ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಫೆಬ್ರವರಿ 14, 2026

ಜೈಮಿನಿ ಭಾರತ 32 - ದೊಡ್ಡಬೆಲೆ ನಾರಾಯಣಶಾಸ್ತ್ರೀ

 ಜೈಮಿನಿ ಭಾರತ 32 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ವರ ಚಂದ್ರಹಾಸನಂ ಪ್ರೀತಿಯಿಂದೊಡಗೊಂಡು। 

ಶರಧಿಯ ಮಧ್ಯದೊಳ್ ಬಕದಾಲ್ಭ್ಯನಂ ಕಂಡು।

ಮರಳಿ ಕೃಷ್ಣಾರ್ಜುನರ್ ಸಿಂಧುದೇಶದಮೇಲೆ ಗಜನಗರಿಗೈತಂದರು॥


ಪ್ರತಿಪದಾರ್ಥ :- ಕೃಷ್ಣಾರ್ಜುನರು = ನರನಾರಾಯಣರು,ಪ್ರೀತಿಯಿಂದ = ಪ್ರೇಮದಿಂದ, ವರ= ಉತ್ತಮವಾದ, ಚಂದ್ರಹಾಸನಂ= ಚಂದ್ರಹಾಸನನ್ನು,  ಒಡಗೊಂಡು= ಜೊತೆಮಾಡಿಕೊಂಡು, ಬಕದಾಲ್ಭ್ಯನಂ= ಬಕದಾಲ್ಭ್ಯನೆಂಬ ಋಷಿಯನ್ನು, ಶರನಿಧಿಯ= ಸಾಗರದ ಮಧ್ಯದೊಳ್= ಮಧ್ಯದಲ್ಲಿ, ಕಂಡು=ಈಕ್ಷಿಸಿ, ಸಿಂಧುದೇಶದ ಮೇಲೆ= ಸಿಂಧು ರಾಜ್ಯದಮೇಲೆ, ಗಜನಗರಿಗೆ= ಹಸ್ತಿನಾಪುರಕ್ಕೆ, ಮರಳಿ= ತಿರುಗಿ, ಐತಂದರು= ಬಂದರು. 


ತಾತ್ಪರ್ಯ:-ಚಂದ್ರಹಾಸನನ್ನು ಪ್ರೀತಿಯಿಂದ ಜೊತೆಗೆ ಕರೆದುಕೊಂಡು ಸಮುದ್ರಮಧ್ಯದಲ್ಲಿ ಬಕದಾಲ್ಭ್ಯನನ್ನು ನೋಡಿ ಕೃಷ್ಣಾರ್ಜುನರಿಬ್ಬರೂ ಸಿಂಧ ದೇಶದ ಮೂಲಕ ಹಸ್ತಿನಾಪರಿಗೆ ಬಂದರು. 


ಕೇಳ್ದೆಲಾ ನರನಾಥ ಪಾರ್ಥಂಗೆ ನಾರದಂ। 

ಪೇಳ್ದ ವೃತ್ತಾಂತಮಂ ಬಳಿಕ ಸಂತೋಷಮಂ। 

ತಾಳ್ದು ಕುಂತೀಸುತಂ ಚಂದ್ರಹಾಸ ಪುರಾಭಿಮುಖಮಾಗಿನಡೆಯುತಿರಲು॥ 

ಆಳ್ದೋರಿ ತಮತಮಗೆ ಭೂಪಾಲರೈದೆ ಕೆಂ। 

ದೂಳ್ದೇವಲೋಕಮಂ ಕಿತ್ತೆತ್ತಿಕೊಂಡೊಯ್ದು। 

ದಾಳ್ದುದಿನ್ನೇನಂಬುಧಿಯೊಳವನಿತಳಮೆಂಬ ತೆರನಾಗಿ ಪದಹತಿಯೊಳು॥೧॥


ಪ್ರತಿಪದಾರ್ಥ :- ಎಲೈ ನರನಾಥ= ಅಯ್ಯಾ ಜನಮೇಜಯನೆ, ಪಾರ್ಥಂಗೆ= ಫಲುಗುಣನೊಂದಿಗೆ, ನಾರದಂ= ನಾರದನು, ಪೇಳ್ದು=ತಿಳಿಸಿದ, ವೃತ್ತಾಂತಮಂ = ವಾರ್ತೆಯನ್ನು, ಕೇಳ್ದೆ= ಕೇಳ್ದೆಯಷ್ಟೆ, ಬಳಿಕ = ತರುವಾಯ, ಕುಂತೀಸುತಂ= ಫಲುಗು- 

ಣನು, ಸಂತೋಷಮಂತಾಳ್ದು= ಆನಂದಗೊಂಡು, ಚಂದ್ರಹಾಸನ ಪುರಕೆ= ಚಂದ್ರಹಾಸನ ಕುಂತಳ ರಾಜ್ಯದ ಕಡೆಗೆ, ಮುಖಮಾಗಿ= ಎದುರಾಗಿ, ನಡೆವುತಿರಲು= ನಡೆಯುತ್ತಿರಲಾಗಿ, ಭೂಪಾಲರು= ಅರಸುಗಳು, ತಮತಮಗೆ= ತಮ್ಮ ತಮ್ಮಷ್ಟಕ್ಕೆ,ಆಳ್ದೋರಿ= ಅವರವರ ಸಾಹಸವನ್ನು ತೋರ್ಪಡಿಸಿ, ಐದೆ= ಹೊರಡಲಾಗಿ, ದೇವಲೋಕಮಂ= ಅಮರಾವ- 

ತಿಯನ್ನು, ಕೆಂಧೂಳ್= ಕೆಂಪುಧೂಳು, ಕಿತ್ತು= ಕಿತ್ತುಕೊಂಡು,ಅವನಿತಳಂ= ಭೂಪ್ರದೇಶವು, ಪದಹತಿಯೊಳು= ಕಾಲ್ತುಳಿ- 

ತದಿಂದ, ಅಂಬುಧಿಯೊಳು= ಸಾಗರದಲ್ಲಿ, ಆಳ್ದುದು= ಮುಳುಗಿಕೊಂಡಿತು, ಇನ್ನೇನು= ಇನ್ನೇನಾದೀತು, ಎಂಬ= ಎನ್ನತಕ್ಕ,  ತೆರನು= ರೀತಿಯು, ಆಗೆ= ಆಗಲಾಗಿ, ಒಯ್ದುದು= ಧೂಳನ್ನೆತ್ತಿಕೊಂಡು ಹೊರಟಿತು. 


ತಾತ್ಪರ್ಯ:- ಕೇಳೈ ಜನಮೇಜಯ ಭೂಪಾಲನೆ, ಸುರಮುನಿಯಾದ ನಾರದನು ಫಲುಗುಣನಿಗೆ ಪೇಳಿದ ಇಂದುಹಾಸನಕಥೆಯನ್ನು ಇನ್ನೂ ವಿವರಿಸಿ ಹೇಳುವೆನು. ದೇವಮುನಿಯಿಂದ ಚಂದ್ರಹಾಸನ ಕಥೆಯನ್ನು ಸವಿಸ್ತಾರವಾಗಿ ಕೇಳಿಸಂತುಷ್ಟನಾದ ಧನಂಜಯನು ಸೇನಾಸಮೇತನಾಗಿ ಕುಂತಳರಾಜ್ಯದ ಕಡೆಗೆ ಹೊರಡುತ್ತಿರುವಾಗ ಸೈನ್ಯದ ಪಾದತುಳಿ- ತದಿಂದ ಎದ್ದ ಧೂಳು ಭೂಮ್ಯಾಕಾಶಗಳಿಗೆ ಏಕಾಕಾರವಾಗಿ ಕಾಣಿಸಿತು. 


ಬರುತಿರ್ದುದರ್ಜುನನ ಸೈನಿಕಂ ಕುಂತಳ ನ। 

ಗರಿಗಾಗಿ ಜನಮೇಜಯ ಕ್ಷಿತಿಪ ಕೇಳಿತ್ತ। 

ನರನ ವಾಜಿಗಳೂರ ಪೊರವಳಯಮುಪವನದ ನಡುವೆ ತಮ್ಮಿಚ್ಛೆಯಿಂದೆ॥

ತಿರುಗುತಿರೆ ಕಂಡವರ್ ಕೌತುಕಮಿದೆಂದು ಬಂ। 

ದೊರೆಯೆ ಪದ್ಮಾಕ್ಷಮಕರಧ್ವಜರ್ ಪಿಡಿದವರ। 

ಶಿರದ ಪಟ್ಟದ ಲಿಪಿಯನೋದಿ ವಿಸ್ಮಿತರಾಗಿ ತಂದೆಗೊಪ್ಪಿಸಿ ನುಡಿದರು॥೨॥ 


ಪ್ರತಿಪದಾರ್ಥ :- ಜನಮೇಜಯ ಕ್ಷಿತಿಪ = ಜನಮೇಜಯ ಭೂಕಾಂತನೆ, ಕೇಳು= ಆಲಿಸು,  ಕುಂತಳನಗರಿಗಾಗಿ= ಕುಂತಳ ನಗರದವಕಡೆಗೆ, ಅರ್ಜುನನ = ಫಲುಗುಣನ, ಸೈನಿಕಂ= ದಳವು, ಬರುತಿರ್ದುದು= ಬರುತ್ತಲಿತ್ತು, ನರನ= ಪಾರ್ಥನ,  ವಾಜಿಗಳು= ಯಜ್ಞಾಶ್ವಗಳು,  ಇತ್ತ= ಈ ಭಾಗದಲ್ಲಿ,  ಊರ= ಪಟ್ಟಣದ, ಪೊರವಳಯದ= ಹೊರಗಡೆಯಲ್ಲಿರತಕ್ಕ, ಉಪವನದ= ಉದ್ಯಾನದ, ನಡುವೆ= ಮಧ್ಯಭಾಗದೊಳಗೆ, ತಮ್ಮಿಚ್ಛೆಯಿಂದ= ಸ್ವೇಚ್ಛೆಯಾಗಿ, ತಿರುಗುತಿರೆ= ತಿರುಗುತ್ತಿರ- 

ಲಾಗಿ, ಇದು= ಈ ರೀತಿ ನಡೆಯತಕ್ಕದ್ದು,ಕೌತುಕಂ= ಅಚ್ಚರಿಯು, ಎಂದು=ಎಂಬುದಾಗಿ,  ಕಂಡವರು= ನೋಡಿದ ಸೇವಕರು, ಬಂದು= ಬಂದವರಾಗಿ, ಒರೆಯೆ= ಹೇಳಲಾಗಿ, ಪದ್ಮಾಕ್ಷ ಮಕರಧ್ವಜರು= ಇಂದುಹಾಸನ ಕುವರರಾದ ಪದ್ಮಾಕ್ಷ ಮಕರಧ್ವಜರು, ಪಿಡಿದು= ಹಿಡಿದುಕೊಂಡು,  ಅದರ= ಆ ತುರಗದ, ಶಿರದ= ಹಣೆಯಲ್ಲಿದ್ದ, ಪಟ್ಟದ= ಚಿನ್ನದ ತಗಡಿನ- 

ಮೇಲೆ  ಬರೆದಿರತಕ್ಕ, ಲಿಪಿಯ= ಬರವಣಿಗೆಯ, ನೋಡಿ= ನೋಡಿದವರಾಗಿ, ವಿಸ್ಮಿತರಾಗಿ=ಅಚ್ಚರಿಗೊಂಡು, ತಂದೆಗೆ= ತಮ್ಮ ಜನಕ ಇಂದುಹಾಸನಿಗೆ, ಒಪ್ಪಿಸಿ = ಕೊಟ್ಟು,  ನುಡಿದರು= ಮುಂದೆ ಹೇಳುವಂತೆ ಹೇಳುತ್ತಾರೆ.  


ತಾತ್ಪರ್ಯ:- ಅತ್ತ ಯಜ್ಞಾಶ್ವಗಳು ಕುಂತಳ ರಾಜ್ಯದ ಊರಹೊರಗಿನ ಉದ್ಯಾನದಲ್ಲಿ ತಿರುಗಾಡುತ್ತಿರುವ ಆಶ್ಚರ್ಯವನ್ನು ಅಲ್ಲಿಯ ಕಾವಲ್ಗಾರರು ನೋಡಿ ತಡಮಾಡದೆ ಬಂದು ಚಂದ್ರಹಾಸನ ಕುವರರಾದ ಪದ್ಮಾಕ್ಷ ಮಕರಧ್ವಜರಿಗೆ ತಿಳಿಸಲು ಅವರೀರ್ವರೂ ಜಾಗ್ರತೆಯಾಗಿ ಹೋಗಿ ಯಜ್ಞಾಶ್ವಗಳನ್ನು ನೋಡಿ ಊದರ ಹಣೆಯಲ್ಲಿರುವ ಬಿರುದಾವಳಿಯನ್ನೆಲ್ಲಾ ಓದಿಕೊಂಡು ಕುದುರೆಗಳು ಸಹಿತ ತಂದೆ ಚಂದ್ರಹಾಸನ ಬಳಿಗೆ ಬಂದು ನುಡಿದರು. 


ಜೀಯ ಬಿನ್ನಪವನವಧರಿಸಿಳೆಯಮೇಲೆ ಕೌಂ। 

ತೇಯನ ಮಹಾಧ್ವರದ ವಾಜಿಗಳ್ ತಿರುಗಿ ತರು। 

ವಾಯೊಳಿಲ್ಲಿಗೆ ಬಂದೊಡಾವು ಕಟ್ಟಿದೆವಿನ್ನು ಬಿಡಿಸಿಕೊಂಬತಿಬಲರನು॥ 

ಸಾಯಕದ ಮೊನೆಯೊಳೈಸಲೆ ಕಾಣಬೇಕೆನಲ್-। 

ಪ್ರೀಯದಿಂ ತನಯರಂ ತೆಗೆದಪ್ಪಿ ತಾನಭಿ। 

ಪ್ರಾಯಮಂ ತಿಳಿದು ಹರ್ಷಿತನಾಗಿ ಚಂದ್ರಹಾಸಂ ನಯದೊಳಿಂತೆಂದನು॥೩॥ 


ಪ್ರತಿಪದಾರ್ಥ :- ಜೀಯ= ಎಲೈ ತಂದೆಯೇ, ಬಿನ್ನಪವನು= ನಮ್ಮ ಮಾತುಗಳನ್ನು,  ಅವಧರಿಸು= ಲಾಲಿಸು,  ಕೌಂತೇಯನ= ಕುಂತೀ ಸುತನಾದ ಯುಧಿಷ್ಠಿರನ,  ಮಹಾ= ದೊಡ್ಡದಾದ,  ಅಧ್ವರದ=ಅಶ್ವಮೇಧದ, ವಾಜಿಗಳ್= ಕುದುರೆಗಳು, ಇಳೆಯಮೇಲೆ= ಪ್ರಪಂಚದಲ್ಲೆಲ್ಲಾ, ತಿರುಗಿ= ಸುತ್ತಿಕೊಂಡು, ಇಲ್ಲಿಗೆ= ನಮ್ಮ ಪಟ್ಟಣಕ್ಕೆ, ತರುವಾಯೊಳ್= 

ಕಡೆಗೆ, ಬಂದೊಡೆ= ಬಂದಿರುವ ಕಾರಣದಿಂದ,  ಆವು= ನಾವು, ಕಟ್ಟಿದೆವು= ಕಟ್ಟಿಹಾಕಿರುವೆವು, ಇನ್ನು= ಇನ್ನು ಮುಂದೆ, ಬಿಡಿಸಿಕೊಂಬ= ಬಿಡಿಸಿಕೊಳ್ಳಲು ಬರುವ, ಅತಿಬಲರನು= ಸಾಹಸಿಗಳನ್ನು, ಐಸಲೆ= ಚನ್ನಾಗಿ, ಸಾಯಕದಮೊನೌಯೊಳು= ಬಾಣಗಳ ತುದಿಯಿಂದ,  ಕಾಣಬೇಕು= ನೋಡುವುದೇ ಸರಿ, ಎನಲ್= ಎಂದು ನುಡಿಯಲು, ತನಯರಂ= ಕುವರರನ್ನು, ಪ್ರಿಯದಿಂ= ಅಕ್ಕರೆಯಿಂದ,  ತೆಗೆದಪ್ಪಿ= ಹತ್ತಿರಕ್ಕೆ ಕರೆದು ಆಲಂಗಿಸಿಕೊಂಡು, ತಾನು=ತಾನಾದರೊ, ಅಭಿಪ್ರಾಯಮಂ= ಶ್ರೀಕೃಷ್ಣ ಪರಮಾತ್ಮನೇ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸಲು ಭೂಸಂಚಾರವನ್ನು ಮಾಡಿಕೊಂಡು ಇಲ್ಲಿಗೆ ಬರುತ್ತಿ- 

ರುವುದಾಗಿ, ತಿಳಿದು= ತಿಳಿದುಕೊಂಡು,  ಹರುಷಿತನಾಗಿ= ಸಂತಸಗೊಂಡು, ನಯದೊಳು= ವಿಶ್ವಾಸದಿಂದ,  ಇಂತು= ಮುಂದೆ ಹೇಳುವಂತೆ,  ಎಂದನು= ನುಡಿದನು.  


ತಾತ್ಪರ್ಯ:- ತಂದೆಯೇ ? ಈ ಕುದುರೆಗಳು ಭೂಕಾಂತನಾದ ಯುಧಿಷ್ಠಿರನ ಯಜ್ಞಾಶ್ವವಗಳಾಗಿವೆ. ದೇಶದೇಶವನ್ನೆಲ್ಲಾ ಸುತ್ತಿಸುತ್ತಿ ಕೊನೆಗೆ ನಮ್ಮೂರ ಹೊರಗೆ ತಿರುಗಾಡುತ್ತಿದ್ದುದನ್ನು ನಾವು ಕಂಡು ಹಿಡಿದುತಂದಿರುವೆವು. ಯುದ್ಧಮಾಡಿ ನಮ್ಮನ್ನು ಸೋಲಿಸಿದಲ್ಲದೆ ಈ ಕುದುರೆಗಳನ್ನು ಯುಧಿಷ್ಠಿರನ ಕಡೆಯವರದೆಂತು ಪಡೆದಾರೆಂದು ನುಡಿದರು. ಈ ರೀತಿ ಹೇಳುತ್ತಿರುವಸುತರ ನುಡಿಗಳನ್ನಾಲಿಸಿ ಚಂದ್ರಹಾಸನು ಪುತ್ರರನ್ನು ಸಂತೋಷದಿಂದ ಆಲಂಗಿಸಿಕೊಂಡು ಹೇಳಿದನು. 


ಮಕ್ಕಳಿರ ಕೇಳಿ ತಾನಾಬಾಲ್ಯದಿಂದೆ ಬಿಡ। 

ದಕ್ಕರಿಂ ಚಿತ್ತದೊಳ್ ಧ್ಯಾನಿಸುವ ದೇವನಿನಿ। 

ತಕ್ಕೆ ಮೈದೋರುವಂ ಪಾರ್ಥನ ಸಹಾಯಕೈತಂದು ನಮಗರಿವೆನಿದನು॥ 

ಸಿಕ್ಕಿದೊಡೆ ಕೃಷ್ಣದರ್ಶನದ ಪುಣ್ಯವೆ ಸಾಕು। 

ಮಿಕ್ಕ ಸುಕೃತದ ಗಸಣಿಯೇಕಿನ್ನು ಧರ್ಮಾಧ್ವ। 

ರಕ್ಕೆ ತಿರುಗುವ ಕುದುರೆಗಳನಿಲ್ಲಿ ಕಟ್ಟಿದೊಡೆ ಪುರುಷಾರ್ಥಮೇನೆಂದನು॥೪॥ 


ಪ್ರತಿಪದಾರ್ಥ :- ಮಕ್ಕಳಿರ= ಮಕ್ಕಳೇ, ಕೇಳಿ= ಆಲಿಸಿ, ಆ ಬಾಲ್ಯದಿಂದ= ಚಿಕ್ಕಂದಿನಿಂದಲೂ, ತಾನು=ನಾನು, ಬಿಡದೆ= ತಪ್ಪದೆ, ಚಿತ್ತದೊಳ್= ಮನಸ್ಸಿನಲ್ಲಿ, ಧ್ಯಾನಿಸುವ= ಧ್ಯಾನಮಾಡುವ, ದೇವನು= ದೇವರೇ, ಇನಿತಕ್ಕೆ= ಇಷ್ಟು ದಿನಕ್ಕೆ, ಪಾರ್ಥನ= ಫಲುಗುಣನ,  ಸಹಾಯಕೆ=ಸಹಾಯದ ನಿಮಿತ್ತ, ಐತಂದು= ಬಂದು, ನಮಗೆ= ನಮಗಾದರೊ, ಮೈತೋರು- 

ವಂ= ಪ್ರತ್ಯಕ್ಷನಾಗುವನು, ಇದನು= ಈ ವಾರ್ತೆಯನ್ನು, ಅರಿವೆನು= ತಿಳಿದಿದ್ದೇನೆ,  ಸಿಕ್ಕಿದರೆ=ಇಷ್ಟು ಮಾತ್ರ ಶ್ರೀಕೃಷ್ಣನ ದರ್ಶನಲಾಭವು ನಮಗುಂಟಾದರೆ, ಕೃಷ್ದರ್ಶನಪುಣ್ಯಮೆ= ಕೃಷ್ಣ ಪರಮಾತ್ಮನನ್ನು ನೋಡಿದಂತ ಪುಣ್ಯವೆ, ಸಾಕು= ಸಾಕಾಗಿದೆ, ಮಿಕ್ಕ =ಉಳಿದ, ಸುಕೃತದ= ಸತ್ಕಾರ್ಯದ, ಘಸಣಿ= ಅಲೆದಾಟವು, ಏಕೆ= ಏನು ಪ್ರಯೋಜನ,  ಇನ್ನು= ಈ ಪ್ರಕಾರವಾಗಿ ಸ್ವಾಮಿಯೆ ನಮ್ಮ ಎದುರಿಗೆ ಬಂದು ನಿಂತ ಬಳಿಕ,  ಧರ್ಮಾಧ್ವರಕೆ= ಯುಧಿಷ್ಠಿರನ ಅಶ್ವಮೇಧ ಯಾಗಕ್ಕಾಗಿ, ತಿರುಗುವ= ಭೂಸಂಚಾರ ಮಾಡುತ್ತಿರುವ, ಕುದುರೆಗಳನು= ಕುದುರೆಗಳನ್ನು,  ಇಲ್ಲಿ= ಈ ಎಡೆಯಲ್ಲಿ, ಕಟ್ಟಿದರೆ= ಕಟ್ಟಿಹಾಕಿದ ಮಾತ್ರಕ್ಕೇ, ಪುರುಷಾರ್ಥಂ ಏನು= ಸಾರ್ಥಕವೇನು, ಎಂದನು= ಎಂದು ಹೇಳಿದನು. 


ತಾತ್ಪರ್ಯ:- ಎಲೈ ಮಕ್ಕಳೇ ಕೇಳಿ. ನಾನು ಬಾಲ್ಯದಿಂದ ಯಾರನ್ನು ಧ್ಯಾನಿಸುತ್ತಲಿದ್ದೆನೊ ಅಂತಹ ಪರಮಪುರುಷನಾದ 

ಸ್ವಾಮಿಯು ನನಗೆ ಸಂದರ್ಶನವನ್ನು ಕೊಡುವುದಕ್ಕಾಗಿಯೇ ಅರ್ಜುನನ ಸಹಾಯಕನಾಗಿ ಆತನ ಹಿಂದೆ ಬರುತ್ತಲಿರುವನು. ಇಂತಹ ಪರಮಮೂರ್ತಿಯು ಪ್ರತ್ಯಕ್ಷನಾಗುವಾಗ ಈ ಯಜ್ಞಾಶ್ವಗಳನ್ನು ನಾವು ಯಾವ ಪುರುಷಾರ್ಥಕ್ಕಾಗಿ ಕಟ್ಟಬೇಕಾಗಿದೆ. 


ಧರಣಿಯೊಳ್ ಪ್ರತ್ಯಕ್ಷಧರ್ಮದಾಕೃತಿ ಯುಧಿ। 

ಷ್ಠಿರಭೂಪನಾತನ ಹಯಂಗಳಂ ತಡೆದಪರೆ। 

ಪಿರಿದಾಯಸದೊಳವರ್ ಪಾಲಿಸಿದರಿನ್ನೆಗಂ ದಶಮಾಸದಿಂದ ಮೇಲೆ॥ 

ಅರೆದಿಂಗಳಾದುದಿನ್ನಿಹುದು ಪಕ್ಷತ್ರಯಂ। 

ಬರಿಸಕಲ್ಲಿಂದ ಮುಂದಿಲ್ಲಿ ಸಿಕ್ಕಿರ್ದೊಡ। 

ಧ್ವರಮುಳಿವುದದರಿಂದ ನೀವೆ ರಕ್ಷಿಸಿ ಪಾಂಡವಂಗೆ ಕೊಟ್ಟಪುದೆಂದನು॥೫॥


ಪ್ರತಿಪದಾರ್ಥ :- ಯುಧಿಷ್ಠಿರ ಭೂಪನು= ಧರ್ಮತನಯನಾದರೊ, ಧರಣಿಯೊಳ್= ಇಳೆಯೊಳಗೆ, ಪ್ರತ್ಯಕ್ಷ = ಎದುರಿಗೆ ಇರತಕ್ಕ,  ಧರ್ಮದ=ಧರ್ಮಕಾರ್ಯದ, ಆಕೃತಿ= ಆಕಾರವಾಗಿರುವನು, ಆತನ= ಅಂಥಾ ಧರ್ಮಾತ್ಮನಾದ ಧರ್ಮಪುತ್ರನ,

ಹಯಂಗಳಂ = ಯಜ್ಞಾಶ್ವಗಳನ್ನು, ತಡೆದಪರೆ= ತಡೆಯಬಹುದೆ, ಅವರ್= ಆ ಪಾರ್ಥಾದಿಗಳೆಲ್ಲಾ, ಇನ್ನೆಗಂ= ಇಷ್ಟು ಕಾಲವೂ, ಪಿರಿದಾಯಸದೊಳು= ಅಧಿಕ ಕಷ್ಟದಿಂದ, ಪಾಲಿಸಿದರು= ಸಲಹಿಕೊಂಡಿದ್ದಾರೆ, ದಶಮಾಸದಿಂದ ಮೇಲೆ= ಹತ್ತು ತಿಂಗಳಾಗಿ, ಅರೆದಿಂದಗಳು= ಹದಿನೈದುದಿನಗಳು ಹೆಚ್ಚಾಗಿ, ಆದುದು= ಆಗಿದೆ, ಪಕ್ಷತ್ರಯಂ= ಮೂರುತಿಂಗಳು ಮಾತ್ರವೇ, ವರ್ಷಕೆ=ಒಂದು ವರ್ಷಕೆ, ಇನ್ನು= ಇನ್ನು ಮುಂದೆ, ಇಹುದು= ಉಳಿದಿರುವುದು, ಇಲ್ಲಿ= ಈ ನಮ್ಮ  ನಾಡಿನಲ್ಲಿ ಸಿಕ್ಕಿರ್ದಡೆ =ಕಟ್ಟಿಹಾಕಿಬಿಟ್ಟ ಪಕ್ಷದಲ್ಲಿ,  ಮುಂದೆ= ಇನ್ನು ಮುಂದೆ, ಅಧ್ವರಂ= ಯಾಗವು, ಉಳಿವುದು= ನಿಂತುಹೋಗುವುದು, ಅದರಿಂದ= ಆದಕಾರಣ,  ನೀವೇ ರಕ್ಷಿಸಿ= ಯಜ್ಞಾಶ್ವಗಳ ಗೊಡವೆಗೆ ಹೋಗದೆ, ಪಾಂಡವರಿಗೆ= ಫಲುಗುಣನಿಗೆ, ಕೊಟ್ಟಪುದು= ಈ ಕುದುರೆಗಳನ್ನು ಒಪ್ಪಿಸಬೇಕು, ಎಂದನು= ಎಂಬುದಾಗಿ ಹೇಳಿದನು.  


ತಾತ್ಪರ್ಯ:- ಯುಧಿಷ್ಠಿರನಾದರೊ, ಲೋಕದಲ್ಲಿ ಪ್ರತ್ಯಕ್ಷಧರ್ಮಸ್ವರೂಪನು, ಆತನು ಮಾಡಬೇಕೆಂದಿರುವ ಯಾಗದ ಕುದುರೆಗಳನ್ನು ಅರ್ಜುನಾದಿಗಳು ಹತ್ತು ತಿಂಗಳಿಂದಲೂ ಸಲಹುತ್ತಿರುವರು. ಧರ್ಮರಾಯನು ಮಾಡಬೇಕೆಂದಿರುವ ಯಾಗದ ಅವಧಿಯು ಒಂದೂವರೆತಿಂಗಳು ಮಾತ್ರವೇ ಇರುವಾಗ ನೀವು ಈ ಅಶ್ವಗಳನ್ನು ಈಗ ಕಟ್ಟಿಹಾಕಿದರೆ, ಯಜ್ಞಭಂಗವಾದೀತು ಎಂದನು. 


ತನ್ನ ಹೇಳಿಕೆಯೊಳಲ್ಲದೆ ಕೃಷ್ಣಫಲ್ಗುಣ। 

ರ್ಗಿನ್ನು ಸಿಕ್ಕಿದ ಹರಿಗಳಂ ಬಿಡದೆ ಭೂಮಿಯೊಳ್। 

ಸನ್ನದ್ಧರಾಗಿ ಪಾಲಿಸಿ ನೀವು ಯಜ್ಞಕಾಲಕೆ ಧರ್ಮಜಂಗೆ ಕುಡಲು॥ 

ಉನ್ನತದ ಸುಕೃತಮಾದಪುದು ನಮಗೆಂದು ಸಂ।

 ಪನ್ನಮತಿ ಚಂದ್ರಹಾಸಂ ನಿಜ ಕುಮಾರರಂ।

ಮನ್ನಿಸಿ ತುರಂಗ ರಕ್ಷೆಗೆ ಕಳುಹಿ ಬಲಸಹಿತ ಪೊಳಲ ಪೊರಗಿರುತಿರ್ದನು॥೬॥ 


ಪ್ರತಿಪದಾರ್ಥ :- ಸಂಪನ್ನ= ಉತ್ತಮೋತ್ತಮವಾದ,  ಮತಿ= ತಿಳುವಳಿಕೆಯಿಂದ ಕೂಡಿರತಕ್ಕ, ಚಂದ್ರಹಾಸಂ= ಇಂದುಹಾಸನು, ನಿಜಕುಮಾರರಂ= ತನ್ನ ಮಕ್ಕಳನ್ನು, ಮನ್ನಿಸಿ= ಕ್ಷಮಿಸಿ, ಇನ್ನು= ಇನ್ನು ಮುಂದೆ, ಭೂಮಿಯೊಳ್= ನಮ್ಮ ದೇಶದಲ್ಲಿ, ಸಿಕ್ಕಿದ= ಸಿಕ್ಕಿದಂಥಾ, ಹರಿಗಳಂ= ಅಶ್ವಗಳನ್ನು,  ತನೂನ=ನನ್ನ, ಹೇಳಿಕೆಯೊಳು= ಹೇಳುವಿಕೆಯಿಂದ, ಅಲ್ಲದೆ=

ಹೊರತು, ಕೃಷ್ಣಫಲುಗುಣರ್= ಕೃಷ್ಣ ಮತ್ತು ಪಾರ್ಥರಬಿಡದೆ=ತಡಮಾಡದೆ, ಸನ್ನದ್ಧರಾಗಿ = ಸಿದ್ಧವಾಗಿ, ನೇವು= ನೀವೀರ್ವರೂ, ಪಾಲಿಸಿ= ಸಲಹಿ, ಧರ್ಮಜಂಗೆ= ಧರ್ಮತನಯನಿಗೆ, ಯಜ್ಞಕಾಲಕೆ = ಯಾಗಮಾಡುವ ಕಾಲಕ್ಕೆ ಸರಿಯಾಗಿ,  ಕೊಡಲು= ಕೊಟ್ಟಹಾಗಾದರೆ, ನಮಗೆ= ನಮಗಾದರೊ, ಉನ್ನತದ ಸುಕೃತಂ= ಅಧಿಕವಾದ ಪುಣ್ಯಪ್ರಾಪ್ತಿಯು,

ಆದಪುದು= ಆಗುತ್ತದೆ, ಎಂದು= ಎಂಬತೆರನಾಗಿ ಹೇಳಿ, ತುರಂಗಪಾಲನೆಗೆ= ಕುದುರೆಯ ರಕ್ಷಣೆಗೆ, ಕಳುಹಿ= ಪದ್ಮಾಕ್ಷ ಮಕರ ಧೂವಜರನ್ನೂ ಕಳುಹಿಸಿ, (ಚಂದ್ರಹಾಸನು) ಪೊಳಲಪೊರಗೆ= ಪಟ್ಟಣದ ಹೊರಭಾಗದಲ್ಲಿ,  ಬಲಸಹಿತ= ದಳದಿಂದ ಕೂಡಿ, ಇರುತಿರ್ದನು= ಇದ್ದನು.


ಅ॥ವಿ॥ ತುರಂಗಮ= ತುರುಗಜಾಗ್ರತೆಯಾಗಿ, ಗಮ= ಗಮಿಸುವುದು, ಬಲ=ಸೈನ್ಯ, ಶಕ್ತಿ, ಬಲಭಾಗ. 


ತಾತ್ಪರ್ಯ:- ಆದಕಾರಣ ನೀವು ಈ ಯಾಗದ ಕುದುರೆಗಳನ್ನು ಕಾಪಾಡುತ್ತಿದ್ದು ಯಜ್ಞಕಾಲಕ್ಕೆ ಧರ್ಮಜನಿಗೆ ಅವುಗಳನ್ನು ಒಪ್ಪಿಸಿ ಕೃತಕೃತ್ಯರಾಗಬೇಕೆಂದು ಹೇಳಿ ಅವರೀರ್ವರನ್ನೂ ಯಜ್ಞಾಶ್ವಗಳ ರಕ್ಷಣೆಗಾಗಿ ನೇಮಿಸಿ ತಾನು ಸೇನಾಸಮೇತನಾಗಿ 

ಕೃಷ್ಣಸ್ವಾಮಿಯ ಸಮಾಗಮವನ್ನೆ ಎದುರು ನೋಡುತ್ತ ಊರ ಹೊರಗಿನ ಬಯಲಿನಲ್ಲಿರುವಾಗ. 


ತುರಂಗಗಳಂ ಬಿಟ್ಟದರ ಕೂಡೆ ಸೇನೆಸಹಿ। 

ತಿರದೆ ಪದ್ಮಾಕ್ಷ ಮಕರಧ್ವಜರ್ ಪೋದ ಬಳಿ। 

ಕರವಿಂದನಾಭದರ್ಶನಕೆ ಲೋಲೈಪನಾಗಿ ಚಂದ್ರಹಾಸಂ ಮುದದೊಳು॥ 

ಪುರದ ಹೊರವಳಯದೊಳ್ ಸೇನೆಯಂ ಕೂಡಿಕೊಂ। 

ಡಿರುತಿರ್ದನನ್ನೆಗಂ ಮೇರೆದಪ್ಪಿದ ಮಹಾ। 

ಶರಧಿಯಂತರ್ಜುನನ ಮೋಹರಂ ತಲೆದೋರಿತೆತ್ತಣಾಶ್ಚರ್ಯಮೆನಲು॥೭॥ 


ಪ್ರತಿಪದಾರ್ಥ :- ಪದ್ಮಾಕ್ಷ ಮಕರಧ್ವಜರ್= ಪದ್ಮಾಕ್ಷ ಮಕರಧ್ವಜರೀರ್ವರೂ,ತುರಂಗಗಳಂ= ಯಾಗದ ಕುದುರೆಗಳನ್ನು, ಬಿಟ್ಟು= ಬಿಟ್ಟವರಾಗಿ, ಇರದೆ= ನಿಲ್ಲದೆ, ಸೇನೆಸಹಿತ= ದಳದೊಂದಿಗೆ, ಅದರಕೂಡ= ಅವುಗಳ ಜೊತೆಯಲ್ಲಿ, ಪೋದಬಳಿಕ = ಹೋದನಂತರ, ಚಂದ್ರಹಾಸನು = ಇಂದುಹಾಸನಾದರೊ, ಅರವಿಂದನಾಭನ= ಶ್ರೀಕೃಷ್ಣನ, ದರುಶನಕೆ= ದರುಶನಕ್ಕಾಗಿ, ಲೋಲುಪನಾಗಿ= ಆಶೆಗೊಂಡು, ಸೇನೆಯಂ= ಬಲವನ್ನೆಲ್ಲಾ,  ಪುರದ= ನಗರದ, ಹೊರವಲಯದೊಳ್= ಹೊರಭಾಗದಲ್ಲಿ, 

ಕೂಡಿಕೊಂಡು = ನಿಲ್ಲಿಸಿಕೊಂಡು, ಮುದದೊಳು= ಆನಂದದಿಂದ, ಇರುತಿರ್ದನು= ಇದ್ದನು, ಅನ್ನೆಗಂ= ಅಷ್ಟು ಹೊತ್ತಿಗೆ, 

ಅರ್ಜುನನ = ಪಾರ್ಥನ, ಮೋಹರಂ= ಬಲವು, ಎತ್ತಣ= ಎಲ್ಲಿಯ, ಆಶ್ಚರ್ಯಂ=ಅಚ್ಚರಿಯು, ಎನಲು= ಎಂಬರೀತಿಯಾ- 

ಗಿ, ಮೇರೆತಪ್ಪಿದ= ಮಿತಿಮೀರಿದ, ಮಹಾಶರಧಿಯಂತೆ= ದೊಡ್ಡ ಸಾಗರದ ಹಾಗೆ, ತಲೆದೋರಿತು =ಗೋಚರಿಸಿತು.  


ತಾತ್ಪರ್ಯ:- ಮಿತಿಮೀರಿ ಬರುತ್ತಲಿರುವ ಕಡಲೋ ಎಂಬಂತೆ ಸಮೀಪಿಸುತ್ತಿರುವ, ಅರ್ಜುನನ ಸೇನಾಸಾಗರವನ್ನು ಕಂಡು. 


ಸಮತಳಿಸಿ ಫಲುಗುಣನ ಸೇನೆ ಬಹುದಂ ಕಂಡು। 

ಸಮರಕಭಿಮುಖನಾಗಿ ತನ್ನ ಮೋಹರಸಹಿತ। 

ಸಮಚಂದ್ರಹಾಸನೈತರಲಾಗ ಮುರಹರಂ ಸಕಲ ಭೂಪಾಲಕರನು॥ 

ಕ್ರಮದಿಂದೆ ನಿಲ್ಲಿಸಿ ಪಾರಥಂಗೆ ಸಾರಥಿಯಾಗಿ। 

ಕಮಲ ಸುಗದಾ ಶಂಖ ಚಕ್ರದ ಚತುರ್ಭುಜದ। 

ಕಮನೀಯ ರೂಪಮಂ ಕೈಕೊಂಡು ಬಿಟ್ಟನಾತನ ಸಮ್ಮುಖಕೆ ರಥವನು॥೮॥ 


ಪ್ರತಿಪದಾರ್ಥ :- ಅಸಮಚಂದ್ರಹಾಸಂ= ಅಸದೃಶನಾದ ಚಂದ್ರಹಾಸನು, ಫಲುಗುಣನ= ಪಾರ್ಥನ, ಸೇನೆ=ದಳವು, ಸಮತಳಿಸಿ = ಸಾಂದ್ರವಾಗಿ, ಬಹುದಂ= ಬರುತ್ತಿರುವುದನ್ನು,ಕಂಡು=ಈಕ್ಷಿಸಿ, ಸಮರಕೆ= ಕಾಳಗಕ್ಕೆ, ಅಭಿಮುಖನಾಗಿ= 

ಎದುರಾಗಿ, ತನ್ನಮೋಹರಸಹಿತ= ತನ್ನ ದಳದೊಂದಿಗೆ, ಐತರಲಾಗಿ= ಬರಲು, ಮುರಹರಂ= ಕೃಷ್ಣನು, ಕ್ರಮದಿಂದ= ಒಂದು ಕ್ರಮವಾಗಿ, ಸಕಲಭೂಪರನು= ರಾಜರನ್ನೆಲ್ಲಾ, ನಿಲಿಸಿ= ನಿಲ್ಲಿಸಿ, ಪಾರ್ಥಂಗೆ= ಫಲುಗುಣನಿಗೆ,  ಸಾರಥಿಯಾಗಿ= ರಥವನ್ನು ನಡೆಸತಕ್ಕವನಾಗಿ, ಕಮಲ=ತಾವರೆಯ, ಸುಗದಂ= ಶ್ರೇಷ್ಠವಾದ ಗದೆಯು, ಶಂಖ=ಶಂಖವು, ಚಕ್ರದ= ಚಕ್ರವೇ ಮೊದಲಾ- 

ದವುಗಳಿಂದ ಕೂಡಿದ, ಚತುರ್ಭುಜದ = ನಾಲ್ಕು ತೋಳುಗಳುಳ್ಳ, ಕಮನೀಯ= ಮನರಂಜಿಸುವ, ರೂಪಮಂ= ಆಕಾರವನ್ನು, ಕೈಕೊಂಡು= ತಾಳಿ, ರಥವನು= ತೇರನ್ನು,  ಆತನಸಮ್ಮುಖಕ್ಕೆ= ಚಂದ್ರಹಾಸನಿಗೆದುರಾಗಿ, ಬಿಟ್ಟನು= ರಥವನ್ನು ನಡೆಯಿಸಿದನು. 


ತಾತ್ಪರ್ಯ:- ತಾನೂ ದಳಸಹಿತ ನಿಂತು ನೋಡುತ್ತಿದ್ದನು. ಅತ್ತ ಶ್ರೀಕೃಷ್ಣನು ಸಕಲ ರಾಜರನ್ನೂ ಕ್ರಮವರಿತು ನಿಲ್ಲಿಸಿ, ತಾನು  ಶಂಖಚಕ್ರಗದಾಪದ್ಮಂಗಳಿಂದಲಂಕೃತವಾದ ಕೈಗಳಿಂದಲೂ ಸುಂದರಾಕಾರದಿಂದಲೂ ಕೂಡಿ, ಅರ್ಜುನನ ಸಾರಥಿಯಾಗಿ ತೇರನ್ನು ಮುಂದಕ್ಕೆ ನಡೆಸುತ್ತಾ ಎಲೈ ಅರ್ಜುನನೆ! ವೈಷ್ಣವಶಿರೋಮಣಿಯಾಗಿರುವ ಚಂದ್ರಹಾಸನನ್ನು ನೋಡೆಂದು ನುಡಿ-

ಯಲು, ಫಲುಗುಣನು ಕೃಷ್ಣಮೂರ್ತಿಯನ್ನು ಕುರಿತು ಎಲೈ ಮಹಾನುಭಾವನೆ, ವಿಷ್ಣುನಾಮ ಸಂಕೀರ್ತನೆಯಲ್ಲಿಯೇ ನಿರತ-

ನಾಗಿ,ತುಲಸೀಮಾಲಿಕೆಗಳಿಂದೊಪ್ಪುತ್ತ ಸತ್ವಗುಣಾವಿಶೆಷ್ಟನಾಗಿರುವ ಈ ಇಂದುಹಾಸನನ್ನು ನೋಡಿದ್ದು ನನ್ನ ಪೂರ್ವಜನ್ಮದ 

ಸುಕೃತವೇ ಸರಿ. 


ನೋಡಿದೈ ಪಾರ್ಥ ವೈಷ್ಣವ ಶಿರೋಮಣಿಯನೆನೆ। 

ಮೂಡಿಮುಳುಗುವ ಮಾಧವ ಧ್ಯಾನಚೇತನದ। 

ಸೂಡಿದ ಮುಕುಂದಪಾದಾಬ್ಜ ತುಲಸೀಪೂತಮಸ್ತಕದ ಸತ್ವಗುಣದ॥ 

ಬೀಡೆನಿಪ ಕಲಿ ಚಂದ್ರಹಾಸನಂ ಕಂಡು ತಾ। 

ಮಾಡಿದಗ್ಗದ ಪುಣ್ಯದಿಂ ಜನ್ಮಸಫಲವಾ। 

ಯ್ತಾಡಲೇನೆಲೆದೇವ ತನ್ನ ಬಿನ್ನಪವನಧರಿಸೆಂದನಿಂದ್ರಸೂನು॥೯॥


ಪ್ರತಿಪದಾರ್ಥ :- ಪಾರ್ಥ= ಅಯ್ಯಾ ಫಲುಗುಣಾ, ವೈಷ್ಣವಶಿರೋಮಣಿಯನು= ಶ್ರೀಕೃಷ್ಣನನ್ನು ಧ್ಯಾನಿಸುವವರಲ್ಲಿ ಉತ್ತಮ ನಾದ ಇಂದುಹಾಸನನ್ನು, ನೋಡಿದೈ= ನೋಡಿದೆಯಾ? ಎನೆ= ಎನಲು, ಇಂದ್ರಸೂನು= ಇಂದ್ರನಂದನನಾದ ಪಾರ್ಥನು, ಎಲೆದೇವ= ಎಲೈ ಪ್ರಭುವೆ, ತಾಂ= ನಾನು, ಮಾಡಿದ= ಔಸಗಿದ, ಪುಣ್ಯಫಲದಿಂದ = ಸುಕೃತಪರಂಪರೆಯಿಂದ, ಮೂಡಿ= ಪ್ರಾಪ್ತವಾಗಿ, ಮುಳುಗುವ= ಮುಳುಗಿರತಕ್ಕ, ಮಾಧವಧ್ಯಾನಚೇತನದ= ಶ್ರೀಮನ್ನಾರಾಯಣನ,  ಧ್ಯಾನ= ಭಜನೆಯಲ್ಲಿ, ಚೇತನದ= ಆಸಕ್ತಿಯುಳ್ಳ,ಸೂಡಿದ= ಹಾಕಿಕೊಂಡಿರತಕ್ಕ, ಮುಕುಂದ= ಶ್ರೀಕೃಷ್ಣನ, ಪಾದಾಬ್ಜ= ಅಡಿದಾವರೆಯಲ್ಲಿ ಪೂಜಿ-

ಸಲ್ಪಟ್ಟಿರುವಂಥಾ, ತುಲಸಿಯ= ತುಲಸೀಕುಡಿಗಳಿಂದ, ಪೂತ= ಪವಿತ್ರವಾದ, ಮಸ್ತಕದ= ತಲೆಯನ್ನುಳ್ಳ, ಸತ್ವಗುಣದ= ಸತ್ವಸ್ವಭಾವದ, ಬೀಡು= ನೆಲೆಯು, ಎನಿಪ= ಎನ್ನಿಸಿಕೊಳ್ಳತಕ್ಕ,ಕಲಿ= ಶೂರನಾದ, ಚಂದ್ರಹಾಸನಂ = ಚಂದ್ರಹಾಸನನ್ನು,  ಕಂಡು= ಈಕ್ಷಿಸಿ,  ಜನ್ಮ= ನನ್ನ ಬಾಳು, ಸಫಲವು= ಸಾರ್ಥಕವಾದದ್ದು, ಆಯ್ತು= ಆಯಿತು,ಆಡಲೇನು= ಇನ್ನು ಹೆಚ್ಚಾಗಿ ಹೇಳತಕ್ಕದ್ದೇನಿರುವುದು, ತನ್ನ=ನನ್ನ,  ಬಿನ್ನಪವನು= ಅರಿಕೆಯನ್ನು, ಅವಧರಿಸು= ಲಾಲಿಸು,  ಎಂದನು= ಎಂಬುದಾಗಿ ಹೇಳಿದನು.  


ತಾತ್ಪರ್ಯ:- ಎಂದು ಕೊಂಡಾಡುತ್ತಲಿರುವ ಅರ್ಜುನನನ್ನು ನೋಡಿ ಕೃಷ್ಣನು ಅಯ್ಯಾ ಫಲುಗುಣಾ! ಈ ಇಂದುಹಾಸನಾದ- 

ರೊ, ಸುಜ್ಞಾನಮೂರುತಿಯು. ಮಹಾತಪಸ್ವಿಯು. ಅಲ್ಲದೆ ಮುನ್ನೂರು ವರ್ಷ ವಯಸ್ಸುಳ್ಳ ಮುದುಕನಾಗಿದ್ದಾನೆ, ಇವನ ದೃಢಭಕ್ತಿಗೆ ನಾನು ಮೆಚ್ಚಿರುವನೆಂದು ನುಡಿಯುತ್ತ. 


ಜ್ಞಾನವೃದ್ಧಂ ತಪೋವೃದ್ಧಂ ವಯೋವೃದ್ಧಂ। 

ನೀನರೇಶ್ವರನೀತನೊಳ್ ಕಾದಿ ಜಯಿಸುವ ವಿ। 

ಧಾನವೆಂತೆನಗೆ ಬೆಸಸೆಂದರ್ಜುನಂ ಕೇಳ್ದೊಡಸುರಾರಿ ಕರುಣದಿಂದೆ॥ 

ಧ್ಯಾನಿಸುವನಾ ಬಾಲ್ಯದಿಂದೆನ್ನನೀತಂಗೆ। 

ತಾನೊಲಿದೆನೆಂದು ನಿಜರೂಪಮಂ ತೋರಲಾ। 

ಭೂನಾಥನಂಬುಜಾಕ್ಷನ ದಿವ್ಯಮೂರ್ತಿಯಂ ಕಂಡು ಪುಳಕಿತನಾದನು॥೧೦॥


ಪ್ರತಿಪದಾರ್ಥ :- ಈ ನರೇಶ್ವರನು= ಈ ರಾಜನು, ಜ್ಞಾನವೃದ್ಧ= ಮಹಾಜ್ಞಾನಿ, ತಪೋವೃದ್ಧಂ= ಮಹಾತಪಸ್ವಿ, ವಯೋವೃದ್ಧನು= ಬಹಳ ವಯಸ್ಸಾದವನು, ಎನಗೆ= ನನಗೆ, ಈತನೊಳ್= ಈ ಇಂದುಹಾಸನೊಂದಿಗೆ, ಕಾದಿ= ಜಗಳಮಾಡಿ, ಜಯಿಸುವ= ಗೆಲ್ಲತಕ್ಕ, ನಿಧಾನಂ= ಬಗೆಯು, ಎಂತು= ಯಾವ ರೀತಿಯಾಗಿದೆ, ಬೆಸಸು= ಹೇಳು, ಎಂದು= ಎಂಬ ತೆರನಾಗಿ, ಅರ್ಜುನನು= ಪಾರ್ಥನು, ಕೇಳ್ದೊಡೆ= ಪ್ರಶ್ನಿಸಲು, ಅಸುರಾರಿ = ಕೃಷ್ಣನು,  ಕರುಣದಿಂದ= ಪ್ರೀತಿಯಿಂದ, ಎನ್ನನು= ನನ್ನನ್ನು,  ಆ ಬಾಲ್ಯದಿಂದ= ಹುಡುಗನಾದಾರಭ್ಯ, ಧ್ಯಾನಿಸುವನು= ಪೂಜಿಸುತ್ತಲಿದ್ದನೆ, ತಾನು= ನಾನು, ಈತಂಗೆ= ಈ ಚಂದ್ರಹಾಸನಿಗೆ, ಒಲಿದೆನು= ಮೆಚ್ಚಿದ್ದೇನೆ, ಎಂದು= ಎಂಬುದಾಗಿ ನುಡಿದು, ನಿಜರೂಪಮಂ= ತನ್ನ ನಿಶ್ಚಯವಾದ ಆಕೃತಿಯನ್ನು,ತೋರಲು= ಕಾಣಿಸಲು, ಅಂಬುಜಾಕ್ಷನ= ಶ್ರೀಕೃಷ್ಣನ, ದಿವ್ಯ= ಉತ್ತಮವಾದ, ಮೂರ್ತಿಯಂ=

ಆಕಾರವನ್ನು,  ಕಂಡು=ನೋಡಿ, ಆ ಭೂನಾಥನು= ಆ ರಾಜ ಚಂದ್ರಹಾಸನು,  ಪುಳಕಿತನಾದನು= ರೋಮಾಂಚಗೊಂಡನು. 


ತಾತ್ಪರ್ಯ:- ಇವನು ಜ್ಞಾನವೃದ್ಧನು, ತಪೋವೃದ್ಧ, ವಯೋವೋದ್ಧ, ಇವನೊಡನೆ ಯುದ್ಧಮಾಡಿ ಗೆಲ್ಲುವ ವಿಧಾನವನ್ನು ನನಗೆ ಹೇಳು. ಅರ್ಜುನನು ಹೀಗೆ ಹೇಳಲು ಶ್ರೀಕೃಷ್ಣನು" ಇವನು ಬಾಲ್ಯದಿಂದ ನನ್ನನ್ನು ಧ್ಯಾನಿಸುತ್ತಿದ್ದಾನೆ. ಇವನಿಗೆ ನಾನು ಒಲಿದಿದ್ದೇನೆ," ಎಂದು ಹೇಳಿ ತನ್ನ ನಿಜರೂಪವನ್ನು ತೋರಿಸಲು, ಚಂದ್ರಹಾಸನು ಆ ರೂಪವನ್ನು ನೋಡಿ ರೋಮಾಂಚನಗೊಂಡನು. 


ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ। 

ಪೊಂಬಟ್ಟೆಯಂ ತಾಳ್ದು ಕೌಸ್ತುಭದ ಶೋಭಾವ। 

ಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನಾಂತು॥ 

ತುಂಬಿದವಯವದ ಲೃವಣ್ಯಲಹರಿಗಳ ವಿಸ। 

ಟಂಬರಿವ ಕರುಣರಸವೆಳನಗೆಯ ಸಿರಿಮೊಗದ। 

ಶಂಬರಾರಿಯ ಪಿತಂ ಪಾರ್ಥನ ರಥಾಗ್ರದೊಳ್ ಕಣ್ಗೆಸೆದನಾ ನೃಪತಿಯ॥೧೧॥


ಪ್ರತಿಪದಾರ್ಥ :- ಶಂಬರಾರಿಯಪಿತಂ= ಶ್ರೀಕೃಷ್ಣನು, ಆ ನೃಪತಿಯ= ಆ ಚಂದ್ರಹಾಸನ,  ಕಣ್ಗೆ= ಕಣ್ಣುಗಳಿಗೆ, ಪಾರ್ಥನ ರಥಾಗ್ರದೊಳ್= ಪಾರ್ಥನ ತೇರಿನ ಮುಂದುಗಡೆ, ಕಂಬು=ಶಂಖವು, ಚಕ್ರ= ಚಕ್ರಾಯುಧವು, ಅಬ್ಜ= ತಾವರೆಯು, ಕೌಮೋದಕಿಗಳಂ= ಗದೆ ಇವುಗಳನ್ನು,  ಧರಿಸಿ= ತೊಟ್ಟುಕೊಂಡು, ಪೊಂಬಟ್ಟೆಯಂ = ಹಳದೀ ಬಣ್ಣದ ಮಡಿಯನ್ನು, ತಾಳ್ದು= ಧರಿಸಿ,  ಕೌಸ್ತುಭ= ಕೌಸ್ತುಭಮಣಿಯ, ಶೋಭಾ=ಪ್ರಭೆಯ, ಅವಲಂಬದಿಂ= ಆಶ್ರಯದಿಂದ, ಸರ್ವಾಭರಣದಿಂ=

ಸಮಸ್ತವಡವೆಗಳಿಂದ,ಭೂಷಿತನಾಗಿ= ಅಲಂಕಾರಗೊಂಡು, ದಿವ್ಯ= ಶ್ರೇಷ್ಠವಾದ, ಮಾಲೆಗಳನು= ಹೂದಂಡೆಗಳನ್ನು, ಆಂತು= ಹಾಕಿಕೊಂಡು,  ತುಂಬಿದ= ಸಾಂದ್ರವಾದ, ಅವಯವದ= ಅವಯವಗಳ, ಲಾವಣ್ಯ = ಪ್ರಕಾಶಿಸತಕ್ಕ,  ಲಹರಿಗಳ= ಪ್ರವಾಹಂಗಳ, ವಿಸಟಂಬರವ= ವಿಶಾಲತೆಯನ್ನು ಪಡೆದಿರತಕ್ಕ, ಕರುಣರಸದ=ಕರುಣಾರಸದಿಂದ ಕೂಡಿದ, ಎಳನಗೆಯ= ಹುಸಿನಗೆಯುಳ್ಳ, ಸಿರಿಮೊಗದ= ಕಾಂತಿಯುಕ್ತವಾದ ಮುಖದಿಂದ, ಎಸೆದನು= ಹೊಳೆಯುತ್ತಲಿದ್ದನು. 


ತಾತ್ಪರ್ಯ:- ಈ ರೀತಿಯಲ್ಲಿ ಶೋಭಿಸುತ್ತಲಿರುವ ಕೃಷ್ಣನನ್ನು ಚಂದ್ರಹಾಸನು ನೋಡಿದೊಡನೆಯೇ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಶರೀರವೆಲ್ಲಾ ರೋಮಾಂಚನಗೊಂಡಿತು, ಕೂಡಲೇ ತನ್ನ ರಥದಿಂದ ಕೆಳಗಿಳಿದು ಅರ್ಜುನನ ತೇರಿನ ಬಳಿಗೆ ಬಂದು, ಕೃಷ್ಣಸ್ವಾಮಿಯ ಪಾದಾರವಿಂದಗಳಿಗೆರಗಿ ಆ ಮಹಾನುಭಾವನನ್ನು ಸ್ತೋತ್ರಮಾಡುತ್ತಲಿರುವಾಗ,ಅಸುರಾ-

ರಿಯು ಆ ಇಂದುಹಾಸನನ್ನು ಮೆಲ್ಲಗೆ ಮೇಲಕ್ಕೆತ್ತಿ  ಆನಂದಾತಿಶಯದಿಂದ ಬಾಚಿ ತಬ್ಬಿಕೊಂಡನು. 


ಕಂಗಳ ನಿರೀಕ್ಷಣದ ಸೌಖ್ಯಮಂ ಸೂಸುವುದ। 

ಕಂಗಳ ಪೊನಲ್ತಟೆಯ ಹರ್ಷದಿಂದೇಳ್ವ ಪುಳ। 

ಕಂಗಳ ನೆಗಳ್ಕೆಯಂ ಭಯಭರಿತಭಕ್ತಿ ಭಾವಿಸೆ ರಥವನಿಳಿದು ಬಂದು॥ 

ಮಂಗಳ ಪವಿತ್ರ ಕೋಮಲ ಪಾದಪದ್ಮಯು।

ಗ್ಮಂಗಳ ಸಮೀಪದೊಳ್ ಚಂದ್ರಹಾಸಂ ಪ್ರಣಾ। 

ಮಂಗಳ ವಿಧಾನಮಂ ಮಾಡುತಿರೆ ಹರಿ ತೆಗೆದು ಬಿಗಿದಪ್ಪಿದಂ ಕೃಪೆಯೊಳು॥೧೨॥ 


ಪ್ರತಿಪದಾರ್ಥ :- ಚಂದ್ರಹಾಸಂ= ಚಂದ್ರಹಾಸನು, ಸೂಸುವ= ಕಾಣತಕ್ಕ,  ಉದಕಂಗಳ= ಕಣ್ಣೀರುಗಳ, ಪೊನಲ್= ಧಾರೆಯು, ಕಂಗಳ= ಕಣ್ಣುಗಳಿಂದ, ನಿರೀಕ್ಷಣದ= ಈಕ್ಷಿಸುವುದರಿಂದ, ಸೌಖ್ಯಮಂ= ಆನಂದವನ್ನು,  ತಡೆಯೆ= ಅಡಗಿಸು- 

ತ್ತಿರಲು, ಭಯ= ಹೆದರಿಕೆಯಿಂದ,  ಭರಿತ= ತುಂಬಿದ, ಭಕ್ತಿ= ಭಕ್ತಿಯಾದರೊ, ಹರುಷದಿಂದ= ಆನಂದದಿಂದ, ಏಳ್ವ= ಉಬ್ಬುವ, ಪುಲಕಂಗಳ= ರೋಮಾಂಚದ, ನೆಗಳ್ಕೆಯಿಂ= ಆಗುವುದರಿಂದ, ಬಾರಿಸೆ= ಮೇಲಕ್ಕೆಬ್ಬಿಸುತ್ತಿರಲು, ರಥವನು= ರಥದಿಂದ, ಇಳಿದು= ಕೆಳಕ್ಕಿಳಿದು, ಮಂಗಳ= ಶುಭಪ್ರದವಾದ,ಪವಿತ್ರ= ಸ್ವಚ್ಛವಾದ, ಕೋಮಲ= ಮೆತ್ತಗಿರತಕ್ಕ, ಪಾದಪ-

ದ್ಮಯುಗಳಂಗಳ= = ತೃವರೆಯ ಎಲೆಗಳನ್ನು ಹೋಲುವ ಎರಡು ಕಾಲ್ಗಳ, ಸಮೀಪದೊಳ್= ಹತ್ತಿರದಲ್ಲಿ, ಪ್ರಣಾಮಂಗಳ ವಿಧಾನಮಂ= ನಮಸ್ಕಾರಗಳನ್ನು, ಮಾಡುತ= ನೆರವೇರಿಸುತ್ತ,ಇರೆ=ಇರಲಾಗಿ,  ಹರಿ= ಕೃಷ್ಣನು,  ಕೃಪೆಯೊಳು= ಕರುಣೆಯಿಂದ,  ತೆಗೆದು= ಹತ್ತಿರಕ್ಕೆ ಕರೆದುಕೊಂಡು, ಬಿಗಿಯಪ್ಪಿದಂ= ಗಟ್ಟಿಯಾಗಿ ತಬ್ಬಿಕೊಂಡನು.  


ಅ॥ವಿ॥ ಪದ್ಮಗಳಂತಿರುವ ಪಾದಗಳು= ಪಾದಪದ್ಮಂಗಳು( ಉತ್ರರ ಪದ, ಕ, ಸ) ಮಂಗಳವಾದ, ಪವಿತ್ರವಾದ, ಕೋಮಲವಾದ, ಪಾದಪದ್ಮಂಗಳು ( ವಿ, ಪೂ. ಕ. ಸ. ) ಮಂಗಳ ಪವಿತ್ರ ಕೋಮಲ ಪಾದಪದ್ಮಯುಗ್ಮ( ಷ. ತ.) 

ಅಸುರ+ಅರಿ= ಅಸುರಾರಿ ( ಸ. ದೀ. ಸಂ.)


ತಾತ್ಪರ್ಯ:- ಶ್ರೀಕೃಷ್ಣದರ್ಶನವು ಚಂದ್ರಹಾಸನ ಕಣ್ಣುಗಳಲ್ಲಿ ಆನಂದಾಶ್ರುಗಳ ಧಾರೆಯನ್ನು ತಂದೆತು. ಇದರಿಂದ ಶ್ರೀಕೃಷ್ಣನ ಮೂರ್ತಿದರ್ಶನಕ್ಕೆ ಸ್ವಲ್ಪ ಅಡ್ಡಿಯಾಯಿತು. ಸಂತೋಷದಿಂದ ರೋಮಾಂಚನವುಂಟಾಯಿತು. ಚಂದ್ರಹಾಸನು ಭಯಭರಿತ ಭಕ್ತಿಯಿಂದ ರಥವನ್ನಿಳಿದು ಬಂದು ಮಂಗಳವೂ ಪವಿತ್ರವೂ ಕೋಮಲವೂ ಆದ ಶ್ರೀಕೃಷ್ಣನ ಪಾದಕಮಲಗಳಿಗೆ ನಮಸ್ಕರಿಸಿದನು. ಶ್ರೀಕೃಷ್ಣನು ಅವನನ್ನು ಮೇಲಕ್ಕೆತ್ತಿ ಕೃಪೆಯಿಂದ  ಆಲಿಂಗಿಸಿದನು. 


ಅಸುರಾರಿ ಬಳಿಕರ್ಜುನನ ವದನಮಂ ನೋಡಿ। 

ನಸುನಗುತ ನುಡಿದನೇತಕೆ ಸುಮ್ಮನಿಹೆ ಧರ್ಮಿ। 

ಶಶಿಹಾಸನತಿಬಲಂ ಪರಿಣತಂ ಧ್ರುವಸನ್ನಿಭಂ ತನಗೆ ಭಕ್ತನಿವನು॥ 

ಒಸೆದು ನೀನಾಲಂಗಿಸೆನೆ ದೇವ ನಿಮ್ಮಡಿಗ। 

ಳುಸಿರಿದುವಲಾ ತನ್ನ ಮಾರ್ಗಗತಿ ಲೇಸನ್ಯ। 

ರೆಸಗುವಂದದೊಳಾಚರಿಸೆ ಭಯಾವಹಮೆಂದು ಭೀಷ್ಮ ಸಂಗರದೊಳೆನಗೆ॥೧೩॥ 


ಪ್ರತಿಪದಾರ್ಥ :- ಬಳಿಕ=ಅನಂತರ, ಅಸುರಾರಿ = ಕೃಷ್ಣನು,  ಅರ್ಜುನನ= ಪಾರ್ಥನ,  ಮುಖಮಂ=ಮುಖವನ್ನು,  ನೋಡಿ=ಈಕ್ಷಿಸಿ,  ನಸುನಗುತ= ಮುಗುಳ್ನಗುತ್ತ, ನುಡಿದನು= ಮುಂದೆ ಹೇಳುವಂತೆ ಹೇಳಿದನು, ಏತಕೆ= ಯಾವ ಕಾರಣದಿಂದ,  ಸುಮ್ಮನಿಹೆ= ಮೌನವಾಗಿರುವೆ, ಶಶಿಹಾಸನು= ಚಂದ್ರಹಾಸನು, ಧರ್ಮಿ=ಧರ್ಮಿಷ್ಟ, ಅತಿಬಲಂ= ಬಹಳ ಪರಾಕ್ರಮಿ, ಪರಿಣತಂ= ತಿಳೈವಳಿಕೆಯುಳ್ಳವನು, ಧ್ರುವಸನ್ನಿಭಂ = ಧ್ರುವಚಕ್ರವರ್ತಿ ಸಮಾನನು, ಇವನು= ಈ ಇಂದುಹಾಸನು, ತನಗೆ= ನನಗೆ, ಭಕ್ತನು=ಭಜಕನು, ನೀನು= ನೀನು, ಒಸೆದು= ವಿಶ್ವಾಸದಿಂದ,  ಆಲಂಗಿಸು= ಅಪ್ಪಿಕೊ, ಎನೆ=ಎನ್ನಲು, ದೇವ= ಎಲೈ ಪ್ರಭುವೆ, ನಿಮ್ಮಡಿಗಳು= ತಾವು, ಉಸಿರೆದುವಲಾ=ನುಡಿದಿರಲ್ಲವೇ, ಆ ತನ್ನ=ಆ ನನ್ನ,  ಮಾರ್ಗಗತಿ= ರೀತಿಯು, ಲೇಸು= ಉತ್ತಮವು, ಅನ್ಯರು=ಬೇರೆಯವರು, ಎಸಗುವ=ಮಾಡುವ, ಅದದೊಳು= ತೆರನಾಗಿ,  ಆಚರಿಸೆ= ನೆರವೇರೆಸಲು, ಭೀಷ್ಮ ಸಂಗರದೊಳು=ಭೀಷ್ಮಾಚಾರ್ಯರೊಂದಿಗೆ ನಡೆಸಿದ ಕಾಳಗದಲ್ಲಿ,  ಭಯಾವಹಂ= 

ಭಯವನ್ನುಂಟುಮಾಡತಕ್ಕದ್ದಾಗಿದೆ,ಎಂದು= ಎಂಬುದಾಗಿ, (ಎಂದರೆ ಭೀಷ್ಮಾಚಾರ್ಯರೊಂದಿಗೆ ಯುದ್ಧ ಮಾಡಿದಂತೆ ಈಗಲೂ ಈ ಚಂದ್ರಹಾಸನೊಂದಿಗೆ ಕದನವನ್ನು ಮಾಡಲೇಬೇಕೆಂಬ ಭಾವವು) 


ತಾತ್ಪರ್ಯ:- ಬಳಿಕ ಶ್ರೀಕೃಷ್ಣನು ಅರ್ಜುನನ ಮುಖವನ್ನು ನೋಡಿ ನಸುನಗುತ್ತಾ " ಏಕೆ ಸುಮ್ಮನಿರುವೆ ? ಚಂದ್ರಹಾಸನು ಧರ್ಮದಿಂದ ನಡೆಯುವವನು, ಮಹಾಬಲಶಾಲಿ, ಧ್ರುವನಿಗೆ ಸಮಾನನಾದ ನನ್ನ ಭಕ್ತ. ಪ್ರೀತಿಯಿಂದ ಇವನನ್ನಾಲಿಂಗಿಸು" ಎಂದನು. ಅರ್ಜುನನು " ದೇವಾ ನೀನೇ ಹೇಳಿದಂತೆ ನನ್ನ ಕರ್ತವ್ಯವನ್ನುನಾನು ಮಾಡಬೇಕು.  ನನ್ನ  ಧರ್ಮವನ್ನು ಬಿಟ್ಟರೆ ಅದು ಭಯಕ್ಕೆ ಕಾರಣವಾಗುತ್ತದೆ" ಎಂದನು. 


ಅದರಿಂದೆ ಕಾಳೆಗವೆ ತನಗೆ ಕರ್ತವ್ಯಮೀ। 

ಪದದೊಳಾಲಿಂಗನಮುಚಿತಮಲ್ಲವೃದ್ಧನಹ। 

ನದರಿಂದೆ ಬೇಕಾದೊಡೀತಂಗೆ ವಂದಿಸುವೆನೆನೆ ತನ್ನ ಕಿಂಕರರ್ಗೆ॥ 

ಮುದದೊಳೆರಗಿದೊಡೆ ಮೇಣವರನಪ್ಪಿದೊಡೆ ತ। 

ಪ್ಪದು ಮಾನವರ್ಗೆ ಕಾಪಿಲ ಗೋ ಸಹಸ್ರ ದಾ। 

ನದ ಪುಣ್ಯಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಹೇಳೆಂದನು॥೧೪॥ 


ಪ್ರತಿಪದಾರ್ಥ :- ಅದರಿಂದ =ಆದಕಾರಣ,  ಕಾಳಗವೆ=ಹೋರಾಟವೇ, ತನಗೆ= ನನಗಾದರೊ, ಕರ್ತವ್ಯಂ= ಮಾಡತಕ್ಕ- 

ದ್ದಾಗಿದೆ, ಈ ಪದದೊಳು=ಇಂತಹ ಕಾಲದಲ್ಲಿ, ಆಲಿಂಗನಂ= ತಬ್ಬಿಕೊಳ್ಳುವುದು, ಉಚಿತಂ ಅಲ್ಲ=ಯುಕ್ತವಾಗಿ ತೋರು- 

ವುದಿಲ್ಲ, ವೃದ್ಧನು= ಮುದುಕನು, ಅಹನು= ಆಗಿದ್ದಾನೆ,  ಬೇಕಾದೊಡೆ= ನಿನಗೆ ಇಷ್ಟವಾಗಿದ್ದರೆ, ಈತಂಗೆ= ಈ ಇಂದುಹಾ- 

ಸಂಗೆ, ಆದರದಿಂದ=ಪ್ರೀತಿಯಿಂದ,  ವಂದಿಸುವೆನು= ನಮಸ್ಕರಿಸುವೆನು, ಎನೆ= ಎನ್ನಲು, ಪಾರ್ಥ=ಫಲುಗುಣನೆ, ತನ್ನ ಕಿಂಕರರ್ಗೆ= ತನ್ನ ಭಕ್ತರಿಗೆ, ಮುದದೊಳು=ಅಕ್ಕರೆಯಿಂದ, ಎರಗಿದೊಡೆ= ವಂದಿಸಿದರೆ, ಮೇಣು=ಅಲ್ಲದೆ, ಅವರನು=ಆ ಭಕ್ತರನ್ನು, ಅಪ್ಪಿದೊಡೆ= ತಬ್ಬಿಕೊಂಡರೆ, ಕಾಪಿಲ= ಕಪಿಲವರ್ಣವನ್ನುಂಟಾಗಿರುವ, ಗೋಸಹಸ್ರ= ಸಾವಿರ ಆಕಳುಗಳ, ದಾನದ= ದಾನಮಾಡುವುದರ, ಪುಣ್ಯಂ=ಸುಕೃತವು, ಮಾನವರ್ಗೆ= ನರರಿಗೆ, ತಪ್ಪದು=ತಪ್ಪುವುದಿಲ್ಲ,  ಎನ್ನ=ನನ್ನ, ಭಕ್ತರನು= ಪೂಜಿಸುವವರನ್ನು, ಆದರಿಪುದು= ಸತ್ಕರಿಸುವುದು, ಅಧರ್ಮವೆ= ಧರ್ಮಕ್ಕೆ ವಿರುದ್ಧವೇ, ಎಂಬುದಾಗಿ ಪ್ರಶ್ನೆ

ಮಾಡಿದನು. 


ತಾತ್ಪರ್ಯ:- "ಆದುದರಿಂದ ನನಗೆ ಯುದ್ಧ ಮಾಡುವೈದೇ ಕರ್ತವ್ಯ.  ಈಗ ಆಲಿಂಗಿಸುವುದು ಉಚಿತವಲ್ಲ. ಇವನು ವೃದ್ಧನೆಂಬ ಕಾರಣಕ್ಕೆ ಬೇಕಾದರೆ ನಮಸ್ಕರಿಸುತ್ತೇನೆ." ಎಂದು ಅರ್ಜುನನು ಹೇಳಿದನು. ಶ್ರೀಕೃಷ್ಣನು " ನನ್ನ ಭಕ್ತರಿಗೆ ನಮಸ್ಕರಿಸಿದರೆ, ಆಲಿಂಗಿಸಿದರೆ ಮನುಷ್ಯರಿಗೆ ಸಹಸ್ರ ಕಪಿಲೆ ಗೋವುಗಳನ್ನುದಾನಮಾಡಿದ ಫಲವು ಬರದೆ ಬಿಡುವುದಿಲ್ಲ.  ಅರ್ಜುನ ನನ್ನ ಭಕ್ತರನ್ನು ಆದರಿಸುವುದು ಅಧರ್ಮವೆ? ಹೇಳು" ಎಂದನು. 


ತನ್ನ ಶರಣರ ಜೀವನವೆ ತನಗೆ ಜೀವನಂ। 

ತನ್ನ ಶರಣರ್ ಬೇರೆ ತಿಳಿಯೆ ತಾಂ ಬೇರಲ್ಲ। 

ತನ್ನ ಶರಣರ ಹೃದಯಕಮಲದೊಳ್ ಪ್ರತ್ಯಕ್ಷಮಾಗಿ ತಾನಿರುತಿರ್ಪೆನು॥ 

ನಿನ್ನ ತೆರದಿಂ ಮರುಳರಾರುಂಟು ಲೋಕದೊಳ್। 

ನಿನ್ನ ತೆರದಿಂದೀತನೆನಗೆ ಬೇಕಾದವಂ। 

ನಿನ್ನ ತೆರನೇನೆಂದು ಜರೆದು ಕೌಂತೇಯನಂ ಕೇಳ್ದನಸುರಾರಿ ನಗುತೆ॥೧೫॥


ಪ್ರತಿಪದಾರ್ಥ :- ಅಸುರಾರಿ=ಕೃಷ್ಣನು, ನಗುತ= ಮುಗುಳ್ನಗುತ್ತ, ಕೌಂತೇಯನಂ= ಪಾರ್ಥನನ್ನು, ಜರೆದು=ಹೀಯಾಳಿಸಿ,  ತನಗೆ= ನನಗೆ, ತನೂನ ಶರಣರ= ನನ್ನನ್ನು ಮರೆಹೊಕ್ಕವರ, ಜೀವನವೆ= ಬಾಳೆ, ಜೀವನವು= ಬದುಕು, ತನ್ನ ಶರಣರು= ನನ್ನ ಭಕ್ತರು, ಬೇರೆ ತಿಳಿಯೆ= ಬೇರೆ ವಿಧವಾಗಿ ತಿಳಿದುಕೊಂಡರೆ, ತಾಂ=ನಾನು, ಬೇರಲ್ಲ=ಬೇರೆಯವನಲ್ಲ, ನಾನು= ನೃನು, ತನ್ನ ಶರಣರ= ನನ್ನನ್ನು ಮರೆಹೊಕ್ಕವರನ್ನು, ಹೃದಯಕಮಲದೊಳ್= ಮನಸ್ಸಿನಲ್ಲಿ,  ಪ್ರತ್ಯಕ್ಷಮಾಗಿ = ಗೋಚರವಾಗುವಂ-

ತೆ, ಇರುತಿರ್ಪೆನು= ಇರುತ್ತೇನೆ. ಲೋಕದೊಳ್= ಭೂಮಿಯಲ್ಲಿ,  ಮರುಳರು= ಅವಿವೇಕಿಗಳು, ನಿನ್ನ ತೆರದೊಳು= ನಿನ್ನಂತೆ, ಆರು= ಮತ್ತೆ ಯಾರು, ಉಂಟು= ಇದ್ದಾರೆ, ಈತನು=ಈ ಇಂದುಹಾಸನು,  ಎನಗೆ=ನನಗೆ, ನಿನ್ನ ತೆರದಿಂದ= ನಿನಗಿಂತಲೂ ಹೆಚ್ಚಾಗಿಯೇ, ಬೇಕಾದವಂ= ಬೇಕಾದವನಾಗಿರುವನು, ನಿನ್ನ ತೆರನು= ನಿನ್ನ ಬಗೆಯು, ಏನು= ಎಂಥಾದ್ದು, ಎಂದು=ಎಂಬುದಾಗಿ,  ಕೇಳ್ದನು= ಕೇಳಿದನು. 


ತಾತ್ಪರ್ಯ:- ಶ್ರೀಕೃಷ್ಣನು " ನನ್ನ  ಶರಣರ ಜೀವನವೇ ನನಗೆಶಜೀವನ. ನನ್ನ ಶರಣರು ಬೇರೆ ನಾನು ಬೇರೆ ಅಲ್ಲ. ನನ್ನ ಶರಣರ ಹೃದಯ ಕಮಲದಲ್ಲಿ ನಾನು ಪ್ರತ್ಯಕ್ಷನಾಗಿರುತ್ತೇನೆ. ಈ ಲೋಕದಲ್ಲಿ ನಿನ್ನಂಥ ಹುಚ್ಚರು ಯಾರಿದ್ದಾರೆ! ಇವನು ನನಗೆ ನಿನ್ನಷ್ಟೇ ಬೇಕಾದವನು; ನಿನ್ನ ರೀತಿಯೇನು?" ಎನದು ನಗುತ್ತಾ ಕೇಳಿದನು. 


ಭೂಪಾಲ ಕೇಳ್ ಬಳಿಕ ಫಲುಗುಣಂ ಕೃಷ್ಣನ ನಿ। 

ರೂಪಮಂ ಕೈಗೊಂಡು ಹರ್ಷದಿಂದಾಗ ನಿ। 

ಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಗೈಯಲು॥ 

ಆ ಪೊಡವಿಪತಿ ನುಡಿದನೆಲೆ ಪಾರ್ಥ ಕದನ ದಾ। 

ಳಾಪಮಂ ನಿನ್ನೊಡನೆ ಮಾಡಿದೊಡೆ ನೃಪಮಖಂ। 

ಲೋಪಮಹುದೆಂದು ಕಳುಹಿದೆನೆನ್ನ ತನುಜರಂ ತುರುಗ ರಕ್ಷಾರ್ಥಮಾಗಿ॥೧೬॥ 


ಪ್ರತಿಪದಾರ್ಥ :- ಭೂಪಾಲ= ಭೂಕಾಂತನಾದ ಜನಮೇಜಯನೆ, ಕೇಳು=ಲಾಲಿಸು,ಬಳಿಕ =ಅನಂತರ, ಫಲುಗುಣಂ= ಪಾರ್ಥನು, ಕೃಷ್ಣನ =ಕೃಷ್ಣನ, ನಿರೂಪಮಂ= ಆಜ್ಞೆಯನ್ನು, ಕೈಕೊಂಡು= ಅನುಮೋದಿಸಿ, ಹರುಷದಿಂದ= ಆನಂದದಿಂದ, ಬಂದು= ಬಂದು, ಆಗ= ಆ ವೇಳೆಯೊಳಗೆ, ನಿಷ್ಪಾಪನಾಗಿ= ಪಾಪರಹಿತನಾಗಿ, ಇಹ=ಇರತಕ್ಕ, ಚಂದ್ರಹಾಸನಂ= ಇಂದು- 

ಹಾಸನನ್ನು,ಗಾಢಾಲಿಂಗನಗೈಯಲು= ಭದ್ರವಾಗಿ ಅಪ್ಪಿಕೊಳ್ಳಲು, ಆ ಪೊಡವಿಪತಿ = ಆ ದೇಶಾಧಿಪತಿಯಾದ ಇಂದುಹಾ- 

ಸನು, ಎಲೆ ಪಾರ್ಥ= ಅಯ್ಯಾ ಫಲುಗುಣ, ನಿನ್ನೊಡನೆ= ನಿನ್ನಕೂಡ, ಕದನದ=ಕಾಳಗದ, ಆಳಾಪಮಂ= ಪ್ರಸಂಗವನ್ನು, ಮಾಡಿದೊಡೆ= ಪ್ರಾರಂಭಿಸಿದರೆ, ನೃಪಮಖಂ=ಧರ್ಮರಾಯನ ಯಾಗವು,ಲೋಪಂ= ಅಡಚಣೆಗೆ ಸಿಕಕುವುದು, ಅಹುದು= ಆಗುತ್ತದೆ, ಎಂದು= ಎಂಬುದಾಗಿ ತಿಳಿದು, ತುರಗ ರಕ್ಷಾರ್ಥವಾಗಿ= ಕುದುರೆಗಳ ರಕ್ಷಣೆಗೋಸುಗ, ಎನ್ನ=ನನ್ನ,  ತನುಜರಂ= ಮಕ್ಕಳನ್ನು, ಕಳುಹಿದೆನು=ಕಳುಹಿಸಿದ್ದೇನೆ ಎಂಬುದಾಗಿ,  ನುಡಿದನು= ಹೇಳಿದನು. 


ತಾತ್ಪರ್ಯ:- ಎಂದು ಜರಿಯಲು, ಫಲುಗುಣನು ಕೃಷ್ಣನ ಅಪ್ಪಣೆಯಂತೆ ತಡಮಾಡದೆ ಬಂದು ಇಂದುಹಾಸನನ್ನು ಅಪ್ಪಿಕೊ-

ಕೊಳ್ಳಲು, ಆಗ ಇಂದುಹಾಸನು ಪಾರ್ಥನನ್ನು ಕುರಿತು ಕೇಳೈ ಫಲುಗುಣಾ! ನಿನ್ನೊಡನೆ ಯುದ್ಧಕ್ಕೆ ನಿಂತರೆ ಧರ್ಮನಂದನನ ಯಾಗಕ್ಕೆ ಭಂಗಬಂದೀತು ಎಂದು ಯೋಚಿಸಿ, ಯಜ್ಞಾಶ್ವಗಳ ರಕ್ಷೆಗಾಗಿ ನನ್ನ ಕುವರರಾದ ಪದ್ಮಾಕ್ಷ ಮಕರಧ್ವಜರನ್ನು ಕಳು-

ಸಿರುವೆನು. 


ಹಲವು ಮಾತುಗಳೇಕೆ ನಮಗೆ ನಿಮಗಾಶ್ರಯಂ। 

ಜಲಜಾಕ್ಷನಾಗಿರ್ದ ಬಳಿಕಾವಧರ್ಮಕೌ।

ಶಲಮಕಟ ಸಾಕಿನ್ನು ಪಾರ್ಥ ನಿನ್ನಶ್ವಂಗಳಂ ತರಿಸಿ ಕುಡುವೆನೆನುತೆ॥ 

ಬಲಸಹಿತ ಕುದುರೆಕಾವಲ್ಗೆ ಪೋಗಿಹ ಸುತರ । 

ಬಳಿಗೆ ಚರರಂ ಕಳುಹಿ ಕರೆಸಲವರೈತಂದು। 

ಫಲುಗುಣನ ವಾಜಿಗಳನ್ನೊಪ್ಪಿಸಿ ಮುರಾರಿಯಂ ಕಂಡರತಿಭಕ್ತಿಯಿಂದೆ॥೧೭॥


ಪ್ರತಿಪದಾರ್ಥ :- ಹಲವು ಮಾತುಗಳೇಕೆ= ಹೆಚ್ಚು ಮಾತುಗಳಿಂದ ಏನು ಪ್ರಯೋಜನ, ನಮಗೆ= ನಮಗೂ, ನಿಮಗೆ= ನಿಮಗೂ, ಆಶ್ರಯಂ= ಆಧಾರವಾಗಿರುವ, ಜಲಜಾಕ್ಷನು= ಶ್ರೀಕೃಷ್ಣನು, ಆಗಿರ್ದ ಬಳಿಕ= ಆದನಂತರ, ಆವ= ಯಾವತೆರ- 

ನಾದ, ಧರ್ಮಕೌಶಲಂ= ಕ್ಷಾತ್ರಧರ್ಮವು ಬೇಕಾಗಿರುವುದು, ಪಾರ್ಥ= ಎಲೈ ಫಲುಗುಣನೆ, ಅಕಟ= ಅಯ್ಯೊ, ಇನ್ನು= ಇನ್ನುಮುಂದೆ, ಸಾಕು= ಯುದ್ಧದ ಗೊಡವೆ ಬೇಡ, ನಿನ್ನ = ನಿನ್ನದಾದ, ಅಶ್ವಂಗಳಂ= ಕುದುರೆಗಳನ್ನು,  ತರಿಸಿಕೊಡುವೆನು= ತರಿಸಿಕೊಡುತ್ತೇನೆ, ಎನುತ= ಎಂದು ನುಡಿಯುತ್ತ,  ಚರರಂ= ದೂತರನ್ನು,  ಕುದುರೆಗಾವಲ್ಗೆ= ಯಾಗದ ಕುದುರೆಗಳ ಪಾಲನೆಗೆ, ಬಲಸಹಿತ= ದಳದೊಂದಿಗೆ, ಪೋಗಿಹ= ಹೋಗಿರತಕ್ಕ, ಸುತರಬಳಿಗೆ=ಪುತ್ರರ ಸಮೀಪಕ್ಕೆ,  ಕಳುಹಿ= ಕಳುಹಿಸಿ ಕೊಟ್ಟು, ತರಿಸಲು= ಬರುವಂತೆ ಮಾಡಲಾಗಿ, ಅವರು= ಆ ಪುತ್ರರೀರ್ವರೂ, ಐತಂದು= ಬಂದು, ಅತಿಭಕ್ತಿಯಿಂದ= ಹೆಚ್ಚಾದ ಭಕ್ತಿಯಿಂದ, ಫಲುಗುಣನ= ಪಾರ್ಥನ, ವಾಜಿಗಳನು= ಕುದುರೆಗಳನ್ನು, ಒಪ್ಪಿಸಿ = ಒಪ್ಪಿಸಿಬಿಟ್ಟು, ಮುರ್ರಿಯಂ= ಶ್ರೀಕೃಷ್ಣನನ್ನು, ಕಂಡರು= ಕಾಣಿಸಿಕೊಂಡರು. 


ತಾತ್ಪರ್ಯ:- ಎಲೈ ಅರ್ಜುನ, ಹೆಚ್ಚಾದ ಮಾತುಗಳಿಂದ ಫಲವೇನು, ನಮ್ಮಿಬ್ಬರಿಗೂ ಕೃಷ್ಣಸ್ಮಾಮಿಯೇ ಆಸರೆಯಾಗಿರುವು- 

ದರಿಂದ, ನಾನು ಈಗಲೇ ಚರರನ್ನು ಕಳುಹಿ ಯಜ್ಞಾಶ್ವಗಳನ್ನು ತರಿಸಿ ನಿನಗೆ ಕೊಡುವೆನೆಂದು ನುಡಿದು, ಕೂಡಲೆ ದೂತರನ್ನು ತನ್ನ ಕುವರರಿದ್ದೆಡೆಗೆ ಕಳುಹಿದನು. ಅವರು ತಡಮಾಡದೆ ಹೋಗಿ ಪದ್ಮಾಕ್ಷ ಮಕರಧ್ವಜರಿಗೆ ಚಂದ್ರಹಾಸನ ಆಜ್ಞೆಯನ್ನು ಅರಿಕೆಮಾಡಿದರು. ಅವರೀರ್ವರಿಗೂ ಯಜ್ಞಾಶ್ವಗಳೊಂದಿಗೆಜಾಗ್ರತೆಯಾಗಿ ಬಂದು, ತಂದೆಯ ಅಪ್ಪಣೆಯ ಮೇರೆಗೆ ಆ ಕುದುರೆಗಳನ್ನು ಅರ್ಜುನನಿಗೊಪ್ಪಿಸಿ ಕೃಷ್ಣನ ಪಾದಾರವಿಂದಗಳಿಗೆ ಭಕ್ತಿಯಿಂದ ನಮಸ್ಕರಿಸಿದರು. 


ನರನೊಡನೆ ಸಖ್ಯಮಾದುದು ಬಳಿಕ ಬಂದ ನೃಪ। 

ವರರೆಲ್ಲಂ ಪ್ರಿಯದೊಳಾದರಿಸಿದಂ ಕೂಡೆ। 

ಹರಿಯನತಿಭಕ್ತಿಯಿಂದೈದೆ ಕೊಂಡಾಡಿದಂ ನಿರುಪಮ ಸ್ತುತಿಗಳಿಂದೆ॥ 

ಪರಿಪರಿಯ ಗುಡಿ ತೋರಣಾವಳಿಯ ರಚನೆ ಮಿಗೆ। 

ಪುರಕೆ ಬಿಜಯಂಗೈಸಿ ತಂದನುತ್ಸವದಿಂದೆ। 

ಸಿರಿಯನುರೆ ವಿಸ್ತರಿಸಿ ಭೂಪುರಂದರನಂತೆ ಚಂದ್ರಹಾಸನಂ ಮೆರೆದನು॥೧೮॥ 


ಪ್ರತಿಪದಾರ್ಥ :- ಸಖ್ಯಂ= ಸ್ನೇಹವು, ನರನೊಡನೆ=ಅರ್ಜುನನೊಡನೆ, ಆದುದು=ಉಂಟಾಯಿತು,  ಬಳಿಕ = ಅನಂತರ, ಬಂದ ನೃಪರೆಲ್ಲರಂ= ಬಂರ ರಾಜರುಗಳನ್ನೆಲ್ಲಾ, ಪ್ರಿಯದೊಳು= ವಿಶ್ವಾಸದಿಂದ,  ಆದರಿಸಿದಂ= ಸತ್ಕರಿಸಿದನು, ಕೂಡ= ಒಡನೆಯೇ, ಅತಿಭಕ್ತಿಯಿಂದ= ಹೆಚ್ಚಾದ ಭಕ್ತಿಯಿಂದ, ನಿರುಪಮ=ಅಸದೃಶವಾದ,  ಸ್ತುತಿಗಳಿಂದ= ಹೊಗಳುವುದರಿಂದ, ಐದೆ= ಚನ್ನಾಗಿ,  ಹರಿಯನು= ಕೃಷ್ಣನನ್ನು, ಕೊಂಡಾಡಿದನು= ನುತಿಸಿದನು, ಪರಿಪರಿಯ = ವಿಧವಿಧವಾದ, ಗುಡಿ= ಚಪ್ಪರಗಳು, ತೋರಣ= ತೋರಣಗಳು ಇವುಗಳ, ಆವಳಿಯ= ಸಮುದಾಯದ, ರಚನೆ= ಅಲಂಕಾರಗಳೆಲ್ಲಾ, ಮಿಗೆ= ಹೆಚ್ಚಾಗಿ, ಮೆರೆಯೆ= ಕಾಂತಿಯುಕ್ತವಾಗಲು, ಪುರಕೆ= ನಗರಕ್ಕೆ,  ಬಿಜಯಂಗೈಸಿ= ಬರಮಾಡಿ, ಉತ್ಸವದಿಂದ= ಅತ್ಯಾನಂದದಿಂದ,  ತಂದನು= ಕರೆದುಕೊಂಡು ಬಂದನು, ಚಂದ್ರಹಾಸಂ = ಚಂದ್ರಹಾಸನು, ಉರೆ= ಹೆಚ್ಚಾಗಿ, ಸಿರಿಯನು= ತನ್ನ ಐಶ್ವರ್ಯವನ್ನು, ವಿಸ್ತರಿಸಿ =ಪ್ರಕಟಿಸಿ, ಭೂ= ಭೂಲೋಕದ, ಪುರಂದರನಂತೆ= ದೇವೇಂದ್ರನೋಪಾದಿಯಲ್ಲಿ, ಮೆರೆದನು= ಪ್ರಕಾಶಿಸುತ್ತಲಿದ್ದನು. 


ತಾತ್ಪರ್ಯ ಆ ಬಳಿಕ ಇಂದುಹಾಸನಿಗೂ ಅರ್ಜುನನಿಗೂ ಸ್ನೇಹವಾಯಿತು. ಮಯೂರಧ್ವಜಾದಿ ರಾಜರನ್ನೆಲ್ಲಾ ವಿಶ್ವಾಸದಿಂದ ನೋಡಿದನು. ಶ್ರೀಕೃಷ್ಣ ಮೂರುತಿಯನ್ನು ಅತ್ಯಂತ ಭಕ್ತಿಯಿಂದ ಕೊಂಡಾಡುತ್ತಲಿದ್ದನು. ಅನಂತರ ತನ್ನ ಪಟ್ಟಣವನ್ನೆಲ್ಲಾ ಅಲಂಕಾರಮಾಡಿಸಿ ಕೃಷ್ಣಾದಿಗಳನ್ನೆಲ್ಲಾ ತನ್ನ ಊರಿಗೆ ಕರೆದುಕೊಂಡು ಹೋದನು. ತನ್ನ ಜನ್ಮವು ಇಂದಿಗೆ ಸಫಲವುಂಟಾಯಿತೆಂದು ಆ ಶಶಿಹಾಸನ ಸಂತೋಷಕ್ಕೆ ಪಾರವೇ ಇರಲಿಲ್ಲ, ಆಗ ಆ ಕುಂತಳನಗರವು ಭೂಲೋಕದ ಸ್ವರ್ಗದಂತೆ ಹೊಳೆಯುತ್ತಲಿತ್ತು. 


ಇಂದುಹಾಸಾಶ್ರಯದೊಳಿರ್ದಖಿಲ ಪುರಜನಂ। 

ಕಂದರ್ಪ ತಾತನಂ ಕಂಡು ಕೃತಕೃತ್ಯಮಾ। 

ಯ್ತಿಂದಿರಾ ವಲ್ಲಭನ ಸಂದರ್ಶನಕೆ ದುಷ್ಟಬುದ್ಧಿ ನಿಜ ಸೂನುಸಹಿತ॥ 

ಬಂದು ನಿರ್ಧೂತ ಕಿಲ್ಭಿಷನಾದನಾಗಳೈ। 

ತಂದು ಗಾಲವನ ಸುರಮರ್ದನನ ಪಾದಾರ। 

ವಿಂದಮಂ ವಿವಿಧಾಗಮೋಕ್ತದಿಂ ಪೂಜಿಸಿದನತಿ ಭಕ್ತಿ ಭಾವದಿಂದೆ॥೧೯॥


ಪ್ರತಿಪದಾರ್ಥ :- ಕಂದರ್ಪ= ಮನ್ಮಥನ, ತಾತನಂ= ತಂದೆಯಾದ ಕೃಷ್ಣನನ್ನು,  ಇಂದುಹಾಸನ= ಚಂದ್ರಹಾಸನ,  ಆಶ್ರಯದೊಳು= ಆಸರೆಯಲ್ಲಿ,ಇರ್ದ= ಇದ್ದಂಥ, ಅಖಿಳ= ಸಕಲ, ಪುರಜನಂ= ನಗರವಾಸಿಗಳೂ, ಕಂಡು=ನೋಡಿ, 

ಕೃತಕೃತ್ಯಮಾಯ್ತು= ಕೃತಾರ್ಥರಾದರು,ಇಂದಿರಾ= ಲೋಕಮಾತೆಯ, ವಲ್ಲಭನ= ಕಾಂತನಾದ ಕೃಷ್ಣನ,  ಸಂದರ್ಶನಕೆ= ದರ್ಶನಕ್ಕೆ,  ನಿಜಸೂನು ಸಹಿತ= ತನ್ನ ಕುವರನಾದ ಮದನನೊಂದಿಗೆ, ದುಷ್ಟಬುದ್ಧಿ = ದುಷ್ಟಬುದ್ಧಿಯು, ಬಂದು= ಬಂದು, ನಿರ್ಧೂತ= ನಿವಾರಣೆಯನ್ನೈದಿದ, ಕಿಲ್ಬಿಷನು= ದೋಷವುಳ್ಳವನಾದ, ಗಾಲವನು= ಗಾಲವ ಋಷಿಯೂ, ಆಗಲೆ= ಒಡನೆಯೇ, ಐತಂದು=ಬಂದು, ಅತಿ ಭಕ್ತಿ ಭಾವದಿಂದ = ಮಿಗಿಲಾದ ಭಕ್ತಿ ಪೂರ್ವಕವಾಗಿ, ವಿವಿಧ= ಅನೇಕ, ಆಗಮ= ವೇದಗಳ, ಉಕ್ತಿಯಿಂದ= ವಚನಗಳಿಂದ, ಅಸುರಮರ್ದನನ= ರಾಕ್ಷಸ ಸಂಹಾರಕನಾದ ಕೃಷ್ಣನ, ಪಾದಾರವಿಂದಮಂ= ಅಡಿದಾವರೆಗಳನ್ನು,ಪೂಜಿಸಿದನು.


ತಾತ್ಪರ್ಯ = ಚಂದ್ರಹಾಸನ ಆಶ್ರಯದಲ್ಲಿದ್ದ ಕುಂತಳ ನಗರದ ಎಲ್ಲ ಪುರಜನರೂ ಶ್ರೀಕೃಷ್ಣನನ್ನು ಕಂಡು ಕೃತಕೃತ್ಯರಾದರು. ದುಷ್ಟಬುದ್ಧಿಯು ತನ್ ಮಗ ಮದನನೊಡನೆ ಬಂದು ಶ್ರೀಕೃಷ್ಣನನ್ನು ಕಂಡು ಸಮಸ್ತ ಪಾಪಗಳನ್ನೂ ಕಳೆದುಕೊಂಡನು. ಗಾಲವನು ಬಂದು ಶ್ರೀಕೃಷ್ಣನ ಪಾದಗಳನ್ನೂ ವಿವಿಧ ಆಗಮಗಳ ಮಂತ್ರದಿಂದ ಅತಿ ಭಕ್ತಿ ಭಾವದಿಂದ  ಪೂಜಿಸಿದನು. 


ಪ್ರೀತಿಯಿಂ ಚಂದ್ರಹಾಸಂ ತನ್ನ ರಾಜ್ಯಮಂ। 

ಪೀತಾಂಬರನ ಚರಣ ಸರಸಿರುಹಕರ್ಪಿಸಿದ। 

ನಾತಂ ಧನಂಜಯನ ಸಮ್ಮತದೊಳೊಸೆದು ವಿಷಯಾ ಕುಮಾರಂಗೆ ಕೊಟ್ಟು॥ 

ಖ್ಯಾತಮಾದಖಿಳ ವಸ್ತುಗಳೊಡನೆ ಗಜಪುರಕೆ । 

ದೂತರಂ ಕಳುಹಿ ಸತ್ಕೃತನಾಗಿ ಭೂಪತಿ। 

ವ್ರಾತ ಸಹಿತಲ್ಲಿ ಮೂರಿರುಳಿರ್ದು ಪೊರಮಟ್ಟನೈದೆ ಕುದುರೆಗಳ ಕೂಡೆ॥೨೦॥


ಪ್ರತಿಪದಾರ್ಥ :- ಚಂದ್ರಹಾಸಂ = ಇಂದುಹಾಸನು, ಪೀತಾಂಬರನ= ಶ್ರೀಕೃಷ್ಣನ, ಚರಣಸರಿಸಿರುಹಕೆ= ಕಮಲದಂತಿರುವ ಪಾದಗಳಿಗೆ,  ತನ್ನ ರಾಜ್ಯಮಂ = ತನ್ನ ದೇಶವನ್ನು, ಪ್ರೀತಿಯಿಂದ= ಪ್ರೇಮದಿಂದ,  ಅರ್ಪಿಸಿದನು= ಕೊಟ್ಟನು,ಆತಂ= ಆ ಶ್ರೀಕೃಷ್ಣನು,  ಎಸೆದು= ಪ್ರಕಾಶವಾಗಿ, ವಿಷಯಕುಮಾರಂಗೆ= ವಿಷಯೆಯ ತನುಜ ಮಕರಧ್ವಜನೆಂಬುವನಿಗೆ, ಧನಂಜಯನ ಸಮ್ಮತದೊಳು= ಪಾರ್ಥನ ಇಷ್ಟದಂತೆ, ಕೊಟ್ಟು= ವಹಿಸಿ, ದೂತರಂ= ತನ್ನ ಸೇವಕರನ್ನು, ಖ್ಯಾತಮಾದ= ಹೆಸರುವಾಸಿಯಾದ,  ಅಖಿಲವಸ್ತುಗಳೊಡನೆ= ಸಕಲ ಪದಾರ್ಥಗಳೊಂದಿಗೆ ,ಗಜಪುರಿಗೆ= ಹಸ್ತಿತಿನಾವತಿಗೆ, ಕಳುಹಿ= ಕಳುಹಿಸಿ,  ಸತ್ಕೃತನಾಗಿ = ಮನ್ನಣೆಹೊಂದಿ, ಅಲ್ಲಿ= ಆ ಕುಂತಳ ನಗರದಲ್ಲಿ,  ಐದೆ= ಚನ್ನಾಗಿ, ಮೂರಿರುಳು=ಮೂರು ರಾತ್ರಿ, ಭೂಪತಿವ್ರಾತಸಹಿತ= ರಾಜರ ಸಮೊಹದೊಡನೆ, ಇರ್ದು=ಇದ್ದು, ಕೂಡ= ಒಡನೆ, ಪೊರಮಟ್ಟನು= ಹೊರಟನು. 


ತಾತ್ಪರ್ಯ:- ಆ ಬಳಿಕ ಸಂತುಷ್ಟನಾದ ಚಂದ್ರಹಾಸನು ತನ್ನ ರಾಜ್ಯವನ್ನು ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಿದನು. ಶ್ರೀಕೃಷ್ಣನು ಅರ್ಜುನನ ಸಮ್ಮತಿಯಿಂದ ಆ ರಾಜ್ಯವನ್ನು ವಿಷಯೆಯ ಮಗನಾದ ಮಕರಧ್ವಜನಿಗೆ ಕೊಟ್ಟು ಅಲ್ಲಿಯ ಉತ್ತಮವಾದ ವಸ್ತುಗಳನ್ನೆಲ್ಲಾ ಹಸ್ತಿನಾವತಿಗೆ ಕಳುಹಿಸಿ ಅರ್ಜುನಾದಿಗಳೊಡನೆ ಚಂದ್ರಹಾಸನ ಸತ್ಕಾರವನ್ನು ಸ್ವೀಕರಿಸಿ, ಕುಂತಳರಾಜ್ಯದಲ್ಲಿಯೇ ಮೂರು ದಿನಗಳಿದ್ದು, ಅನಂತರ ಸರ್ವರನ್ನೂ ಕರೆದುಕೊಂಡು ಯಜ್ಞಾಶ್ವಗಳೊಡನೆ ಮುಂದೆ ಹೊರಟನು. 





ಶನಿವಾರ, ಫೆಬ್ರವರಿ 7, 2026

ಜೈಮಿನಿ ಭಾರತ 31 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 31 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ಕೃತ ವಿವಾಹದೊಳಗುಪಹತಿಯ ಕೃತಕಂಗಳಿಂ । 

ಸುತನೊಡನೆ ಮೃತನಾದ ಮಂತ್ರಿಯಂ ಧರಣಿಗಧಿ। 

ಪತಿಯಾಗಿ ನೆಗಪಿದಂ ಚಂದ್ರಹಾಸಂ ಚಂಡಿಕಾದೇವಿಯಂ ಮೆಚ್ಚಿಸಿ॥


ಪ್ರತಿಪದಾರ್ಥ :- ಚಂದ್ರಹಾಸಂ= ಚಂದ್ರಹಾಸನು, ಧರಣಿಗೆ= ಭೂಮಂಡಲಕ್ಕೆ, ಅಧಿಪತಿಯಾಗಿ= ರಾಜನಾಗಿ, ಚಂಡಿಕಾ- 

ದೇವಿಯಂ= ಚಂಡಿಕೇಶ್ವರಿಯನ್ನು, ಮೆಚ್ಚಿಸಿ= ಮುಚ್ಚುವಂತೆ ಮಾಡಿ, ಕೃತ= ನೆರವೇರಿದ, ವಿವಾಹದೊಳು= ಲಗ್ನದಲ್ಲಿ, ಉಪಹತಿಯ= ಕೊಂದುಹಾಕುವುದರ, ಕೃತಕಂಗಳಿಂ= ಕಾರ್ಯಗಳಿಂದ, ಸುತನೊಡನೆ= ಮಗನೊಡನೆ, ಮೃತನಾದ= ಸತ್ತುಬಿದ್ದಿದ್ದ, ಮಂತ್ರಿಯಂ= ಅಮಾತ್ಯನನ್ನು, ನೆನಪಿದಂ= ಪುನಃ ಜೀವಿಸುವಂತೆ ಮಾಡಿದನು. 


ತಾತ್ಪರ್ಯ:- ಮದುವೆಯಾದ ಚಂದ್ರಹಾಸನನ್ನು ಕೊಲ್ಲಲು ಮಾಡಿದ ಕಪಟ ಕೃತ್ಯದಿಂದ ತಾನೇ ಮಗನೊಡನೆ ಮೃತನಾದ ದುಷ್ಟಬುದ್ಧಿಯನ್ನು ದೊರೆಯಾದ ಚಂದ್ರಹಾಸನು ಚಂಡಿಕಾದೇವಿಯನ್ನು ಮೆಚ್ಚಿಸಿ, ಬದುಕಿಸಿದನು. 


ವಾಸವಾತ್ಮಜ ಕೇಳಲಂಕಾರದಿಂ ಚಂದ್ರ। 

ಹಾಸನಂ ಮದವಳಿಗನಂ ಮಾಡುತಿರ್ದರ್ ಸು। 

ವಾಸಿನಿಯರುತ್ಸವದೊಳಿಂತೆಂದು ಮದನನಂತಃಪುರದೊಳೆಚ್ಚರಿಸಲು॥

ಪ್ರಾಸಾದದಗ್ರದೊಳ್ ತಪಿಸುತಿಹ ವಿಷಯೆಗೆ ವಿ। 

ಲಾಸಿನಿಯರೈತಂದು ನುಡಿದರಂಬುಜ ವನಕೆ। 

ನೇಸರುದಯಿಸುವ ಕಾಲದ ಮುಂದೆ ತಂಪಿಡಿದುಬೀಸುವೆಳಗಾಳಿಯಂತೆ॥೧॥


ಪ್ರತಿಪದಾರ್ಥ :- 

ವಾಸವಾತ್ಮಜ= ಇಂದ್ರಕುವರನಾದ ಫಲುಗುಣನೆ, ಕೇಳು= ಲಾಲಿಸು, ಸುವಾಸಿನಿಯರು= ಸುಮಂಗಲಿಯರು, ಚಂದ್ರಹಾಸನಂ = ಚಂದ್ರಹಾಸನನ್ನು,  ಉತ್ಸವದೊಳು= ಸಂಭ್ರಮದಲ್ಲಿ, ಮದವಳಿಗನಂ = ಮದುವೆಯ ಗಂಡನ್ನು, ಮಾಡುತಿರ್ದರ್=ಅಲಂಕರಿಸುತ್ತಿದ್ದರು,ಅಂತಃಪುರದೊಳು= ಸ್ತ್ರೀಯರಿದ್ದೆಡೆ, ಇಂತೆಂದು= ಈ ತೆರನಾಗಿ,  ಮದನನು= ದುಷ್ಟಬುದ್ಧಿಯ ಕುವರನು,  ಎಚ್ಚರಿಸಲು= ಹೇಳಿದ ಕಾರಣ, ವಿಲಾಸಿನಿಯರು= ಅಲ್ಲಿ ನೆರೆದಿದ್ದ ಹೆಂಗಸರು, ಐತಂದು=ಬಂದು, ನೇಸನೇಸರು=ರವಿಯು, ಉದಯಿಸುವ= ಮೂಡುವ, ಕಾಲದ= ವೇಳೆಯ, ಮುಂದೆ= ಮೊದಲೇ, ಅಂಬುಜವನಕೆ= ತಾವರೆಕೊಳದ ವನಕ್ಕೆ, ತಂಪಿಡಿದು= ತಣ್ಣನಾಗಿ, ಬೀಸುವ= ಬೀಸುತ್ತಲಿರುವ, ಎಳೆಗಾಳಿಯಂತೆ= ತಂಗಾಳಿಯ ಹಾಗೆ, ಪ್ರಾಸಾದದ= ಮಹಡಿಯ, ಅಗ್ರದೊಳ್= ತುದಿಯಲ್ಲಿ, ತವಿಸುತಿಹ= ಕಾಮಬಾಧೆಯನ್ನನುಭವಿಸುತ್ತಿ- 

ರುವ, ವಿಷಯೆಗೆ= ವಿಷಯೆಗೆ, ನುಡಿದರು= ತಿಳಿಸಿದರು. 


ತಾತ್ಪರ್ಯ:- ನಾರದಮುನಿಯು ಅರ್ಜುನನನ್ನು ಕುರಿತು ಇಂತೆಂದನು.  ಕೇಳೈ ಫಲುಗುಣನೆ, ದುಷ್ಟಬುದ್ಧಿಯ ಕುವರನಾದ ಮದನನು ವಿಷಯೆಯನ್ನು ಇಂದುಹಾಸನಿಗೆ ಕೊಟ್ಟು  ಮದುವೆಮಾಡಬೇಕೆಂದು ನಿಶ್ಚೈಸಿರತಕ್ಕ ಸುದ್ಧಿಯನ್ನು  ರಾಣಿವಾ-

ಸದ, ಸ್ತ್ರೀಯರೊಂದಿಗೆ ಹೇಳಿದ ಕೂಡಲೇ ಅವರೆಲ್ಲಾ ಚಂದ್ರಹಾಸನನ್ನು ಮದುವಣಿಗನನ್ನಾಗಿ ಮಾಡಿದರು. ಅಲ್ಲಿದ್ದ ನಾರಿಯರಲ್ಲಿ ಕೆಲವರು ತಡಮಾಡದೆ ಉಪ್ಪರಿಗೆಯ ಮೇಲಂತಸ್ತಿನಲ್ಲಿ, ವಿರಹವೇದನೆಯಿಂದ ತಪಿಸುತ್ತಲಿರುವ ವಿಷಯೆ-

ಯ ಬಳಿಗೆ ಹೋಗಿ ಈ ಸುದ್ದಿಯನ್ನು ಹೇಳಿದರು, ವಿಷಯಾಸಕ್ತಳಾದ ವಿಷಯೆಯು ಇವರ ಮಾತನ್ನು ಕೇಳಿದ ಕೂಡಲೇ ಕಮಲಗಳ ವನಕ್ಕೆ ಸೂರ್ಯಕಾಂತಿಯು ಬಿದ್ದಂತೆ ಅತ್ಯಾನಂದದಿಂದ ಕೂಡಿದವಳಾದಳು. 


ಸೊಗಯಿಸುವ ಪಚ್ಚಗಪ್ಪುರದ ಪುಡಿಯಂ ಮೈಗೆ। 

ತಿಗುರಿದೊಡೆ ಬಾವನ್ನದೊಳ್ಗೆಸರನೆಸೆವ ಕುಚ। 

ಯುಗದೆಡೆಗೆ ಮೆತ್ತಿದೊಡೆ ಕಣ್ಣೆವೆಗೆ ಪನ್ನೀರನೊಡನೊಡನೆ ತೊಡೆದೊಡದಕೆ॥ 

ಮಿಗೆ ಪೆಚ್ಚಿತುರಿಯೆಂದು ಮತ್ತೆ ಸಿಡಿಮಿಡಿಗೊಂಡು। 

ಮುಗುಳಂಬನುರುಬೆಗಾರದೆ ಪೊರಳುತಿಹ ಮಂತ್ರಿ। 

ಮಗಳೆಡೆಗೆ ಪರಿತಂದು ನುಡಿದೊಳೊಸಗೆಯನಾಪ್ತ ಸಖಿಯೊರ್ವಳವಳಕೂಡೆ॥೨॥


ಪ್ರತಿಪದಾರ್ಥ :- ಒರ್ವಳು= ಒಬ್ಬಳು, ಸಖಿಯು=ಗೆಳತಿಯು, ಮೈಗೆ= ವಿಷಯೆ ದೇಹಕ್ಕೆ, ಸೊಗಯಿಸುವ = ಉತ್ತಮವಾದ, 

ಪಚ್ಚಕರ್ಪೂರದ ಪುಡಿಯಂ= ಪಚ್ಚಕರ್ಪೂರದ ಹುಡಿಯನ್ನು, ತಿಗುರಿದೊಡೆ= ಉಜ್ಜಿದರೆ, ಎಸೆವ= ಹೊಳೆವ, ಕುಚಯುಗ- 

ದೆಡೆಗೆ = ಸ್ತನಯುಗ್ಮಗಳಮೇಲೆ, ಬಾವನ್ನದ= ಶ್ರೀಗಂಧದ,ಒಳ್ಗೆಸರನು= ನೀರಾಗಿರುವ ಗಂಧವನ್ನು, ಮೆತ್ತಿದೊಡೆ= ಬಳಿದರೆ,

ಒಡನೊಡನೆ= ಬಾರಿಬಾರಿಗೂ,  ಪನ್ನೀರನು=ಗುಲಾಬಿ ಹೂವಿನ ನೀರನ್ನು, ಕಣ್ಣೆವೆಗೆ= ಕಣ್ಣು ರೆಪ್ಪೆಗೆ, ತೊಡೆದೊಡೆ=ಹಚ್ಚಿದ- 

ರೆ, ಅದಕೆ= ಹಾಗೆ ಬಳಿದ ಕಾರಣ, ಉರಿ= ತಾಪವು, ಮಿಗೆ= ಹೆಚ್ಚಾಗಿ, ಪೆಚ್ಚಿತು= ಬಲವಾಯಿತು, ಎಂದು= ಎಂಬುದಾಗಿ,  ಮತ್ತೆ=ತಿರುಗಿ, ಸಿಡಿಮಿಡಿಗೊಂಡು= ಕೋಪಗೊಂಡು,  ಮುಗುಳಂಬನ= ಮನ್ಮಥನ, ಉರುಬೆಗೆ= ಹೊಯ್ಲಿಗೆ, ಆರದೆ= ಸಹಿಸುವುದಕ್ಕೆ ಆಗದೆ, ಪೊರಳುತಿಹ = ಹೊರಳಾಡುತ್ತಿರುವ, ಮಂತ್ರಿಮಗಳೆಡೆಗೆ= ವಿಷಯೆಯ ಸಮೀಪಕ್ಕೆ,  ಪರಿತಂದು= ಜಾಗ್ರತೆಯಾಗಿ ಬಂದು, ಅವಳಕೂಡೆ= ಆ ವಿಷಯೆಯೊಂದಿಗೆ, ಒಸಗೆಯನು= ಶುಭ ವಾರ್ತೆಯನ್ನು, ನುಡಿದಳು= ತಿಳಿಸಿದಳು. 


ತಾತ್ಪರ್ಯ:- ಮೈಯುರಿಯೆಂದು ನರಳುವ ವಿಷಯೆಯ ಮೈಗೆ ಪಚ್ಚಕರ್ಪೂರದ ಪುಡಿಯನ್ನು ತೀಡಿದರೆ, ಚಂದನದ ಗಂಧವನ್ನು ಮೊಲೆಗಳ ಮೇಲೆ ಹಚ್ಚಿದರೆ, ಕಣ್ಣೆವೆಗೆ ಪನ್ನೀರನ್ನು ಹಚ್ಚಿದರೆ,  ಉರಿಯು ಹೆಚ್ಚಿಯಿತೆಂದು ಸಿಡಿಮಿಡಿಗೊಳ್ಳುತ್ತಾ ಮದನತಾಪವನ್ನು ಸಹಿಸದೆ ಹೊರಳುತ್ತಿದ್ದ ವಿಷಯೆಯ ಬಳಿಗೆ ಆಪ್ತಸಖಿಯೊಬ್ಬಳು ಬಂದು ಶುಭಸಮಾಚಾರವನ್ನು ಹೇಳಿದಳು. 


ಚಿಂತೆಯಂ ಬಿಡು ತರಳೆ ಕೈಸಾರ್ದುದೀಗ ನಿ। 

ನ್ನಂತರಂಗದ ಬಯಕೆ ಶಶಿಹಾಸನೆಂಬವಂ। 

ಕಂತು ಸಮನಾಗಿಹಂ ನೀನದೇಂ ಪುಣ್ಯಮಂ ಮಾಡಿದೆಯೊ ಮುನ್ನಿನೊಳು॥ 

ಕುಂತಳೇಂದ್ರನ ಕುವರಿ ನಗುತ ಸರಸದೊಳಾಡಿ। 

ದಂತಾಯ್ತು ತಂದೆ ಕಳುಹಿದ ಲೇಖನವನೋದಿ। 

ಸಂತಸದೊಳಿಂದು ಮದನಂ ನಿನ್ನನಾತಂಗೆ ಕುಡುವೆನೆಂದವಳೊರೆದಳು॥೩॥


ಪ್ರತಿಪದಾರ್ಥ :- ತರಳೆ= ಎಲೈ ತರುಣಿಯೆ, ಚಿಂತೆಯಂ= ವ್ಯಥೆಯನ್ನು, ಬಿಡು= ಬಿಟ್ಟು ಬಿಡು, ನಿನ್ನ= ನಿನ್ನದಾದ, ಅಂತರಂಗದ= ಒಳಗೇ ನೆಲಸಿದ್ದ, ಬಯಕೆ= ಇಷ್ಟಾರ್ಥ, ಈಗ= ಈ ಸಮಯದಲ್ಲಿ, ಕೈಸಾರ್ದುದು= ನೆರವೇರುವುದು, ಮುನ್ನ= ಪೂರ್ವಜನ್ಮದಲ್ಲಿ, ಇಳೆಯೊಳು= ಪ್ರಪಂಚದಲ್ಲಿ, ನೀಂ= ನೀನು, ಅದೇಂಪುಣ್ಯಮಂ= ಇನ್ನೆಂಥ ಮೇಲ್ಮೆಯನ್ನು, ಮಾಡಿದೆಯೊ= ಎಸಗಿರುವೆಯೊ, ನಗುತ= ಮುಗುಳು ನಗುತ್ತಾ, ಸರಸದೊಳು= ಹಾಸ್ಯವಾಗಿ, ಕುಂತಳೇಂದ್ರನ ಕುವರಿ= ಕುಂತಳಾಧೀಶನ ಮಗಳಾದ, ಚಂಪಕಮಾಲಿನಿ = ಚಂಪಕಮಾಲಿನಿಯೆಂಬ ನಿನ್ನ ಸಖಿಯು, ಆಡಿದಂತೆ= ನುಡಿದ ಹಾಗೆಯೆ, ಆಯ್ತು= ಉಂಟಾಯಿತು, ಇಂದು= ಈ ಹೊತ್ತು, ಮದನಂ= ಮದನನಾದರೊ, ತಂದೆ= ತಂದೆಯಾದ ದುಷ್ಟಬುದ್ಧಿಯು, ಕಳುಹಿದ= ಕಳುಹಿಸಿದಂಥ, ಲೇಖನವ= ಕಾಗದವನ್ನು, ನೋಡಿ= ನೋಡಿಕೊಂಡು, ಆತಂಗೆ= ಆ ಚಂದ್ರಹಾಸಂಗೆ, ನಿನ್ನನು= ನಿನ್ನನ್ನು, ಸಂತಸದೊಳು= ಪ್ರೇಮದಿಂದ, ಕೊಡುವನು= ಮದುವೆಮಾಡಿಕೊಡುವನು, ಎಂದು= ಎಂಬುದಾಗಿ,  ಅವಳು= ಆ ಸಖಿಯು, ಒರೆದಳು=ನುಡಿದಳು. 


ತಾತ್ಪರ್ಯ:- ಅಮ್ಮಾ, ವಿಷಯೆ! ನೀನೇಕೆ ಯೋಚಿಸುವಿ, ನಿನ್ನ ಮನೋಭಿಪ್ರಾಯವು ನೆರವೇರಿತಾದ್ದರಿಂದ, ಇನ್ನು ಚಿಂತಿಸಬೇಡ, ಪೂರ್ವದಲ್ಲಿ ನೀನು ಮಾಡಿದ ಪುಣ್ಯವು ಅಸಾಧಾರಣವಾದ್ದರಿಂದಲೇ ನಿನಗೆ ಚಂದ್ರನಂತಿರುವ ಚಂದ್ರಹಾಸನೊಂದಿಗೆ ಪಾಣಿಗ್ರಹಣ ಮಹೋತ್ಸವವು ನಡೆಯುವುದು. ನಿನ್ನ ತಂದೆಯಾದ ದುಷ್ಟಬುದ್ಧಿಯು ನಿನ್ನಣ್ಣನಿಗೆ ಕಾಗದವನ್ನು ಬರೆದಿದ್ದಾನೆ.  ಮದನನೂ ಕೂಡ ಅತ್ಯಾನಂದದಿಂದ ನಿನ್ನನ್ನು ಚಂದ್ರಹಾಸನಿಗೆ ಕೊಟ್ಟು ಮದುವೆ ಮಾಡಲು ನಿಷ್ಕರ್ಷಿಸಿರುವನೆಂದು ನುಡಿದಳು. 


ರಜ್ಜುಬಂಧನವನುಗಿದ ಮೃಗದಂತೆ ತಾಂ ನೆನೆದ। 

ಕಜ್ಜಮೊಡಗೂಡಲ್ಕೆ ಮೊಗಮರಲ್ದುದು ಬಳಿಕ। 

ಲಜ್ಜೆ ಮೊಳೆದೋರಿದುದು ತಲೆವಾಗಿ ನೆಲನನುಂಗುಟದಿಂದೆ ಬರೆಯುತಿರಲು॥ 

ಉಜ್ಜುಗವಿದೇನಬಲೆ ಸಾಕು ನಡೆ ಮಂಗಳ ಸು। 

ಮಜ್ಜನದ ಮನೆಗೆಂದು ಕಮಲಾಯತಾಕ್ಷಿಯಂ। 

ತಜ್ಜನನಿ ಕಳುಹಿದ ನಿತಂಬಿನಿಯರುಪ್ಪರಿಗೆದುದಿಯಿಂದಿಳುಹಿ ತಂದರು॥೪॥ 


ಪ್ರತಿಪದಾರ್ಥ :-:- ತಾಂ= ತಾನು, ನೆನೆದ= ಯೋಚಿಸಿದ, ಕಜ್ಜಂ= ಕಾರ್ಯವು, ಒಡಗೂಡಲ್ಕೆ= ನೆರವೇರಿದ ಕಾರಣ, ರಜ್ಜುಬಂಧನವನು= ಕಟ್ಟಿದ್ದ ಹಗ್ಗವನ್ನು, ಉಗಿದ= ಬಿಡಿಸಿದ, ಮೃಗದಂತೆ= ಪ್ರಾಣಿಯಂತೆ, ಮೊಗಂ= ಮುಖವು, ಅರಳ್ದುದು= ಅರಳಿತು, ಲಜ್ಜೆ= ನಾಚಿಕೆಯು, ಬಳಿಕ = ಅನಂತರ, ಮೊಳೆದೋರಿದುದು= ಆರಂಭವಾಯಿತು, ತಲೆವಾಗಿ= ತಲೆಯನ್ನು ಬಗ್ಗಿಸಿ, ಉಅಂಗುಟದಿಂದ= ಹೆಬ್ಬೆರಳಿನಿಂದ,ನೆಲನನು= ಭೂಮಿಯನ್ನು, ಬರವುತಿರಲು= ಗೆರೆಹಾಕುತ್ತಿದ್ದ ಕಾರಣ, ಅಬಲೆ= ಎಲೈ ಬಾಲೆಯೇ, ಇದೇನು ಉಜ್ಜುಗಂ= ಇದೆಂತಹ ಕೆಲಸ, ಸಾಕು= ನಿಲ್ಲಿಸು, ಮಂಗಳ= ಕಲ್ಯಾಣಪ್ರದ-

ವಾದ ಸುಮಜ್ಜನದ,  ಮನೆಗೆ= ನೀರುಮನೆಗೆ, ನಡೆ= ಹೊರಡು, ಎಂದು=ಎಂಬತೆರನಾಗಿ, ತಜ್ಜನನಿ= ಅವರ ತಾಯಿಯು, ಕಳುಹಿದ= ಕಳುಹಿಸಿದಂಥ, ನಿತಂಬಿನಿಯರು= ಸ್ತ್ರೀಯರು,ಕಮಲಾಯತಾಕ್ಷಿಯಂ = ತಾವರೆಯಂತೆ ವಿಶಾಲವಾದ ಕಣ್ಣುಗಳುಳ್ಳ ವಿಷಯೆಯನ್ನು, ಉಪ್ಪರಿಗೆಯ = ಮಹಡಿಯ, ತುದಿಯಿಂದ = ಕಡೆಯಭಾಗದಿಂದ, ಇಳುಹಿ= ಕೆಳಕ್ಕಿಳಿಸಿ, ತಂದರು= ಸ್ನಾನದ ಮನೆಗೆ ಕರೆತಂದರು.


ತಾತ್ಪರ್ಯ:- ಈ ಮಾತನ್ನು ಕೇಳಿದ ವಿಷಯೆ, ಬಂಧನದಿಂದ ಬಿಡಿಸಿಕೊಂಡ ಮೃಗದಂತೆ ಸಂತೋಷಚಿತ್ತಳಾದಳು.ಮುಖವು ವಿಕಸಿತವಾಯಿತು. ನಾಚಿಕೆಯು ತಲೆದೋರಿತು. ನೆಲವನ್ನು ಹೆಬ್ಬೆಟ್ಟಿನಿಂದ ಕೆರೆಯುತ್ತಿದ್ದಳು.ಆಗ ಅವರ ತಾಯಿಯು ಕಳುಹಿದ ಸೇವಕ ಜನರು ಬಂದು ವಿಷಯೆಗೆ ಮಂಗಳ ಸ್ನಾನವನ್ನು ಮಾಡಿಸಲೋಸುಗ ಉಪ್ಪರಿಗೆಯಿಂದ ನೀರಮನೆಗೆ ಕರೆದುಕೊಂಡು ಬಂದರು. 


ವರ ಶಾತಕುಂಭ ಕುಂಭಸ್ತನದ ಪಲ್ಲವಾ। 

ಧರದ ಗುಣರಾಜಿ ರಾಜಿತದ ಕೋಮಲೆಗೆ ಸೌಂ। 

ದರ ಕುಂಕುಮಾಂಗ ಮಾಂಗಲ್ಯದಬಲೆಯರುದಕಪೂರಿತ ಕನಕಕಲಶದ॥

ಸುರುಚಿವೆತ್ತರುಣ ತರುಣ ಪ್ರವಾಳದ ವಸ್ತ್ರ। 

ಪರಿವೃತದ ಕಲ್ಪಕಲ್ಪ ವಿಧಾನಮಾಗಿರದೆ। 

ವಿರಚಿಸಿದರಾಗ ರಾಗದೊಳಮಲ ಶೋಭನ ಸ್ನಾನವಂ ಸೋತ್ಸವದೊಳು॥೫॥ 


ಪ್ರತಿಪದಾರ್ಥ :- ಸೌಂದರ= ಅಲಂಕಾರದಿಂದ ಕೂಡಿದ, ಕುಂಕುಮಾಂಗ= ಕುಂಕುಮವೇ ದೇಹದಲ್ಲಿವುಳ್ಳ, ಮಾಂಗಲ್ಯ= ಮಾಂಗಲ್ಯದಿಂದ ವಿರಾಜಿಸುತ್ತಿರುವ, ಅಬಲೆಯರು= ನಾರಿಯರು, ಉದಕ= ಜಲದಿಂದ, ಪೂರಿತ= ತುಂಬಿರತಕ್ಕ, ಕನಕ ಕಲಶದ= ಸುವರ್ಣದ ತಂಬಿಗೆಯ, ಸುರುಚಿವೆತ್ತ= ಕಳೆಯಿಂದ ಕೂಡಿರತಕ್ಕ, ಅರುಣ= ಕೆಂಪಾದ, ತರುಣ= ನೂತನವಾದ, ಪ್ರವಾಳದ = ಪಲ್ಲವದ, ವಸ್ತ್ರ= ಬಟ್ಟೆಯ ಮೂಲಕ, ಪರಿವೃತ= ಆವರಿಸಿಕೊಂಡಿರತಕ್ಕ, ಕಲ್ಪ= ಬಗೆಗೆ, ಕಲ್ಪ= ಹೋಲುತ್ತಿರುವ, ವಿಧಾನಮಾಗಿ= ರೀತಿಯಾಗಿ, ಇರದೆ= ಕಾಲವನ್ನು ಕಳೆಯದೆ, ಆಗ= ಆ ಕಾಲದಲ್ಲಿ, ವರ= ಉತ್ತಮವಾದ,  ಶಾತಕುಂಭ= ಸುವರ್ಣ ಕರವಾದ, ಕುಂಭ= ಕಲಶದಹಾಗೆ ಇರತಕ್ಕ,  ಸ್ತನದ= ಕುಚಗಳುಳ್ಳ, ಪಲ್ಲವ= ಚಿಗುರಿನಂತೆ ವರ್ಣವುಳ್ಳ, ಅಧರದ= ತುಟಿಯ, ಗುಣರಾಜಿ = ಸದ್ಗುಣ ಸಮುದಾಯದಿಂದ, ರಾಜಿತದ= ಕಾಂತಿಯಿಂದ ಕೂಡಿದ,  ಕೋಮಲೆಗೆ= ಸುಂದರಿಯಾದ ವೆಷಯೆಗೆ, ರಾಗದೊಳು= ಸಂತಸದಿಂದ,  ಮಹೋತ್ಸವದೊಳು= ಅತ್ಯಂತವೈಭವದಿಂದ, ಅಮಲ=ಪರಿಶುದ್ಧವಾದ, ಶೋಭನ= ಮಂಗಳಕರವಾದ, ಸ್ನಾನವ= ಸ್ನಾನವನ್ನು, ಆಗ= ಆ ಸಮಯದಲ್ಲಿ,  ವಿರಚಿಸಿದರು= ನೆರವೇರಿಸಿದರು. 


ತಾತ್ಪರ್ಯ:- ಚಿನ್ನದ ಕಳಶದಂತಿರುವ ಕುಚಗಳಿಂದಲೂ, ಕೆಂಪಾದ ಚಿಗುರನ್ನು ಮೀರಿಸುವ ಚೆಂದುಟಿಯಿಂದಲೂ, ಸದ್ಗುಣಾವಳಿಗಳಿಂದಲೂ, ಶೋಭಿಸುತ್ತಿರುವ ವಿಷಯೆಗೆ ಭಂಗಾರದ ತಂಬಿಗೆಗಳಿಂದ ನೀರನ್ನು ಹೊಯಿದು ಸ್ನಾನವನ್ನು ಮಾಡಿಸಿದರು. 


ಮುಟ್ಟಿದೊಡೆ ಕಂದದಿರದವಳಸುಕುಮಾರ ತನು। 

ದಿಟ್ಟೆಯರದೆಂತೊ ನವ ಕುಂಕುಮವನೀಗ ನುಂ। 

ಪಿಟ್ಟರಲ್ಲದೆ ಪೋದ ಮಧ್ಯದೊಳೆಂತು ನಿಲಿಸಿದರೊ ದಿವ್ಯಾಂಬರವನು॥ 

ಬಟ್ಟ ಮೊಲೆಗಳ ಪೊರೆಗೆ ಬಾಗಿ ನಡೆವಳ್ಗೆಂತು। 

ಕಟ್ಟಿದರೊ ಹಾರಾವಳಿಯನೆಂದು ಕೌತುಕಂ। 

ಬಿಟ್ಟು ನೋಳ್ಪವೊಲೆಸೆದಳಾವಿಷಯೆ ಬಳಿಕಲಂಕಾರ ಮಂಡಿತೆಯಾಗಲು॥೬॥ 


ಪ್ರತಿಪದಾರ್ಥ :- ಇವಳ= ಈ ವಿಷಯೆಯ, ಸುಕುಮಾರತನು= ಮೃದುವಾದ ದೇಹ, ಮುಟ್ಟಿದರೆ= ಮುಟ್ಟಿಬಿಟ್ಟರೆ, ಕಂದದಿರದು= ಕಾಂತಿಯುಕ್ತವಾಗಿರುವುದಿಲ್ಲ, ನವಕುಂಕುಮ= ಹೊಸಕುಂಕುಮವನ್ನು, ದಿಟ್ಟೆಯರು= ಪ್ರಾಜ್ಞರಾದ ಸ್ತ್ರೀಯರು, ಈಗ= ಈಗಲಾದರೊ, ಊದೆಂತು= ಅದುಹೇಗೆ, ನುಂಪಿಟ್ಟರು= ಸಿಂಗರಿಸಿದರು, ಅಲ್ಲದೆ= ಇದಲ್ಲದೆ, ದಿವ್ಯಾಂಬರವನು= ಪೀತಾಂಬರವನ್ನು, ಪೋದಮಧ್ಯದೊಳು= ಬಡವಾದ ಸೊಂಟದಲ್ಲಿ, ಅದೆಂತು ನಿಲಿಸಿದರೊ= ಅದು ಹೇಗೆ ನಿಲ್ಲುವಂತೆ ಮಾಡಿದರೊ, ಹಾರಾವಳಿಯನು= ಅನೇಕ ಹಾರಗಳನ್ನು,ಬಟ್ಟ= ದುಂಡಗಿರತಕ್ಕ, ಮೊಲೆಗಳ ಪೊರೆಗೆ= ಕುಚಗಳ ಭಾರಕ್ಕೆ,  ಬಾಗಿನಡೆವಳ್ಗೆ= ಬಗ್ಗಿ ನಡೆಯತಕ್ಕ ವಿಷಯೆಗೆ, ಎಂತು= ಹೇಗೆ, ಕಟ್ಟಿದರೊ= ಹಾಕಿನಿಲ್ಲಿಸಿದರೊ, ಎಂದು= ಎಂಬತೆರನಾಗಿ, ಕೌತುಕಂ= ಅಚ್ಚರಿಯನ್ನು, ಬಟ್ಟು= ತಾಳಿ, ನೋಡುವೆವೊ= ನಿರುಕಿಸುವೆವೊ, ಅಲಂಕಾರಮಂಡಿತೆಯಾಗಲು= ಅಲಂಕಾರದಿಂದ ಕೂಡಲು, ಬಳಿಕ = ಅನಂತರ, ಆ ವಿಷಯೆ= ಆ ಕುಮಾರಿ ವಿಷಯೆ, ಎಸೆದಳು= ಕಾಂತಿಯುಕ್ತಳಾದಳು. 


ತಾತ್ಪರ್ಯ:- ವಿಷಯೆಯ ಕೋಮಲ ದೇಹವು ಮುಟ್ಟಿದರೆ ಮಾಸುವಂತೆ ಇದ್ದರೂ ಅವಳಿಗೆ ಕುಂಕುಮವನ್ನು ಹೇಗಿಟ್ಟರೋ! ಅತಿ ಬಡವಾದ ಸೊಂಟದಲ್ಲಿ ಅದು ಹೇಗೆ ದಿವ್ಯವಾದ ಪೀತಾಂಬರವನ್ನು ನಿಲ್ಲೆಸಿದರೋ! ಬಟ್ಟ ಮೊಲೆಗಳ ಭಾರದಿಂದ ಬಾಗಿ ನಡೆಯುವ ಅವಳಿಗೆಅದು ಹೇಗೆ ಹಾರಗಳಿಂದ ಅಲಂಕರಿಸಿದರೋ ಏನೋ ಎನ್ನುವಂತೆ ವಸ್ತ್ರಾಲಂಕಾರಗಳಿಂದ ಕೂಡಿದ ವಿಷಯೆಯು ಶೋಭಿಸಿದಳು. 


ಬಾವನ್ನಗಂಪಿನಂಗದ ಲಲನಿಗನುಲೇಪ। 

ನಾವಳಿಗಳೇಕಿನ್ನು ಕನ್ಯಕಾ ತಿಲಕಕ್ಕೆ। 

ಭಾವಿಸೆ ಲಲಾಮವೇತಕೆ ಪಣೆಗೆ ಸೊಂಪೊದವಿದದವಯವದೊಳಿಂಪುವಡೆದ॥ 

ಪೂವೆಸೆವ ಕೋಮಲೆಗದೇತಕೆ ಕುಸುಮದ ಮಾಲೆ। 

ಲೃವಣ್ಯ ಭೂಷಣದ ಪೆಣ್ಗಾಭರಣಮೇಕೆ। 

ಕೋವಿದೆಯರಲ್ಲ ಸೈರಂಧ್ರಿಯರೆನಲ್ಕೆ ವಿಷಯೆಗೆ ಸಿಂಗರಂ ಗೈವರು॥೭॥ 


ಪ್ರತಿಪದಾರ್ಥ :- ಅನುಲೇಪನಾದಿಗಳು= ಚಂದನಲೇಪನಗಳು, ಬಾವನ್ನು= ಸಿರಿಕಂಡದ, ಕಂಪಿನ= ಪರಿಮಳದ, ಅಂಗದ= ದೇಹದ, ಲಲನೆಗೆ= ತರುಣಿಗೆ, ಏಕೆ= ಏನು ಪ್ರಯೋಜನ, ಭಾವಿಸೆ= ಯೋಚಿಸಿ ನೋಡಿದರೆ, ಪಣೆಗೆ = ಹಣೆಗೆ, ಲಲಾಮ- ವು=ತಿಲಕವು, ಕನ್ಯಾತಿಲಕಕೆ= ಹುಡುಗಿಯರಲೂಲೆಲ್ಲಾ ಶ್ರೇಷ್ಠಳಾಗಿರತಕ್ಕ ವಿಷಯೆಗೆ, ಇನ್ನು= ಇನ್ನುಮುಂದೆ, ಏತಕೆ= ಏನು ಸಾರ್ಥಕವು, ಕುಸುಮದಮಾಲೆ=ಪುಷ್ಪಮಾಲಿಕೆಯು, ಸೊಂಪು=ಸೌಂದರ್ಯವು, ಒದವಿದ= ಉಂಟಾಗಿರತಕ್ಕ, ಅವಯವ- 

ದೊಳು= ಅವಯವಗಳಲ್ಲಿ, ಇಂಪುವಡೆದ= ಸುವಾಸನೆಯನ್ನು ಬೀರುವ,  ಪೂವೆಸರ= ಹೂವಿನ ಸಮುದಾಯದಂತಿರತಕ್ಕ, ಕೋಮಲೆಗೆ= ಮೃದುಶರೀರವುಳ್ಳ ವಿಷಯೆಗೆ, ಅದೇಕೆ= ಯಾತಕ್ಕೆ ಬೇಕು, ಆಭರಣಂ= ತೊಡಿಗೆಗಳು, ಲಾವಣ್ಯ= ಸೌಂದರ್ಯವೆಂಬ, ಭೂಷಣದ = ಅಲಂಕಾರವುಳ್ಳ, ಪೆಣ್ಗೆ= ತರುಣಿಗೆ, ಏಕೆ= ಏನು ಸಾರ್ಥಕವು,  ಸೈರಂಧ್ರಿಯರು= ಸೇವಕ ಸ್ತ್ರೀಯರು,  ಕೋವಿದೆಯರೈ= ಬಲ್ಲವರು, ಅಲ್ಲ= ಆಗಿಲ್ಲ, ಎನಲ್ಕೆ= ಎಂಬ ರೀತಿಯಾಗಿ, ವಿಷಯೆಗೆ= ವೆಷಯೆಗೆ, ಸಿಂಗರಂ- 

ಗೈದರೈ= ಅಲಂಕಾರ ಮಾಡಿದರು. 


ಅಪರದಿಗ್ಭಾಗದಂತಂಜನೋದ್ಭಾಸಿತಂ। 

ವಿಪುಲ ಹರಿಪದದಂತೆ ತಾರಕಾಲಂಕೃತಂ। 

ಲಿಪಿಯಂತೆ ದೀರ್ಘಶೋಭಾನ್ವಿತಂ ದ್ವಿಜನಂತೆ ಶ್ರುತಿಯುತಂ ದೈತ್ಯನಂತೆ॥ 

ಅಪಹೃತಾನಿಮಿಷ ಲೀಲಾವಿಲಾಸಂ ನರಾ। 

ಧಿಪನಂತೆ ಕುವಲಯಶ್ರೀಧರಂ ಘನದಂತೆ। 

ಚಪಲಾಭಿರಾಮಮಾಗಿರ್ದುದಾ ಶಶಿಮುಖಿಯ ನೇತ್ರಯುಗಮೇವೇಳ್ವೆನು॥೮॥ 


ಪ್ರತಿಪದಾರ್ಥ :- ಅಪರದಿಗ್ಭಾಗದಂತೆ= ಪಡುವಣ ದಿಕ್ಕಿನಂತಾಗಿ, ಅಂಜನ= ಅಂಜನೇಯನೆನ್ನುವ ಆನೆಯಿಂದ, ಉದ್ಭಾಸಿತಂ= ಹೊಳೆಯುತ್ತಲಿರುವುದು, ವಿಪುಲ= ವಿಶಾಲವಾಗಿರತಕ್ಕ, ಹರಿಪದದಂತೆ= ಅಂತರಿಕ್ಷದ ಹಾಗೆ, ತಾರಾಲಂಕೃತಂ= ತಾರೆಗಳಿಂದ ಅಲಂಕರಿಸಲ್ಪಟ್ಟಿರುವುದು, ಲಿಪಿಯಂತೆ= ಬರವಣಿಗೆಯ ಹಾಗೆ, ದೀರ್ಘ= ದೀರ್ಘವಾದ ಅಕ್ಷರಗಳ, ಶೋಭಾ= ಕಾಂತಿಯಿಂದ,  ಅನ್ವಿತಂ= ಕೂಡಿದ, ದ್ವಿಜನಂತೆ= ವಿಪ್ರನಹಾಗೆ, ಶ್ರುತಿಯುತಂ= ವೇದಸಹಿತವಾಗಿ-

ರುವುದು, ದೈತ್ಯನಂತೆ= ರಕ್ಕಸನ ರೀತಿಯಾಗಿ, ಅಪಹೃತ= ಅಪಹರಿಸಲ್ಪಟ್ಟ, ಲೀಲಾ= ಸಂತೋಷದ, ವಿಲಾಸಂ= ಸಡಗರ-

ವುಳ್ಳದ್ದು,ನರಾಧಿಪನಂತೆ= ರಾಜನಹಾಗೆ, ಕುವಲಯ= ಭೂಮಂಡಲದ, ಶ್ರೀ= ಐಸಿರಿಯನು, ಧರಂ= ಹೊಂದಿರುವುದು, ಘನದಂತೆ= ಮೋಡದಹಾಗೆ, ಚಪಲಾಭಿರಾಮಂವಿದ್ಯುತ್ತಿನಿಂದ ಶೋಭಿಸುವುದು,(ಇದು ಪಶ್ಚಿಮದಿಕ್ಕಿನ ಅಂತರಿಕ್ಷದ ವರ್ಣನೆಯು) ಆ ಶಶಿಮುಖಿಯ= ಚಂದ್ರಮುಖಿಯಾದ ವಿಷಯೆಯ,ನೇತ್ರಯುಗಂ= ಕಣ್ಣುಗಳೆರಡೂ,ಅಪರದಿಗ್ಭಾಗದಂತೆ ಅಂಜನೋದ್ಭಾಸಿತಂ= ಕಪ್ಪನ್ನು ಹಚ್ಚಿರುವುದರಿಂದ ಕಾಂತಿಯುಕ್ತವಾಗಿರುವುದು, ವಿಪುಲಹರಿಪದದಂತೆ ತಾರಕಾಲಂಕೃತಂ= ಕಣ್ಣುಗುಡ್ಡೆಗಳಿಂದ ನೋಡುವುದಕ್ಕೆ ಅಂದವಾಗಿರುವುದು, ಲಿಪಿಯಂತೆ ದೀರ್ಘಶೋಭಾನ್ವಿತಂ= ವಿಶಾಲವಾಗಿಯೂ 

ಅಲಂಕಾರವಾಗಿಯೂ ಇರುವುದು, ದ್ವಿಜನಂತೆ ಶೃತಿಯುತಂ= ಶ್ರೋತ್ರಂಗಳಿಂದ ಕೂಡಿರುವುದು, ದೈತ್ಯನಂತೆ ಅಪಹೃತ= ರಾಕ್ಷಸನಂತೆ ಅಪಹರಿಸಲ್ಪಟ್ಟ, ಅನಿಮಿಷ= ರೆಪ್ಪೆ ಬಡಿಯದೆ ನೋಡುತ್ತಿರುವ, ಲೀಲಾ= ಲೀಲೆಯ, ವಿಲಾಸಂ= ಕಾಂತಿಯುಳ್ಳದ್ದು, ಘನದಂತೆ= ಕುವಲಯ, ಶ್ರೀಧರಂ= ಕರೀಕಮಲದ ಪ್ರಕಾಶದಂತೆಯೂ, ಚಪಲಾಭಿರಾಮಂ= ಚಂಚಲವಾದದ್ದಾಗಿಯೂ, ( ಇದು ವಿಷಯೆಯ ಕಣ್ಣುಗಳ ವರ್ಣನೆಯು)


ತಾತ್ಪರ್ಯ:- ವಿಷಯೆಯ ಕಣ್ಣುಗಳು ಪಶ್ಚಿಮದಿಕ್ಕಿನಂತಿದ್ದವು. ಏಕೆಂದರೆ ಪಶ್ಚಿಮ ದಿಗ್ಗಜ ಅಂಜನ. ಅವಳ ಕಣ್ಣುಗಳಿಗೆ 

(ಅಂಜನ)ಹಚ್ಚಿತ್ತು. ಆಕಾಶದಲ್ಲಿ ನಕ್ಷತ್ರಗಳಿರುವಂತೆ ಅವಳ ಕಣ್ಣುಗುಡ್ಡೆಗಳಿದ್ದವು. ಅಕ್ಷರಗಳಿಗೆ ದೀರ್ಘಹಾಕಿದಾಗ ಶೋಭಿಸುವಂತೆ ಕಣ್ಣುಗಳು ದೀರ್ಘವಾಗಿದ್ದವು. ಬ್ರಾಹ್ಮಣನು (ಶೃತಿ) ವೇದವನ್ನು ಕಲಿತಿರುತ್ತಾನೆ. ಅವಳ ಕಣ್ಣುಗಳು ಎರಡು ಕಿವಿಗಳಿಂದೊಡಗೂಡಿದ್ದವು.ರಾಕ್ಷಸನು ದೇವತೆಗಳನ್ನು (ಅನಿಮಿಷ) ಅಪಹರಿಸುವಂತೆ, ಅವಳ ಸೌಂದರ್ಯವು ನೋಟಕರು ರೆಪ್ಪೆ ಬಡಿಯದಂತೆ ಮಾಡುತ್ತಿದ್ದವು. ರಾಜನು ಭೂಪತಿಯಾದಂತೆ ಅವಳ ಕಣ್ಣುಗಳು ಚಪಲ ಕನ್ನೈದಿಲೆಯಂತೆ -ಇದ್ದವು. 


ಉಲ್ಲಾಸ ತಿಲಕಮಂ ಸುತಮಾಲ ಪತ್ರಮುಂ। 

ಮೊಲ್ಲೆಯ ಮುಗುಳ್ಗಳುಂ ಚೂತಪ್ರವಾಳಮುಂ। 

ಮಲ್ಲಿಗೆಯಲರ್ಗಳುಮಂ ಸಂಪಗೆಯ ಮೊಗ್ಗೆಯುಂ ನಿಂಬದಳಮುಂ ತೊಳಗುವ॥ 

ಸಲ್ಲಲಿತ ಸಾಲ ಕಾನನದೊಳಿರ್ದಪುವು ಪೊಸ। 

ತಲ್ಲೆಂಬ ತೆರನಾದುದೆಂತು ಬಣ್ಣಿಸುವೆನೀ। 

ಚೆಲ್ಲೆಗಂಗಳ ಚೆಲ್ವಿಕೆಯೊಳೆಸೆವ ಬಾಲಕಿಯ ನಗೆಮೊಗದ ಸೌಂದರವನು॥೯॥ 


ಪ್ರತಿಪದಾರ್ಥ :- ಉಲ್ಲಾಸ= ಹೊಳೆಯುತ್ತಲಿರುವ, ತಿಲಕಮುಂ= ತಿಲಕವೆಂಬ ಮರವು, ಉಲ್ಲಾಸ= ಅಗಲವಾದ, ತಿಲಕಮಂ= ಹಣೆಯಲ್ಲಿರತಕ್ಕ ಕುಂಕುಮವು, ಸು=ಉತ್ತಮವಾದ, ತಮಾಲಪತ್ರಮುಂ= ಹೆಗಲಿನಮೇಲೆ ಬರೆದಿರತಕ್ಕ ಮಕರಿಕಾಪತ್ರವೂ, ಸು=ಚನ್ನಾಗಿರತಕ್ಕ, ತಮಾಲಪತ್ರಮುಂ= ಹೊಂಗೆ ಎಲೆಯೂ, ಮೊಲ್ಲೆಯ= ಮಲ್ಲಿಗೆಯ,ಮುಗುಳ್ಗಳುಂ

= ಮೊಗ್ಗುಗಳೂ, ಚೂತಪ್ರವಾಳಮುಂ= ಮಾವಿನ ಮರದ ಎಳೆ ಚಿಗುರು, ಮಲ್ಲಿಗೆಯ= ಮಲ್ಲಿಗೇಶಗಿಡದ, ಅಲರ್ಗಳುಂ= ಹೂಗಳೂ, ಸಂಪಿಗೆಯ= ಚಂಪಕವೃಕ್ಷದ, ಮೊಗ್ಗೆಯುಂ= ಮೊಗ್ಗು, ನಿಂಬದಳಮು= ಬೇವಿನಮರದ ಚಿಗುರೂ, ತೊಳಗುವ

= ಹೊಳೆಯುವ, ಸಲ್ಲಲಿತ= ಸುಂದರವಾದ, ಸಾಲಕಾನನದೊಳು= ಸಾಲಾಗಿರುವ ಕಾಡಿನೊಳಗೆ, ಇರ್ದಪವು= ಇದ್ದವು, ಪೊಸತು= ನೂತನವಾದ್ದದ್ದು, ಅಲ್=ಅಲ್ಲವು, ಎಂಬ= ಎನ್ನತಕ್ಕ,  ತೆರನು=ಬಗೆಯು, ಆದುದು= ಆಗಬಿಟ್ಟಿತು, ಈ ಚೆಲ್ಲೆಗಂಗಳ= ಟಪಲನೇತ್ರಗಳ, ಚೆಲ್ವಿಕೆಯೊಳು= ಅಲಂಕಾರದಿಂದ,  ಎಸೆವ= ಹೊಳೆಯುತ್ತಿರುವ, ಬಾಲಕಿಯ= ಬಾಲೆ- 

ಯಾದ ವಿಷಯೆಯ,ನಗೆಮೊಗದ= ಮಂದಹಾಸದಿಂದ ಕೂಡಿದ ಮುಖದ, ಸೌಂದರವನು= ಅಲಂಕಾರವನ್ನು, ಎಂತು= ಯಾವ ರೀತಿಯಾಗಿ, ಬಣ್ಣಿಸುವೆನು= ವರ್ಣನೆಮಾಡಲಿ. 


ತಾತ್ಪರ್ಯ:- ತಿಲಕ, ಹೊಂಗೆ, ಮಲ್ಲಿಗೆಯ ಹೂ, ಮೊಲ್ಲೆಯ ಮೊಗ್ಗು, ಮಾವಿನ ಚಿಗುರು, ಸಂಪಗೆಯ ಮಮೊಗ್ಗು, ಬೇವಿನ ಚಿಗುರು ಇವೆಲ್ಲವೂ ಸಾಲಮರದ ಕಾಡಿನಲ್ಲಿರುವುದೇ! ಹಣೆಯಲ್ಲಿ ಉಲ್ಲಾಸ ತಿಲಕ, ತಮಾಲಪತ್ರದ ರೇಖೆ ಮೊಲ್ಲೆಯ ಮೊಗ್ಗು, ಅವಳ ತುಟಿ ಮಾವಿನ ಚಿಗುರು, ನಗು ಮಲ್ಲಿಗೆಯ ಹೂ, ಮೂಗು ಸಂಪಗೆಯ ಮೊಗ್ಗು, ಮುಖ ಬೇವಿನ ಚಿಗುರು, ಇವು ವಿಷಯೆಯ ಸ-ಅಲಕ-ಆನನ ಮುಂಗುರುಳಿಂದ ಕೂಡಿದ ಮುಖದಲ್ಲದ್ದವು ಹೇಗೆ ವರ್ಣಿಸಲಿ. 


ಶ್ರವಣ ಭೂಷಣದಿಂದೆ ಹಸ್ತಾಭರಣದಿಂದೆ। 

ದಿವಿಜ ಪದಮೆಸೆವಂತೆ ಕುಂತಳ ಶ್ರೀಯ ವೈ। 

ಭವದಿಂದೆ ರಮಣೀಯ ಕಾಂಚೀಪ್ರದೇಶದಿಂ ಭೂಭಾಗಮೊಪ್ಪುವಂತೆ॥ 

ತವೆ ಮೆರೆವ ಸುಗ್ರೀವ ತಾರಾವಲಂಬದಿಂ। 

ದವಿಕಲಾಂಗದ ಇರಾಜಿತದಿಂದೆ ಸನ್ನುತ। 

ಪ್ಲವಗ ಕುಲದುನ್ನತಿಯ ಬೆಳೆವಿಗೆಯ ಚೆಲ್ವಿಂದೆ ವಿಷಯೆ ಕಂಗೊಳಿಸುತಿರ್ದಳು॥೧೦॥ 


ಪ್ರತಿಪದಾರ್ಥ :- ದಿವಿಜಪದಂ= ಅಂತರಿಕ್ಷವು, ಶ್ರವಣಭೂಷಣದಿಂದ= ಶ್ರವಣವೆಂಬ ನಕ್ಷತ್ರದ ಒಡವೆಯಿಂದ, ಹಸ್ತಾಭರ- ಣದಿಂದ= ಹಸ್ತಾನಕ್ಷತ್ರವೆಂಬ ತೊಡಿಗೆಯಿಂದ, (ಅಂತರಿಕ್ಷದ ಪರವಾಗಿ) ಶ್ರವಣಭೂಷಣದಿಂ=ಶಕಿವಿಗೆ ಇಟ್ಟುಕೊಳ್ಳುವ,ಓಲೆ ಮೊದಲಾದವುಗಳಿಂದ, ಹಸ್ತಾಭರಣದಿಂದ= ಕೈಗೆ ಇಟ್ಟುಕೊಳ್ಳುವ ಕಡಗ ಮುಂತಾದವುಗಳಿಂದ,(ವಿಷಯೆಯ ಅಲಂಕಾ- 

ರದ ಪರವಾಗಿ) ಎಸೆವಂತೆ=ವಹೊಳೆಯುವಹಾಗೆ) ಭೂಭಾಗಂ= ಭೂಮಿಯ ಭಾಗವು, ಕುಂತಳ= ಕುಂತಳ ನಗರದ, ಶ್ರೀ= ಐಶ್ವರ್ಯದ, ವೈಭವದಿಂದ = ಏಳಿಗೆಯಿಂದ, ಕುಂತಳ=ಕೂದಲಿನ, ಶ್ರೀಕಾಂತಿಯ= ವೈಭವದಿಂದ ಅಲಂಕಾರದಿಂದ, ರಮಣೀಯ= ನೋಡುವುದಕ್ಕೆ ಚೆನ್ನಾಗಿರತಕ್ಕ, ಕಾಂಚೀ= ಕಂಚೀ ಎಂಬ ನಗರದ, ಪ್ರದೇಶದಿಂದ=ಸ್ಥಳದಿಂದ,ರಮಣೀಯ= 

ಅಲಂಕಾರವಾಗಿರುವ, ಕಾಂಚೀ= ಡಾಬಿನ, ಪ್ರದೇಶದಿಂದ= ಸೊಂಟದಲ್ಲಿರೋಣದರಿಂದ, ಒಪ್ಪುವಂತೆ= ಅಂದವಾಗಿರು- 

ವಂತೆ, ತವೆ=ಚನ್ನಾಗಿ, ಮೆರೆವ= ಹೊಳೆಯುತ್ತ, ಸುಗ್ರೀವನೆಂಬ=ಕಪಿರಾಜನ, (ಒಳ್ಳೆ ಕಂಠದ) ತಾರಾ= ತಾರೆಯೆಂಬ ವಾಲಿಯ ಹೆಂಡತಿಯ, (ಕಣ್ಣು ಗುಡ್ಡೆಗಳ) ಅವಲಂಬದಿಂದ= ಆಶ್ರಯದ ಮೂಲಕ, ಆವಿಕಲ= ವಿಶಾಲವಾದ ಮತ್ತು ಸ್ಫುಟ-

ನಾಗಿರತಕ್ಕ, ಅಂಗದ= ಭುಜಕೀರ್ತಿಯ, ಮತ್ತು ಅಂಗದನೆಂಬ ಕಪಿಯ, ವಿರಾಜಿತದಿಂದ= ಸೌಂದರ್ಯದಿಂದ, ವಿಷಯೆ = 

ವಿಷಯೆಯು, ಕಂಗೊಳಿಸುತಿರ್ದಳು= ಕಾಂತಿಯುಕ್ತಳಾಗಿದ್ದಳು. 


ತಾತ್ಪರ್ಯ:- ಆಕಾಶವು ಶ್ರವಣ, ಹಸ್ತಾ ನಕ್ಷತ್ರಗಳಿಂದಶೋಭಿಸುವಂತೆ ವಿಷಯೆಯು ಕಿವಿಗಳ ಆಭರಣ ಹಸ್ತಾಭರಣಗಳಿಂದ 

ಶೋಭಿಸುತ್ತಿದ್ದಳು. ಭುಮಿಯು ಕುಂತಳ ದೇಶದಿಂದ ಶೋಭಿಸುವಂತೆ ಮುಂಗುರುಳುಗಳಿಂದ ಅವಳು ಅಂದವಾಗಿದ್ದಳು. ಭೂಮಿಯು ಕಾಂಚೀಪ್ರದೇಶದಿಂದ ಶೋಭಿಸುವಂತೆ ಅವಳ ನಡುವು ಕಾಂಚಿಯಿಂದ(ಡಾಬಿನಿಂದ) ಹೊಳೆಯುತ್ತಿತ್ತು. ಅವಳ ಸುಂದರವಾದ ಕತ್ತು ನಕ್ಷತ್ರದಂತಿದ್ದ ಅವಳ ಕಣ್ಣುಗಳು ಸ್ವಲ್ಪವೂ ಕುಂದಿಲ್ಲದೆ ಸ್ಫುಟವಾಗಿ ಸುಂದರವಾಗಿ ಕಾಣುತ್ತಿದ್ದವು. 


ಲಾವಣ್ಯ ವಾರಿ ಪೂರಿತಮಾದ ನಾಭೀಸ। 

ರೋವರದತ್ರಿವಳಿತೆರೆಗಳನಡುವೆ ರಂಜಿಸುವ।

ಶೈವಾಲದಂತೆ ಜಘನಾದ್ರಿಯಂ ವೇಡ್ಡೈಸಿದಮಲ ಕಾಂಚೀದಾಮದ॥ 

ದಾವ ಶಾಖಿಯಿಂದೆ ನಭಕೇಳ್ವ ಕರ್ಬೊಗೆಯಂತೆ।

ಪೀವರ ಸ್ತನದುರ್ಗಕಂಗಜನಡರ್ದಿಳಿವ । 

ಠಾವಿನಂತಾ ಚಂದ್ರಮುಖಿಯ ತನುಮಧ್ಯದೊಳ್ ಬಾಸೆ ಕಂಗೊಳಿಸಿರ್ದುದು॥೧೧॥


ಪ್ರತಿಪದಾರ್ಥ :- ಆ ಚಂದ್ರಮುಖಿಯ = ಚಂದ್ರನಂತೆ ಮುಖವುಳ್ಳ ಆ ವಿಷಯೆಯ, ತನು= ದೇಹದ, ಮಧ್ಯದೊಳ್= ಮಧ್ಯಭಾಗದಲ್ಲಿರತಕ್ಕ, ಬಾಸೆ= ವಳಿತ್ರಯವಾದರೊ,ಲಾವಣ್ಯ =ಸೌಂದರ್ಯವೆನ್ನತಕ್ಕ, ವಾರಿ=ನೀರಿನಿಂದ, ಪೂರಿತವಾದ= ತುಂಬಿದ, ನಾಭಿ= ಹೊಕ್ಕುಳೆಂಬ, ಸರೋವರದ= ಕೊಳದ, ತ್ರಿವಳಿ= ಮೂರು ಮಡಿಕೆಗಳ, ತೆರೆಗಳನಡುವೆ= ತರಂಗದ ಮಧ್ಯಭಾಗದೊಳಗೆ, ರಂಜಿಸುವ= ಹೊಳೆಯುವ, ಶೈವಾಲದಂತೆ= ಪಾಚಿಯಹಾಗೆ, ಜಘನ= ಹಿಂಭಾಗ ಕುಂಡೆಯೆಂಬ, ಅದ್ರಿಯಂ= ಪರ್ವತವನ್ನು, ವಡ್ಡೈಸಿದ= ಎದುರಿಸಿದಂಥ, ಅಮಲ= ಪರಿಶುದ್ಧವಾದ, ಕಾಂಚೀದಾಮದ=ಚಿನ್ನದ ಡಾಬಿನ, ದಾವ ಶಿಖಿಯಿಂದ= ಕಾಡು ಬೆಂಕಿಯಿಂದ, ನಭಕೆ= ಅಂತರಿಕ್ಷಕ್ಕೆ, ಏಳ್ವ= ಏರುತ್ತಿರುವ, ಕಾರ್ಬೊಗೆಯಂತೆ= ಕಪ್ಪು ಹೊಗೆಯರೀತಿಯಾಗಿ,ಪೀವರ= ದಪ್ಪನಾದ, ಸ್ತನದುರ್ಗಕೆ= ಕುಚಗಳೆಂಬ ಪರ್ವತಕ್ಕೆ, ಅಂಗಜನು=ಮನ್ಮಥನು, ಅಡರ್ದು= 

ಹತ್ತಿ, ಇಳಿವ= ಇಳಿದು ಬರುವ, ಠಾವಿನಂತೆ= ಪ್ರದೇಶದ ಹಾಗೆ, ಕಂಗೊಳಿಸಿರ್ದುದು= ಕಾಂತಿಯುಕ್ತವಾಗಿತ್ತು. 


ತಾತ್ಪರ್ಯ:- ಅವಳ ನಾಭೀಸರೋವರದಲ್ಲಿತುಂಬಿದ ಸೌಂದರ್ಯ ಜಲದ, ತ್ರಿವಳಿಗಳೆಂಬ ತೆರೆಗಳ ನಡುವೆ ಕಟ್ಟಿದ ಪಾಚಿಯೋ, ಅವಳ ಜಘನವೆಂಬ ಬೆಟ್ಟವನ್ನು ಸುತ್ತುವರಿದ ಡಾಬಿನಿಂದ ಏಳುವ ಕಾಡುಗಿಚ್ಚಿನ ಕರಿಯ ಹೊಗೆಯೋ ಎಂಬಂತೆ ಅವಳ ಸ್ತನದುರ್ಗಕ್ಕೆ ಇಳಿಯಲು ಹತ್ತಲು ಮನ್ಮಥನಿಗೆ ದಾರಿಯೋ ಎಂಬಂತೆ ಅವಳ ಬಾಸೆ ಕಾಣಿಸುತ್ತಿತ್ತು. 

( ಹೊಕ್ಕುಳಿನಿಂದ ಮೊಲೆಗಳವರೆಗೆ ಬೆಳೆದ ಕೂದಲು)


ಬಿಡದೆ ಮಕ್ತಾಹಾರದಿಂದೆ ಸಮರೂಪದಿಂ। 

ದೃಢತೆವೆತ್ತೂರ್ಧ್ವಮುಖಮಾಗಿ ಕರ್ಕಶ ವೃತ್ತ। 

ದೊಡಗೂಡಿ ಕುಚಯುಗಂ ಮೆರೆದುದು ಕಠೋರ ತಪದಿಂದೆಸೆವ ಯೋಗಿಯಂತೆ॥ 

ಬಡವಾಗಿ ಬಲ್ಲಿದರ ನಡುವೆ ನವೆದಿರ್ದ ಸೊಂ। 

ಪಡಗದೆ ವಿಜೃಂಭಿಸುವ ವೀರ ಕಂಠೀರವಕೆ। 

ಪಡಿಯಾಗಿ ಸತ್ಪುರುಷನಂದದೊಳ್ ಕಾಣಿಸಿತು ಮಧ್ಯಲತೆ ಮಂತ್ರಿಸುತೆಯ॥೧೨॥


ಪ್ರತಿಪದಾರ್ಥ :- ಬಿಡದೆ= ನಿಯಮಕ್ಕೆ ಅನುಸಾರ, ಮುಕ್ತ= ಬಿಡಲ್ಪಟ್ಟ, ಆಹಾರದಿಂದ= ಅನ್ನಾದಿಗಳಿಂದ, ಮುಕ್ತಾಹಾರ- 

ದಿಂದ= ಮುತ್ತುಗಳ ಮಾಲಿಕೆಯಿಂದ, ಸಮರೂಪದಿಂ= ಏಕರೀತಿಯಿಂದ, ಸಮ=ಒಂದೇ ಬಗೆಯಾದ, ರೂಪದಿಂ= ಆಕಾರದಿಂದ, ಧೋಡತೆವೆತ್ತು=ವಮನಸ್ಸನ್ನು ಸ್ಥಿರಮಾಡಿಕೊಂಡು, ಊರ್ಧ್ವಮುಖಮಾಗಿ=ವಮೇಲಕ್ಕೆ ನೋಟವನ್ನೆಟ್ಟು, 

(ಮೇಲಕ್ಕೆತ್ತಲ್ಪಟ್ಟಮೊಲೆತೊಟ್ಟುಗಳನ್ನು ಹೊಂದಿ) ಕರ್ಕಶ= ಕಠಿಣವಾದ,  ವೃತ್ತದ= ನಡವಳಿಕಯುಳ್ಳ, ಕರ್ಕಶವೃತ್ತದ= ಬಲವಾಗಿಯೂ, ದುಂಡಗೂ ಇರತಕ್ಕ ರೀತಿಯಿಂದ, ಒಡಗೂಡಿ= ಸೇರಿ, ಕುಚಯುಗಂ= ಸ್ತನಯುಗ್ಮವು, ಕಠೋರ= ಬಹು ಕಠಿಣವಾದ, ತಪದಿಂದ= ತಪಸ್ಸಿನಿಂದ,  ಎಸೆವ= ಹೊಳೆಯುವ, ಯೋಗಿಯಂತೆ= ಯತಿಯತೆರನಾಗಿ, ಎಸೆದುದು= ಕಾಂತಿಯುಕ್ತವಾಯಿತು, ಬಲ್ಲಿದರ= ಪ್ರಾಜ್ಞರಾದವರ, ನಡುವೆ= ಮಧ್ಯದಲ್ಲಿ,ನವೆದು= ಬಡವಾಗಿ, ಇರ್ದು=ಇದ್ದು, ಸೊಂಪು= ದೇಹದ ಕೋಮಲತೆಯು, ಅಡಗದೆ= ತಗ್ಗದೆ, ವಿಜೃಂಭಿಸುವ= ಮೆರೆಯತಕ್ಕ, ವೀರ= ಪರಾಕ್ರಮದಿಂದ ಕೂಡಿದ,  ಕಂಠೀರವಕೆ= ಮೃಗರಾಜನಿಗೆ, ಪಡಿಯಾಗಿ= ಹೋಲಿಕೆಯಾಗಿ, ಸತೂಪುರುಷನ= ಉತ್ತಮನಾದ ಮನುಷ್ಯನ, ಅಂದದೊ- 

ಳ್= ರೀತಿಯಾಗಿ, ಮಂತ್ರಿಸುತೆಯ= ಮಂತ್ರಿ ದುಷ್ಟಬುದ್ಧಿಯ ಪುತ್ರಿ ವಿಷಯೆಯ, ಮಧ್ಯಲತೆ= ಬಳ್ಳಿಯಂತಿರುವ ಸೊಂಟ- 

ವು, ಬಡವಾಗಿ = ಸಣ್ಣನಾಗಿ, ಕಾಣಿಸಿತು= ತೋರಬಂದಿತು, ಎಂದರೆ ಬಲವಾದ ಕುಚಯುಗ್ಮದಿಂದಲೂ, ಸಣ್ಣನಾದ ನಡುವಿನಿಂದಲೂ ಕೂಡಿದ್ದಳು. 


ತಾತ್ಪರ್ಯ:- ಯೋಗಿಯಾದವನು ಸತತವಾಗಿ ಆಹಾರವನ್ನು ಬಿಟ್ಟು ಎಲ್ಲ ಜೀವರಾಶಿಗಳನ್ನು ಸಮನಾಗಿ ಕಾಣುತ್ತಾ ದೃಢ- 

ವಿಗಿ ಊರ್ಧ್ವಮುಖನಾಗಿರುತ್ತಾನೆ. ವಿಷಯೆಯ ಸ್ನನಗಳೂ ಹಾಗೆಯೇ (ಮುಕ್ತಾಹಾರ) ಮುತ್ತಿನ ಹಾರದಿಂದಲಂಕೃತವಾಗಿ ಒಂದೇ ಗಾತ್ರ ಆಕಾರಗಳಿಂದ ದೃಢವಾಗಿ, ಕಠಿಣವಾಗಿ, ದುಂಡಗೆ ಊರ್ಧ್ವಮುಖವಾದ ಚೂಚುಕಗಳಿಂದ ಕೂಡಿದ್ದವು. ಬಡವನಾಗಿದ್ದರೂ ಬಲ್ಲಿದರ ನಡುವೆ, ಕಷ್ಟಪಟ್ಟರೂ ಸೊಂಪಡಗದೆ, ಸಿಂಹದಂತಿರುವ ಸತ್ಪುರುಷನಂತೆ ಅವಳ ನಡುವು ವಿಜೆಂಭಿಸಿತು. ( ಸ್ತನಯುಗ್ಮ ವಿಜೃಂಭಿಸಿದರೆ ನಡು ಬಡವಾಗಿ ಸಿಂಹ ಕಟಿಯಂತಿತ್ತು)


ತೊಳಗಿ ಬೆಳಗುವ ಸದ್ಗುಣಾವಳಿಗಳೈಶ್ವರ್ಯ। 

ಲಲನೆಯಂ ಗೃಹಪತಿಯ ಮಂದಿರಕೆ ಸಂಘಟಿಸಿ। 

ಬೆಳವಿಗೆಯನತಿಶಯಂಮಾಳ್ಪಂತೆ ಸಿಂಗರಂಗೈದು ನೀಲಾಳಕೆಯರು॥ 

ಬಳಿಕ ಪೊನ್ನಂದಣದ ಮೇಲೆ ವೈವಾಹ ಮಂ। 

ಗಳ ಮಹೋತ್ಸವಕೆ ವಿರಚಿಸಿದ ಮಂಟಪದೆಡೆಗೆ। 

ನಳಿನ ಪತ್ರಾಕ್ಷಿಯಂ ತಂದರೊಸಗೆಯೊಳಂದು ವಿಭವದ ವಿಲಾಸದಿಂದೆ॥೧೩॥ 


ಪ್ರತಿಪದಾರ್ಥ :- ನೀಲಾಳಕೆಯರು=ಕಪ್ಪು ಮುಂಗುರುಳುಳ್ಳ ಸ್ತ್ರೀಯರು,  ತೊಳಗಿಬೆಳಗುವ= ಹೆಚ್ಚಾದ ಕಾಂತಿಯ, ಸದ್ಗುಣಾವಳಿಗಳು= ಉತ್ತಮವಾದ ಗುಣಗಳು ಮತ್ತು ಐಶ್ವರ್ಯ ಸಂಪತ್ತು ಇವುಗಳ, ಲಲನೆಯಂ= ನಾರಿಯನ್ನು, ಸಂಗಡಿಸಿ= ಹೊಂದಿ, ಗೃಹಪತಿಯಮಂದಿರಕೆ= ಯಜಮಾನನ ಭವನಕ್ಕೆ, ಬೆಳವಿಗೆಯ = ಏಳಿಗೆಯ, ಅತಿಶಯಮಂ= ಹೆಚ್ಚಿಕೆಯನ್ನು, ಮಾಳ್ಪಂತೆ= ಮಾಡುವ ರೀತಿಯಾಗಿ, ಸಿಂಗರಂಗೈದು= ಶೃಂಗಾರವನ್ನು ಮಾಡಿ, ಬಳಿಕ =ಅನಂತರ, ಅಂದು= ಆ ಸಮಯದಲ್ಲಿ,  ಪೊನ್ನಂದಣದ= ಚಿನ್ನದ ಮೇನೆಯಲ್ಲಿ, ಮೇಲೆ= ಮೇಲ್ಭಾಗದಲ್ಲಿ, ವೈವಾಹ= ಪರಿಣಯದ, ಮಂಗಳ= ಶುಭದಾಯಕವಾದ, ಮಹೋತ್ಸವಕೆ= ವೈಭವಕ್ಕಾಗಿ, ವಿರಚಿಸಿದ= ನಿರ್ಮಿಸಿದ, ಮಂಟಪದೆಡೆಗೆ= ಮಂಟಪದ ಹತ್ತಿರಕ್ಕೆ,  ಒಸಗೆಯೊಳು= ಮಂಗಳಕರವಾದ ವರ್ತಮಾನದಿಂದ, ವಿಭವದವಿಲಾಸದಿಂದ= ಅತಿಶಯವಾದ ವೈಭವದಿಂದ,  ನಳಿನಪತ್ರಾಕ್ಷಿಯನ್ನು= ಕಮಲದ ದಳದಂತೆ ವಿಶಾಲವಾದ ಕಣ್ಣುಗಳುಳ್ಳ ವಿಷಯೆಯನ್ನು,  ತಂದರು= ಕರೆದುಕೊಂಡು ಬಂದರು.  


ಅ॥ವಿ॥ ಅಂದಣ(ತ್ಭ) ಆಂದೋಳಿಕ(ತ್ಸ) ಸಿಂಗರಿಸಿ( ತ್ಭ) ಶೃಂಗರಿಸಿ( ತ್ಸ)


ತಾತ್ಪರ್ಯ:- ಇಂತಹ ಸುಂದರಿಯಾದ ವಿಷಯೆಯನ್ನು ನಾನಾ ಬಗೆಯಾದ ಉಡಿಗೆ ತೊಡಿಗೆಗಳಿಂದಲಂಕರಿಸಿ, ಅತ್ಯುತ್ಸವ- 

ದಿಂದ ಕೂಡಿದವರಾಗಿ ನವರತನಖಚಿತವಾಗಿ ರಚಿಸಿರುವ ವಿವಾಹ ಮಂಟಪಕ್ಕೆ ಬಂಗಾರದ ಮೇನೆಯಲ್ಲಿ ಕರೆದುಕೊಂಡು ಬಂದರು. 


ಬಳಸಿದ ಸಮಸ್ತ ಜನಜಂಗುಳಿಯ ಕೈಸೊಡ। 

ರ್ಗಳ ಸಾಲ ಹಂದಣಿಯ ಪಾಡುವ ಪುರಂಧ್ರಿಯರ। 

ಕಳಸ ಕನ್ನಡಿವಿಡಿದ ಕನ್ನೆಯರ ನಾನಾ ಸುವಸ್ತುಗಳ ವಿಸ್ತರಣದ॥ 

ತೊಳಗುವೊಸಗೆಯ ವಾದ್ಯ ಸಂಕುಲದ ಬಹು ಫಲಾ। 

ವಳಿಗಳ ವಿಡಾಯದಿಂದೈತಂದು ದಂಡಿಗೆಯ। 

ನಿಳಿದನಾರತಿಗಳ ನಿವಾಳಿಯಿಂ ಚಂದ್ರಹಾಸಂ ಭದ್ರಮಂಟಪದೊಳು॥೧೪॥


ಪ್ರತಿಪದಾರ್ಥ :- ಚಂದ್ರಹಾಸಂ= ಚಂದ್ರಹಾಸನು, ಬಳಸಿದ = ಸುತ್ತುವರಿದ, ಸಮಸ್ತ = ಎಲ್ಲಾ, ಜನ= ಪ್ರಜೆಗಳ, ಜಂಗುಳಿಯ= ಗುಂಪಿನ, ಕೈಸೊಡರ್ಗಳ= ಕೈದೀಪಗಳ, ಸಾಲ= ಸಾಲಾಗಿರತಕ್ಕ,  ಸಂದಣಿಯ= ಗುಂಪನ್ನು, ಪಾಡುವ= ಹಾಡುವ, ಪುರಂಧ್ರಿಯರ = ಸುವಾಸಿನಿಯರ, ಕಲಶಕನ್ನಡಿ= ಕಲಶ ಕನ್ನಡಿಯನ್ನು, ಪಿಡಿದ= ಹಿಡಿದ, ಕನ್ನೆಯರ= ಬಾಲೆಯರ, ನಾನಾ= ತಂಡತಂಡವಾದ, ಸುವಸ್ತುಗಳ= ಉತ್ತಮವಾದ ಪದಾರ್ಥಗಳ, ವಿಸ್ತರಣದ= ಸಮುದಾಯದ, ತೊಳಗುವ= ಹೊಳೆಯುವ, ಪೊಸಗೆಯ= ಮಂಗಳಕರವಾದ, ವಾದ್ಯ= ಮಂಗಳವಾದ್ಯಗಳ, ಕುಲದ=ಗುಂಪಿನ, ಬಹು= ಅನೇಕ ಪ್ರಕಾರವಾದ, ಫಲಾವಳಿಗಳ= ಹಣ್ಣುಗಳ, ವಿಡಾಯದಿಂದ= ಗುಂಪಿನಿಂದ, ಐತಂದು= ಬಂದು, ಭದ್ರಮಂಟಪ- ದೊಳು = ಮದುವೆಯಮಂಟಪದೊಳಗೆ,ಆರತಿಗಳನಿವಾಳಿಯಿಂ=ಆರತಿಗಳನ್ನೆತ್ತುವುದರಿಂದ,ದಂಡಿಗೆಯನು=ಪಲ್ಲಕ್ಕಿಯ-

ನ್ನು, ಇಳಿದನು= ಇಳಿದವನಾದನು. 


ತಾತ್ಪರ್ಯ:- ಆ ದಿವ್ಯವಾದ ವಿವಾಹಮಂಟಪದಲ್ಲಿ ಅನೇಕ ಜನಗಳ ಗುಂಪಿನಿಂದಲೂ, ಕೈಯಲ್ಲಿ ಹಿಡಿದಿರತಕ್ಕ ದೀಪಗಳಿಂದಲೂ, ಮುತ್ತೈದೆಯರು ಹೇಳತಕ್ಕ ಮಂಗಳಕರವಾದ ಹಾಡುಗಳ ಸೊಬಗಿನಿಂದಲು, ಕಲಶಕನ್ನಡಿಯನ್ನು ಕೈಯಲ್ಲಿ ಹಿಡಿದಿರುವ ಕನ್ನೆಯರಿಂದಲೂ, ಅನೇಕವಾದ್ಯವಿಶೇಷಗಳಿಂದಲೂ ಕೂಡಿ ಮನೋಹರವಾಗಿತ್ತು. ಇಂತಹ ದಿವ್ಯ ಮಂಟಪಕ್ಕೆ ಚಂದ್ರಹಾಸನನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಬಂದರು.  


ವರ ತಾರಕಾಕ್ಷೆಯೆಂಬಾ ಪ್ರಧಾನನ ಪತ್ನಿ। 

ಚರಣಮಂ ಪ್ರಕ್ಷಾಳನಂಗೈಯೆ ಮದನನಾ। 

ದರಿಸಿ ಮಧುಪರ್ಕಮಂ ಮಾಡೆ ಕನ್ಯಾವರಣದೊಳ್ ಕುಲ ಪರಂಪರೆಯನು॥ 

ಒರೆಯೆನಲ್ ಶಶಿಹಾಸನೆನಗೆ ವಾಮನಗೋತ್ರ। 

ಮರವಿಂದನಾಭಂ ಪಿತಂ ಹರಿಪಿತಾಮಹಂ। 

ಮುರಹರಂ ಪ್ರಪಿತಾಮಹಂ ಕುಳಿಂದನುಮವನ ಸತಿಯುಂ ಗುರುಗಳೆಂದನು॥೧೫॥ 


ಪ್ರತಿಪದಾರ್ಥ :- ವರ= ಮೇಲ್ಮೆಯನ್ನು  ಹೊಂದಿದ, ತಾರಕಾಕ್ಷಿಯೆನ್ನತಕ್ಕ, ಪ್ರಧಾನನ ಪತ್ನಿ= ಸಚಿವನಾದ ದುಷ್ಟಬುದ್ಧಿಯ ಸತಿಯು, ಚರಣಮಂ= ಚಂದ್ರಹಾಸನ ಕಾಲುಗಳನ್ನು, ಪ್ರಕ್ಷಾಳನಂಗೈದು= ತೊಳೆದು, ಮದನನು= ಮದನನಾದರೊ, ಆದರಿಸಿ= ಸತ್ಕರಿಸಿ, ಮಧುಪರ್ಕಮಂ ಮಾಡಿ= ಮಧುಪರ್ಕದ್ರವ್ಯವನ್ನು ರಚಿಸಿ, ಕನ್ಯಾವರಣದೊಳು= ಬಾಲೆಯನ್ನು ಪರಿ- 

ಗ್ರಹಿಸುವ ಕಾಲದಲ್ಲಿ, ಕುಲಪರಂಪರೆಯನು= ವಂಶಾವಳಿಯನ್ನು, ಒರೆಯೆನಲ್= ತಿಳಿಸು ಎಂದು ಮದನನು ಕೇಳಲು, ಶಶಿಹಾಸನು= ಚಂದ್ರಹಾಸನು, ಎನಗೆ=ನನಗೆ, ವಾಮನಗೋತ್ರಂ= ವಾಮನಗೋತ್ರಕ್ಕೆ ಸೇರಿದವನು, ಅರವಿಂದನಾಭಂ= 

ಕಂಜನಾಭನೆ, ಪಿತಂ=ತಂದೆ, ಪಿತಾಮಹಂ= ತಾತನಾದರೊ, ಹರಿ=ವಿಷ್ಣುವು, ಪ್ರಪಿತಾಮಹಂ = ಮುತ್ತಾತನು, ಮುರಹರಂ= ಮುರಾಂತಕನು, ಗುರುಗಳು= ನನ್ನನ್ನು ಪಾಲಿಸಿದವರು, ಕುಳಿಂದನೂ= ಮೇಧಾವಿಯೂ, ಅವನ= ಆ ಮೇಧಾವಿಯ, ಸತಿಯುಂ= ಹೆಂಡತಿಯಾದ ಮೇಧಾವಿನಿಯೂ ಆಗಿರುವರು, ಎಂದನು=ಎಂಬುದಾಗಿ ಉತ್ತರ ಕೊಟ್ಟನು. 


ತಾತ್ಪರ್ಯ:- ಅಲ್ಲಿ ದುಷ್ಟಬುದ್ಧಿಯ ಹೆಂಡತಿಯಾದ ತಾರಕಾಕ್ಷಿಯು ಚಂದ್ರಹಾಸನ ಕಾಲುಗಳನ್ನು ತೊಳೆದಳು. ಮದನನು ಇಂದುಹಾಸನನ್ನು ಆದರದಿಂದ ದಿವ್ಯ ಪೀಠದಲ್ಲಿ ಕುಳ್ಳಿರಿಸಿದನು. ಮಧುಪರ್ಕವೇ ಮೊದಲಾದ ಕಾರ್ಯಗಳೆಲ್ಲಾ ನಡೆದು 

ಕನ್ಯಾವರಣ ಕಾಲದಲ್ಲಿ ಪ್ರವರೋಚ್ಛಾರಣವನ್ನು ಕೇಳಿದರು. ಆಗ ಇಂದುಹಾಸನು ನಾನು ವಾಮನಗೋತ್ರದವನು. ಪದ್ಮನಾಭನಾದ ಶ್ರೀ ಮಹಾವಿಷ್ಣುವೇ ನಮ್ಮ ತಂದೆಯು, ಪಾಪಗಳನ್ನು ದೂರಮಾಡುವ ಹರಿಯೇ ನಮ್ಮ ತಾತನು. ಮುರಾಂತಕನಾದ ಕೃಷ್ಣಸ್ವಾಮಿಯೇ ನಮ್ಮ ಮುತ್ತಾತನಾಗಬೇಕು. ಚಂದನಾವತಿಯ ಅರಸನಾದ ಕುಳಿಂದನೂ ಅವನ ರಾಣಿಯಾದ ಮೇಧಾವಿನಿಯೂ ನನ್ನ ಸಾಕುತಂದೆ ತಾಯಿಗಳಾಗಿದಾರೆಂದು ನುಡಿದನು. 


ಅಲ್ಪಭಾಷಿತಮಲ್ಲದಿಹ ಚಂದ್ರಹಾಸನ ಸು। 

ಜಲ್ಪಿತಂ ಸೊಗಸೆ ಮದನಂ ಮುದದೊಳಾಗ ಸಂ। 

ಕಲ್ಪಿತ ನೀರೀಕ್ಷಣೆಗೆ ಸುಮುಹೂರ್ತಮಂಕೇಳ್ದು ತೆರೆದೆಗೆಸಿ ಭೂ ದಿವಿಜರ॥ 

ನಲ್ಸರಕವೆತ್ತು ಜೀರಿಗೆಬೆಲ್ಲದೊಪ್ಪಮೆಸೆ। 

ಯಲ್ಪದದ ಮೆಟ್ಟಕ್ಕಿ ಸುತ್ತನೂಲ್ ಮೆರೆಯೆ ಫಣಿ। 

ತಲ್ಪನಿದಿರೊಳ್ ತದರ್ಪಿತಮಾಗಲೆಂದವನ ಕೈಗೆ ಧಾರೆಯನೆರೆದನು॥೧೬॥ 


ಪ್ರತಿಪದಾರ್ಥ :- ಅಲ್ಪಭಾಷಿತ= ಸಾಧಾರಣವಾದ ಮಾತು, ಅಲ್ಲದಿಹ= ಅಲ್ಲದಿರತಕ್ಕ,ಚಂದ್ರಹಾಸನ = ಇಂದುಹಾಸನು, ಸುಜಲ್ಪಿತಂ= ಸವಿನುಡಿಯು, ಸೊಗಸೆ= ಯೋಗ್ಯವಾಗಿರಲು,ಮದನಂ= ಮದನನಾದರೊ, ಮುದದೊಳು= ಆನಂದದಿಂದ, ಆಗ= ಆ ಕಾಲದಲ್ಲಿ, ಸಂಕಲ್ಪಿತ= ನಿಷ್ಕರ್ಷಿಸಿರತಕ್ಕ, ನೀರೀಕ್ಷಣೆಗೆ= ಲಗ್ನವನ್ನು ಎದುರು ನೋಡುವುದಕ್ಕೆ, ಸುಮೂಹೂರ್ತ- ಮಂ= ಒಳ್ಳೆಯ ಲಗ್ನವನ್ನು, ಕೇಳ್ದು= ಕೇಳಿ, ತೆರೆತೆಗಿಸಿ= ತೆರೆಯನ್ನು ತೆಗೆಯುವಂತೆ ಮಾಡಿ, ಭೂದಿವಿಜರ= ವಿಪ್ರರ, ನಲ್= ಶ್ರೇಷ್ಠವಾದ, ಪರಕೆವೆತ್ತು= ಆಶೀರ್ವಾದ ಪಡೆದು, ಜೀರಿಗೆ ಬೆಲ್ಲದ= ಜೀರಿಗೆ ಬೆಲ್ಲ ಇವುಗಳ, ಒಪ್ಪಂ= ವಧೂವರರು ಇಡತಕ್ಕದ್ದು, ಎಸೆಯಲ್= ಚನ್ನಾಗಿ ಕಾಣಲು, ಪದದ= ಹೆಜ್ಜೆಯ, ಮೆಟ್ಟಕ್ಕಿ = ಮೆಟ್ಟತಕ್ಕ ಅಕ್ಷತೆಯು, ಸುತ್ತ= ನಾಲ್ಕು ಕಡೆಯೂ, ನೂಲ್= ಸೂತ್ರವು, ಮೆರೆಯೆ= ಕಂಗೊಳಿಸುತ್ತಿರಲಾಗಿ, ಫಣಿತಲ್ಪನ= ಶ್ರೀಮನ್ನಾರಾಯಣನ,  ಸಾಲಗ್ರಾಮದ= ಸಾಲಗ್ರಾಮಶಿಲೆಯ, ಇದಿರೊಳ್= ಮುಂದುಗಡೆ, ತದರ್ಪಿತಂ= ಶ್ರೀಮನ್ನಾರಾಯಣನಿಗೆ ಸಮರ್ಪಕವಾಗತಕ್ಕದ್ದು, ಆಗಲಿ= ಆಗಬೇಕು,  ಎಂದು=ಎಂಬುದಾಗಿ,  ಅವನಕೈಗೆ= ಆ ಚಂದ್ರಹಾಸನ ಹಸ್ತ ಪ್ರದೇಶಕ್ಕೆ, ಧಾರೆಯನು= ತುಲಸೀದಳ, ಸಾಲ- 

ಗ್ರಾಮ ಶಿಲೆ ಇವುಗಳಿಂದ ಕೂಡಿದ ಉದಕವನ್ನು, ಎರೆದರು= ಸುರಿದವರಾದರು. 


ತಾತ್ಪರ್ಯ:- ಇಂತಹ ಅಸಾಧಾರಣವಾದ ಇಂದುಹಾಸನ ನುಡಿಗಳನ್ನಾಲಿಸಿ ಸಂತುಷ್ಟನಾದ ಮದನನು ಗೋತ್ರಪ್ರವರಗಳನ್ನು ಹೇಳಿದ ಬಳಿಕ ಕನ್ಯಾನಿರೀಕ್ಷಣೆಗೆ ಸರಿಯಾದ ಮುಹೂರ್ತವನ್ನು ಕೇಳಿ ತೆರೆಯನ್ನು ಸರಿಸಿದರು. ವಧೂವರರು ಜೀರಿಗೆ ಬೆಲ್ಲವನ್ನು ಪರಸ್ಪರ ಹಾಕಿದರು. ಅನಂತರ ಅಕ್ಷತಾರೋಪಣೆಯೂ ಕಂಕಣ ಬಂಧನೆಯೂ ನಡೆಯಿತು, ಆ ತರುವಾಯ ಮದನನೂ ತಾರಕಾಕ್ಷಿಯೂ ಸಹ ವಿಷಯೆಯನ್ನು ಇಂದುಹಾಸನಿಗೆ ಕೃಷ್ಣಾರ್ಪಿತವಾಗಲೆಂದು ಧಾರೆಯೆರೆದರು.


ಮೊರೆವ ಮರಿದುಂಬಿಗಳ ಮಾಲೆಯಂ ತಾಳ್ದ ನವ।

 ಪರಿಮಳದ ಮಂದಾರ ಮಾಲೆಯಂ ವಿಷಯೆ ಸೌಂ।

ದರ ಶಿರೀಷದ ಮಾಲೆಯಂ ಪೋಲ್ವ ನಳಿತೋಳನೆತ್ತಿ ಕಂಧರದೊಳಿಡಲು॥ 

ಭರಿತ ಲಾವಣ್ಯ ಸಾಕಾರದಿಂ ಮಂಗಳಾ। 

ಭರಣಂಗಳೆಸೆವಲಂಕಾರದಿಂ ಪಾರ್ವರು। 

ಚ್ಚರಿಪಗ್ನಿಹೋತ್ರ ಪ್ರಕಾರದಿಂ ವಧುವಂ ಕುಳಿಂದಜಂ ಕೈವಿಡಿದನು॥೧೭॥


ಪ್ರತಿಪದಾರ್ಥ :- ಮೊರೆವ= ಧ್ವನಿಗೈಯುವ, ಮರಿದುಂಬಿಗಳ = ಎಳೆದುಂಬಿಗಳ, ಮಾಲೆಯಂ= ಹಾರವನ್ನು, ತಾಳ್ದ= ಪಡೆದಿರುವ, ನವ= ಹೊಸ, ಪರಿಮಳದ= ಸುವಾಸನೆಯ, ಮಂದಾರಮಾಲೆಯಂ= ಮಂದಾರ ಹೂಗಳಿಂದ ಮಾಡಿದ ಹಾರವನ್ನು,  ಸೌಂದರ= ಅಂದವಾದ, ಶಿರೀಷಮಾಲೆಯಂ= ಶಿರೀಷ ಹೂಗಳ ಹಾರವನ್ನು, ಪೋಲ್ವ= ಹೋಲುವ, ನಳ= ತಾವರೆ ದಂಟಿನಂತ, ತೋಳುಗಳನು= ಕೈಗಳನ್ನು, ಎತ್ತಿ= ಮೇಲಕ್ಕೆತ್ತಿ,ಕಂಧರದೊಳು= ಇಂದುಹಾಸನ ಕಂಠದಲ್ಲಿ,  ಇಡಲು= ಹಾಕಲಾಗಿ, ಭರಿತ= ತುಂಬಿರುವ, ಲಾವಣ್ಯ =ಸೌಂದರ್ಯದ, ಸಾಕಾರದಿಂ= ಆಕೃತಿಯಿಂದಲೂ, ಮಂಗಳ= ಶುಭದಾಯಕ- 

ಗಳಿಂದ, ಆಭರಣಗಳಾದ= ತೊಡಿಗೆಗಳಿಂದ, ಎಸೆವ= ಹೊಳೆಯುವ, ಅಲಂಕಾರದಿಂ= ಅಂದದಿಂದಲೂ, ಪಾರ್ವರು= ಭೂಸುರರು, ಉಚ್ಚರಿಪ= ಹೇಳುತ್ತಿರುವ, ಅಗ್ನಿಹೋತ್ರಪ್ರಕಾರದಿಂ= ಅಗ್ನಿಸಾಕ್ಷಿಯಾಗಿಯೂ, ಕುಳಿದಜ= ಇಂದುಹಾಸನು, ವಧುವಂ= ಮದುವೆಗೆ ಸಿದ್ಧಳಾಗಿರುವ ವಿಷಯೆಯೆಂಬ ತರುಣಿಯನ್ನು, ಕೈವಿಡಿದನು= ಮದುವೆಮಾಡಿಕೊಂಡನು. 


ತಾತ್ಪರ್ಯ:- ಸುಕುಮಾರಿಯಾದ ವಿಷಯೆಯೆಂಬ ಕನ್ಯಾಮಣಿಯು ಶಿರೀಷ ಕುಸುಮದಂತೆ ಅತ್ಯಂತ ಮೃದುವಾದ ತನ್ನ ಕೈಗಳಿಂದ ಸುವಾಸನೆಯನ್ನು ಬೀರುತ್ತಿರುವ ಮಂದಾರಮಾಲೆಯನ್ನೆತ್ತಿಕೊಂಡು ಇಂದುವನ್ನು ಹೋಲುತ್ತಿರುವ ಇಂದುಹಾಸನ ಕತ್ತಿಗೆ ಹಾಕಿದಳು, ಆಗ ಬ್ರಾಹ್ಮಣರೆಲ್ಲಾ ಚಂದ್ರಹಾಸ ವಿಷಯೆಯರಿಗೆ ಆಶೀರ್ವಾದ ಮಾಡಿದರು. ಸುಂದರಾ- 

ಕಾರದಿಂದಲೂ, ದಿವ್ಯಾಭರಣಗಳಿಂದಲೂ, ಒಪ್ಪುತ್ತಲಿರುವ ವಿಷಯೆಯನ್ನು ಇಂದುಹಾಸನು ಅಗ್ನಿಸಾಕ್ಷಿಯಾಗಿ ಪಾಣಿಗ್ರ- 

ಹಣ ಮಾಡಿದನು. 


ಮುಂದೆ  ವಿರಚಿಸಿದ ವೇದಿಯೊಳೆಸೆವ ಹಸೆಗೆ ನಡೆ। 

ತಂದು ಪಾಣಿಗ್ರಹಣಮಂ ಗೈದು ಲಾಜಾಜ್ಯ। 

ದಿಂದೆ ಹೋಮದೊಳಗ್ನಿಯಂ ಬೆಳಗೆ ವಿಪ್ರರಾಶೀರ್ವಾದಮಂ ಮಾಡಲು॥ 

ಬಂದು ತಿಲಕವನಿಟ್ಟು ಪತ್ರಫಲಮಂ ಕೊಟ್ಟು। 

ಪೊಂದಳಿಗೆವಿಡಿದಾರತಿಯ ನೆತ್ತಲೈದೆಯರ್। 

ಕಂದರ್ಪ ರತಿಗಳ ವಿವಾಹಮೆನೆ ಕಂಗೊಳಿಸಿತಾ ದಂಪತಿಗಳ ಮದುವೆ ॥೧೮॥ 


ಪ್ರತಿಪದಾರ್ಥ :- ಮುಂದೆ= ಮೊದಲೇ, ವಿರಚಿಸಿದ= ಎಸಗಿದ್ದ, ವೇದಿಯೊಳು= ಹಸೆಜಗಲಿಯ ಮೇಲ್ಕಡೆ, ಎಸೆವ= ಹೊಳೆಯುವ, ಲಾಜ= ಲಾಜಾಹೋಮವು, (ಅರಳನ್ನು ಮಂತ್ರಪುರಸ್ಸರವಾಗಿ ಅಗ್ನಿಯಲ್ಲಿ ಹಾಕುವುದು) ಅಶ್ಮದಿಂದ= ಅಶ್ಮನಾಮಕವಾದ ಕಾರ್ಯದಿಂದ, ಹೋಮದೊಳು= ಹೋಮದ ಕಾರ್ಯದಿಂದ,ಅಗ್ನಿಯ ಕುರಿತು= ಅಗ್ನಿಗೆ, ಬೆಳಗಿ= ಆರತಿ ಮಾಡಿ, ವಿಪ್ರರು= ಬ್ರಾಹ್ಮಣರು,  ಆಶೀರ್ವಾದಮಂ ಮಾಡಲು= ಆಶೀರ್ವಚನವನ್ನು ನುಡಿಯಲು, ಬಂದು= ಬಂದವನಾಗಿ,  ತಿಲಕವನು= ಹಣೆಗೆ ಅಲಂಕಾರವಾದದ್ದನ್ನು, ಇಟ್ಟು = ಇಟ್ಟವನಾಗಿ,  ಪತ್ರಫಲಮಂ= ಫಲತಾಂಬೂಲವ- 

ನ್ನು,  ಕೊಟ್ಟು = ಅವರೀರ್ವರ ಕೈಗೆ ಕೊಟ್ಟು,  ಐದೆಯರ್= ಮುತ್ತೈದೆಯರು, ಪೊಂದಳಿಗೆ ಪಿಡಿದು= ಚಿನ್ನದ ತಟ್ಟೆಯನ್ನು ಹಿಡಿದುಕೊಂಡು, ಆರತಿಯನು ಎತ್ತಲು= ಆರತಿಯನ್ನು ಬೆಳಗಿದಾಗ, ಆ ದಂಪತಿಗಳ ಮದುವೆ=ಆ ಚಂದ್ರಹಾಸ ವಿಷಯೆ-

ಯರ ಲಗ್ನವು, ಕಂದರ್ಪರತಿಗಳ= ಮನ್ಮಥ ರತಿದೇವಿಯರ,ವಿವಾಹಂ= ಕಲ್ಯಾಣವು, ಎನೆ= ಎಂಬಂತೆ, ಕಂಗೊಳಿಸಿತು= ವಿಜೃಂಭಣೆಯಿಂದ ಕೂಡಿತ್ತು. 


ತಾತ್ಪರ್ಯ:- ಸಪ್ತಪದಿ, ಲಾಜಾಹೋಮ, ಮೊದಲಾದವೆಲ್ಲಾ ನೆರವೇರಿದವು. ಬ್ರಾಹ್ಮಣರೆಲ್ಲ ಆಶೀರ್ವಾದವನ್ನು ಮಾಡಿದರು. ಮುತ್ತೈದೆಯರು ಚಂದ್ರಹಾಸನಿಗೂ ವಿಷಯೆಗೂ ಕುಂಕುಮವನ್ನು ಹಣೆಗಿಟ್ಟು, ಕೈಗೆ ತಾಂಬೂಲವನ್ನು ಕೊಟ್ಟು ಹಾಡುಗಳ- 

ನ್ನು ಹೇಳುತ್ತಿರುವ ಚಂದವನ್ನು ನೋಡಿದರೆ ಮನ್ಮಥ ರತಿದೇವಿಯರ ಮದುವೆಯೋ ಎಂಬಂತೆ ಮೆರೆಯುತ್ತಲಿತ್ತು.


ತತ್ಕಾಲದೊಳ್ ಮದನನಾ ಚಂದ್ರಹಾಸನಂ। 

ಸತ್ಕರಿಸಿ ಬಳುವಳಿಗೆ ಬಹಳ ಗೋ ಮಹಿಷಿ ಬಲ। 

ವತ್ಕರಿಸಿ ತುರಂಗ ರಥ ಶಯ್ಯಾಸನಂಗಳಂ ವಳಿತ ವಾಹನ ಪದವನು॥ 

ಉತ್ಕೃಷ್ಟ  ಪರಿಮಳದ್ರವ್ಯ ಸಂಕುಲಮಂ ಚ। 

ಮತ್ಕಾರದಬಲೆಯರನಂಬರಾಭರಣ ವಿಲ। 

ಸತ್ಕಂಠಮಾಲೆಗಳನಿತ್ತನೆಂದುಂ ಬಳಸಿ ತೀರದ ಸುವಸ್ತುಗಳನು॥೧೯॥ 


ಪ್ರತಿಪದಾರ್ಥ :- ತತ್ಕಾಲದೊಳ್ = ವಿಷಯೆಗೂ ಚಂದ್ರಹಾಸನಿಗೂ ಮದುವೆ ನಡೆದ ವೇಳೆಯೊಳಗೆ, ಮದನಂ= ಮದನನು, ಚಂದ್ರಹಾಸನಂ= ಆ ಚಂದ್ರಹಾಸನನ್ನು, ಸತ್ಕರಿಸಿ = ಆದರಿಸಿ, ಬಹಳ = ಅಧಿಕವಾದ, ಗೋ= ಧೇನುಗಳನ್ನೂ, ಮಹಿಷಿ= ಎಮ್ಮೆಗಳನ್ನೂ, ಬಲವರ್= ಬಲವಾಗಿರತಕ್ಕ, ಕರಿ= ಆನೆಗಳನ್ನೂ, ಅಶ್ವರಥ ಶಯ್ಯಾಸನಂಗಳಂ= ಕುದುರೆ, ರಥ, ಹಾಸಿಗೆ,ಕುಳಿತುಕೊಳ್ಳುವ ವಸ್ತುಗಳೆ ಮೊದಲಾದವನ್ನೂ, ವಳಿತ= ಆವರಿಸಿರುವ, ವಾಹನಪದವನು= ಅಶೂವರಥಗಳನ್ನು

ನಿಲ್ಲಿಸಲು ಅನುಕೂಲವಾದ ಎಡೆಗಳನ್ನೂ, ಉತ್ಕರ್ಷ= ಶ್ರೇಷ್ಠವಾದ,  ಪರಿಮಳ= ಸುರಭಿ ವಿಶಿಷ್ಟವಾದ, ದ್ರವ್ಯ= ಪದಾರ್ಥಗಳ, ಸಂಕುಲವನು=ಸಮುದಾಯವನ್ನು, ಚಮತ್ಕಾರದ= ಚಾತುರ್ಯದಿಂದ ಕೂಡಿರುವ,ಅಬಲೆಯರನು= ನಾರಿಯರನ್ನೂ, ಅಂಬರ= ಪೀತಾಂಬರವೇ ಮೊದಲಾದವನ್ನೂ, ಆಭರಣ= ತೊಡಿಗೆಗಳನ್ನೂ, ವಿಲಸತ್= ಕಾಂತಿಯುಕ್ತ- 

ವಾದ, ಕಂಠಮಾಲೆಗಳನು= ಕಂಠೀಹಾರಗಳನ್ನೂ, ಬಳಸಿ= ಉಪಯೋಗಿಸಿ,  ಎಂದುಂ= ಯಾವಕಾಲಕ್ಕೂ, ತೀರದ= ಮುಗಿಯದ, ಸುವಸ್ತುಗಳನು= ಶ್ರೇಷ್ಠವಾದ ವಸ್ತುಗಳನ್ನೂ, ಬಳುವಳಿಗೆ=ಮರ್ಯಾದಾ ದ್ರವ್ಯಕ್ಕಾಗಿ, ಇತ್ತನು= ಕೊಟ್ಟನು.


ತಾತ್ಪರ್ಯ:- ಈ ರೀತಿಯಲ್ಲಿ ಅತಿ ಸಂಭ್ರಮದಿಂದ ವಿವಾಹ ಮಹೋತ್ಸವವು ನಡೌದಮೇಲೆ ಮದನನು, ಅನೇಕ ಗೋವುಗಳನ್ನೂ, ಮಹಿಷಿಗಳನ್ನೂ,ಆನೆ, ಕುದುರೆ ರಥಗಳನ್ನೂ, ಹಸೆಗೆ ಕುಳಿತುಕೊಳ್ಳುವ ಪೀಠಗಳೇ ಮೊದಲಾದವನ್ನೂ, ಹೆಚ್ಚಾದ ಸುಗಂಧ ದ್ರವ್ಯಗಳನ್ನೂ, ಅನೇಕ ಜನ ಸ್ತ್ರೀಯರನ್ನೂ, ನಾನಾಪ್ರಕಾರವಾದ ಉಡಿಗೆ ತೊಡಿಗೆಗಳನ್ನೂ, ಅನೇಕ ಕಂಠೀಹಾರಗಳನ್ನೂ,  ಎಂದೆಂದಿಗೂ ಮುಗಿಯದಷ್ಟು ಹೆಚ್ಚಾಗಿ ಆ ವಧೂವರರಿಗೆ ಬಳುವಳಿಯಾಗಿ ಕೊಟ್ಟನು. 


ಉರ್ವೀಶ್ವರನ ಪುರೋಹಿತ ಗಾಲವಂಗೆ ತನ।

ಗುರ್ವ ಬಾಂಧವ ಪುತ್ರಮಿತ್ರರ್ಗೆ ನೆರೆದ ಭೂ। 

ಗೀರ್ವಾಣರೆಲರ್ಗೆ ಕವಿ ಗಮಕಿ ನಟ ವಿದೂಷಕ ವಂದಿ ಗಾಯಕರ್ಗೆ॥ 

ಸರ್ವ ಜನಕವರವರ ತರವರಿತು ಸತ್ಕರಿಸಿ। 

ತರ್ವಾಯೊಳಗಣಿತ ದ್ರವ್ಯಮಂ ಪೊತ್ತು ಬೇ। 

ಸರ್ವಿನಂ ಕೊಟ್ಟನುತ್ಸವದಿಂದೆ ಯಾಚಕರ್ಗಾಗ ದುರ್ಮತಿಯ ಸೂನು॥೨೦॥


ಪ್ರತಿಪದಾರ್ಥ :- ದುರ್ಮತಿಯ ಸೂನು= ದುಷ್ಟಬುದ್ಧಿಯ ಮಗ ಮದನನು, ಉರ್ವೀಶ್ವರನ= ಕುಂತಳ ರಾಜನ, ಪುರೋಹಿತ= ಹವ್ಯಕ ವ್ಯಾದಿಗಳನ್ನ ಮಾಡಿಸತಕ್ಕ, ಗಾಲವಂಗೆ= ಗಾಲವ ಮುನಿಗೂ, ತನಗೆ= ತನ್ನಕಡೆಯ, ಉರ್ವ= ಹೆಚ್ಚಾದ, ಬಾಂಧವ= ನೆಂಟರುಗಳಿಗೂ, ಪುತ್ರ= ಮಕ್ಕಳಿಗೂ, ಮಿತ್ರರ್ಗೆ= ಪ್ರೀತಿಪಾತ್ರರಾದವರಿಗೂ, ನೆರೆದ= ಅಲ್ಲಿ ಸೇರಿರತಕ್ಕ, ಭೂಗೀರ್ವಾಣರೆಲ್ಲರಿಗೆ= ಭೂಸುರರಿಗೂ, ಕವಿ=ಕವಿಗಳಿಗೂ, ಗಮಕಿ= ಓದುಗರಿಗೂ, ನಟ= ನರ್ತಕರು, ವಿದೂಷಕ= ನಕಲಿಯವರು, ವಂದಿ= ಹೊಗಳತಕ್ಕವರು, ಗಾಯಕರ್ಗೆ= ಹಾಡುಗಾರರಿಗೆ, ಸರ್ವಜನಕೆ= ಸಮಸ್ತರಿಗೂ, ಅವರವರ= ಆಯಾಯ ಪ್ರಜೆಗಳ, ತರವ= ಮರ್ಯಾದೆಯನ್ನು, ಅರಿತು=ತಿಳಿದು, ಸತ್ಕರಿಸಿ = ಮನ್ನಿಸಿ,ತರ್ವಾಯದೊಳು=

ಇವರನ್ನೆಲ್ಲಾ ಉಪಚರಿಸಿದ್ದಾದನಂತರ,ಅಗಣಿತ= ಲೆಕ್ಕವಿಲ್ಲದಷ್ಟು, ದ್ರವ್ಯಮಂ= ಹಣವನ್ನು,  ಪೊತ್ತು=ಹೊತ್ತುಕೊಂಡು,  ಬೇಸರ್ವಿನಂ= ಬೇಸರಹುಟ್ಟುವಂತೆ, ಉತ್ಸವದಿಂದ=ಅತ್ಯಾನಂದದಿಂದ, ಯಾಚಕರ್ಗೆ= ಭಿಕ್ಷುಕರಿಗೆ, ಕೊಟ್ಟನು= ಕೊಟ್ಟನು.  


ತಾತ್ಪರ್ಯ:- ಆ ಬಳಿಕ ಪುರೋಹಿತನಾದ ಗಾಲವ ಮುನಿಗೂ, ತನ್ನ ಬಂಧುಮಿತ್ರರಿಗೂ, ಬ್ರಾಹ್ಮಣೋತ್ತಮರಿಗೂ, ಕವಿಗಳು, ಶಾಸ್ತ್ರಜ್ಞರು,ನಟವಿದೂಷಕರಿಗೂ, ಸ್ತುತಿಪಾಠಕರಿಗೂ, ಗಾಯಕರೇ ಮೊದಲಾದವರಿಗೆಲ್ಲಾ ಅಪರಿಮಿತವಾದ ಹಣದ ರಾಶಿಯನ್ನುಕೊಟ್ಟು ಸತ್ಕರಿಸಿದನು. ಯಾಚಕರಿಗಾದರೊ ಅವರು ಹೊರುವಷ್ಟು ಧನವನ್ನು ಕೊಟ್ಟು ಅವರ ಮನಸ್ಸನ್ನು ತಣಿಸಿದನು.