ಜನಪದ ಮಹಾಕಾವ್ಯ
ಮಲೆಯ ಮಾದೇಶ್ವರ
ಸಂಪಾದಕರು: ಡಾ. ಪಿ. ಕೆ. ರಾಜಶೇಖರ
ನಾಗರೀಕತೆಯ ಸೋಂಕಿಲ್ಲದ ಜನತೆ ಅನಕ್ಷರಸ್ಥರೇ ಹೊರತು ಅವಿದ್ಯಾವಂತರಲ್ಲ. ಮಾನವನ ಜ್ಞಾನಭಂಡಾರದಲ್ಲಿ ಅಕ್ಷರವಿದ್ಯೆ ಇತ್ತೀಚಿನದು. ಗವಿಮಾನವನಿಂದ ಇತ್ತೀಚಿನವರೆಗೂ ವಿಕಾಸಗೊಳ್ಳುತ್ತ ಬಂದಿರುವ ಅವನ ಜ್ಞಾನಗರ್ಭದ ಅನಂತಮುಖಗಳಲ್ಲಿ ಕೆಲವನ್ನು ಮಾತ್ರ ವಿದ್ವಾಂಸರು ಗರಂಥರೂಪದಲ್ಲಿ ಹಿಡಿದಿಡಲು ಪ್ರಯತ್ನಿಸಿರುವುದರಿಂದ ಇನ್ನೂ ಅಮೂಲ್ಯವಾದ ಎಷ್ಟೋ ಮುಖಗಳು ಬರವಣಿಗೆಗಿಳಿಯದೆ ಅಜ್ಞಾತವಾಗಿದ್ದು ಅನಕ್ಷರಸ್ಥ ಸಮಾಜದಲ್ಲಿ ಉಸಿರಾಡುತ್ತಿವೆ. ಈ ಬಗೆಯ ಪರಂಪರಾನುಗತ ಜನಪ್ರಿಯ ಸಂಪ್ರದಾಯಗಳ ಮೊತ್ತವಾದ " ಜಾನಪದ " ಮೊಟ್ಟಮೊದಲು ವ್ಯಷ್ಟಿಯ ಮನೋಗರ್ಭದಲ್ಲಿ ರೂವಿಕ್ಕಿದರೂ ಕಾಲಕ್ರಮದಲ್ಲಿ ಸಮಷ್ಟಿಯ ಸ್ವತ್ತಾಗಿ ಅನೇಕ ತಲೆಮಾರುಗಳಲ್ಲಿ ಹಾಯ್ದು ಬಂದು ಸಹಸ್ರ ಸಹಸ್ರ ಮುಖಗಳಿಂದ ಹೊರಹೊಮ್ಮುವಾಗ ಹೊಸ ಹೊಸ ಗಾತ್ರ ಆಕಾರಗಳನ್ನು ಪಡೆದು ಪಾತ್ರವನ್ನು ವಿಸ್ತರಿಸಿಕೊಳ್ಳುತ್ತಾ ಹಾಗೂ ನಾಗರೀಕತೆಯೊಡನೆ ಸೆಣೆಸಾಡುತ್ತಾ ಬೆಳೆದು ಬಂದಿದೆ.
ಜಾನಪದದ ಅಧ್ಯಯನ ಆದಿಮಾನವನಿಂದ ಹಿಡಿದು ಇಂದಿನವರೆಗೂ ಬೆಳೆದುಬಂದಿರುವ ಜ್ಞಾನ ವಿಜ್ಞಾನಗಳನ್ನೊಳಗೊಂ-
ಡಿರುವುದರಿಂದ ಶಿಷ್ಟ ಸಂಸ್ಕೃತಿಯ ಮೂಲವನ್ನು ಜಾನಪದದಲ್ಲಿ ಕಾಣಬಹುದಾಗಿದೆ. ಜನಪದ ಸಂಸ್ಕೃತಿಯೇ ಮೂಲವಾಗಿದ್ದು ಎಲ್ಲ ಜ್ಞಾನ ವಿಜ್ಞಾನಗಳಿಗೂ ಮಾತೃಸ್ಥಾನದಲ್ಲಿ ನಿಲ್ಲುವ ಜಾನಪದ ಜನಸಾಮಾನ್ಯರ ವಿಶ್ವವಿದ್ಯಾಲಯ. ಅವರ ಬದುಕಿನ ಸರ್ವಸ್ವವನ್ನೂ ಒಳಗೊಂಡಿರುವ ವಿಶ್ವಕೋಶ.
ಜಾನಪದ ಅಧ್ಯಯನ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೊಸದಲ್ಲವಾದರೂ ನಮಗೆ ಇತ್ತೀಚಿನದು. ಆದರೆ ನಮ್ಮ ಜಾನಪದ ಸಂಪತ್ತು ಈಚಿನದಲ್ಲ. ಭಾರತ ಜಾನಪದದ ಅಕ್ಷಯ ಭಂಡಾರವಾಗಿದ್ದರೂ ನಮ್ಮ ಅವಜ್ಞೆಯಿಂದಾಗಿ ಆಗಿರಬಹುದಾದ ನಷ್ಟವೂ ಅಷ್ಟಿಷ್ಟಲ್ಲ. "ಜನಪದ ಮಹಾಕಾವ್ಯ " ಎಂದರೆ ಥಟ್ಟನೆ ಫಿನ್ಲೆಂಡಿನ " ಕಲೇವಲ " ನೆನಪಿಗೆ ಬರುತ್ತದೆ. ಹಾಗೆಂದ ಮಾತ್ರಕ್ಕೆ ಉಳಿದ ಯಾವ ದೇಶದಲ್ಲೂ ಜನಪದ ಮಹಾಕಾವ್ಯಗಳು ಇಲ್ಲವೇ ಇಲ್ಲವೆಂದು ಅರ್ಥವಲ್ಲ.
ಕರ್ನಾಟಕದ ವ್ಯಾಪ್ತಿಗೊಳಪಡುವ ಜನಪದ ಮಹಾಕಾವ್ಯಳೆಂದರೆ ಒಂದು " ಮಲೆಯ ಮಾದೇಶ್ವರ ಮಹಾಕಾವ್ಯ " ಎರಡು
" ಮನಟೇಸ್ವಾಮಿ ಮಹಾಕಾವ್ಯ " ಮಾದೇಶ್ವರರ ಕಾಲ ೧೬ ನೇ ಶತಮಾನ. ಮಾದೇಶ್ವರನ ತಂದೆ ಕಾಳೆಕಲ್ಯಾಣದೇವರು ತಾಯಿ ಉತ್ತರೋಜಮ್ಮ. ಮಾದೇಶ್ವರ ತನ್ನ ಮಹಿಮೆಯಿಂದ ಜನಪದವನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡು ಈಶ್ವರನೆನಿಸಿ-
ಕೊಂಡಮೇಲೆ ಎಲ್ಲರೂ ನಮ್ಮವನು ತಮ್ಮವನು ಎಂದು ಕೊಂಡಾಡಿದಂತೆ ಕಾಣುತ್ತದೆ.
ಮಠದ ಅಯ್ಯಗಳು ಮಾದೇಶ್ವರನಲ್ಲಿ ಕೆಲವು ವಿಶೇಷ ಗುಣಗಳನ್ನು ಗಮನಿಸಿದರೂ ಅವನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅನೇಕ ಮಠಗಳಲ್ಲಿ ಅಡ್ಡಾಡಿ ಜಾತೀಯ ಭೂತದಿಂದ ಪಾರಾಗಲು ದುರ್ಗಮವಾದ ಏಳುಮಲೆ ನಡುವೆ ನೆಲಸಿದನೆಂದು ಕಾಣುತ್ತದೆ. ಜನಪದ ಹೃದಯವನ್ನು ಇಷ್ಟೊಂದು ಸೂರೆಗೊಂಡಿರುವ ಈ ಮುದ್ದು ಮಾದೇವ ಭಕ್ತರಿಗೆ ಈಶ್ವರ, ಸಂಶೋಧಕರಿಗೆ ಇತಿಹಾಸ ಪುರುಷ,ಸಾಹಿತ್ಯ ರಸಾಸ್ವಾದಕರಿಗೆ ಕಥಾನಾಯಕ, ಧರ್ಮಜಿಜ್ಞಾಸುಗಳಿಗೆ ವಿಭೂತಿ ಪುರುಷ. ಮಹದೇಶ್ವರ ನೆಲೆಗೊಂಡಿರುವ ಸ್ಥಳ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮನೋಹರವಾದ ಪರ್ವತಾರಣ್ಯಗಳ ನಡುವೆ ಇದೆ. ಮಾದೇಶ್ವರನಿಗೆ ಗುಡಿ ಕಟ್ಟಿಸಿಕೊಟ್ಟ ಜುಂಜೇಗೌಡನ ಆಲಂಬಾಡಿ ದೇವಾಲಯದ ಉತ್ತರಕ್ಕೆ ೧೨ ಮೈಲಿ ದೂರದಲ್ಲಿದೆ. ಈ ಊರಲ್ಲಿ ಈಗ ಸೋಲಿಗರು ವಾಸವಾಗಿದ್ದಾರೆ.
ಮಂಗಳ ಮೈಮ ಮಾದೇವ
ಮಂಗಳ ಮೈಮ ಲಿಂಗದ ರೂಪ
ಸಂಗೂಮೇಶ್ವರ ಮಾದೇವ
ಗುರು-ಸಂಗೂಮೇಶ್ವರ ಮಾದೇವ
ಲಿಂಗದ ವರಗಳ ಕರುಣೀಸಯ್ಯ
ಬಾಲ ಚಂದಿರ ಮಾದೇವ
ಶಿವ-ಬಾಲಚಂದಿರ ಮಾದೇವ
ಲಿಂಗದ ವರಗಳ ಕರುಣಿಸು ಗುರುವೆ
ಜಂಗುಮರ ಪ್ರಿಯ ಮಾದೇವ
ಯತಿಗಣರುದಯದ ಕಮಲದೊಳಿರುವ
ಗತಿ ಮೋಕ್ಷವ ಕೊಡುವ ಮಾದೇವ ॥೧೦॥
ಬಾ ನನ್ನ ಗುರುವೆ ನಾನಿನ್ನ ಕಂದ
ಬಾಗಿದೇನು ಮಾದೇಶ್ವರನೆ
ಬನ್ನಿ ನಿಮ್ಮ ಸಿರುಪಾದಗಳ
ನಂಬಿದೇನು ತಂದೆ
ಇದ್ಯೆ ಕಲಿಸಿದ ಗುರುವಿನ ಪಾದಕೆ
ಬಿದ್ದು ನಮಿಸುತ ಪಾಡುವೆವು
ಇದ್ದಷ್ಟು ಮತಿಯ ಕರುಣಿಸು ಗುರುವೆ
ಮುದ್ದು ಮಾದೇವನೆ ಮುದದಿಂದ
ಲಿಂಗಕೆ ಸರಣು - ಅಯ್ಯನ
ಜಂಗಮಕ್ಕೆ ಸರಣು ॥೨೦॥
ಲಿಂಗಧಾರಣೆ ಮಾಡಿದ ಗುರುವಿನ
ಪಾದಕೊಂದು ಸರಣು
ಮತಿಯ ಕೊಡೋ ಮಾದೇವ ನಮಗೆ
ಸೃತಿಯ ಕೊಡೊ ಸರಸತಿಯೇ
ನಮ್ಗೆ ಇದ್ಯಾ ಬುದ್ಧಿ ಕಲಿಸಿದ ಗುರುವೆ
ಕೊಡು ನಮಗೆ ಮತಿಯ
ವಿಗ್ಗಾಣೇಶ್ಪುರನೆ ಮಾದೇವ
ಗೌರೀಯ ಮುದ್ದಿನ ಕುಮಾರನೆ
ನಮಗೆ ಇದ್ಯಾ ಬುದ್ಧಿ ಕಲಿಸೀದ ಗುರುವೆ
ಕೊಡು ನಮಗೆ ಮತಿಯ ॥ ೩೦॥
ಸಂದೇಲೆತ್ತಿದ ವಾಲಗವು
ಸಂದಿದವು ನಿಮ್ಮೇಳುಮಲೆಗೆ
ಚಂದಕೆ ಚಂದ್ರನೇತುರಮೂರ್ತಿ
ವಂದೀಪೆ ನಿಮಗೆ ಸರಣಾರ್ತಿ
ಮುಡುಕುತೊರೆ ಮಲ್ಲಪ್ಪಾ ಬಾ
ತಲಕಾಡ ಹೊಸಲಿಂಗ ಬಾ
ಕುಂತೂರು ಮಠದ ಹುತ್ನಲ್ಲಿರುವಾ
ಚಿಲಕೋಡಿ ಸಂಬುಲಿಂಗ ಬಾ
ಪಾದ ನೋಡಿದರೆ ಪಾತಾಳವಲ್ಲೊ
ಜಂಜಡೆಯೊಳಗೆ ಕೈಲಾಸ ॥೪೦॥
ಮುಕ್ಕೋಟಿ ಮಾನುವ ದೇವದಾನುವ
ನಿನ್ನೊಳಗಲ್ಲೊ ಮಾದೇಸ
ಪಾತಾಳಲೋಕ ಪಾದಕೆ ಜಂಗು
ಪಾದುವೆಲ್ಲ ರವರತ್ನಗಳು
ಪಾದಪೂಜೆ ಕಿರುಜಂಗಿನ ಸಪ್ತ
ಘಲ್ಲೀರು ಎಂದಾವು
ಘಲ್ಲೀರ್ ಘಲ್ಲೀರ್ ಎಂದಾವು ಮಾದೇವ
ನಿಮ್ಮ ಗಗ್ಗುರಾದ ಬಿರುದು
ಪಾದ ಪೂಜೆ ಕಿರುಜಂಗಿನ ಸಪ್ತ
ಘಲ್ಲೀರು ಎಂದಾವು ॥೫೦॥
ಸುತ್ತೇಳು ಲೋಕಕೆ ಗೊತ್ತಾಗಿರುವುದು
ಸುತ್ತೂರು ಮಠವೆ ತಾನಿಂದು
ಹೆಚ್ಚೀನ ಗದ್ದುಗೆ ನೆಳಲಲ್ಲಿ ಗುರುವೆ
ಸೋದಿಸಿ ಕುಳಿತರೋ ಮಾದೇವ
ಹೆಚ್ಚೀನ ಗದ್ದುಗೆ ಮುತ್ತೀನ ಬೆತ್ತ
ಸುತ್ತೂರು ಮಠದ ಸ್ವಾಮುಗಳ್ಗೆ
ಸಾಲುತ್ತಿಗೆ ಸೂರಿಯ ಪಾನಿ
ಸಾಲೂರು ಮಠದ ಗುರುಗಳ್ಗೆ
ಏಕದಾರುತಿ ಎಳುಗಾಯಿ ಪೂಜೆ
ಧೂಪದಾರುತಿ ಬಲಗೈಲಿ ॥೬೦॥
ಮಾಗಳಿ ಹೂವು ಮರಳಿ ಎದ್ದಿತು
ಮಾದೇವ ಲಿಂಗನಿಗೆ
ಆದಿಕರ್ನಾಟಕ ಮೈಸೂರಿನಿಂದ
ಚಿನ್ನದ ಕೊಳಗ ಕಳುಗವುರೆ
ಕೊಳುಗವ ಧರಿಸಿ ಮಾದೇವ
ಕಲ್ಗವೀಲಿ ಒರಗವುರೆ
ಮುಂಗೊಂಡದ ಮಾದೇವ
ಮುಂದಲ ಪೂಜೆಗೆ ಬರುವಾಗ
ಹಣ್ಣು ಕಾಯಿ ಸಾಂರಾಣಿ ಗವುಲು
ಮಂಜುಗವುದಾವು ॥೭೦॥
ಶಿವುನ ಕಂಡ್ಯ ಶಿವಲಾತ್ರೀಲಿ
ನಮ್ಮರನ ಕಂಡ್ಯ ಏಳುಮಲೆಯಲ್ಲಿ
ಇಂದು ಕಂಡರು ಮಾದೇವನ
ಸಿರುಗಂಧದ ಕೊಳುದಲ್ಲಿ
ಚಂದಕೆ ಚಂದಿರನೇತುರ ಮೂರ್ತಿ
ವಂದಿಪೆ ನಿಮಗೆ ಸರಣಾರ್ಥಿ
ಸರುವರ ನೋಡಿ ಪಡದರು ಗುರುವೆ
ಜಗದೊಳಗೆಲ್ಲ ನಿಮಕೀರ್ತಿ
ಕೆಂಡಗಣ್ಣಯ್ಯ ಕೊಂಡಕ್ಕೆ ಬರುವಾಗ
ದುಂಡುಮಲ್ಲೀಗೆ ಹರಡಿದವು ॥೮೦॥
ಲಿಂಗದ ಭಾಗ್ಯ ಕರುಣಿಸು ತಂದೆ
ಚಂದ್ರಸೇಕರ ಮಾದೇವ
ಜಾಜಿ ಹೂವಿನ ಜಾಣ ಬಾ
ಜೇನು ಮಲೆಯ ಜಗದೊಡೆಯ ಬಾ
ಈರತ ಮಾದೇವ ನಂದಿಯ ಮ್ಯಾಲೆ
ಮೆರೆಯೋದ ನೋಡಯ್ಯ
ಬೆಟ್ಟದ ಮಾದೇವ ಬರುವಾಗ
ನಡುಬೆಟ್ಟವೆಲ್ಲ ಗುಡುಗುಟ್ಟಿದುವು
ಹುಟ್ಟುಕಲ್ಲು ಸರಗುಟ್ಟಿದುವು
ಕಾವ್ಯಕಂತೆ ದೇವರ ಮಕ್ಕಳ
ಬರೈವುದ ನೋಡಯ್ಯ
ಉರಗ ಭೂಷಣ ಕರದಲಿ ಕತ್ತಿ
ಮೆರೆದು ಬಂದು ರಥವೇರುವರೆ
ಬಿರುದುಗಾರ ನೆಲೆಗೊಂಡವುರೆ
ಗಂಡುಭೈರುಂಡ ಪಕ್ಷಿಯನೇರಿ
ನಡೆದರು ಏಳುಮಲೆಗೆ
ಅಂತರಗಂಗೆ ಮರೆಯಲ್ಲಿ
ಮರ್ತು ನಿದ್ರೆ ಮಾಡೋರೆ
ಎಬ್ಬುರೈಸಪ್ಪ ಕಾರಯ್ಯ
ಮಜ್ಜಣದೊತ್ತಾಯ್ತು ॥೧೦೦॥
ಏಳುಮಲೆ ಕೈಲಾಸದ ಒಡೆಯ
ಏಳಯ್ಯ ಗುರುವೆ ಮಾದೇವ
ಕಾಕೋಳಿ ಕೂಗಿತು ಮೂಡು ಕೆಂಪೇರಿತು
ಏಳಯ್ಯ ಶಿವೈನೆ ಮಾದೇವ
ಗಂಡುಲಿ ಮ್ಯಾಲೆ ಬ್ಯಾಂಟೆಯನಾಡಿ
ನಿದ್ದುರೆಗೆಟ್ಟು ಮನುಗವುರೆ
ನೀ ಎಬ್ಬುರುಸಪ್ಪ ಕಾರಯ್ಯ
ಮಜ್ಜಣದೊತ್ತಾಯ್ತು
ಚಿನ್ನದ ಮಂಟಪದಲ್ಲಿ ಮಾದೇವ
ಚಿನುಮಯನಾಗಿ ಹೊಳೆಯುವರು ॥೧೧೦॥
ಸಣ್ಣ ಬಾಲಕರು ಕಾರಯ್ಯ ಬಿಲ್ಲಯ್ಯ
ಚಿನ್ನದ ಚವುಲ ಬೀಸುವರು
ಸ್ವಾಮಿ ನಂದಿವಾನ ಗಂಧದ ರೇಕೆ
ನಂಜುಂಡಲಿಂಗನಿಗೆ
ಮಾಗಳಿ ಹೂವು ಮರಳಿ ಎದ್ದಾವು
ಮಾದೇವ ಲಿಂಗನಿಗೆ
ಅಲ್ಲಿ- ಕೋಗಿಲೆಯೆದ್ದು ಕೊಂಬೆಯೇರಿ
ಕೂಗುತವೆ ಮಾದೇಶ್ಪುರನ
ರಾಗವೆತ್ತಿ ದುಂಡು ಮಾದಯ್ಯನ
ನೆನಿಯುತಾವೆ ನೋಡು ॥೧೨೦॥
ಹಿಡಿದಾರುಲ್ಲೆ ಬೋಳಿಯವೊಳುಗೆ
ಮಡುಗವುರೆ ತಮ್ಮೆಗ್ಗರವ
ಕಾರು ಗುಡುಗು ಕರುಮಿಂಚಿನ ಸಪ್ತಕೆ
ಕರದಾರು ಹೆಬ್ಬುಲಿಯ
ಅಡವಿಲಾಡುವ -ದೊಡ್ಡ
ಗುಣಕಲ್ಲು ಬರಗನ
ಸನ್ನೆ ಮಾಡಿ ತಾ ಕರೆದರು ಗುರುವೆ
ಬಣ್ಣದೆಬ್ಬುಲಿಯ
ಬಣ್ಣದೆಬ್ಬುಲಿಗೆ - ಶಿವನೆ
ಚಿನ್ನಾದ ಅನುಸೂಡಿ ॥೧೩೦॥
ಏಳುಮಲೆಯಲಿ ಮೆರಿಯುವ ತಂದೆ
ಚಂದ್ರಸೇಖರನೆ
ನೌಲು ಕುಣಿದಾವೋ ಶಿವನೆ
ನೌಲು ಕುಣಿದಾವೊ
ನೌಲಿಂಡು ನಡುಬೆಟ್ಟವನತ್ತಿ
ನೌಲು ಕುಣಿದಾವೊ
ಸಾಲುಸಂಪೀಗೆ ವನದ ಒಳುಗೆ
ಸಾಲಿಟ್ಟು ಬರುವರಿವರ್ಯಾರೋ
ನೂರೊಂದು ಜನ ತಮ್ಮಡಿ ಮಕ್ಕ
ಹೂವಿಗೆ ಬರುತಾರೆ ॥೧೪೦॥
ಹುವ್ವ ಕುಯ್ಯೋ ಜಾಣ -ನೋಡಿ
ಹುವ್ವ ಕುಯ್ಯೋ ಜಾಣ
ಗಿಡದಮ್ಯಾಲೆ ಬಂದು ಗಿಣಿಗಳು ಕೂತವೆ
ನೋಡಿ ಕುಯ್ಯೊ ಜಾಣ
ಬೆಟ್ಟದ ಮ್ಯಾಲಿನ ಕಲ್ಲೀಗೆ
ಹನ್ನೆರಡು ಸಾವಿರ ಮಲ್ಲಿಗೆಯು
ಬೆಟ್ಟಕೆ ಬೆಳಗೀನ ಮಲ್ಲಿಗೂವು
ಗಮಗುಟ್ಟುತ ಬಂದಾವು
ಏಳುನೂರು ಎಡಮಾಳದ ಒಳುಗೆ
ಹುಟ್ಟಿತ್ತು ಮಾಲಿಂಗವೆ ॥೧೫೦॥
ಅಲ್ಲಿ ಮುಟ್ಟಿ ಪೂಜಿಯ ಮಾಡಿದ
ಬ್ಯಾಡರ ಕನ್ನಯ್ಯ ಸರಣು
ಕಾರಯ್ಯ ಜಂಗುಮರು- ಬೆಟ್ಟದ
ಬಿಲ್ಲಯ್ಯ ಜಂಗಮರು
ಮಲನಾಡು ದೇಶಕೆಲ್ಲ- ನಮ್ಮ
ಮಾದೇವ ಜಂಗುಮರು
ಅಂಗದ ವಸ್ತುರ ಲಿಂಗದ ಪೂಜೆ
ಜಂಗುಮ ದೇವರಿಗೆ
ಹೂವಿನ ಜಂಜಡೆ ಬೆರಳಿ ಬಾಪುರಿ
ಶೇಷಣ್ಣ ದೇವರಿಗೆ ॥ ೧೬೦॥
ಕಾರಯ್ಯ ಇರುವ ಮಲೆಯಲ್ಲಿ
ಕಾಮಜೇನು ಕರುದೊ
ಕರುವ ಬಿಡೋ ಕಾರಯ್ಯ- ನಿನ್ನ
ಮಜ್ಜಣದೊತ್ತಾಯ್ತು
ಕಂಚೀನಂಡೆ ಕರೆಡಿದ ಪಾಲು
ಒಳಸಾಲಮ್ಮನ ಕೈಯಲ್ಲಿ
ಬೆರಳೀಯ ಬಟ್ಲಲ್ಲಿ ಕಾಸೀದ ಹಾಲು
ಮಾದೇವನ ಕೈಯಲ್ಲಿ
ಆಲುಮಜ್ಜಣ ಅರಣೀಗೆ ( ಅರಣಿ=ಶಿವನಿಗೆ)
ಎಳನೀರುಮಜ್ಜಣ ಶಿವನೀಗೆ ॥೧೭೦॥
ನಮ್ಮೊಡೆಯ ಮಾದೇವನಿಗೆ
ಎಣ್ಣೇಲಿ ಮಜ್ಜುಣವು
ಕಣ್ಣಿಲ್ಲದವುರಿಗೆ ಕಣ್ಣಂತೆ ಶಿವ
ಕಣ್ಣೀಗೆ ಕಣ್ಣಾಗಿದರಂತೆ
ಎಲ್ಲರ ಜೀವದಿ ಸಾಂಬ ಸದಾಶಿವ
ಬಣ್ಣ ಬಣ್ಣವಾಗಿಹರಂತೆ
ಎಲ್ಲಾ ರೂಪು ತಾನಂತೆ
ಎಲ್ಲಾರೊಳಗೂ ಶಿವನಂತೆ
ಅಲ್ಲಲ್ಲರಸುತ ಗುಡಿಗಳ ತಿರುಗುವ
ಜನಗಳ ಕಣ್ಣಿಗೆ ಕಲ್ಲಂತೆ ॥೧೮೦॥
ಕಾಡಪ್ಪಾ ಪಾರುವಾಳದಕ್ಕಿ
ಕಂದನ ಹುಲುಮರಿದುಂಬಿಗಳು
ನವುಲಕ್ಕಿ ನವುಲಿಂಡಯ್ಯಾನ
ಕೂಗಿ ಕರಿದಾವು
ಕಾಡಿ ಬೇಡಿ ಕಂಗೆಟ್ಟೆನು ಗುರುವೆ
ಬೇಡುವೆನು ನಿಮ್ಮ ಸಿರಿಪಾದವ
ಮಂಡೆಮ್ಯಾಗಳ ಮಜ್ಜಣದೂವ
ಪಾಲಿಸಯ್ಯ ವರುವ
ಇಂದು ಕಂಡ ಸರಗೂರಲ್ಲಿ
ಚದುರಂಗದ ಬೆಟ್ಟದ ಕೈಯೊಳಗೆ ॥೧೯೦॥
ಇಂದು ಕಂಡೀರ್ಯಾ ಮಾದೇವನ
ಸಿರುಗಂಧದ ಕೊಳುದಲ್ಲಿ
ತಾವರೆ ಉದುರು ಬಾಣಿಗಳಯ್ಯ
ತಲೆಯ ಮ್ಯಾಲೆ ತಾ ಉರುಗಣ್ಣು
ತಾವನೋಡಿ ನೆಲೆಗೊಂಡೆ ಗುರುವೆ
ಜೇನು ಮಲೆಯಲ್ಲಿ
ಆರು ಕುರುಜಡೆ ಜಂಗುಮರಯ್ಯ
ಹಾಲು ಮಣಿಸರ ಕೊರಳಲ್ಲಿ
ನಂಗೆ ಹಾದಿ ತೋರೋ ಕಾರಯ್ಯ
ನಾಗುಮಲೆ ಗಂಟ ॥೨೦೦॥
ಆದಿಯ ಮಠಮನೆ ಯಾವುದು ಎಂದು
ಸೋದಿಸಿ ಹುಡುಕಿದ ಮಾದೇವ
ಲೆಪಿಲಾಂದಿಗುಪಿ ತಪನಿಷ್ಠೆಯಲಿ ( ಲೆಪಿಲಾಂದಿಗುಪಿ = ವಿಪಿನಾಂಧಕಾರ =ಕಟ್ಟುಗ್ರವಾದ )
ಇರೈವುದು ಆ ಮಠವು
ತಾವರೆ ಕಟ್ಟೆ ಏರಿಯಮ್ಯಾಲೆ
ದೇವರು ಮೂರುತ ಮಾಡುವುರೆ
ದೇವರ ಕಂಡರೆ ಬರಹೇಳು ಕಾರಯ್ಯ
ಜೇನುಮಲೆಗಾಣೆ
ಎಂದಿಲ್ದ ಕೆಂದ್ತಾವ್ರು ಪುಷ್ಮ
ಇಂದಿಲ್ಲಿರುವುದು ಕೊಳದಲ್ಲಿ ॥೨೧೦॥
ತುಂಬುಗುರುಳು ಶಿವಗುರುವಿನ ಪೂಜಿಗೆ
ಕೊಂಡು ನಾ ಪೋಗುವೆನು
ನಾಗರಕಂತೆ ನಡುತುಂಬ ಜಂಗು
ನಾಗರಾಜವ ಮೆರುದವುರೆ
ಜಂಗುಮರ ಕೈ ವಾಲಗದಲ್ಲಿ
ಸಂಕರೆದ್ದು ಬಂದ
ಸಂದೆ ವಾಲಗವು ಸಾಸಣ ಪೂಜೆಗಳು
ಗಂಧದ ಗವುಲು ಕವುದಾವು
ಇಂದು ನೋಡು ಮಾದೇವನಿಗೆ
ಜಂಗುಮರ್ವಾಲಗವು ॥೨೨೦॥
ಅಡ್ಡ ಗುಡ್ಡಿಗಳು -ಶಿವುನೆ
ಒಡ್ಡೀನ ಪೂಜೆಗಳು
ಅಡ್ಡ ಗುಡ್ಡ ದಿಡ್ಡಿಗಲ್ಲಿನಮ್ಯಾಲೆ
ಲಗ್ಗೆ ಚೆಂಡುಗಳು
ಕರತನ್ನಿ ಕಾರಯ್ಯನ-ಹೋಗಿ
ಹಿಡಿತನ್ನಿ ಬಿಲ್ಲಯ್ಯನ
ಚಿಕ್ಕ ಬೆಟ್ಟದಲ್ಲಿ ಚೆಂಡಾಡುವಂತಾ
ಬರೇಳಿ ಮಾದೇವನ
ಅಡ್ಡಗಂಧವ ಧರುಸವುರೆ- ದೊಡ್ಡ
ಬರುಗನ ಮ್ಯಾಲೇರವುರೆ ॥೨೩೦॥
ಜಂಗಮರೊಂದಿಗೆ ಮಾದೇವನೆದ್ದು
ಬೀದೀಲಿ ಮೆರೆದಾರು
ನಾಗುಮಲೆಯ ಕೋಡುಗಲ್ಲಿನಮ್ಯಾಲೆ
ನಲಿದು ನಾಂಟ್ಯನಾಡವುರೆ
ನಾಗರಸೆಡೆಯ ನೆಳ್ಳಲ್ಲಿ ಮಾದೇವ
ಏಗದಲ್ಲಿ ತಾ ಒರುಗವುರೆ
ಕರಿಯಕಂಬಳಿ ಗದ್ದುಗೆ ಹೂಡಿಶ
ಸಿದ್ದುಪತ್ತುರೆ ಸೇದುತಲಿ
ಇದ್ದರು ರುಸಿಗಳು ಮುದ್ದು ಮಾದೇವನ
ಗದ್ದುಗೆ ಎಡಬಲದಿ ॥೨೪೦॥
ಸಣ್ಣ ಬರಗನಮ್ಯಾಲೆ ಕನ್ನಾಡಿಕಟ್ಟಿ
ಪನ್ನಂಗದಾರುತಿಯು
ದೇವಲೋಕದ ಸ್ತ್ರೀಯರು ತಂದರು
ದೇವರಿಗಾರತಿಯ
ಕಾಡುಗಲ್ಲಿನ ಮ್ಯಾಲೆ ಸ್ವಾಮಿ
ಜೋಡೆರಡು ಪಾದವನೂರಿ
ಅಯ್ಯ ಜೋಡುಗೊಂಬಿನ ಭಾರಿ ಬಸವನ
ಬಾಬಾ ಅನ್ನುತ್ತಾ
ಆನೆತಲೆದಿಂಬ್ಯೀನ ಮರೆಯ
ಬಳಬಳಸು ಬ್ಯಾಡರ ಕಣುವೆ ॥೨೫೦॥
ಸ್ವಾಲುಗರೈಕಳ ವಾಲೀಗದಲ್ಲಿ
ಸಂಕರೆದ್ದು ಬಂದ
ಸಣ್ಣನಾಮದ ಸರಗೂರಯ್ಯ
ಏಳುಮऽಲೆಗೆ ಬರುವಾಗಿ
ಒಡೆದ ಹೊಂಬಾಳೆಯೆಲ್ಲ
ವಾಲಾಡಿ ಬಂದೋ
ಮಕ್ಕಳಿಲ್ಲದೆ ಬೋಜನ ಗುರುವೆ
ದುಕ್ಕದಿಂದಲೆ ಬರುತಿರಲು
ಸಕ್ಕರೆ ದಾನವ ಮಾಡವುರೆ
ಫಲಾರ ದಾನ ಮಾಡವುರೆ ॥೨೬೦॥
ಹಾಲು ದಾನವ ಮಾಡವುರೆ
ಕಜ್ಜೂರ ದಾನವ ಮಾಡವುರೆ
ಬಾಲನ ಭೋಗ ಕರುಣೀಸಯ್ಯ
ಬಾಲಚಂದಿರ ಮಾದೇವ
ಕಂಚೀನ ಕಂಸಾಳೆ ಚಂದ
ಪಂಚೈದು ಗೊಂಡೆ ಚೆಂದ
ಜಂಗುಮರ ವಾಲಿಗ ಚಂದ
ನಾಗುಮಲೆಯಲ್ಲಿ
ಲಂಕೆಯಾಳುವ ರಾವುಳನಂತೆ
ಬಂಕಾಪುರಿಯ ಪಟ್ಟಣದಿ ॥೨೭೦॥
ಪರಿಪರಿರಾಜ್ಯ ಆಳುವನಂತೆ
ಶ್ರವಣನೆಂಬ ರಕ್ಕಸನು
ಕಿಂಕರರೆಲ್ಲ ಸಂಕಟಪಡುತ
ಸಂಕರ ಶಿವನಿಗೆ ಮೊರೆ ಇಡಲು
ಪ್ರಮುರ್ತೆ ಮಾಡುವ ನಿಮಗಳನೆಲ್ಲ
ಯರ್ತಗಳಿಸುವ ಶ್ರವಣನು
ಅರಗಿನಲಿ ಚಮ್ಮಾಳಿಗೆ ಮಾಡಿ
ಧರಿಯ ಮ್ಯಾಲೆ ತಂದಿರುಸವುರೆ
ನರುಮುರಿ ಎಂಬೊ ಶ್ರವಣನ ಕೊಂದ
ತವಸರ ಬೆಟ್ಟದಲಿ ॥೨೮೦॥
ಹಿಂಡುಗಾಳಿಯ ಗಂಡ ಬಾ
ಗಂಡುಗಲಿಯ ಮೊನೆಗಾರ ಬಾ
ಜಂಗುಮರೊಂದಿಗೆ ತಮ್ಮಡಿಗೇರಿಲಿ
ಮೆರಿಯುವ ಮಾದೇವ ಬಾ
ವರದ ಗೌರಿಯ ಪುತ್ರನೆ ಬಾ
ಮುದ್ದುಳ್ಳ ಗಣನಾಯಕ ಬಾ
ಸೀರು ಮುಖದ ಗೌರಿಯ
ಬೀನುಮೈಯ್ಯಾನೆ ಬಾ ( ಬೀನುಮೈಯ್ಯ= ಬೆನುಮಯ್ಯ, ಗಣಪತಿ )
ಚಂಡಿ ಕಟ್ಟಿ ಚಾಮುಂಡಿ ಬಾ
ಚಾಮರಾಜರ ಮನೆ ದೇವ್ರೆ ಬಾ ॥೨೯೦॥
ಐದುಗಾಲಿಯ ಮನ್ನ ಬಾ
ಐಭೋಗಿ ನಂಜುಂಡ ಬಾ
ಉತ್ತಮ ಪುರುದೊಳಗೆ ತುಂಬಿ
ಎತ್ತಿದೊ ಹಾಲರವಿ
ಉತ್ತುರಾಣಿ ಜಂಜಡೆಯ ಒಳುಗೆ
ಮೆಲ್ಲಗೆ ಬಂದೊ ಹಾಲರವಿ
ಹಾಲರುವಿಯ ಹೊತ್ತು ಕೊಂಡು
ಜಾಲದ ಮುಳ್ಳ ತುಣುಕೊಂಡು
ಹೊತ್ತು ಮೂಡಿತು ಮಾದೇವ ನಿಮ್ಮ
ತಮ್ಮಡಿಗೇರಿಗೆ ॥೩೦೦॥
ಆಲಂಬಾಡಿಗೆ ಲೋಲ ಬಾ
ಜೇನುಮಲೆಗೆ ದುಂಡಯ್ಯ ಬಾ
ಆಲರುವಿ ಮೇಲೂವಿನ ದಂಡೆ
ವಾಲಾಡಿ ಬಂದೊ
ಕಿರುಕಾಕ ಹೊಡಿದ ರವುಸೀಗೆ
ದೇಸುವೆಲ್ಲ ತಲ್ಲಣಿಸಿದುವೋ
ಆಸರಗಲ್ಲತ್ತಿ ಮಾದೇವ ತಮ್ಮ
ಪರುಸೆ ನೋಡಿದರು.
ಕಲ್ಯಾಣ ಪಟ್ಟಣ ಚಂದ
ಕಲ್ಯಾಣ ಚಂದ ॥೩೧೦॥
ಲಿಂಗಪೂಜೆ ಚಂದ- ಶಿವನ
ಮಾಯರೂಪದಿಂದ
ಆರಗಾರ ಮುತ್ತಿನಾರ
ಲಿಂಗದೊಳುಗಲ ಶಿವದಾರ
ಲಿಂಗಧಾರಣೆ ಮಾಡಿದ ಗುರುಗಳ
ಪಾದಕೊಂದು ಸರಣು
ಶಿವ ಶಿವ ಎನುತಲಿ ಈಬುತ್ತಿ ಧರಿಸಲು
ಬಹುಗಳ ಕೊಡುವುದು ಈಬುತ್ತಿ
ಭಕ್ತಿಯಿಂದ ಶಿವಭಕ್ತರು ಧರಿಸಲು
ಭಕ್ತಿ ಕೊಡುವುದು ಈಬುತ್ತಿ ॥ ೩೨೦॥
ಯಾರು ಬಲ್ಲರೋ ಮೈಮೆಗಳ
ತೋರಿಸಯ್ಯ ನಿಜುರೂಪುಗಳಾ
ಮಾಯಕಾರ ಮಾದೇವ ನಿನ್ನ
ತೋರಿಸಯ್ಯ ನಿಜರೂಪುಗಳ
ಆಲಂಬಾಡಿ ಸೀಮೇದ ಒಳುಗೆ
ಬ್ಯಾಡರೆಲ್ಲ ಒಟ್ಟುಗೂಡಿ
ತಂದರಲ್ಲೊ ಮಾದೇವನಿಗೆ
ಹೊಸಬಣ್ಣದ ಹೆಬ್ಬುಲಿಯ
ಅಂಗೈಲಿ ಸಿವಲಿಂಗ ಮಡಗಿ
ಗಂಗೇಲಿ ಜಳಕ ಮಾಡವುರೆ ॥೩೩೦॥
ಮಂಗಳಮೈಮ ಲಿಂಗದರೂಪ
ಸಂಗಮೇಶ್ವುರ ಮಾದೇವ
ರುದಯಕಾಲದ ಹೊತ್ತೀನ ಒಳಗೆ
ಎತ್ತುವೆನು ನಮ ಶಿವನುಡಿಯ
ತಪ್ಪುಬಂದರೆ ಮನ್ನೀಸಬಹುದು
ಮಾನ್ಯರೆ ನೀವೆಲ್ಲ
ವ॥ಸಭೇಲಿ ಸಣ್ಣ ಬಾಲಕ ಕತೆಯನ್ನು ಮಾಡ್ತನಂತೇಳಿ
ಹತ್ತುಕಂಡವರಿಲ್ಲ
ಕಾಣದೇ ಇರೋರಿಲ್ಲ
ಕಂಡಮಾನ್ಯರಿಗೆ ॥೩೪೦॥
ತಪ್ಪಾದ ಕತೆಯನ್ನು ತಿದ್ದಿ ಕೊಟ್ಟಂತವುರಿಗೆ
ವ॥ ಅವುರ ತೊಟ್ಟಿಲ ಸಿಸುವಾಗಿ ವಂದನೆ ಸರುಣೆಂದೆ
ಒಂದೂ ತಿಳಿಯದ ಕಂದನು ನಾನು
ಚಂದಾಗಿ ನುಡಿವೆ ಶಿವನುಡಿಯ
ಕುಂದಕವಿದ್ದರೆ ಮನ್ನಿಸ ಬವುದು
ಮಾನ್ಯರೆ ನೀವೆಲ್ಲ
ಮರಾವೇ ಮೊದಲೊ ಬೀಜವೆ ಮೊದಲೊ
ಬಲ್ಲವನ್ಯಾರೋ ಮಾದೇವ
ಆದಿಸಕ್ತಿ ಮಾದಪ್ಪನೆ ಬಲ್ಲ
ಆದಿಗುರು ನಮ ಶಿವಬಲ್ಲ ॥೩೫೦॥
ಎಡದಲಿ ಕಾರಯ್ಯ ಬಲದಲ್ಲಿ ಬಿಲ್ಲಯ್ಯ
ಬರುವುದ ನೋಡಯ್ಯ
ಬ್ಯಾಡರಕನ್ನಯ್ಯ ಬೆಳ್ಳಿಯ ಚವುಲ
ಬೀಸೋದ ನೋಡಯ್ಯ
ಮಂಗಳ ಮೈಮ ಲಿಂಗದ ರೂಪ
ಸಂಗಮೇಶ್ವರ ಮಾದೇವ
ಲಿಂಗದ ವರಗಳ ಕರುಣೀಸಯ್ಯ
ಬಾಲಚಂದಿರ ಮಾದೇವ
ಏಳುಮಲೆ ಕೈಲಾಸದೊಡೆಯ ನಮ್ಮಪ್ಪಾಜಿ ಮಾದೇವ
ನಿಮಾಮ ಪಾದುಕ್ಕೆ ಸರಣುಸರಣಾರ್ತಿ ॥೩೬೦॥
ಮಾದಪ್ಪ ಏಳುಮಲೆಯಲ್ಲಿ ನೆಲೆಗೊಂಡದ್ದು
ಇತ್ತಲಾಗಿ ಕುಂತೂರು ಪ್ರಭೂಲಿಂಗಪ್ಪನವರು
ಹೋದೋರೆಲ್ಲ ಹಿಂದುಕ್ಕೆ ಬರ್ನೆ ಇಲ್ವಲ್ಲ
" ಮರುದೇವ್ರ ಕರಿಯಕೆ ಯಾರ್ನ ಕಳುಸ್ಲಿ" ಅಂತ ಗುರುಗಳು
ಮಠದಲ್ಲಿ ಮಜ್ಜಣ ತರುವಂತ ಆನೆಯನ್ನ ಕೂಗುದ್ರು
ಗುರು ಅಪ್ಣೆ ಆದೇಟ್ಗೆ ಮಜ್ಜುಣದಾನೆ
ಗುರುಗಳ್ಗೆ ಬಂದು ಶರಣ್ಮಾಡ್ತು
" ಅಪ್ಪಾ ಮಜ್ಜಣ ತರುವಂತ ಆನೆಯೇ
ಮರುದೇವ್ರು ಕೋಪುಸ್ಕೊಂಡು ಹೊಂಟೋಯ್ತಾ ಇದ್ದಾನೆ
ಮಾರಮ್ಮನ ಕಳುಸ್ದೆ ಮಾರಮ್ಮನೂ ಬರ್ನಿಲ್ಲ
ಏಳುತಲೆ ಕಾಳಿಂಗ ಸರ್ಪುನ ಕಳುಸ್ದೆ
ಕಾಳಿಂಗಸರೂಪ ಬಸವಣ್ಣ ಯಾರೂ ಬರೂನಿಲ್ಲ
ಮರುದೇವ್ರು ಬರಕಿಲ್ಲ ಅಂತೇಳುದ್ರೆ
ನೀನು ಮಾತ್ರ ಬುಡುಬ್ಯಾಡ ॥೬೩೦॥
ಗುರುಗಳು ಕರ್ಕೊಂಡ್ಬರೇಳ್ತರೆ ಅಂತೇಳ್ಬುಟ್ಟು
ಸೊಂಡ್ಲಲ್ಲೆತ್ತಿ ಕುಣುಸ್ಕೊಂಡ್ಬಂದ್ಬುಡು"
ಕುಂತೂರು ಪ್ರಭೂಲಿಂಗಪ್ಪನವರ ಮಾತಾದೇಟ್ಗೆ
ಮಜ್ಜಣ ತರೂವಂತ ಆನೆ
ಮಠುವನ್ನು ಬಿಟ್ಟು ಮಾದಪ್ಪನ ಹುಡೀಕೊಂಡು
ಕಾಡಲ್ಲಿ ಗುರುವೆ ಬರುತಾದೆ
ನೋಡಿ ನಮ್ಮ ಶಿವನೆ
ನಮ್ಮ ಸ್ವಾಮಿಯವರು ಹೆಬ್ಬುಲಿ ಮೇಲೆ ಹೋಯ್ತಿದ್ರೆ
ಮಜ್ಜಣ ತರೈವಂತಾನೆ ಮಠುವನ್ನ ಬುಟ್ಬಂದು
ನಮ್ಮ ಸ್ವಾಮಿಯವರ ಆಟ್ಗಟ್ಬುಡ್ತು
"ಅಯ್ಯ ಮಜ್ಜುಣದಾನ್ಯೆ
ನೀನು ಬಂದಂತ ಸಮಾಚಾರವೇನಪ್ಪ?"
"ಮರುದೇವ್ರೆ ಗುರುಗಳು ಕರ್ಕೊಂಡ್ಬರಕೇಳಿದ್ದಾರೆ
ನನ್ನ ಜೊತೇ ಒಳುಗೆ ಬರ್ಬೇಕು ನೀವು" ಅಂತು
"ಅಯ್ಯಾ ಮಜ್ಜುಣದಾನೆಯೆ
ನಾನು ಮಾತ್ರ ಮಠುಕ್ಕೆ ಬರಾಕಿಲ್ಲ
ಮರುದೇವ್ರು ಬರೋದಿಲ್ಲ ಅಂತ ಹೇಳ್ಬುಡಪ್ಪ "
ಮರುದೇವ್ರೆ ನೀನು ಬರಕಿಲ್ಲ ಅಂತೇಳುದ್ರೆ
ನಾ ಬುಡಕಿಲ್ಲ" ಅಂತೇಳ್ಬುಟ್ಟು ಮಜ್ಜುಣದಾನೆ
ಮಾದೇವುನ್ನ ಸೊಂಡ್ಲಲೆತ್ತಿ ಕುಣುಸ್ಕೊಂಡ್ಬುಡ್ತಂತೆ
ನಮ್ಮಪ್ಪಾಜಿ ಮಾದೇವ ಮಜ್ಣುದಾನೆಯ ॥೬೫೦॥
ಅವ್ರು ಜಗ್ಸಿ ಪಾತಾಳುಕ್ಕೆ ತುಣದವೂನೆ ಮಾದೇವ
ನೋಡಿ ನಮ್ಮ ಶಿವನಾ
" ಅಪ್ಪಾ ಮಜ್ಜಣದಾನೆಯೆ
ನಾನು ಹೋಗಿ ಮುಂದೆ ನೆಲುಗೊಳ್ತಿದ್ದೀನಿ
ನನ್ನ ಏಳುಮಲೆ ಕೈಲಾಸ್ಕೆ ಬರುವಂತ ಪರ್ಸೆಯೆಲ್ಲ
ಆನೆದಿಂಬುನ ಬ್ವಾರೆ ಅಂತೇಳಿ
ನಿನಗೆ ಒಂದು ಕಾಸು ಧೂಪ ಹಾಕ್ಲಿ
ಕೊನೆ ಒಳುಗೆ ಬಂದು ನನ್ನೇಳುಮಲೆ ಕೈಲಾಸ್ದಲ್ಲಿ ನನ್ನ ಪರ್ಸೆಯೆಲ್ಲಾ
ನನಗೊಂದು ಕಾಸುನ ಧೂಪ ಹಾಕ್ಲಿ
ಕರವೆತ್ತಿ ಕೈ ಮುಗೀಲಿ" ಅಂತೇಳಿ ॥೬೬೦॥
ಮಾದಪ್ಪ ಆಸುರ್ವಾದವನ್ನು ಮಾಡ್ಬುಟ್ಟು
ಹೆಬ್ಬುಲಿ ಮೇಲೆ ಕೂತ್ಕೊಂಡು ನಮ್ಮ ಸ್ವಾಮಿಯವರು
ಅವರು ಅಡವಿಯ ಒಳುಗೆ ಬರುತಾರೆ
ನೋಡಿ ನಮ್ಮ ಶಿವನಾ
ನಮ್ಮಪ್ಪಾಜಿ ಏಳ್ಮಲೆ ಕರ್ತು ಏಕಾಂಗಿವಸ್ತು
ಮಾಯ್ಕಾರ ಮಾದೇವ
ಆನೆದಿಂಬುನ ಬ್ವಾರೆ ಮ್ಯಾಲೆ
ದೇವಾಲೆ ಕಂಬವನ್ನು ನೆಟ್ಟು
ದೇವಾಲೆ ಕಂಬುದ ಮೇಲೆ ಹನ್ನೆರಡಾನೆ ನಿಲ್ಸಿ ॥೬೭೦॥
ಹನ್ನೆರಡಾನೆ ಮೇಲೆ ಹನ್ನೆರಡೆಜ್ಜೆ ಕೆಂಬರಗನ ನಿಲ್ಸಿ
ಕೆಂಬರಗನ ಮೇಲೆ ನನ್ನ ಸ್ವಾಮಿ ನಿಂತುಕೊಂಡು
ಸುತ್ತಾಮುತ್ತಾ ಹತ್ತೇಳು ದಿಕ್ಕನೆಲ್ಲ ದ್ರಿಷ್ಟಿಸಿ ನೋಡುದ್ರಂತೆ
ಆನುಮಲೆ ಜೇನುಮಲೆ ಗುಂಜುಮಲೆ ಗುರುಗಂಜಿಮಲೆ
ಕಾನುಮಲೆ ಕಂಬತ್ತಿಮಲೆ ಗುತ್ತಿಮಲೆ ಗೌಳಿಮಲೆ
ಸಂಕುಮಲೆ ಸಮದಟ್ಟುಮಲೆ ಪಾರಿಮಲೆ ಪಚ್ಚೆಮಲೆ
ರುದ್ರಾಕ್ಷಿಮಲೆ ಭದ್ರಾಕ್ಷಿ ಮಲೆ ಭಸ್ಮಂಗಮಲೆ ಈಬುತ್ತಿಮಲೆ
ಕೊಂಗುಮಲೆ ಕೋನಾಚಿಮಲೆ ಕಡದಾಕ್ಷಿಮಲೆ ಕೆಂಜಾಳುಮಲೆ
ಹತ್ತುಮಲೆ ಸುತ್ತುಮಲೆ ಎಪ್ಪತ್ತೇಳು ಮಲೇನೆಲ್ಲ ನೋಡಿ
ನಾನು ಎಲ್ಲಿ ನೆಲೆಗೊಳ್ಳಬೇಕಪ್ಪ ಅಂತೇಳಿ
ನನ್ನ ಸ್ವಾಮಿ ಏಳ್ಮಲೆ ಹೆತ್ತಯ್ಯ ॥೬೮೦
ಕಿರುಬೆರಳ್ನಲ್ಲಿ ಕವುಡೆಯ ಆಕಾಸುಕ್ಕೆ ಅಂತೆ ಚಿಮ್ಮುದ್ರಂತೆ
ನನ್ನಪ್ಪಾಜಿ ಮಾಯ್ಕಾರ ಮಾದೇವ
ಚಿಮ್ಮುದಂತ ಕವುಡೆ ಆಕಾಶವನ್ನು ಮುಟ್ಟಿ
ಉತ್ಮಾಪುರದ ಉತ್ರಾಜಮ್ಮನ ಮನೆ ಅಂಗಳದಲ್ಲಿ ಹೋಗಿ ಬೀಳ್ತಂತೆ
ತಾಯಿ ಉತ್ರಾಜಮ್ಮ ಅಂಗಳ್ದಲ್ಲಿ ಬಿದ್ದ ಕವುಡೆ ನೋಡಿ
" ಅಯ್ಯೋ ನನ ಕಂದ ಮರುದೇವ್ರೆ
ನೀನಾಡೋ ಕವುಡೆ ಅಂಗಳದಲ್ಲೆಲ್ಲ ಚೆಲ್ಲಾಡ್ತವಲ್ಲಪ್ಪ" ಅಂತೇಳ್ಬುಟ್ಟು ಮಾತಾಯಿ
ಕಣ್ಣೀರ್ ಹಾಕ್ತಾ ಅವಳಂತೆ
ನನ್ನ ಸ್ವಾಮಿ ಏಳ್ಮಲೆ ಮಾದೇವ
" ಅಯ್ಯೊ ನನ ತಾಯಿ " ಅಂದ್ಬುಟ್ಟು ಸುತ್ತಾಮುತ್ತಾ ದ್ರಿಷ್ಟೈಸಿ ॥೬೯೦॥
ಮೈಸೂರ್ ಚಾಮುಂಡೇಶ್ವರಿ ಬೆಟ್ಟ ನೋಡುದ್ರಂತೆ
"ಹಾಳ್ಮುಂಡೆ ಮೊಕ ಇಲ್ಗು ಕಾಣ್ತದಲ್ಲ" ಅಂತೇಳಿ
ಕುಂತೂರು ಕಡೀಕೆ ದ್ರಿಷ್ಟಿ ಮಡುಗುದ್ರಂತೆ
ಪ್ರಭೂಸ್ವಾಮಿ ಬೆಟ್ಟ ಕಂಡ್ಬುಡ್ತಂತೆ
ಇತ್ಲಾಗಿ ತಿರೈಗಿ ನೋಡುದ್ರಂತೆ
ರಂಗಸ್ವಾಮಿ ತೊಳಸಮ್ಮನ ಬೆಟ್ಟ
ಸ್ವಾಮಿ ಎದುರ್ಗೆ ಕಂಡ್ಬುಡ್ತಂತೆ
" ಸುತ್ತಮುತ್ತ ಶತ್ರುಗಳಿದ್ದಾರಲ್ಲ ಇವುರ ಮೊಕ ಹ್ಯೇಂಗೆ ನೋಡ್ಬೇಕು ನಾನು
ಕಾ ಅನ್ನೋ ಕಾಗೆ ಸಪ್ತ
ಗೂ ಅನ್ನೋ ಗೂಗೆ ಸಪ್ತ ॥೭೦೦॥
ಕೊಕ್ ಅನ್ನೊ ಕೋಳಿ ಸಪ್ತ ನನ್ನ ಕಿವೀಕರ್ಣಕ್ಕೆ
ಕೇಳ್ದೇ ಹೋಗ್ಲಿ " ಅಂತೇಳಿ ನನ್ನಪ್ಪಾಜಿ
ಕೆಂಜೆಡೆ ಒದುರ್ಕೊಂಡು ಕೆಂಜುರುಗಣ್ ಬುಟ್ಕೊಂಡು
ರೋಸವ್ಯಾಸವನ್ನು ತಾಳ್ಕೊಂಡು ಲೆಂಘಣ್ಸಿ ಮ್ಯಾಗ್ನಿಂದ
ಅವರು ಝೇಂಕರಿಸಿ ತುಳುದವುರೆ ಮಾದೇವ
ನೋಡಿ ನಮ್ಮ ಶಿವನಾ
ಝೇಂಕರಿಸಿ ತುಳುದೇಟ್ಗೆ
ಬೆಟ್ಟಗುಡ್ಡುವೆಲ್ಲ ಸಮತಟ್ಟಾಗೋದೇ
ಅಡವಿ ಅರಣ್ಯ ಚದುರ ಮಧ್ಯದಲ್ಲಿ
ನಟ್ಟನಡುರಾಜ್ಯ ಬ್ಯಾಡಂಗಂವಣ್ದ ಸೀಮೆ ॥೭೧೦॥
ಕಿಕ್ಕೇರಿದೇಸ ಹಿಂದಕ್ಬುಟ್ಕೊಂಡ್ರು
ಬೇವುನಟ್ಟಿ ಬಲಕ್ಬುಟ್ಕೊಂಡ್ರು
ಆಲಂಬಾಡೀನೂ ಬಲುಕ್ಬುಟ್ಕೊಂಡ್ರು
ನೂರೊಂದಯ್ಯನಗಿರಿ ಚಾರಂದಪ್ಪನ ಮಲೆ
ದ್ಯಾವರಳ್ಳಿ ನಡುರಾಣ್ಯ
ಅಂತರಗಂಗೆ ತೆಂಕ್ಚೋರಿ
ಸೀಗೆ ಸಿರುಗಂಧ ಬಾಡಬಾಕನೊತ್ತೆ
ಏಳ್ಬಾಯಿ ಹೊನ್ನುತ್ತ
ನುಗ್ಗುನಾರದ ಜ್ವಾಲೆ ಬಿದ್ರು ಸೀಡೆ
ಮಗ್ಗಾರಗುತ್ತಿ ಕೆಮ್ಮತ್ತಿ ಮರದಂಡು- ೭೨೦॥
ಅಲ್ಲಿ ಉದ್ಭವ ಆಗವ್ರಲ್ಲ ಮಾದೇವ
ನೋಡಿ ನಮ್ಮ ಶಿವನಾ॥
ಇತ್ಲಾಗೆ ಬಸವಣ್ಣ ಸರ್ಪಣ್ಣ ಎರಡೂ ಬಂದು
ಒಂತಾವೆ ನಿಂತ್ಕೊಂಡು " ಇಲ್ಲಿ ಮಾದೇವ ಸಿಕ್ನಿಲ್ವಲ್ಲ "
ಅಂತ ಮಾತಾಡ್ಕೊಅಂಡು ಬತ್ತಿದ್ರೆ
ಏಳ್ಬಾಯಿ ಹೊನ್ನುತ್ತದಲ್ಲಿ
ಹುಟ್ಟಗಲ್ಗೆ ದ್ರಿಷ್ಟಿತುಂಬಿ
ಪಾತಾಳಲೋಕದಲ್ಲಿ ಗಂಗಾದೇವೀಗೆ
ಪಾದಪೂಜೆಯನ್ನು ಕೊಟ್ಕೊಂಡು
ಮೇಗುಲೋಕುಕ್ಕೆ ತನ್ನ ಮಸ್ತ್ಕಪೂಜೆಗೆ ಕೊಟ್ಕೊಂಡು ॥೭೩೦॥
ಮಧ್ಯದಲ್ಲಿ ನರಲೋಕುಕ್ಕೆ
ಲಿಂಗುಕೆ ಪೂಜೆ ಕೊಟ್ಕೊಂಡು
ಒಡದು ಮೂಡಿದಂತ ನಮ್ಮಪ್ಪಾಜಿ ಕಂಡು
" ಇಲ್ಲೆ ಮರುದೇವ್ರು " ಅಂತೇಳಿ
ಬಸವಣ್ಣೂವೆ ಸರ್ಪಣ್ಣನೂವೆ ಬಂದ್ರಲ್ಲ
"ಬಸವಣ್ಣ ನೀವೆಲ್ಲಿಂದ ಬಂದ್ರಿ?"
"ನಾನು ಬಲಗಡೆಯಿಂದ ಬಂದೆ " ಸರ್ಪಣ್ಣ ಹೇಳ್ತು
ಬಸವಣ್ಣ ನಿಂತಿದ್ದೋನು
" ಸ್ವಾಮಿ ನಾನೆಡಗಡೆಯಿಂದ ಬಂದೆ" ಅಂತೇಳಿದ್ದಾನೆ
"ನಾನು ಇಷ್ಟು ದೂರ ಬಂದ್ರೂವೆ" ॥ ೭೪೦॥
ಈ ಉಕ್ನಳ್ಳಿ ಬಸವನೂವೆ ಈ ಕಾಳಿಂಗ ಸರ್ಪನೂವೆ
ನನ್ನ ಕರುಕೊಂಡೋಗೋಕೆ ಬಂದವಲ್ಲ" ಅಂತೇಳಿ
ನಮ್ಪ್ಪಾಜಿ ಮಾದೇವಬಾಳ ಕ್ವಾಪದಲ್ಲಿ
ಬಸುವನ ಬಲು ಶೀಕ್ಸ್ಯ ಮಾಡ್ಬುಟ್ರು
"ಅಯ್ಯೋ ಬಸವಣ್ಣ ಕ್ವಾಪ್ದಲ್ಲಿ ಹೊಡುದ್ಬುಟ್ಟೆ
ನೀನು ಬಂದ ದಾರಿ ಬಸವನ ದಾರಿ ಆಗ್ಲಪ್ಪ
ಸರ್ಪ ಬಂದ ದಾರಿ ಸರ್ಪನ ದಾರಿ ಆಗ್ಲಪ್ಪ
ಎಲ್ಲ ನನ್ನ ಬರುವಂತ ಪರ್ಸೆ ಎತ್ತುನ ದಾರಿ ಸರ್ಪನ ದಾರಿ ಅಂತೇಳಿ
ಅಯ್ಯಾ ಬಸವಣ್ಣ
ನನ್ನ ಪರ್ಸೆ ಕೈಲಿ ನಿನಗೆ ಒಂದು ಪೂಜೆಕೊಡುಸ್ತಿದ್ದೀನಿ ॥೭೫೦॥
ನನ್ನ ಗುಡಿ ಬಾಗ್ಲು ಮುಂದೆ ನೀನಿರಪ್ಪ
ನನ್ನ ಪರ್ಸೆ ಮಂದಿ ಕೈಲಿ ತುಣೀಸಿ
ನಿನಗೊಂದು ಧೂಪ ಹಾಕುಸ್ತೀನಿ" ಅಂದ್ರು
ಏಳುತಲೆ ಕಾಳಿಗ ಸರ್ಪುನ ಮಾದಪ್ಪ ಎತ್ತಿ
ತಲದೆಸೀಗೆ ನೆಳ್ಳಾಗೆ ಕುಣುಸ್ಕೊಂಡು-
ಸರ್ಪುನ ಏಳೆಡೆ ನೆಳ್ಳಲ್ಲಿ ಮನುಗವ್ರೆ ಮಾದೇವ
ನೋಡಿ ನಮ್ಮ ಶಿವನಾ॥
ಏಳ್ಮಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ
ನಿನ್ನ ಪಾದವೇ ಗತಿ ಕಣಪ್ಪ ಮಾದಪ್ಪ
ಶರಣು ಶರಣಾರ್ತಿ ॥೭೬೦॥
ಬೇವುನ್ಕಾಳಿ ಧುನಿಯಾ ಧೂಳೀಪಟವಾದ ಕವಟ್ಲು
ತಂದನ್ನೋ ತಾऽನ ತಾನಂದನ್ನೊ ತಾऽನೊ॥ ಸೊಲ್ಲು॥
ಹುಟ್ಟರೆ ಕಲ್ಲುನ ಬಂಡೇ ಮ್ಯಾಲೆ
ನಿಂತವುರೆ ನನ್ಮಾಯಿಕಾರ ॥
ನಿಂತುಕೊಂಡು ನನ್ನ ಮಾಯ್ಕಾರ
ಏನಂದ್ಯೋಚನೆ ಮಾಡುತಾರೆ॥
ದ್ರುಷ್ಟು ಮುಂಡೇ ಮಕ್ಕಳ ನಾನು
ಧರೇಯ ಮ್ಯಾಲೆ ಮಡುಗ್ಬಾರದು॥
ಎಕ್ಳು ಸೊಕ್ಕುದ ಮುಂಡೆ ಮಕ್ಕಳ
ಎಕ್ಕುಟ್ಟಿಸಿ ನಾನು ಬರಬೇಕು॥೧೦॥
ನಾನು ಅನ್ನೋ ಮುಂಡೆ ಮಕ್ಳ
ನಿರೈಮೂಲನೆ ಮಾಡಿ ಬರಬೇಕು॥
ಜೀನ್ರು ಇದ್ದರೆ ಜಗತ್ಯವೆಲ್ಲ
ಜೀನ್ರು ಕುಲವಾಗೋಯ್ತದೆ ॥
ಹಂಗಂತ ನನ್ನ ಮಾದೇವ
ಹುಚ್ಚುಗ್ವಾಪ ತಾಳವ್ರೆ ॥
ಎತ್ತುರದಲ್ಲಿ ನಿಂತುಕೊಂಡು
ಹತ್ತೂ ದಿಕ್ಕ ನೋಡವ್ರೆ॥
ಸಿಡು ಸಿಡುಗ್ವಾಪ ತಾಳವ್ರೆ
ಕಿಡುಗಣ್ಣಾದ್ರೆ ಬಿಟ್ಟವ್ರೆ॥
ಹಿಂಡೂ ಮಾರಿರ ನೋಡವ್ರೆ
ಅವ್ರು ಕಂಡು ಕೂಗಿ ಕರುದವ್ರೆ॥ ೨೦॥
ಕಬ್ಬಾಳ್ದ ದುರುಗಮ್ಮ
ನೀನಬ್ಬುರ್ಸೊಂಡು ಬಾರಮ್ಮ॥
ಕರಿಯ ಬೆಟ್ಟದ ಮಾರಮ್ಮ
ನೀನು ಕರುದೇಟ್ಗೆ ಬಾ ಕಂದಮ್ಮ॥
ಹಟ್ಟೀಯ ಲಕ್ಕಮ್ಮ ಬಾ
ಬೆಟ್ಟದ ಚಿಕ್ಕಮ್ಮ ಬಾ ॥
ಕರುಳೆಕಲ್ಲ ದೇವಮ್ಮ
ಸರ್ರನೆ ಬವ್ವ ನನಕಂದ ॥
ಬೆಟ್ಟಳ್ಳೀಯ ಮಾರೀ ಮುಂಡೆ
ನೀ ಜಟ್ಟನೆ ಬವ್ವ ನನಕಂದ॥ ೩೦॥
ಕಲ್ಲೂರ ಮಲ್ಲುಗ ದೇವಿ
ಎಲ್ಲಿದ್ದಿಯವ್ವ ಬ್ಯಾಗ ಬವ್ವ॥
ಹೆಗ್ಗೂರೀನ ಮಾರೀ ಮುಂಡೆ
ಭಗ್ಗನೆ ಬವ್ವ ನನಕಂದ ॥
ಮುಡುಗುಂಡ್ದ ಮುಳ್ಳಾಚಿ ಮಾರಿ
ಗುಡುಗುತ ಬವ್ವ ನನಕಂದ ॥
ಬನ್ನೂರ ಹ್ಯಾಮಾದ್ರಿ ಬಾ
ಸ್ವಾಸಲಿ ಹೊನ್ನಾದೇವಿ ಬಾ ॥
ಪಿರಿಯಪಟ್ಣದುರಿಮಸ್ಣಿ
ಕರುದೇಟ್ಗೆ ಬವ್ವ ನನಕಂದ ॥೪೦॥
ಕುಂಡ್ಮಾರಿ ಕಿವುಡ್ಮಾರಿ
ಕುಂಟ್ಮಾರಿ ಓಡಿ ಬನ್ರಮ್ಮ ॥
ಎಲ್ಲಮ್ಮ ಏಕನಾತಿ- ನೀ
ನೆಲ್ಲಿದ್ದೀಯೆ ನನಕಂದ॥
ಬೆಟ್ಟದೋಳೆ ಚಾಮುಂಡಿ
ಉತ್ತನಳ್ಳಿ ಉರುಕಾತಿ॥
ಬಂಕಾಪುರದ ಬೆಂಕಿ ಮಾರಿ
ಬೇಗನೆ ಬವ್ವ ನನಕಂದ ॥ ೫೦ ॥
ಏಳು ನಾಲಿಗೆ ದುರುಗಮ್ಮ
ನೀನೆದ್ದು ಬಾರೊ ನನಕಂದ ॥
ಬೆಳಕೋಡಿ ಮಾರಮ್ಮ
ಪಿಳೇಗಿನ ಮಾರಮ್ಮ॥
ದೂರದ ದುಬ್ಲಮ್ಮ
ಪಾಗಡದ ರಾಕಾಸಿ॥
ಕರೀಗ್ವಾರದ ಮಾರಿ ಬವ್ವ
ಬಿಳೀ ಗ್ವಾರದ ಮಾರಿ ಬಾ॥
ವಾಂತುಭೇದಿ ಮಾರೀರೆ ಬನ್ರೊ
ಗೂಣುನಳ್ಳಿ ಮಾರಿ ಬಾ॥ ೬೦॥
ಸಿವುಸಮುದ್ರದ ಮಾರಮ್ಮ
ಪಾಳ್ಯದ ಶಿವುಮಾರಿ ॥
ಗುಂಡಾಪುರದ ಮಾರಮ್ಮ- ನೀ
ದಂಡ ಕಟ್ಕೊಂಡು ಬಾ ಕಂದ॥
ಮಳವಳ್ಳಿ ದಂಡೀನ ಮಾರಿ
ಕಳ್ಳೀಪುರದ ಮಾರಮ್ಮ ॥
ಪಿರಿಯಾಪಟ್ಣದ ಹಿರಿದೇವ್ತಿ
ನೀನು ಮೊದಲೆ ಬವ್ವ ನನಕಂದ ॥
ಏಳ್ಮಲಯ್ಯನ ಅಪ್ಣೆ ಆಯ್ತು ಅಂತೇಳಿ
ಮಾಯ್ಕಾರುನ ಬಳುಗೆ ಬಂದ್ರು ಮಾರೀರು
"ಅಪ್ಪಾಜಿ ನಮ್ಮುನ್ನ ಕರುದಂತ ವಿಚಾರವೇನು " ? ಅಂತ ಕೇಳುದ್ರು
" ಬನ್ನಿ ಬನ್ನಿ ನನ್ನ ಕಂದುಗಳ್ಯಾ ॥೧೦೦॥
ಒಳ್ಳೆ ಮಟ ಮಟ ಮಂಗ್ಳಾರಮದ್ದಾನದ ಹೊತ್ನಲ್ಲಿ
ನಾನು ಸನ್ನೆ ಮಾಡುದೇಟ್ಗೆ ನೀವೆಲ್ಲ ಆಲ್ಕೊಂಡು ಕೂಕ್ಕೊಂಡು
ಬೇವುನಟ್ಟಿಗೆ ನುಗ್ಗಿ ಕಂದುಗಳೆ-
ಇದೇ ನಿಮ್ಗೆ ದೊಡ್ಡಬ್ಬ" ಅಂತಾರೆ ಮಾದವ
ನೋಡಿ ನಮ್ಮ ಶಿವನಾ ॥
" ಆಗ್ಲಿ ನನ್ನಪ್ಪಾಜಿ " ಅಂದಿದ್ದಾರೆ ಮಾರೀರು
ಬೇವುನಟ್ಟಿ ಕಾಳಮ್ಮ ಎಳ್ಳುನ ಕಡುಗೋಟಾರದಲ್ಲಿ ಕುಂತಿದ್ರೆ
ನಮ್ಮ ಸ್ವಾಮಿ " ಈ ಮುಂಡೇಗೆ
ನನ್ನ ಮಾಯ ಗೊತ್ತಿಲ್ಲ ನನ್ನ ಸಾಸ ಗೊತ್ತಿಲ್ಲ
ಇವುಳ್ಮನೆಯ ಎಕ್ಕುಟ್ಸಿ ॥೧೨೦॥
ಇವ್ಳ ಧುನಿಯಾವನ್ನು ಧೂಳೀಪಟ ಮಾಡ್ಬೇಕೆಂಬುದಾಗಿ
ತಿರ್ಗ ಬೇವುನ್ಕಾಳಿ ಕಡುಗೊಟಾರ್ದ ಬಾಕುಲ್ಗೆ
ಮಾಯ್ದಿಂದ ಬಂದ್ರಲ್ಲಪ್ಪ ಮಾದೇವ
ನೋಡಿ ನಮ್ಮ ಶಿವುನಾ॥
ಕಡುಗೊಟಾರ್ದ ಬಾಕ್ಲಲ್ಲಿ ನಿಂತ್ಕೊಂಡು
" ಯಾರಮ್ಮ ಕೊಟಾರ್ದಲ್ಲಿ ನನಕಂದ
ಅತಿ ಸಂಕಯ್ಯನ ಭಿಕ್ಷಾ ಜ್ಯೋತಿ ಲಿಂಗಯ್ಯನ ಭಿಕ್ಷಾ
ಬಂದಿರುವಾತನ ಭಿಕ್ಷಾ " ಅಂತೇಳಿ
ಭಿಕ್ಷಾ ಸಾರ್ತರಲ್ಲಪ್ಪ ಮಾದೇವ
ನೋಡಿ ನಮ್ಮ ಶಿವನ॥೧೩೦॥
ಬೇವುನ್ಕಾಳಮ್ಮ ಕತ್ತೆತ್ತಿ ನೋಡ್ದ
" ಅಯ್ಯೋ ನನ್ನ ಮಗುನ್ಮಗ್ನೆ ಮುಂಚೆ ಒಬ್ಬ ಬಂದಿದ್ದ
ಆ ಹಾಳಾದೋನು ನನ್ ಕೈಲಿ ಪ್ರಾಣಬಿಟ್ಟ
ಈಗ ನೀನೊಬ್ಬ ಬಂದಿದ್ದೀಯ ಮರುಮಗ್ನೆ
ಒಳ್ಳೆ ಮಾತ್ನಿಂದ ಕಣ ಬುಟ್ಬುಟ್ಟು -
ಆಚ್ಗೋಗು" ಅಂತಾಳೆ ಬೇವುನ ಕಾಳಮ್ಮ
ನೋಡಿ ನಮ್ಮ ಶಿವನಾ ॥
ಆಹಾ ಎಂತೇ ಹಟಾ ಈ ಮುಂಡೇದು
ನಾನು ಎಷ್ಟಾಗಿ ಕೇಳಿದ್ರೂ
ಭಿಕ್ಷುವನ್ನೇ ಕೊಡುದೇ ಹೋದ್ಲಲ್ಲ ಮುಂಡೇ ಮಗ್ಳು
ಕಂಡ್ಯಾ ಎಕ್ಕು ಸೊಕ್ಕುದ ಮಾತಾಡ್ತಾಳಲ್ಲ
ಇವುಳ್ನ ಎಕ್ಕುಟ್ಟುಸ್ಬೇಕು " ಅಂತೇಳಿ
ಮಾರೀರ ಸನ್ನೆ ಮಾಡಿ ಕರುದವ್ರೆ ಮಾದೇವ
ನೋಡಿ ನಮ್ಮ ಶಿವನಾ ॥
ನನ್ನೇಳ್ಮಲೆ ಹೆತ್ತಯ್ಯ ಸನ್ನೆ ಮಾಡೋದ್ನೆ ಕಾಯ್ತಿದ್ದ ಮಾರೀರು
ನಾ ಮುಂದು ತಾ ಮುಂದು ಅಂತೇಳಿ
ಒಬ್ರು ಮೇಲೆ ಒಬ್ರು ಬಿದ್ದು ಬತ್ತಿದ್ರೆ
ಕಾಳಿ ಕಾಂಕಾಳಿ ಅನ್ನುವಂತಾ ಮಳೇ ಮಾರೀರು
ಧುಮ್ಕಿ ಧೈಮ್ಕಿ ಬರೋರಂತೆ
ಮುಂಗಾರ್ ಮೋಡ ಗವುದೋಯ್ತಂತೆ ॥೧೫೦॥
ಬರುಬಾರದ ಮಳೆಯೆ ಬಂದೋಯ್ತು "
ಹಳ್ಳಾಕೊಳ್ಳುವೆಲ್ಲ ತುಂಬಿ ತುಳುಕೋದೂವಂತೆ
ಹೊಡ್ಕೆ ಹಳ್ಳುದ್ ನೀರು ಸಮುದ್ರೊಪ್ಪಂದಾಗಿ ಉಕ್ಕಿ
ಬೇವುನ್ಕಾಳಿ ಎಳ್ಳುನ ಕಣುಕ್ಕೆ ನುಗ್ಗಿ
ಮುನ್ನೂರ್ಮುವತ್ಪಲ್ಲ ಬುಂಡುಗನೆಳ್ಳ
ಹಣೆಗಿಕ್ಕೋತೀನಿ ಅಂದ್ರೂ ಒಂದ್ಕಾಳಿಲ್ಲುದಂಗೆ
ಜಾಲುದ ಕೊಳುಕ್ಕೆ ಕೊಂಡೋಯ್ತಂತೆ
ಬೇವುನ್ಕಾಳಿ ಬಾಯ್ಬೊಡ್ಕೊತಿದ್ರೆ
ಏಳಟ್ಟಿ ದನ ಏಳಟ್ಟಿ ಎಮ್ಮೆ ಏಳಟ್ಟಿ ಕುರೀಗಳ ಹೊಡ್ಕೊಂಡು
ಬೇವುನ್ಕಾಳಿ ಗಂಡ ಕೆಂಡೇಗೌಡ ॥೧೬೦॥
ದನಾ ಕಾಯೋಕೋಗಿದ್ನಲ್ಲ ಶಿವ್ನೆ
ಮಾದಪ್ಪುನ ಆಗ್ನೆ ಮೀರ್ದೆ ಹುಲಿಯಮ್ಮ
ಹಿಂಡುಲಿ ದಂಡ್ ಕಟ್ಕೊಂಡೋಗಿ
ಕೆಂಡೇಗೌಡನ ಸುತ್ತ ಹುಲುಗಳು ಗೇರಾಯ್ಸೊ ಹಂಗೆ ಮಾಡುದ್ಲಂತೆ
ಕೆಂಡೇಗೌಡ ಕುಂತಿದ್ರೆ ಹನ್ನೆರಡೆಜ್ಜೆ ಕೆಂಬರ್ಗ
" ಕೆಂಡೇಗೌಡ್ನ ಗ್ವಾಮಾಳ್ಯ ಕಚುಕ್ನೆ ಹಿಡ್ಕೊಂಡು
ಮೂರ್ಸಲ ಮ್ಯಾಲುಕ್ಕೆತ್ತಿ ಕುಕ್ಕಿ
ಅವುನೆಕ್ಕತ್ತುನ ಮ್ಯಾಲೆ ಕೂತ್ಕೊಂಡು
ಒಕ್ಳ ರಕ್ತುವನ್ನು ಹೀರ್ತಾ ಇದ್ರೆ "
ಬೇವುನ ಕಾಳಮ್ಮುನ ಜೀತ್ಗಾರು ॥೧೭೦॥
ಅವ್ರು ಬಾಯ ಬಡುಕೊಂಡು ಬರುತಾರೆ
ನೋಡಿ ನಮ್ಮ ಶಿವನಾ ॥
ಬೇವುನ್ಕಾಳಮ್ಮ ಜೀತ್ಗಾರ್ರು ಮೋಕುವನ್ನು ನೋಡ್ಬುಟ್ಟು
"ಏನ್ರಪ್ಪ ಜೀತ್ಗಾರ್ರೆ?" ಅಂತ ಕೇಳುದ್ಲು
" ಬೇವುನ್ಕಾಳಮ್ಮ ಏನಂದ್ರೆ ಏನೇಳವ
ನಮ್ಗೆ ಹೇಳಕೆ ಬಾಯ್ಬರಾಕಿಲ್ಲ " ಅಂದ್ರು
"ಹಂಗದ್ರೇನಪ್ಪ ಬಂದ್ವಿಚಾರವೇನ್ರಪ್ಪ ?"
" ಅಮ್ಮ ತಾಯಿ ನಿನ್ನ ಗಂಡ ಕೆಂಡೇಗೌಡುನ
ಹುಲೀ ಕುಕ್ಬುಡ್ತು ತಾಯಿ" ಅಂತೇಳುದ್ರು
" ಅಪ್ಪ ಜೀತ್ಗಾರ್ರೆ ಹಂಗಂದ್ರೇನಪ್ಪ " ಅಂದ್ಬುಟ್ಟು ॥೧೮೦॥
ಅವ್ಳು ಬಾಯ್ಬಾಯ ಬಡ್ಕೊಂಡು ಬರುತಾಳೆ
ನೋಡಿ ನಮ್ಮ ಶಿವನಾ॥
ಕಾಳಮ್ಮ ಗಂಡನ್ಮೊಕ ನೋಡ್ಬೇಕು ಅಂತ ಬತ್ತಿದ್ರೆ
ಮೇಯ್ತಿದ್ದಂತ ದನಾ ಕರ ಕುರೀ ಎಮ್ಮೆ ಆಡ್ಗೆಲ್ಲ
ನಾಗೇರ್ ಬಂದು ಎಮ್ಮೆ ಸತ್ತು ಬಿದ್ದವಂತೆ
ದೊಡ್ರೋಗ ಬಂದು ದನಗಳು ಸತ್ತವಂತೆ
ಕಸಗ್ಲು ರೋಗ ಬಂದು ಕುರಿಗಳು ಸತ್ಬಿದ್ವಂತೆ
ಆಡುಗಳುಗೆಲ್ಲ ಬರಬಾರ್ದ್ರೋಗ ಬಂದು
ಮೇಯ್ತಿದ್ದವು ಮೇಯ್ತಿದ್ತಾವೆ ಸತ್ತು ಬಿದ್ದಿದ್ದವಂತೆ
" ಅಯ್ಯೋ ನನಗಂಡೋದ ॥೧೯೦॥
ಅಯ್ಯೊ ನನ್ನ ಎಮ್ಮೆಗಳೋದೊ
ಅಯ್ಯೊ ನನ್ನ ದನುಗಳೋದೊ
ಅಯ್ಯ ನನ್ನ ಆಡು ಕುರಿಗಳೋದೊ ಅಂತ
ಬೇವುನ್ಕಾಳಮ್ಮ ಬಾಯ್ ಬಾಯ್ಬಡ್ಕೊಂಡು
ಅಯ್ಯೊ ಭಗವಂತ
ಸರ್ರಾತ್ರೆ ಮುಂಡೆಯಾದೆ ಸಮರಾತ್ರೆ ಮುಟಡೆಯಾದೆ
ಮದ್ದಾನದ ಮುಂಡೆಯಾದೆ ಮುಸ್ಸಂದೆ ಮುಂಡೆಯಾದೆ
ನನ್ನ ಗಂಡ್ಮಕ್ಕ ನೋಡ್ಬೇಕು ಅಂತೇಳಿ -
ಅಲ್ಲಿ ಓಡೋಡಿ ಬರುತಾಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥ ೨೦೦॥
ಬೇವುನ್ಕಾಳಮ್ಮನ ಗಂಡ್ಮಕ್ಳು
ಎಪ್ಪತ್ತೇಳ್ಮಂದಿ ಜೀತ್ಗಾರ್ರು ಜೊತೇಲಿ ಕರ್ಕೊಂಡು
ಏರ್ಕಟ್ಕೊಂಡು ಬಾನ್ಗಡ್ಕೆಬ್ಬೆ ಹೊಲ್ದಲ್ಲಿ
ಹೊಲುವನ್ನ ಉಳ್ತಾ ಇದ್ದಾರೆ
ನಮ್ಮಪ್ಪಾಜಿ ಮಾದೇವ ಬೇವುನ್ಕಾಳಮ್ಮುನ ಗಂಡ್ಮಕ್ಕುಳ್ಗೆ -
ಅವ್ರು ಮೊಲ್ಲಾಗ್ರ ಕೊಡುತಾರೆ ಮಾದೇವ
ನೋಡಿ ನಮ್ಮ ಶಿವನಾ ॥
ಮೊಲ್ಲಾಗ್ರ ಬಂದು ಬೇವುನ್ಕಾಳಮ್ಮನ ಗಂಡ್ಮಕ್ಳು
ಕಲ್ ಕಲ್ನೆ ಕಡೀತಾರಂತೆ
ಮಣ್ ಮಣ್ನೆ ಮುಕ್ತರಂತೆ ॥೨೧೦॥
ಮೊಲ್ಲಾಗ್ರ ಬಂದು ಬಿದ್ದೊದ್ದಾಡರಂತೆ
ಜೀತ್ಗಾರ್ರು ಕಣ್ಣಲ್ಲಿ ನೋಡ್ಕೊಂಡು
" ಇದೇನಪ್ಪ ಬೇವುನ್ಕಾಳಮ್ಮನ ಗಂಡ್ಮಕ್ಳು
ಹೊಲ ಉಳ್ತಿದ್ದೋರು ಮೊಲ್ಲಾಗ್ರ ಬಂದು ಒದ್ದಾಡ್ತಿದ್ದಾರೆ
ಬೇವುನ್ಕಾಳಮ್ಮುಂಗೆ ಈ ಸುದ್ದಿ ಮುಟ್ಟುಸ್ಬೇಕು " ಅಂತೇಳಿ
ಓಡೋಡಿ ಬತ್ತವ್ರೆ ಜೀತ್ಗಾರ್ರು
ನೋಡಿ ನಮ್ಮ ಶಿವನಾ ॥
" ಅಪ್ಪಾ ಜೀತ್ಗಾರ್ರೆ ಏನು ವೆಚಾರುವ್ರಪ್ಪ
ಉಳಾಕೋದೋರು ಬಿದ್ದೋಡ್ಬತ್ತಿದ್ದೀರಲ್ಲ"
"ಅಮ್ಮ ಕಾಳಮ್ಮ ಏನೂಂತೇಳುಲವ್ವ ॥೨೨೦॥
ನಿನ್ ಗಂಡ್ಮಕ್ಳು ಹೊಲಾ ಉಳ್ತಿದ್ದೋರು
ಮೊಲ್ಲೋಗ್ರ ಬಂದು ಒದ್ದಾಡ್ತ ಅವ್ರೆ ತಾಯಿ"
"ಅಯ್ಯಯ್ಯೊ ಕೆಟ್ನಲ್ಲಪ್ಪ" ಅಂತೇಳಿ ಬೇವುನ್ಕಾಳಮ್ಮ
ಲಬಾಲಬ್ನೆ ಬಾಯ್ಬಡ್ಕೊಂಡ್ಬತ್ತಿದ್ರೆ
ಕಾಳಮ್ನುನ ಮೊಮ್ಮಕ್ಕಳು ಪಳ್ಳಿ ಓದೋಕೋಗಿದ್ವಲ್ಲ
ಅಲ್ಲಿ ಪಳ್ಳಿ ಓದ್ಬುಟ್ಟು ಮನೇಗೆ ಬರೋ ಕಾಲ್ದಲ್ಲಿ
ಕಾರ್ಗಾಳಿ ಬಂದು ಕತ್ತಿಸುಕ್ಬುಟ್ವಂತೆ
ಹುಯಿಲ್ಗಾಳಿ ಬಂದು ಹುಯ್ದಾಕ್ಬುಟ್ವಂತೆ
ಹಿಂಡ್ಗಾಳಿ ಬಂದು ಹೊಡ್ಕೊಂಡೋದ್ವಂತೆ
ಮನೇಲಿದ್ದಂತ ಮರುಮಕ್ಕಳ್ಗೆಲ್ಲ
ಒಡುಗ್ವಾರ ಸಿಡುಗ್ವಾರ ಮುಂದುಲ್ಗ್ವಾರಾ ಹಿಂದುಲ್ಗ್ವಾರಾ ಆಗಿ
ಮನೆ ತುಂಬ ಸತ್ತು ಬಿದ್ವಂತೆ
ಹೊಲ ಉಳ್ತಿದ್ದ ಗಂಡ್ಮಕ್ಳು ನೆಲ ಕಚ್ಕೊಂಡ್ಬಿದ್ದಿದ್ದವುಲ್ಲಪ್ಪ ಅಂತೇಳಿ
ಬೇವುನಟ್ಟಿಗೆ ಓಡೋಡಿ ಬಂದ್ರೆ
ಮೊಮ್ಮಕ್ಳು ಮರುಮಕ್ಳು ಸತ್ತು ಸತ್ತು ಬಿದ್ದಿದ್ದವಂತೆ
ಈ ಹಾಳ್ ಸೊಸು ಮುಂಡೇರೆಲ್ಲೋದ್ರಪ್ಪ ಅಂತೇಳಿ -
ಅವ್ಳು ಬಾಯ್ಬಡ್ಕೊಂಡ್ಬತ್ತಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥
ಬೇವುನ್ಕಾಳಮ್ಮುನ ಏಳ್ಜನ ಸೊಸೇರು
ಚಿನ್ನ ಬೆರಳಿ ಕೊಡವನ್ನು ಕಂಕ್ಳಲ್ಲೆರೀಕೊಂಡು
ಬೇವುನಟ್ಟಿಯನ್ನು ಬಿಟ್ಟು
ನೀರ್ತರಕೆ ಅಂತೇಳಿ ಊರ್ಮುದ್ಲು ಕಟ್ಟಿಗ್ಬಂದವ್ರೆ
ನಮ್ಮಪ್ಪಾಜಿ ಮಾದೇಶ್ವರ
ಅವುರವುರ್ಗೆ ಜಗಳ ಬರೋ ಹಂಗೆ ಬೇಳ್ಮೆ ಚಲ್ಲುದ್ರು
ಹೊತ್ತಿದ್ದ ಚವುರ್ಗೆ ಕಾಲ್ಮೇಲೆ ಬಿದ್ದೋಯ್ತಂತೆ
" ನನ್ ಕಾಲ್ಮೇಲೆ ಚವುರ್ಗೆ ಎತ್ತಾಕ್ದೊಳ್ಯಾರ್ಲ ನನ್ಸವ್ತಿ " ಅಂತೇಳಿ ಒಬ್ಳಂದ್ಲು
" ಯಾರ್ಲ ನನ್ನ ಸವ್ತಿ ಅನ್ನೋಳು " ಅಂತೇಳಿ ಇನ್ನೊಬ್ಳಂದ್ಲು
ಒಬ್ಳು ಮುಂದಲೆ ಒಬ್ಳು ಕಿತ್ಕೊಂಡು
ಆಡ್ಬಾರದ ಮಾತಾಡ್ತ ಮಾಡ್ಬಾರುದ ಜಗ್ಳ ಮಾಡ್ತಾ
ಒಬ್ಬರಿಗೊಬ್ರು ಕಿತ್ತಾಡ್ತಾ - ॥೨೫೦॥
ಅವುರೇಳ್ಮಂದಿ ಕಟ್ಟೇ ಒಳೀಕೆ ಬಿದ್ದವ್ರೆ ಮಾದೇವ
ನೋಡಿ ನಮ್ಮ ಶಿವನಾ ॥
ಬೇವುನ್ಕಾಳಮ್ಮ ಕಟ್ಟೆ ಹತ್ರುಕ್ಬಂದು
ಬಾಯ್ ಬಾಯಿ ಬಡೀತಿದ್ರೆ
ಕಣುವೇ ಕೆಳುಗ್ಲಿಂದ ಕಳ್ರು ಬಂದು
ಬೇವ್ನಟ್ಟೀ ಒಳುಗಿದ್ದಂತ ಏಳ್ಕೊಪ್ಪುರ್ಕೆ ದ್ರವ್ಯವನ್ನ
ಹೊತ್ಕೊಂಡೊಯ್ತಾ ಇರೋದ ನೋಡ್ಬುಟ್ಟು
ಅವುಳ್ ಜೀತ್ಗಾರ್ರು ಓಡ್ಬಂದು ಸುದ್ದಿ ಕೊಟ್ರಂತೆ
" ಬಿಡುಬ್ಯಾಡಿ ಹಿಡ್ಕೊಳ್ರೊ ಆ ನನ್ ಮರುಮಕ್ಳ" ಅಂತೇಳಿ
ಕಾಳಮ್ಮ ಕೂಕ್ಕೋತಿದ್ರೆ ॥೨೬೦॥
ಅವುಳ್ ಜೀತ್ಗಾರ್ರು ಕಳ್ರ ಹಿಡಿಯಾಕೋಯ್ತಾ ಇದ್ರೆ
ಒಡೋಡ್ತಾಲೆ ಗೋಗಲ್ಲಾಗೋದ್ರಂತೆ
" ಅಯ್ಯಯ್ಯೊ ಕೆಟ್ನಲ್ಲಪ್ಪ " ಅಂತ ಬೇವುನ್ಕಾಳಮ್ಮ
ಬಾಯ್ಬಡ್ಕೊಂಡು ಬೇವುನಟ್ಟಿ ಹತ್ರುಕೆ ಬತ್ತಿದ್ರೆ
ಬಂಕಾಪುರಿ ಬೆಂಕೀ ಮಾರೀಗೆ ಸನ್ನೆ ಮಾಡುದ್ರಂತೆ
ಬೆಂಕಿ ಮಾರಿ ಅಲ್ಕೊಂಡು ಕೂಕ್ಕೊಂಡು
ಬೇವುನಟ್ಟಿ ಒಳೀಕೆ ನುಗ್ಗುದ್ಲಂತೆ
ಅವುಳ್ನುಗ್ಗಿದ್ಲು ತಡ ಬೇವುನಟ್ಟಿ
ಧಗಾ ಧಗ್ನೆ ಕತ್ಕೊಂಡು ಧಿಗೀ ಧಿಗ್ನೆ ಉರೀತಿತ್ತಂತೆ " ॥೨೭೦॥
" ಅಯ್ಯಯ್ಯಪ್ಪೊ ಹೋಯ್ತಲ್ಲಪ್ಪೊ" ಅಂತೇಳಿ
ಬೇವುನ್ಕಾಳಮ್ಮ ಲಬಾ ಲಬ್ನೆ ಬಾಯ್ಬಡ್ಕೊಂಡು
ಬೆಂಕಿ ಆರುಸ್ಬೇಕಂತೇಳಿ
ನೀರಾಕ್ತಳಂತೆ ಮಣ್ಣಾಕ್ತಳಂತೆ
ಬೇವ್ನಟ್ಟಿ ಧಗ ಧಗ್ನೆ ಕತ್ಕೊಂಡು ಧಿಗಿ ಧಿಗ್ನಿ ಉರೀತಿದ್ರೆ
ಬೇವುನ್ಕಾಳಮ್ಮ ನೋಡ್ತ ನಿಂತಿದ್ಲು
ಕುದ್ರೆ ಗಾತ್ರ ಕೆಂಡ ಕುಪ್ರಸಿ ಬಂದು
ಅವ್ಳ ಕುಪ್ಸಾ ಸುಟ್ಟಾಕ್ತಂತೆ
ಆನೆಗಾತ್ರುದ ಕಿಡೀ ಹಾರಿ ಅವುಳರವತ್ಮೊಳುದ ಸೀರೆ ಸುಟ್ಟೋಯ್ತಂತೆ
ಉಡೂದ್ಕು ಸೀರೆ ಇಲ್ದೆ ಬೇವುನ್ಕಾಳಮ್ಮ ॥೨೮೦॥
ಹುಟ್ಟುದ ನಿರ್ವಾಣದಲ್ಲಿ ಕುಂತಿದ್ಳಂತೆ
ಮಾನ ಮುಚ್ಚೊಳಕು ಒಂದು ತುಂಡರುವೆ ಇಲ್ವಂತೆ
ಬೇವುನಟ್ಟಿಯೆಲ್ಲ ಸುಟ್ಟು ಭಸ್ಮಾ ಆಗೋಯ್ತಂತೆ
ನಮ್ಮಪ್ಪಾಜಿ ಏಳ್ಮಲೆ ಕಿರ್ತು ಏಕಾಂಗಿ ವಸ್ತು
ಮಾಯ್ಕಾರ ಮಾದೇವ್ನ ಪಡೂಲ್ ಪರ್ಸೆಗೆ ಹಾದಿಯಾಗೋಯ್ತಂತೆ
ಬೇವುನ್ಕಾಳಮ್ಮುಂಗೆ
ನಿಲ್ಲೊದ್ಕೆ ನೆಲೆಯಿಲ್ಲ ಕುಂಡ್ರೊದ್ಕೆ ಜಾಗವಿಲ್ಲ ಮನುಗೋದ್ಕೆ ಸ್ಥಳುವಿಲ್ಲ
"ಅಯ್ಯೊ ಪರಮಾತ್ಮ
ನಾನು ಬದುಕುವಂತ ಯೋಗ ತರ್ನಿಲ್ಲ " ಅಂತೇಳಿ
ಅತ್ತೂ ಅತ್ತೂ ಸಾಕಾಗೋದ್ಲು ॥೨೯೦॥
ಒಂದಾಲದ ಮರವಂತೆ
ಆಲದ ಮರದ ಕೆಳಗೆ
ತಿನ್ನದ್ಕೆ ಅನ್ನವಿಲ್ದೆ ಹೊದಿಯೊದ್ಕೆ ಬಟ್ಟೆಯಿಲ್ದೆ -
ಬೀದಿ ಪಾಲಾಗಿ ಬಿದ್ದವ್ಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥
ನನ್ನಪ್ಪಾಜಿ ಏಳ್ಮಲೆ ಹೆತ್ತಯ್ಯ
ಮಾರೀರ್ನೆಲ್ಲ ಕರುದು
" ಸಾಬಾಸ್ ನನ್ ಕಂದುಗಳ್ಯಾ
ನೀವು ನಾನು ಕರಿಯೋವರುಗೂ
ಜಗತ್ಯದಲ್ಲಿ ಯಾರ್ಕಣ್ಗು ಬೀಳ್ದಂಗೆ ಕಲ್ಗವಿ ಒಳುಗೆ- ॥೩೦೦॥
ನೆಲುಗೊಳ್ಳಿ ಅಂದವ್ರೆ ಮಾದೇವ
ನೋಡಿ ನಮ್ಮ ಶಿವನಾ ॥
ನಮ್ಮಪ್ಪಾಜಿ ಮಾದೇವ
ಬೇವುನ್ಕಾಳಿ ಧುನಿಯಾವನ್ನು ಧೂಳೀಪಟ ಮಾಡ್ಬುಟ್ಟು
ಹುಟ್ಟರೆ ಕಲ್ಬಂಡೆ ಮ್ಯಾಲೆ ಕುಂತ್ಗೊಂಡು
ಬೇವುನ್ಕಾಳೀಗೆ ನಿದ್ರೆ ಕೊಟ್ಟವ್ರೆ ಮಾದೇವ
ನೋಡಿ ನಮ್ಮ ಶಿವನಾ ॥ ೩೦೭॥
ದೇವಾಜಮ್ಮನನ್ನು ಉದ್ಧಾರ ಮಾಡಿದ ಕವಟ್ಲು ( ಕವಟ್ಲು = ಕವಲು, ಟಿಸಿಲು)
ಮऽಲೆಯ ಮಾದೇವ ಒಲಿವಾ ಚಂದವೊ
ನೋಡಿ ನಮ್ಮ ಸಿವನಾ॥ಸೊಲ್ಲು॥
ಏಕಾಂಗಿ ವಸ್ತು ಏಳ್ಮಲೆ ಕರ್ತು ಮಾದೇವ
ಹುಟ್ಟರೆ ಕಲ್ಬಂಡೆ ಮೇಲೆ ಕೂತ್ಕೊಂಡು
ಒಂದು ಮಾಯುಲ ಬೇಳ್ಮೆ ಚಲ್ಲುದ್ರಂತೆ
ಊರ್ಮುಂದ್ಲ ಕಟ್ಟೇ ಒಳುಗೆ ಬಿದ್ದು ಪ್ರಾಣ ಕಳುಕೊಂಡಿದ್ದಂತದ್ಯಾವಾಜಮ್ಮ
ದಡುಕ್ಕೆ ಬಂದು ಬಿದ್ಲಂತೆ
ಅವುಳ್ಗೆ ಎಚ್ರ ಕೊಟ್ರು ಮಾದೇವ
" ಅಯ್ಯೊ ನನ್ನಪ್ಪಾಜಿ ಮಾದೇವ " ಅನ್ಕೊಂಡು ದ್ಯಾವಾಜಮ್ಮ
ಮೆಲ್ಲುನೆ ಮ್ಯಾಲುಕ್ಕೆದ್ರಂತೆ
ಬೆಳ್ಳಿ ಮೂಡಿ ಬೆಳಕರೀತಾ ಬಂದಿತ್ತಂತೆ
ಅತ್ತೆ ಬೇವುನ್ಕಾಳಿ ಬಿದ್ದಿದ್ದಂತ ಆಲುದ ಮರತ್ತಾವಾಕೆ ಹೋಗೋ ಗ್ಯಾನ ಕೊಟ್ರು ॥೧೦॥
ಕಣ್ಣೊಸೀಕೊಂಡು ಬತ್ತವ್ಳೆ ದ್ಯಾವಾಜಮ್ಮ
ನೋಡಿ ನಮ್ಮ ಶಿವನಾ ॥
ಮೈಮ್ಯಾಲೆ ಗ್ಯಾನುವಿಲ್ದೆ
ಬರುಬೆತ್ಲಲ್ಲಿ ಬಿದ್ದಿದ್ದಂತ ಬೇವುನ್ಕಾಳಿ ನೋಡ್ಬುಟ್ಟು
"ಅಯ್ಯೊ ಪರಮಾತ್ಮ
ನಮ್ಮತ್ತಮ್ಮ ಯಾಕಪ್ಪ ಹಿಂಗ್ಬಿದ್ದವ್ಳೆ " ಅಂತೇಳಿ
"ಅತ್ತಮ್ಮ ಅತ್ತಮ್ಮ ಮ್ಯಾಕೇಳಿ" ಅಂದ
ಬೇವುನ್ಕಾಳಿ ಕಣ್ಬುಟ್ಟು ನೋಡ್ಬುಟ್ಟು
"ಅಯ್ಯೊ ನನಕಂದ ದ್ಯಾವಾಜಿ
ನೀನಾದ್ರೂ ಬಂದಿದ್ದೀಯ ನನಕಂದ " ಅಂತೇಳಿ ॥೨೦॥
ದ್ಯಾವಾಜಮ್ಮುನ ಕೊಳ್ತಬ್ಕೊಂಡು -
ಅಲ್ಲಿ ಗುಳುಗುಳುನೆ ಅಳ್ತಾಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥
ಮಾದಪ್ಪ ಬೇವುನ್ಕಾಳಿ ನೋಡಿ ನಗುನಾಡ್ತಿದ್ದಾರೆ
"ಈಗ್ಲಾರು ಬುದ್ಧಿ ಕಲಿ ಕೆಟ್ಮುಂಡೆ " ಅಂದಿದ್ದಾರೆ
ದ್ಯಾವಾಜಮ್ಮುಂಗೆ ಅತ್ತೆ ಅವಸ್ಥೆ ನೋಡಿ
ಹೊಟ್ಟೆ ಕಳ್ ಹೊಸಕ್ದಂಗಾಯ್ತು
ತನ್ನುಟ್ಟಿದ್ದ ಸೀರೆ ಸೆರುಗರುದು
ಬೇವುನ್ಕಾಳಿ ಮಾನವನ್ನು ಮುಚ್ಚಿ
"ಅಯ್ಯೊ ನನಕಂದ ದ್ಯಾವಾಜಿ ॥೩೦॥
ನಾವು ಬದುಕುವಂತ ಕಾಲ ಬರ್ನಿಲ್ಲ
ಬಾಳುವಂತ ಯೋಗ ತರ್ನಿಲ್ಲ
ಈ ಹಾಳ್ ಕೊಮ್ಮೆ ಗಾತ್ರುದ ಹೊಟ್ಟೆ ಹಸ್ದು
ಬಾಧಿ ತಾಳಕಾಗಕಿಲ್ಲಿ ನನಕಂದ
ಗಂಡುನ ಕಳ್ಕೊಂಡೆ ಮಕ್ಳು ಮರೀ ಕಳ್ಕೊಂಡೆ
ಮನೇ ಕಳ್ಕೊಂಡೆ ಮಠಾ ಕಳ್ಕೊಂಡೆ ನನಕಂದ
ನನ್ನಟ್ಟಿ ತಾವು ಕಾಗೆ ಕೂತ್ಕಳಕೊ ಕಂಬ ಇಲ್ಲುದಂಗಾಯ್ತಲ್ಲವ್ವ
ನಿಂತ್ಕೊತ್ತೀನಿ ಅಂದ್ರೆ ನೆಲೆ ಇಲ್ಲ
ಕೂತ್ಕೋತ್ತೀನಿ ಅಂದ್ರೆ ತಳಾ ಇಲ್ಲ
ಉಣ್ಣುದ್ಕೆ ಅನ್ನವಿಲ್ಲ ಉಡದ್ಕೆ ಬಟ್ಟೆ ಇಲ್ವಲ್ಲ ನನಕಂದ ಅಂತೇಳಿ ॥೪೦॥
ಅವ್ಳು ದುಕ್ಕಾ ಮಾಡ್ತಾ ಕುಂತವ್ಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥
ಒಂದೇ ಒಂದು ರಾತ್ರೀಗೆ ಬೇವುನ್ಕಾಳಮ್ಮ
ಆತೇ ಹುಳಿನಂಗೆ ಹತ್ತೋಗ್ಬಟ್ಲಂತೆ
ಗ್ವಾಡೆ ಮ್ಯಾಗ್ಳ ಪಲ್ಲಿಯಂಗಾಗೋದ್ಲಂತೆ
ದ್ಯಾವಾಜಮ್ಮುನ ಕಟ್ಕೊಂಡು ತನ್ನ ಹಾಳಾದ ಬದುಕ್ನೆಲ್ಲ -
ನೋಡ್ತಾ ಸುತ್ತಾಡುತಾಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥
ಹಟ್ಟಿ ಬೆಂದೋಗಿ ಏಳ್ ದಿವ್ಸ ಆಗೋಯ್ತು
ಯಾರಟ್ಟಿ ತಾವ್ಕೋದ್ರೂ ಒಬ್ರೂ ಸೇರ್ಸೊಲ್ರು ॥೫೦॥
ಏಳೂರು ಬೀದಿಗಾಣೆ ಬತ್ತಿದ್ರೆ
"ಜೀನ್ಮುಂಡೆ ಬತ್ತಳೆ ಜಿಪುಣ್ಮುಂಡೆ ಬತ್ತಳೆ
ಒದ್ದೋಡುಸ್ರೋ " ಅಂತೇಳಿ
ಸಿಕ್ಕು ಸಿಕ್ದೋರೆಲ್ಲ ಬಾಯಿಗೆ ಬಂದಂಗಾಡಾರಂತೆ
" ಅತ್ತೆ ಸೊಸೇರಿಬ್ರೂ ಕೂತ್ಕೊಂಡು ಮಾತಾಡ್ತಾರೆ
"ಅತ್ಯಮ್ಮ ಅತ್ಯಮ್ಮ
ನನ್ಗೆ ಬಾಳ ಹಸುವಾಯ್ತದಲ್ಲ ಅತ್ಯಮ್ಮ " ಅಂತ
ಬೇವುನ್ಕಾಳಮ್ಮ ದ್ಯಾವಾಜಮ್ಮುನ್ನ ತಲೆಯ
ತನ್ನೆದೆಗೆ ಆನುಸ್ಕೊಂಡು
ಬಿಕ್ಕುಳುಸ್ಕೊಂಡಳುತಾಳೆ ಕಾಳಮ್ಮ ॥೬೦॥
ನೋಡಿ ನಮ್ಮ ಶಿವನಾ ॥
ಅಯ್ಯೊ ನನಕಂದ ದ್ಯಾವಾಜಿ
ನಮ್ಮ ಜೀತ್ಗಾರ್ರು ಮನೇಗಾದ್ರೂ ಹೋಗಿ
ಒಂದ್ಮುದ್ದೆ ಹಿಟ್ಕೇಳನ ನಡಿಯವ್ವ" ಅಂದ್ಲು
" ಏನವ್ವ ತಾಯಿ ಯಾರವ್ವ ತಾಯಿ
ಯಾರಾರು ಒಂದು ಮುದ್ದೆ ಹಿಟ್ಕೊಡ್ರವ್ವ " ಅಂತೇಳಿ
ಮೆಳೆ ಮೇಲೆಸ್ದಿದ್ದ ಸೂತ್ಕುದ ಮಡ್ಕೆ ಒಡ್ತಂದು -
ಹಿಟ್ಟ ಕೇಳ್ತ ನಿಂತವುಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥
ಬೇವಿನ್ಕಾಳಿ ಜೀತ್ಗಾರ ಮಾದೇಗೌಡ ॥೭೦॥
ಅವುನ್ಮನೆ ಮುಂದೆ ಎದುಮಟ್ಟ ಕಸಾ ಬಿದ್ದಿತ್ತು
ತಿರ್ಕೊಂಡ್ತಿನ್ನಕೆ ನಿಂಗೇನಾಗಿದ್ದತು
ಇಲ್ಲಿ ಬಿದ್ದಿರೋ ಕಸಾ ಗುಡ್ಸಿ ತಿಪ್ಗಾಕಿ ಬಂದ್ರೆ
ನಿಂಗೆ ಹಿಟ್ಕೊಡ್ತಿನಿ " ಅಂದ್ಲಂತೆ ಮಾದೇಗೌಡುನ ಹೆಡ್ತಿ
"ಹಂಗೆ ಆಗ್ಲಿ ನನ್ತಾಯಿ " ಅಂತೇಳಿ
ಮನೆ ಮುಂದಾರ್ದಲ್ಲಿ ಬಿದ್ದಿದ್ದಂತ ಎದುಮಟ್ಟ ಕಸುನೆಲ್ಲ ಗುಡ್ಸಿ ಬಾಚಾಕುದ್ರಂತೆ
ಮಾದೇಗೌಡ್ನ ಹೆಂಡ್ತಿ ಕೈಲಿ
" ಅಮ್ಮ ನಂಗೆ ಸಂಕ್ಟ ಹೆಚ್ಚಾಗದೆ ಹಿಟ್ಕೊಡವ್ವ " ಅಂತೇಳಿ
ಒಡುದೋಗಿದ್ದ ಓಡ್ಗೆ ಒಂದ್ಮುದ್ದೆ ಹಿಟ್ಟಾಕುಸ್ಕೊಂಡು
ಅದ್ರುಮೇಲಷ್ಟು ಎಸ್ರು ಹುಯುಸ್ಕೊಂಡು ॥೮೦॥
ನತ್ತೀ ಮ್ಯಾಲೆ ಹಿಟ್ಮಡೀಕೊಂಡೋಯ್ತಿದ್ರೆ
ಮಾದೇಗೌಡ ನೋಡುದ್ನಂತೆ
" ಅಯ್ಯೊ ಪರಮಾತ್ಮ
ಈ ಕೆಟ್ಮುಂಡೇ ಎಂತೇ ಐಸ್ವರ್ಯದಲ್ಲಿದ್ದೋಳು
ಇಂತೇ ಬದುಕಾಟ ಇವುಳ್ಗಾಯ್ತಲ್ಲ
ಇವುಳ್ಮನೆ ಕೆಳ್ಸುಕೆ ನಾವೋಯ್ತಿದ್ದೊ
ಅವುಳ್ ಕೊಟ್ಟ ಕೂಲೀಲಿ ನಮ್ಮಂಡ್ತಿ ಮಕ್ಳ ಸಾಕ್ತಿದ್ದೊ
ಪರಮಾತ್ಮ ಎಂತೇ ಕಷ್ಟ ಕೊಟ್ಟಿದ್ದಿಯಪ್ಪ
ಅವುರವುರು ಮಾಡಿದ್ದ ಅವುರವರ ಮಳ್ಗೆ ತುಂಬ್ತಿಯಲ್ಲೊ ಭಗವಂತ " ಅಂದನಂತೆ
"ಬೇವುನ್ಕಾಳಮ್ಮ ಹಿಟ್ಟೊತ್ಕೊಂಡು - ॥೯೦॥
ಅವ್ಳು ಜಾಲುದ ಕೊಳಕೆ ಬರುತಾಳೆ
ನೋಡಿ ನಮ್ಮ ಶಿವನಾ ॥
ಜಾಲುದ ಕೊಳುಕೆ ಬಂದಿ
ಕೈ ಕಾಲ್ತೊಳ್ಕೊಂಡು ಹಿಟ್ಟುಣ್ಣನ ಅಂತೇಳಿ
ಕೊಳುಕಿಳೀತಿದ್ರೆ
ನಮ್ಮಪ್ಪಾಜಿ ಮಾದೇವ ನೋಡುದ್ರಂತೆ
" ಬೇವುನ್ಕಾಳಿಗೆ ಹಿಟ್ ಕೊಡುಸ್ಬಾರ್ದು" ಅಂತೇಳಿ
ಊರ ನಾಯ್ಗಳ ಕರುದವುರೆ ಮಾದೇವ "
ನೋಡಿ ನಮ್ಮ ಶಿವನಾ ॥೧೦೦"
" ಅಪ್ಪ ನಾಯ್ಗಳೆ
ಬೇವುನ್ಕಾಳಿ ಹಿಟ್ಟುನ್ಮುದ್ದೇನು ಎಸ್ರುನುವೆ ತಂದು ಮಡುಗವ್ಳೆ
ನೀವು ಎಸ್ರುಂಟಸ್ಬುಟ್ಟು
ಅಲ್ಲಿರುವಂತ ಹಿಟ್ಟುನ ಮುದ್ದೆ ತಕ್ಕೊಂಡು-
ನೀವು ಊಟ ಮಾಡ್ರಪ್ಪ" ಅಂತಾರೆ ಮಾದೇವ
ನೋಡಿ ನಮ್ಮ ಶಿವನಾ ॥
ನಾಯ್ಗಳೆಲ್ಲ ಮುತ್ತಾಕೊಂಡ್ವಂತೆ
ಮಡ್ಕೇಲಿದ್ದ ಎಸುರ್ನೆಲ್ಲ ಉಂಟುಸ್ಬುಟ್ಟು
ಹಿಟ್ಟುನ್ಮುದ್ದೆ ಕಚ್ಕೊಂಡ್ವಂತೆ
ಅವು ಓಡಾಡ್ಕೊಂಡು ತಿನ್ತಾ ಅವೆ
ಬೇವುನ್ಕಾಳಮ್ಮ ಕೈಕಾಲ್ ಮೊಕ ತೊಳ್ಕೊಂಡು ಬಂದು ॥೧೧೦॥
ಕಣ್ಣಿಂದ ನೋಡಿದ್ದಾಳೆ
" ಎಲ ಎಲಾ ನನ್ ಮಗುನ ನಾಯ್ಗಳೆ
ಊರಿಂದ ಒಂದ್ಮುದ್ದೆ ಹಿಟ್ಟು ಅಷ್ಟೆಸ್ರೀಸ್ಕೊಂಡ್ಬರಕೆ
ಎಷ್ಟೊಂದು ಕಷ್ಟಾ ಬಿದ್ದಿವ್ನಿ
ನೀವ್ಬಂದು ಹಿಟ್ ತಿನ್ಕೊಂಡ್ರೆ ನನುಗಿಲ್ದಂಗಾಯ್ತಲ್ಲ" ಅಂತೇಳಿ
ಬೇವುನ್ಕಾಳಮ್ಮ ನಾಯ್ಗಳ್ನೆಲ್ಲ ಒದುಗಾಡುಸ್ಕೊಂಡು
ನಾಯ್ ಬಾಯಲ್ಲಿರೋ ಹಿಟ್ಟ ತಾನು ಕಿತ್ಕೊಂಡು-
ರಸಮಿಸನೆ ತಿಂತಾ ನಿಂತವ್ಳೆ ಕಾಳಮ್ಮ
ನೋಡಿ ನಮ್ಮ ಶಿವನಾ ॥
ಏಳ್ಮಲೆ ಕೈಲಾಸ್ಕೆ ಹೋಗುವಂತ ಪಡುವಲ ಪರ್ಸೆ ॥೧೨೦॥
ಬೇವುನಟ್ಟಿ ತಾವ್ಕೆ ಬಂದು
" ಕೆಟ್ಮುಂಡೆ ಬೇವುನ್ಕಾಳಿ ಹಟ್ಟಿ ತಾವು ಬಾಳ ಧೂಳು
ಕಾಲ್ಮಡ್ಗದ್ಕೆ ಆಗದಿಲ್ಲ " ಅಂತೇಳಿ
ಕಾಕಾಕೊಂಡು ಬೇವುನ್ಕಾಳಿ ಬೊಯ್ಕೊಂಡು
ಅವ್ರು ಮುಂದಕ್ಕೆ ಪ್ರಾಯ್ಣ ಮಾಡ್ತಾರೆ
ನೋಡಿ ನಮ್ಮ ಶಿವನಾ ॥
ಪರ್ಸೆ ಬೊಯ್ಕೊಂಡು ಕಾಕಾಕೋದ್ನೋಡಿ
ಬೇವುನ್ಕಾಳಮ್ಮನ ಕಣ್ಣಲ್ಲಿ ನೀರು ಕೋಡಿಗಟ್ಟೋದ್ವಂತೆ
" ಈ ಹಾಳ್ಮುಂಡೆ ಜೀವ ಇನ್ನಿರ್ಬಾರ್ದು " ಎಂತೇಳಿ ಕಾಳಮ್ಮ
ಜಾಲುದ ಕಟ್ಟೆಗೆ ಬೀಳ್ಬೇಕು ಅನ್ನೋಗ ॥೧೩೦॥
ನನ್ನೇಳ್ಮಲೆ ಹೆತ್ತಯ್ಯ ನಿಜುರೂಪಾಳ್ಕೊಂಡು
ಅವುಳ್ಮುಂದೆ ಬಂದು ನಿಂತ್ಕೊಂಡ್ರಂತೆ
" ಅಯ್ಯೊ ನನಕಂದ ಬೇವುನ್ಕಾಳಿ
ನಾನ್ಯಾರು ಅನ್ನೋದು ನೆಪ್ಪಿದ್ದತ ಕಂದ ?"
"ಅಯ್ಯೊ ಏಳ್ಮಲೆ ಕರ್ತು ಏಕಾಂಗಿ ವಸ್ತು
ಮಾಯ್ಕಾರ ಮಾದೇವ ನನ್ನಪ್ಪಾಜಿ
ನನ್ಗೆ ಏಳು ಲಕ್ಷ ಭಾಗ್ಯ ಕೊಟ್ಟಂತ ಪರಮಾತ್ಮ
ನನ್ನ ಬದ್ಕೆಲ್ಲ ಬಯಲಾಗೋಯ್ತು ಸ್ವಾಮಿ "
ಅಯ್ಯೊ ಕಾಳಮ್ಮ
ಎಕ್ಕು ಸೊಕ್ಕುದ ಮಾತಾಡಿ ಎಕ್ಕುಟ್ಟೋದಲ್ಲ ನನಕಂದ ॥೧೪೦॥
ನಿನ್ನ ಬಾಯ್ಲಿ ಹೆಂಗೆಂಗೆ ಕಡೀತೊ ಹಂಗಂಗೆ ಮಾಡಿವಾನಿ
ಈಗ್ಲೂ ನೀನು ಒಂದ್ಕಾಳೆಳ್ಳೆತ್ತಿ ನನ್ನ ಮುತ್ತುನ ಜೋಳುಗ್ಗೆ ನೀಡುದ್ದೆ ಉಂಟಾದ್ರೆ
ನಿನ್ಗೆ ಮೊದಲಿದ್ದ ಭಾಗ್ಯದ್ಮೇಲೆ -
ಇನ್ನಷ್ಟು ಭಾಗ್ಯವ ಕೊಡುವೇನು"
ನೋಡಿ ನಮ್ಮ ಶಿವನಾ ॥
"ಅಯ್ಯೋ ಮಾದೇವ
ಬದ್ದುದ್ದು ಬಾಳಿದ್ದು ಇಷ್ಟೇ ಸಾಕು ನನ್ನಪ್ಪ
ನಾನಿನ್ನು ಪ್ರಪಂಚುದಲ್ಲಿ ಎಷ್ಟು ದಿವಾಸ ಇರ್ಬೇಕು
ನೀನು ನನ್ಗೆ ಐಶ್ವರ್ಯ ಕೊಡುಬೇಡ ತಂದೆ
ಈ ಹಾಳ್ಮುಂಡೆ ಕಣ್ಣಲ್ಲಿ ನೋಡ್ತಾ ನೋಡ್ತಾ ॥೧೫೦॥
ಕೈಯಾರ ಎಳ್ಕೊಟ್ಟು ಸವುರ್ಸೋಳಲ್ಲ
ನನ್ಗೆ ಮೋಕ್ಷುಕ್ಕೆ ದಾರಿ ಮಾಡುದ್ರಷ್ಟೇ ಸಾಕು" ಅನ್ನೋದಾಗಿ ಬೇವುನ್ಕಾಳಮ್ಮ-
ಸ್ವಾಮಿ ಪಾದಾವ ತಬ್ಬಿ ಬೇಡವ್ಳೆ
ನೋಡಿ ನಮ್ಮ ಶಿವನಾ ॥
ನನ್ನೇಳ್ಮಲೆ ಹೆತ್ತಯ್ಯ
ಅವುಳ ತಲೆ ಮೇಲೆ ತಮ್ಮ ಪಾದವನ್ನು ಮಡುಗಿ
ಅವುಳ ಪ್ರಾಣವನ್ನು ಬೇವುನಟ್ಟಿಗೆ ಕಳ್ಸಿ
ಅಲ್ಲೊಂದು ಒಣಬೇವುನ ಮರ ಪ್ರತೇಕ್ಷ ಮಾಡುದ್ರಂತೆ
ಅವುಳ ದ್ರೀಯವನ್ನು ಜಾಲುದ ಕೊಳುಕ್ಕೆ-
ಗೋಗಲ್ಲ ಮಾಡಿ ನಿಲ್ಸವ್ನೆ ಮಾದೇವ ॥೧೬೦॥ ( ಗೋಗಲ್ಲು=ಕೋಡುಗಲ್ಲು)
ನೋಡಿ ನಮ್ಮ ಶಿವನಾ ॥
ಜಾಲುದ ಕೊಳುಕ್ಕೆ ಗೋಗಲ್ಮಾಡಿ ನಿಲ್ಲುಸ್ಬುಟ್ಟು
ದನುಗಳು ನೀರ್ಕುಡೀಬೇಕು
ಈ ಗೋಗಲ್ಲ ಒತ್ರುಸ್ಬೇಕು
ಹಂಗಾದ್ರು ಅವುಳ್ಕರ್ಮ ಸಮೀಬಾರ್ದು ಕಾಣಮ್ಮ ಅಂತ-
ಸೃಪ ಕೊಟ್ಟವರಲ್ಲಪ್ಪ ಮಾದೇವ
ನೋಡಿ ನಮ್ಮ ಶಿವನಾ ॥
ನನ್ನೇಳ್ಮಲೆ ಕೈಲಾಸ್ಕೆ ಹೆಣ್ಣೇಳ್ಕೋಟಿ ಗಂಡೇಳ್ಕೋಟಿ ಪರೂಸೆ ಬತ್ತದೆ
ಬರುವಂತ ಪರ್ಸೆಯೆಲ್ಲ
ಬೇವ್ನಟ್ಟೀಲಿರೂವಂತ ಒಣಬೇವುನ್ಮರ ನೋಡಿ ॥೧೭೦॥
ಬೇವುನ್ಕಾಳಿಯಂಗೆ ಅಂಕಾರ ಪಟ್ರೆ
ಫಲುವಿಲ್ಲದ ಮರುವಾಯ್ತಿವಿ ಅಂತ ತಿಳ್ಕೊಳ್ಳಿ
ಬೇವುನ್ಕಾಳಿ ಹೆಸ್ರಲ್ಲಿ ಒಂದ್ಕಾಸುನ ಧೂಪ ಹಾಕ್ಲಿ
ಕೊನೇ ಒಳುಗೆ ನನ್ನೇಳ್ಮಲೆ ಕೈಲಾಸ್ಕೆ ಬಂದು
ನನ್ಗೆ ಒಂದ್ಕಾಸುನ ಧೂಪ ಹಾಕ್ಲಿ ಅಂತೇಳಿ
ಅವ್ರು ದ್ಯಾವಾಜಮ್ಮುನ ಕರ್ದು -
ಸಾರಿ ಬುದ್ದೀಯ ಹೇಳ್ತಾವ್ರೆ ಮನೋಡಿ
ನಮ್ಮ ಶಿಬಬಬವ
ಅಯ್ಯೊ ನನಕಂದ ದ್ಯಾವಾಜಮ್ಮ
ನೀನು ನಿನ್ನ ತಂದೆ ಮನುಗೋಗಿ ಸುಕೈವಾಗಿ ಬದುಕಮ್ಮ ಅಂತೇಳುದ್ರು ॥೧೮೦॥
ಮಾದೇವುನ ಮಾತ ಕೇಳಿ ದ್ಯಾವಾಜಮ್ಮ
ಮಾದೇವುನ ಪಾದುದ ಮೇಲೆ ರಪ್ಪಂತ ಬಿದ್ದಿ
ಮಾದೇವುನ ಎರಡು ಪಾದುವನ್ನು ಹಿಡ್ಕೊಂಡು-
ಅವ್ಳು ಕಣ್ಣಲ್ಲಿ ನೀರ ಕೆಡುಗವ್ಳೆ
ನೋಡಿ ನಮ್ಮ ಶಿವನಾ ॥
" ಹೆತ್ತಯ್ಯ ನಮ್ಮ ತಂದೆ ಮನುಗೋಗಿ ಸುಕುವಾಗಿ ಬದುಕು ಅಂತೀರಲ್ಲ ಅಪ್ಪಾಜಿ
ನನ್ನ ಅಣ್ತಮ್ದೀರು ಬಾಲ ದುಷ್ಟುರಲ್ಲಗುರುವೆ
ಅಡೋಗ ಉಡೋಗ ಅಡವಿಯಲ್ಲ ನೆಂಟ್ರು
ಕೆಟ್ಟಾಗ ಹೆತ್ತೋರ ಹಟ್ಟೀಗೋಗಿ ಹೊರೆಯಾಗ್ಲಾರೆ ಬುದ್ಧಿ
ನನ್ನತ್ತೆಗೆ ಕಾಣುಸ್ದ ಗತೀನೆ ನನ್ಗು ಕಾಣ್ಸಿ ನನ್ನಪ್ಪಾಜಿ ॥೧೯೦॥
ಐಸ್ವರ್ಯವಂತುರ ಮನೇಗೆ ಲಗ್ನುವಾಗಿದ್ದಿ
ಬಡುಸ್ತಾನ ಬಂದಾಗ ಬ್ಯಾರೇವ್ರ ಹಟ್ಟಿ ಬಾಗ್ಲು ತುಳೀನಾರಿ
ಪರುಪಂಚದಲ್ಲಿ ಅಪಕೀರ್ತಿ ಹೆಸ್ರು ತಕ್ಕೊಂಡು
ನಮ್ಮಪ್ಪುನ ಮನೆಗೋಗ್ಲಾರಿ ನನ್ನ ಸ್ವಾಮಿ
ಏಳೊರ್ಷುದಲ್ಲಿ ಎತ್ತಿ ಮಾಲೆ ಹಾಕಿದಾಗ್ಲಿಂದ
ನನ್ನ ಗಂಡನ ಮನೆಯಿಂದ ತವುರ್ಗೋದೋಳಲ್ಲ
ಈಗ್ಮಾತ್ರ ನಾನು ಹೋಗ್ಲಾರಿ ಗುರುವೆ
ನನ್ನ ನಿಮ್ಪಾದ್ಕೇ ಕರ್ಕೊಳ್ಳಿ ಅಂತಾಳೆ ದೇವಾಜಮ್ಮ
ನೋಡಿ ನಮ್ಮ ಶಿವನಾ ॥
" ಅಯ್ಯೊ ನನಕಂದ ಸತ್ಯುವಂತೆ ದ್ಯಾವಾಜಿ
ನೀನು ಭಕ್ತಿವಂತೆ ಮಗಳಮ್ಮ
ನಿನ್ನ ಕೈ ಬುಡ್ಲಾರಿ ನನಕಂದ
ಮೂಡ್ಲುಮಲೆ ದಿಕ್ಕೆ ಮೊಕಾ ಮಾಡ್ಕೊಅಂಡು
ಮಾದೇವ ನಿನ್ನ ಪಾದವೇ ಗತಿ ಅಂತೇಳಿ
ಕಣ್ಮುಚ್ಕೊಂಡು ನನ್ನ ಗ್ಯಾನುಸ್ತ
ನಿನ್ನ ಗಂಡುನ್ನ ಕರಿಯವ್ವ " ಅಂದ್ರು
ಸತ್ಯುವಂತೆ ದ್ಯಾವಾಜಮ್ಮ
ಜಾಲುದ್ಕೊಳುದಲ್ಲಿ ಕೈಕಾಲ್ಮೊಕ ತೊಳ್ಕೊಂಡು
ನಮ್ಮಪ್ಪಾಜಿ ಪಾದುಪೂಜೆ ಮಾಡಿ
ಭಕ್ತಿಯಿಂದ ಕೈಮುಕ್ಕೊಂಡು
ಮೂಡ್ಲು ದಿಕ್ಕಿಗೆ ಮೊಕಾ ಹಾಕೊಂಡು
"ಮಾದೇವ ನಿನ್ನ ಪಾದ್ವೇಗತಿ ಕಣಪ್ಪ " ಅಂತೇಳಿ
ಒಂದೇ ದುಡುದಲ್ಲಿ -
ತನ್ನ ಗಂಡುನ್ನ ಕರುದವುಳೆ ದ್ಯಾವಾಜಮ್ಮ
ನೋಡಿ ನಮ್ಮ ಶಿವನಾ ॥
ದ್ಯಾವಾಜಮ್ಮುನ ಗಂಡ
ಮೊಲ್ಲಾಗ್ರ ಬಂದು ಸತ್ತು ಬಿದ್ದಿದ್ದೋನು
ಮ್ಯಾಲುಕ್ಕೆದ್ದು ಜಾಲುದ ಕೊಳದತ್ರುಕೆ ಬಂದು
ನಮ್ಮ ಸ್ವಾಮಿಯವರ ಪಾದುಕ್ಕೆ ಸರಣ್ಮಾಡುದ್ನಂತೆ
ಆಗ ನಮ್ಮಪ್ಪಾಜಿ
"ಕೇಳೊ ನನಕಂದ ದ್ಯಾವಾಜಿ
ನೀನು ನಿನ್ನ ಗಂಡುನ ಜೊತೇಲಿ
ಹಿಂಡುಗ್ನಾದ್ದೊಡ್ಡೀಲಿ ಜೀವ್ನ ಮಾಡವ್ವ
ಆದ್ರೆ ನನಕಂದ
ದೀವುಳ್ಗೆ ತಿಂಗ ನಿನ್ಮನೆಯಿಂದ
ಒಂದಿಡಿ ಎಳ್ಳು ನನ್ನ ಮಣ್ ಮಜ್ಜುಣ್ಕೆ ಬರ್ಬೇಕು
ನಿನ್ನೊಂಸ ಪರಿಯಂತ ಎಲ್ಲಿದ್ರೂ ಕೊಟ್ಟು ಕಳುಸಮ್ಮ
ಎಲ್ಲಿದ್ರೂ ನನ್ನ ಮರೀಬೇಡ ಕಂದಮ್ಮ
ನಿನ್ನ ಮುತ್ತೈದು ಸ್ತಾನ ಸ್ಥಿರಂಜುನವಾಗ್ಲಿ ಅಂತ ಆಸುರ್ವಾದುವನ್ನು ಕೊಟ್ಟು-
ಅವ್ರು ಏಳ್ಮಲೆ ಕೈಲಾಸ್ಕೆ ಹೊಯ್ತಾರೆ ಮಾದೇವ ॥೧೩೧॥
ನೋಡಿ ನಮ್ಮ ಶಿವನಾ ॥
ಕೃತಜ್ಞತೆಗಳು.
ಸಂಪಾದಕರು,
ಡಾ. ಪಿ. ಕೆ. ರಾಜಶೇಖರ
ಪ್ರಕಾಶಕರು: ಕರ್ನಾಟಕ ಸರ್ಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಜೆ.ಸಿ.ರಸ್ತೆ
ಬೆಂಗಳೂರು-೫೬೦೦೦೨
ಮಹಾಕಾವ್ಯದ ಗಾಯಕರು,
ಮಹದೇವಯ್ಯ : ಕ್ಯಾತಮಾರನಹಳ್ಳಿ, ಮೈಸೂರು
ಮಾದಯ್ಯ , ಜೋಪ್ಡಿ , ಮೈಸೂರು
ಸಿದ್ದಯ್ಯ , ಬಂಡಿಕೇರಿ , ಮೈಸೂರು
ಚನ್ನಯ್ಯ , ಆಲ್ಗೂಡು , ಟಿ. ನರಸೀಪುರ ತಾಲೂಕು, ಮೈಸೂರು ಜಿಲ್ಲೆ.
ಪುಟ್ಟಮಾದಯ್ಯ, ಕಾರೇಪುರ, ನಂಜನಗೂಡು ತಾಲೂಕು.
ಸಿದ್ಧಶೆಟ್ಟಿ, ಕೃಷ್ಣಾಪುರ, ಎಳಂದೂರು ತಾಲೂಕು. ಮೈಸೂರು ಜಿಲ್ಲೆ.
ಹನುವಯ್ಯ, ರಾಮಸಮುದ್ರ, ಚಾಮರಾಜನಗರ ತಾಲೂಕು.ಮೈಸೂರು ಜಿಲ್ಲೆ.
ಗುರುಬಸಮ್ಮ, ಇಂದ್ವಾಡಿ, ಕೊಳ್ಳೇಗಾಲ ತಾಲೂಕು. ಮೈಸೂರು ಜಿಲ್ಲೆ.
ಮಹದೇವಪ್ಪ, ಕೊಳತ್ತೂರು, ತಮಿಳುನಾಡು.
ಬಸವರಾಜು, ಗಾಂಧಿನಗರ ಮೈಸೂರು.
ಮಾದಮ್ಮ, ತಲಕಾಡು, ಮೈಸೂರು ಜಿಲ್ಲೆ.
ಪುಟ್ಟಮಾದಯ್ಯ, ತಲಕಾಡು, ಮೈಸೂರು ಜಿಲ್ಲೆ.
ಕಾಳಮ್ಮ, ದೊಡ್ಡಾಘಟ್ಟ, ತುರುವೇಕೆರೆ, ತುಮಕೂರು ಜಿಲ್ಲೆ.
ಪುಟ್ಟನಂಜಮ್ಮ, ಕ್ಯಾತಮಾರನಹಳ್ಳಿ, ಮೈಸೂರು.
ಮಾದಮ್ಮ, ಕಣ್ಣೂರು, ಕೊಳ್ಳೆಗಾಲ ತಾಲೂಕು, ಮೈಸೂರು ಜಿಲ್ಲೆ.
ಮಾದಮ್ಮ, ಚವ್ವಳ್ಳಿ ಟಿ. ನರಸೀಪುರ ತಾಲೂಕು.
_
ಚಿಕ್ಕಲಿಂಗಮ್ಮ, ಸತ್ಯಗಾಲ.
ಮುನಿಯಪ್ಪ, ಬೊಮ್ಮೇನಹಳ್ಳಿ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ.
ಮಾದಮ್ಮ, ಬೊಪ್ಪಸಮುದ್ರ , ಮದ್ದೂರು ,ತಾಲೂಕು, ಮಂಡ್ಯ ಜಿಲ್ಲೆ.
ವೆಂಕಟಪ್ಪ, ದೊಡ್ಡಗೋರಾಘಟ್ಟ, ಚಿಮ್ಮನಹಳ್ಳಿ, ತುರುವೇಕೆರೆ ತಾಲೂಕು.
ಬೋರಯ್ಯ, ಗೊರವನಹಳ್ಳಿ ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ.
ನಂಜಮ್ಮ, ಪಾದರಾಯಸ್ವಾಮಿ ಗುಟ್ಟೆ , ಬೆಂಗಳೂರು.
ಸಂಜಿಮುತ್ತಯ್ಯ, ದುದ್ದಗೆರೆ, ವರುಣ ಹೋಬಳಿ, ಮೈಸೂರು ಜಿಲ್ಲೆ.
ಮಲ್ಲೇಗೌಡ, ಸಾದೊಳಲು, ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ.
ಬಸಮ್ಮ, ಅಗರ, ಎಳಂದೂರು ತಾಲೂಕು,
ನಗರದ ಪುಟ್ಟನಂಜಮ್ಮ, , ದು ಗ್ಗಟ್ಟಿ, ಎಳಂದೂರು ತಾಲೂಕು,
ದೊಡ್ಡಮ್ಮ, ಚಾಮರಾಜನಗರ
ಕಾಮಮ್ಮ, ಚಾಮರಾಜನಗರ.
ಚಿಕ್ಕಯ್ಯ, ಉತ್ತನಹಳ್ಳಿ ಮೈಸೂರು ತಾಲೂಕು.
ಸಿದ್ಧಶೆಟ್ಟಿ, ಬೆಟ್ಟದ ಬೀಡು, ಹೆಗ್ಗಡದೇವನಕೋಟೆ ತಾಲೂಕು, ಮೈಸೂರು ಜಿಲ್ಲೆ.
ಈ ಎಲ್ಲಾ ಗಾಯಕರ ಕಾವ್ಯಗಳನ್ನು ೧೯೭೧-೧೯೭೩ ನೇ ಇಸವಿಯ ಅಂತರದಲ್ಲಿ ಸಂಗ್ರಹಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ