ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಏಪ್ರಿಲ್ 7, 2019

ತಿಮ್ಮಕವಿ ವಿರಚಿತ ಯಾದವಗಿರಿ ಮಾಹಾತ್ಮ್ತಂ

ತಿಮ್ಮಕವಿ ವಿರಚಿತ ಯಾದವಗಿರಿ ಮಾಹಾತ್ಮ್ತಂ

ಈ ಕಾವ್ಯದ ಕರ್ತೃ ತಿಮ್ಮಕವಿ. ಇವನ ಕಾಲ ಕ್ರಿ. ಶ. ೧೬೭೨-೧೭೦೪. ಈತ ಚಿಕದೇವರಾಜ ಒಡೆಯರ ಆಶ್ರಿತ. ಆತನ ಅಪ್ಪಣೆಯಂತೆ ಮತ್ತು ಮಂತ್ರಿ ಚಿಕುಪಾದ್ಯನ ಪ್ರೇರಣೆಯಿಂದ ಈ ಕಾವ್ಯವನ್ನು ಬರೆದಂತೆ ಹೇಳುತ್ತಾನೆ. ಈತನ ಬ್ರಾಹ್ಮಣ ಕವಿ. ವೇಣುಗೋಪಾಲ ಸ್ವಾಮಿಯ ಭಕ್ತ. ಜಾಮದಗ್ನ್ಯ ಗೋತ್ರದವನು. ಚಿಕುಪಾಧ್ಯಾಯನಿಗೆ ಪ್ರೀತಪಾತ್ರನು. ಇವನು ಮೂರು ಕಾವ್ಯಗಳನ್ನು ರಚಿಸಿದ್ದಾನೆ. ಯಾದವಗಿರಿ ಮಾಹಾತ್ಮ್ತ, ವೆಂಕಟಗಿರಿ ಮಾಹಾತ್ಮ್ಯ, ಮತ್ತು ಪಶ್ಚಿಮರಂಗಕ್ಷೇತ್ರ ಮಾಹಾತ್ಮ್ಯ. ಇವು ಮೂರೂ ಚಂಪೂ ಕೃತಿಗಳು.

ಈ ಕಥೆ ನಾರದೀಯ ಪುರಾಣದಲ್ಲಿ ಬರುತ್ತದೆ. ಒಬ್ಬ ಬ್ರಾಹ್ಮಣೋತ್ತಮನು ಯಾದವಗಿರಿಯಲ್ಲಿ ಚಿಕ್ಕದೇವರಾಜನಿಗೆ ಸಂಸ್ಕೃತದಲ್ಲಿ ಹೇಳಿದನು. ರಾಜ ಅದನ್ನು ಕನ್ನಡದಲ್ಲಿ ಬರೆಯುವಂತೆ ಸೂಚಿಸಿದನು. ಚಿಕ್ಕುಪಾಧ್ಯನು ತಿಮ್ಮಕವಿಯನ್ನು ಕರೆದು ಅದನ್ನು ಕನ್ನಡದಲ್ಲಿ ಬರೆಯುವಂತೆ ಹೇಳಿದನು. ಅವನ ಮಾತನ್ನು ಶಿರಸಾವಹಿಸಿ ತಿಮ್ಮಕವಿ ಆ ಕಥೆಯನ್ನು ಚಂಪೂರೂಪವಾಗಿ ಕನ್ನಡಿಸಿದನು.

ಪ್ರಥಮಾಶ್ವಾಸಂ.
ಸ್ರ॥ ಶ್ರೀಮಾನಿನ್ಯಾನನಾಂಭೋರೈಹವಿಕಸನ ಬಾಲಾರ್ಕನಿಂದ್ರಾದಿದೇವ
ಸ್ತೋಮೋದ್ಯನ್ಮೌಳಿ ರತ್ನಾವಳಿರುಚಿ ವಿಲಸತ್ಪಾದಪಾನೀಯಜಾತಂ
ಕಾಮಪ್ರೋಲ್ಲಾಸರೂಪಂ ಮುನಿಜನಹೃದಯಾಗಾರ ದಿವ್ಯತ್ಪ್ರದೀಪಂ
ಪ್ರೇಮಂಬೆತ್ತಿತ್ತು ನಿತ್ಯಂ ಯದುಗಿರಿಪತಿ ಸೌಭಾಗ್ಯಮಂ ಪಾಲಿಕೆಮ್ಮಂ॥೧॥

ಶಾ॥ ಶ್ರೀಲಕ್ಷ್ಮೀಕುಚಕುಂಭಕುಂಕುಮರಜಃಪಂಕಾಂಕಿತೋರಸ್ಥಳಂ
ನೀಲಾಂಭೋಧರ ಸುಂದರಾಂಗನಮರಾಧೀಶಾರ್ಚಿತಾಂಘ್ರಿದೂವಯಂ
ವ್ಯಾಲೇಶೋರು ಫಣಾಮಣಿ ಪ್ರಥಿತ ಶೋಭಾಶ್ಲಿಷ್ಠವಕ್ತ್ರಾಂಬುಜಂ
ಲೀಲಾಬಂಧುರವಾರ್ಢಿ ರಕ್ಷಿಸುಗೆ ಶ್ರೀರಂಗೇಶನೊಲ್ದೆಲ್ಲರಂ॥೩॥

ಮ॥ ನುತಭಕ್ತಾಳಿ ಚಕೋರ ಕೌಮುದಿ ಮಹಾಮುಕ್ತ್ಯಂಗನಾಕುಂತಳ
ಪ್ರತತಿಂದಿಂದಿರ ಮಲ್ಲಿಕಾಕುಸುಮದಾಮಂ ಶ್ರೀಸ್ತನದ್ವಂದ್ವರಂ
ಜಿತ ಮುಕ್ತಾಮಣಿಹಾರಮಾನತಮನಃಕಾದಂಬದುಗ್ಧಂ ರಮಾ
ಪತಿ ಪದಾಬ್ಜನಖಾಂಶು ಶೋಭನಕರಂ ತಾನಿರ್ಕೆ ಮಚ್ಚಿತ್ತದೊಳ್॥೪॥

ಉ॥ ಮಾತೆ ಸಮುದ್ರಜಾತೆ ಸತತಾನತದೇವಕಿರೀಟ ಸನ್ಮಣಿ
ವ್ರಾತೆ ವಿರಾಜಿತಾಂಘ್ರಿ ಜಲಜಾತೆ ಸುನೀತೆ ಜಗತ್ರಯಾತಿ ವಿ
ಖ್ಯಾತೆ ವಿಳಾಸಯುಕ್ತೆ ವಿಧುಬಿಂಬಸಮಾನೆ ರಂಗನಾಥಸಂ
ಪ್ರೀತೆ ವಿನೀತೆ ಮಾಡೆಮಗೆ ಶ್ರೇಯಮನಾಲೆಸಿ ರಂಗನಾಯಕೀ॥೫॥

ಉ॥ ವಾದಿತವಲ್ಲಕೀ ಗುಣರವೋದ್ಭವ ನೂತನ ದಿವ್ಯಗೀತ ಸಾ
ರೋದಿತಮೋರೆ ಯೋಗಿಹೃದಯಾಲಯದೀಪಿಕೆ ನೀರಜಾತಜಾ
ಹ್ಲಾದಕರಾಂತರಂಗೆ ಕರುಣಂಬಡೆದಿತ್ತು ಮತಿಪ್ರಕಾಶಮಂ
ವೇದಶಿರೋನತಾಂಘ್ರಿಯುಗೆ ಪಾಲಿಸೈ ಶಾರದೆಯೆಮ್ಮನಾವಗಂ॥೬॥

ಮ॥ನುತಿಪೆಂ ರಾಮಕಥಾಂಬುರಾಶಿಶಶಿಯಂ ವಾಲ್ಮೀಕಿಯಂ ರಾಧಿಕಾ
ಪತಿಚಾರಿತ್ರರಸಜ್ಞಭಾವಶೈಕನಂ ಶ್ರೀವ್ಯಾಸನಂ ಕಾಳಿಕಾ
ಸ್ತುತಿ ಸಾರಪ್ಲುತ ಕಾಳಿದಾಸಕವಿಯಂ ಶೃಂಗಾರಲೀಲಾಕಲಾ
ತತಿ ಕಲ್ಪಾವನಿಜಾತ ಪಕ್ವಫಲವದ್ಗೀರ್ವಾಣನಂ ಬಾಣನಂ॥೧೮॥

ಚಂ॥ ನವರಸರೀತಿಯಂ ತಿಳಿವ ಲೋಕವಿವರ್ತನ ಸತ್ಪ್ರಪಂಚಮೇ
ತವೆಯಱಿವಂಗಜಾತ ವರಶಾಸ್ತ್ರ ವಿಳಾಸಮನೈದೆ ಬಲ್ಲ ಸ
ದ್ಯುತಿ ಲಸತ್ಕಲಾತತಿಯನೊಪ್ಪಿರೆ ವೇದಪರೀಸ್ಫುರನ್ಮಹಾ
ಕವಿಗಳ ಪಾದಕಾನೆಱಗಿ ಬೇಳ್ಪೆನನಾರತಮಿಷ್ಟಸಿದ್ಧಿಯಂ॥೨೦॥

ವಚನ: ಇಂತೀ ಪೂರ್ವೋಕ್ತಮಾದ ಸಕಲರಂ ನೆನೆದವರ ಪ್ರಸಾದಲಬ್ಧ ಕವಿತಾ ಮಾರ್ಗಮನುಳ್ಳ ಮನೋವೃತ್ತಿವೆತ್ತು

ಮ॥ ಕವಿ ಬೃಂದಾರಕ ಭೂರುಹಾಶ್ರಿತಮನಂ ಶ್ರೀವೇಣುಗೋಪಾಲ ಪಾ
ದವನೇಜಾತಮರಂದಸಾರರತಭೃಂಗಂ ಜಾಮದಗ್ನ್ಯನ್ವಯೋ
ದ್ಭವನಾನಂದದ ಚಿಕ್ಕದೇವನೃಪ ಕಾರುಣ್ಯೋಚಿತಂ ಮೋದದಿಂ
ಕವಿತಿಮ್ಮಂ ಯದುಭೂಮಿಭೃನ್ಮಹಿಮೆಯಂ ಪೇಳ್ಗುಂ ಬುಧಾನುಜ್ಞೆಯಿಂ॥೨೧

ಕೃತಿನಾಥಂ ಯಾದವಗಿರಿ
ಪತಿ ಪ್ರೇರಕನೆಣಿಸೆ ಚಿಕ್ಕದೇವಾಧಿಪನ
ಪ್ರತಿಕಥೆ ಯಾದವಗಿರಿರಂ
ಜಿತ ಮಾಹಾತ್ಮ್ಯಮೆನೆ ಕೇಳದಿರ್ಪರುಮೊಳರೇ॥೨೨॥

ಯಾದವಗಿರಿ ಮಹಾತ್ಮೆಯ
ನಾದರದಿಂ ಕೇಳ್ದು ತಿರ್ದಿ ತಪ್ಪದಱೊಳಗೇ
ನಾದಮುಳ್ಳೊಡೆ ಕವಿಗಳ್
ಮೋದದಿನುರ್ವಿಸುವುದೀ ಪ್ರಬಂಧಮನಿಳೆಯೊಳ್॥೨೩॥

ಆನದಱಿನುಸಿರ್ವೆನುರ್ವೀ
ಮಾನಿನಿಯಾಣ್ಮನ ಕವೀಶಮಂದಾರನ ಸ
ನ್ಮಾನಿತವಿದ್ವಜ್ಜನಸಂ
ತಾನನ ಚಿಕದೇವರಾಯನೊಲ್ಮೆಯಿನೀಗಳ್॥೨೪॥

ಮ॥ ಹೃದಯಾಂಭೋರುಹದಲ್ಲಿಯಾಂ ನೆನೆದು ಗೋಪಾಲಾಂಘ್ರಿಪಂಕೇಜಮಂ
ಮುದದಿಂದಾತನನುಜ್ಞೆಯಿಂದುಸುರ್ವೆನೀ ವಿದ್ವದ್ದಯಾ ಸಾರದಿಂ
ಮೊದಲೊಳ್ ವೈರಿನೃಪಾಲಖಂಡನರತ ಶ್ರೀಚಿಕ್ಕದೇವೇಂದ್ರನ
ಭ್ಯುದಯಕ್ಕಾಶ್ರಯಮಪ್ಪವೋಲ್ ಬುಧಜನಕ್ಕಾನಂದಮುಂ ಸಾರ್ವವೋಲ್ ॥೨೬॥

ಮ॥ ತೀರಮಹೀದ್ರ ನಿರ್ಝರ ಸಮೀಪ ವಿರಾಜಿತಕುಂಜಮಲ್ಲಿಕಾ
ಚಾರು ಸುಮಾಳಿತಲ್ಪಕೃತಮನ್ಮಥಕೇಳಿ ವಿಳಾಸಮಿಶ್ರಮೋ
ದಾರ ಸುರಾಂಗನಾಕುಚತಟಸ್ಥಿತ ಕುಂಕುಮಘರ್ಮವಾರಿಸಂ
ಚಾರಿತ ಮಂದಮಾರುತನಿನಾಂತತಿಗಂಧಮನೊಪ್ಪಿತಾರ್ಣವಂ॥

ಮ॥ ಕಮಲಾಕ್ಷಾಂಗನೆಯೆನ್ನ ಪುತ್ರಿ ವಿಧಿ ತಾಂ ದೌಹಿತ್ರನೀಶಂಗೆ ಚಂ
ದ್ರಮನಂ ಮೌಳಿಯೊಳಾಂತು ರಂಜಿಸುವವೊಲಿತ್ತೆಂ ಸುರೇಶಂಗೆ ಪೋ
ದ ಮಹಾಭೂತಿಯನಿತ್ತೆನಾರೆನಗೆ ನೋಡಲ್ ಸಾಟಿಯಿಲ್ಲೆಂದು ಹ
ರ್ಷಮನಾಂತುರ್ವಿದುದೆಂಬಿನಂ ತೆರೆಗಳಿಂ ಪೆರ್ಚಿರ್ದುದಾ ಸಾಗರಂ॥

ಮ॥ ಮಗಳಂ ನೋಳ್ಪೆನೆ ಪೇಳ್ವೆನೇಂ ಚಪಳೆ ಪುತ್ರಂ ರಾಜಯಕ್ಷ್ಮಾಮಯ
ಪ್ರಗತ ಕುಂಭಜನೆನ್ನನಂದು ನೆಱೆ ಪೀರ್ದಂ ಮೇಣ್ ವಿಷಕ್ಕಾಗರಂ
ಮಿಗೆಯಾದೆಂ ಬಹುಭಂಗಮಂ ತಳೆದೆನಾರೆನ್ನಂತೆ ಕಷ್ಟಸ್ಥರೆಂ
ದಗಿದಂಭೋನಿಧಿ ತರ್ಗಿದಂತೆ ಗತ ಕಲ್ಲೋಲಂಗಳಿಂದೊಪ್ಪುಗುಂ॥೩೧॥

ಮ॥ ಸಲೆ ಇಂತೊಪ್ಪುವ ಸಿಂಧುವೆಂಬ ಸರದೊಳ್ ತತ್ಕೀಕಕ್ಷ್ಮಾಧರಾ
ವಲಿ ಪತ್ರಂ ವಿಸತ್ ಸ್ವಕೀಯ ಘನಧಾತುವ್ರಾತಕಿಂಜಲ್ಕ ಸ
ಮ್ಮಿಳಿತ ಸಾನುಮಣಿವ್ರಜದ್ಯುತಿಪರಾಗಂ ನೀಲಮೇಘಾಳಿ ಸಂ
ಕಲಿತಂ ಹೇಮಸರೋಜ ಕರ್ನಿಕೆಯವೋಲ್ ಹೇಮಾದ್ರಿ ಕಣ್ಗೊಪ್ಪುಗುಂ ॥೩೩॥

ಮ. ಸ್ರ. ॥ ಎಳೆವುಲ್ಲಂ ಮೇದು ಪಾನೀಯಮನುಱೆ ಸವಿದುರ್ವುತ್ತೆ ಪೆರ್ಗೆಚ್ಚಲಿಂ ಭೂ
ತಳದೊಳ್ ಸಾಲಾಗಿರಲ್ ಪಾಲ್ಸರಿಗಱೆವ ಪಶುವ್ರಾತದಿಂ ಕ್ಷೋಣ್ಯಮರ್ತ್ಯಾ
ವಳಿ ಕೃದ್ದಿವ್ಯಾಗ್ನಿಹೋತ್ರಂಗಳಿನೊಗೆವ ಹವಿರ್ಗಂಧಧೂಮಾಳಿಯಿಂ ಮಂ
ಜುಳ ಲಕ್ಷ್ಮ್ಯಾವಾಸಮೆಂಬಂತಿರೆಯೆಸೆದುದು ಸೊಂಪಿಂದೆ ಕರ್ಣಾಟ ದೇಶಂ॥೪೧॥

ಮ.ಸ.॥ ಅರಲಿಂ ಪಣ್ಣಿಂ ಲಸತ್ಪಲ್ಲವದಿನವನಿಜಂ ಮಕ್ಕಳಿಂ ಭಾಗ್ಯದಿಂ ಭಾ
ಸುರ ಸೌಂದರ್ಯಾಂಗನಾಸಂತತಿ ಕೃತ ವಿಲಸದ್ಭಕ್ತಿಯಿಂದಂ ಜನಂ ಬಂ
ಧುರ ವಿಪ್ರವ್ರಾತ ಪೂಜಾವಿಧಿಯಿನುರು ಕಲಾವೃತ್ತಿಯಿಂ ದಾನದಿಂ ಭೂ
ಪಸಂದೋಹಂ ವಿಳಾಸಂಬಡೆದು ಮೆಱೆದುದಾರಾಜ್ಯದೊಳ್ಪೆಂಪಿನಿಂದಂ॥೪೪॥

ತೂಗುತುಮುರ್ವುತೆ ತೊನೆವುತೆ
ಬಾಗುತೆ ಬಳ್ಕುತೆ ಸುಗಂಧಮಂ ತಳೆದೊಳ್ಪಿಂ
ರಾಗಿಸಿ ರಂಜಿಸಿ ಮನುಜ
ರ್ಗಾಗಿಸಿ ಪದುಳಮನೆ ಶಾಲಿವನಮೆಸೆದಿರ್ಕುಂ॥೪೮॥

ಸರಸಿಜ ಗುಣದಿಂದೇಱಿಸಿ
ವರ ಕೈರವನಾಳ ಧನುವನಂಬುಜಮುಖಿ ತಾ
ನಿರದಾೞಡಿ ಮಿಂಟೆಯಿನೊ
ತ್ತರಿಸಿಟ್ಟೋಡಿಸಿದಳಾರ್ದು ಶುಕಸಂತತಿಯಂ॥೪೯॥

ಉ॥ ಜಾಱೆ ಕುಚಾಂಬರಂ ಕುಣಿಯೆ ಕರ್ಣದೊಳೋಲೆ ಲಲಾಟದೊಳ್ ಕುರುಳ್
ಮೀಱಿಯಲುಂಗೆಬಟ್ಟಮೊಲೆ ಕಂಪಿಸೆ ಬಳ್ಕೆ ಸುಮಧ್ಯದೇಶಮೊ
ಳ್ಪೇಱೆ ನಿತಂಬಮುಂ ಪೊಡರೆ ನೂಪುರ ಕಂಕಣರಾವಮುಣ್ಮೆ ತಾಂ
ಸಾಱುತುಮಿಟ್ಟು ಕೈರವದಿನೋಡಿಸಿದಳ್ಮದ ಕೀರಬೃಂದಮಂ॥೫೧॥

ಮ॥ ತೊಳಪಕ್ಷಿದ್ಯುತಿ ಪೊಣ್ಮೆ ಕಂಕಣರವಂ ಕೈಗಣ್ಮೆ ದೇಹಾಂಶು ತಾಂ
ಪೊಳೆಯಲ್ ಸುಸ್ಮಿತ ಕಾಂತಿಯುಣ್ಮೆ ವದನಾಬ್ಜಂ ಮುದ್ದುವೇಱಲ್ಮಹೋ
ಜ್ವಳ ಭೂಷಾರುಚಿ ರಾಜಿಸಲ್ ಸ್ಫಟಿಕಪಾತ್ರಂದಾಳ್ದು ಹಸ್ತಾಬ್ಜದೊಳ್
ತಿಳಿ ನೀರಂ ಪಥಿಕರ್ಗೆ ನೀಡಿ ಸರಸಾಳಾಪಂಗಳಿಂದೊಪ್ಪಿದಳ್ ॥೫೩॥  

ಮ॥ ಮಿಸುಪೀ ಪತ್ತನ ಮಧ್ಯದಲ್ಲಿ ಹರಿಲಕ್ಷ್ಮೀಯುಕ್ತನಾಗಿರ್ಕುಮೆಂ
ದೊಸೆದಾ ವಾಸುಕಿ ನಾಗಲೋಕದಿನಿಳಾಭಾಗಕ್ಕೆ ಸಾರ್ತಂದು ದಿ
ವ್ಯಸಹಸ್ರೋರು ಫಣಂಗಳಿಂ ಬಿಡದೆ ತಾಂ ವೇಢೈಸಿ ನೋಳ್ಪಂತೆ ಕ
ಣ್ಗೆಸೆದತ್ತಾ ಪುರದಲ್ಲಿ ರನ್ನದೆನೆಗಳ್ ಸುತ್ತಲ್ಕರಂ ಚೆಲ್ವಿನಿಂ॥೫೭॥

ಚಂ॥ ಪುರವಧು ತನ್ನೊಳಿಹ ನರರೆಲ್ಲರುಮೀಕ್ಷಿಸೆ ಭಾಗ್ಯಯುಕ್ತರೀ
ಧರಣಿಯೊಳಾರಿವರ್ಗೆ ಸರಿಯಾದಪರೆಂದು ನಕ್ಕು ಪೇಳ್ಗುವಂ
ತಿರೆ ಕಮನೀಯಸೌಧತತಿಕಾಂತಿ ವಿರಾಜಿಸಿದತ್ತು ಪೆಂಪಿನಿಂ
ಪುರಪತಿಕೀರ್ತಿಯಾವರಿಸೆ ಪರ್ವಿತಮಾಳ್ಕೆಯೆನಲ್ ವಿಳಾಸದಿಂ॥೫೯॥

ಉ॥ ಪೊಂಗಳರಾಶಿಯಿಂ ವರದುಕೂಲನಿಕಾಯದೆ ರತ್ನಬೃಂದದಿಂ
ಮಂಗಳಮಾದ ವಿದ್ರುಮಸಮೂಹದೆ ಕಾಂಚನಪಾತ್ರಯೂಥದಿಂ
ಸಿಂಗರಮಾದ ಚಾರುಮಣಿತೋರಣದಿಂ ಗಣಿಕಾಲಯಂಗಳಿಂ
ದಂಗಡಿವೀಥಿಯೊಪ್ಪಿದುದು ಭೂವರಪುತ್ರರ ಜೂಜಿನೇಳ್ಗೆಯಿಂ ॥೬೫॥

ಮ॥ ಪುರಲಕ್ಷ್ಮೀ ಕನಕಾಬ್ಜ ಕರ್ಣಿಕೆಯವೋಲ್ ಗಾಂಗೇಯರತ್ನಾಂಶು ಭಾ
ಸುರ ಸೌಧಪ್ರಭೆಯಿಂದೆ ಹೇಮರಚಿತಪ್ರಾಕಾರದಿಂ ಮಾಧುರೀ
ಯ ರವಂಗೆಯ್ವ ಕಪೋತಸಂತತಿಯಿನುದ್ಯತ್ಸಂಭ ಸಂದೋಹದಿಂ
ಧರಣೀಂದ್ರಾಲಯಮೊಪ್ಪಿದತ್ತುಶತಭಾಸ್ವತ್ತೇಜದಿಂದಾವಗಂ॥೬೭॥

ಉ॥ ನೀಲದ ಲೋವೆ ಪಚ್ಚೆಯ ವಿತರ್ದಿಕೆ ವಜ್ರದ ಕಂಭಮಿಂದುಕಾಂ
ತಾಳಿಯ ಭಿತ್ತಿ ಮಿದ್ರುಮದ ಜಂತೆ ಸುವರ್ನಕವಾಟಮೀಕ್ಷಿಸಲ್
ಕೀಲಿತ ಪುಷ್ಯರಾಗದುರುಗೇಹಳಿ ಮೌಕ್ತಿಕ ಸದ್ವಿಟಂಕಮಿಂ
ತಾ ಲಲಿತಸ್ರಜಂಗಳಿಂ ಬೆಡಂಗು ನೃಪಾಲಯದೊಳ್ ವಿರಾಜಿಕುಂ॥೬೮॥

ಇದು ವಿನದಮರವರ ಸರಸಿಜಭವಭವಮುಖ ಸುರಸಮುದಯ ಸುರುಚಿರ
ಮಕುಟನಿಕರ ಖಚಿತಮಣಿನಿಚಯ ರುಚಿಕಲಿತ ಯದುಗಿರಿಸದನ ತಿರು
ನಾರಾಯಣ ಮೃದುಪದಲಲಿತ ಜಲರೈಹಜನಿತ ಮಕರಂದ ರಸಾಸ್ವಾದನ
ನಿರತ ಮತ್ತಮಧುಕರಾಯಮಾನ ಬಿರುದೆಂತೆಂಬರಗಂಡ ಯದುಕುಲ
ಶರಧಿರಾಕಾಸುಧಾಕರನಾದ ಚಿಕ್ಕದೇವಮಹಾರಾಯನ ಕರುಣಾ
ಕಟಾಕ್ಷಾವಲೋಕನಮುದಿತ ಚಿಕ್ಕುಪಾಧ್ಯಾಯ ಪ್ರೇರಿತ
ಕವಿತಿಮ್ಮ ವಿರಚಿತ ಕರೂಣಾಟಕವಚನರಚನೆಯ
ಯಾದವಗಿರಿ ಮಾಹಾತ್ಮ್ಯೆಯೊಳ್ ಪೀಠಿಕಾ ಪ್ರಕರಣಂ
ಸಮುದ್ರ ಮೇರು ದೇಶ ಪುರವರ್ಣನಾದಿ ಕಥಾಸಾರಂ
ಪ್ರಥಮಾಶ್ವಾಸಂ ಸಮಾಪ್ತಂ.  

ದಶಮಾಶ್ವಾಸಂ.

ಶ್ರೀಲಲನಾ ರಮಣೀಯಕು
ಚಾಲಿಂಗನಜನಿತಪುಲಕರಂಜಿತಗಾತ್ರಂ
ಪಾಲಿಸುಗೆಮ್ಮಂ ಭಕ್ತಿನಿ
ರಾಲಸ್ಯಮನಿತ್ತು ಯಾದವಾಚಲದೊಡೆಯಂ ॥೧॥

ವಚನ॥ ಸುಚರಿತಾಖ್ಯಾನಶ್ರವಣಾನಂತರಮಾ ಮುನಿಗಳಿಂತೆಂದರ್

ಎಲೆ ನಾರದ ನೀಂ ಪೇಳ್ದೀ  
ಸುಲಲಿತ ವೃತ್ತಾಂತಮೆಮ್ಮ ಕರ್ಣಂಗಳ್ಗ
ಸ್ಖಲಿತಾಮೃತಸೇಚನಮಾ
ಯ್ತಲಸದೆಯಿಂದೆಮ್ಮಮೇಲಣತಿದಯೆಯಿಂದಂ॥೨॥

ಮ.ಸ.॥ ಸರಸಂ ಪೇಳೊಂದು ವೃತ್ತಾಂತಮನೆಲೆ ಮುನಿ ನಿನ್ನಿಂ ಮಹಾವಾಸುದೇವ
ಸ್ಫುರದುದ್ಯತ್ಸತ್ಕಥಾಸಾರಮನನುವದಿಸಲ್ಕನ್ಯನಾವಂ ಸಮರ್ಥಂ
ಕರುಣಂಗೆಯ್ಯೆಂದು ಪೇಳ್ದಾ ಋಷಿಗಳ ನುಡಿಯಂ ನಾರದಂ ಕೇಳ್ದು ಮತ್ತಾ
ದರದಿಂದಾ ಯೋಗಿಗಳ್ಗಿಂತಮಳಿನ ಹೃದಯಂ ಹರ್ಷದಿಂದೆಂದನಾಗಳ್ ॥೩॥

ಅವಿವಕ್ಷಿತವಕ್ತೃತ್ವಂ
ಸುವಿದ್ಯನಿಚಯಕ್ಕಯುಕ್ತಮೆಲೆ ಮುನಿಗಳಿರಾ
ಸುವಿವಕ್ಷಿತಮಾದೊಡೆ ತಾಂ
ವಿವಕ್ಷಿತಗುಣವುಮದಾಗಿ ಕೇಳ್ವೈದಖಿಳಮಂ ॥೪॥

ವಚನ॥ ಇಂತೆಂದಾ ಮುನಿಪುಂಗವನಂ ನಾರದನಂ ಕೂರ್ತಾ ಮುನಿಗಳ್ ಪ್ರಶ್ನೆಗೆಯ್ದರದೆಂತೆನೆ,

ಉತ್ಸಾಹ॥ ಸಾರಸೋದ್ಭವಂಗೆ ಪೂರ್ವದಲ್ಲಿ ವಿಷ್ಣುವಿತ್ತ ಸಾ
ಧಾರಣರೂಪಮಿರ್ಕುಮೋವಿರಿಂಚಿಲೋಕದೊಳ್
ಧಾರಿಣೀತಳಾಂತದಲ್ಲಿಯೆಂತುಮಲ್ಲದಿರ್ಕುಮೋ
ನಾರದಂ ಮುನೀಶರಿಂತು ಕೇಳೆ ಪೇಳ್ದನೊಲುಮೆಯಿಂ॥೫॥

ವಚನ॥ ಅದೆಂತೆಂದೊಡೆ

ಮ॥ ಮಿಗೆ ಹರೂಷಂಬಡೆದೀಗಳಾಲಿಸುಗೆ ನಿಮ್ಮಿಂ ಯುಕ್ತಕಾಲಾನುಯೋ
ಗಿಗಳಿಂ ಮನ್ನಯನಾತಿಪಾರಣೆಯದಾದಾ ರೂಪಮಂ ಜಾನಿಪೆಂ
ಸೊಗಸಿಂ ಪೂರ್ವವಿವೃತ್ತಪುಣ್ಯಕಥೆಯಂ ಶ್ರೀಕಾಂತಸದ್ಭಕ್ತಿ ಬಾ
ಕ್ಕುಗಳೊಳ್ಪಿಂದವಧೃನದಿಂದೆಸೆಯೆನೀಮಾಂ ಪೇಳ್ವೆನುತ್ಸಾಹದಿಂ॥೬॥

ಸ್ರ॥ ಶ್ರೀಮತ್ಕಾಕುತ್ಸ್ಥವಂಶೋದ್ಭವನೆನಿಸುವ ರಾಮಂ ವಿಶಾಲಾಕ್ಷಿಯಾದಾ
ಭೂಮಿಪ್ರೋದ್ಭೂತೆ ಸೌಮಿತ್ರಿಗಳೊಡನೆ ವನವಾಸವಂ ಮಾಡುತಿರ್ದಾ
ಶ್ಯಾಮಾಂಗಂ ದಿವ್ಯನಾರಾಯಣಗಿರಿತಟಮಂ ಪೊರ್ದೆ ಕಂಡಲ್ಲಿಯಾಗಳ್
ರಾಮಂಗುದ್ಯುಲ್ಲಸದ್ವಿಸ್ಮಯಮುಖನಿರದಿಂತೆಂದನಾ ಲಕ್ಷ್ಮಣಾಂಕಂ ॥೭॥

ಚಂ॥ ಜಲಧರವರ್ಣ ಕೇಳ್ ಮಿನುಗುವೀ ನಗದಗ್ರದೊಳಂತರಂಗನಿ
ರ್ಮಲಕರತೀರ್ಥತೀರದೊಳೆ ದಿವ್ಯಮನೋಜ್ಞವಿಮಾನಮಧ್ಯದೊಳ್
ವಿಲಸಿತವಿಷ್ಣುಮೂರ್ತಿ ನೆಲಸಿರ್ಕುಮುದಾರ ತದೀಯ ರೂಪಮಂ
ತೆಲೆ ರಘುಜಾಸಮಭ್ಯಧಿಕಮುಕ್ತಕಮಾಗಿರುತಿರ್ಕುಮಾವಗಂ॥೮॥

ಆ ನವಮೂರ್ತಿಯ ರೂಪು ಸ
ಮಾನಂ ನಿನ್ನೊಡನೆಯೆಂದು ಕಾಣಲೂಪಡುಗುಂ
ಭಾನುಕುಲನೊಳ್ವಭೀಪ್ಸಿತ
ಮಾನಸನಾದೊಡೆ ನಿರೀಕ್ಷಿಸುವುದದನೀಗಳ್ ॥೯॥

ಮ॥ ಎನಲಾ ರಾಘವನೆಳ್ದು ಪ್ರೀತಮನನಾ ಸೀತಾಸಮೇತಂ ಸುರಂ
ಜನ ಕಲ್ಯಾಣದ ತೀರ್ಥಮಂ ಗಮಿಸಿಯಲ್ಲಿರ್ಪಾ ಜಗನ್ನಾಥನಂ
ವನಜಾತಾಯತನೇತ್ರನಂ ಲಲಿತರಾಕಾಚಂದ್ರಬಿಂಬಾಸ್ಯನಂ
ಘನಭಾಸ್ವನ್ಮಣಿಕುಂಡಲೃಭರಣದಿವ್ಯತ್ಸತ್ಕಪೋಲಾಢ್ಯನಂ॥೧೦॥

ಮ.ಸ್ರ.॥ ವಿಲಸತ್ಕೋಟೀರಮುಖ್ಯಾಭರಣಸುರುಚಿರಾಲಂಕೃತಾಕಾರನಂ ಮಂ
ಜುಲಮಾಗಿರ್ಪಂಜನೋರ್ವೀಧರ ಸುಲಲಿತಸಂಕಾಶನಂ ದ್ರಷ್ಟ್ರಲೋಕಾ
ವಳೀನೇತ್ರವ್ಯೂಹ ಸಂರಂಜಕನನಖಿಲಸೌಭಾಗ್ಯಸದ್ರೂಪನಂ ಮಂ
ಗಲಭೂಷಾಭೂಷಣೀಭೂತನನನುಪಮನಂ ಕಂಡನಾ ರಾಘವೇಂದ್ರಂ॥೧೧॥

ನಾರಾಯಣನಂ ವಿಪುಲಾ
ಕಾರಾಯುಧಪರಿವೃತಾಂಗನಂ ಮುದದಿಂದಂ
ಸ್ಮೇರಾಕ್ಷಿಯಿನೀಕ್ಷಿಸಿ ರಘು
ವೀರಂ ಸಾಷ್ಟಾಂಗದಿಂದಮಭಿವಂದಿಸಿದಂ॥೧೨॥

ವಚನ॥ ಅನಂತರದೊಳ್

ಮ.ಸ್ರ. ॥ ಧೃತಿಯಿಂದಂ ವಿಸ್ಮಯೋತ್ಫುಲ್ಲವದನೆ ವರವೈದೇಹಿಯುಂ ಚಾರುಕರ್ಣಾ
ಯತಸಮ್ಯಗ್ದೃಷ್ಟಿಯಿಂ ನೋಡಿದಳಲುಗದೆ ನೇತ್ರಂಗಳಂ ರಾಮಭದ್ರಂ
ಜಿತದೈತ್ಯಂ ಲಕ್ಷ್ಮಣಾನೀತಕಮಲಕೃತನಾರಾಯಣಾಂಘ್ರ್ಯಬ್ಜಪೂಜಾ
ವ್ರತನಿಷ್ಣಾತಂ ಪೊದಳ್ದಲ್ಲಿಯೆ ಕತಿಪಯವಾಸಂಗಳಿರ್ದಂ ಸಮೋದಂ॥೧೩॥

ಬಳಿಕಾ ಶ್ರೀಲಕ್ಷ್ಮೀ ಮಂ
ಜುಳಮುಖಪದ್ಮಾರ್ಕವಾಷ್ಣುವಾಹವ ಪಟು ದೋ
ರ್ಬಳಪುಂಗವ ರಾಮಂಗೆ ವಿ
ಮಳಮಪ್ಪವೊಲೊಂದು ವಾಕ್ಯಮಂ ನಲಿದೊಱೆದಂ ॥೧೪॥

ಮ.ಸ್ರ.॥ ಎಲೆ ರಾಮಾ ದಾನವೇಂದ್ರಾನ್ವಯನಿಧನಮುಮಂ ಮಾಡಿನೀನೊಲ್ದಯೋಧ್ಯಾ
ವಿಲಸತ್ತ್ವಾದ್ವಾಸಮಂ ಸಾರ್ದೊಡೆ ಬಳಿಕಿರದೊಂದಂಶದಿಂ ಬರ್ಪೆನೆಂದಾ
ಜಲಜಾಕ್ಷಂ ಪೇಳೆ ರಕ್ಷೋವ್ರಜಹರ ರಘುವೀರಂ ಸುರಾಂಶೋದ್ಭವ ಪ್ರೋ
ದ್ಬಲಕೀಶಶ್ರೇಷ್ಠದಿಂ ತಾನೊಡೆವೆರದು ಮಹಾದೈತ್ಯರಂ ಕೊಂದು ಮತ್ತಂ ॥೧೫॥

ಪ್ಲವಗಬಲದೊಡೆಯನಯೋಧ್ಯಾ
ಸುವಿಲಾಸಪುರಾಂತಮಂ ಪ್ರವೇಶಿಸಿ ರಾಮಂ
ನವಭಕ್ತಿಯುಕ್ತರಕ್ಷಾ
ವ್ಯವಹರಣೆಯುಳ್ಳವನಾಗಿ ರಘುಪತಿಯಾಗಳ್॥೧೬॥

ಪ್ರಿಯಭಕ್ತ ವಿಭೀಷಣ ನಿಜ
ವಿಯೋಗದ ಸಹಿಷ್ಣುತೆಯನಭೀಕ್ಷಿಸಿ ಕೊಟ್ಟಂ
ದಯೆಯಿಂ ಸ್ವಾರ್ಚಿತಫಣಿಪತಿ
ಶಯನನನಾ ರಂಗನಾಥನಂ ಭಜಿಸೆನುತಂ॥೧೭॥

ವರನಾರಯಣನಂ ನೀಂ
ನಿರುತಂ ಪೂಜಿಸುವುದೆಂದು ಕುಡಲೊಯ್ದಂ ಶ್ರೀ
ಹರಿತಲ್ಪರಂಗನಾಯಕ
ನುರುತರದೂರಗತನಾಗೆ ರವಿಕುಲತಿಲಕಂ॥ ೧೮॥

ಮ॥ ಜನದಿಂದಂ ಕ್ಷಣಮಾತ್ರಮಾಗಳೆ ವಿಷಣ್ಣಂ ಕಣ್ಗೆ ಕಾಣಲ್ಪಡಲ್
ಮನಮೊಲ್ದಾದಿಪಿತಮಹಂ ಬಳಿಕಮಾತ್ಮಾವಾಸದಿಂ ಬಂದು ರಂ
ಜನಮಾಗಿರ್ದ ವಿಮಾನಮೇಱೆ ರಘುನಾಥಂಗೆಂದನಿಂತೆಂದು ಕೇಳ್
ವನಜಾಪ್ತಾನ್ವಯಭೂಷರಾಮ ಮಿಗೆನೀಂ ಮದ್ಮದ್ವಾಕ್ಯಮಂ ಮೋದದಿಂ॥೧೯॥

ವಚನ: ಅದೆಂತೆಂದೊಡೆ

ನಾರಾಯಣಾಚಲೇಂದ್ರವಿ
ಹಾರನಪೂರ್ವಂ ತ್ವದರ್ಚಿತನ ವಿಷ್ಣುವಿನಾ
ಕಾರಾಂಶಮಿದೆಮದರ್ಚಿತ
ಮಾರೆಯ್ದಿದನೊಲ್ದು ನೀಂ ಪರಿಗ್ರಹಿಸೀಗಳ್॥೨೦॥

ಚಂ॥ ಎನೆ ರಘುನಾಯಕಂ ಕಲಿತಕೌತುಕನಾಗಳೆ ಬೇಗಮೆಳ್ದು ಸ
ದ್ವಿನುತನುದಾತ್ತಭಕ್ತಿಯಿನುದಾರ ತದಂಶಮನಬ್ಜಜಾತನಿಂ
ಮನದೊಲವಿಂದೆ ಕೊಂಡನುಜಯುಕ್ತನದಂ ಬಹುಕಾಲಮೊಳ್ಪಿನಿಂ
ಘನತರಮಾಗಿ ಪೂಜಿಸುತುಮೊರ್ಮೆ ಸಮೀಪದೊಳಿರ್ದ ತಮ್ಮನಂ ॥೨೧॥

ಮ॥ ಕರೆದಿಂತೆಂದನರಣ್ಯದೊಳ್ಪದೆದು ಪೂರ್ವಂ ಮತ್ಕರಾಂಭೋಜದಿಂ
ದಿರದಾರಾಧಿಕಮೂರ್ತಿಯುಂ ಬಗೆಯೇ ಮೇಣೀ ಮೂರ್ತಿಯುಂ ಸಾಟಿಯೇ
ಸರಿ ನಿಸ್ಸಂಶಯಮೆಂದು ಭಾವೆಸುವೆ ನಾನಿಂತೆಂದ ರಾಮೋಕ್ತಿಯಂ
ಹರಿಪುತ್ರಂ ತವೆ ಕೇಳ್ದು ಮೂರ್ತಿಯದು ತಾನೆಲ್ಲಿರ್ಕುಮೆಂದಾಶೆಯಿಂ॥೨೨॥

ಉ॥ ಊರ್ಮಿಳೆಯಾಣ್ಮನಂನುತಿಸೆ ಯಾದವಶೈಲದೊಳಿರ್ಕುಮೆಂದು ಸ
ದ್ಧಾರ್ಮಿಕ ಲಕ್ಷ್ಮಣಂ ವಚಿಸೆ ಮಾರುತನಂದನನೆಳ್ದು ಬೇಗದಿಂ
ಪೆರ್ಮೆಯಿನೆಯ್ದಿ ಯಾದವಮಹೀಧ್ರಮನಲ್ಲಿಯ ದಿವ್ಯಮೂರ್ತಿಯಂ
ಶರ್ಮಸಮೇತನರ್ಚಿಸಿ ರಘೂದ್ವಹನಂಘ್ರಿಯನೊಲ್ದು ಪೊರ್ದಿದಂ॥೨೩॥

ವಚನ॥ ಅಂತು ಪೊರ್ದಿಯಾ ಪವನಕುಮಾರಂ ರಾಮಭದ್ರಂಗಿಂತೆಂದನದೆಂತೆನೆ

ಮ॥ ಎಲೆ ಮತ್ಸ್ವಾಮಿ ಭವತ್ಸಮರ್ಚಿತಮದಪ್ಪೀ ರೂಪಮಂ ಯಾದವಾ
ಚಲದಗ್ರಸ್ಥನ ಚಾರುಮೂರ್ತಿಯನದಂ ತ್ವದ್ರೂಪುಮಂ ಮನ್ಮನಂ
ಜಲಮುಗ್ವರ್ಣಸಮಾನಮಾಗ ತಿಳಿದೀಗಳ್ಭಾವಿಸುತ್ತಿರ್ಕುಮೆಂ
ದಲಸನ್ಮಾರುತಸಟಭವಂಗೆ ಮುದದಿಂದಿಂತೆಂದನಾ ರಾಘವಂ ॥೨೪॥

ಪವನಾತ್ಮಜ ನೀನೆನ್ನಂ
ಸುವಿಳಾಸದಿನೆಂತು ಭಾವಿಸುವೆಯಂತಾ ಯಾ
ದವಗಿರಿಯೊಳ್ ನಾರಾಯಣ
ನವಮೂರ್ತಿಯನೊಲ್ದು ಸೇವಿಸುತ್ತಡಿಗಡಿಗಂ ॥೨೫॥

ಸಂತೋಷಂಬಡಿಸೆನೆ ಹನು
ಮಂತಂ ರಘುಪತಿನಿರೂಪದಿಂದಾ ನಗದೊಳ್
ತಾಂತಳರ್ದುಪೇತಕುತುಕನ
ನಂತೋಪಚರಣೆಗಳಿಂ ಸಮರ್ಚಿಕುಮನಿಶಂ॥೨೬॥

ವಚನ॥ಮತ್ತಮನಂತರದೊಳ್

ಉತ್ಸಾಹ॥
ಆ ರಘೂದ್ವಹಂ ರಮಾಧರಾಸಮೇತನಾದ ಮ
ಚ್ಚಾರುವಂಶದೇವ ವಿಷ್ಣುಮೂರ್ತಿಯಂ ಚಿರಂ ಪ್ರಪೂ
ಜೋರೈಭಕ್ತಿಯಿಂದೆ ಸೇವೆಗೆಯ್ದು ರಾಮಭದ್ರ ನೀಂ
ಭೂರಿಜಂಗಮಾಚರಂಗಳಂ ಸುದಿವ್ಯಲೋಕಮಂ॥೨೭॥

ಮ.ಮಾ.॥ ಆವ ವೇಳೆಯೊಳೆಯ್ದಿಸಿರ್ದವನಾಗಳಾ ವರ ಮೂರ್ತಿಯಂ
ಪಾವಮಾನಿಯ ಕೈಯ್ಯೋಳೀಯೆ ಬಳಿಕ್ಕವಂ ರಘುನಾಥಜಂ
ಗಾ ವಿಳಾಸದ ಮೂರ್ತಿಯಂ ಪರಮೇಷ್ಠಿಪೂಜಿತಮಂ ಕುಡಲ್
ಪಾವನಾಂಗಮನಾತಪಿತ್ರ್ಯಮೆನುತ್ತೆ ಕೊಂಡನದಂ ಕುಶಂ॥೨೮॥

ವಚನ॥ ಆ ಮೂರ್ತಿಯಂ ನಿರಂತರಂ ಸ್ಮರಿಸುತರ್ಚಿಸುತ್ತಿರ್ಪಿನಂ

ಚಂ॥ ಬಳಿಕತಿಲಕ್ಷಣಂಗಳಿನುದಾರಗುಣಂಗಳಿನಾ ಕುಶಂಗೆ ಮಂ
ಗಳಯುತೆ ಕಂಧರಸ್ತೆ ಕನಕಾಂಚಿತಮಾಲಿಕೆ ಮಂಗಳಾಂಗಿ ಕ
ಣ್ಗೊಳಿಪ ಕುಮಾರಿ ತಾಂ ಕನಕಮಾಲಿಕೆಯೆಂಬ ಶುಭಾಖ್ಯೆ ಪುಟ್ಟಿದಳ್
ಸುಲಲಿತನೀಲಕುಂತಳೆಯಪಾಂಗವಿನಿರ್ಜಿತಚಂದ್ರಿಕಾಭೆ ತಾಂ॥೨೯॥

ಮ॥ ವಿಲಸದ್ಭ್ರೂಲತೆ ಪದ್ಮನೇತ್ರೆ ದರಹಾಸಾಸ್ಯಾಬ್ಜೆ ಚಾಂಪೇಯ ಮಂ
ಜುಲನಾಸಾಪುಟೆ ಸಿಂಹಮಧ್ಯೆ ಕಲಹಂಸೀಯಾನೆ ಬಿಂಬೋಷೂಠೆ ಕೋ
ಕಿಲಮಾಧುರ್ಯಸುವಾಣಿ ಕಂಜಮೃದುಪಾದದ್ವಂದ್ವೆ ಸದ್ಯವ್ವನೋ
ಜ್ವಲದತ್ಯಂತಶೈಭಾಂಗಿ ವಿಷ್ಣೈಪದಭಕ್ತ್ಯಾಸಕ್ತೆ ತಾನೊಪ್ಪಿದಳ್ ॥೩೦॥

ಧನ್ಯಸ್ವರೂಪೆಯಾದಾ
ಕನ್ಯೆಯ ಸೌಂದರ್ಯಮಂ ಕುಶಂ ನೋಡಿ ಸ
ನ್ಮಾನ್ಯಂ ಮನದಲ್ಲಿರದೆ ವ
ದಾನ್ಯಂ ಮಹನೀಯಮಪ್ಪ ಮುದಮಂ ಪಡೆದಂ॥೩೧॥

ಪಂ॥ ಕುಶಂಗೆ ವಂಶದೇವನಾದ ಕುಂಜಪತ್ರನೇತ್ರನಂ
ವಿಶಾಲನೇತ್ರೆ ಕನ್ಯೆ ಕಂಡು ಸೇವೆಗೆಯ್ದಳಾಗಲಾ
ಸುಶೀಲದಲ್ಲಿ ವರ್ತಿಸುತ್ತುಮಾ ಕುಶಂ ಲವಾನ್ವಿತಂ
ವಿಶಂಕಟಂ ರಘೂದ್ವಹೀಂದ್ರಸತ್ಕಥೋರುಗಾನಮಂ॥೩೨

ಆ ರಾಮಪ್ರಿಯನಾದಾ
ಶ್ರೀರಾಮಾರಮಣನಗ್ರದೊಳ್ವಿರಚಿಸಿದಂ
ಧೀರಂ ರಘುವಂಶಕೆ ಕ
ರ್ತಾರಂ ತಾನಾಗಿ ಕುಶಕುಮಾರಕನೆಸೆದಂ॥೩೩॥

ವಚನ: ಅನಂತರದೊಳ್

ಚಂ॥ ಅಲಸಕಟಾಕ್ಷ ಸಂಯುತೆಯನಂಗದೊಳುದ್ಭವಮಾದ ಸದ್ವಿಲಾ
ಸಲಸದನಂಗದೇವತೆವೊಲಿರ್ಪಳನತ್ಯರುಣಾಧರೋಷ್ಠೆಯಂ
ಸುಲಲಿತಮಾಗಿಯಂಕುರಿಪುರೋರುಹಕುಟ್ಮಳೆಯಂ ಸುಕಾಂತಿ ಮಂ
ಜುಲೆಯನಿನಾನ್ವಯಂ ಕನಕಮಾಲೆನಿಯಂ ಮಿಗೆ ನೋಡಿಯಾ ಕುಶಂ॥೩೪॥

ಚಂ॥ ಕುವರಿಯ ಜಾತಜವ್ವನೆಯ ಸದ್ಗುಣ ರೂಪಕೆ ತಕ್ಕ ಕಾಂತನಂ
ಸವಿನಯನೊಲ್ದು ಯೋಚಿಸಿ ವಿಚಾರಿಸಿ ಕಾಣದೆ ತನ್ನ ಪದ್ಮ ಪ
ತ್ರವಿಮಲನೇತ್ರೆ ಪತ್ನಿಯೊಡನಂತುಱೆ ಚಿಂತಿಸಿ ರಾತ್ರಿಯಲ್ಲಿ ಪೆ
ರ್ಚುವ ವರನಿದ್ರೆಯೊಳ್ ಕನಸುಗಂಡನುದಾರನತೀವವಿಕ್ರಮಂ ॥೩೫॥

ವಚನ॥ ಅದೆಂತೆಂದೊಡೆ

ಮ॥ ಬಲಿ ಸೌಮಿತ್ರಿ ಸಮೇತ ರಾಮನನಿಳಾಸಂಜಾತೆಯಂ ಮತ್ತೆ ದೋ
ರ್ಬಲಶತ್ರುಘ್ನಪುರಸ್ಥನಾದ ಭರತಕ್ಷ್ಮಾಪಾಲನಂ ಕಂಡು ನಿ
ಶ್ಚಲಕೌತೂಹಲನಾಗಿ ಸಾನುಜಕುಶಂ ಸದ್ಭಕ್ತಿಯಿಂ ಜಾನಕೀ
ಲಲನಾಸಂಯುತರಾಘವಾಂಘ್ರಿಗೆ ನಮಸ್ಕಾರಂಗಳಂ ಮಾಡಿದಂ॥೩೬॥

ವಚನ:ತದನಂತರದೊಳ್

ತಾರಾಧಿಪಾನನಂ ರಘು
ವೀರಂ ಬಹುತಾಪಹಾರಿ ಹಾಸಜ್ಯೋತ್ಸ್ನಾ
ಸಾರಾಮಲವಚನಂಗಳಿ
ನೋರಂತಾ ಕುಶಧರಾಧಿಪಂಗಿಂತೆಂದಂ ॥೩೭॥

ಮ॥ ಎಲೆ ಪುತ್ರಾತಿಕುಶಾಗ್ರಧೀಕಲಿತಮಾಡಲ್ತಕ್ಕುದಸ್ಮತ್ಸುನಿ
ರ್ಮಲವಾಕ್ಯಂ ಹಿತಮಾಗಿ ಚಾರುತರ ಲಾವಣ್ಯಾಂಗಿಯಂ ಕನ್ಯೆಯಂ
ಕುಲವಂತಂ ಯದುಶೇಖರಾಖ್ಯನೆನಿಪೊರ್ವಂ ರಾಜಪುತ್ರಂ ಮಹೋ
ಜ್ವಲನಾರಾಯಣಭಕ್ತಿಮಂತನೆಸೆಗುಂ ಕೇಳಾ ಕುಮಾರಂಗೆ ನೀಂ ॥೩೮॥

ಈಯೆಂದಂ ರಘುನಾಥಂ
ತಾಯಾದ ಜನಕತನುಜೆ ಕುಶನಂ ಕರೆದೀ
ಯಾಯತಲೋಚನೆ ಬಯಸಿದೊ
ಡಾಯದೆ ನೀಂ ಸ್ತ್ರೀಧನಂಗಳಂ ಕುಡು ತನಯಾ ॥೩೯॥

ಪಿತೃದತ್ತಮಾದ ಧನಮದು
ಸುತೆಯರ ಪ್ರೀತಿಗೆ ನಿಧಾನಮೆನೆ ರಘುವಂಶೋ
ನ್ನತನಾಕ್ಷಣಮೆಚ್ಚರ್ತ
ಪ್ರತೆಮಂ ಸ್ವಪ್ನಮಂ ನಿಜಾಂಗನೆಗೊಱೆದಂ ॥೪೦॥

ಮ॥ ಕನಸಂ ಕೇಳ್ದು ವಿಕಾಸಚಾರುನಯನಾಂಭೋಜಾತೆಯಾಗುತ್ತಮಾ
ವನಿತಾರತ್ನ ಮಹಾಮುದಂಬಡೆದಳಂತಾನನ್ನೆಗಂ ವ್ಯೋಮದಿಂ
ಮುನಿವಂಶೇಂದ್ರ ರಿರಾತ್ತಭದ್ರಕುತುಕಸ್ವಾಂತಂ ಮಹಾಬೇಗದಿಂ
ಮನಮೊಲ್ದಾ ಯದುಶೇಖರಾಖ್ಯಜಣರಾಡಭ್ಯರ್ಣಮಂ ಪೊರ್ದಿದಂ ॥೪೧॥

ಆ ಯದುಶೇಖರನಾ ನಾ
ರಾಯಣಗಿರಿಯೊಳ್ ರಮೇಶನಂ ಪೂಜಿಸಿ ಶೋ
ಭಾಯತನಖಿಳಮುನಿಪಸಮು
ದಾಯಾವೃತನಿರ್ದನಾಂತು ಸಾಮ್ರಾಟ್ಪದಮಂ ॥೪೨

ಉ॥ ಆ ಯದುಶೇಖರೇಂದ್ರಪಿತೃ ಯಾದವಭೂಷಣನಾತ್ಮಜಂಗೆ ಸ
ಶ್ರೇಯದ ತದ್ಗುಣಾನುಕನ್ಯೆಯನೀಕ್ಷಿಪವೇಳೆಯಲ್ಲಿ  ಸಾ
ರ್ದಾಯಿಳೆಯಾಣ್ಮನಂ ಕರೆದು ರಾಮಜಕನ್ಯೆಯೆ ತದ್ಗುಣಕ್ಕೆ ತ
ಕ್ಕಾಯತನೇತ್ರೆಯೆಂದಱುಪಲಾನವನೀಶನಯೋಧ್ಯೆಗೆಯ್ದಿದಂ ॥೪೩॥

ಶಾ॥ ಕನ್ಯಾನ್ವೇಷಣಕಾರ್ಯಕಾಗಿ ಬಹುಭೂಪರ್ ಬಂದಯೋಧ್ಧಾಪುರ
ಕ್ಕನ್ಯೋನ್ಯಂ ಮಿಗೆ ಕೇಳ್ದು ಸತ್ಕುಶಲನಾಗಿರ್ಪ್ಪಾ ಕುಶಲೋರ್ವೀಶನಿಂ
ಕನ್ಯಾಲಾಭಮನೆಯ್ದಲಿಲ್ಲ ಜನನೀ ತಾತೋಕ್ತಿಯಿಂ ರಾಮಜಂ
ಧನ್ಯಂ ತಾಂ ಯದುಶೇಖರಂಗೆ ಸುತೆಯಂ ವೈವಾಹಮಂ ಮಾಡಿದಂ॥೪೪॥

ವಚನ: ಮತ್ತಾ ಕುಶಂ ತನುಜೆಗೆ ಬಳುವಳಿಯಂ ಕುಡಲುದ್ಯೋಗಿಸಿದನದೆಂತೆನೆ

ಮ.ಸ್ರ. ॥ ರಥಮಂ ನೂರಂ ಸಹಸ್ರೋರುತರಕರಿಗಳಂ ದ್ರವ್ಯಮಂ ಕೋಟಿಯಂ ಸು
ಪ್ರಥಿತಂ ಸೇವಾರ್ಥದಾಸೀ ತ್ರಿಶತಮನಯುತಾಶ್ವಂಗಳಂ ಕೊಟ್ಟನಾತಂ
ಪೃಥುವಕ್ಷೋಜಾತೆಗಾತ್ಮೋದ್ಭವೆಗೆ ನಿಯುತರತ್ನಂಗಳಂ ಮೋದದಿಂದಂ
ಪೃಥಿವೀನಾಥಂ ಕುಶಂ ಯೋಜನಶತಕ ಸುಸಸ್ಯೋರ್ವಿಯಂ ಶೀಘ್ರದಿಂದಂ॥೪೫॥

ಮ॥ ಬಳಿಕಾ ಕನ್ಯೆಯವನ್ನಿರೀಕ್ಷಿಸಿ ಕುಶಂಗಿಂತೆಂದಳುರ್ವಿಸುತಾ
ಮಳಗರ್ಭಾಂಬುಧಿಚಂದ್ರಂ ನೀನೊಸೆದು ಕೊಟ್ಟೀ ವಸ್ತುವಂ ಮನ್ಮನಂ
ಗೊಳಲಿಲ್ಲೆಂದೆನೆ ಸಾಲದೆಂಬ ಬಗೆಯಂ ಕಾಕುತ್ಸ್ಥವಂಶೋದ್ಭವಂ
ತಿಳಿದಿತ್ತಂ ಧನದಾಧಿಕಂ ದ್ವಿಗುಣಮಂ ಮತ್ತಾ ಕುಶೋರ್ವೀವರಂ ॥೪೬॥

ವಚನ: ಅನಂತರದೊಳ್

ಮ॥ ಎನಗೀ ವಸ್ತುಗಳಾಶೆಯಿಲ್ಲೆನಲದೇಂ ನಿನ್ನಿಷ್ಟಮೆಂದಾ ಕುಶಾ
ವನಿಪಂ ಕೇಳಲದೀವುದುಳ್ಳೊಡೆ ಮದೀಯಾಕಾಂಕ್ಷೆಯಂ ಪೇಳ್ವೆ ನಾ
ನೆನೆ ಪೇಳಿತ್ತಪೆನೆಂಬ ತಂದೆಗುಸುರ್ದಳ್ ಶ್ಯಾಮಾಂಗಿ ಕೇಳಾದೊಡಿಂ
ಘನರಾಮಾರ್ಚಿತಮಾದ ದೈವಧನಮಂ ತಾಂ ಬೇಡಿದಳ್ ಪ್ರೇಮದಿಂ ॥೪೭॥

ಚಂ॥ಅವನಿಜೆ ಪೇಳ್ದ ಬುದ್ಧಿಯನವಂ ಸ್ಮರಿಸುತ್ತೆ ದಿವಾಕರಾನ್ವಯಂ
ಸವಿಭವನಾ ಸುಮೂರ್ತಿಯುಮನಾದಿಯೊಳಿತ್ತುದನುಂ ವಿಲಾಸದಿಂ
ದವೆ ಕುಡಲಾ ನೃಪಾಲಕುಲಶೇಖರ ಯಾದವಪುಂಗವಂ ತದೀ
ಯ ವಿವಿಧ ಕನ್ಯಕಾಧಿಕಧನಾನ್ವಿತನಾಗಿ ಸುರಾತಿವಿಕ್ರಮಂ ॥೪೮॥

ವಿಪುಳಾಯೋಧ್ಯಾಪುರದಿಂ
ಸುಪವಿತ್ರಂ ಬರುತುಮಿರ್ಪಿನಂ ಮಧ್ಯದೊಳಂ
ತಪಹರಿಸಲ್ ಸ್ತ್ರೀರತ್ನಮ
ನುಪಾಯಮಂ ನೆನೆದು ದುಷ್ಟಭೂಪರ್ಪಡೆದರ್॥೪೯॥

ಮ.ಸ್ರ.॥ ಸಮರೋರ್ವೀದೀಪ್ತಮಾದಾ ಯದುತಿಲಕನ ತೇಜೋಗ್ಪಿಯಿಂ ದಗ್ಧ ಪಕ್ಷ
ಕ್ರಮದಿಂದಾದರ್ವಿಪಕ್ಷರ್ಶಲಭತೆಯನವರೂಪೊರ್ದಿದರೂಸಾಹಸಂಗೊಂ
ಡಮಳ ಶ್ರೀರಾಮಚಂದ್ರಾರ್ಚಿತನೆನಿಪಲಸದ್ದೇವನಂ ರಕ್ಷಿಸುತ್ತುಂ
ವಿಮಲಾಂಗಂ ಬಂದು ಲಂಕಾದಹನನಿರದೆ ದುಷ್ಟರ್ಕಳಂ ಕೊಂದನಾಗಳ್॥೫೦॥

ಚಂ॥ ಮುನಿಗಳಿರಲ್ಲಿಯೆಯ್ದುತಿರೆ ಪಾರಣೆಯಾದುದು ಮದ್ವಿಲೋಚನ
ಕ್ಕನುಪಮವಿಷ್ಣುವಾರ್ಗೆ ಸಲೆ ದೇವತೆಯಾತನ ಸುಪ್ರಸಾದದಿಂ
ದನಿಶಮವರ್ಗೆ  ಬರ್ಕುಮೆ ಪರಾಭವಮಾ ಯದುಶೇಖರಂ ಸುಕಾಂ
ಚನಚತುರಂತಯಾನದೊಳೆ ಮೂರ್ತಿಯನಿಟ್ಟು ಮನೋನುರಾಗದಿಂ ॥೫೧॥

ದಂಪತಿಗಳ ಮುಂಗಡೆಯೊಳ್
ಸೊಂಪೊಂದಿರೆ ದೇವನಂದಳಂ ಸಕಳಜನಂ
ಪೆಂಪುವಡೆದೆಸೆವ ಮಧುರೆಯ
ನಿಂಪಾಗಿರೆ ಪೊಕ್ಕುದಾಗಳಾತ್ಮವಿಲಾಸದಿಂ ॥೫೨॥

ವಚನ॥ ಮತ್ತಮಮಿತತೇಜಸ್ವಿಯಾದ ಶ್ರೀಮಹಾವಿಷ್ಣುವಿನ ಸಮಾಗಮಮುಮನುದ್ವಾಹಮಂಗಳತರವಾರ್ತೆಯುಮನಾ-
ಕರ್ಣಿಸಿಪುರನಿರ್ಗತವನಿತಾಜನನಿಕ್ವಣನ್ಮಣಿಕಂಕಣಗಣಝಣಝಣರಣಿತ ಸಮ್ಮಿಶ್ರಿತನೂಪುರಸಿಂಜಿತಂಗಳಿಂದವರನ್ಯೋ-
ನ್ಯಸಲ್ಲಾಪಂಗಳ್ತಿರೋಧನಮನೆಯ್ದುತಿರೆಯುಂ ಸುವರ್ಣಕೋಣಾಹತಿನಿರ್ಘೋಷೆತೋದ್ಯದ್ಭೇರಿಕುಹರ ಸಂಭ್ರಮಂಗಳಿಂ ಮೃದುಮೃದಂಗ ಶಂಖ ವೇಣು ವೀಣಾದ್ಯನೇಕವಾದ್ಯಹೃದ್ಯಧ್ವನಿಯುಂ ರ್ಬುರಿತಂಗಳಾಗೆಯುಮಾ ಮಹಾವಿಷ್ಣು ಸಮಾ-
ಗಮನೋತ್ಸಾಹಸಂಭ್ರಮಂಗಳ್ ಸಕಲ ದಿಕ್ತಟಂಗಳೊಳ್ ಕೇಳಲ್ಪಡುತಿರೆಯುಂ ವೈಕುಂಠಸೇವಾನಿರತಚತುರವೈತಾಳಿಕ-
ಕುಲೋದ್ಭವರ್ ಯಾದವರಾಘವವಂಶಸಂಭೂತಿಳಾಧೀಶವ್ರಾತಪ್ರಭಾವಂಗಳನುಘ್ಘಡಿಸುತ್ತಿರೆಯುಂ ಕಾಹಳಿಕಾಚಿನ್ಹನಿಕ್ವಣಮಿಳಿತಕಳಕಳಸ್ವನಭರಿತ ತತ್ಪುರಮಂ ಮಹೀಪತಿಯಾತ್ಮೀಯದಂಪತಿಗಳೊಡಗೂಡಿ ಜಗತ್ಪತಿಯಾದ ಮಹಾವಿಷ್ಣುವಂ ಪ್ರವೇಶಮಂ ಮಾಡಿಸಿದನಾ ಪ್ರಸ್ತಾವದೊಳ್

ಶಾ॥ ಆ ನಾರೀಮಣಿಗೂಡಿಯಾ ನೃಪತಿಯರ್ಥಿವ್ಯೂಹಮಂದಾರನಂ
ಧ್ಯಾನಾದ್ಯರ್ಚನೆಯಿಂದೆ ಪೂಜಿಸಿದನಾ ದೇವಪ್ರಸಾದಂಗಳಿಂ
ದಾನಂದಂಬಡೆದುತ್ಪ್ರಭಾವತೆಯನೆಯ್ದುತ್ತಿರ್ಪ ಸೌಭಾಗ್ಯಸಂ
ತಾನಂಬೆತ್ತಮಿತಾತ್ಮಪುತ್ರಸುಖಮಂ ತಾನೆಯ್ದಿದಂ ಮೋದದಿಂ॥೫೩॥

ವಚನ: ಅದಲ್ಲದೆಯುಮಿತ್ತಲ್

ಮ॥ಯದುವಂಶಕ್ರಮದಿಂದೆ ಭಕ್ತಸುರಭೂಜಂ ವಾಸಮಂ ಮಾಡಿದಂ
ಮುದದಿಂದಂ ವಸುದೇವಗೇಹದೊಳೆ ಶ್ರೀಮದ್ದೇವಕೀ ಗರ್ಭಮಂ
ಪದೆದಾತ್ಮೋದರವಿಶ್ವಧರ್ಶನಮನಾ ಗೋಪೀ ಪರಿಷ್ವಂಗಮಂ
ತ್ರಿದಶಾರಾತಿಮಹಾಬಲಂ ಯವನನಿಂದಾದಾಪರಾಭೂತಮಂ॥೫೪॥

ಮುಚುಕುಂದ ಮೋಕ್ಷಮಂ ಬ್ರ
ಹ್ಮಚರ್ಯಪಾಲನೆಯನನ್ಯಬಂಧಚ್ಛಿದಮಂ
ಪ್ರಚುರೋಲೂಖಲಬಂಧಮ
ನಚರಿತಪುತ್ರಾರ್ಥಯಾನಮಂ ಪರಿಕಿಸುತಂ॥೫೫॥

ವಚನ: ಮತ್ತಾ ಘಂಟಾಕರ್ಣರ ವಿಕಾರರೂಪಮೋಕ್ಷಮುಮಂ ನಿಜತನೂಜ ಪರಿಪಾಲನಮುಮಂ ಪರತನೂಭವರಕ್ಷಣಮುಮಂ ವಿರಾಟ್ ಸ್ವರೂಪಪ್ರಭಾವಮುಮಂ ಕಿರೀಟವರೂಥ ಸಾರತಿಸ್ಥಿತಿಯುಮನನಿರುದ್ಧ-
ಕೋಟೀರಕಲಾಪಿ ಕಲಾಪಧಾರಣಮುಮಂ ಸತ್ಯಪ್ರತಿಜ್ಞಾಪ್ರತಿಷ್ಠಾರೂಪತ್ವಮುಮಂ ನವನೇತಾಪಹರಣಮುಮಂ
ಸತ್ಯಾನಾಹತಮಹೈಶ್ವರ್ಯಮುಮಂ ಉಗ್ರಸೇನಸಾಮ್ರಾಜ್ಯನಿಯಾಮಕತ್ವಮುಮಂ ಬ್ರಹ್ಮ ರುದ್ರ ಶಕ್ರಾದ್ಯಮರಾರಾದನ-
ತ್ವಮುಮಂ ಕುಂತ್ಯಾದಿಗಳ ಸಾಷ್ಟಾಂಗನಮಸ್ಕಾರಂಗಳುಮನೇತತ್ಪೊರ್ವೋಕ್ತಮಾದಾಶ್ಚರ್ಯಚರಿತ್ರಂಗಳನೀಕ್ಷಿಸುತ್ತು-
ಮಾನಕದುಂದುಭಿಯ ಮಂದಿರದೊಳ್ ಶ್ರೀರಮಣಂ ನಿವಾಸಮಂ ಮಾಡಿದನೆಂದು ನಿರೂಪಿಸಿದ ದೇವಮುನಿಯ ಸುಧಾಸಾರವಚನಂಗಳಂ ಕೇಳ್ದು ಮಗುಳ್ದಾ ಮುನಿಗಳಿಂತೆಂದರದೆಂತೆಂದೊಡೆ

ಮ॥ ಎಲೆ ವಿಪ್ರೋತ್ತಮ ಸರ್ವಮುಂ ತಿಳಿಗುಮೆಮ್ಮಿಂ ಮುಂತಿದಂ ಪೇಳ್ ಮಹೋ
ಜ್ವಲಮಾಗಿರ್ಪನಿರುದ್ಧಮೌಳಿಗೆ ಲಸಚ್ಛ್ರೀಕೃಷ್ಣನಿಂ ಧಾರಣಂ
ನಲವಿಂ ಸಂಘಟಮಾದುದೆಂತೊಸೆದು ನೀನೆಯಾ ಮುನೀಂದ್ರರ್ಗೆ ಮಂ
ಗಳಮಪ್ಪಂತುಸುರ್ದು ಕಿರೀಟದಿತಿಹಾಸಂ ಖ್ಯಾತಮಪ್ಪಂತೆವೊಲ್॥೫೬॥

ವಚನ ॥ ಅದೆಂತೆಂದೊಡೆ

ಪೂರ್ವದೊಳಾ ಪ್ರಹ್ಲಾದಂ
ಗೊರ್ವತನೂಜಂ ವಿರೋಚನಂ ಮದದಿಂದಾ
ಸರ್ವೇಶನನಿಂಗಡಲೊಳ್
ದುರ್ವಿಷಯಾಸಕ್ತಿಯಿಂದೆಸೇವಿಸುತಿರ್ದಂ ॥೫೭॥

ವಚನ ॥ ಇಂತಿರ್ಪಿನಮೊಂದು ದಿನದೊಳ್

ಮ॥ ನುತ ಲಕ್ಷ್ಮೀಪತಿ ಯೋಗನಿದ್ರೆಯೊಳಿರಲ್ ಯೋಗೀಂದ್ರರೆಲ್ಲರ್ವಿನಿ
ರ್ಗತರಾಗಲ್ಪಿತನಿಂ ಪ್ರಭೂತತರ ಭಕ್ತ್ಯಾವೇಶದಿಂ ಪೊರ್ದಿಯಾ
ದಿತಿಜಂ ಮೆಲ್ಲನೆ ನೋಡುತಿರ್ಕೆಲನನಂತಃಪುರಂಬೊಕ್ಕು ದಿ
ವ್ಯತದುದ್ಯನ್ಮಣಿಮೌಳಿಯಂ ತ್ವರಿತದಿಂ ಕಳ್ದೊಯ್ದು ಪಾತಾಳಮಂ॥೫೮॥

ಪೊಕ್ಕೊಂದು ಗುಹೆಯೊಳಿರೆ ಪಾ
ಯ್ವಕ್ಕೆಯೊಳೆಚ್ಚರ್ತನಿತ್ತರದಿಂದಿರೆ ಸಹಿತಂ
ರಕ್ಕಸವಗೆಯಂ ಶೀಘ್ರದೆ
ಮೊಕ್ಕಳಮಾಗಿರಲೊಱಲ್ದು ಬಂದರ್ಭಕ್ತರ್ ॥೫೯॥

ಉತ್ಸಾಹ॥ ಪುಂಡರೀಕಪತ್ರದೀರ್ಘನೇತ್ರನಾದ ದೇವನಂ
ಕಂಡು ಕಾಣದಾ ಕಿರೀಟಮಂ ಸುಭಕ್ತಭೀತಿಯಂ
ಕೊಂಡು ವಿಹ್ವಲರ್ಕಳಾಗಿ ಪ್ರಶ್ನೆಗೆಯ್ಯಲಂತವ
ರ್ಗಂಡಜೇಶವಾಹನಿಂತು ಪೇಳ್ದನಾಗಳೊಲ್ಮೆಯಿಂ ॥೬೦॥

ಮ.ಮಾ॥ ನಿದ್ರೆಗೆಯ್ಯುತುಮಿರ್ದೆನಾಂ ತಿಳಿದಾತನೆಲ್ಲೆನೆ ಕೇಳುತುಂ
ಕದ್ರುಜಾಧಿಪತಲ್ಪ ಕಿಂಕರರೆಲ್ಲರೀಕ್ಷಿಸಿಯೆಮ್ಮೊಳಾರ್
ಕ್ಷುದ್ರತಸ್ಕರರಾಂ ಭವತ್ಪದ ಸಂಶ್ರಿತರ್ಮಿಗೆಯಿರ್ಪೆವಾರ್
ತ್ವದ್ರುಹರ್ಖಲನಾ ವಿರೋಚನನೊರ್ವನೆ ಸರಿ ಮಾಧವಾ ॥೬೧॥

ವಚನ: ಎಂದು ಮತ್ತಮಿಂತೆಂದರ್

ಮ॥ ಸತತಂ ಸೇವಿಸುವಲ್ಲಿಯುಂ ವಿಷಮಮಪ್ಪಂತೀಕ್ಷಿಸುತ್ತಿರ್ಪನಾ
ದಿತಿಜಂ ಮೆಯ್ಗರೆದೆಯ್ದಿದಂ ಬಗೆವೊಡಿಂದಾತಂ ಕಣಾ ತಸ್ಕರಂ
ಮತಮೇಂ ನಿಶ್ಚಯಮಿಂತಿದೆಂದೆಣಿಸಿ ಸರ್ವರ್ತಾರ್ಕ್ಷ್ಯನಂ ಕೂರ್ತು ಸ
ಮ್ಮತಮಪ್ಪಂತೊಱೆದರ್ ವಿಚಾರಿಸಿ ಖಗೇಶಂಗಣ್ಮದಪ್ಪಂತೆವೋಲ್॥ ೬೨॥

ಎಲೆ ಪಕ್ಷೀಂದ್ರ ಮದೀಯರೊಳ್ವಿವರಿಸಲ್ ನೀಂ ವೇಗವಂತಂ ಮಹಾ
ಬಲವಂತಂ ಪಟುಧೀರನಂತದಱಿನಾ ದೈತ್ಯೇಂದ್ರನಂಗೆಯ್ದು ಮಂ
ಜುಲಕೋಟೀರಮನಿಳ್ದುತಾರೆ ನಲವಂ ಕೈಕೊಂಡು ಶ್ರೀಮನ್ಮಹಾ
ಬಲಯುಕ್ತಂ ತ್ರಿಮುಹೂರ್ತದೊಳ್ತಿರುಗಿದಂ ಭೂಮ್ಯಾದಿಲೋಕಂಗಳಂ ॥೬೩॥

ಬಳಿಕಂ ಪಕ್ಷಿವರಂ ವಿರೋಚನನಾಪಾತಾಳಕೋಣಸ್ಥನಂ
ಮುಳಿದಂತೀಕ್ಷಿಸಿ ಯುದ್ಧಮಂ ನೆಗಳ್ದು ಪಕ್ಷೀಂದ್ರಂ ಮಹಾತೀಕ್ಷ್ಣಸಂ
ಕುಲಕೋಟಿಸ್ಫುಟವಕ್ತ್ರತುಂಡದೆ ಮಿಗಲ್ಪೊಯ್ದಾತನಂ ಕೊಂದು ಪ್ರೋ
ಜ್ವಲಕೋಟೀರಮನಿಳ್ದುಕೊಂಡು ನಭದೊಳ್ ಬಪ್ಪಲ್ಲಿ ಮುಂಬಟ್ಟೆಯೊಳ್ ॥೬೪॥

ವಚನ॥ ಅತ್ಯಂತನೀಲಮುಮಾಶ್ಚರ್ಯಕರಮುಮಾ ಬ್ರಹ್ಮಲೋಕವಿತತಮುಮಾದುದೊಂದು ಕಾಂತಿ ನಭಸ್ಥಳದೊಳೆಯ್ದುತಿರ್ಪ ವಿನತಾನಂದನನಿಂ ಕಾಣಲ್ಪಡೆ ವಿಸ್ಮಯಾವಿದ್ಧನೇತ್ರಂ ಖಗನಾಥಂ ಬಳಸಿ ನೋಡುತ್ತಿರೆ

ಮ.ಸ್ರ. ॥ ಬಳಿಕಂ ಸಂಶೋಭಿ ಬೃಂದಾವನತಟದೊಳೆ ಕರ್ಣಾಂತವಿಶ್ರಾಂತನೇತ್ರಂ
ವಿಳಸದ್ವ್ಯತ್ಯಸ್ತಪಾದಂ ವಿಕಚಕಮಲವಕ್ತ್ರಂ ಸುಪಿಂಛಾವತಂಸಂ
ತೊಳಗುತ್ತುಂ ತೋರ್ಪ ಜಾಂಬೂನದಕುಸುಮಲಸತ್ಕರ್ಣಪೂರಂ ಮಹಾಮಂ
ಜುಳಗುಂಜಾಹಾರ ಭಾಸ್ವದ್ಗಳನತಿಸುಭಗಂ ಮಲ್ಲಿಕಾಮಂದಹಾಸಂ॥೬೫॥

ಮ.ಸ್ರ.॥ ವಿಕಸನ್ನೀಲೋತ್ಲಲಾರಾಣ್ಯದ ರುಚಿಗುಪದೇಶಂಗಳಂ ಮಾಳ್ಪ ಗೋಪೀ
ನಿಕರಾಕ್ಷ್ಯಾಲೋಕನ ಶ್ಯಾಮಳತನುಸತತಂ ಮೋದದಿಂದೋಷ್ಠಪಾನಾ
ಧಿಕಭಾಸ್ವದ್ವಂಶರಂಧ್ರಾವೃತಕರತಳಸರ್ವಾಂಗುಳೀಪಲ್ಲವಂ ರಂ
ಜಕಮಾಗಿರ್ದರ್ರ್ಧದಂಷ್ಟ್ರಾಂಕುರತೃಣಯುತಗೋಬೃಂದಸಂತುಷ್ಟಚಿತ್ತಂ॥೬೬॥

ಸ್ರ॥ ಈಕ್ಷದ್ಗೋಪಾಲಪುತ್ರಪ್ರತತಿಪರಿವೃತಂ ಗಾನಪೀಯೂಷಸಾರಂ
ಸಾಕ್ಷಾದ್ಗೋಪಾಲನೊಪ್ಪುತ್ತಿರಲನುಪಮಸೌಂದರ್ಯನಂಶಕಿಣುತಾಗಳ್
ಪಕ್ಷೀಂದ್ರಂ ತಾಂ ದ್ವಿಲಕ್ಷಾರ್ಧವಿತತಪರಿಮಾಣಾಂಗನತ್ಯಂತಸಂಶೋ
ಭಿಬಕ್ಷೀರಾಂಬೋಧಿಭಾಸ್ವದ್ಧರಿಯಂ ಮಕುಟಮಂಶತಾಳ್ದು ಸಂತೋಷದಿಂದಂ॥೬೭॥

ಮ॥ ಬಿಡೆ ಗೋಪಾಲನ ಮಸ್ತಕಕ್ಕೆ ಸಮಮಾದತ್ತಾ ಕಿರೀಟಂ  ಸಮಂ
ತೊಡನೊಪ್ಪಿತ್ತದು ಬರ್ಹಿಪಿಂಛತತಿಯೊಳ್ ತಾನೊಂದಿ ಸಂತೋಷದಿಂ
ಕಡುವೇಗಂ ಪೃಥವೀತಳಕ್ಕಿಳಿದು ಗೋಪಾಲಂಗೆ ಸದಾಭಕ್ತಿಯಿಂ
ಪೊಡಮಟ್ಟಿಂಗಡಲಲ್ಲಿಗೆಯ್ದಿ ಹರಿಗೀ ವೃತ್ತಾಂತಮಂ ನಲ್ಮೆಯಿಂ॥೭೦॥

ಮುನಿಗಳ್ ವೈಷ್ಣವರೆಲ್ಲರಾಲಿಸುತಿರಲ್ ಪೇಳಲ್ಪಯೋರಾಶಿರಂ
ಜನತಲ್ಪಂ ಕರುಣಾಂಬುರಾಶಿ ವಿಲಸನ್ನಾರಾಯಣಂ ಕೇಳ್ದು ತಾಂ
ವಿನತಾನಂದನನಂ ಮುಗುಳ್ನಗೆಯಿನಾಗಳ್ನೋಡಿ ಸಂತೋಷಮಂ
ಡನನೃಗಿರ್ದನೆನಿಪ್ಪ ನಾರದನ ವಾಕ್ಯಂಗೇಳುತಾ ಯೋಗಿಗಳ್ ॥೭೧॥

ವಚನ॥ ಉತ್ಪುಲಕಿತರಾಗಿ ಸಂತೋಷಿತರಾಗಲವರಂ ಕೂರ್ತು ನಾರದಂ ಮಗುಳ್ದಿಂತೆಂದನದೆಂತೆನೆ

ತೀರ್ಥೀಕೃತಾಖಿಲಂ ಬಹು
ತೀರ್ಥಂಗಳ ಯಾತ್ರೆಗೆಯ್ದುತುಂ ಬಲರಾಮು
ಪ್ರಾರ್ಥಿಪ ಜನಮಾನಸದಿ
ಷ್ಟಾರ್ಥಪ್ರದ ಯಾದವಾದ್ರಿಯಂ ನೆಱೆಕಂಡಂ॥೭೨॥

ಮ॥ ಯದುಶೈಲಾಗ್ರಮನೇಱಿ ನೀಲವಸನಂ ಕಲ್ಯಾಣತೀರ್ಥಾಂತದೊಳ್
ಪದಪಿಂ ಸನ್ಮುನಿಸಂಚಯಂಬೆರಸಿ ಮಿಂದಾನಂದಮಂ ತಾಳ್ದಿ ಚಾ
ರು ದಯಾಂಭೋನಿಧಿ ರಾಮನೀಕ್ಷಿಸಿದನಾಗಳ್ ಜನ್ಮರೋಗಾಳಿಯಿಂ
ಪುದಿದಿರ್ಪರ್ಗಮೃತೋಪಮೌಷಧಮನಾ ನಾರಾಯಣಸ್ವಾಮಿಯಂ ॥೭೩॥

ಮ॥ ಮನದಿಂ ಜಾನಿಸಿ ವಾಕ್ಯದಿಂ ನುತಿಸಿ ನೇತ್ರದ್ವಂದ್ವದಿಂ ನೋಡಿ ಶ್ರೀ
ವನಿತೇಶಾಚ್ಯುತಮೂರ್ತಿಯಂ ಭಜಿಸಿ ಸಂಸಾರಾಬ್ಧಿಕಲ್ಲೋಲ ನೌ
ವೆನಿಪಾ ದ್ವಾರಕಿಯಂಸಮಂತು ಗಮಿಸೀ ವೃತ್ತಾಂತಮಂ ರಾಧಿಕಾ
ನನಪಂಕೇಜಸುಧಾರಥಂಗಱುಪಿದಂಶಶ್ರೀರೋಹಿಣೀನಂದನಂ॥೭೪॥

ಮ॥ ನಲವಿಂ ದಕ್ಷಿಣದಿಕ್ಕಿನಲ್ಲಿ ನಗಮೊಂದಿಕ್ಕುಂ ವಿಪಶ್ಚಿನ್ಮನೋ
ನಿಲಯಂ ತದ್ಗಿರಿಯಗ್ರದಲ್ಲಿ ಭವಸಂತಾಪಘ್ನ ನಾರಾಯಣಂ
ನೆಲಸಿರ್ಕುಂ ಮಿಗೆ ತತ್ಸ್ವರೂಪಮನೆಮದ್ವಂಶಾರ್ಚಿತಸ್ವಾಮಿಯೊಳ್
ಜಲಜಾತಾಂಬಕಂ ನೋಡಲಾನಿನಿತು ಭೇದಂಗಾಣೆನಾ ದ್ವಂದ್ವದೊಳ್॥೭೫॥

ವಚನ॥

ಇಂತೆಂದ ಬಲರಾಮಭಾಷಿತಮಂ ಕೇಳ್ದಾ ಯಾದವವಂಶಪುಂಗವಂ ಕೋಷ್ಣಂ ಮಗುಳ್ದಿಂತೆಂದನದೆಂತೆನೆ

ಚಂ॥ ಎಲೆ ಬಲಭದ್ರ ನೀಂ ನುಡಿಯಲಕ್ಕುಮೆಯೀಪರಿಯಿಂದೆ ವಾಕ್ಯಮಂ
ವಿಲಸಿತಮತ್ಕುಲಕ್ಕೆ ಧನರೂಪದ ಮೂರ್ತಿಗೆ ಸಾಮ್ಯಮುಂಟೆ ಪೇ
ಳಲಸದೆ ನೂತ್ನಮಾದ ನುಡಿ ಪುಟ್ಟಿತು ನಿನ್ನಿನೆನಲ್ ಹಲಾಯುಧಂ
ಬಲವದುದಾರನಾ ಹರಿಯನೀಕ್ಷಿಸುತಾಡಿದನೊಂದು ವಾಕ್ಯಮಂ॥೭೬॥

ಶಾ॥ ನಿನ್ನಂ ಸ್ಪರ್ಶಿಸಿ ಮಾಳ್ಪೆ ನಾಂ ಶಪಥಮಂ ನೋಡೆಂದೊಡಂತೊಲ್ದು ವಿ
ತ್ಪನ್ನರ್ಕೃಷ್ಣಬಲರ್ವಿವಾದಿಸುತುಮಾ ದೇವೇಶನಂ ಪುಷ್ಕರೋ
ತ್ಪನ್ನಪ್ರಸ್ಪುರಿತಾಕ್ಷನಂ ನಯದಿಂದಂ ನೋಳ್ಪೆವೆಂದಾಗಳಾ
ಸನ್ನಾಮರ್ ಪೊಱಮಟ್ಟು ಮುಂದಿರಿಸಿಕೊಂಡಾತ್ಮಾನ್ವಯಾಧೀಶ್ವರಂ ॥೭೭॥

ಶಾ॥ ಎಲ್ಲಿರ್ಪಂ ಕಮಲಾಲಯಾಸಹಿತಮಾ ನಾರಾಯಣಂ ತನ್ನಗ
ಕ್ಕುಲ್ಲಾಸಂದಳೆದೆಯ್ದಿಯಾ ಯದುಗಿರೀಂದ್ರಸ್ಥಾಗ್ರದೊಳ್ ಸ್ವಾನ್ವಯ
ಪ್ರೋಲ್ಲೀಲಾಪದದೇವನಂ ನಿಲಿಸಿದರ್ತದ್ಯುಗ್ಮದೊಳ್ ಭೇದಮಂ
ಫುಲ್ಲಾಬ್ಜಾಕ್ಷಬಲರ್ ಪರಾಮರಿಸುತುಂ ಕಾಣರ್ ಕಲಾಮಾತ್ರಮಂ ॥೭೮॥

ಮ॥ ಬಳಿಕೀರ್ವರ್ಗೆ ಪ್ರಶಾಂತಮಾಗೆ ಕಲಹಂ ವೃಷ್ಣ್ಯಾನ್ವಯೇಂದ್ರರ್ ಮುದಂ
ದಳೆದನ್ಯೋನ್ಯ ಸುಸಂಗದಿಂದೆ ವಿಭವಾದಿತ್ಯೋರ್ಜಿತಾಹರ್ನಿಶಂ
ಗಳೊಳಾ ಮೂರ್ತಿಗಳಂ ಬಲಾಚ್ಯುತರೆ ಸಾಕ್ಷಾತ್ಕಾರಮಂ ಮಾಡೆ ಮ
ತ್ತೆ ಲಸದ್ಯಾದವರೆಲ್ಲರುಂ ಭಜಿಸಿದರ್ ತಚ್ಛೈಲಮಂ ಮೋದದಿಂ ॥೭೯॥

ಮ॥ ಎಲೆ ವಿಪ್ರೇಂದ್ರರಿರಾ ಮಹಾದ್ರಿ ಮೊದಲೊಳ್ ನಾರಾಯಣೋರ್ವೀಧ್ರಮೆಂ
ಬ ಲಸನ್ನಾಮದಿನೊಪ್ಪುತಿರ್ದು ಬಳಿಕಿಂತೀ ಯಾದವರ್ ಸೇವಿಸಲ್
ವಿಲಸದ್ಯಾದವಶೈಲಮೆಂಬ ಪೆಸರಂ ತಾಳ್ದೀಶಧರಾಭಾಗದೊಳ್
ಸಲೆ ಪ್ರಖ್ಯಾತಮದಾಗಿ ಕಣ್ಗೊಳಿಕುಮೀಗಳ್ ನೋಡಲಾಶ್ಚರ್ಯದಿಂ॥೮೦॥

ನಾರಾಯಣನ ಸಮಾಗಮ
ದೀರುಚಿರ ಕಥಾನುಸರಣೆಯಂ ಭಕ್ತಿಯಿನಾಂ
ತಾರೈದು ಕೇಳ್ವ ಪೇಳ್ವರ್
ಭೂರಿಗುಣಾಭರಣಧನಿಕರಕ್ಕುಂ ತಥ್ಯಂ ॥೮೧॥

ಪಿತ್ರಾದ್ಯುತ್ತಾರಕರಂ
ಪತ್ರಿರಥಾಧೀಶಗಮನಭಕ್ತ್ಯನ್ವಿತರಂ
ಚಿತ್ರತರ ಧರಮಪರರಂ
ಪುತ್ರರನವರೆಯ್ದೆ ಪಡೆಗುಮೆಲೆ ಮುನಿಗಳಿರಾ ॥೮೨॥

ಆ ಕನಕಮಾಲಿನಿಗೆ ಸದೃ
ಶಾಕಾರಂಬೆತ್ತ ಕನ್ಯೆಯಂ ಪಡೆವರ್ ಭೂ
ಲೋಕಾನುಭವದ ಕಡೆಯೊಳ್
ಶ್ರೀಕಾಂತನ ಪರಮಪದಮನೊಳ್ಪಿಂ ಲಭಿಪರ್ ॥೮೩॥

ಮ॥ ಬಹುಭಾಷಾತತಿಯಿಂ ಪ್ರಯೋಜನಮದೇಂ ಪೇಳ್ವಾಲಿಪರ್ಗಾವಗಂ
ಸ್ಪೃಹೆಯಾಗಿರ್ಪ ಸಮಸ್ತ ಭಾಗ್ಯಮಿನವಂಶೋದ್ಭೂತನಾದಾ ರಘೂ
ದ್ವಹ ಕೃಷ್ಣಾಮಳ ಸತ್ಕಟಾಕ್ಷದೊದವಿಂದಂ ಪೆರ್ಚುಗುಂ ಮತ್ತವ
ರ್ಗಹಿತರ್ ನಾಶಮನೊಂದುಗುಂ ಭಯಮನಾಂಪರ್ ದಾನವಾಧೀಶ್ವರರ್॥೮೪॥

ಮ.ಸ್ರ. ॥ ಸುರರೆಲ್ಲರ್ ವಂದಿಪರ್ ಸಂತತಮವರ್ಗುಪಚಾರಂಗಳೇ ಮಾಡಲಕ್ಕುಂ
ಸರಿಮಾಡಲ್ ತಕ್ಕುದಲ್ತಿಂತವರ್ಗಿರದಪಚಾರಂ ಸಮಂತೊರ್ಮೆ ಸಮಂತೊರ್ಮೆ ಯೋಗೀ
ಶ್ವರರಿಪ್ಪಂತ್ತೊಂದು ಪೂರ್ವಾಪರಪಿತೃಗಳನುದ್ಧಾರಣಂಗೆಯ್ದಪರ್ ಬಂ
ಧುರಸತ್ಕರ್ಮಂಗಳಿಂದೀ ವಿಧದೆ ಸುಖಿಸುವರ್ ವಿಷ್ಣುಪದ್ಭಕ್ತಿಯಿಂದಂ ॥೮೫ ॥

ಗಿರಿಕುಲಶೇಖರಮುನ್ನತ
ವರಕಾಂಚನರಜತಮುಖ್ಯಧಾತುಗಳಿಂ ವಿ
ಸ್ಫುರಿತ ಮನೋಹರ ಶೃಂಗೋ
ತ್ಕರಸಂಯುತಮಾದ ಯಾದವೋರ್ವೀಧರದೊಳ್॥೮೬॥

ಸಲೆಯೆಮ್ಮನುತ್ಸುಕರನೆಸ
ಗಲಾದಿಯೊಳ್ವೀತ ವಿರಹಮಾಗಿಯೆ ಸತತಂ
ವಿಲಸದ್ವಿಷ್ಣುವಿನುಭಯಾ
ಮಲತರ ದಿವ್ಯಸ್ವರೂಪಮುಂ ಪಸರಿಸುಗುಂ॥೮೭॥

ಗದ್ಯ : ಇದು ವಿನಮದಮರವರ ಸರಸಿಜಭವಭವಮುಖಸುರಸಮುದಯ ಸುರುಚಿರ
ಮಕುಟನಿಕರಖಚಿತಮಣಿನಿಚಯರುಚಿಕಲಿತ ಯದೈಗಿರಿಸದನ ತಿರೈನಾರಾ
ಯಣಮೃದುಪದಲಲಿತಜಲರೈಹಜನಿತ ಮಕರಂದರಸಾಸ್ವಾದನನಿರತ
ಮತ್ತಮಧುಕರಾಯಮಾನ ಬಿರುದಂತೆಂಬರಗಂಡ ಯದುಕುಲ
ಶರಧಿರಾಕಾಸುಧಾಕರನಾದ ಚಿಕ್ಕದೇವಮಹಾರಾಯನ
ಕರುಣಾಕಟಾಕ್ಷಾವಲೋಕನಮುದಿತ ಚಿಕ್ಕುಪಾಧ್ಯಾಯ
ಪ್ರೇರಿತ ಕವಿತಿಮ್ಮ ವಿರಚಿತ ಕರ್ಣಾಟಕ
ವಚನರಚನೆಯ ಯಾದವಗಿರಿ ಮಹಾತ್ಮ್ಯೆಯೊಳ್
ಬ್ರಹ್ಮದೇವಾರ್ಚನಾದಿ ವಿಗ್ರಹಂ ರಘುವಂಶಕ್ಕೆ
ಸಾರ್ದು ಯದುಶೈಲದೊಳ್ ಪ್ರತಿಷ್ಠೆಯಾದ
ಕಥಾವಿವರ್ಣನಂ ಸ್ವಾಮಿಗೆ ಕಿರೀಟಂ
ಪೊರ್ದಿದ ಕಥಾವಿವರ್ಣನಂ
ದಶಮಾಶ್ವಾಸಂ ಸಮಾಪ್ತಂ.

ಚಿರಋಣಿ
ಸಂಪಾದಕರು:
ಎಂ.ಪಿ. ಮಂಜಪ್ಪ ಶೆಟ್ಟಿ.
ಪ್ರಕಾಶನ:
ಕನ್ನಡ ಅಧ್ಯಯನ ಸಂಸ್ಥೆ.  
ಮೈಸೂರು ವಿಶ್ವವಿದ್ಯಾನಿಲಯ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ