ರನ್ನನ ಗಧಾಯುದ್ದ ಅಥವಾ ಸಾಹಸಭೀಮ ವಿಜಯ
ಶ್ರೀಯುವತೀಪ್ರಿಯಂ ಬಲಯುತಂ ಬಲಿದರ್ಪಹರಂ ಜಿತಾರಿದೈ
ತೇಯನನಂತಭೋಗನಿಲಯಂ ಪ್ರತಿಪಾಲಿತಧರ್ಮಚಕ್ರನ
ಬ್ಜಜಾಯತನೇತ್ರನಾದಿಪುರುಷಂ ಪುರುಷೋತ್ತಮನೀಚಳುಕ್ಯನಾ
ರಾಯಣದೇವನೀಗೆಮಗೆ ಮಂಗಳಕಾರಣಮುತ್ಸವಂಗಳಂ
ತರುಣೋತ್ತುಂಗಶಶಾಂಕಖಂಡಮೆ ಭುಜಂಗೇಂದ್ರನಂ
ಕುರಮುನ್ಮೀಲಿತಮಟ್ಟಹಾಸಮೆ ದಳಾನೀಕಂ ವೃಷಂ ಪುಷ್ಪ ಮೀ
ಶ್ವರಶೈಲಂ ಫಲಮಾಗೆ ಕೋಮಲಮುಖೀಗೌರೀಲತಾಶ್ಲಿಷ್ಟ ಶಂ
ಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯನಾರಾಯಣಂ
ವರಪದ್ಮಾಸನದೊಳ್ ಕನನ್ಮಣಿಮಯಂ ಸಿಂಹಾಸನಂ ಬ್ರಾಹ್ಮಿಯೊಳ್
ಪರಮಶ್ರೀ ಗಣನಾಕ್ಷಸೂತ್ರಮಣಿಯೊಳ್ ರತ್ನೋಜ್ವಲಂ ಭೂಷಣಂ
ದೊರೆಯಿಗಿರ್ಪಿನಮೊಂದುಗುಂದದಖಿಲಂ ವಿಜ್ಞಾನದಿಂದಂ ಜಗ
ದ್ಗುರುವಾದಂ ನಮಗೀಗೆ ಬೇಳ್ಪವರಮಂ ಶ್ರೀರಾಜಕಂಜಾಸನಂ
ಬಲವದ್ವೈರಿತಮೋಹರಾತಿಪಟುಗಳ್ ಪದ್ಮಾಸನಸ್ಪರ್ಶಸ
ಲ್ಲಲಿತಂಗಳ್ ಜಿತಚಕ್ರವಾಕನಿವಹಪ್ರೇಮಾಹವಂಗಳ್ ಮಹೀ
ವಲಯೋದ್ದ್ಯೋತಕರಂಗಳಾನತ ಜನಕ್ಕಾನಂದಮಂ ಮಾಳ್ಕ ಮಂ
ಗಲಮುಚ್ಚಂಡಕರಂ ಮಹೀವಲಯದೊಳ್ ಚಾಳುಕ್ಯಮಾರ್ತಾಂಡನಾ
ಕೂರಿಸಿ ವೀರ ಶ್ರೀಯಂ
ಕೂರದರಂ ಕೊಂದು ಸಮರಜಯಮಂ ಮಾಡಲ್
ಕೂರಸಿಯೊಳ್ ನೆಲಸುಗೆ ಕಂ
ಠೀರವವಾಹನೆ ಚಳುಕ್ಯಕಂಠೀರವನಾ
ನೆಗಳ್ದುದು ರಾಮಾಯಣಮುಂ
ನೆಗಳ್ದುದು ಭಾರತಮುಮಾಮಹಾ ಕವಿಗಳಿನಾ
ನೆಗಳ್ದರ್ ವ್ಯಾಸರ್ ವಾಲ್ಮೀ
ಕಿಗಳೆನೆ ನೆಗಳ್ದುಭಯ ಕವಿಗಳೆಮಗಭಿವಂದ್ಯರ್
ಮೃದು ಪದ್ಯರಚನೆಯೊಳ್ ಕಾ
ಳಿದಾಸನುಂ ಗದ್ಯರಚನೆಯೊಳ್ ಬಾಣನುಮಂ
ಕದ ಕವಗಳೆನಿಸಿ ನೆಗಳ್ದಿ
ರ್ದುದರಿಂ ಸತ್ಕವಿಗಳಿರ್ವರೆಮಗಭಿವಂದ್ಯರ್
ಮದಮಣಮಿಲ್ಲ ದಾನಗುಣದಿಂ ನೆಗಳ್ದ್ದುಂ ನೃಪಸಿಂಹನಾಗಿಯುಂ
ವಿದಿತವಿಶುದ್ಧಭದ್ರಗುಣನಂತೆ ವಿರುದ್ಧಮಿದೆಂಬಿನಂ ನಿಜಾ
ಭ್ಯುದಯನಿವೇದದೀರ್ಘಕರಮೊಪ್ಪೆ ಜಗತ್ಪ್ರಿಯವಾದ ದೇವನಂ
ಕದ ಗಣನಾಯಕಂ ವರದನಕ್ಕಮಗಮ್ಮನಗಂಧವಾರಣಂ
ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು ಮೆರೆವನಿರಿವ ಬೆಡಂಗಂ
ಕೃತಿ ನೆಗಳ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ
ಪಡೆಯೆಡೆಯ ಕಡೆಯ ಬಡವರ್
ಕುಡೆ ಪಡೆದನೊ ಚಕ್ರವರ್ತಿಯೊಳ್ ತೈಲಪನೊಳ್
ಪಡೆದಂ ಮಹಿಮೋನ್ನತಿಯಂ
ಪಡೆದಂ ಕವಿಚಕ್ರವರ್ತಿವೆಸರಂ ರನ್ನಂ
ಅರಾತೀಯ ಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ
ಕನ್ನಡಮೆರಡರುನೂರರ
ಕನ್ನಡಮಾತಿರುಳ ಕನ್ನಡಂ ಮಧುರಮ್ಯೋ
ತ್ಪನ್ನಂ ಸಂಸ್ಕೃತಮೆನೆ ಸಂ
ಪನ್ನಂ ನೆಗಳ್ದುಭಯ ಕವಿತೆಯೊಳ್ ಕವಿರನ್ನಂ
ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ
ಒಳಪೊಕ್ಕು ನೋಡೆ ಭಾರತ
ದೊಳಗಣ ಕಥೆಯೆಲ್ಲಮೀ ಗದಾಯುದ್ಧದೊಳಂ
ತೊಳಕೊಂಡತ್ತೆನೆ ಸಿಂಹಾ
ವಳೋಕನಕ್ರಮದಿನರಿಪಿದಂ ಕವಿರನ್ನಂ
ಗುಣಮನೆ ತೋರ್ಪಂ ದೋಷದ
ಗುಣಂಗಳನೆ ನೆಗಳ್ದು ತೋರ್ಪ ದುರ್ಜನನುಮದೇಂ
ಗುಣಗಣನೆಗೆ ತೋರ್ಪಂ ಕೃತಿ
ಗುಣದೋಷ ಪರೀಕ್ಷೆಗಾರನಾರ್ ಬಾರಿಪರೋ
ದ್ವಿತೀಯಾಶ್ವಾಸಂ
ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ಲುದ್ರಾವತಾರಂ ಗಡಂ
ನೊಸಲೊಳ್ ಕಣ್ಗಡಮೆಂದು ನಚ್ಚಿ ಪೊರೆದೆಂ ತಾನಕ್ಕೆ ತಮ್ಮಮ್ಮನ
ಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಾಮಿರ್ವರುಂ ಕಯ್ದುವಂ
ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾದ್ರೌಣಿಯುಂ ದ್ರೋಣನುಂ
ಮುಳಿದಾಂಪರ್ ಧರಣೀಶ್ವರರ್ ಮಿಗೆ ಪೆರರ್ ಬಿಲ್ಗೊಂಡುಮೇಗೆಯ್ವರೆ
ನ್ನೊಳಮಿಂ ತೀರದ ಕಾರ್ಯಭರಮಂ ತೀರ್ಚಲ್ ಪೆರರ್ ಗಂಡರಿ
ನ್ನೊಳರೇ ಪಾಂಡವರೆಂಬರೇಗಹನಮೆಂಬಾದರ್ಪದಂತಾಜಿಯೊಳ್
ಸುಳರಂಬೆತ್ತಿರೆ ಸತ್ತರೆನ್ನಿನಿಬರುಂ ತಮ್ಮಂದಿರುಂ ಮಕ್ಕಳುಂ ॥೧೨॥
ಪದುಳಂ ಕುಳ್ಳಿರ್ದೆಮಗಾ
ಯದ ಮಾತಂ ತಗುಳೆ ಗಳಪಿ ಪೋದಂ ಸಂಧಿ
ರ್ದದಟರೊಳಿರಿದರಿಯಂ ತ
ಪ್ಪದೆ ಕಮ್ಮರಿಯೋಜನೆನಿಸಿದಂ ಬಿಲ್ಲೋಜಂ ॥೧೩॥
ಅರಸಂಗರಗಜ್ಜದೊಳಂ
ಧುರದೊಳಮರಿಸೇನೆಗೆಂಬರದು ಪುಸಿಯಾಯ್ತಂ
ತೆರಡರೊಳೊಂದರಫಲಮುಂ
ಪರಿಣತಿಗಾಯ್ತಿಲ್ಲನರ್ಥಕಂ ವಾಕ್ಯಾರ್ಥಂ॥೧೪॥
ಒಸೆದರ್ಜುನಂಗೆ ಮುಂ ಕಳ
ಶಸಂಭವಂ ಮಾನ್ಯಪದವಿಯಂ ಮಾಡಿದೊಡಂ
ಬೆಸುಗೆಗಿಡೆ ಪಾಳಿಗಿಡೆ ತ
ನ್ನಸುವಂ ತೆಲ್ಲಟಿಗೆಗುಡುವ ತೆರದೊಳ್ ಕೊಟ್ಟಂ॥೧೫॥
ಈಯಲಿರಿಯಲ್ ಶರಣ್ಬುಗೆ
ಕಾಯಲ್ ಕ್ಷತ್ರಿಯರೆ ಬಲ್ಲರಬ್ರಹ್ಮಣ್ಯಂ
ಭೋಯೆನಲುಂ ಬ್ರಾಹ್ಮಣರವಿ
ಧಾಯೆನಲುಂ ಬಲ್ಲರಿರಿರಲವರೆಂತರಿವರ್॥೧೬॥,
ಚಾತುರ್ವಣ್ ರ್ಣ್ಯದೊಳಂ ದ್ವಿಜ
ಜಾತಿಗೆ ದರ್ಭಾಧಿಕಾರಮಲ್ಲದೆ ವಂಶೋ
ದ್ಭೂತ ನೃಪೋಚಿತಮರಿಯಂ
ಘಾತಿಪ ಶಸ್ತ್ರಾಸ್ತ್ರಮವರ್ಗೆ ಜಾತಿವಿರುದ್ಧಂ॥೧೭॥
ಓಜಂ ಗಡ ಚಿಃ ಭಾರ
ದ್ವಾಜಂ ಗಡ ಬಿಲ್ಲ ಬಲ್ಮೆಯುಂ ಕುಲಮುಂ ನಿ
ರ್ವ್ಯಾಜಂ ಮಸುಳ್ದುವು ಪಾಂಡುತ
ನೂಜರ ಪಕ್ಕದೊಳೆ ಪಾಳಿಗಿಡೆ ನೆಗ಼ಳ್ದುದರಿಂ॥೧೮॥
ಪ್ರಿಯಮಿತ್ರನೆನಗೆ ಕಮಲ
ಪ್ರಿಯನಂದನನವನನೆನ್ನ ಪಕ್ಕದೆ ಪಳಿದ
ಪ್ರಿಯಮಂ ಮಾಡಿದನಾ ಕಳ
ಶಯೋನಿ ನೆಗ಼ಳ್ದಿಂದ್ರಸುತನಿನೇಗುಂದಿದನೋ॥೧೯॥
ತಪನಸುತಂ ಬೇರಾಂ ಬೇ
ರೆ ಪೊಲ್ಲದಂ ನುಡಿದನಾವಗಂ ರ
ಕ್ಷಿಪ ಕಯ್ದುವನೆನಲಾ ಮರೆ
ಯಪಾಂಡವಂ ಬಗೆದು ನೋಳ್ಪೊಡಶ್ವತ್ಥಾಮಂ॥೨೦॥
ಗೆಲಲಾರ್ಪೊಡಿರಿದು ಗೆಲ್ವುದು
ಗೆಲಲಾರದೊಡಣ್ಮಿ ಸಾವುದಾಳ್ಗಿನಿತೆ ಗುಣಂ
ಗೆಲಲುಂ ಸಾಯಲುಮಾರದೆ
ತೊಲಗಿದೊಡೆ ನೆಗಳ್ತೆ ತೊಲಗದಿರ್ಕುಮೆ ಮೈಯ್ಯಂ॥೨೧॥
ಕರವಾಳಂ ಮಸೆವಂದದೆ
ಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂ
ಪೊರೆದೊಡೆ ಕೂರ್ಪಂ ತೋರ್ಪಂ
ತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್॥೨೩॥
ತುರುಗೋಳೊಳ್ ಪೆಣ್ಬುಯ್ಯಲೊ
ಳರಿವೆಸದೊಳ್ ನಂಟನೆಡರೊಳೂರಳಿವಿನೊಳಂ
ತರಿಸಂದು ಗಂಡುತನಮನೆ
ನೆರಪದವಂ ಗಂಡನಲ್ಲನೆಂತುಂ ಷಂಡಂ॥೨೪॥
ನೆಗಳ್ದೇಕಾದಶರುದ್ರನಿದಿಪುರುಷಂ ದೇವಂ ಲಲಾಟೇಕ್ಷಣಂ
ನಗರಾಜಪ್ರಿಯನಂದನಾ ಪ್ರಿಯತಮಂ ದ್ರೋಣಂಗೆ ಕಾರ್ಯಾರ್ಥದಿಂ
ಮಗನಾದಂ ಸ್ಮರಘಸ್ಮರಂ ದಯೆಯಿನಶ್ವತ್ಥಾಮನೆಂದೆಂದೊಡಾ
ತ್ಮಗತಂ ಸತ್ತ್ವದಿನೇಂ ಪರೀಕ್ಷಿಪನೊ ಪಿಂಗಾಕ್ಷಂ ವಿರೂಪಾಕ್ಷನಂ॥೨೫॥
ಪಗೆ ಚಿತ್ರಿಂಗದನುಯ್ಯಲ್
ಗಗನದೊಳುರೆ ತನ್ನ ತಂದ ಬಾಂಧವಕೃತಮಂ
ಬಗೆಯದಹಿತಮನೆ ಬಗೆದಂ
ಪುಗದಿರ್ಕುಮೆ ಪೋಗಿ ಕೌರವಂ ರೌರವಮಂ॥೨೬॥
ಕಾರ್ಯಸಖಂ ಶಕುನಿ ಗಡಾ
ಶೌರ್ಯಸಖಂ ಸೂತಜಂ ಗಡಾ ಭೀಷ್ಮ ಶರಾ
ಚಾರ್ಯರ ನುಡಿ ಕಯ್ಪೆ ಗಡಮ
ಕಾರ್ಯಂಗಹಿಕೇತನಂಗೆ ವಿಧಿವಿಳಸನದಿಂ॥೨೭॥
ಗುರು ಕವಚಂ ಕರ್ಣಂ ಬಾ
ಹುರಕ್ಕೆ ಸುರಸಿಂಧುನಂದನಂ ಸೀಸಕಮಾ
ಗಿರೆ ಮೆಯ್ಗೆ ಮುಳಿಯಲರಿಯದೆ
ಕುರುರಾಜನ ತೊಡೆಯನುಡಿವೆನೆಂದಂ ಭೀಮಂ॥೨೮॥
ಧೃತರಾಷ್ಟ್ರಂ ದ್ರುಮಮಾದುದು
- ಶತಶಾಖಂ ಪಂಚಶಾಖಮಾದುದು ಪಾಂಡು
ಕ್ಷಿತಿರುಹಮಕ್ಷಯಮಾಯ್ತಾ
ದ್ವಿತೀಯಮಾಯ್ತೇಕಶಾಖಮಿವನಿಂದಾದ್ಯಂ॥೨೯॥
ತೃತೀಯಾಶ್ವಾಸಂ
ನೆಗಳ್ದಾಭಾರತಮಲ್ಲ ಶಕ್ರಸುತ ಬಾಣಾಘಾತದಿಂ ಭೀಮಭೀ
ಮಗದಾದಂಡವಿಘಾತದಿಂ ಕುರುನೃಪಾನೀಕಂ ಪಡಲ್ವಟ್ಟು ಜೀ
ರಿಗೆಯೋಕ್ಕಲ್ಗೆಣೆಯಾಗಿ ಬಿಳ್ದಭಟರಿಂ ಬಿಳ್ದಶ್ವದಿಂ ಬಿಳ್ದದಂ
ತಿಗಳಿಂದಂ ಜವನುಂಡು ಕಾರಿದವೊಲಾಯ್ತೆತ್ತಂ ಕುರುಕ್ಷೇತ್ರದೊಳ್॥೨॥
ದೊಣೆಯಿಂದಂ ತೆಗೆವಾಗಳೊಂದು ತುಡುವಾಗಳ್ ಪತ್ತುಬಾಣಂ ಧನು
ರ್ಗುಣದಿಂದಂ ಬಿಡುವಲ್ಲಿ ನೂರು ಪರಿವಾಗಳ್ ಸಾಸಿರಂ ವೈರಿಮಾ
ರ್ಗಣಮಂ ಛೇದಿಸುವಲ್ಲಿ ಲಕ್ಕೆ ನಡುವಾಗಳ್ ಕೋಟಿ ಸೇನಾಂಗದೊಳ್
ಗಣನಾತೀತಮಿದೆಂದೊಡೇವೊಗಳ್ವುದೋ ಬಿಲ್ಬಲ್ಮೆಯಂ ಪಾರ್ಥನಾ॥೩॥
ಕೆಲರಂ ನುಣ್ಣನೆ ನೊಣೆದಂ
ಕೆಲರಂ ಪಿಡಿದಡಸಿ ನುಂಗಿದಂ ಕುರುಕುಲರಂ
ಕೆಲರಂ ಸೌಳನೆ ಸೀಳ್ದಂ
ಕೆಲರಂ ಮಾರುತಿ ಜವಂಗೆ ಬಾಣಸುಗೆಯ್ದಂ॥೯॥
ಕೆಲರಂ ಕುರಿದರಿದರಿದಂ
ಕೆಲಂಬರಂ ಸಂಧಿಸಂಧಿಯಂ ಪರಿಯೆಚ್ಚಂ
ಕೆಲರಂ ದೆಸೆವಲಿಗೆಯ್ದಂ
ಕೆಲರಂ ಭುಜಬಲದಿನರಿದು ಶಿಲೆಯೊಳ್ ಪೊಯ್ದಂ॥೧೦॥
ಬಡಿಗೊಂಡು ಗೋಣಿಪಣ್ಣಂ
ಬಡಿವಂತಿರೆ ಪವನಸೂನು ಪೆಂಕುಳಿನಾಯಂ
ಬಡಿವಂತಿರೆ ಪಾಳುಡುವಂ
ಬಡಿವಂತಿರೆ ಬಡಿದನನಿಬರಂ ಕೌರವರಂ॥೧೧॥
ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾ
ಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂ
ಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದದಾ ಮೃಷಾಪಾತಕಂ
ಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ॥೨೩॥
ತನಗೆ ಹತೋಶ್ವತ್ಥಾಮೋ
ಯೆನಲಕ್ಕುಮೆ ಯಮಪುರಕ್ಕೆ ಗುರು ಪೋಪೆಡೆಯೊಳ್
ಘನಕುಂಜರ ಎಂದೆಂಗುಮೇ
ಜನರಂಜನೆಗರಿಯಲಾದುದಿಲ್ಲಲಮಗನಂ
ಈ ದೊರೆಯರಮಗನುಂ ಮೃಷ
ವಾದಂ ನೋಡೆಂದು ಧರ್ಮನಂ ಮೂದಲಿಸಲ್
ಪೋದಂ ಪುತ್ರನನಲಸಲ್
ಪೋದನೆ ಯಮಪುರಕೆ ಮುಕ್ಥಬಾಣಂ ದ್ರೋಣಂ॥೨೫॥
ಕಳಶಜನನಿಂತು ಕೊಲಿಸಿದ
ಖಳನೆ ಗಡಂ ಧರ್ಮನಂದನಂ ಕ್ರೂರದಿನಂ
ಗಳ ಪೆಸರಂ ಮರೆಯಿಸಿ ಮಂ
ಗಳವಾರಂ ಕಡ್ಡವಾರಮೆಂಬಂತೆ ವಲಂ॥೨೬॥
ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾ
ಗನೆ ಭಗದತ್ತನಾನೆ ಬರಿಯೆಲ್ವುಡಿವನ್ನೆಗಮೊತ್ತೆ ಗಂಡನಾ
ಗನೆ ಕೊಲಲೊಲ್ಲದಂಗಪತಿ ಬಿಲ್ಲೊಳೆ ಕೊಂಡೆಳೆವಲ್ಲಿ ಗಂಡನಾ
ಗನೆ ಕುರುಬಾಲಸಂಹರಣ ಮಾತ್ರದೆ ಮಾರುತಿ ಗಂಡನಾದನೇ॥೨೭॥
ಒಡವುಟ್ಟಿದರಂ ಕೊಂದವ
ರಡಗಂ ತಿಂದವರ ನೆತ್ತರಂ ಬೆಲಗಸೆಯೊಳ್
ಕುಡಿವೀ ನಿಸ್ತ್ರಿಂಶತೆಯಂ
ಹಿಡಿಂಬಿಯಂ ಪೊರ್ದಿ ಕಲ್ತನಾಗನೆ ಭೀಮಂ॥೨೮॥
,,,
ಎನಗಾಜೂದಿನೊಳಗ್ರಜಾನುಜಸಮೇತಂ ಗಂಡುದೊಳ್ತಾಗಿ ಕಾ
ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ,
ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇ
ವನನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ॥೨೯॥
ದೊರೆ ಯಮಪುತ್ರನಿರ್ದಿರವು ವಾಯುಜನಿರ್ದಿರವಗ್ನಿಪುತ್ರಿಯಿಎ
ರ್ದಿರವಮಳರ್ಕಳಿರ್ದಿರವು ಮತ್ಸ್ಯನಿವಾಸದೊಳೆಲ್ಲಮಂತೆ ಮೆ
ಯ್ಗರೆದಿರೆ ಗಂಡುಗೆಟ್ಟುಬಳೆದೊಟ್ಟು ಬೃಹನ್ನಳೆಯಾಗಿ ಪಾರ್ಥನಿ
ರ್ದಿರವುಮೆನಲ್ಕೆ ಪಾರ್ಥನದು ರಂಭೆಯ ಶಾಪಮೊ ತನ್ನ ಪಾಪಮೋ॥೩೦॥
ಗುರಃವಂ ದ್ವಿಜನ್ಮನಂ ಸುತ
ವಿರಹಾಗ್ನಿಗ್ರಸ್ತನಂ ನಿರಾಯುಧನಂ ಸಂ
ಹರಿಸಿದ ಶಕ್ರಸುತಂಗಾ
ಗುರುವಧಮೆ ಯಶೋವಧಕ್ಕೆ ಕಾರಣಮಲ್ತೆ॥೩೧॥
ಎನಗಿದಯುಕ್ತಮೆಂದಿರದೆ ಪೆರ್ಬುಸಿಯೊಳ್ ಪುದಿದಿರ್ದ ಧರ್ಮನಂ
ದನನನೆ ಧರ್ಮನಂದನನೆನಲ್ ದೊರೆ ದಿಗ್ಗಜಮೊತ್ತೆ ಬಿರ್ದು ಬಿ
ರ್ದಿನಿಸಗಿದಿರ್ದ ಭೀಮನನೆ ಭೀಮನೆನಲ್ ದೊರೆ ಪೇಡಿಯಾಗಿ ಮ
ತ್ಸ್ಯನ ಮನೆವೊಕ್ಕ ಪಾರ್ಥನನೆ ಪಾರ್ಥನೆನಲ್ ದೊರೆ ಗಂಡರೆಂಬರೇ॥೩೨॥
ಗುರುವಂ ಪ್ರೋ ಜ್ಝಿತಚಾಪನಂ ಪುಸಿದುಕೊಂದಾ ಭೀರಮಂ ಭೀಷ್ಮರಂ
ಶರಶಯ್ಯಾಗತರಂ ಕರುತ್ತು ಗುರಿಯೆಚ್ಚಾ ಪೊಚ್ಚರಂ ಕರ್ಣನಂ
ವಿರಥಜ್ಯಾಯುಧನೆನ್ನದೆಚ್ಚು ತಲೆಗೊಂಡಾ ಶೌರ್ಯಮಂ ಪಾಂಡುಪು
ತ್ರರೆ ಬಲ್ಲರ್ ಮೆರೆಯಲ್ಕೆ ಸಾಹಸಧನಂ ಧುರ್ಯೋಧನಂ ಬಲ್ಲನೇ॥೩೩॥
ಸೊಕಮಿರ್ಕಕ್ಕಟ ದರ್ಭಪಾಣಿ ಯಮಜಂ ದರ್ವೀಕರ ವಾಯುಪು
ತ್ರಕನುಂ ಜರ್ಜರಹಸ್ತನಿಂದ್ರತನಯಂ ದಸ್ರಾತ್ಮಜರ್ ದಂಡಮು
ಷ್ಟಿಕರರ್ ಶಸ್ತ್ರವಿಡಂಬಮೇವುದವರ್ಗೆ ಪಾಂಚಾಲಿಯುಂ ಗಂಧದಾ
ಯಕಿಯಾಗಿರ್ಪಿನಮಂದು ಮತ್ಸ್ಯಗೃಹದಿಂದೀನಿಗ್ರಹಂ ಪೊಲ್ಲದೇ॥೩೪॥
ಅಧಿಕಾರಿಗಳೆನೆ ಸೈರಿಸೆ
ವಧಿಕಾಕಾರಿಗಳಾಗಿ ಬಾಳ್ಗೆ ಬಡುವುಗಳವರ್ಗಾ
ಯುಧಭಾರಮೇಕೆ ಬಗೆಯ
ಲ್ಕೆ ಧರ್ಮದಿಂ, ಕ್ಷತ್ರಧರ್ಮಮವರ್ಗೆ ವಿರುದ್ಧಂ॥೩೫॥
ಸಭೆಯೊಳ್ ತಮ್ಮಯ ಪಕ್ಕದೆನ್ನನುಜನಾ ಪಾಂಚಾಲಿಯಂ ಪಂಚವ
ಲ್ಲಭೆಯಂ ಮೋದೆಯುಮಲ್ಲಿ ಮಿಳ್ಮಿಳನೆ ನೋಡುತಿರ್ದ ಬಲ್ಲಾಳ್ಗಳಿ
ಲ್ಲಿ ಭರಂಗೆಯ್ದಪರೀಪರಾಕ್ರಮಮುಮೀಪೆರ್ಮಾತುಮೀಗಂಡುಮೀ
ಸುಭಟಾಲಾಪಮುಮೆಲ್ಲಮಾನೃಪತಿಗಳ್ಗೇನೆಂಬೆನೆಲ್ಲರ್ದುದೋ॥೩೬॥
ಯಮವಾಯುತ್ರಿದಶಾಶ್ವಿನನೀತನಯರುಂ ತಾವಾದರೀಯಯ್ವರುಂ
ಹಿಮಕೃದ್ವಂಶಕಳಂಕರಂತವರ್ಗಮಾ ಪಾಂಚಾಲ ಭೂಪಾಲ ಪು
ತ್ರಿಮನೋವಲ್ಲಭೆಯಾದಳೆಂದೊಡೆ ಗಡಂ ಕೇಳಲ್ಕದೇಂ ಕ್ಷತ್ರಧ
ರ್ಮಮೊ ಭೂಲೋಕಕೆ ಪೇಳಿಮೀ ದೊರೆಯ ಚಾರಿತ್ರಂ ಪೃಥಾಪುತ್ರರಾ॥೩೭॥
ಪಸೆಯೊಳ್ ಪಸುರ್ವಂದರೊಳ
ಗ್ನಿಸಾಕ್ಷಿಯೊಳ್ ಕೊಂಡ ಪಾಂಡುಪತಿಯಿರೆ ದೋಷಾ
ವಸಥರ್ ಪಾದರದಿಂ ಜನಿ
ಯಿಸಿದರ್ ಪಾಂಡವರೊಳಲ್ಲದೆಮ್ಮೊಳಮುಂಟೆ॥೩೮॥
ಬಿಡದಾರಾಧಿಸೆ ಮುನ್ನಮೆ
ಕುಡಲಾರದೆ ಬಳಿಕೆ ಗಂಟಲಂ ಮೆಟ್ಟಿದೊಡಿ
ಟ್ಟೆಡೆಯೊಳ್ ಕೊಟ್ಟಂ ಗೆಲ್ಲಂ
ಗುಡುವಂತೆ ನರಂಗೆ ಪಾಶುಪತಮನೆ ರುದ್ರಂ॥೩೯॥
ತನಯನೆನಗೆಂದು ಮನ್ನಿಸಿ
ತನಗುರುಗಜ್ಜಕ್ಕೆ ಪಾಕಶಾಸನನರ್ಧಾ
ಸನಮೇರಿಸಿ ನೀರೇರಿಸಿ
ಮನುಜಂಗಂ ಮಾನ್ಯ ಪದವಿಯಂ ಮಾಡಿದನೇ॥೪೦॥
ಪವನಂಗೆ ಪುಟ್ಟಿದಂ ರಾ
ಘವನಣುಗಾಳ್ ತ್ರಿಣಯನಾಂಶಮೆನಿಪಣುವಂ ಪಾಂ
ಡವಕೇತುದಂಡದೊಳ್ ನೆಲ
ಸುವುದಾವಗ್ಗಳಿಕೆ ಕಪಿಗೆ ಚಪಲತೆ ಸಹಜಂ॥೪೧॥
ಅನುಜೇಯನಿತ್ತು ನರಂಗಾ
ತನ ತನಯಂಗಿತ್ತು ತನ್ನ ಮಗಳಂ ತಾನಾ
ತನ ರದಮನೆಸಗಿ ಧರ್ಮಜ
ನನುಜನ ನೆವದಿಂದಮರಸುಗೆಯ್ವಂ ಕೃಷ್ಣಂ॥೪೨॥
ಪುರುಷರ್ ಮೂವರೊಳೊರ್ವನೆಂಬರಸುರಪ್ರಧ್ವಂಸಿಯೆಂಬರ್ ಜಗ
ದ್ಗುರುವೆಂಬರ್ ಪೆರರ್ಗೇಕೆ ತೇರನೆಸಪಂ ಧರ್ಮಾನುಜಂಗೇಕೆ ಕಿಂ
ಕರನಾದಂ ಕರವೇರಿಯಾದನದರಿಂ ಸೂತಂ ಭಟಂ ಪೇಳಿ ಯೆಂ
ಬರಮಾತೊಪ್ಪುಗುಮಾದಿ ದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ॥೪೩॥
ಅನಿಮೇಷಾದ್ಯವತಾರಂ
ತನಗಾಗೆ ದಶಾವತಾರಮನಿತರೊಳಿರದ
ರ್ಜುನನ ರಥಮೆಸಗಿ ಪಪನ್ನೊಂ
ದನೆಯದು ಸೂತಾವತಾರಮುಂ ಹರಿಗಾಯ್ತೆ॥೪೪॥
ಪ್ರತಿಕೂಲದೈವನೈ ನೀಂ
ಪ್ರತಿನೃಪನುಕೂಲದೈವರಸಹಾಯನೆ ನೀಂ
ಪ್ರತಿನೃಪರಸಹಾಯರ್ ನೀಂ
ಪ್ರತಿಬಲನದರಿಂದನರ್ಥಕಂ ವಾಕ್ಯಾರ್ಥಂ॥೪೫॥
ಎನಗೆ ಮನಮಿಂದು ಶೂನ್ಯಂ
ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು ದುಶ್ಯಾ
ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ॥೬೯॥
ಮಹಿಭೂಭೃಚ್ಛತ್ರಶೂನ್ಯಂ ಕನಕಮಹಿಧರಂ ದ್ರೋಣವೃಕ್ಷಿದಿಶೂನ್ಯಂ
ಗುಹೆ ಸಿಂಹಾನೀಕ ಶೂನ್ಯಂ ದೆಸೆದಿಗಿಭಟಾಶೂನ್ಯಮಾದಂತೆ ವಾಯು
ಸ್ಪ್ಹಹಭೀಮೋದ್ದಾಮ ಬಾಹಾಬಲ ದಳಿತಕುಭೃದ್ವರ್ಗಶೂನ್ಯಂ ವಿಷಾದಾ
ವಹಮಕ್ಕುಂ ಮುನ್ನಮೆನ್ನಿರ್ಪರಿಕೆಯ ಸಭೆ ಮತ್ತೆಂತದಂ ಪೊಕ್ಕು ನೋಳ್ಪೆಂ॥೭೨॥
ಚತುರ್ಥಾಶ್ವಾಸಂ
ತನ್ನೊಡವುಟ್ಟಿದರ್ ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂ
ತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾ
ನೆನ್ನೊಡವುಟ್ಟಿದರ್ ಪೆಸರ ನೂರ್ವರೊಳೊರ್ವರುಮಿಲ್ಲ ಬಾಳ್ವೆನೆಂ
ಬೆನ್ನಳಿಯಾಸೆಯಂ ಬಿಸುಟೆನಿನ್ನವರಾದುದನಾಗದಿರ್ಪೆನೇ॥೯॥
ಸಾಧಿಸುವೆಂ ಫಲ್ಗುಣನಂ
ಸಾಧಿಸುವೆಂ ಪವನಸುತನ ಬಸಿರಿಂ ಹಾ ಕ
ರ್ಣಾ ದುಶ್ಯಾಸನ ತೆಗೆವೆಂ
ಸಾಧಿಸಿದಿಂ ಬಳಿಕೆ ಯಮಜನೊಳ್ ಪುದುವಾಳ್ವೆಂ॥೧೦॥
ಆಮ್ಮಗನೆನಾಗೆ ಧರ್ಮಜ
ನೇಮ್ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂ
ನಿಮ್ಮೊಳ್ ನೇರ್ಪಡುಗಿಡದೆ ಸು
ಖಮ್ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ಯೆಂ॥೧೨॥
ಉಡಿದಿರ್ದ ಕಯ್ದು ನೆತ್ತರ
ಕಡಲೊಳಗಡಿಗಡಿಗೆ ತಳಮನುರ್ಚುತ್ಥಿರೆ ಕಾ
ಲಿಡಲೆಡೆವಡೆಯದೆ ಕುರುಪತಿ
ದಡಿಗವೆಣಂಗಳನೆ ಮೆಟ್ಟಿ ನಡೆಯುತ್ತಿರ್ದಂ॥೧೪॥
ಪೆಣದಿನಿಗಳ ತಂಡಂ ಬ
ಲ್ವೆಣಗಳನರಸುತ್ತುಮಲ್ಲಿ ಬರೆವರೆ ಸಾರ
ಲ್ಕಣಮೀಯದೆ ತಮ್ಮಾಳ್ದನ
ಪೆಣನಂ ಕಾದಿರ್ದರಲ್ಲಿ ಬಿಳ್ದ ಭಟರ್ಕಳ್॥೧೫॥
ಅಂಧನೃಪಸುತನೆಯೋ ಜಾ
ತ್ಯಂಧನೆಯೋ ಮೆಟ್ಟದಗಲ್ದು ಪೋಗೆನುತುಂ ಕೋ
ಪಾಂಧರ್ ಜಡಿದರ್ ಪತಿಯ ಕ
ಬಂಧಮನೆಡಗಲಿಸಿ ಪೋಪ ದುರ್ಯೋಧನನಂ॥೧೬॥
ಹಲಚಕ್ರಾಂಕುಶರೇಖಾ
ವಿಲಸಿತ ಪದತಳಕೆ ಮಾಡೆ ಪುನರುಕ್ತತೆಯಂ
ಹಲಚಕ್ರಾಂಕುಶಮಾಕುರು
ಕುಲಜಂ ಕುಸಿಕುಸಿದು॥೧೭॥
ವಿನುತವಿರೋಧಿಮಂಡಳಿಕಮೌಳಿ ವಿರಾಜಿತ ಪಾದಪೀಠ ಕಾಂ
ಚನಕಮಳಾಯಮಾನಮಿವು ನಿಮ್ಮಯ ಮೆಲ್ಲಡಿ ಭಿಂಡಿವಾಳದಂ
ಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳುರ್ಚೆ ಸಂಯುಗಾ
ವನಿತಳದೊಳ್ ವಿಧಾತ್ರವಶದಿಂ ನಿಮಗಂ ನಡೆವಂತುಟಾದುದೇ॥೧೮॥
ತನುಜಾನುಜರ ವಿಯೋಗದ
ಮನಃಕ್ಷತಂ ನೋಯಿಸಲ್ಕೆ ನೆರೆಯದೆ ಸಮರಾ
ವನಿಜಾತ ಚರಣಕ್ಷತ
ಮಿನಿಸು ನೋಯಿಕುಮೆ ವಜ್ರಮನನಪ್ಪೆನ್ನಂ॥೧೯॥
ಮೊನೆಯೊಳಿದಿರ್ಚಿ ಸತ್ತಭಟನಂ ಗಜದೃಷ್ಟಿಯೊಳಣ್ಮಿ ಬೀ
ರನನದಟಿಂ ಸಹಸ್ರಭಟರಂ ರಣದೊಳ್ ಪೊಣರ್ದಿಕ್ಕಿ ಸತ್ತ ಗಂ
ಡನನರಸುತ್ತೆ ಬರ್ಪ ಸುರಸುಂದರಿಯರ್ಕಳನೀಕ್ಷಿಸುತ್ತುಮೊ
ಯ್ಯನೆ ನಡೆದಂ ಪರಾಕ್ರಮನಿಕೇತನನಾ ಫಣಿರಾಜಕೇತನಂ॥೨೦॥
ಇನಿಸಿನಿಸುತಿಂಬೆವೊರ್ಮೆಯೆ
ತಿನೆ ತವುಗುಮಿದೆಂದು ತಾಯುಮಾನೆಯ ಪೆಣನಂ
ತಿನಲಾರದೆ ಪೆರರ್ಗಿಕ್ಕದೆ
ಮನಮಂ ಪಸುತಿರ್ದುವಲ್ಲಿ ಲೋಭಿಮರುಳ್ಗಳ್॥೩೮॥
ನವಭೂತಭಾಷೆಯಿಂ ಕುರು
ಪುವೇಳ್ದು ತಾಮಡ್ಡಗವಿತೆಯಂ ಮಾಡಿ ಮಹಾ
ವ್ಯವಸಾಯಂಗೆಯ್ವ ಮರು
ಳ್ಗವಿಗಳ್ ತಾವೇಂ ಗುಣಾಢ್ಯರಂ ಮಸುಳಿಸರೇ॥೪೨॥
ಗುರುವಿನ ನೆತ್ತರಂ ಕುಡಿವೆನಪ್ಪೊಡೆ ದ್ವಿಜವಂಶಜಂ ನಿಜಾ
ವರಜನ ನೆತ್ತರಂ ಕುಡಿವೆನಪ್ಪೊಡೆ ಭೀಮನೆ ಪೀರ್ದನೆಯ್ದೆ ಭೀ
ಷ್ಮರ ಬಿಸುನೆತ್ತರಂ ಕುಡಿವೊಡಿನ್ನುಮೊಳಂ ಕುರುರಾಜ ನಿನ್ನ ನೆ
ತ್ತರ ಸವಿನೋಳ್ಪೊಡಾಂ ಬಯಸಿ ಬಂದಪೆನೆಂದದೊಂದು ಪುಲ್ಮರುಳ್॥೪೩॥
ಕದನದೊಳುಣ್ಮಿದೊಳ್ಮಿದುಳ ಕರ್ದಮದೊಳ್ ಜಗುಳ್ದಂಘ್ರಿ ಜಾರಿ ಪೋ
ಪುದುಮೊಡನಿರ್ದ ಸಂಜಯನಿಳೇಶ್ವರನಂ ಪಿಡಿದೂರುಭಂಗಮಾ
ಗದೆ ವಲಮೆಂದೊಡಾಗದೆನೆ ಪುಲ್ಮರುಳೊಂದೆಡೆವೋಗಿ ಭೀಮ ಕೋ
ಪದೆ ನಿನಗೂರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ॥೪೪॥
ಅರಗಿನಮಾಡದೊಳ್ ವಿಷದ ಲಡ್ಡುಗೆಯೊಳ್ ಕೊಲಲೆಂದು ಬಂಧುಮ
ತ್ಸರದೊಳೆ ವೈರಮಂ ಪದೆದು ಭೀಮನನಿನ್ನಿನಿತರ್ಕೆ ತಂದ ನೀಂ
ಮರುಳಯೊ ನೋಳ್ಪಮಿರ್ವರ ಮರುಳ್ತನಮಂ ಫಣಿರಾಜಕೇತನಾ॥೪೫॥
ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರಿ ಪೋ
ದೊಡೆ ಕಲಿಭೀಮನಾಣೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ
ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಗೊಂಡೊಡೆ ಭೂತಕೋಟಿಯುಂ
ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ॥೪೬॥
ಇಭಶೈಲಂಗಳನೇರಿಯೇರಿ ರುಧಿರಸ್ರೋತಂಗಳಂ ದಾಂಟಿದಾಂ
ಟಿಭದೋರನೀಲಲತಾ ಪ್ರತಾನವಿಪಿನ ವ್ರಾತಂಗಳೊಳ್ ಸಿಲ್ಕಿ ಸಿ
ಲ್ಕಿ ಭರಂಗೆಯ್ದುರದೆಯ್ದಿ ಸಂಜಯ ಶಿರಸ್ಕಂಧಾವಲಂಬಂ ಕುರು
ಪ್ರಭು ಕಂಡಂ ಶಲಜಾಲಜರ್ಜರಿತ ಗಾತ್ರತ್ರಾಣನಂ ದ್ರೋಣನಂ॥೪೮॥
ಅರಿಯೆಮೆ ಬಿಲ್ಲಬಿನ್ನಣಕೆ ಗಾಂಡಿವಿಯಲ್ತು ಪಿನಾಕಪಾಣಿಯುಂ
ನೆರೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮ್ಮುಪೇಕ್ಷೆಯೆಂ
ದರಿಯೆನಿದೆನ್ನ ಕರ್ಮವಶಮೆಂದರಿಯೆಂ ನಿಮಗಿಂತು ಸಾವುಮೇ
ತೆರದಿನಕಾಲಣಂ ನೆರೆಯೆ ಸಂಭವಿಸಿರ್ದುದೊ ಕುಂಭಸಂಭವಾ॥೫೦॥
ಅದಟಿನ ಪಾರ್ಥನೆಚ್ಚು ಕೊಲೆ ಜಾತಬಲಂ ದ್ರುಪದಾತ್ಮಜಾಥನೋ
ವದೆ ಪುಡಿಯೊಳ್ ಪೊರಳ್ಚಿ ತಲೆಯಂ ತೆಗೆವಲ್ಲಿ ಪಿನಾಕವೆತ್ತವೋ
ದುದೊ ಶರವೆತ್ತವೋದುದೊ ಲಲಾಟದಿನಿಂಗಳಣ್ಣದೆತ್ತವೋ
ದುದೊ ಗುರುಸೂನು ತಾನುಮಣಮಮ್ಮನಲಂಪುಮದೆತ್ತವೋದುದೋ॥೫೧॥
ಶರಸಂಧಾನಮನನ್ಯಸೈನ್ಯದೊಡಲೊಳ್ ಬಿಲ್ಬಲ್ಮೆಯಂ ತನ್ನ ಶಿ
ಷ್ಯರ ಮೈಯೊಳ್ ನಿಜಕೀರ್ತಿಯಂ ನಿಖಿಳದಿಕ್ಚಕ್ರಂಗಳೊಳ್ ಚಿತ್ತಮಂ
ಹರ ಪಾದಾಂಬುಜಯುಗ್ಮದೊಳ್ ನಿರಿಸಿದಂ ಚಾಪಾಗಮಾಚಾರ್ಯರೊಳ್
ದೊರೆಯಾರೆಂಬಿನಮಣ್ಮಿ ಸತ್ತಳವಿದೇಂ ದ್ರೋಣಂಗೆ ಮೈವೆತ್ತುದೋ॥೫೨॥
ಅರೆಮುಗಿದಿರ್ದ ಕಣ್ಗಳುಮಲರ್ದ ಮೊಗಂ ಕಡಿವೋದ ಕೆಯ್ಯುಮಾ
ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ ॥೫೪॥
ಗುರುಪಣ್ಣಿದ ಚಕ್ರವ್ಯೂ
ಹರಚನೆ ಪೆರರ್ಗರಿದು ಪುಗಲಿದಂ ಪೊಕ್ಕು ರಣಾ
ಜಿರದೊಳರಿನೃಪರನಿಕ್ಕೀದ
ನರಸುತ ನಿನ್ನೊರೆಗೆ ದೊರೆಗೆ ಗಂಡರುಮೋಳರೇ॥೫೫॥
ಪಲರಿರ್ದು ಕಾದಿದರ್ ಮೆ
ಯ್ಗಲಿಗಳ್ ನಿನ್ನೊಂದೆ ಮೆಯ್ಯೊಳಂ ತವೆ ಕೊಂದೈ
ಪಲರಂ ನಿನ್ನಂ ಪೆತ್ತಳ್
ಮೊಲೆವೆತ್ತಳೆ ವೀರಜನನಿವೆಸರಂ ಪೆತ್ತಳ್॥೫೬॥
ಅಸ಼ಮಬಲ ಭವದ್ವಿಕ್ರಮ
ಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ
ರ್ಥಿಸುವೆನಭಿಮನ್ಯು ನಿಜ ಸಾ
ಹಸೈಕದೇಶಾನುಮರಣಮೆಮಗಕ್ಕೆ ಗಡಾ॥೫೭॥
ಧಾರಿಣಿಯೊಳ್ ನಿಜಸಂಯುಗ
ಭಾರಮನಾಂತಿರ್ದ ವೀರಪುಂಗವರಿರೆ ತ
ದ್ಭಾಲಮನಾಂತಭಿಮನ್ಯು ಕು
ಮಾರಂ ಪುಗೆ ವೀರರಮಣನೆನಿಸಿದನಲ್ತೆ॥೫೮॥
ತರುಣ ಯುವ ವೃದ್ಧ ವಿಕ್ರಮ
ಪರಿಣತರುರದಿಕ್ಕಿ ಸಿಂಹಾಸಾಹಸನಿವನುಂ
ತರುಣನೆ ಆನುಂ ಯುವನೆನೆ
ಸುರಪಗಾನಂದನಂ ಮಹಾಜರ್ಜರನೇ॥೫೯॥
ಪಸಿವಿನೊಳನ್ನಮಂ ಪಸಿದು ಬಂದವರ್ಗಿಕ್ಕುವ ಯುದ್ಧರಂಗದೊಳ್
ಕುಸಿಯದೆ ಸೂರೆಗೊಳ್ಳದೆ ರಣಕ್ಕೆ ಶುಚಿತ್ವಮನಪ್ಪುಕೆಯ್ವ ಮಾ
ನಸಿಕೆಯ ನಾಲ್ವರುಂ ನಮಗೆ ವಂದ್ಯರವಂದೀರೊಳೀತನಲ್ತೆ ಸಾ
ಹಸಧನನೆಂದು ಕೆಯ್ಮುಗಿದನಂದಭಿಮನ್ಯುಗೆ ಕೌರವೇಶ್ವರಂ॥೬೦॥
ಗಳಿತಶರಮಾಯ್ತು ಹಸ್ತಂ
ಗಳಿತರಣೋತ್ಸಿಹಮಾಯ್ತು ಹೃದಯಂ ನಯನಂ
ಗಳಿತಾಶ್ರುವಾಯ್ತು ಕೌರವ
ಕುಲತಿಲಕಂಗೆ ಕುಮಾರನಂ ಕಾಣಲೊಡಂ॥೬೧॥
ಜನಕಂಗೆ ಜಲಾಂಜಲಿಯಂ
ತನೂಭವಂ ಕುಡುವುದುಚಿತಮದುಗೆಟ್ಟೀಗಳ್
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ॥೬೨॥
ಪಂಚಮಾಶ್ವಾಸಂ
ಪುಡಿಯೊಳ್ ಪೊರಳ್ಚಿಯುಂ ಮೆ
ಯ್ಯಡಗಂ ತಿರಿತರಿದು ಕೊರೆದು ತಿಂದುಂ ಗೊಟ್ಟಂ
ಗುಡಿದುಂನೆತ್ತರನೆಂತುಂ
ಹಿಡಿಂಬರಿಪು ತಣಿದನಿಲ್ಲ ದುಶ್ಯಾಸನನಂ॥೩॥
ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ
ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ
ಕುಡಿಕುಡಿದಾರ್ದ ವೈರಿಯುಳಿದನ್ನೆಗಮೆನ್ನಳಲೆಂತು ಪೋಕುಮೆಂ
ದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ॥೪॥
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್
ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀ ಹಸ್ತದೊಳ
ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ
ನುಜ ದುಶ್ಯಾಸನ ಭೀಮ ಭೀಮಗದೆಯಿಂ ಪಂಚತ್ವಮಂ ಪೋರ್ದಿದಯ್॥೫॥
ನಿನ್ನಂ ಕೊಂದಂ ಗಡಮೊಳ
ನಿನ್ನುಂ ಕೊಂದವನನಿಕ್ಟಿ ಕೊಲ್ಲದೆ ಮಾಣ್ಬಾ
ನಿನ್ನುಮೊಳೆಂ ಗಡಿದಕ್ಕುಮೆ
ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೬॥
ಜನನೀ ಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯ ಭೋ
ಜನಮೆಂಬಿಂತಿವನುಂಡೆನಾಂ ಬಳಿಕ ನೀಂ ಬಾಲತ್ವದಿಂದೆಲ್ಲಿಯುಂ
ವಿನಯೋಲ್ಲಂಘನಮಾದುದಿಲ್ವ ಮರಣಕ್ಕನ್ನಿಂದೆ ನೀಂ ಮುಂಚಿದಯ್
ಮೊನೆಯೊಳ್ ಸೂಳ್ ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ॥೭॥
ಅನುಜನ ನೆತ್ತರನೀಂಟಿದ
ವನನಿಂದಾಪ್ರಾಣಸಹಿತಮೀಂಟದೆ ದುರ್ಯೋ
ಧನನೆಂಬ ಪೆಸರ್ಗೆ ಮುಯ್ಯಾಂ
ಪೆನೆ ದುಶ್ಯಾಸನನ ಬನ್ನಮಂ ನೀಗುವೆನೇ॥೮॥
ನೆಗಪಿ ವರೂಥಮಂ ವಸುಧೆ ನುಂಗಿದುದುಂ ಸಮಪಾದ ಶೋಭೆಯುಂ
ಬಗೆಗೊಳೆ ತನ್ನ ಮುಂ ತೆಗೆದ ದಕ್ಷಿಣ ಮುಷ್ಟಿಯೆ ಕರ್ಣಮೂಲದೊಳ್
ಸೊಗಯಿಸೆ ಪಾಳಿಯಂ ನೆರಪದಾಳ್ದನ ಕಜ್ಜಮನೊಕ್ಕು ಸತ್ತರಂ
ನಗುವವೊಲಿರ್ದನಂಗಪತಿ ನೆಮ್ಮಿ ನಿಜೋನ್ನತಕೇತುದಂಡಮಂ॥೧೦॥
ಆನುಂ ದುಶ್ಯಾಸನನುಂ
ನೀನುಂ ಮೂವರೆ ದಲಾತನುಂ ಕಳಿದ ಬಳಿ
ಕ್ಕಾನುಂ ನೀನೆ ದಲೀಗಳ್
ನೀನುಮಗಲ್ದೆತ್ತವೋದೆಯಂಗಾಧಿಪತಿ॥೧೧॥
ನೀನಿಲ್ಲದರಸುಗೆಯ್ವೆನೆ
ನೀನಿಲ್ಲದೆ ಬಾಳ್ವೆನೆಂದು ಬಗೆದಪ್ಪೆನೆ ಪೇಳ್
ನೀನಿಲ್ಲದಹಿತರೊಳ್ ಸಂ
ಧಾನಂ ಮಾಡುವೆನೆ ಕೂಡೆನಂಗಾಧಿಪತಿ॥೧೨॥
ನಿನ್ನ ಮಗಂ ವೃಷಸೇನಂ
ತನ್ನ ಮಗಂ ಸತ್ತನಣ್ಮಿ ಲಕ್ಷಣನುಂ ನೀ
ನೆನ್ನ ಸಂತೈಸುವುದಾಂ
ನಿನ್ನಂ ಸಂತೈಸೆ ಬಂದೆನಂಗಾಧಿಪತೀ॥೧೩॥
ಪಳಿಯಂ ಕೇಳ್ದೆನೊ ಮೇಣ್ನಡೆ
ವಳಿಯಂ ತಪ್ಪಿದೆನೊ ಕಾಣೆನಣ್ಮಿಂದಂ ಕೂ
ರ್ತಳಿದಿವರಂ ಪಗದೆನೊ ಪ
ಚ್ಛಳಿದೆನೊ ಪೇಳ್ ಕೂಡಿ ನಿನ್ನೊಳಂಗಾಧಿಪತಿ॥೧೪॥
ಅರಿಯೆನಿದಂ ನಿನ್ನಿಂದಿನ
ತೆರನಂ ನೀನೆನಗದೇಕೆ ಮುಳಿದಿರ್ಪೆಯೊ ಮೇಣ್
ಮರುವಾತುಗುಡದೆ ರವಿಸುತ
ಮರಸುಂದಿರ್ದಪೆಯೊ ಮೇಣ್ಬಳಲ್ದಿರ್ದಪೆಯೋ॥೧೫॥
ನಿನ್ನೀ ಕೆಳೆಯ ಸುಯೋಧನ
ನನ್ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನೆನ್ನದೆ ಜೀಯೆನ್ನದೆ ದೇ
ವೆನ್ನದದೇಕುಸಿರದಿರ್ಪೆಯಂಗಾಧಿಪತಿ॥೧೬॥
ಅನೃತಂ ಲೋಭಂ ಭಯಮೆಂ
ಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂ
ದನ ನನ್ನಿ ಚಾಗಮಣ್ಮೆಂ
ಬಿನಿತರ್ಕಂ ನೀನೆ ಮೊತ್ಮಮೊದಲಿಗನಾದಯ್॥೧೭॥
ಆನರಿವೆಂ ಪೃಥೆಯರಿವಳ್
ದಾನವರಿಪುವರಿವನರ್ಕನರಿವಂ ದಿವ್ಯ
ಜ್ಞಾನಿಸಹದೇವನರಿವಂ
ನೀನಾರ್ಗೆಂದಾರುಮರಿಯರಂಗಾಧಿಪತಿ॥೧೮॥
ಒಡವುಟ್ಟಿದನೆಂದರಿದೊಡೆ
ಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂ
ಕುಡಲಾರ್ತೆನಿಲ್ಲ ರಾಜ್ಯ
ಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತಿ॥೧೯॥
ನೀನುಳ್ಳೊಡುಂಟು ರಾಜ್ಯಂ
ನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟಯ್
ನೀನುಳ್ಳೊಡುಂಟು ಪೀಳಿಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತಿ॥೨೦॥
ಇನಸುತ ಗಾಂಡಿವಿ ಸಂಮೋ
ಹನಾಸ್ತ್ರದಿಂದೆಚ್ಚು ನಿದ್ರೆಯಂ ಮಾಡಿದನಂ
ದಿನ ಗೋಗ್ರಹಣದೊಳೀಗಳ್
ನಿನಗಿಂತೀ ದೀರ್ಘನಿದ್ರೆಯಂ ಮಾಡಿದನೇ॥೨೧॥
ಕಸವರಮಂ ದ್ವಿಜದಾನಕೆ
ಪೂಸಜೌವನಮಂ ಸ್ವದಾರ ಸಂತೋಷಕೆ ನಿ
ನ್ನಸುವಂ ಪತಿಕಾರ್ಯಕೆ ವೆ
ಚ್ಚಿಸಿದಯ್ ನಿನ್ನನ್ನನಾವನಂಗಾಧಿಪತಿ॥೨೨॥
ಹರಿ ಬೇಡೆ ಕವಚಮಂ ನೀ
ನರಿದಿತ್ತಯ್ ಕೊಂತಿ ಬೇಡೆ ಬೆಚ್ಚದೆ ಕೊಟ್ಟಯ್
ಪುರಿಗಣೆಯಂ ನಿನಗೆಣೆ ಕಸ
ವರಗಲಿ ಮೆಯ್ಗಲಿಯುಮಾವನಂಗಾಧಿಪತಿ॥೩೩॥
ನಯನದೊಳಮೆರ್ದೆಯೊಳಂ ನಿ
ನ್ನಯ ರೂಪಿರ್ದಪುದು ನಿನ್ನಮಾತಿರ್ದಪುದೆ
ನ್ನಯ ಕಿವಿಯೊಳಗಿನನಂದನ
ವಿಯೋಗಮೆಂತಾದುದರಿಯೆನಂಗಾಧಿಪತೀ॥೨೪॥
ನಿನ್ನಂ ಕೊಂದ ಕಿರೀಟಿಯು
ಮೆನ್ನನುಜನನಿಕ್ಕಿಕೊಂದ ಭೀಮನುಮೊಳನಾ
ನಿನ್ನುಮೊಳೆಂ ಗಡಿದಕ್ಕುಮೆ
ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ॥೨೫॥
ಪರಶುಧರಂ ಚಕ್ರಧರಂ
ಸುರಪತಿ ಭೂಕಾಂತೆಯೆಂದೀ ಪೇಳ್ದ
ಯ್ವರೆ ಕೂಡಿ ನಿನ್ನ ಕೊಂದರ್
ನರನೊರ್ವನೆ ಕೊಂದನಲ್ಲನಂಗಾಧಿಪತೀ॥೨೬॥
ಇಂದಾನಿದೆಂ ಮೇಣಿನ
ನಂದನ ಕೇಳ್ ಪಾಂಡುತನಯರಾದರ್ ನಿನ್ನಂ
ಕೊಂದುಂ ದುಶ್ಯಾಸನನಂ
ಕೊಂದುಂ ಬರ್ದುಕುವರೆ ಬರ್ದುಕರಂಗಿಧಿಪತೀ॥೩೭॥
ಇನಸುತನಿರವಂ ದುಶ್ಯಾ
ಸನನಿರವಂ ಕಂಡುಮಿನ್ನುಮೆನ್ನಸುವಿದು ನೆ
ಟ್ಟನೆ ಪೋದುದಿಲ್ಲ ಕಲ್ಲೆರ್ದೆ
ತನದಿಂದೆನ್ನಂತು ಬರ್ದನಾವನುಮೊಳನೇ॥೨೮॥
ಸೂನುಗಳಳಿವಂ ಪ್ರಿಯಮಿ
ತ್ರಾನುಜರರಿವಂ ವಿಧಾತ್ರ ನೀಂ ಕಾಣಿಸಿ ಮುಂ
ದೇನಂ ಕಾಣಿಸಲಿರ್ದಪೆ
ನೀನೆನ್ನಂ ಪಾಪಕರ್ಮನಂ ನಿರ್ಗುಣನಂ॥೨೯॥
ಆರೊಡನೆ ನುಡಿವೆನಳ್ತಿಯೊ
ಳಾರೊಡನೋಲಗದೊಳಿರ್ಪೆನಾರೊಡನೆ ಸಮಂ
ತಾರೋಗಿಪೆನೇರುವೆನಾ
ನಾರೊಡನೆನ್ನಣುಗರಿಲ್ಲದಿಭವಾಜಿಗಳಂ॥೩೦॥
ಕೆಳೆಯಂಗಾಯ್ತಸುಮೋಕ್ಷಮಾಗದೆನಗಂ ಬಾಷ್ಮಾಂಬು ಮೋಕ್ಷಂ ಧರಾ
ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾಂ ಕೊಟ್ಟೆನಲ್ಲನ್ಯಮಂ
ಡಳಮಂ ಸುಟ್ಟನಿವಂ ಪ್ರತಾಪ ಶಿಖಿಯಿಂದಾನೀತನಂ ಸತ್ಕ್ರಿಯಾ
ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ॥೩೧॥
ಜಲದಾನಕ್ರಿಯೆಯಂ ವಾ
ಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ
ಕೆಳೆಯಂಗೆ ಮಾಡಿದಯ್ ಕುರು
ಕುಲದರ್ಪಣ ಮರೆವುದಿನ್ನಹರ್ಪತಿಸುತನಂ॥೩೨॥
ಪೆಂಡಿರ್ ಪಳಯಿಸುವಂದದೆ
ಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್
ಕೊಂಡೆಸೆಪರಾರೊ ಕುರುಕುಲ
ಮಂಡನ ನೀನೆತ್ತಿಕೊಂಡ ಛಲಮನೆ ಮೆರೆಯಾ॥೩೩॥
ದರಹಾಸಪೇಶಲಂ ದಿ
ಕ್ಕರಿಗಮನಂ ಕನಕಪರ್ವತ ಪ್ರಾಂಶುದಿನೇ
ಶ್ವರಸುತನ ರೂಪು ಚಿತ್ರಂ
ಬರೆದಂತಿರ್ದಪುದು ಚಿತಾತಭಿತ್ತಿಯೊಳೆನ್ನಾ॥೩೪
ಗುರುದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು
ರ್ವರೆಯ ಕಾವ ಗುಣಕ್ಕೆ ನರ್ಮಸಚಿವಂ ಕ್ರೀರಸಕ್ಕಾನೆಯಾಳ್
ಗುರುಭಾರಕ್ಕಿರಿವಾಳ್ ರಣಕ್ಕೆ ತುಳಿಲಾಳ್ ಕಟ್ಟಾಯದೊಳ್ ಮೇಳದಾಳ್
ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ॥೩೫॥
ದಿವಿಜತನಯಂಗೆ ಮುಖ್ಯಂ
ರವಿಜಂಜಯಕಾದನೆನಗೆ ಕಣ್ಣೊಳ್ ಕಾಣಂ
ಕಿವಿಯೊಳ್ ಕೇಳಂ ಕಾಣ್ಬಂ
ದವೆಂತು ಕೇಳ್ವಂದಮೆಂತು ತಲೆಯಿಲ್ಲದನಾ॥೩೬॥
ತರಣಿತನಯಾನನೇಂದು
ಸ್ಮರಣದೆ ಕಯ್ಗಣ್ಮುವೆನ್ನ ಶೋಕಮಹಾಸಾ
ಗರಮಂ ತವೆಪೀರ್ದುದು ಭೀ
ಕರಮತ್ಕೋಪಾಗ್ನಿ ಬಾಡಬಾಗ್ನಿ ತೆರದಿಂ॥೩೭॥
ಧವಳ ಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಂ
ಧವಳವಿಲೋಚನೋತ್ಪಲ ವಧೂಜನಮುಂ ಬೆಲಸಷ್ಟದಿಕ್ತಟಂ
ಧವಳಿಸೆ ಕೀರ್ತಿಯಿಂ ಧವಳ ಮಂಗಳಗೇಯದಿನೊಪ್ಪಿ ಬರ್ಪ ಕೌ
ರವಧವಳಂಗೆ ದೇಸಿಗನೆ ಬರ್ಪವೊಲೊರ್ವನೆ ಬರ್ಪುದಾದುದೆ॥೪೧॥
ಎಲ್ಲಿದುವೊ ಧವಳಚಾಮರ
ಮೆಲ್ಲಿತ್ತೊಸಿತಾತಪತ್ರಮಹಿಕೇತನಮ
ತ್ತೆಲ್ಲಿತ್ತೊ ಮೃಗೇಂದ್ರಾಸನ
ಮೆಲ್ಲಿದುವೋ ಲೋಲಪಾಳಿಕೇತನತತಿಗಳ್॥೪೨॥
ಎಲ್ಲಿದಳೊ ಭಾನುಮತಿ ತಾ
ನೆಲ್ಲಿತ್ತೋಲಗದ ಸೂಳೆಯರ್ಕಳ ತಂಡಂ
ಎಲ್ಲಿತ್ತೊ ಗೀತವಾದ್ಯಂ
ಸಲ್ಲಲಿತವಧೂಜನಪ್ರವೃತ್ತಂ ನೃತ್ತಂ॥೪೩॥
ಸುತಶತಕಮುಂ ಸಹೋದರ
ಶತಕಮುಮೆಲ್ಲಿತ್ತೊ ಮಗನೆ ಪೇಳೆಲ್ಲಿತ್ತೋ
ಚತುರಂಗ ಸೈನ್ಯಮೆಲ್ಲಿದ
ರತಿರಥಸಮರಥಮಹಾರಥಾರ್ಧರಥರ್ಕಳ್॥೪೪॥
ನಿಮಗೆ ಪೊಡಮಟ್ಟು ಪೋಪೀ
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ
ಸಮಕೊಳಿಸಲೆಂದು ಬಂದೆನೆ
ಸಮರದೊಳೆನಗಜ್ಜ ಪೇಳಿಮಾವುದು ಕಜ್ಜಂ॥೪೫॥
ಕಲಿಗಂ ಶಂಕೆಯೆ ಚಾಗಿಗಂ ಬೆರಗೆ ಮೇಣ್ ಕಟ್ಟಾಳ್ ನೆರಂಬಾರ್ವನೇ
ಕುಲಜಂಗಂ ಮರುವಾಳೆ ಸಜ್ಜನಿಕೆಗಂ ಕಲ್ವೋಜೆಯೇ ಧರ್ಮಿಗಂ
ಕೊಲೆಯೇ ಮಂತ್ರಿಗಮಿಚ್ಚೆಕಾರತನಮೇ ತಕ್ಕಂ ಪಿಸುಣ್ಬೇಳ್ವನೇ
ಚಲಮಂ ಗಂಡುಮನಪ್ಪುಕೆಯ್ವೆನಗಮಾ ಕೌಂತೇಯರೊಳ್ ಸಂಧಿಯೇ॥೪೬॥
ನೆಲಕಿರಿವೆನೆಂದು ಬಗೆದಿರೆ
ಚಲಕಿರಿವೆಂ ಪಾಂಡುಸುತರೊಳೀನೆಲನಿದು ಪಾ
ಳ್ನೆಲನೆನಗೆ ದಿನಪಸುತನಂ
ಕೊಲಿಸಿದ ನೆಲನೊಡನೆ ಪುದುವಾಳ್ದಪೆನೇ॥೪೭॥
ಅನುಜಸಮೇತನೊಳಂತಕ
ತನಯನೊಳನುಜವ್ಯಪೇತನೀಗಳ್ ದುರ್ಯೋ
ಧನನಳಿಪಿ ಸಂಧಿಗೆಯ್ದೊಡೆ
ಮುನಿವರ ಮೆಚ್ಚುವರ ನುಡಿಗೆ ಪಕ್ಕಾಗಿರನೇ॥೪೮॥
ಕೂಡೆ ವಿರೋಧಿಯಂ ತರಿದು ತದ್ವಶಮಾಂಸದೆ ಭೂತಭೋಜನಂ
ಮಾಡದೆ ವೈರಿವಾರವನಿತಾವದನಾಂಬುರುಹಕ್ಕೆ ಬೆಳ
ರ್ಮಾಡದ ಬಂಧುಶೋಕದೊಳೆ ಪೊರ್ದಿದ ಬಂಧುಜನಕ್ಕೆ ಸಂತಸಂ
ಮಾಡದೆ ಸಂಧಿಮಾಡುವನೆ ಪಾಂಡವರೊಳ್ ಫಣಿರಾಜಕೇತನಂ॥೪೯॥
ಬಾಡಮನಯ್ದನವರ್ ಮುಂ
ಬೇಡಿದಡಾನಿತ್ತೆನಿಲ್ಲ ರಾಜ್ಯಾರ್ಧಮನಾಂ
ಬೇಡಿಯವರಲ್ಲಿಗಟ್ಟಿದೊ
ಡೇಡಿಸಿ ರೋಡಿಸನೆ ಪವನನಂದನನೆನ್ನಂ॥೫೦॥
ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು
ಳ್ಳನ್ನೆಗಮೊಲ್ಲೆನೆನ್ನೊಡಲೊಳೆನ್ನಸುವುಳ್ಳಿನಮಜ್ಜ ಸಂಧಿಯಂ
ಮುನ್ನಮವಂದಿರಿರ್ಬರುಮನಿಕ್ಕುವೆನಿಕ್ಕಿ ಬಳಿಕ್ಕೆ ಸಂಧಿಗೆ
ಯ್ವೊನ್ನೆಗಳ್ದಂತಕಾತ್ಮಜನೊಳೆನ್ನಳಲಿರಿದೊಡಾಗದೆಂಬೆನೇ॥೫೧॥
ಪುದುವಾಳಲ್ಕಣಮಾಗದೆಂತುಮವರೊಳ್ ಸಂಧಾನಮಂ ಮಿಡಲಾ
ಗದು ನೀಮಿಲ್ಲದೇಯಜ್ಜ ಬಿಲ್ಲಗುರುಗಳ್ ತಾಮಿಲ್ಲದಾ ಕರ್ಣನಿ
ಲ್ಲದೆ ದುಶ್ಯಾಸನನಿಲ್ಲದಾರೊಡನೆ ರಾಜ್ಯಂಗೆಯ್ವೆನಾರ್ಗೆನ್ನ ಸಂ
ಪದಮಂ ತೋರುವೆನಾರ್ಗೆತೋರಿ ಮೆರೆವೆಂ ನಾನಾ ವಿನೋದಂಗಳಂ॥೫೨॥
ಖಂಡಿತಮೆನಿಪ್ಪ ಪರಮಹಿ
ಮಂಡಲಧವಳಾತಪತ್ರಸಂಪದ಼ಮೆನಗೇ
ಭಂಡಮದನೊಲ್ವೆನೊಲ್ಲೆನ
ಖಂಡಿತಮಭಿಮಾನಮದನೆ ಬಲ್ವಿಡಿವಿಡಿವೆಂ॥೫೩॥
ಪುಟ್ಟಿದ ನೂರ್ವರುಮೆನ್ನೊಡ
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ಪುಟ್ಟಿ ಪೊದಳ್ದುದು ಸತ್ತರ್
ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ॥೫೪॥
ಕಾದದಿರೆನಜ್ಜ ಪಾಂಡವ
ರಾದರ್ ಮೇಣಿಂದಿನೊಂದೆ ಸಮರದೊಳಾಂ ಮೇ
ಣಾದೆನದರಿಂದೆ ಪಾಂಡವ
ರ್ಗಾದುದು ಮೇಣಾಯ್ತು ಕೌರವಂಗವನಿತಳಂ॥೫೫॥
ಜಲಧಿಗಳೇಳುಂ ಭೂಭೃ
ತ್ಕುಲಂಗಳಂ ರಿಪುಗೆ ಸಿರಿಯನೀವಂತೆತ್ತಂ
ತಳಮಳವಿಗಳಿಯೆ ಕುರುಕುಲ
ತಿಳಕಂ ರಿಪುಗೆಂತುಮೀವನಲ್ಲಂ ಶ್ರೀಯಂ॥೫೬॥
ಜತುಗೇಹಾನಲಬೀಜಮುಗ್ರವಿಷಸಂಜತಾಂಕುರಂ ಕ್ರೀಡನೋ
ದ್ದತಿಕೃದ್ದ್ಯೂತವಿನೋದಪಲ್ಲವಚಯಂ ಪಾಂಚಾಲರಾಜಾತ್ಮಜಾ
ಯತಕೇಶಗ್ರಹಪುಷ್ಪಮಾಗೆ ಬೆಳೆದಾ ವೈರದ್ರುಮಂ ಕೌರವ
ಕ್ಷಿತಿಪಾಲೋರು ಕಿರೀಟಭಂಗ ಫಲಮಂ ಪೇಳ್ ಮಾಡದೇಂ ಪೋಕುಮೇ॥೫೭॥
ಷಷ್ಟಾಶ್ವಾಸಂ
ತುಂಗ ಕುರುವಂಶಮಯಶೋ
ಭಂಗಂ ಛಿದ್ರಿತಮದೆನ್ನ ದೂಸರಿನಾಯ್ತಾ
ನುಂ ಗಡ ಕುರುರಾಜನೆ ನೀ
ಮುಂ ಗಡ ಸಂಧಾನವೇಳ್ದಿರೆನಗರಸು ಗಡಾ॥೩॥
ಈಯೆರಡುಮೆನ್ನ ನಿಡುದೋ
ಳಾಯತ್ತಂ ವೀರವೃತ್ತಿ ಜಯಮೆಂಬುದು ದೈ
ವಾಯತ್ತಮಜ್ಜ ಭರತಾ
ನ್ವಾಯಕ್ಕೆ ಕಲಂಕಮಾಗದಂತಿರೆ ನೆಗಳ್ವೆಂ॥೪॥
ಬೆಸಕೆಯ್ವೆಂ ಬಿಡಿಮಜ್ಜ ಮಂಗಳಮಹಾಶ್ರೀ ಸಂಧಿಕಾರ್ಯಕ್ಕೆ ಲಂ
ಘಿಸಿದೆಂ ನಿಮ್ಮಯಮಾತನೊರ್ಮೆಗೆಮದಾಜ್ಞಾಲಂಘನಂ ದೋಷಮೊಂ
ದಿಸದಿನ್ನಾಗ್ರಹಮಂ ಬಿಸುಳ್ಪುದೆನೆ ಸತ್ತ್ವಕ್ಕಂ ತದೇಕಾಂಗ ಸಾ
ಹಸಕಂ ವಿಸ್ಮಯಮುತ್ತು ಮೆಚ್ಚಿ ಪೊಗಳ್ದಂ ಮಂದಾಕಿನೀ ನಂದನಂ॥೫॥
ದಿನಕರ ತನಯನ ದುಶ್ಯಾ
ಸನನವಿಯೋಗದೊಳಮಿಂದುವರೆಗಂ ನೋವಿ
ಲ್ಲೆನಗಹಿತರೊಡನೆ ಸಂಧಿಗು
ಡೆನೆ ನೊಂದೆಂ ಸ್ವಜನಗುರುಜನಾಭಾಯರ್ಥನೆಯಿಂ॥೭॥
ಅರಿಗಳ್ ಪಾಂಡವರೊಳ್
ವಿರೋಧಮಂ ಬಿಸುಟು ಸಂಧಿಯಂ ಮಾಡುವುದೆಂ
ಬರಮಾತಂ ಕೇಳಿಸಲೆ
ನ್ನೆರಡುಂ ಕಿವಿಗಳನದೇಕೆ ಬಿದಿ ಮಿಡಿದನೋ॥೮॥
ಒಂದೆರಡು ಮತ್ತರಂತರ
ದಿಂದಂ ಪೊರಮಟ್ಟಪಜ್ಜೆಯಿಂ ಸಲೆ ಕೊಳನಂ
ಪಿಂದು ಪೆರಗಾಗಿ ಪುಗೆ ಚಿಃ
ಎಂದವನಂ ರಾಜ್ಯಲಕ್ಪ್ಮಿ ಪೇಸಿ ಬಿಸುಟ್ಟಳ್॥೯॥
ತುರುವಂ ಕಳಿಸುವ ಕೃಷ್ಣೆಯ
ನಿರಿಯಂ ಪಿಡಿದುರ್ಚವೇಳ್ವ ಕೊಳನಂ ಪಿಂದುಂ
ಪೆರಗಾಗಿ ಪುಗುವ ದುರ್ನಯ
ಮರಿಪವೆ ಕೌರವನ ರಾಜ್ಯದಾಯದ ಕುಂದಂ॥೧೦॥
ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂಪತ್ತಿತ್ತೊ ಮೇಣಿಲ್ಲಿ ಪ
ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಿಲ್ಲಿ ದಿಙ್ನಾಗರಾ
ಜಗೆ ಮೆಯ್ಗರ್ಚಿಕೊಳಲ್ಕಜ ಸಮೆದ ತೋಯೋದ್ದೇಶಮೋ ಸಂದೆಯಂ
ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ॥೧೧॥
ಕುರುಪತಿ ನಿನ್ನ ಪೊಕ್ಕತೊರೆಗಳ್ ಮೊದಲಾಗಿಯೆ ಬತ್ತುತಿರ್ಪುವೀ
ದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ ಭೀಮನೀ ಸರೋ
ವರಮುಮನೆಮ್ಮುಮಂ ಕದಡುಗುಂ ಪುಗದಿರ್ ತೊಲಗೆಂದು ಬಗ್ಗಿಪಂ
ತಿರೆ ನೆಗೆದತ್ತನೇಕಬಕಕೋಕಮರಾಳವಿಹಂಗಮಸ್ವನಂ॥೧೨॥
ವಳಿತಶಿಳೀಮುಖಮುತ್ಪಳ
ದಳನಯನಂ ಕಂಜರಂಜಿತ ಜಯಲಕ್ಷ್ಮೀ
ವಿಳಸಿತಮೆನೆ ದಿಟ್ಟಿಗೆ ಕೊಳು
ಗುಳಮಂ ಪೋಲ್ದತ್ತು ಪೂಗೊಳಂ ಕೌರವನಾ॥೧೩॥
ನರಲೋಕಮನನುಭೋಗಿಸಿ
ಸುರಲೋಕದ ಸುಖಮನಾತ್ಮ ವಿಭವದೆ ತಳೆದಾ
ಕುರುಪತಿ ವೈಶಂಪಾಯನ
ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ॥೧೪॥
ವನರುಹವಿಷ್ಟರಂ ರುಚಿರಂ ರೇಚಕ ಪೂರಕ ಕುಂಭಕಕ್ರಿಯಾ
ಮನಮಿರೆ ನೆತ್ತಿಯೊಳ್ ದರನಿಮೀಲಿತ ದೃಷ್ಷಿ ನಿವಿಷ್ಟ ಮಾಗೆ ಮೂ
ಗಿನತುದಿಯೊಳ್ ನೀರುದ್ಧ ಮಂತ್ರ ಪದಾಕ್ಷರಂಗಳಂ
ಜಿನುಗುತಲಿರ್ದನಾ ಪರಮಯೋಗಿಯವೊಲ್ ಫಣಿರಾಜಕೇತನಂ॥೧೫॥
ಮೀರಿದ ಪಗೆವನ ಪಟ್ಟಂ
ಪಾರಿಸುವೆನೊ ಮುನ್ನಮಮರುಂಡಮೃತಮನೇಂ
ಕಾರಿಸುವೆನೊ ಖಚರರನಡ
ರ್ದೇರಿಸುವೆನೊ ಮೇರುಗಿರಿರ ತೂರಲ ತುದಿಯಂ॥೧೭॥
ಎತ್ತುವೆನೊ ಮಂದರಾದ್ರಿಯ
ನೊತ್ತುವೆನೊ ರಸಾತಳಕ್ಕೆ ನೆಲನಂ ದೆಸೆಯಂ
ಪತ್ತುವೆನೊ ಪಗೆಯ ಬೆನ್ನಂ
ಪತ್ತುವೆನೊ ದಿಶಾಗಜಂಗಳಂ ತುತ್ತುವೆನೊ॥೧೮॥
ದಾಂಟುವೆನೊ ಕುಲನಗಂಗಳ
ನೀಂಟುವೆನೊ ಚತುಸ್ಸಮುದ್ರಮಂ ರವಿ ಶಶಿಯಂ
ಮೀಂಟುವೆನೊ ಗಗನತಳದಿಂ
ಗಂಟಲನೊತ್ತುವೆನೊ ಸಕಲ ದಿಕ್ಪಾಲಕರಂ॥೧೯॥
ರಸೆಗಿಳಿದನೊ ಮೇಣ್ ನಾಲ್ಕುಂ
ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲೀ
ವಸುಮತಿಯೊಳ್ ಗಾಂಧಾರಿಯ
ಬಸಿರಂ ಮೇಣ್ ಮಗುಳೆ ಪೋಗಿ ಪೊಕ್ಕಿರ್ದನೋ॥೨೦॥
ಚರಮಚರಮೆಂಬ ಜಗದಂ
ತರದೊಳ್ ಖಳನೆಲ್ಲಿ ಪೊಕ್ಕೊಡಂ ತದ್ಭುಜಪಂ
ಜರದೊಳ್ ಪೊಕ್ಕೊಡೆ ಹರಿಹರ
ಹಿರಣ್ಯಗರ್ಭರ್ಕಳಾಂತೊಡಂ ಕೊಲ್ಲದಿರೆಂ॥೨೨॥
ಕುರುಕುಲಕದಳೀಕಾನನ
ಕರಿಕಳಭಂ ಶತ್ರುಶಲಭಸಂಪಾತನವಿ
ಸ್ಫುರಿತಪ್ರದೀಪನಾಕುರು
ಧರೆಯೊಳ್ ಕುರುಪತಿಯನರಸಿದಂ ಪವನಸುತಂ॥೨೭॥
ಮರುದಾಂದೋಳಿತ ಜಂಬೂ
ತರುಶಾಖಾಹಸ್ತಕಿಸಲಯಂ ಮಿಳಿಮಿಳಿರು
ತ್ತಿರೆ ಸನ್ನೆಗೆಯ್ದು ತೋರ್ಪಂ
ತಿರಲೆಸೆದುವು ಪವನಜಂಗೆ ದುರ್ಯೋಧನನಂ॥
ಭವದಹಿತನಿಲ್ಲಿದಂ ಕೌ
ರವಾರಿ ನೋಡೆಂದು ಮೂಡಿಮುಳ್ಕಾಡಿಯೆ ತೋ
ರ್ಪವೋಲಲ್ಲಿ ಮೂಡಿ ಮುಳ್ಕಾ
ಡುವ ವಿಹಗಾವಳಿಗಳೇಂ ಮನಂಗೊಳಿಸಿದುವೋ॥೪೪॥
ಮೀಂಗುಲಿಗವಕ್ಕಿ ಕೊಳನೊಳ್
ಮೀಂಗೆರಗುವ ತೆರದಿನೆರಗಿ ನೋಡಿಲ್ಲಿರ್ದಂ
ಪಿಂಗಾಕ್ಷನೆಂದು ಪವನಸು
ತಂಗರಿಪುವ ತೆರದಿನಂತದೇಂ ಸೊಗಯಿಸಿತೋ॥೪೫
ಮಲುದಾತ್ಮಜ ನಿಜರಿಪು ತಲೆ
ಗರೆದಿರ್ದಪನಿಲ್ಲಿ ನೋಡು ಕೊಳದೊಳಗೆಂಬಂ
ತಿರೆ ಪೊಳೆದು ತೋರ್ಪ ಜಲಚರ
ಪರಿಕರಮರಿಪಿದುವು ತಾಮೆ ದುರ್ಯೋಧನನಂ॥೪೬॥
ಒಳಗಾದಂ ಪಗೆವಂ ಸರೋವರದೊಳಿರ್ದಿನ್ನೆತ್ತವೋಪಂ ಸರೋ
ಜಳಮಂ ತವೆ ಪೀರ್ದು ಪೀರ್ವೆನಸುಹೃದ್ರಕ್ತಾಂಬುವಂ ತೋರ್ಪೆನೆ
ನ್ನಳವಂ ಮತ್ಪತಿಗೆಂದು ಸಂತಸದೆ ಬಾಹಾಸ್ಭಾಲನಂಗೆಯ್ದು ದಿ
ಗ್ವಳಯಂ ಮಾರ್ದನಿಯಿಟ್ಟವೊಲ್ ಗಜರಿದಂ ಚಾಳುಕ್ಯ ಕಂಠೀರವಂ॥೪೭॥
ಸಪ್ತಮಾಶ್ವಾಸಂ
ಭರತಾನ್ವಾಯದೋಳಂದಿನಿಂದುವರೆಗಂ ಸಾಪತ್ನರೊಳ್ ಬದ್ಧಮ
ತ್ಸರಮಿಲ್ಲೆಮ್ಮನಕಾರಣಂ ಕದಡಿದಯ್ ಸಾವೆಯ್ದಿದಯ್ ನಷ್ಟಸೋ
ದರಮಾದತ್ತೆನಗಂ ಸ್ವಗೋತ್ರವಧೆಯಪ್ಪಾಪಾತಕಂ ಕೌರವೇ
ಶ್ವರ ನೀಂ ಸಂಧಿಗೊಡಂಬಡಿಂತು ಕೊಳನಂ ಪೊಕ್ಕಿರ್ದುದೇಂ ತಕ್ಕುದೇ॥೯॥
ಜಳದೊಳ್ ಮೀನಿರ್ಪವೊಲ್ ನೀಂ ಕೊಳದೊಳೆ ಮುಳುಗಿರ್ದಕಟಾ ಕೋಡಸೇಡಿಂ
ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಜಾಕರಂ ತೋರಿದಯ್ ನಿ
ನ್ನಳವಂ ಚಿಃ ಸತ್ತರೇಂ ಪುಟ್ಟರೆ ಪೊರಮಡು ನೀಂ ಕಯ್ದುಗೊಳ್ ಕೌರವೇಂದ್ರಾ
ಚಳವಜ್ರಂ ಬಂದನೀಗಳ್ ಕುರುಕುಲಮಥನೋದ್ಭೀಕರಂ ಭೀಮಸೇನಂ॥೧೩॥
ಹರಿಸಂಧಾನಕ್ಕೆ ವಂದಂದವಗಡಿಸಿದಹಂಕಾರಮೇನಾಯ್ತೊ ಕೃಷ್ಣಾಂ
ಬರಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೊ ಕೌಂತೇಯರಂ ಮ
ಚ್ಚರದಿಂ ಕಾಂತಾರದೊಳ್ ತಿರ್ರನೆ ತಿರಿಪಿದ ಸೊರ್ಕೀಗಳೇನಾದುದೆಂದಾ
ಕುರುವಂಶಾಧೀಶನಂ ಮೂದಲಿಸಿದನದಟಂ ಭೀಮನುದ್ದಾಮಭೀಮಂ॥೧೪॥
ಎನಿತುಂ ಪೊಕ್ಕಿರ್ದಪಯ್ ನೀಂ ಪೊರಮಡು ಕೊಳದಿಂ ದ್ರೌಷದೀದ್ರೋಹದುಶ್ಯಾ
ಸನದುಷ್ಟಜ್ಯೇಷ್ಠ ಭೀಷ್ಮಪ್ರಮುಖನಿಖಿಲಬಂಧುಕ್ಷಯೋತ್ಪನ್ನದುಃಖ
ಧ್ವನಿವಾರಿಚ್ಛಿನ್ನಧೈರ್ಯದ್ರುಮ ಯಮಸುತ ನಿಷ್ಕರಣ ದ್ವೇಷಿ ಭೀಮ ಧ್ವನಿಯಂ ಕೇಳ್ದಿನ್ನುಮಿರ್ದಯ್ ಕುರುಕುಲವಿಲಯೋತ್ಪಾತನೋತ್ಪಾತಕೇತೂ॥೧೫॥
ಅನಿಲತನೂಜನ ಸಿಂಹ
ಧ್ವನಿಯಂ ಕೇಳ್ದಳ್ಕಿ ತತ್ಸರೋವರದೆರ್ದೆ ಪ
ವ್ವನೆ ಪಾರುವಂತೆ ಪಾರಿದು
ವನಾಕುಳಂ ಕೊಳದೊಳಿರ್ದ ತದ್ವಿಹಗಕುಳಂ॥೧೭॥
ಅರೆಸೀದುವು ತಾವರೆ ಖಗ
ಮರೆಬೆಂದುವು ಭೀಮಕೋಪಶಿಖಿ ಮುಟ್ಟೆ ಸರೋ
ವರದ ಮಳಲ್ ಪುರಿಗಡಲೆಗೆ
ಪುರಿದ ಮಳಲ್ ಕಾಯ್ವ ತೆರದೆ ಕಾಯ್ದತ್ತೆತ್ತಂ॥೧೮॥
ಬಂದಂ ಬಕಾಂತಕಂ ಪೋ
ಕೊಂದಂಬಕವೆಸರ್ಗೆ ಮುನಿದು ನಮ್ಮುಮನಿನ್ನೆಂ
ಬಂದದೊಳೆ ಪಾರಿಪೋದುವು
ನಿಂದಿರದುರವಣಿಸಿ ಬಕನಿಕಾಯಕಮದರೊಳ್॥೧೯॥
ಕುಪಿತಮರುತ್ಸುತರವಕ
ಳ್ಕಿ ಪರಮೇಶ್ವರನಿಕರಸಂಭ್ರಮೋಲ್ಲಹರಿಕೆ ಭಾ
ವಿಪೊಡೆ ಜನಕ್ಕೆ ಕೊಳಂ ಕಿ
ಳ್ತು ಪಾರುವಂತಾಯ್ತು ಕಮಲಜಾಂಡಂಬರೆಗಂ॥೨೦॥
ಆರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುಲಗಪತಾಕಂ॥೨೨॥
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ
ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ
ರಜವನದಿಂ ಕರಂಗಿ ಕಮಲಾಕರದಿಂ ಪೊರಮಟ್ಟನಾಗಳಾ
ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥
ನೆನೆ ಚಿತ್ರಾಂಗದನಿಂದಮಂದು ನಿನಗಾದಾಪತ್ತನಾ ಬನ್ನಮಂ
ನೆನೆ ನೀಂ ಗೋಗ್ರಹಣ ಪ್ರಪಂಚದೊಳೆ ಮೆಯ್ವೆತ್ತಿರ್ದುದಂ ನಿನ್ನ ತ
ಮ್ಮನ ಕೆನ್ನೆತ್ತರನೀಂಟುವಲ್ಲಿ ಭಯದಿಂದಳ್ಕುತ್ತೆ ಬೆನ್ನಿತ್ತುದಂ
ನೆನೆ ಪಿಂತಿಕ್ಕಿದ ನಿನ್ನ ಮುನ್ನಿನ ಕವಲ್ಬನ್ನಂಗಳಂ ಕೌರವಾ॥೪೦॥
ಜತುಗೇಹಾನಲದಾಹದಿಂ ವಿಷವಿಶೇಷಲಿಪ್ತಗುಪ್ತಾನ್ನದಿಂ
ಕೃತಕದ್ಯೂತವಿನೋದದಿಂ ದ್ರುಪದಜಾಕೇಶಾಂಬರಕೃಷ್ಟಿಯಿಂ
ಧೃತರಾಷ್ಟ್ರಾತ್ಮಜ ಪಾಂಡುರಾಜಸುತರಂ ಮುನ್ನಂ ಕೊಲಲ್ ಕೋರಿದಯ್
ಗಥಕಾಲಂ ಲಯಕಾಲಮಾಯ್ತು ನಿನಗಿನ್ನಾಯ್ತಂತ್ಯಕಾಲಂ ಗಡಾ॥೪೧॥
ಇರಲಿಂತೀಮಾದ್ರಿಪುತ್ರರ್ ಬಡವುಗಳವರೇಗೆಯ್ವರಿಂ ಧರ್ಮಪುತ್ರಂ
ಬೆರಸೀಗಳ್ ಬರ್ಕೆ ಭೀಮಂ ಹರಿಸುತನೊಡನೀ ಮೂವರುಂ ಬರ್ಕೆ ಮೇಣ
ಯ್ವರುಮಿಂಬರ್ಕೀ ಕೃತಾಂತಾತ್ಮಜಪವನಜಗಾಂಡೀವಧನ್ವರ್ಕಳೀಮೂ
ವರೊಳೊರ್ವಂ ಕೃಷ್ಣ ಬರ್ಕಿಂ ಪೊಣರಲನಿಬರುಂ ಬರ್ಕೆ ಮೇಣ್ ಬನ್ನಮೀವೆಂ॥೪೨॥
ಅಷ್ಟಮಾಶ್ವಾಸಂ
ಕಿರಿಕಿರಿದೆ ಮೆಟ್ಟಿ ಮುಂದಂ
ಕಿರಿಕಿರಿದನೆ ಸಾರ್ಚಿ ತಮ್ಮಗದೆಗಳನಾಗಳ್
ಕಿರಿಕಿರಿದೆ ತಿರುಪಿ ಮಾಣದೆ
ಕಿರಿಕಿರಿದನೆ ತೂಂಕಿ ತೂಂಕಿ ನೂಂಕಿದರೆನಸು॥೭॥
ಪದಘಾತಕ್ಕಗಿದಳ್ಕಿ ಬಳ್ಕಿದುದಧೋಲೋಕಂ ಭಯಂಮರ್ತ್ಯಲೋ
ಕದೊಳಂ ಪೊಣ್ಮಿದುದೂರ್ಧ್ವಲೋಕದೊಳೆ ಮತ್ತಾಯ್ತದ್ಭುತಭ್ರಾಂತಿಯೆಂ
ಬುದನೆಂಬಂತಿರೆಯಂತದೇಂ ಭುವನಂ ಪರ್ಯಾಕುಲಂ ಮಾಡಲಾ
ರ್ತುದೊ ದುರ್ಯೋಧನಭೀಮಸೇನರ ಗದಾಯುದ್ಧಂ ತ್ರಿಧಾಭ್ರಾಂತಿಯಂ॥೧೦॥
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ
ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ
ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂರುಗೊಳ್ಳೆಂದು ಮ
ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥
ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ
ಗಿದು ಪಾಂಚಾಲೀಪ್ರಪಂಚಕ್ಕಿದು ಕೃತಕಸಭಾಲೋಕನಭ್ರಾಂತಿಗೆಂದೋ
ವದೆ ಪೊಯ್ದಂ ತೋಳ್ಗ಼ಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಕೋ
ಪದೊಳಯ್ದಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ॥೧೯॥
ಕುರುರಾಜಂ ವಿದ್ಯಾಧರ
ಕರಣದೆ ನೆಗೆದಂಬರಕ್ಕೆ ಗದೆಯಂ ಕ್ರಮದಿಂ
ತಿರುಪೆ ಧರಾಚಕ್ರಂ ಕೋ
ವರಚಕ್ರಂ ತಿರಿವ ತೆರದಿ ತಿರಿದತ್ತೆನಸುಂ॥೨೪॥
ತೆರಪಂ ನಿಟ್ಟಿಸಿ ಕುರುಪತಿ
ಬರಸಿಡಿಲೆರಗುವವೊಲೆರಗಿಪೊಯ್ಯಲೊಡಂ ಮೆ
ಯ್ಯರಿದು ಪವನಜನು ಮೇನೆಂ
ದರಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥
ಇರಿಯೆಂ ಬಿಳ್ದನನೆಂಬೀ
ಬಿರುಬಿಂದಂ ಬೀಸೆ ಗದೆಯ ಗಾಳಿಯ ಕೋಳೆ
ಳ್ಚರಿಸಿದುದು ಭೀಮನಂ ಮೆ
ಯ್ಮರೆದವನಂ ತಂದೆ ಸುತರ್ಗೆ ಕೂರದರೊಳರೇ॥೩೨॥
ಇಡೆ ತೊಡೆಯನುಡಿದು ನೆಟ್ಟನೆ
ಕೆಡೆಯುತ್ತುಂ ಕರ್ಚಿ ನೆಲನನಾನಿದನೆಂತುಂ
ಬಿಡೆನೆಂಬ ತೆರದೆ ಕುಲಗಿರಿ
ಕೆಡೆವಂದದೆ ಕೌರವೇಂದ್ರನಾಗಳ್ ಕೆಡೆದಂ॥೩೭॥
ಬಲದೇವಾದಿಗಳಾಗದಾಗದೊದೆಯಲ್ಕೇಕಾದಶಾಕ್ಷೋಹಿಣೀ
ಬಲಲಕ್ಷ್ಮೀಪತಿಯಂ ಪರಾಭವಿಸದಿರ್ ಚಿಃ ತಕ್ಕುದಲ್ಲೆಂದು ಮಾ
ರ್ಕೊಳೆಯುಂ ಮಾಣದೆ ಭೀಮಸೇನನೊದೆದಂ ವಾಮಾಂಘ್ರಿಯಿಂ ರತ್ನಮಂ
ಡಲರಶ್ಮಿಪ್ರಕಟಜ್ವಲನ್ಮಕುಟಮಂ ಕೌರವರಾಜೇಂದ್ರನಾ॥೩೯॥
ಮುಳಿಸಿಂ ನಂಜಕ್ಕಿಕೊಂದಂದಿನ ಜತುಗೃಹದೊಳ್ ಸುಟ್ಟುಕೊಂದಂದಿನುರ್ವೀ
ತಳಮಂ ಜೂದಾಡಿ ಗೆಲ್ದಂದಿನ ನಿಜಕಬರೀನೀವಿಬಂಧಂಗಳಂ ದೋ
ರ್ವಳದಿಂದಂ ತಮ್ಮನಿಂದಂ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಸಂ
ಚಳನಾ ಚಂಡಾಲನಾ ಪಾತಕನಿರವನಿದಂ ನೋಡು ಪಂಕೇಜವಕ್ತ್ರೇ॥೪೫॥
ಅರಸಂ ದೀಕ್ಷಿತನಿಲ್ಲಿ ಋತ್ವಿಜರುಮೆಮ್ಮೀ ನಾಲ್ವರುಂ ಸಂಗರಾ
ಧ್ವರದೊಳ್ ತಾನುಪದೇಶಕಂ ಮುರಹರಂ ನೀನುಂ ಗೃಹೀತವ್ರತಾ
ಚರಣವ್ಯಾಪಿಕೆಯುಂ ಭವತ್ಪರಿಭವಂ ಸಂಚಾರಕಂ ಕೌರವೇ
ಶ್ವರನೀತಂ ಪಶುವಾಗೆಬೇಳ್ದೆನಿವಂ ಕೋಪಾಗ್ನಿಯಿಂದಗ್ನಿಜೇ॥೪೬॥
ಇದರೊಳ್ ಮೂರ್ಧಾಭಿಷಿಕ್ತರ್ ಮಣಿಮಕುಟಧರರ್ ಕೃಷ್ಣೆ ಬಾಹಾಬಳಾಗ್ರ್ಯರ್
ಕದನಪ್ರೋಚ್ಚಂಡದಂಡಕ್ರಮವಿಜಿತರಿಪುಕ್ಷತ್ರಿಯರ್ ವೀರಲಕ್ಷ್ಮೀ
ಸದನರ್ಸೋಮಾಮೃತಾಸ್ವಾದನಶುಚಿವದನರ್ ಮುನ್ಮಳ್ಕಾಡಿದರ್ ನೋ
ಡಿದು ನಿನ್ನೀ ಕೇಶಪಾಶಂ ಕುರುಕುಲಪತಿಗಾಯ್ತಲ್ತೆ ಕೀನಾಶಪಾಶಂ॥೪೯॥
ಉಪಕಾರ ಸ್ಮರಣೆ
ಪ್ರೊ. ಪಿ. ಸುಬ್ರಾಯ ಭಟ್
ಅನಂತರ ಲೋಭಂ ಭಯಮೆಂ
ಬಿನಿತುಂ ನೀನಿರ್ದ ನಾಡೊಳಿರ್ಕುಮೆ ರವಿನಂ
ದನ ನನ್ನಿ ಚಾಗಮಣ್ಮೆಂ
ಬಿನಿತರ್ಕಂ ನೀನೆ ಮೊತ್ತಮೊದಲಿಗನಾದಯ್ ||೧೭||
ಆನಱಿವೆಂ ಪೃಥೆಯಱಿವಳ್
ದಾನವರಿಪುವರಿವನರ್ಕನಱಿವಂ ದಿವ್ಯ
ಜ್ಞಾನಿ ಸಹದೇವನಱಿವಂ
ನೀನಾರ್ಗೆಂದಾರುಮಱಿಯರಂಗಾಧಿಪತೀ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ