ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಮಾರ್ಚ್ 21, 2020

ಪೊನ್ನನ ಶಾಂತಿ ಪುರಾಣಂ

ಪೊನ್ನನ  ಶಾಂತಿ ಪುರಾಣಂ

ಶಾಂತಿ ಪುರಾಣವನ್ನು ರಚಿಸಿದ ಪೊನ್ನ ಕವಿಯ ಕಾಲ ಹತ್ತನೆಯ ಶತಮಾನದ ನಟ್ಟ ನಡುವಣ ಕಾಲ. ಅತ್ತ ಪಂಪನಿಗೂ ಇತ್ತ ರನ್ನನಿಗೂ ನಡುವೆ ಸಾಹಿತ್ಯ ಸೇತುವೆಯಂತೆ ಪೊನ್ನ ನಿಂತಿದ್ದಾನೆ. ಈತನು ಭುವನೈಕರಾಮಾಭ್ಯುದಯವನ್ನು ೯೬೦ ರಲ್ಲೂ ಶಾಂತಿಪುರಾಣವನ್ನು ೯೬೫ ರಲ್ಲೂ ರಚಿಸಿದ್ದಾನೆ.

ಸಂಸ್ಕೃತದಲ್ಲಿ ಶಾಂತಿನಾಥನನ್ನು ಕುರಿತು ಸ್ವತಂತ್ರ ಕಾವ್ಯವನ್ನು ಬರೆದದ್ದು ಅಸಗಕವಿ. ಪೊನ್ನನ ಶಾಂತಿಪುರಾಣಕ್ಕೆ ಇದು ಆಧಾರಗ್ರಂಥ. ಕನ್ನಡದಲ್ಲಿ ಶಾಂತಿಪುರಾಣವನ್ನು ಬರೆದ ಮೊದಲ ಕವಿ ಪೊನ್ನ. ಅನಂತರ ರಚಿತವಾದ ಶಾಂತಿ ಪುರಾಣ ಕೃತಿ ಶ್ರೇಣಿಗೆ ಇವನೇ ಆದಿ ಕವಿ. ಅಸಗನ ೧೬ ಸರ್ಗಗಳನ್ನು ಪೊನ್ನ ೧೨ ಆಶ್ವಾಸಗಳ ಚೌಕಟ್ಟಿಗೆ ಹೊಂದಿಸಿದ್ದಾನೆ. ಅಸಗ ಸೂರ್ಯ ಪೊನ್ನ ಚಂದ್ರ, ಕನ್ನಡ ಕಾವ್ಯದ ಕಡೆಯ ಎರಡು ಆಶ್ವಾಸಗಳು ಪೂರ್ತಿಯಾಗಿ ಪೊನ್ನನ ಸ್ವೋಪಜ್ಞ ಸೃಷ್ಟಿ. ಚಕ್ರರತ್ನದ ಉದ್ಭವ ಪ್ರಸಂಗ ಪೊನ್ನನ ಮೊಹರು ಇರುವ ಭಾಗ. ಶಾಂತಿಪುರಾಣ ೧೬ ನೆಯ ತೀರ್ಥಂಕರ ಶಾಂತಿನಾಥನ ಚರಿತೆ. ಶಾಂತಿನಾಥ ವಿಶ್ವಸೇನ-ಐರಾದೇವಿಯರ ಮಗ.

ಜಿನಸೇನಾಚಾರ್ಯರು ಮಹಾಪುರಾಣದ ಆದಿಪುರಾಣ( ಪೂರ್ವಪುರಾಣ) ವನ್ನು ರಚಿಸಿದರು. ಉತ್ತರಪುರಾಣವನ್ನು ಅವರ ಶಿಷ್ಯ ಗುಣಭದ್ರಾಚಾರ್ಯರು ೮೯೮ ರಲ್ಲಿ ಪೂರೈಸಿದರು. ಈ ಉತ್ತರಪುರಾಣದಲ್ಲಿ ಸೇರಿರುವ ಶಾಂತಿನಾಥ ತೀರ್ಥಂಕರರ ಚರಿತೆ ೬೨ ಮತ್ತು ೬೩ ನೆಯ ಪರ್ವದಲ್ಲಿ ನಿರೂಪಿತವಾಗಿದೆ.

ಪ್ರಥಮಾಶ್ವಾಸಂ

ಮ॥ ಸ್ರ॥ ಪರಮ ಶ್ರೀ ಸ್ನೇಹ ಗೇಹಾಯತ ಪದ ಕಮಲಂ ಚೇತನಾಚೇತನಾಂಗ
ಸ್ಫುರಿತಾಘೌಘಚ್ಚಿದಂ ಭಾಸುರ ಸುರನರ ಸದ್ಭವ್ಯ ಸೇವ್ಯಂ ವಚೋ ವಿ
ಸ್ತರ ತೃಪ್ತಿ ವ್ಯಾಪ್ತ ಲೋಕ ತ್ರಿತಯನಪಗತಾಶೇಷ ದೋಷಾಳಿ ಮುಕ್ತಿ
ಸ್ಥಿರ ಸೌಖ್ಯಾಂಭಸ್ವಯಂಭೂರಮಣ ಜಲಧಿ ರಕ್ಷಿಕ್ಕೆ ಶಾಂತೀಶನೆಮ್ಮಂ ॥೧॥

ಮ॥ ಬಗೆ ಶುದ್ಧಂ ತನು ಶುದ್ಧಮಾ ಸ್ತುತಿ ಪದಾರ್ಥಂ ಶುದ್ಧಮಿಂತೀ ತ್ರಿಶು
ದ್ಧಿಗಳಿಂ ಧ್ಯಾನಿಸುವೆಮ್ಮನೋತೆಱಗುವೆಮ್ಮಂ ಬಂದಿಪೆಮ್ಮಂ ತ್ರಿಕಾ
ಲಗಯೋಗರ್ ಪರಮೇಶ್ವರರ್ ಪರಸುಗಿಂ ವಾತ್ಸಲ್ಯದಿಂ ಸರ್ವ ಸಾ
ಧುಗುಣಂ ಸಾಧುಗಳಪ್ಪೆಮಾ ಪರಕೆಯಿಂದಾಮುಂ ವ್ರತ ವ್ರಾತದೊಳ್॥೫॥

ಚಂ॥ ಗುರು ವರದತ್ತ ದಿವ್ಯಮುನಿ ಪುತ್ರರುದಾತ್ತಶುಭಂಕರ ಪ್ರಭಂ
ಕರರವರೈಶ್ವರಂ ನೆಗೞ್ದ ನೇಮಿಜಿನೇಶರ ಶಾಸನಕ್ಕೆ ಭಾ
ಸುರ ಪರಿರಕ್ಷಣಸ್ಥಿತಿಯನಿತ್ತರಿದುರ್ವಿಗಭೂತಪೂರ್ವಮಾ
ಗಿರೆ ದೊರೆವೆತ್ತ ಬಗೆದೀಕ್ಷಿಸಿ ರಕ್ಷಿಸುಗೆಮ್ಮನೇಗಳುಂ ॥೬॥

ಮ॥ಅತಿ ಗಂಭೀರ ಮೃದೂಕ್ತಿ ವಕ್ತ್ರದೊಳೊಡಂಬಟ್ಟೊಪ್ಪೆ ಕೇಳ್ದಂ ಬಹು
ಶ್ರುತನಲ್ಪ ಶ್ರುತನೆನ್ನದಾರ ಕಿವಿಗಂ ನುಣ್ಪಿಂಪಿನೊಳ್ ಕೂಡೆ ಪಂ
ಡಿತರುಂ ಮೂರ್ಖರುಮೆಕ್ಕೆಯಿಂ ಪೊಗೞೆ ಪೇೞಲ್ ಬಾಜಿಸಲ್ಮುಂ ಸರ
ಸ್ವತಿಯಂ ಸಾಧೆಸೆ ಸಂದ ಸಯ್ಪು ಸವಣಂಗಕ್ಕು ಪೆಱಂಗಕ್ಕುಮೇ॥೮॥

ಭುವನದ ಕನ್ನಡ ಸಕ್ಕದ
ಗವಿಗಳ್ ಸಲೆ ಸಾಲೆ ಸೋಲೆ ಸವಣಂಗಿತ್ತಂ
ಸವಿವೇಕಮುಭಯಕವಿ ಚ
ಕ್ರವರ್ತಿವೆಸರಂ ನಿಜಾಹಿತೋಷ್ಣಂ ಕೃಷ್ಣಂ ॥೯॥

ದೊರೆಯಿಲ್ಲೆನೆ ಪೊರೆಯಿಲ್ಲೆನೆ
ನೆರಮಿಲ್ಲೆನೆ ಸಮಱಿ ಸಕ್ಕದಂ ಕನ್ನಡಮೆಂ
ಬೆರಡುಂ ಕವಿತೆಯನಮಳ್ವೆ
ತ್ತರಂತಿರೊಡ ನಡಪಿದಂ ಕುರುಳ್ಗಳ ಸವಣಂ ॥೧೦॥

ಕನ್ನಡಗವಿತೆಯೊಳಸಗಂ
ಗನ್ನೂರ್ಮಡಿರೇಖೆಗಗ್ಗಳಂ ಸಕ್ಕದದೊಳ್
ಮುನ್ನುಳ್ಳ ಕಾಳಿದಾಸಂ
ಗನ್ನಾಲ್ವಡಿ ರಚನೆಯೊಳ್ ಕುರುಳ್ಗಳ ಸವಣಂ ॥೧೧॥

ಶಾಂತಿಜಿನ ಜನ್ಮ ಜಲಧಿಗೆ
ಶಾಂತಿಪುರಾಣಮೆ ಪರಾರ್ಥ್ಯ ರತ್ನಮಿದಂ ಪೇ
ೞ್ವಂತು ಕವಿ ಚಕ್ರವರ್ತಿಯೆ
ನೋಂತಂ ಪೆಸರಿಂ ಪುರಾಣ ಚೂಡಾಮಣಿಯಂ ॥೧೨॥

ಜಿನ ಮದನರೊಳಗೆ ಪದಿನಾ
ಱನೆಯ ತತ್ಸಕಳ ಚಕ್ರವರ್ತಿಗಳೊಳಗ
ಯ್ದನೆಯನೆನೆ ಪುಣ್ಯಪುಂಜಾ
ರ್ಜನಕ್ಕೆ ಶಾಂತೀಶನಂತು ನೋಂತಯರುಮೊಳರೇ॥೧೩॥

ಆ ತೀರ್ಥಕರನ ಪೆಂಪುಪ
ಮಾತೀತಮದರ್ಕೆ ಬಯಸಿ ಕಣ್ಣುಂ ಕಾಲುಂ
ಬಾತೊಡೆ ಬರ್ಕುಮೆ ಪುಣ್ಯಮ
ನಾತನ ನೆರಪಿದುದನೆಯ್ದೆ ನೆರಪದೆ ಮೊದಲೊಳ್ ॥೧೪॥

ಮ॥ ಜಿನ ತತ್ವಂ ಮದನತ್ವಮೆಂಬಿವೆರಡುಂ ದೂರಸ್ಥಮೆಂತೆನ್ನಲಾ
ಜಿನ ತತ್ವಂ ಗತರಾಗಮಾ ಮದನ ತತ್ವಂ ರಾಗ ಸಂಪೂರ್ಣಮ
ಯ್ದನೆಯಂ ತಜ್ಜಿನ ಚಕ್ರವರ್ತಿ ಜಿನನಾಥಂ ಷೋಡಶಂ ಧರ್ಮ ಚ
ಕ್ರನಿಯುಕ್ತಂ ಭರತೋರ್ವಿಗಿಂತು ಸಲೆ ನೋಂತಂ ಶಾಂತಿತಿರ್ಥೇಶ್ವರಂ॥ ೧೬॥

ಆ ಜಿನಚಂದ್ರನನಯ ನಯ
ಭಾಜನನಂ ಸಲೆ ಪುರಾಣ ಚೂಡಾಮಣಿಯಂ
ಭ್ರಾಜಿತ ಶಾಂತೀಶ್ವರ ಕಥೆ
ಗೀ ಜಗದೊಳ್ ಪತಿಯೆನಲ್ಕೆ ಪೇಳ್ವೆಂ ಕೃತಿಯಂ॥೩೬॥

ಚ॥ ಕವಿ ಕವಿಚಕ್ರವರ್ತಿ ಕೃತಿನಾಯಕನಾ ಜಿನಚಂದ್ರ ದೇವನು
ತ್ಸವ ನಿಧಿ ಮಲ್ಲಪಾರ್ಯನುಮುದಾತ್ತ ಯಶೋನಿಧಿ ಪುನ್ನಮಾರ್ಯನುಂ
ಸವಿ ತವದಂತು ಪೇೞೂದೆಸೆದರೆಂದೊಡೆ ಶಾಂತಿಪುರಾಣಮೇಂ ಕರಂ
ನವರಸಮೇಂ ಸಮರ್ಥಯುತಮೇಂ ಮೃದು ಬಂಧನಮೇಂ ಪ್ರಸನ್ನಮೋ॥೩೭॥

ಉಪಮಾತೀತಂ ಕೃತಿ ಶಾಂ
ತಿಪುರಾಣಂ ಸಲೆ ಪುರಾಣಚೂಡಾಮಣಿಯೆಂ
ದುಪಶಮದಿಂ ಬರೆಯಿಸಿ ಮ
ಲ್ಲಪಯ್ಯನುಂ ಪುನ್ನಮಯ್ಯನುಂ ಪರೆಯಿಸಿದರ್॥೩೮॥

ಉ॥ ಭೂಮಿಗೆ ಕಾವ್ಯರತ್ನಮಿದೆ ಸಾರಮೆನಲ್ ನೆಗೞ್ದೀ ಪುರಾಣಚೂ
ಡಾಮಣಿಗೞ್ತಿಯಿಂ ಕಳಸಮಿಟ್ಟು ಗುರು ಸ್ಥಿರ ಭಕ್ತಿ ಪೂರ್ಶಕಂ
ಪ್ರೇಮದೆ ಮಲ್ಲಪಯ್ನುಮುದಾತ್ತ ಯಶೋನಿಧಿ ಪುನ್ನಮಯ್ಯನುಂ
ತಾಮುಪಕಾರಮಂ ನೆರಪಿದರ್ ಜಗದೊಳ್ ಜಿನಚಂದ್ರದೇವರಾ॥೫೧॥

ತನ್ಮಧ್ಯದೊಳಿರ್ಪುದು ರುಚಿ
ವನ್ಮೇರು ನಗೇಂದ್ರಮದಱ ಮೂಡಣ ದೆಸೆಯೊಳ್
ಮನ್ಮಥ ನೃಪಾಭಿನವ ರಾ
ಜ್ಯೋನ್ಮದ ಮಹಿ ದೇಹಮುಂಟು ಪೂರ್ವವಿದೇಹಂ॥೫೭॥

ವ॥ ಎಂಬಿನಂ ನೆಗೞ್ದ ಪೂರೂವವಿದೇಹದೊಳ್ ಕಾಮರಾಗ ಕಮನೀಯ ಮನೋರಥ ಜನ್ಮಭಾಮಿಯಪ್ಪ
ವತ್ಸಕಾವತೀವಿಷಯದಾವವೆಡೆಯೊಳಂ ನಿಮ್ನ ಪ್ರದೇಶಂದಪ್ಪದೆ ಪಥಿಕ ಜನದ ಕಣ್ಗಂ ಮನಕ್ಕಂ ಪಸರಂ ಬಡೆದು ನೆಱೆ ಸೊಗಯಿಸುವ ಸರಸ ಸರಸೀರುಹಾಕರಂಗಳೊಳ್

ಚಂ॥ ವಿದಳಿತ ಹೇಮ ತಾಮರಸ ಸಾಂದ್ರ ಲಸನ್ಮಕರಂದ ಸಕ್ತ ಷ
ಟ್ಪದತತಿ ಪಾಯ್ದು ಪಾಯ್ದು ಸರಸೀರುಹದಿಂ ಸರಸೀರುಹಕ್ಕೆ ಪೋ
ಲ್ತುದು ಮಧುವಂ ಮನೋಭವನೈಮೞ್ತಿಯೊಳಾಡುವ ಪೊನ್ನಬಟ್ಟನೊ
ರ್ಮೊದಲೆ ಮನೋಜಕಾಂತೆ ಮುಳಿಸಿಂ ದೆಸೆಗೋವದೆ ಸೂಸುವಂದಮಂ॥೫೮॥

ವ॥ ಮತ್ತಮಾನಾಡೂರೂರ್ದಪ್ಪದೆ ವಿಚಿತ್ರ ಕ್ಷೇತ್ರಂಗಳೊಳ್ ಪವಿತ್ರ ಪುಣ್ಯಬೀಜ ಪ್ರರೋಹದ ಬೆಳಸಿನ ಸಿರಿಯ ಕಣ್ಬೊಲಂಗಳೆನಿಸುವ ಕೆಯ್ವೊಲಂಗಳೊಳ್

ಅಮಿತ ಗುಣವರ್ಣನ ಪ್ರ
ಕ್ರಮಕ್ಕೆ ಸಲೆ ನಾಣ್ಚಿ ತಲೆನೆಱಗಿದ ಸುಜನೋ
ತ್ತಮರಂತೆ ಭರದಿನೆಱಗಿದು
ವಮೇಯ ಪರಿಪಕ್ವ ಗಂಧಶಾಲಿ ವನಂಗಳ್ ॥೫೯॥

ತತ್ಕಮಳ ಕಣಿಶ ಕಬಳ ಸ
ಮುತ್ಕ ಶುಕ ಪ್ರಕರಮೆಸೆಯೆ ಪೊಸ ನೇತ್ರದ ಚಂ
ಚತ್ಕಂಚುಕಮನಿಳಾವಿಳ
ಸತ್ಕಾಮಿನಿ ತೊಟ್ಟ ಪೋಲ್ವೆಯುಂ ಪುಟ್ಟಿಸುಗುಂ ॥೬೦॥

ವ॥ ಮತ್ತಂ ತದುಪಾಂತದೊಳ್

ಬಹುಪೋಷಣಂ ಮಾವಿನ
ಸಹಕಾರದ ಸೊನೆಯ ಸೋನೆ ಬಳಿಯಿಸೆ ಬಳೆಗುಂ
ಮಹಿಯೆನೆ ಬಣ್ಣಿಸುವ ಪಿತಾ
ಮಹಂಗಮರಿದೆಗ್ಗ ಮೊಗ್ಗೆ ನಿನಗಮದೆನಗಂ ॥೬೧॥

ಉ॥ ಮೆಯ್ವಸಮೊಂದೆ ಪೂವಿನೊಳೆ ಪೋಗಿ ಮೊಗಂ ಮುರಿದಳ್ಳೆಗೊಂಬಿನೊಳ್
ಪಾಯ್ವುದುಮೊಂದೆ ಪಣ್ಣ ರಸಮಂ ಸವಿದಾಱದೆ ಚಂಚುವಂ ಕೆಲ
ಕ್ಕುಯ್ವುದುಮೊಂದೆ ಕೋರಕದೊಳೞ್ಕಮೆವೆತ್ತವಚತ್ತು ಲಂಘನಂ
ಗೆಯ್ವದುಮಾದುದಾ ಮಧುಪ ಕೀರ ಪಿಕಾಳಿಗೆ ನಂದನಂಗಳೊಳ್ ॥೬೩॥

ಚಂ॥ ನಯಮಳವಟ್ಟ ಪಚ್ಚೆ ಸಹಕಾರದೊಳಿಂಗುಳಿಕಂ ತಳಿರ್ತಶೋ
ಕೆಯೊಳರಿದಾಳಮುಳ್ಳಲರ್ದ ಸಂಪಗೆಯೊಳ್ ಕಡುಗರ್ಪು ಭೃಂಗ ಕೋ
ಟಿಯೊಳೆಸೆದಿರ್ದ ನೀಲಿ ಗಿರಿಮಲ್ಲಿಕೆಯೊಳ್ ಸಮನಾಗೆ ಚೀರಘ
ಟ್ಟಿಯೆ ಬರೆದಿಟ್ಟ ಚಿತ್ರದ ಬನಕ್ಕೆಣೆಯಾಯ್ತು ಬನಂ ವಿದೇಹದೊಳ್॥೬೪॥

ಇಂತಿನಿವಿರಿದಗ್ಗಳದ ದ
ಗುಂತಿಯನೊಳಕೊಂಡು ವಿಷಯ ವರ ವನಿತೆಯ ಸೀ
ಮಂತದ ಮಣಿ ಕಾಂತಿಗೆ ಮು
ಯ್ವಾಂತುದು ಚೆಲ್ವಿಂ ಪ್ರಭಾಕರೀನಾಮಪುರಂ ॥೬೫॥

ಆ ಪೊೞಲನಾಳ್ದನಖಿಳ ಮ
ಹೀಪತಿ ಮದದಂತಿ ದಂತ ಖಂಡನೆಗೆ ಸಮಾ
ರೋಪಿತ ಕೃಪಾಣ ಧಾರಾ
ವ್ಯಾಪಾರಂ ಸ್ತಿಮಿತಸಾಗರಂ ಮಂಡಳಿಕಂ ॥೬೭॥

ವ॥ ಸ್ಮಿತಸಾಗರ ಮಹೀವಲ್ಲಭಂಗೆ

ನಿರತಿಶಯ ರೂಪ ಯೌವನ
ವಿರಾಜಿತಾಂಗಿಯರನಂಗ ಜಂಗಮ ಲತಿಕೋ
ತ್ತರ ತನುಗಳ್ ನೆಗೞ್ದ ವಸುಂ
ಧರೆಯುಂ ವಸುಮತಿಯುಮೆಂಬರರಸಿಯರಾದರ್॥೭೨॥

ಅಗ್ರಮಹಿಷೀ ಪದಕ್ಕಮು
ದಗ್ರ ಪ್ರೇಮಾಸ್ಪದಕ್ಕಮವರಿರೆ ನೃಪನ
ವ್ಯಗ್ರತೆಯಿನಿತರ ವನಿತೆಯ
ರಾಗ್ರಹಮುಂ ಬಿಟ್ಟನೇನವರ್ ಸೊಬಗಿಯರೋ॥೭೩॥

ಆ ಜಾಯಾ ದ್ವಯಕಂ ಕ್ಷಿತಿ
ರಾಜಂಗಮಪೂರ್ವ ತುಂಗಜಂಗಮ ದಿವಿಜೋ
ರ್ವೀಜಮಿವೆನೆ ಪುಟ್ಟಿದರಪ
ರಾಜಿತನುಮನಂತವೀರ್ಯನುಂ ಪ್ರಿಯತನಯರ್॥೭೭॥

ದಶಮಾಶ್ವಾಸಂ

ಶ್ರೀಮಜ್ಜಿನಚಂದ್ರ ಸುಧಾ
ಧಾಮೋದಯ ವಿಭವಮಂ ನೆಱಂ ಬಡೆದವೊಲಂ
ದಾಮಹೀಯುತ್ಸವಮೆಂಬುದ
ಸಾಮಾನ್ಯಮದೋಷ್ಟಿ ಪೂರ್ವಮಶ್ರುತಪೂರ್ವಂ ॥೧॥

ವ॥ ಅಂತಾತ್ರಿಲೋಕಚೂಡಾಮಣಿಯುದಯದೊಳ್ ಮಂದಮಂದಾಯಮಾನಪವನವಿಳಸನಮುಮಪಾಂಸುಲ
ದಿಗ್ವನಿತಾವದನಲಕ್ಷ್ಮಿಯುಮಭಿನವನಮೇರು ಮಂದಾರ ಪಾರಿಜಾತಕುಸುಮವರ್ಷಮುಮಿತಸ್ತಸ್ಸಂಚಲದಮರ-
ಕರಪರಿತಾಡ್ಯಮಾನಮಹನೀಯ ದೇವದುಂದುಭಿ ನಿರ್ಘೋಷ ಲೀಲೆಯುಂ ಗಗನದಿಗವನೀವಳಯವಿಲಂಬಿ-
ವ್ಯತಿಕರಮಪ್ಪುದುಂ ಭವನನಿಳಯ ವ್ಯಂತರಾವಾಸ ಜ್ಯೋತಿರಮರ ಕಲ್ಪಾ ಲಯಚತುರ್ಭೇದಭಿನ್ನಮಪ್ಪ ದೇವಲೋಕದೊಳ್ ಶಂಖಪಟಹ ಕಂಠೀರವ ಘಂಟಾರವಂಗಳೊರ್ಮೊದಲೆಸೆವುದುಮರ್ಹದ್ವಿತೀಯ
ಕಲ್ಯಾಣಮನಱಿದು ಸಮುದ್ರವೇಳಾಸೋಪಹಾಸಿಯಾಗಿ ನಾಲ್ಕುಂ ದೇವಲೋಕದೊಳ್  ಶೋಭಿಸುತ್ತಿರ್ಪನ್ನೆಗಂ-

ಉ॥ ಆಸನಕಂಪನದಿಂದಮಿೞಿದಾಸನದಿಂ ಕರಪದ್ಮಕುಟ್ಮಲೋ
ದ್ಭಾಸಿಲಲಾಟಪಟ್ಟರತಿಸಂಭ್ರಮದಿಂ ಪೊಡೆವಟ್ಟು ನೂಱನೂ
ರ್ಛಾಸಿರಮಂ ವಿಗುರ್ವಿಸಿ ವಿಮಾನದ ಯಾನದ ವಾಹನಂಗಳ
ಗ್ರೇಸರಸದ್ವಿಮಾನಮುಮನರ್ಚನೆಯೊಳ್ ದೊರೆಕೊಂಡ ಚೆಲ್ವುಮಂ॥೨॥

ವಚನ॥ ಅವಗಯಿಸಿ

ತಳರ್ದಾಗಳ್ ಜಿನಪುಣ್ಯಾ
ನಿಳಚಳಿತ ಚತುರ್ವಿಧಾಮರೇಂದ್ರಾಂಬುಧಿ ಕ
ಣ್ಗೊಳಿಸಿದುದು ದೇವಸಮಿತಿಯ
ವಿಳಾಸಮಂ ನೆಱೆಯೆ ಪೂಗೞಲಾವೊಂ ನೆಱೆವೊಂ॥೩॥

ವ॥ ಅಂತು ಮೂವತ್ತಿರ್ವರಿಂದ್ರರುಂ ಪರಿವೇಷ್ಟಿಸಿ ಬರೆ ಸೌಧರೂಮೇಂದ್ರನೈರಾವಣಕರೀಂದ್ರ ಸಾಮಾನಿಕತ್ರಯಸ್ತ್ರಿಂಶ
ಲ್ಲೋಕಪಾಲಪಾರಿಷದಾತ್ಮರಕ್ಷಕಾಭಿಯೋಗ್ಯಕಿಲ್ಮಷಿಕಾದಿ ಪರಿವಾರ ಪರೀತರಾಗಿ ಹಸ್ತ್ಯಶ್ವ ರಥ ಪದಾತಿ ವೃಷಭಂ
ಗಂಧರೂವನರ್ತಕೀವಾರ ಸಪ್ತಾನೀಕಂ ಬೆರಸು ಜಿನೇಂದ್ರ ದ್ವಿತೀಯಕಲ್ಯಾಣೋತ್ಸುಕರಾಗಿ ಬರೆವರೆ

ರಾಗಂ ಮೆಯ್ಯೊಳ್ ಪೊಂಪುೞಿ
ವೋಗೆ ಪೊನಲ್ವರಿಯೆ ನೃತ್ಯವಾದನ ಗೀತೋ
ದ್ಯೋಗದ ಸಂಗೀತಕರಸ
ಮಾಗಳ್ ಸುರಗಗನಗಮನಮೇನೊಪ್ಪಿದುದೋ॥೪॥

ಆಗಸದೊಳಡರ್ದು ಪರೆದಿರ
ದೀಗಡೆ ನಿರ್ವಾಣರೇಖೆಗೊಂಡನೊ ಬಿದಿಯೆಂ
ಬೀಗಮನಿಕಯಂತಾದೇ
ವಾಗಮನದ ಚೆಲ್ವುವಾಗಗೋಚರಮಲ್ತೇ॥೫॥

ವ॥ ಎಂಬಿನಂ ಬಂದು ಹಸ್ತಿನಪುರಮನೆಯ್ದಿ ವಿಶ್ವಸೇನ ಮಹಾರಾಜನ ರಾಜಮಂದಿರದೊಳಮರೇಂದ್ರಸಮೇತಮಮರ-
ನಿಕಾಯಮಿರೆ ಪರಮಪವಿತ್ರೆ ಪುಲೋಮಪುತ್ರೆ ಪರಿವಾರ ದೇವೀಸಮನ್ವಿತೆ ಪೋಗಿ ಮಹಾದೇವಿಯ ಪ್ರಸೂತಿಕಾ ನಿಕಾಯಮಂ ಪೊಕ್ಕು

ಗಂಗಾಸಿಕತಿಳತಳದು
ತ್ಸಂಗದೊಳೆಸೆವೊಂದು ಹೇಮಪದ್ಮಮೆ ಗೆತ್ತಿಂ
ದ್ರಾಂಗನೆ ನೋಡಿದಳಂಬಿಕೆ
ಯಂಗೋಪಾಂತದ ಜಿನೇಂದ್ದದಾರಕ ರವಿಯಂ ॥೬॥

ವ॥ ಕಂಡು ಮೂಮೆ ಬಲಗೊಂಡೆಱಗಿ ಪೊಡೆವಟ್ಟುಮೞ್ಕಱೊಳ್ ನಿಂದು ಭಾವಿಸಿ ನೋಡಿ

ತೆಂಬಲರಲೆಪದ ಪೊಸಲತೆ
ಯೆಂಬಿನಮಂಕುರಿಸೆ ಪುಳಕಮೊರ್ಮೊದಲೊಳೆ ಬಿ
ಲ್ಲುಂಬೆಱಗುಮಾಗಿ ಸತಿ ಚೋ
ದ್ಯಂಬಟ್ಟಳಜಾತಪೂರ್ವ ವಿಸ್ಮಯದಿಂದಂ॥೭॥

ವ॥ ಅಂತು ಜಿನಾರ್ಭಕನಂ ನೋಡಿ ತದೀಯಾಂಗಸಂಗತಲಕ್ಷಣವ್ಯಂಜನಂಗಳಂ ನೋಡಲಱಿಯದೆಯುಂ ಎತ್ತಿಕೊಳಲಣ್ಮದೆಯುಮಿರ್ದಿಂದ್ರನಾಜ್ಞೆಯಂ ಬಗೆದು ಕಿಱಿದು ಶಂಕೆವೆರಸು

ಒಳ್ಳಾನೆಗೋಡಲಱಿಯದ  
ಬೆಳ್ಳಾಳವೊಲಗಿದು ಕಂಡು ಲಾವಣ್ಯರಸಂ
ತಳ್ಳಂಕುಗುಟ್ಟೆ ಮಿಳ್ಳಿಸಿ
ದಳ್ಳಿಱಿದಾಡುವ ಜಿನೇಂದ್ರಶಿಶುವಂ ತಳದಿಂ ॥ ॥೮॥

ಅಕ್ಕರಂ॥ ನಿಡಿಯ ಬಳ್ಳಿಯ ತುಱುಗೆವೆಗಣ್ಗಳ ಕೆನ್ನೆಯನೆಯ್ದಿದ ಪುರ್ವುಗಳಂ
ಪೊಡವಿ ಷಟ್ಕಂಡಕ್ಕಡಿಯಿಡುವಡಿಗಳಂ ತೊಳಗಿ ಬೆಳಗುವ ಪೆಱೆನೊಸಲಂ
ಪಡೆದ ಕಾಮದೇವತ್ವಮನವಗಯಿಸುವಂತಿರ್ದ ರೂಪಿನ ಬಾಲಕನಂ
ಬಡವಂ ಮಾಣಿಕಂಬೆತ್ತಂತೆ ರಾಗದಿನೆತ್ತಿಕೊಂಡಿಂದ್ರನದೇವಿ ಬಂದಳ್॥೯॥

ವ॥ ಅಂತೈರಾದೇವಿಯ ಮುಂದೆ ಮಾಯಾರ್ಭಕನನಿರಿಸಿ ಜಿನಾರ್ಭಕನನೆತ್ತಿಕೊಂಡು ಬರೆ ಸುರಸುಂದರಿಯರ ತಳ್ತು ಪಿಡಿದ ವಜ್ರದ ಕೊಡೆಗಳ ನೆೞಲ್ಗಳೊಳಂ ಗೊಂದಳದಿಕ್ಕುವ ಚಾಮರಂಗಳ ತಣ್ಗಾಳಿಯೊಳಂ ಮಂಗಳಗೀತಿಪೂತೆಯರ
ಪಿಡಿದ ಮಟಗಳೋಪಕರಣವಾದ್ಯದೊಳಂ ವಿಸ್ಮಿತನಾಗಿ ತ್ರಿಭುವನ ಮೂಲಸ್ತಂಭಂ ಸಕಳಕಳಾಧರಲೀಲಾವಳಂಬಿತ-
ವದನೇಂದು ಸಾಂದ್ರಚಂದ್ರಿಕಾಮೃತಚ್ಛಟಾಸ್ಫೋಟಿತಸುರಾಧೀಶನೆೞ್ತಂದುದಂ ಕಂಡು

ಮ॥ ಜಯ ಜೀವಾಧಿಪ ನಂದ ನಂದ ಸುಚಿರಂ ವರ್ಧಸ್ವ ವರೂಧಸ್ವಯೆಂ
ದು ಯಥಾರ್ಥಂ ಸ್ತುತಿಗೆಯ್ದು ರತ್ನಮಕುಟಂ ನಿರ್ಯಾಣಮಂ ತಾಗೆ ದಂ
ತಿಯ ಮೇಗಿರ್ದು ವಿನಮ್ರನಾಗೆ ದಿವಿಜೇಂದ್ರಂ ತನ್ಮನೋನೀತಿ ಭ
ಕ್ತಿಯ ಪೆಂಪಂ ಪವಣೆಯ್ದೆ ಪೇೞಲಱಿಯೆಂ ವಾಗ್ಗೋಚರಾತೀತಂ॥೧೦॥

ಆಯೆಡೆಯೊಳೆಱಗೆ ದಿವಿಜನಿ
ಕಾಯಂ ತನ್ಮಣಿಕಿರೀಟಕುಳಚಳನದೊಳಿಂ
ದ್ರಾಯುಧಮಯಮಾದುದು ನಿಖಿ
ಳಾಯತ ನೃಪಭವನ ಭುವನ ದಿಗವನಿಮಧ್ಯಂ ॥೧೧॥

ಚಂ॥ ಅಮರರ ದಂತಿ ನಿರ್ನವಿಸೆಯುಂ ಶಚಿ ನೀಡೆಯುಮಿಂದ್ರನಾಂತು ಸಂ
ಭ್ರಮಮನನಾಗಿ ಬಾಗಿ ಕೊಳೆಯುಂ ಜಿನಬಾಲಕನೇಱೆಯುಂ ಸಸಂ
ಭ್ರಮ ಸುರವರ್ಧಮಾನಪಟಹಧ್ವನಿ ಪೊಣ್ಮೆಯುಮುತ್ಸವಂ ಮನೋ
ರಮಹೃದಯಂಗಮಾನುಷಮುಮಾದುದು ಜನ್ಮದೊಳಿಂದ್ರವಂದ್ಯನಾ॥೧೨॥

ವ॥ ಅಂತು ಜಿನದಾರಕನಂ ಪಾರಿಜಾತಪಲ್ಲವಾಯಮಾನನಿಜಕರಪಲ್ಲವಂಗಳಿನೆತ್ತಿಕೊಂಡೈರಾವತಬಂಧುರಸ್ಕಂಧದೊಳಿಟ್ಟು ಪರಮೌದಾರಿಕಂಶರೀರಸ್ಪರೂಶನಸುಖಾಭವನಿಮೀಳಿತ ಲೋಚನಂ ಸೌಧರೂಮೇಂದ್ರನಿಂದ್ರಾಣಿಯಂ ಪೆಱಗನೇಱಿಸಿ-
ಕೊಂಡುತ್ತರಾಭಿಮುಖನಾದನಾಗಳ್

ಜಿನನ ತನುಜ್ಯೋತ್ಸೆಯಿನಿಂ
ದ್ರನಯನಕುವಲಯವನಂಗಳಲರ್ದುವಿಭಂ ಕಾಂ
ಚನಶಿಖರದ ಹಿಮವದ್ಗಿರಿ
ಯೆನಿಸಿದುದಘಹರನ ಕನಕತನು ಸುಚ್ಛವಿಯಿಂ॥೧೩॥

ವ॥ ಆಗಳೀಶಾನೇಂದ್ರಂ ಮುತ್ತಿನ ಮುರಿದ ಲಂಬಣಗಳಿಂ ನೇಲ್ವ ಸೌಗಂಧಿಕದ ಸೂಸಕಂಗಳಿಂ ಪದ್ಮರಾಗದ ಮಣಿಚೂಳಿಕೆ-
ಯಿಂದಂ ನಯನಮನೋಹರಮಪ್ಪ ಚಂದ್ರಕಾಂತ ಧವಳಾತಪತ್ರಮಂ ಪಿಡಿಯೆಯುಂ ಸನತ್ಕುಮಾರಮಾಹೇಂದ್ರಪತಿಗ-
ಳಿಂದ್ರಾಯುಧೋಪಮಾನಪರಾರ್ಧ್ಯ ಮಣಿಮಯೋಖಮಾಳಿಕಾದುರಾಲೋಕನನಕ್ಷತ್ರಮಾಳಾಕಳಾಪಕಕ್ಷಂಗಳಪ್ಪ
ಪಕ್ಷಗಜಂಗಳನೇಱಿ ಗಂಗಾತರಂಗಧವಳವಿಲೋಲ ಚಾಮರಂಗಳನಿಕ್ಕೆಯುಂ ನಾಕಲೋಕಚಂದನಚರ್ಚಾಚಿತ ಸುರಭಿ ನಮೇರುಪಾರಿಜಾತ ಕುಸುಮಾರ್ಚಿತ ದೇವಾಂಗಪಟಪ್ರಚ್ಛದಾಚ್ಛಾದಿತ ಪಂಚರತ್ನಮಯವೇದಿಕಾವಿರಾಜಮಾನಸಮು-
ತ್ತುಂಗಮಣಿಪೀಠಪ್ರತಿಮಮಪ್ಪ ಸೌಧರ್ಮೇಂದ್ರನುತ್ಸಂಗದೊಳ್ ತೀರ್ಥಕುಮಾರಂ ಬರೆ ಚತುರ್ವಿಧಾಮರನಿಕಾಯಂ
ನಡೆಗೊಂಡಾಗಳ್

ಸುರಕರಿಗೆ ಮೊಗಂ ಮೂವ
ತ್ತೆರಡದಱೊಂದೊಂದು ಮೊಗಕೆ ಕೋಡೆಂಟಿಂಬಾ
ಗಿರೆ ಕೋಡೊಳೊಂದು ಕೊಳನಾ
ಸರದೊಳ್ ನವನಳಿನಲತೆಗಳೋರೊಂದವಱೊಳ್ ॥ ೧೪॥

ಸರಸಿಹರುಹಲತೆಗೆ ಮೂವ
ತ್ತೆರಡಂಬುಜಮಂಬುಜಕ್ಕಮೆಸೞ್ಗಳ್ ಮೂವ
ತ್ತೆರಡವಱ ಮೇಗೆ ಕುಣಿವರ್
ಸುರವನಿತೆಯರಿಂದ್ರನಾಜ್ಞೆಯಿಂದೋರೊರ್ವರ್॥೧೫॥

ಎಸಳ ಮೊನೆ ಕೂರಿತಡಿಗೆಂ
ಬ ಸಂಕೆಯಿಂ ಮೆಟ್ಟದಂತೆ ಮುಟ್ಟದೆ ಕುಣಿದಾ
ಗಸಮೆಂಬ ರಂಗದೊಳ್ ಬ
ಣ್ಣಸರಮನಾಡಿದರನೇಕರಮರಾಂಗನೆಯರ್॥೧೬॥

ಸರಸಿರುಹದ ಮೇಗಾಡುವ
ಸುರಸುದತಿಯರಾಟದಂದಮೆಂತೆನೆ ಸಿರಿಯಂ
ಪರಿಭವಿಸಿ ತಂದುಪೊಸಯಿಪ
ಸಿರಿವಂತಿಕೆಯಿಂದೆ ಕಾಲೊಳೊದೆದಪರೆನಿಕುಂ ॥೧೭॥

ವ॥ ಅನಿವಿರಿದು ಮಹಿಮೆಗೆ ನೋಂತ ತೀರ್ಥಕರಬಾಲಕನಂ ತಮ್ಮನೆ ನೋಡಿಸುವ ಬಗೆಯಿಂ

ಬಗೆದಂದಮಪ್ಪ ತನು ಬಗೆ
ವುಗೆಯುಂ ಬಗೆದಂದಮಪ್ಪ ಕೆಯ್ತಂ ಚಿತ್ತಂ
ಬುಗೆಯುಂ ಪಪ್ಪದ ದೇವರ್
ತೆಗೆದರ್ ಕಿಱಿಕಿಱಿದೆ ದುರಿತಹರಣನ ಬಗೆಯಂ ॥೧೮॥

ವ॥ ಮತ್ತಮ ದಿವಿಜವಂದಿಸಂದೋಹಂ

ಪೊಗೞ್ದರ್ ತಮ್ಮಱಿವನಿತನೆ
ಪೊಗೞ್ವುಪಮೆಗಳುಂಬಮಾದ ಜಿನನಂ ಕೆಯ್ದೀ
ವಿಗೆ ಬೆಳಗುವನಿತನಲ್ಲದೆ
ದಿಗವನಿ ಗಗನಾಂತರಾಳಮಂ ಬೆಳಗುಗುಮೇ॥೧೯॥

ವ॥ ಅಂತಮರಸಮಿತಿ ಸುರಕರಿಯಂ ಬಳಸಿ ಬರುತ್ತುಂ

ಹರೀಣೀವೃತ್ತಂ॥ ಪರಮ ದಯೆಗೆಯ್ ನಿನ್ನೊಳ್ ತೊಟ್ಟೊಂದು ಭಕ್ತಿಯನಾದರಂ
ಬೆರಸು ಪೆಱತೊಂದೇಮುಟ್ಟಾಮೊಲ್ಲೆಮಂತದನೆಂಬ ತ
ತ್ಸುರಸಮುದಯಂ ಚೇತೋವಾಕ್ಕಾಯಶುದ್ಧಿಗಳೊಳ್ ತಮೋ
ಹರನನೆರೆದರ್ ದೈಷ್ಕರ್ಮಾರಾತಿ ಹೇತಿವಿಭೀತಿಯಿಂ॥೨೦॥

ದುರಿತಾರಿಯನಭವಂಗೆ
ಲ್ದಿರೆಮೊೞಗುವ ವಿಜಯಪಟಹದಂತೆ ನವಾಂಬೋ
ಧರರವದಿನೇೞುಕೋಟಿಯ
ಮರೆ ಸುರದುಂದುಭಿಗಳೊಡನೆ ಮೊೞಗಿದುವಾಗಳ್ ॥೨೧॥

ವ॥ ಅಂತು ನಭೋಯಾನದಿಂದಮಮರವಾಹಿನಿ ಬರೆ ಪರಕಲಿಸಿಯುಂ ತುಱುಂಬಿಯುಂ ನಿಗುಂಬಿಸಿಯುಂ ಕೇಳಿಸಿಯುಂ ನಡೆದು ದಿಗಂತಪರ್ಯಂತಮಾನಾಲೋಕಮೆಲ್ಲಂ ಕಿೞ್ತೆೞ್ದು ಬರೆ ಕವಿದ ಮಣಿಮಕುಟದ ತೊಟ್ಟಾಭರಣದದುಟ್ಟ ದುಗುಲದ
ಕಿಕ್ಕಿಱಿಗಿಱಿದ ಧವಳಚ್ಛತ್ರಂಗಳೊಳ್ ತಳ್ಪೊಯ್ದು ಯಾನವಿಮಾನಂಗಳೊಳ್ ಪಾಯ್ದಾಯ್ದು ತೞ್ತಿಕ್ಕುವ ಧವಳಚಮರರು-
ಹಂಗಳ ಮುಂದೆ ಪೊಳೆವ ದುಗ್ಧಾಬ್ಧಿ ಫೇನಪಿಂಡಪಾಂಡುರಂಗಳಪ್ಪೊಜ್ಝರಂಗೊಳೊಳಂ ದಂದಶೂಕಬೃಂದದಂತೆ ವನಪಾ-
ವನದೊಳ್ ಮೆಯ್ವಡೆದ ಮತ್ಸ್ತಮಕರಸಿಂಹವ್ಯಾಘ್ರಾದಿಪತಾಕಾನೀಕದೊಳಂ ದೆಸೆಗೆ ಬೆಸೆದು ಬಿಱ್ಱನೆ ಬೀಗುವ ಪೊಸಸಿರಿ-
ವಂತನಂತೆ ವಾತಪೂರಣಂಗಳೊಳಂ ಪರಭಾಗಂ ಬಡೆದು

ಅತಿಶಯಪಂಚರುಚಿ ಪ್ರತಿ
ಕೃತಿ ಹರಿತಂ ತಾಮ್ರಕೃಷ್ಣಪೀತಸಿತ ಶ್ರೀ
ಧೃತಮಾಗಿ ಸೂಯಿಯಾಣದ
ವಿತಾನಮಂ ಪೋಲ್ತುದಖಿಳಧರಣೀಮಾರ್ಗಂ॥೨೨॥

ವಸುಧೆಯೊಳೆಸೆದಿರ್ದಭಿವೀ
ಕ್ಷಿಸುವ ಜನಕ್ಕೆಯ್ದೆ ಜಿನನ ಜನ್ಮೋತ್ಸವಮಂ
ಬೆಸಕೆಯ್ದ ಮಣಿವಿತಾನದೊ
ಳೆಸೆದಂತೆಸೆದತ್ತಶೇಷದೇವನಿಕಾಯಂ ॥೨೩॥

ವ॥ ಅಂತು ಪಿರಿದಪ್ಪುದಱಿಂದನೇಕಮುಖದೊಳ್ ನಡೆವ ಸುರಕೋಟಿಯಂ ಕಂಡು ಸೌಧರ್ಮೇಂದ್ರಂ ಜಿನಾಭಿಷೇಕಕ್ಕೆ ನಿಂದ ಕೃತ್ರಿಮಹೇಮಪಟ್ಟಕಾಕಾರದಿಂ ಪವಿತ್ರಮಾದಮರ ಗಿರೀಂದ್ರಕ್ಕೆ ನಡೆಯಿಮೆಂದು ಕಯ್ವೀಸುವಂತೆ ಸನ್ನೆಗೆಯ್ದು ಚಾಮರಮಂ ಬೀಸುವುದುಂ

ಮ॥ ಬಗೆಯಲ್ ಬಾರದ ದೇವರಾಜಬಲಮಂ ಭೋರೆಂದು ಪೋಪೋ ಪುಗಲ್
ಪುಗಲಿತ್ತತ್ತ ದಿವೌಕದಿಂ ಪೊಱಗೆ ನಿಲ್ ನಿಲ್ ಪಿಂಗು ನೀನೆಂಬ ದಂ
ದುಗದಿಂ ದೇವರ ದಂಡಧಾರರೆರಡುಂ ಪಕ್ಷಂಗಳೊಳ್ ಸಾಱೆ ನೂ
ಲ್ದೆಗೆದಂತಿಂದ್ರಗಿರೀಂದ್ರಮೆಯ್ದುವಿನೆಗಂ ಪೋಯ್ತಾಗಳಿಂದ್ರದ್ವಿಪಂ ೨೪॥

ಇದು ಶತಸಹಸ್ರಯೋಜನ
ಮುದಗ್ರಮಿದನಡರ್ವ ತೊಡರ್ವ ಗಸಣಿಯೊಳೇನೆಂ
ಬುದನೆಂದು ದಿವಿಜಗಜಮಂ
ಬುದಮಾರ್ಗಕ್ಕೊಗೆದುದೊಗೆವ ರಜತಾದ್ರಿಯವೋಲ್॥೨೫॥

ಆ ಗಿರಿಯ ದರಿಯ ಕರ್ಪೂ
ರಾಗುರುಕುಜತತಿಯ ಮೇಗಣಿಂ ಪೋಗೆ ಮರು
ನ್ನಾಗಂ ಬಿಳಿಯ ಮುಗಿಲ್ಗಳ
ಮೇಗಂ ನಡೆವಿಂದುಬಿಂಬಮೆನಿಸಿದಾಗಳ್ ॥೨೬॥

ವ॥ ಅಂತಮರಮಹೀಧರಂಬಿಡಿದು ಮೇಗಣ್ಗೊಗೆವಿಂದ್ರಕರೀಂದ್ರದ ಬೞಿವೞಿಯನೆ

ಓರಂತು ಪೋಪ ದಿವಿಜರ
ಹಾರಿ ತಟಂಬಡಿದು ಪೊಕ್ಕು ಪೊಱಮಡುವೊಂದಾ
ಕಾರಂ ಗಿರಿರಾಜನ ನವ
ಹಾರದ ಲಂಬಣಮನೇನದನನುಕರಿಸಿದುದೋ॥೨೭॥

ನವಕುಸುಮಾವಚಯಕ್ಕಮ
ರವನಿತೆಯರ್ ತಗುಳೆ ಪಾರಿಜಾತಾವಳಿ ಸೋ
ಲ್ತವರ್ಗೆ ಕರಂ ಮಗುೞ್ದುಂ ಪ
ಲ್ಲವಿಸಿದುವೆನಿಸಿದುವು ತಳದ ವೆಳ್ಪುಂ ಕೆಂಪುಂ॥೨೮॥

ವ॥ ಅಂತು ಪೋಗಿ ಪಾಂಡುಕವನದ ಮೂಡಣದೆಸೆಯೊಳ್ ನೂಱುಯೋಜನಮಾಯಾಮದೊಳಮಯ್ವತ್ತುಯೋಜನ-
ವಿಸ್ತಾರದೊಳಮೆಂಟುಯೋಜನಮುತ್ಸೇಧದೊಳಮಮರ್ದು ಚಂದ್ರಸ್ವರೂಪದೊಳಮೊಪ್ಪಿ

ಕುಳಿಶಾವಳಿಗಳನಮರ್ದಿಂ
ತೊಳದಡಿಗಲ್ಲಿಕ್ಕಿ ಬೆಳ್ಳಿಯಿಟ್ಟಿಗೆಯಿಂ ಚೌ
ಪಳಿಯಿಕ್ಕಿದಂತೆ ತೊಳತೊಳ
ತೊಳಗಿ ಬೆಡಂಗಿಡದ ಪಾಂಡುಕಾಹ್ವಯಶಿಲೆಯೊಳ್॥೨೯॥

ವ॥ ಪೂರ್ವಾಭಿಮುಖವಾಗಿ ನಿಂದು ಮೃಗೇಂದ್ರಾಸನದೊಳ್ ಜಿನೇಂದ್ರದಾರಕನನಿರಿಸೆ ಸಿಂಹಾಸನದಿಕ್ಕೆಲದೊಳಂ ಕಿರ್ಗಿರ್ದುವಾಗಿರ್ದ ಮಣಿಮಯ ಭದ್ರಾಸನದೊಳ್ ಸೌಧರ್ಮೇಶಾನೇಂದ್ರರಿರ್ದು ವಿರಚಿಸೆ

ಮ॥ ನವಮುಕ್ತಾಫಲಮಧ್ಯವಿದ್ರುಮಮಣಿಪ್ರಾಲಂಬಿಲಂಬೂಷಮೆ
ಯ್ದುವ ರೋಚಿರ್ನಿಳಯೋಜ್ಜ್ವಳಂ ಸುರಭಿದಾಮೋಲ್ಲಾಸಿ ಮಂದಾರಪ
ಲ್ಲವಮುತ್ತೋರಣಮಿಂದ್ರಲೋಕ ವಸನಾವಷ್ಟಂಭಿತ ಸ್ತಂಭವಿ
ದ್ಧವಿತಾನಂ ಮಣಿಕೇತನಂ ಸಮೆದುದುದ್ಯೋತಾತಪಂ ಮಂಡಪಂ॥೩೦॥

ವ॥ ಅದಱೊಳಗಣ ಮೃಗೇಂದ್ರವಿಷ್ಟರದೊಳ್ ಕೂಸಾಗಿಯುಂ ಪ್ರಭಾವಿಶೇಷದಿಂದೆರಡನೆಯ ಮಂದರದ ಚೂಳಿಕೆಯಿ-
ರ್ಪಂತಿರ್ದ ಜಿನೇಂದ್ರಂಗೆ ಸೌಧರ್ಮೇಂದ್ರಂ ಜನ್ಮಾಭಿಷೇಕೋದ್ಯುಕ್ತನಾಗಿ ದಕ್ಷಿಣೇಂದ್ರಂಬೆರಸು ನಿಂದಿರ್ದ ಸಾಮಾನಿಕದೇವರಂ ಜಿನರಾಜಂಗೆ ಮೆಯ್ಗಾಪಾಗಿರಿಸೆ

ಸುರಪತಿ ಶಿಖಿ ದಂಡಧರಂ
ನಿರುತಿ ಜಳೇಶಂ ಸಮೀರಣಂ ಧನದನುಮೀ
ಶ್ವರನೆಂಬ ಲೋಕಪಾಲರ
ನಿರವೇೞ್ದವರವರ ದೆಸೆಯೊಳನುಚರ ಸಹಿತಂ॥೩೧॥

ಮಹಿಳಾ ಸಹಿತಂ ವಾಹನ
ಸಹಿತಂ ಸಂಗೀತಸಹಿತ ಮತಿಶುದ್ಧಮನ
ಸ್ಸಹಿತ ನಿಜವಿವಿಧಾಯುಧ
ಸಹಿತಂ ನಿಲವೇೞ್ದ ನೆಲೆಯೊಳಿರೆ ದಿಗಧೀಶರ್॥೩೨॥

ವ॥ ಇತ್ತ ಜಿನ ಬಾಲಕಾಧ್ಯಾಸಿತ ಪ್ರದೇಶದೊಳ್

ಲಸದಗುರುಸುರಭಿಸಾರ
ಪ್ರಸರಂ ನವಧೂಪಧೂಮಮಮರಾದ್ರಿಯನಾ
ಗಸಮನಮರೇಂದ್ರರಂ ದಿಕ್
ಪ್ರಸರಮನೇಂ ಪುದಿದು ನಿಲೆ ಪುದುಂಗೊಳಿಸಿದುದೋ॥೩೩॥

ವ॥ ಅಲ್ಲಿಂ ಬೞಿಯಂ

ಕನಕಾದ್ರಿಶಿಖಾವಳ ನ
ರ್ತನಕ್ಕೆ ಲಯಮೆಳಸೆ ದಿವಿಜದುಂದುಭಿ ಶಂಖ
ಸ್ವನದೊಡನೆ ಮೊೞಗಿದುವು ಜಿನ
ಜನನಾಭಿಷವಪ್ರಸಂಗಮಂಗಳವಿಧಿಯೊಳ್ ॥೩೪॥

ಮ॥ ಸಮಶುದ್ಧಸ್ಫುಟಮಪ್ಪುದೊಂದು ಸುತಿಯಂ ಪ್ರಾರಂಭಿಗಂ ಮಾಡೆ ತಾ
ಳಮನುದ್ದಂಬಿಡಿದಂಗವರ್ತನೆಯೊಳಾಭೋಗಂ ಪೊದೞ್ದೊಪ್ಪೆ ಬಂ
ಹಿಮವನ್ಮಂದರಕಂದರಪ್ರತಿರಮಂ ಕೂಟಕ್ಕೆ ಮೆಯ್ಯೊಡ್ಡೆ ಪಂ
ಚಮಮಾಂಗಲ್ಯದೊಳಿಂದ್ರಗಾಯಕರದೇನಿಂಬಿಂ ನಯಂಬೆತ್ತರೋ॥೩೫॥

ವ॥ ಮತ್ತಂ ತ್ರಿಭುವನೈಕ ಸಕಲ ಚಕ್ರವರ್ತಿಯ ನಾಲ್ಕುಂ ದೆಸೆಯೊಳಂ ಸೂೞ್ಸೂೞೊಳ್

ಅಮರರ ಗಾಣರ ಮುಖರಿಗ
ಳಮರ್ದಂ ಕೆದಱಿದವೊಲೆಳಸೆ ಗಾಣತಿಗೆಯ್ದು
ತ್ತಮಮಧ್ಯಮನೀಚಲಯ
ಕ್ರಮತಾಳದಿನೆಸೆಯೆ ಪಾಡಿದರ್ ಮಂಗಳಮಂ ॥೩೬॥

ವ॥ ತದನಂತರ ಪ್ರಥಮಲೋಕಾಮರೇಶನುಮೀಶಾನೇಶಂ ಚಂಚತ್ಪಂಚರತ್ನಗೋಶೀರ್ಷ ಚಂದನ ನಿರ್ಮಲಾಕ್ಷತಾರ್ಘ್ಯ-
ಮನೆತ್ತಿದಿಂ ಬೞಿಯಿಂ

ಸುರಪತಿಯುಗಳಂ ಕಳಶೋ
ದ್ಧರಣೋದಿತಮಂತ್ರದಿಂದಮೋಂಕಾರಪುರ
ಸ್ಸರಮಮರದ್ರುಮಪಲ್ಲವ
ಪರಿಶೋಭಿತಶಾತಕುಂಭಕುಂಭದ್ವಯಮಂ ॥೩೭॥

ವ॥ ಪದ್ಮಾದಿ ಸರೋವರವಾರಿಪೂರಿತಮನೆತ್ತಿಕೊಳ್ವುದುಮುೞಿದನಿಬರಿಂದ್ರಮಭಿಷೇಕ ಮಂಗಳದ್ರವ್ಯಂಗಳಂ ಕೂಡಿ ಶಚಿದೇವಿ ಶಕ್ರ ಕರತಳಕ್ಕವಂ ನೋಡಿ ನೀಡೆ ಪುರೋಡಾ ಶಕಷಾಯಸ್ನಾನೀಯೋದ್ವರ್ತನಸಂಚಾವಳಿಸ್ನಾನೋಪಕರಣಂ
ಬೆರಸು ಜಗದೇಕಬಂಧುವಂ ಮಜ್ಜನಂಬುಗಿಸಿ

ನೀರೊಳ್ ಪಂಚಮಜಲಧಿಯ
ನೀರೆ ಪವಿತ್ರಂ ಪವಿತ್ರಮಲ್ಲವು ಪೆಱವೆಂ
ದೋರಂತು ತದಂಭೋಧಿಯ
ನೀರಂ ತರವೇೞ್ದನಮರರಿಂದಮರೇಂದ್ರಂ ॥೩೮॥

ತರವೇೞಲೊಡಂ ಸುರರೊ
ರ್ವರೊರ್ವರಂ ಕೞಿಯೆ ತೇನತೇನಂ ತಳಿರ್ದುಂ
ಭರದಿಂ ನೀರಂ ಮೊಗೆದುಂ
ಪರಿತಂದರ್ ಕನಕಕಳಶವಿಶದೋದಕಮಂ ॥೩೯॥

ವ॥ ಸೌಧರ್ಮೇಶಾನೇಂದ್ರರ ಕೆಯ್ಯೊಳ್ ನೀಡುತ್ತುಮಿರೆಯಿರೆ ಮೇರುವಿನ ಪಂಚಮಸಮುದ್ರದೆಡೆಯೊಳ್ ನಿಂದಮರಸಮಾಜಮೊಂದೊರೊರೂವರ ಕೆಯ್ಗೆ

ಕೈಡೆಯುಂ ಕೊಳೆಯುಂ ನಭದೊಳ್
ಬೆಡಂಗುವೆತ್ತಮರಕರದಿನಮರಕರಕ್ಕೇಂ
ನಡೆದುವೊ ಹಿಮಕರನೆಡೆಗೊಡ
ನಡರ್ವಂತಿರಲೋಳಿವೋಳಿಯಿಂ ಕಳಶಂಗಳ್ ॥೪೦॥

ಎರಡೆ ಕರದಿಂದವಂ ಕೊಳ
ಲರಿದೆಂದನಿತರ್ಕಮನಿತೆ ಭುಜಮಂ ಹರಿ ವಿ
ಸ್ತರಿಸಿದನಣಿಮಾದಿಗುಣೋ
ತ್ಕರಮುಳ್ಳಮರಂಗೆ ಭುಜವಿಗುರ್ವಣೆ ಪಿರಿದೇ॥೪೧॥

ವ॥ ಅಂತು ಕಳಧೌತ ಕಳಶ ಸಹಸ್ರಂಗಳಿಂದಭಿಷೇಕಂಗೆಯ್ದೆ

ಜಿನಚಂದ್ರಕುಮಾರಂ ಕ್ಷೀ
ರನೀರಪೂರಪ್ಲವಾಂತರಸ್ಥಂ ಪೋಲ್ತಂ
ಕನಕರುಚಿಯಿಂದಮಾ ಪಳಿ
ಕಿನ ಕೊಡನೊಳಗಿರ್ದ ನಂದದೀವಿಗೆಯಿರವಂ ॥೪೨॥

ವ॥ ಅಂತಾ ಕ್ಷೀರವಾರಿಧಿವಾರಿಯೆಲ್ಲಮನೊರ್ಮೊದಲೊಳೆಪೊಯ್ವಂತೆ ಪೊಯ್ವ ಪಯಃಪ್ರವಾಹಮಂ ಬಾಲಕನಬಲಂ ಸೈರಿಸನೆಂಬ

ಸಂದೋಹದ ಮನದ ನಾಕಜ
ಸಂದೋಹದ ಬಗೆಯನಘಹರಂ ಕಳೆಯಲ್ಕಃ
ಎಂದುಸಿರೆಗಾಳಿಯೊಳ್ ತಿರಿ
ತಂದರ್ ತರಗೆಲೆವೊಲಮರರಂಬರತಳದೊಳ್ ॥೪೩

ಉಸಿರನೊಳದೆಗೆವುದುಂ ದೇ
ವಸಮಿತಿ ತಂತಮ್ಮನೆಲೆಗಳೊಳ್ ನಿಂದಸಮಂ
ಜಸಿಕೆಯನೞಿದು ಪರಿಚ್ಛೇ
ದಿಸಿದುದು ಜಿನಪತಿಯನಂತವೀರ್ಯಸ್ಥಿತಿಯಂ॥೪೪॥

ವ॥ ಅನಂತರಂ ಪುರಂದರಂ ಪುನರಾರಬ್ದ ಜನ್ಮಾಭಿಷೇಕನಾಗಿ

ಉ॥ ಶ್ರೀರಮಣೀಪ್ರಿಯಂಗಮೃತಮಂಗಳಮಜ್ಜನಮಂ ಜಿನಂಗೆ ವಿ
ಸ್ತಾರಿಸೆ ಪೊನ್ನ ಪೊಚ್ಚಪೊಸವಪ್ಪ ಕೊಡಂಬೆರಸಾಳಿಗಟ್ಟಿ ಭೋರ್
ಭೋರೆನೆ ಪೋಪ ಬರ್ಪಮರಸಂಹತಿ ಪೋಲ್ತುದು ಮಂದರಾದ್ರಿಗಂ
ಕ್ಷೀರಪಯೋಧಿಗಂ ಹರಿಯ ಕಟ್ಟಿದ ಜಂಗಮಸೇತುಬಂಧಮಂ ॥೪೫॥

ವ॥ ಎನಿಸಿದಮರಸಮಿತಿಯ ತಂದ ಪಾಲ್ಗಡಲ ಪಾಲಂಶಪುಷ್ಕಲಾವರ್ತಬಲಾಹಕಾಂಬುದಂಗಳ್
ಕನಕಾಚಳಚೂಳಿಕೆಯೊಳ್ ಸುರಿವುತಿರ್ಪಂತಿಂದ್ರರುಂ ಭಗವದುಷ್ಣೀಷದೊಳ್ ಸುರಿಯೆ

ಜಿನನುರದೊಳೆಸೆವ ಪಾಲಿನ
ಪೊನಲ್ ಸಯಂಬರದ ಮುಕ್ತಿಕನ್ಯಕೆ ಸುರರಾ
ಜನ ಮುಂದೆ ಮಾಲೆಯೂಡಿದ
ಮನೋಜ್ಞಸ್ಥಿತಸಿಂಧುವಾರಮಾಲೆಯನಿೞಿಕುಂ॥೪೬॥

ಆ ಕುರುತಿಲಕನ ಮೆಯ್ಯೊಳ
ನೇಕಪಯಃಕಣಗಣಂ ಪೊದೞ್ದುವು ಮುಕ್ತಿ
ಶ್ರೀಕಾಂತೆಯಿತ್ತ ಮುತ್ತಿನ
ವೈಕಕ್ಷದ ತೆರದಿನಭಿಷವೋತ್ಸವವಿಧಿಯೊಳ್ ॥೪೭॥

ಬಳಸಿದ ಬಂಬಲ್ಗುರುಳೊಳ್
ಪೊಳೆವ ಪಯಃಕಣಿಕೆ ಸಿಂಧುವಾರಲತಾಂತಾ
ವಳಿಯೆನಿಸಿ ತುಱುಗೆ ಮಜ್ಜನ
ವಿಳಾಸಮಂದೇಂ ವಿಳಾಸಮಂ ತಾಳ್ದಿದುದೋ॥೪೮॥

ವ॥ ಮತ್ತಂ ತತ್ಸಮಯದೊಳ್

ಖಚಿತಹರಿನೀಲ ಮರಕತ
ರುಚಿರಂ ಚೆಂಬೊನ್ನಕಳಶಮಿಂದ್ರಧನುಃಶ್ರೀ
ನಿಚಿತಂ ನವಸಾಂಧ್ಯಜಳದ
ರುಚಿಯಂ ಕೆಯ್ಕೊಂಡುದಮರ ಕರಪಲ್ಲವದೊಳ್॥ ೪೯॥

ವ॥ ಅದಲ್ಲದೆಯುಮಭವನ ಜನ್ಮಾಭಿಷವೋತ್ಸವದೊಳ್ ದುಗ್ಧೋಪದುಗ್ಧಮಾಗಿ

ತ್ರೈಲೋಕ್ಯತಿಲಕಜಿನಪತಿ
ಬಾಲಕಜನ್ಮಾಭಿಷವಣಯೋಗ್ಯಮಿದೆಂದಿಂ
ದ್ರಾಳಿ ಸಮೆಯಿಸಿದ ಬೆಳ್ಳಿಯ
ಕೋಳೆಯನಾಂತಂತಿರೆಸೆದುದಿಂದ್ರನಗೇಂದ್ರಂ ॥೫೦॥

ಪಾಲ್ಗಡಲ ನೀಲ ಪರಿವ ಪೊ
ನಲ್ಗಳ್ ಸುರಗಿರಿಯ ಪಿರಿಯ ನೇರಾಣಿಯ ತಾ
ಱಲ್ಗಳ್ವಿದಿೞಿದಂದೇ
ಱಲ್ಗೆಱಗಿದುವಾಜಿನೇಂದ್ರಸವನೋತ್ಸವದೊಳ್॥೫೧॥

ವ॥ ತದನಂತರಮಾದಿತ್ಯಂಗೆ ಸೊಡರಿಡುವಂತೆ ಭಕ್ತಿನಿಮಿತ್ತದಿಂ

ಸೌರಭನಿಧಿ ತೀರ್ಥಕರಕು
ಮಾರಕನೆಂದಱಿದುಮಾಜಗತೂಪತಿಗಿಂದ್ರಂ
ಸಾರಸುಗಂಧವಿಳೇಪನ
ಭೂರಿಜಳಸ್ನಪನವಿಧಿಗೋಡರ್ಚಿದನಾಗಳ್ ॥೫೨

ವ॥ ಆ ಗಂಧಸ್ನಪನೋದಕಂ ಮೇರುಮಹೀಧರಜಾಂಬೂನದನಿತಂಬಂಬೀಡಿದಿಳಿದು ಕಾಳಾಗರು ಮಿಶ್ರಪಯೋಸ್ಸ್ರೋತಸ್ಸಮುದಿತಂ ಸೌಮನಸಮನೆಯ್ದೆ

ಅಕಳಂಕ ಜಿನಾಭಿಷವೋ
ತ್ಸುಕದೊಳ್ ನಾಂದಾಱಿಸಲ್ಕೆ ಪರಪಿದ ಕುಟಿಳಾ
ಳಕದೊಳ್ ತಗುಳ್ದ ಶೀತೋ
ದಕಮನೆ ಕರ್ಬುರಿತಮಾಗಿ ಸೊಗಯಿಸಿ ತೋರ್ಕುಂ॥೫೩

ವ॥ ಎಂಬಿನಂ ಗಂಧೋದಕದಿನಮರೇಂದ್ರನಭಿಷೇಕಂಗೆಯ್ಯೆ

ಆ ಗಂಗೋಧಕಕತಿಪಯ
ಭಾಗಮೆ ನೆಲೆಮುಟ್ಟೆ ಮೇಗಣಿಂ ಮೇಗೆಯೆ ಕೊ
ಳ್ವಾಗಡಿನ ಮುಕುಟದೊಳ್ ತಳಿ
ವಾಗಡಿನುಗಿಬಗಿ ತಗುಳ್ದುದಮರೇಶ್ವರರೊಳ್ ॥೫೪॥

ವ॥ಅಂತು ನೆಱೆಯೆ ಜನ್ಮಾಭಿಷೇಕಮಂ ವೃತ್ರಹಂ ನಿರ್ವರ್ತಿಸಿ ದಕ್ಷಿಣೇಂದ್ರನುಂ ಶಚಿಯುಂ ಬೆರಸು

ಮ॥ ಜಳದಿಂದಂ ಬಳಮಂ ಸುಗಂಧರಸದಿಂ ಸೌಗಂಧ್ಯಮಂ ಪುಷ್ಪಸಂ
ಕುಳದಿಂ ಪೂಜ್ಯತೆಯಂ ಸಿತಾಕ್ಷದಿನುದ್ತದ್ವೃತ್ತಮಂ ಚಂದ್ರಿಕೋ
ಜ್ಜ್ವಳಸಾನ್ನಾಯ್ಯದಿನಿಂದುಲಕ್ಷ್ಮಿಯನುದಂಚದ್ದೀಪದಿಂ ಕಾಂತಿಯಂ
ವಿಳಸದ್ದೂಪದಿನೈಷ್ಯಮಂ ಫಲದಿನವ್ಯಾಬಾಧೆಯಂ ಮಾಡುಗುಂ ॥೫೫॥

ಜಿನಪತಿಪದಪಂಕಜಮೆಂ
ದಿನಿತರ್ಚನೆಯಿಂದಮಿಂದ್ರನರ್ಚಿಸಿ ಮನದಿಂ
ತನುವಿಂ ವಚನದಿನೇಕಾ
ಗ್ರನಾಗಿ ಪೊಡವಟ್ಟನೆಱಗೆ ಮಕುಟಂ ಧರೆಯೊಳ್॥೫೬॥

ವ॥ ಅಂತರ್ಚಿಸಿ ಪೊಡಮಟ್ಟು ಪರಮೌದಾರಿಕಶರೀರನುಂ ತೃಣೀಕೃತತ್ರಿಭುವನ ಸಕಲ ಸೌಂದರ್ಯತಿಶಯಸುಂದರಾಕಾರ-
ನುಮಪ್ಪ ತೀರ್ಥಕರಕುಮಾರಂಗೆ ಸೌಧರ್ಮೇಂದ್ರಂ ಪ್ರಸಾದಿತ ವಿಷ್ಟಪತ್ರಿತಯನಪ್ಪುದನಱಿದು ಪ್ರಸಾದನಪ್ರಾರಂಭಂ ಗೆಯ್ಯೆ

ತೊಡವಿಂಗೆ ತೊಡವು ನಿರ ತಂ
ತೊಡವೇಂ ಪೆಱತುಂಟೆ ಜಿನನ ತೊಡವೆನೆ ಮತ್ತಾ
ತೊಡವೆಡ್ಡಮಪ್ಪ ರೂಪಿನ
ಬೆಡಂಗು ಭೂಷಣವೆಶೇಷಂ ಬಾರಿಸದೇ ॥೫೭॥

ವ॥ ಎಂದು ಪ್ರಥಮಕಲ್ಪಾಮರೇಂದ್ರಂ ಸಾಂದ್ರ ಭಕ್ತಿಪ್ರಬೋಧಿತಾಶಯಕುಶೇಶಯನಾಗುಣಗಣಮಣಿಭೂಷಣಂಗೆ ದಿವಿಜೇಂದ್ರ ಲೋಕೋತ್ತಮಭೂಷಣಂಗಳಿಂ ತುಡಿಸೆ

ಮ॥ ಮಣಿಬಂಧಂ ಮಣಿಯಿಂ ಕಟೀನಿಕಟಮಾ ಚೆಂಬೊನ್ನ ಚೆಲ್ವಪ್ಪ ಕಿಂ
ಕಿಣಿಯಿಂ ವೃತ್ತಘನಪ್ರಕೋಷ್ಠಯುಗಳಂ ಮೇಲಾದ ಮಾಣಿಕ್ಯಂ
ಕಣದಿಂ ತೋಳೆಸೆದಿರ್ದ ತೋಳ್ವಳೆಗಳಿಂದುಷ್ಣೀಷಪಟ್ಟಂ ಶಿಖಾ
ಮಣಿಯಿಂ ಕಂಧರಮಾರದಿಂ ನೊಸಲುದಾರಾಶ್ವತ್ಥಪತ್ರಾಂಕದಿಂ ॥೫೮॥

ವ॥ ಅಲಂಕೃತನಾಗಿಯುಂ ನಿಸರ್ಗಸುಂದರನಪ್ಪುದಱಿಂದಮಲಂಕಾರಕ್ಕೆ ತಾನಲಂಕಾರಮಾದೊಡಂ ಲೋಕವ್ಯವಹಾರಾ-
ಪೇಕ್ಷೆಯಿಂ ಪ್ರಸಾದಿತಂಮಾಡಿ

ಮುದ್ರಸಹಜಾತವಿದ್ಧ
ಚ್ಛಿದ್ರಾನ್ವಿತಕರ್ಣಯುಗಳಪಾಳಿಗಳೊಳ್ ಸಂ
ವಿದ್ರುತರಜಂಗೆ ಹರಿ ವಿಲ
ಸದ್ರುಚಿಮದ್ಛವಜ್ರಕುಂಡಲಂಗಳನಿಟ್ಟಂ॥೫೯॥

ವ॥ ಇಟ್ಟು ಜಿನೇಂದ್ರಭಾನುವನೞ್ಕರ್ತು ನೋಡಿ॥

ಭವನ ತನುಭಾಳಮಂಡಳದ
ನವಮಂಡನದಿಂದೊಪ್ಪೆ ನಯನದ್ವಯದಿಂ
ತವೆ ನೋಡಲ್ ನೆಱೆಯದೆ ನಯ
ನವಿಹ್ವಲಂ ಹರಿ ಸಹಸ್ರಲೋಚನನಾದಂ ॥೬೦॥

ವ॥ ಆಗಿಯುಂ ಮನಂ ಸಂತಸಂಬಡೆ ಪರಿಪುಷ್ಟ ಹರ್ಷೋತ್ಕರ್ಷಚಿತ್ತನಾಗಿಯಾದಿಮಾರ್ಗಪ್ರಹಿತಮತಿಯಾಗಿ ಪಾಂಡುಕ ಶಿಳಾತಳಮೆ ರಟಗಭೂಮಿಯಾಗೆ ದಿವಿಜವಾದಕಕರಹತತವಿತತಘನಸುಷಿರಾವನದ್ಧವಾದಿತ್ರಂ ಸಂಗೀತತೂರ್ಯಮಾಗೆ ಗೀರ್ವಾಣಮಂಗಳಗಾಯಕರೆ ಸಂಗೀತಗಾಯಕರಾಗೆ ನಿಳಿಂಪಭಾರತಿಕರೆ ನಟ್ಟುವರಾಗೆ ಸನ್ಮಾರ್ಗನಾಟಕಾರಂಭಪ್ರಸ್ತುತ
ಪವಿತ್ರಸೂತ್ರಧಾರನೆ ಮುಂದೆಶನಿಂದು ಪುಷ್ಪಾಂಜಳಿಯಂ ಕೆದಱೆ

ಆ ಲಲಿತಕುಸುಮತತಿಯಾ
ಬಾಲಕಪದಪದ್ಮಮೂಲಮಂ ಬಳಸಿದುವೊ
ಡ್ಡೋಲಗಕೆ ಪುಷ್ಠಪರಾಜನ
ನೋಲಗಿಸಲ್ ಬಂದ ಪುಷ್ಪನಿಚಯದ ತೆಱದಿಂ॥೬೧॥

ವ॥ ಪುಷ್ಪಾಂಜಳಿವಿಕ್ಷೇಪಂಗೆಯ್ದೆಱಗಿ ಪೊಡವಟ್ಟು ಸರಸಾಗಮಪ್ರಾರಂಭನಿರತನನುವೈಶಾಖಸ್ಥಾನಸ್ಥಿತನಾಗಿ

ಮ॥ಸ್ರ॥ ವಿಭು ಮೂವತ್ತಿರ್ವರಿಂದ್ರರ್ ತನಗೆ ವಶವಿಧೇಯರ್ ದಿವೌಕಾತ್ಮತೇಜಃ
ಪ್ರಭೆ ಮತ್ತೊಂದಿಲ್ಲ ತತ್ವಂ ಮತಿಗೆ ವಿಮಲಮೇಕಾಂತವೈರಾಗ್ಯಮಸ್ಮತ್
ಪ್ರಭು ಕೂಸಿಂದಿರ್ದನಿಲ್ಲುತ್ತಮಸಮರಸವತ್ತಾಂಡವಾರಂಭಣಕ್ಕಾ
ರಭಟೀವೃತ್ತಪ್ರವೃತ್ತಂ ಸುರಪರಿವೃಢನೆೞ್ದಾಡಿದಂ ಭಕ್ತಿಯಿಂದಂ ॥೬೨॥

ವ॥ ಅಂತು ನಾಟ್ಯನಿಬಂಧನಮೆ ಸುರೇಶ್ವರರೂಪದಿಂದಮಾಡುವಂತಾಡೆ ತ್ರಿಲೋಕಾಧಿಪತಿ ನೋಡೆ ನಾಟ್ಯರಸಕೂಪಾರಂ ಮೇರೆದಪ್ಪಿ ಕಪ್ಪಂಗವಿಯಾಗಿ ಕವಿಯೆ

ಆ ರಸದೊಳ್ ಬಳೆದ ಲತಾ
ಕಾರಮನನುಕರಿಸೆ ದಿವಿಜರಾಜನ ಭುಜವಿ
ಸ್ತಾರದೊಳಾಡಿದರಮರಿಯರ
ದೋರೋಂದರೊಳೆಣ್ಬರೊಂದಿ ಗೊಂದಳದಿದಂ ॥೬೩॥

ಜಂಬಾರಿ ವಿಕೃತಮಾಡುವ
ರಂಭಾನಟಿಯಂತೆ ಲಾಸ್ಯದೊಳ್ ತಾಂಡವಮು
ಜ್ಜೃಂಭಿಸೆಗಣೀಕೆಯರೊಡನಾ
ರಂಭಿಸಿದರಪೂರ್ವನರ್ತನಾರಂಭಣಮಂ>॥೬೪॥

ವ॥ಅಂತಷು ದ್ರುತಲಲಿತರಸಾಯತ್ತಮಪ್ಪಾರಭಟೀವೃತ್ತಿಯೊಳಂ ತಾನುಂ ತನ್ನ ಭುಜತರುವನದೊಳಾಡುವಚ್ಚರಸೆಯ-
ರುಮಾಡಿ ರಂಜಿಸಿರೆ ಜಿನಪತಿಸ್ನಪನದ ಕಡೆಯೊಳ್

ಲೋಲಭ್ರಮರಂ ಭ್ರಮರೀ
ಮಾಲೆ ತೆಱಂದಿರೆಯೆ ತಾಂ ತೆಱಂದಿರವವೊಲು
ನ್ನೀಲಿತಮನನಮರೀಸಮ
ಲೀಲಂ ಹರಿ ಬವರಿಗೊಟ್ಟನಾೞ್ದು ಬೆಡಂಗಿಂ॥೬೫ ॥
ವ॥ ಅಂತಿಂದ್ರನಾನಂದನೃತ್ಯಮನಾಡಿದ ಪರಿಸಮಾಪ್ತಿಯೊಳ್ ಐರಾವತದ ಬೆಂಗೆ ವಂದ ನಿಜಪರಮಸ್ವಾಮಿಯಂ ನಿಷಾದಿಯಂತೆ ನಿಬಿಡನಿಬದ್ಧಪವಿತ್ರಕ್ಷೌಮೋಪಚ್ಛದೋಪಚಿತಸುಖಾಸನಾಂಕಿತಮಂ ನಿಜಾಂಕಮನೇಱಿಸಿಕೊಂಡು ಹಸ್ತಿನಪುರಾಭಿಮುಖನಮರಸಮಿತಿವೆರಸು ಅಮರೇಂದ್ರನಮರಗಿರೀಂದ್ರದ ಚೂಳಿಕೆಯಿಂ ಭದ್ಠಶಾಳಂಬರಮಾದಭಿ-
ರಾಮತೆಯಂ ನೋಡುತ್ತುಂ

ಪಿರಿಯಕ್ಕರಂ ॥ ಎಳೆಯೊಳೞ್ದುದು ಸಾಸಿರಯೌಜನಂ ಗಗನಕ್ಕೆ ತೊಂಬತ್ತೊಂಬಯ್ಸಾಸಿರಂ
ಬಳೆದುದಂತಿದಂ ಚಂದ್ರಾದಿತ್ಯ ಗ್ರಹನಕ್ಷತ್ರ ತಾರಾನಿಕರಮೆಂದುಂ
ಬಳಸುತ್ತಿರ್ಪುದು ನಾಲ್ಕುಪವನಂಗಳೊಳ್ ಪದಿನಾಱಕೃತ್ರಿಮಜಿನಗೃಹಂಗಳ್ಶ
ಕುಳನಗಂಗಳ ಕುಲದೈವಮಧಿರಾಜನಂ ತಾಯ್ಗಿರಿ ಮೇರುಮಹೀಧರೇಂದ್ರಂ ॥೬೬॥

ಇದಱ ತಪನೀಯಸಾನುಗಳ್ ಜಿನಸವನಗಂಧೋದಕಂಗಳಿಂ ಪೂವಲಿಯಂ
ಮುದದೆ ತಲೆಯೊಳ್ ಪೊತ್ತಂತಿರ್ಪುವು ಮೇರುವೆಂತಂತಿವಿಭಕ್ತಂಗಳ್
ಮದನವೈರಿಗಾಸಂದಿಯಾದುದು ಯಥಾರಾಜಾ ತಥಾಪ್ರಜಾಃ ಎಂಬು
ದಿದನೆಪಡೆದಿಂಕಂನುಡಿವುತ್ತುಮಮರೇಂದ್ರನೆಯ್ದಿದಂ ಹಸ್ತಿನಪುರವರಮಂ ॥ ೬೭॥

ವ॥ ಎಯ್ದಿ ಬಹಿರಾಭಾಗದೊಳ್ ನಿಂದು ವಿಶ್ವಸೇನಮಹಾರಾಜಂಗೆ ಪೊೞಲಂ ಬೇಗವಷ್ಟಶೋಭೆಯಂಗೆಯ್ಯಲ್ವೇೞ್ದಟ್ಟು-
ವುದುಂ

ಚಂ॥ ಪುರನಿಕರಂ ತ್ರಿವಿಷ್ಟಪಮೊ ಪೇೞ್ ದಿವಿಜೇಂದ್ರನಿವಾಸಮೋ ಸಮೋ
ಪುರಮೋ ವಿಮಾನಮೋ ಭವನಮೋ ಸುರಭೂರುಹರಾಜಿಯೋ ವನೋ
ತ್ಕರಮೊ ಸುರೇಂದ್ರನೋ ನೃಪನೊ ದೇವನೊ ಮರ್ತ್ಯನೊ ಪೇೞಿಮೆಂಬಿನಂ
ನರಪತಿ ಮಾಡಿದಂ ಪುರಕೆ ಪೊಂಪುೞಿಯಪ್ಪಿನಮಷ್ಟಶೋಭೆಯಂ ॥೬೮॥

ವ॥ ಅಂತಷ್ಟಶೋಭೆಯಂ ಮಾಡೆ

ಗುಡಿ ತುಱುಗಿ ಲತೆಯ ಪೊಸದಾಂ
ಗುಡಿಯೆನಿಸಿದುದವನಿಪತಿಯ ಕರು ಮಾಡದೊಳಂ
ಗಡಿಯೊಳ್ ವೇಶ್ಯಾವಾಟದೊ
ಳೆಡೆಗಿಱಿದ ವಿಶಿಷ್ಟ ಸೌಧಭವನಾವಳಿಯೊಳ್ ॥೬೯॥

ರಾಣಿಯಾವಾಸದ ಪೊಸ ನೇ
ರಾಣಿಯ ಮಾಡಂಗಳೊಳಗೆ ಕೆಯ್ಗೆಯ್ದಿರೆ ರು
ದ್ರಾಣಿ ವರುಣಾನಿ ನೆಗೞ್ದಿಂ
ದ್ರಾಣಿಯೆನಲ್ತಕ್ಕುಮಿಕ್ಕ ಮಹಿಷೀಬೃಂದಂ ॥೭೦॥

ಮಣಿಕುಟ್ಟಿಮಭೂಮಿಗೆ ಕಿ
ೞ್ಕಣಿಯದಿದೆನೆ ಪೋಲೆ ನಿಮಿರೆ ಪಾಸಿನ ಕಾರೋ
ಹಣದಿಂ ನೃಪೇಂದ್ರಭವನಂ
ಗಣಮೊಪ್ಪಿದುದುರ್ವರಾಸ್ಯತಿಲಕನ ಬರವಿಂ॥೭೧॥

ವ॥ ಅಂತು ಪಸದನರಾಜಲಕ್ಷ್ಮಿಯ ಮೊಗಮಿರ್ಪಂತಿರ್ದ ಮರಕತತೋರಣದ ಮುಂಬೆತ್ತಿದ ಮುತ್ತಿನ ಮಂಡವಿಗೆಯೊಳಗೆ

ಹಾರದ ಲಂಬೂಷಂ ಕೇ
ಯೂರದ ಪೊಸಗಂಬಮೆಸೆವ ಮುತ್ತಿನ ಕಡೆ ವಿ
ಸ್ತಾರಿಸಿದ ಪಂಚರತ್ನದ
ತೋರಣಮೊಪ್ಪಿದುದು ನಡುವೆ ನಿಲೆಹರಿಪೀಠಂ ॥೭೨॥

ಆ ಹರಿಪೀಠದೊಳಪಗತ
ಮೋಹನನಿದಿರ್ವೋಗಿ ತಂದು ಕುಳ್ಳಿರಿಸಿ ಸುರ
ವ್ಯೂಹಕ್ಕಂದಾಸನಸಂ
ದೋಹಮನವರವರ್ಗೆ ತಕ್ಕುದಂ ತರಿಸಿ ನೃಪಂ ॥೭೩॥

ವ॥ ತಾನುಂ ತಕ್ಕಾಸನದೊಳ್ ಕುಳ್ಟಳಿರೆ

ಆ ದಿನದೊಳ್ ಹಸ್ತಿನಪುರ
ಕಾದುತ್ಸವಮೆಳೆಯೊಳಿನಿತೆನಲ್ಕೆಡೆಗಾಣ
ಲ್ಕೋದಿದಗಾಳುಗಮಾನಿತ
ಮಾದುದಸಂಜಾಪೂರ್ವ ವಿಸ್ಮಯದಿಂದ ॥೭೪॥

ವ॥ ಆಗಳ್ ಸೌಧರ್ಮೇಂದ್ರಂ ವಿಶ್ವಸೇನನೃಪೇಂದ್ರನುಮನೈರಾಮಹಾದೇವಿಯುಮನಮರಲೋಕಾಂಬರ ಸ್ರಗವಲೇಪನಾಲಂಕರಣಗಳಿಂದಂ ಪೂಜಿಸಿ ಜನ್ಮಾಭಿಷೇಕವೃತ್ತಕಮನವರ್ಗೆ ತಿಳಿಯೆ ಪೇಳ್ದು

ಉ॥ ಈ ಪರಮೇಶ್ವರಂ ತ್ರಿಜಗದೀಶ್ವರನೀಹತಕಲ್ಮಷಂಗೆಮಾ
ತಾಪಿತೃಭಾವಮೆಂದು ನಿಮಗಾದುದು ನೀಮೆಮಗಂದು ದೇವತಾ
ರೂಪಮತೀತಜನ್ಮಸಮುಪಾರ್ಜಿತ ಪುಣ್ಯಫಲೈಕಕಾಲಕೃ
ಳೋಪಪರಂಪರಾಸಮಧಿಕಂ ನಮಗಿಂತಿರೆ ಮುನ್ನ ನೋಂತರಾರ್ ॥೭೫॥

ವ॥ ಎಂದು ಪರಮಾಶ್ಚರ್ಯಾತೀತ ಶಿರಃಕಂಪಂಬೆರಸು

ಸುರಪತಿ ಕೆಯ್ನಿಱಿದು ಚರಾ
ಚರಗುರುಗಂ ಗುರುಗಳೆನಿಸಿದಾಯಿರ್ವರ್ ಮು
ನ್ನೆರಪಿರ್ದಗಣ್ಯಪುಣ್ಯ
ಸ್ಥಿರತ್ವಮಂ ನೆಗೞೆ ಪೊಗೞಲಱಿಯಂ ಸಭೆಯೊಳ್ ॥೭೬॥

ವ॥ ಅನಂತರಂಯಥೋಕ್ತವಿಧಾನದಿಂ ( ಶುಭದಿ) ನಮುಂ


ಪ್ರಕಟಮುಮಪ್ಪಂತಿರೆ ಜಾ
ತಕರ್ಮದೊಸಗೆಯೈಮನೊಸೆದುಮಾಡಿಸೆ ಬಳಿಕ
ರ್ಭಕಜಿನಶೀತಾಂಶುಗೆ ನಾ
ಮಕರಣದುತ್ಸವದೊಳುತ್ಸವಂ ಬೆರಸಾಗಳ್ ॥೭೭॥

ವ॥ ತನ್ನಿಷ್ಟನಾಗಿ ತಾರಾತಳಮುಕ್ತಾಫಲಾಂಗುಲಿಕಪ್ರಾರಂಭದೊಳ್ ಪರಿಚಿತಚಾಮೀಕರವೇದಿಕಾ ಸನಾಥದೊಳಪರಿಮಿತರುದ್ರೇಂದ್ರ ಚಾಪವ್ರತಾನಾನೂನಾಂಶುಲಲಿತದೀಪ್ಯಮಾನ ಮಣಿಭಿತ್ತಿಸಮ-
ಭಿದ್ಯೋತಿತ ನೀರಂಧ್ರಜಾಲಾಂತರಾಳದೊಳ್ ಸತತದಹ್ಯಮಾನಕಾಲಾಗುರೂದ್ದೂಪೋದ್ಫಧಾಮ-
ಧೂಮಾಮೋದಮತ್ತಮಧುಕರನಿಕರಝಂಕಾರಪರೀತ ದಿಗಂತರಾಳದೊಳಭಿನವನಮೇರುಮಂದಾರ
ಪಾರಿಜಾತ ಸಂತಾನಕ ಕುಸುಮಮಂಜರೀ ಮಧ್ಯಲಂಬಮಾನಸಿಂಜಾನ ಮಣಿಕಿಂಕಿಣೀಕ್ವಣಿತದೊಳ್
ಮಂಗಳಾಕರಣಾಭಿರಾಮ ರಾಜಭವನಲಕ್ಷ್ಮೀ ಶಿರೋಮಂಡನೋಪಮಾನ ಮೌಕ್ತಿಕಮಣಿಮಯ
ಮಂಡಪದೊಳ್
ಕರಕಮ
ಮ॥ ಪಸೆಯೊಳ್ ಪಾಸಿದ ಬೊಂಗಮುಲ್ಲವದ ದೇವಾಂಗಂ ಮಣಿಸ್ತಂಭದೊಳ್
ಪೊಸವತ್ಯಂಗಮಪೂರ್ಮಾಗೆ ಹರಿ ಪೌರೋಹಿತ್ಯಮಂ ತಾಳೆರಾ
ಗಿಸಿ ಶಕ್ರಾಂಗನೆ ದಾದಿಯಾಗೆ ತರೆ ದೇವೇಂದ್ರಾಳಿ ಮುಂದಿರ್ದು ಘೋ
ಷಿಸೆ ಸಿದ್ಧಸ್ತುತಿಯಂ ಜಿನಂಗೆಸೆದುದಂತಾ ನಾಮಕರ್ಮೋತ್ಸವಂ ॥೭೮॥

ವ॥ ಅನಂತರಂ ವಿಶ್ವಸೇನಾವನೀನಾಥನುಮೈರಾಮಹಾದೇವಿಯುಂ ಕುರುಕುಳಾಗ್ರಗಣ್ಯರಪ್ಪ ಬಂಧುಗಳುಂ ಮುಕುಳಿತ-
ಕರಕಮಳರ್ ಬಳಯಿಸಿಯುಮಿರೆ

ಉ॥ ಆದಿಜಿನೇಶ್ವರಂ ಮೊದಲ ಚಕ್ರಿಗೆ ಭಾವಿಜಿನೇಂದ್ರನಾಮತೀ
ರ್ಥೋದಯಮಾಳೆಯಂ ಬೆಸಸೆ ತಜ್ಜಿನಭಾಷಿತಮಾತ್ಮಚಿತ್ತಮಂ
ಭೇದಿಸಿದಂತೆ ಲೋಕಪತಿಗಿಟ್ಟನನುಸ್ಮೃತಮಾತ್ರಪಾಪವಿ
ಚ್ಛೇದನಮಂ ಜಗತ್ಪ್ರಥಮಮಂಗಳಮಂ ಹರಿ ಶಾಂತಿನಾಮಮಂ ॥೭೯॥

ಆ ನಾಮಕರಣದೊಳ್ ಪೊಸ
ತಾನಂದಂ ಬಗೆಯನುಗಿಯೆ ಪುನರುಕ್ತತೆಯಿಂ
ದಾನಂದನೃತ್ಯಮಂ ಹರಿ
ತಾನಾಡಿದನೊಸಗೆಯೆಸಕಮಿರ್ಮಡಿಸುವಿನಂ॥೮೦॥

ಕೃತಜ್ಞತೆಗಳು,

ಸಂಪಾದಕರು,  
ಪ್ರೊ. ಹಂ. ಪ. ನಾಗರಾಜಯ್ಯ

ಪ್ರಕಾಕರು,
ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ,  ಹಂಪಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ