ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಮಾರ್ಚ್ 14, 2020

ಜನ್ನ ಕವಿ ವಿರಚಿತ ಅನುಭವ ಮುಕುರಂ

ಜನ್ನ ಕವಿ ವಿರಚಿತ ಅನುಭವ ಮುಕುರಂ

ಈ ಕಾವ್ಯದ ನಿಜವಾದ ಹೆಸರು " ಮೋಹಾನುಭವ ಮುಕುರ ". ಸಂಕ್ಷಿಪ್ತ ನಾಮ " ಅನುಭವ ಮುಕುರ." {ಪರಂಜ್ಯೋತಿ ಯತಿಯ " ಅನುಭವ ಮುಕುರ " ವೆಂಬ ವೇದಾಂತ ಕೃತಿ ಬೇರೊಂದುಂಟು.} ಜನ್ನನ ಅನುಭವ ಮುಕುರಕ್ಕೆ" ಸ್ಮರತಂತ್ರ "
ವೆಂದು ಮತ್ತೊಂದು ಹೆಸರು.

ಕನ್ನಡದಲ್ಲಿ ಉಪಲಬ್ಧವಿರುವ ಕಾಮಶಾಸ್ತ್ರ ಕೃತಿಗಳಲ್ಲಿ ಎರಡನೆಯದು ಈ " ಅನುಭವ ಮುಕುರ " ಮೊದಲನೆಯದು ಚಂದ್ರರಾಜನ ( ಜೀವಿತ ಕಾಲ ಸು. ೧೦೩೦ ) ಮದನ ತಿಲಕ. ಈ ಎರಡೂ ಗ್ರಂಥಗಳೂ ಛಂದಸ್ಸಿನ ದೃಷ್ಟಿಯಿಂದ ಗಣ್ಯವಾದವು.

ಜನ್ನ ಹೊಯ್ಸಳ ವೀರಬಲ್ಲಾಳನ ಆಸ್ಥಾನಕವಿ. ಯಶೋಧರ ಚರಿತೆಯನ್ನು ಓದಿಸಿ ಕೇಳಿ ಬಲ್ಲಾಳನು " ಕವಿ ಚಕ್ರವರ್ತಿ" ಬಿರುದನ್ನು ಕೊಟ್ಟಿರಬಹುದು.

ಒಬ್ಬ ಕವಿಯ ಉತ್ತರೋತ್ತರ ಬೆಳವಣಿಗೆಯ ಚಿತ್ರ ಜನ್ನನಲ್ಲಿ ಸಿಗುತ್ತದೆ. ಇಂತಹ ಮತ್ತೊಂದು ನಿದರ್ಶನ ಕನ್ನಡ ಸಾಹಿತ್ಯದಲ್ಲಿ ದುರ್ಲಭ.  ಈಕೃತಿ ಕಾಮಶಾಸ್ತ್ರವಾಗುವುದಕ್ಕಿಂತ ಮಿಗಿಲಾಗಿ ಪ್ರೇಮದರ್ಪಣವಾಗಿದೆ. ಸ್ತ್ರೀ ಮಾಹಾತ್ಮ್ಯ
ಪ್ರಕಾಶನಕ್ಕೆ ಮೀಸಲಾಗಿದೆ. ಬದುಕಿನಲ್ಲಿ ಹೆಣ್ಣಿನ ಅನಿವಾರ್ಯತೆ, ದಾಂಪತ್ಯದಲ್ಲಿ ಅವಳ ಸ್ಥಾನಮಾನಗಳು, ಅವಳ ಒಲವಿನ ಬಲ, ಅನುರಾಗದ ಆನಂದ ಮುಂತಾದುವನ್ನು ಜನ್ನ ಸಾರಿದ್ದಾನೆ.

ಶ್ರೀ ದರಹಾಸಮುಂ ವದನ ದೀಧಿತಿಯುಂ ಕರುಣಾವಲೋಕನಂ
ಮೋದಿ ಸುಕೋಮಲಾಂಗರುಚಿಯುಂ ಸಲೆ ಮೆಲ್ನಡೆ ಭೂಷಣಾದಿ ನೈ
ನಾದಮದೆಂತುಟುಜ್ಜಳಿಪುದಂತೆಸಗುತ್ಕರಣೇಂದ್ರಿಯಂಗಳಂ
ಸಾದರದಿಂದಂ ಸಮಂತು ಕೃತಸೌಖ್ಯಮನೆಯ್ದಿಸು ಹಂಸಗಾಮಿನೀ॥೧॥

ಬಿಸದಿಂ ಸೊದೆ ಕರ್ಬುನದಿಂ ವಸು ಬ
ಲ್ಬಿಸಿಲಿಂ ನೆರಳಾ ಪದದಿಂ ಸಿರಿಯಂ
ತೆಸಕಂಬಡೆದಂ ಜಡಜಜ ಭವನಂ
ರಸವೃತ್ತಿಕರಂ ಕಮಲಾನನೆಯಿಂ॥೫॥

ಮಿಸುನಿಗೆ ಕಂಪು ರತ್ನತತಿಗಿಂಪು ಸುರೂಪಿಗೆ ಸೊಂಪು ಕೋಮಲ
ಪ್ರಸರಕೆ ನುಣ್ಪು ಸದ್ರಸಕೆ ಕಂಪು ಮಹತ್ವಕ್ಕೆ ಗುಣ್ಪು ನಾಡೆ ರಾ
ಜಿಸಲತಿರಮ್ಯಮಾದವೊಲನಂತ ಗುಣಾನ್ವಿತಮಾದ ಜೀವನ
ಕ್ಕಸಿಯಳ ಬೇಟವೊಂದು ದೊರೆಕೊಂಡೊಡೆ ಸಂಪದಮಾಗಿ ತೋಱುಗುಂ॥೬॥

ಇದು ಸಮ್ಯಕ್ಪರಿಮಳಮನುಪಮಮಿಂ
ತಿದು ಸಂಪತ್ಸಮುದಯಮಿದು ಸೈಖಮಿಂ
ತಿದು ಶಯ್ಯಾಕುಳಮತಿಮೃದುತರಮೆಂ
ಬುದು ನೀನಿಲ್ಲದೆ ಬೆಱೆವುದೆ ರಮಣೀ॥೭॥

ಧನದಾಸೆಯನಭಿಮಾನಮ
ನನವಧಿಯೆನಿಪಾ ಪ್ರಪಂಚಮಂ ಪುಟ್ಟಿಸುಗುಂ
ತನುಗುಣಮೆಂಬರದೇತಕೆ
ವನಿತೆಯರಿರೆ ಬೇಱದುಂಟೇ ವಾಂಛಾವಿಷಯಂ॥೮॥

ಹೇಯಂ ಸಂಸಾರಸೌಖ್ಯಂ ತರುಣಿಯರದಱಿನತ್ಯಂತ ಬೀಭತ್ಸುಗಾದ್ಯಂ
ಮಾಯಾಮೋಹಾದಿ ದೇಹಪ್ರಕೃತಿ ತನುಗುಣಂ ಶ್ಲ್ಯಾಘ್ಯಮಲ್ತೆಂದು ನಿಚ್ಚಂ
ಧೀಯುಕ್ತರ್ ಪೇೞ್ವ ಶಾಸ್ತ್ರವ್ರಜದೊಳೆ ಬಗೆಯಲ್ ಸೌಖ್ಯಮೊಂದುಂಟು ನೋಡಲ್
ಸ್ತ್ರೀಯಿಂದಂ ಸರ್ವಸೌಖ್ಯಂ ಸಮನಿಪುದಬಲೇ ಮುಕ್ತಿಗಂ ಭಾಜನೀಯಂ॥೧೧॥

ಅೞಿವು ತಪ್ಪದು ಜಾತನಾದ ಬೞಿಕ್ಕಮೆಂದು ಪರೋಕ್ಷದೊಳ್
ತಿಳಿಯೆ ಕಾಣ್ಬುದದಾವುದುಂಟು ವೃಥಾ ಮನೋಹರಮಲ್ಲದೇಂ
ನಳಿನಲೋಚನೆ ಕಾಯ ಜೀವನುಮುಳ್ಳ ಕಾಲದೊಳಕ್ಕಱಿಂ
ಬೆಳಸು ಮೋಹರಸಂಗಳಿಂ ಕರಣೇಂದ್ರಿಯಂಗಳನಾವಗಂ ॥೧೨॥

ಪಂದೆಯಂ ಕಲಿ ಮಾೞ್ಪರಾ ಕಲಿ ಪಂದೆಯೆಂಬವೊಲಾಗಿಪರ್
ಸಂದ ಜಾನದ ಯೋಗಿಯಂ ಚಲಚಿತ್ತವೃತ್ತಿಯನೆಯ್ದಿಪರ್
ನಿಂದೆ ಪೊರ್ದದವರ್ಗೆ ತತ್ಕ್ಷಣದಿಂದೆ  ನಿಂದೆಯ ಪೊರ್ದಿಪರ್
ಚಂದಿರಾನನೆಯೆಂದೊಡಿಂದೆರಡಕ್ಕಮೋಪಳ ಕಾರಣಂ॥೧೩॥

ಅಱಿವೊಂದು ರಸಂ ಮಱವೊಂದು ರಸಂ
ಪೆಱತೇನಬಳಾಳಿಯ ಗೌಣಗಣಂ
ಕುಱುಪಿಟ್ಟುದೆ ಭಿನ್ನ ರಸ ಸ್ಫುರಣಂ
ನೆಱೆ ಬಲ್ಲೊಡೆ ನಂಬಬುಜಾಕ್ಷಿಯರಂ॥ ೧೪॥

ಆಸೆಗೆ ಮೊದಲಬಲಾವಳಿ
ಮೋಸಕ್ಕೆ ಮೊದಲ್ ಜಡತ್ವಮೆರಡುಂ ಗೆಲ್ಪೊಡೆ
ಹೂಸಕಮಿಲ್ಲದೆ ಭಜಿಪುದು
ಮೆಯ್ಸಿರಿಯುಳ್ಳವಳನಬ್ಜಸದೃಶಾನನೆಯಂ॥೧೫॥

ಎನಿತಂ ಕಲ್ತೊಡಮೆಲ್ಲಮಂ ತಿಳಿದೊಡಂ ನಾನಾಕಲಾಪ್ರೌಢಿಯಂ
ಘನಕೌಶಲ್ಯಮನಾಂತೊಡಂ ಸುಚರಿತಂ ತಾನಾದೊಡಂ ಮೋಕ್ಷ ಸಾ
ಧನಮುಂ ಸೌಖ್ಯಮುಮೆಂಬಿವರ್ಕೆ ಪೆಱತೇನೀ ದ್ವಂದ್ವಮೇ ಸಾಧನಂ
ವನಿತಾಸಂಗ ಸುಖಾಂಯಮೆಂಬಿವೆರಡುಂ ಚಂಚತ್ಸುಬಿಂಬಾಧರೇ ॥೧೬॥

ಅಱಿತುದೆ ಲೋಲಲೋಚನೆಯರಕ್ಕಱುವಂದರದಲ್ತು ಬೇವಸಂ
ಪೆಱದೆಗೆಯುತ್ತೆ ಚಿತ್ತವಬಲಾಳಿಯ ಕೋಪ ಮುಖಾನೈಭಾವದಿಂ
ಪೆಱದೆಗೆಯಿತ್ತು ಮೋಹನಮದಲ್ಲದೊಡಿಂತು ವಿರಕ್ತನಾದಪಂ
ತಱುಬಿರಲಗ್ನಿಯಂತರಗು ನಿಲ್ವುದೆ ಗಟ್ಟಿಯದಾಗಿ ಬಾಲಿಕೇ ॥೧೭॥

ಎಲ್ಲಾ ಯೌವನಮಬಲೆಯ
ರೆಲ್ಲಂದದಿನೀಕ್ಷಿಸಲ್ಕೆ ಕುಟಿಲಾನ್ವಿತೆಯರ್
ಭುಲ್ಲವೆಸಲೇತಕೆನ್ನದಿ
ರೊಲ್ಲದೊಡಾ ವಿಷಯಬದ್ಧಮಾತ್ಮದ್ರೋಹಂ ॥೧೮॥

ಇಲ್ಲದಿರ್ದೊಡಂ ಸಮಸ್ತ ಸಂಪದಂಗಳಾದೊಡಂ
ಖುಲ್ಲನಾದೊಡಂ ವಿಶುದ್ಧ ಚಿತ್ತನಾದೊಡಂ ಸದಾ
ನಿಲ್ಲದಂತನಂಗನಾದೊಡಂ ಮನೋಜ್ಞನಾದೊಡಂ
ನಲ್ಲೆಯೊಲ್ಮೆಯೊಂದೆಯುಳ್ಳೊಡಂತದೇ ಸುಖಾವಹಂ॥೨೦॥

ವರ ಸುಖದನುರೂಪಂ ಸೌಂ
ದರಿಯರ್ ತಾಂ ಪಾಪರೂಪಮುೞಿದುವುವೆಲ್ಲಂ
ಧರೆಗೆಂದೆನಲಾನಂದಂ
ಸುರತದೊಳುಂಟಿಲ್ಲದನ್ಯವೃತ್ತಿಯೊಳುಂಟೇ॥೨೧॥

ಜಪಸಮಾಧಿಯೊಳೊಂದು ನೈಮಿಷಮಾತ್ರಮೊಂದದ ಚಿತ್ತಮಂ
ವ್ಯಪಗತೇಂದ್ರಿಯ ಪಂಚಕಂಗಳನೇಕ ದೇಶವಿಲಾಸದಿಂ
ದಪಹರಿಪ್ಪ ವಿಲಾಸಿನೀಜನದಿಂದ ಸೌಖ್ಯಮನೆಯ್ದದೇಂ
ಕೃಪಣರಾದಪರೇಕೆ ಮಾನವರಂಗಜಾಗಮಕೋವಿದೇ ॥೨೪॥

ಅರವಿಂದಮಶೋಕಂ ಮಿಗೆ ಚೂತಂ
ವರ ಮಲ್ಲಿಗೆ ನೀಲೋತ್ಪಲಮೆಂದಿಂ
ತೊರೆದೈದಲರಂಬಿಂ ವಶಮಾಗರ್
ವರನಾರಿಯರಿಂದಾರೆನಿಸಿರ್ಕುಂ ॥೨೮॥

ಅಳಿಪು ಚಿಂತೆ ಸುಯ್ವ ತಾಪಮೆಯ್ದೆ ಕಾರ್ಶ್ಯಮಕ್ರಿಯಾ
ವಳಿ ವಿವೇಕಶೂನ್ಯವಕ್ಕೆ ಮಱವು ಮೂರ್ಛೆ ಮಾರಣಂ
ಗಳಿವೆನಿಪ್ಪ ಪಙ್ಕ್ಚ್ಯ ವಸ್ಥೆಗಳ್ಗೆ ಹೇತು ಪಂಚಪು
ಷ್ಪಲಸಿತಾಸ್ತ್ರಮೆಂದು ಕೋವಿದಾಳಿ ಪೇೞ್ಗಮಂಗನೇ ॥೨೯॥

ಇಂತಿವು ವಿಯೋಗಹೇತುಗ
ಳಂತಲ್ಲದೆ ಸಂಗಸೌಖ್ಯಮಂ ಪುಟ್ಟಿಸುವಾ
ಕಾಂತೆಯರ ಬಾಣದಿಂದಂ
ತಾಂ ತೋರ್ಪುದು ರಾಮಣೀಯ ತುರ್ಯಾತೀತಂ॥೩೦॥

ಶೃಂಗಾರಂ ರೌದ್ರಂ ವೀ
ರಾಂಗಂ ಬೀಭತ್ಸುವೆಂಬ ನಾಲ್ಕು ರಸಂಗ
ಳ್ಗಂಗನೆ ಹಾಸ್ಯಂ ಕರುಣಂ
ಪಿಂಗದೆಯದ್ಭುತ ಭಯಾನಕಂಗಳ್ ಜನ್ಯಂ॥೩೧॥

ಕರುಣಾರಸದಿಂ ವಾಕ್ಯ
ಯ್ಕೆ ರಸಂ ಪ್ರಣಯದಿನೆಯ್ದೆ ಮೋಹರಸಂ ಭೀ
ಕರದಿಂ ಭಕ್ತಿ ರಸಂ ಶಾಂ
ತರಸೋದ್ರೇಕತೆಯಿನಪ್ಪುದಾನಂದರಸಂ ॥೩೨॥

ಅದಱಿಂ ಪದಿಮೂಱು ರಸಾ
ಸ್ಪದಮೆನಿಸುಗು ಲೀಲೆವೆತ್ತನೇಕಕಲಾಭೇ
ದದೆ ಮೋಹಿಸುವಂಗನೆಯರ್
ಮದನಂಗೆ ಸಹಾಯಮಪ್ಪುದೇನಾಶ್ಚರ್ಯಂ॥೩೩॥

ಉಭಯಾನುರಾಗಮೇ ಮನ್ಮಥನ ರೂಪಂ
ಕ್ಷುಭಿತಾರ್ದ್ರಮಾನಸಂ ತಾನೆ ಕುಸುಮಾಸ್ತ್ರಂ
ಅಭಿಲಾಷೆಗೂಡಿದಾ ತುರ್ಮದು ತಾನೇ
ಇಭಯಾನೆ ಕೇಳ್ ದಶಾವಸ್ಥೆಯೆನಿಸಿರ್ಕುಂ ॥೩೫॥

ಪುದಿದಿರ್ದಪುದೆಂತಾ ಪರಮಾತ್ಮಂ
ಹೃದಯಾಂಗಣದೊಳ್ ಗೂಢತೆಯಿಂದಂ
ಸುದತೀ ನಿಜಕಾಂತಾಕೃತಸೌಖ್ಯಂ
ಪುದಿದಿರ್ದಪುದಾವಂ ನೆಱೆ ಕಾಣ್ಬಂ॥೪೦॥

ಅನುಭವಸಿದೂಧಮಲ್ಲದದು ದೃಶ್ಯಮದಲ್ಲದಿರ್ದೊಡೆ ರೂಹಿಡ
ಲ್ಕನುಗುಣಮಲ್ಲ ಸಾಧ್ಯಯುತಮಲ್ಲ ಸಮಸ್ತ ಜನಕ್ಕವಿಲ್ಲ ಚೇ
ತನದೊಡವಲ್ಲ ಜೀವನಳವಲ್ಲವಸಂಮತಮಿಂದಚ್ಚಿಗಂ
ಜನನುತೆ ಕೋಮಲಾಂಗಿ ನಿಜಕಾಂತೆಯರೊಲ್ಮೆಯದಾರ್ಗೆ ಮಾಡುಗುಂ ॥೪೧॥

ಒಲಿಸಿ ಸಮಂತು ಬಾಲಿಕೆಯರಂ ಕೃತಸೌಖ್ಯಮನಾಂತೆವೆಂಬರೇಂ
ಕಲಿಗಳೊ ಕಾಮಿನೀಜನದ ಸೇವೆಯನೊಲ್ದುರೆ ಮಾಡಿ ಮಾಡಿ ಮ
ಮ್ಮಲ ಮಱುಗುತ್ತುಮಿರ್ಪವರದೇಂ ಜಡಜೀವರೊ ವಿಸ್ಮಯಾತ್ಮಕಂ
ನೆಲೆಗೊಳೆ ಹಂಸನಿಲ್ಲದೊಡೆ ಜೀವನಮಿರ್ಪವೊಲಂಬುಜಾನನೇ॥೪೩॥

ಬಲ್ಲೆನೆಂದೊಲಿಸಲ್ಕೆ ಬಾರದವಜ್ಞೆಯಿಂದಿರಬಾರದಾ
ಫುಲ್ಲನೇತ್ರೆಯರಿಚ್ಚೆಗಂಡು ಮನಕ್ಕೆ ತಾಂ ಮನಮಾಗಿ ಸಂ
ದೆಲ್ಲ ಭಾವದೊಳೆಲ್ಲ ರೀತಿಯೊಳೆಲ್ಲ ಮೆಯ್ಸಿರಿಯಲ್ಲಿ ಕೂ
ರ್ತಲ್ಲಿಯಿಲ್ಲಿ ಸಮಂತದೆಲ್ಲಿಯುಮೊಂದಿರಲ್ಕೆ ಮನೋಹರಂ ॥೪೪॥

ಸುಗುಣಂ ದುರ್ಲಭಮೆಯ್ದೆ ದುರ್ಗುಣಗಣಂ ಬಾಹುಲ್ಯಮಾಗಿರ್ಪುದಾ
ಸುಗುಣಂಗೊಳ್ವೊಡೆ ದುರ್ಗುಣಪ್ರಚಯಮಂ ತಾನೊಲ್ಲದೀ ಸದ್ಗುಣಾ
ದಿಗಳಂ ದಾಂಟಿದೊಡಂತೆ ಮಾನಿನಿಯರೊಳ್ ಮಾತ್ಸರ್ಯಮಂ ಬಿಟ್ಟು ಕೇಳ್
ಸುಗುಣಂ ತಾನಿನಿಸಾದೊಡಂ ವರಿಪುದೇ ಪ್ರೌಢತ್ವಮಬ್ಜಾನನೇ ॥೪೫॥

ಗುಣಮುಳ್ಳೊಡೆ ನೇಹಂ ನೆಱೆ ನೆಗೞ್ಗುಂ
ಗುಣಮುಳ್ಳೊಡೆ ಮೋಹಾಮೃತಮೊಸರ್ಗುಂ
ಗುಣಮುಳ್ಳೊಡೆ ಸರ್ವಂ ಸುಖಮೆನಿಕುಂ
ಗುಣಮೆಂಬುದು ಮುಖ್ಯಂ ಮೃಗನಯನೇ॥೪೬॥

ಗುಣಕೊಳಗಾಗೆ ಮತ್ತೆ ಪೊರೆಯುಂಟೆ ಮನೋವ್ಯಥೆಯುಂಟೆ ಜಾಡ್ಯಮೆಂ
ಬಣಕಮದುಂಟೆಕಕ್ಕುಲತೆಯುಂಟೆ ಕಡಂಗುವುದುಂಟೆ ಭಿನ್ಮಮೆಂ
ಬೆಣಿಕೆಯದುಂಟೆ ಬಲ್ಮುನಿಸದುಂಟೆಯಹಂಕೃತಿಯುಂಟೆ ಕಾಂತೆ ಕೇಳ್
ಪ್ರಣಯಸುಖಕ್ಕೆ ಮೊತ್ತಮೊದಲಪ್ಪುದು ಸದ್ಗುಣಮಂಗಜೋಕ್ತಿಯಿಂ ॥೪೭॥

ಗುಣಮಂ ಕಲ್ತೊಡನೇಕಕಾಲಮೊಲವಿಂ ವಿದ್ವಜ್ಜನವ್ರಾತದೊಳ್
ಪ್ರಣಯಂಗೆಯ್ದಪರೆಂಬರಲ್ಪ ಗುಣಮಂ ತಾಂ ಕಲ್ವೊಡಭ್ಯಾಸವೊಂ
ದಣುಮಾತ್ರಂ ಬರೆ ಸಾಲ್ಗುಮೆಂಬರದಱಿಂ ಕಾಂತಾವಿನೋದಕ್ಕೆ ಸ
ದ್ಗುಣವೊಂದುಳ್ಳೊಡೆ ದುರ್ಗುಣಪ್ರಚಯಮೇಗಯ್ದಪುದಬ್ಜಾನನೇ ॥೪೮॥

ಗುಣಮೊಂದಾವುದು ಬೇಱದುಂಟೇ ವನಿತಾ ಪಾದಾದಿ ಕೇಶಾಂತಮಂ
ಗುಣಸಂದೋಹಮನಲ್ತೆ ಬಣ್ಣಿಸುವೊಡೊಂದೊಂದಂಗಮಂ ಬೇಱೆವೇ
ಱೆಣಿಸಲ್ಕಾ ಫಣಿರಾಜನಂತೆ ಬಹು ಜಿಹ್ವಾ ವೃಂದಮೇನುಂಟೆ ಕೇಳ್
ಪ್ರಣಯಾಲಂಕೃತ ಚಿತ್ತೆಯೆಂದೊಡಮದಿನ್ನಾಂ ಕಂಡುದಂ ಬಣ್ಣಿಪೆಂ॥೪೯॥

ತಳಮರುಣಪಲ್ಲವಂ ಸ್ಮರಶರಧಿ ಜಂಘೆಗಳ್
ಪೊಳೆವ ತೊಡೆ ಬಾಳೆಗಳ್ ನಿಱಿಗೆಗಳೆ ಕಟಿತಟಂ
ಸುಳಿಯೆ ವಳಿ ನಾಭಿ ಬಾಸೆಯಸಿತ ಫಣೀಂದ್ರನೆಂ
ದಿಳೆ ಪೊಗೞ್ವುದಾವ ಸೋಜಿಗದುಪಮೆ ಮಾನಿನೀ॥೫೦॥

ಬಟ್ಟಮೊಲೆ ಮತ್ತೇಭ ಕುಂಭಯುಗಮೆಂದುಂ
ನಿಟ್ಟಿಪೊಡೆ ಬಾಹುಯುಗಲಂ ಲತೆಗಳೆಂದುಂ
ನೆಟ್ಟನೆ ಕರಂ ಶಾಖೆಗಳ್ಗೆ ಸಮನೆಂದುಂ
ತೊಟ್ಟನುಸುರಲ್ ಕಬ್ಬಮೆಂಬರಬುಜಾಕ್ಷಿ ॥೫೧॥

ತೊಳಪ ಮುಕುರಮಂ ಕಪೋಲಮೆಂದು ದಂತಪಂಙ್ಕ್ತಿಯಂ
ತಿಳಿಯೆ ಫಲಿತದಾಡಿಮಂಗಳೆಂದು ಸೌಂದರೋಷ್ಠಮಂ
ಪೊಳೆವ ಪವಳಮೆಂದುಂ ಚಂಪಕಂ ಸುನಾಸಿಕೋಪಮೋ
ಜ್ವಳಕಮಿಳೆಯೊಳೆಂದು ಕೋವಿದಾಳಿ ಪೇೞ್ವರಂಗನೇ॥೫೨॥

ಆನನಮಂ ಚಂದಿರನೆಂ
ದಾ ನೆಯ್ದಿಲನಕ್ಷಿಗಳ್ಗೆ ಸಮಮೆಂದಳಕ
ಸ್ಥಾನಮನರೆವೆಱೆಗೆಣೆಯೆಂ
ದಾ ನೀಲಾಳಕಮನಳಿಗಳೆನೆ ಬಣ್ಣೆಸುವರ್॥೫೩॥

ಬಣ್ಣಿಸಿದೊಡಂ ಮತ್ತೆ ಬೞಿಸಂದು ಸೇವೆಯಂ
ಕಣ್ಣಱಿಯೆ ತಾಂ ಮಾಡಿದೊಡನೇಕ ಭೋಜ್ಯಮಂ
ತಿಣ್ಣಮೆನಲ್ಕುಂಡು ಬಡವಾಗಿಪ್ಪಳಾದೊಡಂ
ಪೆಣ್ಣೊಲವು ಬೇಱಪ್ಪುದೆಲೆ ಮಂದಗಾಮಿನೀ॥೫೮॥

ಪ್ರಕೃತಿಗಳಂ ಸಂಚಾರಿಯ
ನಕಳಂಕಸ್ಥಾಯಿಯಂ ಸುವಿದ್ಯೆಯನೊಲವಿಂ
ಸುಕುಮಾರತೆಯಂ ಸ್ತ್ರೀಯರ
ವಿಕೃತಿಗಳಂ ಬಲ್ಲೊಡಾತನೇ ಸರ್ವಜ್ಞಂ ॥೬೧॥

ಪುಟ್ಟದ ಜವ್ವನಕ್ಕೆ ಮೊದಲೇ ತಲೆದೋಱುವ ಲಜ್ಜೆ ರಾಗದಿಂ
ದಿಟ್ಟಿಪ ನೋಟಮಿಂಪೆಸೆವ ಮೆಲ್ನುಡಿಯಂಕುರಿತಸ್ತನಕ್ಕೆ ಮೇ
ಲಿಟ್ಟ ಸೆಱಂಗು ತಣ್ಣೆಸೆವ ಕೋಮಲದೇಹಮನನ್ಯವೃತ್ತಿಯಂ
ಪುಟ್ಟಿಪ ನೇಹದಂಗನೆಗೆ ಸೋಲ್ವುದೆ ಪುಣ್ಯಮದಂಬುಜಾನನೇ॥೬೨॥

ನಸು ಸೊಪ್ಪಾದಧರಂ ಸಡಿಲ್ವ ವಸನಂ ಕಂಪಂ ಪೊದೞ್ದೂರುಗಳ್
ಮಸಕಂಗುಂದಿದ ಘರ್ಮಬಿಂದುಗಳಣಂ ನಗ್ನತ್ವದಿಂ ನೋೞ್ಪ ಸಾ
ಲಸನೇತ್ರಂ ಪರಿತರ್ಪ ಮನೂಮಥರಸಂ ಚೆಲ್ವಾಗೆ ರತ್ಯಂತದೊಳ್
ಮಸುಳ್ದುಂ ಲಜ್ಜಿಪ ಕಾಂತೆಯಂ ಮುದದಿನಾಲಿಂಗಿಪ್ಪನೇಂ ಧನ್ಯನೋ॥೬೯॥

ಮೇಲ್ವಾಯ್ದು ಕೇಶಗ್ರಹಂಗೆಯ್ದು ತಂದಾ
ಮೇಲ್ವಾಸಿನೊಳ್ ಕೂಂಕಿ ತನ್ನುಬ್ಬಿನಂದಂ
ಚೆಲ್ವಾಗೆ ನಲ್ವೊಂದು ತಾಂಬೂಲಮಿತ್ತುಂ
ಸಾಲ್ವನ್ನೆಗಂ ಕೂಡೆ ಸತ್ಪ್ರೌಢಿಯಕ್ಕುಂ॥೭೦॥

ತತ್ಸಮಯೋಚಿತ ಗುಣಗಣಮಂ
ಚಿತ್ತೇಶ್ವರನೊಳ್ ಮೆಱೆದೊಡಮನಿಶಂ
ಉತ್ತುಂಗಕುಚೇ ರುಚಿರಮೆನಿಕ್ಕುಂ
ಮತ್ತೆಲ್ಲಾದೊಡಮದನಂತಫಲಂ ॥೭೬॥

ಕಾತರಿಸಿ ಕರಗಿ ಕಂಪಂಗೊಂಡು ಮತ್ತಂ
ಭೀತಿಗೊಳುತವನ ಮೆಯ್ಸೋಂಕಿಂಗೆ ನಿಚ್ಚಂ
ಚೇತನಮನೊಸೆದು ಮಾಡುತ್ತಿರ್ಪೊಡಂ ತಾಂ
ಭೂತಲದೊಳವಳ ಸಂಗಂ ದಿವ್ಯ ರಮ್ಯಂ ॥೭೭॥

ನುಡಿದಂತೆ ನಡೆವುದೊಳ್ಳಿತು
ನುಡಿಯದೆ ತಾಂ ನಡೆದು ತೋರ್ಪುದೊಳ್ಳಿತು ನೀಂ ಕೇಳ್
ನಡೆಯದೆ ನುಡಿಯಂ ಮೆಱೆವುದು
ಪೊಡವಿಯೊಳತಿ ಹೀನವೃತ್ತಿ ಮೃಗಮದಗಂಧೀ॥೮೩॥

ಮಾನಿನಿಯರೊಳಗನಱಿವೊಡೆ
ದಾನವಮಥನಂಗೆ ಬಾರದದಱಿಂ ಪುರುಷರ್
ಮಾನಿನಿಯರ ವಶಮೆಂತೆನೆ
ತಾನೇ ಘೃತಮಾಗಲಾರ್ಪುದೇ ನವನೀತಂ॥೮೪॥

ಮುಳಿಸು ವೃಥಾಭಿಮಾನಮನುರಾಗಮನಂಗವಿಕಾರಮುಬ್ಬೆಗಂ
ಕಲುಷತೆ ಡಂಬನಂ ಕುಟಿರವೃತ್ತಿಯಸೂಯೆ ಪರಾಙ್ಮುಖತ್ವಮೆಂ
ಬಿಳೆಯೊಳಗುಳ್ಳ ದುರ್ಜನ ಗುಣಂಗಳೆ ನಲ್ಮೆಗೆ ಕೇಡ ತಪ್ಪುದಾ
ಕುಳವೆನಿಪಂತದಂ ಜಯಿಸುವಂಗನೆ ಸದ್ವಧುವಂಬುಜಾನನೇ॥೮೬॥

ಒಡಲಾದತ್ತುಱೆ ಪೂರ್ವಕರ್ಮವಶದಿಂ ನಾನಾವಿಚಾರಂಗಳಿಂ
ನಡೆದತ್ತುನ್ಮದ ಬಾಲ್ಯಯೌವನ ಮಹದ್ವೃದ್ಧತ್ವಮೆಂದಂಜಿ ಜಂ
ಜಡದೊಳ್ ಬೀೞ್ವುದು ಪೋದುದೆನ್ನದವೊಲೀ ಸಂಸಾರದೊಳ್ ಜೀವನಂ
ಕಡುಚೆಲ್ವಾಗಿರೆ ನಚ್ಚುವನ್ನನೆ ವರಂ ಸ್ತ್ರೀರತ್ನಮಬ್ಜಾನನೇ॥೮೭॥

ಬಲ್ಲವನೆಂತಾದೊಡಮಾ
ವಲ್ಲಭೆಯರನೊಲಿಸಲಾರ್ಪನೆಂತೆನೆ ಜಗದೊಳ್
ಕಲ್ಲಲ್ತೇ ಶಶಿಕಾಂತಂ
ಝಲ್ಲಿಸುವುದು ಚಂದ್ರಕಿರಣಮಂ ತಾಗಲೊಡಂ ॥೯೦॥

ನೋಟದ ಬೆಡಂಗಿಂದೆ ಕೂರ್ಪವಳಿವಳ್ ಮಾ
ತಾಟದ ಮಹಾಲೀಲೆಗೊಲ್ವಳಿವಳ್ ಸಂ
ದೂಟದ ರಸಕಾಕಾಸೆಗೆಯ್ವಳನಿತಂ ಕೇಳ್
ಚಾಟುಕಿರಣ ಪ್ರಾಪ್ತಿಯಿಂದಱಿಯವೇೞ್ಕುಂ ॥೯೧॥

ಇಂಬಱಿದು ಕೈದುಡುಕಿಯಿಚ್ಚೆಯಱಿದಾದಂ
ಬೆಂಬಿಡಿದು ಮೆಯ್ವೞಿಗೆ ಬಂದೊಡನೆ ಹೊಯ್ದಾ
ಚುಂಬನಮನಿತ್ತು ಭಯಮಂ ಕಳೆದು ಕೂಡಲ್
ಕಂಬುನಿಭಕಂಠೆಯೊಳಗಾಗದವರುಂಟೇ ॥೯೨॥

ವರವಜ್ರಮಂ ವಜ್ರದಿಂ ಭೇದಿಪಂತಾ
ವರಮಲ್ಲದುದ್ರೇಕಿವೆಣ್ಗಳ್ಗೆ ನಿಚ್ಚಂ
ಸ್ಮರಶಾಸ್ತ್ರಮಂ ಬಿಟ್ಟು ಕಾರುಣ್ಯದಿಂದಂ
ನೆರೆಯಲ್ ಕರಂ ಸೋಲ್ವರಿಂದೀವರಾಕ್ಷೀ ॥೯೬॥

ಮಾತಿಂಗೆ ಕೆಲವು ಕಾಂತೆಯರೋವರನಿಶಂ
ಗೀತಕ್ಕೆ ಕೆಲವೈ ಕೋವಿದೆಯರ್ಕಳೆಳಪರ್
ನೂತಾನುಭವಸುಸಂಗಕೆ ಕೂರ್ಪರೊಲವಿಂ
ಪ್ರೀತರ್ಗೆ ಕೆಲವುಬಾಲೆಯರಿಂತು ಧರೆಯೊಳ್॥೯೭॥

ಸವಿ ಸಖರಿಂ ಜುಗುಪ್ಸೆ ಸಖರಿಂ ದೃಢಮೈತ್ರಮದಾ ಸಖಾಳಿಯಿಂ
ನವವಿಧಯೋಗಮಾ ಸಖರಿನಂತು ವಿಯೋಗಮದಾ ಸಖಾಳಿಯಿಂ
ಭವದನುರಾಗಮಾ ಸಖರಿನುಜ್ವಲದುಃಖಮುಮೆಯ್ದೆ ಸಖ್ಯರಿಂ
ಪ್ರವರಶಶಾಂಕವಕ್ತ್ರೆಯದಱಿಂ ಸಖರಿಲ್ಲದೊದುಂಟೆ ಮೋಹನಂ॥೧೦೧॥

ಏಕೀಕೃತಸ್ನೇಹಕೆ ಬೇಡವೆಂದುಂ
ರಾಕಾಬ್ಜವಕ್ತ್ರೇ ಸಖರೆಂ ಕೃತ್ಯಂ
ಲೋಕಾನ್ವಿತಸ್ನೇಹಕೆ ಮುಖ್ಯಮಾಗಲ್
ಬೇಕಾದುದಾ ಸ್ನೇಹಿತರೆಂಬ ಕೃತ್ಯಂ॥೧೦೨॥

ನೋಯಿಸಿ ಸವಿಯಂ ಪುಟ್ಟಿಪೊ
ಡಾಯಸಮಾಗಿರೆಯುಂ ತಿಳಿಯಲುಪಾ
ದೇಯಮೆ ತನುವಱಿಯದೊಂದುವ
ಸಾಯುಜ್ಯಂ ಜಗದೊಳುಂಟೆ ಕಮಲದಳಾಕ್ಷೀ॥೧೦೬॥

ವರ ಜನ್ನ ಕವೀಶ್ವರನಿಂ
ಸ್ಮರತಂತ್ರಂ ಪ್ರೌಢಿಗೊರೆ ಮಿಗಿಲ್ ತಾನೆನೆ ಸಂ
ದುರುತರದನುಭವ ಮುಕುರಂ
ಸ್ಥಿರಮಿರಿಸುಗೆ ಚಂದ್ರತಾರೆಯುಳ್ಳನ್ನೆವರಂ॥೧೧೦॥

ಸಂಪಾದಕರು:
ಪ್ರೊ. ಸಿ. ಪಿ. ಕೃಷ್ಣಕುಮಾರ್.
ಪ್ರಕಾಶಕರು,
ಪ್ರಸಾರಾಂಗ,
ಕನ್ನಡ ವಿಶ್ವವಿದ್ಯಾಲಯ,  
ಹಂಪಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ