ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಮೇ 23, 2020

ಆಚಣ್ಣನ ವರ್ಧಮಾನ ಪುರಾಣಂ

ವರ್ಧಮಾನ ಪುರಾಣಂ
ಆಚಣ್ಣ 

ವರ್ಧಮಾನ ಪುರಾಣಂ ಮತ್ತು ಶ್ರೀಪದಾಶೀತಿ ಈ ಕೃತಿಗಳ ಕರ್ತೃ ಆಚಣ್ಣ. ಇವನ ತಂದೆ ಕೇಶಿರಾಜ. ಕೇಶಿರಾಜನು ಕಲಚುರ್ಯ ರಾಜ ಆಹವಮಲ್ಲನಲ್ಲಿ ಮಹಾಪ್ರಧಾನನಾಗಿದ್ದ. ಈತನ ತಾಯಿ ಮಲ್ಲಾಂಬಿಕೆ. ಶಂಕ ಈತನ ಸಹೋದರ. ಶ್ರೀನಂದಿಮುನೀಂದ್ರನು ಆಚಣ್ಣನ ಗುರು. ಆಚಣ್ಣನ ಕಾಲ ಕ್ರಿ. ಶ. ೧೧೯೫. 

ಪ್ರಥಮಾಶ್ವಾಸಂ 
ವಿಶಾಖಭೂತಿಲೀಲೋದಯ ವರ್ಣನಂ. 

ಶಾ॥ ಶ್ರೀಮಚ್ಚಾಮರ ಸಿಂಹವಿಷ್ಟರ ವರಚ್ಛತ್ತತ್ರಯಾಶೋಕ ದಿ 
ವ್ಯಾಮೇಯಧ್ವನಿ ಪುಷ್ಪವೃಷ್ಟಿ ಸುರಭೇರೀ ಭೂರಿ ಭಾಮಂಡಳ 
ಸ್ತೋಮಂ ಭಾಸ್ವದನಂತಬೋಧ ಬಳ ದೃಕ್ಸೌಖ್ಯತ್ವ ಲಕ್ಷ್ಮೀ ಸಮು 
ದ್ದಾಮಂ ಮಾೞ್ಕೆಮಗೞ್ಕಱಿಂದೆ ಶುಭಮಂ ಶ್ರೀವರ್ಧಮಾನಂ ಜಿನಂ ॥೧॥ 

ಚಂ॥ ಅತನುವನೋವದಪ್ಪಳಿಸಿ ಮೋಹನಸಾಹಸಮಂ ಕಳಲ್ಚಿ ದುಃ 
ಕೃತ ಖಳಸೇನೆಯಂ ತವಿಸಿ ವಿಶ್ವಗುಣೋಜ್ಜ್ವಳ ರತ್ನಕೋಶದೀ 
ಶತೆವಡೆದಪ್ರತರ್ಕ್ಯಮಹಿಮೋದಯಮಂ ತಳೆದಿರ್ದ ಸಿದ್ಧಸಂ 
ತತಿ ನಮಗೀಗೆ ಸಿದ್ಧಿರಮಣೀ ರಮಣೀಯನಿವಾಸ ವಾಸಮಂ ॥೨॥ 

ಮ॥ ಸ್ರ॥ ವರಪಂಚಾಚಾರ ಚಂಚತ್ಕುಳಿಸದೆ ಮದನೋದ್ಯತ್ಪ್ರತಾಪೋಚ್ಚಧಾತ್ರೀ 
ಧರಮಂ ಮುಂನುರ್ಚುನೂಱಪ್ಪಿನಮೊಡೆದು ತಪಃಪ್ರಾಜ್ಯಸಾಮ್ರಾಜ್ಯಲಕ್ಷ್ಮೀ 
ಪರಿರಂಭ ಪ್ರಾಪ್ತಿಯಿಂದಂ ಪ್ರತಿದಿನಮಧಿಕಾನಂದಮಂ ತಾಳ್ದಿದಾಶಾಂ 
ಬರಮುಖ್ಯರ್ ಮಾೞ್ಕೆ ಶುದ್ಧಾಚರಣಮನೆಮಗಾಚಾರ್ಯರಾಚಾರವರ್ಯರ್॥೩॥ 

ಇದು ಸಂಸಾರಸ್ವರೂಪಂ ಪರಿಕಿಪೊಡಿದು ಮುಕ್ತಿಸ್ವರೂಪಂ ದಲೆಂದ
ಗ್ಗದ ಸತ್ಯಾಧಿಷ್ಠಿತ ಶ್ರೀಜಿನವಚನದೊಳಿರ್ದಂದಮಂ ಪ್ರೀತಿಯಿಂ ತ 
ಪ್ಪದೆ ನಾನಾಜೀವಜಾಳಕ್ಕನುದಿನಮುಪದೇಶಂಗೆಯ್ಯುತಿರ್ಪ ಸೌಜ 
ನ್ಯದಯಾಂಭೋರಾಶಿಗಳ್ ಸುಶ್ರುತಜಳಧಿಗಳಂ ಮಾೞ್ಕಪಾಧ್ಯಾಯರೆಮ್ಮಂ ॥೪॥ 

ಚಂ॥ ಸಮರಸಭಾವಭಾವನೆಯೆ ಭಾವಮನಾವರಿಸಿತ್ತು ಮತ್ತೆ ಸಂ 
ಯಮಗುಣಶೀಲಸಂತತಿ ಸಮಂತತಿ ಶೋಭೆಯನಾಂತುದಿನ್ನರಾ 
ರಮಮ ಸಮಸ್ತ ಭೂತಳದೊಳೆಂಬ ಸಮಾಖ್ಯೆಗೆ ಸಂದ ಸಾಧುಗಳ್ 
ವಿಮಳಯಶೋನಿಧಾನರೆಮಗೀಗೆ ನಿಜೋತ್ತಮಸಾಧುವೃತ್ತಿಯಂ ॥೫॥ 

ಪರಮ ಜಿನೇಂದ್ರಬೋಧ ಹಿಮವನ್ನಗಜಾತೆಯನೇಕ ಭಂಗಭಂ 
ಗುರವಿಸರತ್ತರಂಗೆಯ ನಿಯೋಗ ಸಮುಜ್ಜ್ವಳಫೇನ ಸಂತತ 
ಸ್ಫುರಿತ ನಯಪ್ರಮಾಣ ಘನಘೋಷ ಲಸದ್ವಚನಾಮೃತಾಂಬು ಸ 
ದ್ಭರಿತೆ ಸರಸ್ವತೀಸುರತರಂಗಿಣಿ ಮನ್ಮತೀಗೀಗೆ ಸಿದ್ಧಿಯಂ॥೬॥ 

ಶ್ರೀ ಸಿದ್ಧಾಯಿನಿ ಯಕ್ಷಿ ಸು 
ರಾಸುರ ನರಖಚರನಿಚಯಕೀರ್ತಿತೆ ಭುವನೋ 
ದ್ಭಾಸಿತೆ ಮತ್ಕೃತಿಗತುಳ ವಿ 
ಳಾಸ ವಿಕಾಸಂಗಳಂ ನಿಮಿರ್ಚುಗೆ ಸತತಂ ॥೭॥ 

ಧರ್ಮವಿರೋಧಿಗಳಂ ದು 
ಷ್ಕರ್ಮಪಯೋಧಿಗಳನಧಿಕಜನತಾಧಿಗಳಂ 
ನಿರ್ಮೂಳಿಸುಗೆ ಗಜೇಂದ್ರಂ 
ಪೆರ್ಮೆಯ ಯಕ್ಷಂ ಜಿನೇಂದ್ರಮತಕೃತಿ ಪಕ್ಷಂ ॥೮॥ 

ಗೌತಮನಂ ಗತನತಜನ 
ತಾತಮನಂ ಸಕಲಲೋಕವರ್ತಿತ ಕೀರ್ತಿ 
ಶ್ರೀತಮನಂ ಬಂಧಿಸುವೆಂ 
ಪ್ರೀತಮನಂನಿಖಿಲ ಗಣಧರೌಘೋತ್ತಮನಂ॥೯॥ 

ಶರಣಕ್ಕೆಮಗೆಂದುಂ ಭಾ 
ಸುರತರ ಭೂತಬಲಿ ಪುಷ್ಪದಂತಾಖ್ಯರ ಸ 
ಚ್ಚರಣಸರಸಿರುಹಯುಗಳಂ 
ವರಭವ್ಯಮಧುವ್ರತೋತ್ಕರ ಪ್ರೀತಿಕರಂ ॥೧೦॥ 

ಉ॥ ಶ್ರೀವಿಜಯಂ ಗಜಾಂಕುಶನುದಾತ್ತಯಶಂ ಗುಣವರ್ಮನಾ ಜಗ 
ತ್ಪಾವನ ನಾಗವರ್ಮನಸಗಂ ರಸಿಕಾಗ್ರಣಿ ಹಂಪದೇವನಾ 
ಭಾವಕ ಚಕ್ರಿ ಹೊನ್ನಿಗನಿಳಾನುತ ರನ್ನಿಗನಗ್ಗದಗ್ಗಳಂ 
ಧೀವಿಭು ಬೊಪ್ಪನೆಂಬ ಕವಿದರ್ಶಕರಿಂದೆಸೆದತ್ತು ಭೂತಳಂ ॥೧೮॥ 

ಮ॥ ಸದಳಂಕಾರದಾಗರಮುದ್ಘರಸಭಾವಾನೀಕದೋಕಂ ಸದ 
ರ್ಥದ ಸಾರ್ಥಂ ವರಶಬ್ದವೃಂದದ ವಿರಾಜನ್ಮಂದಿರಂ ನಾಡೆಯುಂ 
ಮೃದುಸಂದರ್ಭದ ಗರ್ಭಮಿಂತಿದೆನಿಸಲ್ ಸಾಲ್ದಿರ್ದ ಕಾವ್ಯಂ ಸಭಾ 
ಸದರಂತಃಕರಣಕ್ಕದೇಂ ಕಱೆಯದೇ ಸೌಖ್ಯಾಮೃತಾಸಾರಮಂ ॥೨೧॥ 

ಶಾ॥ ಭಾರದ್ವಾಜ ಪವಿತ್ರಗೋತ್ರತಿಳಕಂ ಶ್ರೀಕೇಶೀರಾಜಾತ್ಮಜಂ 
ಸಾರೋದಾರ ಪವಿತ್ರತಾದಿ ಗುಣಭೃನ್ಮಲ್ಲಾಂಬಿಕಾನಂದನಂ 
ತಾರೇಶೋಜ್ವಳ ಕೀರ್ತಿ ಜೈನರುಚಿ ವಾಣೀವಲ್ಲಭ ನಿರ್ಮಳಾ 
ಚಾರಂ ನಿರ್ಮಿಸಿ ಪೆರ್ಮೆವೆತ್ತನೊಲವಿಂದಾಚಣ್ಣನೀ ಧಾತ್ರಿಯೊಳ್॥೨೪॥

ಭರತಮಹೀಕಾಂತೆಯ ಭಾ 
ಸುರಮುಖಸರಸೀರುಹಮೆನಿಸಿ ರಂಜಿಸುತಿರ್ಕುಂ 
ವರವಿಷಯಂ ಮಗಧಾಖ್ಯಂ 
ಸ್ಮರವಿಷಯಂ ಸಕಳಮಂಗಳೋತ್ಕರ ವಿಷಯಂ॥೩೨ ॥

ಮ॥ ಅದನೇವಣ್ಣಿಪೆನೆಲ್ಲಿನೋಡಿದೊಡಮುದ್ಯಾನಂಗಳೆತ್ತೆತ್ತ ನೋ 
ಡಿದೊಡಂ ತಣ್ಬುಳಿಲೆಲ್ಲಿನೋಡಿದೊಡಮಾವಾಳಂಗಳೆತ್ತೆತ್ತ ನೋ 
ಡಿದೊಡಂ ಪೂಗೊಳನೆಲ್ಲಿ ನೋಡಿದೊಡಮಿಕ್ಷುಕ್ಷೇತ್ರಮೆತ್ತೆತ್ತ ನೋ 
ಡಿದೊಡಂ ಶಾಲಿವನಂಗಳಿಲ್ಲದ ನೆಲಂ ಬೇಱಿಲ್ಲ ಕಾಲೂಱಿರಲ್॥೩೩॥ 

ಜನಪದದ ಚೆಲ್ವನೀಕ್ಷಿಪೆ 
ನೆನುತೆಯ್ತಂದಮೃತವಾರ್ಧ್ಧಿ ಬಹುಮೈಖದಿಂ ಭೋ 
ರೆನೆ ಪರಿಯುತ್ತಿರ್ದಪುದೆಂ 
ಬಿನಮಮಳಿನ ನದಿಗಳೆಸೆವುವದಱೊಳ್ ಪಲವುಂ॥೩೫॥ 

ಅಮರಾವತಿ ತದ್ಭೂತಳ 
ದ ಮೇಲೆ ಸಲ್ಲೀಲೆವೆತ್ತು ಪಲವುಂ ರೂಪಿಂ 
ದಮೆ ನಿಂದುದೆಂಬ ತೆಱದಿಂ 
ದಮೆಸೆವುವಂತಲ್ಲಿ ಸಂತತಂ ನಗರಂಗಳ್ ॥೩೬॥ 

ಧಾರಿಣಿಗೆ ದಿವಂಗಳನಾ 
ಧಾರಂಗಳ್ ಗಗನದಿಂದೆ ಬಿೞ್ದುವೆನಿಪ್ಪಂ
ತಾ ರುಚಿರ ದೇಶದೂರ್ಗಳ್ 
ಭೂರಿತರ ಶ್ರೀಯನಾಂತು ನಿಂದುವು ಪಲವುಂ ॥೩೭॥ 

ಚಂ॥ ಕಳಶಮನಾಗಳೆತ್ತುವುದುಮಾರ್ದ್ದಿಸೆ ತೋಳ್ದೆಱೆಪಿಂ ಮನೋಜನಾ 
ಗಳೆ ಜಳಧಾರೆಗೆತ್ತು ನಖದೀಧಿತಿರೇಖೆಗೆ ಕೆಯ್ಯನೊಡ್ಡುವಾ 
ಕುಳತೆಯನಾ ಪ್ರಪಾಂಗನೆಯರೀಕ್ಷಿಸಿ ಪಾಂಥರಮೇಲೆ ಲೋಚನಾಂ 
ಚಳದೊಳೆ ಬೀಸುತುಂ ತಳಿವರುಚ್ಚಳಿತ ಸ್ಮಿತವಾರಿಬಿಂದುವಂ ॥೩೯॥ 

ಕೂರೆಲೆಗಳ ಬಾಯ್ಧಾರೆಗೆ 
ಕೋರೈಸಿ ಮುಸುಂಕಿದಂತೆ ಪರಿಕಾಲ್ಗಳ ಪಂ 
ಕೇರುಹ ರಜದೊಳ್ ಪೊರೆದು ಸ 
ಮೀರಂ ನವಗಂಧಶಾಳಿ ವನದೊಳ್ ಸುೞಿಗುಂ ॥೪೧॥ 

ಚಂ॥ ಮಿಳಿರ್ವೆಲೆಪಕ್ಕದಂತರುಣಿಮತ್ತ್ವದಿನೊಳ್ದೆನೆ ಕುಂಡದಂತೆ ಕ 
ಣ್ಗೊಳೆ ಗಿಳಿವೆಣ್ಬೊಲಿರ್ದ ಕಳಮಸ್ತಬಕಾಗ್ರಮನೇಱಿ ಪಾಲುಣ 
ಲ್ಕೆಳಸುವರಾಜಕೀರಮನಿದೋಪವಳ್ ನೆರೆದಪ್ಪುದಾಗದೀ 
ಗಿಳಿಯನಗಲ್ಚಲೆಂದಬಲೆ ಪಾಮರಿ ಸೋಯದೆ ನೋಡಿ ಪಿಂಗುವಳ್ ॥೪೨॥ 

ಮ॥ ಎಲರ್ವೊಯ್ಲಿಂದೊಸರ್ವಿಕ್ಷುಕಾಂಡರಸದಿಂ ನಾಂದಿಕ್ಕಿ ತಮ್ಮೊಳ್ ಪಳಂ 
ಚಲೆವೊಳ್ಗೊಂಚಲ ಕಾಯೊಳುರ್ಕುವೆಳೆನೀರಿಂದಂ ಬನಂಗಳ್ಗುಗುಂ 
ದಲೆ ನೀರೂಟಮಿದೇಕೆ ಕೆಮ್ಮನೆ ತೊಳಲ್ವುತ್ತಿರ್ಪರಿಂತೆಮ್ಮ ನೆಂ 
ದುಲಿವಂತಿರ್ಪುವುರಾಟಣಂಗಳಸಕೃದ್ವ್ಯೂಢಾಕ್ಷ ಚೀತ್ಕಾರದಿಂ॥೪೩॥

ಮ॥ ವರಯೋಷಿಜ್ಜನಮಂ ಪುರಂ ಪುರಮನೊಳ್ಪೊಂಗೋಂಟೆ ಪೊಂಗೋಂಟೆಯಂ 
ತರುಷಂಡಂ ತರುಷಂಡಮಂ ಬಹುತಟಾಂಕಂಗಳ್ ತಟಾಂಕಂಗಳಂ 
ಪರಿಕಾಲ್ಗಳ್ ಪರಿಕಾಲ್ಗಳಂ ಬೆಳೆದ ಕೆಯ್ಗಳ್ ಕೆಯ್ಗಳಂ ಸುತ್ತಿ ಪಾ 
ಮರಿಯರ್ ತಳ್ತೊಳಕೆಯ್ಯೆ ಚೆಲ್ವನೊಳಕೊಂಡಿರ್ಕುಂ ತದುರ್ವೀತಳಂ॥೫೨॥ 

ಫಳಿತ ಪನಸಾಮ್ರ ಸನ್ಮಾ 
ತುಳಂಗ ದಾಡಿಮ ತಮಾಳ ಪಾಟಳ ಕದಳೀ 
ತಿಳಕಾಶೋಕಾನೋಕಹ 
ಕುಳಂಗಳಿಂದೆಸೆವುದದಱ ಬಹಿರುದ್ಯಾನಂ೫೩॥ 

ದಿಕ್ಕಾಮಿನಿಯರ್ ಕಂಡಂ 
ದಕ್ಕುಂ ಕಣ್ಣೆಂಜಲೆಂದು ಧಾತ್ರೀಪುರಶ್ರೀ 
ಗಿಕ್ಕಿದಪಚ್ಚೆಯ ಜವನಿಕೆ 
ಯಕ್ಕುಮಿದೆನಿಸಿದುದು ಬಳಸಿದುಪವನಷಂಡಂ॥೫೪॥ 

ಚಂ॥ ಸರಸಫಳಾಳಿಭಾರಮನುರಾಗಸಮನ್ವಿತ ಕೀರಮಾತ್ತ ಬಂ 
ಧುರ ಪಿಕವಾರಮುದ್ಘಮಧುಲಿಟ್ಪರಿವಾರಮಶೇಷ ಸತ್ಕವೀ 
ಶ್ವರನುತಿಸಾರಮಾಶ್ರಿತ ವಿಯೋಗಿ ಕುಠಾರಮನಾರತಂಮನೋ 
ಹರಮೆನಿಕುಂ ವಿಶಾಲ ಸಹಕಾರಮಹೀರುಹಮಾವನಾಂತದೊಳ್ ॥೫೫॥ 

ನೆನೆದು ತನತ್ತು ಪರ್ವುಗೆಗೆ ಮುನ್ನೆಡೇಗೊಟ್ಟುಪಕಾರಮಂ ದಿನೇ 
ಶನ ಘನತೀವ್ರರಶ್ಮಿನಿಚಯಂಗಳಿನಾದಮೆ ಬೆಂದ ತನ್ನಭೋಂ 
ಗನೆಯತಿತಾಪಮಂ ಕಿಡಿಸಲೆಂದು ಸುಧಾಕಳಶಂಗಳಂ ವನಾಂ 
ಗನೆ ಕೊಡುವಂತೆ ಕಣ್ಗೆಸೆವುವಲ್ಲಿ ಫಳಾವಳಿ ನಾಳಿಕೇರದಾ॥೫೬॥

ಬಿಸುಗದಿರನ ಬೆಂಕೆಗೆ ಸೈ 
ರಿಸದೆ ನಭೋಂಗಣದಿನಿೞಿದು ತಾರಗೆಗಳ್ ಪುಂ 
ಜಿಸಿದಾ ಮಣಿಗಾಱವಸರದ 
ಪೊಸಮುತ್ತಿನ ನೆವದಿನಿರ್ಪ್ಪುವಿರುಳಪ್ಪಿನೆಗಂ॥೫೯॥ 

ಅಭಿಮಾನಿ ಸತ್ಯಭಾಷಣ 
ನಭಿಯಾತಿವಿಭೀಷಣಂ ಯಶೋಭೂಷಣನ 
ಸ್ತಭಯಂ ನಯವಿಕ್ರಮಿ ವಿ 
ಶ್ವಭೂತಿ ವಿಶ್ವಂಭರಾಧಿಪತಿಯದನಾಳ್ವಂ ॥೭೭॥ 

ಆ ವಿಶ್ವಭೂತಿ ಭೂಪನ 
ದೇವಿ ವಲಂ ಜೈನೆಯೆಂಬಳವಧು ವಿಬುಧ 
ವ್ಯಾವರ್ಣನೀಯರೂಪ ಗು 
ಣಾವಳಿಗಳ ಸಿರಿಯ ಸೊಬಗಿನಾಗರಮೆನಿಪಳ್॥೮೫॥ 

ಚಂ॥ ನಗೆಯಲರ್ದಿರ್ದ ಪೂವೆಸೆವ ಕಣ್ಬೆಳಗಂತದು ಜೊನ್ನಮಾವಗಂ 
ಸೊಗಯಿಪ ಕಮ್ಮನಪ್ಪುಸಿರೆ ತೆಂಕಣತಣ್ಣೆಲರಿಂಚರಂ ಕರಂ 
ಬಗೆಗೊಳಿಸಿರ್ದ ಕೋಗಿಲೆಯ ನುಣ್ದನಿಯಾಗೆ ಜಗಜ್ಜಯಕ್ಕೆ ತಾಂ 
ಮಿಗೆ ನೆರಮೆಂಬನಾ ಸತಿಯ ಜವ್ವನಮೆಂಬ ವಸಂತಮಂ ಸ್ಮರಂ ॥೮೬॥ 

ಆ ಲಲನೆಯ ರೂಪದು ಜನ 
ತಾಲೋಚನಮಧುಪತತಿಗೆ ಮಂದಾರದ ಪೂ 
ಮಾಲೆಯವೋಲನವರತಂ
ಲೀಲೆಯನಾಗಿಸುವೈದೆಂದೊಡಾರ್ ಪೊಗೞದವರ್॥೮೭॥ 

ತನಗಿಂದ್ರಾಣಿಯೆ ಸರಿ ಗೋ 
ಮಿನಿಯೆ ಸಮಾನಂ ಸರಸ್ವತೀದೇವಿಯೆ ನೆ  
ಟ್ಟೆ ಪಡಿ ರತಿರಮಣಿಯೆ ತೊಣೆ 
ಯೆನೆ ರೂಢಿಯನಾಂತ ವಧುವನಿನ್ನೇವೊಗೞ್ವೆಂ ॥೮೮॥

ರತಿಪತಿಯುಂ ರತಿಯುಂ ಸುರ 
ಪತಿಯುಂ ತತ್ಸತಿಯುಮಿರ್ಪವೊಲಂತಾ ಭೂ 
ಪತಿಯುಂ ತತ್ಸುದತಿಯುಮು
ನ್ನತಿವಡೆದತಿಶಯಸುಖಾನ್ವಿತರ್ ಚಿರಮಿರ್ಪರ್॥೮೯॥

ಉ॥ ಇಂದುಗೆ ಪಾರಿಜಾತವೊಡವುಟ್ಟಿದವೋಲೊಡವುಟ್ಟಿದಂ ಮಹಾ 
ನಂದದೆ ವಿಶ್ವಭೂತಿಗೆ ವಿವೇಕಭೂತಿ ವಿಶಾಖಭೂತಿಯೆಂ 
ಬಂ ದಿನಪಪ್ರತಾಪನಬಳಾಜನಲೋಚನೆ ರಮ್ಯರೂಪನ 
ಸ್ಪಂದಿತ ಧೈರ್ಯರ್ಸಂಪದನರಾತಿನೃಪಾಳಕಜಾಳ ಕಂದಪಂ ॥೯೦॥ 

ಆ ವಿಶ್ವಭೂತಿಗಂ ಜೈ 
ನೀವನಿತೆಗಮಂದು ವಿಶ್ವನಂದಿಕುಮಾರಂ 
ಭಾವಭವಭಾಸುರಾಂಗಂ 
ಭೂವಿನುತಗಭೀರನಾದನಾತ್ಮಜನಾದಂ॥೯೨॥ 

ಚಂ॥ ಪಡಿಯಱನೊರ್ವನುರ್ವಿದ ಜರಾರುಜೆಯಿಂ ಶ್ಲಥ ಜೀರ್ಣಮಪ್ಪೊಡಲ್ 
ಕೆಡೆವವೊಲಾಗೆ ಬಾಗಿ ಮಿಗೆ ಕೆಮ್ಮಿ ಬೞಲ್ದಡಿಗೊರ್ಮೆ ನಿಂದು ಬಿ 
ೞ್ದೆಡೆಯಿದು ತನ್ನ ಮುನ್ನೆಸೆವ ಜವ್ವನಮೆಂದಱಸುತ್ತುಮಿರ್ಪವೋಲ್ 
ನಡುಗುತುಮಾನತೋನ್ನತಮುಖಂ ಬರುತಿರ್ಪುದುಮಾಗಳಾತನಂ॥೯೬॥ 

ಎಮೆಯಿಕ್ಕದೆ ನೀಡುಂ ನೋ
ಡಿ ಮನದೊಳಿಂತೆಂದನಕಟ ಪಂಚೇಂದ್ರಿಯ ಸೌ 
ಖ್ಯಮನಭಿಲಾಷಿಪ ಜೀವಂ 
ಭ್ರಮಿಯಿಸುಗುಮಪಾರ ಘೋರ ಜನ್ಮಾಟಿಯೊಳ್॥೯೭॥ 

ಉರಗನ ದಾಡೆಯೊಳಮೃತಮ 
ನುರಿವಗ್ನಿಯೊಳಧಿಕ ಶೈತ್ಯಮಂ ಮೂರ್ಖಸಭಾಂ 
ತರದೊಳ್ ವಿವೇಕಮಂ ಭವ 
ಶರನಿಧಿಯೊಳ್ ಸಾರಸುಖಮನೇನಱಸುವುದೇ॥೧೦೧॥

ಶಾ॥ ಎಂತೆಂತೀಕ್ಷಿಪೊಡಂ ಸಮಂತು ವಿವಿಧ ಕ್ಲೇಶಂಗಳಂ ಜಂತುಗ 
ತ್ಯಂತಂ ಸಂತತಮೀವುದಾವ ತೆಱದಿಂದಾರಯ್ವೊಡಂ ಸೌಖ್ಯಲೇ 
ಶಂ ತನ್ನೊಳ್ ತಲೆದೋಱಲಾಱದೆನಿಪೀ ನಿಸ್ಸಾರಸಂಸಾರದಿಂ
 ಭ್ರಾಂತೇಂ ಪಿಂಗುಗುಮಂಗಜಾರಿಜಿನಪಾದಾಂಭೋಜ ಸೇವಾರತಂ॥೧೦೨॥ 

ವ॥ ಎಂದು ನಿಸ್ಸಾರಸಂಸಾರೋದ್ವಿಗ್ನನುಂ ಭೂರಿವೈರಾಗ್ಯ ಸುಧಾವಾರಿ ನಿಮಗ್ನನುಮಾಗಿ 

ಉ॥ ತನ್ನ ಸಹೋದರಂಗೆ ಪರಮೋತ್ಸವದಿಂದೆ ವಿಶಾಖಭೂತಿಗಾ 
ಸನ್ನುತ ವಿಶ್ವಭೂತಿಯಧಿರಾಜವಿಭೂತಿಯನಿತ್ತು ಮತ್ತೆ ಲೋ 
ಕೋನ್ನತ ವಿಶ್ವನಂದಿಗೆ ನಿಜೋರ್ಜಿತಸೂನುಗೆ ಯೌವರಾಜ್ಯಮಂ 
ತಾನ್ನಿಖಿಳಪ್ರಧಾನ ಪರಿವಾರ ಸಮನ್ವಿತನಿತ್ತನುತ್ತಮಂ ॥೧೦೩॥ 

ವ॥ ಅಂತು ಪಂಡಿತಪುರುಷಪರಿಷತ್ಪೂಜ್ಯಂ ನಿಜರಾಜ್ಯಭಾರದಿಂ ಪಿಂಗಿ

ಮ॥ ವರವೈರಾಗ್ಯರಸಪ್ರಪೂರ್ಣಹೃದಯರ್ ಭೂಪೇಂದ್ರರಯ್ನೂರ್ವರಾ 
ದರದಿಂದಂ ಬರೆ ತನ್ನ ಕೂಡೆ ವಿಬುಧಸ್ತುತ್ಯಂ ಧರಾಧೀಶ್ವರಂ 
ಪುರದಿಂದಂ ಪೊಱಮಟ್ಟನಂದು ವಿಳಸತ್ಪೌರಾಂಗನಾನೀಕ ಭಾ 
ಸುರ ನೇತ್ರೋತ್ಪಳಮುಕ್ತ ಕಜ್ಜಳ ಜಳಾರ್ದ್ರೀಭೂತ ವೀಥಿಚಯಂ॥೧೦೪॥ 

ವ॥ ಅಂತು ತನ್ನಗಲ್ಕೆಯಂ ನಿಕ್ಕುವಂ ಸೈರಿಸದ ಪೌರಜನದ ಮನದ ಬಳಗಂ ಬೞಿಸಲುತ್ತುಮಿರೆ ಪರಿತ್ಯಕ್ತ ಪರಿಗ್ರಹಂ ಪರಮಾನಂದದಿಂ ಪೋಗಿ 

ಮಾಳಿನಿ॥ ಬ್ರತಸಮಿತಿ ಸುಗುಪ್ತಿ ಶ್ರೀಧರ ಶ್ರೀದವಾಖ್ಯ 
ಬ್ರತಿಪತಿ ಪದಪದ್ಮದ್ವಂದ್ವಮಂ  ಭಕ್ತಿಯಿಂದಂ 
ಕ್ಷಿತಿಪತಿಕೃತಪುಣ್ಯಂ ಪೊರ್ದಿ ಜೈನೇಂದ್ರದೀಕ್ಷಾ
ವಿತತವೆಭವದೊಳ್ಪಂ ಪೆತ್ತನುತ್ಕೃಷ್ಟಚಿತ್ತಂ॥೧೦೫॥ 

ವ॥ ಅಂತಾ ವಿಶ್ವಭೂತಿಭೂತಳಾಧಿಪಂ ಭೂತಳಪ್ರಣೂತ ಜಿನಮತಪ್ರಣೀತ ಮಹಾತಪೋನುಷ್ಠಾನ ಪ್ರಾಜ್ಯರಾಜ್ಯಭಾರದೊಡೆಯನಾದನ್…..

ಕೃತಜ್ಞತೆಗಳು,  
ಸಂಪಾದಕರು. 
ಜಿ. ಜಿ. ಮಂಜುನಾಥನ್,
ಪ್ರಕಾಶಕರು: ಪ್ರಸಾರಾಂಗ, 
ಕನ್ನಡ ವಿಶ್ವವಿದ್ಯಾಲಯ, ಹಂಪಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ