ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಜೂನ್ 20, 2020

ಯಕ್ಷಪ್ರಶ್ನೆ

ಯಕ್ಷಪ್ರಶ್ನೆ

-----------


ಮಹಾಭಾರತದ " ಅರಣ್ಯಪರ್ವ " ದಲ್ಲಿ ಬರುವ ಯಕ್ಷಪ್ರಶ್ನೆ ; ಯಕ್ಷ ಮತ್ತು ಧರ್ಮರಾಯನ ಮಧ್ಯೆ ನಡೆಯುವ ಸಂವಾದ.  ಮಹಾಭಾರತವನ್ನು " ಇತಿಹಾಸ " ಎನ್ನುತ್ತಾರೆ.  " ಇತಿ+ ಹ + ಆಸ " ಎಂದರೆ ಇದು ಹೀಗಿತ್ತಂತೆ ಎಂಬ ಅರ್ಥ ಬರುತ್ತದೆ. ಹಿಂದೆ ಆಗಿ ಹೋದುದು, ಚರಿತ್ರೆ ಎನ್ನಬಹುದು. ಇದು ಅತ್ಯಂತ ಹಳೆಯದು.  ಆದುದರಿಂದ ಪುರಾಣವೂ ಹೌದು. "ಹಳತಾದುದು, ಆದರೆ ಇಂದಿಗೂ ಹೊಸತಾಗಿರುವುದು " ಪುರಾಣ.  


ಸುಮಾರು ಒಂದು ಲಕ್ಷ ಶ್ಲೋಕಳಿಂದ ಕೂಡಿದ ಈ ಮಹಾಕಾವ್ಯದಲ್ಲಿ ಇಲ್ಲದ್ದು ಯಾವುದೂ ಭೂಮಿಯ ಮೇಲೆ ಇಲ್ಲ ಎನ್ನುವ ಮಾತಿದೆ. ಪ್ರಪಂಚದಲ್ಲಿ ಇಲ್ಲಿಯವರೆಗೆ ರಚಿತವಾದ ಅತ್ಯಂತ ದೊಡ್ಡ ರಚನೆಯಿದು. ಇದರಲ್ಲಿ ಧರ್ಮಶಾಸ್ತ್ರ, ನೀತಿಶಾಸ್ತ್ರ, ಸಮಾಜಶಾಸ್ತ್ರ,  ಅರ್ಥಶಾಸ್ತ್ರ ಇತ್ಯಾದಿ ಇಹ-ಪರಗಳೆರಡಕ್ಕೂಸಲ್ಲುವ ಸಮಸ್ತ ನೀತಿ ಸಂಹಿತೆಗಳಿವೆ. ಮುಖ್ಯವಾಗಿ, ಶ್ರೀಕೃಷ್ಣ ಯುದ್ಧ ರಂಗದಲ್ಲಿ ಅರ್ಜುನನಿಗೆ ಉಪದೇಶಿಸಿದ ಗೀತೋಪದೇಶವಿದೆ. ಇನ್ನು ವಿದುರ ನೀತಿ, ಯಕ್ಷಪ್ರಶ್ನೆ,  ಭೀಷ್ಮ ಧರ್ಮರಾಜನಿಗೆ ಉಪದೇಶಿಸಿದ ಅಪೂರ್ವ ರಾಜಧರ್ಮದಂಥ ಸರ್ವಕಾಲಕ್ಕೂ ಅನ್ವಯಿಸುವ ವಿಚಾರಗಳಿವೆ. ಇಂಥ ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. 


೧)ಆದಿಪರ್ವ: ಶಂತನುವಿನ ಗಂಗಾದೇವಿಯೊಂದಿಗಿನ ಭೇಟಿ. ದೇವವ್ರತನ ಜನನ. ಭೀಷ್ಮ ಪ್ರತಿಜ್ಞೆ. ಧೃತರಾಷ್ಟ್ರ ಪಾಂಡುವಿನ ಜನನ. ಪಾಂಡುವಿಗೆ ಶಾಪ. ತಪೋವನದಲ್ಲಿ ಕುಂತಿ ಮಾದ್ರಿಯರಿಗೆ ದೇವತೆಗಳಿಂದ ಪಾಂಡವರ ಜನನ. ಗಾಂಧಾರಿಯ ಮತ್ಸರ. ನೂರೊಂದು ಮಂದಿ ಕೌರವರ ಹುಟ್ಟು. ಪಾಂಡುವಿನ ಮರಣದೊಂದಿಗೆ ಮಾದ್ರಿಯ ಸಹಗಮನ. ಪಾಂಡವ- ಕೌರವರ ವಿದ್ಯಾಭ್ಯಾಸ.  ಕರ್ಣ ಅಂಗರಾಜನಾಗುವುದು. ಹಿಡಿಂಬಾ, ಬಕಾಸುರ ವಧೆ. ದ್ರೌಪದಿ ಸ್ವಯಂವರ. ಖಾಂಡವ ವನದ ವಾಸ. ಸುಭದ್ರಾ ಕಲ್ಯಾಣ. 


೨) ಸಭಾಪರ್ವ: ಧರ್ಮರಾಜನಿಂದ ರಾಜಸೂಯಯಾಗ.ಜರಾಸಂಧ ವಧೆ, ಶಿಶುಪಾಲ ಸಂಹಾರ. ದ್ಯೂತದಾಟ.ದ್ರೌಪದಿಯನ್ನು ತುಂಬಿದ ಸಭೆಗೆಳೆದು ತರುವುದು.ಅಕ್ಷಯಾಂಬರ ಪ್ರಕರಣ. 


೩) ಅರಣ್ಯಪರ್ವ: ಪಾಂಡವರ ವನವಾಸ. ದ್ವೈತವನವಾಸ. ಅರ್ಜುನನಿಗೆ ಪಾಶುಪತಾಸ್ತ್ರ ಪ್ರಾಪ್ತಿ. ನಳ, ಶಿಬಿ, ಋಷ್ಯಶೃಂಗ,  ಶ್ವೇತಕೇತು,ಸಾವಿತ್ರಿ ವೃತ್ತಾಂತಗಳು. ಜಟಾಸುರ ವಧೆ. ಅಜಗರ-ಯುಧಿಷ್ಠಿರ, ಯಕ್ಷ- ಧರ್ಮರಾಜ ಸಂವಾದ. ಧರ್ಮವ್ಯಾಧೋಪಖ್ಯಾನ.ರಾಮಾಯಣದ ಕಥಾಶ್ರವಣ. 


೪) ವಿರಾಟ ಪರ್ವ: ಪಾಂಡವರ ವಿರಾಟ ನಗರ ಪ್ರವೇಶ. ಕೀಚಕ ವಧೆ. ಗೋಗ್ರಹಣ. ಉತ್ತರೆ-ಅಭಿಮನ್ಯು ವಿವಾಹ. 


೫) ಉದ್ಯೋಗ ಪರ್ವ: ಯುದ್ಧ ಸಿದ್ಧತೆ. ಅರ್ಜುನ ಮತ್ತು ಧುರ್ಯೋಧನರು ಕೃಷ್ಣನನ್ನು ಕಂಡದ್ದು. ವಿದುರ ನೀತಿ. ಯುದ್ಧ ಸಂಧಿಗಳ ಬಗ್ಗೆ ಚರ್ಚೆ. ಕೃಷ್ಣ ಸಂಧಾನ.  ಕರ್ಣ ಭೇದೋಪಾಯ. ಯುದ್ಧ ನಿಶ್ಚಯ. ಭೀಷ್ಮ ಸೇನಾಧಿಪತ್ಯ. 


೬) ಭೀಷ್ಮ ಪರ್ವ: ಯುದ್ಧಾರಂಭ. ಭಗವದ್ಗೀತಾ ಉಪದೇಶ. ಭೀಷ್ಮರು ತನ್ನನ್ನು ಕೊನೆಗೊಳಿಸುವ ಉಪಾಯ ತಿಳಿಸುವುದು. ಭೀಷ್ಮರ ಶರಶಯನ. 


೭) ದ್ರೋಣ ಪರ್ವ: ದ್ರೋಣ ಸೇನಾ ನಾಕತ್ವ. ಭೀಕರ ಯುದ್ಧ ವಿವರಗಳು. ಕೆಲವು ಪ್ರಮುಖರ ಅಂತ್ಯ.  ದ್ರೋಣರಿಂದ ಶಸ್ತ್ರತ್ಯಾಗ.ಅಶ್ವತ್ಥಾ ಮನಿಂದ ನಾರಾಯಣಾಸ್ತ್ರ ಪ್ರಯೋಗ. ಉಪಶಾಂತಿ. 


೮) ಕರ್ಣ ಪರ್ವ: ಕರ್ಣನಿಂದ  ಸೇನಾನಾಯಕತ್ವ. ಯುಧಿಷ್ಠಿರನ ಸೋಲು. ದುಶ್ಯಾಸನ ಮತ್ತು ಕರ್ಣ ಸಂಹಾರ. 


೯) ಶಲ್ಯ ಪರ್ವ: ಶಲ್ಯ ಸೇನಾನಾಯಕತ್ವ. ಶಲ್ಯ ವಧೆ. ದುರ್ಯೋಧನನ ಸೋಲು. ಭೀಮ-ದುರ್ಯೋಧನರ ಗದಾಯುದ್ಧ. ಊರುಭಂಗ. ಅಶ್ವತ್ಥಾಮನ ಸೇನಾಧಿಪತ್ಯ. 


೧೦) ಪಂಚಪಾಂಡವರ ಹೊರತಾಗಿ ಮಿಕ್ಕೆಲ್ಲರ ಸಂಹಾರ. ದ್ರೌಪದಿಯ ಶೋಕ. ಅಶ್ವತ್ಥಾಮನಿಗೆ ಶಾಪ. 


೧೧) ಸ್ತ್ರೀ ಪರ್ವ: ಯುದ್ಧದಲ್ಲಿ ತಮ್ಮವರನ್ನು ಕಳೆದುಕೊಂಡ ಸ್ತ್ರೀಯರ ಶೋಕ. ದ್ರೌಪದಿ, ಕುಂತಿ, ಗಾಂಧಾರಿಯರನ್ನು ಸಮಾಧಾನ ಮಾಡುವುದು. ಗಾಂಧಾರಿ ಕೃಷ್ಣನನ್ನು ಶಪಿಸುವುದು. 


೧೨) ಶಾಂತಿ ಪರ್ವ: ಬಂಧು, ಬಾಂಧವ, ಮಿತ್ರರನ್ನು ಕಳೆದುಕೊಂಡ ಯುಧಿಷ್ಠಿರ ದುಃಖದಿಂದ ವೈರಾಗ್ಯದ ಕಡೆಗೆ ತಿರುಗುವುದು. ರಾಜ್ಯ ತ್ಯಜಿಸುವ ಯೋಚನೆ. ಬಂಧುಗಳಿಂದ ವಿವೇಕ. ಪಟ್ಟಾಭಿಷೇಕ. ಶರಶಯ್ಯೆಯಲ್ಲಿ ಪವಡಿಸಿದ್ದ ಭೀಷ್ಮರನ್ನು ಭೇಟಿ ಮಾಡಿದ ಕೃಷ್ಣ ಮತ್ತು ಪಾಂಡವರು. ಭೀಷ್ಮರಿಂದ ರಾಜಧರ್ಮ, ಆಪದ್ಧರ್ಮ, ಮೋಕ್ಷಧರ್ಮ ಉಪದೇಶ.


೧೪) ಅಶ್ವಮೇಧಿಕ ಪರ್ವ: ಯುಧಿಷ್ಠಿರನ ಸಂತಾಪ. ಪರೀಕ್ಷಿತ ಜನನ. ಅಶ್ವಮೇಧ ಯಾಗ ಸಿದ್ಧತೆ. ಅರ್ಜುನ ಬಬ್ರುವಾಹನ ಕಾಳಗ. ಯಾಗವೈಭವ. 


೧೫) ಆಶ್ರಮವಾಸಿಕ ಪರ್ವ: ಯುಧಿಷ್ಠಿರನ ಆಳ್ವಿಕೆ. ಧೃತರಾಷ್ಟ್ರ,  ಗಾಂಧಾರಿ, ಕುಂತಿ , ವಿದುರ, ಸಂಜಯರು ತಪಸ್ಸಿಗೆ ತೆರಳಿದ್ದು. ಕಾಡುಗಿಚ್ಚಿನಲ್ಲಿ ಅವರ ದೇಹತ್ಯಾಗ. 


೧೬) ಮೌಸಲ ಪರ್ವ: ಯಾದವ ಕಲಹ. ಯಾದವ ಕುಲಾಂತ್ಯ. ಬಲರಾಮ ದೇಹತ್ಯಾಗ.  ಕೃಷ್ಣಾವತಾರದ ಅಂತ್ಯ. ವಸುದೇವ ದೇಹತ್ಯಾಗ. ದ್ವಾರಕೆ ಸಮುದ್ರ ಗರ್ಭ ಸೇರುವುದು.  ಯಾದವ ಸ್ತ್ರೀಯರ ತಪೋವನ ಗಮನ ಮತ್ತು ಅಗ್ನಿಪ್ರವೇಶ. 


೧೭) ಮಹಾಪ್ರಾಸ್ಥಾನಿಕ ಪರ್ವ : ಪಾಂಡವರ ಮಹಾಪ್ರಸ್ಥಾನ. ಯುಯುತ್ಸುಮತ್ತು ಪರೀಕ್ಷಿತರ ಪಟ್ಟಾಭಿಷೇಕ.  ಅರ್ಜುನನ ಶಸ್ತ್ರತ್ಯಾಗ. ದ್ರೌಪದಿ, ನಕುಲ, ಸಹದೇವ, ಅರ್ಜುನ, ಭೀಮರ ಸಾವು. ಯುಧಿಷ್ಠಿರನಿಗೆ ಸ್ವರ್ಗಾಹ್ವಾನ.


೧೮) ಸ್ವರ್ಗಾರೋಹಣ ಪರ್ವ: ಸ್ವರ್ಗದಲ್ಲಿ ದುರ್ಯೋಧನನ ದಿವ್ಯ ಭೋಗ ಜೀವನ, ಯುಧಿಷ್ಠಿರನ ನರಕ ದರ್ಶನ. ಕೌರವ, ಪಾಂಡವರು ದೇವತಾಂಶಗಳಲ್ಲಿ ಐಕ್ಯರಾದುದು. ಕಥಾ ಮುಕ್ತಾಯ. ಮಂಗಳ.  


ಮಹಾಭಾರತದ ಕಥೆಯ ಸೂಕ್ಷ್ಮಾವಲೋಕನ. ಕನ್ನಡಿಯಲ್ಲಿ ಆನೆ ಕಂಡಂತೆ. ಕೊಳದಲ್ಲಿ ಚಂದ್ರನನ್ನು ಕಂಡಂತೆ ಎನ್ನಬಹುದು. ಇಂಥ ಮಹಾಭಾರತದಲ್ಲಿ ಬರುವ ಆದಿಪರ್ವದ:-ಉಪಪರ್ವ-ವನಪರ್ವದಲ್ಲಿ ಯಕ್ಷಪ್ರಶ್ನೆ ಪ್ರಸಂಗ ಬರುತ್ತದೆ.  


ವನಪರ್ವದಲ್ಲಿ ಯಕ್ಷ ದರ್ಶನ.ಮಹಾಭಾರತದ ವನಪರ್ವದಲ್ಲಿ ಯಕ್ಷಪ್ರಶ್ನೆ ಬರುತ್ತದ. ವನವಾಸದ ಅವಧಿಯ ಕೊನೆಯಲ್ಲಿ ಪಾಂಡವರು ದ್ವೈತವನದಲ್ಲಿದ್ದರು.ದ್ವೈತ ಎಂದರೆ ಇಹ ಮತ್ತು ಪರ ಎಂದೂ ಅರ್ಥ ಮಾಡಬಹುದು. ವನವಾಸದ ಅವಧಿ ಪೂರ್ತಿ ಪಾಂಡವರಿಗೆ ಜ್ಞಾನಧನ ಸಂಪನ್ನರಾದ ಋಷಿ, ಮುನಿಗಳ ಒಡನಾಟ ಒದಗಿತು. ಮೂಲತಃ ಸಾತ್ವಿಕನಾದ ಯುಧಿಷ್ಠಿರನ ವ್ಯಕ್ತಿತ್ವ ಮತ್ತಷ್ಟು ಪರಿಪಕ್ವವಾಯಿತು. ಯಕ್ಷಪ್ರಶ್ನೆಗೆ ಮೂಲವಾದ ಘಟನೆ, ಒಂದು ಬೆಳಗು ಒಬ್ಬ ಬ್ರಾಹ್ಮಣ ಪಾಂಡವರಲ್ಲಿಗೆ ಬಂದ. ಮರದ ಕೊಂಬೆಗೆ ನೇತುಹಾಕಿದ್ದ ಅವನ ಅರಣಿಯನ್ನು ಜಿಂಕೆಯೊಂದು ತೆಗೆದುಕೊಂಡು ಹೋಗಿತ್ತು 

ಬ್ರಾಹ್ಮಣ ಎಂದರೆ ಬ್ರಹ್ಮನನ್ನು ಉಪಾಸಿಸುವವನು. ಬ್ರಹ್ಮ ಎಂದರೆ ಸೃಷ್ಟಿಯ ಸಮಗ್ರ ಜ್ಞಾನ.  ಯಾರಿಗೆ ಈ ಜ್ಞಾನ ಕರಗತವಾಗಿರುತ್ತದೊ, ಸೃಷ್ಟಿ ಅವನ ಆಜ್ಞಾಧಾರಕಳಾಗಿರುತ್ತಾಳೆ ಎಂಬ ಮಾತಿದೆ. ಅರಣಿ ಎಂದೆ ಅಗ್ನಿಯನ್ನು ಹೊತ್ತಿಸುವ ಸಾಧನ. ಅರಣಿ ಎಂದರೆ ಮಂಥನ ಶಕ್ತಿ. ಇಂಥ ಶಕ್ತಿಯನ್ನು ಚಂಚಲತೆಗೆ ಹೆಸರಾದ ಹರಿಣ ಎತ್ತಿಕೊಂಡು ಹೋಯಿತು. ಆಧ್ಯಾತ್ಮಿಕವಾಗಿ ಅರ್ಥಮಾಡಿಕೊಂಡರೆ ಬ್ರಹ್ಮೋಪಾಸನೆಗೆ ಅಗತ್ಯವಿರುವ ಚಿಂತನಮಂಥನ ಶಕ್ತಿಯನ್ನು ಚಂಚಲತೆ ಎಂಬುದು ಅಪಹರಿಸಿಕೊಂಡು ಹೋಯಿತು ಎಂದಾಗುತ್ತದೆ.


ಬ್ರಾಹ್ಮಣ ಬಂದು ವಿನಂತಿಸಿದ. ಧರ್ಯರಾಯ ತಮ್ಮಂದಿರೊಡಗೂಡಿ ಆರಣಿಯ ಅನ್ವೇಷಣೇಗೆ ಹೊರಟ. ವೀರಾಧಿವೀರರಿರುವಾಗ ಧರ್ಮರಾಯ ಸ್ವತಃ ಹೊರಟಿದ್ದೇಕೆ ? ಅರ್ಜುನ, ಭೀಮರು ಕ್ಷಾತ್ರ ಗುಣದವರು.ಬರೀ ಈ ಗುಣದಿಂದ ಕಾರ್ಯಸಿದ್ಧಿಯಾಗದು. ಅದಕ್ಕೆ ಧರ್ಮ ಸಂಸ್ಕಾರವೂ ಬೇಕು ಆದುದರಿಂದ ಧರ್ಮದ ಪ್ರತೀಕವಾದ ಧರಾಮರಾಯನೇ ಹೊರಟ. 


ಜಿಂಕೆ ಒಂದಿಷ್ಟು ಮುಖ ತೋರಿಸುತ್ತಿತ್ತು,ಮತ್ತೆ ಓಡಿ ಮರೆಯಾಗುತ್ತಿತ್ತು. ಮನಸ್ಸೂ ಹೀಗೆ ಸಾತ್ವಿಕತೆ ಮೇಲಾದಾಗ ಆಧ್ಯಾತ್ಮದತ್ತ ಮುಖಮಾಡುತ್ತದೆ. ಭೌತಿಕ ಬಾಧೆಗಳು ಹೆಚ್ಚಾದಾಗ ಮತ್ತೆ ಓಡುತ್ತದೆ. ಪಾಂಡುಪುತ್ರರು ಬಹಳ ಹೊತ್ತು ಇದರ ಬೆನ್ನಟ್ಟಿದರು. ಅದು ಕೈಗೆ ಸಿಗಲಿಲ್ಲ. ಬಿಸಿಲಿಗೆ ಬಳಲಿದರು.ಬಾಯಾರಿತು. ಆರಣಿಯನ್ನು ಪಡೆಯದೆ ಮರಳಿಹೋಗಲಾಗದು. ಜಿಂಕೆ ಕೈಗೆ ಸಿಗಲಾರದು. ಇಬ್ಬಂದಿಯಲ್ಲಿ ಬಳಲಿ ಹೋದರು. ಮರದ ಬುಡಕ್ಕೆ ಬೆನ್ನು ಆನಿಸಿ ಕುಳಿತವರನ್ನು ಕುರಿತು ನಕುಲ ಕೇಳಿದ ಪ್ರಶ್ನೆ ಯಕ್ಷ- ಧರ್ಮ ಸಂವಾದದ ಮೊದಲ ಪ್ರಶ್ನೆ ಎನ್ನಬಹುದು. 


ನಾಸ್ಮಿನ್ಕುಲೇನ ಜಾತು ಮಮಜ್ಜ ಧರ್ಮೋ ನ ಚಾಲಸ್ಯಾದರ್ಥಲೋಪೋ ಬಭುವ॥ 

ಅನುತ್ತರಾಃ ಸರ್ವಭೂತೇಷು ಭೂಯಃ ಸಮ್ಪ್ರಾಪ್ತಾಃ ಸ್ಮಃ ಸಂಶಯಂ ಕಿಂ ನು ರಾಜನ್॥ 


" ರಾಜನ್ ಹೀಗೇಕೆ ? ನಮ್ಮ ಕುಲದಲ್ಲಿ ಎಂದೂ ಧರ್ಮಲೋಪವಾದುದಿಲ್ಲ. ಆಲಸ್ಯದಿಂದ ಅರ್ಥಕ್ಕೆ ಚ್ಯುತಿ ಬಂದದ್ದಿಲ್ಲ. ಯಾರು ಏನನ್ನು ಬೇಡಿದರೂ ನಾವು ನಿರುತ್ತರರಾದುದಿಲ್ಲ. ಈ ಒಂದು ಕಾರ್ಯ ನಮ್ಮಿಂದ ಪೂರೈಸಲಾಗುತ್ತಿಲ್ಲ ಏಕೆ?"

ಧರ್ಮರಾಯ ಉತ್ತರಿಸಿದನು. " ದುಃಖ-ಸುಖಗಳ ಪ್ರಾಪ್ತಿಗೆ ನಿರ್ದಿಷ್ಟ ಕಾರಣವಿಲ್ಲ. ಪುಣ್ಯ-ಪಾಪಗಳಿಗನುಸಾರವಾಗಿ ಸುಖ-ದುಃಖಗಳನ್ನು ವಿಧಿಸುವವನು ಯಮಧರ್ಮನಲ್ಲದ ಬೇರಾರೂ ಇಲ್ಲ" 


ಮುಂದೆ ನಡೆಯುವುದನ್ನು ಮುಂಚಿತವಾಗಿಯೇ ಕಂಡವನಂತೆ ಧರ್ಮರಾಯ ನಕುಲನ ಸಂದೇಹಕ್ಕೆ ಉತ್ತರಿಸಿದ. ಮತ್ತೆ ಬಾಯಾರಿಕೆ ತಡೆಯಲಾಗದಾಗಿದೆ. ಈ ಮರ ಏರಿ ಎಲ್ಲಿಯಾದರೂ ನೀರು ಕಾಣುತ್ತದೋ ನೋಡು ಎಂದ. ನಕುಲನಿಗೆ ಒತ್ತೊತ್ತಾಗಿ ಬೆಳೆದ ವೃಕ್ಷಸಮೂಹವೂ ಅಲ್ಲಿಂದ ಕೇಳಿ ಬರುತ್ತದ್ದ ಹಕ್ಕಿಗಳ ಕೂಜನವೂ ಕೇಳಿಸಿತು. ಹೀಗಿರುವ ಕಡೆ ನೀರಿರಲೇಬೇಕೆಂಬ ತರ್ಕದಿಂದ ನಕುಲ ಅತ್ತ ನಡೆದ. 


ತಾನು ನೀರು ಕುಡಿದು ಅಣ್ಣಂದಿರಿಗೆ ಕೊಂಡು ಹೋಗುತ್ತೇನೆ ಎಂದುಕೊಂಡು ಬೊಗಸೆ ತುಂಬಾ ನೀರು ತುಂಬಿಕೊಂಡ. ಅಷ್ಟರಲ್ಲಿ ಒಂದು ಅಶರೀರವಾಣಿ ಕೇಳಿಸಿತು. " ನಕುಲ, ಈ ಕೊಳ ನನ್ನದು. ನೀರನ್ನು ಕುಡಿಯುವ ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು !" ನಕುಲನಿಗೆ ಈ ಮಾತು ಹಿಡಿಸಲಿಲ್ಲ.ಬೊಗಸೆಯನ್ನೆತ್ತಿ ಬಾಯಿಗಿಟ್ಟ ಅಷ್ಟೇ. ಮೂರ್ಛಿತನಾಗಿ ನೆಲಕ್ಕೊರಗಿದ. ನಕುಲನನ್ನು ಹಿಂಬಾಲಿಸಿ ಸಹದೇವ, ಅರ್ಜುನ, ಭೀಮರು ಬಂದರು. ಅಶರೀರವಾಣಿಯ ಮಾತನ್ನು ಧಿಕ್ಕರಿಸಿ, ಧರಾಶಾಯಿಯಾದರು. ಕಡೆಗೆ ಚಿಂತೆಯಿಂದ, ಬಾಯಾರಿಕೆಯಿಂದ ಕಂಗಾಲಾದ ಧರ್ಮರಾಯನೇ ಬಂದ. ತಮ್ಮಂದಿರು ಧರಾಶಾಯಿಯಾದುದನ್ನು ನೋಡಿದ. ಇಂಥ ಪರಮ ಪರಾಕ್ರಮಿಗಳಿಗೆ ಈ ಗತಿ ಬಂದುದೆಂತು ಎಂದು ಚಿಂತಿಸಿದ. 


ಹೀಗೆ ಯೋಚಿಸಿ ಬಾಯಾರಿಕೆಯನ್ನಾದರೂ ತಣಿಸಿಕೊಳ್ಳೊಣ ಎಂದು ನೀರಿಗಿಳಿದ. ಕೂಡಲೇ ಗುಡುಗಿನಂತೆ ಸ್ವರವೊಂದು ಕೇಳಿಸಿತು. 


ಅಹಂ ಬಕಃ ಮತ್ಸ್ತಭಕ್ಷೋ ನೀತಾ ಮಯಾ ಪ್ರೇತವಶಂ ತವಾನುಜಾಃ |

ತ್ವಂ ಪಞ್ಚಿಮೋ ಭವಿತಾ ರಾಜಪುತ್ರಾ ನ ಚೇತ್ಪ್ರಶ್ನಾವ್ಪ್ಛತೋ ವ್ಯಾಕರೋಷಿ॥ 


" ನಾನು ಬಕ, ಈ ಸರೋವರದ ಮೀನುಗಳನ್ನು ತಿಂದು ಬದುಕುವವ. ನಿನ್ನ ನಾಲ್ಕೂ ಮಂದಿ ತಮ್ಮಂದಿರು ಪ್ರೇತವಶರಾದುದು ನನ್ನಿಂದಲೇ. ಈ ಸರಸಿಯ ನೀರು ಕುಡಿದರೆ ನೀನು ಐದನೆಯವನಾಗುತ್ತಿ. ಆದುದರಿಂದ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಅನಂತರ ನೀರು ಕುಡಿ" ಎಂದ. ಧರ್ಮರಾಯನಿಗೆ ಈಗಾಗಲೇ ಇದು ಯಃಕಶ್ಚಿತ್ ಬಕಪಕ್ಷಿಯಲ್ಲ. ಯಾವುದೋ ಮಹಾ ಚೇತನ. ತನ್ನನ್ನು ಪರೀಕಾಷಿಸಲು ಈ ರಂಗಸಜ್ಜಿಕೆ ಮಾಡಿದೆ ಎಂದು ತಿಳಿದು ಹೋಗಿತ್ತು. ಹಾಗೇ ಹೇಳಿಯೂ ಬಿಟ್ಟ. 


" ಹೌದು, ನಾನು ಯಕ್ಷ, ಬಕವಲ್ಲ. ನಾನು ಕಾರಣವಿಲ್ಲದೆ ನಿನ್ನ ಅನುಜರನ್ನು ಕೊಲ್ಲಲಿಲ್ಲ. ಪ್ರಶಾನೆಗಳಿಗೆ ಉತ್ತರಿಸಿ ನೀರು ಕುಡಿಯಿರಿ ಎಂದೆ. ಕೇಳಲಿಲ್ಲ. ನಿನ್ನ ಗತಿ ಹಾಗಾಗದಿರಬೇಕಾದರೆ, ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಅನಂತರ ನೀರು ಕುಡಿ" ಎಂದಿತು ಆ ಸ್ವರ. 


ಧರ್ಮರಾಯ ನೀರಿನಿಂದ ಹಿಂದೆ ಸರಿದು ನಿಂತ. " ಮಹಾತ್ಮಾ, ನೀನೆಂದಂತೆ ನಾನು ಈ ಸರೋವರದ ನೀರು ಕುಡಿಯುವ ಮುನ್ನ ನಿನ್ನ ಪ್ರಶ್ನೆಗಳಿಗೆ ಉತ್ತರಿಸಲು ನನ್ನ ಮಿತಿಯೊಳಗೆ ಪ್ರಯತ್ನಿಸುತ್ತೇನೆ. ನಿನ್ನ ಸ್ವತ್ತಾದ ಈ ಸರೋವರದ ಮೇಲೆ ಅತಿಕ್ರಮಣ ಮಾಡುವುದು ಅಧರ್ಮವೇ ಸರಿ. ನಿನ್ನ ಪ್ರಶ್ನೆಗಳಿಗೆಲ್ಲ ನನಗೆ ಉತ್ತರ ತಿಳಿದಿದೆ ಎಂಬ ಅಭಿಮಾನ ನನಗಿಲ್ಲ. ಗೊತ್ತಿರುವುದನ್ನು ಉತ್ತರಿಸುತ್ತೇನೆ." ಎಂದುತ್ತರಿಸಿದ ಧರ್ಮರಾಯ. 


ಯಕ್ಷ ಪ್ರಶ್ನೆ :- ೧. ಕಿಂಸಿದಾದಿತ್ಯಂ ಉನ್ನಯತಿ ಕೇ ಚ ತಸ್ಯಾಭಿತಶ್ಚರಾಃ | 

                       ಕಶ್ಚೈನಮಸ್ತಂ ನಯತಿ ಕಸ್ಮಿಂಶ್ಚ ಪ್ರತಿತಿಷ್ಠತಿ ॥ 


ಯಾವುದು ಸೂರ್ಯ ಉದಯಿಸುವಂತೆ ಮಾಡುತ್ತದೆ? ಆತನ ಸುತ್ತ ಚಲಿಸುವವರ್ಯಾರು? ಸೂರ್ಯಾಸ್ತಕ್ಕೆಕಾರಣರಾರು?

ಯಾವುದರ ಮೇಲೆ ಅದು ಪ್ರತಿಷ್ಠಿತವಾಗಿದೆ. 


ಯಕ್ಷ ಮೊದಲು ನಾಲ್ಕು ಪ್ರಶ್ನೆಗಳನ್ನು ಧರ್ಮರಾಯನ ಮುಂದಿಟ್ಟ. ಇವು ಜಿಜ್ಞಾಸುವಿನಲ್ಲಿ ಉದ್ಭವಿಸಬಹುದಾದ ಮೂಲಭೂತ ಪ್ರಶ್ನೆಗಳು. ಅದಕ್ಕೆ ಯುಧಿಷ್ಠಿರನ ಉತ್ತರ ಹೀಗಿದೆ. 


ಬ್ರಹ್ಮಾದಿತ್ಯಂ ಉನ್ನಯತಿ ದೇವಾಸ್ತಸ್ಯಾಭಿತಶ್ಚರಾಃ | 

ಧರ್ಮಶ್ಚಾಸ್ತಂ ನಯತಿ ಚ ಸತ್ಯೇ ಚ ಪ್ರತಿತಿಷ್ಠತಿ ॥ 


ಸೂರ್ಯನನ್ನು ಉದಯಿಸುವಂತೆ ಮಾಡುವುದು ಬ್ರಹ್ಮ. ಇವನ ಸುತ್ತ ಚರಿಸುವವರು ದೇವತೆಗಳು. ಧರ್ಮಕಾರಣದಿಂದ ಸೂರ್ಯ ಮುಳುಗುತ್ತಾನೆ. ಸೂರ್ಯ ಪ್ರತಿಷ್ಠಿತನಾಗಿರುವುದು ಸತ್ಯದ ಮೇಲೆ. 


ಇದರಲ್ಲಿ ಎರಡು ದೃಷ್ಟಿಕೋನಗಳಿವೆ. ಒಂದು ಯಕ್ಷ ಮತ್ತು ಧರ್ಮರಾಯನ ನಡುವೆ ನಡೆಯುವ ಒಂದು ಸಂವಾದ ರೂಪದ ಕಥೆ. ಇದರಲ್ಲಿ ಇನ್ನೊಂದು ಆಯಾಮ ಕಾಣುತ್ತದೆ. ಯಕ್ಷ ನಾನು ಎನ್ನುವವ ಧರ್ಮವೇ ಮೂರ್ತಿವೆತ್ತಂಥ,ಪರಮಜ್ಞಾನಿ. ಸೂರ್ಯ, ಪರಿಬ್ರಮಣ, ಅಸ್ತಮಾನ, ಬ್ರಹ್ಮ ಇತ್ಯಾದಿ ಶಬ್ಧಗಳಿಗೆ ಜಿಜ್ಞಾಸು ಅರ್ಥ ಹುಡುಕುತ್ತಾನೆ. ಈ ಹೊಸ ಬೆಳಕಿನಲ್ಲಿ ಈ ಸಂವಾದವನ್ನು ನೋಡಿದಾಗ ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ನಾನು ಎನ್ನುವ ಪದಕ್ಕೊಂದು ಅರ್ಥ ಸಿಗುತ್ತದೆ. ಅದರ ಅನ್ವೇಷಣೆಯತ್ತ ಕರೆದೊಯ್ಯುವುದೇ ಈ ಸಂವಾದದ ಮೂಲಭೂತ ಉದ್ದೇಶ. 


ಹೀಗೆ ಯಕ್ಷ ಮೊದಲ ಕಂತಿನಲ್ಲಿಯೇ " ಸೂರ್ಯ " ಎಂಬ ಶಬ್ದ ತರುತ್ತಾನೆ. ಸೂರ್ಯ ಈ ಸೂರ್ಮಂಡಲದ ಸಮಸ್ತ ಗ್ರಹಗಳಿಗೆ ಜೀವಾಧಾರ. ಇದರ ಬೆಳಕಿನಿಂದ ಜೀವಸಂಕುಲದ ಅಸ್ತಿತ್ವ.  "ಜೀವ" ಎಂದರೆ ಈ ದೇಹವನ್ನು ನಡೆಸುವ ಚೈತನ್ಯ.  ಅದನ್ನು ಆತ್ಮ, ಪರಮಾತ್ಮನ ಅಂಶ, ಚೈತನ್ಯ ಎಂದೆಲ್ಲ ಮನೂಕುಲ ಗುರುತಿಸುತ್ತದೆ.ಈ ಚೈತನ್ಯ ಬಂದದ್ದೆಲ್ಲಿಂದ ? ಹೋಗುವುದೆಲ್ಲಿಗೆ ? ಈ ದೇಹಧಾರಣೆ ಮಾಡಲು ಕಾರಣವೇನು? ಅದರ ಸ್ವರೂಪವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವುದೇ "ಜೀವನ". ದೇಹಧಾರಣೆಯ ಗುರಿ ಉತ್ತರವೇ ಬೆಳಕು ಎಂದರು ಬಲ್ಲವರು. ಪ್ರಖರ ಬೆಳಕನ್ನು ಜೀವಾಧಾರವನ್ನು " ಸೂರ್ಯ " ಎಂದು ಹೆಸರಿಸಿರದು. ಈ ಸೂರ್ಯನ ಅಂದರೆ ಜ್ಞಾನ ಸೂರ್ಯನನ್ನು ಉದಯಿಸುವಂತೆ ಮಾಡುವುದ್ಯಾವುದು? ಎಂದು ಪ್ರಶ್ನಿಸಿದ್ದ ಯಕ್ಷ. 


ಧರ್ಮರಾಯ ಕೊಟ್ಟ ಉತ್ತರ ಬ್ರಹ್ಮ.  ಬ್ರಹ್ಮ ಎಂದರೆ ಪಾರಮಾರ್ಥ ಜ್ಞಾನ ಸ್ವರೂಪದ ಅರಿವು. ಈ ಅರಿವಿನಿಂದ ಮಾತ್ರ ಜ್ಞಾನಸೂರ್ಯ ಹುಟ್ಟುತ್ತಾನೆ ಎಂದ ಧರ್ಮರಾಯ.  ಸ್ವರೂಪವೆಂಬ ಸೂರ್ಯಾಸ್ತಕ್ಕೆ " ಬ್ರಹ್ಮ " ಕಾರಣ ಮತ್ತು " ದೇವತೆಗಳು ಇದರ ಸುತ್ತ ಚಲಿಸುವವರು ಎಂದ ಧರ್ಮಜ. 


ಯಕ್ಷಪ್ರಶ್ನೆ:  ೨; ಕೇನಸ್ವಿ ಚ್ಛ್ತಿಯೋ ಭವತಿ ಕೇನಸ್ವಿದ್ವಿನ್ದತೇ ಮಹತ್ । 

                    ಕೇನಸ್ವಿದ್ದ್ವಿಯವಾನ್ಭವತಿ ರಾಜನ್ಕೇನ ಚ ಬುದ್ಧಿಮಾನ್॥ 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ, 


ಶ್ರುತೇನ ಶ್ರೋತ್ರಿಯೋ ಭವತಿ ತಪಸಾ ವಿನ್ದತೇ ಮಹತ್ । 

ಧೃತ್ವಾ ದ್ವಿತೀಯಾನ್ಭವತಿ ಬುದ್ಧಿಮಾನ್ವೃದ್ಧ ಸೇವಯಾ॥ 


ವೇದಾಧ್ಯಯನದಿಂದ ಶ್ರೋತ್ರಿಯನಾಗುತ್ತಾನೆ. ತಪಸ್ಸಿನಿಂದ ಮಹತ್ತಾದುದನ್ನು ಪಡೆಯುತ್ತಾನೆ. ಧೈರ್ಯದಿಂದ ಎರಡನೆಯ ರೂಪ ಪಡೆಯುತ್ತಾನೆ. ವೃದ್ಧರ ಸೇವೆಯಿಂದ ಬುದ್ಧಿವಂತನಾಗುತ್ತಾನೆ. 


ಬರೆದಿಟ್ಟಿರುವುದನ್ನು ಓದಿ ತಿಳಿದುಕೊಳ್ಳುವಾಗ ತಪ್ಪುಗಳಾಗಬಹುದು. ಕೇಳಿ ತಿಳಿಯುವಾಗ ತಪ್ಪಾಗಲಾರದು. ಬಳಿಯಲ್ಲಿ ತಿದ್ದುವ ಗುರುವಿನ ಉಪಸ್ಥಿತಿ ಇರುತ್ತದೆ. ಆದುದರಿಂದ ಶ್ರುತೇನ ಶ್ರೋತ್ರಿಯೋ ಭವತಿ. ಮನಸ್ಸಿನಮೇಲೆ ಸಂಪೂರ್ಣ ನಿಯಂತ್ರಣವಿಟ್ಟು ಇಚ್ಛಿಸಿದ ವಿಷಯದಮೇಲೆ ಏಕಾಗ್ರತೆಯಿಂದ ಚಿಂತನೆ ನಡೆಸುವುದೇ ತಪಸ್ಸು. ಮೂಲಸ್ವರೂಪದ ತಿಳಿವಳಿಕೆಗಾಗಿ ತಪಿಸಿದಾಗ ಮಹತ್ತಾದದ್ದು ಲಭ್ಯವಾಗುತ್ತದೆ. ಸ್ವರೂಪಜ್ಞಾನವೇ ಮಹತ್ ಜ್ಞಾನ. ಮನುಷ್ಯ ಹಿರಿದಾದುದನ್ನು ಪಡೆಯುವ ಕಾಂಕ್ಷೆಯಿಂದ ತಪಸೆ, ತಪಸ್ಸಿನಲ್ಲಿ ಪಡೆದಿದ್ದನ್ನು ಧಾರಣಮಾಡಿದಾಗ ಮತ್ತೊಂದು ಮುಖ ತೆರೆದುಕೊಳ್ಳುತ್ತದೆ. ಸುಖ-ದುಃಖಗಳನ್ನು ಸಮನಾಗಿ ಕಾಣುತ್ತ ದ್ವೇಷ-ರಾಗಗಳಿಂದ ಹೊರಗೆ ನಿಂತವನಿಗೆ ಆನಂದದ ಸ್ಥಿತಿ ಸ್ಥಿರವಾಗುತ್ತದೆ. ಇಂಥವ ಕರ್ಮ ಬಂಧನದಿಂದ ಮುಕ್ತನಾಗುತ್ತಾನೆ. ಇದೇ ಮುಕ್ತ ಜೀವನ. ತಪಸ್ಸಿನಿಂದ ಸ್ವರೂಪಜ್ಞಾನ ಪಡೆದ ವೃಧ್ದರನ್ನು ಸೇವಿಸುವುದರಿಂದ ಬುದ್ಧಿವಂತರಾಗುತ್ತಾರೆ ಎಂದ ಧರ್ಮರಾಯ.  


ಯಕ್ಷಪ್ರಶ್ನೆ: ೩ ; ಕಿಂ ಬ್ರಾಹ್ಮಣಾನಾಂ ದೇವತ್ವಂ ಕಶ್ಚ ಧರ್ಮಃ ಸತಾಮಿವ। 

                    ಕಶ್ಚೈಷಾಂ ಮಾನುಷೋ ಭಾವಃ ಕಿಮೇಷಾಮಸತಾಮಿವ॥ 


ಬ್ರಾಹ್ಮಣರಿಗೆ ದೇವತ್ವ ಯಾವುದರಿಂದ ? ಸಾತ್ವಿಕರಿಗೆ ಧರ್ಮ ಯಾವುದು? ಅವರು ಮನುಷ್ಯತ್ವ ಹೊಂದುವುದ ಹೇಗೆ ? ಯಾವುದು ಅಸತ್ಕಾರ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಕೊಟ್ಟ ಉತ್ತರ:


ಸ್ವಾಧ್ಯಾಯ ಏಷಾಂ ದೇವತ್ವಂ ತಪ ಏಷಾಂ ಸತಾಮಿವ। 

ಮರಣಂ ಮಾನುಷೋ ಭಾವಃ ಪರಿವಾದೋऽ ಸತಾಮಿವ॥


ವೇದಾಧ್ಯನದಿಂದಲೇ ದೇವತ್ವ. ಸತ್ಪುರುಷರಿಗೆ ತಪಸ್ಸೇ ಧರ್ಮ. 

ಮರಣದಿಂದಲೇ ಮನುಷ್ಯತ್ವ  ಅಪವಾದವೇ ಅಸತ್ಕಾರ್ಯ. 


ವೇದಜ್ಞಾನದಿಂದ ಮತ್ತು ಬ್ರಹ್ಮೋಪಾಸನೆಯಿಂದ ಮಾತ್ರ ಬ್ರಾಹ್ಮಣನಾಗುತ್ತಾನೆ. ಇವುಗಳಿಂದ ದೈವತ್ವಕ್ಕೇರುತ್ತಾನೆ. ಸತ್ಪುರುಷನೆನಿಸಿಕೊಳ್ಳುತ್ತಾನೆ. ಇಂಥ ಸತ್ಪುರುಷ ನಿರಂತರ ತಪಸ್ಸು, ಬ್ರಹ್ಮಜ್ಞಾನದ ಉಪಾಸನೆ, ಹಾಗೂ ಬಯಸುವವರಿಗೆ ಮಾರ್ಗದರ್ಶನ, ಯಜ್ಞಗಳಿಂದ ಜಗತ್ತಿಗೆ ಶಾಂತಿ ಸುಖಗಳನ್ನು ದೊರಕಿಸುವುದು ತಪಸ್ಸು. ಮರಣವೆಂದರೆ ದೇಹದ ಸಾವಲ್ಲ. ದೈವತ್ವದ, ಬ್ರಹ್ಮೋಪಾಸನೆಯ,ತಪಸ್ಸಿನ ಸಾವು. ಅಂದರೆ ಧರ್ಮದಿಂದ ವಿಮುಖನಾಗುವುದು. ಹೀಗೆ ಮಾಡುವುದರಿಂದ ಮರಣಹೊಂದಿ ಸಾಮಾನ್ಯ ಮನುಷ್ಯನಾಗುತ್ತಾನೆ. ಪರನಿಂದೆ ಬ್ರಾಹ್ಮಣನಿಗೆ ಸಲ್ಲದು. ಅದರಿಂದ ಧರ್ಮದಲ್ಲಿ ದೋಷವುಂಟಾಗುತ್ತದೆ. ಅಂದರೆ ಮನಸ್ಸು ವಿಕೃತವಾಗುತ್ತದೆ. ಅವನು ಪರನಿಂದಕನಾಗುತ್ತಾನೆ. ಇದು ಅಸತ್ಕಾರ್ಯ.  


ಯಕ್ಷಪ್ರಶ್ನೆ: ೪; ಕಿಂ ಕ್ಷತ್ರಿಯಾಣಾಂ ದೇವತ್ವಂ ಕಶ್ಚ ಧರ್ಮಃ ಸತಾಮಿವ।

                   ಕಶ್ಚೈಷಾಂ ಮಾನುಷೋ ಭಾವಃ ಕಿಮೇಷಾಮಸತಾಮಿವ॥


ಕ್ಷತ್ರಿಯನಿಗೆ ದೈವತ್ವವನ್ನುಂಟುಮಾಡುವುದು ಯಾವುದು? ಅವರಿಗೆ ಯೋಗ್ಯ ಧರ್ಮ ಯಾವುದು? ಮನುಷ್ಯ ಭಾವ ಯಾವುದರಿಂದ? ಯಾವ ಗುಣದಿಂದ ಅವರು ಸತ್ಪುರುಷರೆನಿಸುವುದಿಲ್ಲ ?


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಕೊಟ್ಟ ಉತ್ತರ ಹೀಗೆ: 


ಇಷ್ವಸ್ತ್ರಮೇಷಾಂ ದೇವತ್ವಂ ಯಜ್ಞ ಏಷಾಂ ಸತಾಮಿವ। 

ಭಯಂ ವೈ ಮಾನುಷೋ ಭಾವಃ ಪರಿತ್ಯಾಗೋऽ ಸತಾಮಿವ॥ 


ಧನುರ್ಬಾಣಗಳ ವಿದ್ಯೆಯು ಕ್ಷತ್ರಿಯರಿಗೆ ದೇವತ್ವವನ್ನುಂಟುಮಾಡುತ್ತದೆ. ಸತ್ಪುರುಷರು ಮಾಡುವ ಯಜ್ಣಯಾಗಾದಿಗಳನ್ನು ಮಾಡುವುದು ಕ್ಷತ್ರಿಯನ ಧರ್ಮ. ಕ್ಷತ್ರಿಯನಾಗಿದ್ದರೂ ಕ್ಷತ್ರಿಯನಿಗೆ ಅಸಹಜವಾದ ಭಯವಿರುವುದೇ ಅವನ ಮನುಷ್ಯತ್ವ. ಶರಣಾದವರನ್ನು ತ್ಯಜಿಸಿದರೆ ಸತ್ಪುರುಷನೆನಿಸಿಕೊಳ್ಳುವುದಿಲ್ಲ. 


ಕ್ಷತ್ರಿಯ ಕುಲದಲ್ಲಿ ಹುಟ್ಟುವವ ಕ್ಷಾತ್ರಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯುವುದರಿಂದ ಗುಣಮತ್ತು ಸ್ವಭಾವಗಳು ಸಹಜವಾಗಿ ರೂಪುಗೊಳ್ಳುತ್ತವೆ. ಅವನು ತನಗೆ ವಿಧಿಸಲ್ಪಟ್ಟ "ಧರ್ಮ" ಗಳನ್ನು ಆಚರಿಸುವುದರಿಂದ ದೈವತ್ವಕ್ಕೆ ಸಲ್ಲುತ್ತಾನೆ.

ಸಾಮಾನ್ಯ ಅರ್ಥದಲ್ಲಿ ಅಶ್ವಮೇಧ ಎಂದರೆ ಕುದುರೆಯನ್ನು ಹೋಮಮಾಡುವುದು ಎಂಬ ಅರ್ಥವಿದೆ. ಮನಸ್ಸಿಗೂ ಅಶ್ವ ಶಬ್ಧ ಎಂಬ ಪ್ರಯೋಗವಿದೆ. ಕಂಡಕಂಡಂತೆ ಓಡುವುದು ಮನಸ್ಸಿನ ಗುಣ. ಇಂಥ ಮನಸ್ಸನ್ನು ನಿರಂತರ ಪ್ರಯತ್ನ ಅಥವಾ ತಪಸ್ಸಿನಿಂದ ಹಿಡಿದು ತಂದು ಅರಿವಿನ ಅಗ್ನಿಯಲ್ಲಿ ಹೋಮಿಸುವುದೇ ಅಶ್ವಮೇಧ. ಇಂಥ ಯಜ್ಞಗಳೇ ಕ್ಷತ್ರಿಯನ ಧರ್ಮ. 

ಅವರಲ್ಲಿರುವ ದೈರೂಬಲತೆ ಭಯ. ಭಯದ ಮೂಲ ದೇಹದ ಮೇಲಿನ ಮೋಹ. ಸಾವು ಕೂಡ ಇದರ ಒಂದು ರೂಪ. ಎಂದು ಮನುಷ್ಯ ಈ ದೇಹದ ಯಥಾರ್ಥತೆಯನ್ನು ಕಾಣುತ್ತಾನೋ ಅಂದು ಈ ಭಯ ನಿವಾರಣೆಯಾಗುತ್ತದೆ. ಒಮ್ಮೆ ಇದು ಮನವರಿಕೆಯಾದರೆ ಮನುಷ್ಯ ಭಾವ ಇಲ್ಲವಾಗುತ್ತದೆ. ಈ ಭಯದಿಂದ ರಕ್ಷಣೆಯನ್ನರಸಿ ಬಂದವರನ್ನು ನಿರಾಕರಿಸುದೇ ಅವರು ಮಾಡಬಹುದಾದ ಅಧರ್ಮ. ಆಗ ಅವನು ಸತ್ಪುರುಷನೆನಿಸಿಕೊಳ್ಳುವುದಿಲ್ಲ. 


ಯಕ್ಷಪ್ರಶ್ನೆ: ೫ ; ಕಿಮೇಕಂ ಯಜ್ಞಿಯಂ ಸಾಮ ಕಿಮೇಕಂ ಯಜ್ಞಿಯಂ ಯಜುಃ। 

                    ಕಾ ಚೈಷಾಂ ವೃಣುತೋ ಯಜ್ಞಂ ಕಾಂ ಯಜ್ಞೋ ನಾತಿವರ್ತತೇ॥ 


ಯಜ್ಞದಲ್ಲೆ ಅತಿ ಮುಖ್ಯವಾದ ಒಂದು ಸಾಮ ಯಾವುದು ? 

ಯಜ್ಞದಲ್ಲಿ ಅತಿ ಮುಖ್ಯವಾದ ಒಂದು ಯಜುಸ್ಸು ಯಾವುದು? 

ಇವುಗಳಲ್ಲಿ ಯಾವುದು ಯಜ್ಞಕ್ಕೆ ನಿಯೋಜಿಸಲ್ಪಡುತ್ತದೆ? 

ಯಾವುದಿಲ್ಲದಿದ್ದರೆ ಯಜ್ಞ ಅಸಾಧ್ಯ? 


ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಪ್ರಾಣೋ ವೈ ಯಜ್ಞಿಯಂ ಸಾಮ ಮನೋ ವೈ ಯಜಾಞಿಯಂ ಯಜುಃ । 

ಋಗೇಕಾ ವೃಣುತೇ ಯಜ್ಞಂ ತಾಂ ಯಜ್ಞೋ ನಾತಿ ವರ್ತಿತೇ ॥ 


ಮನುಷ್ಯತ್ವದಿಂದ ದೈವತ್ವದೆಡೆಗಿನ ನಮ್ಮ ಪಯಣದಲೂಲಿ ಪಾಲಿಸಬೇಕಾದ ನಿಯಮಗಳನ್ನೇ ಯಜ್ಞ ಎಂದರು. ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಬ್ರಹ್ಮಯಜ್ಞ, ಜ್ಞಾನಯಜ್ನ ಇತ್ಯಾದಿ.  ಇವುಗಳೆಲ್ಲ ಭೌತಿಕ ಸ್ವರೂಪದ ಯಜ್ಞಗಳು. ಇವುಗಳನ್ನು ತಿಳಿಯದೆ,  ಆಚರಿಸದೆ ಮುಂದೆ ಹೋಗಲು ಸಾಧ್ಯವಿಲ್ಲ.  


ಪಂಚಭೂತಗಳಿಂದ ಉಂಟಾದ ಈ ದೇಹ, ಬಾಹ್ಯ ಜಗತ್ತಿನ ಸಂಪರ್ಕಕ್ಕೆ ಬಂದಾಗ, ಅದರಲ್ಲಿ ನಾನಾರೀತಿಯ ವಿಕಾರಗಳುಂಟಾಗುತ್ತವೆ. ಕಾಮ, ಕ್ರೋಧ, ರಾಗ, ದ್ವೇಷ ಇತ್ಯಾದಿ ವಿಕಾರಗಳಿಂದ ನಮ್ಮ ಮೂಲಸ್ವರೂಪ ಮರೆತು ದೇಹವೇ ನಾನೆಂಬ ಭ್ರಮೆಯಾಗುತ್ತದೆ. ಪ್ರಯತ್ನಪೂರ್ವಕವಾಗಿ ಮನಸ್ಸನ್ನು ಹದಗೊಳಿಸಿ, ಪ್ರಾಣವೇ ನಾನೆಂಬ ಅರಿವಿನಲ್ಲಿ ವಿಕಾರಗಳನ್ನು ಹೋಮಿಸುವುದೇ ಆತ್ಮಯಜ್ಞ. ಆದುದರಿಂದ ಪ್ರಾಣವೇ ಅಗ್ನಿ.  ಅಂದರೆ ಬೆಳಕು, ಅರಿವು. ಮನಸ್ಸನ್ನು ಇದರಲ್ಲಿ ತೊಡಗಿಸುವುದೇ ಯಜ್ಞ.ಋಕ್ಕು ಎಂದರೆ ಮಂತ್ರ. ಸಾಮ ಎಂದರೆ ಋಕ್ಕನ್ನು ಛಂದೋಬದ್ಧವಾಗಿ, ಲಯಬದ್ಧವಾಗಿ ಉಚ್ಚರಿಸುವುದು ಯಾ ಹಾಡುವುದು. ಪ್ರಾಣ ಎಂದರೆ, ದೇಹದಲ್ಲಿದ್ದುಕೊಂಡು ಅದನ್ನು ನಡೆಸುವ ಚೈತನ್ಯ.  ಇದು ಅನುಭವವೇದ್ಯ. ನಾನು ಈ ದೇಹವಲ್ಲ. ನಾನು ವಿಶ್ವಚೈತನ್ಯದ ಒಂದು ಭಾಗ. ನಾನೇ ಬ್ರಹ್ಮ,  ಅಂದರೆ ಸಮಸ್ತ ಸೃಷ್ಟಿಜ್ಞಾನವನ್ನುಒಳಗೊಂಡಿರುವವ. ಅದೇ ನಾನು. ಇದಲ್ಲ ಎನ್ನುವುದೇ ಈ ಆತ್ಮಯಜ್ಞದ ಋಕ್ಕು. ಇದನ್ನೇ ಪ್ರಾಚೀನ ದ್ರಷ್ಟಾರರು " ಅಹಂ ಬ್ರಹ್ಮಾಸ್ಮಿ " ಎಂದರು. ನಿರಂತರವಾಗಿ "ಅಹಂ" ನ್ನು ಹೋಮಿಸುವುದೇ ಆತ್ಮಯಜ್ಞ ಎಂದು ಉತ್ತರಿಸಿದ್ದನ್ನು ಯಕ್ಷ ಒಪ್ಪಿದ. 


ಯಕ್ಷಪ್ರಶ್ನೆ: ೬; ಕಿಂ ಸ್ವಿದಾವಪತಾಂ ಶ್ರೇಷ್ಠಂ ಕಿಂ ಸ್ವಿನ್ನಿವಪತಾಂ ವರಮ್। 

                    ಕಿಂಸ್ವಿತ್ ಪ್ರತಿಷ್ಟಮಾನಾನಾಂ ಕಿಂಸ್ವಿತ್ ಪ್ರಸವತಾಂ ವರಮ್॥ 


ದೇವತರ್ಪಣ ಮಾಡುವವರಿಗೆ ಶ್ರೇಷ್ಠಫಲ ಯಾವುದು? 

ಪಿತೃತರ್ಪಣ ಮಾಡುವವನಿಗೆ ಉತ್ತಮಫಲ ಯಾವುದು ॥ 


ಯಕ್ಷಪ್ರಶ್ನೆಗೆ ಧರ್ಮರಾಯನ ಉತ್ತರ ಹೀಗಿತ್ತು. 


ವರ್ಷಮಾವಪತಾಂ ಶ್ರೇಷಾಠಂ ಬೀಜಂ ನಿವಪತಾಂ ವರಮ್। 

ಗಾವಃ ಪ್ರತಿಷ್ಟಮಾನಾನಾಂ ಪುತ್ರಂ ಪ್ರಸವತಾಂ ವರಃ ॥ 


ದೇವತರ್ಪಣ ಮಾಡುವವರಿಗೆ ಮಳೆ ಫಲ. ಪಿತೃತರ್ಪಣ ಮಾಡುವವನಿಗೆ ಬೀಜವೇ ಫಲ.ಸುಖಾಪೇಕ್ಷಿಗಳಿಗೆ ಹಸುಗಳು ಉತ್ತಮ ಫಲ. ಸಂತತಿಯನಿಚ್ಛಿಸುವವನಿಗೆ ಪುತ್ರನೇ ಉತ್ತಮ ಫಲ.  


ಮೂಲದಲ್ಲಿ ವಿಶ್ವಚೈತನ್ಯ ಒಂದೇ. ಈ ಚೈತನ್ಯವನ್ನು ಗುರುತಿಸಿ, ಗೌರವಿಸುವ, ಪೂಜಿಸುವ ತನ್ಮೂಲಕ ಐಹಿಕ ಬದುಕನ್ನು ಹಸನಾಗಿರಿಸಿಕೊಳ್ಳುವುದು ಭಾರತೀಯ ಸಭ್ಯತೆ. ಅಗ್ನಿಯಲ್ಲಿ ಹವೆಸ್ಸನ್ನು ನೀಡುವುದು ಭೌತಿಕಕ್ರಿಯೆ. ಇದು ಋತುಗಳ ಸಮತೋಲನಕ್ಕೆ ಲಭಿಸುವ ಫಲ. ಆಂತರಿಕ ಯಜ್ಞನದಲ್ಲಿ ಕಾಮನೆಗಳು, ಪ್ರವೃತ್ತಿಗಳನ್ನು ಹೋಮಿಸುವುದು ತರ್ಪಣ. ಇದರ ಪಲ ಜ್ಞಾನ ವರ್ಷಧಾರೆ. ಕುಟುಂಬದಲ್ಲಿ ಆಗಿಹೋದ ಯಾ ಇರುವ ವಯೋವೃದ್ಧ ಯಾ ಜ್ಞಾನವೃದ್ಧರ ಸೇವೆ ಮಾಡುವುದು. ಇವೇ ಇಹ-ಪರಗಳಲ್ಲಿ ಸಮೃದ್ಧಿ ಶಾಂತಿ ನೀಡುವ ಬೀಜಗಳು. ಪಿತೃಗಳು ಎಂದರೆ ಪ್ರಾಚೀನರು ಕಂಡ "ಸೂತ್ರಗಳು". ಇವುಗಳ ಅಧ್ಯಯನ, ಮನನ . ಇವು ಬೀಜರೂಪದಿಂದ "ಜೀವದಲೂಲಿವೆ " ಇವು ಪ್ರಾಪ್ತವಾಗುತ್ತವೆ.ಇಂದ್ರಿಯ ಸುಖ ಬಯಸುವವರಿಗೆ ಇಂದ್ರಿಯಗಳೇ ಮುಖ್ಯ.ಸಾಂಪ್ರದಾಯಿಕ ಕುಟುಂಬಗಳಲ್ಲಿ ಹೆತ್ತವರ ಅಂತ್ಯಕರ್ಮಗಳ ಜವಾಬ್ದಾರಿ ಗಂಡುಮಕ್ಕಳ ಕರ್ತವ್ಯ. ಆದುದರಿಂದ ಪುತ್ರಸಂತಾನ ಅಗತ್ಯ. ಪುತ್ರ ಪಿತನ ಪ್ರತಿರೂಪ. ವಿಶ್ವವ್ಯಾಪೀ ಚೈತನ್ಯದ ಸೂಕ್ಷ್ಮರೂಪ ಜೀವ. ಜೀವದ ಬೃಹತ್ರೂಪ ವಿಶ್ವಚೈತನ್ಯ. ಅದಕ್ಕೆಂದೇ ನಮ್ಮವರು " ಅಹಂ ಬ್ರಹ್ಮಾಸ್ಮಿ"  ಎಂದರು. ಬ್ರಹ್ರೂಪವೇ ಪುತ್ರ. ಹೊಸ ಹುಟ್ಟುಇದು. 


ಯಕ್ಷಪ್ರಶ್ನೆ: ೭ ; ಇನ್ದ್ರಿಯಾರ್ಥಾನನುಭವನ್ಬುದ್ಧಿಮಾಂಲ್ಲೋಕ ಪೂಜಿತಃ । 

                     ಸಮ್ಮತಃ ಸರ್ವಭೂತಾನಾಮುಚ್ಛ್ವಸನ್ಕೋ ನ ಜೀವತಿ॥ 


ಇಂದ್ರಿಯಸುಖಾನುಭವ ಮಾಡುತ್ತಾ, ಬುದ್ಧಿವಂತನೆಂದು ಲೋಕಪೂಜಿತನಾಗಿ ಸಮಸ್ತಭೂತಗಳೂ ಗೌರವದಿಂದ ಕಾಣುತ್ತಿದ್ದರೂಬದುಕಿಯೂ ಸತ್ತವನಂತಿರುವವನ್ಯಾರು? 


ಈ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ದೇವತಾತಿಥಿಭೃತ್ಯಾನಾಂ ಪಿತೃಣಾಮಾತ್ಮನಶ್ಚಯಃ। 

ನ ನಿರ್ವಪತಿ ಪಂಚಾನಾಮ್ ಉಚ್ಛ್ವಸನ್ ನ ಸಜೀವತಿ॥ 


ದೇವತೆಗಳು, ಅತಿಥಿಗಳು, ಪಿತೃಗಳು, ಭೃತ್ಯರು ಹಾಗೂ ತಾನು - ಈ ಐವರಿಗೆ ತೃಪ್ತಿಯಾಗುವಂತೆ ನಡೆಯದವ ಬದುಕಿದ್ದರೂ ಸತ್ತಂತೆ. 


ಆತ್ಮ ಎಂದರೆ ಪಂಚಭೂತಾತ್ಮಕ ದೇಹವನ್ನು ನಡೆಸುವ ಚೈತನ್ಯ. ಇದರ ಮೂಲ ಮತ್ತು ಸ್ವಭಾವವನ್ನು ಅರಿತರೆ, ಇಡೀ ಬ್ರಹ್ಮಾಂಡದ ರಹಸ್ಯವನ್ನು ತಿಳಿಯಬಹುದು. ಈ ತಿಳಿವಿನ ಬಗ್ಗೆ ತಪಿಸುವುದೇ ಆತ್ಮ ಯಜ್ಞ.  ಭೌತಿಕ ಕಾಮನೆಗಳನ್ನು ತಿಳಿವಿನ ಅಗ್ನಿ ಯಲ್ಲಿ ಹೋಮಿಸುತ್ತಾ ದೈವತ್ವಕ್ಕೇರುವುದೇ. ಈ ಸೃಷ್ಟಿ ಪೂರ್ತಿಯಾಗಿ ಚೈತನ್ಯ ಸ್ವರೂಪಿ. ಈ ಚೈತನ್ಯದ ಗತಿ ಬೇರೆಬೇರೆ ಸ್ತರಗಳಲ್ಲಿರುತ್ತದೆ. ಯಾವ ಚೈತನ್ಯಕ್ಕೆ ಪುಷ್ಟಿ ನೀಡಬೇಕಿದೆಯೋ ಆ ಗತಿಯಲ್ಲಿ ನಾದದ ಮೂಲಕ - ಮಂತ್ರಗಳನ್ನು ಕ್ರಮಬದ್ಧವಾಗಿ ಪಠಿಸುವ- ಚೈತನ್ಯ ನೀಡಬಹುದೆಂದು ನಮ್ಮ ಪ್ರಾಚೀನರಿಗೆ ತಿಳಿದಿತ್ತು. ಇದೇ ದೇವಯಜ್ಞ.  ಪಿತೃ ಎಂದರೆ ಹಿರಿಯರು. ಮುಖ್ಯವಾಗಿ ಕುಟುಂಬದ ಹಿರಿಯರು. ಹೆತ್ತವರು, ಅಜ್ಜ-ಅಜ್ಜಿ ಅವರ ಹಿಂದಿನ ತಲೆಮಾರು.  ಗತಿಸದ ಚೈತನ್ಯಗಳನ್ನು ಸ್ಮರಿಸಿ ಅವುಗಳಿಗೆ ಪುಷ್ಟಿ ನೀಡುವುದೇ ಪಿತೃಯಜ್ಞ. ಒಂದೈ ಕುಟುಂಬದ ಹಿರಿಯನ ಮೇಲೆ ಇಡೀ ಕುಟುಂಬ ಅವಲಂಬಿಸಿರುತ್ತದೆ. ಹೆಂಡತಿ,ಮಕ್ಕಳು,  ವಯಸ್ಸಾದ ಹಿರಿಯರು,ಸೇವಕರು, ಗೋ ಸಂಪತ್ತು- ಇವರೆಲ್ಲರೂ ಭೃತ್ಯರೇ. ಇವರನ್ನು ಪ್ರೇಮ ಕರೈಣೆಗಳಿಂದ  ಕಾಣುತ್ತಾ,ಅವರಿಗೆ ಸಲ್ಲಬೇಕಾದುದನ್ನು ನೀಡುವುದೇ ಭೃತ್ಯಯಜ್ಞ ಯಾ ಮನುಷ್ಯಯಜ್ಞ. ಈ ಮೇಲಿನ ಕರ್ತವ್ಯಗಳನ್ನು ನಿರ್ವಹಿಸಲಾರದವ ಬದುಕಿದ್ದರೂ ಸತ್ತವನಂತೆ. 


ಯಕ್ಷಪ್ರಶ್ನೆ: ೮ ;  ಕಿಂಸ್ವಿದ್ಗುರುತರಂ ಭೂಮೇಃ ಕಿಂಸ್ವಿದುಚ್ಚತರಂ ಚ ಖಾತ್। 

                      ಕಿಂಸ್ವಿಚ್ಛೇಘ್ರತರಂ ವಾಯೋಃ ಕಿಂಸ್ವಿದ್ಬಹುತರಂ ತೃಣಾತ್॥ 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ.  


ಮಾತಾ ಗುರುತರಾ ಭೂಮೇಃ ಖಾತ್ಪಿತೋಚ್ಚತರಸ್ತಥಾ । 

ಮನಃ ಶೀಘ್ರತರಂ ವಾತಾಚಿನ್ತಾ ಬಹುತರೀ ತೃಣಾತ್॥ 


ತಾಯಿ ಭೂಮಿಗಿಂತ ಭಾರ. ತಂದೆ ಆಕಾಶಕ್ಕಿಂತ ಎತ್ತರ. ಮನಸ್ಸನ್ನು ವಾಯುವಿಗಿಂತ ವೇಗವಾದುದು. ಚಿಂತೆಗಳು ಹುಲ್ಲಿಗಿಂತ ಹೆಚ್ಚಾಗಿವೆ. ಹೆತ್ತವಳು ತಾಯಿ. ನವಮಾಸ ಗರ್ಭದಲ್ಲಿ ಧರಿಸಿ, ನಾನಾ ರೀತಿಯ ಪೀಡೆಗಳನ್ನು ಅನುಭವಿಸಿ ಪ್ರಸವ ಕಾಲದಲ್ಲಿ ಅಸಹನೀಯ ನೋವನ್ನುಂಡು ಜನ್ಮವೀಯುವಳು. ಪರಾವಲಂಬಿಯಾಗಿರುವ ಕಂದನನ್ನು ಕಣ್ಣರೆಪ್ಪೆಯಂತೆ, ಜತನದಿಂದ ಬೆಳೆಸುವವಳು ತಾಯಿ. ಆದುದರಿಂದ ಬದುಕು ರೂಪಿಸುವವಳು ತಾಯಿ. ಹಾಗೇ ಜಗತ್ತು ವಿಶ್ವಚೈತನ್ಯದಿಂದ ಹುಟ್ಟಿತಾದರೂ ಹುಟ್ಟಿಸಿದ ಶಕ್ತಿ ಪ್ರಕೃತಿಮಾತೆ. ಆದ್ದರಿಂದ ತಾಯಿ ಭೂಮಿಗಿಂತ ಭಾರ.  ತಾಯಿಯನ್ನು ಆದರಿಸುವವ ತಂದೆ. ಸಂಸಾರವನ್ನು ಧರ್ಮಮಾರ್ಗದಿಂದ ನಡೆಸುವವ ತಂದೆ. ಆದುದರಿಂದ ಅವನ ಸ್ಥಾನ ಎತ್ತರದಲ್ಲಿ  ಅಂದರೆ ಆಕಾಶಕ್ಕಿಂತ ಎತ್ತರ. ಮನುಷ್ಯನಿಗೆ ಅನುಗಾಲವೂ ಚಿಂತೆ. ಸಾವಿರ ರೂಪದ ಯೋಚನೆಗಳು. ಮನಸ್ಸಿನ ಚಂಚಲ ಸ್ವಭಾವದಿಂದ ಯೋಚನೆಗಳು ವಾಯುಗಿಂತ ವೇಗವಾಗಿ ಚಲಿಸುತ್ತವೆ. 


ಯಕ್ಷಪ್ರಶ್ನೆ:  ೯;  ಕಿಂ ಸ್ವಿತ್ಸುಪ್ತಂ ನ ನಿಮಿಷತಿ ಸ್ವಿಜ್ಜಾತಂ ನ ಚೋಪತಿ। 

                      ಕಸ್ಯಸ್ವಿದ್ಧೃದಯಂ ನಾಸ್ತಿ ಕಿಂ ಸ್ವಿದ್ವೇಗೇನ ವರ್ಧತೇ॥ 


ನಿದ್ರಿಸುವಾಗಲೂ ರೆಪ್ಪೆ ಮುಚ್ಚದಿರುವುದು ಯಾವುದು ? ಜನಿಸಿಯೂ ಜಡವಾಗಿರುವುದ್ಯಾವುದು ? ಹೃದಯವಿಲ್ಲದ್ಯಾವುದು ? ವೇಗದಿಂದ ವರ್ಧಿಸುವುದ್ಯಾವುದು ? 


ಈ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ:


ಮತ್ಸ್ಯಃ ಸುಪ್ತೋನ ನ ನಿಮಿಷತ್ಯಣ್ಡಂ ಜಾತಂ ನ ಚೋಪತಿ। 

ಅಶ್ಮನೋ ಹೃದಯಂ ನಾಸ್ತಿ ನದೀ ವೇಗೇನ ವರ್ಧತೇ॥ 


ನಿದ್ರಿಸುವಾಗ ಮೀನು ರೆಪ್ಪೆ ಮುಚ್ಚುವುದಿಲ್ಲ. ಜನಿಸಿಯೂ ಅಂಡ ಚಲಿಸದು. ಶಿಲೆಗೆ ಹೃದಯವಿಲ್ಲ.ವೇಗವಾಗಿ ವರ್ಧಿಸುವುದು ನದಿ. 


ಮತ್ಸ್ಯ ಎಂದರೆ ಮೀನು. ಮೀನು ನಿದ್ರಿಸುವಾಗಲೂ ಕಣ್ಣು ಮುಚ್ಚುವುದಿಲ್ಲ.  ಮೀನು ಬದುಕಿನ ಸಂಕೇತ. ನದಿ ಸಂಸಾರದ ಸಂಕೇತ ಮೀನು ನದಿಯಲ್ಲಿ ಚಲಿಸುತ್ತಾ ಒಂದು ದಂಡೆಯಿಂದ ಮತ್ತೊಂದು ದಡಕ್ಕೆ ಹೋಗುತ್ತದೆ. ಸ್ವಪ್ನ ಬದುಕು. ಜಾಗೃತಿ ಪಾರಮಾರ್ಥದತ್ತ ಜೀವನ ಪಯಣ. ಎರಡೂ ಕಡೆ ಅವನು ಎಚ್ಚರದಿಂದ ಬದುಕನ್ನು ಗಮನೆಸುತ್ತಾನೆ. ಸಾಮಾನ್ಯನ ಬದುಕು ಅಂಡದಂತೆ. ಅದು ಮುಂದೆ ಚಲಿಸದು. ಬದುಕಿದೆ ಆದರೆ ಬದುಕು ಸಾವಿನಂತಿದೆ. ಸಂಸಾರದ ಮಾಯೆಯೊಳಗೆ ಅಡಗಿದೆ ಜೀವ. ಮೊಟ್ಟೆಯ ಸಿಪ್ಪೆಯೊಡೆದು ಹೊರಬಂದರೆ ಬೆಳಗುವ ಸೂರ್ಯದರ್ಶನವಾಗುತ್ತದೆ. ಜೀವ ಬೆಳೆಯತೊಡಗುತ್ತದೆ. ಆತ್ಮ ಎಂದರೆ ಕಲ್ಲು ಎಂಬರ್ಥವೂ ಇದೆ. "ಶ್ಮ " ಎಂದರೆ ನಾಶವಾಗುವಂತದ್ದು. ಪಂಚಭೂತಗಳಿಂದಾದ ಈಶರೀರ ನಶ್ವರ, ನಾಶವಾಗುವಂಥದ್ದು. ಇದನ್ನು ಹೊಂದಿರುವವನು ಅಶ್ಮ. ಅಂದರೆ ಇದರ ಸ್ವಭಾವವನ್ನು ತಿಳಿದವ. ಇಂದ್ರಿಯಜನ್ಯ ಭಾವನೆಗಳಿಗೆ ಸ್ಪಂದಿಸುವುದಿಲ್ಲ. ನದಿ ಹರಿವಿಗೆ ಪರ್ಯಾಯ ಹೆಸರು. ಮನಸ್ಸು ಭೌತಿಕ ಸುಖಗಳ ಸಂಪರ್ಕಕ್ಕೆ ಬಂದಾಗ ಇದರ ಹರಿವು ಬಲಗೊಳ್ಳುತ್ತದೆ. ಆಜ್ಯ ಹಾಕಿದಷ್ಟೂ ಬೆಂಕಿ ಪ್ರಜ್ವಲಗೊಳ್ಳುವಂತೆ ಭೋಗಿಸಿದಷ್ಟೂ ಕಾಮನೆಗಳು ಎದ್ದು ಕುಣಿಯುತ್ತವೆ. 


ಯಕ್ಷಪ್ರಶ್ನೆ:  ೧೦ ;  ಕಿಂ ಸ್ವಿತ್ ಪ್ರವಸತೋ ಮಿತ್ರಂ ಕಿಂ ಸ್ವಿನ್ ಮಿತ್ರಂ ಗೃಹೇ ಸತಃ । 

                         ಆತುರಸ್ಯ ತು ಕಿಂ ಮಿತ್ರಂ ಕಿಂ ಸ್ವಿನ್ ಮಿತ್ರಂ ಮರಿಷ್ಯತಃ॥ 


ಪ್ರವಾಸಿಗೆ ಮಿತ್ರನ್ಯಾರು ? ಮನೆಯಲ್ಲಿ ಯಾರು ಮಿತ್ರ ? ರೋಗಿಗೆ ಮಿತ್ರನ್ಯಾರು ? ಸಾಯುವವನಿಗೆ ಯಾರು ಮಿತ್ರ ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಕೊಟ್ಟ ಉತ್ತರ ಹೀಗೆ : 


ಸಾರ್ಥಃ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರ ಗೃಹೇ ಸತಃ । 

ಆತುರಸ್ಯ ಭಿಷಮ್ಮಿತ್ರಂ ದಾನಂ ಮಿತ್ರಂ ಮರಿಷ್ಯತಿ ॥ 


ಪ್ರವಾಸಿಗೆ ಮಿತ್ರ ಸಹಪ್ರಯಾಣಿಕರು. ಪತ್ನಿ ಮನೆಯಲ್ಲಿ ಮಿತ್ರಳು. ರೋಗಿಗೆ ವೈದ್ಯ ಮಿತ್ರನಾದರೆ ಸಾವಿನಂಚಿನಲ್ಲಿರುವವನಿಗೆ ದಾನ ಮಿತ್ರ. 


" ಮಿತ್ರ " ಎಂದರೆ ಸಹೃದಯ.  ಹೃದಯವನ್ನು ಅರಿತವನು. ಹೃದಯ ಎಂದರೆ ಭಾವನೆಗಳ ಕೇಂದ್ರ. ಅರಿವು ತಿಳುವಳಿಕೆಗಳೆಲ್ಲಕ್ಕೂ ಹೃದಯ ಪರ್ಯಾಯ ಪದ. ಇಂಥ ಹೃದಯವನ್ನು ಅರ್ಥಮಾಡಿಕೊಳ್ಳಬಲ್ಲವನೇ ಸಖ. ಹಾಗೇ ಇವನೂ ಸಹೃದಯನಾಗಿರಬೇಕು. ಇಂಥವನು ಮಿತ್ರ. ಸಾರ್ಥ ಎಂದರೆ ವ್ಯಾಪಾರಕ್ಕಾಗಿ ಸಹಪ್ರಯಾಣಿಕರೊಡನೆ ಒಂದು ಊರಿನಿಂದ ಮತ್ತೊಂದಕ್ಕೆ ಪಯಣಿಸುವುದು. ಜೀವನದುದ್ದಕ್ಕೂ ನಾವು ಕಾಣುವ, ಸೇರಿ ಬದುಕುವ, ಬದುಕಿ ಬೇರೆಯಾಗುವ ಪಯಣಿಗರು. ಸಹೃದಯರೇ ಪ್ರವಾಸಿಗೆ ಮಿತ್ರರು. ಪತ್ನಿಯನ್ನು ಕೈಹಿಡಿದು ಅವಳೊಂದಿಗೆ ಏಳು ಹೆಜ್ಜೆ ಇಡುವುದರ ಮೂಲಕ ನೀನು ನನ್ನ ಸಖಿ, ಮಿತ್ರಳು ಎನ್ನುತ್ತಾನೆ. ದುಕಿನ ಏಳು ಬೀಳುಗಳನ್ನು ಒಂದಾಗಿ ಅನುಭವಿಸುವ ಅಗತ್ಯವಿರುವಾಗ ಸಲಹೆ ನೀಡುವ, ಮನೆವಾರ್ತೆಯನ್ನು ಪತಿಗೆ ತೊಂದರೆಯಾಗದಂತೆ ನಡೆಸಿಕೊಂಡು ಹೋಗುವ ಮಡದಿಯ ಸಾಂಗತ್ಯದಿಂದ ಇಹದ ಬದುಕು ಮಾತ್ರವಲ್ಲ ಪರದ ಬಾಗಿಲು ತೆರೆದುಕೊಳ್ಳುತ್ತದೆ. ಹೀಗೆ ಮನೆಯಲ್ಲಿ ಪತ್ನಿಯೇ ಮಿತ್ರಳು. ಸಾವಿನಂಚಿನಲ್ಲಿರುವವನ ಮಿತ್ರ ದಾನ. ಮನಸ್ಸಿನ ಕಶ್ಮಲಗಳನ್ನು, ಕಾಮನೆಗಳನ್ನು ,ಆಸಕ್ತಿಯನ್ನು ವೆಶ್ವಚೈತನ್ಯಕ್ಕೆ

ಹರಿಯಬಿಡುವುದೇ ಆದಿಭೌತಿಕ ದಾನ. ಅಗತ್ಯವಿರುವವರಿಗೆ ವಸ್ತುಮೂಲಕವಾಗಿ ನೀಡುವುದು ಭೌತಿಕ ದಾನ. ಇದ್ದವ ಇಲ್ಲದವನಿಗೆ ನೀಡುವುದು. ಕೊಂಡವ ನೀಡಿದವನ ಋಣಬಾಧ್ಯನಾಗುತ್ತಾನೆ.ಆದ್ದರಿಂದ ಭೌತಿಕ ದಾನಕ್ಕಿಂತ ಮಾನಸಿಕ ದಾನವೇ ಅತ್ಯುತ್ತಮ. 


ಯಕ್ಷಪ್ರಶ್ನೆ  : ೧೧ ; ಕೋऽ ತಿಥಿಃ ಸರ್ವ ಭೂತಾನಾಂ ಕಿಂಸ್ವಿದ್ಧರ್ಮಂ ಸನಾತನಂ। 

                         ಅಮೃತಂ ಕಿಂಸ್ವಿದ್ರಾಜೇಂದ್ರ ಕಿಂ ಸ್ವಿತ್ ಸರ್ವಮಿದಂ ಜಗತ್॥ 


ಸಮಸ್ತ ಭೂತಗಳ ಅತಿಥಿ ಯಾರು ? ಸನಾತನ ಧರ್ಮ ಯಾವುದು ? ಅಮೃತವು ಯಾವುದು ? ಜಗತ್ತು ಏನಾಗಿದೆ ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಕೊಟ್ಟ ಉತ್ತರ ಹೀಗೆ: 


ಅತಿಥಿಃ ಸರ್ವ ಭೂತಾನಾಮಗ್ನಿಃ ಸೋಮೋ ಗವಾಮೃತಮ್ । 

ಸನಾತನೋ ऽ ಮೃತೋ ಧರ್ಮೋ ವಾಯುಃ ಸರ್ವಮಿದಂ ಜಗತ್॥


ಸರ್ವಭೂತಗಳಲ್ಲೂ ಅಗ್ನಿಯೇ ಅತಿಥಿ. ಮೋಕ್ಷ ಮಾರ್ಗ ತೋರಿಸುವುದೇ ಧರ್ಮ. ಸೋಮ ಎಂಬ ಹವಿಸ್ಸು ಅಮೃತ. ಜಗತ್ತು ವಾಯುವಿನಿಂದ ವ್ಯಾಪ್ತವಾಗಿದೆ.


ದೇಹ ಎಂದರೆ ನಿರಂತರವಾಗಿ ಕಂಪಿಸುತ್ತಿರುವ ಭೌತದ್ರವ್ಯ. ಒಂದು ಜಡವಸ್ತು. ಪ್ರಾಣ ಎಂಬುದು ಈ ಭೌತದ್ರವ್ಯದಲ್ಲಿ ಸೇರಿಕೊಂಡಾಗ ಅದಕ್ಕೆ ಜೀವ ಬರುತ್ತದೆ. ಈ ಜೀವ ದೇಹವೆಂಬ ವಾಹನವನ್ನು ನಡೆಸುತ್ತದೆ. ಭೌತವಸ್ತು ಜೀವ ತಳೆದು ಕಂಪಿಸುತ್ತದೆ. ಕಂಪನ ಎಂದರೆ ಜೀವಕಣಗಳ ಘರ್ಷಣೆ. ಈ ಶಾಖವೇ ಅಗ್ನಿ.  ಇವನು ದೇಹದಿಂದ ನಿರ್ಗಮಿಸಿದರೆ ಅದೇ ಸಾವು. ಆದುದರಿಂದ ಸಮಸ್ತ ಜೀವರಾಶಿಗಳಲ್ಲಿ ಅಗ್ನಿಯೇ ಅತಿಥಿ. 


ಪ್ರಾಣವಾಯುವಿನಿಂದಲೇ ಜೀವಜಾಲದ ಅಸ್ತಿತ್ವ. ಇದು ದೇಹದಲ್ಲಿ ಐದು ರೂಪದಿಂದ ಕಾರ್ಯ ನಿರ್ವಹಿಸುತ್ತದೆ. ಈ ಐದು ಮುಖಗಳು ಆಕಾಶತತ್ವ, ವಾಯುತತ್ವ, ಅಗ್ನಿತತ್ವ, ಜಲತತ್ವ, ಹಾಗೂ ಪೃಥ್ವಿತತ್ವಗಳನ್ನು ಪ್ರತಿನಿಧಿಸುತ್ತವೆ. ಇದನ್ನ ಪ್ರಿಣವಾಯುತತ್ವ ಎಂದರು. ಸರ್ವಶರೀರದಲ್ಲಿ ಸದಾ ಚಲಿಸುತ್ತಿರುವುದು ವ್ಯಾನ. ಪ್ರಾವಾಯುವಿನ ಶಕ್ತಿಯನ್ನು ದೇಹದಾದ್ಯಂತ ಒಯ್ಯುವುದು ಇದು. ಇದರ ವರ್ಣ ಗಾಢ ಕಿತ್ತಳೆ. ವಿವಿಧ ಅಂಗಗಳ ಸಂವೇದನೆ, ಬೆಳವಣಿಗೆಗೆ ಇದು ಕಾರಣ. ಇದರ ಹೊರತಾಗಿ ವಿಶ್ವವನ್ನು ವ್ಯಾಪಿಸಿದ ವಾಯುವಿಗೆ ಅನೇಕ ರೂಪಗಳಿವೆ. ಅಹವ, ಪ್ರವಹ, ವಿವಹ, ಪರಾವಹ, ಸಂವಹ, ಉದ್ವೇಗ ಮತ್ತು ಪರಿವಹ.ಇವೆಲ್ಲದಕ್ಕೂ ನಿಗದಿತವಾದ ಕಾರ್ಯಗಳಿವೆ. ಆದುದರಿಂದ ವಿಶ್ವ ಹಾಗೂ ಅದರಲ್ಲಿನ ಸಮಸ್ತ ಜೀವಜಾಲ ವಾಯುವೆ. ಯಾವುದು ಪಾರಮಾರ್ಥಿಕ ಸಾವಿನಿಂದ ಪಾರುಗಾಣಿಸುತ್ತದೋ ಅದು ಅಮೃತ. ಭೌತಿಕ ದೇಹದಲ್ಲಿರುವಾಗಲೇ ಸಮಸ್ತ ಮಾನಸಿಕ ಬಂಧನಗಳನ್ನು ಕಳಚಿಕೊಂಡ ಜೀವಿಗೆ ಸಾವು ಒಂದು ಕ್ರಿಯೆ ಮಾತ್ರ ಎಂಬ ಅರಿವು ಬರುತ್ತದೆ. ಮುಂದೆ ಜನ್ಮಗಳಿರಬಹುದು. ಅವುಗಳಲ್ಲಿಯೂ ಈ ಅರಿವು ಅದರ ಕೈಗೋಲಾಗುತ್ತದೆ.ಇದೇ ಅಮೃತತ್ವ. ಸಮವೇ ಅಮೃತ. ಮನುಷ್ಯ ದೇಹದಲ್ಲಿ ಸೇರಿಕೊಂಡ ಜೀವ ಜನುಮಾಂತರಗಳ ಅನುಭವಜೀವಸಾರವನ್ನು ಸಂಚಯಿಸಿ, ಮಥಿಸಿದಾಗ ಸಿಕ್ಕಿದ ಜ್ಞಾನವನ್ನು ಚಿಂತನೆಯ ತಪಸ್ಸಿನ ಅಗ್ನಿಯಲ್ಲಿ ಕಾಯಿಸಿದಾಗ ಪರಮಸತ್ಯದ, ತನ್ನ ಮೂಲ ಸ್ವರೂಪದ ತುಪ್ಪ ಸಿಗುತ್ತದೆ. ಇದನ್ನುಮತ್ತೆ ಅದರ ಮೂಲ ಸ್ವರೂಪವಾದ ವಿಶ್ವಚೈತನ್ಯಕ್ಕೆ ಸಮರ್ಪಿಸುವುದರಿಂದ ಅವನ ಭವಚಕ್ರ ಭ್ರಮಣದಿಂದ ಬಿಡುಗಡೆ ದೊರೆಯುತ್ತದೆ. ಇದೇ ಯಜ್ಞ. ಅಂತಿಮವಾದ ಯಜ್ಞದ ಅರ್ಥ. 


ಯಕ್ಷಪ್ರಶ್ನೆ: ೧೨ ; ಕಿಂಸ್ವಿದೇಕೋವಿಚರತೇ ಜಾತಃ ಕೋ ಜಾಯತೇ ಪುನಃ । 

                       ಕಿಂಸ್ವಿದ್ಧಿಮಸ್ಯ ಭೈಷಜ್ಯಂ ಕಿಂ ಸ್ವಿದಾವಪನಂ ಮಹತ್ ॥ 


ಒಂಟಿಯಾಗಿ ಸಂಚರಿಸುವುದ್ಯಾವುದು ? ಪುನಃ ಪುನಃ ಹುಟ್ಟುವುದ್ಯಾವುದು ? ಹಿಮಕ್ಕೆ ಔಷಧಿ ಏನು ? ಇದೆಲ್ಲವನ್ನೂ ತನ್ನೊಳಗೆ ಅಡಗಿಸಿಕೊಳ್ಳುವುದ್ಯಾವುದು? 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಸೂರ್ಯ ಏಕೋ ವಿಚರತೇ ಚಂದ್ರಮಾ ಜಾಯತೇ ಪುನಃ। 

ಅಗ್ನಿರ್ಹಿಮಸ್ಯ ಭೈಷಜ್ಯಂ ಭೂಮಿರಾವಪನಂಮಹತ್ ॥ 


ಏಕಾಂಗಿಯಾಗಿ ಸಂಚರಿಸುವವ ಸೂರ್ಯ. ಮತ್ತೆ ಮತ್ತೆ ಹುಟ್ಟುವವನು ಚಂದ್ರ.ಹಿಮಕ್ಕೆ ಔಷಧಿ ಅಗ್ನಿ.  ಸಮಸ್ತ ವಸ್ತುಗಳನ್ನು ತನ್ನೊಳಗಿಟ್ಟುಕೊಳ್ಳುವುದು ಭೂಮಿ. 


ದೇಹದೊಳಗೆ ಇದ್ದುಕೊಂಡು ಅದನ್ನು ನಡೆಸುವ ಚೈತನ್ಯ ಇಡೀ ಬ್ರಹ್ಮಾಂಡದ ಕೇಂದ್ರ. ಏಕೆಂದರೆ ಈ ನಾನು ಇದ್ದರೆ ನನಗೆ ಈ ಬ್ರಹ್ಮಾಂಡದ ಇರುವಿಕೆಯ ಅರಿವು. ನಾನೇ ಇಲ್ಲದಿದ್ದರೆ ಇದ್ಯಾವುದೂ ನನ್ನ ಪಾಲಿಗೆ ಇಲ್ಲವಲ್ಲ. ಇಲ್ಲಿ ನಾನು ಎಂಬುದು ಚೈತನ್ಯವನ್ನು ಗುತಿಸಲೊಂದು ಹೆಸರು. ದೇಹ ಬ್ರಹ್ಮಾಂಡ ಪೂರ್ತಿ  ಇದರ ಸುತ್ತಮುತ್ತ ಇದ್ದರೂ ಅಸಂಖ್ಯ ದೇಹಗಳ ಮೂಲಕ ಇದರ ಪಯಣದಲ್ಲಿ ಇದು ಏಕಾಂಗಿ.


ದೇಹದೊಂದಿಗೆ ಮನಸ್ಸಿನ ಅಸ್ತಿತ್ವ . ಇದರ ಸ್ವಭಾವ ಚಂಚಲ. ಜನುಮಾಂತರಗಳ ಸಂಚಯದಿಂದ ವಿಶ್ವಜ್ಞಾನಕ್ಕಾಗಿಹಂಬಲಿಸಿ, ತಪಿಸುವ ಇದು ದೇಹಮೂಲಕಾಮನೆಗಳಿಂದ ನಾನಾ ರಾಗ, ದ್ವೇಷಗಳಿಂದ ಸಾಯುತ್ತದೆ. ತನ್ನ ಸ್ವರೂಪದರ್ಶನಕ್ಕೆ ಹಂಬಲಿಸಿ ಅದರಿಂದ ವಿಮುಖವಾಗಿ, ಭವ ಬಂಧನವೆಂಬ ಸುಳಿಯಲ್ಲೆ ಕಳೆದು ಹೋಗುವುದು ಸಾವು. ಮತ್ತೆ ಒಂದು ದೇಹದೊಂದಿಗೆ ಹುಟ್ಟುತ್ತದೆ. ಆ ದೇಹದ ನಾಶದಿಂದ ಸಾಯುತ್ತದೆ. 


ಹಿಮದ ಗುಣ ಹೆಪ್ಪುಗಟ್ಟುವುದು. ಹೆಪ್ಪುಗಟ್ಟಿದರೆ ಹಿಮಗಟ್ಟಿಹೋಯಿತು ಎನ್ನತ್ತೇವೆ. ಇದೇ ಅವಿದ್ಯೆ. ದೇಹಕ್ಕೆ ಸಂಬಂಧಪಟ್ಟ ಸಮಸ್ತ ಜೀವವಸ್ತುಗಳಮೇಲೆ ಮೋಹ ರಾಗ ದ್ವೇಷಗಳು ದೇಹಕ್ಕೆ ಸುಖ ನೀಡುವುವೆಂದು ಭ್ರಮೆಯುಂಟುಮಾಡುತ್ತವೆ. ಮೂಲಕಾರಣ ಮರೆತು ಹೋಗುತ್ತದೆ. ಇದೇ ಅವಿದ್ಯೆ. ಅವಿದ್ಯೆಯಿಂದ ಹೆಪ್ಪುಗಟ್ಟುವಿಕೆ. ಇದಕ್ಕೆ ಪರಿಹಾರ ಅಗ್ನಿ.  ಎಲ್ಲದಕ್ಕೂ ಭೂಮಿ ಆಧಾರ. ದೇಹ ಉಂಟಾಗುವುದು ಪಂಚಭೂತಗಳಿಂದ. ಸ್ಥೂಲ ಶರೀರವೇ ಪೃಥ್ವಿ ತತ್ವ. ಅದನ್ನು ಪಡೆಸುವುದು ನಾವು. ಆತ್ಮನೆಂದು ಹೆಸರಿಸಿ ಗುರುತಿಸುವ ವಿಶ್ವ ಚೈತನ್ಯ.  ಮಸ್ಸುಗಳನ್ನು ಆದರಿಸಿರು-

ವುದು ಈ ದೇಹ. 


ಯಕ್ಷಪ್ರಶ್ನೆ: ೧೩ ;  ಕಿಂ ಸ್ವಿದೇಕ ಪದಂ ಧರ್ಮ್ಯಂ ಕಿಂಸ್ವಿದೇಕ ಪದಂ ಯಶಃ। 

                        ಕಿಂಸ್ವಿದೇಕ ಪದಂ ಸ್ವರ್ಗ್ಯಂ ಕಿಂಸ್ವಿದೇಕ ಪದಂ ಸುಖಮ್॥ 


ಧರ್ಮದ ನೆಲೆ ಯಾವುದು ? ಯಶಸ್ಸು ಗಳಿಸುವುದೆಂತು ? ಸ್ವರ್ಗದ ಹಾದಿ ಯಾವುದು ? ಸುಖ ಯಾವುದರಲ್ಲಿದೆ ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ದಾಕ್ಷ್ಯಂ ಏಕ ಪದಂ ಧರ್ಮ್ಯಂ। ದಾನಂ ಏಕ ಪದಂ ಯಶಃ।

 ಸತ್ಯಂ ಏಕ ಪದಂ ಸ್ವರ್ಗ್ಯಂ।ಶೀಲಂ ಏಕ ಪದಂ ಸುಖಮ್॥ 


ದಕ್ಷತೆಯೇ ಧರ್ಮದ ಏಕೈಕ ನೆಲೆ, ದಾನವೇ ಯಶಸ್ಸಿನ ಏಕೈಕ ಮಾರ್ಗ.ಸ್ವರ್ಗದ ಹಾದಿ ಸತ್ಯದ ಮೂಲಕ ಮಾತ್ರ ಲಭ್ಯ. ಸುಖಪಡೆಯುವ ಮಾರ್ಗ ಶೀಲ ಮಾತ್ರ. 


ಈ ಸಮಾಜಕ್ಕೆ ಶಾಂತಿ ಸುಖಗಳನ್ನುಂಟು ಮಾಡುವಲ್ಲಿ ಶ್ರಮಿಸುವುದೇ ಧರ್ಮ. ತನ್ನಿಂದ ಒಳ್ಳೆಯದಾಗಬೇಕು, ತನ್ನ ಈ ಜಗತ್ತು ಒಳ್ಳೆಯದಾಗಬೇಕು. ಏಕೆಂದರೆ ಎಲ್ಲರಲ್ಲಿದ್ದು ನಡೆಸುವುದು ಒಂದೇ ಚೈತನ್ಯ.  ಈ ಅರಿವೇ ನಡತೆಯೇ ಧರ್ಮ. ಇದೇ ಧರೂಮದ ನೆಲೆ. 


ಯಾವಕಾರಣಕ್ಕೂ ಈ ಸತ್ಯದಿಂದ ವಿಚಲಿತನಾಗದಿರುವುದೇ ಸ್ವರ್ಗದ ಏಕೈಕ ಹಾದಿ. ಇವಿರಲಿ ಪರವಿರಲಿ ಮನುಷ್ಯ ಯಶಸ್ಸನ್ನು ಬಯಸುತ್ತಾನೆ.  ಜನ್ಮಾಂತರಗಳಿಂದ ಸಂಚಿತಗೊಂಡ ಕರ್ಮಫಲಗಳನ್ನು ತುಂಡರಿಸುವುದು, ಅವುಗಳಿಂದ ಬೆಡುಗಡೆ ಹೊಂದುವುದು, ಸ್ವಇಚ್ಛೆಯಿಂದ, ಸಂತೋಷದಿಂದ ಅವುಗಳ ಫಲಗಳನ್ನು ಅನುಭವಿಸಿ ನಿರ್ಲಿಪ್ತನಾಗಿರುವುದೇ 

ದಾನ. ಸಿರಿವಂತನಿಗೆ ಸೌಜನ್ಯ, ಶೂರನಿಗೆ ಮಿತ ಭಾಷಿತ್ವ. ಜ್ಞಾನಿಗೆ ಶಾಂತ ಮನಸ್ಸು., ವಿದ್ವಾಂಸನಿಗೆ ವಿನಯ, ಐಶ್ವರ್ಯಕ್ಕೆ ಸತ್ಪಾತ್ರ ದಾನ, ತಾಪಸಿಗೆ ಕೋಪ ನಿಗ್ರಹ, ಪರಾಕ್ರಮಿಗೆ ಕ್ಷಮಾಗುಣ, ಧರ್ಮಮಾರ್ಗಿಗೆ ನಿಷ್ಕಾಪಟ್ಯಗಳುಭೂಷಣ.ಇವೆಲ್ಲ ಗುಣಗಳಿಗೂ ಶೀಲವೇ ಕಾರಣ. ಇವಿಷ್ಟೂ ಮನುಷ್ಯನಿಗೆ ಭೂಷಣ. 


ಯಕ್ಷಪ್ರಶ್ನೆ  : ೧೪ ; ಕಿಂಸ್ವಿದಾತ್ಮಾ ಮನುಷ್ಯಸ್ಯ ಕಿಂ ಸ್ವಿದ್ದೈವಕೃತಃ ಸಖಾ। 

                         ಉಪಜೀವನಂ ಕಿಂಸ್ವಿದಸ್ಯ ಕಿಂಸ್ವಿದಸ್ಯ ಪರಾಯಣಮ್॥ 


ಮನುಷ್ಯನಿಗೆ ಆತ್ಮ ಯಾವುದು? ಭಗವಂತನಿತ್ತ ಮಿತ್ರನ್ಯಾರು ? ಜೀವನಕ್ಕೆ ಆಧಾರ ಯಾವುದು ? ಜೀವನದ ಮುಖ್ಯ ಕರ್ತವ್ಯವೇನು ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಪುತ್ರ ಆತ್ಮಾ ಮನುಷ್ಯಸ್ಯ ಭಾರ್ಯಾ ದೈವಕೃತಃ ಸಖಾ। 

ಉಪಜೀವನಂ ಚ ಪರ್ಜನ್ಯೋ ದಾನಮಸ್ಯ ಪರಾಯಣಮ್॥ 


ಜೀವಿಗ ಆತ್ಮ ಪುತ್ರ. ಪತ್ನಿ ದೈವದತ್ತ ಮಿತ್ರಳು. ಮೋಡಕ್ಕೆ ನೀರು ಜೀವಾಧಾರ. ದಾನವೇ ಜೀವನದಲ್ಲಿ ಅತೀ ಮುಖ್ಯವಾದುದು. 


ಪುತ್ರ ಎನ್ನುವ ಪದಕ್ಕೆ  " ಪುತ್ " ಎಂಬ ನರಕದಿಂದ ಮೇಲೆತ್ತುವವನು. ದುಃಖ ನೋವು ನರಳಾಟಗಳ ನಿರಂತರ ಅನುಭವವೇ ನರಕ. ಇದು ಸ್ವಯಾರ್ಜಿತ, ಕರ್ಮಸಂಬಂಧವಾಗಿ ಬರುವಂತದ್ದು. ಸುಖ ದುಃಖಗಳು ನಮ್ಮಿಂದಲೇ ಸೃಷ್ಟಿಸಲ್ಪಟ್ಟವು ಎಂಬುದನ್ನು ನೆನಪಿಟ್ಟುಕೊಂಡು,ಆ ಫಲವನ್ನು ಭಗವದರೂಪಣಮಾಡುವವನು ಮುಕ್ತನಾಗುತ್ತಾನೆ. ಪತ್ನಿಯನ್ನು ದೈವದತ್ತ ಸಖೀ ಎಂದರೆ ಗೆಳತಿ, ಮಿತ್ರಳು ಎಂದರು ಬಲ್ಲವರು. ಧರ್ಮಪತ್ನಿಗೆ ಬದುಕಿನಲ್ಲಿ ಸಮಾನ ಸ್ಥಾನವಿತ್ತು. ಯಜ್ಞ ಯಾಗಾದಿಗಳಿಂದ, ದಾನದ ವರೆಗೆ ಪತ್ನಿಯ ಅನುಮತಿ ಸಹಕಾರವಿಲ್ಲದಿದ್ದರೆ ಅದು ನಿಷ್ಫಲವೆನಿಸುತ್ತದೆ.ಪತ್ನಿ ಮಿತ್ರಳೂ ಹೌದು. ಮಾಡಿದ ಕ್ರಿಯೆಯ ಬಗ್ಗೆ ಆಳವಾಗಿ ವಿವೇಚಿಸಿ ಅದರ ಸಾಧಕ ಭಾದಕಗಳ ತುಲನೆಯಿಂದ ಸಮಾಜಕ್ಕೆ ತನ್ನ ವೈಯಕ್ತಿಕ ಜೀವನಕ್ಕೆ ಒತ್ತುಕೊಡುವಂತಿದ್ದರೆ ಉಳಿಸಲು ನಿಶ್ಚಯಿಸುವುದೇ ಪ್ರಾಯಶ್ಚಿತ್ತ.  


ಬದುಕಿಗೊಂದು ಗತಿಯಿದೆ. ಅದರ ಅರಿವಿರಲಿ, ಇಲ್ಲದಿರಲಿ, ಪ್ರತಿಯೊಂದು ಕ್ರಿಯೆಯೂ ಒಂದು ನೆಶ್ಚಿತ ಫಲನೇಡುತ್ತದೆ. ಯಜ್ಞ ಯಾಗಗಳ ಮೂಲಕ ಪ್ರಕೃತಿಯನ್ನೇ ಒಲೆಸಿಕೊಳ್ಳುವ ತಂತ್ರವನ್ನು ರೂಪಿಸಿತ್ತು ನಮ್ಮ ಪ್ರಾಚೀನ ಸಭ್ಯತೆ. ಭೌತಿಕವಾದುದನ್ನು ಗಮನಿಸಿದರೆ " ಜೀವಾಧಾರ ಮಳೆ  " ಆಧ್ಯಾತ್ಮಿಕವಾಗಿ ಅರ್ಥೈಸಿದರೆ ಸಂಚಿತ ಕರ್ಮಫಲಗಳ ಕೊಳೆ ತೊಳೆಯುವ ದೈವಕೃಪೆ. ಈ ಎರಡೂ ವರ್ಷಧಾರೆಗಳೇ ಜೀವನಾಧಾರ. 


ಯಕ್ಷಪ್ರಶ್ನೆ  : ೧೫ ; ಧನ್ಯಾನಾಮುತ್ತಮಂ ಕಿಂಸ್ವಿದ್ ಧನಾನಾಂ ಸ್ಯಾತ್ಕಿಮುತ್ತಮಮ್। 

                         ಲಾಭಾನಾಮುತ್ತಮಂ ಕಿಂಸ್ಯಾತ್ಸುಖಾನಾಂ ಸ್ಯಾತ್ಕಿಮುತ್ತಮಮ್॥ 


ಧನಪ್ರಾಪ್ತಿಯ ಮಾರ್ಗದಲ್ಲಿ ಯಾವುದು ಉತ್ತಮ ? ಧನಗಳಲ್ಲಿ ಶ್ರೇಷ್ಠವಾದುದು ಯಾವುದು? ಲಾಭದಲ್ಲಿ ಉತ್ತಮವಾದುದು ಯಾಸವುದು ? ಯಾವುದು ಸುಖಗಳಲ್ಲಿ ಶ್ರೇಷ್ಠ ? 


ಯಕ್ಷನ ಮೇಲಿನ ಪ್ರಶ್ನೆಗಳಿಗೆ  ಧರ್ಮರಾಯ ಉತ್ತರಿಸುವುದು ಹೀಗೆ ;


ಧನ್ಯಾನಾಮುತ್ತಮಂ ದಾಕ್ಷ್ಯಂ ಧನಾನಾಮುತ್ತಮಂ ಶ್ರುತಮ್। 

ಲಾಭಾನಾಂ ಶ್ರೇಯ ಆರೋಗ್ಯಂ ಸುಖಾನಾಂ ತುಷ್ಟಿರುತ್ತಮಾ॥  


ಧನಗಳಿಕೆ ಯಾವುದೇ ರೀತಿಯದಿರಲಿ, ನಿರಂತರ ಪ್ರಯತ್ನವೇ, ಪ್ರಯತ್ನನದಲ್ಲಿ ದೃಢತೆಯೇ ಯಶಸ್ಸಿಗೆ ಕಾರಣ.ಏಕಚಿತ್ತ-

ದಿಂದ ಗುರಿಯೆಡೆಗೆ ಸಾಗುವವನೇ, ಯಾವುದೇ ಅಡೆತಡೆಗಳಿಗೂ ಅಂಜದೌ ಮುಂದೆ ನಡೆಯುವವನೇ ಗುರಿ ಮುಟ್ಟಬಲ್ಲ. ಹೀಗೆ ದಕ್ಷತೆಯೇ ಧನ ಗಳಿಕೆಯ ಸಾಧನ ಎಂದಾಯಿತು. 


ಧನಕ್ಕೆ ಭೌತಿಕ ಸಿರಿ ಆದ್ಯಾತ್ಮಿಕ ಸಿರಿ ಎಂದು ಎರಡು ಮುಖ. ಭೌತಿಕ ಸಿರಿ ದುಡ್ಡು ಕಾಸು, ಚಿನ್ನ, ಬೆಳ್ಳಿ, ಭೂಮಿ, ಅಧಿಕಾರ ಇತ್ಯಾದಿ.  ಆದ್ಯಾತ್ಮಿಕ ಸಿರಿ ತನ್ನ ಮೂಲಸ್ವರೂಪದ ಜ್ಞಾನ ತನ್ಮೂಲಕ ಬರುವ ವಿಶ್ವರೂಪದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಸಮತಾಭಾವ. ನಶ್ವರವಾದ ಭೌತಿಕ ಸಿರಿಗಾಗಿ ಜೀವನ ವ್ಯರ್ಥಮಾಡುವುದಕ್ಕಿಂತ , ಶಾಶ್ವತ ಸುಖವಾದ ಸ್ವರೂಪಜ್ಞಾನಕ್ಕಾಗಿ ಶ್ರಮಿಸುವುದು ಉತ್ತಮ. ವಿದ್ಯೆಯೇ ಉತ್ತಮವಾದ ಧನ. 


ಆರೋಗ್ಯಕ್ಕೆ ದೇಹದ ಆರೋಗ್ಯ ಹಾಗೂ ಮನಸ್ಸಿನ ಆರೋಗ್ಯ ಎಂದು ಎರಡು ಮುಖ. ದೇಹದ ಆರೋಗ್ಯ ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ,  ಬದುಕನ್ನು ನೋಡುವ ದೃಷ್ಟಿಕೋನಗಳ ಮೇಲೆ ಅವಲಂಬಿತವಾಗಿವೆ. ಸದಾ ರೋಗಗಳಿಂದ ಕೂಡಿದ ದೇಹದಲ್ಲಿ ಆರೋಗ್ಯಕರ ಚಿಂತನೆಗಳಿರಲು ಸಾಧ್ಯವಿಲ್ಲ.  ನಿರಂತರವಾದ ಧನಾತ್ಮಕ ಚಿಂತನೆಗಳು, ಜ್ಞಾನದ ಅಧ್ಯಯನ. ಸತ್ಸಂಗಗಳಿಂದ ಪಾರಮಾರ್ಥಿಕ ಆರೋಗ್ಯ ಗಳಿಸಬಹುದು. ಮನಸ್ಸಿನ ಆರೋಗ್ಯವೇ ಮುಖ್ಯವಾದುದು. 


ಬದುಕು ಪೂರ್ವಾರ್ಜಿತ ಕರ್ಮಗಳ ಸಂಚಯ ಎಂಬುದನ್ನು ಒಪ್ಪಿಕೊಂಡರೆ ತೃಪ್ತಿ ಸುಲಭ. ಯಾವುದು ಸಹಜವಾಗಿ ನಮ್ಮ ಪಾಲಿಗೆ ಬಂದಿದೆಯೋ ಅದನ್ನು ಸಂತೋಷದಿಂದ ಸ್ವೀಕರಿಸಿದಾಗ ಅಸೂಯೆ, ಮಾತ್ಸರ್ಯ,  ಕ್ರೋಧವಿರದು. ಇದೇ ಸರ್ವೋತ್ತಮ ಸುಖ. 


ಯಕ್ಷಪ್ರಶ್ನೆ  : ೧೬ ; ಕಶ್ಚ ಧರ್ಮಃ ಪರಲೋಕೇ ಕಶ್ಚಧರ್ಮಃ ಸದಾ ಫಲಂ।

                         ಕಿಂ ನಿಯಮ್ಯ ನ ಶೋಚನ್ತಿ ಕೈಶ್ಚ ಸಂಧಿರ್ನಜೀಯತೇ॥ 


ಶ್ರೇಷ್ಠವಾದ ಧರ್ಮ ಯಾವುದು? ನಿರಂತರ ಫಲನೀಡುವ ಧರ್ಮ ಯಾವುದು? ಯಾವುದರ ನಿಯಂತ್ರಣದಿಂದ ಶೋಕ ದೂರವಾಗುತ್ತದೆ? ಯಾರ ಸ್ಹೇಹ ಕ್ಷಯಿಸದು? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಅನೃಶಂಸ್ಯಂ ಪರಮೋಧರ್ಮಃ ತ್ರಯೀ ಧರ್ಮಃ ಸದಾಫಲಂ । 

ಮನೋಯಾಮ್ಯ ನ ಶೋಚನ್ತಿ ಸಂಧಿಃ ಸಂಧಿಃ ಸದ್ಭಿರ್ನಜೀಯತೇ॥ 


ಅಹಿಂಸೆಯೇ ಪರಮ ಧರ್ಮ. ಕರ್ತವ್ಯ ಪಾಲನೆಯಿಂದ ಸತ್ಫಲ ಪ್ರಾಪ್ತಿ. ಮನೋನಿಯಂತ್ರಣವೇ ದುಃಖ.ನಾಶಕ್ಕೆ ಮೂಲ. ಸತ್ಪುರುಷರ ಸ್ನೇಹವೇ ಅಕ್ಷಯ. 


"ನೃಶಂಸ್ಯ" ಎಂದರೆ ಹಿಂಸೆ. ಅಹಿಂಸೆಯೇ ಪರಮಧರ್ಮ. ಎಲ್ಲಿ ಹಿಂಸೆಯಿಲ್ಲವೋ ಅಲ್ಲಿ ಮೈತ್ರಿ, ಕರುಣೆ, ದಯೆಗಳು ಮಾತನಾಡುತ್ತವೆ. ಬೆಳಕಿನ ಅನುಪಸ್ಥಿತಿಯೇ ಕತ್ತಲೆ ಹೊರತು, ಕತ್ತಲೆಗೊಂದು ಸ್ವಂತದ ಉಪಸ್ಥಿತಿಯಿಲ್ಲ.ದೇಹದಲ್ಲಿರೈವವನಿಗೆ ಭೌತಿಕ ಕರ್ತವ್ಯ ಮತ್ತು ಆಧ್ಯಾತ್ಮಿಕ ಕರ್ತವ್ಯಗಳಿರುತ್ತವೆ. ಇವುಗಳೇ ಕರ್ಮಪಾಲನೆ. ಇವುಗಳಿಂದ ಜಗತ್ತಿಗೆ ಹಿತವಾಗಬೇಕು. ಈ ಹಿತವೇ ಧರ್ಮ. 


ಲೌಕಿಕದಲ್ಲಿದ್ದರೂ ಇಲ್ಲದಂತಿರು.ನಿನ್ನೊಳಗಿನ ಆ " ದೇವ" ಸನ್ನಿಧಿಯಲ್ಲಿರು.ನಿನಗೆಂದು ನಿಗದಿಯಾದ ಸಮಸ್ತ ಕರ್ಮಗಳನ್ನೂ ಫಲಾಪೇಕ್ಷೆಯಿಲ್ಲದೆ, ಸಮಚಿತ್ತನಾಗಿ ನಿರ್ವಹಿಸು.ಮತ್ತೆ ಅದು ಮುಗಿಯಿತೋ ಮರಳಿ ಆ " ಸಖ" ನ ಸಾನ್ನಿಧ್ಯಕ್ಕೆ ಮರಳು, ಇದೇ ಎಂದೆಂದಿಗೂ ಕ್ಷೀಣಿಸದ ಮಿತ್ರನಿವನು. ತ್ರಯೀ ಎಂದರೆ ಮೂರು. ಇವು ಹೇಳುವ ಗುಹ್ಯತಮ ಜ್ಞಾನವೇ ಈ ತ್ರಯೀ. ಪ್ರಾಚೀನರು ನಮಗಾಗಿ ಉಳಿಸಿದ ಪ್ರಣವ ಮಂತ್ರ " ಓಂ " ಕಾರದ ರಹಸ್ಯವೂ ಇದೇ. ಈ "ಓಂ"ಕಾರದ ಸತತ ಮನನದ ಮೂಲಕ ಸತ್ವ, ರಜಸ್, ತಮೋ ಗುಣಗಳನ್ನು ನಿಯಂತ್ರಿಸಿ ವಿಶ್ವರಹಸ್ಯವನ್ನು ಅರ್ಥಮಾಡಿ-

ಕೊಳ್ಳುವ ರೀತಿಯಿದು. 


ಯಕ್ಷಪ್ರಶ್ನೆ: ೧೭ ; ಕಿಂ ನು ಹಿತ್ವಾ ಪ್ರಿಯೋ ಭವತಿ ಕಿಂ ನು ಹಿತ್ವಾ ನ ಶೋಚತಿ। 

                       ಕಿಂ ನು ಹಿತ್ವಾರ್ಥವಾನ್ಭವತಿ ಕಿಂ ನು ಹಿತ್ವಾ ಸುಖೀ ಭವೇತ್॥ 


ಯಾವುದನ್ನು ತ್ಯಜಿಸುವುದರಿಂದ ಇತರರಿಗೆ ಪ್ರಿಯನಾಗುತ್ತಾನೆ ? ಯಾವುದನ್ನು ತ್ಯಜಿಸುವುದರಿಂದ ದುಃಖ ಸಂಕಟಗಳು ದೂರವಾಗುತ್ತವೆ. ಯಾವುದರ ತ್ಯಾಗದಿಂದ ಸಿರಿ ದೊರೆಯುತ್ತದೆ.? ಯಾವುದರ ತ್ಯಾಗದಿಂದ ಸುಖ ಪ್ರಾಪ್ತಿಯಾಗುತ್ತದೆ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಮಾನಂ ಹಿತ್ವಾಪ್ರಿಯೋ ಭವತಿ ಕ್ರೋಧಂ ಹಿತ್ವಾನ ಶೋಚತಿ। 

ಕಾಮಂ ಹಿತ್ವಾರ್ಥವಾನ್ ಭವತಿ ಲೌಭಂ ಹಿತ್ವಾ ಸುಖೀ ಭವೇತ್॥ 


ಅಹಂಕಾರ ತ್ಯಾಗದಿಂದ ಜನಪ್ರಿಯನಾಗುತ್ತಾನೆ. ಕೋಪ ನಿಯಂತ್ರಣದಲ್ಲಿದ್ದರೆ ದುಃಖವಿರದು. ಆಸೆಯ ತ್ಯಾಗದಿಂದ ಸಿರಿ ಲಭ್ಯ.ಲೋಭ ತ್ಯಾಗಿಗೆ ಸುಖಸಾಧ್ಯ. 


ಪ್ರಾಪಂಚಿಕ ವಿಷಯಗಳನ್ನು ಚಿಂತಿಸುತ್ತ ಚಿಂತಿಸುತ್ತ ಒಬ್ಬಾತ ಅವುಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾನೆ. ಆಸಕ್ತಿಯಿಂದ ಆ ವಿಷಯದ ಬಗ್ಗೆ ಕಾಮ ಉಂಟಾಗುತ್ತದೆ. ಕಾಮ ಎಂದರೆ ಬಯಕೆ. ಆ ಕಾಮ ಫಲ ನೀಡದಿದ್ದರೆ ಕೋಪ ಬರುತ್ತದೆ. ನಿರಾಸೆಯೇ ಮೂಲವಾದ ಈ ಕ್ರೋಧ ಒಂದು ರೀತಿಯ ಸಮ್ಮೋಹವನ್ನು ಉಂಟುಮಾಡುತ್ತದೆ.ಒಂದು ಥರದ ಮಾಯಕ ಇದು. ಈ ಮಾಯಕದಿಂದ ಸ್ಮೃತಿಭ್ರಮೆಯಾಗುತ್ತದೆ. ಹಾಗೆಂದರೆ ಸರಿ-ತಪ್ಪುಗಳ ಮಧ್ಯದ ಅಂತರವಿಲ್ಲದಿರುವಿಕೆ. ಇದರ ಫಲ ಬುದ್ಧಿಯೇ ನಾಶವಾಗುತ್ತದೆ. ಮನಸ್ಸು ಹುಚ್ಚಾಗುತ್ತದೆ. ಇದರಿಂದ ನಾಶವೇ ಹೊರತು ಬೇರೆ ಫಲವಿಲ್ಲ. 


ಯಕ್ಷಪ್ರಶ್ನೆ: ೧೮ ; ಕಿಮರ್ಥಂ ಬ್ರಾಹ್ಮಣೇ ದಾನಂ ಕಿಮರ್ಥಂ ನಟನರ್ತಕೇ। 

                       ಕಿಮರ್ಥಂ ಚೈವ ಭೃತ್ಯೇಷು ಕಿಮರ್ಥಂ ಚೈವ ರಾಜಸು॥ 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಧರ್ಮಾರ್ಥಂ ಬ್ರಾಹ್ಮಣೇ ದಾನಂ ಯಶೋ ऽ ರ್ಥಂ ನಟನರ್ತಕೇ । 

ಭೃತ್ಯೇಷು ಭರಣಾರ್ಥಂ ವೈ ಭಯಾರ್ಥಂ ಚೈವರಾಜಸು॥ 


ಕರ್ತವ್ಯಪಾಲನೆಗಾಗಿ ಬ್ರಾಹ್ಮಣರಿಗೆ ದಾನ ನೀಡಬೇಕು. ಪ್ರತಿಭೆಯ ಗುರುತಿಸುವಿಕೆಗಾಗಿ ನಟನರ್ತಕರಿಗೆ ಪಾರಿತೋಷಕ. ನಿಷ್ಠೆಯನ್ನುಳಿಸಿಕೊಳ್ಳಲು ಸೇವಕರಿಗೆ ಭಕ್ಷೀಸು ನೀಡಬೇಕು. ಸಿಂಹಾಸನದ ಭಯದಿಂದ ರಾಜರಿಗೆ ಕಪ್ಪಕಾಣಿಕೆ ಸಲ್ಲುತ್ತದೆ.


ಬ್ರಾಹ್ಮಣ ಎಂದರೆ, ಬ್ರಹ್ಮನನ್ನು ಉಪಾಸನೆ ಮಾಡುವವನು. ಬ್ರಹ್ಮ ಎಂದರೆ "ನಾನು" ಎನ್ನುವುದರ ಬಗೆಯ ಜ್ಞಾನ.  ಈ " ನಾನು" ಎನ್ನುವುದೇನು ಎಂಬುದನ್ನು ತಿಳಿದುಕೊಂಡರೆ ಜಗತ್ತನ್ನೇ ಅರ್ಥಮಾಡಿಕೊಳ್ಳಬಹುದು ಎನ್ನುತ್ತಾರೆ ಬಲ್ಲವರು. ಇಂಥ ಬ್ರಹ್ಮೋಪಾಸಕ ಸಮಾಜದ ಸೊತ್ತು. ಅವನನ್ನು ಭೌತಿಕ ಅಗತ್ಯಯಗಳನ್ನು ನೀಡಿ ಸಲಹುವುದು ಸಮಾಜದ ಕರ್ತವ್ಯ.  ಪ್ರತಿಯಾಗಿ ಸಮಾಜದ ಒಳಿತಿಗಾಗಿ ಯಾಗ, ಯಜ್ಞಗಳು, ಪ್ರಾರ್ಥನೆ ತಕ್ಕ ಕ್ರಿಯಾಕರ್ಮಗಳನ್ನು ಮಾಡುವುದು ಬ್ರಾಹ್ಮಣನ ಕರ್ತವ್ವ. ಅವನ ಜೀವನೋಪಾಯದ ಅಗತ್ಯಗಳನ್ನು ದಾನಮಾಡಬೇಕು. 


ಯಕ್ಷಪ್ರಶ್ನೆ: ೧೯ ; ಕೇನಸ್ವಿದಾವೃತೋ ಲೋಕಃ ಕೇನಸ್ವಿನ್ನ ಪ್ರಕಾಶತೇ। 

                       ಕೇನ ತ್ಯಜತಿ ಮಿತ್ರಾಣಿ ಕೇನ ಸ್ವರ್ಗಂ ನ ಗಚ್ಛತಿ॥ 


ಈ ಪ್ರಪಂಚವನ್ನಾಶ್ರಯಿಸಿರುವುದು ಯಾವುದು? ಯಾವ ಕಾರಣದಿಂದ ವಸ್ತು ಬೆಳಗುವುದಿಲ್ಲ ? ಮಿತ್ರರನ್ನು ಅಗಲೆಸುವುದು ಯಾವುದು? ಸ್ವರ್ಗ ಪ್ರಾಪ್ತಿಯಾಗದಿರುವ ಕಾರಣವೇನು? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಅಜ್ಞಾನೇನಾವೃತೋ ಲೋಕಸ್ತಮಸಾ ನ ಪ್ರಕಾಶತೇ। 

ಲೋಭಾತ್ ತ್ಯಜತಿ ಮಿತ್ರಾಣಿ ಸಂಗಾತ್ ಸ್ವರ್ಗಂ ನ ಗಚ್ಛತಿ॥ 


ಪ್ರಪಂಚ ಅಜ್ಞಾನದಿಂದ ಆವರೆಸಲ್ಪಟ್ಟಿದೆ. ಕತ್ತಲ ಕಾರಣದಿಂದ ವಸ್ತು ಬೆಳಗುವುದಿಲ್ಲ.  ಲೋಭದಿಂದ ಮಿತ್ರರು ದೂರವಾಗುತ್ತಾರೆ. ಸಂಗದಿಂದ ಸ್ವರ್ಗ ದೂರವಾಗುತ್ತದೆ. 


ಯಾವುದು ಶಾಶ್ವತವೋ ಅದು ಜ್ಞಾನ.  ಅಶಾಶ್ವತವಾದುದರ ಬಗೆಯ ತಿಳುವಳಿಕೆ ಅಜ್ಞಾನ. ಇದೆಯೆಂದು ನಂಬಬಯಸಿದರೂ ಕಣ್ಣಿಗೆ ಕಾಣದ ಯಾವುದೋ ಒಂದನ್ನು ನಂಬುವುದೆಂತು. ಅದರ ಇರುವಿಕೆಗೆ ಪ್ರಮಾಣವೇನು? ಎಂದು ಶಂಕಿಸುತ್ತದೆ ಮನಸ್ಸು.  ಆತ್ಮನಿಗೆ ಆತ್ಮನೇ ಮಿತ್ರ. ಅವನಿಗೆ ಅವನೇ ಕೂಡ ಶತ್ರು. ಮನಸ್ಸು ಹಾದಿ ತಪ್ಪಿದಾಗ ಎಚ್ಚರಿಸುವ ಮಿತ್ರನಿವ.ಕರ್ಮಗಳ ಲೆಕ್ಕವಿಟ್ಟು ಇವು ನಿನ್ನವೇ ಕರ್ಮದ ಫಲಗಳು. ಅನುಭವೆಸಿದಾಗ, ಅನುಭವದಿಂದ ಮುಕ್ತನಾದಾಗ ಒಂದು ಲೆಕ್ಕ ಮುಗಿಯಿತು ಎನ್ನುವವ. 


ಯಕ್ಷಪ್ರಶ್ನೆ: ೨೦ ; ಮೃತಃ ಕಥಂ ಸ್ಯಾತ್ಪುರುಷಂ ಕಥಂ ರಾಷ್ಟ್ರಂ ಮೃತಂ ಭವೇತ್। 

                       ಶ್ರಾದ್ದಂ ಮೃತಂ ಕಥಂ ವಾ ಸ್ಯಾತ್ಕಥಂ ಯಜ್ಞೋ ಮೃತಂ ಭವೇತ್॥ 


ಮನೂಷ್ಯನಿಗೆ ಮರಣ ಯಾವುದು ? ರಾಷ್ಟ್ರ ಸಾಯುವುದೆಂತು ? ಶ್ರಾದ್ಧವು ನಿಷ್ಫಲವಾಗುವುದು ಹೇಗೆ ? ಯಜ್ಞ ನಷ್ಟ ಯಾವುದರಿಂದ ? 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಮೃತೋ ದರಿದ್ರಃ ಪುರುಷೋ ಮೃತಂ ರಾಷ್ಟ್ರಮರಾಜಕಂ। 

ಮೃತಮಶ್ರೋತ್ರಿಯಂ ಶ್ರಾದ್ಧಂ ಮೃತೋ ಯಜ್ಞಸ್ತ್ವದಕ್ಷಿಣಃ॥ 


ಮನುಷ್ಯನಿಗೆ ದಾರಿದ್ರ್ಯವೇ ಸಾವು. ರಾಷ್ಟ್ರದ ಸಾವು ಅರಾಜಕತೆ. ಅಶ್ರೋತ್ರಿಯನಿಂದ ಶ್ರಾದ್ಧ ನಿಷ್ಫಲ. ದಕ್ಷಿಣೆಯಿಲ್ಲದ ಯಜ್ಞ ನಿಷ್ಪ್ರಯೋಜಕ. 


ಸಮಾಜದಲ್ಲಿ ಒಬ್ಬ ದರಿದ್ರನಿಗೆ ಯಾವುದೇ ಸ್ಥಾನಮಾನಗಳಿಲ್ಲ. ಭೌತಿಕ ಸುಖವಿಲ್ಲ.  ಅವನು ಇದ್ದೂ ಸತ್ತಂತೆ. ದಕ್ಷತೆಯಿಂದ ಆಳುವ ಅರಸನಿಲ್ಲದಿದ್ದರೆ ರಾಷ್ಟ್ರದಲ್ಲಿ ಅರಾಜಕತೆಯುಂಟಾಗುತ್ತದೆ. ಪರರ್ಷ್ಟ್ರದವರು ಬಂದು ಸ್ವಾಧೀನಪಡಿಸಿಕೊಳ್ಳಲೂ ಬಹುದು, ಅಥವಾ ಸ್ವಾರ್ಥಸಾಧಕ ಅಧಿಕಾರಿಗಳ ಕೈವಶವಾಗಲೂಬಹುದು. ಇಲ್ಲಿಗೆ ಆ ರಾಷ್ಟ್ರದ ಅವಸಾನವಾಗುತ್ತದೆ. ಶ್ರಾದ್ಧಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಡಬಲ್ಲವನಿಲ್ಲದಿದ್ದರೆ ಅದು ನಿಷ್ಫಲವಾಗುತ್ತದೆ. ಸಂಕಲ್ಪಿತ ಫಲ ಸಿಗದೇ ಇರುವುದರಿಂದ ಅದರ ಅವಸಾನವಾಗುತ್ತದೆ. ಯಾವುದೇ ಯಜ್ಞ ಕಾರ್ಯದಲ್ಲಿ ಋತ್ವಿಕ್ ತೃಪ್ತನಾಗಬೇಕು. ಆಗ ಮಾತ್ರ ಅದು ಸಫಲವಾಗುತ್ತದೆ. ಯಥೋಚಿತ ದಾನ , ದಕ್ಷಿಣೆಗಳಿಲ್ಲದ ಯಜ್ಞ ಫಲಪ್ರದವಲ್ಲ. 


ಯಕ್ಷಪ್ರಶ್ನೆ: ೨೧ ; ಕಾ ದಿಕ್ಕಿಮುದಕಂ ಪ್ರೋಕ್ತಂ ಕಿಮನ್ನಂ ಕಿಂ ಚ ವೈ ವಿಷಮ್। 

                      ಶ್ರಾದ್ಧಸ್ಯ ಕಾಲಮಾಖ್ಯಾಹಿ ತತಃ ಪಿಬ ಹರಸ್ವ ಚ॥ 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಸಂತೋ ದಿಕ್ ಜಲಮಾಕಾಶಂ ಗೌರನ್ನಂ ಪ್ರಾರ್ಥನಾ ವಿಷಮ್। 

ಶ್ರಾದ್ಧಸ್ಯ ಬ್ರಾಹ್ಮಣಃ ಕಾಲಃ ಕಥಂ ವಾ ಯಕ್ಷ ಮನ್ಯಸೇ ॥ 


ಸಂತರೇ ದಿಕ್ಕುಗಳು. ಆಕಾಶವನ್ನು ನೀರು ಎನ್ನುತ್ತಾರೆ. ಇಂದ್ರಿಯಗಳೇ ಆಹಾರ.  ಕಾಮನೆಗಳೇ ವೆಷ. ಶ್ರೋತ್ರಿಯ ಲಭ್ಯವಾದಂದೇ ಶ್ರಾದ್ಧಕ್ಕೆ ಸಕಾಲ. 


ಚೈತನ್ಯ ಬಿಂದು ವಿಕಸನಗೊಂಡು, ವಿರಾಟ್ ಸ್ವರೂಪದಲ್ಲಿ ಒಂದಾಗುವ ಪ್ರಥಮ ಪಾದ. ಈ ವಿಕಸನದ ಪರಿಯಲ್ಲಿ ಹಾದಿ ತೋರಿಸಲು, ವಿಕಸನ ಚೈತನ್ಯಗಳು ಸದಾ ಸಿದ್ಧವಾಗಿರುತ್ತವಂತೆ. ಇದು ಬಾಹ್ಯ ರೂಪ. ಈ ವಿಶ್ವ ಸೃಷ್ಟಿಯಾದ ಕ್ಷಣದಲ್ಲಿಯೇ ಹುಟ್ಟಿಬಂದಿರುವುದು ಚೈತನ್ಯರೂಪಿ ಶಕ್ತಿ ಆತ್ಮ. ಅದರಲ್ಲಿ ಮೂಲಭೂತವಾಗಿ ಜಗತ್ತಿನ ಸಮಸ್ತಜ್ಞಾನವೂ ಅಡಗಿದೆ. ಈ ಜ್ಞಾನ ತತ್ಕಾಲಕ್ಕೆ ಮರೆಯಾಗಿದೆ. ಅದೇ ಒಳಗಿದ್ದುಕೊಂಡು ನಡೆಸುವ ಸತ್ಪುರುಷನೂ, ಸಂತನೂ, ಸಖನೂ ಹೌದು. ಇವನೇ ಸರಿಯಾದ ಹಾದಿ ತೋರಿಸುವವನು. 


ಶ್ರದ್ಧೆಯಿಂದ ಮಾಡುವ ಸಕಲ ಕರ್ಮಗಳೂ ಶ್ರಾದ್ಧ ಎನ್ನುತ್ತಾರೆ ಬಲ್ಲವರು.  ಯಾವುದೇ ಯಜ್ಞ ಮಾಡಲೂ ಮನಸ್ಸು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಫಲಾಪೇಕ್ಷೆಯಿಲ್ಲದೆ ಈ ಕರ್ಮ ಮಾಡಲು ಇಚ್ಛಿಸುತ್ತೇನೆ ಎಂಬ ಖಚಿತ ಗುರಿಯೊಂದಿಗೆ ಸಂಕಲ್ಪ ಮಾಡುತ್ತೇವೆ. ಹೀಗೆ ಮಾಡುವಾಗ " ನಾನು " ಈ ಭೌತಿಕ ದೇಹದಲ್ಲಿ ಏನಾಗಿದ್ದೇನೆ ಎಂದು ಹೇಳುವುದೇ ಪ್ರವರ. ಈ ಕರ್ಮಕ್ಕೆ ಬ್ರಹ್ಮೋಪಾಸನೆಯ ಕಾಮನೆ ಕಂಡ ಕ್ಷಣವೇ ಅತ್ಯುತ್ತಮ, ಸೂಕ್ತ ಕಾಲ. 


ಜಗತ್ತಿಡೀ ಆಕಾಶ ಮಾತ್ರ. ಆ ಅನಂತ ಆಕಾಶದಲ್ಲಿಯೇ " ಸಮಸ್ತವೂ " ಇದೆ. ಸೃಷ್ಟಿ, ಸ್ಥಿತಿ, ಲಯಗಳ ಅನಂತ ನಾಟಕ ನಡೆಯುತ್ತಿರುತ್ತದೆ. ಹೇಗೆ ನಡೆಯುತ್ತಿದೆ ? ಇದರಲ್ಲಿ ನನ್ನ ಸ್ಥಾನಮಾನಗಳೇನು? ಈ ಪ್ರಶ್ನೆಗಳ ಉತ್ತರಕ್ಕಾಗಿ ತಪೆಸುತ್ತಿದ್ದರೆ, ಜ್ಞಾನಭಾಸ್ಕರ ಸಂಚಿತ ಕರ್ಮ ನಾಶಮಾಡುತ್ತಾನೆ. ಜೀವಜಲ ಪ್ರಾಪ್ತಿಯಾಗುತ್ತದೆ. ಆದುದರಿಂದ ಆಕಾಶವೇ, ಆಕಾಶ ರಹಸ್ಯವೇ ಬದುಕು. 


ಯಕ್ಷಪ್ರಶ್ನೆ: ೨೨ ; ತಪಃ ಕಿಂ ಲಕ್ಷಣಂ ಪ್ರೋಕ್ತಂ ಕೋ ದಮಶ್ಚ ಪ್ರಕೀರ್ತಿತಃ। 

                       ಕ್ಷಮಾ ಚ ಕಾ ಪರಾ ಪ್ರೋಕ್ತಾ ಕಾ ಚ ಹ್ರೀಃ ಪರಿಕೀರ್ತಿತಾ॥ 


ತಪಸ್ಸಿನ ಲಕ್ಷಣವೇನು ? ಆತ್ಮಸಂಯಮವೆಂದು ಹೆಸರಾದುದೇನು? ಕ್ಷಮೆಯಲ್ಲಿ ಶ್ರೇಷ್ಠವಾದುದ್ಯಾವುದು ? ಲಜ್ಜೆಯ ಫಲ ಯಾವುದು ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ತಪಃ ಸ್ವಧರ್ಮವರ್ತಿತ್ವಂ ಮನಸೋ ದಮನಂ ದಮಃ । 

ಕ್ಷಮಾ ದ್ವಂದ್ವ ಸಹಿಷ್ಣುತ್ವಂ ಹ್ರೀರಕಾರ್ಯನಿವರ್ತನಮ್॥ 


ಕರ್ತವ್ಯ ನಿರ್ವಹಣೆಯೇ ತಪಸ್ಸು.  ಮನೋ ನಿಯಂತ್ರಣವೇ ದಮ. ದ್ವಂದ್ವಗಳನ್ನು ಎದುರಿಸುವುದೇ ಕ್ಷಮಾ. ಅಸಂಗತ ಕಾರ್ಯ ತಡೆಯುವುದು ಲಜ್ಜೆ. 


ಬದುಕಿನಲ್ಲಿ ಪ್ರತಿಯೊಂದು ಜೀವಿಗೂ ಒಂದೊಂದು ಕಾರ್ಯ ನಿಗದಿಯಾಗಿರುತ್ತದೆ. ವಿದ್ಯಾರ್ಥಿಗೆ ವಿದ್ಯಾರಜನೆ, ಗುರುವಿಗೆ ವಿದ್ಯಾಬೋಧನೆ, ಗೃಹಸ್ತನಿಗೆ ಕುಟುಂಬ ರಕ್ಷಣೆ. ಪತ್ನಿಗೆ ಗೃಹರಕ್ಷಣೆ ಇತ್ಯಾದಿ.  ಈ ಕರ್ತವ್ಯಪಾಲನೆಯೇ ತಪಸ್ಸು.  ಇದರೊಂದಿಗೆ "ಆತ್ಮಧರ್ಮ" ಎಂಬುದೂ ಇದೆ. ಇಂದಿನ ಸಮಸ್ಯೆಗಳ ಸುಳಿಯಿಂದ ಹೊರಬರಲಾಗದಿರಬಹುದು. ಕಳೆದುಹೋದ ನೆನಪುಗಳು ಕಾಡುತ್ತಿರಬಹುದು. ಇದೆಲ್ಲವನ್ನೂ ಮೀರಿ ನಿಂತು ಮನಸ್ಸನ್ನು ನಿಯಂತ್ರಿಸುವುದೇ ದಮ. 

ವಿರುದ್ಧ ಭಾವವೇ ದ್ವಂದ್ವ. ದೇಹಮೂಲವಾದ ಲಾಭ-ಅಲಾಭ, ಜಯ-ಅಪಜಯ, ಮಾನ-ಅಪಮಾನ, ಇತ್ಯಾದಿ. ಹಾಗೇ ಪಾರಮಾರ್ಥದಲ್ಲೂ ದ್ವಂದ್ವಗಳಿವೆ. ಇಂದು ಅವು ಹೆಚ್ಚು. ಇವುಗಳೆಲ್ಲವನ್ನು ಮೀರಿ ಮನಸ್ಸನ್ನು ನಿಜಸ್ವರೂಪದಲ್ಲಿ ನೆಲೆಗೊಳಿಸುವುದೇ ಸೈರಣೆ. 


ಯಕ್ಷಪ್ರಶ್ನೆ: ೨೩ ; ಕಿಂ ಜ್ಞಾನಂ ಪ್ರೋಚ್ಯತೇ ರಾಜನ್ ಕಃ ಶಮಶ್ಚ ಪ್ರಕೀರ್ತಿತಃ । 

                      ದಯಾ ಚ ಕಾ ಪರಾ ಪ್ರೋಕ್ತಾ ಕಿಂ ಚ ಆರ್ಜವಮುದಾಹೃತಮ್॥ 


ಜ್ಞಾನವೆಂದು ಯಾವುದನ್ನು ಹೇಳುತ್ತಾರೆ ರಾಜನೇ ? ಶಮ ಎಂದು ಯಾವುದನ್ನು ಕರೆಯುತ್ತರೆ ? ದಯೆ ಎಂದರೇನು ? ಯಾವುದನ್ನು ಆರ್ಜವ ದಯೆ ಎನ್ನುತ್ತಾರೆ ? 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಜ್ಞಾನಂ ತತ್ವಾರ್ಥ ಸಂಬೋಧಃ ಶಮಃ ಚಿತ್ತ ಪ್ರಶಾಂತತಾ. 

ದಯಾ ಸರ್ಶಸುಖೈಷಿತ್ವಂ ಆರ್ಜವಂ ಸಮಚಿತ್ತತಾ॥ 


ತತ್ವಾರ್ಥಗಳನ್ನು ತಿಳಿಯುವುದೇ ಜ್ಞಾನ.  ಮನಶ್ಯಾಂತಿಯೇ ಶಮ. ಸರ್ವಭೂತ ಹಿತಚಿಂತನೆಯೇ ದಯೆ. ಸಮಚಿತ್ತವೇ ಋಜುತ್ವ.


ತತ್ವಾರ್ಥಗಳನ್ನು ತಿಳಿಯುವುದೇ ಜ್ಞಾನ.  ಮಿಕ್ಕಿದ್ದೆಲ್ಲ ಮಿಥ್ಯೆ. ಒಂದು ಬಾರಿ ಈ ಅರ್ಥ ತೆರೆದುಕೊಂಡಿತೋ ಜೀವ ದ್ವಂದ್ವಗಳಿಂದ ಮುಕ್ತವಾಗುತ್ತದೆ. ಇದೇ ಶಮ. ಋಜುತ್ವವೆಂದರೆ ಸಮಚಿತ್ತ. ಇದು ಸಹಜಸ್ವಭಾವಕ್ಕೆ ಹೋಗುತ್ತದೆ. ಕಾಲು ಜಾರಿ ಬಿದ್ದವನನ್ನು ಎತ್ತಲು ಧಾವಿಸುವುದು, ಪೆಟ್ಟಾದರೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವುದು. ಇದನ್ನು ಪ್ರಯತ್ನಪೂರ್ವಕವಾಗಿ ಮಾಡಬಹುದು. ಇದು ನನ್ನ ಸಾಮಾಜಿಕ ಕರ್ತವ್ಯ ಎಂದೋ, ನೋಡುವವರು ಏನೆಂದುಕೊಳ್ಳುತ್ತಾರೆ ಎಂದು ಮಾಡಬಹುದು. ಇದ್ಯಾವುದೂ ಇಲ್ಲದೆ ತೀರ ಸಹಜಕ್ರಿಯೆಯಾಗಿ, ಒಳಗಿನ ತುಡಿತದ ಬಾಹ್ಯ ಆಚರಣೆಯಾಗಿ ಮಾಡುವ ಕೆಲಸ, ಸಹಜ ಸ್ವಭಾವವೇ ಆರ್ಜವ. ಈ ಸ್ಥಿತಿಯಲ್ಲಿ ಮಾತ್ರ ಮನುಷ್ಯ ಸರ್ವಭೂತಗಳಲ್ಲೂ ತನ್ನನ್ನೇ ಕಾಣಬಲ್ಲ. 


ಯಕ್ಷಪ್ರಶ್ನೆ: ೨೪ ; ಕಃ ಶತ್ರುರ್ದುರ್ಜಯಃ ಪುಂಸಾಂ ಕಶ್ಚ ವ್ಯಾಧಿರನಂತಕಃ। 

                       ಕೀದೃಶಶ್ಚ ಸ್ಮೃತಃ ಸಾಧುರಸಾಧುಃ ಕೀ ದೃಶಃ ಸ್ಮೃತಃ ॥ 


ಮನುಷ್ಯನಿಗೆ ಜಯಿಸಲು ಕಷ್ಟಸಾಧ್ಯವಾದ ಶತ್ರು ಯಾವುದು ? ಕೊನೆಯಿಲ್ಲದ ವ್ಯಾಧಿ ಯಾವುದು ? ಸಾಧುಪುರುಷನೆಂದರೆ ಯಾರು ?  ಅಸಾಧು ಪುರುಷನೆಂದರೆ ಯಾರು ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ:


ಕ್ರೋಧಃ ಸುದುರ್ಜಯಃ ಶತ್ರುರ್ಲೋಭೋ ವ್ಯಾಧಿರನಂತಕಃ । 

ಸರ್ವಭೂತ ಹಿತಃ ಸಾಧುರಸಾಧುರ್ನಿರ್ದಯಃ ಸ್ಮೃತಃ ॥ 


ಕೋಪವೆಂಬುದು ಜಯಿಸಲು ಕಷ್ಟಸಾಧ್ಯವಾದುದು. ವೈರಿಯಾದ ಲೋಭವೇ ಒಂದು ರೋಗ. ಸರ್ವಜೀವಿಗಳ ಹಿತ ಬಯಸುವವ ಸಾಧು. ನಿರ್ದಯನಾದವನೇ ಅಸಾಧು. 


ಜಗತ್ತಿನಲ್ಲಿ ಕೋಪವೇ ಸಕಲ ಗೊಂದಲಗಳ ಮೂಲ. ಹಿಂದೆಂದೋ ಪತಿ ಇತ್ತ ವಚನಗಳನ್ನು ರಾಮ ವನವಾಸ, ಭರತ ಪಟ್ಟಾಭಿಷೇಕಗಳ ರೂಪದಲ್ಲಿ ಕೈಕೇಯಿ ಬೇಡಿದಳು. ಇದೇ ಕಾರಣ ರಾಮಾಯಣ ನಡೆಯಿತು. ಇಷ್ಟಾದುದು ಕೈಕೇಯಿಯ ಕೋಪದಿಂದ. ಲೋಭ ಎನ್ನುವುದು ಒಂದು ರೋಗ. ತಾನೂ ಉಣ್ಣುವುದಿಲ್ಲ, ಪರರಿಗೂ ಉಣ್ಣಗೊಡುವುದಿಲ್ಲ ಲೋಭಿ. 

ಅಗತ್ಯಗಳಿಗಾಗಿ ಗೃಹಸ್ಥ ಉಳಿಸುವುದು, ಸಂಗ್ರಹಿಸಿಡುವುದು ಕರ್ತವ್ಯವೇ ಹೊರತು ಲೋಭವಲ್ಲ. ದರೆ ಸನ್ಯಾಸಿ ಉಳಿಸಿ, ಸಂಗ್ರಹಿಸುವುದು ಸಲ್ಲದು. ಸಾಧು ಎನ್ನುವ ಪದ ಹಗುರವಾಗಿ ಬಳಕೆಯಾಗುತ್ತಿದೆ. ಸಾಧನಾಪಥದ ಪಥಿಕನೇ ಸಾಧು. ಸಮಸ್ತ ಜೀವಜಂತುಗಳಲ್ಲಿ ಸೃಷ್ಟಿಯಲ್ಲಿ ಪಾರಮಿತ ಹೊಂದಿದವ, ಮೈತ್ರಿಯನ್ನು ಹೊಂದಿದವ "ಸಾಧು". ಇದಿಲ್ಲದವನೇ ಅಸಾಧು. 


ಯಕ್ಷಪ್ರಶ್ನೆ: ೨೫ ; ಕೋ ಮೋಹಃ ಪ್ರೋಚ್ಯತೇ ರಾಜನ್ ಕಶ್ಚಮಾನಃ ಪ್ರಕೀರ್ತಿತಃ। 

                      ಕಿಮಾಲಸ್ಯಂ ಚ ವಿಜ್ಞೇಯಂ ಕಶ್ಚ ಶೋಕಃ ಪ್ರಕೀರ್ತಿತಃ ॥


ರಾಜನೇ, ಮೋಹ ಎನ್ನುವುದು ಯಾವುದಕ್ಕೆ ? ಅಹಂಕಾರ ಎಂದರೇನು ? ಆಲಸ್ಯವೆಂದು ಯಾವುದನ್ನು ತಿಳಿಯಬೇಕು ? ಶೋಕವೆಂದು ಕರೆಯುವುದ್ಯಾವುದು ? 


ಈ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಮೋಹೋ ಹಿ ಧರ್ಮಮೂಢತ್ವಂ ಮಾನಸ್ತ್ವಾತ್ಮಾಭಿಮಾನತಾ । 

ಧರ್ಮನಿಷ್ಕ್ರಿಯತಾऽಲಸ್ಯಂ ಶೋಕಸ್ತ್ವಜ್ಞಾನಮುಚ್ಯತೇ ॥ 


ಧರ್ಮದ ಬಗೆಗಿರುವ ಅಜ್ಞಾನವೇ ಮೋಹ. ಆತ್ಮಾಭಿಮಾನವೇ ಮಾನ ಎನ್ನುತ್ತಾರೆ. ಧರ್ಮಾಚರಣೆಯ ಬಗೆಗಿನ ಅಸಡ್ಡೆಯೇ ಆಲಸ್ಯ ಎನಲ್ಪಡುತ್ತದೆ. ಅಜ್ಞಾನವೇ ಶೋಕ. 


ಇಲ್ಲಿಯವರೆಗೆ ಯಮಧರ್ಮ ತೊಂಬತ್ತೊಂಬತ್ತು ಪ್ರಶ್ನೆಗಳನ್ನು ಕೇಳಿದ. ಬಾಯಾರಿ ದಣಿದಿದ್ದರೂ, ಒಡಹುಟ್ಟಿದವರು ಗತಪ್ರಾಣರಾಗಿ ಎದುರಿಗೆ ಬಿದ್ದಿದ್ದರೂ ಧರ್ಮರಾಯ ಕಿಂಚಿತ್ತೂ ವಿಚಲಿತನಾಗಲಿಲ್ಲ, ಕೋಪಗೊಳ್ಳಲಿಲ್ಲ. ತಾಳ್ಮೆಯಿಂದ ಯಕ್ಷ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಏಕೆ? ಅವನನ್ನು ನಂಬಿ ವನವಾಸಿಗಳಾಗಿದ್ದರು. ಜೂಜಿನಲ್ಲಿ ಅವರನ್ನು ಪಣವಾಗಿಟ್ಟು ಸೋತಿದ್ದ.ಅವರ ಯೋಗಕ್ಷೇಮ ಅವನ ಧರ್ಮವಾಗಿತ್ತು. ಈಗ ಯಕ್ಷ ಮೋಹವೆಂದರೇನೆಂದು ಕೇಳುತ್ತಿದ್ದಾನೆ

ಧರ್ಮದ ಬಗೆಗಿನ ಅಜ್ಞಾನವೇ ಮೋಹ ಎಂದುತ್ತರಿಸುತ್ತಾನೆ ಧರ್ಮರಾಯ.  ಅಜ್ಞಾನವೇ ಶೋಕ ಕಾರಣ. ಕರ್ತವ್ಯದ ಬಗೆಗಿನ ಅಸಡ್ಡೆಯೇ ಆಲಸ್ಯ.  


ಯಕ್ಷಪ್ರಶ್ನೆ: ೨೬ ; ಕಿಂ ಸ್ಥೈರ್ಯಮ್ ಋಷಿಭಿಃ ಪ್ರೋಕ್ತಂ ಕಿಂ ಚ ಧೈರ್ಯಮುದಾಹೃತಮ್। 

                      ಸ್ನಾನಂ ಚ ಕಿಂ ಪರಂ ಪ್ರೋಕ್ತಂ  ದಾನಂ ಚ ಕಿಮಿಹೋಚ್ಯತೇ॥ 


ಋಷಿಗಳು ಯಾವುದನ್ನು ಸ್ಥೈರ್ಯವೆನ್ನುತ್ತಾರೆ ? ಯಾವುದನ್ನು ಧೈರ್ಯವೆನ್ನುತ್ತಾರೆ ? ಅತ್ಯುತ್ತಮವಾದ ಸ್ನಾನ ಯಾವುದು? ದಾನವೆಂದು ಯಾವುದು ಹೇಳಲ್ಪಡುತ್ತದೆ ? 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಸ್ವಧರ್ಮೇ ಸ್ಥಿರತಾಸ್ಥೈರ್ಯಂ ಧೈರ್ಯಂ ಇಂದ್ರಿಯ ನಿಗ್ರಹಃ । 

ಸ್ನಾನಂ ಮನೋಮಲತ್ಯಾಗೋ ದಾನಂ ವೈ ಭೂತರಕ್ಷಣಮ್॥


ಸ್ವಧರ್ಮದಲ್ಲಿಯೇ ಸ್ಥೈರ್ಯ. ಇಂದ್ರಿಯ ನಿಗ್ರಹವೇ ಧೈರ್ಯ. ಮನಸ್ಸಿನ ಕೊಳೆ ತೊಳೆಯುವುದೇ ಸ್ನಾನ. ಭೂತರಕ್ಷಣೆಯೇ ಸ್ನಾನ. 


ಸವಧರ್ಮದಲ್ಲಿ ಭೌತಿಕ ಮತ್ತು ಪಾರಮಾರ್ಥಿಕ ಎಂದು ಎರಡುವಿಧ. ಭೌತಿಕ ಧರ್ಮ ಸಮಾಜದಲ್ಲಿದ್ದು ನಾವು ಮಾಡಬೇಕಾದ ಕರ್ತವ್ಯಗಳು.  ಭೌತಿಕ ಧರ್ಮಪಾಲನೆ ಮಾಡುತ್ತಿದ್ದರೂ " ತಾನು" ಯಾರುಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಪಾರಮಾರ್ಥಿಕ ಧರ್ಮ.ತೇಜಸ್ಸು, ಕ್ಷಮೆ, ಧೈರ್ಯ, ಬಾಹ್ಯ ಶುದ್ಧಿ ಹಾಗೂ ಸರ್ವರಲ್ಲಿ ಮೈತ್ರಿಭಾವ. ತನ್ನಲ್ಲಿ ಅತಿ ಗರ್ವವಿಲ್ಲದಿರುವುದು. ಇವು ಒಳಗಿನಿಂದ ಶುದ್ಧನಾಗಿರುವವನ ಲಕ್ಷಣ. ಕೊಳೆ ತುಂಬಿದವ ಡಾಂಭಿಕ, ಅಹಂಕಾರಿ, ಕ್ರೂರಿ, ಕಠೋರ, ಅಜ್ಞಾನಿ. ಈ ಆಸುರೀ ಗುಣಗಳೆಂಬ ಮಲವನ್ನು ತೊಳೆದುಕೊಳ್ಳಲು ಅನುಗ್ರಹಿಸು ಎಂದು ನಿರಂತರ ಪ್ರಾರ್ಥಿಸಿದರೆ ಇದೂ ಕಳೆದು ಹೋಗುತ್ತದೆ ಎಂದರು ನಮ್ಮ ಪ್ರಾಚೀನರು. 


ಯಕ್ಷಪ್ರಶ್ನೆ: ೨೭; ಕಃ ಪಂಡಿತಃ ಪುಮಾನ್ಜ್ನೇಯೋ ನಾಸ್ತಿಕಃ ಕಶ್ಚ ಉಚ್ಯತೇ। 

                     ಕೋ ಮೂರ್ಖಃ ? ಕಶ್ಚ ಕಾಮಃ ಸ್ಯಾತ್ಕೊ ಮತ್ಸರಃ ಇತಿ ಸ್ಮೃತಃ ॥ 


ಪಂಡಿತನೆಂದು ಯಾರನ್ನು ಹೆಸರಿಸುತ್ತಾರೆ. ? ನಾಸ್ತಿಕ ಎಂದು ಯಾರಿಗೆ ಹೇಳುತ್ತಾರೆ ? ಮೂರ್ಖ ಯಾರು ? ಕಾಮನೆ ಎಂದರೇನು? ಯಾವುದಕ್ಕೆ ಮತ್ಸರ ಎನ್ನುತ್ತಾರೆ. 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಧರ್ಮಜ್ಞಃ ಪಟಡಿತೋ ಜ್ಞೇಯೋ ನಾಸ್ತಿಕೋ ಮೂರ್ಖ ಉಚ್ಯತೇ । 

ಕಾಮಃ ಸಂಸಾರ ಹೇತುಶ್ಚ ಹೃತ್ತಾಪೋ ಮತ್ಸರಃ ಸ್ಮೃತಃ॥ 


ಯಾರು ವಿದ್ಯಾಸಂಪನ್ನನೋ ನಾಯಿ, ಹಸು, ಆನೆ, ಚಂಡಾಲನಲ್ಲಿ ಒಂದೇ ಮೂಲತತ್ವವನ್ನು ಕಾಣುವವನು ಪಂಡಿತ. ಇಲ್ಲಿ ಪಾಂಡಿತ್ಯ ಎಂದರೆ ಬ್ರಹ್ಮತತ್ವ. ಬ್ರಹ್ಮ ಎಂದರೆ ಜ್ಞಾನ.  ಆದಧ್ಯಾತ್ಮಿಕ ಜ್ಞಾನ.  ಪ್ರಪಂಚದ,  ಜಗತ್ತಿನ ತನ್ನ ಮೂಲಸ್ವರೂಪದ ಜ್ಞಾನ.  ಈ ಜ್ಞಾನವನ್ನು ತಿಳಿದವ ಸಮಸ್ತವಸ್ತುಗಳನ್ನೂ ಸಮಭಾವದಿಂದ ಕಾಣುತ್ತಾನೆ. ಇವನೇ ಧರ್ಮಜ್ಞ. ಈ ಮೂಲರೂಪವೆಂಬುದೊಂದಿಲ್ಲವೇ ಇಲ್ಲ. ಇದೆಲ್ಲವೂ ಕಲ್ಪನೆ ಮಾತ್ರ ಎನ್ನುತ್ತಾ ಸಂಸಾರದಲ್ಲಿ ಮಾತ್ರ ಆಸಕ್ತನಾಗಿರುವವ ನಾಸ್ತಿಕ. ಇವನು ಮೂರ್ಖ. ಏಕೆಂದರೆ ಈ ದೇಹ ಅದರೊಂದಿಗೆ ಚಿಂತಿಸುವ ಯುಕ್ತಾಯುಕ್ತ ಗುರುತಿಸುವ ಶಕ್ತಿ ಲಭ್ಯವಾಗಿದೆ. ಇದನ್ನು ಅರ್ಥಮಾಡಿಕೊಳ್ಳದವ ಮೂರ್ಖ. ಒಬ್ಬ ಸರ್ವಸಂಗ ಪರಿತ್ಯಾಗಿ ಕಾಡಿನಂಚನಲ್ಲಿ ಸಣ್ಣ ಕುಟೀರ ಕಟ್ಟಿ ವಾಸಿಸುತ್ತಿದ್ದ.ಎಲ್ಲಿಂದಲೋ ಬಂದ ಇಲಿ ಕೌಪೀನ ಕಚ್ಚಿತು. ಇಲಾ ಹಿಡಿಯಲು ಬೆಕ್ಕು ತಂದ. ಬೆಕ್ಕಿಗೆ ಹಾಲು ಬೇಕೆಂದು ಹಸು ತಂದ. ಹಸು ಕಾಪಿಡಲು ಮತ್ತು ಹಾಲು ಕರೆಯಲು ಹೆಣಣೊಬ್ಬಳನ್ನು ತಂದ. ಪ್ರಕೃತಿಯ ಆಕರೂಷಣೆ ಹೆಚ್ಚಾಯಿತು. ಸಂಸಾರಿಯಾದ. ಕೌಪೀನದ ಮೇಲಿನ ಆಶೆಯ ಫಲ ಹೀಗಿತ್ತು. 


ಯಕ್ಷಪ್ರಶ್ನೆ: ೨೮ ; ಕೋऽಹಂಕಾರ ಇತಿ ಪ್ರೋಕ್ತಃ ಕಶ್ಚ ದಂಭಃ ಪ್ರಕೀರ್ತಿತಃ । 

                      ಕಿಂ ತದ್ದೈವಂ ಪರಂ ಪ್ರೋಕ್ತಂ ಕಿಂ ತತ್ ಪೈಶುನ್ಯಮುಚ್ಯತೇ ॥ 


ಯಾವುದನ್ನು ಅಹಂಕಾರ ಎನ್ನುತ್ತಾರೆ ? ಡಂಭ ಎನ್ನುವುದು ಯಾವುದಕ್ಕೆ  ? ದೈವತ್ವ ಎಂದು ಯಾವುದನ್ನು ಹೇಳುತ್ತಾರೆ ? ಪೈಶುನ್ಯ ಎಂದರೇನು ? 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಮಹಾಜ್ಞಾನಮಹಂಕಾರೋ ದಂಬೋ ಧರ್ಮಧ್ವಜೋಚ್ಛಯಃ । 

ದೈವಂ ದಾನಫಲಂ ಪ್ರೋಕ್ತಂ ಪೈಶುನ್ಯಂ ಪರದೂಷಣಂ ॥ 


ಅಜ್ಞಾನದ ಪರಮಾವಧಿಯೇ ಅಹಂಕಾರ. ಧರ್ಮದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವುದೇ ಡಂಭ. ದಾನದಿಂದಲೇ ದೈವ ಪ್ರಾಪ್ತಿ. ಪರನಿಂದೆಯೇ ಪೈಶುನ್ಯ. 


ಸಂತರೊಬ್ಬರನ್ನು ಕಾಣಲು, ಪ್ರಸಿದ್ಧರೂ, ಬಹುಮಾನ್ಯರೂ ಆದ ಪಂಡಿತರೊಬ್ಬರು ಬಂದರು. ಅವರು ಸಂತರನ್ನು ಕುರಿತು 

" ಸ್ವಾಮಿ, ತಿಳಿದುಕೊಂಡಷ್ಟೂ, ಓದಿಕೊಂಡಷ್ಟೂ ಗೊಂದಲ ಜಾಸ್ತಿ ಅಲ್ಲವೇ ?" ಎಂದರು. ಒಂದು ಕ್ಷಣ ಅರನ್ನೇ ನೋಡಿದ ಸಂತರು " ಹೌದೇನು, ನಮಗಿದು ಗೊತ್ತಿರಲೇ ಇಲ್ಲ. ಓದಿಕೊಂಡವರಿಗೆ ಗೊಂದಲ ಇರುತ್ತದೆ. ಏಕೆಂದರೆ ಓದಿ ಓದಿ ವಿಷಯ ಸಂಗ್ರಹ ಮಾಡುವುದು ಮಾತ್ರ. ಇದರಲ್ಲಿ ತಿಳುವಳಿಕೆ ಮಾತ್ರ. ವಿಷಯ ತಿಳಿಯುವ, ಅರ್ಥ ಮಾಡಿಕೊಳ್ಳುವ ಅಗತ್ಯ ವಿವೇಚನೆ ಇಲ್ಲ. ತಿಳಿದಿದ್ದನ್ನು ವಿವರಿಸಲು ಬರುವುದಿಲ್ಲ.ಹಾಗಾಗೆ ಅವರಲ್ಲಿ ಗೊಂದಲವಿಲ್ಲ. ಇನ್ನೇನು ನೀವೇ ಅರ್ಥಮಾಡಿಕೊಳ್ಳಿ. ಅಂದು ಸುಮ್ಮನಾದರು. ಹೀಗೆ ಬಹಿರಂಗವಾಗಿ ಧರ್ಮಸೂಕ್ಷ್ಮವರಿತವ ಎಂದು ತಿಳಿಯದ ವಿಷಯವನ್ನು ವ್ಯಾಖ್ಯಾನಿಸಿ, ತಪ್ಪು ಅಭಿಪ್ರಾಯ ಮೂಡಿಸುವುದು ಡಾಂಭಿಕತೆ. ದಾನ ಎಂದರೆ ನಿರ್ಮಲೀಕರಣ. ದುರ್ಗುಣಗಳನ್ನು ಹೊರಹಾಕಿ ಮನಸ್ಸು ಬುದ್ಧಿಗಳನ್ನು ಶುದ್ಧಗೊಳಿಸಿ ನಡೆದದ್ದಕ್ಕೆ ಪಶ್ಚತ್ತಾಪ ಪಡುವುದೇ ದಾನ. ಇದರಿಂದ ಮಾತ್ರ ದೈವತ್ವ ಸಾಧ್ಯ. 


ಲೋಗರೊಡನಾಟದಲ್ಲಿ ಎಚ್ಚರ ಅಗತ್ಯ.  ಇದು ತಾತ್ಕಾಲಿಕ, ಕರ್ತವ್ಯಕ್ಕಾಗಿ ಮಾತ್ರ ಎಂಬ ಎಚ್ಚರಿಕೆಯಿಂದ ನಡೆಯಬೇಕು. ಅರಿಷಡ್ವರ್ಗಗಳು ಮುಸುಕಿ ಅವುಗಳೆಡೆಗೆ ಸೆಳೆತ ಜಾಸ್ತಿಯಾಗುತ್ತದೆ. ಎವೆಲ್ಲದರೊಂದಿಗೆ ಹಲವು ಆಯಾಮಗಳ ಸೆಳೆತವಿರುತ್ತದೆ. ಪರನಿಂದೆ ಅವುಗಳಲ್ಲೊಂದು. ನಿಂದೆ ಎಂದರೆ ಕೆಟ್ಟಮಾತುಗಳನ್ನಾಡುವುದು ಚಾಡಿ


ಯಕ್ಷಪ್ರಶ್ನೆ: ೨೯ ; ಧರ್ಮಶ್ಚಾರ್ಥಶ್ಚ ಕಾಮಶ್ಚ ಪರಸ್ಪರ ವಿರೋಧಿನಃ ।

                      ಏಷಾಂ ನಿತ್ಯವಿರುದ್ಧಾನಾಂ ಕಥಮೇಕತ್ರ ಸಂಗಮಃ॥ 


ಧರ್ಮ, ಅರ್ಥ, ಕಾಮ ಇವು ಮೂರೂ ಪರಸ್ಪರ ವಿರೋಧವುಳ್ಳವು. ಆದರೂ ವಿರೋಧವಿದ್ದಾಗ್ಯೂಹೇಗೆ ಒಂದು ಕಡೆ ಹೊಂದಿಕೊಂಡಿವೆ. 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ:


ಯದಾ ಧರ್ಮಶ್ಚ ಭಾರ್ಯಾ ಚ ಪರಸ್ಪರವಶಾನುಗೌ। 

ತದಾ ಧರ್ಮಾರ್ಥಕಾಮಾನಾಂ ತ್ರಯಾಣಾಮಪಿ ಸಂಗಮಃ॥ 


ಹೇಗೆ ಧರ್ಮ ಮತ್ತು ಧರ್ಮಪತ್ನಿ ಪರಸ್ಪರ ಹೊಂದಿಕೊಂಡಿರುತ್ತಾರೋ ಹಾಗೆಯೇ ಧರ್ಮ, ಅರ್ಥ, ಕಾಮಗಳೆಂಬ ಮೂರೂ ಒಂದೆಡೆ ಸೇರಿರುತ್ತವೆ. 


ಧರ್ಮ ಎಂದರೆ ಯಾವುದರಿಂದ ತನಗೆ, ತಾನಿರುವ ಪರಿಸರಕ್ಕೆ, ಸಮಾಜಕ್ಕೆ ಹಿತವಾಗುತ್ತದೋ ಬೇರೆಯವರೂ ಸಚ್ಚಾರಿತ್ರ್ತರಾಗಿ ನಡೆಯುವಂತಾಗುತ್ತದೆಯೋ ಅದೇ ಧರ್ಮ. ಧರ್ಮಾರ್ಜಿತ ವಿತ್ತದಿಂದ ತನ್ನ ಸಾಮಾಜಿಕ ಕರ್ತವ್ಯ ನಿರ್ವಹಣೆ ಮಾಡಬೇಕು. ತನ್ನ ಸಂಸಾರ, ಪಿತೃಗಳು, ದೇವರೈ, ಸಮಾಜದ ಋಣ ತೀರಿಸಬೇಕು. ಇದು ಭಗವಂತ ನೀಡಿದ್ದು. ಅವನಿಗೇ ಅರ್ಪಿತ ಎಂಬ ಭಾವದಿಂದ ಮಾಡಿದಾಗ ಅವನು ಬಂಧನದಿಂದ ಹೊರಗೆ ನಿಲ್ಲುತ್ತಾನೆ. ಹೀಗೆ ಧರ್ ಅರ್ಥ ಒಂದಕ್ಕೊಂದು ಪೂರಕ. 


ಮನಸ್ಸುಗಳಲ್ಲಿ ಹಲವು ವಿಧ. ಸಾಮಾನ್ಯ, ಅಸಾಮಾನ್ಯ,ಮತ್ತು ಮನಸ್ಸೇ ಇಲ್ಲದ ಮನಸ್ಸು ಇತ್ಯಾದಿ.  ಸಾಮಾನ್ಯ ಮನಸ್ಸು ಇಂದ್ರಿಯ ಮೂಲ ಸುಖದ ಕಾಮನೆಯಲ್ಲೇ ಮಗ್ನ. ಸದಾ ಅದರ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಅಸಾಮಾನ್ಯ ಮನಸ್ಸು ದೈವದತ್ತವಾಗಿಬಂದಿದೆ. ಅದನ್ನು ದೈವರೂಪೀ ಸಮಾಜಕ್ಕೆ ನೀಡುವ ಎನ್ನುವಂಥದ್ದು. ಮನಸ್ಸೇ ಇಲ್ಲದ ಮನಸ್ಸು ಸರ್ವಶ್ರೇಷ್ಠ. 


ಯಕ್ಷಪ್ರಶ್ನೆ: ೩೦ ; ಅಕ್ಷಯೋ ನರಕಃ ಕೇನ ಪ್ರಾಪ್ಯತೇ ಭರತರ್ಷಭ । 

                       ಏತನ್ಮೇ ಪೃಚ್ಛತಃ ಪ್ರಶ್ನಂ ತಚ್ಛೀಘ್ರಂ ವಕ್ತುಮರ್ಹಸಿ॥ 


ಭರತರ್ಷಭ, ಎಂದಿಗೂ ಮುಗಿಯದ ನರಕವಾಸ ಪ್ರಾಪ್ತಿಯಾಗುವುದು ಯಾವುದರಿಂದ ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


೧) ಬ್ರಾಹ್ಮಣಂ ಸ್ವಯಮಾಹೂಯ ಯಾಚಮಾನಮಕಿಞ್ಚನಮ್

    ಪಶ್ಚಾನ್ನಾಸ್ತೀತಿಯೋ ಬ್ರೂಯಾತ್ಸೋऽಕ್ಷಯಂ ನರಕಂ ವ್ರಜೇತ್॥ 


ದರಿದ್ರನಾದ ಯಾಚಕ ಬ್ರಾಹ್ಮಣನನ್ನು ತಾನಾಗಿಯೇ ಕರೆದು, ಅವನನ್ನು ಬರಿಗೈಯಲ್ಲಿ ಮರಳಿ ಕಳಿಸುವವ ಅನಂತ ನರಕ ಭಾಜನನಾಗುತ್ತಾನೆ. 


೨) ವೇದೇಷು ಧರ್ಮಶಾಸ್ತ್ರೇಷು ಮಿಥ್ಯಾಯೋ ವೈ ದ್ವಿಜಾತಿಷು

    ದೇವೇಷು ಪಿತೃ ಧರೂಮೇಷು ಸೋ ऽ ಕ್ಷಯಂ ನರಕಂ ವ್ರಜೇತ್॥ 


ವೇದಗಳಲ್ಲಿ, ಧರ್ಮಶಾಸ್ತ್ರಗಳಲ್ಲಿ, ಬ್ರಾಹ್ಮಣರಲ್ಲಿ, ದೇವತೆಗಳಲ್ಲಿ, ಪಿತೃಸಂಬಂಧ ಕಾರ್ಯಗಳಲ್ಲಿ ನಂಬಿಕೆಯಿಲ್ಲದವ ಬಹಳಕಾಲದವರೆಗೆ ನರಕವಾಸಿಯಾಗುತ್ತಾನೆ. 


೩) ವಿದ್ಯಮಾನೇ ಧನೇ ಲೋಭಾದ್ದಾನ ಭೋಗವಿವರ್ಜಿತಃ 

    ಪಶ್ಚಾನ್ನಾಸ್ತೀತಿ ಯೋ ಬ್ರೂಯಾತ್ಸೋऽ ಕ್ಷಯಂ ನರಕಂ ವ್ರಜೇತ್


ಧನವಿದ್ದರೂ ಲೋಭಿಯಾಗಿದಾನ ಮಾಡದವ, ತಾನೂ ಸುಖಗಳನ್ನು ಅನುಭವಿಸದವ ನರಕವೃಸವನ್ನು ಅನೈಭವೆಸುತ್ತಾನೆ.


ಯಕ್ಷಪ್ರಶ್ನೆ: ೩೧ ; ರಾಜನ್ಕುಲೇನ ವೃತ್ತೇನ ಸ್ವಾಧ್ಯಾಯೇನ ಶ್ರುತೇನ ವಾ । 

                       ಬ್ರಾಹ್ಮಣ್ಯಂ ಕೇನ ಭವತಿ ಪ್ರಬ್ರೂಹ್ಯೇತತ್ಸುನಿಶಿತ್ವಮ್॥ 


ಬ್ರಾಹ್ಮಣತ್ವವೆಂಬುದು ಯಾವುದರಿಂದ ಖಚಿತವಾಗುತ್ತದೆ ? ಕುಲದಿಂದಲೆ ? ನಡತೆಯಿಂದೆ ? ವೇದಾಧ್ಯಯನದಿಂದಲೆ? ವಿದ್ಯೆಯಿಂದಲೆ? 


ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ: 


೧) ಶೃಣು ಯಕ್ಷ ಕುಲಂ ತಾತ ನ ಸ್ವಾಧ್ಯಾಯೋ ನ ಚ ಶ್ರುತಮ್। 

ಕಾರಣಂ ಹಿ ದ್ವಿಜತ್ವೇ ಚ ವೃತ್ತಮೇವ ನ ಸಂಶಯಃ ॥ 


ಯಕ್ಷ ಕುಲ ತಿಲಕನೇ, ಬ್ರಾಹ್ಮಣ್ಯಕ್ಕೆ ಕುಲ, ವೇದಾಧ್ಯಯನ, ವಿದ್ಯೆ ಇವ್ಯಾವುದೂ ಕಾರಣವಲ್ಲ. ಅವನ ನಡತೆಯಿಂದಲೇ ಬ್ರಾಹ್ಮಣ್ಯ ಲಭ್ಯವಾಗುತ್ತದೆ. 


೨)ವೃತ್ತಂ ಯತ್ನೇನ ಸಂರಕ್ಷ್ಯಂ ಬ್ರಾಹ್ಮಣೇನ ವಿಶೇಷತಃ ।

ಅಕ್ಷೀಣ ವೃತ್ತೋ ನ ಕ್ಷೀಣೋ ವೃತ್ತ ತಸ್ತು ಹತೋ ಹತಃ॥ 


ಬ್ರಾಹ್ಮಣನು ವಿಶೇಷತಃ ತನ್ನ ನಡೆನುಡಿಗಳನ್ನು ಪ್ರಯತ್ನಪೂರ್ವಕವಾಗಿ ಧರ್ಮಸಮ್ಮತವಾಗಿರುವಂತೆ ರಕ್ಷಿಸಿಕೊಳ್ಳಬೇಕು. ಯಾರ ನಡತೆ ಸರಿಯಾಗಿರುತ್ತದೋ ಅವನು ಎಂದಿಗೂ ನಾಶವಾಗುವುದಿಲ್ಲ. ಕೆಟ್ಟ ನಡೆ ನಾಶಕ್ಕೆ ದಾರಿ. 


೩)ಪಠಕಾಃ ಪಾಠಕಾಶ್ಚೈವ ಯೇ ಚಾನ್ಯೇ ಶಾಸ್ತ್ರಚಿನ್ತಕಾಃ। 

ಸರ್ವೇ ವ್ಯಸನಿನೋ ಮೂರ್ಖಾ ಯಃ ಕ್ರಿಯಾವಾನ್ಸ ಪಣ್ಡಿತಃ॥ 


ದುರ್ನಡತೆಯ ವ್ಯಸನಿ ಅಧ್ಯಯನಶೀಲನಾಗಿರಲಿ, ಅಧ್ಯಾಪಕನಾಗಿರಲಿ, ಶಾಸ್ತ್ರಚಿಂತಕನೇ ಆಗಿರಲಿ ಅವನು ಮೂರಾಖನೇ. ಸನ್ನಡತೆಯುಳ್ಳ ಕ್ರಿಯಾಶೀಲನೇ ಪಂಡಿತ. 


೪) ಚತುರ್ವೇದೋऽಪಿ ದುರ್ವೃತ್ತಃ ಸ ಶೂದ್ರಾದತಿರಿಚ್ಯತೇ । 

    ಯೋऽಗ್ನಿಹೋತ್ರಪರೋ ದಾನ್ತಃ ಸ ಬ್ರಾಹ್ಮಣ ಇತಿ ಸ್ಮೃತಃ ॥ 


ನಾಲ್ಕು ವೇದಗಳನ್ನು ಅಧ್ಯನ ಮಾಡಿದ್ದರೂ ಕೆಟ್ಟ ವೃತ್ತಿಯವನಾಗಿದ್ದರೆ ಅತ್ಯಂತ ಕೀಳು ವೃತ್ತಿಯವನಿಗಿಂತ ಕೀಳೆನಿಸಿಕೊಳ್ಳುತ್ತಾನೆ. ಅಗ್ನಿಹೋತ್ರಿಯಾಗಿರುವವನು ಮಾತ್ರ ಬ್ರಾಹ್ಮಣನೆನಿಸಿಕೊಳ್ಳುತ್ತಾನೆ. 


ಯಾರು ಬ್ರಹ್ಮನಿಗಾಗಿ ತಪಿಸುತ್ತಾರೋ, ಬ್ರಹ್ಮನ ಆರಾಧನೆ ಮಾಡುತ್ತಾರೋ ಅವನೇ ಬ್ರಾಹ್ಮಣ.  ಕುಲ, ವಂಶ, ವೃತ್ತಿಗಳಿಂದಲ್ಲ. ಸಚ್ಚಾರಿತ್ರ್ಯ, ಅಧ್ಯಯನ, ಮತ್ತು ತಪಸ್ಸಿನಿಂದಲೇ ಬ್ರಾಹ್ಮಣನಾಗುತ್ತಾನೆ. 


ಯಕ್ಷಪ್ರಶ್ನೆ: ೩೨ ; ಪ್ರಿಯವಚನವಾದೀ ಕಿಂ ಲಭತೇ ವಿಮೃಶಿತ ಕಾರ್ಯಕರಃ ಕಿಂ ಲಭತೇ । 

                       ಬಹುಮಿತ್ರಕರಃ ಕಿಂ ಲಭತೇ ಧರ್ಮರತಃ ಕಿಂ ಲಭತೇ ಕಥಯ ॥ 


ಪ್ರಿಯ ವಾಕ್ಯಗಳನ್ನಾಡುವವನಿಗೆ ಏನು ಲಭಿಸುತ್ತದೆ ? ಸುವ್ಯವಸ್ಥಿತ ವಿಮರ್ಶಿತ ಕಾರ್ಯ ಮಾಡುವವನಿಗೆ ಫಲವೇನು ? ಬಹುಮಂದಿ ಮಿತ್ರರನ್ನು ಹೊಂದಿರುವವನಿಗೆ ಏನು ಲಾಭ ? ಧರ್ಮಕಾರ್ಯನಿರತನಿಗೆ ಸಿಗುವ ಫಲವೇನು ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಪ್ರಿಯವಚನವಾದೀ ಪ್ರಿಯೋ ಭವತಿ ವಿಮೃಶಿತಕಾರ್ಯಕರೋऽಧಿಕಂ ಜಯತಿ। 

ಬಹುಮಿತ್ರಕರಃ ಸುಖಂ ವಸತೇ ಯಶ್ಚ ಧರ್ಮರತಃ ಸ ಗತಿ ಲಭತೇ ॥ 


ಪ್ರಿಯವಾಕ್ಯಗಳನ್ನಾಡುವವನು ಸರ್ವರಿಗೂ ಪ್ರಿಯನಾಗುತ್ತಾನೆ.  ವಿಮರ್ಶಿಸಿ ಕೆಲಸ ಮಾಡುವವನುಹೆಚ್ಚು ಜಯಗಳಿಸುತ್ತಾನೆ. ಬಹುಮಂದಿ ಮಿತ್ರರುಳ್ಳವ ಸುಖಿಯಾಗುತ್ತಾನೆ. ಧರ್ಮರತನು ಸದ್ಗತಿ ಹೊಂದುತ್ತಾನೆ. 


ಮನಸ್ಸಿನ ಚಿಂತನೆಗಳು ಶಬ್ದವಾಗಿ ಹೊರಬೀಳುತ್ತವೆ. ಸಂತಸದ ಶಬ್ದಗಳು ಹೊರಬೀಳುವಾಗ ಮುಖ ವಿಕಸಿತವಾಗುತ್ತದೆ.ಮೈ ಸುಖದಿಂದ ತೊನೆಯುತ್ತದೆ.ಇದೇ ರೀತಿಯ ಪರಿಣಾಮ ಪರಿಸರದ ಮೇಲೂ ಆಗುತ್ತದೆ.ಆದ್ದರಿಂದ ಪ್ರಿಯ ವಾಕ್ಯಗಳನ್ನಾಡುವವನು ಸರ್ವರಿಗೂ ಪ್ರಿಯನಾಗುತ್ತಾನೆ.  ಇಂಥ ಮಾತುಗಾರನ ಹೃದಯವೂ ಪ್ರಿಯವಾಗಿಯೇ ಇರುತ್ತದೆ. ಇವನ ಮಾತುಗಳಿಂದ ಇವನ ಸಾಂಗತ್ಯ ಬಯಸುತ್ತಾರೆ. ಇಂಥವರಿಗೆ ಸ್ನೇಹಿತರೂ ಹೆಚ್ಚಾಗುತ್ತಾರೆ. ಮಿತ್ರ ಎಂದರೆ ಕೇವಲ ಸ್ನೇಹಿತನಲ್ಲ. ಅವನು ಸಖನೂ ಹೌದು. ಸೌಖ್ಯವೀಯುವವನೇ ಸಖ. ಕಷ್ಟ-ಸುಖಗಳಲ್ಲಿ ಒಂದಾಗಿ ನಡೆವವ ಸಖ. ಈ ಸಾಂಗತ್ಯ ಸುಖ ನೀಡುತ್ತದೆ. ಮಿತ್ರತ್ವದ ಲಾಭ ಇದು. 


ಮಾಡುವ ಕೆಲಸಗಳಲ್ಲಿ ಯುಕ್ತಾಯುಕ್ತಾ ವಿವೇಚನೆ ಇರಬೇಕು. ಇಚ್ಛಿತ ಫಲ ಪ್ರಾಪ್ತಿ ಇದೆಯೇ, ಕೆಲಸ ಮಾಡುವವ ಮಾತ್ರ ಜಯಶಾಲಿಯಾಗುತ್ತಾನೆ.ಸರ್ವಭೂತಗಳಿಗೆ ಹಿತ ತರುವುದೇ ಧರ್ಮ. ಇದರಿಂದ ಜೀವಿ ಸ್ಥಿತಪ್ರಜ್ಞನಾಗುತ್ತಾನೆ. ಕರ್ಮಲೇಪವಿಲ್ಲದ ಕರ್ತವ್ಯ ಕ್ರಿಯೆಗಳಿಂದ ಜೀವಿ ಜನನ. ಮರಣಗಳ ಪರಿಭ್ರಮಣದಿಂದ ಬಿಡುಗಡೆ ಹೊಂದುತ್ತಾನೆ. ಇದೇ ಒಳ್ಳೆಯ ಗತಿ. 


ಯಕ್ಷಪ್ರಶ್ನೆ: ೩೩; ಕೋ ಮೋದತೇ ಕಿಮಾಶ್ಚರ್ಯಂ ಕಃ ಪಂಥಾಃ ಕಾ ಚ ವಾರ್ತಿಕಾ । 

                      ಮಮೈತಾಂಶ್ಚುತುರಃ ಪ್ರಶ್ನಾನ್ಕಥಯಿತ್ವಾ ಜಲಂ ಪಿಬ ॥ 


ಯಾರು ಆನಂದದಿಂದಿರುವವ ? ಆಶ್ಚರ್ಯವಾದುದು ಯಾವುದು ? ಸೂಕ್ತ ಪಥ ಯಾವುದು ? ಯಾವುದು ಸಮಾಚಾರ ? 


ಯಕ್ಷನ ಮೇಲಿನ ಪ್ರಶ್ನೆಗೆ ಧರ್ಮರಾಯ ಉತ್ತರಿಸುವುದು ಹೀಗೆ: 


ಪಂಚಮೇऽಹನಿ ಷಷ್ಠೇ ವಾ ಶಾಕಂ ಪಚತಿ ಸ್ವೇ ಗೃಹೇ। 

ಅನೃಣೀ ಚಾಪ್ರವಾಸೀ ಚ ಸ ವಾರಿಚರ ಮೋದತೇ॥ 


೧) ತನ್ನ ಮನೆಯಲ್ಲಿಯೇ ಮಾಡಿದ ಅಡುಗೆಯನ್ನು ಉಣ್ಣುವವ, ಋಣವಿಲ್ಲದವ, ಯಾವಾಗಲೂ ಪ್ರವಾಸಮಾಡದವ ಇಂಥವರು ಸಂತೋಷದಿಂದ ಇರುತ್ತಾರೆ. ಸ್ವಪಾಕ ಉಣ್ಣುವವ ಎಂದರೇನು ? ಅಡುಗೆಗೆ ಹತ್ತಾರು ಸಾಮಾನು ಉಪಯೋಗಿಸುತ್ತೇವೆ. ಅಗ್ನಿ ಅಥವಾ ಒಲೆ,ಪಾತ್ರೆಗಳು, ಅಕ್ಕಿ, ಬೇಳೆ, ತರಕಾರಿಗಳು, ಸಂಬಾರ ಪದಾರ್ಥಗಳು ಇತ್ಯಾದಿ. ಅಡುಗೆಯಾಗುತ್ತದೆ. ಊಟಮಾಡುತ್ತೇವೆ. ಇದರಿಂದ ದೇಹ, ಮನಸ್ಸು,  ಬುದ್ಧಿಗಳ ಮೇಲೆ ಪರಿಣಾಮವಾಗುತ್ತದೆ.ಹೀಗೆಯೇ ನಾವು ಬುದ್ಧಿಗೆ ಉಣಿಸುವ ಅಡುಗೆಯೂ ಕೂಡ. ನಮಗರಿವಿಲ್ಲದೇ ಮನಸ್ಸಿನಲ್ಲಿ ನೆಲೆಯಾದ ವಿಷಯಗಳಿಂದ ಕೆಲವನ್ನು ಸಂಗ್ರಹಿಸುತ್ತೇವೆ. ಇವುಗಳಲ್ಲಿ ಸತ್ಯಾಸತ್ಯಗಳ ವಿಂಗಡಣೆಯಾಗಬೇಕು. ಸತ್ಯವನ್ನು ಮನನ, ಚಿಂತನಗಳ ಮೂಲಕ ಪಾಕಕ್ಕೆ ತರಬೇಕು. ಇದನ್ನು ಉಂಡರೆ ಮಾತ್ರ ಆರೋಗ್ಯ.  


೨) ಅಹನ್ಯಹನಿ ಭೂತಾನಿ ಗಚ್ಛಂತೀಹ ಯಮಾಲಯಮ್ । 

    ಶೇಷಾಃ ಸ್ಥಾವರಮಿಚ್ಛಂತಿ ಕಿಮಾಶ್ಚರ್ಯಮತಃ ಪರಮ್ ॥ 


ಜೀವಿಗಳು ನಿರಂತರವಾಗಿ ಸಾಯುತ್ತಲೇ ಇರುತ್ತವೆ. ಉಳಿದವರು ಇದನ್ನು ಕಂಡೂ ನಾನು ಶಾಶ್ವತ ಎಂದು ಭ್ರಮಿಸುತ್ತಾರಲ್ಲ ಇದೇ ಆಶ್ಚರ್ಯ, ಇದೇ ಪರಮಾಶ್ಚರ್ಯ, ಅತ್ಯಾಶ್ಚರ್ಯ. ಒಮ್ಮೆ ಜೀವ ದೇಹದಿಂದ ಹೊರಗೆ ಹೋಯಿತೋ ಅದು ಬರೀ ಶವವಾಗುತ್ತದೆ. ಇದು "ಇಂಥವರ ಶವ" ಎಂಬುದು ತಿಳಿದವರಿಗೆ. ಆದರೂ ಈ ದೇಹಕ್ಕೆ ಅಲಂಕಾರದ ಸಂಭ್ರಮ ನಡೆಯುತ್ತದೆ. "ನಾನು" ಮಾತ್ರ ಸಾವಿಲ್ಲದವ ಎಂಬುದು ಪರಮಾಶ್ಚರ್ಯ. 


೩) ತರ್ಕೋऽಪ್ರತಿಷ್ಠಃ ಶ್ರುತಯೋ ವಿಭಿನ್ನಾಃ ನೈಕೋ ಋಷಿರ್ಯಸ್ಯ ಮತಂ ಪ್ರಮಾಣಮ್ 

     ಧರ್ಮಸ್ಯ ತತ್ತ್ವಂ ನಿಹಿತಂ ಗುಹಾಯಾಂ ಮಹಾಜನೋ ಯೇನ ಗತಃ ಸ ಪನ್ಥಾಃ॥ 


ಧರ್ಮದ, ಆತ್ಮವೆಂಬ ಚೈತನ್ಯದ ಸ್ವರೂಪವನ್ನರಿಯಲುಹಾದಿಗಳು ಹಲವು. ಹಿಂದೆ ಅನೇಕರು ನಡೆದ ಹಾದಿ ಇದೆ. ಅಂಥವರ ಹೆಜ್ಜೆ ಗುರುತುಗಳಲ್ಲಿ ನಡೆಯುವುದೇ ಸೂಕ್ತ ಹಾದಿ. ತಿಳಿದವರು ಬರೆದಿಟ್ಟ ಶಾಸ್ತ್ರಗಳ ಆಧಾರದಲ್ಲಿ ಸಾಧನೆ ನಡೆಸುವುದೇ ಸೂಕ್ತ. 


೪) ಅಸ್ಮಿನ್ಮಹಾಮೋಹಮಯೇ ಕಟಾಹೇ ಸೂರ್ಯಾಗ್ನಿನಾ ರಾತ್ರಿದಿವೇನ್ಧನೇನ। 

     ಮಾಸರ್ತುದರ್ವೀಪರಿಘಟ್ಟನೇನ ಭೂತಾನಿ ಕಾಲಃ ಪಚತೀತಿ ವಾರ್ತಾ ॥ 


ಕಾಲಪುರುಷನೆಂಬ ಮಹಾಮೋಹಮಯ ಬಾಣಲೆಯ ಮೇಲೆ, ಸೂರ್ಯನೆಂಬ ಅಗ್ನಿಯಿಂದ, ಹಗಲು-ರಾತ್ರಿಗಳೆಂಬ ಇಂಧನಗಳಿಂದ, ಮಾಸಋತುಗಳೆಂಬ ಸಟ್ಟುಗದಿಂದ ಜೀವಗಳು ಬೇಯಿಸಲ್ಪಡುತ್ತವೆ. ಇದೇ ಸಮಾಚಾರ ಎಂದುತ್ತರಿಸಿ ಧರ್ಮರಾಯ.  ಭೌತಿಕ ಮೋಹಮಾಯೆಗಳ ಬಲೆಯಲ್ಲಿ ಸಿಲುಕಿ " ಈ ಬದುಕೇ " ಸತ್ಯ ಎಂದು ಬದುಕುವವ, ಕರ್ಮಸಂಚಯದ, ನೋವು-ನಲಿವುಗಳ ಉರಿಯಲ್ಲಿ ತಪಿಸುತ್ತಾನೆ, ಒದ್ದಾಡುತ್ತಾನೆ. ಇದೇ ಇಂದಿನ ಮುಖ್ಯ ಸುದ್ದಿ  ಎಂದ.


ಯಕ್ಷಪ್ರಶ್ನೆ: ೩೪ ; ವ್ಯಾಖ್ಯಾತಾ ಮೇ ತ್ವಯಾ ಪ್ರಶ್ನಾ ಯಾಥಾತಥ್ಯಂ ಪರಂತಪ । 

                       ಪುರುಷಂ ತ್ವಿದಾನೀಂ ವ್ಯಾಖ್ಯಾಹಿ ಯಶ್ಚ ಸರ್ವಧನೀ ನರಃ ॥ 


ನಾನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿರುವೆ. ಮತ್ತೆ ಎರಡು ಪ್ರಶ್ನೆ ಕೇಳಲು ಆಸಕ್ತನಾಗಿರುವೆ. ಪುರುಪನೆಂದರೆ ಯಾರು? ಸರ್ವಶ್ರೇಷ್ಠ ಧನಿಕನ್ಯಾರು ?


 ಯಕ್ಷನ ಮೇಲಿನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುವುದು ಹೀಗೆ : 


ದಿವಂ ಸ್ಪೃಶತಿ ಭೂಮಿಂಚ ಶಬ್ದಃ ಪುಣ್ಯೇನ ಕರ್ಮಣಾ । 

ಯಾವತ್ಸ ಶಬ್ದೋ ಭವತಿ ತಾವತ್ಪುರುಷ ಉಚ್ಯತೇ ॥ 


೧) ಪುಣ್ಯಕರ್ಮದ ಫಲವಾದ ಕೀರ್ತಿಯು ಭೂಮಿ, ಸ್ವರ್ಗಗಳಲ್ಲಿ ಎಷ್ಟು ಕಾಲದ ವರೆಗೆ ಕೇಳಿಸುತ್ತಿರುವುದೋ ಅಲ್ಲಿಯವರೆಗೆ ಅವನು ಪುರುಷನೆನಿಸಿ ಕೊಳ್ಳುತ್ತಾನೆ. "ತತ್ವಶಃ ವಸ್ತು ಎಂಬುದು ಇಲ್ಲವೇ ಇಲ್ಲ. ವಸ್ತು ಎಂದು ನಾವು ಕಾಣುವುದೆಲ್ಲವೂ ಚೈತನ್ಯ ಮಾತ್ರ. ಇನ್ನು ವಸ್ತುಗಳಲ್ಲಿ ಭಿನ್ನತೆ ಇರುವುದೇಕೆ? ಎಂದರೆ ಚೈತನ್ಯದ ನಿರಂತರ ಕಂಪನದಲ್ಲಿ ವ್ಯತ್ಯಾಸವಿರುವು-ರಿಂದ ಮಾತ್ರ." ಹುಟ್ಟು-ಬದುಕು, ಆ ಬದುಕಿನ ಕೊನೆ ಮತ್ತೆ ಹುಟ್ಟು- ಹೀಗೆ ಅನಂತಕಾಲದವರೆಗೆ ನಡೆಯುತ್ತದೆ. ಎಲ್ಲಿಯವರೆಗೆ ಸತ್ ಕರ್ಮಗಳ ಫಲ ಅಥವಾ ಇರುವಿಕೆ ಈ ಭೂಮಿಯಲ್ಲಿ ಉಳಿದಿರುತ್ತದೆ ಅಲ್ಲಿಯವರೆಗೆ ಅವನಿರುವಿಕೆ ಇರುತ್ತದೆ ಎಂದುತ್ತರಿಸಿದ ಧರ್ಮರಾಯ.  


೨) ತುಲ್ಯೇ ಪ್ರಿಯಾಪ್ರಿಯೇ ಯಸ್ಯ ಸುಖದುಃಖೇ ತಥೈವಚ। 

   ಅತೀತಾನಾಗತೇ ಚೋಭೇ ಸ ವೈ ಸರೂವ ಧನೀ ॥ 

  ಭೂತ ಭವ್ಯ ಭವಿಷ್ಯೇಷು ನಿಃಸ್ಪೃಹಃ ಶಾಂತ ಮಾನಸಃ। 

  ಸುಪ್ರಸನ್ನಃ ಸದಾಯೋಗೀ ಸ ವೈ ಸರೂವ ಧನೀಶ್ವರಃ ॥ 


ಧನಗಳಲ್ಲೂ ಎರಡು ವಿಧ. ಭೌತಿಕ ಧನ ಮತ್ತು ಆದಿಭೌತಿಕ ಧನ. ಭೌತಿಕ ಧನದಲ್ಲಿ ಹಣ, ಭೂಮಿ, ಸಂಸಾರ, ಮಿತ್ರರು, ಆರೋಗ್ಯ,  ಅಧಿಕಾರ, ಕೀರ್ತಿ ಇತ್ಯಾದಿ. ಆಧ್ಯಾತ್ಮಿಕ ಧನದ ಪಟ್ಟಿಯಲ್ಲಿ ಜನ್ಮ ಮೃತ್ಯುಗಳೆಂಬ ಪರಿಭ್ರಮಣವೆಂಬ ಭವಸಾಗರದಿಂದ ಮುಕ್ತನಾದವನೇ ಸರ್ವಶ್ರೇಷ್ಠ ಧನಿಕ, 


೩೪ ಪ್ರಶ್ನೆಯಲ್ಲಿ ೧೨೧ ಉಪಪ್ರಶ್ನೆಗಳು ಅಡಕವಾಗಿವೆ. ಇಲ್ಲಿಯವರೆಗೆ ಕೇಳಿದ ಎಲ್ಲ ಪ್ರಶ್ನೆಗಳಿಗೆ ಯಕ್ಷ ಒಪ್ಪುವಂತೆ ಧರ್ಮರಾಯ ಉತ್ತರಿಸಿದ. ಸುಪ್ರೀತನಾದ ಯಕ್ಷನೆಂದ - 


ವ್ಯಾಖ್ಯಾತಃ ಪುರುಷೋ ರಾಜನ್ಯಶ್ಚ ಸರ್ವಧನೀ ನರಃ । 

ತಸ್ಮಾತ್ವಮೇಕಂ ಭ್ರಾತೃಣಾಂ ಯಮಿಚ್ಛಸಿ ಸ ಜೀವತು॥ 


ರಾಜನೇ ನೀನು ಪುರುಷನೆಂದರೆ ಯಾರು ? ಸರ್ವಧನಿಕನಾದ ನರ ಯಾರು ? ಎಂಬ ನನ್ನ ಪ್ರಶ್ನೆಗಳಿಗೆ ಯಥಾತಥ್ಯವಾಗಿ ಉತ್ತರಿಸಿರುವೆ. ನಾನು ಸಂತುಷ್ಟನಾಗಿದ್ದೇನೆ. ನಿನ್ನೊಬ್ಬ ತಮ್ಮನನ್ನು ಬದುಕಿಸಲು ಇಚ್ಛಿಸಿದ್ದೇನೆ, ಯಾರನ್ನು ಬದುಕಿಸಲು ಇಚ್ಛಿಸುತ್ತೀಯೋ ತಿಳಿಸು ಎಂದ. ಒಂದೆ ಒಂದು ಕ್ಷಣವೂ ಯೋಚಿಸದೆ ಧರ್ಮರಾಯ ಕೊಟ್ಟ ಉತ್ತರ. 


ಶ್ಯಾಮೋ ಯ ಏಷ ರಕ್ತಾಕ್ಷೋ ಬೃಹಚ್ಚಾಲ ಇವೋತ್ಥಿತಃ। 

ವ್ಯೂಢೋರಸ್ಕೋ ಮಹಾಬಾಹುಃ ನಕುಲೋ ಯಕ್ಷ ಜೀವಿತು॥ 


ಅದೋ ಅಲ್ಲಿ ಶ್ಯಾಮಲವರ್ಣದಿಂದ, ಕೆಂಪು ಕಣ್ಣುಗಳಿಂದ, ಸಾಲವೃಕ್ಷದಂತೆ ಬೃಹದ್ದೇಹಿಯಾಗಿರುವ, ವಿಶಾಲವಾದ ಎದೆ,ಉದ್ದವಾದ ತೋಳುಗಳಿಂದ ಕೂಡಿದ ನಕುಲ ಬದುಕಲಿ ಎಂದ. 


ಯಕ್ಷನೆಂದ : ಪ್ರಿಯಸ್ತೇ ಭೀಮಸೇನೋऽಯಮ್ ಅರ್ಜುನೋ ವಃ ಪರಾಯಣಮ್। 

ಸ ಕಸ್ಮಾನ್ನಕುಲಂ ರಾಜನ್ ಸಾಪತ್ನಂ ಜೀವಮಿಚ್ಛಸಿ॥ 

ಯಸ್ಯ ನಾಗ ಸಹಸ್ರೇಣ ದಶಸಂಖ್ಯೇನ ವೈ ಬಲಮ್ 

ತುಲ್ಯಂ ತಂ ಭೀಮಮುತ್ಸೃಜ್ಯ ನಕುಲಂ ಜೀವಮಿಚ್ಛಸಿ॥ 


ಯಾರಿಗೆ ಹತ್ತು ಸಾವಿರ ಆನೆಗಳ ಬಲವಿದೆಯೋ ಆ ಭೀಮ, ನಿನಗೆ ಪರಮ ಪ್ರಿಯನಾದ ಅರ್ಜುನ, ಅವರನ್ನು ಬಿಟ್ಟು ನಕುಲನನ್ನು ಬಯಸುತ್ತಿರುವೆ. ಆಶ್ಚರ್ಯವಾಗಿದೆ ನನಗೆ ಎಂದ ಯಕ್ಷ. 


ಧರ್ಮರಾಯ ತಡವರಿಸಲಿಲ್ಲ, ಯೋಚಿಸಲಿಲ್ಲ. 


ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ। 

ತಸ್ಮಾದ್ ಧರ್ಮಂ ನ ತ್ಯಜಾಮಿ ಮಾ ನೋ ಧರ್ಮೋಹತೋऽವಧೀತ್॥ 

ಎಂದು ಉತ್ತರಿಸಿದ. ಧರ್ಮವಿರುದ್ಧವಾದ ಕೆಲಸಗಳಿದಲೇ ಸಾವು. ಧರ್ಮವನ್ನು ರಕ್ಷಿಸಿದರೆ ಅದೇ ನಮ್ಮನ್ನು ರಕ್ಷಿಸುತ್ತದೆ. ಆದುದರಿಂದ ನಮ್ಮಿಂದ ಹತವಾದ ಧರ್ಮ ನಮ್ಮನ್ನು ಕೊಲ್ಲದಿರಲಿ ಎಂಬ ಕಾರಣಕ್ಕೆ ನಾನು ಧರ್ಮವನ್ನು ಬಿಡಲಾರೆ.


ಆನೃಶಂಸ್ಯಂ ಪರೋ ಧರ್ಮಃ ಪರಮಾರ್ಥಾಚ್ಚ ಮೇ ಮತಮ್। 

ಅನೃಶಂಸ್ಯಂ ಚಿಕೀರ್ಷಾಮಿ ನಕುಲೋ ಯಕ್ಷ ಜೀವತು॥ 


ದಯೆಯೇ ಸರ್ವಶ್ರೇಷ್ಠ ಧರ್ಮವೆಂಬುದು ನನ್ನ ಅಭಿಮತ. ಇದಕ್ಕಾಗಿ ನಾನು ಸದಾ ಪ್ರಯತ್ನಿಸುತ್ತೇನೆ. ಆದುದರಿಂದ ಯಕ್ಷನೇ ನಕುಲನು ಜೀವಂತನಾಗಲಿ. 


ಧರ್ಮಶೀಲಃ ಸದಾ ರಾಜಾ ಇತಿಮಾಂ ಮಾನವಾ ವಿದುಃ । 

ಸ್ವಧರ್ಮಾನ್ನ ಚಲಿಷ್ಯಾಮಿ ನಕುಲೋ ಯಕ್ಷ ಜೀವತು॥ 


ಯಕ್ಷನೇ ಧರ್ಮಶೀಲನಾದ ರಾಜನೆಂದು ಮನುಷ್ಯರು ನನ್ನ ಬಗ್ಗೆ ಹೇಳುತ್ತಾರೆ. ಆದುದರಿಂದ ಸ್ವಧರ್ಮದಿಂದ ವಿಚಲಿತನಾಗಲಾರೆ. ನಕುಲ ಬದುಕಲಿ. 


ಕುಂತೀ ಚೈವ ತು ಮಾದ್ರಿಚ ದ್ವೇ ಭಾರ್ಯೇ ತು ಪಿತುರ್ಮಮ।

ಉಭೇ ಸಪುತ್ರೇ ಸ್ಯಾತಾಂ ವೈ ಇತಿ ಮೇ ಧೀಯತೇ ಮತಿಃ॥ 


ನನ್ನ ಪಿತನಿಗೆ ಕುಂತಿ ಮತ್ತು ಮಾದ್ರಿ ಎಂಬ ಇಬ್ಬರು ಪತ್ನಿಯರು. ಇವರಿಬ್ಬರೂ ಪುತ್ರವತಿಯರಾಗಿರಬೇಕು ಎಂಬುದು ನನ್ನ ಇಚ್ಛೆ. 


ಯಥಾ ಕುಂತೀ ತಥಾ ಮಾದ್ರಿ ವಿಶೇಷೋ ನಾಸ್ತಿ ಮೇ ತಯೋಃ । 

ಮಾತೃಭ್ಯಾಂ ಸಮಮಿಚ್ಚಾಮಿ ನಕುಲೋ ಯಕ್ಷ ಜೀವತು.॥ 


ಈ ಇಬ್ಬರೂ ತಾಯಂದಿರೂ ನನಗೆ ಸಮಾನ. ಕುಂತಿ ಹೇಗೋ ಹಾಗೇ ಮಾದ್ರಿಯೂ. ನಕುಲ ಮಾದ್ರಿ ಪುತ್ರ, ಕುಂತಿಗೆ ಧರ್ಮರಾಯ, ಭೀಮ, ಅರ್ಜುನ , ಹೀಗೆ ಮೂರು ಮಕ್ಕಳು. ಮಾದ್ರಿಗೆ ನಕುಲ, ಸಹದೇವ ಇಬ್ಬರು. ಒಂದು ವೇಳೆ ಸ್ವಾರ್ಥಕ್ಕೆ ಸಿಲುಕಿಧರ್ಮಜ, ಭೀಮನನ್ನೋ, ಅರ್ಜುನನ್ನೋ ಬದುಕಿಸಿಕೊಂಡರ, ಮಾದ್ರಿ ಸಂತಾನ ಹೀನಳಾಗುತ್ತಾಳೆ.ಅದೇ ನಕುಲ ಬದುಕಿದರೆ ಕುಂತಿಗೊಬ್ಬ ಮಗ, ಮಾದ್ರಿಗೊಬ್ಬ ಮಗ ಸಿಗುತ್ತಾನೆ. ಆದುದರಿಂದ ಇಬ್ಬರೂ ಪುತ್ರವತಿಯರಾಗಿರುತ್ತಾರೆ

ಹೀಗಿತ್ತು ಧರ್ಮರಾಯನ ಧರ್ಮಪ್ರಜ್ಞೆ. ಆದುದರಿಂದ ನಕುಲ ಬದುಕಲಿ. 


ಯುಧಿಷ್ಠಿರನ ಮಾತುಗಳಿಂದ ಯಕ್ಷ ಸುಪ್ರೀತನಾದ. 


ತಸ್ಯ ತೇऽರ್ಥಾಚ್ಚ ಕಾಮಾಚ್ಚ ಅನೃಶಂಸ್ಯಂ ಪರಂ ಮತಮ್। 

ತಸ್ಮಾತ್ ತೇ ಭ್ರಾತರಃ ಸರ್ವೇ ಜೀವಂತು ಭರತರ್ಷಭ॥ 


ಭರತಶ್ರೇಷ್ಠನೇ, ಅರ್ಥ ಮತ್ತು ಕಾಮಗಳಿಗಿಂತ ದಯೆ, ಸಮಾನತೆಗಳೇ ಶ್ರೇಷ್ಠ ಎಂದೆ. ಮೆಚ್ಚಿದೆ. ಆದುದರಿಂದ ನಿನ್ನ ನಾಲ್ವರೂ ತಮ್ಮಂದಿರು ಜೀವಿಸಲಿ ಎಂದ. ಕೂಡಲೇ ನಾಲ್ವರೂ ಪಾಂಡುಪುತ್ರರು ಎದ್ದು ನಿಂತರು. ಯುಧಿಷ್ಠಿರಮಾತ್ರ ಇನ್ನೂ ಸತ್ಯ ತಿಳಿಯುವುದರಲ್ಲೇ ಇದ್ದ. ಯಕ್ಷನನ್ನು ಕುರಿತು, ಈಗ ಪ್ರಶ್ನಿಸಿದ. " ನೀನು ಸಾಮಾನ್ಯನಲ್ಲ. ಲಕ್ಷಾಂತರ ಯೋಧರನ್ನು ವಧಿಸಬಲ್ಲ ಅಮಿತ ಪರಾಕ್ರಮಿಗಳಾದ ನನ್ನ ಸಹೋದರರನ್ನು ಸೋಲಿಸಿದೆ ನೀನು. ದೈವಶ್ರೇಷ್ಠನಾದ ನಿನ್ನ ಹೆಸರೇನು? ನೀನು ನಮ್ಮ ಮಿತ್ರನೇ? ಪಿತನೇ?" ಎಂದು ಕೇಳಿದ. 


ಯಕ್ಷನೆಂದ, " ಹೌದು, ನಾನು ನಿನ್ನ ಜನ್ಮದಾತನಾದ ಯಮಧರ್ಮ.  ನಿನ್ನನ್ನು ನೋಡಲೆಂದು ಬಂದೆ. ಸತ್ಯ, ಧರ್ಮ, ಶೌಚ, ಸರಳತೆ, ಲಜ್ಜೆ, ನಿಶ್ಚಲತೆ, ದಾನ, ತಪಸ್ಸು, ಬ್ರಹ್ಮಚರ್ಯ,  ಯಶ ನನ್ನ ಅಂಗಗಳು. ಅಹಿಂಸೆ,ಸಮತ್ವ, ಶಾಂತಿ, ಶೌರ್ಯ, ಮತ್ಸರವಿಲ್ಲದಿರುವುದು ನನ್ನ ಕಾಣುವ ಮಾರ್ಗಗಳು. 


ಶಾಂತಿ, ದಾಂತಿ,ಉಪರತಿ, ತಿತಿಕ್ಷೃ, ಸಮಾಧಿಗಳಲ್ಲಿ ಸ್ಥಿರಮಾನಸನಾದ ನೀನು ನನಗೆ ಪರಮಪ್ರಿಯ. ನಾನು ಧರ್ಮದೇವತೆ. ನಿನ್ನನ್ನು ನೋಡಿ ಪ್ರಸನ್ನನಾಗಿದ್ದೇನೆ. ಏನು ಬೇಕೋ ಕೇಳು ನೀಡುತ್ತೇನೆ. ಎಂದ. " ಪ್ರಭೋ, ಬ್ರಾಹ್ಮಣ ಕಳೆದುಕೊಂಡ ಆರಣಿಗಾಗಿ ಬಂದೆವು. ಅದು ಸೀಗಲಿ. ವನವಾಸದ ಅವಧಿ ಮುಗಿಯಿತು. ಇನ್ನು ಒಂದು ವರ್ಷ ಅಜ್ಞಾತವಾಸ ಇದೆ. ಈ ಕಾಲದಲ್ಲಿ ನಮ್ಮನ್ನು ಯಾರೂ ಗುರುತಿಸದಿರಲಿ" ಎಂದು ಬೇಡಿದ. ಯಕ್ಷ ಮತ್ತೂ ಸುಪ್ರೀತನಾದ. " ಮತ್ತೊಂದು ವರ ಕೇಳು"ಎಂದ, ಧರ್ಮರಾಯ ಬೇಡಿದ್ದು ನೋಡಿ. " ನಿನ್ನ ದರುಶನವೇ ಮಹಾ ವರ. ನೀನೇನು ನೀಡಿದರೂ ಸ್ವೀಕರೀಸುತ್ತೇನೆ.

ಆದರೂ ಕೇಳುತ್ತೇನೆ, 


ಜಯೇಯಂ ಲೋಭಮೋಹಂಚ ಕ್ರೋಧಂ ಚಾಹಂ ಸದಾ ವಿಭೋ ।

ದಾನೇ ತಪಸಿ ಸತ್ಯೇಚ ಮನೋ ಮೇ ಸತತಂ ಭವೇತ್॥ 


" ಲೋಭ, ಮೋಹ, ಕ್ರೋಧಗಳನ್ನು ಜಯಿಸುವವನಾಗಲಿ. ದಾನ, ತಪಸ್ಸು, ಮತ್ತು ಸತ್ಯದಲ್ಲಿ ನನ್ನ ಮನಸ್ಸು ಸದಾ ಸ್ಥಿರವಾಗಿರಲಿ, ಹೀಗೆ ಕರುಣಿಸು" ಎಂದ. 


" ಯಕ್ಷ, ಪಾಂಡುಪುತ್ರ ಸ್ವಭಾವದಿಂದ ಇವೆಲ್ಲ ನಿನ್ನಲ್ಲಿವೆ, ಆದರೂ ನಿನ್ನಿಚ್ಛೆಯಂತೆ ನೀಡುತ್ತೇನೆ ಸ್ವೀಕರಿಸು" ಎಂದು ಅಂತರ್ಧಾನನಾದ. ಕಡೆಗೊಂದು ಮಾತು ಬರುತ್ತದೆ. ಯಾರು ಇದನ್ನು ಮನಸ್ಸಿಟ್ಟು ಓದಿ, ಮನನ ಮಾಡುತ್ತಾರೋ ಅವರು ಮನಸ್ಸಿನ ಮೇಲೆ ಪ್ರಭುತ್ವ ಹೊಂದುತ್ತಾರೆ.  ಸತ್ಪುರುಷರಾಗುತ್ತಾರೆ, ಜಿತೇಂದ್ರಿಯರಾಗುತ್ತಾರೆ. ಹೀಗೆಂದರೇನು ? ಓದಬೇಕು, ಮತ್ತೆ ಮತ್ತೆ ಆಳಕ್ಕಿಳಿಯುವಷ್ಟು ಮನನ ಮಾಡಬೇಕು. 


ಯಕ್ಷಪ್ರಶ್ನೆ ಮಾಲಿಕೆಯ ತತ್ವಗಳು ಸಹೃದಯನ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಬೇಕು.  ಈ ಪ್ರಶ್ನೋತ್ತರ ಮಾಲಿಕೆಯ ಆರಂಭದಲ್ಲಿ ಬರುವ "ಆರಣಿ" ಯ ಸಂಕೇತ . ಮನನದೊಂದಿಗೆ ಮಂಥನವಾಗಬೇಕು. ಹುಟ್ಟಿ ಬಂದ ಜ್ಞಾನಾಗ್ನಿಯಲ್ಲಿ ಅಜ್ಞಾನ ಉರಿದು ಹೋಗಬೇಕು. ಚಂಚಲ ಮನಸ್ಸೆಂಬ ಹರಿಣ ಆರಣಿಯನ್ನು ಒಯ್ದಿದೆ ಇದು ಮರಳಿ ಕೈಗೆ ಬರಬೇಕು.  ಆಗಲೂ ಪರೀಕ್ಷೆ ಕೊನೆಯಾಗದು. ಯಮಧರ್ಮ ಸಾಕ್ಷಾತ್ ಧರ್ಮಸ್ವರೂಪ. ಪರೀಕ್ಷಕನಾಗಿ ಎದುರು ನಿಲ್ಲುತ್ತಾನೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆಗ ಬದುಕು " ಯಕ್ಷ ಪ್ರಶ್ನೆ" ಯಾಗಿ ಉಳಿಯುವುದಿಲ್ಲ. 


ನಾವೆಲ್ಲರೂ ಧರ್ಮ ಸ್ವರೂಪರು. ನಮ್ಮ ಮೂಲಸ್ವಭಾವ ಆನಂದ. ಎಲ್ಲಿ ಧರ್ಮಮೂಲ ಆಚರಣೆಗಳಿವೆಯೋ ಅಲ್ಲಿ ಆನಂದ ತನ್ನಿಂದ ತಾನೇ ಉಂಟಾಗುತ್ತದೆ.  ಇದನ್ನೇ ಧರ್ಮರಾಯ ಲೋಭ, ಮೋಹ, ಕ್ರೋಧಗಳಿಲ್ಲದಂತಾಗಲಿ, ತಪಸ್ಸು ಸತ್ಯಗಳಲ್ಲಿ ಮನಸ್ಸು ಸ್ಥಿರವಾಗಿರಲಿ ಎಂದು ಬೇಡಿದ್ದು. 


ಕೃತಜ್ಞತಾ ಪೂರ್ವಕ ನೆನಕೆಗಳೊಂದಿಗೆ. 


ಸಂಪಾದಕರು: ಸಂಧ್ಯಾ ಪೈ, ಮಣಿಪಾಲ,  

ಪ್ರಕಾಶಕರು ಮತ್ತು ಪುಸ್ತಕ ವಿತರಕರು, 

# ೩೪, ೫೦ ಅಡಿ ರಸ್ತೆ, ಅಯ್ಯಪ್ಪಸ್ವಾಮಿ ದೇಗುಲದ ಬಳಿ, 

ರಾಘವೇಂದ್ರ ಬ್ಲಾಕ್, ಬೆಂಗಳೂರು-೫೬೦೦೫೦. 
     

2 ಕಾಮೆಂಟ್‌ಗಳು: