ಶ್ರೀಪದಾಶೀತಿ,
ಇದರ ಕರ್ತೃ ಆಚಣ್ಣ, ಇದರಲ್ಲಿ ೯೨ ಪದ್ಯಗಳಿವೆ. ಆ. ನೆ. ಉಪಾಧ್ಯೆ ಅವರು " ತುಂಬ ಚಿಕ್ಕದೂ ಸರಳವೂ ಸ್ಪಷ್ಟವೂ ಆದ ಶೈಲಿಯುಳ್ಳ ಪ್ರಸ್ತುತ ಕೃತಿಯೇ ಆಚಣ್ಣನ ಮೊದಲ ಕಾವ್ಯ ಪ್ರಯತ್ನ" ಎಂದಿದ್ದಾರೆ.
ಶ್ರೀಪದಾಶೀತಿಯಲ್ಲಿ ಅರ್ಹಂತ, ಸಿದ್ಧ, ಸಾಧು, ಉಪಾಧ್ಯಾಯ ಮತ್ತು ಆಚಾರ್ಯರನ್ನು ಸ್ತು ತಿಸಿದ್ದಾನೆ. ಮೊದಲ ೧೬ ಪದ್ಯಗಳಲ್ಲಿ ಅಕ್ಷರಾತ್ಮಕ ಪಂಚಪದಗಳ ಸ್ವರೂಪ, ಲಕ್ಷಣ, ಮತ್ತು ಮಾಹಾತ್ಮ್ಯಗಳು ವಿವರಿಸಲ್ಪಟ್ಟಿವೆ,. ೧೬ ನೆಯ ಪದ್ಯದಿಂದ೩೪ ನೆಯ ಪದ್ಯದವರೆಗೆ ಪಂಚಪರಮೇಷ್ಠಿಗಳ ಲಕ್ಷಣ ಹೇಳಲ್ಪಟ್ಟಿದೆ. ಇಲ್ಲಿಂದ ಮುಂದಕ್ಕೆ ಕೃತಿಯ ಅಂತ್ಯದ ವರೆಗೂ ಪಂಚಪರಮೇಷ್ಠಿಗಳ ಸ್ತವನ, ಕೈವಲ್ಯದ ಮಹತ್ವವನ್ನು ಬಣ್ಣಿಸಿದೆ. ಸಿದ್ಧರನ್ನು ಅಧಿಕವಾಗಿ ಸ್ಮರಿಸಿರುವುದು ಇಲ್ಲಿಯ ಒಂದು ವಿಶೇಷ. ಜೈನ ಧರ್ಮೀಯರಿಗೆ ಕೈಪಿಡಿಯ ರೂಪದಲ್ಲಿರುವ ಶ್ರೀಪದಾಶೀತಿ ಕೈವಲ್ಯಮುಕುರ ಮಂಗಳಕಲಶ ಆಗಿದೆ.
ಶ್ರೀಮತ್ಪಂಚಪದಂ ಗುರು
ನಾಮಾದಿ ತ್ರಿತಳಮತುಳರಮ್ಯಂ ಹರ್ಮ್ಯಂ
ಧಾಮಮಯಂ ಸುಖಕಲಶೋ
ದ್ದಾಮಂ ವಿಶ್ರಾಮಧಾಮಮಕ್ಕೆಮಗನಿಶಂ॥೧
ಅದು ನವಪದಾರ್ಥ ನವನಿಧಿ
ಪದಮದುಕೈವಲ್ಯಮುಕುರ ಮಂಗಳಕಲಶಂ
ಬೆದೆಬಿದ್ದವೇಕದಡಿಪಾ
ಸ್ಪದಮದು ರತ್ನತ್ರಯಾದಿ ದೈವಾಗಾರಂ॥೨॥
ಅದು ಪರಮಸೌಖ್ಯಲಕ್ಷ್ಮೀ
ಸದನಂ ವಾಣೀವಿಳಾಸಿನೀಕುಳಭವನಂ
ವಿದಿತಯಶಶ್ಶ್ರೀಹರ್ಷಾ
ಸ್ಪದಗೃಹಮೆರೆದಂದದೊಂದೆ ನುತಿಪದಮಲ್ತೇ॥೩॥
ನಿರುತಂ ಪಂಚಪದಕ್ಕ
ಕ್ಕರಲಕ್ಷ್ಮೀಸ್ಥಾನಭೇದದಿಂ ತ್ರಿವಿಕಲ್ಪಂ
ದೊರೆಕೊಳ್ಗುಮವಂ ಕ್ರಮದು
ಚ್ಚರಿಸುವ ನೆನೆವಯ್ದುವುಜ್ಜುಗಂ ದಲ್ ಕಜ್ಜಂ ॥೪॥
ಪಣತೀಸಂ ಸೋಳಸವಂ
ಪಣ ಚದು ದುಗಮೇಕಮೆಂದು ಪೇೞ್ವಗಮದಿಂ
ಗಣಿಯಿಸುವೊಡೆ ಸವಿಧಂ
ಪ್ರಣುತ ಶ್ರೀಪದಮೆನಿಪ್ಪ ತತ್ಪಂಚಪದಂ ॥೫॥
ವ॥ ಇದರ ಅರ್ಥಮಂ ಪರಮಾರ್ಥತೀರ್ಥಪರಂಪರಾ ಪ್ರಸಿದ್ಧ ವಿಶುದ್ದೋಪ ದೇಶದಿಂ ವಿಶದಂ ಮಾೞ್ಪೆಂ
ಣಮೋಅರಿಹಂತಾಣಂ
ಣಮೋ ಸಿದ್ಧಾಣಂ
ಣಮೋ ಆಇರಿಯಾಣಂ
ಣಮೋ ಉವಜ್ಝಾಯಾಣಂ
ಣಮೋ ಲೋಏ ಸವ್ವಸಾಹೂಣಂ
೧) ಎಂಬಿದು ಪಂಚತ್ರಿಂಶದಕ್ಷರಂ ಪಂಚಪದಂ
ಅರಿಹಂತಸಿದ್ಧ ಆ ಇರಿಯ ಉವಜ್ಝಾಯಾ ಸಾಹೂ
೨) ಎಂಬಿದು ಷೋಡಶಾಕ್ಷರಂ ಪಂಚಪದಂ
ಅರಿಹಂತ ಸಿಸಾ
೩) ಎಂಬುದು ಷಡಕ್ಷರಂ ಪಂಚಪದಂ
ಅಸಿ ಆ ಉಸಾ
೪) ಎಂಬುದು ಪಂಚಾಕ್ಷರಿ ಪಂಚಪದಂ
ಅ ಸಿ ಸಾಹೂ
೫) ಎಂಬಿದು ಚತುರಕ್ಷರ ಪಂಚಪದ
ಅ ಸಾ
೬) ಎಂಬಿದು ದ್ವಕ್ಷರಂ ಪಂಚಪದ
ಓಂ ( ಕಾರಂ)
೭) ಎಂಬಿದು ಏಕಾಕ್ಷರಂ ಪಂಚಪದಂ
ಎಂಬೀ ಸಪ್ತಪದೀ ಪದೋಪಲಕ್ಷಣದಿಂ
ಈ ವಿಧದಲ್ಲಿ ಆ ಪಂಚಪದಕ್ಕೆ ಏಳು ಬಗೆಯ ಸ್ವರೂಪವುಂಟು. ಇವುಗಳಲ್ಲಿ ಯಾವುದನ್ನು ಬೇಕಾದರೂ ಯಥಾಶಕ್ತಿ ಭವ್ಯರು ಸ್ವೀಕರಿಸಬಹುದು.
ಓಂ ಹ್ರಾಂ ಣಮೋ ಅರಿಹಂತಾಣಂ
ಓಂ ಹ್ರೀಂ ಣಮೋ ಸವ್ವ ಸಿದ್ಧಾಣಂ
ಓಂ ಹ್ರೂಂ ಣಮೋ ಆ ಇರಿಯಾಣಂ
ಓಂ ಹ್ರೌಂ ಣಮೋ ಉವಜ್ಝಾಯಾಣಂ
ಓಂ ಹ್ರಃ ಣಮೋ ಲೋಏ ಸವ್ವಸಾಹೂಣಂ
ಎಂಬೀ ಅಘೋರ ಪಂಚನಮಸ್ಕಾರ ದಿವ್ಯಮಂತ್ರಮಂಗಳಂ ಶ್ರೀಪಂಚಪದ ವಿಶೇಷಂಗಳೆಂದಱಿವುದು.
ಉದಕಂ ದಕಂ ಕಮೆಂದೊಡ
ಮುದಕವಿಶೇಷಪ್ರತೀತಿಯೆಲ್ಲೆನಿಸುವವೊಲ್
ಸದಮಳಪಣತೀಸಾದಿಕ
ಪದಂಗಳೆ ವಿಶೇಷವಾಚ್ಯವಾಚಕಮೆನಿಕುಂ॥೬॥
ಗುರುಪಂಚಕನಾಮಾದ್ಯಾ
ಕ್ಷರಸಂಧಿ ಪ್ರಭವಮಖಿಲವಿದ್ಯಾಮಹಿಮಾ
ಕರಮೆನಿಪೋಮಕ್ಷರದೊಳ್
ಸ್ಫುರದಿಂದುದ್ಯುತಿಯೊಳಿರಿಪೆನೆನ್ನಯ ಮತಿಯಂ॥೭॥
ಓಮಕ್ಷರಮುಂ ವಾಚೋ
ಭಾಮಾವಶ್ಶೈಕತಿಲಕಮಾದುದುಮುಕ್ತಿ
ಶ್ರೀಮೋಹನಸಾಯಕಮುಂ
ಶ್ರೀಮದ್ಗುರುಪಂಚಕಾಖ್ಯೆತಾನಾದುದಱಿಂ॥೮॥
ಕಿಱಿದೆಂದಿದನಱಿಯಮೆಯಿಂ
ದುಱದ ನರಂ ಚಿಂತಾರ್ಥವಿತರನ್ಮಣಿಯಂ
ಕಿಱಿದೆಂದುಱದನ ತೆಱದಿಂ
ಬಱಿದಾಗದೆ ಬಯಸಿದರ್ಥಮಂ ಪಡೆದಪನೇ॥೯॥
ಅತಿಶಯಚಿಂತಿಮಣಿ ವಿ
ಶ್ರುತ ವಿದ್ಯಾಕಲ್ಪಕಂದಳೀಕಂದಮಿಳಾ
ಸ್ತುತಬೋಧವಾರ್ಧಿವೇಳಾ
ಸಿತರುಚಿಸಂಪೂರ್ಣಬಿಂಬವಿಭವಂ ಪ್ರಣವಂ॥೧೦॥
ಭೇದಿಸೆ ವರಜೈನವಚೋ
ವೇದಪ್ರಾಸಾದಮೂಲಮೆಂದಿವನೊಲವಿಂ
ವೇದರಹಸ್ಯಮನಱಿವರ್
ಮೋದದೆ ವೇದಾದಿಯೆಂಬರಂಬರವಸನರ್॥೧೧॥
ಪೊಳೆವಮೃತಾಂಶುವ ಕಳೆಯಿಂ
ಕಳೆಯೆನಿಸುವ ಬೆಳಗಿನಿಂದಮೆನ್ನಯ ಭಾಲ
ಸ್ಥದೊಳ್ ತಿಲಕಶ್ರೀಯಂ
ತುಳುಂಕುವೀ ಬ್ರಹ್ಮಬೀಜಮೆನಗೀಗಱಿವಂ॥೧೨॥
ಸ್ಫುರದರಸಹಸ್ರಶೋಭಾ
ಪರಿಕಳಿತಂ ಧರ್ಮಚಕ್ರಮೆನಗಾಯಗ್ರೇ
ಸರಮೆಂಬ ಮನದ ಪೆರ್ಚಂ
ದೊರಕೊಳಿಸುಗೆ ಪಂಚಗುರುಪದಾಕ್ಷರಮಮಳಂ॥೧೩॥
ಭುವನತ್ರಯಮಂ ನಿಜರುಚಿ
ನವಾಮೃತಾರ್ಣವದೊಳಾವಗಂ ತೇಂಕಿಸುತಿ
ರ್ಪವಿತರ್ಕ್ಯಕಾಂತಿಕಾಂತಂ
ಶಿವಪದಮಂ ಕುಡುಗೆ ನಮಗೆ ಗುರುಪದಮನಘಂ॥೧೪॥
ಅಮರ್ದಂ ಸಲೆ ಸವಿಸಲ್ಕೋಂ
ನಮಯೆಂಬೀ ಪಂಚಪದಸುಧಾಕ್ಷರಮತ್ಯು
ತ್ತಮಮಾತ್ಮರಸನೆಗಾದಂ
ಸಮನಿಸೆ ಪಱಿಪಡದೆ ನಿಖಿಲಜನ್ಮಾತಂಕಂ॥೧೫॥
ಏಕಾಕ್ಷರೋಕ್ತಲಕ್ಷಣ
ಸಾಕಲ್ಯಂ ದ್ದ್ವ್ಯಕ್ಷರಾದಿಗಳುಮಂ ತಾನ
ವ್ಯಾಕುಳಮಮರ್ಗುಂ ಸಕಳಗು
ಣಾಕರಮಾವಾಚಕತ್ವಮದು ಕೇವಳಮೇ॥೧೬॥
ಭೂತಭವದ್ಭಾವಿಗಳನ
ತೀತಜನಿಗಳಂ ನಿಜಸ್ವರೂಪಸ್ಥಿತಿ ಸಂ
ಜಾತಾನಂದರನಮಳರ
ನಾನತಗುಣ ಪಂಚಗುರುಗಳಂ ಚಿಂತಿಸುವೆಂ॥೧೭॥
ಘಾತಿಚತುಷ್ಟಯಹತಿ ಸಂ
ಜಾತಾಮಿತಬೋಧದೃಷ್ಟಿ ಸುಖವೀರ್ಯಮಯಂ
ಜ್ಯೋತಿರ್ಮಯ ದಿವ್ಯವಪುಃ
ಖ್ಯಾತಂ ಭೂತಾರ್ಥವಾದಿ ಜಿನನಪವೃಜಿನಂ॥೧೮॥
ಸಮವಸೃತಿಮಂಡಲ ಶ್ರೀ
ರಮಣೀರಮಣಂ ಸಮಸ್ತಭುವನಸ್ತುತ್ಯ
ಕ್ರಮಕಮಳಂ ಸಿಂಹಾಸನ
ಚಮರರೈಹಪ್ರಭೃತಿ ವಿವಿಧಭವವಿಭಾಸಂ॥೧೯॥
ದ್ವಾದಶಗುಣ ಭವ್ಯಮನೋ
ಹ್ಲಾದಿ ವಚೋಮೃತಸುಧಾಂಶುಬಿಂಬಂ ಮುಕ್ತಿ
ಶ್ರೀದಯಿತಂ ಭುವನತ್ರಯ
ವೇದಿ ಜಿನೇಶ್ವರನನಶ್ವರಂ ವಿಶ್ವವರಂ॥೨೦॥
ಭಾವವಿಮುಕ್ತಂ ಸಕಲಗು
ಣಾವಹ ವಿಶ್ವಾವಬೋಧ ಪರಮಾನಂದಂ
ಪಾವನನಿಜಪದಪದ್ಮಂ
ಸೇವಕ ರಕ್ಷೈಕದಕ್ಷನಕ್ಷಯನಭವಂ॥೨೧॥
ಅಷ್ಟವಿಧಕರ್ಮವಿಳಯ
ಸ್ವೇಷ್ಟಗುಣಾಷ್ಟಕನನಂತಸುಖಸಂತುಷ್ಟಂ
ಶಿಷ್ಟಾಷ್ಟಮಭೂಮಧ್ಯನಿ
ವಿಷ್ಟ ಶಿಲಾವಿಷ್ಟ ರನಂತಕಾಲಂ ಶುದ್ಧಂ॥೨೨॥
ಸೂರಿತ್ರಯಮಾಗಮ ರುಚಿ
ಚಾರಿತ್ರವಹಿತ್ರ ಜನನವಾರಾಶಿ ಸಮು
ತ್ತಾರಕಮಕ್ಕೆಮಗೆಂದುಂ
ಸಾರದಯಾಮೃತಸಮುದ್ರಮುದ್ರಿತಭುವನಂ॥೨೩॥
ಚರಮಾಂಗಮಂಗಸಂಗತಿ
ವಿರಹಿತನಖಿಳರ್ಧಿಶೀಲಗುಣಗಣರತ್ನಾ
ಭರಣ ವಿರಾಜಿತನಪಗತ
ಪರೀಷಹಂ ಪ್ರವಚನೈಕದೃಷ್ಟಿ ವಿಶಿಷ್ಟಂ॥೨೪॥
ಶಿಕ್ಷಾದಿಲಕ್ಷಣತ್ರಯ
ಲಕ್ಷಿತನಾಚಾರ್ಯನುತ್ತರೋಭಯಲಕ್ಷ್ಮೀ
ಲಕ್ಷಿತನುಪದೇಶಕ ನಾ
ಲಕ್ಷಿತನಗ್ರೈಕಲಕ್ಷದಿಂ ಸಾಧುವರಂ॥೨೫॥
ಜಡಿದಂ ನುಡಿದಂ ತಮ್ಮೊ
ಳ್ನಡೆಯಂ ಪಡಿದೋಱಿ ಜಡರನೊಯ್ಯನೆ ಕೃಪೆಯಿಂ
ಕಿಡದೆಡೆಗೆಯ್ದಿಪ ಸಾಧುಗ
ಳಡಿಗಳೀಗಳ್ ಕಿಡಿಸುಗೆಮ್ಮ ಜನ್ಮಶ್ರಮಮಂ॥೨೬॥
ಏಮಾತೊ ಸಕಲ ಮಯದೊ
ಳೀಮಾತೆ ಸುನಿಶ್ಚಿತಾರ್ಥಸಾರಂ ಸಕಲ
ವ್ಯಾಮೋಹಜಾಲರಹಿತ ನಿ
ರಾಮಯ ಚಿತ್ಪದಮೆ ಯೋಗಿಜನಪದಮೆನಿಕುಂ ॥೨೭॥
ಅದನಾದಿ ವಿಮಳಮಚಳಂ
ವಿದಿತಮಖಂಡಾವಿಕಲ್ಪಮತುಲಾದ್ವೈತಂ
ಮದನಶರದೂರ ದುರ್ಗಂ
ಚಿದಮಳ ಪರಮಾಣು ಸಮಯಸಾರಮುದಾರಂ॥೨೮॥
ಭೇದಾದಿ ವಿಕಲ್ಪಕ್ಕೊಳ
ಗಾದೊಡಮೇಕತ್ವನಿಯತಮಣುವೆನಿಸುವವೊಲ್
ಚೋದಿಸಿ ಚಿತ್ಪರಮಾಣುವು
ಮಾದುದು ತತ್ಸದೃಶಮದಱಪೊರ್ದುಗೆಯಿಂದಂ॥೨೯॥
ಅಲ್ಲಿರ್ದವರೆ ಜಗತ್ತ್ರಯ
ವಲ್ಲಭರಿಂದ್ರಾದಿ ವಿಶ್ವವಂದ್ಯರನಿಂದ್ಯರ್
ಫುಲ್ಲಶರವಿಜಯಿಗಳ್ ಭವ
ವಲ್ಲೀ ವಿಚ್ಛೇದದಕ್ಷರಕ್ಷರನಿಳಯರ್॥೩೦॥
ಅವರೆಮಗೆ ಕುಡುಗೆ ದಯೆಯಿಂ
ಭವಜಲಧಿಯ ತಡಿಯನೆಯ್ದುವಲ್ಲಿಗುಪಾಯ
ಪ್ರವರಮೆನಿಸಿದ ನಿಜಾಂಘ್ರಿಯೊ
ಳವಿಕಳ ಸದ್ಭಕ್ತಿಯುಕ್ತಿಯಂ ಮುಕ್ತಿವರಂ॥೩೧॥
ಪಂಚಗುರುಚರಣಭಕ್ತಿ ಸ
ಮಂಚಿತ ಪಂಚಪ್ರಕಾರ ತತ್ಸಂಯಮಮಂ
ಪಂಚಮಗತಿಯೊಳ್ ರತಿಯಂ
ಸಂಚಿತಪುಣ್ಯಂಗೆ ನಿಕಟನಿರ್ವೃತಿಗಕ್ಕುಂ॥೩೨
ಜನನ ಜರಾಂತಕ ಮೃತ್ಯು
ಧ್ವನಿಯಂ ಕನಸಿನೊಳಮೊಲ್ಲೆನಾಲಿಸಲೆಂಬೀ
ಮನಮುಳ್ಳೊಡೆ ಗುರುಪದಮಂ
ವಿನಯದಿನಾರಾಧಿಸರ್ಧಿತಾರ್ಥಪ್ರದಮಂ ॥೩೩॥
ಪರಮಪದ ಪರಮಸುಖರಸ
ನಿರವಧಿ ನಿರ್ಗಾಧವಾರ್ಧಿಯೊಳ್ ಮುಳುಗಿ ನಿರಂ
ತರಮಿರ್ಪ ಬಯಕೆಯುಳ್ಳರ್
ಗುರುಪದಮಂ ನೆನೆವುದೞ್ತಿಯಿಂದನವರತಂ॥೩೪॥
ಪರಮಾನಂದಸುಧಾರ್ಣವ
ನಿರಂತರಾ ಮಗ್ನಪ್ರವೃತ್ತಿನಿರಾಕುಳರಂ
ಪರಿಪೂರ್ಣ ಬೋಧ್ಯ ಬೋಧ
ಸ್ವರೂಪರಂ ನೆನೆವೆನೊರ್ಮೆಯುಂ ನಿರ್ಮಳರಂ॥೩೫॥
ಅವಲೋಹದಿಂದೆ ಪಿಂಗಿದ
ಸುವರ್ಣದಂತಖಿಳ ಕರ್ಮನಿರ್ಮುಕ್ತಸಮು
ದ್ಭವ ಸಹಜಗುಣವಿಳಾಸ
ಪ್ರವರಂ ಶಿವನಜನನಂತನರ್ಹಂ ಸಿದ್ಧಂ॥೩೬॥
ಏಕಾಗ್ರಮನಂ ಧ್ಯಾನಿಸು
ಲೋಕಾಗ್ರನಿವಾಸಿ ಸಕಲಕರ್ಮಾರಿ ಜಯ
ಸ್ವೀಕೃತ ಶಾಶ್ವತಪದರನ
ನೇಕಾಂತಮತಪ್ರಸಿದ್ಧಸಿದ್ಧರನೊಲವಿಂ ॥೩೭॥
ಧ್ಯಾನೈಕದೃಷ್ಟಿವಿಷಯರ
ನೂನಗುಣಾಸ್ಪದರ ಶೇಷ ದೋಷವಿದೂರರ್
ಸ್ವಾನಂದವಾರ್ಧಿಗಳ್ ಜಗ
ತೀನುತ ಪದಕಮಲಯುಗಳರಗಣಿತಮಹಿಮರ್॥೩೮॥
ಜಾತಿ ಜರಾಮರಣಭಯಾ
ತೀತರ್ ಸಂಯೋಗ ವಿರಹಸಂಜ್ಞಾ ರೋಗೋ
ದ್ಭೂತ ಪರಿಕ್ಲೇಶಾನಭಿ
ಭೂತರ್ ಸಿದ್ಧರ್ ವಿಶುದ್ಧಬೋಧಸಮೃದ್ಧರ್॥೩೯॥
ಪರಮಸ್ವಾಸ್ಥ್ಯಪ್ರತ್ಯಯ
ಪರಿಸ್ಫುಟಾನುತಗುಣ ನಿಶಾಂತರನಂತರ್
ಸ್ವರಸಾಭಿವ್ಯಕ್ತ ಭುವನ
ಸ್ವರೂಪ ಸಂತೃಪ್ತಿಯುಕ್ತರಪ್ಪರ್ ಮುಕ್ತರ್॥೪೦॥
ಚರಮಾಂಗಪ್ರವಿಮಳ ಸ
ತ್ಪುರುಷಾಕಾರರ್ ವಿಶುದ್ಧಚೈತನ್ಯಗುಣ
ಸ್ಥಿರಕಾಯರನಾಮಯರು
ದ್ಧುರವಿಮಳಜ್ಞಾನನಿಷ್ಠರಖಿಳವರಿಷ್ಠರ್॥೪೧॥
ಗತಸಿಕ್ಥಲಸನ್ಮೂಷಾ
ಸ್ಥಿತ ಪುರುಷಾಕಾರಸನ್ನಿಭಾಕೃತಿಯುಕ್ತರ್
ಕೃತಕೃತ್ಯರತೀತಭವರ್
ವಿತತಾನಂತಾವಬೋಧರಪಗತರೋಧರ್ ॥೪೨॥
ಅವ್ಯಾಬಾಧರಮೂರ್ತರ್
ಪ್ರವ್ಯಕ್ತಶಾಸ್ತ್ರ ನಿರಸ್ತವಿಷಯಾಸಂಗರ್
ಭವ್ಯಜನ ಭಕ್ತಿಭಾವ್ಯರ್
ನವ್ಯ ಚಿದಾನಂದವಾರ್ಧಿಮಗ್ನರಭಗ್ನರ್॥೪೩॥
ಸಿದ್ಧರನಬದ್ಧರಂ ಸಂ
ಶುದ್ಧರನತ್ಯಂತಸೌಖ್ಯಸಂಪದ್ಯುತರಂ
ಬದ್ಧಾಗ್ರಹದಿಂ ಭಾವಿಸೆ
ಸಿದ್ಧ ಚಿದಾನಂದತತ್ಸ್ವರೂಪನೆ ಅಕ್ಕುಂ ॥೪೪॥
ಆಸನ್ನಭವ್ಯನಮೃತ ಸು
ಖಾಸಾರದೆ ಜನ್ಮದವಮನಾಱಿಸಲರ್ಹಂ
ಭಾಸುರ ಚಿದ್ಘನ ನಿತ್ಯ ನಿ
ಜಾಸೀನ ನಿರಂಜನಾತ್ಮರಂ ಧ್ಯಾನಿಸುಗುಂ॥೪೫॥
ಭಾವ್ಯಮೆನಲ್ ಸಿದ್ಧತ್ವಂ
ಭವ್ಯಂಗದೆ ಸಾಧ್ಯಸದೃಶಮಪ್ಪುದರಿಂದಂ
ಸೇವ್ಯಜನ ತತ್ವಮೀಪ್ಸಿತ
ನವ್ಯಪ್ರವ್ಯಕ್ತ ಮುಕ್ತಿಸೂಕ್ತಿ ನಿಮಿತ್ತಂ॥೪೬॥
ಬಿತ್ತಿಕ್ಕಿದ ಕುಡಿಯಂ ನಿಜ
ಚಿತ್ತಮನಿನ್ನಪ್ಪ ಪುಷ್ಪಕಣಿಶದೊಳಿರಿಪೆಂ
ಉತ್ತಮರೆನಿಪ್ಪ ಭವ್ಯಂ
ಚಿತ್ತಮನಿರಿಸುವುದು ಭಾವಿ ಸಿದ್ಧಾಕೃತಿಯೊಳ್ ॥೪೭॥
ಕೆಯ್ದೆಗೆಯದೊರ್ಮೆಯುಂ ತಾ
ನೆಯ್ದಲ್ವೇಡಿರ್ದಶುದ್ಧ ಸಿದ್ಧತ್ವಮನಾ
ರಯ್ದು ಸಮಚಿತ್ತದಿಂ ದೇ
ಗೆಯ್ದುಂ ಭಾವಿಪುದು ಭವ್ಯನವ್ಯಾಸಂಗಂ ॥೪೮॥
ಏಕಕ್ಷಣ ಸದೃಶಂ ಸಮ
ನಾಕೃತಿಯಂಬೞ್ದತೀತಕಾಲಂ ಭವ್ಯಂ
ಗೇಕಸ್ವರೂಪ ವಿಮಳನಿ
ಜಾಕೃತಿಯಿಂದಿರ್ಪ ಕಾಲದೊಡನೊರ್ಕುಳಿಯಂ॥೪೯॥
ಒಂದೆರಡು ಜನ್ಮಮಿನ್ನುಂ
ಸಂಧಿಸುವೊಡಮವಱ ಕಣ್ಣಿಯಂ ಗಣಿಯಿಸದಿ
ರ್ಪಂದ ಮನದಿಂದೆ ನೋೞ್ಪುದು
ಮುಂದಣ ಸಿದ್ಧತ್ವಮಿಂದೆ ಬಂದವೊಲನಿಶಂ॥೫೦॥
ಜ್ಞಾನವನವಾರ್ಧಿ ದೃಷ್ಟಿ ವಿ
ಧಾನಂ ಸಮ್ಯಕ್ತ್ವಸದನಮಗರು ಲಘುತ್ವಾ
ಧಾನಮಬಾಧಾತ್ಮ ಗುಣಂ
ತಾನಾದುದುಸೂಕ್ಷ್ಮತಾಸ್ಪದಂ ಸಿದ್ಧತ್ವಂ ॥೫೧॥
ಅಮರತ್ವಮನಜರತ್ವಮ
ನಮೃತಾಶಿತ್ವಮುಮನೆಯ್ದುವುಜ್ಜಗಮುಳ್ಳಂ
ಗಮೃತಪದವೊಂದೆ ಸಾಧ್ಯಂ
ಸಮನಿಸುಗುಮವೆಲ್ಲಮದಱೊಳನ್ವರ್ಥಂಗಳ್ ॥೫೨॥
ಲೋಕಾಲೋಕಮನೆಲ್ಲಮ
ನೇಕಕ್ಷಣದೊಳೆ ಸಮಂತು ಬೆಳಗುವ ಬೋಧಾ
ವ್ಯಾಕುಳತೆ ಸೌಖ್ಯಸುಧೆಯಿಂ
ದೋಕುಳಿಯಾಡಿಸದೆ ಸಿದ್ಧಪರಮೇಷ್ಠಿಗಳಂ ॥೫೩॥
ಪರಮಾನಂದಮಪೂರ್ವಂ
ದೊರಕೊಳ್ಳದೊಡಮೃತಪದದೊಳಿಂದ್ರಿಯ ಸುಖಮಂ
ಪರಿಹರಿಸಿ ತಪದೊಳೆಸಗಿದ
ಪುರುಮುಖ್ಯರ್ ಮೂರ್ಖರೆನಿಸಿಕೊಳರೆ ಬುಧರಿಂ ॥೫೪॥
ಅಸುಖ ಪ್ರತಿಪಕ್ಷಂ ಸುಖ
ಮಸದೃಶಮಿಲ್ಲದೊಡೆ ಮುಕ್ತಿಯೊಳ್ ತತ್ಪದಮಂ
ಬಿಸುಡದೆ ಸಾಧಿಪನಾವಂ
ರಸೆಯಂ ನೀರಸೆಯನುಗುೞ್ವನೇ ತೃಷ್ಣಾರ್ತಂ॥೫೫॥
ಇಲ್ಲದೊಡಾನಂದದೊಳಳ
ವಿಲ್ಲದ ಪರಮಾರ್ಥಸೌಖ್ಯವೈಹಿಕಸುಖಮಂ
ವೊಲ್ಲೆನ್ನದೆ ಸಾಧಿಪೊಡೇ
ನಿಲ್ಲಾ ಸತ್ಪುಣ್ಯಮಾರ್ಗಮಾರ್ಗಂ ಸುಲಭಂ ॥೫೬॥
ಅದುಕಾರಣದಿಂ ಸುಖಮೆಂ
ಬುದು ನಿಯತಂ ಪರಮಪದದೊಳೊಂದಱೊಳೆ ಭವಾ
ಸ್ಪದದೊಳಸುಬಂದಲೆತ್ತಂ
ವಿದಿತಂ ಪ್ರತ್ಯಕ್ಷಸದನುಮಾನಾದಿಗಳಿಂ॥೫೭॥
ದುರಿತವಶನಿಂತು ಜೀವಂ
ದುರಿತಹರಂ ಶೂನ್ಯನೆಂಬನುಡಿಯಪಮಾನಂ
ಪರಿವೃತಘನಪಟಲಂ ಭಾ
ಸ್ಕರನುದಯಪ್ರಾಪ್ತನಾರ್ಗೆ ಸಂದೇಹಕರಂ ॥೫೮॥
ಭಾವಿಪೊಡನಾದಿನಿಧನಂ
ಜೀವಂ ಪರಿಣಾಮಿ ನಿತ್ಯನುತ್ಪಾದಾದಿ
ತ್ರೈವಿಧ್ಯಲಕ್ಷಣಂ ಚಿ
ದ್ಭಾವಂ ಪರಭಾವದೂರನುರುಸುಖಸಾರಂ ॥೫೯॥
ಸಕಲೋಪಾಧಿವಿವರ್ಜಿತ
ನಕಲಂಕನಮೂರ್ತನಕ್ಷಯಂ ಸುವಿಶುದ್ಧಂ
ಪ್ರಕಟ ಸಹಭಾವ ಬೋಧಾಂ
ಬಕನಾನಂದಾಬ್ಧಿಭುವನ ಚೂಡಾರತ್ನಂ ॥೬೦॥
ಪರಮಂ ಪರಮಾತ್ಮಂ ತ
ತ್ಪುರುಷಾಸ್ಪದದದುವೆ ಪರಮಪದಂ ಬಿ
ತ್ತರಿಸುವೆನಾನದನೊಲವಿಂ
ನಿರವಧಿಸುಖಬೋಧಸಿಂಧುವಂ ಬಂಧುರಮಂ ॥೬೧॥
ದುರಿತರಿಪುದೂರ ದುರ್ಗಂ
ಪರಮಾತ್ಮಾಚಿಂತ್ಯಶಕ್ತಿ ಸಾರಾಗಾರಂ
ನಿರವದ್ಯಬೋಧಲಕ್ಷ್ಮೀ
ಸ್ಥಿರಕೇಳೀನಿಲಯಮೆನಿಸದೇ ಪರಮಪದಂ ॥೬೨॥
ಅದು ಸುಖದಸವಿಯಕರಡಿಗೆ
ಚದುರತವರ್ಮನೆ ನಿರ್ಕುಳತತ್ವದ ನಿಳಯಂ
ಮದಮನೊದವೆಸದ ಸಿರಿಗೆಡೆ
ಪುದುವಿಲ್ಲದ ರಾಜಲೀಲೆಗಾಲಯಮಲ್ತೇ॥೬೩
ಸುಖದಕಣಿ ಸುಖದತಿಂತಿಣಿ
ಸುಖದಬನಂ ಸುಖದಸುಗ್ಗಿ ಸುಖದಬಸಂತಂ
ಸುಖದತಿಳಿ ಸುಖದಪೊಂಪುಳಿ
ಸುಖದೊರ್ಬುಳಿ ಸುಖದಸೋನೆಯೆನಿಸದೆ ನಿಸದಂ॥೬೪॥
ಸುಖದ ತನಿರಸದ ಪೆರ್ಮಡು
ಸುಖದೊತ್ತಿನಸುತ್ತು ಸುಖದ ತಣ್ಬುೞಿಲೆನಿಕುಂ
ಸುಖದಡೊಣೆ ಸುಖದ ದೀರ್ಘಿಕೆ
ಸುಖದಕೊಳಂ ಸುಖದಯಂತ್ರಧಾರಾಗಾರಂ॥೬೫॥
ಅದೆ ಹರ್ಷದ ಪರುಸದಕಣಿ
ಯದೆ ಚಿಂತೆಯನಂತರಿಪ್ಪಚಿಂತಾಮಣೆ ಮ
ತ್ತದೆ ಬೇಡಿತೀವ ಸುರತರು
ವದೆ ಕಾಮಿಸಿದೀವ ಕಾಮಧೇನುವೆನಿಕ್ಕುಂ ॥೬೬॥
ಅಱಿವಂಗಮಱಿಯದಂಗಂ
ಕಿಱಿಕಿಱಿಯದಱಿವಂಗಮಱಿದು ನೆಱೆಮಱೆವಂಗಂ
ಪೊಱಪೊಣ್ಮಿದ ಸುಖರಸಮಂ
ಕಱೆವ ಶಿವಾಸ್ಪದಮನಱಿವುದಱಿಪುವುದಱಿವಂ॥೬೭॥
ಅಸಮಾನಹರ್ಷರಸಮಂ
ಪಸರಿಪ ತತ್ಪುರದೊಳಿರ್ದುಬಂದಂತೆ ಬುಧಂ
ಬೆಸಗೊಂಡವರ್ಗದಱೆಸಕಮ
ನುಸಿರ್ವುದು ತತ್ಪದಮನದ ಸುಗಮತ್ತ್ಮಮುಮಂ॥೬೮॥
ಬೆಸಗೊೞ್ವುದು ಪೇೞ್ವುದು ಭಾ
ವಿಸುವುದು ಶಿವತಾತಿಸಿದ್ಧಗತಿಯೊಳೆ ರತಿಯಂ
ಬೆಸಗೊಳ್ಳದಿರಸುಗತಿಯಂ
ಬೆಸಗೊಳ್ವುದೆ ಪೋಗದೂರದಾರಿಯ ದೆಸೆಯಂ ॥೬೯॥
ಗ್ರಾಮಾದಿ ಗಮ್ಯವಸ್ತುವ
ನಾಮಾದ್ಯವಗಮನರುಚಿಯುತಂ ತದಭಿಮುಖಂ
ಪ್ರೇಮದೆ ನಡೆದದನೆಯ್ದುವ
ನಾ ಮಾಳ್ಕೆಯನಾಮುಮೆಯ್ದುವಂ ತತ್ಪದಮಂ ॥೭೦॥
ಇರುಳುಂ ಪಗಲುಂ ನಿಮ್ಮಯ
ಪರಿಚಿಂತಾಕುಳಿತಚಿತ್ತನಾಗಿರ್ದದೆನ್ನಂ
ಮರುಳೆಂದು ಮರುಳುಮಾಡದೆ
ಕರುಣದಿನೀಕ್ಷಿಪುದು ವಿಶ್ವರಕ್ಷಾದಕ್ಷರ್॥೭೧ ॥
ಮರುಳಕ್ಕೆಮ ಪುರುಳಕ್ಕೆಮ
ದುರಿತಾಹಿತಭೀತಿಯಿಂ ಭವತ್ಪದಪದ್ಮಂ
ಶರಣೆಂದು ಪೊರ್ದಿದೆನ್ನಂ
ಪರಿಪಾಲಿಸದಿರ್ದೊಡೆತ್ತ ನಿಮಗೆ ಗುರುತ್ವಂ॥೭೨ ॥
ಅದರಿಂದಮೃತ ದಯಾಮೃತ
ವಿದಳನ್ನಯನೋತ್ಪಳಾಗ್ರದಿಂದೆನ್ನಂ ನೋ
ೞ್ಪದೆ ನಿಮಗೆ ಕಜ್ಜಮೆನಗಂ
ಮದಿತಭವದ್ವದನವನಜ ಸೇವಾಲೋಕಂ ॥೭೩॥
ಪಿರಿಯರ್ ಗುರುಗಳ್ ದೇವರ್
ಪರಮಾತ್ಮರಚಿಂತ್ಯಶಕ್ತಿಯುಕ್ತರ್ ಮುಕ್ತರ್
ನಿರತಿಶಯ ಸುಖಸಮೃದ್ಧರ್
ನಿರವಧಿಬೋಧೈಕಮೂರ್ತಿಗಳ್ ನೀಮೆ ವಲಂ॥೭೪॥
ಏಕಾಕಾರದನೇಕರ್
ಲೋಕಾಲೋಕಾವಲೋಕದಕ್ಷರನಕ್ಷರ್
ಲೋಕೈಕಹಿತಪದಾರ್ಥರ
ನಾಕುಳರಾಕಾರದೂರರಸಮಾಕಾರರ್॥೭೫॥
ಅತನು ಸುಖವ್ರತ ಖೞ್ಗದಿ
ನತನುವನುರದಿಕ್ಕಿಯೃತನತನೈತೆಯಂ ಕೊಂ
ಡತನುಸುಖಲೋಲರಾದರ್
ವ್ರತರಹಿತರ್ ಸಿದ್ಧರೆಂಬ ಜಸಮೆಸೆವಿನೆಗಂ॥೭೬॥
ನಿಮಗಂ ಭಾವಭವಂಗಂ
ಸಮಾನಮತನುತ್ವಮಾದೊಡಂ ತಚ್ಚರಿತಂ
ಸುಮನರ್ಗಮಾದೊಡೆರ್ದೆಗಿ
ಚ್ಚಮರ್ದುಮನೇೞಿಸುವುದಮಮ ನಿಮ್ಮುಪಶಮನಂ॥೭೭॥
ಆರುಂ ಕಾಣದ ಕೇಳದ
ದೂರದೊಳಷ್ಟಮ ವೆಶೆಷ್ಟಭೂಮಿಯ ಶಿಲೆಯೊಳ್
ನೀರೂಪತೆಯಿಂದಿರ್ದೊಡ
ಮಾರೂಪಿಂ ನಿಮ್ಮ ಬೆನ್ನನಾಂ ಬಿಟ್ಟಪನೇ॥೭೮॥
ಆರಱಿವರೆಮ್ಮ ತಾಣವ
ನಾರೆಮ್ಮಿರ್ದೆಡೆಗೆ ಬರ್ಪರೆಮ್ಮಂ ಕಾಣ್ಬರ್
ಧೀರರೆನವೇಡ ನಿಮ್ಮ ಪ
ದಾರಾಧನೆ ಮತ್ಸಹಾಯದೇವತೆಯಲ್ತೇ ॥೭೯॥
ಕರೆದು ಕರಗ್ರಹದಿಂದಾ
ದರದಿಂದಾ ರಾಜದರ್ಶನಂಗೆಯಿಸುವನಂ
ತೆರಡೆನಿಸದ ನಿಜಚರಣ
ಸ್ಮರಣಮೆ ಕಾಣಿಸದೆ ನಿಮ್ಮನೆನ್ನನಮೋಘಂ॥೮೦॥
ಒರ್ವೊರ್ವರೆ ಸಾಲ್ವಿರಿ ಸಕ
ಳೋರ್ವಿಯನವಲೋಕಮಾತ್ರದಿಂ ತಣಿಪಲ್ಕೆ
ನ್ನೊರ್ವನನನಾಥನಂ ಗತ
ಗರ್ವನನಾನಂದರಸದೊಳೋಲಾಡಿಸಿರೇ॥೮೧॥
ನರಲೋಕಮನಿೞಿಕೆಯ್ದಾ
ಸುರಲೋಕಮನಿಕ್ಕಿ ಮೆಟ್ಟಿ ನಿಮ್ಮುನ್ನತಿಯಂ
ಧರೆಗಱಿಪುವಂತೆ ಲೋಕದ
ಶಿರಮಾದುದು ರಜ್ಜುಮಾತ್ರಮೆಂಟನೆಯ ನೆಲಂ॥೮೨॥
ವಿಮಳೇಷತ್ಪ್ರಾಗ್ಭಾರಾ
ಷ್ಟಮಭೂಮೀಮಧ್ಯದಲ್ಲಿ ಸೀತಾಭಿಖ್ಯಂ
ಹಿಮಕರಬಿಂಬಾಕಾರಂ
ರಮಣೀಯಂ ಸ್ಫಾಟಿಕಂ ಶಿಳಾತಳಮೆಸೆಗುಂ ॥೮೩॥
ಸುರಲೋಕದ ಸೌಂದರ್ಯಮ
ನಿರಿಸತ್ತಲೆನಿಪ್ಪ ವರ್ಣಗಂಧಾದಿ ಮನೋ
ಹರತೆ ನಿರಂತರಮದಱೊಳ್
ಪರಮಾತ್ಮರ್ ನೆಲೆಸಿದೆಡೆಗೆ ಪಡಿ ಮತ್ತುಂಟೇ ॥೮೪॥
ನರಲೋಕಮಾನಸೀಮೋ
ಪರಿಗತತನುವಾತ ಚರಮಖಂಡದೊಳನಿಶಂ
ಬೆರಸಿರ್ಪರನಂತಮಿತರ್
ಶಿರಸ್ಸಮಾನರ್ ವಿಚಿತ್ರದೇಹೋತ್ಸೇಧರ್ ॥೮೫॥
ಸಿದ್ಧಾರ್ಥಮೆಂಬ ಪೆಸರಿಂ
ದುದ್ಧರಮಂಗಳಮದಾಯ್ತು ಸರ್ಷಪಮೆಂದಂ
ದಿದ್ಧವಿಶುದ್ಧಗುಣಾಢ್ಯರ್
ಸಿದ್ಧರೆ ಪರಮಾರ್ಥ ಮಂಗಳಾತ್ಮಕರಲ್ತೇ ॥೮೬॥
ಸಿದ್ಧಿ ನಿಮಗೆತ್ತಲೆಂಬೀ
ಶುದ್ಧವಚೋಮಂಗಳಾಪಸಾರಿತ ವಿಘ್ನಂ
ಸಿದ್ಧಿಸುಗುಮಿಷ್ಟಮೆಂದೊಡೆ
ಸಿದ್ಧಗುಣಸ್ತುತಿಯನಂತಸುಖಮಂ ಕುಡದೇ॥೮೭॥
ಕೃತಕೃತ್ಯಂ ಧನ್ಯಂ ಸಂ
ಸ್ತುತಫಲವಜ್ಜನ್ಮನುಂ ಕೃತಾರ್ಥನುಮಾದೆಂ
ವಿತತಗುಣ ಸಿದ್ಧಚರಣೋ
ನ್ನತಿಯಂ ಸತ್ಸೇವೆಮಾಳ್ಪದಾವಾವೊಳ್ಪಂ॥೮೮॥
ಭೂತಳದೊಳೀ ಸಿರಿಪದಾ
ಶೀತಿ ಸುಧಾವೃಷ್ಟಿ ಸಕಳಜನತಾಸಸ್ಯ
ವ್ರಾತಕ್ಕೆ ತಣಿಯೆ ಕಱೆದು ನಿ
ಜಾತಕದಿಂಫಲಸಮೃದ್ಧಿಯಂ ಮಾೞ್ಕನಿಶಂ ॥೮೯॥
ಸ್ತುತಿಯಿಸುವನೆನೆವ ಭಾವಿಪ
ಸತತಂ ಧ್ಯಾನಿಸುವ ವಿಬುಧಸಂತತಿಗೊಲವಿಂ
ಪ್ರತಿಪಕ್ಷರಹಿತ ಸುಖಸಂ
ತತಿಯಂ ದಯೆಗೆಯ್ಗೆ ಸಿದ್ಧ,ಸಂತತಿಯನಿಶಂ ॥೯೦॥
ಜಿನಸಮಯಸಮುದ್ಧರಣಂ
ಜಿನಮತಸಿದ್ಧಾಂತವಾರ್ಧಿವರ್ಧನ ಚಂದ್ರಂ
ಜಿನರಂತೆ ಭವ್ಯಸೇವ್ಯಂ
ಜಿನಮುನಿಯಾಚಣ್ಣನಮಳಗುಣಗಣನಿಳಯಂ ॥೯೨॥
॥ಶ್ರೀಪದಾಶೀತಿ ಸಮಾಪ್ತಂ॥
ನೆನಕೆಗಳೊಡನೆ,
ಸಂಪಾದಕರು: ಜಿ. ಜಿ. ಮಂಜುನಾಥನ್
ಪ್ರಕಾಶಕರು: ಪ್ರಸಾರಾಂಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಚಂದ್ರಪ್ರಭ ಪುರಾಣಂ
ಅಗ್ಗಳ ಕವಿ ಕೃತ,
ಇದರ ಕರ್ತೃ ಅಗ್ಗಳ. ಇವನ ತಂದೆ ಶಾಂತೀಶ. ತಾಯಿ ವಾಚಾಂಬಿಕೆ. ಗುರು ಶೃತಕೀರ್ತಿ. ಅಗ್ಗಳನು ತನ್ನನ್ನು " "ಜಿನಮತಶ್ರೀಕೋಶ ವೇಶ್ಮಾರ್ಗಳಂ" ಎಂದು ಹೇಳಿಕೊಂಡಿದ್ದಾನೆ. ಮೂಲಸಂಘ ದೇಶೀಗಣ ಪುಸ್ತಕಗಚ್ಛ ಕೊಂಡಕುಂದಾನ್ವಯಕ್ಕೆ ಸೇರಿದವನಾಗಿದ್ದನೆ. ಈ ಕೃತಿಯನ್ನು ಕ್ರಿ. ಶ. ೧೧೮೯ರಲ್ಲಿ ರಚಿಸಿದ್ದಾನೆ. ಈತನ ಸ್ಥಳ ಬಿಜಾಪುರ ಜಿಲ್ಲೆಯ ಇಂಗಳೇಶ್ವರ.
ಪೂರ್ವಕವಿ ಸ್ತವಾವಸರದಲ್ಲಿ ಅಗ್ಗಳನು ಪಂಪ, ಪೊನ್ನ, ರನ್ನರು ರಚಿಸಿದ ಕಾವ್ಯತ್ರಯಕ್ಕೆ ಜಗತ್ತ್ರಯ ಬೆಲೆಯಾಗಿ ಹೋಯಿತು ಎನ್ನುವಲ್ಲಿ ವಿನಯವನ್ನೂ, ನಾನು ಹೇಳಿದ ಚಂದ್ರಪ್ರಭೋದಯ ವಿಸ್ತಾರಿಯೆನಿಪ್ಪ ಕಾವ್ಯಮಿದಮೂಲ್ಯತ್ವಕ್ಕೆ
ಪಕ್ಕಾಗದೇ ಎನ್ನುವಲ್ಲಿ ಸ್ವಾಭಿಮಾನವನ್ನೂ ಮೆರೆದಿದ್ದಾನೆ.
ಪ್ರಥಮಾಶ್ವಾಸಂ
ಶಾ॥ ಶ್ರೀಪಾದದ್ವಿತಯಪ್ರದಕ್ಷಿಣಕೃತಿವ್ಯಾಸಕ್ತಗೀರ್ವಾಣಕಾಂ
ತಾಪಾಂಗಪ್ರತಿಬಿಂಬಕೋಟಿಘಟಿತಸ್ಮೇರಸ್ಥಳೇಂದೀವರ
ಶ್ರೀಪೂರ್ಣಂ ಹಿಮವನ್ನಗೇಂದ್ರಮೆನೆಕಣ್ಗಿಂಬಾದಚಾಂದ್ರಪ್ರಭಂ
ರೂಪಂ ದಿವ್ಯವಚೋಮರುನ್ನದಿಯಿನೆಮ್ಮೊಳ್ ಮಾೞ್ಕೆ ನೈರ್ಮಲ್ಯಮಂ॥೧॥
ಶಾ॥ ಧೈರ್ಯಂ ಘೋರತಪಃಪರೀಷಹಸಮೂಹಪ್ರಾಪ್ತಿಯೊಳ್ ಸಂದ ತಾ
ತ್ಪರ್ಯಂ ಪಂಚವಿಧಾಮಳಾಚರಣಷಟ್ತ್ರಿಂಶದ್ಗುಣಶ್ರೇಣಿಯೊಳ್
ಕಾರ್ಯಂ ಶಿಷ್ಯವಿನೇಯಶಿಕ್ಷೆಯೊಳೊಡಂಬಟ್ಟೊಪ್ಪೆ ಸಂಶೋಭಿಪಾ
ಚಾರ್ಯರ್ ತಾಮೆಮಗೀಗೆ ಸಪ್ತಪರಮಸ್ಥಾನೋದಯೋಪಾಯಮಂ ॥೩॥
ಮ॥ಹಾ॥ ನಯನಿಕ್ಷೇಪಪ್ರಮಾಣಂಗಳೊಳೆ ಪಡೆದನೈಕಾಂತಸಿದ್ಧಿಪ್ರತಿಜ್ಞಾ
ಜಯಮಂ ತದ್ವಿಜ್ಞರೊಳ್ ಮುಂ ಬೞಿಕೆ ತಿಳಿಪಿ ಭವ್ಯರ್ಗೆ ಸದ್ಧರ್ಮಕರ್ಮಾ
ಶ್ರಯತತ್ತ್ವಾತತ್ತ್ವಭೇದಂಗಳನೊಡರಿಸಿ ವಾಕ್ಶ್ರೀಯಶಶ್ಶ್ರೀಸಮಾಕೃ
ಷ್ಟಿಯನಾದಂ ಸಂದರಂತರ್ಮುಖತೆಗಭಿಮುಖಂ ಮಾೞ್ಕುಮುಪಾಧ್ಯಾಯರೆಮ್ಮಂ ॥೪॥
ಶಾ॥ ಪ್ರಾಳೇಯಾಮಳಿನಾಂಗಿ ತುಂಗಮಹಿಷೇಂದ್ರಾರೂಢೆಯಾತ್ಮಾಷ್ಟದೋ
ರ್ಮಾಳಾಳಂಕೃತೆ ಚಕ್ರಶೂಲಶರಚಾಪೋತ್ಕೇತುಚಂಚತ್ಕಶಾ
ಭೀಳಾಸಿಸ್ಫುಟಖೇಟಕಾನ್ವಿತೆ ಚಳದ್ಭಾಳಾಕ್ಷಿ ಸಂಪ್ರೀತಿಯಿಂ
ಜ್ವಾಳಾಮಾಳಿನಿ ಮಾೞ್ಕೆ ಮತ್ಕೃತಿಗೆ ನಿರ್ವಿಘ್ನೋಕ್ತಿನಿರ್ವಾಹಮಂ॥೯॥
ಚಂ॥ ಮರಕತಕಾಂತಿಯಂ ತಳೆದ ಮೆಯ್ವೆಳಗಿನ ನೊಸಲೊಳ್ ಪೊದೞ್ದು ತಾ
ವರೆಯೆಸಳ್ಬೊಟ್ಟಿನಂತೆಸೆವ ಕಣ್ಮಲರಿಂ ವರದಪ್ರಫುಲ್ಲಪಂ
ಕರುಹಕಶಾಂಕುಶಾಂಕಿತಚತುರ್ಭುಜದಿಂದೆಸೆವಂ ಕಪೋತವಿ
ಷ್ಕಿರರಥನೞ್ಕಱಿಂ ವಿಜಯಯಕ್ಷನೊಡರ್ಚುಗಮೋಘರಕ್ಷೆಯಂ॥೧೦॥
ಮ॥ವಿ॥ ದುರಿತವ್ರಾತಲತಾಕೃಪಾಣಿ ವಿಸರುದ್ದುರ್ಬೋಧರೋದಸ್ವಿನೀ
ತರಣದ್ರೋಣಿ ಸಮುನ್ನತಾಕ್ಷಯಪದಪ್ರಾಸಾದನಿಶ್ರೇಣಿ ಬಂ
ಧುರಸಾಹಿತ್ಯಸುರತ್ನರೋಹಣಮಹೇಂದ್ರಕ್ಷೋಣಿ ತಾಳ್ದಿರ್ಕೆ ವಿ
ಸ್ತರದಿಂ ವಾಣಿ ಮದೀಯಮಾನಿತಮುಖಶ್ರೀಯೊಳ್ ಸಖೀಲೀಲೆಯಂ॥೧೨॥
ಮ॥ ವಿ॥ ಷಡಭಿಜ್ಞಂ ಕ್ಷಣಿಕಂ ಜಡಾತ್ಮನೆನಿಪಂ ನೈಯಾಯಿಕಂ ವೃತ್ರವಿ
ದ್ವಿಡಮಾತ್ಯಂ ಸಲೆ ಶೂನ್ಯವಾದಿ ಶಬರೋಕ್ತ್ಯಾಸಕ್ತಮೀಮಾಂಸಕಂ
ನಡೆವಂ ಕಾಪಿಳವೃತ್ತಿಯಂ ಬಿಡದೆ ಸಾಂಖ್ಯಂ ನೋೞ್ಪೊಡೆಂದೆಲ್ಲದೊ
ಳ್ಪಡರ್ವನ್ನಂ ಶ್ರುತಕೀರ್ತಿದೇವನೊಳೆ ನಿಂದಳ್ ವಾಣಿಯೇಂ ಜಾಣೆಯೋ ॥೨೫॥
ಸುಳಲಿತಕವಿಕೃತಿಗಮಳಿನ
ನೆಳಸುವವೋಲ್ ಮಲಿನನೆಳಸನತಿವಿಶದಹಿಮೋ
ಪಳಮೊಸರ್ವವೊಲಿಂದುಕರಾ
ವಳಿಗೆತೃಣಗ್ರಾಹಿನೀಳಮಣಿಯೊಸರ್ದಪುದೇ॥೩೯॥
ಪೊಗೞ್ವ ಬಗೆಯುಳ್ಳೊಡಂ ನಾ
ಲಗೆ ಪೊಡರದು ಖಳರ್ಗೆ ಮದವಿಶೇಷದಿನುಸಿರಲ್
ಬಗೆವೊಡಮಕಾಲದೆಸಕದಿ
ನಗಲದವೊಲ್ ಪರಭೃತಕ್ಕೆ ಮೂಕೀಭಾವಂ॥೪೧॥
ಪರಿಕಿಪೊಡವಿಚಾರಿ ಸಿತೇ
ತರಗತಿಯಾದಂ ಪ್ರಭಂಜನಪ್ರಿಯನತಿನಿ
ಷ್ಠುರಜಿಹ್ವನುಷರ್ಬುಧನಂ
ತಿರೆ ದುರ್ಬುಧನಾರೊಳೊಂದಿ ಪಡೆಯಂ ನೋವಂ ॥೪೨
ಕುಕವಿಯನಲೆದಂಜಿಪ ಜಾಣ್
ಸುಕವಿಯೊಳೇನುಂಟೆ ದುರ್ಜನಾಳಿಗೆ ಶಕುಳ
ಪ್ರಕರಮನೆರ್ದೆಗಿಡಿಪುಗ್ರತೆ
ಬಕನಿಕರಕ್ಕುಂಟೆ ತಿಮಿತಿಮಿಂಗಿಲಗಿಲದೊಳ್ ॥೪೩॥
ಚಂ॥ಕವಿಕುಳಸೇವ್ಯಮಾನಕಕವಿತಾಕಳಹಂಸೆಗೆ ಕೇಳಿಲೀಲೆ ಸಂ
ಭವಿಪೊಡನಾಮಲಂ ಜಿನಕಥಾರಸವಶಾನಸದಲ್ಲಿ ಕೂಡೆ ಸಂ
ಭವಿಕುಮದಲ್ಲದಂತೆ ದೊರೆಕೊಳ್ಗುಮೆ ದುಷ್ಕೃತಸೈರಿಭಪ್ರಜಾ
ವಿವರಮೆನಿಪ್ಪ ರೃಜವಿಟಚೋರಕಥೋಲ್ಬಣಪಲ್ವಲಂಗಳೊಳ್ ॥೫೦॥
ಮ॥ ವಿ॥ ಕಿವಿಯಂ ಜಕ್ಕುಲೀಪಂತೆ ನುಣ್ಪಡರ್ದ ಶಬ್ದಂ ಶಬ್ದಸಂದರ್ಭದೊಳ್
ಸವಿಯಂ ಮುಂದಿಡುವರ್ಥಮರ್ಥದೊಳೊಡಂಬಟ್ಟೊಳ್ಪನೋರಂತೆ ಬೀ
ಱುವ ಭಾವಂ ಭಾವದಿಂದೊದವಿ ಚಿತ್ತಂ ಕೂಡೆ ತೇಂಕಾಡೆ ಪೊ
ಣ್ಮುವ ನಾನಾರಸಮಿರ್ಪ ವಸ್ತುಕೃತಿಯಂ ಪೇೞ್ದಗ್ಗಳಂ ಮೆಚ್ಚಿಪಂ॥೫೧॥
ಮ॥ ವಿ॥ ಸುರರಾಜಾರ್ಚಿತನಿಂಗಳೇಶ್ವರಪುರಶ್ರೀತೀರ್ಥಚಂದ್ರಪ್ರಭಂ
ಪರಮೇಶಂ ಶ್ರುತಕೀರ್ತಿದೇವಮುನಿಪಂ ತ್ರೈವಿದ್ಯಚಕ್ರಾಧಿಪಂ
ಗುರು ಭವ್ಯರ್ ಪ್ರಿಯಬಾಂಧವರ್ ತನಗೆನಿಪ್ಪನ್ಯೂನಮಂ ಪುಣ್ಯದೇ
ೞ್ತರಮಂ ತಾಳ್ದಿದನಗ್ಗಳಂ ಜಿನಮತಶ್ರೀಕೋಶವೇಶ್ಮಾರ್ಗಳಂ॥೫೨॥
ಉ॥ ತಿಂಗಳ ತಣ್ಣನಪ್ಪ ಕದಿರ್ದೊಂಗಲೊಳಭ್ಯಸಿಸಿತ್ತೊ ಕಾಮಬಾ
ಣಂಗಳೊಳಾದಮೋದಿದುದೊ ಬಂದ ಬಸಂತದ ಕಮ್ಮನಪ್ಪೆಲರ್
ತಾಂ ಗುರುವಾಗೆ ಕಲ್ತುದೊ ವಿಳಾಸವತೀನಯನತ್ರಿಭಾಗದೊಳ್
ಸಂಗಳಿಸಿತ್ತೊ ಮೋಹನಮನಗ್ಗಳ ನಿನ್ನಯ ವಾಕ್ಪ್ರಗುಂಭನಂ ॥೫೯॥
ಮ॥ ವಿ॥ ನಯದಿಂ ಪಂಪನೊಱಲ್ದು ನಿರ್ಮಿಸಿದ ಪೊನ್ನಂ ಪ್ರೀತಿಯಿಂ ಪೇೞ್ದ ಭ
ಕ್ತಿಯಿನ್ ರತ್ನಕವೀಶ್ವರಂ ಸಮೆದ ತತ್ಕಾವ್ಯತ್ರಯಕ್ಕಂ ಜಗ
ತ್ತ್ರಯಮುಂ ಬೆಲೆಯಾಗಿ ಪೋಯ್ತೆನೆ ಬೞಿಕ್ಕಾಂ ಪೇೞ್ದ ಚಂದ್ರಪ್ರ
ಭೋದಯವೆಸ್ತಾರಿಯೆನಿಪ್ಪ ಕಾವ್ಯಮಿದಮೂಲ್ಯತ್ವಕ್ಕೆ ಪಕ್ಕಾಗದೇ॥೬೬॥
ಷಷ್ಠಾಶ್ವಾಸಂ
ಚಕ್ರೋತ್ಪತ್ತಿವರ್ಣನಂ
ಶ್ರೀಗೆ ಜಯಶ್ರೀಗೆ ಯಶ
ಶ್ಶ್ರೀಗೆ ಶಶಿಪ್ರಭೆಯೆ ಸವತಿಯಾದಪಳೆಂಬು
ದ್ಯೋಗಲೊಳಿರ್ದಂ ಸಕಲನೃ
ಪಾಗಮಗುರು ಜೈನಜನಮನೋಹರಚರಿತಂ ॥೧॥
ಚಂ॥ ಎರಡನೆಯಬ್ಧಿಯುಂ ಮೊದಲ ವಾರಿಧಿಯುಂ ಗಡಿಯಾಗೆ ನೀಳ್ದು ಬಂ
ಧುರಭರತತ್ರಿಖಂಡಧರೆಗಿಕ್ಕಿದ ಸೀಮೆಯ ಕೋಂಟೆಯೆಂಬಿನಂ
ಕರಮೆಸೆದಿರ್ಪುದಾತತಗುಹಾದ್ವಯ ವಜ್ರಮಯೀದರೀ ಪ್ರಭಾ
ಪರಿಚಿತ ಪಾರ್ಶ್ವಮಗ್ರನಿಭೃತಾಂಬುಧರಂ ವಿಜಯಾರ್ಧಭೂಧರಂ॥೨॥
ಆ ಕುತ್ಕೀಲಂ ಸೊಗಯಿಪು
ದಾಕಾಶೋರಗವಿಮುಕ್ತನಿರ್ಮಳತರನಿ
ರ್ಮೋಕಂ ತಾನೆನೆ ರಜತಾ
ಳೋಕಸಹಸ್ರಾಂಶುಧವಳಿತಾಶಾವಳಯಂ ॥೩॥
ಪ್ರತಿಬಿಂಬಿಸಿದುದು ರಜತಾ
ಚ್ಛತೆಯಿಂ ಸುರಲೋಕಮೆಂಬಗುರ್ವಿಂದಾಪ
ರ್ವತದುತ್ತರದಕ್ಷಿಣದಿ
ಕ್ಪ್ರತಿ ಬದ್ಧಶ್ರೇಣಿಯೊಳ್ ಪುರೋತ್ಕರಮೆಸೆಗುಂ॥೪॥
ವ॥ ಅಲ್ಲಿ ದಕ್ಷಿಣಶ್ರೇಣಿಗಲಂಕಾರಮಾಗಿ
ಉ॥ ಪ್ರತ್ಯಹಮೊಪ್ಪುಗುಂ ವಿವಿಧರತ್ನ ವಿನಿರ್ಮಿತಕೂಟಕೋಟಿಮ
ಚ್ಚೈತ್ಯಗೃಹಾವಹಂ ಶುಕಪಿಕಾಕುಳಸೌಂದರನಂದನಾವಳೀ
ವೃತ್ಯುಪಶೋಭಿತಂ ಚತುರಖೇಚರವಾರವಧೂನಿಧಾನಮಾ
ದಿತ್ಯಪುರಂ ಪುರಂದರಪುರಪ್ರತಿಮಂ ಪುರುರತ್ನಗೋಪುರಂ॥೫॥
ನಿಜರೂಪವಿಜಿತಮಕರ
ಧ್ವಜನಖಿಳದಿಶಾಂತರಪ್ರತಿಷ್ಠಿತಕೀರ್ತಿ
ಧ್ವಜನದನಾಳ್ವಂ ಧರಣೀ
ಧ್ವಜನೆಂಬಂ ಖೇಚರೇಂದ್ರನಪಗತತಂದ್ರಂ॥೬॥
ಅಪರಿಮಿತಖಚರಭೂಭೃ
ದ್ವಿಪಕ್ಷಕೃಂತನಮನೀಯೆ ದಕ್ಷಿಣಬಾಹಾ
ಚಪಳಾಸಿಕುಳಿಶಮಾವಗ
ಮುಪಮೆಗೆ ವಂದಂ ಸುರೇಂದ್ರನೊಳ್ ಖಚರೇಂದ್ರಂ॥೭॥
ವ॥ ಆತನೊಂದುದಿವಸಂ ಸಭಾಭವನದೊಳ್
ಉ॥ ಮಂಡಳಿಸಿರ್ದ ಖೇಚರಸಮೂಹದ ಮಧ್ಯದೊಳಿರ್ದು ದೂರದಿಂ
ಗುಂಡಿಗೆ ಕೈಯೊಳೊರ್ಚೆಱಗಿನಿಂ ಪೊದೆದಂಬರಮುಟ್ಟ ಕಚ್ಚುಟಂ
ಮುಂಡಿತಮೂರ್ಧಮೊಪ್ಪೆ ಬರುತಿರ್ಪೆಡೆಯೊಳ್ ವ್ರತಚಿಹ್ನಧಾರಿಯಂ
ಕಂಡನಣುವ್ರತಪ್ರಕರಪಾಲಕನಂ ಪ್ರಿಯಧರ್ಮನಾಮಮಂ ॥೮॥
ಇದಿರೆೞ್ದು ಕೈಗಳಂ ಮುಗಿ
ದುದಾತ್ತವಿಷ್ಟರದೊಳಿರಿಸಿ ಪಾದ್ಯಮನಿತ್ತಂ
ಪದಪಿಂದಾ ಖಚರೇಶ್ವರ
ನದಾರ್ಗೆ ಜಿನಮುದ್ರೆ ಮೂಡಿಸದೊ ಮುದದೊದವಂ॥೯॥
ವ॥ ಅನಂತರಂ ಸಕಲವಿದ್ಯಾಧರಲೋಕಮಂ ವಿಸರ್ಜಿಸಿ
ಇಂದು ನಿಜಾಗಮನದೆ ಮ
ನ್ಮಂದಿರಮಂ ಪೂತವೃತ್ತಿಗೆಯ್ದಿಸಿದುದದೇ
ನೆಂದಱಿಪಿಮೆಂದೊಡಂದಿಂ
ತೆಂದಂ ತದ್ದೇಶಯತಿಕೃತಾಶೀರ್ವಾದಂ॥೧೦॥
ನೀರಾಗರೆನಿಸಿದೆಮಗಮ
ಕಾರಣದಿಂದೊಲವು ನಿನ್ನೊಳಾದತ್ತೆನೆ ಮ
ತ್ತಾರಯೆ ಸರ್ವಗತಂ ಸಂ
ಸಾರದೊಳೀಮೋಹಮೊಂದೆ ದಲ್ ಖಚರೇಂದ್ರಾ॥೧೧॥
ವ॥ ಅದುಕಾರಣದಿನಿಂದು ಭವದೀಯ ವಾರ್ತೆಯೊಂದನೀ ಶಿಖರಿಶಿಖರಸಿದ್ಧಕೂಟಚೈತ್ಯಾಯತನಕ್ಕೆ ವಂದಿರ್ದ ಸುಧರ್ಮರೆಂಬ ಸರ್ವಾವಧಿಬೋಧಸಂಪನ್ನಮುನಿಮುಖ್ಯರಿನಱಿದು ಬಂದೆಂ ಅದಾವುದೆಂದೊಡರಿಂಜಯ-
ಜನಾಂತದ ವಿಪುಳನಗರಾಧೆಪತಿ ಜಯವರ್ಮನೆಂಬೊಂ ಜನನಾಥಂ ಆತನರಸಿ ಜಯಶ್ರೀಯೆಂಬಳ್ ಅವರಿರೂವರ್ಗಂ
ತ್ರಿಭುವನಮೋಹನದೀಪ
ಪ್ರಭೆ ನಿಜಕರ್ಣೋತ್ಪಳಾಯತಾಕೇಕರದೃ
ಕ್ಪ್ರಭೆ ಪುಟ್ಟಿದಳೆಸೆವ ಶಶಿ
ಪ್ರಭೆಯೆಂಬುಚಿತಾಭಿಧಾನಕನ್ಯಾರತ್ನಂ ॥೧೨॥
ನಿನ್ನಂ ಧುರದೊಳ್ ಸಾಧಿಸು
ವನ್ನನದೊರ್ವಂ ಗಡಾದಪಂ ಮದೈವೆಯನಾ
ಕನ್ನೆಯನೆನೆ ಕಿವಿಯಂ ಕ
ರ್ಬೊನ್ನಸರಲ್ ತಾಗಿದಂತಿರಾದಂ ಖಚರಂ॥೧೩॥
ವ॥ ಎಂದು ಮನದೊಳ್ ಮಚ್ಚರಮುಮನುದ್ರೇಕಮುಮನೊಳಕೆಯ್ದುಂ ಸ್ವಭಾವಗಂಭೀರ ವೃತ್ತಿಯಪ್ಪುದಱಿನವಹಿತಭಾವಮನವಳಂಬಿಸಿ ಬೞಿಯಮಿಲ್ಲಿಗೆ ತಕ್ಕುದಂ ಪ್ರತೀಕಾರಮನಪ್ರಮತ್ತವೃತ್ತಿಯಿಂ ನೆಗೞ್ದಪ್ಪೆನೆಂದು ವಿನಯದಿನಾಕ್ಷುಲ್ಲಕಮುನಿಯುಮನಂದಿನ ದಿವಸಮುಮಂ ಕಳಿಪಿ ಮಱುದೆವಸಂ
ಮ॥ ವಿ॥ ಕಿವಿ ಶಬ್ದಂಗಿಡೆ ಘಂಟಿಕಾಘನಠಣತ್ಕಾರಂಗಳಿಂದೆಯ್ದೆ ದಿ
ಙ್ನೆವಹಂ ಮೇಘಕುಳಂ ಚಳಧ್ವಜಪಟೀವಾತಂಗಳಿಂ ಕೂಡೆ ತೂ
ಳ್ದೆ ವಿಯನ್ಮಂಡಲಮಧ್ಯದೊಳ್ ಬಹುತರಂ ನಕ್ಷತ್ರಸಂಛನ್ನವಾ
ಗೆ ವಿಮಾನಾವಳಿ ಕೋಪದಿಂದೆ ತಳರ್ದಂ ವಿದ್ಯಾಧರಾಧೀಶ್ವರಂ॥೧೪॥
ಗಗನದೊಳೆೞ್ದೊಪ್ಪಿರೆ ಮಿಗೆ
ನೆಗಪಿದ ಧೂಳೀಸಮುಚ್ಚಯಂಗಳಿವೆಂತೆಂ
ತೊಗೆದುವೆನೆ ನಾಶಹೇತುಗ
ಳೊಗೆದವು ಸುತ್ತಿಱಿದು ಧೂಮಕೇತುಗಳಾಗಳ್ ॥೧೫॥
ಅಳ್ಕೆ ಮನಂ ನೋೞ್ಪರ ಕ
ಣ್ಣುಳ್ಕೆ ವಿಯಚ್ಚರಕಿರೀಟರತ್ನಾಂಶುಚಯಂ
ಗಳ್ಕೊರ್ವೆ ಮಿಱುಗಿದುವು ಪಗ
ಲುಳ್ಕಂಗಳ್ ದೆಸೆಯೊಳವಿರಳಪ್ರಸರಂಗಳ್ ॥೧೬॥
ವ॥ ಇವು ಮೊದಲಾಗಿ ಮತ್ತಮನೇಕವೈಹಾಯಸೋತ್ಪಾತಂಗಳಾಗೆ ಕಂಡು
ಜಯಮನೆಮಗರಿಗೆ ಪಿರಿದುಂ
ಭಯಮಂ ಪೇೞ್ದಪುವಿವೆಂದು ನಡೆದಂ ಖಚರಾ
ನ್ವಯಪತಿಯುಪನತಮೃತ್ಯೂ
ದಯಂಗೆ ದುರೂಣಯಮೆ ಸುನಯಮೆನಿಸುಗುಮೆ ವಲಂ॥೧೭॥
ವ॥ ಅಂತು ನಡೆದು ವಿಪುಳಾಪುರಮನೆಯ್ದಿದಾಗಳ್
ಶಾ॥ ಕೇಳೀಭೂಧರಮೂರ್ಧದೊಳ್ ಬಹುವಿಧೋದ್ಯಾನಾವಳೀಚೂಳದೊಳ್
ಶಾಳೋದ್ಯತ್ಪರಿಕೂಟಜಾಳಶಿರದೊಳ್ ಹರ್ಮ್ಯೋರ್ಧ್ವದೊಳ್ ಸಂವೃತೋ
ತ್ತಾಳಾಟ್ಟಾಳಕಕೋಟಿಯೊಳ್ ಪುರಮಹಾದ್ವಾರಾಗ್ರಿಮಸ್ಥಾನದೊಳ್
ಲೋಳತ್ಕೇತುಚಯಂ ವಿಮಾನನಿಚಯಂ ನಿಂದತ್ತದೆತ್ತೆತ್ತಲುಂ ॥೧೮॥
ವ॥ ಅಂತುವಿಸ್ಮಿತಾಶೇಷಪೌರಜನವಿಲೋಕ್ಯಮಾನಾನೂನನಯನನಾಗಿರ್ದು ವಿಯಚ್ಚರೇಶ್ವರಂ ಜಯವರ್ಮಜನೇಶ್ವನಲ್ಲಿ-
ಗನ್ವಯಾಗತನುಂ ನಿಸೃಷ್ಟಾರ್ಥನುಂ ನೀತಿನಿರತನುಮಾಕಾರವಂತನುಂ ವಚನಚತುರನುಮಪ್ಪುದ್ದವನೆಂಬ ದೂತಮುಖ್ಯನನಟ್ಟಿದೊಡಾತಂ ಬಂದು ದೌವಾರಿಕನಿವೇದಿತಂ ಸಭಾಭವನಮಂ ಪೊಕ್ಕು ಸಮುಚಿತಾಸನದೊಳ್ ಕುಳ್ಳಿರ್ದು
ಉ॥ ಖೇಚರಚಕ್ರವರ್ತಿ ಧರಣೀಧ್ವಜನಸ್ಮದಧೀಶನುದ್ಘತಾ
ರಾಚಳಚೂಳಶೇಖರನರಾತಿಮದದ್ವಿಪಕೂಟಪಾಕಳಂ
ಯಾಚಕಯಾಚಿತಾರ್ಥಸುಸಮರ್ಥನಗೋಚರಚಿತ್ತನರ್ಥಶಾ
ಸ್ತ್ರೋಚಿತಚಾರುಚಕ್ಷು ವಿಮಳಾಚರಣಂ ಸಚರಾಚರಸ್ತುತಂ ॥೧೯॥
ಉ॥ ಬಂದು ಭವತ್ಪುರಾಗ್ರಿಮನಭೋವಳಯಾಂತರದಲ್ಲಿ ನಿಂದು ಪೋ
ಗೆಂದೊಡೆ ಬಂದೆನಾಂ ನಿಜಪದಾಂಬುರುಹದ್ವಿತಯಾಂತಿಕಕ್ಕದೇ
ಕೆಂದೊಡೆ ನಿನ್ನ ನಂದನೆ ಶಶಿಪ್ರಭೆಯೆಂಬ ಕುಮಾರಿಯೊರ್ವಳಾ
ನಂದಿತಲೋಕಲೋಚನವಿಳಾಸನಿವಾಸಮೊಳಳ್ ಗಡಾಕೆಯಂ ॥೨೦॥
ಮ॥ವಿ॥ ಅನಭಿಜ್ಞಾತಕುಲಕ್ರಮಂಗೆ ಪಥಿಕಂಗೇಕಾಕಿಗೊಲ್ದೀವ ಠ
ಕ್ಕಿನೊಳಿರ್ದಪ್ಪೆ ವಿವಾಹಲಗ್ನಮನೆ ನೀಂ ಪಾರುತ್ತುಮೆಂಬಿಂತಿದಂ
ಜನದಿಂ ಕೇಳ್ದುದು ಸಜ್ಜನಾಚರಿತಮಲ್ತಾರಯ್ಯೆ ಸದ್ವಸ್ತುಭಾ
ಜನನಪ್ಪೆನ್ನೊಳೆ ಮಾೞ್ಪುದಾಕೆಗೆ ವಿವಾಹೋದ್ಯೋಗಮಂ ರಾಗದಿಂ ॥೨೧॥
ಎಂದಪನಲ್ತೆ ನಭಶ್ಚರ
ವೃಂದಾರಕನೀವುದದಱಿನಾಕೆಯನೊಲವಿಂ
ದಿಂದೆ ಬೞಿಕ್ಕೀಯದೊಡೀ
ಬಂದಾತಂ ಬಱಿದೆ ಪೋಗಲೇನರಿದಪನೇ॥೨೨॥
ವ॥ ಎಂದು ಸಾಮಭಾಸದಿಂ ದಂಡೋಕ್ತಿಯನೆ ನುಡಿಯಲೊಡಂ
ಚಂ॥ ಒದವಿದ ನಿದ್ರೆ ದೂತಜನಗರ್ಜನದಿಂ ಕಿಡೆ ಹೃದ್ಗುಹಾಂತರಾ
ಳದಿನುರುಕೋಪಸಿಂಹಮಿರದೆೞ್ದುದು ಮೀಸೆಯ ಕೆತ್ತು ಕೇಸರಂ
ಕೆದಱುವ ಭಂಗಿ ಪುರ್ವಿನ ಪೊಡರ್ಕೆಯೆ ಮೆಯ್ಮುಱಿವೋಜೆ ಕಣ್ಗಳಿಂ
ದುದಯಿಪ ಕೆಂಪದಾಗುೞಿಪ ವಕ್ತ್ರದ ಕೆಂಪೆನೆ ರಾಜಮೇರುವಾ॥೨೩॥
ವ॥ ಅಂತು ಕಡುಮುಳಿದು
ಚಂ॥ ಹೃದಯದೊಳೊಂದು ನಾಲಗೆಯೊಳೊಂದೆನಿಪಾನುಡಿ ಬೇಡ ಕನ್ನೆಯ
ಲ್ಲದೆ ಗಡ ಪೋಗೆನೆಂದು ಕಡೆಯೊಳ್ ನುಡಿದಾ ನೈಡಿಯಂ ಪ್ರತಿಷ್ಠಿಸಲ್
ಪದೆವೊಡೆ ಪೋಗು ನಿನ್ನ ಪತಿಯಂ ಬರವೇೞೆಡೆಮಾತನಟ್ಟಲೇಂ
ಕದನದೊಳಾನೆ ಪೇೞ್ದಪೆನವಂಗಿರದಿತ್ತಪೆನೇಯೆನೆಂಬುದಂ ॥೨೪॥
ವ॥ ಅದಲ್ಲದೆಯುಂ
ಸಿಂಗದ ಮುಂದಣ ಕನ್ನೆಯ
ದೇಂ ಗಡ ಮೇಷಕ್ಕೆ ಸಾಟಿಯೆನಿಕುಮೆ ರೋದೋ
ರಂಗದೊಳಿನಿತು ತೊೞಲ್ದುಂ
ಪಿಂಗಿದುದಿಲ್ಲಿನೆತು ಸಂಶಯಂ ಚರ ನಿನ್ನೊಳ್॥೨೫॥
ವ॥ ಎಂದು ನಿಜಭುಜವಿಕ್ರಮಮಂ ವಕ್ರೋಕ್ತಿಯಿಂ ನುಡಿದು ದೂತನಂ ಕಳಿಪಿ ಸನ್ನಾಹ ಭೇರಿಯಂ ಪೊಯ್ಯಲೂವೇೞ್ದು ಅಜಿತಸೇನನಂ ಬರಿಸಿ ತದ್ವೃತ್ತಾಂತಮಂ ನಿವೇದಿಪುದುಮಾತನೀಷದ್ರೋಷಹಸಿತಭಾಸುರಮುಖಸರೋಜನಾಗಿ
ಮ॥ಸ್ರ॥ ತನಗೇಕೀಯುದ್ಧ ಸನ್ನದೂಧತೆಯ ಗಸಣಿ ಮುಂ ಕಾದಲೆಂದುರ್ಬಿ ಬಂದಾ
ತನದೊಂದಾಯಾಸಮಂ ಕೇಳನೆ ರಣಮುಖದೊಳ್ ಭೀಕರಂಕೊಲ್ಲೆನಾನೆಂ
ಬಿನಿತಂ ತಾಂ ನಚ್ಚಿಮೆಯ್ವೆರ್ಚಿದನೊ ಕಲಿತನಕ್ಕೞ್ತಿ ಮೇಣೀಗಳಾಯ್ತೋ
ಮನದೊಳ್ ಪೋಬರ್ಕದಂತುಂಹರಿಬವನಿನಿತುಂ ಟಕ್ಕನಾಂತಲ್ಲಿನೋೞ್ಕುಂ॥೨೬॥
ಬಗೆಗೆನಿತು ಸಮರಸಂಭ್ರಮ
ಮೊಗೆವಂತಿರೆ ನಿಮಗೆ ಗಹನಮಾವುದೋ ಬಂದೀ
ಖಗಸೇನೆಯನಾನೊರ್ವನೆ
ಖಗತತಿಯಂ ಶ್ವೇನನಂದದಿಂ ಪಡೆಪಾಯ್ವೆಂ॥೨೭॥
ಚಂ॥ ಎನುತೆನುತುಂ ನಿಯುದೂಧಜಯದೊಂದೊಲವಿಂದೆ ಹಿರಣ್ಯನೆಂದುದಂ
ಮನದೊಳಿನಿತ್ತು ಭಾವಿಪುದುಮಾಭವನಾಮರನಾಯಕಂ ಪುರಾ
ವನಿತಲದೊಳ್ ಸಭಾಸದರ್ಗೆ ಕೌತುಕಮಾಗಿರೆ ನಿಂದನಾವಗಂ
ನೆನೆಯದ ಮುನ್ನ ಬಂದು ಸಮುದಂ ಸಶರಂ ಸರಥಂ ಸಕಾರ್ಮುಕಂ॥೨೮॥
ವ॥ ಆಗಳರಸನಂ ಬಲಸಮೇತಮಲ್ಲಿಯೆ ನಿಲಿಸಿ ಬೞಿಯಂ ಸಕಲಾಯುಧಸನಾಥಮಪ್ಪ ತದ್ದಿವ್ಯರಥಮನಾ ಫಣಾಧರನೆ ಸಾರಥಿಯಾಗೇಱಿ ಗಗನಕ್ಕೆ ನೆಗೆದಂಬರದ ತೆಱಂಬೆ ಕಳನಾಗಳುಂಬಮಾಗೊಡ್ಡಿನಿಂದ ವಿದ್ಯಾಧರವರುಥಿನಿಯಂ ನೋಡಿ
ತೋಳತೀನೆಯನಡಂಗಿಸಲಿನಿತೆಡೆವಡೆದೆನೆಂದು ಮನದೊಳುತ್ಸಾಹಮನಪ್ಪುಕೆಯ್ದು
ಚಂ॥ ಕುಳಿಕನ ದಾಡೆಯಂ ಮುಱಿವ ದೀಗ್ಗಜಮಂ ಪಡೆ ಪಾಯ್ವ ವಾರ್ಧಿಯಂ
ಚುಳುಕದೊಳಾಂಪ ಮೇರುಗಿರಿಯಂ ಮರಳೊತ್ತುವ ವಜ್ರವಹ್ನಿಯಂ
ತಳದೊಳಗಿರ್ದಿಲಾಗೆ ಪೊಸೆದಿಕ್ಕುವ ಸಿಂಗದ ಕೇಸರಂಗಳಂ
ಸೆಳೆವಳವಂ ಸಮಂತು ತಳೆದಂ ರಣದೋಹಳನಾ ಕುಮಾರಕಂ॥೨೯॥
ಪೃಥ್ವಿ॥ ಅನಂತರಮದೆತ್ತಲುಂ ತರದೆ ಸುತ್ತಿದತ್ತಾ ಕುಮಾ
ರನೇಱಿದ ವರೂಥಮಂ ಖಚರಯಾನಸಂದೋಹಕಂ
ದಿನಾಧಿಪತಿಯೇಱಿ ನಿಂದ ರಥಮಂ ನಭೋವೀಧಿಯೊಳ್
ಘನಾಘನಕದಂಬಕಂ ಬಳಸುವಂದದಿಂದಾವಗಂ ॥೩೦॥
ಅನ್ತುಪಢೌಕಿತವಾಗೆ ಕೃ
ತಾನ್ತಭ್ರೂಭ್ರುಕುಟಿಕುಟಿಲಮಂ ಜಯಲಕ್ಷ್ಮೀ
ಕಾನ್ತಂ ಕಾರ್ಮುಕಮಂ ತಳ
ದಿನ್ತಳೆದೇಱಿಸಿ ಬೞಿಕ್ಕೆ ಜೇವೊಡೆಯಲೊಡಂ ॥೩೧॥
ಚಂ॥ ಒಡೆದುದೊ ಪದ್ಮಜಾಂಡಮವನೀವಳಯಂ ಪಿಳಗಿತ್ತೊ ಮೇರು ಮೇಣ್
ಕೆಡೆದುದೊ ವಾರ್ಧಿಯುರ್ಕಿದುದೊ ಪೇೞೆನೆ ತನ್ನ ನಿಮಿರ್ಕೆಗಾದುದಿ
ಟ್ಟೆಡೆ ಜಗಮೆಂಬಿನಂ ಪೊಡರ್ದು ಪೊಣ್ಮಿದುದಾತನ ಕೆಯ್ಯ ಬಿಲ್ಲ ಜೇ
ವೊಡೆಯ ರವಂ ಲಯಪ್ರಭವದಂತಕಸೈರಿಭಘೋಷಣಭೀಷಣಂ ॥೩೨॥
ವ॥ ಆ ಸಮಯದೊಳ್
ಕತ್ತರಿವಾಣಿಯೊಳೆಱಗುವ
ಚಿತ್ತದೆ ಕವಿತರ್ಪ ಜಳವಿಹಂಗಂಗಳವೋಲ್
ಎತ್ತಂ ಕವಿತಂದುವು ಭೂ
ಭೃತ್ತನಯಂಗಾಗಿ ಖಚರರೆಚ್ಚ ಶರಂಗಳ್॥೩೩॥
ವ॥ ಅದಂ ಕಂಡು
ಮರಸುತ್ತನೆಸಲೊಡಂ ಭೋ
ರ್ಗರೆದೈತರ್ಪಾ ಸರಲ್ಗಳಂ ಖಂಡಿಸುತುಂ
ಬರುತಿರ್ದುವು ಬಳಸಿದ ಪಂ
ಜರದಂತಿರೆ ಸುತ್ತಿ ನಿಶಿತವಿಶಿಖಾವಳಿಗಳ್ ॥೩೪॥
ಅಣಿಯರಮಿಸೆ ಕುವರನ ಕೂ
ರ್ಗಣೆಯೇಱಿಂ ಪಱಿದು ಬಿರ್ದ ಖಚರರ ತಲೆ ಸಂ
ದಣಿಸೆ ವಿಮಾನಂಗಳ ಪೇ
ರಣಿ ಪೋಲ್ತುದು ತೆಱೆದ ಮೊಗದ ಪೇಳಿಗಳಿರವಂ॥೩೫॥
ಪೊಸಮಸೆಯ ಸರಲೂಗಳಂ ತೊ
ಟ್ಟಿಸೆ ಕೊಂಡೋಡಿದುವಿನೇಂದುಬಿಂಬಂಗಳನಾ
ಗಸದೊಳ್ ಕೊಂಡೋಡುವ ರಾ
ಹುಸಮೂಹಂಗಳವೊಲಾ ವಿಮಾನಾವಳಿಯಂ॥೩೬॥
ವ॥ ಅದಲ್ಲದೆಯುಂ
ಚಂ॥ ಪೊದೆಯೊಳಗಿಂದಮುರ್ಚುವೆಡೆಯಲ್ಲಿ ಸರಲ್ ದಿಟಮೊಂದು ಮತ್ತೆ ಮಾ
ಣದೆ ತುಡುವಲ್ಲಿ ಪತ್ತು ಪೊಱಮುಯ್ವುವರಂ ತೆಗೆವಲ್ಲಿ ನೂಱು ಬೇ
ಗದೆ ಬಿಡುವಲ್ಲಿ ಸಾಸಿರಮಿದಿರ್ಚಿದರಂ ನಡುವಲ್ಲಿ ಲಕ್ಕಮೆಂ
ಬುದನೆನೆ ಬಿಲ್ಲ ಬಿನ್ನಣಮ ನಾರಣದೊಳ್ ಮೆಱೆದಂ ಯುವಾಧಿಪಂ॥೩೭॥
ಉ॥ ಪೂತೆಲವಕ್ಕೆ ಪೌರವನಭೂರುಹಮೊಪ್ಪುವ ಮುಳ್ಪಿಗುಚ್ಚಳ
ಕ್ಕೇತನಚೀನಚೇಳವರುಣೋಪಲಭಿತ್ತಿಗೆ ಪೊನ್ನಕೋಂಟೆ ಸಂ
ಧ್ಯಾತಪನಂಗೆ ತೋರಣಕನನ್ಮುಕುರಂ ದೊರೆಯಾಗಿ ತೋಱಿದ
ತ್ತಾತನೊಳಾಂತು ಪುಣ್ಬಡೆದ ಖೇಚರಸೇನೆಯ ರಕ್ತಸೇಕದಿಂ॥೩೮॥
ವ॥ ಅಂತು ಕಡುಕೆಯ್ದು ಕಾದುವ ಕುಮಾರನಂ ಬೆಱಗಣ್ಮೞಿಯದಂತಳ್ಕಿದರುಮೊರ್ವರುೞಿಯದಾದಿತ್ಯಸುತಪುರಮು-
ಮಾದಿತ್ಯಪುರಮುಂ ಗುಱಿಯಾಗಿ ಪೋಗೆ ತನ್ನ ವಿಮಾನಮೊಂದೆ ನಿಂದುದಂ ಧರಣೀಧ್ವಜವಿದ್ಯಾಧರ ಚಕ್ರವರ್ತಿ ಕಂಡು
ಪೊಟ್ಟೆಲರಿಂ ಪಾಱುವವೋಲ್
ಬೆಟ್ಟಂ ಪಾಱುಗುಮೆ ರಿಪುಶರಾಹತಿಗೆ ಭಯಂ
ಬಟ್ಟಳಿಕನೋಡುವಂತಿರೆ
ಕಟ್ಟಾಯದ ಕಣಿಯೆನಿಪ್ಪನೇನೋಡುಗುಮೇ॥೩೯॥
ವ॥ ಎಂದು ಪರಿಚ್ಛೇದಿಸಿವಧ್ಯಾಭಾವದಿಂ ಹಿರಣ್ಯನೊಳ್ ಪ್ರಧಾನವ್ಯಾಪಾರಮಂ ನೈಡಿಯುತಿರ್ದ ಶಶಿಪ್ರಭಾಪ್ರಿಯನ ರಥಕ್ಕಾಗಿ ಬೇಗನೆ ಬಂದಂಬುವೀಡಿನೊಳ್ ನಿಂದು ವೆದ್ಯಾಧರರ್ ಯುದ್ಧಸನ್ನದ್ಧರಾಗಿ
ಚಂ॥ ಇರದೆ ವಿಯಚ್ಚರಾಧಿಪತಿಯೆಚ್ಚ ಕೃಶಾನುಪೃಷತ್ಕಮಂ ಪಯೋ
ಧರಶರದಿಂ ಪಯೋಧರಶಿಲೀಮುಖಮಂ ಮರುದುಗ್ರಬಾಣದಿಂ
ಮರುದಿಷುವಂ ಫಣಿಪ್ರಬಳಸಾಯಕದಿಂ ಫಣಿಚಂಡಕಾಂಡಮಂ
ಗರುಡಪತತ್ರಿಯಿಂದಜಿತಸೇನನಡರ್ತಿರದೆಚ್ಚು ತೂಳ್ದಿದಂ॥೪೦॥
ಅವನ ತಲೆ ಪಱಿದು ಗಗನಾ
ಗ್ರವಿಭಾಗಕ್ಕೊಗೆದು ರಾಹುಶಿರದವೊಲಾದಂ
ರವಿಯಂ ಬೆರ್ಚಿಸೆ ಕುವರಂ
ಕವಲಂಬಿಂದೆಚ್ಚು ಬಿಚ್ಚತಂ ನಲಿದಾರ್ದಂ ॥೪೧॥
ವ॥ ಆಗಳ್
ತೀವಿದುದು ದಿವಿಜನಿವಹಮ
ಹಾವೀರಧ್ವನಿ ದಿಗಂತಮಂ ವ್ಯೋಮಮುಮಂ
ತೀವಿದುದು ತತ್ಕರಪ್ರ
ಸ್ತಾವಿತಮಂದಾರಪಾರಿಜಾತಾಸಾರಂ॥೪೨॥
ವ॥ ಅನಂತರಂ ಜಿತಖಚರಸೇನನಜಿತಸೇನಂ ಬಂದು
ವಿರಚಿತತೋರಣಮಾಳಾ
ಕರಮುತ್ತಂಭಿತಜಯಧ್ವಜೋತ್ಕರಮೆನಿಪಾ
ಪುರಮಂ ತರುಣೀಕೇಕರ
ಮರೀಚಿನೀರಾಜಿತಾಕ್ಷತಾಂಗಂ ಪೊಕ್ಕಂ॥೪೩॥
ವ॥ ಅಂತುಪೊಕ್ಕು ಅರಮನೆಗೆ ಬಂದು ಸುಹೃಜ್ಜನಾಗ್ರಗಣ್ಯನಂ ಹಿರಣ್ಯನಂ ಸನ್ಮಾನ ಪೂರ್ವಕಂ ವಿಸರ್ಜಿಸಿ ಋಪರಮೋತ್ಸವದಿನಿರ್ದನನ್ನೆಗಂ
ಮ॥ಸ್ರ॥ ಮನದೊಳ್ ಮುನ್ನಾದ ರಾಗಂ ದ್ವಿಗುಣಿಸೆ ತನಗಿಂತೀಗಳೀಯಂದದಿಂ ಮ
ತ್ತನಯಾಪೂರ್ವಾನುರಾಗಂ ದ್ವಿಗುಣಿಸದಿರದುದ್ವಾಹಲಗ್ನಾಹಮುಂ ಭೋಂ
ಕನೆ ಸಾರ್ತಂದಿರ್ದುದೇನುಂ ತಡೆದಿರಲೆಡೆಯಿಲ್ಲುತ್ಸವಪ್ರಸ್ತುತಾಪಾ
ದನಮಂ ಮಾಡಲ್ಕೆವೇೞ್ಕುಂ ಪಿತೃವಿರಹದೆ ಜಾಮಾತೃವಿನ್ನಿರ್ಪನಲ್ಲಂ ॥೪೪॥
ವ॥ ಎಂದು ಜಯವರ್ಮಭೂಭುಜಂಬಗೆದಂದು ಗೃಹಮಹತ್ತರನಂ ಬರಿಸಿ ಬೆಸಸಿದಾಗಳ್
ಸ್ರ॥ ನೀಲಾಬದ್ಧಸ್ಥಲೀಕಂ ಮರಕತಜಗತೀಮಂಡಲಂ ಸ್ಫಾಟಿಕಸ್ತಂ
ಭಾಲಂಬಂ ಚಾರುಚಾಮೀಕರಮಯರುಚಿಮದ್ಭಿತ್ತಿ ವೈಡೂರ್ಯನಿರ್ಯೂ
ಹಾಲೀಢಂ ವ್ಯಕ್ತಮುಕ್ತಾಘಟಿತಪಟಳಸಂಪರ್ಕಕರ್ಕೇತನದ್ವಾ
ರಾಲಂಕಾರಂಗಳಿಂ ಕಣ್ಗೆಸೆದುದನುಪಮಂ ತತ್ಕೃತೋದ್ವಾಹಗೇಯಂ॥೪೫॥
ಅದರ ನವರತ್ನ ಕೂಟಾ
ಗ್ರದಿನುಣ್ಮುವ ಬೆರಕೆವೆಳಗು ತುಂಗಧ್ವಜಚೀ
ನದ ಕಡೆಗಡೆಯೊಳ್ ಕಣ್ಗೆಸೆ
ದುದು ಸಾರಾವಳಿಯ ವಿಳಸವಿಕ್ಕಿದ ತೆಱದಿಂ॥೪೬॥
ದಿಟ್ಟಿಗೆವರೆ ಬಂಧವಿಧಂ
ಕಟ್ಟಿದ ಪಲತೆಱದ ಮಣಿಯ ಸೂಸಕದ ನೆೞಲ್
ಕುಟ್ಟಿಮತಲದೊಳ್ ಪೊಳೆದೆಡೆ
ಗಟ್ಟುತ್ತಲಲ್ಲಿ ಬಣ್ಣವುರಮಂ ತೀವಲ್॥೪೭॥
ಸುೞಿವೆಳವೆಂಡಿರ ಕಡೆಗ
ಣ್ಬೞಿಯಂ ಪಸರಿಸುವ ಬೆಳಗು ಬೆಳದಿಂಗಳ ಪೊಂ
ಪುೞಿಯೆಂದು ಸುರಿವುವದಱೊಳ್
ಮೞೆಯಿಲ್ಲದೆಯುಂ ಪ್ರಣಾಳಶಶಿಕಾಂತಂಗಳ್ ॥೪೮॥
ವ॥ ಮತ್ತಮಲ್ಲಿ
ಚಂ॥ ಸಿರಿಸದ ಮಾಲೆಯೆಂದೆಸೆವದಾಡಿಮಬೀಜಸಮಾಜವೆಂದು ಸೌಂ
ದರಬಿಸಕಾಂಡವೆಂದು ನಲವಿಂದಳಿಯುಂ ಗಿಳಿಯುಂ ಮರಾಳಮುಂ
ಪರಿಮರಿಯಾಡಿ ವಾಸಿಸದೆ ಪೀರದೆ ನೀಱದೆ ಮಾಣ್ದ ಪಚ್ಚೆಯೊ
ಳ್ವರಲ ತೊಳಪ್ಪ ಮಾಣಿಕದ ಮುತ್ತಿನ ಲಂಬಣಮಿಲ್ಲದೆಲ್ಲಿಯು॥೪೯॥
ಚಂ॥ ವಿವಹನದುತ್ಸವಕ್ಕೆ ನೆಲೆಯಾದುದಿದೆಂಬಿನಿತಲ್ತು ಕಾಮನು
ತ್ಸವಕ್ಕೆ ವಸಂತನುತ್ಸವಕೆ ನಾಟಕದುತ್ಸವಕಾದುದಕ್ಕೆ ನೋ
ಡುವೊಡೆನೆ ನಲ್ಲರೊಳ್ ನಲಿವ ಸಿಂಪಿಣಿಯಾಡುವ ನರ್ತಿಪೊಂದು ಚಿ
ತ್ರವಿಧದ ಚಿತ್ತಕಾಮಿನಿಯರಿಂದೆಸೆದಿರ್ದುದು ತಜ್ಜನಾಶ್ರಯಂ॥೫೦॥
ವ॥ ತನ್ಮಧ್ಯದೊಳ್
ಮರಕತಸೋಪಾನಚತು
ಷ್ಠರಾಜಿತಂ ಕೋಣಶೋಣಮಣಿಕಲಶಮನೋ
ಹರಮುತ್ತುಂಗಂ ಭಾಸುರ
ಹಿರಣ್ಮಯಂ ವಿಪುಳವೇದಿಯೆಸೆದತ್ತಾದಂ॥೫೧॥
ಪಳಿಕಿನ ಭೃಂಗಾರದ ಬೆ
ಳ್ವೆಳಗುಂ ಜಾಗಂಗಳೆಸೆವ ಪಸುರ್ವೆಳಗುಂ ಪ್ರ
ಜ್ವಳಿಪ ಮಣಿಸ್ತಂಭದ ಕೆಂ
ಬೆಳಗುಂ ಪಸರಿಪುವು ಸುರಶರಾಸನಶತಮಂ॥೫೨॥
ಬಳಭಿಚ್ಚಾಪಲತಾವಳಿ
ಬಳಸಿದ ಬೆಳ್ಮುಗಿಲ ಮಱೆಯಿದೆನೆಬಣ್ಣವುರಂ
ಬಳಸಿರ್ದೊಡೆ ಸೊಗಯಿಸಿದುದು
ಪಳಿಕಿನ ಪಟ್ಟವಣೆ ವೇದಿಕಾಧಿತ್ಯಕದೊಳ್ ॥೫೩॥
ವ॥ ತತ್ಪುರೋಭಾಗದೊಳ್
ಉ॥ ಸ್ವಸ್ತಿಕಲಕ್ಷ್ಯಲಕ್ಷಮಣಿದರ್ಪಣಮಂಡಿತಮುಲ್ಲಸತ್ಪ್ರವಾ
ಳಸ್ತಬಕಂ ಪವಿತ್ರಬಿಸಸೂತ್ರವೃತಂ ನವಪಿಷ್ಟಚರ್ಚಿಕಾ
ಶಸ್ತಮುಪಾತ್ತದರ್ಭರಚನಂ ನಿಖಿಲೌಷಧಿಪುಂಜಿತಂ ಪರಿ
ನ್ಯಸ್ತಮದೊಂದು ಪೂರ್ಣಕಲಶಂ ತಳೆದತ್ತತುಳಂ ವಿಳಾಸಮಂ॥೫೪॥
ಶಾ॥ ಆ ವೇದೀಸ್ಥಳದೊಳ್ ಹರಿದ್ವಸುವ ಪಾತ್ರಂಗಳ್ ಲಸದ್ದೂರ್ವೆಯಿಂ
ತೀವಿರ್ದುಂ ನವಚಂದ್ರಕಾಂತಚಷಕಂಗಳ್ ಚಂದನಕ್ಷೋದದಿಂ
ತೀವಿರ್ದುಂ ಮಣಿಶುಕ್ತಿಗಳ್ ಪರಿಮಿಳಿತ್ಕಾಶ್ಮೀರಸಾರಾಂಬುವಿಂ
ತೀವಿರ್ದುಂ ಬಱಿದಿರ್ದವೋಲೆಸೆದುವಾದಂ ವರ್ಣಸಾಮಾನ್ಯದಿಂ॥೫೫॥
ವ॥ ಮತ್ತಂ ಮಣಿಕನಕರಜತಪಾತ್ರಂಗಳೊಳ್ ಪರಿಪಕ್ವಸಾಮಿಪಕ್ವಶಲಾಟುಭೇದಭಿನ್ನಂಗಳಪ್ಪ ಮಾಕಂದ ಮಾತುಲುಂಗ ಜಂಬೀರನಾರಂಗ ದಾಡಿಮ ದ್ರಾಕ್ಷಾ ಚೋಚ ಮೋಚಾದಫಳ ಕುಳಂಗಳುಂ ಸೊಗಯಿಪುವದಲ್ಲದೆಯುಂ
ಮ॥ವಿ॥ ಘಸೃಣಾಭ್ಯುಕ್ಷಣವರೂಣ ಪೂರಭರಣಸ್ಥಾಳಾವಳೀಮಾರ್ಜನ
ಪ್ರಸವಾಬಂಧನದೀಪಿಕೋಜ್ವಲನದರ್ಭಾಗರ್ಭ ಶಾಲ್ಯಕ್ಷತೆ
ಪ್ರಸರಕ್ಷಾಲನ ತೋರಣಗ್ರಥನ ಮುಕ್ತಾಮಾಳಿಕಾಳಂಬನ
ವ್ಯಸನವ್ಯಗ್ರಕರಂ ಕರಂ ಸೊಗಯಿಸಿತ್ತಂತಲ್ಲಿ ಕಾಂತಾಜನಂ॥೫೬॥
ವ॥ ಅಂತನಂತಮಂಗಳದ್ರವ್ಯಸಂಸೇವ್ಯಮಂ ಉತ್ಸವೋನ್ಮತ್ತಪರಿವಾರಜನ ಪರಿಪೂರ್ಣಮುಮಾಗಿ ಪರಿಣಯನಮಂಡಪಂ ರಾಜಾಶ್ರಯಶ್ರೀಗೆ ಮಂಗಳಸದನಮೆನಿಸಿತ್ತು ಅನ್ನೆಗಮಿತ್ತಮಶೇಷೌಷಧೆಸನಾಥತೀರ್ಥಜಲಂಗ-
ಳಿನುತ್ಸಾಹಪಟಹರವಂಗಳೆಸೆಯೆ ಮಜ್ಜನಂ ಬೊಕ್ಕು ನೈಪಥ್ಯಗೃಹಕ್ಕೆ ವಂದು ಕೈಗೆಯ್ಯಲೊಡಂ
ಆ ರಾಜಶೇಖರಂಗೇಂ
ರಾರಾಜಿಸಿದುದೊ ವಿಚಿತ್ರಮಣಿಗಣರಚನೋ
ದಾರಂ ಶೇಖರಮುಜ್ಜ್ವಳ
ಮೇರುಶಿಖರಿಶಿಖರರತ್ನದೊಳ್ ಸರಿವರುತುಂ॥೫೭॥
ಮಸುಳಿಸಿದುದಜಿತಸೇನನ
ಮಿಸುಪ ಮೊಗಂ ರತ್ನಕುಂಡಳಪ್ರಭೆ ತನ್ನೊಳ್
ಪಸರಿಸುತಿರೆ ಸೊಗಸಿನ ಕೆಂ
ಬಿಸಿಲೆಳಸಿದ ಕನಕಕಮಳಕಮನೀಯತೆಯಂ ॥೫೮॥
ಅಗಲದೆ ನೆಲಸಿದ ಲಕ್ಷ್ಮಿಯ
ನಗೆಗಣ್ಗಳ ಬೆಳಗು ಬಳೆದು ಬೀೞಲ್ವರಿದ
ತ್ತಗಲ್ದುರದೊಳೆಂಬ ತೆಱದಿಂ
ಸೊಗಯಿಸಿದುದು ವಿಮಳತರಳತಾರಾಹಾರಂ ॥೫೯॥
ಅರಿಬಳಜಳನಿಧಿಮಥನೋ
ದ್ಧುರಭುಜಮಂದರಮನೆಯ್ದೆ ಸುತ್ತಿದ ತಾರಾ
ಪರಿಕರಮೆನೆ ವಜ್ರಾವಳಿ
ವಿರಚಿತಕೇಯೂರವಳಯಮೇಂ ತೊಳಗಿದುದೋ॥೬೦॥
ಕರಟನಿಘರ್ಷಣದೆ ಮದಂ
ಬೊರೆದಾನೆಯ ಕೈಯನಳಿಗಳಾವರಿಸಿದವೊಲ್
ಮರಕತಕಂಕಣಮೆಸೆದವು
ತಿರುವೊಯ್ಲಿಂ ಕರ್ಪುವೆತ್ತ ತತ್ಕರಯುಗದೊಳ್ ॥೬೧॥
ಅರುಣತಲದ್ಯುತಿತತಿಯೆಡೆ
ದೆರಪುಗಳಿಂದುಣ್ಮುವಂದದಿಂ ಕೆಂಬೆಲರುಂ
ಗುರದಿನೊಗೆವರೈಣರೈಚಿಮಂ
ಜರಿ ತಳಿರ್ವೇಱಿಸಿದುದೈದೆ ಕರಶಾಖೆಗಳಂ೬೨॥
ಕರೆ ಕತ್ತರಿಸಿದ ಚೀನಾಂ
ಬರದೊಪ್ಪುವ ಸುತ್ತಿನಿಂದೆ ಡಿಂಡೀರಪರಂ
ಪರೆ ಬಳಸಿದಮಳಕಮಳಾ
ಕರಮೆನೆ ನೇತ್ರಾಳಿಗಿತ್ತನಾಕರ್ಷಣಮಂ॥೬೩॥
ಉ॥ ಪೂಗಣೆ ಕರ್ವುವಿಲ್ ಮಿಳಿರ್ವ ಮೀಂಗುಡಿ ಮಲ್ಲಿಗೆ ಮಾವು ತೆಂಬೆರಲ್
ಕೋಗಿಲೆ ಜೊನ್ನಮಿಂದೊಳದ ನೈಣ್ದನಿ ಸುಗ್ಗಿಯೆನಿಪ್ಪವೆಲ್ಲಮೊಂ
ದಾಗಿಯೆ ದರ್ಪಕಂಗೆ ಸಮನಿಪ್ಪ ಜಗಜ್ಜಯದರ್ಪಮಂ ಸಮಂ
ತಾಗಿಸಲೊಂದೆ ಸಾಲ್ಗುಮೆನಿಸಿತ್ತು ಕುಮಾರಕೃತಪ್ರಸಾಧನಂ॥೬೪॥
ವ॥ ಆ ಪ್ರಸ್ತಾವದೊಳನೇಕಾಂತಃಪುರಕಾಂತೆಯರುಂ ಶಶಿಪ್ರಭಾಪ್ರಸಾಧನಕರಣನಿರತೆಯರಾಗಿ ಶರದದ ನಿಱಿಮುಗಿಲ ತುಱುಗಲನೆಡೆಗಲಸಿದ ವಿದ್ಯಾಧರಿಯ ಪರಿಯನನುಕರಿಸೆ ಪೊಸದುಗುಲಮಂ ನಿಱಿವಿಡಿದುಡಿಸಿಯುಂ ಘುಸೃಣರಸದಿ-
ನಸುಗೆದಳಿರಂ ತೊಯ್ವಂತೆ ಯಾವಕದ್ರವದಿಂ ಪದತಳಮಂ ಲೇಸೆನಿಸಿಯುಂ ಚರಣನಖಚಂದ್ರಮಂಡಳಕ್ಕೆ ಪರಿವೇಷಮಂ ಪಡೆವಂತೆ ಬೆರಕೆವೆಳಗು ಬಳಸೆ ನವರತ್ನನೂಪುರಂಗಳಂ ತುಡಿಸಿಯುಂ ಮನೋಜಗಜಕುಂಭದೊಳ್ ನಕ್ಷತ್ರಮಾಲೆಯಂ ಸುತ್ತುವಂತೆ ರತ್ನರಸನಾಸೂತ್ರಮಂ ವೃತ್ತಕಟಿಯೊಳ್ ವೇಷ್ಟಿಸಿಯುಂ ಮದನಮಂಗಳಭೃಂಗಾರಂಗಳಂ ಬರ್ಚಿಸುವಂತೆ ಮೊಲೆಗೆಲದೊಳ್ ಕಸ್ತೂರಿಕಾಪತ್ರಭಂಗಮಂ ಚಿತ್ರಿಸಿಯುಂ ದರಹಾಸಾಭಾಸುರಮುಖಸರೋರುಹಮೃನಾಳನಾಳಂಗಳೆನಿಸಿ ಪೊಳೆವ ಮುತ್ತಿನ ಸರಂಗಳಂ ಕೊರಲೊಳಿಕ್ಕಿಯುಂ ಕೋಮಲಬಾಹಾಲತೆಗಾಳವಾಳವಳಯಮಂ ಸಮೆವಂತೆ ಕನಕವಳಯಮಂ ಮುಂಗೈಯೊಳ್ ಸಂಗಳಿಸಿಯುಂ ಮದನಮೋಹನಶರಂಗಳಂ ಪಲತೆಱದಲರ್ಗಳಿಂದರ್ಚಿಸುವಂತೆ ಪೊಸಪರಿಯ ಕೇವಣದುಂಗುರಂಗಳಂ ಬೆರಲ್ಗಳೊಳ್ ನಿರವಿಸಿಯುಂ ಮನ್ಮಥಮನೋರಥಕ್ಕೆ ರಥಾಂಗಯುಗಳಮಂ ಸಂಗಳಿಸುವಂತೆ ಮೊಗಕ್ಕೆ ಸೊಗಯಿಸುವ ರತ್ನ ರಚನೆಯೋಲೆಯಂ ಪಾಲೆಯೊಳ್ ತೊಡರ್ಚಿಯುಂ ಕರ್ಣಾವತಂಸದೊಳ್ ಕೀಲಿಸಿದ ನೀಲದುನ್ಮುಖಮಯೂಖಸಂಕುಳಂ ಕೊಡಂಕೆಯೊಳ್ ತಿಂಬಿತೆಂಬಂತೆ ಕೊಗ್ಗಿಯ ಕತ್ತುರಿಯಂ ಪತ್ತಿಸಿಯುಂ ಬೆಳತಿಗೆಗಣ್ಣ ಬಳವಿಗಿದುವೆ ಗುಱಿಯೆಂದು ಕುಱುಪನಿಕ್ಕುವಂತೆ ಕೊನೆಗೊಡಂಕೆಯೊಳ್ ತೋರಮುತ್ತಿನ ಮುಗುಳಂ ತೆಗಳ್ಚಿಯುಂ ನೇತ್ರಪುತ್ತಿಕೆಗೆ ನಿರ್ವಾಣರೇಖೆವಡೆವಂತೆ ನಗೆಗಣ್ಗಳೊಳ್ ಕಜ್ಜಳರೇಖೆಯನಳಂಕರಿಸಿಯುಂ ಕರ್ವುವಿಲ್ಲಂ
ಗೊಲೆಗೊತ್ತುವಂತೆ ನಿಡುವುರ್ವಂ ಕುಡುವುರ್ವಾಗೆ ಸಮಱಿಯುಂ ವದನನಳಿನಮಂ ಬಳಸಿದಳಿಮಾಲೆಯೆನಿಸಿ ಸುೞಿಗುರುಳನಳವಡಿಸಿಯುಮನಂತರಂ
ಚಂ॥ ಲಳನೆಯ ಕೇಶದಲ್ಲಿಯಲರುಂ ತಳಿರುಂ ಪೊಳೆವಂದದಿಂದೆ ಕೋ
ಮಳನಖಕಾಂತಿಯುಂ ಮೃದುತಳದ್ಯುತಿಯುಂ ನಿಮಿರ್ವನ್ನಮೊಯ್ಯನಾ
ಗಳೆ ತಲೆವಿಕ್ಕಿ ಕೞ್ತಲೆಗಮಿಂದುಮರೀಚಿಗಮಾಯ್ತು ನಾಡೆ ಕ
ಣ್ಗಳವಡೆ ಮಲ್ಲಯುದ್ಧಮೆನೆ ದೇಸೆಯ ಪೂಮುಡಿಯಂ ತೊಡರ್ಚಿದರ್॥೬೫॥
ಮಳಯಜಮೃಗಮದಪಂಕಂ
ಗಳಿನಡಕಿಲ್ಬೊಟ್ಟನೊರ್ವಳಾಕೆಯ ಭಾಳ
ಸ್ಥಳಿಯೊಳಳವಡಿಸಿದಳ್ ಸ್ಮರ
ಕುಳದೇವತೆ ಮಿಸುಪ ನೊಸಲ ಕಣ್ದೋೞಿದವೋಲ್॥೬೬॥
ವ॥ ಅಂತಲಂಕರಿಸಿ
ಚಂ॥ ಮಸೆದಸಮಾಸ್ತ್ರನುನ್ಮದನಬಾಣಶಲಾಕೆ ವಿಳಾಸದಿಂದಮೇ
ಱಿಸಿದಲರ್ವಿಲ್ಲನೈಕ್ಷವಧನುರ್ಲತೆ ಬರ್ಚಿಸಿ ಮೀನಕೇತುವೆ
ತ್ತಿಸಿದ ಸಮುಲ್ಲಸಜ್ಝಷಪತಾಕೆಯೆನಿಪ್ಪವೊಲಾಂತಳಾಕೆಯಾ
ಪಸದನದೊಳ್ ಜಗತ್ತ್ರಿತಯಚಿತ್ತವಿಮೋಹನಶಕ್ತಿಯೇೞ್ಗೆಯಂ ॥೬೭॥
ವ॥ ಆಗಳ್
ಚಂ॥ ಕಟಿ ಕಳಕಾಂಚಿಯಿಂದೆ ಕಳಕಾಂಚಿಯುಮೀಕಟಿಯಿಂ ಕರಂ ಕನ
ತ್ಕಟಕದಿನೀ ಕನತ್ಕಟಕಮುಂ ಕರದಿಂ ನಿಟಿಲಂ ಲಲಾಮದಿಂ
ನಿಟಿಲದಿನಾ ಲಲಾಮಮುಮಲಂಕರಿಸಿರ್ದುವೆನುತ್ತೆ ನೋಡಿದ
ಘಟಕುಚೆಯರ್ ಸಮಂದರುತುಮಾಕೆಯ ಭೂಷ್ಯವಿಭೂಷಣಂಗಳಂ ॥೬೮॥
ವ॥ ಅದಲ್ಲದೆಯುಂ
ಬಡತನಮನಾಂತ ನಡು ಕೊ
ರ್ವಡರೂದ ಕುಚಂ ಬಿಣ್ಪನಾಳ್ದ ಜಘನಂ ಬೆಳರ್ಗೆಂ
ಪಿಡಿದಧರಮಿಂಪನಪ್ಪಿದ
ನುಡಿ ತಡೆಪಂಬೆತ್ತ ನಡೆ ನಿಜಂ ಕೋಮಳೆಯಾ॥೬೯॥
ವ॥ ಎಂದು ಚತುರಯುವತಿಯರ್ ಪೊಗೞುತ್ತಿರ್ಪಿನಂ ವಿವಾಹಲಗ್ನಂ ಸಾರ್ತಂದುದೆಂದು ಬರವೇೞಲೊಡಂ
ಮ॥ವಿ॥ ನಭಮಂ ಸಂಜೆಮುಗಿಲ್ ಪಗಿಲ್ತ ತೆಱದಿಂ ತಳ್ಪೊಯ್ಯೆ ಭೂಷಾಮಣಿ
ಪ್ರಭೆ ದಿಕ್ಚಕ್ರಮನಚ್ಚಜೊನ್ನಮೆಳಸಿತ್ತೆಂಬನ್ನೆಗಂ ತುಂಬೆ ದೃ
ಕ್ಪ್ರಭೆ ಭೂಭಾಗಮನೆಯ್ದೆಬೆಳ್ಪಮರ್ದ ಪಾಂಗಿಂ ಪೆರ್ಚೆ ಪಾದೋಲ್ಲಸ
ತ್ಪ್ರಭೆ ಬಂದಳ್ ಕುಡುತುಂ ಶಶೆಪ್ರಭೆ ಜನಾಕ್ಷೀಂದೀವರಾನಂದಮಂ ॥೭೦॥
ಮ॥ಸ್ರ॥ ಉರದೊಳ್ ಹಾರಾಂಶು ಗಂಡಸ್ಥಳಿಯೊಳಕರೂಣಾವತಂಸಾಂಶು ಮತ್ತಂ
ಶಿರದೊಳ್ ರತ್ನಾವಳೀಶೇಖರಶಿಖರಸಮುತ್ತಾಂಶುಗಳ್ ಮೊತ್ತಮಂ ಬಿ
ತ್ತರಿಪನ್ನಂ ಸಿದ್ಧವಿದ್ಯಾಧರದಿವಿಜಕುಮಾರರ್ಕಳಂ ಚೆಲ್ವಿನಿಂ ಮಾಂ
ಕರಿಸುತ್ತುಂ ಬಂದನಾಸಾದಿತನಿರುಪಮಶೃಂಗಾರಸಾರಂ ಕುಮಾರಂ॥೭೧॥
ವ॥ ಅಂತು ಬಂದ ವಧೂಕಾಂತರಿರ್ವರುಮಂ ವಿವಾಹವೇದಿಕಾಮಧ್ಯದೊಳ್ ದಳಿಂಬದಿಂ ಪಚ್ಚವಡಿಸಿದ ಪಳಿಕಿನ ಪಟ್ಟವಣೆಯೊಳಿರಿಸಿ ಮುನ್ನಮೆ ಹುತಾಗ್ನಿಯಾಗಿರ್ದ ಪುರೋಹಿತಂ ಪ್ರಣವಪೂರ್ವಕಮುಚ್ಚರಿಸಿದ ಪುಣ್ಯಾಹರವದೊಡನೆ
ಮ॥ ವಿ॥ ಮುಗುಳಂ ಪೇಱಿದ ಕುಂದವಲ್ಲಿಗೆಮರಲ್ತಂದಾ ಕದಂಬೋದ್ಘಶಾ
ಖೆಗಮಚ್ಛಾಂಬುವನಂಬುದಂ ಕಱೆವ ಪಾಂಗಿಂ ಸಾತ್ವಿಕಸ್ವೇದಬಿಂ
ದುಗೆ ರೋಮೋದ್ಗತಿಗಿದರ್ಕೆಯಾದ ಸುತೆಗಂ ಜಾಮಾತೃಗಂ ಪ್ರೀತಿ ಕೈ
ಮಿಗೆ ಕೈನೀರೆಱೆದಂ ಕನತ್ಕಳಶಹಸ್ತಂ ತಜ್ಜಯಶ್ರೀಪ್ರಿಯಂ॥೭೨॥
ವ॥ಆ ಪ್ರಸ್ತಾವದೊಳ್
ಮುಸುಕಿದುದು ದುಂದುಭಿಧ್ವನಿ
ದೆಸೆಯಂ ಮಾಂಗಲ್ಯಗೀತರುತಿ ತಿಂಬಿದುದಾ
ಗಸಮಂ ಶಂಖಧ್ವನಿ ಪೂ
ರಿಸಿದುದು ತಳ್ಪೊಯ್ದು ರೋದಸೀಮಂಡಳಮಂ॥೭೩॥
ಪ್ರಿಯತರಲವಂಗಲವಲೀ
ದ್ವಯಕ್ಕಮೇಕೈಕಲಲಿತಶಾಖಾಯೋಗಂ
ನಯದಿಂ ಸಮನಿಪವೋಲಾ
ಪ್ರಿಯಂಗಮಾ ಪ್ರಿಯೆಗಮಾಯ್ತು ಪಾಣಿಗ್ರಹಣಂ ॥೭೪॥
ನಳಿನಿಯ ನಳಿನಮನಿನನಾ
ಕಳಿಪಂತಿರೆ ಕರದೆ ವಧುವ ಕರಮಂ ಕರದಿಂ
ತಳೆದಂ ಕುಮಾರನಾರ್ದ್ರಾಂ
ಗುಳಿದಳಕಂಟಕಿತಬಾಹುನಾಳಾನ್ವಿತಮಂ ॥೭೫॥
॥ಮಾಲಿನಿ॥
ಮನವನೊಲಿಸೆ ತಿರ್ಯಗ್ವರ್ತಿತಸ್ಮೇರತಾರಂ
ಜನಪತಿಸುತನಾಗಳ್ ಕಾಂತೆಯಂ ನೋಡಿದಂ ಮೆ
ಲ್ಲನೆ ಸಮದಸಲೀಲಾಪಾಂಗದಿಂ ನೋೞ್ಪವೋಲ್ ಹ
ಸ್ತಿನಿಯನಿನಿಯನಾರ್ದಪ್ರೇಮದಿಂ ಸಾಮಜೇಂದ್ರಂ॥೭೬॥
ಚಂ॥ ಮಸಪಳಿಪಿಂ ಪ್ರಿಯಾನನಮನೀಕ್ಷಿಸಲುದ್ಯತೆಯಾಗಿ ತಾನೆ ಲ
ಜ್ಜಿಸಿ ತಲೆವಾಗಿ ಕಂಡು ಮಣಿಕುಟ್ಟಿಮದೊಳ್ ನೆಱೆ ನೋಡಿ ಮತ್ತೆ ಮಾ
ನಸದೊಳಗಿಟ್ಟೊಡಂ ನವಸುಖಾನುಭವಕ್ಕರೆಮುಚ್ಚಿ ಕಣ್ಗಳಂ
ಪಸರಿಪ ಹೋಮಧೂಮತತಿಗಂದು ಶಶಿಪ್ರಭೆ ದೂಱನೇಱಿಪಳ್ ॥೭೭॥
ವ॥ ಅಂತು ಪರಸ್ಪರಲೀಲಾವಲೋಕನಸುಖಮನನುಭವಿಸಿ ಬೞಿಯಂ ಪುರೋಹಿತಾದೇಶದಿಂ ಹೋಮಾಗ್ನಿಯಂ ಪ್ರದಕ್ಷಿಣಂಗೈದು ಲಾಜಾಂಜಲಿಯನಿಕ್ಕಿ ಬಂದೊಂದೆಪಸೆಯೊಳ್ ಕುಳ್ಳಿರ್ದನೇಕಾಶೀರ್ವಾದಪುರಸ್ಸರಮಾರ್ದ್ರಾಕ್ಷತಾ-
ರೋಪಣಮಂಗಳಮನಂಗೀಕರಿಸೆ
ಆ ರಮಣೀರಮಣರ ಶೃಂ
ಗಾರರಸಾಪೂರ್ವತರತರಂಗಿಣಿಯೊಳದೇಂ
ಪಾರೈಸಿ ತೊಳಲ್ದುವೊ ರಸ
ಪೂರದ ಮೀಂಗಳನೆ ಪೋಲ್ತು ನೋೞ್ಪರ ಕಣ್ಗಳ್ ॥೭೮॥
ಚಂ ॥ ರತಿಯೊಡನಿಂದ್ರನೆಂತು ನೆರೆದಂ ಶಚಿಯೊಳ್ ಸ್ಮರನೆಂತು ನಾಡೆ ಸಂ
ಗತಿವಡೆದಂ ದಲೆಂದವಳ ರೂಪುಮನಾತನ ಲೀಲೆಯಂ ಮನ
ಕ್ಕತಿಶಯಮಾಗೆ ಮತ್ತವಳ ಲೀಲೆಯನಾತನ ರೂಪುಮಂ ಜನ
ಪ್ರತತಿ ಮರಲೂದು ನೋಡಿದುದು ನಿಂದು ವಿವಾಹಗೃಹೈಕದೇಶದೊಳ್॥೭೯॥
ಉ॥ ಇದು ಪಯೋಜಜಂಗೆ ಕೃತಕೃತ್ಯತೆ ಸಾರೂದುದು ಪುಷ್ಪಸಾಯಕಂ
ಗಿಂದೊಳಸೋರ್ದುದೇಸುವೆಸನಿಂದು ಸನಾಭಿಜನಕ್ಕೊಡರ್ಚಿತಾ
ನಂದಪರಂಪರಾಜನನಮಿಂದು ಫಲಂ ಪೊಸಜವ್ವನಕ್ಕಮಾ
ಯ್ತಿಂದು ಸುರೂಪವೃತ್ತಿ ದೊರೆವೆತ್ತುದು ನಾಡೆಯುಮೆಂದು ನೋಡಿದರ್ ॥೮೦॥
ವ॥ ಅನ್ನೆಗಂ ಜಯಶ್ರೀಮಹಾದೇವಿಯಂತಃಪುರಕಾಂತಾಜನಕ್ಕಂ ಪ್ರಧಾನ ವಧೂಜನಕ್ಕಂ ಸಾಮಂತಸೀಮಂತಿನೀನಿವ-
ಹಕ್ಕಂ ಪುರಪುರಂಧ್ರೀಸಮೂಹಕ್ಕಂ ವಾರನಾರೀಪ್ರತಾನಕ್ಕಂ ತಾನುಂ ಪರಿಚಾರಿಕಾಜನಮುಂ ಕೈಗೈಯೊಳ್
ಚಂ॥ ವಿದಳಿತಪುಷ್ಪಮಾಲಿಕೆಗಳಿಂ ಮಳಯೋದ್ಭವದಿಂ ತೊಳಪ್ಪ ರ
ನ್ನದ ತೊಡವಿಂದಳಂಕರಿಸಿ ಕಾಂಚನಭಾಜನದಿಂದೆ ಪಂಚರ
ತ್ನದ ಘನಸಾರವಾರಿಯ ಮೃಗೋತ್ಥಕುಳುತ್ಥದ ಬಾಯಿನಂಗಳಂ
ಮುದದೊದವಿಂದಮಿತ್ತು ಮೆಱೆದರ್ ನೆಲೆವೆರ್ಚಿದುದಾತ್ತವೃತ್ತಿಯಂ॥೮೧॥
ಚಂ॥ ಹೃದಯದೊಳೆನ್ನವರ್ಪೆಱರಿವರ್ ಧನಿಕರ್ ಬಡವರ್ ಸಮಂತು ಬೇ
ಡದವರಡುರ್ತು ಬೇಡಿದವರೆನ್ನದೆ ರನ್ನದ ಪೊನ್ನ ಚಿತ್ರವ
ಸ್ತ್ರದ ಪೊಸಪಚ್ಚದೊಟ್ಟಿಲನೆ ಕೋಶಗೃಹಂ ಬಱಿದಾಗೆ ಕೊಟ್ಟು ಮಾ
ಣದೆ ಮಗುೞಾನೆಯಂ ಕುದುರೆಯಂ ಧರಣೀಪತಿ ಸಾಱಿ ಬೀಱಿದಂ ॥೮೨
ವ ॥ ಆ ವಿವಾಹಕಲ್ಯಾಣಾನಂತರಂ
ಚಂ॥ ಎಡೆಗುಡೆ ಸಾರ್ದು ಕೇಳಲೆಳಸುತ್ತಿರೆ ಮಾತಱಿದಾಡಿ ಕೇಳಿಯೊಳ್
ತೊಡರ್ದಿರೆ ಸೋಂಕಿ ಮೆಯ್ಯನಿನಿತೊಪ್ಪಿಸೆ ಪಾಂಗಱಿದಪ್ಪಿ ತಾಂ ಮೊಗಂ
ಗುಡೆ ಪದವೆತ್ತು ಚುಂಬಿಸಿ ಭಯಂಗೆಯೆ ಬಲ್ವೆಣಸಂ ಪೊದೞ್ಚಿ ನಾ
ಣ್ಗಿಡೆ ನೆರೆದೂಢೆಯಂ ಪ್ರಥಮಸಂಗಮದೊಳ್ ಕುವರಂ ಮರಳ್ಚಿದಂ ॥೮೩॥
ಮಸಪ ನಸುಲಜ್ಜೆಯಂ ಮಾ
ಣಿಸಿದುದು ಬಾಯ್ಗೂಟದಿಂಪು ಮಣಿತಮುಮಂ ಮ
ೞ್ಗಿಸಿದುದು ಮೆಯ್ಸೋಂಕಿನ ಹರ
ವಸವಱಿವುಮನರರೆ ತೂಳ್ದಿದುದು ಪೊಸಸುಸಿಲೊಳ್॥೮೪॥
ಉ॥ ಚುಂಬನಮೊರ್ಮೆಗೊರ್ಮೆ ತನಿವೆರ್ಚುವುದಪ್ಪಿರದೊರ್ಮೆಗೊರ್ಮೆ ಮ
ತ್ತಂ ಬಿಗುಪೇಱುತಿರ್ಪುದು ವಿಳಾಸದ ಗೆಯ್ತಮದೊರ್ಮೆಗೊರ್ಮೆಗಿಂ
ಪಿಂ ಬಗೆಯಂ ಮರುಳ್ಚುವುದು ನುಣ್ನುಡಿಯುಂ ಕಿವಿಗೊರ್ಮೆಗೊರ್ಮೆ ಸೋ
ಲಂಬಡೆಯುತ್ತುಮಿರ್ಪುದವರ್ಗಳ್ಗವಕಾಶಮದುಂಟೆ ಬೇಟದೊಳ್॥೮೫॥
ಚಂ॥ ಅನವರತಂ ರಥೋತ್ಸವದೊಳುಣ್ಮುವ ಘರ್ಮಜಲಂಗಳಿಂದೆ ಮ
ಜ್ಜನಮನತಿಪ್ರಿಯಾಧರಸುಧಾರಸಸೇವನೆಯಿಂದೂಟಮಂ
ಮನದಱಿವಂ ಕೞಲ್ಚುವ ರತಾಂತಸುಖೋದಯದಿಂದೆ ನಿದ್ರೆಯಂ
ನೆನೆಯದೆ ಪೋದುವಂತವರ್ಗೆ ಚಿತ್ತಜಕೇಳಿಗಳಿಂದೆ ಪೊೞ್ತುಗಳ್॥ ೮೬॥
ವ॥ ಅಂತು ಕತಿಪಯದಿನಂಗಳಂ ಪ್ರತಿದಿನಪ್ರವರ್ಧಮಾನನವಪ್ರಣಯಪ್ರಸ್ತುತವಿನೋದಂಗಳಿಂ ಕಳಿಪಿ ಬೞಿಯಂ ಜನನೀಜನಕದರ್ಶನೋತ್ಕಂಠತೆಯಿಂ ನಿಜಪುರಗಮನಾಭಿಮುಖನಾದ ಕುಮಾರನಭಿಪ್ರಾಯಮನಱಿದು ಜಯವರ್ಮಮಂಡಲೇಶ್ವರಂ ನಿಜತನೂಜೆಯೊಡವೋಪಂತು ಚಾಮರದ ಕುಂಚದಡಪದ ಡವಕೆಯ ಕನ್ನಡಿಯ ಪಡಿಗದ ಪಾವುಗೆಯ ಸೆಜ್ಜೆಯ ಮಜ್ಜನದ ಖಜ್ಜಯದ ಹೀಲಿಕರಗದ ಬೋನದ ಪರಿಯಣದ ಮುಡಿಯಿಕ್ಕುವಡಿಯೂಡುವಡಿಗು-
ಟ್ಟುವಾರತಿಯೆತ್ತುವ ತಿಳಕವಿಡುವ ನಿಱಿವಿಡಿವ ಮಾಲೆಸಮೆವ ಘಟ್ಟಿಮಗುಳ್ಚುವ ನೆಲನನುಗ್ಘುಡಿಪ ಪಲವುಂ ನಿಯೋಗ-
ದನ್ವಯಾಗತೆಯರುಮಪ್ಪ ಆಕಾರವತಿಯರಂ ವಿಳಾಸಿನೀಜನಂಗಳುಮನನುಜತನುಜ ಪ್ರೀತಿಯಿಂ ನಡೆಪಿದ ಕೇಳೀಕೀರಶಾರಿಕಾಪಾರಾವತಮಯೂರಹಾರೀತಕಚಕೋರಹಂಸಹರಿಣಕರಿಕಳಭಸಂದೋಹಮುಮಂ ವಿನೋದ
ಪಾತ್ರಂಗಳುಮಪ್ಪ ಬರ್ಬರಶಾಕಬಧಿರವರ್ಷಧರಮೂಕಕಿರಾತಜಡುಲಗಡಲ ಖಂಜರಂಕಸಮಾಜಮುಮಂ ವೈಣಿಕಪಾಣಿವಿಕವಾಂಶಿಕಮಾರ್ದಂಗಿಕಗಾಯಕನರ್ತಕಾದಿ ಕುತಪಪ್ರತತಿಯುಮಂ ಶಿಬಿಕಾಂದೋಳವಾಜಿವಾರಣ-
ವರೂಥವಿಸರಾದಿನಾನಾಯಾನಂಗಳುಮಂ ಅನುಕುಪ್ಯರೂಪ್ಯಕನಕಾಂಬರರತ್ನಾಭರಣಭಾರಧಾರಣ ಧೌರೇಯ-
ಮಹಾಕಾಯ ವೈವಧಿಕನಿಕರಮುಮಂ ಸಮಕಟ್ಟಿ ವಿಶಿಷ್ಟವಾರವಾಸರ ತಾರಾಕರಣಯೋಗಸಂಯೋಗದೊಳ್
ಮಗಳುಮನಳಿಯನುಮಂ ಬರಿಸಿ ಕುಳ್ಳಿರಿಸಿ
ಉ॥ ನಿನ್ನಯ ಕೂಟಮಂ ಬಯಸಿ ಪೆತ್ತವಳೆಂತುಮೊಡಂಬಡಂ ದಿಟಂ
ನಿನ್ನ ಮನಕ್ಕೆ ಮಾಡಳದು ದೈವಕೃತಂ ದೊರೆಕೊಂಡುದಪ್ಪೊಡಂ
ಮನ್ನಿಪುದೆಮ್ಮ ಕಾರಣದಿನಿತ್ತಣ ಪಂಬಲನೀಕೆ ಮಾಡದಂ
ತಿನ್ನಡೆಯಿಪ್ಪುದೊಂದೆ ತೆಱನಪ್ಪುದಿದಂ ಸೆಱಗೊಡ್ಡಿ ಬೇಡಿದೆಂ॥೮೭॥
ವ॥ ಎಂದು ಕುಮಾರಂಗೆ ಪೇೞ್ದು ತಾನುಂ ಜಯಶ್ರೀಮಹಾದೇವಿಯುಂ ಶಶಿಪ್ರಭೆಯ ಮೊಗಮಂ ಪ್ರೇಮರಸವಿಸರವಿಲುಳಿತ ಲೋಚನಂಗಳಿಂ ನೋಡಿ
ಉ॥ ಅಕ್ಕ ನಿಜಪ್ರಿಯಂಗೆ ಮನದನ್ನದೆ ನೀಂ ಬೆಸಕೆಯ್ವುದಾಗಳುಂ
ಮಕ್ಕಳ ಮಾೞ್ಕೆಯಿಂದಿರದೆ ನೀನೊಡವಂದ ಜನಕ್ಕೆ ಸಂತಸಂ
ಮೊಕ್ಕಳಮಾಗೆ ಮನ್ನಿಪುದು ಮಾವನ ಪೆರ್ಮೆಗಮತ್ತೆಯೊಲ್ಮೆಗಂ
ತಕ್ಕ ನೆಗೞ್ತೆಯಂ ನೆಗೞ್ವುದೀವುದು ಪೆತ್ತೆಮಗಂ ಪ್ರಮೋದಮಂ॥೮೮॥
ವ॥ ಎಂದು ಬುದ್ಧಿವೇೞ್ದು ಶೇಷಾಕ್ಷತಮನಿಕ್ಕಿ ಮಂಗಳಮೃದಂಗರವಮೆಸೆಯೆ ಪುರಮಂ ಪೊಱಮಟ್ಟು ಕಿಱಿದಂತರಮಂ ಕಳುಪಿ ಮಗುಳ್ದು ವಿಪುಳಪುರಮಂ ಪೊಕ್ಕರ್ ಇತ್ತ ಯೈವರಾಜನುಂ ನದ್ಯುಭಯತಟೋದ್ಯಾನಂಗಳೊಳಂ ಮಹಾಸರೋ-
ವರತೀರನಂದನಂಗಳೊಳಂ ಪರೂವತನಿತಂಬಪಾವನವನಂಗಳೊಳಂ ಬಳ್ಳಿಮಾವುಗಳೆ ಬಳ್ಳಿಮಾಡಂಗಳಾಗೆಯುಂ ಶ್ರೀಖಂಡಷಂಡಂಗಳೆ ಪರಿಷನ್ಮಂಡಪಂಗಳಾಗೆಯುಂ ತಮಾಲಮಾಲೆಗಳೆ ಸಂಗೀತಶಾಲೆಗಳಾಗೆಯುಂ ಲತಾವಿತಾನಂಗಳೆ
ವಿತಾನಂಗಳಾಗೆಯುಂ ಅದಿರ್ಮುತ್ತೆಯ ಸುತ್ತುಗಳೆ ತೆರೆಸುತ್ತುಗಳಾಗೆಯುಂ ಎಸಳಪಸರಂಗಳೆ ಮಸುರಿಗೆಗಳಾಗೆಯುಂ
ಕೆಂದಳಿರಗೊಂದಂಗಳೆ ಬೊಂದರಿಗೆಗಳಾಗೆಯುಂ ಚಂಪಕವೀಧಿಗಳೆ ವಿನೋದವಿಹರಣವೀಧಿಗಳಾಗೆಯುಂ ಬೀಡುಬಿಡು-
ತ್ತುಂ ಕೆಲವಾನುಂದಿವಸದಿಂದನ್ವಯಾಗತರಾಜಧಾನಿಯಂ ಕೌಶಲೆಯನೆಯ್ದಿ ಕ್ರೋಶದ್ವಯಮಾತ್ರದೊಳ್ ನಿಂದು ನಿಜಾಗ-
ಮವಾರ್ತೆಯಂ ಜನಕನಲ್ಲಿಗೆ ವಾರ್ತಾಚರರ ಕೈಯೊಳಟ್ಟುವುದುಮವರ್ ಬಂದು ಓಲಗದೊಳಿರ್ದ ನರನಾಥಂಗಱಿಪ-
ಲೊಡಂ
ಚಂ॥ ಕಡವಲರ್ದಂತೆ ಕಂಟಕಿತಮಾಗಿರೆ ಮೆಯ್ ಸರೈಜಂ ರಸಾಯನಂ
ಬಡೆದವೊಲಾಗೆ ತಾಂ ಪೊದೆದ ಮೇಲುದಱಿಂ ಗುಡಿಯಂ ತೊಡರ್ಚಿ ದಾಂ
ಗುಡಿವಿಡೆ ಹರ್ಷಮೊಂದು ಪೊಱೆಯೇಱಿದನಿತ್ತಜಿತಂಜಯಂ ಮನ
ಕ್ಕೊಡರಿಸದಾರ್ಗೆ ರಾಗದೊದವಂ ಪಿರಿದುಂ ಪ್ರಿಯಬಂಧುಸಂಗಮಂ॥೮೯॥
ವ॥ ಆಗಳಾವಾರ್ತೆಯನಜಿತಸೇನಮಹಾದೇವಿ ಕೇಳ್ದು ಘನನಿನದಮಂ ಕೇಳ್ದ ಮಯೂರವನಿತೆಯಂತೆ ಮನಃಪ್ರಮೋದಮನೊಳಕೆಯ್ದು ಅರಸನಲ್ಲಿಗೆವಂದು ಚರರ್ಗಂಗುಚಿತಮನಿತ್ತು ಪುರದೊಳೊಸಗೆಯಂ ಮಾಡಲ್ವೇೞ್ದು
ಮ॥ವಿ॥ ದೆಸೆಯಂ ವಾರ್ಧಿತರಂಗಮಾಲೆ ನೆಲನಂ ನೀಲಾಚಲಾನೀಕಮಾ
ಗಸಮಂ ಶಾರದನೀರದಪ್ರತತಿ ತಿಂಬಿತ್ತೆಂಬಿನಂ ಜಾತಿವಾ
ಜಿಸಮಾಜಂ ಮದವದ್ಗಜೇಂದ್ರಘಟೆ ಪಾಂಡುಚ್ಛತ್ರಷಂಡಂ ನಿಗುಂ
ಬಿಸೆ ಪುತ್ರಂಗಿದಿರ್ವಂದರಂದರಸಿಯುಂ ಭೂಪಾಲನುಂ ಲೀಲೆಯಿಂ॥೯೦॥
ವ॥ ಅಂತು ಬಂದು ವಾಹನದಿಂದಿೞಿದು
ಚಂ॥ ಚರಣಸರೋರುಹಕ್ಕೆ ಮಕುಟದ್ಯುತಿವಾರಿಗಳಿಂದೆ ಪಾದ್ಯಮಂ
ವಿರಚಿಸಿದಾತ್ಮಜಂಗೆ ಬಿಡುಮುತ್ತಿನ ಸೇಸೆಯನಿಕ್ಕುವಂದದಿಂ
ಸುರಿದು ಮುದಶ್ರುಬಿಂದುಚಯಮಂ ಬೞಿಯಂ ಪರಸುತ್ತೆ ಮತ್ತೆ ಮ
ತ್ತಿರದೊಲವಿಂದಮಪ್ಪಿ ಬಿಡದಿರ್ದನದೊಂದರೆಜಾವಮಂ ನೃಪಂ ॥೯೧॥
ವ॥ ಅನಂತರಂ ನಿಜಪದಸರೋಜಕ್ಕಾನಂದಾಶ್ರುಬಿಂದೈಗಳಿಂ ಮಕರಂದಬಿಂದುಗಳನೋಲಗಿಸಿದ ಕುಮಾರನನಜಿತ-
ಸೇನಮಹಾದೇವಿ ನಲ್ವರಕೆಯಿಂ ಪರಸಿ ಮೋಹರಸಪರವಶತೆಯಿಂ ತೊಱೆದ ಮೊಲೆಗೆಲಕ್ಕೆ ತೆಗೆದು ಪುಳಕಕಳಿಕಾಕುಳ-
ತೆಯಿಂ ಕದಂಬಕುಸುಮಸ್ರಜಂಗಳಂತಿರ್ದ ಭುಜವಲ್ಲರಿಗಳಿಂದಪ್ಪಿ
ಉ॥ ಎನ್ನಯ ತಂದೆ ಬಂದನೆನಗಿಂದು ಮನೋರಥಸಿದ್ಧಿಯಾದುದಿಂ
ದುನ್ನತಿವೆತ್ತುದಗ್ರಮಹಿಷೀಪದಮಿಂದಧಿದೇವತಾಚಯಂ
ಸನ್ನಿದಮಾದುದೆಂದು ಸಿರಿಗಂಪಿನ ಪಂಕದೊಳಣ್ಪನಿಕ್ಕಿ ತಾಂ
ಜೊನ್ನದ ಜೊಂಪದೊಳ್ ನೆಲಸಿದಂತೆರ್ದೆಯಾಱಿದಳೊಪ್ಪಿ ತೋಱಿದಳ್॥೯೨॥
ವ॥ ಆಗಳೆ ಪೊಡೆಮಟ್ಟ ಶಶಿಪ್ರಭೆಯನಖಂಡಿತಕರ್ಣಪತ್ರಶೋಭಾಪಾತ್ರೆಯಾಗೆಂದು ಪರಸಿ ಪುರಾಭಿಮುಖನಾಗಿ
ಬಡತನದೊಳ್ ಸಿರಿ ಮೆಯ್ ಬೆಮ
ರ್ವೆಡೆಯೊಳ್ ತಂಗಾಳಿ ಮರ್ವು ಪರ್ವಿದ ಸಮಯ
ಕ್ಕುಡುಪೋದಯಮೆಬಂದದೆ
ಗಡಣಿಸಿದುದು ಸುತನ ಬರವು ಬಯಸುವ ಪದದೊಳ್॥೯೩॥
ಅಂದೆ ವಿಗತಾಶರಮಪ್ಪೆಮ
ಗಂ ದೇವಿಗಮಾಮುನೀಶ್ವರಂ ನಿಮ್ಮ ಸುತಂ
ಬಂದಪನೆಂಬಾದೇಶದಿ
ನಿಂದುವರಂ ಪಿಡಿದುದೊಡಲನಾಶಾಪಾಶಂ॥೯೪॥
ಅವಧರಿಪೊಡೆ ನೆಲನಂ ಪೊ
ಯ್ದವನ ಕರಂ ಬೆಟ್ಟಮೆಚ್ಚ ಧನ್ವಿಯ ಸರಲೆಂ
ಬಿವು ತಪ್ಪುವೊಡಂ ಪೋಲ್ವುವು
ಸವಣರ ನುಡಿಯೆಂದುಮೆಂತುಮೇಂ ತಪ್ಪುಗುಮೇ॥೯೫॥
ವ॥ ಎಂದು ಪಕಾಕದಾನೆಗಳೊಳ್ ಬರ್ಪಾ ಪಾರ್ಥಿವರೊಳರಸಂ ನುಡಿಯುತುಂ ಬಂದನೇಕವಸನಕಿಸಲಯಕುಸುಮಮ-
ಣಿವಿಸರರಚಿತತೋರಣಮಾಲಾಮನೋಹರಮುಂ ಅವಿರಳ ಕಾಶ್ಮೀರರಸವಿಸರಸಂಸಿಕ್ತರಾಜವೀಧೀಸನಾಥಮುಂ
ಉಚ್ಛ್ರಿತ ಸಮೀಚೀನಚೀನಧ್ವಜವಿತಾನವಿರಾಜಿತಮುಂ ಉತ್ಸಾಹಪಟಹರಟನಪ್ರತಿನಾದಿತ ನಾನಾಪ್ರಾಸಾದಕುಂಜ-
ರಂಜಿತಮುಂ ಅಟ್ಟಾಳಸಾಳಗೋಪುರಸೌಧಸಂಕುಳಸಮಾರೂಢದರೂಶನೋತ್ಸುಕಜನಜನಿತ ಸಂಕಟಮುಮಪ್ಪ-
ನಗರಿಯಂ ಪುಗುವಾಗಳ್
ಚಂ॥ ಪಸರೆಪ ಪಾದರಾಗಮಿಳೆಯಂ ತಳಿರೇಱಿಸೆಲೋಚನಾಂಶುಗಳ್
ದೆಸೆಯನಲರ್ಚಿ ದೇಹರುಚಿ ಪೊಂದೊಡವಂ ಗಗನಾಂಗದೊಳ್ ನಿಯೋ
ಜಿಸೆ ಕಳಕಾಂಚಿಕಾವಿರುತಿ ಕರ್ಣದೊಳಂಚೆಯ ತುಪ್ಪುೞಂಚೆಯಂ
ಪೊಸೆಯೆ ನಿರೀಕ್ಷಣವ್ಯಸನದಿಂ ನಡೆತಂದುದು ಸೌಂದರೀಜನಂ॥೯೬॥
ಮ॥ ಸ್ರ॥ ಜನಸಮ್ಮರ್ದೋತ್ಥಕೋಳಾಹಳಕುಪಿತಹಯಸ್ಕಂಧಮೂಲಸ್ಥಳಾಸ್ಫಾ
ಳನಲೀಲಂ ತಾಂ ಕುಮಾರಂ ಗಮನಚತುರಚಂಚದೂವಶಾರೂಢೆ ತತ್ಕಾ
ಮಿನಿ ಮಾದ್ಯತ್ಕುಂಭಿಕುಂಭಸ್ಥಳನಿಹಿತನಿಶಾತಾಂಕುಶಂ ಭೂಭುಜಂ ಖ
ೞ್ಗಿನಿಕಾಯಪ್ರಾವೃತೋದ್ಯನ್ಮಣಿಮಯಶಿಭಿಕಾರೂಢೆ ಮಾದೇವಿಯಲ್ತೇ॥೯೭॥
ವ॥ ಎಂದು ನುಡಿವ ಯುವತಿಯರ ನುಡಿಯೊಳ್ ತಡಂಗಲಿಸಿದ ಪುಣ್ಯಪಾಠಕಜನಂಗಳಾಶೀರ್ವಾದನಾದಮುಮಂ ಅಗಣ್ಯಪುಣ್ಯಾಂಗನಾಜನಂಗಳ್ ತಳಿವ ಶೇಷಾಕ್ಷತಂಗಳುಮನಾಕರ್ಷಿಸುತ್ತುಮಾಂತುಕೊಳುತ್ತುಂ ಬಂದು ರೃಜಮಂದಿರಮಂ ಪೊಕ್ಕು ಕರೈಮಾಡದ ಮೊದಲಭೂಮಿಕೆಯೊಳಿಕ್ಕಿದ ವಿಶಾಲಹಂಸತೂಲದೊಳರಸಿಯುಂ ತಾನುಂ ಕುಳ್ಳಿರ್ದು ಯುವರಾಜ-
ನುಮನೊಲ್ಲೆನೆನೆಯೆನೆ ತಮ್ಮ ಸಮೀಪದೊಳ್ ಕುಳ್ಳಿರಿಸಿ ಶಶಿಪ್ರಭೆಗೌಚಿತ್ಯಾಸನಮನಿತ್ತು ಅಶೇಷಪರಿವಾರಮಂ ವಿಸರೂಜಿಸಿ
ಅಡಿಗಡಿಗಪ್ಪಿಕೊಳುತ್ತುಂ
ನುಡಿನುಡಿಗೊರ್ಮೊರ್ಮೆ ತೆಗೆದು ಮುಂಡಾಡುತ್ತುಂ
ಪಿಡಿದು ಚುಬುಕಾಗ್ರಮಂ ನಲ
ವೊಡರಸಿ ಮುದ್ದಾಡಿಸುತ್ತುಮಿರ್ದು ಸುತನಂ॥೯೮॥
ವ॥ ಇರ್ದು ಕಿಱಿದಾನುಂ ಬೇಗದಿಂ
ಶಾ॥ ಏನೆಂದುಯ್ದನವಂ ಬೞಿಕ್ಕವನಿನಾದಾಪತ್ತದೇನಾತನಂ
ನೀನೇಗೆಯ್ದೆಯಿನಿತ್ತುಕಾಲಮಿರವೆಂತಾದತ್ತು ಮತ್ತೀವಿವಾಹ
ಹಾನಂದಂ ದೊರೆಕೊಂಡುದಾರಿನಿದು ಮಚ್ಚಿತ್ತಕ್ಕೆ ಚಿತ್ರಾವಹಂ
ತಾನೆಂದಾತ್ಮಜನಿಂನೃಪಂ ತಿಳಿದನಾ ವೃತ್ತಾಂತದಾದ್ಯಂತಮಂ॥೯೯॥
ವ॥ ತಿಳಿದು ಬೞಿಯಂ ಯಥೋಚಿತದಿವಸವ್ಯಾಪಾರಮಂ ತೀರ್ಚಿ ಪರಮ ಪ್ರಮೋದ ಪರಂಪರೆಯನಪ್ಪುಕೆಯ್ದಿರ್ಪಿನಂ
ಮ॥ವಿ॥ ಸ್ಫುರದುಗ್ರೋರಗಪೂರ್ವಮಪ್ಪ ರಸೆಯೊಳ್ ತಿಗ್ಮಾಂಶುಬಿಂಬೋದಯಂ
ಪಿರಿದುಂ ಚೋದ್ಯಮಿದೆಂಬಿನಂ ನಿಶಿತಶಸ್ತ್ರಾಕೀರ್ಣಮಪ್ಪಸ್ತ್ರಮಂ
ದಿರದೊಳ್ ಯಕ್ಷಸಹಸ್ರರಕ್ಷಿತಮುದಗ್ರಾರಾಂಶುಭಾರಂ ಭಯಾ
ತುರಚೇತಃಪರಚಕ್ರಮುಣ್ಮಿದುದುಚಕ್ರಂ ವಿಕ್ರಮೈಕಕ್ರಮಂ॥೧೦೦॥
ವ॥ ಅಂತು ಪುಟ್ಟಿದ ಚಕ್ರೋತ್ಪತ್ತಿಯುತ್ಸವಮನಾಯುಧಾಧ್ಯಕ್ಷಂ ಬಂದರಸಂಗೆ ಬಿನ್ನವಿಸೆ ಮಗನ ಗಣ್ಯಪುಣ್ಯಪ್ರಭಾವಕ್ಕೆ ಮನದೊಳಾನಂದಮುಮನಾಶ್ಚರ್ಯಮುಮನಾಂತು ಕುಮಾರನಂ ಬರಿಸಿ
ಚಂ॥ ಉದಯಿಸಿತಾಯುಧಾಲಯದೊಳಿಂದು ರಥಾಂಗಮದಲ್ತೆ ನಿನ್ನ ಪು
ಣ್ಯದ ಫಲಮಾಫಲಂ ಜಿನಪದಾಂಬುಜವರ್ಯಸಪರ್ಯೆಯಿಂದಮಾ
ಯ್ತದನಱಿದಿಚ್ಛೆಯರ್ಚನೆಗಳಿಂದೆ ತದಂಘ್ರಿಯನೈದೆ ಮುಂ ಬೞಿ
ಕ್ಕದನೊಲವಿಂದಮರ್ಚಿಸು ತನೂಭವ ಪೆರ್ಚಿಸು ರಾಜ್ಯಲಕ್ಷ್ಮಿಯಂ॥೧೦೧॥
ವ॥ ಎಂದಾತನ ಮನೋಗತಾನುವಾದಮಂ ಮಾಡುವುದುಂ ಮಹಾವಿಭುತಿಯಿಂ ಜಿನರಾಜಮಂದಿರಕ್ಕೆ ವಂದು
ರಗಳೆ:
ಪ್ರಥಿತತೀರ್ಥಾಹ್ವಯಸರಿತ್ಸರಸ್ಸಲಿಲದಿಂ
ಪೃಥುಕಮಲಪರಿಮಲಪರಾಗಭರಕಲಿಲದಿಂ॥
ರಂಗಕಲಶೋನ್ಮಿಶ್ರಚಂದನಕ್ಷೋದದಿಂ
ಭೃಂಗಾಂಗನಾಕೃಷ್ಟಿಪರಿಣತಾಮೋದದಿಂ ॥
ಶಶಿಶಕಲಸಮಕಳಮತಂಡುಲನಿಕಾಯದಿಂ
ವಿಶದಸದ್ಭಕ್ತಿಲತಿಕಾಂಕುರಪ್ರಾಯದಿಂ॥
ಅಪರಿಮಿತವಿಕಚಕುಸುಮಸ್ರಕ್ಸಮೂಹದಿಂ
ಸ್ವಪರಿಮಳಭರಜಡೀಕೃತಗಂಧವಾಹದಿಂ ॥
ಅಕ್ಷೂಣಕನಕಪಾತ್ರೋದ್ಧೃತನಿವೇದ್ಯದಿಂ
ಭಕ್ಷೋಪದಂಶಘೃತಸಿತನಿಚಯಹೃದ್ಯದಿಂ॥
ವರ್ತಿಕಾರತ್ನಪ್ರಮಿತದೀಪ್ತದೀಪದಿಂ
ವರ್ತೀಕೃತೋದ್ಧೈಮಶಾರೀಕಳಾಪದಿಂ ॥
ಲಸಿತಾಗುರುಪ್ರಬಳತರಧೂಪಧೂಮದಿಂ
ವಿಸರದಾಮೋದಾಧಿವಾಸಿತವ್ಯೋಮದಿಂ॥
ರಾಜಕದಳಾಮ್ರಜಂಬೀರಫಲಗುಚ್ಛದಿಂ
ಪೂಜನಾಮಾತ್ರಸಂಪಾದಿತಹೃದಿಚ್ಛದಿಂ॥
ಪರಮಜಿನರಾಜನಂ ದುರಿತಾಬ್ದರಾಜನಂ
ಪೂಜಿಸಿ ಸುಭಕ್ತಿಯಿಂ ರಾಜಿಸಿ ಮೃದೂಕ್ತಿಯಿಂ ॥
ವಾಸ್ತವಗುಣಸ್ತವದೆ ಶಸ್ತರೂಪಸ್ತವದೆ
ಪೊಗೞ್ವೞ್ತಿವರೆ ತನಗೆ ಮಗುಳ್ದನಿಂತರಮನೆಗೆ॥ ೧೦೨॥
ವ॥ ಅನಂತರಂ ತನ್ನ ಪುಣ್ಯೋದಯಾಚಲದೊಳುದಯಿಸಿದ ತೇಜೋಮಾರ್ತಂಡಮಂಡಳದಂತೆ ಸೊಗಯಿಸುವ ಸುದರ್ಶನಮೆಂಬ ಚಕ್ರರತ್ನಮಂ ತನ್ನ ಪೆಂಪಿನೊಳ್ ಸೆಣಸಿ ಕೀೞ್ವಟ್ಟು ಆಳ್ವೆಸಕ್ಕೆ ವಂದ ಗಗನತಳದಂತೆ ಪೆರ್ಮೆಯಂ ತಳೆದ ವಜ್ರಮಯವೆಂಬ ಚರ್ಮರತ್ನಮಂ ತನ್ನ ಪುಣ್ಯಪ್ರಭಾವದಿಂ ನಿಯೋಗಿಸಿಟ್ಟನಿತೆ ಬೇಗದಿಂ ಬೆಟ್ಟಘಟ್ಟಹಳ್ಳಕೊಳ್ಳಮೆಂಬ ವಿಷಮಭೂತಳಮನನಿತುಮಂ ನಾಲ್ವತ್ತೆಂಟುಯೋಜನಪ್ರಮಾಣ ವಿಸ್ತೀರ್ಣಕಟಕಕ್ಕೆ ಸುಖಪ್ರಯಾಣನಿಮಿತ್ತಂ ಸಮತಳಮಂ ಮಾಡೆ ಕೈಗೆ ಬಂದ ದಂಡರತ್ನಮುಂ ಕೂಟಮಂ ಬಯಸಿ ಬರಲ್ಕೆ ಸಾಮ್ರಾಜ್ಯಲಕ್ಷ್ಮಿ ಮುಂದಟ್ಟಿದ ಲೀಲಾಸನಾಳಧವಳಶತಪತ್ರಮೆನಿಪ ಸೂರ್ಯಪ್ರಭಮೆಂಬ ವಿಚಿತ್ರಚ್ಛತ್ರರತ್ನಮುಂ ತನ್ನ ವಿಶದಯಶಃ ಪ್ರಭಾವದೊಳ್ ಮುೞುಂಗಿ ಪಗಲೊಳಂ ವರ್ತಿಪಿಚ್ಛೆಯಿಂ ಬರ್ಚಿ ಬಂದ ಶಶಿಕಳೆಯದೆಂಬಂತೆಸೆವ ಚಿಂತಾಜನನಿಯೆಂಬ ಕಾಕಿಣೀರತ್ನಮುಂ ತನ್ನರಾತಿಗಳ ಜೀವನರಸಾಸ್ವಾದತೃಷ್ಣೆಯಿಂ ನಿಸ್ತ್ರಿಂಶಮಿಷದಿನೋಲಗಿಪ ಜವನ ನಾಲಗೆಯಂ ಪೋಲ್ವೆಯಾದ ಸೌಗಂಧಕಮೆಂಬ ಖಡ್ಗರತ್ನಮುಂ ತನ್ನ ಮಕುಟಕ್ಕೆ ಶಿಖಾಮಣಿಯಾಗಿ ಭುವನೈಕರಕ್ಷಾಮಣಿಯಪ್ಪ ಜಿನಚರಣನಖಕಿರಣ-
ಮಣಿಯೊಳೊಂದಿ ಪವಿತ್ರಮಪ್ಪೆನೆಂಬ ಚಿಂತೆಯಿಂ ಬಂದ ಚಿಂತಾಮಣಿಯೆಂಬಂತಿರ್ದಚೂಡಾಮಣಿಯೆಂಬ ಮಣಿರತ್ನಮಂ ಇಂತೀ ಏೞುಂಜೀವರತ್ನಂಗಳುಮಂ ಮತ್ತಮಯೋಧ್ಯ ಭದ್ರಮುಖ ಕಾಮವೃಷ್ಟಿ ಬುದ್ಧಿಸಾಗರ ವಿಜಯಪರ್ವತ ಪರಂಜಯ ಶಶಿಪ್ರಭಾಪರನಾಮಂಗಳಪ್ಪ ಸೇನಾಪತಿ ಸ್ಥಪತಿ ಗೃಹಪತಿ ಪುರೋಹಿತ ಗಜವಾಜಿ ಸ್ತ್ರೀರತ್ನಂಗಳೆಂಬೇೞುಂ ಜೀವರತ್ನಂಗಳುಮಂ ಕಾಳ ಮಹಾಕಾಳ ಪಾಂಡುಕ ನೈಸರ್ಪ ಮಾಣವಕ ಪಿಂಗಳ ಶಂಖ ಸರ್ಪರತ್ನಂಗಳೆಂಬೊಂಬತ್ತು ನಿಧಿಗಳುಮನನುಕ್ರಮದೊಳರ್ಚಿಸಿ ಬಂದು ತಂದೆಯ ಪಾದಾರವಿಂದಕ್ಕೆಱಗಲೊಡಂ
ಚಂ॥ ಭುವನದ ಕಣ್ಗೆ ಸಂದಣಿಸೆ ಕೌತುಕಮೊರ್ಮೆಯೆ ಸಾರ್ದತರ್ಕ್ಯವೈ
ಭವವಿಭವುವಪ್ಪ ರಾಜ್ಯವೆಭವೋದಯದಿಂದೆ ವಿರಾಜಿಪಂಗೆ ದಿ
ಟ್ಟಿ ವಿಷಮುಮಪ್ಪುದೆಂದು ಪದಪಿಂ ಪ್ರಭುಸೂನುಗೆ ತಾನೆ ರಕ್ಕೆಗ
ಟ್ಟುವ ತೆಱದಿಂದೆ ಕಟ್ಟಿದನಿಳಾಪತಿ ತನ್ನಧಿರಾಜಪಟ್ಟಮಂ॥೧೦೩॥
ವ॥ ಅಂತು ಕಟ್ಟಿದ ಸಾರ್ವಭೌಮಪದವೀಪಟ್ಟಮನಾತ್ಮೀಯಲಲಾಟಪಟ್ಟದೊಳಲಂಕರಿಸಿ ತನ್ಮಹೋತ್ಸವದೊಳ್
ಮ॥ಸ್ರ॥ ಇದೆ ದೇಯಂ ಮತ್ತದೇಯಂ ಬಗೆವೊಡಿದು ದಲೆಂಬೀ ವಿಚಾರಕ್ಕಣಂ ಸ
ಲ್ಲದೆ ಕೆಯ್ಗೇವಂದೊಡಂ ತನ್ನಯ ಕೆಲದೊಳದಾರಿರ್ದೊಡಂ ಕೊಟ್ಟು ದಾರಿ
ದ್ರ್ಯದಮಾತಿಲ್ಲೆಲ್ಲಿಯುಂ ಬಾೞ್ತೆಗಮಖಿಳಧರಾಚಕ್ರದೊಳ್ ತಾನೆನಿಪ್ಪ
ಗ್ಗದ ಮಾತಂ ಮಾಡಿದಂ ಚಕ್ರಧರನೋಸೆದು ಸಾಹಿತ್ಯವಿದ್ಯಾವಿನೋದಂ॥೧೦೪॥
ಗದ್ಯಂ:
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿಸತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಾಪುರಾಣದೊಳ್
ಚಕ್ರೋತ್ಪತ್ತಿವರೂಣನಂ
ಷಷ್ಠಾಶ್ವಾಸಂ.
ಪ್ರೀತಿಪೂರ್ವಕ ನೆನಕೆಗಳು
ಸಂಪಾದಕರು: ಜಿ. ಜಿ. ಮಂಜುನಾಥನ್
ಪ್ರಸಾರಾಂಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ