ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶುಕ್ರವಾರ, ಏಪ್ರಿಲ್ 7, 2017

ಕುಮಾರವ್ಯಾಸ ರಚಿತ ಕರ್ನಾಟಕ ಭಾರತ ಕಥಾಮಂಜರಿ / ಗದುಗಿನ ಭಾರತ


ಕುಮಾರವ್ಯಾಸ ರಚಿತ ಕರ್ನಾಟಕ ಭಾರತ ಕಥಾಮಂಜರಿಯಿಂದ ಆಯ್ದ ಕಾವ್ಯ ಸಂಗ್ರಹ


ಶ್ರೀ ವನಿತೆಯರಸನೆ ವಿಮಲರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರದಾತಾರ
ರಾವಣಾಸುರ ಮಥನ ಶ್ರವಣಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಾಯಣ
‌‌‌‌
ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ಲ
ಕರಣನಿರ್ಮಲ ಭಜಕರಘಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ


ವರ ಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ


ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ


ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ದಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ
ಶೌರಿ ಸುರಪತಿ ಸಕಲಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ


ಹಲಗೆ ಬಳಪವ ಪಿಡಿಯದೊಂದಗ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗ ಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ


ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನ ಲು ರಚಿಸಿದ ಕುಮಾರವ್ಯಾಸ ಭಾರತವ


ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ
ಕಾದಿ ಗೆಲಿದನನಣ್ಣನನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೋ ಗದುಗಿನ ವೀರನಾರಯಣ


ಸಂಧಿ ,ಮೂರು


ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದುಟ್ಟಳು ಲೌಹಿತಾಂಬರವ಼
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ


ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ
ಧರೆಗೆ ಬಂದನು ಸೂರ್ಯನಾತನ
ಕಿರಣಲಹರಿಯ ಹೊಯ್ಲಿನಲಿ ಸರ
ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ


ಎನ್ನಬಾರದಲೇ ಋಷಿಪ್ರತಿ
ಪನ್ನ ಮಂತ್ರವಮೋಘವದರಿಂ
ದೆನ್ನ ತೂಕದ ಮಗನಹನು ನೀನಂಜಬೇಡೆನುತ
ಕನ್ನಿಕೆಯ ಮುಟ್ಟಿದನು ಮುನ್ನಿನ
ಕನ್ನೆತನ ಕೆಡದಿರಲಿಯೆನುತವೆ
ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ


ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ
ಕುರುಳುದಲೆ ನಿಟ್ಟೆಸಳುಗಂಗಳ
ಚರಣ ಕರ ಪಲ್ಲವದ ಕೆಂಪಿನ
ವರಕು‌ಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ


ಅಳುವ ಶಿಶುವನು ತೆಗೆದು ತೆಕ್ಕೆಯ
ಪುಳಕಜಲದಲಿ ನಾದಿ ಹರುಷದ
ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ
ಕುಲದ ಸಿರಿ ತಪ್ಪುವದಲಾ ಸಾ
ಕಿಳುಹ ಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ


ಕೆದರಿ ಕಾಲಲಿ ಮಳಲರಾಶಿಯ
ನೊದೆದನು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ


ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ರ್ತ್ಯರಿಗೆ ಮಗನಿವನಲ್ಲ ಮಾಯಾಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ


ತೃಣವಲಾ ತ್ರೈಲೋಕ್ಯರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪಲುಳಿತೇ
ಕ್ಷಣನು ಬಂದನುಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ


ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವವ ಮಾಡಿ ಮ
ಹೀದಿವಿಜರನು ದಾನ ಮಾನಂಗಳಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ. ರವಿನಂದನನು ರಾಧೇಯ ನಾಮದಲಿ


ಸಂಧಿ ನಾಲ್ಕು


ಧಾರುಣೀಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವಪೂರ್ಣಮಾಸದಲಿ
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರನವತರಿಸಿದನು ಧರಣಿಯಲಿ


ನಿರ್ಮಲಿನವಾಯ್ತಖಿಲ ದೆಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೃಪ ರೂಪಾಗಿ ಜನಿಸಿತಲ
ದುರ್ಮಹೀಶರ ಹೊತ್ತ ಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನಿಕರ


ಅವನಿಸುತವಾರ ತ್ರಯೋದಶಿ
ದಿನದ ಮಧ್ಯದೊಳರ್ಕನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭೀಮಸೇನನ ಜನನದದ್ಭುತವ


ಭೀಮನುದಯಿಸಿದಿರುಳು ರಾಯ ಪಿ
ತಾಮಹನು ಜನಿಸಿದನಲೈ ನಿ
ಮ್ಮಾ ಮಹಾತ್ಮನ ಹುಟ್ಟು ಬೆದರಿಸಿತಖಿಳಜನಮನವ
ಭೂಮಿ ನಡುಗಿತು ದೆಸೆಗೆ ಹರಿದವು
ಧೂಮಕೇತುಗಳೊದರಿದವು ಬಳಿ
ಕಾ ಮಹಾನಗರದಲಿ ಭರದಲಿ ಭೂರಿ ಗೋಮಾಯು


ಕರೆಸಿದನು ದೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸಮನಂತರದಲುತ್ಪಾತ ಫಲಗತಿಯ
ಭರತವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು


ಜನಪತಿಗೆ ಬಳಿಕೊಬ್ಬ ವೇಶ್ಯಾಂ
ಗನೆಯ ಸುತನು ಯುಯುತ್ಸು ನೂರೊಂ
ದೆನಿಸಿತರಸು ಕುಮಾರಕರು ಗಾಂಧಾರಿಯುದರದಲಿ
ಜನಿಸಿದರು ನೂರೊಂದು ನೂರ್ವರಿ
ಗನುಜೆ ದುಸ್ಸಳೆಯಾದಳಾ ವರ
ಮಾನಿನಿ ಜಯದ್ರಥನರಸಿಯಾದಳು ರಾಯ ಕೇಳೆಂದ


ತೀವಿದುವು ನವಮಾಸ ವಿಮಲ ವಿ
ಭಾವಸುವಿನುದಯದಲಿ ಶುಭ ಲ
ಗ್ನಾವಲಂಬನ ತಾರೆಯುತ್ತರೆ ಫಲುಗುಣಾಹ್ವಯದ
ಜೀವ ಕೇಂದ್ರ ಸ್ಥಿತಿ ದಶಾ ದಿ
ಗ್ಭಾವಿತ ಗ್ರಹರಾಶಿಯಿರೆ ಗಾಂ
ಡೀವಿ ಜನಿಸಿದೊಡನೆ ಜನಿಸಿತು ಜನದ ಸುಮ್ಮಾನ


ರಣಭಯಂಕರನರ್ಜುನನು ಧಾ
ರುಣಿಯೊಳುದಿಸದ ಮುನ್ನ ತಿಂಗಳ
ನೆಣಿಸಿದರೆ ಮೂರಾಯ್ತು ಮಧುರೆಯ ರಾಜಭವನದಲಿ
ಗುಣರಹಿತನಚ್ಯುತನು ವರಶ್ರಾ
ವಣ ಬಹುಳದಷ್ಟಮಿಯಿರುಳು ರೋ
ಹಿಣಿಯಲವತರಿದನಲೈ ದೇವಕಿಯ ಜಠರದಲಿ


ಬಂದರವರಿಬ್ಬರು ಮಹೀತಳ
ಕಿಂದುವದನೆಗೆ ಸುತರನಿತ್ತರು
ಮಂದಗಮನೆಯ ಕಳುಹಿ ಹಾಯ್ದರು ಗಗನ ಮಂಡಲಕೆ
ಒಂದು ವರುಷಕೆ ಕಿರಿಯರರ್ಜುನ
ಗಿಂದ ಬಳಿಕವತರಿಸಿದರು ಮುನಿ
ವೃಂದ ನೆರೆ ಪತಿಕರಿಸಿ ಕೊಂಡಾಡಿತು ಕುಮಾರಕರ


ಸಂಧಿ. ಹದಿನೈದು.
ಎಂದು ಸಾರಿದ ದನಿಯನಾ ದ್ವಿಜ
ವೃಂದವಾಲಿಸಿ ನಮಗಿದೇಕರ
ವಿಂದವದನೆಯ ತೊಡಕು ತೆಗೆ ನಾವಾರು ಧನುವಾರು
ಬಂದ ದಕ್ಷಿಣೆ ಮೃಷ್ಟಭೋಜನ
ದಿಂದ ತುಷ್ಟರು ನಾವು ನಮಗಿದ
ರಿಂದ ಬಹ ದುಷ್ಕೀರ್ತಿ ಬರಲೆಂದುದು ಬುಧವ್ರಾತ


ವಚನ ಶೂರರು ನಾವು ಪಾರ್ಥಿವ
ನಿಚಯವೇ ಭುಜಶೂರರನಿಬರ
ನಚಲ ಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ
ಉಚಿತವೇಲ್ಲಿದು ನಮ್ಮ ಸಾಹಸ
ರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ


ಸಾಂಗ ವೇದ ಪದಕ್ರಮದ ಸ
ರ್ವಾಂಗ ವಿಷಯದಲಕಿಳ ಪೌರಾ
ಣಂಗಳಲಿ ಮೀಮಾಂಸೆಯೊಳ್ ಸ್ಮೃತಿ ತರ್ಕ ಶಾಸ್ತ್ರ ದಲಿ
ಭಂಗಿಸುವೆವೀ ದ್ರೌಪದಿಯನಾ
ವಂಗದಲಿ ವಾತ್ಸ್ಯಾಯನಾದಿಯು
ಪಾಂಗ ವಿದ್ಯದಲೆಮ್ಮ ನೌಡೆಂದುದು ಬುಧಸ್ತೋಮ


?ಭರತದಲಿ ವೈದ್ಯದಲಿ ಕಾವ್ಯ ಸು
ವಿರಚಿತಾಲಂಕಾರದಲಿ ಗಜ
ತುರಗ ಲಕ್ಷಣದಲಿ ಸಮಾಹಿತ ಮಂತ್ರ ತಂತ್ರದಲಿ
ಸರಸ ಕವಿತಾರಚನೆಯಲಿ ವಿ
ಸ್ತರದುಪನ್ಯಾಸದಲಿ ಭೂಪತಿ
ಕರೆಸಿನೋಡಲಿ ನಮ್ಮನೆಂದರು ದ್ವಿಜರು ತಮತಮಗೆ


ರಸದ ಹೊರಲೇಪದಲಿ ಹುದುಗಿದ
ಮಿಸುನಿಯಂತಿರೆ ಜೀವಭಾವ
ಪ್ರಸರದೊಳಗವಲಂಬಿಸಿದ ಪರಮಾತ್ಮನಂದದಲಿ
ಎಸೆವ ವಿಪ್ರಾಕಾರದಲಿ ರಂ
ಜಿಸುವ ಭೂಪತಿ ತತ್ಸಭಾಸ
ದ್ವಿಸರಮಧ್ಯದೊಳಿರ್ದು ಕೇಳಿದನೀ ಮಹಾಧ್ವನಿಯ


ನೋಡಿದನು ತಮ್ಮನನು ಸನ್ನೆಯ
ಮಾಡಿದಡೆ ಕೈಕೊಂಡನವನಿಪ
ಗೂಡಿ ಕುಂತಿಗೆ ಭೀಮಸೇನಂಗೆರಗಿ ಮನದೊಳಗೆ
ಕೂಡೆ ಕುಳ್ಳಿರ್ದನಖಿಳ ವಿಪ್ರರ
ನೋಡಿ ಮೆಲ್ಲನೆ ಧೋತ್ರದರ್ಭೆಯ
ಗೂಡ ಸಂವರಿಸುತ್ತ ಸಭೆಯಿಂದೆದ್ದನಾ ಫಾರ್ಥ


ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲಲೇ ತಾ
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ
ವೈನತೇಯನ ವಿಗಡಿಸಿದ ವಿಷ
ವೇನು ಸದರವೊ ಹಾವಡಿಗರಿಗಿ
ದೇನುನಿಮ್ಮುತ್ಸಾಹವೆಂದುದು ಧೂರ್ತ ವಟುನಿಕರ


ಮದುವೆ ಬೇಕೇ ಶ್ರೋತ್ರಿಯ ಸ್ತೋ
ಮದಲಿ ಕನ್ಯಾರ್ಥಿಗಳು ನಾವೆಂ
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ
ಮದುವೆಯಹುದಿದು ಸೌಖ್ಯ ಪುಣ್ಯ
ಪ್ರದವು ಭೂದೇವರಿಗೆ ನೀ ನೆನೆ
ದುದು ಭಗೀರಥಯತ್ನವೆಂದುದು ಭೂಸುರವ್ರಾತ


ಕೆಲರು ಹೋಗದಿರೆಂದು ಜರೆದರು
ಕೆಲರು ತಾನೇ ಬಲ್ಲೆನೆಂದರು
ಕೆಲರು ನುಡಿದರು ವಿಪ್ರಸಭೆಗಪಹಾಸಹಾಸ್ಯವಹುದೆಂದು
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಾಕಾರನೀತಂ
ಗಳುಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ


ತೊಟ್ಟ ಹೊಸ ಯಜ್ಞೋಪವೀತದ
ಮಟ್ಟಿ ನೊಸಲಲಿ ಕುಶೆಯ ಕರಡಿಗೆ
ಕಟ್ಟಿಯಿರುಕಿದ ಕಕ್ಷೆ ಬೆರಳಲಿ ಮುರಿದ ದರ್ಭೆಗಳ
ಉಟ್ಟ ಬಾಸರ ಬಳಲುಗಚ್ಚೆಯ
ನಟ್ಟಹಾಸದ ಜನದ ನಗೆಗಳ
ನಟ್ಟವಿಗನೋಸರಿಸಿ ಸಭೆಯಲಿ ಮೆಲ್ಲನೈತಂದ


ಧನು ತನಗೆ ನೆಗಹಲ್ಕೆ ಕೃಷ್ಣಾ
ಜಿನವೊ ಸಾಲಗ್ರಾಮದೇವರೊ
ವಿನುತ ತುಳಸಿಯೊ ಕುಶವೊ ದರ್ಭೆಯೊ ಸಮಿಧೆಗಳ ಹೊರೆಯೊ
ನೆನೆದ ತಿಲವೋ ಮೇಣಿದೌಪಾ
ಸನದ ಕೊಳವಿಯೊ ಬಣಗು ವಿಪ್ರನ
ನೆನಹ ನೋಡಿರೆ ಘನವಲಾ ದ್ರಂಪದಿಯ ಸೌಭಾಗ್ಯ


ಇತ್ತ ನೋಡೌ ತಾಯೆ ಹಾರುವ
ರತ್ತ ಗಡ್ಡದುಪಾದ್ಯರನು ತಾ
ವೆತ್ತುವರು ಗಡ ಧನುವನೆಸುವರು ಗಡ ತಿಮಿಂಗಲನ
ಹೊತ್ತುಗಳೆವರೆ ಲೇಸು ಬಳಿಕಿ
ನ್ನುತ್ತಮರಲಾ ವಿಪ್ರರೆನೆ ತಲೆ
ಗುತ್ತಿ ನಾಚಿದ‌ಳುಂಗುಟದೊಳೌಕುತ ಮಹೀತಳವ


ಎಲವೊ ಮಟ್ಟಿಯ ಮದನ ದರ್ಭೆಯ
ತಿಲದ ಮನ್ಮಥ ವಿಮಲಧೋತ್ರದ
ತಳಿರುಗಾಸೆಯ ಕಾಮ ಕೃಷ್ಣಾಜಿನದ ಕಂದರ್ಪ
ನಳಿನಮುಖಿಯನು ವರಿಸು ಬಾ ನಿನ
ಗಳವಡುವನೆಲೆಯಕ್ಕ ಕೇಳೌ
ತಲೇವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು


ಹದೆ ಹಲಾಯುಧ ನೋಡು ವಿಪ್ರೌ.
ಘದಲಿ ಪಾರ್ಥನ ಬರವು ಮೇಘದ
ಹೊದರುಗಳ ಹರಿದಶ್ವನಂತಿರೆ ವಿಪ್ರವೇಷದಲಿ
ವಿದಿತವೇ ವಸುದೇವನಾಣೆಂ
ದುದಕೆ ತಪ್ಪದಲೈ ಸಭಾ ಮ
ಧ್ಯದಲಿ ಬರುತಿರ್ಪಾತನರ್ಜುನನೆಂದನಸುರಾರಿ


ಜನಪನೋ ಭೀಮಾದಿಗಳೊ ತ
ಜ್ಜನನಿಯೋ ತಾವೆಲ್ಲ ಭೂಸುರ
ಜನದ ಸಾಮೀಪಾಯದಲಿ ಸಭೆಯೊಳಗಿರ್ದರೆನೆ ಕೇಳ್ದು
ನೀನಗಿದೆಂತವರರಿತವರಗಿನ
ಮನೆಗೆ ತಪ್ಪಿದರೆಂತು ಶಿವ ನೀ
ನೆನಿತು ಮಾಯಾಸಿದ್ಧನೆಂದನು ನಗುತ ಬಲರಾಮ


ತೂಗಿ ಕಿವಿವರೆಗುಗಿದು ಯಂತ್ರವ
ತಾಗಿಸಿದನಂಬಿನಲಿ ಪಾರ್ಥನ
ಲಾಗು ವೇಗವನಾರು ಬಲ್ಲರು ಯಂತ್ರಭೇದದಲಿ
ಜಾಗು ಧಣುಧಣು ಪೂತು ಕಾರ್ಮುಕ
ಯೋಗಸಿದ್ಧನೆ ಮಝರೆ ಕೋದಂ
ಡಾಗಮ ತ್ರಿಪುರಾರಿಯೆಂದುದು ವಂದಿ ಸಂದೋಹ


ವಿರಾಟ ಪರ್ವ


ಸಂಧಿ  ಐದು
ಏನಲವೊ ತುದಿಮೂಗಿನಲಿ ಬಿಳು
ಪೇನು ಢಗೆ ಹೊಯ್ದೇಕೆ ಬಂದೆಯಿ
ದೇನು ನಿನ್ನಿನ ರಣವನಯ್ಯನು ಗೆಲಿದುದೇನಾಯ್ತು
ಏನು ಭಯ ಬೇಡಿನ್ನು ಕಲಹ ನಿ
ಧಾನ ವಾರ್ತೆಯದದೇನೆನಲು ಕುರು
ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ


ಎತ್ತ ದುವ್ವಾಳಿಸುವಡಾಲಿಗ
ಳತ್ತಲಾನೆಯ ಥಟ್ಟು ಕಾಲಾ
ಳೊತ್ತರದ ರಣವಾಜಿ ರೂಢಿಯ ರಾಯ ರಾವುತರು
ಸುತ್ತ ಬಳಸಿಹುದೆತ್ತ ಮನ ಹರಿ
ವತ್ತ ಮೋಹರವಲ್ಲದನ್ಯವ
ವತ್ತ ಕಾಣೆನು ಜೀಯ ಹದನಿದು ವೈರಿ ವಾಹಿನಿಯ


ಎಂದಡಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೀಸೆಯನು ಬೆರ
ಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ
ಸಂದಣಿಸಿ ರೋಮಾಂಚ ಕೆಲ ಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ


ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯ ಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ


ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾ ದೇ
ವೆನುತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ


ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು


ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದಿರಿನಲಿ


ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನದಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರಿಯಶವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದುಕುವನಾವನೆಂದನು ಖಂಡೆಯವ ಜಡಿದು


ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ
ಗೆಲನ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ


ಅರಿಯೆನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕಕರ್ಣನೆಂಬವನೆನಗೆ ಸಮಬಲನೆ
ಬರಿಯ ಬಯಲಾಡಂಬರದಲಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆಮಾಣೆನೆಂದನು ನಾರಿಯರ ಮುಂದೆ


ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿತಾ
ನುಡುಹನಾದೆನು ಶಿವ ಶಿವಾಯಿಂದೇನ್ನ ಕೈ ಮನಕೆ
ಗಡಣಿಸುವ ಸಾರಥಿಯನೊಬ್ಬನ
ಪಡೆದೆನಾದೊಭಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ


ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ
ದೋರೆಗರುಳಲಿ ದಾನವಿಯರೊಡ
ಲೇರು ಹತಾತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ


ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂ


ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರೆಂದರಾವನ
ನಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ
ಮಂಗಳವಲೇ ಬಳಿಕ ರಣದೊಳ಼
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ


ಎಂದಳೀ ಸೈರಂಧ್ರಿ ಸುರಪನ
ನಂದನವ ಸುಡುವಂದು ಪಾರ್ಥನ
ಮುಂದೆ ಸಾರಥಿಯಾದ ಗಡ ನಾವರಿಯೆವೀ ಹದನ
ಹಿಂದುಗಳೆಯದೆ ಕರೆಸು ನಮ್ಮ ಬೃ
ಹನ್ನಳೆಯನೆನೆ ನಗುತ ಲೇಸಾ
ಯ್ತೆಂದು ಪರಮೋತ್ಸಾಹದಲಿ ಸೈರೇಂದ್ರಿಗಿಂತೆಂದ


ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾಸನನೆ ಲೇಸು ಮಾಡಿದೆ
ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನ‌ಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವುದು


ತಾಯೆ ನೀನೆ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ
ರಾಯಕುವರಿ ನವಾಯಿ ಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ


ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರ ಗತಿಯಲಿ
ಬರವು ಭಾರೀಯ ಕಾರಿಯವ ಸೂಚಿಸುವುದೆನೆ ನಗುತ
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪನೆನೆ ಮೀರಬಲ್ಲೆನೆ ಮಗಳೆ ಹೇಳೆಂದ


ಪುರಕೆ ಹಾಯ್ದರು ಹಸ್ತಿನಾಪುರ
ದರಸುಗಳು ಹೊಲನೊಳಗೆ ಶತ ಸಾ
ವಿರದ ತುರುಗಳ ಹಿಡಿದರಳಿದುದು ಗೋಪ ಪಡೆ ಕಾದಿ
ಮರಳಿಚುವೊಡೆಮ್ಮಣ್ಣ ದೇವನ
ಧುರಕೆ ಸಾರಥಿಯಿಲ್ಲ ನೀವಾ
ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ


ಇನ್ನು ನೀವೇ ಬಲ್ಲಿರೆನೆ ನಡೆ
ನಿನ್ನ ಮಾತನು ಮೀರಬಲ್ಲೆನೆ
ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ
ಬೆನ್ನಲಬಲೆಯನೈದಲಾ ಸಂ
ಪನ್ನ ಬಲನೋಲಗಕೆ ಬರೆ ಹರು
ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ


ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ


ಆನಿರಲು ಭೀಷ್ಮಾದಿಗಳು ನಿನ
ಗೇನ ಮಾಡಲು ಬಲ್ಲರಳುಕದೆ
ನೀನು ಸಾಕೆಂದು ನಿಮಿಷಕೆ ಗಲುವೆನವರುಗಳ
ತಾನದಾರೆಂದರಿಯಲಾ ಗುರು
ಸೂನು ಕರ್ಣ ದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ಸಾಕೆಂದ


ವೀರನಹೆ ಬಳಿಕೇನು ರಾಜ ಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ


ನರನು ತಲೆ ಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರೆ ತಾನೆ ತೊಡಿಸಿದನು


ಸಂಧಿ ಆರು


ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲ ಗರುಡಿಯೋ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ


ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ


ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ


ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಕ ಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸ‌ಮ ಬಲನೈ ರಥವ ಮರಳಿಚು ಜಾಳಿಸುವೆನೆಂದ


ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ


ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡು ಸುಡು
ಕಾಕಲಾ ಕಣ್ಣೊಡೆದವೇ ಕಾಣಾ ಮಹಾ ಬಲವ
ನಾಕನಿಳಯರಿಗರಿದು ನಿನಗೆ ವಿ
ವೇಕವೆಳ್ಳೆನಿತಿಲ್ಲ ತೆಗೆ ತೆಗೆ
ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ


ನುಡಿಯ ಕೇಳದೆ ಮುಂದೆ ಹತ್ತೆಂ
ಟಡಿಯನರ್ಜುನ ರಥವ ಹರಿಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನರೆ ತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ


ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ


ನೋಡಿದನು ಕಲಿಪಾರ್ಥನೀ ಕೇ
ಡಾಕೆದರಿದ ಕೇಶದಲಿ ಕೆ
ಟ್ಟ್ಟೋಡುತಿರೆಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ


ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವಶಿವಾ ಬೆಂ
ಬಳಿಯಲಟ್ಟುವ ವೀರನಿವನೊ ಸುಭಟನಹನವನು
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿ ಸೇನೆ


ಇತ್ತಲರ್ಜುನನುತ್ತರನ ಬೆಂ
ಬತ್ತಿ ಬಂದನು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿ ಕೊಂಡೆನೆ
ನುತ್ತ ಮರಳಿದನು ನೋಡಿ ನಿಲ್ಲದೆ ಮತ್ತೆ ಸೈವರಿದ


ಇಟ್ಠಣಿಸಿ ನರ ನೂರು ಹೆಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನನ್ವಯವ


ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯುಂಟೆ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ


ಮನದಲೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ
ಅನುವರದೊಳೇನಾಯ್ತು ರಿಪು ವಾ
ಹಿನಿಯನಿರಿಯದೆ ನಾಡ ನರಿಯವೊ
ಲೆನಗೆ ನೀ. ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ


ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ


ಹರುಕನೇ ನೀನೆಲವೊ ರಾಯರೊ
ಳುರುವ ನೃಪ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ಧುರ಼ಭರವು
ಸರಿಗಳೆಯದಪಕೀರ್ತಿ ರವಿ ಶಶಿ
ಮುರಿದು ಬೀಳ್ವನ್ನಬರವೆಲೆ ಹಿಡಿದೆಳೆದನುತ್ತರನ


ಕೊಳುಗುಳದೊಳೋಡಿದಡೆ ಹಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹಜ್ಜೆಯನಿಡಲು ಹಜ್ಜೆಯೊಳಶ್ವಮೇಧ ಫಲ
ಅಳಿದೆನಾದೊಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲನನುಗ್ಗಡಿಸುವನು ವೀರಸ್ವರ್ಗವಹುದೆಂದ


ಆಳೊಳೊಡ್ಡುಳ್ಳವನು ಭಾರಿಯ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರಮುಂದೊದರಿ ಬಾಸ್ಕಳಗೆಡೆದು ಬಂದೀಗ
ಕೋಲನಿಕ್ಕದೆ ಗಾಯವೇಘೇೇಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳ್ಳಿತಿಹೆಯೆಂದ


ಕಾದುವೆನು ಮಾರೊಡ್ಡಿನಲಿ ನೀ
ನೈದಿಸೆನ್ನಯ ರಥವ ಮನದಲಿ
ಳೇದತನವನುಬಿಟ್ಟು ಸಾರಥಿಯಾಗು ಸಾಕೆನಲು
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯವಲ್ಲೆಂದ


ಎನ್ನ ವಂದಿಗ ರಿಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ಯರನು ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇಯೀ
ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹೆಂದ


ಎಲವೊ ಸಾರಥಿಯಾಗು ನಡೆ ನೀ
ಗಳಹಿದೊಡೆ ಕಟವಾಯ ಕೊಯ್ವೆನು
ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಯಲಿ
ಬಳಿಕ ನೀ ನಗು ನಡೆಯೆನುತ ರಿಪು
ಬಲ ಭಯಂಕರನುತ್ತರನ ಹೆಡ
ತಲೆಯ ಹದರಿನೊಳೌಂಕಿ ತಂದನು ರಥವನೇರಿಸಿದ


ಮರನನೇರಿದರೊಳಗೆ ಪಾಂಡವ
ರಿರಿಸಿ ಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಣ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ


ಹೊಗರ ಹೊರಳಿಯ ಹೊಳೆವ ಬಾಯ್ದಾ
ರೆಗಳ ತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು -ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆನಸ್ತ್ರ ಸೀಮೆಯಲಿ


ತುಡುಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನಃ
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆಸೋಕೆಂದನಾ ಪಾರ್ಥ


ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಟಿರ ಚಾಪವೀ ಧನು ಭೀಮಸೇನನದು
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ


ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸೀನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ


ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ
ಬಾಲಕನ ಬೀನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾವಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ


ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತವಾ
ಹನ ವಿಜಯ ಬೀಭತ್ಸು ಪಾರ್ಥ ಕಿರೀಟಿ ಮೊದಲಾದ
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದದವನು ವಿಸ್ತಾರವಾಗಿ ವಿರಚಿಸಿದ


ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದನು ಬೊಬ್ಬೆಯ
ಭಾರವಣೆ ಮಿಗೆ ಧನುವ ಕೊಂಡನು ತಿರುವನೇರಿಸಿಧ


ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ
ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ


ಹೊಗಳಲನುಪಮ ಸೈನ್ಯವಿಂತೀ
ದ್ವಿಗುಣವಂಧಾಸುರನ ಸೇನೆಗೆ
ತ್ರಿಗುಣವಿದು ರಾವಣನ ಮೋಹರಕನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನಾ
ಲಗೆ ದಣಿಯೆ ಕೈವಾರಿಸುತ ಮಿಗೆ
ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು


ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನತುರಗವ
ಕರೆವವೋಲ್ ಕೈಗಟ್ಟಿ ದುವ್ವಿಳಿಸುವಡಾಹವಕೆ
ಅರರೆ ಪೂತುರೆ ಹಯವೆನುತ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿ ಮಂಡಲವನಂಡಲೆಯೆ


ಶಿರವ ಸಿಡಿಲೆರಗಿದವೋಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳು
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ


ಏನು ಮತ್ಸ್ಯಕುಮಾರ ಭವಣಿಯಿ
ದೇನು ನಿನಗೆಂದೆನಲು ಜಗದವ
ಸಾನದಂದದಿ ಸಿಡಿಲು ಸುಳಿದುದು ಬಿರಿದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನ ಕಳುಹು ಮ
ಹಾ ನಿಧಾನವ ಮಾಣು ಮಾಣೆನೆ ಪಾರ್ಥನಿಂತೆಂದ


ಖೇಡನಾಗದಿರದುಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತ ಸಂತೈಸಿ
ಮೂಡಿಗೆಯ ಅಂಬುಗಿದು ತಿರುವಿಗೆ
ಹೂಡಿದನೂ ಫಲುಗುಣ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ


ಸಂಧಿ  ಏಳು


ಚೆಲ್ಲಿ ಹೋಯಿತು ಕೆಲಕೆ ಕೆಲಬರು
ಬಿಲ್ಲ ಬಿರುಕೋಲುಗಳ ಬಿಸುಟರು
ಗಲ್ಲೆಗೆಡೆದರು ಕೆಲರು ಪಾರ್ಥನ ಕೋಲ ತೋಹಿನಲಿ
ಮೆಲ್ಲ ಮೆಲ್ಲನೆ ಸರಿವ ಕೌರವ
ಮಲ್ಲನನು ಕಂಡಟ್ಟಿದನು ತುರು
ಗಳ್ಳ ಹೌಗದಿರೆನುತ ಮೂದಲಿಸಿದನು ಕಲಿಪಾರ್ಥ


ಕಾಯಲಾಪರೆ ಕರೆಯಿರಾ ಕ
ರ್ಣಾಯತಾಸ್ತ್ರರನಕಟ ಕೌರವ
ರಾಯ ಸಿಲುಕಿದನೆಲ್ಲಿ ಭೀಷ್ಮ ದ್ರೋಣ ಕೃಪರೆನುತ
ಬಾಯಬಿಡೆ ಕುರುಸೇನೆ ಗುರು ಗಾಂ
ಗೇಯ ಶಕುನಿ ವಿಕರ್ಣ ಕೃಪ ರಾ
ಧೇಯ ಸೈಂಧವ ಚಿತ್ರಸೇನಾದಿಗಳು ಜೋಡಿಸಿತು


ಇತ್ಥ ತುರುಗಳ ಬಿಸುಟು ರಾಯನ
ತೆತ್ತಿಗರು ತಲ್ವಣಿಸಿ ಹಾಯ್ದರು
ಹೊತ್ತಿದವು ಮುಸುಡುಗಳು ಸಂಗರ ವಿಜಯ ಗರ್ವಿತರ
ಸುತ್ತ ಗೋವರ ಸನ್ನೆಯಲಿ ಪುರ
ದತ್ತ ಮುಂದಾದವು ಪಶುವ್ರಜ
ವುತ್ತರನು ಮುಳುಗಿದನು ಪರಿತೋಷ ಪ್ರವಾಹದಲಿ


ಬಿಗಿದ ಕೆಚ್ಚಲ ತೊರೆದೊಗುವ ಹಾ
ಲುಗಳ ಮಿಗೆ ಸೂಳೆದ್ದ ಬಾಲವ
ಮೊಗ ನೆಗಹಿ ದೆಸೆದೆಸೆಯ ನೋಡುತ ಬೆಚ್ಚಿ ಬಿರುವರಿವ
ಅಗಿದು ಸರಳಿಸಿ ನಿಲುವ ಹೊಸಬರ
ಸೊಗಡಿಗವ್ವಳಿಸುತ್ತ ಗೋವರು
ತೆಗೆದ ಪಥದಲಿ ತೆಕ್ಕೆವರಿದವು ಹಿಂಡು ಹಿಂಡಿನಲಿ


ಕೆಲವು ಕಡೆಗಂದಿಗಳು ಬಾಲದ
ಬಳಿಗೆ ಮೂಗಿಟ್ಟಡಿಗಡಿಗೆ ಮನ
ನಲಿದು ಮೋರೆಯನೆತ್ತಿ ಸುಕ್ಕಿಸಿ ಮತ್ತೆ ಹರಿ ಹರಿದು
ಮಲೆತು ಕಾಲಲಿ ನೆಲನ ಕೆರೆದ
ವ್ವಳಿಸಿ ಮತ್ತೊಂದಿದಿರುವರೆ ಬಲು
ಸಲಗನೀಡಿರಿದಾಡುತಿರ್ದುದು ಹಿಂಡು ಹಿಂಡಿನಲಿ


ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟೀಗಳಾಂತುಕೊಂಡರು ಮತ್ತೆ ಕಾಳಗವ
ಆರಸುಮೋಹರ ಮುರಿದು ಹರಿಬವಬ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ


           ಉದ್ಯೋಗ ಪರ್ವ


ಒಂದು ದಿನ ವೊಡ್ಡೋಲಗಕ್ಕೈ
ತಂದನಖಿಳಾವನಿಯರಾಯರ
ಮಂದಿಯಲಿ ಮುರವೈರಿ ನುಡಿದನುರಾಜಮಂತ್ರವನು
ಹಿಂದೆ ಜೂಜಿನ ವಿಲಗದಲಿಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವರೇನು ಹದನೀಪಾಂಡುತನಯರಿಗೆ


ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊರಿಗೆ ನಿನ್ನದು ಹರಣ ಭರಣವನು
ನೀವು ಬಲ್ಲಿರಿಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ


ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ


ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನುಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ


ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ
ಆಸುರದ ಕತ್ಥಲೆಯ ಬೀಡು ಮ
ಹಾ ಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ


ಬಲನ ಮಾತೇನಿವರ ಭಾಗ್ಯದ
ನೆಲೆಯ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀ ಕುಮಾರಕನೆ
ನೆಲನನಲುಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು


ಕಾದಿ ಸಾವುದು ಮೇಣು ರಿಪುಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನನಿದು ಕ್ಷತ್ರಿಯರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ಶಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ


ಎನಲು ನಕ್ಕನು ದ್ರುಪದನಿನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವರೆ ಕೌರವೇಶ್ವರರು
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪರನ್ನಿಬರೊಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬೆಳಸಿ ನೋಡುವುದು


ವಿಹಿತವಿದು ಪಾಂಚಾಲಕನ ಮತ


ವಹುದು ರಾಯರಿಗಟ್ಟುವುದು ವಿ
ಪಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ
ಬಹಳ ಸಂವರಣೆಯಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ


ಬೀಳುಕೊಂಡರ್ಜುನನು ಲಕ್ಷ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳಡಹಾಯ್ದು
ಮೇಲೆ ಹಂಗನ ಬಲನಹರಿಣೀ
ಜಾಲದೆಡೆನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ


ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸು ಮಿಗಲರೆದೆರೆದ ಲೋಚನ
ಯುಗಳ ಸಮತಳಿಸಿದಸುಸಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ


ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ದನಬುಜಾಂ
ಬಕನನೆಬ್ಬಿಸಮ್ಮದೊಯ್ಯನೆ ಚರಣಸೀಮೆಯಲಿ
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ


ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ


ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷ್ಮೀ
ಲೋಲ ನುಡಿದನು ಉಭಯ ರಾಯರಿಗಿತ್ತ ಬರವೇನು
ಹೇಳಿರೈ ಬರವಘಟಿತವಲಾ
ಮೇಳವೇ ಕಡುಮಾನ್ಯರೆಮ್ಮೀ
ಯಾಲಯಕೆ ಬರವೇನೆನಲು ಕುರು ರಾಯನಿಂತೆಂದ


ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗ ಬೇಕೆಂದ


ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ಧಾರ ಮೆಚ್ಚಿದಳಾರ ಸಂಗಡವುರಿಯ ಹಾಯಿದಳು
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮದೆಂದೇ
ನಾರಕದ ಸಾಮ್ರಾಜ್ಯಕೈದುವರೆಂದು ಹರಿ ನುಡಿದ


ನಾಡಿಗೋಸುಗ ಸೋದರರು ಹೊ
ಯ್ದಾಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ


ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದುಕಲಿಮಾಡಿ ಬಿಡುವರು ಖುಲ್ಲರಾದವರು
ನಗುತ ಹೆರೆಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ


ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು
ನಿವಗೆ ನಿವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು


ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಿರಾಯಣ ಮಹಾಸೇನೆ
ಕಾದುವವರಿವರೋಂದು ದೆಸೆಯೆರ
ಡಾದುದಿವರೊಳು ಮೆಚ್ಛಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ


ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೆ ಸಾಕು ನಮಗೆಂದ


ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ್ ಕೈಮುಗಿದು
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದುಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು


ಮರೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿನೀ ಹೊ
ಕ್ಖಿರಿಯಲಾಗದು ಕೃಷ್ಣಯೆಂದನು ಕೌರವರ ರಾಯ


ಸುಲಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ವದೆ ಮಂದಮತಿಯಾಗಿ
ಮರುಳೆ ಕಾದದಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗುಟಾಟದೆ ಮಾಣ್ಬರೇ ನಿಮ್ಮಣ್ಣ ತಮ್ಮದಿರು


ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎನಗೆಶ್ರಮವುಂಟದು ನಿಲಲಿಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತಮಹಿಮಾವಲಂಬವನೆಂದನಾ ಪಾರ್ಥ


ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವದೇನು ಹೇಳೆಂದ


ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆಚಾಚಿದನು ಹರಿಪದಕೆ

ಸಂಧಿ  ಎಂಟು

ಬರೆದ ಬಳಿಕದು ವಿಧಿಯ ಸೀಮೆಯ
ಬರಹ ನಿಜಕಾರ್ಯಾರ್ಥ ಲಾಭವು
ದೊರಕಿದೊಡೆ ಪತಿಯರ್ಥ ನೀರಲಿ ಬರೆದ ಲಿಪಿಯಂತೆ
ಕರಗುಪಿತ ಲೋಲುಪರು ಲಂಚದ
ಪರಮಜೀವನ ಜಾಣರಾ ಸಿರಿ
ಕರಣದವರೊಪ್ಪಿದರು ಭೂಪಾಲಕನು ಸಭೆಯೊಳಗೆ


ನಳನ ನಹುಷನ ಶಾಲಿಹೋತ್ರನ
ಬಲುಮೆಗಳು ಕಿರಿದೆಂಬ ವಿದ್ಯಾ
ನಿಳಯ ವರ ಧರೇವಂತನೇರಾಟವನು ನಸುನಗುತ
ಬಲಿದ ದೃಢ ವಾಘೆಗಳು ದೃಷ್ಟಾ
ವಳಿಯ ಹಯ ಪ್ರೌಢ ಪ್ರತಾಪರು
ಹೊಳೆವ ಮಕುಟದ ಸಾಲುಗಳೊಪ್ಪಿದರು ರಾವುತರು


ಅತಿ ಮದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರುಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ


ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿತ್ತವ
ಭಂಜನೆಗೆ ಬಲುದೈವ ಬಂದನು ನೃಪತಿಯರಮನೆಗೆ


ಬರಲು ಮುರಹರನಿದಿರುವಂದರು
ಗುರು ನದೀಜ ದ್ರೋಣ ಗೌತಮ
ಗುರುಸುತಾದಿ ಸಮಸ್ತ ಭೂಪಚಮೂಹ ಸಂದೋಹ
ಚರಣದಲಿ ಚಾಚಿದರು ಭೂಮೀ
ಶ್ವರರುಮಕುಟವನಂತತಾರಾ
ಪರಿವೃತೇಂದುವಿನಂತೆ ಮೆರೆದುದು ಹರಿಯಪದನಖವು


ಅರಿದಲೈ ಮುರವೈರಿ ಸನಕಾ
ದ್ಯರ ಸಮಾಧಿಗೆ ಸುಳಿಯದಂಘ್ರಿಯ
ದರುಶನದ ಫಲಭೋಗ ಸಾರಿದುದಸ್ಮದಾದ್ಯರಿಗೆ
ಸುರನರೋರಗರೊಳು ಕೃತಾರ್ಥರು
ನಿರುತ ತಾವಲ್ಲದೊಡೆ ನಿಮ್ಮಯ
ಸರಸಿಜಾಂಘ್ರಿಯ ಸೇವೆ ದೊರಕುವುದಾವ ಮುನಿಗಳಿಗೆ


ನೀವು ಬಿಜಯಗೈವಿರೆಂದು ಮ
ಹಾ ವಿಳಾಸದೊಳಳವಡಿಸಿ ನಾ
ನಾ ವಿಧದ ಷಡುರಸವ ಗರುಡಿಯಲಿಂದು ಸವೆಸಿದೆನು
ದೇವ ನಮ್ಮರಮನೆಗೆ ಬಾರದೆ
ನೀವು ವಿದುರನ ಮನೆಯಲುಂಡಿರಿ
ಗೋವಳಿಗತನ ನಿಮ್ಮ ಮೈಸಿರಿ ತಪ್ಪದಾಯ್ತೆಂದ


ಈಕೃಪನೀ ದ್ಲೋಣನೀ ಗಂ
ಗಾ ಕುಮಾರನ ಮನೆಯ ಹೊಗದವಿ
ವೇಕಿ ತೊತ್ತಿನ ಮಗನ ಮನೆಯಲಿ ಹಸಿವನೂಕಿದೀರಿ
ಸಾಕಿದಿತನು ನಂದಗೋಪನು
ಕಾಕ ಬಳಸಲು ಸಲ್ಲದೇ ನಿಮ
ಗೇಕೆ ರಾಯರ ನೀತಿಯೆಂದನು ನಗುತಕುರುರಾಯ


ಕುರುಪತಿಯ ಬಿರುನುಡಿಯ ಕೇಳಿದು
ಕರಣದಲಿ ಕೋಪಿಗ್ನಿಯುಕ್ಖಲು
ಕೆರಳಿ ನಿರ್ಭೀತಿಯಲಿ ನುಡಿದನು ವಿದುರನರಸಂಗೆ
ದುರುಳ ನೀನಾಡಿದ ನುಡಿಗೆ ಉ
ತ್ತರವನೀಯಲದೇಕೆ ನಿನ್ನಯ
ವರ ಜನನಿಗಾದಿಯಲಿ ಗಂಡರದಾರು ಹೇಳೆಂದ


ಕಡುಮುಳಿಸಿನಲಿ  ಭೀಮ  ನಿನ್ನಯ
ತೊಡೆಗ಼ಳನು ಕಡಿವಾ ಸಮಯದೊಳು
ತಡೆದು ನಿನ್ನನು ಕಾಯಬೇಕೆಂದುಳುಹೀದೆನು ಧನುವ
ಕೆಡೆನುಡಿಸಿಕೊಂಡಿನ್ನು ಕಾವೆನೆ
ನುಡಿದು ಬಲವೇನೆನುತ ವಿದುರನು
ಹಿಡಿದ ಬಿಲ್ಲನು ಮುರಿದನಾ ಕುರುರಾಯ ಬೆರಗಾಗೆ


ಪ್ರಿಯದಲುಂಬುದು ಮೇಣು ವಿಬುಧಾ
ಶ್ರಯದಲುಂಬುದು ಮಾನವರಿಗಿದು
ನಿಯತವಿಂತಲ್ಲದೊಡೆ ಕೇಳೈ ಕೌರವರ ರಾಯ
ಪ್ರಿಯನು ನೀನಲ್ಲೆಮಗೆವಿಬುಧಾ
ಶ್ರಯವು ತಾ ಮುನ್ನಿಲ್ಲ ನಿನ್ನಾ
ಲಯದಲೆಮಗೆಂತೂಟ ಸಂಭವಿಸುವುದು ಹೇಳೆಂದ


ಹಗೆಯನೊಳಗಿಡಲಾಗದದು ವೈ
ರಿಗಳ ನಿಳಯದಲನ್ನ ಪಾನಾ
ದಿನಗಳನುಣಲಾಗದು ನಿಧಾನಿಸೆ ರಾಜನೀತಿಯಿದು
ಬಗೆಯೆ ನೀ ಪಾಂಡವರಿಗಹಿತನು
ವಿಗಡ ಪಾಂಡವರೆನ್ನ ಜೀವನ
ಹಗೆಯ ನಂಬುವೆನೆಂತು ಹೇಳೈ ಕೌರವರ ರಾಯ


ಸಂಧಿ   ಒಂಬತ್ತು


ಆವನಿಪತಿ ಕೇಳಾವು ಪಾಂಡವ
ರವರು ಬನದಲಿ ಕಂದ ಮೂಲವ
ಸವಿದು ಕೊಂಬರು ಋಷಿಗಳಿಗೆ ಹಂಗೇಕೆ ಭೂಮಿಪರ
ಇವರದಾವನ ಪಕ್ಷಪಾತ
ವ್ಯವಹರಣೆಯವರಲ್ಲ ಕೇಳಿ
ನ್ನಿವರ ನುಡಿಗಳನೆಂದು ನುಡಿದನು ಮತ್ತೆಮುರವೈರಿ


ಬೆರಳ ಮೀಸೆಯೊಳಿಡುತ ಕಿರು ನಗೆ
ವೆರಸಿ ಕರ್ಣಾದಿಗಳ ವದನವ
ತಿರುಗಿ ನೋಡುತ ಹರಿಯ ನುಡಿಗಳ ಕಿವುಡುಗೇಳುತ್ತ
ಮರುಳುತನದಾಳಾಪವೇತಕೆ
ಮುರಹರನೆ ಪಾಂಡವರ ಹಂಬಲ
ಮರೆದು ಕಳೆ ಕರಣಕ್ಕೆ ಖಾತಿಯಬಳಸಬೇಡೆಂದ


ಅವರು ನಮ್ಮೊಳು ಸರಸವಾಡುವ
ಹವಣದಲ್ಲದೆ ರಾಜ ಕಾರ್ಯವ
ನೆವಗೆ ಯೋಚಿಸಿ ಕಳುಹಿದಂದವ ಮೆಚ್ಚೆನಾನಿದನು
ಬವರ ಬೇಕೇ ಬೇಡಿ ಕೊಂಬುದು
ಅವನಿಗಿವನಿ ಮಾತ ನೀನಾ
ಡುವರೆ ಪಾಂಡವರೇಕೆ ನೀವೇಕೆಂದು ಖಳ ನುಡಿದ


ಮಾವ ಮೊದಲು ಸಹಾಯ ಮಧ್ಯದೊ
ಳಾ ವಿರಾಟನ ಸಖ್ಯ ಕಡೆಯಲಿ
ನೀವು ಮಮ ಪ್ರಾಣಾಹಿ ಯೆಂಬಿರಿ ನಿಮ್ಮಪಾಂಡವರ
ನಾವು ಕಡೆಯಲಿ ಹೊರಗು ನಮಗಿ
ನ್ನಾವ ಭೂಪರ ಸಖ್ಯವಿದ್ದುದು
ದೇವ ನಾಚಿಸಬೇಡ ಸಂಧಿಯ ಮಾತ ಮರೆಯೆಂದ


ಮಾಡು ಸಂಧಿಯನೆಮ್ಮ ವಚನಕೆ
ಕೋಡದಿರು ಸವಿಮಾತುಗಳ ನಿನ
ಗಾಡುವವರಿಗೆ ಚಿತ್ತಗೊಡದಿರು ಹಿಸುಣ ಹೊಗಿಸದಿರು
ನಾಡನಾಲಗೆ ಗೆಳೆಯರೆಂಬುದ
ಮಾಡದಿರು ಪಾಂಡವ ನೃಪಾಲರ
ಕೂಡುವಾಳಿಕೆ ಪಥ್ಯ ಕೇಳೆಂದಸುರರಿಪು ನುಡಿದ


ನೀತಿಗಾಲಯ ನಿಮ್ಮ ಕುಲ ವಿ
ಖ್ಯಾತವದು ನೆಲೆ ಸಕಲ ಸೌಖ್ಯ
ವ್ರಾತಕಿದು ಸದ್ಭೀಜವೆನಿಸಿತು ಕೌರವಾನ್ವಯವು
ಭೂಥಳದ ಲೋಲುಪತೆಯೊಳು ಕುಲ
ಘಾತಕನು ನೀನೆಂಬ ಕೀರ್ತಿಗೆ
ಯೋತು ನೆಲೆಯಾಗದಿರು ಬೇಡಿದೆವೆಂದು ಹರಿ ನುಡಿದ


ಈ ಹರಿಯನುಡಿಗೇಳು ದೈವದ
ಮೋಹ ತಪ್ಪಿದ ಬಳಿಕ ಸುಭಟರ
ಸಾಹಸಿಕೆ ಹುರುಳಿಲ್ಲ ನಂಬದಿರೆಮ್ಮ ಬಲುಹುಗಳ
ಬಾಹಿರವ ನೀನಾಡದಿರು ವೈ
ದೇಹಿಯನು ಸೆರೆವೊಯ್ದಸ್ವಾಮಿ
ದ್ರೋಹಿಯನು ಹೋಲದಿರು ಕೌರವಯೆಂದನಾ ಭೀಷ್ಮ


ನೆಲನ ಬೇಡುವ ಪಾಂಡವರ ಭುಜ
ಬಲದೊಳಗೆ ಕುಂದಿಲ್ಲ ನೀತಿಯ
ತಿಳುಹಲೈತಂದಸುರರಿಪು ಸಾಮಾನ್ಯ ಬಳನಲ್ಲ
ಇಳೆಯೊಳರ್ಧವನೊಪ್ಪುಗೊಡು ಯದು
ಕುಲಲಲಾಮನ ನೇಮವನು ನೀ
ಸಲಿಸು ಕೆಡಿಸದಿರೀ ವಿಳಾಸವನೆಂದನಾ ದ್ರೋಣ


ಪರಮಪುರುಷನು ಕೃಷ್ಣರಾಯನು
ಕುರುಕುಲದ ಹಿರಿಯನು ನದೀಸುತ
ಪರಮಧನಸಮಚಾಪವಿದ್ಯನು ದ್ರೋಣನದರಿಂದ
ಧರಣಿಪತಿ ಬಲುಹುಳ್ಳವರು ನಿ
ನ್ನರಮನೇಯಲುಂಟೇ ವಿಚಾರಿಸು
ಮರುಳುತನ ಬೇಡಿವರ ನುಡಿಗಳುಯೆಂದನಾ ವಿದುರ


ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಢಿ ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನನಿಧಿ ಕೊಂ
ಡಾಡಲೇತಕೆ ಧರೆಯನೀರಡಿ
ಮಾಡಿಕೊಂಡ ಮಹಾತ್ಮ ನಿನಗಂಜುವೆನು ನಾನೆಂದ


ನೆಲದೊಳರ್ಧಪನೀವುದಿಲ್ಲಾ
ಸ್ಥಳವನೈದನು ಮುನ್ನ ಕೊಡೆನೆ
ನ್ನಿಳೆಯ ಭಾಗವನೀಸುಕೊಟ್ಟಡೆ ನಿನ್ನಮೇಲಾಣೆ
ನೆಲನ ಕಡೆಯಲಿ ಮುಳ್ಳುಮೊನೆಯು
ಚ್ಚಳಿಪ ಧರಣಿಯನಿತ್ತೆನಾದೊಡೆ
ಬಳಿಕ ನೀನಗು ಹೋಗು ಕದನವ ಕೊಂಡು ಬಾಯೆಂದ


ದನವ ಕಾದುದು ತೀರ್ದುದೇ ಬನ
ಬನಕೆತೊಳಲ್ವುದು ಕಡೆಯನೈದಿತೆ
ಮುನಿಗಳೊಳು ಬೊಗಳುಗಳನೆರಗಿಸಿ ಕೊಂಬುದದ ಬಿಸುಟು
ವನನಿಧಿಯನೆಡೆಗೊಂಡು ನಡುಹಾ
ವಿನಲಿ ಹಕ್ಕೆಯ ಬಿಸುಟು ನಮ್ಮೊಳು
ಮನಕತವ ನೀ ತಿಳುಹಲೋಸುಗ ಬಹರೆ ಹೇಳೆಂದ


ಮುನಿದು ದುರಿಯೋಧನನು ದುಶ್ಯಾ
ಸನನು ಕೆಲದರಮನೆಯೊಳಾಳೋ
ಚನೆಯ ಮಾಡಿದರಂದು ಸೌಬಲಕರ್ಣರೊಡಗೂಡಿ
ದನುಜವೈರಿ ಕುಮಂತ್ರದಲಿ ಬೊ
ಪ್ಪನೊಳು ಖಾತಿಯನಿಕ್ಕಿದನು ಕೈ
ಮನದ ಕಲಿಗಳು ಕಟ್ಟಿ ಕೃಷ್ಣನನೆಂದು ಗಜಬಜಿಸೆ


ಎರಡು ಬಲವನು ಮಸೆದು ಕೊಲಿಸುವ
ಭರವೆ ಯಾದವನದು ನಿಧಾನಿಸ
ಲರಿ ನಮಗೆ ಮುರವೈರಿಯಲ್ಲದೆಪಾಂಡುನಂದನರೆ
ತರಿಸಿ ಹುರಿ ನೇಣುಗಳನೀತನ
ಕರವೆರಡನೊಡೆಬಿಗಿದಡವದಿರು
ಕೆರಳಿ ಮಾಡುವುದಾವುದೆಂದನು ಕೌರವರ ರಾಯ


ಗಾಳಿಯುಪಶಮಿಸಿದೊಡೆ ವಹ್ನಿ
ಜ್ವಾಲೆ ತಾನೇ ನಿಲುವುದೀತನ
ತೋಳ ಬಿಗಿದೊಡೆ ಬಳಿಕ ಮನಗುಂದುವರು ಪಾಂಡವರು
ಮೇಳವಿಸಿ ನೇಣುಗಳನೆನುತ ನೃ
ಪಾಲನವದಿರು ಗಜಬಜಿಸುವುದ
ನಾಲಿಸುತ ಸಾತ್ಯಕಿಯೊಡನೆ ಕೃತವರ್ಮನರುಹಿದನು


ಆಳು ಕುದುರೆಯ ಬಾಗಿಲಿಗೆ ಬರ
ಹೇಳು ಕೈದುವ ಕೊಂಡು ವೀರ ಭ
ಟಾಳಿ ಹತ್ತಿರೆ ನಿಲಲಿ ಕೈವೀಸಿದರೆ ಕವಿಕವಿದು
ಬೀಳ ಬಡಿವುದು ಹೊಕ್ಕು ದಂಡಿನ
ಮೇಲೆ ದಂಡನು ಕಡಿದು ಕುರು ಭೂ
ಪಾಲಕನ ನೊರೆ ನೆತ್ತರಲಿ ನಾದುವುದು ಮೇದಿನಿಯ


ಎಂದು ಸುಭಟರಿಗರುಹಿ ಸಸಾತ್ಯಕಿ
ಬಂದು ಕೃಷ್ಣನ ಕಿವಿಯ ಹತ್ತಿರೆ
ನಿಂದು ವದನವ ಚಾಚಿ ಬಿನ್ನಹ ಮಾಡಿದನು ನಗುತ
ಮಂದಮತಿಗಳು ತಪ್ಪಿದರು ಮನ
ಗುಂದಲಾಗದು ಜೀಯ ಚಿತ್ತೈ
ಸೆಂದಡಸುರಾರಾತಿ ನಗುತವೆ ಭೀಷ್ಮಗಿಂತೆಂದ


ಪರಿಣತ ಪ್ರೌಡಿಗಳಿಗಂತಃ
ಕರಣ ನನೆವುದು ಸುಜನರಿಗೆ ನಿ
ಷ್ಠುರತೆಗಲ್ಲದೆ ಮನವನೀಯದು ಮಹಿಯಮೂಢಜನ
ಕರಗುವುದು ಶಶಿಕಾಂತ ಚಂದ್ರನ
ಕಿರಣ ತಾಗಲು ವಜ್ರಹತಿಗ
ಬ್ಬರಿಸಿದಲ್ಲದೆ ಗಿರಿಗಳೊಡೆಯವು ಭೀಷ್ಮ ಕೇಳೆಂದ


ದೂತರನು ಕಟ್ಟುವುದು ರಾಯರಿ
ಗೇತರುಚಿತವು ನಮ್ಮ ಕಟ್ಟಲು
ಕಾತರಿಸುತಿದೆ ನಿಮ್ಮ ಮೊಮ್ಮಂದಿರು ನೀ ಕರೆಸಿ
ಮಾತನಾಡಿಸಿ ನೋಡು ನಮಗೀ
ಭೀತಿ ತಾನಿಲ್ಲೆನಲು ಗಂಗಾ
ಜಾತ ಧೃತರಾಷ್ಟ್ರಂಗೆ ನುಡಿದನು ಕೌರವನ ಹದನ


ದುರುಳ ಮಗನೇ ಕೃಷ್ಣರಾಯರ
ಕೆರಳಿಚುವರೇ ಯಾದವರು ನಮ
ಗೆರವಿಗರೆ ವಸುದೇವನಲಿ ತಾ ಭೇದವೇ ನಿನಗೆ
ದುರುಳತನವಿದು ಬೇಡ ಖುಲ್ಲರ
ನೆರವಿಯೊಳಗಾಡಿದೊಡೆ ತಪ್ಪದು
ನರಕವೆಂದನು ಕುರುಪತಿಗೆ ಧೃತರಾಷ್ಟ್ರ ಭೂಪಾಲ


ಎಲೆ ಮರುಳೆ ಧೃತರಾಷ್ಟ್ರ ನಂಜಿನ
ಬಳಗವೀತನ ಬಂಧುಕೃತ್ಯದ
ಬಳಕೆಯಲಿ ನೀ ನಿನ್ನ ಕಂದನ ಬೇಡಿಕೊಳಲೇಕೈ
ಮುಳಿದು ಬಗಳುವ ನಾಯ್ಗೆ ಚಂದ್ರಮ
ನಳುಕುವನೆ ನರಿಯೊರಲಿದೊಡೆ ಕಳ
ವಳವಹುದೆ ಸೀಂಹಕ್ಕೆಯೆಂದನು ಖಾತಿಯಲಿ ವಿದುರ


ನೋರಜು ಹೊಕ್ಕೊಡೆ ಕಲಕುವುದೆ ಸಾ
ಗರದ ಜಲನೊಣವೆರಗಿದೊಡೆ ಕುಲ
ಗಿರಿಗಳಲ್ಲಾಡುವವೆ ಕೇಳ್ ಧೃತರಾಷ್ಟ್ರ ಭೂಪತಿಯೆ
ತೆರಳಲರಿವನೆ ಕೊಬ್ಬಿದೊಳ್ಳೆಯ
ಮರಿಗೆ ಗರುಡನು ನಿನ್ನ ಮಕ್ಕಳ
ದುರುಳತನಕಂಜುವನೆ ಮುರರಿಪುಯೆಂದನಾ ವಿದುರ


ವಿದುರನಿಂತೆನುತಿರಲು ಮಿಂಚಿನ
ಹೊದರು ಹುರಿಗೊಂಡಂತೆ ರವಿಶತ
ಉದುರಿದವು ಮೈಮುರಿದು ನಿಂದಡೆ ದೇವರಂಗದಲಿ
ಸದೆದುದಾಸ್ತಾನವನು ಘನ ತೇ
ಜದ ಲಹರಿ ಲೀಲೆಯಲಿ ಹರಿ ತೋ
ರಿದನು ನಿರುಪಮ ವಿಶ್ವರೂಪವನಾ ಮಹಾ ಸಭೆಗೆ


ಚರಣದುಂಗುಟದಲ್ಲಿ ದೇವರು
ತುರುಗಿದರುನೊಸಲಲಿಕಮಲಜ
ನುರದಲಗ್ಗದ ರುದ್ರನಾಸ್ಯದೊಳಗ್ನಿ  ವಾಯುಗಳು
ಬೆರಳಲಿಂದ್ರಾದಿಗಳು ನಯನಾಂ
ಬುರುಹದಲಿ ರವಿ ನಾಭಿಯಲಭವ.
ವರಭುಜಾಗ್ರದೊಳಖಿಳ ದಿಗುಪಾಲಕರು ರಂಜಿಸಿತು


ತಳುಕನುಗಿದೀಡಾಡಿ ಪರಿಣತ
ಪುಳಕದಲಿ ನನೆನನೆದು ಹರುಷದ
ಜಲಧಿಯಲಿ ಮನಮುಳುಗಿ ಭಕುತಿಯ ಭಾರದಲಿಕುಸಿದು
ಅಳುಕಿ ತಮತಮಗೆದ್ದು ಮುನಿಸಂ
ಕುಲ ಸಹಿತ ಗಾಂಗೇಯ ಕೃಪ ನಿ
ರ್ಮಲ ವಿದುರ ಗುರುಸಂಜಯಾದಿಗಳೆರಗಿದರು ಪದಕೆ


ಒಳಗೆ ಹೊಳೆದನು ಬಾಹ್ಯದಲಿ ಪ್ರ
ಜ್ವಲಿಸಿದನು ತಾನಲ್ಲದನ್ಯರ
ಬಳಕೆ ಬೇರೊಂದಿಲ್ಲದಂತಿರೆ ಕೂಡೆ ತೋರಿದನು
ಒಳಗೆಬಿಗಿವೆವೊ ಹೊರಗೆ ಕೃಷ್ಣನ
ಸಿಲುಕಿಸುವೆವೋ ತಿಳಿಯೆ ಕೃಷ್ಣರು
ಹಲಬರಿಹರಾರಾರ ಕಟ್ಟುವೆವೆಂದರಾ ಖಳರು


ಕಂಗಳನುಕರುಣಿಸಿದನಂಧ ನೃ
ಪಂಗೆ ಬಳಿಕೀ ಕೃಷ್ಣರಾಯನ
ಮಂಗಳ ಶ್ರೀ ಮೂರ್ತಿಯನು ಮನದಣಿಯೆತಾ ನೋಡಿ
ಕಂಗಳಡಗಲಿದೇವ ನಿಮ್ಮೀ
ಯಂಗವಟ್ಟವ ಕಂಡು ಬಳಿಕೀ
ಕಂಗಳಿತರವ ಕಾಣಲಾಗದುಕೃಪೆಯ ಮಾಡೆಂದ


ತಾತ ಹೆದರದಿರೀ ಮುಕುಂದನ
ಕೈತವಕೆಬೆಚ್ಚದಿರು ಸಂಧಿಯ
ಮಾತು ತಾನಿದು ಹೃದಯವೇ ಬೆಸಗೊಳ್ಳಿ ಮುರಹರನ
ಈತನಂತರ್ಯಾಮಿ ಜೀವ
ವ್ರಾತದಲಿ ಜನಜನಿತವಿದು ಜಗ
ವೀತನಾಜ್ಞೆಯೊಳೊಲವುದೆಂದನು ಕೌರವರರಾಯ


ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ನುಡಿವನೀ ಹದನ
ಭಿನ್ನನಂತಿರೆ ತೋರಿ ಭಿನ್ನಾ
ಭಿನ್ನನೆನಿಸಿಯೆ ಮೆರೆವ ತಿಳಿಯಲ
ಭಿನ್ನನೈ ಮುರವೈರಿ ನಾವಿನಂಜಲೇಕೆಂದ


ಇಳಿದನವನಿಗೆ ಧಾರುಣಿಯ ಹೊರೆ
ಗಳೆಯಲೋಸುಗವಿಲ್ಲಿ ನಮ್ಮೊಳ
ಗೊಳಗೆ ವೈರವಬಿತ್ತಿ ಬರಿಕೈವನು ಮಹಾಬಲವ
ಛಲಕೆ ಮಣಿಯದೆ ರಾವಣಾದಿಗ
ಳಳಿದರಿದಲಾ ಕೀರ್ತಿಕಾಯವಿ
ದಳಿವುದಗ್ಗದ ಕೀರ್ತಿಯುಳಿವುದು ಅಂಜಲೇಕೆಂದ


ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಟ ಧಾ
ರುಣಿಯ ಹಸಿರಿಗಳುಪುವವನಲ್ಲಳುಕಿಲ್ಲ ಕಾಯದಲಿ
ರಣ ಮಹೋತ್ಸವವೆಮ್ಮ ಮತ ಕೈ
ದಣಿಯೆ ಹೊಯ್ದಾಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದಙ


ಎನಲುನಸುನಗುತಸುರರಿಪು ಮು
ನ್ನಿನಮನುಷ್ಯಾಕಾರವನು ಮಗು
ಳನುಕರಿಸಿ ಧೃತರಿಷ್ಟ್ರ ಭೀಷ್ಮರಿಗೆಂದನೀ ಹದನ
ಘನಸುಯೋಧನ ಪಾಂಡುವಿನ ನಂ
ದನರೊಳಾದ ವಿವಾದ ನಮಗೇ
ಕೆನುತ ರಾಜಾಲಯವನಸುರಧ್ವಂಸಿ ಹೊರವೊಂಟ


ಹತ್ತನೆಯ   ಸಂಧಿ
ಕರ್ಣ ಭೇದನ ಸೂಚನಾ  ಪದ್ಯ


ಸೆಣಸುವದಟರಗಂಡ ಸಮರಾಂ
ಗಣ ಕಮಲ ಭೇರುಂಡನಾ ದಿನ
ಮಣಿಯ ಮಗನುದ್ದಂಡಕರ್ಣನ ಕಂಡಳಾ ಕುಂತಿ


ಇನತನೂಜನಕೂಡೆ ಮೈದುನ
ತನದ ಸರಸವನೆಸಗಿ ರಥದೊಳು
ದನುಜರಿಪು ಬರಸೆಳೆದು ಕುಳ್ಳಿರಿಸಿದನು. ಪೀಠದಲಿ
ಎನಗೆ ನಿಮ್ಮಡಿಗಳಲಿ ಸಮಸೇ
ವನಯೆ ದೇವ ಮುರಾರಿಯಂಜುವೆ
ನೆನಲು ತೊಡೆ ಸೋಂಕಿನಲಿ ಸಾರಿದುಶೌರೀಯಿಂತೆಂದ


ಭೇದವಿಲ್ಲೆಲೆ ಕರ್ಣ ನಿಮ್ಮೊಳು
ಯಾದವರು ಕೌರವರೊಳಗೆಸಂ
ವಾದಿಸುವಡನ್ವಯದ ಮೊದಲೆರಡಿಲ್ಲ ನಿನ್ನಾಣೆ
ಮೇದಿನೀಪತಿ ನೀನು ಚಿತ್ತದೊ
ಳಾದುದರಿವವಿಲ್ವೆನುತ ದಾನವ
ಸೂದನನುರವಿಸುತನ ಕಿವಿಯಲಿ ಬಿತ್ತಿದನು ಭಯವ


ದಾನವಾಂತಕ ಬೆಸಸು ವಂಶ ವಿ
ಹೀನನ ನಿಮ್ಮಡಿಗಳೋಡನೆ ಸ
ಮಾನಿಸುವರೆ ಸಾಕೆನುತ ರವಿಸೂನು ಕೈಮುಗಿಯೆ
ಮಾನನಿಧಿ ನಿನ್ನಾಣೆ ಬಾರೈ
ನೀನು ನಮ್ಮೆಲ್ಲರ ಹವಣೆ ವರ
ಭಾನುವಂಶಲಲಾಮ ನೀ ರಾಮಂಗೆ ಸರಿಯೆಂದ


ಕಳೆದು ಕೊಂಡನು ವೀಳೆಯವನಂ
ಜುಳಿಯಲಾತಂಗಿತ್ತು ಕರ್ಣನ
ಕೆಲಕೆ ಬಲಸೆಳೆದವನ ಕರದೊಳು ಕರತಳವನಿಕ್ಕಿ
ಎಲೆ ದಿವಾಕರತನಯ ನಿನ್ನಯ
ಕುಲವನರಿಯೆಯಲಾ ಸುಯೋಧನ
ನಲಿ ವೃಥಾ ಸೇವಕತನದಲಿಹುದುಚಿತವಲ್ಲೆಂದ


ಲಲನೆ ಪಡೆದೀಯೈದು ಮಂತ್ರಂ
ಗಳಲಿ ಮೊದಲಿಗ ನೀನು ನಿನ್ನಯ
ಬಳಿ ಯುಧಿಷ್ಟಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲೈದನೆ
ಯಲಿ ನಕುಲ ಸಹದೇವರಾದರು
ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು


ಅದರಿನಾ ಪಾಂಡವರಲೈವರ
ಮೊದಲಿಗನು ನೀನಿರಲು ಧರಣಿಯ
ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು
ಇದು ನಿಧಾನವು ಕರ್ಣ ನಿನ್ನ
ಭ್ಯುದಯವನೆ ಬಯಸುವೆನು ನಿನ್ನಯ
ಪದಕೆ ಕೆಡಹುವೆನೈವರನು ನಡೆ ತನ್ನ ಸಂಗಾತ


ನಿನಗೆಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಪಾಂಡವ
ಜನಪ ಕೌರವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ


ಎಡದ ಮೈಯಲಿ ಕೌರವೇಂದ್ರರ
ಗಡಣ ಬಲದಲಿ ಪಾಂಡು ತನಯರ
ಗಡಣವಿದಿರಲಿ ಮಾದ್ರ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸವ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ


ಶೌರಿಯದಲಿದಿರಿಲ್ಲ ಕುಲದಲಿ
ಸೂರಿಯನ ಮಗನೊಡನೆ ಹುಟ್ಟಿದ
ವೀರರೈವರು ಪಾಂಡುತನಯರು ನಿನ್ನ ವೈಭವಕೆ
ಆರು ಸರಿಯೈ ಕರ್ಣ ನಡೆ ನಡೆ
ಧಾರುಣೀಪತಿಯಾಗು ನೀನಿರೆ
ವೈರವಿತ್ತಂಡಕ್ಕೆ ಬಳಿಕಿಲ್ಲೆಂದನಸುರಾರಿ


ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹುದೆ
ಬರಿದೆ ಹೋಹುದೆ ತನ್ನವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ


ಕಾದಿ ಕೊಲುವೊಡೆ ಪಾಂಡುಸುತರು ಸ
ಹೋದರರು ಕೊಲಲಿಲ್ಲ ಕೊಲ್ಲದೆ
ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ
ಭೇದದಲಿ ಹೊಕ್ಕಿರಿದನೋ ಮಧು
ಸೂದನಕಟಕಟೆನುತ ಘನ ಚಿಂ
ತೋದಧಿಯಲದ್ದವೊಲು ಮೌನದೊಳಿರ್ದನಾ ಕರ್ಣ


ಏನು ಹೇಳೈ ಕರ್ಣ ಚಿತ್ತ
ಗ್ಲಾನಿ ಯಾವುದು ಮನಕೆ ಕುಂತೀ
ಸೂನುಗಳ ಬೆಸಕೈಸಿ ಕೊಂಬುದು ಸೇರದೆ ನಿನಗೆ
ಹಾನಿಯಿಲ್ಲೆನ್ನಾಣೆ ನುಡಿ ನುಡಿ
ಮೌನವೇತಕೆ ಮರುಳುತನ ಬೇ
ಡಾನುನಿನ್ನಪದೆಸೆಯ ಬಯಸುವನಲ್ಲ ಕೇಳೆಂದ


ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರ ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ


ಒಡನೆ ಹುಟ್ಟಿದೆವೆಂಬ ಕಥನವ
ನೆಡೆಗುಡದೆ ಬಣ್ಣಿಸಿದೆ ವಿಜಯನ
ಗಡುಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ
ನುಡಿದು ಫಲವೇನಿನ್ನು ಕೇಳೆ
ನ್ನೊಡೆಯನಿದಂತಹೆನು ಬಾರೆನು
ಪೊಡವಿಯಲಿ ನೀ ಹರಹಿಕೊಳು ನಿನ್ನವರ ನಿಲಿಸೆಂದ


ವೀರ ಕೌರವರಾಯನೇ ದಾ
ತಾರನಾತನ ಹಗೆಯೆ ಹಗೆ ಕೈ
ವಾರವೇಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆಸಮರದ
ಸಾರದಲಿತೋರುವೆನು ನಿಜ ಭುಜ
ಶೌರಿಯದ ಸಂಪನ್ನತನವನು ಪಾಂಡವರಲಿ


ಹಲವು ಮಾತೇನಖಿಳ ಜನಕೆ
ನ್ನುಳಿವು ಸೊಗಸದು ಕೌರವೇಶ್ವರ
ನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತಜನವಿಲ್ಲ
ಸಲಹಿದನು ಮನ್ನಣೆಯಲೆನಗೆ
ಗ್ಗಳಿಕೆಯಲ್ಲದೆ ಹೀನ ವೃತ್ತಿಯ
ಬಳಸಿ ನಡೆಸನು  ಕೌರವೇಂದ್ರನನೆಂತು ಮರೆದಪೆನು


ನೋಡಿ ದಣಿಯನು ಬಿರುದ ಹೋಗಳಿಸಿ
ಹಾಡಿ ದಣಿಯನು ನಿಚ್ಛಲುಚಿತವ
ಮಾಡಿ ತಣಿಯನು ಮಾನನಿಧಿಯನದೆಂತು ಮರೆದಪೆನು
ಕಾಡಲಾಗದು ಕೃಷ್ಣ ಖಾತಿಯ
ಮಾಡಲಾಗದು ಬಂದೆನಾದೊಡೆ
ರೂಢಿಮೆಚ್ಚದು ಕೌರವನ ಹಗೆ ಹರಿಬ ತನಗೆಂದ


ಅರುಣಜಲದಾಜ್ಯದಲಿ ಬಂಬಲು
ಗರುಳ ಚರುವಿನಲೆಲುವಿನೊಟ್ಟಿಲ
ಬೆರಳ ಸಮಿಧೆಯಲಡಗಿನಖಿಳಾಹುತಿಯ ರಚನೆಯಲಿ
ನರಕಪಾಲದ ಪಾತ್ರೆಗಳ ತಿಲ
ದೊರಳೆಗಳ ಕೇಶೌಘ ದರ್ಭಾಂ
ಕುರದಲಾಹವಯಜ್ಞದೀಕ್ಷಿಥನಹೆನು ತಾನೆಂದ


ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ರುಣ ಹಿಂಗೆ ರಣದಲಿ ಸುಭಟ ಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ


ಎನಲು ಕರ್ಣನ ದೃಢವ ಕಂಡನು
ಮನದೊಳುತ್ಸಾಹಿಸಿದನಾದೊಡೆ
ತನಯರೈವರ ಹದನು ನಿನ್ನದು ಬಲುಹ ಮಾಡುವೊಡೆ
ಮನಕೆ ಖತಿಯಹುದರುಹದಿರ್ದೊಡೆ
ತನಗೆಗುಣವಲ್ಲೆಂಬ ಕಾರಣ
ವಿನಿತನೊಡ್ಡೈಸಿದೆನು ನೀಸುಖಿಯಾಗು  ಹೋಗೆಂದ


ಬಂದರೊಳ್ಳಿತುಬಾರದಿರ್ದೊಡೆ
ಕಂದ ಕೇಳೈ ಮಧುರ ವಚನದಿ
ಮಂದಮತಿಯನು ತಿಳುಹಿ ತಮ್ಮಂದಿರಿಗೆ ರಾಜ್ಯವನು
ಇಂದು ಕೊಡಿಸುವುದುಚಿತ ಸಂಪ್ರತಿ
ಗಿಂದು ಸೇರಿಸು ನಿನ್ನ ಮಾತನು
ಹಿಂದುಗಳೆಯನು ಕೌರವೇಶ್ವರನೆಂದನಸುರಾರಿ


ಮಸೆದುದಿತ್ತಂಡಕ್ಕೆ ಮತ್ಸರ
ವಸಮ ಸಂಗರವೀಗ ನೀತಿಯ
ನುಸುರಿದರೆ‌ ಮನಗಾಣನೇ ಕೌರವ ಮಹೀಶ್ವರನು
ವಿಸಸನದ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ವೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ


ಕಳುಹಬೇಹುದು ದೇವ ದಿನಪತಿ
ಈಳಿದಪಪರಾಂಬುಧಿಗೆ ಸಂಪ್ಲತಿ
ಯಳಿದ ಹೊತ್ತಿಂದೀಗ ನೆಟ್ಟನೆ ನೀವು ಪಾಂಡವರು
ಹುಲುಸರವಿ ಹಾವಹುದು ಹುತ್ತಿನ
ತಲೆಯಲಿರಲಜ್ಞರಿಗೆ ಹಿಸುಣರ
ಬಳಕೆ ಹೊಗುವುದು ಕಳುಹಬೇಕೆಂದೆರಗಿದನು ಕರ್ಣ


ವೀರರವಿಸುತನೊಂದು ದಿನ ರವಿ
ವಾರದಲಿ ಪರಿತೋಷ ಮಿಗೆ ಭಾ
ಗೀರಥೀ ತೀರದಲಿ ತಾತಂಗರ್ಘ್ಯವನು ಕೊಡುತ
ಸಾರ ಮಂತ್ರವ ಜಪಿಸುತಿರಲೌ
ದಾರಿಯದ ಸುರತರುವ ಕುಂತೀ
ನಾರಿ ಕಾಣಲು ಬಂದಳಾತ್ಮಜನಿದ್ದನದಿಗಾಗಿ


ಬರಲು ತಾಯ್ಗಿದಿರಾಗಿ ರವಿಸುತ
ನಿರದೆ ಬಂದನು ದಂಡದಂತಿರೆ
ಚರಣದಲಿ ಮೈಯಿಕ್ಕಲಾತನ ನೊಸಲ ನೆಗಹಿದಳು
ಬರಸೆಳೆದು ಬಿಗಿದಪ್ಪಿದಳು ನೀ
ರುರವಣಿಸಿದವು ನಯನದಲಿ ಸೆರೆ
ಕೊರಳಿಗೌಕಿ ತಾನಳಲನಬುಧಿಯೊಳಾಳ್ದಳಾ ಕುಂತಿ


ಆ ಸಮಯದಲಿ ಗಂಗೆ ನಾರ
ವೇಷದಲಿ ನಡೆತಂದಳೆಲೆ ಕುಂ
ತೀ ಸತಿ ಕೈಯೆಡೆಯ ಕಂದನನೊಪ್ಪುಗೊಳು ನೀನು
ಈಸು ದಿನವಿವನಾಗುಹೋಗಿನ
ಗಾಸಿಯನು ತಲೆಗಾಯ್ದೆನೆನ್ನಯ
ಭಾಷೆ ಸಂದುದೆನುತ್ತ ತಾಯಿಗೆ ಕೊಟ್ಟಳಾತ್ಮಜನ


ಇರಲಿರಲು ರವಿ ಬಂದನೆಕ್ಕಟಿ
ಕರೆದನೀತನ ಕಿವಿಯೊಳೆಲ್ಲವ
ನೊರೆದ ನಿನಗೆಲೆ ಮಗನೆ ಕುಂತೀದೇವಿ ತಾಯಹುದು
ಮುರಹರನ ಮತದಿಂದ ನಿನ್ನಯ
ಸರಳ ಬೇಡಲು ಬಂದಳಂದಿನ
ಹರಿಗೆ ಕವಚವನಿತ್ತವೊಲು ಮರುಳಾಗಬೇಡೆಂದ


ಬೆಸಸಿದುದಕೆ ಹಸಾದವೆಂದನು
ಬಿಸಜಬಂಧುವ ಕಳುಹಿದನು ಮ
ನ್ನಿಸಿದನಿತ್ತಲು ಮಾತೆಯನು ಭಯಭರಿತ ಭಕ್ತಿಯಲಿ
ಬಸೆದು ಬಿಜಯಂಗೈದ ಹದನನು
ವುಸುರ ಬೇಹುದು ತಾಯಿಯೆನೆ ಶೋ
ಕಿಸುತ ನುಡಿದಳು ಕುಂತಿ ಕರ್ಣನ ತೆಗೆದುಬಿಗಿಯಪ್ಪಿ


ಮಗನೆ ತಮ್ಮಂದಿರನು ಪಾಲಿಸು
ವಿಗಡತನವನು ಮಾಣು ನೀನೋ
ಲಗಿಸುವರೆ ಕುರುಪತಿಯ ನಿನಗವರಿದಿರೆಯಿತ್ತಂಡ
ಸೊಗಸು ತಾನೆಂದುದನು ಹಿಸುಣರ
ಬಗೆಯನೀ ಕೇಳದಿರು ನೀ ಮನ
ಬಿಗಿಸದಿರು ಸಲಿಸೆನ್ನವಚನವನೆಂದಳಾ ಕುಂತಿ


ತಾಯಹುದು ತಾ ಬಲ್ಲೆನದು  ಸಂ
ಜಾಯತವುಪಾಂಡವರು ತಮ್ಮದಿ
ರೀಯುಭಯ ರಾಯರಲಿ ಪಟ್ಟದಹಿರಿಯತಾನಹುದು
ರಾಯನೆನ್ನನು ನೆಚ್ಚಿ ಹೊರೆದನು
ಸಾಯಲಳುಕುವೆನೇ ಸುಡೇತರ
ದೀಯಿಳೆಯ ಬಾಳಿಕೆ ಕೃತಘ್ನತೆಗೆಲ್ಲಿ ಗತಿಯೆಂದ


ಮಕ್ಕಳೈವರಿಗಾ ಹಿರಿಯನದು
ತಕ್ಕ ಮಾತೆಲೆ ತಾಯೆ ಸಂದೇ
ಹಕ್ಕೆನೆಲೆಯಿಲ್ಲದು ನಿಲಲಿ ಧಾರುಣಿಯ ಬಯಸುವರೆ
ತಕ್ಕುದೇ ದಾತಾರನರಸಿಯೊ
ಳೊಕ್ಕತನವಿರಲಾರು ಮೆಚ್ಚುವ
ರಕ್ಕ ಹೇಳೌ ಹೇಸಳೇ ಜಯಲಕ್ಷ್ಮಿ ತನಗೆಂದ


ಇಂದು ನೀವರುಹಿದ ಬಳಿಕ ರವಿ
ನಂದನನುಯೆಂದರಿದನಲ್ಲದೆ
ಹಿಂದೆ ದುರಿಯೋಧನನದಾವುದ ನೋಡಿ ಸಲಹಿದನು
ಬಂದುಪಾಂಡವರೊಡನೆ ಕೂಡಿದ
ರಿಂದು ನಗದೇಲೋಕವಂತಿರ
ಲಿಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ ನೀವೆಂದ


ಆದೊಡೈವರ ಮಕ್ಕಳನು ತಲೆ
ಗಾಯ್ದು ತೋರೈ ಕಂದ ನಿನಗಿ
ನ್ನೀ ದುರಾಗ್ರಹವೊಪ್ಪುವುದೆ ಕೌರವನಸೇವೆಯಲಿ
ಹೋದ ಬಾಣವಮರಳಿ ತೊಡದಿರು
ಮಾದು ಕಳೆ ವೈರವನೆನಲ್ಕೆ ಹ
ಸಾದವೆಂದನು ಬೀಳುಕೊಟ್ಟನು ಬಂದನಲಮನೆೆಗೆ


     

1 ಕಾಮೆಂಟ್‌: