ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜೂನ್ 2, 2019

ಶ್ರೀವಿಜಯಕೃತ ಕವಿರಾಜಮಾರ್ಗಂ

ಕವಿರಾಜಮಾರ್ಗಂ- ಶ್ರೀವಿಜಯ.
( ಶ್ರೀವಿಜಯಕೃತ ಕವಿರಾಜಮಾರ್ಗಂ)

ಕವಿರಾಜಮಾರ್ಗವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವೂ, ಮಹತ್ವಪೂರ್ಣವೂ ಆದ ಸ್ಥಾನವನ್ನು ಪಡೆದಿದೆ.  ಈವರೆಗೆ ಉಪಲಬ್ಧವಾಗಿರುವ ಕನ್ನಡ ಗ್ರಂಥಗಳಲ್ಲಿ ಕವಿರಾಜಮಾರ್ಗವು ಮೊತ್ತಮೊದಲನೆಯದು. ಇದು ಅಲಂಕಾರಶಾಸ್ತ್ರಕ್ಕೆ ಸಂಬಂಧಪಟ್ಟ ಲಕ್ಷಣ ಗ್ರಂಥ. ಕನ್ನಡದಲ್ಲಿ ಕಾವ್ಯಮೀಮಾಂಸೆಯಪರಂಪರೆಗೆ ತಲಕಾವೇರಿ. ಈ ಗ್ರಂಥವನ್ನು ರಚಿಸಿದವನು ರಾಷ್ಟ್ರಕೂಟವಂಶದ ದೊರೆ ನೃಪತುಂಗನೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಆತನ ಸಭಾಸದನಾಗಿದ್ದ ಕವಿಯೊಬ್ಬನು ಇದರ ಕರ್ತೃಎಂದು ಬೇರೆ ಹಲವು ಮಂದಿ ವಿದ್ವಾಂಸರ ಅಭಿಮತ. ನೃಪತುಂಗ ಸಭಾಸದನಾದ ಆ ಕವಿ ಶ್ರೀವಿಜಯನೆಂದು ಕೆಲವರೂ, ಕವೀಶ್ವರನೆಂದು ಇನ್ನೂ ಕೆಲವರು ವಾದಿಸಿದ್ದಾರೆ. ಕವಿ ಯಾರೇ ಆಗಿದ್ದರೂ, ಈ ಗ್ರಂಥವು ನೃಪತುಂಗನ ಆಳಿಕೆಯಲ್ಲಿ ( ಕ್ರಿ. ಶ. ೮೧೪-೮೭೭) ರಚಿತವಾಗಿರುವುದು ನಿರ್ವಿವಾದವಾಗಿದೆ. ಇದರ ನಿರ್ಮಾಣಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿರುವಪ್ರೇರಕ ಶಕ್ತಿಯೂ ಕವಿಯ ಆಶ್ರಯದಾತನೂ ಆಗಿರುವುದರಿಂದಲೂ ನೃಪತುಂಗನ ವಿಚಾರವನ್ನು ಪ್ರಸ್ತಾವಿಸಬೇಕಾದ್ದು ಅಗತ್ಯ.

ರಾಷ್ಟ್ರಕೂಟ ವಂಶವು ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರದೇಶಗಳನ್ನು ಎರಡು ಶತಮಾನಗಳಿಗಿಂತ ಹೆಚ್ಚು ಕಾಲ ತನ್ನ ಆಳ್ವಿಕೆಯಲ್ಲಿ ಇಟ್ಟುಕೊಂಡಿದ್ದಿತು. ಈ ವಂಶದ ಮೊದಲ ದೊರೆ ದಂತಿವರ್ಮ. ನೃಪತುಂಗನು ಮೂರನೆಯ ಗೋವಿಂದನ ಏಕಮಾತ್ರ ಪುತ್ರ.ಇವನು ಪಟ್ಟಕ್ಕೆ ಬಂದಾಗ ಶರ್ವ ಎಂಬ ಹೆಸರಿಗೆ ಬದಲು ಅಮೋಘವರ್ಶ ಎಂಬ ಹೆಸರನ್ನು ತಳೆದನು.ತಂದೆ “ ಜಗತ್ತುಂಗ “ ಎಂದು ಪ್ರಸಿದ್ಧನಾಗಿದ್ದಂತೆ “ ನೃಪತುಂಗ” ನೆಂದು ಪ್ರಸಿದ್ಧನಾದನು. ಸಮಕಾಲೀನ ಶಾಸನಗಳಲ್ಲಿ ಅತಿಶಯಧವಳ, ಲಕ್ಷ್ಮೀವಲ್ಲಭ, ಮಹಾರಾಜಶರ್ವ, ನೃಪತುಂಗ, ಪೃಥ್ವೀವಲ್ಲಭ ಎಂದೂ ನೃಪತುಂಗನ ಬಿರುದುಗಳು ಉಲ್ಲೇಖಗೊಂಡಿವೆ. ಕವಿರಾಜಮಾರ್ಗದಲ್ಲಿ ಕಂಡುಬರುವ ಬಿರುದುಗಳೆಂದರೆ ನೀತಿನಿರಂತರ, ಕೃತಕೃತ್ಯಮಲ್ಲ
( ವಲ್ಲಭ) ವೀರನಾರಾಯಣ, ನಿತ್ಯಮಲ್ಲವಲ್ಲಭ, ನರಲೋಕಚಂದ್ರ.ಕಾವ್ಯದಲ್ಲಿ ಮೇಲಿಂದ ಮೇಲೆ ಉಕ್ತವಾಗಿರುವುವು
ಅತಿಶಯಧವಳ, ನೃಪತುಂಗ, ಅಮೋಘವರ್ಷ ಎಂಬ ಬಿರುದುಗಳು. ರಾಷ್ಟ್ರಕೂಟ ವಂಶದ ದೊರೆಗಳಲ್ಲಿ ಅನೇಕ ಮಂದಿಗೆ ಅಮೋಘವರ್ಷ ಎಂಬ ಬಿರುದಿರುವುದೂ ನೃಪತುಂಗನೊಬ್ಬನಿಗೆ ಮಾತ್ರ ಅತಿಶಯಧವಳ ಎಂಬ ಬಿರುದಿರುವುದು ಗಮನಾರ್ಹ.

ಇದು ಅಲಂಕಾರ ಗ್ರಂಥವಾದರೂ ಇದರಲ್ಲಿ ಕಾವ್ಯಶಾಸ್ತ್ರದ ಹಲವು ವಿಷಯಗಳ ಜತೆಗೆ ಆ ಕಾಲದ ಕನ್ನಡನಾಡು, ನುಡಿ, ಜನ, ಮೊದಲಾದವುಗಳ ಬಗೆಗೆ ಮಾಹಿತಿಗಳಿವೆ. ಭಾರತೀಯ ಅಲಂಕಾರಶಾಸ್ತ್ರಸಂಪ್ರದಾಯವನ್ನು ಸ್ಥಳೀಯ ಭಾಷೆಯಲ್ಲಿ ಪರಿಚಯ ಮಾಡುವ ಹೊಣೆಗಾರಿಕೆಯನ್ನು ಹೊತ್ತು ಸ್ವೀಯಪ್ರತಿಭೆ ಮತ್ತು ವೈದುಷ್ಯಗಳನ್ನು ಕೂಡ ಜೋಡಿಸಿ ಒಂಬತ್ತನೆಯ
ಶತಮಾನದಷ್ಟು ಹಿಂದೆಯೇ ಇಂಥ ವಿಶಿಷ್ಟಕೃತಿಯನ್ನು ರಚಿಸಿದ ಕೃತಿಕಾರನನ್ನು ಅಭಿನಂದಿಸಬೇಕು. ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಪ್ರಪಂಚಭಾಷೆಗಳಲ್ಲೇ ಕವಿರಾಜಮಾರ್ಗ ಒಂದು ವಿಶಿಷ್ಟ ಶಾಸ್ತ್ರಗ್ರಂಥವೆಂದು ಹೇಳಲು ಅವಕಾಶವಿದೆ. ಇದು ಕೇವಲ ಒಂದು ಅಲಂಕಾರಶಾಸ್ತ್ರ ಸಂಪ್ರದಾಯವನ್ನು ಪರಿಚಯಿಸುವ ಕೃತಿಯಲ್ಲ. ತನ್ನ ನಾಡಿನ ಭೌಗೋಳಿಕ ವ್ಯಾಪ್ತಿ, ಕನ್ನಡದ ತಿರುಳು, ದೇಶ್ಯಭಾಷೆಯ ಪ್ರಭೇದಗಳ, ದಕ್ಷಿಣೋತ್ತರ ಮಾರ್ಗಗಳು, ಸಂಸ್ಕೃತ  ಭಾಷೆಯ ಬಳಕೆಯಲ್ಲಿ ಇತಿಮಿತಿಗಳು ಮೊದಲಾದ ವಿಷಯಗಳನ್ನು ಪ್ರತಿಪಾದಿಸಿದ ಗ್ರಂಥವಾಗಿ ಪ್ರಶಸ್ತಿಯನ್ನು ಪಡೆದಿದೆ.

ಪ್ರಥಮಪರಿಚ್ಛೇದಂ

ಮಂಗಳಾಚರಣೆ

ಶ್ರೀತಳ್ತುರದೊಳ್ ಕೌಸ್ತುಭ
ಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ
ಪ್ರೀತಿಯಿನಾವನನಗಲಳ್
ನೀತಿನಿರಂತರನುದಾರನಾ ನೃಪತುಂಗನಂ॥೧-೧॥

ಕೃತಕೃತ್ಯಮಲ್ಲನಪ್ರತಿ
ಹತವಿಕ್ರಮನೊಸೆದು ವೀರನಾರಾಯಣನ
ಪ್ಪತಿಶಯಧವಳಂ ನಮಗೀ
ಗತರ್ಕಿತೋಪಸ್ಥಿತಪ್ರತಾಪೋದಯಮಂ ॥೧-೨॥

ಅನ್ವಯ : ಶ್ರೀ ತಳ್ತ ಉರದೊಳ್= ಲಕ್ಷ್ಮಿ ವಕ್ಷಸ್ಥಳದಲ್ಲಿ ನೆಲಸಿ, ಕೌಸ್ತುಭಜಾತದ್ಯುತಿ= ಕೌಸ್ತುಭದಿಂದ ಉಂಟಾದ, ಬಳಸಿ= ಸುತ್ತುವರಿದು, ಕಾಂಡಪಟದಂತೆ ಇರೆ= ತೆರೆಯಂತೆ ಇರಲು, ಸಂಪ್ರೀತಿಯಿನ್= ಪ್ರೀತಿಯಿಂದ, ಆವನನ್ ಅಗಲಳ್= ಯಾರನ್ನು ಅಗಲದೆ ಇರುವಳೋ, ಆ ನೀತಿನಿರಂತರನ್=ಆ ನೀತಿನಿರಂತರನು, ಉದಾರನ್= ಉದಾರನು,(ಆದ) ನೃಪತುಂಗನ್= ನೃಪತುಂಗನು, ಕೃತಕೃತ್ಯಮಲ್ಲನ್= ಸಫಲತೆ ಪಡೆದ ವೀರ, ಅಪ್ರತಿಹತವಿಕ್ರಮ= ಎದುರಿಲ್ಲದ ಶೂರ, ವೀರನಾರಾಯಣನಪ್ಪ = ವೀರ ನಾರಾಯಣನಾಗಿರುವ, ಅತಿಶಯಧವಳನ್= ಅತಿಶಯಧವಳನ್ ಎಂಬ ಬಿರುದುಳ್ಳವನು
ಒಸೆದು = ಸಂತೋಷದಿಂದ, ನಮಗೆ, ಅತರ್ಕಿತ ಉಪಸ್ಥಿತ= ನಿಸ್ಸಂಶಯವಾದ, ಪ್ರತಾಪ+ಉದಯನ್= ಸಾಹಸದ ಏಳ್ಗೆಯನ್ನು. ಈಗೆ=ಒದಗಿಸಲಿ.

ಗದ್ಯಾನುವಾದ: ಲಕ್ಷ್ಮಿ ವಕ್ಷಸ್ಥಳದಲ್ಲಿ ನೆಲಸಿ ಕೌಸ್ತುಭದಿಂದ ಉಂಟಾದ ಕಾಂತಿ ಸುತ್ತುವರಿದು ತೆರೆಯಂತಿರಲು, ಪ್ರೀತಿಯಿಂದ ಯಾರನ್ನು ಅಗಲದೆ ಇರುವಳೋ, ಆ ನೀತಿನಿರಂತರನು, ಉದಾರನೂ ಆದ ನೃಪತುಂಗನು, ಕೃತಕೃತ್ಯಮಲ್ಲನು ಅಪ್ರತಿಹತ
ವಿಕ್ರಮನು, ವೀರನಾರಾಯಣನು ಆದ ಅತಿಶಯಧವಳನು ಸಂತೋಷದಿಂದ ನಮಗೆ ನಿಸ್ಸಂಶಯವಾದ ಸಾಹಸದ ಏಳ್ಗೆಯನ್ನು ಒದಗಿಸಲಿ.

ವಿಶೇಷ: ಕವಿರಾಜಮಾರ್ಗದ ಮೊದಲ ಎರಡು ಪದ್ಯಗಳು ರಾಷ್ಟ್ರಕೂಟರಾಜ ನೃಪತುಂಗನಿಗೂ ವಿಷ್ಣುವಿಗೂ ಅಭೇಧವನ್ನು ಕಲ್ಪಿಸುತ್ತವೆ. ರಾಜ್ಯಲಕ್ಷ್ಮಿಯನ್ನು ಧರಿಸಿದ ನೃಪತುಂಗನಿಗೂ ಶ್ರೀದೇವಿಯನ್ನು ಧರೆಸಿದ ವಿಷ್ಣುವಿಗೂ ಇಲ್ಲಿ ಹೇಳಿರುವ ಎಲ್ಲ ಬಿರುದುಗಳೂ ಸರಿಹೊಂದುತ್ತವೆ. ಕೃತಕೃತ್ಯಮಲ್ಲ, ಅಪ್ರತಿಹತವಿಕ್ರಮ, ಅತಿಶಯಧವಳ ಮುಂತಾದುವು ನೃಪತುಂಗನ ಬಿರುದುಗಳು. ಸಾಹಿತ್ಯ ಕೃತಿಯನ್ನು ಶ್ರೀಕಾರದಿಂದ ಪ್ರಾರಂಭ ಮಾಡುವ ಸಂಪ್ರದಾಯವನ್ನು ಇಲ್ಲಿ ಅನುಸರಿಲಾಗಿದೆ.

ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರರುಚಿರಪದರಚನೆ ಚಿರಂ
ದೇವಿ ಸರಸ್ವತಿಹಂಸೀ
ಭಾವದೆ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್॥೧-೩॥

ಅನ್ವಯ: ಶ್ರೀ = ಶ್ರೀಯುತಳು, ವಿಶದವರ್ಣೆ= ಸ್ವಚ್ಛವಾದ ಬಣ್ಣವುಳ್ಳವಳು, ಮಧುರ +ಆರಾವ + ಉಚಿತೆ=ಮಧುರವಾದ ಶಬ್ಧದವಳು, ಚತುರ ರುಚಿರ ಪದರಚನೆ= ಚತುರವಾದ ಮತ್ತು ಸುಂದರವಾದ ಪದರಚನೆ ಉಳ್ಳವಳು, ಚಿರಂದೇವಿ ಸರಸ್ವತಿ= ಶಾಶ್ವತತ್ವವುಳ್ಳವಳಾದ ಸರಸವತಿ, ಮನ್ಮಾನಸದೊಳ್= ನನ್ನ ಮನಸ್ಸಿನಲ್ಲಿ, ಹಂಸೀ ಭಾವದೆ= ಹಂಸಿಯಂತೆ, ಕೂರ್ತು ನೆಲೆಗೊಳ್ಗೆ= ಕಳಿತು ನೆಲೆಗೊಳ್ಳಲಿ.

ಭಾವಾರ್ಥ :ಶ್ರೀಯುತಳು ಸ್ವಚ್ಛವಾದ ಬಣ್ಣವುಳ್ಳವಳು, ಮಧುರವಾದ ಶಬ್ಧದವಳು, ಚತುರವಾದ ಮತ್ತು ಸುಂದರವಾದ ಪದರಚನೆಯುಳ್ಳವಳು, ಶಾಶ್ವತತ್ವವುಳ್ಳವಳು, ಆದ ಸರಸ್ವತಿ ನನ್ನ ಮಾನಸದಲ್ಲಿ ನೆಲೆಗೊಳ್ಳಲಿ.
ವಿಶೇಷ: ಸರಸ್ವತಿಯ ಪ್ರಾರ್ಥನೆಯಲ್ಲಿ  ಕಾವ್ಯಾದರ್ಶದ ಶ್ಲೋಕವನ್ನು ಅನುಸರಿಸಲಾಗಿದೆ.( ೧.೧)

ಚತುರ್ಮುಖಮುಖಾಂಭೋಜವನಹಂಸವಧೂರ್ಮಮ।
ಮಾನಸೇ ರಮತಾಂ ನಿತ್ಯಂಸರ್ವಶುಕ್ಲಾ ಸರಸವತೀ॥
( ಬ್ರಹ್ಮನ ಮುಖವೆಂಬ ಕಮಲವನದಲ್ಲಿ ಹಂಸಿಯಾದ ಸರ್ವಧವಳ ಸರಸ್ವತಿ ನನ್ನ ಮಾನಸದಲ್ಲಿ ನಿತ್ಯವೂ ಸಂತೋಷದಿಂದ ನೆಲಸಿರಲಿ)

ಸಂಸ್ಕೃತದಲ್ಲಿರುವ “ ಚತುರ್ಮುಖ” ನನ್ನು ಬಿಟ್ಟು ಶ್ರೀವಿಜಯನು  ಮಧುರಾರಾವೋಚಿತೆ, ಚತುರರೈಚಿರಪದರಚನೆ, ಚಿರಂದೇವಿ ಎಂಬ ವಿಶೇಷಣಗಳನ್ನು ಸೇರೆಸಿದ್ದಾನೆ. “ ಮಧುರಾರಾವ “, ಹಂಸಧ್ವನಿಯನ್ನು, “ಪದರಚನೆ” ಹಂಸಿಯ ಪಾದರಚನೆಯನ್ನು ಕೂಡ ಸೂಚಿಸುವುದರಿಂದ “ ಹಂಸೀಭಾವ” ಎಂಬುದು ಸಾರ್ಥಕವಾಗಿದೆ.

ಪೂರ್ವಕವಿಪ್ರಶಂಸೆ:

ಪರಮಾಲಂಕಾರೋಚಿತ
ವಿರಚನೆಗಳ್ ನೆಗೞ್ಗುಮಾರ ವದನೋದರದೊಳ್
ನೆರಮಕ್ಕಾ ಪರಮಕವೀ
ಶ್ವರರೆಮಗೆ ಕೃತಿಯೊಳಕೃತಕಾಚಾರಪರರ್॥೧-೪॥

ಅನ್ವಯ: ಪರಮ+ಅಲಂಕಾರ+ಉಚಿತ= ಉತ್ತಮ ಅಲಂಕಾರವೆಂದೆನಿಸುವ, ವಿರಚನೆಗಳ್= ಶ್ರೇಷ್ಠರಚನೆಗಳು, ಆರ ವದನ + ಉದರದೊಳ್ ನೆಗೞ್ಗುಮ್+ ಯಾರ ಬಾಯಲ್ಲಿ ಮೆರೆಯುವುವೋ, ಅಕೃತಕ ಆಚಾರಪರರ್= ಕೃತ್ರಿಮವಲ್ಲದ ಸಂಪ್ರದಾಯಗಳನ್ನು ಅನುಸರಿಸುವ, ಆ ಪರಮ ಕವೀಶ್ವರರ್= ಆ ಉತ್ತಮ ಕವಿಗಳು, ಎಮಗೆ= ನಮಗೆ, ಈ ಕೃತಿಯೊಳ್ ನೆರಮಕ್ಕೆ= ಈ ಕೃತಿಯಲ್ಲಿ ನೆರವಾಗಲಿ.

ಭಾವಾರ್ಥ: ಉತ್ತಮ ಅಲಂಕಾರವೆಂದೆನಿಸುವ ಶ್ರೇಷ್ಠರಚನೆಗಳು ಯಾರ ಬಾಯಿಯಲ್ಲಿ ಮೆರೆಯುವುವೋ, ಕೃತ್ರಿಮವಲೂಲದ ಸಂಪ್ರದಾಯಗಳನ್ನು ಅನುಸರಿಸುವ ಆ ಉತ್ತಮ ಕವಿಗಳು ನಮಗೆ ಈ ಕೃತಿ ರಚನೆಯಲ್ಲಿ ನೆರವಾಗಲಿ.

ವೆಶೇಷ: “ ಪರಮಾಲಂಕಾರೋಚಿತ ವಿರಚನೆಗಳ್” ಎಂದಾಗ ಅಲಂಕಾರಕರಿಂದ ನಿರ್ದೇಶಿತವಾದ ಮಾರ್ಗದಲ್ಲಿ ರಚಿತವಾದ ಶ್ರೇಷ್ಠರಚನೆಗಳೆಂಬ ಸೂಚನೆ ಇದೆ. ದಂಡಿಯ ಶ್ಲೋಕವನ್ನು ನೋಡಿದರೆ ಈ ಅರ್ಥ ಸರಿಯೆನೇಸುತ್ತದೆ. ( ೧.೨)

ಪೂರ್ವಶಾಸ್ತ್ರಾಣಿ ಸಂಹೃತ್ಯ ಪ್ರಯೋಗಾನುಪಲಕ್ಷ್ಯಚ ।
ಯಥಾಸಾಮರ್ಥ್ಯಮಸ್ಮಾಭಿಃ ಕ್ರಿಯತೇ ಕಾವ್ಯಲಕ್ಷಣಮ್॥

( ಹಿಂದಿನ ಶಾಸ್ತ್ರಗ್ರಂಥಗಳನ್ನು ಸ್ವೀಕರಿಸಿ, ಪ್ರಯೋಗಗಳನ್ನು ಗಮನಿಸಿ ಕಾವ್ಯಲಕ್ಷಣವನ್ನು ಯಥಾಶಕ್ತಿ ಹೇಳುತ್ತೇನೆ)

ನೃಪತುಂಗನ ಆಸ್ಥಾನ:

ಶ್ರುತದೊಳ್ ಭಾವಿಸಿ ನೋೞ್ಪೊಡೆ ।
ಸತತಂ ಕವಿವೃಷಭರಾ ಪುರಯೋಗಂಗಳೊಳಂ॥
ಕೃತಪರಿಚಯಬಲನಪ್ಪನ ।
ನತೆಶಯಧವಳನ ಸಭೃಸದರ್ ಮನ್ನಿಸುವರ್॥೧- ೫॥

ಅನ್ವಯ: ಶ್ರುತದೊಳ್ ಭಾವಿಸಿ ನೋೞ್ಪೊಡೆ= ಯೋಚನೆಮಾಡಿ ನೋಡಿದರೆ. ಸತತಮ್= ಯಾವಾಗಲೂ, ಕವಿವೃಷಬರಾ
ಪ್ರಯೋಗಂಗಳೊಳಮ್= ಕವಿಶ್ರೇಷ್ಠರ ಪ್ರಯೋಗಗಳಲ್ಲಿ. ಕೃತ+ ಪರಿಚಯ+ಬಲನಪ್ಪನ್= ಒಳ್ಳೆಯ ಪರಿಚಯ ಬಲವಿರುವವನು, ಅತಿಶಯ ಧವಳನ= ನೃಪತುಂಗನ , ಸಭಾಸದರ್= ಸಭಾಸದರು , ಮನ್ನಿಸುವರ್= ಗೌರವಿಸುವರು.

ಭಾವಾರ್ಥ: ಯೋಚನೆಮಾಡಿನೋಡಿದರೆ, ಯಾವಾಗಲೂ ಕವಿಶ್ರೇಷ್ಠರ ಪ್ರಯೋಗಗಳಲ್ಲಿ ಒಳ್ಳೆಯ ಪರಿಚಯಬಲವಿರುವವನನ್ನು ಅತಿಶಯಧವಳನ, ( ನೃಪತುಂಗನ)  ಸಭಾಸದರು ಗೌರವಿಸುವರು.

ವ್ಯಾಕರಣಕಾವ್ಯನಾಟಕ।
ಲೋಕಕಳಾಸಮಯಮಾದಳಂಕೃತಿಗಳೊಳಂ॥
ವ್ಯಾಕುಳನಲ್ಲದನೇಕೆ ವಿ ।
ವೇಕಬೃಹಸ್ಪತಿಯ ನಗರಮಂ ಪುಗುತರ್ಪಂ॥೧-೬॥

ಅನ್ವಯ : ವ್ಯಾಕರಣ ಕಾವ್ಯ  ನಾಟಕ ಲೋಕಕಳಾಸಮಯಮ್ ಆದ= ವ್ಯಾಕರಣ,  ಕಾವ್ಯ, ನಾಟಕ, ಲೋಕಕಲಾವಿದ್ಯೆಗಳ, ಅಳಂಕೃತಿಗಳೊಳಮ್= ಸೌಂದರ್ಯದಲ್ಲಿ, ವ್ಯಾಕುಳನ್ ಅಲ್ಲದನ್= ಮನಸ್ಸಿಲ್ಲದವನು, ಏಕೆ,
ವಿವೇಕಬೃಹಸ್ಪತಿಯ= ವಿವೇಕದಲ್ಲಿ ಬೃಹಸ್ಪತಿಗೆ ಸಮಾನನಾದವನ(ನೃಪತುಂಗನ) ನಗರಮನ್ ಪುಗುತರೂಪನ್= ನಗರವನ್ನು ಪ್ರವೇಶಿಸುತ್ತಾನೆ ?

ಭಾವಾರ್ಥ: ವ್ಯಾಕರಣ,  ಕಾವ್ಯ, ನಾಟಕ, ಲೋಕಕಲಾವಿದ್ಯೆಗಳ  ಸೌಂದರ್ಯದಲ್ಲಿ ಮನಸ್ಸಿಲ್ಲದವನು ವಿವೇಕಬೃಹಸ್ಪತಿಯ (ನೃಪತುಂಗನ) ನಗರದಲ್ಲಿ ಏಕೆ ಪ್ರವೇಶಿಸುತ್ತಾನೆ?

ವಿಚಾರ: ನೃಪತುಂಗನ ಆಸ್ಥಾನದಲ್ಲಿ ವ್ಯಾಕರಣ,  ಕಾವ್ಯ, ನಾಟಕ, ಲೋಕಕಲಾವಿದ್ಯೆಗಳನ್ನು ಬಲ್ಲವರಿದ್ದರೆಂಬುದನ್ನು ಶ್ರೀವಿಜಯ ಈ ಪದ್ಯದ ಮೂಲಕ ತಿಳಿಸುತ್ತಿದ್ದಾನೆ. ಇದು ಕವಿರಾಜಮಾರ್ಗ ಪರಿಸರದ ಶಾಸ್ತ್ರ,  ಸಾಹಿತ್ಯ ಮತ್ತು ಇತರ ವಿದ್ಯೆಗಳ ಮೇಲೆ ಕೂಡ ಬೆಳಕನ್ನು ಚೆಲ್ಲುತ್ತದೆ.

ಅಪಂಡಿತರ ಸ್ವಭಾವ

ಮೃಗಪಶುಗಣಂಗಳೊ।
ಳಗಣಿತನಿಜಜಾತಿಜನಿತಭಾಷೆಗಳೆಂದುಂ ॥
ನೆಗೞ್ದಂತಿರೆ ನರರೊಳಮ।
ಪ್ರಗಲ್ಭವಚನಪ್ರವೃತ್ತಿ ನೆಗೞ್ಗುಂ ಸಹಜಂ॥೧-೭॥

ಅನ್ವಯ: ಮೃಗ ಪಶು ಶಕುನಿಗಣಂಗಳೊಳ್ =ವನ್ಯಮೃಗಗಳು, ಇತರ ಪ್ರಾಣಿಗಳು ಮತ್ತು ಹಕ್ಕಿಗಳಲ್ಲಿ, ನಿಜಜಾತಿ ಜನಿತ= ತಮ್ಮ ತಮ್ಮ ಜಾತಿಗೆ ಅನುಗುಣವಾದ, ಅಗಣಿತ ಭಾಷೆಗಳ್= ಲೆಕ್ಕಕ್ಕೆ ಮೀರಿದ ಭಾಷೇಗಳು, ಎಂದುಮ್ ನೆಗೞ್ದು ಅಂತು ಇರೆ= ಯಾವಾಗಲೂ ಪ್ರಸಿದ್ಧವಾಗಿರುವಾಗ, ನರರೊಳಮ್=ಮಾನವರಲ್ಲಿಯೂ, ಅಪ್ರಗಲ್ಭ= ಪ್ರೌಢಿಮೆಯಿಲ್ಲದ, ವಚನ ಪ್ರವೃತ್ತಿ= ಮಾತಿನ ರೀತಿ, ನೆಗೞ್ಗುಮ್ ಸಹಜಂ= ಪ್ರಸಿದ್ಧವಾಗಿರುವುದು ಸಹಜ.

ಭಾವಾರ್ಥ: ವನ್ಯಮೃಗಗಳು, ಇತರ ಪ್ರಾಣಿಗಳು ಮತ್ತು ಹಕ್ಕಿಗಳಲ್ಲಿ ತಮ್ಮ ತಮ್ಮ ಜಾತಿಗೆ ಅನುಗುಣವಾದ ಲೆಕ್ಕಕ್ಕೆ ಮೀರಿದ ಭಾಷೆಗಳಿರುವುದು ಸಹಜ. ಅದರಂತೆಯೇ ಮಾನವರಲ್ಲಿಯೂ ಪ್ರೌಢಿಮೆಯಿಲ್ಲದ ಮಾತಿನ ರೀತಿ ಪ್ರಸಿದ್ಧವಾಗಿರುವುದು ಸಹಜ.

ಗುಣಮಿದು ದೋಷಮಿದೆಂಬೀ।
ಗಣಿದಮನೆತ್ತಱಿಗುಮಶ್ರುತಪ್ರಕೃತಿಜನಂ ॥
ತೃಣಸಸ್ಯಘಾಸವಿಷಯ ।
ಪ್ರಣಯಂ ಸಮವೃತ್ತಿಯಪ್ಪವೋಲ್ ಮೃಗಗಣದೊಳ್॥೧-೮॥

ಅನ್ವಯ: ಮೃಗಗಣದೊಳ್= ಮೃಗಸಮೂಹದಲ್ಲಿ, ತೃಣ ಸಸ್ಯ ಘಾಸ ವಿಷಯ ಪ್ರಣಯಮ್= ಹುಲ್ಲು, ಸಸ್ಯ, ಮೇವು ಇವುಗಳ ವಿಷಯದಲ್ಲೆ, ಪ್ರಣಯಮ್=ಆಸೆ, ಸಮವೃತ್ತಿಯಪ್ಪವೋಲ್=ಸಮವಾಗಿರುವಂತೆ, ಗುಣಮ್ ಇದು ದೋಷಂ ಇದು ಎಂಬ ಈ ಗಣಿದಮನ್= ಇದು ಗುಣ, ಇದು ದೋಷ, ಎಂಬ ಲೆಕ್ಕಾಚಾರವನ್ನು, ಅಶ್ರುತ ಪ್ರಕೃತಿ ಜನಮ್= ಅವಿದ್ಯಾವಂತರಾದ ಮುಗ್ಧ ಜನ, ಎತ್ತ ಅಱಿಗುಮ್= ಹೇಗೆ ತಿಳಿಯುತ್ತಾರೆ.

ಭಾವಾರ್ಥ: ಮೃಗಸಮೂಹದಲ್ಲಿ ಹುಲ್ಲು, ಸಸ್ಯ, ಮೇವು- ಇವುಗಳ ವಿಷಯದಲ್ಲಿ ಸಮಾನವಾದ ಆಸೆ ಇರುವಂತೆಯೇ, ಅವಿದ್ಯಾವಂತರಾದ ಮುಗ್ಧ ಜನರಲ್ಲಿ ಇದು ಗುಣ, ಇದು ದೋಷ ಎಂಬ ವಿವೇಚನೆ ಹೇಗಿರುತ್ತದೆ.

ವಿಚಾರ: ದಂಡಿ ಅವಿದ್ಯಾವಂತರನ್ನು ಅಂಧರೊಂದಿಗೆ ಹೋಲಿಸಿದ್ದಾನೆ(೧.೮) ಶ್ರೀವಿಜಯ ಅವರನ್ನು ವಿವೇಚನೆ ಇಲ್ಲದ ಪ್ರಾಣಿಗಳಿಗೆ ಹೋಲಿಸಿದ್ದಾನೆ.

ಕಾವ್ಯಾಭ್ಯಾಸ

ಅದಱಿಂ ಪರಮಾಗಮಕೋ ।
ವಿದನಪ್ಪುದು ಪೂರ್ವಕಾವ್ಯರಚನೆಗಳಂ ತಾಂ ॥
ಮೊದಲೊಳ್ ಕಲ್ತಂಗಲ್ಲದೆ ।
ಪದದೊಳ್ ಜಾಣುಂ ಬೆಡಂಗುಮಕ್ಕುಮೆ ಕೃತಿಯೊಳ್॥೧-೯॥

ಅನ್ವಯ : ಅದಱಿನ್= ಅದರಿಂದ, ಪರಮ ಆಗಮ ಕೋವಿದನ್ ಅಪ್ಪುದು= ಶ್ರೇಷ್ಠ ಶಾಸ್ತ್ರಗಳಲ್ಲಿ ನುರಿತವನಾಗಬೇಕು. ಪೂರ್ವ ಕಾವ್ಯ ರಚನೆಗಳನ್= ಪೂರ್ವಕಾವ್ಯ ರಚನೆಗಳನ್ನು , ತಾನ್ ಮೊದಲೊಳ್ ಕಲ್ತಂಗೆ ಅಲ್ಲದೆ= ತಾನು ಮೊದಲು ಕಲಿತವನಿಗಲ್ಲದೆ, ಪದದೊಳ್= ಪದಗಳಲ್ಲಿ, ಜಾಣುಮ್ ಬೆಡಂಗುಮ್=ಜಾಣ್ಮೆ ಮತ್ತು ಸೊಬಗು, ಅಕ್ಕುಮೆ ಕೃತಿಯೊಳ್= ಕೃತಿಯಲ್ಲಿ ಇರುತ್ತದೆಯೇ.

ಭಾವಾರ್ಥ: ಆದುದರಿಂದ,  ಕವಿ ಶ್ರೇಷ್ಠಶಾಸ್ತ್ರಗಳಲ್ಲಿ ನುರಿತವನಾಗಬೇಕು. ಪೂರ್ವಕಾವ್ಯ ರಚನೆಗಳನ್ನು ತಾನು ಮೊದಲು ಕಲಿತವನಿಗಲ್ಲದೆ ಕೃತಿಯ ಪದಗಳಲ್ಲಿ ಜಾಣ್ಮೆ ಮತ್ತು ಸೊಬಗು ಇರುತ್ತದೆಯೇ?

ಜಡಜನಮುಮೆಲ್ಲಮೋದಂ ।
ತಡೆಯದೆ ಕಲ್ಗುಂ ಗುರೂಪದೇಶಕ್ರಮದಿಂ ॥
ನುಡಿವಲ್ಮೆಯಲ್ತದೇಂ ಕ ।
ಲ್ತೊಡನೋದೈವುವಲ್ತೆ ಗಿಳಿಗಳುಂ ಪುರುಳಿಗಳುಂ॥೧-೧೦॥

ಅನ್ವಯ: ಜಡಜನಮುಮ್ ಗುರೂಪದೇಶಕ್ರಮದಿನ್= ಮಂದಬುದ್ಧಿಯವನೂ ಕೂಡ ಗುರುಗಳ ಉಪದೇಶದಿಂದ, ತಡೆಯದೆ ಎಲ್ಲನ್= ಬೇಗನೆ ಎಲ್ಲ ವಿದ್ಯೆಗಳನ್ನೂ, ಓದನ್ ಕಲ್ಗುಂ= ಕಲಿಯುವರು, ನುಡಿ ಬಲ್ಮೆ ಅಲ್ತು= (ಅದು) ಪಾಂಡಿತ್ಯ-
ವೆನಿಸಿಕೊಳ್ಳುವುದಿಲ್ಲ, ಗಿಳಿಗಳುಂ ಪುರುಳಿಗಳುಂ= ಗಿಳಿಗಳು ಮತ್ತು ಪುರುಳಿಗಳು, ಕಲ್ತೊಡನ್+ ಓದುವೈವಲ್ತೆ= ಕಲಿತ ಕೂಡಲೆ ಹಾಗೆಯೇ ಉಚ್ಚರಿಸುವುದಿಲ್ಲವೇ?

ಭಾವಾರ್ಥ: ಮಂದಬುದ್ಧಿಯವರೂ ಕೂಡ ಗುರುಗಳ ಉಪದೇಶದಿಂದ ಬೇಗನೆ ಎಲ್ಲ ವಿದ್ಯೆಗಳನ್ನೂ ಕಲಿಯುವರು. ಆದರೆ ಅದು ಪಾಂಡಿತ್ಯವೆನಿಸಿಕೊಳ್ಳುವುದಿಲ್ಲ. ಗಿಳಿಗಳು ಮತ್ತು ಪುರುಳಿಗಳು ಕಲಿತ ಮಾತುಗಳನ್ನು ಹಾಗೆಯೇ ಉಚ್ಚರಿಸುವುದಿಲ್ಲವೇ?

ವಿಚಾರ:ಪುರುಳಿ = ಹೆಣ್ಣು ಗಿಳಿ, ಇಲ್ಲಿ “ ಬುರಲಿ” ಎಂಬ ಗಿಳಿ ತರಹದ ಹಕ್ಕಿ ಇರಬಹುದು. ( ಸೀತಾರಾಮ ಜಾಗೀರ್ ದಾರ್,
ಕವಿರಾಜಮಾರ್ಗಂ, ೨೦೧೫, ಪು. ೩೦)

ಕಾವ್ಯಹೇತುಗಳು

ಪ್ರತಿಭಾವತ್ವಮುಮಕೃತಕ
ಚತುರತೆಯುಂ ಪರಮಬುಧಜನನೋಪಾಸನಮುಂ
ಶ್ರುತಪರಿಚಯಮುಂ ತರ್ಕುಂ
ಪ್ರತೀತಿಯಂ ವಾಗ್ವಿದಗ್ಧತಾನಿಪುಣತೆಯೊಳ್॥೧-೧೧॥

ಅನ್ವಯ: ಪ್ರತಿಭಾವತ್ತ್ವಮುಮ್= ಪ್ರತಿಭೆಯು, ಅಕೃತಕ ಚತುರತೆಯುಮ್= ನೈಜ ಚತುರತೆಯು, ಪರಮ ಬುಧಜನ+ ಉಪಾಸನಮುಮ್= ಶ್ರೇಷ್ಠ ಪಂಡಿತರ ಸೇವೆಯು, ಶ್ರುತ ಪರೆಚಯಮುಮ್= ಶಾಸ್ತ್ರಗಳ ಪರಿಚಯ, ವಾಕ್+ವಿದಗ್ಧತಾ-
ನಿಪುಣತೆಯೊಳ್= ವಾಕ್ ಪ್ರೌಢಿಮೆಯ ನಿಪುಣತೆಯಲ್ಲಿ, ಪ್ರತೀತಿಯನ್ ತರ್ಕುಮ್= ಪ್ರಸಿದ್ಧಿಯನ್ನು ತರುತ್ತವೆ.

ಭಾವಾರ್ಥ: ಪ್ರತಿಭೆ, ನೈಜ ಚತುರತೆ, ಶ್ರೇಷ್ಠಪಂಡಿತರ ಸೇವೆ ಶಾಸ್ತ್ರಗಳ ಪರಿಚಯ ವಾಕ್ಪರೌಢಿಮೆಯಲ್ಲಿ ನಿಪುಣತೆಯಲ್ಲಿ ಪ್ರಸಿದ್ಧಿಯನ್ನು ತರುತ್ತವೆ.

ವಿಶೇಷ: ಕಾವ್ಯಾದರ್ಶದಲ್ಲಿ ಸಹಜವಾದ ಪ್ರತಿಭೆ, ನಿರ್ದುಷ್ಟವಾದ ಶಾಸ್ತ್ರಪಾಂಡಿತ್ಯ, ನಿರಂತರ ಅಭ್ಯಾಸ ಕಾವ್ಯ ಹೇತುಗಳೆಂದುಹೇಳಲಾಗಿದೆ( ೧.೧೦೩)

ನೈಸರ್ಗಿಕೀ ಚ ಪ್ರತಿಭಾ ಶ್ರುತಂ ಚ ಬಹುನಿರ್ಮಲಮ್
ಅಮಂದಶ್ಚಾಭಿಯೋಗೋಸ್ಯಾಃ ಕಾರಣಂ ಕಾವ್ಯಸಂಪದಂ॥
( ಸಹಜವಾದ ಪ್ರತಿಭೆ, ನಿರ್ಮಲವಾದ ವಿದ್ಯೆ, ಹೆಚ್ಚಿನ ಅಭ್ಯಾಸ ಕಾವ್ಯಸಂಪತ್ತಿಗೆ ಕಾರಣ)
ಕವಿರಾಜಮಾರ್ಗದಲ್ಲಿ ಕೃತಕವಲ್ಲದ ಚತುರತೆಯನ್ನು ಸೇರೆಸಿರುವುದನ್ನು ಗಮನಿಸಬಹುದು)

ಸುಕವಿ - ಕುಕವಿ
ಪಸರಿಸಿದಾ ಬಗೆ ಮನಮಂ
ಪೊಸತಾಗೆ ನೆಗೞ್ಚಲರಿಯನಾ ರಚನೆಯೊಳೇಂ
ಬಸನಂ ತನಗಿನಿತಱ ಬೇ
ವಸಮೇಂ ಕವರ್ದುರುಮೊಳರೆ ಕವಿಯಲ್ಲದರಂ ॥೧-೧೨॥

ಅನ್ವಯ : ಪಸರೆಸಿದ ಆ ಬಗೆ= ವಿಸ್ತರಿಸಿದ ಆಲೋಚನೆ, ಮನಮನ್ ಪೊಸತಾಗೆ ನೆಗೞ್ಚಲ್ ಅಱಿಯನ್= ಮನಸ್ಸನ್ನು ಹೊಸದಾಗಿ ಹರಳಿಸುವಂತೆ ಮಾಡಲಾರದವನಿಗೆ, ಆ ರಚನೆಯೊಳ್= ಆ ರಚನೆಯಲ್ಲಿ, ಏನ್ ಬಸನಂ= ಚಟ ಏಕೆ, ತನಗೆ ಇನಿಱ ಬೇವಸಮೇನ್= ತನಗೆ ಇಷ್ಟೊಂದು ಚಿಂತೆ ಏಕೆ, ಕವಿ ಅಲ್ಲದರನ್= ಕವಿ ಅಲ್ಲದವರನ್ನು, ಕವರ್ದರುಮೊಳರೆ= ದೋಚಿಕೊಳ್ಳುವವರಿದ್ದಾರೆಯೇ?

ಭಾವಾರ್ಥ: ವಿಸ್ತರಿಸಿದ ಆಲೋಚನೆ ಮನಸ್ಸನ್ನು ಹೊಸದಾಗಿ ಹೊಳೆಯುವಂತೆ ಮಾಡಲಾರದವನಿಗೆ ಅಂಥ ರಚನೆಯನ್ನು ಮಾಡುವ ಚಟ ಏಕೆ ? ಕವಿಯಲ್ಲದವರನ್ನು ಯಾರಾದರೂ ದೋಚಿಕೊಳ್ಳುವವರಿದ್ದಾರೆಯೇ ?
ವಿಚಾರ : ಭಾಮಹ ಇದೇ ವಿಷಯವನ್ನು ಸ್ಪಷ್ಟಪಡಿಸುತ್ತಾ “ ಕವಿತ್ವ ಬರೆಯದಿದ್ದರೆ ಯಾವ ಪಾಪವೂ ಇಲ್ಲ. ವ್ಯಾಧಿ ಬರುವುದಿಲ್ಲ. ಆದರೆ ಕೆಟ್ಟ ಕವಿತ್ವ ಮರಣಕ್ಕೆ ಸಮಾನ” ಎಂದಿದ್ದಾನೆ.

ನಾಕವಿತ್ವಮಧರ್ಮಾಯ ವ್ಯಾಧಯೇ ದಂಡನಾಯವಾ ।
ಕುಕವಿತ್ವಂ ಪುನಃ ಸಾಕ್ಷಾನ್ಮೃತಿಮಾಹುರ್ಮನೀಷಿಣಃ॥

ಬಗೆಬಗೆದು ಕೇಳ್ದು ಬುಧರೊಲ
ವೊಗೆದಿರೆ ಹೃದಯದೊಳೆ ತಾಳ್ದ ಮಣಿಹಾರಂಬೋಲ್
ಸೊಗಯಿಸುವ ವಚನವಿರಚನೆ
ನೆಗೞ್ದುಂ ಭಾವಿಸುವೊಡದರ ಪೆಂಪತಿ ಸುಲಭಂ॥೧-೧೩॥

ಅನ್ವಯ: ಬಗೆಬಗೆದು ಕೇಳ್ದು= ಚೆನ್ನಾಗಿ ಯೋಚಿಸಿ ಕೇಳಿ ( ಕೇಳಿದ ಕಾರಣ ), ಬುಧರ ಒಲವು ಒಗೆದಿರೆ= ವಿದ್ವಾಂಸರಲ್ಲಿ ಒಲವು ಹುಟ್ಟಲು, ಹೃದಯದೊಳೆ ತಾಳ್ದ= ಹೃದಯದಲ್ಲಿ ತಳೆದ, ಮಣಿಹಾರಂಬೋಲ್=ಮಣಿಹಾರದಂತೆ, ಸೊಗಯಿಸುವ ವಿರಚನೆ= ಸೊಗಯಿಸುವ ವೆಶಿಷ್ಟರಚನೆ, ನೆಗೞ್ಗುಮ್=ಪ್ರಸಿದ್ಧವಾಗುವುದು, ಭಾವಿಸುವೊಡೆ= ಯೋಚಿಸಿದರೆ, ಅದರ ಪೆಂಪು ಅತಿ ಸುಲಭಂ= ಅದರ ಹಿರಿಮೆ ತುಂಬ ಸುಲಭ ಸಾಧ್ಯ.

ಭಾವಾರ್ಥ: ಮತ್ತೆ ಮತ್ತೆ ಕೇಳುವವರಲ್ಲಿ ಪ್ರೀತಿ ಹುಟ್ಟಲು ಹೃದಯದಲ್ಲಿ ತಳೆದ ಮಣಿಹಾರದಂತೆ ಸೊಗಯಿಸುವ ವಿಶಿಷ್ಟ ರಚನೆ ಪ್ರಸಿದ್ಧವಾಗುವುದು. ಭಾವಿಸಿದರೆ ಅದರ ಹಿರಿಮೆ ತುಂಬ ಸುಲಭ ಸಾಧ್ಯ.

ನೆನೆನೆನೆದು ಪೆಱರ ಮಾತುಗ
ಳನೆ ನೆಗೞ್ದಿರೆ ಕೃತಿಯೊಳಿಡುವವಂ ನಗದ ಗುಹಾ
ಧ್ವನಿಯವೊಲನರೂಥವಚನಂ
ತನಗಾಗಿಸಲಱಿಯನುಚಿತವೃಕ್ಚತುರತೆಯಂ॥೧-೧೪॥

ಅನ್ವಯ: ನೆಗೞ್ದಿರೆ= ಪ್ರಸಿದ್ಧವಾದ, ಪೆಱರಮಾತುಗಳನೆ= ಬೇರೆಯವರ ಮಾತುಗಳನ್ನೇ, ನೆನೆನೆನೆದು=ನೆನೆನೆನೆದು,ಕೃತಿಯೊಳ್ ಇಡುವವನ್= ಕೃತಿಯಲ್ಲಿ ಉಪಯೋಗಿಸುವವನು, ನಗದ ಗುಹಾಧ್ವನಿಯವೊಲ್= ಪರೂವತ ಗುಹೆಯ ಧ್ವನಿಯಂತೆ, ಅನರ್ಥವಚನನ್= ಅರ್ಥವಿಲ್ಲದ ಮಾತುಗಳನ್ನು ಬಳಸುವವನಾಗಿರುತ್ತಾನೆ. ಉಚಿತ ವಾಕ್ಚತುರತೆಯನ್= (ಅವನು) ಸಮಂಜಸವಾದ ಉಕ್ತಿಚಾತುರ್ಯವನ್ನು, ತನಗಾಗಿಸಲ್ ಅಱಿಯನ್= ತನ್ನದು ಮಾಡಿಕೊಳ್ಳಲು ತಿಳಿಯನು.

ಭಾವಾರ್ಥ: ಬೇರೆಯವರ ಮಾತುಗಳನ್ನೇ ನೆನೆದು ತನ್ನ ಕೃತಿಯಲ್ಲಿ ಬಳಸುವವನು ಪರ್ವತ ಗುಹೆಯ ಮಾರ್ದನಿಯಂತೆ ಅರ್ಥ ವಿಲ್ಲದ ಮಾತುಗಳನ್ನು ಬಳಸುವವನಾಗಿರುತ್ತಾನೆ. ಅವನಿಗೆ ಸಮಂಜಸವಾದ ವಾಕ್ಚಾತುರ್ಯವನ್ನು ತನ್ನದಾಗಿಸಿಕೊಳ್ಳುವುದು ಹೇಗೆಂದು ತಿಳಿಯದು.

ಕುಱಿತಂತು ಪೆಱರ ಬಗೆಯಂ
ತೆಱೆದಿರೆ ಪೆಱರ್ಗಱಿಪಲಾರ್ಪವಂ ಮಾತಱಿವಂ
ಕಿಱಿದಱೊಳೆ ಪಿರಿದುಮರ್ಥಮ
ನಱಿಪಲ್ ನೆಱೆವಾತನಾತನಿಂದಂ ನಿಪುಣನ್॥೧-೧೫॥

ಅನ್ವಯ: ಕುಱಿತು ಅಂತು ಪೆಱರ ಬಗೆಯನ್ ತೆರೆದಿರೆ= ತನ್ನಲ್ಲಿ ಮೂಡಿಬಂದ ಅಭಿಪ್ರಾಯ ಇತರರ ಆಲೋಚನೆಯನ್ನು ತಿಳಿಸುತ್ತಿರುವಾಗ, ಪೆಱರ್ಗೆ ಅಱಿಪಲ್ ಆರ್ಪವನ್= ( ಅದನ್ನು) ಇತರರಿಗೆ ತಿಳಿಸಲು ಬಲ್ಲವನು, ಮಾತು ಅಱಿವನ್= ಮಾತನ್ನು ತಿಳಿದವನು, ಕಿಱಿದಱೊಳೆ=ಕಿರಿದರಲ್ಲಿ( ಸ್ವಲ್ಪದರಲ್ಲಿ) ಪಿರಿದುಮ್ಅರ್ಥಮನ್= ವೆಶೇಷ ಅರ್ಥವನ್ನು, ಅಱಿಪಲ್ ನೆಱೆವಾತನ್= ತಿಳಿಸಬಲ್ಲವನು, ಆತನಿಂದಮ್ ನಿಪುಣನ್= ಆತನಿಗಿಂತಲೂ ನಿಪುಣನು.

ಭಾವಾರ್ಥ: ತನ್ನಲ್ಲಿ ಮೂಡಿಬಂದ ಅಭಿಪ್ರಾಯ ಇತರರ ಆಲೋಚನೆಯನ್ನು ತಿಳಿಸುತ್ತಿರುವಾಗ,  ಅದನ್ನು ಇತರರಿಗೆ ತಿಳಿಸಲು ಬಲ್ಲವನು ಮಾತನ್ನು ಅರಿತವನು. ಕಿರಿದರಲ್ಲಿ ಹಿರಿಯ ಅರ್ಥವನ್ನು ತೋರಿಸಿ ತಿಳಿಸಬಲ್ಲವನು ಅವನಿಗಿಂತಲೂ ನಿಪುಣನು.

ವಿಶೇಷ: ಕಿರಿದರಲ್ಲಿ ಹೆಚ್ಚಿನ ಅರ್ಥವನ್ನು ಮೂಡಿಸುವುದು ಮಹಾಕವಿಯ ಲಕ್ಷಣ. ಹಿತಮಿತವಾದ ವಚನದಿಂದ ಗಂಭೀರವಾದ ಅರ್ಥವನ್ನು ನೀಡಿದ ಪಂಪಾದಿ ಕವಿಗಳು ಶಾಶ್ವತ ಕೀರ್ತಿಯನ್ನು ಪಡೆದಿದ್ದಾರೆ.  

ನುಡಿಯಂ ಛಂದದೊಳೊಂದಿರೆ
ತೊಡರ್ಚಲಱಿವಾತನಾತನಿಂದಂ ಜಾಣಂ
ತಡೆಯದೆ ಮಹಾಧ್ವಕೃತಿಗಳ
ನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ॥ ೧-೧೬॥

ಅನ್ವಯ ನುಡಿಯನ್= ಮಾತನ್ನು,  ಛಂದದೊಳ್ ಒಂದಿರೆತೊಡರ್ಚಲ್ ಅರಿವ ಆತನ್= ಛಂದೋಬಂಧದಲ್ಲಿ ತೊಡಗಿಸಬಲ್ಲವನು,ಆತನಿಂದಮ್ ಜಾಣನ್= ಆತನಿಗಿಂತಲೂ ಜಾಣ, ತಡೆಯದೆ, ಮಹಾಧ್ವಕೃತಿಗಳನ್= ಮಹಾ-
ಕಾವ್ಯಗಳನ್ನು, ಒಡರಿಸಲ್ ಆರ್ಪನ್= ರಚಿಸಬಲ್ಲವನು, ಎಲ್ಲರಿಂದಮ್ ಬಲ್ಲನ್= ಎಲ್ಲರಿಗಿಂತಲೂ ಬಲ್ಲವನಾಗಿರುತ್ತಾನೆ.

ಭಾವಾರ್ಥ: ನುಡಿಯನ್ನು ಛಂದೊಬಂಧದಲ್ಲಿ ಉಪಯೋಗಿಸಬಲ್ಲವನು ಆತನಿಗಿಂತಲೂ ಜಾಣ. ತಡೆಯದೆ ಮಹಾಕಾವ್ಯಗಳನ್ನು ರಚಿಸಬಲ್ಲವನು ಎಲ್ಲರಿಗಿಂತಲೂ ಬಲ್ಲವನಾಗಿರುತ್ತಾನೆ.

ಮಾತಱಿವರ್ ಕೆಲಬರ್ ಜಗ
ತೀತಳಗತಮನುಜರೊಳಗೆ ಮಾತಱಿವವರೊಳ್
ನೀತಿವಿದರಮಳಕವಿತಾ
ನೀತಿಯುತರ್ ಕೆಲರೆ ಪರಮಕವಿವೃಷಭರ್ಕಳ್॥೧-೧೭॥

ಅನ್ವಯ: ಜಗತೀತಳ ಗತ ಮನುಜರೊಳಗೆ= ಜಗತ್ತಿನಲ್ಲಿರುವ ಮನುಷ್ಯರಲ್ಲಿ. ಮಾತು ಅಱಿವರ್ ಕೆಲಬರ್= ಮಾತನ್ನು ಅರಿತವರು ಕೆಲವರು, ಮಾತು ಅಱಿವವರೊಳ್ = ಮಾತನ್ನು ಅರಿತವರಲ್ಲೆ, ನೀತಿವಿದರ್= ನೀತಿಯನ್ನು ಬಲ್ಲವರು, ಅಮಳ ಕವಿತಾನೀತಿಯುತರ್= ಸ್ವಚ್ಛವಾದ ಕವಿತಾನೀತಿಯನ್ನು ಅನುಸರಿಸುವವರು, (ಆದ) ಪರಮ ಕವೆ ವೃಷಭರ್ಕಳ್= ಪರಮ ಕವಿ ಶ್ರೇಷ್ಠರು , ಕೆಲರೆ= ಕೆಲವರು ಮಾತ್ರ.

ಭಾವಾರ್ಥ: ಜಗತ್ತಿನಲ್ಲಿರುವ ಮನುಷ್ಯರಲ್ಲಿ ಮಾತನ್ನು ಅರಿತವರು ಕೆಲವರು. ಮಾತನ್ನು ಅರಿತವರಲ್ಲಿ ನೀತಿಯನ್ನು ಬಲ್ಲವರು, ಸ್ವಚ್ಛವಾದ ಕವಿತಾನೀತಿಯನ್ನು ಅನುಸರಿಸುವವರು ಆದ ಪರಮಕವಿಶ್ರೇಷ್ಠರು ಕೆಲವರು ಮಾತ್ರ.

ಪಾಪಮಿದು ಪುಣ್ಯಮಿದು ಹಿತ
ರೂಪಮಿದಹಿತಪ್ರಕಾರಮಿದು ಸುಖಮಿದು ದುಃ
ಖೋಪಾತ್ತಮಿದೆಂದಱಿಪುಗು
ಮಾ ಪರಮಕವೆಪ್ರಧಾನರಾ ಕಾವ್ಯಂಗಳ್॥೧-೧೮॥

ಅನ್ವಯ: ಪಾಪಮ್ ಇದು= ಇದು ಪಾಪ, ಪುಣ್ಯಮ್ ಇದು= ಇದು ಪುಣ್ಯ, ಹಿತರೂಪಮ್ ಇದು= ಇದು ಹಿತವಾದ ರೂಪ, ಅಹಿತ ಪ್ರಕಾರಮ್ ಇದು= ಇದು ಕೆಟ್ಟದು, ಸುಖಮ್ ಇದು= ಇದು ಸುಖ, ದುಃಖ+ ಉಪಾತ್ತಮ್ ಇದು = ಇದು ದುಃಖವನ್ನು ಉಂಟು ಮಾಡುವುದು, ಎಂದು, ಆ ಪರಮ ಕವಿಪ್ರಧಾನರಾ ಕಾವ್ಯಂಗಳ್ = ಆ ಪರಮಕವಿವರ್ಯರ ಕಾವ್ಯಗಳು,  ಅಱಿಪುಗುಮ್=ತಿಳಿಸಿಕೊಡುತ್ತವೆ.

ಭಾವಾರ್ಥ: ಇದು ಪಾಪ, ಇದು ಪುಣ್ಯ,  ಇದು ಹಿತವಾದ ರೂಪ, ಇದು ಕೆಟ್ಟದ್ದು, ಇದು ಸುಖ, ಇದು ದುಃಖವನ್ನು ಉಂಟುಮಾಡುವುದು ಎಂದು ಆ ಕವಿ ಶ್ರೇಷ್ಠರ ಕಾವ್ಯಗಳು ತಿಳಿಸುತ್ತವೆ.

ಲೌಕಿಕ ಸಾಮಯಿಕೋರುವಿ।
ವಿವೇಕಮುಮಭ್ಯುದಯಪರಮನಿಃಶ್ರೇಯಸಮುಂ ॥
ಪ್ರಾಕಟಮಕ್ಕುಂ ವಿದಿತಾ ।
ನೇಕಕವೀಶಪ್ರಯೋಗಪದಪದ್ಧತಿಯೊಳ್॥೧-೧೯॥

ಅನ್ವಯ: ಲೌಕಿಕ ಸಾಮಯಿಕ= ಲೌಕಿಕ ಮತ್ತು ಆಧ್ಯಾತ್ಮಿಕ,  ಉರು ವಿವೇಕಮುಮ್= ವಿಸ್ತಾರವಾದ ವಿವೇಕ, ಅಭ್ಯುದಯ=ಅಭಿವೃದ್ಧಿ,  ಪರಮ ನಿಃಶ್ರೇಯಸಮುಮ್=ಪರಮ ಪುರುಷಾರ್ಥವಾದ ಮೋಕ್ಷ, ವಿದಿತ=ಪ್ರಸಿದ್ಧವಾದ, ಅನೇಕ ಕವೀಶ ಪ್ರಯೋಗ ಪದ್ಧತಿಯೊಳ್= ಅನೇಕ ಕವಿಶ್ರೇಷ್ಠರ ಪ್ರಯೋಗ ಪದ್ಧತಿಗಳಲ್ಲಿ, ಪ್ರಕಟಮ್ ಅಕ್ಕುಮ್= ಪ್ರಕಟವಾಗುತ್ತವೆ.

ಭಾವಾರ್ಥ: ಲೌಕಿಕ ಮತ್ತು ಆಧ್ಯಾತ್ಮಿಕದ ವಿಸ್ತಾರ ವಿವೇಕ, ಅಭ್ಯುದಯ,  ಪರಮ ಪುರುಷಾರ್ಥವಾದ ಮೋಕ್ಷ ಎಂಬುವು ಅನೇಕ ಕವಿಶ್ರೇಷಾಠರ ಪ್ರಯೋಗ ಪದ್ಧತಿಗಳಲ್ಲಿ ಪ್ರಕಟವಾಗುತ್ತವೆ.

ಅಧಿಕೃತಸತ್ಪುರುಷಾರ್ಥ।
ಪ್ರಧಾನಧರ್ಮಾರ್ಥಕಾಮಮೋಕ್ಷಂಗಳವಾ॥
ಬುಧಜನವಿವಿಕ್ತಕಾವ್ಯ।
ಪ್ರಧಾರಿತಾರ್ಥಂಗಳಖಿಳಭುವನಹಿತಂಗಳ್॥೧-೨೦॥

ಅನ್ವಯ: ಅಖಿಳ ಭುವನ ಹಿತಂಗಳ್= ಸಮಸ್ತಲೋಕಕ್ಕೆ ಹಿತಕರವಾದ, ಅಧಿಕೃತ ಸತ್ ಪುರುಷಾರ್ಥ ಪ್ರಧಾನ= ಪ್ರಸಿದ್ಧ ಸತ್ಪುರುಷಾರ್ಥಗಳಾದ, ಧರ್ಮ, ಅರ್ಥ, ಕಾಮ ಮೋಕ್ಷಂಗಳ್= ಧರ್ಮಾರ್ಥಕಾಮಮೋಕ್ಷಗಳು, ಅವು, ಆ ಬುಧಜನ ವಿವಿಕ್ತ ಪ್ರಧಾರಿತ ಅರ್ಥಂಗಳ್= ಆ ಬುಧಜನರು ರಚಿಸಿದ ಕಾವ್ಯಗಳಿಂದ ವಿಶದವಾಗುತ್ತವೆ.

ಭಾವಾರ್ಥ: ಸಮಸ್ತಲೋಕಕ್ಕೆ ಹಿತಕರವಾದ ಪ್ರಸಿದ್ಧ ಸತ್ಪುರುಷಾರ್ಥಗಳೆಂದರೆ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷ. ಅವು ಬುಧಜನರು ರಚಿಸಿದ ಕಾವ್ಯಗಳಿಂದ ವಿಶದವಾಗುತ್ತವೆ.

ವಿಚಾರ: ಕಾವ್ಯಗಳಲ್ಲಿ ಧರ್ಮಾರ್ಥಕಾಮಮೋಕ್ಷಗಳಿಗೆ ಇರೈವ ಪ್ರಾಧಾನ್ಯವನ್ನು ಕುರಿತು ಭಾಮಹ ಹೇಳಿದ ಶ್ಲೋಕ( ೧.೨)
ಶ್ರೀವಿಜಯನ ಪದ್ಯಕ್ಕೆ ಪ್ರೇರಣೆಯಾಗಿರಬಹುದು.

ಧರೂಮಾರ್ಥಕಾಮಮೋಕ್ಷೇಷು ವೈಚಕ್ಷಣ್ಯಂ ಕಲಾಸು ಚ ।
ಪ್ರೀತಿಮ್ ಕರೋತಿ ಕೀರ್ತಿಂಚ ಸಾಧುಕಾವ್ಯ ನಿಷೇವಣಮ್॥

( ಧರ್ಮಾರ್ಥಕಾಮಮೋಕ್ಷಗಳ ವಿವೇಕ, ಕಲೆಗಳಲ್ಲಿ ಪ್ರೀತಿ ಮತ್ತು ಕೀರ್ತಿ ಒಳ್ಳೆಯ ಕಾವ್ಯಗಳ ರಚನೆಯಿಂದ ಲಭಿಸುತ್ತವೆ)

ಲೋಕದೊಳದಱಿಂ ಕಾವ್ಯ ।
ಸ್ವೀಕರಣೋದ್ಯುಕ್ತನಕ್ಕೆ ಕವಿ ತನ್ನಱಿವಂ ॥
ತಾಕಲ್ಪಾಂತಸ್ಥಾಯಿ।
ಶ್ರೀಕೀರ್ತಿವಧೂಪ್ರಧಾನವಲ್ಲಭನಕ್ಕುಂ॥೧-೨೧॥

ಅನ್ವಯ: ಅದಱಿನ್= ಆದ್ದರಿಂದ, ಲೋಕದೊಳ್= ಲೋಕದಲ್ಲಿ, ಕವಿ ತನ್ನ ಅಱಿವಂತೆ= ತನ್ನ ಅರಿವಿಗೆ ಅನುಗುಣವಾಗಿ, ಕಾವ್ಯ ಸ್ವೀಕರಣ+ಉದ್ಯುಕ್ತನ್+ಅಕ್ಕೆ= ಕಾವ್ಯ ರಚನೆಗೆ ತೊಡಗಬೇಕು, ( ಅದರಿಂದ)ಆ ಕಲ್ಪಾಂತಸ್ಥಾಯಿ=ಕಲ್ಪಾಂತದವರೆ-
ಗೂ, ಶ್ರೀ ಕೀರ್ತಿ ವಧೂ ಪ್ರಧಾನವಲ್ಲಭನ್ ಅಕ್ಕುಮ್= ಶ್ರೀ ಕೀರ್ತಿ ವಧುವಿಗೆ ಪತಿಯಾಗಿರುವನು.

ಭಾವಾರ್ಥ : ಆದುದರಿಂದ ಲೋಕದಲ್ಲಿ ಕವಿ ತನ್ನ ಅರಿವಿಗೆ ಅನುಗುಣವಾಗಿ ಕಾವ್ಯ ರಚನೆಗೆ ತೊಡಗಬೇಕು. ಅದರಿಂದ ಕಲ್ಪಾಂತದವರೆಗೂ ಶ್ರೀಕೀರ್ತಿ ವಧುವಿಗೆ ಅವನು ಪತಿಯಾಗಿರುವನು.

ವಿಚಾರ: ಭೂಮಿ ಇರುವವರೆಗೂ ಉಳಿಯುವ ಕೀರ್ತಿಯನ್ನು ಬಯಸುವ ಬುದ್ಧಿವಂತನು ಕಾವ್ಯ ರಚನೆಗೆ ತೊಡಗಬೇಕೆಂಬ ಭಾಮಹನ ಶ್ಲೋಕವನ್ನು ಶ್ರೀವಿಜಯನು ಅನುಸರೆಸಿದ್ದಾನೆ. (೧.೮)

ಅತೋಭಿವಾಂಛತಾ ಕೀರ್ತಿಂ ಸ್ಥೇಯ ಸೀಮಾ ಭುವಃ ಸ್ಥಿತೇಃ।
ಯತ್ನೋ ವಿದಿತವೇದ್ಯೇನ ವಿಧೇಯಃ ಕಾವ್ಯಲಕ್ಷಣಃ॥

(  ಭೂಮಿ ಇರುವವರೆಗೂ ಒಂದೇ ಸಮನಾಗಿ ಉಳಿಯುವ ಕೀರ್ತಿಯನ್ನು ವಾಂಛಿಸುವವನು ಕಾವ್ಯರಚನೆಯಲ್ಲಿ ತೊಡಗಬೇಕು. )

ಕಾವ್ಯಲಕ್ಷಣ

ಕವಿಭಾವಕೃತಾನೇಕ ।
ಪ್ರವಿಭಾಗವಿವಿಕ್ತಸೂಕ್ತಮಾರ್ಗಂ ಕಾವ್ಯಂ॥
ಸವಿಶೇಷಶಬ್ದರಚನಂ ।
ವಿವಿದಾರ್ಥವ್ಯಕ್ತಿವರ್ತಿತಾಲಂಕಾರಂ॥೧-೨೨॥

ಅನ್ವಯ: ಕವಿಭಾವಕೃತ ಅನೇಕ ಪ್ರವಿಭಾಗ ಸೂಕ್ತ ಮಾರ್ಗಮ್ ಕಾವ್ಯಮ್= ಕವಿಯ ಭಾವದಲ್ಲಿ ಮೂಡಿಬಂದ, ಅನೇಕ ವಿಭಾಗಗಳಿಂದ ಚೆನ್ನಾಗಿ ಹೇಳಿದ ಮಾರ್ಗವೇ ಕಾವ್ಯ.  ಸವಿಶೇಷ ಶಬ್ದರಚನಮ್= ಅದು ವಿಶೇಷವಾದ ಶಬ್ದಗಳಿಂದ ರಚಿತವಾದುದು. ವಿವಿಧ ಅರ್ಥವ್ಯಕ್ತಿ ವರ್ತಿತ ಅಲಂಕಾರಮ್= ವಿವಿಧ ಅರ್ಥಗಳ ಅಭಿವ್ಯಕ್ತಿಯಿಂದ ಅಲಂಕೃತವಾದುದು.

ಭಾವಾರ್ಥ: ಕವಿಯ ಭಾವದಲ್ಲಿ ಅಂದವಾಗಿ ಮೂಡಿಬಂದ ಅನೇಕ ರೀತಿಯ ಮಾರ್ಗವೇ ಕಾವ್ಯ.  ಅದು ವಿಶೇಷವಾದ ಶಬ್ದಗಳಿಂದ ರಚಿತವಾದುದು. ವಿವಿಧ ಅರ್ಥಗಳ ಅಭಿವ್ಯಕ್ತಿಯಿಂದ ಅಲಂಕೃತವಾದುದು.  

ವಿಶೇಷ: ಸರಿಯಾದ ಶಬ್ದ ಮತ್ತು ಅರ್ಥಗಳನ್ನು ಅಂದವಾಗಿ ರೂಪಿಸಿದ ಮಾರ್ಗವೇ ಕಾವ್ಯವೆಂದು ಲೇಖಕ ಅಭಿಪ್ರಾಯ ಪಟ್ಟಿದ್ದಾನೆ. ಶಬ್ದ, ಅರ್ಥ ಮತ್ತು ಅಲಂಕಾರ ಸುಂದರ ಕಾವ್ಯ ರಚನೆಗೆ ಆಧಾರ. ದಂಡಿ ಇದೇ ರೀತಿಯಅಭಿಪ್ರಾಯವನ್ನು ವ್ಯಕ್ತಮಾಡಿದ್ದಾನೆ. ( ೧•೧೦)

ತೈ ಶರೀರಂ ಚ ಕಾವ್ಯಾನಾಮಲಂಕಾರಾಶ್ಚ ದರ್ಶಿತಾಃ।
ಶರೀರಂ ತಾವದಿಷ್ಟಾರ್ಥವ್ಯವಚ್ಛಿನ್ನಾ ಪದಾವಲೀ॥

( ಕಾವ್ಯಕ್ಕೆ ಶರೀರ ಯಾವುದೆಂಬುದನ್ನೂ ಅದಕ್ಕೆ ಸೊಗಸನ್ನು ಕೊಡುವ ಅಲಂಕಾರಗಳಾವುವೆಂಬುದನ್ನೂ ಅವರು ತೋರಿಸಿದ್ದಾರೆ. ಇಷ್ಟಾರ್ಥದಿಂದ ಕೂಡಿ ಬರುವ ಪದಸಮೂಹವೇ ಶರೀರ )

ಭಾಮಹನೂ ಇದೇ ಅಭಿಪ್ರಾಯವನ್ನು ವ್ಯಕ್ತ ಮಾಡಿದ್ದಾನೆ.( ೧.೧೬) ಶಬ್ದರ್ಥೌ ಸಹಿತೌ ಕಾವ್ಯಂ.

ನರಲೋಕಚಂದ್ರಮತದಿಂ ।
ಪರಮಾಲಂಕಾರಮುಂ ಶರೀರಮುಮೆಂದಿಂ ॥
ತೆರಡಕ್ಕುಂ ಭೇದಂ ಬಹು ।
ಪರಿಕರಮಾ ಕಾವ್ಯವಸ್ತುಪುರುಷಂಗೆಂದುಂ॥೧-೨೩॥

ಅನ್ವಯ: ನರಲೋಕಚಂದ್ರ ಮತದಿನ್= ನರಲೋಕಚಂದ್ರನ ( ನೃಪತುಂಗನ ) ಮತದಲ್ಲಿ, ಆ ಕಾವ್ಯ ವಸ್ತು ಪುರೈಷಂಗೆ ಎಂದಮ್= ಆ ಕಾವ್ಯ ವಸ್ತು ಎಂಬ ಪುರುಷನಿಗೆ ಯಾವಾಗಲೂ, ಪರಮ ಅಲಂಕಾರಮುಮ್= ಶ್ರೇಷ್ಠವಾದ ಅಲಂಕಾರ,  ಶರೀರಂ ಎಂದು =ಶರೀರ ಎಂದು, ಎರಡಕ್ಕುಂ= ಎರಡಿರುತ್ತವೆ, ಭೇದಮ್ ಬಹುಪರಿಕರಮ್= ( ಇವುಗಳಲ್ಲಿ ) ಪ್ರಭೇದಗಳು ಹಲವೈ.

ಭಾವಾರ್ಥ: ನರಲೋಕಚಂದ್ರನಾದ ನೃಪತುಂಗನ ಮತದಲ್ಲಿ ಕಾವ್ಯ ವಸ್ತು ಒಬ್ಬ ಪುರುಷ. ಅವನಿಗೆ  ಅಲಂಕಾರ ಮತ್ತು ಶರೀರ ಎಂಬ ಎರಡು ಅಂಶಗಳಿರುತ್ತವೆ. ಇವೆರಡರಲ್ಲಿ ಅನೇಕ ಪ್ರಭೇದಗಳಿರುತ್ತವೆ.

ವಿಚಾರ: ಕಾವ್ಯವನ್ನು ಸಾಮಾನ್ಯವಾಗಿ ಕನ್ಯೆಗೆ ಹೋಲೆಸುವುದುಂಟು. ಕಾವ್ಯವಸ್ತುವನ್ನು ಪುರುಷನೆಂದು ಹೇಳಿರುವುದನ್ನು ಗಮನಿಸಬೇಕು.

ಅವಱೊಳ್ ಶರೀರಮೆಂಬುದು ।
ಕವಿಪ್ರಧಾನಪ್ರಯೋಗಪದಪದ್ಧತಿಯೊಳ್ ॥
ದ್ವಿವಿಧಮೆನಿಕ್ಕುಮದತಿಶಯ ।
ಧವಳೋಕ್ತಕ್ರಮದೆ ಗದ್ಯಪದ್ಯಾಖ್ಯಾತಂ॥೧-೨೪॥

ಅನ್ವಯ: ಅವಱೊಳ್ ಶರೀರಮ್ ಎಂಬುದು=ಅವುಗಳಲ್ಲಿ ಶರೀರ ಎಂಬುದು,  ಕವಿ ಪ್ರಧಾನ ಪ್ರಯೋಗ ಪದ ಪದ್ಧತಿಯೊಳ್= ಮಹಾಕವಿಗಳ ಪ್ರಯೋಗ ಮಾರ್ಗದಲ್ಲಿ, ದ್ವಿವಿಧಮ್ ಎನಿಕ್ಕುಮ್= ಎರಡು ತೆರನಾಗಿತ್ತದೆ. ಅದು ಅತಿಶಯ ಧವಳ+ ಉಕ್ತ ಕ್ರಮದೆ= ಅದು ಅತಿಶಯಧವಳನ ಅಭಿಪ್ರಾಯದಲ್ಲಿ , ಗದ್ಯ ಪದ್ಯ ಆಖ್ಯಾನಮ್= ಅವುಗಳ ಹೆಸರು ಗದ್ಯ ಮತ್ತು ಪದ್ಯ.

ಭಾವಾರ್ಥ: ಅವುಗಳಲ್ಲಿ ಶರೀರ ಎಂಬುದು ಮಹಾಕವಿಗಳ ಪ್ರಯೋಗ ಮಾರ್ಗದಲ್ಲಿ ಎರಡು ತೆರನಾಗಿರುತ್ತದೆ. ಅತಿಶಯಧವಳನಾದ ನೃಪತುಂಗನ ಅಭಿಪ್ರಾಯದಲ್ಲಿ ಅವೆರಡರ ಹೆಸರು ಗದ್ಯ ಮತ್ತು ಪದ್ಯ.  

ವಿಚಾರ: ಗದ್ಯ ಮತ್ತು ಪದ್ಯ ಎಂಬುವು ಕಾವ್ಯದ ಶರೀರ ಎಂದು ಹೇಳಿರುವುದು ವೆಶೇಷ. ಭಾಮಹನು ಶಬ್ದಾರ್ಥಗಳಿಂದ ಕೂಡಿದ್ದು ಕಾವ್ಯವೆಂದೂ ಅದರಲೂಲಿ ಗದ್ಯ ಮತ್ತು ಪದ್ಯ ಎಂಬ ಎರಡು ಪ್ರಭೇದಗಳಿವೆ ಎಂದೂ ಹೇಳಿದ್ದಾನೆ. ( ೧.೧೬)

ಶಬ್ಧಾರ್ಥೌ ಸಹಿತೌ ಕಾವ್ಯಂ ಗದ್ಯಂ ಪದ್ಯಂ ಚ ತದ್ ದ್ವಿಧಾ.

ಪದಪಾದನಿಯತ ನಿಯಮಾ।
ಸ್ಪದಮಲ್ಲದಳಂಕೃತಂ ಕ್ರಿಯಾಕಾರಕದೊಳ್ ॥
ಪುದಿದರ್ಥವ್ಯಕ್ತಿಯನೀ।
ವುದು ಗದ್ಯಮನೇಕರೂಪಭೇದವಿವಿಕ್ತಂ॥೧-೨೫॥

ಅನ್ವಯ: ಪದ ಪಾದ ನಿಯತ ನಿಯಮ ಆಸ್ಪದಮ್ ಅಲ್ಲದ= ಪದ ಪಾದಗಳ ನಿರ್ದಿಷ್ಟ ನಿಯಮಕ್ಕೆ ಒಳಗಾಗದೆ, ಅಳಂಕೃತಮ್= ಅಲಂಕೃತವಾದುದು,  ಕ್ರಿಯಾಕಾರಕದೊಳ್ ಪುದಿದು= ಕ್ರಿಯಾಕಾರಕಗಳಿಗೆಅನ್ವಯವೃಗುತ್ತಿದ್ದು, ಅರ್ಥ ವ್ಯಕ್ತಿಯನ್+ ಈವುದು= ಅರ್ಥವನ್ನು ವ್ಯಕ್ತಮಾಡುವುದು, ಗದ್ಯಮ್= ಗದ್ಯ, ( ಇದು ) ಅನೇಕ ರೂಪ ಭೇದ ವಿವಿಕ್ತಮ್ = ರೂಪ ಭೇದಗಳಿಂದ ಕೂಡಿರುತ್ತದೆ.

ಭಾವಾರ್ಥ: ಪದ ಪಾದಗಳ ನಿರ್ದಿಷ್ಟ ನಿಯಮಕ್ಕೆ ಒಳಗಾಗದಿದ್ದರೂ ಅಲಂಕೃತವಾಗಿ, ಕ್ರಿಯಾಕಾರಕಗಳಿಗೆ ಅನ್ವಯವಾಗುತ್ತಿದ್ದು ಅರ್ಥವನ್ನು ವ್ಯಕ್ತಮಾಡುವುದು ಗದ್ಯ.  ಇದರಲ್ಲಿ ಅನೇಕ ಪ್ರಭೇದಗಳಿರುತ್ತವೆ.

ವಿಚಾರ: ದಂಡಿ ಗದ್ಯವನ್ನು ಪಾದರಹಿತವೆಂದೂ ಪದಗಳಿಂದ ಕೂಡಿದ್ದೆಂದೂ, ಹೇಳಿರುವುದು ಶ್ರೀವಿಜಯನಿಗೆ ಪ್ರೇರಣೆಯಾಗಿರಬಹುದು. ( ೧.೨೩)  ಅಪಾದಃ ಪದಸಂತಾನೋಗದ್ಯಮ್.

ಸಂಸ್ಕೃತ ಭಾಷೆಯ ಮಧುರವಾದ ಶಬ್ದಾರ್ಥಗಳಿಂದ ಕೂಡಿದ್ದು ಗದ್ಯವೆಂದು ಉಚ್ಛ್ವಾಸಗಳೆಂಬ ಹೆಸರಿನ ಅಧ್ಯಾಯಗಳಿರುವ ಆ ಕಾವ್ಯ ಆಖ್ಯಾಯಿಕೆ ಎಂದೂ ಭಾಮಹನೂ ಹೇಳಿದ್ದಾನೆ. ( ೧.೨೫ )

ಸಂಸ್ಕೃತಾನಾಕುಲಶ್ರವ್ಯ ಶಬ್ಧಾರ್ಥಪದ ವೃತ್ತಿನಾ ।
ಗದ್ಯೇನ ಯುಕ್ತೋದಾತ್ತಾರ್ಥಾಸೋಚ್ಛ್ವಾಸಾಖ್ಯಾಯಿಕಾ ಮತಾ॥  

ಸದಮಳಸಮಸಂಸ್ಕೃತ ಕಾ ।
ವ್ಯದ ಹೃದಯಂ ಹರ್ಷಚರಿತಂ ಕಾದಂಬರಿಗಳ್॥
ಮೊದಲಾಗಿ ನೆಗೞ್ದುವಿದಱೊಳ್ ।
ಸದಳಂಕಾರಂಗಳಖಿಳಕವಿವಿದಿತಂಗಳ್॥೧-೨೬॥

ಅನ್ವಯ: ಸತ್+ಅಮಳ= ಸ್ವಚ್ಛವಾದ,  ಸಮಸಂಸ್ಕೃತ ಕಾವ್ಯದ = ಸಮಸಂಸ್ಕೃತ ಕಾವ್ಯದ,  ಹೃದಯಂ, ಹರ್ಷಚರಿತ ಕಾದಂಬರಿಗಳ್=ಹರ್ಷಚರಿತ, ಕಾದಂಬರಿ ಮೊದಲಾಗಿ, ನೆಗೞ್ದವು=ಪ್ರಸಿದ್ಧವಾದವು, ಇದರೊಳ್= ಇವುಗಳಲ್ಲಿ, ಸದಳಂಕಾರಗಳ್= ಸದಳಂಕಾರಗಳು, ಅಖಿಳ ಕವಿ ವಿದಿತಂಗಳ್= ಎಲ್ಲಾ ಕವಿಗಳಿಗೂ ಪರಿಚಿತವಾಗಿವೆ.

ಭಾವಾರ್ಥ: ಸ್ವಚ್ಛವಾದ ಸಂಸ್ಕೃತ ಕಾವ್ಯದ ಹೃದಯದಂತೆ ಮೆರೆಯುವಂಥವು ಹರ್ಷಚರಿತ, ಕಾದಂಬರಿ ಮದಲಾದವು. ಇವುಗಳಲ್ಲಿರುವ ಉತ್ತಮ ಅಲಂಕಾರಗಳು ಎಲ್ಲಾ ಕವಿಗಳಿಗೂ ಪರಿಚಿತವಾಗಿವೆ.  

ವಿಚಾರ: “ಸಮಸಂಸ್ಕೃತ “ ಎಂಬುದನ್ನು ಕನ್ನಡದಲ್ಲಿ “ತತ್ಸಮ” ಎಂಬ ಅರ್ಥದಲ್ಲಿ ಬಳಸುತ್ತಾರೆ.  ಆದರೆ ಇಲ್ಲಿ ಸಂಸ್ಕೃತವನ್ನೇ ಸಮಸಂಸ್ಕೃತವೆಂದು ಕರೆದಿರುವುದು ವಿಶೇಷ. ಕನ್ನಡದ ಪ್ರಾಚೀನ ಕವಿಗಳಿಗೆ ಪ್ರೇರಣೆ ನೀಡಿದ ಮುಖ್ಯ ಕವಿಗಳಲ್ಲಿಬಾಣನು ಒಬ್ಬನಾಗಿದ್ದಾನೆ. ಲಕ್ಷಣಕಾರರಲ್ಲಿ ದಂಡಿ, ಅಲಂಕಾರಿಕ ಕಾವ್ಯ ರಚನೆಯಲ್ಲಿ ಬಾಣ ಸ್ಫೂರ್ತಿದಾಯಕರು.

ಗದ್ಯಕಥಾ

ಮಿಗೆ ಕನ್ನಡಗಬ್ಬಂಗಳೊ।
ಳಗಣಿತಗುಣಗದ್ಯಪದ್ಯಸಮ್ಮಿಶ್ರಿತಮಂ ॥
ನಿಗದಿಸುವರ್ ಗದ್ಯಕಥಾ ।
ಪ್ರಗೀತಿಯಿಂ ತಚ್ಛಿರಂತನಾಚಾರ್ಯರ್ಕಳ್॥೧-೨೭॥

ಅನ್ವಯ: ಮಿಗೆ ಕನ್ನಡ ಕಬ್ಬಂಗಳೊಳ್= ಹೆಚ್ಚಾಗಿ ಕನ್ನಡ ಕಾವ್ಯಗಳಲ್ಲಿ, ಅಗಣಿತಗುಣ= ಲೆಕ್ಕಕ್ಕೆ ಮೀರಿದ ಗುಣಗಳಿಂದ ಕೂಡಿದ, ಗದ್ಯಪದ್ಯ ಸಮ್ಮಿಶ್ರಿತಮನ್= ಗದ್ಯಪದ್ಯಗಳ ಮಿಶ್ರಣವನ್ನು,  ಗದ್ಯಕಥಾ ಪ್ರಗೀತಿಯಿನ್= ಗದ್ಯಕಥೆ ಎಂಬ ಸಾಂಪ್ರದಾಯಿಕವಾದ ಹೆಸರಿನಿಂದ, ತತ್+ಚಿರಂತನಾಚಾರ್ಯರ್ಕಳ್= ಆ ಪೂರ್ವಾಚಾರ್ಯರು, ನಿಗದಿಸುವರ್= ಕರೆಯುತ್ತಾರೆ.

ಭಾವಾರ್ಥ: ಹೆಚ್ಚಾಗಿ ಕನ್ನಡ ಕಾವ್ಯಗಳಲ್ಲಿ ಅಸಂಖ್ಯಾತ ರೀತಿಯ ಗದ್ಯಪದ್ಯಗಳ ಮಿಶ್ರಣವನ್ನು, ಗದ್ಯಕಥೆ ಎಂಬ ಸಾಂಪ್ರದಾಯಿಕವಾದ ಹೆಸರಿನಿಂದ ಪೂರ್ವಾಚಾರ್ಯರು ಕರೆಯುತ್ತಾರೆ.  

ವಿಚಾರ:ದಂಡಿ ಗದ್ಯ ಮತ್ತು ಪದ್ಯ ಸೇರಿದ ಕಾವ್ಯವನ್ನು “ಚಂಪೂ” ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ( ೧.೩೧) : ಗದ್ಯಪದ್ಯಮಯೀ ಕಾಚಿಚ್ಚಂಪೂರಿತ್ಯಭಿಧೀಯತೇ. ಕನ್ನಡದಲ್ಲಿ ಇದನ್ನು ಗದ್ಯಕಥೆ ಎಂದು ಕರೆಯುವುದೇಕೆ ಎಂಬುದು ಸ್ಪಷ್ಟವಾಗಿಲ್ಲ.

ಪಾಂಡಿತ್ಯ:

ಸಕಳಕಳಾಭಾಷಾಲೌ ।
ಕಿಕಸಾಮಯಿಕಾದಿ ವರ್ಣನಾನಿರ್ಣಿಕ್ತ॥
ಪ್ರಕಟತರವಸ್ತುವಿಸ್ತರ ।
ವಿಕಲ್ಪವಿದನಲ್ಲದಾಗದಾಗದು ಪೇೞಲ್॥ ೧-೨೮॥

ಅನ್ವಯ: ಸಕಳಕಳಾ= ಸಕಲ ಕಲೆಗಳು, ಭಾಷಾ=ಭಾಷೆಗಳು, ಲೌಕಿಕ ಸಾಮಯಿಕಾದಿ= ಲೌಕಿಕ ಮತ್ತು ಆಧ್ಯಾತ್ಮಿಕಾದಿ
( ವಿದ್ಯೆಗಳಲ್ಲಿ), ವರ್ಣನಾ ನಿರ್ಣಿಕ್ತ= ವರ್ಣಿಸಲೂಪಟ್ಟಿರೈವ, ಪ್ರಕಟತರ ವಸ್ತು= ಪ್ರಕಟವಾಗಿರುವ ವಸ್ತು, ವಿಸ್ತರ= ವಿಸ್ತಾರವಾದ, ವಿಕಲ್ಪವಿದನ್ ಅಲ್ಲದೆ= ವೈವಿಧ್ಯದ ಅರಿವು ಇರುವವನಲ್ಲದೆ, ಆಗದಾಗದು ಪೇೞಲ್= (ಕಾವ್ಯವನ್ನು) ಹೇಳಲು ಖಂಡಿತ ಸಾಧ್ಯವಿಲ್ಲ.

ಭಾವಾರ್ಥ : ಸಕಲಕಲೆಗಳು, ಭಾಷೆಗಳು,  ಲೌಕಿಕ ಮತ್ತು ಆಧ್ಯಾತ್ಮಿಕ ವಿದ್ಯೆಗಳಲ್ಲಿ ವಿವರಿಸಲ್ಪಟ್ಟಿರುವ, ಎಲ್ಲ ವಸ್ತುಗಳ ವಿಸ್ತಾರವಾದ ಮತ್ತು ವೈವಿಧ್ಯದ ಅರಿವು ಇರುವವನಿಗಲ್ಲದೆ ಕಾವ್ಯವನ್ನು ರಚಿಸಲು ಸಾಧ್ಯವಿಲ್ಲ.

ವಿಚಾರ: ಅಲಂಕಾರಿಕರು ಕವಿಗೆ ಬೇಕಾದ ಪಾಂಡಿತ್ಯವನ್ನು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಶ್ರೀವಿಜಯನು ಮಹಾಕವಿಯ ಗುಣಗಳನ್ನು ಹೆಸರಿಸಿದ್ದಾನೆ.

ಗದ್ಯ-ಪದ್ಯ ಕವಿಗಳು

ವಿಮಳೋದಯ ನಾಗಾರ್ಜುನ ।
ಸಮೇತ ಜಯಬಂಧು ದುರ್ವಿನೀತಾದಿಗಳೀ॥
ಕ್ರಮದೊಳ್ ನೆಗೞ್ಚಿ ಗದ್ಯಾ ।
ಶ್ರಮಪದಗುರುತಾಪ್ರತೀತಿಯಂ ಕೆಯ್ಕೊಂಡರ್॥೧-೨೯॥

ಅನ್ವಯ: ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತಾದಿಗಳ್= ದುರ್ವಿನೀತ ಮೊದಲಾದವರು, ಈ ಕ್ರಮದೊಳ್= ಈ ಕ್ರಮದಲ್ಲಿ, ನೆಗೞ್ಚಿ= ಪ್ರಸಿದ್ಧಿ ಪಡೆದು, ಗದ್ಯಾಶ್ರಮ ಪದ ಗುರುತಾ ಪ್ರತೀತಿಯಂ= ಗದ್ಯಮಾರ್ಗದಲ್ಲಿ ಗುರುತ್ವದ ಹಿರಿಮೆಯನ್ನು, ಕೆಯ್ಕೊಂಡರ್=ಪಡೆದರು.

ಭಾವಾರ್ಥ:ವಿಮಳೋದಯ,ನಾಗಾರ್ಜುನ, ಜಯಬಂಧು,  ದುರ್ವಿನೀತ ಮತ್ತು ಇತರರು ಈ ಕ್ರಮದಲ್ಲಿ ಪ್ರಸಿದ್ಧಿ ಪಡೆದು ಗದ್ಯಮಾರ್ಗದಲ್ಲಿ ಗುರುತ್ವದ ಹಿರಿಮೆಯನ್ನು ಪಡೆದರು.

ವಿಚಾರ: ಗದ್ಯಕವಿಗಳು ಮತ್ತು ಪದ್ಯಕವಿಗಳು ಸಾಹಿತ್ಯವನ್ನು ಸಂಪದ್ಭರಿತವನ್ನಾಗಿ ಮಾಡಿದ್ದನ್ನು ಹೇಳುವಾಗ ಶ್ರೀವಿಜಯನು ಈ ಪದ್ಯದಲ್ಲಿ ಸಂಸ್ಕೃತ ಗದ್ಯಕವಿಗಳನ್ನು ಹೆಸರಿಸಿದಂತಿದೆ. ಗಂಗ ದುರ್ವಿನೀತ( ಕ್ರಿ. ಶ.೬೦೦) ಗುಣಾಢ್ಯನ ಬೃಹತ್ಕಥೆಯನ್ನು
ಸಂಸ್ಕೃತಕ್ಕೆ ಅನುವಾದ ಮಾಡಿದನೆಂದೂ ಕೆಲವು ವ್ಯಖ್ಯಾನಗಳನ್ನು ಬರೆದನೆಂದೂ ಭಾವಿಸಲಿಗಿದೆ. ಬೇರೆ ಕವಿಗಳ ಬಗೆಗೆ ವಿವರಗಳು ತಿಳಿಯುತ್ತಿಲ್ಲ. ಸಂಸ್ಕೃತದ ವಿಮಲೋದಯ, ನಾಗಾರ್ಜುನ ಯಾವ ಗ್ರಂಥಗಳನ್ನು ರಚಿಸಿದರೆಂಬುದನ್ನು ನಿರ್ಧರಿಸಲು ಆಧಾರಗಳು ಸಾಲವು.

ಪದ್ಯಂ ಸಮಸ್ತಜನತಾ ।
ಹೃದ್ಯಂ ಪದವಿದಿತಪಾದನಿಯಮನಿವೇದ್ಯಂ॥
ವಿದ್ಯಾಪಾರಪರಾಯಣ ।
ಮಾದ್ಯಂ ಸದ್ವೃತ್ತಿವೃತ್ತಜಾತ್ಯಾಯತ್ತಂ॥೧-೩೦॥

ಅನ್ವಯ: ಪದ್ಯಮ್ ಸಮಸ್ತ ಜನತಾ ಹೃದ್ಯಮ್= ಪದ್ಯ ಸಮಸ್ತ ಜನತೆಯ ಹೃದಯವನ್ನು ಸೂರೆಗೊಳ್ಳುತ್ತದೆ. ಪದ ವಿದಿತ ಪಾದ ನಿಯಮ= ಪದ ಮತ್ತು ಪಾದ ನಿಯಮಕ್ಕೆ, ನಿವೇದ್ಯಮ್=ಒಳಪಟ್ಟಿರುತ್ತದೆ, ವಿದ್ಯಾ ಪಾರ ಪರಾಯಣಮ್= (ಛಂದೋ)ವಿದ್ಯೆಯನ್ನು ಅನುಸರಿಸುತ್ತದೆ, ಆದ್ಯಮ್=ಮೂಲಭೂತವಾದುದು, ಸದೂವೃತ್ತ ವೃತ್ತ ಜಾತಿ ಆಯತ್ತಮೂ= (ಇದರ ) ಅಭಿವ್ಯಕ್ತಿ ವೃತ್ತ ಮತ್ತು ಜಾತಿ ಪದ್ಯಗಳಿಂದ ಕೂಡಿರುತ್ತದೆ.

ಭಾವಾರ್ಥ: ಪದ್ಯ ಸಮಸ್ತ ಜನತೆಯ ಹೃದಯವನ್ನು ಸೂರೆಗೊಳ್ಳುತ್ತದೆ. ಅದು ಪದ ಮತ್ತು ಪಾದನಿಯಮಕ್ಕೆ ಒಳಪಟ್ಟಿರುತ್ತದೆ. ಛಂದೋವಿದ್ಯೆಯನ್ನು ಅನುಸರೆಸುವ ಈ ಮೂಲಭೂತ ಅಭಿವ್ಯಕ್ತಿ ವೃತ್ತಗಳಿಂದ ಜಾತಿಪದ್ಯಗಳಿಂದ ಕೂಡಿರುತ್ತದೆ.

ವಿಚಾರ: ಪದ್ಯ ರಚನೆಯ ಬಗ್ಗೆ ಕೃತಿಕಾರನಿಗೆ ಇರುವ ಒಲವು ಸ್ಪಷ್ಟವಾಗಿದೆ. “ ಪದ್ಯಂ ಸಮಸ್ತ ಜನತಾ ಹೃದ್ಯಂ” ಎಂಬುದು ಈ ಒಲವನ್ನು ಅಂದವಾದ ಹೇಳಿಕೆಯ ರೂಪದಲ್ಲಿ ವ್ಯಕ್ತಪಡಿಸಿದೆ.

ಪ್ರಣುತ ಗುಣಸೂರಿ ನಾರಾ ।
ಯಣ ಭಾರವಿ ಕಾಳಿದಾಸ ಮಾಘಾದಿಗಳೀ।
ಗಣಿದದೊಳೆ ಮಹಾಕಾವ್ಯ ।
ಪ್ರಣಯಮನಾಗಿಸಿದರಮಳಕವಿವೃಷಭರ್ಕಳ್॥೧-೩೧॥

ಅನ್ವಯ: ಪ್ರಣುತ= ಸ್ತುತ್ಯರಾದ, ಗುಣಸೂರಿ, ನಾರಾಯಣ, ಭಾರವಿ, ಮಹಾಕಾವ್ಯ ಪ್ಣಯಮನ್= ಮಹಾಕಾವ್ಯದ ವಿಶಿಷ್ಟಕ್ರಮವನ್ನು, ಆಗಿಸಿದರ್= ಹಾಕಿಕೊಟ್ಟ, ಅಮಳಕವೆವೃಷಬರ್= ಸ್ವಚ್ಛರಾದ ಕವಿಶ್ರೇಷ್ಠರು.

ಭಾವಾರ್ಥ: ಖ್ಯಾತಿವೆತ್ತ ಗುಣಸೂರಿ, ನಾರಾಯಣ, ಭಾರವಿ,  ಕಾಳಿದಾಸ, ಮಾಘ ಮೊದಲಾದವರು ಈ ರೀತಿಯಲ್ಲಿ ಮಹಾಕಾವ್ಯದ ವಿಶಿಷ್ಟ ಕ್ರಮವನ್ನು ಹಾಕಿಕೊಟ್ಟ ಶ್ರೇಷ್ಠಕವಿಗಳು.

ವಿಚಾರ: ಭಾರವಿ, ಕಾಳಿದಾಸ,  ಮಾಘ ಮಹಾಕಾವ್ಯ ರಚಿಸಿದವರಲ್ಲಿ ಪ್ರಮುಖರು. ಆದರೆ ಗುಣಸೂರಿ, ನಾರಾಯಣ ಯಾರೆಂಬುದು ಸ್ಪಷ್ಟವಾಗಿಲ್ಲ.

ಪರಮ ಶ್ರೀವಿಜಯಕವೀ।
ಶ್ವರ ಪಂಡಿತಚಂದ್ರ ಲೋಕಪಾಲಾದಿಗಳಾ ॥
ನಿರತಿಶಯವಸ್ತುವಿಸ್ತರ ।
ವಿರಚನೆ ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ॥೧-೩೨॥

ಅನ್ವಯ: ಪರಮ ಶ್ರೀವಿಜಯ ಕವೀಶ್ವರ= ಶ್ರೇಷ್ಠರಾದ ಶ್ರೀವಿಜಯಕವೀಶ್ವರ, ಪಂಡೆತಚಂದ್ರ, ಲೋಕಪಾಲಾದಿಗಳ್=ಲೋಕಪಾಲಾದಿಗಳು, (ರಚಿಸಿದ) ನಿರತಿಶಯ ವಸ್ತುವಿಸ್ತರ ವಿರಚನೆ= ನಿರುಪಮವಾದ ವಸ್ತು ವಿಸ್ತರ ರಚನೆಗಳು, ತತ್+ಆದ್ಯ ಕಾವ್ಯಕ್ಕೆ =ಹಿಂದೆ ಹೇಳಿದ ಆದ್ಯ ಕಾವ್ಯಕ್ಕೆ, ಎಂದುಮ್= ಯಾವಾಗಲೂ, ಲಕ್ಷ್ಯಮ್= ಉದಾಹರಣೇಗಳು.

ಭಾವಾರ್ಥ:ಶ್ರೇಷ್ಠರಾದ ಶ್ರೀವಿಜಯ ಕವೀಶ್ವರ, ಪಂಡಿತಚಂದ್ರ, ಲೋಕಪಾಲ, ಮೊದಲಾದವರ ನಿರುಪಮ ವಸ್ತು ವಿಸ್ತರ ರಚನೆಗಳು ಹಿಂದೆ ಹೇಳಿದ ಆದ್ಯ ಕಾವ್ಯಕ್ಕೆ ಉದಾಹರಣೆಗಳು.  

ವಿಚಾರ: ಈ ಪದ್ಯದಲ್ಲಿ ಉಲ್ಲೇಖಗೊಂಡಿರುವ ಕವಿಗಳು ಕನ್ನಡ ಕವಿಗಳೇ ಅಥವಾ ಪ್ರಾಕೃತ ಕವಿಗಳೇ ಎಂಬುದು ಸ್ಪಷ್ಟವಾಗಿಲ್ಲ.  “ ಆದ್ಯಕಾವ್ಯ” ಎಂಬುದು ಪ್ರಾಚೀನ ಕನ್ನಡ ಕಾವ್ಯವನ್ನು ಸೂಚಿಸುತ್ತಿರಬಹುದು. ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ ಮತ್ತು ಲೋಕಪಾಲ ಎಂಬ ಹೆಸರುಗಳ ಬಗೆಗೆ ವಿದ್ವಾಂಸರ ಊಹೆಗಳು ಇನ್ನೂ ಊಹೆಗಳಾಗಿಯೇ ಉಳಿದಿವೆ.

ಚತ್ತಾಣ- ಬೆದಂಡೆ

ನುಡಿಗೆಲ್ಲಂ ಸಲ್ಲದ ಕ ।
ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ ॥
ಗಡಿನ ನೆಗೞ್ತೆಯಕಬ್ಬದೊ ।
ಳೊಡಂಬಡಂಮಾಡಿದರ್ ಪುರಾತನಕವಿಗಳ್॥೧-೩೩॥

ಅನ್ವಯ: ನುಡಿಗೆಲ್ಲಮ್ ಸಲ್ಲದ= ಬೇರೆ ಭಾಷೆಗಳಿಗಿಂತ ಭಿನ್ನವಾದ, ಕನ್ನಡದೊಳ್=ಕನ್ನಡದಲ್ಲಿ, ಚತ್ತಾಣಮುಮ್ ಬೆದಂಡೆಯುಮ್ ಎಂದು= ಚತ್ತಾಣ ಮತ್ತು ಬೆದಂಡೆ ಎಂದು, ಈಗಡಿನ= ಈಗಿನ, ನೆಗೞ್ತೆಯ ಕಬ್ಬದೊಳ್= ಪ್ರಸಿದ್ಧ ಕಾವ್ಯಗಳಲ್ಲಿ, ಪುರಾತನ ಕವಿಗಳ್=ಪ್ರಾಚೀನ ಕವಿಗಳು, ಒಡಂಬಡನ್ ಮಾಡಿದರ್= ಹೊಂದಿಕೆಯಾಗುವಂತೆ ಮಾಡಿದರು.

ಭಾವಾರ್ಥ: ಬೇರೆ ಭಾಷೆಗಳಿಗಿಂತ ಭಿನ್ನವಾದ ಕನ್ನಡದಲ್ಲಿ ಈಗಲೂ ಪ್ರಸಿದ್ಧವಾಗಿರುವ, ಚತ್ತಾಣ ಮತ್ತು ಬೆದಂಡೆ ಎಂಬುವು ಪ್ರಸಿದ್ಧ ಕಾವ್ಯಗಳಲ್ಲಿ ಸೇರುವಂತೆ ಪುರಾತನ ಕವಿಗಳು ಮಾಡಿದರು.

ವಿಚಾರ: ಚತ್ತಾಣ ಮತ್ತು ಬೆದಂಡೆ ಬಗ್ಗೆ ಅನೇಕ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆಯಾದರೂಅವುಗಳ ಸ್ವರೂಪದ ಬಗ್ಗೆ ಸ್ಪಷ್ಟವಾಗಿಲ್ಲ. ಚಿತ್ರಾಯತನ, ವೈದಂಡಿಕಾ ಎಂಬ ಸಂಸ್ಕೃತ ಮೂಲದ ಸಾಹಿತ್ಯ ಪ್ರಕಾರಗಳೇ ಕನ್ನಡದಲ್ಲಿ ಚತ್ತಾಣ ಮತ್ತು ಬೆದಂಡೆ ಆಗಿವೆ, ಎಂಬುದು ಒಂದು ಊಹೆ. ಆದರೆ ಈ ಹೆಸರಿನ ಪ್ರಕಾರಗಳು ಎಲ್ಲೂ ಉಕ್ತವಾಗಿಲ್ಲ.

ಕಂದಮುಮಮಳಿನ ವೃತ್ತಮು ।
ಮೊಂದೊಂದೆಡೆಗೊಂದು ಜಾತಿ ಜಾಣೆಸೆಯೆ ಬೆಡಂ॥
ಗೊಂದಿವಱೊಳಮರೆ ಪೇೞಲ್ ।
ಸುಂದರರೂಪಿಂ ಬೆದಂಡೆಗಬ್ಬಮದಕ್ಕುಂ॥೧-೩೪॥

ಅನ್ವಯ: ಕಂದಮುಮ್= ಕಂದವೂ, ಅಮಳಿನ ವೃತ್ತಮುಮ್= ಸ್ವಚ್ಛವಾದ ವೃತ್ತವೂ, ಒಂದೊಂದು ಎಡೆಗೆ ಒಂದು ಚಾತಿ=ಅಲ್ಲಲ್ಲಿ ಜಾತಿ ಪದ್ಯಗಳು, ಜಾಣ್ ಎಸೆಯೆ ಬೆಡಂಗು ಒಂದಿ= ಜಾಣ್ಮೆಯಿಂದ ಶೋಭಿಸಿ, ಇವಱೊಳ್ ಅಮರೆ= ಇವುಗಳಲ್ಲಿ ಹೊಂದುವಂತೆ ಹೇಳಲು, ಸುಂದರ ರೂಪಿನ್= ಸುಂದರ ರೂಪದಿಂದ, ಬೆದಂಡೆ ಕಬ್ಬಮ್=ಬೆದಂಡೆ ಕಾವ್ಯ,  ಅದು ಅಕ್ಕುಂ= ಅದು ಆಗುತ್ತದೆ.

ಭಾವಾರ್ಥ: ಕಂದಪದ್ಯ ಸ್ವಚ್ಛವಾದ ವೃತ್ತ ಮತ್ತು ಅಲ್ಲಲ್ಲಿ ಜಾತಿಪದ್ಯಗಳುಜಾಣ್ಮೆಯಿಂದ ಶೋಭಿಸುವಂತೆ ಸೇರಿ ಅಂದವಾಗಿರುವಂತೆ ಹೇಳಿದರೆ ಅದು ಸುಂದರವಾದ ಬೆದಂಡೆ ಕಾವ್ಯವಾಗುತ್ತದೆ.  

ವಿಚಾರ: ಈ ವಿವರಣೆಯಿಂದ ಬೆದಂಡೆಯ ಸ್ವರೂಪ ತಿಳಿಯುವುದಿಲ್ಲ. ಛಂದಸ್ಸಿನ ವಿಷಯ ಮಾತ್ರ ಹೇಳಿರುವುದರಿಂದ ಇದು ಮಾತ್ರಾಛಂದಸ್ಸಿನ ಕಂದ. ಅಕ್ಷರ ಛಂದಸ್ಸಿನ ವೃತ್ತ ಮತ್ತು ಅಂಶ ಛಂದಸ್ಸಿನ ಪದ್ಯಗಳು ಸೇರಿದ ವಿಶಿಷ್ಟ ಕಾವ್ಯಪ್ರಕಾರ-
ವೆಂದು ಊಹಿಸಬಹುದು

ಕಂದಂಗಳ್ ಪಲವಾಗಿರೆ ।
ಸುಂದರವೃತ್ತಂಗಳಕ್ಕರಂ ಚೌಪದಿ ಮ ॥
ತ್ತಂ ದಲ್ ಗೀತಿಕೆ ತಿವದಿಗ ।
ಳಂದಂಬೆತ್ತೆಸೆಯೆ ಪೇೞ್ವೊಡದು ಚತ್ತಾಣಂ॥೧-೩೫॥

ಅನ್ವಯ: ಕಂದಂಗಳ್ ಪಲವಾಗಿರೆ= ಕಂದಪದ್ಯಗಳು ಹಲವಿದ್ದು,ಸುಂದರವೃತ್ತಂಗಳ್= ಸುಂದರ ವೃತ್ತಗಳು, ಅಕ್ಕರಮ್=ಅಕ್ಕರ, ಚೌಪದಿ=ಚೌಪದಿ, ಮತ್ತಮ್ ದಲ್ ಗೀತಿಕೆ ತಿವದಿಗಳ್= ಮತ್ತೆ ಗೀತಿಕೆ, ತಿವದಿಗಳು, ಅಂದಮ್ ಬೆತ್ತೆಸೆಯೆ ಪೇೞ್ದೊಡೆ= ಅಂದವಾಗಿ ಸೇರುವಂತೆ ಹೇಳಿದರೆ, ಅದು ಚತ್ತಾಣಮ್=ಅದು ಚತ್ತಾಣ.

ಭಾವಾರ್ಥ: ಕಂದಪದ್ಯಗಳು ಹಲವಿದ್ದು, ಅವುಗಳ ಜತೆಗೆ ಸುಂದರ ವೃತ್ತಗಳು, ಅಕ್ಕರ, ಚೌಪದಿ, ಗೀತಿಕೆ, ಮತ್ತು ತಿವದಿಗಳು ಅಂದವಾಗಿ ಸೇರುವಂತೆ ಹೇಳಿದರೆ ಅದು ಚತ್ತಾಣ.  

ವಿಚಾರ: ಹೀಗೆ ವಿವಿಧ ರೀತಿಯ ಛಂದೋಬಂಧಗಳಿಂದ ಕೂಡಿದ ಕಾವ್ಯಪ್ರಕಾರ ಚತ್ತಾಣ ಎಂಬ ಹೆಸರಿನಲ್ಲಿ ಯಾವುದೂ ಕಂಡುಬಂದಿಲ್ಲ. ಆದರೆ ಕವಿರಾಜಮಾರ್ಗದ ಪೂರ್ವಕಾಲದಲ್ಲೇ ಅಕ್ಷರಛಂದಸ್ಸು, ಮಾತ್ರಾಛಂದಸ್ಸುಮತ್ತು ದೇಶೀಛಂದಸ್ಸು ವಿಸ್ತಾರವಾಗಿ ಬಳಕೆಯಾಗುತ್ತಿದ್ದುವೆಂದೂ ಅವೆಲ್ಲ ಸೇರಿ ಕೆಲವು ಕಾವ್ಯಪ್ರಕಾರಗಳು ರೂಪುಗೊಂಡಿದ್ದುವೆಂಬುದೂ ಸ್ಪಷ್ಟವಾಗುತ್ತದೆ.

ಕನ್ನಡನಾಡು-ಜನ

ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಲಯವಿಲೀನವಿಶದವಿಷಯವಿಶೇಷಂ॥೧-೩೬॥

ಅನ್ವಯ: ಕಾವೇರಿಯಿಂದಮ್= ಕಾವೇರಿಯಂದ, ಆ ಗೋದಾವರಿವರಮ್ ಇರ್ದ= ಆ ಗೋದಾವರಿವರೆಗೂ ಇದ್ದ, ನಾಡು+ಅದು= ನಾಡು ಅದು(ಪ್ರದೇಶ), ಆ ಕನ್ನಡದೊಳ್ =ಆ ಕನ್ನಡ ನಾಡಿನಲ್ಲಿ,  ಭಾವಿಸಿದ ಜನಪದಂ= ಸೇರಿದ ಜನಪದ( ಜನರು ವೃಸಿಸುವ ಪ್ರದೇಶ) , ವಸುಧಾವಲಯ ವಿಲೀನ= ಭೂಮಂಡಲದಲ್ಲಿರುವ, ವಿಶದ=ಸುಂದರವಾದ, ವಿಷಯ ವಿಶೇಷ= ಪ್ರದೇಶಗಳಲ್ಲಿ ಒಂದು,

ಭಾವಾರ್ಥ: ಕಾವೇರಿಯಿಂದ ಆ ಗೋದಾವರಿಯವರೆಗೂ ಇದ್ದ ನಾಡದು. ಆ ಕನ್ನಡ ನಾಡಿನಲ್ಲಿ ಸೇರಿದ ಜನಪದ
( ಜನರ ವಾಸಪ್ರದೇಶ)ಭೂಮಂಡಲದಲ್ಲಿರುವ ಸುಂದರವಾದ ಪ್ರದೇಶಗಳಲ್ಲಿ ಒಂದು.

ವಿಶೇಷ: ಎರಡು ನದಿಗಳು ಗಡಿಪ್ರದೇಶವಾಗಿರುವ ಭಾಷಾ ಪ್ರದೇಶವನ್ನು ಇಷ್ಟು ಸ್ಪಷ್ಟವಾಗಿ ಸೂಚಿಸಿರುವುದು ಒಂದು ವಿಶೇಷ.

ಅದಱೊಳಗಂ ಕಿಸುವೊೞಲಾ
ವಿದಿತ ಮಹಾಕೊಪಣನಗರದಾ ಪುಲಿಗೆಱೆಯಾ
ಸದಭಿಸ್ತುತಮಪ್ಪೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್॥೧-೩೭॥

ಅನ್ವಯ: ಅದಱೊಳಗಮ್=ಅದರಲ್ಲಿ (ಆ ಕನ್ನಡ ನಾಡಿನಲ್ಲಿ) ಕಿಸುವೊೞಲಾ= ಕಿಸುವೊೞಲ, ವಿದಿತ ಮಹಾಕೊಪಣ-
ನಗರದಾ= ಪ್ರಸಿದ್ಧ ಮಹಾಕೊಪಣನಗರದ, ಪುಲಿಗೆಱೆಯಾ= ಪುಲಿಗೆಱೆಯ, ಸತ್+ಅಭಿಸ್ತುತಮಪ್ಪ = ಸ್ತುತ್ಯವಾದ, ಒಂಕುಂದದ ನಡುವಣ= ಒಂಕುಂದದ ನಡುವೆ ಇರುವ, ನಾಡೆ ನಾಡೆ= ನಾಡೇ , ಕನ್ನಡದ ತಿರುಳ್= ತಿರುಳ್ಗನ್ನಡನಾಡಾಗಿದೆ.

ಭಾವಾರ್ಥ: ಅದರಲ್ಲಿ ( ಆ ಕನ್ನಡ ನಾಡಿನಲ್ಲಿ) ಕಿಸುವೊೞಲ, ಪ್ರಸಿದ್ಧ  ಮಹಾಕೊಪಣ ನಗರದ, ಪುಲಿಗೆಱೆಯ, ಸ್ತುತ್ಯವಾದ ಒಂಕುಂದದ ನಡುವೆ ಇರುವ, ನಾಡೇ ತಿರುಳ್ಗನ್ನಡನಾಡಾಗಿದೆ.

ವಿಶೇಷ: ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ತಿರುಳ್ಗನ್ನಡ ನಾಡನ್ನು ಗುರುತಿಸುವ ಪ್ರಯತ್ನ ಒಂಬತ್ತನೆಯ ಶತಮಾನದಲ್ಲೇ ನಡೆದಿರುವುದು ಒಂದು ವೆಶೇಷವೇ ಸರಿ. ಕಿಸುವೊೞಲ್ ಈಗ ಪಟ್ಟದಕಲ್ಲು.  ಕೊಪಣ ಈಗಿನ ಕೊಪ್ಪಳ. ಪುಲಿಗೆಱೆ ಈಗಿನ ಲಕ್ಷ್ಮೇಶ್ವರ. ಒಂಕುಂದ ಈಗ ಒಕ್ಕುಂದ ಆಗಿವೆ.

ಪದನಱಿದು ನುಡಿಯಲುಂ ನುಡಿ
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱತೋ
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್॥೧-೩೮॥

ಅನ್ವಯ: ಪದನ್ ಅಱಿದು ನುಡಿಯಲುಮ್= ಹದವರಿತು ಹೇಳಲು, ನುಡಿದುದನ್ ಅಱಿದು= ಹೇಳಿದುದನ್ನು ತಿಳಿದು, ಆರಯಲುಮ್ ಆರ್ಪರ್= ಶೋಧಿಸಬಲ್ಲವರು, ಆ ನಾಡವರ್ಗಳ್= ಆ ನಾಡಿನವರು. ಚದುರರ್=( ಅವರು) ಚತುರರು, ನಿಜದಿನ್ ಕುಱಿತು ಓದದೆಯುಂ= ಉದ್ದೇಶಪೂರ್ವಕವಾಗಿ ಓದದಿದ್ದರೂ, ಕಾವ್ಯಪ್ರಯೋಗ ಪರಿಣತ ಮತಿಗಳ್= ಕಾವ್ಯ-
ಪ್ರಯೋಗ ಮಾಡುವಷ್ಟು ಪರಿಣತಬುದ್ಧಿ ಇರುವಂಥವರು.

ಭಾವಾರ್ಥ: ಹದವರಿತು ಹೇಳಲು, ಹೇಳಿದುದನ್ನು ತಿಳಿದು ಶೋಧಿಸಬಲ್ಲವರು ಆ ನಾಡಿನವರೈ. ಅವರು ಚತುರರು, ಉದ್ದೇಶಪೂರ್ವಕವಾಗಿ ಓದದಿದ್ದರೂ ಕಾವ್ಯಪ್ರಯೋಗ ಮಾಡುವಷ್ಟು ಪರಿಣತಬುದ್ಧಿ ಇರುವಂಥವರು.

ವಿಶೇಷ: ಸಾಮಾನ್ಯವಾಗಿ ಪಂಡಿತರು ಅನಕ್ಷರಸ್ಥರನ್ನು ತಿರಸ್ಕಾರದಿಂದ ನೋಡುತ್ತಾರೆ. ಆದರೆ ವಿದ್ಯಾವಂತರಲ್ಲದಿದ್ದರೂ ಕನ್ನಡ ಜನಪದರು ಕಾವ್ಯಪ್ರಯೋಗ ಮಾಡಬಲ್ಲರೆಂದು ಶ್ರೀವಿಜಯನು ಪ್ರಶಂಸಿಸಿರುವುದು ವಿಶೇಷ.

ಕುಱಿತವರಲ್ಲದೆ ಮತ್ತಂ
ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್
ಕಿಱುವಕ್ಕಳುಮಾ ಮೂಗರು
ಮಱೆಪಲ್ಕಱಿವರ್ ವಿವೇಕಮಂ ಮಾತುಗಳಂ॥೧-೩೯॥

ಅನ್ವಯ: ಕುಱಿತವರ್ ಅಲ್ಲದೆ= ಕಲಿತವರು ಮಾತ್ರವಲ್ಲದೆ,  ಮತ್ತಮ್ ಪೆಱರುಮ್=ಮತ್ತೆ ಇತರರೂ, ತಂತಮ್ಮ ನುಡಿಯೊಳ್= ತಮ್ಮತಮ್ಮ ಮಾತುಗಳಲ್ಲಿ, ಎಲ್ಲರ್ ಜಾಣರ್= ಎಲ್ಲರೂ ಜಾಣರು,  ಕಿಱುವಕ್ಕಳುಮ್= ಚಿಕ್ಕ ಮಕ್ಕಳು,
ಮೂಗರುಮ್= ಮೂಗರು, ವಿವೇಕಮನ್ ಮಾತುಗಳನ್= ವಿವೇಕದಿಂದ ಕೂಡಿದ ಮಾತುಗಳನ್ನು, ಅಱಿಪಲ್ಕೆ ಅಱಿವರ್=ಆಡಬಲ್ಲರು.

ಭಾವಾರ್ಥ: ಕಲಿತವರು ಮಾತ್ರವಲ್ಲದೆ ಬೇರೆಯವರು ಕೂಡ ತಮ್ಮ ತಮ್ಮ ಮಾತುಗಳಲ್ಲಿ ಜಾಣರು. ಚಿಕ್ಕ ಮಕ್ಕಳು, ಮೂಗರು, ಕೂಡ ವಿವೇಕದಿಂದ ಕೂಡಿದ ಮಾತುಗಳನ್ನಾಡಬಲ್ಲರು.

ಜಾಣರ್ಕಳಲ್ಲದವರುಂ
ಪೂಣಿಗರಱಿಯದೆಯುಮಱಿವವೋಲವಗುಣದಾ
ತಾಣಮನಿನಿಸೆಡೆವೆತ್ತೊಡೆ
ಮಾಣದೆ ಪಡಿದದನೆಕೃತಿಗಳಂ ಕೆಡೆನುಡಿವರ್॥೧-೪೦॥

ಅನ್ವಯ: ಜಾಣರ್ಕಳ್ ಅಲ್ಲದ ಅವರುಮ್= ಜಾಣರಲ್ಲದವರು ಕೂಡ, ಪೂಣಿಗರ್= ಕಾರ್ಯಸಾಧಕರು, ಅಱಿಯದೆಯುಮ್= ತಿಳಿಯದಿದ್ದರೂ, ಅಱಿವವೋಲ್= ತಿಳಿದವರಂತೆ, ಅವಗುಣದಾ ತಾಣಮನ್ ಇನಿಸು ಎಡೆವೆತ್ತೊಡೆ=ಅವಗುಣ ಸ್ವಲ್ಪವಿದ್ದರೂ, ಮಾಣದೆ ಪಿಡಿದು= ಒಪ್ಪದೆ ಅದನ್ನೇ ಹಿಡಿದು, ಅದನೆ=ಅದನ್ನೇ, ಕೃತಿಗಳನ್= ಕೃತಿಗಳನ್ನು, ಕೆಡೆನುಡಿವರ್= ಕೆಟ್ಟದಾಗಿ ವ್ಯಾಖ್ಯಾನಿಸುತ್ತಾರೆ,

ಭಾವಾರ್ಥ: ಜಾಣರಲ್ಲದವರು ಕೂಡ ಕಾರ್ಯಸಾಧಕರು.  ತಿಳಿಯದಿದ್ದರೂ ತಿಳಿದವರಂತೆ, ಅವಗುಣ ಸ್ವಲ್ಪವಾಗಿದ್ದರೂ ಅದನ್ನೇ ಹಿಡಿದು ಕೃತಿಗಳನ್ನು ಕೆಟ್ಟದಾಗಿ ವ್ಯಾಖ್ಯಾನಿಸುತ್ತಾರೆ.

ಸಕ್ಕದಮುಂ ಪಾಗದಮುಮ
ದಕ್ಕುಂ ಬಗೆದಂತೆ ಸಮಱಿ ಪೇೞಲ್ ಮುನ್ನಂ
ನಿಕ್ಕುವಮೊಳವಪ್ಪುದಱಿಂ
ತಕ್ಕಂತವಱವಱ ಲಕ್ಷ್ಯಮುಂ ಲಕ್ಷಣಮುಂ॥೧-೪೧॥

ಅನ್ವಯ: ಅವಱವಱ ಲಕ್ಷ್ಯಮುಮ್ ಲಕ್ಷಣಮುಂ=ಆಯಾಭಾಷೆಗಳ ಲಕ್ಷ್ಯ ಲಕ್ಷಣಗಳು, ಮುನ್ನಮೇ=ಮೊದಲೇ, ನಿಕ್ಕುವಮ್ ಒಳವು ಅಪ್ಪುದರಿಮ್= ನಿರ್ದಿಷ್ಟವಾಗಿ ಇರುವುದರಿಂದ, ಸಕ್ಕದಮುಂ=ಸಂಸ್ಕೃತವನ್ನು, ಪಾಗದಮುಮ್=
ಪ್ರಾಕೃತವನ್ನೂಬಗೆದಂತೆ= ಭಾವಿಸಿದಂತೆ, ಸಮಱಿ ಪೇೞಲ್ = ಅಂದವಾಗಿ ಹೇಳಲು, ಅದಕ್ಕುಮ್= ಆಗುತ್ತದೆ.

ಭಾವಾರ್ಥ: ಆಯಾ ಭಾಷೆಗಳ ಲಕ್ಷ್ಯಲಕ್ಷಣಗಳು ಮೊದಲೇ ನಿರ್ದಿಷ್ಟವಾಗಿ ಇರುವುದರಿಂದ ಸಂಸ್ಕೃತದಲ್ಲಿ ಮತ್ತು ಪ್ರಾಕೃತದಲ್ಲಿ ಯಥೇಚ್ಛವಾಗಿ ಕಾವ್ಯ ರಚನೆ ಮಾಡಲು ಸಾಧ್ಯ.

ಅರಿದಾದಂ ಕನ್ನಡದೊಳ್
ತಿರಿಕೊಱೆಗೊಂಡಱಿಯ ಪೇೞ್ವೆನೆಂಬುದಿದಾರ್ಗಂ
ಪರಮಾಚಾರ್ಯರವೋಲ್ ಸ
ಯ್ತಿರಲಱಿಯ ರ್ ಕನ್ನಡಕ್ಕೆ ನಾಡವರೋಜರ್॥೧-೪೨॥

ಅನ್ವಯ: ಕನ್ನಡದೊಳ್ = ಕನ್ನಡದಲ್ಲಿ , ತಿರಿಕೊಱೆಗೊಂಡು= ಅಲ್ಲಿ ಭಿಕ್ಷೆ ಬೇಡಿ, ಅಱಿಯೆ ಪೇಳ್ವೆನ್=ತಿಳಿದುಕೊಂಡ ವಿಷಯವನ್ನು ಹೇಳುತ್ತೇನೆ ಎಂಬುದು, ಆರ್ಗಮ್ ಅರಿದು ಆದಮ್= ಯಾರಿಗಾದರೂ ತುಂಬ ಕಷ್ಟ, ಪರಮಾಚಾರ್ಯರ
ವೋಲ್= ಪರಮಾಚಾರ್ಯರಂತೆ, ಸಯ್ತು ಇರಲ್ ಅಱಿಯರ್= ಸಮಾಧಾನದಿಂದ ಇರಲು ಅರಿಯರು, ಕನ್ನಡಕ್ಕೆ ನಾಡವರ್ ಓಜರ್= ಕನ್ನಡಕ್ಕೆ ಆ ನಾಡಿನವರೇ ಗುರುಗಳು.

ಭಾವಾರ್ಥ: ಕನ್ನಡದಲ್ಲಿ ಅಲ್ಲಿ, ಇಲ್ಲಿ, ಭಿಕ್ಷೆ ಬೇಡಿ, ತಿಳಿದುಕೊಂಡ ವಿಷಯವನ್ನು ಹೇಳುತ್ತೇನೆ ಎಂದು ಹೇಅಳುವುದು ಯಾರಿಗಾದರೂ ಕಷ್ಟ , ಪರಮಾಚಾರ್ಯರಂತೆ ಸಮಾಧಾನದಿಂದ ಹೇಳಲು( ಈ ನಾಡಿನವರಿಗೆ)ತಿಳಿಯದು. ಆದರೆ ಕನ್ನಡದಲ್ಲಿ ಆ ನಾಡಿನವರೇ ಗುರುಗಳು.

ವಿಚಾರ: ಸಂಸ್ಕೃತ ಮತ್ತು ಪ್ರಾಕೃತದ ಪರಮಾಚಾರ್ಯರಿಗೆ ಲಕ್ಷ್ಯಲಕ್ಷಣಗಳು ಸಮೃದ್ಧವಾಗಿ ಇರುವುದರಿಂದ ಅವರಿಗೆ ಕಾವ್ಯರಚನೆ ಕಷ್ಟವೆನೆಸದು. ಆದರೆ ಕನ್ನಡ ಕವಿಗಳಿಗೆ ಆ ಸೌಲಭ್ಯವಿಲ್ಲ. ಆದರೆ ಕನ್ನಡದಲ್ಲಿ ಆ ನಾಡಿನವರೇ ಗುರುಗಳು  ಎಂಬುದನ್ನು ಕವಿ ಇಲ್ಲಿ ಸೂಚಿಸಿದ್ದಾನೆ.

ಕಾವ್ಯದೋಷಗಳು

ಗೀತಿಕೆ:
ಕಾಣನೇಗೆಯ್ದುಂ ತನ್ನ ದೋಷಮಂ
ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ
ಪೂಣಿಗನಾದುದಱಿಂ ಪೆಱರಿಂ
ಜಾಣರಿನೋದಿಸಿ ಪೇೞ್ವುದು ಕಬ್ಬಮಂ॥೧-೪೫॥

ಅನ್ವಯ: ಕಣ್ಗಳ್= ಕಣ್ಣುಗಳು, ಎಂದುಂ=ಎಂದೂ, ತಮ್ಮ ಕಾಡಿಗೆಯನ್= ತಮ್ಮ ಕಾಡಿಗೆಯನ್ನು, ಕಾಣದಂತೆ, ಏಗೆಯ್ದುಮ್= ಏನು ಮಾಡಿದರೂ, ತನ್ನ ದೋಷಮನ್= ತನ್ನ ದೋಷವನ್ನು, ಕಾಣನ್=ಕಾಣುವುದಿಲ್ಲ, ಆದುದಱಿನ್= ಆದುದರಿಂದ,  ಪೂಣಿಗನ್= ಅಭ್ಯಾಸಶೀಲನಾದವನು, ಪೆಱರಿನ್ ಜಾಣರಿನ್ ಓದಿಸಿ= ಜಾಣರಾದ ಇತರರಿಂದ(ತನ್ನ ಕಾವ್ಯವನ್ನು) ಓದಿಸಿ, ಕಬ್ಬಮನ್ ಪೇೞ್ವುದು= ಕಾವ್ಯವನ್ನು ಪ್ರಕಟಿಸಲಿ.

ಭಾವಾರ್ಥ: ಕಣ್ಣುಗಳು ಎಂದೂ ತಮ್ಮ ಕಾಡಿಗೆಯನ್ನು ಕಾಣದಂತೆ ಯಾವ ಮನುಷ್ಯನು ಏನು ಮಾಡಿದರೂ ತನ್ನ ದೋಷವನ್ನು ತಾನೇ ಕಾಣಲಾರನು. ಆದುದರಿಂದ ಅಭ್ಯಾಸಶೀಲನಾದವನು ಜಾಣರಾದ ಇತರರಿಂದ ತನ್ನ ಕಾವ್ಯವನ್ನು ಓದಿಸಿ ಆಮೇಲೆ ಪ್ರಕಟಿಸಲಿ.

ವಿಶೇಷ: ಜಾಣರಾದ ಓದುಗರಿಂದ ಅಭಿಪ್ರಾಯ ಸ್ವೀಕರಿಸಬೇಕೆಂಬ ಅಪೂರ್ವ ಯೋಚನೆಯನ್ನು ಮುಂದಿಟ್ಟಿರುವುದು ಕವಿರಾಜಮಾರ್ಗದ ವೈಶಿಷ್ಟ್ಯ.

ಕನ್ನಡ ದೇಸಿ

ದೋಸಮಿನಿತೆಂದು ಬಗೆದು
ದ್ಭಾಸಿಸಿ ತಱಿಸಂದು ಕನ್ನಡಂಗಳೊಳೆಂದುಂ
ವಾಸುಗಿಯುಮಱಿಯಲಾಱದೆ
ಬೇಸಱುಗುಂ ದೇಸಿ ಬೇಱೆಬೇಱಪ್ಪುದಱಿಂ॥೧-೪೬॥

ಅನ್ವಯ:ದೇಸಿ ಬೇಱೆ ಬೇಱೆ ಅಪ್ಪುದಱಿನ್= ದೇಸಿ ಬೇರೆ ಬೇರೆಯಾಗಿರುವುದರಿಂದ, ಕನ್ನಡಂಗಳೊಳ್= ಕನ್ನಡ ಭಾಷಾ
ಪ್ರಭೇದಗಳಲ್ಲಿ, ದೋಸಮ್ ಇನಿತೆಂದು= ದೋಷ ಈ ರೀತಿಯದೆಂದು, ಬಗೆದು ಉದ್ಭಾಸಿಸಿ= ಯೋಚಿಸಿ, ತಿಳಿಯಪಡಿಸಿ, ತಱಿಸಂದು=ನಿಶ್ಚಯಿಸಿ, ವಾಸುಗಿಯುಮ್= ವಾಸುಕಿ ಕೂಡ, ಅಱಿಯಲಾಱದೆ= ತಿಳಿಯಲಾರದೆ, ಬೇಸಱುಗುಮ್=
ಬೇಸರಪಟ್ಟುಕೊಳ್ಳುತ್ತಾನೆ.

ಭಾವಾರ್ಥ: ದೇಸಿ ಬೇರೆಬೇರೆಯಾಗಿರುವುದರಿಂದ ಕನ್ನಡ ಭಾಷಾ ಪ್ರಭೇದಗಳಲ್ಲಿ ದೋಷ ಈ ರೀತಿಯದೆಂದು ಯೋಚಿಸಿ, ತಿಳಿಯಪಡಿಸಿ, ನಿಶ್ಚಯಿಸಿ ವಾಸುಕಿ ಕೂಡ ಸ್ಪಷ್ಟವಾಗಿ ಅರಿಯಲಾಗದೆ ಬೇಸರಗೊಳ್ಳುತ್ತಾನೆ.

ವಿಚಾರ: ಕನ್ನಡದ ದೇಸಿಯಲ್ಲಿರುವ ವಿವಿಧ ಬಗೆಗಳನ್ನು ಗುರುತಿಸಿ, ಅವುಗಳಲ್ಲಿ ವ್ಯತ್ಯಾಸ ಇರುವುದನ್ನು ಹೇಳಿದ್ದು ಕವಿರಾಜಮಾರ್ಗದ ಇನ್ನೊಂದು ವಿಶೇಷ.  

ವಿದಿತಸಮಸಂಸ್ಕೃತೋದಿತ
ಪದಂಗಳೊಳ್ ಪುದಿದು ಬೆರಸಿ ಬರೆ ಕನ್ನಡದೊಳ್
ಮುದಮನವು ತರ್ಕುಮತಿಶಯ
ಮೃದಂಗಸಂಗೀತಕಾದಿ ಮಧುರರವಂಬೋಲ್॥೧-೫೫॥

ಅನ್ವಯ: ವಿದಿತ= ಪ್ರಸಿದ್ಧವಾದ,  ಸಮಸಂಸ್ಕೃತ ಉದಿತ ಪದಂಗಳೊಳ್ = ಸಮಸಂಸ್ಕೃತ ಪದಗಳಿಗೆ, ಪುದಿದು =ಹೊಂದಿಕೊಳ್ಳೈವಂತೆ, ಬೆರಸಿ ಬರೆ= ಬೆರಸಿ ಬರೆವುದಾದರೆ, ಕನ್ನಡದೊಳ್= ಕನ್ನಡದಲ್ಲಿ,  ಅತಿಶಯ=ಅತಿಶಯವೃದ, ಮೃದಂಗಸಂಗೀತಕಾದಿ= ಮೃದಂಗ ಸಂಗೀತಾದಿಗಳ, ಮಧುರರವಂಬೋಲ್= ಮಧುರ ಧೂವನಿಯಂತೆ, ಮುದಮನ್ ಅವು ತರ್ಕುಮ್= ಅವು ಸಂತೋಷವನ್ನು ಉಂಟುಮಾಡುತ್ತವೆ.

ಭಾವಾರ್ಥ: ಪ್ರಸಿದ್ಧವಾದ ಸಮಸಂಸ್ಕೃತ ಪದಗಳಿಗೆ ಹೊಂದಿಕೊಳ್ಳುವಂತೆ ಕನ್ನಡ ಪದಗಳು ಬೆರಸಿ ಬರೆಯುವುದಾದರೆ ಅತಿಶಯವಾದ ಮೃದಂಗಸಂಗೀತದ ಮಧುರಧೂವನಿಯಂತೆ ಸಂತೋಷವನ್ನು ಉಂಟುಮಾಡುತ್ತವೆ.  

ವಿಚಾರ: ಸಂಸ್ಕೃತ ಪದಗಳನ್ನು ಬಳಸುವುದಾದರೆ ಅವ್ಯಯಗಳನ್ನು ನೇರವಾಗಿ ಬಳಸದೆ, ಸಮಸಂಸ್ಕೃತ ಪದಗಳನ್ನು ಯಾವರೀತಿ ಬಳಸಬಹುದೆಂದು ಮಾರ್ಗಕಾರ ಸ್ಪಷ್ಟಪಡಿಸಿದ್ದಾನೆ. ಅಲ್ಲದೆ ಈ ರೀತಿ ಮಾಡಿದರೆ ಅದು ಮೃದಂಗಧ್ವನಿಯಂತೆ ಮಧುರವಾಗಿರುತ್ತದೆಂದು ಅಭಿಪ್ರಾಯಪಟ್ಟಿದ್ದಾನೆ.

ತಱೆಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದವೋಲ್॥೧-೫೮॥

ಅನ್ವಯ: ತಱಿಸಂದು = ಪ್ರಯತ್ನಪೂರ್ವಕವಾಗಿ , ಆ ಸಕ್ಕದಮನ್= ಆ ಸಂಸ್ಕೃತವನ್ನೂ, ಅಱಿಯದೆ ಕನ್ನಡಮುಮನ್= ಅರಿಯದೆ ಕನ್ನಡವನ್ನೂ, ಸಮಾಸೋಕ್ತಿಗಳೊಳ್ ಕುರಿತು ಬೆರಸಿದೊಡೆ= ಸಮಾಸಗಳಲ್ಲಿ ಬೆರಸಿದರೆ, ಮಱುಗುವ ಪಾಲ್ಗೆ= ಕುದಿಯುವ ಹಾಲಿಗೆ, ಅಳೆಯ ಪನಿಗಳಮ್ ಬೆರಸಿದವೋಲ್= ಮಜ್ಜಿಗೆಯ ಹನಿಗಳನ್ನು ಬೆರಸಿದಂತೆ, ವಿರಸಮ್= ಅದು ವಿರಸವೇ ಆಗುತ್ತದೆ.

ಭಾವಾರ್ಥ: ಸಂಸ್ಕೃತವನ್ನೂ ಕನ್ನಡವನ್ನೂ ಅರಿಯದೆ ಬೇಕೆಂದೇ ತಂದು ಸಮಾಸಗಳಲ್ಲಿ ಬೆರಸಿದರೆ ಕುದಿಯುವ ಹಾಲಿಗೆ ಮಜ್ಜಿಗೆಯ ಹನಿಗಳನ್ನು ಬೆರಸಿದಂತೆ ವಿರಸವಾಗುತ್ತದೆ.

ದ್ವಿತೀಯಪರಿಚ್ಛೇದಂ

ಶಬ್ದ ಮತ್ತು ಅರ್ಥಗಳ ಪ್ರಯೋಗ ವಿಧಿ

ಸುಭಟರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್
ಅಭಿಮಾನಿಗಳತ್ಯುಗ್ರರ್
ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್ ॥೨-೨೮॥

ಅನ್ವಯ: ನಾಡವರ್ಕಳ್ = ಈ ನಾಡಿನ ಜನ,  ಸುಭಟರ್ಕಳ್ = ಒಳ್ಳೆಯ ಯೋಧರು . ಕವಿಗಳ್= ಕವಿಗಳು, ಸುಪ್ರಭುಗಳ್=ಒಳ್ಳೆಯ ಪ್ರಭುಗಳು, ಚೆಲ್ವರ್ಕಳ್=ಸುಂದರರು, ಅಭಿಜನರ್ಕಳ್= ಶಿಷ್ಟರು, ಗುಣಿಗಳ್=ಗುಣವಂತರು,
ಅಭಿಮಾನಿಗಳ್=ಅಭಿಮಾನಿಗಳು,  ಅತಿ+ಉಗ್ರರ್=ಪರಾಕ್ರಮಿಗಳು, ಗಭೀರ ಚಿತ್ತರ್=ಗಂಭೀರಚಿತ್ತರು, ವಿವೇಕಿಗಳ್=ವಿವೇಕಿಗಳು.

ಭಾವಾರ್ಥ: “ ಈ ನಾಡಿನ ಜನ ಒಳ್ಳೆಯ ಯೋಧರು. ಕವಿಗಳು, ಒಳ್ಳೆಯ ಪ್ರಭುಗಳು, ಸುಂದರರು, ಶಿಷ್ಟರು, ಗುಣವಂತರು, ಅಭಿಮಾನಿಗಳು, ಅತ್ಯುಗ್ರರು, ಗಂಭೀರಚಿತ್ತರು,ಮತ್ತು ವಿವೇಕಿಗಳು”

ಅಂತಧಿಕವಿಶೇಷಣಗಣ।
ಮಂ ತಡೆಯದೆ ಪೇೞ್ವೊಡಂಕಚಾರಣೆಗಳೊಳಂ ॥
ಸಂತಂ ಪೇೞ್ಗುೞಿದಾವೆಡೆ ।
ಯಂತರದೊಳಮಾಗದೆಂದನತಿಶಯಧವಳಂ॥೨-೨೯॥

ಅನ್ವಯ: ಅಂತು ಅಧಿಕ ವಿಶೇಷಣ ಗಣಮ್= ಹೀಗೆ ಅಧಿಕ ವಿಶೇಷಣೆಗಳನ್ನು, ತಡೆಯದೆ ಪೇೞ್ವೊಡೆ= ತಡೆಯದೆ ಹೇಳುವಾಗ, ಅಂಕಚಾರಣೆಗಳೊಳಂ= ಸದ್ಗುಣವರ್ಣನೆಯ ಪ್ರಸಂಗವಿದ್ದಾಗ ಮಾತ್ರ,  ಸಂತಮ್ ಪೇೞ್ಗೆ= ಬಳಸುವುದು ಸರಿ, ಉೞಿದಾವೆಡೆ= ಉಳಿದೆಡೆಗಳಲ್ಲಿ, ಅಂತರದೊಳಮ್ ಆಗದು= ಹಾಗೆ ಹೇಳುವುದು ಸರಿಯಲ್ಲವೆಂದು, ಅತಿಶಯಧವಳನ್ ಎಂದನ್= ಅತಿಶಯಧವಳನು ಹೇಳಿದನು.

ಭಾವಾರ್ಥ: ಹೀಗೆ ಅಧಿಕ ವಿಶೇಷಣಗಳನ್ನು ಸದ್ಗುಣವರ್ಣನೆಯ ಪ್ರಸಂಗವಿದ್ದಾಗ ಮಾತ್ರ, ಬಳಸುವುದು ಸರಿ. ಉಳಿದೆಡೆಗಳಲ್ಲಿ ಹಾಗೆ ಹೇಳುವುದು ಸರಿಯಲ್ಲವೆಂದು ಅತಿಶಯಧವಳನಾದ ನೃಪತುಂಗನ ಮತ.

ಪ್ರಹೇಳಿಕೆ
ಗೀತಿಕೆ:
ಅನುಗತಂ ಪೂರ್ವಕವಿಗಳಂ
ನೆನೆದಿನ್ನು ಪೇೞ್ದೆಂ ದುಷ್ಠರೋಕ್ತಿಯ
ನ್ನನುಗತಕ್ರಮದೆ ಬಗೆದು ಹೇಳಿಕೆಯೊಳ್
ಜನಿತ ವಿಭೇದಮುಮಂ ಪೇೞ್ವೆಂ ಕಿಱಿದಂ॥೨-೧೪೩॥

ಅನ್ವಯ: ಅನುಗತಮ್ ಪೂರ್ವಕವಿಗಳನ್  ನೆನೆದು= ಪೂರ್ವ ಕವಿಗಳನ್ನು ಕ್ರಮವಾಗಿ ನೆನೆದು, ದುಷ್ಟರ ಉಕ್ತಿಯನ್ ಇನ್ನುಂ ಪೇಳ್ವೆನ್= ದುಷ್ಟರ ಉಕ್ತಿಗಳನ್ನು ಹೇಳಿದೆ, ಅನುಗತ ಕ್ರಮದೆ ಬಗೆದು =ಅನುಗತಕ್ರಮದಲ್ಲಿ ಯೋಚಿಸಿ, ಹೇಳಿಕೆಯೊಳ್ ಜನಿತ ವೆಭೇದಮುಮನ್= ಪ್ರಹೇಳಿಕೆಯಲ್ಲಿ ಉಂಟಾದ ಭೇದಗಳನ್ನು, ಕಿಱಿದನ್ ಪೇೞ್ವೆನ್= ಸಂಕ್ಷೇಪವಾಗಿ ಹೇಳುತ್ತೇನೆ.
ಭಾವಾರ್ಥ: ಪೂರ್ವ ಕವಿಗಳನ್ನು ಕ್ರಮವಾಗಿ ನೆನೆದು ದುಷ್ಟರ ಉಕ್ತಿಗಳನ್ನು ಹೇಳಿದೆ. ಪ್ರಹೇಳಿಕೆಗಳಲ್ಲಿ ಉಂಟಾದ ಪ್ರಭೇದಗಳನ್ನು ಸಂಕ್ಷೇಪವಾಗಿ ಹೇಳುತ್ತೇನೆ.  

ಗೀತಿಕೆ:

ಭಾವೆಯುಂ ನುಸುಳುಮಸ್ಪಷ್ಟಾಕ್ಷರಮು
ಮಾ ವರ್ಣವ್ಯತ್ಯಯಮುಂ ಬಿಂದುಚ್ಯುತಿಯುಂ
ಭಾವಿಸಿದೊರ್ನುಡಿಯುಂ ವರ್ಣಚ್ಯುತಮುಂ
ಕೇವಳಮವಱ ಭೇದಮಾ ಸುಸಮಂತಕಮುಂ॥೨-೧೪೪॥

ಅನ್ವಯ: ಭಾವೆಯುಮ್ ನುಸುಳುಮ್ ಅಸ್ಪಷ್ಟ ಅಕ್ಷರಮುಮ್= ಭಾವೆ, ನುಸುಳ್, ಅಸ್ಪಷ್ಟಾಕ್ಷರ, ವರ್ಣ ವ್ಯತ್ಯಯ-
ಮುಮ್ ಬಿಂದು ಚ್ಯುತಿಯುಮ್== ವರ್ಣವ್ಯತ್ಯಯ,ಬಿಂದುಚ್ಯುತಿ, ಭಾವಿಸಿದ ಒರ್ನುಡಿಯುಂ=ಒರ್ನುಡಿ, ವರ್ಣಚ್ಯುತಮುಮ್=ವರ್ಣಚ್ಯುತ, ಆ ಸುಸಮಂತಕಮುಮ್=ಸಮಸ್ತ, ಕೇವಳಮ್ ಅವಱ ಭೇದಮ್= ಇವು(ಪ್ರಹೇಳಿಕೆಯ)ಪ್ರಭೇದಗಳು.

ಭಾವಾರ್ಥ = ಭಾವೆ, ನುಸುಳ್, ಅಸ್ಪಷ್ಟಾಕ್ಷರ, ವರ್ಣವ್ಯತ್ಯಯ, ಬಿಂದು ಚ್ಯುತಿ,ಒರ್ನುಡಿ, ವರೂಣಚ್ಯುತ, ಮತ್ತು ಸಮಸ್ತಕ ಎಂಬುವು ಪ್ರಹೇಳಿಕೆಯ ಪ್ರಭೇದಗಳು.

ವಿಚಾರ : ಇಲ್ಲಿ ಪ್ರಹೇಳಿಕೆಯು ಎಂಟು ಪ್ರಕಾರಗಳನ್ನು ಹೆಸರೆಸಲಾಗಿದೆಯೇ ಹೊರತು ಅದರ ಲಕ್ಷಣವನ್ನು ಹೇಳಿಲ್ಲ. ದಂಡಿ ಅದರ ಲಕ್ಷಣವನ್ನು ಹೇಳಿದ್ದಾನೆ.( ೩.೯೭)

ಕ್ರೀಡಾಗೋಷ್ಠೀವಿನೋದೇಷು ತಜ್ ಜ್ಞೈರಾಕೀರ್ಣಮಂತ್ರಣೇ।
ಪರವ್ಯಾಮೋಹನೇ ಚಾಪಿ ಸೋಪಯೋಗಾಃ ಪ್ರಹೇಲಿಕಾಃ॥

( ಕ್ರೀಡಾಗೋಷ್ಠೀ ವಿನೋದಗಳಲ್ಲಿ, ತಿಳಿದಿರುವವರ ಜತೆ ಗುಪ್ತ ಸಂಭಾಷಣೆಗೆ, ಇತರರನ್ನು ಮೋಹಗೊಳಿಸಲು ಪ್ರಹೇಲಿಕೆಯನ್ನು ಉಪಯೋಗಿಸಲಾಗುವುದು)

ಭಾವೆ:

ಗೀತಿಕೆ:

ಸವಿಹಿತಮಪ್ಪ ಕರ್ಣಪೂರೋತ್ಪಳಮಂ ।
ಧವಳವಿಲೋಚನೆಯ ಗುಣಸುಂದರಮಂ॥
ಕಿವಿವರಂ ನೀಳ್ದ ನಯನಯುಗದೊಳೊ ।
ಪ್ಪುವವಳಾನವಯವದೇಕ ಕಳೆಯ ವೇೞ್ದೆಂ ಪ್ರಿಯೆಯಂ॥೨-೧೪೫॥

ಅನ್ವಯ: ಧವಳ ವಿಲೋಚನೆಯ= ಪ್ರಕಾಶಮಾನ ನೇತ್ರದವಳು, ಗುಣಸುಂದರಮನ್=ಗುಣಸುಂದರಿಯು, ಕಿವಿವರಂ ನೀಳ್ದ= ಕಿವಿಯವರೆಗೆ ನೀಳವಾಗಿರುವ, ನಯನಯೈಗದೊಳ್ ಒಪ್ಪುವವಳಾನ್= ಕಣ್ಣುಗಳಿಂದ ಒಪ್ಪುವವಳನ್ನು, ಪ್ರಿಯೆಯನ್= ಪ್ರಿಯೆಯನ್ನು, ಸವಿಹಿತಮಪ್ಪ ಕಣ್ಪೂರ ಉತ್ಪಳಮನ್=ಕಿವಿಯಲ್ಲಿ ಚೆನ್ನಾಗಿ ಒಪ್ಪುವ ನೈದಿಲೆಯನ್ನು, ಅವಯವದೆ ಏಕೆ ಕಳೆಯವೇೞ್ದಿನ್= ತೆಗೆದುಬಿಡಬೇಕೆಂದು ನಾನೇಕೆ ಹೇಳಿದೆನು.

ಭಾವಾರ್ಥ = “ ಬಿಳಿಯ ಕಣ್ಣುಗಳುಳ್ಳವಳು, ಗುಣಸುಂದರಿಯು, ಕಿವಿಯವರೆಗೆ ನೀಳವಾಗಿರುವ ಕಣ್ಣುಗಳಿರುವವಳು, ಆದ ಪ್ರಿಯೆಗೆ ಕಿವಿಯಲ್ಲಿ ಚೆನ್ನಾಗಿಒಪ್ಪುವ ನೈದಿಲೆಯನ್ನು ತೆಗೆದುಬಿಡಬೇಕೆಂದು ನಾನೇಕೆ ಹೇಳಿದೆನು.

ವಿಚಾರ: ಭಾವೆ ಎಂಬುದು ಭಾಮೆಯ ಪರ್ಯಾಯಪದ ಅಥವಾ ತದ್ಭವ ಇರಬಹುದು. ದಂಡಿಯಲ್ಲಿ ಈ ಪ್ರಭೇದವಿಲ್ಲ. ಇದನ್ನು ಹೇಳಿದವರಲ್ಲಿ ಕವಿರಾಜಮಾರ್ಗಕಾರನೇ ಮೊದಲನೆಯವನಿರಬಹುದು. “ಭಾಮಾ” ಎಂದರೆ ಸೊಕ್ಕಿನ ಹೆಣ್ಣು.ವಿಶಾಲನಯನೆಯಾದ ಪ್ರಿಯೆಗೆ ನೈದಿಲೆಯ ಆವಶ್ಯಕತೆ ಇಲ್ಲದ ಕಾರಣ ನಾಯಕನು ಅದನ್ನು ತೆಗೆದುಬಿಡುವಂತೆ
ಹೇಳಿರಬಹುದು.

ನುಸುಳ್:

ಗೀತಿಕೆ:
ತಿರಿವುದದೊಂದು ಚಕ್ರದೊಳೆ ನಿಂದುದಿವಾ ।
ಕರನೆ ಮತ್ತರಿದು ಕಳೆವೊಡಂತದನಾವೆಡೆಯಿಂ ॥
ದರಮೆಯಾಗಿ ನೆಲಸಿ ಕೆಲಕಾಲದಿಂ ।
ಪೊರೆದಿರದೞಿದ ಬೞಿಕೆ ತಾಂ ನೆಲದೊಳ್॥೨-೧೪೬॥

ಅನ್ವಯ: ತಿರಿವುದು ಅದು ಒಂದು ಚಕ್ರದೊಳೆ ನಿಂದು=ಅದು ಒಂದು ಚಕ್ರದಲ್ಲೇ ನಿಂತು ಸುತ್ತುತ್ತದೆ, ದಿವಾಕರನೆ= ಸೂರ್ಯನೇ, ಮತ್ತೆ ಅರಿದು ಕಳೆವೊಡೆ= ತಿಳಿದು ಅದನ್ನು ಕತ್ತರಿಸಿ ಹಾಕಿದರೆ, ಅಂತು ಅದನ್ ಆವೆಡೆಯಿಂದೆ  ಅರಮೆಯಾಗಿ ನೆಲಸಿ ಕೆಲಕಾಲದಿನ್= ಯಾವುದೋ ದಿಕ್ಕಿನಲ್ಲಿ ಸ್ವಲ್ಪಕಾಲ ನೆಲಸಿದ್ದು,ಅೞಿದ ಬೞಿಕೆ=ನಷ್ಟವಾದ ಬಳಿಕ, ಪೊರೆದು ಇರದು =ಸಂತೋಷವಾಗಿರುವುದಿಲ್ಲ.

ಭಾವಾರ್ಥ =” ಅದು ಒಂದು ಚಕ್ರದಲ್ಲೇ ಸುತ್ತುತ್ತದೆ, ಸೂರ್ಯನೇ ಅದನ್ನು ಕತ್ತರಿಸಿ ಹಾಕಿದರೆ ಯಾವುದೋ ದಿಕ್ಕಿನಲ್ಲಿ ಸ್ವಲ್ಪಕಾಲ ನೆಲಸಿದ್ದು, ಪೂರ್ತಿ ನಷ್ಟವಾದಬಳಿಕ ತಾನು ನೆಲದಲ್ಲಿ ಇರುವುದಿಲ್ಲ. “

ವಿಚಾರ: ಇದರ ಅರ್ಥ “ಗಾಳಿ” ಎಂದು ಮುಳಿಯ ತಿಮ್ಮಪ್ಪಯ್ಯನವರು, “ಚಕ್ರವಾಕ” ಎಂದು ಎಂ. ವಿ. ಸೀತಾರಾಮಯ್ಯನವರು, “ಚಂದ್ರ” ಎಂದು ಟಿ. ವಿ. ವೆಂಕಟಾಚಲಶಾಸ್ತ್ರೀಯವರು ಊಹಿಸಿದ್ದಾರೆ.

ಅಸ್ಪಷ್ಟಾಕ್ಷರ:

ಗೀತಿಕೆ:
ನೆಟ್ಟನೆ ತಾಂ ಸವಿಯೊಳೊಂದಿರೆ ಭೋಜನಮಾ ।
ನಟ್ಟು ಬಡಿಸು ನಾಮಱಿಯದೆನಸುಂ ಸವಿಯಂ ॥
ಪುಟ್ಟಿದಾಱುವಱಿಯರದಱ ಪೆಸರೊ ।
ಳಟ್ಟುದಂ ಪೇೞಿಕೇಳ್ದೇನೆಂದಱಿಯೆಂ॥೨-೧೪೭॥

ಅನ್ವಯ: ನೆಟ್ಟನೆ ತಾನ್ ಸವಿಯೊಳ್ ಒಂದಿರೆ= ಸರಿಯಾಗಿ ತನಗೆ ರುಚಿಕರವಾಗಿದ್ದರೆ, ಭೋಜನಮಾನ್ ಅಟ್ಟು ಬಡಿಸು=
ಅಂಥ ಭೋಜನವನ್ನು ಅಡುಗೆಮಾಡಿ ಬಡಿಸು, ನಾಮ್ ಅಱಿಯದ ಎನಸುಮ್ ಸವಿಯನ್= ನಾವು ತಿಳಿಯದ ಅನೇಕ ರುಚಿಗಳ, ಪುಟ್ಟಿದ ಆಱುಮ್ ಅರಿಯದ=ಯಾರೂ ಈ ತನಕ ತಿಳಿದಿರದ, ಅದಱ ಪೆಸರೊಳ್ ಅಟ್ಟುದನ್= ಅದರ ಹೆಸರು ಮಾತ್ರ ತಿಳಿದು ಅಡುಗೆ ಮಾಡಿದ್ದನ್ನು, ಪೇೞಿ ಕೇಳ್ದು ಏನ್ ಎಂದಱಿಯದೆ= ಹೇಳಿದರೆ ಅದನ್ನು ಕೇಳಿಯೂ ಅದೇನೆಂಬುದನ್ನು ನಾನರಿಯೆ.

ಭಾವಾರ್ಥ: “ ಸರಿಯಾಗಿ ತನಗೆ ರೈಚಿಕರವಾಗಿದ್ದರೆ ಅಡುಗೆಗಳನ್ನು ಬೇಗ ಮಾಡಿ ಬಡಿಸು. ನಾವು ತಿಳಿಯದ ರುಚಿಗಳ, ಯಾರೂ ಈವರೆಗೆ ಯಾರೂ ಈವರೆಗೆ ತಿಳಿದಿರದ ಹೆಸರಿನ ಅಡುಗೆ ಮಾಡಿದ್ದನ್ನು, ತಿಳಿದು ಹೇಳಿದರೆ, ಅದನ್ನು ಕೇಳಿಯೂ ಅದೇನೆಂಬುದು ನಾನರಿಯೆ.”

ವಿಚಾರ: ಅಸ್ಪಷ್ಟವಾದ ಅಕ್ಷರಗಳು ಮತ್ತು ಅಸ್ಪಷ್ಟವಾದ ಅರ್ಥ ಇರುವ ಪ್ರಹೇಳಿಕೆ ಇದು. ಇಲ್ಲಿ “ ಆರುಂ ಅರಿಯದ” ಎಂಬುದನ್ನು “ ಆಱುಂ ಅಱಿಯದ” ಎಂದು ಓದಿದರೆ ಅಥವಾ ಕೇಳಿದರೆ ಷಡ್ರಸಗಳು ಎಂದು ಅರ್ಥವೃಗುತ್ತದೆ.

ವರ್ಣವ್ಯತ್ಯಯ:

ಗೀತಿಕೆ:
ಆವನಾಮಕತ್ವಕ್ಷುಚಯಂ ।
ಕ್ರಾವನೊಚರಾಮಾಯ ದಷ್ಟಾ ಸಾಯದೆಗಳೊಳ್॥
ಸೇವಿಸೆವಮಲ ಹೈವಸುಮುಕ್ತಿ ಮಹಾ ।
ದೇವ ನಿನ್ನನ್ನನಪ್ಪೊನಸಹಾಯಗುಣಂ॥೨-೧೪೮॥

ವಿಚಾರ: ಈ ಪ್ರಹೇಳಿಕೆ ಕವಿರಾಜಮಾರ್ಗದಲ್ಲಿ ಮಾತ್ರ ಕಂಡುಬರುತ್ತದೆ. ಇದರಲ್ಲಿ ವರ್ಣವ್ಯತ್ಯಯವಾಗಿದೆ. ವರ್ಣವ್ಯತ್ಯಯವೆಂದರೆ ಅಕ್ಷರಗಳ ಸ್ಥಾನಗಳು ಹಿಂದುಮುಂದಾಗಿರುವುದು. ಪ್ರಕೃತ ಪದ್ಯದಲ್ಲಿ ಯಾವೆಡೆಗಳಲ್ಲಿ ವರ್ಣವ್ಯತ್ಯಯವಾಗಿದೆ ಎಂಬುದು ದುರೂಹ್ಯವಾಗಿದೆ.

ಬಿಂದುಚ್ಯುತಕ:

ಗೀತಿಕೆ:
ಸೊಗಯಿಸುಗುಮಿಂದ್ರ ನೀಲಮಣಿಸನ್ನಿಭದೊಳ್।
ಮಿಗೆ ಜಳನಿಧಿಯೊಳಗುದಿತದಿಂದಿರದವೋಲ್ ॥
ನೆಗೆದತಿಧವಳಮೂರ್ತಿಗೆ ಘನವಳಯಸದಗ್ಧ ।
ಗಗನದೊಳುಳಿದುಳಿದು ವಿಶಾಳಿತಾಶಾವಳಯಂ॥೨-೧೪೯॥

ಅನ್ವಯ: ಜಳನಿಧಿಯೊಳಗೆ ಉದಿತದಿಂದಿರದವೋಲ್= ಸಮುದ್ರದಲ್ಲಿ ಹುಟ್ಟಿದ ಅಶ್ವದಂತೆ, ( ಇಂದಿರ= ಒಂದು ಜಾತಿಯ ಕುದುರೆ) ನೆಗೆದ ಅತಿಧವಳ ಮೂರ್ತಿಗೆ= ಸ್ವಚ್ಛವಾದ ಮೂರ್ತಿಗೆ( ಚಂದ್ರನಿಗೆ) ಘನ ವಳಯ ಸದಗ್ಧ ಗಗನದೊಳ್= ಮೋಡಗಳ ಸಮೂಹದಿಂದ ಕೂಡಿರುವ ಆಕಾಶದಲ್ಲಿ, ಉಳಿದುಳಿದು =ಅಡಗಿ, ವಿಶಾಳಿತ ಆಶಾವಳಯಮ್= ವಿಶಾಲವಾದ ದಿಕ್ಕುಗಳ ವಲಯ, ಇಂದ್ರನೀಲಮಣಿ ಸನ್ನಿಭದೊಳ್ ಸೊಗಯಿಸುಗುಂ= ಇಂದ್ರನೀಲಮಣಿಯಂತೆ ಸೊಗಸಾಗಿರುತ್ತದೆ.

ಭಾವಾರ್ಥ: “ ಸಮುದ್ರದಲ್ಲಿ ಹುಟ್ಟಿದ ಅಶ್ವದಂತೆ ( ಉಚ್ಚೈಶ್ರವಸ್ಸು, ದಿವ್ಯಾಶ್ವ) ಕಾಣಿಸಿಕೊಂಡ ಅತಿ ಧವಳಮೂರ್ತಿಗೆ (ಚಂದ್ರನಿಗೆ) ಮೋಡಗಳ ಸಮೂಹದಿಂದ ಕೂಡಿರುವ ಆಕಾಶದಲ್ಲಿ ಅಡಗಿ ವಿಶಾಲವಾದ ದಿಕ್ಕುಗಳ ವಲಯ ಇಂದ್ರನೀಲರತ್ನದಂತೆ ಸೊಗಸಾಗಿರುತ್ತದೆ.”
ವಿಚಾರ: ಇಲ್ಲಿ ಬಿಂದುಲೋಪದಿಂದ ಅರ್ಥ ಸ್ಪಷ್ಟವಾಗಿಲ್ಲ.  “ ಘನವಳಯ” ಎಂಬುದಕ್ಕೆ “ಘನವಳಯಂ” ಎಂದು ಬಿಂದು ಸೇರಿಸಿದರೆ ಚಂದ್ರನ ಆಕೃತಿಯ ವರ್ತುಲ ಮನಸ್ಸಿಗೆ ಬರುತ್ತದೆಂದು ಡಾ॥ ಟಿ. ವಿ. ವೆಂಕಟಾಚಲಶಾಸ್ತ್ರೀಯವರು ಊಹಿಸಿದ್ದಾರೆ.  ( ೨೦೧೧- ಪುಟ ೧೫೯)

ಒರ್ನುಡಿ:
ಗೀತಿಕೆ:
ಆವುದು ಬಾಗಿದುದುಮಧಿಕಂ ಬಸನಂ ।
ಕೇವಳಮಾಗೆ ನೆಗೆವುದುಚಿತಾವಯವದಿಂ ॥
ದೇವದಿಂ ನಿಂದು ಸಿತಗನಂ ನುಡಿವುದು ।
ಭಾವಿಸೆ ಬಗೆಗೊಳದಾರನೊರ ಅನುಡಿಯಿಂ॥೨-೧೫೦॥

ಅನ್ವಯ: ಆವುದು ಬಾಗಿದುದುಮ್= ಯಾವುದು ಬಾಗಿರುತ್ತದೆಯೋ, ಅಧಿಕಮ್ ಬಸನಮ್ ಕೇವಳಮಾಗೆ ನೆಗೆವುದು ಉಚಿತಾವಯವದಿಂದೆ= ಹೆಚ್ಚಾದ ವ್ಯಸನದಿಂದ ಶರೀರದ ಉಚಿತವಾದೆಡೆಯಿಂದ ಮೇಲೆ ನಿಮಿರುತ್ತದೆಯೋ, ಏವದಿನ್ ನಿಂದು ಸಿತಗನ್ ನೈಡಿವುದು= ಜುಗುಪ್ಸೆಯಾಗುವಂತೆ ಸ್ಥಾಯಿಯಾಗಿದ್ದು ಜಾರನನ್ನು ಹೀನೈಸುತ್ತದೆಯೋ, ಅದು ಭಾವಿಸೆ ಬಗೆಗೊಳದೆ ಆರನ್ ಒರೂನುಡಿಯಿನ್= ಅದು ವಿಚಾರಮಾಡಿದರೆ ಒರ್ನುಡಿಯಿಂದ ರಂಜಿಸುವುದು.

ಭಾವಾರ್ಥ: “ ಯಾವುದು ಬಾಗಿರುತ್ತದೆಯೋ, ಹೆಚ್ಚಾದ ವ್ಯಸನದಿಂದಾಗಿ ಶರೀರದ ಉಚಿತವಾದೆಡೆಯಿಂದ ಮೇಲೆ ನಿಮಿರುತ್ತದೆಯೋ, ಜುಗುಪ್ಸೆಯಾಗುವಂತೆ ಸ್ಥಾಯಿಯಾಗಿದ್ದು ಜಾರನನ್ನು ಹೀನೈಸುತ್ತದೆಯೋ ಅದು ವಿಚಾರಮಾಡಿದರೆ ಒರ್ನುಡಿಯಿಂದ ರಂಜಿಸುವುದು. “

ವಿಚಾರ: ಈ ಪ್ರಹೇಳಿಕೆಗೆ “ಧ್ವಜ” ಎಂದು ಉತ್ತರವಿರುವಂತೆ ತೋರಿದರೂ ಪ್ರುಷನ ಜನನೇಂದ್ರಿಯವನ್ನು ಸೂಚಿಸುತ್ತಿರುವಂತೆ ಕಾಣುತ್ತದೆ.

ವರೂಣಚ್ಯುತಕ:
ಗೀತಿಕೆ:
ತಳಮಳಗುತ್ತುಂ ಜನಿತನಿಜಭೀತ ಮನಂ ।
ಗೊಳೆ ಕಳವಳಿಸಿ ಚರಿತರ್ ನಿಲಲಣ್ಮದೆ ಮೊ ॥
ಕ್ಕಳಮೊಳಗೆ ಸುೞಿದರರಸಂ ಮನದೊಳ್ ।
ಮುಳಿದಸಿಯನೆ ನೋಡೆ ಪರಿವಾರದವರ್॥೨-೧೫೧॥

ಅನ್ವಯ: ಅರಸನ್ ಮನದೊಳ್ ಮುಳಿದು=ಅರಸನು ಮನಸ್ಸಿನಲ್ಲಿ ಮುನಿಸಿಕೊಂಡು, ಅಸಿಯನೆ ನೋಡೆ= ಕತ್ತಿಯನ್ನು ನೋಡಲು, ಪರಿವಾರದವರ್=ಪರಿವಾರದವರು. ತಳಮಳಗುತ್ತುಮ್=ತಳಮಳಿಸಿ, ಜನಿತ ನಿಜ ಭೀತಿ=ತಮ್ಮಲ್ಲಿ ಹುಟ್ಟಿದ ಭೀತಿ. ಮನಂಗೊಳೆ ಕಳವಳಿಸಿ= ಮನಸ್ಸನ್ನು ಹಿಡಿದಿರಲು ಕಳವಳಗೊಂಡು, ಚರಿತರ್ ನಿಲಲಣ್ಮದೆ ಮೊಕ್ಕಳಮ್ ಒಳಗೆ ಸುೞಿದರ್= ಅಲ್ಲಿ ನಿಲ್ಲುವುದಕ್ಕೆ ಧೈರ್ಯಮಾಡದೆ ಪೂರ್ತಿಯಾಗಿ  ಒಳಗಡೆಗೆ ಸೇರಿಕೊಂಡರು.

ಭಾವಾರ್ಥ: “ ಅರಸನು ಮನಸ್ಸಿನಲ್ಲಿ ಮುನಿಸಿಕೊಂಡು ಕತ್ತಿಯನ್ನು ನೋಡಲು, ಪರಿವಾರದವರು ತಳಮಳಿಸಿ, ತಮ್ಮಲ್ಲಿ ಹುಟ್ಟಿದ ಭೀತಿ ತಮ್ಮ ಮನಸ್ಸನ್ನು ಹಿಡಿದಿರಲು ಕಳವಳಗೊಂಡು ಅಲ್ಲಿ ನಿಲ್ಲುವುದಕ್ಕೆ ಧೈರ್ಯಮಾಡದೆ ಪೂರ್ತಿಯಿಗಿ ಒಳಗಡೆಗೆ ಸೇರಿಕೊಂಡರು.”

ವಿಚಾರ: ಇದು ವರ್ಣಚ್ಯುತಕ. ಯಾವುದಾದರೂ ವರ್ಣ ಲೋಪವಾದಾಗ ಅದನ್ನು ಸೇರಿಸಿದರೆ ಅರ್ಥಸ್ಫುಟವಾಗುತ್ತದೆ. ಇಲ್ಲಿ “ ಅಸಿಯನೆ “ ಎಂಬುದನ್ನು “ಅರಸಿಯನೆ “ ಎಂದು ತಿದ್ದಿ ಓದಿದರೆ ಹೆಚ್ಚು ಅರ್ಥಪೂರ್ಣವಾಗುವುದು.

ಸಮಸ್ತಕ:
ಗೀತಿಕೆ:
ವಿಗಳಿತರಾಗನಾವೊನಿನ್ನಾವುದಱಿಂ ।
ಸೊಗಯಿಸುಗುಂ ಕಟಕತ್ವಮಂ ಸಮರ್ಥಬಲಂ ॥
ಬಗೆದೆನಗೊಯ್ಯನೆಸಗೆಯಿದುವೊಡಾ।
ರಗಲಲಾಟಿಸುಗುಮದನೇವೇೞ್ವೆಂ ಬನದೊಳ್॥೨-೧೫೨॥

ವಿಚಾರ:ಈ ಪದ್ಯದ ಪಾಠ ಅಶುದ್ಧವಾಗಿದೆ. ಇದರ ಹೆಸರೂ ಅನಿಶ್ಚಿತ. ಇದರ ಅರ್ಥವನ್ನು ಊಹಿಸಿದರೆ “ವೀತರಾಗನಾದವನು ಅವನ ತಪಸ್ಸಿನಿಂದ ಪ್ರಕಾಶಿಸುವನು. ಅಂತಹ ಸಮರ್ಥನು ಪ್ರಭುತ್ವವನ್ನು ಬೇರೆಯವರಿಗೆ ಒಪ್ಪಿಸಿ ಅರಣ್ಯಕ್ಕೆ ತೆರಳಿದರೆ ಹೇಳುವುದೇನಿದೆ,”

ತೃತೀಯಪರಿಚ್ಛೇದಂ:
ಅರ್ಥಾಲಂಕಾರಪ್ರಕರಣಂ;

ನಿದರ್ಶನ:
ಗುಣದೋಷಾದಿಗಳಿಂದನು।
ಗುಣಮಾಗಿರೆ ಪೇೞ್ದು ತದನುಸದೃಶದಿನೊಂದಂ ॥
ಪ್ರಣಿಹಿತನಿದರ್ಶನಕ್ರಮ ।
ದೆಣಿಸುವುದಕ್ಕುಂ ನಿದರ್ಶನಾಲಂಕಾರ॥೩-೧೪೧॥

ಅನ್ವಯ: ಗುಣದೋಷಾದಿಗಳಿಂದೆ= ಗುಣದೋಷಗಳಿಂದ, ಅನುಗುಣವಾಗಿದ್ದರೆ, ಪೇೞ್ದು=ಹೇಳಿ, ತತ್ ಅನುಸದೋಶದಿ-
ನ್=ಅದಕ್ಕೆ ಸದೋಶವಾಗಿರುವ,ಒಂದನ್ ಪ್ರಣಿಹಿತ ನಿದರ್ಶನ ಕ್ರಮದೆ=ಇನ್ನೊಂದನ್ನು ನಿದರ್ಶನಕ್ರಮದಿಂದ, ಎಣಿಸುವುದು=ಪರಿಗಣಿಸುವುದು, ಅಕ್ಕುಮ್ ನಿದರ್ಶನ ಅಲಂಕಾರಮ್= ಅದು ನಿದರೂಶನ ಅಲಂಕಾರ.  

ಭಾವಾರ್ಥ: ಒಂದು ವಿಷಯವನ್ನು ಹೇಳುವಾಗ ಅದರದೇ ಗುಣದೋಷಗಳಿಗೆ ಅನುಗುಣವಾಗಿರುವ ಒಂದು ವಿಷಯವನ್ನು ಹೇಳಿ, ಅದಕ್ಕೆ ಸದೃಶವೃಗಿರುವ ಇನ್ನೊಂದನ್ನು ನಿದರ್ಶನವಾಗಿ ಪರಿಗಣಿಸುವುದು ನಿದರ್ಶನ ಎಂಬ ಅಲಂಕಾರ.  

ವಿಚಾರ: ಇದಕ್ಕೆ ದಂಡಿಯ ಮೂಲ ಹೀಗಿದೆ. ( ೨-೩೪೮)

ಅರ್ಥಾಂತರಪ್ರವೃತ್ತೇನ ಕಿಂಚಿತ್ ತತ್ಸದೃಶಂ ಫಲಮ್।
ಸದಸದ್ವಾ ನಿದರ್ಶ್ಯೇತ ಯದಿ ತತ್ ಸ್ಯಾತ್ ನಿದರೂಶನಮ್॥

( ಏನಾದರೊಂದು ಕಾರ್ಯವನ್ನು ಮಾಡಬಯಸಿದವನಿಂದ ಅದಕ್ಕೆ ಸಮಾನವಾದ ಒಳ್ಳೆಯ ಅಥವಾ ಕೆಟ್ಟ ಫಲವನ್ನು ಬೋಧೆಸೈವಂತಾದರೆ ಅದು ನಿದರೂಶನವಾಗುತ್ತದೆ)

ಅಮಳಿನಗುಣವೃತ್ತಿಗಳಿಂ
ಸಮುಪಸ್ಥಿತಸಕಳಜನಗತೋಚಿತಗುಣಮಂ
ಸಮನಾಗಿಸುವರ್ ಕನ್ನಡಿ
ಕಮನೀಯಾಕಾರಬಿಂಬಮಂ ತಾಳ್ದುವವೋಲ್(೩-೧೪೨)

ಅನ್ವಯ: ಕನ್ನಡಿ ಕಮನೀಯ ಆಕಾರ ಬಿಂಬಮನ್= ಕನ್ನಡಿ ಕಮನೀಯ ಆಕಾರದ ಬಿಂಬವನ್ನು, ತಾಳ್ದುವವೋಲ್= ತಳೆಯುವ ಹಾಗೆ, ಅಮಳಿನ ಗುಣವೃತ್ತಿಗಳಿನ್= ನಿರ್ಮಲವಾದ ಸದ್ಗುಣಗಳಿಂದ , ಸಮುಪಸ್ಥಿತ ಸಕಳ ಜನಗತ ಉಚಿತ ಗುಣಮನ್= ಸಕಲ ಜನರೂ ಆ ಸ್ವಚ್ಛಗುಣಗಣಗಳನ್ನೇ, ಸಮನಾಗಿಸುವರ್= ತಮ್ಮಲ್ಲಿ ಸಮಗೊಳಿಸಿಕೊಳ್ಳುವರು.  

ಭಾವಾರ್ಥ: “ ಕನ್ನಡಿ ಕಮನೀಯ ಆಕಾರದ ಬಿಂಬವನ್ನು ತನ್ನಲ್ಲಿ ತಳೆಯುವಹಾಗೆ(ಉತ್ತಮರ)ನಿರ್ಮಲವಾದ ಸದ್ಗುಣಗಳಿಂದ ಸಕಲ ಜನರೂ ಆ ಸ್ವಚ್ಛಗುಣಗಣಗಳನ್ನೆ ತಮ್ಮಲ್ಲಿ ಸಮಗೊಳಿಸಿಕೊಳ್ಳುವರು “

ವಿಚಾರ: ರಾಜನ ಅಥವಾ ಉತ್ತಮರ ಸದ್ಗುಣಗಳೇ ಪ್ರಜೆಗಳ ಗುಣಗಳನ್ನು ರೂಪಿಸುತ್ತವೆ ಎಂಬುದನ್ನು ನಿದರ್ಶನದ ಮೂಲಕ ಸ್ಪಷ್ಟಪಡಿಸಲಾಯಿತು.

ಜನಮಱಿಯದನ್ನೆಗಂ ಮು
ನ್ನೆ ನಯಮನಱಿದಱಿಪಲಾರ್ಪೊಡದು ಮಂತ್ರಿಗುಣಂ
ಜನಮಾದಂ ನೆಗೞೆ ನಗ
ಧ್ವನಿವೋಲನುಕರಣವಾರ್ತೆ ಮಂತ್ರಿಗುಣಮೇ॥೩-೧೪೩॥

ಅನ್ವಯ: ಜನಮ್ ಅಱಿಯದೆ ಅನ್ನೆಗಮ್ ಮುನ್ನೆ= ಜನ ತಿಳಿಯುವುದಕ್ಕೆ ಮುನ್ನವೇ, ನಯಮನ್ ಅಱಿದು= ನೀತಿಯನ್ನರಿತು, ಅಱಿಪಲ್ ಆರ್ಪೊಡೆ= (ರಾಜನಿಗೆ) ತಿಳಿಸಲು ಸಾಧ್ಯವಾದರೆ, ಅದು ಮಂತ್ರಿಗುಣಮ್=ಅದು ಮಂತ್ರಿ ಗುಣ, ಜನಮ್ ಆದಮ್ ನೆಗೞೆ= ಜನರಲ್ಲಿ ಚೆನ್ನಾಗಿ ತಿಳಿದ ಮೇಲೆ , ನಗಧ್ವನಿವೋಲ್= ಬೆಟ್ಟದ ಮಾರ್ದನಿಯಂತೆ, ಅನುಕರಣವಾರ್ತೆ=ಅನುಕರಣ ವಾರ್ತೆ ನುಡಿದರೆ, ಮಂತ್ರಿ ಗುಣಮೇ=ಅದು ಮಂತ್ರಿಗುಣವಾಗುವುದೇ?

ಭಾವಾರ್ಥ:” ಜನ ತಿಳಿಯುವುದಕ್ಕೆ ಮುನ್ನವೇ ನೀತಿಯನ್ನರಿತು (ರಾಜನಿಗೆ) ತಿಳಿಸಬಲ್ಲ ಸಾಮರ್ಥ್ಯವೇ ಮಂತ್ರಿಯ ಗುಣ.ಜನರಲ್ಲಿ ಬಹಳಷ್ಟು ತಿಳಿದ ಮೇಲೆ ಅದನ್ನೇ ಅನುಕರಿಸಿ ಬೆಟ್ಟದ ಮಾರ್ದನಿಯಂತೆ ನೈಡಿದರೆ ಅದು ಮಂತ್ರಿಯ ಗುಣವಾಗುವುದೇ ?”

ತಲೆಸೂಡಿ ಮುನ್ನೆ ಕಜ್ಜದ
ಫಲಮಂ ಬೆಸಗೊಂಡುಮೇವನಲ್ಲಿಂ ಬೞಿಯಂ
ತಲೆಯಂ ಕಿರಿಯಿಸಿ ದಿವಸಮ
ನಲಸದೆ ಬೆಸಗೊಳ್ವನಂತು ಗಾವಿಲನಕ್ಕುಂ॥೩-೧೪೪॥

ಅನ್ವಯ: ತಲೆಸೂಡಿ ಮುನ್ನೆ= ಮೊದಲು ಯಾವುದಾದರೂ ಕಾರ್ಯಕ್ಕೆ ತಲೆಯೊಡ್ಡಿ, ಕಜ್ಜದ ಫಲಮನ್ ಬೆಸಗೊಂಡುಮ್= ಕಾರ್ಯದ ಫಲವನ್ನು ಕುರಿತು ಪ್ರಶ್ನಿಸಿ, ಏವನಲ್ಲಿಮ್=ಪ್ರಯೋಜನವೇನು, ಬಳಿಯಂ =ಬಳಿಕ, ತಲೆಯನ್ ಕಿರಿಯಿಸಿ= ತಲೆಯನ್ನು ಬೋಳಿಸಿಕೊಂಡು , ದಿವಸಮನ್ ಅಲಸದೆ ಬೆಸಗೊಳ್ವನ್= ದಿನಶುದ್ಧಿ ಹೇಗೆಂದು ಕೇಳುವವನಂತೆ , ಅಂತು ಗಾವಿಲನ್ ಅಕ್ಕುಮ್= ಅವನೂ ಹೆಡ್ಡನಾಗುತ್ತಾನೆ.

ಪ್ರತಿಕೂಲನಾಗಿ ನಿಲೆ ವಿಧಿ
ಮತನಯಮನುಕೂಲಮಾಗಿ ನಿಲೆಯುಂ ಕಾರ್ಯ
ಸ್ಥಿತಿಯಂ ಸಾಧಿಸಲಾಗದು
ಮೃತಕಕೃತೋಪಕೃತಿಯವೊಲನರ್ಥಾಯಾಸಂ॥೩-೧೪೫॥

ಅನ್ವಯ: ಪ್ರತಿಕೂಲನಾಗಿ ನಿಲೆ ವಿಧಿ= ವಿಧಿ ಪ್ರತಿಕೂಲವಾಗಿದ್ದರೆ, ಮತನಯಮ್ ಅನುಕೂಲಮ್ ಆಗಿ ನಿಲೆಯುಮ್= ಹಿತವಾದ ನೀತಿಯ ಅನುಕೂಲವಾಗಿದ್ದರೂ, ಕಾರ್ಯಸ್ಥಿತಿಯನ್ ಸಾಧಿಸಲ್ ಆಗದು= ಕಾರ್ಯ ಸಫಲವಾಗುವುದಿಲ್ಲ, ಮೃತಕ ಕೃತ= ಮೃತದೇಹಕ್ಕೆ ಮಾಡಿದ ಉಪಕೃತಿಯವೋಲ್= ಉಪಚಾರದಂತೆ, ಅನರ್ಥ ಆಯಾಸಂ= ಅದು ವ್ಯರ್ಥವಾದ ಆಯಾಸ.

ಭಾವಾರ್ಥ: “ ವಿಧಿ ಪ್ರತಿಕೂಲವಾಗಿದ್ದರೆ ಹಿತವಾದ ನೀತಿಯು ಅನುಕೂಲವಾಗಿದ್ದರೂ, ಕಾರ್ಯಸಫಲವಾಗುವುದಿಲ್ಲ. ಮೃತದೇಹಕ್ಕೆ ಉಪಚಾರ ಮಾಡಿದಂತೆ ಅದು ವ್ಯರ್ಥವಾದ ಆಯಾಸ.”

ವಿಚಾರ: ನಿದರ್ಶನಾಲಂಕಾರದಲ್ಲಿ ಕೆಲವು ಲಕ್ಷ್ಯಗಳಲ್ಲಿ “ತಾಳ್ದುವವೋಲ್” (೧೪೨) ಧ್ವನಿವೋಲ್ (೧೪೩)” ಮೃತಕಕೃತೋ-
ಪಕೃತಿಯವೋಲ್” ( ಪ್ರಸ್ತುತ ಪದ್ಯ) ಎಂಬಂತೆ ಸಾದೃಶ್ಯವಾಚಕವನ್ನು ಬಳಸಲಾಗಿದೆ. ಹೀಗಿದ್ದರೂ ಇದನ್ನು ಉಪಮಾಲಂಕಾರವೆಂದು ತಿಳಿಯಬಾರದು. ಆದರೆ ಭಾಮಹನು ನಿದರ್ಶನಾಲಂಕಾರದಲ್ಲಿ ಈ ರೀತಿಯ ಉಪಮಾವಾಚಕಗಳನ್ನು ನಿಷೇಧಿಸಿದ್ದಾನೆ. ( ೩.೩೩)

ಕ್ರಿಯಯೈವ ವಿಶಿಷ್ಟಸ್ಯ ತದರ್ಥಸ್ಯೋಪದರ್ಶನಾತ್।
ಜ್ಞೇಯಾ ನಿದರ್ಶನಾ ನಾಮ ಯಥೇವವತಿಭಿರ್ವಿನಾ॥

( ಕ್ರಿಯೆಯೇ ವಿಶಿಷ್ಟವಾದ ಅದರ ಅರ್ಥವನ್ನು ತಿಳಿಸುವುದರಿಂದ “ ಅದರಂತೆ” ಮೊದಲಾದವನ್ನು ಬಿಟ್ಟು ನಿದರ್ಶನಾಲಂಕಾರವನ್ನು ತಿಳಿಯಬಹುದು)

ಪದೆದುದಯಿಸಲೆಂದುಂ ಕಾ
ಲದೊಳಲ್ಲದುದಾರತೇಜನರ್ಕನುಮಲ್ಲಂ
ಸದುದಿತಗುಣನದಱಿಂ ನಯ
ವಿದನಪ್ಪಂ ಕಾಲಮಂ ನೆರಂ ತೋರ್ಕೆ ನೃಪಂ॥೩-೧೪೬॥

ಅನ್ವಯ: ಎಂದುಮ್ ಕಾಲದೊಳ್ ಅಲ್ಲದೆ= ಯಾವಾಗಲೂ ಸರಿಯಾದ ಕಾಲದಲ್ಲಿ ಅಲ್ಲದೆ, ಪದೆದು ಉದಯಿಸಲ್= ಸಂತೋಷದಿಂದ ಉದಯಿಸಿದರೂ, ಉದಾರ ತೇಜನ್= ಅಪಾರ ತೇಜಸ್ಸುಳ್ಳ, ಅರ್ಕನುಂ= ಸೂರ್ಯನೂ, ಅಲ್ಲನ್= ಸೂರ್ಯನಲ್ಲ, ಅದಱಿನ್= ಆದ್ದರಿಂದ, ಸದುದಿತ ಗುಣನ್= ಗುಣೋದಯನು, ನಯವಿದನಪ್ಪನ್= ನಯವಿದನು, ನೃಪನ್ =( ಆದ )  ರಾಜನು, ಕಾಲಮನ್ ನೆರಮ್ ತೋರ್ಕೆ= ಕಾಲವನ್ನು ಸರಿಯಾಗಿ ಪಾಲಿಸಲಿ.

ಭಾವಾರ್ಥ: “ ಅಪಾರ ತೇಜಸ್ಸುಳ್ಳ ಸೂರ್ಯನೇ ಆದರೂ ಉದಯಿಸಬೇಕಾದ ಕಾಲದಲ್ಲಿ ಉದಯಿಸದೆ ಯಾವಾಗಲೋ, ಸಂತೋಷದಿಂದ ಉದಯಿಸಿದರೂ ಅವನು ಸೂರ್ಯನೇ ಅಲ್ಲ. ಅದರಿಂದ ಗುಣೋದಯನೂ ನಯವಿದನೂ ಆದ ರಾಜನು ಕಾಲವನ್ನು ಸರಿಯಾಗಿ ಪಾಲಿಸಲಿ.”

ಪಡೆಯಱಿಯಲಾದೊಡರಿಯಂ
ಕಿಡಿಸುಗುಮಂತಃಕಳಂಕನೃಪಮಂಡಲಮಂ
ತಡೆಯದೆ ತಮಸ್ಸ್ವಭಾವಂ
ಕಿಡಿಸುವವೋಲಱಿದು ರಾಹು ಶಶಿಮಂಡಳಮಂ॥೩-೧೪೭॥

ಅನ್ವಯ: ಅಂತಃಕಲಂಕ ರಾಜಮಂಡಲಮನ್= ಅಂತಃಕಲಂಕವಿರುವ ರಾಜಮಂಡಲವನ್ನು, ತಡೆಯದೆ ತಮಃ ಸ್ವಭಾವನ್=ತಡೆಯದೆ ತಮಃ ಸ್ವಭಾವವಿರುವ, ರಾಹು ಅಱಿದು ಶಶಿಮಂಡಲಮನ್= ರಾಹುಗ್ರಹ ಅರಿದು ಶಶಿಮಂಡಲವನ್ನು , ಕಿಡಿಸುವವೋಲ್= ನಾಶಮಾಡುವ ರೀತಿ, ಪಡೆ ಅಱಿಯಲಾದೊಡೆ= ಸೈನ್ಯ( ಅಂತಃಕಲಂಕವನ್ನು)
ತಿಳಿಯುವುದಾದರೆ, ಅರಿಯನ್= ಶತ್ರುವನ್ನು ಕಿಡಿಸುಗುಮ್= (ಅಂತಹ ರಾಜನನ್ನು ) ನಾಶಮಾಡುವನು.

ಭಾವಾರ್ಥ: “ ರಾಜಮಂಡಲದಲ್ಲಿರುವ ಅಂತಃಕಲಂಕವನ್ನು ಸೈನ್ಯ ತಿಳಿಯುವುದಾದರೆ ತಮೋಗ್ರಹವಾದ ರಾಹು ನಾಶಮಾಡುವಂತೆ (ಚಂದ್ರಮಟಡಲವನ್ನು ನುಂಗಿ ಬಿಡುವಂತೆ) ವೈರಿಯು (ಅಂತಹ ರಾಜನನ್ನು) ನಾಶಮಾಡುವನು.”

ಕಿಱಿದೆಂದೇಳಿಸಿ ಪಗೆಯಂ
ಪಱಿಪಡೆ ಕಿಡಿಸದೊಡೆ ಪೆತ್ತು ಕಾಲದ ಬಲಮಂ
ನೆಱೆದಿಱಿಗುಂ ನೆರೆದನುವಿಂ
ಮಱಸುವ ವೊಲ್ ದಿವಸಕರನನಂಬುದನಿವಹಂ॥೩-೧೪೮॥

ಅನ್ವಯ: ಕಿಱಿದು ಎಂದು ಏಳಿಸಿ= ಅಲ್ಪನೆಂದು ಉದಾಸೀನಮಾಡಿ, ಪಗೆಯನ್= ಶತ್ರುವನ್ನು, ಪಱಿಪಡೆ ಕಿಡಿಸದೊಡೆ= ತುಂಡುತುಂಡುಮಾಡದೆ ಬಿಟ್ಟರೆ, ಪೆತ್ತು ಕಾಲದ ಬಲಮನ್= ಅವನು ಕಾಲದ ಬಲವನ್ನು ಪಡೆದು, ದಿವಕರನನ್ = ಸೂರ್ಯನನ್ನು, ಅಂಬುದನಿವಮ್ = ಮೇಘಸಮೂಹ, ಮಱಸುವವೋಲ್= ಮುಚ್ಚಿಬಿಡುವಂತೆ, ನೆರೆದು ಅನುವಿನ್ ಇಱಿಗುಮ್= ಅನುಕೂಲವಾದ ಸಂದರ್ಭವನ್ನು ನೋಡಿ ಇರಿಯ ಇರಿಯುತ್ತಾನೆ.

ಭಾವಾರ್ಥ: “ ವೈರಿ ಅಲ್ಪನೆಂದು ಉದಾಸೀನಮಾಡುತ್ತ ಅವನನ್ನು ತುಂಡುತುಂಡುಮಾಡದೆ ಬಿಟ್ಟರೆ,  ಅವನು ಕಾಲದ ಬಲವನ್ನು ಪಡೆದು ತನಗೆ ಅನುಕೂಲವಾದ ಸಂದರ್ಭವನ್ನು ನೋಡಿ ಮೇಘವೃಂದ ಒಮ್ಮೊಮ್ಮೆ ಸೂರ್ಯನನ್ನೇ ಮುಚ್ಚಿಬಿಡುವ ಹಾಗೆ ಇವನನ್ನೇ ಇರಿಯಲು ಶಕ್ತನಾಗುವನು”

ಒಳಗಿರ್ದ ವೈರಿಗಳ್ ಮೊ ।
ಕ್ಕಳಮೀಯರ್ ಪೆರ್ಚಲಧಿಕವಿಭವರ್ಕಳುಮಂ ॥
ತಳರದಥಡನಿರ್ದು ಬಡಬಾ ।
ನಳನೆಂದುಂ ಪೆರ್ಚಲೀಯದಂತಂಬುಧಿಯಂ॥೩-೧೪೯॥

ಅನ್ವಯ: ಬಡಬಾಲನನ್= ಬಡಬಾಗ್ನಿ, ಒಡನ್ ಇರ್ದು= ಜತೆಯಲ್ಲೇ ಇದ್ದು, ಎಂದುಮ್ ಅಂಬುಧಿಯನ್= ಎಂದಿಗೂ ಸಮುದ್ರವನ್ನು, ಪೆರ್ಚಲ್ ಈಯದಂತೆ= ಹೆಚ್ಚಲು ಅವಕಾಶ ಕೊಡದಂತೆ, ಒಳಗೆ ಇರ್ದ ವೈರಿಗಳ್= ಒಳ ವೈರಿಗಳು, ತಳರದೆ= ಅಲ್ಲಿಂದ ಹೋಗದೆ, ಅಧಿಕ ವಿಭವರ್ಕಳುಮನ್= ಅಧಿಕ ವೈಭವವಿರುವವರನ್ನುಕೂಡ, ಮೊಕ್ಕಳಮ್=ವಿಶೇಷ-
ವಾಗಿ, ಪೆರ್ಚಲ್ ಈಯರು=ಅಭಿವೃದ್ಧಿ ಹೊಂದಲು ಬಿಡುವುದಿಲ್ಲ.  

ಭಾವಾರ್ಥ: “ ಬಡಬಾಗ್ನಿ ಸಮುದ್ರದೊಳಗೆ ಇದ್ದುಕೊಂಡು ಅಲ್ಲಿಂದ ಹೊರಡದೆ ಅದು ಹೆಚ್ಚಲು ಅವಕಾಶ ಕೊಡದಿರುವಂತೆ ರಾಜರು ಎಷ್ಟೇ ವೈಭವದಿಂದಿದ್ದರೂ ಒಳವೈರಿಗಳು ಆ ರಾಜನು ಏಳಿಗೆ ಹೊಂದಲು ವಿಶೇಷವಾಗಿ ಅವಕಾಶ ಕೊಡುವುದಿಲ್ಲ”

ಪರಪಕ್ಷಮುಳ್ಳಿನಂ ತನ ।
ಗಿರವುಬ್ಬಸಮದಱಿನೞಿವುದದನೇಗೆಯ್ದುಂ ॥
ಪರೆದ ಪುಡಿಯೆಲ್ಲಮಂ ನೀರ್ ।
ನೆರೆದು ಕೆಸರ್ಮಾಡದನ್ನೆಗಂ ನೆಲಸುಗುಮೇ॥೩-೧೫೦॥

ಅನ್ವಯ : ಪರಪಕ್ಷಮ್ ಉಳ್ಳಿನಂ= ಶತ್ರುಪಕ್ಷ ಇರುವವರೆಗೂ, ತನಗೆ ಇರವು ಉಬ್ಬಸಮ್= ತನ್ನ ಉಳಿವು ಕ್ಲೇಶಕರ, ಅದಱಿನ್ ಅೞಿವೈದುಅದನ್ ಏಗೆಯ್ದುಮ್= ಆದುದರಿಂದ ಅದನ್ನು ಹೇಗಾದರೂ ನಾಶಮಾಡಬೇಕು, ಪರೆದ ಪುಡಿ ಎಲ್ಲಮನ್= ಹರಡಿಕೊಂಡಿರುವ ಮಣ್ಣಿನ ಪುಡಿಯೆಲ್ಲವನ್ನೂ,ನೀರ್ ನೆರೆದು ಕೆಸರ್ ಮಾಡದೆ= ನೀರು ಕೆಸರು ಮಾಡದೆ,
ಅನ್ನೆಗಮ್ ನೆಲಸುಗುಮೇ= ಆವರೆಗೆ ಸುಮ್ಮನಿರುತ್ತದೆಯೇ.

ಭಾವಾರ್ಥ: “ ಶತ್ರುಪಕ್ಷ ಇರುವವರೆಗೂ ತನ್ನ ಉಳಿವು ಕ್ಲೇಶಕರ. ಆದುದರಿಂದ ಅದನ್ನು ಹೇಗಾದರೂ ನಾಶಮಾಡಬೇಕು. ಹರಡಿಕೊಂಡಿರುವ ಮಣ್ಣಿನ ಪುಡಿಯೆಲ್ಲವನ್ನೂ ನೀರು ಕೆಸರು ಮಾಡದೆ ಸುಮ್ಮನಿರುತ್ತದೆಯೇ”

ಕುಱಿಗೊಂಡು ನೆಗೞ್ದನಿಚ್ಚೆಯ ।
ನಱಿಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ॥
ತಱಿಸಲಿಸಲಾಱನಾರ್ತನ
ತೆಱನಱಿಯದೆ ಮರ್ದುವೇೞ್ವ ಬೆಜ್ಜನ ತೆಱದಿಂ॥೩.೧೫೧॥

ಅನ್ವಯ:ಕುಱಿಗೊಂಡು ನೆಗೞ್ದನ ಇಚ್ಛೆಯನ್ ಅಱಿಯದೆ= ಪ್ರಭುವಿನ ಇಚ್ಛೆಯನ್ನು ಇಂಗಿತದಿಂದ ಅರಿಯದೆ, ತನ್ನ ಇಚ್ಛೆಯಿಂದ ಕಜ್ಜಂ ಬೇೞ್ವನ್=ತನ್ನ ಇಚ್ಛೆಗೆ ಅನುಸಾರವಾಗಿ ಕಾರ್ಯದ ಸಲಹೆ ಹೇಳುವವನು, ತಱಿಸಲಿಸಲಾಱನ್= ಸಫಲಗೊಳಿಸಲಾರನು, ಆರ್ತನ=ಕಷ್ಟದಲ್ಲಿರುವವನ, ತೆಱನ್ ಅಱಿಯದೆ=ಸ್ಥಿತಿಯನ್ನು ಅರಿಯದೆ, ಮರ್ದುವೇೞ್ವ= ಮದ್ದನ್ನು ಹೇಳುವ, ಬೆಜ್ಜನ ತೆಱದಿನ್= ವೈದ್ಯನಂತೆ (ಅವನ ಪರಿ ಇರುವುದು)

ಪರಿಣಾಮಪಥ್ಯಮಂ ಸುಖ ।
ಪರಿಕರಮಂ ಮೆಚ್ಚದನ್ನರಾರೀ ಮಾತಂ ॥
ನಿರತಿಶಯರಸಸಮೇತಮ ।
ನರೋಚಕಂ ಮೆಚ್ಚದಂತೆ ಸೊಗಯಿಸುವುಣಿಸಂ॥೩-೧೫೨॥

ಅನ್ವಯ: ಪರಿಣಾಮ ಪಥ್ಯಮನ್=ಪರಿಣಾಮದಲ್ಲಿ ಹಿತಕರವೂ, ಸುಗಪರಿಕರಮ್= ಸುಖಕರವೂ, ಮೆಚ್ಚದನ್ನರಾರ್= ಮೆಚ್ಚದವರಾರು? ನಿರತಿಶಯ ರಸ ಸಮೇತಮನ್=ನಿರತಿಶಯ ರಸಸಮೇತವಾದ, ಸೊಗಯಿಸುವ ಉಣಿಸನ್= ಸೊಗಸಾದ ಊಟವನ್ನು,  ಅರೋಚಕನ್ ಮೆಚ್ಚದಂತೆ=ಅಜೀರ್ಣರೋಗಿ ಮೆಚ್ಚದಂತೆ,

ಭಾವಾರ್ಥ = “ ಪರಿಣಾಮದಲ್ಲಿ ಹಿತಕರವೂ ಸುಖಕರವೂ ಆದ ಈ ಮಾತನ್ನು ಮೆಚ್ಚದವರಾರು? ನಿರತಿಶಯ ರಸಸಮೇತವಾದ ಸೊಗಸಾದ ಊಟವನ್ನು ಅಜೀರ್ಣರೋಗಿ ಮಾತ್ರ ಮೆಚ್ಚಲಾರನು.”

ಇಂತುದಿತಭೇದಮಂ ದೃ
ಷ್ಟಾಂತಾಳಂಕಾರಮಾರ್ಗಮಂ ಕನ್ನಡದೊಳ್
ಸಂತತಗುಣಮಂ ಕೈಕೊ
ಳ್ವಂತಾಗಿರೆ ಬಗೆದು ಪೇೞ್ಗೆ ಪರಮಕವೀಶರ್॥೩-೧೫೩॥

ಅನ್ವಯ: ಇಂತು ಉದಿತ ಭೇದಮನ್= ಹೀಗೆ ವಿವಿಧಪ್ರಕಾರಗಳನ್ನೊಳಗೊಂಡ, ದೃಷ್ಟಂತ ಮಾರ್ಗಮನ್= ದೃಷ್ಟಾಂ-
ತಾಲಂಕಾರದ ಗುಣವನ್ನು, ಕನ್ನಡದೊಳ್ =ಕನ್ನಡದಲ್ಲಿ,  ಸಂತತ ಗುಣಮನೂ ಕೈಕೊಳ್ವಂತೆ= ಸ್ಥಿರವಾದ ಗುಣವನ್ನು ಮೆಚ್ಚುವಂತೆ. ಪರಮಕವೀಶರ್= ಶ್ರೇಷ್ಠಕವಿಗಳು, ಪೇೞ್ಗೆ= ಪ್ರಯೋಗಿಸಬೇಕು.

ಭಾವಾರ್ಥ: ಹೀಗೆ ವಿವಿಧ ಪ್ರಕಾರಗಳನ್ನೊಳಗೊಂಡ ದೋಷ್ಟಾಂತಾಲಂಕಾರದ ಗುಣವನ್ನು ಜನ ಮೆಚ್ಚುವಂತೆ ಕವೀಶ್ವರರು ಪ್ರಯೋಗಿಸಬೇಕು.  

ಉದಾತ್ತ:

ಮಿಗೆ ಮನದ ಪೆಂಪುಮಂ ಕೆ ।
ಯ್ಮಿಗೆ ವಿಭವದ ಪೆಂಪುಮಂ ವೆಶೇಷಿಸಿಪೇೞಲ್ ॥
ಬಗೆವುದುದಾತ್ತಾಲಂಕಾ।
ರಗುಣೋದಯಮದಱದಿಂತು ಸದುದಾಹರಣಂ॥೩-೧೭೩॥

ಅನ್ವಯ: ಮಿಗೆ ಮನದ ಪೆಂಪುಮನ್= ಆಶಯದ ಹಿರಿಮೆಯನ್ನು, ಕೆಯ್ಮಿಗೆ ವಿಭವದ ಪೆಂಪುಮನ್= ವಿಭವದ ಮಹತ್ವವನ್ನೂ, ವಿಶೇಷಿಸಿ ಪೇಳಲ್= ವಿಶೇಷವಾಗಿ ಹೇಳಿದರೆ, ಬಗೆವುದು ಉದಾತ್ತ ಅಲಂಕಾರ ಗುಣೋದಯಮ್= ಅದು ಉದಾತ್ತ ಅಲಂಕಾರದ ಗುಣೋದಯವೆಂದು ತಿಳಿಯುವುದು, ಅದಱದು ಇಂತು ಸದುದಾಹರಣಮ್=ಅದರ ಒಳ್ಳೆಯ ಉದಾಹರಣೆ ಹೀಗಿದೆ.

ಭಾವಾರ್ಥ = ಆಶಯದ ಹಿರಿಮೆಯನ್ನೂ, ವಿಭವದ ಮಹತ್ವವನ್ನೂ ವಿಶೇಷವಾಗಿ ಹೇಳಿದರೆ ಅದು ಉದಾತ್ತ ಎಂಬ
ಅಲಂಕಾರ.  ಅದರ ಒಳ್ಳೆಯ ಉದಾಹರಣೆ ಹೀಗಿದೆ.

ದಂಡಿ ಹೇಳಿದ ಲಕ್ಷಣ ಹೀಗಿದೆ: (೨-೩೦೦)
ಆಶಯಸ್ಯ ವಿಭೂತೇರ್ವಾ ಯನ್ಮಹತ್ತ್ವಮನುತ್ತಮಮ್।
ಉದಾತ್ತಂ ನಾಮ ತಂ ಪ್ರಾಹುಲಂಕಾರಂ ಮನೀಷಿಣಃ॥

( ಆಶಯದ ಹಿರಿಮೆಯನ್ನು, ಮಹತ್ತ್ವವಾದುದನ್ನು ವಿದ್ವಾಂಸರು ಉದಾತ್ತಲಂಕಾರವೆಂದು ಹೇಳುತ್ತಾರೆ.)

ಚಲದೆಡೆಗೆ ಪಿರಿದು ರಜಮುಂ ।
ನೆಲನುಂ ಪ್ರಿಯದೆಡೆಗೆ ಕಿಱಿದು ಕೊಳಲುಂ ಕುಡಲುಂ॥
ಚಲಮುಂ ಪ್ರಿಯಮುಂ ಬೞಿ ಸಮ ।
ಬಲಮಾಗಿರೆ ನೆಗೞ್ವ ಬಗೆಗೆ ಕಿಱಿದೇಂ ಪಿರಿದೇಂ॥೩-೧೭೪॥

ಅನ್ವಯ: ಚಲದೆಡೆಗೆ =ಚಲ ಹಿಡಿದಾಗ, ಪಿರಿದು ರಜಮುಮ್= ಒಂದು ಧೂಳಿನ ಕಣ ಕೂಡ ದೊಡ್ಡದಾಗುತ್ತದೆ, ನೆಲನುಮ್ ಪ್ರಿಯದೆಡೆಗೆ ಕಿಱಿದು=ಪ್ರಿಯವೆನಿಸಿದಾಗ ದಾನ ಕೊಡಲು ಇಡಿಯ ಭೂಮಂಡಲವೇ ಕಿರಿದು, ಕೊಳಲುಮ್ ಕುಡಲುಮ್= ಸ್ವೀಕರಿಸಲು ಮತ್ತು ಕೊಡಲು , ಚಲಮುಮ್ ಪ್ರಿಯಮುಮ್= ಚಲ ಮತ್ತು ಇಷ್ಟ, ಬೞಿಸಮಬಲಮ್ ಆಗಿರೆ= ಅವನ ಬಳಿ ಸಮಬಲವಾಗಿರುವಾಗ, ನೆಗೞ್ವ ಬಗೆಗೆ= ಅವನ ದೃಷ್ಟಿಗೆ, ಕಿಱಿದು ಏನ್ ಪಿರಿದು ಏನ್= ಚಿಕ್ಕದು ಯಾವುದು ದೊಡ್ಡದು ಯಾವುದು?

ಭಾವಾರ್ಥ: “ ಚಲ ಹಿಡಿದಾಗ ಒಂದು ಧೂಳಿನ ಕಣ ಕೂಡ ದೊಡ್ಡದು ಎನ್ನುತ್ತಾನೆ. ತನಗೆ ಪ್ರಿಯವೆನಿಸಿದಾಗ ದಾನಕೊಡಲು ಇಡಿಯ ಭೂಮಂಡಲವೇ ಕಿರಿದೆನ್ನುತ್ತಾನೆ. ಹೀಗೆ ಚಲ ಪ್ರಿಯ ಎಂಬ ಎರಡೂ ಅವನ ಬಳಿ ಸಮಬಲವಾಗಿರುವಾಗ ಅವನ ದೃಷ್ಟಿಗೆ ಯಾವುದು ತಾನೆ ಚಿಕ್ಕದು, ಯಾವುದು ತಾನೆ ಹಿರಿದು?”

ವಿಚಾರ: ಇಲ್ಲಿ ಆಶಯದ ಮಹತ್ವವನ್ನು ಹೇಳುತ್ತಿರುವುದರಿಂದ “ಉದಾತ್ತ”

ಅೞಿದೞಿಪಿ ಬೞಿಯನುೞಿಯದೆ ।
ಪೞಿವರುಮಂ ತವಿಸಿ ಕಳೆಯದುೞಿವಳನಾದಂ॥
ಪೞಿಕೆಯ್ದು ತೊೞ್ತನುೞಿದಂ।
ತುೞಿದ ಮಹಾಪುರುಷಱೞಿಯದುಪೞಿದರೆ ಸಿರಿಯಂ॥೩-೧೭೫॥

ಅನ್ವಯ : ಅೞಿದು=(ತಾವೂ)ನಾಶವಾಗಿ,  ಅೞಿಪಿ=(ಇತರರನ್ನೂ)ನಾಶಮಾಡಿ, ಉೞಿಯದೆ= ಹತ್ತಿರದೆಡೆಯನ್ನು ಬಿಡದೆ, ಪೞಿವರುಮನ್ ತವೆಸಿ ಕಳೆಯದೆ= ನಿಂದಿಸಿದವರನ್ನು ಕೂಡ ಬಿಡದೆ, ಉೞಿವಳನ್= ಉಳಿಯುವವಳನ್ನು, ತೊೞ್ತನ್ ಉೞಿದಂತೆ ಉೞಿದ= ತೊತ್ತನ್ನು ಬಿಟ್ಟುಬಿಡುವಂತೆ ಬಿಟ್ಟ, ಮಹಾಪುರುಷರ್= ಮಹನೀಯರು, ಅಱಿಯದೆ ಉೞಿದರೆ=
ಅರಿಯದೆ ಬಿಟ್ಟು ಬಿಟ್ಟರೆ? ಸಿರಿಯಂ=ಲಕ್ಷ್ಮಿಯನ್ನು. “

ಭಾವಾರ್ಥ: “ ತಾವೂ ನಾಶವಾಗಿ, ಇತರರನ್ನೂ ನಾಶಮಾಡಿ, ಹತ್ತಿರದೆಡೆಯನ್ನು ಬಿಡದೆ, ನಿಂದಿಸಿದವರನ್ನು ಕೂಡ ಬಿಡದೆ ಇರುವ ಲಕ್ಷ್ಮಿಯನ್ನು ತೊತ್ತನ್ನು ಬಿಟ್ಟುಬಿಡುವಂತೆ ಬಿಟ್ಟ ಮಹನೀಯರು ತಿಳಿವಳಿಕೆಯಿಲ್ಲದೌ ಬಿಟ್ಟುಬಿಟ್ಟರೆ,”

ಕಸವರಮೆಂಬುದು ನೆಱೆ ಸೈ।
ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ॥
ಕಸವೇಂ ಕಸವರಮೇನು ।
ಬ್ಬಸಮಂ ಬಸಮಲ್ಲದಿರ್ದು ಮಾಡುವುವೆಲ್ಲಂ॥೩-೧೭೬॥

ಅನ್ವಯ: ಪರ ವಿಚಾರಮನ್=ಪರರ ವಿಚಾರವನ್ನು, ಧರ್ಮಮುಮ್=ಧರ್ಮವನ್ನು, ನೆಱೆ ಸೈರಿಸಲ್ ಆರ್ಪೊಡೆ=ಚೆನ್ನಾಗಿ ಸಹಿಸುವುದಾದರೆ,ಕಸವರಮ್=ಅದು ಚಿನ್ನವೆಂದು ಹೇಳಬೇಕು, ( ಇಂತಹ ಗುಣ ಇಲ್ಲದವರಿಗೆ) ಕಸವೇನ್ ಕಸವರಮೇನ್= ಕಸವಾದರೇನು, ಚಿನ್ನವಾದರೇನು, ಉಬ್ಬಸಮನ್ ಬಸಮ್ ಅಲ್ಲದೆ ಇರ್ದು ಮಾಡುವುವು ಎಲ್ಲಮ್= ಎಲ್ಲವೂ ಕ್ಲೇಶವನ್ನೇ ಉಂಟುಮಾಡುತ್ತದೆ.

ಭಾವಾರ್ಥ “ ಇತರರ ವಿಚಾರವನ್ನು ಧರ್ಮವನ್ನು ಚೆನ್ನಾಗಿ ಸಹಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅಂತಹ ಸಹನಾಗುಣವನ್ನು ಚಿನ್ನವೆಂದು ಹೇಳಬೇಕು. (ಇಂತಹ ಗುಣ ಇಲ್ಲದವರಿಗೆ)ಕಸವಿರಲಿ, ಹೊನ್ನಿರಲಿ ಕ್ಲೇಶವನ್ನೇ ಉಂಟುಮಾಡುತ್ತವೆ.

ಪಾೞಿ ನಿಲೆ ನೆಗೞೆ ಬಾೞ್ವುದು।
ಬಾೞೆಂಬುದು ನಿಕ್ಕುವಂ ಗುಣಗ್ರಾಮಣಿಗಳ್॥
ಪಾೞಾಗೆ ತೆಗೞೆಬಾೞ್ವಾ।
ಬೆೞೇನಾಚಂದ್ರತಾರಮೋ ಮಾನಸರಾ॥೩-೧೭೭॥

ಅನ್ವಯ: ಪಾೞಿ ನಿಲೆ ನೆಗೞೆ ಬಾೞ್ವುದು= ( ಗುಣವಂತರು) ಕ್ರಮತಪ್ಪದಂತೆ ನಡೆಸುವ ಜೀವನವೇ, ಬಾೞ್ ಎಂಬುದು ನಿಕ್ಕುವಮ್=ಬಾಳುಪ ಎಂಬುದು ನಿಜ, ಗುಣಗ್ರಮಣಿಗಳು=ಗುಣವಂತರು, ಪಾೞಾಗೆ= ಹಾಳಾದರೆ, ತೆಗೞೆ ಬಾೞ್ವ= ಎಲ್ಲರೂ ತೆಗಳುವಂತೆ ಬಾಳುವ, ಆ ಬಾೞ್ ಏನ್ ಆಚಂದ್ರತಾರಮೋ ಮಾನಸರಾ= ಅಂಥ ಮನುಷ್ಯರ ಬಾಳು ಚಂದ್ರ ತಾರೆಗಳಂತೆ ಶಾಶ್ವತವೇ?

ಭಾವಾರ್ಥ: “ ಗುಣವಂತರು ಕ್ರಮತಪ್ಪದಂತೆ ನಡೆಸುವ ಜೀವನವೇ ಜೀವನೆಂಬುದು ನಿಶ್ಚಿತ. ಎಲ್ಲರೂ ತೆಗಳುವ ಹಾಳಾದ ಜೀವನ ಚಂದ್ರತಾರೆಗಳಂತೆ ಶಾಶ್ವತವೇನು.”

ಪೊಲ್ಲಮೆಯುಂ ಗುಣಮುಂ ತಮ ।
ಗಲ್ಲದೆ ಪುದುವಲ್ತು ಮತ್ತೆ ತನಗಂ ಪೆಱರ್ಗಂ॥
ನಿಲ್ಲದೆ ಜನಮಂತಾಗಿಯು
ಮೆಲ್ಲಂ ಮುನಿಸೊಸಗೆವೆರಸು ಪೞಿಗುಂ ಪೊಗೞ್ಗುಂ॥೩-೧೭೮॥

ಅನ್ವಯ:ಪೊಲ್ಲಮೆಯುಂ ಗುಣಮುಂ = ಕೆಟ್ಟತನವೂ ಗುಣವೂ, ತಮಗೆ ಅಲ್ಲದೆ= ತಮಗೆ ಸೇರಿದ್ದಲ್ಲದೆ, ಪುದುವಲ್ತು ಮತ್ತೆ ತನಗಮ್ ಪೆರರ್ಗಮ್= ತನಗೂ ಇತರರಿಗೂ ಸೇರಿದ್ದಲ್ಲ, ನಿಲ್ಲದೆ ಜನಂ ಅಂತಾಗಿಯುಂ= ಜನ ಹಾಗಿದ್ದರೂ ನಿಲ್ಲದೆ, ಎಲ್ಲಮ್ ಮುನಿಸು ಒಸಗೆವೆರಸು ಪೞಿಗುಂ ಪೊಗೞ್ಗುಂ = ಎಲ್ಲರೂ ಕೋಪಬಂದಾಗ ಬಿಡದೆ ಹಳಿಯುತ್ತಾರೆ,

ಭಾವಾರ್ಥ: “ ಕೆಟ್ಟತನವೂ ಗುಣವೂ ತಮಗೆ ಸೇರಿದ್ದಲ್ಲದೆ ತನಗೂ ಇತರರಿಗೂ ಸೇರಿದ್ದಲ್ಲ. ಹಾಗಿದ್ದರೂ ಜನರೆಲ್ಲರೂ ಕೋಪ ಬಂದಾಗ ಬಿಡದೆ ಹಳಿಯುತ್ತಾರೆ. ಸಂತೋಷವಾದಾಗ ಹೊಗಳುತ್ತಾರೆ.”

ವಿಚಾರ:ಈ ಪದ್ಯದ ಜೊತೆಗೆ ಮುಂದಿನ ಪದ್ಯವನ್ನೂ ಅನ್ವಯಿಸಿದಾಗ ಅರ್ಥ ವಿಶದವಾಗುತ್ತದೆ.

ಮಿಗೆ ಪೞಿವರೆನ್ನನೆನ್ನದೆ ।
ಪೊಗೞ್ವರ್ ನೆರೆದೆಲ್ಲರೆನ್ನನೆನ್ನದೆ ತನ್ನೊಳ್॥
ಬಗೆದುಭಯಲೋಕಹಿತದೊಳ್।
ನೆಗೞೆ ಜನಂ ಪೞಿಗೆ ಪೊಗೞ್ಗೆ ತನಗೇನದಱೊಳ್॥೩-೧೭೯॥

ಅನ್ವಯ: ಮಿಗೆ ಪೞಿವರ್ ಎನ್ನನ್ ಎನ್ನದೆ= ಎಲ್ಲರೂ ನನ್ನನ್ನು ತೆಗಳುವರು ಎಂದುಕೊಳ್ಳದೆ, ಪೊಗೞ್ವರ್ ನೆರೆದೆಲ್ಲರ್ ಎನ್ನನ್ ಎನ್ನದೆ= ಅವರೆಲ್ಲರೂ ನನ್ನನ್ನು ಹೊಗಳುವರೆಂದೂ ಎಣಿಸದೆ, ತನ್ನೊಳ್ ಬಗೆದು= ತಾನು ಆಲೋಚಿಸಿ, ಉಭಯ ಲೋಕ ಹಿತದೊಳ್ ನೆಗೞೆ= ಇಹಪರಗಳೆರಡಕ್ಕೂ ಹಿತವಾದುದನ್ನು ಆಚರಿಸಬೇಕು, ಜನಮನ್ ಪೞಿಗೆ = ಜನ ಹಳಿಯಲಿ,ಪೊಗೞ್ಗೆ = ಹೊಗಳಲಿ, ತನಗೇನ್ ಅದಱೊಳ್= ಅದರಲ್ಲಿ ತನಗೇನು?

ವಿಚಾರ: “ ಎಲ್ಲರೂ ನನ್ನನ್ನು ತೆಗಳುವರು ಎಂದುಕೊಳ್ಳದೆ, ಅವರೆಲ್ಲರೂ ನನ್ನನ್ನು ಹೊಗಳುವರೆಂದೂ ಎಣಿಸದೆ, ಇಹಪರಗಳೆರಡಕ್ಕೂ ಹಿತವಾದುದನ್ನು ಮಾತ್ರ ತಾನು ಆಚರಿಸಬೇಕು. ಜನ ಹಳಿಯಲಿ, ಹೊಗಳಲಿ, ಅದರಿಂದ ತನಗೇನು?

ಪ್ರಣತಾರಿತ್ರುಟಿತ ಮುಕ್ತಾ ।
ಮಣಿಗಣಮುತ್ತಂಸದಿಂ ಕೞಲ್ದುದಿರೆ ಸಭಾಂ॥
ಗಣಮೊಪ್ಪೆ ವೀರನಾರಾ
ಯಣನಾ ತಾರಕಿತನಭದವೋಲ್ ಸೊಗಯಿಸುಗ॥೩-೧೮೦॥

ಅನ್ವಯ: ಪ್ರಣತ ಅರಿ= ನಮಸ್ಕರಿಸಿದ ಶತ್ರುಗಳ, ಮುಕ್ತಾಮಣಿಗಣಮ್= ಮುತ್ತಿನ ಮಣಿಗಳು, ಉತ್ತಂಸದಿನ್ ಕೞಲ್ದ= ಶಿರೋಭೊಷಣದಿಂದ ಕಳಚಿಕೊಂಡು, ಉದಿರೆ= ಕೆಳಗೆ ಉದುರಲು, ವೀರನಾರಾಯಣನ್= ವೀರನಾರಾಯಣನ (ಅವನ ಸಭೆ) ಆ ತಾರಕಿತ ನಭದವೋಲ್= ನಕ್ಷತ್ರಗಳಿಂದ ಕೂಡಿದ ಆ ಗಗನದಂತೆ, ಸೊಗಯಿಸುಗುಂ = ಸೊಗಯಿಸುತ್ತದೆ.

ಭಾವಾರ್ಥ: “ನಮಸ್ಕರಿಸಿದ ಶತ್ರುಗಳ ಮುತ್ತಿನ ಮಣಿಗಳು ಶಿರೋಭೊಷಣದಿಂದ ಕಳಚಿಕೊಂಡು ಕೆಳಗುದುರಲು ವೀರನಾರಾಯಣನ ಸಭಾಂಗಣವೆಲ್ಲ ನಕ್ಷತ್ರಗಳಿಂದ ಕೂಡಿದ ಗಗನದಂತೆ ಸೊಗಯಿಸುತ್ತದೆ.”

ಅಪಹ್ನುತಿ:

ಅಮೃತಮಯಕಿರಣನೆಂಬುದು ।
ಮಮರದು ಶಿಶಿರಾಂಶುವೆಂಬುದು ಶಶಿಗೆಂದುಂ॥
ಸಮನಿಸಿ ವಿಷಕಿರಣನುಮನ ।
ಲಮರೀಚಿಯುಮೆಂದೆನಲ್ಕೆ ಮೋಹಾಪೋಹಂ॥೩-೧೮೩॥

ಅನ್ವಯ: ಅಮೃತಮಯ ಕಿರಣನ್ ಎಂಬುದುಮ್= ಚಂದ್ರನಿಗೆ ಅಮೃತಕಿರಣನೆಂದೂ, ಶಿಶಿರ+ಅಂಶುವೆಂಬುದುಮ್= ಶೀತಕಿರಣನೆಂದೂ( ಹೇಳುವುದು) ಸಲ್ಲದು, ಶಶಿಗೆ ಎಂದುಮ್= ಚಂದ್ರನಿಗೆ ಯಾವಾಗಲೂ, ಸಮನಿಸಿ ವಿಷಕಿರಣನುಮ್,
ಅನಲ ಮರೀಚಿಯುಮ್=ವಿಷಕಿರಣ, ಅಗ್ನಿಕಿರಣ, ಎಂದು ಎನಲ್ಕೆ ಮೋಹಾಪೋಹಮ್= ಹೀಗೆ ಹೇಳುವುದು ಮೋಹಾಪೋಹ.

ಭಾವಾರ್ಥ: “ ಚಂದ್ರನಿಗೆ ಅಮೃತಕಿರಣನೆಂದೂ, ಶೀತಕಿರಣನೆಂದೂ ( ಹೇಳುವುದು ) ಸಲ್ಲದು,ಸರಿಯಾಗಿ ಹೇಳಬೇಕಾದರೆ ಅವನಿಗೆ ವಿಷಕಿರಣ, ಅಗ್ನಿಕಿರಣ ಎಂದು ಕರೆಯಬೇಕು. ಹೀಗೆ ಹೇಳುವುದು ಮೋಹಾಪೋಹ.”

ವಿಚಾರ: ಹೀಗೆ ಹೇಳುವುದು ಕಾಮಪೀಡಿತನೆಂದು ದಂಡಿ ತನ್ನ ಲಕ್ಷಣದಲ್ಲಿ ಹೇಳಿದ್ದಾನೆ.  ( ೨.೩೦೭)

ಅಮೃತಸ್ಯಂದಿ ಕಿರಣಶ್ಚಂದ್ರಮಾ ನಾಮತೋ ಮತಃ।
ಅನ್ಯ ಏವಾಯಮರ್ಥತ್ಮಾ ವಿಷನಿಷ್ಯಂದಿದೀಧಿತಿಃ॥

( ಚಂದ್ರನನ್ನು ಅಮೃತಕಿರಣನೆಂದು ನಾಮಮಾತ್ರಕ್ಕೆ ಹೇಳುತ್ತಾರೆ. ಯಥಾರ್ಥವಾಗಿ ಅವನು ವಿಷಕಿರಣನು.)

ವಿವರಣೆ:( ೨-೩೦೮)

ಇತಿ ಚಂದ್ರತ್ವ ಮೇವೇಂದೌ ನಿವರ್ತ್ಯಾಂತರಾತ್ಮತಾ ।
ಉಕ್ತಾ ಸ್ಮರಾರ್ತೇ ನೇತ್ಯೇಷಾ ಸ್ವರೊಪಾಪಹ್ನುತಿರ್ಮತಾ॥

( ಹೀಗೆ ಚಂದ್ರನಲ್ಲಿ ಚಂದ್ರತ್ವವನ್ನೇ ನಿಷೇಧೆಸಿ ಅನ್ಯಸ್ವರೂತ್ವವನ್ನು ಕಾಮುಕನು ಹೇಳುವುದರಿಂದ ಇದು ಸ್ವರೂಪಾದಹ್ನುತಿ)

ಕುಸುಮಂಗಳೆಂಬ ಮಾತದು
ಪುಸಿ ದಹನಮಯಂಗಳಂಬುಗಳ್ ಮನಸಿಜನಾ
ಜಸಮೞಿಯೆ ಸುಡುವುವೆರ್ದೆಯಂ
ಬಿಸಿಯವಿವೆಂದಿಂತೆ ಪೇೞೆ ಧರ್ಮಾಪೋಹಂ॥೩-೧೮೪॥

ಅನ್ವಯ: ಕುಸುಮಂಗಳ್=( ಇವು)ಹೂವುಗಳು, ಎಂಬ ಮಾತು ಅದು ಪುಸಿ= ಎಂಬ ಮಾತು ಸುಳ್ಳು, ಮನಸಿಜನಾ =ಮನ್ಮಥನ, ಅಂಬುಗಳ್=ಬಾಣಗಳು, ದಹನ ಮಯಂಗಳ್= ಬೆಂಕಿಗಳು, ಜಸಮ್ ಅೞಿಯೆ= ಕಳೆಗುಂದಿಸಿ, ಸುಡುವುವು ಎರ್ದೆಯನ್= ಎದೆಯನ್ನು ಸುಡುತ್ತವೆ, ಇವು ಬಿಸಿಯವು, ಎಂದು ಇಂತೆ ಪೇೞೆ= ಎಂದು ಹೀಗೆ ಹೇಳಿದರೆ, ಧರ್ಮಾಪೋಹಂ= ಧರ್ಮಾಪೋಹ.

ಭಾವಾರ್ಥ: “ ಇವು ಹೂಗಳೆಂಬ ಮಾತು ಸುಳ್ಳು. ಮನ್ಮಥನ ಬಾಣಗಳು.ನಿಜವಾಗಿ ಬೆಂಕಿಗಳು. ಕಳೆಗುಂದಿಸಿ ಅವು ಎದೆಯನ್ನು ಸುಡುವುವು. ತುಂಬಾ ಬಿಸಿಯಾದುವು.” ಎಂದು ಹೇಳಿದರೆ ಅದು ಧರ್ಮಾಪೋಹ.

ವಿಚಾರ: ಅಪಹ್ನುತಿಯ ಇನ್ನೊಂದು ಪ್ರಭೇದವಾದ ಧರ್ಮಾಪೋಹಕ್ಕೆ ಇದು ಉದಾಹರಣೆ.

ಸ್ಮರನಸ್ತ್ರಸಮಿತಿಯದು ನಿ
ರ್ಭರಮಂಗಮನುರ್ಚಿ ಪೋಗೆಯುಂ ಪೋಬೞಿಯಂ
ದೊರೆಕೊಳಿಸಲಾಗದದಱಿಂ
ಶರತತಿಯಲ್ತೆಂಬುದಿಂತು ಧರ್ಮಾಪೋಹಂ॥೩-೧೮೫॥

ಅನ್ವಯ: ಸ್ಮರನ ಅಸ್ತ್ರ ಸಮಿತಿ= ಮನ್ಮಥನ ಬಾಣ ಸಮೂಹವು, ಅದು ನಿರ್ಭರಮ್ ಅಂಗಮನ್ ಉರ್ಚಿ= ಅದು ರಭಸದಿಂದ ಶರೀರವನ್ನು ಛೇದಿಸಿಕೊಂಡು, ಪೋಗೆಯುಂ= ಹೋದರೂ, ಪೋಬೞಿಯನ್= ಹೋದ ಮಾರ್ಗವನ್ನು, ದೊರೆಕೊಳಿಸಲ್ ಆಗದು= ಹಿಡಿಯಲಾಗುವುದಿಲ್ಲ, ಅದಱಿನ್=ಆದ್ದರಿಂದ, ಶರತತಿ ಅಲ್ತು ಎಂಬುದು ಇದು= ಬಾಣ-
ಸಮೂಹವೇ ಅಲ್ಲ ಎನ್ನುವುದು ಧರ್ಮಾಪೋಹ.

ಭಾವಾರ್ಥ: “ ಮನ್ಮಥನ ಬಾಣ ಸಮೂಹವು ರಭಸದಿಂದ ಶರೀರವನ್ನು ಭೇದಿಸಿಕೊಂಡು ಹೋದರೂ ಅದು ಹೋದ ಮಾರ್ಗವನ್ನು ಹಿಡಿಯಲಾಗುವುದಿಲ್ಲ.  ಆದ್ದರಿಂದ ಇದು ಬಾಣಸಮೂಹವೇ ಅಲ್ಲ” ಎನ್ನುವುದು ಧರ್ಮಾಪೋಹ.

ಸ್ಮರನಯ್ದಂಬುಗಳಲಲ್ತಿವು
ಶರಕೋಟಿಗಳಿಲ್ಲದಾಗಳಿಂತೀ ಲೋಕಾಂ
ತರವರ್ತಿ ವಿರಹಿಗಣಮಂ
ನಿರುತಂ ಮರ್ದಿಸವುಯೆನೆ ಸುಗುಣಾಪೋಹಂ॥೩-೧೮೬॥

ಅನ್ವಯ: ಸ್ಮರನ ಅಯ್ದು ಅಂಬುಗಳ್ ಅಲ್ತು ಇವು= ಮನ್ಮಥನ ಐದು ಬಾಣಗಳಲ್ಲ ಇವು. ಶರಕೋಟಿಗಳ್= ಶರಕೋಟಿಗಳು, ಇಲ್ಲದಾಗಳ್= ಇಲ್ಲದಿದ್ದರೆ,  ಇಂತು ಈ ಲೋಕಾಂತರವರ್ತಿ= ಹೀಗೆ ಈ ರೀತಿಯಲ್ಲಿ ಲೋಕದಲ್ಲೆಲ್ಲ, ವಿರಹಿಗಣಮನ್= ವಿರಹಿ ಜನ ಸಮೂಹವನ್ನು, ನಿರುತಮ್ ಮರ್ದಿಸವು ಅವು= ಅವು ಯಾವಾಗಲೂ ಹೀಗೆ ಛೇಡಿಸುತ್ತಿರಲಿಲ್ಲ. ಅವು ಎನೆ ಸುಗುಣಾ ಪೋಹಮ್=ಎಂದರೆ ಸುಗುಣಾಪೋಹ.

ಭಾವಾರ್ಥ: “ ಇವು ಮನ್ಮಥನ ಐದು ಬಾಣಗಳಲ್ಲ. ಶರಕೋಟಿಗಳು.  ಇಲ್ಲದಿದ್ದರೆ ಈ ರೀತಿ ಲೋಕದಲ್ಲೆಲ್ಲ ವಿರಹಿ ಜನಸಮೂಹವನ್ನು ಯಾವಾಗಲೂ ಇಷ್ಟೊಂದು ಪೀಡಿಸುತ್ತಿರಲಿಲ್ಲ” ಎಂದರೆ ಅದು “ ಸುಗುಣೋಪೋಹ “

ವಿಚಾರ: ಐದು ಹೂಬಾಣಗಳಿಗೆ ಇರಬೇಕಾದ ಸುಗುಣವನ್ನು ನಿರಾಕರಿಸುತ್ತಿರುವುದರಿಂದ ಇದು ಸುಗುಣೋಪೋಹ.  

ರಸವದಲಂಕಾರ.

ವೀರಾದ್ಭುತ ಕರುಣಾಶೃಂ
ಗಾರ ಭಯಾನಕ ಸರೌದ್ರ ಭೀಭತ್ಸ ಮಹಾ
ಸಾರತರಹಾಸ್ಯಶಾಂತೃ
ಧಾರಂ ನವವಿಧವಿಕಲ್ಪಮಾ ರಸಮಾರ್ಗಂ॥೩-೧೮೮॥

ಅನ್ವಯ:ವೀರ, ಅದ್ಭುತ, ಕರುಣಾ, ಶೃಂಗಾರ, ಭಯಾನಕ, ರೌದ್ರ, ಬೀಭತ್ಸ, ಹಾಸ್ಯ, ಶಾಂತ, ಆಧಾರಮ್=ಆಧಾರವಾದವು. ನವವಿಧ ವಿಕಲ್ಪಮ್= ಒಂಬತ್ತು ಬಗೆಗಳಿಂದ ಕೂಡಿದ್ದು, ಆ ರಸಮಾರ್ಗಮ್= ಆ ರಸಮಾರ್ಗ.

ಭಾವಾರ್ಥ = ವೀರ, ಅಧ್ಭುತ, ಕರುಣೆ, ಶೃಂಗಾರ, ಭಯಾನಕ, ರೌದ್ರ, ಬೀಭತ್ಸ, ಮಹಾಸಾರತರವಾದ ಹಾಸ್ಯ, ಶಾಂತಗಳಿಂದ ರಸಮಾರ್ಗವು ಒಂಬತ್ತು ಬಗೆಗಳಿಂದ ಕೂಡಿದೆ.

ರಾವಣನಂ ಕೊಂದು ಜಯ
ಶ್ರೀವಧುವಂ ತಾಳ್ದಿ ಮುಯ್ಪಿನೊಳ್ ವರ ಸೀತಾ
ದೇವತೆಯಂ ತರ್ಪನ್ನೆಗ
ಮೋವದೆ ಪುರುಷವ್ರತೋಚಿತಂ ವೀರರಸಂ॥೩-೧೮೯॥

ಅನ್ವಯ: ರೃವಣನನ್ ಕೊಂದು= ರಾವಣನನ್ನು ಕೊಂದು, ಜಯ ಶ್ರೀವಧುವನ್= ಜಯಲಕ್ಷ್ಮಿಯನ್ನು , ತಾಳ್ದಿ ಮುಯ್ಪಿನೊಳ್= ವರಿಸಿ ಉಡುಗೊರೆಯಾಗಿ, ಸೀತಾದೇವತೆಯನ್= ಸೀತಾದೇವಿಯನ್ನು, ತರ್ಪ ಅನ್ನೆಗಮ್=
ಕರೆತರುವವರೆಗೂ, ಓವದೆ= ತಪ್ಪದೆ, ಪುರುಷ ವ್ರತ ಉಚಿತಮ್= ಮಹಾ ಪುರುಷವ್ರತಕ್ಕೆ ಉಚಿತವಾದುದು, ವೀರರಸಮ್= ವೀರರಸ.

ಭಾವಾರ್ಥ : “ರಾವಣನನ್ನು ಕೊಂದು ಜಯಲಕ್ಷ್ಮಿಯನ್ನು ವರಿಸಿ ಉಡುಗೊರೆಯಾಗಿ ಸೀತಾದೇವಿಯನ್ನು ಕರೆತರುವವರೆಗೂ ಮಹಾಪುರುಷವ್ರತದಲ್ಲಿದ್ದ ( ರಾಮನಿಗೆ) ವೀರರಸ ಉಚಿತವಾಗಿದೆ.”

ವಿಚಾರ:ರಾಮನ ಉತ್ಸಾಹ ಸ್ಥಾಯೀ ಭಾವವಾಗಿರುವುದರಿಂದ ಇಲ್ಲಿ ವೀರರಸ.

ಜಲನಿಧಿಯಂ ಪಾಯ್ದೊರ್ವನೆ ।
ನಿಲಿಕಿ ದಶಾನನನ ಪೊೞಲನಾ ಲಂಕೆಯನಾ॥
ಕುಲಮಿಲ್ಲದಿಱಿದು ನಿಂದಂ
ಕಲಿಯಾದಂ ಬಗೆದು ನೋೞ್ಪೊಡದ್ಭುತಮಾದಂ॥೩-೧೯೦॥

ಅನ್ವಯ = ಜಲನೆಧಿಯನ್ ಪಾಯ್ದು= ಸೃಗರವನ್ನು ದಾಟಿ, ಒರ್ವನೆ= ಒಬ್ಬನೇ, ನಿಲಿಕಿ ದಶಾನನನ ಪೊೞಲನ್= ರಾವಣನ ರಾಜಧಾನಿಯಾದ ಲಂಕೆಯನ್ನು ಆಕ್ರಮಿಸಿ, ಆಕುಲಮ್ ಇಲ್ಲದೆ=ನಿರಾಂತಕವೃಗಿ, ಇಱಿದು= ನಾಶಮಾಡಿ,  
ನಿಂದನ್ ಕಲಿಯಾಗಿ= ಕಲಿಯಾಗಿ ನಿಂತನು, ಬಗೆದು ನೋೞ್ಪೊಡೆ = ಯೋಚಿಸಿ ನೋಡಿದರೆ, ಆದಮ್ ಅದ್ಭುತಮ್= ತುಂಬಾ ಅದ್ಭುತ.

ಭಾವಾರ್ಥ: “ ಸಾಗರವನ್ನು ದಾಟಿ, ರಾವಣನ ರಾಜಧಾನಿಯಾದ ಲಂಕೆಯನ್ನು ನಿರಾತಂಕವಾಗಿ ಆಕ್ರಮಿಸಿ ಕಲಿಯಾಗಿ ನಿಂತವನನ್ನು ಕುರಿತು ಯೋಚಿಸಿದರೆ ತುಂಬಾ ಅದ್ಭುತ.”

ವಿಚಾರ: ವಿಸ್ಮಯವನ್ನು ಉಂಟುಮಾಡುವ ಹನುಮಂತನ ಕಾರ್ಯಗಳ ನಿರೂಪಣೆ ಅದ್ಭುತರಸ.

ಕರೆಕರೆದು ಮನೋಧೃತಿಯಂ
ನೆರೆವಾಸೆಯೊಳಿರ್ದಳಲ್ಲದುೞಿದೊಡೆ ನಿನ್ನಾ
ವಿರಹಾನಿಳನಾ ತಾಪದೆ
ಕರಗುಗುಮಿನ್ನಾಕೆಗಿನಿಸು ಕರುಣಿಸು ಮನದೊಳ್॥೩-೧೯೧॥

ಅನ್ವಯ: ಕರೆಕರೆದು ಮನೋಧೃತಿಯಿನ್= ಹೇಗೋ ಮನೋಧೃತಿಯನ್ನು ಕರೆದು ತಂದುಕೊಂಡು, ನೆರೆವ ಆಸೆಯೊಳ್ ಇರ್ದಳ್= ನಿನ್ನನ್ನು ಸೇರುವ ಆಸೆಯಿಂದ ಬದುಕಿದ್ದಾಳೆ, ಅಲ್ಲದೆ ಉೞಿದೊಡೆ= ಇಲ್ಲದಿದ್ದರೆ,  ನಿನ್ನಾ ವಿರಹ ಅನಳನಾ= ನಿನ್ನ ಮೇಲಿನ ವಿರಹಾಗ್ನಿಯ, ತಾಪದೆ= ತಾಪದಿಂದ, ಕೊರಗುಗುಮ್= ಕೊರಗುತ್ತಾಳೆ. ಇನ್ನು ಆಕೆಗೆ ಇನಿಸು ಕರುಣಿಸು
ಮನದೊಳ್= ಇನ್ನು ಆಕೆಗೆ ಮನಸ್ಸಿನಲ್ಲಿ ಸ್ವಲ್ಪ ಕರುಣಿಸು.”

ಭಾವಾರ್ಥ: “ ಹೇಗೋ ಮನೋಧೃತಿಯನ್ನು ಕರೆದು ತಂದುಕೊಂಡು, ನಿನ್ನನ್ನು ಸೇರುವ ಆಶೆಯಿಂದ ಬದುಕಿದ್ದಾಳೆ. ಇಲ್ಲದಿದ್ದರೆ ನಿನ್ನ ಮೇಲೆ ವಿರಹಾಗ್ನಿಯ ತಾಪದಿಂದ ಕೊರಗುತ್ತಾಳೆ.  ಆಕೆಯ ಮೇಲೆ ನಿನ್ನ ಮನಸ್ಸಿನಲ್ಲಿ ಸ್ವಲೂಪವಾದರೂ
ಕರುಣೆ ತೋರಿಸು.”

ಪುಳಕಿತಕಪೋಳಫಳಕಂ
ವಿಳಸಿತಮದಿರಾರುಣೇಕ್ಷಣಂ ಸ್ಫುರಿತೋಷ್ಠಂ
ಕೆಳದೀ ನಿನ್ನ ಮುಖಂ ತಳ
ಮಳಗೊಳಿಸುಗುಮಿಂತು ನಿಭೃತಶೃಂಗಾರರಸಂ॥೩-೧೯೨॥

ಅನ್ವಯ: ಕೆಳದೀ=ಗೆಳತಿ, ಪುಳಕಿತ ಕಪೋಳ ಫಳಕಂ = ರೋಮಾಂಚಗೊಂಡ ಕಪೋಲಗಳಿಂದ, ವಿಳಸಿತ ಮದಿರಾರುಣ ಈಕ್ಷಣಮ್= ವಿಲಸಿತವಾದ ಮತ್ತೇರಿದ ಕೆಂಗಣ್ಣಿನಿಂದ, ಸ್ಫುರಿತ ಓಷ್ಠಮ್=ಕಂಪಿಸುವ ತುಟಿಗಳಿಂದ, ನಿನ್ನ ಮುಖಂ= ನಿನ್ನ ಮುಖ, ತಳಮಳಗೊಳಿಸುಗುಮ್= ತಳಮಳಗೊಳಿಸುವುದು, ಇಂತು ನಿಭೃತಶೃಂಗಾರ ರಸಮ್= ಇಂತು ಸಂಪೂರ್ಣ ಶೃಂಗಾರರಸ.”

ಭಾವಾರ್ಥ:” ಗೆಳತಿ! ರೋಮಾಂಚಗೊಂಡ ಕಪೋಲಗಳಿಂದ, ವಿಲಸಿತವಾದ ಮತ್ತೇರಿದ ಕೆಂಗಣ್ಣಿನಿಂದ, ಕಂಪಿಸುವ ತುಟಿಗಳಿಂದ ಕೂಡಿರುವ ನಿನ್ನ ಮುಖ ತಳಮಳಗೊಳಿಸುವುದು. “ ಎಂಬುದು ಶೃಂಗಾರರಸಪೂರ್ಣವಾಗಿದೆ.

ವಿಚಾರ: ಇಲ್ಲಿ ರತಿಯೆಂಬ ಸ್ಥಾಯಿಭಾವಕ್ಕೆ ಹೊಂದಿಕೆಯಾಗುವ ಅನುಭಾವಗಳ ವರ್ಣನೆಯಿದೆ.

ತಾಳತರುವಿತತಿಯೊಳ್ ಬೇ
ತಾಳಂಗಳ್ ಮೊಱೆದು ತೆಱೆದು ಬಾಯ್ಗಳನಾ ಪಾ
ತಾಳಬಿಲಂಗಳವೋಲ್ ತಳ
ತಾಳಲಯಕ್ರಮದೆ ಕುಣಿಯೆ ಭಯಮಯನಾದೆಂ॥೩-೧೯೩॥

ಅನ್ವಯ: ತಾಳ ತರುವಿತತಿಯೊಳ್= ತಾಳೆಯ ಮರಗಳ ಸಮೂಹದಲ್ಲಿ, ಬೇತಾಳಂಗಳ್ ಮೊಱೆದು= ಬೇತಾಳಗಳು ಆರ್ಭಟಿಸುತ್ತ. ತೆರೆದು ಬಾಯ್ಗಳನ್ ಆ ಪಾತಾಳ ಬಿಲಂಗಳವೋಲ್= ಪಾತಾಳಬಿಲಗಳ ಹಾಗೆ ಬಾಯಿಗಳನ್ನು ತೆರೆದು, ತಳ ತಾಳ ಲಯ ಕ್ರಮದೆ= ಅಂಗೈಯ ತಾಳಲಯಗಳಿಗೆ ಅನುಗುಣವಾಗಿ,  ಕುಣಿಯೆ= ಕುಣಿಯುತ್ತಿರಲು, ಭಯಮಯನ್ ಆದೆನ್= ನಾನು ಭಯಗ್ರಸ್ತನಾದೆನು.

ಭಾವಾರ್ಥ: “ ತಾಳೆಯ ಮರಗಳ ಸಮೂಹದಲ್ಲಿ ಬೇತಾಳಗಳು ಆರ್ಭಟಿಸುತ್ತ,  ಪಾತಾಳ ಬಿಲಗಳ ಹಾಗೆ ಬಾಯಿಗಳನ್ನು ತೆರೆದು ಅಂಗೈಯ ತಾಳಲಯಗಳಿಗೆ ಅನುಗುಣವಾಗಿ ಕುಣಿಯುತ್ತಿರಲು ನಾನು ಭಯಗ್ರಸ್ತನಾದೆನು.

ವಿಚಾರ: ಭಯವನ್ನು ಹುಟ್ಟಿಸುವ ವಿಭಾವಗಳನ್ನು ಹೇಳಿರುವುದರಿಂದ ಇಲ್ಲಿ ಭಯಾನಕ ರಸವಿದೆ.

ಕೊಂದು ಜಟಾಯುವನಾತಂ
ಮುಂದಿಟ್ಟಾ ಜನಕಸುತೆಯನೊಯ್ದಂ ಮತ್ತಾ
ಪಂದೆಯನಂತಕಮುಖದೊಳ್
ತಂದಿಟ್ಟಂದಲ್ಲದುೞಿಗುಮೇ ರೌದ್ರರಸಂ॥೩-೧೯೪॥

ಅನ್ವಯ: ಕೊಂದು ಜಟಾಯುವನ್= ಜಟಾಯುವನ್ನು ಕೊಂದು, ಆತನ್=ಆತನು, ಮುಂದಿಟ್ಟು ಆ ಜನಕ ಸುತೆಯನ್= ಆ ಸೀತೆಯನ್ನು ಮುಂದಿಟ್ಟುಕೊಂಡು, ಒಯ್ದನ್= ಒಯ್ದಿರುವನು, ಮತ್ತೆ ಆ ಪಂದೆಯನ್= ಮತ್ತೆ ಆ ಹೇಡಿಯನ್ನು, ಅಂತಕ ಮುಖದೊಳ್= ಮೃತ್ಯುಮುಖದಲ್ಲಿ , ತಂದು ಇಟ್ಟಂದು ಅಲ್ಲದೆ= ತಂದಿಟ್ಟಂದಲ್ಲದೆ, ಉೞಿಗುಮೇ = ಬಿಡುವೆನೇ, ರೌದ್ರರಸಮ್= ರೌದ್ರರಸ.

ಭಾವಾರ್ಥ = “ ಜಟಾಯುವನ್ನು ಕೊಂದು, ಆ ಸೀತೆಯನ್ನು ಮುಂದೆಟ್ಟುಕೊಂಡು ಅವನು ಒಯ್ದಿರುವನು, ಆ ಹೇಡಿಯನ್ನು ಮೃತ್ಯು ಮುಖದಲ್ಲಿ ತಂದಿಡದೆ ಬಿಡುವೆನೇ,” ಎಂಬುದು ರೌದ್ರರಸ.

ವಿಚಾರ: ರಾಮಾಯಣದ ಈ ಕ್ರೋಧ ಪ್ರಸಂಗವೂ ಕವಿರಾಜಮಾರ್ಗಕಾರನ ಸ್ವತಂತ್ರ ಕಲ್ಪನೆ.

ನವವಿವರಾವೃತ ಪೂತಿ
ದ್ರವತ್ವಗಾವೃತವಿಮಿಶ್ರಮಾಂಸೋಪಚಿತಮ ॥
ಧ್ರುವಮಸುಚಿತ್ರ ಭ್ರಮಿತಾ।
ಸ್ಥಿವಹಂ ಮೆಯ್ ಬಗೆವೊಡಿಂತು ಕಿಸುಗುಳಮಾದಂ॥೩-೧೯೫॥

ಅನ್ವಯ: ನವ ವಿವರಾವೃತ= ಒಂಬತ್ತು ದ್ವಾರಗಳಿಂದ, ಪೂತಿದ್ರವ=ಹೊಲಸು ನಾರುವ ಕೀವಿನಿಂದ, ತ್ವಕ್ ಆವೃತ ವಿಮಿಶ್ರ ಮಾಂಸ ಉಪಚಿತಮ್= ಚರ್ಮ ಆವರಿಸಿದ ಮಾಂಸ ಮಿಶ್ರಣದಿಂದ, ಅದ್ರುವಂ ಅಸು= ಅಶಾಶ್ವತವಾದ ಪ್ರಾಣದಿಂದ, ಚಿತ್ತಭ್ರಮಿತ= ಚಿತ್ತಭ್ರಮಣವಾದ, ಅಸ್ಥಿವಹಮ್=ಮೂಳೆಗಳಿಂದ ಕೂಡಿದ, ಮೆಯ್=ದೇಹ, ಬಗೆವೊಡೆ= ಯೋಚಿಸಿದರೆ, ಇಂತು ಕಿಸುಗುಳಮ್ ಆದಮ್=ಹೀಗೆ ತುಂಬ ವಿಕಾರವಾದ ಪದಾರ್ಥ.

ಭಾವಾರ್ಥ: “ ದೇಹವೆಂಬುದು ಒಂಬತ್ತು ದ್ವಾರಗಳಿಂದ, ಹೊಲಸು ನಾರುವ ಕೀವಿನಿಂದ, ಚರ್ಮ ಆವರಿಸಿದ ಮಾಂಸಮಿಶ್ರಣದಿಂದ, ಮೂಳೆಗಳಿಂದ ಕೂಡಿದ ಅಸ್ಥಿರವಾದ ವಿಕಾರವಾದ ಪದಾರ್ಥ. “

ವಿಚಾರ : ದೇಹವನ್ನು ಜುಗುಪ್ಸಾವಹವಾಗಿ ವರ್ಣಿಸಿರುವುದರಿಂದ ಇದು ” ಬೀಭತ್ಸರಸ”

ಪರಪುರುಷಸೇವನಾಕೃತ ।
ಸುರತವಿಕಾರಂಗಳೆಲ್ಲಮಂ ನಿಜಪತಿಯೊಳ್ ॥
ನೆರೆದಾಗಳೆ ಮಱೆಯಲ್ ಬಗೆ ।
ದಿರವದುನಗಿಸಿತ್ತು ಪೀನಮಭಿಸಾರಿಕೆಯಾ॥೩-೧೯೬॥

ಅನ್ವಯ: ಪರಪುರುಷ ಸೇವನಾಕೃತ= ಪರಪುರುಷನ ಸೇವೆಯಲ್ಲಿ, ಸುರತ ವಿಕಾರಂಗಳ್ ಎಲ್ಲಮನ್= ಸುರತವಿಕಾರಗಳೆಲ್ಲವನ್ನೂ, ನಿಜಪತಿಯೊಳ್ ನೆರೆದಾಗಳೆ= ತನ್ನ ಪತಿಯೊಡನೆ ಕೂಡಿದಾಗ, ಮಱೆಯಲ್ =ಮರೆಮಾಡಲು, ಅಭಿಸಾರಿಕಾ =ಅಭಿಸಾರಿಕೆ, ಬಗೆದ ಇರವು= ಮಾಡಿದ ಪ್ರಯತ್ನಗಳು, ಅದು ನಗಿಸಿತ್ತು ಪೀನಮ್= ಅದು ತುಂಬ ನಗಿಸಿತ್ತು. “

ಭಾವಾರ್ಥ: “ ಅಭಿಸಾರಿಕೆ ತಾನು ಮಾಡಿದ ತಪ್ಪನ್ನು ಮರೆಸಲು ಮಾಡಿದ ಪ್ರಯತ್ನಗಳು ನಗಿಸುತ್ತಿರುವುದರಿಂದ ಇಲ್ಲಿ ಹಾಸ್ಯರಸ.

ಮೃಗಗುಣದೊಳ್ ಪರಿಚಿತಮುಂ ।
ದ್ವಿಗುಣಮದೋರಂತೆ ಮಟ್ಟಮಿರ್ದುದುಮತ್ತಂ ॥
ವಿಗತವಿಕಾರಾಕಾರಂ ।
ಸೊಗಯಿಸುಗುಂ ನಿನ್ನ ರೂಪು ಶಾಂತಾಧಾರಂ॥೩-೧೯೭॥

ಅನ್ವಯ: ಮೃಗಗಣದೊಳ್ ಪರಿಚಿತಮುಮ್= ಮೃಗಗಳಲ್ಲಿ ಪರಿಚಿತವಾದುದು, ದ್ವಿಗುಣಮ್= ದ್ವಿಗುಣಗಳಿಂದ( ಎರಡು ಹಗ್ಗದ ಹುರಿಗಳಿಂದ ) ಅದು ಓರಂತೆ ಮಟ್ಟಮ್ ಇರ್ದುದು= ಒಂದೇ ಸಮನಾಗಿ ಮಟ್ಟವಾಗಿ ಇರುವುದು, ವಿಗತ ವಿಕಾರ ಆಕಾರಮ್= ಯಾವುದೇ ವಿಕಾರವಿಲ್ಲದೆ ಇರುವ ನಿನ್ನ ಆಕಾರ, ಸೊಗಯಿಸುಗುಮ್ ನಿನ್ನ ರೂಪು ಶಾಂತ ಆಧಾರಮ್= ಶಾಂತವೇ ಆಧಾರವಾಗಿರುವ ನಿನ್ನ ರೂಪು ಸೊಗಯಿಸುತ್ತಿದೆ.

ಭಾವಾರ್ಥ: “ ಮೃಗಗಳಲ್ಲಿ ಪರಿಚಿತವಾದುದು, ದ್ವಿಗುಣಗಳಿಂದ ಒಂದೇ ಸಮನಾಗಿ ಮಟ್ಟವಾಗಿ ಇರುವುದು, ಯಾವದೇ ವಿಕಾರವಿಲ್ಲದೆ ಇರುವ ನಿನ್ನ ಆಕಾರ, ಶಾಂತವೇ ಆಧಾರವಾಗಿರುವ ರೂಪದಿಂದ ಸೊಗಯಿಸುತ್ತಿದೆ,”

ವಿಚಾರ: ಇದು ಮೃಚ್ಛಕಟಿಕ ನಾಟಕದ ಮಂಗಳಶ್ಲೋಕದಲ್ಲಿರುವ ಶಿವನ “ ಪರ್ಯಂಕಬಂಧ” ವರೂಣನೆಯನ್ನು ನೆನಪಿಸುತ್ತದೆ, ( “ ಪರ್ಯಂಕಗ್ರಂಥಿ ಬಂಧದ್ವಿಗುಣಿತಭೈಜಗಾಶ್ಲೇಷಸಂವೀತಜಾನೋಃ “) ಅಲುಗಾಡದಂತೆ ಎರಡೆಳೆಯ ಹುರಿಯಿಂದ ಗಂಟನ್ನು ಹಾಕಿಮಾಡುವ ಪರ್ಯಂಕ ಬಂಧದ ವರ್ಣನೆಯೇ ಕವಿರಾಜಮಾರ್ಗದಲ್ಲಿ ಶಾಂತನಾದ ಯೋಗಿಯ ಯೋಗಮುದ್ರೆಯಾಗಿ ಮೂಡಿಬಂದಿದೆ.

ಊರ್ಜಿತ :

ಆರೂಢನೆಜಮನೋಹಂ ।
ಕಾರೋತ್ಕರೂಷಪ್ರಕಾಶಮೂರ್ಜಿತಸದಳಂ ॥
ಕಾರಂ ತದೀಯಭೇದವಿ ।
ಚಾರಮನೀ ತೆಱದಿನಱಿದುಕೊಳ್ಗೆ ಕವೀಶರ್॥೩-೧೯೮॥

ಅನ್ವಯ: ಆರೂಢ ನಿಜ ಮನೋಹಂಕಾರ= ಯಾರಾದರೊಬ್ಬರ ಅಹಂಕಾರದ ಏರಿಕೆಯ, ಉತ್ಕರ್ಷ ಪ್ರಕಾಶಮ್= ಅತಿಶಯವನ್ನು ಪ್ರಕಟಿಸುವುದೇ, ಊರ್ಜಿತ ಸದಳಂಕಾಮ್= ಊರೂಜಿತಾಲಂಕಾರ. ತದೀಯ ಭೇದ ವಿಚಾರಮ್ =ಅದರ ಭೇದಗಳನ್ನು, ಕವೀಶರ್= ಕವೀಶ್ವರರು, ಈ ತೆರದಿನ್ ಅಱಿದುಕೊಳ್ಗೆ= ಈ ರೀತಿ ತಿಳಿದುಕೊಳ್ಳಲಿ.

ಭಾವಾರ್ಥ: ಯಾರಾದರೊಬ್ಬರ ಅಹಂಕಾರದ ಏರಿಕೆಯ ಅತಿಶಯವನ್ನು ಪ್ರಕಟಿಸುವುದೇ ಊರ್ಜಿತ ಎಂಬ ಅಲಂಕಾರ. ಕವೀಶ್ವರರು ಅದರ ಭೇದಗಳನ್ನು ಈ ರೀತಿ ತಿಳಿದುಕೊಳ್ಳಲಿ.

ವಿಚಾರ = ದಂಡಿ ಇದನ್ನು “ ಊರ್ಜಸ್ವಿ” ಎಂದು ಕರೆದಿದ್ದಾನೆ. “ ಊರ್ಜಸ್ವಿ ರೂಢಾಹಂಕಾರಮ್ “ (೨-೨೭೫) ಎಂದು ಅದರ ಲಕ್ಷಣವನ್ನು ಹೇಳಿದ್ದಾನೆ.  

ಕೊಲ್ಲೆಂ ಬಿಸುಡಾಯುಧಮಂ ।
ಪುಲ್ಲಂ ಕರ್ಚೇಱು ಪುತ್ತನಡಿಗೆಱಗೆನ್ನಾ ॥
ನಿಲ್ಲದೆ ತೊಲಗಿದಿರಿಂದಂ  ।
ತಲ್ಲದೊಡೆೞ್ದಾರ್ದು ಕೆಯ್ದುಗೆಯ್ ನೀನೀಗಳ್॥೩-೧೯೯॥

ಅನ್ವಯ: ಕೊಲ್ಲೆನ್ ಬಿಸುಡು ಆಯುಧಮ್=ನಿನ್ನನ್ನು ಕೊಲ್ಲುವುದಿಲ್ಲ ಆಯುಧವನ್ನು ಬಿಸಾಡು, ಪುಲ್ಲನ್ ಕರ್ಚು=ಹುಲ್ಲನ್ನು ಕಚ್ಚು, ಏರು ಪುತ್ತನ್= ಹುತ್ತವನ್ನು ಏರು, ಎನ್ನಾ ಅಡಿಗೆ ಎಱಗು= ನನ್ನ ಅಡಿಗೆರಗು, ನಿಲ್ಲದೆ ತೊಲಗು ಇದಿರಿಂದೆ= ಎದುರಿಗೆ ನಿಲ್ಲದೆ ತೊಲಗು, ಅಂತು ಅಲ್ಲದೊಡೆ= ಹಾಗಿಲ್ಲದಿದ್ದರೆ, ಎೞ್ದು =ಎದ್ದು, ಆರ್ದು=ಆರ್ಭಟಿಸಿ, ಕೆಯ್ದುಗೆಯ್ನೀನ್ ಈಗಳ್= ಈಗ ನೀನು ಆಯುಧವನ್ನು ಹಿಡಿ.

ಭಾವಾರ್ಥ: “ ನಿನ್ನನ್ನು ಕೊಲ್ಲುವುದಿಲ್ಲ.  ಆಯುಧವನ್ನು ಬಿಸಾಡು. ಹುಲ್ಲನ್ನು ಕಚ್ಚು. ಹುತ್ತವನ್ನು ಏರು. ನನ್ನ ಅಡಿಗೆರಗು. ಎದುರು ನಿಲ್ಲದೆ ತೊಲಗು. ಹಾಗಲ್ಲದಿದ್ದರೆ ಆರ್ಭಟಿಸಿ ಈಗ ನೀನು ಆಯುಧವನ್ನು ಹಿಡಿ. “

ವಿಚಾರ: ಇವು ಒಬ್ಬ ವೀರನ ಅಹಂಕಾರದ ಮಾತುಗಳು. ಹೀಗಾಗಿ ಇದು ಊರ್ಜಿತ ಎಂಬ ಅಲಂಕಾರವಾಗಿದೆ.

ವ್ಯಾವೃತ್ತಿ:

ಮಗುೞ್ದುಂ ಮಗುೞ್ದಾ ಮಾತಂ ।
ನೆಗೞ್ದಿರೆ ಪೇೞ್ದಾಗಳಕ್ಕುಮಾ ವ್ಯಾವೃತ್ತಿ॥
ಸ್ವಗತಾಳಂಕಾರಂ ಬಗೆ ।
ಗಗಾಧಮನರದಱ  ತೆಱನನೀ ಕುಱಿಪುಗಳಿಂ॥೩-೨೦೦॥

ಅನ್ವಯ: ಮಗುೞ್ದುಮ್ ಮಗುೞ್ದು = ಮತ್ತೆ ಮತ್ತೆ, ಆ ಮಾತನ್= ಅದೇ ಮಾತನ್ನು , ನೆಗೞ್ದಿರೆ ಪೇೞ್ದ ಆಗಳ್= ಚೆನ್ನಾಗಿ ಹೇಳಿದಾಗ, ಅಕ್ಕುಮ್ಆ ವ್ಯಾವೃತ್ತಿ ಸ್ವಗತ ಅಳಂಕಾರಮ್= ಅದು ವ್ಯಾವೃತ್ತಿ ಎಂಬ ಅಲಂಕಾರವಾಗುತ್ತದೆ. ಅಗಾಧಮನರದಱ= ವಿವೇಕವಂತರು ಅದರ ಕುರುಹುಗಳನ್ನು ಅರಿಯಬೇಕು.

ಭಾವಾರ್ಥ: ಮತ್ತೆ ಮತ್ತೆ ಮೊದಲು ಹೇಳಿದ ಮಾತನ್ನೇ ಉಚ್ಚರಿಸುವುದು ವ್ಯಾವೃತ್ತಿ( ವಿಶೇಷವಾದ ಆವೃತ್ತಿ). ಅದರ ಪರಿಯನ್ನು ವಿವೇಕವಂತರು ಅದರ ಕುರುಹುಗಳಿಂದ ಅರಿಯಬೇಕು.

ವಿಚಾರ: ದಂಡಿ ಭಾಮಹರು ಇದನ್ನು ಹೇಳಿಲ್ಲ. ಕಾವ್ಯಾವಲೋಕನದಲ್ಲಿ ನಾಗವರ್ಮ ಇದನ್ನು “ಆವಳಿ” ಎಂದಿದ್ದಾನೆ. ಇದನ್ನೇ ಕೆಲವರು “ಏಕಾವಳಿ” ಎಂದಿದ್ದಾರೆ.  ಇನ್ನೂ ಕೆಲವರು ಇದನ್ನು “ ಮುಕ್ತಪದಗ್ರಸ್ತ” ಎಂದು ಕರೆದಿದ್ದಾರೆ. ಇದರಲ್ಲಿ ಎರಡೆರಡು ಪದಗಳಲ್ಲಿ ಎರಡನೆಯ ಪದ ಮುಂದಿನ ಪೂರ್ವ ಪದ ಆಗುತ್ತದೆ.

ಪ್ರಿಯತರ:

ಪ್ರಿಯ ಕುಶಲಪೂರ್ವಕೋಚಿತ।
ನಯವಿನಯೋದಾರ ರುಚಿರವಚನಪ್ರಾಯಂ॥
ಪ್ರಿಯತರಮೆಂಬುದು ಸಕಳ ।
ಕ್ರಿಯಾನುಗಮಿತಾರ್ಥಮಿಂತು ತದುದಾಹರಣಂ॥೩-೨೦೨॥

ಅನ್ವಯ: ಪ್ರಿಯ ಕುಶಲಪೂರ್ವಕ= ಪ್ರಿಯವೂ ಕುಶಲಪೂರ್ವಕವೂ, ಉಚಿತ, ನಯ, ವಿನಯ, ಉದಾರ, ರುಚಿರ ವಚನಪ್ರಾಯಂ= ಮಧುರವಚನವಿರುವುದು, ಪ್ರಿಯತರಮ್ ಎಂಬುದು= ಪ್ರಿಯತರ ಎಂಬ ಅಲಂಕಾರ.ಸಕಳ ಕ್ರಿಯಾನುಗಮಿತ ಅರ್ಥಂ= ಸಕಲ ಕ್ರಿಯಗಳನ್ನು ಅನುಸರಿಸುವ ಅರ್ಥವಾದ ( ಈ ಅಲಂಕಾರಕ್ಕೆ ) ಇಂತು ತತ್ ಉದಾಹರಣಮ್=ಹೀಗೆ ಅದರ ಉದಾಹರಣೆ.

ಭಾವಾರ್ಥ : ಪ್ರಿಯವೂ ಕುಶಲಪೂರ್ವಕವೂ ಉಚಿತ, ನಯ, ವಿನಯ, ಗುಣಗಳಿಂದ ಕೂಡಿದ ಮಧುರ ವಚನ ಇರುವುದು ಪ್ರಿಯತರ ಎಂಬ ಅಲಂಕಾರ.

ವಿಚಾರ: ದಂಡಿ ಇದನ್ನು “ ಪ್ರೇಯಸ್” ಎಂದು ಕರೆದಿದ್ದಾನೆ.  “ ಪ್ರೇಯಃ ಪ್ರಿಯತರಾಖ್ಯಾನಮ್” ( ೨-೨೭೫) ಎಂದಿದ್ದಾನೆ.

ಆಶೀರಲಂಕಾರ:

ದೊರೆಕೊಂಡು ಮನದ ಬಗೆಯುಂ
ಪಿರಿದಾಗಿರೆ ಪಿರಿಯರೊಸಗೆಯಂ ಬೀಱುವುದುಂ
ಪರಮಾಶೀರರ್ಥಾಳಂ
ಕರಣಾಂತರಮದಱ ಲಕ್ಷ್ಯಮೀ ತೆಱನಕ್ಕುಂ॥೩-೨೦೫॥

ಅನ್ವಯ: ಮನದ ಬಗೆಯುಂ = ಮನಸ್ಸಿನ ಇಷ್ಟಾರ್ಥ, ಪಿರಿದು ಆಗಿರೆ= ಹಿರಿದಾಗಿ ಒದಗಿ ಬರಲೆ ಎಂದು, ಪಿರಿಯರ ಒಸಗೆಯನ್ ಬೀಱುವುದುಮ್= ಹಿರಿಯರು ಶುಭವನ್ನು ಕೋರೈವುದು, ಪರಮ ಆಶೀರರ್ಥ ಅಳಂಕರಣ ಅಂತರಮ್= ಆಶೀಃ ಎಂಬ ಶ್ರೇಷ್ಠವಾದ ಅಲಂಕಾರ, ಅದರ ಲಕ್ಷ್ಯಮ್ ಈ ತೆಱನ್ ಅಕ್ಕುಮ್= ಅದರ ಲಕ್ಷ್ಯ ಈ ರೀತಿ ಇರುತ್ತದೆ

ಭಾವಾರ್ಥ: ಮನಸ್ಸಿನ ಇಷ್ಟಾರ್ಥ ಹಿರಿದಾಗಿ ಒದಗಿ ಬರಲಿ ಎಂದು ಹಿರಿಯರು ಶುಭವನ್ನು ಕೋರುವುದು ಆಶೀಃ ಎಂಬ ಶ್ರೇಷ್ಠವಾದ ಅರ್ಥಾಲಂಕಾರ. ಅದರ ಲಕ್ಷ್ಯ ಹೀಗಿದೆ.

ವಿಚಾರ: ದಂಡಿಯ ಪ್ರಕಾರ ಆಶೀರಲಂಕಾರದಲ್ಲಿ ಹಿರಿಯರು ಶುಭವನ್ನು ಕೋರುವುದು ಮಾತ್ರವಲ್ಲದೆ ಇಷ್ಟವಾದ ವಿಷಯದಲ್ಲಿ ಹಾರೈಕೆಯು ಆಶೀರಲಂಕಾರವೇ. ( ೨-೩೫೭)

ಆಶೀರ್ನಾಮಾಭಿಲಷಿತೇ ವಸ್ತುನ್ಯಾಶಂಸನಂ ಯಥಾ।
ಪಾತು ವಃ ಪರಮಂ ಜ್ಯೋತಿರವಾಙ್ಮಾನಸಗೋಚರಮ್॥

( ಇಷ್ಟವಾದ ವಸ್ತುವಿನ ವೆಷಯದಲ್ಲಿ ಕೋರಿಕೆಯನ್ನು ಪ್ರಕಟಿಸುವುದು ಆಶೀಃ ಎಂಬ ಅಲಂಕಾರ.  ವಾಕ್ಕು ಮತ್ತು ಮನಸ್ಸಿಗೆ ಗೋಚರವಾಗದ ತೇಜಸ್ಸು ನಿಮ್ಮನ್ನು ರಕ್ಷಿಸಲಿ ಎಂದು ಹೇಳಿದಂತೆ.)

ಆಯುಂ ಶ್ರೀಯುಂ ವಿಜಯಮು ।
ಮಾಯತಿಯುಂ ನೃಪತಿ ನಿನಗೆ ನಿಜಸಂತತಿಯುಂ॥
ನ್ಯಾಯದೆ ಪೆರ್ಚುವುದಕ್ಕೀ ।
ತೋಯಧಿಧರಣೀಧರಾಧರಸ್ಥಿತಿವರೆಗಂ ॥೩-೨೦೬॥

ಅನ್ವಯ: ನೃಪತೆ=ರಾಜನೇ! ಈ ತೋಯಧಿ= ಈ ಸಮುದ್ರ, ಧರಣೀ= ಭೂಮಿ, ಧರಾಧರ=ಪರ್ವತ, ಸ್ಥಿತಿವರೆಗಂ= ಇರುವವರೆಗೆ, ನಿನಗೆ ಆಯುಮ್=ನಿನಗೆ ಆಯಸ್ಸು, ಶ್ರೀಯುಂ=ಸಂಪತ್ತು, ವಿಜಯಮುಮ್=ವಿಜಯವೂ, ಆಯತಿಯಮ್= ಅಭ್ಯುದಯವೂ, ನಿಜ ಸಂತತಿಯುಂ =ನಿನ್ನ ವಂಶವೂ, ನ್ಯಾಯದಿ ಪೆರ್ಚುವುದು ಅಕ್ಕೆ= ನ್ಯಾಯವಾಗಿ ಹೆಚ್ಚುತ್ತಿರಲಿ.

ಭಾವಾರ್ಥ: “ ರಾಜನೇ ! ಈ ಸಮುದ್ರ, ಭೂಮಿ, ಪರ್ವತಗಳಿರುವವರೆಗೆ ನಿನಗೆ ಆಯಸ್ಸು, ಸಂಪತ್ತು, ವಿಜಯ, ಅಭ್ಯುದಯ, ಸಂತತಿಗಳು ಹೆಚ್ಚುತ್ತಿರಲಿ,

ಭಾವಿಕ:
ಗೀತಿಕೆ:
ಭಾವಮೆಂಬುದಕ್ಕುಂ ಕವಿಗಳಾ ।
ಭಾವಿಸಿ ಮನದ ಬಗೆಯೊಂದಿದರ್ಥಂ ॥
ಕೇವಲಮದಱೊಳಳಂಕೃತಿ।
ಭಾವಿಕಮೆಂಬುದಕ್ಕುಂ ನೃಪತುಂಗದೇವಮತದಿಂ॥೩-೨೦೭॥

ಅನ್ವಯ: ಕವಿಗಳಾ=ಕವಿಗಳ, ಭಾವಮ್ ಎಂಬುದು= ಭಾವ ಎಂಬುದು, ಭಾವಿಸಿ =ಪರಿಭಾವಿಸಿ, ಮನದ ಬಗೆಯೊಂದು ಅರ್ಥಂ= ಮನದಲ್ಲಿ ತಂದುಕೊಂಡ ಅರ್ಥ, ಅಕ್ಕುಮ್=ಆಗಿರುತ್ತದೆ, ಕೇವಲ ಅದಱೊಳ್ = ಕೇವಲ ಅದರಲ್ಲಿ, ಅಲಂಕೃತಿ ಭಾವಿಕಮ್ ಎಂಬುದು= ಭಾವಿಕಮೆಂಬ ಅಲಂಕಾರ ಎಂಬುದು, ನೃಪತುಂಗ ದೇವ ಮತದಿನ್ ಅಕ್ಕುಮ್= ನೃಪತುಂಗದೇವನ  ಆಶಯದಂತೆ ಇರುತ್ತದೆ.

ಭಾವಾರ್ಥ: ಕವಿಗಳು ಪರಿಭಾವಿಸಿ ಮನದಲ್ಲಿ ತಂದುಕೊಂಡ ಅರ್ಥ “ ಭಾವ” ನೃಪತುಂಗದೇವನ ಆಶಯದಂತೆ ಅದರಲ್ಲಿ ತೋರುವ ಅಲಂಕಾರ “ ಭಾವಿಕ “

ವಿಚಾರ: ಇದು ಕೇವಲ ಒಂದು ಪದ್ಯಕ್ಕೆ ಸಂಬಂಧಿಸಿದ್ದಲ್ಲ. ದಂಡಿ ಇದನ್ನು ಸ್ಪಷೂಟಪಡಿಸುತ್ತಾ ಇಡಿಯ ಪ್ರಬಂಧದ ವ್ಯಾಪ್ತಿ ಇರುವ ಗುಣವೇ “ ಭಾವಿಕ” ಎಂದಿದ್ದಾನೆ.  ( ೨-೩೬೪)

ತದ್ಭಾವಿಕಮಿತಿ ಪ್ರಾಹುಃ ಪ್ರಬಂಧವಿಷಯಮ್ ಗುಣಮ್
ಭಾವಃ ಕವೇರಭಿಪ್ರಾಯಃ ಕಾವ್ಯೇಷ್ಟಾಸಿದ್ದಿ ಸಂಸ್ಥಿತಃ॥
( ಮಹಾಕಾವ್ಯಾದಿ ಪ್ರಬಂಧ ಸಂಬಂಧವಾದ ಗುಣವನ್ನು ಭಾವಿಕಮೆಂದು ಹೇಳುತ್ತಾರೆ.  ಕಾವ್ಯಗಳಲ್ಲಿ ಕೊನೆಯವರೆಗೆ ಇರುವ ಕವಿಯ ಅಭಿಪ್ರಾಯ ಭಾವ.)

ಧ್ವನ್ಯಲಂಕಾರ:

ಧ್ವನಿಯೆಂಬುದಳಂಕಾರಂ।
ಧ್ವನಿಯಿಸುಗುಂ ಶಬ್ಧದಿಂದಮರ್ಥದೆ ದೂಷ್ಯಂ॥
ನೆನೆವುದಿದನಿಂತು ಕಮಳದೊ।
ಳನೆಮಿಷಯುಗಮೊಪ್ಪಿ ತೋರ್ಪುದಿಂತಿದು ಚೋದ್ಯಂ॥೩-೨೦೮॥

ಅನ್ವಯ : ಧ್ವನಿ ಎಂಬುದು ಅಳಂಕಾರಮ್= ಧ್ವನಿ ಎಂಬುದು ಒಂದು ಅಲಂಕಾರ.  ಧ್ವನಿಯಿಸುಗುಮ್ ಶಬ್ಧದಿಂದಮ್=
ಅದು ಶಬ್ಧದಿಂದ ಸೂಚಿತವಾಗುತ್ತದೆ. ಅರ್ಥದೆ ದೂಷ್ಯಂ= ಅರ್ಥದಿಂದಾದರೆ ದೂಷ್ಯ. ನೆನೆವುದು ಇದನ್ ಇಂತು= ಇದನ್ನು
ಹೀಗೆ ತಿಳಿಯಬೇಕು. ಕಮಲದೊಳ್ = ಕಮಲದಲ್ಲಿ, ಅನೆಮಿಷ ಯುಗಮ್=ಮೀನುಗಳೆರಡು, ಒಪ್ಪೆ ತೋರ್ಪುದು= ಸೊಗಸಾಗಿ ಕಾಣುತ್ತಿವೆ. ಇಂತು ಇದು ಚೋದ್ಯಮ್= ಇದೇನು ಆಶ್ಚರ್ಯ!

ಭಾವಾರ್ಥ: “ ಧ್ವನಿ” ಎಂಬುದು ಒಂದು ಅಲಂಕಾರ.  ಅದು ಶಬ್ಧದಿಂದ ಸೂಚಿತವಾಗುತ್ತದೆ. ಅರ್ಥದಿಂದಾದರೆ ಅದು ದೋಷಯುಕ್ತವಾಗಿರುತ್ತದೆ. ಇದನ್ನು ಈ ರೀತಿ ತಿಳಿಯಬೇಕು. “ ಕಮಲದಲ್ಲಿ ಮೀನುಗಳೆರಡು ಸೊಗಸಾಗಿ ಕಾಣುತ್ತಿವೆ. ಇದೇನು ಆಶ್ಚರ್ಯ !”

ವಿಚಾರ: ಧ್ವನಿಯನ್ನು ಒಂದು ಅಲಂಕಾರವೆಂದು ಹೇಳುವ ಈ ಪದ್ಯಕ್ಕೆ ದಂಡಿ ಭಾಮಹರಲ್ಲಿ ಮೂಲವಿಲ್ಲ. ಧ್ವನಿಯನ್ನು ಕುರಿತಂತೆ ಒಂಬತ್ತನೆಯ ಶತಮಾನದಲ್ಲೇ ಶ್ರೀವಿಜಯನು ಹೇಳಿರುವುದು ಆಶ್ಚರ್ಯವೇ ಸರಿ. ಅಲಂಕಾರಗಳ ಪಟ್ಟಿಯಲ್ಲಿ “ಧ್ವನಿ”  ಸೇರಿಲ್ಲವಾದುದರಿಂದ ಇದು ಅನಂತರದಕಾಲದಲ್ಲಿ ಸೇರಿದೆಯೇನೋ ಎಂದೆನಿಸುತ್ತದೆ, ಆದರೆ ಮಹಾಕಾವ್ಯದ ಲಕ್ಷಣವನ್ನು ಹೇಳುವ ಮೊದಲು ವಿಶೇಷವಾಗಿ ಈ ಧ್ವನಿಯ ವಿಷಯವನ್ನು ಹೇಳಿರುವುದರಿಂದ ಇದನ್ನು ಶ್ರೀವಿಜಯನು ಬೇಕೆಂದೇ ಈಸ್ಥಳದಲ್ಲಿ ಹೇಳಿದ್ದಾನೆಂದು ಭಾವಿಸಬೇಕಾಗುತ್ತದೆ.

ಮಹಾಕಾವ್ಯಲಕ್ಷಣ:

ಮಾಲಿನೀ:

ಅತಿಶಯಮಿತಿಹಾಸೋಪಾಶ್ರಯಂ ಮೇಣ್ ಕಥಾವಿ।
ಶ್ರುತಚತುರವಿಕಾಶೋತ್ಪಾದಿತಾರ್ಥೋತ್ಕರಂ ಮೇ ॥
ಣತಿಕುಶಲಸುಲೀಲಾಚಾರಲೋಕೋಪಕಾರೋ ।
ದಿತಪರಮಗುಣೈಕೋದಾರಧೀರಾಧಿಕಾರಂ॥

ಅನ್ವಯ:ಅತಿಶಯಂ=ಅತಿಶಯವಾದುದು, ಇತಿಹಾಸ +ಉಪಾಶ್ರಯಂ= ಇತಿಹಾಸವನ್ನು ಆಶ್ರಯಿಸಿದ ಕಥಾವಸ್ತು ಇರುವಂಥದು. ಕಥಾವಿಶ್ರುತ ಚತುರ ವಿಕಾಸ ಉತ್ಪಾದಿತ= ವಿಶ್ರುತವೂ ಚತುರವೂ ಪ್ರಕಾಶಮಾನವೂ ಆಗಿ, ಅರ್ಥ+ಉತ್ಕರಮ್= ಅರ್ಥಗರ್ಭಿತವಾಗಿರುವುದು, ಅತಿಕುಶಲ= ಅತಿಕುಶಲವಾಗಿರುವುದು, ಸುಲೀಲಾ= ಲೀಲಾವಿನೋದವಾಗಿರುವುದು, ಆಚಾರಲೋಕೋಪಕಾರ+ಉದಿತ= ಆಚಾರಗಳನ್ನು ಲೋಕೋಪಕಾರಿಯಾಗಿ ಹೇಳುತ್ತಾ,
ಪರಮ ಗುಣ+ ಏಕ= ಶ್ರೇಷ್ಠಗುಣಗಳಿಂದ, ಉದಾರ ಧೀರ ಅಧಿಕಾರಮ್=ಉದಾರ ಮತ್ತು ಧೀರ ಅಧಿಕಾರಗಳಿಂದ ಕೂಡಿದ್ದು( ಮಹಾಕಾವ್ಯ)

ಭಾವಾರ್ಥ: ಅತಿಶಯವಾದುದು, ಇತಿಹಾಸವನ್ನು ಆಶ್ರಯಿಸಿದ ಕಥಾವಸ್ತು ಇರುವಂತಹುದು, ವಿಶ್ರುತವೂ ಚತುರವೂ ಪ್ರಕಾಶಮಾನವೂ ಆಗಿ, ಅರ್ಥಗರ್ಭಿತವಾಗಿರುವುದು, ಅತಿ ಕುಶಲವಾಗಿ, ಲೀಲಾವಿನೋದವಾಗಿ ಇರುವುದು ಆಚಾರಗಳನ್ನು ಲೋಕೋಪಕಾರಿಯಾಗಿ ಹೇಳುತ್ತಾ ಶ್ರೇಷ್ಠ ಗುಣಗಳಿಂದ, ಉನ್ನತವಾಗಿ ಮೂಡಿಬರುವುದು,ಅಧಿಕಾರ-
ಗಳಿಂದ ಕೂಡಿರುವುದು “ ಮಹಾಕಾವ್ಯ “

ವಿಚಾರ: ದಂಡಿ ಕಾವ್ಯಾದರ್ಶದ ಪ್ರಾರಂಭದಲ್ಲಿ ಹೇಳಿರುವ ಮಹಾಕಾವ್ಯ ಲಕ್ಷಣವನ್ನು ಶ್ರೀವಿಜಯನು ತನ್ನ ಕೃತಿಯ ಕೊನೆಯಲ್ಲಿ ಹೇಳಿರುವುದು ಗಮನಿಸತಕ್ಕ ವಿಷಯ. ಮಹಾಕಾವ್ಯ ಸರ್ಗಗಳಿಂದ ಕೂಡಿರುವುದೆಂದು, ಆಶೀರ್ನಮಸ್ಕ್ರಿಯಾ ವಸ್ತುನಿರ್ದೇಶನಗಳಿಂದ ಕೂಡಿರುತ್ತದೆಂದುದಂಡಿ ಹೇಳಿದ್ದಾನೆ.  ( ೧-೧೫ ) ಅಲ್ಲದೆ,

ಇತಿಹಾಸ ಕಥೋದ್ಭೂತಮಿತರದ್ವಾ ಸದಾಶ್ರಯಮ್।
ಚತುರ್ವರ್ಗಫಲಾಯತ್ತಂ ಚತುರೋದಾತ್ತನಾಯಕಮ್॥ ( ೧-೧೫)

( ಇತಿಹಾಸದ ಕಥೆಯಿಂದ ರೂಪುಗೊಂಡಿದ್ದು ಅಥವಾ ಇತರ ಸತ್ಕಥೆಗಳನ್ನು ಆಶ್ರಯಿಸಿದ್ದು, ನಾಲ್ಕು ಪುರುಷಾರ್ಥಗಳಿಗೆ ಸಂಬಂಧಿಸಿದ್ದು. ಉದಾತ್ತ ನಾಯಕ ಇರುವುದು) ಎಂದೂ ಹೇಳಿದ್ದಾನೆ.

ಮಾಲಿನೀ:

ಪರಮಸುಖಪದಶ್ರೀಧರ್ಮಕಾಮಾರ್ಥಮೋಕ್ಷ।
ಸ್ಥಿರವಿಷಯವಿಶೇಷಾಖ್ಯಾನವಿಖ್ಯಾತತತ್ವಂ॥
ಪುರಜನಪದಶೈಲಾದಿತ್ಯಚಂದ್ರೋದಯಾಸ್ತಾಂ।
ತರಸಮೃಗಗಣವ್ಯಾವರ್ಣನಾನಿರ್ಣಯಾರ್ಥಂ॥
ಅನ್ವಯ: ಪರಮ ಸುಖಪ್ರದ= ಪರಮ ಸುಖ ಸಂಪತ್ತನ್ನು ನೀಡುವ, ಶ್ರೀಧರ್ಮ ಕಾಮ ಅರ್ಥ ಮೋಕ್ಷ ಸ್ಥಿರವಿಷಯ=
ಧರೂಮ, ಅರ್ಥ, ಕಾಮ, ಮೋಕ್ಷ, ಎಂಬ ನಾಲ್ಕು ಪುರುಷಾರ್ಥಗಳ ವಿಷಯವನ್ನು,  ವಿಶೇಷ= ವೆಶೇಷವನ್ನು, ಆಖ್ಯಾನ ವಿಖ್ಯಾತ ತತ್ತ್ವಮ್= ಆಖ್ಯಾನಗಳನ್ನು ಒಳಗೊಂಡ ವಿಖ್ಯಾತ ತತ್ವವಾಗಿರಬೇಕು, ಪುರ ಜನಪದ ಶೈಲ= ಪುರ, ದೇಶ,

ಪರ್ವತ, ಆದಿತ್ಯ ಚಂದ್ರೋದಯ ಅಸ್ತಾಂತರ= ಸೂರ್ಯಚಂದ್ರರ ಉದಯಾಸ್ತಗಳು, ಸಮೃಗಗಣವ್ಯಾವರ್ಣನಾ ನಿರ್ಣಯಾರ್ಥಮ್= ಮೃಗಗಳ ವರ್ಣನೆಗಳು ನಿರೂಣಯಾತ್ಮಕವಾಗಿ ಬರಬೇಕು.  

ಭಾವಾರ್ಥ: ಪರಮ ಸುಖಸಂಪತ್ತನ್ನು ನೀಡುವ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ವಿಷಯವನ್ನು ವಿಶೇಷವಾಗಿ ತಿಳಿಸುವ ಆಖ್ಯಾನಗಳಿಂದ ಕೂಡಿರಬೇಕು, ಪುರ, ದೇಶ, ಪರ್ವತ, ಸೂರ್ಯಚಂದ್ರರ ಉದಯಾಸ್ತಗಳು, ಮೃಗಗಳ ವರ್ಣನೆಗಳು ನಿರೂಣಯಾತ್ಮಕವಾಗಿ ಬರಬೇಕು.  

ವಿಚಾರ: ಪ್ರಾಚೀನ ಅಲಂಕಾರಿಕರ ಲಕ್ಷಣಗಳನ್ನು ಪರಿಶೀಲಿಸಿ ಶ್ರೀವಿಜಯನು ತನ್ನದೇ ಆದ ರೀತಿಯಲ್ಲಿ ಮಹಾಕಾವ್ಯ ಲಕ್ಷಣವನ್ನು ಹೇಳಿದ್ದಾನೆ.  ಧರ್ಮಾರ್ಥಕಾಮಮೋಕ್ಷಗಳ ವಿಷಯವನ್ನು ಭಾಮಹ ಹೇಳಿದ್ದಾನೆ. ( ೧-೨)

ಧರ್ಮಾರ್ಥ ಕಾಮಮೋಕ್ಷೇಷು ವೈಚಕ್ಷಣ್ಯಂ ಕಲಾಸು ಚ ।
ಪ್ರೀತಿಂ ಕರೋತಿ ಕೀರ್ತಿಂಚ ಸಾಧುಕಾವ್ಯ ನಿಷೇವಣಮ್॥

( ಧರ್ಮಾರ್ಥಕಾಮಮೋಕ್ಷಗಳಲ್ಲಿ, ಕಲೆಗಳಲ್ಲಿ, ಚಾತುರ್ಯ ತೋರಿಸಿ, ಉತ್ತಮ ಕಾವ್ಯ ಪ್ರೀತಿಯನ್ನು ಕೀರ್ತಿಯನ್ನು ಗಳಿಸುತ್ತದೆ)

ಮಾಲಿನೀ:

ಸಮುದಿತ ಕುಸುಮಾಮೋದೋದಯೋದ್ಯಾನಲೀಲಾ ।
ಕ್ರಮವಿಹಿತಜಲಕ್ರೀಡಾವಿನೋದಾದಿನೀತಂ॥
ಪ್ರಮದಮದನಮಾದ್ಯದ್ಯೌವನೋದ್ಯಾನರಾಮಂ।
ರಮಣರಣಿತಗೋಷ್ಠೀಬಂಧಸಂಧಿಪ್ರಬಂಧಂ॥೩-೨೧೧॥

ಅನ್ವಯ: ಸಮುದಿತ ಕುಸುಮ ಆಮೋದ ಉದಯ= ವಿಕಸಿತ ಪುಷ್ಪಗಳ ಪರೆಮಳ ಹರಡಿದ, ಉದ್ಯಾನ= ಉದ್ಯಾನಗಳಲ್ಲಿ, ಲೀಲಾಕ್ರಮ ವಿಹಿತ= ಲೀಲೆಯಿಂದ ವಿಹಾರ, ಜಲಕ್ರೀಡಾವಿನೋದಾದಿನೀತಮ್= ಜಲಕ್ರೀಡಾ ವಿನೋದಗಳಿಂದ ಕೂಡಿದ್ದು, ಪ್ರಮದ ಮದನಮ್= ಸೊಕ್ಕಿದ ಯುವತಿಯರ, ಆದ್ಯದ್ ಯೌವನ ಉದ್ಯಾನ ರಾಮಮ್= ರಮಿಸುವ ರಮಣೀಯ ಉದ್ಯಾನ. ರಮಣರಣಿತ ಗೋಷ್ಠೀ ಬಂಧ= ಪ್ರೇಮಿಗಳ ಇಂಪಾದ ಧ್ವನಿಗಳಿಂದ ಕೂಡಿದ ಗೋಷ್ಠಿಗಳ, ಬಂಧ ಸಂಧಿ ಪ್ರಬಂಧಮ್=ಕಥಾಬಂಧದಲ್ಲಿ ಸೇರಿದ ಸಂಧಿಗಳಿಂದ ಕೂಡಿರಬೇಕು.

ಭಾವಾರ್ಥ: ಅರಳಿದ ಹೂಗಳ ಪರಿಮಳ ಹರಡಿರುವ ಉದ್ಯಾನಗಳಲ್ಲಿ ಲೀಲಾವಿಹಾರ, ಕ್ರಮವಿಹಿತವಾದ ಜಲಕ್ರೀಡಾವಿನೋದ, ಸೊಕ್ಕಿದ ಯುವತಿಯರ ಕಾಮಕ್ರೀಡಾವಿಲಾಸಗಳಿಂದ ರಮಣೀಯವಾಗಿರಬೇಕು. ಪ್ರೇಮಿಗಳ ಇಂಪಾದ ಧ್ವನಿಗಳಿಂದ ಕೂಡಿದ ಗೋಷ್ಠಿಗಳ ವರ್ಣನೆ ಇರಬೇಕು. ಕಥಾಬಂಧದಲ್ಲಿ ಸಂಧಿಗಳು ಸೇರಿರಬೇಕು.

ವಿಚಾರ: ದಂಡಿ ಸರ್ಗಬಂಧವನ್ನು ಕುರಿತು ಹೇಳಿರುವನಾದರೂ( ಸರ್ಗಬಂಧೋ ಮಹಾಕಾವ್ಯಮುಚ್ಯತೇ ತಸ್ಯ ಲಕ್ಷಣಮ್)
(೧-೧೪) ಸಂಧಿಗಳಿಂದ ಕೂಡಿದ ಮಹಾಕಾವ್ಯವನ್ನು” ಪ್ರಬಂಧ” ಎಂದು ಕರೆದಿರುವ ಕವಿರಾಜಮಾರ್ಗ ಅನಂತರ ಕಾಲದ ಮಹಾಕಾವ್ಯಗಳಿಗೆ ಮಹಾಪ್ರಬಂಧವೆಂಬ ಹೆಸರು ಬರಲು ಸ್ಫೂರ್ತಿಯನ್ನು ನೀಡಿರಬಹುದು.

ಮಾಲಿನೀ:

ವಿವಿಧವಿಭವಶೋಭಾರಂಭಲಂಭಪ್ರಲಂಭೋ ।
ದ್ಭವವಿಹಿತವಿವಾಹೋತ್ಸಾಹಸಾಕಲ್ಯಕಲ್ಪಂ ॥
ಪ್ರವರನೃಪಕುಮಾರಾತ್ತೋದಯಾದಿಪ್ರಮೋದಾ|
ಸವಸಮುದಿತಸೇವಾರಾತಿವೃತ್ತಾಂತವೃತ್ತಂ॥

ಅನ್ವಯ: ವಿವಿಧ ವಿಭವ ಶೋಭಾರಂಭ= ವಿವಿಧ ವಿಭವಾನ್ವಿತ ಶೋಭಾರಂಭಗಳು, ಲಂಭ= ಸಮಾಗಮ, ಪ್ರಲಂಭ ಉದ್ಭವ= ವಿರಹಗಳ ಮೂಲಕ, ವಿಹಿತ ವಿವಾಹ ಉತ್ಸಾಹ= ನಡೆಯುವ ವಿವಾಹೋತ್ಸವ ಮೊದಲಾದವನ್ನು, ಸಾಕಲ್ಯ ಕಲ್ಪಮ್= ಸಮಗ್ರವಾಗಿ ವರ್ಣಿಸಬೇಕು, ಪ್ರವರ ನೃಪ ಕುಮಾರಾತ್ತ= ಶ್ರೇಷ್ಠರಾದ ರಾಜಕುಮಾರನ, ಉದಯಾದಿ ಪ್ರಮೋದ = ಜನನಾದಿ ವೆನೋದಗಳನ್ನು, ಆಸವ= ಮಧುಪಾನ, ಸಮುದಿತ ಸೇವಾರಾತಿ= ಶತ್ರುಗಳ ಸೇವೆಗೆ ಸಂಬಂಧಿಸಿದ, ವೃತ್ತಾಂತ ವೃತ್ತಮ್=ವೃತ್ತಾಂತಗಳಿಂದ ಕೂಡಿರಬೇಕು,

ಭಾವಾರ್ಥ: ವಿವಿಧ ವಿಭವಾನ್ವಿತ ಶೋಭಾರಂಭಗಳು, ಸಮಾಗಮ, ವಿರಹಗಳ ಮೂಲಕ ಕೊನೆಗೆ ನಡೆಯುವ ವಿವಾಹೋತ್ಸವ ಮೊದಲಾದವನ್ನು ಸಮಗ್ರವಾಗಿ ವರ್ಣಿಸಬೇಕು. ಶ್ರೇಷ್ಠರಾದ ರಾಜಕುಮಾರನ ಜನನ ಹಾಗೂ ವಿನೋದಗಳನ್ನು, ಮಧುಪಾನ, ಶತ್ರುವೃತ್ತಾಂತ ಮೊದಲಾದ ಪ್ರಸಂಗಗಳಿಂದ ಕೂಡಿರಬೇಕು.

ಮಾಲಿನೀ:

ನಯವಿನಿಮಯ ನಾನಾ ಮಂತ್ರದೂತಪ್ರಯಾಣ ।
ಕ್ಷಯಸಮಯವಿಳಾಸೋಲ್ಲಾಸಿಸಂಗ್ರಾಮಿಕಾಂಗಂ॥
ಭಯವಿರಹಿತವೀರ್ಯೌದಾರ್ಯಗಂಭೀರಕಾರ್ಯಾ ।
ಶ್ರಯವಿಶದಗುಣಶ್ರೀ ನಾಯಕೋತ್ಕರೂಷವೇದ್ಯಂ॥೩-೨೧೩॥

ಅನ್ವಯ: ನಯವಿನಿಮಯ = ರಾಜನೀತಿಯ ವಿಚಾರಗಳ ವಿನಿಮಯದಿಂದ ಕೂಡಿದ, ಮಂತ್ರ= ಮಂತ್ರಾಲೋಚನೆ, ದೂತ=ದೂತವೃತ್ತಾಂತ, ಪ್ರಯಾಣ ಕ್ಷಯ ಸಮಯ ವಿಳಾಸ= ಪ್ರಯಾಣ, ಕ್ಷಯ ಸಮಯದಲ್ಲಿ, ಉಲ್ಲಾಸಿ ಸಂಗ್ರಾಮಿಕ ಅಂಗಮ್= ಉಲ್ಲಾಸ ನೀಡುವ ಯುದ್ಧದ ಅಂಗಗಳು, ಭಯವಿರಹಿತ= ಭಯವಿಲ್ಲದ, ವೀರ್ಯ, ಔದಾರ್ಯ, ಗಂಭೀರ ಕಾರ್ಯ ಆಶ್ರಯ= ವೀರ್ಯ, ಔದಾರ್ಯ ಗಂಭೀರ ಕಾರ್ಯಗಳಿಗೆ ಮೂಲವಾದವನು. ವಿಶದ ಗುಣಶ್ರೀ ನಾಯಕ ಉತ್ಕರ್ಷ ವೇದ್ಯಮ್= ವಿಶದ ಗುಣಸಂಪದ್ಭರಿತನು ಆದ ನಾಯಕನ ಉತ್ಕರ್ಷವನ್ನು ತಿಳಿಸುವಂತಿರಬೇಕು.

ಭಾವಾರ್ಥ: ರಾಜನೀತಿಯ ವಿಚಾರಗಳ ವಿನಿಮಯದಿಂದ ಕೂಡಿದ ಮಂತ್ರಾಲೋಚನೆಗಳು, ದೂತ ವೃತ್ತಾಂತ, ( ಸೈನ್ಯದ)
ಪ್ರಯಾಣ, ಕ್ಷಯಸಮಯದಲ್ಲಿ ಉಲ್ಲಾಸ ನೀಡುವ ಯುದ್ಧರಂಗ ಕಥಾಂಗಗಳಾಗಿರಬೇಕು. ಭಯವಿರಹಿತನು, ವೀರ್ಯ, ಔದಾರ್ಯ, ಗಂಭೀರಕಾರ್ಯಗಳಿಗೆ ಮೂಲವಾದವನು, ವಿಶದಗುಣ ಸಂಪದೂಭರಿತನು ಆದ ನಾಯಕನ ಉತ್ಕರ್ಷವನ್ನು ತಿಳಿಸುವಂತಿರಬೇಕು.  

ಮಾಲಿನೀ:

ವಿಳಸಿತಸದಳಂಕಾರಾದಿಸಂಸಾಧಿತಾರ್ಥಂ ।
ಕುಳವಿದಿತಪದೋದ್ಯತ್ಕೋಮಳಾಳಾಪಶೀಲಂ॥
ಸುಳಲಿತಗುಣನಾನಾವೃತ್ತಜಾತಿಪ್ರವೃತ್ತಾ।
ಸ್ಖಳಿತರಸವೆಶೇಷೋಪಾಶ್ರಯಂ ಶ್ರೀನಿವೇಶಂ॥೩-೨೧೪॥

ಅನ್ವಯ: ವಿಳಸಿತ ಸದಳಂಕಾರಾದಿ= ಚೆಲುವೆನ ಅಲಂಕಾರಗಳಿಂದ, ಸಂಸಾಧಿತ= ಸಾಧಿತವಾದ, ಅರ್ಥಮ್= ಅರ್ಥ, ಕುಳ ವಿದಿತ ಪದ ಉದ್ಯತ್ ಕೋಮಳ ಆಳಾಪ= ಶುದ್ಧವಾದ ಪದಬಂಧಗಳಿಂದ ಸುಕುಮಾರವಾಗಿರಬೇಕು, ಸುಳಲಿತ ಗುಣ= ಸುಲಲಿತವಾದ ಗುಣಗಳಿಗೂ, ನಾನಾ ವೃತ್ತ ಜಾತಿ ಪ್ರವೃತ್ತ= ವೃತ್ತ ಜಾತಿ ಪದ್ಯಗಳಿಗೂ, ಅಸ್ಖಳಿತ ರಸ ವಿಶೇಷ ಉಪಾಶ್ರಯಮ್= ದೃಢವಾದ ರಸಾಭಿವ್ಯಕ್ತಿಗೆ ಆಶ್ರಯವಾಗಿರುವ ರಚನೆ.

ಭಾವಾರ್ಥ: ಚೆಲುವಿನ ಅಲಂಕಾರಗಳಿಂದ ಸಾಧಿತವಾದ ಅರ್ಥ, ಶುದ್ಧವಾದ ಪದಬಂಧಗಳಿಂದ ಸುಕುಮಾರವಾಗಿರಬೇಕು.  ಸುಲಲಿತವಾದ ಗುಣಗಳಿಗೂ, ನಾನಾ ವೃತ್ತ ಜಾತಿ ಪದ್ಯಗಳಿಗೂ ನಿರಂತರ ರಸಾಭಿವ್ಯಕ್ತಿಗೂ ಆಶ್ರಯವಾಗಿರುವ ರಚನೆ ( ಮಹಾಕಾವ್ಯ)

ಮಾಲಿನೀ :

ನಯವಿದುದಿತಯುಕ್ತಿವ್ಯಕ್ತಿಲೋಕಪ್ರತೀತ್ಯಾ।
ಶ್ರಯಸಕಳಕಳಾಲೀಲಾಕರಾಲ್ಪೋಪಜಲ್ಪಂ ॥
ನಿಯತಸಮಯಸಾರಾಸಾಧನೀಯಾಧಿಕಾರಾ ।
ನ್ವಯಪರಮತಪೋನುಷ್ಠಾನನಿಷ್ಠಾರ್ಥಸಿದ್ದಂ॥೩-೨೧೫॥

ಅನ್ವಯ: ನಯವಿದ್+ ಉದಿತ= ರಾಜನೀತಿವಿದರಿಂದ ಆದ, ಯುಕ್ತಿ ವ್ಯಕ್ತಿಲೋಕ ಪ್ರತೀತಿ+ಆಶ್ರಯ= ಯುಕ್ತಿಗಳನ್ನು, ಲೋಕ ಪ್ರತೀತಿಯನ್ನು ಆಶ್ರಯಿಸಿದ, ಸಕಳ ಕಳಾಲೀಲಾ ಆಕರ=ಸಕಲ ಕಲಾಲೀಲೆಗಳಿಗೆ ಆಕರವಾದ, ಅಲ್ಪ ಉಪಜಲ್ಪಮ್= ಮಿತಶಬ್ಧಗಳಿಂದ ಕೂಡಿರಬೇಕು, ನಿಯತ ಸಮಯ ಸಾರಾಸಾಧನೀಯ= ನಿಯತವಾದ ಧರ್ಮಶಾಸ್ತ್ರಗಳ
ತತ್ವಸಾರಕ್ಕೆ ಅನುಗುಣವಾಗಿ,  ಅಧಿಕಾರ ಅನ್ವಯ= ಅಧಿಕಾರಾರ್ಹರಿಗೆ ಸಾಧನೀಯವಾದ, ಪರಮ ತಪೋನುಷ್ಠಾನಮ್= ಪರಮತಪೋನಿಷ್ಠಾನುಗುಣವಾದ, ಇಷ್ಟಾರ್ಥಸಿದ್ಧಿಇರಬೇಕು.

ಭಾವಾರ್ಥ : ರಾಜನೀತಿವಿದರಾದವರ ಯುಕ್ತಿಗಳನ್ನು ಲೋಕಪ್ರತೀತಿಯನ್ನು ಆಶ್ರಯಿಸಿದ ಸಕಲ ಕಲಾಕಲಾಪಗಳ ಪರಿಯನ್ನೊಳಗೊಂಡ ಮಿತಶಬ್ಧಗಳಿಂದ ಕೂಡಿರಬೇಕು. ನಿಯತವಾದ ಧರ್ಮಶಾಸ್ತ್ರಗಳ ತತ್ತ್ವಸಾರಕ್ಕೆ ಅನುಗುಣವಾಗಿ ಅಧಿಕಾರಾರ್ಹರಿಗೆ ಸಾಧನೀಯವಾದ, ಪರಮ ತಪೋನಿಷ್ಠಾನುಗುಣವಾದ ಇಷ್ಟಾರ್ಥಸಿದ್ಧಿ ಇರಬೇಕು.

ಮಾಲಿನೀ:

ವಿಗತಮಳಮುಪಾತ್ತಾರಾತಿಸಾರ್ಥಾರ್ಥವೀರಂ
ಸ್ಥಗಿತಮಮಿತನಾನಾಶಬ್ಧವೀಚೀಪ್ರಪಂಚಮ್
ನಿಗದಿತಗುಣರತ್ನೈಕಾಕರಂ ಸಾಗರಂಬೋಲ್
ಸೊಗಯಿಸಿ ಧರಣೀಚಕ್ರಾಂಬರಾಕ್ರಾಂತಮಕ್ಕುಂ॥೩-೨೧೬॥

ಅನ್ವಯ: ವಿಗತ ಮಳಮ್= ನಿರ್ಮಲವಾದ, ಉಪಾತ್ತಾರಾತಿ ಸಾರ್ಥ ಅರ್ಥವೀರಮ್ ಸ್ಥಗಿತಮ್= ಶತ್ರುಗಳಿಂದ ಸೆಳೆದುಕೊಂಡ ಐಶ್ವರ್ಯದಿಂದ ಕೂಡಿದ್ದು, ಅಮಿತ ನಾನಾ ಶಬ್ಧ ವೀಚೀ ಪ್ರಪಂಚಮ್= ಅಪರಿಮಿತವಾದ ವಿಧವಿಧವಾದ ಶಬ್ಧಗಳೆಂಬ ಅಲೆಗಳಿಂದ ಕೂಡಿದ್ದು, ನಿಗದಿತ ಗುಣರತ್ನ ಏಕಾಕರಮ್= ನಿಗದಿತ ಗುಣಗಳೆಂಬ ರತ್ನಗಳಿಗೆ ಆಕರ, ಸಾಗರಂಬೋಲ್=ಸಾಗರದಂತೌ, ಸೊಗಯಿಸಿ=ಸೊಗಯಿಸಿ, ಧರಣೀ ಚಕ್ರ ಅಂಬರ ಆಕ್ರಾಂತ ಅಕ್ಕುಮ್= ಭೂಮ್ಯಾಕಾಶಗಳನ್ನು ಆಕ್ರಮಿಸಿಕೊಂಡಿರುತ್ತದೆ.

: ನಿರೂಮಲವಾದುದು, ಶತ್ರುಗಳಿಂದ ಸೆಳೆದುಕೊಂಡ ಐಶ್ವರ್ಯದಿಂದ ಸಾರ್ಥಕವಾದ ವೀರರಿಂದ ಕೂಡಿದ್ದು. ಅಪರಿಮಿತವಾದ ವಿಧವಿಧವಾದ ಶಬೂಧಗಳೆಂಬ ಅಲೆಗಳಿಂದ ಕೂಡಿದ್ದೈ. ನಿಗದಿತ ಗುಣಗಳೆಂಬ ರತ್ನಗಳಿಗೆ ಸಾಗರದಂತೆ
ಆಕರವಾದುದು. ಭೂಮ್ಯಾಕಾಶಗಳನ್ನು ಆಕ್ರಮಿಸಿಕೊಂಡಿರುವುದು ( ಈ ಮಹಾಕಾವ್ಯ)

ಗೀತಿಕೆ:

ಇಂತು ಮಿಕ್ಕ ವರ್ಣನೆಗಳ್ ।
ಸಂತತಮೊಂದಾಗಿ ಪೇಳ್ದ ಕಾವ್ಯಂ ಧರೆಯೊಳ್॥
ಸಂತತಿ ಕೆಡದೆ ನಿಲೂಕುಮಾಕ।
ಲ್ಪಾಂತಂಬರಮಮೋಘವರೂಷಯಶಂಬೋಲ್ ॥೩-೨೧೭॥

ಅನ್ವಯ: ಇಂತು ಮಿಕ್ಕ ವರ್ಣನೆಗಳ್ ಇಂತು ಉಳಿದ ವರ್ಣನೆಗಳನ್ನು, ಸಂತತಮ್ ಒಂದಾಗಿ ಪೇೞ್ದ= ಒಂದುಗೂಡುವಂತೆ ಹೇಳಿದ, ಕಾವ್ಯಮ್=ಕಾವ್ಯವೈ, ಧರೆಯೊಳ್= ಭೂಮಿಯಲ್ಲಿ, ಸಂತತಿ ಕೆಡದೆ= ವಂಶ ಕೆಡದಂತೆ. ಅಮೋಘವರ್ಷ ಯಶಂಬೋಲ್= ನೃಪತುಂಗನ ಯಶಸ್ಸಿನಂತೆ, ಆಕಲ್ಪಾಂತಂಬರಮ್= ಕಲ್ಪಾಂತರದವರೆಗೂ, ನಿಲ್ಕುಮ್= ನಿಲ್ಲುತ್ತದೆ.

ಭಾವಾರ್ಥ: ಹೀಗೆ ವಿವಿಧ ವರ್ಣನೆಗಳನ್ನುಒಂದುಗೂಡುವಂತೆ ಹೇಳಿದ ಕಾವ್ಯವು ಅಮೋಘವರ್ಷ ನೃಪತುಂಗನ ಯಶಸ್ಸೆನಂತೆ ಕಲ್ಪಾಂತದವರೆಗೂ ನಿರಂತರವಾಗಿ ಚಿರಸ್ಥಾಯಿಯಾಗಿ ನಿಲೂಲುವುದು,

ಮತ್ತೇಭವಿಕ್ರೀಡಿತ:

ನಿರವದ್ಯಾನ್ವಯಮುದ್ಘಮುನ್ನತಮಹಾಕ್ಷೀರಾಬ್ಧಿಡಿಂಡೀರಪಾಂ ।
ಡುರಮಾಕ್ರಾಂತಸುಶೈಲಸಾಗರಧರಾಶಾಚಕ್ರವಾಳಾಂಬರಂ॥
ಪರಮ ಶ್ರೀವಿಜಯಪ್ರಭೂತಿಜಯಶಂಸ್ತ್ರೀಬಾಲವೃದ್ಧಾಹಿತಂ।
ಪರಮಾನಂದಿತಲೋಕಮೊಪ್ಪೆ ನೆಲೆಗೊಳ್ಗಾಚಂದ್ರತಾರಾಂಬರಂ॥೩-೨೩೧॥

ಅನ್ವಯ: ನಿರವದ್ಯ ಅನ್ವಯಂ=ನಿಷ್ಕಲಂಕ ಸ್ವರೂಪವಿರುವ, ಉದ್ಘಮ್= ಶ್ರೇಷ್ಠವಾದ,ಉದ್ಧತ ಮಹಾಕ್ಷೀರಾಬ್ಧಿ= ವಿಸ್ತಾರವಾದ ಮಹಾಕ್ಷೀರಸಾಗರದ, ಡಿಂಡೀರಪಾಂಡುರಮ್= ನೊರೆಯಂತೆ ಬೆಳ್ಳಗಿರುವ, ಆಕ್ರಾಂತ=ವಶವಾದ, ಸುಶೈಲ=ಪರ್ವತ, ಸಾಗರ=ಸಮುದ್ರ, ಧರಾಶಾ= ಭೂಮಿ, ದಿಗಂತ, ಚಕ್ರವಾಳ ಅಂಬರಮ್= ಅಂತರಿಕ್ಷಗಳಲ್ಲಿ ವ್ಯಾಪಿಸಿರುವ, ಪರಮ ಶ್ರೀವಿಜಯ ಪ್ರಭೂತಿಜ= ಶ್ರೇಷ್ಠ ಶ್ರೀವಿಜಯ ಪ್ರಭೂತವಾದ, ಯಶಮ್= (ಈ ಕೃತಿಯ)ಯಶಸ್ಸು,
ಸ್ತ್ಸೀ ಬಾಲ ವೃದ್ಧಾ ಹಿತಮ್= ಸ್ತ್ರೀಬಾಲವೃದ್ಧರಿಗೆ ನಿಜವಾದದ್ದು,  ಪರಮ ಆನಂದಿತ ಲೋಕಮ್ ಒಪ್ಪೆ= ಪರಮಾನಂದಿತವಾದಲೋಕವು ಒಪ್ಪುವಂತೆ, ಆಚಂದ್ರತಾರಂಬರಮ್= ಚಂದ್ರನೂ ತಾರೆಗಳೂ ಇರುವವರೆಗೆ, ನೆಲೆಗೊಳ್ಗೆ= ನೆಲೆಗೊಳ್ಳಲಿ.  

ಭಾವಾರ್ಥ: ನಿಷ್ಕಲಂಕಸ್ವರೂಪವಿರುವ,ಶ್ರೇಷ್ಠವಾದ,  ವಿಸ್ತಾರವಾದ ಮಹಾಕ್ಷೀರಸಾಗರದ ನೊರೆಯಂತೆಬೆಳ್ಳಗಿರುವ, ವಶವಾದ ಪರ್ವತ, ಸಾಗರ, ಭೂಮಿ, ದಿಗಂತ, ಅಂತರಿಕ್ಷಗಳಲ್ಲಿ ವ್ಯಾಪಿಸಿರುವ ಪರಮ ಶ್ರೀವಿಜಯಪ್ರಭೂತವಾದ(ಈ ಕೃತಿಯ) ಯಶಸ್ಸು ಸ್ತ್ರೀಬಾಲವೃದ್ಧರಿಗೆ ಹಿತವಾಗಿದ್ದು,ಪರಮಾನಂದಿತವಾದ ಲೋಕವು ಒಪ್ಪುವಂತೆ ಚಂದ್ರನೂ ನಕ್ಷತ್ರಗಳೂ ಇರುವವರೆಗೆ ಶಾಶ್ವತವಾಗಿ ನೆಲೆಗೊಳ್ಳಲಿ,

ಇದು ಪರಮಸರಸ್ವತೀತೀರ್ಥಾವತಾರ ನೃಪತುಂಗದೇವಾನುಮತಮಪ್ಪ
ಕವಿರಾಜಮಾರ್ಗದೊಳ್ ಅರ್ಥಾಲಂಕಾರ ಪ್ರಕರಣಂ ತೃತೀಯ ಪರಿಚ್ಛೇದಂ
ಕವಿರಾಜಮಾರ್ಗಾಲಂಕಾರಂ ಸಮಾಪ್ತಂ.

ಕೃತಜ್ಞತೆಗಳು;

ಡಾ . ಆರ್ವಿಯಸ್ ಸುಂದರಂ.
ಪ್ರಕಾಶಕರು:
ಕನ್ನಡ ಪುಸ್ತಕ ಪ್ರಾಧಿಕಾರ;
ಕನ್ನಡ ಭವನ, ಜೆ. ಸಿ. ರಸ್ತೆ,
ಬೆಂಗಳೂರು-೫೬೦೦೨


5 ಕಾಮೆಂಟ್‌ಗಳು:

  1. ನೆನೆ ನೆನೆದು, ಅರಸಿ ಕೈಚೆಲ್ಲಿ ಕುಳಿತು.... ಹುಡುಕಲುದ್ಯೋಗಿಸಿದಾಗ ಅಮೃತದಂತೆ ಸಿಕ್ಕಿತೀ ಮೂಲಕಾವ್ಯ. ಸುಲಿದ ಬಾಳೆಯ ಹಣ್ಣಿನಂತೆಯೇ.... ತಮ್ಮ ಕಾರ್ಯ ಸ್ಮರಣೀಯ, ಅಭಿನಂದನೀಯ. ತಮಗೂ ತಮ್ಮ ಸಹ ಸಾಹಿತ್ಯ ಸಹೃದಯ ವರ್ಗಕ್ಕೂ ಹಾರ್ದಿಕ ವಂದನೆಗಳು.

    ಪ್ರತ್ಯುತ್ತರಅಳಿಸಿ
  2. ತುಂಬಾ ಚನ್ನಾಗಿ ಕವಿರಾಜ ಮಾರ್ಗ ಕೃತಿಯ ಸರಳಾನುವಾದ ಮಾಡಿದ್ದೀರಿ ಸರ್‌ ,ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಸಾಯುತಿದೆ ನಿಮ್ಮ ನುಡಿ. ಓ. ಕನ್ನಡದ ಕಂದರಿರ್ ಬರ್ವಾರ್ಥ. ಬಿಡಿ ಸರ್

    ಪ್ರತ್ಯುತ್ತರಅಳಿಸಿ