ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಏಪ್ರಿಲ್ 27, 2019

ರನ್ನನ ಅಜಿತಪುರಾಣ

ರನ್ನನ ಅಜಿತಪುರಾಣ

ರನ್ನನು ಬೆಳುಗರೆ ನಾಡಿನಲ್ಲಿರುವ ಬೆಳುಗಲಿ ಐನೂರು ಪ್ರಾಂತದಲ್ಲಿರುವ ಜಂಬುಖಂಡಿ ಎಪ್ಪತ್ತರಲ್ಲಿ ಶ್ರೇಷ್ಠವಾದ ಮುದುವೊಳಲು ( ಈಗಿನ ಮುಧೋಳ) ಎಂಬ ಊರಿನಲ್ಲಿ ಸೌಮ್ಯಸಂವತ್ಸರದಲ್ಲಿ ಕ್ರಿ. ಶ. ೯೪೯ ರಲ್ಲಿ ಹುಟ್ಟಿದನು. ಈತನು ಬಳೆಗಾರಕುಲದ ಅಬ್ಬಲಬ್ಬೆ ಮತ್ತು ಜಿನವಲ್ಲಭೇಂದ್ರ ಎಂಬ ದಂಪತಿಗಳ ಮಗ. ದೃಢಬಾಹು, ರೇಚಣ, ಮಾರಯ್ಯ ಎಂಬುವವರು ಇವನ ಸಹೋದರರು. ಇವನಿಗೆ ಜಕ್ಕಿ, ಶಾಂತಿ ಎಂಬ ಇಬ್ಬರು ಹೆಂಡತಿಯರು, ಇವನಿಗೆ ರಾಯನೆಂಬ ಮಗ
ಮತ್ತು ಅತ್ತಿಮಬ್ಬೆ ಎಂಬ ಮಕ್ಕಳು. ಇವನ ಗುರು ಅಜಿತಸೇನಾಚಾರ್ಯರು ಗುರುಗಳು. ಆಶ್ರಯದಾತ ಚಾವುಂಡರಾ. ಇವನು ಚಾಲುಕ್ಯ ಚಕ್ರವರ್ತಿಯರಾದ ತೈಲಪ ಹಾಗೂ ಅವನ ಮಗ ಸತ್ಯಾಶ್ರಯ ಇರಿವಬೆಡಂಗ ಇವರ ಆಸ್ಥಾನದಲ್ಲಿ ಕವಿಯಾಗಿದ್ದನು. ತೈಲಪನು ಇವನಿಗೆ ಕವಿಚಕ್ರವರ್ತಿ ಎಂಬ ಬಿರುದನ್ನಿತ್ತನು. ಅಲ್ಲದೆ ಕವಿರತ್ನ, ಅಭಿನವಕವಿಚಕ್ರವರ್ತಿ,ಕವಿಕುಂಜರಾಂಕುಶ,ಉಭಯಕವಿ ಎಂಬ ಬಿರುದುಗಳೂ ಇದ್ದುವು.

ಅತ್ತಿಮಬ್ಬೆ.

ಪತಿಯೊಡನೆನ್ನ ತಂಗೆ ದಹನಾರ್ಚಿಯೊಳೊಂದೆ ಮುಹೂರ್ತದೊಳ್ ನಿವೇ ।
ದಿತತನುವಾದಳಾಂ ಪಿರಿಯೆನಪ್ಪುದಱಿಂ ಪಿರಿದಪ್ಪ ದಾರುಣ ॥
ವ್ರತದಹನಾರ್ಚಿಯಂದನುದಿನಂ ತನುವಂ ತನುಮಾಡುತಿರ್ಪೆನೆಂ।
ಬತನುವಿರೋಧಮುಂ ತನುವಿರೋಧಮುಮೊಪ್ಪುಗುಮತ್ತಿಮಬ್ಬೆಯೊಳ್॥

ಪತಿವಿಗಮದೊಳಸಿಧಾರಾ ।
ವ್ರತಂಗಳಂ ತಾಳ್ದಿ ಧರ್ಮಮಂ ಮಾಡುವ ಸಂ॥
ತತಿಯಂ ಕಾಯುತೆ ಕಾಯ ।
ಸ್ಥಿತಿಯಾಯ್ತಾನತ್ತಿಮಬ್ಬೆ ಮಾಣ್ಬಳೆ ಮಾಣಳ್ ॥

ಒಡಲನುಪವಾಸದಿಂ ತ।
ನ್ನೊಡಮೆ ಯನನವರತದಾನದಿಂ ತವಿಸಿ ಜಸಂ
ಬಡೆದಳ್ ನೂರ್ಮಡಿ ತೈಲನ ।
ಪಡೆವಳ ತೈಲಪನ ಜನನಿಗೆಣೆ ಪೆಱರೊಳರೇ॥

ಶ್ರಾವಕಧರ್ಮದೊಳ್ ದೊರೆಯೆನಲ್ ಪೆಱರಿಲ್ಲೆನೆ ಸಂದ ರೇವತೀ ।
ಶ್ರಾವಕಿ ತಾನೆ ಸಜ್ಜನಿಕೆಯೊಳ್ ಜನಕಾತ್ಮಜೆ ಶೀಲದೊಳ್ ॥
ದೇವಕಿ ತಾನೆ ದಾನಗುಣದಿಂದೆ ಸುಲೋಚನೆ ತಾನೆ ಎಂದು ಭ।
ವ್ಯಾವಳಿ ಮೆಚ್ಚಿ ಬಣ್ಣಿಪುದು ಭವ್ಯಮನೋರಥಜನ್ಮಭೂಮಿ॥

ಬುಧಜನ ವಂದಿತೆ ಧರ್ಮ।
ಪ್ರಧಾನೆ ದರ್ಶನವಿಶುದ್ಧೆ ದಾನಗುಣೈಕಾಂ ॥
ಬುಧಿಯೆನಿಸಿದ ಕವಿವರಕಾ।
ಮಧೇನುವೆಂದೆಂಬುದತ್ತಿಮಬ್ಣೆಯನೆ ಜಗಂ॥

ಮನದೊಳ್ ತಾಳ್ದುವಳೀಸತಿ ।
ಜಿನನಂ ಜಿನಜನನಿ ಗರ್ಭದೊಳ್ ತಾಳ್ದುವಳೆಂ ॥
ಬಿನಿತೆ ವಿಕಲ್ಪಂ ತೈಲನ ।
ಜನನಿಗೆ ಜನಜನನಿಗೇಂವಿಕಲ್ಪಮುಮುಂಟೆ ॥

ಆಸನ್ನ ಭವ್ಯೆಯುಂ ಜಿನ।
ಶಾಸನದೀಪಿಕೆಯುಮೆನಿಸಿ ಮಣಿಕನಕಮಯೋ॥
ದ್ಭಾಸಿ ಜಿನಪ್ರತಿಮೆಗಳಂ ।
ಸಾಸಿರದಯ್ನೂಱನೞ್ತಿಯಿಂ ಮಾಡಿಸಿದಳ್॥

ಸ್ಫುರಿತೋದ್ವನ್ಮಣಿಘಂಟೆಗಳ್ ಮಣಿವಿತಾನಶ್ರೇಣಿಗಳ್ ಸ್ವರ್ಣ ಭಾ ।
ಸುರದೀಪಂಗಳ ಮಾಲೆ ದಿವ್ಯವಸನಪ್ರಾರಬ್ಧಶುಂಭಧ್ವಜೋ ॥
ತ್ಕರಮುದ್ಬಾಸಿತರತ್ನ ತೋರಣಂಗಳಂ ಮಾಡಿರ್ದುವೊಂದೊಂದು ಸಾ।
ಸಿರದಯ್ನೂಱೆನೆಯತ್ತಿಮಬ್ಬೆಗೆಣೆಯಲ್ಲೀಕಾಲದೊಳ್ ದಾನಿಗಳ್॥

ಉನ್ನತಕುಕ್ಕುಟೇಶ್ವರ ಜಿನೇಶ್ವರನಂ ಜಿನಭಕ್ತೆ ಪೋಗಿ ಕಾ ।
ಣ್ಬನ್ನೆಗಮನ್ನಮಂ ಬಿಸುಟು ಪರ್ವತಮಂ ಪರಿದೇಱೆ ತಜ್ಜಿನಾ॥
ಸನ್ನದೊಳತ್ತಿಮಬ್ಬೆಗೆ ಪಥಶ್ರಮಮಾಱಲಕಾಲವೃಷ್ಟಿಯಾ।
ಯ್ತೆನ್ನದೊ ದೇವಭಕ್ತಿಗದು ಚೋದ್ಯಮೆ ಕೊಳ್ಳವೆಪುಷ್ಪವೋಷ್ಟಿಗಳ್॥

ಈ ಮಹಿಗೆಲ್ಲಮಗ್ಗಳದ ದಾನಿಯನಗ್ರಣಿಮಾಡಿ ದಾನಚಿಂ ।
ತಾಮಣಿಯಂ ನೆಗೞ್ತೆವಡೆದೊಪ್ಪಮೆ ಸಾಲ್ಗುಮದರ್ಕೆ ಮುನ್ನ ಚಿಂ॥
ತಾಮಣಿ ಕಾಮಧೇನು ಸುರಭೂರೈಹಮೆಂಬಿವನೇಕೆ ಮಾಡಿದಂ ।
ತಾಮರಸೋದ್ಭವಂ ಜಡಜಜಂಗೆ ವಿವೇಕಮದೆಲ್ಲಿ ಬಂದೈದೋ॥

ಪದೆದೆಱೆದರ್ಥಿಜನಕ್ಕಿ।
ತ್ತುದೆ ಧನಮೀಯದುದೆ ಕೆಟ್ಟುದೆಂದರ್ಥಮನೀ ॥
ವುದಱಿಂ ತನ್ನಷ್ಟಂ ಯ ।
ನ್ನದೀಯತೆ ಎನಿಪುದತ್ತಿಮಬ್ಬೆಯ ದಾನಂ॥

ಕಲಿಯನೆ ನೆಗೞ್ದಳ್ ಕಸವರ ।
ಗಲಿಯನೆ ಗುಣದಂಕಕಾರ್ತಿ ಮೊನೆಯೊಳ್ ಮನೆಯೊಳ್॥
ಮೊಲೆವೊತ್ತ ತೈಲ ಜನನಿಯ ।
ಕೆಲದೊಳ್ ರಂಜಿಪರೆ ಮೀಸೆವೊತ್ತಂಣಂಗಳ್॥

ಅಳುರದು ಕಿಚ್ಚು ಮುಟ್ಟದು ವಿಷಾಹಿ ಮಹಾಸತಿಯಿರ್ದ ಮಂಡಲಂ ।
ಬೆಳೆವುದು ಬೇಡಿದಂತೆ ಮಱೆಕೊಳ್ವುದೆನಿಪ್ಪ ಜಸಕ್ಕೆ ನೋಂತು ಭೂ॥
ತಿಲಕಪವಿತ್ರೆಯಂ ಗುಣಪವಿತ್ರೆಯನಾಸತಿಯಂ ಮಹಾಸತೀ ।
ತಿಲಕೆಯನತ್ತಿಮಬ್ಬರಸಿಯಂ ಪೆಸರ್ಗೊಳ್ವುದು ಪುಣ್ಯಕಾರಣಂ ॥

ಭ್ರಾಂತೇನಾದಿಪುರಾಣದ ।
ಶಾಂತಿಪುರಾಣದ ಸಮಾನಮೆನೆ ಕೃತಿಯಂ ಕ॥
ಲ್ಪಾಂತಸ್ಥಾಯಿಯನಾಶ್ರಿತ ।
ಚಿಂತಾಮಣಿಗತ್ತೆಮಬ್ಬೆಗೞ್ತಿಯೆ ಪೇೞ್ವೆಂ ॥

ಪೊನ್ನಿಗನುಂ ಮಲ್ಲಪನುಂ ।
ಪೊನ್ನನುನೞ್ತಿಯೆ ಪುರಾಣ ಚೂಡಾಮಣಿಯಂ॥
ಮುನ್ನಂ ಪೇೞಿಸಿದಂತೆ ಗು।
ಣೋನ್ನತ ಕವಿರತ್ನನಿಂದಿದಂ ಪೇೞಿಸಿದಳ್॥

ವೈರಾಗ್ಯ

ತನಗಲ್ಲದೊಡಲ್ಗೊಡಮೆಗೆ ।
ಮನಮಿಟ್ಟಪವರ್ಗ ಮಾರ್ಗಮಂ ಪೊರ್ದದೆ ತ ॥
ನ್ನನೆ ತಾನೆ ನಂಬಿಸುವೊಡಾ ।
ತ್ಮನಂತು ಪೇೞಾತ್ಮವಟಚಕರ್ ಪೆಱರೊಳರೇ॥

ಸಾರದೆ ಸಾರಮಪ್ಪ ಜಿನಧರ್ಮಮನಾತ್ಮನಸಾರಮಪ್ಪುದಂ ।
ಸಾರಮಿದೆಂದು ನಂಬಿ ತನಗಲ್ಲದುದಂ ತನಗಪ್ಪುದೆಂದು ಕೇ॥
ದಾರ ವಿಹಾರ ಸೋದರ ಕೃಶೋದರ ಸುಂದರದಾರದಾರಕೋ ।
ದಾರವಿಮೋಹದೊಳ್ ತೊಡರ್ದು ದಾರುಣದುಃಖಮನೆಯ್ದದಿರ್ಕುಮೇ॥

ತನು ತಾಳಲಾಱದನ್ನೆಗ ।
ಮೆನಸುಂ ನೀನದಱೊಳಾತ್ಮಶಕ್ತಿಕ್ಷಯಮ ॥
ಪ್ಪಿನೆಗಮಿರಲ್ಕಕ್ಕುಮೆ ಕೞಿ ।
ದ ನೀರ್ಗೆ ಬಂದಪುದೆ ಬೞಿಕೆ ಜರಗಂ ತಿರ್ದಲ್॥

ಎನಿತೆನಿತು ಕೞಿದ ಭವಮಂ ।
ನೆನೆದಪೆಯೆನಿತೆನಿತು ಭವದ ಬಂಧುಗಳಂ ನೀಂ ॥
ನೆನೆದಪೆಯೆನಿತೆನಿತೊಡಲಂ ।
ನೆನೆದಪೆಯೆಲೆಜೀವ ನೀನೆ ಪೇೞ್ ಪವಣೊಳವೇ॥

ಎನಿತಂ ಕುಕ್ಕುೞಗುದಿದಪೆ ।
ಯೆನಿತಂ ತಕ್ಕಳಗೞಲ್ದಪೈ ಜೀವನೆ ನೀ ॥
ನೆನಿತಂ ಮಲ್ಮಲ ಮಱುಗುವೆ।
ಯೆನಿತಂ ಸಂಸಾರದೊಳಗೆ ತಿಱ್ದನೆ ತಿರಿವೈ॥

ಎನಿತಂ ಬೆದವೆದ ಬೆಂದಪೆ ।
ಯೆನಿತಂ ಸುಡುಸುಡನೆ ಪುಗುವೆಯೈ ಜೀವನೆ ನೀ॥
ನೆನಿತಂ ಮಲ್ಮಲ ಮಱುಗುವೆ ।
ಯೆನಿತಂ ಭವಗಹನದೊಳಗೆ ಬಟ್ಟನೆ ಬರ್ಪೈ॥

ಕಡೆಯಿಲ್ಲದ ಸಂಸಾರದ ।
ಕಡೆಗಾಣಲ್ಬಗೆವೆಯಪ್ಪೊಡೆನ್ನುಕ್ತಿಗೊಡಂ ॥
ಬಡು ಜೀವ ನಿನ್ನ ಕಾಲಂ।
ಪಿಡಿವೆಂ ಧರ್ಮಮನೆ ಮಗುಳೆ ಬಲ್ವಿಡಿವಿಡಿಯಾ॥

ಜವನಟ್ಟಿ ಕೊಲ್ವ ಕೊಲೆಗಾ।
ಜವಂಜವಸ್ಥಿತಿಗೆ ಮೆಯ್ಯ ನೀರ್ತೆಗೆವನ್ನಂ ॥
ಜವಜವಜವನಂಜಿಸಿದುವು ।
ಜವನಾಳ್ಗಳ ತೆಱದಿನೆನ್ನ ಕೆನ್ನೆಯ ನರೆಗಳ್॥

ಮೆಲುಕಂ ಸವಿಯಱಸುವ ಗಾ।
ವಿಲರಿರ್ಪವರಿರ್ಪೊಡಿರ್ಕೆ ಮೆಳ್ಪಟ್ಟು ಜವಂ ॥
ಕೊಲೆ ಕಾವರೊಳರೆ ಧರ್ಮಮೆ ।
ತಲೆಗಾಯ್ಗುಂ ಧರ್ಮಮಾರ್ಮ ಮುಭಯಭವಕ್ಕಂ॥

ಕರಗುವ ಮುಗಿಲಂ ಕೆನ್ನೆಯ ।
ನರೆಯಂ ಕಂಡನಿತಱಿಂ ಕೆಲರ್ ಪರಮತಪೋ ॥
ಭರದೊಳ್ ಭರದೊಳ್ ನೆಗೞಲ್ ।
ಗುರುಬಂಧುಪ್ರಿಯ ವಿಯೋಗಮಂ ಕಂಡು  ಕೆಲರ್॥

ನರರೆಂಬರ್ ವೈರಾಗ್ಯಂ ।
ದೊರಕೊಂಡೊಡೆ ತೊಱೆವೆವೆಂಬರನ್ನೆವರಂ ಸ॥
ಯ್ತಿರಲೀಯದಂತಕಂ ಗೋ ।
ಣ್ಮುರಿಗೊಂಡೆೞೆದುಯ್ವೊಡಡ್ಡ ಬರ್ಪರುಮೊಳರೆ॥

ಮುಸುಮೊಗಮಾಯ್ತು ಮೊಗಂ ಕಾ
ಲ ಸುತ್ತುಗಂ ಪೋಯ್ತು ಪಲ್ಗಳಳ್ಳಾಡಿದುವೇ॥
ಡಿಸುವಂತಿರ್ದಪರಿನ್ನುಂ ।
ಬಿಸುಡಿರೆ ನೀವಜ್ಜ ನಿಮ್ಮ ನಿರ್ಲಜ್ಜಿಕೆಯಂ॥

ಎಮ್ಮಾನೆಯೆಮ್ಮ ಕುದುರೆಯಿ ।
ವೆಮ್ಮರಸಿಯರೆಮ್ಮ ಮಕ್ಕಳಿವರೆಂಬೀ ಮ॥
ತ್ತಮ್ಮನದೊಳ್ ಕೆಯ್ಗಳಿಯೆ ಗು।
ಳುಮ್ಮನೆ ರಸೆಗಿೞಿದರೆನಿಬರಾನುಮಿಳೇಶರ್॥

ಪುಡುಕೆಯ ಪೊಂಗಳಾರೊಡನೆ ಭೂತಳಮಾರೊಡನಂಗನಾಳಿಯಾ ।
ರೊಡನೆಗಜಂಗಳಾರೊಡನೆ ವಾಜಿಗಳಾರೊಡನಾಪ್ತತಂತ್ರಮಾ ॥
ರೊಡನೆ ರಥಂಗಳಾರೊಡನೆ ಚಾಮರಮಾರೊಡನಾತಪತ್ರಮಾ।
ರೊಡನೆ ವಿಭೂತಿಯಾರೊಡನೆ ಪೋದುವು ರಾಜ್ಯಮನೆಂತೊ ನಂಬುವರ್॥

ಕರಿ ಪೋಗವು ಹರಿ ಪೋಗವು ।
ಪರಿವಾರಂ ಪೋಗವೊಡನೆ ನಡೆಪಿದ ನಾಲ್ವರ್ ॥
ನೆರಮಾಗಿ ಪೋಗರಂತಕ ।
ಪುರಕ್ಕೆ ಪೋಪೆಡೇಯೊಳರಸರೋರ್ವರೆ ಪೋಪರ್॥

ಇತ್ತ ನಿಷೇಕಮಾಗೆ ಗುರುಗತ್ತಭಿಷೇಕವಿಭೂತಿಗೊಂದುಗುಂ ।
ತತ್ತನಯರ್ಕಳೊಳ್ ಮೃತಕತೂರ್ಯಮೆ ಮಂಗಳತೂರ್ಯಮಕ್ಕುಮಾ॥
ಸತ್ತವರೆತ್ತ ನೀರಿೞಿವರೆತ್ತ ಜನಂ ನೆರೆದಿಂಡೆಯಾಡಿ ಪಾ॥
ಡುತ್ತೆಸೆದಿರ್ಪರಿಂತು ಮೃತಿರಾಜವಿಡಂಬಮನೇಕೆ ಕಾಣ್ಬಿರೇ॥

ತಪಃ ಪ್ರಯಾಣ

ಜಿನ ಪಿತೃಗಳ್ ಜಿನತನಯನಂ ।
ಜಿನೇಂದ್ರತವರೆಲ್ಲಮೊಡನೆ ತಳರಲೊಡಂ ಬಿ ॥
ಮ್ಮನೆಯಾಗಿ ಮದುವೆಗಳುಪಿದ ।
ಮನೆಯಂದದಿನಿರ್ದುದಂದಯೋಧ್ಯಾನಗರಂ॥

ದಿನಕರನಿಲ್ಲದಂಬರಮುಮಾಮ್ರಮಹೀರೈಹಮಿಲ್ಲದೊಂದು ಕಾ ।
ನನಮುಮರಲ್ದ ಪಂಕರೈಹಮಿಲ್ಲದ ಪೂಗೊಳನುಂ ವನೇಭಮಂ ॥
ಡನನೆನೆ ಸಂದ ಯೂಥಪತಿಯಿಲ್ಲದರಣ್ಯಮುಮೇಂ ತ್ರಿಲೋಕಮಂ।
ಡನನೆನೆ ಪೆಂಪುವೆತ್ತಜಿತನಿಲ್ಲದಯೋಧ್ಯೆಯುಮೊಪ್ಪಲಾರ್ಕುಮೇ॥

ಇಂಪಿಲ್ಲದ ಕೇದಗೆಯುಂ ।
ಕಂಪಿಲ್ಲದ ಪೂ ಸುಪುತ್ರನಿಲ್ಲದ ಭವನಂ ॥
ಪೆಂಪಿಲ್ಲದ ಕುಲವಧು ಗೃಹ ।
ಸಂಪತ್ತಿಲ್ಲದವಿಳಾಸಮೇನೊಪ್ಪುಗುಮೇ॥

ಮಲ್ಲಿಲ್ಲದ ಬಳಮುಂ ಮೂ ।
ಗಿಲ್ಲದ ಮೊಗಮಾನೆಯಿಲ್ಲದರಮನೆ ಸಂಪ ॥
ತ್ತಿಲ್ಲದಮಾನಸವಾಳ್ ದಯೆ।
ಯಿಲ್ಲದ ಧರ್ಮಂ ಮನಂಗೊಳಲ್ ನೆಱೆದಪುದೆ ॥

ವಚನ॥ ಎಂಬಂತೆ ಬಿನ್ನನಾದ ಪೊೞಲಂ ಪರಮೇಶ್ವರನ ಬೞಿವೞಿಗೊಂಡು ಪೋಪ ಪುರಜನಂಗಳುಮಂ ಕಂಡು ಅಂತಃಪುರದೊಳಿರ್ದ ಸಹಸ್ರಾಂಗನೆಯರಾಕುಳ ವ್ಯಾಕುಳೆಯರಾಗಿ,

ದೇವನನಾಲೋಕಾಂತಿಕ ।
ದೇವರ್ ಬಂದೇನನಪ್ಪೊಡಂ ಗಳಪಿ ತಪೋ ॥
ಭಾವನೆಗೆಱಗಿಸಿದರ್ ನಮ।
ಗಾವುದು ಸೂೞಕ್ಕ ಪೇೞಿಮಿನ್ನೇಗೆಯ್ವೊಂ ॥

ಎಲ್ಲಿಲ್ಲದ ಸುರಗಣಿಕೆಯ ।
ರೆಲ್ಲಿಲ್ಲದ ದೇವಿಯರ್ಕಳಗಲರುಸಿರ್ಪ॥
ತ್ತಿಲ್ಲ ನಮಗವರೆ ಜಗತೀ ।
ವಲ್ಲಭನಂ ಪಚ್ಚಿ ವಚ್ಚಿ ಮಚ್ಚಿಸಿಕೊಂಡರ್॥

ವಚನ ॥ ಅಂತು ಕೆಲರಲ್ಲಿ ವಿವೇಕವಿಕಳೆಯರಾಗಿ ನುಡಿಯೆ ವಿವೇಕಿಗಳಂ ಬರೆಸಿ ,

ಸುರಲೋಕಸುಖಮನೊಲ್ಲದೆ ।
ನರಲೋಕಕ್ಕಿರದೆ ಬಂದು ಮುಕ್ತಿಶ್ರೀಯೊಳ್ ॥
ನೆರೆಯಲ್ ಪೋದಪನಱಿಯಿರೆ ।
ಸುರವಧುವರನಂತು ಬಗೆದು ಪುಟ್ಟನೇಶದೇವಂ॥

ಕಳೆ ಸಿರಿಗನ್ನಡಿಯಂ ಮಂ ।
ಗಳವಸದನಮೇವುದಕ್ಕ ಕಾಲಲತಗೆಯಂ ॥
ಕಳೆ ತೊಡೆದು ಕಣ್ಗೆ ಕಜ್ಜಲ ।
ವಿಳಿಸವಿನ್ನೇವುದೆಮಗವೇಗೆಯ್ದಪುವೋ ॥

ಕಳೆ ಸೀಗುರಿಯಂ ಡವಕೆಯ ।
ನೊಳಗಿಡು ಚಾಮರಮನಿಕ್ಕದಿರು ಸಕಳ ಜಗ ॥
ತ್ತಿಳಕನುೞಿದಿರ್ದ ಮೆಯ್ಮೆಯ ।
ವಿಳಾಸಮೆಮಗಾತನಿಲ್ಲದೆಂತೊಪ್ಪುಗುಮೋ॥

ಬಿಡಿಮಿಂ ದೀವದ ರಾಜಹಂಸೆಗಳನಿನ್ನೀರಾಜಕೀರಂಗಳಂ ।
ಬಿಡಿಮಿಂತೀ ಮೃಗಪೋತಕಂಗಳನಿವಂ ಕೊಂಡೊಯ್ದು ಕಾಂತಾರದೊಳ್ ॥
ಬಿಡಿಮೀ ಬಾಜಿಪ ಬೀಣೆಯಂ ತಿಸರಮಂ ಕೊಳ್ಳೆಂದು ಬಲ್ಲಂಗಿವಂ ।
ಕುಡಿಮೇಗೆಯ್ದಪೆಮಾಮಿವಕ್ಕೆಮಗಿವಿರ್ದಿನ್ನೆಲ್ಲಮೇಗೆಯ್ವುದೋ॥

ವಚನ : ಎಂದು ಪರಿಚಾರಗಣಕ್ಕಪ್ಪಯಿಸಿ

ನಿಮಗೆಂದಪ್ಪೊಡಮಾಮಱಿ।
ಯೆ ಮನಃಕ್ಷತಮಾಗಿಯರಿಯದೆಮ್ಮಿಂದಮಿದಂ ॥
ಸಮವಾಯಂ ಮಾಡಿದೊಡಂ ।
ಕ್ಷಮಿಯಿಪುದೆಂದೆರೆದರಜ್ಜರಂ ಗುಜ್ರುಮಂ॥

ವಚನ: ಅಂತೊರೆದನಿಮೊಂದೆಡೆಗೆ ವಂದು,

ಇಂದಜಿತಂ ತಪೋವನಕೆ ಪೋದನಧೀಶನೆ ಪೋಗೆ ಮಾಣಲಾ ।
ಗೆಂದೊಡವೋಗಲಿರ್ದೆಮವರಿಂ ಬೆಸಕೇಳ್ದಪೆಮೆಂದು ನಮ್ಮ ತಾಯ್॥
ತಂದೆಗೆ ಪೇೞ್ದು ಬನ್ನಿಮೊಡನಾಡಿದ ಮೇಳದವಳ್ದಿರೆಲ್ಲಮೇ।
ನೆಂದಪಿರಕ್ಕ ನೇಲ್ದಳಿಪಿ ಮಾಣ್ದೊಡೆ ದುರ್ಜನಮಲ್ತೆ ಸಜ್ಜನಂ ॥

ವಚನ: ಎಂದು ಪರಿಚ್ಛೇದಂಗೆಯ್ದನಿಬರುಂ ನಿತಂಬಿನಿಯರ್ ತಂತಮ್ಮ ಚೆಂಬೊನ್ಮಾಡದ ನೆಲೆಯನೇಱಿ ನಿಜಗೃಹೋಪ-
ವನಕ್ಕೆ ಮುಂ ನೀರೆಱೆದು ನಡಪಿ ಬೆಳೆಯಿಸಿದ ಬಾಳಾಶೋಕ ಪಾದಪಾದಿಗಳ್ಗೆ ಮುಕುಳಿತಾಂಜಲಿಯರಾಗಿ,

ಲಲಿತಲತಾಲಯಂಗಳಿರ ! ಸುಂದರಕಾನನಚಂದನದ್ರುಮಂ।
ಗಳಿರ ! ತಳಿರ್ತಶೋಕೆಗಳಿರ ! ಸಹಕಾರತಮಾಲಭೂರುಹಂ ॥
ಗಳಿರ ! ವಿಯೋಗಮಾದುದೆಮಗಂ ನಿಮಗಂ ಬೆಸಕೆಯ್ವೆಮೆಂದು ವಿ।
ಹ್ವಳೆಯರಗಲ್ಕೆಯೊಳ್ ನೆಗಪಿದರ್ ಬಸಮಲ್ಲದ ಬಾಷ್ಪವಾರಿಯಂ॥

ಎಲೆ ಪರಪುಷ್ಟ ಕೇಳೆಲೆ ಮಧುವ್ರತ ಕೇಳೆಲೆ ರಾಜಕೀರ ಕೇ ।
ಳೆಲೆ ಕಳಹಂಸ ಕೇಳೆಲೆ ಸರೋಜಿನಿ ಕೇಳೆಲೆ ಚೂತರಾಜ ಕೇ ॥
ಳೆಲೆ ವನರಾಜಿ ಕೇಳ್ ನೆನೆಯುತಿರ್ಪುದು ಕೂರ್ಪುದು ಸೈರೆಸಿರ್ಪುದ।
ಗ್ಗಲಿಸಿದ ನಲ್ಮೆ ತಣ್ಮಲೆಯೆ ಬೆನ್ನನೆ ಪೋದಪೆಮೆಮ್ಮ ಸಾಮಿಯಾ॥

ಪಾರ್ವನ ಪುಯ್ಯಲ್

ವಚನ: ಅಂತು ಕೆಯ್ಯ ತೊವಲ್ವೆರಸು ಮೆಯ್ಯಱಿಯದೆ ಪುಯ್ಯಲಿಡುವ ಪಾರ್ವನ ಪುಯ್ಯಲಂ ಆಸ್ಥಾನಮಂಟಪದೊ-
ಳೋಲಗಂಗೊಟ್ಟಿರ್ದರಸಂ ಕೇಳ್ದಿನ್ನೆವರಮೆನ್ನರಾಜ್ಯದೊಳೆಲ್ಲಿಯುಂ ಮಱೆದಪ್ಪೊಡಂ ಕೇಳ್ದಱಿಯೆನಿಂದಶ್ರುತಪೂರ್ವಮ-
ಪ್ಪ ಕರೈಣಾಕ್ರಂದನಮಂ ಕೇಳ್ದೆನೆಂದು ವೆಸ್ಮಯಂಬಟ್ಟು ಧರಾಮರಂಗೆ ಬೞಿಯನಟ್ಟಿ ಬೆಸಗೊಳೆ,

ಭರತನೃಪಂ ಮುನ್ನ ಧರಾ ।
ಮರಜನಮಂ ಪಡೆದನವನ ಪಡೆದಿರ್ದ ಧರಾ ॥
ಮರವೇಷದೆನ್ನಸುವನು ।
ದ್ಧರಿಪುದು ನೀಂ ಸಗರ ದುಃಖಸಾಗರದಿಂದಂ॥

ಪರಕೆಗಳನುಯ್ದು ಕೊಟ್ಟೆಂ ।
ಪರಮೇಶ್ವರಿಗಳ್ಗೆ ಪೋಗಿ ಪಾಳಂ ಬಿಟ್ಟೆಂ ॥
ನರನಾಥಪುಣ್ಯಪುಂಜ ।
ಸ್ವರೂಪನಂ ಪಡೆದೆನೋರ್ವನಂ ನಂದನನಂ॥

ಪಡೆದು ವಿವಾಹೋತ್ಸವಮಂ ।
ತಡೆಯದೆ ಮಾೞ್ಪಲ್ಲಿ ಬಂದು ಜವನೆಂಬ ಸಿಡಿಲ್ ॥
ಸಿಡಿಲೆಱಗಿದುದಾನುಂ ನಿ
ನ್ನಡಿಗೆಱಗಿದೆನೆನ್ನ ಮಗನನೀಯಲೆವೇೞ್ಕುಂ ॥

ಶರಣಾಗಾ ದ್ವಿಜನೆನ್ನಂ ।
ಕರುಣಿಸು ನೀನೆನ್ನ ಮಗನನಂತಕಪುರದಿಂ ॥
ತರವೇೞ್ವುದೆನಗೆ ಮರಣಂ ।
ಶರಣಂ ಮೇಣಿನಿತೆ ನಿನ್ನ ಚರಣಂ ಶರಣಂ॥

ದ್ವಿಜವಂಶಜನಾ ಭರತಂ ।
ಸೃಜಿಯಿಸಿದಂ ಚಕ್ರವರ್ತಿ ನೀನುಂ ಚಕ್ರ॥
ಧ್ವಜನೈ ಬಡವನೋರ್ವ ।
ದ್ವಿಜಸುತನಂ ದೇವ ಕಾವುದೇನರಿದಾಯ್ತೆ ॥

ವಚನ: ಎಂದು ಕರುಣಮಾಗಿ ಬಾಯೞಿದು ಪುಯ್ಯಲ್ಚಿ ತನ್ನ ಮೂದಲಿಸಿ ನುಡಿಯೆಯಾ ದ್ವಿಜನ ನುಡಿಯಂ ಕೇಳ್ದು ವಿಸ್ಮಯಾಕ್ರಾಂತಸ್ವಾಂತನಾಗಿ,

ಬೆಸಕೆಯ್ಯದ ಮಂಡಲಮಂ ।
ಬೆಸಕೆಯ್ಸಿಯುಮೆಱಗದವರನೆಱಗಿಸಿ ಯುಮುಪಾ ॥
ರ್ಜಿಸಿದೆನ್ನ ಯಶಃಪ್ರಸರಂ।
ಮಸುಳ್ವಂತಾಗಿರ್ಕುಮೀ ದ್ವಿಜನ್ಮನ ನುಡಿಯಿಂ ॥

ಬಡವಂ ಪಾರ್ವನಪತ್ಯಶೋಕವಿಕಳಂ ಬಂದೆನ್ನನೀಯಂದದಿಂ ।
ನುಡಿದಂ ಸತ್ತರನೆತ್ತಲಾರ್ಪರೊಳರರ್ಥಿಪ್ರಾರ್ಥನಾಭಂಗದಿಂ ॥
ಕಿಡುಗುಂ ನಿರ್ಮಳಕೀರ್ತಿಲಕ್ಷ್ಮಿ ಪೆಱತೇನೇನೆಂದಮೆಂತೆಂದುಮಿಂ ।
ನುಡಿಯಲ್ಕಾವುದುಮಿಲ್ಲ ಪಾರ್ವನೊಳಿದಕ್ಕೇಗೆಯ್ವೆನೆಂತಕ್ಕುಮೋ॥

ಸತ್ತವರನೆತ್ತುವುದೆಂಬುದ ।
ದೆತ್ತಣಮಾತಘಟಮಾದುದೀ ಪಾರ್ವಂ ತಾಂ ॥
ನೆತ್ತೆತ್ತ ಬಂದು ಮೂಡಿದ ।
ನೆತ್ತೆತ್ತೆನಗಿನಿತು ದುರ್ಯಶಂ ಮಾಡಿದನೋ॥

ವಚನ: ಎಂದು ಚಿಂತಿಸುತಿರ್ದ ತಮ್ಮರಸನ ಚಿತ್ವೃತ್ತಿಯನಱಿದು ಬುದ್ಧಿಸಾಗರನೆಂಬ ಪುರೋಹಿತನೆಂದನೆಂದುಂ ತಮ್ಮೊಳೋರೊರೂವರಪ್ಪೊಡಂ ಸತ್ತಱಿಯದರ ಮನೆಯಪುಲ್ಲಂ ಕಿರ್ಚುಮಂ ಕೊಂಡು ಬರ್ಪುದು , ಮೇಣ್ ಬರ್ಪೊಡಂ ನಿನ್ನ ಮಗನ ಪಡೆವೆನೆಂದೊಡಾ ನುಡಿಯನಱಿದುಮಱಿಯದಂತೆ ಕಿಱಿದಂತರಂಬರಂ ಪೋಗಿ ಮಗುಳೆ ಬಂದೆಲ್ಲಿಯುಂ ಪಡೆದೆನಿಲ್ಲೆಂಬುದುಂ, ಆತನಂ ಮೆಲ್ಲಮೆಲ್ಲನೆ ಮಾತಾಡಿಸಿ,

ಪಗಲಿರುಳೆಳಜೊನ್ನಂ ಕಾಳಮೆಂಬುಕ್ತಿ ಚಿತ್ತಂ ।
ಬುಗೆ ನೆರೆದರಗಲ್ವರ್ ಪುಟ್ಟುವರ್ ಪೊಂದುವರ್ ನೀಂ ॥
ಬಗೆಯ ಮರುಳೆ ಕಾಳಾಭೀಳವಕ್ತ್ರಾಂತಮಂ ದಲ್ ।
ಪುಗದರೊಳರೆ ಪೇೞ್ ನಿಮ್ಮಜ್ಜಪಜ್ಜರ್ಕಳಾರುಂ ॥

ಮಱೆವುದು ದುಂಖಮನಱಿವಂ ।
ಮೆಱೆವುದು ಸೈರಿಪುದು ಮುಂತೆ ನೀಂ ಪೋಗಾನುಂ॥
ಪೆಱಗನೆ ಬಂದಪೆನೆಂಬೀ ।
ತೆಱನಲ್ಲದೆ ಜವನ ಬಾಱಿಯೊಳ್ ಬರ್ದುಕುವರಾರ್॥

ಆರಾರಂ ನುಂಗಿದನಿ ।
ಲ್ಲಾರಾರಂ ನೊಣೆದನಿಲ್ಲ ಸವೆನೋಡಿದನಿ॥
ಲ್ಲಾರಾರಂ ಸುರಮಾನವ ।
ನಾರಕತಿರ್ಯಕ್ ಸಮೂಹಮಂ ಯಮರಾಜಂ॥

ಬಡವಂ ಬಾೞ್ಗೆಂಗುಮೊ ಸಿರಿ।
ಯೊಡೆಯಂ ಮಾಣ್ಗೆಂಗುಮೋ ತಪಸ್ವಿಗಳಿವರಂ ॥
ಕಡೆಗಣಿಸುವೆನೆಂಗುಮೊ ಪೆ ।
ಣ್ಪಡೆಯೆಂಗುಮೊ ತುೞಿದು ಪರಿಗುಮಂತಕರಾಜಂ ॥

ಆಯು ನೆಱೆವಿನೆಗಮಿರ್ಪನೆ ।
ಜಾಯೆಂಬನೆ ಮಾಣ್ಬನಿಂದಿನೊಂದಿವಸಮನ ॥
ಧ್ಯಾಯಂಮಾಡುವನೆಂಬನೆ।
ಬಾಯೞಿದೞಿಯೞಿ ಜನಂಗಳಂ ಜವನುಯ್ವಂ॥

ಏಂ ನಿಷ್ಕರುಣಿಯೊ ಪಸುಮಗ ।
ನೆನ್ನದೆ ಮತ್ತಾಣ್ಮನೆನ್ನದಱಿವುಳ್ಳಂ ಬಾ ॥
ೞ್ಗೆನ್ನದೆ ಮರುಳಕ್ಕಟ ಮಾ
ಣೆನ್ನದೆ ಮುಂಬಿಟ್ಟು ಕೊಂದಪಂ ಯಮರಾಜಂ॥

ಕುಲಜಂ ಕುಲಹೀನನಿವಂ ।
ಕಲಿ ಪಂದೆಯಿವಂ ಮಹಾಭಿಮಾನಿಯಿವಂ ನಾ॥
ಣಿಲಿಯಿವನೆನ್ನದೆ ಪಲರಂ ।
ನಲಿನಲಿದಾಟಂದು ಕೊಂದಪಂ ಯಮರಾಜಂ॥

ಕಟ್ಟಿದ ಕುಱಿಗಳ್ ಬೋನದೊ।
ಳಟ್ಟೇಱಿಸಿ ಬಯ್ತ ಬಾಡುಗಳ್ ಬಡ್ಡಿಸಿ ತಂ॥
ದಿಟ್ಟಾಚಾಖಾದ್ಯಂಗಳ್ ಮುಂ।
ದಿಟ್ಟ ನಿವೇದ್ಯಂಗಳಂತಕಂಗೆ ಜನಂಗಳ್॥

ಮೊಱೆಯಿಡೆಯಿಡೆ ಕೂಗಿಡೆಯಿಡೆ ।
ದಱದಱಮೆಂದೆೞೆದು ಪುಯ್ಯಲಿಡೆಯಿಡೆ ಕೊಲ್ಗುಂ॥
ಕುಱಿಯಂ ಕೊಲ್ವಂತಿರೆ ತಿಱಿ।
ಕೊಱೆಗೊಂಡು ಜಗಜ್ಜನಂಗಳಂ ಯಮರಾಜಂ॥

ಮೃತಪಟಹಂ ಜಯಪಟಹಂ ।
ಚಿತಾಗ್ನಿಧೂಮಂ ಜಯಧ್ವಜಂ ಜನಕರುಣಾ ॥
ರುತಿ ಜಯಮಂಗಳರುತಿಯೆನೆ ।
ಕೃತಾಂತರಾಜಂಗೆ ರಾಜ್ಯಚಿಹ್ನಮಿದಲ್ತೆ ॥

ಆ ಜಗದೇಕಕಂಟಕನಾ ಬಹುಬಕ್ಷಿಯನಾತ್ರಿಲೋಕಪಂ ।
ಕೇಜಸಮುತ್ಥಜೀವಮಕರಂದಮದಾಳಿಯನಾಪರಿಸ್ಫುರ॥
ತ್ತೇಜನನಂಗಜಾಂತಕನಮೋಹನಘಾಂತಕನಂತಕಾಂತಕಂ ।
ಶ್ರೀಜಿನರಾಜನಲ್ಲನುೞಿದೊಂ ಗೆಲಲಾರ್ಕುಮೆ ಮೃತ್ಯುರಾಜನಂ॥

ವಚನ: ಎಂದು ಬುದ್ಧಿಸಾಗರನುಂ ತನಗೆ ಸಂಸಾರಸ್ವರೂಪನಱಿಪಿ ಸದ್ಧರ್ಮೋಪದೇಶಂಗೆಯ್ದಾಗಳಾ ಬ್ರಾಹ್ಮಣಂ ...ಇವರನಿವರ ನುಡಿಯೊಳ್ ತೊಡರ್ಚುವೆನೆಂದು,

ಈ ನಿನ್ನ ಪೇೞ್ದ ಧರ್ಮಮಿ ।
ದೇನೆನಗೆಯೊ ನಿನಗಮುಂಟೊ ನಿನಗುಳ್ಳೊಡದಂ ॥
ನೀನಱಿಪುವುದೆನೆ ದರಹಸಿ ।
ತಾನನನೆಂದಂ ನರೇಂದ್ರನೆನಗದು ಮುನ್ನಂ॥

ವಚನ: ಉಂಟೆಂಬುದು, ನಿನ್ನಱುವತ್ತು ಸಾಸಿರ್ವರ್ ಮಕ್ಕಳುಮಿಂದು ದೃಷ್ಟಿವಿಷಮ ವಿಷಧರನಿಂ ಭಸ್ಮಾವಶೇಷರಾದರೆಂ-
ಬುದಂ ಸಂಸಾರಜೀವಂಗಳಂದು ಪುಟ್ಟಿದರಂದೆ ಸತ್ತರೆಂಬುದಿದೇಂ ಚೋದ್ಯಮೆಂಬುದು, ಮುನ್ನಿನಂತೆ ಧರ್ಮಕಥಾಕಥನ-
ದೊಳಿರ್ಪನ್ನೆಗಮಶ್ರುಜಲವಿಲುಳಿತವಿಲೋಚನನುಮಪಗತೋತ್ತರೀಯನುಂ ಮನ್ಯೂದ್ಗತಕಂಠನುಮತಿಪ್ರಚುರವಿಪ್ರಲಾ-
ಪಾಕ್ಷರ ಮುಖರಮುಖನುಂ ಅಸಹ್ಯಶೋಕಪಾವಕಶಿಖಾಕಲಾಪ ಸಂತಪ್ಯಮಾನಮಾನಸನುಂ ಭಗ್ನಮನೋರಥನುಮಾಗಿ ಭಗೀರಥಂ ಬಂದು ತಂದೆಯ ಮುಂದೆ ಮೆಯ್ಯನೀಡಾಡಿ -

ಬೆಸನೆಂದು ಪೂಣ್ದು ದೇವರ ।
ಬೆಸನಂ ಸುಕುಮಾರರೆನಿಪ ರಾಜಕುಮಾರರ್ ॥
ಬೆಸದಪ್ಪಿದರೆನಗನಿತೊಂ ।
ದು ಸೈಪು ಸಮನಿಸದೆ ಬರೂದುಕಿ ಬಂದೆಂ ನೃಪತೀ॥

ಎನಲೊಡಮಾಮಾತಂ ಕೇ।
ಳ್ದನಭ್ರವಜ್ರಾಭಿಘಾತಮಾದಂತೆ ಸಭಾ ॥
ಜನಮೆಲ್ಲಂ ಮೋಹಿಸೆ ಭೋಂ ।
ಕೆನೆ ಹಾಹಾಕ್ರಂದಮೊಗೆದುದಂತಃಪುರದೊಳ್॥

ಅವಿರಳಗಳದಶ್ರುಜಲ ।
ಪ್ರವಾಹಮುದ್ದೃಪ್ತ ಪುತ್ರಶೋಕಾವೇಗಂ ॥
ದಿವಸಂ ಕೆಡೆದಿರ್ದುದು ಷ ।
ಣ್ಣವತಿಸಹಸ್ರಾಂಗಳಿನಾ ನೃಪನಡಿಮೊದಲೊಳ್ ॥

ಬಾಳಂ ಕಿತ್ತಂಜಿಸಿ ಬಾ ।
ಯ್ಕೇಳಿಸಿ ಷಟ್ಖಂಡಭರತಮಂ ಕಲಿಯೈ ಬ॥
ಲ್ಲಾಳನೆ ನೆಗೞ್ದೈ ಧರಣೀ ।
ಪಾಳ ನಿಜಾತ್ಮಜರನೇಕೆ ರಕ್ಷಿಸದಿರ್ಪೈ॥

ಪಡೆವುದು ಮೇಣ್ ನಂದನರಂ ।
ನಡೆವುದು ಮೇಣ್ ತಪಕೆ ಸಗರವಲ್ಲಭ ಮತ್ತಂ ॥
ಪಡೆವುದೊ ತನಯರ್ಕಳ ಪಿಂ ।
ಬಡಿನೊಳ್ ಪೇೞೆಮಗರಸ ಮಾನಸವಾಳೇ॥

ವಚನ: ಎಂದು ವಿಪ್ರಲಾಪಂಗೆಯ್ಯೆ-

ಅರಸಿಯರ ಕಣ್ಣ ನೀರ್ಗಳ ।
ಬೆರಸಿದ ಕಾಡಿಗೆಯ ಕರ್ಪು ಪೋಲ್ತತ್ತು ಕುಚಾಂ॥
ತರದೊಳ್   ಬೀೞುತ್ತುಂ ತ ।
ತ್ಪರಿತಾಪಜ್ವಲನ ಧೂಮಧೂಮ್ರಚ್ಛವಿಯಂ ॥

ಅನಿತೊಂದು ಶೋಕವೇಗಂ ।
ತನಗಾಗೆಯುಮಚಲಿತಸ್ವರೊಪದಿನಿರ್ದಂ ॥
ಕನಕನಗಂಬೊಲ್ ಸಗರನ ।
ಮನಮಂ ಸಾಗರದ ಗುಣ್ಪನಱಿವರುಮೊಳರೆ॥

ಅನಿಲಾಹತಿಯಿಂ ಚಳಿಯಿಕು ।
ಮನೋಕಹಾನೀಕಮದ್ರಿ ಚಳಿಯಿಕುಮೆ ಪೃಥ ॥
ಗ್ಜನದಂತುದಾತ್ತ ಚಿತ್ತಂ।
ಜನಪತಿ ಧೈರ್ಯಾಂಬುರಾಶಿ ಚಳಿಯಿಸಿದಪನೆ ॥

ಬಳಸಿದ ಪೊರೞ್ವಂಗನೆಯರ ।
ಬಳಗದಿನವರಶ್ರುಜಲದಿನನಿಲಾಹತಿ ಚಂ॥
ಚಳತೆಯಂ ನಿರ್ಜರಮುಮ।
ನೊಳಕೊಂಡು ಸುವರ್ಣಗಿರಿಯನರಸಂ ಪೋಲ್ತಂ॥

ವಚನ: ಅಂತು ಧೈರ್ಯಾವಷ್ಟಂಭ ಗಂಭೀರನಾಗಿ-

ಅರಸ ಕೃತಾಂತನುಯ್ದ ಸುತರಂ ಪಡೆದೀಯೆಮಗೆಂದು ಕಾಂತೆಯರ್ ।
ನುಡಿದಪರೆನ್ನ ಪೆತ್ತ ಮಗನಂ ಪಡೆದೀಯೆನಗೆಂದು ಪಾರ್ವನುಂ ॥
ನುಡಿದಪನಯ್ಯ ಸತ್ತವರನೆತ್ತುವರಾರ್ ಮತಿಗೆಟ್ಟರಕ್ಕಟಾ।
ಬಡವುಗಳೀ ಕುಲಾಂಗನೆಯರೀ ಬಡಪಾರ್ವನ ನಂಟರಾಗರೇ॥

ವಚನ: ಎಂದು “ ಸಮಶೀಲವ್ಯಸನೇಷು ಸಖ್ಯ” ಮೆಂದವರ ದೀನಾನನಂಗಳಂ ನೋಡಲಾಱದೆ ಮನಮಂ ಬಲಿದು ನಿಲೆ-

ಪರಿಜನಮುಂ ಪುರಜನಮುಂ ।
ನೆರೆದನಿಬರ್ ತಮ್ಮೊಳರಸನೇಂ ಕಲ್ಲೆರ್ದೆಯೋ॥
ಮರವಾನಿಸನೋ ಕಲ್ಲುಂ।
ಮರನಿರ್ಪಂತಿರ್ದನಿಂತು ನಿಷ್ಕರುಣನೊ ಪೇೞ್॥

ವಚನ: ಎಂಬ ಜನಾಪವಾದಮಂ ಕೇಳ್ದು ಬುದ್ಧಿಸಾಗರಂ ಸಗರನ ಮೇಲೆ ಸಿತಸರ್ಪಂಗಳನಿೞಿಯೆ ಸುರಿವುದುಂ ತಪ್ತಾಯಃ ಕಟಾಹಪತಿತಲಾಜಃ ಪುಂಜದಂತೆ ದೆಸೆದೆಸೆಗೆ ಚಿಳಿಲ್ ಚಿಳಿಲೆನೆ ಸಿಡಿಲ್ದು ಪಾಱುವುದಮೋರೊರ್ವರ್ಗೋರೊರ್ವರ್ ಮಕ್ಕಳ ದುಕ್ಕಮಂತರಸಂಗಱುವತ್ತು ಸಾಸಿರ ಮಕ್ಕಳ ದುಕ್ಕಂ ಸಾಮಾನ್ಯಮಕ್ಕುಮೆ! ಮಹಾಸತ್ವನುಂ ಧೈರ್ಯಾಂಬು-
ರಾಶಿಯುಮಪ್ಪುದಱಿಂದಸಹ್ಯಮಪ್ಪ ದುಃಖೋದ್ರೇಕಮಂ ಸೈರಿಸಿರ್ದನೆಂದು ಸಕಲಜನಕ್ಕೆಲ್ಲಂ ಪ್ರಕಟಂಮಾಡೆ ಸಗರನಾ ಬ್ರಾಹ್ಮಣಂಗಮಂತಃಪುರಕ್ಕಂ ಮಱುಮಾತುಗುಡಲಱಿಯದೆ “ ಮೌನಂ ಸರ್ವಾರ್ಥಸಾಧನಂ “ ಎಂಬುದಂ ಮನದೊಳ್  ಬಗೆದು-
ಕಡೆಯೆಯ್ದಿತ್ತೆನಗಿಂದು ರಾಜ್ಯವಿಭವಂ ಪೊಣ್ಮಿರ್ದ ಮೋಹೋದಯಂ ।
ತಡಿಸಾರ್ದಿರ್ದಪುದಕ್ಕೆ ಮಂಗಳಮಹಾಶ್ರೀ ಪೋಪೆನೀಗಳ್ತಪಂ ॥
ಬಡಲೆಂದುತ್ತಮ ಸತ್ವನೂರ್ಜಿತಗುಣಂ ಸಿಂಹಾಸನಂ ಭೇರಿ ಬೆ।
ಳ್ಗೊಡೆಯಿಂತೆಲ್ಲಮನೊಲ್ಲದಿರ್ದನರಸಂ ತಳ್ವಿಲ್ಲದಾಸ್ಥಾನದೊಳ್॥

ಕೃತಜ್ಞತೆಗಳು.  
ಸಂಪಾದಕರು: ರಂ. ಶ್ರೀ. ಮುಗಳಿ.
ಸಾಹಿತ್ಯ ಅಕಾಡಮಿ,
ನ್ಯೂಡೆಲ್ಲಿ .