ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮಾರ್ಚ್ 18, 2018

ಭಾವಾರ್ಥದೊಂದಿಗೆ ಸೋಮೇಶ್ವರ ಶತಕ

ಸೋಮೇಶ್ವರ ಶತಕ

ಶ್ರೀಮತ್ಕೈಲಾಸವಾಸಂ ಸ್ಮಿತಮೃದುವಚನಂ ಪಂಚವಕ್ತ್ರಂ ತ್ರಿಣೇತ್ರಂ
ಪ್ರೇಮಾಂಕಂ ಪೂರ್ಣಕಾಮಂ ಪರಮ ಪರಶಿವಂ ಪಾರ್ವತೀಶಂ ಪರೇಶಂ
ಧೀಮಂತಂ ದೇವದೇವಂ ಪುಲಿಗಿ ರಿನಗರೀ ಶಾಸನಾಂಕಂ ಮೃಗಾಂಕಂ
ಸೋಮೇಶಂ ಸರ್ಪಭೂಷಂ ಸಲಹುಗೆ ಜಗಮಂ ಸರ್ವದಾ ಸುಪ್ರಸನ್ನಂ
ಭಾವಾರ್ಥ:
ಶ್ರೀ ಮತ್ಕೈಲಾಸವಾಸಿಯಾದ,ನಗೆಯಿಂದ ಕೂಡಿದ,ಮೃದುವಾದ ಮಾತುಳ್ಳ,ಐದು ಮುಖವುಳ್ಳ, ಮೂರು ಕಣ್ಣುಳ್ಳ, ಪ್ರೇಮವೇ ಗುರುತಾಗುಳ್ಳ,ಸರ್ವ ಸಮೃದ್ಧಿಯನೊಳಗೊಂಡಿರುವ, ಸರ್ವೋತ್ಕೃಷ್ಟ ಮಂಗಳಸ್ವರಕಪನಾದ, ಪಾರ್ವತೀಪತಿಯಾದ, ಸರ್ವೇಶ್ವರನಾದ,ಜ್ಞಾನಿಯಾದ,ದೇವತೆಗಳಿಗೆ ದೇವನಾದ,ಪುಲಿಗಿರೌನಗರಿಯ ಪಾಲನೆಯೇಲಕ್ಷಣವಾಗುಳ್ಳ, ಜಿಂಕೆಯನ್ನುಕೈಯಲ್ಲಿ ಧರಿಸಿರುವ, ನಾಗಾಭರಣನಾದ ಸೋಮೇಶ್ವರನು ಸರ್ವದಾ ದಯೆಯಿಝದ ಲೋಕವನ್ನು ರಕ್ಷಿಸಲಿ.


ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ||೧||
ಭಾವಾರ್ಥ:
ಅನೇಕ ತೊರೆಗಳು ಬಂದು ಸೇರಿ ಒಂದು ದೊಡ್ಡ ಸಮುದ್ರವಾಗುವಂತೆ ಮನುಷ್ಯನು ಕೆಲವು ವಿಷಯಗಳನ್ನು ಪಂಡಿತರಿಂದಲೂ, ಕೆಲವನ್ನು ಶಾಸ್ತ್ರಗಳಿಂದಲೂ,ಕೆಲವನ್ನು ಇತರರ ಆಚರಣೆಯಿಂದಲೂ,ಕೆಲವನ್ನು ಸ್ವಬುದ್ಧಿಯಿಂದಲೂ, ಕೆಲವನ್ನು ಸುಜನರಸಹವಾಸದಿಂದಲೂ, ತಿಳಿದುಕೊಳ್ಳುವುದರಿಂದ ಸರ್ವಜ್ಞನಾಗುವನು.

ಅದರಿಂ ನೀತಿಯೆ ಸಧನಂ ಸಕಲ ಲೋಕಕ್ಕಾಗಬೇಕೆಂದು ಪೇ
ಳಿದ ಸೋಮಂ ಸುಜನರ್ಕಳೀಶತಕದೊಳ್ ತಪ್ಪಿರ್ದೊಡಂ ತಿದ್ದಿ ತೋ
ರ್ಪುದು ನಿಮ್ಮುತ್ತಮ ಸದ್ಗುಣಂಗಳ ಜಗದ್ವಿಖ್ಯಾತಮಂ ಮಾಳ್ಪುದಾಂ
ಮುದದಿಂ ನಿಮ್ಮವನೆಂಬುದೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೨||
ಭಾವಾರ್ಥ:
ಆದಕಾರಣ ಸಕಲರಿಗೂ ನೀತಿಯು ಸಹಾಯವಾಗಬೇಕೆಂದು ಸೋಮನೆಂಬಕವಿಯಾದ ನಾನು ಈ ಸೋಮೇಶ್ವರ ಶತಕವನ್ನು ರಚಿಸಿದೆನು. ಇದರಲ್ಲಿ ತಪ್ಪುಗಳಿದ್ದರೆ ಸಜ್ಜನರು ಅವನ್ನು ತಿದ್ದಿ ತೋರಿಸಿ ತಮ್ಮ ಸದ್ಗುಣಗಳನ್ನು ಲೋಕದಲ್ಲಿ ಹರಡಬೇಕಲ್ಲದೆ ನಾನೂ ನಿಮ್ಮಲ್ಲಿ ಸೇರಿದವನೇ ಎಂದು ಭಾವಿಸಬೇಕು.


ರವಿಯಾಕಾಶಕೆ ಭೂಷಣಂ ರಜನಿಗಾಚಂದ್ರಂ ಮಹಾಭೂಷಣಂ
ಕುವರಂ ವಂಶಕೆ ಭೂಷಣಂ ಸರಸಿಗಂಬೋಜಾತಗಳ್ ಭೂಷಣಂ
ಹವಿಯಜ್ಞಾಳಿಗೆಭೂಷಣಂ ಸತಿಗೆ ಪಾತಿವ್ರತವೇ ಭೂಷಣಂ
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀಚೆನ್ನಸೋಮೇಶ್ವರಾ||೫||
ಭಾವಾರ್ಥ:
ಆಕಾಶಕ್ಕೆಸೂರ್ಯನೂ,ರಾತ್ರಿಗೆ ಚಂದ್ರನೂ,ವಂಶಕ್ಕೆ ಮಗನೂ,ಸರೋವರಕ್ಕೆಕಮಲವೂ,ಯಜ್ಞಕ್ಕೆ ಹೋಮಮಾಡುವ ಪದಾರ್ಥವೂ,ಹೆಂಗಸಿಗೆ ಪಾತಿವ್ರತ್ಯವೂ,ರಾಜಸಭೆಗೆ ಕವಿಯೂ ಅಲಂಕಾರವು.

ಪಳಿಯರ್ ಬಂಜೆಯೆನುತ್ತ ಪುತ್ರವತಿಯೆಂಬರ್ ದೇವ ಪಿತ್ರರ್ಚನಂ
ಗಳಿಗಂ ಸುವ್ರತಕಂ ವಿವಾಹಕೆ ಶುಭಕ್ಕಂ ಯೋಗ್ಯಳನ್ನೋದಕಂ
ಗಳ ನೀಡಲ್ ಕುಲಕೋಟಿ ಮುಕ್ತಿದಳೆಗುಂ ಸುಜ್ಞಾನದೊಳ್ ಕೂಡಿದಾ
ಕುಲವೆಣ್ಣಿಂಗೆಣೆಯಾವುದೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೭||
ಭಾವಾರ್ಥ:
ಒಳ್ಳೆಯ ಕುಲದಲ್ಲಿ ಹುಟ್ಟಿ ವಿವೇಕವುಳ್ಳವಳೂ,ಗುಣವತಿಯೂ ಆದ ಸ್ತ್ರೀಯು ಬಂಜೆಯಾಗಿದ್ದರೂ ಆಕೆಯನ್ನು ಬಂಜೆಯೆಂದು ಯಾರೂ ನಿಂದಿಸುವುದಿಲ್ಲ,ಮಕ್ಕಳೊಂದಿಗಳಂತೆಯೇ ಭಾವಿಸುವರು.ದೇವರಪೂಜೆ,ಶ್ರಾದ್ಧ,ವಿವಾಹ,ವ್ರತಾಚರಣೆ ಮೊದಲಾದ ಶುಭಕಾರ್ಯಗಳಿಗೆ ಆಕೆಯು ಯೋಗ್ಯಳು, ಆಕೆಯು ಅನ್ನೋದಕಗಳನ್ನುದಾನಮಾಡಿದರೆ ಆಕೆಯ ವಂಶವೆಲ್ಲವೂ ಮುಕ್ತಿಯನ್ನು ಪಡೆಯುವುದು.


ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು
ಶೃತಿಮಾರ್ಗಂ ಬಿಡದಾತ ಸುವ್ರತಿ ಮಹಾಸದ್ವಿದ್ಯೆಯೇ ಪುಣ್ಯದಂ
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮||
ಭಾವಾರ್ಥ:
ತನಗೆ ಒಳ್ಳೆಯದನ್ನುಮಾಡುವವನೇ ನಂಟ,ತನ್ನನ್ನು ಕಾಪಾಡುವವನೇ ತಂದೆ,ಧರ್ಮಮಾರ್ಗದಲ್ಲಿ ನಡೆವ ಹೆಂಡತಿಯೇ ಸಕಲ ಸುಖಕ್ಕೂ ಕಾರಣ,ಒಂದಕ್ಷರವನ್ನುಕಲಿಸಿದವನೂ ಗುರು,ವೇದಮಾರ್ಗವನ್ನು ಬಿಡದೆ ನಡೆಯುವವನೇ ಮುನಿ,ಒಳ್ಳೆಯ ವಿದ್ಯೆಯೇ ಬ್ರಹ್ಮವಿದ್ಯೆಯೇ ಪುಣ್ಯವನ್ನು ಕೊಡುವುದು,ಮಗನೇ ಸದ್ಗತಿಗೆ ಕಾರಣನು.

ಧರಣೀಶಂ ಧುರ ಧೀರನಾಗೆ ಧನಮುಳ್ಳಂ ತ್ಯಾಗಿಯಾಗಲ್ ಕವೀ
ಶ್ವರ ಸಂಗೀತದಿ ಜಾಣನಾಗೆ ಸುಕಲಾ ಪ್ರೌಢಂಗಿರಲ್ ಪ್ರೌಡೆವೆಣ್
ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಂಗಳಂ ಬಲ್ಲೊಡಂ
ದೊರೆವೋಲ್ ಚಿನ್ನಕೆ ಸೌರಭಂ ಹರಹರಾ ಶ್ರೀಚೆನ್ನಸೋಮೇಶ್ವರಾ||೧೧||
ಭಾವಾರ್ಥ:
ದೊರೆಗೆ ಯುದ್ಧದಲ್ಲಿಧೈರ್ಯವೂ,ಧನಿಕನಿಗೆದಾನಮಾಡುವ ಬುದ್ಧಿಯೂ,ಕವಿತ್ವ ಮಾಡುವವನಿಗೆಸಂಗೀತದಲ್ಲಿ ಪಾಂಡಿತ್ಯವೂ,ಸಂಗೀತ,ಚಿತ್ರ ಮೊದಲಾದ ಲಲಿತ ಕಲೆಗಳಲ್ಲಿ ನಿಪುಣನಾದವನಿಗೆ ಚತುರಳಾದ ಹೆಂಡತಿಯೂ,ಕರಣಿಕನಿಗೆ ಧರ್ಮದಲ್ಲಿ ಬುದ್ಧಿಯೂ,ಮಂತ್ರಿಗೆ ಸಾಮ ದಾನ ಭೇದ ದಂಡಗಳೆಂಬ ನಾಲ್ಕು ಉಪಾಯಗಳ ತಿಳಿವೂ ಇದ್ದರೆ ಅದು ಚಿನ್ನಕ್ಕೆ ಸುವಾಸನೆಯುಂಟಾದಂತೆ ಶೋಭಿಸುತ್ತದೆ.


ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ
ಜನಕಂ ಸತ್ಫಲಕಂಜನಾದಿಯನುಲೇಪಂಗಳ್ಗೆ ಸಮ್ಮೋಹ ಸಂ
ಜನಕಾನಂದಕೆ ರಾಜಭೋಗಕೆ ಸುವಿದ್ಯಂಗಳ್ಗದಾರಾದೊಡಂ
ಮನದೊಳ್ ಕಾಮಿಸದಿರ್ಪರೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೧೨||
ಭಾವಾರ್ಥ:
ಧನ,ಧಾನ್ಯ,ಅಲಂಕಾರ,ವಸ್ತ್ರ,ಸುಗಂಧವುಳ್ಳ ಹೂ,ಒಳ್ಳೆಯ ಪದಾರ್ಥಗಳ ಊಟ,ಉತ್ಯಮವಾದ ಹಣ್ಣು ಕಾಡಿಗೆ ಮೊದಲಾದ ಬಳಿದುಕೊಳ್ಳುವ ಸುವಾಸನಾದ್ರವ್ಯಗಳು,ಸಮ್ಮೋಹವನ್ನು ಹುಟ್ಟಿಸುವ ಆನಂದ, ರಾಜಭೋಗ,ಸುವಿದ್ಯೆ ಇವುಗಳನ್ನು ಮನಸ್ಸಿನಲ್ಲಿ ಬಯಸದಿರುವವರು ಯಾರೂ ಇಲ್ಲ.


ಸವಿವಣ್ಣಲ್ಲಿನಿಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್
ಲವಣಂ ಕೇಳಲು ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್
ಶಿವ ಬಿಲ್ಲಾಳ್ಗಳೊಳಂಗಜಂ ಜನಿಸುವ ಜನ್ಮಂಗಳೊಳ್ ಮಾನುಷಂ
ಕವಿತಾ ವಿದ್ಯೆಸುವಿದ್ಯೆಯೊಳ್ ಹರಹರಾ ಶ್ರೀಚೆನ್ನಸೋಮೇಶ್ವರಾ||೧೩||
ಭಾವಾರ್ಥ:
ರುಚಿಯಾದ ಹಣ್ಣುಗಳಲ್ಲಿ ಸಿಹಿ ಮಾವೂ,ನವರಸಗಳಲ್ಲಿ ಶೃಂಗಾರವೂ,ಸಂಭಾರಗಳಲ್ಲಿ ಉಪ್ಪೂ ,ಮಾತುಗಳಲ್ಲಿ ಎಳೆಯ ಮಕ್ಕಳ ಮಾತೂ, ಭಾಗ್ಯಗಳಲ್ಲಿ ಆರೋಗ್ಯಭಾಗ್ಯವೂ, ದೇವರುಗಳಲ್ಲಿ ಶಿವನೂ, ಬಿಲ್ಲನ್ನು ಹಿಡಿದು ಯುದ್ಧ ಮಾಡುವ ಶೂರರಲ್ಲಿ ಮನ್ಮಥನೂ, ಜನ್ಮಗಳಲ್ಲಿ ಮನುಷ್ಯ ಜನ್ಮವೂ, ವಿದ್ಯೆಗಳಲ್ಲಿ ಕವಿತ್ವ ವಿದ್ಯೆಯೂಶ್ರೇಷ್ಠವಾದುವು.

ಮಳೆಯೇ ಸರ್ವಜನಾಶ್ರಯಂ ಶಿವನೇ ದೇವರ್ಕಳ್ಗೆ ತಾನಾಶ್ರಯಂ
ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ  ಸಾಧಾರಣಂ
ಬಳೆಯೇ ಸರ್ವ ವಿಭೂಷಣಕ್ಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ
ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀಚೆನ್ನಸೋಮೇಶ್ವರಾ||೧೪||
ಭಾವಾರ್ಥ:
ಎಲ್ಲ ಜನಕ್ಕೂ ಮಳೆಯೇ ಆಧಾರ,ಎಲ್ಲದೇವತೆಗಳಿಗೂ ಶಿವನೇ ಆಶ್ರಯ, ಎಲ್ಲರ ಜೀವನಕ್ಕೂ ಬೆಳೆಯೇ ಕಾರಣ, ಎಲ್ಲ ಜನರಿಗೂ ಬಡವನೇ ಸುಲಭನು ಅಂದರೆ ಕೆಲಸಕ್ಕೊದಗುವವನು,ಒಡವೆಗಳಲ್ಲೆಲ್ಲ ಬಳೆಯೇ ಮುಖ್ಯ,ಉತ್ಸವಗಳಲ್ಲಿ ಪುತ್ಪರೋತ್ಸವವೇ ಶ್ರೇಷ್ಠ, ಎಲ್ಲರಲ್ಲಿಯೂ ಸ್ನೇಹಿತನೇ ಉತ್ತಮನು.

ಫಲವತ್ತಿಲ್ಲದ ರಾಜ್ಯದಲ್ಲಿ ಪ್ರಭು ದಂಡಕ್ಕಾಸೆಗೆಯ್ವಲ್ಲಿ ಬಲ್
ಪುಲಿಗಳ್ ಸಿಂಗಗಳಿಕ್ಕೆಯಲ್ಲಿ ಪೆರವೆಣ್ಣಿರ್ದಲ್ಲಿ ಕುಗ್ರಾಮದೊಳ್
ಗೆಲವಂ ತೋರದೆ ದುಃಖಮಪ್ಪ ಕಡೆಯೊಳ್ ಭೂತಂಗಳಾವಾಸದೊಳ್
ಸಲ್ಲೆ ಬಲ್ಲರ್ ನಿಲೆ ಸಲ್ಲದೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೧೫||

ಭಾವಾರ್ಥ: ಬೆಳೆಯು ಚೆನ್ನಾಗಿ ಆಗದ ದೇಶದಲ್ಲಿಯೂ, ಯಾವಾಗಲೂ ತೆರಿಗೆಯನ್ನು ತೆಗೆದುಕೊಳ್ಳುವುದರಲ್ಲಿಯೇ
ಅಭಿಲಾಶೆಯುಳ್ಳ ದೊರೆಯ ರಾಜ್ಯದಲ್ಲಿಯೂ, ಹುಲಿಗಳೂ ಸಿಅಂಹಗಳೂ ಹೆಚ್ಚಾಗಿ ಸೇರಿಕೊಂಡಿರುವ ಎಡೆಯಲ್ಲಿಯೂ, ಪರಸ್ತ್ರೀ ಇರುವ ಸ್ಥಳದಲ್ಲಿಯೂ, ಅನುಕೂಲತೆಯಿಲ್ಲದ ಊರಲ್ಲಿಯೂ,ಉಲ್ಲಾಸವನ್ನುಂಟುಮಾಡದೆ ದುಃಖವನ್ನುಂಟುಮಾಡುವ ಕಡೆಯಲ್ಲಿಯೂ,ಪಿಶಾಚಗಳು ವಾಸಮಾಡುವ ಪ್ರದೇಶದಲ್ಲಿಯೂ ವಿವೇಕಿಗಳಾದವರು ವಾಸಮಾಡಬಾರದು.

ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ
ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನಾಪತ್ತಿನೊಳ್
ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ
ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನಸೋಮೇಶ್ವರಾ||೧೬||

ಭಾವಾರ್ಥ: ಉಪಯೋಗಿಸದಿರುವ ಹಮವೂ, ಮುಪ್ಪಿನಲ್ಲಿ ಸಲಹದ ಮಗನೂ, ಪೈರು ಒಣಗುತ್ತಿರುವ ಕಾಲದಲ್ಲಿ ಬಾರದಿರುವ ಮಳೆಯೂ, ಕಷ್ಟಕಾಲದಲ್ಲಿ ಬಂದು ವಿಚಾರಿಸಿಕೊಳ್ಳದ ನಂಟನೂನಿಷ್ಪ್ರಯೋಜನವು. ಸಮಯಕ್ಕೆ ದೊರೆತ ಸಹಾಯವು ಅಲ್ಪವಾದರೂ ಅದೇ ಮಹತ್ತರವಾದದ್ದು.

ತೆರನಂ ಕಾಣದ ಬಾಳ್ಕೆಯಲ್ಪಮತಿ ಕ್ಷುದ್ರಾರಂಭಮಲ್ಪಾಶ್ರಯಂ
ಕಿರುದೋಟಂ ಕಡೆವಳ್ಳಿ ಬೀಳುಮನೆ ಮುಂಗೆಯ್ವಾರ್ಭಟಂ ಸಾಲದಾ
ದೊರೆ ಕಾರ್ಯಂ ಘೃತಮಿಲ್ಲದೂಟದ ಸುಖಂ ದುರ್ಮಾರ್ಗರೊಳ್ ಸ್ನೇಹಮುಂ
ಬರಿಗೈಯಂ ಸುರಿದಂತೆಲೈಹರಹರಾ ಶ್ರೀಚೆನ್ನಸೋಮೇಶ್ವರಾ ||೧೭||

ಭಾವಾರ್ಥ : ರೀತಿ ಕೆಟ್ಟ ಬದುಕು,ಅಲ್ಪ ಬುದ್ಧಿ, ಅಲ್ಪ ಕಾರ್ಯವನ್ನು ಹಿಡಿಯುವುದು, ನೀಚರನ್ನು ಆಶ್ರಯಿಸುವುದು,ಸಣ್ಣ ತೋಪ,ತೀರ ಕೊನೆಯಲ್ಲಿರುವ ಹಳ್ಳಿ,ಹಾಳಾಗುತ್ತಿರುವ ಮನೆ,ಮೊದಲಿಗೇ ಮಾಡುವ ಗದ್ದಲ,ಅಂದರೆ ಆರಂಭ  ಶೂರತ್ವ, ಸಾಲ ಮಾಡಿ ಮಾಡುವ ಆಡಂಬರದ ಕೆಲಸ,ತುಪ್ಪವಿಲ್ಲದ ಊಟ,ದುರ್ಮಾರ್ಗದಲ್ಲಿ ಸ್ನೇಹ ಇವೆಲ್ಲವೂ ವ್ಯರ್ಥವು.

ಪೊರೆದೇಂ ಬಾಳವೆ ಪಂದಿನಾಯ್ಗಳೊಡಲಂ ಮಾತಾಡವೇ ಭೂತಗಳ್
ತರುಗಳ್ ಜೀವಿಗಳಲ್ವೇ ಪ್ರತಿಮೆಗಳ್ ಕಾದಾಡವೇ ತಿತ್ತಿಗಳ್
ಮೊರೆಯುತ್ತೇನನುಸಿರಿಕ್ಕವೇ ಗ್ರಹ ಗೃಹಂ ಚೆಲ್ವಾಗಿರಲ್ ಸೇರದೇ
ನಿರಲೇಕಜ್ಞರನೇಕದಿಂ ಹರಹರಾ ಶ್ರೀಚೆನ್ನಸೋಮೇಶ್ವರಾ ||೧೮||

ಭಾವಾರ್ಥ : ಹಂದಿ ನಾಯಿಗಳು ಹೊಟ್ಟೆಹೊರೆದುಕೊಂಡು ಬದುಕುವುದಿಲ್ಲವೇ, ಪಿಶಾಚಿಗಳು ಮಾತಾಡುವುದಿಲ್ಲವೇ, ಗಿಡಗಳಿಗೆ ಜೀವವಿಲ್ಲವೇ,ಬೊಂಬೆಗಳು ಸೂತ್ರ ಹಿಡಿದುಎಳೆಯುವುದರಿಂದ ಕಾದಾಡುವುದಿಲ್ಲವೆ,ತಿದಿಗಳು ಒತ್ತುವುದರಿಂದ ಉಸಿರಾಡುವುದಿಲ್ಲವೇ,ಒಳ್ಳೆಯ ಮನೆಗಳಲ್ಲಿ ಗ್ರಹಗಳು ಬಂದು ಸೇರುವುದಿಲ್ಲವೇ,ಅವುಗಳಂತೆಯೇ ಮೂಢರನೇಕರಿರುವುದರಿಂದಫಲವೇನು.

ಜಡನಂ ಮೂರ್ಖನ ಕೋಪಿಯಂ ಪಿಸುಣನಂ ದುರ್ಮಾರ್ಗಿಯಂ ಪೆಂಡಿರಂ
ಬಡಿದುಂ ಬೈವನ ನಂಟರುಣ್ಣಲಲಡಲುಂಟಾಗಿರ್ದುದಂ ತಾಳದಾ
ಕಡು ಪಾಪಿಷ್ಠನ ಜಾಣ್ಮೆಯಿಲ್ಲದನನಿಷ್ಟಂ ಮಾಳ್ಪನಂ ನೋಡಿಯುಂ
ನುಡಿಸಲ್ ಸಜ್ಜನರೊಲ್ವರೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೧೯||

ಭಾವಾರ್ಥ : ಸೋಮಾರಿ,ಹಠಮಾರಿ,ಸಿಟ್ಟಿನವ,ಚಾಡಿಕೋರ,ದುರಾಚಾರಿ,ಹೆಂಡತಿಯನ್ನು ಯಾವಾಗಲೂ ಬೈದು ಹೊಡೆಯುತ್ತಿರುವವ,ಉಣ್ಣಃವುದಕ್ಕೂ,ಉಡುವುಲಕ್ಕೂ ಅನುಕೂಲವಿರುವ ನಂಟರನ್ನುನೋಡಿ ಸೈರಿಸದ ಪಾಪಿ,ಜಾಣತನವಿಲ್ಲದವ,ಕೆಟ್ಟದನ್ನು ಮಾಡುವವ,ಇವರನ್ನು ಸುಜನರು ಕಂಡರೂ ಮಾತನಾಡಿಸುವುದಕ್ಕೆ ಇಷ್ಟಪಡುವುದಿಲ್ಲ.

ಸತಿಯಾಲಾಪಕೆ ಸೋಲ್ವ ಜೂಜಿಗೆ ಖಳರ್ ಕೊಂಡಾಡುತಿರ್ಪಲ್ಲಿಗಂ
ಅತಿ ಪಾಪಂ ಬರ್ಪ ಕಾರ್ಯಕಲ್ಪ ವಿಷಯಕ್ಕಂ ದಾಸಿಯಾ ಗೋಷ್ಠಿಗಂ
ಪ್ರತಿ ತಾನಿಲ್ಲದ ಮದ್ದು ಮಂತ್ರ ಮಣಿಗಂ ಸಂದೇಹಮಪ್ಪಲ್ಲಿಗಂ
ಮತಿವಂತರ್ ಮರುಳಪ್ಪರೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೨೦||

ಭಾವಾರ್ಥ : ಹೆಂಗಸಿನ ಮಾತಿಗೂ,ಸೋಲುವ ಜೂಜಾಟಕ್ಕೂ,ನೀಚರ ಹೊಗಳಿಕೆಗೂ,ಬಹಳ ಪಾಪ ಬರುವ ಕೆಲಸಕ್ಕೂ ಅಲ್ಪ ವಿಷಯಕ್ಕೂ,ಸೇವಕಿಯರ ಸಹವಾಸಕ್ಕೂ,ಪ್ರತೀಕಾರವಿಲ್ಲದ ಔಷಧ ಮಂತ್ರಮಣಿಗಳಿಗೂ,ಸಂಶಯ ತೋರುವಸ್ಥಳಕ್ಕೂ ಬುದ್ಧಿಶಾಲಿಗಳು ಮರುಳಾಗರು.

ಸುಡು ಸೂಪಂ ಘೃತಮಿಲ್ಲದೂಟವ ಪರಾನ್ನಾಪೇಕ್ಷೆಯಾ ಜಿಹ್ವೆಯಂ
ಸುಡು ದಾರಿದ್ರ್ಯದ ಬಾಳ್ಕೆಯಂ ಕಲಹ ಕೋಪಂ ಮಾಳ್ಪ ಸಂಗಾತಿಯಂ
ಸುಡು ತಾಂಬೂಲವಿಹೀನ ವಕ್ತ್ರವ ವರಸ್ತ್ರೀ ನೋಡುವಾ ಕಣ್ಗಳಂ
ನುಡಿದುಂ ತಪ್ಪುವ ರಾಜನಂ ಹರಹರಾ ಶ್ರೀಚೆನ್ನಸೋಮೇಶ್ವರಾ ||೨೧||

ಭಾವಾರ್ಥ : ತುಪ್ಪ ,ತೊವ್ವೆ ,ಇವುಗಳಿಲ್ಲದ ಊಟವನ್ನೂ, ಇತರರ ಮನೆಯ ಊಟವನ್ಶೇಯಾವಾಗಲೂ ಬಯಸುತ್ತಿರುವ  ನಾಲಗೆಯನ್ನೂ ,ಬಡತನದ ಜೀವನವನ್ನೂ ,ಕೋಪಿಸಿಕೊಳ್ಳುತ್ತಲೂ ಜಗಳವಾಡುತ್ತಲೂ ಇರುವ ಹೆಂಡತಿಯನ್ನೂ, ತಾಂಬೂಲ ಹಾಕಿಕೊಳ್ಳದಿರುವಬಾಯಿಯನ್ನೂ, ಪರಸ್ತ್ರೀಯನ್ನು ನೋಡುವ ಕಣ್ಣನ್ನೂ,ಆಡಿದಮಾತಿಗೆ ತಪ್ಪುವ ದೊರೆಯನ್ನೂ,ಅತಿ ನಿಕೃಷ್ಟವೆಂದು ಭಾವಿಸತಕ್ಕದ್ದು.

ಅವಿನೀತಂ ಮಗನೇ ಅಶೌಚಿ ಮುನಿಯೇ ಬೈವಾಕೆ ತಾಂ ಪತ್ನಿಯೇ
ಸವಗೆಟ್ಟನ್ನವದೂಟವೇ ಕುಜನರೊಳ್ ಕೂಡಿರ್ಪವಂ ಮಾನ್ಯನೇ
ಬವರಕ್ಕಾಗದ ಬಂಟನೇ ಎಡರಿಗಂ ತಾನಾಗದಂ ನಂಟನ
ಶಿವನಂ ಬಿಟ್ಟವ ಶಿಷ್ಟನೇ ಹರಹರಾ ಶ್ರೀಚೆನ್ನಸೋಮೇಶ್ವರಾ||೨೨||

ಭಾವಾರ್ಥ: ವಿನಯವಿಲ್ಲದ ಮಗನೂ,ಪರಿಶುದ್ಧನಲ್ಲದ ಋಷಿಯೂ,ಬೈಯುವ ಹೆಂಡತಿಯೂ,ರುಚಿಗೆಟ್ಟ ಅನ್ನದ ಊಟವೂ,ಕೆಟ್ಟವರಸಹವಾಸದಲ್ಲಿರುವ ದೊಡ್ಡ ಮನೂಷ್ಯನೂ,ಯುದ್ಧಕ್ಕೆ ಒದಗದ ಭಟನೂ, ಕಷ್ಟಕ್ಕಾಗದ ನೆಂಟನೂ,ಶಿವನನ್ನು ಬಿಟ್ಟಿರುವ ಆಚಾರವಂತನೂ ಆಯಾ ಹೆಸರಿಗೆ ಅರ್ಹರಲ್ಲ.

ಕೊಲುವಾ ಕೂಟವು ನಷ್ಟಮಪ್ಪ ಕೆಲಸಂ ಕೈಲಾಗದಾರಂಭಮುಂ
ಗೆಲವೇನಿಲ್ಲದ ಯುದ್ಧ ಪಾಳುನೆಲದೊಳ್ ಬೇಸಾಯ ನೀಚಾಶ್ರಯಂ
ಹಲವಾಲೋಚನೆ ಜೂಜು ಲಾಭ ಮನೆ ಮಾರಾಟಂ ರಸಾದ್ಯೌಷಧಂ
ಫಲದ ಭ್ರಾಂತಿಯ ತೋರ್ಪುವೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೨೩||

ಭಾವಾರ್ಥ: ಜನಗಳನ್ನು ಕೊಂದು ದೋಚಿಕೊಳ್ಳುವವರ ಸಂಘವೂ, ಆದಾಯವಿಲ್ಲದೆ ನಷ್ಟವಾಗುತ್ತಿರುವ ಕೆಲಸವೂ,ಯೋಗ್ಯತೆಗೆ ಮೀರಿದ ಉದ್ಯೋಗಕ್ಕೆ ಕೈ ಹಾಕುವುದೂ,ಗೆಲ್ಲುವ ಸೂಚನೆ ಇಲ್ಲದಿರುವ ಯುದ್ಧವೂ, ನಿಸ್ಸಾರವಾದ ಭೂಮಿಯಲ್ಲಿ ಮಾಡುವ ಬೇಸಾಯವೂ,ಅಲ್ಪನ ಆಶ್ರಯವೂ,ಒಂದು ಕೆಲಸವನ್ನು ಮಾಡುವುದಕ್ಕೆನಿಷ್ಕರ್ಷೆಯಾಗಿ ಒಂದು ಮಾರ್ಗವನ್ನಾಲೋಚಿಸದೆ ಬಗೆಬಗೆಯಾಗಿ ಆಲೋಚನೆ ಮಾಡುವುದೂ,ಜೂಜಿನ ಲಾಭವೂ,ಇದ್ದ ಮನೆಯನ್ನು ಮಾರಿಬಿಡುವುದೂ,ಪಾದರಸ ಪಾಷಾಣಗಳ ಔಷಧವೂ ಇವೆಲ್ಲವೂ ಪ್ರಯೋಜನವಾದೀತೆಂಬ ಭ್ರಾಂತಿಯನ್ನು ಹುಟ್ಟಿಸುವುವು.

ತವೆ ಸಾಪತ್ನಿಯರಾಟ ಸಾಲ ಮಧುಪಾನಂ ಬೇಟದಾ ಜಾರಿಣೀ
ನಿವಹಂ ಮಾಡುವ ಮಾಟಮಂತುಟಮಿತಂ ಮೃಷ್ಟಾನ್ನಮೆಂದೂಟ ದ್ಯೂ
ತವನಾಡುತ್ತಿಹ ಪೋಟ ಸೂಳೆಯರೊಳೊಲ್ದಿರ್ಪಾಟಮಿಂತೆಲ್ಲ ಮುಂ
ಸವಿಯಾಗಂತ್ಯದಿ ಕಷ್ಟವೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೨೪||

ಭಾವಾರ್ಥ:ಸವತಿಯರು ಗಂಡನಲ್ಲಿ ತೋರಿಸುವ ಆಟಪಾಟಗಳು,ಸಾಲ ಮಾಡುವುದು,ಮದ್ಯಪಾನ ಮಾಡುವುದು,ಜಾರಸ್ತ್ರೀಯರು ತಮ್ಮನ್ನು ಮೋಹಿಸುವಂತೆ ತೋರಿಸುವ ಬೆಡಗು,ಮೃಷ್ಟಾನ್ನವು ಸಿಕ್ಕಿತೆಂದು ಮಿತಿಮೀರಿ ಮಾಡುವ ಊಟ,ಜೂಜಾಡುವ ಪುಂಡರಲ್ಲಿಯೂ,ಸೂಳೆಯಲ್ಲಿಯೂ ವಿನೋದ ಪಡುವುದು ಇವು ಮೊದಲು ಸುಖಕರವಾಗಿ ಕಂಡುಬಂದರೂ ಕೊನೆಗೆ ಕಷ್ಟವನ್ನುಂಟುಮಾಡುವುವು.

ತೆರನಂ ಕಾಣದ ತಾಣದಲ್ಲಿ ಕಪಟಂಗಳ್ ಮಾಳ್ಪರಿರ್ಪಲ್ಲಿ ನಿ
ಷ್ಠುರ ಭಾಷಾ ನೃಪನಲ್ಲಿ ನಿಂದ ಬರಿದೇ ಬರ್ಪಲ್ಲಿಯನ್ನೋದಕಂ
ಕಿರಿದಾದಲ್ಲಿ ರಿಪುವ್ರಜಂಗಳೆಡೆಯೊಳ್ ದುಸ್ಸಂಗ ದುರ್ಗೋಷ್ಠಿಯ
ಲ್ಲಿರಸಲ್ಲಿರ್ದೊಡೆ ಹಾನಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೨೫||

ಭಾವಾರ್ಥ: ಪರಿಚಯವಿಲ್ಲದ ಸ್ಥಳದಲ್ಲಿಯೂ,ಮೋ ಗಾರರಿರುವ ಕಡೆಯಲ್ಲಿಯೂ, ಯಾವಾಗಲೂ ನಿಷ್ಠುರೋಕ್ತಿಯನ್ನಾಡುತ್ತಿರುವ ದೊರೆಯಬಳಿಯಲ್ಲಿಯೂ,ವ್ಯರ್ಥವಾದ ಅಪವಾದವು ಬರುವ ಸ್ಥಳದಲ್ಲಿಯೂ,ಅನ್ನ ನೀರಿಗೆ ಕೊರತೆಯಾದ ಕಡೆಯಲ್ಲಿಯೂ,ಶತ್ರುಗಳ ಮಧ್ಯದಲ್ಲಿಯೂ,ಕೆಟ್ಟವರ ಸಹವಾಸದಲ್ಲಿಯೂ,ದುಷ್ಟರ ಗುಂಪಿನಲ್ಲಿಯೂ ಇರಬಾರದು,ಇದ್ದರೆ ಕೇಡುಂಟಾಗುವುದು.

ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್ ಫಲಂ ತೀವಿದಾ
ಮರಗಳ್ ಪುಟ್ಟವೇ ಪುಷ್ಪಮೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ
ನಿರುತಂ ಸತ್ಕವಿಗೊರ್ವ ಗರ್ವಿ ಪುಸಿಯುತ್ತ ಲೋಭಿಯಾಗಲ್ ನಿಜಂ
ಧರೆಯೊಳ್ ದಾತರು ಪುಟ್ಟರೇ ಹರಹರಾ ಶ್ರೀಚೆನ್ನಸೋಮೇಶ್ವರಾ|೨೬||

ಭಾವಾರ್ಥ: ಕಾಡಿನಲ್ಲಿ ಸುತ್ತುತ್ತಿರುವ ಪಕ್ಷಿಗೆ ಆ ಕಾಡಿನಲ್ಲಿರುವ ಒಂದು ಮರವುಹಣ್ಣು ಬಿಡದೆ ಹೋದರೆ  ಹಣ್ಣುಳ್ಳ ಬೇರೆ ಮರಗಳು ದೊರೆಯುವುದಿಲ್ಲವೇ,ಗಿಡದಲ್ಲಿ ಒಂದು ಹೂ ಬಾಡಿಹೋದರೆತುಂಬಿಗೆ ಮಧುವಿರುವ ಬೇರೆ  ಹೂ ದೊರೆಯುವುದಿಲ್ಲವೇ,ಹಾಗೆಯೇ ಯಾವನೋಒಬ್ಬನು ಗರ್ವದಿಂದ ಸತ್ಕವಿಗಸುಳ್ಳು ಹೇಳುತ್ತಾಜಿಪುಣನಾಗಿದ್ದರೆ ಆ ಕವಿಗೆ ದ್ರವ್ಯ ಸಹಾಯ ಮಾಡುವವರು ಲೋಕದಲ್ಲಿ ಯಾರೂಸಿಕ್ಕುವುದೇ ಇಲ್ಲವೇ.

ಮದನಂ ದೇಹವ ನೀಗಿದ ನೃಪವರಂ ಚಂಡಾಲಗಾಳಾದ ಪೋ
ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಂ ನಳಂ ವಾಜಿಪಂ
ಸುಧೆಯಂ ಕೊಟ್ಟು ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದ ರಾಘವಂ
ವಿಧಿಯಂ ಮೀರುವನಾದನೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೨೭||

ಭಾವಾರ್ಥ: ಮನ್ಮಥನು ದೇಹವನ್ನೇ ಕಳೆದುಕೊಂಡನು, ರಾಜಶ್ರೇಷ್ಠನಾದ ಹರಿಶ್ಚಂದ್ರನು ಚಂಡಾಲನಿಗೆ ದಾಸನಾದನು,ಬ್ರಹ್ಮನಿಗೆಒಂದು ತಲೆಯೇ ಹೋಯಿತು,ಶುಕ್ರಾಚಾರ್ಯನಿಗೆ ಒಂದು ಕಣ್ಣು ಹೋಯಿತು,ನಳನು ಕುದುರೆಯ ಕಾಯುವಂತಾಧನು,ಇಂದ್ರನು ಅಮೃತವನ್ನು ಕಳೆದುಕೊಂಡುಯುದ್ಧದಲ್ಲಿ ಸೋತುಹೋದನು, ಶ್ರೀರಾಮನು ತನ್ನ ಹೆಂಡತಿಯನ್ನು ಕಳೆದುಕೊಂಡನು,ಹೀಗಿರುವಾಗ ಲೋಕದಲ್ಲಿ ಅದೃಷ್ಟವನ್ನು ಮೀರಲು ಯಾರು ತಾನೆ ಸಮರ್ಥರು.

ಕಡಿದಾಡಲ್ ರಣರಂಗದೊಳ್ ನೃಪರೊಳಂ ತಾನಗ್ಗದಿಂ ಕಾದೊಡಂ
ಮೃಡನಂ ಮೆಚ್ಚಿಸಿ ಕೇಳೆದ್ದಡಂ ತೊಳಲಿ ತಾಂ ದೇಶಾಟನಂಗೆಯ್ದೊಡಂ
ಕಡಲೇಳಂ ಮಗುಚಿಟ್ಟೊಡಂ ಕಲಿಯೆ ನಾನಾ ಹೃದ್ಯ ವಿದ್ಯಂಗಳಂ
ಪಡೆದಷ್ಟಲ್ಲದೆ ಬರ್ಪುದೇ ಹರಹರಾ ಶ್ರೀಚೆನ್ನಸೋಮೇಶ್ವರಾ||೨೮||

ಭಾವಾರ್ಥ : ಯುದ್ಧದಲ್ಲಿ ಶತ್ರುಗಳನ್ನೆಲ್ಲ ಕಡಿದುಹಾಕಿದರೂ,ದೊರೆಗಳ ಬಳಿ ಹೆಚ್ಚಾಗಿ ಕಾದಿದ್ದರೂ,ಈಶ್ವರನನ್ನು ತಪಸ್ಸಿನೀಂದ ಮೆಚ್ಚಿಸಿವರವನ್ನು ಕೇಳಿದರೂ,ಅನೇಕ ದೇಶಗಳನ್ನು ಸುತ್ತಿ ಬಳಸಿದರೂ,ಏಳು ಸಮುದ್,ಗಳನ್ನು ತಲೆಕೆಳಗು ಮಾಡಿದರೂ,ಹೃದಯಂಗಮವಾದ ಅನೇಕ ವಿದ್ಯೆಗಳನ್ನು ಕಲಿತರೂ,ತನಗೆಷ್ಟು ಲಭ್ಯವೋ ಅಷ್ಟೇ ಬರುವುದಲ್ಲದೆ ಹೆಚ್ಚಾಗಿ ಬರುವುದಿಲ್ಲ.

ಧರೆ ಬೀಜಂಗಳ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ ಗಂಡ ಹೆಂ
ಡಿರನತ್ಯುಗ್ರದಿಂ ಶಿಕ್ಷಿಸಲ್ ಪ್ರಜೆಗಳಂ ಭೂಪಾಲಕಂ ಬಾಧಿಸಲ್
ತರುವೇ ಪಣ್ಗಳ ಮೆಲ್ಲೆ ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್
ಹರ ಕೊಲ್ಲಲ್ ಪರಕಾಯ್ವನೇ ಹರಹರಾ ಶ್ರೀಚೆನ್ನಸೋಮೇಶ್ವರಾ||೨೯||

ಭಾವಾರ್ಥ: ಲದಲ್ಲಿ ಬಿತ್ತಿದ ಬೀಜವನ್ನು ನೆಲವೇ ನುಂಗಿದರೂ,ಹೊಲದ ಸುತ್ತಲೂ ಹಾಕಿದ ಬೇಲಿಯುತಾನೇ ಹೊಲದ ಪೈರನ್ನೆಲ್ಲ ಮೇದುಬಿಟ್ಟರೂ,ಗಂಡನು ತನ್ನ ಹೆಂಡತಿಯನ್ನು ಕ್ರೂರವಾಗಿ ದಂಡಿಸಿದರೂ,ದೊರೆಯೇ ತನ್ನ ಪ್ರಜೆಗಳನ್ನು ಹಿಂಸೆಪಡಿಸಿದರೂ,ಮರವು ತನ್ನಲ್ಲಿ ಬಿಟ್ಟ ಹಣ್ಣುಗಳನ್ನು ತಾನೇ ತಿಂದುಬಿಟ್ಟರೂ,ಹೆತ್ತ ಮಗುವಿಗೆ ತಾಯಿಯೇ ವಿಷವನ್ನುಣ್ಣಿಸಿದರೂ,ಈಶ್ವ,ನು ಪ್ರಾಣಿಗಳನ್ನು ತಾನೇ ಕೊಂದುಹಾಕಿದರೂ, ಇತರರು ಕಾಪಾಡಲು ಸಾಧ್ಯವೇ.

ಪುರಗಳ್ ಪುಟ್ಟವೆ ನಿಂದುದಿಲ್ಲದಶಕಂಠಗಾಯಿತೇಲಂಕೆ ಸಾ
ಗರದೊಳ್ ಪೋಗದೆ ದ್ವಾರಕಾನಗರಿ ಭಿಲ್ಲರ್ಗಾದುದೇ ಗೋಪುರಂ
ದುರುಳರ್ಗಾದುದೆ ಷಟ್ಪುರಂ ಮಧುರೆಯೊಳ್ ಕಂಸಾಸುರಂ ಬಾಳ್ದನೇ
ಸಿರಿ ಬಂದು ನಿಲೆ ಪುಣ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ|| ೩೦|| .

ಭಾವಾರ್ಥ :- ತ್ರಿಪುರಗಳು ಹುಟ್ಟಲಿಲ್ಲವೆ? ಆದರೆ ಅವು ಉಳಿಯಲಿಲ್ಲ; ಲಂಕೆಯು ರಾವಣನಿಗೆ ನಿಲ್ಲಲಿಲ್ಲ; ದ್ವಾರಕೆಯು ಸಮುದ್ರದಲ್ಲಿ ಮುಳುಗಿ ಹೋಯಿತು; ಗೋಪುರವು ಭಿಲ್ಲರ ವಶವಾಗಲಿಲ್ಲ;ಷಟ್ಪುರವು ದುಷ್ಟರಾದ ಕುಂಭ ನಿಕುಂಭರಿಗೆ ದಕ್ಕಲಿಲ್ಲ ;ಮಧುರೆಯಲ್ಲಿ ಕಂಸಾಸುರನು ಬಾಳಲಿಲ್ಲ; ಆದುದರಿಂದ ಐಶ್ವರ್ಯವು ದೊರೆತರೂ ಅದು ಸ್ಥಿರವಾಗಿ ನಿಲ್ಲುವುದಕ್ಕೆ ಪುಣ್ಯವಿರಬೇಕು. ‌


.ಹುಲುಬೇಡಂ ಮುರವೈರಿಯಂ ಕುರುಬನಾ ಶೂದ್ರಕನ ರಾಮನಂ
ಬೆಲೆವೆಣ್ಣಿಂದ ಶಿಖಂಡಿ ಭೀಷ್ಮನುಮನಾ ದ್ರೋಣಾರ್ಯನಂ ವಸ್ತ್ರವಂ
ತೊಳೆವಾತಂ ಹತಮಾಡರೇ ಫಣೆಯೊಳಂ ಪೂರ್ವಾರ್ಜಿತಂ ಹಾಗಿರಲ್
ಕೊಲನೇ ಕ್ಷುದ್ರ ಸಮರ್ಥನಂ ಹರಹರಾ ಶ್ರೀಚೆನ್ನಸೋಮೇಶ್ವರಾ||೩೧||

ಭಾವಾರ್ಥ:-ಅಲ್ಪನಾದ ಬೇಡರವನೊಬ್ಬನು ಶ್ರೀಕೃಷ್ಣನನ್ನೂ , ಕುರುಬನೊಬ್ಬನು ಶೂದ್ರೀಕನೆಂಬವೀರನನ್ನೂ , ಅಂಬೆಯೆಂಬ ಹೆಂಗಸುಪರಶುರಾಮನನ್ನೂ, ಶಿಖಂಡಿಯು ಭೀಷ್ಮಾಚಾರಿಯನ್ನೂ, ಧೃಷ್ಟದ್ಯುಮ್ನನು ದ್ರೋಣಾಚಾರ್ಯನನ್ನೂ, ನಾಶಮಾಡುವುದಕ್ಕೆ ಕಾರಣರಾಗಲಿಲ್ಲವೇ? ಹಣೆಯ ಬರಹವು ಹಾಗಿದ್ದರೆ ಸಮರ್ಥನನ್ನು ಅಲ್ಪನಾದವನು ಕೊಲ್ಲಲಾಗುವುದು.

ಮೃಡತಾಂ ಭಿಕ್ಷವ ಬೇಡನೇ ಮಖಜೆ ತಾಂ ತೊಳ್ತಾಗಳೆ ಪಾಂಡವರ್
ಪಿಡಿದೋಡಂ ತಿರಿದುಣ್ಣರೇ ಖಳನ ಕೈಯೊಳ್ ಸಿಕ್ಕಳೇ ಸೀತೆ ತಾಂ
ಸುಡುಗಾಡಿಕ್ಕೆಗೆ ಭಂಟನಾಗನೆ ಹರಿಶ್ಚಂದ್ರಂ ನರರ್ ಪೂರ್ವದೊಳ್
ಪಡೆದಷ್ಟುಣ್ಣದೆ ಪೋಪರೇ ಹರಹರಾ ಶ್ರೀಚೆನ್ನಸೋಮೇಶ್ವರಾ||೩೨||

ಭಾವಾರ್ಥ:- ಶಿವನು ಭಿಕ್ಷೆ ಬೇಡಲಿಲ್ಲವೇ ? ದ್ರೌಪದಿಯು ವಿರಾಟನಗರದಲ್ಲಿ ದಾಸಿಯಾಗಿರಲಿಲ್ಲವೇ ? ಪಾಂಡವರು ಮಡಕೆಯನ್ನು ಹಿಡಿದುಕೊಂಡು ತಿರಿದು ತಿಂದು ಜೀವನ ಮಾಡಲಿಲ್ಲವೇ ?ಸೀತೆಯು ರಾವಣನಿಗೆ ಸೆರೆ ಸಿಕ್ಕಲಿಲ್ಲವೇ ? ಹರಿಶ್ಚಂದ್ರನು ಶ್ಮಶಾನದ ಕಾವಲುಗಾರನಾಗಲಿಲ್ಲವೇ ?ಆದ ಕಾರಣ ಮನುಷ್ಯರು ಪೂರ್ವಜನ್ಮದಲ್ಲಿ ಮಾಡಿದ ಕರ್ಮಕ್ಕೆ ತಕ್ಕ ಫಲವನ್ನನುಭವಿಸಿಯೇ ತೀರಬೇಕು.

ಕೊಡಬಲ್ಲಂಗೆ ದರಿದ್ರಮಂ ಪ್ರವುಢಗಂ ಮೂಢಾಂಗನಾ ಲಾಭಮಂ
ಮಡೆಯಂಗುತ್ತಮಜಾತಿ ನಾಯಕಿಯ ಪಾಪಾತ್ಮಂಗೆ ದೀರ್ಘಾಯುವಂ
ಕಡುಲೋಭಂಗತಿ ದ್ರವ್ಯಮಂ ಸುಕೃತಿಗಲ್ಪಾಯುಷ್ಯಮಂ ನೀಡುವಂ
ಸುಡು ಪಾಪಿಷ್ಟನ ಬೊಮ್ಮನಂ ಹರಹರಾ ಶ್ರೀಚೆನ್ನಸೋಮೇಶ್ವರಾ||೩೩||

ಭಾವಾರ್ಥ :-ಔದಾರ್ಯವುಳ್ಳವನಿಗೆ ಬಡತನವನ್ನೂ , ವಿದ್ಯಾವಂತನಿಗೆ ತಿಳುವಳಿಕೆಯಿಲ್ಲದ ಹೆಂಡತಿಯನ್ನೂ , ಮೂಢನಿಗೆ ಚತುರೆಯಾದ ಹೆಂಡತಿಯನ್ನೂ , ಪಾಪಿಷ್ಟನಿಗೆ ದೀರ್ಘಾಯುಷ್ಯವನ್ನೂ , ಜಿಪುಣನಿಗೆ ಹೆಚ್ಚಾದ ಐಶ್ವರ್ಯವನ್ನೂ , ಸತ್ಕಾರ್ಯ ಮಾಡುವವನಿಗೆ ಅಲ್ಪಾಯುಷ್ಯವನ್ನೂ ಕೊಡುವ ಆ ಬ್ರಹ್ಮನು ನಿಂದ್ಯನಲ್ಲವೇ?

ಗಿಡವೃಕ್ಷಂಗಳಿಗಾರು ನೀರನೆರೆವರ್ ನಿತ್ಯಂ ಮಹಾರಣ್ಯದೊಳ್
ಕಡು ಕಾರ್ಪಣ್ಯದಿ ಕೇಳ್ವವೇ ಶಿಖಿ ಜಲೋರ್ವಿಮಾರುತಾಕಾಶಮಂ
ಮೃಡ ನೀನಲ್ಲದದಾರು ಕಾಯ್ವರು ಜಗದ್ರಕ್ಷಾಕರಂ ನೀನೆಲೈ
ಕೊಡುವರ್ ಕೊಂಬುವರು ಮರ್ತ್ಯರೇ ಹರಹರಾ ಶ್ರೀಚೆನ್ನಸೋಮೇಶ್ವರಾ||೩೪||

ಭಾವಾರ್ಥ :-ಕಾಡಿನಲ್ಲಿರು ಮರ ಗಿಡಗಳಿಗೆ ನಿತ್ಯವೂ ಯಾರು ನೀರನ್ನು ಹಾಕುವವರು ? ಅವು ಪಂಚಭೂತಗಳ ಬಳಿಗೆ ಹೋಗಿ ಬಲು ದೈನ್ಯದಿಂದ ಬೇಡಿಕೊಳ್ಳುತ್ತವೆಯೆ ? ಎಲೈ ಈಶ್ವರನೆ ಲೋಕವನ್ನೆಲ್ಲರಕ್ಷಿಸುವವನು ನೀನಲ್ಲದೆ ಮತ್ತಾರು ? ಕೊಡುವುದಕ್ಕೂ ತೆಗೆದು ಕೊಳ್ಳುವುದಕ್ಕೂ ಮನುಷ್ಯರಿಗೆ ಸ್ವಾತಂತ್ರ್ಯವೆಲ್ಲಿಯದು ?

ಉಡುರಾಜಂ ಕಳೆಗುಂದಿ ಪೆರ್ಚದಿಹನೆ ನ್ಯಗ್ರೋದ ಬೀಜಂ ಕೆಲಂ
ಸಿಡಿದು ಪೆರ್ಮರನಾಗದೇ ಎಳೆಗರುಂ ಎತ್ತಾಗದೇ ಲೋಕದೊಳ್
ಮಿಡಿ ಪಣ್ಣಾಗದೆ ದೈವದೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ||೩೫||

ಭಾವಾರ್ಥ :- ಚಂದ್ರನು ಕೃಷ್ಣಪಕ್ಷದಲ್ಲಿ ಕಳೆಗುಂದಿದರೂ ಮರಳಿ ಶುಕ್ಲಪಕ್ಷದಲ್ಲಿ ವೆದ್ಧಿಹೊಂದುವುದಿಲ್ಲವೇ ? ಬಹಳ ಸಣ್ಣದಾಗಿರುವ ಆಲದ ಬೀಜವು ಸಿಡಿದುನೆಲದ ಮೇಲೆ ಬಿದ್ದು ಮೊಳೆತು ದೊಡ್ಡಮರವಾಗುವುದಿಲ್ಲವೇ ?ಎಳೆಗರುವು ಬೆಳೆದು ದೊಡ್ಡ ಗೂಳಿಯಾಗುವುದಿಲ್ಲವೇ ?ಸಣ್ಣ ಹೀಚು ಬಲಿತು ದೊಡ್ಡ ಹಣ್ಣಾಗುವುದಿಲ್ಲವೇ ? ಹಾಗೆಯೇ ಬಡವನು ದೇವರ ದಯೆಯಿದ್ದರೆ ಒಂದಾನೊಂದು ಕಾಲಕ್ಕೆ ಭಾಗ್ಯವಂತನಾಗುವನು.

ಭಾವಾರ್ಥ :-ತನ್ನ ಕುಲವನ್ನು ಉದ್ಧಾರಮಾಡುವವನಾಗಿ , ಐಶ್ವರ್ಯವನ್ನೂ ದೀರ್ಘಾಯುಷ್ಯವನ್ನೂ ಪಡೆದು , ದೋಷರಹಿತಳಾಗಿ ಬಾಳುವ ಹೆಂಡತಿಯಿಂದಲೂ ಸಂತೋಷಕರನಾದ ಮಗನಿಂದಲೂ ಕೂಡಿ , ಈಶ್ವರ ಭಕ್ತನಾಗಿ,
ದೇಹದಾರ್ಢ್ಯದಿಂದೊಪ್ಪಿದವನಾಗಿ ಬಾಳುವ ಸುಖವು ಪೂರ್ವಜನ್ಮದ ಪುಣ್ಯದಿಂದ ದೊರೆಯಬೇಕಲ್ಲದೆ ಸಾಮಾನ್ಯವಾಗಿ ಸಿಕ್ಕುವುದಿಲ್ಲ. (೩೬ನೇ ಪದ್ಯದ ಭಾವಾರ್ಥ)

ಸ್ವಕುಲೋದ್ಧಾರಕನಾಗಿ ಭಾಗ್ಯಯುತನಾಗಾಯುಷ್ಯಮುಳ್ಳಾತನಾ
ಗಕಳಂಕಾಸ್ಪದಳಾಗಿ ಬಾಳ್ವ ಸತಿಯಿರ್ದಾನಂದಮಂಮಾಳ್ಪ ಬಾ
ಲಕನಿರ್ದೀಶ್ವರ ಭಕ್ತನಾಗಿ ತನುವೊಳ್ ದಾರ್ಢ್ಯಂ ಸಮಂತೊಪುಪುವಾ
ಸುಖ ಪೂರ್ವಾರ್ಜಿತ ಪುಣ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೩೬||

ಮಧುರೇಂದ್ರಂ ಕಡು ದಿಟ್ಟನಾಗಲು ಬಳಿಕ್ಕೀಡೇರಿತೇ ದ್ವರಕಾ
ಸದನಂ ವಾರ್ಧಿಯ ಕೂಡದೆ ಕುರುಕುಲಾಂಭೋರಾಶಿಯೊಳ್ ಸೈಂಧವಂ
ಪುದುಗಲ್ ಬಾಳ್ದನೆ ಭೂಮಿಯಂ ಬಗಿದು ಪೊಕ್ಕೇಂ ದುಂದುಭಿ ಕ್ಷೋಣಿಯೊಳ್
ವಿಧಿ ಕಾಡಲ್ ಸುಖಮಾಂಪರೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೩೭||

ಭಾವಾರ್ಥ :- ಮಧುರಾಪುರದ ದೊರೆಯಾದ ಕಂಸನು ಎಲ್ಲರಿಗೂ ಅಸಾಧ್ಯನಾಗಿದ್ದರೂ ಅವನ ಇಷ್ಟ ನಡೆಯಿತೇ?
ದ್ವಾರಕಾ ಪಟ್ಟಣವು ಸಮುದ್ರದಲ್ಲಿ ಮುಳುಗಿಹೋಗಲಿಲ್ಲವೆ ? ಸೈಂಧವನು ಕೌರವರ ಸೈನ್ಯದಲ್ಲಿ ಅವಿತುಕೊಂಡಿದ್ದರೂ ಬದುಕಿದನೆ ? ದುಂದುಭಿಯು ನೆಲವನ್ನು ಬಗಿದು ಒಳಗೆ ಸೇರಿಕೊಂಡರೂ ಸಾವು ತಪ್ಪಿತೆ ? ಆದುದರಿಂದ ದೈವವು ಕಾಡುವಾಗ ಸುಖವಾಗಿ ಬಾಳುವುದು ಸೃಧ್ಯವಲ್ಲ.

ಸುರೆಯಂ ಸೇವಿಸುವಾತ ಬಲ್ಲನೆ ಮಹಾ ಯೋಗೀಂದ್ರರೆಂದೆಂಬುದಂ
ದೊರೆಯೊಳ್ ಸ್ನೇಹವನಾಂತವಂ ಬಡವರಂ ತಾಂ ನೋಳ್ಪನೇ ಪ್ರೀತಿಯಿಂ
ಪಿರಿಯರ್ ಮಾನಿತರೆಂದು ಕಾಣ್ಬನೆ ಮಹಾ ದುರ್ಮಾರ್ಗನೆಂತಾದೊಡಂ
ದುರುಳಂ ಬಲ್ಲನೆ ಬಾಳ್ವರಂ ಹರಹರಾ ಶ್ರೀಚೆನ್ನಸೋಮೇಶ್ವರಾ ||೪೦||

ಭಾವಾರ್ಥ :- ಹೆಂಡಕುಡುಕನು ಯೋಗಿಯನ್ನು ಪೂಜ್ಯನೆಂದು ತಿಳಿದು ಗೌರವಿಸುವನೆ ? ದೊರೆಯಲ್ಲಿ ಸ್ನೇಹವನ್ನು ಸಂಪಾದಿಸಿಕೊಂಡಿರುವವನು ಬಡವರನ್ನು ಪ್ರೀತಿಯಿಂದ ಕಾಣುವನೆ ? ದುರ್ಮಾರ್ಗದಲ್ಲಿ ನಡೆಯುವವನು ಇವರು ದೊಡ್ಡವರು, ಇವರು ಪೂಜ್ಯರು ಎಂದು ಗೌರವಿಸುವನೆ ? ದುಷ್ಟನು ಸಭ್ಯರಾಗಿ ಬಾಳುವವರನ್ನು ಬಾಧಿಸದೆ ಬಿಡುವನೆ ?

ಬರೆ ದಾರಿದ್ರ್ಯದಿ ದ್ರೋಣನಂ ದ್ರುಪದ ಪೂರ್ವ ಸ್ನೇಹದಿಂ ಕಂಡನೇ
ಕುರುಭೂಪಾನು ಪಾಂಡುಪುತ್ರರು ಮಹಾ ಧರ್ಮಾತ್ಮರೆಂದಿತ್ತನೇ
ಹರಿಯ ತಂಗಿಯ ಬಾಲನೆಂದು ಬಗೆದೇಂ ಕಂಸಾಸುರ ಕಂಡನೇಂ
ದೊರೆಗಳ್ಗೆತ್ತಣ ನಂಟರೈ ಹರಹರಾ ಶ್ರೀಚೆನ್ನಸೋಮೇಶ್ವರಾ||೫೪||

ಭಾವಾರ್ಥ :-ದ್ರುಪದನು ದೊರೆಯಾಗಿದ್ದಾಗ ಅವನ ಬಾಲ್ಯಸ್ನೇಹಿತನಾದ ದ್ರೋಣನು ದಾರಿದ್ರ್ಯದಿಂದ ತನ್ನಲ್ಲಿಗೆ ಬರಲು ಮೊದಲಿನ ಸ್ನೇಹವನ್ನು ನೆನೆದು ಅವನನ್ನು ಆದರಿಸಿದನೆ ? ಪಾಂಡವರು ಧರ್ಮಿಷ್ಠರೆಂದು ತಿಳಿದಿದ್ದರೂ ಅವರಿಗೆ ದುರ್ಯೋಧನನು ರಾಜ್ಯವನ್ನು ಕೊಟ್ಟನೆ ? ಕಂಸನು ಕೃಷ್ಣನನ್ನು ತನ್ನ ತಂಗಿಯ ಮಗನೆಂದು ದ್ವೇಷಿಸದೆ ಬಿಟ್ಟನೆ ? ಆದಕಾರಣ ದೊರೆಗಳಿಗೆ ನಂಟರು ಎಂಬ ಮಮತೆಯು ಎಲ್ಲಿಂದ ಬಂದೀತು ?

ಪುರ ದುರ್ಗಂಗಳಬಲ್ಮೆಮಾಡದೆ ಪ್ರಜಾಕ್ಷೋಭಂಗಳಂ ನೋಡದೆ
ಲ್ಲರು ವಿಶ್ವಾಸಿಗಳೆಂದು ನಂಬಿ ಬಹುದಂ ಪೋದಪ್ಪುದಂ ಕಾಣದಾ
ತುರದಿಂದುಂಡತಿ ನಿದ್ರೆಗೆಯ್ದು ಮದನಂಗಳಾಗಿಹಂ ಲೋಕದೊಳ್
ದೊರೆಯೇ ಸೊಕ್ಕಿದ ಕೋಣನೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೫೫||

ಭಾವಾರ್ಥ:- ಪಟ್ಟಣಗಳನ್ನೂ, ಕೋಟೆಗಳನ್ನೂ ಬಲಪಡಿಸದೆ , ಪ್ರಜೆಗಳ ಕಷ್ಟವನ್ನು ಲಕ್ಷಿಸದೆ, ಎಲ್ಲರೂ ತನ್ನಲ್ಲಿ ವಿಶ್ವಾಸವುಳ್ಳವರೆಂದು ನಂಬಿ, ತನ್ನ ಆದಾಯ ವೆಚ್ಚಗಳನ್ನು ವಿಚಾರಮಾಡದೆ, ಬೇಕಾದ ಹಾಗೆ ತಿಂದು ಮಿತಿಮೀರಿ, ನಿದ್ದೆ ಮಾಡುತ್ತ ಯಾವಾಗಲೂ ವಿಷಯಾಸಕ್ತನಾಗಿರುವವನು ಸೊಕ್ಕಿದ ಕೋಣನೇ ಹೊರತು ದೊರೆಯಲ್ಲ.

ಹರತಾಂ ಕುಂಟಿಣಿಯಾಗೆ ನಂಬಿಯೊರೆದಂ ಚಂದ್ರಾವತಿ ದೇವಿಗಂ
ಕರ ಕಷ್ಟಂಗಳ ಮಾಡಿದಂ ದ್ವಿಜ ವಿರಾಟಂ ಧರ್ಮಭೂಪಾಲನಂ
ಶಿರಮಂ ಚಿಟ್ಟೆಯೊಳಿಟ್ಟನಗ್ನಿಜೆಗೆ ಬಂದಾಪತ್ತನೇನೆನೆಂಬೆನಾಂ
ಪರಸೇವಾ ಸ್ಥಿತಿ ಕಷ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ||೭೪||

ಭಾವಾರ್ಥ :- ಭಕ್ತ ಪರಾಧೀನನಾದ ಶಿವನು ನಂಬಿಯೆಂಬ ತನ್ನ ಭಕ್ತನ ಹೇಳಿಕೆಯಂತೆ ಅವನಿಗೆ ತಲೆಹಿಡುಕನಾದನು. ಕಾಲಕೌಶಿಕನೆಂಬ ಬ್ರಾಹ್ಮಣನು ಹರಿಶ್ಚಂದ್ರನ ಹೆಂಡತಿ ಚಂದ್ರಮತೀ ದೇವಿಗೆ ಅನೇಕ ತೊಂದರೆಗಳನ್ನು ಕೊಟ್ಟನು. ವಿರಾಟರಾಜನು ಧರ್ಮರಾಜನ ತಲೆಯನ್ನು ದಾಳದಿಂದ ಹೊಡೆದನು. ದ್ರೌಪದಿಯು ಅನೇಕ ಕಷ್ಟಗಳಿಗೀಡಾದಳು. ಆದಕಾರಣ ಪರರ ಸೇವೆ ಮಾಡಿಕೊಂಡಿರುವುದುಬಹಳ ಕಷ್ಟವಾದದ್ದು.

ಪರರಾಯರ್ಕಳ ಸೇನೆಯಂ ಗೆಲಿದು ಮತ್ತೇಭಂಗಳಂ ಸೀಳ್ದುತ
ನ್ನರಿಯೆಂದೆಂಬರನೊಕ್ಕಲಿಕ್ಕುವ ಭಟರ್ಗಂ ಗಂಜಿ ಕೀಳ್ನಾಯ್ಗಳಂ
ನಿರುತಂ ಭೋಜ್ಯ ವಿಶೇಷಮಿತ್ತು ಪೊರೆವರ್ ಮಾನಂಗಳೆಲ್ಲಿರ್ಪುವೈ
ಪರಪೋಷ್ಯಕ್ಕೊಳಗಾಗಿರಲ್ ಹರಹರಾ ಶ್ರೀಚೆನ್ನಸೋಮೇಶ್ವರಾ||೭೫||

ಭಾವಾರ್ಥ :- ಶತ್ರುರಾಜರ ಚತುರಂಗ ಬಲವನ್ನು ಯುದ್ಧದಲ್ಲಿ ನಾಶಮಾಡಿ ತಮಗೆ ಜಯವನ್ನುಂಟುಮಾಡುವ ಸಾಮರ್ಥ್ಯವುಳ್ಳ ಭಟರಿಗೆ ಗಂಜಿಯನ್ನೂ ತಮ್ಮ ಬಳಿಯಲ್ಲಿರುವ ನೀಚಪ್ರಾಣಿಗಳಾದ ನಾಯಿಗಳಿಗೆ ಯಾವಾಗಲೂ ಮೃಷ್ಟಾನ್ನ ಭಕ್ಷ್ಯಭೋಜ್ಯಗಳನ್ನೂ ದೊರೆಗಳು ಕೊಡುವರು. ಆದುದರಿಂದ ಜೀವನಕ್ಕಾಗಿ ಮತ್ತೊಬ್ಬನ ಅಧೀನದಲ್ಲಿರುವವನಿಗೆ ಮಾನವು ದೊರೆಯದು.

ಅರೆಯಂ ಸೀಳುವೊಡಾನೆ ಮೆಟ್ಟಲಹುದೇ ಚಾಣಂಗಳಿಂದಲ್ಲದೆ
ಕಿರಿದಾಗಿರ್ದೊಡದನೇನುಪಾಯಪರನೊರ್ವಂ ಕೋಟಿಗೀಡಕ್ಕು ಹೆ
ಮ್ಮರನಿರ್ದೇನದರಿಂದಲೆತ್ತಬಹುದೇ ಬಲ್ಭಾರಮಂ ಸನ್ನೆಸಾ
ವಿರ ಕಾಲಾಳಿನ ಸತ್ವವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೭೬||

ಭಾವಾರ್ಥ :- ಬಂಡೆಯನ್ನು ಸೀಳಬೇಕಾದರೆ ಸಣ್ಣದಾಗಿರುವ ಉಕ್ಕಿನ ಉಳಿಯಿಂದಲ್ಲದೆ ದೊಡ್ಡ ಶರೀರವುಳ್ಳ ಆನೆಯ ತುಳಿತದಿಂದ ಸಾಧ್ಯವಲ್ಲ. ಉಪಾಯ ಬಲ್ಲವನು ಒಬ್ಬನಾಗಿದ್ದರೂ ಸಾಮಾನ್ಯರಾದ ಕೋಟಿ ಜನಕ್ಕೆ ಸಮನಾಗುವನು. ಹೆಚ್ಚಾ ಭಾರವನ್ನು ಎತ್ತಬೇಕಾದರೆ ದೊಡ್ಡ ಮರದಿಂದ ಸಾಧ್ಯವಲ್ಲ. ಭಾರವನ್ನೆತ್ತುವುದಕ್ಕಾಗಿ ಉಉಪಯೋಗಿಸುವ ಸನ್ನೆಗೆ ಸಾವಿರ ಮಂದಿಯಷ್ಟು ಬಲವಿರುವುದು.

ಮದನಂಗಂಜುವ ಯೋಗಿಯೇ ಮನೆಯ ಪೆಣ್ಣಿಂಗಂಜುವಂ ಗಂಡುಸೇ
ಮದಕಂಜೋಡುವುದಾನೆಯೇ ನಟನದೊಳ್ ಸೋತೋಡುವಳ್ ಸೂಳೆಯೇ
ಬುಧನೇ ತರ್ಕದೊಳಂಜುವಂಜುವಂ ಶರದ ಘಾತಕ್ಕಂಜೆ ದಿವ್ಯಾಶ್ವವೇ
ಕದನಕ್ಕಂಜುವ ವೀರನೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೭೮||

ಭಾವಾರ್ಥ :- ಮನ್ಮಥನಿಗೆ ಹೆದರುವವನು ಯೋಗಿಯಲ್ಲ. ಹೆಂಡತಿಗೆ ಹೆದರುವವನು ಗಂಡುಸಲ್ಲ. ಮದದಾನೆಗೆ ಹೆದರಿ ಓಡಿಹೋಗುವುದು ಆನೆಯಲ್ಲ. ನಾಟ್ಯವಾಡುವುದಕ್ಕೆ ಕೈಯಲ್ಲಾಗದೆ ಓಡಿಹೋಗುವವಳು ಸೂಳೆಯಲ್ಲ. ವಾದ ಮಾಡುವುದಕ್ಕೆ ಹೆದರುವವನು ವಿದ್ವಾಂಸನಲ್ಲ. ಬಾಣದ ಪೆಟ್ಟಿಗೆ ಹೆದರುವುದು ಉತ್ತಮಜಾತಿಯ ಕುದುರೆಯಲ್ಲ. ಯುದ್ಧಕ್ಕೆ ಹೆದರುವವನು ವೀರನಲ್ಲ.


ಕೊಡಬೇಕುತ್ತಮನಾದವಂಗೆ ಮಗಳಂ ಸತ್ಪಾತ್ರಕಂ ದಾನಮಂ
ಬಿಡಬೇಕೈ ಧನಲೋಭ ಬಂಧು ಜನರೊಳಗೆ ದುಷ್ಟಾತ್ಮರೊಳ್ ಗೋಷ್ಠಿಯಂ
ಇಡಬೇಕೀಶ್ವರನಲ್ಲಿ ಭಕ್ತಿರಸಮಂ ವಿಶ್ವಾಸಮಂ ಸ್ವಾಮಿಯೊಳ್
ಇಡಬೇಕಿದ್ದುಣಬೇಕೆಲೈ ಹರಹರಾ ಶ್ರೀಚೆನ್ನಸೋಮೇಶ್ವರಾ||೭೯||

ಭಾವಾರ್ಥ :- ಮಗಳನ್ನು ಯೋಗ್ಯನಾದ ವರನಿಗೂ, ದಾನವನ್ನು ತಕ್ಕ ಅರಹತೆಯುಳ್ಳವನಿಗೂ ಕೊಡಬೇಕು. ನಂಟರ ವಿಚಾರದಲ್ಲಿ ದುಡ್ಡಿನಾಶೆ ಯನ್ನೂ, ದುಷ್ಟರಲ್ಲಿ ಸಹವಾಸವನ್ನೂ ಬಿಡಬೇಕು. ಈಶ್ವರನಲ್ಲಿ ಭಕ್ತಿಯನ್ನೂ , ತನ್ನ ಒಡೆಯನಲ್ಲಿ ನಂಬಿಕೆಯನ್ನೂ ಇಟ್ಟುಕೊಂಡಿರಬೇಕು. ತನಗೆ ದೇವರು ಕೊಟ್ಟಿದ್ದರಲ್ಲಿ ಇತರರಿಗೂ ಊಟಕ್ಕಿಟ್ಟು ತಾನೂ ಊಟ ಮಾಡಬೇಕು .

ಕ್ಷಿತಿಯಂ ಶೋಧಿಸಲಕ್ಕುವೀಚಿಗಳ ಲೆಕ್ಕಂ ಮಾಡಲಿಕ್ಕಾಗದೋ
ನ್ನತಿಯಂ ಕಾಣಲುಬರ್ಕು ಸಾಗರಗಳೇಳನಂ ದಾಂಟಲಕ್ಕು ನಭೋ
ಗತಿಯಂ ಸಾಧಿಸಲಕ್ಕು ಬೆಟ್ಟಗಳ ಚೂರ್ಣಂ ಮಾಡಲಕ್ಕೀಕ್ಷಿಸಲ್
ಸತಯಾ ಚಿತ್ತವಭೇದ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮೦||

ಭಾವಾರ್ಥ :- ಭೂಮಿಯನ್ನು ಶೋಧಿಸಿ ಅದರಲ್ಲಿ ಏನಿದೆಯೆಂಬುದನ್ನು ತಿಳಿಯಬಹುದು, ಸಮುದ್ರದ ಅಲೆಗಳನ್ನು ಲೆಕ್ಕ ಮಾಡಬಹುದು, ಆಕಾಶದ ಎತ್ತರವೆಷ್ಟೆಂಬುದನ್ನು ತಿಳಿಯಬಹುದು, ಸಪ್ತ ಸಮುದ್ರಗಳನ್ನೂ ದಾಟಬಹುದು, ಆಕಾಶದಲ್ಲಿ ಸಂಚಾರ ಮಾಡುವುದನ್ನು ಕಲಿಯಬಹುದು, ಬೆಟ್ಟಗಳನ್ನು ಒಡೆದು ಪುಡಿಮಾಡಬಹುದು, ಆದರೆ ಸ್ತ್ರೀಯರಮನಸ್ಸಿನ ಅಭಿಪ್ರಾಯವನ್ನು ತಿಳಿಯುವುದು ಮಾತ್ರ ಸಾಧ್ಯವಲ್ಲ.

ರಣದೊಳ್ ಶಕ್ರನ ತೇರನೇರಿದ ಮಹಾಶೈಲಾಳಿ ಬೆಂಬತ್ತ ಮಾ
ರ್ಗಣದಿಂ ಚಿಮ್ಮಿದ ಸಪ್ತಸಾಗರಗಳಂ ದಿಕ್ಕೆಂಟು ಮೂಲೋಕಮಂ
ಕ್ಷಣದೊಳ್ ವೆಚ್ಚವಮಾಡಿ ಬೇಡೆ ಬಲಿ ಸಾಲಕ್ಕಂಜಿ ಬಿಟ್ಟೋಡಿದಂ
ರುಣಭಾರಕ್ಕೆಣೆಯಾವುದೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮೧||

ಭಾವಾರ್ಥ :- ಬಲಿಚಕ್ರವರ್ತಿಯು ಯುದ್ಧದಲ್ಲಿ ಇಂದ್ರನನ್ನು ಗೆದ್ದು ಅವನ ರಥವನ್ನು ಹತ್ತಿದನು; ದೊಡ್ಡ ಬೆಟ್ಟಗಳ ಗುಂಪು ಹಿಂದಟ್ಟಿ ಬರಲು ಅವನ್ನು ತನ್ನ ಬಾಣದಿಂದ ಚಿಮ್ಮಿದನು; ಇಂಥವನು ಮೂರಡಿ ಭೂಮಿಯನ್ನು ಬೇಡಿದ ವಾಮನನಿಗೆ ಸಪ್ತ ಸಮುದ್ರಗಳನ್ನೂ, ಎಂಟುದಿಕ್ಕುಗಳನ್ನೂ, ಮೂರುಲೋಕಗಳನ್ನೂ ಕ್ಷಣಮಾತ್ರದಲ್ಲಿ ದಾನಮಾಡಿಯೂ ಸಾಲವನ್ನು ತೀರಿಸುವುದಕ್ಕೆ ಶಕ್ತಿಯಿಲ್ಲದೆ ಹೆದರಿ ಪಾತಾಳಕ್ಕೆ ಓಡಿಹೋದನು . ಆದಕಾರಣ ಸಾಲಕ್ಕಿಂತ ಹೆಚ್ಚಾದ ಭಾರವು ಯಾವುದೂ ಇಲ್ಲ.

ಪೊರಬೇಡಂಗಡಿ ಸಾಲ ವೂರ ಹೊಣೆಯಂ ಪಾಪಗಳಂ ನಿಂದೆಯಂ
ಮರೆಬೇಡಾತ್ಮಜ ಸತ್ಕಳತ್ರ ಸಖರೊಳ್ ನ್ಯಾಯಂಗಳೊಳ್ ಸತ್ಯದೊಳ್
ಸೆರೆ ಬೇಡರ್ಭಕ ಪಕ್ಷಿ ವೃದ್ಧ ತರುಣೀ ಗೋ ವಿಪ್ರ ದೀನರ್ಕಳಂ
ತೆರಬೆಡೊತ್ತೆಗೆ ಬಡ್ಡಿಯಂ ಹರಹರಾ ಶ್ರೀಚೆನ್ನಸೋಮೇಶ್ವರಾ||೮೨||

ಭಾವಾರ್ಥ :- ಅಂಗಡಿಯ ಸಾಲವನ್ನೂ, ಊರಿನವರಿಗೆಲ್ಲ ಹೊಣೆಯಾಗುವುದನ್ನೂ, ಪಾಪಗಳನ್ನೂ, ನಿಂದೆಯನ್ನೂ ಹೊತ್ತುಕೊಳ್ಳಬೇಡ; ಮಗನಲ್ಲಿಯೂ, ಯೋಗ್ಯಳಾದ ಹೆಂಡತಿಯಲ್ಲಿಯೂ, ಸ್ನೇಹಿತರಲ್ಲಿಯೂ ಮರೆಮಾಚಬೇಡ; ನ್ಯಾಯವನ್ನೂ, ಸತ್ಯವನ್ನೂಮುಚ್ಚಿಡಬೇಡ, ಎಳೆಯಮಕ್ಕಳನ್ನೂ ಹಕ್ಕಿಗಳನ್ನೂ, ಮುದುಕರನ್ನೂ, ಹೆಂಗಸರನ್ನೂ, ಹಸುಗಳನ್ನೂ, ಬ್ರಾಹ್ಮಣರನ್ನೂ, ದಿಕ್ಕಿಲ್ಲದವರನ್ನೂ ಸೆರೆಹಾಕಬೇಡ; ಒಡವೆಯನ್ನು ಒತ್ತೆಯಿಟ್ಟು ಸಾಲಮಾಡಿ ಬಡ್ಡಿಯನ್ನು ತೆರಬೇಡ.

ಅನುಮಾನಂಬಡೆ ರಾಮನಗ್ನಿಯೊಳಪೊಕ್ಕಾ ಸೀತೆ ತಾನೈತರಲ್
ವನದೊಳ್ ನೇರಿಳೆವಣ್ಣನಗ್ನಿಜೆ ಬಹುಪ್ರಖ್ಯಾತಿಯಿಂ ಪತ್ತಿಸಲ್
ದನುಜಾರಾತಿ ಸ್ಯಮಂತ ರತ್ನವ ನೃಪಂಗೀಯಲ್ಕೆ ದೂರ್ ಪೋದುದೇ
ಜನರಂ ಮೆಚ್ಚಿಸಲಾಗದೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮೩||

ಭಾವಾರ್ಥ :- ಸೀತಾದೇವಿಯುರಾವಣನ ಬಳಿಯಲ್ಲಿ ಬಹುಕಾಲವಿದ್ದಳೆಂದು ಆಕೆಯನ್ನು ಸ್ವೀಕರಿಸುವುದಕ್ಕೆ ರಾಮನು ಸಂಶಯಪಡಲು ಆ ಸಂಶಯವನ್ನು ಪರಿಹಾರ ಮಾಡುವುದಕ್ಕಾಗಿ ಸೀತೆಯು ಅಗ್ನಿ ಪ್ರವೇಶ ಮಾಡಿ ಶುದ್ಧಳೆಂದೆನಿಸಿಕೊಂಡಳು. ಮರದಿಂದ ಕೊಯ್ದ ನೇರಿಳೆ ಹಣ್ಣನ್ನು ದ್ರೌಪದಿಯು ಮರಳಿ ಮರಕ್ಕೆ ಸೇರಿಕೊಳ್ಳುವಂತೆಮಾಡಿ ಮಹಾಪತಿವ್ರತೆಯೆಂದೆನಿಸಿಕೊಂಡಳು; ನಷ್ಟವಾಗಿ ಹೋಗಿದ್ದ ಸ್ಯಮಂತಕ ಮಣಿಯನ್ನು ಶ್ರೀಕೃಷ್ಣನು ತಂದು ಸತ್ರಾಜಿತನಿಗೆ ಸಭೆಯಲ್ಲಿ ಕೊಟ್ಟು ತನ್ನ ಮೇಲೆ ಬಂದಿದ್ದ ಅಪವಾದ ಸುಳ್ಳೆಂದು ತೋರಿಸಿದನು. ಹೀಗೆ ಮಾಡಿದರೂ ಇವರುಗಳ ಮೇಲೆ ಬಂದಿದ್ದ ದೂರು ಕೊನೆಗೂ ಹೋಗಲಿಲ್ಲ. ಆದ ಕಾರಣ ಜನರನ್ನು ಮೆಚ್ಚಿಸುವುದು ಯಾರಿಂದಲೂ ಸಾಧ್ಯವಿಲ್ಲ.

ಅಡಿಮೂರೀಯೆನಲೀಯನೇ ಬಲಿನೃಪಂ ಮೂಲೋಕಮಂ ದೇಹಮಂ
ಕಡಿದೀಯೆಂದೆನೆ ಪಕ್ಕಿಗೀಯನೆ ನೃಪಂ ತನ್ನಂಗವಾದ್ಯಂತಮಂ
ಮೃಡಬೇಕೆಂದೆನೆ ಸೀಳ್ದು ತನ್ನ ಸುತನಂ ನೈವೇದ್ಯಮಂ ಮಾಡನೇ
ಕೊಡುವರ್ಗಾವುದು ದೊಡ್ಡಿತೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮೪||

ವಾಮನನು ಮೂರು ಹೆಜ್ಜೆಯಷ್ಟು ನೆಲವನ್ನು ಬೇಡಲು ಬಲಿಚಕ್ರವರ್ತಿಯು ಮೂರು ಲೋಕವನ್ನೂ ಕೊಡಲಿಲ್ಲವೆ? ಗಿಡಗದ ರೂಪದಿಂದ ಬಂದ ಇಂದ್ರನು ಶಿಬಿ ಚಕ್ರವರ್ತಿಯ ದೇಹದಿಂದ ಮಾಂಸವನ್ನು ಕೊಯ್ದುಕೊಡೆಂದು ಕೇಳಲು ಆತನು ತನ್ನ ದೇಹವನ್ನೆಲ್ಲ ಕೊಟ್ಟು ಬಿಡಲಿಲ್ಲವೆ? ಈಶ್ವರನು ತನ್ನ ಆಹಾರಕ್ಕಾಗಿ ಸಿರಿಯಾಳನ ಮಗನ
ಮಾಂಸವನ್ನು ಕೇಳಲಾಗಿ ಸಿರಿಯಾಳನು ಅದನ್ನು ಒದಗಿಸಲಿಲ್ಲವೆ? ಆದುದರಿಂದ ತ್ಯಾಗಿಗಳಿಗೆ ದಾನಮಾಡುವ ವಿಷಯದಲ್ಲಿ ಯಾವುದೂ ಹೆಚ್ಚಲ್ಲ.

ಮಡೆಯಂಗುತ್ತಮ ವಿದ್ಯೆ ಬೆಟ್ಟಕುರುಡಂಗೆ ಮಾರ್ಗವೇ ಬೆಟ್ಟ ಕೇಳ್
ಬಡವಂಗೆಲ್ಲರ ವೈರ ಬೆಟ್ಟ ಜಡದೇಹಂಗುಜ್ಜುಗ ಬೆಟ್ಟ ಮು
ಮುಪ್ಪಡಸಿರ್ದಾತಗೆ ಪೆಣ್ಣು ಬೆಟ್ಟ ರುಣವೇ ಪೆರ್ಬೆಟ್ಟ ಮೂಲೋಕದದೊಳ್
ಕಡುಲೋಭಂಗಿಡೆ ಬೆಟ್ಟವೈ ಹರಹರ ಶ್ರೀಚೆನ್ನಸೋಮೇಶ್ವರಾ||೮೫||

ಭಾವಾರ್ಥ:- ಮೂಢನಿಗೆ ಉತ್ತಮವಾದ ವಿದ್ಯೆಯೂ, ಕುರುಡನಿಗೆ ದಾರಿಯೂ, ಬಡವನಿಗೆ ಜನರಲ್ಲಿ ಧ್ವೇಷವೂ, ಭಾರವಾದ ಮೈಯುಳ್ಳವನಿಗೆ ಕೆಲಸವೂ, ಮುದುಕನಿಗೆ ಪ್ರಾಯದ ಹೆಂಡತಿಯೂ, ಯಾರಿಗೇ ಆಗಲಿಸಾಲವೂ, ಬಹಳ ಜಿಪುಣನಿಗೆ ಅನ್ನ ದಾನಮಾಡುವುದೂ ಅತ್ಯಂತ ಕಷ್ಟವಾದುವುಗಳು.

ಶಿವಸುಜ್ಞಾನವೆ ಯೋಗಿಗಳ್ಗೆ ನಯನಂ ಚಂಡಾಂಶು ಶುಭ್ರಾಂಶುಗಳ್
ಭವನೇತ್ರಂ ಪುರುಷೋತ್ತಮಂಗೆ ಕಮಲಂ ಕಣ್ ರಾತ್ರಿಗಾ ಪಾವಕಂ
ರವಿ ಲೋಕತ್ರಯಕ್ಕೆಲ್ಲ ದೃಷ್ಟಿ ವಿಭುಧವ್ರಾತಕ್ಕೆ ಶಾಸ್ತ್ರಾಂಬಕಂ
ಕವಿಯೇ ರಾಜರ ಕಣ್ಣೆಲೈ ಹರಹರ ಶ್ರೀಚೆನ್ನಸೋಮೇಶ್ವರಾ||೮೬||


ಭಾವಾರ್ಥ:- ಯೋಗಿಗಳಿಗೆ ಈಶ್ವರನ ಸ್ವರೂಪದ ಅರಿವೂ, ಶಿವನಿಗೆ ಸೂರ್ಯ ಚಂದ್ರರೂ, ವಿಷ್ಣುವಿಗೆ ಕಮಲವೂ, ರಾತ್ರಿಗೆ ಅಗ್ನಿಯೂ, ಮೂರು ಲೋಕಕ್ಕೂ ಸೂರ್ಯನೂ, ವಿದ್ವಾಂಸರಿಗೆ ಶಾಸ್ತ್ರವೂ, ರಾಜನಿಗೆ ಕವಿಯೂ ಕಣ್ಣುಗಳು.

ಮದನಂಗೀಶ್ವರ ಶತೃ ಬಂಧನಿಚಯಕ್ಕೆ ಜಾರೆಯೇ ಶತ್ರು ಪೇ
ಳದ ವಿದ್ಯಂಗಳ ತಂದೆ ಶತೃ ಕುವರರ್ಗಂ ಶತೃ ಸನ್ಮಾನ್ಯರಾ
ಸದನಕ್ಕಂ ಕಡುಸಾಲ ರೂಪವತಿ ತಾನೇ ಶತೃ ಗಂಡಂಗೆ ಮೇಣ್
ಮುದಿಗಾ ಯವ್ವನೆ ಶತೃವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮೭||

ಭಾವಾರ್ಥ :- ಈಶ್ವರನು ಮನ್ಮಥನಿಗೂ, ಹಾದರಗಿತ್ತಿಯು ಬಂಧುಗಳಿಗೂ,ವಿದ್ಯೆಯನ್ನು ಕಲಿಸದತಂದೆಯು ಮಕ್ಕಳಿಗೂ, ಸಾಲವು ಮಾನವಂತರ ಮನೆತನಕ್ಕೂ, ಸುಂದರಿಯಾದ ಹೆಂಡತಿಯು ಗಂಡನಿಗೂ, ಯೌವನಸ್ಥಳಾದ ಹೆಂಡತಿಯು ಮುದುಕನಿಗೂ ಶತ್ರುಗಳು.

ಪೃಥುರೋಮೇಶ ತಿಮಿಂಗಿಲಂ ತಿವಿಯ ನೂಂಕಲ್ ಸಿಂಧು ತಾನುಕ್ಕದೇ
ಶಿಥಿಲತ್ವಂಬಡೆದಿರ್ಪ ವಂಶ ಮೊರೆಯಲ್ ಕಿಚ್ಚೇಳದೇ ಮಂದರಂ
ಮಥಿಸಲ್ ಕ್ಷೀರಸಮುದ್ರದೊಳ್ ಬಹು ವಿಷಂ ತಾಂ ಪುಟ್ಟದೆ ಮರ್ತ್ಯರೊಳ್
ಮಥಿನಂ ವೆಗ್ಗಳವಲ್ಲವೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೮೮||

ಭಾವಾರ್ಥ :- ದೊಡ್ಡ ಮೀನಾದ ತಿಮಿಂಗಿಲವು ತಿಮಿಯೆಂಬ ಮೀನನ್ನು ತಳ್ಳಲು ಸಮುದ್ರವು ಉಕ್ಕುವುದಿಲ್ಲವೆ? ಬಿದಿರು ಮೆಳೆಯಲ್ಲಿ ಬೇರೆ ಬೇರೆ ಇರುವ ಬಿದಿರುಗಳು ಒಂದಕ್ಕೊಂದು ಉಜ್ಜಿದರೆ ಭಬೆಂಕಿ ಹುಟ್ಟಿ ಉರಿಯೇಳುವುದಿಲ್ಲವೇ? ಮಂದರ ಪರ್ವತದಿಂದ ಕ್ಷೀರಸಮುದ್ರವನ್ನು ಕಡೆಯಲು ಲೋಕವನ್ನೇ ಸುಡುವ ವಿಷವು ಹುಟ್ಟಲಿಲ್ಲವೆ? ಹಾಗೆಯೇ ಮನುಷ್ಯರಲ್ಲಿಯೂ ಒಬ್ಬರಿಗೊಬ್ಬರಿಗೆ ಜಗಳ ಹುಟ್ಟುವುದು ಕೇಡಿಗೆ ಕಾರಣವು.


ಹರಿಯೊಳ್ ನಾರದ ಮಂದಿವಾಳದೆ ಮಹಾ ಶಾಪಂಗಳಂ ತಾಳನೇ
ಸುರವೆಣ್ಣಿಂದಲಿ ಪುಷ್ಪದಂತ ವನದೊಳ್ ತಾಂ ಕ್ರೋಡರೂಪಾಗನೇ
ವಿರಸಂ ಬರ್ಪುದು ಬೇಡೆನಲ್ ದೃಪದೆಯಂ ಭೀಮಾರಿ ತಾಂ ನೋಯನೆ
ಸರಸಂ ವೆಗ್ಗಳಮಾಗದೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮೯||

ಭಾವಾರ್ಥ :- ನಾರದನು ವಿಷ್ಣುವಿನಲ್ಲಿ ಹೆಚ್ಚಾದ ಸಲಿಗೆಯನ್ನು ತೋರಿಸಿದುದರಿಂದ ದೊಡ್ಡ ಶಾಪವನ್ನು ಪಡೆಯಲಿಲ್ಲವೆ? ಪುಷ್ಪದಂಯನೆಂಬ ಗಂಧರ್ವನು ಒಬ್ಬ ಅಪ್ಸರ ಸ್ತ್ರೀಯನ್ನು ತಡೆದುದರಿಂದ ಹಂದಿಯ ಜನ್ಮವನ್ನು ತಾಳಲಿಲ್ಲವೇ ? ದ್ರೌಪದಿಯು ಬೇಡವೆಂದು ಎಷ್ಟು ಬಗೆಯಲ್ಲಿ ಹೇಳಿದರೂ ಕೇಳದೆ ಕೀಚಕನು ಆಕೆಯಲ್ಲಿ ಸರಸವಾಡಲು ಹೋದುದರಿಂದ ಭೀಮನು ಅವನನ್ನು ಕೊಲ್ಲಲಿಲ್ಲವೆ ? ಆದ ಕಾರಣ ಹೆಚ್ಚಾದ ಸರಸವು ಕೇಡನ್ನುಂಟು ಮಾಡದೆ ಬಿಡದು.

ಸುರಚಾಪಾಯತಮಿಂದ್ರಜಾಲದ ಬಲಂ ಮೇಘಂಗಳಾಕಾರ ಬಾ
ಲರು ಕಟ್ಟಾಡುವಕಟ್ಟೆ ಸ್ವಪ್ನದ ಧನಂ ನೀರ್ಗುಳ್ಳೆ ಗಾಳೀಸೊಡರ್
ಪರಿವುತ್ತಿರ್ಪ ಮರೀಚಿಕಾ ಜಲ ಜಲವರ್ತಾಕ್ಷರಂ ತೋರುವೈ
ಸಿರಿ ಪುಲ್ಲಗ್ರದ ತುಂತುರೈ ಹರಹರಾ ಶ್ರೀಚೆನ್ನಸೋಮೇಶ್ವರಾ||೯೦||

ಭಾವಾರ್ಥ :- ಕಾಮನಬಿಲ್ಲು, ಇಂದ್ರಜಾಲದಿಂದ ತೋರಿದ ಸೈನ್ಯ, ಮೋಡಗಳು ಹೊಂದುವ ಬಗೆಬಗೆಯ ಆಕಾರ, ಆಟಕ್ಕಾಗಿ ಹುಡುಗರು ಕಟ್ಟುವ ಕಟ್ಟೆ, ಕನಸಿನಲ್ಲಿ ಕಾಣುವ ಹಣ, ನೀರಮೇಲಣ ಗುಳ್ಳೆ, ಗಾಳಿಯಲ್ಲಿಟ್ಟ ದೀಪ, ಹರಿಯುವಂತೆ ಕಾಣುವ ಬಿಸಿಲ್ಗುದುರೆ, ನೀರಿನ ಮೇಲಿನ ಅಕ್ಷರ, ಹುಲ್ಲಿನ ಕೊನೆಯಲ್ಲಿರುವ ನೀರಿನ ತುಂತುರು ಇವುಗಳಂತೆ ಐಶ್ವರ್ಯವು ಕ್ಷಣಿಕವಾದದ್ದು.

ಮಳೆಯಲಿಕ್ಕಿದ ಜೇನು ಶೂದ್ರ ಕಲಿತಿರ್ಪಾ ವಿದ್ಯೆಯುಚ್ಛಿಷ್ಟಮಾ
ಮಾಗಲು ಮೃಷ್ಟಾನ್ನವು ಸರ್ಪ ಕಾಯ್ವ ಧನಮುಂ ಲುಬ್ಧಾರ್ಚಿತೈಶ್ವರ್ಯಮುಂ
ಹೊಲೆಪಾಡಿಂದಲೆ ಕೂಡಲಿಕ್ಕಿ ಪೆರರ್ಗಂ ತಾನಾಗದೆ ಪೋಗುವಲ್
ಗಳಿಸೇನುಣ್ಣದೆ ಪೋಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೯೧||

ಭಾವಾರ್ಥ :- ಮಳೆಯಲ್ಲಿಟ್ಟ ಜೇನೂ, ಶೂದ್ರನು ಕಲಿತ ವಿದ್ಯೆಯೂ, ಎಂಜಲಾದ ಮೃಷ್ಟಾನ್ನವೂ, ಸರ್ಪವು ಕಾದಿರುವ ಹಣವೂ, ಜಿಪುಣನು ಸಂಪಾದಿಸಿದಐಶ್ವರ್ಯವೂ, ಎಷ್ಟು ಕಷ್ಟಪಟ್ಟು ಕೂಡಿಸಿದ್ದರೂ ಇತರರಿಗೆ ಉಪಯೋಗವಿಲ್ಲದೆ ಹೋಗುವುದು. ಆದಕಾರಣ ಅನುಭವಿಸದೆ ಹೋಗುವ ದ್ರವ್ಯವನ್ನು ಗಳಿಸಿದುದರಿಂದ ಏನು ಪ್ರಯೋಜನ?

ಮಹಿಯೊಳ್ ಭೂಸುರವೇಷದಿಂ ಕಲಿಯಲ್ ಕರ್ಣಂ ಧನುರ್ವೇದಮಾ
ರಹಿಗೆಟ್ಟಂ ಬಲು ನೊಂದನಿಲ್ವಲ ಮಹಾವಾತಾಪಿಯೊಳ್ ಶುಕ್ರನುಂ
ಅಹಿರಾತ್ಮಜೆ ಮಂತ್ರತಂತ್ರವರಿದಾಣ್ಮಂ ಪೋಗೆ ತಾ ತಂದಳೇ
ಬಹು ವಿದ್ವಾಂಸನು ಭ್ರಾಂತನೈ ಹರಹರಾ ಶ್ರೀಚೆನ್ನಸೋಮೇಶ್ವರಾ||೯೨||

ಭಾವಾರ್ಥ :- ಕರ್ಣನು ಬ್ರಾಹ್ಮಣ ವೇಷವನ್ನು ಹಾಕಿಕೊಂಡು ಪರಶುರಾಮನಲ್ಲಿ ಧನುರ್ವಿದ್ಯೆಯನ್ನು ಕಲಿತರೂ ಕೇಡನ್ನು ಹೊಂದಿದನು. ಶುಕ್ರನು ತನ್ನ ಶಿಷ್ಯರಾದ ಇಲ್ವಲ, ವಾತಾಪಿಯೆಂಬ ರಾಕ್ಷಸರಿಗೆ ಮಂತ್ರೋಪದೇಶ ಮಾಡಿ ವ್ಯಥೆಪಟ್ಟನು. ಕರ್ಕೋಟಕನ ಮಗಳಾದ ಜರತ್ಕಾರುವು ಮಂತ್ರ ತಂತ್ರಗಳನ್ನುಕಲಿತಿದ್ದರೂ ತನ್ನನ್ನು ಬಿಟ್ಟುಹೋದ ಗಂಡನನ್ನು ಹಿಂದಕ್ಕೆ ಕರೆತರಲಾರದೆ ಹೋದಳು. ಆದಕಾರಣ ದೊಡ್ಡ ವಿದ್ವಾಂಸನೂ ದಿಕ್ಕು ತೋರದಂತಾಗುವನು.

ಸುಚರಿತ್ರರ್ ಸಲೆ ಕೀರ್ತಿಗೋಸುಗ ಮಹಾ ಕಷ್ಟಂಗಳಂ ತಾಳಿ ಸೂ
ರಿಚಯಕ್ಕಾದರದಿಂದ ಮಾನಗಳಿತ್ತಾಚಂದ್ರ ತಾರಾರ್ಕವಾ
ದಚಲ ಖ್ಯಾತಿಯ ತಾಳ್ದರೀಗಲಿಳೆಯೊಳ್ ತಾವೀಯರೈ ಪೋಗಲಾ
ವಚನಕ್ಕೇನು ದರಿದರವೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೯೩||

ಭಾವಾರ್ಥ :- ಪೂರ್ವಕಾಲದಲ್ಲಿ ಸಚ್ಚರಿತ್ರರು ಕೀರ್ತಿಯನ್ನು ಪಡೆಯುವುದಕ್ಕಾಗಿ ಅನೇಕ ಕಷ್ಟಗಳನ್ನನುಭವಿಸಿ ಪಂಡಿತರಿಗೆ ಆದರದಿಂದ ಬಹುಮಾನಗಳನ್ನು ಕೊಟ್ಟು ಸೂರ್ಯ, ಚಂದ್ರ, ನಕ್ಷತ್ರಗಳಿರುವವರೆಗೂ ನಿಲ್ಲತಕ್ಕ ಶಾಶ್ವತವಾದ ಕೀರ್ತಿಯನ್ನು ಪಡೆದರು. ಈಗಲಾದರೋ ಹಾಗೆ ಕೊಡುವವರು ಯಾರೂ ಇಲ್ಲ. ಅದು ಹೋಗಲಿ, ಒಳ್ಳೆಯ ಬಾಯಿ ಮಾತನ್ನು ಕೂಡ ಆಡತಕ್ಕವರಿಲ್ಲ.

ಪಶುಗಳ್ ಕ್ರೂರ ಮೃಗಂಗಳಂಡಜಗುಳಂ ಸರ್ಪಂಗಳುಂ ಕಣ್ಗೆ ಕಾ
ಣಿಸದತ್ಯುಗ್ರ ಗ್ರಹಂಗಳುಂ ಪಟು ಭಟರ್ ವಿದ್ವಜ್ಜನಂ ಮಂತ್ರಿಗಳ್
ಋಷಿಗಳ್ ಶಾಂತರು ಯೋಗಿಗಳ್ ಪ್ರಜೆಗಳುಂ ತಾವೆಲ್ಲರುಂ ತಮ್ಮಯಾ
ಶಿಶುವಂ ಲಾಲಿಸದಿರ್ಪರೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೯೪||

ಭಾವಾರ್ಥ :- ಪಶುಗಳೂ, ಕ್ರೂರಮೃಗಗಳೂ, ಪಕ್ಷಿಗಳೂ, ಹಾವುಗಳೂ, ಕಣ್ಣಿಗೆ ಕಾಣಿಸದ ಬಹುಕ್ರೂರವಾದ ಪಿಶಾಚಿಗಳೂ, ಬಲಿಷ್ಠರಾದ ಯೋಧರೂ, ವಿದ್ವಾಂಸರೂ,ಮಂತ್ರಿಗಳೂ, ಋಷಿಗಳೂ, ಶಾಂತರೂ, ಯೋಗಿಗಳೂ, ಪ್ರಜೆಗಳೂ, ತಂತಮ್ಮ ಮಕ್ಕಳನ್ನು ಪ್ರೀತಿಸದೆಯಿರುವರೆ?


ಕುರುಡಂ ಕನ್ನಡಿಯಂ ಕವೀಂದ್ರರ ದುರ್ಮಾರ್ಗಿಗಳ್ ತ್ಯಾಗಿಯಂ
ಬರಡಂ ಬಾಲರ ಮುದ್ದ ಬಂಜೆ ಕಡುಚೋರಂ ಚಂದ್ರನಂ ಕಾವ್ಯದ
ಚ್ಚರಿಯಂ ಗಾಂಪರು ಪಾಪಿಗಳ್ ಸುಜನರಂ ಮಾಣಿಕ್ಯಮಂ ಮರ್ಕಟಂ
ಜರೆಯಲ್ ಸಿಂಗವ ಕುನ್ನಿಯೇಂ ಹರಹರಾ ಶ್ರೀಚೆನ್ನಸೋಮೇಶ್ವರಾ||೯೫||

ಭಾವಾರ್ಥ :- ಕುರುಡನು ಕನ್ನಡಿಯನ್ನೂ, ದುರ್ಮಾರ್ಗಿಯು ಕವಿಗಳನ್ನೂ, ಜಿಪುಣನು ದಾನಿಯನ್ನೂ, ಬಂಜೆಯು ಮಕ್ಕಳ ಮುದ್ದನ್ನೂ, ಕಳ್ಳನು ಚಂದ್ರನನ್ನೂ, ಮೂಢನು ಕಾವ್ಯದ ರಸವನ್ನೂ, ಪಾಪಿಷ್ಠನು ಸಜ್ಜನರನ್ನೂ, ಕೋತಿಯು ರತ್ನವನ್ನೂ, ನಾಯಿಯು ಸಿಂಹವನ್ನೂ ತಿರಸ್ಕರಿಸಿದರೆ ಆ ಪದಾರ್ಥಗಳಿಗೆ ಕೊರತೆಯೇನು?

ಕೊಲುತಿರ್ಪಯ್ಯಗಳೋದು ಬೇನೆಯಳಿವಾ ತೀಕ್ಷ್ಣೌಷಧಿ ಪಾಡುಬಿ
ದ್ದುಳುವಾರಂಬದ ಧಾನ್ಯ ಶತೃಜಯ ಪುತ್ರೋತ್ಪತ್ತಿ ಕೈಗಿಕ್ಕುವಾ
ಬಳೆ ರಾಜಾಶ್ರಯಮಿಕ್ಕುವಾಪದ ಧನಂ ಬೇಹಾರಮಿಂತೆಲ್ಲಮುಂ
ಪಲಕಷ್ಟಂ ಕಡೆಗೊಳ್ಳಿತೈ ಹರಹರಾ ಶ್ರೀಚೆನ್ನಸೋಮೇಶ್ವರಾ||೯೬||

ಭಾವಾರ್ಥ :- ಹೊಡೆದು ಬಡಿದು ಉಪಾದ್ಯಾಯರು ಹೇಳಿಕೊಡುವ ಓದು, ರೋಗವನ್ನು ನಿರ್ಮೂಲನ ಮಾಡುವ ತೀಕ್ಷ್ಣವಾದ ಔಷಧ, ಕಷ್ಟಪಟ್ಟು ಉತ್ತು ಬಿತ್ತಿಬೆಳೆಯುವ ಧಾನ್ಯ, ಶತ್ರುಗಳಮೇಲೆ ಯುದ್ಧಮಾಡಿ ಗೆಲ್ಲುವಿಕೆ, ಮಕ್ಕಳನ್ನು ಹೆರುವುದು, ಕೈಗೆ ಬಳೆಯನ್ನು ತೊಟ್ಟುಕೊಳ್ಳುವುದು, ದೊರೆಯ ಆಶ್ರಯ ಸಂಪಾದಿಸುವುದು, ಕಷ್ಟಕಾಲಕ್ಕೆಂದು ಹಣ ಕೂಡಿಡುವುದು, ವ್ಯಾಪಾರ ಇವೆಲ್ಲವೂ ಮೊದಲು ಬಹಳ ಕಷ್ಟವಾಗಿ ಕಡೆಗೆ ಸುಖವನ್ನು ಕೊಡುವುವು.

ಪೊಡೆಯೊಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ಧನೇನಪ್ಪನೇ
ಕಡುಪಾಪಂ ಬಲು ಮೀಯಲಾತ ಶುಚಿಯೇ ಕಾಕಾಳಿಯೇಂ ಮೀಯದೆ
ಗುಡಪಾನಂಗಳೊಳದ್ದೆ ಬೇವಿನ ಫಲಂ ಸ್ವಾದಪ್ಪುದೇ ಲೋಕದೊಳ್
ಮಡಿಯೇ ನಿರ್ಮಲ ಚಿತ್ತವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೯೭||

ಭಾವಾರ್ಥ :- ಹೊಟ್ಟೆಯಲ್ಲಿ ಕಲ್ಮಷವನ್ನು ತುಂಬಿಕೊಂಡು ಮೇಲೆ ತೊಳೆದ ಮಾತ್ರಕ್ಕೆ ಪರಿಶುದ್ಧನಾಗುವನೆ? ಬಹಳ ಪಾಪಗಳನ್ನು ಮಾಡಿದವನುಅನೇಕ ತೀರ್ಥಸ್ನಾನಗಳನ್ನು ಮಾಡಿದರೆ ಶುದ್ಧನಾಗುವನೆ? ಕಾಗೆಗಳ ಗುಂಪು ಸ್ನಾನ ಮಾಡುವುದಿಲ್ಲವೆ? ಬೇವಿನ ಹಣ್ಣನ್ನು ಬೆಲ್ಲದ ಪಾನಕದಲ್ಲಿ ಅದ್ದಿಟ್ಟರೆ ಅದರ ಕಹಿಯು ಹೋಗಿ ಸಿಹಿಯಾಗುವುದೆ? ಆದುದರಿಂದ ಮನಸ್ಸನ್ನು ಶುದ್ಧವಾಗಿಟ್ಟುಕೊಂಡಿರುವುದೇ ಮಡಿ.

ರಚನಂಗೆಯ್ಯದೆ ಧರ್ಮ ಕೀರ್ತಿಯೆರಡಂ ಸದ್ಧರ್ಮಮಂಪಾಪದಾ
ನಿಚಯಕ್ಕಿಕ್ಕದೆ ತತ್ವ ಕೇಳಿ ಜಗವೆಲ್ಲಂ ಬೊಮ್ಮಮೆಂದೆನ್ನದೇ
ಉಚಿತಾಲೋಚನೆಯಿಂದ ತನ್ನ ನಿಜವಂ ತಾನೇ ಕಾಣದೆ ವಾದಿಪಾ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೯೮||

ಭಾವಾರ್ಥ :- ಧರ್ಮವನ್ನೂ, ಕೀರ್ತಿಯನ್ನೂ ಸಂಪಾದಿಸದೆ, ತಾನು ಮಾಡಿದ ಪುಣ್ಯವನ್ನು ಪಾಪಗಳಿಗಾಗವಿನಿಯೋಗಿಸದೆ,ತತ್ವಗಳನ್ನು ಕೇಳಿ ಲೋಕವೆಲ್ಲವೂ ಬ್ರಹ್ಮವೇ ಎಂದು ತಿಳಿದುಕೊಳ್ಳದೆ, ಚೆನ್ನಾಗಿ ತನ್ನಲ್ಲಿ ತಾನೇ ಆಲೋಚಿಸಿ ತನ್ನ ಸ್ವರೂಪವನ್ನು ತಿಳಿದುಕೊಳ್ಳದೆ ಸುಮ್ಮನೆ ಮಾತಿನಿಂದ ಮಾತ್ರ ತಾನು ಬ್ರಹ್ಮನೆಂದು ಹೇಳೆಕಕೊಳ್ಳುವ ವಚನಬ್ರಹ್ಮ ದಿಂದ ಮೋಕ್ಷವು ಎಂದಿಗೂ ದೊರೆಯುವುದಿಲ್ಲ.

ಸಚರ ಸ್ಥಾವರಕೆಲ್ಲ ಸರ್ವ ಸುಖ ದುಃಖಂಗಳ್ ಸಮಾನಂಗಳೆಂ
ದಚಲಾನಂದದಿ ತನ್ನನನ್ಯರೆಣಿಸಲ್ ಸುಜ್ಞಾನಿಗಳ್ ನೀರಿನೊಳ್
ಶುಚಿಯೊಳ್ ಪಾದವನಿಟ್ಟು ತೋರ್ಪ ತೆರದೊಳ್ ತಾನಾಗದೇ ವಾದಿಪಾ
ವಚನ ಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೯೯||

ಭಾವಾರ್ಥ :- ಚರಾಚರಾ ವಸ್ತುಗಳೆಲ್ಲಕ್ಕೂ ಸುಖ ದುಃಖಗಳು ಸಮಾನವಾಗಿರುವುವು ಎಂದು ಜ್ಞಾನಿಗಳು ತಮ್ಮನ್ನೂ, ಇತರರನ್ನೂ ಸಮಾನವಾಗಿ ತಿಳಿದು ಪರಿಪೂರ್ಣಾನಂದದಿಂದ ನೀರಿನಲ್ಲಾದರೂ, ಬೆಂಕಿಯಲ್ಲಾದರೂಕಾಲನ್ನಿಟ್ಟು ಅದರಿಂದುಂಟಾಗುವ ಸುಖವೂ, ದುಃಖವೂ ಸಮಾನವೆಂದು ತೋರ್ಪಡಿಸುವಂತೆ ತಾನು ಇರದೆ ಮಾತಿನಲ್ಲಿ ಮಾತ್ರ ತಾನು ಬ್ರಹ್ಮನೆಂದುವಾದಿಸುವವನಿಗೆ ಮೋಕ್ಷವೆಲ್ಲಿಯದು?


ಶುಚಿ ತಾನಾಗದೆ ಸರ್ವಶಾಸ್ತ್ರ ನಿಪುಣಂ ತಾನಾಗದೆ ಕಾಮಮಂ
ಪಚನಂಗೈಯ್ಯದೆ ಕೋಪಮಂ ಬಿಡದೆ ಲೋಭಚ್ಛೇದ ಮಾಡದೇ
ರುಚಿ ಮೋಹಕ್ಕೊಳಗಾಗದಂತು ಮದ ಮಾತ್ಸರ್ಯಂಗಳಂ ನೀಗದೇ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀಚೆನ್ನಸೋಮೇಶ್ವರಾ||೧೦೦||

ಭಾವಾರ್ಥ :- ಪರಿಶುದ್ಧನೂ, ಸರ್ವ ಶಾಸ್ತ್ರಜ್ಞನೂಆಗದೆಯೂ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಗೆಲ್ಲದೆಯೂ ಬರಿಯ ವಚನ ಬ್ರಹ್ಮದಿಂದ ಮುಕ್ತಿ ದೊರೆಯಲಾರದು.

ಪ್ರಚುರಂ ಪತ್ತೊಳಗಾಗೆ ರಂಧ್ರವನೆ ಕೈಗೊಂಡೆಂಟನೀಗೇಳ್ ಬಿ
ಟ್ಟುಚಿತಂ ತಾನೆನಿಪಾರ ಕಟ್ಟಯಿದಕ್ಕೀಡಾಗದೇ ನಾಲ್ವರಂ
ರಚನಂಗೆಯ್ಯದೆ ಮೂರನಂಬದೆರಡಂ ಬಿಟ್ಟೊಂದರೊಳ್ ನಿಲ್ಲದಾ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀಚೆನ್ನಸೋಮೇಶ್ವರಾ||೧೦೧||

ಭಾವಾರ್ಥ :- ದಶೇಂದ್ರಿಯಗಳನ್ನೂ, ನವರಂಧ್ರಗಳನ್ನೂ, ಸಂಪೂರ್ಣ ಸ್ವಾಧೀನ ಮಾಡಿಕೊಂಡು, ಅಷ್ಠಮದಗಳನ್ನೂ ಸಪ್ತವ್ಯಸನಗಳನ್ನೂಬಿಟ್ಟು ಅರಿ ಷಡ್ವರ್ಗಗಳನ್ನು ಜಯಿಸಿ, ಕಾಮನ ಪಂಚಬಾಣಗಳಿಗೆ ಗುರಿಯಾಗದೆ, ನಾಲ್ಕು ಪುರುಷಾರ್ಥಗಳನ್ನು ಅನುಭವಿಸದೆ, ಈಷಣತ್ರಯವನ್ನುನಂಬದೆ, ಸುಖದುಃಖಗಳೆರಡನ್ನೂ ಬಿಟ್ಟು, ಬ್ರಹ್ಮವೊಂದರಲ್ಲಿ ನಿಂತರಲ್ಲದೆ ಬರಿಯ ವಚನಬ್ರಹ್ಮದಲ್ಲಿ ಮುಕ್ತಿಯಾಗುವುದಿಲ್ಲ.

ಟಿಪ್ಪಣಿ :- ಪ್ರಚುರಂ= ಚೆನ್ನಾಗಿ, ಪತ್ತು = ಐದು ಕರ್ಮೇಂದ್ರಿಯಗಳೂ, ಐದು ಜ್ಞಾನೇಂದ್ರಿಯಗಳೂ, ರಂಧ್ರ= ನವರಂಧ್ರಗಳು, ಕೈಗೊಂಡು= ಅಧೀನ ಮಾಡಿಕೊಂಡು, ಎಂಟ = ಅಷ್ಟಮದಗಳನ್ನು, ನೀಗಿ = ಬಿಟ್ಟು, ಏಳ = ಸಪ್ತ ವ್ಯಸನಗಳನ್ನು, ಆರ = ಅರಿಷಡ್ವರ್ಗಗಳನ್ನು ,ಆಯಿದಕೆ= ಕಾಮನ ಪಂಚಬಾಣಗಳಿಗೆ, ನಾಲ್ವರಂ = ಧರ್ಮ,ಅರ್ಥ,ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು, ಮೂರ = ಈಷಣತ್ರಯವನ್ನು, ಎರಡಂ = ಸುಖದುಃಖಗಳೆರಡನ್ನು, ಒಂದರೊಳ್ = ಬ್ರಹ್ಮದಲ್ಲಿ.

ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ
ಯತಮಂ ನಿಶ್ಚಲಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ
ಅತಿ ಮಾಧುರ್ಯ ಸುಭಾಷಿತಂಗಳ ಮಹಾ ಸತ್ಕೀರ್ತಿಯಂ ಬಾಳ್ಕೆಯಂ
ಶತಕಾರ್ಥಂ ಕೊಡದಿರ್ಪುದೆ ಹರಹರಾ ಶ್ರೀಚನ್ನಸೋಮೇಶ್ವರಾ||೧೦೨||

ಭಾವಾರ್ಥ :- ಈ ಶತಕದ ಅರ್ಥವನ್ನು ಚೆನ್ನಾಗಿ ವಿಚಾರಮಾಡಿನೋಡಿದರೆ ವಿವೇಕವೂ, ಬುದ್ಧಿಯೂ, ಜಾಣ್ಮೆಯೂ, ಓದುವ ಒಳ್ಳೆಯ ಶೈಲಿಯೂ,ಗಾಂಭೀರ್ಯವೂ,ನೀತಿಯೂ, ದೃಢಮನಸ್ಸೂ, ರಾಜಾಸ್ಥಾನಕ್ಕೆಯೋಗ್ಯವಾದ ಪಾಂಡಿತ್ಯವೂ, ಬಹಳ ಇಂಪಾದ ವಾಕ್ಪಟುತ್ವವೂ,ಒಳ್ಳೆಯ ಕೀರ್ತಿಯೂ, ಜೀವನವೂ ದೊರೆಯದೆ ಹೋಗದು. ಅಂದರೆ ಖಂಡಿತ ಮೇಲಿನವುಗಳೆಲ್ಲ ದೊರೆಯುವುವು.

ಜ್ಞಾನ ಪ್ರಶಂಸೆ || ಸ್ರಗ್ಧರಾ ವೃತ್ತ||

ಸ್ವಾಮೀ ನನ್ನಿಂದ ನೀನಿಂತೊರೆಯಿಸಿದೆ ಕೃಪಾದೃಷ್ಟಿಯಂ ಬೀರಿ ಲೋಕ
ಪ್ರೇಮಂದಾಳ್ದಿಂತು ನೀತಿ ಪ್ರಕಟನೆ ಪಡೆ ನಾಲ್ಸಾಸಿರಂ ನಾಲ್ಕು ನೂರುಂ
ಈ ಮಾಯಾ ಪೂರ್ಣ ಕಲ್ಯಬ್ದದೆ ಗತಿಸೆ ವಿಕಾರಾಬ್ದದಲ್ಲೀಶ್ವರಾ ನಿ
ನ್ನಾಮಹಾತ್ಮ್ಯಂಘ್ರಿಗಿತ್ತೆಂಪುಲಿಗಿರಿನಗರೀ ಶಾಸನಾಂಕಾ ಮಹೇಶಾ ||೧೦೩||

ಭಾವಾರ್ಥ :- ಪುಲಿಗಿರಿ ನಗರೀಶನಾದ ಸೋಮೇಶ್ವರನೆ ! ನನ್ನಲ್ಲಿ ಕೃಪೆಮಾಡಿ ಲೋಕೋಪಕಾರಾರ್ಥವಾಗಿನನ್ನಿಂದ ಹೀಗೆ ಈ ನೀತಿ ವಚನಗಳನ್ನು ಹೇಳಿಸಿದೆ. ಕಲಿಯುಗದಲ್ಲಿ ನಾಲ್ಕುಸಾವಿರದ ನಾನ್ನೂರು ವರ್ಷಗಳು ಕಳೆದಮೇಲೆ ಬಂದ ವಿಕಾರಿನಾಮ ಸಂವತ್ಸರದಲ್ಲಿ ಈ ಶತಕವನ್ನು ಮಹತ್ತಾದ ನಿನ್ನ ಪಾದಗಳಿಗೆ ಅರ್ಪಿಸಿದ್ದೇನೆ.

ಟಿಪ್ಪಣಿ :- ಒರೆಯಿಸಿದೆ = ಹೇಳಿಸಿದೆ,, ಬೀರಿ = ಹರಡಿ, ಈ ಮಾಯಾಪೂರ್ಣ ಕಲ್ಯಬ್ದದೆ = ಮೋಸದಿಂದ ತುಂಬಿದ ಈ ಕಲಿಯುಗದಲ್ಲಿ, ಗತಿಸೆ == ಕಳೆದು ಹೋಗಲು, ಅಬ್ದ = ಸಂವತ್ಸರ.


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀಚೆನ್ನಸೋಮೇಶ್ವರಾ||೩||

ಭಾವಾರ್ಥ :- ಕೈಯಲ್ಲಿ ಕನ್ನಡಿಯಿದ್ದರೂ, ನೀರಿನಲ್ಲಿ ಮುಖವನ್ನು ನೋಡಿಕೊಳ್ಳಬಹುದೇ? ಕಾಮಧೇನುವಿದ್ದರೂ ಹಾಲಿಗಾಗಿ ಗೊಡ್ಡು ಹಸುವನ್ನು ಸಾಕುತ್ತಾರೆಯೇ? ಗುಣವಂತರು ಹಾಲನ್ನು ಊಟಮಾಡಿದಮೇಲೆ ಬೇರೆ ಪದಾರ್ಥವನ್ನು ತಿನ್ನುವರೇ? ಗಿಳಿಯ ಮಾತಿನಲ್ಲಿರುವ ಇಂಪಿಗಿಂತಲೂಕಾಗೆಯ ಕೂಗಿನಲ್ಲಿ ಹೆಚ್ಚಾದ ಇಂಪಿರುವುದೇ? ಅಪ್ಸರ ಸ್ತ್ರೀಯಾದ ರಂಭೆಯ ನರ್ತನಕ್ಕಿಂತಲೂ ಡೊಂಬರ ಕುಣಿತವು ಚೆನ್ನಾಗಿರುವುದೇ? ಸ್ನೇಹಿತರಿಗಿಂತಲೂಹೆಚ್ಚಿನ ವಸ್ತು ಮತ್ತೊಂದು ಉಂಟೆ.

ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ
ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀ ಜಾತಿಯೊಳ್ ವೆಗ್ಗಳಂ
ರವಿ ಮುಖ್ಯಂ ಗ್ರಹವಗ್ರದೊಳ್ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್
ಶಿವನೇ ದೇವರೊಳುತ್ತಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ||೪||

ಭಾವಾರ್ಥ :- ಮನುಷ್ಯರಲ್ಲಿ ಕವಿಯೂ, ಲೋಹಗಳಲ್ಲಿ ಚಿನ್ನವೂ, ಪವಿತ್ರವಾದ ಜಲಗಳಲ್ಲಿ ಗಂಗೆಯೂ,ಹೆಂಗಸರಲ್ಲಿ ಪತಿವ್ರತೆಯೂ, ಗ್ರಹಗಳಲ್ಲಿ ಸೂರ್ಯನೂ, ರಸಗಳಲ್ಲಿ ಶೃಂಗಾರರಸವೂ, ದೇವತೆಗಳಲ್ಲಿ ಶಿವನೂ ಶ್ರೇಷ್ಠ.

ಹರನಿಂದುರ್ವಿಗೆ ದೈವವೇ ಕಿರಣಕಿಂದುಂ ಬಿಟ್ಟು ಸೊಂಪುಂಟೇ ಪೆ
ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇರಾಪ್ತರಿನ್ನಿರ್ಪರೇ
ಸರಿಯೇ ವಿದ್ಯಕೆ ಬಂಧು ಮಾರನಿದಿರೊಳ್ ಬಿಲ್ಲಾಳೆ ಮೂಲೋಕದೊಳ್
ಗುರುವಿಂದುನ್ನತ ಸೇವ್ಯನೇ ಹರಹರಾ ಶ್ರೀಚೆನ್ನಸೋಮೇಶ್ವರಾ||೬||

ಭಾವಾರ್ಥ :- ಲೋಕದಲ್ಲಿ ಶಿವನಿಗಿಂತಲೂ ದೊಡ್ಡ ದೇವರೂ, ಚಂದ್ರಕಿರಣಕ್ಕಿಂತ ಹೆಚ್ಚಾಗಿ ಆನಂದವನ್ನು ಕೊಡುವ ಕಿರಣವೂ, ತಂದೆ ತಾಯಿಗಳನ್ನು ಮೀರಿದ ಹಿತಚಿಂತಕರೂ, ಹೆಂಡತಿಗಿಂತ ಹೆಚ್ಚಿನವರಾದ ಆಪ್ತರೂ, ವಿದ್ಯೆಗಿಂತ ಹೆಚ್ಚಾದ ನಂಟರೂ, ಮನ್ಮಥನನ್ನು ಮೀರಿದ ಬಿಲ್ಲಾಳೂ, ಸೇವೆಮಾಡಿಸಿಕೊಳ್ಳುವುದಕ್ಕೆ ಗುರುವಿಗಿಂತ ಉತ್ತಮನಾದವನೂ ಇಲ್ಲ.

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ
ನಿಜ ಮಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ||೯||

ಭಾವಾರ್ಥ :- ಪ್ರಜೆಗಳನ್ನು ಚೆನ್ನಾಗಿ ರಕ್ಷಿಸಬಲ್ಲವನೇದೊರೆ, ಲಂಚಕ್ಕಾಸೆಪಡದವನೇ ಯೋಗ್ಯನಾದ ಮಂತ್ರಿ, ತಂದೆ ತಾಯಿಗಳನ್ನು ಸಲಹಬಲ್ಲವನೇ ಧರ್ಮಿಷ್ಟನು, ದೇವರಲ್ಲಿ ಭಕ್ತಿಯುಳ್ಳವನೇ ಭಕ್ತನು, ನಿರ್ಭಯನಾದವನೇ ಸೈನಿಕನು, ಒಳ್ಳೆಯ ನಡತೆಯುಳ್ಳವನೇ ಬ್ರಾಹ್ಮಣನು.

ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳುಗಳ್ ನಕ್ಷತ್ರ ವೆಷ್ಟಾದೊಡಂ
ದೊರೆಯೇ ಚಂದ್ರಗೆ ಜೀವರತ್ನಕೆಣೆಯೇ ಮಿಕ್ಕಾದ ಪಾಷಾಣಗಳ್
ಉರಗೇಂದ್ರಂಗೆ ಸಮಾನಮೊಳ್ಳೆಯೇ ಸುಪರ್ಣಂಗೀಡೆ ಕಾಕಾಳಿ ಸ
ಕ್ಕರೆಗುಪ್ಪಂ ಸರಿಮಾಳ್ಪಲರೇ ಹರಹರಾ ಶ್ರೀಚೆನ್ನಸೋಮೇಶ್ವರಾ||೧೦||

ಭಾವಾರ್ಥ :- ಹೊನ್ನೆ ಹುಳುಗಳು ಕೋಟಿಯಿದ್ದರೂ ಒಬ್ಬ ಸೂರ್ಯನಿಗೆ ಸಮವಾಗುವುವೇ! ನಕ್ಷತ್ರಗಳೆಷ್ಟಾದರೂ ಚಂದ್ರನಿಗೆ ಸಮವೇ! ಸಾಮಾನ್ಯವಾದ ಕಲ್ಲುಗಳು ಜೀವರತ್ನಕ್ಕೆ ಎಣೆಯೇ? ನೀರು ಹಾವು ಆದಿಶೇಷನಿಗೆ ಸಾಟಿಯೇ? ಕಾಗೆಯ ಗುಂಪು ಗರುಡನಿಗೆ ಸಮವೇ? ಉಪ್ಪನ್ನು ಸಕ್ಕರೆಗೆ ಹೋಲಿಸುವರೇ?

ಮರಗಳ್ ಪುಟ್ಟುವ ತಾಣಮೊಂದೆ ಖಗಕಂ ರಾಜ್ಯಂಗಳೇಂ ಪಾಳೆ ಭೂ
ವರರೊಳ್ ತ್ಯಾಗಿಗಳಿಲ್ಲವೇ ಕವಿಗೆ ವಿದ್ಯಾಮಾತೃವೇಂ ಬಂಜೆಯೇ
ಧ,ರೆಯೆಲ್ಲಂ ಪಗೆಯಪ್ಪುದೇ ಕರುಣಿಗಳ್ ತಾವಿಲ್ಲವೇ ಲೋಕದೊಳ್
ನರರಂ ಪುಟ್ಟಿಸಿ ಕೊಲ್ವನೇ ಹರಹರಾ ಶ್ರೀಚೆನ್ನಸೋಮೇಶ್ವರಾ||೩೮||

ಭಾವಾರ್ಥ:- ಪಕ್ಷಿಗಳಿಗೆ ಅನುಕೂಲವಾದ ಮರಗಳು ಹುಟ್ಟುವುದು ಒಂದೇ ಕಡೆಯಲ್ಲಿಯೇ? ಎಲ್ಲದೇಶಗಳೂ ಹಾಳಾಗಿವೆಯೇ? ದೊರೆಗಳಲ್ಲಿ ಕವಿಗಳಿಗೆ ಆಶ್ರಯ ಕೊಟ್ಟು ಆದರಿಸುವ ಉದಾರಗುಣವುಳ್ಳವರು ಯಾರೂ ಇಲ್ಲವೆ? ವಿದ್ಯೆಯೆಂಬ ತಾಯಿಯು ಬಂಜೆಯೆ? ಲೋಕದಲ್ಲಿ ಎಲ್ಲರೂ ಶತ್ರುಗಳಾಗುವರೆ? ದಯೆಯುಳ್ಳವರು ಯಾರೂ ಇರುವುದೇ ಇಲ್ಲವೆ? ದೇವರು ಮನುಷ್ಯರನ್ನು ಸೃಷ್ಟಿಮಾಡಿದಮೇಲೆ ಅವರನ್ನು ರಕ್ಷಿಸದೆ ಕೊಲ್ಲುವನೆ?

ಕೃತ ಶಾಪಾನ್ವಿತನಾ ಹಿಮಾಂಶುಗುರುವಿಂ ಗೋತ್ರಾರಿಯನ್ಯಾಂಗನಾ
ರತಿಯಿಂ ಕೀಚಕನಂ ಬಕಾರಿ ಮುರಿದಂ ಸುಗ್ರೀವನಿಂ ವಾಲಿ ತಾಂ
ಹತನಾದಂ ದಶಕಂಠನಾ ಹರಿಶರಕ್ಕೀಡಾದನೇವೇಳ್ವೆನಾ
ನತಿ ಕಾಮರ್ಗತಿ ಹಾನಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ||೩೯||

ಭಾವಾರ್ಥ :- ಪರಸ್ತ್ರೀಯನ್ನು ಬಯಸಿದುದರಿಂದ ಚಂದ್ರನು ಬೃಹಸ್ಪತಿಯ ಶಾಪಕ್ಕೂ, ಇಂದ್ರನು ಗೌತಮನ ಶಾಪಕ್ಕೂಗುರಿಯಾದರು; ಕೀಚಕನು ಭೀಮನಿಂದಲೂ, ವಾಲಿಯು ಸುಗ್ರೀವನಿಂದಲೂ, ರಾವಣನು ರಾಮನಿಂದಲೂ ಮರಣ ಹೊಂದಿದರು. ಆದಕಾರಣ ಹೆಚ್ಚಾದ ಸ್ತ್ರೀವ್ಯಾಮೋಹವು ಕೇಡನ್ನುಂಟುಮಾಡುವುದು.

ಚಿಗುರೆಂದುಂ ಮೆಲೆ ಬೇವು ಸ್ವಾದುವಹುದೇ ಚೇಳ್ ಚಿಕ್ಕದೆಂದಳ್ಕರಿಂ
ತೆಗೆಯಲ್ ಕಚ್ಚದೆ ಪಾಲನೂಡಿ ಫಣಿಯಂ ಸಾಕಲ್ಕೆ ವಿಶ್ವಾಸಿಯೇ
ಖಗಮಂ ಸಾಕುವೆನೆಂದು  ಗೂಗೆಮರಿಯಂ ಸಂಪ್ರೀತಿಯಿಂದೋವರೇ
ಪಗೆಯಂ ಬಾಲಕನೆಂಬರೇ ಹರಹರಾ ಶ್ರೀಚೆನ್ನಸೋಮೇಶ್ವರಾ||೪೧||

ಭಾವಾರ್ಥ :- ಬೇವಿನೆಲೆಯನ್ನು ಚಿಗುರೆಂದು ತಿಂದರೆ ಸಿಹಿಯಾಗಿರುವುದೆ? ಚೇಳನ್ನು ಚಿಕ್ಕದೆಂದುಪ್ರೀತಿಯಿಂದ ಹಿಡಿದುಕೊಂಡರೆ ಅದು ಕುಟುಕದೆ ಬಿಡುವುದೆ? ಹಾವಿಗೆ ಹಾಲನ್ನು ಕುಡಿಸಿ ಪೋಷಿಸಿದರೆ ಅದು ನಮಗೆ ವಿಶ್ವಾಸವನ್ನುತೋರಿಸುವುದೆ? ಹಕ್ಕಿಯನ್ನು ಸಾಕುವ ಅಪೇಕ್ಷೆಯಿಂದ ಗೂಬೆಯ ಮರಿಯನ್ನು ಅಕ್ಕರೆಯಿಂದ ಸಾಕುವರೆ? ಶತ್ರುವನ್ನು ಹುಡುಗನೆಂದು ಅಲಕ್ಷ್ಯಮಾಡುವರೆ?

ಸುಳಿದಾ ಹೊಮ್ಮಿಗವೆಯ್ದೆ ಸೀತೆಯ ಖಳಂ ಕೊಂಡೊಯ್ದು ತಾಂಬಾಳ್ದನೇ
ಇಳಿದಂಬೋಧಿಯ ಬಾಳ್ದನೇ ತಮಸನಂದಾಮ್ನಾಯವಂ ಕದ್ದು ತಾಂ
ತಲೆಯಂ ಕಟ್ಟರೆ ಕಂಚವಾಳ ಮರದೊಳ್ ಶೂದ್ರೀಕ ವೀರಾಖ್ಯನಂ
ಕಳವೇಂ ಕೊಲ್ಲದೆ ಕಾಯ್ವುದೇ ಹರಹರಾ ಶ್ರೀಚೆನ್ನಸೋಮೇಶ್ವರಾ ||೪೨||

ಭಾವಾರ್ಥ:- ಚಿನ್ನದ ಜಿಂಕೆಯು ಸುಳಿದಾಡುತ್ತಿರುವಂತೆ ಮಾಡಿ ಅಲ್ಲಿದ್ದ ಸೀತೆಯನ್ನು ಕದ್ದುಕೊಂಡು ಹೋದ ರಾವಣನು ಬದುಕಿದನೆ? ವೇದಗಳನ್ನು ಕದ್ದುಕೊಂಡು ಹೋದ ರಾಕ್ಷಸನು ಸಮುದ್ರದಲ್ಲಿಹೋಗಿ ಅಡಗಿಕೊಂಡರೂ ಉಳಿದನೆ? ಶೂದ್ರೀಕನೆಂಬ ಶೂರನನ್ನುಕಳ್ಳತನ ಮಾಡಿದುದಕ್ಕಾಗಿ ಕಂಚವಾಳದ ಮರಕ್ಕೆ ನೇಣುಹಾಕದೆ ಬಿಟ್ಟರೆ? ಆದಕಾರಣ ಕಳ್ಳತನದಿಂದ ಕೇಡೇ ಹೊರತು ಕ್ಷೇಮವಾಗದು.

ಪಿಡಿಯಲ್ ಪೊಮ್ಮಿಗವೆಂದು ಪೋಗೆ ರಘುಜಂ ಭೂಪುತ್ರಿ ಸಂನ್ಯಾಸಿಯೆಂ
ದಡಿಯಿಟ್ಟಳ್ ದಶಕಂಠನುಯ್ದಿವಳನಂದಾಯುಷ್ಯಮಂ ನೀಗಿದಂ
ಕೊಡಬೇಡೆಂದೆನೆ ಶುಕ್ರ ರಾಜ್ಯವನಿತಂ ಪೋಗಾಡಿದಂ ರಾಕ್ಷಸಂ
ಕಡು ಮೋಸಂ ಕೆಡಿಕುಂ ಹರಹರಾ ಶ್ರೀಚೆನ್ನಸೋಮೇಶ್ವರಾ ||೪೩||

ಭಾವಾರ್ಥ :- ಮಾಯಾಮೃಗವನ್ನು ನಿಜವಾದ ಚಿನ್ನದ ಜಿಂಕೆಯೆಂದು ನಂಬಿ ರಾಮನು ರಾವಣನ ಮೋಸಕ್ಕೊಳಗಾಗಿ ಸೀತೆಯನ್ನಗಲಿ ಹೋಗಲು, ಸೀತಾದೇವಿಯು ರಾವಣನನ್ನು ನಿಜವಾದ ಸಂನ್ಯಾಸಿಯೆಂದು ತಿಳಿದು ಪರ್ಣಶಾಲೆಯಿಂದ ಈಚೆಗೆ ಬಂದು ಅವನ ಕೈಗೆ ಸಿಕ್ಕಿದಳು. ಅವನು ಆಕೆಯನ್ನು ಹೊತ್ತುಕೊಂಡು ಹೋದದ್ದೇ ಅವನ ಸಾವಿಗೆ ಕಾರಣವಾಯಿತು. ಬಲಿಚಕ್ರವರ್ತಿಯು ಯಜ್ಞಮಾಡುತ್ತಿದ್ದಾಗ ಅಲ್ಲಿಗೆ ಬ್ರಹ್ಮಚಾರಿಯಾಗಿ ಬಂದ ವಾಮನನಿಗೆ ದಾನಕೊಡಬೇಡವೆಂದು ಶುಕ್ರನು ಎಷ್ಟು ಹೇಳಿದರೂ ಕೇಳದೆ ಬಲಿಯು ವಾಮನನ ಮೋಸಕ್ಕೊಳಗಾಗಿ ರಾಜ್ಯವನ್ನೆಲ್ಲ ಕಳೆದುಕೊಂಡನು. ಆದಕಾರಣ ಹೆಚ್ಚಾದ ಮೋಸವು ನಿಜವಾಗಿ ಕೇಡನ್ನುಂಟುಮಾಡುವುದು.

ಪಿಡಿಯಲ್ ಸಿಂಗವ ಮತ್ಸರಂ ಬಿಡುವುದೇ ದುರ್ಗಂಧಮೇಲಾದಿಯೊಳ್
ತೊಡೆಯಲ್ ನಾರದೆ ನಾಯ ಬಾಲ ಸೆಡೆಯಂ ಕಟ್ಟಲ್ಕೆ ಚೆನ್ನಪ್ಪುದೇ
ಸುಡುಚೇಳಂ ತೆಗೆಯಲ್ಕೆ ಸುಮ್ಮನಿಹುದೇನೇನೆಂದೊಡೆಷ್ಟಾದೊಡಂ
ಬಿಡ ತನ್ನಂದವ ನೀಚ ತಾಂ ಹರಹರಾ ಶ್ರೀಚೆನ್ನಸೋಮೇಶ್ವರಾ||||೪೭||

ಭಾವಾರ್ಥ :- ಸಿಂಹವನ್ನು ಪ್ರೀತಿಯಿಂದ ಹಿಡಿದರೆ ಅದು ದ್ವೇಷವನುನ ಬಿಡುವುದೆ? ದುರ್ವಾಸನೆಯುಳ್ಳ ಪದಾರ್ಥಕ್ಕೆ ಏಲಕ್ಕಿ ಮೊದಲಾದ ಸುವಾಸನೆಯುಳ್ಳ ಪದಾರ್ಥಗಳನ್ನು ಮೇಲೆ ಬಳಿದರೆ ಅದರ ನಾತವು ಹೋಗುವುದೆ? ನಾಯಿಯ ಡೊಂಕು ಬಾಲವನ್ನು ಕೋಲಿನಿಂದ ಕಟ್ಟಿ ನೇರವಾಗಿ ಮಾಡಿದರೆ ಅದು ನೆಟ್ಟಗಾಗುವದೆ? ಬೆಂಕಿಗೆ ಬಿದ್ದು ಸುಡುವ ಚೇಳನ್ನು ಕೈಯಿಂದ ತೆಗೆದು ಬದುಕಿಸಿದರೆ ಅದು ಕುಟುಕದೆ ಸುಮ್ಮನಿರುವುದೆ? ಹಾಗೆಯೇ ನೀಚನಿಗೆ ಎಷ್ಟು ಹೇಳಿದರೂ,ಎಷ್ಟು ಮಾಡಿದರೂ ತನ್ನ ಕೆಟ್ಟ ಸ್ವಭಾವವನ್ನು ಬಿಡನು.

ಖಳ ವೇದಂಗಳನೊಯ್ದನುರ್ವಿತಳಮಂ ತಾಂ ಚಾಪೆವೊಲ್ ಸುತ್ತಿದಂ
ಛಲದಿಂ ಪೋರಿದರೆಲ್ಲರಂ ಗೆಲಿದು ಬಂದಾ ಪೆಂಣ ಕೊಂಡೋಡಿದಂ
ತಲೆಯೊಳ್ ಕಾದಿದರೂರ್ಗಳಂ ಪಡೆದರೆಲ್ಲರ್ ಗೆಲ್ದು ತಾವಾಳ್ದರೇಂ
ಬಲು ಗರ್ವಂ ಕೊಲದಿರ್ಪುದೇ ಹರಹರಾ ಶ್ರೀಚೆನ್ಸೋಮೇಶ್ವರಾ||೪೪||

ಭಾವಾರ್ಥ:- ವೇದಗಳನ್ನು ಕದ್ದುಕೊಂಡು ಹೋದ ಸೋಮಕಾಸುರನೂ, ಭೂಮಿಯನಾನು ಚಾಪೆಯಂತೆ ಸುತ್ತಿ ಪಾತಾಳಲೋಕಕ್ಕೆ ತೆಗೆದುಕೊಂಡುಹೋದ ಹಿರಣ್ಯಾಕ್ಷನೂ, ಎದುರುಬಿದ್ದರಾಜಪುತ್ರರೆಲ್ಲರನ್ನೂಯುದ್ಧದಲ್ಲಿ ಗೆದ್ದು ರಾಮನು ಪಡೆದ ಸೀತಾದೇವಿಯನ್ನು ಅಪಹರಿಸಿದ ರಾವಣನೂ, ಬಲದ ಗರ್ವದಿಂದ ಕಾದಿ ಗೆದ್ದು ಹಲವು ಊರುಗಳನ್ನು ಪಡೇದವರೂ ಯಾರೂ ತಾವು ಗೆದ್ದುದನ್ನು ಅನುಭವಿಸಲಿಲ್ಲ. ಆದುದರಿಂದ ಗರ್ವವು ನಾಶಕರವು.

ತ್ರಿಜಗಾಧೀಶ್ವರನೊಳ್ ಮನೋಜ ಕಲಹಂದಾಳ್ದಗ್ನಿಗೀಡಾದ ವಾ
ರಿಜನಾಭಂಗಿದಿರಾಗಿ ಬಾಣ ಭುಜಸಾಹಸ್ರಂಗಳಂ ನೀಗಿದಂ
ದ್ವಿಜರಾಜಂಗೆಣೆವಂದು ಚಕ್ರಹತಿಯಿಂ ಸ್ವರ್ಭಾನು ತುಂಡಾಗನೇ
ಗಜದೊಳ್ ಸುಂಡಗೆ ಯುದ್ಧವೇ ಹರಹರಾ ಶ್ರೀಚೆನ್ನಸೋಮೇಶ್ವರಾ||೪೫||

ಭಾವಾರ್ಥ:- ಈಶ್ವರನ ಮೇಲೆ ಹೋರಾಡಿದ ಮನ್ಮಥನು ಸುಟ್ಟು ಬೂದಿಯಾದನು. ವಿಷ್ಣುವಿನ ಮೇಲೆ ಯುದ್ಧ ಮಾಡಿದ ಬಾಣಾಸುರನು ತನ್ನ ಸಾವಿರ ತೋಳುಗಳನ್ನೂ ಕಳೆದುಕೊಂಡನು.ಚಂದ್ರನ ಸಮಕ್ಕೆ ಬಂದು ಕುಳಿತ ರಾಹುವು ವಿಷ್ಣವಿನ ಚಕ್ರಾಯುಧದಿಂದ ತುಂಡಾದನು. ಆನೆಯ ಮೇಲೆ ಸುಂಡಿಲಿಯು ಯುದ್ಧಮಾಡಲು ಸಾಧ್ಯವೆ? ಎಂದರೆ ಅಲ್ಪನು ಬಲಿಷ್ಠರಮೇಲೆ ಯುದ್ಧಕ್ಕೆ ಹೋದರೆ ಕೇಡು ತಪ್ಪದು.

ಅಗಲರ್ ಸೂಳೆಯನಾಳರಾ ಕುಲಜೆಯಂ ಸಂಕೀರ್ಣವಂ ಮಾಳ್ಪರಾ
ವಗ ದುರ್ಗೋಷ್ಠಿಯೊಳಿರ್ಪರೇಳು ಬೆಸನಕ್ಕೀಡಪ್ಪರಾಚಾರಮಂ
ಬಗೆಯರ್ ಸ್ವಾತ್ಮವಿಚಾರಕಲ್ಪಮತಿಯೀವರ್ ಧರ್ಮಂ ಪಾಲಿಸರ್
ಯುಗ ಧರ್ಮಂ  ನರರ್ಗಪ್ಪುದೈ ಹರಹರಾ ಶ್ರೀಚೆನ್ನಮಲ್ಲಿಕಾರ್ಜುನಾ ||೪೬||

ಭಾವಾರ್ಥ :- ಸತ್ಕುಲದಲ್ಲಿ ಹುಟ್ಟಿದ್ದ ಹೆಣ್ಣನ್ನು ಮದುವೆಯಾಗಿದ್ದರೂ ಸೂಳೆಯ ಸಹವಾಸಕ್ಕೆ ಬಿದ್ದು ಆ ಹೆಣಾಣೀನಲ್ಲಿ ಅನುರಾಗವನ್ನಿಡದೆ ಹೋಗುವರು. ಜಾತಿಸಂಕರವನ್ನು ಮಾಡುವುದಕ್ಕೆ ಯತ್ನಿಸಿ ದುಷ್ಟರ ಗುಂಪಿನಲ್ಲಿಯೇ ಯಾವಾಗಲೂ ಇರುತ್ತ, ಸಪ್ತ ವ್ಯಸನಗಳೆಂಬ ದುರಾಶೆಗಳಿಗೆ ಗುರಿಯಾಗಿ ಸದಾಚಾರದ ಮೇಲೆ ದೃಷ್ಟಿಯಿಡರು. ಆತ್ಮಜ್ಞಾನ ವಿಚಾರವನ್ನು ಬಿಟ್ಟು ತಮ್ಮ ಧರ್ಮವನ್ನು ಕಾಪಾಡಿಕೊಳ್ಳದೆ ಇರುವರು. ಹೀಗಿರುವುದರಿಂದ ಜನರು ಕೆಡುವುದಕ್ಕೆ ಯುಗಧರ್ಮವೇ ಪ್ರಬಲವಾದ ಕಾರಣವು.

ಘನ ದೈನಂ ಬಡುವರ್ ಗುರುತ್ವಗೆಡುವರ್ ಗ್ರಾಸಕ್ಕೆ ಕುಗ್ರಾಮವಾ
ಗನುಗೊಟ್ಟಿಪ್ಪರು ವೀಕ್ಷಣಕ್ಕೆ ಮುನಿವರ್ ಮಾತಾಡಶಲುಂ ಬೀಗಿ ಬಿ
ರ್ರನೆ ಬಾಗರ್ ತಲೆಗೇರಿ ಸೊಕ್ಕು ತೊನೆವರ್ ತಾವೆಲ್ಲರಂ ನಿಂದಿಪರ್
ಮನುಜರ್ಗೆತ್ತಣ ನೀತಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ||೪೮||

ಭಾವಾರ್ಥ :- ತಿನ್ನುವುದಕ್ಕೆ ಇಲ್ಲದಿರುವಾಗ ಮನುಷ್ಯರು ಬಹಳ ದೈನ್ಯದಿಂದಿರುವರು, ಗೌರವವನ್ನು ಲಕ್ಷಿಸುವುದಿಲ್ಲ. ಅನುಕೂಲ ಹೊಂದಿರುವವರಾದರೋ, ಯಾರಾದರೂ ತಮ್ಮನ್ನು ನೋಡಿದ ಮಾತ್ರಕ್ಕೇ ಕೋಪಿಸಿಕೊಳ್ಳುವರು, ಮಾತನಾಡಿಸಿದರೆ ಗರ್ವದಿಂದ ಉಬ್ಬಿಹೋಗುವರು . ಮದವೇರಿ ತಲೆ ತಿರುಗಿದವರಾಗಿರುವವರು, ಎಲ್ಲರನ್ನೂ ನಿಂದಿಸುವರು. ಹೀಗಿರುವಲ್ಲಿ ಮನುಷ್ಯರಿಗೆ ನೀತಿಯು ಎಲ್ಲಿಯದು?

ಬಡಿಕೋಲಂ ಸಮಮಾಡಲಕ್ಕುಮರೆಯೊಳ್ ಕೂಪಂಗಳಂ ತೋಡಲ
ಕ್ಕಿಡಿದಿಕ್ಕುಂ ಮೃದುಮಾಡಲಕ್ಕು ಮಳಲೊಳ್ ತೈಲಂಗಳಂ ಹಿಂಡಲ
ಕ್ಕಡವೀ ಸಿಂಗವ ತಿದದ್ದಲಕ್ಕು ಕರೆಯಲ್ ಬಕ್ಕುಗ್ರದ ವ್ಯಾಘ್ರಮಂ
ಕಡುಮೂರ್ಖಂ ಹಿತಕೇಳ್ವನೇ ಹರಹರಾ ಶ್ರೀಚೆನ್ನಸೋಮೇಶ್ವರಾ||೪೯||

ಭಾವಾರ್ಥ :- ಧಾನ್ನವನ್ನು ಬಡೆಯುವ ಕೋಲನ್ನು ನೇರವಾಗಿ ಮಾಡಬಹುದು, ಬಂಡೆಯಲ್ಲಿ ಬಾವಿಯನ್ನು ತೋಡಬಹುದು, ಉಕ್ಕನ್ನು ಬಡಿದು ಮೆತ್ತಗೆ ಮಾಡಬಹುದು,ಮಳಲನ್ನು ಹಿಂಡಿ ಎಣ್ಣೆಯನ್ನು ತೇಗೆಯಬಹುದು, ಕಾಡಿನಲ್ಲಿರುವ ಸಿಂಹವನ್ನು ಪಳಗಿಸಬಹುದು,ಕ್ರೂರವಾದ ಹುಲಿಯನ್ನು ಹತ್ತಿರಕ್ಕೆ ಕರೆಯಬಹುದು, ಆದರೆ ಕಡು ಮೂರ್ಖನು ಬುದ್ಧಿವಾದವನ್ನು ಕೇಳುವಂತೆ ಮಾಡಲಾಗುವುದಿಲ್ಲ.

ತೊನೆವರ್ಮಾತಿಗೆ ಸೋ ಲ್ದು ತನ್ನ ತಲೆಯೊಳ್ ತಾನಿಟ್ಟು ಬೊಬ್ಬಿಟ್ಟು ಕೈ
ಯನೆ ಬಿಟ್ಟೆಲ್ಲರ ಮುಂದೆ ತೋಳ ನೆಗಪುತ್ತಂ ಕೋತಿಯಂತೇಡಿಸು
ತ್ತಿನಿಸುಂ ಹೇಸದೆ ಲಜ್ಜೆಯಿಲ್ಲದನಿಬರ್ ತಾಂ ಮಾನ್ಯನೆಂದೆನ್ನದಾ
ಮನುಜಂ ಸದ್ಗತಿ ಕಾಣನೈ ಹರಹರಾ ಶ್ರೀಚೆನ್ನಸೋಮೇಶ್ವರಾ||೫೦||

ಭಾವಾರ್ಥ :- ತಾನು ಹೇಳಿದುದನ್ನೆಲ್ಲ ಮೆಚ್ಚಿ ತಲೆದೂಗುವವರ ಮಾತಿಗೆ ಮರುಳಾಗಿ ಉಬ್ಬಿ ತನ್ನ ತಲೆಯಮೇಲೆ ಕೈಯಿಟ್ಟುಕೊಂಡು ಕೂಗಾಡುತ್ತ ಕೈಗಳನ್ನಾಡಿಸುತ್ತ ತೋಳುಗಳನ್ನು ಮೇಲಕ್ಕೆತ್ತುತ್ತ ಕೋತಿಯಂತೆ ಅಂಗಚೇಷ್ಟೆ ಮಾಡಿ ಇತರರನ್ನು ಅಣಕಿಸುತ್ತ ಯಾವ ಕೆಲಸಕ್ಕೂ ಹಿಂದೆಗೆಯದೆ ನಾಚಿಕೆಯನ್ನು ಬಿಟ್ಟು ಇತರರಿಂದ ಯೋಗ್ಯನೆಂದೆನಿಸಿಕೊಳ್ಳದ ಮನುಷ್ಯನು ಸದ್ಗತಿಯನ್ನು ಹೊಂದನು.

ಕುಲದೊಳ್ ಕೂಡರು ಕೂಸನೀಯರ್ ನೃಪರ್ ನಿಷ್ಕಾರಣಂ ದಂಡಿಪರ್
ನೆಲೆಯೊಳ್ ಸೇರಲು ಪೋರುಗೈದು ಸತಿ ತಾಂ ಪೋಗಟ್ಟುವಳು ಸಾಲಿಗರ್
ಕಲುಗುಂಡಂ ತಲೆಗೇರಿಪರ್ ತೊಲಗಿರಲ್ ಲಕ್ಷ್ಮೀ ಕಟಾಕ್ಷೇಕ್ಣಂ
ನೆಲಮುಟ್ಟಲ್ ಮುನಿದಪ್ಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ||೫೧||

ಭಾವಾರ್ಥ :- ಲಕ್ಷ್ಮೀಕಟಾಕ್ಷವು ತಪ್ಪಿದರೆ ಕುಲದವರು ತಮ್ಮಲ್ಲಿ ಸೇರಿಸಿಕೊಳ್ಳದೆ ಬಹಿಷ್ಕಾರ ಹಾಕುವರು, ಹೆಣ್ಣು ಕೊಡುವುದಿಲ್ಲ, ಕಾರಣವಿಲ್ಲದೆ ದೊರೆಯು ದಂಡಿಸುವನು, ಮನೆ ಸೇರಿದರೆ ಹೆಂಡತಿಯು ಜಗಳವಾಡಿ ಓಡಿಸುವಳು, ಸಾಲಗಾರರು ತಲೆಯ ಮೇಲೆ ಕಲ್ಲು ಹೊರಿಸುವರು, ನೆಲವನ್ನುಮುಟ್ಟಿದರೆ ಅದೂ ಕೋಪಿಸಿಕೊಳ್ಳುವುದು ಎಂದರೆ ಬಡತನವು ಬಂದವನಿಗೆ ಎಲ್ಲರೂ ವಿರೋಧಿಗಳಾಗುವರು.

ತೊನೆಯಲ್ ತಾಳ್ಮೆಯನಾಂತವಂ ಬೆರತೊಡಂ ನಿರ್ಗರ್ವಿ ಕೊಟ್ಟಾಡಲಾ
ತನೆ ಸತ್ಯವ್ರತಿ ಸೂರುಳಿಟ್ಟು ಪುಸಿಯಲ್ ಭಾಷಾ ಪರೀಪಾಲಕಂ
ಕನಲ್ದುಂ ಸೈರಣೆವಂತನುದ್ಗುಣಯುತಂ ತಾಂ ನಿರ್ಗುಣಂ ದುಷ್ಕುಲಂ
ಧನಿಕಂ ಸತ್ಕುಲಜಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ||೫೨||

ಭಾವಾರ್ಥ :- ಧನಿಕನು ಸೈರಣೆಯಿಲ್ಲದಿದ್ದರೂ ತಾಳ್ಮೆಯುಳ್ಳವನೆಂದೂ, ಗರ್ವಪಡುತ್ತಿದ್ದರೂ ನಿಗರ್ವಿಯೆಂದೂ, ದಾನಮಾಡಿ ಆಡಿಕೊಂಡರೂ ಸತ್ಯವ್ರತನೆಂದೂ, ಭಾಷೆಕೊಟ್ಟು ತಪ್ಪಿದರೂ ಮಾತು ಉಳಿಸಿಕೊಳ್ಳುವವನೆಂದೂ, ಸಿಟ್ಟುಗೊಟಡರೂ ತಾಳ್ಮೆಯುಳ್ಳವನೆಂದೂ, ಗುಣವಿಲ್ಲದವನಾದರೂ ಉತ್ತಮಗುಣವುಳ್ಳವನೆಂದೂ, ನೀಚಕುಲದವನಾಗಿದ್ದರೂ ಉತ್ತಮ ಕುಲದಲ್ಲಿ ಹುಟ್ಟಿದವನೆಂದೂ ಹೇಳಿಸಿಕೊಳ್ಳುವನು ಎಂದರೆ ಐಶ್ವರ್ಯವು ಮನುಷ್ಯನ ಎಲ್ಲ ದುರ್ಗುಣಗಳನ್ನೂ ಸುಗುಣಗಳನ್ನಾಗಿ ಮಾಡುವುದು.

ಕರೆಯಲ್ ಕರ್ಣಗಳಿರ್ದು ಕೇಳರು ಕರಂಗಳ್ ಚೆಲ್ವನಾಂತಿರ್ದೊಡಂ
ಮುರಿದಂತಿರ್ವರ  ಮೇಲೆ ಹೇರಿ ನಡೆವರ್ ಮಾತಿರ್ದೊಡಂ ಮೂಕರ
ಪ್ಪರು ಕಾಲಿರ್ದೊಡೆ ಕುಂಟರಪ್ಪರಿಡೆ ಕಾಲಂ ಪೂರ್ವ ಪುಣ್ಯಂಗಳಿಂ
ಸಿರಿವಂತರ್ ನೆಲೆಗಾಣರೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೫೩||

ಭಾವಾರ್ಥ :- ಪೂರ್ವಜನ್ಮದಲ್ಲಿ ಮಾಡಿದ ಪುಣ್ಯದಿಂದ ಧನವು ಲಭಿಸಿದ ಮಾತ್ರಕ್ಕೆ ಜನರು ತಮ್ಮ ಯೋಗ್ಯತೆಯನ್ನು ತಾವರಿಯದೆ ಮಿತಿಮೀರಿ ಗರ್ವಿಸುತ್ತ ಇತರರು ತಮ್ಮನ್ನು ಕರೆದರೆ ಕಿವುಡರಂತೆ ಕೇಳದ ಹಾಗಿರುವರು, ಕೈಗಳು ಚೆನ್ನಾಗಿದ್ದರೂ ಕೈಮುರಿದವರಂತೆ ಅವನ್ನು ಇಬ್ಬರಮೇಲೆ ಹೇರಿಕೊಂಡು ನಡೆಯುವರು, ಮಾತಾಡಬಲ್ಲವರಾದರೂ ಮೂಕರಂತಿರುವರು, ಕಾಲು ಸರಿಯಾಗಿದ್ದರೂ ನಡೆಯಲು ಹಿಂದೆಗೆಯುವರು.


ಬಲವಂತರ್ ನೆರವಾಗಲಿಕ್ಕೆಲದವರ್ ಮಿತ್ರತ್ವಮಂ ತಾಳ್ದಿರಲ್
ನೆಲನೆಲ್ಲಂ ಬೆಸಲಾಗೆ ಧಾನ್ಯತತಿಯಂ ನಿಷ್ಕಾರಣಂ ದಂಡಮಂ
ಕೊಳದೆಲ್ಲರ್ ಸೊಗವಾಗೆ ನಂಬುಗೆಗಪೋಹಂ ಬಾರದಂತಾಳೆ ತಾಂ
ಬಲು ಭಾಗ್ಯಂ ದೊರೆಗಪ್ಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ||೫೬||

ಭಾವಾರ್ಥ :- ಬಲಿಷ್ಠರಾದವರ ಸಹಾಯವಿದ್ದು, ತನ್ ದೇಶದ ಸಮೀಪದಲ್ಲಿರುವ ರಾಜರು ಸ್ನೇಹಿತರಾಗಿದ್ದು,ಭೂಮಿಯು ಯಾವಾಗಲೂ ಫಲವತ್ತಾಗಿ ಒಳ್ಳೆಯ ಬೆಳೆಯನ್ನು ಕೊಡುತ್ತಿದ್ದು, ಪ್ರಜೆಗಳಿಂದ ಅನ್ಯಾಯವಾಗಿ ದಂಡವನ್ನು ತೆಗೆದುಕೊಳ್ಳದೆ ಪ್ರಜೆಗಳೆಲ್ಲರೂ ಸುಖವಾಗಿರುವಂತೆ ನೋಡಿಕೊಳ್ಳುತ್ತ, ತನ್ನಲ್ಲಿ ಯಾರಿಗೂ ನಂಬಿಕೆ ಕೆಡದಂತೆ ಆಳುವ ದೊರೆಯು ಭಾಗ್ಯಶಾಲಿಭಯಾಗುವನು.

ಧರೆಯೊಳ್ ತನ್ನಯ ವೀರರೊಳ್ ಪ್ರಜೆಗಳೊಳ್ ದಾಯಾದರೊಳ್ ಭೃತ್ಯರೊಳ್
ಪುರದೊಳ್ ಬಂಧುಗಳೊಳ್ ಸುಭೋಜನಗಳೊಳ್ ವೈದ್ಯಂಗಳೊಳ್ ದೈವದೊಳ್
ಅರಿಯೊಳ್ ಜ್ಯೋತಿಷ ಮಂತ್ರವಾದದೆಡೆಯೊಳ್ ವಿದ್ವಂಸರೆಡೆಯೊಳ್ ಸ್ತ್ರೀಯರೊಳ್
ದೊರೆಗಳೆಳ್ಚರು ಬೇಕೆಲೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೫೭||

ಭಾವಾರ್ಥ :- ಯುದ್ಧದಲ್ಲಿಯೂ, ತನ್ನ ಕಡೆಯ ಶೂರರಲ್ಲಿಯೂ, ದೇಶದ ಜನರಲ್ಲಿಯೂ, ಜ್ಞಾತಿಗಳಲ್ಲಿಯೂ, ಸೇವಕರಲ್ಲಿಯೂ, ಪಟ್ಟಣದಲ್ಲಿಯೂ, ನಂಟರಲ್ಲಿಯೂ, ಊಟದಲ್ಲಿಯೂ, ಔಷಧದಲ್ಲಿಯೂ, ದೇವತಾ ವಿಷಯದಲ್ಲಿಯೂ, ಶತ್ರುವಿನಲ್ಲಿಯೂ, ಜ್ಯೌತಿಷ ಮಂತ್ರವಾದಗಳವಿಷಯದಲ್ಲಿಯೂ,ವಿದ್ವಾಂಸರಲ್ಲಿಯೂ, ಸ್ತ್ರೀಯರಲ್ಲಿಯೂ,ದೊರೆಯು ಯಾವಾಗಲೂ ಜಾಗರೂಕನಾಗಿರಬೇಕು.

ವರ ವಿದ್ವತ್ಕವಿವರ್ಯ ಗಾಯಕ ಪುರಾಣಜ್ಞರ್ ಮಹಾ ಪಾಠಕರ್
ಪರಿಹಾಸೋಚಿತಿಹಾಸ ಮಂತ್ರ ಶಕುನಜ್ಞರ್ ವಾಗ್ಮಿಗಳ್ ವೇಶಿಯರ್
ಶರ ಶಸ್ತ್ರಾದಿ ಸಮಸ್ತ ವಿದ್ಯೆಯರಿದರ್ ಕಾಲಾಳು ಮೇಲಾಳಿರಲ್
ದೊರೆಯೊಡ್ಡೋಲಗಮೊಪ್ಪುಗುಂ ಹರಹರಾ ಶ್ರೀಚೆನ್ನಸೋಮೇಶ್ವರಾ ||೫೮||

ಭಾವಾರ್ಥ :- ಶ್ರೇಷ್ಠರಾದ ವಿದ್ವಾಂಸರು, ಕವಿಗಳು, ಸಂಗೀತಗಾರರು, ಪೌರಾಣಿಕರು, ಹೊಗಳುಭಟ್ಟರು, ಹಾಸ್ಯಗಾರರು, ಇತಿಹಾಸಕಾರರು, ಮಂತ್ರ ಶಾಸ್ತ್ರಜ್ಞರು, ಶಕುನಶಾಸ್ತ್ರಜ್ಞರು ಯುಕ್ತಿಯಿಂದ ತಕ್ಕ ಮಾತಾಡುವವರು,ವೇಶ್ಯೆಯರು, ಅಸ್ತ್ರವಿದ್ಯೆ ಶಸ್ತ್ರವಿದ್ಯೆ ಮೊದಲಾದ ಸಮಸ್ತ ವಿದ್ಯೆಗಳಲ್ಲಿಯೂ ಗಟ್ಟಿಗರು, ಕಾಲಾಳುಗಳು, ಸೇನಾನಾಯಕರು ಇವರೆಲ್ಲರೂ ಇದ್ದರೆ ರಾಜಸಭೆಯು ಶೋಭಿಸುವುದು.

ಚಪಳರ್ ಚೋರರು ಜೂಜುಗಾರರು ವಿಟರ್ ತಾಂ ಶ್ರೇಷ್ಠರೆಂದೆನ್ನವರ್
ಕಪಟೋಪಾಯರು ಕೂಟಸಾಕ್ಷಿಯ ಜನರ್ ಕೊಂಡಾಡುವರ್ ಕೊಂಡೆಯರ್
ಅಪನಿಂದಾನ್ವಿತರಾತ್ಮಬೋಧ ಕುಹಕರ್ ಸಾಮೀಪ್ಯಮಾತ್ರೇಷ್ಠರುಂ
ನೃಪರೊಳ್ ಮಾನ್ಯರೆನಿಪ್ಪರೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೫೯||

ಭಾವಾರ್ಥ :- ಸ್ಥಿರಮನಸ್ಸಿಲ್ಲದೆ ಚಂಚಲತೆಯುಳ್ಳವರು,ಕಳ್ಳರು,ಜೂಜಾಡುವವರು, ಸೂಳೆಗಾರರು, ಸ್ವಪ್ರತಿಷ್ಠೆಯುಳ್ಳವರು, ಮೋಸಗಾರರು, ಸುಳ್ಳುಸಾಕ್ಷಿ ಹೇಳುವವರು, ಮುಖಸ್ತುತಿ ಮಾಡುವವರು,ಚಾಡಿಕೋರರು, ಕೆಟ್ಟ ಹೆಸರನ್ನು ಪಡೆದವರು, ಬ್ರಹ್ಮಜ್ಞಾನವುಟಳ್ಳವರೆಂದು ನಟಿಸುವ ಕುತ್ಸಿತರು,ರಾಜಾಶ್ರಯವುದೊರೆತುದೇ ಸಾಕೆಂದು ಭಾವಿಸುವವರು ಇವರೇ ದೊರೆಗಳಗೌರವಕ್ಕೆ ಪಾತ್ರರಾಗುವವರು.

ಧುರ ಧೀರರ್ಗರೆಗಂಜಿ ಹೇಡಿಗಳಿಗಂಮೃಷ್ಟಾನ್ನ ಸತ್ಕೀರ್ತಿಯಂ
ಧರೆಯೊಳ್ ಬಿತ್ತುವಗಡ್ಡ ದುಡ್ಡು ಜರೆವರ್ಗಿಷ್ಟರ್ಥ ದಾನಂಗಳುಂ
ಅರೆಮೆಯ್ವೆಣ್ಗರೆ ಭೋಗಮೆಲ್ಲ ಸೊಗಮುಂ ವೇಶ್ಯಾಜನಕ್ಕೀಕ್ಷಿಸಲ್
ದೊರೆಗಳ್ಗೆತ್ತಣ ನೀತಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೬೦||

ಭಾವಾರ್ಥ :- ಯುದ್ಧದಲ್ಲಿ ಸಮರ್ಥರಾದವರಿಗೆ ಅರೆಹೊಟ್ಟೆಗೆ ಗಂಜಿಯನ್ನೂ, ಕೈಯಲ್ಲಾಗದ ಹೇಡಿಗಳಿಗೆ ಮೃಷ್ಟಾನ್ನವನ್ನೂ, ತನ್ನ ಕೀರ್ತಿಯನ್ನು ಪ್ರಸಿದ್ಧಿಪಡಿಸುವವನಿಗೆ ಎರಡು ಕಾಸನ್ನೂ, ತನ್ನನ್ನು ನಿಂದಿಸುವವನಿಗೆ ಕೇಳಿದಷ್ಟು ದಾನವನ್ನು ಕೊಡುತ್ತಲೂ, ಹೆಂಡತಿಗೆ ಅಲ್ಪ ಸುಖವನ್ನೂ ವೇಶ್ಯೆಗೆ ಸರ್ವ ಸೌಖ್ಯವನ್ನೂ ಉಂಟುಮಾಡುತ್ತಲೂ, ಇರುವ ದೊರೆಗೆ ನೀತಿಯೆಲ್ಲಿಯದು.

ಅತಿ ಗಂಭೀರನುದಾರ ಧೀರನು ಮಹಾ ಸಂಪನ್ನ ಸತ್ಯಾತ್ಮನೂ
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ
ವ್ರತಿ ಸದ್ಧರ್ಮ ವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ
ಪತಿಕಾರ್ಯಂ ವರ ಮಂತ್ರಿಯೈಹರಹರಾ ಶ್ರೀಚೆನ್ನಸೋಮೇಶ್ವರಾ ||೬೧||

ಭಾವಾರ್ಥ :-ಬಹಳ ಗಂಭೀರನಾಗಿಯೂ, ಉಉದಾರಿಯಾಗಿಯೂ, ಧೈರ್ಯಶಾಲಿಯಾಗಿಯೂ,ಗುಣಶಾಲಿಯಾಗಿಯೂ,ಸತ್ಯಸಂಧನಾಗಿಯೂ,ಅನೇಕ ಭಾಷೆಗಳನ್ನೂ ಲಿಪಿಗಳನ್ನೂ ಕಲಿತವನಾಗಿಯೂ, ಲಂಚಕ್ಕೆ ಆಶೆ ಪಡದವನಾಗಿಯೂ, ನಿಯಮವುಳ್ಳವನಾಗಿಯೂ, ಧರ್ಮವಿಚಾಹರವುಳ್ಳವನಾಗಿಯೂ,ನಾಲ್ಕು ಬಗೆಯ ಉಪಾಯಗಳನ್ನು ತಿಳಿದವನಾಗಿಯೂ, ಸ್ವಾಮಿಕಾರ್ಯದಲ್ಲಿ ಆಸಕ್ತಿಯುಳ್ಳವನಾಗಿಯೂ ಇರುವವನೇ ಶ್ರೇಷ್ಠನಾದ ಮಂತ್ರಿಯು.



ಬಹುಳೋಪಾಯದಲಾರ್ಜಿಸುತ್ತಧನಮಂ ತನ್ನಾಳ್ದನಂ ದೈವವೆಂ
ದಹಿತರ್ ತನ್ನವರನ್ಯರೆನ್ನದಣುಮಾತ್ರಂ ಪೋಗದೊಲ್ ತ್ರಾಸಿನಂ
ತಿಹನೊಕ್ಕಲ್ಗತಿ ಪ್ರೀತಿಪಾತ್ರನಿಳೆಮೆಚ್ಚಲ್ ಶಾನುಭಾಗಾಖ್ಯನೀ
ಮಹಿ ವಾರಾಣಸಿಯಪ್ಪನೈ ಹರಹರಾ ಶ್ರೀಚಿನ್ನಸೋಮೇಶ್ವರಾ ||೬೨||

ಭಾವಾರ್ಥ :- ರಾಜ್ಯಕ್ಕಾಗಿ ಅನೇಕ ಉಪಾಯಗಳಿಂದ ಹಣವನ್ನು ಸಂಪಾದಿಸಿ, ದೊರೆಯನ್ನು ದೇವರೆಂದು ಭಾವಿಸಿ,ಶತ್ರುಗಳು ನಮ್ಮವರು ಹೊರಗಣವರು ಎಂಬ ಭೇದವನ್ನೆಣಿಸದೆ, ಒಂದು ಕಡೆಗೂ ಬಗ್ಗದೆ ತಕ್ಕಡಿಯಂತೆ ಒಂದೇ ಸಮವಾಗಿದ್ದು ಪ್ರಜೆಗಳಿಗೆ ಪ್ರೀತಿಪಾತ್ರನಾಗಿರುವ ಶಾನುಭೋಗನು ಭೂಲೋಕದಲ್ಲಿ ಕಾಶೀಕ್ಷೇತ್ರದಂತೆ ಪರಿಶುದ್ದನೆನಿಸುವನು.

ಇಳೆಯಾಣ್ಮಂ ತನಗಲ್ತೆ ವೆಗ್ಗಳನೆನುತ್ತಂ ಪಾರುಪತ್ಯಂಗಳಂ
ಖಳಗೀಯಲ್ ಸುಲಿತಿಂದು ರಾಜ್ಯವನಿತಂ ನೀವೇಕೆ ತಾವೇಕೆಂ
ದುಳಿದರ್ಗೀಯದೆ ತಾನೇ ಕಾಲಯಮನಂತತ್ಯುಗ್ರಮಂ ತಾಳ್ದಿದಾ
ದಳವಾಯೇ ಬಳಿಮಾರಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೬೪||

ಭಾವಾರ್ಥ :- ದೊಡ್ಡ ಮನುಷ್ಯನೆಂದು ಭಾವಿಸಿ ನೀಚನನ್ನು ದೊರೆಯು ದಳವಾಯಿಯನ್ನಾಗಿ ಮಾಡಿ ಅವನಿಗೆ ಸರ್ವಾಧಿಕಾರವನ್ನು ಕೊಡಲು, ಅವನು ಪ್ರಜೆಗಳನ್ನು ಹಿಂಸಿಸಿಸುಲಿಗೆಮಾಡಿ,  ತನ್ನ ಅಧಿಕಾರ ಬಲದಿಂದ ಇತರ ಅಧಿಕಾರಿಗಳನ್ನುಬಾಯ್ಬಡಿದು ಅವರಿಗೇನನ್ನೂ ಕೊಡದೆ ಎಲ್ಲವನ್ನೂ ತಿಂದುಬಿಡುತ್ತ ಕಾಲಯಮನಂತೆ,ಕ್ರೂರನಾಗಿರುವನು.ಇಂಥವನು ದಳವಾಯಿಯಲ್ಲ, ಹೆಮ್ಮಾರಿ.


ಅಣುಮಾತ್ರಂ ಕೊಸರಿಲ್ಲದಾಳ್ದನೆಡೆಯೊಳ್ ಲಂಚಕ್ಕೊಡಂಬಟ್ಟುಮಾ
ರ್ಪಣಮಂ ಕೊಂಡತಿ ವಿತ್ತಮಂ ಕೆಡಿಸಿ ಪೈಶೂನ್ಯೋಕ್ತಿಯಿಂ ದ್ರೋಹಮಂ
ಎಣಿಸುತ್ತೆಲ್ಲರ ಬಾಳ್ಗೆ ನೀರನೆರೆದಾರುಂ ಕಾಣದೇ ಭಕ್ಷಿಪಾ
ಗಣಕಂ ಹೆಗ್ಗಣಕಂ ಸಮಂ ಹರಹರಾ ಶ್ರೀಚೆನ್ನಸೋಮೇಶ್ವರಾ||೬೩||

ಭಾವಾರ್ಥ :- ಒಡೆಯನ ಬಳಿಯಲ್ಲಿ ಸ್ವಲ್ಪವೂ ಆಶೆಯನೂನು ತೋರಿಸದೆ ಹೊರಗಡೆ ಲಂಚಕ್ಕೊಪ್ಪಿಕೊಂಡು, ತಾನು ಮಾಡುವ ಸರಕಾರದ ಸರಕಾರದ ಕೆಲಸಕ್ಕೆಜನರಿಂದ ಪ್ರತಿಫಲವನ್ನುತೆಗೆದುಕೊಂಡು ದೊರೆಗೆ ಬರುವ ಹೆಚ್ಚು ಲಾಭವನ್ನು ಕೆಡಿಸಿ, ಇತರರ ಮೇಲೆ ಚಾಡಿಹೇಳಿ ಅವರಿಗೆ ದ್ರೋಹಮಾಡಿ ಅವರ ಜೀವನವನ್ನು ತಪ್ಪಿಸಿ, ಯಾರೂ ಕಾಣದಂತೆ ರಾಜಾದಾಯವನ್ನು ತಾನೇ ತಿಂದುಹಾಕುವ ಗುಮಾಸ್ತೆಯು ಹೆಗ್ಗಣಕ್ಕೆ ಸಮಾನನು.

ಒಡೆಯಂಗುತ್ಸವಮಾಗೆ ಸರ್ವ ಜನಮಾನಂದಂಗೊಳಲ್ ರಾಜ್ಯದೊಳ್
ಕೊಡದೊಳ್ ತುಂಬಿರೆ ಜೇನು ನಿಚ್ಚ ಪಲ ಪೈರಿಂಗುರ್ವಿ ಯಿಂಬಾಗಿರಲ್
ಗಡಿ ದುರ್ಗಂಗಳುಭದ್ರಮಾಗೆ ಧನ ಧಾನ್ಯಂ ತೀವೆ ಭಂಡಾರದೊಳ್
ನಡೆವಂ ಮಂತ್ರಿವರೇಣ್ಯನೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೬೫||

ಭಾವಾರ್ಥ :- ದೊರೆಗೆ ಉತ್ಸಾಹವಾಗುವಂತೆಯೂ, ಪ್ರಜೆಗಳೆಲ್ಲರಿಗೂ ಆನಂದವುಂಟಾಗುವಂತೆಯೂ, ಜೇನು ಕೊಡವು ಯಾವಾಗಲೂ ಜೇನುತುಪ್ಪದಿಂದ ತುಂಬಿರುವಂತೆಯೂ, ಭೂಮಿಯು ಫಲಗಳಿಂದಲೂ, ಪೈರುಗಳಿದಲೂ ಶೋಭಿಸುವಂತೆಯೂ, ರಾಜ್ಯದ ಎಲ್ಲೆಕಟ್ಟುಗಳಲ್ಲಿರುವ ಕೋಟೆಗಳು ಭದ್ರವಾಗಿರುವಂತೆಯೂ, ಭಂಡಾರದಲ್ಲಿ ಧನವೂ, ಧಾನ್ಯವೂ ತುಂಬಿರುವಂತೆಯೂ ಮಾಡುವ ಮಂತ್ರಿಯೇ ಮಂತ್ರಿ ಶ್ರೇಷ್ಠನೆನಿಸುವನು.


ಕಳವಂ ಕೊಂಡವನೆಯ್ದೆ ಹೆಜ್ಜೆವಿಡಿದಾ ಮರ್ಮಂಗಳಂ ಕಾಣದೇ
ಪೊಳಲೊಳ್ ಪೊಕ್ಕರ ಪೋದರ ನುಡಿವಮಾತಂ ಕೇಳದೇ ಕಾಣದೇ
ಪಳಿವನ್ಯಾಯವ ನೋಡದನ್ಯರೊಳೇ ದೂರಿಟ್ಟೆಲ್ಲರಂ ಬಾಧಿಪಾ
ತಳವಾರಂ ಬೆಳವಾರನೈ ಹರಹರಾ ಶ್ರೀಚೆನ್ನಸೋಮೇಶ್ವರಾ||೬೬||

ಭಾವಾರ್ಥ :- ಕಳ್ಳತನ ಮಾಡಿ ಓಡಿಹೋದ ಕಳ್ಳನ ಮಾರ್ಗವನ್ನು ಹಿಡಿದು ಮರ್ಮಗಳನ್ನು ತಿಳಿದುಕೊಳ್ಳದೆಯೂ,ಊರಿಗೆ ಬಂದವರನ್ನೂ, ಊರಿನಿಂದ ಹೋಗುವವರನ್ನೂ, ಜನರು ಆಡಿಕೊಳ್ಳುವ ಮಾತುಗಳನ್ನು ಗಮನಿಸದೆಯೂ, ನಿಂದೆಯನ್ನೂ, ಅನ್ಯಾಯವನ್ನೂ ಲಕ್ಷ್ಯಮಾಡದೆ ತಪ್ಪಿಲ್ಲದವರ ಮೇಲೆ ದೂರು ಹಾಕಿ ಎಲ್ಲರನ್ನೂ ಬಾಧೆಯಿಡುವ ತಳವಾರನು ನೀಚನೆಂದೆನಿಸುವನು.

ಶುಕ ಶಂಖಂ ಗಜ ವಾಜಿ ವೀಣೆ ಪಶು ತಾಳಂ ಭೇರಿ ಶೋಭಾನ ಪಾ
ತಕ ನೃತ್ಯಂ ಗಣಿಕಾಂಗನಾ ತಳಿರುಗಳ್ ಪೂವಣ್ಣು ವಿಪ್ರದ್ವಯಂ
ಮುಕುರಂ ಮಾಂಸವು ಮದ್ಯತುಂಬಿದ ಕೊಡಂ ಪೆರ್ಗ್ಗಿಚ್ಚನಾರ್ ಕಂಡೊಡಂ
ಶಕುನಂ ಶೋಭನಕಾಸ್ಪದಂ ಹರಹರಾ ಶ್ರೀಚೆನ್ನಸೋಮೇಶ್ವರಾ ||೬೭||

ಭಾವಾರ್ಥ :- ಗಿಳಿ,ಶಂಖ, ಆನೆ, ಕುದುರೆ, ವೀಣೆ, ಹಸು, ತಾಳ, ಭೇರಿ, ಮಂಗಳ ಪಾಠಕರು, ನಾಟ್ಯ, ಸೂಳೆಯರು, ಚಿಗುರು, ಹೂ, ಹಣ್ಣು, ಇಬ್ಬರು ಬ್ರಾಹ್ಮಣರು, ಕನ್ನಡಿ, ಮಾಂಸ, ಹೆಂಡ ತುಂಬಿದ ಕೊಡ,ದೊಡ್ಡ ಉರಿ,ಇವು ಶುಭ ಶಕುನಗಳು.


ಇರಿಯಲ್ಬಲ್ಲೊಡೆ ವೀರನಾಗು ಧರೆಯೊಳ್ ನಾನಾ ಚಮತ್ಕಾರಮಂ
ಅರಿಯಲ್ಬಲ್ಲೊಡೆ ಮಂತ್ರಿಯಾಗು ವಿಭುವಾಗಾರೆಂದೊಡಂ ಕೋಪಮಂ
ತೊರೆಯಲ್ಬಲ್ಲೊಡೆ ಯೋಗಿಯಪ್ಪುದರಿಷಡ್ವರ್ಗಂಗಳಂ ಗೆಲ್ವೊಡೇ
ತೆರಬಲ್ಲರ್ಪೊಣೆಯಪ್ಪುದೈ ಹರಹರಾ ಶ್ರೀಚೆನ್ನಸೋಮೇಶ್ವರಾ||೭೭||

ಭಾವಾರ್ಥ :-- ಯುದ್ಧಮಾಡುವುದಕ್ಕೆ ತಿಳಿದಿರುವವನೇ ಭಟನಾಗಬೇಕು; ನಾನಾ ವಿಧವಾದ ಚಮತ್ಕಾರವನ್ನು ತಿಳಿದವನೇ ಮಂತ್ರಿಯಾಗಬೇಕು; ಯಾರು ಏನೆಂದರೂ ಕೋಪಿಸಿಕೊಳ್ಳದೆ ತಾಳ್ಮೆಯಿಂದಿರುವವನೇ ದೊರೆಯಾಗಬೇಕು; ಕಾಮ
ಕ್ರೋಧ ಮೊದಲಾದ ಅರಿಷಡ್ವರ್ಗವನ್ನು ಗೆಲ್ಲುವ ಸಾಮರ್ಥ್ಯವುಳ್ಳವನೇ ಯೋಗಿಯಾಗಬೇಕು; ತನ್ನ ಕೈಯಿಂದ ದಂಡ ತೆರುವ ಯೋಗ್ಯತೆಯುಳ್ಳವನೇ ಮತ್ತೊಬ್ಬರು ಮಾಡುವ ಸಾಲಕ್ಕೆ ಹೊಣೆಯಾಗಬೇಕು.

ಕಪಿಯುಂ ಗಾಣಿಗ ಪಾಪು ಕಾಷ್ಠ ಜಿನ ತಕ್ರಂ ತೈಲಸಿಕ್ತಂ ವಿರೋ
ಧಿಪನೊರ್ವಂ ದ್ವಿಜ ಮುಕ್ತಕೇಶಿ ಜಟಿ ರಕ್ತಂ ರಿಕ್ತಕುಂಭಂ ವಿಲಾ
ಪಿಪ ಭಗ್ನಾಂಗನ ಕುಷ್ಠಿಯಂ ವಿಧವೆಯಂ ಕೊಂದಾಟಮಂ ಧೂಮಮಂ
ನಿಪುಣರ್ ಕಂಡರೆ ಪೋಗರೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೬೮||

ಭಾವಾರ್ಥ :- ಕೋತಿ, ಗಾಣಿಗ, ಹಾವು, ಕಟ್ಟಿಗೆ, ಜೈನ ಸನ್ಯಾಸಿ, ಮಜ್ಜಿಗ, ಎಣ್ಣೆಹಚ್ಚಿಕೊಂಡಿರುವವನು, ಶತ್ರು, ಒಂಟಿಬ್ರಾಹ್ಮಣ, ಜುಟ್ಟು ಕೆದರಿಕೊಂಡಿರುವವನು, ಜಟೆಯನ್ನು ಬಿಟ್ಟುಕೊಂಡಿರುವವನು, ರಕ್ತ, ಬರಿಯ ಗಡಿಗೆ,
ಅಳುತ್ತಿರುವ ಅಂಗಹೀನ, ಕುಷ್ಠರೋಗವುಳ್ಳವನು, ವಿಧವೆ, ಕೊಂದಾಟ, ಹೊಗೆ ಇವನ್ನು ಕಂಡರೆ  (ಅಪಶಕುನವಾದುದರಿಂದ) ತಿಳಿದವರು ಮುಂದೆ ಹೋಗರು.

ಕೊಳನಂ ತಾವರೆಯಂ ತಳಿರ್ತ ವನಮಂ ಪೂದೋಟಮಂ ವಾಜಿಯಂ
ಗಿಳಿಯಂ ಬಾಲ ಮರಾಳನಂ ಬಸವನಂ ಬೆಳ್ಳಕ್ಕಿಯಂ ಛತ್ರಮಂ
ತಳಿರಂ ಪೂರ್ಣ ತಟಾಕಮಂ ಕುಮುದಮಂ ದೇವರ್ಕಳಂತುಂಬಿಯಂ
ತಿಳಿಯಲ್ ಸ್ವಪ್ನದಿ ಲೇಸೆಲೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೬೯||

ಭಾವಾರ್ಥ:- ಕೊಳ, ತಾವರೆ, ಚಿಗುರಿದ ವನ, ಹೂದೋಟ,ಕುದುರೆ,ಗಿಳಿ, ಹಂಸಪಕ್ಷಿಯ ಮರಿ, ಬಸವ, ಬಿಳಿಯ ಹಕ್ಕಿ, ಛತ್ರ,ಚಿಗುರು, ತುಂಬಿದ ಕೆರೆ, ಬಿಳಿಯ ನೈದಿಲೆ, ದೇವತೆಗಳು, ತುಂಬಿ ಇವನ್ನು ಸ್ವಪ್ನದಲ್ಲಿ ಕಂಡರೆ ಒಳ್ಳೆಯದು.

ಹಣಮಂ ನೆತ್ತರನೆಳ್ಳ ಕೋಣ ಕುರಿಯಂ ಕೈಯಾಯುಧಂ ಬೀಳ್ವುದಂ
ಕಣನಂ ಲುಬ್ಧಕನಂ ವಿಕಾರ ತನುವಂ ಮೇವಾಡನುಂ ಪತ್ತುವಂ
ದಣಮಂ ಕೆಂಪಿನ ಪೂವನೆಣ್ಣೆದಲೆ ನೂತ್ನಾಗಾರಮಂ ದೈತ್ಯರಂ
ಕನಸೊಳ್ ಕಾಣಲ್ ಬಾರದೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೭೦||

ಭಾವಾರ್ಥ :- ಹಣ,ರಕ್ತ, ಎಳ್ಳು, ಕೋಣ, ಕುರಿ, ಕೈಯಲ್ಲಿರುವ ಆಯುಧವು ಬೀಳುವುದು, ಯುದ್ಧರಂಗ,ಬೇಡರವ, ಅಂಗಹೀನನು, ಮೇಯುತ್ತಿರುವ ಆಡು, ಪಲ್ಲಕ್ಕಿ, ಕೆಂಪು ಹೂ, ಎಣ್ಣೆ ಹಚ್ಚಿಕೊಂಡಿರುವ ತಲೆ,ಹೊಸ ಮನೆ, ರಾಕ್ಷಸರು
ಇವನ್ನು ಕನಸಿನಲ್ಲಿ ನೋಡಿದರೆ ಕೇಡಾಗುವುದು

ಕಡು ಮುಪ್ಪಾಗಿರೆ ಕುಂಟನಾಗೆ ಕುರುಡಂ ತಾನಾಗೆ ಯೆತ್ತೇರಿದಾ
ಮುಡುಕಂ ಮೂಕನು ಮೊಂಡ ಲಂಡ ಕಿವುಡಂ ಚಂಡಾಲ ತಾನಾದೊಡಂ
ಸುಡುಮೆಯ್ ಕುಷ್ಠಶರೀರಿಯಾಗಲೊಲಿವರ್ ಪೊನ್ನಿತ್ತೊಡಂ ಸೂಳೆಯರ್
ಕೊಡುಗೈ ವೇಶ್ಯೆಯ ವಶ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೭೧||

ಭಾವಾರ್ಥ :- ಮುದುಕ, ಕುಂಟ, ಕುರುಡ,ಎತ್ತಿನ ಮೇಲೆ ಕುಳಿತು ಬರುವ ಸೊಟ್ಟ ಮೈಯುಳ್ಳವನು,ಮೂಗ,ಮೂರ್ಖ, ಹೇಡಿ,ಕಿವುಡ, ಚಂಡಾಲ,ಜ್ವರದಿಂದ ಸುಡುತ್ತಿರುವ ಮೈಯುಳ್ಳವನು, ಕುಷ್ಠರೋಗವುಳ್ಳವನು, ಇಂಥವರಲ್ಲಿ ಯಾರನ್ನೇ ಆಗಲಿ, ಹಣ ಕೊಟ್ಟ ಮಾತ್ರಕ್ಕೆ, ಸೂಳೆಯರು ಒಲಿಯುವರು.

ಹಣಮುಳ್ಳಂ ಹೆಣನಾದೊಡಂ ಮಮತೆಯಿಂ ತಾನಾವಗಂ ಬಿಟ್ಟಿರಳ್
ಕ್ಷಣ ಮಾತ್ರಂ ಬಲು ಬೂಟಕಂ ಗಳಪಿ ಹರ್ಷೋತ್ಸಾಹದಿಂ ಹಾಲ ಮುಂ
ದಣ ಬೆಕ್ಕಡುವೊಲಾಡಿಕೊಂಡುಧನಮಂ ಪೋಗಲ್ಕೆ ಮಾತಾಡಳೈ
ಗಣಿಕಾಸ್ತ್ರೀ ಗುಣವೇತಕೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೭೨||

ಭಾವಾರ್ಥ :- ಹಣವಿರುವವನು ಹೆಣದಂತೆ ಅವಲಕ್ಷಣವಾಗಿದ್ದರೂ ಸೂಳೆಯು ಅವನನ್ನು ಯಾವಾಗಲೂ ಬಿಟ್ಟಿರದೆ ಪ್ರೀತಿಯನ್ನು ತೋರಿಸುತ್ತಿರುವಳು, ಬೂಟಾಟಿಕೆಯ ಮಾತುಗಳನ್ಠನಾಡಿ ಅವನ ಮನಸ್ಸಿಗೆ ಬಹಳ ಸಂತೋಷವನ್ನು ಹುಟ್ಟಿಸಿ ಹಾಲ ಮುಂದಣ ಬೆಕ್ಕು ಆಡುವಂತೆ ವಿನೋದವಾಡುತ್ತಿರುವಳು. ಅವನಲ್ಲಿ ಹಣವು ಮುಗಿದ ಕೂಡಲೆ ಅವನೊಡನೆ ಮಾತನ್ನೂ ಆಡಳು. ಸೂಳೆಯ ಗುಣವೇ ಇಂತಹುದು.

ಕೊರಚಾಡೆಲ್ಲರಮುಂದೆ ರಚ್ಚೆಗೆಳೆಯುತ್ತಂ ಕಿತ್ತು ಮೆಯ್ಯೆಲ್ಲವಂ
ಹರಿತಿಂದುಳ್ಳ ಸುವಸ್ತುವಂ ಕಡೆಯೊಳೊರ್ವಂಗಿತ್ತು ತಾಂ ಭಾಷೆಯಂ
ಬರಿಗಂಟಿಕ್ಕುವನೆಂದು ತಾಯ ಹೊಸೆಬಟ್ಟೆಳ್ಬಟ್ಟಿ ಕೊಂಡಾಡುತುಂ
ತಿರುವಳ್ ತಾಂ ನೆರೆ ಸೂಳೆಯೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೭೩||

ಭಾವಾರ್ಥ :- ಎಲ್ಲರ ಮುಂದೆಯೂ ರಗಳೆಮಾಡಿ ತನ್ನ ನಾಯಕನನ್ನು ಅಲ್ಲಗಳೆದು ಅವನ ಮೈಯೆಲ್ಲವನ್ನೂ ಕಿತ್ತು ಅವನಲ್ಲಿದ್ದ ಒಳ್ಳೆಯ ವಸ್ತುಗಳನ್ನೆಲ್ಲ ಅಪಹರಿಸಿ ತಿಂದು ಕೊನೆಗೆ ಮತ್ತೊಬ್ಬನಿಗೆ ಮಾತು ಕೊಟ್ಟು ಮೊದಲಿನವನು ಹಣವಿಲ್ಲದವನೆಂದು ತನ್ನ ತಾಯಿಯನ್ನು ಅವನ ಮೇಲೆ ಜಗಳಕ್ಕೆ ಬಿಟ್ಟು ಅವನನ್ನು ಓಡಿಸಿ,ಹೊಸಬನನ್ನು ಕೊಂಡಾಡುತ್ತಿರುವ ಸೂಳೆಯು ಬಹಳ ಗಟ್ಟಿಗಳು.

ಕೃತಜ್ಞತೆಗಳು.

೧) ಶ್ರೀ ಬೆಳ್ಳಾವೆ ವೆಂಕಟನಾರಾಯಣಪ್ಪ,
ಪ್ರಥಮ ಮುದ್ರಣದ ಸಂಪಾದಕರು.

೨) ಪಂಡಿತರತ್ನಂ ಶ್ರೀ ಬಿ. ಶಿವಮೂರ್ತಿ ಶಾಸ್ತ್ರೀ,
ನಾಲ್ಕನೆಯ ಮುದ್ರಣದ ಸಂಪಾದಕರು,
ಮತ್ತು,  ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು.
ಚಾಮರಾಜಪೇಟೆ, ಬೆಂಗಳೂರು - ೫೬೦೦೧೮.




3 ಕಾಮೆಂಟ್‌ಗಳು: