ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಮೇ 16, 2020

ಬಂಧುವರ್ಮನ ಜೀವನಸಂಬೋಧನಂ

ಜೀವನಸಂಬೋಧನಂ 

ಬಂಧುವರ್ಮ 

ದ್ವಾದಶಾನುಪ್ರೇಕ್ಷೆಗಳ ನಿರೂಪಣೆಯನ್ನೊಳಗೊಂಡ " ಜೀವಸಂಬೋಧನ ಗ್ರಂಥವನ್ನೂ"  ಹರಿವಂಶಾಭ್ಯುದಯವೆಂಬ ಜೈನಪುರಾಣವನ್ನೂ ಚಂಪೂಶೈಲಿಯಲ್ಲಿ ರಚಿಸಿದ ಬಂಧುವರ್ಮನು ಕ್ರಿ. ಶ. ೧೨೦೦ ರಲ್ಲಿದ್ದವನು. ಈಚೆಗೆ ಈತನ ಮೂರನೆಯ ಕೃತಿ ಸತಿಧರ್ಮಸಾರವೂ ದೊರೆತಿದೆ. ಈತನು ತನ್ನ ಪೂರ್ವ ಕವಿಗಳನ್ನು ಸ್ತುತಿಸಿಲ್ಲ. ತನ್ನ ಬಗೆಗೆ ಯಾವ ಸಂಗತಿಯನ್ನೂ ಹೇಳಿಕೊಂಡಿಲ್ಲ. ಈತನ ಬಗೆಗೆ ಉಳಿದ ಯಾವ ವಿಷಯಗಳೂ ತಿಳಿದುಬರುವುದಿಲ್ಲ.


ಬಂಧುವರ್ಮನು ಇತರ ಕೆಲವು ಕವಿಗಳಂತೆ ಯಾವ ರಾಜರ ಆಶ್ರಯದಲ್ಲಿದ್ದುದೂ ಕಂಡುಬರುವುದಿಲ್ಲ.  ಹಾಗಾಗಿಯೇ ಯಾರನ್ನೂ ನೆನೆಯದೆ ನಿರ್ಲಿಪ್ತನಾಗಿದ್ದಾನೆ.ಆದರೆ ನೇಮಿಜಿನೇಶರು, ಸಿದ್ಧರು, ಬುಧರು, ಸಾಧುಗಳು ಮತ್ತು ಯಕ್ಷ-ಯಕ್ಷಿ-

ಯರನ್ನು ಸ್ತುತಿಸಿ " ಮನಸಂದು ಸರಸ್ವತಿ ಬಂದು ಬಂಧುವರೂಮನ ಮುಖಪದ್ಮದೊಳ್ ನೆಲಸಿನಿಂದು ವಿರಾಜಿಸುತಿರ್ಕೆ

ರಾಗದಿಂ" ಎಂದು ಜೀವನಸಂಬೋಧನೆಯಲ್ಲಿ ಹೇಳಿ ಸರಸ್ವತಿಯಲ್ಲಿ ಬೇಡಿಕೊಳ್ಳುತ್ತಾನೆ. 


ಜೀವನವನ್ನು ಕುರಿತು ಬೋಧಿಸುವ ಜೈನ ದ್ವಾದಶಾನುಪ್ರೇಕ್ಷೆಗಳ ನಿರೂಪಣೆಯನ್ನೊಳಗೊಂಡಿರುವ ಈ ಕಾವ್ಯವು ಧರ್ಮಕ್ಕೆ ಧರ್ಮ ಕಾವ್ಯಕ್ಕೆ ಕಾವ್ಯ ಎಂಬ ಎರಡೂ ಸದ್ಗುಣಗಳನ್ನೊಳಗೊಂಡಿದೆ. ಇದರಲ್ಲಿ ಕಾಣುವುದು ಕೇವಲ ಮಾನವಧರ್ಮ. ಇದರಿಂದ ಎಲ್ಲ ವರ್ಗದ ಜನರೂ ಇದನ್ನು ಮೆಚ್ಚಿಕೊಳ್ಳುತ್ತರೆ. ಈ ಮೆಚ್ಚಿಕೆಗೆ ಮತ್ತೊಂದು ಕಾರಣವೆಂದರೆ ಪದಬಂಧವು ಲಲಿತವಾಗಿಯೂ ಸರಳವಾಗಿಯೂ ದೇಸೀಯ ಶಬ್ದಗಳಿಂದ ಕೂಡಿರುವುದೂ ಆಗಿದೆ. ಕೊಡುವ ಅನೇಕ ಉಪಮಾನಗಳು 

ನಿತ್ಯದ ಬದುಕಿನಲ್ಲಿ ಅನುಭವಿಸುವ ವಿಷಯಗಳೇ ಆಗಿವೆ. ನೀತಿವೈರಾಗ್ಯ ಬೋಧಕ ಕಥೆಗಳನ್ನು ತನ್ನ ಧರ್ಮಪ್ರತಿಪಾಧನೆಗೆ 

ಬಳಸಿಕೊಂಡಿರುವುದು ತುಂಬ ಸೊಗಸಾಗಿದೆ.  ಇಲ್ಲಿ ಕಥೆಗಳನ್ನು ವಿಸ್ತರಿಸ ಹೋಗಿಲ್ಲ, ತನ್ನ ಉದ್ದೇಶ ಆ ಕಥೆಗಳ ಮೂಲಕ ಮನುಜರನ್ನು ಧರ್ಮದತ್ತ ಸೆಳೆಯುವುದು ಮಾತ್ರವಾಗಿದೆ. ಉದ್ದೇಶಕ್ಕೆ ತಕ್ಕಂತೆ ಕಥೆಗಳಲ್ಲಿ ಹೆಚ್ಚಿನ ವರ್ಣನೆಗಳನ್ನು

ತಾರದೆ ಚಿಕ್ಕಚಿಕ್ಕ ಕಥೆಗಳಲ್ಲಿಚೊಕ್ಕವಾಗಿ ನಿರ್ವಹಿಸಿದ್ದಾನೆ. ಇದರಲ್ಲಿ ಕವಿಯ ಸಾಮರ್ಥ್ಯ, ಪ್ರೌಢಿಮೆ, ಸರಳತೆ ಎದ್ದುಕಾಣುತ್ತವೆ. ಕವಿಯ ಬಗೆಗೆ ಗೌರವ ಅಧಿಕವಾಗುತ್ತದೆ. ಇಲ್ಲಿ ಜೈನತತ್ವ ನಿರೂಪಣೆಯಿದ್ದರೂ ಹೆಚ್ಚಾಗಿ ಕಂಡುಬರುವುದು ಮಾನವಧರ್ಮ. ಇದು ಕಾವ್ಯಾಭ್ಯಾಸಿಗಳಿಗೆ ಉತ್ತಮ ಕಾವ್ಯವಾಗಿ ತತ್ವಚಿಂತಕರಿಗೆ ಬತ್ತದ ಸೆಲೆಯಾಗಿ ಕಂಡುಬರುತ್ತದೆ. 


ಪ್ರಥಮಾಧಿಕಾರಂ 


ಅಧ್ರುವಾನುಪ್ರೇಕ್ಷೆ


ಶಾ॥ ಶ್ರೀ ನಾರೀರಮಣೀಯಪಾದಕಮಲಂ ಶ್ದ್ಧಂ ಪ್ರಸಿದ್ಧಂ ಲಸತ್ 

ಜ್ಞಾನಾಕಾರನಪಾರ ದೃಗ್ಬಲಸುಖಾಖ್ಯಾತಂ ವಿನೂತಂ ವಿನೇ 

ಯಾನೀಕ ಪ್ರವಿರಾಜಿತಂ ತ್ರಿಭುವನಾಧೀಶಂ ಜಿನೇಶಂ ಸಮಾ 

ಧಾನಪ್ರಾಪ್ತಿಯನೀಗೆ ಭವ್ಯನಿಕರಕ್ಕೌಚಿತ್ಮಮಂ ಸ್ತುತ್ಯಮಂ॥೧॥ 


ಮ॥ ಖಳಕರ್ಮಾಷ್ಟವಿಧೋಗ್ರಕಂಟಕಕುಳಪ್ರಧ್ವಂಸದಿಂದಂ ನಿರಾ 

ಕುಳರಂ ನಿಷ್ಕಳರುಂ ವಿನಷ್ಟಮಳರುಂ ಪ್ರಖ್ಯಾಪಿತೋದ್ಯದ್ಗುಣೋ

ಜ್ವಳರುಂ ನಿಶ್ಚಳರುಂ ಪ್ರಣೂತಬಳರುಂ ತಾಮಾಗಿ ಲೋಕಾಗ್ರದೊಳ್ 

ತೊಳಗುತ್ತಿರ್ಪ ವಿಶುದ್ಧಸಿದ್ಧರೆಮಗೀಗಾತ್ಮೋದಯಪ್ರಾಪ್ತಿಯಂ ॥೨॥ 


ಶಾ॥ ಧೈರ್ಯಂ ಸರ್ವಪರೀಷಹಾನ್ವಯಜಯಂ ಚಾರಿತ್ರಭಾಸ್ವತ್ತಪಃ 

ಕಾರ್ಯಂ ಷಡ್ವಿಧ ಜೀವರಾಶಿಹಿತವತ್ಕಾರುಣ್ಯಯುಕ್ತೋದಿತೌ 

ದಾರ್ಯಂ ಸುವ್ರತರತ್ನದಾಯಿಯೆನೆ ಮಿಕ್ಕಾಚಾರಶೌರ್ಯಾನ್ವಿತಾ

ಚಾರ್ಯರ್ ತಾಮೆಮಗೀವರಕ್ಕೆ ದುರಿತಪ್ರಧ್ವಂಸನೋಪಾಯಮಂ ॥೩॥ 


ಉ॥ ಮಾನಿತ ಭವ್ಯಲೋಕಮನಿದಂ ಭುವನತ್ರಿತಯಾಗ್ರದಲ್ಲಿ ಗೊ 

ಯ್ವಾ ನೆವದಿಂದಮಾಪ್ತಮುಖನಿರ್ಗತಮಂ ಗಣನಾಥನಿರ್ಮಿತಾ 

ನೂನ ಸುವಸ್ತು ವಿಸ್ತರಮನಾಗಮಮಂ ಪ್ರತಿಬೋಧಿಪರ್ ಗುಣ 

ಸ್ಥಾನಿಗಳ ಪ್ರಮತ್ತರುಪದೇಶಕರೀಗೆಮಗೊಳ್ಪಿನೋಳಿಯಂ ॥೪॥ 


ಮೋಕ್ಷದ ಬಟ್ಟೆಗಟ್ಟಿ ಬಿಡದಾಱಡಿಗೊಳ್ವ ದುರಂತ ದುಷ್ಟಕ 

ರ್ಮಕ್ಷುಭಿತೋಗ್ರ ತಸ್ಕರರ ದುಷ್ಟರ ದುಸ್ತರ ದುರ್ಧರೋರುದ

ರ್ಪಕ್ಷತಿ ಮಾಡಲಾರ್ಪ ತಪದೊಳ್ಪಿನ ತೆಳ್ಪಿನ ಸಾಧುವರ್ಗಮೀ 

ಗಕ್ಷಯ ಸೌಖ್ಯಮಂ ಸಕಲ ಭವ್ಯಜನಕ್ಕೆ ಮನೋನುರಾಗದಿಂ ॥೫॥ 


ಚಂ॥ ಅನುಪಮ ಕಾವ್ಯಧರ್ಮದಱಿವಿಲ್ಲದನಂ ಜಡನೆಂದು ಪಾಪಕ 

ರ್ಮನ ದೆಸೆಯೊಲ್ಲೆನೆಂದು ಪುಸಿವಾತನನೇೞಿದನೆಂದು ಕಾವ್ಯಚೋ 

ರನನುಱದೇವೆನೆಂದು ಮನಸಂದು ಸರಸ್ವತಿ ಬಂದು ಬಂಧುವ 

ರ್ಮನ ಮುಖಪದ್ಮದೊಳ್ ನೆಲಸಿ ನಿಂದು ವಿರಾಜಿಸುತಿರ್ಕೆ ರಾಗದಿಂ ॥೬॥ 


ಅಱಿವಿಲ್ಲದೆ ತಕ್ಕೆಡೆಯೊಳ್ 

ತಱಿಸಲ್ಲದೆ ತೊಡರ್ದು ನಮೆವ ಜೀವಕ್ಕೆಲ್ಲಂ 

ನೆಱೆಯೆ ಹಿತಮೆಂದು ಬಗೆದಿದ 

ನಱಿಪುವೆನಱಿವಂತು ಜೀವಸಂಬೋಧನೆಯಂ॥೭॥


ಅಷ್ಟಮಾಧಿಕಾರಂ 


೮.  ಆಸ್ರವಾನುಪ್ರೇಕ್ಷೆ 


ತನು ಧನ ವನಿತಾ ಜನನೀ 

ಜನಕ ವಿಮೋಹದೆ ಕಷಾಯಮೊದವುಗುಮದಱಿಂ 

ಜಯಿಸುಗುಮೈದುಮಾಸ್ರವ 

ಘನವಿಪುಳದ್ವಾರಮಲ್ಲಿ ಪುಗುಗುಂ ಪಾಪಂ॥೧॥


ವ॥ ಐದುಮಾಸ್ರವದ್ವಾರಮಾವುದೆಂದೊಡೆ ಹಿಂಸಾನೃತಸ್ತೇಯಾಬ್ರಹ್ಮಪರಿಗ್ರಹಮೆಂಬುವಲ್ಲಿ. 


ಚ॥ ಕೊಲೆ ನವಭೇದದಿಂದಮೊದವುತ್ತಿರೆ ಪಾಪರಜೋತ್ಕರಂ ಕರಂ 

ಪಲವತಿವೇಗದಿಂದೊಡನೆ ಪೊಕ್ಕನುಬಂಧದೆ ಸಂತಮೆಲ್ಲಿಯುಂ 

ನಿಲಲಣಮೀಯದುಗ್ರ ನರಕಂಗೊಳೊಳಕ್ಕಿದಡಲ್ಲಿ ವೇದನಾ

ಜ್ವಲ ಶಿಖಾಳಿ ತಳ್ತಳುರೆ ಬೇವುವು ನೋವುವು ಜೀವರಾಶಿಗಳ್ ॥೨॥ 


ವ॥ ಅಶುಭಮಪ್ಪ ಮನಃಕೃತಂ ಮನಃಕಾರಿತಂ ಮನಸಾನುಮೋದಿತಂ ವಚನಕೃತಂ ವಚನಕಾರಿತಂ ವಚನಾನುಮೋದಿತಂ ಕಾಯಕೃತಂ ಕಾಯಕಾರಿತಂ ಕಾಯಾನುಮೋದಿತಂಗಳಪ್ಪೊಂಬತ್ತುಂ ತೆಱದಿಂ ಬಂದ ಪಾಪದಿಂ ಮದಹಸ್ತಿ ತನ್ನಂ ತಾನೆ ಮೇಗಣಾತನ ವಶದಿಂ ಮಿಳಿಯಂ ಕೊಟ್ಟು ಕಟ್ಟಿಸಿಕೊಳ್ವಂತೆ ಜೀವನುಂ ಕರ್ಮವಶದಿಂ ತನ್ನಂ ತನ್ನಿಂದಮೆ ಕಟ್ಟಿಸಿಕೊಂಡು ದುಃಖಮನುಣ್ಗುಂ 


ಪೊಲೆ ಮಂತ್ರದೆ ಪೋಕುಮನಂ 

ಗೊಲೆ ಧನದಿಂ ಪೋಕುಮಡಸಿ ಕಡಿದ್ಗಳೆ ಸಂ 

ಕಲೆ ಪೋಕುಂ ಕೊಂದವರ್ಗಳ 

ಕೊಲೆ ಪೋಕುಮೆ ಭವಭವಂಗಳೊಳ್ ನೋಯಿಸುಗುಂ॥೩॥


ವ॥ ನಂಟರ್ ಸತ್ತು ಪತ್ತಿದ ಕೊಲೆಯಲೆಗುಮೆಂದೊಡೆ ತಾಂ ತನಗೆ ಮೆಚ್ಚಿ ಮಾಡಿದ ಕೊಲೆಯಲೆಯುದಿರ್ಕುಮೆ ಅದನಿಲ್ಲಿಯೆ ಕಾಣಲಾಗಾ 


ಉ॥ ಒಕ್ಕಱಿವೆಲ್ಲಮಂ ಕಳೆದು ಭೂಷಣಮಂ ಪಣಿಗಟ್ಟುಗಟ್ಟಿ ತೊ 

ಟ್ಟೆಕ್ಕವಡಂಗಳಂ ಕರಿಯ ಕುಪ್ಪಸದೊಳೊಟ್ಟುಗೂಡಿ ಬೇಡರೊಳ್ 

ಪೊಕ್ಕರೊಳಂತೆ ಬಿಲ್ವಿಡಿದು ಮುಂದಣಪಾಪದ ರೂಪೆ ಬಂದು ಕೆ 

ಯ್ಮಿಕ್ಕದೆ ಕಾಡುವೊಕ್ಕಿರವೆ ಪೇಱದೆ ಪೇೞ್ ಕೊಲೆಯೊಂದು ಪಾಪಮಂ॥ ೪॥


ವ॥ ಗೆಂಟರೊಳಿರ್ದ ಪೊಗೆಯಂ ಕಂಡು ಕಿರ್ಚುಂಟೆಂದಱಿವಂತೆ ಕುತ್ಸಿತಮಪ್ಪ ನೆಗೞ್ತೆಯೆ ಮುಂದಣ ದುಃಖಮಂ ಪೇೞ್ಗುಂ


ಪುಸಿ ನಾಲ್ಕು ಮಾೞ್ಕೆಯಾಗಿಯು 

ಮಸದೃಶ ಗುಣ ಕಲ್ಪವೃಕ್ಷಮಂ ಬೇರಿಂದಂ 

ಕುಸಿಯಿಪುದು ಪುಸಿದೊಡಂ ತಾಂ 

ಕುಸಿದಾೞ್ಗುಂ ನೆಟ್ಟನುಗ್ರ ನರಕಾರ್ಣವದೊಳ್॥೫॥ 


ವ॥ ಆ ಪುಸಿಗಳಾವುವೆಂದೊಡೆ ಉಳ್ಳುದನಿಲ್ಲೆಂಬುದುಂ ಇಲ್ಲದುದನುಂಟೆಂಬುದುಂ ವಿಚಾರೀಸದೆ ನುಡಿವುದುಂ ಪಾಪಹೇತುವಪ್ಪ ನುಡಿಯುಮೆಂದಿಂತು ನಾಲ್ಕುಂ ತೆಱದ ಪುಸಿಯಿಂ ಪಾಪಂ ಪುಗುಗುಮದಱಿಂ ಪಣಮುಳ್ಳಂ ತನ್ನ ಮನೆಯಂ ಕಳ್ಳರ್ ಪುಗೆ ಬೆರ್ಚದೊಡಂ ಗುಣಮುಳ್ಳಂ ತನ್ನ ಬಗೆಯಂ ಪಾಪಂ ಪುಗೆ ಬೆರ್ಚದೊಡಮಾಯಿರ್ವರ ಕೇಡಿಂ-

ಗಮಳವಿಯುಂಟೇ


ಮ॥ ಬಿಡದೆಲ್ಲಂದದಿನುಕ್ಕೆವಿಪ್ಪ ಬಗೆಯಿಂ ಬಂಜಿಪ್ಪ ಸಾಮರ್ಥ್ಯದಿಂ

ಕಡುನೋವಾಗಿರೆ ಮಾೞ್ಪ ನಿಗ್ರಹದಿನಿಂತನ್ಯಾಯದಿಂದರ್ಥಮಂ 

ಪಡೆವಂದಂ ಕಳವೆಂಬುದಕ್ಕುಮದು ತಾನಾದಂದು ಪಾಪದ್ವಿಷಂ 

ತಡೆದೇನಿರ್ಕುಮೆ ಬಂದು ಕಟ್ಟಿ ಘನ ದುಃಖಾಂಬೋಧಿಯಲ್ಲಿಕ್ಕುಗುಂ॥ ೬॥


ವ॥ ಅಂತು ತ್ರಿದೋಷಂಗಳ್ವಿಡಿದು ಕುತ್ತಂ ಮಿಗುಗುಂ ಕಳವುವಿಡಿದು ಪಾಪಂ ಪುಗುಗುಮೆಂಬುದಂ ಬಗೆವುದು 


ಅಬ್ರಹಂ ದಶವಿಧದಿಂ 

ತೀಬ್ರಂ ನೆಲಸಿದೊಡೆ ಸೋಲ್ತು ಸೈರಿಸದೆ ಚತು 

ರ್ಥಬ್ರತಮಂ ಪೊರ್ದಿದೊಡೆ 

ನ್ನೀ ಬ್ರಹ್ಮಂ ಕಿಡಿಸಲಘಚಯಂ ಸೋರ್ತರ್ಕುಂ॥೭॥ 


ವ॥ ಅಂತು ಪತ್ತುಂ ತೆಱದಬ್ರಹ್ಮದಿಂ ತುತ್ತತುದಿಯೊಳಾಪತ್ತುವಡಿಸುವ ಕರ್ಮಂಗಳ್ ಪತ್ತುಗುಮದಱಿಂ ಜೀವಂ ದುಃಖಾಗ್ನಿಯೊಳ್ ಪೊತ್ತುಗುಮವು ಬಸನಮೆ ಅಂತಪ್ಪಬ್ರಹ್ಮಂ ದಶವಿಧಮಾವುವೆಂದೊಡೆ ಇಂದ್ರಿಯವರ್ಧನಮಪ್ಪಾ-

ಹಾರಮನುಣ್ಬುದುಂ ತಂಬುಲಮಂ ತಿಂಬುದುಂ ವಸ್ತ್ರಕಂಬಳಂಗಳಂ ಪೊದೆವುದುಂ ಮೃದುಶಯ್ಯೆಯೊಳೊಱಗುವುದುಂ ದಂತ ನಖ ತನುಮಲಾದಿಗಳಂ ಪಿಂಗಿಸುವುದುಂ ಆಗಳುಂ ಸ್ತ್ರೀಪ್ರಸಂಗದೊಳಿರ್ಪುದುಂ ಸುಗಂಧದ್ರವ್ಯಂಗಳಂ ಪೂಸುವುದುಂ ಸುಗಂಧಪುಷ್ಪಂಗಳಂ ವಾಸಿಸುವುದುಂ ಗೀತವಾದ್ಯಂಗಳಂ ಕೇಳುವುದುಂ ನೃತ್ಯನಾಟಕಂಗಳಂ ನೋೞ್ಪುದು-

ಮೆಂದಿಂತು ದಶವಿಧಮಕ್ಕುಂ ಅಂತು ಬ್ರಹ್ಮಚರ್ಯಮೆಂಬುದು ದೇವವ್ರತಮಾವವ್ರತಕ್ಕಮುತ್ಕೃಷ್ಟಮಂತಾ ಮಹಾವ್ರತಮಂ ತಾಳ್ದಿದ ಸತ್ಪುರುಷರೀ ಪೇೞ್ದ ಪತ್ತುಂ ತೆಱದತೀಚಾರಂಗಳಂ ಪೊರ್ದದೆ ಕರಂ ಪ್ರಯತ್ನದೊಳಿರ್ಪುದಿಂತು 


ಮ॥ ಬಸನಕ್ಕೞ್ತಿಗರಲ್ಲಿರೆಂತೆನೆ ಮಹಾದುಃಖಂಗಳಂ ಮಾೞ್ಪ ದು 

ರ್ವ್ಯಸನಂಗಳ್ಗೊಲಿದೇಕೆ ಪೇೞ್ ಕಿಡಿಸುವೀ ಸ್ವರ್ಗಂಗಳೊಳ್ ಮಚ್ಚಿದೊ 

ಳ್ಬೆಸನಂಗಳ್ ಸಲೆ ಮಾೞ್ಪ ದಿವ್ಯ ಸುಖಮಂ ಕೂೞಪ್ಪಿನಂ ನಿಂದು ಸೈ 

ರಿಸದುಣ್ಬೞ್ತಿಯಿನೊಕ್ಕು ಗಂಜಿಗುಡಿವಿರ್ ನಿಮ್ಮನ್ನರಾರ್ ಗಾವಿಲರ್॥೮॥ 


ವ॥ ಪಸಿವಡಿಸಿದಾಗಳ್ ಕೂೞಪ್ಪಿನಮಿರದೆ ಗಂಜಿಗುಡಿವೊಡಮಲ್ಪಸುಖಕ್ಕವಗುಣಂಗಳಂ ಕೆಯ್ಕೊಂಡು ದುರ್ವ್ಯಸನ-

ಕ್ಕೆಱಗುವೊಡಮಾತಂಗುಣ್ಬ ರುಚಿಯಂ ಮಾಡುವ ಪಸಿವು ಕಿಡುಗುಮೀತಂಗೆ ದಿವ್ಯ ಸುಖಮಂ ಮಾಡುವ ಗುಣಂ 

ಕಿಡುಗುಮದಱಿಂ ಪಲವುಕಾಲಂ ಸುಖಮನನುಭವಿಸುವ ಬಸನದೞ್ತಿಯುಳ್ಳೊಡೆ ಕೆಲವು ದಿವಸಂ ಬ್ರತಕ್ಕೆ ಸೈರಿಸಿ ಮೇಗಣ ಸುಖಮನನುಭವಿಸಲಾಗಾ 


ವ್ಯಸನೀ ಕೇಳ್ ನಿನ್ನ ಮಹಾ 

ವ್ಯಸನಂಗಳ್ ನಿನಗೆ ಸುಖಮನಾಗಿಪುವೆಂಬಾ 

ಪುಸಿ ಕಿಂಪಾಕಫಲಂಗಳ 

ರಸವಿನ ಸವಿಯಂತೆ ತುದಿಯೊಳೞಿಪಂ ಪಡೆಗುಂ॥೯॥ 


ವ॥ ಕಿಂಪಾಕಫಲಮೆಂಬ ವಿಷವೃಕ್ಷದ ಪಣ್ಣ ಬಣ್ಣಮುಂ ಕಂಪುಮಿಂಪುಂ ಕಣ್ಣಂ ಮೂಗಂ ನಾಲಗೆಯುಮಂ ಸೋಲಿಸೆ ತಿಂದು ಸಾವಂತೆ ಬಸನಂಗಳ ವಶಮಾಗಿ ಸೋಲ್ತು ನೆಗೞ್ದೊಡೆ ಮೇಗೆ ಕಿಡುವೆಯದಱಿಂ ಪರದಾರಗಮನಮೆಂಬ ದುರ್ವ್ಯಸನದತ್ತ ಸಾರದಿರ್ 


ಮ॥ ನೆರೆವೆಂ ಪೆಂಡಿರೊಳರೆಂಬ ಕಾರಣದೊಳಂ ಮತ್ತೆಂದುಮೇಗೆಯ್ದುಮಾಂ 

ಪೊರೆವೆಂ ಮಕ್ಕಳನೆಂಬ ಬೇವಸದೊಳಂ ಮೆಯ್ಗಿಂಬನೆಲ್ಲಂದದಿಂ 

ದೊರೆಕೊಳ್ವಂತಿರೆ ಮಾೞ್ಪೆನೆಂಬ ಬಗೆಯಿಂ ದುರ್ಮೋಹಮಂ ಮಾಡಿಕೊಂ 

ಡೆರಡುಂ ಮಾೞ್ಕೆಯ ದುಷ್ಪರಿಗ್ರಹದಿನೆೞ್ತಂದಿರ್ದಘಂ ಕಟ್ಟುಗುಂ॥೧೦॥ 

ವ॥ ತೆರಳಿಯ ಪುೞುವುಂ ತನಗೆ ಮಱೆಯಂ ಮಾೞ್ಪೆನೆಂದು ತನ್ನೊಳ್ ಪುಟ್ಟಿದ ನೂಲಿಂ ತನ್ನನೆ ಸುತ್ತಿಕೊಂಡು ಪೊಱಮಡಲಱಿಯದೆ ಸಾವಂತೆ ಜೀವನುಂ ತನ್ನ ಪೆಂಡಿರ ಮಕ್ಕಳ ಮೆಯ್ಯ ಧನಧಾನ್ಯಾದಿಗಳ ಪೆರ್ಚು ಕಾರಣಮಾಗಿ 

ಬಾಹ್ಯಾಭ್ಯಂತರಮೆಂಬೆರಡುಂ ತೆಱದ ಪರಿಗ್ರಹಮಂ ಮಾಡಿ ಸಂಕ್ಲೇಶ ಪರಿಣಾಮದೊಳ್ ಕೂಡಿ ಪಾಪಮಂ ಬರಿಸಿ ತನ್ನಂ 

ದುರ್ಗತಿಯೊಳಿರಿಸಿ ನಮೆಯುತ್ತಿರ್ಕುಮಿಂತೈದುಂ ತೆಱದ ಪಾಪಾಸ್ರವಮನಾಗಲೀಯದಿರೆಂತುಮಿಂದ್ರಿಯಂಗಳ ಮಚ್ಚಂ ಮಚ್ಚದಿರು 


ವಿಷಯಿಗಳ ವಿಷಯಮೆಲ್ಲಂ 

ವಿಷಯಂಗಳ್ ವಿಷಸಮಂಗಳಪ್ಪುದಱಿಂದಂ 

ವಿಷಯಾಸಕ್ತಿಯೆ ಪೊಲ್ಲದು 

ಕಷಾಯಮಂ ಮಾೞ್ಕುಮಾ ಕಷಾಯದಿನೞಿವರ್॥೧೧॥


ವ॥ ವಿರುದ್ಧಾಹಾರಮನುಂಡಂಗೆ ಕುತ್ತಂ ಪುಟ್ಟುಗುಂ ವಿಷಯಂಗಳೊಳಪ್ಪ ಮೆಚ್ಚಂ ಕೆಯ್ಕೊಂಡಂಗಾ ಮೆಚ್ಚು ಕಷಾಯಮಂ ಪುಟ್ಟಿಸುಗುಮಾ ಕುತ್ತಕ್ಕೆ ತಂದ ಕಷಾಯುಮುಮನೀ ಬಸನಿಗೊದವಿಬಂದಕಷಾಯಮುಮಂ ತವೆ ಮಱುಗಿಸಿದೊಡಲ್ಲದೆ ಗುಣಂಗೆಯ್ಗುಮೆ ಮತ್ತಮಿಂತು 


ಶಾ॥ ಸ್ನೇಹಾಭ್ಯಂಗಮನುಳ್ಳ ಮೆಯ್ಯನೆ ರಜಂ ತಿಣ್ಣಂ ತಗುಳ್ವಂತೆ ಸಂ 

ದೇಹಂ ಕೆಯ್ಮಿಗೆ ಮೂಢನಾಗಿ ಮನದೊಳ್ ಮಿಥ್ಯಾತ್ವಮೆಂಬೊಂದು ದು 

ಸ್ಸ್ನೇಹಂ ಪೊರ್ದಿದ ಜೇವನಂ ಮಲರಜಂ ಸಾರ್ಗುಂ ಮಲಂ ಸಾರೆ ನೀಂ 

ದೇಹೀ ದುಃಖದೊಳಾೞ್ವೆಯೆಂದಱಿದಪೆಯುಂ ಕೆಯ್ಕೊಳ್ ನಯಜ್ಞಾನಮಂ॥೧೨ 


ವ॥ ಅಂತು ಮಿಥ್ಯಾದೃಷ್ಟಿಯಪ್ಪ ಜೀವನಂ ಪಾಪಂ ಪತ್ತಿದೊಡನೆ ತೊಱೆಯ ನಡುವಿರ್ದವಂ ನಿಲಲಱಿಯದೆ ಶಿಲೆಯಂ ಪೊತ್ತೊಡವಂ ತಲೆಕೆಳಗಾಗಿ ನರಕದೊಳ್ ಬೀೞ್ಗುಮಿವಂ ತೊಱೆಯೊಳಾೞ್ಗುಮೆನೆಯುಂ ಬಗೆಯಿಂ ನಿಮ್ಮ ಬಸನದೊಳ್ಪಂ 

ಬಗೆಯಲೀಯದಾಗದೇ 


ಕುರುಡ ಕಣ್ಣಿಂದಱಿಯಂ 

ಕರಮಳಿಪಿದ ಬೆಸನಿಯಾವ ತೆಱದೊಳಮಱಿಯಂ 

ಕುರುಡಂ ಕುರುಡನೆ ಬೆಸನಿಯೆ 

ಕುರುಡಂ ಗತಿಯಪ್ಪ ದೆಸೆಯನಱಿಯದ ತೆಱದಿಂ॥೧೩॥ 


ವ॥ ಎಲೆ ಪಱಿದೊಡೆ ಮರಂ ಸಾಗುಮೆ ಬೇರ್ ಪಱಿದೊಡೆ ಸಾಗುಂ ಕಣ್ ಕೆಟ್ಟೊಡೆ ಗತಿ ಕಿಡುಗುಮೆ ಅಱಿವು ಕೆಟ್ಟೊಡೆ ಕಿಡುಗುಂ ಬಸನಿ ಸಾಮಾನ್ಯದ ಕುರುಡನಲ್ಲನೆಂದಿಂತು ಬಸನದ ಪೊಲ್ಲಮೆಯನಱಿದು ಜಿನದೀಕ್ಷೆಯಂ ಕೆಯ್ಕೊಂಡುಯೆಲೆ ಋಷಿಯೇ ಕೇಳಿಂ ಬಸನಕ್ಕಳಿಪಿದೊಡಣಮೊಳ್ಳಿತಲ್ತು 


ಚಂ॥ ಬಸನಿಗಳಪ್ಪ ಲೌಕಿಕರ ದುರ್ವಸನಂಗಳನಿಲ್ಲಿ ಕಂಡು ನೀ 

ನೊಸೆದೞ್ತಿಗೆಯ್ತದಿಂ ಮುನಿಪ ಸೋಲ್ತೊಡೆ ನಿನ್ನಳಿಪಿಂಗೆ ಬರ್ಪವಳ್ 

ಕಸಗಳೆವಾಕೆ ಮೇಣ್ ಕುರುಡಿ ವಿಕಟಾಂಗನೆ ಱಂಡೆ ಮೇಣಿದೇಂ 

ಬಸನಮೊ ಪೊಲ್ಲದುಂಡೞಿವ ರೋಗಿಯವೋಲ್ ಕಿಡಿಪೈ ತಪಂಗಳಂ॥೧೪॥


ವ॥ ಗೃಹಸ್ತರ ಬಸನಂ ಮೇಗೆ ಪೊಲ್ಲಾದೊಡಮೀಗಳೆತ್ತಾನುಮೊರ್ವಂಗಿನಿಸು ಲೇಸು 

ದೊರೆಕೊಳ್ಗುಂ ತುಡುಗುಣಿಯುಣ್ಬಾತನುಣ್ಬಾಗಳಿನುಣಿಸಿನಿಸು ಲೇಸಾದೊಡಂ ಬೞಿಕ್ಕೆ ಲೋಗರೞಿದುದಂ ಕಂಡಾಗಳೊಳ್ಳಿತಲ್ತಂತೆಲೆ ತಪಸ್ವಿ ನಿನ್ನಳಿಪುವೆಡೆಯೀಗಳುಂ ಪೊಲ್ಲದಱಿಂ ನೀಂ ಕೆಯ್ಕೊಂಡ ಮಹಾವ್ರತಂಗಳ-

ನೇಕೞಿವೈಯದನಱಿದೊಡೆ ನೀನೞಿವೈ 


ಜಗದೊಳ್ ಚೋದ್ಯಂ ಪಲವುಂ 

ನೆಗೞ್ದೊಡಮೇನಮರ್ದನುಂಡು ಕಾಱುವುದುಂ ಮೆ 

ಲ್ಪೊಗೆದ ತಪಸ್ವಿಯ ಕೇಡುಂ 

ಬಗೆವಾಗಳ್ ಕರಮೆ ಚೋದ್ಯಮಿಂತೀಯೆರಡುಂ॥೧೫॥ 


ವ॥ ಎನಿತಾನುಂ ಕಾಲದಿನೆಂತಾನುಮಮೃತಮಂ ಮತ್ತೆ ಕಾಱುವರೆಂಬುದೇಂ ಅನಂತಭವಂಗಳೊಳೆಲ್ಲಿಯುಂ ದೊರೆಕೊಳ್ಳದಂತಪ್ಪ ತಪಂ ದೊರೆಕೊಂಡೊಡೆ ಮಗೞ್ದೞಿಪುವರೆಂಬುದೇಕೀಚೋದ್ಯಂಗಳ್ ಸಾಮಾನ್ಯಂಗಳೇ


ಮ॥ ಬಿಸುಟಂ ತಾಯೆನಗೆಂದು ಮತ್ತಮೆಱಗಿಂ ತಾಯೆಂಬುದೇ ಪೆಂಡಿರಂ 

ಬಸನಂ ಚಿಃ ನಿನಗೇವುದಯ್ಯ ತಪಸೀ ನಾಣ್ಚಾತಪಃಪಾವಕಂ 

ಪ್ರಸರಂಗೊಂಡರೆವೆಂದುದೊಂದು ಪೆಣನಂತಾಗಿರ್ದು ನೀಂ ಪೋಗಿ ಬೆ 

ರ್ಚಿಸದಿರ್ ಪೆಂಡಿರನಂತೆ ಬೆರ್ಚುವವರ್ಗಳ್ ನಿನ್ನಿಂ ಕರಂ ಬೆರ್ಚರೇ॥೧೬॥


ವ॥ ತಪಸ್ಸಂತಾಪದೊಳರೆವೆಂದ ಪೆಣನಂತಪ್ಪ ಮೆಯ್ಯಂ ಪೆಂಡಿರತ್ತ ತರ್ಪಾಗಳವರ್ ಓಡುವ ಮೃಗದ ಮೇಲೆ ಪಱುಣೆಯನಿಕ್ಕಿದಂತೆ ಮಿಗೆ ಬೆರ್ಚುವರ್ ನಿಷ್ಕಾರಣಮೇಕೆ ಗುಣಂಗಳಂ ಕಿಡಿಸುವೈ 


ಕಂಪುಳ್ಳುದಱಿಂ ಸುರ ನರ 

ರುಂ ಪೂವಂ ತಲೆಯೊಳಿಟ್ಟರಾ ಪೂವನದಂ 

ಕಂಪುಗಿಡೆ ಕಾಲೊಳೊದೆಯಲ್ 

ಕಂಪಿಸುವುದದನೇನುಮಾಗದೆ ಗುಣದೞಿವಿಂ॥೧೭॥ 


ವ॥ ತಲೆಯೊಳಿರ್ದು ಕಂಪುಗಿಡೆ ಬಾಡಿದೊಡೀಡಾಡಿದ ಪೂವುಮಂ ತಪಕ್ಕೆವಂದು ಗುಣಂಗೆಟ್ಟ ಋಷಿಯುಮನಾರ್ ಮುಟ್ಟುವವರಾರ್ ಮನ್ನಿಸುವರ್ಬೇರ್ ಪಱಿದ ಮರನುಂ ಮೂಲಗುಣಂಗಳ್ ಕೆಟ್ಟ ತಪಮುಂ ಫಲಮಾಗದೆಂಬುದನಱಿ-

ದಿರಿಮೆಂತುಮಱಿಪದಿರಿಂ 


ಚಂ॥ ಬಿಡಿಸಿ ಪರಿಗ್ರಹದ್ವಿತಯಮಂ ತಱಿಸಂದು ತಪೋನಿಯೋಗದೊಳ್ 

ನಡೆವ ಮುನೀಂದ್ರರಂ ತಗುಳಲೆಂದೆಡೆವಾರುತಮಿರ್ಪ ಪಾಪಮೋ 

ಗಡಿಸದನೇಕ ಭೇದದ ವಿಮೋಹ ಮಹಾದ್ಭುತಪಾಪಬಂಧದೊಳ್ 

ತೊಡರ್ದ ಗೃಹಸ್ಥರಂ ಮುಸುಱಿಮುತ್ತದೆ ಮಾಣ್ಗುಮೆ ಪಾಪದಾಸ್ರವಂ॥೧೮॥ 


ವ॥ ಬೇವ ಮನೆಯಿಂ ಪೊಱಮಟ್ಟರಂ ಪಾಱಿಬಂದ ಕಿಡಿಯಿಂದಂ ಸುಡುವ ಕಿರ್ಚು ತನ್ನೊಳಗಿರ್ದವರನೆಂತುಮುೞಿ-

ಯಲೀಗುಮೆ ಮತ್ತಂ ಗೃಹಸ್ಥಾ ನೀ ಕೇಳಾ 


ನಾಲ್ಕುಂ ಕಷಾಯದಿಂದಂ 

ನಾಲ್ಕುಂ ಕರ್ಮಂಗಳೊದವೆ ಸಂಸೃತಿಯಂ ನೀ 

ಗಲ್ಕಂ ಸಲೆ ಮುಕ್ತಿಗೆ ಪೋ 

ಗಲ್ಕಂ ದೊರೆಕೊಳ್ಳದೆಂಬ ಕಥೆಗಳನಱಿಯಾ॥೧೯॥ 


ವ॥ ಪುಲ್ಮನೆಯೊಳಿರ್ದವಂ ಕಿರ್ಚಿನ ಪೆರ್ಚನಿಚ್ಚೈಸಿದೊಡಂ ಸಂಸಾರದೊಳಗಿರ್ದಾತಂ ಕಷಾಯಂಗಳ ಪೆರ್ಚನಿಚ್ಚೈಸುವೊ-

ಡಮಾಯಿರ್ವರುಂ ಬೇವುದುಂ ನೋವುದುಮೇಂ ಪಿರಿದೇ ಕ್ರೋಧ ಮಾನ ಮಾಯಾ ಲೋಭಂಗಳೆಂಬ ನಾಲ್ಕುಂ ಕಷಾಯಂಗಳಿಂ ಕೆಟ್ಟವರ ಕಥೆಗಳನಿನ್ನಪ್ಪೊಡಂ ಕೇಳ ಜೀವಾ


೧. ರೋಷಕಷಾಯ- ದೀಪಾಯನನ ಕಥೆ


ಚಂ॥ ಮನದೊಳಗೊಪ್ಪಿ ಕಾಮನಿರೆ ಬೆಬ್ಬಳನಾಗಿ ಮಹೇಶ್ವರಂ ಗಡಂ 

ಮನಸಿಜನೀತನೆಂದುಱದೆ ಪೇೞ್ ಮುನಿದೋವದೆ ಸುಟ್ಟುಕೊಂದೆನೆಂ 

ದನಿಯತ ಚಿತ್ತನಿರ್ದೊಡೆ ಮನೋಜನೞಲ್ದವನರ್ಧನಾರಿಯ

ಪ್ಪನಿತು ಪರಾಭವಕ್ಕೆ ಗುಱಿ ಮಾಡಿದನಾರ್ ಕಿಡರಯ್ಯ ಕೋಪದಿಂ॥೨೦॥ 


ವಿಪರೀತ ಚಿತ್ತದಿಂ ಕಾಮದೇವಂಗೆ ಮುಳಿದ ಮಹೇಶ್ವರನುಮರ್ಧನಾರಿಯಪ್ಪನಿತು ಪರಾಭವಮೆಯ್ದಿದನೆಂದೊಡೆ ಮುಳಿಸಿಂದಾವ ಕಿಡಂ


ಮುನಿಸೊಗೆಯೆ ಬರ್ಪ ಪಾಪಮ 

ನನಿತಿನಿತೆಂದಱಿವರಾರೊ ದೀಪಾಯನನೆಂ 

ಬನುಪಮ ಮುನಿ ಮುನಿದಾಗಳೆ 

ತನಗೆಯ್ದಿದ ಸುಗತಿಯೞಿದಧೋಗತಿಗಿೞಿದಂ ॥೨೧॥ 


ವ॥ ದೇವನಿರ್ಮಿತಮಪ್ಪ ದ್ವಾರಾವತಿಯೆಂಬ ಪೊೞಲುಂ ಪನ್ನೆರಡು ವರ್ಷದಂದಿಂಗೆ ದೀಪಾಯನಮುನಿಯಿಂದೆ ಕಳ್ಳಿಂದೞಿಗುಮೆಂಬಾದೇಶಂ ಕಾರಣಮಾಗಿಯಾ ದೇಶಮಂ ಬಿಸುಟು ದೀಪಾಯನಂ ತಪಂಬಟ್ಟುಪೋದನಿತ್ತ 

ಪೊೞಲೊಳಗುಳ್ಳ ಕಳ್ಳೆಲ್ಲಮನೊಯ್ದಡವಿಯೊಳಂ ಬೆಟ್ಟದ ಡೊಣೆಯೊಳಂ ಪೊಯ್ದರಾ ದೀಪಾಯನಮುನಿಯು- 

ಮೊಳ್ಳಿತ್ತು ತಪಂಗೆಯ್ದು ವಿಹಾರಿಸುತ್ತುಂ ಪನ್ನೆರಡು ವರುಷದವಧಿ ನೆಱೆದುದೆಂದಧಿಕಮಾಸದ ಪೆರ್ಚಂ ಬಗೆಯದಾ ದ್ವಾರಾವತಿಗೆ ಬಂದು ಪೊಱಪೊೞಲೊಳ್ ಕಲ್ನೆಲೆನಿಂದಿರ್ದೊಡಾ ಪೊೞಲ ಪೊಲೆಯನೊರ್ವಂಬೇಂಟೆವೋಗಿ ನೀರಡಸಿ ಬೞಲ್ದು ಬಂದು ಬೆಟ್ಟದ ಡೊಣೆಯೊಳ್ ತೀವಿರ್ದ ಕಳ್ಳು ತಿಳಿದಿರ್ದೊಡದಂ ನೀರೆಂದು ಕುಡಿದು ಸೊರ್ಕಿವಂದಾ ಕಲ್ನೆಲೆಯೊಳ್ ನಿಂದಿರ್ದ ಮಹರ್ಷಿಯಂ ಱೋಡಾಡಿ ನೀಡುಂ ಕಾಡಿ ಪೆಗಲನೇಱಿರ್ದು ತಲೆಯಂ ಱುಂಜೆಯುರ್ದುತ್ತುಂ ಬಾಜಿಸಿದೊಡಾ ಮುನಿ ಮುನಿಸಿನಿಂ ಸತ್ತೂರ್ವಗತಿಗೆ ಕಟ್ಟಿರ್ದಾಯುಷ್ಯಂ ಕುಂದೆ ಬಂದಗ್ನಿಕುಮಾರನಾಗಿ ಪುಟ್ಟಿ ಬಂದಾ ಪೊೞಲಂ ಸುಟ್ಟು ಕೆಡಿಸಿ ಮತ್ತೆಯುಂ ಪಾಪಮಂ ನೆಱಪಿ ನರಕಕ್ಕಿೞಿದನದಱಿಂ ಕ್ರೋಧಕಷಾಯಂ ಸಾಮಾನ್ಯಮೇಯಲ್ಲದೆ ಮಾನಕಷಾಯದಳವುಮೇಂ ಕಿಱಿದೇ? 


೨. ಮಾನಕಷಾಯ - ಬಾಹುಬಲಿಯ ಕಥೆ


ಚಂ॥ ಬೆಸಸಿರದೆನ್ನನೆಂದು ಬಲವಂದು ಮನಂಗೊಳೆ ನಿಂದ ಚಕ್ರಮಂ 

ಬಿಸುಟು ಮಹೋಗ್ರಮಪ್ಪ ತಪದೊಳ್ ನಿಲೆ ಮಾನಕಷಾಯದಿಂ ಮಳ 

ಪ್ರಸರದ ಕೇಡು ಬಾಹುಬಲಿಗಂ ತಡೆದಿರ್ಪಿನಾಯ್ತು ಮತ್ತಿನೀ 

ಪಸುಗೆ ಸಮಾನರಂ ಗುಣವಿಹೀನರನೇನದು ಕಾಡದಿರ್ಕುಮೇ॥೨೨॥ 


ವ॥ ಅಂತು ಬಾಹುಬಲಿಗೆ ಭುವನತ್ರಯಸ್ವಾಮಿಯಪ್ಪಾದಿಭಟ್ಟಾರಕಂ ತಂದೆ ಸಕಲ ಚಕ್ರವರ್ತಿಯಪ್ಪ ಭರತೇಶ್ವರಂ ಒಡಹುಟ್ಟಿದಂ ತಾನುಮಚಿಂತ್ಯ ಬಳ ಪರಾಕ್ರಮನಂತಪ್ಪಾತನ ಬಲವರ್ಗಕ್ಕೆ ಕಾಯ್ದು ಭರತೇಶ್ವರನೆನಿತಾನುಂ ತೆಱದ ಯುದ್ಧಂಗಳಂ ಪೊಣರ್ಚಿಯೆಂತುಂ ಗೆಲಲಾಱದೆ ಚಕ್ರದಿನಿಟ್ಟೊಡಾ ಚಕ್ರಂ ಬಂದು ಬಾಹುಬಲಿಯಂ ಬಲಂಗೊಂಡು ಬಲದ ಮುಯ್ವಿನ ಕೆಲದೊಳಿರ್ದ ಬೆಸಸು ಬೆಸಸೆಂದು ನಿಂದೊಡದಂ ಕೊಂಡು ಮುಳಿದಿಟ್ಟೀತನಂ ಕೊಂದೀ ರಾಜ್ಯಮನಾಂ ಕೊಳ್ವೆನೇ ಚಿಃ ಪೊಲ್ಲದಿದೇವುದೆಂದು ಚಕ್ರಮಂ ಬಿಸುಟ್ಟಂತೆ ಪೋಗಿ ಸರ್ವಸಂಗಪರಿತ್ಯಾಗಂಗೆಯ್ದು ತಪಮಂ ಕೆಯ್ಕೊಂಡಿರ್ದಾತನಂ ನೆಲನಂ ಮೆಟ್ಟಿರ್ಪಿನಿತಾಯ್ತೆಂಬ ಮಾನಕಷಾಯಂ ಪುಟ್ಟಿದೊಡೆ ಕರ್ಮಕ್ಷಯಕಾರ್ಯಸಿದ್ಧಿ ತನಗಿನಿಸಾನುಂ ತಡೆದಿರ್ದೊಡಂತಪ್ಪ ಬಾಹುಬಲಿಯುಂ ಚಿಂತಾಕ್ರಾಂತನಾಗಿರ್ದನೆಂದೊಡೆಪೇೞಿಮೀಗಳಿನೇೞಿದರಪ್ಪ ಮನುಷ್ಯರಂ ಮಾನಗರ್ವಮೇಗೆಯ್ಯದೋ 


ಗುಣದೊಳ್ ಸಿರಿಯೊಳ್ ಕೀರ್ತಿಯೊ 

ಳೆಣೆಯಿಲ್ಲೆಂಬುದ್ಧರ್ಕಳೇ ಮುನ್ನಿನವರ್ 

ಗುಣಹೀನರೂನರೀಗಳಿ 

ನಣು ಮಾತ್ರ ಕ್ಷಿತಿಪರುದ್ಧತಿಕ್ಕೆಯೆ ಚೋದ್ಯಂ ॥೨೩॥ 


ವ॥ ಗುಣದ ಪೆರ್ಚಿನೊಳ್ ಸರ್ವಜ್ಞನೆನಿಸಿದೊಡಂ ಶ್ರೀಯ ಪೆರ್ಚಿನೊಳ್ ಸಕಳ ಚಕ್ರವರ್ತಿಯೆನೀಸಿದೊಡಂ ಮುನ್ನಿನ ಮಹಾಪುರುಷರಾರುಮುದ್ಧತರಾದರಿಲ್ಲೀಗಳಿನವರ ಗುಣಮುಂ ಮುನ್ನಿನಕ್ಷೂಣರ ಗುಣದನಿತುಮಿಲ್ಲ ಸಿರಿಯಪ್ಪೊಡವರ

ಪಱೆಯ ಪೊಲೆಯರ ಷಡ್ಭಾಗದನಿತಪ್ಪೊಡಮೀಗಳಿನರಸುಗಳಿಗಿಲ್ಲ ಮಾನಕಷಾಯಮೆಟಬುದು ತಮ್ಮಿಂದಗ್ಗಳಮಪ್ಪುದು. 


ಚಂ॥ ನರವರರುರ್ವಿಯೊಳ್ ಧರೆ ಜಗತ್ರಯದೊಳ್ ಜಗಮಂ ತ್ರಿವಾಯುಗಳ್ 

ಧರಿಯಿಸಿ ನಿಂದುವಂತವು ಮಹಾಂಬರದೊಳ್ ನೆಲಸಿರ್ದುವಾ ಮಹಾಂ 

ಬರಮರುಹಂತದೇವರ ಸುಬೋಧದ ಕೋಣೆಯೊಳಿರ್ದುವಂತುಮಾ 

ಪರಮನೊಳುದ್ಧತಿಕ್ಕೆ ಪುಗದಲ್ಪರ ಗರ್ವಮದೇತಱಿಂಗಳಾ॥೨೪॥ 


ವ॥ ಮುನ್ನಿನ ಸಾರ್ವಭೌಮರಪ್ಪ ಸಕಳ ಚಕ್ರವರ್ತಿಗಳ್ವು ಭರತಕ್ಷೇತ್ರದನಿತಱೊಳಿರ್ದುದಾ ಕ್ಷೇತ್ರಂಗಳೆರಡೂವರೆ ದ್ವೀಪಂಗಳೊಳಗಾ ದ್ವೀಪಂಗಳುಂ ಸಮುದ್ರಂಗಳುಂ ದೇವಗತಿಗಳುಂ ಮೂಱುಂ ಲೋಕಂಗಳುಂ ತ್ರಿವಾಯುಗಳುಂ ಮಹಾಕಾಶಮುಮರೈಹಂತದೇವರ ಕೇವಲಜ್ಞಾನದೊಂದು ಕೋಣೆಯೊಳಿರ್ದುದವರುದ್ಧತರಾದಲ್ಲೀಗಳಿನೇೞಿದರಪ್ಪ-

ರೇಕುದ್ಧತರಪ್ಪರಾ ಮಾನಕಷಾಯಂ ಪೊಲ್ಲದದಂ ಪುಟ್ಟಲೀಯದಿರಿಮಿಂ ಮಾಯಕಷಾಯದ ಪೊಲ್ಲಮೆಯುಮೇಂ ಕಿಱಿದೇ


೩. ಮಾಯಕಷಾಯ - ಪುಷ್ಪದಂತ ಕಂತಿಯರ ಕಥೆ 


ಮಱೆಯೊಳ್ ಗುಣಮೞಿದೊಡೆ ಜಗ 

ಮಱಿಯದುದೇ ರಾಹು ಚಂದ್ರನಂ ಮೆಯ್ಯೆಲ್ಲಾ 

ರಱಿದ ಪ್ಪರೆಂದು ನುಂಗಿದೊ 

ಡಱಿದುದು ಜಗಮೆಲ್ಲಮುಕ್ಕೆವಂ ಪೊಲ್ಲದಱಿಂ ॥೨೫॥ 


ವ॥ಎನಗೆ ಮೆಯ್ಯಿಲ್ಲಾರಱಿದಪರೆಂದು ರಾಹು ಚಂದ್ರನಂ ಇರುಳ್ ನುಂಗಿದೊಡಾಗಳೆ ಲೋಕಮೆಲ್ಲಮಱಿದತ್ತು ತಾನುಂ ಲೋಕಕ್ಕಪಕಾರನುಂ ದುಷ್ಟನುಂ ಕನಿಷ್ಟನುಮಾದನೆಂದೊಡೆ ಮನುಷ್ಯರಾ ಮಾಯೆಯಲ್ಲಿಯೆ ಮಾಯಂ ಮಾಡುಗುಂ ಮಱುಭವದೊಳೇಗೆಯ್ಯದೋ


ಭೋಗಪುರಮೆಂಬ ಪುರದೊಳ್ 

ಸಾಗರದತ್ತಾಭಿಧಾನದ ವೈಶ್ಯಂ ಧರ್ಮೋ 

ದ್ಯೋಗದಿನೆಸೆದತಿಶಯತರ 

ಮಾಗುವ ದೇಹಾರದಲ್ಲಿ ಕಂತಿಯರೊರ್ವರ್॥೨೬॥ 


ವ॥ ಪುಷ್ಪದಂತೆಯೆಂಬ ಕಂತಿಯರಿರ್ದು ದೇವರನರ್ಚಿಸಲೆಂದು ಬೇಡಿ ತಂದಕ್ಕಿಯಂ ಮಱೆಯೊಳಡಿಸಿಟ್ಟಿರುಳುಂಡರ್ಚಿ-

ಸಿದ ಪಣ್ಫಲಂಗಳಂ ಮಱೆಯೊಳ್ ತಿಂದು ತಂದ ಶ್ರೀಗಂಧಮೆಲ್ಲಮಂತನ್ನ ಮೆಯ್ಯೊಳ್ ಪೂಸಿಕೊಂಡಱಿಯಲೀಯದ-

ದುಂಡುಂ ತಿಂದುಂ ಮಾಸೋಪವಾಸಮಂ ನೋಂತೆನೆಂದಿರುತ್ತಮಿರೆ ಯಾರಾನುಂ ಕಂಡವರಿತೆಂಬರಿವರೆನಿತು ನೋಂತೊಡಂ ಬಡವಾಗರೆಂದೊಡಿದು ತಪಸ್ಸಾಮರ್ಥ್ಯಮೆಂಬರ್ ಕಮ್ಮನೇಂ ನಾರ್ಪರೆಂದೊಡೆ ತಪದ ಫಲಾತಿಶಯ- 

ಮೆಂಬರಿಂತು ಮಾಯೆಯಿಂ ತಪಂಗೆಯ್ವೆನೆಂದಿರ್ದಾ ಕಂತಿಯರ್ ಮುಡಿಪಿ ಸಾಗರದತ್ತನೆಂಬ ಶೆಟ್ಟಿಯ ಮನೆಯೊಳ್ ಪೂತಿಗಂಧಿಯುಂ ಕಿಸುಗುಳಮುಂ ನಾರ್ಪ ಕೂಂಟಣಿದೊೞ್ತಾದಳೆಂಬೀ ಕಥೆಯಂ ಜೀವಾ ನೀನವಧಾರಿಸಿ ಮಾಯೆಯನೞಿಯಿಂ 


ಉ॥ ನೆಲಸಿರ್ದುಕ್ಕೆವಮೆಂಬುದೊಂದು ಕುೞಿಯೊಳ್ ಮಿಥ್ಯಾತ್ವಮೆಂಬೊಂದು ಕ 

ೞ್ತಲೆ ತೀವಿರ್ದುದಱೊಳ್ ವಿಮೋಹಮೆನಿಪ್ಪತ್ಯುಗ್ರಾಹಿ ಕೇಳ್ ಮರ್ಚಿ ನುಂ 

ಗಲೆ ಪಾರ್ದಿರ್ಪುದಱೊಳ್ ಭಯಂಕರದೊಳೇಂ ಪೊಕ್ಕಿರ್ಪುದರ್ಕಂಜೆಯೇ 

ಕಲಿಯೋ ಪೇೞ್ ನರಕಂಬುಗಲ್ಕೆ ಸೆಡೆಯೈ ಮಾಯಾವಿಯಪ್ಪಾತ್ಮನೇ॥೨೭॥ 


ವ॥ ಒಂದು ಭವದ ಸಾವಿಗಂಜದರಂ ಕಲಿಗಳೆಂಬರಪ್ಪೊಡೆ ಅನಂತಭವದ ಸಾವಿಗಂ ಕೇಡಿಂಗಮಂಜದ ಮಾಯಾವಿಯ-

ಮಗ್ಗಳಂ ಕಲಿಯೆನ್ನದೆ ಪೆಱತೇನೆಂಬುದೋ ಲೋಭಕಷಾಯದಳುರ್ಕೆ ಸಾಮಾನ್ಯಮೇಯದನಿನಿಸಾನುಂ ಕೇಳಾ


೪. ಲೋಭಕಷಾಯ - ಪಟಹಸ್ತನ ಕಥೆ 


ಬಗೆಯೆಂಬುದೊಂದು ಕೊಳನೊಳ 

ಗಗಲದೆ ಕಡುಲೋಭಮೆಂಬ ನೆಗೞಿರೆ ಗುಣದೊಳ್ 

ನೆಗೞೆ ನೆಗೞ್ದೊಡಮೆಂತುಂ 

ನೆಗೞಿರೆ ಗುಣಗಣಮನದುವೆ ನುಂಗುತ್ತಿರದೇ॥೨೮॥ 


ವ॥ ನೆಗೞುಳ್ಳ ಕೊಳನಂ ಪೊಕ್ಕನುಂ ಲೋಭಮುಳ್ಳ ಜೀವನ ಗುಣಮುಂ ಬರ್ದುಂಕುಗುಮೇ


ಉ॥ ಬೇಡರೆನೊಡತಿರ್ಪ ಚಮರಂ ನಿಡುವಾರದೊಳೊಂದು ರೋಮಮಾ 

ಕಾಡೊಳಗೊಂದು ಮುಳ್ ತೊಡರೆ ಸಿಲ್ಕಿದುದಂ ಪಱಿದೇಕೆ ಪೋಪೆನೆಂ 

ದೋಡದೆ ಸತ್ತುದಂತೆ ಕಿಱಿದರ್ಕತಿಲೋಭಮದಾದೊಡೆಲ್ಲಮ 

ೞ್ಕಾಡಿ ತೊಡಂಕುವರ್ ಬಗೆಯೆ ಲೋಭದ ಪೊಲ್ಲಮೆ ಕೊಂದು ಕೂಗದೇ॥೨೯॥ 


ವ॥ ಬೇಡರ್ ಕೊಲಲೆಂದೆೞ್ಪಟ್ಟುವುದಂ ಕಂಡು ಕಾವರಿಲ್ಲದುದುಮಂ ತನ್ನೋಡುವ ಭಯಮುಮಂ ಬಗೆಯದೆ ತನ್ನ ಬಾಲದೊಳೊಂದು ರೋಮದ ಕೇಡಿಂಗಾಱದೆ ಚಮರೀಮೃಗಂ ಸಾವಂತೆ ಕೀಲಿಂಗೆ ದೇಗುಲವನೞಿವಂತೆ ನೂಲಿಂಗೆ ಮಣಿಯನೊಡೆವಂತರ್ಥಕ್ಕೆ ಗತಿಯನೞಿವರೆಂಬುದೆಲ್ಲಂ ಲೋಭಕಷಾಯಕಕ್ಕುಂ ಪೆಱತಕ್ಕುಮೆಯದೆಂತೆನೆ 


ಧರಣಿಜಯಮೆಂಬ ಪುರದೊಳ್ 

ಪರದಂ ಕಡುಲೋಭಿಯೊಂದೆ ಪುಟ್ಟಿಗೆಯುಟ್ಟಿ 

ರ್ದಿರುಳುಂ ಪಗಲುಂ ತನ್ನಯ 

ಕರಮನೆ ಪೊದೆದಿರ್ಪನೈಕಿಲೊಳ್ ಕಡುವಿಸಿಲೊಳ್ ॥೩೦॥ 


ವ॥ ಆತಂಗದಱಿಂದೆ ಪಟಹಸ್ತನೆಂಬ ಪೆಸರಾಗೆ ಪಲಕಾಲಮೊಣಕೂೞನುಂಡುಂಡಾಗಳೊಂದೆಲೆಯನಪ್ಪೊಡಂ ಮೆಲ್ಲದಾರ್ಗಮೇಗೆಯ್ಯಂ ಬಿದಿರದೆ ಪಡೆದರ್ಥಮನೆಲ್ಲ-ಮನೊಂದು ಪೊನ್ನೆೞ್ತಂ ಮಾಡಿ ನೆಲಮಾಳಿಗೆಯೊಳ್ ಬಯ್ತಿಟ್ಟು ಮತ್ತಮೊಂದೆೞ್ತಂ ಮಾಡುವ ಲೋಭದಿಂದೊರ್ವನೆ ಪೋಗಿ ಬಪ್ಪ ತೊಱೆಯೊಳ್ ತೆಪ್ಪಮಂ ಕಟ್ಟಿಯೇಱಿರ್ದು ಪಗಲುಮಿರುಳುಂ ನೀರೊಳ್ ಬರ್ಪ ಪುಳ್ಳಿಗಳಂ ಪಿಡಿದು ಪೊಱಗೊಟ್ಟಿ ಮಾಱಿ ಪೊನ್ನಂ  ನೆಱಪಲೆಂದು ಸೇದೆವಡುತಿ-

ರ್ಪನ್ನೆಗಮೊಂದು ದೆವಸಂ


ಇರುಳೊಟ್ಟಿಕೊಂಡು ಮಣ್ಣಂ 

ಸಿರದೊಳ್ ಪೊತ್ತಿಸಿಯು ಸೊಡರನಾ ತೊಱೆಯೊಳ್ ಮಾ 

ಣ್ದಿರದೇಱಿ ತೆಪ್ಪಮಂ ಚೆ 

ಚ್ಚರದಿಂದಂ ಪುಳ್ಳಿವಿಡಿಯುತಿರ್ಪನನಾಗಳ್॥೩೧॥


ವ॥ ಆ ಪೊೞಲನಾಳ್ವರಸು ಮಾಡದ ಮೇಗೆ ಮೆಯ್ಯ ಬೆವುರನಾಱಸುತಿರ್ದತ್ತಿತ್ತ ನೋೞ್ಪಾಗಳ್ ತೊಱೆಯೊಳಗಣ ಸೊಡರಂ ಕಂಡಿದೇನಾರಯ್ದು ಬನ್ನಿಮೆಂದಟ್ಟಿದೊಡವರೂ ಬೇಗಂ ಪೋಗಿ ನೋಡಿಬಂದೊರ್ವಂ ಪುಳ್ಳಿವಿಡಿದಪ್ಪನೆಂದೊಡಂತಪ್ಪ ಬಡವರೆನ್ನ ಪೊೞಲೊಳೊಳರಾದೊಡಾತನನೊಡಗೊಂಡು ಬನ್ನಿಮೆಂದೊಡಂ-

ತೆಗೆಯ್ವೆಮೆಂದಾತನನೊಡಗೊಂಡು ಬಂದರಸಂಗೆ ತೋಱಿದೊಡಿಂತೇಕಾಪತ್ತೈವಟ್ಟಪೆಯೆನೆ ಎನಗೊಂದೆೞ್ತುಂಟ-

ದರ್ಕೆಣೆಯಂ ಮಾಡಿದಪ್ಪೆನೆಂದಾಪತ್ತುವಟ್ಟಪೆನೆಂದೊಡರಸಂ ಕರುಣಿಸೆಮ್ಮ ಕೀಲಾರದೆತ್ತುಗಳೊಳಗೆ ನಿನ್ನ ಮೆಚ್ಚಿನೆತ್ತಂ

ಕೊಳ್ಗುಮೆನೆ ಎನ್ನೆೞ್ತೆನಂತಪ್ಪೆೞ್ತನಿತ್ತೊಡೆ ಕೊಳ್ವೆನೆಂದೊಡೆ ನಿನ್ನೆೞ್ತನೆಮ್ಮವರಗೆತೋಱಿಸೆಂದೊಡಂತೆಗೆಯ್ವೆನೆಂದವರ-

ನೊಡಗೊಂಡು ಪೋಗಿ ತನ್ನ ನೆಲಮಾಳಿಗೆಯೊಳಿರ್ದ ಪೊನ್ನೆೞ್ತಂ ತೋಱಿದೊಡವರ್ ಬೆಕ್ಕಸಂಬಟ್ಟಿಂತೆಂದರ್ 


ಇನಿತು ಕಸವರಮದೆಮ್ಮರ

ಸನ ಮನೆಯೊಳಗಿಲ್ಲ ಪಡೆಯಲಾಗೀ ಭವದೊಳ್ 

ನಿನಗೆಲ್ಲಿತಪ್ಪುತೆಂಬುದ 

ನೆನುತಂ ಮಗುೞ್ದಂತು ಬಂದು ಭೂಪತಿಗೆಂದರ್ ॥೩೨॥ 


ವ॥ ದೇವಾ ಬಿನ್ನಪಮೀತಂಗೆ ನಮ್ಮೆೞ್ತುಗಳಿಂ ಪಿರಿಯದೊಂದು ಪೊನ್ನೆೞ್ತುಂಟದಱನಿತು ಪೊನ್ನಂ ನಿಮ್ಜ್ಜಪಜ್ಜರುಂ ಪಡೆಯಲಾಱರೆಂದೊಡರಸನೆಂದನೀತನಿಂತಪ್ಪತಿ ಮೋಹಿತನಿವಂ ಬರ್ದೇವನಿರ್ದೇವನಿವನರ್ಥಮೆಲ್ಲಮಂ ಕವರ್ತೆಗೊಳ್ವಮೆಂದೆಣಿಸಿಯಾಯೆೞ್ತಂ ತರಿಸಿಕೊಂಡೊಡವನೆರ್ದೆಯೊಡೆದು ಸತ್ತು ತನ್ನ ಮನೆಯೊಳೆ ಪಾವಾಗಿ ಪುಟ್ಟಿ ತನ್ನ ಮಗನನೆ ಕೊಂದು ನರಕಂಬೊಕ್ಕನೆಂಬೀ ಕಥೆಯಂ ಕೇಳೆಲೆ ಜೀವಂಗಳಿರಾ ಕಡುಲೋಭಮಂ ಬಿಸುಡಿಮಿಂತಪ್ಪ ಶುಭಪರಿಣಾಮವಶದಿಂ ಜೀವಂಗಳ್ ಪುಗುವ ನರಕಂಗಳೊಳಪ್ಪಂದಮಂ ಕೇಳಿಂ


ರಗಳೆ॥ ಇಱಿ ಇಱಿ ಮೃಗಮಂ ತವೆ ಕೊಂದವನಂ 

ತಱಿ ತಱಿಯವಱಡಗಂ ತಿಂದವನಂ ॥೧॥ 


ಪಸಿ ನಾಲಗೆಯಂ ಪುಸಿನುಡಿದವನಂ 

ದಸಿಯಿಂದಿಱಿಯಿಱಿ ಮಿಗೆ ಲಾವುಕನಂ ॥೨॥ 


ಕಡಿ ಕಡಿ ಪರಧನಮಂ ಕಳ್ದವನಂ 

ಸುಡು ಸುಡು ಪೆಱರೊಡವೆಯನಾಳ್ದವನಂ ॥೩॥ 


ಕೊಲ್ ಕೊಲ್ ಪರವಧುವಿಂಗಳಿಪಿದನಂ 

ಮೆಲ್ ಮೆಲ್ ಪರವಧುವಂ ಕಿಡಿಸಿದನಂ ॥೪॥ 


ಬಡಿ ಬಡಿ ಧನದೊಳ್ ತಣಿವಿಲ್ಲದನಂ 

ಪಿಡಿ ಪಿಡಿಯವಗುಣವಿಂಗೆಱಗುವನಂ ॥೫॥


ಎಱೆ ಕೞ್ಗುಡುಹಿಗೆ ಲೋಹದ್ರವಮಂ 

ಅಱೆಯಿಱಿವಂಗೆಯ್ದಿಸುಪ್ರದಮಂ ॥೬॥ 


ಅರಿ ಕರಗಸದಿಂದಾ ಪಾತಕನಂ 

ಅರೆ ಸಣ್ಣಿಗೆಯೊಳ್ ಋಷಿಘಾತುಕನಂ॥೭॥ 


ಕಣ್ಣಂ ಕಳೆ ಮಾಣ್ದಿರದಂತವನಂ 

ಪುಣ್ಣೊಳ್ ಗಿಡಿ ಖಾರವನಿಂತಿವನಂ ॥೮॥ 


ಒತ್ತೀತನ ಗಂಟಲನೊಡೆವಿನೆಗಂ 

ಕುತ್ತಾತನನಲ್ಲಲ್ಲಿಯೆ ಕೆಡೆವಿನೆಗಂ॥೯॥ 


ಪೋೞ್ದಿಕ್ಕವನಂ ನಾಲ್ಕುಂ ದೆಸೆಯೊಳ್ 

ಸೀೞ್ದಿಕ್ಕಿವನಂ ಪಲವುಂ ದೆಸೆಯೊಳ್ ॥೧೦॥ 


ಸೆರಗಿಲ್ಲದೆ ಹಿಮದೊಳಗಿಕ್ಕವನಂ 

ಉರಿಯೊಳ್ ಪಿಡಿದಿಕ್ಕಿಂ ಬೞಿಕವನಂ॥೧೧॥ 


ಕಿಱಿಕಿಱಿದಂ ಖಂಡಂ ಮಾಡವನಂ 

ಕೊಱೆಕೊಱೆದೀಡಾಡಿನ್ನಿರದೆವನಂ॥೧೨ ॥        ॥ ೩೩॥


ಎಂದಿಂತು ನಾರಕರ್ ಬಿಡ 

ದಂದೊರ್ವರನುಗ್ರಕೋಪದಿಂ ದಂಡಿಸುತಿ 

ರ್ಪಂದಮನೆ ಬಗೆದು ಬೆರ್ಚುವು 

ದೆಂದಱಿಪಿಯುಮೇಕೆ ಪೊಲ್ಲದಂ ಚಿಂತಿಸುವಿರ್॥೩೪॥ 


ವ॥ ಬನ್ನದೞಲಂ ಮಾೞ್ಪ ಪೆಂಡತಿಯುಮಂ ದುರ್ಗತಿಯಂ ಮಾೞ್ಪ ಪೊಲ್ಲಮೆಯುಮಂ ಗೆಂಟು ಮಾೞ್ಪವನೆ ಚದುರಂ 


ಮ॥ ಪೆಱತೇಂ ದುಷ್ಪರಿಣಾಮದಿಂದೆ ದುರಿತಂ ಸಾರ್ತರ್ಕುಮಾ ಕರ್ಮಮೇ 

ತೆಱದಿಂದಂ ಕಡುಪೊಲ್ಲದಪ್ಪ ಗತಿಯೊಳ್ ತಂದಿಕ್ಕೆ ದುಃಖಂಗಳ 

ಳ್ಳಿಱಿಯುತ್ತುಂ ಬರೆ ಬೆಂದು ನೊಂದು ಮಱುಗುತ್ತಿರ್ಪಂತುಟೇಕಜ್ಜಮೇ 

ತೆಱದಿಂ ಪೊಲ್ಲಮೆಯತ್ತ ಚಿಂತಿಸದಿರಿಂ ಕೆಯ್ಕೊಳ್ಳಿಮೊಳ್ಪೆಲ್ಲಮಂ ॥೩೫॥ 


ಗದ್ಯ॥ ಇದು ಜಿನಶಾಸನ ಪ್ರಭಾಸನ ಶೀಲೋದಿತ ವಿದಿತ ಬಂಧುವರೂಮ ನಿರ್ಮಿತಮಪ್ಪ ಜೀವಸಂಬೋಧನಾ ಗ್ರಂಥಾವತಾರದೊಳಾಸ್ರವಾನುಪ್ರೇಕ್ಷಾ ನಿರೂಪಣಂ ದೀಪಾಯನ ಬಾಹುಬಲಿ ಪುಷೂಪದಂತಾರ್ಜಿಕಾ ಪಟಹಸ್ತ ಕಥಾ ಚತುಷ್ಟಯ ವರ್ಣನಂ 

ಅಷ್ಟಮಾಧಿಕಾರಂ


ಕೃತಜ್ಞತೆಗಳೊಡನೆ, 

ಸಂಪಾದಕರು: ಬಿ. ಎಸ್. ಸಣ್ಣಯ್ಯ 

ಪ್ರಕಾಶಕರು : ಪ್ರಸಾರಾಂಗ 

ಕನ್ನಡ ವಿಶ್ವವಿದ್ಯಾಲಯ- ಹಂಪಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ