾಳುತ್ತಿರುವನು, ಕೃಷ್ಣಂ= ಕೃಷ್ಣನು.

ತಾತ್ಪರ್ಯ :- ತಂಗಿ ಸುಭದ್ರೆಯನ್ನು ಅರ್ಜುನನಿಗೆ ಮದುವೆಮಾಡಿಸಿ, ಅಣ್ಣನ ಮಗಳನ್ನು ಅಭಿಮನ್ಯುವಿಗೆ ಮದುವೆ ಮಾಡಿಸಿ, ತಾನು ಅರ್ಜುನನ ಸಾರಥಿಯಾಗಿ, ಅವನ ನೆಪದಿಂದ ರಾಜ್ಯವನ್ನಾಳುತ್ತಿರುವವನು ಕೃಷ್ಣನೇ.

ಪುರುಷರ್ ಮೂವರೊಳೊರ್ವನೆಂಬರಸುರಪ್ರಧ್ವಂಸಿಯೆಂಬರ್ ಜಗ
ದ್ಗುರುವೆಂಬರ್ ಪೆಱರ್ಗೇಕೆ ತೇರನೆಸಪಂ ಧರ್ಮಾನುಜಂಗೇಕೆ ಕಿಂ
ಕರನಾದಂ ಕರವೇಱಿಯಾದನದಱಿಂಸೂತಂ ಭಟಂ ಪೇೞಿಯೆಂ
ಬರಮಾತೊಪ್ಪುಗುಮಾದಿ ದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ॥೪೩॥

ಪುರುಷರ್ ಮೂವರೊಳ್= ತ್ರಿಮೂರ್ತಿಗಳಲ್ಲಿ, ಒರ್ವನೆಂಬರ್= ಒಬ್ಬನು ಎನ್ನುತ್ತಾರೆ, ಅಸುರಪ್ರಧ್ವಂಸಿಯೆಂಬರ್= ರಾಕ್ಷಸಸಂಹಾರಿ ಎನ್ನುತ್ತಾರೆ, ಜಗದ್ಗುರು ಎಂಬರ್= ಲೋಕಗುರು ಎನ್ನುತ್ತಾರೆ, ಹಾಗಿದ್ದ ಪಕ್ಷದಲ್ಲಿ , ಪೆಱರ್ಗೆ= ಅನ್ಯರಿಗೆ, ಏಕೆ ತೇರನೆಸಪಂ= ಯಾಕಾಗಿ ರಥವನ್ನು ಓಡಿಸುತ್ತಾನೆ, ಧರ್ಮಾನುಜಂಗೆ= ಅರ್ಜುನನಿಗೆ, ಏಕೆ ಕಿಂಕರನಾದಂ= ಯಾಕೆ ಆಳಾದನು, ಕರವೇೞಿಯಾದಂ= ಬಹಳ ಹೇಡಿಯಾದನು, ಅದಱಿಂ= ಆದುದರಿಂದ, ಸೂತಂ= ಬಂಡಿಯ ಬೋವನು, ಭಟಂ=ಸೇವಕನು, ಪೇೞಿ= ಹೇಡಿ, ( ಅಂಜುಗುಳಿ) ಎಂಬರಮಾತೊಪ್ಪುಗುಂ= ಎಂದು ಹೇಳುವವರ ಮಾತು ಒಪ್ಪಿಗೆಯಾಗುವುದು, ಆದಿದೇವನೆನಿಸಲ್= ಆದಿದೈವವೆಂದು ಹೇಳಲು, ಕೃಷ್ಣಂಗೆ ಅದೆಂತೊಪ್ಪುಗುಂ= ಕೃಷ್ಣನಿಗೆ ಅದು ಹೇಗೆ ಒಪ್ಪುತ್ತದೆ ?

ತಾತ್ಪರ್ಯ :- ಕೃಷ್ಣನನ್ನು ತ್ರಿಮೂರ್ತಿಗಳಲ್ಲೊಬ್ಬನೆಂದೂ, ಅಸುರಸಂಹಾರಿಯೆಂದೂ,ಜಗದ್ಗುರುವೆಂದೂ, ಜನರು ಕೊಂಡಾಡುತ್ತಾರೆ. ಹಾಗಿದ್ದರೆ ಅವನೇಕೆ ಅನ್ಯರಿಗೆ ಸಾರಥಿಯಾಗುತ್ತಾನೆ? ಯಾಕೆ ಅರ್ಜುನನಿಗೆ ಅಡಿಯಾಳಾಗಿದ್ದಾನೆ?ಯಾಕೆ ಸೇವಕನಾಗಿದ್ದಾನೆ? ಯಾಕೆ ಹೇಡಿಯಾಗಿದ್ದಾನೆ? ಆದುದರಿಂದ ಸೂತ, ಸೇವಕ, ಹೇಡಿ, ಎಂದು ಹೇಳುವವರ ಮಾತು ಅವನಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಆದಿದೇವನೆಂದು ಹೊಗಳಿಸಿಕೊಳ್ಳಲು ಕೃಷ್ಣನಿಗೆ ಅದು ಹೇಗೆ ಒಪ್ಪುತ್ತದೆ?

ವ್ಯಕ್ತಿಯ ಯೋಗ್ಯತೆಯನ್ನು ಅಳೆಯುವ ಮಾನದಂಡವೇ ಅವನ ವರ್ತನೆ. ಕೃಷ್ಣನ ವರ್ತನೆಯನ್ನು ನೋಡಿದರೆ ಅವನಲ್ಲಿ ದೇವನೆಂದು ಕರೆಯಿಸಿಕೊಳ್ಳುವ ಯಾವ ಅಂಶವೂ ಇಲ್ಲವೆಂದು ದುರ್ಯೋಧನನ ತೀರ್ಮಾನ.

ಅನಿಮೇಷಾದ್ಯವತಾರಂ
ತನಗಾಗೆ ದಶಾವತಾರಮನಿತಱೊಳಿರದ
ರ್ಜುನನ ರಥಮೆಸಗಿ ಪಪನ್ನೊಂ
ದನೆಯದು ಸೂತಾವತಾರಮುಂ ಹರಿಗಾಯ್ತೆ॥೪೪॥

ಅನಿಮೇಷಾದ್ಯವತಾರಂ= ಮತ್ಸ್ಯಾವತಾರದಿಂದ ತೊಡಗಿದ ಅವತಾರಗಳು, ದಶಾವತಾರಂ= ಹತ್ತು ಅವತಾರಗಳು, ತನಗೆ ಆಗೆ= ತನಗಾಗಿರಲು, ಅನಿತಱೊಳ್ ಇರದೆ = ಅಷ್ಟರಿಂದಲೇ ತೃಪ್ತನಾಗದೆ, ಅರ್ಜುನನ ರಥವೆಸಗಿ= ಅರ್ಜುನನ ರಥವನ್ನು ನಡೆಸಿ, ಹನ್ನೊಂದನೆಯದು= ಹನ್ನೊಂದನೆಯದಾದ, ಸೂತಾವತಾರಮಂ=ಸೂತನ ಅವತಾರವೂ, ಹರಿಗಾಯ್ತೇ= ಕೃಷ್ಣನಿಗೆ ಸಂಭವಿಸಿತೇ? ದಶಾವತಾರಗಳು  :- ಮತ್ಸ್ಯ , ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ,ಬುದ್ಧ,ಕಲ್ಕಿಗಳು.

ತಾತ್ಪರ್ಯ :- ಮತ್ಸ್ಯಾದಿಯಾದ ದಶಾವತಾರಗಳನ್ನು ತಾನು ಹೊಂದಿದ್ದರೂ ತೃಪ್ತಿಯಾಗದೆ ಅರ್ಜುನನ ರಥಚೋದಕನಾಗಿ ಹನ್ನೊಂದನೆಯದಾದ ಸೂತನ ಅವತಾರವೂ ಹರಿಗೆ ಸಂಭವಿಸಿತೇ! ( ಅಭೇದ ಪ್ರತಿಪತ್ತಿಯಿಂದ ಕೃಷ್ಣನಿಗೆ ಎಂಬ ಭಾವನೆ)

ದಶಾವತಾರಗಳನ್ನು ಎತ್ತಿ ಬಂದ ಬವಣೆ ಸಾಲದೆಂದು ಈಗ ಮತ್ತೆ ಸೂತಾವತಾರವೆಂಬ ಹನ್ನೊಂದನೆಯ ಅವತಾರವೂ ವಿಷ್ಣುವಿಗೆ ಆಯಿತೇ ! ಅಯ್ಯೋ ಪಾಪ ! ಚಕ್ರೇಶ್ವರನಾದ ದುರ್ಯೋಧನನ ದೃಷ್ಟಿಯಲ್ಲಿ ಸೂತಕರ್ಮವು ನಿಕೃಷ್ಟ ವಾದುದು . ಇಂತಹ ಹೀನ ಪ್ರವೃತ್ತಿಯನ್ನು ಕೈಕೊಂಡ ಕೃಷ್ಣನನ್ನು ದೇವನೆಂದು ಸಂಬೋಧಿಸುವುದು ಹಾಸ್ಯಾಸ್ಪದವಲ್ಲವೇ ?

ಪ್ರತಿಕೂಲದೈವನೈ ನೀಂ
ಪ್ರತಿನೃಪನುಕೂಲದೈವರಸಹಾಯನೆ ನೀಂ
ಪ್ರತಿನೃಪರಸಹಾಯರ್ ನೀಂ
ಪ್ರತಿಬಲನದಱಿಂದನರ್ಥಕಂ ವಾಕ್ಯಾರ್ಥಂ॥೪೫॥

ದುರ್ಯೋಧನ! ನೀಂ ಪ್ರತಿಕೂಲದೈವನೈ= ದೈವಾನುಕೂಲವಿಲ್ಲದವನು, ( ದೈವಾನುಗ್ರಹವಿಲ್ಲದವನು, ದೈವದ್ರೋಹಿ ) ಪ್ರತಿನೃಪರ್= ಶತ್ರುರಾಜರಾದ ಪಾಂಡವರು, ಅನುಕೂಲದೈವರೈ= ದೈವಾನುಗ್ರಹವುಳ್ಳವರು, ನೀಂ ಅಸಹಾಯನೆ= ನಿನಗೆ ಯಾರ ಸಹೃಯವೂ ಇಲ್ಲ, ಪ್ರತಿನೃಪರ್= ಶತ್ರುಗಳಾದ ಪಾಂಡವರು, ಅಸಹಾಯರ್= ಅನ್ಯರ ಸಹಾಯವನ್ನು ಅಪೇಕ್ಷಿಸದವರು, ನೀಂ ಪ್ರತಿಬಲನ್= ನೀನು ವಿರುದ್ಧ ಪಕ್ಷದವನು, ಅದಱಿಂ= ಆದುದರಿಂದ, ವಾಕ್ಯಾರ್ಥಂ=ಕೊಟ್ಟ ಪದದ ಅಥವಾ ವಾಕ್ಯದ ರಹಸ್ಯಾರ್ಥವನ್ನು ಯಲಿಗೆಳೆಯುವ ಕಾರ್ಯ , ಅನರ್ಥಕಂ= ನಿಷ್ಪ್ರಯೋಜಕ

ಇಲ್ಲಿ “ ಅಸಹಾಯರ್ “,  “ಅಸಹಾಯನ್ “ ಎಂಬುದರ ರಹಸ್ಯಾರ್ಥವನ್ನು ಹುಡುಕುವುದರಿಂದ ಏನು ಪ್ರಯೋಜನ? ಪಾಂಡವರು ಅಸಹೃಯಶೂರರೇ. ನೀನು ಅಸಹಾಯಶೊರನೇ (ಯಾರ ಸಹಾಯವೂ ಇಲ್ಲದವನೇ! ನಿರ್ಗತಿಕನೇ.) ನೀನು ಎಷ್ಟೇ ಶೂರನಾಗಿದ್ದರೂ ದೈವಾನುಕೂಲವೆಲ್ಲದವನಾದುದರಿಂದ ದೈವಾನುಗ್ರಹಪಾತ್ರರಾದ ಪಾಂಡವರನ್ನು ಯುದ್ಧದಲ್ಲಿ ಗೆಲ್ಲುವೆನೆಂಬುದು ಹುಚ್ಚು ಸೃಹಸವೇ ಸರಿ.

ತಾತ್ಪರ್ಯ :- ನೀನು ಅಸಹಾಯಶೂರನೇ. ಆದರೆ ದೈವಾನುಕೂಲವಿಲ್ಲದವನು. ನಿನ್ನ ವಿರೋಧಿಗಳಾದ ಪಾಂಡವರು ಅಸಹಾಯಶೂರರು, ಜತೆಗೆ ದೈವಾನುಕೂಲವುಳ್ಳವರು. ಅಂಥವರಿಗೆ ನೀನು ಪ್ರತಿಸ್ಪರ್ಧಿ ಎಂದ ಮೇಲೆ ನಾನೆಂದ ಮೃತಿನ ರಹಸ್ಯಾರ್ಥವನ್ನು ತರ್ಕಿಸಿ ಏನು ಪ್ರಯೋಜನ?  ( ದೈವದ್ರೋಹಿಗಾಗುವ ದುರ್ಗತಿ ನಿನಗೂ ತಪ್ಪಿದಲ್ಲವೆಂಬ ಆಶಯ,)

ಎನಗೆ ಮನಮಿಂದು ಶೂನ್ಯಂ
ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು ದುಶ್ಯಾ
ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ॥೬೯॥

ದುಶ್ಯಾಸನನಿಲ್ಲದೆ ಇಂದು ನನ್ನ ಮನಸ್ಸು ಬರಿದಾಗಿದೆ. ಮನೆ ಖಾಲಿಯಾಗಿದೆ. ಸೇನಾನಿವೇಶ ನಿರ್ಜೀವವಾಗಿದೆ. ಹೆಚ್ಚೇಕೆ ಸಮಸ್ತ ಭೂಮಂಡಲವೇ ಇಲ್ಲದಾಗಿದೆ , ಎಂದ ಬಳಿಕ ನಾನು ಹೇಗೆ ಜೀವಧಾರಣೆ ಮಾಡಲೆ?

ಕರ್ಣದುಶ್ಯಾಸನರು ಜೊತೆಯಲ್ಲಿದ್ದಾಗ ದುರ್ಯೋಧನನಿಗೆ ಮನವೂ ಮನೆಯೂ ಬೀಡೂ ನಾಡೂ ಎಲ್ಲವೂ ಪೂರ್ಣವಾಗಿತ್ತು , ಸಜೀವವಾಗಿತ್ತು. ಅವರಿಲ್ಲದೆ ಇಂದು ಇವೆಲ್ಲ ಶೂನ್ಯವಾಗಿಬಿಟ್ಟಿವೆ, ಇದ್ದೂ ಇಲ್ಲದಂತಾಗಿವೆ. ಇಲ್ಲಿ ದುರ್ಯೋಧನನು ನಿಜಕ್ಕೂ ಭ್ರಾಂತನಾಗಿದ್ದಾನೆ,ಅವನಿಗೆ ಯಾವುದೂ ಬೇಡವಾಗಿದೆ.

ಮಹಿಭೂಭೃಚ್ಛತ್ರಶೂನ್ಯಂ ಕನಕಮಹಿಧರಂ ದ್ರೋಣವೃಕ್ಷಿದಿಶೂನ್ಯಂ
ಗುಹೆ ಸಿಂಹಾನೀಕ ಶೂನ್ಯಂ ದೆಸೆದಿಗಿಭಟಾಶೂನ್ಯಮಾದಂತೆ ವಾಯು
ಸ್ಪ್ಹಹಭೀಮೋದ್ದಾಮ ಬಾಹಾಬಲ ದಳಿತಕುಭೃದ್ವರ್ಗಶೂನ್ಯಂ ವಿಷಾದಾ
ವಹಮಕ್ಕುಂ ಮುನ್ನಮೆನ್ನಿರ್ಪಱಿಕೆಯ ಸಭೆ ಮತ್ತೆಂತದಂ ಪೊಕ್ಕು ನೋೞ್ಪೆಂ॥೭೨॥

ಮಹಿ =ಭೂಮಿಯು, ಭೂಭೃಚ್ಛತ್ರಶೂನ್ಯಂ= ರಾಜನ ಬೆಳ್ಗೊಡೆಯಿಲ್ಲದಾದಂತೆ, ಕನಕಮಹಿಧರಂ= ಕನಕಾಚಲವು, ದ್ರೋಣವೃಕ್ಷಾದಿಶೂನ್ಯಂ= ದ್ರೋಣಾದಿವೃಕ್ಷಗಳು ಇಲ್ಲದಾದಂತೆ, ಗುಹೆ=ಗುಹೆಯು, ಸಿಂಹಾನೀಕ= ಸಿಂಹಗಳ ಸಮೂಹವು, ಶೂನ್ಯಂ=ಇಲ್ಲದಾದಂತೆ, ದೆಸೆ= ದಿಕ್ಕುಗಳು, ದಿಗಿಭಘಟಾ= ದಿಗ್ಗಜಗಳ ಸಮೂಹವು, ಶೂನ್ಯಂ ಇಲ್ಲದಾದಂತೆ, ಮುನ್ನಂ ಎನ್ನಿರ್ಪ ಅಱಿಕೆಯ ಸಭೆ = ಹಿಂದೆ ನಾನಿದ್ದಂತಹ ಪ್ರಸಿದ್ಧವಾದ ಓಲಜದ ಸಭೆಯು, ವಾಯುಸ್ಪ್ರಹ ಭೀಮ ಉದ್ದಾಮ= ವಾಯುಪ್ರಿಯನಾದ ಭೀಮನ ನೀಳವಾದ, ಬಾಹಾಬಲದಳಿತ= ಬಾಹುಬಲದಿಂದ ಸೀಳಲ್ಪಟ್ಟ , ಕುಭೃತ್ ವರ್ಗ ಶೂನ್ಯಂ= ರಾಜರ ಸಮೂಹದಿಂದ ಬರಿದಾಗಿ, ವಿಷಾದಾವಹಮಕ್ಕುಂ= ವಿಷಾದ ಅಹವಂ ಅಕ್ಕುಂ= ದುಃಖಕ್ಕೊಳಗಾಗಿದೆ. ಮತ್ತೆ ಎಂತು ಅದಂ ಪೊಕ್ಕು ನೋೞ್ಪೆಂ=ಈಗ ಆ ಸಭೆಯನ್ನು ಹೇಗೆ ಪ್ರವೇಶೆಸಿ ನೋಡಲಿ?

ತಾತ್ಪರ್ಯ :- ಭೂಪತಿಯ ಬೆಳ್ಗೊಡೆಯಿಲ್ಲದ ಭೂಮಿ, ದ್ರೋಣಾದಿವೃಕ್ಷಗಳಿಲ್ಲದ ಕನಕ ಪರ್ವತ, ಸಿಂಹಗಳಿಲ್ಲದ ಗವಿ, ದಿಗ್ಗಜಗಳಿಲ್ಲದ ದಿಕ್ಕುಗಳು ಬರಿದಾದಂತೆ, ಹಿಂದೆ ನಾನು ಓಲಗಗಥಡುತ್ತಿದ್ದ ಪ್ರಸಿದ್ಧವಾದ ಸಭೆಯು, ವಾಯುಪ್ರಿಯನಾದ ಭೀಮನ ದೀರ್ಘಬಾಹುಗಳಿಂದ ಸೀಳಲ್ಪಟ್ಟುದರಿಂದ ಬರಿದಾದ ರಾಜ ಸಮೂಹವುಳ್ಳದ್ದಾಗಿ ದುಃಖಕಕ್ಕೊಳಗಾಗಿದೆ. ಅಂತಹ ಸಭಾಮಂದಿರವನ್ನು ಹೇಗೆ ಪ್ರವೇಶಿಸಿ ನೋಡಲಿ !

ಭೂಮಿಗೆ ಶೋಭೆ ಭೂಪತಿಯ ಬೆಳ್ಗೊಡೆಯಿಂದ. ಕನಕಾಚಲಕ್ಕೆ ಶೋಭೆ ದ್ರೋಣಾದಿ ವೃಕ್ಷಗಳಿಂದ, ಗವಿಗೆ ಶೋಭೆ ಸಿಂಹಗಳಿಂದ, ದಿಕ್ಕುಗಳಿಗೆ ಶೋಭೆ ದಿಗ್ಗಜಗಳಿಂದ, ಇವಿಲ್ಲದೆ ಹೋದರೆ ಎಲ್ಲವೂ ಶೂನ್ಯ,ನೆಷ್ಪ್ರಯೋಜಕ. ಇವುಗಳಂತೆಯೇ ಸಭೆಗೆ ಶೋಭೆ ಕಿಕ್ಕಿರಿದ ರಾಡಪುತ್ರರಿಂದ. ಆ ರಾಜಪುತ್ರರನ್ನೆಲ್ಲಾ ಭೀಮನು ಸೀಳಿಹಾಕಿದ್ದರಿಂದ ಹಿಂದೆ ತುಂಬಿ ತುಳುಕುತ್ತಿದ್ದ ಆ ನನ್ನ ಸಭೆ ಇಂದು ಬರಿದಾಗಿಬಿಟ್ಟಿದೆ, ದುಃಖಪೂರ್ಣವಾಗಿದೆ. ಇಂತಹ ಸಭೆಯನ್ನು ಈಗ ಪ್ರವೇಶೆಸಿ ನಾನು ಹೇಗೆ ತಾನೆ ಆ ಶೂನ್ಯವಾದ ದೋಶ್ಯವನ್ನು ನೋಡಲಿ ! ನೋಡಲಾರೆ!

ಅಲಂಕಾರ :- ಮಹೋಪಮೆ, ವೆನೋಕ್ತಿ,
ರಸ :-ಕರುಣ.

    ಚತುರ್ಥಾಶ್ವಾಸಂ

ತನ್ನೊಡವುಟ್ಟಿದರ್ ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂ
ತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾ
ನೆನ್ನೊಡವುಟ್ಟಿದರ್ ಪೆಸರ ನೂರ್ವರೊಳೊರ್ವರುಮಿಲ್ಲ ಬಾೞ್ವೆನೆಂ
ಬೆನ್ೞೞಿಯಾಸೆಯಂ ಬಿಸುಟೆನಿನ್ನವರಾದುದನಾಗದಿರ್ಪೆನೇ॥೯॥

ತನ್ನ ಒಡ ಪುಟ್ಟಿದರ್= ತನ್ನ ಒಡಹುಟ್ಟಿದವರು, ಪೆಸರನಾಲ್ವರೊಳ್= ಹೆಸರಾಂತ ನಾಲ್ವರಲ್ಲಿ,ಒರ್ವರುಂಇಲ್ಲದಿರ್ದೊಡಂ=ಒಬ್ಬರು ಇಲ್ಲದೆ ಹೋದರೂ, ಧರ್ಮತನೂಜಂ= ಧರ್ಮರಾಯನು, ತನ್ನಸುವಂ= ತನ್ನ ಪ್ರಾಣವನ್ನು ನಿವೇದಿಸುವನ್ ಅಗ್ನಿಗೆ= ಅಗ್ನಿಗೆ ಸಮರ್ಪಿಸುವನು, ಎಂದೊಡೆ=ಎಂದಾದರೆ, ಆನ್ ಎನ್ನ ಒಡಹುಟ್ಟಿದರ್=
ನಾನು ನನ್ನ ಒಡಹುಟ್ಟಿದವರು, ಪೆಸರ ನೂರ್ವರೊಳ್= ಪ್ರಸಿದ್ಧರಾದ ನೂರು ಮಂದಿಯಲ್ಲಿ, ಒರ್ವರುಂ ಇಲ್ಲ= ಒಬ್ಬರೂ ಉಳಿದಿಲ್ಲ. ಆದುದರಿಂದಲೇ ಬಾೞ್ವೆನ್ ಎಂಬ ಎನ್ನ ಅೞಿಯಾಸೆಯಂ ಬಿಸುಟಿನ್= ಬಾಳಿಯೇನು ಎಂಬ ನನ್ನ ಕೆಟ್ಟ ಆಸೆಯನ್ನು ಬಿಟ್ಟಬಿಟ್ಟೆನು, ಇನ್ ಅವರಾದುದನ್ ಆಗದಿರ್ಪೆನೇ= ಇನ್ನು ಅವರಾದಂತೆ ನಾನು ಆಗದಿರ್ಪೆನೇ?

ತಾತ್ಪರ್ಯ :- ತನ್ನ ಒಡಹುಟ್ಟಿದ ಪ್ರಸಿದ್ಧರಾದ ನಾಲ್ಕು ಮಂದಿ ತಮ್ಮಂದಿರಲ್ಲಿ ಒಬ್ಬನು ಸತ್ತರೂ ಧರ್ಮರಾಯನು ತನ್ನ ಪ್ರಾಣವನ್ನು ಅಗ್ನಿಗೆ ಅರ್ಪಿಸತ್ತಾನಂತೆ! ಎಂದ ಬಳಿಕ ನನ್ನ ಒಡಹುಟ್ಟಿದ ಪ್ರಸಿದ್ಧರಾದ ನೂರು ಮಂದಿ ತಮ್ಮಂದಿರಲ್ಲಿ , ಒಬ್ಬನೂ ಉಳಿಯದಿರುವಾಗ ನಾನು ಬದುಕಿರಬೇಕೆ? ಬದುಕುತ್ತೇನೆಂಬ ವ್ಯರ್ಥವಾದ ಆಸೆಯನ್ನು ಆಗಲೇ ಬಿಟ್ಟುಬಿಟ್ಟೆನು. ಇನ್ನು ಅವರಿಗಾದ ಗತಿಯನ್ನು ನಾನು ಹೊಂದದಿರುವೆನೇ?

ಸಾಧಿಸುವೆಂ ಫಲ್ಗುಣನಂ
ಸಾಧಿಸುವೆಂ ಪವನಸುತನ ಬಸಿಱಿಂ ಹಾ ಕ
ರ್ಣಾ ದುಶ್ಯಾಸನ ತೆಗೆವೆಂ
ಸಾಧಿಸಿದಿಂ ಬೞಿಕೆ ಯಮಜನೊಳ್ ಪುದುವಾೞ್ವೆಂ॥೧೦॥

ಹಾ ಕರ್ಣ! ಸಾಧಿಸುವೆಂ ಫಲ್ಗುಣನಂ= ಅರ್ಜುನನೊಡನೆ ಹೋರಾಡುತ್ತೇನೆ, ಹಾ ದುಶ್ಯಾಸನಾ! ಸಾಧಿಸುವೆಂ ಪವನಸುತನ= ಭೀಮನೊಂದಿಗೆ ಕಾದಾಡುತ್ತೇನೆ, ( ಅವರ) ಬಸಿಱಿಂ ತೆಗೆವೆಂ= ಅವರ ಹೊಟ್ಟೆಯಿಂದ ನಿಮ್ಮನ್ನು ಹೊರಕ್ಕೆ ತೆಗೆಯುತ್ತೇನೆ, ಸಾಧಿಸಿದಿಂ ಬೞಿಕ್ಕೆ= ಈ ಕಾರ್ಯವನ್ನು ಸಾಧಿಸಿದ ಬಳಿಕ, ಯಮಜನೊಳ್= ಧರ್ಮರಾಯನೊಡನೆ,ಪುದುವಾೞ್ವೆಂ= ಒಂದುಗೂಡಿ ಬಾಳುತ್ತೇನೆ.

ತಾತ್ಪರ್ಯ :- ಭೀಮಾರ್ಜುನರೊಂದಿಗೆ ಹೋರಾಡುತ್ತೇನೆ. ಅವರ ಹೊಟ್ಟೆಯನ್ನು ಸೀಳಿ ದುಶ್ಯಾಸನ ಕರ್ಣರನ್ನು ಹೊರಕ್ಕೆ ತೆಗೆಯುತ್ತೇನೆ. ಇಷ್ಟನ್ನು ಸಾಧಿಸಿದ ಬಳಿಕ ನೀವೆಂದಂತೆ ಧರ್ಮರಾಯನೊಂದಿಗೆ ಕೂಡಿ ಬಾಳುತ್ತೇನೆ.

ಭೀಮಾರ್ಜುನರನ್ನು ಕೊಂದ ಬಳಿಕವೇ ಸಂಧಿಯ ಮಾತು ಎಂಬುದು ದುರ್ಯೋಧನನ ಅಚಲ ನಿರ್ಧಾರ. ಆತನ ಛಲಾಭಿಮಾನಗಳಿಗೆ ಈ ಮಾತು ಸಾಕ್ಷಿಯಾಗಿದೆ.

ಆಮ್ಮಗನೆನಾಗೆ ಧರ್ಮಜ
ನೇಮ್ಮಗನಲ್ಲನೆ ಬಳಿೞಿಕ್ಕೆ ನೀಮುಂ ತಾಮುಂ
ನಿಮ್ಮೊಳ್ ನೇರ್ಪಡುಗಿಡದೆ ಸು
ಖಮ್ಮುನ್ನಿನ ತೆಱದೆ ಬಾೞ್ವುದಾಂ ಬೆಸಕೆಯ್ಯೆಂ॥೧೨॥

ಆಂ ಮಗನಾಗೆ= ನಾನು ನಿಮ್ಮ ಮಗನಾದರೆ, ಧರ್ಮಜನ್ ಮಗನಲ್ಲವೆ ಏನ್= ಧರ್ಮರಾಯನೂ ನಿಮ್ಮ ಮಗನಲ್ಲವೇನು? ಬೞಿಕ್ಕೆ=ಎಂದ ಬಳಿಕ, ನೀಮುಂ ತಾಮುಂ= ನೀವೂ ಅವರೂ, ನಿಮುಮೊಳ್ ನೇರ್ಪಡುಗಿಡದೆ= ನಿಮ್ಮೊಳಗೆ ಹೊಂದಾಣಿಕೆ ಕೆಡದಂತೆ, ನೋಡಿಕೊಂಡು, ಮುನ್ನಿನ ತೆಱದೆ= ಹಿಂದಿನಂತೆ, ಸುಖಂ ಬಾೞ್ವುದು= ಸುಖವಾಗಿ ಬಾಳಿರಿ, ಆಂ ಬೆಸಕೆಯ್ಯೆಂ= ನಾನು ನಿಮ್ಮ ಆಜ್ಞೆಯನ್ನು ಅಂಗೀಕರಿಸಲಾರೆ.

ತಾತ್ಪರ್ಯ :- ನಾನು ನಿಮ್ಮ ಮಗನಾದರೆ ಧರ್ಮರಾಯನೂ ನಿಮ್ಮ ಮಗನಲ್ಲವೇ? ಎಂದ ಮೇಲೆ ನೀವೂ ಅವರೂ ಅನ್ಯೋನ್ಯವಾಗಿದ್ದು ಸುಖವಾಗಿ ಬಾಳಿರಿ. ನಾನು ಮಾತ್ರ ನಿಮ್ಮ ಸಂಧಿಯ ಮಾತಿಗೆ ಎಂದಿಗೂ ಒಡಂಬಡುವವನಲ್ಲ.

ದುರ್ಯೋಧನನ ಈ ವ್ಯಂಗ್ಯೋಕ್ತಿ ಶೋಕಾತಿರೇಕದಿಂದ ಬಂದದ್ದಲ್ಲದೆ ತಂದೆಯ ಮೇಲಿನ ಆಕ್ರೋಶದಿಂದಲ್ಲ

ಎಂಬುದನ್ನು ಅರಿತಿರಬೇಕು.

ಉಡಿದಿರ್ದ ಕಯ್ದು ನೆತ್ತರ
ಕಡಲೊಳಗಡಿಗಡಿಗೆ ತಳಮನುರ್ಚುತ್ಥಿರೆ ಕಾ
ಲಿಡಲೆಡೆವಡೆಯದೆ ಕುರುಪತಿ
ದಡಿಗವೆಣಂಗಳನೆ ಮೆಟ್ಟಿ ನಡೆಯುತ್ತಿರ್ದಂ॥೧೪॥

ನೆತ್ತರಕಡಲೊಳಗೆ = ರಕ್ತದ ಸಮುದ್ರದಲ್ಲಿ, ಉಡಿದಿರ್ದ ಕಯ್ದು= ತುಂಡಾಗಿ ಬಿದ್ದಿದ್ದ ವಿವಿಧ ಆಯುಧಗಳು, ಅಡಿಗಡಿಗೆ= ಆಗಿಂದಾಗ( ಹೆಜ್ಜೆ ಹೆಜ್ಜೆಗೆ ) ತಳಮಂ= ಪಾದಗಳನ್ನು , ಉರ್ಚುತ್ತಿರೆ= ಚುಚ್ಚುತ್ತಿರಲು, ಕಾಲಿಡಲ್= ಕಾಲಿಡುವುದಕ್ಕೆ, ಎಡೆವಡೆಯದೆ= ಆಸ್ಪದವಿಲ್ಲದೆ, ಕುರುಪತಿ= ದುರ್ಯೋಧನನು, ದಡಿಗವೆಣಂಗಳನೆ= ದೊಡ್ಡಶವಗಳನ್ನೇ, ಮೆಟ್ಟಿ= ಮೆಟ್ಟುತ್ತಾ, ನಡೆಯುತ್ತಿರ್ದಂ=ಸಾಗುತ್ತಿದ್ದನು.

ತಾತ್ಪರ್ಯ :- ನೆತ್ತರಿನ ಸಮುದ್ರದಲ್ಲಿ ಮುರಿದು ಬಿದ್ದಿದ್ದ ವಿವಿಧಾಯುಧಗಳು ಹೆಜ್ಜೆ ಹೆಜ್ಜೆಗೆ ತನ್ನ ಪಾದಗಳನ್ನು ಇರಿಯುತ್ತಿರಲು, ಕಾಲೂರುವುದಕ್ಕೂ ಸಾಧ್ಯವಾಗದೆ ದುರ್ಯೋಧನನು ಸತ್ತು ಬಿದ್ದ ದೊಡ್ಡ ದೊಡ್ಡ ಹೆಣಗಳನ್ನು ಮೆಟ್ಟುತ್ತಾ ಸಾಗುತ್ತಿದ್ದನು.

ವಚನ :- ಆಗಳದಂ ಕಂಡು -
ಹೀಗೆ ಶವಗಳನ್ನು ಮೆಟ್ಟುತ್ತಾ ಸಾಗುತ್ತಿರುವ ದುರ್ಯೋಧನನನ್ನು ನೋಡಿ

ಪೆಣದಿನಿಗಳ ತಂಡಂ ಬ
ಲ್ವೆಣಗಳನಱಸುತ್ತುಮಲ್ಲಿ ಬರೆವರೆ ಸಾರ
ಲ್ಕಣಮೀಯದೆ ತಮ್ಮಾಳ್ದನ
ಪೆಣನಂ ಕಾದಿರ್ದರಲ್ಲಿ ಬಿೞ್ದ ಭಟರ್ಕಳ್॥೧೫॥

ಅಲ್ಲಿ= ಆ ಕುರುಕ್ಷೇತ್ರದಲ್ಲಿ, ಪೆಣದಿನಿಗಳ ತಂಡಂ= ಪಿಶಾಚಿಗಳ ಗುಂಪು,  ಬಲ್ ಪೆಣಗಳನ್ ಅಱಸುತ್ತುಂ = ದೊಡ್ಡ ಶವಗಳನ್ನು ಹುಡುಕುತ್ತಾ, ಬರೆವರೆ= ಬರಬರಲು, ಸಾರಲ್ಕೆ = ಹತ್ತಿರ ಬರುವುದಕ್ಕೆ, ಅಣಂ ಈಯದೆ= ಸ್ವಲ್ಪವೂ ಬಿಡದೆ, ತಮ್ಮ ಆಳ್ದನ ಪೆಣನಂ= ತಮ್ಮ ಒಡೆಯನ ಶವವನ್ನು , ಬಿೞ್ದ ಭಟರ್ಕಳ್= ಬಿದ್ದ ಯೋಧರು, ಕಾದಿರ್ದರ್ = ಕಾಯುತ್ತಿದ್ದರು.

ತಾತ್ಪರ್ಯ :- ಆ ಕುರುಕ್ಷೇತ್ರದಲ್ಲಿ ಮಡಿದು ಬಿದ್ದ ಬೃಹದ್ಗಾತ್ರದ ಶವಗಳನ್ನು ಅರಸುತ್ತಾ ಪಿಶಾಚಿಗಳು ಗುಂಪುಗುಂಪಾಗಿ ಬರುತ್ತಿರಲು, ಅವುಗಳನ್ನು ಎಳ್ಳಷ್ಟೂ ಹತ್ತಿರಕ್ಕೆ ಬರಗೊಡದೆ ತಮ್ಮ ಒಡೆಯರ ಶವಗಳನ್ನು ಸ್ವಾಮಿಭಕ್ತರಾದ ಗಾಯಾಳುಗಳು ಕಾಯುತ್ತಿದ್ದರು.

ಅಂಧನೃಪಸುತನೆಯೋ ಜಾ
ತ್ಯಂಧನೆಯೋ ಮೆಟ್ಟದಗಲ್ದು ಪೋಗೆನುತುಂ ಕೋ
ಪಾಂಧರ್ ಜಡಿದರ್ ಪತಿಯ ಕ
ಬಂಧಮನೆಡಗಲಿಸಿ ಪೋಪ ದುರ್ಯೋಧನನಂ॥೧೬॥

ಅಂಧನೃಪ= ಕುರುಡನಾದ ಧೃತರಾಷ್ಟ್ರನ, ಸುತನೆಯೋ= ಮಗನೋ ( ಅಥವಾ ) ಜಾತ್ಯಂಧನೆಯೋ= ಹುಟ್ಟು ಕುರುಡನೋ? ಏನೇ ಆಗಿದ್ದರೂ, ಮೆಟ್ಟದೆ ಅಗಲ್ದು ಪೋಗು = ಶವಗಳನ್ನು ಮೆಟ್ಟದೆ ದೂರ ಹೋಗು, ಎನುತುಂ= ಎನ್ನುತ್ತಾ, ಕೋಪಾಂಧರ್= ಕೋಪದಿಂದ ಅಂಧರಾದ ಆ ಭಟರು, ಪತಿಯಕಬಂಧಮಂ= ತಮ್ಮ ಒಡೆಯರ ಶವಗಳನ್ನು, ಎಡಗಲಿಸಿ ಪೋಪ= ತುಳಿದುಕೊಂಡು ಹೋಗುತ್ತಿರುವ, ದುರ್ಯೋಧನನಂ= ದುರ್ಯೋಧನನನ್ನು , ಜಡಿದರ್=ಗದರಿಸಿದರು.

ತಾತ್ಪರ್ಯ:- ಏನಯ್ಯಾ ! ನೀನು ಕುರುಡನಾದ ಧೃತರಾಷ್ಟ್ರನ ಮಗನು ಮಾತ್ರವೆಯೋ? ಅಲ್ಲ, ಹುಟ್ಟು ಕುರುಡನೂ ಆಗಿದ್ದೀಯೋ? ಏನೇ ಆಗಿದ್ದರೂ ಚಿಂತೆಯಿಲ್ಲ. ಈ ಶವಗಳನ್ನು ಮೆಟ್ಟದೆ ದೂರ ಸರಿ - ಎಂಬುದಾಗಿ ಸಿಟ್ಟಿನಿಂದ ಕಣ್ಣು ಕಾಣದವರಾಗಿ ಸ್ವಾಮಿಭಕ್ತರಾದ ಗಾಯಾಳುಗಳು ತಮ್ಮ ಒಡೆಯರ ಶವಗಳನ್ನು ಮೆಟ್ಟುತ್ತಾ ಹೋಗುತ್ತಿರುವ ದುರ್ಯೋಧನನನ್ನು ಗದರಿಸಿದರು.

ಕಳೇಬರವನ್ನು ಕಾಯುತ್ತಿದ್ದ ಭಟರಿಗೂ ದುರ್ಯೋಧನನನ್ನು ಅಣಕಿಸುವಷ್ಟು ಧೈರ್ಯ ಬಂದಿತ್ತಂತೆ. ಎಂತಹ ವಿಧಿ ವಿಪರ್ಯಾಸ!

ಹಲಚಕ್ರಾಂಕುಶರೇಖಾ
ವಿಲಸಿತ ಪದತಳಕೆ ಮಾಡೆ ಪುನರುಕ್ತತೆಯಂ
ಹಲಚಕ್ರಾಂಕುಶಮಾಕುರು
ಕುಲಜಂ ಕುಸಿಕುಸಿದು॥೧೭॥

ಹಲಚಕ್ರ ಅಂಕುಶಂ= ಯುದ್ಧರಂಗದಲ್ಲಿ ತುಂಡಾಗಿ ಬಿದ್ದಿದ್ದ ಹಲ, ಚಕ್ರ ಮತ್ತು ಅಂಕುಶಗಳೆಂಬ ಆಯುಧ ವಿಶೇಷಗಳು, ಹಲಚಕ್ರಾಂಕುಶರೇಖಾವಿಲಸಿತಪದತಳಕೆ=ಹಲ, ಚಕ್ರ, ಅಂಕುಶ, ಚಿಹ್ನೆಗಳಿಂದ ಶೋಭಿಸುವ ದುರ್ಯೋಧನನ ಅಂಗಾಲುಗಳಿಗೆ, ಪುನರುಕ್ತತೆಯಂ ಮಾಡೆ= ಮತ್ತೊಮ್ಮೆ ಅದೇ ಗುರುತುಗಳನ್ನು ಮಾಡುತ್ತಿರಲು, ಆ ಕುರುಕುಲಜಂ= ಆ ದುರ್ಯೋಧನನು, ಕುಸಿಕುಸಿದು = ಕುಂಟುತ್ತಾ ಕುಂಟುತ್ತಾ , ಮೆಲ್ಲಮೆಲ್ಲನೆ= ನಿಧಾನವಾಗಿ, ನಡೆದಂ= ಸಾಗಿದನು.

ತಾತ್ಪರ್ಯ :- ಕುರುಕ್ಷೇತ್ರದ ನೆತ್ತರಿನ ಕಡಲಲ್ಲಿ ಮುರಿದು ಬಿದ್ದಿದ್ದ ಹಲಚಕ್ರಾಂಶುಗಳು , ಹಲಚಕ್ರಾಂಕುಶಲಾಂಛನವುಳ್ಳ ದುರ್ಯೋಧನನ ಅಂಗಾಲುಗಳಿಗೆ ಚುಚ್ಚಿದಾಗ ಮೊದಲಿದ್ದ ಚಿಹ್ನೆಗಳ ಜೊತೆಗೆ ಮತ್ತೊಮ್ಮೆ ಅದೇ ಗುರುತುಗಳನ್ನು ಉಂಟುಮಾಡಿದಂತಾಗಲು ಕೌರವೇಂದ್ರನು ಕುಟುತ್ತಾ ಮೆಲ್ಲಮೆಲ್ಲನೆ ನಡೆದನು.

ಚಕ್ರೇಶ್ವರನಾದ ದುರ್ಯೋಧನನ ಅಂಗಾಲುಗಳಲ್ಲಿ ನೇಗಿಲು, ಶಂಖ,ಚಕ್ರ,ಕಮಲ, ಅಂಕುಶಗಳ ಲಾಂಛನವಿದ್ದುವಂತೆ. ಈ ಲಾಂಛನಗಳ ಸಹಾಯದಿಂದಲೇ ಮುಂದೆ ವೈಶಂಪಾಯನ ಸರೋವರದಲ್ಲಿ ಅಡಗಿದ್ದ ದುರ್ಯೋಧನನನ್ನು ಪಾಂಡವರು ಪತ್ತೆ ಹಚ್ಚುವರು. ಕೌರವೇಶ್ವರನ ಈ ಶುಭಚಿಹ್ನೆಗಳೇ ಮುಂದೆ ಅವನ ಪಾಲಿಗೆ ಅಶುಭ ಚಿಹ್ನೆಗಳಾಗಿ ಪರಿಣಮಿಸುತ್ತವೆ ಎಂಬುದು ಗಮನಾರ್ಹ.

ವಿನುತವಿರೋಧಿಮಂಡಳಿಕಮೌಳಿ ವಿರಾಜಿತ ಪಾದಪೀಠ ಕಾಂ
ಚನಕಮಳಾಯಮಾನಮಿವು ನಿಮ್ಮಯ ಮೆಲ್ಲಡಿ ಭಿಂಡಿವಾಳದಂ
ಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳುರ್ಚೆ ಸಂಯುಗಾ
ವನಿತಳದೊಳ್ ವಿಧಾತ್ರವಶದಿಂ ನಿಮಗಂ ನಡೆವಂತುಟಾದುದೇ॥೧೮॥

ವಿನುತ= ಸುಪ್ರಸಿದ್ದರಾದ, ವಿರೋಧಿಮಂಡಳಿಕ= ಶತ್ರು ಸಾಮಂತರಾಜರ, ಮೌಳಿ=ಕಿರೀಟಗಳಿಂದ, ವಿರಾಜಿತ= ಶೋಭಿಸಲ್ಪಟ್ಟ, ಪಾದಪೀಠ= ಪಾದಗಳನ್ನು ಇಡುವ ಪೀಠದಲ್ಲಿ, ಕಾಂಚನಕಮಳಾಯಮಾನಂ= ಚಿನ್ನದ ಕಮಲಗಳಂತಿರುವ, ಇವು ನಿಮ್ಮಯ ಮೆಲ್ಲಡಿ= ಈ ನಿಮ್ಮ ಕೋಮಲವಾದ ಪಾದಗಳು, ಭಿಂಡಿವಾಳದ= ಭಿಂಡಿವಾಳವೆಂಬ ಆಯುಧದ, ಅಂಬಿನ= ಬಾಣಗಳ, ಕರವಾಳ= ಖಡ್ಗಗಳ, ಕಕ್ಕಡೆಯ=ಕಕ್ಡೆ ಎಂಬ ಆಯುಧದ, ಕೊಂತದ=ಈಟಿಯ, ಧಾರೆಗಳ್= ಅಲಗುಗಳು, ಉರ್ಚೆ= ಭೇದಿಸಲು, ಸಂಯುಗಾವನಿತಳದೊಳ್= ಯುದ್ಧಭೂಮಿಯಲ್ಲಿ, ನಡೆವಂತುಟು= ನಡೆದುಕೊಂಡು ಹೋಗುವಂತೆ, ಆದುದದೇ=ಆಯಿತೇ!

ತಾತ್ಪರ್ಯ :- ಹೆಸರಾಂತ ಶತ್ರು ಸಾಮಂತರಾಜರ ಮಕುಟಗಳ ಸ್ಪರ್ಶದಿಂದ ಶೋಭಿಸುವ, ಪಾದಪೀಠದಲ್ಲಿ ಚಿನ್ನದ ಕಮಲಗಳಂತೆ ಕಂಗೊಳಿಸುವ , ಈನಿಮ್ಮ ಕೋಮಲವಾದ ಪಾದಗಳಿಗೆ ಭಿಂಡಾವಾಳ, ಬಾಣ,ಖಡ್ಗ,ಕಕ್ಕಡೆ, ಕುಂತವೇ ಮೊದಲಾದ ವಿವಿಧಾಯುಧಗಳ ಚೂರುಗಳು ನಾಟುತ್ತಿರಲು ಈ ಯುದ್ಧಭೂಮಿಯಲ್ಲಿ ಬರಿಗಾಲಿನಲ್ಲಿ ನಡೆಯುವಂತಾಯಿತೇ! ಇದೆಂತಹ ದುರ್ವಿಧಿ !

ದುರ್ಯೋಧನನ ವೈಭವದ ದಿನಗಳನ್ನು ಕಂಡಿದ್ದ , ಇಂದಿನ ದುರವಸ್ಥೆಯನ್ನು ಕಾಣುತ್ತಿರುವ,ಸಂಜಯನಿಗೆ ದುಃಖವು ಉಕ್ಕಿ ಬಂದುದರಲ್ಲಿ ಆಶ್ಚರ್ಯವಿಲ್ಲ. ಸಮಸ್ತ ರಾಜವೈಭವದಿಂದ ಸಿಂಹಾಸನದಲ್ಲಿ ಕುಳಿತು , ಪಾದಪೀಠದಲ್ಲಿ ಪಾದಕಮಲಗಳನ್ನಿಟ್ಟಾಗ , ಓಲಗದಲ್ಲಿ ನೆರೆರ ಶತ್ರು ಸಾಮಂತರಾಜರು ಒಬ್ಬೊಬ್ಬರಾಗಿ ಬಂದು ದುರ್ಯೋಧನನ ಪಾದಗಳಿಗೆ ಮಕುಟವು ತಾಗುವಂತೆ ನಮಸ್ಕರಿಸುತ್ತಿದ್ದರಂತೆ, ಅಂತಹ ಶ್ರೀಪಾದ ಇಂದು ಈ ದುರವಸ್ಥೆಗೀಡಾಯಿತಲ್ಲಾ ಎಂಬ ಮರುಕ ಸ್ವಾಮಿಹಿತನಾದ ಸಂಜಯನಿಗೆ !

ತನುಜಾನುಜರ ವಿಯೋಗದ
ಮನಃಕ್ಷತಂ ನೋಯಿಸಲ್ಕೆ ನೆಱೆಯದೆ ಸಮರಾ
ವನಿಜಾತ ಚರಣಕ್ಷತ
ಮಿನಿಸು ನೋಯಿಕುಮೆ ವಜ್ರಮನನಪ್ಪೆನ್ನಂ॥೧೯॥

ತನುಜಾನುಜರ=ನನ್ನ ಮಕ್ಕಳ ಮತ್ತು ಸಹೋದರರ, ವಿಯೋಗದ ಮನಃಕ್ಷತಂ= ಅಗಲುವಿಕೆಯಿಂದ ಮನಸ್ಸಿಗುಂಟಾದ ಆಘಾತ, ನೋಯಿಸಲ್ಕೆ ನೆಱೆಯದೆ= ನೋವನ್ನುಂಟುಮಾಡುವುದಕ್ಕಿ ಸಮರ್ಥವಾಗದಿರಲು, ಸಮರಾವನಿಜಾತಂ= ರಣಭೂಮಿಯಲ್ಲಿ ಉಂಟಾದ, ಚರಣಕ್ಷತಂ= ಪಾದಗಳ ಗಾಯವು, ವಜ್ರಮನನಪ್ಪ ಎನ್ನಂ=
ವಜ್ರದಷ್ಟು ಕಠಿಣಮನಸ್ಸುಳ್ಳ ನನ್ನನ್ನು , ಇನಿಸುಂ= ಸ್ವಲ್ಪವಾದರೂ, ನೋಯಿಕುಮೆ= ನೋವನ್ನುಂಟುಮಾಡೀತೇ?

ತಾತ್ಪರ್ಯ:- ನನ್ನ ಮಕ್ಕಳ ಮತ್ತು ತಮ್ಮಂದಿರ ಸಾವಿನಿಂದುಂಟಾದ ಮನೋವ್ಯಥೆಯು ವಜ್ರದಷ್ಟು ಕಠಿಣ ಮನಸ್ಸುಳ್ಳ ನನ್ನನ್ನು ನೋಯಿಸುವುದಕ್ಕೆ ಸಮರ್ಥವಾಗಲಿಲ್ಲ. ಎಂದ ಬಳಿಕ ಯುದ್ಧಭೂಮಿಯಲ್ಲಿ ಮುರಿದು ಬಿದ್ದ ಆಯುಧಗಳಿಂದ ಪಾದಗಳಿಗಾದ ಗಾಯವು ನನಗೆ ಸ್ವಲ್ಪವಾದರೂ ನೋವನ್ನುಂಟುಮಾಡೀತೇ?

ತನುಜಾನುಜರ ಮರಣದಿಂದುಂಟಾದ ನೋವೆಲ್ಲಿ? ಚರಣಕ್ಷತದ ನೋವೆಲ್ಲಿ? ಅದನ್ನು ಸಹಿಸಿದ ನನಗೆ ಇದು ಗಣ್ಯವಲ್ಲವೆಂಬ ಭಾವ.

ಮೊನೆಯೊಳಿದಿರ್ಚಿ ಸತ್ತಭಟನಂ ಗಜದೃಷ್ಟಿಯೊಳಣ್ಮಿ ಬೀ
ರನನದಟಿಂ ಸಹಸ್ರಭಟರಂ ರಣದೊಳ್ ಪೊಣರ್ದಿಕ್ಕಿ ಸತ್ತ ಗಂ
ಡನನಱಸುತ್ತೆ ಬರ್ಪ ಸುರಸುಂದರಿಯರ್ಕಳನೀಕ್ಷಿಸುತ್ತುಮೊ
ಯ್ಯನೆ ನಡೆದಂ ಪರಾಕ್ರಮನಿಕೇತನನಾ ಫಣಿರಾಜಕೇತನಂ॥೨೦॥

ಮೊನೆಯೊಳ್= ಯುದ್ಧ ಮುಖದಲ್ಲಿ, ಇದಿರ್ಚಿ ಸತ್ತ ಭಟನಂ= ಪ್ರತಿಭಟಿಸಿ ಸತ್ತು ಹೋದ ವೀರರನ್ನೂ, ಗಜದೃಷ್ಟಿಯೊಳ್= ಆನೆಯೊಂದಿಗೆ, ಅಣ್ಮಿ ಸತ್ತ ಬೀರನಂ= ಸಾಹಸವನ್ನು ತೋರಿ ಸತ್ತ ವೀರನನ್ನೂ, ಅದಟಿಂ ಸಹಸ್ರ ಭಟರಂ ರಣದೊಳ್= ಪರಾಕ್ರಮದಿಂದ ಸಾವಿರ ಯೋಧರೊಂದಿಗೆ ರಣರಂಗದಲ್ಲಿ, ಪೊಣರ್ದು= ಹೋರಾಡಿ, ಇಕ್ಕಿ = ಕೊಂದು, ಸತ್ತ ಗಂಡನನ್= ಸತ್ತ ಪರಾಕ್ರಮಿಯನ್ನು, ಅಱಸುತ್ತೆ ಬರ್ಪ= ಹುಡುಕುತ್ತಾ ಬರುತ್ತಿರುವ, ಸುರಸುಂದರಿಯರ್ಕಳನ್= ದೇವಾಂಗನೆಯರನ್ನು, ಈಕ್ಷಿಸುತ್ತುಂ= ನೋಡುತ್ತಾ, ಪರಾಕ್ರಮ ನಿಕೇತನನ್= ಪರಾಕ್ರಮಕ್ಕೆ ನೆಲವನೆಯಾದ, ಆ ಫಣಿರಾಜಕೇತನಂ= ದುರ್ಯೋಧನನು, ಒಯ್ಯನೆ ನಡೆದಂ= ಮೆಲ್ಲನೆ ನಡೆದನು,

ತಾತ್ಪರ್ಯ :- ಯುದ್ಧದಲ್ಲಿ ಮುಂದಾಗಿ ಶತ್ರುಗಳನ್ನು ಪ್ರತಿಭಟಿಸಿ ಕಾದಾಡಿ ಸತ್ತ ಶೂರರನ್ನೂ, ಆನೆಯೊಂದಿಗೆ ಕಾದಾಡಿ ಸತ್ತ ವೀರರನ್ನೂ, ಪರಾಕ್ರಮದಿಂದ ಸಹಸ್ರಯೋಧರೊಂದಿಗೆ ಹೋರಾಡಿ ಅವರನ್ನೆಲ್ಲ ಕೊಂದ ಬಳಿಕ ಸತ್ತ ಗಂಡುಗಲಿಗಳನ್ನೂ ಹುಡುಕುತ್ತಾ ಬರುತ್ತಿರುವ ಸುರಸುಂದರಿಯರನ್ನು ನೋಡುತ್ತಾ ಪರಾಕ್ರಮಕ್ಕೆ ಆಗರನಾದ ನಾಗಕೇತನನು ನಿಧಾನವಾಗಿ ಮುಂದೆ ಸಾಗಿದನು.

ರಸ :- ವೀರ.

ಇನಿಸಿನಿಸುತಿಂಬೆವೊರ್ಮೆಯೆ
ತಿನೆ ತವುಗುಮಿದೆಂದು ತಾಯುಮಾನೆಯ ಪೆಣನಂ
ತಿನಲಾಱದೆ ಪೆಱರ್ಗಿಕ್ಕದೆ
ಮನಮಂ ಪಸುತಿರ್ದುವಲ್ಲಿ ಲೋಭಿಮರುಳ್ಗಳ್॥೩೮॥

ಇನಿಸಿನಿಸು= ಸ್ವಲ್ಪ ಸ್ವಲ್ಪವೇ , ತಿಂಬೆವು= ತಿನ್ನುತ್ತೇವೆ, ಒರ್ಮೆಯೆ ತಿನೆ= ಒಂದೇ ಬಾರಿಗೆ ತಿಂದರೆ, ತವುಗುಂ ಇದು ಎಂದು= ಇದು ಮುಗಿದು ಹೋದೀತೆಂದು, ಆನೆಯ ಪೆಣನಂ= ಆನೆಯ ಶವವನ್ನು, ತಾಮುಂ ತಿನಲಾಱದೆ= ತಾವೂ ತಿನ್ನಲಾರದೆ, ಪೆಱರ್ಗಿಕ್ಕದೆ= ಇತರರಿಗೂ ಬಡಿಸದೆ, ಲೋಭಿಮರುಳ್ಗಳ್= ಜಿಪುಣಪಿಶಾಚಿಗಳು, ಮನುಮಂ ಪಸುತೆ= ಮನಸ್ಸಿನಲ್ಲಿ ಹಸಿವುತ್ತ, ಅಲ್ಲಿರ್ದುವು= ಅಲ್ಲಿದ್ದುವು.

ತಾತ್ಪರ್ಯ :- ಸ್ವಲ್ಪ ಸ್ವಲ್ಪವೇ ತಿನ್ನೋಣ, ಒಂದೇ ಬಾರಿಗೆ ತಿಂದರೆ ಮುಗಿದು ಹೋದೀತೆಂದುಹೇಳುತ್ತಾ ಕಡುಲೋಭಿ ಪಿಶಾಚಿಗಳು ಆನೆಯ ಹೆಣವನ್ನು ತಾವೂ ತಿನ್ನದೆ ಇತರರಿಗೂ ಕೊಡದೆ ಮನಸ್ಸಿನಲ್ಲೇ ಹಸಿದಿದ್ದುವು.

ನವಭೂತಭಾಷೆಯಿಂ ಕುಱು
ಪುವೇೞ್ದು ತಾಮಡ್ಡಗವಿತೆಯಂ ಮಾಡಿ ಮಹಾ
ವ್ಯವಸಾಯಂಗೆಯ್ವ ಮರು
ಳ್ಗವಿಗಳ್ ತಾವೇಂ ಗುಣಾಢ್ಯರಂ ಮಸುಳಿಸರೇ॥೪೨॥

ನವಭೂತಭಾಷೆಯಿಂ= ಹೊಸ ಪೈಶಾಚಿಕ ಭಾಷೆಯಿಂದ, ಕುಱುಪುವೇೞ್ದು= ಸಂಜ್ಞೆಮಾಡಿ, ತಾಂ=ತಾವು, ಅಡ್ಡಗವಿತೆಯಂ ಮಾಡಿ= ವ್ಯಂಗ್ಯ ಕಾವ್ಯವನ್ನು ರಚಿಸಿ, ಮಹಾವ್ಯವಸಾಯಂಗೆಯ್ವ= ಬಹು ಶ್ರಮ ಪಡುವ ಮರುಳ್ಗವಿಗಳ್= ಪಿಶಾಚಕವಿಗಳು, ತಾವೇಂ= ತಾವೇನು, ಗುಣಾಢ್ಯರಂ= ಗುಣಾಢ್ಯರನ್ನು, ( ಗುಣಾಢ್ಯನೆಂಬ ಕವಿ ಪೈಶಾಚಿಕ ಭಾಷೆಯಲ್ಲಿ
“ ಬೃಹತ್ಕಥೆ” ಯನ್ನು ಬರೆದಿದ್ದಾನೆ ) ಮಸುಳಿಸರೇ=ಕಾಂತಿಗೆಡಿಸರೇ?

ತಾತ್ಪರ್ಯ :- ಹೊಸ ಪೈಶಾಚಿಕ ಭಾಷೆಯಲ್ಲಿ ಸಂಜ್ಞಾಪೂರಕವಾಗಿ ವ್ಯಂಗ್ಯಕಾವ್ಯವನ್ನು ರಚಿಸಿ ಬಹುಶ್ರಮವಹಿಸಿ ಪ್ರಚಾರಮಾಡುವ ಕವಿಪಿಶಾಚಿಗಳು, ಪೈಶಾಚಿಕ ಭಾಷೆಯಲ್ಲಿ ಬೃಹತ್ಕಥಾಕಾವ್ಯವನ್ನು, ರಚಿಸಿದ ಗುಣಾಢ್ಯ ಕವಿಯನ್ನು ನಾಚಿಸರೇ?

ಅಲಂಕಾರ : ವ್ಯಾಜಸ್ತುತಿ.

ಗುರುವಿನ ನೆತ್ತರಂ ಕುಡಿವೆನಪ್ಪೊಡೆ ದ್ವಿಜವಂಶಜಂ ನಿಜಾ
ವರಜನ ನೆತ್ತರಂ ಕುಡಿವೆನಪ್ಪೊಡೆ ಭೀಮನೆ ಪೀರ್ದನೆಯ್ದೆ ಭೀ
ಷ್ಮರ ಬಿಸುನೆತ್ತರಂ ಕುಡಿವೊಡಿನ್ನುಮೊಳಂ ಕುರುರಾಜ ನಿನ್ನ ನೆ
ತ್ತರ ಸವಿನೋೞ್ಪೊಡಾಂ ಬಯಸಿ ಬಂದಪೆನೆಂದದೊಂದು ಪುಲ್ಮರುಳ್॥೪೩॥

ಗುರುವಿನ ನೆತ್ತರಂ ಕುಡಿವೆನಪ್ಪೊಡೆ= ದ್ರೋಣಾಚಾರ್ಯರ ನೆತ್ತರನ್ನು ಕುಡಿಯೋಣವೆಂದರೆ, ಅವಂದ್ವಿಜವಂಶಜಂ= ಅವನು ಬ್ರಾಹ್ಮಣ, ( ಬ್ರಾಹ್ಮಣನ ರಕ್ತವು ಪಿಶಾಚಿಗಳ ಗಂಟಲನ್ನು ಸುಡುವುದಂತೆ. ವೇಣೀಸಂಹಾರ ೨ ನೆಯ ಅಂಕದಲ್ಲಿ ಈ ವಿಚಾರ ಬಂದಿದೆ ) ನಿಜ ಅವರಜನ= ನಿನ್ನ ತಮ್ಮನಾದ ದುಶ್ಯಾಸನನ, ನೆತ್ತರಂ ಕುಡಿವೆನಪ್ಪೊಡೆ= ನೆತ್ತರನ್ನು ಕುಡಿಯೋಣವೆಂದರೆ, ಭೀಮನೆ ಎಯ್ದೆ ಪೀರ್ದಂ= ಭೀಮನೇ ಸಂಪೂರ್ಣ ಹೀರಿಬಿಟ್ಟಿದ್ದಾನೆ, ಭೀಷ್ಮರ ಬಿಸುನೆತ್ತರಂಕುಡಿವೊಡೆ= ಭೀಷ್ಮರ ಬಿಸಿರಕ್ತವನ್ನು ಕುಡಿಯೋಣವೆಂದರೆ, ಇನ್ನುಂ ಒಳಂ= ಇನ್ನೂ ಬದುಕಿದ್ದಾನೆ, ಕುರುರಾಜ=ದುರ್ಯೋಧನನೆ, ನಿನ್ನ ನೆತ್ತರ ಸವಿನೋೞ್ಪೊಡೆ ಆಂ = ನಾವು ನಿನ್ನ ನೆತ್ತರ ರುಚಿ ನೋಡುವುದಕ್ಕಾಗಿಯೇ, ಬಯಸಿ ಬಂದಪೆಂ= ಆಸೆಪಟ್ಟು ಬಂದಿದ್ದೇನೆ, ಎಂದುದು ಅದೊಂದು ಪುಲ್ಮರುಳ್= ಎಂದು ಹೇಳಿತು ಒಂದು ಕ್ಷುದ್ರ ಪಿಶಾಚಿ.

ತಾತ್ಪರ್ಯ :- ರಕ್ತಪಿಪಾಸಿಯಾದ ಒಂದು ಕ್ಷುದ್ರ ಪಿಶಾಚಿ ದುರ್ಯೋಧನನನ್ನು ಸಂಬೋಧಿಸಿ ಹೀಗೆಂದಿತು : “ ದ್ರೋಣನು ಬ್ರಾಹ್ಮಣ; ಅವನ ರಕ್ತ ನನಗೆ ಒಗ್ಗದು. ನಿನ್ನ ತಮ್ಮು ನೆತ್ತರನ್ನು ಭೀಮನೇ ಹೀರಿಬಿಟ್ಟನು. ಭೀಷ್ಮರ ಬಿಸಿನೆತ್ತರನ್ನು ಕುಡಿಯೋಣವೆಂದರೆ ಆ ಮುದುಕ ಇನ್ನೂ ಸತ್ತಿಲ್ಲ. ಆದುದರಿಂದ ನಿನ್ನ ನೆತ್ತರಿನ ರುಚಿನೋಡುವುದಕ್ಕೆ ಆಸೆಪಟ್ಟು ಬಂದಿದ್ದೇನೆ “

ಹುಲು ಪಿಶಾಚಿಗೂ ರಾಜ ದುರ್ಯೋಧನನನ್ನು ಎದುರಿಸಿ ಮಾತನಾಡುವ ಧೈರ್ಯ ಬಂದಿತ್ತು ಆಗ. ಇದು ಕಾಲಗತಿಯಲ್ಲದೆ ಮತ್ತೇನು?

ಕದನದೊಳುಣ್ಮಿದೊಳ್ಮಿದುಳ ಕರ್ದಮದೊಳ್ ಜಗುಳ್ದಂಘ್ರಿ ಜಾಱಿ ಪೋ
ಪುದುಮೊಡನಿರ್ದ ಸಂಜಯನಿಳೇಶ್ವರನಂ ಪಿಡಿದೂರುಭಂಗಮಾ
ಗದೆ ವಲಮೆಂದೊಡಾಗದೆನೆ ಪುಲ್ಮರುಳೊಂದೆಡೆವೋಗಿ ಭೀಮ ಕೋ
ಪದೆ ನಿನಗೂರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ॥೪೪॥

ಕದನದೊಳ್= ಯುದ್ಧದಲ್ಲಿ, ಉಣ್ಮಿದ= ಹೊರಸೂಸಿದ, ಒಳ್ ಮಿದುಳ ಕರ್ದಮದೊಳ್= ಒಳ್ಳೆಯ ಮಿದುಳಿನ ಕೆಸರಿನಲ್ಲಿ, ಜಗುಳ್ದು= ಜಾರಿ, ಅಂಘ್ರಿ ಜಾಱಿ ಪೋಪುದುಂ= ಪಾದವು ಜಾರಿ ಬೀಳಲು, ಒಡನೆ ಇರ್ದ= ಒಟ್ಟಿಗಿದ್ದ, ಸಂಜಯನ್= ಸಂಜಯನು, ಇಳೇಶ್ವರನಂ ಪಿಡಿದು= ರಾಜನನ್ನು ಹಿಡಿದೆತ್ತಿ, ಊರು ಭಂಗಂ ಆಗದೆ ವಲಂ= ತೊಡೆ ಮುರಿದಿಲ್ಲವಷ್ಟೆ, ಎಂದೊಡೆ= ಎಂದು ಕೇಳಿದಾಗ,ಆಗದು ಎನೆ= ಆಗಲಿಲ್ಲವೆಂದು, ಹೇಳಲೈ, ಪುಲ್ಮರುಳ್ ಒಂದು= ಕ್ಷುದ್ರ ಪಿಶಾಚಿಯೊಂದು,
ಎಡೆವೋಗಿ= ಮಧ್ಯೆ ಪ್ರವೇಶಿಸಿ, ಕೌರವೇಶ್ವರಾ! ಭೀಮ ಕೋಪದೆ= ಭೀಮನ ಕೋಪದಿಂದ , ನಿನಗೆ, ಊರುಭಂಗಭಯಂ= ತೊಡೆ ಮುರಿಯುವ ಭಯವು, ಆಗದೆ ಪೋಕುಮೇ= ಆಗದೆ ಹೋದೀತೇ?

ತಾತ್ಪರ್ಯ:- ಯುದ್ಧದಲ್ಲಿ ಯೋಧರ ತಲೆಯೊಡೆದು ಹೊರಸೂಸಿದ ಮಿದುಳಿನ ಕೆಸರಿನಲ್ಲಿ ಪಾದವು ಜಾರಿ ಬೀಳುತ್ತಿರಲು ಒಟ್ಟಿಗಿದ್ದ ಸಂಜಯನು ದುರ್ಯೋಧನನನ್ನು ಹಿಡಿದೆತ್ತಿ “ ತೊಡೆ ಮುರಿದಿಲ್ಲವಷ್ಟೆ “ ಎಂದು ಕೇಳಿದಾಗ ಅವನು ‘ಇಲ್ಲ
ಎನ್ನಲು ಇವರ ಮಾತನ್ನು ಕೇಳುತ್ತಿದ್ದ ಕ್ಷುದ್ರ ಪಿಶಾಚಿಯೊಂದು ಮಧ್ಯದಲ್ಲಿ ಬಾಯಿ ಹಾಕಿ “ ಕೌರವೇಶ್ವರಾ ! ಭೀಮನ ಕೋಪದಿಂದ ನಿನಗೆ ಊರುಭಂಗಭಯವಾಗದೆ ಹೋದೀತೇ “ ಎಂದಿತು.

ಅರಗಿನಮಾಡದೊಳ್ ವಿಷದ ಲಡ್ಡುಗೆಯೊಳ್ ಕೊಲಲೆಂದು ಬಂಧುಮ
ತ್ಸರದೊಳೆ ವೈರಮಂ ಪದೆದು ಭೀಮನನಿನ್ನಿನಿತರ್ಕೆ ತಂದ ನೀಂ
ಮರುಳಯೊ ಭೂತಕೋಟಿವೆರಸಾಹವರಂಗದೊಳಾಡುತಿರ್ಪ ತಾಂ
ಮರುಳಯೊ ನೋೞ್ಪಮಿರ್ವರ ಮರುಳ್ತನಮಂ ಫಣಿರಾಜಕೇತನಾ॥೪೫॥

ಅರಗಿನ ಮಾಡದೊಳ್= ಅರಗಿನ ಮಹಡಿ ಮನೆಯಲ್ಲಿ, ವಿಷದ ಲಡ್ಡುಗೆಯೊಳ್= ವಿಷದ ಲಡ್ಡುಗೆಗಳಲ್ಲಿ, ಕೊಲಲೆಂದು=ಕೊಲ್ಲಲು ಆಗಲಿಲ್ಲವೆಂದು, ಬಂಧು ಮತ್ಸರದೊಳೆ= ದಾಯಾದ್ಯ ಮತ್ಸರದಲ್ಲಿ, ವೈರಮಂ ಪದೆದು= ದ್ವೇಷವನ್ನೇ ನೆಚ್ಚಿ, ಭೀಮನನ್ ಇನ್ ಇನಿತರ್ಕೆ ತಂದ= ಭೀಮನನ್ನು ಇನ್ನು ಈ ನೆಲೆಗೆ ತಂದ, ನೀಂ ಮರುಳಯೊ=ನೀನು ಮರುಳನೋ? ಭೂತಕೋಟಿವೆರಸು= ಅಸಂಖ್ಯಾತ ಪಿಶಾಚಿಗಳೊಂದಿಗೆ , ಆಹವರಂಗದೊಳ್ ಆಡುತಿರ್ಪ= ಯುದ್ಧರಂಗದಲ್ಲಿ ವಿಹರಿಸುತ್ತಿರುವ, ತಾಂ= ನಾನು, ಮರುಳನೊ? ಫಣಿರಾಜಕೇತನಾ! ಇರ್ವರ ಮರುಳ್ತನಮಂ ನೋೞ್ಪಂ=
ಇಬ್ಬರ ಹುಚ್ಚುತನವನ್ನೂ ಹೋಲಿಸಿ ನೋಡುವ.

ಮರುಳ್ ಎಂದರೆ ಪಿಶಾಚವೆಂದೂ ಹುಚ್ಚ ಎಂದೂ ಅರ್ಥ. ದುರ್ಯೋಧನನು ಪಿಶಾಚಿಯನ್ನು ಮರುಳ್ ಎಂದು ಕರೆದುದರಿಂದ ಅವನನ್ನು ಅಷ್ಟಕ್ಕೇ ಬಿಡದೆ ತರಾಟೆಗೆ ತೆಗೆದುಕೊಳ್ಳುತ್ತದೆ.
ತಾತ್ಪರ್ಯ :-

ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋ
ದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ
ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂ
ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥

ಎಲೆ=ಎಲವೋ! ನುಡಿಯದೆ= ಉತ್ತರಕೊಡದೆ, ಪೋಗಲೀಯೆಂ= ಹೋಗಲು ಬಿಡಲಾರೆ, ಪೋದೊಡೆ ಧೂರ್ಜಟಿಯಾಣೆ= ಹೋದರೆ ಶಿವನಾಣೆ, ಮೀರಿ ಪೋದೊಡೆ= ಅಲಕ್ಷಿಸಿ ಹೋದೆಯಾದರೆ, ಕಲಿಭೀಮನಾಣೆ,ಎನೆ=ಎನ್ನಲು, ಧೂರ್ಜಟಿಯಾಣೆಗೆ ನಿಂದು= ಶಿವನಾಣೆಎಂದಾಗ ನಿಂತು, ಭೀಮನೆಂದೊಡೆ= ಭೀಮನಾಣೆ ಎಂದಾಗ, ಮುಳಿದು=ಕೋಪಿಸಿ, ಅಟ್ಟಿ ಕುಟ್ಟಲ್= ಅಟ್ಟಿ ಹೊಡೆಯುವುದಕ್ಕಾಗಿ, ಗದೆಗೊಂಡೊಡೆ= ಗದೆಯನ್ನು ಕೈಯಲ್ಲಿ ಹಿಡಿದಾಗ,
ಇದನ್ನು ನೋಡಿ, ಭೂತಕೋಟಿಯುಂ= ಎಲ್ಲ ಪಿಶಾಚಿಗಳೂ, ಬಡಿಗೊಳೆ=ದೊಣ್ಣೆಯನ್ನು ಹಿಡಿಯಲು, ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ= ಸಂಜಯನು ನಯವಾದ ಮಾತುಗಳಿಂದ ದುರ್ಯೋಧನನನ್ನು ಗದರಿಸಿದನು.

ತಾತ್ಪರ್ಯ :- ಉತ್ತರವನ್ನು ಕೊಡದೆ ಹೋದೆಯಾದರೆ ಶಿವನಾಣೆ ಇದೆ ಎಂದಾಗ ತನ್ನ ಗಮನವನ್ನು ತಡೆದ ದುರ್ಯೋಧನನು, ಭೀಮನಾಣೆಯಿದೆ ಎಂದಾಗ ಕೆರಳಿ ಗದೆಯನ್ನೆತ್ತಿ ಅಟ್ಟಿ ಬಡಿಯಲು ಮುಂದಾದನು. ಶಿವನಾಣೆಗೆ ಶಿರಬಾಗಿದರೆ ಭೀಮನಾಣೆಗೆ ಕೆರಳಿ ಕೆಂಡವಾದನು. ಆದರೇನು, ಪಿಶಾಚಿಗಳೆಲ್ಲ ಒಂದಾಗಿ ದೊಣ್ಣೆಗಳನ್ನು ಹಿಡಿದು ಪ್ರತಿಭಟಿಸಲು ಸಿದ್ಧವಾದವು. ಈ ಅನಿರೀಕ್ಷಿತ ದುರ್ಘಟನೆಯನ್ನು ಸಂಜಯನು ಉಪಾಯದಿಂದ ತಪ್ಪಿಸದಿರುತ್ತಿದ್ದರೆ ಅವರೊಳಗೆ ಹೊಯ್ಕೈಯೇ ನಡೆಯುತ್ತಿತ್ತು.

ಇಭಶೈಲಂಗಳನೇಱಿಯೇರಱಿ ರುಧಿರಸ್ರೋತಂಗಳಂ ದಾಂಟಿದಾಂ
ಟಿಭದೋರನೀಲಲತಾ ಪ್ರತಾನವಿಪಿನ ವ್ರಾತಂಗಳೊಳ್ ಸಿಲ್ಕಿ ಸಿ
ಲ್ಕಿ ಭರಂಗೆಯ್ದುಱದೆಯ್ದಿ ಸಂಜಯ ಶಿರಸ್ಕಂಧಾವಲಂಬಂ ಕುರು
ಪ್ರಭು ಕಂಡಂ ಶಲಜಾಲಜರ್ಜರಿತ ಗಾತ್ರತ್ರಾಣನಂ ದ್ರೋಣನಂ॥೪೮॥

ಸಂಜಯ ಶಿರಸ್ಕಂಧಾವಲಂಬಂ= ಸಂಜಯನ ಹೆಗಲನ್ನು ಆಶ್ರಯಿಸಿಕೊಂಡವನಾಗಿ,ಕುರುಪ್ರಭು= ಕೌರವೇಂದ್ರನು, ಇಭಶೈಲಂಗಳಂ= ಸತ್ತ ಆನೆಗಳೆಂಬ ಬೆಟ್ಟಗಳನ್ನು, ಏಱಿಯೇಱಿ= ಹತ್ತುತಾ ಹತ್ತುತ್ತಾ, ರುಧಿರ ಸ್ರೋತಂಗಳಂ= ರಕ್ತದ ನದಿಗಳನ್ನು, ದಾಂಟಿ ದಾಂಟಿ= ದಾಟುತ್ತ ದಾಟುತ್ತ, ಇಭ ದೋಃ = ಆನೆಗಳ ಸೊಂಡಿಲುಗಳೆಂಬ, ನೀಲಲತಾಪ್ರತಾನ= ಕಪ್ಪುಬಳ್ಳಿಗಳ ಸಮೂಹವೆಂಬ, ವಿಪಿನವ್ರಾತಂಗಳೊಳ್= ಕಾಡುಗಳ ಸಮೂಹಗಳಲ್ಲಿ ಸಿಲ್ಕಿ ಸಿಲ್ಕಿ, ಭರಂಗೆಯ್ದು= ಅತಿ ರಭಸದಿಂದ, ಉಱದೆ= ಲಕ್ಷ್ಯಮಾಡದೆ, ಎಯ್ದಿ= ನಡೆದು ಬಂದು, ಶರಜಾಲಜರ್ಜರಿತಗಾತ್ರತ್ರಾಣನಂ ದ್ರೋಣನಂ ಕಂಡು=
ಬಾಣಗಳ ಸಮೂಹದಿಂದ ನಜ್ಜುಗುಜ್ಜಾದದೇಹ ಮತ್ತು ಕವಚವುಳ್ಳ ದ್ರೋಣನನ್ನು ನೋಡಿದನು.
( ಏಱಿಯೇಱಿ, ದಾಂಟಿ ದಾಂಟಿ, ಸಿಲ್ಕಿ ಸಿಲ್ಕಿ - ಈ ದ್ವಿರುಕ್ತಿ ದುರ್ಯೋಧನನ ಗುರುದರ್ಶನೋತ್ಕಂಠೆಯನ್ನು ಸೂಚಿಸುತ್ತದೆ)

ತಾತ್ಪರ್ಯ :- ದುರ್ಯೋಧನನು ಸಂಜಯನ ಹೆಗಲನ್ನು ಆಧರಿಸಿಕೊಂಡು , ಸತ್ತ ಆನೆಗಳೆಂಬ ಬೆಟ್ಟಗಳನ್ನು ಹತ್ತುತ್ತಾ , ರಕ್ತದ ಹೊಳೆಗಳನ್ನು ದಾಟುತ್ತಾ,ಸೊಂಡಿಲುಗಳ ಕಪ್ಪಾದ ಬಳ್ಳಿಗಾಡುಗಳಲ್ಲಿ ಸಿಕ್ಕಿಕೊಳ್ಳುತ್ತಾ, ಇವಾವುದನ್ನೂ ಲೆಕ್ಕಿಸದೆ, ಅತಿ ರಭಸದಿಂದ ನಡೆದು ಬಂದು ಬಾಣಸಮೂಹದಿಂದ ನುಚ್ಚು ನೂರಾದ ದೇಹ ಮತ್ತು ಕವಚವುಳ್ಳ ದ್ರೋಣನನ್ನು ನೋಡಿದನು.

ಅಲಂಕಾರ :- ರೂಪಕ.   ರಸ - ವೀರ.

ಅಱಿಯೆಮೆ ಬಿಲ್ಲಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣಿಯುಂ
ನೆಱೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮ್ಮುಪೇಕ್ಷೆಯೆಂ
ದಱಿಯೆನಿದೆನ್ನ ಕರ್ಮವಶಮೆಂದರಿಯೆಂ ನಿಮಗಿಂತು ಸಾವುಮೇ
ತೆಱದಿನಕಾರಣಂ ನೆಱೆಯೆ ಸಂಭವಿಸಿರ್ದುದೊ ಕುಂಭಸಂಭವಾ॥೫೦॥

ಕುಂಭಸಂಭವಾ=ಹೇ ದ್ರೋಣನೆ, ಅಱಿಯೆಮೆ= ನಾವು ತಿಳಿಯೆವೇ? ಬಿಲ್ಲ ಬಿನ್ನಣಕೆ= ಧನುರ್ವಿದ್ಯಾಕೌಶಲದಲ್ಲಿ,
ಗಾಂಡಿವಿಯಲ್ತು= ಅರ್ಜುನನಲ್ಲ, ಪಿನಾಕಪಾಣಿಯುಂ= ಪಿನಾಕವೆಂಬ ಧನುಸ್ಸನ್ನುಕರದಲ್ಲಿ ಧರಿಸಿರುವ ಶಿವನು ಕೂಡ,
ನಿಮ್ಮೊಡನೆ ಇದಿರ್ಚಿ= ನಿಮ್ಮನ್ನು ಎದುರಿಸಿ, ಕಾದಿ ಗೆಲಲ್ಕೆ= ಹೋರಾಡಿ ಜಯಿಸಲು, ನೆಱೆಯಂ= ಸಮರ್ಥನಾಗುವುದಿಲ್ಲ, ಅದು= ಹಾಗೆ ಯುದ್ಧಾವಸರದಲ್ಲಿ ಶಸ್ತ್ರ ತ್ಯಾಗಮಾಡಿದ್ದು, ನಿಮುಮ ಉಪೇಕ್ಪೆಯೆಂದು ಅಱಿಯೆಂ= ನಿಮ್ಮ ಅಲಕ್ಷ್ಯದಿಂದಲೋ ತಿಳಿಯೆ, ಇದೆನ್ನ ಕರ್ಮವಶಂ ಎಂದು ಅಱಿಯೆಂ= ಇದು ನನ್ನ ಕರ್ಮಫಲವೋ ತಿಳಿಯೆ, ನಿಮಗೆ ಇಂತು, ಸಾವುಂ ಏತೆಱದಿಂ ಅಕಾರಣಂ ನೆಱೆಯೆ ಸಂಭವಿಸಿರ್ದುದೊ= ನಿಮ್ಮಂಥವರಿಗೆ ಅಕಾರಣವಾಗಿ ಇಂತಹ ದುರ್ಮರಣವು ಏಕೆ ಉಂಟಾಯಿತೋ !

ತಾತ್ಪರ್ಯ :- ಗುರುವರ್ಯಾ ! ಧನುರವಿದ್ಯಾಕೌಶಲದಲ್ಲಿ ನಿಮ್ಮನ್ನು ಪ್ರತಿಭಟಿಸಿ ಹೋರಾಡಿ ಗೆಲ್ಲಲು ಸಾಕ್ಷಾತ್ ಶಿವನಿಗೊ ಅಸಾಧ್ಯವೆಂದಮೇಲೆ ಅರ್ಜುನನ ಮಾತೆಲ್ಲಿ ? ಅವನು ನಿಮಗೆ ಎಷ್ಟರವನು ? ಈ ವಿಚಾರ ನನಗೆ ತಿಳಿಯದೇ ? ಹೀಗಿದ್ದರೂ ನೀವು ಶಸ್ತ್ರತ್ಯಾಗಮಾಡಿದ್ದು ಕೇವಲ ತಿರಸ್ಕಾರದಿಂದಲೋ ಅಥವಾ ನನ್ನ ಕರ್ಮಫಲವು ನಿಮ್ಮನ್ನು ಹಾಗೆ ಮಾಡಿಸಿತೋ ನಾನರಿಯೆ. ಅದೇನೇ ಇರಲಿ, ನಿಮ್ಮಂಥವರಿಗೂ ನಿಷ್ಕಾರಣವಾಗಿ ಇಂತಹ ದುರ್ಮರಣವು ಯಾಕಾಗಿ ಉಂಟಾಯಿತೋ!

ಇಲ್ಲಿ ಬರುವ “ ಕುಂಭಸಂಭವಾ “ ಎಂಬ ಸಂಬೋಧನೆಯೊಂದೇ ಸಾಕು ದ್ರೋಣನು ಅಮಾನುಷ ವ್ಯಕ್ತಿಯೆಂಬುದನ್ನು
ಧ್ವನಿಸಲು.

ಅದಟಿನ ಪಾರ್ಥನೆಚ್ಚು ಕೊಲೆ ಜಾತಬಲಂ ದ್ರುಪದಾತ್ಮಜಾಥನೋ
ವದೆ ಪುಡಿಯೊಳ್ ಪೊರಳ್ಚಿ ತಲೆಯಂ ತೆಗೆವಲ್ಲಿ ಪಿನಾಕವೆತ್ತವೋ
ದುದೊ ಶರವೆತ್ತವೋದುದೊ ಲಲಾಟದಿನಿಂಗಳಣ್ಣದೆತ್ತವೋ
ದುದೊ ಗುರುಸೂನು ತಾನುಮಣಮಮ್ಮನಲಂಪುಮದೆತ್ತವೋದುದೋ॥೫೧॥

ಅದಟಿನ ಪಾರ್ಥನ್= ಪರಾಕ್ರಮಿಯಾದ ಪಾರ್ಥನು, ಎಚ್ಚು ಕೊಲೆ= ಬಾಣಗಳನ್ನೆಸೆದು ಕೊಂದ ಬಳಿಕ, ದ್ರುಪದಾತ್ಮಜಾತನ್= ಧೃಷ್ಟದ್ಯುಮ್ನನು, ಜಾತಬಲಂ= ಧೈರ್ಯವುಳ್ಳವನಾಗಿ, ಓವದೆ=ನಿರ್ದಾಕ್ಷಿಣ್ಯವಾಗಿ, ಪುಡಿಯೊಳ್ ಪೊರಳ್ಚಿ= ಧೂಳಿನಲ್ಲಿ ಹೊರಳಾಡಿಸಿ, ತಲೆಯಂ ತೆಗೆವಲ್ಲಿ= ತಲೆಯನ್ನು ತುಂಡರಿಸುತ್ತಿರುವಾಗ, ಗುರುಸೂನು= ಎಲೈ ಅಶ್ವತ್ಥಾಮನೇ, ನಿನ್ನ ಪಿನಾಕವೆಲ್ಲಿ ಹೋಗಿತ್ತೋ? ಅಮೋಘವಾದ ಬಾಣಗಳೆಲ್ಲಿ ಅಡಗಿದ್ದುವೋ ? ಲಲಾಟದಿಂ= ಹಣೆಯಿಂದ, ಇಂಗಳಗಣ್= ಉರಿಗಣ್ಣು, ಅದೆತ್ತವೋದುದೊ=ಅದೆಲ್ಲಿ ನಂದಿಹೋಯಿತೋ ? ತಾನುಂ ಅಣಂ ಅಮ್ಮನ ಅಲಂಪುಂ= ನಿನಗೆ ತಂದೆಯ ಮೇಲಿದ್ದ ಅತ್ಯಧಿಕ ಪ್ರೇಮವೂ ಎಲ್ಲಿ ಹೋಗಿತ್ತೋ ? ( ಅಶ್ವತ್ಥಾಮನು ರುದ್ರಾವತಾರನೆಂದು ಪ್ರಸಿದ್ಧಿ. ಆದುದರಿಂದ ಶಿವನಂತೆ ಅವನಿಗೂ ಹಣೆಗಣ್ಣು, ಪಿನಾಕಾದಿಗಳಿದ್ದುವೆಂದು ಬಣ್ಣಿಸಲಾಗಿದೆ. )

ತಾತ್ಪರ್ಯ :- ಗುರುಪುತ್ರನಾದ ಅಶ್ವತ್ಥಾಮನೇ ! ನಿನ್ನ ಪ್ರೀತಿಯ ತಂದೆಯನ್ನು ಶೂರನಾದ ಅರ್ಜುನನು ಬಾಣಗಳನ್ನೆಸೆದು ಕೊಂದುದನ್ನು ಕಂಡು ಧೃಷ್ಟದ್ಯುಮ್ನನು ಧೈರ್ಯದಿಂದ ಧಾವಿಸಿ ಬಂದು , ಆ ಮೃತದೇಹವನ್ನು ಧೂಳಿನಲ್ಲಿ ಹೊರಳಾಡಿಸಿ , ಮುಡಿಗೆ ಕೈಯಿಕ್ಕಿ ಸೆಳೆದು ಶಿರವನ್ನು ಕತ್ತರಿಸುತ್ತಿದ್ದಾಗನೀನೆಲ್ಲಿದ್ದೆಯೋ ? ನಿನ್ನ ಪಿನಾಕವೆಲ್ಲಿ ಹೋಗಿತ್ತೋ ? ಬಾಣಗಳೆಲ್ಲಿ ಅಡಗಿದ್ದುವೋ ? ಉರಿಗಣ್ಣು ತಣ್ಣಗಾಗಿತ್ತೋ ? ನಿನ್ನ ಪಿತೃಪ್ರೇಮವೆಲ್ಲಿ ಕಣ್ಮರೆಯಾಗಿತ್ತೋ ?

ಅಶ್ವತ್ಥಾಮನು ರುದ್ರಾವತಾರನಾದರೇನಂತೆ ? ಆಪತ್ತಿಗೊದಗದ ಶೌರ್ಯ ಇದ್ದರೇನು , ಇಲ್ಲದಿದ್ದರೇನು ? ತಂದೆಯ ಋಣವನ್ನು ಮಗನು ತೀರಿಸದೆ ಹೋದನಲ್ಲ ಎಂಬ ಧರ್ಮರೋಷ ದುರ್ಯೋಧನನಿಗೆ.

ಶರಸಂಧಾನಮನನ್ಯಸೈನ್ಯದೊಡಲೊಳ್ ಬಿಲ್ಬಲ್ಮೆಯಂ ತನ್ನ ಶಿ
ಷ್ಯರ ಮೈಯೊಳ್ ನಿಜಕೀರ್ತಿಯಂ ನಿಖಿಳದಿಕ್ಚಕ್ರಂಗಳೊಳ್ ಚಿತ್ತಮಂ
ಹರ ಪಾದಾಂಬುಜಯುಗ್ಮದೊಳ್ ನಿಱಿಸಿದಂ ಚಾಪಾಗಮಾಚಾರ್ಯರೊಳ್
ದೊರೆಯಾರೆಂಬಿನಮಣ್ಮಿ ಸತ್ತಳವಿದೇಂ ದ್ರೋಣಂಗೆ ಮೈಯ್ವೆತ್ತುದೋ॥೫೨॥

ಶರಸಂಧಾನಮಂ= ಬಾಣಗಳ ಜೋಡಣೆಯನ್ನು, ಅನ್ಯಸೈನ್ಯದೊಡಲೊಳ್= ಶತ್ರುಸೈನಿಕರ ದೇಹಗಳಲ್ಲಿಯೂ, ಬಿಲ್ಬಲ್ಮೆಯಂ= ಧನುರ್ವಿದ್ಯಾಕೌಶಲವನ್ನು, ತನ್ನ ಶಿಷ್ಯರಮೆಯ್ಯೊಳ್= ತನ್ನ ಶಿಷ್ಯರ ದೇಹಗಳಲ್ಲಿಯೂ, ನಿಜಕೀರ್ತಿಯಂ=ತನ್ನ ಕೀರ್ತಿಯನ್ನು,ನಿಖಿಳದಿಕ್ಚಕ್ರಂಗಳೊಳ್= ದಶದಿಕ್ಕುಗಳಲ್ಲಿಯೂ, ಚಿತ್ತಮಂ= ಮನಸ್ಸನ್ನು, ಹರಪಾದಾಂಬುಜಯುಗ್ಮಗಳೊಳ್= ಶಿವನ ಪಾದಕಮಲಗಳಲ್ಲಿಯೂ, ನಿಱಿಸಿದಂ= ನೆಲೆಗೊಳಿಸಿದವನು, ಚಾಪಾಗಮಾಚಾರ್ಯರೊಳ್= ಧನುರ್ವಿದ್ಯಾವಿಶಾರದರಲ್ಲಿ, ದ್ರೋಣಂಗೆ= ದ್ರೋಣಾಚಾರ್ಯನಿಗೆ, ದೊರೆಯಾರ್= ಸಾಟಿಯಾರು,ಎಂಬಿನಂ= ಎನ್ನುವಂತೆ, ಅಣ್ಮಿಸತ್ತ= ಸಾಹಸವನ್ನು ತೋರಿ ಸತ್ತ, ಅಳವು= ಸಾಮರ್ಥ್ಯ, ಇದೇಂ ಮೆಯ್ವೆತ್ತುದೋ= ಮೂರ್ತಿಭವಿಸಿತೋ ಏನು ?

ಹಿಂದೆ ಉದ್ವೇಗದಲ್ಲಿ ತಂದೆಮಕ್ಕಳಿಬ್ಬರನ್ನೂ ಜೊತೆಯಾಗಿ “ ಇಸಲಂಬಂ ತಿಱುವಾಯ್ಗೆ ತಂದಱಿವರೇ.
“ ಕಯ್ಪೆ ಸೋರೆಯ ಕುಡಿಯೇಂ ಮಿಡಿಯೇಂ “ ಎಂದೆಲ್ಲ ನಿಂದಿಸಿದ ದುರ್ಯೋಧನನೇ ಪಶ್ಚತ್ತಾಪಪಟ್ಟು ಗುರುವಿನ ಗರಿಮೆ ಮಹಿಮೆಗಳನ್ನು ಮುಕ್ತಕಂಠದಿಂದ ಪೂರಶಂಸಿಸುತ್ತಾನೆ. ನಿಜವಾದ ಗುರುಗಳು ಎಂತಹ ನಿಸ್ವಾರ್ಥಿಗಳು, ಎಂತಹ ತ್ಯಾಗಿಗಳು ಎಂಬುದನ್ನು ಈ ಪದ್ಯವು ಸಾರುತ್ತದೆ.

ತಾತ್ಪರ್ಯ :-ತನ್ನ ಅಮೋಘಾಸ್ತ್ರಗಳನ್ನೆಲ್ಲಾ ಶತ್ರುಗಳ ದೇಹದಲ್ಲಿಯೂ, ಧನುರ್ವಿದ್ಯಾ ಪ್ರವೀಣತೆಯನ್ನು ಶಿಷ್ಯರ ಮೈಯಲ್ಲಿಯೂ, ಧವಲ ಕೀರ್ತಿಯನ್ನು ದಿಕ್ಕುದಿಕ್ಕುಗಳಲ್ಲಿಯೂ, ಮನಸ್ಸನ್ನು ಹರಚರಣದ್ವಯಗಳಲ್ಲಿಯೂ ನೆಲೆಗೊಳಿಸಿದ
ದ್ರೋಣನಿಗೆ ಸರಿದೊರೆಯಾದ ಧನುರ್ಧಾರಿಗಳು ಯಾರು ? ಎಂದು ಎಲ್ಲರೂ ಹೊಗಳು ವಹಾಗೆ , ತನ್ನ ಪರಾಕ್ರಮವನ್ನು
ಪ್ರದರ್ಶಿಸಿ ವೀರೋಚಿತವಾದ ಮರಣವನ್ನಪ್ಪಿದ ಗುರುವಿನಲ್ಲಿ ಪೌರುಷವೇ ಮೂರ್ತೀಭವಿಸಿತೋ ಏನು?

ಆಚಾರ್ಯರು ಸ್ವಲಾಭಕ್ಕಾಗಿ ಯಾವೈದನ್ನೂ ಮಾಡಿಲ್ಲ. ತನ್ನದಾಗಿದ್ದುದೆಲ್ಲವನ್ನೂ ಅನ್ಯರಿಗೆ ಅರ್ಪಿಸಿ ನಿಶ್ಚಿಂತರಾದರು.
ನಿಜವಾದ ಆಚಾರ್ಯರು ಹೀಗಿರಬೇಕಲ್ಲವೇ? ಆಚಾರ್ಯರ ಸ್ತಾನದಲ್ಲಿರುವವರು ಸದಾ ಸ್ಮರಿಸಬೇಕಾದ ವಿಚಾರವಿದು.

ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾ
ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳೞ್ದು ಬಿೞ್ದನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥

ಅರೆಮುಗಿದಿರ್ದಕಣ್ಗಳ್= ಅರ್ಧ ಮುಚ್ಚಿದ ಕಣ್ಣುಗಳು, ಅಲರ್ದಮೊಗಂ= ಅರಳಿದ ಮುಖ, ಕಡಿವೋದ ಕೆಯ್ಯುಂ= ತುಂಡಾದ ಕೈಗಳು, ಆಸುರತರಮಾಗೆ= ಅತಿ ಭಯಂಕರವಾದ ರೀತಿಯಲ್ಲಿ, ಕರ್ಚಿದ ಔಡುಂ ಬೆರಸಿದ= ಕಚ್ಚಿದ ಒಸಡುಗಳಿಂದ ಕೂಡಿದ, ಅನ್ಯಶರಪ್ರಹಾರ ಜರ್ಜರಿತ ಶರೀರನಾಗಿ= ಶತ್ರುಗಳ ಬಾಣಗಳ ಹೊಡೆತದಿಂದ ನಜ್ಜುಗುಜ್ಜಾದ ದೇಹವುಳ್ಳವನಾಗಿ, ನವಲೋಹಿತವಾರ್ಧಿಯೊಳ್ ಅೞ್ದು ಬಿೞ್ದನಂ= ಕೆನ್ನೆತ್ತರಿನ ಸಮುದ್ರದಲ್ಲಿ ಮುಳುಗಿ ಬಿದ್ದಿರುವ, ಆಜಿವೀರನಂ= ಯುದ್ಧವೀರನಾದ, ಅಭಿಮನ್ಯು ಕುಮಾರನಂ= ಕುಮಾರ ಅಭಿಮನ್ಯುವನ್ನು, ಕುರುಪತಿ= ದುರ್ಯೋಧನನು, ನೋಡಿ ಕಂಡಂ= ನೋಡಿ ಗುರುತಿಸಿದನು,

ತಾತ್ಪರ್ಯ :- ಅರೆಮುಚ್ಚಿದ ಕಣ್ಣುಗಳು, ಅರಳಿದ ಮುಖ, ಕತ್ತರಿಸಿದ ಕೈಗಳು, ನೋಡುವವರಿಗೆ ಅತ್ಯಧಿಕ ಭಯವನ್ನುಂಟುಮಾಡುವಂತೆ ಕಚ್ಚಿದ ಒಸಡುಗಳಿಂದ ಕೂಡಿದ, ಶತ್ರುಗಳು ಬಿಟ್ಟ ಬಾಣಗಳಿಂದ ನಜ್ಜುಗುಜ್ಜಾದ ದೇಹವುಳ್ಳ, ನೆತ್ತರ ಕಡಲಲ್ಲಿ ಮುಳುಗಿ ಬಿದ್ದಿರುವ ಯುದ್ಧವೀರನಾದ ಕುಮಾರ ಅಭಿಮನ್ಯುವನ್ನು  ದುರ್ಯೋಧನನು ನೋಡಿ ಗುರುತಿಸಿದನು.

ರಣಭಯಂಕರನಾದ ಅಭಿಮನ್ಯುಕುಮಾರನ ಅಂತಿಮ ಯಾತ್ರೆಯ ದೃಶ್ಯವಿದು ರುದ್ರಭಯಂಕರ; ಹೃದಯ ವಿದ್ರವಕ!

ಗುರುಪಣ್ಣಿದ ಚಕ್ರವ್ಯೂ
ಹರಚನೆ ಪೆಱರ್ಗರಿದು ಪುಗಲಿದಂ ಪೊಕ್ಕು ರಣಾ
ಜಿರದೊಳರಿನೃಪರನಿಕ್ಕೀದ
ನರಸುತ ನಿನ್ನೊರೆಗೆ ದೊರೆಗೆ ಗಂಡರುಮೋಳರೇ॥೫೫॥

ಗುರು ಪಣ್ಣಿದ= ದ್ರೋಣಾಚಾರ್ಯರು ನಿರ್ಮಿಸಿದ, ಚಕ್ರವ್ಯೂಹರಚನೆ= ಚಕ್ಕಾಕಾರವಾಗಿ ನಿಲ್ಲಿಸಿದ ಸೈನ್ವನ್ನು, ಪೆಱರ್ಗೆ=ಅನ್ಯರಿಗೆ, ಪುಗಲ್= ಪ್ರವೇಶಿಸಲು,ಅರಿದು=ಅಸಾಧ್ಯ, ಇದಂ ಪೊಕ್ಕು= ಇದನ್ನು ಭೇದಿಸಿ, ರಣಾಜಿರದೊಳ್= ಯುದ್ಧರಂಗದಲ್ಲಿ, ಅರಿನೃಪರಂ= ಶತ್ರುರಾಜರನ್ನು, ಇಕ್ಕಿದ=ಕೊಂದ, ನರಸುತ= ಅರ್ಜುನ ಕುಮಾರ, ನಿನ್ನ, ಒರೆಗೆ ದೊರೆಗೆ= ಸರಿಸಾಟಿಗೆ,  (ನಿಲ್ಲುವ ) ಗಂಡರು= ಗಂಡುಗಲಿಗಳೂ, ಒಳರೇ=ಇದ್ದಾರೆಯೇ? ಇಲ್ಲ.

ತಾತ್ಪರ್ಯ :-ದ್ರೋಣಾಚಾರ್ಯರು ನಿರ್ಮಿಸಿದ ಚಕ್ರವ್ಯೂಹವನ್ನು ಭೇದಿಸಿ ಮುನ್ನುಗ್ಗಲು ಸಮರ್ಥರಾದವರು ಅರ್ಜುನನೂ ನೀನೂ ಮಾತ್ರ. ಬೇರೆಯವರಿಗೆ ಇದು ಅಸಾಧ್ಯ. ಇದನ್ನು ಪ್ರವೇಶಿಸಿ ಯುದ್ಧರಂಗದಲ್ಲಿ ಅಸಂಖ್ಯಾತ ಶತ್ರುರಾಜರನ್ನು ಸಂಹರಿಸಿದ ಅರ್ಜುನಪುತ್ರನೇ ! ಯುದ್ಧದಲ್ಲಿ ನಿನಗೆ ಸರಿಸಾಟಿಯಾಗಿ ನಿಲ್ಲುವಂತಹ ಪರಾಕ್ರಮಿಗಳೂ ಇದ್ದಾರೆಯೇ?

ಚಕ್ರವ್ಯೂಹವನ್ನು ಭೇದಿಸುವ ರಹಸ್ಯವನ್ನು ಅರ್ಜುನನೂ ಅಭಿಮನ್ಯುವೂ ಮಾತ್ರವೇ ಅರಿತಿದ್ದರು. ಅರ್ಜುನನು ಕಾರ್ಯಾಂತರಮಗ್ನನಾಗಿದ್ದ ಸಮಯವನ್ನು ನೋಡಿಯೇ ಆಚಾರ್ಯನು ಈ ವ್ಯೂಹವನ್ನು ರಚಿಸಿದ್ದನು. ಈ ವ್ಯೂಹವನ್ನು ಭೇದಿಸಲು ಬೇರೆ ನಿರ್ವಾಹವಿಲ್ಲದೆ ಧರ್ಮರಾಯನು ಮನಸ್ಸಿಲ್ಲದ ಮನಸ್ಸಿನಿಂದ ಅಭಿಮನ್ಯುವನ್ನು ಬೀಳ್ಕೊಟ್ಟಿದ್ದನು.

ರಸ - ವೀರ .

ಪಲರಿರ್ದು ಕಾದಿದರ್ ಮೆ
ಯ್ಗಲಿಗಳ್ ನಿನ್ನೊಂದೆ ಮೆಯ್ಯೊಳಂ ತವೆ ಕೊಂದೈ
ಪಲರಂ ನಿನ್ನಂ ಪೆತ್ತಳ್
ಮೊಲೆವೆತ್ತಳೆ ವೀರಜನನಿವೆಸರಂ ಪೆತ್ತಳ್॥೫೬॥

ಮೆಯ್ಗಲಿಗಳ್= ಶೂರರು, ಪಲರ್ ಇರದು= ಹಲವರು ಸೇರಿ, ಕಾದಿದರ್, ನಿನ್ನ ಒಂದೆ ಮೆಯ್ಯೊಳಂ= ನೀನೊಬ್ಬನೇ, ಪಲರ್= ಹಲವರನ್ನು, ತವೆಕೊಂದೈ= ಸಂಪೂರ್ಣ ನಾಶಮಾಡಿದೆ, ನಿನ್ನ ಪೆತ್ತಳ್ = ನಿನ್ನನ್ನು ಹಡೆದವಳು, ಮೊಲೆವೆತ್ತಳೆ=ಸಾಮಾನ್ಯ ಹೆಣಣೇ? ಅಲ್ಲ, ವೀರಜನನಿ= ವೀರಮಾತೆ ( ಎಂಬ) ಪೆಸರಂ= ಕೀರ್ತಿಯನ್ನು ,ಪೆತ್ತಳ್=ಪಡೆದಳು.

ತಾತ್ಪರ್ಯ :- ಅಭಿಮನ್ಯು ! ವೀರಾಧಿವೀರರು ಹಲವರೊಂದಾಗಿ ನಿನ್ನ ಮೇಲೆ ಕೈಮಾಡಿದರೇನು? ಏಕಾಂಗಿವೀರನಾಗಿ ಹೋರಾಡಿ ಹೆಚ್ಚಿನವರನ್ನು ಸಂಹರಿಸಿದೆಯಲ್ಲ ! ನಿನ್ನನ್ನು ಹೆತ್ತವಳು ಸಾಮಾನ್ಯ ಸ್ತ್ರೀಯೆ? ನಿನ್ನನ್ನು ಹಡೆದಂದೇ ಆ ಮಾತೆ ವೀರಮಾತೆಯೆಂಬ ಕೀರ್ತಿಯನ್ನೂ ಪಡೆದಳು.

ಅಸ಼ಮಬಲ ಭವದ್ವಿಕ್ರಮ
ಮಸಂಭವಂ ಪೆಱರ್ಗೆ ನಿನ್ನನಾನಿನಿತಂ ಪ್ರಾ
ರ್ಥಿಸುವೆನಭಿಮನ್ಯು ನಿಜ ಸಾ
ಹಸೈಕದೇಶಾನುಮರಣಮೆಮಗಕ್ಕೆ ಗಡಾ॥೫೭॥

ಅಸಮಬಲ= ಅದ್ವಿತೀಯ ಸಾಹಸವುಳ್ಳವನೇ, ಭವದ್ವಿಕ್ರಮ= ನಿನ್ನಂಥ ಪರಾಕ್ರಮವು, ಪೆಱರ್ಗೆ = ಬೇರೆಯವರಿಗೆ, ಅರಿದು=ಅಸಾಧ್ಯ. ನಿನ್ನನ್ ಆನ್ ಇನಿತಂ ಪ್ರಾರ್ಥಿಸುವೆಂ= ನಿನ್ನಲ್ಲಿ ನಾನು ಇಷ್ಟನ್ನೇ ಬೇಡುತ್ತೇನೆ, ನಿಜಸಾಹಸ ಏಕದೇಶ ಅನುಮರಣಂ ಎಮಗೆ ಅಕ್ಕೆ ಗಡಾ= ನಿನ್ನ ಸಾಹಸದಲ್ಲಿ ಒಂದು ಭಾಗವಾದರೂ ನನ್ನಲ್ಲಿ ನೆಲಸಿ ಅದಕ್ಕನುಗುಣವಾದ ವೀರ ಮರಣವು ನನಗಾಗಲಿ. ( ಏಕದೇಶ= ಒಂದು ಭಾಗ , ಅನುಮರಣ= ಸಹಗಮನ )

ತಾತ್ಪರ್ಯ :- ಅನುಪಮ ಸಾಹಸಿಯೇ ! ನಿನ್ನ ವಿಕ್ರಮವು ಅನ್ಯರಿಗೆಲ್ಲಿ ? ನಾನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುವುದಿಷ್ಟೆ. ನಿನ್ನ ಸಾಹಸಕ್ಕೆ ಸದೃಶವಾದ ಸಾಹಸವೂ ನಿನ್ನ ಮರಣಕ್ಕೆ ಅನುಗುಣವಾದ ಮರಣವೂ ನನಗೆ ಲಭಿಸುವಂತಾಗಲಿ
ಅಭಿಮನ್ಯು ಶತ್ರು ಪುತ್ರನಾದರೂ ಪ್ರಾಯದಲ್ಲಿ ಕಿರಿಯನಾದರೂ ಅದೊಂದನ್ನೂ ಲೆಕ್ಕಿಸದೆ ಅವನ ಅದ್ಭುತ ಸಾಹಸಕ್ಕೆ ಮನಸೋತ ದುರ್ಯೋಧನನು ಮನಸ್ಸಿನಲ್ಲೇ ಮಣಿದು ಪ್ರಾರ್ಥಿಸಿಕೊಳ್ಳುತ್ತಾನೆ ಎಂದ ಮೇಲೆ ಮಹಾನುಭಾವನಲ್ಲವೇ ದುರ್ಯೋಧನ? ದುರ್ಯೋಧನನ ಈ ಮಾತುಗಳು ಸಹೃದಯರಿಗೆ ಮೆಚ್ಚಿಕೆಯಾಗಿ ಅವನಲ್ಲಿ ಅನುಕಂಪೆ ಹುಟ್ಟಿಸದಿರದು.
ಸಾಹಸ ಪಕ್ಷಪಾತಿ ದುರ್ಯೋಧನನ ಔದಾರೋದ್ಗಾರಗಳಿಗೆ ನಾವೂ ತಲೆದೂಗಬೇಕು.

ಧಾರಿಣಿಯೊಳ್ ನಿಜಸಂಯುಗ
ಭಾರಮನಾಂತಿರ್ದ ವೀರಪುಂಗವರಿರೆ ತ
ದ್ಭಾಲಮನಾಂತಭಿಮನ್ಯು ಕು
ಮಾರಂ ಪುಗೆ ವೀರರಮಣನೆನಿಸಿದನಲ್ತೆ॥೫೮॥

ಧಾರಿಣಿಯೊಳ್= ಕುರುಕ್ಷೇತ್ರದಲ್ಲಿ, ನಿಜ ಸಂಯುಗಭಾರಮನ್= ತಮ್ಮ ಯುದ್ಧದ ಹೊರೆಯನ್ನು, ಆಂತಿರ್ದ= ವಹಿಸಿಕೊಂಡಿದ್ದ, ವೀರಪುಂಗವರ್ ಇರೆ= ವೀರಶ್ರೇಷ್ಠರು ಇರುತ್ತಿರಲು, ತದ್ಭಾರಮನಾಂತು= ಆ ಭಾರವನ್ನು ಹೊತ್ತು, ಅಭಿಮನ್ಯು ಕುಮಾರಂ ಪುಗೆ= ಅಭಿಮನ್ಯುವು ಚಕ್ರವ್ಯೂಹವನ್ನು ಪ್ರವೇಶಿಸಿ, ವೀರರಮಣನೆನಿಸಿದನಲ್ತೆ= ಗಂಡರ
ಗಂಡನಾದನಲ್ಲವೇ?

ತಾತ್ಪರ್ಯ :- ಯುದ್ಧದ ಹೊರೆಯನ್ನು, ವಹಿಸಿದ ವೀರಶ್ರೇಷ್ಠರು ಬಹುಮಂದಿ ಇದ್ದರೂ ಅವರಿಂದ ಆ ಮಹಾಭಾರವನ್ನು ತಾನೇ ವಹಿಸಿ ಚಕ್ರವ್ಯೂಹವನ್ನು ಪ್ರವೇಶಿಸಿ ವೀರಾವೇಶದಿಂದ ಹೋರಾಡಿ, ವೀರರ ವೀರ - ಮಹಾವೀರನೆಂದು ಕರೆಯಿಸಿ ಕೊಂಡನಲ್ಲವೇ ಅಭಿಮನ್ಯು!

ತರುಣ ಯುವ ವೃದ್ಧ ವಿಕ್ರಮ
ಪರಿಣತರುಱದಿಕ್ಕಿ ಸಿಂಹಾಸಾಹಸನಿವನುಂ
ತರುಣನೆ ಆನುಂ ಯುವನೆನೆ
ಸುರಪಗಾನಂದನಂ ಮಹಾಜರ್ಜರನೇ॥೫೯॥

ತರುಣ= ಎಳೆಯ ಪ್ರಾಯದವನಾದ ಅಭಿಮನ್ಯು, ಯುವ= ಯುವಕರಾದ, ವೃದ್ಧ = ಪ್ರಾಯಸ್ಥರಾದ, ವಿಕ್ರಮಪರಿಣತರಂ=
ಪರಾಕ್ರಮ ಪಂಡಿತರನ್ನು, ಉಱದೆ=ಲೆಕ್ಕಿಸದೆ, ಇಕ್ಕಿ= ಕೊಂದು, ಸಿಂಹಸಾಹಸನ್ ಇವನುಂ= ಸಿಂಹ ಪರಾಕ್ರಮಿಯಾದ ಇವನೂ, ತರುಣನೇ=ಯುವಕನೇ! ಆನುಂ= ನಾನೂ, ಯುವನ್ ಎನೆ= ಯುವಕನೇ ಎಂದು ಭಾವಿಸಿದ, ಸುರಾಪಗಾನಂದನಂ= ( ಸುರ ಆಪಗಾ ನಂದನಂ )ದೇವಗಂಗೆಯ ಮಗನಾದ ಭೀಷ್ಮನು, ಮಹಾಜರ್ಜರನೇ= ಹಣ್ಣು ಮುದುಕನೇ!

“ತರುಣ “ ಶಬ್ದಕ್ಕೆ ಬಾಲಕನೆಂದೂ, ಯುವಕನೆಂದೂ, ಅರ್ಥ. ಬಾಲಕನಾದ ಅಭಿಮನ್ಯು ಶೌರ್ಯದಲ್ಲಿ ಯುವಕನೇ ಸರಿ.

ತಾತ್ಪರ್ಯ :- ಪರಾಕ್ರಮ ಪಂಡಿತರಾದ ಯುವಕರನ್ನೂ ವೃದ್ಧರನ್ನೂಯುದ್ಧದಲ್ಲಿ ಗಣನೆಗೆ ತಾರದೆ ಕೊಂದಿಕ್ಕಿ ಸಿಂಹಸಾಹಸಿಯಾದ ಅಭಿಮನ್ಯು ಬಾಲಕನೇ? ಅಲ್ಲ. ನಿಜಕ್ಕೂ ಯುವಕನೇ! ತಾನೂ ಯುವಕನೆಂಬ ಭಾವನೆಯಿಂದ ಯುದ್ಧಕ್ಕೆ ಮುಂದಾಗಿ ನಜ್ಜುಗುಜ್ಜಾದ ಗಾಂಗೇಯನು ಮಹಾವೃದ್ಧನೇ ಸರಿ.

ಅಲಂಕಾರ - ವ್ಯತಿರೇಕ.

ಪಸಿವಿನೊಳನ್ನಮಂ ಪಸಿದು ಬಂದವರ್ಗಿಕ್ಕುವ ಯುದ್ಧರಂಗದೊಳ್
ಕುಸಿಯದೆ ಸೂಱೆಗೊಳ್ಳದೆ ರಣಕ್ಕೆ ಶುಚಿತ್ವಮನಪ್ಪುಕೆಯ್ವ ಮಾ
ನಸಿಕೆಯ ನಾಲ್ವರುಂ ನಮಗೆ ವಂದ್ಯರವಂದೀರೊಳೀತನಲ್ತೆ ಸಾ
ಹಸಧನನೆಂದು ಕೆಯ್ಮುಗಿದನಂದಭಿಮನ್ಯುಗೆ ಕೌರವೇಶ್ವರಂ॥೬೦॥

ಪಸಿವಿನೊಳ್= ತಾನು ಹಸಿದಿರುವಾಗ, ಪಸಿದು ಬಂದವರ್ಗೆ= ಹಸಿವಾಗಿ ಬಂದವರಿಗೆ, ಅನ್ನಮಂ ಇಕ್ಕುವ= ಆಹಾರವನ್ನು
ಉಣಬಡಿಸುವ, ಯುದ್ಧರಂಗದೊಳ್= ರಣರಂಗದಲ್ಲಿ, ಕುಸಿಯದೆ=ಹಿಂಜರಿಯದೆ, ಸೂಱೆಗೊಳ್ಳದೆ= ಸುಲಿಗೆ ಮಾಡದೆ,
ರಣಕ್ಕೆ=ಯುದ್ಧದಲ್ಲಿ, ಶುಚಿತ್ವಮಂ= ಸತ್ಯವನ್ನು,ಅಪ್ಪುಕೆಯ್ದು=ಅಂಗೀಕರಿಸುವ, ಮಾನಸಿಕೆಯ= ಗಾಂಭಿರ್ಯವುಳ್ಳ, ನಾಲ್ವರುಂ ನಮಗೆ ವಂದ್ಯರ್= ನಾಲ್ಕು ಮಂದಿಯೂ ನನಗೆ ಪೂಜಾರ್ಹರು. ಅವಂದಿರೊಳ್= ಆ ನಾಲ್ವರಲ್ಲಿ, ಈತನಲ್ತೆ
ಸಾಹಸಧನನ್= ಇವನಲ್ಲವೇ ಸಾಹಸಧನನು, ಎಂದ= ಹೀಗೆನ್ನುತ್ತಾ, ಕೌರವೇಶ್ವರಂ= ದುರ್ಯೋಧನನು, ಅಂದು, ಅಭಿಮನ್ಯುಗೆ, ಕೆಯ್ಮುಗಿದಂ= ನಮಸ್ಕಾರ ಮಾಡಿದನು.
( 1. ಪಸಿದು ಬಂದವರ್ಗಿಕ್ಕುವ, 2. ಯುದ್ಧರಂಗದೊಳ್ ಕುಸಿಯದ, 3. ಸೂಱೆಗೊಳ್ಳದ, 4. ರಣಕ್ಕೆ ಶುಚಿತ್ವಮಂ ಅಪ್ಪುಕೆಯ್ವ - ಈ ನಾಲ್ಕು ಬಗೆಯ ಉದಾತ್ತ ವ್ಯಕ್ತಿಗಳು ಅಭಿವಂದ್ಯರು. )

ತಾನು ಹಸಿದಿರುವಾಗ ಹಸಿವೆಯಿಂದ ಬಳಲಿ ಬಂದವರಿಗೆ ಆಹಾರವನ್ನು ಉಣಬಡಿಸಿ ಅವರನ್ನು ತೃಪ್ತಿಪಡಿಸುವ, ರಣರಂಗದಲ್ಲಿ ಹಿಂಜರಿಯದ, ಅನ್ಯರ ಸ್ವತ್ತನ್ನು ಸುಲಿಗೆಮಾಡದ, ಯುದ್ಧದಲ್ಲಿ ಧರ್ಮವನ್ನು ಅಂಗೀಕರಿಸುವ, -ಉದಾತ್ತ ಮನೋಭಾವವುಳ್ಳ ನಾಲ್ಕು ಮಂದಿಯೂನನಗೆ ಪೂಜಾರ್ಹರು. ಆ ನಾಲ್ವರಲ್ಲಿ ಇವನಲ್ಲವೇ ಸಾಹಸಧನನು! ಎಂದು ಹೇಳುತ್ತಾ ಕೌರವೇಶ್ವರನು ಅಭಿಮನ್ಯುವಿಗೆ ಕೈಜೋಡಿಸಿ ವಂದಿಸಿದನು.

ಅಭಿಮಾನಧನನಾದ  ದುರ್ಯೋಧನನು ಸಾಹಸಧನನಾದ ಅಭಿಮನ್ಯುವಿಗೆ ಸಮರ್ಪಿಸಿದ ಈ ಶ್ರದ್ಧಾಂಜಲಿ - ಶೋಕಗೀತೆ , ಸಹೃದಯರ ಹೃದಯ ತಂತಿಯನ್ನು ಮಿಡಿಯದಿರದು.

ಗಳಿತಶರಮಾಯ್ತು ಹಸ್ತಂ
ಗಳಿತರಣೋತ್ಸಿಹಮಾಯ್ತು ಹೃದಯಂ ನಯನಂ
ಗಳಿತಾಶ್ರುವಾಯ್ತು ಕೌರವ
ಕುಲತಿಲಕಂಗೆ ಕುಮಾರನಂ ಕಾಣಲೊಡಂ॥೬೧॥

ಕೌರವಕುಲತಿಲಕಂಗೆ ಆ ಕುಮಾರನಂ ಕಾಣಲೊಡಂ= ಕೌರವೇಶ್ವರನಿಗೆ ತನ್ನ ಕುಮಾರನನ್ನು ಕಾಣುತ್ತಿರುವಷ್ಟರಲ್ಲೇ, ಹಸ್ತಂ ಗಳಿತಶರಮಾಯ್ತು= ಕೈಯಿಂದ ಬಾಣವು ತಾನಾಗಿ ಜಾರಿಬಿತ್ತು, ಹೃದಯನ ಗಳಿತರಣೋತ್ಸಾಹಮಾಯ್ತು= ಯುದ್ಧೋತ್ಸಾಹವು ಹೃದಯದಿಂದ ಕುಸಿಯಿತು, ನಯನಂ ಗಳಿತಾಶ್ರುವಾಯ್ತು= ಕಣ್ಣುಗಳಿಂದ ಅಶ್ರುಧಾರೆ ಸುರಿಯಿತು.

ತಾತ್ಪರ್ಯ :-ಆ ಕುಮಾರನನ್ನೈ ಕಂಡದ್ದೇ ತಡ ದುರ್ಯೋಧನನ ಕೈಯಿಂದ ಬಾಣವು ತಾನಾಗಿ ಜಾರಿಬಿತ್ತು, ಹೃದಯದಿಂದ
ಯುದ್ಧೋತ್ಸಾಹವು ಸರಿಯಿತು. ಕಣ್ಣುಗಳಿಂದ ಕಂಬನಿ ಧಾರಾಕಾರವಾಗಿ ಸುರಿಯಿತು.

ಪುತ್ರಶೋಕವು ದುರ್ಯೋಧನನ ಧೈರ್ಯವನ್ನು ಒಮ್ಮೆಗೆ ಕದಲಿಸಿಬಿಟ್ಟಿತು!

ರಸ -ಕರುಣ.

ಜನಕಂಗೆ ಜಲಾಂಜಲಿಯಂ
ತನೂಭವಂ ಕುಡುವುದುಚಿತಮದುಗೆಟ್ಟೀಗಳ್
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ॥೬೨॥

ತನೂಭವಂ= ಮಗನು, ಜನಕಂಗೆ= ತಂದೆಗೆ, ಜಲಾಂಜಲಿಯಂ= ತರಪಣೋದಕವನ್ನು, ಕುಡುವುದು ಉಚಿತಂ= ಕೊಡುವುದು ಯೋಗ್ಯ, ಅದುಗೆಟ್ಟೀಗಳ್ ನಿನಗೆ ಆಂ ಕುಡುವಂತೆ ಆದುದೆ= ಅದು ತಪ್ಪಿ ಹೋಗಿ ಈಗ ನಿನಗೆ ನಾನು
ಕೊಡುವಂತಾಯಿತೇ? ತನೂಜ! ನೀಂ ಕ್ರಮವಿಪರ್ಯಯಮಂ ಮಾಡುವುದೇ= ನೀನು ಪದ್ದತಿಯನ್ನು ವ್ಯತ್ಯಾಸಗೊಳಿಸುವುದೇ?

ತಾತ್ಪರ್ಯ :- ಮಗನೇ! ತಂದೆಗೆ ತರ್ಪಣೋದಕವನ್ನು ಮಗನು ಕೊಡುವುದು ಲೋಕ ನಿಯಮ. ಅದನ್ನು ಬಿಟ್ಟು ಈಗ ನಾನು ನಿನಗೆ ತಿಲೋದಕವನ್ನು ಕೊಡುವಂತಾಯಿತೇ! ನೀನೇಕೆ ಈ ನಿಯಮವನ್ನು ಅದಲು ಬದಲು ಮಾಡಿಬಿಟ್ಟೆ.

ಪಂಚಮಾಶ್ವಾಸಂ

ಪುಡಿಯೊಳ್ ಪೊರಳ್ಚಿಯುಂ ಮೆ
ಯ್ಯಡಗಂ ತಿಱಿತಱಿದು ಕೊಱೆದು ತಿಂದುಂ ಗೊಟ್ಟಂ
ಗುಡಿದುಂನೆತ್ತರನೆಂತುಂ
ಹಿಡಿಂಬರಿಪು ತಣಿದನಿಲ್ಲ ದುಶ್ಯಾಸನನಂ||೩||

ದುಶ್ಯಾಸನನಂ= ದುಶ್ಯಾಸನನನ್ನು, ಪುಡಿಯೊಳ್ ಪೊರಳ್ಚಿ= ಧೂಳಿನಲ್ಲಿ ಹೊರಳಾಡಿಸಿಯೂ, ಮೆಯ್ಯ ಅಡಗಂ ತಿಱಿತಿಱಿದು ಕೊಱೆದು= ಮೈಯ ಮಾಂಸವನ್ನು ತುಂಡು ತುಂಡಾಗಿಕತ್ತರಿಸಿ ತಿಂದೂ, ನೆತ್ತರಂ ಗೊಟ್ಟಂಗುಡಿದು= ರಕ್ತವನ್ನು ಗೊಟಗೊಟನೆ ಕುಡಿದೂ, ಹಿಡಿಂಬ ರಿಪು= ಭೀಮನು, ಎಂತುಂ= ಹೇಗೂ, ತಣಿದನಿಲ್ಲ=ತೃಪ್ತನಾಗಲಿಲ್ಲ.

ತಾತ್ಪರ್ಯ :- ದುಶ್ಯಾಸನನನ್ನು ಧೂಳಿನಲ್ಲಿ ಹೊರಳಾಡಿಸಿಯೂ ಅವನ ಮಾಂಸವನ್ನು ತುಂಡುತುಂಡಾಗಿ ಕತ್ತರಿಸಿ ತಿಂದೂ, ನೆತ್ತರನ್ನು ಗೊಟಗೊಟನೆ ಹೊಟ್ಟೆ ತುಂಬ ಕುಡಿದೂ ಹಿಡಿಂಬರಿಪುವಾದ ಭೀಮನು ಹೇಗೂ ತೃಪ್ತನಾಗಲಿಲ್ಲ!

ಇಷ್ಟೆಲ್ಲ ಮಾಡಿದರೂ ಭೀಮನಿಗೆ ತೃಪ್ತಿಯಾಗಲಿಲ್ಲವಂತೆ.

ನಡುವುಡಿವನ್ನಮೇಱಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ
ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋೞ್ದುನೆತ್ತರಂ
ಕುಡಿಕುಡಿದಾರ್ದ ವೈರಿಯುೞಿದನ್ನೆಗಮೆನ್ನೞಲೆಂತು ಪೋಕುಮೆಂ
ದಡಿಗಡಿಗೞ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ॥೪॥

ನಡುವುಡಿವನ್ನಂ= ಸೊಂಟವು ಮುರಿಯುವಂತೆ,ಏಱಿ=ಮೈಮೇಲೆ ಬಿದ್ದು, ಬರಿಯೆಲ್ವು= ಪಕ್ಕೆಲಬುಗಳು,ಉಡಿವನ್ನೆಗಂ= ತುಂಡಾಗುವಂತೆ, ಒತ್ತಿ =ಅಮುಕಿ, ಮೈಯ ಅಡಗು ಅಡಗಾಗೆ ಮೆಟ್ಟಿ= ದೇಹದ ಮಾಂಸವು ಮುದ್ದೆಯಾಗುವಂತೆ ಒದೆದು,ಮುನ್ನ= ಮುಂದೆ, ಉರಮಂ= ಎದೆಯನ್ನು, ಇರ್ಬಗಿಯಾಗಿರೆ= ಎರಡು ಭಾಗವಾಗುವಂತೆ, ಪೋೞ್ದು= ಸೀಳಿ, ನೆತ್ತರಂ ಕುಡಿಕುಡಿದು ಆರ್ದು= ರಕ್ತವನ್ನು ಪಾನಮಾಡುತ್ತಾ ಗರ್ಜಿಸಿದ, ವೈರಿ =ಶತ್ರುವಾದ ಭೀಮನು, ಉೞಿದನ್ನೆಗಂ= ಉಳಿದಿರುವವರೆಗೆ, ಎನ್ನ ಅಳಲ್ ಎಂತು ಪೋಕುಂ= ನನ್ನ ಶೋಕವು ಹೇಗೆ ಹೋದೀತು? ಎಂದು, ಅಡಿಗಡಿಗೆ ಅಳ್ತು= ಎಡೆಬಿಡದೆ  ರೋದಿಸುತ್ತ, ತನ್ನ ಅಣುಗದಮ್ಮನಂ= ತನ್ನ ಪ್ರೀತಿಯ ತಮ್ಮನಾದ ದುಶ್ಯಾಸನನನ್ನು , ಸುಯೋಧನಂ= ದುರ್ಯೋಧನನು, ಈಕ್ಷಿಸಿದಂ= ನೋಡಿದನು.

ತಾತ್ಪರ್ಯ :- ಸೊಂಟ ಮುರಿಯುವಂತೆ, ಮೈ ಮೇಲೆ ಬಿದ್ದು, ಪಕ್ಕೆಲುಬುಗಳು ತುಂಡಾಗುವಂತೆ ಅಮುಕಿ, ದೇಹದ ಮಾಂಸವು ಮುದ್ದೆಯಾಗುವಂತೆ ಒದೆದು, ಬಳಿಕ ಎದೆಯನ್ನು ಎರಡು ಹೋಳಾಗಿ ಸೀಳಿ, ನೆತ್ತರನ್ನು ಹೀರುತ್ತಾ ಆರ್ಭಟಿಸಿದ ವೈರಿಯಾದ ಭೀಮನು ಇನ್ನೂ ಬದುಕಿರುವಾಗ ನನ್ನ ಶೋಕವು ಹೇಗೆ ತಾನೇ ಹೋದೀತು ಎನ್ನುತ್ತಾ ಎಡೆಬಿಡದೆ ರೋದಿಸುತ್ತ ದುರ್ಯೋಧನನು ತನ್ನ ಪ್ರೀತಿಯ ತಮ್ಮನಾದ ದುಶ್ಯಾಸನನ ಕಳೇಬರವನ್ನು ನೋಡಿದನು.

ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್
ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀ ಹಸ್ತದೊಳ
ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ
ನುಜ ದುಶ್ಯಾಸನ ಭೀಮ ಭೀಮಗದೆಯಿಂ ಪಂಚತ್ವಮಂ ಪೋರ್ದಿದಯ್॥೫॥

ನಿಜಜೀವಂ= ತನ್ನ ಜೀವವು, ಪರಲೋಕದೊಳ್= ಸ್ವರ್ಗದಲ್ಲಿಯೂ, ನಿಜಮಹಾಮಾಂಸಂ= ತನ್ನ ಶ್ರೇಷ್ಠವಾದ ಮಾಂಸವು,ಪಿಶಾಚಾಸ್ಯದೊಳ್= ಪಿಶಾಚಿಗಳ ಬಾಯಲ್ಲಿಯೂ, ನಿಜರಕ್ತಂ ರಿಪು ಕುಕ್ಷಿಯೊಳ್= ತನ್ನ ರಕ್ತವು ಶತ್ರುವಿನ ಉದರದಲ್ಲಿಯೂ, ನಿಜಶಿರಂ ರಕ್ತಂಚರೀ ಹಸ್ತದೊಳ್= ತನ್ನ ತಲೆ ರಾಕ್ಷಸಿಯ ಕೈಯಲ್ಲಿಯೂ, ನಿಜಕಾಯಂ ಕುರುಭೂಮಿಯೊಳ್= ತನ್ನ ದೇಹವು ಕುರುಕ್ಷೇತ್ರದಲ್ಲಿಯೂ, ನೆಲಸೆ= ಸೇರಿರಲು, ಗಾಂಧಾರೀಜ= ಗಾಂಧಾರಿದೇವಿಯ ಕುಮಾರನೆ, ದುರ್ಯೋಧನಾನುಜ= ದುರ್ಯೋಧನನ ತಮ್ಮನೇ, ದುಶ್ಯಸನ, ಭೀಮ=ಭೀಮನ, ಭೀಮಗದೆಯಿಂ= ಭಯಂಕರವಾದ ಗದೆಯಿಂದ, ಪಂಚತ್ಲಮಂ= ಮರಣವನ್ನು,
ಪೊರ್ದಿದಯ್= ಹೊಂದಿದೆಯಲ್ಲಾ !
ಪಂಚಭೂತಾತ್ಮಕವಾದ  ದೇಹವು ಪಂಚಭೂತಗಳಲ್ಲಿ ಮರಳಿ ಸೇರುವುದೇ ಪಂಚತ್ವ; ಅಂದರೆ ಸಾವು. ದುಶ್ಯಾಸನನ ಪಂಚತ್ವವು ವಿಲಕ್ಷಣವಾದುದು. ಆತನ ಜೀವ, ಮಾಂಸ, ರಕ್ತ, ಶಿರಸ್ಸು, ಕಾಯ - ಈ ಐದು ಅಂಶಗಳು ಐದೆಡೆಗಳಲ್ಲಿ ಸೇರಿಹೋಗಿ ವಿಚಿತ್ರವಾದ ಮರಣ ಘಟಿಸಿತು.

ತಾತ್ಪರ್ಯ :- ತನ್ನ ಜೀವವು ಪರಲೋಕದಲ್ಲಿ, ಮಾಂಸವು ಪಿಶಾಚಿಗಳ ಬಾಯಲ್ಲಿ, ರಕ್ತವು ಶತ್ರುವಿನ ಹೊಟ್ಟೆಯಲ್ಲಿ, ತಲೆ ರಾಕ್ಷಸಿಯ ಕೈಯಲ್ಲಿ , ದೇಹ ಕುರುಧರೆಯಲ್ಲಿ - ಹೀಗೆ ದೇಹದ ಐದು ಅಂಶಗಳು ಐದೆಡೆಗಳಲ್ಲಿ ಸೇರಿಹೋಗುವಂತಹ ವಿಚಿತ್ರವಾದ ಸಾವು, ಗಾಂಧಾರಿಯ ಮಗನೇ! ದುರ್ಯೋಧನನ ತಮ್ಮನೇ! ದುಶ್ಯಾಸನನೇ! ಭೀಮನ ಭಯಂಕರವಾದ ಗದೆಯಿಂದ ನಿನಗೆ ಸಂಭವಿಸಿತಲ್ಲಾ !

ಗಾಂಧಾರೀಜ...ದುರ್ಯೋಧನಾನುಜ...ದುಶ್ಯಾಸನ… ಎಂದು ಸಂಬೋಧಿಸುವಾಗ ದುರ್ಯೋಧನನ ಕರುಳು ಕತ್ತರಿಸಿದಂತಾಗಿ ಕಂಠವು ಗದ್ಗದವಾಗಿರಬೇಕಲ್ಲವೇ ! ಇಲ್ಲಿ “ ಕುರುಭೂಮಿಯೊಳ್ ನೆಲಸೆ “ ಎಂಬುದು ಭಾವಗರ್ಭಿತವಾಗಿದೆ .

ಅಲಂಕಾರ :- ಪರ್ಯಾಯೋಕ್ತಿ.
ರಸ :- ಕರುಣ.

ನಿನ್ನಂ ಕೊಂದಂ ಗಡಮೊಳ
ನಿನ್ನುಂ ಕೊಂದವನನಿಕ್ಟಿ ಕೊಲ್ಲದೆ ಮಾಣ್ಬಾ
ನಿನ್ನುಮೊಳೆಂ ಗಡಿದಕ್ಕುಮೆ
ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೬॥

ನಿನ್ನಂ ಕೊಂದಂ= ನಿನನ್ನು ಕೊಂದವನು, ಗಡಂ ಒಳಂ ಇನ್ನುಂ= ಇನ್ನೂ ಬದುಕಿರುವನಲ್ಲವೇ ! ಕೊಂದವನಂ ಇಕ್ಕಿ ಮಾಣ್ದ= ಕೊಂದವನನ್ನು ಹೊಡೆದು ಕೊಲ್ಲದೆ ಬಿಟ್ಟ , ಆನ್ ಇನ್ನುಂ ಒಳೆಂ ಗಡ= ನಾನು ಇನ್ನೂ ಬದುಕಿದ್ದೇನಲ್ಲಾ ! ನಿನ್ನಯ ಕೂರ್ಮೆಗಂ= ನಿನಗೆ ನನ್ನಲ್ಲಿದ್ದ ಪ್ರೀತಿಗೂ, ಅದೆನ್ನ ಸೌಧರ್ಮಿಕೆಗಂ= ಆ ನನ್ನ ಸೋದರ ವಾತ್ಸಲ್ಯಕ್ಕೂ, ಇದಕ್ಕುಮೆ= ಇದು ಆದೀತೇ ? ( ಇದು ಉಚಿತವೇ ?)

ತಾತ್ಪರ್ಯ :- ನಿನ್ನನ್ನು ಕೊಂದವನು ಈಗಲೂ ಬದುಕಿರುವಾಗ, ಆತನನ್ನು ಹೊಡೆದು ಕೊಲ್ಲದೆ ಬಿಟ್ಟ ನಾನು ಇನ್ನೂ ಜೀವಿಸಿದ್ದೇನಲ್ಲಾ ! ನೀನು ನನ್ನ ಮೇಲಿಟ್ಟ ಪ್ರೀತಿಗೂ ನಾನು ನಿನ್ನಲ್ಲಿ ತೋರುತ್ತಿದ್ದ ಸೋದರ ವಾತ್ಸಲ್ಯಕ್ಕೂ ತಕ್ಕಂತೆ ನಾನು ವರ್ತಿಸಿದೆನೇ ? ಸೇಡಿಗೆ ಸೇಡು ತೀರಿಸದೆ ಹೋದೆನಲ್ಲಾ ! ಇದು ನನ್ನಂಥವನಿಗೆ ಉಚಿತವೇ ? ಸರ್ವಥಾ ಅಲ್ಲ.
(ದುರ್ಯೋಧನನ ಭ್ರಾತೃವಾತ್ಸಲ್ಯ ಅನ್ಯಾದೃಶವಾದುದೆಂಬುದಕ್ಕೆ ಈ ಮಾತುಗಳೇ ಸಾಕ್ಷಿ )

ಜನನೀ ಸ್ತನ್ಯಮನುಂಡೆನಾಂ ಬೞಿಕೆ ನೀಂ ಸೋಮಾಮೃತಂ ದಿವ್ಯ ಭೋ
ಜನಮೆಂಬಿಂತಿವನುಂಡೆನಾಂ ಬೞಿಕ ನೀಂ ಬಾಲತ್ವದಿಂದೆಲ್ಲಿಯುಂ
ವಿನಯೋಲ್ಲಂಘನಮಾದುದಿಲ್ವ ಮರಣಕ್ಕನ್ನಿಂದೆ ನೀಂ ಮುಂಚಿದಯ್
ಮೊನೆಯೊಳ್ ಸೂೞ್  ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ॥೭॥

ಹಾ! ವತ್ಸ ದುಶ್ಯಾಸನಾ! ಆಂ ಜನನೀ ಸ್ತನ್ಯಮಂ ಉಂಡೆನ್= ನಾನು ತಾಯಿಯ ಎದೆಹಾಲನ್ನು ಮೊದಲು ಕುಡಿದೆನು, ಬೞಿಕ ನೀಂ= ಆ ಮೇಲೆ ನೀನು ಕುಡಿದೆಯಷ್ಟೆ! ಸೋಮಾಮೃತಂ ದಿವ್ಯಭೋಜನಂ ಎಂಬ ಇಂತು ಇವಂ ಉಂಡೆನ್ ಆಂ= ಯಾಗಾವಸಾನದಲ್ಲಿ ಸೇವಿಸುವ ಸೋಮರಸ, ಶ್ರೇಷ್ಠವಾದ ಭೋಜನಾದಿಗಳನ್ನು ನಾನೇ ಮೊದಲು ಉಂಡೆನು, ಬೞಿಕ ನೀಂ= ನನ್ನ ಬಳಿಕವೇ ನೀನು ಉಂಡೆ, ಬಾಲತ್ವದಿಂದೆ ಎಲ್ಲಿಯುಂ ವಿನಯೋಲ್ಲಂಘನಂ ಆದುದಿಲ್ಲ= ಬಾಲ್ಯದಿಂದ ಇಂದಿನ ತನಕ ಎಲ್ಲಿಯೂ ವಿನಯವನ್ನು ಮೀರಿ ನಡೆದವನಲ್ಲ, ( ಆದರೆ ) ಮೊನೆಯೊಳ್= ಯುದ್ಧದಲ್ಲಿ, ಮರಣಕ್ಕೆ ಎನ್ನಿಂದ ನೀಂ ಮುಂಚಿದಯ್= ಸಾವಿಗೆ ನನ್ನಿಂದ ನೀನು ಮುಂದಾದೆಯಲ್ಲಾ, ಇದೊಂದೆಡೆಯೊಳ್= ಈ ಒಂದು ಸಂದರ್ಭದಲ್ಲಿ ಮಾತ್ರ ಸೂೞ್=ಸರದಿ, ತಡಂ ಆಯ್ತೆ= ಅಡ್ಡಿಯಾಗಿಬಿಟ್ಟಿತೇ ?

ತಾತ್ಪರ್ಯ :- ಹಾ! ತಮ್ಮ ದುಶ್ಯಾಸನಾ ! ತಾಯಿಯ ಎದೆಹಾಲನ್ನು ಮೊದಲು ಕುಡಿದವನು ನಾನಲ್ಲವೇ! ಬಳಿಕಲ್ಲವೇ ನೀನು ಕುಡಿದದ್ದು ? ಸೋಮರಸವನ್ನೂ ಸುಖಭೋಜನವನ್ನೂ ನಾನುಂಡಮೇಲಲ್ಲವೇ ನೀನು ಉಂಡದ್ದು ? ಬಾಲ್ಯದಿಂದಲೇ ಇಷ್ಟೊಂದು ವಿನೀತನಾಗಿದ್ದ ನೀನು ಒಮ್ಮೆಯೂ ಅವಿಧೇಯನಾಗಿ ವರ್ತಿಸಿದ್ದಿಲ್ಲ. ಆದರೆ ಯುದ್ಧ ಮುಖದಲ್ಲಿ ಸಾವನಪ್ಪುವುದಕ್ಕೆ ನನಗಿಂತ ಮುಂದಾದೆಯಲ್ಲ ! ಅದೇಕೆ ಈ ಒಂದು ಸಂದರ್ಭದಲ್ಲಿ ಮಾತ್ರ ಸರದಿಯನ್ನು ಉಲ್ಲಂಘಿಸಿದೆ ?

ಇಲ್ಲಿ ಕವಿರನ್ನನ ಸೂಕ್ಷ್ಮಪ್ರಜ್ಞೆ , ದುರ್ಯೋಧನನ ಭವಿಷ್ಯವನ್ನು ಅವನಿಂದಲೇ ನುಡಿಸಿದಂತಿದೆ. ಅಣ್ಣನ ಸರದಿಯಾದ ಬಳಿಕ ತಮ್ಮನ ಸರದಿ ಬರಬೇಕಾದುದು ಸಹಜ. ಆದರೆ ಇಲ್ಲಿ ಕ್ರಮ ವಿಪರ್ಯಾಸವಾಗಿದೆ, ಅಷ್ಟೆ ! ದುರ್ಯೋಧನನ ಪಾಲಿಗೆ ಯುದ್ಧದಲ್ಲಿ ಸರದಿ ಬರುವುದೇ ಹೊರತು ಜಯ ಬರಲಾರದೆಂಬುದನ್ನು ಸೂಚಿಸಲಾಗಿದೆ.

ಈ ಪದ್ಯವು ವೇಣೀಸಂಹಾರ ನಾಟಕದ ೬ ನೆಯ ಅಂಕ ಪದ್ಯ ೧೮೯ ರ ಕನ್ನಡಾನುವಾದದಂತಿದೆ. ವೇಣೀಸಂಹಾರದಲ್ಲಿ ಈ ಮಾತುಗಳನ್ನು ಆಡುವವನು ಧರ್ಮರಾಯನು.
ಸಂದರ್ಭ : ದುಶ್ಯಾಸನನ ವಧಾನಂತರ ರುದ್ರಭೀಕರನಾಗಿ ತನ್ನೆಡೆಗೆ ಬರುತ್ತಿದ್ದ ಭೀಮನನ್ನು ದುರ್ಯೋಧನನೆಂದು ಭ್ರಮಿಸಿ ಭೀಮನು ಸತ್ತನೆಂದೇ ಶೊಕಿಸುತ್ತಾನೆ. ಅಲ್ಲಿಯ ಧರ್ಮರಾಯನ ಭ್ರಾತೃವಾತ್ಸಲ್ಯ ಇಲ್ಲಿ ದುರ್ಯೋಧನನ ಭ್ರಾತೃವಾತ್ಸಲ್ಯವಾಗಿ ಪರಿಣಮಿಸಿದೆ.

ಅನುಜನ ನೆತ್ತರನೀಂಟಿದ
ವನನಿಂದಾಪ್ರಾಣಸಹಿತಮೀಂಟದೆ ದುರ್ಯೋ
ಧನನೆಂಬ ಪೆಸರ್ಗೆ ಮುಯ್ಯಾಂ
ಪೆನೆ ದುಶ್ಯಾಸನನ ಬನ್ನಮಂ ನೀಗುವೆನೇ॥೮॥

ಅನುಜನ= ತಮ್ಮನಾದ ದುಶ್ಯಾಸನನ, ನೆತ್ತರಂ ಈಂಟಿದವನಂ ಇಂದು ಆ ಪ್ರಾಣಸಹಿತಂ ಈಂಟದೆ= ನೆತ್ತರನ್ನು ಪಾನಮಾಡಿದವನ ನೆತ್ತರನ್ನು, ಇಂದು ಆ ಜೀವ ಸಹಿತ ಪಾನಮಾಡದೆ, ದುರ್ಯೋಧನಂ ಎಂಬ ಪೆಸರ್ಗೆ ಮುಯ್ ಆಂಪೆನೆ= ದರ್ಯೋಧನನೆಂಬ ಹೆಸರಿಗೆ ಹೆಮ್ಮೆ ಪಡುವೆನೇ, ದುಶ್ಯಾಸನನ ಬನ್ನಮಂ ನೀಗುವೆನೇ= ದುಶ್ಯಾಸನನಿಗಾದ ಅಪಮಾನವನ್ನು ಕಳೆಯುವೆನೇ ?

ತಾತ್ಪರ್ಯ :- ತಮ್ಮನಾದ ದುಶ್ಯಾಸನನ ನೆತ್ತರನ್ನು ಕುಡಿದ ಭೀಮನ ರಕ್ತವನ್ನು ಜೀವಸಹಿತ ಕುಡಿಯದೆ ಹೋದರೆ ದುರ್ಯೋಧನನೆಂಬ ನನ್ನ ಹೆಸರಿಗೆ ಹೆಮ್ಮೆ ಪಡುವೆನೇ ? ದುಶ್ಯಾಸನನಿಗಾದ ಅಪಮಾನವನ್ನು ಹೋಜಲಾಡಿಸುವೆನೇ ?
( ಭೀಮನ ರಕ್ತವನ್ನು ಹೀರಿ ದುರ್ಯೋಧನನೆಂಬ ಹೆಸರನ್ನು ಸಾರ್ಥಕಗೊಳಿಸದೆ ಬಿಡೆನು ಎಂಬ ಭಾವ )

ನೆಗಪಿ ವರೂಥಮಂ ವಸುಧೆ ನುಂಗಿದುದುಂ ಸಮಪಾದ ಶೋಭೆಯುಂ
ಬಗೆಗೊಳೆ ತನ್ನ ಮುಂ ತೆಗೆದ ದಕ್ಷಿಣ ಮುಷ್ಟಿಯೆ ಕರ್ಣಮೂಲದೊಳ್
ಸೊಗಯಿಸೆ ಪಾೞಿಯಂ ನೆಱಪದಾಳ್ದನ ಕಜ್ಜಮನೊಕ್ಕು ಸತ್ತರಂ
ನಗುವವೊಲಿರ್ದನಂಗಪತಿ ನೆಮ್ಮಿ ನಿಜೋನ್ನತಕೇತುದಂಡಮಂ॥೧೦॥

ವಸುಧೆ ನುಂಗಿದುದುಂ ವರೂಥಮಂ ನೆಗಪಿ= ಕುರುಕ್ಷೇತ್ತದಲ್ಲಿ ಹೂತುಹೋದ ರಥಚಕ್ರವನ್ನು ಮೇಲಕ್ಕೆತ್ತಿ, ಸಮಪಾದ ಶೋಭೆ= ಯುದ್ಧಮಾಡುವಾಗ ನಿಂತುಕೊಳ್ಳುವ ಭಂಗಿ , ಬಗೆಗೊಳೆ= ಚಿತ್ತಾಕರ್ಷವಾಗಿರಲು, ತನ್ನ ಮುಂ ತೆಗೆದ= ತಾನು ಬಾಣಾನುಸಂಧಾನಮಾಡಿ ಕಿವಿಯವರೆಗೆ ಮೊದಲೇ ಸೆಳೆದ, ದಕ್ಷಿಣ ಮುಷ್ಠಿಯೆ= ಬಲಗೈ ಮುಷ್ಠಿಯೆ, ಕರ್ಣ ಮೂಲದೊಳ್
ಸೊಗಯಿಸೆ= ಕಿವಿಯ ಬುಡದಲ್ಲಿ ಶೋಭಿಸಲು, ಪಾೞಿಯಂ ನೆಱಪದೆ= ತಮ್ಮ ಕರ್ತವ್ಯವನ್ನು ಪೂರೈಸದೆ, ಆಳ್ದನ ಕಜ್ಜಮಂ ಒಕ್ಕು ಸತ್ತರಂ= ಸ್ವಾಮಿಕಾರ್ಯವನ್ನು ಕೆಡಿಸಿ ಸತ್ತವರನ್ನೈ, ನಗುವವೊಲ್= ಪರಿಹಾಸಮಾಡುವನೋ ಎಂಬಂತೆ,
ಅಂಗಪತಿ=ಕರ್ಣನು, ನಿಜೋನ್ನತಕೇತುದಂಡಮಂ ನೆಮ್ಮಿ= ತನ್ನ ಎತ್ತರವಾದ ಧ್ವಜದಂಡವನ್ನು ಆಧರಿಸಿಕೊಂಡು, ಇರ್ದಂ= ಇದ್ದನು.

ತಾತ್ಪರ್ಯ :- ಕುರುಕ್ಷೇತ್ರದಲ್ಲಿ ಹೂತಿದ್ದ ತನ್ನ ರಥಚಕ್ರವನ್ನು ಮೇಲೆತ್ತಿ ಶತ್ರುವನ್ನು ಪ್ರತಿಭಟಿಸುವುದಕ್ಕಾಗಿ ನಿಂತ ಸಮಪಾದದ ನಿಲುವು ಚಿತ್ತಾಕರ್ಷಕವಾಗಿರಲು ಬಿಲ್ಲಿಗೆ ಬಾಣವನ್ನು ಜೋಡಿಸಿ ಹೆದೆಯನ್ನು ಕಿವಿಯ ತನಕ ಮೊದಲೇ ಸೆಳೆದ ಬಲಗೈಮುಷ್ಟಿ ಕಿವಿಯ ಬದಿಯಲ್ಲಿ ಶೋಭಿಸಲು ತಮ್ಮ ಕರ್ತವ್ಯವನ್ನು ಪೂರೈಸದೆ ಪ್ರಭುಕಾರ್ಯವನ್ನು ಕಡೆಗಣಿಸಿ ಸತ್ತವರನ್ನು ನೋಡಿ ನಗುತ್ತಿರುವನೋ ಎಂಬಂತೆ, ಕರ್ಣನು ತನ್ನ ಉನ್ನತವಾದ ಧ್ವಜಸ್ತಂಭಕ್ಕೆ ಒರಗಿಕೊಂಡಿದ್ದನು .
ಕರ್ಣಾವಸಾನದ ದೃಶ್ಯ ಭವ್ಯ ಸುಂದರ.
ಅಲಂಕಾರ - ಉತ್ಪ್ರೇಕ್ಷೆ. ರಸಂ - ವೀರ.

ಆನುಂ ದುಶ್ಯಾಸನನುಂ
ನೀನುಂ ಮೂವರೆ ದಲಾತನುಂ ಕೞಿದ ಬೞಿ
ಕ್ಕಾನುಂ ನೀನೆ ದಲೀಗಳ್
ನೀನುಮಗಲ್ದೆತ್ತವೋದೆಯಂಗಾಧಿಪತಿ॥೧೧॥

ಆನುಂ ದುಶ್ಯಾಸನನುಂ ನೀನುಂ ಮೂವರೆ ದಲ್= ನಾನೂ ದುಶ್ಯಾಸನನೂ ನೀನೂ - ಹೀಗೆ ನಾವು ಮೂವರಲ್ಲವೇ ನಿಜವಾಗಿ ಇದ್ದವರು, ಆತನುಂ ಕೞಿದ ಬೞಿಕೌ= ದುಶ್ಯಾಸನನು ತೀರಿದ ಬಳಿಕ, ಆನುಂ ನೀಶೆ ದಲ್= ನಾನೂ ನೀನೂ ಇಬ್ಬರೆ ಉಳಿದೆವಲ್ಲವೇ ? ಈಗಳ್ ನೀನುಂ ಅಗಲ್ದು ಎತ್ತವೋದೆ ಅಂಗಾಧಿಪತೀ= ಈಗ ನೀನು ಕೂಡ ನನ್ನನ್ನು ಬಿಟ್ಟು ಎಲ್ಲಿಗೆ ಹೋದೆಯೋ ಕರ್ಣಾ!

ತಾತ್ಪರ್ಯ :- ಅಂಗಾಧಿರಾಜ ! ನಾನೂ ದುಶ್ಯಾಸನನೂ ನೀನೂ ತ್ರಿಮೂರ್ತಿಗಳಂತಿದ್ದವರಲ್ಲವೇ ? ದುಶ್ಯಾಸನನ ಸಾವಿನ ಬಳಿಕ ನಾವಿಬ್ಬರಲ್ಲೇ ಉಳಿದವರು ? ಈಗಲಾದರೋ ನೀನೂ ನನ್ನನ್ನು ಅಗಲಿ ಎಲ್ಲಿಗೆ ಹೊರಟು ಹೋದೆ ?

ಮೂವರೂ ಒಂದೆಂಬಂತಿದ್ದರು.ಒಬ್ಬರ ಹಿಂದೆ ಒಬ್ಬರಂತೆ ಇಬ್ಬರು ಅಗಲಿದರು. ಇನ್ನು ಉಳಿದವನೊಬ್ಬ. ಅವನೂ ಅವರಿಬ್ಬರನ್ನು ಹಿಂಬಾಲಿಸದಿರುವನೇ ಎಂಬ ಸೂಚನೆಯೂ ಇಲ್ಲಿದೆ. ಎರಡು ಜೀವ ಹೋದರೆ ಮೂರನೆಯದು ಹೋಗಲೇಬೇಕೆಂಬ ನಂಬಿಕೆ ಇಂದಿಗೂ ರೂಢಿಯಲ್ಲಿದೆ.

ರಸ - ಕರುಣ.

ನೀನಿಲ್ಲದರಸುಗೆಯ್ವೆನೆ
ನೀನಿಲ್ಲದೆ ಬಾೞ್ವೆನೆಂದು ಬಗೆದಪ್ಪೆನೆ ಪೇೞ್
ನೀನಿಲ್ಲದಹಿತರೊಳ್ ಸಂ
ಧಾನಂ ಮಾಡುವೆನೆ ಕೂಡೆನಂಗಾಧಿಪತಿ॥೧೨॥

ಅಂಗಾಧಿಪತೀ = ಕರ್ಣನೇ, ನೀನಿಲ್ಲದೆ, ಅರಸುಗೆಯ್ವೆನೆ= ರಾಜ್ಯವಾಳುವೆನೇ ? ನೀನಿಲ್ಲದೆ ಬಾೞ್ವೆನೆಂದು ಬಗೆದಪ್ಪೆನೆ= ನೀನಿಲ್ಲದೆ ಬಾಳುತ್ತೇನೆಂದು ಭಾವಿಸುವೆನೇ ? ನೀನಿಲ್ಲದೆ, ಅಹಿತರೊಳ್= ಶತ್ರುಗಳೊಂದಿಗೆ, ಸಂಧಾನಂ ಮಾಡುವೆನೆ= ಒಪ್ಪಂದವನ್ನು ಮಾಡುವೆನೇ ? ಕೂಡೆಂ= ಸಂಧಿಮಾಡಿ ಶತ್ರುಗಳೊಂದಿಗೆ ಸೇರಲಾರೆನು.

ತಾತ್ಪರ್ಯ :- ಕರ್ಣಾ ! ನೀನಿಲ್ಲದೆ ನಾನು ರಾಜ್ಯಭಾರವನ್ನು ಮಾಡುವೆನೇ? ನಿನ್ನನ್ನು ಬಿಟ್ಟು ನಾನು ಮಾತ್ರ ಬಾಳುವ ಯೋಚನೆಯನ್ನು ಮಾಡುವೆನೇ ? ನೀನಿಲ್ಲದ ಮೇಲೆ ಶತ್ರುಗಳೊಂದಿಗೆ ಸಂಧಿಮಾಡಿ ಒಂದುಗೂಡಿ ಬಾಳುವೆನೇ ? ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲ.

ನಿನ್ನ ಮಗಂ ವೃಷಸೇನಂ
ತನ್ನ ಮಗಂ ಸತ್ತನಣ್ಮಿ ಲಕ್ಷಣನುಂ ನೀ
ನೆನ್ನ ಸಂತೈಸುವುದಾಂ
ನಿನ್ನಂ ಸಂತೈಸೆ ಬಂದೆನಂಗಾಧಿಪತೀ॥೧೩॥

ಅಂಗಾಧಿಪತತೀ= ಎಲೈ ಕರ್ಣನೇ, ನಿನ್ನ ಮಗ ವೃಷಸೇನಂ= ನಿನ್ನ ಮಗನಾದ ವೃಷಸೇನನೂ, ತನ್ನ ಮಗಂ ಲಕ್ಷಣನುಂ= ನನ್ನ ಮಗನಾದ ಲಕ್ಷಣನೂ, ಅಣ್ಮಿ= ಪರಾಕ್ರಮವನ್ನು ತೋರಿಸುತ್ತಾ, ಸತ್ತಂ=ಸತ್ತನು, ನೀನೆನ್ನಂ ಸಂತೈಸುವುದು= ನೀನು ನನ್ನನ್ನು ಸಮಾಧಾನಪಡಿಸಬೇಕು, ಆಂ ನಿನ್ನಂ ಸಂತೈಸೆ ಬಂದೆಂ = ನಾನು ನಿನ್ನನ್ನು ಸಾಂತ್ವನಗೊಳಿಸುವುದಕ್ಕಾಗಿ ಬಂದಿದ್ದೇನೆ.

ತಾತ್ಪರ್ಯ :- ಅಂಗರಾಜ! ನಿನ್ನ ಮಗ ವೃಷಸೇನನೂ ನನ್ನ ಮಗ ಲಕ್ಷಣನೂ ವೀರಾವೇಶದಿಂದ ಹೋರಾಡಿ ಸತ್ತರು. ನಾವಿಬ್ಬರೂ ಪುತ್ರಶೋಕಪೀಡಿತರಾದುದರಿಂದ ಅನ್ನಯೋನ್ಯ ಸಮಧಾನ ತಂದುಕೊಳ್ಳುವುದಕ್ಕಾಗಿ ನಿನ್ನೆಡೆಗೆ ಬಂದಿದ್ದೇನೆ.

ಪೞಿಯಂ ಕೇಳ್ದೆನೊ ಮೇಣ್ನಡೆ
ವೞಿಯಂ ತಪ್ಪಿದೆನೊ ಕಾಣೆನಣ್ಮಿಂದಂ ಕೂ
ರ್ತೞಿದಿವರಂ ಪಗದೆನೊ ಪ
ಚ್ೞೞಿದೆನೊ ಪೇೞ್ ಕೂಡಿ  ನಿನ್ನೊಳಂಗಾಧಿಪತೀ॥೧೪॥

ಪೞಿಯಂ=ನಿಂದೆಯನ್ನು, ಕೇಳ್ದೆನೊ= ಕೇಳಿದೆನೊ, ಮೇಣ್=ಮತ್ತು, ನಡೆವೞಿಯಂ= ನಡತೆಯನ್ನು,ತಪ್ಪಿದೆನೋ= ಮೀರಿದೆನೋ, ಕಾಣೆಂ= ತಿಳಿಯೆನು, ಅಣ್ಮಿಂದಂ= ಸಾಹಸದಿಂದ, ಕೂರ್ತು= ಪ್ರೀತಿಸಿ, ಅೞಿದ= ಸತ್ತ, ಇವರಂ= ಇವರನ್ನೆಲ್ಲ, ಪಗೆದೆನೋ= ದ್ವೇಷಿಸಿದೆನೋ, ನಿನ್ನೊಳ್ ಕೂಡಿ= ನಿನ್ನೊಂದಿಗೆ ಸೇರಿ, ಪಚ್ಚೞಿದೆನೊ ಪೇೞ್= ಬೇಧವನ್ನು ಮಾಡಿದೆನೊ ಹೇಳು.

ತಾತ್ಪರ್ಯ :- ಅಂಗಾಧಿಪತೀ! ಅನ್ಯರು ನಿನ್ನನ್ನು ದೂಷಿಸುತ್ತಿದ್ದಾಗ ಆ ದೂಷಣೆಯ ಮಾತನ್ನು ಕೇಳಿದೆನೋ? ಅಥವಾ ನನ್ನ ನಡವಳಿಕೆಯಲ್ಲಿ ಎಲ್ಲಿಯಾದರೂ ತಪ್ಪಿಬಿಟ್ಟೆನೋ ತಿಳಿಯೆ. ನನ್ನ ಮೇಲೆ ಪ್ರೀತಿಯಿಟ್ಟು ನನಗೋಸ್ಕರ ಸಾಹಸದಿಂದ ಹೋರಾಡಿ ಪ್ರಾಣಾರ್ಪಣೆಗೈದವರನ್ನು ದ್ವೇಷಿಸಿದೆನೋ? ನಿನ್ನೊಂದಿಗೆ ಕೂಡಿ ಬಾಳುತ್ತಿದ್ದಾಗ ನಿನಗೇನಾದರೂ ಭೇದವನ್ನು ಮಾಡಿದೆನೋ? ಹೇಳು, ಯಾಕೆ ಮೌನವಾಗಿರುವೆ?

ಅಱಿಯೆನಿದಂ ನಿನ್ನಿಂದಿನ
ತೆಱನಂ ನೀನೆನಗದೇಕೆ ಮುಳಿದಿರ್ಪೆಯೊ ಮೇಣ್
ಮಱುವಾತುಗುಡದೆ ರವಿಸುತ
ಮಱಸುಂದಿರ್ದಪೆಯೊ ಮೇಣ್ಬೞಲ್ದಿರ್ದಪೆಯೋ॥೧೫॥

ರವಿಸುತ= ಸೂರ್ಯಪುತ್ರನಾದ ಕರ್ಣನೇ! ಇದಂ ನಿನ್ನ ಇಂದಿನ ತೆಱನಂ ಅಱಿಯೆ= ನಿನ್ನ ಇಂದಿನ ಈ ರೀತಿಯೇ ನನಗೆ ಅರ್ಥವಾಗುವುದಿಲ್ಲ. ಅದೇಕೆ ನೀನ್ ಎನಗೆ ಮುಳಿದಿರ್ಪೆಯೊ= ಯಾವ ಕಾರಣಕ್ಕಾಗಿ ನನ್ನ ಮೇಲೆ ಕೋಪಗೊಂಡಿರುವೆಯೋ? ಮೇಣ್=ಅಥವಾ, ಮಱುವಾತುಗುಡದೆ= ಪ್ರತ್ಯುತ್ತರವನ್ನು ಕೊಡದೆ, ಮಱಸುಂದಿರ್ದಪೆಯೊ=
ಮೈಮರೆತು ನಿದ್ರೆಮಾಡುತ್ತಿರುವೆಯೊ? ಮೇಣ್= ಅಥವಾ, ಬೞಲ್ದಿರ್ದಪೆಯೋ=ಆಯಾಸಪಟ್ಟಿರುವೆಯೋ?

ಕರ್ಣ! ಇದೇನು ನಿನ್ನ ರೀತಿಯೇ ಇಂದು ವಿಚಿತ್ರವಾಗಿದೆಯಲ್ಲಾ! ನಿನಗೇನು ನನ್ನಲ್ಲಿ ಕೋಪವೇ? ಯಾಕೆ ಕೋಪಗೊಂಡಿರುವೆ? ಕೋಪವಿಲ್ಲದೆ ಹೋದರೆ ಯಾಕೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ? ಏನು ಗಾಢನಿದ್ರಾಸಕ್ತನಾಗಿರುವೆಯೋ? ಅಲ್ಲ ಆಯಾಸಪಟ್ಟಿರುವೆಯೋ?

ಕರ್ಣನು ಸತ್ತಿದ್ದರೂ ಶೋಕಭರದಲ್ಲಿ ದುರ್ಯೋಧನನು ಆತನು ಜೀವಿಸಿರುವನೆಂದೇ ಭ್ರಮಿಸುತ್ತಾನೆ. ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆಗರೆಯುತ್ತಾನೆ.

ನಿನ್ನೀ ಕೆಳೆಯ ಸುಯೋಧನ
ನನ್ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನೆನ್ನದೆ ಜೀಯೆನ್ನದೆ ದೇ
ವೆನ್ನದದೇಕುಸಿರದಿರ್ಪೆಯಂಗಾಧಿಪತಿ॥೧೬॥

ಅಂಗಾಧಿಪತೀ ! ನಿನ್ನ ಈ ಕೆಳೆಯ ಸುಯೋಧನನನ್ನು ನೋಡದೆ, ನುಡಿಯದೆ, ಅಪ್ಪಿಕೊಳ್ಳದೆ, ಬೆಸನ ಏನ್ ಎನ್ನದೆ, ಜೀಯ ಎನ್ನದೆ, ದೇವ ಎನ್ನದೆ, ಅದೇಕೆ ಉಸಿರದೆ ಇರ್ಪೆ? ( ಬೆಸನ=ಆಜ್ಞೆ, ಕೆಲಸ )

ಅಂಗಾಧಿಪತೀ! ನಿನ್ನ ಈ ಕೆಳೆಯ ಸುಯೋಧನನಂ ನೋಡದೆ, ನುಡಿಯದೆ, ಅಪ್ಪಿಕೊಳ್ಳದೆ,ಬೆಸನ ಏನ್ ಎನ್ನದೆ, ಜೀಯ ಎನ್ನದೆ, ದೇವ ಎನ್ನದೆ, ಅದೇಕೆ ಉಸಿರದೆ ಇರ್ಪೆ? ( ಬೆಸನ = ಆಜ್ಞೆ, ಕೆಲಸ )

ತಾತ್ಪರ್ಯ :- ಅಂಗಾಧಿಪತೀ! ನಿನ್ನ ಗೆಳೆಯನಾದ ಈ ದುರ್ಯೋಧನನನ್ನು ಏಕೆ ನೋಡುವುದಿಲ್ಲ? ಏಕೆ ಮಾತನಾಡಿಸುವುದಿಲ್ಲ? ಏಕೆ ಆಲಿಂಗಿಸಿಕೊಳ್ಳುವುದಿಲ್ಲ? ಏಕೆ ಅಪ್ಪಣೆಯನ್ನು ಕೇಳುವುದಿಲ್ಲ? ಏಕೆ ಸ್ವಾಮಿ! ದೇವ! ಎಂದು ಸಂಬೋಧಿಸುವುದಿಲ್ಲ? ಏಕೆ ಇಷ್ಟೊಂದು ಮೌನ?

ಕರ್ಣನು ದುರ್ಯೋಧನನನ್ನು ಭೇಟಿಯಾಗುತ್ತಿದ್ದಾಗ ಹೇಗೆ ವರ್ತಿಸುತ್ತಿದ್ದನೆಂಬುದನ್ನುಈ ಮಾತುಗಳಿಂದ ತಿಳಿಯಬಹುದು. ಇಲ್ಲಿಯ ಅಚ್ಚಗನ್ನಡ ದೇಸಿ ಬಲ್ಸೊಗಸು.

ಅನೃತಂ ಲೋಭಂ ಭಯಮೆಂ
ಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂ
ದನ ನನ್ನಿ ಚಾಗಮಣ್ಮೆಂ
ಬಿನಿತರ್ಕಂ ನೀನೆ ಮೊತ್ಮಮೊದಲಿಗನಾದಯ್॥೧೭॥

ಅನೃತಂ= ಸುಳ್ಳು, ಲೋಭಂ=ಅತ್ಯಾಸೆ, ಭಯ= ಅಂಜಿಕೆ, ಎಂಬ ಇನಿತುಂ= ಎನ್ನುವ ಇಷ್ಟೂ, ನೀನ್ ಇರ್ದ ನಾಡೊಳ್ ಇರ್ಕುಮೆ= ನೀನಿದ್ದ ದೇಶದಲ್ಲಿ ಇದ್ದೀತೇ? ( ಇರಲಾರದು) ರವಿನಂದನ= ಕರ್ಣನೇ! ನನ್ನಿ =ಸತ್ಯ, ಚಾಗ=ತ್ಯಾಗ, ಅಣ್ಮು=ಸಾಹಸ, ಎಂಬ ಇನಿತರ್ಕಂ= ಎನ್ನುವ ಇಷ್ಟಕ್ಕೂ, ನೀನೆ ಮೊತ್ತಮೊದಲಿಗನ್ ಆದಯ್= ನೀನೇ ಮೂಲಪುರುಷನಾದೆಯಷ್ಟೇ!

ತಾತ್ಪರ್ಯ :- ಸೂರ್ಯ ಸುತನಾದ ಕರ್ಣನೇ! ಸತ್ಯ, ತ್ಯಾಗ, ಪರಾಕ್ರಮಗಳಿಗೆ ಮೂಲಪುರುಷನಾದ ನೀನಿದ್ದ ದೇಶದಲ್ಲಿ ಸುಳ್ಳು, ಅತ್ಯಾಶೆ, ಅಂಜಿಕೆಗಳು ತಲೆದೋರುವುವೇ?

ಸತ್ಯ ತ್ಯಾಗ ಸಾಹಸಗಳೇ ಮೂರ್ತೀಭವಿಸಿದಂತಿದ್ದ ಕರ್ಣನೊಬ್ಬನೇ ಅಲ್ಲ; ಅವನಿದ್ದ ರಾಜ್ಯದಲ್ಲೇತದ್ವಿರುದ್ದಗಳಾದ ಅಸತ್ಯ ಅತ್ಯಾಸೆ ಅಂಜಿಕೆಗಳು ಎಂದೂ ತಲೆದೋರವು ಎಂಬ ಭಾವ.

ಆನಱಿವೆಂ ಪೃಥೆಯಱಿವಳ್
ದಾನವರಿಪುವಱಿವನರ್ಕಱಿವಂ ದಿವ್ಯ
ಜ್ಞಾನಿಸಹದೇವನಱಿವಂ
ನೀನಾರ್ಗೆಂದಾರುಮಱಿಯರಂಗಾಧಿಪತಿ॥೧೮॥

ಅಂಗಾಧಿಪತೀ! ನೀನ್ ಆರ್ಗೆ ಎಂದು = ನೀನು ಯಾರವನು, ( ಯಾರಮಗ ಎಂಬುದನ್ನು ) ಆನ್ ಅಱಿವೆಂ= ನಾನು ಬಲ್ಲೆನು, ಪೃಥೆ= ಕುಂತೀದೇವಿ, ಅಱಿವಳ್= ಬಲ್ಲಳು, ದಾನವರಿಪು= ಕೃಷ್ಣನು, ಅಱಿಲಂ= ತಿಳಿದಿರುವನು, ಅರ್ಕನ್= ಸೂರ್ಯನು, ಅಱಿವಂ=ಬಲ್ಲನು, ದಿವ್ಯ ಜ್ಞಾನಿ= ಮಹಾಜ್ಞಾನಿಯಾದ, ಸಹದೇವನ್= ಸಹದೇವನು, ಅಱಿವಂ=ಬಲ್ಲನು, ಆರುಂ ಅಱಿಯರ್= ಬೇರೆ ಯಾರೂ ಅರಿಯರು, ( ನೀನಾರ್ಗೆ= ನೀನ್ ಆರ್ ಗೆ  - ಇದು ಹಳಗನ್ನಡದಲ್ಲಿ ದೊರಕುವ ವಿಶಿಷ್ಟವಾದ ಪ್ರಯೋಗ. ಇಂಗ್ಲೀಷ್ನಲ್ಲಿ what are you ? ಎಂಬಂತೆ )

ತಾತ್ಪರ್ಯ :- ಕರ್ಣನೇ! ನೀನು ಯಾರೆಂಬ ರಹಸ್ಯವನ್ನು ಬಲ್ಲವರು ಕುಂತಿ, ಸೂರ್ಯ, ಶ್ರೀಕೃಷ್ಣ, ದಿವ್ಯಜ್ಞಾನಿಯಾದ ಸಹದೇವ ಮತ್ತು ನಾನು. ಉಳಿದವರಾರಿಗೂ ನಿನ್ನ ಜನ್ಮ ವೃತ್ತಾಂತ ತಿಳಿಯದು.

ದುರ್ಯೋಧನನಿಗೆ ಕರ್ಣನ ಇತಿವೃತ್ತ ತಿಳಿದಿತ್ತೆಂಬುದಕ್ಕೆ ವ್ಯಾಸಭಾರತದಲ್ಲಿ ಆಧಾರವಿದ್ದಂತೆ ತೋರುವುದಿಲ್ಲ. ಈ ವಿಷಯದಲ್ಲಿ ರನ್ನನು ಪಂಪನನ್ನು ಅನುಸರಿಸಿದ್ದಾನೆ. ಪಂಪಭಾರತದ ಪ್ರಕಾರ ಸತ್ಯಂತಪ ಮಹರಷಿಗಳಿಂದ ದುರ್ಯೋಧನನಿಗೆ ಕರ್ಣನ ಜನ್ಮವೃತ್ತಾಂತ ತಿಳಿಯುತ್ತದೆ. ( ಪಂಪಭಾರತ. ೯- ೬೬ ನೋಡಿರಿ) ದೇವೇಂದ್ರನಿಗೂ ಕರ್ಣನ ಜನ್ಮವೃತ್ತಾಂತ ತಿಳಿದಿತ್ತು. ರನ್ನನು ಇವರಿಬ್ಬರ ಹೆಸರನ್ನು ಈ ಪಟ್ಟಿಯಲ್ಲಿ ಕೈಬಿಟ್ಟಿದ್ದಾನೆ.

ಒಡವುಟ್ಟಿದನೆಂಱಿದೊಡೆ
ಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂ
ಕುಡಲಾರ್ತೆನಿಲ್ಲ ರಾಜ್ಯ
ಕ್ಕೊಡೆಯನನಱಿಯುತ್ತುಮಿರ್ದೆನಂಗಾಧಿಪತಿ॥೧೯॥

ಒಡ ಪುಟ್ಟಿದನ್= ಒಡಹುಟ್ಟಿದವನು, ಎಂದು ಅಱಿದೊಡೆ= ಎಂಬುದನ್ನು ತಿಳಿಯುತ್ತಿದ್ದರೆ, ಧರಮತನಯನ್= ಧರ್ಮರಾಯನು, ರಾಜ್ಯಮನೆ ನಿನಗೆ ಕುಡುಗುಂ= ರಾಜ್ಯವನ್ನು ನಿನಗೆ ಒಪ್ಪಿಸಿ ಕೊಡುತ್ತಿದ್ದನು, ( ಆದರೆ ) ರಾಜಯಕ್ಕೆ ಒಡೆಯನಂ ಅಱಿಯುತ್ತುಂ= ರಾಜ್ಯಕ್ಕೆ ಒಡೆಯನಾಗತಕ್ಕವನು ನೀನೇ ಎಂಬುದನ್ನು ತಿಳಿದಿದ್ದರೂ, ಆಂ=ನಾನು, ಕುಡಲ್ ಆರ್ತೆನ್ ಇಲ್ಲ = ಕೊಡುವುದಕ್ಕೆ ಸಮರ್ಥನಾಗಲಿಲ್ಲ( ಮನಸ್ಸೊಪ್ಪಲಿಲ್ಲ ) ಇರ್ದೆಂ= ತಿಳಿದೂ ತಿಳಿಯದವನಂತಿದ್ದೆ.  ( ( (ನಿಜಕ್ಕೂ ಎಂಥ ನೀಚ ನಾನು) ಕರ್ಣಾ!

ತಾತ್ಪರ್ಯ :-ನೀನು ತನ್ನ ಒಡಹುಟ್ಟಿದವನು, ಹಿರಿಯಣ್ಣನು ಎಂಬುದನ್ನು ಧರ್ಮರಾಯನು ತಿಳಿದಿದ್ದರೆ ಖಂಡಿತವಾಗಿಯೂ
ಇಡೀ ರಾಜ್ಯವನ್ನೇ ನಿನಗೊಪ್ಪಿಸಿ ಕೊಡುತ್ತಿದ್ದನು. ನಾನಾದರೋ ನಿನ್ನ ಜನ್ಮವೃತ್ತಾಂತವನ್ನು ತಿಳಿದಿದ್ದೂ , ನೀನೇ ರಾಜ್ಯಕ್ಕೆಲ್ಲ ಒಡೆಯನಾಗತಕ್ಕವನೆಂಬುದನ್ನು ಅರಿತಿದ್ದೂ ಕೇವಲ ಸ್ವಾರ್ಥದಿಂದ ಕೊಡಲಾರದೆ ಹೋದೆನು. ನಾನೆಂತಹ ನೀಚನಾಗಿಬಿಟ್ಟೆ.

ನೀನುಳ್ಳೊಡುಂಟು ರಾಜ್ಯಂ
ನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟಯ್
ನೀನುಳ್ಳೊಡುಂಟು ಪೀೞಿಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ॥೨೦॥

ನೀನ್ ಉಳ್ಳೊಡೆ ಉಂಟು ರಾಜ್ಯಂ=ನೀನಿದ್ದರೆ ಉಂಟು ದೇಶ, ನೀನ್ ಉಳ್ಳೊಡೆಉಂಟು ಪಟ್ಟಂ = ನೀನಿದ್ದರೆ ಉಂಟು ಅರಸುತನ, ಬೆಳ್ಗೊಡೆಯುಂಟೈ= ಶ್ವೇತಚ್ಛತ್ರ ಉಂಟು, ನೀನ್ ಉಳ್ಳೊಡೆ ಉಂಟು ಪೀಳಿಗೆ= ನೀನಿದ್ದರೆ ಉಂಟು ಪರಂಪರಾಗತವಾದ ವಂಶ, ನೀನಿಲ್ಲದ ಇವೆಲ್ಲ ಒಳವೆ= ನೀನಿಲ್ಲದಿರಲು ಇವೆಲ್ಲ ಇರುವುದೇ? ಇಲ್ಲ.

ತಾತ್ಪರ್ಯ :- ಅಂಗರಾಜ! ನೀನಿದ್ದರೆ ನನಗೆ ರಾಜ್ಯ, ಅರಸೊತ್ತಿಗೆ, ಶ್ವೇತಚ್ಛತ್ರ, ಪರಂಪರಾಗತವಾದ ವಂಶ - ಎಲ್ಲವೂ ಇದೆ.
ನೀನಿಲ್ಲದ ಬಳಿಕ ಇವೆಲ್ಲ ನನಗೆಲ್ಲಿವೆ?

ದುರ್ಯೋಧನನ ಸರ್ವಸ್ವವೂ ಕರ್ಣನಾಗಿದ್ದ. ಅವನಿದ್ದಾಗ ಸಕಲ ಐಶ್ವರ್ಯಗಳಿಂದ ಮೆರೆಯುತ್ತಿದ್ದ ದುರ್ಯೋಧನನಿಗೆ ಇಂದು ಅವನು ತೀರಿಕೊಂಡಾಗ ಈ ವೈಭವಗಳೆಲ್ಲ ಇದ್ದೂ ಇಲ್ಲದಂತೆಯೇ ಸರಿ.

ಇನಸುತ ಗಾಂಡಿವಿ ಸಂಮೋ
ಹನಾಸ್ತ್ರದಿಂದೆಚ್ಚು ನಿದ್ರೆಯಂ ಮಾಡಿದನಂ
ದಿನ ಗೋಗ್ರಹಣದೊಳೀಗಳ್
ನಿನಗಿಂತೀ ದೀರ್ಘನಿದ್ರೆಯಂ ಮಾಡಿದನೇ॥೨೧॥

ಇನಸುತ= ಕರ್ಣನೇ! ಅಂದಿನ ಗೋಗ್ರಹಣದೊಳ್= ಹಿಂದೆ ವಿರಾಟನ ಗೋವುಗಳನ್ನು ಸೆರೆ ಹಿಡಿದಿದ್ದಾಗ ನಡೆದ ಕದನದಲ್ಲಿ, ಗಾಂಡಿ= ಅರ್ಜುನನು, ಸಂಮೋಹನಾಸ್ತ್ರದಿಂದ ಎಚ್ಚು= ಮೈಮರೆದೊರಗುವಂತೆ ಮಾಡುವ ವಿಶಿಷ್ಟವಾದಶಕ್ತಿಯಿಂದ ಕೂಡಿದ ಬಾಣವನ್ನು ಪ್ರಯೋಗಿಸಿ, ನಿದ್ರೆಯಂ ಮಾಡಿದಂ= ನಮಗೆಲ್ಲ ನಿದ್ರೆ ಬರುವಂತೆ ಮಾಡಿದ್ದನು. ಇಂದು ಇಂತು = ಇಂದು ಹೀಗೆ, ದೀರ್ಘನಿದ್ರೆಯಂ= ಬಹಳ ನಿದ್ರೆಯನ್ನು(ಮರಣವನ್ನು) ಮಾಡಿದನೇ= ಉಂಟುಮಾಡಿದನೇ?

ತಾತ್ಪರ್ಯ :- ಕರ್ಣ! ಹಿಂದೆ ಗೋಗ್ರಹಣಾವಸರದಲ್ಲಿ ಅರ್ಜುನನು ಸಂಮೋಹನಾಸ್ತ್ರವನ್ನು ಪ್ರಯೋಗಿಸಿನಮ್ಮನ್ನೆಲ್ಲ ಮೈಮರೆಯುವಂತೆ ಮಾಡಿದ್ದರೆ, ಇಂದು ನಿನ್ನ ಮೇಲೆ ಅಮೋಘಾಸ್ತ್ರಗಳನ್ನೆಚ್ಚು ಎಂದೆಂದೂ ಏಳದಂತಹ ಚಿರಂತನ ನಿದ್ರೆಯನ್ನುಂಟುಮಾಡಿದನೇ (ಸಾವನ್ನು ತಂದನೇ )

ಕಸವರಮಂ ದ್ವಿಜದಾನಕೆ
ಪೂಸಜೌವನಮಂ ಸ್ವದಾರ ಸಂತೋಷಕೆ ನಿ
ನ್ನಸುವಂ ಪತಿಕಾರ್ಯಕೆ ವೆ
ಚ್ಚಿಸಿದಯ್ ನಿನ್ನನ್ನನಾವನಂಗಾಧಿಪತಿ॥೨೨॥

ಅಂಗಾಧಿಪತೀ! ಕಸವರಮಂ = ಹೊನ್ನನ್ನು, ದ್ವಿಜದಾನಕೆ= ವಿಪ್ರರಿಗೆ ದಾನ ಮಾಡುವುದಕ್ಕೂ, ಪೊಸಜೌವನಮಂ= ನವಯೌವನವನ್ನು , ಸ್ವದಾರ ಸಂತೋಷಕೆ= ತನ್ನ ಪತ್ನಿಯ ಸಂತೋಷಕ್ಕೂ, ನಿನ್ನಸುವಂ= ನಿನ್ನ ಪ್ರಾಣವನ್ನು, ಪತಿಕಾರ್ಯಕೆ= ಸ್ವಾಮಿಕಾರ್ಯಕ್ಕೂ, ವೆಚ್ಚಿಸಿದಯ್= ವ್ಯಯಮಾಡಿದೆಯಲ್ಲ! ನಿನ್ನನ್ನನ್= ನಿನ್ನಂಥವನು , ಆವನ್=ಯಾವನಿದ್ದಾನೆ?

ತಾತ್ಪರ್ಯ :- ಅಂಗಾಧಿಪತೀ ! ನಿನ್ನ ಸಕಲ ಸಂಪತ್ತನ್ನು ಬ್ರಾಹ್ಮಣರಿಗೆ ದಾನಮಾಡುವುದಕ್ಕೂ, ನವಯೌವನವನ್ನು ನಿನ್ನ ಪತ್ನಿಯ ಸಂತೋಷಕ್ಕೂ, ನಿನ್ನ ಜೀವನವನ್ನು ಪ್ರಭುಕಾರ್ಯಕ್ಕೂ, ವಿನಿಯೋಗಿಸಿದೆಯಲ್ಲ! ನಿನ್ನಂತಹ ತ್ಯಾಗಿಯು ಈ ಲೋಕದಲ್ಲಿ ಬೇರಾವನಿದ್ದಾನೆ?

ಕರ್ಣನಂತಹ ನಿಸ್ವಾರ್ಥಿಯೂ ತ್ಯಾಗಶೀಲನೂ ಇನ್ನೊಬ್ಬನಿಲ್ಲವೆಂಬ ಭಾವ.

ಹರಿ ಬೇಡೆ ಕವಚಮಂ ನೀ
ನರಿದಿತ್ತಯ್ ಕೊಂತಿ ಬೇಡೆ ಬೆಚ್ಚದೆ ಕೊಟ್ಟಯ್
ಪುರಿಗಣೆಯಂ ನಿನಗೆಣೆ ಕಸ
ವರಗಲಿ ಮೆಯ್ಗಲಿಯುಮಾವನಂಗಾಧಿಪತಿ॥೨೩॥

ಹರಿ=ದೇವೇಂದ್ರನು, ಬೇಡೆ = ಯಾಚಿಸಲು, ಕವಚಮಂ= ಸಹಜಕವಚವನ್ನು, ನೀನ್ ಅರಿದಿತ್ತಯ್= ಸ್ವತಃ ಕತ್ತರಿಸಿ ಕೊಟ್ಟೆ,
ಕೊಂತಿ ಬೇಡೆ= ಕುಂತಿಯು ಬಂದು ಯಾಚಿಸಲು, ಬೆಚ್ಚದೆ= ಗಾಬರಿಯಾಗದೆ, ಪುರಿಗಣೆಯಂ= ಸುಡುಬಾಣವನ್ನು(ಅಗ್ನ್ಯಾಸ್ತ್ರ ? ಒಂದು ಬಗೆಯ ಅಮೋಘಾಸ್ತ್ರ) ಕೊಟ್ಟಯ್= ಕೊಟ್ಟೆಯಲ್ಲವೇ! ನಿನಗೆ ಎಣೆ= ನಿನಗೆ ಸಮಾನವಾದ, ಕಸವರಗಲಿ= ಹೊನ್ನನು ದಾನಮಾಡುವುದರಲ್ಲಿ ಶೂರನೂ, ಮೆಯ್ಗಲಿಯುಂ= ಪರಾಕ್ರಮಿಯೂ, ಆವನ್=ಯಾವನಿರುವನು?

ತಾತ್ಪರ್ಯ :- ಸಾಕ್ಷಾತ್ ಇಂದ್ರನೇ ವಟುವೇಷದಿಂದ ಬಂದು ನಿನ್ನ ಮೈಗೆ ಅಂಟಿಕೊಂಡಿದ್ದ ಸಹಜಕವಚವನ್ನು ಕೈಯೊಡ್ಡಿ ಬೇಡಲು ಹಿಂದುಮುಂದು ನೋಡದೆ ಸ್ವತಃ ಕತ್ತರಿಸಿಕೊಟ್ಟೆಯಲ್ಲ! ಕೃಷ್ಣನ ಆಜ್ಞೆಯಂತೆ ಕುಂತಿಯು ಬಂದು ಹುರಿಗಣೆಯನ್ನು ಬೇಡಿದಾಗ ಹೆದರದೆ ಅದನ್ನೂ ಕೊಟ್ಟೆಯಲ್ಲ! ನಿನ್ನಂಥ ದಾನಶೂರನೂ ಪರಾಕ್ರಮಿಯೂ ಬೇರಾವನಿರುವನು?

ದೇವೇಂದ್ರನೇ ಕರ್ಣನ ಮುಂದೆ ನಿಂತು ಕೈಯೊಡ್ಡಿ ಬೇಡಿದನೆಂದ ಬಳಿಕ ಕರ್ಣನ ಘನತೆ ಸಾಮಾನ್ಯವೇ? ಎಂತಿದ್ದರೂ ಕೊಡುವ ಕೈ ಮೇಲೆ, ಕೊಂಬುವ ಕೈ ಕೆಳಗೆ ಅಲ್ಲವೇ? ಜೀವರಕ್ಷಣೆಗಾಗಿ ದೈವದತ್ತವಾಗಿದ್ದ ಸಹಜ ಕವಚವನ್ನೂ ಶತ್ರು ಸಂಹಾರ ಕಾರಣವಾದ ಹುರಿಗಣೆಯನ್ನೂ ದಾನವಿತ್ತು ಅಪ್ರತಿಮ ಪರಾಕ್ರಮಿಯಾದನು ಕರ್ಣ.

ನಯನದೊಳಮೆರ್ದೆಯೊಳಂ ನಿ
ನ್ನಯ ರೂಪಿರ್ದಪುದು ನಿನ್ನಮಾತಿರ್ದಪುದೆ
ನ್ನಯ ಕಿವಿಯೊಳಗಿನನಂದನ
ವಿಯೋಗಮೆಂತಾದುದಱಿಯೆನಂಗಾಧಿಪತೀ॥೨೪॥

ಅಂಗಾಧಿಪತೀ! ನಯನದೊಳಂ= ಕಣ್ಣುಗಳಲ್ಲಿಯೂ, ಎರ್ದೆಯೊಳಂ= ಹೃದಯದಲ್ಲಿಯೂ, ನಿನ್ನಯ ರೂಪು ಇರ್ದಪುದು= ನಿನ್ನ ಆಕೃತಿ ನೆಲಸಿದೆ, ನಿನ್ನ ಮಾತು ಎನ್ನಯ ಕಿವಿಯೊಳಗೆ ಇರ್ದಪುದು= ನಿನ್ನ ಮಧುರ ವಚನವು ನನ್ನ ಕಿವಿಯಲ್ಲಿ ಎನ್ನೂ ಪ್ರತಿಧ್ವನಿಸುತ್ತದೆ.( ಎಂದ ಬಳಿಕ ) ವಿಯೋಗಂ= ಮರಣವು, ಎಂತಾದುದು= ಹೇಗೆ ಸಂಭವಿಸಿತೋ,
ಅಱಿಯೆನ್= ತಿಳಿಯೆನು.
ತಾತ್ಪರ್ಯ :-ಕರ್ಣ! ನನ್ನ ಕಣ್ಣಮುಂದೆ ನಿನ್ನ ರೂಪವೆದೆ; ಹೃದಯದಲ್ಲಿ ನಿನ್ನ ಮೂರ್ತಿ ನೆಲೆಸಿದೆ; ಕಿವಿಯೊಳಗೆ ನಿನ್ನ ಮಾತುಗಳು ಇನ್ನೂ ಪ್ರತಿಧ್ವನಿಸುತ್ತಿವೆ, ಎಂದ ಬಳಿಕ ನಿನಗೆ ಹೇಗೆ ಸಾವು ಸಂಭವಿಸಿತೋ ನಾನರಿಯೆ!

ನಿನ್ನಂ ಕೊಂದ ಕಿರೀಟಿಯು
ಮೆನ್ನನುಜನನಿಕ್ಕಿಕೊಂದ ಭೀಮನುಮೊಳನಾ
ನಿನ್ನುಮೊಳೆಂ ಗಡಿದಕ್ಕುಮೆ
ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೨೫॥

ನಿನ್ನಂ ಕೊಂದ ಕಿರೀಟಿಯುಂ= ನಿನ್ನನ್ನು ವಧಿಸಿದ ಅರ್ಜುನನೂ, ಎನ್ನನುಜನಂ ಇಕ್ಕಿ ಕೊಂದ ಭೀಮನುಂ= ನನ್ನ ತಮ್ಮನನ್ನು ಉರುಳಿಸ ಕೊಂದ ಭೀಮನೂ , ಒಳನ್=ಇದ್ದಾನೆ, ಆನ್ ಇನ್ನುಂ ಒಳೆಂ ಗಡ = ನಾನಿನ್ನೂ ಬದುಕಿದ್ದೇನಲ್ಲವೇ? ನಿನ್ನಯ ಕೂರ್ಮೆಗಂ= ನೀನು ನನ್ನಲ್ಲಿಟ್ಟ ಪ್ರೀತಿಗೂ, ಅದೆನ್ನ ಸೌಧರ್ಮಿಕೆಗಂ= ಆ ನನ್ನ ಸಹೋದರ ವಾತ್ಸಲ್ಯಕ್ಕೂ, ಇದಕ್ಕುಮೆ= ನಾನು ಜೀವಿಸಿರುವುದು ಯೋಗ್ಯವೇ?

ತಾತ್ಪರ್ಯ :- ಅಂಗಾಧಿರಾಜ! ನಿನ್ನನ್ನು ವಧಿಸಿದ ಅರ್ಜುನನೂ ನನ್ನ ಪ್ರೀತಿಯ ತಮ್ಮನನ್ನು ಕೊಂದ ಭೀಮನೂ ಇನ್ನೂ ಜೀವಂತವಾಗಿದ್ದಾರೆ. ನಿಮ್ಮನ್ನು ಕಳೆದುಕೊಂಡು ನಾನು ಬದುಕಿದ್ದೇನಲ್ಲ! ನಿನ್ನ ಪ್ರೀತಿಗೂ ನನ್ನ ಸೋದರ ಪ್ರೇಮಕ್ಕೂ ಇದು ಯೋಗ್ಯವಲ್ಲವೇ? ಅಲ್ಲ. ಆದುದರಿಂದ ನಾಮ್ಮ ಕೊಲೆಯ ಸೇಡನ್ನು ತೀರಿಸದೆ ಬೆಡೆನು ಎಂಬ ಭಾವ.

ಪರಶುಧರಂ ಚಕ್ರಧರಂ
ಸುರಪತಿ ಭೂಕಾಂತೆಯೆಂದೀ ಪೇೞ್ದ
ಯ್ವರೆ ಕೂಡಿ ನಿನ್ನ ಕೊಂದರ್
ನರನೊರ್ವನೆ ಕೊಂದನಲ್ಲನಂಗಾಧಿಪತೀ॥೨೬॥

ಅಂಗಾಧಿಪತೀ! ಪರಶುಧರಂ= ಪರಶುರಾಮ, ಚಕ್ಧರಂ= ಶ್ರೀಕೃಷ್ಣ, ಸುರಪತಿ=ಇಂದ್ರ, ಭೂಕಾಂತೆ= ಭೂದೇವಿ, ಕೊಂತಿ= ಕುಂತೀದೇವಿ ,ಎಂದು ಈ ಪೇೞ್ದ ಐವರೆ=ಹೀಗೆ ಈ ಐದು ಮಂದಿ , ಕೂಡಿ=ಒಂದಾಗಿ, ನಿನ್ನ ಕೊಂದರ್= ನಿನ್ನನ್ನು ಕೊಂದರು, ನರನ್= ಅರ್ಜುನನು, ಒರ್ವನೆ ಕೊಂದನಲ್ಲ= ಒಬ್ಬನೇ ಕೊಂದುದಲ್ಲ. ಅಂಗಾಧಿರಾಜ! ಪರಶುರಾಮ, ಕೃಷ್ಣ , ಇಂದ್ರ, ಕುಂತಿ, ಮತ್ತು ಭೂದೇವಿ ಹೀಗೆ ಈ ಪಂಚವ್ಯಕ್ತಿಗಳು ಒಟ್ಟಾಗಿ ನಿನಗೆ ಸಾವನ್ನು ತಂದರಲ್ಲದೆ ಕೇವಲ ಅರ್ಜುನನೊಬ್ಬನೇ ಕೊಂದವನಲ್ಲ.

ಇಂದಾನಾದೆಂ ಮೇಣಿನ
ನಂದನ ಕೇಳ್ ಪಾಂಡುತನಯರಾದರ್ ನಿನ್ನಂ
ಕೊಂದುಂ ದುಶ್ಯಾಸನನಂ
ಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೨೭॥

ಇನನಂದನ! ಇಂದು ಆನ್ ಆದೆಂ= ಇಂದು ನಾನಾಯ್ತು, ಮೇಣ್=ಅಥವಾ ಪಾಂಡುತನಯರ್ ಆದರ್= ಪಾಂಡವರಾದರು, ನಿನ್ನಂ ಕೊಂದುಂ ದುಶ್ಯಾಸನನಂ ಕೊಂದುಂ= ನಿನ್ನನ್ನೂ ದುಶ್ಯಾಸನನನ್ನೂ ಕೊಂದು , ಬರ್ದುಕುವರೆ= ಬದುಕಲು ಸಾಧ್ಯವೇ? ಬರ್ದುಕರ್= ಖಂಡಿತ ಬದುಕಲಾರರು.

ತಾತ್ಪರ್ಯ :- ಸೂರ್ಯಪುತ್ರಾ ! ಇಂದು ಒಂದೋ ನಾನು ಮಾತ್ರ ಉಳಿಯಬೇಕು.ಇಲ್ಲವೇ ಪಾಂಡವರು ಮಾತ್ರ ಉಳಿಯಬೇಕು, ನಾನೂ ಪಾಂಡವರೂ ಜೊತೆಯಾಗಿ ಉಳಿಯಲು ಸಾಧ್ಯವಿಲ್ಲ,ನಿನ್ನನ್ನೂ ದುಶ್ಯಾಸನನನ್ನೂ ಕೊಂದವರು ಇನ್ನೂ ಬದುಕುವರೇ? ಇಲ್ಲ. ಬದುಕಲು ಸಾಧ್ಯವಿಲ್ಲ. ಅರ್ಥಾತ್ ನಿಮ್ಮಿಬ್ಬರನ್ನೂ ಕೊಂದ ಭೀಮಾರ್ಜುನರನ್ನು ಕೊಂದೇ ತೀರುವೆನು.

ಇನಸುತನಿರವಂ ದುಶ್ಯಾ
ಸನನಿರವಂ ಕಂಡುಮಿನ್ನುಮೆನ್ನಸುವಿದು ನೆ
ಟ್ಟನೆ ಪೋದುದಿಲ್ಲ ಕಲ್ಲೆರ್ದೆ
ತನದಿಂದೆನ್ನಂತು ಬರ್ದನಾವನುಮೊಳನೇ॥೨೮॥

ಇನಸುತನ ಇರವಂ= ಕರ್ಣನ ಅವಸ್ಥೆಥಯನ್ನು, ದುಶ್ಯಾಸನನ ಇರವಂ= ದುಶ್ಯಾಸನನ ಅವಸ್ಥೆಯನ್ನು, ಕಂಡುಂ= ನೋಡಿ, ಇನ್ನುಂ ಎನ್ನ ಅಸು ಇದು= ಇನ್ನೂ ನನ್ನ ಜೀವವು, ಪೋದುದಿಲ್ಲ, ಕಲ್ಲೆರ್ದೆತನದಿಂದೆ= ಕಲ್ಲಿನಂತೆ ಕಠಿಣವಾದ ಹೃದಯವುಳ್ಳವನಾಗಿ, ಎನ್ನಂತು= ನನ್ನ ಹಾಗೆ, ಬರ್ದನ್=ಬಾಳಿದವನು, ಆವನುಂ ಒಳನೇ= ಯಾವನಾದರೂ ಇರುವನೇ?

ತಾತ್ಪರ್ಯ :- ಕರ್ಣ ದುಶ್ಯಾಸನರ ದುರಂತವನ್ನು ಕಂಡೂ ನನ್ನ ಜೀವವು ಹೋಗಿಲ್ಲ. ಎಂದ ಬಳಿಕ ನನ್ನ ಹಾಗೆ ಕಲ್ಲಿನಂತೆ ಕಠಿಣ ಹೃದಯಿಯಾಗಿ ಬಾಳಿದವನು ಬೇರೆ ಯಾವನಾದರೂ ಇರುವನೇ? ಇರಲಾರ.

ಸೂನುಗಳೞಿವಂ ಪ್ರಿಯಮಿ
ತ್ರಾನುಜರೞಿವಂ ವಿಧಾತ್ರ ನೀಂ ಕಾಣಿಸಿ ಮುಂ
ದೇನಂ ಕಾಣಿಸಲಿರ್ದಪೆ
ನೀನೆನ್ನಂ ಪಾಪಕರ್ಮನಂ ನಿರ್ಗುಣನಂ॥೨೯॥

ಸೂನುಗಳ ಅೞಿವಂ =ಮಕ್ಕಳ ನಾಶವನ್ನೂ, ಪ್ರಿಯಮಿತ್ರ ಅನುಜರ ಅೞಿವಂ=ಪ್ರಿಯಮಿತ್ರನಾದ ಕರ್ಣನ ಮತ್ತು ತಮ್ಮಂದಿರ ಸಾವನ್ನೂ, ಕಾಣಿಸಿ= ಕಣ್ಣಾರೆ ನೋಡುವಂತೆಮಾಡಿ, ವಿಧಾತ್ರ= ಎಲೈ ಬ್ರಹ್ಮನೇ, ನೀನ್=ನೀನು, ಪಾಪಕರ್ಮನಂ ನಿರ್ಗುಣನಂ= ಪಾಪಕರ್ಮಿಯೂ ನಿರ್ಗುಣಿಯೂ ಆದ ನನಗೆ, ಮುಂದೆ ಏನಂ ಕಾಣಿಸಲಿರ್ದಪೆ= ಇನ್ನು ಮೇಲೆ ಇದಕ್ಕಿಂತಲೂ ಘೋರವಾದ ಏನೇನನ್ನು ಕಾಣಿಸಲಿರುವೆಯೋ?

ತಾತ್ಪರ್ಯ :- ಎಲೈ ವಿಧಿಯೇ! ನನ್ನ ಮಕ್ಕಳ , ತಮ್ಮಂದಿರ ಹಾಗೂ ಆಪ್ತಮಿತ್ರನಾದ ಕರ್ಣನ ಮರಣವನ್ನು ಕಾಣುವಂತೆ ಮಾಡಿದೆ. ಇಷ್ಟರಿಂದಲೇ ತೃಪ್ತನಾಗದೆ ಇನ್ನು ಮುಂದೆ ಇದಕ್ಕಿಂತಲೂ ಘೋರವಾದ ಎಂತಹ ದೃಶ್ಯಗಳನ್ನು ಮಹಾಪಾಪಿಯೂ ದುರ್ಗುಣಿಯೂ ಆದ ನನಗೆ ತೋರಲಿರುವೆಯೋ?

ಆರೊಡನೆ ನುಡಿವೆನೞ್ತಿಯೊ
ಳಾರೊಡನೋಲಗದೊಳಿರ್ಪೆನಾರೊಡನೆ ಸಮಂ
ತಾರೋಗಿಪೆನೇಱುವೆನಾ
ನಾರೊಡನೆನ್ನಣುಗರಿಲ್ಲದಿಭವಾಜಿಗಳಂ॥೩೦॥

ಸಂಜಯ ! ಆರೊಡನೆ ನುಡಿವೆನ್ ಅೞ್ತಿಯೊಳ್= ಯಾರೊಡನೆ ಪ್ರೀತಿಯಿಂದ ಮಾತನಾಡಲಿ? ಆರೊಡನೆ ಓಲಗದೊಳ್ ಇರ್ಪೆನ್ = ಯಾರೊಂದಿಗೆ ರಾಜ ಸಭೆಯಲ್ಲಿರಲಿ, ಆರೊಡನೆ ಸಮಂತು ಆರೋಗಿಪೆನ್= ಯಾರೊಂದಿಗೆ ಸುಖಭೋಜನವನ್ನು ಮಾಡಲಿ, ಎನ್ನ ಅಣುಗರಿಲ್ಲದೆ= ನನ್ನ ಆಪ್ತರಿಲ್ಲದೆ , ಇಭವಾಜಿಗಳಂ= ಆನೆ ಕುದುರೆಗಳನ್ನು, ಆರೊಡನೆ ಏರುವೆನ್= ಯಾರೊಂದಿಗೆ ಏರಿ ಸವಾರಿ ಮಾಡುವೆನು ?

ಸಂಜಯ! ನನ್ನ ಜೀವಸಖನಾದ ಕರ್ಣನಿಲ್ಲದೆ ಯಾರೊಡನೆ ಪ್ರೀತಿಯಿಂದ ಮಾತನಾಡಲಿ, ಯಾರೊಡನೆ ರಾಜಸಭೆಯನ್ನು ಅಲಂಕರಿಸಲಿ, ಯಾರೊಡನೆ ಸುಖಭೋಜನವನ್ನು ಮಾಡಲಿ? ಯಾರೊಂದಿಗೆ ಆನೆ ಕುದುರೆಗಳನ್ನೇರಿ ಸವಾರಿ ಮಾಡಲಿ,

ಕೆಳೆಯಂಗಾಯ್ತಸುಮೋಕ್ಷಮಾಗದೆನಗಂ ಬಾಷ್ಮಾಂಬು ಮೋಕ್ಷಂ ಧರಾ
ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾಂ ಕೊಟ್ಟೆನಲ್ಲನ್ಯಮಂ
ಡಳಮಂ ಸುಟ್ಟನಿವಂ ಪ್ರತಾಪ ಶಿಖಿಯಿಂದಾನೀತನಂ ಸತ್ಕ್ರಿಯಾ
ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ॥೩೧॥

ಕೆಳೆಯಂಗೆ= ಗೆಳೆಯನಾದ ಕರ್ಣನಿಗೆ, ಅಸುಮೋಕ್ಷಂ= ಪ್ರಾಣವಿಸರ್ಜನೆ,ಆಯ್ತು= ಆಯಿತು, ಎನಗಂ=ನನಗಾದರೋ, ಬಾಷ್ಪಾಂಬುಮೋಕ್ಷಂ= ಕಂಬನಿಯ ಬಿಡುಗಡೆಯು, ಆಗದು= ಆಗಲಿಲ್ಲ, ಧರಾತಳಮಂ=ಭೂಮಂಡಲವನ್ನು, ಇವಂ= ಈತನು, ಕೊಟ್ಟಂ= ನನಗೆ ಕೊಟ್ಟನು, ನಾಂ= ನಾನಾದರೋ, ಜಳಾಂಜಳಿಯುಮಂ= ತರ್ಪಣೋದಕವನ್ನೂ, ಕೊಟ್ಟೆನಿಲ್ಲ= ಕೊಡಲಿಲ್ಲ, ಇವಂ=ಈತನು, ಪ್ರತಾಪಶಿಖಿಯಿಂದೆ=ಪ್ರತಾಪಾಗ್ನಿಯಿಂದ,ಅನ್ಯಮಂಡಳಮಂ=ಶತ್ರು ಸಮೂಹವನ್ನು,ಸುಟ್ಟಂ=ಸುಟ್ಟನು,ಆನ್= ನಾನು, ಈತನಂ= ಇವನನ್ನು ,ಸತ್ಕ್ರಿಯಾ ಅನಳನಿಂ= ಸಂಸ್ಕಾರಾಗ್ನಿಯಿಂದ, ಸುಟ್ಟೇನುಮಿಲ್ಲ= ದಹಿಸಲಿಲ್ಲ, ಮತ್ಪ್ರಿಯತಮಂ ಕರ್ಣಂಗೆ=ನನ್ನ ಪ್ರಿಯತಮನಿಗೆ( ಕರ್ಣನಿಗೆ ) ಇದೇಂ ಕೂರ್ತೆನೋ= ಇದೆಂತಹ ಪ್ರೀತಿಯನ್ನು ತೋರಿಸಿದೆನೋ ?

ತಾತ್ಪರ್ಯ:-ಸಂಜಯ! ಗೆಳೆಯನಾದ ಕರಣನು ನನಗಾಗಿ ಪ್ರಾಣಾರ್ಪಣೆಗೈದನು. ನಾನಾದರೋ ಇವನಿಗಾಗಿ ಕಣ್ಣೀರನ್ನು ಕೂಡ ಸುರಿಸಲಿಲ್ಲ.ಇವನು ನ್ಯಾಯವಾಗಿ ತನ್ನದಾಗಬೇಕಾಗಿದ್ದ ಭೂಮಂಡಲವನ್ನೇ ನನಗಿತ್ತನು.ನಾನಾದರೋ ಇವನಿಗೆ ತರ್ಪಣೋದಕವನ್ನು ಕೂಡ ಕೊಡಲಿಲ್ಲ. ಇವನು ತನ್ನ ಪ್ರತಾಪಾಗ್ನಿಯಿಂದ ಶತ್ರು ಸಮೂಯಗಳ ರಾಜ್ಯವನ್ನು ಸುಟ್ಟನು. ನಾನಾದರೋ ಇವನ ಕಳೇಬರವನ್ನು ಕೂಡ ವಿಧ್ಯುಕ್ತವಾಗಿ ದಹಿಸಲಿಲ್ಲ.ಇಂತಹ ಬಲಿದಾನವನ್ನು ಮಾಡಿದ ಕರ್ಣನಿಗೆ ಮಾಡತಕ್ಕ ಅಲ್ಪಕಾರ್ಯಗಳನ್ನು ಕೂಡ ನಾನು ಮಾಡಿಲ್ಲ. ನನ್ನ ಪ್ರಿಯತಮನಾದ ಕರ್ಣನಿಗೆ ಇದೆಂತಹ ಪ್ರೀತಿಯನ್ನು ತೋರಿಸಿದೆನೋ! ನಿಜಕ್ಕೂ ನಾನು ಕೃತಘ್ನನೇ ಸರಿ.

ಜಲದಾನಕ್ರಿಯೆಯಂ ವಾ
ಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ
ಕೆಳೆಯಂಗೆ ಮಾಡಿದಯ್ ಕುರು
ಕುಲದರ್ಪಣ ಮಱೆವುದಿನ್ನಹರ್ಪತಿಸುತನಂ॥೩೨॥

ಕುರುಕುಲ ದರ್ಪಣ= ಕುರುಕುಲ ಶ್ರೇಷ್ಠನೇ! ಜಲದಾನಕ್ರಿಯೆಯಂ=ತರಪಣೋದಕ ಕಾರ್ಯವನ್ನು, ವಾಗ್ಜಲದಿಂ=ವಾಗ್ಧಾರೆಯಿಂದಲೂ, ( ಮಾತಿನ ಸುರಿಮಳೆಯಿಂದಲೂ) , ದಹನಕ್ರಿಯೆಯಂ= ದಹನ ಸಂಸ್ಕಾರವನ್ನು, ಕೋಪಾಗ್ನಿಯಿಂದೆ=ಕೋಪವೆಂಬ ಅಗ್ನಿಯಿಂದಲೂ, ಕೆಳೆಯಂಗೆ= ಗೆಳೆಯನಾದ ಕರ್ಣನಿಗ, ಮಾಡಿದಯ್= ಮಾಡಿದೆಯಷ್ಟೆ,ಇನ್=ಇನ್ನು ಮುಂದೆ, ಅಹರ್ಪತಿಸುತನಂ= ಸೂರ್ಯ ಪುತ್ರನನ್ನು, ಮಱೆವುದು= ಮರೆತು ಬಿಡುವುದು.
( ಅಹರ್ಪತಿ= ಅಹಃಪತಿ= ಅಹಸ್ಪತಿ ಈಮೂರು ರೂಪಗಳಿವೆ )

ತಾತ್ಪರ್ಯ :- ಕುರುಕುಲಕ್ಕೆ ಕನ್ನಡಿಯಂತಿರುವವನೇ ! ನಿನ್ನ ಗೆಳೆಯನಿಗೆ ಇದುವರೆಗೆ ಮಾಡಿದ ಆತನ ಪ್ರಶಂಸಾರೂಪವಾದ
ವಾಗ್ಧಾರೆಯಿಂದ ತರ್ಪಣೋದಕವನ್ನೂ, ನಿನ್ನ ಕೋಪಾಗ್ನಿಯಿಂದ ಆತನಿಗೆ ದಹನ ಸಂಸ್ಕಾರವನ್ನೂ, ಮಾಡಿದೆಯಷ್ಟೆ ! ಆದುದರಿಂದ ಇನ್ನು ಮುಂದೆ ಕರ್ಣನನ್ನು ಕುರಿತು ಹಂಬಲಿಸದಿರು; ಅವನನ್ನು ಮರೆತು ಬಿಡು.

ಪೆಂಡಿರ್ ಪೞಯಿಸುವಂದದೆ
ಗಂಡರ್ ಪೞಯಿಸಿದೊಡಾಯಮಂ ಛಲಮಂ ಕಯ್
ಕೊಂಡೆಸೆಪರಾರೊ ಕುರುಕುಲ
ಮಂಡನ ನೀನೆತ್ತಿಕೊಂಡ ಛಲಮನೆ ಮೆಱೆಯಾ॥೩೩॥

ಪೆಂಡಿರ್= ಸ್ತ್ರೀಯರು, ಪೞಯಿಸುವ ಅಂದದೆ= ಪ್ರಲಾಪಿಸುವ ಹಾಗೆ, ಗಂಡರ್= ಪುರುಷರು, ಪೞಯಿಸಿದೊಡೆ= ಅಳುವುದಕ್ಕೆ ತೊಡಗಿದರೆ, ಆಯಮಂ=ಶೌರ್ಯವನ್ನು, ಛಲಮಂ= ಹಟವನ್ನೂ, ಕೈಕೊಂಡು = ಸ್ವೀಕರಿಸಿ, ಎಸೆಪರ್ ಆರೊ= ಮಾಡುವವರು ಯಾರೋ? ಕುರುಕುಲ ಮಂಡನ= ಕುರುಕುಲ ಭೂಷಣ, ನೀನ್ ಎತ್ತಿಕೊಂಡ= ನೀನು ಹಿಡಿದಿರುವ,ಛಲಮನೆ= ಹಟವನ್ನೇ, ಮೆಱೆಯಾ= ಪ್ರದರ್ಶಿಸು.

ತಾತ್ಪರ್ಯ :- ಎಲೈ ಕುರುಕುಲ ಭೂಷಣ! ಇದೇನು, ಹೆಂಗಸರು ಅಳುವಂತೆ ಗಂಡಸರೂ ಅಳುವುದಕ್ಕೆ ತೊಡಗಿದರೆ ಶೌರ್ಯವನ್ನೂ , ಹಿಡಿದ ಹಟವನ್ನೂ ಪೂರೈಸುವವರು ಯಾರು? ಆದುದರಿಂದ
ಗಂಡಸಾದ ನೀನು ಹಿಡಿದಿರುವ ಛಲವನ್ನೇ ಸಾಧಿಸು.

ದುರ್ಯೋಧನನ ಶೋಕಾತಿರೇಕವನ್ನು ನೋಡಿ ಸಂಜಯನ ಮನಸ್ಸೂ ಪರಿವರ್ತನೆಗೊಳ್ಳುತ್ತದೆ. ಇದುವರೆಗು ಯುದ್ಧ ಬೇಡವೆಂದು ಸಾರಿ ಹೇಳುತ್ತಿದ್ದವನೇ ಈಗ ಛಲವನ್ನು ಪ್ರದರ್ಶಿಸಿ ಹೋರಾಡು ಎಂಬ ಸಲಹೆಯನ್ನು ಕೊಡುತ್ತಾನೆ.

ದರಹಾಸಪೇಶಲಂ ದಿ
ಕ್ಕರಿಗಮನಂ ಕನಕಪರ್ವತ ಪ್ರಾಂಶುದಿನೇ
ಶ್ವರಸುತನ ರೂಪು ಚಿತ್ರಂ
ಬರೆದಂತಿರ್ದಪುದು ಚಿತಾತಭಿತ್ತಿಯೊಳೆನ್ನಾ॥೩೪

ದರಹಾಸಪೇಶಲಂ= ಮಂದಹಾಸಮನೋಹರನೂ, ದಿಕ್ಕರಿಗಮನಂ= ದಿಗ್ಗಜದಂತೆ ಗಂಭೀರವಾದ ನಡಿಗೆಯುಳ್ಳವನೂ,
ಕನಕಪರ್ವತಪ್ರಾಂಶು= ಕನಕಾಚಲದಂತೆ ಉನ್ನತನಾದವನೂ ಆದ, ದಿನೇಶ್ವರನಸುತನ= ಸೂರ್ಯಪುತ್ರನಾದ ಕರ್ಣನ,
ರೂಪು= ಆಕೃತಿ, ಎನ್ನಾ= ನನ್ನ, ಚಿತ್ತಭಿತ್ತಿಯೊಳ್= ಮನಸ್ಸೆಂಬ ಗೋಡೆಯಲ್ಲಿ, ಚಿತ್ರಂ ಬರೆದಂತೆ ಇರ್ದಪುದು= ಚಿತ್ರವನ್ನು
ಬರೆದ ಹಾಗಿದೆ.

ತಾತ್ಪರ್ಯ :- ಸಂಜಯ :- ಮುಗುಳ್ನಗೆಗೂಡಿ ಮನೋಹರನೂ, ದಿಗ್ಗಜದಂತೆ ಗಂಭೀರ ನಡಿಗೆಯುಳ್ಳವನೂ,
ಕನಕಪರ್ವತದಂತೆ ದೀರ್ಘದೇಹಿಯೂ, ಆದ ಕರ್ಣನ ದಿವ್ಯ ಸುಂದರ ರೂಪು ನನ್ನ ಮನೋಭಿತ್ತಿಯಲ್ಲಿಬರೆದ ಹಾಗಿದೆ. (  (ಹೀಗಿರುವಾಗ ಅವನನ್ನು ಮರೆಯುವುದಾದರೂ ಹೇಗೆ ? )

ಗುರುದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು
ರ್ವರೆಯ ಕಾವ ಗುಣಕ್ಕೆ ನರ್ಮಸಚಿವಂ ಕ್ರೀರಸಕ್ಕಾನೆಯಾಳ್
ಗುರುಭಾರಕ್ಕಿಱಿವಾಳ್ ರಣಕ್ಕೆ ತುೞಿಲಾಳ್ ಕಟ್ಟಾಯದೊಳ್ ಮೇಳದಾಳ್
ಪರಿಹಾಸಕ್ಕೆನಿಸಿರ್ದನೆಂತು ಮಱೆವಂ ದುರ್ಯೋಧನಂ ಕರ್ಣನಂ॥೩೫॥

ದೀಕ್ಷಾವಿಧಿಗಳ್ಗೆ= ಯಜ್ಞಯಾಗಾದಿ ಕಾರ್ಯಗಳನ್ನು ಕೈಕೊಳ್ಳುವಲ್ಲಿ ಗುರು, ಹಿತಕಾರ್ಯಾಳೋಚನಕ್ಕೆ= ಹಿತಕರವಾದ ಕಾರ್ಯಗಳ ಕುರಿತು ಆಲೋಚನೆಯನ್ನು ಮಾಡುವಲ್ಲಿ, ಮಂತ್ರಿ, ಉರ್ವರೆಯಂ= ಭೂಮಿಯನ್ನು , ಕಾವಗುಣಕ್ಕೆ=
ಸಂರಕ್ಷಿಸುವ ಕಾರ್ಯದಲ್ಲಿ, ಆಳ್ದನ್= ಒಡೆಯನು, ಕ್ರೀಡಾರಸಕ್ಕೆ= ರತಿವಿಲಾಸಗಳಲ್ಲಿ, ನರ್ಮಸಚಿವಂ= ರಹಸ್ಯ ಸಚಿವ, ಗುರುಭಾರಕ್ಕೆ ಆನೆಯಾಳ್= ಮಹತ್ಕಾರ್ಯಗಳನ್ನು ನೆರವೇರಿಸುವುದರಲ್ಲಿ ಆನೆಯಂಥ ಬಂಟ, ರಣಕ್ಕೆಇಱಿವಾಳ್= ಯುದ್ಧದಲ್ಲಿ ಹೋರಾಡುವ ವೀರ, ಕಟ್ಟಾಯದೊಳ್= ಮಾರ್ಮಿಕವಾದ ಸಾಹಸಕಾರ್ಯಗಳಲ್ಲಿ,ತುೞಿಲಾಳ್= ಶೂರ, ಪರಿಹಾಸಕ್ಕೆ = ತಮಾಸೆಗೆ, ಮೇಳದಾಳ್= ಒಡನಾಡಿ, ಎನಿಸಿರ್ದಂ= ಎನ್ನಿಸಿಕೊಂಡಿದ್ದನು, ( ಹೀಗಿರಲು ) ದುರ್ಯೋಧನಂ
ಕರ್ಣನಂ ಎಂತು ಮಱೆವಂ= ದುರ್ಯೋಧನನು ಕರ್ಣನನ್ನು ಹೇಗೆ ತಾನೆ ಮರೆಯಬಲ್ಲನು?

ತಾತ್ಪರ್ಯ :- ಯಜ್ಞಯಾಗಾದಿ ಕಾರ್ಯಗಳಲ್ಲಿ ಗುರು, ಹಿತಕಾರ್ಯಗಳಲ್ಲಿ ಸೂಕ್ತ ಸಲಹೆಯನ್ನೀಯುವುದಕ್ಕೆ ಮಂತ್ರಿ, ರಾಜ್ಯ ಸಂರಕ್ಷಣೆಯಲ್ಲಿ ಒಡೆಯ, ರತಿವಿಲಾಸಗಳಲ್ಲಿ ರಹಸ್ಯ ಸಚಿವ, ಮಹಾತ್ಕಾರ್ಯಗಳಲ್ಲಿ ಗಜೇಂದ್ರ, ಯುದ್ಧದಲ್ಲಿ ವೀರ ಯೋಧ, ಮಾರ್ಮಿಕವಾದ ಸಾಹಸಕಾರ್ಯಗಳಲ್ಲಿ, ಮಹಾಶೂರ, ತಮಾಷೆಯಲ್ಲಿ ಒಡನಾಡಿ ಎನ್ನಿಸಿಕೊಂಡಿದ್ದ ಕರ್ಣನನ್ನು
ದುರ್ಯೋಧನನು ಮರೆಯಲು ಸಾಧ್ಯವೇ?

ಅಲಂಕಾರ - ಉಲ್ಲೇಖ.

ದಿವಿಜತನಯಂಗೆ ಮುಖ್ಯಂ
ರವಿಜಂಜಯಕಾದನೆನಗೆ ಕಣ್ಣೊಳ್ ಕಾಣಂ
ಕಿವಿಯೊಳ್ ಕೇಳಂ ಕಾಣ್ಬಂ
ದವೆಂತು ಕೇಳ್ವಂದಮೆಂತು ತಲೆಯಿಲ್ಲದನಾ॥೩೬॥

ದಿವಿಜತನಯಂಗೆ= ಇಂದ್ರಸುತನಾದ ಅರ್ಜುನನನ್ನು,ಜಯಕೆ=ಜಯಿಸುವುದಕ್ಕೆ, ರವಿಜಂ= ಸೂರ್ಯಸುತನಾದ ಕರ್ಣನು, ಮುಖ್ಯಂ ಆದಂ= ಪ್ರಮುಖನಾಗಿದ್ದವನು, ( ಅಂತಹ ಕರ್ಣನು ಇಂದು ) ಎನಗೆ ಕಣ್ಣೊಳ್ ಕಾಣಂ= ( ಎನ್ನಂ ಕಣ್ಣೊಳ್ ಕಾಣಂ) ನನ್ನನ್ನು ಕಣ್ಣೆತ್ತಿ ನೋಡುವುದಿಲ್ಲ. ಕಿವಿಯೊಳ್ ಕೇಳಂ= (ನನ್ನ ಮಾತುಗಳನ್ನು)ಕಿವಿಯಿಂದ ಕೇಳುವುದಿಲ್ಲ, ತಲೆಯಿಲ್ಲದನಾ= ತಲೆಯಿಲ್ಲದನ್= ಶಿರಚ್ಛೇದಗೊಂಡವನು ,ಕಾಣ್ಬಂದಂ ಎಂತು= ನೋಡುವ ಬಗೆ ಹೇಗೆ? ಕೇಳ್ಬಂದಂಎಂತು= ಕೇಳುವ ಬಗೆ ಹೇಗೆ?

ತಾತ್ಪರ್ಯ :- ಅರ್ಜುನನೊಡನೆ ಪ್ರತಿಸ್ಪರ್ದಿಯಾಗಿ ಹೋರಾಡಿ ಜಯವನ್ನು ಪಡೆಯುವುದಕ್ಕೆ ಪ್ರಮುಖವಾಗಿದ್ದ ಕರ್ಣನು ಇಂದು ನನ್ನನ್ನು ಕಣ್ಣೆತ್ತಿ ನೋಡುವುದೂ ಇಲ್ಲ, ನನ್ನ ಮಾತುಗಳನ್ನು ಕೇಳುವುದೂ ಇಲ್ಲ, ಇದೇಕೆ ಹೀಗೆ? ಅರ್ಥವಾಯಿತು,
ಶಿರಚ್ಛೇದನಗೊಂಡವನು ನೋಡುವುದು ಮತ್ತು ಕೇಳುವುದಾದರೂ ಹೇಗೆ?

ತರಣಿತನಯಾನನೇಂದು
ಸ್ಮರಣದೆ ಕಯ್ಗಣ್ಮುವೆನ್ನ ಶೋಕಮಹಾಸಾ
ಗರಮಂ ತವೆಪೀರ್ದುದು ಭೀ
ಕರಮತ್ಕೋಪಾಗ್ನಿ ಬಾಡಬಾಗ್ನಿ ತೆರದಿಂ॥೩೭॥

ತರಣಿತನಯನ= ಕರ್ಣನ,ಆನನೇಂದು=ಮುಖಚಂದ್ರನ, ಸ್ಮರಣದೆ=ನೆನಪಿನಿಂದಾಗಿ, ಕೆಯ್ಗಣುಮುವ=ಉಕ್ಕೇರುವ, ಎನ್ನ, ಶೋಕಮಹಾಸಾಗರಮಂ= ದುಃಖಾಂಬುಧಿಯನ್ನು, ಭೀಕರ= ಭಯಂಕರವಾದ, ಮತ್ಕೋಪಾಗ್ನಿ= ನನ್ನ ಕೋಪಾಗ್ನಿಯು, ಬಾಡಬಾಗ್ನಿಯ ತೆಱದಿಂ= ವಡಬಾಗ್ನಿಯ ರೀತಿಯಲ್ಲಿ, ತವೆ=ಸಂಪೂರ್ಣ ನಾಶವಾಗುವಂತೆ, ಪೀರ್ದುದು.

ತಾತ್ಪರ್ಯ :- ಸಂಜಯಾ! ಕರ್ಣನಮುಖೇಂದು ಸ್ಮರಣೆಯಿಂದಾಗಿ ಉಕ್ಕೇರುತ್ತಿದ್ದ ನನ್ನ ಶೋಕಾಂಬುಧಿಯನ್ನು ಭಯಂಕರವಾದ ನನ್ನ ಕ್ರೋಧಾಗ್ನಿಯು ವಡಬಾಗ್ನಿಯೋಪಾದಿಯಲ್ಲಿ ಸಂಪೂರ್ಣ ಹೀರಿಬಿಟ್ಟಿತು.

ಇಲ್ಲ, ಇನ್ನು ದುರ್ಯೋಧನನು ಕರ್ಣನಿಗಾಗಿ ಅಳುವಂತಿಲ್ಲ . ವಡಬಾಗ್ನಿ ಸದೃಶವಾದ ಆತನ ಕೋಪಾಗ್ನಿಯು ಶೋಕಸಾಗರವನ್ನು ಪೂರ್ಣ ಬತ್ತಿಸಿಬಿಟ್ಟಿತು.

ಅಲಂಕಾರ - ರೂಪಕ.

ಧವಳ ಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಂ
ಧವಳವಿಲೋಚನೋತ್ಪಲ ವಧೂಜನಮುಂ ಬೆಲಸಷ್ಟದಿಕ್ತಟಂ
ಧವಳಿಸೆ ಕೀರ್ತಿಯಿಂ ಧವಳ ಮಂಗಳಗೇಯದಿನೊಪ್ಪಿ ಬರ್ಪ ಕೌ
ರವಧವಳಂಗೆ ದೇಸಿಗನೆ ಬರ್ಪವೊಲೊರ್ವನೆ ಬರ್ಪುದಾದುದೆ॥೪೧॥

ಧವಳಗಜೇಂದ್ರಮುಂ= ಬಿಳಿಯ ಆನೆಯೂ, ಧವಳ ಚಾಮರಮುಂ= ಬಿಳಿಯ ಚಾಮರವೂ, ಧವಳಾತಪತ್ರಮುಂ= ಬೆಳ್ಗೊಡೆಯೂ, ಧವಳವಿಲೋಚನನೋತ್ಪಲವಧೂಜನಮುಂ= ಬಿಳಿಯ ನೈದಿಲೆಯಂತಹಕಣ್ಣುಗಳುಳ್ಳ ಅಂತಃಪುರಾಂಗನೆಯರೂ, ಬೆರಸು=ಒಂದಾಗಿ, ಕೀರ್ತಿಯಿಂ ಅಷ್ಟ ದಿಕ್ತಟಂ ಧವಳಿಸೆ= ಕೀರ್ತಿಯಿಂದ ಎಂಟು ದಿಕ್ಕುಗಳೂ ಶುಭ್ರವಾಗಲು, ಧವಳ ಮಂಗಳಗೇಯದಿನೊಪ್ಪಿ ಬರ್ಪ ಕೌರವ ಧವಳಂಗೆ= ಧವಳವೆಂಬ ಇಂಪಾದ ಮಂಗಳಗೀತದಿಂದ ಕೂಡಿ ಬರುತ್ತಿರುವ ಕೌರವ ಶ್ರೇಷ್ಠನಿಗೆ , ದೇಸಿಗನೆ ಬರ್ಪವೊಲ್ = ನಿರ್ಗತಿಕನು ಬರುವಂತೆ, ಒರ್ವನೆ ಬರ್ಪುದಾದುದೇ= ಏಕಾಕಿಯಾಗಿ ಬರುವ ಹಾಗಾಯಿತೇ?

ತಾತ್ಪರ್ಯ :- ಬಿಳಿಯಾನೆಯನ್ನೇರಿ, ಬಿಳಿಯ ಚಾಮರಗಳಿಂದ ಗಾಳಿಯನ್ನು ಹಾಕಿಸಿಕೊಳ್ಳುತ್ತಾಬೆಳ್ಗೊಡೆಯ ನೆಳಲಲ್ಲಿ, ಧವಳಕಟಾಕ್ಷವನ್ನು ಬೀರುತ್ತಿರುವ ಅಂತಃಪುರಾಂಗನೆಯರೊಡಗೂಡಿ, ತನ್ನ ಕೀರ್ತಿಯಿಂದ ಅಷ್ಟದಿಕ್ಕುಗಳನ್ನು ಬೆಳಗಿಸುತ್ತಾ ಇಂಪಾದ ಧವಳದ ಹಾಡನ್ನು ಆಲಿಸುತ್ತಾ ಅತಿ ವೈಭವದಿಂದ ಬರುತ್ತಿದ್ದ ಕೌರವ ಶ್ರೇಷ್ಠನು ಇಂದು ನಿರ್ಗತಿಕನಂತೆ ಏಕಾಕಿಯಾಗಿ ಬರುವಂತಾಯಿತೆ!

ದುರ್ಯೋಧನನ ಗತವೈಭವವನ್ನುನೆನೆದು ಹಂಬಲಿಸುತ್ತಾನೆ, ಭೀಷ್ಮ

ಅಲಂಕಾರ - ಉದಾತ್ತ. ರಸ -ಕರುಣ.

ಎಲ್ಲಿದುವೊ ಧವಳಚಾಮರ
ಮೆಲ್ಲಿತ್ತೊಸಿತಾತಪತ್ರಮಹಿಕೇತನಮ
ತ್ತೆಲ್ಲಿತ್ತೊ ಮೃಗೇಂದ್ರಾಸನ
ಮೆಲ್ಲಿದುವೋ ಲೋಲಪಾಳಿಕೇತನತತಿಗಳ್॥೪೨॥

ಅಹಿಕೇತನ= ದುರ್ಯೋಧನ, ಧವಳಚಾಮರಂ= ಬಿಳಿಯ ಚಾಮರಗಳು, ಎಲ್ಲಿದುವೊ=  ಎಲ್ಲಿವೆಯೋ, ಸಿತಾತಪತ್ರ=ಶ್ವೇತಚ್ಛತ್ರ, ಎಲ್ಲಿತ್ತೊ= ಎಲ್ಲಿವೆಯೋ, ಮತ್ತೆ=ಆಮೇಲೆ, ಮೃಗೇಂದ್ರ ಆಸನ=ಸಿಂಹಾಸನ, ಎಲ್ಲಿತ್ತೊ=ಎಲ್ಲಿದೆಯೋ, ಲೋಲಪಾಳಿಕೇತನತತಿಗಳ್ ಎಲ್ಲಿದುವೋ= ಸಾಲುಸಾಲಾಗಿ ತೊನೆದಾಡುವ ಪತಾಕೆಗಳ ಸಮೂಹವೆಲ್ಲಿಯೋ ?

ತಾತ್ಪರ್ಯ :- ದುರ್ಯೋಧನ ! ನಿನ್ನ ಧವಳ ಚಾಮರಗಳೆಲ್ಲಿ ? ಬೆಳ್ಗೊಡೆ ಎಲ್ಲಿ ? ಮತ್ತೆ ಸಿಂಹಾಸನವೆಲ್ಲಿ ? ತೊನೆದಾಡುವ ಪತಾಕೆಗಳ ಸಮೂಹಗಳೆಲ್ಲಿ ?

ಎಲ್ಲಿದಳೊ ಭಾನುಮತಿ ತಾ
ನೆಲ್ಲಿತ್ತೋಲಗದ ಸೂಳೆಯರ್ಕಳ ತಂಡಂ
ಎಲ್ಲಿತ್ತೊ ಗೀತವಾದ್ಯಂ
ಸಲ್ಲಲಿತವಧೂಜನಪ್ರವೃತ್ತಂ ನೃತ್ತಂ॥೪೩॥

ಭಾನುಮತಿ ಎಲ್ಲಿದಳೊ= ಭಾನುಮತಿದೇವಿ ಎಲ್ಲಿದ್ದಾಳೊ? ಓಲಗದ ಸೂಳೆಯರ್ಕಳ ತಂಡಂ ಎಲ್ಲಿತ್ತೊ= ಆಸಾಥಾನದಲ್ಲಿದ್ದನರ್ತನ ಸ್ತ್ರೀಯರ ತಂಡ ಎಲ್ಲಿದೆಯೋ, ಗೀತವಾದ್ಯಂ = ಮಂಗಳಗೀತವಾದ್ಯಗಳೊಂದಿಗೆ,
ಸಲ್ಲಲಿತ=ಮನೋಹರವಾದ, ವಧೂಜನಪ್ರವೃತ್ತಂ ನೃತ್ತಂ= ಅಂತಃಪುರಾಂಗನೆಯರು ಮಾಡುವ ನರ್ತನವೆಲ್ಲಿದೆಯೋ.

ತಾತ್ಪರ್ಯ :- ಭಾನುಮತಿದೇವಿ ಎಲ್ಲಿದ್ದಾಳೆ? ಓಲಗದ ನರ್ತಕಿಯರ ಸಮೂಹವೆಲ್ಲಿ? ಗೀತವಾದ್ಯಗಳ ಹಿಮ್ಮೇಳದೊಂದಿಗೆ ಮನೋಹರವಾಗಿ ನರ್ತಿಸುವ ಅಂತಃಪುರಾಂಗನೆಯರೆಲ್ಲಿ?

ಸುತಶತಕಮುಂ ಸಹೋದರ
ಶತಕಮುಮೆಲ್ಲಿತ್ತೊ ಮಗನೆ ಪೇೞೆಲ್ಲಿತ್ತೋ
ಚತುರಂಗ ಸೈನ್ಯಮೆಲ್ಲಿದ
ರತಿರಥಸಮರಥಮಹಾರಥಾರ್ಧರಥರ್ಕಳ್॥೪೪॥

ಮಗನೆ! ಸುತಶತಕಮುಂ= ನೂರುಮಂದಿ ಮಕ್ಕಳೂ, ಸಹೋದರ ಶತಕಮುಂ= ನೂರುಮಂದಿ ತಮ್ಮಂದಿರೂ, ಎಲ್ಲಿತ್ತೊ=ಎಲ್ಲಿದ್ದಾರೊ, ಚತುರಂಗ ಸೈನ್ಯಂ ಎಲ್ಲಿತ್ತೊ ಪೇಳ್= ಚತುರಂಗಸೈನ್ಯ ಎಲ್ಲಿದೆಯೋ ಹೇಳು. ಅತಿರಥಸಮರಥಮಹಾರಥಾರ್ಧರಥರ್ಕಳ್= ಅತಿರಥ, ಸಮರಥ,ಮಹಾರಥ ಅರ್ಧರಥರ್ಕಳು ಎಲ್ಲಿದ್ದಾರೆ

ತಾತ್ಪರ್ಯ :- ಮಗನೇ ! ನಿನ್ನ ನೂರು ಮಂದಿಮಕ್ಕಳೂ ನೂರುಮಂದಿ ತಮ್ಮಂದಿರೂ ಎಲ್ಲಿದ್ದಾರೆ? ಚತುರಂಗಸೇನೆ ಎಲ್ಲಿದೆ?ನಿನ್ನವರಾದ ಅತಿರಥ ಸಮರಥ ಮಹಾರಥ ಅರ್ಧರಥರೆಲ್ಲಎಲ್ಲಿದ್ದಾರೆ? ಹೇಳು.

ನಿಮಗೆ ಪೊಡಮಟ್ಟು ಪೋಪೀ
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ
ಸಮಕೊಳಿಸಲೆಂದು ಬಂದೆನೆ
ಸಮರದೊಳೆನಗಜ್ಜ ಪೇೞಿಮಾವುದು ಕಜ್ಜಂ॥೪೫॥

ಅಜ್ಜ ! ನಿಮಗೆ ಪೊಡಮಟ್ಟು ಪೋಪೀ ಸಮಕಟ್ಟಿಂ ಬಂದೆನ್= ನಿಮಗೆ ವಂದಿಸಿ ನಿಮ್ಮ ಆಶೀರ್ವಾದವನ್ನು ಪಡೆದು ಹೋಗುವ ಸಿದ್ಧತೆಯಲ್ಲಿ ಬಂದಿದ್ದೇನೆ, ಅಹಿತರೊಳ್= ಶತ್ರುಗಳೊಂದಿಗೆ, ಸಂಧಿಯಂ= ಸಂಧಾನವನ್ನು, ಸಮಗೊಳಿಸಲ್ ಎಂದು = ಏರ್ಪಡಿಸುವುದಕ್ಕಾಗಿ,ಬಂದೆನೆ ಏಂ = ಬಂದೆನೆಂದು ಭಾವಿಸಿದಿರಾ? ಸಮರದೊಳ್=ಯುದ್ಧದಲ್ಲಿ,ಎನಗೆ,
ಕಜ್ಜಂ= ಕಾರ್ಯವು, ಆವುದು ಪೇೞಿಂ=ಯಾವುದೆಂಬುದನ್ನು ಹೇಳಿರಿ.

ತಾತ್ಪರ್ಯ :- ಅಜ್ಜಾ! ನಿಮಗೆ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿ ಆಶೀರ್ವಾದವನ್ನು ಪಡೆಯುವ ನಿರ್ಧಾರದಿಂದ ಬಂದಿದ್ದೇನಲ್ಲದೆಶತ್ರುಗಳೊಂದಿಗೆ ಸಂಧಾನವನ್ನು ಏರ್ಪಡಿಸುವುದಕ್ಕಾಗಿ ಬಂದೆನೆಂದು ಭಾವಿಸಿದಿರಾ? ಯುದ್ಧದಲ್ಲಿ ನಾನು ಮಾಡಬೇಕಾದ ಕಾರ್ಯವೇನೆಂಬುದನ್ನು ಮಾತ್ರ ನೀವು ಅಪ್ಪಣೆಕೊಡಿರಿ. ಸಂಧಿಯಮಾತನ್ನು ಎತ್ತುವುದೇ ಬೇಡ.

ಕಲಿಗಂ ಶಂಕೆಯೆ ಚಾಗಿಗಂ ಬೆರಗೆ ಮೇಣ್ ಕಟ್ಟಾಳ್ ನೆರಂಬಾರ್ವನೇ
ಕುಲಜಂಗಂ ಮಱುವಾಳೆ ಸಜ್ಜನಿಕೆಗಂ ಕಲ್ವೋಜೆಯೇ ಧರ್ಮಿಗಂ
ಕೊಲೆಯೇ ಮಂತ್ರಿಗಮಿಚ್ಚೆಕಾಱತನಮೇ ತಕ್ಕಂ ಪಿಸುಣ್ಬೇೞ್ವನೇ
ಚಲಮಂ ಗಂಡುಮನಪ್ಪುಕೆಯ್ವೆನಗಮಾ ಕೌಂತೇಯರೊಳ್ ಸಂಧಿಯೇ॥೪೬॥

ಕಲಿಗಂ= ಶೂರನಿಗೂ, ಶಂಕೆಯೆ= ಭಯವೇ? ಜಾಗಿಗಂ= ತ್ಯಾಗಿಗೂ, ಬೆರಗೆ= ಗಾಬರಿಯೇ, ಮೇಣ್=ಮತ್ತು, ಕಟ್ಟಾಳ್ = ಧೈರ್ಯಶಾಲಿ, ನೆರಂಬಾರ್ವನೇ= (ನೆರಮಂ ಪಾರ್ವನೇ) ಸಹಾಯವನ್ನು ಅಪೇಕ್ಷಿಸುವನೇ? ಕುಲಜಂಗಂ= ಕುಲೀನನಿಗೂ,
ಮಱುವಾಳೆ= ಪುನರ್ವಿವಾಹವೇ?( ಪುನರ್ಜನ್ಮವೇ ) ಸಜ್ಜನಿಕೆಗಂ= ಸಂಭಾವಿತನಿಗೂ,ಕಲ್ಪೋಜೆಯೇ=ಕಳ್ಪೋಜೆಯೇ= ಕದಿಯುವ ಸಾಮರ್ಥ್ಯವೇ? ಧರ್ಮಿಗಂ= ಸತ್ಕರ್ಮಿಗೂ, ಕೊಲೆಯೇ= ಕೊಲ್ಲಿವಿಕೆಯೇ? ಮಂತ್ರಿಗಂ=ಅಮಾತ್ಯನಿಗೂ,
ಇಚ್ಚೆಕಾಱತನಮೇ= ಸ್ವೈರವೃತ್ತಿಯೇ? ( ಮನಬಂದಂತೆ ನಡೆಯುವಿಕೆಯೇ) ತಕ್ಕಂ=ಯೋಗ್ಯನು, ಪಿಸುಣ್=ಚಾಡಿ, ಪೇೞ್ವನೇ= ಹೇಳುವನೇ? ಚಲಮಂ ಗಂಡುಮಂ ಅಪ್ಪುಕೆಯ್ವ ಎನಗಂ= ಛಲವನ್ನೂ ಪರಾಕ್ರಮವನ್ನೂ ಹೊಂದಿರುವ ನನಗೂ, ಆ ಕೌಂತೇಯರೊಳ್= ಆ ಕುಂತೀಪುತ್ರರಲ್ಲಿ( ಕೌಂತೇಯರೊಳ್ ಎಂಬುದು ಸಾಭಿಪ್ರಾಯವಾದುದು. ಪಾಂಡವರು ಕುಂತಿಯ ಮಕ್ಕಳಲ್ಲದೆ ಪಾಂಡುವಿನ ಮಕ್ಕಳಲ್ಲವೆಂಬ ತಾತತಸಾರ ಭಾವ) ಸಂಧಿಯೇ= ಒಡಂಬಡಿಕೆಯೇ?
( ಸರ್ವಥಾ ಸಾಧ್ಯವಿಲ್ಲ. )

ಅಜ್ಜಾ! ಶೂರನಿಗೆ ಭಯವುಂಟೆ? ತ್ಯಾಗಿಗೆ ಗಾಬರಿಯುಂಟೆ? ಉತ್ತಮ ಕುಲದಲ್ಲಿ ಜನಿಸಿದವನಿಗೆ ಪುನರ್ಜನ್ಮವುಂಟೇ? ಸಂಭಾವಿತನಿಗೆ ಕದಿಯುವ ಸಾಮರ್ತ್ಯವೇ? ಸದ್ಗುಣಿಯುಕೊಲ್ಲುವುದುಟೇ? ಅಮಾತ್ಯನಿಗೆ ಸ್ವೇಚ್ಛಪ್ರವೃತ್ತಿಯೇ? ಯೋಗ್ಯನು ಚಾಡಿ ಹೇಳುವನೇ? ಛಲವನ್ನೂ ಪೌರುಷವನ್ನೂ ಹೊಂದಿರುವ ನನಗೂ ಕುಂತೀಪುತ್ರರೊಂದಿಗೆ ಒಡಂಬಡಿಕೆಯೇ? ಸರ್ವಥಾ ಸಾಧ್ಯವಿಲ್ಲ. ( ಇಲ್ಲಿ ಬಿಡಿಬಿಡಿಯಾದ ನುಡಿಮುತ್ತುಗಳು ದುರ್ಯೋಧನನ ಛಲಕ್ಕೂ ಗಂಡಗರ್ವಕ್ಕೂ ಮೆಚ್ಚಿ ಕಟ್ಟಿದ ಹಾರದಂತಿದೆ )

ನೆಲಕಿಱಿವೆನೆಂದು ಬಗೆದಿರೆ
ಚಲಕಿಱಿವೆಂ ಪಾಂಡುಸುತರೊಳೀನೆಲನಿದು ಪಾ
ೞ್ನೆಲನೆನಗೆ ದಿನಪಸುತನಂ
ಕೊಲಿಸಿದ ನೆಲನೊಡನೆ ಪುದುವಾೞ್ದಪೆನೇ॥೪೭॥

ಅಜ್ಜಾ ! ನೆಲಕೆ= ರಾಜ್ಯಕ್ಕಾಗಿ, ಇಱಿವೆನ್ ಎಂದು ಬಗೆದಿರೆ=ಯುದ್ಧಮಾಡುತ್ತೇನೆಂದು ಭಾವಿಸಿದಿರಾ? ಪಾಂಡುಸುತರೊಳ್= ಪಾಂಡವರೊಡನೆ, ಚಲಕೆ ಇಱಿವೆಂ= ಛಲಕ್ಕಾಗಿಯೇ ಹೋರಾಡುತ್ತೇನೆ, ಈ ನೆಲನ್ ಇದು ಪಾೞ್ನೆಲಂ ಎನಗೆ= ಈ ಭೂಮಿ ನನ್ನ ಪಾಲಿಗೆ ಹಾಳು ಭೂಮಿ, ದಿನಪಸುತನಂ= ಕರ್ಣನನ್ನು, ಕೊಲಿಸಿದ = ಕೊಲ್ಲುವಂತೆ ಮಾಡಿದ, ನೆಲನೊಡನೆ= ಭೂರಮೆಯೊಂದಿಗೆ, ( ನೆಲನ್= ಧರಾವನಿತೆ ) ಮತ್ತೆ= ಇನ್ನು, ಪುದುವಾೞ್ದಪೆನೆ= ಒಂದುಗೂಡಿ ಬಾಳುತ್ತೇನೆಯೇ? ( ಯುದ್ಧಕಾಲದಲ್ಲಿ ಕರ್ಣನ ರಥಚಕ್ರವನ್ನು ಭೂಮಿ ನುಂಗಿ ಅವನ ಕೊಲೆಗೆ ಕಾರಣವಾಯಿತು )

ತಾತ್ಪರ್ಯ :- ಅಜ್ಜಾ! ನಾನು ಪಾಂಡವರೊಡನೆ ರಾಜ್ಯಕ್ಕಾಗಿ ಯುದ್ಧಮಾಡುತ್ತೇನೆಂದು ಭಾವಿಸಿದಿರಾ? ನಾನು ಕಾದಾಡುವುದು ಛಲಕ್ಕೋಸ್ಕರ, ನೆಲಕ್ಕೋಸ್ಕರ ಅಲ್ಲ. ನನ್ನ ಪಾಲಿಗೆ ಈ ಭೂಮಿ ಹಾಳು ಭೂಮಿ. ಯಾಕೆಂದರೆ ಪ್ರಿಯ ಮಿತ್ರನಾದ ಕರ್ಣನ ಕೊಲೆಗೆ ಈಕೆಯೂ ಕಾರಣಳು. ಆದುದರಿಂದ ದ್ರೋಹಿಯಾದ ಈ ಭೂರಮೆಯೊಂದಿಗೆ ಇನ್ನು ನಾನು ಬಾಳುವುದು ಹೇಗೆ ಸಾಧ್ಯ? ಸಾಧ್ಯವಿಲ್ಲ.

ಅನುಜಸ‌ಮೇತನೊಳಂತಕ
ತನಯನೊಳನುಜವ್ಯಪೇತನೀಗಳ್ ದುರ್ಯೋ
ಧನನಳಿಪಿ ಸಂಧಿಗೆಯ್ದೊಡೆ
ಮುನಿವರ ಮೆಚ್ಚುವರ ನುಡಿಗೆ ಪಕ್ಕಾಗಿರನೇ॥೪೮॥

ಅನುಜಸಮೇತನೊಳ್= ತಮ್ಮಂದಿರು ಸಹಿತನಾಗಿರುವ, ಅಂತಕತನಯನೊಳ್= ಧರ್ಮರಾಯನೊಂದಿಗೆ, ಅನುಜವ್ಯಪೇತನ್= ತಮ್ಮಂದಿರನ್ನು ಕಳೆದುಕೊಂಡವನಾದ, ದುರ್ಯೋಧನನ್ ಈಗಳ್ಅಳಿಪಿ ಸಂಧಿಗೆಯ್ದೊಡೆ= ದುರ್ಯೋಧನನು ಈಗ ಜೀವದಾಸೆಯಿಂದ ಸಂಧಿಮಾಡಿದರೆ, ಮುನಿವರ=ಶತ್ರುಗಳ, ಮೆಚ್ಚುವರ= ಮಿತ್ರರ,ನುಡಿಗೆ=
ನಿಂದೆಗೆ, ಪಕ್ಕಾಗಿರೆನೆ= ಒಳಗಾಗಲಾರನೇ!  

ತಾತ್ಪರ್ಯ :- ಅಜ್ಜಾ! ತಮ್ಮಂದಿರು ಸಹಿತನಾಗಿರುವ ಧರ್ಮರಾಯನೊಂದಿಗೆ ತಮ್ಮಂದಿರನೆಲ್ಲಕಳೆದುಕೊಂಡ ದುರ್ಯೋಧನನು ಈಗ ಆಸೆಪಟ್ಟು ಸಂಧಿಮಾಡಿದರೆ ಆತನು ಶತ್ರುಗಳ ಮತ್ತು ಮಿತ್ರರ ನಿಂದೆಗೆ ಗುರಿಯಾಗಲಾರನೇ!

ಕೂಡೆ ವಿರೋಧಿಯಂ ತಱಿದು ತದ್ವಶಮಾಂಸದೆ ಭೂತಭೋಜನಂ
ಮಾಡದೆ ವೈರಿವಾರವನಿತಾವದನಾಂಬುರುಹಕ್ಕೆ ಬೆಳ
ರ್ಮಾಡದ ಬಂಧುಶೋಕದೊಳೆ ಪೊರ್ದಿದ ಬಂಧುಜನಕ್ಕೆ ಸಂತಸಂ
ಮಾಡದೆ ಸಂಧಿಮಾಡುವನೆ ಪಾಂಡವರೊಳ್ ಫಣಿರಾಜಕೇತನಂ॥೪೯॥

ಕೂಡೆ=ಒಡನೆ, ವಿರೋಧಿಯಂ= ಶತ್ರುಗಳನ್ನು, ತಱಿದು= ತುಂಡರಿಸಿ, ತದ್ವಶಮಾಂಸದೆ= ಅವರ ಕೊಬ್ಬು ಮಾಂಸಗಳಿಂದ, {ವಶ = ವಸಾ ( ಸಂ) ಕೊಬ್ಬು}ಭೂತಭೋಜನಂ= ಪಿಶ್ಚಿಗಳಿಗೆ ಔತಣವನ್ನು, ಮಾಡದೆ, ವೈರಿವಾರ= ಶತ್ರು ಸಮೂಹದ, ವನಿತಾ = ಸ್ತ್ರೀಯರ, ವದನಾಂಬುರುಹಂಗಳಂ= ವದನ ಅಂಬುರುಹಂಗಳಂ= ಮುಖಕಮಲಗಳನ್ನು, ಬೆಳರ್ಮಾಡದೆ= ಬೆಳ್ಳಗಾಗಿಸದೆ, ಬಂಧುಶೋಕದೊಳ್= ಬಂಧುಗಳ ಸಾವಿನ ಶೋಕದಿಂದ, ಪೊದಿರ್ದ=ಕೂಡಿದ, ಬಂಧು ಜನಕ್ಕೆ= ನಂಟರಿಗೆ, ಸಂತಸಂ ಮಾಡದೆ= ಸಂತೋಷವನ್ನುಂಟುಮಾಡದೆ, ಫಣಿರಾಜಕೇತನಂ=ದುರ್ಯೋಧನನು, ಪಾಂಡವರೊಳ್ ಸಂಧಿಮಾಡುವನೆ= ಪಾಂಡವರೊಂದಿಗೆ ಸಂಧಿಮಾಡುವನೇ? ಮಾಡಲಾರ

ತಾತ್ಪರ್ಯ :- ಅಜ್ಜಾ ! ಕೂಡಲೇ ಶತ್ರುಗಳನ್ನು ಸಂಹರಿಸಿ ಅವರ ಕೊಬ್ಬು ಮಾಂಸಗಳಿಂದ ಪಿಶಾಚಿಗಳಿಗೆ ಔತಣವನಿಕ್ಕದೆ,
ಶತ್ರು ರಾಜರ ಪತ್ನಿಯರ ಮುಖಕಮಲಗಳನ್ನು ಬಿಳುಪೇರಿಸದೆ, ಬಂಧುಗಳ ಮರಣದಿಂದ ಶೋಕಕ್ಕೊಳಗಾದ ನಂಟರಿಗೆ
ಸಂತೋಷವನ್ನುಂಟುಮಾಡದೆ, ದುರ್ಯೋಧನನು ಪಾಂಡವರೊಂದಿಗೆ ಸಂಧಿಯನ್ನು ಮಾಡುವನೆಂದು ಭಾವಿಸಿದಿರಾ?

ಬಾಡಮನಯ್ದನವರ್ ಮುಂ
ಬೇಡಿದಡಾನಿತ್ತೆನಿಲ್ಲ ರಾಜ್ಯಾರ್ಧಮನಾಂ
ಬೇಡಿಯವರಲ್ಲಿಗಟ್ಟಿದೊ
ಡೇಡಿಸಿ ಱೋಡಿಸನೆ ಪವನನಂದನನೆನ್ನಂ॥೫೦॥

ಅವರ್= ಪಾಂಡವರು, ಮುಂ= ಹಿಂದೆ, ಬಾಡಮಂ ಐದಂ= ಐದು ಗ್ರಾಮಗಳನ್ನು, ಬೇಡಿದೊಡೆ= ಯಾಚಿಸಿದಾಗ, ಆನ್ ಇತ್ತೆನಿಲ್ಲ=ಕೊಡಲಿಲ್ಲ, (ಎಂದ ಬಳಿಕ) ಆಂ=ನಾನೇ,ರಾಜ್ಯಾರ್ಧಮಂ= ಅರ್ಧ ರಾಜ್ಯವನ್ನು, ಬೇಡಿ=ಕೊಡುವಂತೆ ಕೇಳಿ, ಅವರಲ್ಲಿಗೆ=ಅವರ ಬಳಿಗೆ, ಅಟ್ಟಿದೊಡೆ=ದೂತನನ್ನು ಕಳುಹಿಸಿದರೆ, ಪವನನಂದನಂ=ಭೀಮನು, ಎನ್ನಂ=ನನ್ನನ್ನು, ಏಡಿಸಿ= ಹೀಯಾಳಿಸಿ, ಱೋಡಿಸನೆ= ನಿಂದಿಸನೇ?

ತಾತ್ಪರ್ಯ :- ಹಿಂದೆ ಪಾಂಡವರು ಐದು ಹಳ್ಳಿಗಳನ್ನಾದರೂ ತಮಗೆ ಕೊಟ್ಟರೆ ಸಾಕೆಂದು ಕೃಷ್ಣನೊಂದಿಗೆ ಹೇಳಿ ಕಳಿಸಿದ್ದಾಗ ನಾನು ಕೊಡಲೊಪ್ಪಲಿಲ್ಲ. ಅಂಥ ನಾನೇ ಇಂದು ಇಂಥ ಅವಸ್ಥೆಯಲ್ಲಿರುವಾಗ, ಅರ್ಧ ರಾಜ್ಯವನ್ನು ಕೊಡಿರೆಂದು ಕೇಳಿ ದೂತನನ್ನು ಕಳುಹಿಸಿದರೆ ಆ ಭೀಮನು ನನ್ನನ್ನು ಹೀಯಾಳಿಸಿ ನಿಂದಿಸದಿರುವನೇ?

ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು
ಳ್ಳನ್ನೆಗಮೊಲ್ಲೆನೆನ್ನೊಡಲೊಳೆನ್ನಸುವುಳ್ಳಿನಮಜ್ಜ ಸಂಧಿಯಂ
ಮುನ್ನಮವಂದಿರಿರ್ಬರುಮನಿಕ್ಕುವೆನಿಕ್ಕಿ ಬೞಿಕ್ಕೆ ಸಂಧಿಗೆ
ಯ್ವೊನ್ನೆಗೞ್ದಂತಕಾತ್ಮಜನೊಳೆನ್ನೞಲಾಱಿದೊಡಾಗದೆಂಬೆನೇ॥೫೧॥

ಅಜ್ಜ! ಎನ್ನ ಅಣುಗು ಆಳನ್= ನನ್ನ ಪ್ರೀತಿಯ ಬಂಟನಾದ ಕರ್ಣನನ್ನು , ಎನ್ನ ಅಣುಗದಮ್ಮನಂ= ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನನ್ನು, ಇಕ್ಕಿದ=ಕೊಂದ , ಪಾರ್ಥಭೀಮರ್= ಅರ್ಜುನನೂ, ಭೀಮನೂ, ಉಳ್ಳನ್ನೆಗಂ= ಬದುಕಿರುವವರೆಗೂ, ಎನ್ನ ಒಡಲೊಳ್ ಎನ್ನ ಅಸು ಉಳ್ಳಿನಂ= ನನ್ನ ದೇಹದಲ್ಲಿ ಪ್ರಾಣವಿರುವವರೆಗೂ, ಸಂಧಿಯಂ= ಸಂಧಾನವನ್ನು, ಒಲ್ಲೆಂ=ಒಪ್ಪಲಾರೆನು, ಮುನ್ನಂ= ಮೊದಲು, ಅವಂದಿರಿರ್ಬರುಮನ್=ಅವರಿಬ್ಬರನ್ನೂ, ಇಕ್ಕುವೆಂ= ಕೊಲ್ಲುವೆನು, ಇಕ್ಕಿ ಬೞಿಕ್ಕೆ= ಕೊಂದ ಬಳಿಕ, ನೆಗೞ್ದ= ಪ್ರಸಿದ್ಧನಾದ, ಅಂತಕಾತ್ಮಜನೊಳ್= ಯಮನಂದನನೊಡನೆ, ಸಂಧಿಗೆಯ್ವೊಂ= ನಾವು ಸಂಧಿ ಮಾಡೋಣ. ಎನ್ನ ಅೞಲ್=ನನ್ನ ಶೋಕವು, ಆಱಿದೊಡೆ= ತಣಿದಾಗ, ಆಗದು ಎಂಬೆನೆ= ಬೇಡವೆನ್ನುವೆನೇ?

ಅಜ್ಜಾ! ನನ್ನ ಪ್ರೀತಿಯ ಬಂಟನಾದ ಕರಣನನ್ನೂ, ತಮ್ಮನಾದ ದುಶ್ಯಾಸನನನ್ನೂ ಕೊಂದ ಅರ್ಜುನನೂ, ಭೀಮನೂ ಇರುವವರೆಗೂ, ನನ್ನ ದೇಹದಲ್ಲಿ ಪ್ರಾಣವಿರುವವರೆಗೂಸಂಧಿಯನ್ನು ಒಪ್ಪಲಾರೆ. ಮೊದಲು ಅವರಿಬ್ಬರನ್ನೂ ಕೊಂದು ಸೇಡನ್ನು ತೀರಿಸುತ್ತೇನೆ. ಬಳಿಕ ಪ್ರಸಿದ್ಧನಾದ ಧರ್ಮರಾಯನೊಂದಿಗೆ ಸಂಧಿಯನ್ನು ಮಾಡೋಣ. ನನ್ನ ದುಃಖವು ತೀರಿದ ಬಳಿಕ ಸಂಧಿ ಬೇಡವೆನ್ನುವೆನೇ?

ಪುದುವಾೞಲ್ಕಣಮಾಗದೆಂತುಮವರೊಳ್ ಸಂಧಾನಮಂ ಮಿಡಲಾ
ಗದು ನೀಮಿಲ್ಲದೇಯಜ್ಜ ಬಿಲ್ಲಗುರುಗಳ್ ತಾಮಿಲ್ಲದಾ ಕರ್ಣನಿ
ಲ್ಲದೆ ದುಶ್ಯಾಸನನಿಲ್ಲದಾರೊಡನೆ ರಾಜ್ಯಂಗೆಯ್ವೆನಾರ್ಗೆನ್ನ ಸಂ
ಪದಮಂ ತೋಱುವೆನಾರ್ಗೆತೋಱಿ ಮೆಱೆವೆಂ ನಾನಾ ವಿನೋದಂಗಳಂ॥೫೨॥

ಪುದುವಾೞಲ್ಕೆ= ಒಂದಾಗಿ ಬಾಳುವುದಕ್ಕೆ, ಅಣಂ= ಸ್ವಲ್ಪವೂ, ಆಗದು= ಸಾಧ್ಯವಿಲ್ಲ, ಎಂತುಂ= ಹೇಗಿದ್ದರೂ,ಅವರೊಳ್= ಪಾಂಡವರೊಂದಿಗೆ, ಸಂಧಾನಮಂ= ಸಂಧಿಯನ್ನು, ಮಾಡಲಾಗದು=ಮಾಡಕೂಡದು, ಅಜ್ಜ! ನೀಮಿಲ್ಲದೆ=ನೀವಿಲ್ಲದೆ, ಬಿಲ್ಲ ಗುರುಗಳ್ ತಾಂ ಇಲ್ಲದೆ= ಬಿಲ್ಲ ಗುರುಗಳಾದ ದ್ರೋಣಾಚಾರ್ಯರಿಲ್ಲದೆ, ಆ ಕರ್ಣನಿಲ್ಲದೆ,ದುಶ್ಯಾಸನನಿಲ್ಲದೆ, ಆರೊಡನೆ ರಾಜ್ಯಂ ಗೆಯ್ವೆಂ= ಯಾರೊಂದಿಗೆ ರಾಜ್ಯಭಾರಮಾಡಲಿ? ಆರ್ಗೆ ಎನ್ನ ಸಂಪದಮಂ ತೋಱುವೆಂ= ಯಾರಿಗೆ ನನ್ನ ವೈಭವವನ್ನು ತೋರಿಸಲಿ, ನಾನಾ ವಿನೋದಂಗಳಂ ಆರ್ಗೆ ಮೆಱೆವೆಂ= ಬಗೆಬಗೆಯ ಸಂತೋಷಗಳನ್ನು ಯಾರ ಮುಂದೆ ಪ್ರದರ್ಶಿಸಲಿ?

ತಾತ್ಪರ್ಯ :- ಅಜ್ಜ! ಪಾಂಡವರೊಂದಿಗೆ ಕೂಡಿ ಬಾಳುವುದಕ್ಕೆ ಸರ್ವಥಾ ಸಾಧ್ಯವಿಲ್ಲ. ಆದುದರಿಂದ ಅವರೊಂದಿಗೆ ಸಂಧಾನವನ್ನು ಮಾಡುವುದು ಬೇಡ. ನೀವೂ ದ್ರೋಣಾಚಾರ್ಯರೂ ಕರ್ಣನೂ ದುಶ್ಯಾಸನನೂ ಇಲ್ಲದಿರಲು ನಾನು ಯಾರೊಂದಿಗೆ ರಾಜ್ಯವಾಳಲಿ? ನನ್ನ ವೈಭವವನ್ನು ಯಾರಿಗೆ ತೋರಿಸಲಿ? ಬಗೆಬಗೆಯ ವಿನೋದಗಳನ್ನು ಯಾರ ಮುಂದೆ ಮೆರೆಯಲಿ?

ಖಂಡಿತಮೆನಿಪ್ಪ ಪರಮಹಿ
ಮಂಡಲಧವಳಾತಪತ್ರಸಂಪದ಼ಮೆನಗೇ
ಭಂಡಮದನೊಲ್ವೆನೊಲ್ಲೆನ
ಖಂಡಿತಮಭಿಮಾನಮದನೆ ಬಲ್ವಿಡಿವಿಡಿವೆಂ॥೫೩॥

ಖಂಡಿತಂ ಎನಿಪ್ಪ=ತುಂಡು ಮಾಡಲಾಗದ, ಎಂದರೆ ಸಂಧಿಯ ಪ್ರಕಾರ ವಿಭಾಗಿಸಲ್ಪಟ್ಟ, ಪರಮಹಿಮಂಡಲ= ಶತ್ರುವಿನ ವಶವಾದ ಭೂಮಂಡಲ, ಧವಳ ಆತಪತ್ರ= ಬೆಳ್ಗೊಡೆಯ, ಸಂಪದಂ= ಸಂಪತ್ತು, ಎನಗೆ=ನನಗೆ, ಏ ಭಂಡಂ=ಏನು ಪ್ರಯೋಜನ, ಈ ತುಂಡು ರಾಜ್ಯ ಸಂಪತ್ತಿನಿಂದ ನನಗೇನು? ಒಲ್ಲೆನ್ ಒಲ್ಲೆನ್= ಬೇಡ ಬೇಡ, ಅಭಿಮಾನಂ ಅಖಂಡಿತಂ= ನನ್ನ ಅಭಿಮಾನವು ಅಖಂಡವಾದ್ದು , ಅದನೆ=ಅದನ್ನೇ, ಬಲ್ವಿಡಿವಿಡಿವೆಂ=ಬಲ್ಲಿತ್ತು ಪಿಡಿಯೊಳ್ ಪಿಡಿವೆಂ= ಬಲವಾದ ಮುಷ್ಠಿಯಲ್ಲಿ ಹಿಡಿಯುತ್ತೇನೆ.

ತಾತ್ಪರ್ಯ :- ಶತ್ರುವು ಕೊಡುವ ಅರ್ಧರಾಜ್ಯವೈಭವದಿಂದ ನನಗೇನು ಪ್ರಯೋಜನ? ಅದನ್ನು ಸ್ವೀಕರಿಸುವುದೇ ನಾಚಿಕೆಗೇಡು. ಆದುದರಿಂದ ಸಂಧಿಗೆ ಸರ್ವಥಾ ಒಪ್ಪಲಾರೆ. ನನ್ನ ಅಭಿಮಾನವು ಪರಿಪೂರ್ಣವಾದುದು. ಖಂಡವಾದ ರಾಜ್ಯಕ್ಕಿಂತ ಅಖಂಡವಾದ ಅಭಿಮಾನವನ್ನೇ ದೃಢವಾಗಿ ನಂಬಿದ್ದೇನೆ. ಅದನ್ನೇ ಪಟ್ಟು ಹಿಡಿಯುತ್ತೇನೆ.

ದುರ್ಯೋಧನನ ಸ್ವಾಭಿಮಾನವು ಕೆರಳುತ್ತದೆ. ನಶ್ವರವಾದ ಅರ್ಧ ರಾಜ್ಯಕ್ಕಿಂತ ಶಾಶ್ವತವಾದ ಅಭಿಮಾನವೇ ಮೇಲೆಂಬ ಭಾವ. ಖಂಡಿತಂ, ಅಖಂಡಿತಂ ಎಂಬ ಪದಗಳ ಪ್ರಯೋಗ ಸಂದರ್ಭೋಚಿತವೂ ರಮಣೀಯವೂ ಆಗಿದೆ.

ಪುಟ್ಟಿದ ನೂರ್ವರುಮೆನ್ನೊಡ
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ಪುಟ್ಟಿ ಪೊದೞ್ದುದು ಸತ್ತರ್
ಪುಟ್ಟರೆ ಪಾಂಡವರೊಳಿಱಿದು ಛಲಮನೆ ಮೆಱೆವೆಂ॥೫೪॥

ಪುಟ್ಟಿದ ನೂರ್ವರುಂ= ನನಗೆ ಹುಟ್ಟಿದ ನೂರುಮಂದಿ ಮಕ್ಕಳೂ, ಎನ್ನ ಒಡ ಪುಟ್ಟಿದ ನೂರ್ವರುಂ= ನನ್ನೊಂದಿಗೆ ಜನಿಸಿದ ನೂರು ಮಂದಿ ತಮ್ಮಂದಿರೂ, ಇದಿರ್ಚಿ=ಶತ್ರುಗಳನ್ನು ಪ್ರತಿಭಟಿಸಿ, ಸತ್ತೊಡೆ= ತೀರಿಕೊಂಡಾಗ, ಕೋಪಂ ಪುಟ್ಟಿ ಪೊದೞ್ದುದು= ಕೋಪವು ಹುಟ್ಟಿ ಹೊರಹೊಮ್ಮಿತು. ಸತ್ತರ್= ಸತ್ತವರು, ಪುಟ್ಟರೆ= ಮರಳಿ ಹುಟ್ಟುವುದಿಲ್ಲವೇ? ಪಾಂಡವರೊಳ್= ಪಾಂಡವರೊಂದಿಗೆ ಯುದ್ಧ ಮಾಡಿ , ಛಲವನೆ ಮೆಱೆವೆಂ= ನನ್ನ ಛಲವನ್ನೇ ಪ್ರದರ್ಶಿಸುತ್ತೇನೆ.

ತಾತ್ಪರ್ಯ :- ನನ್ನ ನೂರುಮಂದಿ ಮಕ್ಕಳೂ ಒಡಹುಟ್ಟಿದ ನೂರು ಮಂದಿ ತಮ್ಮಂದಿರೂ ಶತ್ರುಗಳೊಂದಿಗೆ ಯುದ್ಧಮಾಡಿ ಸತ್ತುಹೋದರು. ಅವರ ಸಾವಿನಿಂದಾಗಿ ನನ್ನ ಕೋಪವು ಹುಟ್ಟಿ ವಿಜೃಂಭಿಸಿತು. ಸತ್ತವರು ಮತ್ತೆ ಹುಟ್ಟುವುದಿಲ್ಲವೇ? ಜೀವಗಳ್ಳನಾಗಿ ಬಾಳುವುದಕ್ಕಿಂತ ಯುದ್ಧದಲ್ಲಿ ಸಾಯುವುದೇ ಮೇಲು. ಆದುದರಿಂದ ಪಾಂಡವರೊಂದಿಗೆ, ಯುದ್ಧವನ್ನು ಮಾಡಿ ನನ್ನ ಛಲವನ್ನೇ ಸಾಧಿಸುತ್ತೇನೆ.

ಕಾದದಿರೆನಜ್ಜ ಪಾಂಡವ
ರಾದರ್ ಮೇಣಿಂದಿನೊಂದೆ ಸಮರದೊಳಾಂ ಮೇ
ಣಾದೆನದಱಿಂದೆ ಪಾಂಡವ
ರ್ಗಾದುದು ಮೇಣಾಯ್ತು ಕೌರವಂಗವನಿತಳಂ॥೫೫॥

ಅಜ್ಜಾ! ಕಾದದೆ ಇರೆನ್= ಯುದ್ಧ ಮಾಡದೆ ಬಿಡೆನು, ಇಂದಿನ ಒಂದೆ ಸಮರದೊಳ್ ಪಾಂಡವರಾದರ್ ಮೇಣ್ ಆನಾದೆ= ಇಂದು ನಡೆಯಲಿರುವ ಯುದ್ಧದಲ್ಲಿ ಪಾಂಡವರಾಯ್ತು, ನಾನಾಯ್ತು. ಎಂದರೆ ನಾನೋ ಪಾಂಡವರೋ ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯಬೇಕು. ಅದಱಿಂದೆ = ಆದುದರಿಂದ, ಅವನಿತಳಂ= ಭೂಮಂಡಲವು, ಪಾಂಡವರ್ಗಾದುದು= ಪಾಂಡವರಿಗಾಯ್ತು, ಮೇಣ್= ಅಥವಾ, ಕೌರವಂಗಾಯ್ತು= ಕೌರವನಿಗಾಯ್ತು.

ತಾತ್ಪರ್ಯ :-ಅಜ್ಜಾ! ಪಾಂಡವರೊಂದಿಗೆ ಹೋರಾಡಿಯೇ ತೀರುವೆನು.ಇಂದಿನ ಯುದ್ಧದಲ್ಲಿ ಒಂದೋ ಪಾಂಡವರು ಉಳಿಯಬೇಕು, ಇಲ್ಲವೇ ನಾನು ಉಳಿಯಬೇಕು. ಇಬ್ಬರೂ ಉಳಿಯಲು ಸರ್ವಥಾ ಸಾಧ್ಯವಿಲ್ಲ. ನಾನು ಅಳಿದರೆ ಭೂಮಂಡಲವು ಪಾಂಡವರಿಗಾಯ್ತು. ಅವರು ಅಳಿದರೆ ಅಖಂಡವಾದ ಭೂಮಂಡಲ ಕೌರವನಿಗಾಯ್ತು.

ಜಲಧಿಗಳೇೞುಂಭೂಭೃ
ತ್ಕುಲಂಗಳಂ ರಿಪುಗೆ ಸಿರಿಯನೀವಂತೆತ್ತಂ
ತಳಮಳವಿಗೞಿಯೆ ಕುರುಕುಲ
ತಿಳಕಂ ರಿಪುಗೆಂತುಮೀವನಲ್ಲಂ ಶ್ರೀಯಂ॥೫೬॥

ಜಲಧಿಗಳೇೞುಂ= ಸಪ್ತಸಾಗರಗಳೂ, ಭೂಭೃತ್ಕುಲಂಗಳುಂ= ಸಪ್ತಕುಲಾಚಲಗಳೂ, ಎತ್ತಂ= ಎಲ್ಲಿಯಾದರೂ, ತಳಂ ಅಳವಿಗೞಿಯೆ=ಎಲ್ಲೆಯನ್ನು ಮೀರಿದರೂ, ಕುರುಕುಲತಿಲಕಂ= ಕೌರವೇಶ್ವರನು, ರಿಪುಗೆ ಸಿರಿಯಂ ಈವಂತೆ= ಶತ್ರುವಿಗೆ ತನ್ನ ಸಕಲ ಸಂಪತ್ತನ್ನೂ ಕೊಡುವ ಹಾಗೆ, ಶ್ರೀಯಂ= ಆತ್ಮಶ್ರೀಯನ್ನು , ತನ್ನು ಕೀರ್ತಿಯನ್ನು , ರಿಪುಗೆ ಎಂತುಂ ಈವನಲ್ಲ= ಶತ್ರುವಿಗೆ ಯಾವ ರೀತಿಯಿಂದಲೂ ಕೊಡುವವನಲ್ಲ.

ತಾತ್ಪರ್ಯ :- ಸಪ್ತ ಸಾಗರಗಳೂ, ಸಪ್ತ ಕುಲಪರ್ವತಗಳೂ, ತಂತಮ್ಮ ನೆಲೆಯನ್ನು ಒಂದು ವೇಳೆ ದಾಟಿ ಬಂದರೂ, ಕೌರವೇಶ್ವರನು ಶತ್ರುಗಳಿಗೆ ತನ್ನ ಸಕಲ ಐಶ್ವರ್ಯವನ್ನು ಕೊಡುವ ಹಾಗೆ ಆತ್ಮಶ್ರೀಯನ್ನು , ಸ್ವಕೀರ್ತಿಯನ್ನು ಎಷ್ಟುಮಾತ್ರಕ್ಕೂ ಕೊಡುವವನಲ್ಲ. ಅಜ್ಜನಿಂದ ಮೊಮ್ಮಗನ ಛಲಾಭಿಮಾನ ಪ್ರಶಂಸೆ!

ಜತುಗೇಹಾನಲಬೀಜಮುಗ್ರವಿಷಸಂಜತಾಂಕುರಂ ಕ್ರೀಡನೋ
ದ್ದತಿಕೃದ್ದ್ಯೂತವಿನೋದಪಲ್ಲವಚಯಂ ಪಾಂಚಾಲರಾಜಾತ್ಮಜಾ
ಯತಕೇಶಗ್ರಹಪುಷ್ಪಮಾಗೆ ಬೆಳೆದಾ ವೈರದ್ರುಮಂ ಕೌರವ
ಕ್ಷಿತಿಪಾಲೋರು ಕಿರೀಟಭಂಗ ಫಲಮಂ ಪೇೞ್ ಮಾಡದೇಂ ಪೋಕುಮೇ॥೫೭॥

ಜತುಗೇಹ ಅನಲ= ಅರಗಿನ ಮನೆಯ ಬೆಂಕಿಯೇ, ಬೀಜಂ= ಬೀಜವು, ಉಗ್ರವಿಷಸಂಜಾತ ಅಂಕುರಂ= ಭಯಂಕರವಾದ ವಿಷಮಿಶ್ರಿತ ಲಡ್ಡುಗೆಯನ್ನು ತಿನ್ನುವಂತೆ ಮಾಡಿದುದೇ ಮೊಳಕೆ, ಕ್ರೀಡನ ಉದ್ಧತಿಕೃದ್ದ್ಯೂತವಿನೋದ= ವಿನೋದಕ್ಕಾಗಿ ಮಾಡಿದ ಕೃತಕ ಜೂಜೇ , ಪಲ್ಲವಚಯಂ=ಚಿಗುರುಗಳ ಸಮೂಹ, ಪಾಂಚಾಲರಾಜಾತ್ಮಜಾ= ದ್ರೌಪದಿಯ, ಆಯತಕೇಶಗ್ರಹ= ನೀಳವಾದ ತುರುಬನ್ನು ಹಿಡಿದೆಳೆದುದೇ, ಪುಷ್ಪಂ= ಹೂವುಗಳು, ಆಗೆ =ಆಗಲು, ಬೆಳೆದ, ಆ ವೈರದ್ರುಮಂ= ಆ ದ್ವೇಷವೆಂಬ ವೃಕ್ಷವು, ಕೌರವಕ್ಷಿತಿಪಾಲ= ದುರ್ಯೋಧನನ, ಊರುಕಿರೀಟಭಂಗ= ತೊಡೆಗಳ ಮತ್ತು ಮುಕುಟದ ಮುರಿಯುವಿಕೆ ಎಂಬ, ಫಲಮಂ= ಹಣ್ಣುಗಳನ್ನು, ಮಾಡದೆ ಏಂಪೋಕುಮೆ ಪೇೞ್= ಕೊಡದೆ ಹೋದೀತೆ?

ತಾತ್ಪರ್ಯ :-  ಅರಗಿನ ಮನೆಯ ಉರಿಯೆಂಬ ಬೀಜವು, ಭಯಂಕರವಾದ ವಿಪದ ಲಡ್ಡುಗೆಯಲ್ಲಿ ಮೊಳಕೆಯಾಗಿ, ಕಪಟದ್ಯೂತದಲ್ಲಿ ಚಿಗುರಾಗಿ ದ್ರೌಪದಿಯ ತುಂಬಿದ ತುರುಬನ್ನು ಸೆಳೆಯುವುದರಲ್ಲಿ ಹೂವಾಗಿ ಬೆಳೆದಂಥ ಆ ವೈರವೆಬ ಮರವು ಕೌರವನ ತೊಡೆಗಳನ್ನು ಮುರಿಯುವಿಕೆ ಮತ್ತು ಮಕುಟವನ್ನು ಪುಡಿಗುಟ್ಟುವಿಕೆಎಂಬ ಹಣ್ಣುಗಳನ್ನು ಕೊಡದೆ ಇದ್ದೀತೇ!

ವೈರಬಿಜವು ಹೆಮ್ಮರವಾಗಿ ಬೆಳೆದು ಹಬ್ಬಿದ ಬಳಿಕ ಅದು ಹಣ್ಣುಗಳನ್ನು ಕೊಡದೆ ಇದ್ದೀತೇ? ಇರಲಾರದು. ಭೀಷ್ಮರ ಈ ಭವಿಷ್ಯ ವಾಣಿ ಮುಂದೆ ಫಲಿಸುವುದನ್ನು ಕಾಣುತ್ತೇವೆ. ವಿಷವೃಕ್ಷವು ವಿಷಫಲವನ್ನೇ ಬಿಡುತ್ತದೆಯಲ್ಲದೆ ಅಮೃತ ಫಲವನ್ನು ನೀಡುವುದಿಲ್ಲ.

ಈ ಪದ್ಯಕ್ಕೆ ವೇಣೀಸಂಹಾರ ಅಂಕ ೪ - ೯ ರ ಮುಂದಿನ ವಚನದಲ್ಲಿ ಸುಂದರಕನು ವರ್ಣಿಸುವ ವಿಷವೃಕ್ಷದ ಭಾವವೇ ಬಹುಮಟ್ಟಿಗೆ ಪ್ರೇರಕವಾಗಿದೆ.

ಅಲಂಕಾರ :- ಮಾಲಾರೂಪಕ.

ಷಷ್ಟಾಶ್ವಾಸಂ

ತುಂಗ ಕುರುವಂಶಮಯಶೋ
ಭಂಗಂ ಛಿದ್ರಿತಮದೆನ್ನ ದೂಸಱಿನಾಯ್ತಾ
ನುಂ ಗಡ ಕುರುರಾಜನೆ ನೀ
ಮುಂ ಗಡ ಸಂಧಾನವೇೞ್ದಿರೆನಗರಸು ಗಡಾ॥೩॥

ತುಂಗ ಕುರುವಂಶ= ಉತ್ತಮವಾದ ಕುರುವಂಶವು, ಅಯಶೋಭಂಗಂ= ಅಪಕೀರ್ತಿಯಿಂದ ನಾಶವಾದ್ದೂ, ಛಿದ್ರಿತಂ=ಒಡಕುಳ್ಳದ್ದೂ, ಅದೆನ್ನ ದೂಸಱಿಂ ಆಯ್ತು= ಅದು ನನ್ನ ಕಾರಣದಿಂದ ಆಯ್ತು, (ಹೀಗಿರಲು)ಆನುಂ ಗಡ ಕುರುರಾಜನೆ= ನಾನಿನ್ನೂ ಕುರುರಾಜನಂತೆ, ನೀಮುಂ ಗಡ ಸಂಧಾನವೇೞ್ದಿರ್= ನೀವೂ ಸಂಧಾನವನ್ನು ಮಾಡಿಕೊಳ್ಳುವಂತೆ ಹೇಳಿದಿರಲ್ಲಾ! ಎನಗೆ ಅರಸು ಗಡಾ= ನನಗೆ ಅರಸುತನವಂತೆ!

ತಾತ್ಪರ್ಯ :- ಉನ್ನತವಾದ ಕುರುವಂಶವು ನನ್ನ ನಿಮಿತ್ತದಿಂದ ಅಪಕೀರ್ತಿಗೂ ಸರ್ವನಾಶಕ್ಕೂ ಒಳಗಾಯಿತು. ಹೀಗಿದ್ದರೂ ನಾನಿನ್ನೂ ಕುರುರಾಜನಂತೆ ! ನನ್ನ ವಂಶದವರನ್ನೆಲ್ಲ ಕೊಲೆಗೆ ಗುರಿಪಡಿಸಿದ ನಾನು ಇನ್ನೆಲ್ಲಿಯ ರಾಜ? ಎಲ್ಲವನ್ನೂ ತಿಳಿದಂಥ ನೀವೂ ಸಂಧಿಮಾಡಿಕೊಳ್ಳುವಂತೆ ಉಪದೇಶಿಸಿದಿರಿ! ನನಗಿನ್ನು ಅರಸೊತ್ತಿಗೆಯೇ! ಚೆನ್ನಾಯ್ತು! ಚೆನ್ನಾಯ್ತು!

ದುರ್ಯೋಧನನು ಅಜ್ಜನ ಸಂಧಾನಯತ್ನವನ್ನು ಪರಿಹಾಸಮಾಡುತ್ತಾನೆ.

ಈಯೆರಡುಮೆನ್ನ ನಿಡುದೋ
ಳಾಯತ್ತಂ ವೀರವೃತ್ತಿ ಜಯಮೆಂಬುದು ದೈ
ವಾಯತ್ತಮಜ್ಜ ಭರತಾ
ನ್ವಾಯಕ್ಕೆ ಕಲಂಕಮಾಗದಂತಿರೆ ನೆಗೞ್ವೆಂ॥೪॥

ಅಜ್ಜ! ವೀರವೃತ್ತಿ= ವೀರತ್ವವು, ಈ ಎರಡುಂ ಎನ್ನ= ಈ ನನ್ನ ಎರಡು, ನಿಡುದೋಳ್= ದೀರ್ಘಬಾಹುಗಳ, ಆಯತ್ತಂ= ಅಧೀನವಾದದ್ದು, ಜಯಂ ಎಂಬುದು= ಜಯವೆನ್ನುವುದು, ದೈವಾಯತ್ತ= ವಿಧಿಯ ವಶ, ಭರತಾನ್ವಯಕ್ಕೆ= ಭರತ ವಂಶಕ್ಕೆ, ಕಲಂಕಂ ಆಗದಂತಿರೆ= ಕಲಂಕವಾಗದ ರೀತಿಯಲ್ಲಿ, ನೆಗೞ್ವೆಂ= ವರ್ತಿಸುತ್ತೇನೆ.

ಅಜ್ಜಾ! ವೀರತ್ವವೆಂಬುದು ಈ ನನ್ನ ನೀಳವಾದ ಎರಡು ಬಾಹುಗಳನ್ನು ಅವಲಂಬಿಸಿದ್ದು. ಜಯವೆಂಬುದು ವಿಧಿಯ ಅಧೀನವಾದ್ದು, ಎಂದರೆ ವೀರತ್ವವು ನನ್ನ ವಶ, ವಿಜಯವು ವಿಧಿಯ ವಶ. ಆದುದರಿಂದ ಭರತವಂಶಕ್ಕೆ ನನ್ನಿಂದ ಕಳಂಕವು ಬಾರದಂತೆ ಪೌರುಷವನ್ನು ಪ್ರದರ್ಶಿಸುತ್ತೇನೆ.

ಅಭಿಮಾನಧನ ದುರ್ಯೋಧನನ ವೀರೋಚಿತವಾದ ಮಾತುಗಳು.

ಬೆಸಕೆಯ್ವೆಂ ಬಿಡಿಮಜ್ಜ ಮಂಗಳಮಹಾಶ್ರೀ ಸಂಧಿಕಾರ್ಯಕ್ಕೆ ಲಂ
ಘಿಸಿದೆಂ ನಿಮ್ಮಯಮಾತನೊರ್ಮೆಗೆಮದಾಜ್ಞಾಲಂಘನಂ ದೋಷಮೊಂ
ದಿಸದಿನ್ನಾಗ್ರಹಮಂ ಬಿಸುೞ್ಪುದೆನೆ ಸತ್ತ್ವಕ್ಕಂ ತದೇಕಾಂಗ ಸಾ
ಹಸಕಂ ವಿಸ್ಮಯಮುತ್ತು ಮೆಚ್ಚಿ ಪೊಗೞ್ದಂ ಮಂದಾಕಿನೀ ನಂದನಂ॥೫॥

ಅಜ್ಜ! ಮಂಗಳಮಹಾಶ್ರೀಸಂಧಿಕಾರ್ಯಕ್ಕೆ, ಬೆಸಕೆಯ್ವೆ= ( ಬೆಸಕೆಯ್ಯೆಂ= ಸಮ್ಮತಿಸಲಾರೆ) ಬಿಡಿಂ= ಆ ವಿಚಾರವನ್ನೇ ಬಿಟ್ಟು ಬಿಡಿ! ಒರ್ಮೆಗೆ ನಿಮ್ಮಯ ಮಾತಂ ಲಂಘಿಸಿದೆಂ= ಇದೊಂದು ಬಾರಿಗೆ ನಿಮ್ಮ ಮಾತನ್ನು ಮೀರಿದ್ದೇನೆ. ಎಮದು=ನಾವು, ಆಜ್ಞಾಲಂಘನಂ = ಆಜ್ಞೆಯನ್ನು ಮೀರುವುದರಿಂದ, ದೋಷಂ ಒಂದಿಸದು= ದೋಷವುಂಟಾಗದು, ಇನ್ನು= ಇನ್ನಾದರೂ, ಆಗ್ರಹಮಂ= ನೀವು ಒತ್ತಾಯ ಮಾಡುವುದನ್ನು, ಬಿಸುೞ್ಪುದು= ಬಿಡುವುದು, ಎನೆ=ಎನ್ನಲು, ಸತ್ವಕ್ಕಂ= ಸದ್ಗುಣಕ್ಕೂ, ತದೇಕಾಂಗಸಾಹಸಕಂ= ಆ ಏಕೈಕ ಸಾಹಸಕ್ಕೂ, ವಿಸ್ಮಯಂ ಉತ್ತು= ಆಶ್ಚರ್ಯಪಟ್ಟು, ಮಂದಾಕಿನೀ ನಂದನಂ= ಗಗಂಗಾಸುತನಾದ ಭೀಷ್ಮನು, ಮೆಚ್ಚಿ ಪೊಗೞ್ದಂ= ಸಂತೋಷಗೊಂಡು( ಮನಸ್ಸಿನಲ್ಲೇ ) ಹೊಗಳಿದನು.

ತಾತ್ಪರ್ಯ :- ಅಜ್ಜ! ನಿಮ್ಮ ಮಂಗಳಮಹಾಶ್ರೀಸಂಧಿಕಾರ್ಯಕ್ಕೆ ನಾನು ಒಪ್ಪಲಾರೆ ! ಆ ಮಾತನ್ನೇ ಬಿಟ್ಟು ಬಿಡಿ. ಇದೊಂದು ಬಾರಿಗೆ ನಿಮ್ಮ ಆಜ್ಞೆಯನ್ನು ಉಲ್ಲಂಘಿಸಿದ್ದೇನೆ; ಹಾಗೆ ಉಲ್ಲಂಘಿಸಿದ್ದರಿಂದ ನನಗೇನೂ ದೋಷವುಂಟಾಗದೆಂದು ನಂಬಿದ್ದೇನೆ. ಇನ್ನಾದರೂ ನನ್ನನ್ನು ಒತ್ತಾಯಿಸಬೇಡಿರಿ, ನಿಮ್ಮ ದಮ್ಮಯ್ಯ ! ಎನ್ನಲು ತನ್ನ ಮೊಮ್ಮಗನಸಜ್ಜನಿಕೆಗೂ ಏಕೈಕ ಸಾಹಸಕ್ಕೂ ಆಶ್ಚರ್ಯಪಟ್ಟು ಭೀಷ್ಮನು ಮನಸ್ಸಿನಲ್ಲೇ ಆತನನ್ನು ಕೊಂಡಾಡಿದನು.

ದಿನಕರ ತನಯನ ದುಶ್ಯಾ
ಸನನ ವಿಯೋಗದೊಳಮಿಂದುವರೆಗಂ ನೋವಿ
ಲ್ಲೆನಗಹಿತರೊಡನೆ ಸಂಧಿಗು
ಡೆನೆ ನೊಂದೆಂ ಸ್ವಜನಗುರುಜನಾಭ್ಯರ್ಥನೆಯಿಂ|| ೭||

ದಿನಕರತನಯನ= ಕರ್ಣನ, ದುಶ್ಯಾಸನನ, ವಿಯೋಗದೊಳಂ= ಅಗಲುವಿಕೆಯಿಂದಲೂ, ಇಂದುವರೆಗಂ= ಇಂದಿನವರೆಗೆ,
ಎನಗೆ ನೋವಿಲ್ಲ= ನನಗೆ ( ಇಷ್ಟೊಂದು ) ವ್ಯಥಯಾಗಿಲ್ಲ, ( ಇದು ಕೇವಲ ಔಪಚಾರಿಕವಾದ ಮಾತು. ಆತನ ನೋವು ಎಷ್ಟೆಂಬುದನ್ನು ಈ ಹಿಂದೆಯೇ ನೋಡಿದ್ದೇವಷ್ಟೆ ! ) ಅಹಿತರೊಡನೆ= ಶತ್ರುಗಳೊಂದಿಗೆ, ಸಂಧಿಗುಡು ಎನೆ= ಸಂಧಿಯನ್ನು ಮಾಡಿಕೋ ಎನ್ನಲು, ಸ್ವಜನ ಗುರುಜನ ಅಭ್ಯರ್ಥನೆಯಿಂ= ನನ್ನ ಗುರುಹಿರಿಯರ ಪ್ರಾರ್ಥನೆಯಿಂದ, ನೊಂದೆಂ= ಸಂಕಟಪಟ್ಟೆನು.

ತಾತ್ಪರ್ಯ :- ಇಂದಿನವರೆಗೆ ಕರ್ಣದುಶ್ಯಾಸನರ ಅಗಲುವಿಕೆಯಿಂದ ಉಂಟಾದ ವ್ಯಥೆಯು ವ್ಯಥೆಯಲ್ಲ ನನ್ನ ಪಾಲಿಗೆ. ಆದರೆ ಇಂದು ಶತ್ರುಗಳೊಂದಿಗೆ ಸಂಧಿಮಾಡಿಕೋ ಎಂದು ಪದೇ ಪದೇ ಪ್ರಾರ್ಥಿಸುವ ನನ್ನ ಗುರುಹಿರಿಯರ ಮಾತಿನಿಂದ
ಅಸಹ್ಯ ವೇದನೆಯುಂಟಾಯಿತು.

ಅರಿಗಳ್ ಪಾಂಡವರೊಳ್
ವಿರೋಧಮಂ ಬಿಸುಟು ಸಂಧಿಯಂ ಮಾಡುವುದೆಂ
ಬರಮಾತಂ ಕೇಳಿಸಲೆ
ನ್ನೆರಡುಂ ಕಿವಿಗಳನದೇಕೆ ಬಿದಿ ಮಿಡಿದನೋ॥೮॥

ಅರಿಗಳ್ ಪಾಂಡವರ್= ಪಾಂಡವರು ನನ್ನ ವೈರಿಗಳು, ಅವರೊಳ್ ವಿರೋಧಮಂ ಬಿಸುಟು ಸಂಧಿಯಂ ಮಾಡುವುದು= ಅವರೊಂದಿಗೆ ವೈರವನ್ನು ತೊರೆದು ಸಂಧಿಯನ್ನು ಮಾಡಿಕೊ, ಎಂಬರ ಮಾತಂ ಕೇಳಿಸಲ್= ಎನ್ನುವವರ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕಾಗಿಯೇ, ಬಿದಿ= ದೈವವು, ಎನ್ನ ಎರಡುಂ ಕಿವಿಗಳನ್ ಅದೇಕೆ ಮಾಡಿದನೋ= ನನ್ನ ಎರಡು ಕಿವಿಗಳನ್ನು ಏತಕ್ಕಾಗಿ ನಿರ್ಮಿಸಿದನೋ?

ತಾತ್ಪರ್ಯ :- ಬದ್ಧ ಧ್ವೇಷಿಗಳಾದ ಪಾಂಡವರ ಮೇಲಿನ ಹಗೆತನವನ್ನು ತೊರೆದು ಸಂಧಿಯನ್ನು ಮಾಡಿಕೊ ಎಂದು ಎಡೆಬಿಡದೆ ಬೇಡಿಕೊಳ್ಳುವವರ ಮಾತುಗಳನ್ನು ಕೇಳುವುದಕ್ಕಾಗಿಯೇ ವಿಧಿ ನನಗೆ ಎರಡು ಕಿವಿಗಳನ್ನು ಕೊಟ್ಟನೇ!

ಇಂಥ ಮಾತುಗಳು ಕೇಳಿಸದಂತೆ ತನ್ನನ್ನು ಕಿವುಡನನ್ನಾಗಿ ಮಾಡಿದ್ದರೆ ಲೇಸಾಗುತ್ತಿತ್ತು ಎಂಬ ಭಾವ.

ಒಂದೆರಡು ಮತ್ತರಂತರ
ದಿಂದಂ ಪೊಱಮಟ್ಟಪಜ್ಜೆಯಿಂ ಸಲೆ ಕೊಳನಂ
ಪಿಂದು ಪೆಱಗಾಗಿ ಪುಗೆ ಚಿಃ
ಎಂದವನಂ ರಾಜ್ಯಲಕ್ಪ್ಮಿ ಪೇಸಿ ಬಿಸುಟ್ಟಳ್॥೯॥

ಒಂದೆರಡು= ಒಂದೋ ಎರಡೋ, ಮತ್ತರ್ ಅಂತರದಿಂದ= ‘ ಮತ್ತರು ‘ ಗಳಷ್ಟು ದೂರದಿಂದಲೇ, ಪೊಱಮಟ್ಟ ಪಜ್ಜೆ ಎಂಬುದನ್ಎನಿಸಲ್= ( ಕೊಳದಿಂದ ) ಹೊರಟು ಬಂದ ಹಜ್ಜೆ ಎಂದೆನಿಸುವುದಕ್ಕಾಗಿ, ಪಿಂದು ಪೆರಗಾಗಿ= ಹಿಂದು ಹಿಂದಾಗಿ, ಪುಗೆ = ಪ್ರವೇಶಿಸಲು, ಚಿಃ ಎಂದು =ಚಿಃ ಎಂದು ತಿರಸ್ಕರಿಸಿ, ರಾಜ್ಯಲಕ್ಷ್ಮಿ = ರಾಜ್ಯಲಕ್ಷ್ಮಿಯು , ಪೇಸಿ= ಹೇಸಿಕೆ ಪಟ್ಟು, ಅವನಂ=ದುರ್ಯೋಧನನನ್ನು, ಬಿಸುಟ್ಟಳ್= ತೊರೆದಳು.

ತಾತ್ಪರ್ಯ :- ಒಂದೋ ಎರಡೋ ಮತ್ತರುಗಳಷ್ಟು ದೂರದಿಂದಲೇ ಸರೋವರದ ದಾರಿಯ ಕೆಸರಿನಲ್ಲಿ ಹೆಜ್ಜೆಯ ಸಾಲುಗಳನ್ನು ನೋಡಿದವರಿಗೆ ಯಾರೋ ಕೊಳದಿಂದ ಹೊರಟುಹೋಗಿರಬೇಕೆಂಬ ಭಾವನೆಯನ್ನುಂಟುಮಾಡುವುದಕ್ಕಾಗಿ , ಹಿಂದು ಹಿಂದಾಗಿ ಹೆಜ್ಜೆ ಹಾಕುತ್ತಾ ಬರಲು, ಇದುವರೆಗೆ ದುರ್ಯೋಧನನಲ್ಲಿ
ನೆಲಸಿದ್ದ ರಾಜ್ಯಲಕ್ಷ್ಮಿಯು ಈ ದುರ್ವರ್ತನೆಗೆ ಹೇಸಿ ಛೀಮಾರಿ ಹಾಕುತ್ತಾ ಅವನನ್ನು ತೊರೆದುಬಿಟ್ಟಳು.

ವೀರನಾದ ದುರ್ಯೋಧನನು ಹೇಡಿಯಂತೆ ವರ್ತಿಸಿದುದನ್ನು ನೋಡಿ ರಾಜ್ಯಲಕ್ಷ್ಮಿಯು ಅವನನ್ನು ಪರಿತ್ಯಜಿಸಿದಳು.

ವಿಚಾರ :- ಸರೋವರದಿಂದ ಹೊರಹೊರಟ ಹಜ್ಜೆಯ ಸಾಲಿನ ಜೊತೆಗೆ ಹೊಕ್ಕ ಹೆಜ್ಜೆಯ ಗುರುತುಗಳೂ ಇಲ್ಲದಿದ್ದರೆ ನೋಡುವವರಿಗೆ ಸಂದೇಹವುಂಟಾದೀತೆಂಬುದುದುರ್ಯೋಧನನ ಸ್ಕ್ಷ್ಮ ಪ್ರಜ್ಞೆಗೆ ಏಕೆ ತೋರಲಿಲ್ಲವೋ! ಈ ತಂತ್ರ ಬಳಸಲು ಭೀಷ್ಮನು ಹೇಳಲಿಲ್ಲ.; ಮತ್ತೇಕೆ ಈ ಕುತಂತ್ರವನ್ನು ಕೈಗೊಂಡನು? ದುರ್ಯೋಧನನು ವೈಶಂಪಾಯನ ಸರೋವರವನ್ನು ಹಿಂದು ಹಿಂದಾಗಿ ಪ್ರವೇಶಿಸಿದನೆಂಬುದಕ್ಕೆ ವ್ಯಾಸಭಾರತದಲ್ಲಾಗಲಿ, ಪಂಪಭಾರತದಲ್ಲಾಗಲಿ ಯಾವ
ಆಧಾರವೂ ಇಲ್ಲ. ಎಂದ ಬಳಿಕ, ಪಂಪಭಾರತವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಗದಾಯುದ್ಧದಲ್ಲಿ ಈ ಮಾರ್ಪಾಟು ಎಲ್ಲಿಂದ ಬಂದಿರಬಹುದ? ರನ್ನು ಸ್ವತಂತ್ರವಾಗಿ ಈ ಬದಲಾವಣೆಯನ್ನು ಮಾಡಿರಬಹುದೇ? ವೇಣೀಸಂಹಾರ ನಾಟಕದ ೬ ನೆಯ ಅಂಕದಲ್ಲಿ ಪುರುಷನೊಬ್ಬನು ಭೀಮನೊಡನೆ ಆಡುವ ಮಾತಿನಲ್ಲಿ  “ ಎರಡು ಹಜ್ಜೆಯ ಸಾಲುಗಳು ಸರೋವರಕ್ಕೆ ಇಳಿದಂತೆಯೂ , ಅವುಗಳಲ್ಲಿ ಒಂದು ಸಾಲು ಮಾತ್ರ ನೀರನ್ನು ಬಿಟ್ಟು ಹಿಂದಿರುಗಿದಂತೆಯೂ ತೋರುತ್ತಿದ್ದುವು “ ಎಂದು ಹೇಳಲಾಗಿದೆ. ಇದರ ಆಧಾರದಿಂದ ರನ್ನನು ಈ ತಂತ್ರವನ್ನು ಸೃಷ್ಟಿಸಿರಬೇಕು. ಮುಂದಿನ
ಪದ್ಯದಲ್ಲಿ ದುರ್ಯೋಧನನ ದುಷ್ಕೃತ್ಯಗಳ ಪಟ್ಟಿಯಲ್ಲಿ ಪೆಱಗಡಿಯಿಟ್ಟುದನ್ನೂ ಸೇರಿಸುತ್ತಾನೆ ರನ್ನ. ಕರ್ಣಪಾರ್ಯನ ನೇಮಿನಾಥ ಪುರಾಣದಲ್ಲಿ “ ಕೈರುಪತಿ ವೈಶಂಪಾಯನ ಸರೋವರಂಬುಗುತುಮಂದು ಪೆಱಗಡಿಯಿಟ್ಟಂ” ( ೧೨-೧೭೯)
ಎಂಬ ಮಾತು ಬಂದಿದೆ. ಕರ್ಣಪಾರ್ಯನು ಈ ವಿಷಯದಲ್ಲಿ ರನ್ನನನ್ನು ಅನುಸರಿಸಿರಬಹುದು.

ತುಱುವಂ ಕಳಿಸುವ ಕೃಷ್ಣೆಯ
ನಿಱಿಯಂ ಪಿಡಿದುರ್ಚವೇೞ್ವ ಕೊಳನಂ ಪಿಂದುಂ
ಪೆಱಗಾಗಿ ಪುಗುವ ದುರ್ನಯ
ಮಱಿಪವೆ ಕೌರವನ ರಾಜ್ಯದಾಯದ ಕುಂದಂ॥೧೦॥

ತುಱುವಂ= ಗೋವುಗಳನ್ನು, ಕಳಿಸುವ= ಕದ್ದು ಅಪಹರಿಸುವ, ( ಧಾತು - ಕಳ್ ) ಕೃಷ್ಣೆಯ= ದ್ರೌಪದಿಯ, ನಿಱಿಯಂ=ಸೀರೆಯ ನಿರಿಯನ್ನು, ಉರ್ಚವೇೞ್ವ = ಉರ್ಚಲ್ ಪೇೞ್ವ= ಸೆಳೆಯುವಂತೆ ( ತಮ್ಮನಿಗೆ ) ಹೇಳುವ, ಕೊಳನಂ=ಸರೋವರವನ್ನು, ಪಿಂದುಂ ಪೆಱಗಾಗಿ ಪುಗುವ= ಹಿಂದು ಹಿಂದಕ್ಕಾಗಿ ಪ್ರವೇಶಿಸುವ, ದುರ್ನಯಂ= ದುರ್ನೀತಿಗಳು, ಕೌರವನ=ದುರ್ಯೋಧನನ, ರಾಜ್ಯದ ಆಯದ ಕುಂದಂ= ರಾಜ್ಯದ ಮತ್ತು ಶೌರ್ಯದ ಕೇಡನ್ನು, ಅಱಿಪವೆ= ತಿಳಿಸುವುದಿಲ್ಲವೇ?

ತಾತ್ಪರ್ಯ :- ವಿರಾಟನ ಗೋವುಗಳನ್ನು ಅಪಹರಿಸಲು ಯತ್ನಿಸಿದರೂ, ದ್ರೌಪದಿಯ ಸೀರೆಯನ್ನು ಸುಲಿಯುವಂತೆ ತನ್ನ ತಮ್ಮನಿಗೆ ಆಜ್ಞೆಮಾಡಿದುದೂ, ವೈಶಂಪಾಯನ ಸರೋವರವನ್ನು ಹಿಂದುಹಿಂದಾಗಿ ಹೆಜ್ಜೆಯಿಡುತ್ತಾ ಪ್ರವೇಶಿಸಿದುದದೂ,
ದುರ್ಯೋಧನನ ರಾಜ್ಯದ ಕೇಡನ್ನೂ ಶೌರ್ಯದ ಕೊರತೆಯನ್ನೂ ಸೂಚಿಸುವುದಿಲ್ಲವೇ?

ಈ ಮೂರು ದುಷ್ಕೃತ್ಯಗಳೇ ದುರ್ಯೋಧನನ ವಿನಾಶಕ್ಕೆ ಕಾರಣವೆಂಬುದು ಕವಿಯ ಅಭಿಪ್ರಾಯ.

ಗಗನಂ ಬಿೞ್ದುದೊ ಮೇಣ್ ನೆಲಕ್ಕೆ ನೆಲನೇಂಪತ್ತಿತ್ತೊ ಮೇಣಿಲ್ಲಿ ಪ
ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಿಲ್ಲಿ ದಿಙ್ನಾಗರಾ
ಜಗೆ ಮೆಯ್ಗರ್ಚಿಕೊಳಲ್ಕಜ ಸಮೆದ ತೋಯೋದ್ದೇಶಮೋ ಸಂದೆಯಂ
ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ॥೧೧॥

ಗಗನಂ ಬಿೞ್ದುದೊ= ಆಕಾಶವೇ ಕೆಳಗೆ ಬಿದ್ದುಬಿಟ್ಟಿತೋ, ಮೇಣ್=ಅಥವಾ, ನೆಲಕ್ಕೆ ನೆಲನೇಂ ಪತ್ತಿತ್ತೊ= ಭೂಮಿಯಮೇಲೆ ಇನ್ನೊಂದು ಭೂಮಿಯು ಅಂಟಿಕೊಂಡಿತೋ, ಮೇಣ್= ಅಥವಾ, ಇಲ್ಲಿ, ಪನ್ನಗ ವೃಂದಾರಕ= ನಾಗದೇವತೆಗಳು, ಎಂದುಂ= ಸದಾ, ಇರ್ಪ= ವಾಸಿಸುತ್ತಿರುವ, ಬಿಲನೋ= ಬಿಲವೋ, ಅರ್ಥಾತ್ ಪಾತಾಳಲೋಕವೋ, ಮೇಣ್= ಅಥವಾ, ಇಲ್ಲಿ, ದಿಙ್ನಾಗರಾಜಿಗೆ= ದಿಗ್ಗಜಗಳ ಸಮೂಹಕ್ಕೆ, ಮೆಯ್ಗರ್ಚಿಕೊಳಲ್ಕೆ= ಮೆಯ್ಯಂ ಕರ್ಚಿಕೊಳಲ್ಕೆ= ಮೈ ತೊಳೆಯುವುದಕ್ಕಾಗಿ,( ಮೀಯುವುದಕ್ಕಾಗಿ ) ಅಜಂ=ಬ್ರಹ್ಮನು, ಸಮೆದ=ನಿರ್ಮಿಸಿದ, ತೋಯೋದ್ದೇಶಮೋ= ಜಲಾಶಯವೋ (ಎಂಬ ) ಸಂದೆಯಂ= ಸಂದೇಹವು, ಬಗೆಗೆ ಆದತ್ತು= ಮನಸ್ಸಿನಲ್ಲಿ ಉಂಟಾಯಿತು. ವೈಶಂಪಾಯನ ಅಬ್ಜಾಕರಂ ಏಂ ಪಿರಿದೊ=ವೈಶಂಪಾಯನ ಸರೋವರವು ಎಷ್ಟೊಂದು ದೊಡ್ಡದೊ, ಎನಿಸಿರ್ದುದು= ಎನ್ನಿಸುವಂತಿತ್ತು.

ತಾತ್ಪರ್ಯ :- ನೀಲಾಕಾಶವೇ ಕಳಚಿ ಕೆಳಗೆ ಬಿದ್ದುಬಿಟ್ಟಿತೋ ಅಥವಾ ಭೂಮಿಯ ಮೇಲೆ ಇನ್ನೊಂದು ಭೂಮಿ ಅಂಟಿಕೊಂಡಿತೋ, ಅಥವಾ ನಾಗದೇವತೆಗಳು ಸದಾ ವಾಸಿಸುವ ನಾಗಲೋಕವೋ ಅಥವಾ ಅಷ್ಟದಿಗ್ಗಜಗಳಿಗೆ ಮೀಯುವುದಕ್ಕಾಗಿ ಬ್ರಹ್ಮನು ನಿರ್ಮಿಸಿದ ಜಲಾಶಯವೋ ಎಂಬ ಸಂದೇಹವು ದುರ್ಯೋಧನನ ಮನಸ್ಸಿನಲ್ಲುಂಟಾಯಿತು. ಹೀಗೆ ವೈಶಂಪಾಯನ ಸರೋವರವು ಎಂಥ ಭೂಮೂಕೃತಿಯದ್ದೋ ಎನ್ನಿಸುವಂತಿತ್ತು.

ವೈಶಂಪಾಯನ ಸರೋವರವನ್ನು ಆಕಾಶ, ಭೂಮಿ, ನಾಗಲೋಕಗಳಿಗೆ ಹೋಲಿಸಿ, ಕೊನೆಯಲ್ಲಿ ದಿಗ್ಗಜಗಳುಒಂದಾಗಿ ಮೀಯುವುದಕ್ಕಾಗಿ ಬ್ರಹ್ಮನುನಿರ್ಮಿಸಿದ ಜಲಾಶಯವೋ ಎಂದು ವರ್ಣಿಸಿರುವುದರಿಂದ ದಿಗಂತವ್ಯಾಪ್ತವಾಗಿತ್ತೆಂಬ ಭಾವ.ರನ್ನು ವೈಶಂಪಾಯನ ಸರೋವರದ ಬೃಹದ್ರೂಪವನ್ನಷ್ಟೇ ಕಂಡಂತಿದೆ. ಆದರೆ ಪಂಪನು ಆ ಸರೋವರದ ಬೃಹತ್ತು ಮಹತ್ತುಗಳೆರಡನ್ನೂ ಕಂಡರಿಸಿದ್ದಾನೆ. ( ಪಂ. ಭಾ. ಆ. ೧೩-೭೨ ) ಶ್ರೀ ಕುವೆಂಪು ಅವರು ಕವಿದ್ವಯರ ಸರೋವರಗಳ
ಉದ್ದ ಅಗಲಗಳಲ್ಲಿ ಈಜಿದ್ದಾರೆ; ಆಳಕ್ಕೆ ಇಳಿದು ಮುತ್ತು ರತ್ನಗಳನ್ನೆತ್ತಿ ತೋರಿದ್ದಾರೆ! ( ತಪೊನಂದನ. ಪು. ೬೯- ೯೨ )

ಅಲಂಕಾರ :- ಸಂದೇಹ, ಉತ್ಪ್ರೇಕ್ಷೆ.

ಕುರುಪತಿ ನಿನ್ನ ಪೊಕ್ಕತೊಱೆಗಳ್ ಮೊದಲಾಗಿಯೆ ಬತ್ತುತಿರ್ಪುವೀ
ದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ ಭೀಮನೀ ಸರೋ
ವರಮುಮನೆಮ್ಮುಮಂ ಕದಡುಗುಂ ಪುಗದಿರ್ ತೊಲಗೆಂದು ಬಗ್ಗಿಪಂ
ತಿರೆ ನೆಗೆದತ್ತನೇಕಬಕಕೋಕಮರಾಳವಿಹಂಗಮಸ್ವನಂ॥೧೨॥

ಕುರುಪತಿ= ದುರ್ಯೋಧನ, ನಿನ್ನ ಪೊಕ್ಕ= ನೀನು ಹೊಕ್ಕ, ತೊಱೆಗಳ್ ಮೊದಲಾಗಿಯೆ= ನದಿಗಳೇ ಮೊದಲಾದುವು, ಬತ್ತುತಿರ್ಪುವು= ಬತ್ತಿ ಹೋಗುತ್ತವೆ, ( ಅಂಥ ಪಾಪಿ ನೀನು. ಜೀವನದಿಗೇ ಈ ಗತಿಯಾದರೆ ನಿಂತನೀರುಳ್ಳ ಈ ಕೊಳದ ಗತಿಯೇನು ಎಂಬ ಭಾವ ) ಈ ದೊರೆಯ= ಇಂಥ, ದುರಾತ್ಮನಂ ಖಳನಂ= ದುಷ್ಟ ನೀಚನನ್ನು, ಆನ್ ಒಳಕೊಂಡೊಡೆ= ನಾನು ಸೇರಿಸಿಕೊಂಡರೆ, ಭೀಮನ್= ಭೀಮನು, ಈ ಸರೋವರಮುಮಂ= ಈ ಸರೋವರವನ್ನೂ, ಎಮ್ಮುಮಂ= ಪಕ್ಷಿಗಳಾದ ನಮ್ಮನ್ನೂ, ಕದಡುಗುಂ= ಕಲಕುವನು, ( ತೊ ದರೆಗೊಳಿಸುವನು ) ಆದುದರಿಂದ, ಪುಗದಿರ್= ಪ್ರವಂಶಿಸಬೇಡ, ತೊಲಗು= ಹೊರಟುಹೋಗು, ಎಂದು ಬಗ್ಗಿಪಂತಿರೆ= ಎಂಬುದಾಗಿ ಗದರಿಸುತ್ತವೋ ಎಂಬಂತೆ, ಅನೇಕ ಬಕಕೋಕ ಮರಾಳ ವಿಹಂಗಮ ಸ್ವನಂ= ಕೊಕ್ಕರೆ, ಚಕ್ರವಾಕ, ಹಂಸಗಳೇ ಮೊದಲಾದ ಪಕ್ಷಿಗಳ ಕೂಗು, ನೆಗೆದತ್ತು= ಕೇಳಿಸಿತು.

ತಾತ್ಪರ್ಯ :- ಎಲಾ ದುರ್ಯೋಧನನೇ ! ನೀನು ಹೊಕ್ಕ ಹೊಳೆ ಮೊದಲಾದುವು ಕೂಡಾ ಬತ್ತಿಹೋಗುತ್ತವೆ. ಇಂಥ ವಂಚಕನೂ ನೀಚನೂ ಆದವನಿಗೆ ನಾವು ಆಶ್ರಯವನ್ನಿತ್ತರೆ ಭೀಮಸೇನನು ಈ ಸರೋವರವನ್ನೂ ನಮ್ಮನ್ನೂ ಕಲಕಿ ತೊಂದರೆಗೊಳಿಸದಿರನು. ಆದುದರಿಂದ ಇಲ್ಲಿಗೆ ಬರಬೇಡ ; ತೊಲಗಿಹೋಗು ಎಂದು ಗದರಿಸುತ್ತವೋ ಎಂಬಂತೆ ಆ ಸರೋವರದಲ್ಲಿದ್ದ ಅನೇಕ ಕೊಕ್ಕರೆ ಚಕ್ರವಾಕ ಹಂಸಗಳೇ ಮೊದಲಾದ ಪಕ್ಷಿಗಳ ಕೂಗು ಕೇಳಿಸಿತು.

ಫಕ್ಕನೆ ಕೊಳದ ಬಳಿಗೆ ಯಾರು ಬಂದರೂ ಅಲ್ಲಿದ್ದ ಹಕ್ಕಿಗಳು ಅರಚುತ್ತಾ ಹಾರಿಹೋಗುವುದು ಸಹಜ. ಪ್ರಕೃತಿ ಸಹಜವಾದ ಧರ್ಮವನ್ನು ಪ್ರಕೃತ ಸಂದರ್ಭದಲ್ಲಿ ಸೊಗಸಾದ ಉತ್ಪ್ರೇಕ್ಷೆಯಾಗಿ ಕಲ್ಪಿಸಿದ್ದಾನೆ ರನ್ನ. ದುಷ್ಟ ದುರ್ಯೋಧನನಿಗೆ ಜಲಚರ ಪಕ್ಷಿಗಳೂ ಬಹಿಷ್ಕಾರ ಹಾಕಿದುವಂತೆ ! ಈ ಪದ್ಯವನ್ನು ಇದೇ ಆಶ್ವಾಸದ ಪದ್ಯ ೪೦ ರೊಂದಿಗೆ ಹೋಲಿಸಿರಿ. ಅಲ್ಲಿ ಈ ಪಕ್ಷಿಗಳೇ ಭೀಮಸೇನನನ್ನು ಸಾವಗತಿಸುತ್ತಿದ್ದುವೆಂದು ಉತ್ಪ್ರೇಕ್ಷಿಸಲಾಗಿದೆ.  

ವಳಿತಶಿಳೀಮುಖಮುತ್ಪಳ
ದಳನಯನಂ ಕಂಜರಂಜಿತ ಜಯಲಕ್ಷ್ಮೀ
ವಿಳಸಿತಮೆನೆ ದಿಟ್ಟಿಗೆ ಕೊಳು
ಗುಳಮಂ ಪೋಲ್ದತ್ತು ಪೂಗೊಳಂ ಕೌರವನಾ॥೧೩॥

ವಳಿತ=ವಲಿತ=ಸುತ್ತುವರಿದ, ಶಿಳೀಮುಖ= ತುಂಬಿಗಳಿಂದಲೂ( ಬಾಣಗಳಿಂದಲೂ ) ಉತ್ಪಳದಳ ನಯನಂ= ನೈದಿಲೆಯ ಎಸಳೆಂಬ ಕಣ್ಣಿನಿಂದಲೂ,( ನೈದಿಲೆಯ ಎಸಳಂತಿರುವ ಕಣ್ಣುಗಳಿಂದಲೂ ) ಕಂಜರಂಜಿತ=ತಾವರೆಗಳಿಂದ ಶೋಭಾಯಮಾನವಾಗಿಯೂ ( ತಲೆಬುರುಡೆಗಳಿಂದ ತುಂಬಿದುದೂ ) ಜಯಲಕ್ಷ್ಮೀ= ಮಂಗಳ ಲಕ್ಷ್ಮಿಯ  (ಜಯಾಂಗನೆಯ) ವಿಳಸಿತಂ= ವಿಲಾಸ, ( ಕ್ರೀಡೆ ) ಎನೆ= ಎನ್ನುವಂತೆ, ಕೌರವನಾ=ದುರಯೋಧನನ, ದಿಟ್ಟಿಗೆ=ನೋಟಕ್ಕೆ, ಪೂಗೊಳಂ= ಸರೋವರವು, ಕೊಳುಗುಳಮಂ= ಯುದ್ಧರಂಗವನ್ನು, ಪೋಲ್ದತ್ತು= ಹೋಲಿತು.

ಈ ಪದ್ಯದಲ್ಲಿ ಶ್ಲೇಷೆಯಿಂದ ಆ ವೈಶಂಪಾಯನ ಸರೋವರವು ದುರ್ಯೋಧನನ ಕಣ್ಣುಗಳಿಗೆ ರಣರಂಗದಂತೆ ಕಂಡಿತು ಎಂದು ವರ್ಣಿಸಲಾಗಿದೆ.

ತಾತ್ಪರ್ಯ :- ಸರೋವರದ ಸುತ್ತಲೂ ಹಾರಾಡುತ್ತಿರುವ ತುಂಬಿಗಳೇ ಬಾಣಗಳಾಗಲು, ನೈದಿಲೆಯ ಎಸಳುಗಳೇಸತ್ತುಬಿದ್ದ ಯೋಧರ ಕಣ್ಣುಗಳಾಗಲು, ಕಮಲಗಳೇ ತಲೆಬುರುಡೆಗಳಾಗಲು, ಮಂಗಳಲಕ್ಷ್ಮಿಯ ವಿಲಾಸವೇ ಜಯಾಂಗನೆಯ ಕ್ರೀಡೆಯಾಗಲು, ಆ ಸರೋವರವು ದುರ್ಯೋಧನನ ಕಣ್ಣಿಗೆ ಯುದ್ಧರಂಗವೋ ಎಂಬಂತೆ ಕಾಣಿಸಿತು.

ಅಲಂಕಾರ :- ಶ್ಲೇಷೆ, ಉತ್ಪ್ರೇಕ್ಷೆ, ರೂಪಕ.

ನರಲೋಕ‌ಮನನುಭೋಗಿಸಿ
ಸುರಲೋಕದ ಸುಖಮನಾತ್ಮ ವಿಭವದೆ ತಳೆದಾ
ಕುರುಪತಿ ವೈಶಂಪಾಯನ
ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ॥೧೪॥

ನರಲೋಕಮಂ= ಮರ್ತ್ಯಲೋಕವನ್ನು, ಅನುಭೋಗಿಸಿ= ವಶಪಡಿಸಿ ಸುಖವಾಗಿ ಆಳುತ್ತಾ, ಸುರಲೋಕದ ಸುಖಮಂ= ದೇವಲೋಕದ ಸುಖವನ್ನು, ಆತ್ಮ ವಿಭವದೆ= ತನ್ನ ವೈಭವಗಳಿಂದಲೇ, ತಳೆದ= ಅನುಭವಿಸಿ, ಆ ಕುರುಪತಿ= ಆ ದುರ್ಯೋಧನನು, ನಾಗಲೋಕವ ಪುಗುವಂತೆ= ನಾಗದೇವತೆಗಳು ವಾಸಿಸುವ ಪಾತಾಳಲೋಕವನ್ನು ಪ್ರವೇಶಿಸುವಂತೆ, ವೈಶಂಪಾಯನ ಸರಮಂ= ವೈಶಂಪಾಯನ ಸರೋವರವನ್ನು, ಪೊಕ್ಕಂ= ಪ್ರವೇಶಿಸಿದನು.

ಚಕ್ರೇಶ್ವರನಾಗಿ ಭೂಲೋಕದ ಸುಖಭೋಗಗಳನ್ನು ಅನುಭವಿಸಿ, ಸ್ವರ್ಗಲೋಕದ ಸುಖವನ್ನು ತನ್ನ ಐಶ್ವರ್ಯದ ಘನತೆಯಿಂದಲೇ ಪಡೆದು ತೃಪ್ತನಾಗದೆ ಪಾತಾಳಲೋಕದ ಸುಖವನ್ನು ಅನುಭವಿಸುವ ಇಚ್ಛೆಯಿಂದ ಅಲ್ಲಿಗೆ ಪ್ರವೇಶಿಸುತ್ತಿದ್ದಾನೋ ಎಂಬಂತೆ ವೈಶಂಪಾಯನ ಸರೋವರಕ್ಕೆ ಇಳಿದನು.

ದುರ್ಯೋಧನನು ವೈಶಂಪಾಯನ ಸರೋವರವನ್ನು ಪ್ರವೇಶಿಸಿದುದುಪಾತಾಳಲೋಕವನ್ನು ಪ್ರವೇಶಿಸಿದಂತಾಯ್ತು ಎಂಬ ಕಲ್ಪನೆ ಭವ್ಯವಾಗಿದೆ.

ಅಲಂಕಾರ :- ಉತ್ಪ್ರೇಕ್ಷೆ.   

ವನರುಹವಿಷ್ಟರಂ ರುಚಿರಂ ರೇಚಕ ಪೂರಕ ಕುಂಭಕಕ್ರಿಯಾ
ಮನಮಿರೆ ನೆತ್ತಿಯೊಳ್ ದರನಿಮೀಲಿತ ದೃಷ್ಷಿ ನಿವಿಷ್ಟ ಮಾಗೆ ಮೂ
ಗಿನತುದಿಯೊಳ್ ನೀರುದ್ಧ ಮಂತ್ರ ಪದಾಕ್ಷರಂಗಳಂ
ಜಿನುಗುತಲಿರ್ದನಾ ಪರಮಯೋಗಿಯವೊಲ್ ಫಣಿರಾಜಕೇತನಂ॥೧೫॥

ರುಚಿರ= ಮನೋಹರವಾದ, ವನರುಹವಿಷ್ಟರಂ= ಪದ್ಮಾಸನಸ್ಥನಾಗಿ, ( ಧ್ಯಾನಮಾಡುವಾಗ ಕುಳಿತುಕೊಳ್ಳುವ ಭಂಗಿ ) ರೇಚಕ= ಉಸಿರನ್ನು ಹೊರಕ್ಕೆ ತಳ್ಳುವ, ಪೂರಕ= ಪೂರ್ಣಗೊಳಿಸುವ, ಕುಂಭಕ= ಸ್ತಂಭನಗೊಳಿಸುವ, ಕ್ರಿಯಾಮನಂ ಇರೆ= ಕಾರ್ಯದಲ್ಲಿ ಮಗ್ನನಾಗಿರಲು, ನೆತ್ತಿಯೊಳ್= ಹಣೆಯಲ್ಲಿ, ದರನಿಮೀಲಿತ= ಅರೆಮುಚ್ಚಿದ, ದೃಷ್ಟಿ= ನೋಟವು, ನಿವಿಷ್ಟಮಾಗೆ= ನೆಲೆನಿಲ್ಲಲು, ಮೂಗಿನ ತುದಿಯೊಳ್=ತುದಿಮೂಗಿನಲ್ಲಿ, ನಿರುದ್ಧ= ತಡೆದ, ಕರಮುಂ= ಕೈಯೂ, ನಿಲೆ = ಇರಲು, ಮಂತ್ರ ಪದಾಕ್ಷರಂಗಳಂ= ಜಲಸ್ತಂಭನ ಮಂತ್ರಾಕ್ಷರಗಳನ್ನು, ಪರಮಯೋಗಿಯವೊಲ್= ಶ್ರೇಷ್ಠತಪಸ್ವಿಯಂತೆ,
ಫಣಿರಾಜಕೇತನಂ= ಪನ್ನಗಪತಾಕನಾದದುರ್ಯೋಧನನು, ಜಿನುಗುತಲಿರ್ದನ್= ಜಪಿಸುತ್ತಿದ್ದನು. ( ಜಿನುಗು= ಜಿನುಂಗು=
ಗುಣುಗುಟ್ಟು )

ತಾತ್ಪರ್ಯ :- ದುರ್ಯೋಧನನು ಮನೋಹರವಾದ ಪದ್ಮಾಸನವನ್ನು ಬಲಿದು, ಶ್ವಾಸೋಚ್ವ್ಛಾಸಗಳನ್ನು ಸ್ತಂಭನಗೊಳಿಸಿ ಅರೆಮುಚ್ಚಿದ ನೋಟವನ್ನು ಹಣೆಯಲ್ಲಿ ಕೇಂದ್ರೀಕರಿಸಿ, ಮೂಗಿನ ತುದಿಯನ್ನು ಕೈಯಿಂದ ಹಿಡಿದುಕೊಂಡು ಪರಮ ತಪಸ್ವಿಯಂತೆ ಜಲಮಂತ್ರವನ್ನು ಜಪಿಸುತ್ತಾ ಇದ್ದನು.

ಅಲಂಕಾರ :- ಉಪಮೆ.

ಮೀಱಿದ ಪಗೆವನ ಪಟ್ಟಂ
ಪಾಱಿಸುವೆನೊ ಮುನ್ನಮಮರುಂಡಮೃತಮನೇಂ
ಕಾಱಿಸುವೆನೊ ಖಚರರನಡ
ರ್ದೇಱಿಸುವೆನೊ ಮೇರುಗಿರಿರ ತೂಱಲ ತುದಿಯಂ॥೧೭॥

ಮೀರಿದ=ಕೈತಪ್ಪಿ ಹೋದ, ( ಹತೋಟಿಯಿಂದ ತಪ್ಪಿ ಹೋದ ) ಪಗೆವನ= ಶತ್ರುವಾದ ದುರ್ಯೋಧನನ, ಪಟ್ಟಂ ಪಾಱಿಸುವೆನೊ= ಪಟ್ಟಮಂ ಪಾಱಿಸುವೆನೊ= ಸಿಂಹಾಸನವನ್ನು ಪುಡಿಗುಟ್ಟಲೇ ? ಅಥವಾ ಪಟ್ಟಂ = ಛಲವನ್ನು,
ಪಾಱಿಸುವೆನೊ= ಹಾರಿಸಿಬಿಡಲೇ? ಮುನ್ನಂ = ಹಿಂದೆ, ಅಮರರ್= ದೇವತೆಗಳು, ಉಂಡ ಅಮೃತಮಂ= ಕುಡಿದ ಅಮೃತವನ್ನು, ಕಾಱಿಸುವೆನೊ= ವಾಂತಿಮಾಡುವಂತೆ ಮಾಡಲೇ ? ಖಚರರನ್ ಅಡರ್ದು= ಗೆಧರ್ವರ ಮೇಲೆ ಬಿದ್ದು ಅವರನ್ನು ,ಮೇರುಗಿರಿಯ = ಮೇರುಪರ್ವತದ, ತೂಱಲ ತುದಿಯಿಂ= ತುತ್ತತುದಿಯನ್ನು, ( ಶಿ ಖರವನ್ನು) ಏಱಿಸುವೆನೋ= ಹತ್ತುವಂತೆ ಮಾಡಲೇ.

ತಾತ್ಪರ್ಯ :-  ನನ್ನ ಹಿಡಿತದಿಂದ ತಪ್ಪಿಸಿಕೊಂಡ ಶತ್ರುವಾದ ದುರ್ಯೋಧನನ ಸಿಂಹಾಸನವನ್ನು ಧೂಳೇಪಟ ಮಾಡಲೇ? ದೇವತೆಗಳು ದುರ್ಯೋಧನನ ರಕ್ಷಣೆಗಾಗಿ ಬಂದರೆ ಅವರು ಹಿಂದೆ ಪಾನಮಾಡಿದ ಅಮೃತವನ್ನು ಕಕ್ಕಿಸಲೇ? ಅಥವಾ ಗಂಧರ್ವರನ್ನು ಮರೆಹೊಕ್ಕರೆ, ಮೇಲೆ ಬಿದ್ದು ಅವರನ್ನೆಲ್ಲ ಮೇರುಪರ್ವತದ ತುತ್ತತುದಿಗೆ ಅಟ್ಟಲೇ?

ಎತ್ತುವೆನೊ ಮಂದರಾದ್ರಿಯ
ನೊತ್ತುವೆನೊ ರಸಾತಳಕ್ಕೆ ನೆಲನಂ ದೆಸೆಯಂ
ಪತ್ತುವೆನೊ ಪಗೆಯ ಬೆನ್ನಂ
ಪತ್ತುವೆನೊ ದಿಶಾಗಜಂಗಳಂ ತುತ್ತುವೆನೊ॥೧೮॥

ಎತ್ತುವೆನೊ ಮಂದರಾದ್ರಿಯನ್= ಮಂದರ ಪರ್ವತವನ್ನೇ ಎತ್ತಿ ಹಾಕಲೋ, ನೆಲನಂ ರಸಾತಳಕ್ಕೆ ಒತ್ತುವೆನೊ= ಭೂಮಿಯನ್ನು ಒತ್ತಿ ಮೆಟ್ಟಿ ಪಾತಾಳಕ್ಕೆ ತಗ್ಗಿಸಲೋ, ದೆಸೆಯಂ ಪತ್ತುವೆನೊ= ಅಷ್ಟ ದಿಕ್ಕುಗಳನ್ನು ವಶಪಡಿಸಿಕೊಳ್ಳಲೋ, ಪಗೆಯ ಬೆನ್ನಂ ಪತ್ತುವೆನೊ= ಶತ್ರುವನ್ನು ಬೆನ್ನಟ್ಟಲೋ, ದಿಶಾಗಜಂಗಳಂ ತುತ್ತುವೆನೋ=ದಿಗ್ಗಜಗಳನ್ನು ನುಂಗಲೋ.

ತಾತ್ಪರ್ಯ ;- ಮಂದರ ಪರವತವನ್ನುಎತ್ತಿಹಾಕಲೇ? ಭೂಮಿಯನ್ನು ಮೆಟ್ಟಿ ಪಾತಾಳಕ್ಕೆ ತಗ್ಗಿಸಲೇ? ದಿಕ್ಕು ದಿಕ್ಕುಗಳನ್ನು ವಶಪಡಿಸಿಕೊಳ್ಳಲೇ? ಶತ್ರುವನ್ನು ಬೆನ್ನಟ್ಟಲೇ? ಅಥವಾ ದಿಗ್ಗಜಗಳನ್ನೇ ನುಂಗಬಿಡಲೇ?

ದುರ್ಯೋಧನನು ಎಲ್ಲಿ ಅಡಗಿದ್ದರೂ ಹುಡುಕಿ ಹಿಡಿದು ಪ್ರತಿಜ್ಞೆಯನ್ನು ನೆರವೇರಿಸದೆ ಬಿಡೆನೆಂಬ ಭಾವ.

ದಾಂಟುವೆನೊ ಕುಲನಗಂಗಳ
ನೀಂಟುವೆನೊ ಚತುಸ್ಸಮುದ್ರಮಂ ರವಿ ಶಶಿಯಂ
ಮೀಂಟುವೆನೊ ಗಗನತಳದಿಂ
ಗಂಟಲನೊತ್ತುವೆನೊ ಸಕಲ ದಿಕ್ಪಾಲಕರಂ॥೧೯॥

ಕುಲನಗಂಗಳನು= ಸಪ್ತಕುಲಪರ್ವತಗಳನ್ನೂ,ದಾಂಟುವೆನೊ= ದಾಟಿ ಹೋಗಲೆ, ಚತುಸ್ಸಮುದ್ರಮಂ= ನಾಲ್ಕು ಸಮುದ್ರಗಳನ್ನು, ಈಂಟುವೆನೊ=ಕುಡಿಯಲೇ? ಗಗನತಳದಿಂ= ಆಕಾಶದಿಂದ, ರವಿಶಶಿಯಂ= ಸೂರ್ಯ ಚಂದ್ರರನ್ನು ಮೀಂಟುವೆನೊ= ನೂಕಿ ಹಾಕಲೇ? ಸಕಲ ದಿಕ್ಪಾಲಕರಂ= ಅಷ್ಟದಿಕ್ಪಾಲಕರ, ಗಂಟಲಂ=ಕತ್ತುಗಳನ್ನು, ಒತ್ತುವೆನೊ= ಬಿಗಿಯಾಗಿ ಹಿಡಿದು ಉಸಿರುಗಟ್ಟಿಸಲೇ?

ತಾತ್ಪರ್ಯ :- ಸಪ್ತಕುಲಾಚಲಗಳನ್ನು ದಾಟಿಹೋಗಲೇ? ನಾಲ್ಕು ಸಮುದ್ರಗಳನ್ನು ಕುಡಿಯಲೇ? ಆಕಾಶದಿಂದ ಸೂರ್ಯ ಚಂದ್ರರನ್ನು ಉರುಳಿಸಲೇ? ಸಮಸ್ತ ದಿಕ್ಪಾಲಕರ ಗಂಟಲನ್ನು ಬಿಗಿಯಾಗಿ ಹಿಡಿದು ಉಸಿರುಗಟ್ಟಿಸಲೇ?

ದುರ್ಯೋಧನನು ದೊರಕಲಿಲ್ಲವೆಂಬ ರೋಷಾವೇಶದಲ್ಲಿ ಬ್ರಹ್ಮಾಂಡವನ್ನೇ ಅಡಿಮೇಲು ಮಾಡಿಬಿಡಲೇ? ಎಂದು ಅನ್ನಿಸುತ್ತದೆ ಭೀಮನಿಗೆ.

ರಸೆಗಿೞಿದನೊ ಮೇಣ್ ನಾಲ್ಕುಂ
ದೆಸೆಗಳ ಕೋಣೆಗಳೊಳುೞಿದನೋ ಖಳನಿಲ್ಲೀ
ವಸುಮತಿಯೊಳ್ ಗಾಂಧಾರಿಯ
ಬಸಿರಂ ಮೇಣ್ ಮಗುೞೆ ಪೋಗಿ ಪೊಕ್ಕಿರ್ದಪನೋ॥೨೦॥

ಖಳನ್= ದುಷ್ಟನು, ರಸೆಗೆ= ರಸಾತಳಕ್ಕೆ, ಇೞಿದನೊ= ಇಳಿದುಬಿಟ್ಟನೋ? ಮೇಣ್=ಅಥವಾ, ನಾಲ್ಕುಂ ದೆಸೆಗಳ= ನಾಲ್ಕೂ ದಿಕ್ಕುಗಳ, ಕೋಣೆಗಳೊಳ್= ಮೂಲೆಗಳಲ್ಲಿ, ಉೞಿದನೊ= ಅಡಗಿಕೊಂಡನೋ? ಇಲ್ಲ= ಇಲ್ಲವೇ, ಈ ವಸುಮತಿಯೊಳ್= ಈ ಲೋಕದಲ್ಲಿ, ಗಾಂಧಾರಿಯ ಬಸಿರಂ= ಗಾಂಧಾರಿಯ ಹೊಟ್ಟೆಯನ್ನು, ಮೇಣ್ ಮಗುೞೆ= ಮತ್ತೊಮ್ಮೆ, ಪೋಗಿ ಪೊಕ್ಕಿರ್ದನೋ= ಹೋಗಿ ಹೊಕ್ಕಿದ್ದಾನೋ?

ತಾತ್ಪರ್ಯ :- ದುಷ್ಟ ದುರ್ಯೋಧನನು ರಸಾತಳಕ್ಕೆ ಇಳಿದು ಬಿಟ್ಟನೋ? ಅಥವಾ ಚತುರ್ದಿಕ್ಕುಗಳ ಮೂಲೆಗಳೊಂದರಲ್ಲಿ ಅಡಗಿದನೋ? ಇಲ್ಲವೇ ಈ ಲೋಕದಲ್ಲೇ ಗಾಂಧಾರಿಯ ಹೊಟ್ಟೆಯೊಳಕ್ಕೆ ಮತ್ತೊಮ್ಮೆ ಹೊಕ್ಕು ಅಡಗಿದ್ದಾನೋ?

ಹೀಗೆ ಸುರಕ್ಷಿತವಾದ  ಒಂದೆಡೆಯಲ್ಲಿ ಅಡಗದಿರುತ್ತಿದ್ದರೆ ನನ್ನ ಕಣ್ಣಿಗೆ ಬೀಳದಿರುತ್ತಿದ್ದನೇ ಎಂಬ ಭಾವ.

ಚರಮಚರಮೆಂಬ ಜಗದಂ
ತರದೊಳ್ ಖಳನೆಲ್ಲಿ ಪೊಕ್ಕೊಡಂ ತದ್ಭುಜಪಂ
ಜರದೊಳ್ ಪೊಕ್ಕೊಡೆ ಹರಿಹರ
ಹಿರಣ್ಯಗರ್ಭರ್ಕಳಾಂತೊಡಂ ಕೊಲ್ಲದಿರೆಂ॥೨೨॥

ಚರಂ ಅಚರಂ ಎಂಬ= ಜಂಗಮ ಸ್ಥಾವರಗಳೆನ್ನುವ, ಜಗದ ಅಂತರದೊಳ್= ಲೋಕದೊಳಗೆ, ಖಳಂ= ದುಷ್ಟನಾದ ದುರ್ಯೋಧನನು, ಎಲ್ಲಿ ಪೊಕ್ಕೊಡಂ= ಎಲ್ಲಿ ಹೊಕ್ಕು ಅಡಗಿದ್ದರೂ, ತದ್ಭುಜಪಂಜರದೊಳ್ ಪೊಕ್ಕೊಡೆ= ಆ ಬಾಹುಪಂಜರವನ್ನು ಹೊಕ್ಕರೆ, ಹರಿಹರಹಿರಣ್ಯಗರ್ಭರ್ಕಳ್= ತ್ರಿಮೂರ್ತಿಗಳು, ಆಂತೊಡಂ= ಪ್ರತಿಭಟಿಸಿದರೂ, ಕೊಲ್ಲದಿರೆಂ= ಕೊಲ್ಲದೆ ಇರಲಾರೆ.

ತಾತ್ಪರ್ಯ :- ಆ ದುಷ್ಟನು ಪ್ರಪಂಚದ ಚರಾಚರ ವಸ್ತುಗಳೆಡೆಯಲ್ಲಿ ಎಲ್ಲಿ ಅವಿತಿದ್ದರೂ, ತ್ರಿಮೂರ್ಯಿಗಳ ಬಾಹುಪಂಜರವನ್ನು ಮರೆಹೊಕ್ಕಿದ್ದರೂ , ಅವರು ನನ್ನೊಡನೆ ಯುದ್ಧಕ್ಕೆ ಬಂದರೂ ಕೊಲ್ಲದೆ ಬಿಡೆನು.

ಹರಿಹರಬ್ರಹ್ಮರು ದುರ್ಯೋಧನನ ಪರವಾಗಿ ಯುದ್ಧಕ್ಕೆ ಬಂದರೆ ಅವರನ್ನೂ ಸೋಲಿಸಿ ಶತ್ರುವನ್ನು ಕೊಲ್ಲದೆ ಇರಲಾರೆನು
ಎಂಬ ಭಾವ.

ಕುರುಕುಲಕದಳೀಕಾನನ
ಕರಿಕಳಭಂ ಶತ್ರುಶಲಭಸಂಪಾತನವಿ
ಸ್ಫುರಿತಪ್ರದೀಪನಾಕುರು
ಧರೆಯೊಳ್ ಕುರುಪತಿಯನಱಸಿದಂ ಪವನಸುತಂ॥೨೭॥

ಕುರುಕುಲಕದಳೀ ಕಾನನ ಕರಿಕಳಭಂ= ಕುರುಕುಲವೆಂಬ ಬಾಳೆಯ ತೋಟಕ್ಕೆ ಆನೆಯಮರಿಯಂತಿರುವವನೂ, ಶತ್ರುಶಲಭಸಂಪಾತನವಿಸ್ಫುರಿತಪ್ರದೀಪನ್= ಶತ್ರುಗಳೆಂಬ ಪತಂಗಗಳು ಬಿದ್ದು ಸಾಯುವ ಪ್ರಜ್ವಲಿಸುತ್ತಿರುವದೀಪದಂತಿರುವವನೂ, ಆದ, ಪವನಸುತಂ= ಭೀಮನು, ಕುರುಧರೆಯೊಳ್= ಕುರುಭೂಮಿಯಲ್ಲಿ, ಕುರುಪತಿಯಂ= ದುರ್ಯೋಧನನನ್ನು, ಅಱಸಿದಂ= ಹುಡುಕಾಡಿದನು.

ತಾತ್ಪರ್ಯ :- ಕುರುಕುಲವೆಂಬ ಬಾಳೆಯ ತೋಟಕ್ಕೆ ಮರಿಯಾನೆಯಂತಿರುವವನೂ, ಶತ್ರುಗಳೆಂಬ ಪತಂಗಗಳುಬಿದ್ದು ಸಾಯುತ್ತಿರುವಾಗ ಪ್ರಜ್ವಲಿಸುತ್ತಿರುವ ದೀಪದಂತಿರುವವನೂ ಆದಂಥ ಭೀಮಸೇನನು ಕುರುಭೂಮಿಯಲ್ಲಿ ಕೌರವೇಶ್ವರನನ್ನು ಹುಡುಕಾಡಿದನು.

“ ಕುರುಧರೆಯೊಳ್ ಕುರುಪತಿಯನಱಸಿದಂ” ಎಂಬುದು ಧ್ವನಿಪೂರ್ಣವಾಗಿದೆ. ದುರ್ಯೋಧನನ ರಾಜ್ಯದಲ್ಲೇ ಅವನನ್ನು ಹುಡುಕುವಂತಾಯಿತು ಎಂಬುದರಿಂದ ಆತನಿಗೊದಗಿದ ದುರವಸ್ಥೆ ಸೂಚಿತವಾಗಿದೆ.

ಅಲಂಕಾರ :- ಮಾಲಾರೂಪಕ.

ಮರುದಾಂದೋಳಿತ ಜಂಬೂ
ತರುಶಾಖಾಹಸ್ತಕಿಸಲಯಂ ಮಿಳಿಮಿಳಿರು
ತ್ತಿರೆ ಸನ್ನೆಗೆಯ್ದು ತೋರ್ಪಂ
ತಿರಲೆಸೆದುವು ಪವನಜಂಗೆ ದುರ್ಯೋಧನನಂ॥೪೩||

ಮರುತ್ ಆಂದೋಳಿತ = ಗಾಳಿಗೆ ತೂಗಾಡುತ್ತಿರುವ, ಜಂಬೂತರುಶಾಖಾಹಸ್ತಕಿಸಲಯಂ= ನೇರಳೆಮರದ ರೆಂಬೆಗಳ ಚಿಗುರುಗಳೆಂಬ ಕೈಗಳು, ಮಿಳಿಮಿಳುತ್ತಿರಲು= ಅಲ್ಲಾಡುತ್ತಿರಲು,ಸನ್ನೆಗೆಯ್ದು = ಸಂಜ್ಞೆಮಾಡಿ, ಪವನಜಂಗೆ=ಭೀಮನಿಗೆ, ದುರ್ಯೋಧನನಂ ತೋರ್ಪಂತಿರಲು= ದುರ್ಯೋಧನನನ್ನು ತೋರಿಸಿಕೊಡುತ್ತವೋ ಎಂಬಂತೆ, ಎಸೆದುವು= ಶೋಭಿಸಿದುವು.

ತಾತ್ಪರ್ಯ :- ಗಾಳಿಗ ಅಲ್ಲಾಡುತ್ತಿರುವ ಜಂಬುನೇರಳೆಯ ರೆಂಬೆಗಳು ಚಿಗುರುಗಳೆಂಬ ಕೈಗಳಿಂದ ಸನ್ನೆ ಮಾಡಿ ಭೀಮನಿಗೆ ಧುರ್ಯೋಧನನನ್ನು ತೋರಿಸುತ್ತವೆಯೋ ಎಂಬಂತೆ ಆ ಸರೋವರದ ದಡದಲ್ಲಿ ಶೋಭಿಸಿದುವು

ಅಲಂಕಾರ :- ರೂಪಕ, ಉತ್ಪ್ರೇಕ್ಷೆ.

ಭವದಹಿತನಿಲ್ಲಿದಂ ಕೌ
ರವಾರಿ ನೋಡೆಂದು ಮೂಡಿ‌ಮುೞ್ಕಾಡಿಯೆ ತೋ
ರ್ಪವೋಲಲ್ಲಿ ಮೂಡಿ ಮುೞ್ಕಾ
ಡುವ ವಿಹಗಾವಳಿಗಳೇಂ ಮನಂಗೊಳಿಸಿದುವೋ॥೪೪॥

ಕೌರವಾರಿ= ಕೌರವ ಅರಿ = ದುರ್ಯೋಧನನ ವೈರಿಯಾದ ಭೀಮಸೇನನೇ, ಭವದಹಿತಂ= ಭವತ್ ಅಹಿತಂ = ನಿನ್ನ ಶತ್ರುವು, ಇಲ್ಲಿದಂ= ಇಲ್ಲಿದ್ದಾನೆ, ನೋಡು ಎಂದು, ಮೂಡಿ ಮುೞ್ಕಾಡಿಯೆ= ಮೂಡಿ ಮುಳುಗುತ್ತಾ, ತೋರ್ಪವೊಲ್= ತೋರಿಸಿಕೊಡುತ್ತವೆಯೋ ಎಂಬಂತೆ, ಮೂಡಿ ಮುೞ್ಕಾಡುವ= ನೀರಿನಲ್ಲಿ ಮುಳುಗಿ ಏಳುತ್ತಿರುವ, ವಿಹಗ ಅವಳಿಗಳ್=ಪಕ್ಷಿಗಳ ಸಮೂಹವು, ಏಂ ಮನಂಗೊಳಿಸಿದುವೋ= ಎಷ್ಟೊಂದು ಮನೋಹರವಾಗಿ ತೋರಿದುವೋ!

ತಾತ್ಪರ್ಯ :- ಭೀಮಾ! ನಿನ್ನ ಶತ್ರುವಾದ ದುರ್ಯೋಧನನು ಇಲ್ಲಿ ಅಡಗಿದ್ದಾನೆ, ನೋಡಿಕೋ ಎಂಬುದಾಗಿ ನೀರಿನಲ್ಲಿ ಮುಳುಗೇಳುತ್ತಾಸೂಚಿಸುತ್ತಿವೆಯೋ ಎಂಬಂತೆ ಅಲ್ಲಿ ಮುಳುಗುತ್ತ ಏಳುತ್ತ ಇರುವ ಪಕ್ಷಿಗಳ ನೋಟವು ಬಹಳಷ್ಟು ರಮ್ಯವಾಗಿತ್ತು.

ಅಲಂಕಾರ :- ಉತ್ಪ್ರೇಕ್ಷೆ.

ಮೀಂಗುಲಿಗವಕ್ಕಿ ಕೊಳನೊಳ್
ಮೀಂಗೆಱಗುವ ತೆಱದಿನೆಱಗಿ ನೋಡಿಲ್ಲಿರ್ದಂ
ಪಿಂಗಾಕ್ಷನೆಂದು ಪವನಸು
ತಂಗಱಿಿಪುವ ತೆಱದಿನಂತದೇಂ ಸೊಗಯಿಸಿತೋ॥೪೫||

ಮೀಂಗುಲಿವಕ್ಕಿ= ಮೀಂಗುಲಿ ಪಕ್ಕಿ= ಮೀನನ್ನು ಕೊಲ್ಲುವ ಹಕ್ಕಿ ( ಮೀಂಚುಳ್ಳಿ ) ಕೊಳನೊಳ್= ಕೊಳದಲ್ಲಿ, ಮೀಂಗೆ ಎಱಗುವ ತೆಱದಿಂ= ಮೀನನ್ನು ಹಿಡಿಯಲು ನೀರಿಗೆ ಹಾರುವ ರೀತಿಯಲ್ಲಿ, ಎಱಗಿ= ಹಾರಿ, ಪಿಂಗಾಕ್ಷಂ= ದುರ್ಯೋಧನನು, ಇಲ್ಲಿರ್ದಂ= ಇಲ್ಲಿದ್ದಾನೆ, ನೋಡು= ನೋಡಿಕೋ, ಎಂದು, ಪವನಸುತಂಗೆ=ಭೀಮನಿಗೆ, ಅಱಿಪುವ ತೆಱದಿ= ತಿಳಿಸುವ ರೀತಿಯಲ್ಲಿ, ಅದೇಂ ಸೊಗಯಿಸಿತೋ= ಎಷ್ಟೊಂದು ಸೊಗಸಾಗಿ ಕಾಣಿಸಿತೋ.

ಮೀಂಚುಳ್ಳಿ ಹಕ್ಕಿ ಮೀನಿನ ಮೇಲೆ ಎರಗುವ ನೆವದಿಂದ ನೀರಿಗೆ ಹಾರಿ, ‘ ಭೀಮಾ ‘! ನೋಡಿಕೋ! ದುರ್ಯೋಧನನು ಇಲ್ಲಿದ್ದಾನೆ! “ ಎಂದು ಸೂಚ್ಯವಾಗಿ ತಿಳಿಸುತ್ತದೋ ಎಂಬಂತೆ ಬಹು ಸೊಗಸಾಗಿ ತೋರಿತು.

ಅಲಂಕಾರ :-ಉತ್ಪ್ರೇಕ್ಷೆ.

ಮರುದಾತ್ಮಜ ನಿಜರಿಪು ತಲೆ
ಗರೆದಿರ್ದಪನಿಲ್ಲಿ ನೋಡು ಕೊಳದೊಳಗೆಂಬಂ
ತಿರೆ ಪೊಳೆದು ತೋರ್ಪ ಜಲಚರ
ಪರಿಕರಮಱಿಪಿದುವು ತಾಮೆ ದುರ್ಯೋಧನನಂ॥೪೬॥

ಮರುದಾತ್ಮಜ= ಮರುತ್ ಆತ್ಮಜ= ಭೀಮನೇ! ನಿಜರಿಪು= ನಿನ್ನ ವೈರಿ, ಇಲ್ಲಿ ಕೊಳದೊಳಗೆ, ತಲೆಗರೆದಿರ್ದಪಂ=ಇಲ್ಲಿ ಕೊಳದೊಳಗೆ ತಲೆಮರೆಸಿಕೊಂಡಿದ್ದಾನೆ, ನೋಡು, ಎಂಬಂತಿರೆ= ಎಂದ ಹೇಳುತ್ತಿವೆಯೋ ಎಂಬಂತೆ, ಪೊಳೆದು ತೋರ್ಪ= ಹೊಳೆದು ತೋರುವ, ಜಲಚರಪರಿಕರಂ= ಮೀನುಗಳ ಸಮೂಹವು, ತಾಮೆ= ತಾವಾಗಿಯೇ, ದುರುಯೋಧನನಂ ಅಱಿಪಿದುವು= ದುರ್ಯೋಧನನ ನೆಲೆಯನ್ನು ತಿಳಿಯಪಡಿಸಿದುವು.

ತಾತ್ಪರ್ಯ :- ವಾಯುಪುತ್ರನೇ! ನಿನ್ನ ಪರಮವೈರಿಯು ಇಲ್ಲಿ ಕೊಳದೊಳಗೆ ಅಡಗಿಕೊಂಡಿದ್ದಾನೆ ನೋಡು ! ಎಂಬುದಾಗಿ ಕೊಳದಲ್ಲಿ ಹೊಳೆದು ತೋರುತ್ತಿರುವ ಮೀನುಗಳು ತಾವಾಗಿಯೇ ದುರ್ಯೋಧನನು ಅಡಗಿರುವ ನೆಲೆಯನ್ನು ಭೀಮನಿಗೆ ತಿಳಿಸಿದುವೋ ಎಂಬಂತೆ ತೋರಿತು.

ಅಲಂಕಾರ :- ಉತ್ಪ್ರೇಕ್ಷೆ.

ಮೇಲಿನ ನಾಲ್ಕು ಪದ್ಯಗಳಲ್ಲಿ ಪ್ರಕೃತಿ ಸಹಜವಾದ ಧರ್ಮವನ್ನು ಉತ್ಪ್ರೇಕ್ಷಿಸುವುದರ ಮೂಲಕ ದುರ್ಯೋಧನನ ಶೋಧನೆಯಲ್ಲಿ ಭೀಮನಿಗೆ ಬೆಂಬಲವಾಗಿ ಪ್ರಕೃತಿಯೂ ಪಾಲುಗೊಂಡಿತೆಂದು ಸೊಗಸಾಗಿ ನಿರೂಪಿಸಲಾಗಿದೆ.

ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋ
ಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆ
ನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿ
ಗ್ವಳಯಂ ಮಾರ್ದನಿಯಿಟ್ಟವೊಲ್ ಗಜಱಿದಂ ಚಾಳುಕ್ಯ ಕಂಠೀರವಂ॥೪೭॥

ಪಗೆವಂ= ಶತ್ರು, ಒಳಗಾದಂ=ವಶವಾದನು, ಸರೋವರದೊಳ್ ಇರ್ದು ಇನ್ ಎತ್ತ ಪೋಪಂ= ಸರೋವರದಲ್ಲಿದ್ದವನು ಇನ್ನೆಲ್ಲಿಗೆ ಹೋಗುವನು ? ಮುಂ= ಮೊದಲೈ, ಸರೋಜಳಮಂ=ಸರೋವರದ ನೀರನ್ನು ತವೆ ಪೀರ್ದು= ಸಂಪೂರ್ಣ ಹೀರಿ, ಬಳಿಕ, ಅಸುಹೃತ್= ಶತ್ರುವಿನ, ರಕ್ತಾಂಬುವಂ= ರಕ್ತ ಜಲವನ್ನು, ಪೀರ್ವೆಂ= ಹೀರುತ್ತೇನೆ, ಎನ್ನ ಅಳವಂ= ನನ್ನ ಸಾಮರ್ಥ್ಯವನ್ನು, ಮತ್ ಪತಿಗೆ= ಒಡೆಯನಾದ ಧರ್ಮರಾಯನಿಗೆ, ತೋರ್ಪೆಂ= ತೋರಿಸುತ್ತೇನೆ, ಎಂದು =ಹೀಗೆ ಹೇಳುತ್ತಾ, ಸಂತಸದೆ= ಸಂತೋಷದಿಂದ, ಬಾಹಾಸ್ಫಾಲನಂಗೆಯ್ದು= ಭುಜಗಳನ್ನು ತಟ್ಟಿಕೊಂಡು , ದಿಗ್ವಳಯಂ= ಸಕಲ ದಿಕ್ಕುಗಳೂ, ಮಾರ್ದನಿಯಿಟ್ಟವೊಲ್= ಪ್ರತಿಧ್ವನಿಗೈದಂತೆ, ಚಾಳುಕ್ಯ ಕಂಠೀರವಂ= ಸತ್ಯಾಶ್ರಯನು, ಭೀಮನು, ಗಜಱಿದಂ=ಗರ್ಜಿಸಿದನು.

ತಾತ್ಪರ್ಯ :- “ ಇನ್ನೇನು, ವೈರಿ ಸಿಕ್ಕಿದ ಹಾಗೆಯೇ ! ಸರೋವರದಲ್ಲಿದ್ದವನು ಮತ್ತೆಲ್ಲಿಗೆ ಹೋಗಬಲ್ಲನು? ಮೊದಲು ಸರೋವರದ ನೀರನ್ನೆಲ್ಲ ಹೀರಿ ಬಳಿಕ ಶತ್ರುವಿನ ರಕ್ತವನ್ನು ಹೀರುವೆನು. ನನ್ನೊಡೆಯನಾದ ಧರ್ಮರಾಯನಿಗೆ ನನ್ನ ಪರಾಕ್ರಮವನ್ನು ತೋರಿಸುವೆನು “ ಹೀಗೆ ಹೇಳುತ್ತಾ ಭುಜಗಳನ್ನು ತಟ್ಟಿಕೊಂಡು ಸಮಸ್ತ ದಿಕ್ಕುಗಳೂ ಪ್ರತಿಧ್ವನಿಸುವಂತೆ ಭೀಮನು ಸಿಂಹನಾದವನ್ನು ಮಾಡಿದನು.

ಸಪ್ತಮಾಶ್ವಾಸಂ

ಭರತಾನ್ವಾಯದೋಳಂದಿನಿಂದುವರೆಗಂ ಸಾಪತ್ನರೊಳ್ ಬದ್ಧಮ
ತ್ಸರಮಿಲ್ಲೆಮ್ಮನಕಾರಣಂ ಕದಡಿದಯ್ ಸಾವೆಯ್ದಿದಯ್ ನಷ್ಟಸೋ
ದರಮಾದತ್ತೆನಗಂ ಸ್ವಗೋತ್ರವಧೆಯಪ್ಪಾಪಾತಕಂ ಕೌರವೇ
ಶ್ವರ ನೀಂ ಸಂಧಿಗೊಡಂಬಡಿಂತು ಕೊಳನಂ ಪೊಕ್ಕಿರ್ದುದೇಂ ತಕ್ಕುದೇ॥೯॥

ಭರತಾನ್ವಾಯದೊಳ್= ಭರತ ಅನ್ವಾಯದೊಳ್= ಭರತವಂಶದಲ್ಷಿ, ( ಅನ್ವಯ, ಅನ್ವಾಯ -ಎರಡೂ ರೂಪಗಳು ಇವೆ ) ಅಂದಿನಿಂದುವರೆಗಂ= ಅಂದಿಂ ಇಂದುವರೆಗಂ = ಅಂದು ಮೊದಲು ಇಂದು ತನಕ, ಸಾಪತ್ನರೊಳ್= ದಾಯಾದ್ಯರಲ್ಲಿ, ಬದ್ಧ ಮತ್ಸರಂ= ಸ್ಥಿರ ದ್ವೇಷವು, ಇಲ್ಲ= ಇದ್ದಿಲ್ಲ, ಎಮ್ಮಂ= ನಮ್ಮನ್ನು, ಅಕಾರಣಂ= ನಿಷ್ಕಾರಣವಾಗಿ, ಕದಡಿದಯ್= ಕಲಕಿದೆ ( ತೊಂದರೆಗೊಳಿಸಿದೆ ) ಸಾವೆಯ್ದಿದಯ್= ಸಾವಂ ಎಯ್ದಿದಯ್= ನಾಶವನ್ನು ತಂದುಕೊಂಡೆ, ನಷ್ಟ ಸೋದರಂ ಆದತ್ತು=ಸೋದರರನ್ನು ಕಳೆದುಕೊಂಡೆ, ಎನಗಂ= ನನಗೂ, ಸ್ವಗೋತ್ರ ವಧೆಯಪ್ಪ ಆಪಾತಕಂ= ನನ್ನ ವಂಶದವರ ವಧೆಯಿಂದ ಬಂತು ಪಾಪ, ಕೌರವೇಶ್ವರ = ಕೌರವರ ಒಡೆಯನೇ, ನೀಂ ಸಂಧಿಗೆ ಒಡಂಬಡು= ನೀನು ಸಂಧಿಗೆ ಸಮ್ಮತಿಸು, ಇಂತು ಕೊಳನಂ ಪೊಕ್ಕಿರ್ಪುದೇಂ ತಕ್ಕುದೇ = ಹೀಗೆ ಲಜ್ಜೆಗೆಟ್ಟು ಕೊಳದಲ್ಲಿ ಅಡಗಿ ಕುಳಿತುಕೊಳ್ಳುವುದು ನಿನ್ನಂಥವನಿಗೆ
ಯೋಗ್ಯವೇ ? ಅಲ್ಲ.

ತಾತ್ಪರ್ಯ :- ಕೌರವೇಶ್ವರ ! ಭರತವಂಶದ ಆರಂಭದಿಂದ ಇಂದಿನವರೆಗೆ ದಾಯಾದ್ಯರಲ್ಲಿ ಬದ್ಧದ್ವೇಷವು ಇದ್ದಿಲ್ಲ. ನೀನಾದರೋ ನಮ್ಮನ್ನು ವಿನಾ ಕಾರಣ ತೊಂದರೆಗೊಳಿಸಿದೆ. ಅದರ ಫಲವಾಗಿ ಸರ್ವನಾಶವನ್ನು ತಂದುಕೊಂಡೆ. ನಿನ್ನ ಒಡಹುಟ್ಟಿದವರು ತೀರಿಕೊಂಡರು. ನನಗೂ ನನ್ನ ವಂಶದವರ ವಧೆಯಿಂದ ಪಾಪವು ತಟ್ಟಿತು. ಆದುದರಿಂದ ಇನ್ನಾದರೂ ನಮ್ಮೊಡನೆ ಸಂಧಿಗೆ ಒಪ್ಪಿಕೋ. ಹೀಗೆ ಹೇಡಿಯಂತೆ ಕೊಳದಲ್ಲಿ ಅಡಗಿಕೊಂಡಿರುವುದು ಉಚಿತವೇ ಏನು ?ಅಲ್ಲವೆಂಬ ಭಾವ.

ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕಟಾ ಕೋಡಸೇಡಿಂ
ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋಱಿದಯ್ ನಿ
ನ್ನಳವಂ ಚಿಃ ಸತ್ತರೇಂ ಪುಟ್ಟರೆ ಪೊಱಮಡು ನೀಂ ಕಯ್ದುಗೊಳ್ ಕೌರವೇಂದ್ರಾ
ಚಳವಜ್ರಂ ಬಂದನೀಗಳ್ ಕುರುಕುಲಮಥನೋದ್ಭೀಕರಂ ಭೀಮಸೇನಂ॥೧೩॥

ಜಳದೊಳ್ ಮೀನಿರ್ಪವೊಲ್ನೀಂ ಕೊಳದೊಳೆ ಮುಳುಗಿರ್ದು = ನೀರಿನಲ್ಲಿ ಮೀನುಗಳಿರುವಂತೆ ನೀನೂ ಕೊಳದಲ್ಲಿ ಮುಳುಗಿಕೊಂಡು, ಅಕ್ಕಟಾ= ಅಯ್ಯೋ ಕಷ್ಟವೇ ! ಕೋಡಸೇಡಿಂಗೆ ಒಳಗಾದಯ್= ಚಳಿಯ ಬಾಧೆಗೆ ಒಳಗಾದೆಯಲ್ಲಾ! ನಿನ್ನ ದುರ್ಯೋಧನ ಪೆಸರ್ಗೆ ಇದು ಲಜ್ಜಾಕರಂ= ದುರ್ಯೋಧನನೆಂಬ ನಿನ್ನ ಹೆಸರಿಗೇ ಅಪಮಾನವಲ್ಲವೇ? ನಿನ್ನ ಅಳವಂ ತೋಱಿದಯ್= ನಿನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆಯಷ್ಟೆ! ಚಿಃ =ನಿನ್ನ ಪೌರುಷಕ್ಕೆ ಧಿಕ್ಕಾರ! ಸತ್ತರ್ ಏಂ ಪುಟ್ಟರೇ= ಸತ್ತರೇನಂತೆ, ಸತ್ತವರು ಮತ್ತೆ ಹುಟ್ಟುವುದಿಲ್ಲವೇ ? ಪೊಱಮಡು=ಹೊರಕ್ಕೆ ಬಾ, ನೀಂ ಕಯ್ದುಗೊಳ್= ನೀನು ಆಯುಧವನ್ನು ಹಿಡಿ, ಈಗಳ್= ಈಗಲಾದರೋ, ಕೌರವೇಂದ್ರಾಚಳವಜ್ರಂ ಕುರುಕುಲಮಥನೋದ್ಭೀಕರಂ ಭೀಮಸೇನಂ ಬಂದಂ= ಕೌರವೇಂದ್ರನೆಂಬ ಪರ್ವತಕ್ಕೆ ವಜ್ರಾಯುಧದಂತಿರುವವನೂ, ಕುರುವಂಶವನ್ನು ಮಥಿಸಿದುದರಿಂದ ಅತಿಭಯಂಕರನಾದವನೂ ಆದಂಥ ಭೀಮಸೇನನು ಬಂದಿದ್ದಾನೆ.

ತಾತ್ಪರ್ಯ ;- ನೀರಿನಲ್ಲಿ ಮೀನುಗಳು ಇರುವಂತೆ ನಿನ್ನಂಥವನೂ ಕೊಳದಲ್ಲಿ ಮುಳುಗಿ ಕೊಂಡು ಚಳಿಯಿಂದ ಮುದುರಿಕೊಳ್ಳುವಂತಾಯಿತೇ ! ಅಯ್ಯೋ ಕಷ್ಟವೇ ! ದುರ್ಯೋಧನನೆಂಬ ನಿನ್ನ ಹೆಸರಿಗೆ ಇದು ನಾಚಿಕೆಗೇಡಲ್ಲವೇ? ನೀನು ಎಂಥ ಪರಾಕ್ರಮಿ ಎಂಬುದನ್ನು ತೋರಿಸಿಕೊಟ್ಟೆಯಲ್ಲಾ ! ಚಿಃ ನಿನಗೆ ಧಿಕ್ಕಾರ! ಸತ್ತವರು ಮತ್ತೆ ಹುಟ್ಟುವುದಿಲ್ಲವೇ? ಶೂರನಾದ ನೀನೂ ಜೀವಗಳ್ಳನಾಗುವುದೇ! ಕೊಳದಿಂದ ಹೊರಟು ಬಾ. ಆಯುಧವನ್ನು ಹಿಡಿದುಕೋ. ಕೌರವೇಂದ್ರನೆಂಬ ಪರ್ವತವನ್ನು ಪುಡಿಗುಟ್ಟುವ ವಜ್ರಾಯುಧದಂತಿರುವ ಕುರುಕುಲವನ್ನು ಮಥಿಸಿ ಭಯಂಕರನಾಗಿರುವ ಭೀಮಸೇನನು ಬಂದಿದ್ದಾನೆ, ನೋಡು.

ಅಲಂಕಾರ :- ಉಪಮೆ. ರೂಪಕ.

ಹರಿಸಂಧಾನಕ್ಕೆ ವಂದಂದವಗಡಿಸಿದಹಂಕಾರಮೇನಾಯ್ತೊ ಕೃಷ್ಣಾಂ
ಬರಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೊ ಕೌಂತೇಯರಂ ಮ
ಚ್ಚರದಿಂ ಕಾಂತಾರದೊಳ್ ತಿಱ್ರನೆ ತಿರಿಪಿದ ಸೊರ್ಕೀಗಳೇನಾದುದೆಂದಾ
ಕುರುವಂಶಾಧೀಶನಂ ಮೂದಲಿಸಿದನದಟಂ ಭೀಮನುದ್ದಾಮಭೀಮಂ॥೧೪॥

ಹರಿ= ಶ್ರೀಕೃಷ್ಣನು, ಸಂಧಾನಕ್ಕೆ ವಂದಂದು= ಸಂಧಿಗಾಗಿ ಬಂದ ಆ ದಿನ, ಅವಗಡಿಸಿದ= ಮೇಲೆಬಿದ್ದ, ಅಹಂಕಾರಂ= ಗರ್ವ, ಏನಾಯ್ತೊ= ಏನಾಯಿತು = ಎಲ್ಲಿಗೆ ಹೋಯಿತು ? ಕೃಷ್ಣಾ= ದ್ರೌಪದಿಯ, ಅಂಬರ=ಸೀರೆ, ಕೇಶ=ತುರುಬು, ಆಕೃಷ್ಟಿಯಂ= ಸೆಳೆಯುವಿಕೆಯನ್ನು, ಮಾಡಿಸಿದ, ಮದಂ= ದರ್ಪ, ಅದೇನಾಯ್ತೊ=ಅದೇನಾಗಿಬಿಟ್ಟಿತೋ ? ಕೌಂತೇಯರಂ= ಪಾಂಡವರನ್ನು, ಮಚ್ಚರದಿಂ= ಮತ್ಸರದಿಂದ, ಕಾಂತಾರದೊಳ್ ತಿಱ್ರನೆ ತಿರಿಪಿದ= ಕಾಡುಗಳಲ್ಲಿ ಅಲೆದಾಡುವಂತೆ ಮಾಡಿದ, ಸೊರ್ಕು=ಸೊಕ್ಕು, ಈಗಳೇನಾದುದು= ಈಗ ಏನಾಯಿತು, ಎಂದು= ಎಂಬುದಾಗಿ, ಕುರುವಂಶಾಧೀಶನಂ= ದುರ್ಯೋಧನನನ್ನು, ಅದಟಂ= ಪರಾಕ್ರಮಿಯೂ, ಉದ್ದಾಮಭೀಮಂ= ಅತಿ ಭೀಕರನೂ, ಆದ, ಭೀಮಂ= ಭೀಮಸೇನನು, ಮೂದಲಿಸಿದಂ= ಹೀಯಾಳಿಸಿದನು.

ತಾತ್ಪರ್ಯ :-  “ ಎಲಾ ಮದಾಂಧನೇ ! ಶ್ರೀಕೃಷ್ಣನು ಸಂಧಿಮಾಡುವುದಕ್ಕಾಗಿ ಬಂದಿದ್ದಾಗ ಅವನ ಮೇಲೆ ಬಿದ್ದು ಬಂಧಿಸಲು ಯತ್ನಿಸಿದ ಆ ಅಹಂಕಾರ ಈಗ ಎಲ್ಲಿಗೆ ಹೋಯಿತು? ದ್ರೌಪದಿಯ ಸೀರೆಯನ್ನೂ ಕೇಶಪಾಶವನ್ನೂ ತಮ್ಮನಿಂದ ಸೆಳೆಯುವಂತೆ ಮಾಡಿಸಿದ ಮದ ಎಲ್ಲಿ ಅಡಗಿತು? ಪಾಂಡವರನ್ನು ಕಾಡಿನಿಂದ ಕಾಡಿಗೆ ಅಲೆಯುವಂತೆ ಮಾಡಿದ ಸೊಕ್ಕು ಏನಾಯ್ತು? “

ಈ ಪ್ರಕಾರವಾಗಿ ಅತಿ ಭೀಷಣನಾದ , ಮಹಾಪರಾಕ್ರಮಿಯಾದ ಭೀಮನು ದುರ್ಯೋಧನನನ್ನು ಕಕೆಣಕಿ ನಿಂದಿಸಿದನು.

ಎನಿತುಂ ಪೊಕ್ಕಿರ್ದಪಯ್ ನೀಂ ಪೊಱಮಡು ಕೊಳದಿಂ ದ್ರೌಷದೀದ್ರೋಹದುಶ್ಯಾ
ಸನದುಷ್ಟಜ್ಯೇಷ್ಠ ಭೀಷ್ಮಪ್ರಮುಖನಿಖಿಲಬಂಧುಕ್ಷಯೋತ್ಪನ್ನದುಃಖ
ಧ್ವನಿವಾರಿಚ್ಛಿನ್ನಧೈರ್ಯದ್ರುಮ ಯಮಸುತ ನಿಷ್ಕರಣ ದ್ವೇಷಿ ಭೀಮ
ಧ್ವನಿಯಂ ಕೇಳ್ದಿನ್ನುಮಿರ್ದಯ್ ಕುರುಕುಲವಿಲಯೋತ್ಪಾತನೋತ್ಪಾತಕೇತೂ॥೧೫॥

ದ್ರೌಪದೀ ದ್ರೋಹ= ದ್ರೌಪದಿಗೆ ಕೇಡನ್ನು ಬಗೆದವನೇ, ದುಶ್ಯಾಸನ ದುಷ್ಟ ಜ್ಯೇಷ್ಟ= ದುಶ್ಯಾಸನನೆಂಬ ದುಷ್ಟನ ಅಣ್ಣನೇ, ಭೀಷ್ಮ ಪ್ರಮುಖನಿಖಿಲಬಂಧುಕ್ಷಯೋತ್ಪನ್ನದುಃಖಧ್ವನಿವಾರಿಚ್ಛಿನ್ನಧೈರ್ಯದ್ರುಮ= ಭೀಷ್ಮರೇ ಮೊದಲಾದ ಸಮಸ್ತ ಪ್ರಮುಖಬಂಧುಗಳನಾಶದಿಂದುಂಟಾದ ಆರ್ತನಾದವೆಂಬ ಪ್ರವಾಹದಿಂದ ಮುರಿದು ಬಿದ್ದ ಧೈರ್ಯವೆಂಬ ವೃಕ್ಷವೇ, ಕುರುಕುಲವಿಲಯೋತ್ಪಾತನೋತ್ಪಾತಕೇತೂ= ಕುರುವಂಶವನ್ನು ನಾಶಗೊಳಿಸುವುದರಲ್ಲಿ ಪ್ರಳಯಕಾಲದಲ್ಲಿಕಾಣಿಸಿಕೊಳ್ಳುವ ಧೂಮಕೇತುವಿನಂತಿರುವವನೇ; ನೀಂ ಎನಿತುಂ ಪೊಕ್ಕಿರ್ದಪೆಯ್= ನೀನು ಹೇಗೂ ಹೊಕ್ಕಿರುವೆಯಲ್ಲ !( ಇಲ್ಲಿ ಪೊಕ್ಕಿರ್ದಪಯ್ ಬದಲು ಪೊೞ್ತಿರ್ದಪಯ್= ನೀರಿನಲ್ಲಿ ಎಷ್ಟೊಂದು ಹೊತ್ತು ಅಡಗಿರುತ್ತೀಯೇ)ಪೊರಮಡು ಕೊಳದಿಂ= ಬೇಗನೆ ಕೊಳದಿಂದ ಹೊರಟು ಬಾ. ಭೀಮಧ್ವನಿಯಂ ಕೇಳ್ದಿನುಮಿರ್ದಯ್= ಭೀಮನ ಭಯಂಕರ ಧ್ವನಿಯನ್ನು ಕೇಳಿಕೊಂಡು ಇನ್ನು ಅಲ್ಲೇ ಇರುವೆಯಾ?

ಎಲೋ ದ್ರೌಪದೀ  ದ್ರೋಹನೇ! ದುಷ್ಟ ದುಶ್ಯಾಸನನ ದುಷ್ಟ ಅಣ್ಣನೇ! ಭೀಷ್ಮರೇ ಮೊದಲಾದ ಪ್ರಮುಖ ಬಂಧುಗಳ ನಾಶದ ಶೋಕಪ್ರವಾಹದಿಂದ ಮುರಿದುಬಿದ್ದ ಧೈರ್ಯದ್ರುಮವೇ! ಧರ್ಮರಾಯನನ್ನು ನಿಷ್ಕಾರಣ ದ್ವೇಷಿಸುವವನೇ! ಕುರುವಂಶನಾಶಕ ಪ್ರಳಯಕಾಲದ ಧೂಮಕೇತುವೇ? ಎಷ್ಟು ಹೊತ್ತು ನೀರಿನಲ್ಲಿ ಅಡಗಿ ಕುಳಿತುಕೊಳ್ಳುವೆ? ಹೊರಕ್ಕೆ ಬಾ ! ಭೀಮನ ಗರ್ಜನೆಯನ್ನು ಕೇಳಿಯೂ ಇನ್ನೂ ಕೊಳದಲ್ಲೇ ಇರುವೆಯಾ ?

ಅನಿಲತನೂಜನ ಸಿಂಹ
ಧ್ವನಿಯಂ ಕೇಳ್ದಳ್ಕಿ ತತ್ಸರೋವರದೆರ್ದೆ ಪ
ವ್ವನೆ ಪಾಱುವಂತೆ ಪಾಱಿದು
ವನಾಕುಳಂ ಕೊಳದೊಳಿರ್ದ ತದ್ವಿಹಗಕುಳಂ॥೧೭॥

ಅನಿಲತನೂಜನ= ಭೀಮನ, ಸಿಂಹಧ್ವನಿಯಂ= ಸಿಂಹನಾದವನ್ನು, ಕೇಳ್ದು ಅಳ್ಕಿ= ಕೇಳಿ ಹೆದರಿ, ತತ್ ಸರೋವರದ ಎರ್ದೆ= ಆ ಸರೋವರದ ಪ್ರಾಣವೇ, ಪವ್ವನೆ ಪಾಱುವಂತೆ= ಥಟ್ಟನೆ ಹಾರಿಹೋಗುವಂತೆ, ಕೊಳದೊಳಿರ್ದ= ಕೊಳದಲ್ಲಿದ್ದ, ತತ್ ವಿಹಗ ಕುಳಂ= ಆ ಪಕ್ಷಿಗಳ ಸಮೂಹವು, ಅನಾಕುಳಂ= ನಿರಾತಂಕವಾಗಿ, ಪಾಱಿದುವು= ಹಾರಿಹೋದುವು.

ತಾತ್ಪರ್ಯ :- ಭೀಮನ ಭಯಂಕರವಾದ ಸಿಂಹನಾದವನ್ನು ಕೇಳಿ ಬೆಚ್ಚಿ ಬಿದ್ದ ಸರೋವರದ ಪ್ರಾಣಿ ಪಕ್ಷಿಯೇ ಹವ್ವನೆ ಹಾರಿಹೋಯಿತೋ ಎಂಬಂತೆ ಆ ಸರೋವರದಲ್ಲಿದ್ದ ಪಕ್ಷಿಗಳೆಲ್ಲ ಬುರ್ರೆಂದು ಹಾರಿಹೋದುವು.

ಭೀಮನ ಅಟ್ಟಹಾಸವನ್ನು ಕೇಳಿದ ಹಕ್ಕಿಗಳು ಬೆಚ್ಚಿ ಹಾರಿದ್ದನ್ನು ಕೊಳದ ಪ್ರಾಣಪಕ್ಷಿಯೇ ಹಾರಿಹೋದಂತಿತ್ತು ಎಂಬ ಕಲ್ಪನೆ ಭವ್ಯ ಸುಂದರ.

ಅಲಂಕಾರ :- ಉತ್ಪ್ರೇಕ್ಷೆ.

ಅರೆಸೀದುವು ತಾವರೆ ಖಗ
ಮರೆಬೆಂದುವು ಭೀಮಕೋಪಶಿಖಿ ಮುಟ್ಟೆ ಸರೋ
ವರದ ಮೞಲ್ ಪುರಿಗಡಲೆಗೆ
ಪುರಿದ ಮೞಲ್ ಕಾಯ್ವ ತೆಱದೆ ಕಾಯ್ದತ್ತೆತ್ತಂ॥೧೮॥

ಭೀಮ ಕೋಪ ಶಿಖಿ ಮುಟ್ಟೆ= ಭೀಮನ ಕೋಪಾಗ್ನಿ ಸ್ಪರ್ಶದಿಂದ, ತಾವರೆ ಅರೆ ಸೀದುವು= ತಾವರೆಗಳು ಅರ್ಧ ಸುಟ್ಟುಹೋದುವು. ಖಗಂ ಅರೆಬೆಂದುವು= ಪಕ್ಷಿಗಳು ಅರ್ಧ ಬೆಂದುಹೋದುವು, ಸರೋವರದ ಮೞಲ್ ಪುರಿಗಡಲೆಗೆ
ಪುರಿದ ಮೞಲ್ ತೆಱದೆ ಕಾಯ್ದತ್ತೆತ್ತಂ= ಸರೋವರದ ಸುತ್ತಲೂ ಇದ್ದ ಮಳಲು ಹುರಿಗಡಲೆಯನ್ನು ಹುರಿದ ಮರಳು  ಕಾಯುವಂತೆ ಬಿಸಿಯಾಯಿತು.

ತಾತ್ಪರ್ಯ :- ಭೀಮನ ಕೋಪಾಗ್ನಿಯ ತಾಪದಿಂದ ತಾವರೆಗಳೂ ಪಕ್ಷಿಗಳೂ ಅರ್ಧ ಬೆಂದುಹೋದುವು. ಸರೋವರದ ಸುತ್ತ ಮುತ್ತಣ ಮಣಲು ಹುರಿಗಡಲೆಯನ್ನು ಹುರಿದ ಮರಳಿನಂತೆ ಕಾವೇರಿತು.

“ ಪುರಿಗಡಲೆಗೆ ಪುರಿದ ಮೞಲ್ ಕಾಯ್ವ ತೆಱದೆ “ ಎಂಬಲ್ಲಿನ ಸುಂದರ ದೇಸಿಯನ್ನು ಗಮನಿಸಿರಿ. ಕವಿ ರನ್ನನ ಹುಟ್ಟೂರು ಕಡಲೆಕಾಯಿಗೆ ಪ್ರಸಿದ್ಧವಾದುದು.

ಅಲಂಕಾರ :- ಅತ್ಯುಕ್ತಿ, ರೂಪಕ.

ಬಂದಂ ಬಕಾಂತಕಂ ಪೋ
ಕೊಂದಂಬಕವೆಸರ್ಗೆ ಮುನಿದು ನಮ್ಮುಮನಿನ್ನೆಂ
ಬಂದದೊಳೆ ಪಾಱಿಪೋದುವು
ನಿಂದಿರದುರವಣಿಸಿ ಬಕನಿಕಾಯಕಮದಱೊಳ್॥೧೯॥

ಬಕಾಂತಕಂ= ಬಕಾಸುರನನ್ನು ಕೊಂದ ಭೀಮನು, ಬಂದಂ= ಬಂದನು, ಬಕ ಪೆಸರ್ಗೆ ಮುನಿದು ನಮ್ಮುಮಂಇನ್ ಪೋ ಕೊಂದಂ= ಬಕವೆಂಬ ಹೆಸರಿಗೆ ಕೋಪಿಸಿ ನಮ್ಮನ್ನೂಇನ್ನು ಕೊಂದೇ ಬಿಡುವನು, ಎಂಬಂದದೊಳೆ= ಎನ್ನುವಂತೆ, ಅದಱೊಳ್ ನಿಂದಿರದೆ=ಆ ಸರೋವರದಲ್ಲಿ ನಿಲ್ಲದೆ, ಉರವಣಿಸಿ=ತ್ವರೆಯಿಂದ, ಬಕನಿಕಾಯಕಂ=ಬಕಪಕ್ಷಿಗಳ ಸಮೂಹವು, ಪಾಱಿಪೋದುವು= ಹಾರಿಹೋದುವು.

ತಾತ್ಪರ್ಯ :- ಇದೋ ಬಕಾಂತಕನು ಬಂದನು. ಬಕವೆಂಬ ನಮ್ಮ ಹೆಸರಿಗೆ ಕೋಪಿಸಿಕೊಂಡು ಇವನು ನಮ್ಮನ್ನು ಕೊಂದೇತೀರುವನು ಎಂದು ಹೇಳುತ್ತಿವೆಯೋ ಎಂಬಂತೆ ಆ ಸರೋವರದಲ್ಲಿದ್ದ ಬಕಪಕ್ಷಿಗಳು ನಿಲ್ಲದೆ ಗುಂಪುಗುಂಪಾಗಿ
ಹಾರಿಹೋದುವು.

ಅಲಂಕಾರ :- ಉತ್ಪ್ರೇಕ್ಷೆ.

ಕುಪಿತಮರುತ್ಸುತರವಕ
ಳ್ಕಿ ಪರಮೇಶ್ವರನಿಕರಸಂಭ್ರಮೋಲ್ಲಹರಿಕೆ ಭಾ
ವಿಪೊಡೆ ಜನಕ್ಕೆ ಕೊಳಂ ಕಿ
ೞ್ತುಪಾಱುವಂತಾಯ್ತು ಕಮಲಜಾಂಡಂಬರೆಗಂ॥೨೦॥

ಕುಪಿತ= ಕೋಪಿಸಿಕೊಂಡ, ಮರುತ್ಸುತ= ಭೀಮನ, ರವಕೆ=ಸಿಂಹನಾದಕ್ಕೆ, ಅಳ್ಕಿ=ಹೆದರಿ, ಪಶ್ಚರ ನಿಕರ=ಮೀನುಗಳ ಸಮೂಹ, ಸಂಭ್ರಮೋಲ್ಲಹರಿಕೆ=ಗಾಬರಿಯಿಂದ ನೀರಿನ ಮೇಲಕ್ಕೆ ನೆಗೆಯುತ್ತಿರುವುದು, ಭಾವಿಪೊಡೆ= ವಿಚಾರಿಸುವುದಿದ್ದರೆ, ( ಕಲ್ಪಿಸುವುದಾದರೆ ) ಜನಕ್ಕೆ =ಜನರಿಗೆ, ಕೊಳಂ=ಸರೋವರವು, ಕಮಲಜಾಂಡಂಬರೆಗಂ=
ಬ್ರಹ್ಮಾಂಡದವರೆಗೆ, ಕಿೞ್ತುಪಾಱುವಂತಾಯ್ತು= ಕಿತ್ತು ಹಾರಿಹೋಗುತ್ತದೆಯೋ ಎಂಬಂತೆ ತೋರಿತು.

ಕೋಪಗೊಂಡ ಭೀಮನ ಗರ್ಜನೆಯನ್ನುಕೇಳಿದ ಮೀನುಗಳ ಸಮೂಹವು ಗಾಬರಿಗೊಂಡು ಒಮ್ಮೆಲೇ ನೀರಿನಿಂದ ಮೇಲ್ಗಡೆ ನೆಗೆಯುತ್ತಿರುವುದನ್ನು ನೋಡಿದ ಜನರಿಗೆ ಆ ಕೊಳವೇ ಕಿತ್ತು ಬ್ರಹ್ಮಾಂಡದವರೆಗೆ ಹಾರಿ ಹೋಗುತ್ತಿದೆಯೋ ಎಂಬಂತೆ ತೋರಿತು.  

ಅಲಂಕಾರ :- ಉತ್ಪ್ರೇಕ್ಷೆ .

ಆರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುಲಗಪತಾಕಂ॥೨೨॥

ನಿರ್ಜಿತಕಂಠೀರವರವಮಂ= ಸಿಂಹಗರ್ಜನೆಯನ್ನು ಮೀರಿಸಿದ, ನಿರಸ್ತಘನರವಮಂ= ಮೇಘಗರ್ಜನೆಯನ್ನು ಸೋಲಿಸಿದ, ಆ ರವಮಂ= ಆ ಗರ್ಜನೆಯನ್ನು, ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ, ಉರಗಪತಾಕಂ= ಪನ್ನಗಕೇತನನು, (ದುರ್ಯೋಧನನು) ನೀರೊಳಗಿರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು.

ತಾತಾಪರ್ಯ :- ಸಿಂಹಗರ್ಜನೆಯನ್ನೂ ಗುಡುಗೀನ ಮೊಳಗನ್ನೂ ಮೀರೀಸಿದ ಭೀಮನ ಆರ್ಭಟೆಯನ್ನು ಕೇಳಿದರೆ ಎಂಥವನಾದರೂ ಬೆಚ್ಚೀ ಬೀಳಲೇ ಬೇಕು. ಆದರೆ ಅಭಿಮಾನಧನನಾದ ದುರ್ಯೋಧನನು ಆ ಸಿಂಹನಾದವನ್ನು ಕೇಳಿ ಕೆರಳಿ ಕೆಂಡವಾದನು. ಅವನ ಕಣ್ಣುಗಳು ಅರುಣವರ್ಣವಾದುವು. ಕೋಪೋದ್ರೇಕದಿಂದ ಶೀತಲವಾದ ನೀರಿನಲ್ಲಿದ್ದರೂ ಮೈಬೆವರಿಬೀಟ್ಟಿತು.

“ನೀರೊಳಗಿರ್ದುಂ ಬೆಮರ್ತನುರಗಪತಾಕಂ “ ಎಂಬ ಈ ನುಡಿಮುತ್ತು ರನ್ನನ ಅದ್ಭುತ ಪ್ರತಿಭೆಗೆ ಕನ್ನಡಿಹಿಡಿದಂತಿದೆ. ದುರ್ಯೋಧನನ ಕೋಪದಕಾವು ಎಷ್ಟು ತೀವ್ರವಾಗಿತ್ತೆಂಬುದನ್ನು ಸುದೀರ್ಘ ಬಣ್ಣಿಸುವುದರ ಬದಲು ಈ ಪುಟ್ಟ ವಾಕ್ಯದಲ್ಲಿ ಕವಿ ಸೆರೆಹಿಡಿದಿರುವನು. ಉರಘಪತಾಕಂ ಎನ್ನುವ ಪದವೂ ಇಲ್ಲಿ ಅರ್ಥವತ್ತಾಗಿದೆ.

ಅಲಂಕಾರ :- ಅತ್ಯುಕ್ತಿ, ವಿರೋಧಾಭಾಸ. ರಸ - ರೌದ್ರ.

ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ
ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ
ರಜವನದಿಂ ಕಱಂಗಿ ಕಮಲಾಕರದಿಂ ಪೊಱಮಟ್ಟನಾಗಳಾ
ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥

ನಿಜಮಕುಟ= ತನ್ನ ಕಿರೀಟದ, ಸ್ಫುರತ್=ಪ್ರಕಾಶಿಸುವ, ಮಣಿಗಣಚ್ಛವಿಯಂ=ನವರತ್ನಗಳ ಕಾಂತಿಯಿಂದ. ಪಂಕಜವನದೊಳ್= ತಾವರೆಗಳ ಸಮೂಹದಲ್ಲಿ, ಸುರಚಾಪಲೀಲೆ= ಕಾಮನಬಿಲ್ಲಿನ ಸೊಗಸು, ಮನಂಗೊಳಿಸೆ=
ಮನೋಹರವಾಗಿ ತೋರುತ್ತಿರಲು, ತನ್ನಯ ಮೇಗೆ ಒಗೆದಿರ್ದ= ತನ್ನ ಮೇಲ್ಭಾಗದಲ್ಲಿದ್ದ, ನೀಲನೀರಜ ವನದಿಂ=
ಕನ್ನೈದಿಲೆಗಳ ಸಮೂಹದಿಂದ, ಕಱಂಗಿ=ಕಪ್ಪಾಗಿ, ಆ ಭುಜಯುಗ ತೋರಣಾಯಿತ ಗದಾಪರಿಘಂ= ಪರಿಘ ಸದೃಶವಾದ ತನ್ನ ಗದೆಯನ್ನು ತೋರಣೋಪಾದಿಯಲ್ಲಿ ಆ ಬಾಹು ದ್ವಯಗಳಲ್ಲಿಎತ್ತಿ ಹಿಡಿದು, ಫಣಿರಾಜಕೇತನಂ=
ದುರ್ಯೋಧನನು, ಕಮಲಾಕರದಿಂ= ಸರೋವರದಿಂದ, ಆಗಳ್ ಪೊರಮಟ್ಟಂ= ಆಗ ಹೊಲಬಂದನು.

ತಾತ್ಪರ್ಯ :- ತನ್ನ ಕಿರೀಟದಲ್ಲಿ ಹೊಳೆಯುತ್ತಿದ್ದ ನವರತ್ನಗಳ ನವವಿಧ ಕಾಂತಿಯಿಂದ ಆ ಸರೋವರದಲ್ಲಿದ್ದ ತಾವರೆಗಳ ಸಮೂಹದಲ್ಲಿ ಇಂದ್ರಚಾಪದ ಸೊಬಗು ಮನೋಹರವಾಗಿ ಕಾಣುತ್ತಿರಲು, ತನ್ನ ಮೇಲ್ಗಡೆಯಲ್ಲಿದ್ದ
ಕನ್ನೈದಿಲೆಗಳ ಕಾಂತಿಯು ಪ್ರತಿಫಲಿಸಿದುದರಿಂದ ಕ್ಷಣಕಾಲ ಕಪ್ಪಾಗಿ ತೋರುತ್ತಿರಲು, ತನ್ನ ಎರಡು ತೋಳುಗಳಲ್ಲಿ
ಪರಿಘಸದೃಶವಾದ ಗದೆಯನ್ನು ತೋರಣದಂತೆ ಎತ್ತಿಹಿಡಿದವನಾಗಿ, ಪನ್ನಗಪತಾಕನು ಕೂಡಲೇ ಕೊಳದಿಂದ ಹೊರಬಿದ್ದನು

ಸರೋವರದ ತಳದಿಂದ ಮೇಲೆದ್ದು ಬರುತ್ತಿರುವದುರ್ಯೋಧನನನ್ನು “ ಫಣಿರಾಜಕೇತನಂ “ ಎಂದು ಕರೆದುದು ಅರ್ಥಘರ್ಭಿತವಾಗಿದೆ. ಸರ್ಪಮತ್ಸರವುಳ್ಳವನಲ್ಲವೇ ದುರ್ಯೋಧನ!

ಅಲಂಕಾರ :- ಉತ್ಪ್ರೇಕ್ಷೆ, ಉಪಮೇ.

ನೆನೆ ಚಿತ್ರಾಂಗದನಿಂದಮಂದು ನಿನಗಾದಾಪತ್ತನಾ ಬನ್ನಮಂ
ನೆನೆ ನೀಂ ಗೋಗ್ರಹಣ ಪ್ರಪಂಚದೊಳೆ ಮೆಯ್ವೆತ್ತಿರ್ದುದಂ ನಿನ್ನ ತ
ಮ್ಮನ ಕೆನ್ನೆತ್ತರನೀಂಟುವಲ್ಲಿ ಭಯದಿಂದಳ್ಕುತ್ತೆ ಬೆನ್ನಿತ್ತುದಂ
ನೆನೆ ಪಿಂತಿಕ್ಕಿದ ನಿನ್ನ ಮುನ್ನಿನ ಕವಲ್ಬನ್ನಂಗಳಂ ಕೌರವಾ॥೪೦॥

ಎಲೋ ಕೌರವಾ! ಚಿತ್ರಾಂಗದನಿಂದಂ ಅಂದು ನಿನಗೆ ಆದ ಆಪತ್ತನ್ ಆ ಬನ್ನಮಂ ನೆನೆ= ಚಿತ್ರಾಂಗದನೆಂಬ ಗಂಧರ್ವನಿಂದಹಿಂದೆ ನಿನಗೆ ಬಂದೊದಗಿದ ಸಂಕಷ್ಟವನ್ನೂ ಅಪಮಾನವನ್ನೂಸ್ಮರಿಸಿಕೋ! ನೀಂಗೋಗ್ರಹಣ ಪ್ರಪಂಚದೊಳೆ ಮೆಯ್ವೆತ್ತಿರ್ದುದಂ ನಿನ್ನ ತಮ್ಮನ ಕೆನ್ನೆತ್ತರನೀಂಟುವಲ್ಲಿ ಭಯದಿಂದಳ್ಕುತ್ತೆ ಬೆನ್ನಿತ್ತುದಂ ನೆನೆ= ನೀನು ಗೋಗ್ರಹಣಾವಸರದಲ್ಲಿ ಅನುಭವಿಸಿದ್ದನ್ನೂ ನಿನ್ನ ತಮ್ಮನ ಕೆನ್ನೆತ್ತರನ್ನು ನಾನು ಕುಡಿಯುತ್ತಿದ್ದಾಗ ಭಯದಿಂದ ನಡುಗಿ ಓಡಿಹೋದುದನ್ನೂ ಸ್ಮರಿಸಿಕೋ, ಪಿಂತೆ ಇಕ್ಕಿದನಿನ್ನ ಮುನ್ನಿನ ಕವಲ್ಬನ್ನಂಗಳಂ ನೆನೆ= ಹಿಂದೆ
ಅನುಭವಿಸಿದ ನಾನಾ ಅಪಮಾನಗಳನ್ನು ಸ್ಮರಿಸಿಕೋ.

ತಾತ್ಪರ್ಯ :- ಎಲೋ ಕೌರವಾ! ಅಂದು ಚಿತ್ರಾಂಗದನಿಂದ ನೀನು ಪಟ್ಟ ಕಷ್ಟವನ್ನೂ ಅವಮಾನವನ್ನೃ ಸ್ಮರಿಸಿಕೋ! ವಿರಾಟನ ಗೋವುಗಳನ್ನು ಸೆರೆಹಿಡಿಯಲು ಬಂದು ನೀನು ಪಟ್ಟ ಪಾಡನ್ನೂ ನಿನ್ನ ತಮ್ಮನ ಬಿಸಿನೆತ್ತರನ್ನು ನಾನು ಹೀರುತ್ತಿದ್ದಾಗ ಅಂಜಿ ನಡುಗುತ್ತಾ ಓಡಿ ಹೋದುದನ್ನೂ ನೆನಪುಮಾಡಿಕೋ! ಹೀಗೆ ಹಿಂದೆ ನೀನು ಅನುಭವಿಸಿದ ನಾನಾ ಸಂಕಷ್ಟಗಳನ್ನು ಮತ್ತೊಮ್ಮೆಚಿಂತೀಸಿಕೋ!

ಜತುಗೇಹಾನಲದಾಹದಿಂ ವಿಷವಿಶೇಷಲಿಪ್ತಗುಪ್ತಾನ್ನದಿಂ
ಕೃತಕದ್ಯೂತವಿನೋದದಿಂ ದ್ರುಪದಜಾಕೇಶಾಂಬರಕೃಷ್ಟಿಯಿಂ
ಧೃತರಾಷ್ಟ್ರಾತ್ಮಜ ಪಾಂಡುರಾಜಸುತರಂ ಮುನ್ನಂ ಕೊಲಲ್ ಕೋಱಿದಯ್
ಗಥಕಾಲಂ ಲಯಕಾಲಮಾಯ್ತು ನಿನಗಿನ್ನಾಯ್ತಂತ್ಯಕಾಲಂ ಗಡಾ॥೪೧॥

ಜತುಗೇಹ ಅನಲದಾಹದಿಂ= ಅರಗಿನ ಮನೆಗೆ ಬೆಂಕಿ ಹಚ್ಚಿ ಸುಡುವುದರಿಂದಲೂ, ವಿಷವಿಶೇಷ ಆಲಿಪ್ತ ಗುಪ್ತಾನ್ನದಿಂ= ಮಹಾವಿಷಮಿಶ್ರಿತವಾದ ಆಹಾರವನ್ನು ರಹಸ್ಯವಾಗಿ ತಿನ್ನಿಸುವುದರಿಂದಲೂ, ಕೃತಕದ್ಯೂತವಿನೋದದಿಂ= ಕಪಟ ಜೂಜಿನ ವಿನೋದದಿಂದಲೂ,ದ್ರುಪದಜಾ=ದ್ರೌಪದಿಯ, ಕೇಶ ಅಂಬರ ಆಕೃಷ್ಟಿಯಿಂ= ತುರುಬನ್ನೂ ವಸ್ತ್ರವನ್ನೂ ಸೆಳೆಯುವುದರಿಂದಲೂ, ಧೃತರಾಷ್ಠ್ರಾತ್ಮಜ= ದುರ್ಯೋಧನನೇ! ಕೊಲಲ್=ಸಂಹರಿಸಲು, ಕೋಱಿದಯ್= ಬಯಸಿದೆಯಷ್ಟೇ! ಗತಕಾಲಂ= ಕಳೆದುಹೋದ ಕಾಲವೆಲ್ಲ,ಲಯಕಾಲಂಆಯ್ತು=ನಮ್ಮ ಅವನತಿಯ ಕಾಲವಾಗಿತ್ತು, ನಿನಗೆ ಇನ್ನು ಅಂತ್ಯಕಾಲಂ  ಆಯ್ತು ಗಡಾ= ನಿನಗೆ ಇನ್ನು ಅವಸಾನಕಾಲ ಬಂದೊದಗಿತಲ್ಲಾ!

ತಾತ್ಪರ್ಯ :- ಅರಗಿನ ಮನೆಗೆ ಕೀಚ್ಚಿಟ್ಟು ಸುಡುವುದರಿಂದಲೂ, ಉಗ್ರವಿಷಮಿಶ್ರಿತವಾದ ಆಹಾರವನ್ನು ಗುಟ್ಟಾಗಿ ತಿನ್ನಿಸುವುದರಿಂದಲೂ, ವಿನೋದಕ್ಕೆಂದು ಕಪಟ ಜೂಜಿನ ವ್ಯಾಜದಿಂದಲೂ, ದ್ರೌಪದಿಯ ಮುಡಿಯನ್ನೂ ವಸ್ತ್ರವನ್ನೂ ಸೆಳೆಯುವುದರ ಮೂಲಕವೂ ಪಾಂಡವರಾದ ನಮ್ಮನ್ನು ಕೊಲ್ಲುವುದಕಾಕೆಪ್ರಯತ್ನಿಸೀದೆಯಲ್ಲಾ! ಎಲಾ ದುರುಯೋಧನ, ಕಳೆದುಹೋದ ಕಾಲ ನಮ್ಮ ಅವನತಿಯ ಕಾಲವಾಗಿತ್ತು. ಇದೀಗ ನಿನ್ನ ಅಂತ್ಯಕಾಲವು ಸಮೀಪಿಸಿತೆಂದು ತಿಳಿದುಕೋ!

ಇರಲಿಂತೀಮಾದ್ರಿಪುತ್ರರ್ ಬಡವುಗಳವರೇಗೆಯ್ವರಿಂ ಧರ್ಮಪುತ್ರಂ
ಬೆರಸೀಗಳ್ ಬರ್ಕೆ ಭೀಮಂ ಹರಿಸುತನೊಡನೀ ಮೂವರುಂ ಬರ್ಕೆ ಮೇಣ
ಯ್ವರುಮಿಂಬರ್ಕೀ ಕೃತಾಂತಾತ್ಮಜಪವನಜಗಾಂಡೀವಧನ್ವರ್ಕಳೀಮೂ
ವರೊಳೊರ್ವಂ ಕೃಷ್ಣ ಬರ್ಕಿಂ ಪೊಣರಲನಿಬರುಂ ಬರ್ಕೆ ಮೇಣ್ ಬನ್ನಮೀವೆಂ॥೪೨॥

ಎಲೈ ಕೃಷ್ಣ! ಈ ಮಾದ್ರಿ ಪುತ್ರರ್ ಇಂತು ಇರಲಿ= ಈ ನಕುಲ ಸಹದೇವರು ಒತ್ತಟ್ಟಿಗಿರಲಿ, ಬಡವುಗಳ್ ಅವರ್ ಏ ಗೆಯ್ದಪರ್= ದುರ್ಬಲರಾದ ಅವರು ಏನು ಮಾಡಬಲ್ಲರು? ( ಆದುದರಿಂದ)ಧರ್ಮಪುತ್ರಂ ಬೆರಸು= ಧರ್ಮರಾಯನೊಂದಿಗೆ, ಈಗಳ್ ಬರ್ಕೆ= ಈಗ ಬರಲಿ, ಭೀಮಂ ಹರಿಸುತನೊಡೆ= ಭೀಮನು ಅರ್ಜುನನೊಂದಿಗೆ ಕೂಡಿ, ಈ ಮೂವರುಂ= ರ್ಮರಾಯ ಭೀಮ ಅರ್ಜುನರು, ಬರ್ಕೆ=ಬರಲಿ, ಮೇಣ್=ಅಥವಾ, ಅಯ್ವರುಂ ಇಂ ಬರ್ಕೆ= ಐದು ಮಂದಿಯೂ ಒಟ್ಟಾಗಿ ಬರಲಿ, ಅಥವಾ, ಕೃತಾಂತಾತ್ಮಜ=ಧರ್ಮರಾಯ, ಪವನಜ=ಭೀಮ, ಗಾಂಡೀವಧನ್ವ= ಅರ್ಜುನ, ಈ ಮೂವರೊಳ್= ಈ ಮೂರು ಮಂದಿಯಲ್ಲಿ, ಒರ್ವಂ ಬರ್ಕೆ= ಒಬ್ಬನು ಬರಲಿ, ಮೇಣ್ =ಅಥವಾ, ಇಂ ಪೊಣರಲ್= ಇನ್ನು ಯುದ್ಧ ಮಾಡಲು, ಅನಿಬರುಂ =ಅಷ್ಟುಮಂದಿಯೂ ಬರ್ಕೆ=ಬರಲಿ, ಬನ್ನಮೀವೆಂ= ಬನ್ನಮಂ ಈವೆಂ= ಹಾನಿಯನ್ನುಂಟುಮಾಡುತ್ತೇನೆ.( ನಾಶಮಾಡುತ್ತೇನೆ )

ತಾತ್ಪರ್ಯ :- ಎಲೋ ಕೃಷ್ಣ ! ದುರ್ಬಲರಾದ ಈ ನಕುಲ ಸಹದೇವರು ಒತ್ತಟ್ಟಿಗಿರಲಿ. ಇವರು ಏನು ತಾನೆ ಮಾಡಬಲ್ಲರು ! ಆದುದರಿಂದ ಇವರು ಧರ್ಮರಾಯನನ್ನು ಕೂಡಿಕೊಂಡು ನನ್ನೊಂದಿಗೆ ಯುದ್ಧಕ್ಕೆ ಬರಲಿ, ಅಥವಾ ಧರ್ಮರಾಯಭೀಮಾರ್ಜುನರು ಮೂವರೂ ಒಂದಾಗಿ ಬರಲಿ, ಅಥವಾ ಐದು ಮಂದಿಯೂ ಒಟ್ಟಾಗಿ ಬರಲಿ, ಅಥವಾ ಧರ್ಮರಾಯ ಭೀಮಾರ್ಜುನರು ಒಬ್ಬೊಬ್ಬರಾಗಿಯಾದರೂಬರಲಿ, ಅಥವಾ ಅವರೆಲ್ಲರೊಂದಾಗಿ
ಬಂದರೂ ಸರಿಯೆ, ನಾನು ಯುದ್ಧಮಾಡುವುದಂತೂ ಖಂಡಿತ. ಅವರನ್ನು ಭಂಗಪಡಿಸದೆ ಬಿಡೆನು.

ಅಷ್ಟಮಾಶ್ವಾಸಂ

ಕಿಱಿಕಿಱಿದೆ ಮೆಟ್ಟಿ ಮುಂದಂ
ಕಿಱಿಕಿಱಿದನೆ ಸಾರ್ಚಿ ತಮ್ಮಗದೆಗಳನಾಗಳ್
ಕಿಱಿಕಿಱಿದೆ ತಿರುಪಿ ಮಾಣದೆ
ಕಿಱಿಕಿಱಿದನೆ ತೂಂಕಿ ತೂಂಕಿ ನೂಂಕಿದರೆನಸು॥೭॥

ಮುಂದಂ ಕಿಱಿಕಿಱಿದೆ ಮೆಟ್ಟಿ= ಮುಂದಕ್ಕೆ ಮೆಲ್ಲಮೆಲ್ಲನೆ ಹೆಜ್ಜೆ ಇಟ್ಟು, ತಮ್ಮ ಗದೆಗಳನ್ ಕಿಱಿಕಿಱಿದನೆ ಸಾರ್ಚಿ= ತಮ್ಮ ಗದೆಗಳನ್ನು ಮೆಲ್ಲಮೆಲ್ಲನೆ ಮುಂದಕ್ಕೆ ನೀಡಿ, ಆಗಳ್=ಬಳಿಕ, ಕಿಱಿಕಿಱಿದೆ ತಿರುಪಿ= ನಿಧಾನವಾಗಿ ತಿರುಗಿಸಿ, ಮಾಣದೆ=ಬಿಡದೆ, ಕಿಱಿಕಿಱಿದನೆತೂಂಕಿ ತೂಂಕಿ ನೂಂಕಿದರ್ ಎನಸುಂ= ಮೆಲ್ಲಮೆಲ್ಲನೆ ಬೀಸಿಬೀಸಿ ಕೊನೆಗೆ ರಭಸದಿಂದ ಬೀಸಿದರು.

ತಾತ್ಪರ್ಯ :- ದ್ವಂದ್ವಯುದ್ಧಾರಂಭದಲ್ಲಿ, ಭೀಮದುರ್ಯೋಧನರು ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ಮುಂದಕ್ಕೆ ಬಂದು, ಮೆಲ್ಲಮೆಲ್ಲನೆ ತಮ್ಮ ಗದೆಗಳನ್ನುಚಾಚುತ್ತಾ, ನಿಧಾನವಾಗಿ ತಿರುಗಿಸುತ್ತಾ ಅತ್ತಿತ್ತ ಚಲಿಸುತ್ತಾ ಕ್ರಮೇಣ ರಭಸದಿಂದ ಬೀಸತೊಡಗಿದರು.

ಅಲಂಕಾರ :- ಯಮಕ.

ಪದಘಾತಕ್ಕಗಿದಳ್ಕಿ ಬಳ್ಕಿದುದಧೋಲೋಕಂ ಭಯಂಮರ್ತ್ಯಲೋ
ಕದೊಳಂ ಪೊಣ್ಮಿದುದೂರ್ಧ್ವಲೋಕದೊಳೆ ಮತ್ತಾಯ್ತದ್ಭುತಭ್ರಾಂತಿಯೆಂ
ಬುದನೆಂಬಂತಿರೆಯಂತದೇಂ ಭುವನಂ ಪರ್ಯಾಕುಲಂ ಮಾಡಲಾ
ರ್ತುದೊ ದುರ್ಯೋಧನಭೀಮಸೇನರ ಗದಾಯುದ್ಧಂ ತ್ರಿಧಾಭ್ರಾಂತಿಯಂ॥೧೦॥

ಪದಾಘಾತಕ್ಕೆ= ಪಾದದ ಘಟ್ಟನೆಗೆ, ಅಧೋಲೋಕಂ=ಪಾತಾಳಲೋಕವು, ಅಗಿದು=ಭಯಗೊಂಡು, ಅಳ್ಕಿಬಳ್ಕಿದುದು= ಮುದುಡಿಕೊಂಡಿತು, ಮರ್ತ್ಯಲೋಕದೊಳಂ= ಭೂಲೋಕದಲ್ಲಿಯೂ, ಭಯಂ=ಭಯವು, ಪೊಣ್ಮಿದುದು=ಉಂಟಾಯಿತು, ಊರ್ದ್ವಲೋಕದೊಳೆ= ದೇವಲೋಕದಲ್ಲಿ, ಮತ್ತೆ, ಅದ್ಭುತಭ್ರಾಂತಿ ಆಯ್ತು ಎಂಬುದುಂ ಎಂಬಂತಿರೆ= ಎಂಬುದಾಗಿ ಹೇಳುತ್ತಿರುವಂತೆ, ದುರ್ಯೋಧನ ಭೀಮಸೇನರ ಗದಾಯುದ್ದಂ= ಭೀಮದುರ್ಯೋಧನರ ಗದಾಯುದ್ಧವು, ಅದೇಂ ಭುವನಮಂ ಪರ್ಯಾಕುಲಂಮಾಡಲಾರ್ತುದೋ= ಅದೇನು ಸಾಗರಗಳನ್ನ ಉಲ್ಲೋಲಕಲ್ಲೋಲಗೊಳಿಸಲುಶಕ್ತವಾಯಿತೋ! ಅದೇಂ ತ್ರಿಧಾಭ್ರಾಂತಿಯಂ ಮಾಡಲ್ ಆರ್ತುದೊ= ಮೂರು ಲೋಕವನ್ನು ಭಯಗೊಳಿಸಲು ಸಮರ್ಥವಾಯಿತೋ!

ತಾತ್ಪರ್ಯ :- ಭೀಮದುರ್ಯೋಧನರ ಭಾರವಾದ ಹೆಜ್ಜೆಗಳ ತುಳಿತಕ್ಕೆ ಪಾತಾಳಲೋಕವು ಹೆದರಿ ಮುದುರಿಕೊಂಡಿತು, ಭೂಲೋಕದಲ್ಲಿ ಭಯವು ತಲಿದೋರಿತು. ಮತ್ತೆ ದೇವಲೋಕದಲ್ಲಿ ಆಶ್ಚರ್ಯಕರವಾದ ಗಲಿಬಿಲಿಯುಂಟಾಯಿತು ಎಂಬುದಾಗಿ ಹೇಳುತ್ತಿರುವಂತೆ ಸಮಸ್ತ ಸಾಗರಗಳನ್ನು ಉಲ್ಲೋಲಕಲ್ಲೋಲಗೊಳಿಸಲು, ಅದೆಂತು ಶಕತವಾಯಿತೋ! ಏನೆನ್ನಲಿ, ದುರ್ಯೋಧನಭೀಮಸೇನರ ಗದಾಯುದ್ಧದಿಂದ ಮೂರುಲೋಕವೂ ತಲ್ಲಣಗೊಂಡಿತು!

ಅಲಂಕಾರ :- ಅತ್ಯುಕ್ತಿ.

ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ
ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ
ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂಱುಗೊಳ್ಳೆಂದು ಮ
ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥

ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೆ= ಕಳಿಂಗರಾಜ ಗಜಘಟೆಯನ್ನೆಲ್ಲಕೊಂದು ಕಳಿಂಗರಾಜನನ್ನು ವಧಿಸಿದ ಅಹಂಕಾರಕ್ಕೆ ( ನೊಣೆ = ನುಂಗು, ಸಂಹರಿಸು. ) ಒಂದುಗೊಳ್= ಒಂದು ಕೊಳ್= ಇದೋ ಒಂದು ಏಟು, ಮತ್ಸಹೋದರರಂ ಕೋಪದೆತಿಂದುದರ್ಕೆರಡುಗೊಳ್= ನನ್ನ ತಮ್ಮಂದಿರನ್ನು ಕೋಪದಿಂದ ತಿಂದುದಕ್ಕೆ ಇದೋ ಎರಡನೇ ಪೆಟ್ಟು, ದುಶ್ಯಾಸನನ ಉರಸ್ಥಳ ಕ್ಷರತ್ ಅಸ್ರಾಂಬುವಂ ಆರ್ದು ಪೀರ್ದ ಮುಳಿಸಿಂಗಂ ಮೂಱುಗೊಳ್= ದುಶ್ಯಾಸನನ ಎದೆಯಿಂದ ಚಿಮ್ಮುತ್ತಿರುವ ರಕ್ತವನ್ನು ಆರ್ಭಟಿಸಿ ಹೀರಿದ ಕೋಪಕ್ಕಾಗಿ ಇದೋ ಮೂರನೆ ಏಟು! ಎಂದು=ಎಂಬುದಾಗಿ ಹೇಳುತ್ತಾ, ಮಚ್ಚರದಿಂ= ಮತ್ಸರದಿಂದ, ಓವದೆ= ನಿರ್ದಾಕ್ಷಿಣ್ಯವಾಗಿ, ದುರ್ಯೋಧನಂ ಗದೆಯಂ ಎತ್ತಿ ಭೀಮನಂ ಪೊಯ್ದಂ= ದುರ್ಯೋಧನನು ಗದೆಯನ್ನು ಎತ್ತಿ ಭೀಮನನ್ನು ಬಲವಾಗಿ ಹೊಡೆದನು.

ತಾತ್ಪರ್ಯ :- ಕಳಿಂಗರಾಜನ ಆನೆಗಳ ಹಿಂಡನ್ನೆಲ್ಲ ಸಂಹರಿಸಿ ಕಳಿಂಗರಾಜನನ್ನು ಕೊಂದ ಅಪರಾಧಕ್ಕೆ ಇದೋ ಒಂದು ಏಟು! ನನ್ನ ತಮ್ಮಂದಿರನೆಲ್ಲ ತಿಂದುದಕ್ಕೆ ಇದೋ ಎರಡನೆಯ ಏಟು! ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನ ಎದೆಯಿಂದ ಪುಟಿಯುತ್ತಿರುವ ಕೆನ್ನೆತ್ತರನ್ನು ಆರ್ಭಟಿಸುತ್ತಾ ಹೀರಿದ ಕೋಪಕ್ಕೆ ಇದೋ ಮೂರನೇ ಏಟು! ಹೀಗೆನ್ನುತ್ತಾ ದುರ್ಯೋಧನನು ಕೋಪೋದ್ರೇಕದಿಂದ ಗದೆಯನ್ನೆತ್ತಿ ಭೀಮನನ್ನು ಹೊಡೆದನು.

ಭೀಮನು ತನಗೆ ಮಾಡಿದ ಮಹಾಪರಾಧಗಳನ್ನು ಆತನಿಗೆ ಜ್ಞಾಪಿಸುತ್ತಾ ಒಂದೊಂದು ಅಪರಾಧಕ್ಕೆ ಒಂದೊಂದು ಪೆಟ್ಟಿನಂತೆ ಮೂರು ಪೆಟ್ಟುಗಳನ್ನು ಹಾಕುತ್ತಾನೆ ದುರ್ಯೋಧನ.

ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ
ಗಿದು ಪಾಂಚಾಲೀಪ್ರಪಂಚಕ್ಕಿದು ಕೃತಕಸಭಾಲೋಕನಭ್ರಾಂತಿಗೆಂದೋ
ವದೆ ಪೊಯ್ದಂ ತೋಳ್ಗ಼ಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಕೋ
ಪದೊಳಯ್ದಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ॥೧೯॥

ಭೀಮನ ದುರ್ನಯಕ್ಕೆ ದುರ್ಯೋಧನನು ಮೂರು ಏಟುಗಳನ್ನು ಬಿಗಿದರೆ ಪ್ರತಿಯಾಗಿ ದುರ್ಯೋಧನನ ಅಪರಾಧಗಳಿಗೆ ಐದು ಏಟುಗಳನ್ನು ಬಾರಿಸುತ್ತಾನೆ ಭೀಮ!

ಇದು= ಈ ಏಟು, ಲಾಕ್ಷಾಗೇಹದಾಹಕ್ಕೆ= ಅರಗಿನ ಮನೆಯನ್ನು ಸುಟ್ಟಿದ್ದಕ್ಕೆ, ಇದು = ಈ ಏಟು, ವಿಷಮ ವಿಷಾನ್ನಕ್ಕೆ= ಕ್ರೂರ ವಿಷಮಿಶ್ರಿತ ಆಹಾರವನ್ನು ತಿನ್ನಿಸಿದ್ದಕೆ, ಇದು=ಈ ಏಟು, ನಾಡಜೂದಿಂಗೆ= ಕಪಟ ದ್ಯೂತಕ್ಕೆ, ( ನಾಡ= ನಾೞ- ಮೋಸದ ನಾೞವಾಸೆಗೆ= ಮೋಸದ ದಾಳ , ಪಂಪ ಭಾರತ ೬-೬೮ ವಚನ ನೋಡಿ ) ಇದು= ಈ ಏಟು, ಪಾಂಚಾಲೀಪ್ರಪಂಚಕ್ಕೆ= ದ್ರೌಪದಿಯ ವಿಷಯಕ್ಕೆ, ( ದ್ರೌಪದಿಯನ್ನು ಅಪಮಾನಗೊಳಿಸಿದ್ದಕ್ಕೆ ) ಇದು=ಈ ಏಟು, ಕೃತಕಸಭಾ ಆಲೋಕನ ಭ್ರಾಂತಿಗೆ= ಕೃತಕ ಸಭೆಗೆ ಪಾಂಡವರನ್ನು ಆಮಂತ್ರಿಸಿದ ಹುಚ್ಚಾಟಕ್ಕೆ, ಎಂದು =ಎಂಬುದಾಗಿ
ಹೇಳುತ್ತಾ, ಓವದೆ= ನಿಷ್ಕರುಣೆಯಿಂದ, ಕಾಲ್ಗಳಂ= ಕಾಲುಗಳನ್ನು, ತೋಳ್ಗಳಂ=ಭುಜಗಳನ್ನು, ಅಗಲ್ದುರಮಂ= ಅಗಲ್ದ ಉರಮಂ= ವಿಶಾಲವಾದ ಎದೆಯನ್ನೂ, ಕೆನ್ನೆಯಂ= ಕಪೋಲವನ್ನೂ, ನೆತ್ತಿಯಂ=ನೆತ್ತಿಯನ್ನೂ, ಕೋಪದೊಳ್=ಕೋಪದಿಂದ, ಅಯ್ದು ದುರನಯಕ್ಕೆ= ಐದು ಅಪರಾಧಗಳಿಗೆ, ಅಯ್ದೆಡೆಯಂ= ಐದು ಭಾಗಗಳನ್ನು, ಉರು ಗದಾದಂಡದಿಂ= ಭಯಂಕರವಾದ ಗದಾದಂಡದಿಂದ, ಭೀಮಸೇನಂ=ಭೀಮನು, ಪೊಯ್ದಂ= ಹೊಡೆದನು.ತಾತ್ಪರ್ಯ :-  ಇದೋ ಈ ಏಟು ಅರಗಿನ ಮನೆಗೆ ಬೆಂಕಿ ಹಚ್ಚಿದ್ದಕ್ಕೆ! ಇದೋ ಈ ಏಟು ವಿಷಾನ್ನವನ್ನು ಇಕ್ಕಿದ್ದಕ್ಕೆ! ಇದೋ ಈ ಏಟು ಮೋಸದ ಜೂಜಾಟಕ್ಕೆ! ಇದೋ ಈ ಏಟು ದ್ರೌಪದಿಯನ್ನು ಪರಾಭವಗೊಳಿಸಿದ್ದಕ್ಕೆ! ಇದೋ ಈ ಏಟು ಮೋಸದಿಂದ ನಮ್ಮನ್ನು ಸಭೆಗೆ ಬರಮಾಡಿದ್ದಕ್ಕೆ! ಹೀಗೆ ಹೇಳುತ್ತಾ ಭೀಮನು ಕುಪಿತನಾಗಿ ನಿರ್ದಾಕ್ಷಿಣ್ಯದಿಂದ ದುರ್ಯೋಧನನ ಕಾಲುಗಳನ್ನೂ, ತೋಳುಗಳನ್ನೂ, ಅಗಲವಾದ ಎದೆಯನ್ನೂ, ಕೆನ್ನೆಯನ್ನೂ ಮತ್ತು ನೆತ್ತಿಯನ್ನೂತನ್ನ ಭೀಕರವಾದ ಗದೆಯಿಂದ ಅಪ್ಪಳಿಸಿದನು. ದುರ್ಯೋಧನನ ಐದು ಅನ್ಯಾಯಗಳಿಗೆ ಕ್ರಮವಾಗಿ ಐದು ಏಟುಗಳನ್ನು
ಬಾರಿಸಿದನು.

ಅಲಂಕಾರ :- ಯಥಾ ಸಂಖ್ಯೆ.

ಕುರುರಾಜಂ ವಿದ್ಯಾಧರ
ಕರಣದೆ ನೆಗೆದಂಬರಕ್ಕೆ ಗದೆಯಂ ಕ್ರಮದಿಂ
ತಿರುಪೆ ಧರಾಚಕ್ರಂ ಕೋ
ವರಚಕ್ರಂ ತಿರಿವ ತೆಱದಿ ತಿರಿದತ್ತೆನಸುಂ॥೨೪॥

ಕುರುರಾಜಂ= ದುರ್ಯೋಧನನು, ವಿದ್ಯಾಧರ ಕರಣದೆ= ಕೈಕಾಲುಗಳನ್ನು ವಿಶಿಷ್ಟರೀತಿಯಲ್ಲಿ ಸಂಕೋಚಗೊಳಿಸಿ  (ಅಂಗೋಪಾಂಗಗಳನ್ನು ಸಂಕೋಚಗೊಳಿಸಿ ಥಟ್ಟನೆ ನೆಗೆಯುವುದಕ್ಕೆ ವಿದ್ಯಾಧರ ಕರಣವೆಂದು ಹೆಸರು) ಅಂಬರಕ್ಕೆ ನೆಗೆದು=ಆಕಾಶಕ್ಕೆ ಲಂಘಿಸಿ, ಗದೆಯಂ ಕ್ರಮದಿಂ ತಿರುಪೆ= ಗದೆಯನ್ನು ಒಂದೇ ಸಮನೆ ಬೀಸುತ್ತಿರಲು, ಧರಾಚಕ್ರಂ= ಭೂಮಂಡಲವೇ, ಕೋವರಚಕ್ರಂ= ಕುಂಬಾರನ ಚಕ್ರವು ( ಕೋವ= ಕುಂಬಾರ ) ತಿರಿವ ತೆಱದಿ= ತಿರುಗುವ ರೀತಿಯಲ್ಲಿ,
ಎನಸುಂ= ಜೋರಾಗಿ ತಿರ್ದತ್ತು= ತಿರುಗಿತು.

ತಾತ್ಪರ್ಯ :- ಬಹಳ ಹೊತ್ತು ಹೋರಾಡುತ್ತದ್ದರೂ ಒಬ್ಬರನ್ನೊಬ್ಬರು ಗೆಲ್ಲೈವುದಕ್ಕಾಗದಿರಲು ಕುಪಿತನಾದ ದುರ್ಯೋಧನನು ತನ್ನ ದೇಹವನ್ನು ಕುಗ್ಗಿಸಿ ಥಟ್ಟನೆ ಆಕಾಶಕ್ಕೆ ಹಾರಿ ಜೋರಾಗಿ ಗದೆಯನ್ನು ಬೀಸುತ್ತಿರಲು ಕುಂಬಾರರ ಚಕ್ರವು ತಿರುಗುವಂತೆ ಭೂಮಂಡಲವೇ ಗರಗರನೆ ತಿರುಗಿತು.

ಅಲಂಕಾರ :- ಅತ್ಯುಕ್ತಿ.

ತೆಱಪಂ ನಿಟ್ಟಿಸಿ ಕುರುಪತಿ
ಬಱಸಿಡಿಲೆಱಗುವವೊಲೆಱಗಿಪೊಯ್ಯಲೊಡಂ ಮೆ
ಯ್ಮಱೆದು ಪವನಜನು ಮೇನೆಂ
ದಱಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥

ತೆಱಪಂ= ಸಂದರ್ಭವನ್ನು, ( ಅವಕಾಶವನ್ನು ) ನಿಟ್ಟಿಸಿ= ನೋಡಿ, ಕುರುಪತಿ= ದುರ್ಯೋಧನನು, ಬಱಸಿಡಿಲೆಱಗುವವೊಲೆಱಗಿ ಪೊಯ್ಯಲೊಡಂ= ಬರಸಿಡಿಲು ಬೀಳುವಂತೆ ಮೇಲೆ ಬಿದ್ದು ಹೊಡೆದಾಗ, ಪವನಜನುಂ= ಭೀಮನು ಕೂಡಾ, ಮಯ್ಮಱೆದು=ನಿಶ್ಚೇಷ್ಟಿತನಾಗಿ= ಏನೆಂದಱಿಯದೆ= ಏನಾಯಿತೆಂಬುದನ್ನು ತಿಳಿಯದೆ, ಮತಿವಿಕಳನಾಗಿ= ವಿವೇಕಶೂನ್ಯನಾಗಿ, ಮೂರ್ಚ್ಛೆಗೆ ಸಂದಂ= ಸ್ಮ್ರತಿ ತಪ್ಪಿ ಬಿದ್ದನು.

ತಾತ್ಪರ್ಯ :- ಸರಿಯಾದ ಸಂದರ್ಭವನ್ನು ನೋಡಿಕೊಂಡು ದುರ್ಯೋಧನನು ಬರಸಿಡಿಲು ಬೀಳುವಂತೆ ಮೇಲೆ ಬಿದ್ದು ಹೊಡೆದಾಗ ತನಗೇನಾಯಿತೆಂಬುದನ್ನು ತಿಳಿಯಲಾರದೆ ಬುದ್ಧಿಶೂನ್ಯನಾಗಿ ಭೀಮನು ಕೂಡ ಮೂರ್ಛಿತನಾಗಿ ಬಿದ್ದುಬಿಟ್ಟನು.

ಅಲಂಕಾರ :- ಉಪಮೆ.

ಇಱಿಯೆಂ ಬಿಳ್ದನನೆಂಬೀ
ಬಿಱುಬಿಂದಂ ಬೀಸೆ ಗದೆಯ ಗಾಳಿಯ ಕೋೞೆ
ೞ್ಚಚಱಿಸಿದುದು ಭೀಮನಂ ಮೆ
ಯ್ಮಱೆದವನಂ ತಂದೆ ಸುತರ್ಗೆ ಕೂರದರೊಳರೇ॥೩೨॥

ಬಿೞ್ದನಂ= ಬಿದ್ದವನನ್ನು, ಇಱಿಯೆಂ=ಕೊಲ್ಲೆನು,ಎಂಬ ಈ ಬಿಱುಬಿಂದಂ= ಎನ್ನುವ ಈ ಆವೇಶದಿಂದ,
( ಬಿಱುಬು=ತೀವ್ರತೆ, ಬಿರುಸು ) ಬೀಸೆ=ಬೀಸಿದಾಗ, ಗದೆಯ ಗಾಳಿಯ ಕೋೞ್= ಗದೆಯಿಂದ ಉಂಟಾದ ಗಾಳಿಯ ಶೈತ್ಯವು ( ಕೋಡು=ಕೋೞ್= ಶೈತ್ಯ ) ಮೆಯ್ಮಱೆದವನಂ ಭೀಮನಂ ಎೞ್ಚರಿಸಿದುದು= ಮೂರ್ಛಿತನಾದ ಭೀಮನನ್ನು ಎಚ್ಚರಗೊಳಿಸಿತು, ಸುತರ್ಗೆ ಕೂರದರ್= ಮಕ್ಕಳನ್ನು ಪ್ರೀತಿಸದ, ತಂದೆ=ತಂದೆಗಳೂ, ಒಳರೆ=ಇದ್ದಾರೆಯೇ? ಇಲ್ಲ.

ತಾತ್ಪರ್ಯ:- ಯುದ್ಧದಲ್ಲಿ ಬಿದ್ದವನ್ನು ಕೊಲ್ಲಲಾರೆನು ಎನ್ನುವ ಆವೇಶವುಳ್ಳ ದುರ್ಯೋಧನನು ತನ್ನ ಗದೆಯನ್ನು ರಭಸದಿಂದ ಬೀಸುತ್ತಿದ್ದಾಗ ಗದೆಯ ಗಾಳಿಯ ತಂಪು ತಟ್ಟಿ ಸ್ಮೃತಿತಪ್ಪಿ ಬಿದ್ದಿದದ್ದ ಭೀಮನು ಚೇತರಿಸಿದನು. ಗಾಳಿಯ ಸ್ಪರ್ಶದಿಂದ ಭೀಮನು ಎಚ್ಚರಗೊಂಡುದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಮಕ್ಕಳನ್ನು ಪ್ರೀತಿಸದ ತಂದೆಗಳೂ ಇದ್ದಾರೆಯೇ? ಇಲ್ಲವೆಂಬ ಭಾವ.

ಭೀಮನು ವಾಯುಪುತ್ರನಲ್ಲವೇ? ವಾಯುಸ್ಪರ್ಶದಿಂದ ಭೀಮನು ಎಚ್ಚರಗೊಂಡನು ಎನ್ನುವ ಕಲ್ಪನೆ ಸಹಜಸುಂದರವಾಗಿದೆ.

ಅಲಂಕಾರ :- ಅರ್ಥಾಂತರನ್ಯಾಸ.

ಇಡೆ ತೊಡೆಯನುಡಿದು ನೆಟ್ಟನೆ
ಕೆಡೆಯುತ್ತುಂ ಕರ್ಚಿ ನೆಲನನಾನಿದನೆಂತುಂ
ಬಿಡೆನೆಂಬ ತೆಱದೆ ಕುಲಗಿರಿ
ಕೆಡೆವಂದದೆ ಕೌರವೇಂದ್ರನಾಗಳ್ ಕೆಡೆದಂ॥೩೭॥

ಇಡೆ= (ಗದಾದಂಡದಿಂದ ) ಹೊಡೆದಾಗ, ತೊಡೆಯಂ ಉಡಿದು= ತೊಡೆಗಳು ಮುರಿದು, ನೆಟ್ಟನೆ ಕೆಡೆಯುತ್ತುಂ= ನೇರವಾಗಿ ಬೀಳುತ್ತಾ, ನೆಲನಂ ಆಂ ಇದಂ ಎಂತುಂ ಬಿಡೆಂ ಎಂಬ ತೆಱದೆ= ಈ ಭೂಮಿಯನ್ನು ನಾನು ಎಷ್ಟು ಮಾತ್ರಕ್ಕೂ ಪಾಂಡವರಿಗೆ ಬಿಟ್ಟುಕೊಡಲಾರೆನು ಎಂಬ ಹಾಗೆ, ಕರ್ಚಿ= ( ಭೂಮಿಯನ್ನು ) ಕಚ್ಚಿ ಹಿಡಿದು, ಕುಲಗಿರಿಕೆಡೆವಂದದೆ= ಕುಲಪರ್ವತವು ಕುಸಿದು ಬೀಳುವಂತೆ, ಆಗಳ್ ಕೌರವೇಂದ್ರಂ ಕೆಡೆದಂ= ಆಗ ಕೌರವೇಂದ್ರನು ಬಿದ್ದು ಬಿಟ್ಟನು.

ತಾತ್ಪರ್ಯ :- ಭೀಮನ ಭೀಕರ ಹೊಡೆತಕ್ಕೆ ತೊಡೆಗಳು ಮುರಿದು ನೆಟ್ಟಗೆ ಬೀಳುತ್ತಿದ್ದಂತೆಯೇ “ ಈ ನೆಲವನ್ನು ಎಷ್ಟುಮಾತ್ರಕ್ಕೂ ( ಪಾಂಡವರಿಗೆ ) ಬಿಟ್ಟುಕೊಡಲಾರೆನು “ ಎನ್ನುವಂತೆ ಭೂಮಿಯನ್ನು ಕಚ್ಚಿ ಹಿಡಿಯುತ್ತಾ ಕುಲಾಚಲವು ಕುಸಿದು ಬೀಳುವಂತೆ ಕೌರವೇಂದ್ರನು ಬಿದ್ದುಬಿಟ್ಟನು.

ತೊಡೆ ಮುರಿದು ಸಹಜವಾಗಿ ಕವಚಿಬಿದ್ದ ಕೌರವೇಂದ್ರನನ್ನು ಕವಿ ಸಹಾನುಭೂತಿಯಿಂದ ಕಾಣುತ್ತಾನೆ. ಆತನ ಕಲ್ಪನೆ ಗರಿಗೆದರಿ ಹಾರುತ್ತಿದೆ. ದುರ್ಯೋಧನನ ಛಲವನ್ನು ಕೊಂಡಾಡುವ ಇಲ್ಲಿಯ ಉತ್ಪ್ರೇಕ್ಷೆ “ ಬಲ್ಸೊಗಸು, ಬಲ್ಸೊಗಸು! “
“ ಅಂತು ಸತ್ತುಂ ನೆಲನಂ ಪತ್ತುವಿಡೆನೆಂಬಂತೆ ನೆಲನಂ ಪತ್ತಿ” ಎಂಬ ಪಂಪಭಾರತದ ಮಾತನ್ನು ( ೧೩-೯೯)ಹೋಲಿಸಿ.

ಬಲದೇವಾದಿಗಳಾಗದಾಗದೊದೆಯಲ್ಕೇಕಾದಶಾಕ್ಷೋಹಿಣೀ
ಬಲಲಕ್ಷ್ಮೀಪತಿಯಂ ಪರಾಭವಿಸದಿರ್ ಚಿಃ ತಕ್ಕುದಲ್ಲೆಂದು ಮಾ
ರ್ಕೊಳೆಯುಂ ಮಾಣದೆ ಭೀಮಸೇನನೊದೆದಂ ವಾಮಾಂಘ್ರಿಯಿಂ ರತ್ನಮಂ
ಡಲರಶ್ಮಿಪ್ರಕಟಜ್ವಲನ್ಮಕುಟಮಂ ಕೌರವರಾಜೇಂದ್ರನಾ॥೩೯॥

ಬಲದೇವಾದಿಗಳ್= ಬಲರಾಮನೇ ಮೊದಲಾದವರು, ಆಗದು ಆಗದು ಒದೆಯಲ್ಕೆ= ಒದೆಯ ಕೂಡದು ಕೂಡದು, ಏಕದಶಾಕ್ಷೋಣೀ ಬಲಲಕ್ಷ್ಮೀಪತಿಯಂ ಪರಾಭವಿಸದಿರ್= ಹನ್ನೊಂದು ಅಕ್ಷೋಹಿಣೀ ಸೈನ್ಯಕ್ಕೆ ಅಧೀಶ್ವರನಾದವನನ್ನು
ಅಪಮಾನಗೊಳಿಸಬೇಡ! ಚಿಃ ತಕ್ಕುದಲ್ಲ=ಚಿಃ ಯೋಗ್ಯವಲ್ಲ, ಎಂದು ಮಾರ್ಕೊಳೆಯುಂ= ಹೀಗೆನ್ನುತ್ತಾ ಪ್ರತಿಭಟಿಸುತ್ತಿದ್ದರೂ, ಮಾಣದೆ=ಬಿಡದೆ, ಭೀಮಸೇನಂ=ಭೀಮನು, ಕೌರವ್ಯರಾಜೇಂದ್ರನಾ= ಕೌರವೇಶ್ವರನ, ರತ್ನಮಂಡಲರಶ್ಮಿಪ್ರಕಟಜ್ವಲನ್ಮಕುಟಮಂ= ನವರತ್ನಗಳ ಸಮೂಹದ ಕಾಂತಿಯಿಂದ ಬೆಳಗುತ್ತಿದ್ದ ಕಿರೀಟವನ್ನು
ವಾಮಾಂಘ್ರಿಯಿಂದಂ ಒದೆದಂ= ಎಡಗಾಲಿನಿಂದ ತುಳಿದೇ ಬಿಟ್ಟನು!

ಬಲದೇವಾದಿಗಳು ಒದೆಯಬೇಡ, ಬೇಡ ! ಹನ್ನೊಂದು ಅಕ್ಷೋಹಿಣೀ ಬಲಕ್ಕೆ ಅಧಿಪತಿಯಾಗಿರುವ ಕೌರವೇಶ್ವರನನ್ನು ಅವಮಾನಗೊಳಿಸಬೇಡ. ಚಿಃ ನಿನ್ನಂಥವನಿಗೆ ಇದು ಯೋಗ್ಯವಲ್ಲ ಎಂದು ತಡೆಯುತ್ತಿದ್ದರೂ ಕೇಳದೆ, ರತ್ನಗಳ ಸಮೂಹದ ಕಾಂತಿಯಿಂದ ಜಗಜಗಿಸುತ್ತಿದ್ದ ಕೌರವೇಂದ್ರನ ಕಿರೀಟವನ್ನು ಭೀಮಸೇನನು, ಅದೂ ಎಡಗಾಲಿಂದ ತುಳಿದೇ ಬಿಟ್ಟನು.

ಮುಳಿಸಿಂ ನಂಜಕ್ಕಿಕೊಂದಂದಿನ ಜತುಗೃಹದೊಳ್ ಸುಟ್ಟುಕೊಂದಂದಿನುರ್ವೀ
ತಳಮಂ ಜೂದಾಡಿ ಗೆಲ್ದಂದಿನ ನಿಜಕಬರೀನೀವಿಬಂಧಂಗಳಂ ದೋ
ರ್ವಳದಿಂದಂ ತಮ್ಮನಿಂದಂ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಸಂ
ಚಳನಾ ಚಂಡಾಲನಾ ಪಾತಕನಿರವನಿದಂ ನೋಡು ಪಂಕೇಜವಕ್ತ್ರೇ॥೪೫॥

ಪಂಕೇಜವಕ್ತ್ರೇ= ಕಮಲಮುಖೀ, ಮುಳಿಸಿಂ ನಂಜಿಕ್ಕಿ ಕೊಂದಂದಿನ ಆ ನೀಚನ= ನನ್ನ ಮೇಲಿನ ದ್ವೇಷದಿಂದ ವಿಷದ ಲಡ್ಡುಗೆಗಳನ್ನು ತಿನ್ನಿಸಿ ಕೊಲ್ಲುವುದಕ್ಕೆ ನೋಡಿದ ಆ ದಿನದ ಆ ನೀಚನ, ಜತುಗೃಹದೊಳ್ ಸುಟ್ಟು ಕೊಂದಂದಿನ ಆ ದ್ರೋಹನಂ= ಅರಗಿನ ಮನೆಯಲ್ಲಿ ನಮ್ಮನ್ನು ಸುಟ್ಟು ಕೊಲ್ಲುವುದಕ್ಕಾಗಿ ಯತ್ನಿಸಿದ ಆ ದ್ರೋಹಿಯ, ಉರ್ವೀತಳಮಂ
ಜೂದಾಡಿ ಗೆಲ್ದಂದಿನ= ಕಪಟ ಜೂಜಿನಿಂದ ನಮ್ಮ ವಶವಿದ್ದ ಭೂಭಾಗವನ್ನು ಗೆದ್ದ ಆ ದಿನದ ಚಂಚಲನ, ನಿಜಕಬರೀನೀವಿಬಂಧಂಗಳಂ ದೋರ್ವಳದಿಂದಂ ತಮ್ಮನಿಂದಂ ತೆಗೆಯಿಸಿ ನಡೆದಾ= ನಿನ್ನ ತುರುಬನ್ನು ಬಾಹುಬಲದಿಂದ ತಮ್ಮನಿಂದ ಹಿಡಿದೆಳೆಯಿಸಿ ಹೋದ, ಆ ಚಂಡಾಲನ,ನಿನ್ನ ಉಡಿಗಂಟನ್ನು ಸುಲಿಸಿದ ಆ ಪಾತಕನ, ಇರವಂ ಇಂದು ನೋಡು= ಇಂದಿನ ಅವಸ್ಥೆಯನ್ನು ಕಣ್ದಣಿಯೆ ನೋಡಿಕೋ!

ತಾತ್ಪರ್ಯ :- ಎಲೌ ಕಮಲಮುಖೀ! ಅಂದು ನನ್ನ ಮೇಲಿನ ದ್ವೇಷದಿಂದ ವಿಷದ ಲಡ್ಡುಗೆಗಳನ್ನು ತಿನ್ನಿಸಿ ನನ್ನನ್ನು ಕೊಲ್ಲುವುದಕ್ಕೆ ನೋಡಿದ ಆ ನೀಚನ, ಅರಗಿನ ಮನೆಗೆ ಬೆಂಕಿ ಹಚ್ಚಿ ನಮ್ಮನ್ನೆಲ್ಲ ಸುಟ್ಟುಹಾಕುವುದಕ್ಕೆ ಯತ್ನಿಸಿದ ಆ ದ್ರೋಹಿಯ, ಮೋಸದಿಂದ ಜೂಜಾಡಿ ನಮ್ಮ ಅಧೀನವಿದ್ದ ಭೂಭಾಗವನ್ನು ಗೆದ್ದ ಆ ಚಂಚಲಚಿತ್ತನ, ನಿನ್ನ ಸಿರಿಮುಡಿಗೆ ಕೈಯಿಕ್ಕಿ ಸೆಳೆಯುವಂತೆ ಬಾಹುಬಲದಿಂದ ತಮ್ಮನನ್ನು ಪ್ರೇರೇಪಿಸಿದ ಆ ಚಾಂಡಾಲನ, ನಿನ್ನ ಉಡಿಗಂಟನ್ನು ಸೆಳೆಯಿಸಿದ ಆ ಪಾತಕನ ಈ ಅವಸ್ಥೆಯನ್ನು ಕಣ್ಣಾರೆ ನೋಡು!

“ ಪಂಕಜವಕ್ತ್ರೇ “ ಎಂಬ ಸಂಬೋಧನೆ ಈ ಸಂದರ್ಭಕ್ಕೆ ಒಪ್ಪುವಂತಥಾದ್ದು! ದ್ರೌಪದಿಯ ಮುಖದಲ್ಲಿ ಹಿಂದೆಂದೂ ಕಾಣದ ದಿವ್ಯ ತೇಜಸ್ಸನ್ನು ಕಾಣುತ್ತಾನೆ ಭೀಮ! ಅವಳ ಮುಖವು ಆಗತಾನೆ ಅರಳಿದ ಕಮಲದಂತೆ ನಳನಳಿಸುತ್ತಿತ್ತು ಎಂಬ ಭಾವ.

ಅಲಂಕಾರ :- ಯಥ್ಸಂಖ್ಯೆ.

ಅರಸಂ ದೀಕ್ಷಿತನಿಲ್ಲಿ ಋತ್ವಿಜರುಮೆಮ್ಮೀ ನಾಲ್ವರುಂ ಸಂಗರಾ
ಧ್ವರದೊಳ್ ತಾನುಪದೇಶಕಂ ಮುರಹರಂ ನೀನುಂ ಗೃಹೀತವ್ರತಾ
ಚರಣವ್ಯಾಪಿಕೆಯುಂ ಭವತ್ಪರಿಭವಂ ಸಂಚಾರಕಂ ಕೌರವೇ
ಶ್ವರನೀತಂ ಪಶುವಾಗೆಬೇಳ್ದೆನಿವಂ ಕೋಪಾಗ್ನಿಯಿಂದಗ್ನಿಜೇ॥೪೬॥

ಅಗ್ನಿಜೇ= ಅಗ್ನಿ ಪುತ್ರಿಯಾದ ದ್ರೌಪದೀ, ಸಂಗರಾಧ್ವರದೊಳ್= ಈ ಯುದ್ಧದಲ್ಲಿ, ಅರಸಂ= ರಾಜನಾದ ಧರ್ಮರಾಯನು, ದೀಕ್ಷಿತಂ= ವ್ರತಾರಂಭವನ್ನು ಮಾಡಿದವನು, ಲ್ಲಿ ಎಮ್ಮ ಈ ನಾಲ್ವರುಂ= ಇಲ್ಲಿ ನಾವು ನಾಲ್ಕು ಮಂದಿಯೂ, ಋತ್ವಿಜರು= ಮಂತ್ರ ಪುರಸ್ಸರವಾಗಿ ಹೋಮಮಾಡುವ ಹೋತೃ, ಅಧ್ವರ್ಯು=ಉದ್ಗಾತೃಮತ್ತು ಬ್ರಹ್ಮ ಎಂಬ ನಾಲ್ವರು ಋತ್ವಿಜರು, ಮುರಹರಂ=ಕೃಷ್ಣನೇ, ತಾಂ ಉಪದೇಶಕ= ಸ್ವತಃ ಕರ್ಮೋಪದೇಶಮಾಡುವ ಆಚಾರ್ಯ, ನೀನುಂ= ನೀನೂ ಕೂಡ, ಗೃಹೀತವ್ರತ ಆಚರಣ ವ್ಯಾಪ್ತಿಕೆಯುಂ=ವ್ರತಾಚರಣೆಯನ್ನು ಕೈಕೊಂಡವಳು, ಭವತ್ಪರಿಭವಂ= ನಿನ್ನ ಅವಮಾನವೇ, ಸಂಚಾರಕಂ= ಯಜ್ಞಾಗ್ನಿಯನ್ನು ಉಜ್ವಲಿಸುವ ವಾಯು, ಕೌರವೇಶ್ವರಂ ಈತಂ ಪಶುವಾಗೆ= ಈ ದುರ್ಯೋಧನನೇ ಯಾಗದ ಪಶುವಾಗಲು, ಇವನಂ= ಈತನನ್ನು, ಕೋಪಾಗ್ನಿಯಿಂದೆ ಬೇಳ್ದೆಂ= ಕೋಪಾಗ್ನಿಯಲ್ಲಿ ಹೋಮಿಸಿದೆನು. ಈ ಪದ್ಯದಲ್ಲಿ ದ್ರೌಪದಿಯನ್ನು “ ಅಗ್ನಿಜೇ “ ಎಂದು ಸಂಬೋಧಿಸಿದುದು ಔಚಿತ್ಯಪೂರ್ಣವಾಗಿದೆ.

ಈ ಪದ್ಯದಲ್ಲಿ ಭೀಮನು ಕೌರವ ವಧೆಯನ್ನು ಒಂದು ಯಾಗಕ್ಕೆ ಹೋಲಿಸುತ್ತಾನೆ. ಈ ಭಾರತಾಹವಯಜ್ಞದಲ್ಲಿ ಧರ್ಮರಾಯನೇ ಯಜಮಾನನು. ಭೀಮಾರ್ಜುನನಕುಲಸಹದೇವರಾದ ನಾವು ನಾಲ್ವರೂ ಋತ್ವಿಜರು. ಸ್ವತಃ ಶ್ರೀಕೃಷ್ಣನೇ ಧರ್ಮೋಪದೇಶಮಾಡುವ ಆಚಾರ್ಯನು. ನೀನು ಕೂಡ ವ್ರತಾಚರಣೆಯಲ್ಲಿ ನಿರತಳಾದವಳೇ. ನಿನ್ನ ಅವಮಾನವೇ ಯಜ್ಞಾಗ್ನಿಯನ್ನು ಪ್ಜ್ವಲಿಸುವ ಅನಿಲ. ಕೌರವನೇ ಯಜ್ಞಪಶುವಾಗಲು ಇವನನ್ನು ನನ್ನ ಕೋಪಾನಲಕ್ಕೆ ಆಹುತಿಕೊಟ್ಟೆನು.

“ ಅನಲಾನಿಲ ಸಂಯೋಗಂ ಉರಿಪದಿರ್ಕುಮೆ ಪಗೆಯಂ” ಎಂಬ ಭೀಮನ ವಚನವನ್ನು ಇಲ್ಲಿ ಸ್ಮರಿಸಬಹುದು.

ಅಲಂಕಾರ :- ರೂಪಕ.

ಇದಱೊಳ್ ಮೂರ್ಧಾಭಿಷಿಕ್ತರ್ ಮಣಿಮಕುಟಧರರ್ ಕೃಷ್ಣೆ ಬಾಹಾಬಳಾಗ್ರ್ಯರ್
ಕದನಪ್ರೋಚ್ಚಂಡದಂಡಕ್ರಮವಿಜಿತರಿಪುಕ್ಷತ್ರಿಯರ್ ವೀರಲಕ್ಷ್ಮೀ
ಸದನರ್ಸೋಮಾಮೃತಾಸ್ವಾದನಶುಚಿವದನರ್ ಮುನ್ಮೞ್ಕಾಡಿದರ್ ನೋ
ಡಿದು ನಿನ್ನೀ ಕೇಶಪಾಶಂ ಕುರುಕುಲಪತಿಗಾಯ್ತಲ್ತೆ ಕೀನಾಶಪಾಶಂ॥೪೯॥

ಕೃಷ್ಣೇ! ಇದಱೊಳ್= ಈ ಕೇಶಪಾಶದಲ್ಲಿ, ( ಎಂದರೆ, ಇದರ ಮಹಿಮೆಯಿಂದಾಗಿ) ಮುನ್ನಂ= ಹಿಂದೆ , ಮೂರ್ಧಾಭಿಷಿಕ್ತರ್= ಪಟ್ಟಾಭಿಷೇಕ ಮಾಡಿಸಿಕೊಂಡ ರಾಜರು, ಮಣಿಮಕುಟಧರರ್= ರತ್ನಮಕುಟವನ್ನು ಧರಿಸಿದವರು, ಬಾಹಾಬಳಾಗ್ರ್ಯರ್= ಬಾಹುಬಲದಲ್ಲಿ ಅಗ್ರಗಣ್ಯರಾದವರು, ಕದನಪ್ರೋಚ್ಚಂಡದಂಡಕ್ರಮವಿಜಿತರಿಪುಕ್ಷತ್ರಿಯರ್= ಅತ್ಯುಗ್ರವಾದ ದಂಡಕ್ರಮದಿಂದ ಶತ್ರುಗಳನ್ನು ಜಯಿಸಿದವರು, ವೀರಲಕ್ಷ್ಮೀಸದನರ್= ವೀರಲಕ್ಷ್ಮಿಗೆ ನೆಲೆಮನೆಯಾದವರು, ಸೋಮಾಮೃತಾಸ್ವಾದನಶುಚಿವದನರ್= ( ಯಜ್ಞಯಾಗಾದಿಗಳನ್ನು ಮಾಡಿ) ಸೋಮರಸವನ್ನು ಸವಿದು ಪವಿತ್ರವಾದ ವದನವುಳ್ಳವರು, ಅೞ್ಕಾಡಿದರ್= ನಿಶ್ಶೇಷರಾದರು, ನೋಡ=ನೋಡು, ಇದು ನಿನ್ನೀ ಕೇಶಪಾಶಂ= ಈ ನಿನ್ನ ಕೇಶರಾಶಿಯು, ಕುರುಕುಲಪತಿಗೆ= ದುರ್ಯೋಧನನಿಗೆ, ಕೀನಾಶಪಾಶಂ= ಯಮಪಾಶವಾಗಿ, ಆಯ್ತಲ್ತೆ= ಪರಿಣಮಿಸಿತಲ್ಲವೇ!

ತಾತ್ತ್ಪರ್ಯ :- ದ್ರೌಪದಿಯ ಸಿರಿಮುಡಿಯನ್ನು ಸುಟ್ಟಿ ತೋರಿಸುತ್ತಾ ಭೀಮನುಭೀಮನು ಹೀಗೆಂದನು: ಕೃಷ್ಣೆ! ಈ ನಿನ್ನ ಕೇಶಪಾಶಪ್ರಪಂಚದಲ್ಲಿ, ಈ ಮೊದಲು ಪಟ್ಟಾಭಿಷಿಕ್ತರಾದವರು, ನವರತ್ನ ಖಚಿತವಾದ ಕಿರೀಟವನ್ನು ಧರಿಸಿದವರು, ಬಾಹುಬಲದಲ್ಲಿ ಅಗ್ರಗಣ್ಯರಾದವರು, ಭಯಂಕರವಾದ ಆಯುಧಗಳಿಂದ ಶತ್ರುಗಳನ್ನು ಗೆದ್ದವರು, ವೀರಾಂಗನೆಗೆ ನೆಲೆವೀಡಾದವರು, ಸೋಮರಸವನ್ನು ಆಸ್ವಾದಿಸಿ ಪವಿತ್ರವಾದ ಮುಖವುಳ್ಳವರು, ಸರ್ವರೂ ನಿರ್ನಾಮವಾದರು ಕಂಡೆಯಾ! ಮಾತ್ರವಲ್ಲ ನಿನ್ನ ಈ ಕೇಶಪಾಶವೇ ಕೌರವೇಂದ್ರನಿಗೆ ಯಮಪಾಶವಾಗಿ ಪರಿಣಮಿಸಿತಲ್ಲವೇ!

ಈ ಪದ್ಯದ ಓಜೋಪೂರ್ಣವಾದ ಶೈಲಿಯೂ ಛಂದಸ್ಸೂ ಭೀಮನ ಭಾವನೆಗಳನ್ನುಸೊಗಸಾಗಿ ಬಿಂಬಿಸುತ್ತವೆ. “ ನಿನ್ನೀ ಕೇಶಪಾಶಂ ಕುರುಕುಲಪತಿಗ್ಯ್ತಲ್ತೆ ಕೀನಾಶಪಾಶಂ” ಎಂಬಲ್ಲಿ ರನ್ನನ ಅದ್ಭುತ ಪ್ರತಿಭೆಯ ವಿದ್ಯುಲ್ಲತಾಪ್ರಭೆಯನ್ನು ಕಾಣಬಹುದು. ಪಂಪಭಾರತದಲ್ಲಿ ದುಶ್ಯಾಸನನ ವಧೆಯಾದೊಡನೆ ಭೀಮನು ದ್ರೌಪದಿಯ ಮುಡಿಯನ್ನು ಕಟ್ಟುತ್ತಾನೆ.ಇಲ್ಲಿ ತನ್ನ ಪ್ರತಿಜ್ಞೆಗಳನ್ನೆಲ್ಲ ಪೂರೈಸಿದ ಬಳಿಕ ವಿಜಯಕ್ಕೆಶಕಳಶವಿಟ್ಟಂತೆ ಭೀಮನು ವೇಣೀಸಂಹಾರವನ್ನು ಮಾಡುತ್ತಾನೆ. ರಸೌಚಿತ್ಯಗಳ ದೃಷ್ಟಿಯಿಂದ ಇದು ಉಚಿತವೇ ಸರಿ.

ಅಲಂಕಾರ :- ಅತಿಶಯೋಕ್ತಿ, ರೂಪಕ.

ಉಪಕಾರ ಸ್ಮರಣೆ
ಪ್ರೊ. ಪಿ. ಸುಬ್ರಾಯ ಭಟ್

ಅನೃತಂ ಲೋಭಂ ಭಯಮೆಂ
ಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂ
ದನ ನನ್ನಿ ಚಾಗಮಣ್ಮೆಂ
ಬಿನಿತರ್ಕಂ ನೀನೆ ಮೊತ್ತಮೊದಲಿಗನಾದಯ್ ||೧೭|| ( ಪಂಚಮಾಶ್ವಾಸಂ)

ಆನಱಿವೆಂ ಪೃಥೆಯಱಿವಳ್
ದಾನವರಿಪುವಱಿವನರ್ಕನಱಿವಂ ದಿವ್ಯ
ಜ್ಞಾನಿ ಸಹದೇವನಱಿವಂ
ನೀನಾರ್ಗೆಂದಾರುಮಱಿಯರಂಗಾಧಿಪತೀ || ೧೮|| ( ಪಂಚಮಾಶ್ವಾಸಂ )

12 ಕಾಮೆಂಟ್‌ಗಳು:

  1. ಮಾನ್ಯರೆ,
    ನಿಮ್ಮ ಬರೆವಣಿಗೆ ಹಾಗೂ ಪದಶಃ ಅರ್ಥ ಬಹಳ ಉಪಯೋಗವಾಗುತ್ತದೆ

    ನೀವು ಗದಾಯುದ್ಧದ ಯಾವ ಆವೃತ್ತಿಯನ್ನು ಅನುಸರಿಸುತ್ತಿದ್ದೀರ? ಈ ಪದ್ಯಗಳ ಸಂಖ್ಯೆ ತೀ.ನಂ.ಶ್ರೀ ಯವರ ಗದಾಯುದ್ಧ ಸಂಗ್ರಹದೊಂದಿಗೆ ಹೊಂದುವುದಿಲ್ಲ.(ಹಾಗೂ ಕೆಲವು ಪದ್ಯಗಳು ಅಲ್ಲಿ ಸಿಗುತ್ತಲೇ ಇಲ್ಲ).

    ನೀವು ಬಳಸುವ ಆವೃತ್ತಿಯು ಲಭ್ಯವಿದ್ದರೆ (ಪುಸ್ತಕ ಅಥವಾ ಅಂತರ್ಜಾಲದಲ್ಲಿ) ದಯವಿಟ್ಟು ತಿಳಿಸಿ.

    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ನಾನು ಅನುಸರಿಸುತ್ತಿರುವ ಕೃತಿಯ ಹೆಸು " ಗದಾಯುದ್ಧ ದರ್ಪಣಂ "
    ಕೃತಿಕಾರರು ( ವ್ಯಾಖ್ಯಾನಕಾರ ಮತ್ತು ಪ್ರಕಾಶಕ - ಪ್ರೊ. ಪಿ. ಸುಬ್ರಾಯ ಭಟ್. ಸರಕಾರಿ ಕಲಾಶಾಲೆ,ಅಂಚೆ ವಿದ್ಯಾನಗರ, ಕಾಸರಗೋಡು - 3, ಕೇರಳ.)

    ಲಭ್ಯತೆಯ ಬಗ್ಗೆ ಮಾಹಿತಿ ಇಲ್ಲ.

    ಪ್ರತ್ಯುತ್ತರಅಳಿಸಿ
  3. ಕನ್ನಡಕ್ಕೆ ದೊಡ್ಡ ಸೇವೆ ಮಾಡಿದ್ದೀರಿ ! ಧನ್ಯವಾದಗಳು!!

    ಪ್ರತ್ಯುತ್ತರಅಳಿಸಿ
  4. Very good - If complete text with treatise was available - it would have been s gem gift to hale-Kannada lovers!!

    ಪ್ರತ್ಯುತ್ತರಅಳಿಸಿ
  5. ನಮ್ಮಂತಹ ಹಳಗನ್ನಡ ಅಭ್ಯಾಸಕರಿಗೆ ತುಂಬಾ ಸಹಕಾರಿಯಾಗುತ್ತಿದೆ, ನಿಮ್ಮ ಪ್ರಯತ್ನ ನಿರಂತರವಾಗಿರಲಿ. ವಂದನೆಗಳು ಮಹನಿಯರೇ.

    ಪ್ರತ್ಯುತ್ತರಅಳಿಸಿ
  6. ೯ ಮತ್ತು ೧೧ ನೇ ಆಶ್ವಾಸವನ್ನು ಕೊಟ್ಟಿದ್ದರೆ ಇನ್ನೂ ಅನುಕೂಲಬಾಗುತ್ತಿತ್ತು.

    ಪ್ರತ್ಯುತ್ತರಅಳಿಸಿ
  7. ದುರ್ಯೋಧನನು ಯುದ್ಧ ಭೂಮಿಯಲ್ಲಿ ಸಂಜನಾ ಹೆಗಲ ಸಹಾಯದಿಂದ ಏಕೆ ನಡೆಯುವನು. ಸಂಜನು ಹಿರೀಕನಾದರೂ ಇವನಿಗೆ ಅಂತಹ ಅವಕಾಶ ಕೊಟ್ಟನೇ?
    ಇಭಶೈಲಂಗಳಂ ದಾಂಟಿ ದಾಂಟಿ... ಯಲ್ಲಿ ಬರುವ ಸನ್ನಿವೇಶ.

    ಪ್ರತ್ಯುತ್ತರಅಳಿಸಿ