ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮಾರ್ಚ್ 18, 2018

ರತ್ನಾಕರವರ್ಣಿ ಭರತೇಶವೈಭವ

ರತ್ನಾಕರವರ್ಣಿ ಭರತೇಶವೈಭವ

ಭರತೇಶವೈಭವವನ್ನು ಬರೆದ ಕವಿ ರತ್ನಾಕರವರ್ಣಿ. ಈತನು ಅಪರಾಜಿತೇಶ್ವರಶತಕ, ತ್ರಿಲೋಕಶತಕ,ರತ್ನಾಕರಾಧೀಶ್ವರಶತಕ ಎಂಬ ಶತಕತ್ರಯವನ್ನೂ,’ ಎರಡುಸಾವಿರ ಗ್ರಂಥದಷ್ಟು ಅದ್ಯಾತ್ಮಗೀತೆ’ ಗಳನ್ನೂ
ರಚಿಸಿದ್ದಾನೆ. ಕವಿಗೆ ರತ್ನಾಕರವರ್ಣಿ, ರತ್ನಾಕರಸಿದ್ಧ, ರತ್ನಾಕರ ಅಣ್ಣ ಎಂಬನಾಮಗಳಿದ್ದರೂ ರತ್ನಾಕರಸಿದ್ಧ
ಎಂಬುದು ಆತನ ಮೆಚ್ಚಿಗೆಯ ಹೆಸರು.
ಈತನಿಗೆ ಶ್ರೀಶುಚಿದೀಕ್ಷೆಯನ್ನು ಕೊಟ್ಟವನು ‘ದೇಶಿಗಣಾಗ್ರಣಿ ಚಾರುಕೀರ್ತ್ಯಾಚಾರ್ಯ ‘. ಮೋಕ್ಷಾಗ್ರಗುರು
ಹಂಸನಾಥ. ಈತನ ಆಜ್ಞೆಯ ಮೇರೆಗೆ ಆತ್ಮಲೀಲಾರ್ಥವಾಗಿ ‘ ಭರತೇಶವೈಭವವೆಂಬ ಕಾವ್ಯವನಿದ ನೊರೆ ‘ದದ್ದು.
ರತ್ನಾಕರನು ಸೂರ್ಯವಂಶದ ರಾಜಕುಲದವನು. ದೇವರಾಜನೆಂಬುವನ ಮಗ. ಈತನ ಜನ್ಮಸ್ಥಳ ಮೂಡಬಿದಿರೆ.
ರತ್ನಾಕರನ ಧರ್ಮಪ್ರತಿಪಾದನೆಯಲ್ಲಿ ಆತನ ತತ್ವಜಿಜ್ಞಾಸೆಯಲ್ಲಿ ಅಲೌಕಿಕವಾದ ಔದಾರ್ಯವಿದೆ. ಬಹುಶಃ ಮತ್ತಾವ
ಜೈನಕವಿಯಲ್ಲಿಯೂ ಕಾಣಬರದ ಸ್ವತಂತ್ರ ಮನೋವೃತ್ತಿಯಿದೆ. ಮನಗಂಡುದನ್ನು ನಿರ್ದಾಕ್ಷಿಣ್ಯವಾಗಿ ನುಡಿಯಬಲ್ಲ
ಕೆಚ್ಚಿದೆ. ತನು, ರೂಪ, ವಿಭವ, ಯೌವನ, ಧನ, ಸೌಭಾಗ್ಯ, ಆಯುರಾದಿಗಳ್ ಮಿಂಚಿನ ಪೊಳಪಿನಂತೆ, ಮುಗಿಲ ನೆಳಲಂತೆ,
ಇಂದ್ರ ಧನುಸ್ಸಿನಂತೆ, ಬೊಬ್ಬುಳಿಕೆಯುರ್ಬಿನಂತೆ ಕ್ಷಣಭಂಗುರವೆಂಬ ಜೈನರ ಕ್ಷಣಿಕವಾದ, ರತ್ನಾಕರನಿಗೆ ಅಷ್ಟು ರುಚಿಸುವುದಿಲ್ಲ. ಅದು ಭೋಗಕ್ಕೆ ಅಯೋಗ್ಯವಲ್ಲ. ಕ್ಷಣಿಕವೆಂಬುದನ್ನು ಅರಿತು, ಭೋಗವಿಮುಖನಾಗದೆಯೇ
ಶಾಶ್ವತ ಸುಖವನ್ನುಅರಸುತ್ತಾ ಹೋಗಬೇಕೆಂಬುದು ಆತನ ಸಂದೇಶ.ಇದೇ ಭಾವವು ಭರತೇಶವೈಭವದಲ್ಲಿ ತಾನೇ ತಾನಾಗಿ ತಾಂಡವವಾಡುತ್ತಿರುವುದನ್ನು ಕಾಣಬಹುದು.

ಆಸ್ಥಾನ ಸಂಧಿ.

ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ
ಕಿರಣ ಸುಜ್ಞಾನ ಪ್ರಕಾಶ
ಸುರರ ಮಕುಟಮಣಿ ರಂಜಿತ ಚರಣಾಬ್ಜ
ಶರಣಾಗು ಪ್ರಥಮ ಜಿನೇಶ||೧||

ಕಬ್ಬಿಗರೋದುಗಬ್ಬವ ,ಹಾಡುಗಬ್ಬವ
ಕಬ್ಬದೊಳೊರೆವರಿವೆರಡು
ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ
ಕಬ್ಬೆ ಹೇಳೆಲೆ ಸರಸ್ವತಿಯೆ ||೩||

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗಾ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣಾ ||೪||

ರಳ ಕುಳ ಶಿಥಿಲ ಸಮಾಸ ಮುಂತಾದವ
ರೊಳಗಿಲ್ಲಿ ಕೆಲವುಳ್ಳರುಂಟು
ಕೆಲವಿಲ್ಲಾದರುವಿಲ್ಲಾವೇಕೆಂದರವರ ಕೋ
ಟಲೆಯೇಕೆ ಹಾಡುಗಬ್ಬದೊಳು ||೫||

ಸಕಲ ಲಕ್ಷಣವು ವಸ್ತುಕಕೆ, ವರ್ಣಕಕಿಷ್ಟು
ವಿಕಳವಾದರು ದೋಷವಿಲ್ಲ.
ಸಕಲ ಲಕ್ಷಣಕಾಗಿ ಬಿರಸು ಮಾಡಿದರೆ ಪು
ಸ್ತಕದ ಬದನೆಕಾಯಹುದು ||೬||

ಚಂದಿರನೊಳಗೆ ಕಪ್ಪುಂಟು ಬೆಳ್ದಿಂಗಳು
ಕಂದಿ ಕುಂದಿಹದೋ ನಿರ್ಮಲವೊ
ಸಂಧಿಸಿ ಶಬ್ದದೋಷಗಳೊಮ್ಮೆ ಸುಕಥೆಗೆ
ಬಂದರೆ ಧರ್ಮ ಮಾಸುವುದೇ ||೭||

ಪುರುಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರಿಯ ಹೇಳಲಳವೇ ||೧೨||

ಧರೆಯೊಳೆಲ್ಲವ ಸುಟ್ಟರುಂಟಲ್ಲಿ ಭಸ್ಮ ಕ
ರ್ಪುರವ ಸುಟ್ಟರೆ ಭಸ್ಮವುಂಟೆ
ನರತತಿಗಾಹಾರ ನಿಹಾರವುಂಟೆಮ್ಮ
ಭರತೇಶಗಿಲ್ಲ ನಿಹಾರಾ ||೧೪||

ಹೆಂಗಳ ರೂಪು ಗಂಡರಿಗೆ ಗಂಡರ ರೂಪು
ಹೆಂಗಳ ಸೋಲಿಪುದೆಂಬ
ಪಾಂಗಲ್ಲವವನ ಚೆಲ್ವಿಕೆ ಗಂಡುಪೆಣ್ಗಳ
ಕಂಗಳ ಸೆರೆವಿಡಿದಿಹುದು ||೩೦||

ವಾರನಾರಿಯರು ತಾವಾರನಾರಿಯರೊ ಶೃಂ
ಗಾರಕೆ ಸೋತು ಭೂವರನಾ
ಹಾರುತಿದ್ದರು ಸುರಪಶುವ ಗೋದಾನಕ್ಕೆ
ಹಾರುವ ಹಾರುವನಂತೆ ||೩೩||

ತುಂಬಿಯ ಗಾನವಂತಿರಲಿ ಕೋಕಿಲನಾದ
ವೆಂಬರ ಮಾತದಂತಿರಲಿ
ತುಂಬುರ ನಾರದರಿನ್ನೇಕೆ ಹೋಪುರೆ
ಯೆಂಬಂತೆ ಸೊಗಿ ಹಾಡಿದರು ||೪೨||

ಹೊತ್ತ ದೇಹವ ಬರುಮರಣದೊಳ್ಬಿಟ್ಟರೆ
ಮತ್ತೊಂದು ದೇಹ ಮುಂದಹುದು
ಹೊತ್ತದೇಹವ ಬಿಟ್ಟು ಮತ್ತೊಂದು ದೇಹವ
ಪತ್ತದೆ ನಿಲ್ವುದು ಮುಕ್ತಿ ||೫೦||

ಹಿಡಿದ ದೇಹವ ಬಿಟ್ಟು ಮತ್ತೊಂದು ದೇಹವ
ಪಿಡಿಯದೆ ನಿಲ್ವುದೆಂತೆನಲು
ಬಿಡದೆ ಸುಜ್ಞಾನಾಗ್ನಿಯಿಂದ ಕರ್ಮದ ಬೇರ
ಸುಡುವುದೊಂದೆಂದುಪಾಡಿದರು ||೫೧||

ಕವಿವಾಕ್ಯ ಸಂಧಿ.

ಸಂಗೀತಗೋಷ್ಠಿ ನಿಂದುದು ಸಾಹಿತ್ಯಸು
ಸಂಗತಿಗೆಳಸಿ ನೃಪೇಂದ್ರ
ತುಂಗ ವಿದ್ವಾಂಸರ ನೆರವಿಗೊಯ್ಯನೆ ತನ್ನ
ಕಂಗಳ ಕಾಂತಿದೋರಿದನು||೧||

ಕವಿಗಳು ಹಲಬರುಂಟವರ ಮಧ್ಯದೊಳೊಬ್ಬ
ದಿವಿಜಕಲಾಧರನೆಂಬ
ಕವಿಯಿದ್ದನವನ ಮೊಗವ ನೋಡಲೊಡನಾ
ಕವಿನುಡಿದನು ಭಾವರಿದು||೨||

ಭೋಗವಿಚಾರವು ಬೇಕು ನೃಪತಿಗಾತ್ಮ
ಯೋಗವಿಚಾರವು ಬೇಕು
ರಾಗರಸಿಕನಾಗಬೇಕು ಭಾವಿಸೆ ವೀತ
ರಾಗರಸಿಕನಾಗಬಂಕು ||೬||

ಕೊಡಬೇಕು ಕೊಡುವಲ್ಲಿ ಪಾತ್ರವರಿಯಬೇಕು
ನುಡಿಬೇಕು ಮೌನವೂ ಬೇಕು
ಬಡವರಂತಿರಬೇಕು ಪ್ರಭುವಿನಂತಿರಬೇಕು
ನಡೆಯಿದು ಜಾತಿಕ್ಷತ್ರಿಯರ ||೭||

ಭೂಮಿಯೊಳಗೆ ಹೂಳ್ವ ಲೋಹಮಣ್ಬಿಡಿವುದು
ಹೇಮ ಮಣ್ಬಿಡಿವುದೇ ನೃಪತಿ
ಕಾಮಿಸಿ ಭೋಗಿಸುವಗೆ ಕರ್ಮಬಂಧ, ನಿ
ಷ್ಪ್ರೇಮಭೋಗಿಗೆ ಬಂಧವುಂಟೆ ||೧೫||

ಗಾನ ಮದ್ದಳೆ ತಾಳ ಲಯಕೆ ನರ್ತಿಪ ಮಂದ
ಯಾನೆಗೆ ಶಿರದ ಕುಂಭದೊಳು
ಧ್ಯಾನವಿಪ್ಪಂತೆ ರಾಜ್ಯದೊಳಿರ್ದು ಮುಕ್ತಿಸಂ
ಧಾನದೊಳಗೆ ನಿನ್ನ ನೆನಹು||೧೯||

ಪಟಗಾರನುರೆ ಸೂತ್ರವಿಡಿದಿದ್ದರಾ ಗಾಳಿ
ಪಟ ಗಗನದೊಳಾಡುವಂತೆ
ಕುಟಿಲವಲ್ಲಾತ್ಮ ನಿನ್ನಂಗದೊಳಿರ್ದು ಸಂ
ಘಟಿಸಿ ಮುಕ್ತಿಯೊಳದೆ ಬುದ್ಧಿ ||೨೦||

ಮೊಲೆ ಮುಡಿ ಮುಖ ನಖ ಕಟಿ ತುಟಿಯೆಂದರೆ
ಒಲಿದೀವರುಂಟು ಲೋಕದೊಳು
ಒಳಹೊರಗಾತ್ಮ ಶರೀರವೆಂಬೀ ನುಡಿ
ಗೊಲಿದೀವರಾರು ನಿನ್ನಂತೆ ||೨೨||

ಒಳಗಿದ್ದ ದೇವನ ಕಾಣದೆ ಹೊರಗೆ ದೇ
ಗುಲವ ಪೂಜಿಸುವೆಗ್ಗನಂತೆ
ಒಳಗಣಾತ್ಮನ ಬಿಟ್ಟು ಮೈಯನೆ ತಾನೆಂದು
ಸಲೆ ಹೊಗಳಿಸಿಕೊಳುತಿಹರು ||೨೩||

ಭೋಗವಿಲ್ಲದೆ ಭೋಗಿಯಹುದು ನಿನ್ನೊಳಗಾತ್ಮ
ಯೋಗವಿಲ್ಲದೆ ಯೋಗಿಯಹುದು
ಭೋಗದೊಳಿದ್ದು ಯೋಗವ ಮಾಡಿ ಭವಮುಕ್ತ
ರಾಗುವರಾರು ನಿನ್ನಂತೆ ||೨೬||

ಭೊಗ್ಗನೊಂದೇ ದಿನದೊಳು ತೋರನಾತ್ಮನು
ಬಗ್ಗಿದಾಗಳೆ ಬಾಗಿಲಹುದೆ
ನುಗ್ಗೆಯ ಮರನಲ್ಲ ಕರ್ಮವೆಂಬುದು ಕರ್ಮ
ಜಗ್ಗಲೊಯ್ಯನೆ ತೋರುತಿಹನು||೩೦||

ಮದನಸನ್ನಾಹ ಸಂಧಿ.

ಕಟಕದ ವಾರ್ತೆಯ ಕೇಳುತಿಷ್ಟಳುಕುತ
ಪಟುವಾಗಿ ಮೊದಲು ತಾ ನುಡಿದ
ಘಟಿತ ಗರ್ವವ ನೆನೆದಾ ಕಾಮ ಕೂಡೆ ಹೋ
ರಟೆಗೆ ಮುಂಕೊಂಡನೇನೆಂಬೆ ||೧||

ಮಿಗೆ ಸುನಂದಾದೇವಿ ಕೇಳ್ದು ಪ್ರಾಪ್ತರನಟ್ಟಿ
ಮಗನ ಕರೆಸಿದಳು ಮನೆಗೆ
ದುಗುಡವ ಕಾಣಿಸದಂಗಜ ಬಂದಿಷ್ಟು
ನಗೆಮೊಗದಿಂದೆರಗಿದನು ||೨||

ಭುಜಬಲಿ ದೊಡ್ಡಣ್ಣನೊಡನೆ ಕಾಳಗವೆಂದು
ಗಜಬಜಿಸಿದೆ ಕಂಡ ನೀನು
ಸುಜನರಾರಿದ ಮೆಚ್ಚುವರು ಸುಡು ನಿನ್ನೊಂದು
ಕುಜನಮಾರ್ಗವನೆಂದಳಾಕೆ||೩||

ಅಣ್ಣನ ಕೂಡೆ ಕಾಳೆಗವ ಮಾಡೆಂದಾನು
ಬೆಣ್ಣೆವಾಲೂಡಿ ಸಾಕಿದೆನೆ
ತಣ್ಣನೆ ಮಾಡಬೇಕೆಮ್ಮೆಲ್ಲರುದರಕೆ
ಹುಣ್ಣು ಮಾಳ್ಪುದು ಲೇಸೆ ಮಗನೆ||೪||

ಹಿರಿಯಣ್ಣ ಹೆತ್ತ ತಂದೆಯ ಪಾಟಿಯೆಂದು ಸ
ತ್ಪುರುಷರು ಭಕ್ತಿ ಮಾಡುವರು
ಸರಿ ನಾನು ತಾನೆಂದು ದಾಯಾದ್ಯರಾಗಿ ಧೂ
ರ್ತರು ಹೋರುವರು ಜಗದೊಳಗೆ ||೫||

ಎಲ್ಲರು ತಪಸಿಗೆಯ್ದಿದರು ನೀನೊಬ್ಬ ನ
ಮ್ಮೆಲ್ಲರರ್ತಿಯಸಲಿಸಣ್ಣ
ಬಲ್ಲಿತುದೋರದಿರಣ್ಣನಿಗೆರಗೆಂದು
ಗಲ್ಲವ ಪಿಡಿದಲುಗಿದಳು ||೬||

ಇಲ್ಲಮ್ಮಾಜಿ ಕಾಳಗವೆಂದು ಮೊದಲಿಷ್ಟು
ಸೊಲ್ಲಿಸಿದೆನು ಕೋಪದಿಂದ
ಸಲ್ಲದೆಂದೆಲ್ಲರಾಡಲು ಬಿಟ್ಟೆನಣ್ಣನ
ಮೆಲ್ಲಡಿಗೆರಗುವೆನೆಂದ ||೭||

ಪರರಲ್ಲವೆಂಬುದ ಮಾಡೆನು ನಾನು ದೇ
ವರಿಗತಿ ಚಿಂತೆಯೇಕಿದಕೆ
ಶಿರಬಾಗಿ ಬಹೆನಣ್ಣನಿಗೆಂದನು ಮಾತಿನೊ
ಳಿರಿಸಿಕೊಂಡೆದೆಯೊಳು ಕೋಪ ||೮||

ಸಂತಸಬಟ್ಟಾಕೆ ತಕ್ಕೈಸಿಕೊಂಡೆನ್ನ
ಕಂತು ನೀನಂತೆ ಮಾಡೆಂದು
ಚಿಂತೆ ಹೋಯ್ತೆಂದು ಪರಸಿ ಕಳುಹಿದಳೆಲ್ಲ
ರಂತರಂಗವ ಕಾಂಬರಾರು ||೯||

ಪಡೆದಳಿಗೆರಗಿ ಬೀಳ್ಕೊಂಡು ತನ್ನರಮನೆ
ಗೊಡನೆ ಹೊಕ್ಕನು ಪುಷ್ಪಬಾಣ
ಬೆಡಗಾಗಿ ಸಿಂಗರಿಸಿದನು ತನ್ನಂಗಕೆ
ಕಡೆಯ ಶೃಂಗಾರವದಲ್ತೆ ||೧೦||

ಆಗಲೌ ನಲ್ಲಳೆ ನಿನ್ನ ಪಕ್ಷದ ಮೇಲೆ
ಪೂಗಣೆ ತೊಡುವುದಿಲ್ಲಬಲೆ
ಹೋಗದೆನ್ನೊಡನೊಡ್ಡಿ ನಿಂದ ಚಕ್ರಿಯ ಪೌಜ
ತಾಗುವೆನೆಂದನಾ ಮದನ ||೧೫||

ಸಲ್ಲದೋಪನೆ ಬಿಡು ಹಿರಿಯಣ್ಣನೊಡನಿಂತು
ಬಲ್ಲಿತುದೋರ್ಪುದು ಗುಣವೆ
ಬಿಲ್ಲು ಡೊಂಕಲು ನಿನ್ನ ನಡೆ ಡೊಂಕೆ ಬೇಡೆಂದು
ನಲ್ಲಳಾಡಿದಳು ನಲ್ಮೆಯೊಳು|| ೧೬||

ಹಂಸನಾಥನೆ ಬಲ್ಲ ಮದನನ ಮನದ ವಿ
ಧ್ವಂಸ ಭಾವನೆ ನಿಂದುದಕಟ
ನಾಂ ಸೇರದಿರೆ ನನ್ನ ಸುತರು ವೈರಿಗಳೆ ಕ
ರ್ಮಾಂಶನ ನಡೆ ಸುಡಲೆಂದ||೪೦||

ಒಡ್ಡಿದಂಕವ ನಾನು ಗೆಲ್ವೆ ನೀನನ್ನ ಕ
ದೊಡ್ಡಣ್ಣನೊಡನಿರೆಂದವಗೆ
ಎಡ್ಡ ಮನ್ನಣೆಯನಿತ್ತರ್ಕ ಕೀರ್ತಿಯ ತೋರ
ಲಡ್ಡಬಂದವ ಕರೆಕೊಂಡ ||೪೨||

ರಾಜೇಂದ್ರಗುಣವಾಕ್ಯ ಸಂಧಿ.

ಭರತೇಶ ಭುಜಬಲಿರಾಜರ ಮಂತ್ರಿ ಮಿ
ತ್ರರು ನಡುನೆಲದೊಳೊಗ್ಗಾಗಿ
ದೊರೆಗಳಿಬ್ಬರ ಕದನಕೆ ಮುಂದೆ ಯೋಚಿಸಿ
ದರು ಮೃದುಕಲೆಯನೇನೆಂಬೆ ||೧||

ಸರ್ವಬಲವ ಕೊಲ್ಲಬೇಡ ಕೂರಸಿವಿಡಿ
ದೊರ್ವರು ಕಾಡಬೇಡಿನ್ನು
ಇರ್ವರ ಧರ್ಮಯುದ್ಧಕೆ ಕೇಳ್ವವೆಂದೆಯ್ದಿ
ಸಾರ್ವಭೌಮನ ಕೇಳ್ದರೊಡನೆ||೨||

ಕುಲಿಶದೇಹಿಗಳು ನೀವಿಬ್ಬರಿನ್ನಂಕದ
ತಳದಲ್ಲಿ ಕಾಲಿಕ್ಕುವಾಗ
ಬಳೆಗಾರವಸರದೊಳೆರಡಾನೆ ಹೊಕ್ಕು ಹೋ
ಕುಳಿಸಿದಂತಹುದೆಂದರವರು ||೩||

ಇದಕೆ ನೀವೇನ ಕಂಡಿರಿ ಪೇಳಿರೆಂದರಂ
ಜದೆ ನುಡಿವೆವೆ ಸ್ವಾಮಿಯೆನಲು
ಎದೆಹಾರು  ಬೇಡವೈ ಪೇಳಿರೆಂದನು ಧರ್ಮ
ಕದನಕೊಪ್ಪೆಂದರಾ ಹಿತರು ||೪||

ಅಂತಿಂತುಟೆಂದೆನ್ನ ಕೇಳಬೇಡರಲಂಬ
ನೆಂತೊಪ್ಪಿದಂತೆ ಕೇಳುವೆನು
ಚಿಂತಿಸಿಕೊಳ್ಳಿರೈ ಹೋಗಿರೆಂದನು ಮಹಾ
ಸಂತಸಬಡುತ ಸಾಗಿದರು ||೫||

ಮದನನ ಕಂಡು ಕೈಮುಗಿದು ಬಿನ್ನವಿಪೊಡೆ
ಮ್ಮೆದೆ ಬೆಚ್ಚುತಿದೆಯೆಂದರವರು
ಕದನವುಂಟಾದರೆ ಭೀತಿ ಬೇಡುಸುರಿರೈ
ಮೊದಲಂತೆ ಹೇಳಬೇಡೆಂದ ||೬||

ಕಾಳಗವುಂಟು ಖಡ್ಗದ ಯುದ್ಧಬೇಡ ಕೇ
ಳ್ಮೇಲಾದ ಮೃದುಲಯುದ್ಧವನು
ತೋಳ ಬಲ್ಮೆಯೊಳೆ ನೀವಿಬ್ಬರು ಮಾಳ್ಪುದೆಂ
ದಾ ಲೇಸುಗಾರರಾಡಿದರು ||೭||

ಎವೆಯಿಕ್ಕದೊಬ್ಬರೊಬ್ಬರ ನೋಡಬೇಕು  
ಕಣ್ಣೆವೆಯಿಕ್ಕಿದಾಗದು ಸೋಲ
ಬವರವನಷ್ಟರೊಳ್ಬಿಡಬೇಕು ಬಿಡದಿರ್ದ
ರವಧರಿಸಿನ್ನೊಂದು ಮಾತ ||೮||

ಮೊಗೆದು ಹಸ್ತಗಳಿಂದ ಜಲವನೊಬ್ಬೊಬ್ಬರು
ಮೊಗಕೆ ಚೆಲ್ವುದು ಚೆಲ್ಲುತಿರೆ
ಮೊಗವಡ್ಡದೆಗೆದಾಗ ಸೋಲವಲ್ಲಿಯು ಯುದ್ಧ
ಮುಗಿಯದರಾಲಿಸಿನ್ನೊಂದ ||೯||

ಮಲ್ಲಯುದ್ಧವ ಮಾಳ್ಪುದವರೊಳೊಬ್ಬನನೆತ್ತಿ
ದಲ್ಲಿ ಸುಮ್ಮನೆ ನಿಲಬೇಕು
ಅಲ್ಲಿಂದ ಮುಂದೊಂದು ಕಾಳಗಗೀಳಗ
ಸಲ್ಲದೊಪ್ಪೆನಲೊಪ್ಪಿತೆಂದ ||೧೦||

ಸಂಗರ ದೊರೆಗಳಿಬ್ಬರಿಗಲ್ಲದುಳಿದ ಷ
ಡಂಗವಾಹಿನಿಗಿಲ್ಲವೆಂದು
ಡಂಗುರಸಾರಿತು ಕಟಕದೊಳ್ಮದನನ
ಣ್ಣಂಗೊಡ್ಡಿ ನಿಲೆ ಮೇರುವಂತೆ ||೧೧||

ತರತರವಾಗಿ ನಿಂದರು ವ್ಯಂತರಾಂಕರಂ
ಬರಚರರಾಕಾಶದಲ್ಲಿ
ನರರು ತುರುಗಿ ತುಂಬಿ ನಿಂದಿರ್ದರಾ ವಸುಂ
ಧರೆ ತೆರಪೆಯ್ದದೆಂಬಂತೆ ||೧೨||

ಗರ್ವಗಿರಿಯನಿಳಿವಂತಾನೆಯಿಂದಿಳಿ
ದುರ್ವಿಯೊಳಲ್ಪದೂರವನು
ಕರ್ವುವಿಲ್ಲನು ಮಧ್ಯದೊಳು ನಿಂದನಾ ಪಸು
ರ್ಪರ್ವತನಿಂದುದೆಂಬಂತೆ ||೧೩||

ಹೆಣ್ಣು ಗಂಡಿನ ಕಂಗಳವನಲ್ಲಿ ನಿಂದವು
ಕಣ್ಣಿಯೊಳೆರಳೆ ಬಿದ್ದಂತೆ
ಅಣ್ಣಗೊಡ್ಡಿದುದೊಂದು ಕೊರತೆಯಿಲ್ಲದೆ ಮಿಕ್ಕ
ಬಣ್ಣದೊಳವಗುಂಟೆ ಕೊರತೆ ||೧೪||

ಹತ್ತಿರಕೆಯ್ತಂದು ಚಾಂಗು ಭಲಾಯೆನ
ಲೆತ್ತಿದ ಶಿಬಿಕೆಯಿಂದಿಳಿದು
ಹತ್ತೆಂಟು ಮಾರೆನೆ ಸ್ಮರನಿದಿರೊಳು ನಿಂದ
ನುತ್ತುಂಗಚರಿತನಾ ಚಕ್ರಿ||೧೫||

ಕುಂದಣದದ್ರಿ ಪಚ್ಚೆಯ ಗಿರಿಯೆರಡೊಡ್ಡಿ
ನಿಂದುವೊ ಕಳದೊಳೆಂಬಂತೆ
ಸೌಂದರಾಯತದೀರ್ಘದೇಹಿಗಳಣ್ಣ ತ
ಮ್ಮಂದಿರೊಪ್ಪಿದರು ನೋಳ್ಪರಿಗೆ ||೧೬೬||

ಭೂರಿವಾದ್ಯದ ನಾದ ನಿಂದುದು ಕದನದ
ಭೇರಿಯ ಸನ್ನೆ ಮತ್ತಿರಲಿ
ಆರಯ್ದು ನಾಲ್ಕೆಂಟು ನುಡಿವೇಳ್ವ ಮೊದಲೆಂದ
ನಾ ರಾಯ ಪಲರು ಕೇಳ್ವಂತೆ ||೧೭||

ಮನಸಿಜ ಕೇಳಣ್ಣ ನಿನಗೆನಗಿಂದು ದು
ರ್ಮನದಿಂದ ಜಗಳವಪ್ಪುದಕೆ
ಘನವೇನು ಹೇಳು ನಿಷ್ಕಾರಣ ಕದನವ
ಜನಪರೆಸಗುವರೆಯೆಂದ ||೧೮||

ನಿನ್ನೊಡವೆಯ ನಾನು ಕೊಂಡುದಿಲ್ಲಣ್ಣ ನೀ
ನನ್ನೊಡವೆಯ ಕೊಂಡುದಿಲ್ಲ
ಮುನ್ನಯ್ಯನಿರಿಸಿದಂದದಿ ರಾಜ ಯುವರಾಜ
ಸನ್ನಾಹದೊಳಗಿರ್ದೆವಲ್ತೆ ||೧೯||

ನುಡಿಯಲ್ಲಿ ನಾ ನಿನ್ನ ಬಿಟ್ಟಾಡಿದೆನೆ ನನ್ನ
ಪಡೆಯೊಳಗೊಬ್ಬರಾಡಿದರೆ
ಒಡಹುಟ್ಟಿದವನ ನೋಡುವೆನೆಂದು ಬರಹೇಳೆ
ಫಡ ಹುಸಿಯೆಂಬರೆ ಅಪ್ಪ ||೨೦||

ಮಾತಿಗೆ ತೊಡಗಿದ ಕದನಕಿಂದಿವನಿಗೆ
ಭೀತಿಯಾದುದೆಯೆನಬೇಡ
ಫೂತು ಮಝರೆಯೆನೆ ಕದನದೋರ್ಪೆನು ಕೇಳು
ಪಾತಕ ಕಳೆವೆನು ಮೊದಲು ||೨೧||

ನಾನಿಷ್ಟು ನಿನ್ನಿಂದ ಹಿರಿಯನಾದುದರಿಂದ
ಸೇನೆಗೆ ಬರವೇಳ್ದೆನೈಸೆ
ನೀನೆನಗಗ್ರಜನಾದರೆ ನೀನಿರ್ದ
ಸ್ಥಾನಕೆಯ್ದೆ ತಡೆದಿಹೆನೆ ||೨೨||

ಪಾಟಿಸಿ ಕೇಳಣ್ಣ ನಾನು ನೀನಾಡುವ
ರಾಟಕಾರರು ನಮ್ಮ ಭಟರು
ನೋಟಕಾರರೆ ನೀನು ನೆನೆದ ಸಂಗ್ರಾಮ ಸ
ಘಾಟಿಕೆಯಾಯ್ತು ಕಂಜಾಸ್ತ್ರ ||೨೩||

ನನ್ನ ಗೆದ್ದುದರಿಂದ ನಿನಗೆ ಕೀರ್ತಿಯೆ ಹೇಳು
ನಿನ್ನ ಗೆಲ್ದೆನಗೊಂದು ಜಸವೆ
ಪನ್ನಗ ನರ ಸುರ ಲೋಕದುತ್ತಮರು ಛೀ
ಯೆನ್ನರೆ ಯೋಚಿಸಿ ನೋಡು ||೨೪||

ಅದಕೇನು ನೀನಿಂತು ಕದನಕೆಯ್ದಿದೆಯೈಸೆ
ಕದನದೊಳ್ಗೆಲವೈಸೆ ಕಡೆಗೆ
ಬದೆಗರಂದದಿ ಹೋರಲೇತಕೆ ಗೆಲವು ನಿ
ನ್ನದು ಸೋಲವೆನಗೆ ಹೋಗೆಂದ ||೨೫||

ಗೆಲವೆಂಬುದೇನುಪಚಾರವಲ್ಲಣ್ಣ ತೋ
ಳ್ವಲವ ಬಲ್ಲೆನು ಸತ್ಯವಹುದು
ಬಲವೆಲ್ಲ ಕೇಳ್ವಂತೆ ಪೇಳ್ವೆನು ಕೇಳೆಂದು
ಬಳಿಕ ಚಕ್ರೇಶನಿಂತೆಂದ||೨೬||

ದೃಷ್ಟಿವಿಜಯವೆಂತು ಪಂಚವಿಂಶತಿಚಾಪ
ದಷ್ಟುದ್ದ ಹೆಚ್ಚು ನೀನೆನ್ನ
ದೃಷ್ಟಿಸಬಹುದಾನು ನಿನ್ನ ನೋಳ್ಪಾಗೂರ್ಧ್ವ
ದೃಷ್ಟಿ ನೊಂದವೆ ಹೊಯ್ವುದೆಂದ||೨೭||

ಜಲಯುದ್ಧದೊಳು ನಾನು ಚೆಲ್ಲೆ ನಿನ್ನೆದೆಮುಟ್ಟಿ
ಯಿಳಿವುದು ವಾರಿ ನೀನೆನ್ನ
ಮುಳುಗಿಸಿ ಬಿಡಬಹುದವರಿಂದ ನನಗಾಗ
ಚಳಿತಡ್ಡಮೊಗವಹುದೆಂದ||೨೮||

ಮಲ್ಲಗಾಳಗವೆಂತು ಭುಜಬಲಿಯೆಂದಯ್ಯ
ನಲ್ಲವೆ ಪೆಸರಿಟ್ಟನಂದು
ಬಲ್ಲೆ ನಯ್ಯನ ವಾಕ್ಯ ಹುಸಿಯದು ಭುಜಬಲ
ದಲ್ಲಿ ನೀನೆತ್ತುವೆಯೆಂದ|| ೨೯||

ಅನುಜಾತಗಗ್ರಜ ಸೋತೆನೆಂಬಾಗ ಕ
ರ್ರನೆ ದಶದಿಕ್ಕು ಕಂದಿದುವು
ಅನಲವಿಲ್ಲದೆ ಹೊಗೆ ಸೂಸಿತು ಸೂಸದೆ
ಮನರತ್ನ ನೊಂದಾಡುವಾಗ||೩೦||

ಬೆದರಿತು ಕಟಕ ಹಾ ಕಷ್ಟವ ನೆನೆದೆನೆಂ
ದೆದೆಯೊಳಂಗಜ ನೊಂದುಕೊಳುತ
ಮದನ ಸಮ್ಮುಖವಾಗದೋರೆಯಾಗಿರೆ ಚಕ್ರಿ
ಮುದದೋರಿ ಮತ್ತಿಂತು ನುಡಿದ ||೩೧||

ಕೇಳಣ್ಣ ಚಕ್ರವ ಬಯಸಿತಿಲ್ಲಾನು ಶ
ಸ್ತ್ರಾಲಯದೊಳು ತಾನೆ ಹುಟ್ಟಿ
ಏಳಿಸಿ ನಾಡ ಸುತ್ತಿಸಿತು ನಿಮ್ಮೆಲ್ಲರ
ಆಲಿಗೆ ನೋವಾಗುವಂತೆ ||೩೨||

ಅರಸಾಗಿ ನೀನೂರೊಳಿರ್ದೆ ನೀನಟ್ಟಿದ
ದೊರೆಯಾಗಿ ನಾನೆಯ್ದಿ ನಿನ್ನ
ಧರೆಯ ಸಾಧಿಸಿ ತಂದೆನೊಪ್ಪುಗೊಳ್ನಿನ್ನ ಭೂ
ವರವೃಂದವಿದೆ ಕಟಕವಿದೆ ||೩೩||

ನಿನಗೆ ನಾನಣ್ಣನೆಂಬಕ್ಕರವಿಲ್ಲ ನೀ
ನನುಜನೆಂಬಕ್ಕರುಂಟಪ್ಪ
ನನೆವಿಲ್ಲ ನಿನ್ನ ಭಾಗ್ಯವ ಕಣ್ಣುತುಂಬ ನೋ
ಳ್ಪೆನು ರಾಜಪದವಿಗಿಂತೊಪ್ಪು ||೩೪||

ಕೌಶಲಿಯೊಳು ನೀನು ಸುಖಬಾಳು ನನಗೊಂದು
ದೇಶವ ಕೊಟ್ಟು ಬೇರಿರಿಸು
ಕ್ಲೇಶದ ಮಾತಲ್ಲ ಸಂತೋಷ ಪುರುಪರ
ಮೇಶನ ಕೆಂಬಜ್ಜೆಯಾಣೆ ||೩೫||

ವಿರಸವ ಬಿಡು ಬಿಡೆಂದಾ ಚಕ್ರಿ ನುಡಿಯೆ ಪೂ
ಸರನು ತಗ್ಗುತ ಮನಸಿನೊಳು
ಮುರಿದ ಮೋರೆಯೊಳಿರೆ ಚಕ್ರರತ್ನವನಾಗ
ಕರೆದಿಂತು ನುಡಿದನಾ ಚಕ್ರಿ ೩೬||

ಹೋಗು ಚಕ್ರವೆ ಭುಜಬಲಿಯನೋಲೈಸೆನೆ
ಹೋಗದೀತಗೆ ಪುಣ್ಯವುಂಟು
ಪೂಗಣೆಯಗೆ ಚಕ್ರ ಬೆಸಗೈಯ್ವ ಪುಣ್ಯವಿ
ಲ್ಲಾಗಿ ನಿಂದಿತು ಮುಂದೆ ಬಂದು ||೩೭||

ಎಲೆಲೆ ಪಿಶಾಚ ಹೋಗೆಂದರೇತಕೆ ಹೋಗೆ
ಕಲಹ ನಿನ್ನಿಂದಾದುದೆನಗೆ
ಜಲಜಾಸ್ತ್ರನತ್ತ ಸಾರೆಂದು ನೂಕಿದರದು
ಬಳೆ ಜಾರುವಂತೆ ಜಾರಿದುದು ||೩೮||

ಗರೈಡಮಂತ್ರಕೆ ವಿಷವಿಳಿವಂತೆ ಭರತಭೂ
ವರನ ವಾಕ್ಯವ ಕೇಳಲಾಗಿ
ಜರಿಜರಿದಂಗಜಗೆತ್ತಿದ ಕೋಪ ಪೈ
ಸರಿಸಿತು ಹೃದಯ ತಂಪಾಯ್ತು ||೩೯||

ಒಲೆದ ಮೋರೆಯ ತಿರುಹಿದನು ಸಮ್ಮುಖವಾಗಿ
ಕಳೆದನೊಯ್ಯನೆ ತೋಳತೊಡಕ
ಅಳುಕಾದುದಣ್ಣನ ಮೊಗವ ನೋಡದೆ ನಾಚಿ
ತಲೆಗುಸಿದಿರ್ದನಾ ಮದನ ||೪೦||

ಕಡೆಯ ಯುದ್ಧದೊಳಲ್ಲದಿವರುಕ್ಕು ನಿಲ್ಲದೆಂ
ದಿಡಿಕಿರಿದೀಕ್ಷಿಸುತಿರ್ದು
ನುಡಿಯೊಳೆ ಚಕ್ರಿ ಗೆಲ್ದುದ ಕಂಡು ಪೊಗಳ್ದರು
ನುಡಿಯದೆ ಸಖ ಮಂತ್ರಿ ನೃಪರು ||೪೧||

ನುಡಿವ ಗಂಭೀರ ಬೋಧಿಪ ಬೋಧೆ ತಮ್ಮನೆಂ
ದೊಡಕು ಹುಟ್ಟಿಸದೊಂದು ಪ್ರೀತಿ
ತೊಡರದ ಮಾತಿಂದ ಗೆಲ್ದ ಚಾತುರ್ಯಕೆ
ಪಡೆಯೆಲ್ಲ ಮೆಚ್ಚಿ ಕೀರ್ತಿಸಿತು ||೪೨||

ನಾಸಿಕಾಗ್ರದೊಳಿಟ್ಟ ಬೆರಳಿಂದ ತನ್ನ ದು
ರ್ವಾಸನಾ ಚರಿತವ ನೆನೆದು
ಹೇಸುವ ತಲೆಗೊಡಹುವನಾಗ ಮನಸಿಜ
ನಾಸನ್ನ ಮೋಕ್ಷುಕನಲ್ತೆ ||೪೩||

ಪಾಪಿ ನಾನೆನ್ನಣ್ಣಗಿದಿರಾಗಿ ಕುಲಕೆ ಲೋ
ಕಾಪವಾದವ ತಂದೆನಕಟ
ಕೋಪ ಗರ್ವಗಳಾರ ಕೆಡಿಸವೆಂದಾ ಪುಷ್ಪ
ಚಾಪ ತನ್ನೊಳು ಮರುಗಿದನು ||೪೪||

ಸನ್ಮತವಲ್ಲದ ಕಾರ್ಯವ ನೆಗಳ್ವೆನ್ನ
ನುನ್ಮತ್ತನೆನ್ನೆಂದೆ ಪಿತನು
ಮನ್ಮಥನೆಂದೇಕೆ ಕರೆದನೆಂದೆದೆಯೊಳು
ದ್ಯನ್ಮೋಕ್ಷಗಾಮಿ ಚಿಂತಿಸಿದ ||೪೫||

ನೀತಿವೇಳ್ವಾಗ ನಿನ್ನಣ್ಣ ನಿನ್ನಣ್ಣನೆಂ
ದೋತೆಲ್ಲರೊರೆವಾಗ  ನಾನು
ಆತನೀತನು ಚಕ್ರಿಯೆಂದೆನಗ್ರಜನೆಂಬ  
ಮಾತನಾಡಿದೆನೆ ಹಾಯೆಂದ ||೪೬||

ಲೋಕದ ಮುಂದಣ್ಣ ಸೋಲವೆಂದನು ನೂಕು
ತಾಕಾಯ್ತು ಚಕ್ರಕೆನ್ನಿಂದ
ತೂಕವೆ ನನಗಿದು ಲಘುತೆಯೆಂದಾತ್ಮನಿ
ರಾಕರಣೆಯ ಮಾಡಿಕೊಂಡ ||೪೭||

ದೀಕ್ಷೆಗೆಯ್ವುದೆ ಲೇಸೆಂದೆದೆಯೊಳು ನೆನೆ
ದಿಕ್ಷುಕೋದಂಡನಣ್ಣನನು
ಈಕ್ಷಿಸದೆಡಬಲದತ್ತ ನೋಡಿದನು ಶಾಂ
ತಾಕ್ಷಿಯೊಳೊಮ್ಮೆ ಪಾಯ್ದಳವ||೪೮||

ಆಕಾಶ ಭೂಮಿ ತುಂಬಿದ್ದ ದಳವ ನೋಡ
ಲಾ ಕಾಮಗೊಡನೆ ಕೈಮುಗಿಯೆ
ಏಕೆ ಕೈಮುಗಿದಪರೆನಗೆಂದು ನಾಣ್ಚಿ ಮ
ತ್ತೀಕಡೆಗೊಲಿದು ನೋಡುವನು ||೪೯||

ಪೌಜ ನೋಳ್ಪುದ ಬಿಟ್ಟು ತಲೆವಾಗಿ ಮದನನ
ಣ್ಣಾಜಿಗಿನ್ನೆನ್ನ ಕಾರ್ಯವನು
ಮಾಜದಾಡುವೆನೆಂದು ನೆನೆದಿರ್ದನಿಲ್ಲಿಗೆ
ರಾಜೇಂದ್ರಗುಣವಾಕ್ಯ ಸಂಧಿ ||೫೦||

ಚಿತ್ತಜನಿರ್ವೇಗ ಸಂಧಿ.

ನೋವುತಿರ್ದುದು ಚಿತ್ತ ಮನ್ಮಥ ತಲೆಯೆತ್ತಿ
ಭೂವರಾಗ್ರಣಿಯ ನೋಡಿದನು
ದೇವರು ಕ್ಷಮಿಸುವುದೆನ್ನದು ತಪ್ಪೆಂದು
ಭಾವಶುದ್ಧದೊಳು ಕೈಮುಗಿದ ||೧||

ತಪ್ಪಿಲ್ಲವಣ್ಣ ನಿನ್ನಯ ನಡೆಯೆಲ್ಲವು
ಒಪ್ಪವೆನ್ನೆದೆಗೆ ಸಂತೋಷ
ಒಪ್ಪಚ್ಚಿ ನೋವೆನಗಿಲ್ಲವೆಂದೊರೆದನಾ
ಛಪ್ಪನ್ನ ದೇಶದೊಡೆಯನು ||೨||

ದೂಷಣವನು ತೊಡಗಿದೆ ನಾನು ದೇವರು
ಭೂಷಣಗೈದಿರಿ ನನ್ನ
ದೋಷವೆನ್ನನೆ ಪುದಿದಲೆವುದು ಪರಮ ಸಂ
ತೋಷ ದೇವರಿಗಹುದೆಂದ ||೩||

ಅಂತಾಡದಿರು ನೀನು ಬೇರೆ ನಾ ಬೇರೆಯೇ
ನಿಂತು ನೋವರೆ ಕಬ್ಬುವಿಲ್ಲ
ಕುಂತೆಂಬುದೆನಗಿಲ್ಲ ನಿನಗಿಲ್ಲ ನೀನಿಂತು
ಚಿಂತೆಗೊಳ್ಳದಿರೆಂದನಣ್ಣ ||೪||

ನನಗಾವ ಚಿಂತೆಯಿಲ್ಲೆನ್ನ ಬಿನ್ನಹವನೊಂ
ದನೆ ಪಾಲಿಪುದು ದೇವರೆಂದ
ಅನುಜ ಪೇಳೇನೆಂದ ದೀಕ್ಷೆಗೆ ಪೋಪೆನೊ
ಪ್ಪೆನುತ ಕೈಮುಗಿದನಂಗಜನು ||೫||

ಭೋಂಕನೆದ್ದನು ಚಕ್ರಿ ಗಳಗಳನೆಯ್ತಂದು
ಪಂಕಜಾಯುಧ ದೀಕ್ಷೆಗೀಗ
ಮುಂಕೊಂಡು ಪೋಪೆನೆಂಬುದ ಮರೆಯೆಂದು ತ
ಳ್ಳಂಕದಿ ತಕ್ಕೈಸಿಕೊಂಡ ||೬||

ದೀಕ್ಷೆಗೆಯ್ದಲದೇಕೆ ಭಂಗವೇನಾಯ್ತು ಕ
ಟಾಕ್ಷಿಸಿ ನುಡಿದೆನೆ ನಿನ್ನ
ಮೋಕ್ಷಕಾರ್ಯವ ಮುಂದೆ ಯೋಚಿಸಿಕೊಂಬವಿಂ
ದೀ ಕ್ಷೋಭೆ ಬೇಡಪ್ಪಯೆಂದ ||೭||

ಭಂಗವಿಲ್ಲೆನಗೆ ದೇವರಿಗೊಡ್ಡಿ ನಿಂದಾಜಿ
ರಂಗದಿ ಲಘುತೆದೋರಿದೆನು
ಭಂಗುರಕರ್ಮತಂತ್ರದಿ ನೊಂದೆನೆನ್ನಂತ
ರಂಗ ಹೇಸಿತು ಪೋಪೆನೆಂದ ||೮||

ದರ್ಪಕ ನೀನೇನ ಮಾಡಿದೈ ಹುಂಡಾವ
ಸರ್ಪಿಣಿದೋಷದೊಳೆನಗೆ
ತೋರ್ಪುದೀ ಭಂಗವೆಂದೊರೆದನಯ್ಯನು  ನೀನೈ
ಬೇರ್ಪಟ್ಟು ನೆನೆಯದಿರೆಂದ||೯||

ಕಾಲದೇಶದೊಳಾದರೆನ್ನಿಂದ ಪ್ರಕಟವಾ
ದೀ ಲೋಕವಾರ್ತೆ ಜಾರುವುದೇ
ಕೈಲಾಸಗಿರಿಗೈಯ್ದಬೇಕೆನ್ನ ಬಿನ್ನಹ
ಕಾಲಸ್ಯ ಮಾಡದೊಪ್ಪೆಂದ||೧೦||

ಆಡದಿರಾ ಮಾತನೆನ್ನ ಮುನಸಿಗರ್ತಿ
ಮಾಡಿ ಮತ್ತೆಯ್ದು ನೀನೆಂದು
ಕೂಡೊಮ್ಮ ತಕ್ಕೈಸಿ ಗಡ್ಡವ ಪಿಡಿದೊತ್ತಿ
ಬೇಡಿಕೊಂಡನು ಚಕ್ರಧರನು||೧೧||

ಎಂದಿರ್ದು ದೀಕ್ಷೆಯ ತಾಳ್ದು ನಾನಪವರ್ಗ
ಮಂದಿರದೊಳು ನಿಲ್ವೆನೈಸೆ
ತಂದೆಯ ಬಳಿಗೆಂದು ಪೋಪೆನೊಪ್ಪಣ್ಣಾಜಿ
ಯೆಂದನಾ ಕುಸುಮಕೋದಂಡ ||೧೨||

ಹರಿದುದು ಸಂಸಾರಸುಖದಾಸೆ ನಿಮ್ಮೆಲ್ಲ
ರೆರಕದ ಮಮತೆ ಜಾರಿದುದು
ಮುರಿದ ಚಿತ್ತವನಿನ್ನು ಮೊನೆಮಾಡಬಹುದೆ ಬಾ
ಯ್ದೆರೆದು ಹೋಗೆಂದುಸುರೆಂದ ||೧೩||

ಅಣ್ಣನಿಗಿದಿರೊಡ್ಡಿ ನಿಂದ ದೇಹವ ಮಸಿ
ಮಣ್ಣ ಮಾಳ್ಪೆನು ತಪಕೊಡ್ಡಿ
ಉಣ್ಣದುರಿವ ಕರ್ಮಗಳ ಸುಟ್ಟು ಮೋಕ್ಷಕೆ
ಪೊಣ್ಣನೆಯ್ದುವೆನು ನೋಡೆಂದ||೧೪||

ಮುನ್ನೆದ್ದರರುವರು ತೊಂಬತ್ತಮೂವರು
ನಿನ್ನೆ ಹೋದರು ನೀನು ಹೋಗೆ
ಭಿನ್ನಗಾಗದೆಯೆನ್ನ ಭಾಗ್ಯ ಬೇಡಣ್ಣ ನೀ
ನೆನ್ನ ನುಡಿಯ ಮನ್ನಿಸೆಂದ ||೧೫||

ಪುರುನಾಥನಾಣೆ ದೇವರ ಪಾದದಾಣೆ ಶ್ರೀ
ಗುರು ಹಂಸನಾಥನೆ ಸಾಕ್ಷಿ
ಇರೆನು ದೀಕ್ಷೆಗೆ ನನ್ನ ಕಳುಹಚಿತ್ತೈಸೆಂದು
ಚರಣಾಬ್ಜದೊಳು ಮಂಡೆಯಿಟ್ಟ ||೧೬||

ಕಂಬನಿ ಗುಳುಗುಳನೊಕ್ಕವೇಳೇಳಣ್ಣ
ನೀಂ ಬಯಸಿದುದಾಗಲೆಂದ
ಇಂಬಿನೊಳೆದ್ದಾಗಲೆಂದೊಡಂಬಟ್ಟು ಪಾ
ದಾಂಬುಜಕಿತ್ತ ಹೆಮ್ಮಗನ ||೧೭||

ಅಳುತಿರ್ದನಣ್ಣನು ನಗುತ ಕೈಮುಗಿದವ
ಕಳಭ ಸಂಕಲೆ ಬಿಟ್ಟು ವನಕೆ
ತಳರ್ವಂತೆ ಸಂಗವ ತೊರೆದೆಯ್ದುತಿರ್ದನು
ದಳವೆಲ್ಲ ಬೆರಗಾಗಿ ನೋಡೆ ||೧೮||

ಅಕಟ ಕಷ್ಟವನೊಂದನೇನೆಂಬೆ ಕುಟಿಲನಾ
ಯಕ ಶಠನಾಯಕನವರು
ಮಕರಾಂಕ ಮೊದಲು ತಮ್ಮೊಡೆಯನಿಗೊಡ್ಡಿದಾ
ಟಕೆ ನೋವ ತಾಳ್ದಿದ್ದರೊಳಗೆ ||೧೯||

ಒಒಡೆಯನಿಗನುಕೂಲವಾದರೀ ಸ್ಮರನು ನ
ಮ್ಮೊಡೆಯನು ಮೀರಿದಾಗಿವನು
ಒಡೆಯನೆಯೆಂದಲ್ಪದೂರವ ಹೋಗಿ ಬೆಂ
ಗಡೆಯೊಳಿಂತೆಂದರು ನಿಂದು ||೨೦||

ಸಿರಿಯ ಹೋಗಾಡಿ ಹೋಹರಸ ಕೇಳ್ನೀನೆಮ್ಮ
ಭರತಚಕ್ರೇಶ್ವರಗೆರಗಿ
ಇರದಾದೆ ಹೋಗು ಹೋಗಿನ್ನು ಭಿಕ್ಷೆಗೆ ನೀನು
ತಿರಿವೊಡಾತನ ನಾಡೆ ಬೇಕು ||೨೧||

ಜಪಶಾಂತಿಯೊಳು ಹೋಗುತಿರ್ದನಾ ನುಡಿಗಿಷ್ಟು
ಕುಪಿತದಿ ತಿರುಗಿ ನೋಡಿದನು
ತಪಸಿಗೆಯ್ದುವಗೆ ಸೈರಣೆ ಮುಖ್ಯವೆಂದು ನಿ
ರ್ಲಪಿತದಿ ನಡೆದನಾ ಮದನ ||೨೨||

ಜೋಲಿಯಿಲ್ಲದೆ ಬಂದು ಜಿನನ ಕಂಡಾತ್ಮಸಂ
ಖಾಳಿವೆರಸಿ ಯೋಗಿರೂಪ
ತಾಳಿದನಂಗಜನೆಂಬೆನು ಕೊಸರುವ
ವೇಳೆಯಲ್ಲಿರಲತ್ತಲಿತ್ತ||೨೩||

ಮಂದಿಯ ಕಳುಹಿ ಕಣ್ಣೀರಿಕ್ಕುವಂಗಜ
ನಂದನರುಗಳ ಕೈವಿಡಿದು
ಕಂದಿದ ಮೊಗ ಕಣ್ಣೊಳೊಗುವ ಕಂಬನಿಯಿಂದ
ಮಂದಿರವೊಕ್ಕನಾ ಚಕ್ರಿ ||೨೪||

ಕೃತಜ್ಞತೆಗಳು.

ಪ್ರಧಾನ ಸಂಪಾದಕ :

ಕೆ. ವಿ. ಪುಟ್ಟಪ್ಪ,  ಎಂ. ಎ.

ಸಂಪಾದಕ.
ಟಿ. ಎಸ್. ಶಾಮರಾವ್, ಎಂ. ಎ.

1 ಕಾಮೆಂಟ್‌: