ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮಾರ್ಚ್ 11, 2018

ಷಡಕ್ಷರಿದೇವ ವಿರಚಿತ ಬಸವರಾಜ ವಿಜಯಂ

ಷಡಕ್ಷರಿದೇವ ವಿರಚಿತ ಬಸವರಾಜ ವಿಜಯಂ

ಈ ಕಾವ್ಯದ ಕರ್ತೃ ಷಡಕ್ಷರಿದೇವ. ಬಸವರಾಜವಿಜಯವು ವೃಷಭೇಂದ್ರವಿಜಯವೆಂದೇ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದೆ. ಕವಿಯೂ ವೃಷೇಂದ್ರಕೃತಿಯೆಂಬ ನಾಮನಿರ್ದೇಶನವನ್ನು ಹಲವೆಡೆ ಮಾಡಿರುವನು.
ತನ್ನ ಕೃತಿ ಬಸವಪುರಾಣವೆಂದೂ ನುಡಿದಿರುವನು. ಆದರೆ ಕವಿ ಈ ಕೃತಿಗೆ “ ಬಸವರಾಜವಿಜಯಂ” ಎಂಬ ಅಭಿಧಾನವನ್ನಿಟ್ಟಿರುವುದು ಪ್ರತಿ ಆಶ್ವಾಂತ್ಯದಲ್ಲಿ ಬರುವ ಉಲ್ಲೇಖದಿಂದ ಸ್ಪಷ್ಟವಾಗುತ್ತದೆ.

ಜನ್ಮ ಕಾಲ: ಷಡಕ್ಷರಿದೇವನ ಜನ್ಮತಿಥಿ ಮತ್ತು ಲಿಂಗೈಕ್ಯಕಾಲ ಇದುವರೆಗೆ ಲಭ್ಯವಾಗಿಲ್ಲ. ಆತನು ಹದಿನೇಳನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದನೆಂದು ನಿರ್ಧರವಾಗಿ ಹೇಳಬಹುದು. ಷಡಕ್ಷರಿದೇವನು ರಾಜಶೇಖರವಿಳಾಸ,ಬಸವರಾಜವಿಜಯಗಳನ್ನು ಬರೆದುದು ಅನುಕ್ರಮವಾಗಿ ಕ್ರಿ.ಶ.೧೬೫೪ ಮತ್ತು ೧೬೭೭ ರಲ್ಲಿ.ಷಡಕ್ಷರಿದೇವ,ಚಿಕದೇವರಾಯ,ತಿರುಮಲರಾಯ,ವಿಶಾಲಾಕ್ಷಪಂಡಿತ ಇವರೆಲ್ಲರ ಪರಸ್ಫರ ಒಡನಾಟಗಳನ್ನು ತಿಳಿಸುವ ಆಖ್ಯಾಯಿಕೆಗಳು ದೇವಚಂದ್ರನ ರಾಜಾವಳೀಕಥೆಯಲ್ಲಿ ಉಕ್ತವಾಗಿವೆ.

ಚಿಕದೇವರಾಯ ಮತ್ತು ತಿರುಮಲಾರ್ಯ ಇವರು ಕ್ರಿ.ಶ.೧೬೪೫ ಕ್ಕೆ ಸರಿಯಾದ ಪಾರ್ಥಿವ ಸಂವತ್ಸರದ ಆಶ್ವಿಜ ಮಾಸದಲ್ಲಿ ಜನಿಸಿದರು. ಷಡಕ್ಷರಿದೇವನು ಅವರಿಗಿಂತ ವಯಸ್ಸಿನಲ್ಲಿ ಸ್ವಲಾಪ ಹಿರಿಯನಾಗರುವಂತೆ ತೋರುತ್ತದೆ. ಕ್ರಿ.ಶ.೧೬೫೪ ರಲ್ಲಿ . ಆತನು ರಾಜಶೇಖರವಿಳಾಸವನ್ನು ರಚಿಸಿರುವನು.ಆಗ ಕವಿಗೆ ಸುಮಾರು ಹದಿನೆಂಟು ವರುಷ
ಗಳಾದರೂ ಆಗಿರಬೇಕು. ಅಂದರೆ ಷಡಕ್ಷರಿದೇವನು ಕ್ರಿ.ಶ.೧೬೩೬ ರ ಸುಮಾರು ಜನಿಸಿರುವ ಸಂಭವವಿದೆ.

ಷಡಕ್ಷರಿದೇವನು ದನುಗೂರಲ್ಲಿ ಜನಿಸಿ ಅಲ್ಲಿಯ ಮಠಕ್ಕೆ ಪಟ್ಟಾಧಿಕಾರಿಯಾಗಿದ್ದರೂ ತನ್ನ ಜೀವನದ ಬಹುಭಾಗವನ್ನೆಲ್ಲ ಎಳಂದೂರಿನಲ್ಲಿಯೇ ಕಳೆದಂತೆ ತೋರುತ್ತದೆ. ರಾಜಶೇಖರವಿಳಾಸವನ್ನು ಎಳಂದೂರಿನಲ್ಲಿಯೇ
ರಚಿಸಿದನೆಂಬ ಬಗೆಗೆ ಐತಿಹ್ಯಗಳಿವೆ. ದನುಗೂರಿನಲ್ಲಿ ಹುಟ್ಟಿದ ಷಡಕ್ಷರಿಯು ತಮ್ಮ ಮಠದ ಬೇರೊಂದು ಶಾಖೆಯಿರುವ ಎಳಂದೂರಿಗೆ ಬಂದಿರುವುದು ಸಹಜವಾಗಿದೆ. ಎಳಂದೂರಿನಲ್ಲಿ ಷಡಕ್ಷರಿಯ ಶಿಷ್ಯರಾದ
ಮುದ್ದುಭೂಪಾಲ ಮತ್ತು ಮೈಸೂರ ಭೂಪಾಲರು ಅಲ್ಲಿ ಮಠ ಮಾನ್ಯಗಳನ್ನು ನಿರ್ಮಿಸಿ, ಅನುಕೂಲತೆಗಳನ್ನು ಕಲ್ಪಿಸಿಕೊಟ್ಟುದರಿಂದ ತನ್ನ ಜೀವಿತದ ಬಹು ಭಾಗವನ್ನು ಎಳಂದೂರಿನಲ್ಲಿಯೇ ಕಳೆದಿದ್ದಾನೆ. ಹೀಗೆ ಎಳಂದೂರು
ಕವಿಯ ಕಾರ್ಯರಂಗವಾಗಿ,ಕಾವ್ಯರಂಗವಾಗಿ ಪರಿಣಮಿಸಿದೆ.

ಗುರುಪರಂಪರೆ: ಕೊಲ್ಲಿಪಾಕಿ ಲಿಂಗೋದ್ಭವ ರೇಣುಕಾಚಾರ್ಯ,ಆತನಪುತ್ರ ನಿಗಮಾಗಮ ಶಾಸ್ತ್ರಪಾರಗನಾದ
ರುದ್ರಮುನೀಶ್ವರ, ಆತನ ವಂಶದಲ್ಲಿ ಜನಿಸಿದವನು ಉದ್ದಾನ ಶಿವಯೋಗಿ,ಆತನ ಹಸ್ತಕಮಲೋದ್ಭವ
ಅನ್ನದಾನೀಶ, ಅವರ ಕರಕಂಜಜ ರೇವಣಸಿದ್ಧದೇಶಿಕ,ಆತನ ಕರಕಂಜಾತಜಾತ ಚಿಕವೀರದೇಶಿಕ,ಚೀಕವೀರ
ದೇಶಿಕನ ಕರಕಮಲೋದ್ಭವ ಷಡಕ್ಷರಿದೇವ.

ಪ್ರಥಮಾಶ್ವಾಸಂ.

ಶ್ರೀಮತ್ಕಲ್ಯಾಣಭೂಭೃನ್ನುತಸುಕರಪದಂ ದಿವ್ಯಗಂಗಾಂಬಿಕಾಸ
ತ್ಪ್ರೇಮಾವಾಸಂ ಗಣೇಂದ್ರಾನ್ವಿತನುರುಮಹಿಮಾಧಾರನಶ್ರಾಂತಸತ್ವಾ
ರಾಮಂ ಭೂತಿಪ್ರಯುಕ್ತಂ ಪ್ರಣವರುಚಿ ಪರಾನಂದಧರ್ಮಂ ಸ್ವಲೀಲೋ
ದ್ದಾಮಂ ರಕ್ಷಿಪುದೆಮ್ಮಂ ಬಿಡದನವರತಂ ನಂದಿಕೇಶಂ ಮಹೇಶಂ||೧||

ಗಂಗಾರಂಗತ್ತರಂಗಪ್ರಭವಕಣಗಣಸ್ಫಾರತಾರಾಪರೀತ
ಸ್ವಾಂಗಾರ್ಧೇಂದುದ್ಯುತಿಪ್ರೋನ್ಮಿಳಿತ ನಿಜಜಟಾಜೂಟವಿಭ್ರಾಜಮಾನ
ಶೃಂಗಾರಾಸಾರಗೌರೀಕಬಳಿತಕಲಿತಾರ್ಧಾಂಗನುದ್ಯದ್ದಯಾರ್ದ್ರಾ
ಪಾಂಗಂ ಮಾಂಗಲ್ಯಸಾಕಲ್ಯಮನೆಮಗೊಲವಿಂ ಮಾಳ್ಕೆ ನಿಚ್ಚಂ ತ್ರಿಣೇತ್ರಂ||೨||

ಶುಂಭನಿಶುಂಭದರ್ಪಹರೆ ಶಂಬರವೈರಿವಧೂಮನೋಗದ
ಸ್ತಂಬಿನಿ ಕುಂಭಿನೀಧರಕುಮಾರಿ ಕುಮಾರಗಜಾಸ್ಯಮಾತೆನಿ
ರಾದಂಭತಪಃಪ್ರಲಬ್ಧಪಶುಪಾರ್ಧಕಳೇವರೆ ಲೋಕಧಾತ್ರಿ ವಿ
ಶ್ವಂಭರಜಂಭಭಿತ್ಪ್ರಣತೆ ಪಾರ್ವತಿ ಪಾಲಿಪುದೆನ್ನನಂಬಿಕೆ||೪||

ಶಿವನಡಿಗಳ್ಗೆ ಮುಂಬರಿದು ಕುಂಬಿಡುವಬ್ಜಭವಾದಿ ದೇವರೊ
ಪ್ಪುವ ಕನಕಸ್ಫುರನ್ಮಕುಟಘಟ್ಟನದಿಂ ಸುರಿದೊಟ್ಟಿಲಾದ ರೇ
ಣುವನಿರದೊಟ್ಟಿಕೊಂಡು ಕನಕಾಚಳದಂತತಿರಮ್ಯಮಾದ ದಾ
ನವಸರಿನಿರ್ಝರಂ ಗಜಮುಖಂ ಮಿಗೆ ಮಾಳ್ಕೆಮಗಿಷ್ಟಸಿದ್ಧಿಯಂ ||೫||

ಜಿತಮಾಯಂ ನಿರುಪಾಯನನ್ವಿತಚಿದಂಗಂ ಸದ್ದಯಾಪಾಂಗನೂ
ರ್ಜಿತಶೀಲಂ ಶ್ರುತಿಮೂಲನಾತ್ತಶಿವಮಂತ್ರಂ ಪ್ರೋಕ್ತಂತ್ರಂ ಕುಸಂ
ಸೃತಿದೂರಂ ಗಣಸಾರನನ್ಯಸಮಯಾಹಂಕಾರಶಂಕಾಹರಂ
ಸತತಂ ಮಾಳ್ಕೆಮಗಲ್ಲಮಪ್ರಭುವರಂ ವೈರಾಗ್ಯಸೌಭಾಗ್ಯಮಂ ||೧೦||

ಭೂವಳಯಪ್ರಸಿದ್ಧಸುಖಭೋಗಮನೊಕ್ಕು ವಿರಾಗಭಾವಮೇ
ಭಾವದೊಳಾಗೆ ಭಾವಭವನಂ ಸಲೆ ಭಂಗಿಸಿ ಲಿಂಗವಂಗದೊ
ಳ್ತೀವೆ ನಿಜೇಚ್ಛೆಯಿಂ ಕದಳಿವೊಕ್ಕು ಶಿವೈಕ್ಯತೆಯಾಂತು ನಿಂದ ಮಾ
ಮಾದೇವಿಯ ಪಾದಪಂಕರುಹಕಾಱಡಿಯಾಗಿಪೆನ್ನ ಚಿತ್ತಮಂ ||೧೫||

ಕವಿತೆಯನೊಲ್ದೊಡರ್ಚುವ ಕವೀಂದ್ರರ ರಕ್ಷಿಪ ದುಷ್ಕವಿತ್ವಮುಂ
ತವಿಪ ಗುಣಂಗಳಿಂದೆ ಕವಿತಾಚತುರಾನನನೇಳ್ಗೆವೆತ್ತ ಸ
ತ್ಕವಿಕುಲಚಕ್ರವರ್ತಿ ಕವಿರಾಜಶಿರೋಮಣಿಯೆಂಬ ಪೆಂಪು ಸಂ
ಭವಿಸೀದ ಸತ್ಕವೀಶ್ವರ ಹರೀಶ್ವರನೀಗೆಮಗೀಪ್ಸಿತಾರ್ಥಮಂ ||೧೯||

ಅವಿಚಲಿತಖಲಮದಾಚಲ
ಪವಿಯಂ ಪ್ರಣುತಪ್ರಬಂಧಪಂಕಜವೀಳಸ
ದ್ರವಿಯಂ ಚಲದಂಕಮಹಾ
ಕವಿಯಂ ಘನರಾಘವಾಂಕನಂ ನುತಿಗೈವೆಂ ||೨೦||

ಮೊದಲೊಳ್ಸೋಮಗುರೂತ್ತಮಂ ಸರಸವಾಕ್ಚಾತುರ್ಯದಿಂದಂಧ್ರದೇ
ಶದ ಭಾಷಾಕ್ರಮದಿಂ ವೃಷೇಂದ್ರಕೃತಿಯಂ ತಾಂ ಮಾಡಿದಂ ಭಕ್ತಿಯಿಂ
ದದನಾ ಭೀಮಕವೀಶ್ವರಂ ನೆಗಳ್ದನಾದಂ ವರ್ಣಕಪ್ರೌಡಿಯಿಂ
ದದನುದ್ಯದ್ರುಚಿ ಸಂಸ್ಕೃತೋಕ್ತಿಯೊಳೆ ಪೇಳ್ದಂ ಶಂಕರಾರ್ಯೋತ್ತಮಂ ||೨೮||

ಪದಪಿಂದಾದ್ಯರ್ಕಳಿಂತಿಂತತುಳ ಸರಸ ಶಬ್ದಾರ್ಥಸಂದರ್ಭದಿಂ ಕೋ
ವಿದರೆಲ್ಲರ್ಮೆಚ್ಚೆ ಬರ್ದಿಂ ನೆಗಳ್ದ ಬಸವಪೌರಾಣಮಂ ಬೇಱೆ ಮೇಣ್ಪೇ
ಳ್ವುದು ಹಾಸ್ಯಕ್ಕಾಸ್ಪದಂ ಬೆಳ್ತನಮನುಚಿತಮಂತಾದೊಡಂ ತದ್ಗಣಸ್ತೋ
ಮದ ಜಾನಂ ಸಾರ್ವುದೀ ವ್ಯಾಜದಿನೆನುತಿದನಾಂ ಪೇಳಲುದ್ಯುಕ್ತನಾದೆಂ  ||೨೯||

ಧರ್ಮಸ್ವರೂಪನಾನತ
ಶರ್ಮಪ್ರದನೆನಿಪ ಬಸವರಾಜನ ಕೃತಿಯಂ
ಕೂರ್ಮೆಯಿನುಸುರ್ದೊಡೆ ಕೇಳದ
ರಾರ್ ಮಚ್ಚದರಾರ್ ಮಹೋತ್ಸವಂಬಡೆಯದರಾರ್||೪೧||

ಇಳೆಯೊಳ್ಮೇಣ್ಪುಟ್ಟಿ ಪುಟ್ಟುತ್ತಳಿವ ನರರ ಮೇಲುರ್ಬಿ ಕಬ್ಬಂಗಳಂ ಬಿ
ಚ್ಚಳಿಸುತ್ತುಂ ತಮ್ಮ ದಗ್ಧೋದರವ ಪೊರೆಯಲೆಂದಕ್ಕಟಾಕೆಟ್ಟರನ್ಯ
ರ್ಪಳಿದಂತಪ್ಪಲ್ಪಧೀಮಂತರನಸಮ ವೃಷಾಧೀಶನಂ ನಿತ್ಯನಂ ನಿ
ರ್ಮಳನಂ ಕೊಂಡಾಡಿ ಪೇಳ್ವೆಂ ಕೃತಿಯನೊಸಗೆಯಿಂ ಕೇಳ್ವುದೊಲ್ದೀಶಭಕ್ತರ್||೪೪||

ತುಳಿದೊಡೆ ಮುಳಿದಗಿವುದು ಫಣಿ
ತುಳಿಯದೊಡಂ ಜವದಿನಗಿವನಿವನೆಂದು ಭಯಾ
ಕುಳಮಗಿದಪುದಿಳೇ ಕಂಡಾ
ಗಳೆ ಖಳನಂ ಕ್ರೋಧವಿಜಿತದಾವಾನಕ್ಷನಂ ||೫೧||

ಬೇವಿಂಗೆಱಗು ಕಾಕಂ
ಮಾವಿಂಗೆಱಗುಗುಮೆ ಗಿಳಿಯವೋಲ್ ದುಷ್ಕೃತಿಯಂ
ಸೇವಿಪ ಗಾವಿಲನತುಳ ಕ
ಳಾವಿತ್ಕೃತಿಯನನುಭವಕ್ಕೆ ಬಗೆದಂದಪನೇ||೫೫||

ಕೃತಿ ಬಸವಪುರಾಣಂ ಕೃತಿ
ಪತಿ ಬಸವಂ ಕೃತಿಯನುಸಿರ್ದವಂ ಶಿವಕವಿ ಸಾ
ರತರಷಡಕ್ಷರಿದೇವಂ
ಕೃತಿಪಾಲಕರಭವಭಕ್ತರೆನೆ ಮಚ್ಚದರಾರ್||೫೬||

ಆವಾವ ದೇಶಮಂ ಪರಿ
ಭಾವಿಸಿ ನೀಂ ಬಂದೆ ಮುನಿಪ ಮನುಜಾವನಿಯೊಳ್
ಪಾವನಶಿವಭಕ್ತಿಲಸ
ದ್ಭಾವಾನ್ವಿತರೊಳರೆ ಪೇಳ್ವುದೆಂದುಮೆ ಕೇಳ್ದಳ್ ||೯೧||

ವಚನ:- ಎಂದು ಕೇಳಲೊಡಂ ಮುನ್ನಮಾಂ ಬಿನ್ನವಿಸಲೆಂದಿರ್ದ ಕಜ್ಜದುಜ್ಜವಣೆಗೆ ಮೃಡಾನಿಯ
ನುಡಿ ಸಹಾಯಮಾದುದು ಸಮಯಂಬಡೆದೆನೆಂದು ಸಡಗರಿಸಿ ನಾರದಂ ಸಾರೆವಂದು
ಮಾರಹರಂಗಂಬಿಕೆಗಂ ಮಗುಳ್ದೆಱಗಿ ರಯ್ಯಮೆನೆ ಕೈಯಂ ಮುಗಿದು ನಿಂದು

ಅವಧರಿಪುದು ಬಿನ್ನಪಮಂ
ಕುವಲಯಸಖಮೌಳಿ ದೇವಿಯರ್ಕೇಳ್ದಿರವಂ
ವಿವರಿಪೆನೆಲ್ಲಾ ಭುವನದೆ
ಶಿವಭಕ್ತಿ ವಿಶೇಷಮಾಗಿ ವರ್ತಿಪುದೀಗಳ್ ||೯೨||

ನರಲೋಕಮೊಂದಱೊಳ್ಪುರ
ಹರಭಕ್ತಿಯತೀವ ಗುಪ್ತಮಾಗಿರ್ದಪುದು
ರ್ವರೆಯೊಳ್ತೋರ್ಪ ಶಿವೈಕ್ಯರ್
ಪರಿರಂಜಿಸಿದಪರಜಸ್ರಮಪ್ರಕಟತೆಯಿಂ ||೯೩||

ಪರಶಿವನಿಷ್ಠರಲ್ಲಿ ಪೆಱರೊಳ್ನುಡಿಯಾಡದೆ ಗೂಢಭಾವದಿಂ
ದರೆಬರುದಾತ್ತವೃತ್ತರಿರುತಿರ್ದಪರಲ್ಲಿ ಕೆಲಂಬರನ್ಯರಿ
ರ್ಪಿರವನಮರ್ಚಿ ತಮ್ಮ ಬಗೆಗಾಣಿಸದಂತವರಂತೆ ರಂಜಿಪರ್
ಪರವಶಭಾವದಿಂ ಪೆಱರಿಳಾಸ್ಥಿತಿಯಂ ಮಱೆದೊಲ್ಲರನ್ಯಮಂ ||೯೪||

ವಚನ:- ಅಂತೆಸೆದಿರ್ದುಮವರ್ ದೃಷ್ಟಪ್ರತ್ಯಯಮಂ ತೋಱದಿರ್ಪುದಱಿಂ ಜಡಬುದ್ಧಿ
ಜನನಿವಹಂ ನಂಬುಗೆ ಸಂಭವಿಸದಜ್ಞತೆಗಡರ್ಪಾಗಿರ್ದಪುದಂತಱಿ ಭಕ್ತಿಭಾವಮುಂ
ಗುರುಚರಹರಪ್ರಭಾವಮುಂ ಸುಜ್ಞಾನಾನುಭಾವಮುಮಂತವಿರಳಮುಮಸ್ಪಷ್ಟಮು
ಮಾಗಿರ್ದಪುದಿವಂ ಪ್ರತಿಷ್ಠೆಗೈದಾ ಗುಪ್ತಭಕ್ತರಂ ಕೃತಾರ್ಥರಂ ಮಾಡಿ ಕರುಣಿಸಲ್ಕೆ -

ಪುರಹರಕೃಪೆಯಿಂ ನೀವವ
ತರಿಸಿ ಧರಾಂಗನೆಯಂಘ್ರಿಸಂಸ್ಪರ್ಶನದಿಂ
ಪರಿಶುದ್ಧಿಗೊಳಿಸಿ ಪಸರಿಪು
ದುರುಭಕ್ತಿಜ್ಞಾನಮತಮಹತ್ವಸ್ಥಿತಿಯಂ||೯೫||

ಎಂದಾಮುನಿ ಬಿನ್ನವಿಸಿದೊ
ಡಿಂದುಧರಂ ಪರಮಹರ್ಷಮಂ ತಳೆದೆನಗಂ
ನಂದೀಶಂಗಂ ಭೇದಮ
ದೊಂದದು ಮದ್ರೂಪನೀತನಂ ಕಳುಪಿದಪೆಂ ||೯೬||

ಈ ನಂದಿನಾಥನಿಂದೆ ಸ
ದಾನಂದಂ ಬಡೆವುದಲ್ತೆ ಜಗಮಪರಶಿವಂ
ತಾನೆನಿಪೀತಂ ಭಕ್ತಿ
ಜ್ಞಾನ ಶಿವಾಚಾರಮಂ ಪ್ರತಿಷ್ಠಿಪನಿಳೆಯೊಳ್ ||೯೭||

ಎಂದೊಡೆ ಶಿವನಾಗಳ್ಗಿರಿ
ನಂದನೆ ಮನ್ನಾಥ ಭಕ್ತದೇಹಿಕನಾನೆಂ
ಬಂದವೊ ನೋಳ್ಪೊಡಭೇದಂ
ಸಂದುದೊ ನಂದಿಯೊಳೆ ನನ್ನಿವೇಳೆನಗೆಂದಳ್||೯೮||

ವಚನ:- ಎಂದು ದೇವಿಯಳ್ಕಱಿಂ ಬೆಸಗೊಳಲೊಡಂ  

ಬಗೆವೊಡೆ ಭಕ್ತದೇಹಿಕನೆನಿಪ್ಪೆನೆನಿಪ್ಪೆನಿದಕ್ಕೆ ದೇವಿ ಸಂ
ದೆಗಮೆ ಸಮಸ್ತ ದೇವತತಿ ಬಲ್ಲುದಿದಂ ನಿಜ ಭಕ್ತರಾತ್ಮ ನಾ
ನೆ ಗಡ ಬಳಿಕ್ಕಮಿಂತಿದಱೊಳೊಂದು ವಿಶೇಷಮನೊಲ್ದು ಪೇಳ್ದಪೆಂ
ನಗಸುತೆ ಕೇಳ್ದುದೆಂತೆನೆ ಶಿಲಾದನೆನಿಪ್ಪ ಮುನೀಂದ್ರನಾದಿಯೊಳ್ ||೯೯||

ಪರಮ ಶ್ರೀಗಿರಿಯಲ್ಲಿ ದಾನವವರಾಶಾಭಾಗದೊಳ್ನಿಂದು ಮ
ಚ್ಚರಣಧ್ಯಾನದೆ ಕಂದಮೂಲಫಲಪರ್ಣಾಂಭೋಮರುತ್ಸೋಮಭಾ
ಸ್ಕರತೇಜಂಗಳನೊಲ್ದು ಸೇವಿಸಿ ತಪಸ್ತಪ್ತಾಂಗನಾಗಿರ್ದು ವ
ತ್ಸರಕೋಟಿತ್ರಯಮಂ ಕರಂ ಕಳಿಪಿದಂ ಯೋಗಪ್ರಭಾವಾನ್ವಿತಂ ||೧೦೦||

ಮುನಿಪತಿ ಮತ್ತಂ ಸರ್ಷಪ
ದನಿತೆನಿಸುವ ಶಿಲೆಯನೊಲ್ದು ಸೇವಿಸಿ ತಪಮಂ
ಘನಮೆನೆ ನೆಗಳುತೆ ಕಳೆದಂ
ಬಿನದದೆ ಶತಕೋಟಿವತ್ಸರಂಗಳನಾಗಳ್ ||೧೦೧||

ಆ ಮುನಿಯುದ್ದಾಮತಪೋ
ದ್ದಾಮಂ ಪಿಡಿದೆಳೆಯೆ ಬಂದು ಕರುಣಿಸಿ ನಿಜಮಂ
ಪ್ರೇಮದೊಳೆ ತೋಱಿ ನಿನ್ನಯ
ಕಾಮಿತ ವರವಾವುದೀಗಳದನೊರೆಯೆಂದೆಂ ||||೧೦೨||

ವಚನ:- ಎನಲೊಡನಾ ಶಿಲಾದನಾದರದಿಂ ಪಾದಕಮಲದೊಳ್ ಸೈಗೆಡೆದು ಭಕ್ತಿಪರವಶಂ
ಪರಮ ಹರ್ಷದಿ ಸನ್ನುತಿಗೆಯ್ದೇಳ್ದು ನಿಟಿಲತಟಘಟಿತಕರಪುಟನಾಗಿ ದೇವದೇವಾ
ನಿರತಿಶಯ ಭವದ್ಭಕ್ತಿಸುಧಾರಸಪಾತ್ರನಂ ಶಿವಸಮಯವನಜವನಮಿತ್ರನಂ ನಿನ್ನನ್ನನಪ್ಪ
ಪುತ್ರನಂ ಬಗೆದು ಬಯಸಿ ತಪಂಗೆಯ್ದೆನೀಗಳಭವ ಭವಾದೃಶತನಯನಂ ಕೂರ್ತು ಕರು
ಣಿಪುದೆಂದು ಬೇಡಿ ಮತ್ತಮಿಂತೆಂದಂ -

ಅನುಪಮಗುಣಗಣಸಂಯುತ
ನೆನಿಸಿದೊಡಂ ನಿಮ್ಮ ಭಕ್ತಿಯೊಂದಿಲ್ಲದೊಡಾ
ತನಯನೆ ರಿಪುವೆನಗವನಂ
ಕನಲ್ಕೆಯಿಂ ತಱಿದು ಬಿಸುಡುವೆಂ ಪುರಮಥನಾ ||೧೦೩||

ಅದಱಿಂ ತ್ವದೀಯ ಮಂಜುಳ
ಪದಪದ್ಮಪರಾಗಭೃಂಗನೆನಿಸುವ ಸುತನಂ
ಪಡೆದೀವುದಲ್ಲದೊಡೆ ಮಿ
ಕ್ಕುದನೊಲ್ಲೆಂ ವರವನದ್ರಿಜಾತಾರಮಣಾ ||೧೦೪||

ವಚನ:- ಎಂದ ಶಿಲಾದನ ಭಕ್ತಿಭಾವಕ್ಕೆ ಮಚ್ಚಿ ಮನಂದಂದು

ಪರಿಕಿಪೊಡಾದಿಕಾರಣಮನಾದಿಸದಾದಿಯೆನಿಪ್ಪ ಮತ್ಕಳಾ
ಭರಿತನನೆನ್ನ ಚಿತ್ಪರಮಧರ್ಮನಿಜಾಂಗನನಾ ಚತುರ್ಯುಗ
ಸ್ಫುರಿತಸುಧರ್ಮಪಾದನನಪಾರಕೃಪಾಕರನಂ ದ್ವಿತೀಯ ಶಂ
ಕರನನನಂತಸದ್ಗುಣನನೆನ್ನಯ ವಾಹನರೂಪನಾದನಂ ||೧೦೫||

ಕರೆದೆಂದೆಂ ವೃಷಭೇಂದ್ರನಂ ಪ್ರಮಥರೊಳ್ ನೀನಲ್ತೆ ಮುಖ್ಯಂ ಚರಾ
ಚರರಕ್ಷಾಕರನಪ್ರಮೇಯಮಹಿಮಂ ಮತ್ಪ್ರಾಣರೂಪಂ ಜಗ
ದ್ಗುರು ಸತ್ಯಂ ನಿನಗಿತ್ತೆನೆನ್ನ ದೃಡಭಕ್ತಿಶ್ರೀಯನಾನಾದಿಯೊಳ್
ನಿರುತಂ ನೀನೆ ಶಿಲಾದಸೂನುವೆನಿಸೈ ಶ್ರೀನಂದಿನಾಥಾಖ್ಯೆಯಿಂ ||೧೦೬||

ಎನೆ ಕೈಕೊಂಡು ಮಹಾಪ್ರಸಾದಮೆನುತಂ ಮತ್ಪಾದಪದ್ಮಕ್ಕೆ ವಂ
ದನೆಗೈದೆನ್ನ ನಿರೂಪದಿಂ ಮುನಿ ಶಿಲಾದಾಖ್ಯಂಗಯೋನಿಪ್ರಭೂ
ತನಿಪ್ಪೇಳ್ಗೆಯನಾಳ್ದು ನಂದಿವೆಸರಿಂದಂ ಪುತ್ತನಾದಂ ಪುರಾ
ತನಸಂತಾನಮನೋವನೇರುಹದಿನಾಧೀಶಂ ವೃಷಾಧೀಶ್ವರಂ||೧೦೭||

ನವಮಾಶ್ವಾಸಂ.
ರುದ್ರಪಶುಪತಿಗಳ ಕಥೆ.
ಶ್ರೀಗೌರೀಪ್ರೇಮಸುಧಾ
ಸಾಗರಪೂರ್ಣೇಂದು ಸಸ್ಮಿತಾಮಳವದನಾ
ಭೋಗಂ ಭೋಗೇಶ್ವರಧರ
ನಾಗಮನುತನೀಗೆ ಸೌಖ್ಯಮಂ ಶಿವಲಿಂಗಂ ||೧||

ವಸುಧೆಗೆ ತೊಡವೆನಿಸುತೆ ರಂ
ಜಿಸುವೆಲೆಯೂರೆಂಬ ಪೊಳಲೊಳೊಪ್ಪುವನೊರ್ವಂ
ಫಪೊಸತೆನಿಪ ರುದ್ರಪಶುಪತಿ
ವೆಸರಿಂದೆ ಗುಣಪ್ರಯುಕ್ತನೀಶ್ವರಭಕ್ತಂ ||೩೭||

ಅವನೊಂದು ದಿನದೊಳೊರ್ವಂ
ಶಿವನನಿಕೇತನದೊಳೋದೆ ಕಥಿಕಂ ಭುವನ
ಸ್ತವನೀಯ ಶಿವಪುರಾಣಮ
ನವಿಕಳಮತಿಯೊಲ್ದು ಕೇಳುತಿರ್ದಂ ಸಭೆಯೊಳ್ ||೩೮||

ಸುರರೆಲ್ಲ ಕೂಡಿ ಭೋಗೀಶ್ವರಗುಣಮಿಳಿತಂ ಮಂದರಂ ಮಂತಗೋಲಾ
ಗಿರೆ ದುಗ್ಧಾಂಭೋಧಿಯಂ ಮೇಣ್ಕಡೆಯೆ ಕಡೆಯೊಳಂಬೋಧರಶ್ಯಾಮಘೋರಂ
ಗರಳಂ ಪುಟ್ಟಿರ್ದು ಸರ್ವಾಮರರನಳುರ್ದು ಬೆಂಬತ್ತೆ ಕಂಡಂತದಂ ಶಂ
ಕರನಾಗಳ್ನುಂಗಿ ಲೋಕಾವಳಿಯ ಪೊರೆದನೆಂಬುಕ್ತಿಯಂ ಕೇಳ್ದನಾಗಳ್ ||೩೯||

ವಚನ:- ಅಂತದಂ ಕೇಳ್ದು ಬೆದಱಿ ಬೆಬ್ಬಳಿವೋಗಿ -

ಹರ ಹರ ಹರನುಂಡನೆ ತ
ದ್ಗರಳಮನಿದು ನಿಜಮೆ ಪೇಳ್ವುದೆನೆ ಕಥಿಕಂ ಬಿ
ತ್ತರಿಸಿದನಿದು ನಿಜಮಾ ಶಂ
ಕರನುಂಡಂ ಘೋರಗರಳಮಂ ಶ್ರುತಿಸಿದ್ಧಂ ||೪೦||

ಎನೆ ಕೇಳ್ದಕ್ಕಟ ಕೆಟ್ಟೆನೆನ್ನ ಶಿವನೆನ್ನಾತ್ಮೇಶನೋವೋವೊ ಕೆ
ಮ್ಮನೆ ಹಾಲಾಹಲಮಂ ಮರುಳ್ತನದ ಪೆರ್ಚಿಂ ನುಂಗಿದಂ ನುಂಗಿ ಜೀ
ವನಮಂ ಕೊಂಡುಳಿದಪ್ಪನೆಂತೊ ಗತಿಯಾರ್ತನ್ನಂಘ್ರಿಯಂ ನಂಬಿ ನ
ಚ್ಚಿ ನಿತಾಂತಂ ಬಿಡದಿರ್ದವಂಗೆನಗೆನುತ್ತಾಕ್ರಂದನಂ ಗೆಯ್ವುತುಂ ||೪೧||

ಅತಿಸುಕುಮಾರ ಸೋಮಧರನೆತ್ತ ಭಯಂಕರ ಕಾಲಕೂಟಮಂ
ಮತಿ ಮಿಗೆ ಪೀರ್ವುದೆತ್ತ ಸುಧೆಯಂ ತೆಗೆದುಂಬ ಮರಾಳನೆತ್ತ ಮಾ
ರುತಸಖನಾಳ್ದ ದಳ್ಳುರಿಯನೀಂಟುವುದೆತ್ತ ನಿಪೀತಚಂದ್ರಿಕಾ
ಮೃತಸುಚಕೋರನೆತ್ತ ಬಿಸಿಲಂ ಕುಡಿವಂದಮದೆತ್ತ ಲೋಕದೊಳ್||೪೨||

ಗರಳಜ್ವಾಲೆಯ ಧೂಮರಾಜಿ ಮಿಗೆ ಕಣ್ಣೆಂತಿರ್ದುದೋ ಪಾಣಿಪಂ
ಕರುಹಂ ಮೇಣ್ಪಿಡಿದೌಂಕಿದಂದೆನಿತು ತಾಂ ಕಂದಿರ್ದುದೋ ನುಂಗೆ ನು
ಣ್ಗೊರಲುಂ ಜಿಹ್ವೆಯುಮಾ ವಿಷಾಗ್ನಿಯುರಿಯಿಂದೇನಾದುದೋ ನುಂಗೆ ಕುಕ್ಷಿಯೊ
ಳ್ಪರದಿಂ ಪೊಕ್ಕು ಮಡಲ್ತೆನಿತ್ತೆಸಗಿತೋ ಸಂತಾಪಮಂ ದೇವನಾ||೪೩||

ಗರಳಮನುಣ್ಬುದಂ ಬಿಡಿಸದೇಕೆ ನಗಾತ್ಮಜೆ ಸುಮ್ಮನಿರ್ದೆ ರು
ದ್ರರೆ ಗಣವರ್ಯರೇ ವಿಷಮನೀಂಟುವ ವೇಳೆಯೊಳೆತ್ತಲಯ್ಯೊ ಪೋ
ದಿರಿ ಕರಿವಕ್ತ್ರಷಣ್ಮುಖರೆ ತಂದೆ ಬಿಸಂಗೊಳೆ ನೋಡುತಿರ್ಪುದೇ
ಪರಿಹೃತಿಗೆಯ್ಯದಕ್ಕಟ ಪರಾಙ್ಮುಖನಪ್ಪುದೆ ವೀರಭದ್ರ ನೀಂ ||೪೪||

ಸುರರೆಲ್ಲರಳಿದೊಡೇಂ ಪು
ಟ್ಟರೆ ನಿನ್ನನ್ನರ್ಕಳೊಗೆವರೇ ಮೃತಿಗಂಜು
ತ್ತಿರದಯ್ಯೊ ವಿಷಮವಿಷಮಂ
ಪುರಹರ ನೀನುಂಡೆಯೆಂತೊ ಜೀವಿಪೆಯಕಟಾ||೪೫||

ಜರೆ ರೋಗಂ ಮೃತಿ ನಿನ್ನಯ
ಶರೀರಮಂ ಸೋಂಕದಂತೆ ನಿಯತಿಯೊಳಾನೊ
ಲ್ದಿರದೆಸಗಿದಪೆಂ ಪಂಚಾ
ಕ್ಷರಜಪಮಂ ಕೇಳ್ವೆನೆಂತೊ ವಿಷಮೀಂಟಿದುದಂ ||೪೬||

ವಚನ:- ಎಂದು ನೊಂದು ಪಲುಂಬಿ ಪಳಯಿಸುತೆನ್ನಾಳ್ದಂ ಗರಳಂಗೊಂಡನೆಂಬುದನಾಲಿಪುದಱಿಂ
ಮರಣಮೆ ಲೇಸೆಂದು ರುದ್ರಪಶುಪತಿಯಗಾಧಕೂಪದೊಳ್ಬೀಳ್ವನಿತಱೊಳ್ತದ್ಭಕ್ತಿಭಾವಕ್ಕೆ ಶಂಕರಂ
ಪ್ರಮಥರುದ್ರಾದಿಗಣ ದಿವಿಜಗಣಸಮೇತಂ ಪ್ಸನ್ನನಾಗಿ ಕರತಳದಿಂ ಪಿಡಿದು ನೆಗಪಿ ಬೋಳೈಸಿ
ಮುಚ್ಚಿದೆನೊಚ್ಚತಂ  ವರಮಂ ಬೇಡೆನೆ ಭಕ್ತಂ ಪದಾರವಿಂದಕ್ಕೆಱಗಿ ಕರಾಂಜಲಿಗೈದು -

ಆವಾವ ವರಮನೊಲ್ಲೆನು  
ಮಾವರ ನೀಂ ಪೀರ್ದ ವಿಷಮನುಗುಳುಗುಳುಗುಳ್ದಂ
ದೀವ ವರಕೋಟಿಯಂ ನೀಂ
ಭಾವಜಹರ ನೆಟ್ಟನೆನಗೆ ಕೊಟ್ಟವನಲ್ತೆ ||೪೭||

ಫಣಿಧರ ನೀಂ ಬಿಸಮುಂಡುದ
ನಣುಮಾತ್ರಂ ಕೇಳಲಾಱೆನುಗುಳುಗುಳೆಂದಾ
ಗುಣನಿಧಿ ಹರಿವಿಧಿಮುಖ ಸುರ
ಗಣಮಗಿವಿನಮುಸುರೆ ಶಂಕರಂ ನಸುನಗುತೆಂದಂ ||೪೮||

ನಂಜಿನ ಭಯಮೆನಗುಂಟೆಂ
ದಂಜದಿರೆಲೆ ಮಗನೆ ನೋಳ್ಪುದೆನ್ನಯ ಕೊರಲೊಳ್
ರಂಜಿಸುವಂಜನವರ್ಣದ
ಮಂಜಿನ ಸೀರ್ಪನಿವೋಲೆಸೆವ ಹಾಲಾಹಲಮಂ ||೪೯||

ವಚನ:- ಏಗೈದಪುದೆನ್ನನಿದೆಂದಭವಂ ನುಡಿಯಲೊಡಂ ಕೇಳ್ದು ರುದ್ರಪಶುಪತಿ ತದ್ಗರಳ ಸೀಕರಮನಭೀಕ್ಷಿಸಿ

ಇದು ದಿನದಿನದೊಳ್ ಬಳೆ ಬಳೆ
ದುದರಮನೊಳಪುಗದೆ ಮಾಣ್ದಪುದೆ ಪೊಕ್ಕಾಗಳ್
ಪದುಳಮಿರಲೀವುದೇ ನಿ
ನ್ನ ದಯಾನಿಧಿ ಬಿಟ್ಟು ಕಳೆವುದೀ ಗಳಗರಮಂ ||೫೦||
 
ಬಿಡದೊಡೆ ಕೇಳೆನ್ನಸುವಂ
ಬಿಡುವೆಂ ಬಿಡದಂದದೆಂತು ನೋಳ್ಪೆನೊ ನಿನಗ
ಪ್ಪಡವಳಲನೆಂದು ಕೂರಸಿ
ವಿಡಿದಂ ಮೃತಿಗಮರರಳ್ಕೆ ಪೊಗಳೆ ಗಣಂಗಳ್||೫೧||

ವಚನ:- ಅಂತು ತನ್ನಂ ಪರಿಚ್ಛೇದಂಗೆಯ್ಯಲುಜ್ಜುಗಿಸಿದ ಭಕ್ತವರನ ನೇಹದ ಬಗೆಗೆ ಮಚ್ಚಿ
ಮದನಹರಂ ಕಾರುಣ್ಯದಿನೀಕ್ಷಿಸುತ್ತಮಿವಂ ವಿಷಮನುಗುಳದಿರೆ ಸಾಯದಿರಂ ವಿಷಮ
ನುಗುಳೆ ಭುವನಂ ಬೇಯದಿರದೇಗೆಯ್ವೆನೆಂದು ಭಕ್ತಿಹಿತಭುವನಹಿತ ಕಾರ್ಯದ್ವಂದ್ವ
ದೊಳಾಂದೋಳಿಪ ಮನಮನೊಂದೆಡೆಗೊಂದಿಸಿ ನೆನೆದುಭಯ ಹಿತಾರ್ಥಮಾಗಿ
ಶಿವನಿಂತೆಂದಂ.

ಪ್ರಮಥವರರಾಣೆ ನಿನ್ನಾ
ಣೆ ಮಗನೆ ಗಳವಿಷದಿನಳಿನಳಿಯೆನಳಿಯೆಂ ದಿಟಮೌ
ರ್ವಮಹಾಶಿಖಿ ನಂದಿದಪುದೆ
ಹಿಮಕಣದಿಂದೆನುತ್ತೆ ಶಂಭು ನಂಬುಗೆಗೊಟ್ಟಂ ||೫೨||

ವಚನ:- ಅಂತು ನಂಬುಗೆಯಿತ್ತಿದುಮಂ ನಂಬದೊಡೆನ್ನ ಬಲದೊಡೆಯನೇಱಿ ಕೊರಲಂ
ನಿಚ್ಚಂ ನಿರೀಕ್ಷಿಸುತ್ತಿರೆಂದು ನುಡಿದೊಡಂಬಡಿಸುತಾತನನಂಕಾಲಂಕಾರನಂ ಶಂಕರಂ ಮಾಡೆ -

ಕರವಾಲನುರ್ಚಿ ಪಿಡಿದೀ
ಶ್ವರನಂಕಮನೇಱಿ ಕೊರಲನೀಕ್ಷಿಸುತುತ್ಕಂ
ಧರ ರುದ್ರಪಶುಪನಿರ್ಪಂ
ಗರಳಂ ಮಿಡುಕಿದೊಡೆ ಮಡಿವೆನೆಂದತಿ ಮುಗ್ಧಂ ||೫೩||

ವರರುದ್ರಪಶುಪತಿಯ ಸ
ಚ್ಚರಿತಮನಿಂತೊರೆದು ಚನ್ನಬಸವಂಗೆ ಗುಣಾ
ಕರ ಬಸವಂ ಮಗುಳ್ದೊರ್ವನ
ಶರಣನ ಸತ್ಕಥೆಯನೊರೆವೆನೆಂದಿಂತೆಂದಂ ||೫೪||

ತಿರುನೀಲಕ್ಕನ ಕಥೆ.

ತಿರುನೀಲಕ್ಕನೆನಿಪ್ಪೀ
ಶ್ವರಭಕ್ತಂ ದ್ರವಿಡದೇಶದೊಳ್ನೆಲಸಿರ್ಪಂ
ಪರಮ ಗುಣಾನ್ವಿತನಾತನ
ತರುಣಿ ಸುಶೀಲಾಭಿಧಾನದಿಂ ಕಂಗೊಳಿಪಳ್ ||೫೫||

ಪರಮಾನಂದದಿನೊಂದು ವಾಸರದೊಳಾ ಭಕ್ತಂ ಶಿವಾಗಾರದೊ
ಳ್ಪರ ಲಿಂಗಾರ್ಚನಮಂ ನೆಗಳ್ಚುತಿರೆ ತಲ್ಲಿಂಗಾಗ್ರದೊಳ್ಪತ್ತಿ ಮೇ
ಣ್ಪರಿತರ್ಪೊಂದು ಸೆಲಂದಿಯಂ ಜವದಿನಾಗಳ್ಕಂಡು ತತ್ಕಾಂತೆ ಬಾ
ಯೆರಲಿಂ ತೂಂತಿಱಿದಳ್ ಭಯಾಕುಲಿತೆ ಗಂಡಂ ಕಂಡನಾ ಕಜ್ಜಮಂ ||೫೬||   

ಎಲೆ ಎಲೆ ದೋಷದೂಷಿತೆ ದುರಾತ್ಮಿಕೆ ಲಿಂಗದ ಪಾವನಾಂಗಮಂ
ತೊಲಗದೆ ಬಾಯುಗುಳ್ ಸಿಡಿಯೆ ತೂಂತಿಱಿದಪ್ಪೆ ವರಾಕಿ ಪಾಱೆನು
ತ್ತಲೆದುಲಿದಾಕೆಯಂ ನಿಳಯದಿಂ ಪೊಱಗಿಕ್ಕಿ ನಿರೀಕ್ಷಿಪಾಗಳಾ
ಲಲನೆ ಬಿಗುರ್ತು ತೂಂತಿಱಿಯದಿರ್ದ ತದೀಯ ಕಳೇವರಾರ್ಧದೊಳ್ ||೫೭||

ಕರ್ಪೂರದ ಮಣಿಗಣಮೆನೆ
ತೋರ್ಪ ನವಸ್ಫೋಟಕಂಗಳಿರೆ ಕಾಣುತ್ತಂ
ಸರ್ಪಧರಭಕ್ತನುತ್ಸವ
ಮಿರ್ಪುಡುಗೆ ವಿಷಾದದಿಂದೆ ಬಿಸುಸುಯ್ದಾಗಳ್ ||೫೮||

ತೂಂತಿಱಿದು ಹಿತಮನೆಸಗಿದ
ಕಾಂತೆಯ ಕೆಡೆನೂಂಕಿ ಪೊಲ್ಲವೆಸಗಿದೆನೆಂದಾ
ಚಿಂತಾಭರಿತಂ ಭರದಿಂ
ತಾಂ ತರುಣಿಯ ಪೊರೆಗೆ ಪೊಡಮಡುತೆಂದಂ ||೫೯||

ಪರಮ ಶಿವಭಕ್ತೆ ನಿನ್ನಯ
ಪರಿಯಂ ಮುನ್ನಱಿಯದಕಟ ಜಡಿದೆಂ ಬಡಿದೆಂ
ತರಳಾಕ್ಷಿ ನಿನಗೆ ತಪ್ಪಂ
ಕರಮೆಸಗಿದೆನೆನ್ನವೋಲ್ದುರಾತ್ಮಕರೊಳರೇ ||೬೦||

ಎನೆ ಕೇಳ್ದಾತನ ಕಾಂತೆ ನೊಂದು ಮನದೊಳ್ ಮದ್ದೇವದೇವಂಗೆ ನೋ
ವೆನಿತಾಯ್ತೋ ಪುಗುಳಿಂದೆ ಕೆಟ್ಟೆನಿನಿಯಂ ಕೋಪಾತುರಂ ಬೈದೊಡಂ
ಮುನಿಸಿಂ ಪೊಯ್ದೊಡಮೋವೊ ತೂಂತಿಱಿಯದಾನೇಕಿಲ್ಲಗೇಳ್ತಂದೆನೆಂ
ದು ನಿತಾಂತಂ ಪೊನಲಾಗೆ ಕಣ್ಬನಿಯಳುತ್ತೈತಂದು ತಲ್ಲಿಂಗದಾ ||೬೨||

ಕೆಲದೊಳ್ನಿಂದು ನಿರೀಕ್ಷಿಸುತ್ತೆ ನಿಬಿಡ ಸ್ಫೋಟಂಗಳಂ ಕಂಡು ಕಾ
ದಲನುಂ ತಾನುಮಮಂದ ಶೋಕರಸದೊಳ್ ತೇಂಕಾಡುತುಂ ಪುಷ್ಪಕೋ
ಮಲ ಲಿಂಗಾಂಗದೊಳಾಯ್ತು ಬಲ್ಪುಗುಳಿದೆನ್ನಿಂ ಮುನ್ನಮೇಗೈವೆನೆಂ
ದು ಲಸತ್ ಖಡ್ಗದೆ ತನ್ನ ಗೋಣ್ಕೊಱೆಯೆ ಕೂರ್ಪಿಂ ಮಚ್ಚಿದಂ ಶಂಕರಂ ||೬೩||

ವಚನ:- ಅಂತುಮಾಮಹೇಶ್ವರಂ ದಿವಿಜಗಣಗಣೇಂದ್ರ ಸಹಿತಂ ತನ್ಮುಗ್ಧಭಕ್ತಿಗೊಲವಿಂ
ಪ್ರತ್ಯಕ್ಷಮಾಗಿ ವರವನಿತ್ತಪೆಂ ಬೇಡಿಮೆನೆ ಜಾಯಾಪತಿಗಳ್ ಸಾಷ್ಟಾಂಗಮೆಱಗಿ
ಬದ್ಧಾಂಜಲಿಗಳಾಗಿ

ಇನ್ನೆಮಗೆ ಬೇಱೆ ವರಮೇಂ
ನಿನ್ನಯ ತನು ಸುಖದೊಳಿರೆ ನಿರೀಕ್ಷಿಪುದೆ ವರಂ
ಭಿನ್ನ ವರಂಗಳನರ್ಥಿಸೆ
ನಿನ್ನಂಘ್ರಿಯನೊಲ್ಲದಿರ್ದರಾಗೆವೆ ನಿಜದಿಂ ||೬೪||

ಭವ ಭವದಂಘ್ರಿಯಸ್ಮರಣಮಿ
ದವಿರತಮಿರ್ಕೆಮಗೆ ನಿನ್ನ ಗಣಮುಂ ನೀನುಂ
ಪ್ರವಿತತ ಸುಖಮಿರ್ಪುದು ಬೇ
ಳ್ಪ ವರಂ ಬೇಱಿಲ್ಲ ಬಾಲಚಂದ್ರಾಭರಣಾ ||೬೫||

ವಚನ:- ಎಂದು ಬಿನ್ನೈಸಲೊಡನೆ

ಹರಿವಿರಿಂಚಿಪುರಂದರಾದಿಗಳಂದು ತನ್ನಿಜ ಭಕ್ತಿಗ
ಚ್ಚರಿಯನಾನೆ ಗಣಾಳಿ ಸಂತಸಮೊಂದಿ ಕೀರ್ತಿಸೆ ಸತ್ಕೃಪಾ
ಶರಧಿಯಲ್ಲಿ ಮುಳುಂಗಸುತ್ತವರಂ ಮಹಾನಿಜಮೋಕ್ಷ ಭಾ
ಸುರ ಸುಖಸ್ಥಿತಿಯನಿತ್ತು ಮನ್ನಿಸಿದಂ ಮನೋಭವಮರ್ದನಂ ||೬೬||

ಕೋಳೂರ ಕೊಡಗೂಸಿನ ಕಥೆ.

ವಿಳಸದ್ಬಾಹ್ಯವನೋಪರಮ್ಯ ಪರಿಖಾಪೂರ್ಣಾಂಬುಜಾತಾಂಬುಜೋ
ತ್ಪಳ ಕಲ್ಹಾರಸುಗಂಧಿ ಚುಂಬಿತ ನಭಶ್ಚಂದ್ರಾಶ್ಮಸಾಲಂ ಸಮು
ಜ್ವಳ ರತ್ನಾಲಯ ಹರ್ಮ್ಯ ಮಂಟಪ ಶಿವಾಗಾರಾಮಿತ ಶ್ರೀಯುತಂ
ಕಳೆವೆತ್ತಗ್ಗಳಮಾಗಿ ರಂಜಿಪುದು ಕೋಳೂರೆಂಬ ಸತ್ಪತ್ತನಂ ||೬೭||

ಆ ಪಟ್ಟಣದೊಳಗಿರ್ಪಂ
ಗೋಪಧ್ವಜಪಾದಪೂಜಕಂ ಮೃದುಮಧುರಾ
ಳಾಪಂ ಸದ್ಗುಣನಿವಹ ಕ
ಳಾಪಂ ಶಿವದೇವನೆಂಬ ಭಕ್ತನದೊರ್ವಂ ||೬೮||

ಅವನ ತನುಜಾತೆ ಸೌಂದರಿ
ಕುವಲಯದಳನಯನೆ ಕೋಮಲಾಂಗಿ ಸುಧಾಮಾ
ರ್ದವವಿನಯವಾಣಿ ಮೃದುಹಸಿ
ತವನೇರುಹವದನೆ ಕನ್ಯೆ ಕಂಗೊಳಿಸಿರ್ಪಳ್ ||೬೯||

ವಚನ:- ಆ ಶಿವದೇವನೊಂದು ದಿನಂ ದೇವಕಾರ್ಯನಿಮಿತ್ತಂ ಗೃಹಿಣಿವೆರಸು ನೆರೆಯೂರ್ಗೆ
ತೆರಳಲುಜ್ಜುಗಿಸಿ ತನೂಜೆಯಂ ಕರೆದು ಮೈದಡಪಿ ಗಲ್ಲಂಬಿಡಿದು ಮುದ್ದಿಸಿ ನಿಡುನೇಹದಿಂ
ನಿರೀಕ್ಷಿಸಿ ಮನೆಗಾಪಿಂಗಿರಿಸಲೆಂದಿಂತೆಂದಂ -

ಮಗಳೆ ಮನೋಜ್ಞೆ ಮಾತೆ ಮಱೆದೊರ್ಮೆಯುಮಾಡದಿರಕ್ಕ ಮಕ್ಕಳೊಳ್
ಪೊಗದಿರು ಪಿತ್ತಲೋವರಿಯನೊರ್ವಳೆ ಪೋಗದಿರೆತ್ತಲುಂ ಮನಂ
ಬುಗುವ ದುಕೂಲಮಂ ಮಿಸುನಿಬೊಂಬೆಯನೊಪ್ಪುವ ಭೂಷಣಂಗಳಂ
ಬಗೆಮಿಗೆ ತಂದು ನಾಳೆ ನಿನಗಿತ್ತಪೆನಾಂ ಮನೆಗಾದಿರೊಪ್ಪದಿ||೭೦||

ಶಿವನಿಳಯಕ್ಕೆಯ್ದಿ ತನೂ
ಭವೆ ನೀಂ ಪ್ರಸ್ಥೈಕಮಿತದ ಕಪಿಲೆಯ ಪಾಲಂ
ಶಿವಲಿಂಗಕೆ ಪೊಳ್ತಱಿದೊ
ಪ್ಪುವ ತೆಱದಿಂ ಸಲಿಸಿ ಸಲಿಪುದೆನ್ನೀ ವ್ರತಮಂ ||೭೧||

ವಚನ:- ಎಂದು ಮಗಳ್ಗೆ ಬುದ್ಧಿವೇಳ್ದು ನಿಜರಮಣಿವೆರಸಿ ಬೇಱೂರ್ಗವಂ ಪೋದಾಗಳ್
ಪರಿಮಳೋದಕದಿಂ ಜಳಕಂಬೊಕ್ಕು ದಣಿಂಬಮನುಟ್ಟು ನೊಸಲೊಳ್ ಭಸಿತಮಂ ತಳೆದು
ಸಿಂಗರಿಸುತಂ ಶಿವನಿಯಮಿತಕಪಿಲಾಕ್ಷೀರಮಂ ಕಮ್ಮಗಿನಿದಪ್ಪಂತೆ ಕಾಸಿ ಬಳ್ಳದಿನಳೆದು
ಪೊಯ್ದು ಪೊಂಬಟ್ಟಲ್ದೀವ ಧವಳ ವಸ್ತ್ರಮನಿರ್ಮಡಿಕೆಯಿಂ ಮುಸುಂಕಿ ಸಡಗರದಿನೇಳ್ತಂದು
ಶಿವಾಲಯಮಂ ಪೊಕ್ಕು ಕಲ್ಲಿನಾಥನಂ ಕಂಡೆರಗಿ ಮುಂದೆ ಪಾಲ್ಬಟ್ಟಲನಿಟ್ಟು ದೇವ
ಪಸಿದೆ ಪಾಲ್ಗುಡಿವುದೆಂದುಸುರ್ದು ಕೊಡಗೂಸು ಕಂಬಮಂ ಮಱೆಗೊಂಡು ನಿಂದಿರ್ದಿನಿ
ಸಾನುಂ ಬೇಗದಿಂ ಮರಳ್ದು ನೋಳ್ಪಿನಮಾ ಪಾಲ್ಬಟ್ಟಲಿರ್ದಂತಿರೆ ಪೆಳರ್ದು ಮನಂ ನೊಂದು
ಮಱುಗಿ -

ದಡದಡಿಪೆರ್ದೆ ಬಿಸಿ ಮಸಗುವ
ನಿಡುಸುಯ್ ಕಂಪಿಪ ಕರಂಗಳಿರ್ಪೋಡಿದ ಬಾ
ಯ್ಗುಡಗುಡನೆ ಸುರಿವ ಕಣ್ಬನಿ
ಯೊಡನಿರೆ ಕೊಡಗೂಸು ನೋಡಿ ಲಿಂಗಮನಾಗಳ್ ||೭೨||

ಏಂ ಕಾರಣಮೀ ಪಾಲಂ
ನೀಂ ಕುಡಿಯದೆ ಸುಮ್ಮನಿರ್ಪೆಯಕಟಕಟೆನಗಾ
ತಂಕಮನಾಗಿಪುದುಚಿತಮೆ
ಶಂಕರ ನೀಂ ಪೇಳ್ವುದೆಂದು ಮಗುಳ್ದಿಂತೆಂದಳ್ ||೭೩||

ಪಸಿವೇನಾಗದೊ ದೇವ ಕೇಳ್ನಿನಗೆ ಪಾಲೇಂ ಕಾಯದೋ ಪೊತ್ತಿತೋ
ಬಿಸುಪಾಱಿರ್ದುದೊ ಕಮ್ಮನಾಗದೊ ತನಿತ್ತಿಂಪೇಱದೋ ಕಣ್ಗೆ ರಂ
ಜಿಸದೋ ಮೇಣ್ ಪೊಗೆ ಸುತ್ತಿದತ್ತೊ ಪೆಱರಿಂ ಕಣ್ಣೆಂಜಲಾದತ್ತೊ ಬ
ಲ್ಬಿಸಿಯಾಗಿರ್ದುದೊ ಮೀಸಲೋಸರಿಸಿತೋ ಪೇಳಿಂತಿದಿರ್ಪಂದಮಂ ||೭೪||

ಮನಮೆಳಸಿ ನೋಡಿದೆನೆ ನು
ಣ್ಗೆನೆಯಂ ಬೇರ್ಕೆಯ್ದು ತಂದೆನೇ ಪಾಲನಿದಂ
ಮನೆಯಲ್ಲಿ ತಡಂಗೆಯ್ದೆನೆ
ನೆನೆದೆನೆ ಪೆಱತೊಂದನೇಕೆ ನುಡಿಯೇ ಪುರಾರಿ ||೭೫||

ಬಿಸುಪಾಱಿರ್ದೊಡೆ ಸವಿಸಮ
ನಿಸುಗುಮೆ ಬಗೆದಂದು ಜವದಿನೀಂಟಯ್ಯ ಸುಧಾ
ರಸಮಂ ನೀಂ ಬಯಸಿದುದಂ
ಬೆಸಸೀಗಳೆ ಮನೆಗೆ ಪೋಗಿ ತಂದಪೆನಭವಾ||೭೬||

ಪೊಸ ಸರ್ಕರೆಯಂ ನವಮಧು
ರಸಮಂ ನಱುನೆಯ್ಯನೆಸೆವ ಕದಳೀಫಲಮಂ
ರಸನೆಯೆಳಸಿದುದನೆನ್ನೊ
ಳ್ಬೆಸಸೀಗಳೆ ನಿನಗೆ ತಂದಪೆಂ ಶಶಿಮೌಳೀ ||೭೭||

ಪುರಿಗಡುಬು ತಱಗು ಚಕ್ಕುಲಿ
ಕರಂಜಿಗಾಯತಿರಸಂ ಚಿಗುಳಿ ಲಡ್ಡುಗೆ ಸ
ಕ್ಕರೆ ಪೇಣೆಯೊಳವು ಮನ್ಮಂ
ದಿರದೊಳ್ನೀಂ ಬಯಸೆ ಪೋಗಿ ತಂದಪೆನೀಗಳ್ ||೭೮||

ಪಾಲೊಡನಾರೋಗಿಪೆನೆನೆ
ಲೀಲೆಯೊಳಾಂ ಪೋಗಿ ತರ್ಪೆನೋಗರಮನಿವ
ಳ್ಬಾಲಕಿ ಪುಸಿನುಡಿದಪಳೆಂ
ದಾಲೋಚಿಸದಿರು ಪರೀಕ್ಷಿಸೆನ್ನಯ ಗುಣಮಂ ||೭೯||

ಎನ್ನ ಮಾತನುಪೇಕ್ಷೆಗೆಯ್ಯದೆ ಪಾಲನೀಂಟಿದೊಡಯ್ಯ ಕೇ
ಳ್ನಿನ್ನನಾಂ ಕರೆದೊಯ್ವೆನೊಪ್ಪುವ ವೀರಭದ್ರನ ತೇರ್ಗೆ ಸಂ
ಪನ್ನಮದ್ಗುರು ಪರ್ವಕೆನ್ನಯ ತಂದೆ ನಾಳೆನಗೀವ ರ
ತ್ನೋನ್ನತಾಭರಣಂಗಳಂ ನಿನಗೀವೆನಿಂದುಕಳಾಧರಾ ||೮೦||

ವಚನ:- ಎಂದಡಿಗೆಱಗಿ ಮಱುಗಿ ಬಾಯಳಿದು ಪಲವಂದದಿನೊಡಂಬಡಿಸಿದೊಡಂ ತುಟಿ
ಮಿಡುಕದುಗ್ರಂ ಸುಮ್ಮನಿರೆ ಮನಂನೊಂದು ತಲ್ಲಣಿಸಿ ಮಲ್ಲಳಿಗೊಂಡು -

ನುಡಿಯಂ ಪಾಲ್ಗುಡಿಯಂ ಮಹೇಶನಕಟಿನ್ನೇಗೆಯ್ವೆನೆಂದಳ್ತು ಬಾ
ಯ್ವಿಡುತುಂ ಸುಱ್ಱನೆ ಸುಯ್ವುತುಂ ಸುಗಿವುತುಂ ಬೇಳಾಗುತುಂ ಬೆರ್ಚಿ ಸೈ
ಗೆಡೆಯುತ್ತುಂ ಬಿಡದೆಳ್ದು ಡೆಂಡಣಿಸುತುಂ ಬಾಯಾಱುತುಂ ಬಳ್ಕುತುಂ
ಸೆಡೆವುತ್ತುಂ ಕೊಡಗೂಸು ಕೋಟಲಗೆ ಪಕ್ಕಾಗಿರ್ದಳಾ ವೇಳೆಯೊಳ್ ||೮೧||

ವಚನ|| ಇಂತು ಪಿರಿದು ವಿಷಾದಂಬಡೆದು ಪಾಲ್ಗುಡಿಯದ ನಿನಗೆನ್ನ ಹರಣಮಂ ಸಮರ್ಪಿ
ಸುವೆನೆಂದು ಮರಣೋದ್ಯತೆಯಾಗಿ ಮುಂತಣ ಶಿಲಾಸ್ತಂಭಮಂ ಶಿರಮೊಡ್ಡಿ ಘಳಿಲನೆ
ಪಾಯಲೊಡನೆ

ನಂದನೆ ನೊಂದಪಳೆಂದೊ
ಲ್ದಿಂದುಧರಂ ಪಿಡಿದು ನೆಗಪಿ ನಿಜಕರದಿನವ
ಳ್ತಂದಣ್ಣೆವಾಲನೀಂಟಿದ
ನಂದಂ ಮಿಗೆ ಭಕಕ್ತವತ್ಸಲಂ ಬಳಿಕಾಗಳ್ ||೮೨||

ಎಳೆನಗೆಯುಣ್ಮೆ ಮುದ್ದುಮೊಗದೊಳ್ಸುಧೆಯಿಂದಭಿಷೇಕಿಪಂತೆ ಕಂ
ಬೆಳಗಡರ್ದೊಪ್ಪೆ ಲಿಂಗತನುವಂ ಕೊಡಗೂಸು ಮನೋನುರಾಗ ಸ
ಮ್ಮಿಳಿತ ವಿನೋದದಿಂ ಪಸುಳೆಯಾನೆನುತುಂ ಸುಧೆಯೀಂಟಲೊಲ್ಲದು
ಮ್ಮಳಮನೊಡರ್ಚಿ ಕಾಡಿದೆ ಗಡೆಂದೆನೆ ನಕ್ಕನಹೀಂದ್ರಭೂಷಣಂ ||೮೩||

ಜನಕಂ ಬಂದೊಡೆ ಪೇಳ್ದಪೆ
ನಿನಿತೆಲ್ಲಮನಯ್ಯ ಮಱೆಯದಿರ್ಬಳಿಕೆನಗಂ
ನಿನಗಂ ಸಂವಾದಮದುಂ
ಟೆನುತುಂ ಪೊಡಮಟ್ಟುನಗುತೆ ಮನೆಗೇಳ್ತಂದಳ್ ||೮೪||

ಬಾಲೆಯ ನುಣ್ಣುಡಿ ಬಟ್ಟಲ
ಪಾಲಿಂದಿನಿದಾಗೆ ಕಿವಿಗೆ ಪಾಲ್ಗುಡಿಯದೆ ಮು
ನ್ನಾ ಲಲನೆಯ ಮುಗ್ದೋಕ್ತಿಯ
ನಾಲಿಸಿದೆಂ ಮುದದಿನೆಂದನುಮೆಗೆ ಮಹೇಶಂ ||೮೫||

ಪಾಲಂ ತಂದನುದಿನಮಾ
ಬಾಲೆ ಪೊದಳ್ದೀಂಟೆ ಗಿರೀಶನೆಱೆದೈದುಗುಮಾ
ತ್ಮಾಲಯಕೆ ಮುಗ್ಧಭಕ್ತಿಸ
ಮಾಲಂಬಿತ ಚಿತ್ತೆ ಮತ್ತಮಿಂತೊಂದು ದಿನಂ ||೮೬||

ಬೇಱೂರ್ಗೆ ಪೋದ ಪಿತನಾ
ದಾರಿಯೊಳೈತರುತೆ ಬಱಿಯ ಬಟ್ಟಲ್ವಿಡಿದಂ
ದೋರಂತೆ ಬರ್ಪ ಸುತೆಯಂ
ಸಾರೆಯೊಳೀಕ್ಷಿಸುತೆ ನಾಡೆ ಕೆರಳ್ದಿಂತೆಂದಂ ||೮೭||

ಎಲೆ ತರುವಲಿ ಬಟ್ಟಲ ಪಾಲ ಪಾ
ಲ್ನೆಲಕೊಕ್ಕುದೊನೀನೆ ಪೀರ್ದೆಯೋ ಪೇಳಿದನು
ಕ್ಕಲಿಸದೊಡನಾಡಿಗಳ್ಗೇಂ
ನಲಿದೆಱೆದೆಯೊ ಬಱಿಯ ಬಟ್ಟಲಿರ್ದುದೆ ಕರದೊಳ್ ||೮೮||

ವಚನ:-  ಎಂದಾಗ್ರಹಿಸಿ ಜನಕಂ ನುಡಿಯೆ ಬಿಗುರ್ತು ನಿಂದು -

ನೀಂ ಬೆಸಸಿದಂತೆ ಬಟ್ಟ
ಲ್ದುಂಬಿ ಸುಧಾರಸಮನೊಯ್ದು ಮುಂದಿಡೆ ಸವಿದಂ
ತ್ರ್ಯಂಬಕನೆಲೆ ಜನಕ ಬಳಿ
ಕ್ಕಂ ಬಱುವಟ್ಟಲನೆ ಕೊಂಡು ಬಂದಪೆನೀಗಳ್ ||೮೯||

ಅನುದಿಮಿಂತಾರೋಗಿಪ
ನಿನಿವಾಲಂ ಶೂಲಿ ನನ್ನಿ ತೊದಳಲ್ಲೆನೆ ತ
ಜ್ಜನಕಂ ಪಾಲಂ ಶಿವನು
ಣ್ಬನೆ ಪುಸಿ ಪುಸಿಯೆಂದು ತನ್ನೊಳಂದಿಂತೆಂದಂ ||೯೦||

ಅತಿವೃದ್ಧಭಕ್ತತತಿ ಸಂ
ತತಮುಂ ಪ್ರಾರ್ಥಿಸಿದೊಡುಣ್ಬುದದು ದುರ್ಲಭಮೀ
ಸಿತಿಗಳನೇನುಮನಱಿಯದ
ಮತಿರಹಿತೆಯ ಮಾತುಗೇಳ್ದು ಪಾಲ್ಗುಡಿದಪನೇ||೯೧||

ವಚನ:- ಎಂದು ಬಗೆಯುತ್ತುಂ ಶಿವಂಗಿವಳ್ಪಾಲ್ಗುಡಿಪುದಂ ನಾಳೆ ನೋಳ್ಪೆನೆಂದು ನಿರ್ಧರಿಸಿ
ಮಗಳ್ಗೂಡಿ ನಿಜಗೃಹಮಂಬೊಕ್ಕಿರ್ದು ಮಱುದಿನದುದಯದೊಳೆಂದಿನಂತಳೆದ ಪಾಲಂ
ಪೊಂಬಟ್ಟಲ್ದೀವಿ ತಳೆದ ನಂದನೆಯಂ ಮುಂದಿಟ್ಟೇಳ್ತಂದು ಶಿವದೇವಂ ಶಿವನಿದಿರೊಳ್ನಿಂದು
ನಿರೀಕ್ಷಿಸುತ್ತಿರೆ ಕೊಡಗೂಸು ಮೃಡಂಗೆಱಗಿ ಪಾಲಂ ಮುಂದಿಟ್ಟು ಕೈಮುಗಿದಾರೋಗಿಪುದೆಂದು
ಬಿನ್ನಪಂಗೆಯ್ಯೆ-

ಹರನಾ ಭಕ್ತೆಯ ಮಹಿಮೆಯ
ಪರಿಯಂ ಧರೆಗಱುಪಲೆಂದು ಪಾಲ್ಗುಡಿಯದೆ ಸೈ
ತಿರೆ ಸುರ್ಕಿ ಸುಗಿದಳಾಗ
ಳ್ತರಳೆ ಪಿತಂ ಕಂಡು ಕಾಯ್ದು ಸುತೆಗಿಂತೆಂದಂ ||೯೨||

ಕುಡಿಕುಡಿದು ನೀನೆ ಸುಧೆಯಂ
ಮೃಡನೀಂಟುಗುಮೆಂದು ನುಡಿದೆ ಪುಸಿಯಂ ನಿನ್ನಂ
ಕಡಿದಿಕ್ಕದೆ ಮಾಣ್ಬೆನೆ ಕೇ
ಳ್ಕಡುಪಾತಕಿಯೆಂದು ತಂದೆಯಱೆಯಟ್ಟಲೊಡಂ ||೯೩||

ಹಾ ಮಸೇಶ್ವರಾ ಹಾ ಮದೀಶ್ವರಾ ನೀನೆ ಸದ್ಗತಿ ಕಾವುದೆಂ
ದಾ ಮಹಾಭಯಕಂಪಿತಾಂಗಿಯೊಱಲ್ಚಿ ಬಾಯ್ವಿಡೆ ಬೇಗದಿಂ
ಸೋಮಶೇಖರನಂಜದಿರ್ತನುಜಾತೆಯೆಂದಭಯಂಗುಡು
ತ್ತಾ ಮನೋಜ್ಞಸುಧಾರಸಂಗುಡಿದಂ ಕೃಪಾನಿಧಿ ಶಂಕರಂ ||೯೪||

ಆ ಕೊಡಗೂಸಂ ಕರುಣಾ
ಲೊಕದಿ ನಡೆನೋಡಿ ತೆಗೆದು ಬಿಗಿದಪ್ಪುತೆ ಗೌ
ರೀಕಾಂತಂ ತನ್ನೊಡಲೊ
ಳ್ಜೋಕೆಯಿನೊಳಪೋಗಿಸೆ ಪೊಗುವ ಮಗಳಂ ಜನಕನ ||೯೫||

ಕಂಡೆಲೆಲೆ ಪೋಗದಿರೆನುತುಂ
ಚಂಡಿಕೆವಿಡಿದೆಳೆಯೆ ಶಿಖಿಯೆ ಪೊಱಗುಳಿದಿರೆ ಭೂ
ಮಂಡಲವಚ್ಚಿರಿವಡೆ ಮುಂ
ಕೊಂಡಾ ಕೊಡಗೂಸು ಲಿಂಗದೊಳಪೊಕ್ಕಿರ್ದಳ್ ||೯೬||

ಅಮರ್ದಮಳ ಮುಗ್ಧಭಕ್ತಿಯೊ
ಳಮರ್ದಂ ತನಗಿತ್ತ ಮುಗ್ಧಭಕ್ತೆಗೆ ಸೊಗಯಿ
ಪ್ಪಮರ್ದನೊಸೆದಿತ್ತನಘಹರ
ನಮರ್ದುಣಿಗಳ್ಪೊಗಳೆ ನಲಿಯೆ ಶರಣಸಮೂಹಂ ||೯೭||

ಷಣ್ಮಾಸಕೊರ್ಮೆ ಲಿಂಗದೊ
ಳುಣ್ಮಿದ ಕುಂತಳಮನೀಗಳಂ ಕತ್ತರಿಪ
ರ್ಪೆಣ್ಮಣಿಗಿಂತೆಸಗಿದನುಮೆ
ಯಾಣ್ಮಂ ತಾನಿದು ಸಮಸ್ತ ಭುವನಪ್ರಥಿತಂ ||೯೮||

ಕೃತಜ್ಞತೆಗಳು,
ಸಂಪಾದಕರು.
ಡಾ. ಆರ್. ಸಿ. ಹಿರೇಮಠ, ಎಂ. ಎ., ಪಿ. ಹೆಚ್. ಡಿ.,
ಕನ್ನಡ ಪ್ರಾಧ್ಯಾಪಕರು,
ಕರ್ನಾಟಕ ವಿಶ್ವವಿದ್ಯಾಲಯ,
ಧಾರವಾಡ.









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ