ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಆಗಸ್ಟ್ 21, 2021

ಹಾಲಸಿದ್ಧೇಶ್ವರ ಸಾಂಗತ್ಯ

 ಹಾಲಸಿದ್ಧೇಶ್ವರ ಸಾಂಗತ್ಯ 

ಕರ್ತೃ  :- ಮಲ್ಲಿಕಾರ್ಜುನ ಕವಿ 

ಸಂಪಾದಕರು  : ಡಾ॥ ಎಫ್. ಟಿ. ಹಳ್ಳಿಕೇರಿ


ಕರ್ನಾಟಕದಲ್ಲಿ ಬದುಕಿ ಬಾಳಿ ಸಾಧನೆಗೈದು ಜನಮಾನಸದಲ್ಲಿ ಪ್ರಸಿದ್ಧರಾದ ಸ್ಥಳೀಯ ರಾಜ-ಮಹರಾಜ, ಸಾಮಂತ-ಮಾಂಡಲಿಕ, ಮಠಾಧಿಪತಿ ಮೊದಲಾದವರ ಬಗೆಗೆ ಕಾವ್ಯ ಪುರಾಣಗಳು ಅಂದಿನಿಂದ ಇಂದಿನವರೆಗೂ ರಚನೆಗೊಳ್ಳುತ್ತಲಿವೆ. ಇವು ಆಯಾ ವ್ಯಕ್ತಿಗಳ ಚರಿತ್ರೆಯನ್ನು ವೈಭವೀಕರಿಸಿದರೂ ಸಮಕಾಲೀನ ಸಂದರ್ಭದ ಭೌಗೋಳಿಕ ಪರಿಸರ, ಸಾಮಾಜಿಕ-ಧಾರ್ಮಿಕ ಆಚರಣೆ ಸಂಪ್ರದಾಯಗಳ ವಿವರಗಳು ಹಾಸು ಹೊಕ್ಕಾಗಿವೆ. ಕುಮಾರರಾಮನ ಸಾಂಗತ್ಯ

ಸಿರುಮನ ಚರಿತ್ರೆಗಳು, ಇಮ್ಮಡಿ ಭೂಪಾಲನ ಸಾಂಗತ್ಯ ಮುಂತಾದ ಕೃತಿಗಳು ತಾಜಾ ನಿದರ್ಶನಗಳಾಗಿವೆ. ಪ್ರಸಿದ್ಧ ಮಠಾಧಿಪತಿಗಳ ವ್ಯಕ್ತಿತ್ವಮತ್ತು ಕರ್ತೃತ್ವ ಶಕ್ತಿಯನ್ನು ನಿರೂಪಿಸುವುದಕ್ಕಾಗಿ ನಮ್ಮ ಕವಿಗಳು ಕಾವ್ಯ ಪುರಾಣಗಳನ್ನು ರಚನೆ ಮಾಡಿದ್ದಾರೆ. ಅಂಥ ಕೃತಿಗಳ ಸಾಲಿಗೆ ಹಾಲಸಿದ್ಧೇಶ್ವರ ಸಾಂಗತ್ಯ ಹೊಸ ಸೇರ್ಪಡೆಯಾಗಿದೆ. 


ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ರಾಂಪುರದ ಹಾಲಸ್ವಾಮಿ ಬೃಹನ್ಮಠದ ಮೊದಲ ಮಠಾಧಿಪತಿಯಾಗಿದ್ದ ಹಾಲಸಿದ್ಧಸ್ವಾಮಿ ಚರಿತ್ರೆಯನ್ನು ನಿರೃಪಿಸುವ ಕೃತಿ ಇದು. ಕೃತಿಯಲ್ಲಿ ಕಥಾನಾಯಕನನ್ನು ಹುಚ್ಚಹಾಲ, ಹಾಲೇಶ, ಹಾಲಸಿದ್ಧ, ಹಾಲಸಿದ್ಧೇಶ್ವರ ಎಂದು ಕರೆಯಲಾಗಿದೆ.  


ಇದು ಎರಡು ಸಂಧಿ ೪೪೦ ಸಾಂಗತ್ಯ ಪದ್ಯಗಳನ್ನು ಒಳಗೊಂಡ ಒಂದು ಚಿಕ್ಕ ದೇಶೀ ಕಾವ್ಯ. ಇದರ ಕರ್ತೃ ಮಲ್ಲಿಕಾರ್ಜುನ ಕವಿ.  ಈ ಕವಿಯ ಊರು, ಗುರುಪರಂಪರೆ,ವಂಶಾವಳಿಗಳಂಥ ಇತರೆ ವಿಚಾರಗಳು ತಿಳಿದು ಬರುವುದಿಲ್ಲ. 


ಸಂಧಿ ೧,

ಓಂನಮಃಶಿವಾಯೆಂದು ಧ್ಯಾನಿಸು. 


ಕಂದ ಪದ್ಯ 


ಪಶುಪತಿ ಪರಮಾನಂದ ಪರಮಕಲ್ಯಾಣ 

ಕಾಶಿ ಕೇದಾರ ಪಂಪಾಕ್ಷೇತ್ರ 

ಪರಮತ ನಂಜುಂಡಶಿವ ಗಂಗಾಧರ 

ಹರನೆ ನಮಃಶಿವಾಯ ( ಪಲ್ಲವಿ) 


ಸಾಂಗತ್ಯ: 

ಆದಿಗಣೇಶನ ಪಾದಪೂಜೆಯ ಮಾಳ್ಪ 

ಸಾಧಿತ ದೇಶಿಕಗಣನು 

ವಾದಿಸಿ ರುದ್ರಮುನಿಯು ಶಾಪವನಿತ್ತ 

ಮೂದೇವನೆಂದ ಚಿತ್ರಗುಪ್ತ   ॥೧॥ 


ಆದಿಗಣೇಶನ ಶಿವಾರ್ಚನೆ ಪೂಜೆಗೆ 

ನೀಡಾಗಿಸಿ ಪುಷ್ಪ ಪಣ್ಣುಗಳ 

ಬೇಗದಿ ತಾಯೆಂದು ದೇಶಿಕ ಗಣನಿಗೆ 

ಆಗ ಹೇಳಿದ ಮುನಿವರನು  ॥೨॥ 


ಎಚ್ಚರಿಕೆಯಿಂದ ಸುಸ್ಥಿರಮಾರ್ಗದಿ ನೀನು 

ಯೆತ್ತಿತ್ತ ಪುಷ್ಪಜಾತವನು 

ನಿಚ್ಚಪ ಗಣನಾಥನೇನ ಮಾರ್ಗವ ಹೇಳಿ

ಎಚ್ಚರಿಕೆಯೆಂದು ಹೇಳಿದರು  ॥೩॥ 


ಮಂದಮತಿಗಳಿಂದ ಸಂದೇಹವಿಲ್ಲದೆ 

ಬಂದು ರುದ್ರಮುನಿಯಾಶ್ರಮಕೆ 

ನಿಂದು ನೋಡಿದ ಕೊಣವನದ ಶೃಂಗಾರವನು

ಯಂದು ಹೇಳಿದ ದೇಶಿಕಗಣನು  ॥೪॥


ಕೊಣನೊಳು ಕುಮುದ ತಾ ಪತ್ರಿಪುಷ್ಪವ 

ರಳಿರೆ ತಡೆಯಲಾರದೆ ಎತ್ತಿದೆನು 

ಒಡನೆ ಕಂಡನು ಮುನಿ ವನದೊಳು ನೀನೀಗ 

ಇರುವ ಕಾರಣವ ಹೇಳೆನಲು  ॥೫॥ 


ನಾನೀಗ ಆದಿಗಣೇಶನ ಚಿಟ್ಟಿಗ 

ಅನುರಾಗದಿ ಕುಮುದ ತಾ ಪತ್ರಿಯ 

ಕಮಲವರಳಿರೆ ಎತ್ತಿದೆನಯ್ಯ ಮುನಿವರ 

ಚಿನುಮಯನ ಪೂಜೆಗೆಯೆಂದೆನಲು ॥೬॥ 


ಆರ ಕೇಳಿ ಎತ್ತಿದೆ ಅರುಹೆಮ್ಮೊಳು ನೀನು 

ದೂರು ಮಾಡಿ ದೂಷಿಸಿ ನುಡಿಯೆ 

ಹಾರತೂರಲಾಗಿ ಅತಿ ಮಾತನಾಡಲು 

ವಾದಿಸಿ ನುಡಿದ ರುದ್ರಮುನಿಯು  ॥೭॥ 


ಎಲೆ ಪಾಪಿ ಕಮಲವ ಕೊಯ್ದ ಕಾರಣದಿಂದ 

ಹಿಡಿಶಾಪವನುಯೆಂದು ಮುನಿಪ 

ಶಾಪವೇತಕೆ ಸ್ವಾಮಿ ನೀ ಪಾಲಿಸಿಕೊಯೆಂದು 

ಅನೇಕಾಂಗದಲಿ ಕೊಂಡಾಡಿದನು  ॥೮॥ 


ವಾಕುದೋಷಗಳಿಗೆ ಶಾಪವಿತ್ತಿರಿ ಸ್ವಾಮಿ 

ನಿಃಶಾಪವೆಂದಿಗೆ ಕರುಣಿಸೆನಲು 

ಶೋಕವಿಘ್ನ ದುಃಖಗಳಿಂದ ಕೇಳಲು 

ನೂಕಿ ಮರ್ತ್ಯದಿ ಜನಿಸೆಂದ  ॥೯॥ 


ನೂಕೆ ಕ್ರೋಧಗಳಿಂದ ಶೋಕವಿಟ್ಟಳುತಲಿ

ಮರ್ತ್ಯಲೋಕಕೆ ದೇಶಿಕಗಣನು 

ಸಾಕಾರ ಸರ್ವಜ್ಞ ಮುನಿಯು ಅಳುವದ ಕಂಡು 

ವಿವೇಕದಿ ನೀನಾರೆಂದು ಕೇಳಿದನು  ॥೧೦॥ 


ಆದಿಗಣೇಶನ ಚಿಟ್ಟಿಗ ನಾನೀಗ 

ವಾದಿಸಿ ನುಡಿದೆ ರುದ್ರಮುನಿಯ 

ಪಾದದಲೊದ್ದು ಶಾಪವನಿತ್ತು 

ಕಳುಹಿದ ನನ್ನ ನಾಮವು ದೇಶಿಕಗಣನು   ॥೧೧॥ 


ನೂಕೆ ಕೋಪದಿ ಮುನಿ ಶಾಪಹೊದ್ದಿತುಯೆಂದು 

ಶಪಿಸಿ ಮರ್ತ್ಯಕೆ ಕಳುಹೆ 

ಕೆಡುಕು ಬರುತಿರೆ ನಿಮಕಂಡೆ ಮುನಿವರ

ಸಾಕಾರ ಕರುಣಿ ನೀವೆನಲು  ॥೧೨॥ 


ಎನ್ನ ಪುಣ್ಯದಿಂದೀಗ ನಿಮ್ಮ ಕಂಡೆನು ಸ್ವಾಮಿ 

ಇನ್ನಿದರ ಕಥಕತ್ತಲೆಯ 

ಚನ್ನಾಗಿ ತಿಳಿಸೆಂದು ಉನ್ನಿಸಿ ಬಿದ್ದನು 

ಇನ್ನು ದೇಶಿಕಗಣವರನು ॥೧೩॥ 


ದುಃಖಗಳಿಂದಲಿ ಬಿಕ್ಕುತ್ತ ಹೇಳಿದ 

ಚಕ್ಕನೆ ಸರ್ವಜ್ಞ ಮನಿಗೆ

ಮುಕ್ಕಣ್ಣ ಶಿವನೆಂದು ಮುನಿಯು ಮನ್ನಿಸಿದನು 

ನಕ್ಕು ದೇಶಿಕಗಣವರನು ॥೧೪॥ 


ಎಂದು ಬಿನ್ನಹಗಳಿಂದ ಸರ್ವಜ್ಞ ಮುನಿಯೊಳು 

ನೊಂದು ದುಃಖದಿ ಹೇಳುತಿರಲು 

ಕಂದ ನೀನಂಜಬೇಡೆಂದು ಭಸಿತವನಿಟ್ಟು 

ನಿಂದು ಸಂತೈಸಿದ ಮುನಿಪ ॥೧೫॥ 


ಮುನಿಗಳ ಶಾಪವು ಮುಂದುವರಿದವು ಮಗನೆ 

ಹೆದರದೆ ಮರ್ತ್ಯದಿ ಜನಿಸೀ 

ಯದೆಹಾರುಯಿಲ್ಲದೆ ಯತಿ ಪಾಲ 

ಸಿದ್ಧನ ಸ್ತುತಿಸಲು ಶಾಪ ಪರಿಹಾರವು ॥೧೬॥ 


ಎಂದು ಹೇಳಿದ ಸರ್ವಜ್ಞ ಮುನೀಶ್ವರ 

ಇಂದು ದೇಶಿಕಗಣವರಗೆ 

ಹಿಂದಳ  ಶಾಪದಿ ಬಂದು ಮರ್ತ್ಯದಿ ಪುಟ್ಟಿ 

ನೊಂದುಕೊಳ್ಳಲುಬ್ಯಾಡ ಮಗನೆ ॥೧೭॥ 


ಮುನಿಗಳ ಶಾಪವ ತ್ರಿಣಯ ತಪ್ಪಿಸಲಾರ 

ನಿನ್ಹವಣೇನು ಹುಟ್ಟು ಹೋಗೆನಲೂ 

ಭವಣೆಗೊಳ್ಳಲುಬ್ಯಾಡ ಭವವ ಗೆದ್ದು 

ನೀನು ಜಗದೀಶನ ಭಜಿಸುತ್ತಯಿರಲು ॥೧೮॥ 


ಹೇಳಿದ ಮುನಿವರ ದೇಶಿಕಗಣನಿಗೆ 

ಆಣೆಭಾಷೆಯ ಕೊಟ್ಟು ಕಳುಹಿ 

ಹೋಗಯ್ಯ ನಮ್ಮದು ಓಂನಮಃಶೆವಾಯಯೆಂದು 

ಧ್ಯಾನಿಸು ಪರಶಿವನ ಯೋಗದಲಿ ॥೧೯॥ 


ಅಂಜದೆ ನೀ ಹೋಗಿ ನಿರಂಜನ ಭಕ್ತರ 

ಪುಂಜಸುತನು ಆಗಿ ಜನಿಸೀ 

ಅಂಜನಸಿದ್ಧಿಯು ಅರುಹು ಸಂದಾನವ ನಿ 

ರಂಜನ ಕೊಡುವನು ಮಗನೇ ॥೨೦॥ 


ರುದ್ರಮುನಿಯು ಕೊಟ್ಟ ರೌದ್ರದ ಶಾಪವ 

ತಿದ್ದಿದ ಸರ್ವಜ್ಞ ಮುನಿಯು 

ನಿರ್ಧಾರವಾಗಿ ನೀ ಮರ್ತ್ಯದೊಳಗೆ ಹುಟ್ಟಿ 

ಗೆದ್ದು ಬಾ ಮಾಯಾಶಾಪವನು ॥೨೧॥ 


ವಾಕು ನಿಂದೆಗಳಿಗೆ ಶಾಪಬಂದಿತು ಮಗನೆ 

ಜೋಕೆ ಎಚ್ಚರಿಕೆಯೆಂದೆನುತ 

ಕಾಕುತನದ ಮಾತ ಕಡೆಯಲ್ಲರಿಸಿ ಬೇಗ 

ನೂಕಿ ಶಾಪವ ಹರಿದು ॥೨೨॥ 


ಮರ್ತ್ಯದ ಶಾಪಕ್ಕೆ ಮರವುವೆಗ್ಗಳ ಮಗನೆ 

ಅರಿದು ಸುಜ್ಞಾನಮಾರ್ಗದಲಿ 

ಜರಿದು ಹೊನ್ನುಹೆಣ್ಣ ಹರಿದು ಭವಗಳ ನೀನು 

ಮೆರೆವುದು ಲಿಂಗಸಂಗದಲೀ ॥೨೩॥ 


ಕಷ್ಟ ಜನ್ಮವು ಬೇಡ ದ್ರಷ್ಟಮೂರುತಿ ನೀನು 

ಒಂದಿಷ್ಟು ಕರುಣ ನಿಮ್ಮದಿರಲಿ 

ಅಷ್ಟಾಂಗಕೆರಗಲು ದ್ರಷ್ಟ ಲಿಂಗಾಂಗಿನ 

ಹೊಟ್ಟೆಯೊಳಗೆ ಜನಿಸೆಂದ ॥೨೪॥


 ಗುರುಲಿಂಗಜಂಗಮ ಚರಮೂರ್ತಿ ಹಿರಿಯರ 

ವರಗರೂಭದಿ ಜನೆಸೆನಲು 

ವರವಿಭೂತಿಯ ಧರಿಸಿ ಕಳುಹಿದ ಮುನಿ 

ಸ್ಥಿರವಾಗಿ ಬಾ ಕಂಡ್ಯ ಮಗನೇ ॥೨೫॥ 


ವಂದನೆ ನಿಂದನೆವಳುಕು ಸೊಳಕಿಲ್ಲದೆ 

ಎಚ್ಚರಿಕೆಯೆಂದೆನಲು 

ಚಂದದಿ ಭೋಗಿಸಿ ದೇಶಿಕಗಣನು 

ಅಂದು ಕಳುಹಿದ ಮುನಿವರನು ॥೨೬॥ 


ಬಿದ್ದು ಪಾದದ ಮೇಲೆ ಎದ್ದು ಕರಗಳ ಮುಗಿದು 

ಗೆದ್ದೆ ಶಾಪವ ನೆಮ್ಮ ಕರುಣದಲೀ 

ಮೈಗ್ಧಾ ನಿನ್ನಯ ತೊತ್ತು ಭೃತ್ಯನ ಸಲಹಯ್ಯ 

ಎಂದು ನಿರ್ದಕದಿ ಕಳುಹೆಸಿಕೊಂಡಾ ॥೨೭॥ 


ಹಿಂದಳ ನಾಮವು ದೇಶಿಕಗಣನಾಥ 

ಮುಂದೆ ಹುಚ್ಚ ಹಾಲನೆನಿಸಿ 

ಬಂದು ಮರ್ತ್ಯದಿ ಹುಟ್ಟಿ ನಿಮ್ಮ ಕಂದನೈದಾನೆ ಸ್ವಾಮಿ 

ಯೆಂದು ಹೇಳಿದ ಚಿತ್ರಗುಪ್ತ ॥೨೮॥ 


ಚಿತ್ರಗುಪ್ತರು ತಾವು ಎಚ್ಚರಿಸಿ ಪರಶಿವಗೆ 

ಹುಚ್ಚಹಾಲಗೆ ಕೃಪೆಯಿರಲಿ 

ನುಚ್ಚುನುರಿಯಲಯ್ಯ ನಿಮ್ಮ ಮೆಚ್ಚಿನ ಕಂದಾನು 

ಎಚ್ಚರಿಕೆ ಪರಾಕುಯೆಂದೆನಲು ॥೨೯॥ 


ಹಿಂದಳ ಶಾಪದಿ ಬಂದು ಮರ್ತ್ಯದಿ ಹುಟ್ಟಿ ನಿಮ್ಮ  

ಕಂದನ ರಕ್ಷಿಸು ಸ್ವಾಮಿ 

ಯೆಂದು ಬಿನ್ನಹ ಮಾಡೆ ಚಿತ್ರಗುಪ್ತರು ತಾವು 

ನಂದಿಗೀಶ್ವರ ಪಾರ್ವತಿಗೆ ॥೩೦॥ 


ಕುರುವದ ರಾಮೇಶ್ವರ ವರತುಂಗಭದ್ರೆಯ 

ಸ್ಥಿರಮಧ್ಯ ರಾಮಾಪುರದೀ 

ವರವೀರ ಜಂಗಮ ವಿರೂಪಾಕ್ಷ ವೀರಮ್ಮನ 

ಶರಣೆ ಗರ್ಭದಿ ಜನಿಸಿದನು ॥೩೧॥


ಜಂಗಮ ಭಕ್ತರ ಅಂಗದೊಳಗೆ ಹುಟ್ಟಿ 

ಲಿಂಗವ ಭಜಿಸುತಯಿರಲು 

ಹಿಂಗಿತು ಭವಗಳು ಹಿರಿದಾದ ಪಾಪವು 

ಲಿಂಗ ಹುಚ್ಚಹಾಲನಿಗೆ ॥೩೨॥ 


ಮಾತೆಪಿತರುಗಳು ಜಾತಕರ್ಮವಮಾಡಿ ಆ 

ಜಾತ ಹಾಲಸಿದ್ಧ ಯತಿಯ 

ಪ್ರೀತಿಯ ಕಂದನವೋತು ಹೆಸರಿಟ್ಟರು 

ನೀತಿ ಹಾಲಸಿದ್ಧನೆಂದು ಕರೆಯೇ ॥೩೩॥ 


ಪೊಡವಿಯೊಳಗೆ ನಾಮ ನಡೆಯಿತು ಸಿದ್ಧನ 

ದೃಢ ಚಲಭಕ್ತ ಸೂಚನೆಯು 

ಕಡುಗಲಿ ಕಪಟ ಕ್ಷುದ್ರಗಳನೆಲ್ಲವ 

ಬಿಟ್ಟು ಶಿವನ ಹಂಬಲ ಅನುದಿನವು ॥೩೪॥ 


ನಾಮಕರಣಗಳಾದವು ನಮ್ಮ ಕಂದಗೆ 

ಗುರುದೀಕ್ಷೆ ಪರಮಜ್ಞಾನಗಳ 

ಅಳವಡಿಸುವೆನೆಂದು ಅರುಹು ಸಂಧಾನದಿ

ಗುರುವಿನ ಮಠಕ್ಕೆ ಚಿತ್ತೈಸೆ ॥೩೫॥ 


ಭುವನಗಿರಿಯೆಂಬ ಕವಲೆಯದುರ್ಗದ ನವಚಿತ್ರ 

ಹಿರಿಯ ಮಠದಲೀ ಗುರುಮೂರ್ತಿ 

ಮಳೆಯಪಟ್ಟದ ರಾಚೋಟಿ ಸ್ವಾಮಿಯ ಕೈಯ 

ಕರುಣದೀಕ್ಷೆಯ ಕೊಡಿಸಿದರು ॥೩೬॥ 


ಕರುಣದೀಕ್ಷೆಗಳಾಗೆ ಹರಣಶುದ್ಧಗಳಿಂದ 

ತ್ರಿಣಯನ ಜಪಿಸುತ ಸಿದ್ಧ 

ಶರಣಪದ್ಧತಿಯನು ಕೈಕೊಂಡು ಕರ್ಮವ 

ಕ್ಷಯ ಮಾಡುತಿರ್ದ ಅನುದಿನವು ॥೩೭॥ 


ವೇದಶಾಸ್ತ್ರಪುರಾಣ ಆಗಮಂಗಳನೆಲ್ಲ 

ಸಾಧಿಸಿ ಸರ್ವಜ್ಞನೆನಿಸೀ 

ಮೂದೇವನೊಲಿವ ಮುಕ್ತಿಯ ಪಯಣಂಗಳ 

ಹಾದಿಯ ಸವರಿದ ಮುನಿಪ ॥೩೮॥


ಹೊನ್ನು ಹೆಣ್ಣು ಮಣ್ಣು ಚಿನ್ನನು ಪುತ್ರರು 

ಅಣ್ಣ ತಮ್ಮಂದಿರು ಬಂಧುಗಳು 

ಹಣ್ಣಕಣ್ಣನೆ ಸುತ್ತಿ ಮಣ್ಣಮಸಿಯಾಗುತ್ತ ಮುಕ್ಕಣ್ಣ 

ಧ್ಯಾನವ ಮರದಿರಲು ॥೩೯॥


ಯತಿ ಹಾಲಸಿದ್ಧನು ಯತಿ ಸಪನದಿ ಬಂದು ಹಿಂದಳ 

ಕಥನ ಸುಕೃತಗಳ ಮರದೆ 

ಜತನ ಎಚ್ಚರಿಕೆಯೆಂದೆನುತ ಹೇಳಿ ಪೋಗೆ 

ಅತಿಶಯ ಎಚ್ಚರಗೂಡಿ ॥೪೦॥ 


ಹಿಂದೆ ಸರ್ವಜ್ಞ ಮುನೀಶ್ವರ ಪೇಳಿದ 

ನಿಂದನೆ ಶಾಪವ ಮರದೆ 

ಮುಂದೆ ಹೊನ್ನು ಹೆಣ್ಣು ಕಾಣಿಸುತ್ತಿದವೆಂದು ಇ 

ನ್ನೆಂದಿಗೆ ಶಾಪ ಪರಿಹಾರವು ॥೪೧॥ 


ಯೋಚಿಸಿ ಎದೆ ಹಾರುತ ಹಂಬಲೆಸುತ 

ತನ್ನಾತ್ಮದೊಳಗೆ ಗುಣಿಸುತಲೀ 

ಓತು ಪರಬ್ರಹ್ಮ ಜ್ಯೋತಿಪ್ರಕಾಶ ಪರ 

ಮಾತ್ಮನ ಕೊಂಡಾಡಿದನು ॥೪೨ ॥


ಮಠಮನೆಸ್ವಾಸ್ತಿಯ ಸಹಿತ ಸ್ತಾನವ ಮಾಡಿ 

ಕುಟಿಲಕುಹಕವನು ಕಳದು 

ದಿಟ್ಟಗಲಿಸಿದ ಭಕ್ತಿಜಂಗಮಾರ್ಚನೆಯಿಂದ ಹಿಂದಳ 

ಚಟುಳ ಶಾಪವನು ಏನೆಂಬೆ ॥೪೩॥


ಅಂದು ಯೋಚಿಸಿ ತನ್ನ ಸಂದೇಹಗಳ ಬಿಟ್ಟು 

ಇಂದಶೇಖರ ಗತಿಯೆನುತ 

ಹಂದೆಮನವನೆಲ್ಲನೊಂದು ಮಾಡಿಕೊಂಡು 

ಮುಂದೆ ಸದ್ಗತಿಯ ನೆನೆದನು ॥೪೪॥ 


ಯೋಚನೆ ಚಿಂತೆಯು ಭ್ರಾಂತು ಸಂಸಾರಕ್ಕೆ 

ಚಾಚುತೈದವೆ ಮುಂದುವರಿದು 

ನಾಚಿತು ಮನ ತನ್ನ ತಾನೆ ಹೇಸಿಕೆಯಾಗಿ 

ವಾಸಿ ಹುಟ್ಟಿತು ಪ್ರಾಣದೊಳಗೆ ॥೪೫॥ 


ಎಂದಿಗೀ ಶಾಪವ ಹಿಂದು ಮಾಡುವೆನೆಂದು 

ಮುಂದೆ ದಿನ ಹತ್ತಿರ ಬಂತು 

ಎಂದಿನಂದದಿ ದುಃಖನೊಂದುಕೊಳ್ಳುತಲಿರೆ 

ಮುಂದೆ ಸುಳಿದನಲ್ಲಿ ಯತಿಯು ॥೪೬॥ 


ಜಂಗಮಾರ್ಚನೆಯಿಂದ ,ಹಿಂಗದು ಶಾಪವು 

ಮುಂಗಂಡು ತಪಸ ಮಾಡುವುದು 

ಭಂಗಬಿಟ್ಟು ಭ್ರಾಂತುಗೊಂಡುನೊಯ್ಯಲೈಬ್ಯಾಡ 

ಕಂಗೆಡದಿರು ಮಗನೆನಲು ॥೪೭॥ 


ತಪಸ ಮಾಡುವರೆ ಕಪಟಯೀ ದೇಹವು

ಉಪಟಳ ಹಸು ತೃಷೆ ಬಹಳ 

ಅಕಟ ತೂಗಡಿಕೆ ನಿದ್ರೆಯು ಎನ್ನ ಬಿಡದೆಂದು 

ಕಪಟನಾಟಕನ ಭಜಿಸಿದನು ॥೪೮॥ 


ಏಳಲೀಸದು ಗುಂಡು ಮುಳುಗಲೀಸದು ಬೆಂಡು 

ಹೇಳುವ ಗಾದೆ ದಿಟವೆನಲು 

ಕೊಳುಗೊಂಡಿತು ಮಾಯೆ ಕೊಯೆಂದು ಕೂಗುತಲಿದೆ 

ಹೇಳಲ್ಯಾತಕೆ ಎನ್ನ ಮನವೆ ॥೪೯॥ 


ಅಷ್ಟಮದಂಗಳು ಅರಿಷಡುವರ್ಗಾವು 

ಮೆಟ್ಟಿ ಕುತ್ತಿಗೆಯ ಹೀರುತಲಿ 

ಹಿಟ್ಟುಹೆಣನ ಮಾಡಿ ತಿನ್ನುತಾವೆ ದಶವಾಯಿ 

ದೃಷ್ಟಾ ನೋಡಿಕೊ ಎನ್ನ ಮನವೆ ॥೫೦॥ 


ಏಳು ವ್ಯಸನಗಳೆನ್ನ ಏಳಲೀಸದೆ ಬಲು 

ಕೊಳಾ ಹಿಡಿದು ತನುಮನವ 

ಧಾಳಿಯನಿಡುತವೆ ಜಡಹಡಿಕೆಗಳೆನ್ನ ಇದ 

ನೋಡಲ್ಯಾತಕೆ ಎನ್ನ ಮನವೆ ॥೫೧॥ 


ಪಂಚಭೂತಗಳೆನ್ನ ಹಂಚಿಹರಿಯ ಮಾಡಿ ಪ್ರ 

ಪಂಚಗಳೆಲ್ಲ ಮುಂದುವರಿದು 

ಸಂಚರಿಸುತಲೆನ್ನ ಕೊಂದು ತಿಂಬುತಲದೆ 

ಚಂಚಲ್ಯಾತಕೆ ಎನ್ನ ಮನವೆ ॥೫೨॥ 


ಷಡುಚಕ್ರವರ್ತಿಗಳಾರು ಕತ್ತರಿಸುತ್ತ 

ಬಿಡದೆ ಬೆನ್ನನೆ ಮೆಟ್ಟಿಕೊಂಡು 

ಹೊಡಮಗುಚಿಗೊಡವು ಹೊನ್ನು ಹೆಣ್ಣು ಮಣ್ಣು 

ನುಡಿಯಲ್ಯಾತಕೆ ಎನ್ನ ಮನವೆ ॥೫೩॥ 


ಕರಣಂಗಳೆಲ್ಲವು ಹರಣಂಗಳ ತಂದು 

ಚರಣಂಗಳೆಲ್ಲವು ನಡುಗಿ 

ಮರಣಂಗಳಮಾಡಿ ಮರವೆ ಬಂದೈದಾವೆ 

ಅರಿದುಕೊ ನೀ ಎನ್ನ ಮನವೆ ॥೫೪॥ 


ಮಸಿನುಸಿಗಳೆನ್ನ ದೆಸೆಗೆಡಿಸಿತಹವ 

ನುಸಿಮಸಿಗಳ ಮಾಡುತ್ತಿವಕೊ 

ಕಸಕಿಂಥ ಕಡೆಮಾಡಿ ಕಡೆಯಲಿ ನಗುತಾವೆ ನೆ 

ನಸಿಕೊ ಶಿವನನ್ನು ಮನವೆ ॥॥೫೫॥ 


ಕಾಟಕತನವೆನ್ನ ತಲ್ಲಣಿಸಿ ದೇಹಕೆ 

ಕೂಟವ ಬಯಸಿಕೊಂಡಿದಿಕೊ 

ಮೀಟುಗಾರಿಕೆಯಿಂದ ಮಿಡುಮಿಡನೆ ಮಿಡುಕುವ 

ಕೋಟಲೆಯ ನೋಡೆನ್ನ ಮನವೆ ॥೫೬॥ 


ಕೊಂಡೆಯತನಗಳು ಅಂಡಲವುತ ಎನ್ನ 

ಕಂಡಕಂಡಗಳ ತಿಂಬುತಲಿ 

ಬೆಂಡುಗಳನೆ ಮಾಡಿ ಬೆದರಿಸುತ್ತೈದಾವೆ ಇದ 

ಕಂಡು ನೋಡಿಕೊ ಎನ್ನ ಮನವೆ ॥ ೫೭॥


ಆಸೆಪಾಶಗಳೆನ್ನ ಮೋಸಗಾರಿಕೆಯಿಂದ 

ಘಾಸೆ ಮಾಡುತ ತನುಗಳನು 

ರೋಷವೆಗ್ಗಳಿಸುತಮೋಚು ಹೊರುತಲವೆ 

ವಿಚಾರಿಸಿ ನೋಡೆನ್ನ ಮನವೆ ॥೫೮॥ 


ಕೋಪಟೋಪಗಳೆನ್ನ ತಳಪಟಗಳ ಮಾಡಿ 

ತರಹರಿಸದೆ ಕೊಲ್ಲುತಿಹವೇಕೊ 

ತಾಪಿಸಲಾರದೆ ನಾನು ತಲ್ಲಣಿಸಿದೆನೀಗ 

ಬೇಗನೋಡಿಕೊ ಎನ್ನ ಮನವೆ ॥೫೯॥


ಅಸನವಸನಗಳೆನ್ನ ಮಸುಕಿ ಮುದ್ದೆಯ ಮಾಡಿ 

ಹಿಸಿದು ನಸಿದು ತಿನ್ನುತಿವೇಕೊ 

ಹಸೆಗೆಟ್ಟು ದೆಸೆಗೆಟ್ಟು ಹಲುಬಿ ಬಾಯಾರಿದೆ ನೆ 

ನಿಸಿಕೋ ಎನ್ನ ಮನವೆ ॥೬೦॥ 


ಗರುವ ಗಮಕಗಳೆನ್ನ ತರಿದು ಮುರಿದು ನುಂಗಿ 

ಸುರಿದು ರಕುತವ ಹೀರುತಲಿ 

ಅರಿದು ಅಂಗಲಾಚಿ ಬಿರಿವುತ್ತಲಯಿದೇನೆ 

ಜರಿದುಕೊ ನೀ ಎನ್ನ ಮನವೆ ॥೬೧॥ 


ಮದಮತ್ಸರಗಳೆನ್ನ ಸದೆಬಡಿದು ದೇಹವ 

ಮದಿರ ಖಂಡವ ತಿನ್ನುತಿವೇಕೋ 

ಬೆದಬೆದನೆ ಬೇವುತ್ತ ನೋಯುತ್ತಲಿದ್ದೇನೆ

ಹೆದರಿಕೊ ನೀ ಎನ್ನ ಮನವೆ ॥೬೨॥ 


ಹಮ್ಮುಬಿಮ್ಮುಗಳೆನ್ನ ಚಿಮ್ಮುತ್ತ ಕೆಡಹುತ್ತ 

ಗುಮ್ಮಿ ಹಾಕುತ ಕಂಡಕಡೆಗೆ 

ಕಮ್ಮನೆ ನಾ ಕೆಟ್ಟು ದ ಮ್ಮಯ್ಯನೆನುತೆನೆ 

ಸುಮ್ಮನೆ ನೋಡಿಕೋ ಎನ್ನ ಮನವೆ ॥೬೩॥ 


ಮದ್ದುಭಂಗಿಯ ಎನ್ನ ಚಿದ್ರಿಸಿದೆ ಪಾಪ 

ಇದ್ದಿಲ ಮಸಿಯ ಮಾಡಿದವು 

ಎದ್ದು ತೆಕ್ಕಿಸಿ ಎನ್ನ ನಿದ್ರೆಯಚ್ಚರದೊಳು 

ಇರ್ದವು ಕೇಳೆನ್ನ ಮನವೆ ೬೪॥ 


ಚಾಡಿಕೊಂಡೆಗಳು ಕೋಡಿತನದ ಬುದ್ಧಿ 

ಈಡಾಡಿ ಎನ್ನ ತಿಂಬುತಲಿ 

ನೋಡಲಾರೆನು ನೋಡಲಾರೆನು ಪೊರೆಯಂದರಿ 

ವಿಡದೀವೆ ಹಾಡಿಕೋ ಎನ್ನ ಮನವೆ ॥೬೫॥ 


ವಂದನೆ ನಿಂದನೆಗಳು ಬೆಂದು ಬೇಗೆಯ ಮಾಡಿ 

ಕಂದಿಕುಂದಿಸಿ ನುಗ್ಗು ಮಾಡಿ 

ಅಂದಗೆಡಿಸಿ ಅಲ್ಲಿ ತಿಂಬುತಲೈದಾನೆ 

ನಿಂದು ನೋಡಿಕೊ ಎನ್ನ ಮನವೆ ॥೬೬॥


ಕಾಮವಿಷಗಳೆನ್ನ ಕೂಗಿ ಬೊಬ್ಬೆಯಮಾಡಿ 

ಮೂಗ ಹಿಡಿದು ಮುಂದುಗೆಡಿಸಿ

ಕಾಗೆಯಂದರಿ ಕಣ್ಣಬಿಡಿಸುತಲೈದಾವೆ 

ತೂಗಿ ನೋಡಿಕೊಯೆನ್ನ ಮನವೆ॥೬೭॥ 


ಲೋಭಮತ್ಸರಗಳು ಮೋಜುಮಾಡಿ ಎನ್ನ 

ಹೀಜಿ ಕರುಳಹಿಂಡುತಲಿ 

ಘಾಸೆಯಾದೆನು ಗಾಣದೆತ್ತಿನಂದದಿ ನಾನು 

ನೀಸಿ ನೋಡಿಕೊ ಎನ್ನ ಮನವೆ ॥೬೮॥ 


ಹಾದರ ಕಳವುಗಳ್ಹಲವು ಚಂದದಲೆನ್ನ ಹಲುಬಿ 

ಹಮ್ಮೈಸಿ ನೂಕುತಲಿ ಬಲುಕೆಂಡದೊಳು 

ಹಾಕಿ ಬಾಜಿಯಿಂದಲಿ ಕೆತ್ತಿಸುಲಿ 

ತಿನ್ನುತವೆಯನ್ನ ಮನವೆ ॥೬೯॥ 


ಎಂದು ತನ್ನಯ ಮನಕೆ ಇಂತು ಬುದ್ಧಿಯ ಹೇಳಿ 

ನೊಂದುಕೊಳ್ಳುತ ದುಃಖದಲಿ 

ಬೆಂದಸೂಲಿಯ ತಂದು ಚಂದದಿ ನಡುವಿಗೆ 

ಹೊಂದಿಸುತ ಅಳಿವಹುದೆ ॥೭೦॥ 


ನಿರಾಕಾರ ಪರಬ್ರಹ್ಮ ನಿರ್ವಲಯ ಹಿಡಿವರುಯನ್ನ 

ಹಣವಲ್ಲವೆಂದು ಚಿಂತೆಯ ಮಾಡಿದನು 

ಭುವನದೊಳಗೆ ಅಪಹಾಸ್ಯವಾಗುವುದೆಂದು 

ಶಿವನ ನೆನೆವುತ ದುಃಖಗೊಳಲು ॥೭೧॥ 


ಕುರುವಾದ ಹಾಲೇಶ ಅರುಹು ಸಂಧಾನದಿ 

ಮರದ ನಿಧಾನವನು ತೋರಿದನು 

ಅರಿದುಟ ತ ಪಸು ಮಾಡಿ ಮರಿಯಬ್ಯಾಡವು ಕಂದ 

ಜರದು ಹೇಳಿದನು ಯತಿವರನು ॥೭೨॥ 


ಯತಿ ಹಾಲಸಿದ್ಧನು ನುತಿಸಿ ಹೇಳಿಯೂ ಹೋಗೆ 

ಅದರ ಕಥನವೆನಗೆ ಅಳವಹುದೆ 

ಮತಿಹೀನನು ನಾನು ಮೂರನೆಯ ಪಾತಕಯನಗೆ 

ಅರುವಾಗದೆ ಯೋಗದೊಡಲು ॥೭೩॥ 


ಎಂದು ಚಿಂತೆಗಳಿಂದ ಮುಂದೆ ಬರುವ ಮಾತು 

ಇಂದು ಯೋಚಿಸಿ ಮನದೊಳಗೆ 

ನಿಂದನೆ ಲೋಕದ ಸಂದಳಿಯನು ಗೆಲುವ ಇದ 

ರಂದವ ಕಾಂಬರೆನ್ನಳವೆ ॥೭೪॥ 

ಅನ್ನಪಾನವ ಬಿಡೆ ಕಣ್ಣುಗೆಡುವುದು ಕಾಯ 

ಚುನ್ನವಾಡ್ವುದು ಲೋಕವೆಲ್ಲ 

ಮುಕ್ಕಣ್ಣಯ್ಯನ್ನನೇಕೆ ಪಡೆದನೆಂದೆನುತಲಿ 

ಕಣ್ಣನೀರಿನ ಕೋಡಿ ಹರಿಯಲು ॥೭೫॥ 


ಅಸನವೆಸನವ ಬಿಡಲು ಹಸಗೆಡುವುದೀ ಕಾಯ 

ವಸುಧೆಯಲ್ಲವು ನಿಂದಿಪುದು 

ಪಶುಪತಿಯನ್ನನು ಪಡೆದನ್ಯಾತಕೆಯೆಂದು 

ನೊಸಲಕಂಬನಿ ಕೌಡಿಹಾಯೆ ॥೭೬॥ 


ಊಟಮಿಯ್ಯರಬೇಡಿ ಪಾಪಗೊಂಬುದು ಕಾಯ 

ತಾಟಕರೆಲ್ಲ ನಿಂದಿಪರು ಶಶಿ 

ಜೂಟ ಎನ್ನನೇಕೆ ಹುಟ್ಟಿಸಿದನೊಯೆಂದು 

ದೂಟಿಸಿ ಬೀಳೆ ದುಃಖದ ॥೭೭॥ 


ಹಸಿವು ತೃಷೆಗಳ ಬಿಡಲು ಬಸವಳವುದೀ ಕಾಯ 

ದೆಸೆದೆಸೆಯವರು ನಿಂದೆಪರು 

ದಿಸಮಾಕ್ಷಯನ್ನನು ಪಡೆದನ್ಯಾತಕೆಯೆಂದು 

ವಸದು ಒರಸಿದನು ಕಂಬನಿಯ ॥೭೮॥ 


ದುಃಖಗಳಿಂದಲಿ ಬಿಕ್ಕುತ ಬಿರಿವುತ್ತ ವಕ್ಕ 

ಲಿಕ್ಕುತ ವಲದೊಲದು 

ನಕ್ಕಾಟವಾದವು ನಗೆಯಾಡೆ ಲೋಕದೊಳು 

ಸಿಲ್ಕಿದೆ ಶಾಪದ ಬಲೆಗೆ ॥೭೯॥ 


ಮಂದಮತಿಗಳಿಂದ ನಿಂದಿಸಿದನು ಋಷಿಯು 

ಬಂದೆನು ಭವಕೆ ಮರ್ತ್ಯದಲಿ 

ಇಂದುಶೇಖರ ಬಲ್ಲ ಇದಕೇನು ಗತಿಯೆಂದು 

ಮುಂದೆ ದುಃಖದ ಕೋಡಿ ಹರಿಯೆ ॥೮೦॥ 


ಹಮ್ಮುಬಿಮ್ಮುಗಳಿಂದ ಕೆಮ್ಮನೆ ಬೆರೆತು ನಾ 

ಸುಮ್ಮನೆ ನುಡಿದೆ ರುದ್ರಮುನಿಯ 

ಹಣ್ಣಿತು ಶಾಪವು ಹದನ ಕಾಣೆನು ನಾನು 

ಮುಕ್ಕಣ್ಣಯಂದನು ದುಃಖದಲಿ ॥೮೧॥


ಅರಿಯದೆ ನುಡಿದರೆ ಹಿಡಿಶಾಪವಾಯಿತು 

ಅರಿದು ನುಡಿದರೆ ಇನ್ನೆಷ್ಟು 

ಉರುವಿಪಾಲಕ ಬಲ್ಲ ಉರಿದು ಸಾಯಲಿಬಹುದು 

ಧರೆಶಾಪ ಕಷ್ಟವೆನಲು ॥೮೨॥ 


ಹೆಂಡರು ಮಕ್ಕಳು ಕಂದರ ಸಾಕದೆ 

ಬಂದಾನು ಇವ ವೇಶದಲಿ 

ಎಂದೆಂಬ ಲೋಕದ ನಿಂದೆಗಳಿಗೆನಾನು 

ಮುಂದಾದೆನೆಂದ ದುಃಖದಲಿ ॥೮೩॥ 


ಸಾಲಸಂಬಂಧ ಋಣಭಾರವತ್ತದಾದೆ 

ಹೋದನು ಇವ ವೇಶದಲಿ 

ಗಾದೆಯ ಮಾತಿಗೆ ಈಡಾದೆನೆನುತಲಿ 

ಹಲೈಬಿದನು ದುಃಖದಲಿ ॥೮೪॥ 


ಅನ್ನ ಅಗ್ಗಣಿಗಳು ಇನ್ನುತ್ಯಾಮನವಾಗೆ 

ಕಣ್ಣಗೆಟ್ಟುಹೋದನೆನಲು 

ಮುನ್ನಿನ ಮಾತಿನ ಗಾದೆಗೆ ಒಳಗಾದೆನು

ಇನ್ನು ಹೇಗೆಂದು ದುಃಖದಲಿ ॥೮೫॥ 


ಹೇಳದೆ ಹೋದರೆ ಆಳಿಗೊಂಬುದು ಲೋಕ 

ಹೇಳಿದರೆ ಎನ್ನ ಬಿಡದು 

ಈಳಿಲವಲ್ಲಿದು ಇದಕೇನುಹದನೆಂದು 

ಆಲೋಚಿಸಿದ ಮನದೊಳಗೆ ॥೮೬॥ 


ಅರುಹದೆ ಹೋದರೆ ಜರದು ನುಡಿವುದು ಲೋಕ 

ಅರುಹಿದರೆ ಮುನ್ನ ಬಿಡರು 

ಕೊರತೆಯಾದವು ಮುಂದೆ ಕೊಡಿ ಈ ಲೋಕಕೆ 

ಹೆದರುತ ಚಿಂತೆ ಮಾಡಿದನು ॥೮೭॥ 


ಶಾಪವ ಹರಿದೆನು ಪಿನಾಕಿಯನೊಲಿಸೆನು 

ಈ ಲೋಕವ ಗೆಲಲಾರೆನುತ 

ಕಾಕುಭಂಡಾದೆನು ಕಟಕಟೀದೇಹವ 

ನೂಕಿಬಿಡುವೆ ನಿಮಿಷದಲಿ ॥೮೮॥ 


ಭವವ ಹರಿಕೊಂಡೆನು ಭವರಾಪ ಗೆದ್ದೆನು

ಈ ಜಗದ ಮನುಜರ ಗೆಲಲಾರೆ 

ಅಗಹರ ಶಿವನೆಂದು ಎಡರಿ ದುಃಖಗಳಿಂದ 

ಮಿಡುಕುತಿದ್ದನು ಹುಚ್ಚಹಾಲ ॥೮೯॥ 


ಮಾತೆಯೆನಗೆ ರುದ್ರಿ ಪಿತನು ಪರಮೇಶ್ವರ 

ಜಾತ ಶರಣರೆನ್ನ ಬಳಗ 

ಭೂತಳದೊಳಗುಳ್ಳ ಶಿವಭಕ್ತರೆಲ್ಲರೂ ಎನ್ನ 

ತಾತನೆಂದನು ಹುಚ್ಚಹಾಲ  ॥೯೦॥ 


ಅಣ್ಣಂದಿರು ಶರಣರು ತಮ್ಮಂದಿರು ಸುಜ್ಞಾನಿಗಳು 

ಹೆಣ್ಣಗಳೆಲ್ಲ ಸೋದರಿಯರು 

ಪುಣ್ಯವುಳ್ಳವರು ಪುರಾತನರುಯಂದಾಗ

 ಮುಕ್ಕಣ್ಣಯಂದನು ಹುಚ್ಚಹಾಲ ॥೯೧॥ 


ಅಕ್ಕನು ಮಹಾದೇವಿ ಚಿಕ್ಕವ್ವ ಗೌರಮ್ಮ

ಮಿಕ್ಕಿನವರು ಎನ್ನ ಸೋದರರು

ಮುಕ್ಕಣ್ಣ ಶಿವ ಎನ್ನ ಮುಕ್ತಿಯಕರ್ತನು 

ಟಕ್ಕ ಮನುಜರು ತರಗೆಲೆಯು ॥೯೨॥ 


ದೊಡ್ಡವ್ವ ಪಾರ್ವತಿ ಚಿಕ್ಕವ್ವ ಗಂಗಮ್ಮ 

ಮಿಕ್ಕಿನವರೆಲ್ಲ ಸೋದರರು

ಅರುಹುಳ್ಳ ಶರಣರು ದಾಯಾಧ್ಯರು ಎನ್ನ

ದಡ್ಡ ಮನುಜರು ತರಗೆಲೆಯು ॥೯೩.॥


ಕಾಯವೆನಗೆ ಸತಿ ಪ್ರಾಣವೆನಗೆ ಪತಿ 

ರೋಮರೋಮಗಳೆಲ್ಲಸುತರು 

ಚರ್ಮವು ಹಸ್ತ ಮೇಲಾದ ನೆಂಟರು 

ಇದರ ಕೀಲ ನೋಡಿಕೊ ಎನ್ನ ಮನವೆ ॥೯೪॥


ವಿದ್ಯವೆ ತಾಯಿತಂದೆ ಸೋದರ ಮಾವ 

ಶುದ್ಧ ಶಿವಾಚಾರ ಬಂಧುಗಳು 

ನಿದ್ರೆ ತೂಗುತ ಎನ್ನ ಮಿಗಿಲಾದ ಬಳಗವು 

ಇದರ ನಿರ್ಧರ ನೋಡಿಕೊ ಮನವೆ ॥೯೫॥ 


ಹರಣಹಡದ ತಾಯಿ ಚರಣ ಬಂಧುಬಳಗ 

ಕರರಣಂಗಳೆಲ್ಲ ಸೂಕ್ತ ಮಗನು 

ಕರುಣ ವಾಕ್ಯಗಳು ಕಥೆಪರಸಂಗಗಳೆಂದು ಇದರ 

ಹರುವ ನೋಡಿಕೊಯನ್ನ ಮನವೆ॥೯೬॥ 


ದಯವೆ ಧರ್ಮಸತ್ರ ನಯನುಡಿ ಅರವಟ್ಟಿಗೆ 

ಸೈರಣೆಗಳು ಕೆರೆಬಾವಿ ಮೃ 

ದು ನುಡಿ ದೇಗುಲ ಮುನಿ ಹುಚ್ಚಹಾಲಗೆ 

ಸ್ವಯವೆ ಪರಮ ಮುಕ್ತಿ ಕಡಲು॥೯೭॥ 


ಕಾಯವೆ ಪಟ್ಟಣ ವಾಯುಗಮನವೆ ತೇಜಿ 

ಮಾಯಾಪಾಶವು ರಾಜ ಪ್ರಜಾ 

ಮದವೆ ಆನೆಯ ದಳ ಕದನ ಕಾಳಗವನು 

ಮುದದಿ ನೋಡಿಕೊ ಎನ್ನ ಮನವೆ ॥೯೮॥ 


ಕಲಿತನವೆ ಜಾಗಟೆ ಚಲತನವೆ ಮದ್ದಳೆ 

ಭೇರಿ ಧೀರತನವೆ ಶಂಖವಾದ್ಯ

ಧ್ಯಾನವೌ ಶಿವಪೂಜೆ ಮೌನವೆ ಸುಜ್ಞಾನ 

ಕಾರಣವ ನೋಡಿಕೊ ಮನವೆ ॥೯೯॥ 


ತನುವೆ ಪುಷ್ಪಪತ್ರೆ ಮನವೆ ಲಿಂಗಪೂಜೆ 

ಘನವೆ ಶಿವಶರಣರ ಗೋಷ್ಠಿ 

ನೆನವೆ ನಿಜಾನಂದ ಅನುವೆ ಕ್ರಿಯಾಶೀಲ ಇದ 

ರನುವ ತಿಳಿಕೊಯನ್ನ ಮನವೆ ॥೧೦೦॥ 


ನಿತ್ಯವೆ ನಿಜಲಿಂಗ ಸತ್ಯವೆ ಪರಬೊಮ್ಮ

ಭಕ್ತಿಯೆನಗೆ ಮೊಲೆವಾಲು 

ಚಿತ್ತಶುದ್ಧವೆ ಚಿನ್ಮಯ ಜ್ಯೋತಿಪ್ರಕಾಶವು ಇದ 

ರರ್ಥ ನೋಡಿಕೊ ಎನ್ನ ಮನವೆ ॥೧೦೧॥ 


ಕಂಗಳೆ ಕನ್ನಡಿ ಕರೂಣವೆ ಗೀತಪ್ರಬಂಧ 

ನಿರ್ಣಯವೆನಿಜಪದವು 

ಒಲವೆ ಭಕ್ತಿಯ ಬೀಜ ಛಲವೆ ವಿರಕ್ತತಿ 

ಇದರ ಮರೂಮವ ತಿಳಿ ಎನ್ನ ಮನವೆ ॥೧೦೨॥ 


ಕ್ಷಮೆದಮೆ ಮಧುನ್ರುತ ಭಯಭಕ್ತೆ ಪರಮಾನ್ನ 

ಸ್ವಯಚಿತ್ತವೆ ಪರಮಾನ್ನಗಳು 

ನಯನುಡಿ ದ್ಯುತಿಕಾಯಿ ಶೆವನುಡಿ ಹರಿವಾಣ 

ಇದರ ಕ್ರಮವ ನೀ ನೋಡಿಕೊ ಮನವೆ ॥೧೦೩॥ 


ಸಂತೋಷಗಳು ಎನಗೆ ಪಂಚಕಜ್ಜಾಯವು ಪ್ರ 

ಪಂಚಯಿಲ್ಲದುದೆ ಪಳಿದ್ಯಗಳು 

ವಂಚನೆ ಹೋದುದೆ ಭೋಗ ಪದಾರ್ಥಗಳು ಇದರ 

ಮಿಂಚ ನೋಡಿಕೊ ಎನ್ನ ಮನವೆ ॥೧೦೪॥ 


ಅರ್ಪಿತವಳಿದರೆ ಅಡಕೆ ಅನ್ನವ ಬಪ್ಪುದೆ ಸುಣ್ಣ 

ಹಸುತೃಷೆ ಹೊಗೆ ಬಿಳಿಯಲೆಯು 

ಹುಸಿಬಿಟ್ಟುದೆ ಹೋಮ ಶೆವಪೂಜೆ ನಮಗೆಂದು ಇದರ 

ಹಸೈಗೆಯ ನೋಡಿಕೊ ಮನವೆ ॥೧೦೫॥ 


ಹರಣವೆ ದಂಡಿಗೆ ಚರಣವೆ ಸೇವಕರು 

ಕರಗಳೆರಡು ಚಿಟ್ಟಿಗರು ನಯನವೌ 

ದೀವಟಿಗೆ ಕರ್ಣವೆ ಪಂಚವಾದ್ಯ ಇದರ 

ಹವಣ ನೋಡಿಕೊಯನ್ನ ಮನವೆ॥೧೦೬॥ 


ಮಸ್ತಕವೆ ಸತ್ತಿಗೆ ಮನವೆ ಕಾಲಾಳುಗಳು 

ಎಚ್ಚರಿಕೆಯೆ ವಿಶಿಯೋಗನೈಚ್ಚು

ಗುರುಕಿಲ್ಲದ ಗೈಣವೌ ಶಿವಾಲಯವೈ ಎಚ್ಚರಿತು 

ನೋಡಿಕೊ ಎನ್ನ ಮನವೆ॥೧೦೭॥


ಆಕಾಶವೆ ಹೊದಿಕೆಯು ಭೂಮಿಯೆ ಕಟ್ಟವಂಗ 

ನಕ್ಷತ್ರಗಳು ಪತ್ರಪುಷ್ಪ 

ಚಂದ್ರಸೂರ್ಯಾದಿಗಳು ದೀ ಟಿಗೆ ದೀಪವು ಇದರ 

ಅಂಗವ ನೋಡಿಕೊಯನ್ನ ಮನವೆ ॥೧೦೮॥ 


ಕರ್ತೃ : ಮಲ್ಲಿಕಾರ್ಜುನ ಕವಿ 

ಸಂಪಾದಕರು: ಡಾ: ಎಫ್. ಟಿ . ಹಳ್ಳಿಕೇರಿ 

ಪ್ರಕಾಶಕರು: ಪ್ರಸಾರಾಂಗ 

ಕನ್ನಡ ವಿಶ್ವವಿದ್ಯಾಲಯ ಹಂಪಿ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ