ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಅಕ್ಟೋಬರ್ 14, 2018

ರಾಘವಾಂಕ ವಿರಚಿತ ಸೋಮನಾಥಚಾರಿತ್ರ

ರಾಘವಾಂಕ ವಿರಚಿತ ಸೋಮನಾಥಚಾರಿತ್ರ

ಈ ಕಾವ್ಯ ರಾಘವಾಂಕ ಕವಿಯಿಂದ ರಚಿತವಾಗಿದೆ. ಇದು ವಾರ್ಧಕಷಟ್ಪದಿಯಲ್ಲಿದೆ. ಇವನು ಕ್ರಿ. ಶ. ೧೨೦೫ ರ ಸುಮಾರು ಜನೆಸಿ ಕ್ರಿ. ಶ. ೧೨೨೦ ರ ಸುಮಾರಿಗೆ ಕಾವ್ಯರಚನೆಯನ್ನಾಂರಂಭಿಸಿ ಕ್ರಿ. ಶ. ೧೨೬೫ ರವರೆಗೂ ಜೀವಿಸಿರಬಹುದೆಂದು ಊಹಿಸಲಾಗಿದೆ.

ಪಂಪಾಕ್ಷೇತ್ರದ ಮಹಾದೇವ ರುದ್ರಾಣಿಯರು ರಾಘವಾಂಕನ ತಂದೆ ತಾಯಿಗಳು. ಇವರು ಆರಾಧ್ಯಭ್ರಾಹ್ಮಣರು. ರುದ್ರಾಣಿಯು ಹರಿಹರದೇವನ ಅಗ್ರಜೆ. ಆದುದರಿಂದ ರಾಘವಾಂಕನು ಹರಿಹರದೇವನ ಸೋದರಳಿಯನು. ಹರಿಹರನು ರಾಘವಾಂಕನ ವಂಶಗುರುವೂ, ದೀಕ್ಷಾಗುರುವೂ ಆಗಿದ್ದನು. ರಾಘವಾಂಕನ ನಾಮಕರಣೋತ್ಸವ, ವಿದ್ಯಾಭ್ಯಾಸ,  ದೀಕ್ಷಾಮಹೋತ್ಸವಗಳೆಲ್ಲ ಹರಿಹರದೇವನಿಂದಲೇ ನೆರವೇರಿದೆ.

ರಾಘವಾಂಕನ ಕಾವ್ಯ ಶಕ್ತಿಗೆ ಮೆಚ್ಚಿ ಹಂಪೆಯ ದೇವರಾಜೇಂದ್ರ ಭೂಪಾಲಕನು ಆತನಿಗೆ “ ಕವಿಶರಭಭೇರುಂಡನೆಂಬ” ಬಿರುದನೂನಿತ್ತು ಪಾದದ ಪೆಂಡೆಯನೀಯುವನು. ಅರಸನ ಬಿನ್ನಹದ ಮೇರೆಗೆ ರಾಘವಾಂಕನು ಹರಿಶ್ಚಂದ್ರ ಕಾವ್ಯವನ್ನು ರಚಿಸುವನು. ಅದರಿಂದ ಅವನಿಗೆ ಉಭಯಕವಿಶರಭಭೇರುಂಡ ಮೊದಲಾದ ಬಿರುದುಗಳನ್ನೀಯುವನು. ರಾಘವಾಂಕನು ಈ ರೀತಿ ನರಸ್ತುತಿಗೆಯ್ದುದಕ್ಕೆ ಹರಿಹರನು ಮೆಚ್ಚಲಿಲ್ಲವಂತೆ. ಆಗ ರಾಘವಾಂಕನು ಸೋಮನಾಥಚಾರಿತ್ರ, ಶರಭಚಾರಿತ್ರ, ಹರಿಹರಮಹತ್ವ, ಸಿದ್ಧರಾಮಚಾರಿತ್ರ,ವೀರೇಶಚರಿತೆಗಳೆಂಬ ಪಂಚ ಶೈವಕಾವ್ಯಗಳನ್ನು ರಚಿಸಿದನು.

ಒಮ್ಮೆ ನಾರದನು ಶಿವನ ಓಲಗಕ್ಕೆ ಹೋಗುತ್ತಾನೆ. ಪರಶಿವನು ಪಾರ್ವತಿಯೊಡನೆ ಹತ್ತಾರು ಗಣನಾಥರೊಡನೆ ಮೇಳದಾಲೋಚನೆಗಳನ್ನು ನಡೆಸಿದ್ದಾನೆ. ನಾರದನನ್ನು ಕಂಡ ಶಿವನು ಇತ್ತ ಬಾ ಇತ್ತ ಬಾ ಎಂದು ಕರೆದು ಮನ್ನಿಸುವನು. ಇನಿತು ಮನ್ನಣೆಯ ಮೇಲೆ ಇಡುಗಿಚ್ಚನಿಡಬೇಕೆಂದು ನಾರದನ ಹವಣಿಕೆ. ಶಿವನು ನಾರದನನ್ನು ಕುರಿತು “ ಎಲ್ಲಿಗೆ ಹೋಗಿದ್ದೆ? ಹುಸಿಯದೆ ಹೇಳು, ನಿನ್ನ ಚಿತ್ತದುಮ್ಮಳಕ್ಕೆ ಕಾರಣವೇನು “ ಹೇಳೆಂದನು. ಪುಲಿಗೆರೆಯನ್ನು ಸಂದರೂಶಿಸಿ ಬಂದೆ; ಪುಲಿಗೆರೆ ಪ್ರಸಿದೂಧವಾದ ತೀರ್ಥಕ್ಷೇತ್ರ. ನೆನೆದವರ ಸುಖದ ಸುಗ್ಗಿ. ಪೊಗಳುವವರ ಐಸಿರಿ ಎಂದು ಬಣ್ಣಿಸುವನು. ಶಿವಲಿಂಗದ ಪೂಜೆಯೋಜೆ ಎಂತಹುದೆಂದು ಶಂಕರನು ಕೇಳಿದರೆ, “ ಅದರ ಮಾತೆಲ್ಲಿಯದು ? ಊರತುಂಬೆಲ್ಲ ಜೈನರೇ. ಶಿವಾಲಯಗಳ ಬಾಗಿಲುಗಳು ಮುಚ್ಚಿಕೊಂಡಿವೆ. ಬಾಗಿಲು ತೆಗೆಯುವವರೇ ಇಲ್ಲ, ಇನ್ನೆಲ್ಲಿಯ ಪೂಜೆ? ನಾರದನು ಜೈನರನ್ನು ಬಯ್ದು ತನ್ನ ಬಾಯ ಬರವನ್ನು ಹಿಂಗಿಸಿಕೊಳ್ಳುವನು.

ಶಿವನು ಇದನ್ನೆಲ್ಲ ಕೇಳಿ ಕನಲಿ ತನ್ನ ಬಳಿ ನಿಂತಿದ್ದ ಆದಿಗಣನಾಥನನ್ನು ಕರೆದು, ಶೈವಮತದೇಳ್ಗೆಗಾಗಿ ಭೂಲೋಕಕ್ಕೆ ತೆರಳಬೇಕೆಂದು ಆಜ್ಞೆಮಾಡುತ್ತಾನೆ. ಆದಿಗಣನಾಥನು ಸೌರಾಷ್ಟ್ರಪುರಕ್ಕೆ ಬಂದು ದೋರದತ್ತ ಪುಣ್ಯವತಿಯರ ಉದರದಲ್ಲಿ ಜನಿಸುವನು. ಮುಂದೆ ಸೌರಾಷ್ಟ್ರ ಸೋಮನಾಥನನ್ನು ಪುಲಿಗೆರೆಗೆ ತಂದು ಪ್ರತಿಷ್ಠಾಪಿಸುತ್ತಾನೆ. ಪುಲಿಗೆರೆಯ ಸ್ಥಾನಮಹಿಮೆಯನ್ನು ಭಕ್ತರಿಗೆ ತಿಳಿಸಿ ಹರ್ಷೋನ್ಮಾದದಿಂದ ಸೋಮನಾಥನ ಬಲದ ಕಂಬದೊಳಗೆ ಅದೃಶ್ಯನಾಗುವನು. ಅವನ ಪಾರ್ಥಿವ ಶರೀರವನ್ನು ಕಂಬದ ಮಗ್ಗುಲಲ್ಲಿಯೇ ಇಟ್ಟು ಗದ್ದಿಗೆ ಮಾಡಿರುವುದನ್ನು ಇಂದಿಗೂ ಕಾಣಬಹುದು. ಇದು ಕಥಾವಸ್ತು.  

ಪ್ರಥಮಸ್ಥಲ.

ಪಲ್ಲವ:- ದೇವಸಭೆಯೊಳಗಿಂದುಧರನ ಬೆಸನಂ ಪಡೆದು
ಭೂವಳಯಕೆಸೆವ ಸೌರಾಷ್ಟ್ರದೊಳು ಜನಿಸಿ ಬೆಳೆ
ದಾವಗಂ ವ್ಯವಹಾರರೂಪಿಂದೆ ಹುಲಿಗೆಱೆಗೆ ನಡೆತಂದನಾದಯ್ಯನುಯ॥

ಶ್ರೀಮದಗಜಾಹರುಷರತ್ನಾಕರೇಂದು ಗೌ
ರೀಮನೋವನವಸಂತಂ ಭವಾನೀವದನ
ತಾಮರಸದಿನಕರನುಮಾಕಲ್ಪಲತಿಕಾವೃತ ಪ್ರಬಲಸುರಭೂರುಹಂ
ಭೂಮಿಭೃತ್ತನಯಾಕ್ಷಿಕುಮುದನುತಚಂದ್ರಿಕಾ
ನಾಮನೆನ್ನಂ ಸಲಹುಗನುದಿನಂ ಹುಲಿಗೆಱೆಯ
ಸೋಮನಾಥಂ ಸೋಮಶೇಖರಂ ದಯಾಳುಮೂರ್ತಿ ವಿಳಾಸನು॥೧॥

ಶ್ರೀಮದುಜ್ವಲ ತರುಣ ಫಣಿದಾಮ ಸೋಮಯ್ಯ
ಭೀಮತರದುರಿತವಿಘಟನನಾಸೋಮಯ್ಯ
ಹೈಮವತಿಯ ಪ್ರೇಮನವಧಾಮ ಸೋಮಯ್ಯ ಧೃತಸೋಮಸೋಮಯ್ಯ
ವಯೋಮಗಂಗಾವೃತಜಟಾರಾಮ ಸೋಮಯ್ಯ
ರಾಮಣೀಯಕ ಸದ್ಗುಣಸ್ತೋಮ ಸೋಮಯ್ಯ
ಕೋಮಲಾಲಾಪಮಂ ಕರುಣಿಸೆನ್ನಯ ಮತಿಗೆ ಜಿತಕಾಮ ಸೋಮಯ್ಯನೆ ॥೨॥

ಶ್ರೀಯುಮಾವರನಿಂದುಧರನಭಯಕರನುಗ್ರ
ಮಾಯಾರಿ ಭಕ್ತಭಯಹಾರಿ ಗಂಗಾವಾರಿ
ವಾಯುಭೂಗ್ಠಭೂಷನುತ್ತಮವೇಷನಘತಿಮಿರಪೂಷನತಿವಿಗತದೋಷ
ಸ್ವಾಯತಾಖಿಳಲೋಕದಾನತವ್ರಜಪುಣ್ಯ
ದಾಯಕಂ ಹರಿವಿರಿಂಚ್ಯಾದಿ ಪ್ರಮುಖದೇವ
ರಾಯ ಪಂಪಾವಿರೂಪಾಕ್ಷನೆಮಗೀಗೆ ಭಕ್ತಿಜ್ಞಾನವೈರಾಗ್ಯಮಂ ॥೬॥

ಶ್ರೀವಿರೂಪಾಕ್ಷನೊಲು ನಿತ್ಯನಭಿನವ ಮಹಾ
ದೇವಂ ಜಿತೇಂದ್ರಿಯಂ ನಿಷ್ಕಾಮಿ ದೇಹಗುಣ
ವಾವರಿಸದತುಳನಿರ್ಲೇಪನಾರೂಢ ಲೌಕಿಕಮಂಟದಪ್ರತಿಮನು
ಭೂವಂದಿತಂ ನಿತ್ಯತೃಪ್ತಂ ಸಮಸ್ತಮುಖ
ಜೀವಾನುಕಂಪಿಯೆಂದೆನಿಸಿ ರಾಜಿಪ ಸುಕೃತ
ಭಾವಿ ಹಂಪೆಯ ಶಂಕರಪ್ರಭು ಮದೀಯಮತಿಗೀಗೆ ಪ್ರಸನ್ನತೆಯನು ॥೭॥

ಸಕಲಾಗಮಾಚಾರ್ಯನಪ್ರತಿಮನನಸೂಯ
ನಕಳಂಕನುತ್ತಮನನಂತವೇದಾರ್ಥಸಾ
ಧಕನು ವಿದ್ಯಾತೀತನಾನಂದಮಯನು ಶಾಪಾನುಗ್ರಹ ಸಮರ್ಥನು  
ಪ್ರಕಟಿತಯಶೋಮಯಂ ಗುಪ್ತಲಿಂಗಪ್ರೇಮಿ
ಸುಕವಿ ಹಂಪೆಯ ಮಾದಿರಾಜ ಸುಜ್ಞಾನದೀ
ಪಿಕೆ ಕವಿವಮಾಯಾತಮಂ ಧವಳಿಪಂತೆನ್ನ ಹೃದಯದೊಳು ಬೆಳಬೆಳಗುಗೆ॥೮॥

ಭವಿಭಕ್ಪತರೆಂದಿಲ್ಲ ಕೈಯಾನದುದು ತನ್ನ
ಯುವತಿಗಲ್ಲದೆ ಮನದೊಳೆಳಸದುದು ಕಾಯದಿ
ಚ್ಛೆವಿಡಿಯದುದನ್ಯ ನಿಂದೆಯನೃಡದಿಹುದು ಪರದೈವಮಂ ಬಗೆಯದಿಹುದು
ಶಿವಲಿಂಗಪೂಜೆಯನಜಸ್ರ ಹಿಂಗದುದಕಾ
ಮವಿಕಾರವಾದಿ ಷಡುವರ್ಗವಱೆಯದುದು ನೇ
ಮವಿದೆಂದು ನಡೆವ ಹಂಪೆಯ ಮಹಾದೇವ ಗುರುರಾಯ ರಕ್ಷಿಸುಗೆ ನಮ್ಮನು॥೯॥

ಆ ಮಹಾದೇವನುದರದೊಳು ಗುರುಭಕ್ತಿ ನಿ
ಷ್ಕಾಮವಱಿವಾಚಾರ ನೀತಿ ದಯೆ ಜಂಗಮ
ಪ್ರೇಮ ಶಮೆ ದಮೆ ಶಾಂತಿ ದಾಂತಿ ಚಾತುರ್ಯ ಸತ್ಯವುದಾರ್ಯವೇಕನಿಷ್ಠೆ
ಸಾಮರ್ಥ್ಯವೆಲ್ಲಾ ಕಲಾಪ್ರೌಢಿಸದ್ಗುಣ
ಸ್ತೋಮವೆಲ್ಲಂ ಕೂಡಿ ರೂಪಾದುದೆನಿಸುವ ಮ
ಹಾಮಹಿಮ ಹಂಪೆಯ ಹರೀಶ್ವರನಮೂರ್ತಿ ನೆಲಸಿರ್ಕೆನ್ನ ಚಿತ್ತದೊಳಗೆ॥೧೦॥

ಮನವಚನಕಾಯದೊಳಗೊಮ್ಮೆಯುಂ ಭಾಳಲೋ
ಚನನನಲ್ಲದೆ ಹೊಗಳದುದುಭಟನಯ್ಯಮಯೂ
ರನ ಕಾಳಿದಾಸನ ಹಲಾಯುಧನ ಕೇಶಿರಾಜನ ಮಲುಹಣನ ಬಾಣನ
ವಿನುತಭೋಜನ ಭಲ್ಲಟನ ಭಾರವಿಯ ಪದವ
ನೆನೆದು ಬಲಗೊಂಡು ತೊಡಿಗಿದೆನೀ ಮಹಾಕೃತಿಯ
ನೆನಗೆ ನೆರವಕ್ಕೆನಡಸುಗೆ ರಸಂಗೊಡುಗೆ ತಿದ್ದುಗೆ ಸುನಿರ್ವಿಘ್ನದಿಂದ॥೧೧॥

ರಸದೊಳರ್ಥದೊಳು ಭಾವದೊಳಲಂಕಾರದೊಳು
ಹೊಸರೀತಿಯೊಳು ಬಂಧದೊಳು ಲಕ್ಷಣದೊಳು ಪದ
ವಿಸರದೊಳು ಕಾವ್ಯದೊಳು ತಪ್ಪುಳ್ಳೊಡಿದಱೊಳಗೆ ಪರರು ಕೈಯಿಕ್ಕದಂತೆ
ಸಸಿನೆಮಾಡುವುದು ತಿದ್ದುವುದು ಕೊಂಡಾಡಿ ಲಾ
ಲಿಸಿ ಕೇಳ್ವುದೆಲ್ಲಾ ಶಿವಾರ್ಚಕರು ನಾ ನಿಮ್ಮ
ಸಿಸುವೆನಗೆ ಕುಂದಿಲ್ಲದೇತಱಿಂದೆನಲೆನ್ನ ಭರಭಾರ ನಿಮ್ಮದಾಗಿ ॥೧೨॥

ನಡೆವರೆಡಹದೆ ಬಱುಬರೆಡಹುವರೆ ಕಾವ್ಯಮಂ
ನಡೆಸುವಾತಂ ರಸಾವೇಶಮರಹಾಲಸ್ಯ
ವಡೆಗೊಳಲು ತಪ್ಪುಗಲ್ಲದೆ ಕಾವ್ಯಕರ್ತೃ ತಾಂ ತಪ್ಪುವನೆ ಒಂದೆಡೆಯೊಳು
ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ
ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆ
ಯೊಡೆವುದೇ ಬೇನೆಯಱಿಯದ ನೀರಸರನೇಕೆ ಪುಟ್ಟೆಸಿದನಬುಜಭವನು॥೧೪॥

ಬಗೆವೆರಸಿ ಸಂದಷ್ಟವಾದಡಱಿಯೆಂ ಪರೋ
ಕ್ತಿಗಳರ್ಥಮಂ ಕಳುವುದಧಮತನವಱಿದಳುಪಿ
ತೆಗೆದೆನಾದೊಡೆ ಬಳಿಕ್ಕವರಮೈನೀರ್ಗೆ ಮುಡಿಯಿಂ ತೆಗೆದ ಪೂಮಾಲೆಗೆ
ಉಗುಳ್ದ ತಂಬುಲಕುಟ್ಟು ಕಳೆದ ಮೈಲಿಗೆಗೆ ಸವಿ
ದೊಗಡಿಸಿದ ಕೂಳ್ಗೆ ಕೈಯಾಂತವನು ಬೇಱೆ ಸಂ
ದೆಗವಿಲ್ಲೆನಿಪ್ಪಾ ಪ್ರತಿಜ್ಞೆ ಹಂಪೆಯ ರಾಘವಾಂಕನಿಗಲ್ಲದಹುದೆ॥೧೫॥

ಕೃತಿವೆಸರು ಶ್ರೀಸೋಮನಾಥಚಾರಿತ್ರವೀ
ಕೃತಿಗೆ ಪತಿ ಸೋಮೇಶನಿದಕೆ ಕರ್ತರು ಭಕ್ತ
ತತಿಯಿದಂ ಪೇಳ್ದಾತ ಹಂಪೆಯ ಹರೀಶ್ವರನ ಸುತ ರಾಘವಾಂಕನೆನಲು
ಕ್ಷಿತಿಯೊಳಿನ್ನೀ ಕಾವ್ಯಮಂ ಮಹಾಕವಿಗಳೊಳು
ಚತುರರೊಳು ರಸಿಕರೊಳು ಬುಧರೊಳತ್ಯಧಿಕ ಪಂ
ಡಿತರೊಳಾರೋದರಾರ್ಕೇಳರಾರ್ಮೆಚ್ಚರೆಂದೊಡದನೇಪೊಗಳ್ವೆನಯ್ಯಾ॥೨೧॥

ರೋಗಿ ಹಳಿದೊಡೆ ಹಾಲುಹುಳಿಯಪ್ಪುದೇ ಹಗಲು
ಗೂಗೆ ಕಾಣದೊಡೆ ರವಿ ಕಂದುವನೆ ಕಂಗುರುಡ
ನೇಗೈದುವುಂ ಕಾಣದಿರೆ ಮುಕುರ ಕೆಡುವುದೇ ದುರ್ಜನರು ಮೆಚ್ಚದಿರಲು
ನಾಗಭೂಷಣನ ಕಾವ್ಯಂ ಕೆಡುವುದೇ ಮರುಳೆ
ಹೋಗಲಾ ಮಾತದೇಕಂತಿರಲಿ ಕಡೆತನಕ ಕ
ಮೇಗುತ್ತರೋತ್ತರವನೀವ ಭಾಷೆಗಳನವಧರಿಸುವುದು ಸಾಹಿತ್ಯರು॥೨೫॥

ಎಸೆವ ಭಕ್ತಿ ಜ್ಞಾನವರೈಗ್ಯವೊಡಲಾಯ್ತೊ
ಮಸೆದು ಪುಟವಿಟ್ಟ ಪುಣ್ಯಂ ಪುರುಷನಾಯ್ತೊ ಶೋ
ಧಿಸಿದ ಬೆಳದಿಂಗಳಂಗಂಬಡೆದುದೋ ಶಿವನಸೋಲಿಸುವ ರಾಗಂಗಳ
ರಸ ಬಲಿದು ಮುನಿಯಾಯ್ತೊ ಸರ್ವಸಾಮರ್ತ್ಯಂ ಗ
ಳೊಸೆದು ಜೆಡೆವೊತ್ತುವೋಕೌತುಕವಿದೆನಲು ರಾ
ಜಿಸುವ ನಾರದಮುನಿಯ ಚರಿತಂ ಬಣ್ಣಿಸುವೊಡೊಂದು ನಾಲಗೆ ನೆಱೆಯದು ॥೨೮॥

ಮುಂತುಗೊಂಡೆಲ್ಲಿ ಜಗಳವ ಹತ್ತಿಸುವೆನೆಂದು
ಚಿಂತಿಸುವ ಮನ ಕೊಂಡೆಯಕ್ಕೆಳಸಿ ಗದಗದನೆ
ತಿಂತೆ ಮಸಗುವ ಬಾಯಿ ಪರರ ಕಾಳಗದ ಲಗ್ಗೆಯ ಕೇಳಲೆಳಸುವ ಕಿವಿ
ಸಂತಸುಖಮಿರ್ಪವರು ಕಾದಬೇಕೆಂದು ಕಿಸು
ಱಾಂತುಗುರವಸೆವಕ್ಕೆ ತಲೆಯೊತ್ತಿಕುತ್ತಿ ಹಲ
ರಂ ತಱಿವ ಸಮರಮಂ ನೋಡಲೆಳಸುವ ಕಣ್ಣು ಸಿಂಗರಂ ನಾರದಂಗೆ ॥೨೯॥

ಒದೆವ ಸುರಭಿಯ ತೆಱದಿ ಮುಳ್ಳುಳ್ಳ ಕಲ್ಪವೃ
ಕ್ಷದ ತೆಱದೆ ಪರವೇಷದಿಂ ದುಶ್ಚರಿತ್ರಮಂ
ಹದುಗೊಳಿಸಿ ನಡೆಸುವ ಮಹಾಪುರುಷನೊಂದು ದಿನವಲಸಿಕೆಯೊಳೊಕ್ಕಾಡುತೆ
ಕದನವಿಲ್ಲದೆ ಹೊತ್ತು ಹೋಗದಿದನೆಲ್ಲಿ ಬೆಳ
ಸಿದಪೆನೆಂದುಮ್ಮಳಿಸುತಿದ್ದಿದ್ದು ನೆನೆದೆದ್ದು
ಮದನಹರನೋಲಗಕೆ ಹೋಗಿ ನೋಡುವೆನೆಂದು ಪೊಱಮಟ್ಟ ನಿಜಗೃಹವನು॥೩೦॥

ಹರಿಯ ವಿರಿಂಚಿಯಂ ಮನುಗಳಂ ಮುನಿಗಳಂ
ವರಗಣೇಶ್ವರರಂ ನವಗ್ರಹಂಗಳನಧಿಕ
ತರ ನವಬ್ರಹ್ಮರಂ ದ್ವಾದಶಾದಿತ್ತರೇಕಾದಶ ಮಹಾರುದ್ರರಂ
ಸಿರಿ ಸರಸ್ವತಿ ರಂಭೆ ಮೊದಲಾದ ಸುರವನಿತೆ
ಯರ ನಂದಿ ಮಾಕಾಳರಂ ಚಂಡಕೀರ್ತಿಯಂ
ಹರುಷದಿಂ ನೋಡುತ್ತೆ ಬಂದೊಳಗೆ ಹೊಕ್ಕನೆಡೆಗೋಲಿಲ್ಲದಪ್ರತಿಮನು॥೩೩॥

ಶಶಿಧರನು ತನ್ನ ನಚ್ಚಿನ ವಲ್ಲಭೆಯನು ಭಾ
ವಿಸುವ ನಿಟ್ಟಿಸುವ ತಕ್ಕಿಸುವ ಮುದ್ದಿಸುವ ಭೋ  
ಗಿಸುವ ಲಾಲಿಸುವ ಪಾಲಿಸುವ ಪಾಟಿಸುವ ಪರಿಕಿಸುವ ನಗಿಸುವ ನುಡಿಸುವ
ಬೆಸನದೆಸಕಕ್ಕೆ ಪರವಶನಾಗಿ ಸುಖದೆಯೆ
ಣ್ದೆಸೆಗಾಣದಿರೆ ವೀಣೆಯಂ ಜಾಣನಿಂದೆ ಬಾ
ಜಿಸಿ ಸರಂದೋಱೆ ಕೈಮುಗಿದು ಶಿರದೊಳು ಹೊಱುವವನಂ ತಿರುಗಿ ಹರ ಕಂಡನು॥೩೫॥

ದೇವ ಕುಪಿತಾಂಧಕಾಸುರಕಂದಕುದ್ದಾಲ
ದೇವ  ಕರ್ಕಶ ಕಾಲತೂಲ ವಿಲಯೋಜ್ವಲನ
ದೇವ ಮದನಮದೇಭಬಿದುವಿದಳನ ಪ್ರಬಲಬಲವಂತ ಪಂಚಾನನ
ದೇವ ದಾನವಪುರತ್ರಯಗಹನವಹನ ಜಯ
ದೇವ ಜಯಜಯಯೆಂಬ ನಾರದಮುನೀಂದ್ರನಂ
ದೇವರಾಯಂ ದೇವರಾದಿತ್ಯನಿತ್ತಬಾಯಿತ್ತಬಾಯೆನುತಿರ್ದನು॥೩೬॥

ಇತ್ತ ಬಾ ಬಳಲ್ದೆಯೆಲ್ಲಿಗೆ ಹೋದೆ ಹುಸಿಯದಿರು
ಚಿತ್ತದನುಮಾನ ಮೊಗದೊಳು ತೋಱುತಿದೆ ಮುಖಂ
ಕಿತ್ತಡವನಾಲಿಂಗಿಸುತ್ತಿದೆ ದಿಟಂ ಹೇಳು ಹೇಳೆಂದು ಹರ ನೇಮಿಸಿ
ಹತ್ತೆ ಕರೆದೋವಿ ಶಶಿಮೌಳಿ ನಾರದನ ಕೇ
ಳುತ್ತಿರಲು ಕೈಮುಗಿದು ನರಲೋಕದೊಳಗೆಲ್ಲ
ಸುತ್ತಿ ಬಳಲಿದೆನೆಂದು ನುಡಿದೊಡಲ್ಲಿಗೆ ಹೋದ ಕಾರಣವದೇನೆಂದನು॥೩೮॥

ಗುರುನಿಷ್ಠರಾರು ಲಿಂಗಾರೂಢರಾರು ಸ
ತ್ಪುರುಷರಾರನೃತವಂಟದರಾರುವತಿ ವಿಮ
ತ್ಸರರಾರು ಭೂತಹಿತರಾರು ಪರಸತಿ ತಾಯಸರಿಯೆಂದು ಕಾಣ್ಬರಾರು
ಕರುಣಿಗಳದಾರು ವಿದ್ಯಾನಿಚಯ ನಿಪುಣ ಗುಣ
ಪರಿಣತರದಾರು ದಾನಿಗಳಾರು ಧರ್ಮತ
ತ್ಪರರಾರು ಧರಣೀತಳಾಗ್ರದೊಳಗೆಂದು ನೋಡಲು ಹೋದೆ ನಾನೆಂದನು॥೩೯॥

ಉನ್ನತಾಶ್ಚರ್ಯಂಗಳೇನೇನ ಕಂಡೆಯೆನೆ
ನಿನ್ನ ನೆಚ್ಚಿನ ಋಷಿಯಗಸ್ತ್ಯನಾಶ್ರಮವಾತ
ತನ್ನ ಕೈಯಾರ ಪ್ರತಿಷ್ಠಿಸಿದಗಸ್ತ್ಯೇಶ್ವರಂ ರಾಮನನುಜನಂದು
ಚೆನ್ನಿಂ ಪ್ರತಿಷ್ಠಿಸಿದ ಲಕ್ಷ್ಮಣೇಶ್ವರವವಕೆ
ಮುನ್ನ ನಿನ್ನಂಶವಹ ರುದ್ರರ್ ಪ್ರತಿಷ್ಠಿಸಿದ
ಹನ್ನೊಂದು ತೀರ್ಥಮಂ ತಳೆದ ಪುಲಿಕರ ನಗರಿಯಂ ಕಂಡೆ ನಾನೆಂದನು॥೪೦॥

ಮೂಲೋಕದೊಳಗಿಲ್ಲ ಶಿವಶಿವಾ ಏವೊಗಳ್ವೆ
ನಾ ಲಿಂಗವಾ ತೀರ್ಥವಾ ಕ್ಷೇತ್ರವಾ ಸ್ಥಾನ
ವಾಲೋಕಿಪರ ಕಣ್ಣ ಪುಣ್ಯ ನೆನೆವರ ಮನೋಹರ ವಿಹರ ಸುಖದ ಸುಗ್ಗಿ
ಲೀಲೆಯಿಂ ಪೊಗಳ್ವರ ಬಾಯ್ ಬಸಂತವದೆನಿಸಿ
ಸೋಲವಿಲ್ಲದ ಮಹಿಮೆಯಿಂದೊಪ್ಪುತಿದೆಯೆನಲು
ನೀಲಕಂಧರನದಱಭೋಗದಾಗಂ ಪೂಜೆಯೋಜೆಯಂ ಬೆಸಗೊಂಡನು॥೪೧॥

ಅದಱ ಮಾತೆಲ್ಲಿಯದು ಹೋಗಲಂತಹ ಶಿವಾಲ
ಯದ ಬಾಗಿಲೆಂತಕ್ಕೆ ತೆಗೆವುದೇಯೆಂದು ಕೇ
ಳದೆ ಪೂಜೆಯಂ ಕೇಳ್ವರೇಯೆನಲು ತೆಗೆಯಲೀಯದರಾರು ಹೇಳೆಂದೆನೆ
ಪದೆದು ಜೈನರು ಹೆಚ್ಚಿ ಸೊಕ್ಕಿ ಕಂಗಾಣದತಿ
ಮದದಲಂತಾ ಕದವ ಕೆತ್ತು ಭೋಗವ ಕೆಡಿಸಿ
ಸದೆ ಸೊಪ್ಪನೊಟ್ಟ ತೀರ್ಥವ ಹೂಳಿ ದುರ್ನೀತಿಯಲಿ ನಡೆವುತಿಹರೆಂದನು॥೪೨॥

ಜ್ಞಾನವಿಲ್ಲಱಿವುಹುಗದಾಚಾರವಡಿಯಿಡದು
ದಾನಧರ್ಮಂ ದೂರ ನೀತಿಯತ್ತತ್ತ ಲಭಿ
ಮಾನವಂ ಕಂಡರಾರ್ಭೂತದಯೆಯೆಲ್ಲಿಯದು ಭಕ್ತಿಯಿದ್ದೆಱಗದಲ್ಲಿ
ದೀನರುಂ ದುಷ್ಟರುಂ ಧೂರ್ತರುಂ ನೆಱೆ ಪುಣ್ಯ
ಹೀನರುಂ ಭವಿಗಳುಂ ನೀಚರುಂ ಪಾತಕ
ಧ್ಯಾನರುಂ ನೆರೆದ ಹುಲಿಗೆಱೆ ಹುಲಿಯ ಗುಹೆಯಂತಿರದೆ ದೇವ ಕೇಳೆಂದನು॥೪೩॥

ಶಿವನೆಂಬ ದೈವವಿಲ್ಲೆಂಬರೆಲೆ ದೇವ ನಿ
ನ್ನನ್ನವಿನೋದಸಾಮರ್ತ್ಯಶಾಸನವೆನಿಪ್ಪ ವೇ
ದವನು ಹುಸಿಯೆಂಬರಜ್ಞಾನನಿರುಹರಣ ಪೌರಾಣಮಂ ಕಾಕೆಂಬರು
ವಿವಿಧ ಲೋಕಾನುಗ್ರಹಾರ್ಥಗಮದಿ ಶಾ
ಸ್ತ್ರವನೇಳಿಪರು ಪಾಪಹರವೆನಿಪ ಪುಣ್ಯನದಿ
ನಿವಹಮಂ ನಿಂದಿಸುವರಾ ಜೈನರೆಂದಾಡಿದನು ಬಾಯ ಬಱನುಡುಗಲು॥೪೪॥

ದೇವ ನಿಮ್ಮಗ್ರಪೂಜೆಗಳನೊಲಿದೀವ ಯಾ
ಗಾವಳಿಯನಲ್ಲೆಂಬರದುವಿಡಿದು ನಡೆವ ನಾ
ನಾ ವಿಪ್ರರೌಪಾಸನಾಗ್ನಿ ಹೋತ್ರಂ ದೇವ ಋಷಿ ಪಿತೃಸಮರ್ಪಿತವನು
ಸಾವಿತ್ರಿ ಗಾಯತ್ರಿ ಸಾರಸ್ವತಾದಿ ದೇ
ವ್ಯವಿಧೋಪವಸ್ಥೆ ಮೊದಲಾದನುಷ್ಠಾನವೆಂ
ತೀವುವವು ಬಯಲು ಬಯಲೆಂಬರಾ ಜೈನರೆಂದನಾ ಯತಿರಾಯನು॥।೪೫॥

ಅಂತದಂ ಕಂಡು ಕಂಗೆಟ್ಟು ಕಲುಮರನಾಗಿ
ಚಿಂತೆ ಮೊಳೆತಱಿವಱತು ಮನನೊಂದು ಮತಿಯುಡುಗಿ
ಸಂತಸಂಗುಂದಿ ಬರುತಿಂತು ಬಳಲಿದೆನಿಂತು ಬೆಂಡಾದೆನದಱದೆಸೆಯಿಂ
ಮುಂತಿನ್ನಿದಕ್ಕೆ ತಕ್ಕುದನು ನೀವೇ ಬಲ್ಲಿ
ರಂತಕಾಂತಕಯೆನಲು ಕುಪಿತನಾಗುತೆ ತಿರುಗಿ
ಪಿಂತೆ ನಿಂದಾದಿಗಣನಾಥನಂ ಕರೆದೆಲವೊ ಹೋಗು ನೀನಲ್ಲಿಗೆನಲು॥೪೬॥

ಕಾಲನೊಕ್ಕಿಲು ಕಾಮನೂಳಿಗ ಮಹಾರೋಗ
ಮಾಲೆಯೊತ್ತೊತ್ತೆ ಮಾರಿಯ ಮಸಕ ಮೃತ್ಯುವಿನ
ನಾಲಗೆಯ ಹೊಯಿಲು ಮಾಯಾಭಯವು ಕ್ಷುತ್ಪಿಪಾಸೆಗಳ ಹೂಳದ ಹೊಯ್ಯಲು
ಮೇಲೆ ಕೋಪದ ಕಚ್ಚು ಲೋಭದಂಡಲೆ ಮೋಹ
ಜ್ವಾಲೆ ಮದ ಮತ್ಸರದ ಬೇಗೆ ಘನವಾಗೆ ಕಲಿ
ಕಾಲಕ್ಕೆ ಕಂಟಣಿಸದಾನರರೊಳೆಂತು ಜನೆಸುವೆ ದೇವ ಕರೈಣಿಸೆನಲು ॥೪೭॥

ಕಲಿಕಾಲದುಗ್ರತ್ವ ನಿನ್ನ ಮಾಡುವುದೇನು
ಜಲಜಕೆಸಱೊಳು ಮೆಱೆವ ಹಾಲು ಗೋವುಗಳ ಕೆ
ಚ್ಚಲ ಮಾಂಸದೊಳು ಚಾರಮಧು ನೊಣವಿನೊಳು ಸುಕಸ್ತೂರಿ ಮೃಗತತಿಯೊಳು
ನೆಲದೊಳಿನ್ನು ವಿಶೇಷ ವಸ್ತುಗಳನಂತ ವೆ
ಗ್ಗಳಿಸಿಹುಟ್ಟಿದ ಹುಟ್ಟು ಕುಂದಾಯ್ತೆ ಹೇಳು ನಾ
ನೊಲವಿಂ ಕಳುಹುತಿರೆ ನಿನಗೇಕೆ ಚಿಂತೆ ಸುಮ್ಮನೆ ಜನೆಸು ಹೋಗೆಂದನು॥೪೮॥

ಮೇದಿನಿಗೆ ಹೋಗೆಂದೆ ನಿನ್ನೊಡನೆ ನುಡಿದು ಸುಖಿ
ಯಾವ ಬಾಯಿಂದಾರ ನುಡಿಸುವೆಂ ನೋಡಿ ಸುಖಿ
ಯಾದ ಕಣ್ಣಿಂದಾರ ನೋಡುವೆಂ ಪುರಹರನೆ ನಿನ್ನನು ನಿಮಿಷವಗಲದೆ
ಆದಿತೊಡಗಿರ್ದಾದಿ ಗಣನಾಥನೆಂಬ ಹೆಸ
ರಾದೆನೊಂದೇ ದಿವಸವಗಲಿರಲ್ಬಲ್ಲೆನೆಯು
ಮಾದೇವಿಯರಸ ಹೇಳೆಂದು ಚರಣದ ಮೇಲೆ ಹೊಡೆಗಡೆದು ಬಿನ್ನೈಸಲು॥೪೯॥

ಹಲವು ಮಾತೇನೆಲವೊ ನಿನ್ನಿಮಿತ್ತಂ ಬಂದು
ಹುಲಿಗೆಱೆಯ ಬಸದಿಯೊಳು ನಿಂದು ನೀನೆನೆದುದಂ
ಸಲಿಸುವೆನೆನಲು ಲಿಂಗ ನುಡಿವುದೇ ನೋಡುವುದೆ ಬೇಡ ಬೇಡೀ ಹುಸಿಗಳು
ಗೆಲುವೆನಲು ಜಂಗಮಾಕಾರದಿಂದಂ ಬಂದು
ನೆಲಸಿ ನಿನ್ನೊಡನೆ ಮಾತಾಡುವೆಂ ಬೇಡಿತಂ
ಸಲಿಸುವೆಂ ಚಿಂತಿಸದಿರೆಂದಾದಿಮಯ್ಯನಂ ಬೋಳೈಸಲು ॥೫೦॥

ಇನಿತಕ್ಕೆ ನೀನಂಜಲೇಕೆಲವೊ ನಾನೆನ್ನ
ಮನವಱಿವ ಋಷಿಯರಂ ಕ್ಷೇತ್ರವಾಸಿತನಕ್ಕೆ
ಮನುಗಳೊಳಗುತ್ತಮರನೆಸೆವ ಬೇಹಾರಕೆ ಗಣಾಧೇಶರೊಳು ಕೆಲಬರ
ಘನ ದೇವಪುತ್ರಿಕತನಕ್ಕತುಳಬಳಕುಮಾ
ರನ ಕುಮಾರಿಕೆಗೆ ಸತತಂ ಕುಬೇರನನು ನ
ಚ್ಚಿನ ಕೊಟಾರಿಕೆಗೆ ಪರುಟವಿಸಿಕೊಂಡಾಂ ಬರುತ್ತೊಡಗೊಂಡು ಬಹೆನೆಂದನು ॥೫೩॥

ಅಸಿತವರಣನನು ಮಜ್ಜನಕೆ ವಾಯುವನು ಸ
ತ್ಕುಸುಮಪ್ರತಾನಸೌರಂಭಕ್ಕೆ ರಂಭೆಯೂ
ರೂವಸಿ ತಿಲೋತ್ತಮೆ ಮಂಜುಘೋಷೆ ಮೇನಕೆ ಯರೊಳಗಾದ ನಾನಾ ಸತಿಯರ
ಅಸಮಲಾಸ್ಯಕ್ಕೆ ತುಂಬುರನಾರದರನು ರಾ
ಗಸಮೂಹದಾಳಾಪಿಕೆಗೆ ನಂದಿ ಮಾಕಾಳ
ರೆಸೆವ ವಾದ್ಯ ವ್ಯಾಪ್ತಿಗಳವಡಿಸಿಕೊಂಡು ಬಂದಪೆನಂಜಬೇಡೆಂದನು॥೫೪॥

ಆ ರುಚಿರ ಸೌರಾಷ್ಟ್ರಪುರದೊಳಗೆ ಧನದಿಂ ಕು
ಬೇರನೊಳು ಕುಲದಿಂ ದಿವಾಕರನೊಳೊಪ್ಪುವಾ
ಚಾರದಿಂ ಬ್ರಹ್ಮನೊಳು ಚಾರಿತ್ರದಿಂ ಗಂಗೆಯೊಳು ಸತ್ಕಲಾಪ್ರೌಢಿಯಿಂ
ಭಾರತಿಯೊಳೆಕ್ಕೆಕ್ಕೆ ಹೊಯಿಕೈಯೆನಿಸಿ ಮದನ
ವೈರಿ ಸೋಮಯ್ಯನೇ ಪ್ರಾಣಲಿಂಗವೆನಲ್ಕೆ
ಪಾರದತ್ತನೆನಿಪ್ಪ ಸೆಟ್ಟಿಯಿಪ್ಪಂ ಪುಣ್ಯಲಾಭಕ್ಕೆ ಹರದಾಡುತೆ॥೬೩॥

ಆತನಂಗನೆ ಪುಣ್ಯವತಿಯೆಂಬ ವನಿತೆ ರೂ
ಪಾತಿಶಯದೊಳು ಪುರುಷಭಕ್ತಿಯೊಳು ಯುಕ್ತಿಯೊಳು
ನೀತಿಯೊಳು ಸರ್ವಾಭಿಮಾನದೊಳು ಸೌಭಾಗ್ಯದೊಳು ಶಂಕರಾರ್ಚನೆಯೊಳು
ಭೂತಳದೊಳಿನ್ನು ಸರಿಯಿಲ್ಲೆನಿಪ ಪುಣ್ಯ ವಿ
ಖ್ಯಾತಿಗೆ ತವರ್ಮನೆಯೆನಿಸಿ ಬಾಳುತಿರ್ದು ಸಂ
ಪ್ರೀತಿಯಿಂ ತನಯರ್ಕಳಂ ಬಯಸುತಿರ್ಪ ಚಾತುರ್ಯಮಂ ಪೊಗಳ್ವರಾರೈ॥೬೪॥

ಕಂತುವುಂ ಮಾಯೆಯುಂ ವಿಧೆಸಿದವಿಧಾತ್ರನುಂ
ಸಂತತಂ ಸೂತ್ರಿಸಿದ ದುಷ್ಕರ್ಮರೇಖೆಗಳ
ನಿಂತಳಿವಳಿನ್ನೀಕೆಯೆಂದು ಪೇಳ್ವಂದದೆ ವಳಿತ್ರಯಂ ಮೈದೆಗೆದವು
ಎಂತಧಿಕರಾದೊಡಂ ಪುತ್ರನುದಯಿಸನೆಂಬ
ಚಿಂತೆಯಿಂ ಬಡವಾದ ತೆಳುವಸುಱು ಸುತನಾದ
ಸಂತಸದಿ ಹೆಚ್ಚಿ ಪುಟವಾದುದಂ ಬಿನ್ನೈಸುವಂತೆ ಗರ್ಭಂನೂಂಕಿತು॥೭೦॥

ಒಗುದೋಱದ ನಾಭಿಯೆಂಬ ಹುತ್ತದ ಹೊರ
ಗುಳಿ ಗರ್ಭದಿಂ ಹೂಳ್ದಡೆಡೆಗೆಟ್ಟು ಕಾಳಾಹಿ
ತಳರ್ದು ಮೊಲೆವೆಟ್ಟಂಗಳಿಱುಬಿನೊಳು ಪೊಕ್ಕಪುದೊ ಎನೆ ಬಾಸೆದಳವೇಱಿತು
ಮುಳಿದು ಕತ್ತಲೆನರೆಗಚ್ಚಿ ಮುಗಿದಬುಜಕು
ಟ್ಮಳಯುಗದಂದದಿಂ ಮೆಱೆವ ವಿಮಳಕ್ಷೀರ
ಜಳಭರಿತ ಪೀನಕುಚಚೂಚುಕಂ ಕಪ್ಪನಾಲಿಂಗಿಸಿದವೇವೊಗಳ್ವೆನು॥೭೧॥

ಜನಕದನುತ್ಸವಿಸೆ ಸುಮುಹೂರ್ತವೊಲವೇಱಿ ಪರಿ
ಜನನಲಿಯೆ ವಸುಧೆ ತಣಿಯಲು ಶಿವಾಚಾರಲತೆ
ನನೆಯೊತ್ತೆ ಜೈನರೆದೆ ನಡುಗೆ ಹುಲಿಗೆಱೆಯ ಸುರಹೊನ್ನೆಯ ಮಹಾಬಸದಿಯ
ಜಿನನ ಹಣೆ ಛಟಛಟನೆ ಮಿಡಿಯೆ ಸೌರಾಷ್ಟ್ರದರ
ಸನು ನಂದಿಯಂ ತಳೆಯೆ ಪುಣ್ಯವತಿಯುದರದಿಂ
ಜನಿಸಿದಂ ಸುಕುಮಾರಶೇಖರನನಂಗನಲ್ಲದ ಕುಸುಮಕೋದಂಡನು॥೭೩॥

ಈ ಮಗಂ ಕಣ್ದೆಱೆದು ಮೊಲೆಯುಂಡಡೀವೂರ
ಸೋಮನಾಥಂಗೆ ಮೈಯಿಕ್ಕುವೆಂ ಸೇತುವಿನ
ರಾಮೇಶ್ವರನ ಕಾಬೆ ಪರ್ವತದ ಮಲ್ಲಿನಾಥಂಗುಪಹಾರವಿಡುವೆ
ಹೇಮಕೂಟದ ವಿರೂಪಾಕ್ಷಂಗೆ ತಪವಿಪ್ಪೆ
ನೇಮದಿಂ ಕಾಶೀಪತಿಗೆ ತೊಡಿಗೆದೊಡಿಸುವೆ ಮ
ಹಾಮಹೇಶ್ವರರಿಗರ್ಚನೆ ಗೈವೆನೆಂದಿರುಳು ಹರಸಿಕೊಳುತಿರ್ದಳಂದು॥೭೮॥

ಅನವರತವೆಮ್ಮ ಮನೆಗಾರೈಸೆ ಬಹ ತಪೋ
ಧನರತೆಱದಿಂದೊರ್ವ ಗುರುದೇವನೈತಂದು
ವನಿತೆಕೇಳ್ತನಯನಂ ಮನುಜನೆಂದೆನುತಿದಿರಿವನಾದಿಗಣನಾಥನು
ನಿನಗೋತು ಬಂದನೀತಂಗೆ ಶಿವಲಿಂಗದರು
ಶನವನೊದವಿಸಿ ಪ್ರಸಾದದ ಬೆಣ್ಣೆಗೊಡು ನಿನ್ನ
ನೆನೆದಱಿಕೆಯಹುದೆಂದು ಹರಸಿ ಭಸಿತವನಿಡುವುದಂ ಕಂಡೆ ನಾನೆಂದಳು॥೮೧॥

ದಿನಪನಂ ಕಾಣುತ್ತೆ ಕಮಲವರಳ್ವೊಲು ಲಿಂಗ
ವನು ಕಾಣುತಾ ಬಾಲ ಕಣ್ದೆಱೆಯಲಿತ್ತ ಜನ
ಕನ ಹರುಷ ಕಣ್ದೆಱೆಯೆ ಬೆಳುದಿಂಗಳುದಯವಚೋರಿಯಾರೋಗಿಪಂತೆ
ವಿನುತಪ್ರಸಾದ ನವನೀತಮಂ ಸವಿದು ಮಾ
ನಿನಿ ತಣಿಯೆ ಫಳರಸವ ಗಿಳಿಯೀಂಟುವಂದದಿಂ
ತನುಜಮೊಲೆಯುಂಡನಾ ಬಂಧುವರ್ಗಂ ಹೆಚ್ಚಿ ತೇನತೂಗಾಡುತಿರಲು॥೮೪॥

ಕಾಮನ ಕಲ್ಪದ್ರುಮಕೆ ಕಲ್ಪಲತೆಯಂ ಕೂಡಿ
ಪ ಮನೋಜಮಿತ್ರನಂತಾದಿಮಯ್ಯಂಗೆ ನೆರೆ
ಸುಮುಹೂರ್ಥ ಸುದಿನಂ ಸುತಾರೆ ಸುಗ್ರಹಂ ಸುಕರಣಂ ಸುಯೋಗಂಗಳಲ್ಲಿ
ಸಮಕುಲಂ ಸಮರೂಪು ಸಮಬಲ ಸಮಪ್ರಾಯ
ಸಮರೀತಿ ಸಮಧಾತು ಸಮಶೀಲ ಸಮಗುಣಂ
ಸಮವಾದ ಕನ್ನೆಯಂ ಮದುವೆಯಂ ಮಾಡಿದರು ನೆಱೆಮಹೋತ್ಸಾಹದಿಂದೆ॥೯೨॥

ಒಪ್ಪಿ ಕುರುಡನ ಕೈಯ ಕೋಲು ಹೆಳವನ ಬಂಡಿ
ತಪ್ಪದಲ್ಲಿರುತಿರಲ್ಕಲ್ಲದೊಂದಡಿಯಿಡ
ಲ್ಬಪ್ಪುದೇಯೆಂಬಂತಿರೆಲೆ ಮಗನೆ ಕೇಳು ನೀನೆಮಗಾಡಿದವಧಿಯ ದಿನಂ
ಬಪ್ಪಂದು ತನಕುಸುರುವಿಡಿದು ಬಟ್ಟೆಯ ನೋಡು
ತಿಪ್ಪೆನಾ ದಿನಕೆ ಬಾರದೊಡೆ ಧಾರುಣಿಯ ಮೇ
ಲಿಪ್ಪುದಿಲ್ಲಿದನಱಿದು ಬೇಗ ಬಾ ಬಾರದಿರು ಹೋಗು ಸುಖಿಯಾಗೆಂದರು॥೯೯॥

ತೀವಿದೂರೂರ್ಗಳೊಳು ನಗರ ನಗರಿಯೊಳರಸು
ಚಾವಡಿಯೊಳಗ್ರಹಾರಂಗಳೊಳು ಮನ್ನೆಯರ
ಠಾವಿನೊಳು ಪಟ್ಟಣಂಗಳೊಳುಱುವ ವಸ್ತುವಂ ವ್ಯವಹರಿಸುತೆಡೆಗೈವುತ
ಆವಡೆಯೊಳಾರಧಿಕರುತ್ತಮಕ್ಷೇತ್ರಂಗ
ಳಾವುವು ವಿಶೇಷವೆಂದಲ್ಲಲ್ಲಿ ಹೊಕ್ಕು ಪರಿ
ಭಾವಿಸುತ್ತೆಯ್ದಿ ಚಂದ್ರಾದಿತ್ಯಚಕ್ರೇಶನಿಹ ಹುಲಿಗೆಱೆಗೆ ಬಂದನು॥೧೦೩॥

ತಳಿರ ಹಾಸಿನ ಮೇಲೆ ಕುಳ್ಳಿರ್ದು ಸುದತಿಯರ್
ತಳಿವ ಪನ್ನೀರ ಕುಂಚಿಗೆಯ ಬೀಸುವ ಕಮಲ
ದಳದಾಲವಟ್ಟದಲರಿಂಗೆ ಪೂಸುವ ಚೆಂದನದ ಶೈತ್ಯಸೌರಭ್ಯಕೆ
ಎಳಸಿ ಮೈಯೊಡ್ಡಿ ನೀಡುವ ನವ್ಯಫಳವನಿ
ರ್ಮಳಜಳವಳನಾದರಿಸಿ ಕೌತುಕವನಾಳುತ್ತೆ
ಕೆಳೆಯರಂ ಕಳುಹಿದನು ಪುರದೊಳಗೆ ಬೇಡಿಕೆಗೆ ಭಕ್ತರ ಮನೆಯನಱಸಲು॥೧೧೫॥॥

ಪಂಚಮಸ್ಥಲಂ.

॥ಪಲ್ಲವ॥
ಹರನ ಭವನವ ಸುತ್ತಿ ಮುತ್ತಿರ್ದ ಹಗೆಗಳಂ
ಧುರದೊಳಗೆ ಕಡಿಖಂಡಮಾಡಿ ರಣಮಂ ಮಿಕ್ಕು
ಶರಣೆಂದು ಬಂದರಂ ಕಾಯ್ದು ಸೋಮೇಶನಂ ಕಂಡನಂದಾದಯ್ಯನು

ಪೊಱಮಟ್ಟು ನಿಂದು ಕೊರಳೆತ್ತಿ ಕುಸಿದುಬ್ಬಿ ಬಾ
ಯ್ದೆಱೆಯೆ ಧರೆಬಿರಿಯೆ ದೆಸೆಯುಬ್ಬಸಂಬಡೆ ವನಧಿ
ನೆಱೆ ಕುದಿಯೆ ಗಗನ ಮಾರ್ದನಿಗೊಡೆ ಚರಾಚರಂ ಹೆದರಿ ನಡನಡುಗೆ ನೆರೆದು
ಹೊಱಗಿರ್ದ ದೂಷಕರು ಝಲ್ಲೆಂದು ಕೆದಱೆ ಶಿವ
ಬೆಱಗಾಗೆ ಠಣಲೆಂದು ಮಲೆಯಿತ್ತು ಕೆಲೆಯಿತ್ತು
ನೆಱೆ ತೂಳಿ ಮುಕ್ತಿವನಿತೆಯ ತಾಳಿ ರಿಪುತೂಳಗಾಳಿಯಭವನ ಘೂಳಿಯ॥೨೩॥

ಏಗೈದು ಈಸೊಂದು ದನಿಯುಳ್ಳ ಗೂಳಿ ದಿಟ
ವಾಗಿ ಹೊಱವಂಟೊಡಿದು ನೆಲನೆಲ್ಲ ತೆಱಹಿಲ್ಲ
ವೇಗೈಯದಡಿವಿಡಿದು ಬಲವ ಮೇಳೈಸಿಕೊಂಡನುವಾಗಿ ನಿದಿರೂಪುದು
ತಾಗಿದೊಡೆ ಬಳಿಕ ನಾವಾದುದವರಾದುದ
ಕ್ಕೀಡಾಗಲೇಕೆಂದು ಹೆಱೆತೆಗೆದು ಕರದೊಳನು
ವಾಗಿ ಬಿಡದೊಡ್ಡನೊಡ್ಢಿದರು ಶಿವಶಿವ ಬಲದ ಬಹಳತೆಯನೇ ವೊಗಳ್ವೆನು ॥೨೪॥

ಘುಡುಘುಡಿಸಿ ಗುಹೆಯಿಂದೆ ಹುಲಿಯಿಕ್ಕೆಯಿಂ ಸಿಂಹ
ವಡಸಿ ಗಂಹರದಿಂದೆ ಶರಭನುಱೆ ಕಾರ್ಮೇಘ
ದೆಡೆಯಿಂದೆ ಬಱಸಿಡಿಲು ಪೊಱಮಡುವ ತೆಱದೊಳಾದಯ್ಯ  ಸಹಿತಾ ನಿಳಯವ
ಹಡಿದೆಱೆದು ಕೆಲೆವುತ್ತ ಮಲೆವುತೊಲೆವುತ್ತ ಪೊಱ
ಮಡೆ ಕಂಡಿರದೆ ಯೆಲೆಲೆ ಗೂಳಿಯೀ ಬಂದುದೊ
ಗ್ಗೊಡೆಯದನುವಾಗೆಂಬ ಪರಬಲದ ಬೊಬ್ಬೆಯಬ್ಬರವನಾಲಿಸಿ ನೋಡಿತು॥೩೪॥

ಶಿವಶಿವ ಮಹಾದೇವ ಕೊಣಕಿಟ್ಟು ಹರಿಯಿತ್ತು
ಕವಿಯಿತ್ತು ಮುಳಿಯಿತ್ತು ತುಳಿಯಿತ್ತು ಮೆಟ್ಟಿತ್ತು
ಜವಗೆಡಿಸಿ ತಟ್ಟಿ ಮುಟ್ಟಿತ್ತು ಕುತ್ತಿತ್ತು ಕೋಡೆತ್ತಿ ಕೋಡಿನ ಕೊನೆಯಲಿ
ಡವರಿಸಿತ್ತು ಕುಸುಬಿತ್ತು ಕೆಡಹಿತ್ತು ಕೆಲಬಲ
ಕ್ಕವಚಟದೊಳಾದಿಗೊಂಡುಱುಬಿತ್ತು ಹೊಂದಲೆಯ
ತವಕಿಗಳನಸುವಳಿಯೆ ಹೊಸೆಯಿತ್ತು ಬಸವನಲ್ಲಿಂ ಬಳಿಕ್ಕೇವೊಗಳ್ವೆನು॥೩೬॥

ಕತ್ತಲೆಯ ಮರೆಹೊಕ್ಕಿನಕಿರಣ ಮೇಘಂಗ
ಳೊತ್ತೊತ್ತೆಗಗ್ರಾನಿಲಂ ಸೊಕ್ಕಿದಾನೆಗಳ
ಮೊತ್ತಕ್ಕೆ ಕಂಠೀರವಂ ಕಡಗಿ ಕವಿದು ದಾಳಿಕ್ಕುವಂತತುಳ ಕೋಪ
ವೆತ್ತಿದಾದಯ್ಯ ಹೊಸತಾಗಿ ಣ್ಕಾಲ್ಬಂದ
ಮತ್ತಿಬ್ಬರುಂ ಮೀಱಿ ಕೈಗೊಂಡೊಡಿರದೆ ಕೆದ
ಱಿತ್ತು ಝಲ್ಲೆಂದೆಯ್ದೆ ಪರಬಲಂ ಬಳಿಕವರ ಭುಜಬಲವನೇ ವೊಗಳ್ವೆನು॥೩೭॥

ಮುನ್ನ ಮೂದಲಿಸಿ ಪಾರಿಶೆಟ್ಟಿ ನುಡಿದನಿತು
ಮಂ ನೆಱೆಯೆ ಮಾಡದಿರ್ದೊಡೆ ದೂಷಕರ ಕೊಲುವುದೋಸರಿಸಲಾಗದೆಂದು
ತನ್ನ ಮನದೊಳು ಸೋಮನಾಥ ಬಂದರುಹನುಂ
ಭಿನ್ನವಾದಂ ಸವಣರೊಳು ಕೆಲಬರನ್ನಿಱಿದೊ
ಡೆನ್ನ ಪ್ರತಿಜ್ಞೆ ನೆಱೆ ಸಂದುದೆಂದಾದಯ್ಯನಂದು ಮುನಿಸಂ ತಾಳ್ದನು॥೪೨॥

ನಡೆಯಿತ್ತು ಸಮ್ಮುಖಕೆ ಸಕಳರ್ಷಿಸಂಕುಳಂ
ಮಡಿಯಿತ್ತು ಸುರಹೊನ್ನೆಬಸದಿಯರುಹಪ್ರತಿಮೆ
ಯುಡಿಯಿತ್ತು ಜೈನಸಮಯಂ ಭಂಗವಡೆಯಿತ್ತು ಸದ್ದೃಷ್ಟಿಯರಸನ ಬಲಂ
ಮಡಿಯಿತ್ತು ಪುರದೊಳಗೆ ಮರುಳಪಡೆ ರಕ್ತಮಂ
ಕುಡಿಯಿತ್ತು ಗೊರವನಾಡಿತ್ತೆಕಡೆ ಪರಿತನಕ
ನಡೆಯಿತ್ತು ತಾವೊಡಲುವಿಡಿದು ಫಲವೇನೆಂದು ನುಡಿಯಿತ್ತು ಪುರಜನವದು॥

ಹುಲಿಗೆಱೆಯ ನಗರ ಮುಮ್ಮುರಿದಂಡಮಿಂಡಗು
ದ್ದಲಿ ಸಮಯ ಮಂತ್ರಿ ಸಾವತಪಟ್ಟಿಸ್ವಾಮಿ
ಗಳು ಛಲದ ನೆಲೆಯೆಂದೆನಿಪ್ಪತುಳಬಲ ಫಣಿಸ ಮಕ್ಕಳುಗಳಾದಿಯಾದ
ಹಲರೈ ಹದಿನೆಂಟು ಸಮಯವದೆಯ್ದೆ ಜೈನನಾ
ಹೊಳಲೆಲ್ಲ ತೊಡಗುತ್ತು ಕಾಳಗವನೆಂದು ಮನ
ವಳುಕದಾದಯ್ಯನಾಂತಧಟರಂ ಧುರದೊಳಗೆ ಮರುಳಿಗುಣಿಸಾಗಿಸಿದನು ॥೪೫॥

ಬಸದಿಯಳಿದುದು ಸಕಲಸಾಮರ್ಥ್ಯಯತರಪ್ಪ
ಋಷಿಕುಲಂ ಮಡಿಯಿತ್ತು ಚಾತುರ್ಬಲಂ ಸತ್ತು
ದಸುವಳಿದುದಖಿಳಪುರಜನ ಭಂಗ ಹಿಂಗದೆನ್ನನ್ವಯಕ್ಕೆಂದು ಮುಳಿದು
ದೆಸೆಗೆ ಬಲಿಗೊಡುವೆನಾದಯ್ಯನಂ ಮೇಣು ತ
ನ್ನಸುವಂ ಬಿಡುವೆನೆಂದು ತಱಿಸಂದು ಪಡೆಯ ನೆರ
ಹಿಸಿ ಮೇಳವಂ ಮಾಡಿ ಹಲವು ನಿಸ್ಸಾಳಮಂ ಸೂಳೈಸಹೇಳೆಂದನು॥೪೭॥

ಆರನೆಲೆಯೊಳಿರ್ದು ಚಂದ್ರಾದಿತ್ಯಭೂಪಾಲ
ನೆರಡು ದೆಸೆಯೊಳು ಗಜಾಶ್ವರೂಢರಪ್ಪ ಪಲ
ವರಸುಗಳನಾಪ್ತಬಲಮಂ ನೋಡಿ ನಾಡೆಯುಂ ಮನಿಸಂ ಮೊಗಕ್ಕೆ ತಂದು
ಗೊರವನಂ ಹೆಡಗೈಯ ಕಟ್ಟಿ ಗೂಳಿಯ ಹೊಡೆದು
ತರಬೇಕೆನುತ್ತೈದೆ ಬೈದು ಮೂದಲಿಸುತ್ತೆ ಭೂ
ಪಾಲನಾಜ್ಞೆಯೊಳು ತರಹರಿಸಿ ಭಯಮಂ ಬಿಟ್ಟು
ಕಾಲಾಗ್ನಿಯಂತೆ ಕವಿದೆಸುವಿಱಿವಿಡುವ ಪೊಡೆವ ಕೆಡೆಕುತ್ತಿ ವೊತ್ತಿ ತಿವಿವ
ಕಾಳಗದೊಳಾದಯ್ಯನೆಡದೆಸೆಯೊಳಗ್ಗದದೆರ
ಡಾಳು ನಡೆಯಲು ಬಲದಬಾಹೆಯೊಳು ಸಿಡಿಲಂತೆ
ಗೂಳಿ ಬರೆ ಮೂಱು ಮೊನೆಯಿಂ ಪರಬಲಕ್ಕೆ ಕೈದೋಱಿದರದೇ ವೊಗಳ್ವೆನು॥೪೯॥


ಚೂಣಿ ಹೊಂತಲೆ ಕೋಡುಗೈಯ್ಯನುಂ ಮೈದೆಗೆದು
ಹೂಣಿಗರ ಮೂದಲಿಸಿಯಱೆಯಟ್ಟಿ ಕೊಲ್ವ ಬಿ
ನ್ನಾಣಮಂ ಕಂಡು ಭಯಗೊಂಡು ಚಾತುರ್ಬಲಂ ಭೀತಿಯಿಂದಳಿದುಳಿದುದು
ಕೇಣದಿಂ ಹರಣವುಳ್ಳೊಡೆ ಹಾಡಿಕೊಂಡುಂಬ
ಜಾಣುಗೆಟ್ಟಲ್ಲಿ ಸಾಯಲದೇಕೆನುತ್ತವಾ
ಕ್ಷೋಣೀಶನಪ್ಪ ಚಂದ್ರಾದಿತ್ಯಭೂಪನಂ ಬಿಟ್ಟು ದೆಸೆಗೆಟ್ಟೋಡಿತು॥೫೦॥

ಮುಟ್ಟಿ ಮೂದಲಿಸಿ ಬಪ್ಪರಸುಮೋಹರವ ಕಂ
ಡಟ್ಟಿ ಕವಿದಾದಯ್ಯನನಿಬರ ತವೆ ಕೊಂದೊ
ಡಟ್ಟೆಯಾಡುವ ಧುರದೊಳಿರಲಂಜಿ ಸಪ್ತಾಂಗವಳಿಯುತೇಕಾಂಗವುಳಿಯೆ
ಹಿಟ್ಟಿನೊಳಗಕ್ಕಿ ಗಾಣದೊಳೆಳ್ಳುಳಿವ ತೆಱದಿ
ಪಟ್ಟದಧಿರಾಜ ಚಂದ್ರಾದಿತ್ಯಭೂಪಾಲ
ನಿಟ್ಟೋಟದಿಂ ಬಾಯಂಬಿಟ್ಟು ದೆಸೆಗೆಟ್ಟೋಡಿನಟ್ಟಡವಿಯಂ ಪೊಕ್ಕನು॥೫೧॥

ತಟ್ಟ ಸಱ್ಱನೆ ಸೀಳಿ ಕಿಱಿದನದಱೊಳು ಕೌಪು
ಗಟ್ಟಿ ಗುಂಡಿಗೆಯನಾಧಾರಗುಂಡಿಗೆ ಮಾಡಿ
ಮೆಟ್ಟಿ ಕುಂಚವ ಮುಱಿದು ಹೀಲಿಯಂ ಬಿಸುಟು ಕಾವಂ ಲಾಕುಳವನು ಮಾಡಿ
ಮುಟ್ಟಿ ಸರ್ವಾಂಗದೊಳು ಭಸಿತಮಂ ಪೂಸಿ ಶಿವ
ದಿಟ್ಟು ಹರಹರ ನಮೋರ್ಹಂತಾಣವೆಂದೆರಡು
ಗೆಟ್ಟ ಭೀತಿಯ ಭಕ್ತ ಸವಣರಂ ನೋಡಿ ನಗುತಿರ್ದನಂದಾದಯ್ಯನು॥೫೩॥

ರಾಗದಿಂ ರಣವಿಜಯರೈತಂದು ಮೈಯಿಕ್ಕು
ವಾಗ ನಾಗಾಭರಣನತುಳಸಂತೋಷಮನ
ನಾಗಿ ಕರುಣವನವರ ಮೇಲೆ ತಾ ಹೊನಲ್ವರಿಸಿ ಲಿದು ತಲೆದಡವಿ ನೋಡಿ
ಈ ಗೂಳಿಯೀಯಿಬ್ಬರೆಮ್ಮನಿಳಯದೊಳು ಕಾ
ಹಾಗಿ ಮಾಯಾರೂಪಿನಿಂದಿರ್ದು ಕದನವೆ
ದ್ದಾಗ ಮೈದೋಱೆ ಹಗೆಯಂ ಗೆಲುತೆ ಬರಲೆಂದು ನುಡಿದನಾದಯ್ಯನೊಡನೆ॥೬೧॥

ಕರುಣಿಸಿದ ಕೈದುವಿವೆ ಕೋ ದೇವಯೆನಲೆನ್ನ
ಪರಿಸೂತ್ರದಪರ ಭಾಗದೊಳಿರ್ದು ತೀರ್ಥದೊಳ
ಗಿರಿಸು ಹೋಗೆನಲಿದಂ ಹತ್ತಿರ್ದ ನರಮಾಂಸ ಮಜ್ಜೆ ಮಿದುಳೊರಸಿರುಧಿರ
ಬೆರಸಿದೊಡೆ ತೀರ್ಥವ ಪುನೀತತೆಯನೈದಿ ಹರ
ವರಿಯ ಸಾಮರ್ಥ್ಯ ಮಸುಳಿಸುವುದಲೆಯೆನಲು ಕೇಳ್
ಮರುಳೆ ಮೂಜಗದ ದೋಷವನಳಿವುದಕ್ಕಿನಿತು ಭಾರವೇ ಹೋಗೆಂದನು॥೬೨॥

ನಿಸಿತಖಡ್ಗದ ಮೈಯರಕ್ತವದಱೊಳು ಸಂಗ್ರ
ಮಿಸೆ ಜಲಂ ದುರ್ವರೂಣವಾಗೆ ಹೇಸಿಕೆಯ ಹು
ಟ್ಟಸಿದೊಡೆಲೆ ಸ್ನಾನಪಾನಂ ಮಾಡಲನುವಲ್ಲೆನಲು ಪುರಕ್ಕಿನ್ನು ಕದನ
ಮಸುಗುವೊಡೆ ದಿಟ ಮಹಾ ಸಾವು ಕೇಡುಗಳು ಸಂ
ಧಿಸುವೊಡಿನ್ನುಂ ರಕ್ತವರ್ಣವಾದಪುದು ಸಂ
ತಸದೊಳಿರಿಸಂಜಬೇಡೆನೆ ಖಡ್ಗವಂ ತಂದು ಬಿಸುಟನಾ ತೀರ್ಥದೊಳಗೆ ॥೬೩॥

ಧುರದೊಳಗನೇಕರಂ ಕೊಲಲು ತನ್ನೊಳ್ಬೆರೆದು
ಪರಿತರೂಪ ರುಧಿರಮುಮನಾ ತೀರ್ಥದಿಂ ತೊಳೆವ
ಪರಿಯೋಯೆನಿಪ್ಪಂತೆ ಖಡ್ಗವಾ ತೀರ್ಥದೊಳು ಮುಳುಗಲದಕಂದು ತೊಡಗಿ
ಧರೆಯೊಳಗೆ ಖಡ್ಗತೀರ್ಥವೆನಿಪ್ಪ ನಾಮವ
ಚ್ಚರಿಯಾದುದಯ್ಯನೊಡನೆ ಬಂದವರಗಲ
ದಿರಲು ಬಾಹತ್ತರನಿಯೋಗಮಂ ಕೊಟ್ಟ ಸೋಮಯ್ಯನುತ್ಸಾಹದಿಂದ ॥೬೪॥

ನೆರೆಯೂರ ನಾಡಗ್ರಹಾರದೊಳಗುಳ್ಳ ಶರ
ಣರು ಕೇಳ್ದು ಬಂದಾದಿಮಯ್ಯನಂ ಕಂಡು ಭ
ಕ್ತರ ನಿಧಿಯೆ ಶಿವಸಮಯ ಶರಧಿಗೆ ಶಶಾಂಕನಾದೆಯಲಾಯೆನುತ್ತೆ ಹೊಗಳೆ
ಧರೆಯಱಿಯೆ ಗಣಪರೂವಂ ನೆರೆದು ಮಾಡಿ ಭಾ
ಸುರಜಲಕ್ರೀಡೆಗಳನಾಡೆ ಕಂಗೆಸೆವ ದೇ
ವರದೇವನಂ ಬಿಟ್ಟು ಹೋಗಲಾಱದೆ ಪುರಂಗಳ ಮಾಡಿ ಸುಖಮಿರ್ದರು॥೬೫॥

ಹಗೆ ಹೋಯ್ತು ತನ್ನಱಕೆಯಾಯ್ತು ಸೋಮಯ್ಯ ತಂ
ದೆಗೆ ಮಾಣದಂಗರಂಗಂ ರಾಗಭೋಗಂಗ
ಳೊಗೆದವೆಲ್ಲಾ ಜನಂ ಭಕ್ತರಾಗಲು ತೊಡಗಿತಲ್ಲಿ ಶಿವಪುರವಾದವು
ಜಗದೊಳೆನ್ನಿಂದೆ ಕೃತಕೃತ್ಯರಿಲ್ಲೆಂಬ ನಂ
ಬುಗೆಯಿಂದ ತನ್ನ ಪದುಮಾವತೀದೇವಿ ಸಹಿ
ತಗಲದುತ್ಸವಿಸುತಿಪ್ಪಾದಿಮಯ್ಯನ ಜಸಂ ಸುಳಿಯತೊಡಗಿತ್ತಿಳೆಯೊಳು॥೬೬॥

ಅತ್ತ ಸೌರಾಷ್ಟ್ರದೊಳಗಾದಯ್ಯ ತಡೆದನೆಂ
ದತ್ಯುಮ್ಮಳಿಪ ಜನನಿ ಪಿತರಿದ್ದೆಡೆಗೆ ತನ್ನ
ಚಿತ್ತಕೆ ಬಪ್ಪ ಮಾನಿಸರಂ ಸುಖಾಸನವ ಕಳುಹಿ ಸತಿ ತಂದೆ ತಾಯ
ಅತ್ತೆಮಾವಂದಿರೊಳಗಾದೆಲ್ಲರಂ ಬರಿಸಿ
ಚಿತ್ತಜಾರಿಯ ನಿಬಂಧಕ್ಕೆ ಹುಲಿಗೆಱೆಗೆ ದೊರೆ
ವೆತ್ತ ಮುಖ್ಯರ ಮಾಡಿ ನಡೆಸಿ ಹರುಷಂಬಡಿಸಿ ಸುಖಮಿರ್ದನಾದಯ್ಯನು॥೬೭॥

ಕೃತಜ್ಞತೆಗಳು.
ಸಂಪಾದಕರು,
ಡಾ ॥ ಆರ್. ಸಿ. ಹಿರೇಮಠ,
ಡಾ ॥ ಎಂ. ಎಸ್. ಸುಂಕಾಪುರ.

ಪ್ರಕಾಶನ,
ಕನ್ನಡ ಸಾಹಿತ್ಯ ಪರಿಷತ್ತು ,
ಪಂಪಮಹಾಕವಿರಸ್ತೆ , ಚಾಮರಾಜಪೇಟೆ,
ಬೆಂಗಳೂರು-೫೬೦೦೧೮.








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ