ಯಶೋಧರ ಚರಿತೆ
ಜನ್ನ
ಯಶೋಧರ ಚರಿತೆಯ ಕಥಾಸಾರ.
ಮಾರಿದತ್ತ ರಾಜನು ಸಕಲ ಸುಖಕ್ಕೆ ಜನ್ಮಭೂಮಿ ಎನಿಸಿದ ರಾಜಪುರವನ್ನು ರಾಜಧಾನಿ ಮಾಡಿಕೊಂಡು ಅಯೋಧ್ಯಾದೇಶವನ್ನು ಆಳು ತ್ತಿರುತ್ತಾನೆ.ಆ ಊರಿನ ಪಾಪಕಳಾಪಂಡಿತೆ ಚಂಡಮಾರಿದೇವತೆಗೆ ಪ್ರತಿ ಚೈತ್ರ ಆಶ್ವಿಜಗಳಲ್ಲಿ ಜಾತ್ರೆ ನಡೆದು ಪಶುಬಲಿ ನರಬಲಿ ಬೀಳುತ್ತದೆ. ಒಮ್ಮೆ ಚೈತ್ರ ಜಾತ್ರೆಯೊಂದರಲ್ಲಿ ದೊರೆಯ ಅಪ್ಪಣೆಯಂತೆ ಮನುಷ್ಯಯುಗಳಕ್ಕಾಗಿ ಅರಸುತ್ತ ಚಂಡಕರ್ಮ ತಳವಾರನು ಕಿರುವರೆಯದ ಶುಭಲಕ್ಷಣದ ಅಣ್ಣ ತಂಗಿಯರಿಬ್ಬರನ್ನು ಹಿಡಿದುಕೊಂಡು ಹೋಗುತ್ತಾನೆ. ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಚರಿಗೆಗೆ ಹೊರಟವರು.ಅನ್ವರ್ಥನಾಮರಾದ ಅಭಯರುಚಿ ಅಭಯಮತಿಎಂಬ ಆ ಅರಸು ಮಕ್ಕಳಿಬ್ಬರೂ ಸಾವಿಗಂಜದೆ ಒಬ್ಬರನ್ನೊಬ್ಬರು ಸಂತೈಸುತ್ತ ಹಸಿದ ಕೃತಾಂತನ ಬಾಣಸುವಿನಂತಿದ್ದ ಮಾರಿಯ ಮನೆಯನ್ನು ನಿಶ್ಚಿಂತೆಯಿಂದಹೊಗುತ್ತಾರೆ.ಭೈರವ ರೂಪನಾದ ಮಾರಿದತ್ತನು ಆ ಲಲಿತಾಕಾರರಾದ ಧೀರ ಕುಮಾರರ ರೂಪಿಂಗೆ ಠಕ್ಕುಗೊಂಡು ನಿಲ್ಲುತ್ತಾನೆ. ತಲೆಹೊಯಿಸಿಕೊಳ್ಳುವುದಕ್ಕೆ ಮೊದಲು ದೊರೆಯನ್ನು ಹರಸಬೇಕೆಂದು ಜನರು ಆ ಮಕ್ಕಳಿಗೆ ಹೇಳಲು, ಮಂದರ ಧೀರನಾದ ಅಭಯರುಚಿ " ನೆರ್ಮಲ ಧರ್ಮದಿಂದ ಧರೆಯನ್ನು ಪಾಲಿಸು" ಎಂದು ಹರಸುತ್ತಾನೆ.
ಆ ಪುಣ್ಯವಚನವನ್ನು ಕೇಳಿದೊಡನೆಯೇ ಮಾರಿದತ್ತನ ಎತ್ತಿದ ಕೈ ಹೊಡೆಯದೆ ಕೆಳಕ್ಕಿಳಿಯುತ್ತದೆ. ಕಿತ್ತ ಕರವಾಳಿನ ತನಗೂ ಮೃತ್ಯುವಿನಂತಿದ್ದ ಮಾರಿಗೂ ಬೆದರದೆ ಅರ್ತಿಯನ್ನೇ ನುಡಿದ ಆ ಧೀರರ ವೃತ್ತಾಂತವನ್ನು ಕೇಳುತ್ತಾನೆ. ತಮ್ಮ ನಿರ್ಮಲ ಚರಿತ್ರೆ ಧರ್ಮಪರರಿಗಲ್ಲದೆ ರುಚಿಸದೆಂದೂ, ಆ ಮಾತು ಬಿಟ್ಟು ತನ್ನ ಮುಂದಿನ ಕೆಲಸವನ್ನು ಮಾಡಬೇಕೆಂದೂ ಅಭಯರುಚಿ ಹೇಳಲು, ದೊರೆ ಮತ್ತೊಮ್ಮೆ ಕೈಮುಗಿದು ಬೇಡುತ್ತಾನೆ. ದಯೆಯಲ್ಲಿ ನೆಲೆಗೊಳಿಸಿದ ಆ ದೊರೆಯ ಮನಸ್ಸನ್ನು ಕಂಡು, ಅವನಿಗೆ ಕಾಲಲಬ್ಧಿ ಸಂದಿತೆಂದು ತಿಳಿದು ಅಭಯರುಚಿ ತಮ್ಮ ಕಥೆಯನ್ನು ಹೇಳುತ್ತಾನೆ.
ಯಶೌಘ ಅವಂತಿದೇಶದ ಉಜ್ಜಯಿನೀಪುರದ ಅರಸು. ಅವನ ಮಡದಿ ಚಂದ್ರಮತಿ. ಅವರ ಮಗ ಯಶೋಧರ. ಅವನ ಮನಃಪ್ರಿಯೆ ಅಮೃತಮತಿ. ಯಶೌಘ ಒಮ್ಮೆ ಕನ್ನಡಿಯಲ್ಲಿ ತಲೆನರೆ ಕಂಡು ನಿರ್ವೇಗಗೊಂಡು ಮಗನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗುತ್ತಾನೆ. ಯಶೋಧರ ಅಮೃತಮತಿಯರು ಖಚರ ದಂಪತಿಗಳಂತೆ ಕಂಗೊಳಿಸಿ ವಿಹರಿಸುತ್ತಿರುತ್ತಾರೆ. ಒಮ್ಮೆ ಆ ಹೃದಯಪ್ರಿಯರು ಸೆಜ್ಜೆಮನೆಯ ಮಂಚದಮೇಲೆ ಮಲಗಿರುವಾಗ ನಲ್ ನಿಶೆಯ ನಿಶ್ಶಬ್ದತೆಯಲ್ಲಿ ಅಮೃತಮತಿಗೆ ಇನಿದನಿಯೊಂದು ಕೇಳಿಬರುತ್ತದೆ. ಪಕ್ಕದ ಗಜಶಾಲೆಯ ಮಾವಟಿಗನು ತನ್ನ ವಿನೋದಕ್ಕೆ ಹಾಡಿಕೊಳ್ಳುತ್ತಿದ್ದ. ಆ ಹಾಡಿನಿಂದ ಅಮೃತಮತಿಯ ನಿದ್ದೆ ತಿಳಿಯುತ್ತದೆ. ನಿದ್ದೆ ತಿಳಿದು ಆಲಿಸಿ, ಅರಸಿ ರಾಗದ ಸವಿಗೆ ಒಳ ಸೋತು, ಗೀತೆ ಮುಟ್ಟಿದ ಮನವನ್ನೇ ತೋಟ್ಟನೆ ಪಸಾಯದಾನ ಕೊಟ್ಟುಬಿಡುತ್ತಾಳೆ. ಅತಿ ನೂತನ ಗೀತದ ರಾಗಗಳು ಒಂದರಮೇಲೊಂದು ಕಿವಿಗೆ ಸೊದೆಯೆರೆಯುತ್ತಿರಲ, ರಾಣಿಯ ರಾಗ ಕೆರಳಿ ಅವನನ್ನು ನೋಡುವ ಕೂಡುವ ಚಿಂತೆ ಕಡಲುವರಿಯುತ್ತದೆ. ಬೆಳಗಾಗುವುದೇ ತಡ ತನ್ನ ಮನದ ಕೆಳದಿಗೆ ಮನಬಿಚ್ಚಿ ಹೇಳಿ ಅವಳನ್ನು ಗೀತದ ಕಣಿಯನಲ್ಲಿಗೆ ಕಳಿಸುತ್ತಾಳೆ. ಅವಳು ಹೋಗಿ ಒಬ್ಬ ಅಷ್ಟವಂಕನನ್ನು ನೋಡಿ ಹೇಸಿ, ವಿಧಿಯನ್ನು ಬೈದಿಡುತ್ತಾಳೆ. ಮಾತಾಡದೆಯೆ ಮರಳುತ್ತಾಳೆ. ಕೆಳದಿಯ ದಾರಿಯೇ ಕಣ್ಣಾಗಿ ನಿಂತಿದ್ದ ರಾಣಿಯ ಬಳಿ ಬಂದು " ಇಂಥ ಕಾಮದೇವನನ್ನುಎಲ್ಲಿ ಹುಡುಕಿ ಒಲಿದೆ? " ಎಂದು ವ್ಯಂಗವಾಗಿ ನುಡಿಯುತ್ತಾಳೆ. ಕಾಮದ ಕೆರಳಿನಿಂದ ಮರುಳುಮತಿಯಾದ ರಾಣಿ ಆ ವ್ಯಂಗ್ಯ ತಿಳಿಯಲಾರದೆ ನಲಿದು ನೂತನ ನಲ್ಲನ ಚೆಲುವನ್ನು ಕೇಳಲು ತವಕಿಸುತ್ತಾಳೆ. ಅಷ್ಟವಂಕನ ವಿಕಾರ ವರ್ಣನೆಯನ್ನು ಕೇಳಿ ಪುಳಿಂದನ ಕಣೆಗಟ್ಟಿ ನಿಂತ ವನಹರಿಣಿಯಂತೆ ನಿಶ್ಚೇಷ್ಟಳಾಗುತ್ತಾಳೆ. ಆದರೂ, ಕೈಮೀರಿದ ಕಾಮೋದ್ರೇಕದ ಭರದಿಂದ ತಪ್ಪಿಸಿಕೊಳ್ಳಲಾರದವಳಾಗಿ, ಪೊಲ್ಲಮೆಯೆ ಲೇಸು, ನಲ್ಲರ ಮೆಯ್ಯೊಳೆಂದು ಮರುಗಳಿಗೆಯೇ ಸಮಾಧಾನ ತಂದುಕೊಳ್ಳುತ್ತಾಳೆ. ದೂತಿಗೆ ಲಂಚ ಕೊಟ್ಟು ಮಾವಟಿಗನನ್ನು ಹೊಂದಿಸಿಕೊಂಡು ಹಗಲಿರುಳೂ ತನ್ನ ಬಿಡುಹೊತ್ತನ್ನೆಲ್ಲ ಅವನಲ್ಲಿಯೇ ಕಳೆಯುತ್ತಿರುತ್ತಾಳೆ. ಬೇವನ್ನು ಮೆಚ್ಚಿದ ಕಾಗೆಗೆ ಮಾವು ಇಳಿದಾಗುವಂತೆ,ಅಮೃತಮತಿಗೆ ಬರುಬರುತ್ತ ಯಶೋಧರನಲ್ಲಿ ಅನುರಾಗ ಬತ್ತುತ್ತದೆ. ಇದರ ಮರ್ಮವನ್ನು ತಿಳಿಯಬೇಕೆಂದು ದೊರೆ ಒಂದಿರುಳು ನಿದ್ದೆ ಬಂದವನಂತೆ ಮಲಗಿರಲು, ರಾಣಿ ಮೆಲ್ಲನೆ ತೋಳ ಸೆರೆಬಿಡಿಸಿಕೊಂಡು ಜಾರನಲ್ಲಿಗೆ ನುಸುಳುತ್ತಾಳೆ. ಅವಳು ಅರಿಯದಂತೆ ಅರಸನೂ ಬೆನ್ನ ಹಿಂದೆಯೇ ಕತ್ತಿಹಿರಿದು ಹೋಗುತ್ತಾನೆ. ಅಮೃತಮತಿ ತಡಮಾಡಿದ್ದಕ್ಕೆ ಅಷ್ಟವಂಕನು ಮುಳಿದು ಕಲಹಟಸಕ್ಕೆ ಗಿಡುಗ ಎರಗುವಂತೆ ಎರಗಿ ಬಡಿಯುತ್ತಾನೆ. ರಿಣಿ ಅವನ ಕಾಲಮೇಲೆ ಬಿದ್ದು ಹೊರಳಿ" ಪಾತಕಿ ದೊರೆಯಿಂದ ತಡವಾಯಿತು; ನೀನುಳಿದರೆ ಸಾಯುವವಳು ನಾನು, ಮಿಕ್ಕ ಗಂಡಸರು ಸಮಸೋದರರು ನನಗೆ" ಎಂದು ತಿಳಿಸಿ ಸಮಾಧಾನ ಮಾಡುತ್ತಾಳೆ. ದೊರೆಯ ಮನ ಕನಲಿ ಒಡನೆಯೇ ಇಬ್ಬರನ್ನೂ ಸೀಳಿಬಿಡಬೇಕೆಂದು ಕೈಯ ಕತ್ತಿ ನಿಮಿರುತ್ತದೆ. ಆದರೆ ಮರುಗಳಿಗೆಯೇ ಧೃತಿಗೊಂಡು ಆ ಹುಳುಕರನ್ನು ಹೊಡೆಯಲು ಹೇಸಿ ಸುಮ್ಮನೆ ಹಿಂದಿರುಗಿ ಬಂದು ಮಲಗಿಕೊಳ್ಳುತ್ತಾನೆ. ರಾಣಿಯೂ ಬಂದು ಮುನ್ನಿನಂತೆ ಪಕ್ಕದಲ್ಲಿ ಮಲಗಿಕೊಳ್ಳುತ್ತಾಳೆ. ಬೆಳಗ್ಗೆ ಎದ್ದು ದೊರೆ ಸಂಸಾರಕ್ಕೆ ಬೇಸತ್ತು ತೊರೆದು ಹೋಗಲು ತೀರ್ಮಾನಿಸುತ್ತಾನೆ.ರಾಣಿ ಎದ್ದೊಡನೆ ದೊರೆ ನಗೆ ನುಡಿಯ ನೆವವನ್ನು ತೆಗೆದು ನೈದಿಲೆ ಹೂವಿಂದ ಅಮೃತಮತಿಯನ್ನು ಇಕ್ಕುತ್ತಾನೆ. ಅಂದು ಅಷ್ಟವಂಕನ ಬಾರೇಟು ತಿಂದು ಉಳಿದ ಆ ಸುಕುಮಾರಿ ಇಂದು ಆ ಹೂವೇಟಿಂದ ಮೂರ್ಛೆಹೋಗುತ್ತಾಳೆ.ಅವಳ ಅಣಕಕ್ಕೆ ಅಸಹ್ಯಿಸಿ"ಅಯ್ಯೋ ! ಅಂದಿನ ಸಾವು ದೈವದಿಂದ ತಪ್ಪಿತು; ಇಂದು ನೈದಿಲೆಸಾವಿಗಾಯ್ತು " ಎಂದು ಅರಸು ಕೊಂಕಿ ನುಡಿಯುತ್ತಾನೆ. ತನ್ನ ಗುಟ್ಟು ಬಯಲಾದ್ದನ್ನು ತಿಳಿದು ರಾಣಿ ಮರುಮಾತಾಡದೆ ಬೇಸತ್ತಂತೆ ಇದ್ದು ಬಿಡುತ್ತಾಳೆ.
ಇತ್ತ, ದೊರೆ ಬಗೆ ಕದಡಿ ನೆಲೆ ಕಾಣದೆ ತಾಯ ಬಳಿಗೆ ಹೋಗುತ್ತಾನೆ. ಮಗನ ನೀರೋಡಿದ ಮುಖ ಕಂಡು ತಾಯ ಮನಸ್ಸು ಬತ್ತಿದ ನೀರ ಮೀನಂತೆ ಮರುಗಿ ಕಾರಣ ಕೇಳುತ್ತಾಳೆ. ರಾತ್ರಿ ಕನಸಿನಲ್ಲಿ ಹೊಂದಾವರೆಕೊಳದ ಹಂಸ ಕನಲಿ ಆವಲುಗೊಳದಲ್ಲಿ ನಲಿದದ್ದನ್ನು ಕಂಡೆನೆಂದು ಹೇಳಿ ದೊರೆ ನಿಜನುಡಿಯಲಾರದೆ ಇರುಳು ನಡೆದದ್ದನ್ನು ಕನಸಿನ ನೆವದಿಂದ ಮರಸುತ್ತಾನೆ. ಮಗನೊಂದು ನೆನೆದರೆ ತಾಯೊಂದು ನೆನೆಯುತ್ತಾಳೆ. ದುಃಸ್ವಪ್ನದ ಶಾಂತಿಗಾಗಿ ದೇವಿಗೆ ದಾವಣಿಗುರಿಯನ್ನು ತರಿದು ಒಪ್ಪಿಸಬೇಕೆಂದು ತಾಯಿ ಹೇಳಲು, ಮಗ ಕಿವಿ ಮುಚ್ಚಿಕೊಳ್ಳುತ್ತಾನೆ. ವಧೆ ಹಿತವಾಗದು, ಜೀವದಯೆ ಜೈನಧರ್ಮ ಎಂದು ಎಷ್ಟು ಹೇಳಿದರೂ ತಾಯಿ ಕೇಳದೆ, ಕೊನೆಗೆ ಹಿಟ್ಟಿನ ಕೋಳಿಯನ್ನಾದರೂ ಬಲಿ ಕೊಡಬೇಕೆಂದೂ ಇಲ್ಲದಿದ್ದರೆ ತಾನೇ ದೇವಿಗೆ ಬಲಿಬೀಳುವುದಾಗಿಯೂ ಹೇಳಿ ಮಗನನ್ನು ಪೀಡಿಸುತ್ತಳೆ. ತಾಯ ಮೋಹದಿಂದ ಮಗ ಒಪ್ಪಿ ಮಾನೋಮಿಯ ಮುಂದಿನ ಭೌಮಾಷ್ಟಮಿಯಲ್ಲಿ ಹಿಟ್ಟಿನ ಕೋಳಿಯೊಂದನ್ನು ದೇವಿಗೆ ಬಲಿಯಿಡುತ್ತಾನೆ. ಆ ಹಿಟ್ಟಿನ ಕೋಳಿಯನ್ನು ಆಶ್ರಯಿಸಿಕೊಂಡಿದ್ದ ಬೆಂತರನೊಂದು ಕೋಳಿಯ ತಲೆ ಚಿಗಿದೊಡನೆಯೆ ಕು ಕ್ಕೂ ಕೂ ಎಂದು ಕೂಗಿಕೊಂಡು ಹೋಗುತ್ತದೆ.
ಕೂಗಿ ಕರೆವ ದುರಿತಗಳ ಬಲ್ಲುಲಿಯಂತೆ ಇದ್ದ ಆ ವಿಕಾರ ಕೂಗನ್ನು ಕೇಳಿ ದೊರೆ ದಿಗಿಲುಬಿದ್ದು, ವಿಧಿವಿಲಾಸವರಿಯದೆ,
ಮನೆಗೆ ಬರುತ್ತಾನೆ. ಬಂದು ಸಂಸಾರ ತೊರೆದು ಮಗ ಯಶೋಮತಿಗೆ ಪಟ್ಟಕಟ್ಟಿ ಕಾಡಿಗೆ ಹೋಗಲು ಅನುವಾಗುತ್ತಾನೆ.ಅದನ್ನರಿತು ಮಾಯಾಂಗನೆ ಅಮೃತಮತಿ ಹೂವಿನ ಸೌರಭದಂತೆ ತಾನೂ ಗಂಡನ ಹಿಂದೆ ಹೋಗುವುದಾಗಿ ತಿಳಿಸಿ, ಹೋಗುವ ಮೊದಲು ಎಲ್ಲರೂ ತನ್ನರಮನೆಯಲ್ಲಿ ಔತಣವುಂಡು ಹೋಗಬೇಕೆಂದು ಗಂಡನನ್ನೂ ಅತ್ತೆಯನ್ನೂ ಒಪ್ಪಿಸುತ್ತಳೆ. ಔತಣದ ಅಡಿಗೆಯಲ್ಲಿ ವಿಷ ಹಾಕಿ ಆ ಪಾತಕಿ ಇಬ್ಬರನ್ನೂ ಅರಮನೆಯಲ್ಲಿ ಕೊಂದುಬಿಡುತ್ತಾಳೆ.
ಹೀಗೆ ದುರ್ಮರಣದಿಂದ ಸತ್ತು ತಾಯಿ ಮಗ ಇಬ್ಬರೂ ಮುಂದೆ ನಾನಾ ಪಶುಪಕ್ಷಿಗಳಾಗಿ ಏಳೇಳು ಜನ್ಮಗಳನ್ನು ತಳೆದು, ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಹೊಂದಿ, ಕೊನೆಗೆ ಯಶೋಮತಿಗೆ ಕುಸುಮಾವಳಿಯಲ್ಲಿ ಅಭಯರುಚಿ ಅಭಯಮತಿಗಳಾಗಿ ಹುಟ್ಟುತ್ತಾರೆ. ಅಣ್ಣ ತಂಗಿಯರು ಎಳವೆಯಲ್ಲೇ ಜೈನದೀಕ್ಷೆಗೊಂಡು ಸುದತ್ತಾಚಾರ್ಯರಲ್ಲಿ ಶಿಷ್ಯವೃತ್ತಿಯಲ್ಲಿರುತ್ತಾರೆ.
ಗುರುವಿನ ಅಪ್ಪಣೆಯಂತೆ ಚರಿಗೆಗೆ ಹೊರಟ ಆ ಅಭಯರುಚಿ ಆಭಯಮತಿಗಳೇ ನಾವು. ಕೇವಲ ಮಾನಸಿಕ ಪಾಪವೊಂ-
ದಕ್ಕೆ ನಾವು ಪಟ್ಟ ಪಾಡಿನ ಕಥೆ ಇದು.
ಈ ಕಥೆ ಕೇಳಿ ಮಾರಿದತ್ತದೊರೆ ಬೆರಗಾಗಿ ಉದ್ವೇಗಪರನಾಗುತ್ತಾನೆ.ಚಂಡಮಾರಿ ಚೇತನ ಮೂರ್ತಿಯಾಗಿ ಬಂದು ಕುವರನಿಗೆ ವಂದಿಸಿ, ಇನ್ನು ಮೇಲೆ ಹಿಂಸಾಪೂಜೆ ಕೂಡದೆಂದೂ ಹೂವು ಅಕ್ಷತೆಗಳಿಂದ ಸಾತ್ವಿಕ ಪೂಜೆಯೆ ಆಗಬೇಕೆಂದೂ
ಇಲ್ಲದಿದ್ದರೆ ತಾನು ಮುಳಿಯುವುದಾಗಿಯೂ ನೆರವಿಗೆಲ್ಲ ಕಟ್ಟಳೆ ಮಾಡಿ ಅಂತರ್ದಾನವಾಗುತ್ತಾಳೆ.ಮಾರಿದತ್ತನು ಮಗನಿಗೆ ಪಟ್ಟಕಟ್ಟಿ ಜೈನ ದೀಕ್ಷೆ ವಹಿಸಿ ಸಮಾಧಿ ಮುಡಿಪಿ ಕೊನೆಗೆ ಕಲಿಯನ್ನು ಮೂದಲಿಸಿದಂತೆ ಮೂರನೆಯ ಸ್ವರ್ಗದಲ್ಲಿ ದೇವನೇ ಆಗುತ್ತಾನೆ.ಅಭಯರುಚಿ ಅಭಯಮತಿಗಳಿಬ್ಬರೂ ಇಲ್ಲಿ ತಪಸ್ಸು ಮುಗಿಸಿ ಈಶಾನಕಲ್ಪದಲ್ಲಿ ಹುಟ್ಟುತ್ತಾರೆ. ಪಾತಕಿ ಅಮೃತಮತಿ ಧೂಮಪ್ರಭೆ ಎಟಬನರಕದಲ್ಲಿ ತೊಳಲುತ್ತಾಳೆ.
ಯಶೋಧರ ಚಂದ್ರಮತಿಯರ ಜನ್ಮಾಂತರಗಳ ವಿವರ. ( ಮೂರನೆಯ ಅವತಾರ )
ಅಮೃತಮತಿ ಇಟ್ಟ ವೆಷಾನ್ನವುಂಡು ದುರ್ಮರಣದಿಂದ ಸತ್ತ ತಾಯಿ ಮಗ ಇಬ್ಬರೂ ಯಾವೆಡೆಯೇ ಹುಟ್ಟಲಿ ಯಾವ ಹೈಟ್ಟೇ ಹುಟ್ಟಲಿ ಯಶೋಮತಿ ದೊರೆಯೊಡನೆ ಒಂದಲ್ಲ ಒಂದು ಸಂಬಂಧವಿದ್ದೇ ಇರುತ್ತದೆ. ಅರಮನೆಯಲ್ಲಿ ಅವನ ಕೈಯಿಂದ ಬೆಳೆಯುತ್ತಾರೆ; ಬಲೆಗೆ ಸಿಕ್ಕಿ ಅವನ ಮನೆಯಲ್ಲಿ ಅಡುಗೆಯಾಗುತ್ತಾರೆ; ಕಿಡಿನಲ್ಲಿ ಅವನ ಬಾಣಕ್ಕೆ ಬೀಳುತ್ತಾರೆ.
ಕೊನೆಗೆ ಅವನಿಗೇ ಮಕ್ಕಳಾಗಿ ಹುಟ್ಟುತ್ತಾರೆ.
೧. ಮಗ ವಿಂಧ್ಯೆಯಲ್ಲಿ ನವಿಲಾಗಿ, ತಾಯಿ ಕಲಹಟದಲ್ಲಿ ಬೇಟೆ ನಾಯಾಗಿ ಹುಟ್ಟಿ ಯಶೋಮತಿಯ ಅರಮನೆ ಸೇರುತ್ತಾರೆ. ಒಮ್ಮೆ, ಅಮೃತಮತಿಯೊಡನೆ ಸರಸದಲ್ಲಿದ್ದ ಜಾರ ಅಷ್ಟವಂಕನ ಕಣ್ಣನ್ನು ನವಿಲು ಕುಕ್ಕುತ್ತದೆ.ನಾಯಿ ನವಿಲನ್ನು ಮೇಲೆ ಬಿದ್ದು ಕೊಲ್ಲುತ್ತದೆ.ಯಶೋಮತಿ ಕೋಪಗೊಂಡು ನಾಯನ್ನು ಕೊಂದುಬಿಡುತ್ತಾನೆ. ಆದರೆ ಕಣ್ಣರಿಯದಿದ್ದರೂ ಕರುಳರಿಯಿತೆಂಬಂತೆ ಆ ಎರಡು ಸಾವಿಗೆ ದೊರೆ ಅಳುತ್ತಾನೆ.
೨. ಮಗ ವಿಂಧ್ಯೆಯಲ್ಲಿ ಎಯ್ಯಮಿಗವಾಗಿಯೂ ತಾಯಿ ಅಲ್ಲಿಯೇ ಹಾವಾಗಿಯೂ ಹುಟ್ಟಿ, ಹಾವನ್ನು ಎಯ್ಯಮಿಗ ತಿಂದು ಹಾಕುತ್ತದೆ. ಎಯ್ಯಮಿಗವನ್ನು ಹುಲಿಯೊಂದು ಕೊಲ್ಲುತ್ತದೆ.
೩. ಮಗ ಉಜ್ಜಯಿನಿಯ ಸಿಪ್ರಾನದಿಯಲ್ಲಿ ಮೀನಾಗಿಯೂ ಅಲ್ಲಿಯೆ ತಾಯಿ ಮೊಸಳೆಯಾಗಿ ಹುಟ್ಟಿ, ಮೊಸಳೆ ಮೀನ ಮೇಲೆ ಹಾಯಹೋಗುತ್ತದೆ.ಯಶೋಮತಿಯ ಜಾಲಗಾರನು ಆ ಮೊಸಳೆಯನ್ನು ಹಿಡಿದು ಹಲವುಹಲವು ಬಗೆಯಿಗಿ ಸಾರಿಸುತ್ತಾನೆ. ದೊರೆ ಮೀನನ್ನು ಹಿಡಿದು ತರಿಸಿ ತಂದೆ ಯಶೋಧರನ ಶ್ರಾದ್ಧಕ್ಕಾಗಿ ಸಜೀವವಾಗಿ ಅಡುಗೆಮಾಡಿಸಿ ಬ್ರಾಹ್ಮಣರಿಗೆ ಬಡಿಸುತ್ತಾನೆ. ಕಳಿಯುಂಡ ಬ್ರಾಹ್ಮಣರು ಯಶೋಧರನು ಸ್ವರ್ಗದಲ್ಲಿ ಸುಖವಿಗಿರಲೆಂದು ಹೇಳುತ್ತಿರುವಲ್ಲಿ, ಯಶೋಧರನಿಗಿದ್ದ ಆ ಮೀನು ಅಡುಗೆಮನೆಯಲ್ಲಿ ಅರೆಜೀವವಾಗಿ ಬೇಯುತ್ತ ಮರುಗುತ್ತದೆ.
೪. ತಾಯಿ ಉಜ್ಜಯಿನಿಯ ಹೊಲಗೇರಿಯಲ್ಲಿ ಆಡಾಗಿ ಹುಟ್ಟುತ್ತಾಳೆ.ಮಗ ಆ ಆಡಿನಲ್ಲಿ ಹೋತಾಗಿ ಹುಟ್ಟಿ , ಆ ಹೋತೇ ಆ ಆಡಿನೊಡನೆ ನೆರೆದಿರುವಾಗ, ಮತ್ತೊಂದು ಹೋತ ಅದನ್ನು ಇರಿಯುತ್ತದೆ. ಹಾಗೆ ಸತ್ತ ಹೋತನ ಜೀವ ತಾಯ ತಾಯ ಬಸಿರಿನ ಸ್ವಬೀಜದಲ್ಲಿ ಸೇರಿಕೊಂಡು ಬೆಳೆಯುತ್ತದೆ. ಹೀಗೆ ಬಸಿರು ಬೆಳೆದ ಆಡನ್ನು ಒಮ್ಮೆ ಬೇಟೆ ಯಾವುದೂ ಸಿಕ್ಕದ ಯಶೋಮತಿ ಬಾಣದಿಂದ ಹೊಡೆಯುತ್ತಾನೆ. ಆ ಹೆಣ್ಣ ಬಾಯಿಂದ ಉದುರಿದ ಮರಿಯನ್ನು ಹೊಲಯನಿಗೆ ಸಲಹಲು ಕೊಡುತ್ತಾನೆ. ದೊರೆ ಒಮ್ಮೆ ಎಮ್ಮೆಹೋರಿಯೊಂದನ್ನು ಊರ ಮಾರಿಗೆ ಬಲಿಯಿಕ್ಕಿ ಅದನ್ನು ಮಹಾಲಯಕ್ಕಾಗಿ ಕೊಡುತ್ತಾನೆ. ಮುಗ್ಗಿ ಹುಳುತ ಆ ಅಡಗನ್ನು ಬಿಸಿಲಿಗೆ ಆರಹಾಕಿದ್ದಾಗ ನಾಯಿ ಕಾಗೆ ಬಂದು ಮುಟ್ಟಿ ಕೆಡಿಸಿಬಿಡುತ್ತವೆ. ಅದರ ಶುದ್ಧಿಗಾಗಿ ಶಾಸ್ತ್ರಪ್ರಕಾರ ತಾಯ ಬಸಿರಲ್ಲಿ ಸ್ಸಬೀಜದಿಂದ ಹುಟ್ಟಿದ ಆಡು ಬೇಕೆಂದು ಪುರೋಹಿತರು ಹೇಳುತ್ತಾರೆ. ದೊರೆ ಹೊಲೆಯನಿಗೆ ಕೊಟ್ಟಿದ್ದ ಆಡನ್ನು ತರಿಸಿ ಅದರಿಂದ ಶುದ್ಧಿಮಾಡಿಸುತ್ತಾನೆ. ಅದನ್ನುಂಡ ಬ್ರಾಹ್ಮಣರು ಚಂದ್ರಮತಿ ಯಶೋಧರರು ಸ್ವರ್ಗದಲ್ಲಿ ಸುಖವಾಗಿದ್ದಾರೆಂದು ಹೇಳುತ್ತಿರುವುದನ್ನು ಕೇಳಿದ ಆ ಆಡು ಮನದಲ್ಲೇ ಕೊರಗಿ ಮರುಗುತ್ತದೆ
೫. ತಾಯಿ ಕಳಿಂಗದಲ್ಲಿ ಕೋಣನಾಗಿ ಹುಟ್ಟಿ ವ್ಯಾಪಾರಿಯೊಬ್ಬನ ಹೊರೆಗೋಣವಾಗಿರುತ್ತದೆ. ನೀರಡಸಿ ಸಿಪ್ರಾನದಿಗೆ ನೀರು ಕುಡಿಯಲು ಬಂದಿದ್ದ ಆ ಕೋಣ ಅರಸನ ಕುದುರೆಯನ್ನು ಕೊಲ್ಲುತ್ತದೆ. ದೊರೆ ರೇಗಿ ಆ ಕೋಣನನ್ನು ಹಿಡಿದು ತರಿಸಿ ವಿವಿಧ ಕೊಲೆಯಿಂದ ಕೊಲ್ಲಿಸಿ, ಅದರ ಮಾಂಸವನ್ನು ಅಮೃತಮತಿಗೆ ಕೊಡಿಸುತ್ತಾನೆ. ಆ ಮಾಂಸದ ರುಚಿ ಕಂಡ ಅಮೃತಮತಿ ಬಾಣಸದಲ್ಲಿ ಕಟ್ಟಿದ್ದ ಹೋತನನ್ನೂ ತರೆಸಿ ಬೇಯಿಸಿ ತಿನ್ನುತ್ತಾಳೆ.
೬. ತಾಯಿ ಮಗ ಇಬ್ಬರೂ ಉಜ್ಜಯಿನಿಯ ಹೊಲಗೇರಿಯಲ್ಲಿ ಕೋಳಿ ಪಿಳ್ಳೆಗಳಾಗಿ ಹುಟ್ಟುತ್ತಾರೆ. ಯಶೋಮತಿ ಅವನ್ನು ಸಲಹಲು ಚಂಡಕರ್ಮನಿಗೆ ಕೊಡುತ್ತಾನೆ. ಚಂಡಕರ್ಮನು ಒಮ್ಮೆ ವನದಲ್ಲಿ ತಿರುಗುತ್ತಿದ್ದುಮರದ ಕೆಳಗೆ ಅಕಂಪನ ಮುನಿಯನ್ನು ಕಂಡು ಅವನೊಡನೆ ಆತ್ಮತತ್ವ ಜಿಜ್ಞಾಸೆ ನಡೆಸುತ್ತಿರುತ್ತಾನೆ. ಮುನಿ ಆತ್ಮದ ವಿಚಾರವನ್ನೂ ಜೈನತತ್ವವನ್ನೂ ವಿವರಿಸುತ್ತ ಹಿಟ್ಟಿನ ಕೋಳಿಯನ್ನು ಬಲಿಯಿಟ್ಟು ಚಂದ್ರಮತಿ ಯಶೋಧರರು ಹಲವು ಪಾಡುಪಟ್ಟು ಕೊನೆಗೆ ಗೂಡಿನ ಕೋಳಿಗಳಾಗಿರುವ ವೃತ್ತಾಂತವನ್ನು ಅರಿತು ಹೇಳುತ್ತಾನೆ. ಆ ಮಾತನ್ನು ಚಂಡಕರ್ಮನ ಬಳಿಯಿದ್ದ ಕೋಳಿಗಳು ಕೇಳಿ ಜಾತಿಸ್ಮರಗಳಾಗಿ ಮನಸ್ಸಿನಲ್ಲೇ ಅಹಿಂಸಾವ್ರತಧರಿಸಿ ನಲವಿನಿಂದ ಕೆಲೆಯುತ್ತವೆ. ಅದೇ ವನದಲ್ಲಿ ಬೇರೊಂದೆಡೆ ಪರಿವಾರದೊಂದಿಗೆ ವಿಹರಿಸುತ್ತಿದ್ದ ಯಶೋಮತಿ ದೊರೆ ಮಡದಿ ಕುಸುಮಳಿಗೆ ತನ್ನ ಶರವಿದ್ಯೆಯನ್ನು ಮೆರೆಯುವುದಕ್ಕಾಗಿ ದನಿ ಬಂದ ದಿಕ್ಕಿಗೆ ಬಾಣಬಿಟ್ಟು ಆ ಕೋಳಿಗಳನ್ನು ಕೆಡವುತ್ತಾನೆ.
೭. ಆ ಕೋಳಿಗಳು ಹಾಗೆ ಸತ್ತು ಕುಸುಮಾವಳಿಯಲ್ಲಿ ಯಶೋಮತಿಗೆ ಅಭಯರುಚಿ ಅಭಯಮತಿಗಳಾಗಿ ಹುಟ್ಟಿ, ಅವರು ಎಳವೆಯಲ್ಲಿ ಜೈನದೀಕ್ಷೆ ವಹಿಸುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ