ಬಂಧುವರ್ಮ ವಿರಚಿತ ಹರಿವಂಶಾಭ್ಯುದಯಂ
ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ವಿಶಿಷ್ಟವಾದುದು. ಗುಣದಲ್ಲಿಯೂ ಗಾತ್ರದಲ್ಲಿಯೂ ಮಿಗಿಲಾದ ಕೃತಿಗಳನ್ನು ರಚೆಸಿದವರಲ್ಲಿ ಜೈನರೇ ಮೊದಲಿಗರು. ಪಂಪ, ರನ್ನ, ಪೊನ್ನ ಇವರು ರತ್ನತ್ರಯರೆಂದೂ ಜಿನಸಮಯದೀಪಕರೆಂದೂ ಪರಿಕೀರ್ತಿತರಾಗಿದ್ದಾರೆ. ಪೊನ್ನ, ರನ್ನ, ಜನ್ನರು ಕವಿಚಕ್ರವರ್ತಿಗಳೆಂದು ಖ್ಯಾತಿವೆತ್ತಿದ್ದಾರೆ. ಈ ಪರಂಪರೆಗೇ ಸೇರಿದವನು ಕ್ರಿ. ಶ.ಸುಮಾರು ೧೨೦೦ರಲ್ಲಿದ್ದ ಬಂಧುವರ್ಮ. ಇವನು ಜೀವಸಂಬೋಧನೆ ಮತ್ತು ಹರಿವಂಶಾಭ್ಯುದಯ ಎಂಬ ಎರಡು ಚಂಪೂಕಾವ್ಯಗಳನ್ನು ಬರೆದಿದ್ದಾನೆ. ಜೀವಸಂಬೋಧನೆಯಲ್ಲಿ ಜೈನಮತದ ದ್ವಾದಶಾನುಪ್ರೇಕ್ಷೆಗಳನ್ನು ಹೇಳಲಾಗಿದೆ. ಆದುದರಿಂದಲೇ ಈ ಕಾವ್ಯಕ್ಕೆ ಜೀವಸಂಬೋಧನೆ ಎಂಬ ಹೆಸರನ್ನಿಡಲಾಗಿದೆ. ಹರಿವಂಶಾಭ್ಯುದಯದಲ್ಲಿ ೧೪ ಆಶ್ವಾಸಗಳಿವೆ. ಇದರಲ್ಲಿ ೨೨ ನೆಯ ತೀರ್ಥಂಕರನಾದ ನೇಮಿನಾಥನ ಚರಿತೆಯನ್ನು ಹೇಳಿದ್ದಾನೆ.
ಬಂಧುವರ್ಮನಿಗಿಂತ ಮೊದಲು ಒಂದನೆಯ ಗುಣವರ್ಮ, ಚಾವುಂಡರಾಯ. ಕರ್ಣಪಾರ್ಯ, ನೇಮಿಚಂದ್ರ ಇವರು ನೇಮಿನಾಥನ ಚರಿತೆಯನ್ನು ಹೇಳಿದ್ದಾರೆ. ನೇಮಿನಾಥನನ್ನು ಕುರಿತು ಕನ್ನಡ, ಸಂಸ್ಕೃತ, ಮತ್ತು ಪ್ರಾಕೃತದಲ್ಲಿ ಹಲವಾರು ಕೃತಿಗಳು ಹುಟ್ಟಿಕೊಂಡಿವೆ. ಈ ಕಾವ್ಯದ ಜನಪ್ರಿಯತೆಗೆ ನೇಮಿನಾಥನ ಸುತ್ತ ಹೆಣೆದುಕೊಂಡಿರುವ ಜೈನಸಂಪ್ರದಾಯದ ಹರಿವಂಶ ಮತ್ತು ಕುರುವಂಶಗಳ ಕಥೆಯೇ ಕಾರಣವಾಗಿರಬಹುದು. ವೈದಿಕ ಸಂಪ್ರದಾಯದ ಭಾರತ ಮತ್ತು ಭಾಗವತದ ಕಥೆಗಳು ಜೈನಸಂಪ್ರದಾಯದಲ್ಲಿ ಯಾವರೀತಿ ನಿರೂಪಿತವಾಗಿವೆ ಎಂಬುದನ್ನು ಈ ಹರಿವಂಶ ಪುರಾಣಗಳಿಂದ ತಿಳಿದುಕೊ-
ಳ್ಳಬಹುದು. ವೈದಿಕ ಸಂಪ್ರದಾಯದ ಪ್ರಕಾರ ಕ್ಷತ್ರಿಯರಲ್ಲಿ ಸೂರ್ಯವಂಶ ಮತ್ತು ಚಂದ್ರವಂಶವೆಂಬ ಎರಡೇ ರಾಜವಂಶಗಳಿದ್ದರೆ, ಜೈನಪುರಾಣಗಳಲ್ಲಿ ಪುರು, ನಾಥ, ಉಗ್ರ,ಹರಿ ಮತ್ತು ಕುರು ಎಂಬ ಐದು ವಂಶಗಳಿರುವುದು ಕಂಡು ಬರುತ್ತದೆ. ೨೪ ಜನ ತೀರ್ಥಂಕರರೂ ಈ ಐದು ವಂಶಗಳಲ್ಲೇ ಹುಟ್ಟಿದವರು.ಅವರಲ್ಲಿ ನೇಮಿನಾಥ ಹರಿವಂಶಕ್ಕೆ ಸೇರಿದವನು. ಆದುದರಿಂದಲೇ ನೇಮಿನಾಥ ಪುರಾಣಕ್ಕೆ ಹರಿವಂಶಪುರಾಣವೆಂಬ ಹೆಸರು ಹೆಚ್ಚು ರೂಢಿಯಲ್ಲಿದೆ
ಬಂಧುವರ್ಮನು ಸಂಪ್ರದಾಯಸ್ಥ ಕವಿ. ಚಂಪೂಶೈಲಿಯಲ್ಲಿ ರಚಿತವಾಗಿರುವ ಈತನ ಕಾವ್ಯಗಳು ಪ್ರೌಢವಾಗಿವೆ.
ಪ್ರಥಮಾಶ್ವಾಸಂ
ಶಾ॥ ಶ್ರೀಯಂ ಭವ್ಯ ಜನೋದಯಪ್ರಣುತಿಯಂ ಸರ್ವೋಪಕೃದ್ದಿವ್ಯವಾಕ್
ಶ್ರೀಯಂ ಜೀವದಯಾದಮಪ್ರಶಮೆಯಂ ವಿಶ್ವಪ್ರಭಾಸ್ವದೃಶ
ಶ್ರೀಯಂ ಕರ್ಮರಿಪುಕ್ಷಯಪ್ರಭವಮಂ ತಾಳ್ದಿರ್ದ ನಿವೃತ್ತಿಕಾ
ಶ್ರೀಯಂ ಪ್ರಾರ್ಥಿಸಿ ವಂದಿಪೆಂ ತ್ರಿಭುವನೈಕಸ್ವಾಮಿಯಂ ನೇಮಿಯಂ॥೧॥
ಉ॥ ಕಾಮಕಳಾನಿತಂಬಿನಿಯೆ ಪಾದಪಯೋಧರಯೈಗ್ಮೆ ನಾಟ್ಯವಿ
ದ್ಯಾಮೈಖಿ ರೃಜನೀತಿಪದಲಕ್ಷಣಲೋಚನೆ ಸಾರಹಸ್ತೆ ಧ
ರ್ಮಾಮೃತವಾಕ್ಯೆ ಕಾವ್ಯರಸಭಾವೆ ಸರಸ್ವತಿ ಬಂಧುವರ್ಮ ವ
ಕ್ತ್ರಾಮಳಕೋಮಳಾಂಬುರುಹದೊಳ್ ನೆಲಸಿರ್ಕೆ ಮನೋನುರಾಗದಿಂ॥೮॥
ಪದ್ಯಾಂಗಿ ವಚನೆ ಸನ್ಮುಖಿ
ಗದ್ಯ ಮಹಾರಚನೆ ವಿಳಸದುಭಯಾಳಂಕಾ
ರೋದ್ಯತ್ಕುಚೆ ಮತ್ಕೃತಿವಧು
ವಿದ್ಯಾವಿಜ್ಜನದ ಮನದೊಳಿರೆ ವಿರಚಿಸುವೆಂ॥೯॥
ಉ॥ ಕಾರಕದೊಳ್ ಕ್ರಿಯಾಪದದೊಳಿರ್ಕೆ ತಗುಳ್ದಿರೆ ಶಬ್ದಮೆಂಬಳಂ
ಕಾರದೊಳರ್ಥಮೊಂದಿ ನಿಲೆ ಭಾಷೆಯೊಳೊಪ್ಪಿರೆ ದೇಸೆ ಬಲ್ಲರಿ
ದ್ದಾರಯೆ ಕಾವ್ಯಲಕ್ಷಣದೊಳೊಳ್ಪಳವಟ್ಟಿರೆ ಪೇೞ್ವುದಲ್ಲದೇ
ಕಾರಣವಯ್ಯ ಕೆಮ್ಮಗಿರಲಾಗದೆ ಕಬ್ಬವ ಬಿಟ್ಟಿವೇೞ್ವುದೇ॥೧೦॥
ಚಂ॥ಕಿವಿದೆಱೆದಪ್ಪುದಾ ನಯದೊಳರ್ಥದೊಳೊಂದಿದ ಬಂಧದೋಜೆಯಿಂ
ಕವಿಯ ಮನಂಗೊಳಲ್ ನೆಱೆವದಪ್ಪುದು ಕಾವ್ಯರಸಂ ತುಳುಂಕೆ ಪಾ
ಯ್ದವಿರಳದಿಂ ಪೊನಲ್ ಪರಿಗುಮೆಂಬಿನಿತಪ್ಪುದು ನೆಟ್ಟನೋತು ಕೇ
ಳ್ದವರ್ಗಳು ಕಾವ್ಯಬಂಧನಮಿದೆಂಬಿನಿತಪ್ಪುದು ಕಾವ್ಯಬಂಧಂ॥೧೪॥
ಮ॥ ರಸದೊಳ್ ಬಿನ್ನಣದೊಳ್ಪು ಕೂಡೆ ಪದಮರ್ಥವ್ಯಕ್ತಿಯಂ ಮಾಡೆ ರಂ
ಜಿಸಿ ಪತ್ತಿರ್ದೆಣೆಮಾತು ಬಲ್ಲರೆರ್ದೆದಾಳ್ದಂತುಂ ಜನಂ ನಾಡೆ ಬೆ
ಕ್ಕಸಮಪ್ಪಂತುಮಿದೊಂದೆ ಸಾಲ್ವುದು ಜಗಕ್ಕೆಂಬಂತುಮಿಂ ಪೇೞ್ವೆನೆಂ
ದುಸುರಲ್ ಕ.ಬ್ಬಿಗರಣ್ಮದಂತುಮಿದನಾಂ ಪೇೞ್ವೆಂ ಮಹಾಕಾವ್ಯಮಂ ॥೧೬॥
ದುರಿತಕುಳವಿಜಯ ಸಮುದಿತ
ನಿರುಪಮಗುಣನಿಳಯ ಭಗವದಭಿಮತ ವಿಳಸ
ಚ್ಚರಸುಖಕರಮೆಂಬುವಱಿಂ
ಹರಿವಂಶಾಭ್ಯುದಯ ಕೃತಿಯನಾಂ ವಿರಚಿಸುವೆಂ॥೧೭॥
ವಚನ: ಅದೆಂತೆಂದೊಡನೇಕ ಜಳಚರನಿಕರ ನಿಶಿತಾಂಕುರ ನಖದಾಡಾಪ್ರಹಿತ ವಿಭೀಷ್ಟ ಹರಿಶುಕ್ತಿಪುಟ ಸಮುಚ್ಚಳಿತ ಮುಕ್ತಾಫಳ ಕರಾಪಾಂಶು ವಿತಾನಾಳಂಕೃತ ವಿದ್ರುಮ ಲತಾಂಕುರ ಮಂಜರೀ ಪಿಂಜರಿತವೀಚೀಚಯನಿಚಿತ ಪೃಚ್ಛದಾಳಂಬಿತ ಕಂಬುರ್ಲಸಿತ ಬೇಳಾವನಪರಿವೃತ ಚತುರದಧೀವಳಯವಳಯಿತ ಜಂಬೂದ್ವೀಪದ ಭರತಕ್ಷೇತ್ರದ ವಿನೀತಾಖಂಡದೊಳೆ ಮಗದೆಯೆಂಬುದು ವಿಷಯಮದೆಂತಪ್ಪು ದೆಂದೊಡೆ
ಅಂತಪ್ಪ ನಾಡೊಳ್ ರಾಜಧಾನಿ ರಾಜಗೃಹಮೆಂಬುದು ಪೊೞಲ್ ಆ ಪೊೞಲ ಬಹಿರ್ಭಾಗದೊಳ್
ಪೊಳೆದೆಸೆವ ನಳಿನದಲರ್ಗಳ
ತೊಳಗುವ ಬಿಱುಮುಗುಳ ಪಸಿಯ ನನೆಗಳ ಸೊಗಯಿ
ಪ್ಪಳವುಂ ನೀರ್ವಕ್ಕಿಯ ಗೊಂ
ದಳಮುಂ ಕಳಕಳಮುಮೊಳವು ಕೆಱೆಗಳೊಳೆಲ್ಲಂ ॥೨೧॥
ವಚನ: ಅಲ್ಲಿಯ ಕೆಱೆಗಳೆಲ್ಲಂ ಬೆಳೆಗೆಯ್ಗಳೆ ಕೊಳಂಗಳೆಲ್ಲಂ ಪೂಗೊಳಂಗಳೆ ಬಾವಿಗಳೆಲ್ಲಂ ಬೊಡ್ಡಣವಾವಿಗಳೆ.
ಪಣ್ಮರಗಳೆ ಪೂಮರಗಳೆ
ತಣ್ಮಲೆದಲೆವೆಲರೆ ಮಿಱುಗಿಪರಳಲರೆ ಪೊದ
ೞ್ದುಣ್ಮುವ ಕಂಪೆ ಕರಂ ಕೈ
ಗಣ್ಮುವ ದಂಪತಿಯಲಂಪೆ ನಂದನವನದೊಳ್॥೨೨॥
ಮೊದಲೊಳಾದಿಭಟ್ಟಾರಕನಿಕ್ಷ್ವಾಕುವಂಶಮುಗ್ರವಂಶ ಕುರುವಂಶ ನಾಥವಂಶ ಭೋಜವಂಶಮೆಂಬಯ್ದು ಕ್ಷತ್ರಿಯವಂಶಂ ಮಾಡಿದೊಡಂತೆ ನಡೆಯುತ್ತಿರ್ದು ಪತ್ತನೆಯ ತೀರ್ಥದಂದು ವಿದ್ಯಾಧರಶ್ರೇಢಿಯನಾಳ್ವ ಹರಿವಂಶಮೆಂಬ ಪುರಮನಾಳ್ದ ಪ್ರಭಂಜನನೆಂಬರಸಂಗಂ ಮೃಕಂಡೈವೆಂಬರಸಿಗಂ ಪುಟ್ಟಿದಾತಂ
ಖರಕಿರಣೋಪಮತೇಜಂ
ನಿರುಪಮ ಶುಭಲಕ್ಷಣಾಂಕಿತಂ ನಯನಮನೋ
ಹರಮಾಗೆ ನಾಡೆ ಸೊಗಯಿಸು
ತಿರೆ ಮಾರ್ಕಂಡೇಯನೆಂಬ ಪೆಸರಿಂದೆಸೆದಂ॥೩೨॥
ಸಪ್ತಮಾಶ್ವಾಸಂ
ವಚನ: ತಾಗಿ ಬಹುವೇದ್ಯದಿನಿಱಿದು ಬೆಟ್ಟು ಕೆಡೆವಂತೆ ಕೆಡೆದಿಂಬೞಿಯಂ ಶಿಶುಪಾಲಂ ತಮ್ಮ ಬಲಮರ್ಕಾಡುವುದುಮಂ ಕಂಡು ಮನದೊಳೞಲೈಣ್ಮೆ ಮುಳಿಸು ಕಯ್ಗಣ್ಮೆ ನಾರಾಯಣಂಗಿದಿರಂ ನೂಂಕಿ ಕಾದುತ್ತಿರ್ದಂ. ವಿಶ್ವಾವಸುವರ್ಜುನನೊ-
ಳಿದಿರ್ಚಿದಂ. ವೇಣುದಾರಿ ಬಲದೇವನನಾಂತಂ ಯಮಂ ವಸುದೇವನೊಳ್ ತಾಗಿದಂ ರುಗ್ಮಿಣಿ ಸತ್ಯಕನೊಳ್ ಪೊಣರ್ದು ಕಾದೆ ರುಗ್ಮಿಣಿ ಹರಿಯಲೀಯದೆಂತಪ್ಪಡಮೆಮ್ಮಣ್ಣನಂ ಪಿಡಿಗೆಂದು ಸತ್ಯಕನಲ್ಲಿಗಟ್ಟಿದಳದಂತವರ್ ದ್ವಂದ್ವ ಯುದ್ಧದೊಳ್ ಮಸಗಿ ಕಾದೆ ಶಿಶುಪಾಲಂ ತನ್ನ ಮುಂದಣ ಬಲಂ ಕಿಡೆ ಸತ್ತುದಕ್ಕೆ ಕಡುಮುಳಿದು ರಥಮನೈದೆನೂಂಕಿ ಹರಿಯನಿಂತೆಂದಂ
ತುಱುಪಟ್ಟಿ ನಿನ್ನ ಪೆಳದೇಂ
ತುಱುಕಾಱಂ ನಿನ್ನ ತಂದೆ ತುಱುವನೆ ಕಾವೈ
ತುಱುಕಾರ್ತಿಯರೊಳ್ ಮಱೆವಾ
ೞ್ವಱಿಕೆಯ ಗೋವುಳಿಗ ನಿನಗೆ ಶೌರ್ಯಮೆ ಪೊಲನೇ॥೬೪॥
ಮ॥ ಉಡಿದೈ ಬಂಡಿಯನೇನಗುರ್ವೊ ಮಗುೞ್ದುಂ ವಿಕ್ರಾಂತದಿಂ ಕಾಗೆಯಂ
ಪಿಡಿದೈ ಸಂಕಿಸದೆರ್ದು ಕತ್ತೆ ಬಡಗೂಂಟೆಂದಿಂತಿವಂ ನೋವಿನಿಂ
ಬಡಿದೈ ನೀರೊಳಗೊಳ್ಳೆಯಂ ಮಡಿಪಿದೈ ನೀಂ ಚೋದ್ಯಮೋ ಮತ್ತೆ ದಂ
ಡಿಡುವಂ ಮಾಣ್ದಿರದೊತ್ತಿದೈ ಗಡಮಿದೇನಾಶ್ಚರ್ಯಮೋ ಸಾಹಸಂ॥೬೫॥
ಒಲ್ಲದೆ ನಾಣಂ ಕೈದುಗ
ಳಿಲ್ಲದೆ ಕುಣಿದಳಿಪಿ ಕಡುಪೋರ್ವ ಮಲ್ಲರುಮಂ
ನಿಲ್ಲದೆಯೌಂಕಿಯೆ ಗೆಲ್ದಾ
ಗೆಲ್ಲಂ ನಿನಗಾದೊಡಿಱಿವ ಗೆಲ್ಲದೊಳೇನೋ॥೬೬॥
ಚಂ॥ ಬೞಲದೆ ಪೊತ್ತು ಕಲ್ಲನುಲುವಂಗೆಣೆಯಾದ ಮಹಾಪ್ರತಾಪಿ ನೀಂ
ಪೆೞಕನಡುರ್ತು ಕೊಂದ ಕಡುವಲ್ಕಣಿ ಮಾಣ್ದಿರದಣ್ಮಿ ಬಂದು ನಾ
ಯ್ನೊೞಲೆಯ ಮೇಲೆ ಪಟ್ಟಿ ಕಡುವೀರ ಕುಟುಂಬದಿನಗ್ಗಳಿಕ್ಕೆ ಕೈ
ಗೞಿದಿರೆ ಶಂಖಮೋಗಡ ಮಾಹಾತ್ಮ್ಯರಣಾಗ್ರದೊಳೇಡಗುಳ್ಳೆಯೋ॥೬೭॥
ತಾಯೊಡವುಟ್ಟಿದನಂ ಕೊಂ
ದಾಯತಿಯೊಪ್ಪಿರ್ದುದಕ್ಕೆ ನೀಂ ಬಿಸುಟು ಕುಲಾ
ಮ್ನಾಯದ ಪೊೞಲಂ ಭಯದಿಂ
ತೋಯಧಿಯೊಳಗುೞಿದೆ ಗಂಡರಾರ್ ನಿನ್ನನ್ನರ್॥೬೮॥
ಉ॥ ಇನ್ನವು ಸಾಹಸನಗಳೊಳವಾಗಿರೆ ಕೆಮ್ಮನೆ ಸಂತಸಿಕ್ಕೆಯಿಂ
ದನ್ನಯವಂತನಾಗಿರದಿದೇನೌನಗಲ್ಲದ ಮರ್ತ್ಯರಾರ್ಗಮೀ
ಸನ್ನುತೆಯಪ್ಪ ಕನ್ನೆ ವಿಷಕನ್ನೆ ಬರ್ದುಂಕುವ ಕೊಂಡು ಬೇಡ ನೀ
ನಿನ್ನೊಳಿದಿರ್ಚಿ ಸತ್ತು ಕಿಡದಿರ್ ಬಿಡು ಮೆೞ್ಪಡದಿರ್ ಲತಾಂಗಿಯೊಳ್॥೬೯॥
ಬಡಕಳ್ಳಂ ಸಾಯದೆ ಪೋ
ಪಡೆ ಲೇಸೆಂಬಂತೆ ನಿನಗದುಂತಾಗಿಯುಮಿ
ನ್ನುಡುವಿನೊಳೇಂ ಕೈ ಪೋತಂ
ದಡೆ ಸಾಲ್ಗುಂ ಸತಿಯೊಳೇನೊ ಪೋಪುದೆ ಗೆಲ್ಲಂ॥೭೦॥
ವಚನ॥ ಎಂಬಂತೆನಿತಾನುಂ ತೆಱದ ಭಾಷೆಯೊಳ್ ಬೈದುದಂ ಹರಿ ಕೇಳ್ದುಮವರಬ್ಬೆ ಮೂಱು ಪೊಲ್ಲಮೆಯನೀತಂಗೆ ಸೈರಿಸುವುದೆಂದೆನಗೆ ಕೈಯೊಡ್ಡಿ ಬೇಡಿದೊಡಾಂ ನೂಱುಪವರಂ ಸೈರಿಸುವೆನೆಂದೆನೆಂದು ತನ್ನೆಂದುದಂ ನೆನೆದು ನೂಱುವರಂ ಕೇಳುತ್ತಿರ್ದನತ್ತ ಬಲದೇವಂ ಹಳಾಯುಧದಿಂ ವಿಶ್ವಾವಸುವಿನ ತಲೆಯನೊಡಪೊಯ್ದು ಕೊಂದಂ ಅರ್ಜುನನುಂ ತನಗಾಂತ ವೇಣುದಾರಿಯಂ ಕೊಂದಂ ಸತ್ಯಕನುಂ ರುಗ್ಮಿಣನಂ ವಿರಥನಾಗೆಚ್ಚು ಪಿಡಿದು ತನ್ನ ರಥದೊಳಗಿಟ್ಟುಕೊಂಡು ಬಂದನನ್ನೆಗಂ ನಾರಾಯಣಂ ಶಿಶೈಪಾಲನ ಬಯ್ಗಳ್ ನೂಱು ನೆಱೆದಾಗಳ್ ಅಮೋಘಾಸ್ತ್ರದಿನೆಚ್ಚು ಕೊಂದು ವಿಜಪಟಹಮಂ ಪೊಯ್ಸಿ ಕೊಳ್ಕೊಡೆಯಂ ಬೆಳಸಿ ಬೀಡಂಬಿಟ್ಟಿರ್ದಂ ವೆಶ್ವಾವಸು ಮೊದಲಾಗೆ ಸತ್ತ ನೃಯಕರಂ ದಾಹಿಸವೇೞ್ದು ರುಗ್ಮಿಣಕುಮಾರನುಮಂ ಕನ್ನೆಯುಮನಾಱೆ ನುಡಿದು ರುಗ್ಮಿಣಂಗಾ ಪದವಿಯಂ ಮಾಡಿ
ಚಂ॥ ನೆರಪಿದನೇಕ ಜೀವಮರುಣೌಗ್ರರಣೌಹತಮಾದುದಾಗಿಯುಂ
ಹರಿಬಲ ಶೌರ್ಯಸಂಚರಣಮಿಂದುಕುಲೋದ್ಧರಣಾಸುಖಪ್ರಸಂ
ಸರಣ ಸಮತ್ಕ್ರಿಯಾವರಣಮಕ್ಕುಮನಿಂದಿತಂ ರೂಪ ರುಗ್ಮಿಣೀ
ಹರಣಮುಪೇಂದ್ರಚಿತ್ತಹರಣಂ ಜಯ ಸಿಂಹರಣಕ್ಕೆ ಕಾರಣಂ॥೭೧॥
ವಚನ॥ ಅದಱಿಂದುತ್ಸಾಹವಂತನಾಗಿ ಕನ್ನೆಯನೊಡಗೊಂಡು ಪಯಣಂ ಬಂದು ಕೆಲವು ದಿವಸದಿಂ ದ್ವಾರಾವತಿಯನೆಯ್ದೆ ದೇವತೋದ್ಯಾನವನದ ಕೆಲದೊಳ್ ಬಿಟ್ಟಿರ್ದು ಬಂಧುಜನ ಪುರಜನ ಪರಿಜನಾದಿಗಳ್ಗೆ ಪೇಳ್ದಟ್ಟಿ ಬರಿಸಿ ಬೀಡಿನೊಳ್ ತನಗಂ ರುಗ್ಮಿಣಿಗಂ ವಿವಾಹಮಂ ಮಾಡಿ ಕೂಡಿರ್ದುದಂ ಸತ್ಯಭಾಮೆ ಕೇಳ್ದು ನೋೞ್ಪೆನೆಂದು ಬರುತ್ತಿರ್ದುದಂ ಹರಿ ಕೇಳ್ದು ಸತ್ಯಭಾಮೆ ಮೊದಲಾಗೆಲ್ಲರುಂ ನಿನಗೆಱಗುವಂತು ಮಾಡಿದಪ್ಪೆನೆಂದು ರೈಗ್ಮಿಣಿಯನೊಡಂಬಡಿಸಿ
ದಿವ್ಯವಿದ್ಧಮಾಗೆ ಕಯ್ಗೆಯಿಸಿ ಬನದೊಳಗಣಶೋಕವೃಕ್ಷದ ಮೊದಲೊಳ್ ಸ್ಫಟಿಕದ ಜಗಲಿಯ ಮೇಲಿರೆಸಿ ನೀನುಸಿರದೆ ಕಿಱಿದುಪೊತ್ತನಿರೆಂದು ಕೆಲದೊಳೋಜೆ ಸೂಳೆವೆಂಡಿರಂ ದೇವತೆಯನರ್ಚಿಸುತ್ತಂ ಪೊಡೆವಡುತ್ತವರಂ ಬೇಡುತ್ತಮಿರ್ಪಂತು ಮಾಡಿ ಬೀಡಿಂಗೆವೋಗಿರ್ದನನ್ನೆಗಂ ಸತ್ಯಭಾಮೆ
ಚಾಮೀಕರ ಕಳಶಧ್ವನಿ
ಚಾಮರ ಧವಳಾತಪತ್ರ ಪಡಡಕ್ಕಾದಿ
ಶ್ರೀಮದೂವಿಭವಯುತಂ ಪೌ
ಲೋಮಿಯೆ ಬರ್ಪಂದದಂತೆ ಪೊೞಲಿಂ ಬಂದಳ್॥೭೨॥
ವಚನ॥ ಬಂದಾಕೆಯಿರ್ದಲ್ಲಿಗೆ ಪೋಗೆನೆಂಬ ಗರ್ವದಿನೀ ಬನದೊಳಿರ್ದಪೆನೆನ್ನಲ್ಲಿಗೆ ತನ್ನ ತಂದ ಪೆಂಡತಿಯನಟ್ಟುಗೆ ನೋೞ್ಪೆನೆಂದು ಹರಿಯಲ್ಲಿಗಟ್ಟಿದೊಡೆ ಅಂತೆಗೆಯ್ವೆನೆಂದಟ್ಟಿ ಬೇಗಂ ಬನದೊಳುಳಿದಿರ್ದಂ ಸತ್ಯಭಾಮೆಯುಂ ಬಂದು ಬನಮಂ ಪೊಕ್ಕು ಸೊಗಯಿಸುವ ಬನಮನರ್ಥಿಯೊಳ್ ನೋಡುತ್ತಮಂತೆ ಪೋಪಳಿದಿರಂ ಬರ್ಪಾಕೆಗಳುಮಂ ಕಂಡಿದೇ-
ಕಿತ್ತಬಂದಿರೆಂದೊಡೆ ಇಲ್ಲಿ ವನದೇವತೆಯುಂಟು ಕರಂ ಸನ್ನಿಹಿತಮಾಗದನರ್ಚಿಸಿ ವರಂಬಡೆದು ಪೋದಪೆಮೆನೆ ಮನಂಗೊಂಡು ಪೋಗಿ ದೇವತೆಯಂ ಕಂಡು ಚೋದ್ಯಂಬಟ್ಟು ತಾನುಮರ್ಚನೆಯಂ ತರಿಸಿ ವಿನಯದಿನರ್ಚಿಸಿ
ಮ॥ ಹರಿ ಮಾಱಾಂತರನಿಕ್ಕೆ ವೀರಸಿರಿಯಂ ತಪ್ಪಂತೆ ಬಿಂಬೋಪಮಾ
ಧರೆಯಂ ರುಗ್ಮಿಣಿಯೆಂಬನಂದ್ಯವಧುವಂ ತಂದಾತನಿನ್ನಾ ತಳೋ
ದರಿಯಂ ತಾನಣಮೊಲ್ಲದಿರ್ಪನಿತ ನೀಂ ಮಾಡಬ್ಬ ಮಾಡಿತ್ತೊಡಾ
ದರದಿಂ ಪಟ್ಟಮನೀವೆನೆಂದೆಱಗಿದಳ್ ಕಾಲ್ಗಾಗಳಷ್ಟಾಂಗದಿಂ॥೭೩॥
ವಚನ॥ ಅಂತೆಱಗಿ ಪೊಡೆವಡುವುದಂ ಹರಿ ಕಂಡಿದೇಂ ರುಗ್ಮಿಣಿಯಂ ನೋಡಲ್ ಬಂದೈಮೆಯ್ದೆವಾರದೆ ಬರಿಸಿ ನೋಳ್ಪೆನೆಂಬ ಗರ್ವಮೀಗಳ್ ಕಯ್ಯಂ ಮುಗಿದಾಕೆಯಡಿಗೆಱಗಿ ವರಂಬಡುವನಿತಾಯ್ತೆ ನಿನಗೆಂದು ನಗುವುದಂ ಕಂಡು ಸಿಗ್ಗಾಗಿ ಮುಳಿದೆದ್ದು
ಮೊದಲೊಳ್ ಗೋವನೆಯೆಂದೊಡೆ
ಪದವಿಯ ಪೆಂಪಿಂಗದೆಂತುಟಂತಾಗಿದೆಂ
ಬುದನಣಮಱಿಯದಿದಂ ಮಾ
ಡಿದೊಡಮದೇನಾಕೆಗಪ್ಪ ಜಾಣಂ ಬಲ್ಲೆಂ ॥೭೪॥
ವಚನ॥ ಎಂದು ತಾನುಂ ತನ್ನೊಡನೆಯ ಪರಿಚಾರಿಕೆಯರುಮಾಕೆಯ ಮೇಲ್ವಾಯ್ದುಡೆಯನುರ್ಚಿ ಮಾಲ್ಯಾಭರಣಂಗಳ ನೆೞೆದುಕೊಂಡೊಡೆ ಮತ್ತಂ ಪೞಿಯಂದದಿಂದಿಟ್ಟುಂ ತೊಟ್ಟಂದದಿನಿರೆ ಮತ್ತೆಯುಮೆೞೆದುಕೊಳೆ ಮುನ್ನಿನ ಪಸದನ ದಂದದೊಳಿಕ್ಕಿಮದೆಂತೆನೆ
ಪಱಿವಲೆಯಂ ಪಱುಗೋಲಂ
ಮಱೆಮಾಡಿ ಮುನೀಶ್ವರಂಗೆ ಮುನ್ನಿನ ಭವದೊಳ್
ಪಱಿಪಡೆ ಚಿಕ್ಕುಟಮಂ ಗುಂ
ಗುಱುಮಂ ನೆಱೆ ಸೋವುತಿರ್ದ ಭಕ್ತಿಯ ಭರದಿಂ ॥೭೫॥
ವಚನ॥ ಬನ್ನಂ ಬಂದಡೆಯುಮಪಪ್ರಥೆಯುಮಿರೆ ನಿಶ್ಚಯಮೆ ದೇವತೆಗೆತ್ತು ಭಯಮುಂ ಸಿಗ್ಗುಮಾಗೆ ಮಗುೞ್ದುಪೋಗಿ ರತ್ನಮಾಡಮಂ ಪೊಕ್ಕಳಿತ್ತ ರುಗ್ಮಿಣಿಯುಂ ತನ್ನನತಿಕ್ರಮಿಸಿದುದಕ್ಕೆ ಚಿಂತಿಸುತಿರ್ದುದಂ ಕೃಷ್ಣನಱಿದು ಸಾರೆವಂದು ಕಾಲಂಪಿಡಿದು ಸಂತಯ್ಸಿ ಬೀಡಿಂಗೆ ಕೊಂಡುಪೋಗಿ ಸಾಮಂತ ಮಹಾಸಾಮಂತ ಪ್ರಧಾನರಂ ಬರಿಸಿ ತನ್ನೊಡನೆ ಸಿಂಹಾಸನದೊಳಿರಿಸಿ ಮಹಾದೇವಿಪಟ್ಟಂಗಟ್ಟಿ ಪಿರಿದುಮೊಸಗೆಯಂ ಮಾಡಿ ತಾನುಮಾಕೆಯುಂ ಪಟ್ಟವರ್ಧನಮನೇಱಿ ರಾಜ್ಯಚಿಹ್ನಂಗಳ್ವೆರಸು ಮಹಾವಿಭೂತಿಯಿಂ ಪೊೞಲಂ ಪೊಕ್ಕು ಕರುಮಿಡದೊಳ್ ಪಸೆಯಮೇಗಿರ್ದು ಪರಕೆಯಂ ಸೇಸೆಯುಮನಾಂತು ಸುಖದಿನಿರ್ದತಿಸ್ನೇಹಿತರಾಗಿ ನಿಚ್ಚಮಾಕೆಯೊಳತ್ಯಂತ ಕಾಮಭೋಗಾನುರಾಗದಿಂ
ಮನದೊಳೊಗೆದೞ್ಕಱುಂ ಸುಖ
ದನುಭವಣೆಗಳೆನಿತವನಿತುಮೊಡಗೃಡಿದೊಡಂ
ತನುಭವಿಸುತ್ತಿರ್ದನುದಿನ
ಮನುಪಮಿತ ಸುರೇಂದ್ರನಂದದಿಂದಮುಪೇಂದ್ರಂ॥೭೬॥
ಅಷ್ಟಮಾಶ್ವಾಸಂ
ಉ॥ ಆನೆರೆದಟ್ಟಿದಾಗಳಿದು ಪಿತ್ತವಿಕಾರದಿನಾದುದೆಂಗುಮೋ
ತಾನೆನಗಬ್ಬೆಯೆಂದು ಪುಸಿಶೌಚದೊಳಿನ್ನಣಮಾಗದೆಂಗುಮೋ
ಜೈನಮತಶ್ರುತಂಗೆ ಪರನಾರಿಯೊಳಾಗದು ಕೂಟಮೆಂಗುಮೋ
ಮಾನಿತಮಪ್ಪ ವಸ್ತುಗಳನಿತ್ತಡೆ ಮೋಹದಿನಕ್ಕುಮೆಂಗುಮೋ॥೫೮॥
ವಚನ॥ ಎಂದು ಬಗೆಬಗೆದು ಪಲಂಬುತಿರ್ಪಿನಮಬ್ಬೆಗೆ ದಾಹಜ್ವರಮಾದುದೆಂಬುದಂ ಕಾಮದೇವಂ ಕೇಳ್ದಾರಯ್ಯಲೆಂದು ಬಂದಾಗಳ್ ಮುನ್ನ ನಡುಕಂ ಪೊಣ್ಮೆ ಬೆಮರುಣ್ಮೆ ಕಿಱಿದುಬೇಗಮೆಂತಾನುಂ ಬರೆಯಿತ್ತಬಾಯೆಂದು ಸಾರೆ ಕುಳ್ಳಿರಿಸಿ ತೋಱು ಕೆಯ್ಯನೆಂದಾತನ ಕೆಯ್ಯಂ ತನ್ನೆರ್ದೆಯೊಳ್ ಸಾರ್ಚಿ ನಡುಕಮಂ ತೋಱಿ ಬೆಂಕೆಯಂ ನೋಡೆಂದು ಕೆಯ್ಯಂ ಮೊಲೆಯಮೇಗಿಟ್ಟು ಪಿಡಿದಿರ್ದು ಕೆಲದೊಳಿರ್ದವರಂ ಕೇಳದಿಂತೆಂಗುಂ
ಇಂತೆನಗೊದವಿದಸು ಪೋ
ಪಂತಪ್ಪನಿತೊಂದವಸ್ಥೆ ಪೆಱತೊಂದಿದು ತಾ
ನೆಂತುಂ ಕಿಡದಂಗಜನಿಂ
ಭ್ರಾಂತಿಸದೆನ್ನೊಡನೆ ಕೂಡಿ ಬಾಳಿಸು ಪೆಱದೇಂ॥ ೫೯॥
ವಚನ॥ ಎನೆ ತೊಟ್ಟನೆ ಬೇಳ್ಕುತ್ತ ಬೆಟ್ಟನೆವೋಗಿ ತನ್ನ ಕೆಯ್ಯಂ ಬೇಗಮುಡುಗಿಕೊಂಡು ಇದು ನೆಮಗೆನಿತು ಪೈತ್ತಿಕಜ್ವರಮಾದೊಡಮಿಂತೆನಲಕ್ಕುಮೆ
ಎನೆ ಕನಕಮಾಲೆ ನುಡಿಗುಂ
ಮನಸಿಜ ಕೇಳ್ ಖದಿರವನದ ತಸ್ಕರಶಿಲೆ ತಾಯ್
ನಿನಗಾನಲ್ಲೆಂ ನಿನ್ನಂ
ಜನಪತಿ ಕಂಡೆನಗೆ ತಂದು ನಡಪೆಂದಿತ್ತಂ ॥೬೦॥
ಉ॥ ಇತ್ತಡೆ ನಿನ್ನನಾಂ ನಡಪಿದೆಂ ಮೊಲೆಮಾಗದುದೆಲ್ಲಿವಂದುದೋ
ಚಿತ್ತಜ ನಿನ್ನನೊಲ್ದು ಮೊಱೆಯಿಟ್ಟಪೆ ನೀನೆನಗಕ್ಕಟೆಂಬುದಾ
ಪತ್ತಿನೊಳಪ್ಪಡಂ ಫಲಮನುಣ್ಣದೆ ಸಾವರೆ ಪಂಚವಳ್ಳಿಯಂ
ಪಿತ್ತಿಲೊಳಿಟ್ಟರುಂ ಮರನಿಟ್ಟರುಮೇಂ ಫಲಮುಂಬರಲ್ಲರೋ॥೬೧॥
ಅಂತೇಕೆಂಬಿರ್ ನವಮಾ
ಸಾಂತಂಬರೆ ಪೊತ್ತು ಪೆತ್ತ ತಾಯ್ವಿರ್ಗಿನ್ನೆಂ
ದಿಂತಿನಿತು ಕಾಲಮೆಲ್ಲಂ
ಸಂತಸದಿಂ ನಡಪೆ ನಿಮ್ಮೊಳುೞಿದರ್ ಸಮನೇ॥೬೨॥
ಚಂ॥ ನಡಪಿದೆನರ್ತಿಯಿಂ ಫಲಮನುಂಬನಿತಾಗಲೆವೇೞ್ಕುಮೆಂಬಿರ
ಪ್ಪಡೆ ಬೆಸವೇೞಿಯಾಂತ ರಿಪುವಂ ಗೆಲೆ ಕಾದುವೆನಂತುಮಲ್ಲದೀ
ಯೆಡೆಯೊಳಮೂಲ್ಯವಸ್ತುವೊಳವೆನ್ನಿರೆ ತಂದವನೀವೆನೆಲ್ಲಿಯಾ
ದೊಡಮೆನೆ ಗರ್ವಮಾದವರ್ಗೆ ಲೋಕದೊಳೇನರಿದೇನೊ ಗೋಚರಂ॥೬೩॥
ವಚನ॥ ಎಂಬುದೆಲ್ಲಮಂ ಕೇಳ್ದು ಬೆಚ್ಚನೆ ಸುಯ್ದು ಮನದೊಳಿಂತೆಂಗುಮಿವಂಗೆ ತಾಯೆಂಬತ್ತಂ ಪೋಗದೇಗೆಯ್ವೆಂ ಮೋಹಮಂ ತೋಱೆ ನಡೆವೆನೆಂದೆಂಗುಂ ನೀನೆನಗೆ ಬೆಸಕೆಯ್ದುದಂ ಕಂಡು ನಂಬುವುದಂತಪ್ಪಂದುಂ ಕೆಯ್ಕೊಳೆನ್ನ-
ನೊಳಕೊಂಡು ವಿದ್ಯಾಧರ ಶ್ರೀಯನಾವಗಂ ಕೆಯ್ಕೊಂಡು ಸುಖಮಿಪ್ಪುದಂ ಬಗೆದುದನಲ್ಲದೀಗಳಿನಳಿಪನೆ ಬಗೆದೆನಲ್ಲ-
ನೆನೆ ಕಾಮಂ ವಿದ್ಯಾಲಾಭಮುಮರ್ಥಲಾಭಮುಮಿನಿಸು ದೋಷಂಬೆರಸಿಯಲ್ಲದಾವಗವೆನ್ನ ಬಗೆಯೆ ಬಗೆಯಾಗಿ ವಿದ್ಯೆಯಂ ಕೊಳ್ವೆನೆಂದಿಂತೆಂದಂ
ಉಂತುಂ ಬೆಸಕೆಯ್ವೆಂ ನಿಮ
ಗೆಂತು ಭರಂಗೆಯ್ಯೆ ಕೂರ್ಮೆಯುಂ ಕಜ್ಜಮುಮಂ
ಭ್ರಾಂತಿಸವೇಡೆನಲೀವುದು
ಮಂತೋಱಿದೊಡೆಂತು ದಾಂಟುವೆನೊ ಬೆಸಸಿಮದಂ॥೬೪ ॥
ವಚನ॥ ಎನ್ನ ನೇಹಕ್ಕಡಂಬಂದಂ ತನ್ನ ಮೋಹಕ್ಕೆ ಮನಂದಂದನೆಂದು ನಂಬಿ ಪ್ರಜ್ಞಪ್ತಿವಿದ್ಯೆಯಂ ತ್ರಿಶುದ್ಧಿಯನಿತ್ತೆಂ
ಸಂಜಯಂತಭಟ್ಟಾರರ್ ಮೋಕ್ಷವೋದಲ್ಲಿಯ ಸಿದ್ಧಕೂಟದ ಚೈತ್ಯಾಲಯದೊಳ್ ನೀಂ ಸಾಧಿಸಿಕೊಳ್ಳೆಂದು ಮಂತ್ರಪದಂಗಳಂ ಪೇೞ್ದೊಪ್ಪಿಸಿದೊಡೆ ಕೆಯ್ಕೊಂಡು ಪೊಱಮಟ್ಟು ಬಂದರ್ಚನಾಸಹಿತಂ ಪೋಗಿ ಸಿದ್ಧಕೂಟಮಂ ಬಲಗೊಂಡು ದೇವರಂ ಬಂದೆಸಿ ಮಂತ್ರವಿಧಿಯಿಂದಾರಾಧನೆಗೆಯ್ಯೆ ವಿದ್ಯೆ ಸಾಧ್ಯಮಾಗಿ ಬೆಸನೇನೆಂದೊಡದಂ ಪೂಜಿಸಿ-
ರ್ಪಿನಮಲ್ಲಿಗೆ
ಯಮ ನಿಯಮ ಸ್ವಾಧ್ಯಾಯ
ಕ್ರಮಯುತರಹಿತ ವಿಶ್ರುತ ವಿಪುಳೋತ್ತಮರೂ ಗು
ಣಮಣಿಗಳುಂ ಗುಣಭೂಷಣ
ವಿಮಳಮತಿಗಳೆಂಬ ಚಾರಣರ್ ಋಷಿಯುಗಳರ್॥೬೫॥
ವಚನ॥ ಇರ್ವರ್ವಂದಡವರಂ ಬಂಧಿಸಿ ಮುಂದೆ ಕುಳ್ಳಿರ್ದು ಧರ್ಮಮಂ ಕೇಳ್ದಿಬಬೞಿಯಂ ವಿದ್ಯೆಯಂ ಕಾಳಸಂಬರಕುಲದ ಗಂಡರ್ಗೆ ಬೆಸಕೆಯ್ಯದ ಕಾರಣಮಂ ಬೆಸಗೊಂಡು ತಿಳಿದು ಭಟ್ಟಾರರಂ ಬಂಧಿಸಿ ಮಗುೞ್ದು ಬಂದು ತಂನ್ನೆಂದಿನಿರ್ಪಂತೆ ಕಾಮ ದೇವನಿರೆ,
ವಿದ್ಯೆಯುಮಂ ಸಾಧಿಸಿ ಬಂ
ದಿರ್ದನದಂ ಕೇಳ್ದು ಕನಕಮಾಲೆಯುಮಂತಿ
ರ್ದುದ ನಂಬಿಯೆವಿದ್ಯೆಯನೊಸೆ
ದಿರ್ದಿತ್ತೆಂ ಕೊಂಡುಮಿಂತುಂ ಪುಸಿವುದನಱಿಯೆಂ॥೬೬॥
ವಚನ: ಎನೆ ಕಾಮದೇವನಿಂತೆಂದಂ
ಪುಸಿಯಲಣಮಾಗ ರಣದೊಳ್
ಕುಸಿಯಲುಮಣಮಾಗದಬ್ಬನೀಂ ಮುನ್ನೆಂದೆಂ
ಬೆಸಕೆಯ್ದೆನೆಂದೆನಿನ್ನುಂ
ಬೆಸಸಿರೆ ತಕ್ಕೊಂದು ಬೆಸನನರ್ಥಿಯೆ ಗೆಯ್ವೆಂ॥೬೭॥
ವಚನ॥ ಎಂಬುದಂ ಕೇಳ್ದು ಮದನಾಗ್ನಿಯುಮೊಂದಾಗೆ ತಳ್ತ್ತುರಿದೊಡೆರ್ದು ಕುಳ್ಳಿರ್ದಿಂತೆಂದಳ್
ತಕ್ಕನ ತೆಱದಿಂ ನೀನುಱ
ದುಕ್ಕಲಿಸಿದೆಯಕ್ಕುಮಾದೊಡಿರದಿನ್ನುಂ ನೀಂ
ಪೊಕ್ಕಿರ್ದಮರೇಂದ್ರನ ಮಱೆ
ವೊಕ್ಕೊಡಮಾಂ ಕೊಲಿಪೆನೆನ್ನ ಮುಳಿಸನೆ ಸಲಿಪೆಂ॥೬೮॥
ವಚನ ॥ ಎಂತು ಬರ್ದುಂಕುವೆಯೆನೆ ಮನಸಿಜನಿಂತೆಂದಂ
ನಿಮ್ಮ ಮಗನೆಂದು ಬರ್ದುಕುವೆ
ನುಮ್ಮಡಿಸೆನದೆಂತುಮಬ್ಬ ಕೊಂದಡೆ ಪಾಪಂ
ನಿಮ್ಮನೆ ಸಾರ್ಗುಂ ತಾಯ್ ಮುಳಿ
ಸಿಮ್ಮಗನಂ ಕೊಂದಳೆಂಬುದೆಲ್ಲಿಯುಮುಂಟೇ॥೬೯॥
ವಚನ॥ ಆವುದುಮಂ ನೀಮಱಿವಿರೆಮಗೆ ಪಾಪಂ ಮೆಯ್ವೆತ್ತಡೊಳ್ಳಿತ್ತೆಂದೆರ್ದು ಪೋದಂ ಪೋದಾಗಳೆ ಕನಕಮಾಲೆ ತನ್ನ ಮೆಯ್ಯಂ ಕಿಡಿಸುವಂತೆ ಮೆಯ್ಯಂ ಕಿಡಿಸಿ ಕೃತಕಭಾವಮಂ ತನ್ನೊಳುಮೊಡಂಬಡಿಸಿ ಖಿನ್ನಳಾಗಿರ್ದಳಿರ್ಪಿನಂ ಕಾಳಸಂಬರಂ ಬಂದಿಂತೇಕೆಯಿರ್ದೆಯೆನೆ ಶೋಕರಸಮಂ ಭಾವಿಸಿ ಮೆಯ್ಯನಿಕ್ಕಿ ಕಣ್ಣನೀರಂ ನೆಗಪಿ ನೊಂದ ಮೆಯ್ಯಂ ತೋಱಿ ಬಿಡದಿಂತುಮೊಳಱುತ್ತಮಿಂತೆಂಗುಂ
ಆರ ಮಗನೆಂದುಮಱಿಯದೆ
ಧೀರಾ ನೀನೀಯೆ ಕೊಂಡು ನಡಪಿದೆನೆನ್ನಂ
ಕ್ರೂರಸುತವೇಷ ದುರ್ವಾ
ಚಾರನಂ ಮೇಲ್ವಾಯ್ದನಿಂತಧೋಗತಿಗೊಯ್ದಂ॥೭೦॥
ವಚನ॥ ಎಂದು ಮತ್ತಮೆನಿತಾನುಮಿಟ್ಟಳಂಗಳುಮಂ ಪುಸಿಯ ಪೊಟ್ಟಣಂಗಳುಮಂ ನುಡಿಯೆ
ಅಂಬರಚರಪತಿ ಬೇಗಂ
ನಂಬಿದೆನಂಗನೆಯ ನುಡಿಯನೆಂತಪ್ಪೈವರುಂ
ನಂಬುವರಿವರಿಂ ಮದಮಂ
ತುಂಬುವರಿವು ಚೋದ್ಯವಲ್ಲವೆಂದಂ ಜಗದೊಳ್॥೭೧॥
ವಚನ॥ ಪೆಂಡತಿಯ ಮಾತನಂತು ನಂಬಿ ಕಾಳಸಂಬರಂ ಮುಳಿದೀಗಳೆ ಕೊಲ್ವೆನೆಂದು ಪೊಱಮಟ್ಟಂತೆ ಬಂದು ಮಸಗಿ ತನ್ನಯ್ವದಿಂಬರುಮಂ ಪೇೞ್ದೊಡಂತೆಯಾಡುವಂಗೆಱೆಯಪನಾದಂತೆ ಸನ್ನರ್ದರಾಗಿ ಕಾಮದೇವನಿರ್ದೆಡೆಗೆ ನಡುಗುತುಂ ವಿದ್ಯುದ್ದಾಡನಿಂತು ಕೊಲಲಾಗಮುಪಾಯದಿಂ ಕೊಲ್ವಮೆಂದು ಪೊೞಲ ಪೊಱಗೊಂದಡವಿಗೊಯ್ದು ವಿದ್ಯೆಯಿಂದೊಂದು ಅಗಾಧಮಪ್ಪ ಕೂಪಮಂ ಸಮೆದಲ್ಲಿ ಪೊಕ್ಕಡತಿಶಯ ವಸ್ತು ಸಮನಿಸುಗುಮೆನೆ ಕೃತಕಮೆಂದಱಿದು ಕಾಮದೇವಂ ತನ್ನಂದದೊಳೊಂದು ವಿದ್ಯೆಯನಲ್ಲಿ ಪುಗಿಸಿ ಬೇಗಮದೃಶ್ಯನಾಗಿ ನೋಡುತ್ತಿರ್ದನವರೆಲ್ಲಮಿವನನೀಗಳೆ ಪೂೞ್ದು ಕೊಲ್ವಮೆಂದು
ಮ॥ ಮರನುಂ ಕಲ್ಲುಮನೊಟ್ಟಿದಂದು ಪಲವುಂ ಸೂೞೆಲ್ಲಮಾ ಕುಯ್ಯಲಂ
ಭರದಿಂ ಪೂೞ್ವಿನಮೊಟ್ಟುತಿರ್ಪುದನನಂಗಂ ಕಂಡು ಪೋತಪ್ಪುದಾ
ದೊರೆಯಾಯ್ತಬ್ಬೆಯ ಚಿತ್ತವೃತ್ತಿಯೊಳಹಂ ವಿದ್ವೇಷಮಂ ನೆಟ್ಟು ನೀ
ದೊರೆಯಾಯ್ತೆನ್ನಯ ಸೋದರಂಗಳುಂ ಕರಂ ಕೂರ್ತಂದಮೇಂ ಚೋದ್ಯಮೋ॥೭೨॥
ವಚನ॥ ಎನುತೆ ನಿಜರೂಪದೊಳ್ ಬಂದೊದಱಿ ಪೊಕ್ಕಿವರೆನ್ನನೆಂತು ಕೊಲ್ವೊಡಮಾನಿವರಂ ಕೊಲ್ವೆನೆಂದನಿಬರುಮಂ ನಾಗಪಾಶದಿಂ ಪಿಡಿದುಡಿಯೆ ಕಟ್ಟಿಕ್ಕಿ ಪೋ ನಿಮ್ಮರಸಂಗೆ ಪೇೞಿಮೆಂದೊರೂವನನಟ್ಟಿದೊಡವಂ
ಪೊಡವೆಪನನೆಯ್ದಿ ಬೇಗಂ
ನುಡಿಗುಂ ನಿಮ್ಮೈವದಿಂಬರುಂ ಸುತರನಡು
ರ್ತೊಡನಡಿಸಿ ಪಿಡಿದು ದರ್ಪಂ
ಗಿಡೆ ಕೋಡಗಗಟ್ಟುಗಟ್ಟಿದಂ ಕುಸುಮಶರಂ॥೭೩॥
ವಚನ॥ ಎನೆ ಮತ್ತಂ ಮುಳಿದು ಸರ್ವಸನ್ನಣಂಗೆಯ್ದು ಚಾತುರ್ದಂತಬಲಂಬೆರಸು ಪಱೆಯಂ ಪೊಯಿಸಿ ಪೊಱಮಟ್ಟು ಬಂದಂದು ಕಾಮದೇವನಿರ್ದೆಡೆಯನೆಯ್ದಿದಾಗಳಾಪಡೆಗಿಮ್ಮಡಿಯಾಗಿ ಮಾಯಾ ಚಾತುರಂಗಬಲಮಂ ಪಡೆದಿದಿರೊಳೊ-
ಡ್ಡೆರ್ದುದಂ ಕಂಡು ಕಾಳಸಂಬರಂ ಕೆಯ್ವೀಸಿದೊನಂಗಜನುಂ ಬೆಸಸೆ ಮಾಯಾವಡೆ ಪಿರಿದು ಪೊತ್ತೈ ಕಾದಿದಲ್ಲಿ ತನ್ನ ಪಡೆ ನೊಂದು ಕೞಲ್ದು ಕೆಡೆವುದುಮನಿದಿರ ಮಾಯಾವಡೆಗೆ ಗೆಲೆಯಿಱಿವುದುಮಂ ಖೇಚರಪತಿ ಕಂಡು ವಿದ್ಯೆಗಳಂ ಬೆಸಸಿದೊ-
ಡರ್ಕೆನಗಂ ಪ್ರತಿವಿದ್ಯೆಗಳಂ ಬೆಸಸೆ ಭೇದಿಸಿ ಗೆಲ್ದಾಗಳ್ ಕಾಳಸಂಬರಗಾಕಂಠಂಬರಮೞಲೊಗೆಯೆ ಪೆಱಗಂ ನೋಡಿ ಕಾಯ್ಪಿನೊಳ್ ಸೈರಿಸದೆ ನೋಡಲ್ ಬಂದ ಕನಕಮಾಲೆಯಂ ಕಂಡು ಸಾರೆ ಕರೆದು ನಿನ್ನ ಪ್ರಜ್ಞಪ್ತಿ ವಿದ್ಯೆಯಂ
ಬೆಸಸೆನೆ ಮೂದಲೆಯಾದೊಡೆ
ಪಿಸುಣೀ ತಲೆವಾಗುವಂತೆ ತಲೆಯಂ ಬಾಗಿ
ರ್ದ ಸದಾಚರಿತೆಯನಾ ಕಾ
ಳಂಬರಸಂ ಕಂಡು ಮುಳಿಸನೊಳಕೊಂಡು ಕರಂ ॥೭೪॥
ವಚನ॥ ಮಸಗಿ ಮುನ್ನಮಿವನಂ ಕೊಂದಲ್ಲದೆ ನಿನಗೆ ತಕ್ಕುದಂ ಮಾಡೆನೆಂದು ರಥದಿಂ ನೆಲಕ್ಕೆವಾಯ್ದು ಬಾಳುಮತ್ತಪರಮುಮಂ ಕೊಂಡು ನಡವುದನಂಗಜಂ ಕಂಡು ಖಳ್ಗಹಸ್ತನಾಗಿ ನಡೆಯೆ ಗಗನದೊಳಿರ್ದು ನೋೞ್ಪ ನಾರದಂ ಕಂಡಿನ್ನಿರಲಾಗದೆಂದಿರ್ವರೆಡೆಗೆ ವಂದು ಕಾಳಸಂಬರನತ್ತ ನೋಡಿಮಾಣ್ ಮಾಣ್ ಎಂದಿಂತೆಂದು
ಆಗದು ಮುಳಿಯಲ್ಕೆ ದಿಟಂ
ಬೇಗಂ ಸ್ತ್ರೀಜನದ ಮಾತಿನೊಳ್ ನಿನ್ನ ಮಗಂ
ಗಾಗದುದಂ ನೆಗೞ್ವನಿತಣ
ಮಾಗದು ನೀನಿಂತುಮೊಳ್ಳಿತಾರಯ್ ನೃಪತೀ॥೭೫॥
ವಚನ॥ ಎಂದಾತನನೊಳ್ಳಿತ್ತಾಱೆ ನುಡಿದು ತರಿಸಿ ಕಾಮದೇವನತ್ತ ಬಂದು ನಿಮ್ಮಯ್ಯನ ನೋವನಾಱಿಸುವುದಿಂತು ತಂದೆಯ ಪಟ್ಟದಿಂ ಪಾಱಿಸುವುದಾವುದು ಧರ್ಮಮೆಂದು ಕೆಯ್ಯಂ ಪಿಡಿದೊಡಗೊಂಡು ಬಂದಾಗಳಂಗಜನಿಂತೆಂದಂ
ಪೆಱಱಾರ ಪೆಂಡಿರಾದೊಡ
ಮಱಿವುಳ್ಳಂಗೆರಗಿ ನೋಡಲಾಗೆಂದೊಡೆ ತಾ
ಯ್ಗೆಱಗುವರೆಂಬುದುಮಂ ಕೇ
ಳ್ದಱಿದಿರೆ ಬೇಡರ್ಕಳೞಲಿಯುಂ ಪೊಲೆಯರೊಳಂ ॥೭೬॥
ವಚನ॥
ಅದುವನೆನಲಾಗದೆನ್ನೆಡೆಯ ಮಾತನೆಮ್ಮಬ್ಬೆಯನೆ ಬೆಸಗೊಳ್ಳಿಮೆನೆ ಕಾಳಸಂಬರಂ ಕನಕಮಾಲೆಯಂ ಕರೆದು ಪುಸಿಯದಿರಱಿದೊಡುಕ್ಕೆವಮೇವುದುದೆನೆ
ಏನಂ ಪೇೞ್ವೆನೊ ಪಾಪಮ
ನಾನೀತನನಿಂತೆ ಕೊಲಲು ಪಣ್ಣಿದೆನೞಲಿಂ
ದಾನೆ ಕೊಲೆಗೆಯ್ದಿದೆಂ ಪೆಱ
ದೇನೆನ್ನಂ ಕೊಲ್ಲದಂದು ತಪದೊಳ್ ನಿಲ್ವೆಂ ॥೭೭॥
ವಚನ॥ ಎನೆ ಕಾಳಸಂಬರನಿದಪ್ಪುದೆ ಪೆಂಡತಿಯನಿದೆ ಕೊಲ್ವುದಂ ತಪಕ್ಕೆ ಪೋಗೆಂದೊಡಾಕೆ ಪೋದಡೆ ಕಟ್ಟಿದಯ್ವದಿಂಬರುಮಂ ಕಟ್ಟಂ ಬಿಡಿಸಿತಂದುಕೊಟ್ಟಿಂತು
ಉ॥ ತಾಯಳಿಪಿಂದಮಪ್ಪ ಪೞಿಯುಂ ಕೃತಕೋಕ್ತಿಗೆನಂಬಿ ಕೊಲ್ವಭಿ
ಪ್ರಾಯದಳುರ್ಕೆಯಿಂದಿಱಿವತಂದೆಯನಿಕ್ಕುವ ಪಾಪಮುಂ ಪರೀ
ಕ್ಷಾಯತ ಶುದ್ಧಿಯಿಂ ತೊಲಗಿಪೋದಡೆ ರಾಗಿಸಿ ಮನ್ಮಥಂ ಸುಖೋ
ಪಾಯದಿನಿರ್ದನೇ ಗುಣದ ಪೆಂಪಿನೊಳಕ್ಕುಮೆ ಪಾಪಬಂಧನಂ॥೭೮॥
ಗದ್ಯ॥ ಇದರ್ಹತ್ಸರ್ವಜ್ಞ ಪಾದಪದ್ಮವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಕಾಮದೇವನುತ್ಸವಂ , ಅಷ್ಟಮಾಶ್ವಾಸಂ ಸಂಪೂರ್ಣಂ.
ದ್ವಾದಶಾಶ್ವಾಸಂ
ವಚನ॥ ಅಂದು ದುರ್ಯೋಧಂ ಚಕ್ರವ್ಯೂಹಮಂ ಪಾಂಡವರ ಮೊನೆಗೆ ಸಾರ್ಚಿ ತಂದೊಡ್ಡಿ ಮಾರ್ಮಲೆಯುತ್ತಿರ್ದುದುಮಂ ಪೊರ್ದಿ ಬಂದಲೆವುದುಮಂ ಯಾದವರುಂ ಪಾಂಡವರುಮಱಿದು ನಾಮಾವೊಡ್ಡಣಮನೊಡ್ಡುವಮದನೆಂತು ಭೇದಿಸುವಮೆಂದೊಂದೆಡೆಗೆವರ್ಪುದಭಿಮನ್ಯು ಬಂದೀ ಬೆಸನನೆನಗೆ ದಯೆಗೆಯ್ಯಿಮೆಂದು ಹರಿಗಂ ಧರ್ಮಪುತ್ರಂಗಂ ಕೆಯ್ಯಂ ಮುಗಿದು ಬೇಡಿದಾಗಳ್ ಧರ್ಮಜಂ ಮನದಳವನಱಿವನಪ್ಪುದಱಿಂದಿತ್ತೆನೆಂದೊಡೆ ಪೊಡೆವಟ್ಟು ಬೆಸಂಬಡೆದು ಜೀವಿತಂಬಡೆದನಂತೆ ಗುಡಿಗಟ್ಟಿ ಸನ್ನಣಂಗೆಯ್ದು ತನ್ನ ಬಲಮಂ ಕೂಡಿಕೊಂಡು ರಥಾರೂಢನಾಗಿ ಯುದ್ಧಾಭಿಮುಖದೊಳ್ ಪರಿಯಿಸುವಾಗಳ್ ದ್ರುಪದ ಧೃಷ್ಟದ್ಯುಮ್ನ ಘಟೋತ್ಕಚಾದಿಗಳುಂ ಪಾಂಡವರುಂ ಕುಮಾರನೊರ್ವನನಟ್ಟಿ ನೋಡುತ್ತಿರಲಾಗೆಂದು ಸನ್ನಣಂಗೆಯ್ದು ಪೆಱಗಣಿಂ ನೂಂಕಿದರಾಗಳಾ ವ್ಯೂಹದ್ವಾರಪಾಲಕರಾಗಿ ನಿಜಬಲಸಹಿತಮೊಡ್ಡಿರ್ದ ದ್ರೋಣಾಚಾರ್ಯಂ ಕುಮಾರಂ ಬೆಸನಂ ಕೈಕೊಂಡು ಬರ್ಪ ಬರವಂ ಕಂಡು ತನ್ನವರನಂತೆಮಾಣಿಸಿ ತಾನಿನಿಸಡ್ಡಂ ಬಂದು
ಬೀರರ್ ಪಲಬರುಮೊಳರವ
ರಾರುಂ ಬರಲಣ್ಮರಲ್ಲಿಬರಲಕ್ಕುಮೆ ನೀಂ
ಬಾರದಿರು ಕೂಸೆ ಬಂದೊಡೆ
ಬಾರದು ಮಗುೞಲ್ ಸುರಾಸುರಪ್ರಭುಗಳ್ಗಂ ॥೯॥
ವಚನ॥ ಎಂಬುದಂ ಕೇಳ್ದಭಿಮನ್ಯುಮಿಂತೆಂದಂ
ತಂದೆಯ ಬಿಲ್ಲೊಜರಿರೇ
ನೆಂದೊಡಮಾಂ ನಿಮಗೆ ಮುಳಿಯೆನುಸಿರದೆ ನೀಮಿ
ರ್ದಂದದೊಳೆ ಮಿಡುಕದಂತಿರಿ
ಮೆಂದವರಂ ಕೞಿಯೆ ನರಸುತಂ ಪರಿಯಿಸಿದಂ॥೧೦॥
ವಚನ॥ ಪರಿಯಿಸಿ ಚಕ್ರವ್ಯೂಹದೊಳಗಂ ಪೊಲಗೇರಿಯನಾನೆ ಪೊಕ್ಕಂತೆರಡುಂ ಕೆಲನುಮನಲ್ಲಾಡೆ ಪುಗುತರೆ ಚಕ್ರವ್ಯೂಹದ ಸುೞಿವಿನೊಳಗಳಿಟ್ಟೆಡೆಯ ಕೃಪ ಕೃತವರ್ಮರೆಂಬ ನಚ್ಚಿನ ನಾಯಕರಿರ್ವರುಮೆರೞ್ದೆಸೆಯೊಳೊಡನೆ ಬಂದು ತಾಗಿದಾಗಳಭಿಮನ್ಯು ವೈಶಾಖಮಂಡಳಮೆಂಬ ಸ್ಥಾನಕದೊಳ್ ನಿಂದು ಬಹುವಿದ್ಯದಿಮಿಸಲಂಬಂ ತೊಟ್ಟು ತೆಗೆದು
ಎಡಕಂ ಬಳಕಂ ಸೂೞ್ ಸೂ
ೞೆಡೆಮಡಗದೆ ಮಗುೞ್ದು ಬೇಗಮಿಸುತೊಂದೊಂದಂ
ಪೊಡೆವಡಮುರುಗದ ಕಡುಪೆರ
ಡೆಡೆಗಂ ಮಗುೞ್ವಂತುಟಾಯ್ತುವೇಗಾಯ್ಲಿಕೆಯೊಳ್ ॥೧೧॥
ವಚನ॥ ಅಂತೆರೞ್ದೆಸೆಯ ನೆರವಿಯುಮನೊಡನೆ ಪಡಲ್ವಡಿಸಿ ನಾಯಕರಿರ್ವರುಮಂ ಮುಟ್ಟುಗಿಡಿಸಿ ಕಾದುವನ್ನೆಗಂ ಪೆಱಗಂ ಬರ್ಪ ಭೀಮ ದ್ರುಪದಾದಿಗಳುಂ ದ್ರೋಣ ಶಲ್ಯ ವಿಕರ್ಣಾದಿಳ್ಗಡ್ಡಮಾಗಿ ಕಾದುತಿರ್ದರನ್ನೆಗಮಭಿಮನ್ಯುವಿದಿ-
ರಾಂತಂ ಗೆಲೆ ಕಾದಿ ಮತ್ತ ಮೊಳಗಣಂತೆ ರಥಮನೆಸಗಲ್ವೇೞ್ದಾಗಳ್ ಸ್ಥಾನಕದೊಳ್ ನಿಂದು
ಶರಸಂಧಾನ ಕ್ರಿಯೆಯಿಂ
ದೆರಡುಂ ದೆಸೆಗೆಸುತಮಂತೆ ಪರಿಯಿಸಿ ಲೋಗೇ
ಶ್ವರದೊಳಗೆ ಬಂಡಿವರಿವಂ
ತಿರೆ ಚಕ್ರವ್ಯೂಹದೊಳಗೆ ಪರಿದತ್ತು ರಥಂ ॥೧೨॥
ವಚನ॥ ಆಗಳ್ ವ್ಯೂಹದ ಕಟ್ಟು ಕೞಲೆ ಕುಮಾರನಧಟು ಕಣ್ಣೊಳ್ ತೊೞಲ್ದು ಬಲಮೊಡ್ಡಿರಿಯಲ್ ಬಗೆದು ತಳಮಳಗಾ-
ದೊಡೊರ್ವಂ ಭೀಷ್ಮರನೆಯ್ದೆವಂದು ತಾವರೆಗೊಳನಂ ಮಂಜು ಕವಿದಂತಭಿಮನ್ಯು ಪುಗುತಂದನೆನೆ ಭೀಷ್ಮರ್ ತಮ್ಮ ರಥಮನೆಯ್ದೆ ಪರಿಯಿಸಿ ಬಂದಿಂತೆಂಬರ್
ಬಲಸಹಿತಮೆಲ್ಲಮಿರ್ದಂ
ತೊಳಗಾದೈ ಮೊಮ್ಮ ನೀನೆ ನಿನ್ನುಮನಿನ್ನಾ
ನೊಳಕೆಯ್ದೆನೆನ್ನ ಪೇೞ್ದುದ
ನೊಳಕೊಂಡೆನ್ನತ್ತ ಬಂದು ಸುಖಮಿರಲಾಗಾ ॥೧೩॥
ವಚನ॥ ಎಂಬುದನಭಿಮನ್ಯು ಕೇಳ್ದು ಮುಳಿದಿಂತೆಂದಂ
ಏನೇನೋ ಕೂಸಿವನೆಂ
ದೇನುಂ ಸಂಕಿಸದೆ ನುಡಿದೊಡೇನಾಯ್ತಿಂತಿಂ
ತೀ ನೆರವಿಯೆಂಬ ಕಾಗೆಗ
ಳಾನಂಬಂ ತುಡೆ ನಭಕ್ಕೆ ಪಾಱವೇ ಮರುಳೇ॥೧೪॥
ಬನ್ನಮನೊಳಕೊಂಡಳಿಪಿಂ
ದೆನ್ನಲ್ಲಿಗೆ ವಂದು ಕಾಣ್ಬುದೆಂಬುದನೆನೆ ಕೂ
ರ್ತಿನ್ನಂಜದಿರಿನ್ನಲಸದಿ
ರಿನ್ನಾಂತಿಱಿಯೆಂಬುದಜ್ಜ ನೀನಿಂತೆಂಬಾ॥೧೫॥
ಮಾರ್ಪಡೆಯೊಳಮಿರ್ದಡಮೇಂ
ಕೂರ್ಪುದೆನೆನಗಾಯದೊಳ್ಪುಮಂ ಕೀರ್ತಿಯುಮಂ
ಕೂರ್ಪುಮನೊದವಿಪ ಮಾತೆನೆ
ತಪ್ಪುದು ಬೞಿಬರ್ಪ ಮಾತುತಪ್ಪದೆ ನಂಟಂ ॥೧೬॥
ವಚನ॥ ಪೊಲ್ಲಕೆಯ್ದನನುಯ್ದಿರ್ ನೀಮಿಂತು ನುಡಿದೆನ್ನಂ
ಪತ್ತಿಸುವುದನಾಂ ಕಂಡು
ತ್ಪತ್ತಿಸುವುದಿದಕ್ಕೆ ನಿಮ್ಮನೊಂದಿಸಿ ನೇರ್ತ
ಪ್ಪೆಂ ತಮ್ಮನೀತನೆನಿಪನೆ
ಪೆತ್ತಾಂ ಮಗನಿಂತು ಬಂದ ಮುತ್ತಯ್ಯನುಮಂ॥೧೭॥
ವಚನ॥ ಎಂದು ರಥಮನಿನಿಸು ತೊಲಗಿಸಿ ಕಳಿಯೆ ಪರಿಯಿಸಿ ಮಾರ್ಬಲಮೆಳಗೆಯ್ಯ ಮೇಲೆ ಕಾೞ್ಪುರದ ತೊಱೆ ಪರಿದಂತಾನುಂ ಬೇಸಗೆಯೊಳಡವಿಯೊಳುರಿ ಪರಿದಂತಾನುಮಾಗೆ ರಥಂ ಪರಿತಂದು ದುರ್ಯೋಧನನ ಸಾಧನಮನೆಯ್ದೆವಂದಾಗಳಾತನ ಮಗಂ ಲಕ್ಕಣಂ ಕಂಡೆಯ್ದೆನೂಂಕಿದೊಡಭಿಮನ್ಯು ಮುಳಿದೆಚ್ಚಲ್ಲಿಂಮುನ್ನಮಾಹವದೊಳ್
ಮುಱಿದ ವರೂಥಂಗಳ ನಡು
ಪಱಿದ ಹಯೋತ್ಕರದ ಕೆಡೆದ ಹರಿನಿಕರಮೆ ಪುಣ್
ಸುರಿಯುತ್ತಿರೆ ಬಿರ್ದ ಬಂಟರೇ
ಮೆಱೆದಾಡುವ ಭೂತಗಣಮೆ ನೋೞ್ಪಂಗೆತ್ತಂ॥ ೧೮॥
ವಚನ ॥ ಅಂತಗುರ್ವಾದ ಕೊಳ್ಗುಳದೊಳೆ
ಉ॥ ಜೋಳದ ಲೆಕ್ಕಮಂ ಕಳೆದೆನಾಂ ತಲೆಯೊಳ್ ಕಡುಗೂರ್ತ ಕೂರ್ಮೆಯಿಂ
ಮೇಳದ ಲೆಕ್ಕಮೆನ್ನೆರ್ದೆಯದಾಳ್ದನುಮೆಲ್ಲಿದನಂತಱಿಂದಮಾ
ಮೇಳಮುಮಾಳ್ದನುಂ ಖಗನಿಶಾಚರ ಘಟ್ಟಿತಮಾಗೆ ಬೀೞೆ ನೀ
ಜೋಳದೊಳಾಡಿ ಮೆಚ್ಚಿಸುವೆನಾಳ್ದನನೆಂಬವೊಲಟ್ಟಿಯಾಡುಗುಂ॥೧೯॥
ಇಂತೆಮ್ಮಾಳ್ದನ ಋಣಮಂ
ತೆತ್ತೆಮೆನುತ್ತೊಡನೆ ರಾಗದಿಂ ತಮ್ಮಣ್ಣಂ
ಕೊತ್ತಳಿಗೆ ಮೆಱೆವ ತೆಱದೊಳ್
ಕೊತ್ತಳಿಗಾಡಿದವನೇಕವಿಧ ಲಯಗತಿಯಿಂ॥೨೦॥
ವಚನ॥ ಅಂತಗುರ್ವಾದಂದಿನ ಕೊಳುಗುಳದೊಳಭಿಮನ್ಯುವೊಂದಕ್ಷೋಹಿಣಿಬಲಮಂ ಕೊಲ್ವುದಂ ಲಕ್ಕಣಂ ಕಂಡೆಯ್ದೆ ನೂಂಕಿದೊಡೆಯಭಿಮನ್ಯು ಮುಳಿದು
ಕೆಡೆವಿನಮಶ್ವಂಗಳ್ ರಥ
ಮುಡಿವಿನಮಾ ರಥಮನೆಸಪನುಂ ಲಕ್ಕಣನುಂ
ಮಡಿವಿನಮರಿಬಲಮಚ್ಚರಿ
ವಡುವಿನಮೆಚ್ಚಂ ಸುರೇಂದ್ರತನಯನ ತನಯಂ॥೨೧॥
ವಚನ॥ ಲಕ್ಕಣನನಂತು ಕೊಂದು ವೀರಶ್ರೀಯಂ ತಂದು ಪಗೆವಡೆಯೊಳಿಂ ಗಡರಾರೆಂದು ಬಿಲ್ಲನೂಱಿ ನಿಂದು ಪೊಗೞಿಸುತ್ತಿರ್ಪುದಂ ದುರ್ಯೋಧನಂ ಕಂಡು ಚಕ್ರವ್ಯೂಹದ ಬಲ್ಪಳಿದುದಕ್ಕೆ ಮುನ್ನಂ ಬೆಕ್ಕಸಂಬಟ್ಟು ಬೞಿಯಂ ಮಗನಳಿದುದಕ್ಕುಬ್ಬೆಗಂ ಬಟ್ಟನಂತು ನೋವಿಮ್ಮಡಿಸೆ ಸೈರಿಸದೆ ಮೂರ್ಚೆವೋಪನಿತಾಗೆ ಚೇತರಿಸಿರ್ದಿರ್ ನಮ್ಮಲ್ಲಿ ಗಂಡರಾರಿರ್ದಿರೆನೆ ಗಂಡರಿನ್ನುಮೆನಿಬರಾನುಮೊಳರನ್ನೆಗಂ ಬೆಸನನೆನಗೆ ದಯೆಗೆಯ್ಯಿಮೆಂದು ಬೇಡಿಕೊಂಡು
ಬಂಧನಮಂ ಪಱಿಯುತ್ತೆ ಮ
ದಾಂದೋದ್ಧತ ರೌದ್ರಭಾವಯುತ ಗಂಧ ಮಹಾ
ಸಿಂಧುರಮೆಯಿತರೂಪಂತಿರೆ
ಸೈಂಧವನೆೞ್ತಂದು ತಾಗಿದಂ ನರಸುತನೊಳ್ ॥೨೨॥
ವಚನ॥ ಆತನಂತು ತಾಗಿದುದಂ
ಕುಸಿದು ಕಳಶೇಭಮಂ ಕಂ
ಡೆಸುತಿರೆ ಬಂದೆಡೆಯೊಳಾಂತನಾಗಡೆದಲ್ ಖಂ
ಡಿಸುವೊಂ ಬಾಣಂಗಳಂ ಪುಂ
ಜಿಸಿದಂತಿರೆ ಪೊದೞ್ದುದವರ್ಗೆ ಮೇರೆಯಪ್ಪಿನೆಗಂ॥೨೩॥
ವಚನ॥ ಅಂತಭಿಮನ್ಯುದಯಾಸ್ತಮಾನಂಬರಂ ಕಾದುತ್ತಿರೆ ರಥದೊಳಗುಳ್ಳಾಯುಧಂಗಳೆಲ್ಲಂ ತವುಕಲಾಗೆ ಮಾಣ್ದು ಮಾಣ್ದೆಸೆವುದಂ ಸೈಂಧವಂ ಕಂಡು
ಮಾಱಾಂತೆನಿನಿಸು ಪೊತ್ತಿ
ನ್ನಾಱೈ ನೀಂ ಮಗನೆ ಕಾದುಕೊಳ್ಳೆಂದು ಕರಂ
ಜೀಱೆರ್ದು ನಭಕೆ ತಲೆ ಸಲೆ
ಪಾಱೆ ಮಹೋಗ್ರ ಪ್ರತಾಪಿ ಸೈಂಧವನೆಚ್ಚಂ॥೨೪॥
ವಚನ॥ ಸೈಂಧವನಭಿಮನ್ಯುವಂ ಕೊಂದು ರಸಮಂ ಕೊಳ್ವ ವಾದಿಯಂತುದ್ವೃತ್ತನಾಗಿ ವಿಜಯಪಟಹಮಂ ಪೊಯಿಸಿ ನಿಂದು ದುರ್ಯೋಧನಂ ಕಂಡು ರಾಗಂ ಪೊಂಪುೞಿಯಾಗೊಸಗೆವಱೆಯಂ ಪೊಯಿಸಿದನನ್ನೆಗಮಿತ್ತ ಸಂಸಪ್ತಕರ ಮಾಯಾಯುದ್ಧವನರ್ಜುನನೆಂತಾನುಂ ಭೇದಿಸಿ ಬಂದು ಧರ್ಮಪುತ್ರನಂ ಕಂಡು ತನ್ನ ಕಾದಿದ ವಿದ್ಯಾಬಲದ ಚಲದ ಸಾಹಸದ ಮಾತುಗಳಂ ನುಡಿಯುತ್ತಿರ್ದನತ್ತ ನಾರಾಯಣನೊಡ್ಡಿನೊಳ್ ವಸುದೇವಂ ಜರಾಸಂಧನ ಸಾಮಂತನಪ್ಪ ವಜ್ರಕುಂಡಳನೆಂಬ ಬಲ್ಲಾಳನಂ ಗೆಲ್ಲಂ ಕಾದಿ ಪಾರ್ವಗುಣಲಿಕ್ಕುವಂತೆ ಬಯ್ಗಂಬೊತ್ತಿಕ್ಕಿದನನ್ನೆಗಂ
ದುರುಳನಭಿಮನ್ಯು ಸತ್ತೊಡೆ
ನರನಂ ಕೇಳಿಸುವನೆಂದು ಬಿನ್ನನೆ ಪೋಪಂ
ತಿರೆ ಬೆಳಗನುಡುಗಿ ಮೆಲ್ಲನೆ
ಖರಕಿರಣ ಪೋದನಸ್ತಶೈಳಕ್ಕಾಗಳ್॥೨೫॥
ಕೃತಜ್ಞತೆಗಳು
ಸಂಪಾದಕರು: ಬಿ. ಎಸ್. ಸಣ್ಣಯ್ಯ
ಪ್ರಧಾನ ಸಂಪಾದಕರು:ಡಾ. ಹಾ. ಮಾ. ನಾಯಕ
ವಿಭಾಗ ಸಂಪಾದಕರು: ಎನ್. ಬಸವಾರಾಧ್ಯ
ಪ್ರಕಾಶನ: ಕನ್ನಡ ಅಧ್ಯನ ಸಂಸ್ಥೆ
ಮೈಸೂರು ವಿಶ್ವವಿದ್ಯಾನಿಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ