ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಅಕ್ಟೋಬರ್ 12, 2019

ಹರಿಹರ ಕವಿಯ ನಂಬಿಯಣ್ಣನ ರಗಳೆ

ಹರಿಹರ ಕವಿಯ
ನಂಬಿಯಣ್ಣನ ರಗಳೆ

ಒಂದನೆಯ ಸ್ಥಲ

ಸುರರುಂ ದೈತ್ಯಾಳಿಯುಂ ಮಾಳ್ಪಮೃತಮಥನದೊಳ್ ಪುಟ್ಟಿದುದ್ಯದ್ವಿಪಕ್ಕಂ
ಕಠಮಂ ನೀಂ ನೀಡಲಂಗೈಯೊಳಗೆ ತೊಳಗೆ ನೋಡಲ್ ಪ್ರತಿಚ್ಛಾಯೆಯಿಂ ವಿ
ಸ್ತರನಾದಾ ಪುಷ್ಪದತ್ತಾಖ್ಯಾನನಿಳೆಯಱಿಯಲ್ ನಂಬಿಯೆಂದಿಟ್ಟು ಮತ್ತಂ
ಹರ ನೀನೊಲ್ದಾ ಕಥಾಸಾರವನವಧರಿಸೆ ಶ್ರೀವಿರೂಪಾಕ್ಷಲಿಂಗಾ॥

ಶ್ರೀ ಸಕಲಸುರರಸುರರೊಂದೊಂದು ಕಾರಣದಿಂದ
ವಾಸುರದ ದುರ್ವಾಸನಿತ್ತ ಶಾಪದಿನೊಂದ
ಸುರಪತಿಯ ಕೆಟ್ಟ ಸಂಪದಮಂ ತರಲ್ಕೆಂದು
ಉರವಣಿಸಿ ತೊಡಗಿದರು ಕಡಲ ಕಡೆಯಲ್ಕೆಂದು
ಅಮೃಥಮಥನಂ ಮಾಡುತಿರಲುದಯಿದವಂದು
ಕ್ರಮದಿಂದವಿಂದು ಸುಧೆ ಲಕ್ಷ್ಮಿ ಕೌಸ್ತುಭವಂದು
ಸುರಗಜಂ ಸುರಕುಜಂ ಸುರಧೇನುಗಳು ಪುಟ್ಟೆ
ಸುರತುರಂಗಾದ್ಯಖಿಳ ವರವಸ್ತುಗಳು ಪುಟ್ಟೆ
ತಣಿವಿಲ್ಲದಡಸಿ ಮತ್ತತಿಮಥನಮಂ ಮಾಡೆ
ಹೆಣಮಯಂ ಮಾಡುತುಂ ಪೊಱಮಟ್ಟುದದು ನೋಡೆ         ೧೦
ಮಸಗಿ ಭರದಿಂದಸುರರಮರುಂ ಕೆಡಪುತ್ತೆ
ದೆಸೆಗಳಂ ದಹಿಸುತ್ತೆ ರಸೆಯನಲ್ಲಾಡಿಸುತೆ
ಭುಗುಭುಗಿಲ್ ಛಳಿಛಿಟಿಲನೊಗೆದುದು ಮಹಾವಿಷಂ
ಧಗಧಗಿಸಿ ಮುಳಿದು ಬೆಂಬತ್ತಿತು ಮಹಾವಿಷಂ
ಇಂತು ಬರುತಿರ್ಪ ವಿಷವಂ ಶಿವಂ ಕಾಣುತುಂ
ಮುಂತೆ ಮೆಱೆವಾತ್ಮಗಣನಿಕರಮಂ ನೋಡುತುಂ
ನಸುನಗುತೆ ದೇವಿಯರ ಕೂಡೆ ಮಾತಾಡುತುಂ
ಒಸೆದು ನಂದೀಶ್ವರನ ವದನಮಂ ನೋಡುತುಂ
ಇರೆ ಬರ್ಪ ವಿಷವನಾ ಶಂಕರಂ ಕೈಕೊಂಡು
ಚರಿತದಿಂ ನೋಡಿ ತನ್ನೊಳಗುಮಾಡಿಯೆ ಕೊಂಡು          ೨೦
ಪಿಡಿದಿರಲಿದೇನೊ ಕಯ್ಯಂ ಪತ್ತಿತೆನುತಮಿರೆ
ಮೃಡನುದಾಸೀನದಿಂ ಹಸ್ತಮಂ ನೋಡುತಿ
ಮಿಡುಕುತಿರ್ದುದು ವಿಷಂ ಹರನ ಕರತಳದೊಳಗೆ
ನಡುಗುತಿರ್ದುದು ವಿಷಂ ಶಿವನ ಕರತಳದೊಳಗೆ
ದೆಸೆಗೆ ಪರ್ವಿದ ವಿಷಂ ಪಶುಪತಿಯ ಕರದೊಳಗೆ
ರಸೆಯನಂಜಿಪ ಗರಳವಹಿಧರನ ಕರತಳದೊಳಗೆ
ಅಂಗಯ್ಯ ಕಾರೆಳ್ಳಿನಂತಿರ್ದ ಗರಳಮಂ
ಮಂಗಳಮಯಂ ನೋಡಿದಂ ವಿಷದ ವಿರಳಮಂ
ನೋಡಲದಱೊಳ್ ಪ್ರತಿಚ್ಛಾಯೆ ತೋಱುತ್ತಮಿರೆ
ನೋಡಿ ಶಂಕರನಱಿದು ಹೆಱಸಾರೆನುತ್ತಮಿರೆ          ೩೦
ಕೆಲದಲ್ಲಿ ಕೈಮುಗಿದು ನಿಂದಿರ್ದುದಾ ರೂಪು
ಎಲೆ ದೇವ ಬೆಸನಾವುದೆನುತವಿರಲಾ ರೂಪು
ಸಿರಿಮುಡಿಗೆ ಹೂವನಡಕುತ್ತಮಿರು ನೀನೆಂದು
ಹರನೊಲ್ದು ಪುಷ್ಪದತ್ತಂ ನಿನಗೆ ಪೆಸರೆಂದು
ಕರುಣಿಸೆ ಹಸಾದವೆಂದಕ್ಕಱಿಂದಾಡುತುಂ
ಸಿರಿಮುಡಿಗೆ ಹೊಸಹೂಗಳಂ ತಂದು ಸೂಡುತುಂ
ಬರಲೊಂದು ದಿವಸವಾತಂ ಪೈಷ್ಪವಾಟದೊಳು
ಹರನಜೆಡೆಮುಡಿಗೆ ಪೂಗೊಯ್ವ ಪೊಸಬೇಟದೊಳು
ಅಲ್ಲಿಗಿರ್ವರು ವಿಳಾಸಿನಿಯರಂದೆಯ್ತಂದು
ಸಲ್ಲೀಲೆಯಿಂದೆ ಪಾರ್ವತಿಯ ಸಿರಿಮೈಡಿಗೆಂದು         ೪೦
ಪೂಗೊಯ್ವುತಿರೆ ಪುಷ್ದತ್ತನಂದೀಕ್ಷಿಸಿಸುತೆ
ಪೂಗಳಂ ತನ್ನುಮಂ ಮಱೆದಂ ನಿರೀಕ್ಷಿಸುತೆ
ಮಱೆದಿರ್ದನಂ ಸತಿಯರಂದು ಭೋಂಕನೆ ಕಂಡು
ಬೆಱಗಾಗಿ ಸೋಲ್ತು ಪೊಸ ರೂಪಂ ಮನಂಗೊಂಡು
ಇರ್ವರುಂ ಸೋಲ್ತರೊರ್ವಂ ಪುಷ್ಪದತ್ತಂಗೆ
ಒರ್ವನಾ ಯಿರ್ವರ್ಗೆ ಸೋಲ್ತನಾ ಪೊತ್ತಿಂಗೆ
ಸೋಲ್ತೆಲ್ಲರುಂ ಪೂವನಂತಂತೆ ಕೊಯೂದಲ್ಲಿ
ಸೋಲ ನೇಹಂಗಳಿಂತಿರುಗೆ ಬರುತಿರಲಲ್ಲಿ
ಗಿರಿಜೆಯುಂ ಚಂದ್ರಧರನುಂ ಕಂಡು ನಸುನಗುತೆ
ಹರುಷರಾಗುತ್ತಱಿದು ಕಾರುಣ್ಯದಿಂ ಮಿಗುತೆ             ೫೦
ನಿಮ್ಮಯ ಮನೋರಥಂಗಳನೀವೆವಾವೆಂದು
ನಿಮ್ಮೆಲ್ಲರುಂ ಪೋಗಿ ಮರ್ತ್ಯದೊಳ್ ಸಲೆ ಸಂದು
ಸಕಲ ಭೋಗಂಗಳಂ ಸವಿಗಂಡು ಬರ್ಪುದೆನೆ
    ಕೇಳ್ದಲ್ಲಿ ಪುಷ್ಪದತ್ತಂ ಬಿನ್ನಪಂ ದೇವ
ಆಳ್ದ ಅವಧಾರೆನ್ನ ಗುರೈವೆ ದೇವರ ದೇವ
ನರಲೋಕದೊಳ್ ಪುಟ್ಟೆ ಅರಿದು ಬಳಿಕಿಲ್ಲರವು
ನರನಾದ ಬಳಿಕ ಎತ್ತಣದು ಇತ್ತಣ ಬರವು
ಮಿಗೆ ಪೊಲ್ಲದಲ್ಲಿ ಪುಟ್ಟುವುದೇವೆನಾಂ ದೇವ           ೬೦
ಬಗೆಯೆ ನಿಮ್ಮಡಿಗಳ್ಗೆ ದೂರವಪ್ಪೆಂ ದೇವ
ಕಾಮಡಬ್ಬರವಲ್ಲಿ ಕೋಪದಬ್ಬರವಲ್ಲಿ
ಏಮಾತೊ ಲೋಭಮೋಹಂಗಳೂಳಿಗವಲ್ಲಿ
ಮದದ ಸಂದಣಿಯಲ್ಲಿ ಮತ್ಸರದ ಮಯವಲ್ಲಿ
ಅದಿರದ ಮಹಾ ದೋಷವೇಷ ಭೀಕರವಲ್ಲಿ
ಎಂತು ಪುಟ್ಟುವೆನೆಂದು ಬಿನ್ನಪಂಗೆಯ್ವುತಿರೆ
ಕಂತುಮದಹರನೆಂದನಗಜೆ ಮುಯ್ಯಾನುತಿರೆ
ಪೋಗು ಮರ್ತ್ಯದೊಳು ಪುಟ್ಟಂಜಲೇಕೆಲೆ ಮಗನೆ
ರಾಗದಿಂ ನಿನ್ನೊಡನೆ ಬರ್ಪೆನಾನೆಲೆ ಮಗನೆ
ಮಾಡಿತೆಲ್ಲಂ ಪೂಜೆಯಾಗಿ ಕೈಕೊಂಡಪೆಂ
ಆಡಿತೆಲ್ಲಂ ಸ್ತುತಿಗಳಾಗಿ ಕೈಕೊಂಡಪೆಂ             ೭೦
ನಿನ್ನ ಸುಖವೇ ಸುಖಂ ನಿನ್ನ ನಲಿವೇ ನಲಿವು
ನಿನ್ನರ್ತಿಯೇ ಅರ್ತಿ ನಿನ್ನ ಬಲವೇ ಬಲವು
ಆಗಿರ್ಪೆ ನಿನ್ನೊಡನೆ ಬರ್ಪೆನಾನೆಲೆ ಮಗನೆ
ಹೋಗಿ ಸುಖದಿಂದಿರ್ಪುದಿರದೆ ಬರ್ಪುದು ಮಗನೆ
ಎಂದು ಬೆಸಸಲು ಜೀವ ಇನ್ನೊಂದು ಬಿನ್ನಪಂ
ತಂದೆ ಚಿತ್ತೈಸುವುದು ಕಿಂಕರನ ಬಿನ್ನಪಂ
ಎನಿತು ದಿನವಿರ್ಪೆನಾನೆಂದು ಬರ್ಪೆಂ ದೇವ
ಎನಗೆ ಬರ್ಪುದಕೆ ಕುಱುಹೆಂತು ಹೇಳಲೆ ದೇವ
ಎನಲು ಕೇಳೆಲೆ ಮಗನೆ ಚೋಳದೇಶದೊಳೊಂದು
ಘನಮಹಿಮ ಚೇರಮನಪುರದ ಕೆಲದೊಳಗೊಂದು          ೮೦
ತಿರುವಂಜಕಳದೇವರೆಂದೆಂಬ ನಾಮದಿಂ
ಇರುತಿರ್ಪೆವಲ್ಲಿ ನಾವೊಲಿದತಿಪ್ರೇಮದಿಂ
ಅಲ್ಲಿ ಮುನ್ನವೆ ಪುಗದೆ ಎಲ್ಲ ಭೋಗಂಗಳಂ
ಸಲ್ಲೀಲೆಯಿಂ ತೀರ್ಚಿ ಸುಖದ ಸಂದಣಿಗಳಂ
ಬಳಿಕ ಬಂದಲ್ಲಿ ಪುಗೆ ಕರೆದುಕೊಂಡಪೆವಯ್ಯ
ತಿಳಿವಡಿದು ಬರ್ಪ ಪರಿ ಎಲೆ ಮಗನೆ ಹೋಗಯ್ಯ
ನಂಬಿ ಹೋಗೆಂದು ದೇವಂ ನುಡಿದ ಮಾತಿಂಗೆ
ನಂಬಿಯೆಂಬಾ ನಾಮವಾದುದು ಮುಂದಿಂಗೆ
ಎಂಬ ನುಡಿಗೇಳುತುಂ ಪುಷ್ಪದತ್ತಂ ದೇವ
ನಂಬಿದೆಂ ನಂಬಿದೆಂ ನಂಬಿದೆನೆಲೇ ದೇವ              ೯೦
ಎಂದು ಬೀಳ್ಕೊಂಡು ಬಂದು ಚೋಳ ದೇಶಕ್ಕೆ
ಚಂದ್ರಶೇಖರನ ಭಕ್ತಿಯ ಸನ್ನಿವೇಶಕ್ಕೆ
   ಬರಲು ನರಸಿಂಗಮೊನೆಯರದೊಂದು ಪಟ್ಟಣಂ
ತಿರುನಾವಲೂರೆಂಬುದದು ಪೊಗಳ್ವಡಟ್ಟಣಂ
ಅದಱೊಳಗೆ ಶಿವನನರ್ಚಿಪ ಜೆಡೆಯನಾಯ್ನಾರ
ಸುದತಿಯೆಂದೆನಿಪ ಯಸ್ಯಜ್ಞಾನಿದೇವಿಯರ
ಬಸುರೊಳಗೆ ಪೊಕ್ಕನಾ ಪುಷ್ಪದತ್ತಂ ನೋಡ
ಸುರುಚಿರ ನಿಧಾನವೊಳಗಿರ್ಪ ವಸುಮತಿಯಂತೆ
ವರಫಳವನೊಳಕೊಂಡ ಸುರಕಲ್ಪಲತೆಯಂತೆ       ೧೦೦
ಅಮೃತಕಳೆ ತೀವಿರ್ಪ ಕಾಮಧೇನುವಿನಂತೆ
ಅಮಮ ಮೆಱೆವುತ್ತಿರ್ದಳಿಂತು ಮೇಱೆಯಲ್ ಮುಂತೆ
ನವಮಾಸವಾಗುತಿರೆ ಪೊಱಮಡಲ್ಕನುವಾಗೆ
ಶಿವನ ಶಿಶು ಮರ್ತ್ಯವಂ ನೋಡಲುದ್ಯತನಾಗೆ
ಶಶಿಕಳೆಯ ಬಸುಱಿಂದೆ ಬೆಳ್ದಿಂಗಳೊಗೆವಂತೆ
ಎಸೆವ ಪಾಲ್ಗಡಲಿಂದೆ ಶಶಿಬಿಂಬವೊಗೆವಂತೆ
ಶಿವನ ಭಕ್ತಿಯ ಸೊಬಗು ಮೂರ್ತಿಗೊಂಡೊಗೆವಂತೆ
ಭವನ ನೇಹದ ಕಾಹು ರೂಹಗೊಂಡೊಗೆವಂತೆ
ಉದಯವಾದಂ ಶಿವನ ಸೌಂದರಾಧಿಪನಂದು
ಉದಯವಾದಂ ಪುಣ್ಯಕೀರ್ತಿಭೂಷಣನಂದು
ಆಗಳಾತಂಗೆ ಶಿವ ಜಾತಕರ್ಮಂ ಮಾಡಿ
ಭೋಗಕುಳಧಾಮಂಗೆ ನಾಮಕರಣಂ ಮಾಡಿ
ನಂಬಿಬಂದವನಾಗಿ ನಂಬಿಯೆಂದೇ ಇಟ್ಟು
ಇಂಬಿನಿಂ ಮಾತೆಪಿತರತಿಸಂತಸಂಬಟ್ಟು
ಇರುತಮಿರೆ ನಳನಳಿಸಿ ಬಳೆದನಾತಂ ನೋಡ
ಹರಲೀಲೆ ಶಿಶುವಾಗಿ ಬಳೆವಂದದಿಂ ನೋಡ
ಶಿವನ ಭೋಗಂ ರಾಗದಿಂದೆ ಬಳೆವಂದದಿಂ
ಭವನ ಭಾಗ್ಯಂ ಮೂರ್ತಿಗೊಂಡು ಬಳೆವಂದದಿಂ
ಇಂತು ಬಳೆವುತ್ತಿರ್ದನೀಶ್ವರನ ಬೆಸದೊಳಂ
ಸಂತತಂ ಬೆಳಗುತುಂ ತಿರುನಾವಲೂರೊಳಂ॥ ೧೨೦॥

ಪ್ರಥಮ ಸ್ಥಲಂ ಸಮಾಪ್ತಂ

ಹನ್ನೆರಡನೆಯ ಸ್ಥಲಂ

ಕುಸುಮದೊಳಿರ್ಪ ಸೌರಭದವೋಲ್ ನವರತ್ನದೊಳಿರ್ಪ ಕಾಂತಿವೋಲ್
ಶಶಿಯೊಳಗಿರ್ಪ ಚಂದ್ರಿಕೆಯವೋಲ್ ಫಲದೊಳ್ ನೆಲಸಿರ್ಪ ಸದ್ರುಚಿ
ಪ್ರಸರದವೋಲ್ ಸದಾಶೆವನ ಭಕ್ತರೊಳಿರ್ಪ ಶಿವಪ್ರಸಂಗದಂ
ತಸದಳನೊಪ್ಪಿದಂ ಪರವೆನಾಚಿಯರೊಳ್ ಸಲೆ ಸಂದು ಸೌಂದರಂ॥

ಇಂತು ತಿರುವಾರೂರ ಪರವೌನಾಚಿಯರೊಳು ಪರಮ ಸುಖದಿಂ ಮನದಿಂಬು ಬೆಂಬಳಿಗೊಂಡು ನಂಬಿಯಣ್ಣನೊಲವಿಂ ಪಲಕೆಲವು ದಿನಮಿರಲೆರಡನೆಯವೈಘಾಸಿ ತಿರುನಾಳಡಿಯಿಡೆ ಪ್ರಥಮ ಪರ್ವದ ಸಮಯೋಚಿತವ್ಯಯದಾಶಾ ಬೀಜಂ ಪರವಿಯರ ಮಾತೆಯ ಮನದೊಳಂಕುರಿಸುವಲ್ಲಿಂ ಮುನ್ನಂ ಮಾನಿಗಳರಸಂ ನಂಬಿಯಣ್ಣನಿಂಬಱಿವ ಮಂತ್ರಿಯಪ್ಪ ತುಂಬರನಂ ಕರೆದು ನಮಗೆ ಶಿವಂ ಸಮಕಟ್ಟಿದ ಪಡಿವೊನ್ಗಳಂ ಕುಡದ ದೇವಾಲಯಂಗಳೆಲ್ಲಿಯುಂಟೆಂದಾಳೋಚನೆಯಂ
ಕೇಳಲೊಡಂ ದೇವ ಪೂರ್ವ ಪಶ್ಚಿಮ ದಕ್ಷಿಣ ಭಾಗಂಗಳ ಪಡಿವೊನ್ಗಳು ಸಲುತಮಿರ್ದಪುವು ಎಂದು ಕರಣಿಕರಿಂದೋದಿಸಿ ತೋಱಿ ನಿಮ್ಮಡಿಗಳ್ ನಡೆಯೆ ಉತ್ತರಭಾಗವುತ್ತಮವೆಂದಾಯ್ದು ಬಿನ್ನವಿಸಿದ ಪರಮಮಂತ್ರಿಗಂ ಪ್ರಸನ್ನನಾಗಿ         ೧೦

ಪ್ರಯಾಣನಿಮಿತ್ತಂ ಪರವೆಯರಗಲ್ಕೆ ಅಭ್ಯಾಸಮಾಗೆಕರಸೆ ಬಂದ ಪರಿಜನಂಗಳ್ ವೆರಸು ತಿರುವಾರೂರ ತ್ರಿಪುರಹರನಂ ಚಪಳತೆಯಿಂ ಬೀಳ್ಕೊಡು ಪೆರುಮಳಲೆಯ ಕುಱುಂಬರ್ ಪರಸಿ ಗುಡಿಯನೆತ್ತೆ ಪುರಮಂ ಪೊಱಮಟ್ಟು ಪಟ್ಟದಾನೆಯ ಬೆನ್ಗೆ ವಾಯ್ದು ಕೆಲಬಲದೊಳ್ ತುರಂಗಬಲಮಂ ತರಂಗಿಸೆ ಪದಾತಿ ಬಲಂ ಪಡಿಸಲಿಸೆ ನಿಸ್ಸಾಳ ಧ್ವನಿಯುಣ್ಮೆ ಬಿರುದೆತ್ತಿ ಕರೆವ ಕಹಳೆಗಳ ಬಹಳಧ್ವನಿ ದಿಕ್ತಟಕ್ಕೆ ಧೀಂಕಿಡೆ ವಂದಿಗಳ್ ಸಂದಣಿಸಿ ಪೊಗಳೆ ಭಕ್ತರ್ ಬರ್ದುಂಕಿದೆವೆನೆ ಲೋಕವಾಕಸ್ಮಿ-
ಕಂಬಡೆ ಕಟ್ಟಿಕ್ಕಱ ಮಗನನಗಲಲಾರದೆ ಶಿವಂ ಬಯಲನುಟ್ಟು ಬೆನ್ನೊಳ್ ಬರೆ ಉಉತ್ತಮ ಸತ್ತ್ವನುತ್ತರಾಭಿಮುಖನಾಗಿ ಪಲವು ಶಿವಪುರಂಗಳೊಳ್ ಪಡಿವೊನಳಂ ಪಡೆವುತುಂ ಪರವೆಯರ ಗುಣಂ ಮನವನಳ್ಳಿಱಿಯೆ ವಿರಹವಿಹ್ವಳನಾಗುತುಂ
ಕೆಲವೆಡೆಗೆಯ್ದು ಕಿಱಿದಂತರಂ ಬಂದೇಕಾಮ್ರನಾಥನಂ ಕಂಡು ಭಕ್ತಿಫಲಮಂ ಕೊಂಡು ಕಂಚಿಯಂ ಕಳೆದು ತಿರುವತ್ತಿಯೂರ್ಗೆ ನಡೆತರ್ಪಾಗಳ್

ಶಿವಭಕ್ತಿಯೊಳ್ ನೆರೆವ ಸದ್ಭಕ್ತನಂತಗಲದಿರ್ಪ ಚಕ್ರವಾಕಂಗಳಿಂ ಬಳಲ್ದು ಬಂದ ಹರಶರಣರೆಮ್ಮ ತಣ್ನೆಳಲೊಳ್ ಕುಳ್ಳಿರಲಾವೆಲ್ಲಂ ಸಫಲವಪ್ಪೆವೆಂದು ಕರೆವಂತೆ ಕೋಕಿಳಧ್ವನಿಯಿಂ ಮೆಱವ ಮಾಮರಟಗಳ್ ಮೊದಲಾದ ತರು ಕುಲಂಗಳಿಂ ಶಿವಲಿಂಗದ ಮಜ್ಜನಮಂ ಬಯಸುವ ಭಕ್ತಕುಲಮೆಮ್ಮತ್ತಲ್ ಬನ್ನಿಮೆಂದು ಕರೆವಂತೆ ಧ್ವನಿಗೆಯ್ವ ಕೊಳರ್ವಕ್ಕಿ-
ಯಿಂದೊಪ್ಪುವ ಪೂರ್ಣ ತಟಾಕಗಳಿಂ ಶಿವಪೂಜೆಗೆ ಮೀಸಲ ಮೊಗ್ಗೆಗಳಿವೆ ಬನ್ನಿಮೆಂದೆಳಲತೆಯ ಗುಡಿಗಟ್ಟಿ ತುಂಬಿಗಳನುಣ್ಚರದಿಂ ಕರೆವಂತಿರ್ದ ಪೂದೋಟಂಗಳಿಂ ನಂಬಿಯಣ್ಣನ ಮನದನುರಾಗಂ ಪಲ್ಲವಿಸಿದಂತಲ್ಲಲ್ಲಿ   ೩೦
ತೀವಿತಳಿರ್ತೊಪ್ಪುವಶೋಕ ವನಂಗಳಿಂ ಇಂತು ಮೆಱೆವ ಪುರದ ಬಹಿರುದ್ಯಾನಮಂ ತುಂಬುರಂ ತೋಱುತ್ತಂ ಬರೆ ನೋಡುತುಂ ಮಿಗೆ ಮೆಚ್ಚುತುಂ ಮುಯ್ಯಾನುತುಂ ನಡೆತಂದು ಪುರದೊಳಗಂ ಬರುತ್ತಿರೆ ಕೆಲಬಲದ ವೀಥಿಯುಪ್ಪರಿಗೆ-
ಗಳೊಳ್ ನೆರೆದು ನಿಂದು ಸಂದಣೆಸಿ ನೋಡುವ ಶಶಿಮುಖಿಯರೊತ್ತೊತ್ತೆಯಿಂ ಚಂದ್ರಲೋಕದಂತಿರ್ದ ಪುರವೀಥಿಯಂ ಕಳೆದು ದೇವರ ದೇವನ ದೇವಶಿಖಾಮಣಿಯ ದೇವಜನಜನಕ ದೇವರ ಗಂಡನ ದೇವರಾದಿತ್ಯನ ತಿರುವತ್ತಿಯೊರರಸನ
ದೇವಾಲಯದ ಬಾಗಿಲ್ಗೆ ಬಂದು ಪಟ್ಟದಾನೆಯಿಂದಿಳಿದೊಳಗಂ ಪೊಕ್ಕು ಬಲವರಲ್ ಮನಂದಂದು ಸುಕುಮಾರ ಸೌಂದರಂ ನಡೆತಪ್ಪಾಗಳ್
ಮುಂದೆ ಶಿವಪರಿಸೂತ್ರದೊಳು ದೇವವಿಟರ್ಗೆಕಣ್ಮಾಯವಂ ಬಿಡಿಸಿ-            ೪೦
ದಂತೆ ಮುಂದೆ ಕಟ್ಟಿರ್ದ ಪಚ್ಚೆಯ ಜವನಿಕೆಯ ಬಾಗಿಲೊಳ್ ವೇತ್ರದಂಡಮಂ ಪಿಡಿದು ನಿಂದಿರ್ದ ಪಡಿಯಱತಿಯರಿಂ ರಮ್ಯಂಬಡೆದು ಅನಂಗನಾಜ್ಞೆ ಸೀಮೆಯಂ ಪಡೆದಂತಿರ್ದ ಪಚ್ಚೆಯ ತೆರೆಯಂ ಕಂಡು ನಂಬಿಯಣ್ಣನುರವಣಿಸಿ ಬಂದು ಪತಿಯಂ ಬಯಸಿ ಶಿವನಂ ಬೆಂಬೀಳ್ವ ಸಂಕಿಲಿ ನಾಚಿಯರ ಮನವನೆತ್ತುವಂತೆ ಕೈನೀಡುತುಂ ಕಠಾರಿಯ ಕೋಲಿಂ ಭೋಂಕನೆ ತೆರೆಯನೆತ್ತಲೊಡನೆ ಹಂಸತೂಳದೆಳಗದ್ದುಗೆಯ ಮೇಲೆ ಕುಳ್ಳಿರ್ದ ಕಮಳಸೂತ್ರಮಂ ಕರಪಲೂಲದೊಳ್ ಪಿಡಿದು ಇರವಂತಿಯರಲನೊಂದನೆತ್ತಿ ತೊಡರ್ಚಿ ಮತ್ತೊಂದರಲನೆತ್ತಲಾರದೆ ಬಳಲ್ತು ಬೆಮರ್ತು ಪೊಂಬಾಳೆಯ ಬಿಜ್ಜಣಿಗೆಯಂ ಮೆಲ್ಲಮೆಲ್ಲನೌ ಬೀಸಿಕೊಳುತ್ತಂ       ೫೦
ನವಯೌವನದೊಳಗಿರ್ದ ಬೆಳ್ದಿಂಗಳ ತಿರುಳ ಪುತ್ತಳಿಯಂತಿರ್ದ ಸಂಕಿಲಿನಾಚಿಯರ ನೋಟದೊಡನೆ ತನ್ನ ನೋಟಂ ಘಳಿಲನೆ ಸಂಧಿಸೆ ಹಳಿಲನೆ ಮನಂ ಬಿರ್ದು ನೆನಹುಡುಗಿನಡೆಗೆಟ್ಟು ಕಂಪಿಸಿ ನಸುಬೆಮರ್ತು ಹೊಸ ನೋಟಂ ಹೋರಟೆ-
ಗುಟ್ಟಿತೈತಿಕ್ಕಿ ತಳರದೆ ತಂತಮ್ಮೊಳಪೊಕ್ಕ ರೂಪು ಮಗುಳಲಾಱದೆ ನಟ್ಟು ನೋಡುತ್ತಿರಲ್ ಇದೆ ಸಮಯವೆಂದನಂಗನರಲ-
ಸರಲ ಸರಿವಳೆಯಂ ಕಱೆಯೆ ಕಂಡು ಕುಲಾಭಿಮಾನದ ಲಲನೆಯರ್ ತಮತಮಗಂಜಿ ನೋಟಮನಿಕ್ಕಡಿಮಾಡುವಂತೆ ಕಂಡ ಸುಖಮಂ ತುಂಡೆಸುವಂತೆತ್ತಿದ ಜವನಿಕೆಯಂ ಭೋಂಕನೆ ಸಡಿಲ್ಚಿ ಮಱೆಮಾಡಿ ಇದೇನಿದೇನಭವಪೂಜೆ ಮನೋಭವಪೂಜೆಗಿಕ್ಕಿತು ಇದೆಲ್ಲಿಯ ಲಾವಣ್ಯದಲಾವುಲಿಗಂ ಜವ್ವನದ ಸೂಱೆಕಾಱಂ ಮನದಮಲ್ಲಳಿಕಾಱಂ ಚಿತ್ತದಳವುಳಿಕಾಱಂ ಬಂದಂ ಏಗುವೆನೇಗುವೆಂ ಕುಲವಂ ಕಲಂಕಿದಂ ಮುಗುಳಂ ಮೀಸಲ್ವೋಗಿಸಿದಂ ತೀವಿದಮೃತವಂ ತುಳುಂಕಿದಂ ಚಂದ್ರಿಕೆಯಂ ಬಿಂದುಗಳೆದಂ ಓವೋವೊ ಎಂದೆಲ್ಲಾ ಸಖಿಯರ್ ಸಂದಣಿಸಿ ಹೊಸಪೂಜೆ ಹಸನಾಯಿತ್ತೆನುತೆ ಭೋಂಕನೆ ಸಂಕಿಲಿಯ ನತ್ತಲವರ ಮನೆಗೊಯ್ದರ್
ಇತ್ತಲ್ ನಂಬಿಯಣ್ಣಂ ಪ್ರದಕ್ಷಿಣಮಂ ಕಳಿದು ತಿರುಗಿ ಬಂದೈದಾಱಡಿಯೊಳೇಳೆಂಟವಸ್ಥೆಗೊಂಡು ಶಿನಲ್ಲಿಗೆಯ್ತಂದು ಎಲೈಯೆಲೆ ದೇವಾ ಪ್ರಮಾಣಪತ್ರಮಂ ಕೊಡುಕೊಡು ಕೊಟ್ಟ ಬಳಿಕಲ್ಲದೆ ಮಾತಾಡೆನೆಂ ಬಳಲ್ನುಡಿಯಂ ಕೇಳ್ದು ಶಿವಂ ಕೌತುಕಂಬಟ್ಟು ಇದೇನಿದೇನೆಲೆ ಮಗನೆ ನಂಬಿ ನಂಬಿ  ನಿಷ್ಕಾರಣಂ ಮುನಿದ ಕಾರಣಮಂ ಪೇಳ್ದು ಬಳಿಕ್ಕ ೭೦
ಮುನಿವುದೆನೆ ದೇವ ದೇವ ನಿಮ್ಮರಮನೆಯ ಪರಿಸೂತ್ರದೊಳೊರ್ವ ಸಂಕಿಲಿನಾಚಿಯರಂಬನರ್ಘ್ಯರತ್ನಮಂ ಕಂಡೆನೆನಗಾ ಕನ್ನಿಕೆಯಂ ಮಾಡಿಕೊಡುವುದೆನೆ ಶಿವಶಿವ ಶಿವ ಎಂದು ಶಿವಂ ಕಿವಿಯಂ ಮುಚ್ಚಿಕೊಳುತ್ತೆ ಇದಾವ ದುರುಳುತನವಿದಾವ ಮೂರ್ಖತ್ವ ವಿದಾವ ಪಾಪದ  ಸರಸವಿದಂ ನುಡಿಯದಿರ್ ಅವರ ಕುಲಕ್ಕೆ ಕನ್ನಡಿ ಕಲ್ಮಷಂ ಮಾರ್ತಂಡಂ ಮಲಿನಂ ಆ ಮಾತನಾಡದಿರ್ ಅವಳಂ ಶೈಶವ ಕಾಲದೊಳ್ ಮುನ್ನೊರ್ವಂ ರಾಜಪುತ್ರಂ ತನಗೆಂದು ಪೆಸರ್ಗೊಂಡವಂ ಸತ್ಡವನೆ ಗಂಡನಿದೆಬಾಳೆಂದು ಸರ್ವಶುಚಿಯಾಗಿ ಕಟ್ಟುಬ್ಬಟೆಯಾಗಿ ನಡಯಿಸುತಿರ್ದಪರ್ ಈ ಮಾತನವರ ಮಾತೆಪಿತರು ಕೇಳ್ದೊಡೆನ್ನುಮಂ ನಿನ್ನುಮನಿರಲೀಯರು ಮರುಳು ಮಗನೆ ಇದಂ ಬಿಡು ಬಿಡು ಬಿಟ್ಟು ಕಳೆಯೆಂದು ಮನದೊಳ್
ಸಂತಂಬಡುತುಂ ಮಾತಿನೊಳಂಜಲೆಂದೊಲ್ದು ನುಡಿಯೆ ನಂಬಿಯಣ್ಣಂ     ೮೦
ಸಿಡಿಮಿಡಿಗೊಂಡು ಮೊಲೆಗುಡದ ತಾಯಕಾಲ ಬಾಯ ಶಿಶು ನಾಲಗೆಗಿತ್ತಳುವಂತೆ ರಂಗಮಂಟಪದೊಳ್ ಪೊರಳ್ದು ಪೊಡಕರಿಸಲಾಱದೆ ಕಿಂಕುರ್ವಾಣಂ ಕೈಮಿಕ್ಕುತೊತ್ತುಗೊಂಡ ತವರೆ ಆಳ್ಗೊಂಡರಸನೆ ಮನಂಗೊಂಡ ಮಹಿಮನೆ ಸುರತಂಗೊಂಡರೆವೆಣ್ಣೆ ಎಂದು ಮಱುಗಿ ಮಱುಗಿ ಮೊಱೆಯಿಟ್ಟೊಱಲ್ವ  ನಂಬಿಯಂ ಶಂಭು ಕರುಣಿಸಿ ನೋಡಿ ಹೋಹೋ ಮಗನೆ ಇನಿತಾಸುರವೇಕಜಂದಿರ್ ಮೆಲ್ಲನೆ ಪೋಗಿ ವಿಚಾರಿಸಿ ಬಂದಪೆನೇಳೇಳೆಂಬ ಮಾತಿನೊಡನೆ ಹರಣಂ ಬಂದು ಹಸರಿಸಿ ಕುಳ್ಳಿರ್ದ ನಂಬಿಯ ಮಯ್ಯ ತಡವಿ ಪ್ರಸಾದಮಂ ಚಿಲುಪಾಲನೂಡಿ ಬಾಯ ತಂಬುಲಮನಿತ್ತು
ಚಂದನ ದ್ರವಾದಿ ಪರಿಮಳದ್ರವ್ಯಮಂ ಬೀಳುಡೆ ಸಹಿತಂ ಕೊಟ್ಟು ನೀನಿಲ್ಲಿ      ೯೦
ರೆಂದು ಪ್ರಭಾಕರನಂ ಪಶ್ಚಿಮಾಬ್ಧಿಗೆ ಪೋಗವೇಳ್ದು ಭಕ್ತಜನ ಬಾಂಧವಂ ಪ್ರೇಮಜನಕಾಮದಂ ಪ್ರಣಯಜನ ಪ್ರಾಣಮಿತ್ರಂ ನಂಬಿದರ ಬೆಂಬಲಂ ನಚ್ಚಿದರಚ್ಚು ಮಚ್ಚಿದರ ಮೆಚ್ಚು ಅಗಲದವರಾನಂದವೆನಿಪ ಶಿವಲಿಂಗಂ ಜಂಗಮರೂಪಂ ಕೈಕೊಂಡು ನಂಬಿಯಣ್ಣಂಗೆ ಕುಂಟಣಿಯಂ ನಡೆಯಲೆಂದು ಕಾರುಣ್ಯಪಾರಾವಾರಂ ಪಾರ್ವತಿಯಂ ಪೊಱಗೆ ನಿಲಿಸಿ ನಂದೀಶಂ ಕೈಗುಡೆ ವೀರಭದ್ರಾದಿಗಣಂಗಳಱಿದಡೆ ನಂಬಿಗೆ ಪ್ರಮಾದವೆಂದು ಮೆಲ್ಲಮೆಲ್ಲನೆ ಕದ್ದು ಪೊಱಮಟ್ಟ ನಡುವೆಡೆಯೊಳ್ ಭೂದೇವಿ ಪುಳಕಿಸುತೆ ಹರಿವಿರಂಚಿಗಳಱಿಯದ ಶ್ರೀಪದಂ ತನ್ನಂ ಸೋಂಕಿದವೆಂಬುಮ್ಮಹದಿಂ ಶಿವನ ಮೆಲ್ಲಡಿಗಳ್ಗೆ ತನ್ನ ಕರಪಲ್ಲವಮಂ ಪಾಸುತಂ ಬರೆ ಮುಡಿದ ಪಾರಿಜಾತದರಲ ಪರಿಮಳಂ ಧರಣಿಯಂ ತೆಕ್ಕನೆ ತೀವೆ ಈಶಾನಶೆಟ್ಟಿಯರ ಮನೆಯಂ ಪೊಕ್ಕು ಸಂಕಿಲಿನಾಚಿಯರ ತಾಯಪ್ಪ ಶಿದದೇವಿಯರ ಬಾಗಿಲಲಿ ನಿಲಲ್
ಇದೆಲ್ಲಿಯುತ್ಕಟದಕಂಪಿದೆಲ್ಲಿಯ ಬೆಳತಿಗೆವೆಳಗಿದೆಲ್ಲಿಯಚ್ಚರಿಯಾನಂದಂ ಬಂದು ನಿಂದಪುದು ಈ ರೂಪು ತಿರುವತ್ತಿಯೂರರಸನಾಕಾರವಾದೆ ಮಾಣದೆಂದಿದಿರ್ವಂದು ಮಯ್ಯಿಕ್ಕಿನಿಂದು. ಕಯ್ಯಂ ಮುಗಿದು ದೇವ ಹರಿವಿರಿಂಚಿ-
ಗಳ್ಗಗೋಚರಮಪ್ಪ ವೇದಂಗಱಿಯದ ಶ್ರೀಪಾದಾಬ್ಜಗಳೆನ್ನ ಮನದ ಮೊನೆಯೊಳ್ ಪೊತವು ಎನ್ನಿಂ ಕೃತಾರ್ಥರಾರೆನುತ್ತೆ ಮತ್ತೆ ಮತ್ತೆಱಗಿ ಪುಳಕಿತೆಯಾಗಿ ಕನಕಮಣಿಭದ್ರಾಸನದೊಳ್ ಬಿಜಯಂಗೆಯ್ಸಿ ಶ್ರೀಪಾದಪ್ರಕ್ಷಾಳನಂ ಮಾಡಿ ಪಾದೋದಕದಿಂ ಪ್ರಬಲೆಯಾಗಿ ಸಂತಸದಿಂ ಸಂತೈಸಿಕೊಳಲಾರದುರ್ಬಿ ಬಿಬ್ಬನೆ ಬಿರಿದರಲ್ವ ಶಿವದೇವಿಯರಂ ಕಂಡು ಕಾರುಣ್ಯದಿಂ ನೋಡಿ ಸಂಕುಲಿನಾಚಿಯಲ್ಲಿಗೆಪೋದಳೆಲ್ಲಿರ್ದಪಳೆಂದು ಶಿವಂ ಕೇಳಲೊಡಂ
ದೇವದೇವ ಏನೆಂದಱಿಯೆನದೊಂದು ವಿಸ್ಮಯಂ ಇಂದಿನ ಪಗಲ್ ನಿಮ್ಮನರ್ಚಿಸುತ್ತಿರ್ದು ಭೋಂಕನೆ ಬಂದು ಮರುಳಂತೆ ಮರನಂತೆ ಜಡರಂತೆ ಏರ್ವಡೆದರಂತೊರ್ವರೊಳಂ ನುಡಿಯದೆ ಕ್ರೀಡಾವನದ ಹೂವಿನ ಹಸೆಯೊಳ್ ಮಯ್ಯನೀಡಾಡಿ ಬಾಳೆಯ ಬಿಜ್ಜಣಿಗೆಯಿಂ ಬೀಸಿಕೊಳುತ್ತೆ ಆಲಿನೀರ್ಗಳಂ ಚೆಲ್ಲಿಸಿಕೊಳುತ್ತೆ ಪದ್ಮಪತ್ರಂಗಳಿಂದೊತ್ತಿಸಿಕೊಳುತ್ತೆ ಕಾಮನಂಬಿಂ ಮುಮ್ಮಳಿಗೊಳುತ್ತೆ ಮಂದಾನಿಲನಿಂ ಮಲ್ಲಳಿಗೊಳುತ್ತೆ ಮಯ್ಯ ಬಿಸುಪಿಂ ಸುಯ್ಯಲರಬೆಂಕೆಯಿಂ ವನಂ ಕೊರತಗ್ತುಮಿರೆ ತಾಂ ಕಂದುತಿರ್ಪಳೆಂದು ಬಿನ್ನೈಸೆ ಶಿವಂ ಮುಗುಳ್ನಗೆ      ೧೨೦
ನಗುತ್ತೆ ಅದುಕಾರಣದಿಂ ಬಂದೆವೆಮ್ಮ ಮಗನ ರೂಪಂ ಕಂಡು ಸಂಕಿಲಿಯ ಮನಂ ಕಲಂಕಿತೆನೆ ದೇವ ನಿಮ್ಮಡಿಗಳ ಮಗನೋರ್ವಂ ಗಜಮುಖನೊರ್ವಂ ಷಣ್ಮುಖನೊರ್ವಂ ದಕ್ಷಾಧ್ವರಧ್ವಂಸಿಎನ್ನ ಮಗಳು ಸೋಲ್ವಂತಪ್ಪ ಮಕ್ಕಳಾರೆಂದು ಬಿನ್ನೈಸೆ ಈಗಳೀ ಮರ್ತ್ಯದೊಳಗೊರ್ವ ಪೊಸ ಮಗನಂ ಪಡೆದೆವು ಅವನ ರೂಪೆಮ್ಮಿಂದಿಮ್ಮಡಿ ಅವನ ಸೊಬಗೆಮ್ಮಿಂ ನೂರ್ಮಡಿ ಆತನಂ ಸಂಕಿಲಿಯೊಳ್ ನೆರಪುವುದಕ್ಕೆ ನಿಮ್ಮಲ್ಲಿಗೆ ಬಂದೆವೆಂದು ಭಕ್ತಜನ ಲೀಲಾಲೋಲಚಿತ್ತಂ ಶಿವದೇವಿಯರ್ಗೆ ಬೆಸಸುತ್ತಮಿರೆಯಿರೆ
ದ್ವಾದಶ ಸ್ಥಲಂ ಸಮಾಪ್ತಂ.

ಹದಿಮೂರನೆ ಸ್ಥಲ

ದೇವರ್ ಬಿಜಯಂಗೆಯ್ದೊಡ
ದಾವುದಱ ವಿಚಾರಮುಂಟೆ ಕರುಣಿಸುವುದು ನೀಂ!
ಕಾವುದು ಸದ್ಭಕ್ತಿಯನಿ
ತ್ತೋವುದೊಲವಿಂದೆ ಹಂಪೆಯ ವಿರೂಪಾಕ್ಷ॥

ಎಂದು ಶಿವದೇವಿಯರು ಹರುಷಪುಳಕಿತೆಯಾಗಿ
ಇಂದುಮುಖಿ ಬರ್ದುಕಿದಳು ಶಿವ ಕರುಣಿಸಿದಿರಾಗಿ ।
ದೇವ ಅಮೃತದ ಮಳೆ ಕೊಳಲ್ ಜೇನನಱಸುವರೆ
ದೇವ ಪಾಲ್ಗಡಲಿದಿರಲಿರೆ ಹಯನನಱಸುವರೆ ।
ದೇವ ಪುಂಡ್ರೇಕ್ಷುದಂಡದಿ ಪಣ್ಣನಱಸುವರೆ
ದೇವ ಚಂದನದ ಕುಜದೊಳ್ ಕುಸುಮವಱಸುವರೆ ।
ನೀವೆ ಬಿಜಯಂಗೆಯ್ಯಲಱಸಲುಂಟೆ ದೇವ
ನೀವೆ ಕೃಪೆಯಿಂ ಬರೆ ವಿಚಾರವುಂಟೆ ದೇವ ।
ನಿಮ್ಮಡಿಗಳರ್ತಿಯಿಂ ಕರುಣದಿಂ ಬರುತಿರಲು
ಎಮ್ಮಯ ಕೃತಾರ್ಥತೆಯನೇನೆಂಬೆನಿಂತಿರಲು ।           ೧೦
ಬರವಂ ಹರಿವಿರಿಂಚಿಗಳ್ ಪಡೆವರೇ
ನಿಮ್ಮ ನಿಲವಂ ಸಕಲ ಋಷಿಜನಗಳಱಿವರೇ ।
ನೀವಿರ್ದುದೇ ಕುಲಂ ನೀವಿರ್ದುದೇ ನೆಲಂ
ನೀವಿರ್ದುದೇ ಚಲಂ ನೀವಿರ್ದುದೇ ಬಲಂ ।
ಕರುಣಿಪುದು ಕೂಡುವುದು ಸಂಕಿಲಿಯನಾತನೊಳು
ಪರಸುವುದು ಪಾಡುವುದು ತಡವೇವುದಿಂಬಿನೊಳು ।
ಕಳುಪುವೆನೆ ಸಂಕಿಲಿಯ ನಿಮ್ಮೊಡನೆ ಯೆಲೆ ದೇವ
ಎಳಸಿರ್ದರಿರ್ವರುಂ ತಳುವೇವುದೆಲೆ ದೇವ ।
  ಎಂದು ಬಿನ್ನೈಸೆ ಬೇಗಂ ಬೇಡ ನೀರಱಿಯೆ
ಮುಂದುವರಿಯದಿರವಂ ಮಿಗೆ ಚಪಳ ನಾವಱಿಯೆ।          ೨೦
ಮುನ್ನೊರ್ವಳುಂಟು ತಿರುವಾರೂರೊಳಾತಂಗೆ
ಕನ್ನೆವೇಟದ ನೇಹವತಿಬಲ್ಲಿತಾತಂಗೆ ।
ಪರವೆನಾಚಿಯರೆಂಬ ನಾಯಕಸ್ತ್ರೀಯುಂಟು
ಹರವರಿಯ ಸಮಸುಖಂ ಬಿಡಿಸಬಾರದ ನಂಟು।
ಅವಳಿತ್ತಲೆಳಸದಂತವಳತ್ತ ಪೋಗದಂ
ತವಳತ್ತ ನೆನೆಯದಂತವಳತ್ತ ಸಾರದಂ ।
ತಳವಡಲು ಸೂರುಳಂ ಕೊಂಬುದೊಳ್ಳಿತ್ತಾಗಿ
ಅಳವಡಿಸುವುದು ಬಳಿಕ್ಕಿರ್ವುಮನೊಂದಾಗಿ ।
ಕಳಿಪಿದೆವಾತನಂ ನಿಮ್ಮಲ್ಲಿಗೆಂದೆನುತೆ
ಘಳಿಲನುದಯಿಸವೇಳ್ ದಿವಾಕರನನೆಂದೆನುತೆ।          ೩೦
ತಿರುಗಿ ಬಿಜಯಂಗೈದನೀಶಂ ಶಿವಾಲಯಕೆ
ಪರಮಭಕ್ತರಬಂಧು ಬಂದ ತನ್ನಾಲಯಕೆ ।
ತನ್ನ ಬರವೇ ವರವದಾಗಿರ್ದ ನಂಬಿಯಂ
ತನ್ನ ಕರುಣವೆ ಹರಣವಾಗಿರ್ದ ನಂಬಿಯಂ ।
ಕಂಡು ನೀಂ ತುಂಬುರನನೊಡಗೊಂಡು ಹೋಗಯ್ಯ
ಕಂಡುದಂ ಬಯಸುತಿರ್ಪೆಲೆ ಮಗನೆ ಹೋಗಯ್ಯ ।
ಎನೆ ತೆಗೆದು ಪೊಸ ಸಪುರಮಂ ನಲಿದುಟ್ಟು
ಮನವೊಸೆದು ನಿಟಿಲದೊಳ್ ತ್ತುರಿಯ ಬೊಟ್ಟಿಟ್ಟು ।
ತೋರಹಾರಮನಗಲುರಕ್ಕೆ ಕೈಕೊಳಿಸುತುಂ
ಹಾರೈಸಿ ಹೊಳೆವ ಮುತ್ತಿನ ಕಡಕನಿಕ್ಕುತುಂ।           ೪೦
ತುಂಬುರನ ಕೈವಿಡಿದು ಶಿವದೇವಿಯರ ಮನೆಗೆ
ನಂಬಿಯಣ್ಣಂ ಬಂದನುರವಣಿಸುತಂ ತನಗೆ।
ಬರೆ ಕಂಡು ಸಿಂಹಾಸನಮನಿಕ್ಕಿ ಕುಳ್ಳಿರಿಸಿ
ಚರಣತಳವಂ ವಿಳಾಸಿನಿಯರಿಂ ಸಿಂಗರಿಸಿ।
ಸಂಕಿಲಿನಿಮಿತ್ತವೆಯ್ತಂದುದು ತಾನಱಿದು
ಶಂಕರಂ ಬೆಸಸಿತಂ ಸೂರುಳುಗೊಳಲ್ ನೆನೆದು।
ತುಂಬುರನನಲ್ಲಿ ಕರೆವುತ್ತವೇಕಾಂತದೊಳು
ನಂಬಿ ನುಡಿದಳು ತನ್ನ ಮಗಳ ಕಡುನೇಹದೊಳು।
  ಕೇಳು ತುಂಬುರ ನಮ್ಮ ಕುಲದ ಪರಿಕರ ಪೊಸತು
ಪೇಳಬಾರದು ನೋಡ ನುಡಿಸಬಾರದು ಪೊಸತು।              ೫೦
ದೇವರ ಸುತಂ ಸ್ವತಂತ್ರ ಧರೆಗೆ ಸೌಂದರಂ
ಆವೇನುಮಂ ಬಳಿಕ ನುಡಿಯಬಾರದು ಕರಂ।
ಎಲ್ಲವಂ ಮುನ್ನವೇ ಪೇಳ್ವುದುಚಿತಂ ಕೇಳ
ಬಲ್ಲೆ ನೀನಱಿಯದುದುಮುಂಟೆ ತುಂಬುರ ಹೇಳ ।
ಇವರ್ಗೆ ತಿರುವಾರೂರೊಳೊರ್ವ ಮಾನಿನಿಯಂಟು
ಇವರ ಚಿತ್ತಂ ಮುಂದೆ ಸಂಚಳಿಸುವುದುಮುಂಟು ।
ಇದಕೆಮ್ಮ ಮನದ ಸಂದೆಗಮಂ ಬಿಡಿಸಿ ಕೊಟ್ಟು
ಇದಕೆ ದೇವರ ಮುಂದೆಮಗೆ ಸೂರುಳಂಕೊಟ್ಟು ।
ಬಳಿಕ ಸಂಕಿಲಿಯನೊಚ್ಚತವಾಗಿ ಕೊಂಬುದೆನೆ
ತಳರದಗಲದೆ ಚಲಿಸದರ್ತಿಯಿಂದಿಪ್ಪುದೆನೆ।              ೬೦
ಬಂದು ತುಂಬುರನಿದಂ ನಂಬಿಯಣ್ಣಂಗಱುಪೆ
ಎಂದೆ ಮಾತಂ ಸೌಂದರನ ಕರ್ಣದೊಳ್ ನೆರಪೆ।
ಕೇಳ್ದೊಡಂಬಟ್ಟೆನೆಂದಲ್ಲಿ ಸಂತೋಷಮಂ
ತಾಳ್ದು ನುಡಿದಂ ನಡೆಗೊಳುತ್ತೆ ಪರಿತೋಷಂ।
   ಮುಂದೆ ದೇವಾಲಯಕೆ ಬಂದು ಕಾಮೋತ್ಕಟಂ
ಒಂದೊಂದೆ ನೀಂ ಮಾಡುವುದು ದೇವ ಸಂಕಟಂ ।
ಇಂದು ಸಂಕಿಲಿನಾಟಿಯರ ಮಾತೆ ತಾಂ ದೇವ
ಬಂದು ಸೂರುಳಪೇಳ್ದಳಿಂದೀಗಳೆಲೆ ದೇವ ।
ನೀನುವುಂ ಬೆನಕನುಂ ಸ್ವಾಮಿಯುಂ ದೇವಿಯುಂ
ಈ ನಿಂದ ಮರದಡಿಯೊಳಿರ್ಪುದೆನಗಾಗಿಯುಂ ।               ೭೦
ಎನೆ ಕೇಳ್ದಿವರ್ ಸಹಿತವೀಶ್ವರಂ ಪೊಱಮಟ್ಟು
ತನುಜನಿರವೇಳ್ದ ಮರದಡಿಯಲಿರಲಳಪಟ್ಟು ।
ಇರಲು ಬರುತಿರ್ಪ ಶಿವದೇವಿಯರ್ಗಿದಿರಾಗಿ
ಚರಿತದಿಂ ಸೌಂದರನನಱಿಯಲೀಯದೆ ಪೋಗಿ।
ಮರದಡಿಯೊಳಿರ್ದಪೆವು ಬೇಱೆ ಸೂರುಳು ಬೇಡ
ಮರದಲ್ಲಿ ಸಾಲ್ವುದೀ ದೇವಾಲಯಂ ಬೇಡ ।
ಎಂದಲ್ಲಿ ಪೇಳ್ದು ಮತ್ತಾ ಮರಕ್ಕೆಯ್ತಂದು
ಇಂದುಧರನಿರಲಲ್ಲಿ ನಂಬಿಯಣ್ಣಂ ಬಂದು ।
ಸೂರುಳಲ್ಕೆಂದು ದೇವಾಲಯದ ಮುಂದಿರಲು
ನಾರಿಯರ್ ವೆರಸು ಸಂಕಿಲಿಯ ತಾಯ್ ನಡೆತರಲು।        ೮೦
ಕಂಡಲ್ಲಿ ನಂಬಿಯಣ್ಣಂ ಬೆವಸ್ಥೆಗೆ ನಿಂದು
ಖಂಡೇಂದುಮೌಳಿ ಮಾಡಿದನೆ ಇಂತಿದನೆಂದು।
ನಿಂದಿರಲ್ ಸಂಕಿಲಿಯ ಮಾತೆ ನಲವಿಂ ಬಂದು
ಎಂದಳಳಿಯಂಗೆ ನಾಚುತ್ತೆ ದೂರದಿ ನಿಂದು ।
ಎಮ್ಮ ಸಂಕಿಲಿಯ ಪತಿಯಾದಂದೆ ಬೇಱಿಲ್ಲ
ನಿಮ್ಮನಿಲ್ಲಿಗೆ ತಪ್ಪುದಿಂತೆಮಗುಚಿತವಲ್ಲ ।
ಆದೊಡೇನೀ ಮಹಾಸ್ಥಾನಂಗಳೊಳ್ ಬೇಡ
ಆದ ಪೊಲ್ಲವೆ ಲೇಸು ಯೆಮಗೆ ಸರಿಯಿದು ಬೇಡ ।
ಈ ಶಿವಾಲಯದ ಮುಂದಣ ಮರದಡಿಗೆ ಬಂದು
ಈಶನಱಿಯಲ್ ಬಿಡೆಂ ಸಂಕಿಲಿಯನಿನ್ನೆಂದು।
ಶಿವನಾಜ್ಞೆಯಂ ನೀವೇ ಕೈಕೊಂಡು ನುಡಿವುದೆನೆ
ಶಿವನೆ ಬಲ್ಲಂ ಬಳಿಕ್ಕಾದುದಂ ಕಾಣ್ಬೆವೆನೆ
    ಕೋಪಿಸುತೆ ಸಿಡಿಮಿಡಿಗೊಳುತ್ತೆ ಸೌಂದರನಲ್ಲಿ
ತಾಪಿಸುತವೆಯ್ದಿಸದೆ ನಡೆತಂದು ಮರದಲ್ಲಿ ।
ನಿಂದವರ್ ನೆರೆದವರ್ ನೋಡೆ, ಲಜ್ಜೆಯನುಳಿದು
ಇಂದುಧರನಲ್ಲಿ ನೋಡುತ್ತೆ ನಗುತಿರೆ ಮುಳಿದು ।
ನೋಡುತಿರ ನಂಬಿಯಣ್ಣಂ ನುಡಿದನಂತಲ್ಲಿ
ನಾಡೆ ಸಂಕಿಲಿಯನಗಲೆಂ ಬಿಡೆಂ ಬಿಡೆನಿಲ್ಲ।
ಇದಕೆ ಶಿವನೆಜ್ಞೆ ಶಿವನೇ ಬಲ್ಲನೆನುತಲ್ಲಿ
ಮದವನಿಗನತ್ತೆಯರ ಮುಂದೆ ಮುಂದೆ ಸೂರುಳಲಲ್ಲಿ ।
ನಸುನಗುತೆ ದೇವರಿನ್ನುಂ ಪೋಪೆವೇ ಮಗನೆ
ಹಸನಾಯ್ತು ನಿನ್ನ ಹಱೆ ನಿನ್ನ ಕೊಳಲಲೆ ಮಗನೆ ।
     ಎನಲದಂ ಕೇಳದಂತಱಿಯದಂತೆಯ್ತಂದು
ಮನವೊಸೆದು ರಂಗಮಂಟಪದ ಮಧ್ಯದೆ ನಿಂದು ।
ದಿನದಿನಕೆ ಸಾವಿರಚ್ಚಂ ಶರ್ವನಂ ಬೇಡಿ
ತನಗೆಸವ ತುಂಬುರನನಭವಗಪ್ಪಣೆಮಾಡಿ।
ಮನಸಿಜನನಿಳಿಕೆಯ್ವ ಸಿಂಗರಂ ಮಾಡುತುಂ
ತನತನಗೆ ನಲಿವ ಕರಣಂಗಳೊಡಗೂಡುತುಂ ।
ಮುಂದುವರಿವಿಂದ್ರಿಯಂಗಳನಗಲದೋವುತುಂ
ಸಂದಣಿಪ ತವಕಮಂ ತಲೆದಡವಿ ಪೆರ್ಚುತುಂ ।          ೧೦೦
ಸುಕುಮಾರಶೇಖರಂ ಸಿಂಗರದೊಳೊಪ್ಪಿದಂ
ಸಕಲಗುಣಶರಧಿ ಸೌಂದರನಾಗಳೊಪ್ಪಿದಂ

ತ್ರಯೋದಶ ಸ್ಥಲಂ ಸಮಾಪ್ತಂ

ಸಂಪಾದಕ : ಪ್ರೋ। ತೀ. ನಂ. ಶ್ರೀಕಂಠಯ್ಯ, ಎಂ. ಎ.
ಪ್ರಕಾಶನ: ವಸಂತ ಪ್ರಕಾಶನ
ಜಯನಗರ, ಬೆಂಗಳೂರು.