ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಮೇ 9, 2020

ಕಮಲಭವ ಕವಿಯ ಶಾಂತೀಶ್ವರ ಪುರಾಣಂ

ಕಮಲಭವ ಕವಿಯ  ಶಾಂತೀಶ್ವರ ಪುರಾಣಂ


ಕವಿಯ ಕಾಲ ೧೨೩೫. ಇವನು ಜೈನ ಕವಿ. ಇವನು ಎರಡು ಕಾವ್ಯಗಳನ್ನು ರಚಿಸಿದ್ದಾನೆ. ಶಾಂತೀಶ್ವರ ಪುರಾಣಂ ಮತ್ತು ದೇವಕವಿ ಹೆಸರಿನಿಂದ ಕುಸುಮಾವಳೀ ಕಾವ್ಯಇವನ ಕಾವ್ಯದಲ್ಲಿ ಶಾಂತಿತೀರ್ಥಂಕರ ಜೀವದ ಹಿಂದಿನ ಭವದ ವರ್ಣನೆ ಕಾಲಾನುಕ್ರಮಗತಿಯಲ್ಲಿ ಮೆಟ್ಟಲೇರಿದಂತೆ, ಸರಪಳಿಯಂತೆ ಬಂದಿದೆ. ಇದು ಗುಣಭದ್ರಾಚಾರ್ಯ ಮತ್ತು ಚಾವುಂಡರಾಯ ಮಾಡಿರುವ ನಿರೂಪಣೆಗೆ ಅನುಗುಣವಾಗಿದೆ.ಜೈನಾಗಮ ಶಾಸ್ತ್ರಗಳಲ್ಲಿ ಕಮಲಭವನಿಗೆ ವಿಶೇಷ ಪರಿಶ್ರಮವಿದೆ. ಸಂಗೀತ,

ನೃತ್ಯ, ಚಿತ್ರಕಲೆಗಳ ತಿಳಿವಳಿಕ ಇರುವ ಕುಶಲನಾದ ಕವಿ.


ಕಮಲಭವ ವಿಸ್ತಾರಪ್ರಿಯನಾಗಿರುವುದರ ಜತೆಗೆ ಸಂಸ್ಕೃತ ವಾಗಾಡಂಬರ ಪ್ರದರ್ಶನದ ಕವಿ. ಕಮಲಭವ ನೇಮಿಚಂದ್ರನಂತೆ "ಶೃಂಗಾರ ಕಾರಾಗೃಹ " ಕವಿ. ಕಥಾನಾಯಕನಾದ ಶಾಂತಿ ಜಿನನು ಕಾಮದೇವನೂ ಹೌದು. ಅದರಿಂದ ಶೃಂಗಾರರಸಕ್ಕೆ ಪರವಾನಗಿ ದೊರೆತಂತಾಗಿದೆ. ಕಮಲಭವನಿಗೆ  ಅಗ್ಗಳನ ಕಾವ್ಯ ಚಂದ್ರಪ್ರಭಾ ಪುರಾಣ ಅಚ್ಚುಮೆಚ್ಚು. ಯಾದವ (ಸೇವುಣ) ವಂಶದ ಸಿಂಹಣನು ಕಮಲಭವನಿಗೆ ರಾಜಾಶ್ರಯ ನೀಡಿದನು. ಜನ್ನನು ಈತನ ಹಿರಿಯ ಸಮಕಾಲೀನ. ಆಂಡಯ್ಯ, ಕೇಶಿರಾಜ, ಮಲ್ಲಿಕಾರ್ಜುನ, ಎರಡನೆಯ ಗುಣವರ್ಮ,ಇವರು ಈತನ ಸಮಕಾಲೀನರು.


ಪ್ರಥಮಾಶ್ವಾಸಂ


ಶ್ರೀಮಚ್ಚಕ್ರಾಳಿಚಕ್ರೋತ್ಸವಕರನಮರೀವೃಂದ ನೇತ್ರಾರವಿಂದ

ಸ್ತೋಮಾನಂದಪ್ರದಂ ಸಂಸೃತಿತಿಮಿರಹರಂ ತ್ಯಕ್ತದೋಷಂ ವಿಶುದ್ಧೋ

ದ್ದಾಮಂ ತಾನಪ್ಪನೂನಮಲರುಚಿ ಬಾಲಾತಪೋದ್ಭಾಸಿ ನಿಚ್ಚಂ

ಪ್ರೇಮಂಬೆತ್ತೆಮ್ಮಚೇತೋಂಬರಮನೆ ಬೆಳಗುತ್ತಿರ್ಕೆ ಶಾಂತೀಶ್ವರಾರ್ಕಂ॥೧॥


ವಿಳಸನ್ನಿರ್ಮಳಧರ್ಮಕರ್ಮಮಯ ತತ್ವಾತತ್ವಭೇದಂಗಳಂ

ತಿಳಿಪುತ್ತೆಯ್ದೆ ವಿನೇಯಸಂತತಿಗನೇಕಾಂತಪ್ರತಿಜ್ಞಾಯತಂ

ಗಳನಾತ್ಮೀಯಜನಕ್ಕೆ ಪೇೞ್ದನಯನಿಕ್ಷೇಪಪ್ರಮಾಣೋಕ್ತಿಸಂ

ಕುಳಶೌಚಾಯತರೊಲ್ದು ಮಾೞ್ಕೆಮಗುಪಾಧ್ಯಾಯರ್ ಸುಖೋಪಾಯಮಂ॥೪॥


ಅಗಣಿತರಪ್ರಮತ್ತಗುಣಭೂಷಣಭಾಸುರರೊಪ್ಪುವೆತ್ತ ಶಾಂ

ತಿಗೆ ನೆಲೆಯಾದ ನಿರ್ಮಳಮನಸ್ಸಿಗೊಪ್ಪುವಗಾಧಬೋಧದೃ

ಷ್ಟಿಗಳನವದ್ಯಹೃದ್ಯ ಚರಿತರ್ ಜಿತಮನ್ಮಥಶೌರ್ಯರಪ್ಪ ಸಾ

ಧುಗಳ ಪದಂಗಳೀಗೆಮಗೆ ಸಾಧುಪದೋನ್ನತಿಯಂ ನಿರಂತರಂ ॥೫॥


ಅತಿಶಯಕೇವಳಿಗಳ ಸ

ನ್ನುತತರ ಶುದ್ಧಾನುಬದ್ಧ ಕೇವಳಿಗಳ ಸು

ಶ್ರುತಕೇವಳಿಗಳ ಮಹಿಮೋ

ನ್ನತಿಯಂ ವರೂಣಿಸುವ ಸುಮತಿ ಸಮನಿಸುಗೆಮ್ಮೊಳ್ ॥೭॥


ಕ್ಷಣರುಗ್ಮಾಳಾಮಯಾಬ್ದಕ್ಕೆಣೆಯೆನಿಸೆ ಚಳತ್ಕಾಂತಿಯುಕ್ತಾಂತರಂಗೋ

ಲ್ಬಣೆ ನಕ್ರಾರೂಢೆ ಖಡ್ಗಪ್ರಕಟಫಲಕದಂಬಾಳಿಪಾಶಾವಳೀತೋ

ರಣದೋರ್ದಂಡಪ್ರಜೋದ್ಭಾಸುರೆ ಸಲೆ ಮುದದಿಂದಾಮಹಾಮಾನಸೀಯ

ಕ್ಷಿಣಿಯೆಂದುಂ ಮಾೞ್ಕೆ ಶಾಂತೀಶ್ವರಚರಿತಕೃತಿಶ್ರೀಗೆ ಸೌಭಾಗ್ಯದೊಳ್ಪಂ ॥೧೦॥


ವಿದಿತಾಶೇಷಪದಾರ್ಥತತ್ವರುಚಿರಂ ಕಾಲತ್ರಯಾವ್ಯಕ್ತವ

ದ್ಗತಾಲ್ವೋಷ್ಠ ಪುಟಪ್ರವರ್ತನಪರಂ ನಿಶ್ಯೇಷಭಾಷಾತ್ಮಕಂ

ಮೃದುಮಾಧುರ್ಯಗಭೀರಯುಕ್ತಿಗಳನತ್ಯಾಸನ್ನದೂರಸ್ಫುಟ

ಪ್ರದಮಪ್ಪಾಜಿನದಿವ್ಯಭಾಷೆ ನಮಗೀಗುದ್ಯದ್ವಚೋವೃದ್ಧಿಯಂ ॥೧೨॥


ಅನವರತಮಿರ್ಕೆ ಮದ್ಭಾ

ವನೆಯೊಳ್ ಪಡಿಯಿಲ್ಲದಮಳಜಿನಮತಮಣಿಕೇ

ತನದೆಸೆವಪಡಿಗಳೆನಿಸಿದ

ಜಿನಸೇನಾಚಾರ್ಯವೀರಸೇನಾಚಾರ್ಯರ್ ॥೧೭॥


ಭವಹರ ಸಮಂತಭದ್ರರ

ಕವಿಪರಮೇಷ್ಟಿಗಳಪೂಜ್ಯಪಾದರ ಕಾರು

ಣ್ಯವರೇಣ್ಯದುಗ್ಧವಾರ್ಧಿಯೊ

ಳವಿರತಮಿರ್ಕೆಮ್ಮ ಚಿತ್ತಮತ್ತಮರಾಳಂ ॥೨೦॥


ವಿರಹಿಕುಳಂ ಕಳವೀಣಾ

ವಿರುತಿಗೆ ಮುಳಿದೆಳಸದಂತೆ ಸತ್ಕವಿಕೃತಬಂ

ಧುರಕೃತಿಬಂಧದ ಮೃದುಪದ

ಪರಿಕರಮಂ ಕೇಳಲಿಂತು ಖಳನೆಳಸುಗುಮೇ॥೪೭॥


ಜಿನರಾಜ ಸ್ತುತಿ ಕಾವ್ಯಮಂ ಖಳಭಯಕ್ಕುಳ್ಳಳ್ಕಿ ಪುಣ್ಯೈಕಭಾ

ಜನಮಂ ನಿರ್ಮಿಸದಿರ್ಪುದೇಬುಧಚಕೋರವ್ರಾತಚೇತೋಮುದಂ

ಜನಿಯಿಪ್ಪಂತಿರೆ ಪೇೞ್ದೊಡಾಕೃತಿ ಕನಚ್ಚಂದ್ರಾತಪದ್ಯೋತಿ ನೆ

ಟ್ಟನೆ ಮೆಯ್ವೆರ್ಚೆ ತದೀಯದುರ್ಜನಮನೋಮಿಥ್ಯಾಂಧಮಂ ತೂಳ್ದುದೇ॥೫೦॥


ಮೃದುಮಯಮಪ್ಪ ಶಬ್ದತತಿ ಶಬ್ದಸಮಾಜದೊಳೊಂದಿದರ್ಥಮ

ರ್ಥದೊಳವಗಾಹಮಾಗಿ ಬಿಡದುಣ್ಮುವದಗ್ರ ಸುಭಾವ ಭಾವದೊಳ್

ಪುದಿದ ರಸಂ ರಸಪ್ರಸರದೊಳ್ ಸವಿ ಸಂಗಳಿಪಂತೆ ಪೂಣ್ದು ಪೇ

ೞ್ವುದು ಕೃತಿಯಂಚಮತತಿಯೆನಲ್ ವಿಬುಧಾಳಿಗೆ ಸತ್ಕವೀಶ್ವರಂ ॥೫೬॥


ವರ ಶಬ್ಧಜ್ಞರನರ್ಥದರ್ಶಿಗಳನುಕ್ತಿ ಉಕ್ತಿಪ್ರೌಢರಂ ಭಾವತ

ತ್ಪರರಂ ನೀತಿವಿದರ್ಕಳಂ ರಸಿಕರಂ ಸಾಹಿತ್ಯದೊಳ್ ಸಂದ ಜಾ

ಣರನಾಂದೋಳಶಿರಸ್ಸರೋಜಮುಖರಂ ಮಾೞ್ಪುಕ್ತಿಚಾತುರ್ಯ ಬಂ

ಧುರನೊರ್ವಂ ಕವಿಕಂಜಗರ್ಭನುರುವಾಕ್ಸಂದರ್ಭನಿಂತುರ್ವಿಯೊಳ್॥೫೭॥


ಜಿನಸಮಯಪ್ರಕಾಶಕೃತ ಸತ್ಕವಿ ಪಂಪನ ಪೆಂಪುವೆತ್ತ ಪೊ

ನ್ನನ ಕವಿನಾಗಚಂದ್ರನ ನೆಗೞ್ತೆಯರನ್ನನ ಸಂದಬಂಧುವ

ರ್ಮನ ಬುಧನೇಮಿಚಂದ್ರನ ಜಗನ್ನುತ ಜನ್ನನ ರಂಜಿಪಗ್ಗಳ

ಯ್ಯನ ಕೃತಿಸೌಂದರೀಸುಭಗಮಾವಗಮಿರ್ಕೆ ಮದೀಯ ಕಾವ್ಯದೊಳ್॥೬೨॥


ಮೊಲೆಯಿಂದಂಬಿರಿವಿಟ್ಟು ಪಾಲುಗುತುಮೋರಂತಿರ್ದೊಡಂ ತಮ್ಮ ಕೆ

ಚ್ಚಲನಂದೊಯ್ಯನೆ ಕುಂದದುರ್ವಿ ಕೆಲನಂ ಪೆರ್ಗೊತ್ತೆಯುಂ ಕಾಲುಗ

ಳ್ಗಲಸನಬೆತ್ತಿರೆ ಪೋಗದಿಂತು ನಡೆಯಂ ಮಾಣ್ದಲ್ಲಿ ಮೆಲ್ಕೊತ್ತುತುಂ

ಸಲೆ ವಿಭ್ರಾಜಿಸುತಿರ್ಪುವಾವಿಷಯದೊಳ್ ಸಾನಂದದಿಂ ಧೇನುಗಳ್ ॥೮೫॥


ಅರೆವಿರಿದೊಪ್ಪುವ ಪಣ್ಗ

ಳ್ವೆರಸಿದ ಬಿಣ್ಗೊನೆಗಳಿಂದೆ ಪಥಿಕರ ಕಣ್ಗ

ಚ್ಚರಿವಡೆದು ಬಿಡದೆ ಬಾಯಂ

ಬಿರಿಯಿಸುವಂತೆಸೆದಿರ್ದುವಲ್ಲಿ ಬಾೞೆಯ ಪಣ್ಗಳ್ ॥೯೬॥


ಕುಡಿಯಲೊಡರ್ಚಿದಾಗಳೆ ತೃಷಾತುರನಾತ್ಮಶಿರೋಬ್ಜಮಂ ಸಮಂ

ತೆಡವಿಡದೆತ್ತಿ ತೂಗುತಿರೆ ಮಾಣದೆ ತಾನೆಱೆಯುತ್ತಮಿರ್ದೊಡಾ

ಮಡದಿಗೆ ಮೆಚ್ಚಿ ನಿಂದು ತಲೆದೂಗಿದೊಡಾಪಥಿಕಂಗೆ ಭಂಗಿಯಿಂ

ತಡೆಯದಪಾಂಗವೀಕ್ಷಣಪಸಾಯನಮಿತ್ತಳದೇಂ ಪ್ರಗಲ್ಭೆಯೋ॥೧೦೦॥


ಪೊಲನೆಲ್ಲಂ ಸಲೆ ಸರ್ವಸಸ್ಯಮಯಮುರ್ವೀಜಾತಮೆಲ್ಲಂ ಲಸ

ತ್ಫಲಸಂತಾನಮಯಂ ಲತಾಪ್ರತತಿಯೆಲ್ಲಂ ಪುಷ್ಪ ಮಾಲಾಮಯಂ

ಜಲಮೆಲ್ಲಂ ಸರಸೀಜರಾಜಿಮಯಮೂರೆಲ್ಲಂ ಸಮುತ್ಕೃಷ್ಟಮಂ

ಗಲಶೋಭಾಮಯಮಾವಗಂ ಜನಮದೆಲ್ಲಂ ಹರ್ಷಚೇತೋಮಯಂ ॥೧೦೨॥


ಸರಲ ಲತಾಂಗಭಂಗಿ ನೆಱೆ ಕಣ್ಗೊಲಿಸುತ್ತಿರೆ ನಿಂದು ನೀಳ್ದ ಕ

ಣ್ಬರಿ ನವಚಂದ್ರಿಕಾವಿಸರಮಂ ಕೆದಱುತ್ತಿರೆ ಸುಯ್ಗೆ ಪೂಗೆ ಸೂ

ೞ್ವರುತಿರೆ ತುಂಬಿಗಳ್ ಮನಸಿಜಾತನ ಶಾರಿಕೆಯಾಧಿದೇವತಾ

ಪರಿಕರದಂತಿರ್ದರರಲ ಮಾಲೆಯನೆತ್ತಿದ ಮಾಲೆಗಾರ್ತಿಯರ್॥೧೨೬॥


ಆ ಮಣಿಹರ್ಮ್ಯದಾದಲೆಯ ಭೂಮಿಕೆಯೊಳ್ ನಡೆಪಾಡುವಂಗನಾ

ಸ್ತೋಮದ ಚೆಲ್ವನೀಕ್ಷಿಸಿ ಸುರಾಂಗನೆಯರ್ ಬೆಱಗಾಗಿ ಮತ್ಪ್ರಿಯರ್

ತಾಮಿವರಂ ನಿರೀಕ್ಷಿಸಿದೊಡೆಮ್ಮನಭೀಕ್ಷಿಸರೆಂದೆನುತ್ತೆ ಚಿಂ

ತಾವಯಚಿತ್ತರಾದಪರೆನಲ್ ವನಿತಾಜನರೂಪಮೆಂತುಟೋ॥೧೩೦॥


ತರುಣಿಯರಾಸ್ಯನಿಶ್ವಸಿತಸೌರಭಮಂ ಕೊಳುತುಂ ಕುಚಂಗಳೊಳ್

ಪರಿಮಱಿಯಾಡುತುಂ ಪುದಿದ ನಾಭಿಯ ಕತ್ತುರಿಯಂ ತೆರಳ್ಚುತುಂ

ಗುರುಜಘನಾಗ್ರಮಂ ತುಡುಕುತುಂ ಬಿಡದೊಯ್ಯನೆ ನೀವಿಯುಂ ತೆಱಂ

ದಿರಿಪುತುಮಲ್ಲಿ ತೀಡುವುದು ಕಾಮುಕನಂದದೆ ಪೌರಮಾರುತಂ॥೧೩೨॥


ಚತುರ್ದಶಾಶ್ವಾಸಂ


ಶ್ರೀಮದನವಧಿಸುಖಾಮರ

ಧಾಮದಿನೀಧರೆಗೆವರಲಣಂ ಬಗೆದಿರ್ದಂ

ಪ್ರೇಮದಿನಗಣ್ಯಸುಚರಿತ

ಸೀಮಂ ಜಿನಪದಪಯೋಜ ರಾಜಮರಾಳಂ॥೧॥


ವ॥ ಅಂತಿರ್ಪುದುಮಿತ್ತಲಾವಿಶ್ವಸೇನಮಹಾರಾಜಂ ವಿರಾಜಿಸುತಮಖಿಳರಾಜ್ಯ ಸುಖದೊಳಿರೆಯುಮೊಂದು ದಿನದೊಳ್


ಫಲಮುದಯಿಪ ಕಲ್ಪಲತತಿಕೆ

ಗಲರೊಗೆವಂದದೆ ಜಿನಾರಭಕಂ ಜನಿಯಿಪ ನಿ

ರ್ಮಳೆಗಾನೃಪತಿಗಾದುದು

ನಿಳಿಂಪವನಿತಾನುರಾಗಮಯಋತುಸಮಯಂ ॥೨॥


ವ॥ ಇಂತು ಸಮನಿಸಿದ ಋತುಸಮಯದೊಳ್ಸೆಳೆವಿಡಿದುನಿರಾಳಂಕಾರೆಯಾಗಿರ್ದೈರಾದೇವಿಯಂ ದಿವಿಜಯುವತಿಯರ್ನೋಡಿ


ರನ್ನದ ರಯ್ಯಮಪ್ಪ ತೊಡವಂ ತೈಡುದುಣ್ಮುವ ಮೆಯ್ಯ ಚೆಲ್ವು ತಾ

ನುನ್ನತಿವೆತ್ತು ನೂರ್ಮಡಿಸುತಿರ್ದಪುದೀ ಋತುಕಾಲದೊಳ್ವಿಚಿ

ತ್ರನ್ನೆಗೞ್ದೀನೃಪಾಂಗನೆಯ ಪುಣ್ಯಮಿದೆಂತುಟೊಪುಟ್ಟವಂ ಜಿನಂ

ಸನ್ನುತನೆಂದು ಸಂತಸಮನಾಂತುದು ತತ್ಸುರಸೌಂದರೀಜನಂ॥ ೩॥


ಕೊಡಕೆಗೆ ಸಾರ್ಚಿ ಕೆನ್ನೆಯಳಕಂಗಳನೆತ್ತಿ ಕುಚೋರೈಹಾರಮಂ

ಮುಡುಪಿನ ಪಿಂದಣಕ್ಕಿೞಿಪಿ ಕಂಕಣಮಂ ಪಿಡಿದೇಱೆ ನೂಂಕಿ ಕಾ

ಲ್ತೊಡರ್ದಪುದೆಂದು ಸೆಕ್ಕಿ ನಿಱಿಯಂ ಕಟೆಸೂತ್ರದೊಳಾಲತಾಂಗಿಗಿಂ

ತೊಡರೆಸಿದರ್ತದೀಯಸವನಕ್ರಿಯೆಯಂ ಸಲೌ ದೇವಕಾಂತೆಯರ್॥೭॥


ಜಿನಶಿಶು ಸಂಭವಿಸುವನೆಂ

ಬನುರಾಗಂ ಪೊಣ್ಮಿದತ್ತುದೇವಿಯ ತನುವಿಂ

ದೆನೆ ಸುರಿದರ್ಸುರತರುಣಿಯ

ರನುರಾಗಂ ನಿಮಿರೆ ನಿಮಿರ್ದು ಕುಂಕುಮಜಳಮಂ॥೧೦


ವರಮಲ್ಲೀಲತೆಗಳ್ಪೊದೞ್ದ ಮಕರಂದಾಸಾರಪುಷ್ಪಮಂ

ಜರಿಯಿಂದಾ ವನದೇವಿಗೆತ್ತಿ ಸುರಿವಂತಾನಂದದಿಂ ದೇವಸೌಂ

ದರದೇವಿಯ ಶೀರ್ಷದೊಳ್ಸುರಿದರಿಂತೋರಂದದಿಂ ಸ್ಫಾಟಿಕ

ಸ್ಫುರಿತಾಂಭಃಕಳಶಂಗಳಿಂ ಮಳಯಜೋತ್ಕರ್ಪೂರಪೂರಾಂಬುವಂ॥೧೧॥


ವ॥ ಇಂತಮರಾಂಗನೆಯಯರ್ಮಂಗಳಸವನಕ್ರಿಯಾನಂತರಂ ಮಣಿಮಯಪಾದುಕಾದ್ವಯಮಂ ಸಾರ್ಚಿ ತತ್ಸಮಯೋಚಿತಾಂಬರಪರಿಧಾನೆಯಂ ಮಾಡಿದಾಗಳ್


ಇದು ಸುಕೃತಶಲಾಕೆ ಸಮಂ

ತಿದುಭುವನತ್ರಯದಗಣ್ಯಪುಣ್ಯಾಂಕುರಮಿಂ

ತಿದು ಮಂಗಳವಲ್ಲರಿಯೆನಿ

ಸಿದುದೈರಾದೇವಿಯಮಳಗಮನಾಕಾರಂ ॥೧೨॥


ತೊಡೆದು ಸುಗಂಧಬಂಧೈರವಿಲೇಪನಮಂ ಲಲಿತಾಂಗದೊಳ್ಸಮಂ

ತೈಡಿಸಿ ದುಕೂಲಚೇಲಮನುದಂಚಿತಮೌಕ್ತಿಕಮಂಡನಂಗಳಂ

ತುಡಿಸಿ ನವೀನದಿವ್ಯಕುಸುಮಂಗಳನೊಪ್ಪಿರೆ ಕೇಶಪಾಶದೊಳ್

ಮುಡಿಸಿ ಸುರಾಂಗನೃಜನವಲಂಕೃತಿಗೆಯ್ದುದಿಳೇಶಕಾಂತೆಯಂ ॥೧೪॥


ಅಲರವತಂಸದೈಜ್ಜಳಿಕೆ ಕೊರೂವಿತು ಕೇಕರೋಚಿಯಿಂ ಮುಖಾ

ಮಳರುಚಿ ನೀಳ್ದುದುರ್ವಿ ಸುಲಿಪಲ್ಗಳ ನೈಣ್ಬೆಳಗಿಂ ಮಡಲ್ತುದಾ

ಲಲಿತದುಕೂಲದೊಳ್ನೆಱಿ ನಖೋನ್ಮುಖದೀಧಿತಿಯಿಂ ತನುಪ್ರಭಾ

ಕುಳಮೆ ಪೞಚ್ಚನಾಯ್ತು ನವಮೌಕ್ತಿಕಮಂಡನಕಾಂತಿ ಕಾಂತೆಯಾ॥೧೭॥


ಎಸಕದ ಬೆಳ್ವೆಸದನದಿಂ

ಪೊಸಜೊನ್ನ ಸುರೂಪುಗೊಂಡಂತಿರೆ ಮೋ

ಹಿಸುತುಂ ವಿಳಸದಿಲಾಲಪ

ಗತಿ ಪೊರಮಟ್ಟಳರಸಿ ಭೂಷಣಗೃಹಮಂ ॥೧೮॥


ವ॥ ಇಂತು ನೇಪಥ್ಯನಿಳೆಯಮಂ ಪೊಱಮಟ್ಟು ರೃಜಹಂಸನಲ್ಲಿಗೇೞ್ತಪ್ಪ ಮರಾಳವಿಳಾಸಮಂ ನೆನೆಯಿಸುತ್ತುಮೈರಾದೇವಿ-

ಯರ್ಬಳಸಿ ಬರೆ ಬಂದು ಕನತ್ಕನಕ ಪರ್ಯಂಕಪರಿಖಚಿತರುಚಿರಮಣಿಗಣಪರಿಕರಪ್ರತಿಬಿಂಬಾಳಂಬದಿನಿಂದ್ರಚಾಪವೃಂದ-

ಮನೀಂಬವೆಂಬಂತಿರೆಸೆದು ಪೊಳೆವಪಳಿಕಿನ ಭಿತ್ತಿ ಬ್ರಾತವಿಸ್ತಾರಿತಮುಂ ಪರಪಿದ ನವ್ಯದಿವ್ಯಕುಸುಮಕುಟ್ಮಳಂಗಳ ಪರಿ-

ಮಳಕ್ಕೆಱಗುವ ಪಱಮೆಗಳ್ಮಿಱುಗುವ ತಮ್ಮ ತನುವೆನ ಮಾರ್ಪೊಳೆಪು ತುಂಬಿವೆಣ್ಣೆಂಬ ಶಂಕಾಸಕ್ತಿಯಿಂದೆಱಗಿ ಸಂಗಸು-

ಖಂ ಸಂಗಳಿಸದೆ ಪೆಱಸಾರುತಿರ್ಪವರ ಮರುಳ್ತನಕ್ಕೆ ಮುಗುಳ್ನಗುವಂತೆ ಬೆಳ್ವೆಳಗನುಗುಳ್ವ ಶಶಿಕಾಂತಘಟಿಯಕುಟ್ಟಿಮತಳ-

ವಿಳಸಿತಮುಂ ಕುಸುಮಶರನ ಕೂರಸಿಯ ಕರೂಬೊಗರ ಪುರ್ವಿದೆಂಬ ಸಂದೆಗಮನೊಂದಿಸಿ ರತಿ ರುಚಿಯನಗೆಯೆತ್ತುವ

ರುಚಿರಕನಕರಚಿತೋದೂಧೃಮಧೂಮಘಟಪಟಳಮುಖದಿನೊಗೆವ ನವಕಾಳಾಗರು ಧೂಮಸಮಾಜೋತ್ಕೀರ್ಣಶ್ಯಾಮ-

ಳಿತಮುಂ ಕನಕಕಮನೀಯಪುಷ್ಪಪಟಳಕಂಗಳ ಸುರುಚಿರಮರೀಚಿನಿಚಯಂ ಪ್ರಸವರೂಪಮಾದಂತೆಸೆವ ನವಚಂಪಕ-

ಪ್ರಸೂನಸಂತಾನವರಸೌರಭ್ಯಸಮುತ್ಕೀರ್ಣಮುಂ ಪರಮಹಿಮಪರಿಮಳಪರಿಕಳಿತಮಳಯರುಹಪಂಕಪರಿಪೂರ್ಣ ನಿರ್ನಿ-

ಕ್ತಸುವ್ಯಕ್ತಶುಕ್ತಿರೈಹಸುತ್ತಿ ಕಾನಿಕಾಯಸಮಾವೃತಶೋಭಾಯಮನಮುಂ ಸ್ವಕೀಯಸಂಭವ ಸುಕಾಂತಿಸಂಚಯಾಚ್ಛಾದಿತ-

ದಿವ್ಯಪರಿಮಳೋದ್ಗಾರಿಕಸ್ತೂರಿಕಾವಕಿಳಕಳಿತ ಹರಿನೀಳವಿವಿಶಾಳಭಾಜನಬಬ್ರಜವಿಭ್ರಾಜಿತಮುಂ ಮಸೃಣಜಂ ಬಾಳಪರಿ-

ಧೃತಾಕ್ಷೂಣಶೋಣಮಣಿಪಾತ್ರಪರಿಕರಪ್ರಭಾಭರಿತಭಾಸುರಮುಂ ಕಂತುವಿನ ಕೂರಲಗಿದೆಂಬ ವಿಡಂಬಕ್ಕೆ ಪಕ್ಕಾದ ನೂತ-

ನಕನಕಕೇತಕೀದಳಂಗಳಚೆಲ್ವನೀೞ್ದುಕೊಂಡಂತೆ ನೀಳ್ದೆಸೆವ ನಾಗವಲ್ಲೀದಳಾವೃತರಜತ ಘಕಾವಳೀರಮಣೀಯಮುಂ

ಪೊಳೆವಮಳಶಶಿಕಳಾ ಸಕಲನಿಕರಾಯಕಾರಿಯಪ್ಪ ಕಪ್ಪುರವಳಿಕಿನ ಬಳಗಂ ತೆಕ್ಕನೆ ತೀವಿದಂತೆ ಚಂದ್ರೋಪಳಚಷಕ-

ಚಯಕಮನೀಯಮುಂ ಪರಮಜಿನಜನನಿಯಪ್ಪ ಗಣ್ಯಪುಣ್ಯವತೀಯರಿನ್ನರನ್ಯರಾರೆಂದೈರಾದೇವಿಯಂ ತವೆ ನೋಡಲ್ಕೆ ನಾಡೆಯುಂ ತದೀಯಾವಾಸದಧಿದೇವತೆ ಕಣ್ಬಡೆದಳೆಂಬಂತೆ ಪಳಿಕಿನ ಭಕ್ತಿಗಳೊಳ್ಮರ್ಪೊಳೆವ ಮಣಿದೀಪಿಕಾವಳಿ ಮನೋಹರಮುಂ ಸುರತಕೇಳೀಪ್ರಭಾವಕಾರಣ ಲಲಿತಕಲಾವಕಪುರುಳಿಪಾರಾವತಮಯೂರಮರಾಳಜಾಳಕುಹರಣಕ್ವಣ

-ನಮಯವಾಗಿರಯ್ಯಮಪ್ಪಶಯ್ಯಾಸದನದೊಳ್ ಧವಳದುಕೂಲಪ್ರಚ್ಛದಾಚ್ಛಾದಿತದಿನೆಸೆದು ತರಂಗಿಣಿಯ ಭಂಗಿಯನನುಕರಿಸಿ ಕಣ್ಗೊಳಿಪ ಮಂಚದೊಳಂಚಿತಮಾಗಿರ್ದ ವಿಶ್ವಸೇನಮಹಾರಾಜನ ಸೂೞ್ಗೆವಂದ ನೃಪಸೌಂದರಿ

ಕಂದರ್ಪಸಂದೋಹಸಂತುಷ್ಠಿಯಂ ಪಡೆದು ಸುಖಸುಪ್ತಿಯೊಳಿರುತ್ತುಮರಸಿ ಭಾದ್ರಪದ ಬಹುಳ ಸಪ್ತಮಿಯ ಬೆಳಗಪ್ಪಜಾವದೊಳ್ ಭರಣಿನಕ್ಷತ್ರದೊಳ್ ಷೋಡಶಶುಭಸ್ವಪ್ನಂಗಳಂ ಕಂಡಾಗಳ್


ಒದವಿದ ಮಂಗಳ ಪಾಠಕ

ಮೃದುರವದಿಂ ದಿವಿಜಗಾಯಕೀಗೇಯನಿನಾ

ದದಿನೋಕಶ್ಯಕುನಿಗಳುಲಿ

ಪದಿನುಪ್ಪವಡಿಸಿದಳರಸಿ ನೃಪನೊಡನಾಗಳ್ ॥೧೯॥


ತಮತಮಗಮರಸ್ತ್ರೀತತಿ

ಸಮಯಂಬಾರ್ದಿರ್ದದು ಸಾರ್ಚಿ ಪಾವುಗೆಯಂ ವಿ

ಭ್ರಮದಿಂ ಕೈಗೊಟ್ಟರಸಿಗೆ

ಚಮರಮನಿಕ್ಕಿದುದು ಮಂಚದಿಂದಿೞಿವೆಡೆಯೊಳ್ ॥೨೦॥


ಪದಿನಾಱುಂ ಕನಸುಗಳಂ

ಪದೆಪಿಂ ಬೆಳಗಪ್ಪ ಜಾವದೊಳ್ಸತಿ ತಾಂ ಕಂ

ಡುದನೆಯ್ದೆ ಪೇೞ್ದುದನೊಡ

ರ್ಚಿದಳಂತಾವಿಶ್ವಸೇನನೃಪತಿಗೆ ನಲವಿಂ॥೨೩॥


ವ॥ ಅದೆಂತೆಂದೊಡೆ


ದಿವಿಜಾಧೀಶದ್ವಿಪೇಂದ್ರಂ ವೃಷಭಮೃಗರಿಪು ಶ್ರೀಲಸನ್ಮಾಲೆ ಚಂದ್ರಂ

ರವಿ ಮೀನಂ ಪೂರ್ಣಕುಂಭಂ ಕೊಳನಮೃತಪಯೋರಾಶಿ ಸಿಂಹಾಸನಂ ಶ

ಕ್ರವೆಮಾನಂ ನಾಗಸದ್ಮಂ ವಿಮಳಮಣಿಸಮಾಜಂ ವಿಧಮಾಗ್ನಿಯಂದದಿಂ

ತಿವನಾಂ ಸ್ವಪ್ನಂಗಳೀರೆಂಟುಮನೆಸಕದುಷಃಕಾಲದೊಳ್ದೇವ ಕಂಡೆಂ॥೨೪॥


ವ॥ ಮತ್ತಮಾ ಪದದೊಳ್


ಶರದಿಂದುರೋಚಿಯಂ ಮಾಂ

ಕರಿಸುವ ದಿವಿಜದ್ವಿಪೇಂದ್ರಮೆನ್ನಯ ವದನೋ

ದರಗತಮದಾದುದೆಂದಾ

ಧರಣೀಶಂಗರಸಿ ಪೇೞ್ದಳನಿತಂ ಕ್ರಮದಿಂ ॥೨೫॥


ಎನೆ ಕೇಳ್ದರಸಂ ತ್ರಿಭುವನ

ವಿನುತಜಿನಂ ನಿನಗೆ ತನಯನಪ್ಪನೆನಲ್ತಾ

ನನುಪಮಮುದಮಂ ತಳೆದಳ್

ತನುವೆನಸುಂ ತಳೆಯೆ ಪುಳಕಕುಟ್ಮಳಕುಳಮಂ॥೨೬॥


ವ॥ ಆಗಳೆನಿತಾನುಂ ಮುದಮನಪ್ಪುಕೆಯ್ದವನೀವಲ್ಲಭಂ ತದೀಯ ಶುಭಸ್ವಪ್ನಫಲವೃಂದಮನಿಂತೆಂದಂ


ಪಿರಿದಾನುಂ ಧರ್ಮಾನ್ವಿತನತುಳಬಳಂ ಶ್ರೀವರಂ ಭೂಮಿಭೃತ್ ಶೇ

ಖರನಂಚತ್ಕೀರ್ತಿ ತೇಜೋಧಿಕನನೆಮಿಷವಂದ್ಯಂ ಗುಣೋತ್ಪೂರಿತಂ ಸ

ಚ್ಚರಿತಾವಾಸಂ ಗಭೀರಂ ತ್ರಿಭುವನವಿಭು ಸನ್ಮಾನಿ ಸದ್ಭೋಗಿ ಮಾಂಗ

ಲ್ರಮಾರಮ್ಯೋತ್ಕರಂ ಬೋಧದ ನಿಧಿಯೆನಿಪ ನಂದನಂ ತಪ್ಪದಪ್ಪಂ॥೨೭॥


ನಂದನನನುಪಮನುದಯಿಸು

ವಂ ದಿಟದಿಂ ನಮಗೆನಲ್ ನೃಪಂ ತದ್ವಚನ

ಕ್ಕಂದಾಗಳೆ ಸುತನಂ ಪಡೆ

ದಂದದೆ ಪರಮಾನುರಾಗಮಂ ಸತಿ ತಳೆದಳ್ ॥೨೮॥


ವ॥ ಅನ್ನೆಗಮಿತ್ತಲ್ ಮುನ್ನೆ ಪೇಳ್ದ ಮೇಘರಥಚರಾಹಮಿಂದ್ರಂ ನಿಜಾಯುರವಸಾನಮಪ್ಪುದುಮಾದಿವಿಜಭವನದಿಂ ಬಂದೈರಾವತಾಕೃತಿಯಿಂದೈರಾದೇವಿಯ ಮುಖೇಂದುಬಿಂಬದಿಂ ಪೊಕ್ಕುದರಕೈರವದೊಳ್ಪುರಂದರಪ್ರಥಮಕಲ್ಯಾಣ-

ಪೂಜಾಪುರಸ್ಸರಮವತರಿಸಿದಾಗಳ್


ನೆಲಸೆ ಜಗತ್ರಯೈಕಗುರುವಪ್ಪ ಜಿನಾರ್ಭಕನಾತ್ಮಗರ್ಭದೊ

ಳ್ನೆಲಸಿದುದಲ್ತೆ ಚಿತ್ತದೊಳತರ್ಕ್ಯತರಪ್ರಮದಂ ಲತಾಂಗದೊ

ಳ್ನೆಲಸಿದುದೂರ್ಜಿತೋಜ್ವಳನಕಾಂತಿಯ ತಿಂತಿಣಿ ನೀಳ್ದಪಾಂಗದೊ

ಳ್ನೆಲಸಿದುದಾವಗಂ ನಿಮಿರ್ದ ನುಣ್ಬೆಳಗಾ ನರನಾಥಕಾಂತೆಯಾ॥೨೯॥


ತನುವಿನ ಮಧ್ಯದೊಪ್ಪುವ ಕೃಶತ್ವಮಣಂ ಕಿಡದುಜ್ವಳಪ್ರಭಾ

ವಿನಿಹಿತಮಾಗಿ ತೋಱುವ ವಳಿತ್ರಿತಯಂ ಕಿಡದಾಬೃಹದ್ಧನ

ಸ್ತನಯುಗಚೂಚುಕಚ್ಛವಿ ಲವಂ ಕಿಡದಂಗನೆಗಕ್ಷಯಾತ್ಮಕಂ

ಜಿನಶಿಶು ಪುಟ್ಟಿರಲ್ ಪ್ರಕೃತಿವೆತ್ತೆಸೆದಿರ್ಪುದಿದಾವ ಕೌತುಕಂ॥೩೦॥


ಭುವನತ್ರಯಕ್ಕೆ ಗುರುವೆನಿ

ಸುವ ಜಿನಶಿಶು ಗರ್ಭದಲ್ಲಿ ಸಂಭವಿಸಿಯುಮಾ

ಯುವತಿಗೆ ಭರಶ್ರಮಂ ಸಂ

ಭವಿಸದು ತಾನೆಂದೊಡೆಂತಿದೇನಚ್ಚರಿಯೋ೩೧॥


ಗತಿಯೊಳ್ಮಾಂದ್ಯಂ ಪುಟ್ಟದು

ಮತಿಯೊಳ್ಜಡವೃತ್ತಿ ಪುಗುದು ನಿದ್ರಾಲಸ್ಯಂ

ಸತಿಗೆ ಸಮನಿಸದು ಭುವನ

ತ್ರಿತಯಾಧಿಪ ಜಿನಶಿಶೂದಯಂ ಚಿತ್ರತರಂ॥೩೨॥


ಸ್ತುತಿವೆತ್ತ ಜ್ಯೇಷ್ಠಬಹುಳದ

ಚತುರ್ದಶಿಯ ದಿವಸಮುಖದೊಳೈರಾದೇವೀ

ಸತಿಯುದರವದನದಿಂ ಸ

ನ್ನುತ ಬೋಧತ್ರಯರಮಾಧಿಪತಿ ಪೊರಮಟ್ಟಂ॥೩೮॥


ಭುವನತ್ರಯಭವನಕ್ಕೊ

ಪ್ಪುವ ಮಣಿದೀಪಿಕೆಯನೊಸೆದು ಪಡೆವಂತೆ ದಯಾ

ರ್ಣವನಂ ಸತಿ ಪಡೆದಳ್ಸುರ

ನಿವಹೋತ್ಸವಕರನನಮಳಬೋಧಾಕರನಂ ॥೩೯॥


ಅನಿಮಿಷನಾಥನೊಲ್ದು ನಮಗಿತ್ತ ಬೆಸಂ ಸಲೆ ಸಿದ್ದಿಯಾಯ್ತು ನಾ

ಮಿನಿತುಮಲಂಪಿನಿಂಪುದಿದು ದೇವಿಯ ಸೇವೆಯೊಳಿರ್ದುದಿಂತು ನೆ

ಟ್ಟನೆ ಫಲಮಾಯ್ತ ಪುಟ್ಟಿದನಣಂ ತ್ರಿಜಗತ್ಪತಿಯೆಂದು ರಾಗದಿಂ

ತನತನಗಿಂತು ನರ್ತಿಸುತುಮಿರ್ದುದಮರ್ತ್ಯವಧೂಕದಂಬಕಂ॥೪೧॥


ಮೊಳಗಿದುವೆಯ್ದೆ ಬಾಜಿಸದೆಯುಂ ಸುರದುಂದುಭಿಗಳ್ ಲತಾವನಂ

ಗಳ ಕುಸುಮೋತ್ಕರಂ ತಿಱಿಯದಲ್ಲುಗುತಿರ್ದುದು ನಮ್ನಮಾಗದಾ

ಗಳೆ ಸುರಮೌಳಿಮಾಳೆ ನತಮಾದುದು ನಾಕದೊಳೆಂದೊಡೇನಿದ

ಗ್ಗಳಮೊ ಜಿನಾರ್ಭಕೋದಯ ಪುಣ್ಯಫಲಂ ವಿನಮಜ್ಜಗತ್ಕುಳಂ॥೪೩॥


ವರಘಂಟಾನಿನದಂ ಸುರಾವಸಥದೊಳೇರೀರವಂ ವ್ಯಂತರಾ

ಮರವೃಂದಾಲಯದೊಳ್ಮೃಗೇಂದ್ರನಿನಿದಂ ಜ್ಯೋತಿಷ್ಕದೇವಾಳಿಮಂ

ದಿರದೊಳ್ ಶಂಖನಿನಾದಮಾಭವನದೇವಾಸದೊಳ್ಪೊಣ್ಮಿತ

ಚ್ಚರಿಯಿಂ ಷೋಡಶತೀರ್ಥಕೃತ್ಪರಮಜನ್ಮೋತ್ಸಾಹಸತ್ಸೂಚಕಂ ॥೪೪॥


ಜನಿಯಿಸದಂ ಜಿನಶಿಶು ಭೋಂ

ಕೆನೆ ಬರ್ಪುದು ನೀಂ ದ್ವಿತೀಯಕಲ್ಯಾಣಕ್ಕೆಂ

ದಿನಿತನಱಿಪುವವೊಲಾಯ್ತಾ

ಸನಕಂಪಮದಾ ನಿಳಿಂಪನಾಥಂಗಾಗಳ್ ॥೪೫॥


ತನಗಾದಾಸನಕಂಪದಿ

ನನಿಮಿಷವರನಱಿದನವಧಿಬೋಧನೀಗಳ್

ಜನಿಯಿಸದಂಷೋಡಶತೀ

ರ್ಥನಾಥನೆಯೆಂದೆಱಗಿ ತಳೆದನಧಿಕೋತ್ಸವಮಂ ॥೪೬॥


ಸರಸೇನಾಯಾನಸಂಘಟ್ಟನಜನಿತನಿನಾದಂ ವಿಮಾನಧ್ವಜಾನೀ

ಕರಣದ್ಘಂಟಾವಳೀಟಂಕೃತಿರುತಿ ವಿಳಸನ್ಮಂಗಳಾತೋದ್ಯಹೃದ್ಯ

ಸ್ವರಮುದ್ಯಚ್ಚಾಮರಶ್ರೀನಿಕರಕರಲಸತ್ಕಂಕಣವ್ರಾತಖಣ್ಕಾ

ರರವಂ ಮೆಯ್ವೆರ್ಚಿ ದೇವಾಗಮನದೆ ಭುವನಕ್ಕಾಯ್ತು ಶಬ್ದಾತ್ಮಕತ್ವಂ ॥೫೧॥


ಬರೆ ಮುಂದಾನಂದದಿಂ ರನ್ನದ ಮೞೆಗಱೆಯುತ್ತುಂ ಕುಬೇರಂ ಸಮಸ್ತೋ

ರ್ವರೆಗಂ ನಾನಾವಿಮಾನೋಲ್ಬಣಮಣಿಗಣನಿರ್ಯತ್ಪ್ರಭಾಮಾಲೆ ಮೇಲಂ

ಬರಮಂ ಚಿತ್ರಾಂಬರಾಡಂಬರಮನೊದವಿಸುತ್ತಾದಮೇೞ್ತರ್ಪಿನಂ ಚೆ

ಚ್ಚರದಿಂದೇೞ್ತಂದನಾಹಸ್ತಿನಪುರಿಗೆಮನೋರಾಗದಿಂದಂ ಸುರೇಂದ್ರಂ ॥೫೨


ಅದೆ ತಾರಾಚಳದಂತೆ ಬರ್ಪುದೆ ಸಮಂತೈರಾವತಂ ತತ್ಕರೀಂ

ದ್ರದ ಪೂರ್ವಸ್ಥಳಭಾಸಿ ಶಕ್ರನೆ ವಲಂ ತತ್ಕಾಂತೆ ಪೌಲೋಮಿಯಂ

ತದು ಗೀರ್ವಾಣವಧೂಸಮಾಜಮದೆ ದಲ್ಕಲ್ಪಾಮರಶ್ರೇಣಿ ಸು

ತ್ತಿದುದೆಕಲ್ಪಾಮರೇಂದುನೋಡುತಿರೆಯುಂ ತತ್ಪೌರನಾರೀಜನಂ॥೫೪॥


ವ॥ ಇಂತು ಕಲ್ಪಿಸುತ್ತುಂ ತತ್ಪೌರಪುರಂಧ್ರಿಸಂದೋಹಮುನ್ಮುಖತೆವೆತ್ತುನೀಡುಂ ನೋಡುತ್ತುಮಿರೆಯುಮಾಸೌಧರ್ಮೇಂದ್ರಂ ಪ್ರಥಮದ್ವಿತೀಯಕಲ್ಪಾಧಿನಾಥಸಮೇತನಾಗಿಯಾಗಸದಿನಿೞಿದು ತದೀಯ ವಿಶಾಳಶಾಳಾಬಹಿರ್ಭಾಗದೊಳ್ಸಕಳಸುರ-

ಸೇನೆಯಂ ನಿರವಿಸಿ ತಾನಾಗಳ್ಸುರಾಗದಿಂ ನರೇಂದ್ರಮಂದಿರಾಂಗಣಕ್ಕವತರಿಸಿ


ದರಹಾಸಕೇಸರಾವಳಿ

ತರಳಾಯತದೃಗ್ಜಳಂ ಚಳಾಳಕಭೃಂಗೋ

ತ್ಕರಮೆಸೆವ ತತ್ಶಚೀಮುಖ

ಸರಸಿರುಹಮನೊಸೆದು ನೋಡಿದಂ ಸುರರಾಜಂ॥೫೫॥


ವ॥ ಇಂತು ನೋಡಿ ಶಚೀದೇವಿಗೆ ದಿವಿಜರಾಜಂ ಜಿನಾರ್ಭಕನಂ ಬಿಜಯಂಗೆಯ್ಸಿತಪ್ಪತತ್ಕ್ರಮಮಂ ನಿಯಮಿಸಿದಾಗಳ್


ಲುಳಿತಮಣಿಕಂಕಣಧ್ವನಿ

ಕಳಕಾಂಚೀಕ್ಷುದ್ರಘಂಟಿಕಾರವಮುಣ್ಮಲ್

ಘಳಿಲೆನೆ ಸುರೇಭದಿಂ ತಾ

ನಿೞಿದಳ್ನಲವಿಂ ನಿಳಿಂಪಪತಿಸತಿಯಾಗಳ್ ॥೫೬॥


ಬಳಸಿ ಬರೆ ಸುರಪುರಂಧ್ರೀ

ಕುಳಮಾಗಳ್ ರಾಗದಿಂ ಶಚೀದೇವಿ ಸಮು

ಲ್ಲಳಿತಗತಿ ಸೂತಿಕಾಗೃಹ

ದೊಳಗಂ ಪೊಕ್ಕಳಿನಾರ್ಭಕನನೀಕ್ಷಿಸುತುಂ॥೫೭॥


ಉದಯನಗೇಂದ್ರಚೂಳಿಕೆಯ ಪಾರ್ಶ್ವದೊಳುದ್ಗತಪಾಟಳಾಂಶುವಿಂ

ಪುದಿದೆಸೆದಿರ್ಪಿನಂಗೆ ತೊಣೆಯಾಗಿ ತದೀಯನೃಪಾಂಗನಾಂಗಪಾ

ರ್ಶ್ವದೊಳೆನಸುಂ ವಿರಾಜಿಪ ಜಿನಾರ್ಭಕನಂ ಶಚಿ ನೋಡಿದಳ್ದೃಗ

ಬ್ಜದೊಳೊಗೆಯಲ್ಮುದಶ್ರು ನೆಗೆಯಲ್ಪ್ರಮದಂ ಹೃದಯಾರವಿಂದದೊಳ್॥೫೮॥


ಬಲವಂದು ಮೂಱುಸೂೞಾ

ತ್ಮಲಲಾಟವಿನಿಹಿತನಿಜಕರಾಂಬುಜ ನವಕು

ಟ್ಮಳಘಟಿತೆಯಾಗಿ ಪೊಱಮ

ಟ್ಟೊಲವಿಂ ಸೌಧರ್ಮಶಕ್ರವಲ್ಲಭೆಯಾಗಳ್ ॥೫೯॥


ವ॥ ಆಗಳ್ಮಾಯಾನಿದ್ರೆಯಂ ನಿರವಿಸಿ ನಿದ್ರಾಮುದ್ರಿತನೇತ್ರಶತಪತ್ರೆಯಾಗಿರ್ದೈರಾದೇವಿಯ ಮುಂದೆ ಮಾಯಾರ್ಭಕನನಿರಿಸಿ ಜಿನಾರ್ಭಕನಂದುಕೂಲದೊಚ್ಚೆಱಗಿ ಪೊದೆಯಿಸುವಂತೆ ನಿಜನಯನ ಧವಳಾಂಶುವಿಂ

ಪೊದೆಯಿಸಿ ನಿಜಕರಸರೋಜಂ ನೀಡಿ ತೆಗೆದೆತ್ತಿಕೊಂಡು


ಅಲರ್ಗುಡಿಯನೆತ್ತಿ ಸುತ್ತಲೂ

ನಲವಿಂ ಪಾಡುತ್ತುಮಮರಿಯರ್ಬರೆ ಬಂದಳ್

ಲಲಿತಗತಿಯೆಸೆಯೆ ಶಚಿ ಕರ

ತಳರುಚಿ ನೆಲೆವೆರ್ಚೆ ತಳೆದು ಜಿನಬಾಳಕನಂ॥೬೧॥


ತರುಣಾರ್ಕನನರುಣಾಬ್ಜಿನಿ

ಧರಿಯಿಸಿ ಬರೂಪಂತೆ ಶಚಿ ಜಿನಾರ್ಭಕನಂ ತಂ

ದರೈಣಕರತಳದೊಳಾಂತೆ

ಯ್ತರುತಿರೆಕಂಡಿಂದ್ರನೆಯ್ದಿದಂ ಸನ್ಮುದಮಂ॥೬೨ ॥


ಮುನ್ನಮೆ ವಿನಿಮಿತನಾಗು

ತ್ತುನ್ನೀಡಿದ ಪತಿಯ ನಿಡಿಯ ಕಯ್ದಾವರೆಗಾ

ದನ್ನೀಡಿದಳಾಶಚಿ ಕಡೆ

ವೊನ್ನೆಸಕಮನಿಱಿಸಿ ಮಿಸುಪ ಜಿನಬಾಳಕನಂ॥೬೩॥


ಆಗಳ್ ಶಚೀರಮಣಿಪರ

ಭಾಗದೊಳೆಸೆಯಲ್ನಿಜಾಂಕಪೀಠಾಗ್ರದೊಳಿಂ

ಬಾಗಿ ಜಿನಾರ್ಭಕನಿರಲನು

ರಾಗದಿನೊದವಿದರ್ನಿಂತು ಸೌಧರ್ಮೇಂದ್ರಂ॥೬೫॥


ಜಿನಬಾಲಕನ ಮುಖಂಗಂ

ಡನಿತುಂ ಜಯ ಜಯ ಜಯನಂದ ವರ್ಧಸ್ವ ಚಿರ

ಸ್ವನಮುಖರಮಾಯ್ತು ಚತುರಮ

ರನಿಕಾಯಂ ಹರ್ಷವಾರಿನಿಧಿಯೆಂಬಿನೆಗಂ॥೬೬॥


ಜಿನಶಿಶುವಂ ಜನ್ಮಸ್ನಾ

ನನಿಮಿತ್ತಂ ತಲೆಯೊಳಾಂತು ತಂದಪುದೋ ತಾ

ರನಗಂ ಮೇರುನಗೇಂದ್ರ

ಕ್ಕೆನೆ ಕಣ್ಗೊಳಿಸಿರ್ದುದಿಂತು ದಿವಿಜಗಜೇಂದ್ರಂ॥೬೯॥


ವ॥ ಇಂತು ವಿಭ್ರಾಜಿಸುವಭ್ರಗಜರಾಜನ ವಿಕ್ರಿಯಾಕಾರಕೌತುಕಾವಿಭ್ರಮಮಂ ವರ್ಣಿಸುವೊಡೆ


ಪದಪಿಂದೈರಾವತಕ್ಕಾದುವು ಮುಖಮವು ಮೂವತ್ತೆರಳ್ದಂತಮಂತಾ

ವದನಕ್ಕೆಂಟೊಂದು ದಂತಕ್ಕೆಸೆವಕೊಳನದೊಂದಾಕೊಳಕ್ಕಂಬುಜಂಗ

ಳ್ವಿದಿತಂ ಮೂವತ್ತೆರಳ್ತದ್ದಳವನಿತೆ ದಳೈಕಾಗ್ರದೊಳ್ನರ್ತಿಪ ಪ್ರೇ

ಮದೆ ಮೂವತ್ತಿರ್ವರುದ್ಯತ್ಸುರಸುದತಿಯರೇವೇೞ್ವೆನಾಶ್ಚರ್ಯದೊಳ್ಪಂ ॥೭೦॥


ಕಮಳದೆಸೞ್ಮುಟ್ಟದೆ ತಮ

ತಮಗಮರಿಯರೆಸೆವ ರಸಮಯಾನರ್ತನದೊಳ್

ಭ್ರಮರಿಗಳಂ ಮಾಡುವ ವಿ

ಭ್ರಮದಿಂ ಭ್ರಮಮಂ ಸುರರ್ಗೆ ಸಮನಿಸುತಿರ್ದರ್॥೭೧


ನಿಲವಿನ ಭಂಗಿ ಸುರೇಖಾ

ವಿಲಸಿತ ಮುಂದಿಟ್ಟ ಹಸ್ತಗತಿಸಂಗತಿಗಳ್

ಸಲೆ ಸೊಗಯಿಸೆ ರಸಭಾವಂ

ನಲವಿಂ ನರ್ತಿಸುತುಮಿರ್ದರಮರಾಂಗನೆಯರ್॥೭೨॥


ಮಳಯಸಮೀರಸಂಚರಣಶಾಲೆ ಮಯೂರದ ನೃತ್ಯಶಾಲೆ ಕೋ

ಕಿಳಕಳನಾದಶಾಲೆ ಶುಕಸಂಚಯದೋದಿನ ಶಾಲೆ ಖೇಚರೀ

ಕುಳಮೃದುಗೀತಶಾಲೆ ಮಧುಪಂಗಳಮಂಗಳಶಾಲೆಯಪ್ಪ ಸ

ಲ್ಲಲಿತವನಾವಳೀನಿವೃತಸೌಂದರಕಂಧರಮಲ್ತೆ ಮಂದರಂ ॥೯೧॥


ಕಲಕೀರಪ್ರಕರಪಣಾದಮಿಷದಿಂ ಸ್ತೋತ್ರಂಗೆಯ್ಯುತ್ತೆ ಪ್ರವಾ

ಳಲಸದ್ರಾಗಮದಾದಮುಣ್ಮಿ ಕಳಹಂಸಾನಂದಯಾನಸ್ಫುರ

ಚ್ಚಲನನ್ಯಾಸಮದೊಪ್ಪೆ ಸಂಚರಮರುತ್ಸಾತಪ್ರಕಂಪಾಂಘ್ರಿಪಾ

ತುಲಶಾಖಾಮಿಷದಿಂದೆ ನರ್ತಿಸಿದುದಿಂದುದ್ದಾಮಹೇಮಾಚಳಂ॥೯೨॥


ವ॥ ಆಗಳ್ ಬ್ರಂಹಾದಿಕಲ್ಪೇಂದ್ರರಾನಂದದಿಂ ದಿವ್ಯಕುಸುಮಸಂದೋಹಮಂ ನವ್ಯಗಂಧಮಂ ನಿರ್ಮಳಾಕ್ಷತಮಂ ನವೀನದರ್ಭೆಯಂ ನೂತನದೂರ್ವೆಯಂ ಪರಮಾನ್ನಚರುವಂ ಪ್ರೋಜ್ವಳನ್ಮಣಿದೀಪಿಕಾವಳಿಯಂ ತಮತಮಗೆ ತಂದು ನಾಡೆಯುಂ ನೀಡುತ್ತಿರೆ ಪರಮಜಿನಜನ್ಮಾಭಿಷೇಕಂ ಶೋಭೆಯನೆಯ್ದುತ್ತುಮಿರೆ


ಸುಲಲಿತಸುವರ್ಣಕಳಶೋ

ಚ್ಚಲಿತಾಂಶುವಿನೊಡನೆ ಪೊಣರ್ದು ಕೈಮುಱಿದನಿ

ರ್ಮಲನಾಳಿಕೇರವಾರಿಯ

ನೊಲವಿಂ ಸುರಿದರ್ಜಿನಾರ್ಭಕನ ಮಸ್ತಕದೊಳ್॥೧೧೪॥


ಕರಕಳಿತ ಕನಕ ಕಳಶ

ಸ್ಫುರಿತದ್ಯುತಿಮಾಳೆಯೆಂಬ ಸಂದೆಗಮೊಂದು

ತ್ತಿರಲ್ ನವ ಚೂತಫಲರಸ

ಪರಿಕರಮಂ ಸುರಿದರಲ್ತೆ ಜಿನಶಿಶುಶಿರದೊಳ್ ॥೧೧೫॥


ದೆಸೆದೆಸೆಗೆ ಪರಿಮಳಂ ಪಸ

ರಿಸುತುಂ ಮಧುಪಾಳಿಯಂ ಮರುಳ್ಗೊಳಿಸುತುಮಿಂ

ತೆಸೆವ ಮಧುರೇಕ್ಷುರಸಮಂ

ನಿಸದಂ ಸುರಿದರ್ಜಿನಾರ್ಭಕನ ಮಸ್ತಕದೊಳ್॥೧೧೬॥


ಸಂಪಗೆಯ ಸೊಗಯಿಸುವ ತನಿ

ಗಂಪಂ ವೈಡೂರ್ಯರತ್ನರುಚಿಯಂ ತಳೆದಾ

ಸುಂಪೆಸವ ನವಘೃತಮನೊಲ

ವಿಂ ಪರಮನ ಶಿರದಮೇಲೆ ಸುರಿದರ್ಸುರಸರ್॥೧೧೭॥


ಮಣಿಹಾರಾವಳಿಯಂ ಹೆಗಲ್ಗಿೞಿಪಿ ಮುಂಗಯ್ಯಿಂದೆ ಮೇಗಣ್ಗೆ ಕಂ

ಕಣಮಂ ಸಾರ್ಚಿ ಸಮುಲ್ಲಸನ್ಮಕುಟಮಂ ಸಯ್ತೊತ್ತಿ ಕಯ್ಗಯ್ಯೊಳಾ

ಕ್ಷಣದಿಂ ರತ್ನಘಟಂಗಳಂ ಪಿಡಿದು ಪೊಕ್ಕರ್ ಕ್ಷೀರವಾರಾಶಿಯಂ

ಗಣನಾತೀತಮೆನಲ್ಮುದಂ ಪುದಿದು ಸಾರ್ತಂದಂದು ವೃಂದಾರಕರ್॥೧೨೨॥


ನಿರ್ನಿಕ್ತನಿಖಿಳಮಣಿರೋ

ಚಿರ್ನಿಚಯಾವಹಮಹತ್ತರಂಗನಿಕಾಯೋ

ತ್ಕೀರ್ಣಂ ನೆಲೆವೆರ್ಚಿದುದಮೃ

ತಾರ್ಣವಮೆನೆ ಪೊಕ್ಕ ದಿವಿಜರೇನಗಣಿತಮೋ॥೧೨೩॥


ಮಾನಸದಿಂದಮಳಪಯಃ

ಪಾನಕ್ಕೆಱಗಿದ ಮರಾಳಜಾಳಂ ಪೆಱತೇಂ

ತಾನಿದೆನೆ ಮೊಗೆದುದಖಿಳಸು

ರಾನೀಕಂ ಚಂದ್ರಕಾಂತಘಟಕೋಟಿಗಳಂ॥೧೨೪॥


ಮೊಗವ ತೆಗೆವೆತ್ತಿ ನೀಡುವ

ಮಗುಳೆ ಕೊಡಂಗೊಳ್ವತೆಱಪನಾರಱಿವರ್ನೆ

ಟ್ಟಗೆ ಪೋಪ ಬರ್ಪ ಸುರಮಾ

ಳೆಗಳಾಗಳ್ಕಣ್ಗೆವಂದುವೇನಚ್ಚರಿಯೋ॥೧೨೯॥


ಎಡೆವಿಡದೆ ನೀಡುತಿರ್ದುದು

ಗಡಣಿಸಿತನತನಗೆ ದಿವಿಜಪತಿ ಘಟತತಿಯಂ

ತಡೆಯದೆ ನೀಡಿಸಿಕೊಳ್ವಾ

ಬೆಡಂಗು ಕಡುವೇಗಮಾಯ್ತು ಶಕ್ರನೊಳಗಾಗಳ್ ॥೧೩೦॥


ಕುಡೆ ಘಟಮಾಳೆಯಂ ತಳೆವ ಕಯ್ಗಳನೇಕವಡುರ್ತುಕೊಂಡು ಕೊಂ

ಡೆಡೆವಿಡದೞ್ತಿಯಿಂ ಸುರಿವ ಕಯ್ಗಳನೇಕಮುದಗ್ರಭಕ್ತಿಯಿಂ

ಪೊಡೆವಡುತಿರ್ಪ ಚೆನ್ನೊಸಲ ಕಯ್ಗಳನೇಕಮವರ್ಗೆ ನೀಡುವಾ

ಗಡಣದ ಕಯ್ಗಳನೇಕಮೆನೆ ಶಕ್ರವಿಕುರ್ವಣಮೇನಗುರ್ವಮೋ॥೧೩೧॥


ಸುರಿಯುತ್ತಿರ್ದಂ ಸುರೇಂದ್ರಂ ಜಿನಶಿಶುವಿನ ಶೀರ್ಷಾಗ್ರದೊಳ್ವೋರೆನಲ್ಚೆ

ಚ್ಚರದಿಂ ಕ್ಷೀರಾಂಬುಧಾರಾವಳಿಯನಿೞಿಪ ಪೂರೋತ್ಕರಂ ಮಂದರೋರ್ವೀ

ಧರದಿಂದಂ ಬೀೞ್ವ ಚಂಡಧ್ವನಿಗೆ ಕಿವುಡುವೀೞ್ದತ್ತು ದಿಕ್ಚಕ್ರಮೋರಂ

ತಿರೆಸೂಸುತ್ತಿರ್ಪತುಂತುರ್ವನಿತುಱುಗಿಸುಧಾಲೋಕಮಾಯ್ತಲ್ತೆ ಲೋಕಂ॥೧೩೨॥


ಸುರಪತಿ ಜಿನಶಿಶುವಿಂಗತಿ

ಸರಭಸದಿಂ ಮಾಡುವಭಿಷವಾಮೃತಪೂರೋ

ತ್ಕರಮನದೇವೊಗೞ್ವೆಂ ಸುರ

ಗಿರಿಯಘಮರ್ಷಣಮನಿರ್ದ ತೆಱನಾಯ್ತಾಗಳ್ ॥೧೩೫॥


ಸುರಗಿರಿಯಂ ಸಾರ್ದುದು ಹಿಮ

ಗಿರಿಯೇ ಸಲೆ ಬಿಟ್ಟು ಸುರತರಂಗಿಣಿಯೆಂಬಂ

ತಿರೆ ಜಿನಶಿಶುಸವನದ ಪಾ

ಲ್ವರಿಯೆಸೆದುದು ಸುತ್ತಿ ಸುರಿದ ಸರಭಸದಿಂದಂ॥೧೩೬॥


ಜಿತಮಲ್ಲೀಫುಲ್ಲಜಾಳಂ ಜಿತಮಳಯಜದ್ರವಂಜಿತಾಂ ಚತ್ತುಷಾರಂ

ಜಿತಚಂಚತ್ತಾರಹಾರಂ ಜಿತಸಿತಶರದಭ್ರಂ ಜಿತಾಮರ್ತ್ಯಸಿಂಧೂ

ದ್ಗತಡಿಂಡೀರಂ ಜಿತೇಂದ್ರದ್ಯುತಿ ಜಿತಹರಹಾಸಂ ಜಿತಾಭ್ರದ್ವಿಪೇಂದ್ರಂ

ಜಿತಹೈಮಾದ್ರೀಂದ್ರಮಾಯ್ತಾಜಿನಶಿಶುಸವನಸ್ವಾದಪೀಯೂಷಪೂರಂ ॥೧೩೭॥


ತನ್ನುಳ್ಳಮೃತಮನಿತ್ತೆನ

ಗಿನ್ನುಳ್ಳುದು ರತ್ನನಿವಹಮಿವನೊಯ್ದು ಜಗ

ತ್ಸನ್ನುತನಂ ಪೂಜಿಸಿಮೆನು

ತುನ್ನೀಡುವ ತೆಱದಿನುದಧಿ ಬಱಿದಾಯ್ತಾಗಳ್ ॥೧೩೮॥


ಪರಮಾಂಭಶ್ಚಂದನಾರ್ದ್ರಾಕ್ಷತಕುಸುಮಚರುಪ್ರೋಜ್ವಳದ್ದೀಪಕಾ

ಗರುಧೂಪೋದ್ಯತ್ಫಳಾಷ್ಟಾರ್ಚನೆಗಳಿನಮಳಚ್ಛತ್ರಚಾರುಧ್ವಜೋದ್ಭಾ

ಸುರನಾನಾರತ್ನ ಭೂಷಾವಳಿಚಮರಜಸಂಗೀತಕಬ್ರಾತದಿಂದ

ಚ್ಚರಿಯಾಗಲ್ಬೂಜೆಗೆಯ್ದಂ ಜಿನಶಿಶುಚರಣಾಂಭೋಜಮಂ ದೇವರಾಜಂ॥೧೪೧॥


ವ॥ ಇಂತು ವಿಶಿಷ್ಟಾಷ್ಟವಿಧಾರ್ಚನಾದಿಯಪ್ಪನಂತಾರ್ಚನೆಗಳಂ ಸದ್ವಿನಯದಿಂದರ್ಚಿಸಿ ಸಂಸ್ತವತ್ರಿತಯದಿಂದಭಿವರ್ಣಿಸಿ ಪರಮಹರ್ಷಜನಿತಪುಳಕ ಸೂಕ್ತಿರುಹವರ್ಮದ್ದೃತನಿರ್ಮಳಾಂಗನಪ್ಪ ಸೌಧರ್ಮೇಂದ್ರನೀಶಾನೇಂದ್ರಾದಿ ವೃಂದಾರಕರ್ವೆ-

ರಸು ನಿರುಪಮಜಿನಸ್ನಪನಮವಿಪುಳದಿವ್ಯಾಮೋದ ಬಂಧುರಗಂಧೋದಕಪವಿತ್ರೀಕೃತಕೋಟೀರನುಂ ತ್ರಿಭುವನಸ್ತವನೀಯಪಾವನಜಿನಚರಣಮತನುಲಿಪ್ರಲುಳಿತಮಳಯರುಹ ಕರ್ದಮಾಲೇಪಿತಶರೀರನುಂ ಮತಂಗಜ-

ನಿದ್ಯುಷ್ಟವಿಷ್ಟರಮಸ್ತಕನ್ಯಸ್ತವಿಳಸದರ್ಹ ದಮಳಾಂಘ್ರಿಕಮಳಪೂಜಿತಶೇಷಾಕ್ಷತಾಳಂಕಾರರುಮಾಗಿ


ಆ ದಿವಿಜಾಂಗನಾಜನಯುತಂ ಜಿನಬಾಳಕಪಾದಪಂಕಜ

ಕ್ಕಾದರದಿಂದೆ ಸಾರ್ದೆಱಗಿ ತತ್ಸವನಾಮಳಪಾವನೀಯಗಂ

ಧೋದಕಸೇಚನಕ್ರಿಯೆಯಿನಾಕ್ಷಣದಿಂ ನಿಜಗಾತ್ರವಲ್ಲಿಗು

ತ್ಪಾದಿಸಿದಳ್ ಶಚೀಸತಿ ಲಸತ್ಪುಳಕಾತುಳಕೋರಕಂಗಳಂ॥೧೪೨॥


ಸರಪತಿ ಜಿನಶಿಶುವೆರಸೇ

ೞ್ತರುತಿರ್ದಪನೆಂಬ ಸನ್ಮುದಂ ಪುದಿದಾಗಳ್

ಕುರುಪತಿ ಕಯ್ಗೆಯಿಸಿದನ

ಚ್ಚರಿ ಕಯ್ಮಿಗೆ ಪೆಂಪುವೆತ್ತ ಹಸ್ತಿನಪುರಮಂ॥೧೪೯॥


ಗುಡಿಗಳ್ತದ್ಭೂಪಕೀರ್ತಿಬ್ರತತಿಯ ಕುಡಿಗಳ್ಮುತ್ತಿನಿಂ ಬಿತ್ತರಿಪ್ಪಾ

ಕಡೆಗಳ್ವೀಧೀವಿಯತ್ತಾರಗೆಯ ಪಡೆಗಳುದ್ಯನ್ಮಣಿಶ್ರೇಣಿಯಿಂ ಚೆಂ

ಬಡೆದಿರ್ಪಾತೋರಣಂಗಳ್ಪುರವರರಮೆಯಾರಾಳಿ ತೞ್ತೋರಣಂಗಳ್

ಗಡಮೆಂಬಂತಾದಮಾ ಹಸ್ತಿನಪುರಿ ಮಿಗೆ ಚೆಲ್ವಾಗೆಕೈಗೆಯ್ದುದಾಗಳ್ ॥೧೫೦॥


ವ॥ ಎಂದಿಂತು ಪುರಜನವಾನಂದದಿಂದಭಿವರೂಣಿಸುತ್ತುಮಿರ್ಪನ್ನೆಗಮಾಪುರಂದರಂ ಬಂದು ತದೀಯನರೇಂದ್ರಮಂದಿರ-

ಮಂ ಪೊಕ್ಕು ಮುನ್ನಮೆ ತನ್ನ ನಿಯಮದಿಂ ಕಲ್ಪಜಶಿಲ್ಪಿ ನಿರ್ಮಿಸಿದ ವಿಚಿತ್ರಮಂಡಪದೊಳ್ಮಂಡಿತಂಬೆತ್ತ ವೇತಂಡವಿದ್ವಿಷ್ಟ-

ರಾಗ್ರದೊಳ್ಜಿನಾರ್ಭಕನಂ ಬಿಜಯಂಗೆಯ್ಸಿದಾಗಳ್


ಮನದಿಂ ಲೋಚನದಿಂ ಮುದಶ್ರು ಪರಿಯಲ್ಕಂದಾಗಳೇೞ್ತಂದು ನಂ

ದನವಕ್ತ್ರಾಂಬುಜಮಂ ನಿರೀಕ್ಷಿಸಿ ನಿರಸ್ತಾನಂದಪೀಯೂಷವಾ

ರಿನಿಧಾನೋಚ್ಚತರಂಗಮಾಳಿಕೆಗಳೊಳ್ತೇಂಕಾಡುತಿರ್ದರ್ಮಹೀ

ಶನುಮಾದೇವಿಯುಮಂತೆ ಸನ್ಮುದಮನೆಯ್ದಿತ್ತೆಯ್ದೆ ಬಂಧುವ್ರಜಂ ॥೧೫೬॥


ವ॥ ಆ ನಂದನಮುಖಾವಳೋಕನದಿನಾನಂದಮನೆಯ್ದಿದ ವಿಶ್ವಸೇನಮಹಾರಾಜನುಮನೈರಾದೇವಿಯೈಮನುಚಿತಾಸನ-

ಸೀನರುಂ ಮಾಡಿ ಜಿನಾರ್ಭಕನ ಜನ್ಮಾಭಿಷವಣಕಲ್ಯಾಣೋತ್ಸವಮಂ ಶಚೀವಲ್ಲಭನವರ್ಗೆನೆಱೆಯಱಿಯೆ ಪೇೞಿ


ಗರುವಾದಿರೂನೆಗೞ್ಚೀತ್ರಿಲೋಕಗುರುವಿಂಗಾರಿಂತು ನಿಮ್ಮಂತೆ ನೋಂ

ತರೆನುತ್ತುಂ ಕುರುರಾಜಶೇಖರನನೈರಾದೇವಿಯಂ ನಾಡೆಯುಂ

ಸುರರಾಜಂ ನುತಿಗೆಯ್ದು ಪೂಜಿಸಿದನುದ್ಯನ್ನವ್ಯದಿವ್ಯಪ್ರಭಾ

ಸುರಮಾಲ್ಯಾಂಬರಭೂಷಣಾವಳಿಗಳಿಂ ತಾನುದು ಸಾನಂದದಿಂ॥೧೫೭॥


ಪಿರಿದುಂ ಪಿತೃಮಾತೃಗಳೊಳ್

ಪರಮೋತ್ಸವಮತ್ಯುದಗ್ರಮಾಗಲ್ಕಾಗಳ್

ಸುರಪತಿ ಪರಮೋತ್ಸವದಿಂ

ವಿರಚಿಸಿದಂ ಶಿಶುಗೆ ಜಾತಕರ್ಮೋತ್ವಮಂ ॥೧೫೮॥


ವ॥ ತದನಂತರದೊಳ್


ನಿರುಪಮ ಶಾಂತಿಗೆ ನೆಲೆಯಿದು

ಚರಮಶರೀರನ ನಿಜಪ್ರಭಾವಮನೆಂತುಂ

ಪರಿಭಾವಿಸಿ ಪೆಸರಿಟ್ಟಂ

ಸುರಪತಿ ಶಾಂತೀಶನೆಂದು ಸಂತಸದಿಂದಂ॥೧೫೯॥


ಸ್ಥಾನಕಮೊಂಬತ್ತಕೆ ನೆಗ

ೞ್ದಾನೂಱೆಂಟೆಂಬ ನಿಲುವುಗಳ ನಿಜಜನ್ಮ

ಸ್ಥಾನಮಿದೆನೆ ಋಜ್ವಾಗತ

ಮೇನೆಸೆದುದೊ ಪೂರ್ವನಾಟ್ಯದೊಳ್ಸುರಪತಿಯಾ॥೧೬೩॥


ಆ ಸಮಯಋಜುವಿನ ಪದವಿ

ನ್ಯಾಸಂ ಸೌಷ್ಠವನೂನರೇಖೆ ಸಭಾ

ಭಾಸುರಮಾಗಿರೆ ಸಕಳಸ

ಭಾಸದರಂ ಮೋಹಿಸಿದನಮರ್ತ್ಯಾಧೀಶಂ॥೧೬೪॥


ಇಳೆ ಪಾದೋದ್ಯತ್ಪ್ರಚಾರಕ್ಕಿದು ನೆಱೆಯಿತಿಲ್ಲವಿಸ್ತಾರಿಪಾಶಾ

ವಳಿಯಂ ಹಸ್ತಂಗಳಾಚಾಳೆಯತಚಳಬಳಕ್ಕೆಯ್ದಿತಿಲ್ಲಾನಭೋಂತ

ರ್ವಳಯಂ ತನ್ಮೌಳಿಚೂಳಾವಳನದ ತುಡುಂಕಿಗೆಯ್ದಿತಿಲ್ಲೆಂಬಗುರ್ವಂ

ತಳೆದುರ್ವಿಂ ತಾಂಡವಾಡಂಬರಮನೆಸಗಿದಂ ರಾಗದಿಂ ಶಕ್ರನಾಗಳ್॥೧೬೮॥


ನೆಱೆ ವಿಕ್ರಿಯೆಯಿಂ ನಿರ್ಮಿಸಿ

ಮಿಱುಗುವ ಬಾಹಾಸಹಸ್ರತತಿಯಿಂದೆನಸುಂ

ತಱಿಸಂದು ನರ್ತಿಸುತ್ತುಂ

ಮೆಱೆದಂ ತನ್ನಯ ಮಹೇಂದ್ರಜಾಲಮನಿಂದ್ರಂ ॥೧೭೦॥


ಚರಣಾಪಾತಚಳದ್ಧರಾವಳಯದುದ್ಯತ್ಷೋಭದಿಂ ವಾರ್ಧಿಗಳ್

ತೆರೆವೆತ್ತೆಯ್ದೆ ತುಳುಂಕಿ ಕೂಡೆ ಕುಳಶೈಳಶ್ರೇಣಿ ತೂಗಾಡೆ ದಿ

ಕ್ಕರಿಗಳ್ಕುರ್ಗಿ ಕುನುಂಗೆ ಬಾಹುದಳನಾಂದೋಳಕ್ಕೆ ದಿಗ್ಜಾಳಮಂ

ಬರಮಾಗಳ್ತಱಪಾಗೆ ನರ್ತಿಸಿದನೊಲ್ದಿಂದ್ರಂ ನಿಜಾನಂದದಿಂ॥೧೭೪॥


ಸುಮನಶ್ಯೈಳವನಾಜಿನಾಭಿಷವಣಕ್ಷೀರಾಂಬುಧಾರಳಿಯಿಂ

ದೆ ಮುಳುಂಕಾಡಿಸಿದಂದದಿಂ ಸಕಳಮರ್ತ್ಯಾಮರ್ತ್ಯರಂ ನೋಡೆ ನಾ

ಡೆ ಮುಳುಂಕಾಡಿಸಿದಂ ಸ್ವಕೀಯರಸವನ್ನೃತ್ಯಾಮೃತಾಸಾರದಿಂ

ದಮೆನಲ್ಕೇವೊಗೞ್ವೆಂ ಸುರೇಶ್ವರನ ಸಮ್ಯಗ್ಭಕ್ತಿ ಸಂಪತ್ತಿಯಂ ॥೧೭೫॥


ನೆನೆಕೆಗಳೊಂದಿಗೆ:


ಸಂಪಾದಕರು,  

ಪ್ರೊ. ಹಂಪ ನಾಗರಾಜಯ್ಯ,

ಪ್ರಕಾಶಕರು: ಪ್ರಸಾರಾಂಗ

ಕನ್ನಡ ವಿಶವಿಶ್ವವಿದ್ಯಾಲಯ, ಹಂಪಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ