ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಏಪ್ರಿಲ್ 10, 2021

ಷಡಕ್ಷರಿದೇವವಿರಚಿತಂ ರಾಜಶೇಖರವಿಳಾಸಂ = ಶಿವನ ಪಂಚವಿಂಶತಿ ಲೀಲೆಗಳು

ಷಡಕ್ಷರಿದೇವವಿರಚಿತಂ ರಾಜಶೇಖರವಿಳಾಸಂ 

ತೃತೀಯ ಆಶ್ವಾಸದಲ್ಲಿ ಬರುವ ಶಿವನ ಪಂಚವಿಂಶತಿ ಲೀಲೆಗಳು. 


ದೇವ ಬಯಸಿರ್ದಪುದು ಮ 

ದ್ಭಾವಂ ಭವದೀಯ ವದನದಿಂ ತಿಳಿದಪೆನೆಂ 

ದಾ ವಿಮಳವೆನಿಪ ಶಿವಲೀ

ಲಾವಳಿಯಂ ಪೇಳ್ವುದೆನಗದಂ ದಯೆಯಿಂದಂ॥೮೩॥ 


" ದೇವ, ನನ್ನ ಭಾವವು ತಮ್ಮ ವದನದಿಂದ ಆ ಶ್ರೇಷ್ಠವೆನಿಸಿದ ಶಿವನ ಇಪ್ಪತ್ತೈದು ಲೀಲೆಗಳನ್ನು ಕೇಳಬೇಕೆಂದು ಬಯಸಿರುವುದು. ದಯವಿಟ್ಟು ಆ ಲೀಲೆಗಳನ್ನು ಎನಗೆ ಹೇಳಬೇಕು " 


ವ॥ ಎಂದು ಭಕ್ತಿಭರದಿಂ ಪುತ್ರವರಮಂ ಬೇಳ್ಪುದಂ ಮಱೆದಿಂತೆಂದು ಬಿನ್ನಪಂಗೆಯ್ದ ನರೇಂದ್ರನ ಬಗೆಗೆ ಮಚ್ಚಿ ಸಂತಸಂಬಟ್ಟು ನೀಡುಂ ನಿರೀಕ್ಷಿಸಿ ನಿಖಿಳ ಶ್ರುತಿಪುರಾಣಾಗಮಸಾರಮಪ್ಪ ಶಿವಲೀಲೆಯಂ ಪೇಳಲುಜ್ಜುಗಿಸಿ 


ಎಂದು ಭಕ್ತಿಯ ಆಧಿಕ್ಯದಿಂದ ಪುತ್ರ ಸಂತಾನ ಬೇಕೆಂಬ ವರವನ್ನು ಕೇಳದೆ ಮರೆತು ಹೀಗೆಂದು ಬಿನ್ನವಿಸಿಕೊಂಡ ಆ ಮಹಾರಾಜನ ಮನಸ್ಸಿಗೆ ಮೆಚ್ಚಿ, ಸಂತೋಷಗೊಂಡು ದಿಟ್ಟಿಸಿ ನೋಡ, ಸಮಸ್ತ ಪುರಾಣಾಗಮಸಾರಭೂತವಾದ ಶಿವನ ಲೀಲೆಗಳನ್ಠನುಹೇಳಲು ಉದ್ಯೋಗಿಸಿ


ಹೃದಯ ಕಮಲದೊಳೆ ನೆಲಸಿದ 

ಮದನಾರಿಯ ಮಕುಟದಗ್ರದೆಳವೆಱೆಗದಿರು 

ಣ್ಮಿದುದೆನೆ ಪಸರಿಸೆ ವಿಳಸ 

ದ್ರದನದ್ಯುತಿಮೊಗದೊಳಾಗಳವರಿಂತೆಂದರ್ ॥೮೪॥ 


ಹೃದಯ ಕಮಲದಲ್ಲಿ ನೆಲಸಿದಂಥ ಪರಮೇಶ್ವರನ ಮಕುಟಾಗ್ರದಲ್ಲಿರುವ ಎಳೆಯ ಬೆಳದಿಂಗಳ ಕಾಂತಿಯು ಮುಖದಿಂದ ಹೊರಹೊಮ್ಮಿತೋ ಎನ್ನುವಂತೆ ಪ್ರಕಾಶಮಾನವಾದ ಹಲ್ಲಿನ ಕಿರಣಗಳು ಸುತ್ತಲೂ ಪ್ರಸಾರಗೊಳ್ಳಲು ಅವರು ಹೀಗೆ ಹೇಳಿದರು.  


ಮ॥ ಮೊದಲೊಳ್ನಿಷ್ಕಳಮಾಗಿ ನಿರ್ವಿಕೃತಿಯಿಂ ತಾನೊಂದೆ ಸಚ್ಚಿತ್ಸುಖಾ 

ಸ್ಪದಲಿಂಗಂ ಸತಮಾಗಿ ಪೂರ್ಣಮುರು ಷಟ್ತ್ರಿಂಶತ್ಪರಂ ಶಕ್ತಿಯಂ 

ಗದ ಸಂಪರ್ಕದೆ ಘಟ್ಟಿಗೊಂಡ ತಿಳಿನೆಯ್ಯಾಂತ ಮಹೇಶತ್ವಮಾಂ 

ತದು ತದ್ದೇಹದೊಳೊಲ್ದು ತಾಳ್ದುದುರುಲೀಲಾಜಾಲಮಂ ಭೂಮಿಪಾ ॥೮೫॥ 


" ಮಹಾರಾಜನೇ ಕೇಳು,ಆದಿಯಲ್ಲಿ ಒಂದೇ ಒಂದಾದ ಸತ್ತು, ಚಿತ್ತು, ಆನಂದಗಳಿಗೆ ಆಸ್ಪದವಾದ ಲಿಂಗವು ಯಾವ ವಿಕಾರಕ್ಕೂ ಒಳಗಾಗದೆ ನಾಮ, ರೂಪ, ಕ್ರಿಯೆಗಳಿಗೆಅತೀತವಾಗಿ, ಪರಿಪೂರ್ಣ ವಸ್ತುವಿತ್ತು. ಅದು ಶ್ರೇಷ್ಠವಾದ ಮೂವತ್ತಾರು ತತ್ವಗಳಿಗಿಂತಲೂ ಅತ್ತತ್ತ ಇದ್ದು ಶಾಶ್ವತವಾಗಿತ್ತು. ಅದು ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿಗಳ ಅಂಗದ ಸಂಪರ್ಕದಿಂದ ಹೆಪ್ಪುಗಟ್ಟಿ ಗಟ್ಟಿತುಪ್ಪದಂತೆ ಮಹೇಶ್ವರನೆಂಬ ಹೆಸರನ್ನು ಧರಿಸಿ,ಅಂದರೆ ನಾಮರೂಪಕ್ರಿಯಾತ್ಮಕ ದೇಹಧಾರಿಯಾಗಿ, ಲಿಂಗವೇ ದೇಹರೂಪದಲ್ಲಿ ಕಾಣಿಸಿಕೊಂಡು, ( ಕರ್ಮೋದ್ಯೋಗ ಭೂಮಿಯಲ್ಲಿ ಕರ್ಮತನುವಿನಿಂದ ) ಶ್ರೇಷ್ಠ ಲೀಲಾಜಾಲಗಳನ್ನು ತಳೆಯಿತು. 


ವ॥ ಅದೆಂತೆಂದೊಡೆ 


೧. ಚಂದ್ರಶೇಖರ ಲೀಲೆ. 


ಮ॥ ಸುರರ್ಗೋರೋರ್ವರನಿತ್ತು ದಕ್ಷನೊಸೆದಿರ್ಪತ್ತೇಳ್ತನೂಜಾತೆಯರ್ 

ಸರಿಯೆಂಬಂತಿರೆ ಕೂಡಿರೆಂದು ಕುಡೆ ಮೀಱುತ್ತೊರ್ವಳೊಳ್ ಪ್ರೀತಿ ಸಂ 

ದಿರೆ ಶಾಪಂಗುಡೆ ಕಂದಿಕುಂದಿ ತಪಮಂ ತಾನಾಂತಿರಲ್ ಮಚ್ಚಿ ಶಂ 

ಕರನಾಕಾಶನದೀಮೃನಾಳಮೆನೆ ತಚ್ಚಂದ್ರಾರ್ಧಮಂ ಸೂಡಿದಂ ॥೮೬॥ 


ದೇವತೆಗಳಿಗೆ ಒಬ್ಬೊಬ್ಬರಂತೆ ದಕ್ಷನು ಕೊಟ್ಟು,  ಪ್ರೀತಿಪಟ್ಟು ಅಶ್ವಿನ್ಯಾದಿ ಇಪ್ಪತ್ತೇಳು ಸುತೆಯರನ್ನು ಚಂದ್ರನಿಗೆ ಕೊಟ್ಟು ಇವರೆಲ್ಲರನ್ನೂ ಸಮನಾಗಿ ಕಾಣಬೇಕೆಂದು ತಿಳಿಸಲಾಗಿ ಆ ಮಾತನ್ನು ಚಂದ್ರನು ಮೀರಿ ರೋಹಿಣಿಯಲ್ಲಿ ಅಧಿಕ ಪ್ರೀತಿಯನ್ನು ತೋರಲು, ಇದನ್ನು ದಕ್ಷಬ್ರಹ್ಮನು ತಿಳಿದು ಅವನಿಗೆ ಕಳಾಹೀನನಾಗೆಂದು ಶಾಪವನ್ನಿತ್ತನು. ಆಗ ಚಂದ್ರನು ಕಂದಿ ಕುಂದಿ ಶಿವನನ್ನು ಕುರಿತು ತಪಸನ್ನಾಚರಿಸಲು ಪರಮೇಶ್ವರನು ಇವನ ತಪಸ್ಸೀಗೆ ಮೆಚ್ಚಿ, ದೇವಗಂಗಾನದಿಯಲ್ಲಿರುವ ಕಮಲದ ನಾಳವೋ ಎನ್ನುವಂತಿರುವ ಆ ಚಂದ್ರನ ಒಂದು ಕಲೆಗೆ ತನ್ನ ತಲೆಯಲ್ಲಿ ಆಶ್ರಯಕೊಟ್ಟು ಚಂದ್ರಶೇಖರನೆಂದು ಹೆಸರು ಪಡೆದನು. ಇದು ಚಂದ್ರಶೇಖರಲೀಲೆಯೆನಿಸಿತು. 


೨.  ಉಮಾಮಹೇಶ್ವರ ಲೀಲೆ. 


ಶಾ ॥ ಮಂದಾರಾಮಳ ಪುಷ್ಪದೊಳ್ ಪರಿಮಳಂ ಶ್ರೀದೇವಸದ್ರತ್ನ ದೊ 

ಳ್ಚೆಂದಂಬೆತ್ತೆಸೆದಿರ್ಪ ಕಾಂತಿ ನೆಲೆಗೊಂಡಿರ್ಪಂತೆ ತನ್ನೊಳ್ಸದಾ 

ನಂದಂಬೆತ್ತೆಸೆದಿರ್ಪುಮೂರಮಣಿಯೊಳ್ಕೂಡಿರ್ದಜಾಂಡಂಗಳಂ

ಕಂದರ್ಪಾರಿ ನಿಮಿರ್ಚಿ ಸಾರ್ಚಿ ಸುಮನಃಸಂಪ್ಪೀತಿಯಂ ಮಾಡಿದಂ ॥೮೭॥ 


ಕಲ್ಪವೃಕ್ಷ ಪುಷ್ಪದಲ್ಲಿ ಪರಿಮಳವೂ, ಶ್ರೀದೇವಸದ್ರತ್ನವಾದ ಚಿಂತಾಮಣಿಯಲ್ಲಿ ಚಂದವಾಗಿ ಶೋಭಿಸುವ ಕಾಂತಿ ಸಹಜವಾಗಿಯೇ ನೆಲೆಗೊಂಡು ಇರುವ ರೀತಿಯಲ್ಲಿ ತನ್ನಲ್ಲಿಯೇ ಅಂದರೆ ಶಿವನಲ್ಲಿ ಶಿವಸ್ವರೂಪೆಯಾಗಿ ಶಂಕರನಲ್ಲಿ ಶಾಂಕರಿಯೆನಿಸಿ ಶೋಭಿಸುವ ಉಮಾರಮಣಿಯಲ್ಲಿ ಬ್ರಹಾಂಡಗಳನ್ನೆಲ್ಲ ಸೃಷ್ಟಿಸಿ, ಅವುಗಳನ್ನು ಆಯಾಯ ಸ್ಥಳಗಳಲ್ಲಿ ನೆಲೇಗೊಳಿಸಿ ದೇವತೆಗಳೀಗೆ ಪ್ರೀತಿಯನ್ನು ಉಂಟು ಮಾಡಿದನು.


೩. ವೃಷಭವಾಹನ ಲೀಲೆ. 


ಉ॥ ಒರ್ಮೆ ಜಗತ್ರಯಕ್ಕೆ ಲಯಮಂ ರಯದಿಂದೆ ನೆಗಳ್ಚಿ ಚಿ 

ದ್ದರ್ಮಮನಳ್ಕರಿಂ ನೆನೆಯೆ ತಾಂ ವೃಷಭಾಕೃತಿಗೊಂಡು ಮುಂದಿರ 

ಲ್ಕೂರ್ಮೆಯೊಳೇಱಿನಿಂದನಿದು ಚಿತ್ರಮಿಳಾತಳದಲ್ಲಿ ಧರ್ಮಿ ಮೇ 

ಣ್ಧರ್ಮದೊಳಿರ್ಪುದೆಂದು ವಿಬುಧರ್ ಪೊಗಳುತ್ತಿರೆ ಪಾರ್ವತೀಶ್ವರಂ॥೮೮॥ 


ಪರಮೇಶ್ವರನು ಒಮ್ಮೆ ಮೂರುಲೋಕಗಳಿಗೆ ಒಮ್ಮಿಂದೊಮ್ಮೆಲೆ ಪ್ರಳಯವನ್ನುಂಟುಮಾಡಿ,ತನ್ನ ಚಿತ್ಕಳಾರೂಪವಾದ ಧರ್ಮವನ್ನೇ ನೆನೆಯಲಾಗಿ, ಆ ಚಿದ್ಧರ್ಮವು ವೃಷಭನ ಆಕಾರವನ್ನು ತಳೆದು ಮುಂದೆ ಬಂದು ನಿಲ್ಲಲಾಗಿ ಆ ವೃಷಭನನ್ನು ಪ್ರೀತಿಯಿಂದ ಹತ್ತಿ ನಿಂತನು. ಈ ರೀತಿಯು ಭೂಮಂಡಲದಲ್ಲಿ ಅತಿ ವಿಚಿತ್ರವಾದುದು. ಏಕೆಂದರೆ ಧರ್ಮ ಸ್ವರೂಪನಾದ ಪರಮೇಶ್ವರನು ಧರ್ಮದಲ್ಲಿಯೇ ಇರುವನೆಂಬುದು. ಹೀಗೆಂದು ಜ್ಞಾನಿಗಳು ಹೊಗಳುತ್ತಿರಲು ಪಾರ್ವತಿಪರಮೇಶ್ವರನು ವೃಷಭವಾಹನ ಲೀಲೆಯನ್ನು ಮಾಡಿದನು. 


೪. ತಾಂಡವ ಲೀಲೆ. 


ಸ್ರ ॥ ಸ್ಫೂರ್ಜದ್ಗರ್ಜದ್ಘನಾಡಂಬರರವ ಡಮರುಧ್ವಾನಮಿಂಬಾಗಿ ಗಂಗಾ

ವಾರ್ಜಂಗಳ್ ಸೀಕರಂಗಳ್ ಸುರಿಯೆ ಮೊರೆಯೆ ಸರ್ಪಾಳಿ ಚಂಡೇಭಚರ್ಮಂ 

ಪರ್ಜನ್ಯಾಭಂ ಕಟೀಮಂಡಳದೆ ಪೋಡರೆ ಕಾಲಾನಲಾಕ್ಷಿ ಸ್ಫುರತ್ ರೋ 

ಚಿರ್ಜಾಲಂ ಪೋಣ್ಮೆ ದಿಗ್ಭಿತ್ತಿಗಳೊಡೆಯೆ ಹರಂ ತಾಂಡವಂಗೈವುತಿರ್ದಂ ॥೮೯॥ 


ವಜ್ರಾಯುಧಧ್ವನಿಯಂತೆ ಮತ್ತು ಮೇಘಗಳ ಧ್ವನಿಯಂತೆ ಡಮರುಗದ ಧ್ವನಿಯು ಅಧಿಕವಾಗಿರಲಾಗಿ, ತಲೆಯ ಮೇಲಿನ ನೀರು ಸಣ್ಣ ಸಣ್ಣ ತುಂತುರುಗಳಾಗಿ ಸುರಿಯುತ್ತಿರಲು, ದೇಹದಲ್ಲಿ ಧರಿಸಿದ ಹಾವುಗಳೆಲ್ಲ ಬುಸುಗುಡುತ್ತಿರಲು, ಮೌಡಗಳಿಗೆ ಸಮಾನವಾದ ಕಾಂತಿಯಿಂದ ತೀಕ್ಷ್ಣನಾದ ಗಜಾಸುರನ ಚರ್ಮವು ಕಟಿಪ್ರದೇಶದಲ್ಲಿ ಚಲಿಸುತ್ತಿರಲಾಗಿ, ಪ್ರಳಯಕಾಲದಲ್ಲಿ ತೆರೆಯುವ ಅಗ್ನಿನೇತ್ರದಿಂದ ಪ್ರಕಾಶಮಾನವಾದ ಅಗ್ನಿಜ್ವಾಲೆಯು ಹೊರಹೋಮ್ಮುತ್ತಿರಲು, ದಶದಿಕ್ಕುಗಳಲ್ಲಿರುವ ಬ್ರಹ್ಮಾಂಡದ ಗೋಡೆಗಳೆಲ್ಲ ಒಡೆದು ಹೋಗುತ್ತಿರಲು ಶಿವನು ತಾಂಡವನೃತ್ಯ ಮಾಡುತ್ತಿದ್ದನು. 


೫. ಗಿರಿಜಾಕಲ್ಯಾಣ ಲೀಲೆ.


ಮ॥ ತಪಮಿರ್ಪದ್ರಿಜೆಯಲ್ಲಿಗೈದಿ ವಟುವೇಶಂಬೆತ್ತು ನಾನಾ ಪ್ರಪಂ 

ಚಪರಾಲಾಪಮನಾಡಿ ನೋಡಿ ಮನಮಂ ಮೆಚ್ಚುತ್ತೆ ಪೋಗೆಂದು ತ 

ದ್ವಿಪುಳಾವಾಸಕಲಂಪಿನಿಂ ಕಳುಪಿ ಬಂದಾನಂದದಿಂ ನಿರ್ಜರಾ 

ಧೆಪರೇಳ್ತಂದಿರೆ ಶಂಭು ಕೂರ್ತು ಪಸೆನಿಂದಂ ತನ್ಮಹಾದೇವಿಯೊಳ್ ॥೯೦॥ 


ತಪಸ್ಸು ಮಾಡುತ್ತಿದ್ದ ಗಿರಿಜಾಕುಮಾರಿಯಾದ ಪಾರ್ವತಿಯಲ್ಲಿಗೆ ವಟುವೇಶಧಾರಣೆ ಮಾಡಿ ಶಿವನು ಹೋಗಿ, ಲೌಕಿಕ ಸಮ್ಮತವಾದ ಆಲಾಪವನ್ನು ಅವಳೊಡನೆ ಮಾಡಿ, ಅವಳ ಮನಸ್ಸನ್ನು ಪರೀಕ್ಷಿಸಿ, ಮೆಚ್ಚಿ, ಅವಳ ತಂದೆಯ ನಗರಿಯಾದ ಓಷಧಿಪ್ರಸ್ತಪುರಕ್ಕೆ ಹೋಗೆಂದು ಪ್ರೀತಿಯಿಂದ ಕಳುಹಿಸಿಕೊಟ್ಟು, ತಾಬನು ಕೈಲಾಸಕ್ಕೆ ಬಂದು ಆನಂದದಿಂದ ದೇವತಾಧಿಪರೆಲ್ಲರೊಡಗೂಡಿ ಓಷಧಿಪ್ರಸ್ತಪುರಕ್ಕೆ ಮದುವೆಗಾಗಿ ಬಂದು ಆ ಮಹಾದೇವಿಯೋಡನೆ ವಿವಾಹ ಹಸೆಯನ್ನೇರಿ ಲಗ್ನವಾದನು. 


೬. ಭಿಕ್ಷಾಟನಾ ಲೀಲೆ.


ಚಂ॥ ಅಧರಿತ ಮನ್ಮತಾಕೃತಿ ಮನೋಹರಮೂರ್ತಿ ವಿಳಾಸವಾಂತು ಬಂ 

ದಧಿಗತರೂಪಯವ್ವನ ಸುರೇಂದ್ರಪುರಿ ಸುದತೀ ವಿತಾನಮಂ 

ಮಧುಸಖಬಾಣಪಾತಕೊಳಗಾಗಿಸಿ ಭಿಕ್ಷೆಯನಲ್ಲಿ ಬೇಡುತಂ 

ವಿಧುಧರನೊರ್ಮೆ ತಾಳ್ದನಧಿಕೋತ್ಸುಕ ಭಿಕ್ಷುಕ ಲೀಲೆಯಂ ನೃಪಾ ॥೯೧॥ 


ಎಲೈ ಅರಸನೇ, ಮನ್ಮಥನ ಆಕೃತಿಯನ್ನು ಕೀಳ್ಮಾಡುವ ತಾರುಣ್ಯದ ರೂಪವನ್ನು ಹೊಂದಿ, ಆ ಮನೋಹರ ಮೂರ್ತಿಯಾದ ಶಿವನು ಲೀಲಾವಿನೋದದಿಂದ ದೇವೇಂದ್ರನಗರಿಯಾದ ಅಮರಾವತಿಗೆ ಬಂದನು. ಆ ಪಟ್ಟಣದಲ್ಲಿರುವ ಸುಂದರಿಯರ ಸಮೂಹವನ್ನು ವಸಂತಸಖನಾದ ಮನ್ಮಥನ ಪಂಚಬಾಣಗಳ ಪೆಟ್ಟಿಗೆ ಒಳಗಾಗುವಂತೆ ಮಾಡಿ, ಅಲ್ಲಿ ಭಿಕ್ಷೆಯನ್ನು ಬೇಡಿದನು.ಹೀಗೆ ಒಮ್ಮೆ ಅಧಿಕತರವಾದ ಉತ್ಸಾಹದಿಂದ ಭಿಕ್ಷಾಟನದ ಲೀಲೆಯನ್ನು ಮಾಡಿದನು. 


೭. ಮನ್ಮಥದಹನ ಲೀಲೆ. 


ಉ॥ ಅಂಬಿನ ಶತ್ರು ಸತ್ತಿಗೆಯದಕ್ಕಗಿದಿರ್ಪ ರಥಂ ನಿಜಾಶ್ವಮಾ 

ಲಂಬಿಸೆ ಕೋಡೊಳಿಟ್ಟು ಪೊರೆವಾನೆಯದಂ ಮದವೇಱಿಪಾತನೇ 

ನಂಬುಗೆವೆತ್ತ ಮಂತ್ರಿ ಗುಣಮಂ ಪರಿಪಾಲಿಪ ಬಿಲ್ಬಲಂ ತದ 

ಸ್ತ್ರಾಂಬಕಿಯಾಗಲೆಚ್ಚ ಮುಗುಳಂಬನೀಕ್ಷಿಸಿ ಸುಟ್ಟನೀಶ್ವರಂ॥೯೨॥ 


ಕಾಮನ ಬಾಣವಾದ ಕಮಲಕ್ಕೆ ಶತ್ರುವಾದಂಥ ಚಂದ್ರನೇ ಶ್ವೇತಚ್ಛತ್ರಿ; ಆ ಕೊಡೆಯಾಗಿರುವ ಚಂದ್ರನಿಗೆ ಹೆದರದೆ ಇರೈವ ಗಿಳಿಯೇ ವಾಹನವು; ವಸಂತನೇ ಮಂತ್ರಿ. ಮಾಮರವೇ ಮದ್ದಾನೆ; ಆ ಮಾಮರವೆಂಬ ಆನೆಯನ್ನು ಮದೋನ್ಮತ್ತಗೊ- 

ಳಿಸುವ ವಸಂತನೇ ನಂಬಿಕೆಯ ಸಚಿವನು. ಮನ್ಮಥನ ಬಿಲ್ಲಿನ ಹಗ್ಗವಾದ ದುಂಬಿಗಳ ಸಮೂಹವನ್ನು ರಕ್ಷಿಸುವ ಕಮಲದ ದೇಟವೇ ಬಿಲ್ಲು. ಆ ಕಮಲದಂತಹ ಮಂತ್ರಾಸ್ತ್ರ ರೂಪವಾದ ಕಟಾಕ್ಷದಿಂದ ಕೂಡಿದ ಸುಂದರಿಯರೆಂಬ ಪದಾತಿ ದಳ. ಇಂಥ ಚದುರಂಗ ಬಲದಿಂದ ಕೂಡಿ ಎಲ್ಲರನ್ನೂ ಜಯಿಸುತ್ತಿರುವ ಮನ್ಮಥನನ್ನು ಪರಮೇಶ್ವರನು ಸುಟ್ಟನು. ಈ ಕಾರ್ಯ ಮಾಡಲು ತಾರಕನ ಬಾಧೆಯಿಂದ ಬೇಸತ್ತ ದೇವತೆಗಳು ಈಶ್ವಲನಿಂದ ತಾರಕಾರಿಯಾದ ಷಣ್ಮುಖನನ್ನು ಪಡೆಯಬೇಕಾಗಿತ್ತು. ಈ ಇಂದ್ರಾದಿ ದೇವತೆಗಳ ಆಜ್ಞೆಯಂತೆ ಶಿವನ ತಪೋಭರದ ಬೆಸೂಗೆಯನ್ನು ಬಿಡಿಸಿ, ಹತ್ತಿರದಲ್ಲಿಯೇ ಇದ್ದ ಗಿರಿರಾಜಕುಮಾರಿಯಾದ ಪಾರ್ವತಿಯನ್ನು ಶಿವನು ನೋಡಿ ಲಗ್ನವಾಗುವ ಹಾಗೆ ಮಾಡಲೈ ಮನ್ಮಥನು ಚತುರಂಗಬಲ ಸಮೇತನಾಗಿ, ಶಿವನ ಮೇಲೆ ಪಂಚಬಾಣಾನುಸಂಧಾನ ಮಾಡಿ ಬಿಡಲಾಗಿ, ಈಶ್ವರನು ತನ್ನ ಹಣೆಗಣ್ಣಿಂದ ಮನ್ನಥನನ್ನು ಸುಟ್ಟುಹಾಕಿ, ಆ ಚಿತಾಭಸ್ಮವನ್ನು ಮೈಗೆ ಧರಿಸೀಕೊಂಡು ಗಿರಿಜೆಯನ್ನು ಮಾತಾಡಿಸದೇ ಅಂತರ್ದಾನನಾದನು. ಇದನ್ನೇ ಮನ್ಮಥಲೀಲೆ ಎನ್ನುವರು. 


೮. ಯಮಾಂತಕ ಲೀಲೆ ( ಕಾಲಸಂಹಾರ ಲೀಲೆ ) 


ಉ॥ ಶ್ವೇತನೆನಿಪ್ಪ ಪಾತಕಿ ಪಣಾಂಗನೆಗೆಂದರಲಂ ತರುತ್ತೆ ಧಾ

ತ್ರೀತಳದಲ್ಲಿ ಬೀಳೆ ಗಿರಿಶಂಗೆ ಸಮರ್ಪಣಮೆಂದ ಸೈಪು ರಂ 

ಭಾತರುಣೀರತಂಗುಡಲವಳ್ಮಿಗೆ ಬೋಧಿಸೆ ತನ್ನನರ್ಚಿಸಿ 

ರ್ಪಾತನನೊಯ್ಯಲೈದಿದ ಕೃತಾಂತನನರ್ದಿಸಿದಂ ಮಹೇಶ್ವರಂ ॥೯೩॥ 


ಮಹಾಪಾಪಿಷ್ಠನೂ, ವ್ಯಭಿಚಾರಿಯೂ ಆದ ಶ್ವೇತನೆಂಬುವನು ತನ್ನ ಪ್ರೇಯಸಿಗೆಂದು ಹೂಗಳನ್ನು ತರುತ್ತಿರುವಾಗ ಆ ಹೂಗಳು ಭೂಮಿಯ ಮೇಲೆ ಬೀಳಲಾಗಿ, ಗಿರಿಶಂಗೆ ಸಮರೂಪಣವಾಗಲಿ ಎಂದ ಪುಣ್ಯದ ಫಲವಾಗಿ, ರಂಭಾದಿ ಅಪ್ಸರಸ್ತ್ರೀಯರು ಇವನಿಗೆ ಭೋಗಸುಖವನ್ನು ಕೊಡುತ್ತ, ಅವರು ಇವನಿಗೆ ಸನ್ಮಾರ್ಗವನ್ನು ಭೋಧಿಸಲಾಗಿ, ಶ್ವೇತನು ಶಿವಾರ್ಚನಾಕಾರ್ಯದಲ್ಲಿ ನಿರತನಾದಾಗ ಆತನನ್ನೊಯ್ಯಲು ಬಂದ ಯಮನನ್ನು ಶಿವನು ಕೊಂದನು. 


೯. ತ್ರಿಪುರಸಂಹಾರ ಲೀಲೆ. 


ನಾರಿ ಶರಂ ತದಂಗಜನೆ ಸಾರಥಿ ತತ್ಪದ ಶತ್ರು ಮಿತ್ರರೇ 

ಸೇರಿದ ಗಾಲಿಗಳ್ ತದಹಿತಂ ಪೆದೆ ತದ್ಧೃತಮೇ ರಥಂ ತದಾ 

ಧಾರಮೆ ಬಿಲ್ತದಗ್ರಚರತೃಪ್ತಿ ವಿಧಾಯಕಮಶ್ವಮಾಗೆ ತ 

ಚ್ಛೋರಸಜಾತಿ ಜಾತಪುರಮಂ ಪುರವೈರಿ ಕನಲ್ದು ಚುರ್ಚಿದಂ॥೯೪॥ 


ಭಸ್ಮಾಸುರಸಂಹಾರಕಾರಣಕ್ಕಾಗಿ ನಾರೀರೂಪ ಧರಿಸಿದ ವಿಷ್ಣುವೇ ಬಾಣ, ಆತನ ಅಂಗದಿಂದ ಜನಿಸಿದ ಬ್ರಹ್ಮನೇ ಸಾರಥಿ, ಆ ಬ್ರಹ್ಮನ ಹುಟ್ಟಿನ ಸ್ಥಾನವಾದ ಕಮಲದ ಮಿತ್ರ ಶತ್ರುಗಳಾದ ಸೂರ್ಯಚಂದ್ರರೇ ರಥದ ಗಾಲಿಗಳು, ಆ ಸೂರ್ಯ ಚಂದ್ರರಿಗೆ ಅಹಿತವುಳ್ಳವನಾದ ರಾಹುವಿನ ರೂಪವಾದ ಆದಿಶೇಷನೇ ಹೆದೆ, ಆ ಆದಿಶೇಷನಿಂದ ಧಾರಣಮಾಡಿದ ಭೂಮಿಯೇ ರಥ, ಆ ಭೂಮಿಗೆ ಆಧಾರವಾದ ಮೇರುಪರೂವತವೇ ಬಿಲ್ಲು,  ಆ ಮೇರುಪರ್ವತಾಗ್ರದಲ್ಲಿ ಸಂಚರಿಸುವ ದೇವತೆಗಳಿಗೆ ತೃಪ್ತಿಯನ್ನು ವಿಧಾಯಕ ಮಾಡುವ ವೇದಗಳೇ ಅಶ್ವಗಳು, ಆ ವೇದಗಳನ್ನು ಕದ್ದೊಯ್ದ ರಾಕ್ಷಸರ ಸಜಾತೀಯ ಬಂಧುಗಳಾದ ತಾರಕಾಕ್ಷ, ಮಕರಾಕ್ಷಕ, ವಿದ್ಯುನ್ಮಾಲಿಯೆಂಬ ರಾಕ್ಷಸರ ಮೂರು ಪುರಗಳನ್ನು ಶಿವನು ಸುಟ್ಟು ಹಾಕಿದನು. ಇದರಿಂದ ತ್ರಿಪುರ ಹರ, ತ್ರಿಪುರಧ್ವಂಸಿ, ಪುರಹರ ಇತ್ಯಾದಿ ಹೆಸರು ಪಡೆದನು. 


೧೦. ಜಲಂಧರ ಸಂಹಾರ ಲೀಲೆ. 


ಮ॥ ವರಕಂಜೋದ್ಭವನಿಂ ವರಂಬಡೆದು ದಿಕ್ಪಾಲರ್ಕಳಂ ಪೊಯ್ದು ತ 

ತ್ತರುಣೀವೃಂದಮನೆಯ್ದೆ ತಂದು ಸೆಱೆಯಂ ದೈತ್ಯಾರಿಯಂ ಕಟ್ಟಿ ಮೇ 

ಲಿರದಿಟ್ಟಂದು ಜಲಂಧರಂ ಬರೆ ಜಯಾರ್ಥಂ ವಾರ್ಧಿಯೊಳ್ ಚಕ್ರಮಂ

ಬರೆದಂಗುಷ್ಠದಿನೆತ್ತಿಸುತ್ತೆ ತಲೆಗೊಯ್ದಂ ಶರ್ವನಾ ಚಕ್ರದಿಂ॥೯೫॥ 


ಬ್ರಹ್ಮನಿಂದ ವರವನ್ನು ಪಡೆದು ಅಷ್ಟದಿಕ್ಪಾಲರನ್ನು ಹೊಡೆದು, ಅವರ ಧರ್ಮಪತ್ನಿಯರನ್ನು ಸೆರೆಯಲ್ಲಿಟ್ಟು, ಶ್ರೀ ವಿಷ್ಣುವನ್ನು ವಾರುಣಪಾಶದಿಂದ ಕಟ್ಟಿಹಾಕಿ, ಅಷ್ಟಕ್ಕೂ ಸುಮ್ಮನಿರದೆ, ಶಿವನ ಮೇಲೆ ಯುದ್ಧಕ್ಕೆ ಹೊರಟು ಶಿವನಿದ್ದಲ್ಲಿಗೆ ಬರಲಾಗಿ, ಶಿವನು ಸಮುದ್ರದಲ್ಲಿ ಅಂಗುಷ್ಠದಿಂದ ಚಕ್ರವನ್ನು ಬರೆದು, ಅದನ್ನು ಎತ್ತಿ ತಿರುಗಿಸಿಬಿಟ್ಟು ಜಲಂಧರನ ಶಿರವನ್ನು ಕತ್ತರಿಸಿದನು. ಇದೇ ಜಲಂಧರಸಂಹಾರ ಲೀಲೆ. 


೧೧. ಬ್ರಹ್ಮ ಶಿರಚ್ಛೇದನ ಲೀಲೆ. 


ಉ॥ ಪುಟ್ಟಿಪೆನೀ ಜಗತ್ರಯಮನೆನ್ನೊಳೆ ವಿಶ್ವಮಿದಿರ್ಕುಮಾಗಳುಂ 

ನೆಟ್ಟನೆ ಬೊಮ್ಮವಾನೆನುತಹಂಕರಿಸುತ್ತಿರೆ ವಿಷಾಣು ವೇದಮಂ 

ಪುಟ್ಟಿಸಿದಾತನೆಮ್ಮನಭವಂ ಪರಬೊಮ್ಮನೆನಲ್ಕನಲ್ದು ಬೊ 

ಟ್ಟಿಟ್ಟೊಡೆ ಬೊಮ್ಮನೊಂದು ತಲೆಯಂ ಪೞಿದಾಂತನವಂ ಸದಾಶಿವಂ॥೯೬॥ 


ಈ ಜಗತ್ರಯಗಳನ್ನು ನಾನೇ ಸೃಷ್ಟಿಸಿದ್ದು. ನನ್ನಲ್ಲಿಯೇ ಈ ವಿಶ್ವವು ಯಾವಾಗಲೂ ಇದೆ. ನಾನೇ ಪರಬ್ರಹ್ಮ ಎಂದು ಬ್ರಹ್ಮನು ಅಹಂಕಾರದಿಂದ ಕೂಡಿರಲು, ವಿಷ್ಣುವು ವೇದಗಳನ್ನೂ ನಮ್ಮನ್ನೂ ಹುಟ್ಟಿಸಿದವನು ಶಿವನು, ಅವನೇ ಪರಬ್ರಹ್ಮ ನು ಎನ್ನಲು, ಕೋಪಗೊಂಡು ಬ್ರಹ್ಮನು ಬೊಬ್ಬಿಡುತ್ತಿರಲು, ಪರಮೇಶ್ವರನು ಕೋಪಗೊಂಡು ಅವನ ಒಂದು ತಲೆಯನ್ನು ಕತ್ತರಿಸಿ ಅದನ್ನು ಬ್ರಹ್ಮ ಕಪಾಲವೆಂದು ತನ್ನ ಕೈಯಲ್ಲಿ ಧರಿಸಿದನು. ಇದೇ ಬ್ರಹ್ಮ ಶಿರಚ್ಛೇದನ ಲೀಲೆ. 


೧೨. ವೀರಭದ್ರ ಲೀಲೆ. 


ದಕ್ಷನೊಡರ್ಚೆ ಮಾರಣ ಮಹಾಮಖಮಂ ನಿಜವೈರದಿಂದೆ ಕೇ 

ಳ್ದಕ್ಷಯರೂಪೆ ತತ್ಸುತೆಯೆನಿಪ್ಪುದನಂಬಿಕೆ ಪೋಗಿ ನೀಗೆ ಕೇ 

ಳ್ದಾಕ್ಷಣಮುಗ್ರಮೂರ್ತಿ ತಳೆದೈದಿ ತದಾಪ್ತರನಿಕ್ಕಿ ಸೊರ್ಕಿದಾ 

ದಕ್ಷನ ಮಸ್ತಕಂಗಡಿದು ವೀರಸಮಾಹ್ವಯನಾದನೀಶ್ವರಂ ॥೯೭॥ 


ತನ್ನ ಮೇಲಿನ ವೈರದಿಂದ ದಕ್ಷನು ಮಾರಣ ಮಹಾಜ್ಞವನ್ನು ಮಾಡುತ್ತಿದ್ದನು. ಇದನ್ನು ಕೇಳಿದ ಕ್ಷಯರಹಿತರೂಪೆಯೂ ಆ ದಕ್ಷನ ಮಗಳೂ ಆದ ದಾಕ್ಷಾಯಿಣಿಯು ಅಲ್ಲಿಗೆ ಹೋಗಿ,ತಾನು ಅವನ ಸಂಬಂಧದ ತನ್ನ ದೇಹವನ್ನು ಅಲ್ಲಿ ನೀಗಿದಳು. ಇದನ್ನು ಕೇಳಿದ ಶಿವನು ಆಕ್ಷಣವೇ ಉಗ್ರಮೂರ್ತಿಯ ರೂಪವನ್ನು ಧರಿಸಿ, ಅಲ್ಲಿಗೆ ಹೋಗಿ, ಅವನ ಆಪ್ತರನೆಲ್ಲ ಕೊಂದು, ಗರ್ವಿಷ್ಟನಾದ ದಕ್ಷನ ತಲೆನ್ನು ಕಡಿದುವೀರಭದ್ರನೆಂಬ ಹೆಸರನ್ನು ಪಡೆದನು. ಇದೇ ವೀರಭದ್ರ ಲೀಲೆ. 


೧೩.  ಶರಭಲೀಲೆ 


ಘೋರ ಹಿರಣ್ಯಾಕ್ಷ ರುಧಿರೋನ್ಮದಿರಾಮದ ಮತ್ತನಾಗಿ ದೈ 

ತ್ಯಾರಿ ನೃಸಿಂಹಮೂರ್ತಿದಳೆದರ್ದಿಸುತಂತಿರೆ ಲೋಕಮಂ ಮನೋ 

ಜಾರಿ ವಿಚಾರಿಸುತ್ತೆ ಶರಭಾಕೃತಿದಾಳ್ದಿರದೈದಿ ಸೀಳ್ದು ರ 

ಕ್ತಾರುಣಚರ್ಮಮಂ ತಳೆದತಿದ್ಯುತಿ ತತ್ತಮಮಂ ಕಳಲ್ಚಿದಂ॥೯೮॥


ಅತಿ ಭಯಂಕರನೂ, ಬಂಗಾರವರ್ಣದಂತೆ ಕಣ್ಣುಳ್ಳವನೂ, ಆದ ಹಿರಣ್ಯಕಶ್ಯಪನ ರಕ್ತವೆಂಬ ಉನ್ಮತ್ತತೆಯನ್ನುಂಟುಮಾಡುವ ಮದ್ಯಪಾನದಿಂದ ಉನ್ಮತ್ತನಾಗಿ, ವಿಷ್ಣುವು ನೃಸಿಂಹಾಕಾರದಿಂದ ಲೋಕವನ್ನೇ ನಾಶಮಾಡುತ್ತಿರಲು, ಪರಮೇಶ್ವರನು ಈ ವಿಚಾರವನ್ನು ತಿಳಿದು ಶರಭಾಕೃತಿ ತಾಳಿ, ಅವನನ್ನು ಸೀಳಿಹಾಕಿ, ರಕ್ತವರ್ಣದಿಂದ ಕೆಂಪಾದ ಚರ್ಮವನ್ನು ಧರಿಸಿ, ಅತಿಕಾಂತಿಯುಕ್ತನಾಗಿ ಆ ನೃಸಿಂಹನಿಂದ ಲೋಕಕ್ಕುಂಟಾದ ಹಿಂಸೆಯೆಂಬ ಕತ್ತಲೆಯನ್ನು ದೂರಮಾಡಿದನು. 


೧೪. ಅರ್ಧನಾರೀಶ್ವರ ಲೀಲೆ 


ಸ್ರ ॥ ಕ್ಷೀರಾಂಬೋರಾಶಿಯೊಳ್ ಶ್ರೀಪತಿಯಿರೆ ಬಿದಿಯೇಳ್ತಂದು ಯುದ್ಧಂಗುಡಲ್ತ 

ಳ್ತೋರೋರ್ವರ್ಪಾಶುಪತ್ಯಾಸ್ತ್ರದಿನಿಡೆ ಶಿಖಿಯಿಂ ಬೇಯೆ ಲೋಕಂ ಕೃವಾಕೂ 

ಪಾರಂ ವಾರಾಶಿಯೊಳ್ ಪ್ರಜ್ವಲಿಸಿ ಬಳೆದು ತನ್ಮಧ್ಯದೊಳ್ ಲಿಂಗರೂಪಂ 

ಸಾರುತ್ತಂದರ್ಧನಾರೀಶ್ವರನವರ್ಗಖಿಳರ್ಗಳ್ಕಱಂ ತಣ್ಪುಗೈದಂ॥೯೯॥ 


ಕ್ಷೀರಸಮುದ್ರದಲ್ಲಿ ಶ್ರೀವಿಷ್ಣುವು ಇರುತಿರಲಾಗಿ, ಬ್ರಹ್ಮನು ಬಂದು ಯುದ್ಧವನ್ನು ಸಾರಿದನು. ಇಬ್ಬರಿಗೂ ಘನಘೋರವಾಗಿ ಯುದ್ಧ ಉಂಟಾಗಲು ಒಬ್ಬೊಬ್ಬರೂ ಪಾಶುಪತಾಸ್ತ್ರವನ್ನು ಪ್ರಯದಗಿಸಿದರು. ಈ ಕಾರಣದಿಂದ ಲೋಕವೆಲ್ಲ ಬೆಂಕಿಯಿಂದ ಬೇಯತೊಡಗಿತು. ಕೃಪಾಸಮುದ್ರನಾದ ಶಿವನು ಆ ಸಮುದ್ರ ಮಧ್ಯದಿಂದಲೇ ಜಾಜ್ವಲ್ಯಮಾನನಾಗಿ ಕಾಣಿಸಿಕೊಂಡು, ಅವರಿಬ್ಬರ ಮಧ್ಯದಲ್ಲಿ ಬೆಳೆದು ಲಿಂಗಾಕೃತಿಯನ್ನು ವ್ಯಕ್ತಪಡಿಸುತ್ತ, ಅರ್ಧನಾರೀಶ್ವರ ರೂಪನಾಗಿ ಕಾಣಿಸಿಕೊಂಡು ವಿಷ್ಣು ಬ್ರಹ್ಮರಿಗೂ ಲೋಕಕ್ಕೂ ಬಂದ ಕಂಟಕವನ್ನು ತಪ್ಪಿಸಿ, ತಂಪನ್ನುಂಟುಮಾಡಿದನು. 


ಮ॥ ಮಗಳೆಂದೀಕ್ಷಿಸದಂಟೆ ಭಾರತಿ ಮೃಗೀರೂಪದಿಂದವಳ್ಜಾರೆ ತಾಂ 

ಮಿಗೆ ತನ್ನೊಂದು ಪಶುತ್ವಮಂ ಪ್ರಕಟಿಪಂತಾಂತಲ್ಲಿ ತದ್ರೂಪಮಂ 

ಬಗೆಗೊಂಡಟ್ಟಲವಳ್ ಶಿವಂಗವಿದಿಡಲ್ ಶ್ವಾಕಾರದಿಂ ವೇದಮಂ 

ಘ್ರಿಗಳಂ ಘ್ರಾಣಿಸುತೆಯ್ದೆ ತಚ್ಚಿರಮನೆಚ್ಚಂ ಕೇಳ್ಕಿರಾತೇಶ್ವರಂ ॥೧೦೦॥ 


ಸರಸ್ವತಿಯು ತನ್ನ ಮಗಳೆಂದು ನೋಡದೆ ಅವಳನ್ನು ಭೋಗಾಪೇಕ್ಷೆಯಿಂದ ಮುಟ್ಟಲಾಗಿ, ಆ ಸರಸ್ವತಿಯು ಹೆಣ್ಣುಜಿಂಕೆಯ ರೂಪಧರಿಸಿ ಓಡಿಹೋಗಲು, ಬ್ರಹ್ಮನೂ ಕೂಡ ತನ್ನ ಒಂದು ಬಗೆಯ ಪಶುಭಾವವನ್ನು ಪ್ರಕಟಿಸುವಂತೆ, ತಾನೂ ಗಂಡು ಜಿಂಕೆಯ ರೂಪವನ್ನು ಧರಿಸಿ ಸರಸ್ವತಿಯನ್ನು ಬೆನ್ನಟ್ಟಿದನು. ಅವಳು ಶಿವನಲ್ಲಿ ಮೊರೆಯಿಡಲು, ಶಿವನು ಕಿರಾತ ರೂಪಧರಿಸಿ, ನಾಲ್ಕು ವೇದಗಳನ್ನು ನಾಲ್ಕು ನಾಯಿಗಳನ್ನಾಗಿ ಮಾಡಿಕೊಂಡು ಹೊರಟನು. ವೇದಗಳು ಶಿವನ ಪಾದಗಳನ್ನು ಆಘ್ರಾಣಿಸುತ್ತ ಬಂದವು. ಶಿವನು ಗಂಡುಜಿಂಕೆಯ ರೂಪದಲ್ಲಿರುವ ಬ್ರಹ್ಮನ ಶಿರಸ್ಸನ್ನು ಕತ್ತರಿಸಿ ಹಾಕಿದನು. ಬ್ರಹ್ಮನು ತನ್ನ ತಪ್ಪನ್ನು ಒಪ್ಪಿ ನನ್ನ ಈ ಮೃಗರೂಪದ ಚಿಹ್ನೆಯು ಶಾಶ್ವತವಾಗಿಸುವಂತೆ ಬೇಡಿದನು. ಶಿವನು ಕರುಣಿಸಿ ಆ ಮೃಗರೂಪದ ಕಳೇಬರವನ್ನು ಅಂತರಿಕ್ಷದ ನಕ್ಷತ್ರ ಸಮೂಹದಲ್ಲಿ ಮೃಗಶಿರಾ ನಕ್ಷತ್ರವಾಗಿರುವ ಹಾಗೆ ಕರುಣಿಸಿದನು. ಹೆಣ್ಣು ಜಿಂಕೆಯಾದ ಭಾರತಿಯನ್ನು ತನ್ನ ಕೈಯಲ್ಲಿ ಧರಿಸಿದನು. ಆದ್ದರಿಂದಲೇ ಶಿವನು ಮೃಗಧರನೆನಿಸಿದನು. 


೧೬. ಕಂಕಾಳಧರ ಲೀಲೆ. 


ಉ॥ ಆಱಡಿಗೊಂಡು ಮೂಱಡಿಯಿನಾ ಬಲಿಯಂ ಬಲಿಗೊಂಡು ಭೂಮಿಯನ 

ಮೂಱಡಿಯಾಂತು ಮೀಱಿ ಬಳೆದಿತ್ತನನಿಕ್ಕಿ ರಸಾತಳಕ್ಕೆ ನಿಂ 

ದಾಱಡಿವಣ್ಣದಾಗಸಕೆ ಕಾಲಿಡೆ ಖಂಡಿಸೆ ಬೊಮ್ಮನಿಟ್ಟನೀ 

ರ್ಮಾಱಡಿಯಿಂದೆ ಕೊಲ್ವನನೆ ಕೊಂದವನಸ್ಥಿಯನಾಂತನಾ ಹರಂ ॥೧೦೧॥ 


ಹಗೆತನವನ್ನು ಹೊಂದಿ ಮೂರುಪಾದಗಳಿಂದ ಬಲಿಚಕ್ರವರ್ತಿಯಿಂದ ದಾನವನ್ನು ಸ್ವೀಕರಿಸಿ ಮೂರು ಪಾದಗಳನ್ನು ಧರಿಸಿ ಮೀರಿ ಬೆಳೆದು ದಾನಕೊಟ್ಟ ಬಲಿಯನ್ನೇ ರಸಾತಳಕ್ಕೆ ತುಳಿದು ನಿಂತು, ದುಂಬಿಯ ಬಣ್ಣದ ಆಕಾಶಕ್ಕೆ ಕಾಲನ್ನಿಡಲಾಗಿ ಬ್ರಹ್ಮನು ಇಟ್ಟ ಅಂದರೆ ಶಿವನ ಚರಣವಾಗದಿದ್ದರೆ ನಾಶವಾಗಲೆಂದು ಶಾಪ ಪೂರ್ವಕವಾಗಿ ಇಟ್ಟಂಥ ಕಮಂಡಲೋದಕವು ಆ ಕಾಲನ್ನು ( ವಾಮನಮೂರ್ತಿಯ ಕಾಲನ್ನು) ಕತ್ತರಿಸಿ ಹಾಕಲು, ಉಳಿದ ತುಂಡು ಕಾಲುಗಳಿದಲೇ ಕೊಲ್ಲಲು ಹೋದ ಆ ವಾಮನನನ್ನೇ ಕೊಂದು ಅವನ ಮೂಳೆಯನ್ನು ಖಟ್ವಾಂಗವನ್ನಾಗಿ ಧರೆಸಿದನು. ಇದರಿಂದಶಿವನಿಗೆ ಕಂಕಾಳಧರನೆನಿಸಿದನು. 


೧೭. ಚಂಡೀಶ್ವರಾನುಗ್ರಹ ಲೀಲೆ. 


ಉ॥ ನುಣ್ಮಳಲಿಂದೆ ಮಾಡಿ ಶಿವಲಿಂಗಮನರ್ಚಿಸಿ ಧೇನುವೃಂದಮಂ 

ಜಾಣ್ಮಿಗೆ ತಂದು ಪಾಲ್ಗಱೆಯೆ ಕಂಡೊದೆಯುತ್ತಿರೆ ತಂದೆ ಬಂದದಂ 

ಪೊಣ್ಮೆ ಕನಲ್ಕೆ ಕೈಗೊಡಲಿಯಿಂದವನಂ ಪೋಡೆದಿಕ್ಕಿ ಮಿಕ್ಕು ಕೈ 

ಗಣ್ಮಿದ ಚಂಡನೆನ್ನ ಸುತನೆಂದು ಗಣೇಶತೆಯಿತ್ತನೀಶೂವರಂ॥೧೦೨॥ 


ನುಣ್ಣನೆಯ ಮಳಲಿನಿಂದ ಶಿವಲಿಂಗವನ್ನು ರಚಿಸಿ, ಅದನ್ನು ಪೂಜಿಸಿ ತನ್ನ ಆಕಳುಗಳ ಸಮೂಹವನ್ನು ಸಾಧುಗಳನ್ನಾಗಿಮಾಡಿಕೊಂಡು ಆ ಶಿವಲಿಂಗದ ಮೇಲೆ ಹಾಲನ್ನು ಕರೆಯುತ್ತಿರಲು ಇದನ್ನು ತಿಳಿದು ಅವನ ತಂದೆಯು ಬಂದು, ದಿನದಿನವೂ ಹಸುಗಳ ಹಾಲನ್ನು ಈ ಮಳಲ ಲಿಂಗದ ಮೇಲೆ ಕರೆಯುತ್ತಿರುವನಲ್ಲಾ, ಎಂದು ನೋಡಿ ಲಿಂಗವನ್ನು ಒದೆಯಲಾಗಿ, ಕೈಯೊಳಗಿನ ಕೊಡಲಿಯಿಂದ ಚಂಡೇಶನು ತನ್ನ ತಂದೆಯ ಅಭಿಮಾನವನ್ನು ಮಿಕ್ಕಿ ಹೊಡೆದು ಕೊಂದು ಹಾಕಲು, ಶಿವನು ಕೈಮಿಕ್ಕಿ ತಂದೆಯನ್ನು ಕೊಂದ ಚೆಂಡನು ತನ್ನ ಮಗನೆಂದು ಅವನ ಭಕ್ತಿಗೆ ಮೆಚ್ಚಿ ಅವನಿಗೆ ಗಣಪದವಿಯನ್ನು ಕೋಟ್ಟನು. 


೧೮. ವಿಷಾಪಹರಣ ಲೀಲೆ. 


ಸ್ರ ॥ ದೂರ್ವಾಸಂ ಶಂಭು ನಿರ್ಮಾಲ್ಯಮನಮರವರಂಗೀಯೆ ತಾನೊಲ್ಲದಿರ್ಪಾ 

ಗರ್ವಂಗಂಡಬ್ಧಿಯೊಳ್ ಮೇಣ್ನೆರಪೆ ಸಿರಿಯನೀಶಾಜ್ಞೆಯಿಂ ಶೇಷನಂ ತಂ 

ದುರ್ವೀಧ್ರಕ್ಕುರ್ವಿ  ಸುತ್ತುತ್ತೊಡನೆ ಕಡೆಯೆ ದೇವಾದಿದೇವರ್ಮಹಾಶಾ 

ಪೂರ್ವಂ ಪುಟ್ಟಿರ್ದ ಮೃತ್ಯುಪ್ರಭವಿಷಮನದಂ ಕಂಠದೊಳ್ ಶರ್ವನಾಂತಂ ॥೧೦೩॥ 


ಅಮರವರನಾದ ಇಂದ್ರನಿಗೆ ದೂರ್ವಾಸಮಹರ್ಷಿಗಳು ಪರಮೇಶ್ವರನ ಪ್ರ ಸಾದವನ್ನು ಕೋಡಲಾಗಿ, ಇಂದ್ರನು ತಾನು ಒಲ್ಲದವನಾದನು. ಇವನ ಈ ಗರ್ವವನ್ನು ಕಂಡು ಸಮುದ್ರದಲ್ಲಿ ಅವನ ತ್ರೈಲೋಕ್ಯಾಧಿಪತ್ಯವನ್ನುಕೂಡಿಸಿಬಿಡಲು, ಅಂದರೆ ಅವನ ತ್ರೈಲೋಕ್ಯಾಧಿಪತ್ಯವು ಹೋಗುವಂತೆ ಶಾಪವನ್ನಿತ್ತನು. ಪುನಃ ಅದನ್ನು ಪಡೆಯಲು ಶಿವನ ಅಪ್ಪಣೆಯಂತೆ ಆದಿಶೇಷನನ್ನು ಕರೆತಂದು ಮೇರುಪರ್ವತಕ್ಕೆ ಸುತ್ತಿ, ದೇವಾಸುರರೆಲ್ಲ ಕಡೆಯಲು, ಹುಟ್ಟಿದ ಮೃತ್ಯುಸಮಾನವಾದ ಕಾಳಕೂಟವಿಷವನ್ನು ಶಿವನು ತನ್ನ ಕಂಠದಲ್ಲಿ ಧರಿಸಿದನು. ಶಿವನು ನೀಲಕಂಠನೆನಿಸಿದನು. 


ಚಂ ॥ ಸುರರಿಪುಬಾಧೆಗಳ್ಕುತೆ ಮುರಾರಿ ಪುರಾರಿಪದಾರವಿಂದಮಂ 

ಸರಸಿಜದಿಂ ಸಹಸ್ರದೆ ಸಮರ್ಚಿಪ ವೇಳೆಯೊಳೊಂದು ಕುಂದೆ ಕ 

ಣ್ಮರಲನನೂನಭಕ್ತಿಭರದಿಂ ತೆಗೆದೇಱಿಸೆ ಮಚ್ಚಿ ಚಕ್ರಮಂ 

ಸುರುಚಿರಲೋಚನಾಬ್ಜಮನಮರ್ತ್ಯನದೀಧರನಿತ್ತನುರೂವಿಪಾ ॥೧೦೪॥ 


ಎಲೈ ಸತ್ಯೇಂದ್ರಚೋಳಮಹಾರಾಜನೇ ಕೇಳು, ರಾಕ್ಷಸ ಬಾಧೆಗಳಿಗೆ ಹೆದರುತ್ತ ಶ್ರೀವಿಷ್ಣುವು ಪರಮೇಶ್ವರನ ಪಾದಕಮಲಗಳನ್ನು ಸಹಸ್ರ ಕಮಲ ಪುಷ್ಪಗಳಿಂದ ಅರ್ಚಿಸುವ ವೇಳೆಯಲ್ಲಿ ಒಂದು ಹೂವು ಕಡಿಮೆಯಾಗಿರಲಾಗಿ, ಪರಿಪೂರ್ಣ ಭಕ್ತಿಯ ಭರದಲ್ಲಿದ್ದ ವಿಷ್ಣುವು ತನ್ನ ಕಣ್ಣನ್ನೇ ಕಿತ್ತು ಪುಷ್ಪರೂಪವಾಗಿ ಏರಿಸಿ ಪೂಜೆ ಮುಗಿಸಲು ಗಂಗಾಧರನು ಅವನಿಗೆ ಚಕ್ರವನ್ನು ಪ್ರದೃನಮಾಡಿದನು ಮತ್ತು ಮನೋಹರವಾದ ಕಮಲದಂತಹ ಕಣ್ಣನ್ನು ಕೊಟ್ಟನು. ಇದೇ ಚಕ್ರಪ್ರದಾನ ಲೀಲೆ. 


೨೦॥ ವಿಘ್ನಸಂಹಾರ ಲೀಲೆ.  


ಉ॥ ವಾರಣದೈತ್ಯವೈರಿ ವರವಾರಣವಕ್ತ್ರನನೊಲ್ದು ಪೆತ್ತು ದಿ 

ವ್ಯಾರುಣರತ್ನ ಮಂಡನಮನಿತ್ತು ಚತುರ್ದಶವಿದ್ಯೆಗಳಿವಂ 

ಕಾರಣನೆಂಬವೊಲ್ನೆಗಳ್ದು ಕಟ್ಟಿ ಗಣಾಧಿಪಪಟ್ಟಮಂ ಭವೋ 

ತ್ತಾರಣ ಪಂಚವಕ್ತ್ರನೆಸೆದಂ ಕನಕಾದ್ರಿಯೊಳದ್ರಿಜಾನ್ವಿತಂ॥೧೦೫॥ 


ಗಜಾಸುರನೆಂಬ ಹೆಸರಿನ ಆನೆಗೆ ವೈರಿಯಾದ ಪರಶಿವನು ಶ್ರೇಷ್ಠವಾದ ಆನೆಯಮುಖದ ಗಣಪತಿಗೆ ಒಲಿದು ಪಡೆದನು. ಅವನಿಗೆ ದಿವ್ಯವಾದ ಕೆಂಪುರತ್ನದ ಆಭರಣಗಳನ್ನು ಕೊಟ್ಟು ಹದಿನಾಲ್ಕು ವಿದ್ಯೆಗಳಿಗೆ ಇವನೇ ಕಾರಣಪುರುಷನೆಂದು ಗೊತ್ತುಪಡಿಸಿ, ಪ್ರಮಥಗಣಾ ಪಟ್ಟಾಭಿಷೇಕವನ್ನು ಅಭವನೂ ಪಂಚಮುಖಗಳುಳ್ಳವನೂ ಆದ ಪರಮೇಶ್ವರನು ಮಾಡಿ, ಸುವರ್ಣಪರ್ವತವಾದ ಮೇರುಗಿರಿಯಲ್ಲಿಪಾರ್ವತೀ ಸಮೇತನಾಗಿಪ್ರಕಾಶಿಸುತ್ತಿದ್ದನು. 


೨೧. ಉಮಾಸ್ಕಂದ ಲೀಲೆ. 


ಚಂ॥ ಅಸುರನ ಬಾಧೆಗಳ್ಕಿ ಶಿಖಿಯಂ ಕರೆದಟ್ಟೆ ಮೃಡಂ ಮೃಡಾನಿಯೊ 

ಳ್ಸುಸಿಲೆಸೆಪಲ್ಲಿಗೆಯ್ದುತದುದ್ಘನವೀರ್ಯಮನೀಂಟೆ ವಹ್ನಿವ 

ಕ್ತ್ರಸಮಿತಿ ಗರೂಭವಾಂತು ಶರದೊಳ್ಬಸಿಱಂ ಕೊಱೆದಿಕ್ಕೆ ಕೃತ್ತಿಕಾ 

ವಿಸರವಿವರ್ಧಿತಂ ಗುಹಸಮಾಹ್ವಯನೊಪ್ಪಿದನಾ ಮೃಡಾಂಕದೊಳ್ ॥೧೦೬॥ 


ತಾರಕಾಸುರ ಬಾಧೆಗೆ ಹೆದರಿದ ದೇವತೆಗಳು ಅಗ್ನಿಯನ್ನು ಕರೆದು ಶಿವಪಾರ್ವತಿಯರ ಭೋಗಸಮಯಕ್ಕೆ ಅಲ್ಲಿಗೆ ಅಟ್ಟಿದರು. ಅಗ್ನಿಯು ಶಿವನ ಘನತರವಾದ ವೀರ್ಯವನ್ನು ಕುಡಿದುದರಿಂದ ಅಗ್ನಿಯೇ ಮುಖವಾಗಿ ಉಳ್ಳದೇವತೆಗಳೆಲ್ಲರೂ ಗರ್ಭಧಾರಣರಾದರು.ಆ ಗರೂಭವನ್ನು ಅವರು ತಾಳಲಾರದೆ ಶರವಣಕ್ಷೇತ್ರಕ್ಕೆ ಬಂದು ಗರ್ಭವನ್ನು ಕೊರೆದು ಅಲ್ಲಿಕ್ಕಿದರು. ಆ ಗರ್ಭಪಿಂಡವು ಷಟ್ಕೃತಿಯಿಂದ ಬೆಳೆದು ಗುಹನೆಂಬ ಪುತ್ರನು ಪರಮೇಶ್ವರನ ತೊಡೆಯ ಮೇಲೆ ಒಪ್ಪಿದನು. 


೨೨ ಏಕಪಾದ ಲೀಲೆ.


ಚಂ ॥ ಪದಕಟಕಾಹಿಗಳ್ಗಿ ಕಳೆಗುಂದೆ ರವೀಂದುಗಳಲ್ಲಿ ಕಿಳ್ತು ಸೂ 

ಸಿದ ನವರೌಪ್ಯ ಕಿಂಕಿಣಿಗಳಂತಿರೆ ತೋಱೆ ಪೊದಳ್ದ ತಾರೆಗಳ್ 

ವಿದಿತ ನಭಃಕಟಾಹತಟಮಂ ಬಗಿದುರ್ವಿ ಶಿವೈಕಪಾದಮಾ

ಳ್ದುದು ಬಹಿರಂಬುಸಂಭವನವಾಂಬುಜಮೆಂಬ ಬೆಡಂಗನುರ್ವಿಪಾ ॥೧೦೭॥ 


ಎಲೈ ಸತ್ಯೇಂದ್ರಚೋಳಮಹಾರಾಜನೇ, ಪರಮೇಶ್ವರನು ಪಾದದಲ್ಲಿ ಧರಿಸಿದ್ದ ಹಾವುಗಳ ತೊಡಿಗೆ ( ಆಭರಣ ) ಗಳನ್ನು ರಾಹುಕೇತುಗಳೆಂದು ಭಾವಿಸಿ ಸೂರ್ಯಚಂದ್ರರು ಕಳೆಗುಂದಿದರು. ನಕ್ತ್ರಗಳು ಬೆಳ್ಳಿಯ ಸಣ್ಣ ಗೆಜ್ಜೆಗಳು ಕಿತ್ತು ಚಲ್ಲಾಪಿಲ್ಲಿಯಾಗಿರುವಂತೆ ತೋರುತ್ತಿದ್ದುವು. ವಿಖ್ಯಾತವಾದ ಆಕಾಶವೆಂಬ ದೊಡ್ಡ ಕೊಪ್ಪಿರಿಗೆಯ ದಡವನ್ನೂ ಭೇದಿಸಿಕೊಂಡು ಹಬ್ಬಿ, ಹೊರಗಿನ ಆವರಣವೆಂಬ ಸಮುದ್ರದ ನೀರಿನಲ್ಲಿ ಹುಟ್ಟಿದ ಕಮಲವೋ ಎನ್ನುವ ಶೋಭೆಯಿಂದ ಶಿವನ ಒಂದು ಪಾದವು ಶೋಭಿಸುತ್ತಿತ್ತು. 


೨೩॥ ಸುಖಾವಹಮೂರ್ತಿ ಲೀಲೆ. 


ಚಂ ॥ ತಿಳಿಯದೆ ಮುಕ್ತಿ ತನ್ನ ಪದಭಕ್ತಿಯಿನಪ್ಪುದೆನಿಪ್ಪುದಂ ಕಳಂ 

ಕಳಿಯದೆ ಚಿತ್ತದೊಳ್ನೆಗಳ್ದು ಕರ್ಮಕಲಾಪಮನನ್ಯಮಾರ್ಗದೊ 

ಳ್ತೊಳಲಿ ಭವಕ್ಕೆ ಬರ್ಪ ಪಶುವರ್ಗಕೆ ಬೋಧಿಸಿ ಮೋಕ್ಷವೀಯಲೆಂ 

ದೆಳಸಿ ಕೃಪಾಳು ತಾಳ್ದನೆಲೆ ಚೋಳ ಸುಖಾವಹಮೂರ್ತಿ  ಲೀಲೆಯಿಂ ॥೧೦೮॥ 


ಮುಕ್ತಿಯೆಂಬುದು ಈಶ್ವರನ ಪಾದಭಕ್ತಿಯಿಂದಲೇ ಆಗುವುದೆಂಬುದನ್ನು ತಿಳಿಯದೆ, ಕಳಂಕವು ನಾಶವಾಗದೆ, ಚಿತ್ತದಲ್ಲಿ ಅನೇಕ ಕರ್ಮಗಳ ಬಗೆಗೆ ಯೋಚನೆ ಮಾಡಿ,  ಬೇರೆ ಮಾರ್ಗದಲ್ಲಿ ತೊಳಲಾಡಿ ಪುನಃ ಜನನ ಮರಣಗಳೆಂಬ ಈ ಸಂಸಾರಕ್ಕೆ ಬರುವ ಜೀವಕೋಟಿಗೆ ಮೋಕ್ಷವನ್ನುಂಟುಮಾಡಬೇಕೆಂಬ ಬುದ್ಧಿಯಿಂದ ಎಲೈ ಚೋಳಭೂಮಿಪಾಲನೇ ಆ ಕೃಪಾಳುವಾದ ಪರಮೇಶ್ವರನು ಸುಖಾವಹಮೂರ್ತಿಯ ಲೀಲೆಯನ್ನು ಧರಿಸಿದನು.  


೨೪. ದಕ್ಷಿಣಾಮೂರ್ತಿ ಲೀಲೆ. 


ಮ॥ಸ್ರ॥ ವಿಳಸದ್ವಿದ್ಯುಜ್ಜಟಾಮಂಡಳಮಮರನದೀ ಚಂದ್ರಖಂಡಾನ್ವಿತಂ ಮಂ 

ಜುಳಗಂಡಂ ಸರ್ಪಕರ್ಣಾಭರಣಕಲಿತಮಾಸ್ಯಂ ಮೃದುಸ್ಮೇರಮಿಂದೂ 

ಜ್ವಳಮಂಗಂ ಕಣ್ಗೆ ಚೆಲ್ವಾಗಿರೆ ವಟತರುಮೂಲಸ್ಥಿತಂ ಜ್ಞಾನಮುದ್ರಾಂ 

ಗುಳಿಯಿಂ ಶಿಷ್ಟಪ್ರಬೋಧಪ್ರದನೆಸೆದನವಂ ದಕ್ಷಿಣಾಮೂರ್ತಿದೇವಂ॥೧೦೯॥ 


ಶಿವನು ದೇವಗಂಗಾನದಿ ಮತ್ತು ಚಂದ್ರಲೇಖೆಯಿಂದ ಕೂಡಿದ ಮನೋಜ್ಞವೂ ವಿದ್ಯುತ್ಪ್ರಕಾಶ ಪೂರ್ಣವೂ ಆದ ಜಡೆಯ ಸಮೂಹದಿಂದ ಕೂಡಿದ್ದನು. ಮಂಜುಳವಾದ ಕೆನ್ನೆ ಮತ್ತು ಸರೂಪಗಳ ಕರ್ಣಕುಂಡಲಗಳಿಂದ ಸೇರಿದ ಮುಖಮಂಡಲದಲ್ಲಿ ಮಂದಹಾಸವು ಸುಳಿಯುತ್ತಿತ್ತು. ಚಂದ್ರ ಪ್ರಕಾಶದಂತೆ ಶುಭ್ರವಾದ ದೇಹವು ಕಣ್ಣುಗಳಿಗೆ ಚೆಲುವಾಗಿ ಕಾಣುತ್ತಿತ್ತು. ಇಂಥ ಶಿವನು ದಕ್ಷಿಣಾಮೂರ್ತಿಯೆಂಬ ಹೆಸರಿನಿಂದ ಆಲದಮರದ ಬುಡದಲ್ಲಿ ಜ್ಞಾನಮುದ್ರಾಂಗುಳಿಯಿಂದ ಕುಳಿತು ಶೆಷ್ಟರಾದ ಋಷಿಗಳಿಗೆ ಧರ್ಮಭೋದೆ ಮಾಡಿ ಶೋಭಿಸುತ್ತಿದ್ದನು. 


೨೫. ಲಿಂಗೋದ್ಭವ ಲೀಲೆ. 


ಮ॥ ಹರಿಬೊಮ್ಮರ್ ಜಗದೀಶರಾವೆನುತಹಂಕಾರಕ್ಕೆ ಪಕ್ಕಾಗುತಿ 

ರ್ವರೆ ಕಾದುತ್ತಿರೆ ಕೋಟಿಸೂರ್ಯರುಚಿಯಿಂ ತನ್ಮಧ್ಯದೊಳ್ಮೂಡಿ ತಾ 

ನುರುಲಿಂಗಾಕೃತಿಯಾಗೆ ಸೂಕರಮರಾಳಾಕಾರದಿಂ ಪೋಗಿಯುಂ 

ವರಪನ್ಮೂಲಮನಾನನಾಬ್ಜಮನವರ್ಕಾಣಲ್ಕದೇನಾರ್ತರೇ ॥೧೧೦॥ 


ವಿಷ್ಣು ಬ್ರಹ್ಮರು ನಾವೇ ಜಗದೀಶ್ವರರೆಂದು ಅಹಂಕಾರದಿಂದ ಕೂಡಿ, ಇಬ್ಬರೇ ಯುದ್ಧ ಮಾಡುತ್ತಿರಲು, ಅವರಿಬ್ಬರ ಮಧ್ಯದಲ್ಲಿ ಕೋಟಿಸೂರ್ಯಪ್ರಕಾಶಮಾನವಾದ ಕಾಂತಿಯಿಂದ  ಶ್ರೇಷ್ಠ ಲಿಂಗಾಕಾರದಲ್ಲಿಶಿವನು ಮೃಡಿ ನಿಲ್ಲಲಾಗಿ, ಹಂದಿ ಮತ್ತು ಹಂಸಗಳ ಆಕಾರದಲ್ಲಿ ಹರಿ ಬ್ರಹ್ಮರಿಬ್ಬರೂ ಹೋಗಿ, ಹರಿಯು ಪಾದ ಮೂಲವನ್ನೂ ಬ್ರಹ್ಮನು ಮುಖಕಮಲವನ್ನೂ ಕಾಣಲು ಅಸಮರ್ಥರಾದರು. 


ಚಂ ॥ ಕಳೆ ಸಿರಿ ಧರ್ಮಮುತ್ಸವಮಭೀಪ್ಸಿತ ಮಂಗಳಮಂದಮಾತ್ಮ ನಿ 

ರ್ಮಳತೆ ಚಿರಾಯು ವೈರಿಪುರಶೂನ್ಯತೆ ತಜ್ಜಯಮೇಳ್ಗೆಯಾರ್ಪನ 

ರ್ಗಳಕೃತಿ ಶಾಂತಿಯೊಳ್ಪು ಬಲಮಾಶ್ರಿತರಕ್ಷಣೆ ಪೆರ್ಮೆ ಕೂರ್ಮೆ ವ 

ತ್ಸಳತೆ ಜಶಂ ಸುಲೀಲೆ ಸುಖಮುಜ್ವಳ ವಿದ್ಯೆ ವಿಮುಕ್ತಿಯೆಂಬಿವಂ ॥೧೧೧॥


ಪಡೆವಂ ಪ್ರಮೋದದಿಂ ಕೇ 

ಳ್ವೊಡೆ ಕೇಳ್ನರನಾವನಾದೊಡಂ ಪೊಡವಿಯೊಳೀ 

ಮೃಡನ ಘನಪಂಚವಿಂಶತಿ 

ವಡೆದೀ ಲೀಲೆಗಳನೆಲೆ ನರೇಂದ್ರಲಲಾಮ॥೧೧೨॥


ರಾಜನೇ ಭೂಮಿಯಲ್ಲಿ ಯಾವ ಮನುಷ್ಯನೇ ಆಗಲಿ ಮೃಡನ ಈ ಘನತರವಾದ ಪಂಚವಿಂಶತಿಲೀಲೆಗಳನ್ನು ಆನಂದ್ ದಿ ಕೇಳಿದ್ದಾದರೆ,, ಅವನಿಗೆ ಕಲೆಗಳು, ಐಶ್ವರ್ಯ, ಧರ್ಮ, ಆನಂದ, ಇಷ್ಟಾರ್ಥಸಿದ್ಧಿ, ಮಂಗಳ, ಸೊಗಸು, ಚಿತ್ತನೈರ್ಮಲ್ಯ, ದೀರ್ಘಾಯುಷ್ಯ , ಶತ್ರುನಾಶ, ಜಯ, ಏಳಿಗೆ, ಅತಿಯಾದ ವಿರೋಧವಿಲ್ಲದ ಕಾರ್ಯಸಿದ್ಧಿ , ಶಾಂತಿ, ಒಳ್ಳೆಯದು, ಬಲ, ಆಶ್ರಿತರಕ್ಷಣೆ, ಹೆಮ್ಮೆ, ಪ್ರೀತಿ, ವಾತ್ಸಲ್ಯಭಾವ, ಯಶಸ್ಸು, ವಿನೋದ, ಸುಖ, ಶ್ರೇಷ್ಠವಿದ್ಯೆ, ಮುಕ್ತಿ ಇವೇ ಮೊದಲಾದುವುಗಳನ್ನು ಪಡೆಯುತ್ತಾನೆ. 


ಕೃಪೆ. 

ಡಾ॥ ಆರ್. ಸಿ. ಹಿರೇಮಠ.

ಡಾ॥ ಎಂ. ಎಸ್. ಸುಂಕಾಪುರ.

ಭಾವಾನುವಾದ.

ಪಂಡಿತ ಚನ್ನಪ್ಪ ಎರೇಸೀಮೆ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ