ಸರ್ಜಪ್ಪನಾಯಕನ ಕಥನ ಕಾವ್ಯ
(ತರೀಕೆರೆ ಪಾಳೆಯಗಾರ )
ಸಂಪಾದಕರು: ಡಾ . ವಿರೂಪಾಕ್ಷಿ ಪೂಜಾರಳ್ಳಿ
ದಕ್ಷಿಣ ಕರ್ನಾಟಕದ ಕಾವ್ಯ ಪ್ರಕಾರ, ಲಾವಣಿ,ಜನಪದಗೀತೆ,ಕಥನ ಗೀತೆಗಳಲ್ಲಿ ಸರ್ಜಪ್ಪನಾಯಕನ ಕಥೆ ಜೀವಂತಿಕೆ ಪಡೆದಿದೆ. ಮೊತ್ತಮೊದಲಿಗೆ ಸರ್ಜಪ್ಪನಾಯಕನ ಕಥೆ ಲಾವಣಿ ರೂಪದಲ್ಲಿ ಎಂದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹೇಳಿದ್ದಾರೆ. ಕೋಲಾಟ, ಕೃಷಿಚಟುವಟಿಕೆ,ಗಾಡಿಹೊಡೆಯುವಾಗ,ಕಪಿಲೆ ಹೊಡೆಯುವಾಗ,ಕುಟ್ಟುವಾಗ, ರುಬ್ಬುವಾಗ,
ತರೀಕೆರೆ ಸರ್ಜಪ್ಪನಾಯಕನ ಕಥನವು ಸುಂದರ ಹಾಡಿನಂತೆ ಕೇಳಿಸುತ್ತದೆ. ವಿಶೇಷವೆಂದರೆ ಹೆಣ್ಣುಮಕ್ಕಳು ಸಹಾ
ಸರ್ಜಪ್ಪನಾಯಕನ ಕಥನವನ್ನು ಹಾಡುತ್ತಾ ಕಣ್ಣೀರು ಸುರಿಸುತ್ತಾರೆ. ನಿಜಕ್ಕೂ ಜನಮನದಲ್ಲಿ ಜೀವಂತ ಕುರುಹು ಆಗಿದ್ದಾನೆ ಸರ್ಜಪ್ಪನಾಯಕ.
ಜನಮನರಲ್ಲಿ ಸೂರೆಗೊಂಡ ವ್ಯಕ್ತಿ ಸರ್ಜಪ್ಪನಾಯಕ, ವೀರ, ಧೀರ,ಛಲಗಾರ,ಆಂಜನೇಯನಪರಮಭಕ್ತ. ಬಡವರ ಬಂಧು.ಜನತೆಯ ಅಚ್ಚುಮೆಚ್ಚಿನ ನಾಯಕ.ಸರ್ಜಾ ಹನುಮಪ್ಪನಾಯಕರ ಸುತ್ತ ದೊಡ್ಡ ಯುವಕರ ಪಡೆಯೇ ಸೇರಿತು. ತರೀಕೆರೆ ಅರಸರಿಗೆ "ಸರ್ಜಾ" ಎಂಬ ಬಿರುದನ್ನು ಹೈದರನು ಕೊಟ್ಟ ಕಾರಣದಿಂದ ಇವರಿಗೆ ಕೊನೆಯವರೆಗೂ ಅದೆ ಅಭಿದಾನ ಬಂದಿದೆ. ಕಲದುರ್ಗ,ಕಾಮನದುರ್ಗಗಳ ಅಜೇಯ ರಕ್ಷಣೆಯಲ್ಲಿ ಹನುಮಪ್ಪ ಬಂಡಾಯವನ್ನು ನಿರ್ದೇಶಿಸಿದನು. ಸರಕಾರದ ವಿರುದ್ಧ ನಿಂತು "ಇರುಸಾಲನ್ನು ದೋಚಿ ಬಡವರಿಗೆ ಹಂಚತೊಡಗಿದರು.ತರೀಕೆರೆ ಪಾಳೆಯಗಾರರ ಏಳಿಗೆಯನ್ನು ಸಹಿಸಲಾರದೆ ಮೈಸೂರು ಸರಕಾರ ಬ್ರಿಟಿಷ್ ಸೈನ್ಯದ ಸಹಾಯ ಕೋರುತ್ತಾರೆ.೧೮೩೧-೩೭ ರಲ್ಲಿ ನಡೆದ ಯುದ್ಧದಲ್ಲಿ ಸರ್ಜಾರಂಗಪ್ಪನಾಯಕ ವೀರಮರಣವನ್ನಪ್ಪಿದ. ತಂದೆಯ ನಂತರ ಯುದ್ಧವನ್ನು ನಿಲ್ಲಿಸದೆ ಮಗ ಸರ್ಜಾ ಹನುಮಪ್ಪನಾಯಕ ಹೋರಾಟ ಮುಂದುವರಿಸಿದ. ಶತ್ರುಗಳ ಕಪಿಮುಷ್ಠಿಯಿಂದ ಪಾರಾಗಿದ್ದ ಸರ್ಜಾನನ್ನು ಅವರು ಹಿಡಿಯುವುದು ದುಸ್ಸಾಧ್ಯವಾಗಿತ್ತು. ಕುತಂತ್ರ ಕಪಟದಿಂದ ಇವನ ಮರ್ಮವನ್ನರಿತು ಅವನ ಸೂಳೆಯ ಮನ ಪರಿವರ್ತನೆ ಮಾಡಿ ಅವಳ ಸಹಾಯ ಪಡೆದು ನಾಯಕನನ್ನು ಬಂಧಿಸಿಡಲಾಯಿತು.ಕೊನೆಗೆ ಬೆಂಗಳೂರಿಗೆ ಕರೆತಂದು ಗುಟ್ಟಳ್ಳಿ ಅರಮನೆ ಆವರಣದಲ್ಲಿ ಮೂರು ಬಾರಿ ಗಲ್ಲಿಗೆ ಹಾಕಿದರೂ ಪ್ರಾಣಹೋಗಲಿಲ್ಲ.ಬ್ರಿಟಿಷರು ಪ್ರಾಣದಾನ ಕೊಟ್ಟರು. ಸ್ವಾಭಿಮಾನಿ ಸರ್ಜಪ್ಪನಾಯಕ ತನ್ನ ಕೈಯಿಂದಲೆ ನೇಣುಹಾಕಿಕೊಂಡು ಹುತಾತ್ಮನಾಗುತ್ತಾನೆ.
ಸರ್ಜಪ್ಪನಾಯಕ ೧೯ ನೇ ಶತಮಾನದ ಒಬ್ಬ ಪಾಳೆಯಗಾರ. ಪ್ರಸ್ತುತ ಕಥನಕಾವ್ಯದಲ್ಲಿ ಯುದ್ಧ, ಬೇಟೆ, ಸೂಳೆ ನಿಂಗಿಯ ಪ್ರಸಂಗ ಬರುತ್ತದೆ. ಇಲ್ಲಿ ಕರುರಸವನ್ನು ಪ್ರತಿಪಾದಿಸುವ ಜನಪದರು ರಸವತ್ತಾದ ಸನ್ನೆವೇಶ,ದುರಂತ ಪ್ರಸಂಗಗಳನ್ನು
ಮನಕಲಕುವಂತೆ ಹಾಡಿ ರಂಜನೆ ಕೊಡುವರು.
ಹುಟ್ಟಿದ್ದು ತೊರೆಕೇರೆ॥
ಬೆಳೆದಿದ್ದು ಶಿವಮೊಗ್ಗೆ
ಮಾತನಾಡದು ಮಯಸೂರು
ಸರ್ಜತಿ ಭೂಪ
ಇದ್ಯೆ ಕಲಿಯದು ಹಿರಿದುರುಗೊ ऽ ( ತೊರೆಕೇರೆ = ತರೀಕೆರೆ, ಮಯಸೂರ= ಮೈಸೂರು )
ದುರುಗ ದುರುಗಂಬದೊ ॥
ಅದು ಎಂಥ ದುರುಗಾವೋ
ಇದೇ ವಸದ ಹಿರೆದುರುಗ
ಕಂಚಿನ ದುರುಗ
ಏಳೇ ಕಲ್ಲಿಗೆ ಮುಗುದೈಯಿತೊऽ
ಕಂಚಿನ ದುರುಗವು ॥
ಕೇರೆಯ ದುರುಗವು
ಏಳೇ ಕಲ್ಲಿಗೆಮುಗದೆಯಿದೊ
ಸರ್ಜತಿ ಭೂಪ
ಏಳೇ ಕಲ್ಲಿಗೆ ಮುಗದೈಯಿತೊऽ
ಮಾಳಿಗೆ ಮನೆ ಒಳಗೆ ॥
ಮಾತನಾಡುವುನಾರೋ
ಮೆಚ್ಚಿದ ಮೊಳಲುಕೆರೆ ಹನುಮ
ಸರ್ಜತಿ ಭೂಪ
ಮೆಚ್ಚಿದ ಮೊಳಲುಕೆರೆ ಹನುಮऽ.
ಅಂಚಿನ ಮನೆ ಒಳಗೆ ॥
ವಂಚ ಮಾಡುವನಾರೇ
ಮೆಚ್ಚಿದ ಮೊಳಲುಕೆರೆ ಹನುಮ
ಸರ್ಜತಿ ಭೂಪ
ಮೆಚ್ಚಿದ ಮೊಳಲುಕೆರೆ ಹನುಮ ऽ .
ಸಾವಿಡಿಗೆ ಚಂದುರಾಮ ॥
ಕುಲದಲಿ ಬ್ಯಾಡರ ಉಡುಗ
ಆರಾರಿಗೆಲ್ಲ ಮದವೈರಿ
ಸರ್ಜತಿ ಭೂಪ
ಆರಾರಿಗೆಲ್ಲ ಮದವೈರಿऽ.
ಗುಂಡತ್ತಿ ಗುಂಡ ಇಳಿದು
ಗುಂಡನೂರು ಬಾಗಲು ಕಾದು
ಹೋಗದಿರು ಸಾಲು ತಿರುವ್ಯಾನೆ
ಸರ್ಜತಿ ಭೂಪ
ಹೋಗದಿರು ಸಾಲು ತಿರುನ್ಯಾನೊऽ
ಕೊಣವತ್ತಿ ಕೊಣವಿಳಿದು ॥
ಕೊಣನೂರು ಬಾಗಲು ಕಾದು
ಹೋಗದಿರು ಸಾಲು ತಿರುವ್ಯಾನೆ
ಸರ್ಜತಿ ಭೂಪ
ಹೋಗದಿರು ಸಾಲು ತಿರುವ್ಯಾನೆ ऽ.
ಹೋಗ ಇರುಸಲ ತಿರುವಿ
ಬಡವರ ಬಗ್ಗರ ಕರಸಿ
ದಾನವಾದರೆ ಮಾಡ್ಯಾನಲ್ಲೋ.
ಸರ್ಜತಿ ಭೂಪ
ಧರ್ಮವಾದರೆ ಮಾಡ್ಯಾನಲ್ಲೊऽ.
ನಾಳೆಗೆಂಟವ ದಿವಸ ॥
ದುರುಗದ ವೆಂಕಪರಾಯ
ದುರುಗಾದೊಳಾಗ ಮಸಲತ್ತು
ಗೋವಿಂದರಾಯ ವೆಂಕಪರಾಯ
ದುರುಗದೊಳಗ ಮಸಲತ್ತುऽ .
ಮಸಲತ್ತು ಮಾಡ್ಯಾರೋ ॥
ಕಿಮ್ಮತ್ತು ಬೆದಿಕ್ಯಾರೋ
ಹೂವೇನಳ್ಳಿಗೆ ನಡೆದಾರೊ
ಗೋವಿಂದರಾಯ ವೆಂಕಪರಾಯ
ಹೂವೇನಳ್ಳಿಗೆ ನಡೆದಾರೊऽ.
ಹೂವೇನಳ್ಳಿಗೆ ॥
ನಡೆದರೊ ಆವಾಗ
ಉರುಡು ಸಾವಿಡಿಗೆ ನಡಿದಾರೋ
ಗೋವಿಂದರಾಯ ವೆಂಕಪರಾಯ
ಕುಂತೆ ಮಸಲತ್ತು ಮಾಡ್ಯಾರಲ್ಲೋऽ.
ಕುಂತೇನ ಮಸಲತ್ತೋ ॥
ಮಾಡ್ಯಾರೋ ಆವಾಗ
ಕಿಮ್ಮತ್ತಾದರೆ ಬೆದಿಕ್ಯಾರೋ
ಗೋವಿಂದರಾಯ ವೆಂಕಪರಾಯ
ಕಿಮ್ಮತ್ತಾದರೇ ಬೆದಿಕ್ಯಾರೋ ऽ .
ಮಸಲತ್ತು ಮಾಡ್ಯಾರೋ ॥
ಕಿಮ್ಮತ್ತು ಬೆದಿಕ್ಯಾರೋ
ಮದಲೆ ಹನುಮಯ್ಯನ ಕರಿಸ್ಯಾರೋ
ಗೋವಿಂದರಾಯ ವೆಂಕಪರಾಯ
ಮದಲೆ ಹನುಮಯ್ಯನ ಕರಿಸ್ಯಾರೊऽ
ಏನಲೆ ಎಲೇ ಹನುಮ
ಏನೋ ಮಾದಿಗರನುಮ
ನಿಂಗಮ ತಾಯಿನ ದಯೆಮಾಡು
ಮಾದಿಗರನುಮ
ನಿಂಗಮ ತಾಯಿನ ದಯೆ ಮಾಡುऽ.
ದಡಗ್ಗನೆದ್ದನೊ॥
ಊರು ಸಾವಿಡಿ ಬಿಟ್ಟಾನೋ
ಅರಮನೆಗಾದರೆ ನಡುದಾನೆ
ಮಾದಿಗರನುಮ
ಅರಮನೆಗಾದರೆ ನೆಡುದಾನೋऽ.
ಏನಮ್ಮ ಎಲೇ ತಾಯಿ॥
ಏನೇ ನಿಂಗಮ್ಮ ತಾಯಿ
ಊರು ಸಾವಿಡಿಗೆ ಬರಬೇಕು
ನಿಂಗಮ್ಮ ತಾಯಿ
ಊರು ಸಾವಿಡಿಗೆ ಬರಬೇಕುऽ.
ಏನಲೇ ಎಲೆ ಹನುಮ ॥
ಏನೋ ಮಾದಿಗರ ಹನುಮ
ನಾನೊಂದು ಮಾತೊಂದ ಕೇಳತೀನಿ
ಮಾದಿಗರ ಹನುಮ
ಅಂಜು ಇಲ್ಲದೆ ಹೇಳಬೇಕುऽ.
ನಿನ್ನ ಆಣೆಯ ನಿನ್ನಾ॥
ಸೂರ್ಯ ಚಂದುರನೃಣೆ
ನಿನ್ನ ಪಾದದಾಣೆ ಕಾಣೆನಮ್ಮ
ನಿಂಗಮ್ಮ ತಾಯಿ
ಕೋಪವಾದರೆ ಮಾಡಬ್ಯಾಡೋऽ .
ದಡಗ್ಗನೆದ್ದಳೋ॥
ಅರಮನೆ ಬಿಟ್ಟಾಳೊ
ಊರು ಸಾವಿಡಿಗೆ ನಡೆದಾಳೊ
ನಿಂಗಮ್ಮ ತಾಯಿ
ಊರು ಸಾವಿಡಿಗೆ ನಡೆದಾಳೊ.
ಅಣ್ಣ ವೆಂಕಪರಾಯ ॥
ಭಾವ ಗೋವಿಂದುರಾಯ
ನನ್ನ ಕರೆಸಿದ ಬಗವೇನು
ಗೋವಿಂದರಾಯ ವೆಂಕಪರಾಯ
ನನ್ನ ಕರೆಸಿದ ಬಗವೇನುऽ
ಏನುವಿಲ್ಲವಮ್ಮ ॥
ಎತ್ತವಿಲ್ಲವಮ್ಮ ನಿಂಗಮ್ಮ ತಂಗಿ
ಗೊಂಬೆ ಮಂಚಕ್ಕೆ ದಯಮಾಡು
ನಿಂಗಮ್ಮ ತಂಗಿ
ಕುಸಲೆ ಮಂಚಕ್ಕೆ ದಯಮಾಡುऽ.
ಗೊಂಬೆನ ಮಂಚಕ್ಕೆ ॥
ದಯೆ ಮಾಡಿ ಇರುವೆನು
ಕುಸಲೆ ಮಂಚಕ್ಕೆ ದಯೆ ಮಾಡಿ ಇರುವೆನು
ಗೋವಿಂದರಾಯ ವೆಂಕಪರಾಯ
ನನ್ನ ಕರೆಸಿದ ಬಗೆ ಏನುऽ .
ಏನುವಿಲ್ಲವಮ್ಮ ॥
ಎತ್ತವಿಲ್ಲಾವಮ್ಮ ನಿಂಗಮ್ಮ ತಾಯಿ
ಜುಟ್ಲು ಜನಿವಾರ ನಿಲುಸಮ್ಮ
ನಿಂಗಮ್ಮ ತಾಯಿ
ಮಾನ್ಯ ಅಭಿಮಾನ್ಯ ನಿನ್ನದಮ್ಮೊऽ.
ಜುಟ್ಲು ಜನಿವಾರ ನಿನ್ನದೋ॥
ಮಾನ್ಯ ಅಭಿಮಾನ್ಯ ನಿನ್ನದಮ್ಮೊ
ನಿಂಗಮ್ಮ ತಂಗಿ
ಮಾನ್ಯ ಅಭಿಮಾನ್ಯ ನಿನ್ನದಮ್ಮೊऽ
ಬ್ರಾಹ್ಮಣರ ಕುಲದಲ್ಲಿ ॥
ಬ್ಯಾಡನ ಬರುತಾನೆ
ಕುಲಕಾದರೆ ಅಪಕೀರ್ತಿ
ನಿಂಗಮ್ಮ ತಂಗಿ
ಬ್ಯಾಡರ ಕುಲಕೆ ಸಂಚು ಕೊಡಬೇಕು
ಅವನ ಉಪ್ಪುವ ತಿಂದು
ಅವನ ಸೊಪ್ಪುವ ತಿಂದು
ಅವನ ಮೇಲೆ ಎರಡು ಬಗೆದಲ್ಲೊ
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆऽ.
ಒಂಟೆ ಸಾಲೇ ಕೊಡತಿವಿ॥
ಆನೆ ಸಾಲು ಕೊಡತಿವಿ
ಎಮ್ಮೆ, ಆಕಳ ಸಾಲು ಕೊಡತಿವಿऽ
ನಿಂಗಮ್ಮ ತಂಗಿ
ಬ್ಯಾಡನೊಳಸಂಚು ಕೊಡಬೇಕುऽ.
ಆನೆ ಸಾಲು ನಮಗುಂಟು
ಒಂಟೆ ಸಾಲು ನಮಗುಂಟು
ಎಮ್ಮೆ ಆಕಳು ಸಾಲು ನಮಗುಂಟು
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆऽ.
ವಕ್ಕಳ ಗದ್ದೆ ಕೊಡತೀವಿ
ಜಾಗಿರಾಶಿ ಕೊಡತಿವಿ
ಬ್ಯಾಡನೊಳಸಂಚು ಕೊಡಬೇಕು
ನಿಂಗಮ್ಮ ತಾಯಿ
ಬ್ಯಾಡನೊಳಸಂಚು ಕೊಡಬೇಕು ऽ.
ವಕ್ಕಳ ಗದ್ದೆ ನಮಗುಂಟು
ಜಾಗಿರ ಸಾಲು ನಮಗುಂಟು
ಆತನಿದ್ದರೆ ಎಲ್ಲವುಂಟು
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆऽ.
ಸಣ್ಣಕ್ಕಿ ಸರ್ಜಾನ ॥
ಅಗಲಿ ನಾನಿರುಲಾರೆ
ಕೂಡಿ ನಾನಿರುಲಾರೆ
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆऽ.
ಮುವತ್ತು ಮೂರಳ್ಳಿ ॥
ಜಾಗೀರಿ ಕೊಡುತೀವಿ
ಆಳ ರಾಜ್ಯವ ಕೊಡುತೀವಿ
ನಿಂಗಮ್ಮ ತಾಯಿ
ಬ್ಯಾಡನೊಳಸಂಚು ಕೊಡಬೇಕುऽ.
ಮುವತ್ತು ಮೂರಳ್ಳಿ ॥
ಜಾಗೀರು ನಮಗುಂಟು
ಆಳ ರಾಜ್ಯ ನಮಗುಂಟು
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆऽ.
ಬಡಿಗೇರನ ಕರಸಯ್ಯ
ಬಗಣಿ ಸೂಲಗಳನ್ನು ಕೆತ್ತಿಸಯ್ಯ
ಕ್ವಾಟೆ ಸುತ್ತಲ ನಿಲ್ಲಿಸಯ್ಯೊ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ನಿಲ್ಲಿಸಯ್ಯऽ.
ಕಮ್ಮಾರನ ಕರಸಯ್ಯಾ॥
ಶೂಲಗಳು ಕಡಿಸಯ್ಯಾ
ಕ್ವಾಟೇ ಸುತ್ತಲ ನಿಲಿಸಯ್ಯಾ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ನಿಲಿಸಯ್ಯೊऽ.
ನೆವ್ವರನ ಕರಸಯ್ಯ॥
ಶೂಲವಕ್ಕಳು ನುಡಿಸಯ್ಯ
ಕ್ವಾಟೇ ಸುತ್ತಲ ಬಿಗುಸಯ್ಯ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ಬಿಗುಸಯ್ಯೊऽ.
ತಳವಾರನು ಕರಸಯ್ಯ॥
ಶಾವುಲ್ಲು ತರಿಸಯ್ಯ
ಕ್ವಾಟೆ ಸುತ್ತಲು ಒದುಸಯ್ಯ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ಹೊದುಸಯ್ಯೊऽ.
ಮಾದಿಗರನ ಕರಿಸಯ್ಯ ॥
ಬೇಲಿಯ ಕಡಿಸಯ್ಯ
ಬೇಲಿನಾದರೆಕಡಿಸಯ್ಯ
ಗೋವಿಂದರಾಯ ವೆಂಕಪರಾಯ
ಬೇಲಿನಾದರೆ ಕಡುಸಯ್ಯೊऽ.
ಹೂವನಳ್ಳಿ ಎಂಬುದು ॥
ಏಳೇ ಬಜಾರವಾಯಿತೊ
ಏಳು ತರಾವು ಬಡುಸಯ್ಯ
ಗೋವಿಂದರಾಯ ವೆಂಕಪರಾಯ
ಏಳುತರಾವು ಬಡುಸಯ್ಯೊऽ.
ಒಡ್ಡರುನಾ ಕರುಸಯ್ಯ ॥
ಡಂಕಗಳ ಕಡಿಸಯ್ಯ
ಊರ ಬಾಗ್ಲಿಗೆ ನೆಡುಸಯ್ಯ
ಗೋವಿಂದರಾಯ ವೆಂಕಪರಾಯ
ಊರ ಬಾಗ್ಲಿಗೆ ನೆಡುಸಯ್ಯೊऽ.
ಮಾದಿಗರನು ಕರೆಸಯ್ಯ ॥
ರಾಡುನ ಕಟ್ಟುಸಯ್ಯ
ಬಿಗವಾದರೆ ಜೋಡಿಸಯ್ಯೊ
ಗೋವಿಂದರಾಯ ವೆಂಕಪರಾಯ
ಬಿಗವಾದರೆ ಜೋಡುಸಯ್ಯೊऽ.
ಊರ ದೇವತೆ ಸಾರು॥
ಗಟಿಸಾರು ಸಾರುಸಯ್ಯೊ
ಗಟಿಪಾರ್ಯರು ನಿಲ್ಲಿಸಯ್ಯೊ
ಗೋವಿಂದರಾಯ ವೆಂಕಪರಾಯ
ಗಟಿಪಾರ್ಯರು ನಿಲ್ಲೆಸಯ್ಯೊऽ.
ತೊರೆಕೆರೆದೊಳಗಿರುವ ॥
ಸರ್ಜತಿ ಭೊಪನಿಗೆ
ವಾಲೆನಾದರೆ ಬರೈಸಯ್ಯ
ಗೋವಿಂದರಾಯ ವೆಂಕಪರಾಯ
ವಾಲೆನಾದರೆ ಬರುಸಯ್ಯऽ.
ಆಯ್ತಿವಾರ ಅಮಾಸೆ ಮಾಡಿ ॥
ಸೋಮಾರ ಹಿರಿಯಕ್ಕಿ ಒಯ್ದು
ಮಂಗಳವಾರ ದುಳಾಲಗ್ಗಿಗೆ ಬರಬೇಕು
ಅನ್ನುತಲಾಗ
ವಾಲೆನಾದರೆ ಬರುಸಯ್ಯೊऽ.
ವಾಲೇನೆ ಬರುದಾರೋ॥
ವಾಲೇನೆ ಆಕ್ಯಾರೋ
ಮಾಗಿ ಸಪುನವು ಬಿದ್ದಿತಲ್ಲೊ
ಅನ್ನುತಲಾಗಿ
ಮಾಗಿ ಸಪುನವು ಬಿದ್ದಿತಲ್ಲೊ.
ಎಂದಿಗಿಲ್ಲದ ಹೂವ್ವನಳ್ಳಿ ॥
ಇಂದಿಗೆ ಸುಂಗರವಾಯ್ತೊ
ಮುತ್ತಿನ ಜಾಲವ ಬಿಗಿದಂತೆ ಬಿಗಿದಯ್ತೊ
ಅನ್ನುತಲಾಗ
ಮಾಗಿದ ಸಪುನವು ಬಿದ್ದಿತಲ್ಲೊ.
ದಡಗ್ಗನೆದ್ದಾನೊ ॥
ಉಸುನಕ್ಕು ನಕ್ಕಾನೆ,ಹಲ್ಲುನಾದರೆ ಕಡದಾನೊ
ಸರ್ಜತಿ ಭೂಪ
ಮೀಸೆನಾದರು ತಿರುವ್ಯಾನಲ್ಲೊ .
ದಡಗ್ಗನೆದ್ದಾನೊ ॥
ಅರಿವಿ ಗಂಗಿಗೆ ನಡೆದಾನೊ
ಸರ್ಜತಿ ಭೂಪ
ಸ್ನಾನವಾದರೆ ಮಾಡೆನಲ್ಲೊ.
ಸ್ನಾನಾವ ಮಾಡನೇ ॥
ಬಂಗಾರ ಗಿಂಡೀಲಿ
ಪನ್ನೀರಾದರು ಹಿಡಿದಾನೊ
ಸರ್ಜತಿ ಭೂಪ
ಅರಮನೆಗಾದರೇ ಬಂದಾನಲ್ಲೊ.
ಅರಮನೆಗೆ ಬಂದಾನೆ ॥
ಕಾಯಿನ ಕರ್ಪೂರ ತಗುದಾನೊ
ಸರ್ಜತಿ ಭೂಪ
ಮನಿಸ್ವಾಮಿ ರಂಗಯ್ಯಗೆ ನಡೆದಾನೊ.
ಕಾಯಿನೆ ಒಡುದಾನೊ॥
ಕೈಯಿನೆ ಮುಗಿದಾನೆ
ವರುವುನಾದರೆ ಬೇಡುವನಲ್ಲೆ
ಮನಿಸ್ವಾಮಿ ರಂಗ
ಎಡಗಡೆ ಹೂವನ್ನು ಕೊಟ್ಟಿತಲ್ಲೊ
ಎಡ್ಗಡೆ ಹೂವನ್ನು ಕೊಟ್ಟಿತಲ್ಲೊ ॥
ಕೊಟ್ಟಿತು ಆವಾಗ
ಅರಮನೆಗಾದರೆ ಬಂದನಲ್ಲೊ
ಸರ್ಜತಿ ಭೂಪ
ಅರಮನೆಗಾದರೆ ಬಂದನಲ್ಲೊ
ಅರಮನೆಗೆ ಬಂದಾನೆ॥
ಕಾಯಿನ ಕರ್ಪೂರ ಇಟ್ಟಾರಲ್ಲೊ
ಸರ್ಜತಿ ಭೂಪ
ಗರಡಿ ಮನೆಗನ್ನ ನಡೆದಾನೊ
ಗರಡಿ ಮನೆಗೆ ಬಂದಾನಣ್ಣ॥
ಸಮಸಗತಿಯ ಮಾಡನಣ್ಣ
ಹಿಂದಕೆ ಹಿಂಗಣ್ಣ ಹೊಡೆದಾನೊऽ ಸರ್ಜತಿ ಭೂಪ
ಮುಂದಕೆ ಮುಂಗಣ್ಣು ಹೊಡೆದಾನೊऽ.
ಹಿಂದಕ್ಕೆ ಹಿಂಗಣ್ಣ ಹೊಡೆದ
ಮುಂದಕ್ಕೆ ಮುಂಗಣ್ಣ ಹೊಡೆದ
ಯಂಬತ್ತು ಮಣವ ಗುಂಡಿಗಾದರೆ ಕೆಡುದಾನೆ
ಸರ್ಜತಿ ಭೂಪ
ಯಂಬತ್ತು ಮಣ ಗುಂಡಿಗಾದರೆ ನಡೆದಾನುऽ .
ಯಂಬತ್ತು ಮಣವನ್ನು॥
ಗುಂಡಿಗೆ ನಡೆದಾನೊ
ಗುಂಡುನಾದರು ಎಳಲಿಲ್ಲ
ಸರ್ಜತಿ ಭೂಪ
ದುಂಖವಾದರೆ ಮಾಡ್ಯಾನಲ್ಲೊऽ .
ದುಃಖವೇ ಮಾಡ್ಯಾನೊ ॥
ಶೋಕವೇ ಮಾಡ್ಯಾನೋ
ದುಃಖವಾದರೆ ಮಾಡನಲ್ಲೊ
ಸರ್ಜತಿ ಭೂಪ
ಶೋಕವಾದರೆ ಮಾಡ್ಯಾನಲ್ಲೊऽ.
ದುಃಖವು ಮಾಡ್ಯಾನೆ ॥
ಶೋಕವು ಮಾಡ್ಯಾನೆ
ಅರಮನೆಗಾದರೆ ಬಂದನಲ್ಲೋ
ಸರ್ಜತಿ ಭೂಪ
ಅರಮನೆಗಾದರೆ ಬಂದನಲ್ಲೊ ऽ.
ಅರಮನೆಗೆ ಬಂದಾನೆ ॥
ಹಾಲನೆ ಅನ್ನವು
ಮೆದ್ದನು ಅವಾಗ
ಉಳುಕಡ್ಡಿ ಮೆದ್ದೆನಲ್ಲೊ
ಸರ್ಜತಿ ಭೂಪ
ಹೊಳಿಗೆ ಬಿಳಿ ಎಲೆಯ ಮೆದ್ದನಲ್ಲೊऽ.
ಉಳುಡಿಕೆ ಬಿಳಿಯೆಲೆ ॥
ಮೆದ್ದನು ಆವಾಗ
ದೇವರ ಕ್ವಾಣೆಗೆ ನೆಡದಾನೋ
ಸರ್ಜತಿ ಭೂಪ
ದೇವರ ಕ್ವಾಣೆಗೆ ನಡೆದಾನೋऽ.
ದೇವರ ಕ್ವಾಣೆಗೆ ನೆಡದಾನೋ ಆವಾಗ
ಸುದ್ದಿನ ಸುರಿಬಾಕು
ನಾಗರ ಅದ್ಯಾವ ಚಂದ್ರನದ್ಯಾವ ತಗುದಾನೋऽ
ಸರ್ಜತಿ ಭೂಪ
ಚಂದ್ರುದಾದ್ಯವುತಗುದೃನೊऽ.
ತಳವಾರ ತಿಪ್ಪಯ್ಯ ॥
ಕುದುರೆನೆ ಹಿಡಿಯಯ್ಯ
ಕುದುರೆ ಜೀನಾದರೆ ಬಿಗಿಸಯ್ಯ
ಅನ್ನುತಲಾಗ
ತಳವಾರ ತಿಪ್ಪಯ್ಯಗೆ ಹೆಳನಲ್ಲೊऽ .
ತಂದೆನೇ ಪಾದಕ್ಕೆ
ನಡೆದಾನೊ ಆವಾಗ
ತಂದೆ ಪಾದವ ಕೊಡಲಿಲ್ಲೊ
ರಂಗಪ್ಪ ತಂದೆ ಪಾದವ ಕೊಡಲಿಲ್ಲೊऽ.
ಮನ್ನೆ ರಾತ್ರಿಯ ಸಪುನ ॥
ಕೊಟ್ಟೂರು ಬಸವಣ್ಣ ತೇರು
ಕಳಸವಾದರೆ ಮುರಿದಂಗಿತ್ತು
ಸರ್ಜತಿ ಭೂಪ
ಐನ ಇವತ್ತಿನ ಪಯಣವ ನಿಲಿಸಯ್ಯೊऽ
ಮಾಗಿ ಕಾಲದ ಸಪುನ ॥
ಮಗನಿಗೆ ಒಳ್ಳೇದು
ಪರಜನರಿಗೆ ಒಳ್ಳೇದಲ್ಲ
ರಂಗಪ್ಪ ತಂದೆ
ಇವತ್ತೆ ಪಯಣವ ಕೊಡಬೇಕು ऽ.
ಇವತ್ತಿನ ಪಯಣವು ॥
ಕೊಡದಿದ್ದರೆ ನೀನು
ಅರಾರೆ ದಂಡನ್ನು ನುಗ್ಗುತಾರೋ
ರಂಗಪ್ಪ ತಂದೆ
ಇವತ್ತೆ ಪಯಣವ ಕೊಡಬೇऽ.
ನಿನ್ನೆ ರಾತ್ರಿಯ ಸಪುನ ॥
ಹಟ್ಟಿ ತಿಪ್ಪಯ್ಯನ ತೇರು
ಕಳಸವಾದರೆ ಮುರಿದಂಗಿತ್ತು
ಸರ್ಜತಿ ಭೂಪ
ಇವತ್ತೀನ ಪಯಣವ ನಿಲಸಯ್ಯೊऽ.
ಮಾಗಿಕಾಲದ ಸಪುನ ॥
ಮಗನಿಗೆ ಒಳ್ಳೇದು
ಪರಜನರಿಗೆ ಒಳ್ಳೇದಲ್ಲ
ರಂಗಪ್ಪ ತಂದೆ
ಇವತ್ತಿನ ಪಯಣವ ॥
ಇವತ್ತಿನ ಪಯಣವ ಕೊಡದಿದ್ದರೆ ನೀನು
ಆರಾರು ದಂಡು ನುಗ್ಗುತಾರೊ
ರಂಗಪ್ಪ ತಂದೆ ಕೊಡಬೇಕು
ರಾತ್ರಿನ ಸಪುನವೊ ॥
ಹೂವ್ವನಹಳ್ಳಿ ಊರಮುಂದೆ
ಕುದುರೆ ಕಾಲು ಮುರಿದಂಗಿತ್ತು
ನಿನ್ನ ಮದುವೆ ಆದಂಗಿತ್ತು
ಸರ್ಜತಿ ಭೂಪ
ಇವತ್ತಿನ ಪಯಣವ ನಿಲಿಸಯ್ಯऽ.
ಹುಟ್ಟಿದ್ದು ತೊರೆಕೆರೆ
ಬೆಳೆದಿದ್ದು ಶಿವಮೊಗ್ಗೇ
ಪ್ರಾಣ ಗೆಲ್ಲುವುದು ಹೂವನಹಳ್ಳಿ
ರಂಗಪ್ಪ ತಂದೆ
ಇವತ್ತಿನ ಪಯಣವ ಕೊಡಬೇಕುऽ.
ಇವತ್ತಿನ ಪಯಣವು ॥
ಕೊಡದಿದ್ದರೆ ನೀನು ಅರಾರೆ ದಂಡನ್ನು ನುಗ್ಗುತಾರೊ
ರಂಗಪ್ಪ ತಂದೆ
ಇವತ್ತಿನ ಪಯಣವ ಕೊಡಬೇಕುऽ.
ತಂದೆನ ಪಾದಕ್ಕೆ ॥
ಮುಗಿದಾನೋ ಆವಾಗ
ತಾಯಿಪಾದಕ್ಕೆ ನೆಡುದಾನೊ
ಸರ್ಜತಿ ಭೂಪ
ತಾಯಿ ಪಾದಕ್ಕೆ ನೆಡುದಾನೊऽ .
ತಾಯಿನೆ ನೀಲಮ್ಮ ॥
ದುಃಖವ ಮಾಡ್ಯಾಳೋ
ಶೋಕವಾದರೆ ಮಾಡ್ಯಾಳಲ್ಲೊ
ನೀಲಮ್ಮ ತಾಯಿ
ಶೋಕವಾದರೆ ಮಾಡ್ಯಾಳಲ್ಲೊऽ.
ಅವರ ಕೈ ಎಡವಾಗಿ ॥
ನಿನ್ನ ಕೈ ಮೇಲಾಗಿ
ಆಡಿಬಾರಪ್ಪ ನನ್ನ ಮಗನೆ
ಸರ್ಜತಿ ಭೂಪ
ಆಡಿಬಾರಪ್ಪ ನನ ಮಗನೆऽ.
ಇಂದಿಗೆ ನೋಡಿದ ಮಕವೊ॥
ಮತ್ತೆಂದಿಗೆ ನೋಡ್ಯಾಲಿ
ಆಡಿಬಾರಪ್ಪ ನನ್ನ ಮಗನೇ
ಸರ್ಜತಿ ಭೂಪ
ಆಡಿಬಾರಪ್ಪ ನನ ಮಗನೆ ऽ.
ತಂದೆನೆ ಪಾದಕ್ಕೆ ॥
ಮುಗಿದಾನೊ ಆವಾಗ
ತಾಯಿ ಪಾದಕ್ಕೆ ಮುಗುದಾನೊ
ಸರ್ಜತಿ ಭೂಪ
ಕುದುರೆ ಪಾದಕ್ಕೆ ನೆಡುದಾನೊ.
ಆರು ಗಾವುದ ನಲಿಯೇ ॥
ಹಾರುವಂತ ಕುದುರೆ
ದುಃಖವಾದರೆ ಮಾಡುತೈತೋ
ಸರ್ಜನ ಕುದುರೆ
ಪಾದವಾದರೆ ಕೊಡಲಿಲ್ಲೋ॥
ಆರು ಗಾವುದು ನಲಿಯೆ ॥
ಹಾರುವಂತ ಕುದುರೆ
ದುಃಖವಾದರೆ ಮಾಡುತೈತೊ
ಸರ್ಜನ ಕುದುರೆ
ಪಾದವಾದರೆ ಕೊಡಲಿಲ್ಲೊऽ.
ನೆತ್ತಿಮ್ಯಾಗಳ ಸಿಟ್ಟು ॥
ತುದಿಗಾಲಿಗೆ ಇಳಿದಯಿತೊ
ನೆಗ್ಗದೆ ತುದಿಗಾಲಲಿ ಒದ್ದಾನಲ್ಲೊऽ
ಸರ್ಜನ ಕುದುರೆ
ಗಾಳೆ ಗಂಟಾಗಿ ಹೋಯಿತಲ್ಲೊऽ.
ಗಾಳೆನೆ ಗಂಟಾಗಿ ॥
ಹೋಯಿತು ಆವಾಗ
ಮನೆ ಬಾಗಿಲಿಗೆ ಹೋಯಿತಲ್ಲೊ ऽ
ಸರ್ಜನ ಕುದುರೆ
ಊರ ಬಾಗಿಲಿಗೆ ಬಂದಿತಲ್ಲೊऽ.
ಊರನೆ ಬಾಗಿಲಿಗೆ ॥
ಬಂದಿತ್ತೊ ಆವಾಗ
ಮುರಿಗೆ ಮುಂಡಾಸು ತೆಗಿತಲ್ಲೊऽ
ಅನ್ನುತಲಾಗ
ದುಃಖವಾದರೆ ಮಾಡ್ಯನಲ್ಲೊऽ
ಗುರುಹಿರಿಯರ ಮಾತು ಮೀರಿ॥
ತಂದೆ ತಾಯಿಯ ಮಾತು ಮೀರಿ
ಎಂತಾ ಇಗ್ನಾವ ಒದಗಿತು
ಸರ್ಜತಿ ಭೂಪ
ದುಃಖವಾದರೆ ಮಾಡ್ಯನಲ್ಲೊऽ.
ದುಃಖವೆ ಮಾಡ್ಯಾನೆ ॥
ಶೋಕವೆ ಮಾಡ್ಯಾನೆ
ಶೋಕವಾದರೆ ಮಾಡೆನಲ್ಲೊ ऽ
ಸರ್ಜತಿ ಭೂಪ
ಶೋಕವಾದರೆ ಮಾಡೆನಲ್ಲೊ ऽ
ದುಃಖವೇ ಮಾಡ್ಯಾನೆ ॥
ಶೋಕವೆ ಮಾಡ್ಯಾನೆ
ಮುರಿಗೆ ಮುಂಡಾಸು ಸುತ್ಯಾನಲ್ಲೊऽ
ಸರ್ಜತಿ ಭೂಪ
ಮುರಿಗೆ ಮುಂಡಾಸು ಸುತ್ತ್ಯಾನಲ್ಲೊ
ಮುರಿಗೆ ಮುಂಡಾಸು ॥
ಸತ್ತ್ಯಾನು ಆವಾಗ
ಕುದುರೆನಾದರು ಒಡುದಾನೊऽ
ಸರ್ಜನ ಕುದುರೆ
ಹಿಂದಕ್ಕಾದರೆ ನಗೆಸಯಿತೊ ऽ.
ನೆತ್ತಿ ಮ್ಯಾಗಳ ಸಿಟ್ಟು ॥
ತುದಿಗಾಲಿಗಿಳಿದಯಿತೊ
ನೆಗ್ಗದೆ ತುದಿಗಾಲಲಿ ಹೊದ್ದಾನಲ್ಲೊऽ
ಸರ್ಜನ ಕುದುರೆ
ಗಾಳಿ ಗಂಟಾಗಿ ಹೋಯಿತಲುಲೊऽ.
ಗಾಳಿನೆ ಗಂಟಾಗಿ ॥
ಹೋಯಿತು ಆವಾಗ
ಬಸವನಕೋಟೆಗೆ ಹೊಡೆದಾನೋऽ
ಸರ್ಜತಿ ಭೂಪ
ಬಸವನಕೋಟೆಗೆ ಹೊಡೆದಾನೆऽ
ಬಸವನಕೋಟೆಗೆ ॥
ಹೊಡೆದಾನೊ ಆವಾಗ
ಕುದುರೆನಾದರೆ ನಿಲ್ಲಿಸ್ಯಾನೊऽ.
ಸರ್ಜತಿ ಭೂಪ
ಕೋಟೆನಾದರೆ ಹತ್ತ್ಯಾನಲ್ಲೊऽ
ಕೋಟೆಗೆ ಹತ್ತಾನೋ ॥
ಉರುಳಿ ಮುಖವೇರಿ
ಉರುಳಿ ಮುಖವೇರಿ ಹತ್ತಾನಲ್ಲೊ ऽ
ಸರ್ಜತಿ ಭೂಪ
ಉಸುನಕ್ಕಾದರೆ ನಕ್ಕಾನಲ್ಲೊऽ.
ಎಂದಿಗಿಲ್ಲದ ಹೂವ್ವನಹಳ್ಳಿ ॥
ಇಂದಿಗೆ ಸುಂಗಾರವಾಯ್ತೊ
ಮುತ್ತಿನ ಜಾಲರ ಬಿಗಿದಂಗೆ ಬಿಗಿದಾಯ್ತೊ
ಅನ್ನುತಲಾಗ
ಉಸುನಕ್ಕಾದರೆ ನಕ್ಕಾನಲ್ಲೊऽ.
ಉಸುನಕ್ಕು ನಕ್ಯಾನೆ ॥
ಹಲ್ಲುನ ಕಡುದಾನೊ
ಮೀಸೆನಾದರೆ ತಿದ್ದ್ಯಾನಲ್ಲೊ ऽ
ಸರ್ಜತಿ ಭೂಪ
ಕೋಟೆನಾದರೆ ಇಳಿದಾನೆऽ.
ಕೋಟೆನೆ ಇಳಿದಾನೆ ॥
ಕುದುರೆನೆ ಹತ್ತ್ಯಾನೋऽ
ಕುದುರೆನಾದರೂ ಹೊಡುದಾನೋऽ
ಸರ್ಜನ ಕುದುರೆ
ಹಿಂದಕ್ಕಾದರೆ ನಡುಸಯಿತೊऽ.
ನೆತ್ತಿ ಮ್ಯಾಗಳ ಸಿಟ್ಟು ॥
ತುದಿಗಾಲಿಗಿಳಿದಯಿತೋऽ
ನೆಗ್ಗದೆ ತುದಿಗಾಲಲಿ ಹೊದ್ದಾನಲ್ಲೊऽ
ಸರ್ಜನ ಕುದುರೆ
ಗಾಳಿ ಗಂಟಾಗಿ ಹೋಯಿತಲ್ಲೋऽ .
ಗಾಳಿನೆ ಗಂಟಾಗಿ ॥
ಒಯಿತು ಆವಾಗ
ದುರುಗದ ಕೊಣಿವಿಗೆ ಹೊಡೆದಾನೊऽ
ಸರ್ಜನ ಕುದುರೆ
ದುರುಗದ ಕೊಣಿವಿಗೆ ಹೊಡೆದಾನೊऽ.
ಸಾವಿರಳ್ಳಿಗೆ ಸರ್ಜನ ॥
ನೂರಳ್ಳಿಗೆ ಅಧಿಕಾರ
ರಂಡಸಾವನ್ನು ಕೊಲ್ಲುತಾರೆ
ಅನ್ನುತಲಾಗ
ರಂಡಸಾವನ್ನು ಕೊಲ್ಲುತಾರೆ ऽ.
ಸಾವಿರಳ್ಳಿಗೆ ಸರ್ಜನ ॥
ನೂರಳ್ಳಿಗೆ ಅಧಿಕಾರ
ರಂಡಸಾವನ್ನು ಕೊಲ್ಲುತಾರೆ
ಮುನಿಸ್ವಾಮಿರಂಗ
ಆದಿಗಡ್ಡಾಗಿ ಬಂದಿತಲ್ಲೊऽ
ಆದಿಗೆ ಅಡ್ಡವಾಗಿ ॥
ಬಂದಿತೊ ಆವಾಗ
ಕುಂಟ ಬಿದ್ದಂಗೆ ಬಿದ್ದಿತಲ್ಲೊ
ಮುನಿಸ್ವಾಮಿರಂಗ
ಕುಂಟ ಬಿದ್ದಂಗೆ ಬಿದ್ದಿತಲ್ಲೊ ऽ .
ಸರ್ಪವ ನೋಡ್ಯಾನೆ ॥
ಕುದುರೆ ಇಳಿದಾನೋऽ
ಸರ್ಪಗಾವುದ ಮುಗಿದಾನೊ ऽ
ಸರ್ಜತಿ ಭೂಪ
ಸರ್ಪಗಾದರೆ ಮುಗಿದಾನೆऽ.
ತೊರೆಕೆರೆದೊಳಗಿರುವ ॥
ಮನೆಸ್ವಾಮಿ ಕೆರೆ ಹನುಮ
ಏಳೆಡೆ ಸರ್ಪಾವು
ಮಾಯದ ಸರ್ಪವೇ ಹಾದಿ ಬಿಡು ಎನಗೆऽ.
ಒಂದು ಸಾರಿ ಕೇಳ್ಯಾನು ॥
ಎರಡು ಸಾರಿ ಕೇಳ್ಯಾನು
ಸರೂಪವ ಮ್ಯಾಲೆ ನಗೆಸ್ಯಾನೊऽ
ಸರ್ಜತಿ ಭೂಪ
ಹೂವ್ವನಹಳ್ಳಿಗೆ ವಡೆದಾನುऽ
ಹೂವ್ವೆನಳ್ಳಿಗೆ॥
ಒಡುದಾನು ಆವಾಗ
ಊರು ಬಾಗಿಲಿಗೆ ಒಡೆದಾನು
ಅನ್ನುತಲಾಗ
ಮಾದಿಗರ ಹನುಮ ತಡಿಶ್ಯಾನುऽ.
ಏನಲೆ ಎಲೆ ಹನುಮ॥
ಏನೋ ಮಾದಿಗರ ಹನುಮ
ನನ್ನ ತಡೆಯೆಂತು ಬಗೆಯೆನು
ಮಾದಿಗರ ಹನುಮ
ನನ್ನ ತಡೆಯಿಂದ ಬಗೆಯೇನುऽ.
ಊರು ನನ್ನದು ॥
ಊರು ಉಂಬಳ ನನ್ನದು
ಆಳ ರಾಜ್ಯವ ನನ್ನದಲ್ಲೊ
ಮಾದಿಗರ ಹನುಮ
ನನ್ನ ತಡೆ ಎಂದ ಬಗೆಯೇನು ಎಂದऽ .
ಏನಲೇ ಎಲೇ ಹನುಮ ॥
ಏನೋ ಮಾದಿಗರನುಮ
ನಾನೊಂದು ಮಾತಂದು ಕೇಳತಿನಿ
ಮಾದಿಗರನುಮ
ಅಂಜು ಇಲ್ಲದೆ ಹೇಳಬೇಕು ऽ.
ನಿನ್ನ ಆಣೆಯ ನಿನ್ನ ॥
ಸೂರ್ಯ ಚಂದುರೈನಾಣೆ
ನಿನ್ನ ಪಾದದಾಣೆ ಕಾಣೆನಯ್ಯ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೋऽ.
ನಿನ್ನ ಆಣೆಯ ನಿಮ್ಮ॥
ಸೂರ್ಯ ಚಂದುರುನಾಣೆ
ಮನಿಸ್ವಾಮಿ ರಂಗಯ್ಯನಾಣೆ ಕಣೆನಯ್ಯ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೋऽ.
ನೆನಕೆಗಳು,
ಸಂಪಾದಕರು: ವಿರೂಪಾಕ್ಷಿ ಪೂಜಾರಹಳ್ಳಿ
ಪ್ರಕಾಶಕರು: ಪ್ರಸಾರಾಂಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ