ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 28, 2023

ಚೌಂಡರಸಕೃತ ನಳಚಂಪು

ಚೌಂಡರಸಕೃತ ನಳಚಂಪು


ಇದರ ಕರ್ತೃ ಚೌಂಡರಸ. ಈತನಿಗೆ ಚೌಂಡರಾಜನೆಂಬ ಹೆಸರೂ ಇದೂದಿತು. ಇವನ ಕಾಲ ಸುಮಾರು ೧೧೮೫. ಇವನು ದಶಕುಮಾರಚರಿತ್ರೆ ಮತ್ತು ಬಾಣಾಸುರವಿಜಯ ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ಇವನು ವಿಷ್ಣುಭಕ್ತನೆಂದೂ ಸೋಲಾಪುರ ಪ್ರಾಂತವಾಸಿಯೆಂದೂ ಊಹಿಸುತ್ತಾರೆ. ಇವನು ಬ್ರಾಹ್ಮಣ ಕವಿ. ಇವನು ಭರದ್ವಾಜ ಗೋತ್ರದವನು. ಈತನ ತಂದೆ ಮಧುಸೂದನ. ತಾಯಿ ಮಲ್ಲವ್ವೆ. ಅಣ್ಣ ಸರಸಕವೀಶ್ವರ. ಇವನಿಗೆ ಕವಿತಾ ವಿಲಾಸ, ಕವಿರಾಜಶೇಖರ ಮತ್ತು ಕರ್ಣಾಟವಂಶಶೃಂಗಾರ ರಸ ಎಂಬ ಬಿರುದುಗಳಿದ್ದುವು. 


ಪ್ರಕೃತ ಗರಂಥಕ್ಕೆ ಚಂಪುವೆಂದು ಹೆಸರಿಟ್ಟಿದ್ದರೂ ಇದರಲ್ಲಿ ಗದ್ಯಕ್ಕಿಂತ ಪದ್ಯವೇ ಹೆಚ್ಚು. ಇಲ್ಲಿ ೭೭೫ ಪದ್ಯಗಳೂ ೪ ಗದ್ಯಗಳೂ,ಮಧ್ಯೆ ಮಧ್ಯೆ ಸಣ್ಣ ಸಣ್ಣ ವಚನಗಳೂ ಇವೆ. ದಮಯಂತಿಯ ವಿರಹತಾಪ ಮತ್ತು ಗಣಪತಿಯ ಸ್ತೋತ್ರ ಇವುಗಳನ್ನು ಲಲಿತರಗಳೆಯಲ್ಲೂ ಉಳಿದ ಭಾಗಗಳನ್ನು ಕಂದ, ಉತ್ಪಲಮಾಲೆ, ಮತ್ತೇಭವಿಕ್ರೀಡಿತ,ಸ್ರಗ್ಧರೆ, ಮಹಾಸ್ರಗ್ಧರೆ ಈ ವೃತ್ತಗಳಲ್ಲಿಯೂ ೪೮೦ ನೆಯ ಪದ್ಯವನ್ನು ತರಳ ವೃತ್ತದಲ್ಲಿಯೂ ರಚಿಸಿರುವನು.ಈ ಗ್ರಂಥದಲ್ಲಿ ಆಶ್ವಾಸಾದಿ ವಿಭಾಗಗಳಿಲ್ಲ. ಈ ಕೃತಿಯಲ್ಲಿ ಭಾರತದ ಕಥೆಯ ಸಾರಾಂಶವನ್ನೇ ವಸ್ತುವಾಗಿಟ್ಟೈಕೊಂಡು, ತನಗೆ ಬೇಕಾದಂತೆ ಮಾರ್ಪಾಟುಮಾಡಿ, ಕಥಾಭಾಗಕ್ಕಿಂತ ವರ್ಣನೆಗೆ ಪ್ರಾಶಸ್ತ್ಯವನ್ನು ಕೊಟ್ಟಿರುವನು. 


ನಳಚಂಪು


ಶ್ರೀಸತಿ ತನ್ನ ಪೇರುರಮನೃವಗಮಪ್ಪಿರಲಂಘ್ರಿಯಂ ಧರಿ 

ತ್ರೀಸತಿ ಸಾರ್ದಿರಲ್ ಕದನಮೋಹನಕೇಳಿಯನೊಲ್ದು ಸತ್ಯಭಾ 

ಮಾಸತಿ ಪೆರ್ಚಿಸಲ್ ಸೊಬಗುವೆತ್ತು ಜಗತ್ಪತಿ ತನ್ನ ಮಾನಸೋ 

ಲ್ಲಾಸದಿನೆಲ್ಲರಂ ಪೊರೆಗೆ ಮಂಗಳಮೂರ್ತಿಯಭಂಗವಿಟ್ಠಲಂ ॥೧॥ 


ಪ್ರಣುತಸುರಾಸುರಪ್ರಿಯವರಪ್ರದನೂರ್ಜಿತಶೇಷರತ್ನ ಕಂ 

ಕಣನವನೀಜಲಾಗ್ನಿಮರುದಂಬರಸೋಮದಿವಾಕರಾತ್ಮ ಲ 

ಕ್ಷಣನಿಜಮೂರ್ತಿಯದ್ರಿತನಯಾನನಪದ್ಮಮದಾಳಿ ದೇವರ 

ಗ್ರಣಿ ಶಿವನೆಮ್ಮೊಳೀಗೆ ಸುಕವಿಸ್ತುತ ಕಾವ್ಯಮತಿಪ್ರಕಾಶಮಂ॥೨॥ 


ಪರಶು ಸೃಣಿ ಪ್ರದೀಪ್ತರದ ಮೋದಕರಾಜಿತಹಸ್ತನದ್ರಿಜಾ 

ವರನಿಜಪುತ್ರನಿಂದ್ರ ಶಿಖಿ ಕಾಲ ಸುರಾರಿಜಲೇಶ ವಾಯು ಶಂ 

ಕರಸಖ ರುದ್ರವಂದ್ಯನಹಿಭೂಷಣನುನ್ನತಮೂರ್ತಿ ಮತ್ತಕುಂ 

ಜರವದನ ಗಣೇಶನೆಮಗೀಗೆ ಮನೋರಥಕಾರ್ಯಸಿದ್ಧಿಯಂ ॥೩॥ 


ಘೋರವಿಶಾಲವಕ್ತ್ರೆ ಶಿಖಿನೇತ್ರೆ ಚತುರ್ಭುಜೆ ಚಂದೂರಮೌಲಿ ದೈ 

ತ್ಯಾರಿ ಭುಜಂಗಭೂಷಣೆ ಸುರಾಸುರಪೂಜ್ಯೆ  ಮಹಾಭಯಂಕರಾ 

ಕಾರೆ ಸಮಸ್ತ ಶಸ್ತ್ರಪರಿಶೋಭಿತೆ ಭಕ್ತಜನ ಪ್ರಸನ್ನೆ ವಿ 

ಸ್ತಾರವಿಚಿತ್ರಮೂರ್ತಿ ಬನದಂಬಿಕೆ ಮಾೞ್ಕೆಮಗಿಷ್ಟಸಿದ್ಧಿಯಂ॥೪॥


ಅಕ್ಷರಮಾತ್ರಮಂ ಬಯಸಿ ಕಲ್ತವರೊಳ್ ಗುಣಮೇಂ ಪ್ರಭಾವಮಂ 

ಪಕ್ಷವಿಪಕ್ಷಮೆಂದು ಪರಿಭಾವಿಸದೇತೆಱದಿಂ ಪರೋಪಕಾ 

ರಕ್ಷಮರಾಗಿ ಪುಟ್ಟಿದವರುಳ್ಳೊಡೆ ಕೈಮುಗಿದೆರ್ದು ಗಂಧ ಪು 

ಷ್ಪಾಕ್ಷತೆಯಿಂದಲಂಕರಿಸಿವಂದಿಸಿ ಬಣ್ಣಿಸುವೆಂ ನಿರಂತರಂ॥೫॥ 


ಸಂಧಿಯರೊಂದಿ ಬಗ್ಗರ ಸಮಕ್ಷದೊಳಿದ್ದುರಿದೆದ್ದು ದುರ್ಜನಂ 

ನಿಂದಿಸುತಿರ್ಪನುತ್ತಮರ ಕಾವ್ಯಮನಂತುಟು ದಲ್ ನಿರಂತರಂ 

ಹಂದಿಗೆ ಮಿಂದ ನೀರ ಕೆಸಱೊಗ್ಗುವುದಲ್ಲದೆ ತಣ್ಪನೀವ ಸ 

ಚ್ಚಂದನದಣ್ಪದೊಗ್ಗೈವುದೆ ನೈಜಗುಣಕ್ಕೆ ನವೀನಮಾವುದೋ॥೬॥ 


ತಮತಮಗೆಲ್ಲರುಂ ಮತಿಗೆ ತೋಱಿದುದಂ ಸಲೆ ಪೇೞ್ವರುತ್ತಮ

ಕ್ರಮವೆನಲಕ್ಷರಂ ಧರೆಯೊಳೊಬ್ಬರ ಭಾಗೆಗೆ ಬಂದುದಲ್ತು ಲೋ 

ಕಮನುಱೆ ಮೆಚ್ಚಿಸಲ್ ಗಿರಿಶನಾರ್ಪನೆ ತಮ್ಮ ಮದಕ್ಕುಸಿರ್ವರಾ 

ಕ್ರಮಿಸುತೆ ದುರ್ಜನಂಗೆ ಪರಿಶಂಕಿಸಲೇಕೆ ದುರುಕ್ತಿಭೀತಿಯಿಂ॥೭॥ 


ಪರಿವಿಡಿದು ನಳಚರಿತ್ರಂ 

ಪರಮಪವಿತ್ರಂ ನಿತಾಂತಪುಣ್ಯಶ್ಲೋಕಂ 

ವಿರಚಿಸುವನದಟನೀ ಚೌಂ 

ಡರಸಂ ಕರ್ನಾಟವಂಶಶೃಂಗಾರರಸಂ॥೮॥ 


ವ॥ ಅದೆಂತೆನೆ


ಶ್ರೀಮದಶೇಷವಸ್ತು ಪರಿಪೂರ್ಣದಿನಾಗಮಯುಕ್ತ ಸದ್ಬುಧ 

ಸ್ತೋಮದಿನೂರ್ಜಿತಪ್ರಕಟಸಂಪದಸನ್ನುತನಿತ್ಯಮಂಗಳ

ಕ್ಷೇಮದಿನುತ್ತಮೋತ್ತಮಚತುರ್ವಿಧ ನಾಯಕನಾಯಿಕಾಮನಃ 

ಪ್ರೇಮದಿನೊಪ್ಪುಗುಂ ನಿಷಧಮೇಂಬ ಮಹಾವಿಷಯಯಂ ಧರಿತ್ರಿಯೊಳ್॥೯॥ 


ತೊಲಗದ ಸಂಪದಂ ಸೊಬಗುಗುಂದದ ಯೌವನದೇೞ್ಗೆಯೆಲ್ಲರೊಳ್ 

ನೆಲಸಿದ ಧರ್ಮಮತ್ಯಧಿಕನೀತಿ ಕಲಾಕುಶಲತ್ವಮಾವಗಂ 

ಸುಲಲಿತಸತ್ಯವಾಕ್ಯಮೆಡಱಿಲ್ಲದ ಭೋಗಮನಾರತಂ ಸಮು 

ಜ್ಜ್ವಲಮೆನಿಸಿರ್ಪುದಾ ನಿಷಧದೇಶಂ ಸನ್ನುತಸಜ್ಜನರ್ಕಳಾ॥೧೦॥ 


ವ॥ ಮತ್ತಮಾ ಜನಪದಂ ಜನಾರ್ದನನಂತನಂತಭೋಗಸುಪ್ರತಿಷ್ಠಿತಮುಂ ಯಾಗದೀಕ್ಷಿತನಂತನುಕ್ರಮಕ್ಷೇತ್ರಪವಿತ್ರಮುಂ ಸಂವತ್ಸರದಂತೆ ಪಾರ್ಥಿವನಂದಶ್ರೀಮುಖಭಾವರಮ್ಯಮುಂ ಸ್ವರ್ಗಲೋಕದಂತೆ ಸುಮನಸ್ಸಂದೋಹಮಂದಿರಮುಂ ಕಶ್ಯಪಋಷ್ಯಾಶ್ರಮದಂತೆ ದೇವಮಾತೃಕಾಭಿರಾಮಮುಂ ಸಮಾಸಸಂಪತ್ತಿಯಂತೆ ಬಹುವ್ರೀಹಿಸಮೃದ್ಧಿಯುಂ ಉತ್ತರದಿಶಾ- 

ವಿಸ್ತಾರದಂತೆ ಮನುಷ್ಯಧರ್ಮಸನ್ಮಾರ್ಗಮುಂ ನಂದನವನದಂತೆ ನಾನಾಜಾತಿಜನ್ಮಭೂಮಿಯುಂ ಕ್ಷೀರಾಬ್ಧಿಯಂತೆ ಶ್ರೀವರಸಮಾಶ್ರಯಮುಮಾಗಿರ್ಪುದಂತುಲ್ಲದೆಯುಂ 


ನಾನಾಧಾನ್ಯಸಮೃದ್ಧಿ ದೇವನಿವಹಂ ಪುಣ್ಯೋದನಂ ದೃನಸ 

ನ್ಮಾನಂ ಭಾವಕಭಾವಿತಸ್ಥಿತಿ ಸದಾವರ್ಣಾಶ್ರಮಪ್ರಾಪ್ತಿ ವಿ 

ಜ್ಞಾನಂ ಕುಂದದೆನಿಪ್ಪ ತದ್ವಿಷಯಮಂ ಸಾನಂದದಿಂ ನೋಡಿ ವಾ 

ಣೀನಾಥಂ ಮಿಗೆ ಬಣ್ಣಿಸಲ್ನೆಱೆವನೇನಿರ್ದುಂ ಚತುಃಪ್ರೌಢಿಯಂ॥೧೧॥ 


ಸೀಮಾಲಂಘ್ಯಂ ನದಿಯೊಳ್ 

ಸಾಮಜದೊಳ್ ನಿಗಳಮೆನಿಪಕರಪೀಡೆ ರತಿ 

ಪ್ರೇಮದೊಳತಿ ನಿರ್ಲಜ್ಜೆ ವಿ 

ರಾಮಂ ಕಪಿಕುಲದೊಳಲ್ಲದಿಲ್ಲಾ ನಾಡೊಳ್॥೧೨॥


ಅಲ್ಲಿ ನಿರಂತರಂ ಮೆಱೆವುದೊಪ್ಪುವ ತನ್ನ ವಿಲಾಸದಿಂದೆ ವಾ 

ಗ್ವಲ್ಲಭನೋಜೆಗೀ ಪುರವೆ ಸೀಮೆಯೆನುತ್ತಿಳೆ ಬಣ್ಣಿಸಲ್ಕೆ ತಾಂ 

ಸಲ್ಲಲಿತಪ್ರಭಾಕರ ನಿಶಾಕರವೀಥಿಯ ಗೋಪುರಂಗಳ 

ಲ್ಲಲ್ಲಿಯ ಚಿತ್ರದಿಂ ವಿಮಳಪಟ್ಟಣಮೆಂಬುದನೇಕಶೋಭೆಯಿಂ॥೧೩॥ 


ಸುರುಚಿರಶಾತಕುಂಭಕಳಶಂಗಳಿನೊಪ್ಪುವ ಕೇರಿಕೇರಿಯು 

ಪ್ಪರಿಗೆಯ ಲೋವೆಯೊಳ್ ಪೊಳೌವ ಮುತ್ತಿನ ಲಂಬಣದಿಂ ವಿಚಿತ್ರಕ 

ರ್ಬುರಮಣಿತೋರಣಾವಳಿಗಳಿಂ ನವರತ್ನದ ಪುತ್ತಿಕಾಮನೋ 

ಹರತೆಯಿನೊಪ್ಪುಗುಂ ವಿಮಳಪಟ್ಟಣಮುರ್ವಿಯ ಕಣ್ಗೆ ಕೌತುಕಂ॥೧೪॥ 


ಪಸುರೆಳಕೌಂಗು ಪೆರ್ಚಿದೆಳನೀರ್ವೊಱೆಯೊಟ್ಟಿಲ ತೆಂಗು ಸಂತತಂ 

ರಸಮೊಸರ್ವೀಳೆ ಪಣ್ಗೊನೆಗಳಿಂದೊಲೆದಾಡುವ ಬಾೞೆ ದೋರೆವ 

ಣ್ಮುಸುಕಿದ ಬಕ್ಕೆಯುರ್ವಿಗಿಡುಗಂಧಿಕೆ ಕೊರ್ವಿದ ಕರ್ಬು ಕೆಂದಳಿರ್ 

ಮಿಸುಗುವ ಚೂತಮೊಪ್ಪಲತಿಕೌತುಕಮಾದುದು ತದ್ಬಹಿರ್ವನಂ॥೧೫॥ 


ಕೋಗಿಲೆಯಿಂಚರಂ ಗಿಳಿಯ ಮೆಲ್ನುಡಿ ಭೃಂಗನಿನಾದಮಾವಗಂ 

ಸೋಗೆಯಕೇಗು ಮೆಲ್ಲನೆಡೆಯಾಡುವ ಮೆಲ್ಲೆಲರಂಚೆವಿಂಡು ತ 

ಳ್ತೋಗರಗಂಪು ತಳ್ತಲತೆ ಕೊರೂವಿದಶೋಕೆ ತಳಿರ್ತ ಮಾವು ಚೆ 

ಲ್ವಾಗಿರೆ ತತ್ಪುರೋಪವನಮಂ ಮದನಂ ವನಮೆಂದು ಸಾಱನೇ॥೧೬॥ 


ಆ ಪುರದಧಿಪತಿ ಸಕಳಕ 

ಳಾಪರಿಣತನಧಿಕವೀರಸೇನಂ ಜಂಬೂ 

ದ್ವೀಪಮನೊರ್ವನೆ ಪೆರ್ಚಿದ 

ಕೂಪಾರಂ ಸೀಮೆಯಾಗಲಾಳುತ್ತಿರ್ದಂ॥೧೭॥


ಆ ವೀರಸೇನ ನೃಪತಿಗೆ 

ಪಾವನತರಮೂರ್ತಿ ಪುಟ್ಟಿದಂ ನಳನೆಂಬಂ॥ 

ಭಾವಭವಸನ್ನಿಭಂ ನಾ 

ನಾವಂದಿಸ್ತೋತ್ರಪಾತ್ರನಭಿಜನಮಿತ್ರಂ॥೧೮॥ 


ಎಳವೆಱೆಯೇೞ್ಗೆವೆತ್ತು ದಿವಸಕ್ರಮದಿಂ ಕಮನೀಯಮಪ್ಪ ಸ 

ತ್ಕಳೆ ಬೆಳೆವಂದದಿಂ ಬೆಳೆದು ಬಾಲ್ಯವಯಂ ಪೆಱಪಿಂಗಿ ಯೌವನಂ 

ಮೊಳೆತು ತಳಿರ್ತಿರಲ್ ಪಗೆಗಳಂಜುವಿನಂ ಯುವರಾಡಪಟ್ಟಮಂ 

ತಳೆವೊಡೆ ಕಾಲಮೆಂದು ನೃಪನೀಕ್ಷಿಸಿದಂ ನಿಜಪುತ್ರವಕ್ತ್ರಮಂ॥೧೯॥ 


ವ॥ ಆ ಸಮಯೊಳ್ 


ಸಕಳನದೀನದಪ್ರಕಟತೋಯದಿನಂದಭಿಷೇಕಮಂ ಕರಂ 

ಪ್ರಕಟಿಸಿ ಸನ್ಮುಹೂರ್ತದೊಳನಂತರಮುರ್ವಿಪನೞ್ತಿಯಿಂದೆ ಕೌ 

ತುಕಯುವರೃಜಪಟ್ಟವನಲಂಪು ಮಿಗಲ್ ತನಯಂಗೆ ಕಟ್ಟೆ ದಿ 

ಙ್ನಿಕರಜಯಕ್ಕೆ ಸೇನೆಸಹಿತಂ ತಳರಲ್ ಬಗೆದಂದನಾಕ್ಷಣಂ॥೨೦॥ 


ಗಜಬಜಿಸಲ್ ಸುರಸಂತತಿ 

ಭೈಜಗರ್ ಕಿವಿಲ್ಲದುೞಿದರೆರ್ದೆಗೆಡಲಾಶಾ 

ಗಜವರಿಗಳಿಳೆಯನುೞಿಯಲ್ 

ವಿಜಯಪ್ರಸ್ಥಾನಭೇರಿನಿನದಕ್ಕಾಗಳ್॥೨೧॥ 


ಹಸ್ತ್ಯಶ್ವರಥಪದಾತಿ ಸ 

ಮಸ್ತಯುತಂ ನಡೆದು ನಳನೃಪಾಳಂ ರಿಪುವಂ॥ 

ಶಾಸ್ತಿಯನೈದಿಸಿ ದಿಗ್ವಿಜ 

ಯಸ್ತಂಭಮನೆಂಟುದಿಕ್ಕಿನೊಳ್ ನಿಱಿಸಿಟ್ಟಂ॥೨೨॥ 


ವ॥ ಅಂತು ದಿಗ್ವಿಜಯಮಂ ಮಾಡಿ 


ನಗರವಧೂಜನಂ ತಳಿವ ಮಂಗಳಸೇಸೆಗಳಂ ಪ್ರಸೂನಮಾ 

ಲೆಗಳನತಿಪ್ರಮೋದದೊದವಿಂ ತಳೆಯುತ್ತನುರಾಗದೇೞ್ಗೆ ಕೈ 

ಮಿಗೆ ಚತುರಂಗಸೇನೆಸಹಿತಂ ಪುರವಂ ಪುಗುತಂದನುತ್ಸವಂ 

ದ್ವಿಗುಣಿಸೆ ವೀರಸೇನನೃಪನಂದನನಪ್ರತಿಮ ಪ್ರತಾಪದಿಂ॥೨೩॥ 


ಸದಮಳವೈಭವಂ ಬೆರಸು ರಾಜಸುತಂ ಸುಖಸಂಕಥಾವಿನೋ 

ದದೊಳಿರಲಾತ್ಮಜಂಗಖಿಳರಾಜ್ಯದ ಭಾರಮನಿತ್ತು ನಮ್ಮ ವಂ 

ಶದ ನೃಪರಂದವೀತೆಱನೆನುತ್ತರೆಬರ್ ತನ್ನ ಕೂಡೆ ಪೆ 

ರ್ಚಿದ ವನಮಧ್ಯದೊಳ್ ನೆಲಸಿದಂ ಮುದದಿಂ ನಿಷಧಾಧಿನಾಯಕಂ॥೨೪॥  


ವ॥ ಬೞಿಯಂ 


ವಿಜಯವಧೂವರಂ ಸಕಲರಾಜ್ಯದ ಭಾರಮನಾಂತು ಧರ್ಮಮಂ 

ಪ್ರಜೆಯನುರಾಗದೊಳ್ ನೆಲಸಿದಾಜ್ಞೆಯನಾಶ್ರಮವರ್ಣವೃಂದಮಂ 

ಗಜಹಯರತ್ನಕೋಶತತಿಯಂ ತನಿವೆರ್ಚಿಸಿ ನೀತಿಮಾರ್ಗದಿಂ 

ನಿಜಸುಖಲೀಲೆಯಿಂ ನಳನೃಪಂ ಪರಿಪಾಲಿಸುವಂ ಧರಿತ್ರಿಯಂ॥೨೫॥


ಸ್ಥಿರಧರ್ಮಪ್ರೀತಿ ಸತ್ಯಂ ದುರಿತವಿರತಿ ದಾಕ್ಷಿಣ್ಯಮೌದಾರ್ಯವೀರ್ಯಂ 

ಕರುಣಂ ನ್ಯಾಯಂ ಪ್ರಜಾಪಾಲನೆ ಬುಧಜನಸನ್ಮಾನ ದಾನಂ ವಿಶುದ್ಧಾ 

ಚರಣಂ ಸನ್ನೀತಿಮಾರ್ಗಂ ದ್ವಿಜಯತಿಜನಸಂರಕ್ಷೆಯೆಂಬಿಂತಿವೆಲ್ಲಂ 

ಧರಣೀಶಂಗಾತ್ಮನಾಮಂ ನಳನೃಪ ಚರಿತ್ರ ನಿತಾಂತಂ ಪವಿತ್ರಂ॥೨೬॥ 


ಸತತಂ ಸತ್ಯವ್ರತಂ ಧಾರ್ಮಿಕನಧಿಕನನಿಂದ್ಯಂ ದಯಾಯತ್ತಚಿತ್ತಂ 

ವ್ರತನಿಷ್ಠಂ ಪಾಪಭೀತಂ ಮೃದುವಚನರತಂ ತೀವ್ರಪುಣ್ಯಾತ್ಮಕಂ ನಿ 

ತ್ಯತಪಃಪ್ರೀತಂ ಸಮಸ್ತೇಂದ್ರಿಯನಿಜವಿಜಯಂ ಶಾಶ್ವತಂ ಸಾರ್ವಭೌಮಂ 

ಪ್ರತಿಶೂನ್ಯಂ ವೀರಸೇನಾತ್ಮಜನೆನಲದಟಿಂದಾಂಪವಂಗಾಂಪನಲ್ತೇ॥೨೭॥ 


ನಳನೃಪನತ್ಯುದಾರತನಮಂ ಬುಧರುನ್ನತವೈಭವಂಗಳಿಂ 

ನಳನೃಪಸತ್ವಮಂ ರಿಪುನೃಪಾಳದರಿದ್ರತೆಯಿಂ ನಿರಂತರಂ 

ನಳನೃಪಸತ್ಯಮಂ ನಿಖಿಳರಾಜ್ಯವಿವರ್ಧನಂ ವಿಚಾರಿಸಲ್ 

ನಳನ ಗುಣಂಗಳಂ ಪ್ರಜೆಯ ಮನ್ನಣೆಯಿಂದಱಿಗುಂ ಜಗಜ್ಜನಂ॥೨೮॥ 


ಆಹವದೊಳರಿಗೆಚಿತ್ತವಿ 

ವಿಮೋಹದಿನೆರೆವರ್ಥಿಗಳ್ಗೆ ನೋಡಲ್ಕೆ ಪುನ 

ರ್ದೇಹಿಯೆನಲುಂಟೆ ನಳನೃಪ 

ಬಾಹುಬಳಂ ವಿತರಣಂಗಳಿರ್ಪನ್ನೆವರಂ॥೨೯॥ 


ಎಳೆದಳಿರಗ್ರಪಾಣಿತಳಮುನ್ನತಶಾಖೆ ಭುಜಂ ಪ್ರಸೂನಮು 

ಜ್ವ್ಲಲನಖದೀಪ್ತಿ ಪಕ್ವಫಲಸಂತತಿಯೇೞ್ಗೆಯುದಾರವಾಗೆ ಸ 

ಲ್ಲಲಿತಕುಲೀನನಪ್ಪ ನಳಕಲ್ಪಕುಜಂ ಸಕಲೋರ್ವೆಯೆಲ್ಲಮಂ 

ಸಲೆ ನಿಲೆ ರಕ್ಷಿಸಲ್ಕೆ ತವಿಲಾಗದೆ ವರ್ಧಿಸುಗುಂ ಪ್ರಜಾಕುಲಂ॥೩೦॥ 


ನ್ಯಾಯದಿನರ್ಥಮಂ ಪಲವುಪಾಯದಿನುತ್ತಮಧರ್ಮಮಂ ಕುಲ 

ಸ್ರ್ರೀಯರಿನಾತ್ಮಸಂತತಿಗಳಂ ಭುಜಸತ್ತ್ವದಿನುಗ್ರವೈರಿಭೂ 

ದಾಯಮನರ್ಜಿಸಲ್ ಪಡೆಯಲೆಂದು ನಳಂ ಸುಖರಾಜ್ಯವೈಭವ 

ಶ್ರೀಯನನಾರತಂ ಸಲಹುವಂ ವಿತತ ಸ್ವಭುಜ ಪ್ರತಾಪದಿಂ॥೩೧॥ 


ಭೂಮಿಗೆ ಮಂಡನಂ ಭುವನಭೂಭುಜಕೋಟಿಗೆ ಕರ್ಣಕುಂಡಲಂ 

ಪ್ರೇಮಮಿಳಾಜನಕ್ಕೆ ಬುಧಸಂತತಿಗಾತ್ಮಹಿತಂ ಚತುರ್ವಿಧ 

ಸ್ತ್ರೀಮುದಕಾರಣಂ ಕವಿಗೆ ನಾಲಗೆಯುತ್ಸವಮುಗ್ರವೈರಿಗು 

ದ್ರಾಮಶೆಲಾಭಿಘಾತಮೆನಿಕುಂ ನೃಪನುನ್ನತಕೀರ್ತಿ ಕೌತುಕಂ॥೩೨॥ 


ವಸುಧೆಗಧೀಶನಪ್ಪ ನಳನಧ್ವರಸತ್ಫಲದಿಂ ಸುರರ್ಗೆ ಪೆ 

ರ್ವಸಿವಡಗಿತ್ತಿಳಾಭರಮನೊಂದೆ ಭುಜಂ ಧರಿಸಲಾ ಫಣೀಶ್ವರಂ 

ಗುಸಿರುೞಿಯಿತ್ತು ಬಾಹುಬಲದಿಂ ರಿಪುವಂ ಬಱಿಕೆಯ್ಯೆ ಧಾತ್ರಿಯು 

ಬ್ಬಸವೞಿಯಿತ್ತದೇಂ ಹಿತವನೋ ಭುವನತ್ರಿತಯಕ್ಕೆ ತನ್ನೃಪಂ॥೩೩॥ 


ಪಸರಿಸಿದಾಜ್ಞೆಯೆಂಬ ಮೊಲೆವಾಲೆಱೆದುತ್ತಮ ಧರ್ಮಮಾರ್ಗದೊಳ್ 

ಸಸಿನಡಿಯಿಕ್ಕುವಂತೆಸಗಿ ತೋಳ್ಗಳ ತೊಟ್ಟಿಲೊಳಿಟ್ಟು ಮೇದಿನೀ

ಶಿಶುವನನಂತಕೀರ್ತಿವಿಮಳಾಭರಣಂಗಳನಿಕ್ಕಿ ಕೂರ್ತು ಪಾ 

ಲಿಸಲದು ಮುದ್ದುಗೆಯ್ತವನೊಡರ್ಚುವುದಾತನೊಳಾವ ವೆಸ್ಮಯಂ॥೩೪॥ 


ಬಡಿದೊಡೆ ಖಡ್ಗಮಂ ನಳನೃಪಂ ರಿಪುವಾಗಳೆ ಯೈದೂಧರಂಗದೊಳ್ 

ಮಡಿವನಿದಿರ್ಚನೆಂಬ ನುಡಿಗೇಳ್ದೊಡೆ ತನ್ನಯ ರಾಜ್ಯಮೆಲ್ಲಮಂ 

ಬಿಡುವನಮರ್ಚಿದುಂಗುಟವಲುಂಗಿದೊಡಂಘ್ರಿಯ ಮೇಲೆ ಬೇಗದಿಂ 

ಕೆಡೆವನದೇನಮಾನುಷವೊಬಾಹುಬಲಂ ವಿಮಳಾಧಿನಾಥನಾ॥೩೫॥ 


ನಳನೃಪನಿಂತು ರಾಜ್ಯಸುಖದಿಂದಿರಲೊಪ್ಪುವವಾರ್ತೆಯೊಂದು ಭೂ 

ವಳಯದೊಳೆಲ್ಲಿಯೂ ಪಸರಿಸಿತ್ತು ನೆಗೞ್ದ ವಿದರ್ಭದೇಶದ 

ಗ್ಗಳಿಕೆಯ ಚೆಲ್ವ ಕುಂಡಿನಪುರೇಶ್ವರ ಭೀಮನೃಪಾಲನಪುತ್ರಿ ಕೋ 

ಮಳೆ ದಮಯಂತಿಯೆಂಬ ಪೆಸರುರ್ವಿಯ ಸರ್ವರ ಕರ್ಣಕೌತುಕಂ॥೩೬॥ 


ಅಂಚೆಗಳೊಳ್ನಡೆಯಂ ನಯ

ದಿಂಚರಮಂ ಪಿಕನಿಕಾಯಮರಗಿಳಿ ನುಡಿಯಂ 

ಮಿಂಚುಗಳಾಕೆಯಪಾಂಗ 

ಪ್ರಾಂಚಲಮಂ ಬಯಸಿ ಪಡೆದವೆಂಬುದು ಪುಸಿಯೇ॥೩೭॥ 


ಚರಣವಿಘಾತಿಯಂ ತನುವಿನಪ್ಪುಗೆಯಂ ನಸುನೋಟಮಂ ಮುಖಾಂ 

ಬುರುಹದಿನೊಲ್ದುತೂಪಿಱಿವುದಂ ಪಡೆದಾಗಳೆ ಗಾಡಿ ಪೆರ್ಚುಗುಂ 

ತರುಮೊದಲಾಗಿ ಸರ್ವವಿಷಯೇಂದ್ರಿಯಸೌಖ್ಯದಿನಿರ್ಪ ಸದ್ವಿಟರ್ 

ತರುಣಿಯ ನೇಹಮಂ ಪಡೆದೊಡೇಂ ಕೃತಕೃತ್ಯತೆವೆತ್ತು ತೋರ್ಪರೋ॥೩೮॥ 


ಶಂಬರವೈರಿಗೆ ಯಾತ್ರಾ 

ಸಂಬಳಮುದ್ದಂಡವಿಟವಿಡಂಬನಮಾಶಾ

ಲಂಬನಮೆನಿಸುವುದು ಮದ 

ಸ್ತಂಬೇರಮಗಮನೆಯಂದವೇಂ ವರ್ಣಿಪುದೋ॥೩೯॥ 


ನೀತಿವಿದಂ ಕುಲೀನನಧಿಕಂ ಕುಲವಿಕ್ರಮಧಾರ್ಮಿಕಂ ಮನೋ 

ಜಾತನಿಭಂ ಕಲಾಕುಶಲನಿಂಗಿತಕೋವಿದನೂರ್ಜಿತಪ್ರಭಂ 

ಭೂತಳವಲ್ಲಭಂ ನಳನೃಪಂ ಸಲೆ ಮತ್ಪತಿಯಾತನೆಂದು ಸಂ 

ಪ್ರೀತಿಯಿನಾಪ್ತರೊಳ್ ಮಿಗೆ ವಿಚಾರಿಪಳಾಕೆಕರಂ ರಹಸ್ಯದೊಳ್॥೪೦॥ 


ರೂಪವಿಹೀನಂ ಕುಟಿಲಬುದ್ಧಿಗಳಂ ಪರಪೀಡೆಯುಳ್ಳರಂ 

ಕೋಪಿಗಳಂ ಕುಲಾಧಮರನಸ್ಥಿರರಂ ಸತತಂ ದರಿದ್ರರಂ 

ಚಾಪಲಚಿತ್ತರಂ ಮಱೆದು ನಿರ್ಮಿಸಿದುತ್ಕಟಚಿಂತೆಯಿಂದೆ ತ 

ತ್ಪಾಪಮಡಂಗಲೆಂದು ಪಡೆದಂ ದಮಯಂತಿಯನಬ್ಜಸಂಭವಂ॥೪೧॥ 


ಪೊಡವಿಯೊಳೆಲ್ಲರ ಕೈಗ 

ನ್ನಡಿ ಶಾಶ್ವತಸೌಕುಮಾರ್ಯಸಂಪದವೈನೂ

ರ್ಮಡಿ ಭಾಗ್ಯದೇೞ್ಗೆ ಸಾಸಿ 

ರ್ಮಡಿಯೆಂದು ಪೊಗೞ್ದುದವನಿಭೀಮಾತ್ಮಜೆಯಾ॥೪೨॥ 


ಸೌಭಾಗ್ಯದ ನೆಲೆವನೆ ವರ 

ಶೋಭಾ ಸಂಪದದ ಬೆಳಸು ಕಾಂತಿಯ ಕಟಕಂ

ಭೂಭುವನದ ಸಿರಿಯೆನಿಸುವು

ದಾ ಭೀಮಾತ್ಮಜೆಯ ಜನ್ಮವೆಲ್ಲಾ ದೆಸೆಯೊಳ್॥೪೩॥ 


ಇಂತು ಸಮಸ್ತ ಸದ್ಗುಣಗಣಂ ದಮಯಂತಿಗೆ ಪೆರ್ಚಿರಲ್ ದಿಶಾ 

ಪ್ರಾಂತದೊಳಾರ್ತು ಕೇಳ್ದು ನಳಭೂಪತಿಯಂದುಮೊದಲ್ವರಂ ಕರಂ 

ಕಂತುಶರಾಗ್ನಿಗಳ್ಕಿ ಪೊಸಪೂಗೊಳದೊಳ್ ವನದೊಳ್ ತೊಳಲ್ದು ತ 

ಚ್ಚಿಂತೆಯೊಳಿರ್ಪನಾರಱಿವರಾತನ ಚಿತ್ತದ ತಾಪದೇೞ್ಗೆಯಂ ॥೪೪॥ 


ಅಮರ್ದನಮರ್ತ್ಯನಲ್ಲದುಣಲಾರಱಿವರ್ ಧರೆಯೆಲ್ಲಮಂ ಪರಾ 

ಕ್ರಮವೆಸದಾಳ್ವ ಭೂಭುಜಕುಲೋದ್ಭವನಾ ದಮಯಂತಿಗಾತನೇ 

ರಮಣನೆನಿಪ್ಪ ನಾಣ್ಣುಡಿಗಳೆಣ್ದೆಸೆಯೊಳ್ ಬಳೆಯಲ್ಕೆ ಕೇಳ್ದು ವಿ 

ಕ್ರಮನಳನಾಕೆಯಂ ಬಯಸಿ ಬಣ್ಣಿಸುವಂ ಮನದೊಳ್ ನಿರಂತರಂ॥೪೫॥ 


ವಿಮಳಾಂಭೋರುಹಷಂಡದೊಳ್ ನೆಲಸಿ ಮೌನಂ ಮುತ್ತಿ ತದ್ಧ್ಯಾನಚಿ 

ತ್ತಮನಿಂಬಾಗಿಸಿಯನ್ನಪಾನಸುಖಮಂ ಬೇಕನ್ನದಂಗಂ ಬೆಳ 

ರ್ತೆಮೆಯಿಕ್ಕಲ್ಮಱೆದಂಗಜಾಗ್ನಿವಶವಾಗಿರ್ದಾವಗಂ ತನ್ನೃಪಂ 

ದಮಯಂತೀವ್ರತಮಂ ಸಮಾಚರಿಸುವಂ ಸದ್ಬ್ರಹ್ಮಚಾರಿತ್ರದಿಂ॥೪೬॥ 


ಇನ್ನೊಮ್ಮೆ ಸುಡುವೊಡಂಗಜ 

ನಂ ನೀಲಗ್ರೀವ ನಿನಗೆ ಭಾಳಾಕ್ಷಿಯ ಕಿ 

ಚ್ಚಿನ್ನೆಲ್ಲಿಯದೆನ್ನದಿರೀ 

ವೆಂ ನಲವಿಂ ಕಡನನೆನ್ನ ತಾಪಾನಲನಂ ॥೪೭॥ 


ವ॥ ಅಂತಾದನನಾಪ್ತರಱಿದು ಮಱೆಯದಂತಿರೆ 


ಲಲನೆಯರುನ್ನತಸ್ತನನಿಕುಂಜದೊಳುತ್ಕಟಪೂರ್ಣಯೌವನೋ 

ಜ್ವ್ಲಲಜಲತೀರದೊಳ್ ಗುರುನಿತಂಬಶಿಲೋಚ್ಚಯದೊಳ್ ಸುಧಾಧರಾ 

ನಿಲಪರಿಸೇವೆಯೊಳ್ ಸುಖಸಮಾಧಿಯೊಳಿರ್ಪ ತಪಸ್ವಿ ಕಾಮನಂ 

ಗೆಲಲಱಿವಂತೆಮಿಕ್ಕವರದೇಂ ಗೆಲಲಾರ್ಪರೆ ಕೋಟ್ಯುಪಾಯದಿಂ॥೪೮॥ 


ನೆಱೆದಿರ್ದ ವಿರಹದುರಿಯಂ 

ಪೆಱರಱಿಯದ ತೆಱದಿನೊಲ್ದು ಬಱಿಯೋಲಗದೊಳ್ 

ಮೆಱೆದಿರ್ಪಂ ಗದ್ದುಗೆಯೊಳ್ 

ಮಱೆಮಾೞ್ಪಂ ತನ್ನ ಹೃದಯತಾಪದ ರೂಪಂ॥೪೯॥


ಮಱುಜೂಜನಾಡಿ ಗೆಲ್ದಾಂ 

ಪೊಱಮಡಿಸಿದೆನೆನ್ನ ರಾಜ್ಯದಿಂ ಪುಷ್ಕರನಂ 

ಕುಱಪಿದು ತನಯರ್ಸಹಿತಂ 

ಮಱುದಿವಸಂ ಮತ್ಪುರಕ್ಕೆ  ಬಪ್ಪುದು ಬೇಗಂ ॥೭೭೨॥ 


ವ॥ ಅಂತು ದಮಯಂತಿಯಂ ಕರಸೆ 


ವನಿತಾರತ್ನವಿದರ್ಭನಿಂದ ನೃಜಗತ್ಪ್ರಖ್ಯಾತನಿಂ ತಾತನಿಂ 

ವಿನಯಂ ಕೈಮಿಗಲಂಘ್ರಿಗಳ್ಗೆಱಗಿ ತಾಂ ಬೀೞ್ಕೊಂಡು ಸಂತೋಷದಿಂ 

ಜನಲೋಕಕ್ಕೆ ನವೀನವೆಂದಜನಲೋಕಂ ಬಪ್ಪವೊಲ್ ಬಪ್ಪಳಂ 

ಗನೆ ಪುತ್ರರ್ವೆರಸೊಲ್ದು ನೈಷಧಪುರಕ್ಕಾನಂದಸಂದೋಹದಿಂ॥೭೭೩॥ 


ನಿರುಪಮಸಂಪದಂ ಸಕಳರಾಜ್ಯಸಮೃದ್ಧ ಸುಖಪ್ರವರ್ಧನಂ 

ಪರಮಮಹೋತ್ಸದಂ ನಿಜಕಳತ್ರತನೂಭವಬಂಧುಸಂಗಮಂ 

ಸ್ಥಿರತರಮಪ್ಪಿನಂ ತನಗನೇಕಯುಗಂ ವಿಜಯಪ್ರತಾಪದಿಂ

ನಿರವಧಿಕೀರ್ತಿಯಂ ತಳೆದು ರಂಜಿಸುತಿರ್ದನುದಾರವಿಕ್ರಮಂ॥೭೭೪॥ 


ಈ ಕೃತಿಯಂ ಮನಂ ಬಯಸಿ ಕೇಳ್ವ ಜನರ್ಗೆ ಸಮಸ್ತಶಾಶ್ವತ 

ಶ್ರೀಕೃಪೆ ಪಿಂಗದಿರ್ಕೆ ಸತತಂ ಪರಮೋತ್ಸವನಿತ್ಯವೈಭವ 

ಶ್ರೀಕೃತದೇೞ್ಗೆ ರಂಜಿಸುಗೆ ಕಲ್ಪಶತಂ ಕಲಿ ಪೊರ್ದದಿರ್ಕೆ ಶೋ 

ಭಾಕೃತಿಯೊಂದಿ ಧರೆಮೇರುಮಹೀಧರಮೊಪ್ಪುತಿರ್ಪಿನಂ॥೭೭೫॥ 


ಬಾಣಾಸೈರವಿಜಯಂ ಕ 

ಲ್ಯಾಣನಳಖ್ಯಾತಿ ದಶಕುಮಾರಚರಿತ್ರಂ 

ಕ್ಷೋಣೀಜನಕರ್ಣಮನಃ 

ಪ್ರೀಣಮಿವು ಚೌಂಡರಾಜವಿರಚಿತಕೃತಿಗಳ್॥೭೭೬॥


ನಳ ಕಥಾಸಾಹಿತ್ಯ: 

೧) ನಳೋಪಖ್ಯಾನ,     ಸಿ, ಶಿವಶಂಕರಶಾಸ್ತ್ರಿ

೨) ನಳ ನಾಟಕ,            ಡಿ. ಶಾಮರಾವ್

೩) ದಮಯಂತೀ ಚರಿತ್ರೆ,   ಸೋಸಲೆ ಅಯ್ಯಾಶಾಸ್ತ್ರಿ( ಷಟ್ಪದಿ ) 

೪) ನಳಚರಿತ್ರೆ( ಯಕ್ಷಗಾನ,)   ವಿ, ಪುಟ್ಟಣ್ಣ 

೫) ನಳದಮಯಂತಿ ಪುಣ್ಯ ಚರಿತ್ರೆ,   ಸಿ. ವಿ. ಶಿವಶಂಕರ ಶಾಸ್ತ್ರಿ

೬) ನಳದಮಯಂತಿಯರ ಕಥೆ ( ವಚನ ಕಾವ್ಯ)    ? 

೭) ದಮಯಂತೀ ಸ್ವಯಂವರ,      ಬಸವಪ್ಪಶಾಸ್ತ್ರಿ

೮) ನಳಚರಿತ್ರೆ, (ಷಟ್ಪದಿ)               ಕನಕದಾಸ

೯) ನಳಚಂಪು, ( ನಳಚರಿತ್ರೆ )         ಚೌಂಡರಸ

೧೦) ವೈಕುಂಠ ನಳಚರೆತ್ರೆ, ( ಯಕ್ಷಗಾನ )   ಶೇಷದಾಸ

೧೧ ನಳನಾಟಕ,                            ಪುಟ್ಟಣ್ಣ ಕವಿ

೧೨) ನಳಚರಿತ್ರೆ, (ಯಕ್ಷಗಾನ )            ಲಿಂಗರಾಜ

೧೩) ನಳಚರಿತ್ರೆ, ( ಯಕ್ಷಗಾನ )           ದೇವಶಿಖಾಮಣಿ ಶ್ರೀನಿವಾಸಯ್ಯಂಗಾರ್

೧೪) ನಳಚರಿತ್ರೆ, ( ಯಕ್ಷಗಾನ )            ಭೀಮವ್ವ 

೧೫) ನಳಚರಿತ್ರೆ  ( ಯಕ್ಷಗಾನ  )             ಧ್ವಜಪುರದ ನಾಗಪ್ಪಯ್ಯ 

೧೬) ನಳದಮಯಂತೀ ನೃಟಕ,                ಕೃಷ್ಣಾಜೀಭಿಷ್ಠೋ 

೧೭) ನಳಮಹಾರಾಯನ ಟರಿತ್ರೆ ( ಯಕ್ಷಗಾನ)  ಮಹಾಂತ ದೇಶಿಕ

೧೮) ನಳದಮಯಂತಿ,        ಕೆರೂರ್ ವಾಸುದೇವಾಚಾರ್ಯ



ನೆನಕೆ:  ಸಂಪಾದಕರು 

೧) ಎಚ್. ಆರ್. ರಂಗಸ್ವಾಮಿ ಅಯ್ಯಂಗಾರ್ 

೨) ವಿದ್ವಾನ್ ಎಸ್. ಎನ್. ಕೃಷ್ಣಜೋಯಿಸ್


ಮುದ್ರಕರು: 

ಕನ್ನಡ ಅಧ್ಯಯನ ಸಂಸ್ಥೆ, 

ಮೈಸೂರು ವಿಶ್ವವಿದ್ಯಾಲಯ.


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ