ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಅಕ್ಟೋಬರ್ 21, 2018

ಕನಕದಾಸರ ಮೋಹನ ತರಂಗಿಣಿ

ಕನಕದಾಸರ ಮೋಹನ ತರಂಗಿಣಿ

ಕೇಶವನ ಆರಾಧಕನಾಗಿ, ಧರ್ಮ, ಸಮಾಜ, ಸಂಸ್ಕೃತಿಯ ಹಿತಚಿಂತಕನಾಗಿ ಕಾಣಿಸಿಕೊಂಡ ಕನಕದಾಸ ನಡುಗನ್ನಡ ಕಾಲದ ಮಹತ್ವದ ಕನ್ನಡ ಕವಿಗಳಲ್ಲಿ ಒಬ್ಬ. ತನ್ನ ಅಪಾರವಾದ ಲೋಕಾನುಭವ, ಅಸಾಧಾರಣವಾದ ಪ್ರತಿಭೆ, ಸತ್ವಶೀಲವಾದ ವ್ಯಕ್ತಿತ್ವದಿಂದ - ಅದುವರೆಗೂ ಕೇವಲ ಕೀರ್ತನೆಗಳಿಗೆ ಮಾತ್ರ ಸೀಮಿತವಾಗಿದ್ದ ಹರಿದಾಸರ ಕ್ರಿಯಾಶೀಲತೆಯ ಹರವನ್ನು ಹೆಚ್ಚಿಸಿ ಕನ್ನಡ ಕಾವ್ಯ ಪ್ರಪಂಚದಲ್ಲಿ ದಾಸಸಾಹಿತ್ಯಕ್ಕೆ ಘನತೆಯನ್ನು ತಂದು ಕೊಟ್ಟದ್ದು ಕನಕದಾಸನ ಹಿರಿಮೆ. ಉಳಿದೆಲ್ಲ ದಾಸರು ಕೀರ್ತನೆಗಳ ರಚನೆಯಲ್ಲಿಯೇ ತೊಡಗಿದ್ದ ಕಾಲದಲ್ಲಿ ಕನಕದಾಸ ಳಿದವರ ಕೀರ್ತನೆಗಳಿಗಿಂತಲೂ ಸತ್ವಯುತವಾದ ಕೀರ್ತನೆಗಳನ್ನು ರಚಿಸಿಯೂ ಜೊತೆಗೆ ೧) ಮೋಹನತರಂಗಿಣಿ ೨)ರಾಮಧಾನ್ಯ ಚರಿತೆ ೩) ನಳಚರಿತೆ ೪) ಹರಿಭಕ್ತಿಸಾರ ಮತ್ತು ೫) ನೃಸಿಂಹ ಸ್ತವ ಎಂಬ ಛಂದೋವೈವಿಧ್ಯತೆ ಹಾಗೂ ವಸ್ತುವೈವಿಧ್ಯತೆ-
ಯಿಂದ ಕೂಡಿದ ಕಾವ್ಯಗಳನ್ನು ರಚಿಸಿ ಕನ್ನಡ ಕವಿಗಳಲ್ಲಿ ಮೊದಲಿಗ ದಾಸರಾಗಿದ್ದಾರೆ. ಸಾಂಗತ್ಯದ ವೈಭವವನ್ನು ಹೆಚ್ಚಿಸಿದ ಕೆಲವೇ ಕವಿಗಳಲ್ಲಿ ಒಬ್ಬನಾಗಿದ್ದಾನೆ. ಮೋಹನತರಂಗಿಣಿ ಎಂಬ ಬೃಹತ್ಕಾವ್ಯ ಮತ್ತು ನೃಸಿಂಹಸ್ತವ ಎಂಬ ಲಘುಕಾವ್ಯ ಸಾಂಗತ್ಯದಲ್ಲಿ ರಚಿತವಾಗಿವೆ. ಆತ “ ಕವಿಗಳಲ್ಲಿ ದಾಸ, ದಾಸರಲ್ಲಿ ಕವಿ “ ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾನೆ.

ಕನಕದಾಸನ ಮೊದಲ ಹೆಸರು ತಿಮ್ಮಪ್ಪನೆಂದೂ, ಧಾರವಾಡ ಜಿಲ್ಲೆಯ ಬಾಡ ಗ್ರಾಮ ಆತನ ಹುಟ್ಟೂರೆಂದು ತಿಳಿದು ಬರುತ್ತದೆ. ದಂಡನಾಯಕ ಅಥವಾ ಪಾಳೆಗಾರನೋ ಆಗಿದ್ದ ಕುರುಬಜಾತಿಯ ಬೀರಪ್ಪ ಹಾಗೂ ಆತನ ಮಡದಿ ಬುಚ್ಚಮ್ಮ ತಿರುಪತಿ ತಿಮ್ಮಪ್ಪನಿಗೆ ಹರಿಕೆ ಹೊತ್ತು ಹಡೆದದ್ದರಿಂದ ಆತನಿಗೆ ತಮ್ಮಪ್ಪ ಎಂಬ ಹೆಸರನ್ನು ಇಡಲಾಗಿತ್ತು ಎಂದು ಹೇಳುತ್ತಾರೆ.ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿಯೇ ಬೆಳೆದು, ಶಸ್ತ್ರಾಸ್ತ್ರಗಳ ವಿದ್ಯೆ ಕಲಿತು ತಂದೆಯಂತೆ ಪಾಳೆಯಗಾರನಾದ. ಮೊನೆಗಾರ ಧನಿಯಾಗಿದ್ದ ತಿಮ್ಮಪ್ಪ ಅಸಾಮಾನ್ಯ ಶೂರನಾಗಿದ್ದನೆಂದೂ, ದೊರೆಯಾಗಿದ್ದನೆಂದೂ ತಿಳಿದುಬರುತ್ತದೆ. ಒಂದು ಸಲ ಭೂಶೋಧನೆಯಲ್ಲಿದ್ದಾಗ ಚಿನ್ನದ ಕೊಪ್ಪರಿಗೆ ದೊರೆತದ್ದರಿಂದ ಆತನಿಗೆ ಕನಕನೆಂಬ ಹೆಸರು ರೂಢಿಗೆ ಬಂತೆಂದು ಪ್ರತೀತಿ. ದೈವಕೃಪೆಯಿಂದ ದೊರೆತ ಐಶ್ವರ್ಯದಿಂದ ಕಾಗಿನೆಲೆಯಲ್ಲಿ ದೇವಾಲಯವನ್ನು ಕಟ್ಟಿಸಿ, ಜನ್ಮಸ್ಥಳವಾದ ಬಾಡದಲ್ಲಿದ್ದ ಆದಿಕೇಶವಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಉತ್ಸವಗಳು ನಡೆಯುವಂತೆ ಮಾಡಿದ.

೧. ಪೀಠಿಕೆ.

ಶ್ರೀಗಿರಿಜೇಶ್ವರನಾತ್ಮಾಭಿರಾಮ ಸ
ದ್ವಾಗೀಶಪಿತ ಪರಂಧಾಮ
ಕಾಗಿನೆಲೆಯ ರಂಗ ಸುರಸಾರ್ವಭೌಮ ಸು
ತ್ಯಾಗಿ ಪಾಲಿಸೊ ಪೂರ್ಣಕಾಮ ॥೧॥

ಭಾವಾರ್ಥ :- ಮಂಗಳಮಯನಾದ ಪರಶಿವನ ಆತ್ಮಕ್ಕೆ ಆಹ್ಲಾದಕಾರಿಯೂ, ಬ್ರಹ್ಮದೇವನ ತಂದೆಯೂ, ಕೈವಲ್ಯ ಸ್ವರೂಪಿಯೂ, ದೇವತೆಗಳ ಒಡೆಯನೂ, ಮನೋಭಿಲಾಷೆಯನ್ನು ಈಡೇರಿಸುವವನೂ ಆದ ಕಾಗಿನೆಲೆಯ ಕೃಷ್ಣನೆ ಕಾಪಾಡು.

ಕ್ಷೀರಾರ್ಣವಕನ್ಯೆ ಕಮನೀಯಮೂರುತಿ
ನಾರಾಯಣನುರಶ್ಚಿಹ್ನೆ
ಓರಂತೆ ಸಕಲೈಶ್ವರ್ಯ ಸಂಪನ್ನೆ ಮ
ದ್ಭಾರ ನಿನ್ನದು ಸುಪ್ರಸನ್ನೆ ॥೭॥

ಭಾವಾರ್ಥ:- ಕ್ಷೀರಸಾಗರದ ಸುಕುಮಾರಿಯೂ, ಮನೋಹರ ಮೂರ್ತಿಯೂ, ವಿಷ್ಣುವಿನ ಎದೆಯ ಅಲಂಕಾರವೂ, ಸಕಲಸಂಪತ್ತಿನಿಂದ ಕೂಡಿದವಳೂ, ಪ್ರಸನ್ನಚಿತ್ತಳೂ ಆದ ಲಕ್ಷ್ಮಿಯೇ ನನ್ನ ಭಾರ ನಿನ್ನದಾಗಿದೆ.

ನಿಮ್ಮಯ ಪಿತ ಕೃಷ್ಣರಾಯನ ಮಹಿಮೆಯ
ಹಮ್ಮನಱಿದು ಕೀರ್ತಿಪೊಡೆ
ನಮ್ಮಳವಲ್ಲ ಶಾರದೆಗೂಡಿ ಚತುರಾಸ್ಯ
ಬೊಮ್ಮ ಬಾಯೆನ್ನೆದೆವನೆಗೆ॥೯॥

ನಿಮ್ಮ ತಂದೆಯಾದ ಕೃಷ್ಣರಾಯನ ಮಹಿಮಾತಿಶಯವನ್ನು ಅರ್ಥಮಾಡಿಕೊಂಡು ಕೀರ್ತಿಸುವ ಸಾಮರ್ಥ್ಯ ನನ್ನಲ್ಲಿಲ್ಲ.ಆದ್ದರಿಂದ ಚತುರ್ಮುಖನಾದ ಬ್ರಹ್ಮನೆ ಶಾರದೆಯನ್ನು ಕೂಡಿಕೊಂಡು ನನ್ನ ಹೃದಯ ಮಂದಿರದಲ್ಲಿ ನೆಲೆಸು.

ಸಾವಿರ ಸಂತಾನವಡೆದಳ್ಗೆ ಮಮಕಾರ
ತೀವಿಹುದಬಲನ ಮೇಲೆ
ಕೋವಿದೆ ಪೆರ್ಮಕ್ಕಳ ಬಿಟ್ಟು ಸಲೆ ವಾ
ಗ್ದೇವಿಯೆನ್ನೊಳಗಿರು ತಾಯೆ ॥೧೧॥

ಸಾವಿರ ಮಕ್ಕಳನ್ನು ಪಡೆದ ತಾಯಿಗೆ ದುರ್ಬಲ ಮಗುವಿನಲ್ಲಿ ಹೆಚ್ಚಿನ ಮೋಹವಿರುತ್ತದೆ. ಆದ್ದರಿಂದ ಸರಸ್ವತಿಯೆ, ಬಲ್ಲವಳಾದ ನೀನು ಹಿರಿಯ ಮಕ್ಕಳಾದ ಮಹಾಕವಿಗಳನ್ನು ಬಿಟ್ಟು ನನ್ನಲ್ಲಿಯೇ ವಾಸವಾಗಿರು ತಾಯಿ.

ಕಾಯಕವಿದು ನಿನ್ನದು ಕೇಳು ನಿರ್ವಿಘ್ನ
ದಾಯಕ ಎನಗೆ ಸನ್ಮತಿಯ
ಜೀಯ ಕಾರುಣ್ಯದಿ ಕೊಡು ಪೊಂಬೊಳಲ ವಿ
ನಾಯಕ ವಿಶ್ವಾವಲಂಬ॥೧೨॥

ಭಾವಾರ್ಥ:- ವಿಶ್ವಾಧಾರಿಯಾದ ಹೊಂಬಳದ ವಿನಾಯಕನೆ, ಈ ಕಾವ್ಯರಚನೆಯ ಕಾರ್ಯವು ನಿನ್ನದೇ ಆಗಿದೆ. ಆದ್ದರಿಂದ ಒಡೆಯಾ, ವಿಘ್ನನಿವಾರಕನಾದ ನೀನು ಕರುಣೆಯಿಂದ ನನಗೆ ಜ್ಞಾನವನ್ನು ದಯಪಾಲಿಸು.

ಉರಗಾಲಯವೆ ಪೆಸರ್ವಡೆದವನ ಮತ್ಸ್ಯೋ
ದರಜಾತೆಯಾತ್ಮಸಂಭವನ
ವರಪುರಾಣಂಗಳ ಕನ್ನಡಿಸಿದ ಕವೀ
ಶ್ವರರ ಕೊಂಡಾಡುವೆ ಮುದದಿ॥೧೭॥

ಭಾವಾರ್ಥ:- ಹುತ್ತಿನ ಹೆಸರು ಪಡೆದ ವಾಲ್ಮೀಕಿಯ, ಮತ್ಸ್ತಗಂಧಿಯ ಮಗನಾದ ವ್ಯಾಸನ ಪುರಾಣಗಳನ್ನು ಕನ್ನಡಕ್ಕೆ ಅನುವಾದಿಸಿದ ಕುಮಾರವ್ಯಾಸ, ಲಕ್ಷ್ಮೀಶ ರನ್ನು ಸಂತೋಷಥಿಂದ ಕೊಂಡಾಡುತ್ತೇನೆ.

ಬಟ್ಟವೆಱೆಯ ಬೆಳ್ದಿಂಗಳ ಹೊಂದಾರೆ
ವಟ್ಟಲೊಳ್ ಸೋದಿಪರುಂಟೇ
ನೆಟ್ಟನೆ ಕನಕದಾಸನ ಕಾವ್ಯದೊಳ್ ದೋಷ
ತಟ್ಟದು ತಪ್ಪೆನಬೇಡ॥೨೪॥

ಭಾವಾರ್ಥ :- ಪೂರ್ಣಚಂದ್ರನ ಬೆಳ್ದಿಂಗಳನ್ನು ಕಮಲದ ಬಟ್ಟಲಲ್ಲಿ ಸೋಸುವವರುಂಟೆ ? ಕನಕದಾಸನ ಕಾವ್ಯದಲ್ಲಿ ಸೋಸಿನೋಡುವ ದೋಷವಿಲ್ಲ. ಸುಳ್ಳೆನಬೇಡ.

ಹರಿಶರಣ ಪೆಚ್ಚು ಬುಧಜನರಿಗೆ ಮೆಚ್ಚು
ದುರಿತವನಕೆ ಕಾಳ್ಗಿಚ್ಚು
ವಿರಹಿಗಳೆದೆದೆಗಿಚ್ಚು ವೀರರ್ಗೆ ಪುಚ್ಚು ಕೇ
ಳ್ವರಿಗಿದು ತನಿಬೆಲ್ಲದಚ್ಚು॥೩೯॥

ಈ ಕಾವ್ಯವು ಹರಿದಾಸರಿಗೆ ಶ್ರೇಯಸ್ಸಾಗಿಯೂ, ಪಂಡಿತರಿಗೆ ಮೆಚ್ಚಾಗಿಯೂ, ಪಾಪವೆಂಬ ಕಾಡಿಗೆ ದಾವಾಗ್ನಿಯೂ, ವಿರಹಿಗಳ ಎದೆಗೆ ಬೆಂಕಿಯೂ, ಸಹೃದಯರಿಗೆ ರುಚಿಕರವಾದ ಬೆಲ್ಲದ ಅಚ್ಚೂ ಆಗಿರುವುದು.

ಸೌರಾಷ್ಟ್ರ ವರ್ಣನೆ .

ಕೃತಿವೇಳ್ದ ಕನಕದಾಸೋತ್ತಮ ಕೇಳ್ದವ
ಳತಿ ಸುಜ್ಞಾನವಧೂಟಿ
ಕೃತಿಗೆ ಕರ್ತನು ಕಾಗಿನೆಲೆಯಾದಿಕೇಶವ
ಕೃತಿಯ ಕೇಳ್ದರೆ ಪುಣ್ಯವಹುದು॥೧॥

ಭಾವಾರ್ಥ :- ಕಾವ್ಯ ರಚಿಸಿದವನು ಖ್ಯಾತನಾದ ಕನಕದಾಸನು. ಕೇಳಿದವಳು ಜ್ಞಾನಸಂಪನ್ನೆಯಾದ ಯುವತಿ. ಕಾವ್ಯಕ್ಕೆ ಒಡೆಯನು ಆದಿಕೇಶವನು. ಇಂಥ ಕಾವ್ಯವನ್ನು ಕೇಳಿದರೆ ಸಹಜವಾಗಿಯೂ ಪುಣ್ಯಲಭಿಸುವುದು.

ಹೊದ್ದಿರಲುರ್ವಿಯ ಹೆಱಸಾರು ಸಾರೆಂದು
ಬುದ್ಧಿಗಲಿಸೆ ಕೇಳದಿರಲು
ಗದ್ದಿಸಿ ತೆರೆಗೆಯ್ಗಳಿಂದ ತಾಡಿಸುವಂತೆ
ಗುದ್ದಿತು ಜಲನಿಧಿ ತಟವ॥೮॥

ಭಾವಾರ್ಥ :-ಹೊಂದಿಕೊಂಡಿರುವ ಭೂಮಿಗೆ “ ಹಿಂದೆ ಸರಿ ಹಿಂದೆ ಸರಿ “ ಎಂದು ಬುದ್ಧಿ ಹೇಳಿದರೂ ಕೇಳದಿರಲು ಗದರಿಸಿ ತೆರೆಗಳೆಂಬ ಕೈಗಳಿಂದ ಹೊಡೆಯುವಂತೆ ಸಾಗರವು ದಂಡೆಯನ್ನು ಅಪ್ಪಳಿಸಿತು.

ಎಂಬತ್ತು ನಾಲ್ಕು ಲಕ್ಷದ ಜೀವರುಗಳೆಂ
ದೆಂಬ ಬೀಜದ ಸೃಷ್ಟಿಕರ್ತ
ಮುಂಬೆಳಸಿಗೆ ಪಣತವ ಕಟ್ಟಿದಂದದಿ
ಪೊಂಬೆಟ್ಟ ಕಣ್ಗೆ ರಂಜಿಸಿತು॥೧೨॥

ಮುಂದೆನ ಬೆಳೆಗಾಗಿ ಬ್ರಹ್ಮನು ಎಂಬತ್ತುನಾಲ್ಕು ಲಕ್ಷಜೀವಿಗಳೆಂಬ ಬೀಜದ ಉಗ್ರಾಣವನ್ನು ನಿರ್ಮಿಸಿದಂತೆ ಕನಕಬೆಟ್ಟವು ಕಣ್ಣಿಗೆ ಉಲ್ಲಾಸಕರವಾಯಿತು.

ಆ ಪರೂವತದ ದಕ್ಷಿಣ ಭಾಗದೊಳು ಜಂಬೂ
ದ್ವೀಪದ ಮಧ್ಯದೊಳಿರ್ದು
ಸೋಪಸ್ಕರವೆತ್ತ ನಿಖಿಲದೇಶಗಳ ಸ್ವ
ರೂಪವನೇವಣ್ಣಿಸುವೆನು ॥೧೩॥

ಮಾಳವ ಮಗಧ ಕಾಶ್ಮೀರ ಗುಜ್ಜರ ಗೌಳ
ಚೋಳ ಕೋಸಲದೇಶ ಬೋಟ
ಲಾಳ ಕನ್ನಡ ವಂಗ ಚೌಟ ಹೊಯ್ಸಳ ಮಲೆ
ಯಾಳ ದೇಶಂಗಳೊಪ್ಪಿದುವು॥೧೪॥

ಭಾವಾರ್ಥ:- ಮಾಳವ, ಮಗಧ, ಕಾಶ್ಮೀರ, ಗುಜ್ಜರ, ಗೌಳ, ಚೋಳ, ಕೋಸಲ, ಬೋಟ, ಲಾಳ, ಕನ್ನಡ, ವಂಗ,ಚೌಟ, ಹೊಯ್ಸಳ,  ಮಲೆಯಾಳ ದೇಶಗಳು ಶೋಭಿಸಿದುವು.

ಇಂತಿವು ಮೊದಲಾದ ಬಹುದೇಶದಲ್ಲಿ ಶ್ರೀ
ಕಾಂತಂಗೆ ತವರೂರೆನಿಸಿ
ಸಂತಸವಡೆದುದಾ ಸೌರಾಷ್ಟ್ರ ಸಕಲ ದಿ
ಗಂತಕ್ಕೆ ಸತ್ಕೀರ್ತಿ ಮೆರೆಯೆ ॥೧೫॥

ಭಾವಾರ್ಥ :-ಈ ದೇಶಗಳಲ್ಲಿ ಸೌರಾಷ್ಟ್ರವು ಶ್ರೀಹರಿಗೆ ತವರೂರಾಗಿ ದಶದಿಕ್ಕುಗಳಲ್ಲೂ ಘನತೆಯನ್ನು ಮೆರೆದು ಉಲ್ಲಾಸಭರಿತವಾಗಿರುವುದು,

ಪೊಡೆಯೆಂಬುದು ಗಂಧಶಾಲಿಯೊಳ್ ಕೈಯೊಳು
ಕೊಡೆಯೆಂಬ ರಾತಪತ್ರವನು
ತಡೆಯೆಂಬುದಹಿತಮಂತ್ರದೊಳಗಲ್ಲದಾದೇಶ
ದೆಡೆಯೊಳೀ ಶಬ್ದಂಗಳಿಲ್ಲ॥೨೦॥

ಭಾವಾರ್ಥ:- ಹೊಡೆ (ತೆನೆ) ಎಂಬುದು ಸುಗಂಧಯುಕ್ತವಾದ ಬತ್ತದಲ್ಲಿ, “ಕೈಯಲ್ಲಿ ಕೊಡೆ” ಎಂಬುದು ಛತ್ತರಿಯನ್ನು ಕುರಿತು, “ತಡೆ” ಎಂಬುದು ಸರ್ಪಮಂತ್ರದಲ್ಲಿಯೇ ಹೊರತು ಬೇರೆ ಅರ್ಥದಲ್ಲಿ ಈ ಶಬ್ದಗಳೇ ಆ ನಾಡಿನಲ್ಲಿಲ್ಲ.

ಕಂಟಕವೆಂಬುದು ಕೇತಕಿಯೊಳು ರಾಜ
ಕಂಟಕವೆಂಬುದಂಬುಜದಿ
ಕಂಟಕವೆಂಬುದುಹಲಸಿನೊಳಲ್ಲದೆ
ಕಂಟಕವಾದೇಶಕಿಲ್ಲ ॥೨೧॥

ಭಾವಾರ್ಥ:- ಕಂಟಕ (ಮುಳ್ಳು) ಎಂಬುದು ಕೇದಗೆಯಲ್ಲಿ, ರಾಜಕಂಟಕ= (ಚಂದ್ರನ ಆತಂಕ ) ಎಂಬುದು ಕಮಲಕ್ಕೆ, ಕಂಟಕ (ತೊಂದರೆ) ಎನ್ನುವುದು ಹಲಸಿನ ಹಣ್ಣಿನಲ್ಲಿಯೇ ಹೊರತು ಮತ್ತೆ ಕಂಟಕವೆಂಬುದು ಆ ನಾಡಿಗಿಲ್ಲ.

ಕುಟಿಲ ಕುಂತಳದೊಳು ಮಧುಪಾನತೊಂಡೆವ
ಣ್ದುಟಿಯೊಳು ಕಠಿನ ಕಾಂತೆಯರ
ಘಟಕುಚದೊಳಗಲ್ಲದೀನುಡಿಗಳು ಸಂ
ಘಟಿಸವು ಸೌರಾಷ್ಟ್ರದಲ್ಲಿ ॥೨೪॥

ಭಾವಾರ್ಥ:- ಕೊಂಕುತನವೆನ್ನುವುದು ಕೂದಲಲ್ಲಿ, ಮಧುಪಾನವೆನ್ನುವುದು ತೊಂಡೆ ಹಣ್ಣಿನಂಥ ತುಟಿಗಳಲ್ಲಿ, ಕಠಿನತನವೆನ್ನುವುದುವದು ರಮಣಿಯರ ಕುಂಭಕುಚಗಳಲ್ಲಿಯೇ ಹೊರತು ಬೇರೆಡೆಯಲ್ಲಿ ಇಂಥ ಶಬ್ದಗಳು ಹುಟ್ಟಲಾರವು.

ಕೊನೆವಾೞೆ ಕುಸುಮಮಂಜರಿ ಮುಖ್ಯಶಾಲಿಯ
ಕೊನೆಗಳನಗಿದ ಕೀರಗಳು
ಕೊನೆಗಣ್ಣ ಪಾಮರಿಯರ ದಿಟ್ಟಿಗಣ್ಣುರು
ಳ್ಗೊನೆಯೆಂದು ಕೊನೆಗೆ ಪಾಱಿದುವು॥೪೪॥

ಭಾವಾರ್ಥ:- ಬಾಳೆಯ ಗೊನೆ, ಹೂಗೊಂಚಲು, ಬತ್ತದ ತೆನೆಮೊದಲಾದವುಗಳನ್ನು ತಿನ್ನುವ ಗಿಳಿಗಳು ಹಳ್ಳಿಯ ಚೆಲುವೆಯರ ಕಡೆಗಣ್ಣ ಕುಡಿನೋಟವನ್ನು ಉರುಲಿನ ಹಗ್ಗದ ತುದಿಯೆಂದು ಭಾವಿಸಿ ಕಡೆಗೊಮ್ಮೆ ಹಾರಿಹೋದವು.

ಅಂದೊಮ್ಮೆ ವರಹಾವತಾರದಿ ನೆರೆದ ಗೋ
ವಿಂದ ತನ್ನಯ ಪೀತಾಂಬರವ
ಕುಂದದೆ ಭೂಮಿಗೆ ಪೊದಿಸಿದವೊಲಿರುವುದು
ಗಂಧಶಾಲಿಯ ವನ ಕಳಿತು॥೫೨॥

ಭಾವಾರ್ಥ:- ಹಿಂದೆ ವರಾಹಾವತಾರವನ್ನು ಪ್ರದರ್ಶಿಸಿದ ಗೋವಿಂದನು ತನ್ನ ಪೀತಾಂಬರವನ್ನು ಭೂಮಿಗೆ ಹೊದಿಸಿದಂತೆ, ಪಕ್ವಗೊಂಡು ಮಗಮಗಿಸುವ ಬತ್ತದ ಗದ್ದೆಗಳಿರುವುವು.

ವರಮೋಹನತರಂಗಿಣಿಯೆಂಬ ಕಾವ್ಯವ
ಬರೆದೋದಿ ಕೇಳಿದ ಜನರ
ತರಣಿ ಚಂದ್ರಮರುಳ್ಳನಕ ಸತ್ಕೃಪೆವೆತ್ತು
ಪೊರೆವ ಲಕ್ಷ್ಮೀಕಾಂತ ಬಿಡದೆ॥೫೭॥

ಭಾವಾರ್ಥ:- “ ಮೋಹನತರಂಗಿಣಿ “ ಎಂಬ ಈ ಕಾವ್ಯವನ್ನು ಬರೆದ, ಓದಿದ, ಕೇಳಿದ ಜನರನ್ನು ಲಕ್ಷ್ಮೀಪತಿಯು ಅನುಗ್ರಹಿಸಿ ಸೂರ್ಯಚಂದ್ರರು ಇರುವವರೆಗೂ ಏಕಪ್ರಕಾರವಾಗಿ ರಕ್ಷಿಸುವನು.

ದ್ವಾರಕಾಪುರ ವರ್ಣನೆ.

ಮಾಣದರಸುವಂತೆ ಮಡಗದಿರಧಿಕ ಸು
ಜಾಣರ ಜ್ಞಾನ ಲೋಚನಕೆ
ಕಾಣಬರ್ಪಂತೆ ಕನ್ನಡವಾಕ್ಯದಲಿ ನಾರಾ
ಯಣನ ಸತ್ಕೃತಿಯ ವಿಸ್ತರಿಸು॥೧॥

“ಒಂದೇ ಸಮನೆ ತಡಕಾಡುವಂತೆ, ಮುಚ್ಚುಮರೆಮಾಡಿ ಹೇಳಬೇಡ ; ಅತ್ಯಧಿಕ ಕುಶಲರ ಜ್ಞಾನದೃಷ್ಟಿಗೆ ತೋರುವಂತೆ ಕನ್ನಡನುಡಿಯಲ್ಲಿ ನಾರಾಯಣನ ಲೀಲೆಯನ್ನು ವಿವರಿಸು”

ಸುಮನಸದಿಂದೆ ಕೇಳಾದೊಡೆ ಸುಜ್ಞಾನ
ಪ್ರಮದೆ ನಿನ್ನಯ ಕರ್ಣಗಳಿಗೆ
ಅಮರಿದ ಮಣಿಭೂಷಣವೆನಲು ಪೇಳುವೆ
ರಮಣೀಯವಾದ ಸತ್ಕೃತಿಯ ॥೨॥

ಹಾಗಿದ್ದರೆ ನಿನ್ನ ಕಿವಿಗಳಿಗೆ ಅಣಿಗೊಳಿಸಿದ ರತ್ನಾಭರಣವೆನ್ನುವಂತೆ ಮನೋಹರವಾದ ಸತ್ಕಾವ್ಯವನ್ನು ಹೇಳುತ್ತೇನೆ; ಬಲ್ಲವಳಾದ ಚಲುವೆಯೆ ಸಂತೋಷದಿಂದ ಕೇಳು.

ದ್ವಾರಾವತಿಯ ಪಟ್ಟಣದ ಸಂಪೂರ್ಣಶೃಂ
ಗಾರವ ಪೇೞ್ವೆನೆಂದೆನಲು
ನೀರಜಭವಗರಿದಾನೇನುಗಹನ ವಿ
ಸ್ತಾರವಮಾೞ್ಪೆ ಬಲ್ಲನಿತ ॥೩॥

ದ್ವಾರಕಾಪುರದ ವೈಭವವನ್ನು ಪರಿಪೂರ್ಣವಾಗಿ ಹೇಳಲು ಬ್ರಹ್ಮನಿಗೂ ಅಸಾಧ್ಯವಾದದ್ದು ; ಇಂಥ ಅಗಾಧವಾದದ್ದನ್ನು ನಾನು ಏನುತಾನೆ ಹೇಳಬಲ್ಲೆ ; ತಿಳಿದಷ್ಟು ಹೇಳುತ್ತೇನೆ.

ಮಗಳ ಗಂಡನ ಕೂಡೆ ಮಹದಾದಿದೈತ್ಯರು
ಜಗಳಕ್ಕೆ ಬಪ್ಪರೆಂದೆನುತ
ನೆಗೞಾನೆ ಮೀನ್ಗಳನೊಳಕೊಂಡು ಬಂದು ಪೇ
ರಗೞಾದುದಬ್ಧಿ ದ್ವರಕೆಗೆ॥೫॥

ತನ್ನ ಮಗಳ ಗಂಡನಾದ ವಿಷ್ಣುವಿನ ಜೊತೆಗೆ ಮಹಾದೈತ್ಯರು ಯುದ್ಧಕ್ಕೆ ಬರುವರೆಂದು ಸಮುದ್ರರಾಜನು ಮೊಸಳೆ, ಆನೆ, ಮೀನುಗಳುಸಮೇತವಾಗಿ ಬಂದು ಹಿರಿದಾದ ಕಂದಕವಾದಂತೆ ದ್ವಾರಕಾಪುರದ ಕೋಟೆಯ ಕಂದಕವು ಶೋಭಿಸಿತು.

ದೇಶಾಧಿಪ ಕೃಷ್ಣರಾಯಂಗೆ ಖಳರಿಂದ
ಮೋಸವ ಬರಗುಡೆನೆಂದು
ಶೇಷ ಮಂಡಳಿಸಿದಂದದಿ ವಜ್ರದಾಳ್ವೇರಿ
ಲೇಸಾದುದೇವಣ್ಣಿಸುವೆನು॥೮॥

ಆ ನಾಡಿನ ಪ್ರಭು ಕೃಷ್ಣರಾಯನಿಗೆ, ದುಷ್ಟರಿಂದ ಮೋಸವಾಗಲು ಆಸ್ಪದಕೊಡಲಾರೆನೆಂದು ಆದಿಶೇಷನು ಸುತ್ತಿಕೊಂಡಿರುವಂತೆ ಕಂದಕದ ವಜ್ರದ ಗೋಡೆ ಕಂಗೊಳಿಸುವುದು ; ಅದನ್ನು ಏನೆಂದು ವರ್ಣಿಸಲಿ.

ಸೋಮಸೂರಿಯವೀಧಿ ವೀಧಿಯಿಕ್ಕೆಲದಲ್ಲಿ
ಹೇಮನಿರ್ಮಿತ ಸಾಲಸೌಧಾ
ರಾಮಣೀಯತೆವೆತ್ತ ಕಳಸದಂಗಡಿಯಿರ್ದು
ವಾ ಮಹಾದ್ವಾರಕಾಪುರದೆ ॥೧೧॥

ಆ ವಿಸ್ತಾರವಾದ ದ್ವಾರಕಾ ಪಟ್ಟಣದಲ್ಲಿ ಸೋಮ, ಸೂರ್ಯ ಎಂಬ ಬೀದಿಗಳಿದ್ದುವು. ಆ ಬೀದಿಗಳ ಪಕ್ಕದಲ್ಲಿ ಸಾಲುಸಾಲಾದ ಬಂಗಾರದ ಅಂತಸ್ತಿನ ಮನೆಗಳು, ಹಾಗೂ ಮನೋಹರವಾದ ಪಾತ್ರೆಯ ಅಂಗಡಿಗಳಿದ್ದುವು.

ಮಲ್ಲಿಗೆಯಲರ್ದಂಡೆವಿಡಿಯೆ ಬಂದೆಱಗುವ
ಜಿಲ್ಲಿ ದುಂಬಿಗೆ ಬೆರ್ಚಿನಿಂದು
ಸೊಲ್ಲಿಪ ಪೂಮಾಲೆಗಾರ್ತಿ ಕಾಮನ ಕಬ್ಬು
ವಿಲ್ಲಿನಂತಿರ್ದಳೇನೆಂಬೆ॥೧೭॥

ಅರಳಿದ ಮಲ್ಲಿಗೆಯ ಮಾಲೆಯನ್ನು ಹಿಡಿದಾಗ, ಮುತ್ತಿಬರುವ ಮರಿದುಂಬಿಗಳನ್ನು ಕಂಡು ಬೆದರಿ ಮೂದಲಿಸುತ್ತಿದ್ದ ಮಾಲೆಗಾರ್ತಿಯು ಮನ್ಮಥನ ಕಬ್ಬಿನ ಬಿಲ್ಲಿನಂತಿದ್ದಳು. ಅದನ್ನೇನು ಹೇಳಲಿ,

ಕಂಚಗಾಱರು ಕೈದುಗಾಱರು ಹೊಳೆವ ಹೊಂ
ಮಂಚಗಾಱರು ಶಿಲ್ಪಿಗರು
ಸಂಚುಗಾಱರು ಸದ್ವಿದ್ಯಧಿಕರಾದ
ಪಂಚಾಳರಿರ್ದರಿಕ್ಕೆಲದಿ॥೨೨॥

ಕಂಚುಗಾರರು, ಕಮ್ಮಾರರು, ಹೊಳೆಯುವ ಚಿನ್ನದ ಮಂಚ ತಯಾರಕರು , ಶೆಲ್ಪಿಗಳು, ಕುಶಲ ವಿದ್ಯಾವಂತರಾದ ಅಕ್ಕಸಾಲಿಗರು ಹೀಗೆ ಬೀದಿಯ ಎರಡೂ ಪಕ್ಕದಲ್ಲಿ ಪಂಚಾಳರಿದ್ದರು.

ಕೇಣವಿಲ್ಲದ ಕೇವಲಸಾತ್ವಿಕ ಪೌ
ರಾಣ ಶಾಸ್ತ್ರಾರ್ಥಗೋಷ್ಠಿಗಳು
ಗಾಣದಂಡಿಗೆಯ ಭಾಗವತ ಸಂಕಿರ್ತನೆ
ಮಾಣದು ಮನೆಮನೆಗಳಲಿ ॥೩೫॥

ವಿಕಾರವಿಲ್ಲದ ಕೇವಲ ಪವಿತ್ರವಾದ ಪುರಾಣಗಳ, ಶಾಸ್ತ್ರಗಳ , ತಾತ್ಪರ್ಯದ ಚರ್ಚೆ ಮತ್ತು ವೀಣೆಯ ಭಾಗವತರ ಸಂಕೀರ್ತನೆ ಮನೆಮನೆಗಳಲ್ಲಿಯೂ ತಪ್ಪದೆ ನಡೆಯುವುದು.

ರವಿ ಸಿದ್ಧಾಂತ ಪಾಠಕರಷ್ಟಭಾಷಾ
ಕವಿ ಗಮಕಿಗಳು ತಾರ್ಕಿಕರು
ವಿವಿಧ ವಿದ್ವತ್ಸಭೆ ನೆಱೆದುದು ಲಲಿತ ಭಾ
ರ್ಗವಿಯ ಕಾಂತನ ಪುರದೊಳಗೆ॥೪೦॥

ಜ್ಯೋತಿಷ್ಯವನ್ನು ಹೇಳುವವರ, ಅಷ್ಟಭಾಷಾ ಕವಿ,ಗಮಕಿಗಳ, ತರ್ಕಶಾಸ್ತ್ರಜ್ಞರ, ವಿವಧ ಪಂಡಿತರ ಸಭೆ ಆ ದ್ವಾರಕಾನಗರದಲ್ಲಿ ಸೇರುವರು.

ಪರಮ ಸೌಖ್ಯಮನಾಂತು ತಿಗುಳರು ಪಾತ್ತಾಭಿ
ಗರ ಪರಮಾನ್ನ ಮುಂತಾದ
ವರ ಸಣ್ಣಕ್ಕಿಯೋಗರ ತೊವ್ವೆ ಪಳಿದ್ಯವ
ತರತರದಲಿ ಬಡಿಸಿದರು. ॥೫೧॥

ಪರಮಸಂತೋಷದಿಂದ ತಮಿಳರು, ಪಾಯಸ,ತುಪ್ಪ, ಸಣ್ಣಕ್ಕಿಯ ಅನ್ನ. ಬೇಳೆ ಪಳ್ಳಿಟ್ಟು ಮುಂತಾದುವುಗಳನ್ನು ಬಗೆಬಗೆಯಾಗಿ ನೀಡಿದರು.

ಘನನವಘೃತವ ತಂದೆಱೆದರು ಪತ್ರಭಾ
ಜನ ತುಂಬಿ ಕಡೆಗೋಡಿವರಿಯೆ
ಅನಲಾಕೃತಿಯ ಬ್ರಾಹ್ಮರು ಮುದದಿಂದಾಪೋ
ಶನವ ಕೊಂಡರು ಮಹೋತ್ಸವದಿ॥೫೪॥

ಎಲೆಯ ದ್ರೋಣಿತುಂಬ ಹೊರಸೂಸುವಂತೆ ಉತ್ಕೃಷ್ಟವಾದ ತುಪ್ಪವನ್ನು ತಂದು ಸುರಿಯಲು, ತೇಜಸ್ವಿಗಳಾದ ಬ್ರಾಹ್ಮಣರು ಸಂತೃಪ್ತರಾಗಿ, ಸಂಭ್ರಮಾತಿಶಯದಿಂದ ಆಪೋಶನವನ್ನು ಸೇವಿಸಿದರು.

ಕಮ್ಮನೆ ತುಪ್ಪ ಕಜ್ಜಾಯ ಪಾಯಸದಿಂದೆ
ದಮ್ಮನೆ ತಣಿದೆವೆಂದೆನುತ
ಬೊಮ್ಮರ ಸಂತತಿ ನುಡಿಯುತೆ ಸಾರ್ದರು
ನಿರ್ಮಳಶಯನ ಸ್ಥಳಕೆ॥೫೯॥

ಕಂಪುಳ್ಳ ತುಪ್ಪ, ಭಕ್ಷ್ಯ, ಪಾಯಸದಿಂದ ಒಮ್ಮೆಲೆ ಆಯಾಸಗೊಂಡೆವೆಂದು ಹೇಳುತ್ತ. ಆ ಬ್ರಾಹ್ಮಣರು ಶುಚಿಯಾದ ಶಯ್ಯಾಗೃಹಕೆ ತೆರಳಿದರು.

ಶರಧಿಯೊಳೊಗೆದ ಹೊಂದಾವರೆಯಂತಿರ್ಪ
ಪುರ ಮಧ್ಯದಲಿ ಕೃಷ್ಣರಾಯ
ಅರಮನೆ ಕನ್ನಿಕೆಯೆಂಬಂತೆ ಜನ ಮೋ
ಹರಿಸಲು ಕಣ್ಗೆ ರಂಜಿಸಿತು॥೬೨॥

ಆ ಪಟ್ಟಣವು ಸಾಗರದಲ್ಲಿಯ ಸುವರ್ಣಕಮಲದಂತೆ ಶೋಭಿಸುತ್ತಿತ್ತು, ಅದರ ಮಧ್ಯದಲ್ಲಿ ಕೃಷ್ಣರಾಯನ ಅರಮನೆಯು ಲಕ್ಷ್ಮಿಯಂತೆ ಮನೋಹರವಾಗಿತ್ತು.

ಹರಬ್ರಹ್ಮಾದಿದೇವತೆಗಳ ರಾಜಮಂ
ದಿರವ ಕೀೞ್ಪಡಿಸಿ ಶೋಭಿಸುವ
ಪರಮೈಶ್ವರ್ಯಸಂತೋಷದಿ ಶ್ರೀಕೃಷ್ಣ
ನರಮನೆ ಕಣ್ಗೆ ಶೋಭಿಸಿತು॥ ೬೪॥

ಬ್ರಹ್ಮ ಮಹೇಶ್ವರ ಮೊದಲಾದ ದೇವತೆಗಳ ಅರಮನೆಗಳನ್ನೂಮೀರಿ ಶೋಭಿಸುವ ಶ್ರೇಹರಿಯ ಅರಮನೆಯು ಅಪಾರ-ಸಂಪತ್ತು ಸಂತೋಷಗಳಿಂದ ಕೂಡಿ ಕಣ್ಣಿಗೆ ಉಲ್ಲಾಸವನಿನ್ನಿತು.

ಕಂದರ್ಪ ಜನನ.

ಸಿತನಾಗನಾಳ್ದನರ್ಧಾಂಗಿಗೋಸುಗ ತನ್ನ
ವ್ರತಗೆಟ್ಟು ನೃಪಗೆ ಸಿಲ್ಕಿದನ
ಪಿತನ ಮುಂದಿಹನ ತಮ್ಮನ ತರಿದಾತಗಾ
ನತನಾಗಿ ಪೇೞು ಮೇಲ್ಗತೆಯನು॥೧॥

ಇಂದ್ರನರ್ಧಾಂಗಿಯಾದ ಶಚಿದೇವಿಯ ಸಲುವಾಗಿ ವ್ರತಗೆಟ್ಟ ನಹುಷಮಹಾರಾಜನಿಗೆ ಸಿಲುಕಿದವನು ಭೀಮಸೇನ, ಆ ಭೀಮಸೇನನ ತಂದೆಯಾದವನು ವಾಯು, ಆ ವಾಯುವಿನ ಮುಂದಿರುವ ಕುಬೇರನ ತಮ್ಮನಾದ ರಾವಣನನ್ನು ಸಂಹರಿಸಿದ ಶ್ರೀರಾಮನಿಗೆ ತಲೆಬಾಗಿ ಸತ್ಕಾವ್ಯವನ್ನು ವಿವರಿಸು.

ಕಣ್ಣು ಮನವನಿರ್ಕುಳಿಗೊಳ್ವ ಕಡುಜಾಣ
ವೆಣ್ಣುಗಳಧಿದೇವಿ ಕೇಳು
ಗಣ್ಣುಗೊಳ್ಳದೆ ಬೆಳ್ಗಬ್ಬಿನ ರಸದಂತೆ
ಬಣ್ಣಿಸುವೆನು ಕಥಾಮೃತವ॥೨॥

“ಕಣ್ಮನಗಳನ್ನು ಕೋರೈಸುವ ಕಡುಜಾಣೆಯರ ಅಧಿದೇವತೆಯೇ, ನಿರ್ವಂಚನೆಯಿಂದ ಬಿಳಿಯ ಕಬ್ಬಿನ ರಸದಂತೆ
ಅಮೃತಮಯವಾದ ಕಥೆಯನ್ನು ವಿವರಿಸುತ್ತೇನೆ ಕೇಳು.”

“ನಾಪುತ್ರಸ್ಯಲೋಕೋಸ್ತಿ” ಯೆಂದೆಂಬ ಶಾ
ಸ್ತ್ರೋಪದೇಶವ ಕೇಳ್ದೆ ಜೀಯ
ನೀ ಪಾಲಿಸಬೇಕು ನನಗೊರ್ವ ಕಂದರ್ಪ
ರೂಪಾಂತ ವರಕುಮಾರಕನ ॥೨೧॥

ಪುತ್ರನಿಲ್ಲದವರಿಗೆ ಪರಲೋಕ ಪ್ರಾಪ್ತಿಯಿಲ್ಲ ಎಂಬ ಶಾಸ್ತ್ರೋಪದೇಶವನ್ನು ಕೇಳಿದ್ದೇನೆ. ಆದ್ದರಿಂದ ಪ್ರಭು, ನನಗೊಬ್ಬ ಚಲುವಾದ ಸುಕುಮಾರನನ್ನು ಕರುಣಿಸಬೇಕು.

ಮಗುವುಂಡು ಬಲ್ಮೊಲೆ ತೊರೆದರೆ ಮತ್ತಿಷ್ಟು
ಬಿಗುಹುದೋಱುವುದುರಸ್ಥಳದಿ
ಲಗುಗೆಯ್ಯದೆನ್ನ ಬಿನ್ನಪವ ಲಾಲಿಪುದೆಂದು
ಸುಗುಣಂಗೆ ಬಿನ್ನಯಿಸಿದಳು.॥೨೩॥

ಮಗು ಕುಡಿದು ಘನವಾದ ಕುಚಗಳು ತೊರೆಬಿಟ್ಟರೆ, ಎದೆಯಲ್ಲಿ ಮತ್ತಿಷ್ಟು ಬಿರುಸು ಕಾಣಿಸಿಕೊಳ್ಳುವುದು, ಉಪೇಕ್ಷೆ ಮಾಡದೆ ನನ್ನ ಕೋರಿಕೆಯನ್ನು ಮನ್ನಿಸಬೇಕೆಂದು ರುಕ್ಮಿಣಿ ಕೃಷ್ಣನನ್ನು ಬೇಡಿಕೊಂಡಳು.

ದರ್ಪಕಹರನಿಂದ ತನುದಗ್ಧನಾದ ಕಂ
ದರ್ಪ ನಿನ್ನಯ ಬಸಿಱೊಳಗೆ
ಬರ್ಪನು ನಾ ಕೊಟ್ಟ ವರದೊಳು ತುಸುಮಾತ್ರ
ತಪ್ಪದು ಕೇಳಾಯತಾಕ್ಷಿ॥೨೪॥

ಶಿವನಿಂದ ದಹಿಸಲ್ಪಟ್ಟ ಕಾಮನೇ ನಿನ್ನ ಬಸಿರಲ್ಲಿ ಬರುವನು. ವಿಶಾಲಾಕ್ಷಿಯೆ ಕೇಳು, ಇದರಲ್ಲಿ ಎಳ್ಳಷ್ಟೂ ಸಂಶಯಿಲ್ಲ.

ಇಂದುವದನೆ ರುಕ್ಮಿಣಿದೇವಿಗೆ ಗರ್ಭ
ನಿಂದು ಗರ್ಭಿಣಿಯಾದುದಕೆ
ಮುಂದುವರಿದು ಮೇಘ ಗರ್ಜಿಸಿದುವು ದೇವ
ದುಂದುಭಿಗಳ ಹೊಡೆದಂತೆ ॥೩೨॥

ಚಂದ್ರಮುಖಿಯಾದ ರುಕ್ಮಿಣಿದೇವಿಯು ಗರ್ಭವತಿಯಾದ ಸಂತೋಷಕ್ಕಾಗಿ,  ದುಂದುಭಿಗಳನ್ನು ಹೊಡೆದಂತೆ ಮೋಡಗಳು ಉತ್ಸಾಹದಿಂದ ಗರ್ಜಿಸಿದುವು.

ಪೂರಾಯಭುಕ್ತ ನವ್ಯಾಂಬರಸೌಗಂಧ
ಸಾರಸೋರ್ಮುಡಿಯಲರ್ಮಾಲೆ
ರಾರಾಜೀಪ ರತ್ನ ಭೂಷಣಗರ್ಭೋಪ
ಚಾರವ ಕೈಕೊಳಿಸಿದರು॥೬೭॥

ಸಂತೃಪ್ತಿಕರವಾದ ಊಟ,ಹೊಸಬಟ್ಟೆ, ಪರಿಮಳಲೇಪನ, ಬಿಚ್ಚು ಮುಡಿಗೆ ಸೊಗಸೃದ ಹೂಮಾಲೆ, ರಂಜಿಸುವ ರತ್ನಾಭರಣಗಳಿಂದ ಗರ್ಭೋಪಚಾರವನ್ನು ಮಾಡಿದರು.

ಸಡಗರದಲಿ ಕೃಷ್ಣ ಸೋಳಸಾಸಿರ ಪೆ
ಣ್ಗಡಣದಿಂದ ಪೊಕ್ಕನಾಲಯವ
ಮಡದಿ ರುಕ್ಮಿಣಿದೇವಿ ನವಮಾಸವನಾಂತು
ಪಡೆದಳು ವರಕುಮಾರಕನ ॥೬೮॥

ಹದಿನಾರು ಸಾವಿರ ಹೆಂಡಂದಿರನ್ನು ಕೂಡಿಕೊಂಡು ಶ್ರೀಕೃಷಾಣನು ಸಂಭ್ರಮದಿಂದ ಅರಮನೆಯನ್ನು  ಸೇರಿದನು. ನವಮಾಸ ತುಂಬಿದ ರುಕ್ಮಿಣಿದೇವಿ ಸುಕುಮಾರನನ್ನು ಪಡೆದಳು.

ಮಂಗಳವಾದ್ಯ ಶೋಭನವಾದ್ಯ ಜಾತಕ
ರ್ಮಂಗಳ ಬುಧತತಿಯಿಂದ
ಸಂಗತವಡಿಸಿ ಪ್ರದ್ಯುಮ್ನಾಖ್ಯವೆಂದೆಂಬ
ತುಂಗನಾಮವನಿಟ್ಟರೊಲಿದು.॥೬೯॥

ಮಂಗಳವಾದ್ಯ, ಶುಭವಾದ್ಯಗಳು ಮೊಳಗಿದುವೈ. ಪಂಡಿತರಿಂದ ಜಾತಕರ್ಮವನ್ನು ಮಾಡಿಸಿ, ಸಂತೋಷದಿಂದ ಪ್ರದ್ಯುಮ್ನ ಎಂಬ ಉತ್ಕೃಷ್ಟ ಹೆಸರನ್ನಿಟ್ಟರು.

ನಂದನ ತನಗಾದನೆಂದು ರುಕ್ಮಿಣಿ ನಲ
ವಿಂದೆ ಗೇಹದೊಳಿರಲಿತ್ತ
ಮುಂದೊರ್ವ ಖಳನೊಯ್ವನೆಂದು ಚಿಂತಿಸಿ ಭಾನು
ಸಂದನು ಪಡುಗಡಲೊಳಗೆ॥೭೨॥

ತನಗೆ ಮಗನು ಹುಟ್ಟಿದ ಸಂತೋಷದಲ್ಲಿ ರುಕ್ಮಿಣಿದೇವಿಯು ಅಂತಃಪುರದಲ್ಲಿರಲು, ಇತ್ತ ಸೂರ್ಯನು -ಒಬ್ಬ ದುಷ್ಟನು ಮುಂದೆ ಈ ಕುವರನನ್ನು ಅಪಹರಿಸುವನೆಂಬ ಚಿಂತೆಯಿಂದ ಪಶ್ಚಿಮಸಮುದ್ರವನ್ನು ಸೇರಿದನು.

ರೋದನಮಯವಾಗಿದೆ ರುಕ್ಮಿಣಿಗೆಯೇ
ನಾದುದೊ ಕೇಳುಕೇಳೆನಲು
ಮಾಧವನೊಡನೆ ಪೇೞಿದರಾಶಿಶು ಬಯ
ಲಾದ ಸೋಜಿಗದ ಸುದ್ಧಿಯನು॥೮೪॥

“ ಅಳುವುದು ಕೇಳಿಬರುತ್ತದೆ, ರುಕ್ಮಿಣಿಗೆ ಏನಾಯಿತೋ ನೋಡು ನೋಡು “ ಎನ್ನುವಷ್ಟರಲ್ಲಿ ಆ ಮಗುವು ಮಾಯವಾದ ಆಶ್ಚರ್ಯದ ಸುದ್ಧಿಯನ್ನು ಸೇವಕಿಯರು ಕೃಷ್ಣನಿಗೆ ಹೇಳಿದರು.

ಮಱುಗುವ ಮಡದಿಯನಮರ್ದಪ್ಪಿ ಮುದ್ದಿಸಿ
ತುಱುಗೆವೆಗಣ್ಣ ನೀರಿಂಗೆ
ಹರಿಗೋಲಹಾಯ್ಕಿಸಬೇಡೆಂದು ಪೊಂಬಟ್ಟೆ
ಸೆಱಗಿನಿಂ ತೊಡೆದ ಲೋಚನವ॥೮೬॥

ಮರಗುವ ಮಡದಿಯನ್ನು ಬಲವಾಗಿ ಅಪ್ಪಿಕೊಂಡು, ಮುದ್ದಿಟ್ಟು “ನಿನ್ನ ಚಲುವಾದ ಕಣ್ಣುಗಳಿಂದ ಹರಿಯುವ ನೀರಿಗೆ ಹರಿಗೋಲು ಹಾಕಿಸಬೇಡ “ ಎಂದು ತನ್ನ ಪೀತಾಂಬರದ ಸೆರಗಿನಿಂದ ಅವಳ ಕಣ್ಣೊರಸಿದನು.

ಕಣ್ಣೊಡೆದಂತೆ ಕಂಗೆಟ್ಟು ನೋಡಿದರೆನ್ನ
ಚಿಣ್ಣಮಗ್ಗುಲೊಳಿಲ್ಲದಿರಲು
ಸುಣ್ಣಕಲ್ಪುಡಿಗಟ್ಟಿ ಮಡುವೆನೊಳಿೞಿದಂತೆ
ಬಣ್ಣ ಗುಂದಿದೆ ಕೇಳು ತಾಯೇ॥೮೯॥

“ಕಣ್ಣು ಹೋಳಾದಂತೆ ದಿಗ್ಭ್ರಾಂತಳಾಗಿ ನೋಡಿದೆ, ಮಗುವು ನನ್ನ ಹತ್ತಿರ ಇಲ್ಲದಿರುವುದನ್ನು ಕಂಡು ಸುಣ್ಣದ ಕಲ್ಲನ್ನು ಕಟ್ಟಿಕೊಂಡು ಮಡುವಿನಲ್ಲಿ ಮುಳುಗಿದಂತೆ ಗಾಸಿಯಾದೆ ಕಾಣವ್ವ”

ನಿಲ್ಲದಾಕ್ಷಣ ಕೃಷ್ಣ ಬಿಗಿಯಪ್ಪಿ ನೀಪೆತ್ತು
ದಿಲ್ಲವೆಂದೆದೆಯಬಲ್ಪಿಡಿದು
ತಲ್ಲಣಿಸದೆ ನನ್ನ ನೋಡಿ ನೀಮಱಿಯೆಂದು
ಗಲ್ಲವ ಪಿಡಿದು ಮುದ್ದಿಸಿದ॥೯೧॥

ಕೂಡಲೆ ಶ್ರೀಕೃಷ್ಣನು ರುಕ್ಮಿಣಿಯನ್ನು ಗಟ್ಟಿಯಾಗಿ ಅಪ್ಪಿಕೊಂಡು “ನೀನು ಹಡೆದಿಲ್ಲವೆಂದು ತಿಳಿದು ಸಂಕಟಪಡದೆ ತಾಳಿಕೊಳ್ಳು. ನನ್ನನ್ನು ನೋಡಿ ದುಃಖವನ್ನು ಮರೆ” ಎಂದು ಅವಳ ಗಲ್ಲವನ್ನು ಹಿಡಿದು ಮುದ್ದಿಸಿದನು.

ಶಶಿವದನೆಯ ಮನಸ್ತಾಪ ತಂಪಾದುದು
ನಿಶೆ ಬೀತುದುರ್ವೀಸ್ಥಳಕೆ
ಬಿಸಿಗದಿರನು ಹುಟ್ಟಿ ಪೂರ್ವಾಚಲದಿ ರಂ
ಜಿಸಿದನು ಕೇಳಾಯತಾಕ್ಷಿ॥೯೨॥

ವಿಶಾಲಾಕ್ಷಿಯೆ ಕೇಳು - ಆಗ ಚಂದ್ರಮುಖಿ ರುಕ್ಮಿಣಿಯ ಮನಸ್ಸು ಶಾಂತವಾಯಿತು. ಭೂಮಿಯ ಮೇಲಿನ ಕತ್ತಲೆಯು ಕರಗಿ ಪೂರ್ವ ದಿಕ್ಕಿನ ಪರ್ವತದಲ್ಲಿ ಸೂರ್ಯ ಹುಟ್ಟಿ ಶೋಭಿಸಿದನು.

ಕಾಮನಿಗೆ ದೇವತೆಗಳ ಬೋಧೆ.

ವಟಪತ್ರತಲ್ಪನ ವರದಿಂದೆ ಮತ್ಕರ್ಣ
ಪುಟಕಿನಿತಪ್ಪಂತೆ ಪೇೞು
ಕಟಕಟ ! ಹುಟ್ಟಿದಾಕ್ಷಣ ಶಿಶು ನೋಡಲ್ಕೆ
ಮಟಮಾಯವಾದುದಾಶ್ಚರ್ಯ॥೧॥

“ ಅಬ್ಬಬ್ಬಾ ! ಹುಟ್ಟಿದೊಡನೆಯೆ ಮಗುವು ಹೀಗೆ ಮಟಾಮಾಯವಾದದ್ದು ಆಶ್ಚರ್ಯ ! ಶ್ರೀಹರಿಯ ಕೃಪೆಯಿಂದ ನನ್ನ ಕೆವಿಗಳಿಗೆ ಹಿತವೌನಿಸುವಂತೆ ಮುಂದೆ ಹೇಳು.”

ಶತಪತ್ರದಳಲೋಚನೆ ಕೇಳು ಹರನಿಂದೆ
ಹತನಾದ ಕಂತು ರುಕ್ಮಿಣಿಯ
ಸುತನಾಗಿ ಹುಟ್ಟಿ ಮುಂಗೆಲಸಕ್ಕೆ ಬಯಲಾದ
ಕತೆಯ ಬಿತ್ತರಿಪೆ ನಿನ್ನೊಡನೆ॥೨॥

“ ಕಮಲನೇತ್ರೆಯೌ, ಹರನಿಂದ ಸಾವನ್ನಪ್ಪಿದ ಮನ್ಮಥನು ರುಕ್ಮಿಣಿಯ ಮಗನಾಗಿ ಹುಟ್ಟಿ,  ಮುಂದಿನ ಕಾರ್ಯಕ್ಕಾಗಿ ಕಾಣದಾದ; ಆ ಕಥೆಯನ್ನು ವಿವರೆಸುತ್ತೇನೆ ಕೇಳು”

ಅದು ಹೇಗೆನಲು ತಾರಕನುಪಟಳವನು
ಬಿದಿಯೊಳುಸುರರುಬಿನ್ನೈಸೆ
ಪದುಮೋದ್ಭವ ಬಂದು ಪಾಲ್ಗಡಲೊಳು
ಮಧುಸೂದನಂಗೆ ಪೇೞಿದನು.॥೩॥

ಅದು ಹೇಗೆಂದರೆ- ದೇವತೆಗಳು ತಾರಕಾಸುರನ ಉಪಟಳವನ್ನು ಬ್ರಹ್ಮನಿಗೆ ತೋಡಿಕೊಳ್ಳಲು, ಆ ಬ್ರಹ್ಮನು ಕ್ಷೀರಸಾಗರಕ್ಕೆ ಬಂದು ಅದನ್ನು ವಿಷ್ಣುವಿಗೆ ಹೇಳಿದನು.

ತಾರಕನಿಂದೆ ನೊಂದಮರರು ತಮ್ಮ ಸಂ
ಸಾರದುಃಖವ ತನಗುಸಿರೆ
ತೀರೆಸಲರಿಯದಾನೈತಂದೆ ಶ್ರೇವೀರ
ನಾರಾಯಣ ಪೊರೆಯೆಂದ॥೧೫॥

“ ತಾರಕಾಸುರನಿಂದ ಸಂಕಟಕ್ಕೀಡಾದ ದೇವತೆಗಳು ತಮ್ಮ ಬಾಳಿನ ದಃಖವನ್ನು ನನ್ನೆದುರು ತೋಡಿಕೊಳ್ಳಲು, ಅದನ್ನು ಪರಿಹರಿಸಲಾಗದೆ ಬಂದಿದ್ದೇನೆ. ಶ್ರೀವೀರನಾರಾಯಣ ರಕ್ಷಿಸಬೇಕು ಎಂದನು.”

ಕಿಚ್ಚುಗಣ್ಗನತಪವೞಿವುದುಪೂಗೋಲೊ
ಳೆಚ್ಚು ಮನ್ಮಥ ಪೀಡಿಸಲು
ಮೆಚ್ಚುವಡೆದು ಪಾರ್ವತಿಯೊಳು ರಮಿಸಲು
ಸ್ವಚ್ಛದಿ ಸುತ ಬಪ್ಪನೆಂದ॥೧೮॥

“ ಮನ್ಮಥನು ತನ್ನ ಹೂಬಾಣದಿಂದ ಕಾಡಿದರೆ ಉರಿಗಣ್ಣನ ತಪಸ್ಸು ಭಿನ್ನಗೊಳ್ಳುವುದು, ಆಗ ಶಿವನು ಪ್ರಸನ್ನನಾಗಿ ಪಾರ್ವತಿಯನ್ನು ಕೂಡಿದರೆ ನಿರಾಯಾಸವಾಗಿ ಕುಮಾರನು ಹುಟ್ಟುವನು,” ಎಂದನು.

ರತಿರಾಜಂಗೆ ಬೋಧಿಸುವಂತೆ ವರಬೃಹ
ಸ್ಪತಿಗೆ ನೇಮವನಿತ್ತು ಸುರರ
ಸ್ಥಿತಿಗೆ ನೀಕರ್ತನೆಂದಬುಜಸಂಭವ ಶ್ರೀ
ಪತಿಯ ಬೀೞ್ಕೊಂಡನುತ್ಸವದಿ॥೧೯॥

ಮನ್ಮಥನಿಗೆ ತಿಳಿಹೇಳುವ ಕಾರ್ಯವನ್ನು ಬೃಹಸ್ಪತಿಗೆ ಒಪ್ಪಿಸಿ, ದೇವತೆಗಳ ಸ್ಥತಿ ನಿನ್ನೇ ಅವಲಂಬಿಸಿದೆ , ಎಂದು ಹೇಳಿ ಚತುರ್ಮುಖನು ವಿಷ್ಣುವನ್ನು ಬೀಳ್ಕೊಂಡನು.

ಆ ಸಮಯದಿ ಸದ್ಗುರುರಾಯ ನೆನೆದ ಪ
ರಾಶರಮುನಿಗಾದ ಹದನ
ಭೂಸಭೆಯೊಳು ತನಗಹುದೆಂದು ನಾವನಿ
ನಿವಾಸಗಾರ್ತಿಯರ ಬೀೞ್ಕೊಂಡ॥೨೭॥

ಆಗ ಬೃಹಸ್ಪತಿಯು ಪರಾಶರಮುನಿಗಾದಂತೆ ಜನರ ಮಧ್ಯದಲ್ಲಿ ತನಗೂ ಆದೀತೆಂದು ವಿಚಾರಿಸಿ, ನೌಕೆಯ ಹೆಣ್ಣುಗಳನ್ನು ಬಿಟ್ಟು  ಹೊರಟ.

ಕುಂದಗಂಧಿನಿಯರ ಮೆಲ್ನುಡಿಗಮಲ ಶ್ರೀ
ಗಂಧವ ಕಾಣಿಕೆವಿಡಿದು
ಮಂದಗತಿಯನಾಂತು ಬೃಹಸ್ಪತಿಗಿದಿರಾಗಿ
ಬಂದುದು ತಂಗಾಳಿ ಬನದಿಂದ॥೩೦॥

ಮಲ್ಲಿಗೆಯ ವಾಸನೆಯುಳ್ಳ ಮಡದಿಯರ ನಯವಾದ ನಡಿಗೆಗೆ ಶ್ರೀಗಂಧದ ಕಾಣಿಕೆಯನ್ನು ಹಿಡಿದುಕೊಂಡು, ತಂಗಾಳಿಯು ಮಂದಗತಿಯಿಂದ ಬೃಹಸ್ಪತಿಗೆ ಎದುರಾಗಿ ತೋಟದಲ್ಲಿ ಬಂದಿತು.

ಏನ ಹೇಳುವೆ ಚಂದ್ರಕಾಂತಕಲ್ಗಟ್ಟೆ ಸೋ
ಪಾನ ತಣ್ಗೊಳದ ಮಧ್ಯದಲಿ
ನಾನಾರತ್ನ ಶೋಭಿತದ ಚಾವಡಿಯಲ್ಲಿ
ಮೀನಾಂಕ ನಿರ್ದನೋಲಗದಲ್ಲಿ॥೩೨॥

ತಂಪಾದ ಕೊಳದ ಚಂದ್ರಕಾಂತ ಶಿಲೆಯ ಮೆಟ್ಟಲುಗಳ ಮಧ್ಯದಲ್ಲಿರುವ, ನಾನಾ ರತ್ನಗಳಿಂದ ಮನೋಹರವಾದ ಮಂಟಪದ ಓಲಗದಲ್ಲಿ ಮನ್ಮಥನಿದ್ದನು, ಅದರ ಸೊಬಗನ್ನು ಏನೆಂದು ಹೇಳಲಿ.

ಹೊಂಗಳಸವ ಕೀಳ್ಪಡಿಸುವ ವೃತ್ತ ಕು
ಚಂಗಳ ರತಿಯ ಮೇಳದಲಿ
ಕಂಗೊಳಿಸುವ ಕಾಮಗೆ ಬೃಹಸ್ಪತಿ ಪೂ
ದೊಂಗಲನಿತ್ತು ಸಂಧೆಸಿದ.॥೪೩॥

ಹೊಂಗಳಸವನ್ನು ಅಲ್ಲೆನೆಸುವ ದುಂಡು ಮೊಲೆಯ ರತಿಯ ಕೂಡ ವಿರಾಜಮಾನನಾಗಿದ್ದ ಮನ್ಮಥನಿಗೆ, ಬೃಹಸ್ಪತಿಯು ಹೂ ಗೊಂಚಲನ್ನು ಕಾಣಿಕೆಯಾಗಿತ್ತು ಭೆಟ್ಟಿಯಾದ.

ಬೋಧಾರ್ಹ ಬೃಹಸ್ಪತಿಮಹದಾಶೀರ್ವಾದವ
ನಾದರದಿಂ ಕುಡಲೊಡನೆ
ಆದರಗೆಯ್ದು ಕುಳ್ಳಿರಗೊಟ್ಟು ಕೇಳ್ದ ರ
ತೀಧವ ಬಂದ ಸುದ್ಧಿಯನು ॥೪೪॥

ಗುರುವಾದ ಬೃಹಸ್ಪತಿಯು ಆದರದಿಂದ ಆಶೀರೂವದಿಸಿದೊಡನೆ, ಕಾಮನು ಸನ್ಮಾನದಿಂದ ಆತನನ್ನು ಕುಳ್ಳಿರಿಸಿ ಬಂದ ಕಾರಣವನ್ನೈ ಕೇಳಿದನು.

ಕಾವನೊಡನೆ ವಿಸ್ತರಿಸಿದ ಗುರು ವಾಸು
ದೇವ ನಾಲ್ಮೊಗ ನಿರೂಪವನು
ಕೇವಲ ಗುಪ್ತವೆಂದಱಿದು ಮನ್ಮಥನಾಗ
ಜೀವನೊಳ್ ನುಡಿದನಿಂತೆಂದು॥೪೫॥

ಬೃಹಸ್ಪತಿಯು ಹರಿ ಹಾಗೂ ಬ್ರಹ್ಮದೇವರ ಒಸಗೆಯನ್ನು ಮನ್ಮಥನಿಗೆ ವಿವರಿಸಿದ. ಅತಿ ರಹಸ್ಯವಾದ ವೆಷಯವೆಂದು ತಿಳಿದ ಕಾಮನು ಆಗ ತನ್ನಲ್ಲಿಯೇ ಹೀಗೆ ಅಂದುಕೊಂಡನು.

ಸುರಗುರುರಾಯ ನಿನ್ನಯ ವಾಕ್ಯವ ಕೇಳಿ
ಹರನಮೇಲಾನಂಬತೊಡಲು
ಉರವಣೆಗಾಱ ಕೆಂಗಿಡಿಗಣ್ಣ ತೆಱೆದರೆ
ಇರವೞಿದಪುದೆಂದು ನುಡಿದ॥೪೯॥

“ ಬೃಹಸ್ಪತಿಯೆ, ನಿನ್ನ ಮಾತು ಕೇಳಿ ಶಿವನ ಮೇಲೆ ಬಾಣವನ್ನು ಪ್ರಯೋಗಿಸಿದರೆ, ಕುಪಿತನಾದ ಶಿವನ ಉರಿಗಣ್ಣಿನಿಂದ ಸಾವು ಸಂಭವೆಸುವುದು” ಎಂದನು.

ಮತವಱಿಯದೆ ಮಾತನಾಡಿದೆ ಕೇಳ್ ಪರ
ಹಿತಕೊಡಲಱಿದರೇನು
ಶತಪತ್ರಸಖಚಂದ್ರರುಳ್ಳನ್ನ ಕೀರ್ತಿ ಶಾ
ಶ್ವತವಾಗಿಹುದೆಂದು ನುಡಿದ॥೫೦॥

“ ತತ್ವವನ್ನು ಅರಿಯದೆ ಮಾತಾಡಿದೆ, ಪರರ ಕಲ್ಯಾಣಕ್ಕಾಗಿ ಮಡಿದರೇನು ? ಸೂರ್ಯಚಂದ್ರರು ಇರುವವರೆಗೂ ಶಾಶ್ವತ ಕೀರ್ತಿಯುಂಟಾಗುತ್ತದೆ “ ಎಂದು ಬೃಹಸ್ಪತಿ ನುಡಿದನು.

ಓರಂತೆ ವೇದಶಾಸ್ತ್ರಾಗಮ ಪುರಾಣ
ಸಾರವನಱಿದು ನೋಡುವರೆ
ಭಾರವಪ್ಪುದು ಪರಪೀಡಿತ ಲೋಕೋಪ
ಕಾರವೆ ಕೈವಲ್ಯವಹುದು॥೫೯॥

“ ವೇದ, ಶಾಸ್ತ್ರ, ಆಗಮ, ಪುರಾಣಗಳ ಸಾರವನ್ನು ಅರ್ಥಮಾಡಿಕೊಂಡರೆ ಪರರ ಹಿಂಸೆಯೆಂಬುದು ಅಸಹನೀಯವಾಗಿ ಕಾಣುತ್ತದೆ. ಆದ್ದರಿಂದ ಲೋಕೋಪಕಾರವೇ ಮೋಕ್ಷವಾಗಿರುವುದು”

ನೆಟ್ಟನೆ ಸುರಗುರುರಾಯ ಬೋಧಿಸಲೊಡಂ
ಬಟ್ಟು ಪೂಸರಳಿಂದೆ ಶಿವನ
ತಟ್ಟನೆ ತಾಗಲಿಕ್ಕುವೆನೆಂದು ಬಾಸೆಯ
ಕೊಟ್ಟ ಮನ್ಮಥ ಜೀವನಿಗೆ ॥೬೦॥

ಬೃಹಸ್ಪತಿಯು ಹೀಗೆ ಸ್ಪಷ್ಟವಾಗಿ ಬೋಧಿಸಲು, ಅದಕ್ಕೆ ಒಪ್ಪಿಕೊಂಡು, ಕೂಡಲೆ ಪುಷ್ಪಬಾಣಗಳಿಂದ ಶಿವನನ್ನು ಹೊಡೆಯುವೆನೆಂದು ಮನ್ಮಥನು ಬೃಹಸ್ಪತಿಗೆ ಮಾತುಕೊಟ್ಟನು.

ಮನ್ಮಥನ ದಂಡಯಾತ್ರೆ.

ಸ್ವರ್ಣಾಂಬನಂಘ್ರಿನಿರ್ಮಾಲ್ಯತುಲಸಿಯ
ಕರ್ಣದೊಳಿಟ್ಟುಕೊಂಬಂತೆ
ನಿನ್ನ ಮೆಲ್ನುಡಿಗಳ್ಗೆ ಕಿವಿಗುಡದವರಾರು
ಮನ್ನಾಥ ಪೇೞು ಮೇಲ್ಗತೆಯ ॥೧॥

“ ಶ್ರೀಹರಿಯ ಪಾದಗಳ ಮೇಲಿನ ಪವಿತ್ರವಾದ ತುಲಸಿಯನ್ನು ಕಿವಿಯಲ್ಲಿ ಧರಿಸುವಂತೆ, ನಿನ್ನ ಮಧುರ ನುಡಿಗಳಿಗೆ ಕಿವಿಗುಡದವರಾರು ? ಪ್ರಭು ಮೇಲ್ಮಟ್ಟದ ಕಥೆಯನ್ನು ಹೇಳು”

ಮದನಾಗಮದ ಶ್ರೀಕಾರಂಗಳಂತಿರ್ಪ
ಸುದತಿ ನಿನ್ನಯ ಶ್ರೋತ್ರಂಗಳಿಗೆ
ಉದಧಿಯೊಳೊಗೆದ ಪೀಯೂಷದಂತುಸಿರುವೆ
ಹದವಾದ ಮಾತ ಚಿತ್ತೈಸು॥೨॥

“ ಕಾಮಶಾಸ್ತ್ರದ ಶ್ರೀಕಾರಗಳಂತೆ ಇರುವ ಮೋಹನಾಂಗಿಯೆ,ನಿನ್ನ ಕಿವಿಗಳಿಗೆ ಸಮುದ್ರದಲ್ಲಿ ಹುಟ್ಟಿದ ಅಮೃತದಂಥ ಹಿತವಾದ ನುಡಿಗಳನ್ನು ಹೇಳುತ್ತೇನೆ ಕೇಳು.

ಹಸ್ತವ ಮುಗಿದು ಕಾಂತನ ಕರ್ಣಯುಗಳಕೆ
ವಿಸ್ತರಿಸಿದಳು ಬಿನ್ನಹವ
ಸ್ವಸ್ತದೊಳಿರ್ದು ನಿರ್ಜರರಿಗೋಸುಗ ಪಂ
ಚಾಸ್ತ್ರ ಮದನ ಸಾಯಬೇಡ ॥೬॥

ಪಂಚಬಾಣಗಳುಳ್ಳ ಮನ್ಮಥನೆ, ಈಗ ಸುಖವಾಗಿ ಇರುವ ನೀನು, ದೇವತೆಗಳ ದೇವತೆಗಳ ಸಲುವಾಗಿ ಸಾಯಬೇಡ .” ಎಂದು ತನ್ನ ಪತಿಗೆ ಕೈಮುಗಿದು ಬೇಡಿಕೊಂಡಳು.

ಮೂಢರಂದದೊಳೂರ ಗುದ್ದಲಿಯನು ಕೊಂಡು
ನಾಡ ಕಾಲುವೆಯತಿದ್ದುವರೆ
ಬೇಡ ಲಲಾಟನೇತ್ರನ ಕೂಡೆ ಕಲಹ ಕೈ
ಗೂಡದೆಂದೊಲಿದು ಪೇೞಿದಳು॥೮॥

“ ಮೂಢರಂತೆ ಊರಗುದ್ದಲಿಯಿಂದ ನಾಡಕಾಲುವೆಯನ್ನು ತೋಡುತ್ತಾರೆಯೆ ? ಉರಿಗಣ್ಣನೊಡನೆ ಕಾಳಗವು ಸಾಧ್ಯವಾಗದು, ಬೇಡ” ಎಂದು ಪ್ರೀತಿಯಿಂದ ಹೇಳಿದಳು.

ವಾಸವಾದ್ಯಮರರಾಚಾರ್ಯಂಗೆ ನಾನಿತ್ತ
ಬಾಸೆಗೆ ತಪ್ಪುವನಲ್ಲ
ಈಶನೊಳ್ ಕೋಳಾಹಳವ ಮಾಡುವೆನೆಂದು
ಪೂಸರ ನುಡಿದ ಮಾನಿನಿಗೆ॥೯॥

ವಾರಿಜಭವ ಶಕ್ರಾದಿದೇವತೆಗಳು
ನಾರಿಯ ಕುಚಮಂಡಲವ
ಸೇರಿಬದುಕಲೆಂದು ಮದನನ ಮುಂದೆ
ಮಯೂರ ಹೆಗ್ಗಾಳೆಸಾಱಿದುದು॥೧೫॥

ಆಗ “ಮನ್ಮಥನ ಮುಂದೆ ಕಮಲಸಂಭವ, ಇಂದ್ರ ಮೊದಲಾದ ದೇವತೆಗಳು ಲಲನೆಯರ ಕುಚಗಳನ್ನು ಹೊಕ್ಕು ಬದುಕಲಿ” ಎಂದು ಹೆಗ್ಗಾಳೆ ಸಾರುವಂತೆ ಕೂಗಿತು.

ಇತ್ತರದಲಿ ತಳಿರ್ವಡೆದಿರ್ದ ಮಾಮರ
ಮತ್ತೇಭ ಗಿಳಿ ತೇಜವಿಂಡು
ವೃತ್ತವಿಹಂಗ ಚಕೋರ ಕಾಲಾಳ್ಗಳ
ಮೊತ್ತದಿ ನಡೆದನೞ್ತಿಯಲಿ॥೧೯॥

ಎರಡೂ ಬದಿಗೆ ಚಿಗುರಿದ ಮಾಮರವೆಂಬ ಮದ್ದಾನೆಗಳನ್ನು, ಗಿಳಿಗಳೆಂಬ ಅಶ್ವಗಳನ್ನು, ಚಕೋರಪಕ್ಷಿಗಳೆಂಬ ಕಾಲಾಳುಗಳನ್ನು ಕೂಡಿಕೊಂಡು ಉತ್ಸಾಹದಿಂದ ಹೊರಟನು.

ಎಡದೋಳು ಹಾಱಿತು ವಾಮಲೋಚನ ಬೆಂ
ಬಿಡದಲುಗಿತು ಮುಂದೆ ನೋಡೆ
ಗಿಡುವೆದ್ದು ಪರಿದುದು ಮನ್ಮಥ ಬಲಗೂಡಿ
ನಡೆವಾಗಲೇನ ಹೇೞುವೆನು॥೨೬॥

ಮನ್ಮಥನು ಸೈನ್ಯಸಮೇತನಾಗಿ ಹೊರಟಿರಲು, ಆತನ ಎಡದೋಳು ಅದುರಿತು. ಒಂದೇ ಸಮನೆ ಎಡಗಣ್ಣು ಹಾರಿತು. ಗಿಡಗಳು ಮುರಿದುಬಿದ್ದವು. ಆಗ ಆದ ಅಪಶಕುನವನ್ನು ಏನೆಂದು ಹೇಳಲಿ.

ಮಂದಾಕಿನೀದೇವಿ ತಾಯೆ ನಿಮ್ಮೊಳಗಾನು
ಮಿಂದತತ್ ಕ್ಷಣರುದ್ರನಹೆನು
ಮುಂದಾತನ ಕೂಡೆ ಕಾದುವರಿಲ್ಲೆಂದು
ಕಂದರ್ಪ ನುಡಿದ ಜಾಹ್ನವಿಗೆ॥೩೯॥

ತಾಯಿ ಗಂಗಾದೇವಿಯೆ, ನಿನ್ನಲ್ಲಿ ಮಿಂದಾಕ್ಷಣವೆ ನಾನು ಸ್ವತಃ ರುದ್ರನಾಗುತ್ತೇನೆ . ಆಮೇಲೆ ನನ್ನ ಜೊತೆಗೆ ಕಾಳಗಮಾಡುವವರಾರೂ ಇಲ್ಲದಾಗುತ್ತಾರೆ. ಎಂದು ಮನ್ಮಥನು ಗಂಗೆಗೆ ಹೇಳಿದನು.

ಕ್ಷಿತಿಯೊಳು ಮಹದಾದಿಪಾತಕ ನಿನ್ನ ಮೂ
ರುತಿಯ ಕಂಡಾಕ್ಷಣ ಬಯಲು
ಅತಿಕಾಂಕ್ಷೆಯಿಂ ಮಿಂದೊಡೀಶನಹೆನು ಭಾಗೀ
ರಥಿ ನಿನ್ನಹುಗಲಾಱೆ ತಾಯೇ ॥೪೦॥

“ ನಿನ್ನ ದರ್ಶನ ಮಾತ್ರದಿಂದ ಜಗತ್ತಿನ ಘೋರ ಪಾಪವೂ ಮಾಯವಾಗಿ ಬಿಡುತ್ತದೆ. ನಿಜ. ಆದರೆ ಹೆಚ್ಚಿನ ಇಚ್ಛೆಯಿಂದ ಸ್ನಾನಮಾಡಿದರೆ ಶಿವನೇ ಆಗಿ ಬಿಡುತ್ತೇನೆ. ಆದ್ದರಿಂದ ಗಂಗೆಯೇ ನಿನ್ನಲ್ಲಿ ಮುಳುಗಲಾರೆ, ತಾಯೆ.

ಬಾಲೇಂದುಮೌಳಿಯ ತಪದ ತೀವ್ರಾಗ್ನಿಯ
ಜ್ವಾಲೆಯೊಳ್ ಕುದಿಗೊಂಡ ಕುಳಿರು
ಮೇಲುಷ್ಣೋದಕದ್ರೋಣಿಗಳಾಗಿರ್ದ
ಲೀಲೆಯನೇನ ಬಣ್ಣಿಪೆನು.॥೫೧॥

ಶೆವನ ತಪೋಜ್ವಾಲೆಯಿಂದ ಕುದಿದ ಮಂಜು ಬೆಸೆನೀರಿನ ಮಡುಗಳಾಗಿದ್ದ ಆ ಮೋಜನ್ನು ಏನೆಂದು ವರ್ಣಿಸಲಿ ?

ಕಾಮದಹನ.

ಪನ್ನಗರಿಪುವಾಹನ ಕೃಷ್ಣರಾಯನ
ನಿನ್ನಯ ಹೃದಯದೊಳಿರಿಸಿ
ಉನ್ನತವಪ್ಪ ಮೇಲ್ಗತೆವೇೞು ಕಾಂತ ಮ
ತ್ಕರ್ಣದ ಜಡ ಪರೆವಂತೆ॥೧॥

“ ಪ್ರಿಯನೆ, ನಿನ್ನ ಹೃದಯದಲ್ಲಿ ಗರುಡವಾಹನ ಶ್ರೀಕೃಷ್ಣನನ್ನು ನೆಲೆಗೊಳಿಸಿ, ನನ್ನ ಕಿವಿಗಳಲ್ಲೆ ಚೈತನ್ಯ ತುಂಬುವಂತೆ ಉನ್ನತವಾದ ಸತ್ಕಾವ್ಯವನ್ನು ಹೇಳು “

ರೂಢಿಯೊಳತ್ಯಂತ ಸುಗುಣೆ ಕೇಳ್ ತಾಟಂಕ
ಸೂಡಿದತವ ಕಿವಿಗೊಳನ
ಕೋಡಿಬೀಳ್ವಂತೆ ತುಂಬಿಸುವೆನು ಕಡುರುಚಿ
ಮಾಡಿ ಮೋಹನತರಂಗಿಣಿಯನು.॥೨॥

“ ಭೂಮಿಯ ಮೇಲಿನ ಅತ್ಯಂತ ಸುಗುಣಿಯೇ ಕೇಳು; ಮೋಹನತರಂಗಿಣಿಯನ್ನು ಆಸ್ವಾದಗೊಳಿಸಿ, ಓಲೆಯನ್ನು ಧರಿಸಿದ ನಿನ್ನ ಕಿವಿಯೆಂಬ ಕೊಳವನ್ನು ಜಲಪಾತದಂತೆ ತುಂಬಿಬಿಡುತ್ತೇನೆ”

ಪುಷ್ಪಸುಗಂಧಿ ನೀ ಕೇಳಾದೊಡಾಗಿರಿ
ತಪ್ಪಲೊಳ್ ಶಿವನಿರ್ದ ವಿಪಿನ
ಬಪ್ಪವಡೆದು ರಾಜಿಸುತಿರ್ದುದು ಕಂ
ದರ್ಪ ದೃಗುಯುಗಳಕ್ಕೆ ॥೩॥

ಹಾಗಿದ್ದರೆ ಸುವಾಸಿನಿಯೇ ಕೇಳು, ಆ ಪರ್ವತ ಪ್ರದೇಶದಲ್ಲೆ ಶಿವನಿದ್ದ ಕಾಡು ಮನ್ಮಥನ ಕಣ್ಣುಗಳಿಗೆ ಮನೋಹರವಾಗಿ ಶೋಭಿಸಿತು.

ಹುತವಹನೇತ್ರನಿರ್ದಟವಿಯ ಕಂಡು ಮ
ನ್ಮಥಮಹೀರಮಣ ಮುಂಕೊಂಡು
ಕೃತಕದಿಂದೊಳಪುಗಿಸಿದ ಬೇಗವರ ಚೈತ್ರ
ರಥ ಚಂದ್ರಮಂದಾನಿಲರನು॥೮॥

ಉರಿಗಣ್ಣನಾದ ಶಿವನಿದ್ದ ಅಡವಿಯನ್ನು ಕಂಡು ಮುಂದುವರೆದ ಮನ್ಮಥನು ವಸಂತ, ಚಂದ್ರ, ಮಂದಾನಿಲರನ್ನು ಹಾಗೂ ತನ್ನ ರಥವನ್ನು ಮಾಯೆಯಿಂದ ಒಳಪ್ರವೇಶಿಸುವಂತೆ ಮಾಡಿದನು.

ಫುಲ್ಲಶರನ ಮಾರ್ಬಲ ಬನದೊಳು ಪೊಕ್ಕು
ಚೆಲ್ಲವರಿದು ಪೀಡಿಸಲು
ಪಲ್ಲವಿಸಲು ಸದನದೊಳಿರ್ದ ರಿಸಿಗಳು
ಗಲ್ಲಕೆ ಕರವ ಸಾರ್ಚಿದರು॥೧೦॥

ಮನ್ಮಥನ ಸೈನ್ಯವು ಕಾಡಿನ ಒಳಹೊಕ್ಕು ಸುತ್ತಲೂ ಹರಡಿ ಪೀಡಿಸಲು, ತಮ್ಮ ಬೀಡಿನಲ್ಲಿದ್ದ ಋಷಿಗಳು ಚಂಚಲಚಿತ್ತರಾಗಿ ಚಿಂತೆಗೀಡಾದರು.

ಮಧುಮಾಸವಲ್ಲ ವಸಂತ ಬಂದಿದೆ ನೋಡಿ
ವಿಧುವು ಮೂಡಿತು ರಾತ್ರಿಯಲ್ಲಿ
ಇದು ಮದನೋತ್ಪಾತವೆಂದು ಮುನೀಂದ್ರರು
ವಧುಗಳನಮರ್ದಪ್ಪಿದರು.॥೧೨॥

ಅಯ್ಯೋ ನೋಡಿರಿ ! ವಸಂತಋತುವಲ್ಲದಿದ್ದರೂ ವಸಂತಕಾಲ ಬಂದಿದೆ ! ಇರುಳಿನಲ್ಲಿ ಚಂದ್ರ ಮೂಡಿದೆ! ಇದು ಕಾಮನಿಂದಾದ ಅನಾಹುತ ಎಂದು ಋಷಿಗಳು ಕನ್ಯೆಯರನ್ನು ಬಲವಾಗಿ ಅಪ್ಪಿಕೊಂಡರು.

ಚಟುಲಕಾಮೋದ್ದೀಪನದಿಂದೆ ಕಡುಧೂರ್ತ
ವಟುಗಳಸಿರಿಕುವರಿಯರ
ಬಟುಮೊಲೆಗಳ ಕೈದುಡುಕಿದರ್ಕಂಡಲ್ಲಿ
ನಿಟಿಲಾಕ್ಷ ತಪವಿರ್ದ ಬನದಿ॥೧೩॥

ಶಿವನು ತಪಸ್ಸು ಮಾಡುತ್ತಿದ್ದ ಕಾಡಿನಲ್ಲಿ ಧೂರ್ತರಾದ ವಟುಗಳು, ಅತಿಯಾದ ಕಾಮೋದ್ರೇಕದಿಂದ ತರುಣಿಯರನ್ನು ಹುಡುಕಿ, ಕಂಡಲ್ಲಿ ಅವರ ಬಟ್ಟ ಮೊಲೆಗಳಿಗೆ ಕೈಹಾಕುತ್ತಿದ್ದರು.

ಉಗ್ಗಡಿಸುವ ರಾಜಕೀರ ಜಾಣ್ವಕ್ಕಿಗ
ಳಿಗ್ಗಡೆಯೊಳು ಮುಂದೆ ಮೆಱೆಯೆ
ಹೆಗ್ಗಾಳೆ ಕಲಕಂಠ ರಭಸದಿಂದಡರಿದ
ರ್ಭರ್ಗನ ವರತಪೋವನಕೆ॥೨೦॥

ಎರಡೂ ಬದಿಗೆ ಜಯಘೋಷಮಾಡುವ ಗಿಳಿಗಳು, ಮುಂಗಡೆಯಲ್ಲಿ ಕಹಳೆಯ ಕೋಗಿಲೆಗಳು. ಶೋಭಿಸುತ್ತಿರಲು ಕಾಮನ ಕಡೆಯವರು ಶಿವನ ತಪೋವನವನ್ನು ರಭಸದಿಂದ ಮುತ್ತಿದರು.

ಸಂಧಿಸಿ ಹೋಗುವೆನೆಂದೆನಲು ಬಾಗಿಲೊಳಿರ್ದ
ನಂದೀಶ ಮುಱಿಯಲಿಕ್ಕಿದನು
ಕಂದಿದ ವದನದೊಳೆಸೆವ ಕಂದರ್ಪಗೆ
ಬಂದಿದಿರಾದಳಾ ಗಿರಿಜೆ॥೨೧॥

ಸಂಧಿಯನ್ನು ಸಾಧಿಸಿ ಒಳಹೋಗಬೇಕೆನ್ನುವಷ್ಟರಲ್ಲಿ , ಬಾಗಿಲಲ್ಲಿಯೇ ಇದ್ದ ನಂದೀಶನು ಬಲವಾಗಿ ಹೊಡೆದು ನಿಲ್ಲಿಸಿದನು. ಅಷ್ಟರಲ್ಲಿಯೇ ಗಿರಿಜೆಯು, ಬಾಡಿದ ಮುಖವುಳ್ಳ ಮನ್ಮಥನ ಮುಂದೆ ಬಂದಳು.

ಗೊಲೆಗೊಳಿಸಿದ ಪುಷ್ಪಚಾಪ ಸರೋಜನೈ
ದಿಲೆಗೋಲ್ಗಳ ಕುಸುಕಿರಿದು
ತಲೆ ಬಲ್ಲಿತೆಂದು ಕಲ್ಲನೆ ಹಾಯಬೇಡ ಹೋ
ಗೆಲೊ ಪಾಪಿ ಮನ್ಮಥ ಮನೆಗೆ॥೨೩॥

“ಪುಷ್ಪಬಾಣಗಳನ್ನು ಹೂಡಿ, ಕಮಲ, ನೈದಿಲೆಗಳಿಂದ ಹೊಡೆದು ಕೊಲ್ಲುವೆನೆಂಬುದು, ಗಟ್ಟಿ ತಲೆಯಿದೆಯೆಂದು ಕಲ್ಲಿಗೆ ಹಾಯ್ದಂತಾಗುತ್ತದೆ, ಆದ್ದರಿಂದ ಎಲೈ ಪಾಪಿಯಾದ ಮನ್ಮಥನೆ, ಮರಳಿ ಮನೆಗೆ ಹೋಗು.”

ರಜ್ಜುವದೆತ್ತ ದಳ್ಳುರಿಗರೋತ್ತಮನೆತ್ತ
ವಜ್ರವೆತ್ತಾಲಿಕಲ್ಲೆತ್ತ
ಮಜ್ಜೀವಿತೇಶ್ವರನೆತ್ತ ನೀನೆತ್ತ ಕೇಳ್
ದುರ್ಜೀವಿ ತೆರಳೆಂದಳೊಲಿದು ॥೨೪॥

“ ಎಲೈ ಅಧಮನೆ, ಜ್ವಾಲೆಗೆ ನೂಲು ಸಾಟಿಯೆ, ವಜ್ರಕ್ಕೆ ಆಲಿಯ ಕಲ್ಲು ಸಾಟಿಯೆ ? ನನ್ನ ಪ್ರಾಣೇಶ್ವರನಾದ ಶಿವನಿಗೆ ನೀನು ಸಾಟಿಯೆ ? (ಕಾರಣ ಪ್ರತಿಭಟಿಸದೆ ) ಹೊರಟೈಹೋಗೈ” ಎಂದು ( ಗಿರಿಜೆಯು ) ಸಹಾನುಭೂತಿಯಿಂದ ಹೇಳಿದಳು.

ನೋಡವ್ವ ನನ್ನ ಸಾಹಸವ ನಿನ್ನಯ ಮೊಗ
ನೋಡದೆ ತಪಗೆಯ್ವ ಶಿವನ
ಗೂಢಹೃತ್ಕಮಲವನೊಡೆಯೆಚ್ಚು ನಿನಗೆ ಕೈ
ಗೊಡದೆ ಬಿಡೆನೆಂದ ನಗುತ॥೨೫॥

ಆಗ ನಗುತ್ತ ಮನ್ಮಥನು - ತಾಯೆ, ನನ್ನ ಸಾಹಸವನ್ನು ನೋಡುತ್ತಿರು; ನಿನ್ನ ಮಾತ ಲೆಕ್ಕಿಸದೆ, ತಪೋನಿರತನಾದ ಶಿವನ ಅಂತರಾತ್ಮಕ್ಕೆ ಹೊಡೆದು ಅವನನ್ನು ನಿನ್ನೊಡನೆ ಕೂಡಿಸದೆ ಬಿಡೆನು” ಎಂದನು.

ಇಂದು ನಿನಗೋಸುಗ ಧೂರ್ಜಟಿಯ ಮೇ
ಲೊಂದು ಪೂಸರಲಿಂದಲೆಸೆಯೆ
ನೊಂದು ಲಲಾಟನೇತ್ರವ ತೆಱೆದರೆ ನೀನು
ಬೆಂದುಹೋದಪೆ ಬೇಡ ಮಗನೆ॥೨೬॥

ಬೇಡ ಮಗನೆ,ಇಂದು ನನಗಾಗಿ ನೀನು ಶಿವನ ಮೇಲೆ ಒಂದು ಹೂಬಾಣವನ್ನು ಹೊಡೆದರೂ ಸಾಕು, ನೊಂದ ಅವನ ಹಣೆಗಣ್ಣು ತೆರೆದರೆ ನೀನು ದಹಿಸಿ ಹೋಗುವೆ”

ಓರಂತೆ ನಿನ್ನೊಳೀಶ್ವರ ಕೂಡಿದರೆ ಸತ್ಕು
ಮಾರ ಪುಟ್ಟುವ ಪುಟ್ಟಲೊಡನೆ
ತಾರಕನಧಟ ಖಂಡಿಪನೆಂದು ಸುರರಿಗೆ
ನಾರಾಯಣನು ಪೇೞಿದನು॥೨೭॥

“ ಶಿವನು ನಿನ್ನನ್ನು ಕೂಡಿದ್ದಾದರೆ ಸತ್ಕುಮಾರನು ಹುಟ್ಟಿ, ತಾರಕಾಸುರನ ಗರ್ವಭಂಗ ಮಾಡುವನೆಂದು ಶ್ರೀಹರಿಯು ದೇವತೆಗಳಿಗೆ ಹೇಳಿದ್ದಾನೆ. “

ಏಣನಿಭಾಯತೇಕ್ಷಣೆ ಕೇಳು ಪಾರ್ವತಿ
ಬಾಣಪಂಚಕನ ಕುಸ್ತರಿಸಿ
ಕೇಣವಿಲ್ಲದೆ ತನ್ನ ಮಱೆಗೊಂಡು ನಂದೀಶ
ಕಾಣದಂತೊಳಪುಗಿಸಿದಳು॥೩೦॥

“ ಹರಿಣಾಕ್ಷಿಯೆ ಕೇಳು, -ಪಾರ್ವತಿಯು ಮನ್ಮಥನನ್ನು ಸಂತೈಸಿ, ಸಂತೋಷದಿಂದ ತನ್ನಲ್ಲಿ ಮರೆಮಾಡಿಕೊಂಡು, ನಂದೀಶನು ಕಾಣದಂತೆ ಆತನನ್ನು ಒಳಗೆ ಪುಗಿಸಿದಳು.”

ಗಂಡಲರ್ವಕ್ಕಿ ತಿಱುವಾಂತ ಕುಸುಮಕೋ
ದಂಡವನೆಡಗೆಯ್ಯೊಳಾಂತು
ಚಂಡವಿಕ್ರಮ ನೆಯ್ದಿಲೆಗೋಲ ತಿರುಹುತ
ಕಂಡನು ಕುಳಿತಿರ್ದ ಶಿವನ ॥೩೨॥

ಗಂಡು ದುಂಬಿಗಳ ಹೆದೆಯುಳ್ಳ ಹೂಬಿಲ್ಲನ್ನು ಎಡಗೈಯಲೂಲಿ ಹಿಡಿದು, ನೀಲಿ ಕಮಲದ ಬಾಣವನ್ನು ತಿರುಗಿಸುತ್ತ, ಪ್ರಚಂಡ ಪರಾಕ್ರಮಿಯಾದ ಮನ್ಮಥನು ಅಲ್ಲಿ ಕುಳಿತಿದ್ದ ಶಿವನನ್ನು ಕಂಡನು.

ಕಂಜ ಬಾಂಧವಚಂದ್ರ ಶತಕೋಟಿ ತೇಜಃ
ಪುಂಜ ಶಾರ್ದೂಲಚರ್ಮದಲಿ
ಸಂಜೋಗದೆ ಕುಳಿತಿರ್ದ ತಪೋಗ್ರತೆ
ಗಂಜದೆ ಕಾಮ ನಿಟ್ಟಿಸಿದ ॥೩೩॥

ಶತಕೋಟಿ ರವಿಶಶಿಗಳ ಪ್ರಭೆಯುಳ್ಳವನಾಗಿ, ಹುಲಿಯ ಚರ್ಮದ ವಸ್ತ್ರಧಾರಿಯಾಗಿ ಕುಳಿತಿದ್ದ ಶೆವನ ತಪಸ್ಸಿನ ಉಗ್ರತೆಗೆ ಹೆದರದೆ ಕಾಮನು ಶಿವನನ್ನು ನೋಡಿದನು.

ವಿಲಸಿತ ಕುಸುಮಕೋದಂಡಕ್ಕೆ ಬಿಗಿದ ಕ
ಮ್ಮಲರ್ವಕ್ಕಿವೆದೆಯ ಜೇವೊಡೆದು
ಗೆಲವಾಂತು ಕಿವಿವರೆದೆಗೆದೆಚ್ಚ  ನೀಲೋ
ತ್ಪಲಬಾಣದಿಂದಲೀಶ್ವರನ॥೩೭॥

ಮನೋಹರವಾದ ಹೂಬಿಲ್ಲಿಗೆ ಬಿಗಿದ ತುಂಬಿಗಳ ಹೆದೆಯನ್ನು ಮೀಟಿ, ಉತ್ಸಾಹಭರಿತನಾಗಿ ಕಿವಿಯವರೆಗೂ ಅದನ್ನು ಎಳೆದು ಕನೈದಿಲೆಯ ಬಾಣದಿಂದ ಈಶ್ವರನನ್ನು ಹೊಡೆದನು.

ತಾಗಿದು ಮರ್ಮಸ್ಥಾನವ ಕಡಿದು ವಿ
ಭಾಗಿಸೆ ದೃಢಚಿತ್ತವಿಡಿದು
ಭೋಗಿಭೂಷಣ ಕೋಪವ ತಾಳ್ದು ಕಿಡಿಕಿಡಿ
ಯಾಗಿ ಕೆಂಗಿಡಿಗಣ್ಣ ತೆಱೆದ॥೩೮॥

ಕಾಮ ಬಾಣವು ಶಿವನ ಮರ್ಮಸ್ಥಲವನ್ನು ತಾಗಿ ದೃಢಚಿತ್ತವನ್ನು ಕಡಿದು ತುಂಡರಿಸಿತು. ಆಗ ಸರ್ಪಭೂಷಣನು ಕನಲಿ ಕಿಡಿಕಿಡಿಯಾಗಿ ಉರಿಗಣ್ಣು ತೆರೆದನು.

ಭುಗಿಭುಗಿ ಛಿಟಿಛಿಟಿಲೆಂದು ಲೋಚನದೊಳಿ
ರ್ದೊಗೆದ ದಳ್ಳುರಿಸುತ್ತಿ ಸ್ಮರನ
ಬಿಗಿದ ಬತ್ತಲಿಕೆ ಕರ್ವಿಲ್ಲುಸಹಿತೆ ಸು
ಟ್ಟುಗಿದುದು ಕುಡಿ ನಭಸ್ಥಲಕೆ॥೩೯॥

ಭುಗಿಲ್ಭುಗಿಲೆಂದು ಛಿಟಿಛಿಟಿಲೆಂದು ಹಣೆಗಣ್ಣಿನಿಂದ ಹೊರ ಹೊಮ್ಮಿದ ಜ್ವಾಲೆಯು ಬಿಗಿದ ಬತ್ತಳಿಕೆ ಕಬ್ಬಿನ ಬಿಲ್ಲನ್ನು ಮೊದಲುಗೊಂಡು ಮನ್ಮಥನನ್ನು ದಹಿಸಿ ಆಕಾಶಕ್ಕೆ ತೂರಿತು.

ಕರಗಸವೆತ್ತ ಕದಳಿಯೆತ್ತ ಕಾಲಸಂ
ಹರನೆತ್ತ ಕಂದರ್ಪನೆತ್ತ
ತರವಲ್ಲದ ಕಾರ್ಯವ ನೆಗೞ್ದಡೆ ಸುರ
ನರನಾಗಲೋಕ ಮೆಚ್ಚುವುದೇ॥೪೧॥

ಗರಗಸಕ್ಕೆ ಬಾಳೆ ಸಾಟಿಯೆ ? ಕಾಲಸಂಹರನಾದ ಶಿವನಿಗೆ ಕಾಮದೇವನು ಸಾಟಿಯೆ? ಉಚಿತವಲ್ಲದ ಕಾರ್ಯವನ್ನು ಮಾಡಿದರೆ ದೇವಲೋಕವಾಗಲಿ, ಮಾನವಲೋಕವಾಗಲಿ, ನಾಗಲೋಕವಾಗಲಿ ಮೆಚ್ಚಬಲ್ಲುದೆ?

ವರಮನೋಹರತರಂಗಿಣಿಯೆಂಬ ಕಾವ್ಯವ
ಬರೆದೋದಿ ಕೇಳಿದ ಜನರ
ತರಣಿ ಚಂದ್ರಮರುಳ್ಳನಕ ಸತ್ಕೃಪೆಯಿತ್ತು
ಪೊರೆವ ಲಕ್ಷ್ಮಿಕಾಂತ ಬಿಡದೆ॥೪೪॥

“ ಮೋಹನತರಂಗಿಣಿ “ ಎಂಬ ಈ ಉತ್ಕೃಷ್ಟ ಕಾವ್ಯವನ್ನು ಬರೆದ, ಓದಿದ, ಕೇಳಿದ ಜನರನ್ನು ಲಕ್ಷ್ಮೀಪತಿಯು ಅನುಗ್ರಹಿಸಿ,ಸೂರ್ಯಚಂದ್ರರು ಇರುವವರೆಗೂ ತಪ್ಪದೇ ಸಲಹುವನು.

ರತಿಯ ಪ್ರಲಾಪ.

ವೇದಶ್ರುತಿಯ ಬಾಯ ಬೀಯಗ ತರ್ಕವಿ
ಚ್ಛೇದ ಸಜ್ಜನಸಮಾದಿಗಳ
ಭೇದಕ್ಕೆ ನಿಲುಕದ ಶ್ರೀಕೃಷ್ಣರಾಯನ
ಪಾದವ ಕೂರ್ತು ಪೇೞ್ಗತೆಯ॥೧॥

“ ವೇದ ಶೃತಿಗಳ ಬಾಯಿಗಳನ್ನು ಬಿಗಿದ, ತರ್ಕವನ್ನು ಭಂಗಿಸಿದ, ಮುನಿಗಳ ಸಮಾಧಿಗೂ ಸಿಗದ ಶ್ರೀಹರಿಯ ಪಾದಗಳನ್ನು ಕುರಿತು ಕಥೆಯನ್ನು ಹೇಳು.”

ಕುವಲಯದಳನೇತ್ರೆ ಕೇಳು ಕೇವಲ ವೈ
ಷ್ಣವರಾಯರುಗಳಿರ್ದೆಸೆಯ
ಪವನ ಬಂದೆಱಗೆ ಸನ್ಮತಿವೆತ್ತು ಪೇೞುವೆ
ಶ್ರವಣಕಾನಂದವೆಂದೆನಿಸಿ॥೨॥

ಕನೈದಿಲೆಯ ದಳದಂಥ ಕಣ್ಣುಳ್ಳ ಚಲುವೆಯೇ, ಕೇವಲ ವೈಷ್ಣವ ಗಾಳಿಯೇ ಬಂದೆರಗುವಂತೆ , ಕಿವಿಗಳಿಗೆ ಹಿತವೆನಿಸುವ ಹಾಗೆ ಔಚಿತ್ಯಪೂರ್ಣವಾಗಿ ಹೇಳುತ್ತೇನೆ, ಕೇಳು.

ಬಿಸುರುಹದಳನೇತ್ರೆಯ ಕಣ್ಣ ನೀರಿಂದ
ಕೆಸಱೌದುದೊಡಲ ತಾಪದಲಿ
ಎಸರಾರಿತೊಡನೆ ಭಸ್ಮೀಕೃತವಾಯ್ತು ಬ
ಣ್ಣಿಸಬಲ್ಲರಾರು ದುಕ್ಕವನು॥೬॥

ರತಿಯ ಕಣ್ಣೀರಿಂದ ಮನ್ಮಥನ ಬೂದಿಯು ಕೆಸರಾಯಿತು. ಅವಳ ಹೊಟ್ಟೆಯುರಿಯಿಂದ ಅದರ ನೀರು ಆರಿ ಭಸ್ಮವಾದಂತಾಯಿತು. ಅಂಥ ದಃಖವನ್ನು ಯಾರು ತಾನೆ ಬಣ್ಣಿಸಬಲ್ಲರು.

ಗಿಳಿದೇಜಿಗಳೆಲ್ಲಿ ಕರ್ವಿಲ್ಲು ಮೊರೆವ ಬಾ
ಲಳಿವೆದೆ ಪೂಗೋಲ್ಗಳೆಲ್ಲಿ
ತಳಿರ ಖಂಡೆಯ ಮೀನಧ್ವಜವೆಲ್ಲಿ ತೋಱೆಂದು
ಕಲೆಗುಂದಿ ಹಲುಬಿದಳೞುತ॥೭॥

“ ಗಿಳಿಗಳ ಅಶ್ವಗಳೆಲ್ಲಿ ? ಝೇಂಕರಿಸುವ ಮರಿದುಂಬಿಯ ಹೆಡೆ , ಹೂ ಬಾಣಗಳೆಲ್ಲಿ ? ತಳಿರಿನ ಖಡ್ಗ, ಮೀನಧ್ವಜಗಳೆಲ್ಲಿ,? ಹೇಳೆಂದು ಬಳಲಿ ಬಾಡಿದ ರತಿಯು ಗೋಳಾಡಿದಳು.

ವರ್ಣಾಧಿಕ ಶ್ರೀಕಾರಂಗಳಂತಿರ್ಪ
ಕರ್ಣಂಗಳೆಲ್ಲಿ ರಂಜಿಸುವ
ಸ್ವರ್ಣದರ್ಪಣವನೇೞಿಪ ಕದಪುಗಳೆಲ್ಲಿ
ಮನ್ಮನೋನಾಥ ತೋಱೆಂದಳೞುತೆ ॥೧೦॥

ನನ್ನ ಪ್ರಾಣಕಾಂತನೆ, ಸುವರ್ಣದ ಶ್ರೀಕಾರಂಗಳಂತಿದ್ದ ನಿನ್ನ ಕಿವಿಗಳೆಲ್ಲಿ? ಹೊಳೆಯೈವ ಚಿನ್ನದ ಕನ್ನಡಿಯನ್ನು ಅಲ್ಲಗಳೆಯುವ ನಿನ್ನ ಗಲ್ಲಗಳೆಲ್ಲಿ? ತೋರಿಸೆಂದು ಶೋಕಿಸುತ್ತ ನುಡಿದಳು.

ಎಲ್ಲಾ ಕಲೆಗಳನೊಳಕೊಂಡು ರಾಜಿಪ
ಮೆಲ್ಲೆದೆಗುಱುಹೆಲ್ಲಿ ತೋಱು
ಸಲ್ಲಲಿತಮಳ ತಳೋದರ ಸುೞಿನಾಭಿ
ಎಲ್ಲಿವೆ ತೋಱೆಂದಳೞುತ ॥೧೩॥

ಸರ್ವಕಲೆಗಳಿಂದ ಶೋಭಿಸುತ್ತಿದ್ದ ನಿನ್ನ ಹೃದಯದ ಸುಳುಹು ಎಲ್ಲಿ? ನಿನ್ನ ತೆಳುವಾದ ಸುಂದರ ಹೊಟ್ಟೆ ಮತ್ತು ಸುಳಿಯಂತಿದ್ದ ಹೊಕ್ಕುಳುಗಳೆಲ್ಲಿವೆ ತೋರೆಂದು ತೋರೆಂದು ಶೋಕಿಸುತ್ತ ನುಡಿದಳು.


ಅಪ್ಪುವ ನಳಿತೋಳ್ಗಳೆಲ್ಲಿ ಮತ್ಕುಚದ ಮೇ
ಲೊಪ್ಪುವ ಸಿರಿಗೆಯ್ಗಳೆಲ್ಲಿ
ಬೆಳ್ಪುವಡೆದ ಸೆಳ್ಳುಗುರ್ಗಳ ತೋಱೆಂದು
ನೆಪ್ಪೆನೊಳ್ ಬೆದಕಿ ನೋಡಿದಳು॥೧೪॥

ನನ್ನನ್ನು ಅಪ್ಪುವ ನಳಿತೋಳ್ಗಳು, ನನ್ನ ಕುಚಗಳ ಮೇಲೆ ಶೋಭಿಸುವ ಚಲುವಾದ ಹಸ್ತಗಳು , ಶುಭ್ರವಾದ ಚೂಪಾದ ಉಗುರುಗಳು ಎಲ್ಲಿವೆ ತೋರಿಸೆಂದು ಅವೆಲ್ಲವನ್ನೂ ನೆನೆದುಕೊಂಡಳು.

ಎಳವರೆಯದ ಸಿಂಹಮಧ್ಯದಂತೊಪ್ಪುವ
ಸೆಳೆನಡುವೆಲ್ಲಿಗೆ ಹೊಯ್ತು
ಪೊಳೆಯುವ ಪೊಂಬಾೞೆದೊಡೆಯೆಲ್ಲಿ ಹೋಯ್ತೆಂದು
ಹಲುಬಿದಳೞುತಾಯತಾಕ್ಷಿ॥೧೫॥

ಏರು ಹರೆಯದ ಸಿಂಹದ ನಡದಂತೆ ಶೋಭಿಸುವ ಮನೋಹರವಾದ ನಡ ಎಲ್ಲಿ ಹೋಯಿತು ? ಹೊಳೆಯುವ ಹೊಂಬಾಳೆಯಂತ ತೊಡೆಗಳು ಎಲ್ಲಿ ಹೋದವು? ಎನ್ನುತ್ತ ರತಿದೇವಿಯು ದುಃಖದಿಂದ ಹಲುಬಿದಳು.

ಪಾತಕ ಹರನೊಳು ಸೆಣಸಬೇಡೆನಲಾಗಿ
ಮಾತಾಡಲೊಲ್ಲದ ಮುನಿಸೋ
ನಾ ತಾಳಬಲ್ಲೆನೆ ವಿರಹವನೆಂದಾಕೆ
ಭೂತಳದೊಳು ಹೊರೞಿದಳು ॥೧೭॥

ಪಾಪಿಯಾದ ಶಿವನೊಡನೆ ಸೆಣಸಾಡುವುದು ಬೇಡವೆಂದದಕ್ಕೆ ಮುನಿಸುಗೊಂಡು ಹೋದೆಯಾ ? ಈ ವಿರಹವನ್ನು ನಾನು ಸಹಿಸಲು ಸಾಧ್ಯವೆ ? ಎಂದು ರತಿಯು ನೆಲದ ಮೇಲೆ ಹೊರಳಾಡಿದಳು.

ಅೞದವರೞುತಿರ್ದರು ರತಿಕಾಂತನ
ಹೞವಳಿಸುವ ಪ್ರಳಾಪದಲಿ
ಬೞಿಕ ಕಂಡೀಶ್ವರಿ ಗಂಧೋದಕದಿಂದೆ
ತೊಳೆದಳು ರತಿಯ ನುಣ್ಮೊಗವ॥೨೫॥

ಕಾಂತನಿಗಾಗಿ ಹಲುಬುವ ರತಿಯ ಪ್ರಲಾಪವು ಅಳದವರನ್ನು ಅಳಿಸಿಬಿಟ್ಟಿತು. ಅನಂತರ ಪಾರ್ವತಿಯು ಪರಿಮಳೋದಕ-
ದಿಂದ ರತಿಯ ಮೃದುವಾದ ಮುಖವನ್ನು ತೊಳೆದಳು.

ಮುತ್ತಿನ ಸೆಱಗ ಮುಚ್ಚಿದಳು ಬಲ್ಮೊಲೆಗೆ ಪಿ
ನ್ನೆತ್ತಿಯೊಳ್ ತುಱುಬನಿಕ್ಕಿದಳು
ಹತ್ತಿದ ಮೆಯ್ದೂಳ ಕೊಡಹಿ ರಟ್ಟೆಯ ಹಿಡಿ
ದೆತ್ತಿದಳಬುಜಾಂಬಕಿ॥೨೬॥

ಮತ್ತೆ ಪಾರ್ವತಿಯು, ಮುತ್ತಿನ ಸೆರಗಿನಿಂದ ರತಿದೇವಿಯ ಬಲ್ಮೊಲೆಗಳನ್ನು ಮರೆಮಾಡಿದಳು, ಹಿಂದಲೆಯಲ್ಲಿ ಕೂದಲನ್ನು ಕಟ್ಟಿದಳು, ಮೈಗೆ ಹತ್ತಿದ ಧೂಳಿಯನ್ನು ಒರೆಸಿ ಅವಳ ರಟ್ಟೆಯನ್ನು ಹಿಡಿದೆತ್ತಿ ನಿಲ್ಲಿಸಿದಳು.

ಒಂದೊಂದ ಹಳುಕುಟ್ಟಬೇಡ ನಿನ್ನಾಳ್ದನನ
ಕೊಂದ ಮದೀಯವಲ್ಲಭನ
ಸಂದರುಶನವ ಮಾಡೇೞೆಂದು ಚರಣಾರ
ವಿಂದಕೆ ಪೊಡೆಮಡಿಸಿದಳು॥೨೭॥

ಏನಾದರೊಂದನ್ನು ನೆನೆದು ಬಡಬಡಿಸಬೇಡ, ನಿನ್ನ ಪತಿಯನ್ನು ಕೊಂದ ಪರಮೇಶ್ವರನ ದರ್ಶನವನ್ನು ಮಾಡೇಳೆಂದು ಶಿವನ ಪಾದಕ್ಕೆ ನಮಸ್ಕಾರ ಮಾಡಿಸಿದಳು.

ಲೋಲಲೋಚನೆ ದೃಗುಜಲದಿಂದೆ ಪಾದಪ್ರ
ಕ್ಷಾಲನೆ ಗೆಯ್ದಂಘ್ರಿಯುಗವ
ನೀಲೋತ್ಪಲದಿಂದೆ ಪೂಜೆಯ ವಿರಚಿಸಿ
ದಾಲತಾಂಗಿಯ ಕಂಡ ಹರನು॥೨೮॥

ಆಗ ಹರನು, ಕಣ್ಣೀರಿನಿಂದ ತನ್ನ ಪಾದವನ್ನು ತೊಳೆದು ಕಣ್ಣುಗಳೆಂಬ ನೀಲಕಮಲಗಳಿಂದ ಪೂಜಿಸಿದ ಆ ಚಂಚಲನಯನೆಯ ಲತಾಂಗಿ ರತಿಯನ್ನು ನೋಡಿದನು.

ನುಡಿಸಿದ ಮಗಳೆ ನಿನ್ನಾಳ್ದನೆನ್ನಯ ತಪ
ಗೆಡಿಸಿದ ಕಾರಣದಿಂದೆ
ಕಿಡಿ ಸುರಿವಕ್ಕಿಯೊಳ್ ಸುಟ್ಟೆ ವೃಥಾ ದುಕ್ಕ
ಬಡಿಸಬೇಡೆಂದು ಪೇೞಿದನು ॥೨೯॥

“ ಮಗಳೆ, ನಿನ್ನ ಪತಿಯು ನನ್ನ ತಪವನ್ನು ಭಗ್ನಗೊಳಿಸಿದ ಕಾರಣ ನಾನು ಉರಿಗಣ್ಣಿನಿಂದ ಆತನನ್ನು ಸುಟ್ಟೆನು. ವ್ಯರ್ಥವಾಗಿ
ದುಃಖಿಸಬೇಡ “ ಎಂದನು.

ಸಿರಿಹಸ್ತಯುಗಳದಿಂ ಪಿಡಿದೆತ್ತಿ ಪರಮತಾ
ತ್ಪರಿಯದೆ ಮೊಗವ ನಿಟ್ಟಿಸಲು
ಸುರಿವ ಕಂಬನಿಯಿಂದೆ ಬಿನ್ನಹ ಮಾಡಿದಳ್
ಕರಿಚರ್ಮಾಂಬರನೊಡನೆ॥೩೦॥

ಶಿವನು ತನೂನ ಮಂಗಳಕರಗಳಿಂದ ರತಿದೇವಿಯನ್ನು ಹಿಡಿದೆತ್ತಿ, ಅತ್ಯಂತ  ಅಂತಃಕರಣದಿಂದ ಅವಳ ಮುಖವನ್ನು ನೋಡಿದನು. ಆಗ ಅವಳು ಶಿವನಿಗೆ ಈ ರೀತಿ ಬಿನ್ನವಿಸಿಕೊಂಡಳು.

ಪಾಪಕ್ಷಯಕ್ಕೆಂದು ಗಂಗೆಯೊಳ್ಮಿಂದರೆ
ಪಾಪಿಯ ಮೊಸಳೆ ತಿಂದಂತೆ
ತಾಪಸ್ಥ ಸುರರಿಂಗೆ ಹಿತಗೈಯಬಂದ ಪ್ರಾ
ಣೋಪನನುರಿಹಿದೆ ನೀನು॥೩೩॥

“ ಪಾಪಪರಿಹಾರಕ್ಕೆಂದು ಗಂಗೆಯಲ್ಲಿ ಮುಳುಗಿದರೆ, ಆ ಪಾಪಿಯನ್ನು ಮೊಸಳೆ ನುಂಗಿದಂತೆ, ಪರಿತಪಿಸುತ್ತಿದ್ದ ದೇವತೆಗಳ ಹಿತಕ್ಕಾಗಿ ಬಂದ ನನ್ನ ಪ್ರಾಣೇಶ್ವರನನ್ನು ನೀನು ದಹಿಸಿಬಿಟ್ಟೆ.”

ನಾರಾಯಣನ ವಾಕ್ಯವ ಕೇಳಿ ತ್ರಿದಶೋಪ
ಕಾರಕ್ಕೆ ಸ್ಮರ ತನ್ನನೆಚ್ಚು
ಬಾರದ ಬಟ್ಟೆಯ ಬೞಿವಿಡಿದನ ಬಿಟ್ಟು
ನೇರದಿ ನೀ ಬಾಳು ಮಗಳೆ ॥೩೪॥

“ ನಾರಾಯಣನ ಮಾತಿನಂತೆ ಮನ್ಮಥನು ದೇವತೆಗಳ ಉಪಕಾರಕ್ಕಾಗಿ ನನ್ನನ್ನು ಹೊಡೆದು ಸಾವನ್ನಪ್ಪಿದನು; ಆದ್ದರಿಂದ ಮಗಳೆ, ಅವನನ್ನು ಮರೆತು ನೀನು ಚಿರಂಜೀವಿಯಾಗಿ ಬಾಳು. “

ಪದಿನಾಲ್ಕುಜಗದ ಜನಂಗಳು ಕರುಣಾ
ನಿಧಿಯೆಂದು ನಿನ್ನ ಕೀರ್ತಿಪರು
ಕುದಿಗಣ್ಣೊಳೆನ್ನಾಳ್ದನ ಸುಟ್ಟು ನನಗೊಂದು
ಬದುಕಿನ ತೆಱನ ಪೇೞ್ದಪಿರೇ ॥೩೫॥

“ಹದಿನಾಲ್ಕು ಲೋಕದ ಜನರು ನಿನ್ನನ್ನು ಕರುಣ ಸಮುದ್ರನೆಂದು ಕೀರ್ತಿಸುತ್ತಾರೆ. ಅಂಥ ನೀನು, ಉರಿಗಣ್ಣಿನಿಂದ ನನ್ನ ಪತಿಯನ್ನು ದಹಿಸಿ, ಈಗ ನನಗೆ ಬದುಕಿನ ರೀತಿಯನ್ನು ಹೇಳುತ್ತೀಯಾ”

ಸರ್ವರೊಳಗೆ ಮುತ್ತೈದೆಯಾಗಿರ್ದು ವೈ
ಧವ್ಯವನಾಂತು ಬಾೞುವೆನೆ
ಗರ್ವದ ಮಾತಲ್ಲ ತನಗೆ ತನ್ನಾಳ್ದನ
ತರ್ವಾಯ ಮಾಡೆಂದಳೞುತ॥೩೬॥

“ ಎಲ್ಲರೊಡನೆ ಮುತ್ತೈದೆಯಾಗಿ ಬಾಳಿದ ನಾನು ಈಗ ವಿಧವೆಯಾಗಿ ಬದುಕಲೆ? ಇದು ಗರ್ವದ ಮಾತಲ್ಲ, ನನ್ನ ಪತಿಗೆ ಮಾಡಿದಂತೆ ನನಗೂ ಮಾಡಿಬಿಡು.”

ಎಂದೆನಲಾಕ್ಷಣ ಪೇೞ್ದಳು ಗಿರಿರಾಜ
ನಂದನೆ ತನ್ನಾಳ್ದನೊಡನೆ
ಕಂದರ್ಪನರ್ಧಾಂಗಿಯ ಮೇಲೆ ವೈಧವ್ಯ
ಪೊಂದದೊಲ್ ಮಾಡೆಂದಳೊಲಿದು॥೩೮॥

ಹೀಗೆ ರತಿಯು ಹೇಳಲಾಗಿ, ಪಾರ್ವತಿಯು ತನ್ನ ಪತಿಯನ್ನು ಕುರಿತು ರತಿಗೆ ವೈಧವ್ಯ ಉಂಟಾಗದಂತೆ ಮಾಡೆಂದು ಒಲುಮೆಯಿಂದ ಬೇಡಿಕೊಂಡಳು.

ನಿನಗೆ ವೈಧವ್ಯವಿಲ್ಲ. ನೆನೆದೊಡನೆಯೇ ಕಾಮನು ಮನದಲ್ಲಿ ಬರುತ್ತಾನೆಂದೂ, ಮನಸಿಜನಾಗಿ ಆತ ಬಾಳಲೆಂದೂ ಹೇಳಿ, ಶಿವನು ರತಿಗೆ ಮುತ್ತೈದೆತನವನ್ನು ದಯಪಾಲಿಸಿದನು.

ರತಿಯ ವಿವಾಹ.

ನೀಲೋತ್ಪಲಶ್ಯಾಮ ಕಮಲಾಂಬಕನ
ಮಾಲಾಸುಪ್ರಬಂಧವನು
ಆಲಸ್ಯ ಪರಿಹರವಪ್ಪಂತೆ ಪೇೞ್ ನಿನ್ನ
ನಾಲಗೆ ಪರಮಪವಿತ್ರ ॥೧॥

“ ನೀಲೋತ್ಪಲ ಶ್ಯಾಮಲವರ್ಣದವನೂ, ಕಮಲ ನೇತ್ರನೂ ಆದ ಶ್ರೀಹರಿಯ ಬಿರುದಾವಳಿಯನ್ನುಳ್ಳ ಸುಪ್ರಬಂಧವನ್ನು, ನಿನ್ನ ಪವಿತ್ರವಾದ ನಾಲಿಗೆಯಿಂದ ಮನೋಜಾಡ್ಯವು ಪರಿಹಾರವಾಗುವಂತೆ ಹೇಳು”

ಒಡಲಾಂತು ಹರಿಯ ಕೀರ್ತನೆಗೆಯ್ಯದ ಜಿಹ್ವೆ
ಕಡಲ ನಾಲಗೆಯಾಗದಿಹುದೆ
ಮಡದಿ ಕೇಳಿದಱಿಂದೆ ಕೃಷ್ಣಚರಿತವ
ತಡೆಯದೆ ನಿನಗೆ ವಿಸ್ತರಿಪೆ ॥೨॥

“ ಎಲೈ ಮಡದಿಯೆ, ಮಾನವ ಶರೀರವನ್ನು ಪಡೆದು, ಶ್ರೀಹರಿಯ ಕೀರ್ತನೆಯನ್ನು ಮಾಡದ ನಾಲಿಗೆಯು ವ್ಯರ್ಥವಲ್ಲವೆ ? ಆದ್ದರಿಂದ ಕೂಡಲೆ ನಿನಗೆ ಕೃಷ್ಣಚರಿತೆಯನು ವಿಸ್ತರಿಸುವೆನು”

ಓಡದ ಮುಗಿಲ್ಗೆ ತೇಜವನಿಕ್ಕಿ ಹಂಸಾ
ರೂಢ ನಾರದನ ಹಿಂದಿಕ್ಕಿ
ನೋಡಲಾಕ್ಷಣ ಪುಷ್ಪಕವಿೞಿದುದು ದೇವ
ಚೂಡಾಮಣಿಯ ಪಟ್ಟಣಕೆ॥೧೯॥

ಆ ಪುಷ್ಪಕವಿಮಾನವು - ನಿಂತ ಮೋಡಕ್ಕೆ ಮಿಂಚನ್ನುಂಟುಮಾಡಿ, ಹಂಸವನ್ನೇರಿದ ನಾರದನನ್ನು ಹಿಂದಿಕ್ಕಿ ನೋಡನೋಡುತ್ತಲೆ ದ್ವಾರಕಾ ಪಟ್ಟಣದಲ್ಲಿ ಬಂದಿಳಿಯಿತು.

ಕಾಮನ ಕಂಡಾಕ್ಷಣದಲ್ಲಿ ಸುರಸಾರ್ವ
ಭೌಮ ಶ್ರೀಕೃಷ್ಣನೆಂದೆನುತೆ
ವಾಮಲೋಚನೆಯರು ತನುಪುಳಕಿತರಾಗಿ
ಭ್ರಾಮಕವಡೆದಿರ್ದರಾಗ ॥೨೧॥

ಚಲುವೆಯರು ಕಾಮನನ್ನು ಕಂಡೊಡನೆಯೇ, ಸುರಸಾರ್ವಭೌಮನಾದ ಶ್ರೀಕೃಷ್ಣನೆಂದೇ ಆತನೆಂದು ಭ್ರಮಿಸಿ ಪುಳಕಗೊಂಡರು.

ಪುಣ್ಣಮೆಯಾದುದು ಮುಖಚಂದ್ರಮಂಡಲ
ತಣ್ಣಸವೆದೆಯೊಳಾದರಿಸೆ
ಕಣ್ಣಱಿಯದೊಡೇನು ಕರುಳ್ಬಲ್ಲುದೆಂಬಂತೆ
ಚಿಣ್ಣನ ತಾಯಿ ನೋಡಿದಳು॥೨೫॥

ಕಣ್ಣರಿಯದಿದ್ದರೊ ಕರುಳರಿಯಬಲ್ಲುದೆಂಬಂತೆ ಆ ತಾಯಿ ಮನ್ಮಥನನ್ನು ನೋಡಿದಳು; ಎದೆಯಲೂಲಿ ತೃಪ್ತಿಯಾವರಿಸಿ ಅವಳ ಮುಖವು ಹುಣ್ಣಿಮೆಯ ಚಂದ್ರನಂತಾಯಿತು.

ಗಂದೇಭಗಮನೆ ಕೇಳ್ ಬಲರಾಮಸಹಿತ ಗೋ
ವಿಂದನೊಂದೆಸೆಗೆ ಪೋಗಿರ್ದು
ಬಂದನಾಕ್ಷಣವೆ ಮಂದಿರದೊಳು ಹೊಕ್ಕಿರ್ದ
ಕಂದರ್ಪನಿರವನೀಕ್ಷಿಸಿದ.॥೨೬॥

ಮತ್ತಗಜಗಮನೆಯೇ ಕೇಳು, ಬಲರಾಮನೊಡನೆ ಬೇರೆಡೆಗೆ ಹೋಗಿದ್ದ ಗೋವಿಂದನು ಕೂಡಲೇ ಬಂದು ಅರಮನೆಯಲ್ಲಿದ್ದ ಮನ್ಮಥನನ್ನು ನೋಡಿದನು.

ಈತನದಾರು ಬಂದೊಳಪೊಕ್ಕನೆಂದಗ್ರ
ಜಾತನ ಬೆಸಗೊಳಲಾಗಿ
ಭೂತಾಂತರಾತ್ಮಕ ನೀ ಬಲ್ಲೆ ಪೇೞೆಂದು
ಪೀತಾಂಬರನ ಕೇಳಿದನು ॥೨೭॥

“ಒಳಗೆ ಬಂದ ಈತನಾರೆಂದು “ ಗೋವಿಂದನು ಬಲರಾಮನನ್ನು ಕೇಳಲು, ಆ ಬಲರಾಮನು - ಸರ್ವಾತ್ಮಕನಾದ ನಿನಗೆ ಗೊತ್ತು, ನೀನೇ ಹೇಳಬೇಕೆಂದು ಕೃಷ್ಣನನ್ನು ಕೇಳಿದನು,

ಸಕಲಜೀವರುಗಳಂತರ್ಭಾವದಲಿ ವ್ಯಾ
ಪಕಮೂರ್ತಿ ನೀನಿದ ಬಲ್ಲೆ
ಪ್ರಕಟವ ಮಾಡೀತರಾರಿವ ಮಮಕುಮಾ
ರಕನಲ್ಲವೇ ಪೇೞು ಜೀಯ ॥೩೦॥

ಸಕಲ ಜೀವಿಗಳ ಅಂತರಾತ್ಮದಲ್ಲಿ ವ್ಯಾಪಿಸಿರುವ ಕೃಷಾಣನೇ, ನೀನು ಇದನ್ನು ಬಲ್ಲವನಿಗಿರುವಿ, ಆದ್ದರಿಂದ ಇವನಾರೆಂಬುದನ್ನು ಬಹಿರಂಗಪಡಿಸಬೇಕು; ಈತನು ನನ್ನ ಮಗನಲ್ಲವೆ ಅಣ್ಣ.  

ಒಡಲೊಳಗೊಂಬತ್ತು ತಿಂಗಳು ಹೊತ್ತಿರ್ದು
ಪಡೆದಳ್ಗೆ ಪರವಶವಾಯ್ತು
ಕಡೆಯೊಳಿದ್ದಾತನೆಂತಱಿವೆನು ನಾನೆಂದು
ಮಡದಿಯೊಳ್ ಮಾತನಾಡಿದನು॥೩೧॥

“ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಹಡೆದವಳಿಗೇ ತಿಳಿಯದಾಯಿತು, ಇನ್ನು ಹೊರಗಿದ್ದ ನಾನು ಹೇಗೆ ತಾನೆ
ತಿಳಿಯಬಲ್ಲೆ” ಎಂದು ಕೃಷ್ಣನು ರುಕ್ಮಿಣಿಗೆ ಹೇಳಿದನು.

ಏಣನಿಭಾಯತೇಕ್ಷಣೆ ಕೇಳು ನವಪಂಚ
ಬಾಣನ ಬಗೆಯ ಪೇೞುವರೆ
ಮಾಣದೆ ರಾಜಹಂಸೆಯನೇಱಿ ಕಲಹಕಲ್ಯಾಣ
ನಾರದನು ಬಂದಿಳಿದ॥೩೨॥

ಹಕ್ಕಿಯನೇಱಿಯಾಯಸವಡುತೆಲ್ಲೆಲ್ಲಿ
ತುಕ್ಕಿ ಬಂದಿರಿ ಪೇೞ್ವುದೆನಲು
ಸೊಕ್ಕಿದ ಶಂಬರಾಸುರನ ವಿಗ್ರಹವ ಸೀ
ೞ್ದಿಕ್ಕಿಸಿ ಬಂದೆ ಕೇಳ್ ಜೀಯ ॥೩೪॥

“ ರಾಜಹಂಸವನ್ನೇರಿ ಆಯಾಸಪಟ್ಟು ಎಲ್ಲೆಲ್ಲಿ ಸಂಚರಿಸಿ ಬಂದಿರಿ ?” ಎಂದು ಕೇಳಲು, ಆ ನಾರದನು -ಜೀಯಾ ಸೊಕ್ಕಿದ ಶಂಬರಾಸುರನನ್ನು ಕೊಲ್ಲಿಸಿ ಬಂದೆನೆಂದು ಹೇಳಿದನು.

ತ್ರಿಜಗದೊಳಧಟುಳ್ಳ ದೈತ್ಯನ ಮಡುಹಿದ
ಭುಜಬಲನಾರು ಪೇೞೆನಲು
ನಿಜಗಲಿಯಿವನೀಗ ನೋಡೆಂದು ಮಕರ
ಧ್ವಜನ ವಿಗ್ರಹವ ತೋಱಿಸಿದ॥೩೫॥

“ ಮೂರು ಲೊಕದಲ್ಲಿಯೇ ಮೀರಿದ ಪ್ರತಾಪಿಯಾದ ಆ ರಕ್ಕಸನನ್ನು ಸಂಹರಿಸಿದ ಪರಾಕ್ರಮಿಯಾರೆಂಬುದನ್ನು ಹೇಳಬೇಕು” ಎನ್ನಲು ಆ ನಾರದನು - ನೋಡಿ, ಇವನೇ ಆ ಮಹಾವೀರನೆಂದು ಮನ್ಮಥನನ್ನು ತೋರಿಸಿದನು.

ಎನಲಿವನಾರ ಕುಮಾರಕನೆಂಬುದ
ಘನಪೌರುಷದಿ ರುಕ್ಮಿಣಿಗೆ
ಕನಲದೆ ಪೇೞು ಪೇೞೆನಲಾಗಿ ನಾರದ
ಮನವೊಲಿದೊರೆದ ನಾಯಕಗೆ॥೩೬॥

ಹೀಗೆ ನಾರದನು ಹೇಳಲು, ಶ್ರೀಕೃಷ್ಣನು -ಇವನಾರ ಮಗನೆಂಬುದನ್ನು ರುಕ್ಮಿಣಿಗೆ ಅಭಿಮಾನದಿಂದ ಮುಚ್ಚುಮರೆಯಿಲ್ಲದೆ ಹೇಳು ಎಂದನು. ಆಗ ನಾರದನು ಸಂತೋಷದಿಂದ ಅದನೆಲ್ಲ ರುಕ್ಮಿಣಿಗೆ ವಿವರಿಸಿದನು.

ಭಿನ್ನವಿಲ್ಲದೆ ಪೇೞ್ವೆ ಬಿಸಜಾಕ್ಷಿ ಕೇಳೀತ
ಮುನ್ನಲೀಶ್ವರನ ಕಣ್ಣುರಿಗೆ
ತನ್ನ ದೇಹವ ತೆತ್ತು ಮನಸಿಜನಾಗಿರೆ
ಗನ್ನಗತಕವಾದುದೊಡನೆ॥೩೭॥॥

“ ರುಕ್ಮಿಣಿಯೆ, ಮುಚ್ಚುಮರೆಯಿಲ್ಲದೆಯೇ ಹೇಳುತ್ತೇನೆ ಕೇಳು.  ಈ ಮೊದಲು ಮನ್ಮಥನು ಶಿವನ ಕಣ್ಣುರಿಗೆ ತನ್ನ ದೇಹವನ್ನು ಬಲಿಗೊಟ್ಟು ಮನಸಿಜನಾಗಿರಲು, ಕೂಡಲೆ ಮೋಸವಾಗಿ ಹೋಯಿತು”

ಭೂತಳದೊಳಗೆ ಶಂಬರನೆಂಬ ರಕ್ಕಸ
ನಾತಗೆ ರತಿ ಸಿಲುಕಿರಲು
ಆತನೆ ಕೊಲಲೋಸುಗ ದೇಹವ ಬೇಡಿ
ಪೀತಾಂಬರನ ಪ್ರಾರ್ಥಿಸಿದ ॥೩೮॥

ರತಿದೇವಿಯು ಶಂಬರಾಸುರನೆಂಬ ರಕ್ಕಸನ ಕೈಯಲ್ಲಿ ಸಿಲುಕಿರಲು, ಆ ಶಂಬರಾಸುರನನ್ನು ಕೊಲ್ಲುವುದಕ್ಕೆ ಮನ್ಮಥನು, ದೇಹವನ್ನು ಬೇಡಿ ಶ್ರೀಹರಿಯನ್ನು ಪ್ರಾರ್ಥಿಸಿದನು.

ಮನುಮಥನನು ಮೆಚ್ಚಿ ಕಾಮಗೆ ತನ್ನಯ
ಯದುವಂಶದೆ ಬಹುದೆನಲು
ಅದು ನಿಮಿತ್ತದೊಳೆ ನಿನ್ನಯ ಜಠರದಿ ಬಂ
ದುದುಭವಿಸಿದ ಕೇಳು ತಾಯೆ ॥೩೯॥

ಶ್ರೀಹರಿಯು ಮನ್ಮಥನಿಗೆ ಪ್ರಸನ್ನನಾಗಿ ತನ್ನ ಯದುವಂಶದಲ್ಲಿ ಹುಟ್ಟಬಹುದು ಎಂದ. ಆದ್ದರಿಂದ ಮನ್ಮಥನು ಬಂದು ನಿನ್ನ ಗರ್ಭದಲ್ಲಿ ಹುಟ್ಟಿದನು ತಾಯಿ.

ಮುದ್ದು ಮುಖಾನ್ವಿತೆ ಶಿಶು ನಿನ್ನ ಮಗ್ಗುಲೊ
ಳಿದ್ದು ಮಟಮಾಯಗೆಯ್ದು
ಕದ್ದು ಕೊಂಡೊಯ್ದು ಶಂಬರ ಶರಧಿಯೊಳಿಡೆ
ಬಿದ್ದುದು ಮೀನ ಬಾಯೊಳಗೆ ॥೪೦॥

ರುಕ್ಮಿಣಿ ದೇವಿಯೆ, ನಿನ್ನ ಮಗ್ಗುಲಲ್ಲಿದ್ದ ಮಗುವನ್ನು ಶಂಬರಾಸುರನು ಮಾಯೆಯಿಂದ ಕದ್ದೊಯ್ದು ಸಮುದ್ರದಲ್ಲಿ ಚಲ್ಲಲು, ಆ ಮಗುವು ಮೀನಿನ ಬಾಯಲ್ಲಿ ಬಿದ್ದಿತು.

ಮೃಡತಪಧ್ವಂಸಿಯ ನುಂಗಿದ ಪೆಣ್ಮೀನು
ಕಡಲೊಳಗಿರಲೊರ್ವಪಿಡಿದು
ಪೊಡವಿಯನಾಳ್ವ ಶಂಬರಗೀಯಲದನು
ಸೀೞ್ದಡಿಗೆಯ ಮಾಡೆಂದ ರತಿಗೆ॥೪೧॥

ಮನ್ಮಥನನ್ನು ನುಂಗಿದ ಹೆಣ್ಣುಮೀನು ಸಮುದ್ರದಲ್ಲಿರಲು, ಒಬ್ಬ ಮೀನುಗಾರನು ಅದನ್ನು ಹಿಡಿದು ಅರಸನಾದ ಶಂಬರಾಸುರನಿಗೆ ಕೊಟ್ಟನು. ಶಂಬರಾಸುರನು, ರತಿದೇವಿಗೆ, ಅದನ್ನು ಕತ್ತರಿಸಿ ಅಡಿಗೆ ಮಾಡಲು ಹೇಳಿದನು.

ಭೇದಿಸಲಱಿದೆಂಬ ಮಾಯೆಯ ವಿದ್ಯವ
ಸಾಧಿಸಿ ಶಂಬರನೊಡನೆ
ಕಾದಿಖಂಡನೆಗೈದು ಸತಿಶಿರೋಮಣಿಯ ಸಂ
ಪಾದಿಸಿ ತೆಗೆತಂದೆನಿದೆಕೊ॥೪೪॥

ಭೇದಿಸಲಸಾಧ್ಯವಾದ ಮಾಯಾ ವಿದ್ಯೆಯನ್ನು ಸಾಧಿಸಿ ಶಂಬರನೊಡನೆ ಹೋರಾಡಿ, ಆತನನ್ನು ಮುರಿದು, ಇದೋ ಸತಿಶಿರೋಮಣಿಯಾದ ರತಿದೇವಿಯನ್ನು ಪಡೆದು ಮನ್ಮಥನು ಮರಳಿ ಬಂದಿದ್ದಾನೆ.

ಮಾಧವನರ್ಧಾಂಗಿ ಮಱೆಯದೆ ಕೇಳಂದು
ಪೋದ ತತ್ಸುತಪುಣ್ಯದಿಂದೆ
ಕಾದಲೆಸಹ ಬಂದ ಕೈಕೊಂಬುದೆಂದು ಶ್ರೀ
ಪಾದಕೆ ಪೊಡಮಡಿಸಿದನು.॥೪೫॥

ರುಕ್ಮಿಣಿದೇವಿ ಲಕ್ಷ್ಯವಿಟ್ಟು ಕೇಳು, “ ಪುಣ್ಯದಿಂದ ಅಂದು ಹೋದ ಮಗನು ಸತಿಸಹಿತನಾಗಿಶಬಂದಿದ್ದಾನೆ, ಅಂಗೀಕರಿಸಬೇಕು” ಎಂದು ಹೇಳಿ, ಮನ್ಮಥನನ್ನು ಅವಳ ಪಾದಕ್ಕೆ ನಮಸ್ಕರಿಸ ಹಚ್ಚಿದನು.

ಸರ್ವಜ್ಞ ಸರಸಿಜೋದರ ಕಂತು ರತಿಗೆ ಗಾಂ
ಧರ್ವ ವಿವಾಹವಮಾಡಿ
ನಿರ್ವಾಣಗೊಟ್ಟು ಬೇಱಿರಿಸೆಂದು ಮುನಿ
ಗರ್ವದಿಂ ಬಿನ್ನಯಿಸಿದನು॥೬೧॥

“ಸರ್ವಜ್ಞಮೂರ್ತಿಯೂ, ಕಮಲನಾಭನೂ ಆದ ಶ್ರೀಹರಿಯೆ, ಮನ್ಮಥ ಹಾಗೂ ರತಿಗೆ ಗಾಂಧರೂವ ವಿವಾಹವನ್ನು ಮಾಡಿ ಮೋಕ್ಷವನ್ನಿತ್ತು ಬೇರೆ ಮನೆಗೆ ಕಳಿಸು” ಎಂದು ನಾರದನು ಮುನಿಸಹಜವಾದ ಗಾಂಭೀರ್ಯದಿಂದ ಹೇಳಿದನು.

ಜನನಾಥ ರುಷಿವಾಕ್ಯವ ಕೇಳಿ ನಿಬಿಡ
ಸ್ತನಭಾರಭರಿತ ರುಕ್ಮಿಣಿಗೆ
ವಿನಯದಿ ಬೆಸಸಿದ ಕಂದರ್ಪ ರತಿಗೆ ಮ
ಜ್ಜನ ಮಾಡಿಸರಸಂಚೆಗಮನೆ॥೬೨॥

ನಾರದ ಮುನಿಯ ಮಾತನ್ನು ಕೇಳಿ ಶ್ರೀಹರಿಯು, ಭಾರವಾದ ಘನಕುಚಗಳುಳ್ಳ ರುಕ್ಮಿಣಿಯನ್ನು ಕುರಿತು- ರಾಜಹಂಸಗಮನೆಯೆ, ಮನ್ಮಥ ಹಾಗೂ ರತಿಗೆ ಮಜ್ಜನವನ್ನು ಮಾಡಿಸೆಂದು ನಯವಾಗಿ ಹೇಳಿದನು.

ನೆಟ್ಟನೆ ತೆರೆವಿಡಿದರು ಶಾಸ್ತ್ರವಿಧಿಯಿಂದೆ
ಮೆಟ್ಟಕ್ಕಿಯ ಮೇಲೆ ನಿಲೆಸಿ
ಶ್ರೇಷ್ಠರು ಮಂಗಳಾಷ್ಟಕದಿ ನಿರೀಕ್ಷಣೆ
ಗೊಟ್ಟರು ದಂಪತಿಗಳಿಗೆ ॥೬೭॥

ಶಾಸ್ತ್ರವತ್ತಾಗಿ ನೆಟ್ಟಗೌ ತೆರೆಯನ್ನು ಹಿಡಿದು, ಮೆಟ್ಟಕ್ಕಿಯ ಮೇಲೆ ನಿಲ್ಲಿಸಿ, ಮಂಗಳಾಷ್ಟಕವನೂನು ಹೇಳುತ್ತ ದಂಪತಿಗಳಿಗೆ ನಿರೀಕ್ಷೆಯನ್ನುಂಟು ಮಾಡಿದರು.

ಮಧುಪರ್ಕ ತಂಡುಲಾರೋಹಣ ಮೊದಲಾದ
ವಿಧಿಯಿಂದಲಾ ಪುರೋಹಿತರು
ವಧುವನನಲ ಸಾಕ್ಷಿಯೊಳಗೆ ಧಾರೆಯ
ಪದುಮಾಸ್ತ್ರಗೆಱೆದರುತ್ಸವದಿ॥೬೮॥

ಜೇನುಪೇಯ, ಅಕ್ಕಿಯನ್ನೇರಿಸುವ ಮೊದಲಾದ ವಿಧಿಯಿಂದ ಪುರೋಹಿತರು, ಅಗ್ನಿಸಾಕ್ಷಿಯಾಗಿ ವಧುವನ್ನು ಮನ್ಮಥನಿಗೆ ಉತ್ಸಾಹದಿಂದ ಧಾರೆಯೆರೆದರು.

ಹೊನ್ನೊಡಲನ ಪುತ್ರ ಕೇಳು ಖೇಚರದಿಂದ
ತನ್ನಾತ್ಮಜ ಬಂದ ತನಗೆ
ನಿನ್ನಿಂದೆ ಕೈಸಾರಿದುದು ನಿಶೂಚಯವೆಂದು
ಬಿನ್ನಯಿಸಿದಳು ನಾರದಗೆ॥೭೫॥

ಕೃತಜ್ಞತೆಗಳು.
ಡಾ॥ ಎಸ್. ಎಸ್. ಕೋತಿನ.
ಪ್ರಕಾಶನ :- ಕನ್ನಡ ಸಾಹಿತ್ಯ ಪರಿಷತ್ತು.
ಚಾಮರಾಜಪೇಟೆ,  ಬೆಂಗಳೂರು-೫೬೦೦೧೮.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ