ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಫೆಬ್ರವರಿ 6, 2021

ಲಕ್ಷ್ಮೀಶನ ಜೈಮಿನಿ ಭಾರತ ( ಸಂಗ್ರಹ ) ಭಾವಾರ್ಥ ಸಹಿತ

 

ಲಕ್ಷ್ಮೀಶನ

ಜೈಮಿನಿ ಭಾರತ ( ಸಂಗ್ರಹ ) ಭಾವಾರ್ಥ ಸಹಿತ


ಮೊದಲನೆಯ ಸಂಧಿ 

ಪೀಠಿಕಾ ಸಂಧಿ

ವಾರ್ಧಕ ಷಟ್ಪದಿ 


ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ 

ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ 

ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ 

ಆವಗಂ ಸರಹ ಕರುಣಾಮೃತದ ಕಲೆಗಳಿಂ 

ತೀವಿದೆಳನಗೆಯ ಬೆಳುದಿಂಗಳಂ ಪಸರಿಸುವ 

ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ ॥೧॥


ಶ್ರೀ ಲಕ್ಷ್ಮೀದೇವಿಯ ಕಣ್ಣುಗಳೆಂಬ ಚಕೋರ ಪಕ್ಷಿಗಳನ್ನು ಸಲಹುವ, ಭಕ್ತ ಜನರ ಹೃದಯಗಳೆಂಬ ಕನ್ನೈದಿಲೆಗಳ ಮೊಗ್ಗುಗಳನ್ನರಳಿಸುವ, ಜಗತ್ತಿನ ಸೌಭಾಗ್ಯ ಸಮುದ್ರವನ್ನು ಉಕ್ಕಿಸುವ, ಯಾವಾಗಲೂ ಸರಸ, ಕರುಣ ಅಮೃತಗಳೆಂಬ ಕಲೆಗಳಿಂದ ತುಂಬಿದ ಮಂದಹಾಸವನ್ನು ಬೀರುವ ದೇವಪುರವಾಸ ಶ್ರೀ ಲಕ್ಷ್ಮೀಕಾಂತಸ್ವಾಮಿಯ ಮುಖವೆಂಬ ಚಂದ್ರನು,ನಮಗೆ ಆನಂದವನ್ನು ಕೊಡಲಿ. 


ಪ್ರಸ್ತುತ ದೊಳೊಗೆದ ಮುಂಬೆಳಗಮಲದಂತದ ಗ 

ಭಸ್ತಿ ನವ ಪೂರ್ವ ಸಂಧ್ಯಾರುಣಂ ಭಾಳವಿ 

ನ್ಯಸ್ತ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮೂಡುವೆಳನೇಸರೆಹಸೆವ 

ಮಸ್ತಕದ ಮಣಿಮಕುಟಮಾಗಲುದಯಾಚಲದ 

ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ 

ಮಸ್ತ ಸಿದ್ಧಿಪ್ರದಾಯಕ ವಿನಾಯಕ ಮಾಳ್ಪುದೆಮಗೆ ನಿರ್ವಿಘ್ನತೆಯನು ॥೩॥


ಪೂರ್ವಾಚಲದ ಸುತ್ತಲೂ ಸೂರ್ಯೋದಯಕ್ಕೆ ಮೊದಲು ಮುಂಬೆಳಕು ಕಾಣುತ್ತದೆ.ಬಳಿಕ ಅರೈಣನ ಬೆಳಕು ಹರಡುತ್ತದೆ. ಬಳಿಕ ಹೊಂಬಿಸಿಲನ್ನು ಬೀರುವ ಸೂರ್ಯೋದಯ. ಗಣಪತಿಯ ದಂತಕಾಂತಿಯೇ ಮುಂಬೆಳಗು. ಅವನ ಹಣೆಯ ಸಿಂಧೂರ ಕಾಂತಿಯೇ ಅರೈಣನ ಬೆಳಕು. ಅವನ ಕಿರೀಟವೇ ಹೊಂಬಿಸಿಲನ್ನು ಹರಡುವ ಸೂರ್ಯ.  ಹೀಗೆ ಸಮಸ್ತ ಸಿದ್ಧಿಗಳನ್ನು ದಯಪಾಲಿಸುವ ವಿನಾಯಕನು ಪೂರ್ವಾಚಲ. ಅವನು ನಮಗೆ ನಿರ್ವಿಘ್ನವನ್ನುಂಟುಮಾಡಲಿ. 


ಭೂವ್ಯೋಮ ಪಾತಾಳ ಲೌಕಂಗಳಲ್ಲಿ ಸಂ 

ಭಾವ್ಯರೆಂದೆನಿಸಿಕೊಳ್ವಖಿಳದೇವರ್ಕಳಿಂ 

ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಿಣಿ ಫಣಿವೇಣಿ ವಾಣಿ 

ಕಾವ್ಯಮಿದು ಭುವನದೊಳ್ ಸಕಲ ಜನರಿಂದೆ ಸು 

 ಶ್ರಾವ್ಯಮಪ್ಪಂತೆನ್ನ ವದನಾಬ್ಜದಲ್ಲಿ ನೀ 

ನೇ ವ್ಯಾಪಿಸಿರ್ದಮಲಮತಿಯಂ ತಾಯೆನಗೆ ತಾಯೆ ನಗೆಗೂಡಿ ನೋಡಿ ॥೪॥


ಭೂಮಿ, ಸ್ವರ್ಗ, ಪಾತಾಳಗಳಲ್ಲಿ ಪೂಜೆಗೆ ಅರ್ಹರಾದ ಎಲ್ಲಾ ದೇವತೆಗಳಿಂದಲೂ, ಸೇವೆಯನ್ನು ಕೈಗೊಳ್ಳುತ್ತಿರುವ, ಬ್ರಹ್ಮನ ಪಟ್ಟದ ರಾಣಿಯಾದ ಕಲ್ಯಾಣಿಯೂ, ಫಣಿವೇಣಿಯೂ ಆದ ಸರಸ್ವತಿಯೇ, ಈ ಕಾವ್ಯವು ಲೋಕದಲ್ಲಿ ಎಲ್ಲರಿಂದಲೂ ಇಂಪಾಗಿ ಕೇಳಲೂಪಡುವಂತೆ, ನನ್ನ ಮುಖಕಮಲದಲ್ಲಿ ನೀನೇ ವ್ಯಾಪಿಸಿದ್ದು,ತಾಯೇ ನಿರ್ಮಲವಾದ ಸುಮತಿಯನ್ನು ಮಂದಸ್ಮಿತದಿಂದ ನನ್ನನ್ನು ನೋಡಿ ದಯಪಾಲಿಸು. 


ಕೆನೆವಾಲ ಕಡೆದು ನವನೀತಮಂ ತೆಗೆದು ಬಾ 

ಯ್ಗಿನಿದಾಗಿ ಸವಿಯದೆದರೊಳಗೆ ಪುಳಿವಿಳಿದು ಲಸ 

ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ 

ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ 

ಥನಕವಿತೆಯೆಂದು ಕುಂದೀಟ್ಟು ಜರೆದೊಡೆ  ಪೇಳ್ದ 

ವನೊಳಾವುದೂಣೆಯಃ ಜಾಣರಿದನರಿದು ಮತ್ಸರವ ಮರೆದಾಲಿಸುವುದು ॥೭॥


ಕೆನೆಹಾಲನ್ನು ಕಡೆದು ಬೆಣ್ಣೆಯನ್ನು ತಿನ್ನದೆ, ಹಾಲಿನಲ್ಲಿ ಹುಳಿಯನ್ನು ಬೆರಸಿ ಕೆಡಿಸಿದರೆ, ಆ ತಪ್ಪು ಹಸುವಿನದಲ್ಲ. ಈ ಕಾವ್ಯವನ್ನು ಚೆನ್ನಾಗಿ ಪರಿಶೀಲಿಸಿ ವಿಮರ್ಶಿಸಿತಿಳಿದು ನೋಡದೆ, ಇವನಾರೋ ಏನೋ ಒಂದು ಹೊಸ ಕಾವ್ಯವಂತೆ, ಬರೆದಿದ್ದಾನೆ ಎಂದು ಕುಂದನ್ನು ಹೊರಿಸಿ ಜರೆದರೆ ಕಾವ್ಯವನ್ನು ರಚಿಸಿದ ಕವಿಗೆ ಯಾವ ದೋಷವೂ ಬರುವುದಿಲ್ಲ. ಜಾಣರು ಇದನ್ನರಿತು ಮತ್ಸರವ ಬಿಟ್ಟು ಕಾವ್ಯವನ್ನು ಕೇಳಿರಿ. 


ಜಾಣರಂ ತಲೆದೂಗಿಸದೆ ನುಡಿದೊಡಾಪದ 

ಕ್ಕೂಣೆಯಂ ಬಹುದೆಂದು ಸಲಸೋಕ್ತಿಯಿಂದೆ ಗೀ 

ರ್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಿ ನಿಪುಣನು 

ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ 

ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು 

ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ವುದು ಸುಜನರು ॥೮॥


ಕಾವ್ಯವು ಜಾಣರು ಮೆಚ್ಚಿ ತಲೆದೂಗುವಂತೆ ರಚಿಸಬೇಕು. ಇಲ್ಲದಿದ್ದರೆ ಅದೊಂದು ದೋಷ. ಹಾಗಾಗದಂತೆ ಸಂಗೀತಕಲಾ ನಿಪುಣನಾದ ದೇವನೂರಿನ ಲಕ್ಷ್ಮೀಕಾಂತಸಾವಾಮಿಯು, ವೀಣೆಯಿಂದ ಗಾನವನ್ನು ನುಡಿಸಿದಂತೆ, ನನ್ನಿಂದ ಈ ಕಾವ್ಯವನ್ನು ಬರೆಸಿದನೆಂದು ತಿಳಿದು, ಹೊಗಳಲು ಹಿಂಜರಿಯದೆ, ಹೊಟ್ಟೆಕಿಚ್ಚು ಪಡುವವರನ್ನು ಜರೆದು, ಕಿವಿದೆರೆದು ಸಜ್ಜನರಾದವರು ಕೇಳಿರಿ. 


ವರ ವರ್ಣದಿಂದೆ ಶೋಭಿತಮಾಗಿ ರೂಪ ವಿ 

ಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋ 

ದರ ಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ ಪ್ರಚುರಮಾಗಿ 

ನಿರುತ ಮಂಜುಳ ಶಬ್ಧದಿಂದೇ ಕಿವಿಗಿಂಪಾಗಿ 

ಚರಿಸುವ ಸುಲಲಿತ ಷಟ್ಪದಿಗ಼ಳೆಡೆಬಿಡದೆ ಝೇಂ 

ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು॥೧೨॥


ಒಳ್ಳೆಯ ಬಣ್ಣದಿಂದ ಕೂಡಿ, ವಿಸ್ತಾರವಾದ ರೂಪದಿಂದ ಚೆಲುವಾಗಿ,ಹೊಸ ಮಕರಂದದಿಂದ ತುಂಬಿದ ಒಡಲುಳ್ಳವಳಾಗಿ, ಹೂಗಳ ಮಕರಂದದಿಂದ ಕೂಡಿ ದುಂಬಿಗಳು ದುಂಬಿಗಳು ಪದ್ಮಪುಷ್ಪಗಳುಳ್ಳ ಸರೋವರದಲ್ಲಿ ಮಂಜುಳ ನಿನಾದದಿಂದ ಝೇಂಕರಿಸುತ್ತವೆ. ಹಾಗೆಯೇ ಈ ಕಾವ್ಯದಲ್ಲಿರುವ ಷಟ್ಪದಿಗಳು ( ದುಂಬಿಗಳು ) ಶುದ್ಧ ವರ್ಣದಿಂದ (  ಪದ ಶುದ್ಧಿ  ) ಶೋಭಿಸುತ್ತಾ, ತಮ್ಮ ರೂಪದಿಂದ ಚೆಲುವಾಗಿ, ಮಧುರವಾದ ನವರಸಗಳನ್ನು ತಮ್ಮಲ್ಲಿ ತುಂಬಿಕೊಂಡು, ಸಹೃದಯರಿಂದ ಪ್ರಶಂಸೆ ಪಡೆದು, ಮಂಜುಳ ಶಬ್ಧದಿಂದ ಕೂಡಿ, ವಿದ್ವಜ್ಜನರ ಸಭೆಗಳಲ್ಲಿ ಝೇಂಕರಿಸದೆ ಬಿಡುವುದಿಲ್ಲ. 


ಐದನೆಯ ಸಂಧಿ 


ವೇದವ್ಯಾಸರಿಂದ ಧರ್ಮಸಾರ


ಸಾರ್ವನಿಗಮಾರ್ಥಮಂ ತಿಳಿದು ಸತ್ಕರ್ಮಮಂ 

ಸಾರ್ವಕಾಲಂಗೆಯ್ದು ಪರವಧೂವಿಷಯಮಂ 

ಸಾರ್ವ ಚಿಂತೆಯನುಳಿದು ಲೋಕಾಪವಾದಮಂ ಪರಿಹರಿಸಿ ಪರರೊಡವೆಗೆ 

ಪಾರ್ವನಲ್ಲದೆ ಸದಾಚಾರದಿಂ ನಡೆದೊಡಾ 

ಪಾರ್ವನಿಹದೊಳ್ ಕೀರ್ತಿಪರನಾಗಿ ಬಳಿಕವಂ 

ಪಾರ್ವನುತ್ತಮಗತಿಗೆ ದೇಹಾವಸಾನದೊಳ್ ಭೂಪಾಲ ಕೇಳೆಂದ ॥೪೯॥


ಸಮಸ್ತ ವೇದಶಾಸ್ತ್ರವನ್ನು ತಿಳಿದು, ಸದಾ ಸತ್ಕರ್ಮದಲ್ಲೇ ನಿರತನಾಗಿ, ಪರಸ್ತ್ರೀಯ ಚಿಂತನೆಯನ್ನು ಯಾವಾಗಲೂ ಮಾಡದೆ, ಚಿಂತೆಯನ್ನು ಬಿಟ್ಟು ಸದಾಚಾರದಿಂದ ನಡೆಯುವ ಬ್ರಾಹ್ಮಣನು, ಮರಣಾನಂತರ ಉತ್ತಮಗತಿಯನ್ನು ಪಡೆಯುತ್ತಾನೆ. 


ಸರ್ವಧರ್ಮಗಳನರಿದೋವಿದೊಡೆ ರಣಕೆ ಬೇ 

ಸರ್ವನಲ್ಲದೊಡಾತ್ಮವಿದನಾದೊಡಿಳೆಯೊಳ್ ಪೆ

ಸರ್ವಡೆದು ಕ್ಷತ್ರಿಯಂ ಕಾದಿ ಮಡಿದೊಡೆ ಸೂರೆಗೊಂಬನಮರಾವತಿಯನು

ದುರ್ವಚನಮಂ ನುಡಿಯದತಿಥಿಗಳ ಕೆಡೆನುಡಿಯ 

ದುರ್ವರ್ಧನಮಂ ಕೂಡಿ ಗೋರಕ್ಷಣಂಮಾಳ್ಪು 

ದುರ್ವರೆಯೊಳಿದು ಕೀರ್ತಿ ವೈಶ್ಯಂಗೆ ಪರಗತಿ ಮುಕುಂದಸೇವೆಯೊಳಪ್ಪುದು॥೫೦॥


ಸಮಸ್ತ ಧರ್ಮವನ್ನು ತಿಳಿದು ರಕ್ಷಿಸುವ, ಯುದ್ಧಕ್ಕೆ ಹೆದರದ,ಆತ್ಮಜ್ಞಾನಿಯಾದ, ಕೀರ್ತಿವಂತನಾದ,

ಕ್ಷತ್ರಿಯನು ಯುದ್ಧದಲ್ಲಿ ಮಡಿದರೆ ಅಮರಾವತಿಗೆ ಹೋಗುತ್ತಾನೆ.ದುರ್ವಚನಗಳನ್ನು ಬಿಟ್ಟುಅತಿಥಿಗಳನ್ನುತಿರಸ್ಕರಿಸದೆ, ಧನವಂತನಾಗಿ, ಗೋರಕ್ಷಣೆಮಾಡುವ ವೈಶ್ಯನು ಮುಕುಂದನ ಸೇವೆಯನ್ನು ಮಾಡಿದರೆ ಉತ್ತಮ ಗತಿದೊ ರೆಯುತ್ತದೆ.


ದ್ವಿಜರಾಸರಂದಳೆದು ಬೆಸಗೈವ ಶೂದ್ರನುಂ 

ದ್ವಿಜರಾಜವಾಹನಸ್ಮರಣೆಯಿಂದೈದುವಂ 

ದ್ವಿಜರಾಜಸನ್ನಿಭದ ಸುಗತಿಯಂ ಜಗದೊಳಂತದು ಕುಲಸ್ತ್ರೀಯರೊಳಗೆ 

ನಿಜನಾಥಭೀತೆ ಸುಚರಿತ್ರೆ ಗುಣವತಿ ಮಾನಿ 

ನಿ ಜನಾಪವಾದವಿರಹಿತೆಯೆನಿಪ ನಾರಿ ನ 

ನ್ನಿ ಜನಾರ್ದನಾದಿ ನಿರ್ಜರವರ್ಯವಿನುತೆಯಹಳೆನಲವಳ ಸುಕೃತಮೆಂತೋ ॥೫೧॥


ಬ್ರಾಹ್ಮಣರ ಆಶ್ರಯ ಪಡೆದು ಅವಶ್ಯಕತೆಯನ್ನರಿತುಸೇವೆ ಮೃಡುವ ಶೂದ್ರನು, ಗರುಡವಾಹನ ವಿಷ್ಣುವಿನ ಸ್ಮರಣೆ ಮಾಡಿ, ಗರುಡನಂತೆ ಸುಗತಿಗೆ ಪಾತ್ರನಾಗುತ್ತಾನೆ. ಇನ್ನು ಪತಿಭೀತೆ, ಸುಚರಿತ್ರೆ, ಗುಣವಂತೆ, ಜನಾಪವಾದವಿಲ್ಲದ ಸ್ತ್ರೀಯನ್ನು

ಸತ್ಪರುಷರೂ, ದೇವತೆಗುಳೂ, ವಂದಿಸುವರು, ಅವಳ ಪುಣ್ಯವನ್ನು ಹೊಗಳುವುದಾದರೂ ಹೇಗೆ? 



ಪತಿ ದೈವಮೆಂದರಿದು ನಡೆವ ಸತಿಗಹುದು ಪರ 

ಗತಿಯಲ್ಲದಂಗನೆಯರತಿಸಾಹಸಿಗಳವರ 

ಕೃತಕಶೀಲಂಗಳಂ ನಂಬಲಾಗದು ಮೇಣ್ ಸ್ವತಂತ್ರಮಂ ಕುಡಲಾಗದು 

ಪಿತನಿಂದೆ ಬಿಲ್ಯದೊಳ್ ಪತಿಯಿಂದೆ ಹರೆಯದೊಳ್ 

ಸುತನಿಂದೆ ವೃದ್ಧಿಪ್ಯದೊಳ್ ಕುಲಸ್ತ್ರೀ ಸುರ 

ಕ್ಷಿತೆಯಿಗದಿರ್ದೊಡವಳಿಂದೆ ನಿಜವಂಶಕುಹಪತಿ ಬಾರದಿರದಿಳೆಯೊಳು ॥೫೨॥


ಪತಿಯೇ ದೇವರೆಂದು ತಿಳಿದು ನಡೆಯುವ ಸತಿಗೆ ಪರದಲ್ಲಿ ಸದ್ಗತಿ ದೊರೆಯುತ್ತದೆ. ಅತಿ ಸಾಹಸಿಗಳಾದ ಹೆಣ್ಣುಗಳ ಕೃತಕವಾದ ಶೀಲವನ್ನು ನಂಬಬಾರದೈ. ಅಂತಹವರಿಗೆ ಸ್ವಾತಂತ್ರ್ಯವನ್ನು ಕೊಡಬಾರದು. ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಪತಿಯಿಂದ, ವೃದ್ಧಾಪ್ಯದಲ್ಲಿ ಮಗನಿಂದ ರಕ್ಷಿಸಲ್ಪಡದ ಹೆಂಗಸಿನಿಂದ ತನ್ನ ವಂಶಕ್ಕೆ ಅಪಾಯ ಬಾರದಿರದು.


ವರಯಜ್ಞಶಾಲೆಯುಂ ಬಾಲೆಯುಂ ದ್ವಿಜಪಙ್ತಿ 

ಪರಿಶೋಭಿಸದೊಡಂ ಸತ್ಯವಿತೆಯುಂ ಯುವತಿಯುಂ 

ಚರಣಗತಿ ಸಮತೆವೆತ್ತಿರದೊಡಬ್ಜಾರಿಯುಂ ನಾರಿಯುಂ ಚಾರುತರದ 

ಕರಭೋರುಕಾಂತಿ ಸಂಯುಕ್ತಮಾಗಿರದಿರ್ದೊ 

ಡರಸಾಳ್ವ ಧರಣಿಯುಂ ತರಣಿಯುಂ ಶಾಲಿಸುಂ

ದರಮಾಗಿರದೊಡೆ ಸೌಮಂಗಳ್ಯಮಾಗಿಯುಂ ಮೇಲೆಯುನ್ನತಿಯಪ್ಪುದೆ ॥೫೩॥


ಯಜ್ಞಶಾಲೆಯಲ್ಲಿ ಬ್ರಾಹ್ಮಣರಿಲ್ಲದಿರೆ, ತರುಣಿಗೆ ಒಳ್ಳೆಯ ಹಲ್ಲಿನ ಪಂಕ್ತಿಗಳಿಲ್ಲದಿದ್ದರೆ, ಕಾವ್ಯದ ಚರಣವು ಸರಿಯಿಲ್ಲದಿದ್ದರೆ ಕಾವ್ಯವೂ, ಸರಿಯಾದ ನಡಿಗೆಯಿಲ್ಲದ ತರುಣಿಯೂ, ಚಂದ್ರನು ಅತಿ ಪ್ರಕಾಶವಿಲ್ಲದಿದ್ದರೆ, ಹೆಣ್ಣಿಗೆ ಆನೆಯ ಸೊಂಡಿಲಿನಂಥ ತೊಡೆಗಳುಇಲ್ಲದಿದ್ದರೆ, ರಾಜನಾಳುವ ರಾಜ್ಯವೂ ಹೆಣ್ಣೂ, ನೆಲ್ಲಿನ ಗದ್ದೆಗಳಿಂದ ಶಾಂತಿಯಿಂದ ಸುಂದರವಾಗಿಲ್ಲದಿದ್ದರೆ ಸೌಮಂಗಲ್ಯವಿದ್ದರೂ ಶೋಭಿಸುವುದಿಲ್ಲ. ಉನ್ನತಿ ದೊರಕದು. 


ಮಾವಂಗೆ ಭಾವಂಗೆ ಮೇಣತ್ತೆಗೈದೆ ಸಂ 

ಭಾವಿಸುತೆ ಸೇವಿಸುತೆ ಕಾಂತಂಗೆ ಸುರಥಸಂ 

ಜೀವನವನೀವ ನವಯುವತಿಯಹ ಲಕ್ಷಣಂ ಸುಕೃತಫಲಮಂತಲ್ಲದೆ 

ಪಾವಿನಂತಾವಿನಂತಡಿಗಡಿಗೆ ಮೊರೆದೆದ್ದು 

ಡಾವರಿಸಿ ಸೀವರಿಸಿ ಮನೆಗೆಲಸಮಂ ಗೆಯ್ಯ 

ದಾವನಿತೆ ಸಾವನಿತೆ ಲೇಸೆನಿಸದಿಹಳೆ ತತ್ಪತಿಗೆತದ್ಗುರುಜನಕ್ಕೆ ॥೫೪॥


ಅತ್ತೆ, ಮಾವ, ಭಾವ ಇವರನ್ನು ಸೇವೆಸುತ್ತಾ ಗಂಡನಿಗೆ ಸುರತ ಸುಖದ ಸಂಜೀವನವನ್ನು ಕೊಡುವ ತರುಣಿಯು ಸಿಗುವುದು ಪೂರ್ವ ಸುಕೃತದಿಂದದೊರೆಯುವ ಫಲ. ಅದನ್ನು ಬಿಟ್ಟು ಹಾವಿನಂತೆ, ಪಶುವಿನಂತೆ, ಹೆಜ್ಜೆ ಹೆಜ್ಜೆಗೂಕೂಗಿ ಎದ್ದು ಹಿಂಸಾಪರಳಾಗಿ ದುಷ್ಕೃತ್ಯವನ್ನು ಮಾಡುವ ಹೆಣ್ಣು, ಮನೆ ಕೆಲಸ ಮಾಡದವಳು, ಸಾಯುವವರೆಗೂ ಗಂಡನಿಗೆ, ಗುರು ಜನಕ್ಕೆ ( ಹಿರಿಯರಿಗೆ, ಬಂಧುಗಳಿಗೆ ) ಕಂಟಕವಾಗದಿರುವಳೇ.


ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ 

ಮೇಲೆ ಕಾಲಂಗುಳಿಗಳೋರಗೆಯೊಳೊಂದದಿರೆ

ಬಾಲೆಗೀ ಲಕ್ಷಣಂ ಮುತ್ತೈದೆತನಮಾಗಲರಿಯದು ವಿಧವೆಯಾದೊಡೆ 

ಶೀಲಮಾಲಂಬಿಸಿ ತವರ್ಮನೆಯೊಳಿರ್ದನಿತು 

ಕಾಲಮಾಲಸ್ಯಮಿಲ್ಲದೆ ಸದಾಚಾರಕನು 

ಕೂಲೆಯಾಗಿರುತಿರ್ದು ದೇಹ‌ಮಂ ದಂಡಿಸಲ್ ಪತಿಲೋಕಮಂ ಪಡೆವಳು ॥೫೫॥


ಕಪ್ಪಾದ ಕಾಲು, ನಾಲಗೆಗಳು, ನೆಲದ ಮೇಲೆ ಸರಿಯಾಗಿ ಕೂಡಿರದ ಕಾಲು ಬೆರಳುಗಳು ಇರೈವ ಬಾಲಕಿಗೆ ಮುತ್ತೈದೆತನವಿರುವುದಿಲ್ಲ. ವಿಧವೆಯಾದ ಮೇಲೆ ತವರುಮನೆಯಲೂಲಿ ಇದ್ದು, ಸೋಮಾರಿತನವೆಲ್ಲದೆ ಸದಾಚಾರಕ್ಕನುಕೂಲೆಯಾಗಿ ಸಾಯುವವರೆಗೂ ದೇಹವನ್ನು ದಂಡಿಸಿದರೆ ಅವಳು ಪತಿಯ ಲೋಕವನ್ನು ಪಡೆಯುತ್ತಾಳೆ.


ವಿಟಗೋಷ್ಠಿಯೊಳ್ ಭೋಗಮಂ ಬಯಸಿ ಕಾಮಲಂ 

ಪಟೆಯಾಗಿ ಮೇಣರ್ಥಮಂ ಗಳಿಸಿ ಗರ್ವದಿಂ 

ಜಟರಮಂ ಪೊರೆಯುತ್ತೆ ಗರಿಯೊಗೆದುರುಗಿವೊಲಿಹ ದುಷ್ಟವಿಧವೆಯರ ರತಿಯು 

ಘಟಿಪುದಾವಂಗವನುಮವಳುಮವಳಾಣ್ಮನುಂ 

ಸಟೆಯಲ್ಲ ಮೂವರುಂ ಪತಿತರದರಿಂದೆ ಸಂ 

ಕಟದೊಳಂ ನೋಡಲಾಗದು ಪರಸ್ತ್ರೀಯರಂ ನೆರೆದೊಡುಕ್ಕುಲಮಪ್ಪುದೆ॥೫೬॥


ಧನವನ್ನು ಗಳಿಸಿ ಕಾಮಲಂಪಟೆಯಾಗಿ ವಿಟರ ಜೊತೆಗೆ ಭೋಗವನ್ನುಬಯಸಿ ಹೊಟ್ಟೆ ಹೊರೆಯುತ್ತಾಪೊರೆಬಿಟ್ಟ ಹಾವಿನಂತಿರುವ ದುಷ್ಟ ವಿಧವೆಯ ರತಿಯು ಯಾರಿಗೆ ಘಟೆಸುವುದೋ ಅವನೂ, ಅವಳೂ ಅವಳ ಗಂಡನೊ ಪತಿತರಾಗುತ್ತಾರೆ. ಆದುದರಿಂದ ಪರಸ್ತ್ರೀಯರನ್ನು ಎಷ್ಟು ಕಷ್ಟದಲ್ಲೂ ನೋಡಬಾರದು. ಅವರನ್ನು ನೆರೆದರೆ ಅತ್ಯಂತ ಕೀಳು ಕುಲದಲ್ಲಿ ಹುಟ್ಟದಿರುವನೇ ?


ಗೃಹಕೃತ್ತಮಂ ಬಿಟ್ಟು ನೆರೆಮನೆ ತವರ್ಮನೆಯೊ 

ಳಿಹಳೆಳೆಯರಂ ಚುಂಬಿಸುವಳೊಲಿದು ಪಾಡುವಳ್ 

ಗಹಗಹಿಸಿ ಬರಿದೆ ನಗುವಳ್ ಬೀದಿಗರನೈದೆ ಬಾಗಿಲೊಳ್ ನೋಡುತಿಹಳು 

ಬಹುಜನದ ಮುಂದೆ ಸುಳಿವಳ್ ನಾಡಮಾತಂ ಗ 

ಳಹುವವಳ್ ತರುವಲಿಗಳೊಡನಾಡುವಳ್ ತನ್ನ 

ಸಹಜಮಲ್ಲದೆ ಪಿರಿದಲಂಕರಿಸಿ ಕೊಂಬುವಳ್ ನಿಲ್ವಳೆ ಶಿಕ್ಷಿಸಿದೊಡೆ ॥೫೭॥


ಗೃಹಕೃತ್ಯವನ್ನು ಬಿಟ್ಟು ನೆರಮನೆ ತವರುಮನೆಗಳಿಗೆ ಹೋಗುವವಳು, ಎಳೆಯರನ್ನು ಮುತ್ತಿಡುವವಳು, ಹಾಡು ಹೇಳುವವಳು, ಕಾರಣವಿಲ್ಲದೆ ಗಹಗಹಿಸಿ ನಗುವವಳು, ಬಾಗಿಲಲ್ಲಿ ನಿಂತು ಬೀದಿಯಲ್ಲಿ ಓಡಾಡುವವರನ್ನು ನೋಡುವವಳು, ಬಹಳ ಜನರಿದ್ದಾಗ ಅವರ ಮುಂದೆ ಸುಳಿಯುವವಳು, ನಾಡ ( ಊರ) ಮಾತನ್ನು ಆಡುವವಳು, ದುರಾಚಾರಿಗಳಾದ ತರುಣರೊಡನೆಆಡುವವಳು, ಸಹಜವಾಗಿ ಅಲಂಕಾರ ಮಾಡಿಕೊಳ್ಳದೇ ಹೆಚ್ಚಿನ ಅಲಂಕಾರ ಮಾಡಿಕೊಳ್ಳುವವಳು, ಇಂತಹವರನ್ನು ಶಿಕ್ಷಿಸಿದರೆ ತಮ್ಮ ದುರ್ವಿದ್ಯೆಯನ್ನು ಬಿಡುವರೇ ? 


ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರ 

ವರ್ತಕಿಯ ದಾಸಿಯ ಬುರುಂಡೆಯ ಕಪಾಲಿನಿಯ 

ಭರ್ತಾರನುಳಿದವಳ ಮಾಲೆಗಾತಿಯ ಜಟಿಯ ಸೂತಕಿಯ ಸೈರಂಧ್ರಿಯ 

ಕರ್ತವ್ಯದಿಂದಿನಿಬರೊಡನಾಡಿದೊಡೆ ಬಾಲೆ 

ಯರ್ತವೆ ದುರಾಚಾರಮಂ ಕಲಿವರದರಿಂ ಬು 

ಧರ್ತರುಣಿಯರ ನಡೆವಳಿಗೆ ಭಂಗಮಂಕುರಿಸದಂತೆ ಪಾಲಿಸವೇಳ್ವುದು ॥೫೮॥


ನರ್ತಕಿ, ನಾಪಿತೆ, ವೀಳೆಯದೆಲೆಯನ್ನು ಮಾರುವವಳು, ದುರ್ಬೋಧೆ ಮಾಡುವ ಮಧ್ಯಸ್ಥೆ, ವೇಶ್ಯೆ, ಬಿದಿರು ಹೆಣೆಯುವವಳು, ಕಪಾಲಿನಿ, ಗಂಡನನ್ನು ಬಿಟ್ಟವಳು, ಮಾಲೆಗಾತಿ, ಪತಿಹೀನಳಾಗಿ ಜಡೆಯನ್ನು ಬೆಳೆಸಿರುವವಳು, ಸೂತಕಿ, (ರಜಸ್ವಲೆಯಾದರೂ ತೋರಿಸಿಕೊಳ್ಳದವಳು )ಸೈರಂಧ್ರಿಯ ಜತೆಗೆ ಸೇರಿದ ತರುಣಿಯರು, ದುರಾಚಾರವನ್ನು ಕಲಿಯಬಹುದು. ಆದುದರಿಂದ ತಿಳಿದವರು ತಮ್ಮ ಹೆಣ್ಣುಮಕ್ಕಳನ್ನುಅಂತಹವರ ಸಹವಾಸಕ್ಕೆ ಸೇರಲು ಬಿಡಬಾರದು. 


ಪುರುಷಾಂತರಕ್ಕೆಳಸಿ ಪುಷ್ಪಶರತಾಪದಿಂ 

ಕರಗಿ ಕಾತರಿಸಿ ಮೆಲ್ಲನೆ ದೂತಿಯೊರ್ವಳಂ 

ಕರೆದೊಡಂಬಡಿಸಿ ಬೇಡಿದನಿತ್ತು ಸತ್ಕರಿಸಿ ಪೊತ್ತುವೇಳೆಗಳನರಸಿ 

ನೆರೆಹೊರೆಯರಿರದಂತೆ ಪತಿಯಂ ಮರೆಸಿ ಮನೆಯ 

ವರನೆಲ್ಲರಂ ಟೊಣೆದು ಮದನಕೇಳಿಗೆ ಸಂದು 

ಮರಳಿ ಮಾನಿನಿಯರಂತಿರಬಲ್ಲರವರೆ ಜಾರೆಯರವರನೌವಬಹುದೆ॥೫೯॥


ಪುರುಷರ ಸಂಗವನ್ನು ಬಯಸಿ, ಕಾಮ ಶರಗಳಿಗೆ ಕಾತರಿಸಿ, ದೂತಿಯೊಬ್ಬಳನ್ನು ಕರೆದು ಅವಳು ಬೇಡಿದುದನ್ನು ಕೊಟ್ಟು ಒಪ್ಪಿಸಿ, ಹೊತ್ತು ವೇಳೆಗಳನ್ನು ಹುಡುಕಿ, ನೆರೆಹೊರೆಯವರೂ ಪತಿಯೂ ಅರಿಯದಂತೆ ಮರೆಸಿ, ಮನೆಯವರನ್ನೆಲ್ಲ ತ್ಯಜಿಸಿ, ಮದನಕೇಳಿಯಲ್ಲಿ ಭಾಗವಹಿಸಿ ಬಂದು ಯಾರಿಗೂ ತಿಳಿಯದಂತೆ ಇರಬಲ್ಲವರೇ ಜಾರೆಯರು, ಅವರನ್ನು ರಕ್ಷಿಸಬಹುದೇ? 


ಸೋಲ್ದನಂ ಕಂಡು ಕಣ್ಗೊನೆಗೊಲಿದು ನೋಟಮಂ 

ಜೋಲ್ದುರುಬನೊಂದಿಸುವ ನೆವದಿಂದೆ ಕೈನೆಗಪಿ 

ಸಾಲ್ದ ಮೇಲುದನೋಸರಿಸಿ ಮೊಲೆಗೆಲದ ಪೊಗರ್ದೋರಿ ಪಸಿಲಜ್ಜೆಯಿಂದೆ 

ತೇಲ್ದವಳ ತೆರದಿಂದೆ ನಸುನಗೆಯ ಪಸರಿಸುತೆ 

ಕಾಲ್ದೇಗೆಯದೊಯ್ಯನೊಯ್ಯನೆ ನಡೆವ ಭಂಗಿಯಂ 

ನಾಲ್ದೆಸೆಗೆ ಕಾಣಿಸುವ ಮೈಸಿರಿಯ ಕಿಮಿನಿರರವರೆ ಜಾರೆಯೇನಿಪರು ॥೬೦॥


ತಮ್ಮನ್ನು ನೋಡಿ ಸೋತವನನ್ನು ಓರೆ ನೋಟದಿಂದ ನೋಡಿ ಜೋಲು ತುರುಬನ್ನು ಕಟ್ಟಿಕೊಳ್ಳುವ ನೆವದಿಂದ ಕೈಯೆತ್ತಿ ಸೆರಗನ್ನು ಕೆಳಗೆ ಬೀಳಿಸಿ ಎದೆಯ ಹೊರಗನ್ನು ಪ್ರದರೂಶಿಸುತ್ತಾ ಸುಳ್ಳು ಲಜ್ಜೆಯನ್ನು ಪ್ರಕಟಿಸುತ್ತಾ, ನಸುನಗೆಯನ್ನು ಬೀರುತ್ತಾಜೋರಾಗಿ ಹೋಗದೆ ಮೆಲ್ಲಮೆಲ್ಲನೆನಡೆಯುತ್ತಾನಾಲ್ಕೂ ಕಡೆಗೆತನ್ನ ಮೈಮಾಟವನ್ನು ತೋರಿಸುವ ಹೆಂಗಸರೇ ಜಾರೆಯರು. 


ಚಪಲೆ ಚಂಚಲೆ ಚಾಟುಮತಿ ಚಂಡಿ ಚಲವಾದಿ 

ಕುಪಿತೆ ಕುತ್ಸಿತೆ ಕುಹಕೆ ಕುಜೆ ಕುಟಿಲೆ ಕುವಗೇಡಿ

ಕಪಟಿ  ಕಂಟಕಿ ಕಟಕಿ ಕಡುದುಷ್ಟೆ ಕಲಹಾರ್ಥಿ ವಿರಸೆ ಪರವಶೆ ಪಾದರಿ 

ವಿಫಲೆ ವಿಹ್ವಲೆ ವಿಷಮೆ ವಿರಹಿ ವಿಪರೀತೆ ಮಿಗೆ

ತಪಿತೆ ತಸ್ಕರೆ ತವಕೀ ತವೆ ತಂದ್ರಿ ತಾಮಸಿಯೆ 

ನಿಪ ವನಿತೆಯರ ನಿಜಕೆ ನಿಲಿಸಿ ನಿಶ್ಚೈಸಿದೊಡೆ ಬಳಿಕ ಬಳಲಿಕೆ ಬಾರದೆ ॥೬೧॥


ಚಪಲ ಬುದ್ಧಿಯವಳು, ಚಂಚಲ ಸ್ವಭಾವದವಳು, ಕುಹಕಿ, ಹಠಮಾರಿ,  ತನ್ನ ಛಲವನ್ನು ಬಿಡದವಳು, ಕೋಪೆಷ್ಟೆ, ಹೀನಕಾರ್ಯ ನಿರತಳು, ಕುಹಕ ಬುದ್ಧಿಯವಳು, ಹೀನವಾದ ರೀತಿಯಲ್ಲಿ ಹುಟ್ಟಿದವಳು, ದುರ್ಮಾರ್ಗದವಳು, ಉಭಯ ಕುಲದವರಿಗೂ ಕೆಟ್ಟ ಹೆಸರನ್ನು ತರುವವಳು, ಮೋಸಗಾತಿ, ಕೆಲಸಗೇಡಿ, ಕಾಠಿಣ್ಯವುಳ್ಳವಳು, ಅತಿ ಕೆಟ್ಟವಳು, ಜಗಳಗಂಟೆ, ದಯೆಯಿಲ್ಲದವಳು, ಪರರಿಗೆ ವಶವಾದವಳು, ಹಾದರಿ, ಯಾವ ಒಳ್ಳೆಯತನವೂ ಇಲ್ಲದವಳು,ವಿಹ್ವಲಳಾದವಳು, ತನಗೆ ಸಮನಿಲ್ಲದವಳು, ವಿರಹಾರ್ತಳಾದವಳು, ಹೇಳಿದುದಕ್ಕೆ ವಿರೋಧವನ್ನು ವ್ಯಕ್ತಪಡಿಸುವವಳು, ಕಾಮಾರ್ತಳಾದವಳು, ಕಳ್ಳಿ ಅನಂಗವೇಗಿ, ಅತಿನಿದ್ರೆ ಮಾಡುವವಳು, ತಾಮಸಬುದ್ಧಿಯವಳು, ಇವರನ್ನು ಸನ್ಮಾರ್ಗಕ್ಕೆ ತರುವೆನೆಂದು ಯತ್ನಿಸಿದರೆ ಬಳಲಿಕೆ ಬರುವುದಿಲ್ಲವೇ? 


ಹಲವು ಮಾತೇನರಸ ಚಿತ್ರದೊಳ್ ಬರೆದ ಕೋ 

ಮಲೆಯರಂ ನಂಬಬಾರದು ನಿರುತಮೆನಲವರ 

ಪೊಲಬುಗಂಡವರುಂಟೆ ಸಾಕದಂತಿರಲಿ ಪರಿಕಲ್ಪಿತವ್ರತ ಸಮಾಧಿ 

ಸಲೆ ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ 

ವಿಲಗವಿಲ್ಲಾತ್ಮಪತಿಸೇವೆಯಂ ಪ್ರತಿದಿನದೊ 

ಳಲಸದೆ ನೆಗಳ್ಚಿದೊಡೆ ಸತಿಯರ್ಗೆ ಕೀರ್ತಿಸುಗತಿಗಳಪ್ಪುವಿಹಪರದೊಳು॥೬೨॥


ರಾಜ, ಹೆಚ್ಚು ಹೇಳಿ ಏನು ಪ್ರಯೋಜನ? ಚಿತ್ರದಲ್ಲಿ ಬರೆದ ಹೆಂಗಸರನ್ನೂ ನಂಬಬಾರದು, ಎಂದ ಮೇಲೆ ಅವರ ಮಾರ್ಗವನ್ನು ಕಂಡವರುಂಟೆ ? ಅದು ಹಾಗಿರಲಿ, ಹೆಂಗಸಿಗೆ ವ್ರತ, ಸಮಾಧಿ, ತೀರ್ಥಯಾತ್ರೆ, ಜಪ, ತಪ, ನಿಷ್ಠೆ ಎಂಬ ಯಾವ ಕಷ್ಟವೂ ಬೇಕಿಲ್ಲ, ಪತಿ ಸೇವೆಯನ್ನು ಸದಾ ಬೇಸರವಿಲ್ಲದೆ ಮಾಡಿದರೆ ಇಹಪರಗಳೆರಡರಲ್ಲೂ ಕೀರ್ತಿಯುಂಟಾಗುತ್ತದೆ. 


ಭೂಪಾಲ ಕೇಳ್ ಧರ್ಮಸಾರಮಿದು ಜಗದೊಳ್ ಮ 

ಹೀಪತಿಗಳರ್ಥಲೋಲುಪ್ತಿಯಿಂ ತಮ್ಮಯ ಸ 

ಮೀಪದೊಳ್ ದ್ಯೂತರತರಂ ನಾಸ್ತಿಕರನೈದೆ ಪಿಸುಣರನಸೂಯಕರನು

ಸೋಪಚಾರದೊಳಿರಿಸಿಕೊಂಡಿರುತಿರಲ್ ಪ್ರಜಾ 

ಲೋಪಮಪ್ಪುದು ರಾಜ್ಯಮದರಿನಪಕೀರ್ತಿಯಿಂ 

ಪಾಪದಿಂದರಸುಗಳ್ಗಿಹಪರಂ ಕಿಡುಗುಮಿದನರಿಯದಿರಬಹುದೆ ನೃಪರು ॥೬೩॥


ರಾಜನೇ, ಧರ್ಮಸಾರವನ್ನು ಹೇಳುತ್ತೇನೆ ಕೇಳು; ಈ ಲೋಕದಲ್ಲಿ ಭೂಮಿಯನ್ನಾಳುವ ರಾಜರು, ಧನದಾಶೆಯಿಂದ ತಮ್ಮ ಬಳಿ, ಜೂಜುಗಾರರನ್ನೂ, ನಾಸ್ತಿಕರನ್ನೂ, ಚಾಡಿಕೋರರನ್ನೂ, ಅಸೂಯಾಪರರನ್ನೂ, ಉಪಚರಿಸಿ ಇರಿಸಿಕೊಂಡಿದ್ದರೆ, ಪ್ರಜೆಗಳಿಗೆ ಮಹಾಕಷ್ಟವಾಗುತ್ತದೆ. ಪ್ರಜೆಗಳು ನಶೆಸುತ್ತಾರೆ. ಹಾಗಾದಾಗ ರಾಜರಿಗೆ ಅಪಕೀರ್ತಿಯುಂಟಾಗಿ ಇಹಪರಗಳೆರಡೂ ಕೆಡುತ್ತವೆ. ರಾಜರು ಇದನ್ನು ಅರಿಯದೆ ವರ್ತಿಸಬಹುದೇ? 


ಆಚಾರಧರ್ಮದಿಂ ನಡೆಯಲರಿಯದ ವಿಪ್ರ 

ನೇ ಚಕ್ರಿಯಾಜ್ಞೆಯಂ ಮೀರದವನವನಿಂದೆ 

ನೀಚನೆ ಹರಿಪ್ರಿಯಂ ಮಾಧವನ ಪೂಜೆಗೆಯ್ಯದವಂಗೆ ಸುಗತಿಯುಂಟೆ 

ಈ ಚತುರ್ದಶ ಜಗದೊಳಂತಿರಲದಿನ್ನು ಸಲೆ 

ಸೂಚಿಪೆಂ ನಿನಗೆ ಬೆಸಗೊಂಬುದೆನೆ ರಮೆ ನೆಲಸಿ 

ಗೌಚರಿಪಳಾವನ ಮನೆಯೊಳೆಂದು ಭೂವರಂ ಕೇಳ್ದೊಡಾಮುನಿ ನುಡಿದನು ॥೬೪॥


ತನ್ನ ಧರ್ಮ ಆಚಾರಗಳಿಗನುಸಾರವಾಗಿನಡೆಯಲುಬಾರದ ಬ್ರಾಹ್ಮಣನೇ ಹರಿಯ ಆಜ್ಞೆಯನ್ನು ಮೀರಿದವನು. ಅವನಿಗಿಂತ ಹರಿಪ್ರಿಯನಾಗಿ ಹೀನಕುಲದಲೂಲಿ ಹುಟ್ಟಿದವನೇ ಮೇಲಲ್ಲವೇ ? ವಿಷ್ಣುವಿನ ಪೂಜೆ ಮಾಡದವನಿಗೆ ಸದ್ಗತಿ ಇದೆಯೇ ? ಇರಲಿ. ನೀನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತೇನೆ ಕೇಳು ಎನ್ನಲು ಧರೂಮಜನು " ಲಕ್ಷ್ಮೀದೇವಿಯು ಯಾರ ಮನೆಯಲ್ಲಿ ನೆಲೆಸಿರುತ್ತಾಳೆ ಗೋಚರಿಸುತ್ತಾಳೆ " ಎಂದು ಕೇಳಿದನು. ವೇದವ್ಯಾಸರು ಅದಕ್ಕೆ ಉತ್ತರವನ್ನು ಹೀಗೆ ಕೊಟ್ಟರು. 


ವತ್ಸ ಕೇಳಾದೊಡೀ ಧರೆಯೊಳಖಿಳಪ್ರಾಣಿ 

ವತ್ಸಲನ ಸತ್ಯಶೌಚಾನ್ವಿತನ ಮನೆಗೆ ಶ್ರೀ

ವತ್ಸಲಾಂಛನನರಸಿ ತೊಡವೆನಿಪಳಾವಗಂ ಪತಿ ಪರಾಯಣೆಯಾಗಿಹ 

ಸತ್ಸತಿಯದೆಲ್ಲಿ ಮೇಣುನ್ಮುಖಾನಂಗವಿಕ 

ಸತ್ಹರೋಜಾಸ್ತ್ರಕಳುಕದ ಪುರುಷನೆಲ್ಲಿ ವಿಲ 

ಸತ್ಸಮುದ್ರಾತ್ಮಜೆ ಸರಾಗದಿಂದಲ್ಲಿ ಸುಸ್ಥಿರೆಯಾಗಿ ನೆಲಸಿರ್ಪಳು ॥೬೫॥


ವ್ಯಾಸ :- ಲೋಕದ ಸಮಸ್ತ ಪ್ರಾಣಿಗಳನ್ನು ಪ್ರೀತಿಯಿಂದ ನೋಡುವ, ಸತ್ಯ ಶೌಚಗಳಿರುವವನ ಮನೆಗೆ ವಿಷ್ಣುವಿನ ರಾಣಿ (ಲಕ್ಷ್ಮಿ )ಯು ಅಲಂಕಾರಪ್ರಾಯಳಾಗಿರುತ್ತಾಳೆ. ಎಲ್ಲಿ ಪತಿತಪರಾಣೆಯಾದ ಸತಿಯೂ, ಇದಿರಾದ ಮನ್ಮಥನ ಅಸ್ತ್ರಗಳಿಗೆ ಅಳುಕದ ಪುರುಷನೂ ಇರುವರೋ ಅಲ್ಲಿ ಲಕ್ಷ್ಮಿಯು ಸ್ಥಿರವಾಗಿರುವಳು. 


ರನ್ನದಿಂ ಧಾನ್ಯಮೆ ವಿಶೇಷಮೆಂದೊದವಿಸುವ

ನನ್ನಮೇ ಕರಿಸದಿಂ ಕಡೆಯೆಂದು ವೆಚ್ಚಿಸುವ 

ನುನ್ನಿಸಲ್ ಬಾಲಕನುಮತಿಥಿಯುಂ ಸರಿಯೆಂದು ಸತ್ಕರಿಪನಾವನವನ 

ತನ್ನ ತಾಯ್ತಂದೆ ಸೋದರ ಬಂಧು ಬಳಗಮಂ 

ಮನ್ನಿಸುವನಾವನಾತನ ಸದಾಚಾರಸಂ 

ಪನ್ನನಾವನವನ ಮಂದಿರದೊಳೈಶ್ವರ್ಯ ಲಕ್ಷ್ಮಿನೆಲೆಯಾಗಿರ್ಪಳು ॥೬೬॥


ರತ್ನಗಳಿಗಿಂತಲೂ ಆಹಾರ ಧಾನ್ಯಗಳೇ ಹೆಚ್ಚೆಂದು ಭಾವಿಸಿ ಒದಗಿಸೈವವನ, ಅನ್ನವು ರತ್ನಕ್ಕಿಮ್ಮಡಿ ಎಂದು ದಾನಮಾಡುವ, ಮನೆಗೆ ಬಂದವನು ಬಾಲಕನಾಗಿರಲಿ ಅತಿಥಾಯಾಗಿರಲಿ ಸಮಾನವಾಗಿ ಸತ್ಕರಿಸುವ, ತನ್ನ ತಂದೆ,  ತಾಯಿ, ಸಹೋದರರು, ಬಂಧು ಬಳಗಗಳನ್ನು ಮನ್ನಿಸುವ, ಸದಾಚಾರ ಸಂಪನ್ನನ ಮನೆಯಲ್ಲಿ ಐಶ್ವರ್ಯ ಲಕ್ಷ್ಮಿಯು ನೆಲೆಯಾಗಿರುತ್ತಾಳೆ. 


ಹೊಸ್ತಿಲೊರಳೊನಕೆಗಳ ಮೇಲೆ ಕುಳ್ಳಿರ್ಪವನ 

ಮಸ್ತಕವನೆರಡುಕಯ್ಯಿಂ ತುರಸಿಕೊಂಬವನ 

ವಿಸ್ತರದ ಜೂಜುಗಳ್ಗೆಳಸುವನ ಪಿರಿದುಂಬುವನ ನಿಂದು ನೀರ್ಗುಡಿವನ 

ಅಸ್ತಮಯದುದಯಕಾಲದೆ ನಿದ್ರೆಗೈವನಾ. 

ತ್ಮಸ್ತುತಿಯ ಪರನಿಂದೆಯವನ ಸಾಧಿಸಿ ಪರರ 

ವಸ್ತುವಂ ಕಳುವನ ನಿರುದ್ಯೋಗದವನ ಸಿರಿ ತೊಲಗಿದಲ್ಲದೆ ಮಾಣ್ಬಳೆ॥೬೮॥


ಹೊಸ್ತಿಲು, ಒರಳು, ಒನಕೆಗಳ ಮೇಲೆ ಕುಳಿತುಕೊಳ್ಳುವವನು ಎರಡೂ ಕೈಗಳಿಂದ ( ಏಕಕಾಲದಲ್ಲಿ ) ತಲೆಯನ್ನು ತುರಿಸಿಕೊಳ್ಳುವವನು, ಜೂಜಾಟದಲ್ಲಿ ಹೆಚ್ಚಾಗಿತೊಡಗಿದವನು, ಹೆಚ್ಚು ತಿನ್ನುವವನು, ನಿಂತು ನೀರು ಕುಡಿಯುವವನು, ಸೂರ್ಯೋದಯ ಸೂರ್ಯಾಸ್ತ ಕಾಲಗಳಲ್ಲಿ ನಿದ್ರಿಸುವವನು, ಆತ್ಮಸ್ತುತಿ ಪರನಿಂದೆಗಳಲ್ಲಿ ತೊಡಗಿರುವವನು, ಕಾಲ ಕಾದು ಪರರ ವಸ್ತುಗಳನ್ನು ಕದಿಯುವವನು, ನಿರುದ್ಯೋಗಿ ಇವರನ್ನು ಲಕ್ಷ್ಮಿಯು ಬಿಟ್ಟುಹೋಗದೆ ಬಿಡುವಳೇ. 


ಜಡನ ಮೂರ್ಗನ ಶಠನ ತಾಮಸನ ನಿಷ್ಠುರದ 

ನುಡಿಯವನ  ಪಿಸುಣನ ಕೃತಘ್ನನ ಕರುಬನ ಬಾ 

ಯ್ಬಡಿಕನ ಕುಚೇಷ್ಟಕನ ಕಾಮುಕನ ಹಿಂಸಕನ ಡಾಂಬಿಕನ ಪಾಷಂಡಿಯ 

ಕಡುಕೋಪದವನ ಬಹುಭಕ್ಷಕನ ಖೂಳನನ 

ದೃಢನ ಕುತ್ಸಿತನ ಕುಹಕನ ದುರಾಚಾರದಿಂ 

ನಡೆವವನ ವಿಶ್ವಾಸಘಾತಕನ ಪಾತಕನ ಲಕ್ಷ್ಮಿ ತೊಲಗದೆ ಮಾಣ್ಬಳೆ ॥೬೯॥


ಸೋಮಾರಿ, ಮೂರ್ಖ, ದುಷ್ಟ,ಅಲಸಿ, ನಿಷ್ಠುರವಾದಿ, ಚಾಡಿಕೋರ, ಉಪಕಾರಸ್ಮರಣೆ ಇಲ್ಲದವನು, ಅಸೂಯೆಯುಳ್ಳವನು, ಬಾಯಿಬಡುಕ, ದುಶ್ಚೇಷ್ಟೆಯುಳ್ಳವನು, ಕಾಮುಕ, ಹಿಂಸಾಪರ, ತೋರುಗಾಣಿಕೆಯವನು, ನಾಸ್ತಿಕ, ಮಹಾಕೋಪಿಷ್ಟ, ಅತಿಹೇಚ್ಚು ತಿನ್ನುವವನು, ಖೂಳ ( ಸ್ವಭಾವತಃ ದುರ್ಮಾರ್ಗಿ ) ದೃಢತೆಯಿಲ್ಲದವನು, ಕುತ್ಸಿತ, ಕುಹಕಿ, ವಿಶ್ವಾಸಘಾತಕ, ಪಾಪಿ ಇವರನ್ನು ಲಕ್ಷ್ಮಿಯು ಬಿಡದಿರುವಳೇ ? ( ಬಂಗಾರದ ಕಳವು, ಮದ್ಯಪಾನ, ಬ್ರಹ್ಮ ಹತ್ಯೆ, ಭ್ರೂಣಹತ್ಯೆ, ಈ ಪಾಪಮಾಡುವವರ ಸ್ನೇಹ ಇವು ಪಂಚ ಮಹಾಪಾತಕಗಳು) 


ಹತ್ತನೆಯ ಸಂಧಿ 

ಉದ್ದಾಲಕನ ಕಥೆ.


ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್ 

ಭರಿತನಾಗಿಹನಾವಗಂ ಧರ್ಮಸೂನು ಮರೆ 

ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕ್ರತುವನು 

ತರಳತೆಯ ಮೆರೆವೆಗಿಂತರಿವನುಪದೇಶಿಪೊಡೆ 

ಗುರುಗಳಲ್ಲವೆ ನೀವು ಧನ್ಯರಾದಪೆವಿನ್ನು 

ಕರುಣದಿಂದೀ ಶಿಲೆಯೋಳೊಂದಿದ ತುರಂಗಮಂ ಬಿಡಿಸಿಕೊಡಬೇಕೆಂದನು ॥೨೧॥


" ನಮ್ಮ ಮನಸ್ಸಿನಲ್ಲಿ ಯಾವಾಗಲೂ ತುಂಬಿರುವ ಹರಿಯನ್ನು ಬಿಟ್ಟು ಬದುಕುವುದಿಲ್ಲ. ಅವನ ಅಪ್ಪಣೆಯಿಂದಲೇ ಧರ್ಮಜನು ಅಶ್ವಮೇಧವನ್ನು ಮಾಡುತ್ತಿದ್ದಾನೆ. ಹುಡುಗುತನದ ಮರೆವಿಗೆ ನೀವು ಬುದ್ಧಿ ಹೇಳುತ್ತಿರುವಿರಿ, ನಾವು ಧನ್ಯರು. ಕರುಣೆಯಿಂದ ಈ ಕುದುರೆಯನ್ನು ಬಿಡಿಸಿಕೊಡಿರಿ " ಎಂದು ಅರ್ಜುನನು ಹೇಳಿದನು. 


ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ 

ನಿನ್ನ ಹಸ್ತಸ್ಪರ್ಶನಂ ಗೆಯ್ದೊಡಿ ಕುದುರೆ 

ಮುನ್ನಿನಂತವನಿಯೊಳಾ ನಡೆದಪುದು ಪೋಗು ನೀನೆಂದು ಸೌಭರಿ ನುಡಿಯಲು 

ತನ್ನೊಳಗೆ ತಾನೇ ವಿಸ್ಮಿತನಾಗಿ ಪಾರ್ದನದ 

ರುನ್ನತಿಯ ತುದಿ ಮೊದಲನರುಪೆನಲ್ ಜ್ಞಾನ ಸಂ 

ಪನ್ನ ತಾಪಸನರ್ಜುನಂಗೆ ವಿಸ್ತರಿಸಿದಂ ಮತ್ತ ಪೂರ್ವಾಪರವನು ॥೨೨॥


ಆಗ ಸೌಭರಿಯು " ಅರ್ಜುನ, ನೀನು ಕುದುರೆಯ ಬಳಿಗೆ ಹೋಗಿ ಶ್ರೀಕೃಷ್ಣನನ್ನು ಸ್ಮರಿಸಿ ಅದನ್ನು ಮುಟ್ಟಿದರೆ ಅದು ಮೊದಲಿನಂತೆ ನಡೆದುಕೊಂಡು ಹೋಗುತ್ತದೆ. " ಎಂದನು. ಅರ್ಜುನನು ಆಶ್ಚರ್ಯಪಟ್ಟು " ಅದು ಹೇಗೆ? ಈ ವೃತ್ತಾಂತದ ತುದಿ ಮೊದಲನ್ನು ನನಗೆ ಹೇಳಿರಿ" ಎನ್ನಲು ಸೌಭರಿಯು ಹೀಗೆಂದನು. 

 

ಆಲಿಸರ್ಜುನ  ಮುನ್ನ ವಿಪ್ರನುಂಟೋರ್ವನು 

ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ 

ಮೇಲೆ ವೈವಾಹದೊಳ್ ವಧುವಾದಳಿತಂಗೆ ಚಂಡಿಯೆಂಬಾಕೆ ಬಳಿಕ 

ಕಾಲಕಾಲದ  ಜಪಾನುಷ್ಠಾನಪೂಜೆಗಳಿ 

ಗಾಲಸ್ಯಮಂ ಮಾಡದೆನ್ನ ಪರಿಚರ್ಯೆಗನು 

ಕೂಲೆಯಾಗಿರ್ದು ಮನೆವಾಳ್ತೆಯಂ ಸಾಗಿಪುದು ನೀನೆಂದೊಡಿಂತೆಂದಳು॥೨೩॥


" ಅರ್ಜುನನೇ ಕೇಳು. ಹಿಂದೆ ಉದ್ದಾಲಕನೆಂಬ ಹೆಸರಿನ ಬ್ರಾಹ್ಮಣನಿದ್ದನು. ಅವನು ಸಕಲಶಾಸ್ತ್ರಗಳಲ್ಲೂ ಪಾರಂಗತನಾಗಿದ್ದನು. ಅವನಿಗೆ ಚಂಡಿ ಎನ್ನುವ ವಧುವಿನೊಡನೆ ಮದುವೆಯಾಯಿತು. " ಕಾಲ ಕಾಲಕ್ಕೆ ಜಪ ಅನುಷ್ಠಾನ ಪೂಜೆಗಳಿಗೆ ಅನುಕೂಲವಾಗಿದ್ದು, ಮನೆಗೆಲಸವನ್ನು ನೀನು ಮಾಡಬೇಕು. " ಎಂದವನು ತನ್ನ ಹೆಂಡತಿಗೆ ಹೇಳಿದನು. ಆಗವಳು ಹೀಗೆಂದು ಹೇಳಿದಳು. 


ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ 

ಗೊಳ್ಳದಿರ್ ಪರಿಚರ್ಯೆ ಮನೆವಾಳ್ತೆಯೆಂದೆಂಬ

ತಳ್ಳಿಯವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಪೋರೆ 

ಮುಳ್ಳಿಡಿದ ಮರವೇರಿದಂತಾದುದಿಹಪರಕಿ 

ದೊಳ್ಳಿತಾದಪುದೆ ಬಂದುದು ತಪೋಹಾನಿಯೆಂ 

ದಳ್ಳೆಯೊಳ್ ಕೋಲ್ಗೊಂಡ ತೆರದೊಳುದ್ದಿಲಕಂ ಚಿಂತಿಪಂ ಪ್ರತಿದಿನದೊಳು ॥೨೪॥


" ನಿನ್ನ ಮಾತನ್ನು ಎಳ್ಳಷ್ಟಾದರೂ ಕೇಳುವೆನೆಂದು ತಿಳಿಯಬೇಡ. ಪರಿಚರ್ಯೆ, ಮನೆವಾರ್ತೆ, ಎಂಬ ಗೋಜಿನವಳು ನಾನಲ್ಲ. ನೀನು ಏನು ಹೇಳಿದರೂ ನಾನದನ್ನು ಮಾಡುವುದಿಲ್ಲ." ಎಂದು ಚಂಡಿಯು ಹಠದಿಂದ ಹೋರಿದಳು. ಆಗ ಉದ್ದಾಲಕನು (ನಾನು ಇವಳನ್ನು ಮದುವೆಯಾದದ್ದು ) ಮುಳ್ಳು ತುಂಬಿದ ಮರವನ್ನು ಹತ್ತಿದಂತಾಯಿತು, ಇದು ಇಹಕ್ಕೂ ಪರಕ್ಕೂ ಒಳ್ಳೆಯದಾದೀತೇ ? ತಪಸ್ಸಿಗೆ ಹಾನಿ ಬಂದಿತು ಎಂದು ಚಿಂತಿಸಿ ಪಕ್ಕೆಗೆ ಬಾಣ ನಟ್ಟ ಹಿಗಾಗಿ ಪ್ರತಿದಿನವೂ ಚಿಂತೆಮಾಡುತ್ತಿದ್ದನು.( ಮುಳ್ಳಿದ್ದ ಮರವನ್ನು ಹತ್ತಿದ ಮೇಲೆ, ಮೇಲೂ ಕೆಳಗೂ ಮುಳ್ಳು ಚುಚ್ಚುತ್ತವೆ . ಇರುವ ಜಾಗದಲ್ಲೂ ಮುಳ್ಳು) 


ಇಂತಿರುತಿರಲ್ಕೆ ಕೌಂಡಿನ್ಯನೆಂಬೊರ್ವ ಮುನಿ 

ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ 

ಚಿಂತೆವೆತ್ತಿರಲವನಿದೇನೆಂದು ಬೆಸಗೊಂಡೊಡವಳ ಪ್ರತಿಕೂಲತೆಯನು 

ಅಂತರಿಸದೆಲ್ಲಮಂ ಪೇಳ್ದೊಡವನಿದಕೆ ನೀಂ 

ಮುಂತೆ ವಿಪರೀತಮಂ ಮಾಡಲಾದಪುದೆಂದು 

ಸಂತಾಪಮಂ ಬಿಡಿಸಿ ಬೀಳ್ಕೊಂಡವಂ ತೀರ್ಥಯಾತ್ರೆಗೈದಿದನಿತ್ತಲು ॥೨೫॥


ಹೀಗಿರಲು ಅವನ ಮನೆಗೆ ಕೌಂಡಿನ್ಯನೆಂಬ ಒಬ್ಬ ಮುನಿಶ್ರೇಷ್ಠನು ಬರಲು, ಉದ್ದಾಲಕನು ಅವನನ್ನು ಸತ್ಕರಿಸಿ ಚಿಂತಾಕ್ರಾಂತನಾಗಿ ಕುಳಿತಿರಲು " ಇದೇನು ?" ಎಂದು ಅತಿಥಿಯು ಕೇಳಿದನು. ಉದ್ದಾಲಕನು ತನ್ನ ಸ್ಥಿತಿಯನ್ನು ಸ್ವಲ್ಪವೂ ಬಿಡದೆ ಹೇಳಲು, ಅವನು " ನಿನಗೇನಾಗಬೇಕೋ ಅದಕ್ಕೆ ವಿರುದ್ಧವಾದುದನ್ನು ಮಾಡಲು ಹೇಳು. " ಎಂದು ಉಪಾಯವನ್ನು ಹೇಳಿಕೊಟ್ಟು ತೀರ್ಥಯಾತ್ರೆಗೆ ಹೊರಟು ಹೋದನು,


ಉದ್ದಾಲಕಂ ಬಳಿಕ ತನ್ನ ಮಂದಿರದೊಳಿರು 

ತಿದ್ದಸಮಯಕೆ ಪಿತೃಶ್ರಾದ್ಧದಿವಸಂ ಬಂದೊ 

ಡೆದ್ದು ಚಂಡಿಯೊಳೆಲಗೆ ನಾಳೆ ಪೈತೃಕಮದಂ ನಾಡಿದಲ್ಲದೆ ಮಾಡೆನು 

ಕದ್ದು ತಹೆನಧಮಧಾನ್ಯ ವ್ರೀಹಿ ಶಾಕಮಂ 

ಪೊದ್ದಲೀಯೆಂ ಶುದ್ಧವಸ್ತುಗಳನೊಂದುಮಂ 

ತದ್ದಿನಕೆ ಮರುದಿವಸದೊಳ್ ಪೇಳ್ದು ಬಹೆನಪಾತ್ರಂಗೆಂದೊಡಿಂತೆಂದಳು ॥೨೬॥


ಕೆಲವು ದಿನಕ್ಕೆ ಉದ್ದಾಲಕನ ತಂದೆಯ ಶ್ರಾದ್ಧವು ಬಂದಿತು. ಅವನು ಚಂಡಿಗೆ" ಎಲೇ ನಾಳೆ ಪಿತೃಶ್ರಾದ್ಧವಿದೆ ಅದನ್ನು ನಾಡಿದ್ದು ಮಾಡುತ್ತೇನೆ. ಅದಕ್ಕೆ ಕಳಪೆ ಧಾನ್ಯ, ಅಕ್ಕಿ, ತರಕಾರಿಗಳನ್ನೇ ತರುತ್ತೇನೆ. ಶುದೂಧ ವಸ್ತುಗಳೊಂದನ್ನೂ ಹತ್ತಿರಕ್ಕೆ ತರುವುದಿಲ್ಲ. ಅಪಾತ್ರನೋಬ್ಬನಿಗೆ ಶೂರಾದ್ಧದ ಮರುದಿನ ಹೇಳಿ ಬರುತ್ತೇನೆ." ಎಂದನು. 


ನಾಳೆ ಮಾಡಿಸುವೆನಾಂ ಪೈತೃಕವನುತ್ತಮದ 

ಶಾಲಿಧಾನ್ಯ ವ್ರೀಹಿಶಾಕಮಂ ಕೋಂಡು ಬಹೆ 

ನಾಲಯವನತಿಶುದ್ಧವಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ 

ಪೇಳಿಸುವೆನಂದಿನ ದಿನದ ಮೊದಲ ರಾತ್ರಿಯೆ ವಿ 

ಶಾಲಗುಣಸಂಪನ್ನ ವೇದಪಾರಂಗತ ಸು 

ಶೀಲರಹ ಸತ್ಪಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು॥೨೭॥


ಅದಕ್ಕೆ ಚಂಡಿಯು " ಪಿತೃಕಾರ್ಯವನ್ನು ನಾಳೆಯೇ ನಿನ್ನಿಂದ ಮಾಡಿಸುತ್ತೇನೆ, ಉತ್ತಮವಾದ ಧಾನ್ಯ, ಅಕ್ಕಿ , ತರಕಾರಿಗಳನ್ನೇ ತರುತ್ತೇನೆ. ಮನೆಯಲ್ಲಿ ಅತಿ ಶುದ್ಧವಾದ ವಸ್ತುಗಳನ್ನೇ ತರುತ್ತೇನೆ, ಶ್ರಾದ್ಧದ ಹಿಂದಿನ ದಿನದ ರಾತ್ರಿಯೇ ಸದ್ಗುಣ ಸಂಪನ್ನನಾದ ವೇದಪಾರಂಗತನಾದ ಸುಶೀಲನಾದ ಸತ್ಪಾತ್ರನಾದ ಬ್ರಾಹ್ಮಣನಿಗೇ ಆಹ್ವಾನವನ್ನು ಕೊಡುತ್ತೇನೆ" ಎಂದಳು. 


ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ 

ಳಾದರಿಸೆನಾಂ ಬಂದ ವಿಪ್ರರಂ ಪಾಕದ ನ 

ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದು ಭಕ್ಷ್ಯ ಭೋಜ್ಯಾದಿಗಳನು 

ಸ್ವಾದುಫಲ ಶರ್ಕರ ವಿನುತ ಶಾಕ ನಿರ್ಮಲ ಪ 

ಯೋದಧಿಗಳಂ ಸಕುತ್ಸಿತಮಾಗದಂತೆ ಸಂ 

ಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರದಕ್ಷಿಣೆಗಳಂ ಕೊಡೆನೆಂದನು ॥೨೮॥


ಉದ್ಧಾಲಕ " ಆದರೆ ಕ್ಲುಪ್ತವಾದ ಕಾಲವನ್ನು ಅನುಸರಿಸುವುದಿಲ್ಲ. ಬಂದ ಬ್ರಾಹ್ಮಣರಿಗೆ ಮರ್ಯಾದೆ ಕೊಡದೆ, ಒಳ್ಳೆಯ ಪಾಯಸ, ಜೇನುತುಪ್ಪ, ತೈಲದಿಂದ ಮಾಡಿದ ಭಕ್ಷ್ಯ ಭೋಜ್ಯಾದಿಗಳನ್ನು, ಸಿಹಿಯಾದ ಹಣ್ಣು, ಸಕ್ಕರೆ ಬೆರೆತ ಹಾಲು, ಮೊಸರುಗಳನ್ನು ಬಡಿಸಿ ಸತ್ಕರಿಸದೆ, ಊಟವಾದ ಮೇಲೆ ಅವರಿಗೆ ದಕ್ಷಿಣೆಯನ್ನು ಕೊಡುವುದಿಲ್ಲ.  " ಎಂದನು. 


ಎಂದೊಡೆ ಕುತುಪಕಾಲಮಂ ಮೀರಲೀಯೆನಾಂ 

ಬಂದ ವಿಪ್ರರನಾದರಿಸಿ ಪೂಜೆಗೈಸದಿರೆ 

ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಹಸದೆ ಮಾಣೆನು 

ತಂದುಲವಸ್ತ್ರ ತಾಂಬೂಲ ವರದಕ್ಷಿಣೆಗ 

ಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನೆನುತೆ ನಲ 

ವಿಂದೊದವಿಸಿದಖಿಳಲಸದ್ರ್ರವ್ಯಮಂ ಬಳಿಕ ಚಂಡಿ ಪಾಕಂಗೈದಳು ॥೨೯॥


ಅದಕ್ಕೆ ಚಂಡಿಯು " ಕ್ಲುಪ್ತ ಕಾಲವನ್ನು ಮೀರಲು ನಾನು ಬಿಡುವುದಿಲ್ಲ.  ಬಂದ ಬ್ರಾಹ್ಮಣರನ್ನು ಆದರಿಸಿ ಪೂಜೆ ಮಾಡಿಸುತ್ತೇನೆ. ಈ ದಿನ ನೀನು ಹೇಳಿದುದೆಲ್ಲವನ್ನೂ ಸಂಪಾದಿಸದೆ ಬಿಡುವುದಿಲ್ಲ.  ಶುದ್ಧವಾದ ಬಟ್ಟೆ, ತಾಂಬೂಲ, ದಕ್ಷಿಣೆಗಳಿಂದ ಸತ್ಕರಿಸದೆ ಬಿಡುವುದಿಲ್ಲ." ಎಂದು ಸಮಸ್ತ ಒಳ್ಳೆಯ ದ್ರವ್ಯಗಳನ್ನೂ ತಂದು ಅಡಿಗೆ ಮಾಡಿದಳು.  


ಕಂಡನೀತೆರನನುದ್ದಾಲಕಂ ಸಂತಸಂ 

ಗೊಂಡು ಮನದೊಳ್ ಪೊರಗೆ ತಾನೊಪ್ಪದವನಾಗಿ 

ಚಂಡಿ ಪೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ 

ತೊಂಡುತೊಳಸಂ ಮರೆದು ಕರ್ಮಾಂಗಮಾಗಿರ್ದ 

ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡು 

ದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ರೋಷಭೀಷಣನಾದನು ॥೩೦॥


ಈ ರೀತಿಯನ್ನು ಕಂಡು ಉದ್ದಾಲಕನು ಸಂತಸಗೊಂಡನು. ಹೊರಗೆ ಅತೃಪ್ತನಂತೆ ನಟಿಸಿ, ಚಂಡಿ ಹೇಳಿದಂತೆ ಶ್ರಾದ್ಧವನ್ನು ಮಾಡಿದನು. ಸಂತೋಷದಿಂದ ಕರ್ಮಾಂಗವಾದ ಪಿಂಡವನ್ನು ತೆಗೆದು " ಮಡುವಿನಲ್ಲಿ ಹಾಕು " ಎನ್ನಲು ಅವಳು ಪಿಂಡವನ್ನು ಬೀದಿಗೆ ಬಿಸುಟಳು. ಉದ್ದಾಲಕನು ಮಹಾ ಕೋಪವನ್ನು ತಾಳಿದನು. 


ಎಲೆಗೆ ನಿನ್ನೊಡನೆ ನಾನೇಂ ಹರಿಯಹೋರುವೆಂ 

ಛಲಿತನಕಲಿಸಿದೆ ನೀನರೆಯಾಗಿ ಹೋಗೆಂದು 

ಸಲೆ ಮುಳಿದು ಶಾಪವಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದು 

ಕೆಲವುಕಾಲಕೆ ನಿನ್ನೊಳಧ್ವರಹಯಂ ಬಂದು 

ನಿಲಲರ್ಜುನಂ ಬಿಡಿಸಿದೊಡೆ ಮೋಕ್ಷಮಹುದೆಂದು 

ತೊಲಗಿದಂ ಸಂನ್ಯಾಸಕವನತ್ಥಲವನಿಯೊಳ್ ಕಲ್ಲಾದಳಿವಳಿತ್ಥಲು ॥೩೧॥


"ಎಲೇ, ನಿನ್ನೊಡನೆ ನಾನು ಎಷ್ಟೊಂದು ಹೋರಾಡಲಿ. ನಿನ್ನ ಛಲಕ್ಕೆ ನಾನು ಬೇಸತ್ತಿದ್ದೇನೆ, ನೀನು ಕಲ್ಲಾಗಿ ಹೋಗು" ಎಂದು ಉದ್ದಾಲಕನು ಶಾಪವನ್ನು ಕೊಟ್ಟನು.  ಸ್ವಲ್ಪ ಹೊತ್ತಿನ ನಂತರ ಕರುಣೆಯಿಂದ " ಕೆಲವು ಕಾಲಕ್ಕೆ ಅರ್ಜುನನ ಕುದುರೆ ಬಂದು ನಿನ್ನಲ್ಲಿ ಸಿಲುಕಿದಾಗ ಅವನು ಬಿಡಿಸಿದರೆ ನಿನಗೆ ಶಾಪವಿಮೋಚನೆಯಾಗುತ್ತದೆ. " ಎಂದು ಹೇಳಿ ಸಂನ್ಯಾಸ ಸ್ವೀಕಾರ ಮಾಡಿ ಹೋದನು. ಚಂಡಿಯು ಕಲ್ಲಾದಳು. 


ಮೋಕ್ಷಮಹುದಾಗಿ ಚಂಡಿಗೆ ಶಾಪಮೀಗಳುಪ 

ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ

ಲೀಕ್ಷಣದೊಳೆದ್ದು ಪೋದಪುದು ಪೋಗಿನ್ನು ಮುಂದಣ ನೃಪರ್ ಬಲವಂತರು 

ರಾಕ್ಷಸಾರಿಯನೆ ಮರೆಯದಿರೆಂದು ಸೌಭರಿ ನಿ 

ರೀಕ್ಷಿಸಿ ಕೃಪಾವಲೋಕನದಿಂದೆ ವರಸಹ 

ಸಹಸ್ರಾಕ್ಷನ ಕುಮಾರನಂ ಕಳುಹಲಾನತನಾಗಿ ವಿನಯದಿಂ ಬೀಳ್ಕೊಂಡನು ॥೩೨॥


ಚಂಡಿಗೆ ಶಾಪವಿಮೋಚನೆಯ ಕಾಲ ಬಂದಿದೆ.  ಅದಕ್ಕಾಗಿ ಕುದುರೆಯು ಅಲ್ಲಿ ಸಿಲುಕಿದೆ. ನೀನು ಹೋಗಿ ಮುಟ್ಟಿದರೆ ಈ ಕ್ಷಣದಲ್ಲಿ ಅದು ಎದ್ದು ಹೊರಡುತ್ತದೆ. ಹೋಗು, ಇನ್ನು ಮುಂದೆ ಬರುವ ರಾಜರು ಮಹಾಬಲಶಾಲಿಗಳು. ನೀನು ರಾಕ್ಷಸಾರಿಯಾದ ಶ್ರೀಕೃಷ್ಣನನ್ನು ಮರೆಯಬೇಡ ಎಂದು ಹೇಳಿ ಸೌಭರಿಯು ಅರ್ಜುನನನ್ನು ಕೃಪೆಯಿಂದ ನೋಡಿ ಕಳುಹಿಸಿದನು. ಅರ್ಜುನನು ಅವನನ್ನು ವಿನಯದಿಂದ ಬೇಳ್ಕೊಂಡನು. 


ತದನಂತರದೊಳರ್ಜುನಂ ಬಂದು ಕುದುರೆಯಂ 

ಮುದದಿಂದೆ ಮುಟ್ಟಲದು ಬಿಟ್ಟು ನಡೆದುದು ಮುಂದ 

ಕೊದರಿಕೊಳುತೆದ್ದು ನರನಂ ಕಂಡು ಚಂಡಿ ತಪಕಾಗಿ ಕಳುಹಿಸಿಕೊಂಡಳು 

ಒದವಿದ ಸಮಸ್ತ ಜನಮಾಗೆ ವಿಸ್ಮಿತಮಾದು

ದುದಿರಿತು ಕುಸುಮವೃಷ್ಟಿ ಬಳಿಕ ದಕ್ಷಿಣಕೆ ನಡೆ 

ದುದು ವಾಜಿ ಚಂಪಕಾಪುರಕಂದು ಹಿಂದೆ ಬಹ ಪಡೆಸಹಿತ ವಹಿಲದಿಂದ ॥೩೩॥


ಬಳಿಕ ಅರ್ಜುನನು ಬಂದು ಕುದುರೆಯನ್ನು ಮುಟ್ಟಲು ಅದು ಎದ್ದು ಮುಂದೆ ಹೋಯಿತು. ಶಾಪದಿಂದ ಬಿಡುಗಡೆಯಾದ ಚಂಡಿಯು ಅರ್ಜುನನನ್ನು ಕಂಡು ತಪಸ್ಸು ಮಾಡಲು ಅನುಮತಿ ಕೇಳಿ ಹೊರಟಳು. ಅಲ್ಲಿದ್ದ ಸರ್ವರೂ ವಿಸ್ಮಿತರಾದರು.ಪುಷ್ಪವೃಷ್ಠಿಯಾಯಿತು, ಕುದುರೆಯು ದಕ್ಷಿಣ ದಿಕ್ಕಿಗೆ ನಡೆದು ಚಂಪಾನಗರಕ್ಕೆ ಬಂದಿತು. ಅದರ ಹಿಂದೆ ಸೈನ್ಯವು ಹಿಂಬಾಲಿಸಿತು. 


ಹನ್ನೊಂದನೆಯ ಸಂಧಿ 


ಸೂಚನೆ -:

ಹಿಂದುಳಿದನಾಹವಕ್ಕೆಂದು ಹಂಸಧ್ವಜಂ 

ನಂದನನನೆಣ್ಣೆಗಾಯ್ದಿರ್ದ ಕೊಪ್ಪರಿಗೆಯೊ 

ಳ್ತಂದು ಕೆಡಹಿಸಲಚ್ಯುತಧ್ಯಾನದಿಂ ತಂಪುವಡೆದನವನಚ್ಚರಿಯೆನೆ॥ 


ಯುದ್ಧಕ್ಕೆ ಬರಲು ತಡಮಾಡಿದನೆಂದು, ಹಂಸಧೂವಜನು ತನ್ನ ಮಗನನ್ನು ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿ ಕೆಡವಿಸಲು, ಶ್ರೀಕೃಷ್ಣಧ್ಯಾನದಿಂದ ಅವನು ( ಬಿಸಿ ತಟ್ಟದೆ ) ಕ್ಷೇಮವಾಗಿದ್ದನು. 


ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ 

ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ 

ಮೋಹದ ಕುಮಾರಂ ಸುಧನ್ವನಾಯತನಾಗಿ ಬಂದು ನಿಜಮಾತೆಯಡಿಗೆ 

ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗೆ ಸಿತ 

ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್

ಸಾಹಸಂಮಾಳ್ಪೆನೆನ್ನಂ ಪರಿಸಿ ಕಳುಹೆಂದು ಕೈಮುಗಿದೊಡಿಂತೆಂದಳು ॥೧॥


ಜನಮೇಜಯನೇ ಕೇಳು, ಎಲ್ಲ ಭಟರು ಯುದ್ಧಕ್ಕೆ ಹೊರಟ ಮೇಲೆ, ಹಂಸಧ್ವಜನ ಮೋಹದ ಮಗನಾದ ಸುಧನ್ವನು ತಾಯಬಳಿಗೆ ಬಂದು, ಎರಡೂ ಕೈಗಳನ್ನು ಅವಳ ಪಾದಗಳಿಗೆ ನೀಡಿ ಸಾಷ್ಟಾಂಗ ನಮಸ್ಕಾರ ಮಾಡಿ " ಅರ್ಜುನನ ಕುದುರೆಯನ್ನು ಕಟ್ಟಿ ಅವನೋಡನೆ ಯುದ್ಧ ಮಾಡುತ್ತೇನೆ. ಆಶೀರ್ವದಿಸಿ ಕಳುಹಿಸು" ಎನ್ನಲು, ಅವಳು ಹೀಗೆಂದಳು. 


ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯ 

ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ 

ನಂದದಿಂ ಪಾರ್ಥನಂ ರಕ್ಷಿಸುವ ಹರಿಯನೇ ಹಿಡಿವ ಬುದ್ಧಿಯನೆ ಮಾಡು 

ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದೆಂ ಮು 

ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ 

ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು ॥೨॥


ಸುಧನ್ವನ ತಾಯಿಯು :- " ಕಂದ, ಕೇಳು: ಅರ್ಜುನನು ನಾಲ್ಕು ಕಾಲಿನ ಒಂದು ಹಂದಿಯನ್ನು ( ಕುದುರೆ ) ಪಾಲಿಸುತ್ತಾನೆ. ನಿನಗೆ ಅದರ ಚಿಂತೆ ಬೇಡ. ಅರ್ಜುನನನ್ನು ರಕ್ಷಿಸುವ ಹರಿಯನ್ನೇ ಹಿಡಿಯುವ ಉಪಾಯವನ್ನು ಮಾಡು. ಈ ಹಿಂದೆ ನಾರದನಿಂದ ಶ್ರೀ ಕೃಷ್ಣನ ಲೀಲೆಗಳನ್ನು ವಿಸ್ತಾರವಾಗಿ ಕೇಳಿದ್ದೇನೆ. ಅವನು ಈಗ ಬಂದರೆ ಕಣ್ಣಾರೆ ನೋಡಬಹುದು " ಎಂದಳು. 


ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ 

ರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೊಂದು

ಪಾಯಮಂ ಬಲ್ಲೆನಾಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು 

ನೋಯಿಸಿದೊಡಗಧರಂ ಬಾರದಿರನಾನತರ 

ಪಿಯಮಂ ಸೈರಿಸಂ ಬಳಿಕ ತೋರುವೆನಂಬು 

ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮಗುಳಿಂತೆಂದಳು ॥೩॥


" ಅಮ್ಮಾ ಕೇಳು, ಶ್ರೀ ಕೃಷಣನು ನನ್ನೆಡೆಗೆ ಬರುವಂತೆ ಮಾಡುವ ಉಪಾಯ ನನಗೆ ಗೊತ್ತು. ನೀನು ಚಿಂತಿಸಬೇಡ. ಕೈಹಿಡಿದೆಳೆದರೆ ಮೈಯು ತಾನೇ ಬರುತ್ತದೆ. ಅರ್ಜುನನನ್ನು ನೋಯಿಸಿದರೆ ಅವನು ಬರದೇ ಇರುವುದಿಲ್ಲ. ಬಳಿಕ ಅವನ ಮುಂದೆ ನನ್ನ ಪೌರುಷವನ್ನು ತೋರಿಸುತ್ತೇನೆ". 


ಕರುವನೆಳಗಂದಿ ತಾನರಸಿಕೊಂಡೈತರ್ಪ 

ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ 

ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು 

ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್

ನೆರೆ ಕೃಷ್ಣನಂ ಗೆಲ್ಲರುಂಟೆ ಸಿಕೆನ್ನೊಡಲ 

ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ಮೆಟ್ಟದಿರ್ ಪೋಗೆಂದಳು ॥೪॥


ಕರುವನ್ನು ಎಳೆಗಂದಿ ಹಸುವು ಹುಡುಕಿಕೊಂಡು ಬರುವಂತೆ ಶ್ರೀ ಕೃಷ್ಣನು ಅರ್ಜುನನ ಬಳಿಗೆ ಬರುತ್ತಾನೆ.  ಆಗ ನೀನು ಬೆನ್ನು ತೋರಿಸಿದರೆ ನನ್ನ ಬಂಧುಗಳುನನ್ನನ್ನು ಜರೆಯುತ್ತಾರೆ. ಶ್ರೀ ಕೃಷ್ಣನನ್ನು ಯುದ್ಧದಲ್ಲಿ ಗೆಲ್ಲುವವರುಂಟೆ? ನಾನು ನನ್ನ ದುಃಖವನ್ನು ಬಿಟ್ಟೆ. ಅವನಿಗೆ ಹಿಮ್ಮೆಟ್ಟ ಬೇಡ, ಹೋಗು ಎಂದಳು. 


ಎಂದೊಡೆಲೆ ತಾಯೆ ಕೇಳ್ ಚಕ್ರಿಗೆ ವಿಮುಖನಾಗಿ 

ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ 

ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ 

ಕೊಂದಪೆಂ ಪಾರ್ದನ ಪತಾಕಿನಿಯನವನದಟ 

ನಂದಗೆಡಿಸುವೆನೆನ್ನ ವಿಕ್ರಮವನಚ್ಯುತನ

ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲುವುದು ಪುಣ್ಯವಶಮೆಂದನು॥೫॥


ತಾಯಿಗೆ ಸುಧನ್ವನು " ಅಮ್ಮಾ ಚಕ್ರಿಗೆ ಬೆನ್ನು ತೋರಿಸಿ ಬಂದರೆ ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟಿದವನೇ? ಹಂಸಧ್ವಜನ ಮಗನೇ ? ವಿಷ್ಣು ಭಕ್ತನೇ ? ವೀರನೇ ? ಅರ್ಜುನನ ಸೈನ್ಯವನ್ನು ಸಂಹರಿಸಿ ಕೃಷ್ಣನಿಗೆ ನನ್ನ ಪರಾಕ್ರಮವನ್ನು ತೋರಿಸುತ್ತೇನೆ. ಇಷ್ಟರ ಮೇಲೆ ಸೋಲು ಗೆಲುವುಗಳು ಪುಣ್ಯ ವಶ" ಎಂದನು. 


ಅನಿತರೊಳ್ ಕುವಲೆಯೆಂಬುವಳೋರ್ವಳಾ ಸುಧ 

ನ್ವನ ಸಹೋದರಿ ತಂದಳಿರತೀಯನನುಜ ಕೇ 

ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾವನ 

ಮನೆಯೊಳಾಂ ತಲೆಯೆತ್ತೀ ನಡೆವೆನೆಂತದರಿಂದೆ 

ವನಜಾಕ್ಷನಂ ಮೆಚ್ಚಿಸಾಹವದೊಳೆಂದು ಚಂ 

ದನದ ನುಣ್ಪಿಟ್ಟು ಕಪ್ಪುರವೀಳೆಯಂಗೊಟ್ಟು ಕಳುಹಿದಳ್ ಸೇಸೆದಳೆದು ॥೬॥


ಸುಧನ್ವನಿಗೆ ಕುವಲೆಯೆಂಬ ಸಹೋದರಿ ಇದ್ದಳು. ಅವಳು ಆರತಿಯನ್ನು ತಂದು, " ತಮ್ಮ, ನೀನು ಯುದ್ಧದಲ್ಲಿ ವಿಮುಖನಾಗಿ ಬಂದರೆ, ಮಾವನ ಮನೆಯಲ್ಲಿ ನಾನು ತಲೆಯೆತ್ತಿ ನಡೆಯುವುದು ಹೇಗೆ ? ಆದುದರಿಂದ ಸಾಹಸ ಮಾಡಿ ಮೆಚ್ಚಿಸು" ಎಂದು, ಗಂಧದ ಬೊಟ್ಟಿಟ್ಟು ಕರ್ಪೂರ ವೀಳೆಯವನ್ನು ಕೊಟ್ಟು, ಸೇಸೆಯಿಟ್ಟು ಕಳುಹಿಸಿದಳು. 


ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ 

ಪರೆಪಿರ್ದ ಸಂಪಗೆಯ ಪೂಗಳಂ ತನ್ನ ಮೆ 

ಯ್ಯೊರಗೆ ಸರಿಯಾದಪುವೆ ನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ 

ತರಳೆಯಂ ಕಡೆಗಣ್ಣೊಳೊಯ್ಯನೀಕ್ಷಿಸಿ ನಗುತೆ 

ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು 

ಭರದಿಂದೆ ಕೊಳುಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು ॥೧೧॥


ಕೈಯಲ್ಲಿದ್ದ ಬಂಗಾರದ ತಟ್ಟೆಯಲ್ಲಿದ್ದ ಸಂಪಿಗೆ ಹೂಗಳು, ತನ್ನ ಮೈ ಬಣ್ಣದ ಸರಿಗೆ ಬರುವುದೇ ಎಂದು ತೋರಿಸುತ್ತಾ ನಿಂತ ತನ್ನ ಪತ್ನಿಯನ್ನು ಸುಧನ್ವನು ಓರೆ ನೋಟದಿಂದ ನೋಡಿ ಗಂಧ ಪುಷ್ಪಗಳನ್ನು ತೆಗೆದುಕೊಂಡು, ಯುದ್ಧಕ್ಕೆ ಹೊರಡುವ ಅವಸರದಲ್ಲಿ ಹೀಗೆಂದನು: 


ಕಾಂತೆ ಕೇಳಿಂದು ಸಮರದೊಳರ್ಜುನಂಗೆ ಮಾ 

ರಾಂತವನ ಬಿಂಕಮಂ ಮುರಿವೆನಾಂ ಹರಿಬಕಸು 

ರಾಂತಕಂ ಬಂದೊಡಾತನ ಮುಂದೆ ವಿಜಯಮಂ ತೋರಿಸುವೆನೆನ್ನ ಭುಜವಿಕ್ರಮನು 

ನಾಂ ತಳೆವೆನಾರ್ಪಿಂದೆ ವಿಜಯಮಂ ಮೀರ್ದೊಡೆ ಭ 

ವಾಂತರವನೈದಿ ಸನ್ಮುಕ್ತಿಯಂ ಪಡೆದಪೆಂ 

ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು ॥೧೨॥


ಕಾಂತೆ, ಕೇಳು, ಇಂದು ಯುದ್ಧದಲ್ಲಿ ಅರ್ಜುನನಿಗೆ ಇದಿರಾಗಿ ಅವನ ಗರ್ವವನ್ನು ಮುರಿಯುತ್ತೇನೆ. ಅಲ್ಲಿಗೆ ಶ್ರೀ ಕೃಷ್ಣನು ಬಂದರೆ ನನ್ನ ಪರಾಕ್ರಮವನ್ನುತೋರಿಸುತ್ತೇನೆ. ಕೈಮೀರಿದರೆ ಪುನರ್ಜನ್ಮವಿಲ್ಲದ ಮುಕ್ತಿಯನ್ನು ಪಡೆಯುತ್ತೇನೆ, ಎಂದು ಪ್ರಭಾವತಿಯನ್ನು ಸಂತೈಸಿ ಹೊರಡಲು ಅವನನ್ನು ತಡೆದು ಅವಳು ಹೀಗೆಂದು ಹೇಳಿದಳು. 


ಯುಕ್ತಮಲ್ಲಿದು ರಮಣ ನಿನಗೆ ಕೇಳ್ ಕಾದುವಾ 

ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ 

ಮುಕ್ತಿಯಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು 

ವ್ಯಕ್ತದಿಂ ತನಗೊಂದಪತ್ಯಮುಲದಯಿಸದೊಡೆ ವಿ 

ರಕ್ತಿಯಿಂ ಕೈವಲ್ಯಮಾದಪುದೆ ಸಮರಕು 

ದ್ಯುಕ್ತನಪ್ಪಾತಂಗೆ ಸಂತಾನಮಿಲ್ಲದಿರಲಪ್ಪುದೇ ಹೇಳೆಂದಳು ॥೧೩॥


" ಕಾಂತ,  ಕೇಳು, ಶ್ರೀ ಕೃಷ್ಣನಿಗೆ ಇದಿರಾದರೆ ಮುಕ್ತಿಜಯವಾದೀತು. ಯುದ್ಧ ಜಯ ಅಸಾಧ್ಯ. ಮಗನಿಲ್ಲದೆ ಮುಕ್ತಿಯಾದೀತೇ ? ನೀನೇ ಹೇಳು " ಎಂದು ಪ್ರಭಾವತಿಯು ಸುಧನ್ವನಿಗೆ ಹೇಳಿದಳು.  


 ಅದರಿಂದಮಾತ್ಮಜವಿವೇಕಮಿಲ್ಲದೊಡೆ ನನ 

ಗಿದುವೆ ಜಲದೋದಯದ ಋತುಸಮಯಮೀ ಪದದೊ 

ಳುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತಿದೊಡೆ ಬೆಳೆ ಬಾಳ್ಕೆಗೆ 

ಕದನಕೈದುವವೇಳೆಯಲ್ಲೆನಲವಂ ಮುಂದೆ 

ಬೆದೆಗಾಲಮುಂಟೆಂದೊಡವಳೆಣಿಸಿ ಮಳೆಗಳಂ 

ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು॥೧೪॥ 


" ನನಗಿದು ಋತುಸಮಯ, ಈಗ ನೀನು ಭೂಮಿಯಲ್ಲಿ ಬೀಜವನ್ನು ಬಿತ್ತಿದರೆ ಜೀವನಕ್ಕೆ ಬೆಳೆ ಬೆಳೆಯುತ್ತದೆ. ಇದು ಯುದ್ಧಕ್ಕೆ ಹೊರಡುವ ಸಮಯವಲ್ಲ." ಎಂದವಳು ಹೇಳಲು ಸುಧನ್ವನು ಮುಂದಿನ್ನೂ ಬೆದೆಗಾಲಗಳಿವೆ ಎಂದನು. ಅವಳು ವಿಶಾಖಾನಕ್ಷತ್ರದ ತುದಿಯಿದು. ಈ ಕಾಲವನ್ನು ಬಿಟ್ಟರೆ ಬೆಳೆ ಮೊಳೆಯದು ಎಂದಳು. 


ರಮಣಿ ನೀನೆಂಬುದನುನಯಮಪ್ಪುದಾದೊಡಂ 

ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರಮಟ್ಟು 

ಸಮರಕಯ್ಯಂ ಪೋದನುಳಿದೆನಾದೊಡೆ ತಾತನಾಜ್ಞೆಗೊಳಗಾಗದಿರೆನು  

ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ 

ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು 

ಕಮಲಾಕ್ಷಿಯಂ ಮುದ್ದುಗೈದು ಬೀಳ್ಕೊಳ್ವಿನಂ ಕಾತರಿಸಿ ಮೇಲ್ವಾಯ್ದಳು ॥೧೫॥


ರಮಣಿ, ನೀನು ಹೇಳುವುದು ಸರಿಯಾದರೂ, ಯುದ್ಧ ಭೇರಿ ಮೊಳಗುತ್ತಿದೆ, ಆದುದರಿಂದ ಇದು ಸಮಯವಲ್ಲ. ತಂದೆಯು ಯುದ್ಧಕ್ಕೆ ಹೊರಟು ನಾನು ಹಿಂದುಳಿದರೆ ಅವನ ಆಜ್ಞೆಗೆ ಗುರಿಯಾಗುತ್ತೇನೆ. ನಿನಗಿದು ತಿಳಿಯದೆ. ನಾನು ಮುಂದಿನ ಶಿಕ್ಷಯನ್ನು ಸೈರಿಸಲಾರೆನು. ಅನುಕೂಲೆಯಾಗಿ ನನ್ನನ್ನು ಹೋಗಲೈ ಬಿಡು  ಎಂದು ಅವಳ ಗಲ್ಲವನ್ನು ಹಿಡಿದು ಮುದ್ದಿಸಿ ಬೀಳ್ಕೊಳ್ಳಲು ಸುಧನ್ವನು ಸಿದ್ಧನಾಗಲು, ಅವಳು ಕಾತರಿಸಿ ಅವನ ಮೇಲೆ ಬಿದ್ದಳು. 


ಅಂಗಮಿಲ್ಲದನ ಸಮರಂಗಮಂ ಪುಗಲಂಜಿ 

ತುಂಗವಿಕ್ರಮವಿಜಯಸಂಗರಕೆಳಸುವೆನೆಂ 

ಬಂಗವಣೆಯೆಂತುಟೆಂದಂಗನೆ ಬಲಾತ್ಕಾರದಿಂ ಗುರುಕುಚದ್ವಯವನು 

ಸಂಗಡಿಸುವಂತಾರ್ಪಿನಿಂ ಗಾಢತರದೊಳಾ 

ಲಿಂಗನಂಗೈದು ಕುಡಿಗಂಗಳಿಂದವನ ಮೊಗ 

ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು ॥೧೬॥


ಅನಂಗ ಸಮರವನ್ನು ಆರಂಭಿಸಲಂಜಿ, ಪರಾಕ್ರಮ ತೋರುವ ಯುದ್ಧಕ್ಕೆ ಹೋಗುವೆನೆನ್ನುವೆ. (ಇದು ನ್ಯಾಯವೇ ಸರಿಯೇ)

ಅದು ಹೇಗೆ ಎಂದು ಅವಳು ಸುಧನ್ವನನ್ನು ಗಾಢತರವಾಗಿ ಆಲಿಂಗನ ಮಾಡಿ( ಅವಳ ಕುಚಗಳೆರಡನ್ನು ಅವನಿಗೊತ್ತಿ) ಅವನ ಮುಖದ ಇಂಗಿತವನ್ನು ಪರೀಕ್ಷಿಸಲು ಓರೆ ನೋಟದಿಂದ ಅವನ ಮುಖವನ್ನು ನೋಡಿದಳು. ಆ ಶೃಂಗಾರ ಚೇಷ್ಟೆಯ ಬೆಡಗನ್ನು ಏನೆಂದು ಹೇಳಲಿ. 


ಸತಿಗೆ ಷೋಡಶದ ಋತುಸಮಯಮೇಕಾದಶೀ 

ವ್ರತಮಲಂಘ್ಯಶ್ರಾದ್ಧಮಿನಿತೊಂದುದಿನಮೆ ಸಂ 

ಗತಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿಸೆ 

ಕೃತಭೋಜ್ಯಮಾದಪುದು ನಡುವಿರುಳ್ಗಳಿದಾ ವ 

ನಿತೆಯನೊಡಗೂಬಹುದದರಿಂದ ಧರ್ಮಪ 

ದ್ಧತಿಯನೀಕ್ಷಿಸಲಿವಳನಿಂದು ಮೀರುವುದು ಮತವಲ್ಲೆಂದವಂ ತಿಳಿದನು ॥೨೦॥


ಪತ್ನಿಗೆ ಹದಿನಾರನೆಯ ದಿನದ ಋತುಕಾಲ, ಏಕಾದಶಿ ವ್ರತ, ಅಂದೇ ಮೀರಲಾಗದ ಶ್ರಾದ್ಧ.  ಕರ್ತವ್ಯವೇನು ಎಂಬ ಚಿಂತೆ ಬಂದರೆ ಶ್ರಾದ್ಧದ ಅನ್ನವನ್ನು ಮೂಸಿ ನೋಡಿದರೆ ಊಟ ಮಾಡಿದ ಹಾಗಾಯಿತು.  ನಡುರಾತ್ರಿಯನ್ನು ಕಳೆದ ಮೇಲೆ ಸತಿಯನ್ನೊಡಗೂಡಿದರೆ ದೋಷವಿಲ್ಲ. ಹೀಗೆ ಧರ್ಮಪದ್ಧತಿಯನ್ನು ಪರೀಕ್ಷಿಸಿದರೆ ಇವಳನ್ನು ಕೂಡಿದರೆ ದೋಷವಿಲ್ಲ ಎಂದು ಸುಧನ್ವನು ನಿರ್ಧರಿಸಿದನು. 


ತಾತನಾಜ್ಞೆಯನುಳಿದು ಕೃಷ್ಣದರ್ಶನಕೈದ 

ದೀತರಳೆಗಿಂದು ಋತುದಾನಮಂ ಮಾಡಿದೊಡೆ 

ಪಾತಕಂ ತನಗಿಲ್ಲಮೆಂದು ನಿಶ್ಚೈಸಿ ಬಳಿಕಾ ಸುಧನ್ವಂಮನದೊಳು 

ಭೀತಿಯಂ ತೊರೆದು ಕಾಂತೆಯ ಕೂಡೆ ರಮಿಸಿದಂ 

ಪ್ರೀತಿಯಿಂದುಗುರೊತ್ತು ಸರಸ ಚುಂಬನ ಲಲ್ಲೆ 

ವಾತುಗಳರವನೇಮಗಲೆ ತಾಡನಪ್ರೌಢಿ ಬಂಧ ಸಮ್ಮೋಹನದೊಳು ॥೨೧॥

ತಂದೆಯ ಆಜ್ಞೆಯನ್ನು ಮೀರಿ, ಕೃಷ್ಣದರ್ಶನಕ್ಕೆ ಹೋಗದೆ ಇವಳಿಗೆ ಋತುದಾನ ಮಾಡಿದರೆದೋಷವಿಲ್ಲವೆಂದು ಸುಧನ್ವನು ನಿಶ್ಚಯಿಸಿದನು. ಬಳಿಕ ನಿರ್ಭೀತನಾಗಿ ಪತ್ನಿಯೊಡನೆ ಉಗುರೊತ್ತು, ಚುಂಬನ ಲಲ್ಲೆ, ಸರಸದ ಮಾತುಗಳಿಂದ ತಾಡನ ಪ್ರೌಢಬಂಧಗಳಿಂದ ಅತಿಶಯ ಮೋಹದಿಂದ ರಮಿಸಿದನು. 


ಮನ್ವಾದಿಋಷಿಗಳಭಿಮತಮಿದೆಂದರಿದಾ ಸು 

ಧನ್ವಂ ಋತುಸ್ನಾತೆಯಂ ಮೀರದೊಡಗೂಡಿ 

ತನ್ವಿಯಂ ಬೀಳ್ಕೊಂಡು ಸಮರಕನುವಾಗಲಿರಲಿತ್ತ ಕುರುಕುಲದ ನೃಪರ 

ಅನ್ವಯಕೆ ತೊಡವಾದ ನರನ ಹಯಮಂ ಕಟ್ಟು 

ವನ್ವೇಷಣದೊಳಾಹವಕೆ ನಡೆಯುತತಿಬಲ ಸ 

ಮನ್ವಿತಕುಮಾರನಂಸೇನೆಯೊಳ್ ಕಾಣದೆ ಕೆರಳ್ದಂ ಮರಾಳಕೇತು ॥೨೬॥


ಮನುವೇ ಮೊದಲಾದವರ ಮತದಂತೆ ಋತುಕಾಲದಲ್ಲಿ ಕಾಂತೆಯನ್ನೊಡಗೂಡಿದ ಸುಧನ್ವನು, ಅವಳಿಂದ ಬೀಳ್ಕೊಂಡು ಯುದ್ಧಕ್ಕೆ ಹೊರಟನು. ಇತ್ತ ಪಾಂಡವರ ಆಭರಣದಂತಿದ್ದ ಯಾಗಾಶ್ವವನ್ನು ಕಟ್ಟಿ ಯುದ್ಧಕ್ಕೆ ಅನುವಾಗುತ್ತಿದ್ದ ಸೈನ್ಯ ಮಧ್ಯದಲ್ಲಿ ಸುಧನ್ವನನ್ನು ಕಾಣದೆ ಹಂಸಧ್ವಜನು ಕೆರಳಿದನು. 


ಪೊರೆಯೊಳಿಹ ಸಚಿವರಂ ನೋಡುತವರೊಳ್ ಸುಮತಿ 

ಗರಸಂ ನಿರೂಪಿಸಲವಂ ಕಡುಗಡಿಕರಾದ 

ಚರರನಟ್ಟಿದೊಡವರ್ ಬರೆಸೆಳೆದು ನಗುತಿಹ ಸುಧನ್ವಂತುಡುಕಿ ಪಿಡಿದು 

ಕರಯುಗಳಮಂ ನೇಣ್ಗಳಿಂ ಬಿಗಿದು ತಂದರತಿ 

ಭರದಿಂದೆ ರಾಯನಿದ್ದೆಡೆಗಾಗಿ ಪೌರಜನ 

ಪುರಜನಂ ಬೆರಗಾಗೆ ಕದ್ದಾತನಂ ಕೊಂಡುಬರ್ಪಂತೆ ನಿಷ್ಠರದೊಳು ॥೨೭॥


ಮಗನನ್ನು ಕಾಣದೆ ಹಂಸಧ್ವಜನು ಮಂತ್ರಿಯಾದ ಸುಮತಿಗೆ ಆಜ್ಞೆ ಮಾಡಿದನು. ಅವನಾಜ್ಞೆಯಂತೆ ಬಲಾಢ್ಯರಾದ ದೂತರಿಗೆ ಅಪ್ಪಣೆ ಕೊಡಲು, ಅವರು ಸುಧನ್ವನ ಕೈಗೆ ಹಗ್ಗಗಳನ್ನು ಕಟ್ಟಿ ಕದ್ದ ಕಳ್ಳನನ್ನು ಕರೆತರುವಂತೆ ಪುರಜನರ ಪರೆವಾರದವರ ಎದುರಿನಲ್ಲಿ ಎಳೆತಂದರು. 


ಕಟ್ಟುಸಹಿತಾ ಸುಧನ್ವಂ ತಾತನಡಿಗೆ ಪೊಡ 

ಮಟ್ಟೊಡೆ ಕೆರಳ್ದೆಲವೊ ಮೂಢಾತ್ಮ ನೀನೆನ್ನ 

ಕಟ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು 

ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ 

ಧಟ್ಟಿಸಿ ಮರಾಳಧ್ವಜಂ ಕೇಳ್ದೊಡಡಿಗಿಟ್ಟ 

ದಿಟ್ಟಿಯಿಂದಂಜುತೊಯ್ಯನೆ ಲಜ್ಜೆವೆರಸಿ ಬಿನ್ನೈಸಿದನವಂ ಪಿತಂಗೆ ॥೨೮॥


ಕಟ್ಟು ಸಹಿತ ಸುಧನ್ವನು ತಂದೆಯ ಪಾದಕ್ಕೆ ನಮಸ್ಕರಿಸಿದನು.  ಹಂಸಧ್ವಜನು ಕೆರಳಿ " ಎಲೇ ಮೂಢ, ನನ್ನ ಕಟ್ಟಳೆಯನ್ನು ತಿಳಿದೂ ತಿಳಿದೂ ಕೃಷ್ಣನ ದರ್ಶನ ಮಾಡಬೇಕೆಂಬ ದೀಕ್ಷೆಯನ್ನು, ರಣೋತ್ಸಾಹವನ್ನು ಮರೆತೈ, ಊರಿಂದ ಬರಲು ಏಕೆ ತಡಮಾಡಿದೆ " ಎಂದು ಗರ್ಜಿಸಿದನು. ಸುಧನ್ವನು ತಂದೆಯ ಪಾದಕ್ಕೆ ದೃಷ್ಟಿಯಿಟ್ಟು ಲಜ್ಜೆಯಿಂದ ಹೀಗೆಂದನು. 


ಸತಿ ಸಂತತಿಗೆ ಬಯಸಿ ದಿನಗಳೆದುದಿನ್ನಿಲ್ಲ 

ಋತುಸಮಯಮೆಂದೆನಗೆ ಪೇಳ್ದೊಡಲ್ಲಿದ್ದೆನೆನೆ 

ಕೃತಕಮಿದು ನೂಕೀತನಂ ಕೃಷ್ಣದರ್ಶನದ ಕಾಲಮೊದಗಿರಲಿತ್ತಲು 

ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ 

ಹಿತ ಶಂಖ ಲಿಖಿತರಂ ಬೆಸಗೊಳ್ವೆನಿದಕೆ ನಿ 

ಷ್ಕೃತಿಯನೆನರಸಾಜ್ಞೆಯೊಳವರ ಪೊರೆಗೆ ಚರರೈತಂದದಂ ಪೇಳ್ದರು ||೨೯||


ನನ್ನ ಪತ್ನಿಯು ಸಂತತಿಯನ್ನು  ಬಯಸಿ ಋತುಕಾಲಮೀರುವುದೆಂದು ಹೇಳಲು ಅಲ್ಲಿದ್ದೆ ಎಂದು ಸುಧನ್ವನು ಹೇಳಲು " ಕೃಷ್ಣ ದರ್ಶನದ ಧರ್ಮವನ್ನು ಬಿಟ್ಟು ಉಳಿದ ಕರ್ತವ್ಯಗಳು ಉಂಟೆ . ನೀನು ಹೇಳುವುದು ಸುಳ್ಳು" ಎಂದು ಹೇಳಿ ದೂತರಿಗೆ ಶಂಖಲಿಖಿತರನ್ನು ಕರೆಯಿರಿ. ಇದಕ್ಕೆ ಪ್ರಾಯಶ್ಚಿತ್ತವೇನೆಂದು ಅವರನ್ನು ಕೇಳುತ್ತೇನೆ" ಎಂದನು. ದೂತರು ಅವರ ಬಳಿಗೆ ಹೋಗಿ ಹಂಸಧ್ವಜನ ಮಾತುಗಳನ್ನು ತಿಳಿಸಿದರು.  


ಆ ಚರರ ನುಡಿಗೇಳ್ದು ಶಂಖಲಿಖಿತರ್ ಬಂದು 

 ವಾಚಿಸಿದರೆಲೆ ಹಂಸಕೇತು ನೀನೇನನಾ 

ಳೋಚಿಸುವೆ ನಿನ್ನ ತನಯನ ಮೇಲಣಾಶೆಯಿಂ ಭಾಷೆದಪ್ಪಿದೆಯಾದೊಡೆ 

ಈ ಚಂಪಕಾಪುರದೊಳಿಹುದಿಲ್ಲ ನಾವು ಸ 

ತ್ತಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ 

ಭೂಚಕ್ರಪಾಲರಾತ್ಮಜರ ಮೊಗನೋಡಿದರೆ ಹೇಳೆಂದು ನುಡಿದರವರು ||೩೦||


ದೂತರ ಮಾತನ್ನು ಕೇಳಿ ಶಂಖಲಿಖಿತರು ಹಂಸಧ್ವಜನ ಬಳಿಗೆ ಹೋಗಿ " ಹಂಸಧ್ವಜನೇ, ನೀನು ಏನನ್ನಾಲೋಚಿಸಿದೆ, ಮಗನ ಮೇಲಿನ ಮೋಹದಿಂದ ನಿನ್ನ ಭಾಷೆ (ಕಟ್ಟಲೆ)ಗೆ ತಪ್ಪಿದೆಯಾದರೆ ನಾವು ಇಲ್ಲಿರುವುದಿಲ್ಲ. ಸತ್ಯದ ಆಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ ಮೊದಲಾದ ರಾಜರು ತಮ್ಮ ಮಕ್ಕಳ ಮುಖವನ್ನು ನೌಡಿದರೇ ? ಹೇಳು" ಎಂದು ಕೇಳಿದರು. 


ಬಳಿಕರಸನಾ ಸುಮತಿಯಂ ಕರೆದು ಪೇಳ್ದನೀ 

ಖಳನಂ ಕಟಾಹ ಪೂರಿತ ತಪ್ತತೈಲದೊಳ್ 

ಮುಳುಗಿಸೆನಲವನೊಡೆಯನಾಜ್ಞೆಯಂ ಮೀರದಾತನ ಕೈಗಳಂ ಕಟ್ಟಿಸಿ 

ತಳಪಳನೆ ಕುದಿವೆಣ್ಣೆಗೊಪ್ಪರಿಗೆ ಕಾಯ್ವಲ್ಲಿ 

ಗೆಳತರಿಸಿ ಮತ್ತೆ ಪೊತ್ತು ವೊಲುರಿವ ಪೆರ್ಗೊರಡು

ಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗುತೆ ಸಚಿವನಿಂತೆಂದನು ||೩೧||


ಬಳಿಕ ಹಂಸಧ್ವಜನು ಮಂತ್ರಿ ಸುಮತಿಯನ್ನು ಕರೆಸಿ ಈ ಖಳನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಮುಳುಗಿಸು ಎಂದಪ್ಪಣೆ ಕೊಟ್ಟನು.  ಆಜ್ಞೆಯನ್ನು ಮೀರದೆ ಸಚಿವರು, ಎಣ್ಣೆ ಕುದಿಯುತ್ತಿದ್ದ ಕೊಪ್ಪರಿಗೆಯ ಬಳಿಗೆ ಎಳೆತರಿಸಿ, ಉರಿಗೆ ದೊಡ್ಡಕೊರಡುಗಳನ್ನು ಹಿಕಿಸಿ, ಹಸನ್ಮುಖಿಯಾಗಿದ್ದ ಸುಧನ್ವನಿಗೆ ಹೀಗೆಂದನು. 


ತಾತ ನಿನಗಿಂತಾಗಬಹುದೆ ಲೋಕೈಕ ವಿ 

ಖ್ಯಾತನಭಿಮಾನಿ ಹರಿಸೇವಕಂ ಸುಂದರಂ 

ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖಿ ಸಕಲಸಜ್ಜನಸಖಂ 

ನೀತಿವಿದನಾಚಾರಸಂಪನ್ನನುತ್ತಮಂ 

ದಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ 

ನೀತಪ್ತತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು ||೩೨||


ಅಪ್ಪ, ಸುಧನ್ವ , ನಿನಗೆ ಹೀಗಾಗಬಹುದೆ ? ನೀನು ಲೋಕವಿಖ್ಯಾತ, ಸ್ವಾಭಿಮಾನಿ , ಸುಂದರ, ಶ್ರೀ ಹರಿಯ ಸೇವಕ, ತಂದೆ ತಾಯಿಗಳಿಗೆ ಪ್ರೀತಪಾತ್ರ, ಪಂಡಿತ, ಮೃದುಸ್ವಭಾವದವನು, ಸಜ್ಜನರ ಮಿತ್ರ. ನೀತಿಯನ್ನು ಬಲ್ಲವನು, ಆಚಾರಸಂಪನ್ನು, ಉತ್ತಮ, ದಾನಿ. ಇಂತಹ ನಿನ್ನನ್ನು ಈ ಕುದಿಯುವ ಎಣ್ಣೆಯಲ್ಲಿ ಹೇಗೆ ಹಾಕಲಿ ಎಂದು ಸುಮತಿಯು ಕೇಳಿದನು. 


ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ 

ಮಂ ಜರರಿವಿಡುವನಲ್ಲ ತಾನಿನ್ನೆಗಂ ಧರ್ಮ 

ಮಂ ಜಡಿದು ನಡೆದುದಿಲ್ಲಾಹವದೊಳಹಿತರೊಳ್ ಪೊಯ್ಯಾಡಿ ಮಡಿವೊಡಲಿದು 

ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ 

ಡಂ ಜನಾರ್ಧನನಂ ಶರಣ್ಬು ಗುವೆನಳುಕದೆ 

ನ್ನಂ ಜನಕನಾಜ್ಞೆದಪ್ಪದೆ ಹಾಯ್ಕಿಸೆನಲವಂ ತೆಗೆದೆತ್ತಿಬಿಸುಡಿಸಿದನು ||೩೩||


ಸುಧನ್ವನು " ಎಲೆ ಸುಮತಿ ಈ ಶಿಕ್ಷೆಗೆ ನಾನು ಹೆದರುವವನಲ್ಲ. ನಾನು ಇದುವರೆಗೂ ಧರ್ಮಾಚರಣೆಯನ್ನು ಧಿಕ್ಕರಿಸಿದವನಲ್ಲ. ಈ ನನ್ನ ದೇಹವು ಕಾಳಗದಲ್ಲಿ ಮಡಿಯುವಂತಹುದು.ಆದರೆ ಈ ರೀತಿಯಲ್ಲಿ ಸಾಯಬೇಕೇ ಎಂಬೊಂದು ಭಯವಿದೆ. ಆದರೂ ನಾನು ಸಮಸ್ತ ಲೋಕಪಾಲಕನಾದ ಶ್ರೀಕೃಷ್ಣನನ್ನು ಶರಣು ಹೋಗುತ್ತೇನೆ. ನನ್ನ ತಂದೆಯ ಆಜ್ಞೆಯನ್ನು ಮೀರದೆ ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿಸು. ಎನ್ನಲು ಸುಮತಿಯು ಸುಧನ್ವನನ್ನು ಕೊಪ್ಪರಿಗೆಯಲ್ಲಿ ಬಿಸುಡಿಸಿದನು. 


ಭೋಯೆಂದುದಖಿಳ ಪರಿವಾರಮಡಿಗಡಿಗೆ ಹಾ 

 ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ 

ತಾ ಯೆಂದುಪೊರಳ್ದುದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು 

ವಾಯಕಿಂತಕಟ ಸುಕುಮಾರನಂ ಕೊಂದನೀ 

ರಾಯನರಿವಂ ನೆರೆ ಸುಡಲಿ ಶಂಖಲಿಖಿತರೆಂ 

ಬೀ ಯಮೋಪಮರೇಕೆ ಜನಿಸಿದರೊ ಭೂಸುರರೊಳೆಂದು ಮೊರೆಯಿಡುತಿರ್ದುದು ||೩೪||


ಅದನ್ನು ನೋಡಿ ಪರಿವಾರವೆಲ್ಲವೂ ಭೋ ಎಂದು ಮರುಗಿತು ಹಾಹಾ ಎಂದು ಹಲೈಬಿತು. ಅಪ್ಪಾ ನೀನು ಹೀಗೆ ಸಾಯಬಹುದೇ. ರಾಜ್ಯವಾಳಲು ಬೇಸತ್ತು ಸತ್ತೆಯಾ ? ಈ ಒಂದು ಮೋಸದ ನೆಪಕ್ಕೆ ಮಗನನ್ನು ಕೊಂದ ಹಂಸಧ್ವಜನ ಬುದ್ಧಿಯನ್ನು ಸುಡಬೇಕು. ಭೂದೇವತೆಗಳೆಂದು ಕೀರ್ತಿವಡೆದ ಬ್ರಾಹ್ಮಣರಲ್ಲಿ ಶಂಖಲಿಖಿತರೆಂಬ ಈ ಯಮೋಪರಾದವರು ಏಕೆ ಹುಟ್ಟಿದರೋ ? ಎಂದು ಹಾಹಾಕಾರ ಮಾಡಿದರು. 


ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ 

ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ 

ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ 

ಇಂದು ಮೊರೆವೊಗುವೊಡಾರಂ ಕಾಣೆನಕಟ ಗೋ 

ವಿಂದ ನೀನಲ್ಲದೆ ವಿಚಾರಿಸುವರಿಲ್ಲ ಸಲ 

ಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು ||೩೫||


ಇತ್ತ ಕುದಿಯುವ ಎಣ್ಣೆಯ ಕೊಪ್ಪರಿಗೆಗೆ ಬಿದ್ದ ಸುಧನ್ವನಾದರೋ ಶ್ರೀ ಕೃಷ್ಣನನ್ನು ಧ್ಯಾನಿಸುತ್ತಾ " ಹೇ ದೇವ, ನೀನು ಹಿಂದೆ ಪ್ರಹ್ಲಾದನನ್ನು ಕಾಪಾಡಿದೆ, ದ್ರೌಪದಿಯ ಮಾನವನ್ನು ಉಳಿಸಿದೆ. ದೇವ ನಿನ್ನ ನಾಮಸ್ಮರಣೆ ಮಾಡಿದರೆ ಸಾಕು, ಬಂದ ತೊಂದರೆಯನ್ನು ಯಾವಾಗಲೂ ಪರಿಹಾರ ಮಾಡುವೆ. ಇಂದು ಮರೆಹೊಗಲು ನಿನ್ನನ್ನು ಬಿಟ್ಟು ಇನ್ನಾರನ್ನೂ ಕಾಣೆ. ಹ ಗೋವಿಂದ,  ನೀನಲ್ಲದೆ ನನ್ನನ್ನು ನೋಡಿಕೊಳ್ಳುವವರಾರು. ನನ್ನನ್ನು ಸಲಹು " ಎಂದು ಪ್ರಾರ್ಥಿಸುತ್ತಾ ನಿರ್ಭಯದಿಂದಿದ್ದನು. 


ಜಯಜಯ ಜನಾರ್ಧನ ಮುಕುಂದ ಮುರಮರ್ದನ ವಿ 

ಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲ 

ನಯನ ಪೀತಾಂಬರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ 

ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ 

ಲಯಧೇನು ಭಕ್ತವತ್ಸಲ ಕೃಪಾಕರ ಮಹಾ 

ಭಯನಿವಾರಣ ನೃಸಿಂಹ ತ್ರಾಹಿಯೆನುತಿರ್ದನಾ ಸುಧನ್ವಂ ಮರೆಯದೆ ||೩೬||


ಜನಾರ್ಧನ, ಮುಕುಂದ,  ಮುರಮರ್ದನ, ಅರ್ಜುನ ಮಿತ್ರ,  ಗೋವಿಂದ,  ಗರೈಡವಾಹನ, ಕಮಲಾಕ್ಷ, ಪೀತಾಂಬರಧಾರಿ,ಘನಶ್ಯಾಮ,ಶ್ರೀಹರಿ, ಕೃಷ್ಣ, ವೈಕುಂಠ ನಾರಾಯಣ, ನಾಶವಿಲ್ಲದವನೇ, ಶ್ರೀರಾಮ,ಲಕ್ಷ್ಮೀರಮಣ, ನಮಸ್ಕರಿಸಿದವರಿಗೆ ಕಾಮಧೇನು,ಭಕ್ತವತ್ಸಲ, ಕೃಪಾಕರ,  ಮಹಾಭಯ ನಿವಾರಣ, ನರಸಿಂಹ, ನನ್ನನ್ನು ಪಾರುಮಾಡು ಎಂದು ಸುಧನ್ವನು ಶ್ರೀ ಕೃಷ್ಣನನ್ನು ಮರೆಯದೆ ಸ್ತುತಿಸಿದನು. ( ಜನಾರ್ದನ = ಲಯಕಾಲದಲ್ಲಿ ಅಂತಕನಾಗುವವನು )


ಅರಸ ಕೇಳಾಶ್ಚರ್ಯಮಂ ನೋಡಲೆವೆ ಸೀವೊ 

ಲುರಿಗೊಂಡು ಕಡುಗಾಯ್ದು ತಳಪಳದೆ ಕುದಿದುಕ್ಕಿ 

ಮೊರೆವುರುಕಟಾಹತೈಲಂ ಮೈಗೆ ಸೊಗಯಿಸುವ ಬಾವನ್ ನದಣ್ಪಾಗಿರೆ 

ಕೊರಗದಾತನ ರೋಮ ವಡಗದಂಗದ ಸೊಂಪು 

ಕೊರಳ ತುಲಸಿಯ ದಂಡೆ ಬಾಡದು ಮುಡಿದ ಪೂಗ 

ಳರೆಗಂದವರಳ್ದುದು ಸುಧನ್ವ ಮುಖಾಂಬುಜಮಿನೋದಯದ ಕಮಲದಂತೆ ||೩೭||


ಜನಮೇಜಯನೇ ಆಶ್ಚರ್ಯವೊಂದನ್ನು ಕೇಳು : ನೋಡಿದರೆ ಸಾಕು ಎವೆ ಸೀದುಹೋಗುವಂತಿದ್ದ ಅತಿಶಯವಾಗಿ ತಳಪಳನೆ ಕುದಿದು ಉಕ್ಕಿದ್ದ , ಸದ್ದುಮಾಡುತ್ತಿದ್ದ ಕೊಪ್ಪರಿಗೆಯ ಎಣ್ಣೆಯು ಸುಧನ್ವನ ಮೈಗೆ ಶ್ರೀಗಂಧದಂತೆ ತಂಪಾಯಿತು. ಅವನ ರೋಮವೂ ಕೊಂಕಲಿಲ್ಲ. ದೇಹಸೌಂದರ್ಯವು ಮಾಸಲಿಲ್ಲ. ಅವನ ಕೊರಳಿನಲ್ಲಿದ್ದ ತುಳಸಿಯ ಮಾಲೆಯೂ ಬಾಡಲಿಲ್ಲ, ಮುಡಿದ ಹೂಗಳೂ ಬಾಡಲಿಲ್ಲ, ಸೂರ್ಯೋದಯದ ಕಮಲದಂತೆ ಅವನ ಮುಖವು ಅರಳಿತು. 


ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್ 

ಪುಂಡರೀಕಾಕ್ಷನಂ ಬಳಿಕ ಲಿಖಿತಂ ಖಾತಿ 

ಗೊಂಡಿವಂ ಬಲ್ಲನಗ್ನಿಸ್ತಂಭವಂ ನಾರಿಕೇಳಂಗಳಂ ತರಿಸೆನೆ 

ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನಭೋ

ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ 

ಗಂಡಸ್ತಳಂಗಳಂ ಸಿಡಿವೋಳ್ಗಳಾಗಳುಂ ನಗುತಿರ್ದನಾಕುವರನು ||೩೮||


ಈ ದೃಶ್ಯವನ್ನು ನೋಡಿ ಜನರು ಮಹಾಶ್ಚರ್ಯ ಚಕಿತರಾದರು ( ಬೆರಗಾದರು ) ವೆಷ್ಣುವನ್ನು ಸ್ತುತಿಸಿದರು.ಲಿಖಿತನು ಸಿಟ್ಟಾಗಿ ಇವನಿಗೆ ಅಗ್ನಿಸ್ತಂಭವಿದ್ಯೆ ತಿಳಿದಿದೆ. ಎಳನೀರನ್ನು ತರೆಸಿರೆಂದು ಹೇಳಿ ತರಿಸಿದನು. ಅವನ್ನು ಕೊಪ್ಪರಿಗೆಯಲ್ಲಿ ಹಾಕಲು ಉರಿಯು ಆಕಾಶದೆತ್ತರಕ್ಕೆ ಏರಿತು. ಎಳನೀರು ಎರಡು ಹೋಳಾಗಿ ಶಂಖಲಿಖಿತರ ಕೆನ್ನೇಗಳಿಗೆ ಬಡಿದವು. ಸುಧನ್ವನು ನಗುತ್ತಿದ್ದನು. 


ನಿಶ್ಚಲಹೃದಯನಾಗಿ ವಿಷ್ಣುನಾಮಂಗಳಂ ಪು 

ನಶ್ಚರಣೆಯಿಂದವಂ ಸುಖದೊಳಿರುತಿರೆ ಕಂಡು 

ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದ್ರೋಹಮಂ ಮಾಡಿದ 

ದುಶ್ಚರಿತಕಾವುದುಂ ನಿಷ್ಕೃತಿಗಳಿಲ್ಲೆಂಬ 

ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ 

ಯಶ್ಚಿತ್ತಮೆಂದಾ ಕಟಾಹದೊಳ್ ಕುದಿವೆಣ್ಣೆಯೊಳ್ ಬಿದ್ದನಾ ಲಿಖಿತನು ||೩೯||


ವಿಷ್ಣು ನಾಮಗಳನ್ನು ನಿಶ್ಚಲ ಹೃದಯದಿಂದ ಮತ್ತೆ ಮತ್ತೆ ಹೇಳುತ್ತಾ ಸುಧನ್ವನು ಸುಖವಾಗಿದ್ದನು. ಲಿಖಿತನು ಆಗ ವಿವೇಕವನ್ನು ಹೊಂದಿ ಬಹುವಾಗಿ ನೊಂದನು. ಹರಿ ಭಕ್ತರಿಗೆ ದ್ರೋಹವನ್ನು ಮಿಡಿದ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲವೆಂದು

ಕೊಪ್ಪರಿಗೆಗೆ ಹಾರಿ ಕುದಿಯುವ ಎಣ್ಣೆಯಲ್ಲಿ ಬಿದ್ದನು. 


ಆ ತಪ್ತತೈಲದ  ಕಟಾಹದೆಡೆ ಲಿಖಿತಂಗೆ 

ಶೀತಳಸ್ಥಳಮಾದುದಾ ಸುಧನ್ವನ ಸಂಗ 

ಮೇತರತಿಶಯಮೊ ಹರಿಭಕ್ತರಂ ಸಾರ್ದಂಗೆ ತಾಪಮಿರ್ದಪುದೆ ಬಳಿಕ 

ಆತಗಳ್ ಕುದಿವೆಣ್ಣೆಯೊಳ್ ಸುಖದೊಳಿರೆ ಹಂಸ 

ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು 

ಪ್ರೀತಿಯಿಂದವರೀರ್ವರಂ ತೆಗೆದು ತಕ್ಕೈಸಿದಂ ಸುತಪುರೋಹಿತರನು ||೪೦||


ಕುದಿಯುವ ಎಣ್ಣೆಯ ಕೊಪ್ಪರಿಗೆಯು ಲಿಖಿತನಿಗೆ ತಂಪಾದ ಜಾಗವಾಯಿತೊ. ಎಲೈ ರಾಜನೇ ಹರಿಭಕ್ತರ ಬಳಿಯಲೂಲಿದ್ದವನಿಗೆ ತಾಪವುಂಟಾದೀತೇ ! ಅವರಿಬ್ಬರೂ ಕುದಿವೆಣ್ಣೆಯಲ್ಲಿ ಸೈಖದಿಂದಿರಲು, ಹಂಸಧ್ವಜನು ಆಶ್ಚರ್ಯ ಚಕಿತನಾಗಿ ಮಂತ್ರಿಗಳೊಡನೆ ಹೋಗಿ ಅವರಿಬ್ಬರನ್ನು ಹೊರಕ್ಕೆ ತೆಗೆಸಿ ಪ್ರೀತಿಯಿಂದ ಆಲಿಂಗಿಸಿಕೊಂಡನು. 


ಹದಿನೇಳನೆಯ ಸಂಧಿ 

ಬಭ್ರುವಾಹನನ್ನು ತಿರಸ್ಕರಿಸುವುದು 


ಸೂಚನೆ: 

ವಿನಯದಿಂದೈತಂದು ಕಾಣಲ್ಕೆ ಬಬ್ರುವಾ ।

ಹನನಂ ಜರೆದು ನರಂ ನೂಂಕಿದೊಡೆ ಬಳಿಕವಂ । 

ಕನಲಿ ಪಾರ್ಥನ ಚಾತುರಂಗದೊಳ್ಕಾದಲ್ಕೆ ಸೇನೆಸಹಿತಿದಿರಾದನು ॥ 


ಬಬ್ರುವಾಹನನು ವಿನಯದಿಂದ ಬಂದು ಅರ್ಜುನನನ್ನು ಕಂಡಾಗ ಅರ್ಜುನನು ಅವನನ್ನು ಜರೆದು ತಿರಸ್ಕರಿಸಲು ಅವನು ಸೈನ್ಯದೊಂದಿಗೆ ಬಂದು ಕಾಳಗಕ್ಕೆ ಇದಿರಾದನು. 


ಬಳಿಕಾ ಮಹಾಸ್ಥಾನದೊಳ್ ಬಭ್ರುವಾಹನಂ 

ನಲವಿಂದೆ ಕುಳ್ಳಿರ್ದು ನಗುತೆ ಪರಮಂಡಲ 

ಸ್ಥಳದಿಂದೆ ಬಂದ ರಾಯರ ಯಜ್ಞತುರಗಮಂ ಕಟ್ಟಿಕೊಂಡೆವು ಮನೆಯೊಳು 

ಕೊಳುಗುಳಕೆ ಮಿಡುಕುವರ್ ನಾಳೆ ನಾವಿನ್ನು ಹಿಂ 

ದುಳಿಯಬಾರದು ಕದನಕನುವಾಗಿರಲಿ ಪಾಯ 

ದಳಮೆಂದು ನುಡಿದಂ ಸುಬುದ್ಧಿಮೊದಲಾಗಿಹ ಶಿರಃಪಪ್ರಧಾನಿಗಳ ಕೂಡೆ ||೩೦॥


ಆ ಮಹಾಸ್ಥಾನದಲ್ಲಿ ಬಬ್ರುವಾಹನನು ಸಂತೋಷದಿಂದ ಕುಳಿತುಕೊಂಡು ಸುಬುದ್ಧಿಯೇ ಮೊದಲಾದ ಉನ್ನತ ಪ್ರಧಾನಿಗಳಿಗೆ " ಪರಮಂಡಲದ ರಾಜರ ಯಜ್ಞದ ಕುದುರೆಯನ್ನು ಲಾಯದಲ್ಲಿ ಕಟ್ಟಿಕೊಂಡಿದ್ದೇನೆ. ನಾಳೆ ಆಗುವ ಯುದ್ಧಕ್ಕೆ,  ವೀರರಾದವರು ಹಿಂದುಳಿಯಬಾರದು. ಕದನಕ್ಕೆ ಸಿದ್ಧರಾಗಿರಲಿ" ಎಂದನು. 


ಇಂತಿಲ್ಲಿ ನಡೆದಖಿಲವತ್ತಾಂತಮಂ ಕೇಳ್ದ 

ಳಂತಃಪುರದೊಳರ್ಜುನನ ಗುಣಾವಳಿಗಳಂ 

ಸಂತತಂ ನೆನೆದು ಚಿಂತಿಪ ಬಭ್ರುವಾಹನನ ನಿಜಮಾತೆ ಚಿತ್ರಾಂಗದೆ 

ಸಂತೋಷಮಂ ತಾಳ್ದು ತನಯನೋಲಗಕೆ ಭರ 

ದಿಂ ತಳರ್ದಿದಿರೇಳ್ವ ಕುವರನಂ ತೆಗೆದಪ್ಪಿ 

ಕುಂತೀಸುತನ ವಾಜಿಯಂ ಕಟ್ಟಿದೈ ಮಗನೆ ಲೇಸುಮಾಡಿದೆ ಯೆಂದಳು ||೩೧||


ಅತ್ತ ಅಂತಃಪುರದಲ್ಲಿ ಅರ್ಜುನನ ಗುಣಗಳನ್ನು ನಿರಂತರವಾಗಿ ನೆನೆದು ಚಿಂತಿಸುತ್ತಿದ್ದ ಬಬ್ರುವಾಹನನ ತಾಯಿ ಚಿತ್ರಾಂಗದೆಯು ಇಲ್ಲಿ ನಡೆದ ವಿದ್ಯಮಾನಗಳನ್ನು ಕೇಳಿ ಸಂತೋಷದಿಂದ ಒಡ್ಡೋಲಗಕ್ಕೆ ಭರದಿಂದ ಬಂದು ಬಂದಳು.ಬಬ್ರುವಾಹನನು ಎದ್ದು ಬರಲು ಅವನನ್ನು ಅಪ್ಪಿಕೊಂಡು " ಕುಂತೀಸುತನಾದ ಧರ್ಮಜನ ಯಜ್ಞಾಶ್ವವನ್ನು ಕಟ್ಟಿಹಾಕಿದೆಯಲ್ಲವೇ ? ಒಳ್ಳೆಯ ಕೆಲಸ ಮಾಡಿದೆ" ಎಂದಳು. 


ಕ್ಷುದ್ರಬುದ್ಧಿಯನೆಲ್ಲಿ ಕಲಿತೆ ನೀನೀಪರಿ ಗು 

ಗುರುದ್ರೋಹಕೆಂತು ತೊಡರ್ದುದು  ನಿನ್ನ ಮನಮಕಟ 

ಮದ್ರಮಣನಾಗಮಂ ನಿನಗೆ ವಿರಹಿತಮಾದುದಾತನುದರದೊಳೆ ಜನಿಸಿ 

ಉದ್ರೇಕದಿಂದೆ ಕಟ್ಟಿದೆಯಲಾ ತುರಗಮಂ 

ಭದ್ರಮಾದುದು ರಾಜಕಾರ್ಯಮಿಂದಮೃತಕೆ ಸ 

ಮುದ್ರಮಂ ಮಥಿಸೆ ವಿಷಮುದಿಸಿದವೊಲಾಯ್ತು ನಿನ್ನುದ್ಭವಂ ತನಗೆಂದಳು ||೩೨|


" ಮಗನೇ, ಈ ಕ್ಷುದ್ರ ಬುದ್ಧಿಯನ್ನು ಎಲ್ಲಿ ಕಲಿತೆ ? ಅಯ್ಯೋ ಗುರುದ್ರೋಹಕ್ಕೆ ನಿನ್ನ ಮನಸ್ಸೇಕೆ ತೊಡಗಿತು  ? ನನ್ನ ಪತಿಯ ಆಗಮನವು ನಿನಗೇಕೆ ವಿರೋಧವಾಯಿತು ? ಅವನಿಗೆ ಜನಿಸಿ ಅವನ ಕುದುರೆಯನ್ನು ಕಟ್ಟಿದೆಯಲ್ಲವೇ ? ನಿನ್ನ ರಾಜಕಾರ್ಯವು ಮಂಗಲಕರವಾಯಿತಲ್ಲವೇ ? ಅಮೃತವನ್ನು ಪಡೆಯಲೆಂದು ಕ್ಷೀರ ಸಮುದ್ರವನ್ನು ಕಡೆದಾಗ ಹಾಲಾಹಲವು ಜನಿಸಿದಂತೆ ನೀನು ನನ್ನ ಜಠರದಲ್ಲಿ ಜನಿಸಿದೆ " ಎಂದು ಚಿತ್ರಾಂಗದೆಯು ಹೇಳಿದಳು.


ಮಾತೆಯ ನುಡಿಗೆ ನಡನಡುಗಿ ಬಭ್ರುವಾಹನಂ 

ಭೀತಿಯಿಂದಡಿಗೆರಗಿ ಕ್ಷತ್ರಿಯರ ಪಂತದಿಂ 

ದಾತನ ತುರಗಮಂ ಕಟ್ಟಿದೆಂ ನಿಮ್ಮ ಚಿತ್ತಕೆ ಬಾರದಿರ್ದ ಬಳಿಕ 

ನೀತಿಯಾದಪುದೆ ತನಗಿನ್ನು ನಿಮ್ಮಡಿಗೆ ಸಂ 

ಪ್ರೀತಿಯೆಂತಾದಪುದದಂ ಬೆಸಸಿದೊಡೆ ಮಾಳ್ಪೆ 

ನೇತಕಾ ತುರಮೆಂದು ಕೈಮುಗಿದೊಡಾಗ ಚಿತ್ರಾಂಗದೆ ನಿರೂಪಿಸಿದಳು ||೩೩||


ತಾಯಿಯಾಡಿದ ನುಡಿಯನ್ನು ಕೇಳಿದ ಬಬ್ರುವಾಹನನು ಗಡಗಡನೆ ನಡುಗಿ " ಅಮ್ಮಾ ಕ್ಷತ್ರಿಯರ ಧರೂಮದಂತೆ ಅವನ ಕುದುರೆಯನ್ನು ಕಟ್ಟಿಹಾಕಿದೆನು. ಅದು ನಿಮ್ಮ ಮನಸ್ಸಿಗೆ ಒಪ್ಪಿಗೆಯಾಗದಿದ್ದರೆ, ಅದು ಹೇಗೆ ನನಗೆ ನೀತಿಯಾದೀತು ! ತಮ್ಮ ಪಾದಕ್ಕೆ ಏನು ಒಪ್ಪಿದೆಯೋ ಅಪ್ಪಣೆ ಕೊಟ್ಟರೆ ಅದನ್ನು ಮಾಡುತ್ತೇನೆ" ಎಂದು ಕೈಮುಗಿಯಲು ಚಿತ್ರಾಂಗದೆಯು ಹೀಗೆಂದಳು. 


ಮಗನೆ ಕೇಳೆನ್ನನೆಂದರ್ಜುನಂ ಬಿಟ್ಟು ನಿಜ 

ನಗರಿಗೈದಿದನಂದು ಮೊದಲಾಗಿ ತಾನವನ 

ನಗಲ್ದ ಸಂತಾಪದಿಂ ತಪಿಸುತಿರ್ದೆಂ ಪುಣ್ಯವಶದಿಂದೆ ಬಂದಶಂದು 

ಬಗೆಯದಿರ್ದಪೆನೆಂತು ಕಾಂತನಂ ನೀನಿಂದು 

ಮೊಗದೋರಿ ನಿನ್ನ ಸರ್ವಸ್ವಮಂ ತಾತನಂ 

ಘ್ರಿಗೆ ಸಮರ್ಪಿಸಿದೊಡಾಂ ಮಾಡಿದ ತಪೋನಿಷ್ಠೆ ಸಫಲಮಾದಪುದೆಂದಳು ||೩೪||


ಚಿತ್ರಾಂಗದೆ: ಮಗನೇ, ಅರ್ಜುನನು ನನ್ನನ್ನು ಬಿಟ್ಟು ತನ್ನ ಊರಿಗೆ ಹೋದನು. ಅಂದಿನಿಂದ, ನಾನು ಅವನನ್ನು ಅಗಲಿದ ದುಃಖದಿಂದ ತಾಪವನ್ನನುಭವಿಸುತ್ತಾ ಬಂದೆನು. ನನ್ನ ಪುಣ್ಯವಶದಿಂದ ಅವನು ಈ ದಿನ ಇಲ್ಲಿಗೆ ಬಂದಿದ್ದಾನೆ. ಅವನನ್ನು ನೆನೆಯದೆ ಗೌರವಿಸದೆ ಇರುವುದಾದರೂ ಹೇಗೆ ? ನೀನು ಈ ದಿನ ಅವನ ಬಳಿಗೆ ಹೋಗ, ನಿನ್ನ ಸರ್ವಸ್ವವನ್ನೂ ತಂದೆಯ ಪಾದಗಳಿಗೆ ಅರ್ಪಿಸಿದರೆ ನಾನು ಮಾಡಿದ ತಪಸ್ಸು ಸಫಲವಾಗುತ್ತದೆ. 


ಕಂದ ನೀನಿಂದು ನಿನ್ನಖಿಳ ಪ್ರಕೃತಿಗಳಂ 

ತಂದೆಗೊಪ್ಪಿಸಿ ಯುಧಿಷ್ಟಿರನೃಪನ ವೈರಿಗಳ 

ಮುಂದೆ ತೋರಿಸು ನಿನ್ನ ಶೌರ್ಯಮಂ ತನುಧನಪ್ರಾಣಂಗಳವರದಾಗೆ

ನಿಂದೆಗೊಳಗಾಗದಿರ್ ದುಷ್ಟಸಂತಾನದಂ 

ತೊಂದಿಸದಿರಗತಿಯಂ ತನ್ನ ಪಾತಿವ್ರತ್ಯ 

ಕೆಂದು ಸೂನುಗೆ ಬುದ್ಧಿಗಲಿಸಿ ಪಾರ್ಥನ ಬರವಿಗುಬ್ಬಿದಳ್ ಚಿತ್ರಾಂಗದೆ ||೩೫||


ಮಗೂ, ನಿನ್ನ ಸಪ್ತಾಂಗಗಳನ್ನು ನಿನ್ನ ತಂದೇಗೊಪ್ಪಿಸಿ, ನಿನ್ನ ಶೌರ್ಯವನ್ನು ಅವನ ಶತ್ರುಗಳಿಗೆ ತೋರೆಸೈ. ನಿನ್ನ ಐಶ್ವರ್ಯ, ದೇಹ ಪ್ರಾಣಗಳೆಲ್ಲವೂ ಅವರಿಗೆ ಸೇರುತ್ತವೆ. ಲೋಕನಿಂದೆಗೊಳಗಾಗಬೇಡ. ದುಷ್ಟಸಂತಾನದಂತೆ ನನಗೆ ಪರದಲ್ಲಿ ದುರ್ಗತಿಯನ್ನು ಉಂಟುಮಾಡಬೇಡ. ನನ್ನ ಪಾತಿವ್ರತ್ಯಕ್ಕೆ ಕೆಟ್ಟ ಹೆಸರು ಬಾರದಿರಲಿ. ಹೀಗೆ ಚಿತ್ರಾಂಗದೆಯು ಮಗನಿಗೆ ಹೇಳಿ ಅರ್ಜುನನ ಆಗಮನದಿಂದ ಸಂತೋಷಭರಿತಳಾಗಿ ಉಬ್ಬಿ ಮನೆಗೆ ಹೋದಳು. 


ಜನನಿಯಂ ಮನೆಗೆ ಮನ್ನಿಸಿ ಕಳುಹಿ ಬಭ್ರುವಾ 

ಹನನಾ ಸುಬುದ್ಧಿಯಂ  ನೋಡಿ ಪಿತನಂ ಕಾಣ್ಬು 

ದನು ಚಿತವೊ ಮೇಣುಚಿತಮಾದಪುದೊ ಪೇಳಿದರ ನಿಶ್ಚಯವನೀಗಳೆನಲು 

ನಿನಗೆಣಿಕೆ ಬೇಡ ಮೊದಲರಿಯದಾದೆವು ಧರ್ಮ 

ತನಯಂಗೆ ನಿಮ್ಮಯ್ಯನನುಜಾತನಾತನ ರಕ್ಷೆ 

ವಿನುತಹಯಕದನಿನ್ನು ಕಲಿತನದೆ ಕಟ್ಟುವುದು ನೀತಿಪಥಮಲ್ಲೆಂದನು ||೩೬||


ತಾಯಿಯನ್ನು ಮನ್ನಿಸಿ ಮನೆಗೆ ಕಳುಹಿಸಿ, ಬಬ್ರುವಾಹನನು ತನ್ನ ಪ್ರಧಾನಿಯಾದ ಸುಬುದ್ಧಿಯನ್ನು ನೋಡಿ " ತಂದೆಯನ್ನು ಕಾಣುವುದು ಉಚತವೋ ಅನುಚಿತವೋ" ಎಂದು ಕೇಳಿದನು.  ಸುಬುದ್ಧಿಯು " ನಮಗೆ ಅರ್ಜುನನು ಧರ್ಮರಾಯನ ತಮ್ಮನೆಂಬುದಾಗಲೀ, ಅವನ ಯಾಗಾಶ್ವದ ರಕ್ಷೆಗೆ ಅವನು ಬಂದಿರುವುದಾಗಲೀ ತಿಳಿಯಲಿಲ್ಲ.ಇದನ್ನು ಕಟ್ಟುವುದು ನೀತಿಮಾರ್ಗವಲ್ಲ " ಎಂದನು. 


ಇನ್ನು ಕಟ್ಟಿಸು ಗುಡಿಗಳಂ ಬೇಗ ಪಟ್ಟಣಕ್ಕೆ 

ನಿನ್ನಖಿಳ ರಾಜ್ಯಪದವಿಯನೊಪ್ಪಿಸಯ್ಯಂಗೆ 

ಮನ್ನೆಯರ್ ಚಾತುರಂಗದ ಸೇನೆ ನಾಗರಿಕಜನಮಲಂಕರಿಸಿಕೊಳಲಿ 

ಕನ್ನೆಯರ್ ಲಾಜ ದಧಿ ದೂರ್ವಾಕ್ಷತೆಗಳಿಂದೆ 

ಕನ್ನಡಿ ಕಳಸವಿಡಿದು ಬರಲಿ ಸಂದರ್ಶನಕೆ 

ಸನ್ನುತ ಸುವಸ್ತುಗಳನೆಲ್ಲಮಂ ತೆಗೆಸು ತಡವೇಕೆಂದನಾ ಸುಬುದ್ಧಿ ||೩೭||


"ಇನ್ನು ಧ್ವಜಗಳನ್ನು ಕಟ್ಟಿಸಿ ನಗರವನ್ನು ಅಲಂಕರಿಸು. ನಿನ್ನ ಸಮಸ್ತ ಪದವಿಯನ್ನು ನಿನ್ನ ತಂದೆಗೆ ಅರ್ಪಿಸು. ಮಾಂಡಲಿಕರು, ವೀರರು, ಚತುರಂಗ ಸೇನೆಯವರು, ನಾಗರಿಕರು ಅಲಂಕಾರ ಮಾಡಿಕೊಳ್ಳಲಿ. ಕನ್ಯೆಯರು ಅರಳು, ಮೊಸರು, ಗರಿಕೆ, ಅಕ್ಷತೆ, ಕನ್ನಡಿ ಕಳಸಗಳನ್ನು ಹಿಡಿದು ಅರ್ಜುನನನ್ನು ಎದುರುಗೊಳ್ಳ ಬರಲಿ. ನಿನ್ನಲ್ಲಿರುವ ಉತ್ತಮದ ವಸ್ತುಗಳೆಲ್ಲವನ್ನೂ ತರಿಸು. 


ವರಸುಬುದ್ಧಿಯ ಬುದ್ಧಿಯಂ ಕೇಳ್ದನಾ ಪಾರ್ಥಿ 

ದೊರೆದೊರೆಗಳೆಲ್ಲರಂ ಕಳುಪಿದಂ ಮನೆಗಳ್ಗೆ 

ಪುರದೊಳಗೆ ಡಂಗುರಂಬೊಯ್ಸಿದಂ ಕೋಶದ ಸುವಸ್ತುಗಳನು 

ತರಿಸಿದಂ ಕನಕಪೂರಿತ ಶಕಟನಿಕರಮಂ 

ತರುಣಿ ಗೋಮಹಿಷಿ ಮದಕುಂಜರ ಕುಲಾಶ್ವಮಣಿ 

ವಿರಚಿತ ರಥಂಗಳಂ ರಜತ ಕಾಂಚನ ಮಯದ ಪಲವು ಕೊಪ್ಪರಿಗೆಗಳನು ||೩೮||


ಬಬ್ರುವಾಹನನು ಸುಬುದ್ಧಿಯ ಬುದ್ಧಿವಾದವನ್ನು ಕೇಳಿ, ದೊರೆಗಳನ್ನು ಕಳಿಸಿ, ಊರೊಳಗೆ ಡಂಗುರ ಹೊಯ್ಸಿ,ಭಂಡಾರದ ಒಳ್ಳೆಯ ವಸ್ತುಗಳನ್ನು ತೆಗೆಸಿದನು. ಹಲವು ಬಂಗಾರದ ಬಂಡೆಗಳನ್ನು, ತರುಣಿಯರೈ ಗೋವೈಗಳು ಎಮ್ಮೆಗಳು, ಮದ್ದಾನೆಗಳು, ಜಾತ್ಯಶ್ವಗಳು, ಅವುಗಳನ್ನು ಹೂಡಿದ ಹೇಮರಥಗಳನ್ನೈ, ಬೆಳ್ಳಿ ಬಂಗಾರ ತುಂಬಿದ ಹಲವು ಕೊಪ್ಪರಿಗೆಗಳನ್ನು ತರಿಸಿದನು. 


ನವ್ಯಚಿತ್ರಾಂಬರಾಭರಣಗಳಂ ವಿವಿಧ 

ದಿವ್ಯರತ್ನಂಗಳಂ ಪರಿಪರಿಯ ಪರಿಮಳ

ದ್ರವ್ಯಂಗಳಂ ಕನಕ ಕಟ್ವ ನುತಹಂಸತೂಲದ ಮೃದುಲ ತಲ್ಪಗಳನು 

ಸುವ್ಯಜನ ಚಾಮರ ಸಿತಾತಪತ್ರಂಗಳಂ 

ಸವ್ಯಸಾಚಿಯ ಕಾಣಿಕೆಗೆ ತರುವುದೆಂದು ಕ 

ರ್ತವ್ಯದಿಂ ಜೋಡಿಸಿದನಾ ಬಭ್ರುವಾಹನಂದಿರುಳಖಿಳ ವಸ್ತುಗಳನು ||೩೯||


ಹೊಸ ಹೊಸ ವಿಚಿತ್ರವಾದ ಬಟ್ಟೆಗಳು,  ಅನೇಕ ವಿಧವಾದ ದಿವ್ಯ ರತ್ನಗಳು, ಪರಿಪರಿಯ ಸುಗಂಧದ್ರವ್ಯಗಳು, ಬಂಗಾರದ ಮಂಚಗಳು, ಅಲ್ಲಿದ್ದ ಹಂಸತೂಲಿಕಾ ತಲ್ಪಗಳು, ಒಳ್ಳೆಯ ಬೀಸಣಿಕೆ, ಚಾಮರ, ಬಿಳಿಯ ಕೊಡೆಗಳು, ಇವನ್ನು ಅರ್ಜುನನಿಗೆ ಕಾಣಿಕೆಯಾಗಿ ಕೊಡಬೇಕೆಂದುದೂತರಿಂದ ತರಿಸಿದನು. 


ಅರಳ್ದ ಶೋಣಾಂಬುಜಚ್ಛಾಯೆಗಳಡರ್ದುವೆನೆ 

ಭರದಿಂದೆ ಕತ್ತಲೆಯ ಮೇಲೆ ಬಹ ರವಿಯ ರಥ 

ತುರಗ ಖುರಪುಟದಿಂದಮೇಳ್ವ ಕೆಂದೂಳ್ಗಳೆನೆ ಪ್ರಾಚೀನಿತಂಬವತಿಗೆ 

ಸರಸದಿಂ ತರಣಿಯೊಳ್ ನೆರೆವ ಸಮಯದೊಳಾದ 

ಕರರುಹಕ್ಷತದ ಕಿಸುಬಾಸುಳ್ಗಳೆನೆ ಸವಿ 

ಸ್ತರದ ಸಂಧ್ಯಾರಾಗಮೈದೆ ರಂಜಿಸುತಿರ್ದುದಂದು ಮೂಡಣದೆಸೆಯೊಳು ||೪೧||


ಕೆಂದಾವರೆಯ ಛಾಯೆಗಳೋ, ಕತ್ತಲೆಯನ್ನು ಮುತ್ತಲು ಬರುವ ಸೂರ್ಯನ ರಥದ ಕುದುರೆಗಳ ಖುರಪುಟದಿಂದೆದ್ದ ಕೆಂಧೂಳೋ, ಪೂರ್ವದಿಗ್ವನಿತೆಯು ಸೂರ್ಯನೊಡನೆ ಬೆರೆವಾಗ ಆದ ನಖಕ್ಷತಗಳೋ, ಎಂಬಂತೆ ಸಂಧ್ಯಾರಾಗವು ಪೂರ್ವದಿಕ್ಕಿನಲ್ಲಿ ರಂಜಿಸುತ್ತಿತ್ತು. 


ಆದಿತ್ಯನುದಯದೊಳ್ ಫಲುಗುಣನ ಸೂನು ಸಂ 

ಧ್ಯಾದಿಗಳನಾಚರಿಸಿ ವಸ್ತುಗಳನೈದೆ ಸಂ 

ಪಾದಿಸಿ ಕಿರೀಟಿಯಂ ಕಾಣಲನುದರ್ಜುನನಿತ್ತಪಾಳೆಯದೊಳು 

ಸಾಧಿಸಿ ಸಕಲ ನಿತ್ಯಕೃತ್ಯಮಂ ಮಾಡಿ ಮಧು 

ಸೂದನನ ಚರಣಮಂ ನೆನೆದು ವೃಷಕೇತು ಮೊದ 

ಲಾದ ವೀರರ್ಕಳಂ ಕರೆಸಿದಂ ಹಯಮಂ ಬಿಡಿಸಿಕೊಂಬ ತವಕದಿಂದೆ ||೪೪||


ಸೂರ್ಯೋದಯವಾಗಲು ಬಬ್ರುವಾಹನನು ಸಂಧ್ಯಾದಿಗಳನ್ನು ಮಾಡಿ, ಅರ್ಜುನನ ನ್ನು ಕಾಣಲು, ಸಚಲ ಸುವಸ್ತುಗಳನ್ನು ಸಿದ್ಧಪಡಿಸಿಕೊಂಡನು. ಇತ್ತ ರ್ಜುನನು ಸೂರ್ಯೋದಯ ಕಾಲದಲ್ಲಿ ಸಂಧ್ಯಾದಿ ಕರ್ಮಗಳನ್ನು ಪೂರೈಸಿ, ಶ್ರೀಕೃಷ್ಣನನ್ನು ಸ್ಮರಿಸಿ, ಕುದುರೆಯನ್ನು ಬಿಡಿಸಿಕೊಳ್ಳಲು ವೃಷಕೇತುವೇ ಮೊದಲಾದ ವೀರರನ್ನು ಕರೆಸಿಕೊಂಡನು. 


ಅರಸ ಕೇಳಾ ಬಭ್ರುವಾಹನನೊಡನೆ ಬಂದ 

ಪರಿವಾರಮಾ ಪುರಜನಂಗಳಾ ಕಾಮಿನಿಯ 

ರರಳ ಮಳೆ ಮುಕ್ತಾಫಲಂಗಳಂ ಸುರಿದರರ್ಜುನನ ಮಸ್ತಕದಮೇಲೆ 

ವರಸುಬುದ್ಧಿ ಪ್ರಮುಖ ಮಂತ್ರಿಗಳ್ ಬಂದರೊ 

ತ್ತರಿಸಿ ಕಾಣಿಕೆಗೊಂಡು ಬಳಿಕ ವಿಸ್ಮಿತನಾಗಿ 

ನರನೆಲೆ ನೃಪಾಲ ನೀನಾರೆನಲ್ಕೆವನೆದ್ದು ಕೈಮುಗಿಯುತಿಂತೆಂದನು ||೪೮॥


ಜನಮೇಜಯನೆ ಕೇಳು, ಬಬ್ರುವಾಹನನೊಡನೆ ಬಂದ ಪರಿವಾರದವರೂ, ಮಣಿಪುರದ ಜನರೂ, ಹೆಣ್ಣು ಮಕ್ಕಳೂ ಅರ್ಜುನನ ತಲೆಯ ಮೇಲೆ ಅರಳ ಮಳೆಗರೆದರು.( ಹೂವು ಅರಳು ಎರಡೂ ಎಂದು ಗ್ರಹಿಸಬೇಕು ) ಸುಬುದ್ಧಿಯೇ ಮೊದಲಾದ ಮಂತ್ರಿಗಳು ಕಾಣಿಕೆಗಳನ್ನು ಕೊಟ್ಟರು. ಅರ್ಜುನನು ಅವನ್ನು ಸ್ವೀಕರಿಸಿ ವಿಸ್ಮಯದಿಂದ " ಎಲೆ, ರಾಜಾ, ನೀನು ಯಾರು,?" ಎಂದು ಕೇಳಲು ಬಬ್ರುವಾಹನನು ಹೀಗೆಂದು ಹೇಳಿದನು. 


ಮಗುಳೆ ಮಗುಳಡಿಗೆರಗಿ ಭಯ ಭರಿತಭಕ್ತಿಯಿಂ 

ಮಿಗೆ ಬೇಡಿಕೊಳುತೆ ಕಾಲ್ವಿಡಿದಿರ್ಪ ತನಯನಂ 

ಮೊಗನೋಡಿ ಮಾತಾಡಿಸದೆ ಬೆರಗುವಡೆದಂತೆ ಕೆತ್ತುಗೊಂಡಿಹ ವಿಜಯನ 

ಬಗೆಯನೀಕ್ಷಿಸಿ ಹಂಸಕೇತು ನೀಲಧ್ವಜಾ 

ದಿಗಳೆಲ್ಲರುಂ ಸವಿಸ್ಮಯರಾಗಿ ಚಿಂತಿಸಿ ಕ 

ರಗಿದರತಿ ಕರುಣರಸಭಾವದಿಂದೇನೆಂಬೆನಪಕೃತದ ಸೂಚಕವನು ||೫೦||


ಮತ್ತೆಮತ್ತೆ ಭಯಭರಿತ ಭಕ್ತಿಯಿಂದ ಕಾಲಿಗೆರಗಿ ತನ್ನ ಕಾಲು ಹಿಡಿದಿದ್ದ ಮಗನ ಮುಖವನ್ನು ಅರ್ಜುನನು ನೋಡಲಿಲ್ಲ. ಮಾತಿಡಿಸಲಿಲ್ಲ. ಅವನು ಬೆರಗಾಗಿ ಮಿಡುಕುತ್ತಿರಲು ಹಂಸಧ್ವಜ, ನೀಲಧ್ವಜನೇ ಮೊದಲಾದವರು ಅತ್ಯಾಶ್ಚರ್ಯದಿಂದ ಚಿಂತೆ ಮಾಡಿದರು. ಕರುಣಾರಸದಿಂದ ಕರಗಿದರು. ಪಾಪದ ಫಲದ ಸೃಚಕವನ್ನು ಏನೆಂದು ಹೇಳಲಿ.


ಪ್ರದ್ಯುಮ್ನ ಹಂಸಧ್ವಜಾದಿಗಳ್ ಬಳಿಕಿದೇ 

ನುದ್ಯೋಗಮೆಲೆ ಪಾರ್ಥ ನಿನ್ನ ತನುಭವನೀತ 

ನುದ್ಯತ್ಪರಾಕ್ರಮಿ ಮಹಾವೈಭವಶ್ಲಾಘ್ನಭಿಮಾನಿ ಮಾನ್ಯನಿಳೆಗೆ 

ಖದ್ಯೋತಸ್ನಿಭಂ ನಿನ್ನ ಹೋಲುವೆಯ ನಿರ 

ವದ್ಯರೂಪಂ ಪದಾವನತನಾಗಿರ್ದಪಂ 

ಹೃದ್ಯನಿವನಂ ಪರಿಗ್ರಹಿಸಿ ಮನ್ನಿಸದೇಕೆ ಸುಮ್ಮನಿರ್ದಪೆಯೆಂದರು ||೫೧||


ಹೀಗೆ ಸುಮ್ಮನಿದ್ದ ಅರ್ಜುನನನ್ನು ಪ್ರದ್ಯುಮ್ನ, ಹಂಸಧ್ವಜನೇ ಮೊದಲಾದವರು ನೋಡಿ " ಅರ್ಜುನಾ ನೀನು ಮಾಡುತ್ತಿರುವುದೇನು? ಇವನು ನಿನ್ನ ಮಗ. ಮೀರಿದ ಪರಾಕ್ರಮಿ. ಮಹಾ ವಿಭವವನ್ನುಳ್ಳವನು. ಸ್ವಾಭಿಮಾನಿ.  ಲೋಕದಲ್ಲಿ ಮನ್ನಣೆಗೆ ಪಾತ್ರನಾಗಿರುವವನು, ಸೂರ್ಯನಂತೆ ಪ್ರಕಾಶಿಸುತ್ತಿದ್ದಾನೆ. ನಿನ್ನ ರೂಪವೇ ಇವನಲ್ಲಿ ಬಿಂಬಿಸಿದೆ. ಇಂತಹವನು ಬಂದು ಪಾದಗಳಿಗೆ ಶರಣಾಗತನಾಗಿದ್ದಾನೆ. ಇವನನ್ನು ಮನ್ನಿಸದೆ ಏಕೆ ಸುಮ್ಮನಿರುವೆ?" ಎಂದು ಕೇಳಿದರು. 


ಭೂಪ ಕೇಳಿವರಿಂತೆನಲ್ಕೆ ಬಳಿಕರ್ಜುನಂ 

ಕೋಪದಿಂದವನ ನಿಟ್ಟಿಸುತೆಂದನಾಗ ತಲೆ

ಪೋಪುದಕೆ ತನ್ನ ಕಾಲ್ಪೊಣೆಯೆಂಬ ಧರೆಯ ನಾಣ್ಣುಡಿ ತಪ್ಪದಾದುದೆನಲು

ಆ ಪುತ್ರನಹ ಬಭ್ರುವಾಹನನನೊದೆದೆಲವೊ 

ನೀ ಪಂದೆ ಲೋಕದೊಳ್ ತನಗೆ ಸಂಭವಿಸಿದವ 

ನೀಪರಿಯೊಳಂಜುವನೆ ಮೊದಲಶ್ವಮಂ ಕಟ್ಟಿ ಮತ್ತೆಬಿಡುವನೆ ಕಾದದೆ ||೫೨||


ಅವರು ಹಾಗೆ ಹೇಳುತ್ತಿರಲು, ಅರ್ಜುನನು ಬಬ್ರುವಾಹನನನ್ನು ಕೋಪದಿಂದ ನಿಟ್ಟಿಸಿ,ಕಾಲಿನಿಂದ ಒದೆದು ಎಲವೋ ನೀನು ಹೇಡಿ. ನನಗೆ ಹುಟ್ಟಿದವನು ಮೊದಲು ಕುದುರೆಯನ್ನು ಕಟ್ಟಿ ಹೆದರಿ, ಯುದ್ಧ ಮಾಡದೆ ಬಿಡುವನೇ? ಎಂದನು. ತಲೆ ಹೋಗುವುದಕ್ಕೆ ಕಾಲು ಹೊಣೆ ಎಂಬ ಲೋಕೋಕ್ತಿಯು ಇಲ್ಲಿಗೆ ಅನ್ವಯವಾಯಿತು.  


ಚಿತ್ರಾಂಗದೆಗೆ ವೈಶ್ಯನಿಂದೆ ಸಂಭವಿಸಿರ್ದ 

ಪುತ್ರನಲ್ಲದೆ ತನಗೆ ಜನಿಸಿದೊಡೆ ಬಿಡುವೆಯಾ 

ಕ್ಷತ್ರಿಯರ ಮತಮಂ ಸುಭದ್ರೆಗೆನ್ನಿಂ ಜನಿಸಿದಭಿಮನ್ಯು ತಾನೋರ್ವನೆ 

ಶತ್ರುಗಳ ವಿಗಡಚಕ್ರವ್ಯೂಹದಲ್ಲಿಗೆ ಧ 

ರಿತ್ರೀಶನಂ ಮೀರಿ ನಡೆದು ಸಂಗ್ರಾಮದೊಳ 

ಮಿತ್ರಭಟರಂ ಗೆಲ್ದಳಿದನಾತನಲ್ಲದಾತ್ಮಜರುಂಟೆ ತನಗೆಂದನು ||೫೩||


" ನೀನು ಚಿತ್ರಾಂಗದೆಗೆ ವೈಶ್ಯನಿಂದ ಹುಟ್ಟಿದ ಮಗ. ನನಗೆ ಹುಟ್ಟಿದವನಾಗಿದ್ದರೆ ಕ್ಷತ್ರಿಯರ ರೀತಿಯನ್ನು ಬಿಡುತ್ತಿದ್ದೆಯಾ? ಸುಭದ್ರೆಯಲ್ಲಿ ನನ್ನಿಂದ ಜನಿಸಿದ ಅಭಿಮನ್ಯುವೊಬ್ಬನೇ ಮಗ! ಶತ್ರುಗಳು ಒಡ್ಡಿದ ಚಕ್ರವ್ಯೂಹವನ್ನು ತನ್ನ ದೊಡ್ಡಪ್ಪನ ಮಾತನ್ನು ಮೀರಿ ಹೊಕ್ಕು, ಶತ್ರುಗಳಿಂದ ಹತನಾದನು. ಅವನಲ್ಲದೆ ನನಗೆ ಬೇರೆ ಯಾರೂ ಮಕ್ಕಳಿಲ್ಲ" ಎಂದು ಅರ್ಜುನನು ಹೇಳಿದನು. 


ಜಂಬುಕಂ ಜನಿಸುವುದೆ ಸಿಂಗದುದರದೊಳಕಟ 

ಹೆಂಬೇಡಿ ನೀನೆಲವವೊ ಕುಲಗೇಡಿ ತನ್ನ ಬಸಿ 

ರಿಂ ಬಂದವನೆ ಖೂಳ ಕುದುರೆಯಂ ಕಾದದೇತಕೆ ತಂದೆ ಪಂದೆ ನಿನಗೆ 

ಡೊಂಬಿನ ಚತುರ್ಬಲಮಿದೇಕೆ ಭೂಪಾಲರಾ 

ಡಂಬರದ ಛತ್ರಚಮರಂಗಳೇತಕೆ ಬಯಲ 

ಡಂಬಕದ ಕೈದುಗಳಿವೇತಕೆ ಸುಡು ಬಿಡು ಜೀವದಾಸೆಯಂ ಪೋಗೆಂದನು ||೫೪||


" ಸಿಂಹದ ಹೊಟ್ಟೆಯಲ್ಲಿ ನರಿ ಹುಟ್ಟುವುದೇ ? ನೀನು ಮಹಾ ಹೇಡಿ. ಕುಲಗೇಡಿ. ನನಗೆ ಹುಟ್ಟಿದವನೇ? ಕಾದದೆ ಕುದುರೆಯನ್ನೇಕೆ ತಂದೆ. ಎಲವೋ ಹೇಡಿ, ನಿನಗೆ ಈ ಡಂಭಾಚಾರದ ಚತುರಂಗ ಬಲವೇಕೆ ? ಆಡಂಬರದ ಛತ್ರ ಚಾಮರಗಳೇಕೆ? ನೋಟಕ್ಕೆ ಮಾತ್ರ ಕಾಣುವ ಈ ಆಯುಧಗಳೇಕೆ" ಇವನ್ನು ಸುಟ್ಟು ಬಿಡು. ಜೀವದಾಶೆಯನ್ನು ಬಿಡು. ಹೋಗು ?" ಎಂದು ಅರ್ಜುನನು ಬಬ್ರುವಾಹನನನ್ನು ಹಳಿದನು. 


ಅಹಹ ನರ್ತಕಿಯಲಾ ಗಂಧರ್ವನಾಯಕನ 

ದುಹಿತೃವಲ್ಲಾ ನಿನ್ನ ಮಾತೆ ಚಿತ್ರಾಂಗದೆಯೆ 

ವಿಹಿತಮಲ್ಲಿದು ನಿನಗೆ ಭೂಮಿಪರ ವೇಶಮಂ ತಳೆದ ನಾಟಕದ ರಚನೆ 

ಬಹಳ ಪೌರುಷಮಾದುದಿಂದು ಹಯಮಂ ತಡೆದ 

ರಹಣಿ ರಾಯರಮುಂದೆ ಹೋಗೆಂದು ದುಷ್ಕೃತಿಯ 

ಕುಹಕದಿಂ ಬೈದು ಭಂಗಿಸಿ ಜರೆದನಾತ್ಮಜನನರ್ಜುನಂ ಕೋಪದಿಂದೆ ||೫೫||


" ನಿನ್ನ ತಾಯಿ ಚಿತ್ರಾಂಗದೆಯು ಗಂಧರ್ವನಾಯಕನ ಮಗಳಲ್ಲವೇ? ರಾಜರಂತೆ ವೇಷಹಾಕಿ ನಟಿಸುವುದು ಸರಿಯೇ! ಕುದುರೆಯನ್ನು ರಾಜರ ಮುಂದೆ ಕಟ್ಟಿ ಹಾಕಿದ ರೀತಿಯು ಒಳ್ಳೆಯ ನಾಟಕದಂತಿದೆ ಹೋಗು" ಎಂದು ತನ್ನ ಪಾಪದ ಕುಹಕದಿಂದ ಅರ್ಜುನನು ಕೋಪದಿಂದ ಜರೆದು ಅಪಮಾನ ಮಾಡಿದನು. 


ಬಿರುನುಡಿಗಳಿಂ ತನ್ನ ಮೊಗನೋಡದರ್ಜುನಂ 

ಜರೆದೊಡಾತನ ಬಗೆಯನಾ ಸುಬುದ್ಧಿಗೆ ತೋರು 

ತುರೆ ಕನಲ್ದಿರದೆದ್ದುಪಳಿದೆಲಾ ಮಾತೆಯಂ ನನಗೆ ಸೀವರಿಸಿದೆಯಲಾ 

ಅರಿಯಬಹುದಿನ್ನು ಕೇಳ್ ನಿನ್ನ ತಲೆಗೆಡಹದೊಡೆ 

ಕುರುಹಿಟ್ಟು ನೀನಾಡಿದಿನಿತೆಲ್ಲಮಂ ದಿಟಂ 

ಮರೆಯದಿರ್ ಸಾಕೆಂದು ತಿರುಗಿದಂ ಬಭ್ರುವಾಹನನಂದು ಕುದುರೆಸಹಿತ ||೫೬||


ತನ್ನ ಮುಖವನ್ನು ನೋಡದೆ ಅರ್ಜುನನು ಬಿರುನುಡಿಗಳಿಂದ ಜರೆಯಲು, ಅವನ ರೀತಿಯನ್ನು ಪ್ರಧಾನಿಯಾದ ಸುಬುದ್ಧಿಗೆ ತೋರಿಸುತ್ತಾ ಅತಿಯಾದ ಕೋಪವನ್ನು ತಾಳಿ, ಮೇಲಕ್ಕೆದ್ದು," ನನ್ನ ತಾಯಿಯನ್ನು ಹಳಿದೆಯಲ್ಲವೇ ? ನನ್ನು ತುಚ್ಛವಾಗಿ ನಿಂದಿಸುತ್ತಾ ಚೀರಿದೆಯಲ್ಲವೇ? ಇನ್ನು ಮುಂದೆ ತಿಳಿಯುತ್ತದೆ. ಕೇಳು, ನಿನ್ನ ತಲೆಯನ್ನು ಕೆಳಕ್ಕೆ ಕೆಡಹದಿದ್ದರೆ, ನೀನು ಆಡಿದ ಮಾತೆಲ್ಲವೂ ನಿಜವೇ ? ನನ್ನ ಮಾತನ್ನು ಮರೆಯಬೇಡ ಎಂದು ಎಚ್ಚರಿಸಿ ಬಬ್ರುವಾಹನನು ಕುದುರೆ ಸಹಿತ ಹಿಂದಿರುಗಿ ಹೋದನು. 

ಆಲಿಸಿದನಲ್ಲಿ ಪರಿಯಂತ ಜನಮೇಜಯಂ 

ಮೇಲಣ ಕಥೆಯನೊಲ್ದು ಬೆಸಗೊಂಡನೆಲೆ ಮುನಿಪ 

ಹೋಲಿಸಿ ನುಡಿದೆ ಸುರಪಫಲುಗುಣರ ಸಮರಮಂ ಕೇಳ್ವೆನದನಾಂ ನಿನ್ನೊಳು 

ಹೇಳಬೇಹುದು ರಾಘವಂಗೆ ಸುತನೊಡನಾದ

ಕಾಳಗದ ಸಂಗತಿಯನೆನಗೆಂದೆನಲ್ಕೆ ಭೂ 

ಪಾಲಂಗೆ ವಿರಚಿಸಿದನೀ ತೆರದೊಳಾ ತಪೋನಿಧಿ ಬಳಿಕ ಸಂತಸದೊಳು ||೫೯||


ಕಥೆಯನ್ನು ಅಲ್ಲಿಯವರೆಗೆ  ಕೇಳಿದ ಜನಮೇಜಯನು, ಜೈಮಿನಿಯನ್ನು ಹೀಗೆ ಕೇಳಿದನು." ಮುನೀಶ್ವರನೇ ಅರ್ಜುನ ಇಂದ್ರರಿಗಾದ ಯುದ್ಧದ ಕಥೆಯನ್ನು ನಾನು ನಿನ್ನಿಂದ ಕೇಳಿದ್ದೇನೆ.ಶ್ರೀರಾಮನಿಗೂ ಕುಶಲವರಿಗೂ ಆದ ಯುದ್ಧದ ಕತೆಯನ್ನು ನೀನೀಗ ನನಗೆ ಹೇಳು." ಎನ್ನಲು ಅವನು ಸಂತೋಷದಿಂದ ಹೀಗೆಂದು ಹೇಳಿದನು. 


ಹದಿನೆಂಟನೆಯ ಸಂಧಿ 


ಸಂಕ್ಷಿಪ್ತ  ರಾಮಾಯಣ 


ಸೂಚನೆ :

ಸಾಮ್ರಾಜ್ಯಮಂ ತಾಳ್ದೆಸೆವ ರಾಘವೇಂದ್ರನಿಂ 

ದಾಮ್ರಪ್ರವಾಳದಂತಿರೆವಿರಾಜಿಸುತಿರ್ಪ 

ತಾಮ್ರಾಧರೆಯರ ಸೀಮಂತಮಣಿ ಸೀತಾರಮಣಿ ಗರ್ಭಮಂ ತಾಳ್ದಳು ॥


ಸೂಚನೆ: ಶ್ರೀರಾಮನು ಸಾಮ್ರಾಜ್ಯಾಧಿಪತಿಯಾಗಿ ವಿರಾಜಿಸುತ್ತಿದ್ದನು. ತಾಮ್ರಾಧರೆಯರಸೀಮಂತ ಮಣಿಯಂತೆ (ಕೆಂದುಟಿಯುಳ್ಳ ಸುಂದರಿಯರಲ್ಲಿ ಅಗ್ರಗಣ್ಫಯೆ - ಸೀಮಂತಮಣಿಯಂತೆ ) ಶೋಭಿಸುತ್ತಿದ್ದ ಸೀತಾದೇವಿಯು ಶ್ರೀರಾಮಚಂದ್ರನಿಂದ ಗರ್ಭವನ್ನು ಧರಿಸಿದಳು. 


ಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ 

ಜಾಪತಿಯ ಕುಶಲವರ ಸಂಗರದ ಕೌತುಕವ 

ನಾಪನಿತನೊರೆವೆನಿಕ್ಷ್ವಾಕು ಮೊದಲಾದ ರವಿಕುಲದ ನೃಪರೇಳ್ಗೆಗಳನು 

ವ್ಯಾಪಿಸಿದ ಸಂಪದಕೆ ನೆಲೆವನೆಯೆನಿಪ್ಪಯೋ 

ಧ್ಯಾಪುರದೊಳವತರಿಸಿದಂ ಮಹಾವಿಷ್ಣುಸುತ 

ರೂಪದಿಂ ರಾಮಾಭಿದಾನದೊಳ್ ಪುತ್ರಕಾಮೇಷ್ಠಿಯಿಂ ದಶರಥಂಗೆ ||೧||


ಜನಮೇಜಯನೇ ಶ್ರೀರಾಮನ ಮತ್ತು ಕುಶಲವರ ಯುದ್ಧವನ್ನು ನನ್ನ ಕೈಲಾದಮಟ್ಟಿಗೆ ಹೇಳುತ್ತೇನೆ. ಇಕ್ಷ್ವಾಕುವೇ ಮೊದಲಾದ ಸೂರ್ಯವಂಶದ ಚಕ್ರವರ್ತಿಗಳು ಆಳಿದ ಅಯೋಧ್ಯೆಯು ಅಪಾರ ಸಂಪದಕ್ಕೆ ನೆಲೆಮನೆಯಾಗಿತ್ತು. ದಶರಥನೆಂಬ ಚಕ್ರವರ್ತಿಯು ಅದನ್ನಾಳುತ್ತಿದ್ದನು. ಮಕ್ಕಳನ್ನು ಬಯಸಿ ಅವನು ಪುತ್ರಕಾಮೇಷ್ಠಿಯನ್ನು ಮಾಡಲು, ಮಹಾವಿಷ್ಣುವೇ ( ಅವನ ಪತ್ನಿ ಕೌಸಲ್ಯೆಯಲ್ಲಿ ) ಶ್ರೀರಾಮನೆಂಬ ಹೆಸರಿನಿಂದ ಅವತರಿಸಿದನು. 


ತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್ 

ಬಳೆದು ಲಕ್ಷ್ಮಣ ಭರತ ಶತೃಘ್ನರೊಡಗೂಡಿ 

ತಳೆದು ಕೌಶಿಕನ ಮಖಮಂ ಕಾದು ತಾಟಕಿಯನೊರಸಿ ಮುನಿಸತಿಯಘವನು 

ಕಳೆದು ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ 

ಸೆಳೆದು ಹರಚಾಪಮಂ ಮುರಿದೊಲಿಸಿ ಸೀತೆಯಂ 

ತಳೆದುತ್ಸವದೊಳಯೋಧ್ಯಾಪುರಿಗೆ ದಶರಥನೊಡನೆ ರಾಘವಂ ಬಂದನು ||೨||


ತಾಯಿಯ ಗರ್ಭವನ್ನು ಪವಿತ್ರಗೊಳಿಸಿ, ತಮ್ಮಂದಿರಾದ ಲಕ್ಷ್ಮಣ, ಭರತ, ಶತ್ರುಘ್ನರೊಡನೆ ಬೆಳೆದು ವಿಶ್ವಾಮಿತ್ರ ಮಹರ್ಷಿಯ ಯಜ್ಞವನ್ನು ರಕ್ಷಿಸಿ. ತಾಟಕಿಯನ್ನು ಸಂಹರಿಸಿ, ಅಹಲ್ಯೆಯ ಶಾಪವಿಮೋಚನೆ ಮಾಡಿ, ಮಿಥಿಲಾನಗರಕ್ಕೆ ಹೋಗಿ, ( ಪರಶುರಾಮನ ಗರ್ಶಭಂಗ ಮಾಡಿ ) ಶಿವಧನುಸ್ಸನ್ನು ಮುರಿದು ಸೀತಾದೇವಿಯನ್ನು ವರಿಸಿ, ದಶರಥನೊಡನೆ ಶ್ರೀರಾಮನು ಮಹೋತ್ಸವದಿಂದೆ ಅಯೋಧ್ಯೆಗೆ ಬಂದನು. 


ವರ್ಧಿಪ ಕುಮಾರಂಗೆ ಭೂಮೀಶ್ವರಂ ಬಳಿಕ 

ಮೂರ್ಧಾಭಿಷೇಚನಂ ಮಾಡಲನುಗೈಯೆ ನೃಪ 

ನರ್ಧಾಂಗಿ ತಡೆಯೆ ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದೆ 

ಸ್ವರ್ಧಾಮಕಡರೆ ಕೇಳುತೆ ಭರತನಂ ಕಳುಹಿ 

ದುರ್ಧರದರಣ್ಯಪ್ರವೇಶಮಂ ಮಾಡಿದಂ 

ಸ್ಪರ್ಧಿಸುವ ದನುಜರಂ ಮುರಿದು ಮುನಿಗಳನೋವಿ ಸತಿಸಹಿತ ಕಾಕುತ್ಸ್ಥನು ||೩||


ಮಗನಿಗೆ ಯುವರಾಜ ಪಟ್ಟಾಭಿಷೇಕ ಮಾಡಲುದಶರಥನು ಸಿದ್ಧನಾಗಲ, ಅವನ ಪತ್ನಿ ಕೈಕೇಯಿಯು ಅದನ್ನು ತಡೆದಳು.ತಂದೆಯ ವಾಕ್ಯವನ್ನು ಉಳಿಸಲು ಶ್ರೀರಾಮನು ಪತ್ನಿ ಮತ್ತು ಸಹೋದರನೊಡನೆ ವನವಾಸಕ್ಕೆ ಹೋದನು. ದಶರಥನು ಪುತ್ರನ ಅಗಲಿಕೆಯ ದುಃಖದಿಂದ ಸ್ವರ್ಗಸ್ಥನಾದನು. ಭರತನು ಬಂದು ಬೇಡಿಕೊಳ್ಳಲು ಅವನಿಗೆ ಪಾದುಕೆಗಳನ್ನು ಕೊಟ್ಟು ಕಳುಹಿಸಿ ಘೋರವಾದ ಅರಣ್ಯವನ್ನು ಹೊಕ್ಕು ರಾಕ್ಷಸರನ್ನು ಸಂಹರಿಸಿ ಮುನಿಗಳನ್ನು ರಕ್ಷಿಸಿದನು. 


ದಂಡಕಾರಣ್ಯದೊಳಿರಲ್ಕೆ ಶೂರ್ಪಣಖೆ ಬಂ 

ದಂಡಲೆಯಲಾಕೆಯಂ ಭಂಗಿಸಿ ಖರಾದ್ಯರಂ 

ಖಂಡಿಸಿ ಕನಕಮೃಗ ವ್ಯಾಜ್ಯದಿಂದೈದೆ ಲಕ್ಷ್ಮಣನಗಲೆ ಕಪಟದಿಂದೆ 

ಕೊಂಡೊಯ್ಯೆ ರಾವಣಂ ಸೀತೆಯಂ ಕಾಣದುರೆ 

ಬೆಂಡಾಗಿವಿರಹದಿಂ ಬಿದ್ದಿಹ ಜಟಾಯುವಂ 

ಕಂಡು ಪೊಲಬಂ ಕೇಳ್ದು ಸೌಮಿತ್ರಿಸಹಿತ ನಡೆದಂ ಮುಂದೆ ರಘುನಾಥನು ||೪||


ದಂಡಕಾರಣ್ಯದಲ್ಲಿದ್ದಾಗ ಶೂರ್ಪನಖಿಯು ಬಂದು ಮದುವೆಯಿಗೆಂದು ಪೀಡಿಸಲು, ಅವಳ ಮೂಗನ್ನು ಕೊಯ್ಸಿ, ಖರದೂಷ ತ್ರಿಶಿರರನ್ನು ಸಂಹರಿಸಿದನು. ( ಆಗ ರಾಮನ ಅಪ್ಪಣೆಯಂತೆ ) ಮಾರೀಚನು ಬಂಗಾರದ ಜಂಕೆಯಾಗಿ ಬಂದನು. ಅದನ್ನು ಹಿಡಿತರಲು ಶ್ರೀರಾಮನು ಹಿಂದೆ ಹೋಹದನು. ( ಮಾರೀಚನ ಮೋಸದಿಂದ ) ಲಕ್ಷ್ಮಣನೂ ಹೋದನು. ಆಗ ರಾವಣನು ಸೀತಾದೇವಿಯನ್ನು ಅಪಹರಿಸಿದನು.ಸೀತಾದೇವಿಯನ್ನು ಕಾಣದೆ ಶ್ರೀರಾಮನು ವಿರಹದಿಂದ ಬೆಂಡಾದನು. ಜಟಾಯುವಿನಿಂದ ಸೀತಾಹರಣದ ಸುದ್ಧಿಯನ್ನು ರಾವಣನು ಹೋದ ದಾರಿಯನೂನು ಕೇಳಿ, ಲಕ್ಷ್ಮಣನೊಡನೆ ಮುಂದಕ್ಕೆ ಹೋದನು. 


ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ 

ರಥಮಂ ಸಲಿಸಿ ಕರುಣದಿಂದಾಂಜನೇಯನಂ 

ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ 

ಮಥಿಸಿ ರಾವಣನ ಮೇಲಣ ರಾಜಕಾರಿಯದ 

ಕಥನಕಾಳೋಚಿಸಿ ಕರಡಿಕಪಿಗಳಂ ನೆರಪಿ 

ಪೃಥಿವಿಜೆಯನರಸಲ್ಕೆ ವೀರಹನುಮಂತನಂ ಕಳುಹಿದಂ ಕಾಕುತ್ಸ್ಥನು ||೫||


ದಾರಿಯಲ್ಲಿ ಬಂದ ಕಬಂಧನನ್ನು ಕೊಂದು, ಶಬರಿಯ ಆತಿಥ್ಯವನ್ನು ಸ್ವೀಕರಿಸಿ, ಆಂಜನೇಯನನ್ನು ಕಂಡು, ಸುಗ್ರೀವನಿಗೆ ಬೆಂಬಲವನ್ನು ಕೊಟ್ಟು, ವಾಲಿಯನ್ನು ಸಂಹರಿಸಿ,  ರಾವಣನನ್ನು ಹೇಗೆ ಕಂಡುಹಿಡಿಯಬೇಕೆಂದು ಆಲೋಚನೆ ಮಾಡಿ, ಕರಡಿ ಕಪಿಗಳನ್ನು ಕಲೆಹಾಕಿ, ಸೀತಾದೇವಿಯನ್ನು ಹುಡುಕಲು ಆಂಜನೇಯನನ್ನು ಕಳುಹಿಸಿದನು.


ಧೀಂಕಿಟ್ಟು ಶರಧಿಯಂ ದಾಂಟಿ  ಮೇದಿನಿಯ ಸುತೆ 

ಗಂಕಿತದ ಮುದ್ರಿಕೆಯನಿತ್ತು ಬೀಳ್ಕೊಂಡು ನಿ 

ಶ್ಯಂಕೆಯೊಳಶೋಕವನಮಂ ಕಿತ್ತು ದನುಜರಂ ಸದೆದಕ್ಷನಂಮರ್ದಿಸಿ 

ಅಂಕದೊಳ್ ಬಳಿಕಿಂದ್ರಜಿತುವಿನ ಬ್ರಹ್ಮಾಸ್ತ್ರ 

ದಂಕೆಯೊಳ್ ನಿಂದು ವಾಲದಿಗಿಕ್ಕಿದುರಿಯಂದೆ 

ಲಂಕೆಯಂ ಸುಟ್ಟು ಬಂದೊಸಗೆವೇಳ್ದನಿಲಜನನಸುರಾರಿ ಮನ್ನಿಸಿದನು||೬॥


ಆಂಜನೇಯನು ಸಮುದ್ರವನ್ನು ಹಾರಿ, ಸೀತಾದೇವಿಯನ್ನು ಕಂಡು, ಶ್ರೀರಾಮನ ಅಂಕಿತದ ಮುದ್ರೆಯನ್ನು ಅವಳಿಗೆ ಕೊಟ್ಟನು. ಅಶೋಕವನವನ್ನು ಕಿತ್ತುಹಾಕಿದನು. ರಾಕ್ಷಸರನ್ನು ಸದೆಬಡಿದು ಅಕ್ಷನನ್ನು ಸಂಹರಿಸಿದನು. ಬಳಿಕ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಸಿಕ್ಕು, ಬಾಲಕ್ಕೆ ಹಚ್ಚಿದ ಉರಿಯಿಂದ ಲಂಕೆಯನ್ನು ಸುಟ್ಟುಹಾಕಿ  ಬಂದು ಶುಭ ಸಮಾಚಾರವನ್ನು ಹೇಳಿದ ಆಂಜನೇಯನನ್ನು ರಾಮನು ಮನ್ನಿಸಿದನು. 


ಗಣನೆಯಿಲ್ಲದ ಕಪಿಗಳಂ ಕೂಡಿಕೊಂಡು ತೆಂ 

ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀ 

ಷಣನಂ ಪರಿಗ್ರಹಿಸಿ ಲಂಕಾಧಿಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ 

ರಣದೊಳಸುರರ ಕುಲದ ಹೆಸರುಳಿಯದಂತೆ ರಾ 

ವಣ ಕುಂಭಕರ್ಣ ಮೊದಲಾದ ರಕ್ಕಸರನುರೆ 

ಹಣಿದವಾಡಿದನುರವಣಿಸಿ ಧೂಳಿಗೋಟೆಯಂ ಕೊಂಡನಾ ರಘವೀರನು ||೭||


ಶ್ರೀರಾಮನು ಕಪಿಸೈನ್ಯದೊಡನೆ ದಕ್ಷಿಣ ಸಮುದ್ರ ತೀರದಲ್ಲಿದ್ದನು.ಆಗ ವಿಭೀಷಣನು ಬಂದು ಶರಣಾಗತನಾಗಲು ಅವನಿಗೆ ಆಶ್ರಯವನ್ನು ಕೊಟ್ಟು ಲಂಕಾಧಿಪತ್ಯವನ್ನು ಅನುಗ್ರಹಿಸಿದನು. ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ಲಂಕಾದ್ವೀಪಕ್ಕೆ ಹೋಗಿ ರಾವಣ ಕುಂಭಕರ್ಣರನ್ನು ಮೊದಲುಗೊಂಡು ಎಲ್ಲಾ ರಾಕ್ಷಸರನ್ನು ಹೆಸರಿಲ್ಲದಂತೆ ಕೊಂದು ಲಂಕೆಯ ಕೋಟೆ ಕೊತ್ತಲಗಳನ್ನು ಪುಡಿಪುಡಿ ಮಾಡಿದನು. 


ರಾವಣನ ಪದಮಂ ವಿಭೀಷಣಂಗೊಲಿದಿತ್ತು 

ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ 

ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚೆ ವಿಜಯೋತ್ಸವದೊಳು 

ಭೂವರಂ ಸೌಮಿತ್ರಿ ದಶಮಮುಖಾವರಜ ಸು 

ಗ್ರೀವಾದಿಗಳ ಗಡಣದಿಂದಯೋಧ್ಯಾಪುರಿಗೆ 

ದೂವಾಳಿಸಿದನಮಲ ಮಣಿಪುಷ್ಪಕದ ಮೇಲೆ ಭರತನಂ ಪಾಲಿಸಲ್ಕೆ ||೮||


ರಾವಣನ ರಾಜ್ಯವನ್ನು ವಿಭೀಷಣನಿಗೆ ಕೊಟ್ಟು , ದೇವತೆಗಳನ್ನು ರಕ್ಷಿಸಿ, ಸೆರೆಯಾಗಿದ್ದ ಸೀತೆಯನ್ನು ಅಗ್ನಿಮುಖದಿಂದ ಸ್ವೀಕರಿಸಿ, ರಾಮನು ಲಕ್ಷ್ಮಣ, ವಿಭೇಪಣ, ಸುಗ್ರೀವ ( ಆಂಜನೇಯ ) ಇವರೊಡನೆ ಪುಷ್ಪಕವೀಮಾನದಲ್ಲಿ ಭರತನನ್ನು

ಪಾಲಿಸಲು ಹೊರಟನು. 


ವರಪುಷ್ಪಕವನಿಳಿದು ಭರತಶತ್ರುಘ್ನರಂ 

ಕರುಣದಿಂ ತೆಗೆದಪ್ಷಿ ಕೌಶಿಕವಸಿಷ್ಟಾದಿ 

ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೈದೆ ನಮಿಸಿ 

ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ 

ಪರಿಜನಪ್ರಕೃತಿಗಳನಿರದೆ ಕಾಣಿಸಿಕೊಂಡು 

ಬರವನೇ ಹಾರೈಸಿ ಕೃಶೆಯಾದ ಕೌಸಲೆಗೆ ರಾಮನಭಿವಂದಿಸಿದನು ||೯||


ಪುಷ್ಪಕದಿಂದಿಳಿದು ಭರತ, ಶತ್ರುಘ್ನರನ್ನು ಕರುಣೆಯಿಂದ ಆಲಿಂಗಿಸಿಕೊಂಡು, ವಿಶ್ವಾಮಿತ್ರ ವಸಿಷ್ಠರೇ ಮೊದಲಾದ ಗುರುಜನಗಳನ್ನು ಹತ್ಕರಿಸಿ, ಕೈಕೇಯಿ ಮೊದಲಾದ ಮಾತೃವರ್ಗಕ್ಕೆ ನಮಸ್ಕರಿಸಿ, ಅಂತಃಪುರದ ಸ್ತ್ರೀಯರು, ಮಂತ್ರಿಗಳು, ಸಚಿವರು, ಪರಿಜನ, ಪುರಜನರು ಮೊದಲಾದವರಿಗೆ ದರ್ಶನವನ್ನಿತ್ತು, ತನ್ನ ಬರವನ್ನೇ ಇದಿರು ನೋಡುತ್ತಾ ಕೃಶಳಾಗಿದ್ದ ಕೌಶಲ್ಯಾದೇವಿಗೆ ಶ್ರೀರಾಮನು ನಮಸ್ಕರಿಸಿದನು.  


ಹನ್ನೊಂದನೆಯ ಪದ್ಯದ ಭಾವಾರ್ಥ:

ಬಳಿಕ ಶುಭಮುಹೂರ್ತದಲ್ಲಿ ಚಕ್ರವರ್ತಿ ಪಟ್ಟಾಭಿಷೇಕವಾಯಿತು. ಸಮುದ್ರವೇ ಮೇರೆಯಾದ ಭೂಮಿಗೆ ಒಡೆಯನಾದನು. ಸಮಸ್ತ ದೇವತೆಗಳು, ಮುನಿಗಳು, ವಾನರರು, ರಾಕ್ಷಸರೈ, ಮನುಷ್ಯರು ಪಟ್ಟಾಭಿಷೇಕದ  ಮುಹೂರ್ಥದಲ್ಲಿ ಬಂದು ಶ್ರೀರಾಮನನ್ನು ಕಂಡರು. ಮೂರು ಲೋಕಗಳೂ ಅವನನ್ನು ಕೊಂಡಾಡಿದುವು. ಒಂಬತ್ತು ಸಹಸ್ರ ವರ್ಷಗಳಕಾಲ 

ಸಮಸ್ತ ರಾಜರೂ ಅವನನ್ನು ಪ್ರೀತಿಯಿಂದ ಓಲೈಸಿದರು. 


ಮೇಲೆ ತಾಳ್ದಂ ಶುಭಮುಹೂರ್ತದೊಳ್ ವಾರಿನಿಧಿ 

ವೇಲೆಯಾದವನಿಯಂ ಪಟ್ಟಾಭಿಷೇಚನದ 

ಕಾಲದೊಳ್ ಕಂಡರು ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು

ಮೂಲೋಕಮೈದೆ ಕೊಂಡಾಡೆ ಬಳಿಕುರ್ವಿಯಂ 

ಪಾಲಿಸುತಿರ್ದನೊಂಬತ್ತು ಸಾಸಿರವರ್ಷ 

ಮೋಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರೀತಿಯಿಂದೆ ||೧೧||


ಇಪತ್ತುಮೂರನೆಯ ಸಂಧಿ 

ಬಭ್ರುವಾಹನ ಅರ್ಜುನರ ಕಾಳಗ 


ಎಲೆ ಪಾರ್ಥ ವೈಶ್ಯಸಂಭವರಾವಹೆವು ನಿಮ್ಮ 

ಬಲ ಸಮಾಜದೊಳಂಬುಗಳ ಪಸರಮಂ ಹರಹಿ 

ಗೆಲುವಿನಗ್ಗದಲಾಭಮಂ ಪಡೆದವದಟರ ಶಿರಂಗಳಂ ಕೊಂಡೆವರಿಸಿ

ಕಲಿಗಳೈತಂದು ಜೀವಕೆ ಸಂಚಕಾರಮಂ 

ಸಲೆ ಬೇಡಿದೊಡೆ ಕೊಟ್ಟೆವಿಚ್ಛೆಯುಳ್ಳೊಡೆ ನಿನ್ನ 

ತಲೆಯ ಬೆಲೆಗಿದೆ ಸಾಹಸ ದ್ರವ್ಯಮೆನ್ನೊಳೆಂದಾರ್ಜುನಿಪಚಾರಿಸಿದನು ||೩೧||


ಬಬ್ರುವಾಹನನು " ಎಲೈ ಅರ್ಜುನ, ಎಷ್ಟೇ ಆಗಲಿ ನಿನ್ನ ಪ್ರಕಾರ ನಾವು ವೈಶ್ಯ ಸಂಭವರು.ನಿಮ್ಮ ಸೈನ್ಯವೇ ನಮ್ಮ ಕಾರ್ಯಸ್ಥಾನ.ಬಾಣಗಳೇ ನಮ್ಮ ಸರಕು.ಅದನ್ನು ಕೊಟ್ಟು ಜಯವೆಂಬ ಲಾಭವನ್ನು ಹೊಂದಿದೆವು. ವೀರರನ್ನು ಹುಡುಕಿ ಅವರ ತಲೆಗಳನ್ನು ಕೊಂಡೆವು. ಪರಾಕ್ರಮಿಗಳು ಬಂದು ನಮ್ಮ ಜೀವಗಳಿಗೆ ಮುಂಗಡವನ್ನು ಕೊಡು ಎಂದು ಕೇಳಿದಾಗ ಕೊಟ್ಟೆವು. ನಿನಗಿಷ್ಟವಿದ್ದರೆ ನಮ್ಮ ಸಾಹಸವೆಂಬ ದ್ರವ್ಯವನ್ನು ಕೊಟ್ಟು ನಿನ್ನ ತಲೆಯನ್ನು ಕೊಳ್ಳುತ್ತೇನೆ. ಎಂದು ಹೀಯಾಳಿಸಿದನು. 


ಇವರೊಳೇನಹುದಿನ್ನು ವೀರನೀ ಕರ್ಣಸುತ 

ನಿವನ ತಲೆಯಂ ಸಮರ್ಪಿಸು ಮಹಾದೇವಂಗೆ 

ತವೆ ರುಂಡಮಾಲೆಯೊಳ್ ಪೂಜ್ಯಮಾಗಿಹುದೀಶ್ವರನ ಪ್ರೀತಿಯಹುದು ನಿನಗೆ 

ಶಿವನಂದು ಪಾಶುಪತ ಬಾಣಮಂ ಕೊಟ್ಟುದಿ 

ಲ್ಲವೆ ನಿಜಸ್ವಾಮಿಯಂ ಮರೆದಪರೆ ಸಾಕಿದರ 

ಬವಣೆಯೇತಕೆ ನಮಗೆ ಕಾದುವೆಯೊ ತುರಗಮಂ ಬಿಟ್ಟಪೆಯೊ ಪೇಳೆಂದನು ||೩೨||


ಬಬ್ರುವಾಹನ: ಇದರಲ್ಲೆಲ್ಲಾ ಏನು ? ವೃಷಕೇತು ಮಹಾವೀರ. ಇವನ ತಲೆಯನ್ನು ಶಿವನಿಗೊಪ್ಪೆಸು. ಅವನ ರುಂಡಮಾಲೆಯಲ್ಲಿ ಸೇರಿ ಅದು ಪೂಜಾರ್ಹವಾಗುತ್ತದೆ. ಹಿಂದೆ ಶಿವನು ನಿನಗೆ ಪಾಶುಪತಾಸ್ತ್ರವನ್ನು ಕೊಟ್ಟಿರಲಿಲ್ಲವೇ? ನೀನು ನಿನ್ನೊಡೆಯನನ್ನು ಮರೆಯಬಹುದೇ ? ಸುಪ್ರೀತನಾಗುವನು. ಇದನ್ನು ಕಟ್ಟಕೊಂಡು ನನಗೇನು. ಇದರ ತಂಟೆಯೇ ಬೇಡ. ನಮ್ಮೊಡನೆ ಯುದ್ಧಮಾಡೈವೆಯೋ, ಯಾಗಾಶ್ವವನ್ನು ಬಿಟ್ಟು ಹೋಗುವೆಯೋ ಹೇಳು. 


ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ 

ಮಾಡಿದಂ ಕೋಪಮಂ ಧೈರ್ಯದಿಂದಳಲನೀ 

ಡಾಡಿದಂ ಕರ್ಣಜನ ಶಿರವನಲ್ಲಿರಿಸಿದಂ ಕೊಂಡನುರು ಕಾರ್ಮುಕವನು 

ತೀಡಿದಂ ಜೇಗೈದು ತಿರುವಿನೊಳ್ ಬಾಣಮಂ 

ಪೂಡಿದಂ ತೆಗೆದೆಚ್ಚು ರುಧಿರ ಪ್ರವಾಹವಂ 

ತೋಡಿದಂ ಬಭ್ರುವಾಹನನಸರ್ವಾಂಗದೊಳ್ ಕಲಿಪಾರ್ಥನಾ ಕ್ಷಣದೊಳು ||೩೩||


ಅರ್ಜುನನ ಕಣ್ಣಾಲಿಗಳು ಕೋಪದಿಂದ ಕೆಂಪಾದವು. ಮನಸ್ಸಿನ ಅಳಲನ್ನು ಧೈರ್ಯದಿಂದ ತ್ಯಜಿಸಿದನು.ವೋಷಕೇತುವಿನ ತಲೆಯನ್ನು ಅಲ್ಲಿಟ್ಟು ಗಾಂಡೀವವನ್ನು ಹಿಡಿದು ಹೆದೆಯನ್ನು ಜೇಗೈದು, ಬಾಣಗಳನ್ನು ಬಿಟ್ಟು ಬಬ್ರುವಾಹನನ ಸರ್ವಾಂಗದಲ್ಲೂ ರಕ್ತವೊಸರುವಂತೆ ಮಾಡಿದನು. 


ಮೈಸಿರಿಯಳಲ್ಗಳಿವು ಲೇಸಾಯ್ತು ಪಗೆಯ ಮಗ 

ನೈಸಲೇ ಕರ್ಣಜಂ ಸಾಕಿವೇತಕೆ ಬರಿದೆ 

ವೈಸಿಕದ ಬಾಣಪ್ರಯೋಗಂಗಳಿಂದ್ರ ಕೀಲದೊಳುಮಾಕಾಂತನಿಂದೆ 

ಕೈಸಾರ್ದ ಸಾಯಕಮನುಗಿಯೆನುತ ಪಾರ್ಥನಂ 

ಪೈಸರಿಸದೆಚ್ಚನೀ ಬಭ್ರುವಾಹನನ ಕಣೆ 

ಗೈಸದು ನಭೋವಲಯಮೆನೆ ಕವಿದುವಂಬುಗಳ್ ದೇವತತಿ ಬೆರಗಾಗಲು ||೩೪||


ಬಬ್ರುವಾಹನನು " ನನ್ನ ಮೈಯಲ್ಲಾದ ಗಾಯಗಳು ಚೆನ್ನಾಗಿಯೇ ಇವೆ. ಇವುಗಳಿಂದ ಏನೂ ಆಗುವುದಿಲ್ಲ.  ಇಂದ್ರಕೀಲದಲ್ಲಿ ಶಿವನಿಂದ ಪಡೆದ ಪಾಶುಪತಾಸ್ತ್ರವನ್ನು ಪ್ರಯೋಗಿಸು. ಎನ್ನುತ್ತಾ ಅರ್ಜುನನ ಬಾಣಗಳಿಗೆ ಹಿಂಜರಿಯದೆ ಆಕಾಶವೇ ಹಿಡಿಸದಂತೆ ಬಾಣಗಳನ್ನು ಬಿಡಲು ದೇವತೆಗಳು ಬೆರಗಾದರು.


ಮತ್ತವು ಮಸುಳ್ವಂತೆ ನರನಾರ್ದು ತೆಗೆದಿಸಲ್ 

ಪೆತ್ತುವು ಸರಳ್ಗಳೊಂದೊಂದಯುತ ನಿಯುತಮಂ 

ಪೊತ್ತುವು ನಭಸ್ಥಳಕೆ ಕೊಂಡು ರಿಪುಸೇನೆಯಂ ತಾರೆಗಳನುದಿರಿಸಿದುವು 

ಕಿತ್ತುವು ಕುಲಾದ್ರಿಗಳನಾಗಸದ ಬಟ್ಟೆಯಂ 

ಕೆತ್ತುವು ದಿಗಂತಮಂ ತುಂಬಿದುವು ಬಾಣಂಗ 

ಳಿತ್ತುವು ಜಗತ್ತ್ರಯಕೆ ಕಂಪಮಂ ಪಿಂತೆಂದುಮಿಲ್ಲಿದು ವಿಚಿತ್ರಮೆನಲು ||೩೫||


ಅವನ ಬಾಣಗಳನ್ನು ಮುರಿದು ಅರ್ಜುನನು ಅಸಂಖ್ಯಾತ ( ಆಯತ= ಹತ್ತು ಸಾವಿರ, ನಿಯತ= ಅನೇಕ ) ಬಾಣಗಳನ್ನು ಬಿಡಲು ಅವು ಶತ್ರು ಸೈನ್ಯವನ್ನು ಆಕಾಶಕ್ಕೊಯ್ದವು. ನಕ್ಷತ್ರಗಳನ್ನುದುರಿಸಿದವು. ಕುಲಪರ್ವತಗಳನ್ನು ಕಿತ್ತವು. ಆಕಾಶದಲ್ಲಿ ದಾರಿಯಿಲ್ಲದಂತೆ ಮಾಡಿದವು. ದಿಗಂತಗಳನ್ನು ತುಂಬಿ ಇದು ವಿಚಿತ್ತ, ಹಿದೆಂದೂ ಹೀಗಾಗಿರಲಿಲ್ಲವೆಂದುಮೂರು ಲೋಕಗಳೂ ಬೆದರುವಂತೆ ಮಾಡಿದವು. 


ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್ 

ತೆರೆದ ಜಾಳಾಂದ್ರದಂತಾಯ್ತುಗಿದ ಬಟ್ಟೆಗಳ್ 

ಕರೆದ ಪೆರ್ಮಳೆಯಿಂದೆ ನನೆದ ಜಾದಿನ ಗಿರಿಯೊಳಿರದಿಳಿವ ಕೆಂಬೊನಲ್ಗಳ 

ತೆರದೊಳೆಸೆದುವು ರಕ್ತಧಾರೆಗಳ್ ಗಾಯದೊಳ್ 

ಮರೆದನೊಡಲಂ ನಿಮಿಷಕೊಡನೆ ತರಹರಿಸಿದಂ 

ಜರೆದನರ್ಜುನನಂ ರಣಾಗ್ರದೊಳ್ ಮೂದಲಿಸಿ ಬಭ್ರುವಾಹನಂ ಕನಲ್ದು ||೩೬||

ಅರ್ಜುನನ ಬಾಣಗಳು ಬಬ್ರುವಾಹನನ ಮೈಯನ್ನು ಕೊರೆದು ಜಾಳಂದ್ರದಂತೆ ಮಾಡಲು, ಜಾದಿನ ಗಿರಿಯಿಂದ ಇಳಿವ ಮಳೆನೀರಿನ ಝರಿಗಳಂತೆ ಅವನ ಮೈಯಲ್ಲೆಲ್ಲಾ ರಕ್ತಧಾರೆಗಳಿಳಿದವು. ಅದರಿಂದ ಬಬ್ರುವಾಹನನು ಮೈಮರೆದು, ಬೇಗ ಎಚ್ಚೆತ್ತು ಕೋಪಗೊಂಡು ಅರ್ಜುನನನ್ನು ಮೂದಲಿಸಿದನು. 


ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸು 

ಪರ್ಣಧ್ವಜಂ ನಿನಗೆ ಕರುಣದಿಂ ಕಾದಿದ ನ 

ಪರ್ಣಾಧವಂ ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು 

ವರ್ಣಿಸುವರೆಂದು ಬೆರೆತಿಹೆ ತನ್ನ ಹಮರಮಂ 

ನಿರ್ಣೈಸಿದೊಡೆ ವೀರನಹುದೆಂದು ಬಾಣಮಯ 

ದರ್ಣವಮಿದೆತ್ತಣಿಂ ಮೇರೆದಪ್ಪಿದುದೆನಲ್ ಬಭ್ರುವಾಹನನೆಚ್ಚಲು ||೩೭||


" ಎಲೋ ಅರ್ಜುನ, ಶ್ರೀಕೃಷ್ಣನು ಕರ್ಣ, ಭೀಷ್ಮ, ದ್ರೋಣರನ್ನು ಗೆದ್ದುಕೊಟ್ಟ. ನಿನ್ನದು ಅಲ್ಪ ಸತ್ವವೆಂದು ತಿಳಿದಿದ್ದ ಶಿವನು 

ಇಂದ್ರಕೀಲದಲ್ಲಿ ಕರುಣೆಯಿಂದ ಕಾಪಾಡಿದ. ಭೂಮಿಯಮೇಲೆ ತಿಳಿಯದವರು ನಿನ್ನನ್ನು ( ಮೂರುಲೋಕದ ಗಂಡನೆಂದು) 

ಹೊಗಳುತ್ತಿರುವರೆಂದು ನೀನು ನಿನ್ನ ಸಮರಿಲ್ಲವೆಂದು ತಿಳಿದಿರುವೆ. ನನ್ನೊಡನೆ ಯುದ್ಧ ಮಾಡಿ ಗೆದ್ದರೆ ನೀನು ವೀರನೆಂಬುದು ನಿರ್ಧಾರವಾಗುತ್ತದೆ. " ಎಂದು ಬಬ್ರುವಾಹನನು,  ಈ ಬಾಣ ಸಮುದ್ರವು ಎಲ್ಲಿಂದ ಮೇರೆದಪ್ಪಿ ಬಂತೆಂದುಕೊಳ್ಳುವಂತೆ ಬಾಣಗಳನ್ನು ಬಿಟ್ಟನು. 


ಮುವ್ವತ್ತೆಂಟನೇ ಪದ್ಯದ ಭಾವಾರ್ಥ ಕೆಳಗಿನಂತಿದೆ.


ಬಬ್ರುವಾಹನನ ಬಾಣಗಳು ದಿಕ್ಕುಗಳ ಗೋಡೆಗಳನ್ನು ಕೆತ್ತಿದವು. ಭೂಮಿಯಲ್ಲಿ ನಾಟಿ ಬೆಟ್ಟಗಳನ್ನು ಮೇಲಕ್ಕೆತ್ತುದವು. ಕೂರ್ಮನ ಬೆನ್ನನ್ನು ಒತ್ತಿದವು. ಸಾಗರಗಳನ್ನು ಕಲಕಿದವು. ಸೂರ್ಯಮಂಡಲದಲ್ಲಿ ಅಲೆದವು. ಆಕಾಶವನ್ನು ಮುತ್ತಿ, ಹತ್ತಿ ಹರಿದು ಇಳಿದವು. ಮೂರುಲೋಕಗಳಿಗೂ ಭೀತಿಯನ್ನುಂಟುಮಾಡಿದವು. 


ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ 

ನೆತ್ತಿದುವು ಧರೆಯನುಚ್ಚಳಿಸಿ ಕೂರ್ಮನ ಬೆನ್ನ 

ನೊತ್ತಿದುವು ಕಲಕಿದುವು ಸಾಗರವನಾದಿತ್ಯಮಂಡಲವನಂಡಲೆದುವು 

ಮುತ್ತಿದುವು ಬಾಂದಳವನೆಲ್ಲಮಂ ಕೆಲಕೆಲವು 

ಪತ್ತಿದುವು ಪರಿದುವಿಳಿದುವು ಸಕಲಲೋಕಕ್ಕೆ 

ಬಿತ್ತಿದುವು ಭೀತಿಯಂ ಬಭ್ರುವಾಹನನ ಶರಜಾಲಮದನೇವೇಳ್ವೆನು ||೩೮||


ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ

ರ್ಥನ ಸತ್ವಮೆಳದಾಗಿ ಬರೆ ಕಂಡು ಬಭ್ರುವಾಹ 

ಹನನೆಂದನೆಲೆ ಧನಂಜಯ ತನ್ನ ಜನನಿ ಚಿತ್ರಾಂಗದೆ ಪತಿವ್ರತೆ ಕಣಾ 

ಅನಿಮಿತ್ತಮಾಕೆಯಂ ಪಳಿದ ಕಾರಣದಿಂದೆ 

ನಿನಗೆ ಕೈಗುಂದುತಿದೆ ಸಾಕಿನ್ನು ಕೃಷ್ಣನಂ 

ನೆನೆ ಮರುಳೆ ಮುರಹರನ ಸಾರತ್ತಮಿಲ್ಲದಾರಂ ಗೆಲ್ದೆ ಹೇಳೆಂದನು ||೪೧||


ಆ ಬಳಿಕ ಗಂಗಾದೇವಿಯ ಶಾಪದಿಂದ ಅರ್ಜುನನ ಸತ್ವವು ಕಡಿಯೆಯಾಗುತ್ತಾ ಬರಲೈ, ಅದನ್ನು ಕಂಡ ಬಬ್ರುವಾಹನನು "ಎಲೆ ಅರ್ಜುನ ನನ್ನ ತಾಯಿ ಚಿತ್ರಾಂಗದೆಯು ಪತಿವ್ರತೆ, ಕಾರಣವಿಲ್ಲದೆ ಅವಳನ್ನು ಹಳಿದುದರಿಂದ, ನಿನ್ನ ಕೈ ಕುಂದುತ್ತಿದೆ. ಎಲೆ, ಹುಚ್ಚಾ, ಇನ್ನಾದರೂ ಶ್ರೀಕೃಷ್ಣನನ್ನು ಸ್ಮರಿಸು. ಅವನ ಸಾರಥ್ಯವಿಲ್ಲದೆ ಯಾವ ಮಹಾವೀರನನ್ನು ನೀನು ಗೆದ್ದೆ ಎನ್ನುವುದನ್ನು " ಯೋಚಿಸಿ ಹೇಳು ) ಎಂದು ಅರ್ಜುನನಿಗೆ ಹೇಳಿದನೈ. 


ಕ್ಷೋಣಿಗೋಸುಗ ಕೊಂದೆ ನೀನಂದು ಕರ್ಣನಂ 

ಮೇಣವನ ತನಯನ ನೆಳಲ್ಗೆ ಸೇರದೆ ಮನದ 

ಕೇಣದಿಂದೆನ್ನ ಕೈಯಿಂದ ಕೊಲಿಸಿದೆ ಸಾಕು ಹಗೆ ಹರಿದುದಿನ್ನು ನಿನಗೆ 

ಪ್ರಾಣಮಂ ಕಾದುಬಿಡುವೆಂ ಪೋಗು ಬಿಲ್ಗೊಳಲ್

ತ್ರಾಣಮುಳ್ಳೊಡೆ ನಿಂದು ಚಿತ್ತದೊಳ್ ನೆನೆ ಚಕ್ರ 

ಪಾಣಿಯಂ ಬಲಮಪ್ಪುದೆಂದು ಜರೆದಂ ಬಭ್ರುವಾಹನಂ ಫಲುಗುಣನನು ||೪೨||


" ಎಲೆ ಅರ್ಜುನ ನೀನು ಭೂಮಿಗಾಗಿ ಅಂದು ಅಣ್ಣನಾದ ಕರ್ಣನನ್ನು ಕೊಂದೆ. ಇಂದು ಕರ್ಣನ ಮಗನ ನೆರಳನ್ನು ಸಹಿಸದೆ ನನ್ನ ಕೈಯಿಂದ ಕೊಲ್ಲಿಸಿದೆ. ಚಿಂತೆ ಬೇಡ. ನಿನ್ನ ವೈರಿಗಳು ನಿರ್ನಾಮವಾದರು. ನಿನ್ನ ಪ್ರಾಣವನ್ನು ಉಳಿಸಿ ನಿನ್ನನ್ನು ಬೆಡುತ್ತೇನೆ. ಹೋಗಿಬಿಡು. ಬಿಲ್ಲನ್ನು ಹಿಡಿಯುವ ತ್ರಾಣವಿದ್ದರೆ ಯುದ್ಧಕ್ಕೆ ನಿಂತು, ಶ್ರೀಕೃಷ್ಣನನ್ನು ಸ್ಮರಿಸು. ನಿನಗೆ ತ್ರಾಣ ಬರುತ್ತದೆ." ಎಂದು ಬಬ್ರುವಾಹನನು ಅರ್ಜುನನನ್ನು ಜರೆದನು. 


ಹೊಣೆ ಹೊಕ್ಕಿದು ತಾಂ ಪಗೆವನಂ ಗೆಲ್ದೊಡಂ 

ಮಾಣದೆ ರಣಾಗ್ರದೊಳ್ ಮಡಿದೊಡಂ ಕ್ಸಷತ್ರಿಯ 

ರ್ಗೂಣೆಯಮೆ ಕರ್ಣನಂ ಕೊಂದೊಡೇನವನ ಸುತನಳಿದೊಡೇನಾಹವದೊಳು 

ಕ್ಷೀಣಬಲನೇ ತಾನಕಟ ನೀಂ ಸಮರ್ಥನೇ 

ಕಾಣಬಹುದೆನುತ ಭೀಮಾನುಜಂ ಕೋಪದಿಂ

ಬಾಣಂಗಳಂ ಮಗನಮೇಲೆ ಕರೆಯಲ್ಕವಂ ಪರೆಗಡಿಯುತಿಂತೆಂದನು ||೪೩||


ಶಪಥ ಮಾಡಿ ಪರಸತನ್ಯವನ್ನು ಹೊಕ್ಕು, ಶತ್ರುವನ್ನು ಗೆದ್ದರೂ (ಕೊಂದರೂ ), ತಾನೇ ಮಡಿದರೂ ಕ್ಷತ್ರಿಯರಿಗೆ ಅದು ದೋಷವಲ್ಲ. ನಾನು ಕರ್ಣನನ್ನು ಕೊಂದರೇನು? ವೃಷಕೇತುವು ಯುದ್ಧದಲ್ಲಿ ಅಳಿದರೇನು? ನೋಡಿಕೋ ಎಂದು ಅರಾಜುನನು ಮಗನ ಮೇಲೆ ಬಾಣಗಳನ್ನು ಪ್ರಯೋಗಿಸಲು ಅವನು ಅವೆಲ್ಲವನ್ನೂ ಕಡಿದು ಹೀಗೆಂದನು. 


ಪ್ರೀತಿಯಿಂ ದ್ರೋಣನಿತ್ತಂಬುಗಳ ಮನ್ಮಥಾ 

ರಾತಿ ಮು ಖ್ಯಾಮರರ್ ಕೊಟ್ಟ ಬಾಣಂಗಳ 

ಜ್ಞಾತಮಾದುವು ನಿನಗೆ ಮರುಳೆ ನಿನ್ನೊಡನಾಡಿ ಕೃಷ್ಣನಂ ಮರೆದೆಯಾಗಿ 

ಏತಕಾಹವಮಿನ್ನು ಸಾಕೆನಲ್ ಫಲುಗುಣಂ 

ಖಾತಿಯಿಂ ಮಗುಳಿಸಲ್ಕಾ ಬಭ್ರುವಾಹನಂ 

ಘಾತಿಸಿದನಡಿಗಡಿಗೆ ಪಾರ್ಥನಂ ಜಾಹ್ನವಿಯ ಶಾಪದಿಂ ಕೈಗಿಡಲ್ಕೆ ||೪೪||


ನಿನ್ನ ಗೆಳೆಯನಾದ ಕೃಷ್ಣನನ್ನು ನೀನು ಮರೆತುದರಿಂದ ದೇವತೆಗಳೂ ನಿನಗೆ ಕೊಟ್ಟ ಬಾಣಗಳು, ಈಗ ಮರೆತು ಹೋಗಿವೆ. ಸುಮ್ಮನೆ ಏಕೆ ಯುದ್ಧ ಮಾಡುತ್ತಿರುವೆ. ಇನ್ನು ಸಾಕೆಂದು ಬಬ್ರುವಾಹನನು ಹೇಳಲು, ಅರ್ಜುನನು ಕೋಪದಿಂದ ಮತ್ತೆ ಬಾಣಗಳನ್ನು ಬಿಡಲು, ಬಬ್ರುವಾಹನನು ಮತ್ತೆ ಮತ್ತೆ ಅವನ್ನು ಕಡಿದು ಅರ್ಜುನನನ್ನು ಗಾಯಗೊಳಿಸಿದನು. 


ಅತ್ಯುಗ್ರಸಾಯಕಂ ಬರೆ ಪಾರ್ಥನಿದಿರಾಗಿ 

ಪ್ರತ್ಯಸ್ತ್ರದಿಂದಿಸಲದಂ ಕೊಳ್ಳದೈತರ 

ಲ್ಸತ್ಯಭಾಮಾಕಾಂತನಂ ಚಿಂತಿಪನಿತರೊಳ್ತೀವ್ರದಿಂ ಕೊರಳನರಿಯೆ 

ಅತ್ಯಧಿಕ ಕುಂಡಲದ ತಲೆ ಚಿಗಿದು ನಭದೊಳಾ

ದಿತ್ಯಮಂಡಲಮಿಳೆಗುರುಳ್ವಂತೆ ಮುನಿಗಣ 

ಸ್ತುತ್ಯಕೇಶವ ಕೃಷ್ಣಯೆನುತೆ ಬಿದ್ದುದು ಕರ್ಣಸುತನ ಶಿರದೆಡೆಗೆ ಪೋಗಿ॥೪೭॥ 


ಬಬ್ರುವಾಹನನು ಬಿಟ್ಟ ಅತಿ ಉಗ್ರವಾದ ಬಾಣವು ತನ್ನೇಡೆಗೆ ಬರಲು, ಅರ್ಜುನನು ಪ್ರತ್ಯಸ್ತ್ರವನ್ನು ಬಿಟ್ಟನು. ಆ ಬಾಣವು ಪ್ರತ್ಯಸ್ತ್ರವನ್ನು ಮುರಿದು ಮುಂದುವರಿಯಿತು. ಅರ್ಜುನನು ಶ್ರೀಕೃಷ್ಣನನ್ನು ಸ್ಮರಿಸುವುದರೊಳಗೇ ಅವನ ಕತ್ತನ್ನು ಕತ್ತರಿಸಿತು. ಕುಂಡಲ ಮಂಡಿತವಾದ ಅರ್ಜುನನ ತಲೆಯು ಆಕಾಶಕ್ಕೆ ಹಾರಿ, ಸೂರ್ಯಮಂಡಲವು ಕೆಳಗುರುಳಿತೋ ಎಂಬಂತೆ ಮುನಿಗಳು ಸ್ತುತಿಸುವವನೇ, ಕೇಶವ, ಕೃಷ್ಣ ಎಂದು ನಾಮಸ್ಮರಣೆ ಮಾಡುತ್ತಾ ವೃಷಕೇತುವಿನ ತಲೆಯ ಪಕ್ಕಕ್ಕೆ ಹೋಗಿ ಬಿದ್ದಿತು. 


ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ 

ಕುಜವಾರದುತ್ತರಾನಕ್ಷತ್ರದಂದು ವಾ 

ರಿಜಮಿತ್ರನಸ್ತಮಯ ಸಮಯದೊಳ್ ಕೃಷ್ಣಯೆನುತರ್ಜುನನ ತಲೆ ಬೀಳಲು 

ವಿಜಯೋತ್ಸವದೊಳೈದಿದಂ ಬಭ್ರುವಾಹನಂ 

ನಿಜಪುರಕೆ ಗುಡಿ ತೋರಣದೊಳೆಸೆಯೆ ಬಣ್ಣಿಸಲ್ 

ಪ್ರಜೆಗಳಂಗನೆಯರಾರತಿ ಪುಷ್ಪ ದಧಿ ದೂರ್ವೆಯೊಳಿದಿರ್ಗೊಳಲ್ಕೆ ||೪೯||


ಕಾರ್ತಿಕ ಏಕಾದಶೀ ಮಂಗಳವಾರ ಸೂರ್ಯಾಸ್ತಮಯ ಸಮಯದಲ್ಲಿ, ಉತ್ತರಾ ನಕ್ಷತ್ರದಲ್ಲಿ "ಶ್ರೀ ಕೃಷ್ಣಾ " ಎನ್ನುತ್ತಾ ಅರ್ಜುನನ ತಲೆ ಉರುಳಿತು. ಬಬ್ರುವಾಹನನು ಜಯಶಾಲಿಯಾಗಿ ಉತ್ಸವದಿಂದ ತನ್ನ ನಗರಕ್ಕೆ ಬಂದನು. ನಗರವನ್ನು ಧ್ವಜಗಳಿಂದಲೂ, ತೋರಣಗಳಿಂದಲೂ, ಅಲಂಕರಿಸಿದ್ದರು. ಹೆಣ್ಣು ಮಕ್ಕಳು, ಪ್ರಜೆಗಳು,  ಹೂವು, ಮೊಸರು, ಅರಳು, ದೂರ್ವೆಗಳಿಂದ ಇದಿರುಗೊಳ್ಳಲು ಬಂದರು. 


ಮಿಗೆ ವಿಜಯೋತ್ಸವದಿಂದೆ ಪೌರಜನದೊಸಗೆಯಿಂ 

ಬಗೆಬಗೆಯ ಸಿಂಗರದ ಪೆಣ್ಗಳ ಸೊಡರ್ಗಳಿಂ

ನಗರ ಪ್ರವೇಶಮಂ ಮಾಡಿದಂ ಬಭ್ರುವಾಹನನಿತ್ತಲರಮನೆಯೊಳು 

ಸೊಗಸಿಂದುಲೂಪಿ ಸಹಿತಿರುತಿರ್ದಚಿತ್ರಾಂಗ  

ದೆಗೆ ಬಂದು ಸುದತಿಯರ್ ದೇವಿ ನೀನೇಂ ನೋಂತು 

ಮಗನಂ ಪಡೆದೆಯೊನರನಂ ಕೊಂದು ಬರ್ಪನಾರತಿಗಳಂ ತರಿಸೆಂದರು ||೫೦||


ವಿಜಯೋತ್ಸವದಿಂದಲೂ, ಪುರಜನರ ಸ್ವಾಗತದಿಂದಲೂ,ಹೆಣ್ಣುಮಕ್ಕಳು ಹಿಡಿದ ಬಣ್ಣದ ದೀಪಗಳಿಂದಲೂ, ಬಬ್ರುವಾಹನನು ನಗರವನ್ನು ಪ್ರವೇಶಿಸಿದನು. ಇತ್ತ ಅರಮನೆಯಲ್ಲಿ ಉಲೂಪಿಯೊಡನೆ ಕುಳಿತಿದ್ದ ಚಿತ್ರಾಂಗದೆಗೆ ಹೆಣ್ಣುಮಕ್ಕಳು ಬಂದು " ದೇವೀ, ನೀನು ಅದೇನು ವ್ರತವನ್ನು ಮಾಡಿ ಮಗನನ್ನು ಪಡೆದೆಯೋ! ಅವನು ಯುದ್ಧದಲ್ಲಿ ಅರ್ಜುನನನ್ನು ಕೊಂದು ಬರುತ್ತಿದ್ದಾನೆ. ಸ್ವಾಗತಮಾಡಲು ಆರತಿಗಳನ್ನು ತರಿಸು". ಎಂದರು


ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ 

ಸೂನು ಕಲಿ ಪಾರ್ಥನಂ ಸಮರದೊಳ್ ಕೊಂದು ಸುಂ 

ಮಾನದಿಂದೈತಪ್ಪನೆಂದು ಪೊಗಳಲ್ ಕೇಳಿ ಹಮ್ಮೈಸಿ ಬಿದ್ದಿಳೆಯೊಳು 

ಹಾ ನಾಥ ಕೆಟ್ಟೆನಕಟೆಂದು ಕಂಬನಿಯೊಳ 

ಳ್ದಾನಾರಿ ದುಃಖಾರ್ತೆಯಾಗಲಂತಃಪುರದ 

ಮೀನಾಕ್ಷಿಯರ್ ಕೂಡೆ ರೋದಿಸಲ್ ಪೆರ್ಚಿತು ವಿಷಾದರವಮರಮನೆಯೊಳು ||೫೨||


ಬಬ್ರುವಾಹನನು ಅರಮನೆಯ ಬಾಗಿಲಲ್ಲಿಳಿದು, ನೋಡಲು ನೀರಾಜನವೇ ಮೊದಲಾದ ಸತ್ಕಾರ ಮಾಡಬೇಕಾಗಿದ್ದ ಹೆಂಗಸರು ಒಳಗಡೆ ಶೋಕಾರ್ತೆಯರಾಗಿದ್ದರು. ನಾನು ಜಯಶಾಲಿಯಾಗಿ ಉತ್ಸವದಿಂದ ಮನೆಗೆ ಬಂದರೆ, ಈ ಅಳುವೇಕೆ ಎಂದು ಚಕಿತನಾಗಿ ಅಂತಃಪುರವನ್ನು ಹೊಕ್ಕು ತಾಯಿಯ ಸ್ಥಿತಿಯನ್ನು ನೋಡಿ ಹೀಗೆಂದನು. 


ಅಪಜಯಂ  ತನಗಾದುದಿಲ್ಲ ಸಂಗ್ರಾಮದೊಳ್ 

ವಿಪರೀತಮೇತಕಿಂತಾನಂದ ಕಾಲದೊಳ್ 

ಕುಪಿತಮುಖನಾಗಿ ತನ್ನಂಜರೆದೊಡರ್ಜುನನ ಶಿರವನರಿದೆಂ ಧುರದೊಳು 

ರಿಪುಭಯಂಕರ ಕರ್ಣ ತನಯಂಗೆ ಸಂಗರದೊ 

ಳುಪಹತಿಯನಿತ್ತೆಂ ಪ್ರಯಾಸದಿಂದದಕೆ ನೀಂ 

ತಪಿಸಲೇಕೆಂದು ಕಣ್ಣೀರ್ದೊಡೆದು ಮಾತೆಯಂ ಸಂತೈಸಲಿಂತೆಂದಳು ||೫೩||


" ಅಮ್ಮಾ ನಾನು ಸೋತಿಲ್ಲ ಜಯಶಾಲಿಯಾಗಿ ಬಂದೆ. ಸಂತೋಷಪಡುವ ಕಾಲದಲ್ಲಿ ಈ ಅಳುವೇಕೆ. ಅರ್ಜುನ ನನ್ನನ್ನು ಜರೆದುದರಿಂದ ಅವನ ಶಿರಚ್ಛೇದ ಮಾಡಿದೆ. ಬಹಳ ಕಷ್ಟದಿಂದ ವೃಷಕೇತುವನ್ನು ಸಂಹರಿಸಿದೆ. ಇದಕ್ಕಾಗಿ ನೀನೇಕೆ ಅಳಬೇಕು" ಎನ್ನುತ್ತಾ ಬಬ್ರುವಾಹನನು ತಾಯಿಯ ಕಂಬನಿಯನ್ನೊರಸಿ ಸಂತೈಸಿದನು. 


ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ 

ವಾಸಿ ಬಂದುದೆ ನಿನಗೆ ಮತ್ಕಾಂತನಳಿದನೇ 

ವಾಸವನ ಸೂನು ಮೃತನಾದನೇ ಧರ್ಮಾನುಜಂ ಪ್ರಾಣಮಂ ತೊರೆದನೇ 

ವಾಸುದೇವನ ಸಖಂ ಮಡಿದನೇ ನಿನ್ನಂತ 

ದಾಸುರ ಪರಾಕ್ರಮದೊಳಾತ್ಮಪಿತೃಘಾತಮಂ 

ಹೇಸದೆಸಗಿದರುಂಟೆ ಸುಡಲಿ ಸುತರೇಕೆಂದಳಲ್ದಳಾ ಚಿತ್ರಾಂಗದೆ ||೫೪||


ಚಿತ್ರಾಂಗದೆ: ಮಗನೆ ಬಹಳ ಒಳ್ಳೆಯ ಕೆಲಸವನ್ನು ಮಾಡಿರುವೆ.  ಅರ್ಜುನನು ನಿನಗೆ ಶತ್ರುವಾದನೇ ? ನಿನಗೆ ಅವನ ಮೇಲೆ ಛಲವುಂಟಾಯಿತೇ ? ನನ್ನ ಪತಿ ಅಳಿದನೇ ? ದೇವೇಂದ್ರನ ಮಗನು ಮೃತನಾದನೇ ? ಧರ್ಮಜನ ತಮ್ಮನು ಪ್ರಾಣವನ್ನು ಬಿಟ್ಟನೇ? ಶ್ರಕೃಷ್ಣನ ಸ್ನೇಹಿತನು ಮಡಿದನೇ ? ಆಸುರೀ ಪರಿಕ್ರಮದಿಂದ ತನ್ನ ತಂದೆಯನ್ನೇ ನಿನ್ನಂತೆ ಕೊಂದವರುಂಟೇ ? ನಿನಗೆ ಹೇಸಿಗೆ ಬರಲಿಲ್ಲವೇ ? ಇಂತಹ ಮಕ್ಕಳು ಏಕೆ ಹುಟ್ಟಬೇಕು, ಸೂಡಲಿ " ಎಂದಳು. 


ಈ ಕರ್ಣಸೂತ್ರಮೀಕರ್ಣ ತಾಟಂಕಮೀ 

ಶ್ರೀಕರಂ ನಿಜ ಜನನಿಗೇಕೆಂದು ಬಿಡಿಸಿದೈ 

ಸಾಕಿನ್ನು ಮಗಮೊಮ್ಮಗರಳಿದುದಂ ಕೇಳ್ದೆಂತು  ಸೈರಿಪಳೊ ಕುಂತಿದೇವಿ 

ಭೂಕಾಂತನೇಗೈದಪನೊ ಧರ್ಮರಾ ನವಿ 

ವೇಕದಿಂ ಬಾಳ್ಕೆಗಿಡಿಸಿದೆಯೆಂದು ತನಯನಂ 

ಶೋಕದಿಂ ಮಿಗೆ ಬೈದಳಲ್ವ  ಚಿತ್ರಾಂಗದೆಗುಲೂಪಿ ಬಳಿಕಿಂತೆಂದಳು ||೫೫||


" ಈ ಕಂಠ ಸೂತ್ರ ( ತಾಳಿ ), ಕಿವಿಯಲ್ಲಿರುವ ಓಲೆ, ಕೈಗೆ ಹಾಕಿದ ಬಳೆ, ಮೊದಲಾದ ಮುತ್ತೈದೆತನದ ಚಿಹ್ನೆಗಳು ನನ್ನ ತಾಯಿಗೇಕೆ ಬೇಕು ಎಂದು ಅವನ್ನು ಇಲ್ಲದ ಹಿಗೆ ಮಿಡಿದೆ, ಇರಲೆ. ತನ್ನ ಮಗ, ಮೊಮ್ಮಗ ಇಬ್ಬರೂ ಮಡಿದುದನ್ನು ಕೇಳಿ ಕುಂತೀದೇವಿಯು ಹೇಗೆ ಸೈರೆಸೈವಳೊ? ಧರ್ಮರಾಜನು ಈ ಸುದ್ಧಿಯನ್ನು ಕೇಳಿ ಏನು ಮಾಡೈವನೋ ? ಅವಿವೇಕದಿಂದ ಅನೇಕ ಬಾಳುವೆಗಳನ್ನು ಹಾಳುಮಾಡಿದೆ. " ಎಂದು ಚಿತ್ರಾಂಗದೆಯು ಶೋಕದಿಂದ ತನ್ನ ಮಗನನ್ನು ಬೈದು ದುಃಖಿಸಿದಳು. ಆಗ ಉಲೂಪಿಯು ಹೀಗೆಂದಳು. 


ದೇವಿ ನಿಲ್ಲಿನ್ನಮರ್ಜುನನ ಮೃತಿ ಸಂಶಯಂ 

ಭಾವಿಸುವೊಡೆನಗೊಂದು ಕುರುಪುಂಟು ತನ್ನ ಕೇ 

ಳೀವನದೊಳಂದು ಪಾರ್ಥಂ ತನಗೆ ತೋರಿದಂ ದಾಡಿಮ ದ್ರುಮಮೈದನು 

ಆವ ದಿನಕೊಣಗುವುವು ತರುಗಳಾ ದಿನಕೆನ್ನ 

ಜೀವಕಳಿವಹುದೆಂದು ತಾನದಂ ನೋಡಿ ಬಹೆ 

ನೀ ವಿಷಾದಂ ಬೇಡ ಸೈರಿಸೆನೆ ಕಳುಹಿದಳುಲೂಪಿಯಂ ಚಿತ್ರಾಂಗದೆ ||೫೬||


ಐಲೊಪಿಯು " ದೇವೀ ಅರ್ಜುನನು ಮೃತನಾಗಿರುವನೇ ಎನ್ನುವ ಸಂಶಯಕ್ಕೆ ಆಸ್ಪದವಿದೆ. ಒಂದು ದಿನ ನನ್ನ ಕೇಳೀವನದಲ್ಲೆ ಅರ್ಜುನನು ನನಗೆ ಐದು ದಾಳಿಂಬೆ ಮರಗಳನ್ನು ತೋರಿಸಿ " ಇವು ಎಂದು ಒಣಗುವುವೋ ಅದು ನನ್ನ ಪ್ರಾಣ ಹೋಯಿತೆಂದು ತಿಳಿ ಎಂದು ಹೇಳಿದ್ದ. ಆ ಕುರುಹು ಇದೆ. ನಾನು ಅವನ್ನು ನೋಡಿ ಬರುತ್ತೇನೆ.ಅಲ್ಲಿಯವರೆಗೌ ಈ ವೆಷಾದ ಬೇಡ. ಸಹಿಸಿಕೋ ಎಂದು ಚಿತ್ರಾಂಗದೆಗೆ ಹೇಳಿದಳು. ಅವಳು ಉಲೃಪಿಯನ್ನು ಕಳುಹಿದಳು. 


ಕ್ರೀಡಾವನಕೆ ಪೋಗಿ ನಿಮಿಷದೊಳಹೀಂದ್ರಸುತೆ 

ನೋಡಿ ಬಂದಲ್ಲಿಯ ದವಾಗ್ನಿಯಿಂದಾ ಪಂಚ

ದಾಡಿಮ ದ್ರುಮಮೊಣಗಿತರ್ಜುನನ ಮೃತಿ ದಿಟಂ ನಡೆ ಪೋಪೆವಲ್ಲಿಗೆಂದು 

ಪೀಡಿಸುವ ಶೋಕದಿಂ ಚಿತ್ರಾಂಗದೆಗೆ ನುಡಿಯೆ 

ಕೂಡೆ ಪೊರಮಟ್ಟೆಲ್ಲರುಂ ರಣಕೆ ನಡೆತಂದು 

ಜೋಡಾಗಿ ಬಿದ್ದಿರ್ದ ಕರ್ಣಸುತ ಪಾರ್ಥರಂ ಕಂಡಲ್ಲಿ ಕೆಡೆದಳಲ್ದರು ||೫೭||


ಚಿತ್ರಾಂಗದೆಯು ಅಪ್ಪಣೆ ಪಡೆದು ಕ್ರೀಡಾವನಕ್ಕೆ ಹೋಗಿ ಉಲೂಪಿಯು ( ನಾಗರಾಜನ ಮಗಳು ) ನೋಡಲು ಮಹಾ ಅಗ್ನಿಯಿಂದ ಐದು ದಾಳಿಂಬೆ ಮರಗಳೂ ಒಣಗಿದ್ದುವು. ಉಲೂಪಿಯು ಅರ್ಜುನನ ಮರಣ ನಿಜವೆಂದು ತಿಳಿದು ಶೋಕಾರ್ತಳಾಗಿ ಹೋಗಿ ಚಿತ್ರಾಂಗದೆಗೆ ಹೇಳಿದಳು.  ಅವರೆಲ್ಲರೂ ಹೊರಟು ರಣಭೂಮಿಗೆ ಬಂದು ಜೊತೆಯಲ್ಲೇ ಬಿದ್ದಿದ್ದ ವೃಷಕೇತು ಅರ್ಜುನನನ್ನು ನೋಡಿ ನೆಲಕ್ಕೆ ಬಿದ್ದು ಅತ್ತರು. 


ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆ 

ಗೆಳಸಿದೈ ಜನಕಂಗೆ ಜನನಿಯರ್ ನಾವಿರ್ವ

ರುಳಿಯಲೇಕಿನ್ನಕಟ ವೈಧವ್ಯಮಂ ತಾಳಬಲ್ಲೆವೆ ಮಹೀತಳದೊಳು 

ಸೆಳೆದು ಪೊಡೆ ಖಡ್ಗದಿಂದೆಮ್ಭೀಶಿರಂಗಳಂ 

ಬಳಿಕೈದೆ ಭಾರ್ಗವಂ ಕೊಂದುದಿಲ್ಲವೆ ತಾಯ 

ನಳುಕದಿರ್ ಪಿತನ ಮಾತೃದ್ವಯದ ವಧೆ ನಿನಗೆ ಸಫಲಮಾದಪುದೆಂದಳು ||೬೧||


ಆಗ ಚಿತ್ರಾಂಗದೆಯು ಮಗನನ್ನು ನೋಡಿ, ನಿನ್ನ ತಂದೆಯನ್ನು ಕೊಂದೆಯಲ್ಲವೇ ? ವೈದವ್ಯವನ್ನು ತಾಳಿ ಬದುಕಬಲ್ಲೆವೇ ? ನಿನ್ನ ಕತ್ತಿಯನ್ನು ತೆಗೆದು ನಮ್ಮ ತಲೆಗಳನ್ನು ತೆಗೆದು ಬಿಡು. ಹಿಂದೆ ಪರಶುರಾಮನು ತಾಯಿಯನ್ನು ಕೊಲ್ಲಲಿಲ್ಲವೆ. ಹೆದರಬೇಡ ತಂದೆ ಹಾಗೂ ಇಬ್ಬರು ತಾಯಿಯರನ್ನು ಕೊಂದ ಫಲ ನಿನಗೆ ಬರಲಿ" ಎಂದಳು. 


ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ 

ಪ್ರೀಯದಿಂ ಪೋಗಿ ಕಂಡೊಡೆ ತನುಜನಲ್ಲೆಂದು 

ನೋಯೆ ನುಡಿದಾಹವಂ ಬೇಕೆಂದೊಡೀತನಂ ಕೊಂದೆ ನಾಂ ಪಪಂಥಮೆಂದು 

ದಾಯತಪ್ಪಿದ ಬಳಿಕ ಪೇಳ್ದೊಡೇನಹುದಿನ್ನು

ಹೇಯಮಾದುದು ತನ್ನ ಬಾಳ್ಕೆ ಪಿತೃವಧೆಯೊಳೀ 

ಕಾಯಮಂ ಬಿಡುವೆನೀಗಲೆ ನೋಳ್ಪುದೆಂದವಂ ಕಿಚ್ಚುವುಗಲನುವಾದನು ||೬೨||


ತಾಯ ಮಾತನ್ನು ಕೇಳಿ ಬಬ್ರುವಾಹನನು ಶೋಕಭರಿತನಾಗಿ " ನಾನು ಪ್ರೀತಿಯಿಂದ ಹೋಗಿ ಕಂಡರೆ ನೀನು ನನ್ನ ಮಗನಲ್ಲವೆಂಉ ಹೀನಾಯವಾಗಿ ಬೈದುದರಿದ ನಾನದನ್ನು ಪಂಥವಾಗಿ ಸ್ವೀಕರಿಸಿ ಇವನನ್ನು ಸಂಹರಿಸಿದೆನು. ಹೀಗೆ ಲೆಕ್ಕ ತಪ್ಪಿದ ಮೇಲೆ ಏನು ಹೇಳಿದರೇನು ಬಂತು ? ನನ್ನ ಬಾಳು ತ್ಯಜಿಸಲು ಯೋಗ್ಯವಾಗಿದೆ. ಪಿತೃವಧೆ ಮಾಡಿದ ಈ ಶರೀರವನ್ನು ತ್ಯಜಿಸುತ್ತೇನೆ" ಎಂದು ಬೆಂಕಿಯಲ್ಲಿ ಬೀಳಲು ಸಿದ್ಧನಾದನು. 


ತಂದೆಯಂ ಕೊಂದುಳಿದನೆಂದು ಲೋಕದ ಜನಂ 

ನಂದಿಸದೆ ಬಿಡದಿದಕೆ ನಿಷ್ಕೃತಿಗಳಂ ಕಾಣೆ 

ನೊಂದು ಮಂತ್ರಧ್ಯಾನ ಜಪ ತೀರ್ಥ ಯಾಗ ಯೋಗಂಗಳಿಂ ಕಳೆದುಕೊಳಲು 

ಸಂದಿಗ್ಧಮಾಗಿರ್ದ ಪಾತಕಂ ಪೋಪುದು ಮು 

ಕುಂದಸ್ಮರಣೆಯಿಂದಮಮರ್ಜುನಂ ವೈಷ್ಣವಂ 

ಬಂದುದಪಕೀರ್ತಿ ನಾಂ ನಾಚದೆಂತಿರ್ದಪೆಂ ಪುಗುವೆನಗ್ನಿಯೊಳೆಂದನು ||೬೩||


" ಇವನು ತಂದೆಯನ್ನು ಕೊಂದವನು( ತಾನುಳಿದಿದ್ದಾನೆ ) ಎಂದು ಲೋಕದ ಜನಗಳು ನಿಂದಿಸದೆ ಬಿಡುವುದಿಲ್ಲ.  ಇದಕ್ಕೆ ಪರಿಹಾರವು ನನಗೆ ಕಾಣುತ್ತಿಲ್ಲ.  ಮಂತ್ರಪುರಶ್ಚರಣೆ, ಧ್ಯಾನ, ಜಪ, ತೀರ್ಥಯಾತ್ರೆ, ಯಾಗಗಳಿಂದ ಈ ಪಾಪವು ಹೋದೀತು. ಶ್ರೀಕೃಷ್ಣನ ಸ್ಮರಣೆಯಿಂದ ಪಾಪ ಪರಿಹಾರವಾದೀತು. ಆದರೆ ಅರ್ಜುನನು ಕೃಷ್ಣನ ಬಂಧು ಮತ್ತು ಸ್ನೇಹಿತ.  ಹೇಗೆ ಕೃಷ್ಣನನ್ನು ನೆನೆಯಲಿ. ನಾಚದಿರುವುದಾದರೂ ಹೇಗೆ ? ನಾನು ಅಗ್ನಿಪ್ರವೇಶವನ್ನೇ ಮಾಡುತ್ತೇನೆ." ಎಂದನು. 


ಇಪ್ಪತ್ತೆಂಟನೆಯ ಸಂಧಿ 


ಸೂಚನೆ : 

ಇಂದ್ರಜಂ ತುರಂಗಂಗಳಂ ಕಾಣದಿರೆ ನಾರ 

ದಂ ದೃಷ್ಟಿಗೋಚರಕ್ಕೈದಿ ವಿಸ್ತರಿಸಿದಂ 

ಚಂದ್ರಹಾಸ ಕಥಾವಿಶೇಷಮಂ ಕರ್ಣಪೀಯೂಷಮಂ ಪ್ರೀತಿಯಿಂದ ॥ 


ಸೂಚನೆ : ಯಜ್ಞದ ಕುದುರೆಗಳು ಕಾಣದಾಗಲು, ನಾರದನು ಅರ್ಜುನನ ಬಳಿಗೆ ಬಂದು, ಕಿವಿಗಳಿಗಮೃತವಾದ ಚಂದ್ರಹಾಸನ ಕತೆಯನ್ನು ಹೇಳಿದನು.  


ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ 

ಮುನ್ನೊರವನುಂಟು ಕೇರಳ ದೇಶದವನಿಪಂ 

ಸನ್ನುತ ಗುಣೋದಯಂ ಮೇಧಾವಿಯೆಂಬವಂ ಬಲಯುತಂ ಬಳಿಕವಂಗೆ 

ತನ್ನ ಪಟ್ಟದ ರಾಣಿಯೊಳ್ ಬಹಳ ಭಾಗ್ಯ ಸಂ 

ಪನ್ನನೆಡದಂಘ್ರಿಗರುವೆರಳಾಗಿ ದಿವದೊಳು 

ತ್ಪನ್ನನಾದಂ ಮೂಲನಕ್ಷತ್ರದಿಂದರಿಷ್ಟಂಶದೊಳ್ ಸುಕುಮಾರನು ||೧೪||


ನಾರದ : ಅರ್ಜುನಾ, ಹಾಗಾದರೆ ಇನ್ನು ಚಂದ್ರಹಾಸನ ಕತೆಯನ್ನು ಹೇಳುತ್ತೇನೆ.  ಕೇರಳ ದೇಶದಲ್ಲಿ ಮೇಧಾವಿಯೆಂಬ ರಾಜನಿದ್ದನು. ಅವನು ಸದ್ಗುಣಶಾಲಿ, ಬಲವಂತ, ಅವನಿಗೆ ಅವನ ಪಟ್ಟದ ರಾಣಿಯಲ್ಲಿ ಬಹಳ ಭಾಗ್ಯವಂತನಾದ ಒಬ್ಬ ಮಗನು ಹಗಲಿನಲ್ಲಿ ಮೂಲಾನಕ್ಷತ್ರದ ಅರಿಷ್ಟಾಂಶದಲ್ಲಿ ಹುಟ್ಟಿದನು. ಅವನ ಎಡಗಾಲಿನಲ್ಲಿ ಆರು ಬೆರಳುಗಳಿದ್ದವು. 


ಪುತ್ರೋತ್ಸವಂ ಮಾಡಿ ಕೆಲವು ದಿನಮಿರೆ ನೃಪಂ 

ಶತ್ರುಗಳ್ ಬಂದು ನಿಜನಗರಮಂ ಮುತ್ತಿದೊಡೆ 

ಕ್ಷತ್ರಧರ್ಮದೊಳವರೊಡನೆ ಯುದ್ಧರಂಗದೊಳ್ ಪೊಯ್ದಡಿ ಮಡಿಯೆ ಕೇಳ್ದು 

ಚಿತ್ರಭಾನು ಪ್ರವೇಶಂಗೈದಳಂದು ಶತ 

ಪತ್ರಲೋಚನೆ ಪತಿವ್ರತೆಯಾಗಿ ಬಳಿಕೆಲೆ ಧ 

ರಿತ್ರೀಶ್ವರನ ರಾಜ್ಯಮಂ ತೆಗೆದುಕೊಂಡಹಿತರಾಳ್ದರದನೇವೇಳ್ವೆನು||೧೫||


ಮೇಧವಿಯು ಮಗನು ಹುಟ್ಟಿದನೆಂದು ಉತ್ಸವವನ್ನು ಮಾಡಿದನು. ಕೆಲವು ದಿನಗಳನಂತರ ಶತ್ರುಗಳು ಬಂದು ಅವನ ನಗರವನ್ನು ಮುತ್ತಿದರು. ಅವನು ಕ್ಷತ್ರಿಯ ಧರ್ಮದಂತೆ ಹೋರಾಡಿ ಯುದ್ಧದಲ್ಲಿ ಮಡಿದನು. ರಾಣಿಯು ಅವನೊಡನೆ ಅಗ್ನಿ ಪ್ರವೇಶವನ್ನು ಮಾಡಿ ಪತಿವ್ರತೆಯಾಗಿ ಮರಣ ಹೊಂದಿದಳು. ಶತ್ರುಗಳು ಮೇಧಾವಿಯ ರಾಜ್ಯವನ್ನು ವಶಪಡಿಸಿಕೊಂಡು ಆಳಿದರು. 


ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮಟ್ಟು 

ತೊಳಲಿ ಬಳಲುತೆ ಮೆಲ್ಲಮೆಲ್ಲನೈತಂದು ಕುಂ 

ತಳ ನಗರಮಂ ಪೊಕ್ಕಳಲ್ಲಿ ಸಾಕಿದಳರ್ಭಕನನತಿಪ್ರೇಮದಿಂದೆ 

ಎಳೆಯಂಗೆ ಬೇಕಾದುದಿಲ್ಲದಿರೆ ಮರುಗುವಳ್ 

ಪೊಳಲೊಳಗೆ ತಿರಿದು ಹೊರೆದಳಲುವಳ್ ಮುದ್ದಿಸಿ ಪ 

ಸುಳೆಯಭಿನಯಂಗಳ್ಗೆ ಹಿಗ್ಗಿ ಬಿಸುಸುಯ್ವಳವಳನುದಿನದೊಳಾರ್ತೆಯಾಗಿ ||೧೬||


ಬಳಿಕ ಒಬ್ಬ ದಾಸಿಯು ರಾಜನ ಮಗನನ್ನು ತೆಗೆದುಕೊಂಡು, ನಗರವನ್ನು ಬಿಟ್ಟು ಮೆಲ್ಲಮೆಲ್ಲನೆ ಕುಂತಳ ನಗರಕ್ಕೆ ಹೋದಳು. ಅಲ್ಲಿ ಆ ಮಗುವನ್ನು ಅತಿ ಪ್ರೇಮದಿಂದ ಸಾಕಿದಳು. ಅವನಿಗೆ ಅಗತ್ಯವಾದ ವಸ್ತುಗಳಿರಲಿಲ್ಲ. ಅದರಿಂದ ಅವಳು ದುಃಖಿಸುತ್ತಿದ್ದಳು. ಊರಿನಲ್ಲಿ ಹೋಗಿ, ಬೇಡಿ ಸಿಕ್ಕಿದ್ದನ್ನು ತಂದು ಮಗುವನ್ನು ಸಾಕುತ್ತಿದ್ದಳು. ಆ ಮಗುವಿನ ಬಾಲಲೀಲೇಗಳನ್ನು ಕಂಡು ಹಿಗ್ಗುತ್ತಿದ್ದಳು. ಆ ಮಗುವಿನ ದೈಸ್ಥಿತಿಗಾಗಿ ಆರ್ತಳಾಗಿ ನಿಟ್ಟುಸಿರಿಡುತ್ತಿದ್ದಳು. 


ಇಡೆ ತೊಟ್ಟಲಿಲ್ಲಾಡಿಸುವರಿಲ್ಲ ನಿನಗೆ ಪೊಂ 

ದೊಡಿಗೆಯಿಲ್ಲಿರೆ ನಿಳಯವಿಲ್ಲ ಬಿಡದೆರೆವನೀ 

ರ್ಕುಡಿವಾಲ್ಗಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿ ನಲಿವ ತಂದೆತಾಯ್ಗಳಿಲ್ಲ

ಪೊಡವಿಪತಿ ಕೇರಳಾಧೀಶ್ವರಂ ಪರಕೆಯೊಳ್ 

ಪಡೆದೆನಿದಕೀಗ ನಿನ್ನಂ ನೋಡುವೆನ್ನ ಕ 

ಣ್ಣೊಡೆಯದಕಟಕಟೆಂದು ಬಿಸುಸುಯ್ದಳಲ್ದು ಮರುಗುವಳಾಕೆ ದಿನದಿನದೊಳು ||೧೭||


ಆ ದಾದಿಯು ಆ ಮಗುವನ್ನು ನೋಡಿ " ನಿನ್ನನ್ನು ಮಲಗಿಸಲು ತೊಟ್ಟಿಲಿಲ್ಲ.ಆಡಿಸುವವರಿಲ್ಲ. ಉಡಿಸಲು ಒಳ್ಳೆಯ ಬಟ್ಟೆಯಿಲ್ಲ. ಇರಲು ಮನೆಯಿಲ್ಲ.  ಎರೆಯಲು ಎಣ್ಣೆ ನೀರಿಲ್ಲ. ಕುಡುಯಲು ಹಾಲಿಲ್ಲ. ಬೆಣ್ಣೆಯಿಲ್ಲ. ನಿನ್ನ ಲೀಲೆಯನ್ನು ನೋಡಿ ಸಂತೋಷಿಸುವವರಿಲ್ಲ. ನಿನ್ನ ತಂದೆ ಕೇರಳದ ದೊರೆಯು ಹರಕೆ ಹೊತ್ತು ನಿನ್ನನ್ನು ಇದಕ್ಕಾಗಿ ಪಡೆದನು. ನಿನ್ನನ್ನು ನೋಡುವ ನನ್ನ ಕಣ್ಣು ಒಡೆಯದಲ್ಲಾ" ಎಂದು ಪ್ರತಿದಿನವೂ ದುಃಖಿಸುತ್ತಿದ್ದಳು.  


ಮೊಳೆವಲ್ಲುಗುವಜೊಲ್ಲು ದಟ್ಟಡಿ ತೊದಲ್ವನುಡಿ 

ತೊಳತೊಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ 

ಪೊಳೆವ ಕಣ್ಮಿಸುಪ ನುಣ್ಗದಪಿಗೆಣೆ ಚೆಲ್ವಪಣೆ ಕುರುಳ ಜೋಲಂಬೆಗಾಲು 

ಸುಳಿ ನಾಭಿ ಮಿಗೆ ಶೋಭಿಪಧರದೆಡೆ ಬಟ್ಟದೊಡೆ 

ನಳಿತೋಳಿಡಿದ ಧೂಳಿ ಸೊಗಯಿಸುವ ವರ ಶಿಶುವ 

ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗುವಳಜಸ್ರಮವಳು ||೧೮||


ಮೊಳೆಯುತ್ತಿದ್ದ ಹಲ್ಲು,  ಸೋರುವ ಜೊಲ್ಲು,  ದಟ್ಟಡಿ, ತೊದಲು ಮಾತು,  ಹೊಳೆಯುವ ಸೊಗಸು, ಉಕ್ಕಿ ಬರುತ್ತಿದ್ದ ಮುಖ, ಥಳಥಳಿಸುವ ಕಣ್ಣು, ನುಣುಪಾದ ಹಾಲುಗಲ್ಲ, ಹಣೆಯ ಮೇಲೆ ಹಾರಾಡುವ ಮುಂಗುರುಳು, ಅಂಬೆಗಾಲು, ಆಳವಾದ ದುಂಡಾದ ಹೊಕ್ಕುಳು, ಸುಂದರವಾದ ತುಟಿಗಳು,  ದಂಡಾದ ತೊಡೆ, ಮೃದುವಾದ ತೋಳುಗಳು, ಆಡುವಾಗ ಮೈಗೆ ಹತ್ತಿದ ಧೂಳು, ಇವುಗಳಿಂದ ಶೋಭಿಸುತ್ತಿದ್ದ ಮಗುವನ್ನು ಸಂತೋಷದಿಂದ ಆಡಿಸುವವರಿಲ್ಲವೆಂದು ಬಹಳವಾಗಿ ನೊಂದು ಆ ದಾದಿಯು ಯಾವಾಗಲೂ ಮರುಗುತ್ತಿದ್ದಳು.


ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ 

ಲಾಲನೆಗಳಿಲ್ಲೆಂದಳಲ್ದು ಮರುಗುವಳೊಮ್ಮೆ 

ಪಾಲಿಸಿದಳಿಂತು ನಡೆನುಡಿಗಳಂ ಕಲಿವಲ್ಲಿ ಪರಿಯಂತಮಾ ಶಿಶುವನು 

ಮೇಲೆ ರುಜೆ ಬಂದಡಸಿ ವಿಧಿವಶದೊಳಾ ಧಾತ್ರಿ 

ಕಾಲನರಮನೆಗೈದಿದಳ್ ಬಳಿಕ ಪಸುಳೆಗೆ ನಿ 

ರಾಲಂಬಮಾಗಲಾ ಪಟ್ಟಣದೊಳೆಲ್ಲರ್ಗೆ ಕಾರುಣ್ಯಕೀಡಾದನು ||೧೯||


ದಾದಿಯು ಆ ಮಗುವಿನ ಆಟವನ್ನು ಕಂಡು ಒಮ್ಮೆ ಹಿಗ್ಗುವಳು. ಇವನಿಗೆ ಸರಿಯಾದ ಪಾಲನೆಯಿಲ್ಲವೆಂದು ಒಮ್ಮೆ ದುಃಖಿಸುತ್ತಿದ್ದಳು. ಹೀಗಿರಲು ಅವಳಿಗೆ ರೋಗ ಬಂತು ಮೃತಳಾದಳು. ಆ ಮಗುವಿಗೆ ಯಾರ ಆಶ್ರಯವೂ ಇಲ್ಲದಂತಾಗಿ ಆ ಪಟ್ಟಣದ ಜನರ ಕರುಣೆಗೆ ಪಾತ್ರನಾದನು.


ಚೆಲ್ವಶಿಶು ಬೇದಿಯೊಳ್ ಬಂದು ದೇಸಿಗನಾಗಿ 

ನಿಲ್ವಿನಂ ಕಂಡ ಕಂಡಬಲೆಯರ್ ಕರೆಕರೆದು 

ಮೆಲ್ವ ತನಿವಣ್ಗಳಂ ಕಜ್ಜಾಯ ಸಕ್ಕರೆಗ ಳಂ ಕುಡುವರೆತ್ಯಿಕೊಂಡು 

ಸೊಲ್ವ ಮಾತುಗಳನಾಲಿಸಿ ಮುದ್ದಿಸುವರೀವ 

ರೊಲ್ವುದಂ ಮಜ್ಜನಂಗೈಸಿ ಮಡಿಯಂ ಪೊದಿಸಿ 

ಮೆಲ್ವಾಸಿನೊಳ್ ಮಲಗಿಸುವರಳ್ತಿಯಿಂದೊಸೆದು ತಂತಮ್ಮ ಮಕ್ಕಳೊಡನೆ ||೨೦|| 


ಆ ಮಗುವು ಅನಾಥನಾಗಿ ಬಂದು ಬೀದಿಯಲ್ಲಿ ಕೇಳುವವರಿಲ್ಲದೆ ನಿಲ್ಲುವುದನ್ನು ನೋಡಿದ ಆ ಊರ ಸ್ತ್ರೀಯರು ಅವನನ್ನು ಕರೆದು ತಿನ್ನಲು ಒಳ್ಳೆಯ ಹಣ್ಣು ಕಜ್ಜಾಯ ಸಕ್ಕರೆಗಳನ್ನು ಕೋಡುತ್ತಿದ್ದರು. ಆ ಮಗುವನ್ನು ಎತ್ತಿಕೊಂಡು ಅದರ ಮಾತುಗಳನ್ನು ಕೇಳಿ ಮುದ್ದಿಸುತ್ತಿದ್ದರು. ಪ್ರೀತಿಯಿಂದ ತಮ್ಮಲ್ಲಿದ್ದುದನ್ನು ಕೋಡುವರು. ಅದಕ್ಕೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ, ತಮ್ಮ ಮಕ್ಕಳೊಡನೆ ಮೆತ್ತನೆ ಹಾಸಿಗೆಯಲ್ಲಿ ಮಲಗಿಸುತ್ತಿದ್ದರು. 


ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ 

ತಿರುಗುತಿಹ ಬಾಲಕನ ರೂಪಮಂ ಕಂಡು ಕರೆ 

ಕರೆದುಭವನಂಗಳ್ಗೆ ಕೊಂಡೊಯು ಗಣಿಕೆಯರ್ ತಮತಮಗೆ ಮೋಹದಿಂದೆ 

ಸರಸ ಪರಿಮಳ ಸುಗಂಧಂಗಳಂ ತೀಡಿ ಕ 

ತ್ತುರಿಯತಿಲಕವನಿಟ್ಟು ಕಂಮಲರ್ ಮುಡಿಸಿ ಕ 

ಪ್ಪುರ ವೀಳೆಯಂಗೊಟ್ಟು ಮಡಿತೊಡಿಗೆಗಳಿನೈದಿ ಸಿಂಗರಿಸಿ  ಕಳುಹುತಿಹರು ||೨೧||


ಪರರ ಪಾಲನೆಗೆ ಒಳಗಾಗಿ ಆ ನಗರದ ಬೀದಿಗಳಲ್ಲಿ ಅಲೆಯುತ್ತಿದ್ದ ಆ ಮುದ್ದಾದ ಮಗುವಿನ ಸ್ಫುರದ್ರೂಪವನ್ನು ಕಂಡು ವೇಶ್ಯೆಯರು ಮೋಹದಿಂದ ಎತ್ತಿಕೊಂಡು ಹೋಗಿ ತಮ್ಮ ಮನೆಯಲ್ಲಿ ಅದಕ್ಕೆ ಸುಗಂಧವನ್ನು ಹಚ್ಚಿ, ಕಸ್ತೂರಿ ತಿಲಕವನ್ನಿಟ್ಟು ಒಳ್ಳೆಯ ಹೂವನ್ನು ಮುಡಿಸಿ, ಕರ್ಪೂರ ವೀಳೆಯವನ್ನು ಕೊಟ್ಟು, ಮೈಯಲ್ಲಾಸಿಂಗರಿಸಿ ಕಳಿಸುತ್ತಿದ್ದರು. 


ಆಡುವೆಳೆಮಕ್ಕಳೊಡನಾಡುವಂ ಲೀಲೆ ಮಿಗೆ 

ನೋಡುವಚ್ಚರಿಗಳಂ ನೋಡುವಂ ಬಾಲಕರ 

ಕೂಡೆ ಮನೆಮನೆಗಳೊಳಗಾಡುತಿಹನೆಲ್ಲರ್ಗೆ ಮುದ್ದಾಗಿ ಮೋಹಿಸುವನು 

ನೋಡುವರ ಪಾಡುವರನಾಡೆ ಸಾಧನೆಗಳಂ 

ಮಾಡುವರನರ್ಥಿಯಿಂ ಬೇಡುವರ ನೆರವಿಯೊಳ್ 

ಕರೀಡಿಸುವನಾಪುರದ ರೂಢಿಸಿದ ಬೀದಿಯೊಳ್ ಪಸುಳೆ ಪರಪುಟ್ಟನಾಗಿ ||೨೨||


ಅವನು ಆಡುವ ಮಕ್ಕಳೊಡನೆ ಆಡುತ್ತಿದ್ದನು. ಹೊಸ ಆಶ್ಚರ್ಯಕರ ಸಂಗತಿಗಳನ್ನು ನೋಡುತ್ತಿದ್ದನು. ಜೊತೆಯ ಬಾಲಕರೋಡನೆ ಅವರ ಮನೆಗಳಿಗೆ ಹೋಗಿ ಇರುತ್ತಿದ್ದನು. ಕಂಡವರೆಲ್ಲರೂ ಅವನ ಮುದ್ದನ್ನು ನೋಡಿ ಮೋಹಿಸುತ್ತಿದ್ದರು. ಹಾಡುವವರ, ನೋಡುವವರ, ಕೆಲಸ ಮಾಡುವವರ ಗುಂಪಿನಲ್ಲಿ ಆಡುತ್ತಾ ಆ ನಗರದ ಎಲ್ಲ ಕಡೆಗಳಲ್ಲೂ ಆಡುತ್ತಿದ್ದನು. 


ಬಟ್ಟೆಯೊಳ್ ಪುಣ್ಯವಶದಿಂದರ್ಭಕನ ಕಣ್ಗೆ 

ಪುಟ್ಟ ಸಾಲಗ್ರಾಮದದೊಂದು ರಮಣೀಯ ಶಿಲೆ 

ಕಟ್ಟೆಸಕದಿಂದೆ ಕಾಣಿಸಲದಂ ತಾನೆತ್ತಿಕೊಂಡು ಕೆಳೆಯರ್ಗೆ ತೋರಿ 

ಬಟ್ಟಗಲ್ಲಿಂತು ವರ್ತುಳದಿಂದೆ ಚೆಲ್ವಾಗಿ 

ಪುಟ್ಟುವುದೆ ಪೊಸತೆಂದು ಪಿಡಿದಾಡುತೊಡನೆ ಬೈ 

ತಿಟ್ಟುಕೊಂಬಂ ಬಾಯೊಳನವರತಮಿರಿಸಲ್ಕೆ ತನಗೆ ಮನೆಯಿಲ್ಲವಾಗಿ ||೨೩||


ಪುಣ್ಯವಶದಿಂದ ಆ ಬಾಲಚನಿಗೆ ದಾರಿಯಲ್ಲಿ ಒಂದು ಪುಟ್ಟ ಸಾಲಿಗ್ರಾಮ ಶಿಲೆಯು ಸಿಕ್ಕಿತು. ಅವನು ಅದನ್ನೆತ್ತಿಕೊಂಡು ಗೆಳೆಯರಿಗೆ ತೋರಿಸಿ ಈ ಕಲ್ಲು ಹೀಗೆ ದುಂಡಗಿರುವುದೇ ಹೊಸದಲ್ಲವೇ ಎಂದು ಹೇಳಿ, ಅದರಿಂದ ಆಟವಾಡುತ್ತಾ, ಅದನ್ನಿಟ್ಟುಕೊಳ್ಳಲು ಮನೆಯೂ ಜಾಗವೂ ಇಲ್ಲದ್ದರಿಂದ ಬಾಯಲ್ಲಿಯೇ ಇಟ್ಟುಕೊಳ್ಳುತ್ತದ್ದನು.


ತೊಳಪ ಸಾಲಗ್ರಾಮದುಪಲಮಂ ಬಾಲಕಂ 

ಕೆಳೆಮಕ್ಕಳೊಡನಾಟದಶ್ಮಗೋಳಕಮೆಂದು 

ತಿಳಿದಣ್ಣೆ ಕಲ್ಲೊಡ್ಡಿಗಳನಾಡುತದರಿಂದೆ ಗೆಲ್ ದೆಲ್ಲರಂ ಜರೆಯುತ 

ಕಳಕಳಿಸಿ ನಗುತತಿಸ್ನೇಹದದಿಂ ಕ್ರೀಡೆಯಂ 

ತಳೆದಾಗಳುಣಿಸುಗಳನುಂಬಲ್ಲಿ  ತನ್ನ ಕೈ 

ದಳಿಕೆ ತಂದುಳಿದ ಪೊಳಿನೊಳಾವಗಂ ಬಾಯೊಳಿರಿಸಿಕೊಂಡಿರುತಿರ್ಪನು ||೨೪||


ಆ ಸಾಲಿಗ್ರಾಮ ಶಿಲೆಯನ್ನು ಆಡುವ ಗೋಲಿ ಕಲ್ಲೆಂದು ಆ ಬಾಲಕನು ಭಾವಿಸಿ, ಗೋಲಿ ಕಲ್ಲುಗಳನ್ನು ಒಡ್ಡಿ ಆಡುವ ಆಟದಲ್ಲಿ ಎಲ್ಲರನ್ನೂ ಗೆದ್ದು ಅವರನ್ನು ಜರೆದು, ಮರುಕ್ಷಣದಲ್ಲೇ ಅತಿ ಸ್ನೇಹವನ್ನು ತೋರಿಸಿ, ಊಟಮಾಡುವಾಗ ಅದನ್ನು ಕೈಯಲ್ಲಿಟ್ಟುಕೊಂಡು ಉಳಿದಂತೆ ಅದನ್ನು ಬಾಯಲ್ಲಿಯೇ ಇಟ್ಟುಕೊಳ್ಳುತ್ತಿದ್ದನು. 


ಅಲ್ಲಿ ಕೆಳೆಯರೊಳಾಡುತಿರ್ದ ಶಿಶುವಂ ಕಂಡ 

ರುಲ್ಲಾಸದಿಂದೆಸೆವ ಭೂಸುರರ್ ಬಾಲಕನ 

ಸಲ್ಲಲಿತ ರಾಜಲಕ್ಷಣಕೆ ಬೆರಗಾದರವನಂಗಮಂ ನೋಡಿನೋಡಿ 

ನಿಲ್ಲದನುರಾಗದಿಂದಾರ ಸುತನೀ ತರುಣ 

ನೆಲ್ಲಿಂದ ಬಂದನೆಂದಾ ದುಷ್ಟಬುದ್ಧಿಯಂ 

ಮೆಲ್ಲನೆ ವಿಚಾರದಿಂಕೇಳ್ದೊಡಾ ವಿಪ್ರರ್ಗೆ ನಗುತಾತನಿಂತೆಂದನು ||೨೬||


ಹಾಗೆ ಬ್ರಾಹ್ಮಣರು, ಸಂತೋಷದಿಂದ ಕುಳಿತು ಅಲ್ಲಿ ಉಳಿದವರೊಡನೆ ಆಟವಾಡುತ್ತಿದ್ದ ಆ ಬಾಲಕನನ್ನು ನೋಡಿ ನೋಡಿ ಅವನ ರಾಜಲಕ್ಷಣಗಳನ್ನು ಗುರುತಿಸಿ ದುಷ್ಟಬುದ್ಧಿಯನ್ನು " ಈ ಬಾಲಕನಾರು ?" ಎಲ್ಲಿಂದ ಬಂದವನು? ಯಾರ ಮಗ" ಎಂದು ಮೆಲ್ಲನೆ ವಿಚಾರಿಸಿದರು. ಆಗ ದುಷ್ಟಬುದ್ಧಿಯು ನಗುತ್ತಾ ಹೇಳಿದನು. 


ಈಪುರದೊಳೆನಿತಿಲ್ಲನಾಥರಾಗಿಹ ಬಾಲ 

ರೀಪರಿಯೊಳೆತ್ತಣವ ನಾರಸುತನೆಂದರಿಯೆ 

ವೀ ಪಸುಳೆಯಂ ರಾಜಕಾರ್ಯದೊಳಗಿಹೆವಿದರ ಚಿಂತೆ ನಮಗೇತಕೆನಲು 

ಆ ಪಾರ್ವರೆಂದಿರ್ದೊಡಂ ಚಾರುಲಕ್ಷಣದೊ 

ಳೀ ಪೊಳಲ್ಗಗೀ ಕುಂತಳಾಧೀಶನಾಳ್ವ ನ 

ಮ್ಮೀ ಪೊಡವಿಗೊಡೆಯನಹನೀತನಂ ನೀನಿರಿಸಿಕೊಂಡು ರಕ್ಷಿಪುದೆಷಂದರು ||೨೭|


ದುಷ್ಟಬುದ್ಧಿ : ಇಂತಹ ಅನಾಥಬಾಲಕರು ಈ ಪಟ್ಟಣದಲ್ಲಿ ಎಷ್ಟು ಜನರಿಲ್ಲ? ಎಲ್ಲಿಂದ ಬಂದ, ಯಾರ ಮಗ, ಎಂದು ನನಗೆ ತಿಳಿಯದು. ನನಗೋ ರಾಜಕಾರ್ಯದ ಗಡಿಬಿಡಿ. ಈ ಚಿಂತೆ ನಮಗೇಕೆ? 

ಬ್ರಾಹ್ಮಣರು: ಈ ಹುಡುಗನಿಗಿರುವ ಸುಂದರವಾದ ಲಕ್ಷಣಗಳನ್ನು ಗಮನಿಸಿದರೆ, ಕುಂತಳದರಸನು ಆಳುವ ನಮ್ಮೀನಾಡಿಗೆ ಎಂದಿದ್ದರೂ ರಾಜನಾಗುತ್ತಾನೆ. ಆದುದರಿಂದ ನೀನು ಇವನನ್ನು ಇಟ್ಟುಕೊಂಡು ರಕ್ಷಿಸು. 


ಕ್ರೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗ 

ಭೀರ ನಿರ್ಮಲ ಜಲದೊಳೆಸೆವಂತೆ ಮನದೊಳ್ ಕ 

ಠೋರತರ ಭಾವಮಂ ತಳೆದು ಬಹಿರಂಗದೊಳ್ ವಿನಯಮುಳ್ಳಾತನಾಗಿ 

ಚಾರು ಲಕ್ಷಣದ ಶಿಶುವಂ ನೋಡಿ ಧರೆಯ ಬೃಂ 

ದಾರಕರ ನುಡಿಗೊಪ್ಪಿದವೊಲಿರ್ದು ಬಳಿಕ ಸ 

ತ್ಕಾರದಿಂದಾ ವಿಪ್ರರಂ ಕಳುಹಿದಂ ದುಷ್ಟಬುದ್ಧಿ ನಿಜಭವನದಿಂದೆ ||೨೮||


ಈ ಮಾತುಗಳನ್ನು ಕೇಳಿ ದುಷ್ಟಬುದ್ಧಿಯ ಮನಸ್ಸಿನಲ್ಲಿ ಬಾಲಕನನ್ನು ಕುರಿತು ಕಠೋರತರ ಭಾವವುಂಟಾಯಿತು. ಕ್ರೂರವಾದ ಮೊಸಳೆಯಿರುವ ಮಡುವು, ಗಂಭೀರವಾಗಿ ನಿರ್ಮಲವಾದ ನೀರನ್ನೊಳಗೊಂಡಿರುವಂತೆ, ಅವನು ಬಹಿರಟಗದಲ್ಲಿ ವಿನಯವನ್ನು ತಾಳಿ, ಆ ಮಗುವನ್ನು ನೋಡಿ, ಬ್ರಾಹ್ಮಣರ ಮಾತಿಗೆ ಒಪ್ಪಿಗೆಯನ್ನು ಸೂಚಿಸಿ ಅವರನ್ನು ತನ್ನ ಮನೆಯಿಂದ ಕಳುಹಿಸಿದನು. 


ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯಮೆನ 

ಗೇಕಾಧಿಪತ್ಯಮಾಗಿರ್ದಪುದು ಮುಂದಿವಂ 

ಭೂಕಾಂತನಾದಪಂಗಡ ವಿಪ್ರರೆಂದ ನುಡಿ ತಪ್ಪದೆನ್ನಾತ್ಮಜರ್ಗೆ

ಬಕಾದ ಸಂಪದಂ ಬಯಲಾಗಿ ಪೋಪುದೆಂ

ದಾ ಕುಮತಿ ಬೇರೊಂದುಪಾಯಮಂ ಚಿಂತಿಸಿ ಭ 

ಯಾಕಾರದೊಡಲ ಚಂಡಾಲರಂ ಕರೆಸಿ ಬೆಸಸಿದನಾರುಮರಿಯದಂತೆ ||೨೯||


ದುಷ್ಟಬುದ್ಧಿಯು ಹೀಗೆಂದು ಮನದಲ್ಲಿ ಚಿಂತಿಸಿದನು. ಈ ಕುಂತಳದ ರಾಜನಿಗೆ ಮಕ್ಕಳಿಲ್ಲ. ನನಗೆ ಈ ರಾಜ್ಯದ ಏಕಾದಿಪತ್ಯವು ದೊರಕುತ್ತದೆ ಎಂದುಕೊಂಡಿದ್ದೆ . ಬ್ರಾಹ್ಮಣರು ಈ ಮಗುವು ಮುಂದೆ ರಾಜನಾಗುತ್ತಾನೆಂದು ಹೇಳುತ್ತಾರೆ. ಅವರ ಮಾತು ತಪ್ಪುವುದಿಲ್ಲ . ನನ್ನ ಮಕ್ಕಳಿಗೆ ಸೇರಬೇಕಾದ ರಾಜ್ಯ ಕೈತಪ್ಪಿ ಹೋಗುತ್ತದೆ. ಆದುದರಿಂದ ಒಂದು ಉಪಾಯವನ್ನು ಮಾಡುತ್ತೇನೆ. ಹೀಗೆಂದು ಯೋಚಿಸಿ ದುಷ್ಟಬುದ್ಧಿಯು ಯಾರಿಗೂ ತಿಳಿಯದಂತೆ ಭಯಾಕಾರರಾದ ಚಾಂಡಾಲರನ್ನು ಕರೆಕಳುಹಿಸಿದನು.


ಕಾನನಾಂತರದದೊಳೀ ತರಳನಂ ಕೊಂದು ನೀ 

ವೇನಾದೊಡಂ ಕುರುಪುತಂದೆನಗೆ ತೋರ್ಪುದೆಂ 

ದಾ ನರೇಂದ್ರನ ಮಂತ್ರಿ ಬೆಸಸಿದೊಡೆ ಪಶುಘಾತಕಿಗಳಾಡುತಿಹ ಶಿಶುವನು 

ಹೀನ ದಯದಿಂದೆ ಪಿಡಿದೆತ್ತಿಕೊಂಡೊಯ್ದರ್ ಭ 

ಯಾನಕದೊಳಂದು ಕೊಲೆಗೆಳಸಿ ಪ್ರಹ್ಲಾದನಂ

ದಾನವೇಶ್ವರನಾಜ್ಞಯಿಂ ಕಾಳರಕ್ಕಸರ್ ಬಂದು ಕೈದುಡುಕಿದಂತೆ ||೩೦||


ದುಷ್ಟಬುದ್ಧಿಯು ಅವರಿಗೆ " ಈ ಬಾಲಕನನ್ನು ಕಾಡಿನೊಳಕ್ಕೆ ಕರೆದುಕೊಂಡು ಹೋಗಿ ಕೊಂದು, ಏನಾದರೂ ಗುರುತನ್ನು ತಂದು ತೋರಿಸಬೇಕು" ಎಂದು ಆಜ್ಞೆಯನ್ನು ಮಾಡಲು, ಆ ಪಶುಘಾತಕಿಗಳು ಆಡುತ್ತಿದ್ದ ಆ ಹುಡುಗನನ್ನು ದಯೆಯಿಲ್ಲದೆ ಎತ್ತಿಕೊಂಡು ಹೋದರು. ಹಿಂದೆ ಹಿರಣ್ಯ ಕಶಿಪುವಿನ ಆಜ್ಞೆಯಂತೆ ಕಾಳರಾಕ್ಷಸರು ಪ್ರಹ್ಲಾದನನ್ನು ಎತ್ತಿಕೊಂಡು ಹೋದಂತೆ ಆಯಿತು. 


ಪಾತಕಿಗಳೊಡಲೊಳಿಹ ಪರಮಾತ್ಮನಂತೆ ಯಮ 

ದೂತರೆಳೆತಂದಜಾಮಿಳನಂತೆ ಕಾಕ ಸಂ 

ಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ 

ಶೀತಲ ಮರೀಚಿ ಲಾಂಛನದಂತೆ ಬಹಳ ಕೋ 

ಪಾತಿಶಯದೊಳಗಿಹ ವಿವೇಕದಂತಾ ಪಶು 

ಘಾತಕಿಗಳೆತ್ತಿಕೊಂಡೊಯ್ವ ಬಾಲಕನಿರ್ದನವರೆಡೆಯೊಳಂಜುತಳುತೆ ||೩೧||


ಚಂಡಾಲರು ಎತ್ತಿಕೊಂಡು ಹೋಗುವ ಆ ಬಾಲಕನು, ಪಾಪಿಗಳಂತರಂಗದಲ್ಲಿರುವ ಪರಮಾತ್ಮನಂತೆ, ಯಮದೂತರು ಎತ್ತಿಕೊಂಡು ಹೋದ ಅಜಮಿಳನಂತೆ,ಕಾಗೆಗಳ ಗುಂಪಿನಲ್ಲಿರುವಕೋಗಿಲೆಯಂತೆ, ಕತ್ತಲೆಯ ನಡುವಿರುವ ಕ್ಷೀಣ ಚಂದ್ರನಂತೆ ಅತಿಶಯ ಕೋಪದ ನಡುವಿರುವ ವಿವೇಕದಂತೆ ತೋರುತ್ತಿದ್ದನು. ಅವನು ಹೆದರಿ ಅಳುತ್ತಿದ್ದನು. 


ಪೆಗಲೊಳೇರಿಸಿ ಬನಕೆ ಚಂಡಾಲರೊಯ್ಯುತಿರೆ 

ಮಿಗೆ ಬೆದರಿ ಭಯದಿಂದೆ ಬಾಲಕಂ ಬಾಯೊಳಾ 

ವಗಮಿರಿಸಿಕೊಂಡಿರ್ಪ ದಿವ್ಯ ಸಾಲಗ್ರಾಮದುಪಲದತಿಮಹಿಮೆಯಿಂದೆ 

ಬಗೆದೋರಲಾಗ ಮುರಹರ ಕೃಷ್ಣ ಕಮಲಾಕ್ಷ 

ಖಗರಾಜಗಮನ ಸಲಹೆಂದು ಚೀರಿದೊಡವನ 

ಮೊಗನೋಡಿ ಕರುಣದಿಂ ಕಟುಕರೆದೆ ಕರಗಿದುದದೆಂತೊ ಹರಿನಾಮದೇಳ್ಗೆ ||೩೨||


ಆ ಮಗುವನ್ನು ಚಂಡಾಲರುಹೆಗಲ ಮೇಲೆ ಹೊತ್ತುಕೊಂಡು ಒಯೂಯುತ್ತಿರುವಾಗ ಅದು ಬೆದರಿತು. ಬಾಯಲ್ಲಿದ್ದ ಸಾಲಿಗ್ರಾಮ ಶಿಲೆಯ ಮಹಿಮೆಯಿಂದ ಅದು ಮುರಹರ, ಕೃಷ್ಣ,  ಗರುಡವಾಹನ, ಕಮಲಾಕ್ಷ ಸಲಹು ಎಂದು ಜೋರಾಗಿ ಕೂಗಿಕೊಳ್ಳುತ್ತಿತ್ತು. ಚಂಡಾಲರು ಅವನ ಮುಖವನ್ನು ನೋಡಿದರು. ಕರುಣೆಯಿಂದ ಅವರ ಮನಸ್ಸು ಕರಗಿತೈ.ಹರಿನಾಮದ ಹಿರಿಮೆ ಎಷ್ಟಿದ್ದೀತು! 


ಒಯ್ದು ಪಸುಳೆಯನರಣ್ಯದೊಳಿರಿಸಿ ಮರುಗಿ ಬಿಸು 

ಸುಯ್ದು  ಪಶುಘಾತಕಿಗಳಾ ದುಷ್ಟಬುದ್ಸಧಿಯಂ 

ಬಯ್ದು ಶಿಶುವಧೆಗಳುಕಿ ನಿಂದು ನೋಡುತೆ ಕಂಡರರ್ಭಕನೆಡೆದ ಕಾಲೊಳು 

ಅಯ್ದಲ್ಲದೊಂದು ಬೆರಲಿರ್ಪುದಂ ಬಳಿಕದಂ 

ಕುಯ್ದು ಕುರುಪಂ ಕೊಂಡು ತಮ್ಮ ದಾತಾರನೆಡೆ 

ಗೆಯ್ದಿ ತೋರಿದೊಡವನವರ್ಗಳಂ ಮನ್ನಿಸಿ ಮಹೋತ್ಸವದೊಳಿರುತಿರ್ದನು ||೩೩||


ಪಶುಘಾತಕಿಗಳು ಆ ಮಗುವನ್ನೊಯ್ದು ಕಾಡಿನಲ್ಲಿ ಇಟ್ಟು ದುಃಖಿಸಿ, ನಿಟ್ಟುಸಿರಿಟ್ಟು, ಇಂತಹ ಕೆಲಸಕ್ಕೆ ತಮ್ಮನ್ನು ನೇಮಿಸಿದ ದುಷ್ಟಬುದ್ಧಿಯನ್ನು ಬಯ್ದರು. ಆ ಶಿಶುವನ್ನು ಕೊಲ್ಲಲು ಹಿಂಜರಿದರು.  ಆ ಮಗುವನ್ನೇ ಪರೀಕ್ಷಿಸಿದರು. ಆ ಹುಡುಗನ ಎಡಗಾಲಲ್ಲಿ ಆರನೆಯ ಬೆರಳೊಂದಿತ್ತು.ಅದನ್ನೇ ಕೊಯ್ದುಕೊಂಡು ಮಗುವನ್ನುಳಿಸಿ ತಮ್ಮೊಡೆಯನಾದ ದುಷ್ಟಬುದ್ಧಿಯ ಬಳಿಗೆ ಹೋಗಿ ಗುರುತನ್ನು ತೋರಿಸಿದರು. ಅವನು ಅವರನ್ನು ಮನ್ನಿಸಿ ಮಹಾ ಸಂತೋಷದಿಂದಿದ್ದನು. 


ಇತ್ತಲಾ ವಿಪಿನದೊಳ್ ತನ್ನ ವದನದೊಳಿರ್ದ 

ವೃತ್ತ ಸಾಲಗ್ರಾಮ ಶಿಲೆಯ ಪ್ರಭಾವದಿಂ 

ದುತ್ತಮಶ್ಲೋಕನಂ ಭಜಿಸೆ ದಯೆಗೈದೆಡದ ಕಾಲ ಷಷ್ಠಾಂಗುಳಿಯನು 

ಕತ್ತರಿಸಿಕೊಂಡುಳುಹಿ ಪೋದರಂತ್ಯರ್ ಬಳಿಕ 

ತುತ್ತಿಸಿದ ರಾಹು ತೊಲಗಿದ ಶಶಿವೊಲಿಲರ್ದ ನವ 

ನೆತ್ತಣದ ಬಾಧೆಗಳ್ ನರ ನಿನ್ನ ಮಿತ್ರನಂ ಮರೆವೊಕ್ಕ ಜೀವಿಗಳ್ಗೆ ||೩೪||


ತನ್ನ ಬಾಯಲ್ಲಿದ್ದ ಸಾಲಗ್ರಾಮ ಶಿಲೆಯ ಪ್ರಭಾವದಿಂದ ಆ ಹುಡುಗನು ಶ್ರೀಹರಿಯನ್ನು ಸ್ಮರಿಸಲು ಘಾತಕರು ಅವನ ಕಾಲಿನ ಆರನೆಯ ಬೆರಳನ್ನುಕೊಯ್ದುಕೊಂಡು ಹೋದರು. ಆ ಬಾಲಕನು ರಾಹು ತೊಲಗಿದ ( ಗ್ರಹಣ ಬಿಟ್ಟ ) ಚಂದ್ರನಂತಿದ್ದನು. ಅರ್ಜುನ, ನಿನ್ನ ಸ್ನೇಹಿತನನ್ನು ಮರೆಹೊಕ್ಕ ಜೀವಿಗಳಿಗೆ ಬಾಧೆಯೆಲ್ಲಿಯದು ?


ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆ 

ಪಸುಳೆ ಹರಿಹರಿಯೆಂದೊರಲ್ದಳುತಿರಲ್ ಕಣ್ಣೊ 

ಳೊಸರ್ವ ಬಾಷ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡು ಶೋಕದಿಂದೆ 

ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ 

ರಿಸುತಿರ್ದುವಾ ಶಿಶುವನೆಂದೊಡೆಲೆ ಪಾರ್ಥ ಕೇಳ್ 

ವಸುಮತಿಯೊಳಾರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ ||೩೫||


ಬೆರಳನ್ನು ಕೊಯ್ದ ಗಾಯದಿಂದ ರಕ್ತವು ಬಸಿಯುತ್ತಿತ್ತು. ಅಸಾಧ್ಯವಾದ ವೇದನೆಯಾಗುತ್ತಿತ್ತು. ಮಗುವು ಹರಿ ಹರಿ ಎಂದು ಒರಲಿ ಅಳುತ್ತಿತ್ತು. ಕಣ್ಣಲಿಲಿ ನೀರು ಸುರಿಯುತ್ತಿತ್ತು. ಅದನ್ನು ನೋಡಿದ ಕಾಡಿನ ಮೃಗ ಪಕ್ಷಿಗಳು ನೊಂದು ಶೋಕದಿಂದ ಹಸಿವು ನೀರಡಿಕೇಗಳನ್ನುಮರೆತು ಅಲ್ಲಿ ನಿಂತು ಮಗುವನ್ನುಪಚರಿಸುತ್ತಿದ್ದವು. ಎಂದ ಮೇಲೆ ಭೂಮಿಯಲ್ಲಿ ಆಪತ್ತಿನಲ್ಲಿ ದುಃಖಿಸುವವರನ್ನು ನೋಡಿ ಮರುಗದವರು ಪಾಪಿಯಲ್ಲವೇ ! 


ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿ 

ಲೆರಕೆಯಿಂ ಬೀಸಿ ಬಿಜ್ಜಣವಿಕ್ಕಿತಂಚೆ ತುಂ 

ತುರನುದುರ್ಚಿತುಸಾರಸಂ ಸಲಿಲದೊಳ್ ನೆನೆವ ಪಕ್ಕಂಗಳಂ ಬಿದಿರ್ಚಿ 

ಮರುಗಿ ಮೆಲ್ನುದಿಯೊಳುಪಚರಿಸಿದುವು ಗಿಳಿಗಳ 

ಕ್ಕರೊಳಳಿಗಳರ್ಭಕನ ರೋದನದ ಕೂಡಳುವ 

ತೆರದೊಳ್ ಮೊರೆದುವಲ್ಲಿ ಕರುಬರಿದ್ಠದೂರಿಂದೆ ಕಾಡೊಳ್ಳಿತೆನಿಸುವಂತೆ ||೩೬||


ನವಿಲುಗಳು ಗರಿಗೆದರಿನಿಂತು ಆ ಬಾಲಕನಿಗೆ ಬಿಸಿಲು ಬೀಳದಂತೆ ಮಾಡಿದವು. ಹಂಸೆಗಳು ರೆಕ್ಕೆಯಿಂದ ಬೀಸಣಿಗೆ ಬೀಸಿದವು. ಸಾರಸ ಪಕ್ಷಿಗಳು ನೀರಿನಲ್ಲಿ ಮುಳುಗಿ ತುಂತುರನ್ನು ಆ ಮಗುವಿನ ಮೇಲೆ ಚಿಮುಕಿಸಿದವು. ಗಿಳಿಗಳು ಮೃದುವಾದ ಮಾತುಗಳಿಂದುಪಚರಿಸಿದವು. ಅಳುವ ಬಾಲಕನೊಡನೆ ತಾವೂ ಅಳುತ್ತಿವೆಯೋ ಎಂಬಂತೆ ದುಂಬಿಗಳು ಝೇಂಕಾರಮಾಡಿದವು. ಕರುಬರು ( ಹೊಟ್ಟೆ ಕಿಚ್ಚಿನವರು ) ಇರುವ ಊರಿಗಿಂತ, ಕಾಡೇ ಲೇಸು ! 


ನಿಲ್ಲದೆ ನರಳ್ವ ಪಸುಳೆಯ ನಿರ್ಮಲಾಸ್ಯಮಂ 

ಪುಲ್ಲೆಗಳ್ ಕಂಡು ಕಾನನಕೆ ಕಾಮಿಸಿ ತಮ್ಮ 

ನಲ್ಲನೈತರಲುಮ್ಮಳಿಸಿ ವಾಹನವನರಸ ಬಂದ ಪೂರ್ಣೇಂದುವೆಂದು 

ವಲ್ಲಭ ಸ್ಮಾಮಿಯಂ ಬೇಡಿಕೊಳುತಿರ್ಪುವೆನೆ 

ಮೆಲ್ಲಮೆಲ್ಲನೆ ಪೊರೆಗೆ ಪೊದ್ದಿ ಬಾಲಕನಂಘ್ರಿ 

ಪಲ್ಲವದ ರುಧಿರಮಂ ಕುಡಿ ನಾಲಗೆಗಳಿಂದೆ ಮಿಗೆ ಲೇಹನಂಗೈದುವು ||೩೭||


ಎಡೆಬಿಡದೆ ಅಳುವ ಮಗುವಿನ ನಿರ್ಮಲವಾದ ಮುಖವನ್ನು ನೋಡಿ, ಜಿಂಕೆಗಳು ತಮ್ಮನ್ನು ಕಾಮಿಸಿ, ಕಾಡಿಗೆ ಬರಲು, ತನ್ನ ವಾಹನವನ್ನು ಹುಡುಕಿಕೊಂಡು ಚಂದ್ರನು ಬಂದಿರುವನೋ ಎಂದು ಭ್ರಮಿಸಿ, ಆ ಬಾಲಕನ ಬಳಿಗ ಬಂದು ಅವನ ಬೆರಳಿನಿಂದ ಒಸರುತ್ತಿದ್ದ ರಕ್ತವನ್ನು ಮೆಲ್ಲಮೆಲ್ಲನೆ ನೆಕ್ಕುತ್ತಿದ್ದವು. 


ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು 

ಗೂಗೆಗಳ ಕಣ್ದೊಳಸು ಬಕನ ಮೌನದ ಬೆರಗು 

ನಾಗದ ನಿರಾಹಾರಮಳಿಗಳ ಪರಿಭ್ರಮಣಮಿಭದ ಸೀತ್ಕಾರಂಗಳು 

ಪೋಗಲಡಿಯಿಡಲರಿಯದಾರೈವ ಜನಮಿಲ್ಲ 

ದಾಗಹನ ಗಹ್ವರದೊಳಳುವಶಿಶುವಂ ನೋಡ 

ಲಾಗಿ ಬಂದೆಡೆಗೊಂಡ ದುಃಖಾತಿರೇಕಮೆಂಬಂತೆ ಕಾಣಿಸುತಿರ್ದುದು ||೩೮||


ಕೋಗಿಲೆಯ ದೀರ್ಘಾಲಾಪ, ಪಾರಿವಾಳಗಳ ( ಕಲ್ಲನ್ನು ತಿನ್ನುವುದು )ಗುಟುರು,  ಹಾವಿನ ನಿರಾಹಾರ, ಕೊಕ್ಕರೆಯ ಮೌನ, ಗೂಗೆಯ ಕುರುಡು, ದುಂಬಿಗಳ ಸುತ್ತಾಟ, ಆನೆಯ ಕೂಗು ಇವೆಲ್ಲವೂ ಕಾಲಿಡಲು ಅಸಾಧ್ಯವಾದ, ಜನರಿಲ್ಲದ ದಟ್ಟವಾದ ಆ ಕಾಡಿನಲ್ಲಿ ಬಾಲಕನನ್ನು ನೋಡಲು ಅತಿಶಯ ದುಃಖವು ಬಂದಿರುವುದೇನೋ ಎಂಬಂತಿದ್ದವು.


ಬಾಲಕನ ರೋದನದ ಕೂಡೆ ಬನದೇವಿಯರ್ 

ಗಾಳಿ ತೀಡಿದೊಡೆ ಭೋರೆಂಬ ತರುಲತೆಗಳಿಂ 

ಗೋಳಿಟ್ಟರಗ್ನಿ ಜಲ ಭೂ ಗಗನ ವಾಯು ರವಿಶಶಿಗಳ್ ದೆಸೆವೆಣ್ಗಳು 

ಹೇಳಲೇನಡವಿಯ ಚರಾಚರಂಗಳ ಜೀವ 

ಜಾಲಂಗಳುರೆ ಮರುಗುತಿರ್ದುವನಿತರೊಳೊಂದು  

ಕೋಲಾಹಲದ ಘೋಷಮೆಲ್ಲಿಯುಂ ಕಿವಿಗಿಡಿದುದಾ ಮಹಾ ಕಾನನದೊಳು ||೩೯||


ಬಾಲಕನೊಡನೆ, ವನದೇವಿಯರು ಗಾಳಿ ಬೀಸಲು ಭೋರೆಂದು ಸದ್ದು ಮಾಡುವ ಮರಗಿಡ ಬಳ್ಳಿಗಳೊಡನೆ ಗೋಳಾಡಿದರು. ಅಗ್ನಿ, ಜಲ, ಭೂಮಿ, ಗಗನ ವಾಯುಗಳೆಂಬ ಪಂಚಭೂತಗಳೂ ಗೋಳಾಡಿದವು. ಸೂರ್ಯ ಚಂದ್ರರೂ,

ಅಷ್ಟ ದಿಗ್ವಧುಗಳೂ ರೋದಿಸಿದರು. ಹೆಚ್ಚೇನು ಹೇಳುವುದು, ಕಾಡಿನ ಚರಾಚರಗಳ ( ಮೃಗ, ಪಕ್ಷಿ, ಕ್ರಿಮಿಕೀಟಗಳೂ, ಗಿಡ,ಮರ, ಬಳ್ಳಿಗಳೂ ಪೊದೆಗಳೂ ) ಜೀವಜಾಲಗಳು ಮರುಗುತ್ತಿದ್ದವು. ಅಷ್ಟರಲ್ಲಿ ಆ ಕಾಡಿನಲ್ಲಿ ಕೋಲಾಹಲದ ಸದ್ದೊಂದು ಕಿವಿಗೆ ಕೇಳಿ ಬಂತು. 

ದಿನಪನುಪಟಳದಿಂದೆ ನೆಲೆಗೆಟ್ಟು  ಪಲವು ರೂ 

ಪನೆ ತಾಳ್ದು ವನವಾಸದುರುತಪದ ಸಿದ್ಧಿಯಿಂ 

ಘನತೆಯಂ ಪಡೆದು ಮಿಗೆ ಪಗೆಯಾದ ಪಗಲಂ ತೊಲಗಿಪಂಧಕಾರಮೆನಲು 

ಅನುಪಮದ ಕಾರೊಡಲ ಬೇಡವಡೆ ಬೇಂಟೆಗೆ ವಿ 

ಪಿನದೊಳೈತರುತಿರ್ದುದಬ್ಬರದ ಬೊಬ್ಬೆಗಳ 

ನಿನದದಿಂ ಜೀವಿಗಳ ಕೊಲೆಗೆಳಸಿದಂತಕನ ದೂತ ಸಂಘಾತದಂತೆ ||೪೦||


ಸೂರ್ಯನ ಕಾಟದಿಂದ ಇದ್ದ ನೆಲೆಯನ್ನು ಕಳೆದುಕೊಂಡು, ಹಲವು ಆಕಾರಗಳನ್ನು ತಾಳಿ, ಕಾಡಿನಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದು ತನ್ನ ಶತ್ರುವಾದ ಹಗಲನ್ನು ತೊಲಗಿಸುವ ಕತ್ತಲೋ ಎಂಬಂತೆ ಅನುಪಮವಾದ ಕಪ್ಪುದೇಹದ ಬೇಡರ ಪಡೆಯು ಅಬ್ಬರದ ಕೇಕೆಗಳನ್ನು ಹಾಕುತ್ತಾ ಬೇಟೆಗಾಗಿ ಪ್ರಾಣಿಹತ್ಯೆಗೆ ತೊಡಗಿದ ಯಮದೂತರ ಗುಂಪಿನಂತೆ ಆ ಕಾಡಿನಲ್ಲಿ ಬಂದಿತು.  


ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ 

ಹರಿಯನೇ ಜಪಿಸುತಳುತಿಹ ಬಾಲನಂ ಕಂಡು 

ಹರಿಯನಲ್ಲಿಯೆ ನಿಲಿಸಿ ನೋಡಿ ನಿಜ ಶಿರವನಲ್ಲಾಡಿ ತಾಂ ಮೃಗದ ಕೊಲೆಗೆ 

ಹರಿತಂದ ಪಾಪಮತಿ ಪುಣ್ಯಮೊದವಿಸಿತು ಸುವಿ 

ಹರಿಸುವೊಡೆ ಶಿವಶಿವಾ  ಪೊಸತೆಂದು ಹರ್ಷದ ಲ 

ಹರಿಯೊಳೋಲಾಡಿದಂ ಕಡವರವನೆಡಹಿ ಸಂಧಿಸಿದ ಕಡುಬಡವನಂತೆ ||೫೪||


ಹರಿಣವನ್ನು ( ಜಿಂಕೆಯನ್ನು ) ಬೆನ್ನು ಹತ್ತಿ ಬಂದ ಕುಳಿದಕನು ಹರಿನಾಮವನ್ನೇ ಜಪಿಸುತ್ತಿದ್ದ ಬಾಲಕನನ್ನು ಕಂಡು ಹರಿಯನ್ನು ( ಕುದುರೆಯನ್ನು ) ಅಲ್ಲಿಯೇ ನಿಲ್ಲಿಸಿ, ಬಾಲಕನನ್ನು ನೋಡಿ ತನ್ನ ತಲೆಯಲ್ಲಾಡಿಸಿ ತಾನು ಡಿಂಕೆಯ ಕೊಲೆಗೆ ಹರಿತಂದ ( ವೇಗವಾಗಿ ಬಂದ ) ಪಾಪವು ಅತಿಶಯ ಪುಣ್ಯದ ಫಲವನ್ನು ಕೊಟ್ಟಿತು. ಶಿವ ಶಿವಾ ಎಂದು ಹುದುಗಿಸಿಟ್ಟ ಹಣ ( ನಿಕ್ಷೇಪದ ) ಪಾತ್ತರೆಯನ್ನು ಎಡವಿದ ಬಡವನಂತೆ ಆನಂದದಲ್ಲಿ ವಿಹರಿಸಿದನು. 


ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರ 

ಸೆಳೆದು ಬಿಗಿಯಪ್ಪಿ ಕಂಬನಿದೊಡೆದು ಕೂಡೆ ಸ 

ಗ್ಗಳೆಯ ನೀರಿನಿಂದ ಕಾಲ್ದುದಿಯೊಳ್ ಬಸಿವ ನೆತ್ತರಂ ತೊಳೆದು ಮೋಹದಿಂದೆ 

ಗಳದೊಳುಬ್ಬುವ ಗದ್ಗದಂಗಳಂ ಸೈತಿಟ್ಟು 

ತಿಳಿಪಿ ಲಾಲಾಸಿದಂ ಕುಳಿಂದಕಂ ಸೌಭಾಗ್ಯ 

ನಿಳಯದರಕೆಯ ವಸುವನೊದವಿದಗ್ಗದ ಪುಣ್ಯದೊಡಲಸುವನಾ ಶಿಶುವನು ||೫೫||


ಕುಳಿಂದಕನು ಕುದುರೆಯನ್ನಿಳಿದು, ಮಗುವೆನ ಹತ್ತಿರಕ್ಕೆ ಹೋಗಿ,  ಅದರ ಮೈದಡವೆ, ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡು

ಅದರ ಕಣ್ಣೀರನೂನೊರಸಿ. ಚರ್ಮದ ಚೀಲದಲ್ಲಿದ್ದ ನೀರಿನಿಂದ ಎಡಗಾಲ ತುದಿಯಲ್ಲಿ ಒಸರುತ್ತಿದ್ದ ರಕ್ತವನ್ನು ತೊಳೆದು, ಮೋಹ (ಸಂತೋಷ ) ದಿಂದ ಮಗುವಿನ ಕಂಠದಲ್ಲಿ ಬರುತ್ತಿದ್ದ ಗದ್ಗದ ಧ್ವನಿಯನ್ನು ನಿಲ್ಲಿಸಿ, ಮೈಯನ್ನು ನೇವರಿಸಿ ( ಸೈತಿಟ್ಟು

ತನಗೆ ದೊರೆತ ಸೌಭಾಗ್ಯ ಭವನದ ನಿಧಿಯಂತಿದ್ದ ಪುಣ್ಯದ ಸಾಕಾರ ಮೂರ್ತಿಯಂತಿದ್ದ ಆ ಮಗುವನ್ನು ಲಾಲಿಸಿದನು. 


ಎಡಬಲದೊಳಿಹ ತನ್ನವರೊಳಾ ಕುಳಿಂದಕಂ 

ನುಡಿದನೀ ಬಾಲಕಂ ತನ್ನ ತಾಯ್ತಂದೆಗಳ

ನೊಡಹುಟ್ಟಿದವರ ಹಂಬಲಿಸದೆ ಮುರಾರಿಯಂ ನೆನೆವ ನದರಿಂದಿವಂಗೆ 

ಒಡೆಯನಚ್ಯುತನಾದ ಕಾರಣಂ ಮೃತನಾಗ

ದಡವಿಯೊಳ್ ಜೀವಿಸಿದನೆಲ್ಲರ್ಗೆ ತನುಜರಂ 

ಕುಡುವವಂ ಕೃಷ್ಣನೈಸಲೆ ತನಗೆ ಮಕ್ಕಳಿಲ್ಲೀತನೇ ಸುತನೆಂದನು ||೫೬||


ತನ್ನ ಪಕ್ಕದಲ್ಲಿದ್ದ ಪರಿಜನರನ್ನು ಕರೆದು ಕುಳಿಂದನು " ಈ ಬಾಲಕನು ತನ್ನ ತಂದೆ ತಾಯಿಗಳನ್ನು ಒಡಹೈಟ್ಟಿದವರನ್ನು ನೆನೆದು ಹಂಬಲಿಸದೆ ಶ್ರೀಹರಿಯನ್ನು ನೆನೆಯುತ್ತಿದ್ದಾನೆ. ಇವನಿಗೆ ಶ್ರೀಕೃಷ್ಣನೇ ಒಡೆಯ. ಆದುದರಿಂದ ಇವನು ಕಾಡಿನಲ್ಲಿ ಬದುಕಿ ಉಳಿದಿದ್ದಾನೆ. ಎಲ್ಲರಿಗೂ ಮಕ್ಕಳನ್ನು ಕೊಡುವವನು ಶ್ರೀಕೃಷ್ಣನೇ ಊಲ್ಲವೇ ! ನನಗೆ ಮಕ್ಕಳಿಲ್ಲ. ಆದುದರಿಂದ ಇವನೇ ನನ್ನ ಮಗ" ಎಂದನು. 


ಪತ್ತು ವಿಧಮುಂಟು ಸುತರದರೊಳೌರಸ ಪುತ್ರ 

ನುತ್ತಮಂ ಮೇಣಾತನಿಲ್ಲದೊಡೆ ಬಳಿಕಮೊಂ 

ಬತ್ತು ಬಗೆಯೊಳಗೊಂದು ತೆರದ ಮಗನಾದೊಡಂ ಬೇಕಲಾ ಮಾನವರ್ಗೆ 

ತತ್ತನಯರೊಳ್ ತನಗೆ ತಾನೆ ದೊರೆಕೊಂಡವಂ 

ದತ್ತನಂದನನಿವಂ ತನಗೆಂದವಂ ಮುದದೊ

ಳೆತ್ತಿಕೊಂಡಶ್ವವನಡರ್ದು ಪರಿಜನಸಹಿತ ನಿಜಪುರಕೆ ಬರುತಿರ್ದನು ||೫೭||


ಹತ್ತು ವಿಧವಾದ ಮಕ್ಕಳುಂಟು. ಅವರಲ್ಲಿ ತನ್ನ ಪತ್ನಿಯಲ್ಲಿ ಹುಟ್ಟಿದ ಔರಸ ಪುತ್ರನು ಶ್ರೇಷ್ಠ. ಅವನು ಇಲ್ಲದಿದ್ದರೆ ಉಳಿದ ಒಂಬತ್ತು ಬಗೆಯ ಮಕ್ಕಳಲ್ಲಿ ಒಬ್ಬನಾಗಬಹುದು. ಅವರಲ್ಲಿ ಇವನು ತಾನೇ ದೊರೆತ ಮಗ. ಎಂದು ಸಂತೋಷದಿಂದ ಆ ಮಗುವನ್ನೆತ್ತಿಕೊಂಡು ಕುದುರೆಯನ್ನ ಹತ್ತಿ ತನ್ನ ಪರಿವಾರದೊಡನೆ ತನ್ನ ರಾಜಧಾನಿ ಚಂದನಾವತಿಗೆ ಬಂದನು. " 


ಮೃಗಯಾ ವ್ಯಸನದಿಂದೆ ಕಾನನಕೆ, ತಾಂ ಕೃಷ್ಣ 

ಮೃಗದ ಕೂಡೈದಿದೊಡೆ ದೊರಕೊಂಡನೀ ಕೃಷ್ಣ

ಮೃಗ ಭಾವದರ್ಭಕಂ ಪಾಪಕೆಳಸಿದೊಡಾಯ್ತು ಪುಣ್ಯಮೆನುತಲ್ಲಿ ಮಡಿದ 

ಮೃಗಜಾತಿಗಳನವರ್ಗೆ ವೆಚ್ಚಿಸಿ ನೆರೆದ 

ಮೃಗಜೀವಿಗಳನೆಲ್ಲರಂ ಕಳುಹಿ ನಿಜಪುರಕೆ 

ಮೃಗಧರನೊಲೆಸೆವ ಶಿಶುವಂ ಕೊಂಡು ಪರಿಜನದೊಡನೆ ಬಂದನುತ್ಸವದೊಳು ||೫೮||


" ಬೇಟೆಗೆಂದು ನಾನು ಕಾಡಿಗೆ ಬಂದು ಜಿಂಕೆಯ ಬೆನ್ನ ಹಿಂದೆ ಹೋಗಲು, ಈ ಹುಲ್ಲೆಯ ಮರಿಯ ಭಾವವುಳ್ಳ ಈ ಬಾಲಕನು ಸಿಕ್ಕನು. ನಾನು ಹೋದದ್ದು ಪಾಪ ಕಾರ್ಯಕ್ಕೆ , ಸಿಕ್ಕಿದ್ದು ಪುಣ್ಯ " ಎಂದು ಚಿಂತಿಸಿ ಕುಳಿಂದನು ಬೇಟೆಯಲ್ಲಿ ಸತ್ತ ಪ್ರಾಣಿಗಳನ್ನು ಅವರವರಿಗೆ ಕೋಟ್ಟು, ಬೇಡರೆಲ್ಲರನ್ನು ಕಳಿಸಿ ಚಂದ್ರನಂತೆ ಸುಂದರನಾಗಿದ್ದ ಆ ಬಾಲಕನೊಡನೆ, ಪರಿವಾರ ಸಹಿತವಾಗಿ ಚಂದನಾವತಿಗೆ ಬಂದನು. 


ಮುಂದೆ ಪರಿತಂದು ಚರರರಿಪೆ ಸಿಂಗರಿಸಿದರ್ 

ಚಂದನಾವತಿಗೆ ಸಂಭ್ರಮದಿಂ ಕುಳಿಂದಕಂ 

ಬಂದು ನಿಜ ಭವನಮಂ ಪುಗಲಿದಿರ್ವಂದು ನಲಿದವನ ಸತಿ ಮೇಧಾವಿನಿ 

ಕಂದನಂ ತೆಗೆದೆತ್ತ್ತಿಕೊಳುತ ಬಿಗಿಯಪ್ಪಿ ಸಾ 

ನಂದದಿಂ ಪೊರೆಯೇರಿದಳ್ ತನ್ನ ಬಂಜೆತನ 

ಮಿಂದು ಪೋದುದು ಪುತ್ರವತಿಯಾದೆನೆನ್ನ ಪುಣ್ಯದ್ರುಮಂ ಫಲಿಸಿತೆಂದು ||೫೯||


ದೂತರು ಮೊದಲೇ ಬಂದು ಹೇಳಿದಂತೆ ಚಂದನಾವತಿಯನ್ನು ಶೃಂಗರಿಸಿದರು. ಕುಳಿಂದಕನು ಸಂಭ್ರಮದಿಂದ ತನ್ನ ಭವನವನ್ನು ಹೊಕ್ಕನು. ಅವನ ಪತ್ನಿ ಮೇಧಾವಿನಿಯು ನಲಿದು ಮಗುವನ್ನು ಎತ್ತಿಕೊಂಡು ಬಿಗಿದಪ್ಪಿ ಆನಂದೋತ್ಸಾಹದಿಂದ ಹಿಗ್ಗಿದಳು. " ನನ್ನ ಬಂಜೆತನವು ಈ ದಿನ ಹೋಯಿತು, ನನಗೆ ಮಗನು ಸಿಕ್ಕ, ನನ್ನ, ಪುಣ್ಯದ್ರುಮ(ಮರ )ದಲ್ಲಿ ಈಗ ಹಣ್ಣು ಬಿಟ್ಟಿತು ಎಂದಳು. 


ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ 

ಬತ್ತಿದ ಸರೋವರಕೆ ನವ ಜಲಮೊದವಿದಂತೆ 

ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತ ಭೂತಳದೊಳು 

ಮತ್ತೆ ಸಂತಾನಮಿಲ್ಲದ ಕುಳಿಂದನ ಬಾಳ್ಕೆ 

ಗುತ್ತಮ ಕುಮಾರನಾದಂ ಚಂದ್ರಹಾಸನೆನ 

ಲುತ್ತರೋತ್ತರಮಪ್ಪುದಚ್ಚರಿಯೆ ಸುರಪುರದ ಲಕ್ಸ್ಮೀವರನ ಭಕ್ತರು ||೬೩||


ಕತ್ತಲು ಕವಿದಿದ್ದ ಮನೆಗೆ ಮಣಿದೀಪವಾದಂತೆ, ( ಅದ ಎಣ್ಣೆ ಬತ್ತಿಗಳಿಲ್ಲದಿದ್ದರೂ ಬೆಳಗುತ್ತದೆ ) ಒಣಗಿದ ಸರೋವರಕ್ಕೆ ಹೊಸನೀರು ಬಂದಂತೆ, ವಿಸ್ತಾರವಾದ ಕಾವ್ಯಕ್ಕೆ ದೇವತಾಸ್ತುತಿಯು ಶೋಭಿಸುವಂತೆ, ಮಕ್ಕಳಿಲ್ಲದ ಕುಳಿಂದಕನ ಬಾಳಿಗೆ 

ಉತ್ತಮನಾದ ಚಂದ್ರಹಾಸನು ಮಗನಾದನು. ಎಂದ ಮೇಲೆ ದೇವಪುರದ ಲಕ್ಷ್ಮೀಕಾಂತ ಸ್ವಾಮಿಯ ಭಕ್ತರಿಗೆ ಉತ್ತರೋತ್ತರವಾದ ಸಮಸ್ತ ಸನ್ಮಂಗಳಗಳಾಗುವುದು ಆಶ್ಚರ್ಯವೇ !


ಇಪ್ಪತ್ತೊಂಭತ್ತನೆಯ ಸಂಧಿ 


ಸೂಚನೆ : 

ಮಂತ್ರಿ ಮತ್ಸರದಿಂದೆ ಮುಂದೆ ತಪ್ಪುವ ದೈವ 

ಯಂತ್ರಭೇದವನರಿಯದಿಂದುಹಾಸನ ಮೇಲೆ 

ತಂತ್ರಮಂ ಪಣ್ಣಿ ಕೊಲೆಸುವೆನೆಂದು ಕಳುಹಿದಂ ಕುಂತಳೇಂದ್ರನ ನಗರಿಗೆ॥ 


ಸೂಚನೆ : ಮುಂದೆ ದೈವೇಚ್ಛೆಯಿಂದಾಗುವ ಬದಲಾವಣೆಯನ್ನರಿಯದೆ ದುಷ್ಟಬುದ್ಧಿಯು ಚಂದ್ರಹಾಸನನ್ನು ಕೊಲ್ಲಲುತಂತ್ರವನ್ನು ಹೂಡಿ ಕುಂತಳಪುರಕ್ಕೆ ಕಳುಹಿಸಿದನು. 


ಆಲಿಸೆಲೆ ಫಲುಗುಣ ಕುಳಿಂದಕನ ಭವನದೊಳ್ 

ಬಾಲಕಂ ಪೆರ್ಚುವ ಸುಧಾಂಶುಕಳೆಯಿಂ ನಗುವ 

ಲೀಲೆಯಿಂ ಚಂದ್ರಹಾಸಂ ತಪ್ಪನೆಂಬಂತೆ ದಿನದಿನಕೆ ವರ್ಧಿಸುತಿರೆ 

ಮೇಲೆ ಮೇಲೆಸೆದುದಾ ಪೊಳಲ ಸಿರಿ ವಿಮಲ ಗುಣ 

ಶೀಲದಿಂ ಮೆರೆದುದೆಲ್ಲ ಜನಂ ಬಿಡದೆ ಕೊಡ

ವಾಲಂ ಕರೆದುವಾಕಳುತ್ತು ಬಿತ್ತದೆ ಬೆಳೆಯತೊಡಗಿತಿಳೆ ಮಳೆಗಳಿಂದೆ ||೨||


ಅರ್ಜುನನೇ ಕೇಳು,  ಕುಳಿಂದನ ಮನೆಯಲ್ಲಿ ವರ್ಧಿಸುವ ಚಂದ್ರಹಾಸನು ಚಂದ್ರನನ್ನು ಹಾಸ್ಯ ಮಾಡುವಂತೆ

(ಅವನಿಗಿಂತಲೂ ಹೆಚ್ಚು ಪ್ರಕೃಶಮಾನವಾಗಿ ) ಬೆಳೆಯುತ್ತಿದ್ದನು,ಅವನಿಂದ ಚಂದನಾವತಿಯಲ್ಲಿ ಐಶ್ವರ್ಯ,ಗುಣ,ಶೀಲಗಳು

ಹೆಚ್ಚುತ್ತಾ ಬಂದವೈ. ಜನರೆಲ್ಲರೂ ಸಂತೋಷ ಸುಖಗಳಿಂದ ವರ್ಧಿಸಿದರು.ಹಸುಗಳು ಕೊಡಹಾಲನ್ನು ಕರೆದವು. ಉತ್ತುಬಿತ್ತದೆ ಬೆಳೆಗಳು ಬೆಳೆದವು. ತಪ್ಪದೆ ಸುವೃಷ್ಟಿಯಾಗುತ್ತಿತ್ತು. 


ಸೂಚಿತದ ಪೂರ್ವಜನ್ಮದ ಪುಣ್ಯಫಲದಿಂದೆ 

ಯಾಚಿತದೊಳನುಪಮದ ಶಿಶು ನಿಧಾನಂ ತನಗೆ 

ಗೋಚರಿಸಿತೆಂದು ನಲಿದಾ ಕುಳಿದನುಮವನ ರಾಣಿಯುಂ ದಿನದಿನದೊಳು 

ಲೋಚನಂ ತಣಿಯೆ ನೋಡುತ ಹರ್ಷ ವಾರಿಧಿಯ 

ವೀಚಿಯೊಳ್ ಮುಳುಗಾಡಿ ಪುತ್ರವಾತ್ಸಲ್ಯದಿಂ 

ದಾ ಚಂದ್ರಹಾಸನಭ್ಯುದಯದೊಳ್ ಪೆರ್ಚಿದರನೇಕ ಸಂಪದಮೊದವಲು ||೩||


ಪೂರ್ವಪುಣ್ಯವನ್ನು ಸೂಚಿಸುವಂತೆ ಅಯಾಚಿತವಾಗಿ ( ಬೇಡದೆ ) ಶಿಶುವೆಂಬ ಧನವು ತನಗೆ ದೊರಕಿತೆಂದು ಕುಳಿಂದನೂ, ಅವನ ಪತ್ನಿ ಮೇಧಾವಿನಿಯೂ ಕಣ್ಣು ತಣಿಯುವಂತೆ ಚಂದ್ರಹಾಸನನ್ನು ನೋಡುತ್ತಾ ಹರ್ಷ ಸಮುದ್ರದ ತೆರೆಗಳಲ್ಲಿ ಮುಳುಗಿ ಏಳುತ್ತಾಪುತ್ರ ವಾತ್ಸಲ್ಯದಿಂದ ಅವನ್ನು ಪಾಲಿಸುತ್ತಾ , ಅನೇಕ ವಿಧವಾದ ಸಂಪತ್ತುಗಳು ಹೆಚ್ಚಲು, ಅಭ್ಯುದಯವನ್ನು ಹೊಂದಿದರು. 


ಲಕ್ಷಣದೊಳೆಸೆವ ಸುಕುಮಾರನಂ ನಗರಿಗ 

ಧ್ಯಕ್ಷನಾಗಿಹ ಕುಳಿಂದಂ ಕೆಲವು ದಿನದ ಮೇ 

ಲಕ್ಷರಾಭಯಾಸಕಿರಿಸಿದೊಡೆ ಹರಿಯೆಂಬೆರಡು ವರ್ಣಮಲ್ಲದೆ ಪೆರತನು 

ಅಕ್ಷಯಿಂದೀಕ್ಷಸದೆ ವಾಚಿಸದಿರಲ್ಕೆ ಗುರು 

ಶಿಕ್ಷಿಸಿ ಕನಲ್ದು ಬರೆಯೆಂದೊಡಂ ಕೇಳದಿರೆ 

ತತ್ಕ್ಷಣದೊಳಾತನೈತಂದವನ ತಾತಂಗದಂ ಪೇಳ್ದೊಡಿಂತೆಂದನು ||೪||


ಸುಲಕ್ಷಣಭರಿತನಾಗಿದ್ದ ಚಂದ್ರಹಾಸನನ್ನು, ರಾಜನಾದ ಕುಳಿಂದನು ಕೆಲ ದಿನಗಳಾದ ಮೇಲೆ ಅಕ್ಷರಾಭ್ಯಾಸಕ್ಕೆ ಗುರುಗಳ ಬಳಿಗೆ ಕಳುಹಿದನು. ಆದರೆ ಆ ಬಾಲಕನು ಹರಿ ಎಂಬೆರಡು ಅಕ್ಷರಗಳಲ್ಲದೇ ಬೇರೆ ಏನನ್ನೂ ನೋಡಲೂ ಇಲ್ಲ ಓದಲೂ ಇಲ್ಲ. ಗುರುವು ಸಿಟ್ಟಾಗಿಬರೆ ಎಂದರೂ ಕೇಳಲಿಲ್ಲ. ಆಗ ಆತನು ಕುಳಿಂದನ ಬಳಿಗೆ ಬಂದು ಆ ವಿಷಯವನ್ನು ಹೇಳಿದನು.ಆಗ ಕುಳಿಂದನು ಹೀಗೆಂದನು. 


ಈತನೇಕಾದಶಿಯೊಳುಪವಾಸಮಂ ಮಾಳ್ಪ 

ನೀತನಂ ಕಂಡು ನಾವೆಲ್ಲರುಮನುಷ್ಠಿಸುವೆ 

ವೀತನಚ್ಯುತನ ಭಕ್ತನೀತನಿಂದೆನಗಪ್ಪುದಭ್ಯುದಯಮಿಹಪರದೊಳು 

ಈತನಲ್ಲದೆ ಬೇರೆ ತನುಜಾತರಿಲ್ಲ ತನ 

ಗೀತನಲ್ಲಿಯೆ ಜೀವಮಾಗಿರ್ಪೆನಾನದರಿ 

ನೀತನೆಂತಾದೊಡಿರಲೀತಂಗೆ ಶಿಕ್ಷೆ ಬೇಡೆಂದಂ ಕುಳಿಂದನಂದು ||೫||


ಕುಳಿಂದಕ : ಇವನು ಏಕಾದಶಿಯ ದಿನ ಉಪವಾಸ ಮಾಡುತ್ತಾನೆ. ಅವನೊಡನೆ ನಾವೂ ಏಕಾದಶಿಯನ್ನು ಮಾಡುತ್ತೇವೆ. ಇವನು ವಿಷ್ಣು ಭಕ್ತ. ಇವನಿಂದ ನನಗೆ ಇಹದಲ್ಲೂ ಪರದಲ್ಲೂ ಅಭ್ಯುದಯವಾಗುತ್ತದೆ. ನನಗೆ ಇವನಲ್ಲಿಯೇ ಜೀವ. ಆದುದರಿಂದ ಇವನು ಹೇಗಾದರೂ ಇರಲಿ ಶಿಕ್ಷಿಸಬೇಡಿರಿ. 


ಅಂದು ಮೊದಲಾಗಿ ತನ್ನಿಚ್ಚೆಯಿಂ ಚಂದ್ರಹಾ 

ಸಂ ದಾನವಾರಿಯಂ ಬಿಡದೆ ಬಾಲಕ್ರೀಡೆ 

ಯಿಂದುತ್ಸವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದೆ 

ತಂದು ಫಲ ವರ್ಗಮಂ ಪೂಜೆಗೈದುಪವಾಸ 

ದಿಂದ ಜಾಗರಣದಿಂದೇಕಾದಶೀ ವ್ರತವ 

ನಂದದಿಂದಾಚರಿಪನಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು ||೬||


ಅಂದಿನಿಂದ ಚಂದ್ರಹಾಸನು ಬಾಲಕ್ರೀಡೆಯಲ್ಲಿ ವಿಷ್ಣುವಿಗೆ ಉತ್ಸವಗಳನ್ನು ಮಾಡುತ್ತಿದ್ದನು. ಗೆಳೆಯರೊಡನೆ ಭಕ್ತಿಯಿಂದ ವಿಷ್ಣುವಿಗೆ ಪೂಜೆ ಮಾಡಿ ಅವನನ್ನು ಸ್ತುತಿಸುತ್ತಿದ್ದನು. ಏಕಾದಶಿಯ ದಿನ ( ಹಗಲು ಉಪವಾಸ)ರಾತ್ರಿ ಜಾಗರಣೆ ಮಾಡುತ್ತಿದ್ದನು.  ಹೀಗೆ ಏಕಾದಶೀ ವ್ರತವನ್ನು ಆಚರಿಸುತ್ತಾ, ಇತರರಿಗೂ ಹರಿ ಮಹಿಮೆಯನ್ನು ಉಪದೇಶಿಸುತ್ತಿದ್ದನು. 


ಮೆಲ್ಲನಿಂತಿರಲೆಂಟನೆಯ ವರುಷಮಾಗಲ್ಕೆ 

ನಿಲ್ಲದುಪನಯನಮಂ ವಿರಚಿಸಿ ಕುಳಿಂದಂ ಸ 

ಮುಲ್ಲಾಸಮಂ ತಾಳ್ದನಂಗಸಹಿತಖಿಳ ವೇದಂಗಳಂ ನೀಯಿಗಳನು 

ಸಲ್ಲಲಿತ ಶಬ್ಧಾದಿ  ಶಾಸ್ತ್ರಸಿದ್ಧಾಂತಂಗ

ಳೆಲ್ಲಮಂ ಗುರುಮುಖದೊಳಧಿಕರಿಸಿ ಬೇಕಾದ 

ಬಿಲ್ಲವಿದ್ಯೆಯನರಿದು ಗಜ ತುರಗದೇರಾ ಟದೊಳ್ ಚತುರನಾದನವನು ||೭||


ಚಂದ್ರಹಾಸನಿಗೆ ಎಂಟು ವರುಷಗಳಾಗಲು, ಕುಳಿಂದನು ಅವನಿಗೆ ಉಪನಯನ ಮಾಡಿಸಿ ವೇದಗಳು, ಅದರ ಅಂಗಗಳನ್ನೂ,ನೀತಿಶಾಸ್ತ್ರ ವ್ಯಾಕರಣ ಮೊದಲಾದ ಸಿದ್ಧಾಂತಗಳನ್ನೂ, ಗುರುಮುಖದಿಂದ ಕಲಿಸಿದನು. ಬಳಿಕ ಬಿಲ್ವಿದ್ಯೆಯನ್ನೂ, ಕುದುರೆ ಆನೆಗಳ ಏರಾಟ ಮೊದಲಾದುವನ್ನು ಕಲಿತು ಚಂದ್ರಹಾಸನು ಎಲ್ಲ ವಿದ್ಯೆಗಳಲ್ಲಿಯೂ ಚತುರನಾದನು. 


ವಿದಿತ ವೇದಾರ್ಥಮಂ ವಿಷ್ಣುವೆಂದರಿದು ಬಹು 

ವಿಧ ಶಾಸ್ಯ್ರತತಿಗೆ ಹರಿ ಗತಿಯೆಂದು  ತಿಳಿದು ತಾ 

ನಧಿಕರಿಸಿ ಬಳಿಕ ನಿಜಭಕ್ತಿಚಾಪಕೆ ಸತ್ವಗುಣವನಳವಡಿಸಿ ತನ್ನ 

ಸುಧಿಯ ಶರಮಂ ಪೂಡಿ ಕೃಷ್ಣನಂ ಗುರಿಮಾಡಿ 

ವಿಧುಹಾಸನನುಪಮ ಧನುರ್ವಿದ್ಯೆಯಂ ಜಗದೊ 

ಳಧಿಕತರಮಾಗೆ ಸಾಧಿಸಿ ಪರಮ ಭಾಗವತ ಕಲೆಗಳಿಂದೆಸೆದಿರ್ದನು||೮||


ಚಂದ್ರಹಾಸನು ವೇದಕ್ಕೆ ವಿಷ್ಣುವೇ ಅರ್ಥ.ಸಮಸ್ತ ಶಾಸ್ತ್ರಗಳಿಗೂ ಹರಿಯೇ ಗತಿಯೆಂದು ತಿಳಿದು ಎಲ್ಲ ಶಾಸ್ತ್ರಗಳೂ ವಿಷ್ಣುವಿನತ್ತಲೇ ಕರೆದೊಯ್ಯುವುವೆಂದು ತಿಳಿದು ತನ್ನ ಭಕ್ಟತಿಯೆಂಬ ಬಿಲ್ಲಿಗೆ ಸತ್ವಗುಣದ ಹೆದೆಯನ್ನು ಕಟ್ಟಿ ಸದ್ಬುದ್ಧಿಯೆಂಬ ಬಾಣವನ್ನು ಹೂಡಿ, ಕೃಷ್ಣನನ್ನೇ ಗುರಾಮಾಡಿ,ಹೋಲಿಕೆಯೇ ಇಲ್ಲದ ಹಿರಿಮೆಯನ್ನು ಸಾಧಿಸಿ ಪರಮ ಭಾಗವತ ಕಲೆಗಳಿಂದ ಮೆರೆಯುತ್ತಿದ್ದನು. 


ಷೋಡಶ ಪ್ರಾಯದೊಳವಂ ಪ್ರಬಲ ಭಟನಾಗಿ 

ಮೂಡಿದಗ್ಗಳಿಕೆಯಿಂದೈದೆ ರಥಿಕರ್ಕಳಂ 

ಕೂಡಿಕೊಂಡೈದಿ ನಿಜ ತಾತಂಗೆ ಮಲೆವ ಮನ್ನೆಯರೆಲ್ಲರಂ ಘಾತಿಸಿ 

ಮಾಡಿದಂ ದಿಗ್ವಿಜಯಮಂ ಕುಳಿಂದಕನಾಳ್ವ 

ನಾಡಲ್ಲದೆಣ್ದೆಸೆಯ ಸೀಮೆಗಳನೊತ್ತಿದಂ 

ಪೂಡಿಸಿದನವರವರ ಮನೆಗಳ ಸುವಸ್ತುಜಾಲಂಗಳಂ ತನ್ನ ಪುರಕೆ ||೯||


ಚಂದ್ರಹಾಸನಿಗೆ ಹದಿನಾರುವರ್ಷಗಳಾಗಲು. ಅವನು ತನ್ನ ಸೈನ್ಯದೊಡಗೂಡಿ, ತನೂನ ತಂದೆಗೆ ಕಪ್ಪ ಕಾಣಿಕೆಗಳನ್ನು ಕೊಡದೆ ವಿರೋಧಿಸುವ ಸಾಮಂತರನ್ನು ಸದೆ ಬಡಿದು, ತನ್ನ ದೇಶದ ಎಂಟೂ ಮೂಲೆಗಳನ್ನೊತ್ತಿ ರಾಜ್ಯವನ್ನು ವಿಸ್ತರಿಸಿದನು

ತಾನು ಗೆದ್ದ ರಾಜರಲ್ಲಿದ್ದ ಒಳ್ಳೆಯ ವಸ್ತುಗಳನ್ನು ಬಂಡಿಗಳಲ್ಲಿ ತುಂಬಿಸಿ ಅವುಗಳೊಡನೆ ಊರಿಗೆ ಬಂದನು. 


ಹರಿಯನಾರಾಧಿಸದೆ ರಾಜ್ಯಮದದಿಂ ಸೊಕ್ಕಿ 

ದರಿ ಭೂಪರಂ ಗೆಲ್ದು ಮಣಿ ಕನಕ ಮುಕ್ತಾಳಿ 

ಕರಿ ತುರಗ ಮೊದಲಾದ ಮುಖ್ಯ ವಸ್ತು ಪ್ರತತಿ ಸಹಿತ ಪಟ್ಟಣಕೆ ಬರಲು 

ಪುರದ ಸಿಂಗರದ ಮಂಗಳ ವಾದ್ಯರವದಬಲೆ 

ಯರ ಸೊಡರ್ವೆಳಗಿನಾರತಿಗಳ ಮಹೋತ್ಸವದ 

ಸಿರಿಯೊಳ್ ಕುಳಿಂದಂ ಕುಮಾರನನಿದಿರ್ಗೊಳಿಸಿ ಮತ್ತೆ ಕಾಣಿಸಿಕೊಂಡನು ||೧೦|| 


ಹರಿಭಕ್ತರಹಿತರಾಗಿ ರಾಜ್ಯಮದದಿಂದ ಸೊಕ್ಕಿದ್ದ ಶತ್ರುರಾಜರನ್ನು ಗೆದೂದು, ರತ್ನಗಳು, ಬಂಗಾರ, ಮುತ್ತು ಮೊದಲಾದ ವಸ್ತುಗಳೊಡನೆ ತನ್ನೂರಿಗೆ ಬಂದನು. ಕುಳಿಂದಕನಾಜ್ಞೆಯಂತೆ ಚಂದನಾವತಿಯನ್ನಲಂಕರಿಸಿದರು. ಸ್ರ್ರೀಯರು ಕಳಶಕನ್ನಡಿಗಳೊಡನೌ, ಮಂಗಳವಾದ್ಯಗಳ ಘೋಷದಿಂದ ಸ್ವಾಗತಿಸಿದರು. ಚಂದ್ರಹಾಸನಿಗೆ ಆರತಿಗಳನ್ನು ಮಾಡಿದರು. ಬಳಿಕ ಚಂದ್ರಹಾಸನನ್ನು ಕಂಡನು. 


ತಾಯಿತಂದೆಗಳೀಗಳಿಂದಿರಾದೇವಿ ನಾ 

ರಾಯಣರ್ ತನಗೆಂದು ಭಾವಿಸಿ ನಮಿಸಲವರ್ 

ಪ್ರೀಯದಿಂ ತನಯನಂ ತೆಗೆದಪ್ಪಿದರ್ ಬಳಿಕ ಪುರವೀಧಿಯೊಳ್ ಬರುತಿರೆ 

ಆಯತಾಕ್ಷಿಯರಾಗಳಲರ್ಗಳಂ ಚೆಲ್ಲಿದರ್ 

ಕಾಯಜಾಕೃತಿಯೊಳೈತಹ ಚಂದ್ರಹಾಸನ ವಿ 

ಡಾಯಮಂ ನೋಡುವ ಕಟಾಕ್ಷದ ಮರೀಚಿಗಳ ವೀಚಿಗಳ ವಿಕಿರದೊಡನೆ ||೧೧||


ತಂದೆ ತಾಯಿಗಳು ಲಕ್ಷ್ಮೀನಾರಾಯಣರೆಂದು ಭಾವಿಸಿ ಚಂದ್ರಹಾಸನು ಅವರಿಗೆ ನಮಸ್ಕರಿಸಿದನು. ಅವರು ಪ್ರೀತಿಯಿಂದ ಅವನನ್ನು ಅಪ್ಪಿಕೊಂಡು ಅವನೊಡನೆ ಬೀದಿಯಲ್ಲಿ ಬರುವಾಗ ವಿಶಾಲನೇತ್ರೆಯರಾದ ಆ ಊರಿನ ಸ್ತ್ರೀಯರು ಅವನ ಮೇಲೆ ಹೂಗಳನ್ನು ಚೆಲ್ಲಿದರು. ಮನ್ಮಥನಂತೆ ಬರುತ್ತಿದ್ದ ಅವನನ್ನು ಕಟಾಕ್ಷದಿಂದ ನೋಡುತ್ತಿದ್ದರು.


ನಿಳಯಕೈತಂದನುತ್ಸವದಿಂ ಕುಳಿಂದಕಂ 

ಬಳಿಕ ತನ್ನಾಧಿಪತ್ಯವನಾತ್ಮಜಂಗೆ ಮಂ 

ಗಳ ಮುಹೂರ್ತದೊಳಿತ್ತನಂದಿನಿಂ ಚಂದ್ರಹಾಸಂ ಪಾಲಿಸುವನಿಳೆಯನು 

ತುಳುಕಾಡಿತಾನಾಡ ಸಿರಿ ಚಂದನಾವತಿಯ 

ಪೊಳಲ ಸೌಭಾಗ್ಯಮಭಿವರ್ಧಿಸಿತು ವೈಷ್ಣವದ 

ಬಳೆವಳಿಗೆಯಾದುದೆಲ್ಲಾ ಜನದೊಳಾಚಾರ ಗುಣ ದಾನ ಧರ್ಮದಿಂದೆ ||೧೨||


ಮನೆಗೆ ಚಂದ್ರಹಾಸನನ್ನು ಕರೆದುಕೊಂಡು ಹೋಗಿ ಅವನಿಗೆ ರಾಜ್ಯಾಭಿಷೇಕವನ್ನು ಶುಭಮುಹೂರ್ತದಲ್ಲಿ ಮಾಡಿದನು. ಅಂದಿನಿಂದ ಚಂದ್ರಹಾಸನೇ ರಾಜ್ಯವನ್ನಾಳುತ್ತಿದ್ದಾನೆ. ಆ ರಾಜ್ಯದ ಐಶ್ವರ್ಯವು ಅಭಿವೃದ್ಧಿಯಾಗಿ ತುಂಬಿ ತುಳುಕಿತು. ನಗರದ ಸೌಭಾಗ್ಯವು ಹೆಚ್ಚಿತು. ಎಲ್ಲ ಜನರಲ್ಲೂ ನಡತೆ, ಗುಣ, ದಾನ, ಧರ್ಮಗಳು ಅಭಿವರ್ಧಿಸಿ ವಿಷ್ಣು ಭಕ್ತಿಯು ಅಭಿವೃದ್ಧಿ ಹೊಂದಿತು. 


ರಾಯಂಗೆ ವರ್ಷವರ್ಷಕೆ ನಾವು ಕುಡುವ ಸಿ 

ದ್ಧಾಯಮಂ ದುಷ್ಟಬುದ್ಧಿಗೆ ಸಲಿಸಿ ಬರ್ಪ ನಿ 

ಷ್ಕಾಯುತ ದ್ರವ್ಯಮಂ ನೃಪನ ರಾಣಿಗೆ ಪುರೋಹಿತನಾದ ಗಾಲವಂಗೆ 

ಪ್ರೀಯದಿಂದುಪಚರಿಸುವರ್ಥಮಂ ತತ್ಕಾಲ 

ಕೀಯಬೇಕೆಲೆ ಮಗನೆ ಧನವನೊದವಿಸಿ ಕಳುಹ 

ಸೂಯೆಗೀಡಾಗಬೇಡೆಂದು ನಿಜನಂದನಂಗಾ ಕುಳಿಂದ ಪೇಳ್ದನು ||೧೭||


ರಾಜನಿಗೆ ಕೊಡಬೇಕಾದ ಕಪ್ಪವನ್ನು ದುಷ್ಟಬುದ್ಧಿಗೆ ಕೊಟ್ಟು, ರಾಣಿಗೂ, ಪುರೋಹಿತ ಗಾಲವನಿಗೂಹತ್ತು ಸಾವಿರ ನಿಷ್ಕ (ಚಿನ್ನದ ನಾಣ್ಯ )ವನ್ನು ಆ ಕಾಲದಲ್ಲಿ ಕೊಡಬೇಕು.  " ಮಗನೇ ಇದಕ್ಕೆ ಬೇಕಾದ ಧನವನ್ನು ಜೋಡಿಸಿಕೊಂಡು ಕಳುಹಿಸಿಕೊಡು. ಮತ್ಸರಿಸಬೇಡ" ಎಂದು ಕುಳಿಂದನು ಹೇಳಿದನು. 


ಪಿತನ ಮಾತಂ ಕೇಳ್ದು ಚಂದ್ರಹಾಸಂ ಮಹೀ 

ಪತಿಗೆ ಮಹಿಷಿಗೆ ಮಂತ್ರಿ ದುಷ್ಟಬುದ್ಧಿಗೆ ಪುರೋ 

ಹಿತ ಗಾವಲಂಗೆ ಸಲಿಸುವ ಧನವನದರ ಸಂಗಡಕೆ ತಾನಾಹವದೊಳು 

ಪ್ರತಿಭೂಪರಂ ಜಯಿಸಿ ತಂದ ವಸ್ತುಗಳನಂ 

ಕಿತದಿಂದೆ ಕಟ್ಟಿ ಶಕಟೋಷ್ಟ್ರಕರಿ ಭಾರಗಳ 

ಶತ ಸಂಖ್ಯೆಯಿಂದೆ ಕಳುಹಿದನಾಪ್ತರಂ ಕೂಡಿಕೊಟ್ಟು ಕುಂತಳ ನಗರಿಗೆ ||೧೮||


ತಂದೆಯ ಮಾತನ್ನು ಕೇಳಿ ಚಂದ್ರಹಾಸನು ರಾಜ, ರಾಣಿ, ಮಂತ್ರಿ ದುಷ್ಟಬುದ್ದಿ, ಪುರೋಹಿತ ಗಾಲವನಿಗೆ ಕೊಡಬೇಕಾದ ಹಣವನ್ನೂ , ಜೊತೆಗೆ ರಾಜರನ್ನು ಗೆದ್ದು ತಂದ ವಸ್ತುಗಳನ್ನು ಅವರವರ ಹೆಸರು ಹೇಳಿಕಟ್ಟಿಸಿ ನೂರಾರು ಗಾಡಿ, ಕುದುರೆ, ಆನೆ, ಒಂಟೆಗಳ ಮೇಲೆ ಹೇರಿಸಿ ಆಪ್ತರೊಡನೆ ಕುಂತಳ ನಗರಕ್ಕೆ ಕಳುಹಿಸಿಕೊಟ್ಟನು. 


ನೊಸಲೊಳೆಸೆವೂರ್ಧ್ವಪುಂಡ್ರದ ಸುಧೌತಾಂಬರದ 

ಮಿಸುಪ ತುಳಸಿಯ ದಂಡೆಗಳ ಕೊರಳ ನಿಚ್ಚಳದ 

ದಶನಪಙ್ಕ್ತಿಯ ವಿಕಿಲ್ಬಿಷಗಾತ್ರದಚ್ಛಸಾತ್ವಿಕ ಭಾವದಿಂದೆ ಮೆರೆವ 

ಶಶಿಹಾಸನನುಚರರ್ ಬಂದು ಕಾಣಲ್ಕಿದೇಂ 

ಪೊಸಶಕಟ ನಿಮಗೀಗಳೇಕೆ ಶುದ್ಧಿಸ್ನಾನ

ಮಸುವಿಡಿದಿಹನೆ ಕುಳಿಂದಕನೆಂದು ಶಂಕೆಯಿಂ ಕೇಳ್ದನಾ ದುಷ್ಟಬುದ್ಧಿ ||೨೦||


ಹಣೆಯಲ್ಲಿ ಊರ್ದ್ವಪುಂಡ್ರ , ಒಗೆದು ಮಡಿಮಾಡಿದ ಬಟ್ಟೆ, ತುಳಸಿಯ ಮಾಲೆಗಳು, ಶುಭ್ರವಾದ ಹಲ್ಲುಗಳು,ಶುಭ್ರ ದೇಹ, ಸಾತ್ವಿಕ ಭಾವದಿಂದಿದ್ದ ಅವರನ್ನು ನೋಡಿ ದುಷ್ಟಬುದ್ಧಿಯು " ಈಗೇಕೆ ಶುದ್ಧ ಸ್ನಾನ ಮಾಡಿ ಬಂದಿದ್ದೀರಿ, ಕುಳಿದಕನು ಬದುಕಿರುವನೇ"  ಎಂದು ಅನುಮಾನದಿಂದ ಕೇಳಿದನು. 


ಅಶುಭಕೋಟಿಯನೊರಸುವೇಕಾದಶೀ ವ್ರತಕೆ 

ವಿಶದ ಸಲಿಲಸ್ನಾನಮಂದೆಮಗೆ ಸಮನಿಸಿತು 

ಕುಶಲದಿಂ ಬಾಳ್ವಂ ಕುಳಿಂದನಾತನ ಸೂನು ಚಂದ್ರಹಾಸಂಗೆ ನಾಡು 

ವಶವರ್ತಿಯಾಗಿರ್ಪುದವನಾಜ್ಞೆಯಿಂದುಭಯ 

ದಶಮಿಯೊಳ್ ನಡೆವುದುತ್ಸವವಚ್ಯುತಂಗೆ ಕ 

ರ್ಕಶಮಿಲ್ಲದಖಿಳಜನಮಂ ಬಿಡದೆ ಪಾಲಿಪಂ ಹರಿಭಕ್ತಿನಿರತನಾಗಿ ||೨೧||


ಅಗಣಿತ ಅಶುಭವನ್ನು ನಿವಾರಿಸುವ ಏಕಾದಶೀ ವ್ರತದ ದೆಸೆಯಿಂದ ಸ್ನಾನಮಾಡಿದೆವು.ಕುಳಿಂದನು ಕ್ಷೇಮದಿಂದಿರುವನು. ಅವನ ಮಗ ಚಂದ್ರಹಾಸನೀಗ ರಾಜ್ಯವಾಳುತ್ತಿದ್ದಾನೆ. ಅವನ ಅಪ್ಪಣೆಯಂತೆ ತಿಂಗಳ ಎರಡು ದಶಮಿಗಳಲ್ಲೂ ಉತ್ಸವವಾಗುತ್ತಿದೆ. ಅವನು ಹರಿಭಕ್ತನಿರತನಾಗಿ ಸಮಸ್ತ ಜನರನ್ನೂ ಸುಖವಾಗಿ ಪಾಲಿಸುತ್ತಾನೆ. 


ಸುತ್ತಲುಂ ದಿಗ್ವಿಜಯಮಂ ಮಾಡಿ ರಿಪು ನೃಪರ 

ನೊತ್ತಿ ಭುಜಬಲದಿಂದೆ ಕಪ್ಪಮಂ ಕೊಂಡು ಬಂ 

ದುತ್ತಮ ಸುವಸ್ತುಗಳನೆಂದುಮೀವರ್ಥಮಂ ಚಂದ್ರಹಾಸಂ ಕಳುಹಲು 

ಪೊತ್ತು ತಂದಿಹೆವನೇಕ ದ್ರವ್ಯವರಮನೆಗೆ 

ಹತ್ತು ನಿನಗೊಂದರೆಣಿಕೆಯೊಳೆಂದು ಲೇಖನವ 

ನಿತ್ತೊಡೆ ಕುಳಿಂದಕನ ಸೇವಕರ್ಗಾ ದುಷ್ಟಬುದ್ಧಿ ಮಗುಳಿಂತೆಂದನು ||೨೨||


ಚಂದ್ರಹಾಸನು ದಿಗ್ವಿಜಯವನ್ನು ಮಾಡಿ ಶತ್ರುಗಳನ್ನು ಬಾಹುಬಲದಿಂದ ಜಯಿಸಿ ಕಪ್ಪವನ್ನುತೆಗೆದುಕೊಂಡು ನಿಮಗೆ ಎಂದಿನಂತೆ ಕೊಡುವ ಕಪ್ಪವನ್ನು ಕಳಿಸಿದ್ದಾನೆ. ಆ ದ್ರವ್ಯವನ್ನು ಅರಮನೆಗೆ ಹೊತ್ತು ತಂದಿದ್ದೇವೆ. ಕಪ್ಪದ ಹಣ ಹತ್ತು ಸಾವಿರ ನಿಷ್ಕ, ನಿಮಗೆ ಒಂದು ಸಾವಿರ ನಿಷ್ಕ ಇವೌ. ಎಂದು ಹೇಳಿ ಚಂದ್ರಹಾಸನು ಪತ್ರವನ್ನು ಕೊಟ್ಟನು.  


ಏನಿದೆತ್ತಣ ಕೌತುಕದ ನುಡಿ ಕುಳಿಂದಂಗೆ 

ಸೂನು ಜನಿಸಿರ್ದಪನೆ ಬಂಜೆಯಾಗಿಹಳವನ 

ಮಾನಿನಿ ವಿಚಿತ್ರಮೆನಲಾಚರರ್ ಜೀಯ ಪುಸಿಯಲ್ಲವಂ ಬೇಂಟೆಗೈದೆ 

ಕಾನನದ ಮಧ್ಯದೊಳನಾಥನಾಗಿಹ ಶಿಶು ನಿ 

ಧಾನಮಿರೆ ಕಂಡೆತ್ತಿಕೊಂಡು ಬಂದನಾತ್ಮಜ ವಿ 

ಧಾನದಿಂದೋವಿದಂ ಪ್ರೀತಿ ಮಿಗೆ ಚಂದ್ರಹಾಸಾಭಿಧಾನದೊಳೆಂದರು ||೨೩||


ದುಷ್ಟಬುದ್ಧಿ: ಇದೆಂತಹ ಆಶ್ಚರ್ಯ? ಕುಳಿಂದನಿಗೆ ಮಗನು ಹುಟ್ಟಿದನೇ ? ಅವನ ಹೆಂಡತಿ ಬಂಜೆಯಾಗಿದ್ದಳಲ್ಲವೇ ಇದು ವಿಚಿತ್ರವಲ್ಲವೇ? 

ದೂತರು : ಜೀಯ, ನಾವು ಹೇಳುವುದು ಸುಳ್ಳಲ್ಲ. ಬೇಟೆಗೆ ಹೋದಾಗ ಕಾಡಿನ ಮಧ್ಯದಲ್ಲಿ ಅನಾಥನಾಗಿ ಬಿದ್ದಿದ್ದ ಮಗುವಿರಲು, ಅದನ್ನೆತ್ತಿಕೊಂಡು ಬಂದು ಮಗನಂತೆ ಸಾಕಿದನು. ಅವನಿಗೆ ಚಂದ್ರಹಾಸನೆಂಬ ಹೆಸರು. 


ಕೇಳಿ ವಿಸ್ಮಿತನಾದನಾ ದುಷ್ಟಬುದ್ಧಿ ನಾಂ 

ಪಾಳಡವಿಯೊಳ್ ಪಸುಳೆಯಂ ಕೊಂದು ಬಹುದೆಂದು 

ಹೇಳಿದೊಡೆ ಚಂಡಾಲರಂದುಳುಹಿ ಬಂದರಹುದೆಂದು ನಿಶ್ಚ್ಯೆಸಿ ಬಳಿಕ 

ತಾಳಿದಂ ದ್ವೇಷಮಂ ಚಿತ್ತದೊಳ್ ಪೊರಗೆ ಕರು 

ಣಾಳುಗಳ ತೆರದಿಂದವರ್ಗಳಂ ಮನ್ನಿಸಿ ನಿ 

ಜಾಲಯಕೆ ತೆಗೆಸಿದಂ ಚಂದ್ರಹಾಸಂ ಕಳುಹಿದಗಣಿತ ಸುವಸ್ತುಗಳನು ||೨೪|


ಆ ಮಾತನ್ನು ಕೇಳಿ ದುಷ್ಟಬುದ್ಧಿಯು ಆಶ್ಚರ್ಯ ಪಟ್ಟು " ನಾನು ಮಗುವನ್ನು ಅಡವಿಯಲ್ಲಿ ಕೊಂದು ಬರಬೇಕೆಂದು ಚಂಡಾಲರಿಗೆ ಹೇಳಿದ್ದೆ. ಅಂದು ಅವರು ಆ ಮಗುವನ್ನು ಉಳಿಸಿ ಬಂದಿದ್ದಾರೆ." ಎಂದು ನಿಶ್ಚಯಿಸಿ ಮನಸ್ಸಿನಲ್ಲೇ ಚಂದ್ರಹಾಸನ ಮೇಲೆ ದ್ವೇಷವನ್ನು ಬೆಳಸಿಕೊಂಡನು. ಆದರೆ ಅದನ್ನು ಹೊರಗೆ ತೋರಿಸಿಕೊಳ್ಳದೆ ದೂತರನ್ನು ಮನ್ನಿಸಿ, ಚಂದ್ರಹಾಸನು ಕಳುಹಿಸಿದ್ದ ವಸ್ತುಗಳನ್ನು ತನ್ನ ಮನೆಗೆ ಕಳುಹಿಸಿದನು. 


ಕಷ್ಟಮೇತಕೆ ಜೀಯ ಹರಿವಾಸರ ವ್ರತ 

ಭ್ರಷ್ಟರಾದಪೆವೆಂಬ ಭಯಕೆ ನಿನ್ನಾಲಯದ 

ಮೃಷ್ಟಾನ್ನಮಾವೊಲ್ಲೆದಿರ್ದೆವೈಸಲೆ ಗರ್ವದಿಂ ಬೇರೆಯಲ್ಲವೆಂದು 

ದುಷ್ಟಬುದ್ಧಿಯ ಚಿತ್ತಮಂ ತಿಳುಹಿ ಮರುದಿನದೊ 

ಳಿಷ್ಟಭೋಜನದದಿಂದೆ ಸನ್ಮಾನಮಂ ತಳೆದು 

ಹೃಷ್ಟಮಾನಸರಾಗಿ ಬೀಳ್ಕೊಂಡು ತಿರುಗಿದರ್ ಚಂದ್ರಹಾಸನ ದೂತರು ||೨೬||


ಆ ದೂತರು " ಜೀಯ, ಹರಿವಾರ ವ್ರತ ಭ್ರಷ್ಟರಾಗುವೆವೆಂದು ಮೃಷ್ಟಾನ್ನದ ಊಟವನ್ನೊಲ್ಲೆವೆಂದೆವು. ಗರ್ವದಿಂದಲ್ಲ" ಎಂದು ದುಷ್ಟಬುದ್ಧಿಯ ಮನಸ್ಸನೊಪ್ಪಿಸಿ , ಮರುದಿನ ಮೃಷ್ಟಾನ್ನಭೋಜನವನ್ನು ಮಾಡಿ ಸನ್ಮಾನವನ್ನು ಸ್ವೀಕರಿಸಿ ,ಸಂತೋಷ ಚಿತ್ತದಿಂದ ಹಿಂದಿರುಗಿದರು. 


ರಿಪುಮಥನ ಕೇಳ್ ಕುಳಿಂದಂ ಬಹಳ ವೈಭವದೊ 

ಳುಪಚರಿಸಿ ತನ್ನ ನಂದನ ಚಂದ್ರಹಾಸನಂ 

ವಿಪುಲ ಪರಿತೋಷದಿಂದೊಡೆಯಂಗೆ ಕಾಣಿಕೆಯನಿಡಿಸಿ ಕಾಣಿಸಿದ ಬಳಿಕ 

ವಿಪಿನದೊಳ್ ತನಗೀ ಕುಮಾರಕಂ ಮುಂಗೈದ 

ತಪದ ಫಲದಿಂ ತಾನೆ ದೊರಕೊಂಡನೀತನಂ 

ಕೃಪೆಯಿಂದೆ ನೀವೆ ತಾನೆ ಪಾಲಿಸವೇಳ್ವುದೆಂದು ನಿಜಪತತಿಗೆ ಕೈವರ್ತಿಸಿದನು ||೩೩||


ಶತ್ರುಮರ್ಧನ ಜನಮೇಜಯನೇ ಕೇಳು,  ಕುಳಿಂದನು ದುಷ್ಟಬುದ್ಧಿಯನ್ನು ಚೆನ್ನಾಗಿ ಉಪಚರಿಸಿ, ಮಹಾಸಂತೋಷದಿಂದ ತನ್ನ ಮಗ ಚಂದ್ರಹಾಸನನ್ನು ಅವನಿಗೆ ತೋರಿಸಿ,  ಕಾಣಿಕೆಯನ್ನು ಕೊಡಿಸಿದನು. ಬಳಿಕ " ಈ ಬಾಲಕನು ನನಗೆ ಕಾಡಿನಲ್ಲಿ, ಪೂರ್ವ ಪುಣ್ಯ ಫಲದಿಂದ ಸಿಕ್ಕನು. ಇವನನ್ನು ನೀವೇ ಕೃಪೆಯಿಂದ ಪಾಲಿಸಿರಿ" ಎಂದೊಪ್ಪಿಸಿದನು.


ಗಾಡಿಸಿದ ನೃಪಲಕ್ಷಣದ ಚಂದ್ರಹಾಸನಂ 

ನೋಡಿ ವಿಸ್ಮಿತನಾಗಿ ತನ್ನ ಮನದೊಳ್ ಪಿಂತೆ 

ಮಾಡಿಸಿದ ಕೃತ್ಯಮಂ ನೆನೆದು ವಂಚಿಸಿದರೇ ಚಂಡಾಲರೆಮ್ಮನೆಂದು 

ಕೂಡೆ ಮಮ್ಮಲಮರುಗಿ ಪುಸಿಗೆ ನಸುನಗುತ ಕೊಂ 

ಡಾಡಿ ಮನ್ನಿಸಿ ತನಗೆ ನಿನ್ನ ಸುತನಂ ಕಂಡು 

ಮೂಡಿತುತ್ಸವಮೆಂದನಾ ದುಡಷ್ಟಬುದ್ಧಿ ವಿನಯದೊಳಾ ಕುಳಿಂದನೊಡನೆ ||೩೪||


ರಾಜಲಕ್ಷಣಗಳಿಂದ ಅತ್ಯಾಕರ್ಷಕವಾಗಿ ಕಾಣಿಸುತ್ತಿದ್ದ ಚಂದ್ರಹಾಸನನ್ನು ದುಷ್ಟಬುದ್ಧಿಯು ನೋಡಿ,ವಿಸ್ಮಿತನಾಗಿ, ತಾನು ಹಿಂದೆ ಮಾಡಿಸಿದ ಕೆಲಸವನ್ನು ನೆನೆದು,  ಚಂಡಾಲರು ತನ್ನನ್ನು ವಂಚಿಸಿದರೇ ಎಂದು ಮರುಗಿ ತೋರಿಕೆಗೆ ನಗುತ್ತಾ , ಚಂದರಹಾಸನನ್ನು ಹೊಗಳಿ ಮನ್ನಿಸಿ ( ಗೌರವಿಸಿ ) ಕುಳಿಂದನಿಗೆ " ನಿನ್ನ ಮಗನನ್ನು ಕಂಡು ನನಗೆ ಬಹಳ ಸಂತೋಷವಾಯಿತು " ಎಂದು ಮೃದು ಮಾತಿನಿಂದ ಹೇಳಿದನು.  


ಬಂಜೆಯಾಗದು ವಿಪ್ರರಂದೆನ್ನೊಳೆಂದ ನುಡಿ 

ರಂಜಿಸುವ ರಾಜಲಕ್ಷಣದೊಳೊಪ್ಪುವನಿವಂ 

ಭಂಜಿಸದೊಡೀ ಧರಣಿಗೀತನರಸಾದಪಂ ಬಳಿಕ ತನ್ನಾತ್ಮಜರ್ಗೆ 

ಸಂಜನಿಸಲರಿದು ಭೂಪಾಲತ್ವಮಗ್ಗಳಿಕೆ 

ಗಂಜುವವನಲ್ಲ ಬಲವಂತನಹನೀತಂಗೆ 

ನಂಜನೂಡಿಸಿ ಕೊಲ್ವುಪಾಯಂ ಮಾಳ್ಪೆನೆಂದೆಣಿಸಿದಂ ದುಷ್ಟಬುದ್ಧಿ ||೩೭|| 


ಬ್ರಾಹ್ಮಣಾಡಿದ ಮಾತು ಸುಳ್ಳಾಗುವುದಿಲ್ಲ. ರಾಜಲಕ್ಷಣದಿಂದ ಮೆರೆಯುವ ಇವನನ್ನು ಕೊಲ್ಲದಿದ್ದರೆ,  ನನ್ನ ಮಕ್ಕಳಿಗೆ ದೊರೆತನ ಸಿಗುವುದಿಲ್ಲ.  ಇವನೇ ದೇಶಕ್ಕೆ ದೊರೆಯಾಗುತ್ತಾನೆ. ಇವನನ್ನು ಬಲದಿಂದ ಬಾಗಿಸಲಾಗುವುದಿಲ್ಲ.ಇವನಿಗೆ ವಿಷಕೊಟ್ಟು ಕೊಲ್ಲುವ ಉಪಾಯವನ್ನು ಮಾಡುತ್ತೇನೆ ಎಂದು ದುಷ್ಟಬುದ್ಧಿಯು ಆಲೋಚಿಸಿದನು. 


ರಾಕಾಶಶಾಂಕನಭ್ಯುದಮಂ ಕೆಡಿಸಿ ತ 

ನ್ನಾಕಾರಮಂ ತೋರಿಸುವೆನೆಂಬ ಕತ್ತಲೆವೊ 

ಲಾ ಕಮಲಲೋಚನನ ಭೃತ್ಯನಂ ಕೊಲಿಸಿ ತಾಂ ಬಾಳ್ವೆನೆಂಬುಜ್ಜುಗದೊಳು 

ಆ ಕುಮತಿಯಹಮಂತ್ರಿ ಬಳಿಕೊಂದು ಲೇಖನವ 

ನೇಕಾಂತದೊಳ್ ಬರೆದು ಮೇಣದಕೆ ಮುದ್ರೆಯಂ 

ಜೋಕೆಯಿಂದಳವಡಿಸಿ ಶಶಿಹಾಸನಂ ನೋಡಿ ನಸುನಗುತಲಿಂತೆಂದನು ||೩೮||


ಪೂರ್ಣಚಂದ್ರನ ಹೊಳಪನ್ನು ಮಬ್ಬು ಮಾಡಿ ತನ್ನ ರೂಪವನ್ನು ತೋರಿಸುವೆನೆಂದು ಯತ್ನಿಸುವ ಕತ್ತಲೆಯಂತೆ ವಿಷ್ಣುಭಕ್ತನಾದ ಚಂದ್ರಹಾಸನನ್ನು ಕೊಲ್ಲಿಸಿ ತಾನು ಬದುಕುವೆನೆಂಬ ಉದ್ಯೋಗದಲ್ಲಿ ದುರ್ಮತಿಯಾದ ಮಂತ್ರಿಯು ಏಕಾಂತದಲ್ಲಿ ಒಂದು ಕಾಗದವನ್ನು ಬರೆದು, ಅದಕ್ಕೆ ಎಚ್ಚರಿಕೆಯಿಂದ ಮುದ್ರೆ ಹಾಕಿ, ಚಂದ್ರಹಾಸನನ್ನು ನೋಡಿ ನಗುತ್ತಾ , ಹೀಗೆಂದು ಹೇಳಿದನು. 


ಉರ್ವ ಮಂತ್ರದ ಕಜ್ಜಮಿದು ಚಂದ್ರಹಾಸ ನೀ 

ನೊರ್ವನೆ ಹಯಾರೂಢನಾಗಿ ನಾಲ್ವರ್ ಸೇವ 

ಕರ್ವೆರಸಿ ರಾಜಧಾನಿಗೆ ಪೋಗಿ ತನ್ನ ಮಗ ಮದನಂಗೆ ಮುದ್ರೆಸಹಿತ 

ಸರ್ವಜನಮರಿಯದಂತೀವುದೀ ಪತ್ರಿಕೆಯ 

ನುರ್ವರೆಯೊಳಾವೆಸಗಿದತಿಶಯದ ಮಾಳ್ಕೆ ನ 

ಮ್ಮಿರ್ವರೊಳ್ ಗುಪ್ತಮಾಗಿರಲೆಂದು ಕೊಟ್ಟನಾ ಮಂತ್ರಿ ತಲ್ಲೇಖನನವನು ||೩೯||


" ಇದು ಬಹುಮುಖ್ಯವಾದ ವಿಷಯಕ್ಕೆ ಸಂಬಂಧಿಸಿದ ಪತ್ರ.ನೀನೊಬ್ಬನೇ ಕುದುರೆಯನ್ನು ಹತ್ತಿ, ನಾಲ್ಕು ಜನ ಸೇವಕರೊಡನೆ ರಾಜಧೃನಿ ಕುಂತಳ ನಗರಕ್ಕೆ ಹೋಗಿ ನನ್ನ ಮಗ ಮದನನಿಗೆ ಈ ಪತ್ರವನ್ನು ಮುದ್ರೆಯ ಸಮೇತವಾಗಿ ಕೊಡು.ಇದು ಅತಿ ವಿಶಿಷ್ಟವಾದ ಕೆಲಸ. ನಮ್ಮಿಬ್ಬರಲ್ಲೇ ಗುಟ್ಟಾಗಿರಲಿ " ಎಂದು ಹೇಳಿ ಆ ಕಾಗದವನ್ನವನಿಗೆ ಕೊಟ್ಟನು.



ತಿರಿದೆಳೆದಳಿರ್ಗಳಂ ಪಾಸಿ ಕುಳ್ಳಿರದೊಯ್ಯ 

ನೊರಗಲ್ಕೆ ನಡುವಗಲ ಬಿಸಿಲಿಂದೆ ಮಾರ್ಗದೊಳ್ 

ನೆರೆ ಬಳಲ್ದಿಹ ಚಂದ್ರಹಾಸಂಗೆ ತಣ್ಣೆಲರ ಸೊಗಸಿಂದೆ ಕಣ್ಣೆವೆಗಳು 

ಸೆರೆಗೊಂಡುವಾಲಿಗಳನಾತ್ಮೀಯ ಕೃತ್ಯಮಂ 

ಮರೆದು ನಿದ್ರಾಲೋಲನಾಗಿ ಮಲಗಿದವನಂ 

ಮಿರುಗುವಹಿತಲ್ಪದೊಳ್ ದೇವಪುರನಿಲಯ ಲಕ್ಷ್ಮೀವರಂ ಪವಡಿಸುವೊಲು ||೪೯||


ಎಳೆಯ ಚಿಗುರುಗಳನ್ನು ಕಿತ್ತು ಹಾಸಿ,ಸ್ವಲ್ಪಹೊತ್ತು ಕುಳಿತು , ಮಲಗಲು, ಬಿರುಬಿಸಿಲಿನಿಂದ ದಾರಿಯಲ್ಲಿ ಬಳಲಿದ್ದ ಚಂದ್ರಹಾಸನು ತಂಗಾಳಿ ಬೀಸಲು ಕಣ್ಣೆವೆಗಳು ಮುಚ್ಚಿ ನಿದ್ರಾಲೋಲನಾಗಿ,ಆದೆಶೇಷನ ಮೇಲೆ ಮಲಗುವ ದೇವಪುರದ ಲಕ್ಷ್ಮೀಕಾಂತನಂತೆ ಮಲಗಿದನು. 



ಮೂವತ್ತನೆಯ ಸಂಧಿ 


ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ 

ಕೇಳಿ ವೆಗ್ಗಳಿಸಿರ್ದ ಸಮಯದೊಳಲರ್ಗೊಯ್ವ 

ಬೇಳಂಬದಿಂದೆ ಕೆಲಸಿಡಿದು ಬಂದಾ ವಿಷಯೆ ಚೂತದದ್ರುಮದ ನೆಳಲೊಳು 

ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ ತಂ 

ಗಾಳಿಗೊಡ್ಡಿದ ಮೆಯ್ಯ ಸೊಗಸಿಂದೆ ಮರೆದು ನಿ 

ದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರಗಾದಳು ||೧೯||


ತನ್ನ ಜೊತೆಗಾತಿಯರೊಂದಿಗೆ ಚಂಪಕಮಾಲಿನಿಯು ಸರಸ ಕೇಳಿಯಲ್ಲಿದ್ದಾಗ, ಹೂ ಕೊಯ್ಯಬೇಕೆಂದು ಯೋಚಿಸಿ ವಿಷೆಯೆಯೋಬ್ಬಳೇ ಅವರನ್ನು ಬಿಟ್ಟು ಬೇರೊಂದು ಕಡೆಗೆ ಬಂದಳು.ಒಂದಾನೊಂದು ಮಾವಿನ ಮರದ ನೆರಳಿನಲ್ಲಿ,  ಚಿಗುರಿನ ಹಾಸಿಗೆಯ ಮೇಲೆ, ತಂಗಾಳಿಗೆ ಮೈಯೊಡ್ಡಿ,ತೋಳನ್ನೇ ತಲೆದಿಂಬನ್ನಾಗಿ ಮಾಡಿಕೊಂಡು ಮೈಮರೆದು 

ನಿದ್ರಾಮಗ್ನನಾಗಿದ್ದ ಚಂದ್ರಹಾಸನನ್ನು ಕಂಡು ಅತಿಶಯವಾಗಿಅಚ್ಚರಿಗೊಂಡಳು. 


ಒರ್ವರೊರ್ವರನಗಲರಶ್ವಿನೀದೇವತೆಗ 

ಳುರ್ವ ನಳಕೂಬರ ಜಯಂತಾದಿ ಸುರ ತನುಜ 

ರುರ್ವರೆಗದೇಕೆ ಬಹರಿನಶಶಿಗಳಾದೊಡಿಹವುಷ್ಣಶೀತ ದ್ಯುತಿಗಳು 

ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂ 

ಧರ್ವರೊಳಗಾವನೋ ಮನುಜನಲ್ಲೆಂದವನ 

ಸರ್ವಾಂಗಮಂ ಬಿಡದೆ ನೋಡಿದಳ್ ವಿಷಯೆ ವಿಷಯಾಸಕ್ತೆಯಾಗಿ ಬಳಿಕ ||೨೧||


ಅತಿ ಚಲುವರಾದ ಅಶ್ವಿನಿದೇವತೆಗಳು ಒಬ್ಬರನ್ನೊಬ್ಬರು ಅಗಲುವುದಿಲ್ಲ. ನಳಕೂಬರ ಜಯಂತರಲ್ಲೊಬ್ಬನೋ ಎಂದರೆ ಅವರೇಕೆ ಭೂಮಿಗೆ ಬರುತ್ತಾರೆ.  ಸೂರ್ಯನೋ ಚಂದ್ರನೋ ಆದರೆ ಅತಿ ಶಾಖ, ಶೀತಗಳ ಬೆಳಕು ಇರಬೇಕು. ಆದುದರಿಂದ ದೇವತೆಗಳು, ಯಕ್ಷರು, ಕಿನ್ನರು, ಸಿದ್ಧರು, ಗರುಡರು, ಗಂಧರ್ವರಲ್ಲಿ ಇವನು ಯಾರೋ ಒಬ್ಬನಿರಬೇಕು. ಇವನು ಮನುಷ್ಯನಲ್ಲ. ಎಂದುಮೋಹಾಸಕ್ತೆಯಾದ ವಿಷಯೆಯು ಅವನ ಸರ್ವಾಂಗಗಳನ್ನು ಬಿಡದೆ ನೋಡಿದಳು. 


ಬೆಚ್ಚೆರಳೆಗಂಗಳವನವಯವದ ಚೆಲ್ವಿನೊಳ್ 

ಬೆಚ್ಚುವಂಗಜನಾಗ ಕಿವಿವರೆಗೆ ತೆಗೆದು ತುಂ 

ಬೆಚ್ಚಲರ್ಗೊಲಂತರಂಗದೊಳ್ ನಾಂಟಿದುವು ದಾಂಟಿದುವು ಗರಿಗಳೊಡನೆ 

ಬೆಚ್ಚನಾದೆದೆಯಿಂದೆ ಕಾತರಿಸಿ ಮುದುಡುಗೊಂ 

ಡೆಚ್ಚರಿಂದೇಳ್ವ ರೋಮಾಂಚದೊಳಾಸೆ ಮುಂ 

ದೆಚ್ಚೆ ಬೆವರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳ್ವೆನು ||೨೨||


ಬೆಚ್ಚಿದ ತನ್ನ ಜಿಂಕೆಯ ಕಣ್ಣುಗಳನ್ನು ಚಂದ್ರಹಾಸನ ಅವಯವಗಳಲ್ಲಿಟ್ಟಾಗ ಮನ್ಮಥನು ತನ್ನ ಬಾಣಗಳನ್ನು ಹೂಡಿ ಕಿವಿವರೆಗೆಳೆದು ಬಿಡಲು ವಿಷಯೆಯಲ್ಲಿ ಅವು ನಾಟಿದವು. ಅವಳ ಎದೆ ಬಿಸಿಯಾಯಿತು. ಮನಸ್ಸು ಕಾತರಿಸಿತು, ರೋಮಾಂಚನಗೊಂಡ ಅವಳ ಮನದಾಸೆಯು ಮುಂದುವರಿಯಿತು. ಬೆವರುತ್ತಿದ್ದ ವಿಷಯೆಯು ಆವನನ್ನೇ ನೆಟ್ಟಗಂಗಳಿಂದ ನೋಡುತ್ತಿದ್ದಳು. 


ದಿವಿಜೇಂದ್ರತನಯನ ಕೇಳೀ ತೆರದೊಳಾಗ ನವ 

ಯುವತಿ ನಿಂದೀಕ್ಷಿಸುತ ಕಂಡಳವನಂಗದೊಳೆ 

ಸೆವ ರುಚಿರ ಕಂಚುಕದ ತುದಿಸೆರಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು 

ತವಕದಿಂ ಬಿಟ್ಟು ಮುದ್ರೆಯನೋಸರಿಸಿ ತೆಗೆದು 

ವಿವರದೊಳ್ ತನ್ನ ತಂದೆಯ ಹೆಸರ ಬರಹಮಿರೆ 

ಲವಲವಿಕೆ ಮಿಗೆ ನೋಡಿ ಹರ್ಷಪುಳಕದೊಳಂದು ನಿಂದೋದಿಕೊಳುತಿರ್ದಳು ||೨೪||


ಅರ್ಜುನನೇ ಕೇಳು,  ಈ ರೀತಿಯಲ್ಲಿ ಆ ನವಯುವತಿಯು ಚಂದ್ರಹಾಸನನ್ನೇ ನೋಡುತ್ತಾ ನಿಂತಿದ್ದು ಅವನ ಕಂಚುಕದ ತುದಿ ಸೆರಗಿನಲ್ಲಿ ಕಟ್ಟಿದ್ದ ಪತ್ರಿಕೆಯನ್ನು ನೋಡಿದಳು.  ಅದರಲ್ಲೇನಿದೆಯೋ ನೋಡಬೇಕೆಂಬ ತವಕದಿಂದ ಅದನ್ನು ಬಿಚ್ಚಿ ತೆಗೆದುಕೊಂಡು ಮುದ್ರೆಯನ್ನು ಸರಿಸಿ, ಅದನ್ನು ಬಿಚ್ಚಿ ತನ್ನ ತಂದೆಯ ಹೆಸರಿನ ಬರಹವಿರಲು ರೋಮಾಂಚನಗೊಂಡು ಆ ಪತ್ರವನ್ನು ಓದಿಕೊಂಡಳು. 


ಶ್ರೀಮತ್ಸಚಿವ ಶಿರೋಮಣಿ  ದುಷ್ಟಬುದ್ಧಿ ಸು

ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ 

ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ 

ಸೀಮೆಗರಸಾದಪಂ ಸಂದೇಹಮಿಲ್ಲಿದಕೆ 

ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ 

ಥಾಮಿತ್ರನಪ್ಷನೆಂದೀತನಂ ಕಳುಹಿದೆವು ನಿನ್ಶ ಬಳಿಗಿದನರಿವುದು ||೨೫||


ಆ ಕಾಗದದಲ್ಲಿ ಹೀಗೆ ಬರೆದಿತ್ತು; ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿಯು ತನ್ನ ಮಗ ಮದನನಿಗೆ ಹರಸಿ ಅತಿಶಯ ಪ್ರೇಮದಿಂದ ನೇಮಿಸಿರುವ ಕಾರ್ಯವು ಇದು :( ಇದನ್ನು ತಂದ) ಚಂದ್ರಹಾಸನು ನಮಗೆ ಮಹಾ ಹಿತ( ಅತಿಶಯ ಹಿತೈಷಿ, ಮಹಾ + ಅಹಿತ = ಮಹಾಶತ್ರು ) ಇಷ್ಟರಮೇಲೆ ನಮ್ಮ ರಾಜ್ಯಕ್ಕೆ ದೊರೆಯಾಗುತ್ತಾನೆ.  ಇದರಲ್ಲಿ ಸಂದೇಹವಿಲ್ಲ.  ಇವನು ಸಾಮಾನ್ಯನಲ್ಲ. ಮುಂದೆ ನಮಗೆ ಸರ್ವಥಾಮಿತ್ರನಾಗುತ್ತಾನೆ. ( ಎಲ್ಲ ವಿಧದಿಂದಲೂ ಮಿತ್ರ; ಸರ್ವಥಾ + ಅಮಿತ್ರ = ನಮಗೆ ಎಲ್ಲ ರೀತಿಯಿಂದಲೂ ವೈರಿ ) ಎಂದು ನಿನ್ನ ಬಳಿಗೆ ಕಳಿಸಿದ್ದೇವೆ, ತಿಳಿದುಕೋ. 


ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ 

ವಿತ್ತ ವಿದ್ಯಾವಯೋ ವಿಕ್ರಮಂಗಳಂ ನೀಕ್ಷಿ 

ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನಿದರೊಳೆಮಗೆ 

ಉತ್ತರೋತ್ತರಮಪ್ಪುದೆಂದು ಬರೆದಿಹ ಲಿಪಿಯ 

ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ 

ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು ||೨೬||


ಇವನು ಬಂದ ಕೂಡಲೆ ಸ್ವಲ್ಪವೂ , ತಡಮಾಡದೆ ಇವನ ಕುಲ, ಶೀಲ, ಧನ, ವಿದ್ಯೆ, ವಯಸ್ಸು ಯಾವುದನ್ನೂ ವಿಚಾರಿಸದೆ ಇವನಿಗೆ " ವಿಷವ ಮೋಹಿಸೈವಂತೆ ಕೊಡು". ಅದರಿಂದ ನಮಗೆ ಉತ್ತರೋತ್ತರವಾಗಿ ಒಳ್ಳೆಯದಾಗುತ್ತದೆ. ಹೀಗೆಂದು ಬರೆದ ಪತ್ರವನ್ನು ಓದಿಕೊಂಡು ಅದಕ್ಕೆ ಬೇರೊಂದು ಅಭಿಪ್ರಾಯವನ್ನು ತಿಳಿದುಕೊಂಡು ಬಿಟ್ಟಳು. ವಿಧಿಯ ಕಾರ್ಯವನ್ನು ಯಾರಾದರೂ ಮೀರಲು ಸಾಧ್ಯವೇ! 


ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ 

ಗೀತನರಸಹನೆಂದು ಕುಲಶೀಲ ವಿದ್ಯೆಗಳ 

ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು 

ಈತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂ

ದಾ ತಾತನಣ್ಣಂಗೆ  ಬರೆಸಿ ಕಳುಹಿದ ಪತ್ರ

ವೇ ತಪ್ಪದಿದು ವರ್ಣಪಲ್ಲಟದ ಮೋಸವೆಂದಬಲೆ ಭಾವಿಸುತಿರ್ದಳು ||೨೭||


ಈತನು ( ಚಂದ್ರಹಾಸನು )ನಮಗೆ ಮಹಾಹಿತ, ದೇಶಕ್ಕೆ ಈತ ಅರಸನಾಗುತ್ತಾನೆ . ಇವನಲ್ಲಿ ಕುಲಶೀಲ ವಿದ್ಯೆಗಳನ್ನು ಹುಡುಕಬೇಡ. ಇವನು ಮುಂದೆ ನಮಗೆ ಎಲ್ಲ ವಿಧದಿಂದಲೂ ಮಿತ್ರನಾಗುತ್ತಾನೆ. ಇವನಿಗೆ ವಿಷಯೆ ಮೋಹಿಸುವಂತೆ ಕೊಡು ಎಂದು ತಂದೆಯು ಅಣ್ಣನಿಗೆ ಬರೆದು ಕಳಿಸಿದ್ದಾನೆ. ಬರವಣಿಗೆಯಲ್ಲಿ ಅಕ್ಷರ ವ್ಯತ್ತಾಸವಾಗಿ ವಿಷವ ಎಂದಾಗಿ ಬಿಟ್ಟಿದೆ ಎಂದು ವಿಷಯೆಯು ಭಾವಿಸಿದಳು. 


ತಪ್ ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ 

ಗೊಪ್ಪುವ ಯಕಾರಮಂ ಕೆಲಬಲದ ಮಾಮರದೊ

ಳಿಪ್ಪ ನಿರ್ಯಾಸಮಂ ತೆಗೆದು ಕಿರುವೆರಳುಗುರ್ಗೊನೆಯಿಂದೆ ತಿದ್ದಿ ಬರೆದು 

ಅಪ್ಪನಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ

ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲಿರಿಸಿ 

ಸಪ್ಪುಳಾಗದ ತೆರದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು ||೨೯||


ಪತ್ರದಲ್ಲಿ ತಪ್ಪಾಗಿದ್ದ ಬರಹದಲ್ಲಿ " ವ" ಕಾರವನ್ನು ತೆಗೆದು ಪಕ್ಕದಲ್ಲಿ ಮಾವಿನ ಮರದ ಅಂಟೆನಿಂದ , ಕಿರು ಬೆರಳ ಉಗುರೆನ ತುದಿಯಿಂದ " ಯೆ " ಎಂದು ಮಾಡಿ, ಪತ್ರವನ್ನು ಮಡಿಚಿ, ಮುದ್ರೆಯನ್ನು ಮೊದಲಿದ್ದಂತೆ ಮಾಡಿ, ಕಂಚುಕದ ತುದ ಸೆರಗಿನಲ್ಲಿ ಕಟ್ಟಿ ಸದ್ದಾಗದಂತೆ ಮೆಲ್ಲನೆದ್ದು ವಿಷಯೆಯು ಬರುತ್ತಿದ್ದಳು. 


ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ 

ಬುಜ ಮಿತ್ರನಪರಾಹ್ಣಕೈದಲ್ಕೆ ನಿದ್ರೆಯಂ 

ತ್ಯಜಿಸಿ ಮೊಗೊಳೆದು ಮುಕ್ಕುಳಿಸಿ ಕಪ್ಪುರವೀಳೆಯಂಗೊಂಡು ಬಳಿಕ ಬಿಗಿಸಿ 

ನಿಜ ವಾಜಿಯಂ ಬಂದಡರ್ದನುಚರರ್ವೆರಸಿ 

ಋಜುವಾದ ಶಕುನಂಗಳಂ ಕೇಳುತೊಲಿದು ಪೌ 

ರ ಜನಮಿವನಾರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತಿರ್ದನು ||೪೨||


ಅರ್ಜುನನೇ ಕೇಳು, ಈ ಕಡೆ ಚಂದ್ರಹಾಸನು,  ಅಪರಾಹ್ನವಾಗಲು ನಿದ್ದೆಯಿಂದೆದ್ದು, ಮುಖ ತೊಳೆದು ಮುಕ್ಕುಳಿಸಿ, ಕರ್ಪೂರ ವೀಳೆಯವನ್ನು ಹಾಕಿಕೊಂಡು ತನ್ನ ಕುದುರೆಯನ್ನು ಸಿದ್ಧಪಡಿಸಿ, ಏರಿ, ಅನುಚರರಥಡನೌ ಕುಂತಳನಗರದಲ್ಲಿ ಬರುತ್ತಿರಲು ಜನರೈ ಇವನಾರು ಎಂದು ವಿಸ್ಮಿತರಾಗಿ ನೋಡುತ್ತಿದ್ದರು. 


ಆ ನಗರದೊಳ್ ಕುಂತಳೇಶ್ವರನು ನಿರ್ಮಲ 

ಜ್ಞಾನದಿಂ ಗಾಲವನ ಸೂಕ್ತಮಂ ಕೇಳುತ ಸ 

ದಾನಂದ ಯೋಗಮಂ ಕೈಕೊಂಡು ದುಷ್ಟಬುದ್ಧಿಗೆ ವಿಚಾರಮನೊಪ್ಪಿಸಿ 

ಧ್ಯಾನಪರನಾಗಿರ್ಪನದರಿಂದೆ ಪೊಳಲಂ ಪ್ರ 

ಧಾನಿ ಪಾಲಿಪನವಂ ಪೊರಮಟ್ಟಿರಲ್ಕೆ ತ 

ತ್ಸೂನು ಮದನಂ ಧುರಂಧರತೆವೆತ್ತಾ ಸಮಯಕೋಲಗದೊಳಿರುತಿರ್ದನು ||೪೩||


ಇತ್ತ ಕುಂತಳನಗರದ ರಾಜನು ಗಾಲವನ ಮಾತನ್ನು ಕೇಳಿ; ಸದಾನಂದ ಯೋಗವನ್ನು ಅಭ್ಯಸಿಸುತ್ತಾ ನಿರೂಮಲ ಜ್ಞಾನಾರ್ಜನತತ್ಪರನಾಗಿದ್ದನು. ದುಷ್ಟಬುದ್ಧಿಗೆ ರಾಜ್ಯದ ಆಡಳಿತವನ್ನೊಪ್ಪಿಸಿದ್ದನು. ದುಷ್ಟಬುದ್ಧಿಯು ಊರಿನಲ್ಲಿಲ್ಲದುದರಿಂದ, ಅವನ ಅಪ್ಪಣೆಯಂತೆ ಮಗನಾದ ಮದನನು ರಾಜ್ಯಾಡಳಿತದ ಭಾರವನ್ನು ಹೊತ್ತು ಸಭಾಸ್ಥಾನದಲ್ಲಿದ್ದನು. 


ನೀತಿ ಸಮ್ಮತದಿಂ ವಿವೇಕನಿಂತೆನೆ ಕೇಳ್ದು 

ಶಾತಕುಂಭಾಲಂಕೃತಾಸನವನಿಳಿದು ಹ 

ರ್ಷಾತಿಶಯದಿಂದೆ ಮದನಂ ಚಂದ್ರಹಾಸನನಿದಿರ್ವಂದು ಕಂಡು ನಗುತೆ 

ಪ್ರೀತಿಯಿಂದಪ್ಪಿ ಕೈವಿಡಿದೊಡನೆ ಸಭೆಗೆ ತಂ 

ದಾತನಂ ಸತ್ಕರಿಸಿ ಚಂದನಾವತಿಯ ತ 

ದ್ಭೂತಳದ ಮೇಧಾವಿನಿಯ ಕುಳಿಂದನ ಕುಶಲದೇಳ್ಗೆಯಂ ಬೆಸಗೊಂಡನು ||೪೮||


ವಿವೇಕನು ಹೀಗೆ ನೀತಿಸಮ್ಮತವಾದ ಮಾತನ್ನು ಹೇಳಲು, ಮದನನು ಬಂಗಾರದ ಸಿಂಹಾಸನವನ್ನಿಳಿದು ಹೋಗಿ ಅತಿ ಸಂತೋಷದಿಂದ ಚಂದ್ರಹಾಸನನ್ನಿದಿರುಗೊಂಡು, ನಗುತ್ತಾ ಅಪ್ಪಿಕೊಂಡು, ಕೈಹಿಡಿದು ಸಭೆಗೆ ಕರೆದುಕೊಂಡು ಬಂದು ಸತ್ಕಾರ ಮಾಡಿ, ಚಂದನಾವತಿಯ ಒಡೆಯ ಕುಳಿಂದಕ ಮತ್ತು ಅವನ ಪತ್ನಿ ಮೇಧಾವಿನಿಯರ ಕುಶಲವಾರ್ತೆಯನ್ನು ಕೇಳಿದನು. 


ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದ 

ರ್ಶನಮಿಂದಪೂರ್ವಮಾದುದು ಬಂದ ಕಾರ್ಯಮಂ 

ತನಗೊರೆವುದೆಂದು ಮದನಂ ಚಂದ್ರಹಾಸನಂ ಕೇಳ್ದೊಡಾತಂಗೆ ನಿನ್ನ 

ಜನಕನೆನ್ನಂ ನಿನ್ನಬಳಿಗತಿರಹಸ್ಯದಿಂ 

ದನುಮತಿಸಿ ಕಳುಹಲಾನೈತಂದೆನೆಂದು ಕುರು 

ಪಿನ ಮುದ್ರೆ ಸಹಿತ ನಿಜ ಕರದೊಳಿಹ ಪತ್ರಮಂ ಕೊಟ್ಟನಾತನ ಕೈಯೊಳು ||೪೯||


ಮದನನು ನಸುನಗೆಯಿಂದ " ನಿನ್ನ ದರ್ಶನವುಅಪೂರ್ವ ನೀನು ಬಂದ ಕಾರ್ಯವೇನು ನನಗೆ ಹೇಳು " ಎಂದು ಚಂದ್ರಹಾಸನನ್ನು ಕೇಳಿದನು. ಚಂದ್ರಹಾಸನು " ನಿನ್ನ ತಂದೆಯು ಒಂದಾನೊಂದು ಅತಿರಹಸ್ಯವಾದ ಕಾರ್ಯಕ್ಕಾಗಿ ನನ್ನನ್ನು ಕಳಿಸಿದನು. ಆದುದರಿಂದ ಬಂದಿದ್ದೇನೆ" ಎಂದು ಹೇಳಿ ಆ ಕಾಗದವನ್ನು ಅವನಿಗೆ ಕೊಟ್ಟನು, 


ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ 

ದೀಸುವೊಕ್ಕಣೆಗಳ್ ಮಹಾಹಿತಂ ತನಗೀತ 

ನೀ ಸೀಮೆಗರಸಾದಪಂ ಸರ್ವಥಾಮಿತ್ರನಪ್ಪವಂ ನಿಶ್ಚಯಮಿದು 

ಮೋಸವೇ ಕುಲಾಚಾರಗತಿಯ ನಾರೈವೊಡೆ ವಿ 

ಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನಿದ 

ಕೋಸರಿಸಲೇತಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದನು ||೫೧||


ಮದನನು " ಅಪ್ಪನು ನನಗೆ ನೇಮಿಸಿ ಕಳುಹಿಸಿದ ಒಕ್ಕಣೆ ಬಹಳ ಒಳ್ಳೆಯದಾಯಿತು. ಇವನು ನನಗೆ ಮಹಾಹಿತ( ಮಹಾ+ ಅಹಿತ ಎನ್ನುವುದು ದುಷ್ಟಬುದ್ಧಿಯ ಅಭಿಪ್ರಾಯ ) ಮುಂದೆ ಈ ಸೀಮೆಗೆ ರಾಜನಾಗುತ್ತಾನೆ.  ನನಗೆ ಸರ್ವಥಾ ಮಿತ್ರನಾಗುವವನು ( ಸರ್ವಥಾ + ಅಮಿತ್ರ ಎನ್ನುವುದು ದುಷ್ಟಬುದ್ಧಿಯ ಅಭಿಪ್ರಾಯ  ) ಎಂದ ಮೇಲೆ ಕುಲ ಆಚಾರಗಳನ್ನು ವಿಚಾರಿಸಿದರೆ ಮೋಸವಾದೀತು. ಇವನಿಗೆ ವಿಷೆಯು ಮೋಹಿಸುವಂತೆ ಕೊಡುತ್ತೇನೆ. ಇದಕ್ಕೇಕೆ ಹಿಂಜರಿಯಲಿ? ನನ್ನ ತಂಗಿಗೆ ಇವನು ತಕ್ಕವನೇ " ಎಂದು ಯೋಚಿಸಿದನು. 


ಗಣಿತಜ್ಞರಂ ಕರೆಸಿ ನೋಡಿಸಿದನಾಗಳನು 

ಗುಣಮಾದ ರಾಶಿಕೂಟವನಮಲ ಲಗ್ನಮಂ 

ಗುಣಿಸಿ ವಿಸ್ತರಿಸಿದರ್ ಬಳಿಕ ಮದನಂ ಮಾಡಿಸಿದನೊಸಗೆಯಂ ಪೊಳಲೊಳು 

ಹೊಸದೇನಿದೆ

ಮೂವತ್ತೊಂದನೆಯ ಸಂಧಿ 


ದುಷ್ಟಬುದ್ಧಿ ಮದನರನ್ನು ಬದುಕಿಸುವುದು 


ಸೂಚನೆ :

ಕೃತವಿವಾಹದೊಳಗುಪಹತಿಯ ಕೃತಕಂಗಳಿಂ 

ಸುತನೊಡನೆ ಮೃತನಾದ ಮಂತ್ರಿಯಂ ಧರಣಿಗಧಿ 

ಪತಿಯಾಗಿ ನೆಗಪಿದಂ ಚಂದ್ರಹಾಸಂ ಚಂಡಿಕಾದೇವಿಯಂ ಮೆಚ್ಚಿಸಿ


ಸೂಚನೆ : ಮದುವೆಯಾದ ಚಂದ್ರಹಾಸನನ್ನು ಕೊಲ್ಲಲು ಮಾಡಿದ ಕಪಟ ಕೃತ್ಯದಿಂದ ತಾನೇ ಮಗನೊಡನೆ ಮೃತನಾದ ದುಷ್ಟಬುದ್ಧಿಯನ್ನು ದೊರೆಯಾದ ಚಂದ್ರಹಾಸನನು ಚಂಡಿಕಾದೇವಿಯನ್ನು ಮೆಚ್ಚಿಸಿ ಬದುಕಿಸಿದನು. 


ಕೊಂದಪನೊ ವಿಷವನೂಡಿಸಿ ಚಂದ್ರಹಾಸನಂ 

ಮಂದಮತಿಯಾಗಿ ಮರೆದಿರ್ದಪನೊ ಮಗನೆಂಬ 

ಸಂದೇಹದಿಂ ಚಂದನಾವತಿಯೊಳಿರದೆ ಕುಂತಳಪುರಕೆ ದುಷ್ಟಬುದ್ಧಿ 

ನಿಂದಲ್ಲಿ ನಿಲ್ಲದೈತರೆ ಪಥದೊಳಿದಿರಾಗಿ 

ಬಂದು ನುಡಿದುದು ಸರ್ಪಮೊಂದು ನಿನ್ನಾಲಯದೊ

ಳಿಂದುವರೆಗೊಡವೆಯಂ ಕಾದಿರ್ದೆನದು ನಿನ್ನ ಸುತನಿಂದೆ ಪೋದುದೆಂದು ||೨೮||


ಮದನನು ವಿಷವನ್ನು ಹಾಕಿ ಚಂದ್ರಹಾಸನನ್ನು ಕೊಂದನೋ, ಅಥವಾ ಬುದ್ಧಿಗೇಡಿಯಾಗಿ ಸುಮ್ಮನಿರುವನೋ ಎಂಬ ಅನುಮಾನದಿಂದ ದುಷ್ಟಬುದ್ಧಿಯು ಎಲ್ಲಿಯೂ ನಿಲ್ಲದೆ ಕುಂತಳಪುರಕ್ಕೆ ಬರುತ್ತಿದ್ದನು.ದಾರಿಯಲ್ಲಿ ಒಂದು ಸರ್ಪವು ಎದುರಿಗೆ ಬಂದು ನಿನ್ನ ಮನೆಯಲ್ಲಿ ಇದುವರೆಗೂ ಐಶ್ವರ್ಯವನ್ನು ಕಾದುಕೊಂಡಿದ್ದೆ.ನಿನ್ನ ಮಗನಿಂದ ಐಶ್ವರ್ಯವು ವ್ಯಯವಾಯಿತು ಎಂದು ಹೇಳಿತು. 


ಮಾನವರ ತೆರದೊಳಿಂತೆಂದೊರೆದು ಫಣಿ ಬಿಲಕೆ 

ತಾನಿಳಿಯೆ ಕೇಳ್ದು ವಿಸ್ಮಿತನಾಗಿ ಮಂತ್ರಿ ದು 

ಮ್ಮಾನದಿಂ ನಗರದ ಸಮೀಪಕೈತರೆ ವಾದ್ಯಘೋಷಿತಂ ಕಿವಿಯೊಳಿಡಿಯೆ 

ಏನಿದುತ್ಸವಮೂರೊಳೆನೆ ಕಂಡವರ್ ನಿನ್ನ 

ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿ 

ಧಾನದಿಂ ಮದುವೆಯಂ ಮಾಡಿಸಿದನದರೊಸಗೆ ಪೊಳಲೊಳಾದಪುದೆಂದರು ||೨೯||


ಆ ಸರ್ಪವು ಮನುಷ್ಯರಂತೆ ಹೀಗೆ ಹೇಳಿ ಬಿಲದಲ್ಲಿ ಹೋಯಿತು. ಅದರ ಮಾತನ್ನು ಕೇಳಿ ದುಃಖಿತನಾಗಿ ಮಂತ್ರಿಯು ಊರ ಸಮೀಪಕ್ಕೆ ಬರಲು ಮಂಗಳವಾದ್ಯ ಘೋಷವು ಕಿವಿಯನ್ನು ತುಂಬಿತು. ದಾರಿಯಲೂಲಿ ಕಂಡವರನ್ನು ಊರಲ್ಲಿ ಇದೇನು ಉತ್ಸವವೆಂದು ಕೇಳಿದನು. ಅವರು " ನಿನ್ನ ಮಗನು ಚಂದ್ರಹಾಸನಿಗೂ ವಿಷಯೆಗೂ ವೈಭವದಿಂದ ಮದುವೆಯನ್ನು ಮಾಡಿಸಿದ್ದಾನೆ. ಆ ಒಸಗೆ ಊರಲ್ಲಿ ಹಬ್ಬುತ್ತಿದ" ಎಂದರು. 


ರಂಜಿಸುವಪೊಸಮುತ್ತಿನೆಸೆವ ಬಾಸಿಗದ ನೊಸ  

ಲಿಂ ಜಡಿವ ಮಣಿಭೂಷಣಾವಳಿಯ ಕಾಂತಿಯಿಂ 

ಮಂಜುಳ ಹರಿದ್ರ ಕುಂಕುಮ ಚರ್ಚಿತಾಂಗದಿಂ ಚೆಲ್ವಿಂದೆ ಸಂಗಡಿಸಿದ 

ಅಂಜಲಿಗಳಿಂ ಮೆರೆವ ದಂಪತಿಗಳಭಿನಮಿಸೆ 

ಮಂಜರಂ ಮರಿಗಿಳಿಗಳಂ ನಿರೀಕ್ಷಿಸುವಂತೆ 

ನಂಜಿಡಿದ ಮನದಮಾತ್ಯಂ ನೋಡಿ ತನ್ನ ಸುತನಂ ಬಯ್ಯುತಿಂದೆಂದನು ||೩೨||


ಮುತ್ತಿನ ಹೊಸ ಬಾಸಿಂಗವನ್ನು ಧರಿಸಿ, ಹೊಳೆಹೊಳೆಯುವ ಮಣಿಭೂಷಣಗಳನ್ನು ತೊಟ್ಟು, ಹರಿದ್ರಾಕುಂಕುಮಲೇಪಿತ ದೇಹಕಾಂತಿಯಿಂದ ಕೂಡಿದ ಬಂದು ಅಂಜಲಿಹಸ್ತರಾಗಿ ನಮಸ್ಕರಿಸಿದ ಮದುಮಕ್ಕಳನ್ನು ಬೆಕ್ಕು ಗಿಣಿಮರಿಗಳನ್ನು ನೋಡಿದಂತೆ ನೋಡಿ, ವಿಷದಿಂದ ತುಂಬಿದ ಹೃದಯದ ದುಷ್ಟಬುದ್ಧಿಯುಮಗನನ್ನು ಬೈದನು. 


ಮೂಡನೀನೆಲವೊ ಮದನ ನಿನ್ನೆಡೆಗೆ ನಾಂ

ಗೂಢದಿಂ ಬರೆಸಿ ಕಳುಹಿದೊಡುರುವ ಕಜ್ಜಮಂ 

ರೂಢಿಯಿಂ ಮಾಡಿ ಕೆಡಿಸಿದೆ ಪಾಪಿ ಹೃದಯ ಶೂಲನೆನಗೆ ಮೇದಿನಿಯೊಳು 

ಗಾಢದಿಂ ಬಲಿದೆ ಸಾಮ್ರಾಜ್ಯಯ ಸಿಂಹಾಸನಾ 

ರೂಢನಾಗಿರಲೊಲ್ಲದಿರ್ಜಿಸಿದ ವಿತ್ತಮಂ 

ವೇಡೈಸಿದಖಿಳ ಜನಕಿತ್ತೆ ವನವಾಸವೇ ಗತಿ ನಿನಗೆ ಹೋಗೆಂದ ||೩೩||


ದುಷ್ಟಬುದ್ಧಿಯು " ಮದನ, ನೀನು ಮೂಢ, ನಾನು ರಹಸ್ಯವಾಗಿ ಬರೆದು ಕಳಿಸಿದ ಮಹತ್ಕಾರ್ಯವನ್ನು ಕೆಡಿಸಿಬಿಟ್ಟೆ. ಪಾಪಿ, ನನ್ನ ಹೃದಯಕ್ಕೆ ಶೂಲವನ್ನು ಆಳವಾಗಿ ಚುಚ್ಚಿದೆ. ಸಾಮ್ರಾಟನಾಗಿ ಸಿಂಹಾಸನದ ಮೇಲೆ ಕುಳಿತುಕೊಳ್ಳದೆ, ಇಷ್ಟು ದಿವಸ ಗಳಿಸಿ ಕೂಡಿಟ್ಟ ಹಣವನ್ನು ಜನರಿಗೆ ಕೊಟ್ಟು ಕಳೆದೆ. ನಿನಗೆ ವನವಾಸವೇ ಗತಿ, ಹೋಗು " ಎಂದು ಮಗನನ್ನು ಬೈದನು. 


ಪಿತನ ಮಾತಂ ಕೇಳ್ದು ಮದನನುರೆ ಬೆರಗಾಗಿ 

ಖತಿಯೇಕೆ ಜೀಯ ನಿಮ್ಮಡಿಗಳ ನಿರೂಪಮಂ 

ಪ್ರತಿಪಾಲಿಸಿದೆನಲ್ಲದಾನತಿಕ್ರಮಿಸಿ ಮಾಡಿದ ಕಜ್ಜಮೇನಿದರೊಳು 

ಕ್ಷಿತಿಗೆ ಕೌತುಕವೆ ತಂದೆಯ ಮಾತಿಗಾಗಿ ರಘು 

ಪತಿ ವರ್ತಿಸನೆವಿಪಿನ ವಾಸದೊಳ್ ಪತ್ರಸಂ 

ಮತಿವಿಡಿದು ವಿಷಯೆಗೆ ವಿವಾಹಮಂ ವಿರಚಿಸಿದೊಡಾಯ್ತೆನಗೆ ವನಮೆಂದನು ||೩೪||


ತಂದೆಯ ಮಾತನ್ನು ಕೇಳಿ ಬೆರಗಾದ ಮದನನು  " ಜೀಯಾ, ನನ್ನ ಮೇಲೇಕೆ ಕೋಪ ? ನಿಮ್ಮ ಪಾದಗಳ ಆಜ್ಞೆಯನ್ನು ನಾನು ಪರಿಪಾಲಿಸಿದೆನಲ್ಲದೇ, ಅದನ್ನು ಮೀರಿ ನಡೆದುದಾದರೂ ಏನು? ತಂದೆಯ ಮಾತಿನಂತೆ ಶ್ರೀರಾಮನು ಕಾಡಿಗೆ ಹೋಗಲಿಲ್ಲವೇ ? ಪತ್ರದಲ್ಲಿ ನೀವು ಕೊಟ್ಟ ಆಜ್ಞೆಯಂತೆ ವಿಷಯೆಗೆ ವಿವಾಹವನ್ನು ಮಾಡಿದ್ದೇನೆ.ಅದಕ್ಕಾಗಿ ನನಗೆ ವನವೃಸವೇ!" ಎಂದನು. 


ಗನ್ನಗತಕದ ಮಾತು ಸಾಕೆನ್ನ ಕಣ್ಣಮುಂ 

ದಿನ್ನಿರದೆ ಹೋಗೆಂದು ಮಂತ್ರಿ ಮಗನಂ ಬೈದು 

ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿ ನೋಡಿಕೊಂಡದರೊಳಿರ್ದ 

ಭಿನ್ನಿಸಿದ ಭಾವಾರ್ಥಮಂ ತಿಳಿದು ತಪ್ಪಿಲ್ಲ 

ವೆನ್ನ ತನಯನೊಳಿನ್ನು ಲೋಕದೊಳ್ ವಿಧಿಲಿಖಿತ 

ಮನ್ನಿವಾರಿಪರುಂಟೆ ಶಿವಾಶಿವಾ ಪೊಸತೆಂದು ಬಿಸುಸುಯ್ದು ಬೆರಗಾದನು||೩೫||


ದುಷ್ಟಬುದ್ಧಿಯು " ಈ ಮೋಸದ ( ಕಪಟದ ) ಮಾತು ಸಾಕು. ನನ್ನಿದಿರಿನಲ್ಲಿರಬೇಡ ಹೊರಟು ಹೋಗು" ಎಂದು ಮಗನನ್ನು ಬೈದು, ತಾನು ಬರೆದಿದ್ದ ಪತ್ರವನ್ನು ತರಿಸಿಕೊಂಡು ನೋಡಿದನು. " ನನ್ನ ಮಗನಲ್ಲಿ ತಪ್ಪಿಲ್ಲ. ಈ ಲೋಕದಲ್ಲಿ ವಿಧಿಯ ಬರೆಹವನ್ನು ನಿವಾರಿಸುವವರು ಇರುವರೇ ! ಶಿವಶಿವಾ ಇದು ಬಹಳ ವಿಚಿತ್ರ". ಎಂದು ನಿಟ್ಟುಸಿರು ಬಿಟ್ಟು ಬೆರಗಾದನು. 


ವಿಷವ ಮೋಹಿಸುವಂತೆ ಕೊಡುವುದೆನಲೀತಂಗೆ 

ವಿಷಯೆ ಮೋಹಿಸುವಂತೆ ಕೊಡುವುದೆಂಬೀ ಲೇಖ 

ವಿಷಯವಿದು ವಿಧಿಕೃತವೋ ತನ್ನ ಮೋಸವೊ ಬರೆದವನ ಮರರೆಹೊ ಶಶಿಹಾಸನ 

ಮೃಷೆಯೊ ಮದನನ ಮೇಲೆ ತಪ್ಪಿಲ್ಲ ಮೊದಲೆನಗೆ 

ಋಷಿಗಳಾಡಿದ ಮಾತು ಪುಸಿಯದೆಂದಾ ಮಂತ್ರಿ 

ವಿಷಮಬುದ್ಧಿಯೊಳೊಂದುಪಾಯಮಂ ಮನದೊಳಗೆ ನೆನೆದು ಚಿಂತಿಸುತಿರ್ದನು ||೩೬||


" ವಿಷವ ಮೋಹಿಸುವಂತೆ ಕೊಡುವುದು" ಎಂದು ನಾನು ಬರೆಸಿದರೆ ಇಲ್ಲಿ ವಿಷಯೆ ಮೋಹಿಸುವಂತೆ ಕೊಡುವುದು ಎಂದು ಬರೆದಿದೆ. ಇದು ವಿಧಿ ವಿಲಾಸವೋ, ನನ್ನ ಮೋಸವೋ, ಬರೆದವನ ಮರೆವೋ (ತಪ್ಪೋ ) ಚಂದ್ರಹಾಸನ ಸುಳ್ಳೋ ತಿಳಿಯದು. ಮದನನಲ್ಲಿ ತಪ್ಪಿಲ್ಲ. ಬ್ರಾಹ್ಮಣರು ಮೊದಲೇ ಹೇಳಿದ ಮಾತು ಸುಳ್ಳಾಗುವುದಿಲ್ಲ ಎಂದು ದುಷ್ಟಬುದ್ಧಿಯು ಚಿಂತಿಸಿ ಮತ್ತೊಂದು ಉಪಾಯವನ್ನು ಮನಸ್ಸಿನಲ್ಲೇ ಚಿಂತಿಸುತ್ತಿದ್ದನು. 


ವಿಧುಹಾಸನಂ ಪಲವುಪಾಯದಿಂದೀಗ ನಾಂ 

ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ 

ಳ್ವಧಿಕ ಸಂಪದಮಾಹಗದದರಿಂದೆ ಕುಲಘಾತಕಗೆ ಮದುವೆಯಾದ ವಿಷಯೆ 

ವಿಧವೆಯಾಗಿರಲೆಂದು ಹೃದಯದೊಳ್ ನಿಶ್ಚೈಸಿ 

ಮಧುರೋಕ್ತಿಯಿಂದೆ ಮದುಮಕ್ಕಳಂ ಮನ್ನಿಸಿ ವಿ 

ವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದಿಂತೆಂದನು ||೩೭||


ಚಂದ್ರಹಾಸನನ್ನು ನಾನೀಗ ಉಪಾಯದಿಂದ ವಧಿಸದಿದ್ದರೆ, ನನ್ನ ವಂಶಕ್ಕೆ ರಾಜತ್ವ ತಪ್ಪಿ ಹೋಗುತ್ತದೆ.  ಆಳ್ವಿಕೆಯ ಸಂಪತ್ತು ಇಲ್ಲವಾಗುತ್ತದೆ.  ಆದುದರಿಂದ ಕುಲಘಾತಕನಾದ ಚಂದ್ರಹಾಸನನ್ನು ವರಿಸಿದ ವಿಷಯೆಯು ವಿಧವೆಯಾಗಿರಲಿ ಎಂದು ದುಷ್ಟಬುದ್ಧಿಯು ಮನಸ್ಸಿನಲ್ಲಿ ನಿರ್ಧರೀಸಿ, ಮದುಮಕ್ಕಳನ್ನು ಒಳ್ಳೆಯ ಮಾತುಗಳಿಂದ ಮನ್ನಿಸಿದನು. ಅವರಿಗೆ ಅನೇಕ ಸನ್ಮಾನಗಳನ್ನು ಮಾಡಿದನು. ನಂತರ ಚಂದ್ರಹಾಸನೊಬ್ಬನನ್ನೇ ಕರೆದು ಹೀಗೆಂದು ಹೇಳಿದನು. 


ವೀರ ಬಾರೈ ಚಂದ್ರಹಾಸ ನೀನಿನ್ನೆಗಂ 

ದೂರಮಾಗಿರ್ದೆ ನಮಗಿನ್ನಳಿಯನಾದ ಬಳಿ 

ಕೂರ ಹೊರ ಬನದೊಳಿಹ ಚಂಡಿಕಾಲಯಕೆ ಮದುವೆಯ ನಾಲ್ಕನೆಯ ದಿನದೊಳು 

ನೀರಜಸಖಾಸ್ತ ಸಮಯದೊಳೊರ್ವನೇ ಪೋಗಿ 

ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾ 

ಚಾರಮಿದು ವರನಾದವಂಗೆ ನೀನಿಂದಿದಂ ಮಾಡೆಂದು ನೇಮಿಸಿದನು ||೩೮||


" ಚಂದ್ರಹಾಸ, ಇಷ್ಟು ದಿನ ನಮಗೆ ದೂರವಾಗಿದ್ದೆ.ಈಗ ಅಳಿಯನಾಗಿರುವೆ. ನಮ್ಮ ವಂಶದಲ್ಲಿ ಒಂದು ನಡವಳಿಕೆ (ಪದ್ದತಿ ) ಇದೆ. ಅಳಿಯನಾದವನು, ಮದುವೆಯಾದ ನಾಲ್ಕನೆಯ ದಿನ, ಸೂರ್ಯಾಸ್ತಮಯ ಸಮಯದಲ್ಲಿ ಒಬ್ಬನೇ ಹೋಗಿ, ಗೌರೀದೇವಿಯನ್ನು ಪೂಜಿಸಿ, ಬರಬೇಕು. ಇಂದು ನೀನು ಈ ಆಚಾರವನ್ನು ನಡೆಸು" ಎಂದು ದುಷ್ಟಬುದ್ಧಿಯು ಹೇಳಿದನು.  


ಲೇಸಾದುದೆಂದು ಮಾವನ ಮಾತಿಗೊಪ್ಪಿ ಶಶಿ 

ಹಾಸಂ ಪ್ರಸೂನ ಗಂಧಾಕ್ಷತೆಗಳಂ ತರಿಸ 

ಲಾ ಸಚಿವನತಿ ಗೂಢದಿಂದೆ ಚಂಡಾಲರಂ ಕರೆಸಿ ನೀವಂದಿನಂತೆ 

ಮೋಸದಿಂ ಬಿಟ್ಟು ಬಾರದೆ ಚಂಡಿಕಾಲಯಕೆ 

ನೇಸರಂಬುಧಿಗಿಳಿಯಲರ್ಚನೆಗೆ ಬಹನೋರ್ವ 

ನೋಸರಿಸದಡಗಿಕೊಂಡಿರ್ದಾತನಂ ಕೊಲ್ವುದೆಂದು ಬೆಸಸಿದನವರ್ಗೆ ||೩೯||


ಚಂದ್ರಹಾಸನು ಮಾವನ ಮಾತಿಗೆ " ಒಳ್ಳೆಯದಾಯಿತು,  ( ಹಾಗೇ ಮಾಡುತ್ತೇನೆ  )" ಎಂದೊಪ್ಪಿಕೊಂಡು ಹೂವು, ಮಂತ್ರಾಕ್ಷತೆ, ಗಂಧಗಳನ್ನು ತರಿಸಿಕೊಂಡು ಊರ ಹೊರಗಿನ ಚಂಡಿಕಾಲಯಕ್ಕೆ ಹೋದನು. ದುಷ್ಟಬುದ್ಧಿಯು ಚಂಡಾಲರನ್ನು ಕರೆಸಿ " ನೀವು ಹಿಂದೆ ಮಾಡಿದಂತೆ ಮಾಡದೆ ಹೇಳಿದ ಕೆಲಸವನ್ನು ತಪ್ಪದೆ ಮಾಡಬೇಕು. ಚಂಡಿಕಾಲಯಕ್ಕೆ ಸೂರ್ಯನು ಮುಳುಗುವ ವೇಳೆಗೆ ಬ್ಬನು ಪೂಜೆಗೆ ಬರುತ್ತಾನೆ.  ನೀವು ಮರೆಯಾಗಿ ನಿಂತಿದ್ದು ಅವನನ್ನು ಕೊಲ್ಲಿರಿ" ಎಂದು ಆಜ್ಞಾಪಿಸಿದನು. 


ಉತ್ತಮ ಹಯಾರೂಢನಾಗಿ ಮದನಂ ಜವದೊ 

ಳಿತ್ತಣಿಂದೈದೆ ರವಿ ಪಶ್ಚಿಮಾಂಬುಧಿಗಿಳಿವ

ಪೊತ್ತು ಪೊಂದಳಿಗೆಯೊಳ್ ಪುಷ್ಪ ಫಲ ತಾಂಬೂಲ ಗಂಧಾಕ್ಷತೆಗಳನಿರಿಸಿ 

ಎತ್ತಿಕೊಂಡತ್ತಣಿಂ ಬಹ ಚಂದ್ರಹಾಸನ ನಿ 

ದೆತ್ತಪೋದಪೆಯೆಂದು ಬೆಸಗೊಳಲ್ ತವ ಪಿತಂ 

ತೆತ್ತಸುವ್ರತಮೆನಲ್ ಚಂಡಿಕಾ  ಪೂಜೆಯಂ ಮಾಡಿ ಬಂದಪೆನೆಂದನು ||೪೩||


ಮದನನು ಉತ್ತಮವಾದ ಕುದುರೆಯನ್ನು ಹತ್ತಿ ವೇಗವಾಗಿ ಹೊರಡುವಾಗ ಸೂರ್ಯಾಸ್ತಮಯ ಸಮಯ. ಆಗ ಚಂದ್ರಹಾಸನು ಒಂದು ಬಂಗಾರದ ತಟ್ಟೆಯಲ್ಲಿ ಹೂವು, ಹಣ್ಣು,  ತಾಂಬೂಲ,  ಗಂಧ, ಅಕ್ಷತೆಗಳನ್ನಿಟ್ಟುಕೊಂಡು ಮದನನ ಎದುರಿಗೆ ಬರುತ್ತಿದ್ದನು. ಮದನನು " ಇವೆಲ್ಲವನ್ನು ತೆಗೆದುಕೊಂಡು ಎಲ್ಲಿಗೆ ಹೋಗುತ್ತಿರುವೆ" ಎಂದು ಕೇಳಿದನು. ಚಂದ್ರಹಾಸನು " ನಿನ್ನ ತಂದೆಯು ಹೇಳಿದ ವ್ರತವನ್ನು ನಡೆಸಲು ಚಂಡಿಕಾದೇವಿಯ ಪೂಜೆ ಮಾಡಿ ಬರುತ್ತೇನೆ" ಎಂದನು.  ಹಯಾರೂಢನಾಗಿ


ತಟ್ಟನೆ ತುರಂಗಮವನಿಳಿದಿಳೆಗೆ ಮತ್ಪಿತನ 

ಕಟ್ಟಳೆಯ ಚಂಡಿಕಾ ಪೂಜೆಗಾಂ ಪೋದಪೆಂ 

ನೆಟ್ಟನೆ ಮಹೀಶ್ವರನಂ ಪಿರಿದು ಕಜ್ಜಕೆ ನಿನ್ನೊಡಗೊಂಡು ಬಾಯೆನಲ್ಕೆ 

ಕಟ್ಟವಸರಕ್ಕೆ ಬಂದನೆಂದರ್ಚನಾ ದ್ರವ್ಯ 

ಮಿಟ್ಟ ಪೊಂದಳಿಗೆಯಂ ತೆಗೆದುಕೊಂಡಶ್ವಮಂ 

ಕೊಟ್ಟಾತನಂ ಕಳುಹಿ ಪೊರಮಟ್ಟನೇಕಾಕಿಯಾಗಿ ಮದನಂ ಪೊಳಲನು ||೪೪||


ಮದನನು ತಟ್ಟನೆ ಕುದುರೆಯನ್ನಿಳಿದು " ನನ್ನ ತಂದೆ ಹೇಳಿದ ಕಟ್ಟಲೆಯನ್ನು ನಡೆಸಲು ನಾನು ಹೋಗುತ್ತೇನೆ, ರಾಜನು ಮಹಾತ್ಕಾರ್ಯವೊಂದಕ್ಕಾಗಿ ನಿನ್ನನ್ನು ಕರೆದುಕೊಂಡು ಬಾ ಎನ್ನಲು ಅತಿ ಅವಸರದಿಂದ ಬಂದಿದ್ದೇನೆ " ಎಂದು ಪೂಜಾಸಾಮಗ್ರಿಯಿದ್ದ ಬಂಗಾರದ ತಟ್ಟೆಯನ್ನು ತಾನು ತೆಗೆದುಕೊಂಡು, ಕುದುರೆಯನ್ನು ಚಂದ್ರಹಾಸನಿಗೆ ಕೋಟ್ಟು ತಾನೊಬ್ಬನೇ ಊರನ್ನು ಬಿಟ್ಟು ಹೊರ ಹೊರಟನು. 


ತನ್ನ ಪಿತನಾಜ್ಞೆಯಂ ನಡೆಸುವ ಕುಲವ್ರತದ 

ನನ್ನಿ ಶಶಿಹಾಸಂಗೆ ಭಂಗಮಾದಪುದೆಂದು 

ಮನ್ನಿಸಿ ನೆರೆದ ಸಕಲ ಸೇವಕರನೆಲ್ಲರಂ ಕಳುಹಿ ತಾನೊರ್ವನಾಗಿ 

ಉನ್ನತ ದ್ರುಮಷಂಡ ಮಂಡಿತದ ಬನದೊಳ್ ಪ್ರ 

ಸನ್ನೆಯಾಗಿಹ ಚಂಡಿಕಾಲಯಕೆ ಬರುತಿರ್ದ 

ನನ್ನೆಗಂ ಕರತಳದ ಗಂಧಪುಷ್ಪದ ಪಾತ್ರೆಯೋಸರಿಸಿ ಬಿದ್ದುದಿಳೆಗೆ ||೪೫||


ತನ್ನ ವಂಶದ ವ್ರತವನ್ನು ತಂದೆಯ ಆಜ್ಞೆಯಂತೆ ನಡೆಸುವುದು ಚಂದ್ರಹಾಸನಿಗೆ ತಪ್ಪೀತೆಂದು, ಜೊತೆಯಲ್ಲಿದ್ದವರನ್ನು ಕಳಿಸಿ, ತಾನೊಬ್ಬನೇ ಎತ್ತರವಾದ ಮರಗಳಿದ್ದ ವನದಲ್ಲಿ ಪ್ರಸನ್ನಳಾಗಿದ್ದ ಚಂಡಿಕಾದೇವಾಲಯಕ್ಕೆ ಮದನನು ಬರುತ್ತಿರಲು ಊವನ ಕೈಯಲ್ಲಿದ್ದ ಗಂಧ ಪುಷ್ಪದ ತಟ್ಟೆಯು ಜಾರಿ ನೆಲಕ್ಕೆ ಬಿದ್ದಿತು. 


ಖಳರಂತರಂಗ ಪ್ರವೇಶದ ವಿವೇಕಮಂ 

ಬಳಸಿದರಿಷಡ್ವರ್ಗಮೊತ್ತ ರಿಸಿ ಮುರಿವಂತೆ 

ಪೊಲಬನರಿಯದೊಳಪುಗುವಮದನನಂ ಮಂತ್ರಿ ಕಳುಹಿದೊಡಲ್ಲಿ ಬಂದಡಗಿದ

ಕೊಲೆಗಡಿಗ ಚಂಡಾಲರುಗಿದ ಕೈದುಗಳಿಂದೆ 

ಕೆಲಬಲದೊಳಿರ್ದು ಪೊಯ್ದಿರಿದು ಕೆಡಹಿದೊಡೆ ಭೂ

ತಳಕೆ ಬೀಳುತ್ತವಂ ಮಾಧವ ಸ್ಮರಣೆಯಿಂದಸುದೊರೆದನಾಕ್ಷಣದೊಳು ||೪೭||


ಖಳರ ಅಂತರಂಗಕ್ಕೆ ವಿವೇಕವು ಹೋಗಬೇಕೆಂದು ಹೊರಟರೆ, ಅಲ್ಲಿರುವ ಅರಿಷಡ್ವರ್ಗಗಳು ಅದನ್ನು ಮುರಿವಂತೆ, ಮುಂದಿನ ದಾರಿಯನ್ನರಿಯದೆ ಆಲಯದೊಳಕ್ಕೆ ಹೋದ ಮದನನ್ನು, ದುಷ್ಟಬುದ್ಧಿಯು ಮೊದಲೇ ಕಳಿಸಿದ್ದ ಕೊಲೆಗಡಿಕ ಚಂಡಾಲರು,  ಆಯುಧಗಳನ್ನು ಸೆಳೆದು ಹೊಯ್ದು ಇರಿದು ಕೆಡವಿದರು. ಮದನನು ಭೂಮಿಗೆ ಬೀಳುತ್ತಾ ಶ್ರೀಹರಿಯನ್ನು ನೆನೆದು ಪ್ರಾಣಬಿಟ್ಟನು. 


ಅವಗಡಿಸಿ ಮದನನಂ ಘಾತುಕರ್ ಚಂಡಿಕಾ 

ಭವನದೊಳ್ ಕೊಂದು ನಿಲ್ಲದೆ ಪೋದರಿತ್ತಲು 

ತ್ಸವದಿಂದೆ ಚಂದ್ರಹಾಸಂ ಕುಂತಳೇಂದ್ರನಂ ಕಾಣಲಾ ನೃಪನವಂಗೆ 

ಅವನಿಯಂ ಕೊಟ್ಟರಸುಪಟ್ಟವಂ ಕಟ್ಟಿ ಗಾ 

ಲವನ ಮತದಿಂದೆ ಗಾಂಧರ್ವ  ವೈವಾಹದಿಂ 

ಕುವರಿ ಚಂಪಕಮಾಲಿನಿಯನಿತ್ತು ಸತ್ಕರಿಸಿ ಬನಕೆ ತಾಂ ಪೊರಮಟ್ಟನು ||೪೮||


ಕೊಲೆಗಡಿಕರು ಚಂಡಿಕಾಲಯದಲ್ಲಿ ಮದನನನ್ನು ಕೊಂದು ಹೋಗಿಬಿಟ್ಟರು. ಇತ್ತ ಚಂದ್ರಹಾಸನು ಅತಿ ಉತ್ಸುಕನಾಗಿ ಕುಂತಳದ ರಾಜನನ್ನು ಕಂಡನು. ಅವನು ಚಂದ್ರಹಾಸನಿಗೆ ರಾಜ್ಯವನ್ನು ಕೊಟ್ಟು ಪಟ್ಟವನ್ನು ಕಟ್ಟಿ, ಗಾಲವನು ಹೇಳಿದಂತೆ ತನ್ನ ಮಗಳು ಚಂಪಕಮಾಲಿನಿಯನ್ನು ಅವನಿಗೆ ಗಾಂಧರ್ವವಿವಾಹಮಾಡಿ, ಸತ್ಕರಿಸಿ,ತಪಸ್ಸಿಗಾಗಿ ಕಾಡಿಗೆ ಹೋದನು. 


ಗಾಲವನ ಮತದೊಳೆನ್ನ ಕರೆಸದಿಂದುಭೂ 

ಪಾಲಂ ಕುಳಿಂದತನಯಂಗಿಳೆಯನೊಪ್ಪಿಸಿ .ತ್ಮಸ್ತುತಿಯ ಪರನಿಂದೆಯವನ 

ನಾಲಯಕೆ ತೆರಳಿದನೆ ಮದನನಿದ್ದೆಗೈದನೆಂದು ಪಲ್ಮೊರೆದು ಮಗನ 

ಮೇಲೆ ಕೋಪಿಸುತಿರ್ದನನ್ನೆಗಂ ಭ್ರಮರಾರಿ 

ಮಾಲಿನಿವೆರಸಿ ಮಾವನಂ ಕಾಣಲೆಂದು ಶುಂ 

ಡಾಲ ಮಸ್ತಕದಿಂದಮಿಳಿಯಂದ ಶಶಿಹಾಸನೆರಗಿದಂ ಸಚಿವನಡಿಗೆ ||೫೧||


ಗಾಲವನ ಅಭಿಪ್ರಾಯದಂತೆ ತನ್ನನ್ನು ಕರೆಸದೆ ರಾಜನು ಕುಳಿಂದನ ಮಗನಾದ ಚಂದ್ರಹಾಸನಿಗೆ ರಾಜ್ಯವನ್ನೊಪ್ಪಿಸಿ ಕಾಡಿಗೆ ಹೋದ ಸುದ್ದಿಯನ್ನು ಕೇಳಿದ ದುಷ್ಟಬುದ್ಧಿಯು " ಮದನನು ಏನು ಮಾಡುತ್ತಿದ್ದ" ಎಂದು ಹಲೂಲುಕಡಿದು ಮಗನ ಮೇಲೆ ಕೋಪಿಸಿದನು. ಅಷ್ಟರಲ್ಲಿ ಚಂದ್ರಹಾಸನು ಚಂಪಕಮಾಲಿನಿಯೊಡನೆ, ಮಾವನನ್ನು ಕಾಣಲೆಂದು ಆನೆಯ ಮೇಲಿಂದಿಳಿದು ಬಂದು ನಮಸ್ಕರಿಸಿದನು.  


ಕಳಿವರಿವ ಕೋಪದಿಂ ಮಂತ್ರಿ ವಂಶಾಚಾರ 

ಮುಳಿಯಲಾಗದು ಚಂಡಿಕಾರ್ಚನೆಗೆ ನಡೆಯೆಂದು 

ಕಳುಹಿದೊಡೆ ನೀಂ ಮಾಡಿದುಜ್ಜುಗಮಿದೇನೆಂದು ಕೇಳ್ದೊಡಾ ಶಶಿಹಾಸನು 

ಅಳವಡಿಸಿಕೊಂಡು ನಾಂ ಪೋಗುತಿರೆ ನಡುವೆ ಕುಂ 

ತಳ ರಾಜನರಮನೆಗೆ ತನಗವಸರವನಿತ್ತು 

ತಳರ್ದನೊರ್ವನೆ ನಿನ್ನಮಗನಂಬಿಕಾ ಪೂಜೆಗಿಂತಾಯ್ತು ಬಳಿಕೆಂದನು ||೫೨||


ದುಷ್ಟಬುದ್ಧಿಗೆ ಬಹಳ ಕೋಪ ಬಂದರೂ ಅದನ್ನು ನುಂಗಿಕೊಂಡು, ವಂಶಾಚಾರವನ್ನು ಬಿಡಬಾರದು, ಚಂಡಿಕಾ ಪೂಜೆಗೆ ಹೋಗು ಎಂದು ಹೇಳಿಕಳಿಸಿದರೆ ನೀನು ಮಾಡಿದ್ದೇನು ಎಂದು ಚಂದ್ರಹಾಸನನ್ನು ಕೇಳಿದನು.  ಚಂದ್ರಹಾಸನು " ಪೂಜೆಗೆ ಅಣಿಮಾಡಿಕೊಂಡು ಹೋಗುತ್ತಿರುವಾಗ ಕುಂತಳೇಂದ್ರನು ಕೂಡಲೇ ಬಂದು ಕಾಣು ಎಂದು ಮದನನ ಕೈಲಿ ಹೇಳಿಕಳಿಸಿದನು. ನಾನು ಹೋಗಲೇ ಬೇಕಾಯಿತು. ನಿನ್ನ ಮಗನೊಬ್ಬನೇ ಚಂಡಿಕಾಲಯಕ್ಕೆ ಹೋದನು," ಎಂದನು.


ಹಮ್ಮೈಸಿದಂ ದುಷ್ಟಬುದ್ಧಿ ನಯನದೊಳಗಳಿಯ 

ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಹಿಂಸೆ 

ಯಮ್ಮಾಡಿ ಮಾನವಂ ಬಾಳ್ದಪನೆ ದೀಪಮಂಕೆಡಿಸುವ ಪತಂಗದಂತೆ

ನಮ್ಮುಪಾಯವೆ ನಮಗಪಾಯಮಂ ತಂದುದೆಂ 

ದೊಮ್ಮೆ ನಿಜ ಸದನಮಂ ಪೊಕ್ಕಾರುಮರಿಯದವೊ 

ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದು ಕೋಟೆಯಂ ಕತ್ತಲೆಯೊಳು ||೫೩||


ನಯವಾದ ಮಾತುಗಳಿಂದ ಅಳಿಯನನ್ನು ಮನೆಗೆ ಕಳಿಸಿ ದುಷ್ಟಬುದ್ಧಿಯು ಅತಿಶಯವಾಗಿ ದುಃಖಿಸಿದನು. ತಿಳಿದೂ ತಿಳಿದೂ ಇನ್ನೊಬ್ಬರನ್ನು ಹಿಂಸಿಸಿದ ಮನುಷ್ಯನು ಸುಖವಾಗಿ ಬಾಳುವನೇ ? ದೀಪವನ್ನಾರಿಸಲು ಹೋದ ಪತಂಗವು ರೆಕ್ಕೆ ಸುಟ್ಟುಕೊಳ್ಳುವಂತೆ, ನಾವು ಮಾಡಿದ ಉಪಾಯವು ನಮಗೆ ಅಪಾಯವನ್ನು ತಂದಿತೆಂದುಕೊಂಡು ಮನೆಗೆ ಹೋಗಿ, ಯಾರಿಗೂ ತಿಳಿಯದಂತೆ ಅತಿಶಯ ಶೋಕದಿಂದ ಹೊರಹೊರಟು ಕೋಟೆಯನ್ನೇರಿ ಇಳಿದು ( ಚಂಡಿಕಾಲಯದತ್ತ ಹೋದನು ) 


ಪಾಕಶಾಸನ ತನಯ ಕೇಳ್ ಬಳಿಕ ಮಂತ್ರಿ ಸುತ 

ಶೋಕದಿಂದಲ್ಲಿಹ ಮರುಳ್ಗಳಂ ಕಾಣದವಿ 

ವೇಕದಿಂ ಬೇವ ಕುಣಪದ ಚಿತೆಯೊಳುರಿವ ಕಾಷ್ಟಂಗಳಂ ತೆಗೆದುಕೊಂಡು 

ಆ ಕಾಳಿಕಾಲಯಕೆ ಬಂದದರ ಬೆಳಕಿನೊಳ್ 

ವ್ಯಾಕೀರ್ಣ ಕೇಶದ ನಿಮಿರ್ದ ಕೈಕಾಲುಗಳ 

ನೇಕಾಯುಧದ ಗಾಯದೊಡಲ ರುಧಿರದ ಪೊನಲ ಸುಕುಮಾರನಂ ಕಂಡನು ||೫೭||


ಎಲೈ ಅರ್ಜುನನೇ ಕೇಳು: ದುಷ್ಟಬುದ್ಧಿಯು ಪುತ್ರಶೋಕದಿಂದ ಮತಿಗೆಟ್ಟು ಅಲ್ಲಿರುವ ಪಿಶಾಚಿಗಳನ್ನು ಲೆಕ್ಕಿಸದೆ ಉರಿಯುತ್ತಿರುವ ಚಿತೆಯಲ್ಲಿ ಬೇಯುತ್ತಿರುವ ಶವದ ಸುತ್ತಲಿದ್ದ ಪಿಶಾಚಿಗಳನ್ನು ಕಾಣದೇ, ಉರಿಯುವ ಕಟ್ಟಿಗೆಯನ್ನು ಹಿಡಿದು ದೇವಾಲಯವನ್ನು ಹೊಕ್ಕನು. ಕೆದರಿದ ಕೂದಲು ನೆಟ್ಟಗಾದ ಕೈಕಾಲುಗಳು, ಒಂದೇ ಆಯುಧದ ಗಾಯ, ರಕ್ತದಲ್ಲಿ ಮುಳುಗಿದ ದೇಹದಿಂದೊಡಗೂಡಿದ ಮದನನ ದೇಹವನ್ನು ನೋಡಿದನು.


ಕಯ್ಯೊಳಿಹ ಕಾಷ್ಟಂಗಳಂ ಬಿಸುಟು ತನುಭವನ 

ಮೆಯ್ಯ ಗಾಯಂಗಳಂ ತಡಹಿ ತಕ್ಕೈಸಿ ಮಗು 

ಳೊಯ್ಯನೊಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚುಂಬಿಸಿ ಕುಮಾರ ನಿನ್ನ 

ಅಯ್ಯನಾಂ ಬಂದೆನೇಳೈ ತಂದೆ ನಾಡ ನಾ 

ರಯ್ಯಬೇಡವೆ ಕಂದ ಕುಂತಳಾಧೀಶನೇ

ಗೆಯ್ಯ ಹೇಳಿದೆನೆನಗೆ ವಿವರಿಸದೆ ಸುಮ್ಮನಿರ್ದಪೆಯೆಂದೊರಲ್ದನು ||೫೯||


ದುಷ್ಟಬುದ್ಧಿಯು ಕೈಯಲ್ಲಿದ್ದ ಕಟ್ಟಿಗೆಗಳನ್ನೆಸೆದು ಮಗನ ಮೈಯಲ್ಲಿದ್ದ ಗಾಯಗಳನ್ನು ಸವರಿ, ಆ ದೇಹವನ್ನಪ್ಪಿಕೊಂಡು, ಕುಳ್ಳಿರಿಸಿ ಮುಖಕ್ಕೆ ಮುಖವಿಟ್ಟು ಚುಂಬಿಸಿ, " ಮಗೂ, ನಾನು ನಿನ್ನ ತಂದೆ, ನಿನ್ನನ್ನು ನೋಡಲು ಬಂದಿದ್ದೇನೆ. ಅಪ್ಪಾ ಮದನ, ಏಳು, ರಾಜ್ಯವನ್ನಾಳಬಾರದೇ ? ಮಗೂ, ಕುಂತಳಾಧೀಶನು ಏನು ಹೇಳಿದ? ನನಗೆ ವಿಸ್ತಾರವಾಗಿ ಹೇಳದೆಏಕೆ ಸೈಮ್ಮನಿರುವೆ" ಎಂದೊರಲಿದನು. 


ಕಂಬನಿಗಳರುಣಾಂಬುವಂ ತೊಳೆಯೆ ಮುಂಡಾಡಿ 

ಪಂಬಲಿಸಿ ಹಲುಬಿದಂ ಮರುಗಿ ತನ್ನಿಂದದಳಿದ 

ನೆಂಬಳಲ್ಮಿಗೆ ಮಂತ್ರಿ ಸೈರಿಸದೆ ಕೆಲಬಲದ ಕಂಬಂಗಳಂ ಪಾಯಲು 

ಕುಂಬಳದ ಕಾಯಂತೆ ಚಿಪ್ಪಾಗಿ ನಿಜಮಸ್ತ 

ಕಂ ಬಿರಿದು ಬಿದ್ದನುರ್ವಿಗೆ ಪೋದುದಸುಕಾಯ 

ದಿಂ ಬಳಿಕ ನಂದಿದ  ಸೊಡರ್ಗಳೆನೆ ಮೃತರಾಗಿ ಸುತತಾತರಿರುತಿರ್ದರು ||೬೨||


ದುಷ್ಟಬುದ್ಧಿಯ ಕಣ್ಣೀರು ಮದನನ ಶವದ ಮುಖವನ್ನು ತೊಳೆಯಿತು. ಮಗನ ತಲೆಯನ್ನು ನೇವರಿಸಿ ಅವನು ಹಲುಬಿದನು. ತನ್ನಿಂದಲೇ ಮಗನು ಮೃತನಾದನೆಂಬ ಅಳಲು ಹೆಚ್ಚಲು, ಅದನ್ನು ತಡೆಯದೆ ಕೆಲಬಲದಲ್ಲಿದ್ದ ಕಂಬಗಳನ್ನು ಹಾದು, ತಲೆಯ ಚಿಪ್ಪು ಕುಂಬಳಕಾಯಂತೆ ಒಡೆದು ದುಷ್ಟಬುದ್ಧಿಯ ಪ್ರಾಣವು ಹೋಯಿತು.ದೇವಿಯ ವಿಗ್ರಹದ ಮುಂದೆ ನಂದಿದ ದೀಪಗಳೋ ಎಂಬಂತೆ ತಂದೆ ಮಗ ಇಬ್ಬರೂ ಬಿದ್ದಿದ್ದರು. 

 

ಚಂಡಿಕಾಲಯಕಖಿಳ ಜನ ಸಹಿತ ನಡೆತಂದು 

ದಿಂಡುಗೆಡೆದಿಹ ಮಾವ ಮೈದುನರ ಹಾನಿಯಂ 

ಕಂಡು ಕಡುಶೋಕದಿಂದುರೆ ನೊಂದು ಚಂದ್ರಹಾಸಂ ದೇವಿಯಂ ನೋಡುತೆ 

ಖಂಡಿಸಿದೆಲೌ ತನ್ನ ಭಾಗ್ಯಮಂ ತಪ್ಪಾವು 

ದಂಡಲೆದು ಪಡೆವೆನಿವರಸುಗಳಂ ಮೀರಿದೊಡೆ 

ಪುಂಡರೀಕಾಂಬಕನ ಸಾಯುಜ್ಯ ಮೆನಗಾಗಲೆಂದು ನಿಶ್ಚಿತನಾದನು|| ೬೫||


ಊರಿನ ಜನರೆಲ್ಲರೂ ಚಂಡಿಕಾಲಯಕ್ಕೆ ಬಂದರು. ಕೆಳಗೆ ಸತ್ತು ಬಿದ್ದಿದ್ದ ಮಾವ ಮೈದುನರನ್ನು ಕಂಡು ಚಂದ್ರಹಾಸನು ಅತಿಶೋಕದಿಂದ ನೊಂದು ದೇವಿಯನ್ನು ನೋಡುತ್ತಾ " ಅಮ್ಮಾ ಸೌಭಾಗ್ಯವನ್ನು ಖಂಡಿಸಿದೆ. ನಾನು ಮಾಡಿದ ತಪ್ಪೇನು? ಈಗ ನಾನು ಬೆನ್ನುಹತ್ತಿ ಇವರ ಪ್ರಾಣಗಳನ್ನು ಪಡೆಯುತ್ತೇನೆ. ಅದು ಸಾಧ್ಯವಾಗದಿದ್ದರೆ ನನಗೆ ಹರಿಸಾಯುಜ್ಯವಾಗಲಿ 

( ನನ್ನ ಪ್ರಾಣವನ್ನು ಬಿಡುತ್ತೇನೆ ) ಎಂದು ನಿರ್ಧರಿಸಿದನು. 


ಬೆಚ್ಚಿದಂತೆಸೆವ ಪೀಠವನಿಳಿದು ರುದ್ರಾಣಿ 

ಚೆಚ್ಚರದೊಳೈತಂದು ಕೈಯ ಬಾಳಂ ಪಿಡಿದು 

ನಿಚ್ಚಟದ ಹರಿಭಕ್ತಿಗಾಂ ಪ್ರೀತಿಯಂ ತಳೆದನಾತ್ಮವಧೆ ಬೇಡ ನಿನಗೆ 

ಪೆಚ್ಚಿದ ಕುಮಂತ್ರ ಪಾಪದೊಳಳಿದನೀ ಮಂತ್ರಿ 

ವೆಚ್ಚಿಸಿದನಸುವನಾತನ ಸುತಂ ನಿನಗಾಗಿ 

ಮೆಚ್ಚಿಸಿದೆ ನೀಂ ಮಗನೆ ಬಯಕೆಯಂ ಪೇಳೆರಡು ವರವನಿತ್ತಪೆನೆಂದಳು||೬೮||


ಚಂಡಿಕಾದೇವಿಯು ಹೆದರಿದಂತೆ, ತನ್ನ ಪೀಠವನ್ನಿಳಿದು ಬೇಗನೆ ಬಂದು ಖಡ್ಗಧಾರಿಯಾದ ಅವನ ಕೈಯನ್ನು ಹಿಡಿದು "(ಚಂದ್ರಹಾಸ, ನಿನ್ನ ದೃಢ ಹರಿಭಕ್ತಿಗೆ ನಾನು ಮೆಚ್ಚಿದೆ. ಆತ್ಮ ವಧೆ ಬೇಡ. ಈ ಕುಮಂತ್ರಿಯು ಮಹಾಪಾಪವನ್ನು ಮಾಡಿ ಸತ್ತ. ನಿನಗಾಗಿ ಅವನ ಮಗನು ಪ್ರಾಣವನ್ನು ತೆತ್ತ. ನೀನು ನನ್ನನ್ನು ಮೆಚ್ಚಿಸಿರುವೆ. ಎರಡು ವರಗಳನ್ನು ಬೇಡು, ಕೊಡುತ್ತೇನೆ" ಎಂದಳು. 


ದೇವಿಯ ಪದಾಂಬುಜದೊಳೆರಗಿ ಕೈಮುಗಿದು ನಿಂ 

ದಾವಾವ ಜನ್ಮ ಜನ್ಠಮಾಂತರದೊಳೆನಗೆ ರಾ 

ಜೀವನಾಭನ ಭಕ್ತಿ ದೊರೆಕೊಳಲಿದೊಂದು ಮಡಿದಿಹ ಮಂತ್ರಿ ಮಂತ್ರಿಸುತರು 

ಜೀವಿಸಲಿದೊಂದೀಗಗಳಿಂತೆರಡು ವರಮಂ ಕೃ 

ಪಾವಲೋಕನದೊಳಿತ್ತಪುದೆಂದು ಮತ್ತ ಚರ 

ಣಾವನತನಾಗಲ್ಕೆ ಪಿಡಿದೆತ್ತಿ ಕ್ಷತಮಡಗೆ ಮೈದೊಡವುತಿಂತೆಂದಳು ||೬೯||


ಚಂದ್ರಹಾಸನು ದೇವಿಯ ಚರಣಕಮಲಗಳಿಗೆ ನಮಸ್ಕಾರ ಮಾಡಿ, ಕೈಮುಗಿದು ನಿಂತುಕೊಂಡು " ತಾಯಿ, ನಾನು ಯಾವ ಜನ್ಮವನ್ನೆತ್ತಿದರೂ ನನಗೆ ಶ್ರೀಕೃಷ್ಣನಲ್ಲಿ ಭಕ್ತಿಯುಂಟಾಗಲಿ. ಇದು ಮೊದಲನೆಯ ವರ. ಇಲ್ಲಿ ಸತ್ತು ಬಿದ್ದಿರುವ ದುಷ್ಟಬುದ್ಧಿಯೂ ಮದನನೂ ಜೀವಿಸಲಿ. ಇದು ಎರಡನೆಯ ವರ. ಇವನ್ನು ಕೃಪೆಯಿಂದ ನೋಡಿ, ಕರೈಣೆಸು" ಎಂದು ಮತ್ತೆ ನಮಸ್ಕರಿಸಿದನು.  ಆಗ ಚಂಡಿಕಾದೇವಿಯು ಚಂದ್ರಹಾಸನ ಮೈಗಾಯಗಳು ಹೋಗುವಂತೆ ಮೈದಡವಿ ಹೀಗೆಂದು ಹೇಳಿದಳು.  


ಮೊಳಗಿದುವು ದೇವದುಂದುಭಿಗಳಂತಾಗ ಪೂ 

ಮಳೆಕರೆದುದಭ್ರದೊಳ್ ಕೊಂಡಾಡಿತಮರತತಿ 

ಬಳಿಕ ಶಾಂಭವಿ ಮಾಯವಾದಳಸುಪಸರಿಸಿತು ಮದನ ಮಂತ್ರಿಗಳೊಡಲೊಳು 

ಬಲ ರೂಪ ಕಾಂತಿಗಳ್ ಮುನ್ನಿನನಂದದೊಳೆಸೆಯೆ 

ಮಲಗಿದವರೇಳ್ಶಂತೆ ಕಣ್ದೆರೆದು ಕುಳ್ಳಿರ್ದ 

ರೊಲವಿನಿಂ ಚಂದ್ರಹಾಸಂ ಮಾವನಡಿಗೆ ಮಣಿದಪ್ಪಿದಂ ಮೈದುನನನು ||೭೪||


ಆಕಾಶದಲ್ಲಿ ದೇವದುಂದುಭಿಗಳು ಮೊಳಗಿದವು. ದೇವತೆಗಳು ಹೂಮಳೆಗರೆದು ಕೊಂಡಾಡಿದರು. ಶಾಂಭವಿಯು ಮಾಯವಾದಳು. ದುಷ್ಟಬುದ್ಧಿ ಮದನರಿಗೆ ಪ್ರಾಣ ಬಂದಿತು. ಅವರ ರೊಪ, ಕಾಂತಿ, ಬಲಗಳು ಮೊದಲಿನಂತೆ ಆದವು. ಮಲಗಿದವರು ಏಳುವಂತೆ ಕಣ್ತೆರೆದು ಕುಳಿತುಕೊಂಡರು. ಚಂದ್ರಹಾಸನು ಮಾವನಿಗೆ ನಮಸ್ಕರಿಸಿ ಮೈದುನನನ್ನು ಅಪ್ಪಿಕೊಂಡನು. 


ಭೂವಲಯಕಿದು ಪೊಸತು ಮರಣಮಾದೊಡೆ ಮತ್ತೆ 

ಜೀವಮಂ ಬರಿಸಿದವರುಂಟೆ ನಿನ್ನವೊಲೆಂದು 

ಕೈವಾರಿಸುವ ನಿಖಿಳಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು 

ಕಾವರಾರ್ ಕೊಲ್ವರಾರಳಿವರಾರುಳಿವರಾರ್ 

ಭಾವಿಪೊಡೆ ವಿಷ್ಣು ಮಾಯಾಮಯಮಿದೆಂದರಿದು 

ನೀವೆಲ್ಲರುಂ ಕೃಷ್ಣ ಭಜನೆಗೈದಪುದೆಂದು ಸಾರಿದಂ ಬೇಡಿಕೊಳುತೆ ||೭೫||


ಭೂಲೋಕದಲ್ಲಿದು ಹೊಸದು. ಸತ್ತವರಿಗೆ ಜೀವವನ್ನು ನಿನ್ನ ಹಾಗೆ ತರಿಸಿದವರುಂಟೇ? ಎಂದು ಊರಿನ ಜನರೂ, ಪರಿಜನರೂ, ಚಂದ್ರಹಾಸನನ್ನು ಹೊಗಳಿದರು.  ಅವನು " ಕಾಯುವವರಾರು ಕೊಲ್ಲುವವರಾರು, ಸಾಯುವವರಾರು, ಉಳಿಯುವವರಾರು, ಯೋಚಿಸಿದರೆ ಇದು ವಿಷ್ಣು ಮಾಯೆ" ಹೀಗೆಂದು ತಿಳಿದು ನೀವೆಲ್ಲರೂ ಶ್ರೀಕೃಷ್ಣನ ಭಜನೆಯನ್ನು ಮಾಡಿರಿ ಎಂದು ಎಲ್ಲರನ್ನೂ ಬೇಡಿಕೊಂಡು, ಸಾರಿದನು. 

 

ನೆನಕೆ

ದೇವುಡು ನರಸಿಂಹಶಾಸ್ತ್ರೀ. ಎಂ.  ಎ 

ಬಿ. ಶಿವಮೂರ್ತಿಶಾಸ್ತ್ರೀ. 


ಭಾವಾರ್ಥ : 

ನೆನಕೆ: ಅ. ರಾ. ಸೇತುರಾಮ ರಾವ್.

೦೧.೦೨. ೨೦೨೧

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ