ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 28, 2023

ಇಮ್ಮಡಿ ಗುರುಸಿದ್ಧ ವಿರಚಿತ ಹಾಲಾಸ್ಯ ಪುರಾಣಂ

 ಇಮ್ಮಡಿ ಗುರುಸಿದ್ಧ ವಿರಚಿತ ಹಾಲಾಸ್ಯ ಪುರಾಣಂ


ಇದು ಒಂದು ಚಂಪೂಕಾವ್ಯ. ಇದರಲ್ಲಿ ನಾಲ್ಕು ಕಾಂಡಗಳೂ ಅರುವತ್ತಾರು ಆಶ್ವಾಸಗಳೂ ಮೂರುಸಾವಿರದ ಆರುನೂರ

ಮೂವತ್ತೇಳು ಪದ್ಯಗಳೂ ಕೆಲವು ತ್ರಿಪದಿಗಳೂ ರಗಳೆಗಳೂ ಇವೆ. ಈ ಕಾವ್ಯದಲ್ಲಿ ಮಧುರೆಯ ಸುಂದರೇಶ್ವರರ ಚತುಷ್ಷಷ್ಟಿ ಲೀಲೆಗಳು ವರ್ಣಿತವಾಗಿವೆ.ಇದರ ಕರ್ತೃ ಇಮ್ಮಡಿ ಮುರಿಗಾ ಗುರೈಸಿದೂಧ.ಈತನು ಶೂನ್ಯಸಿಂಹಾಸನದ ಪರಂಪರೆಗೆ ಸೇರಿದವನು. ಈ ಪರಂಪರೆಯಲ್ಲಿ ಚಿತ್ರದುರ್ಗದ ಒಂಬತ್ತನೆಯ ಮಠಾಧಿಪತಿಯಾಗಿದ್ದವನು. ಈತನು ಹಾಲಾಸ್ಯ ಪುರಾಣವನ್ನು ಕ್ರಿ. ಶ. ೧೭೨೦ ರಲ್ಲಿ ರಚಿಸಿದಂತೆ ಹೇಳಿಕೊಂಡಿದ್ದಾನೆ. ಮಧುರೆಯ ಮೀನಾಕ್ಷಿಸುಂದರರ ಅರುವತ್ತುನಾಲ್ಕು ಲೀಲೆಗಳು ಹಾಲಾಸ್ಯ ಪುರಾಣದ ವಸ್ತು.


ಗುರುಸಿದ್ಧ ತನ್ನ ಹಾಲೃಸ್ಯ ಪುರಾಣವನ್ನು ಸೋದೆಯ ಸದಾಶಿವರಾಜನ ವರ್ಣಕ ಹಾಲಾಸ್ಯ ಪುರಾಣವನ್ನು ಆಧರಿಸಿ ರಚಿಸಿದಂತೆ ತಿಳಿಸಿದ್ದಾನೆ.ಕ್ರಿ. ಶ.೧೭೪೦ ರಲ್ಲಿ ವೆಂಕಟೇಶ ಚಂಪುವಿನಲ್ಲಿ ಹಾಲಾಸ್ಯ ಪುರಾಣವನ್ನೂ, ಕ್ರಿ. ಶ. ೧೭೪೦ ಕಳಲೆ ನಂಜರಾಜ,ಮತ್ತು ಕ್ರಿ. ಶ. ೧೭೯೪-೧೮೬೮ ರಲ್ಲಿದ್ದ ಮುಮ್ಮಡಿ ಕೃಷ್ಣರಾಜರು ಗದ್ಯದಲ್ಲಿ ಹಾಲಾಸ್ಯ ಪುರಾಣವನ್ನು ಬರೆದಿದ್ದಾರೆ. ದನುಗೂರಿನಲ್ಲಿ ಉದ್ದಾನ ಯೋಗೀಶ್ವರರ ಪರಂಪರೆಯಲ್ಲಿ ಬಂದ ಸೋಮಶೇಖರ ಶಿವಯೋಗಿಯಿಂದ ಗುರುಸಿದ್ಧ ಚಿಕ್ಕಂದಿನಲ್ಲಿ ದೀಕ್ಷೆಯನ್ನು ಪಡೆದನು. ಕುಂಭಲಪಲ್ಲಿಯ ಚಿದ್ಬಸವೇಶನಿಂದ ವಿದ್ಯಾವಂತನಾಗಿ ಮುರಿಗೆ ಶಾಂತವೀರನ ಕೃಪೆಯಿಂದ ಜಗದ್ಗುರುವಾದನು. 


ಗುರುಸಿದ್ಧ ಕನ್ನಡ ಸಂಸ್ಕೃತ ಭಾಷೆಗಳೆರಡರಲ್ಲೂ ಘನವಿದ್ವಾಂಸನಾಗಿದ್ದನೆಂಬುದಕ್ಕೆ ಆತನ ಕಾವ್ಯಗಳೇ ಸ್ಪಷ್ಟ ನಿದರ್ಶನಗಳಾಗಿವೆ. ಈತ ಕನ್ನಡದಲ್ಲಿ ಹೋಳಿಪದ, ಬಿಜ್ಜ ಮಹಾದೇವಿ ಚಾರಿತ್ರ, ಕೈವಲ್ಯಸೋಪಾನನಾಮೈಕೋತ್ತರ ಶತಸ್ಥಲ, ಶೂನ್ಯಮಂತ್ರಗೋಪ್ಯ, ಶಿವಲಿಂಗಮಹಿಮಾಷಟ್ಪದಿ, ಮಿಶ್ರಾರ್ಪಣ ವಾರೂಧಿಕ,ಶಿವಲಿಂಗನಾಂದ್ಯ, ಯೋಗಕಲಾಪಸಾರ,ಸ್ಕಂದಕಲ್ಯಾಣ, ವಿರೂಪಾಕ್ಷ ಪಂಚಾಶಿಕಾಗಮ ಎಂಬ ಕೃತಿಗಳನ್ನೂ, ಸಂಸ್ಕೃತದಲ್ಲಿ ನಂದೀಶ್ವರ ಜಯದಂಡಕ, ಪ್ರಭುಲೀಲಾ ಎಂಬ ಗ್ರಂಥಗಳನ್ನು ಬರೆದಿದ್ದಾನೆ. 


ಹಾಲಾಸ್ಯ ಪುರಾಣ ಒಂದು ವಿಶಿಷ್ಟವಾದ ಕೃತಿ. ಇದರಲ್ಲಿ ಬಳಸಿರುವಷ್ಟು ವಿವಿಧ ಜಾತಿಯ ವೃತ್ತಗಳು ಕನ್ನಡದ ಮತ್ತಾವ ಕೃತಿಯಲ್ಲೂ ಕಂಡುಬರುವುದಿಲ್ಲ. ಕಷ್ಟವೂ ಕ್ಲಿಷ್ಟವೂ ಆದ ಪ್ರಾಸಸ್ಥಾನಗಳನ್ನು ಬಳಸಿ ಲೀಲಾಜಾಲವಾಗಿ ನಿರ್ವಹಿಸಿದ್ದಾನೆ. ಪಟ್ಟದ ಜಗದ್ಗುರುವಾಗಿ ಉಭಯಭಾಷಾಪಂಡಿತನಾಗಿ ಇಮ್ಮಡಿ ಮುರಿಗಾ ಗುರುಸಿದ್ಧ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಮರಣೀಯ ವ್ಯಕ್ತಿಯಾಗಿದ್ದೃನೆ. 


ಪ್ರಥಮಕಾಂಡ

ಪೀಠಿಕಾ ಪ್ರಕರಣ

ಹಾಲಾಸ್ಯ ಪುರಾಣಂ

ಪ್ರಥಮಾಶ್ವಾಸಂ 


ಸ್ರಗ್ಧರೆ: 

ಶ್ರೀಮನ್ಮೀನಾಕ್ಷ್ಯಧೀಶಂ ಮಧುರಿಮಗುಣಕೋಶಂ ಮಹಾನಂದವೇಶಂ 

ಸೋಮಾಂಚನ್ಮೌಲಿಭಾಗಂ ಮಲಿನರಹಿತಭೋಗಂ ಮನೋರಮ್ಯವೇಗಂ 

ಕಾಮಾಂಧಧ್ವಾಂತಸೂರ್ಯಂ ಕಲಿತಸಕಲಶೌರ್ಯಂ ಕಲಾಶಾಲಿಧೈರ್ಯಂ 

ಕ್ಷೇಮಪ್ರಾರಂಭಂ ಮಾಳ್ಕೆಮಗತಿದಯೆಯಿಂ ಸುಂದರೇಂದ್ರಂ ಧರೇಂದ್ರಂ॥೧॥ 


ಚಂಪಕಮಾಲೆ: 

ಶರಜಜನಿತ್ರಿ ಸರೂವಸೈಖಧಾತ್ರಿ ಶಮೋದಯಮೌನಿನೇತ್ರೆ ಮಾ 

ವರಸುತಪಾಲೆ ವರ್ಜಿತಕುಶೀಲೆ ವಧಾನ್ಯಗುಣಾನುಕೂಲೆ ಸುಂ 

ದರನವರೂಪೆ ದಕ್ಷಮುಖಕೋಪೆ ದಯಾರಸಪೂರ್ಣಕೂಪೆ ಭಾ 

ಸುರತರಕೀರ್ತಿ ಸುಸ್ತವನಪೂರ್ತಿ ಸುಖೋತ್ಸವಸಾರೆ ಪಾಲಿಸಾ॥೨॥ 


ಮತ್ತೇಭವಿಕ್ರೀಡಿತ: 

ಪೊಳೆಯಂ ಮಂಡೆಯಮೇಲೆ ತಾಳ್ದನಭವಂ ತತ್ಪುತ್ರನಾದಾನುಮು 

ಜ್ವಳಶೀರ್ಷಾಂತದೊಳೆಯ್ದೆ ತಾಳ್ದೆನಿದೆನೋಡಿಂ ನೀಮೆನುತ್ತಾಗಳುಂ 

ಜಳಮಂ ಸುಂಡಿಲಿನೆಯ್ದೆ ಫೂತ್ಕರಿಸಿ ಚೆಲ್ಲುತ್ತಿರ್ದ ದಿಗ್ದೇಶದೊಳ್ 

ವಿಳಸದ್ವಾರಣವಕ್ತ್ರನೀಗೆಮಗೆ ನಿರ್ವಿಘ್ನತ್ವಮಂ ಸತ್ವಮಂ॥೩॥ 


ಉತ್ಪಲಮಾಲೆ: 

ತಾರಕಶೂರಪದ್ಮಹರಿತುಂಡಗಜಾಸ್ಯ ರನೊಕ್ಕಲಿಕ್ಕಿ ವಿ 

ಸ್ತಾರಸುಖಂಗಳಂ ಭುವನಸಂತತಿಗಿತ್ತು ದಯಾಕಟಾಕ್ಷದಿಂ 

ಭೂರಿಸುರರ್ಕಳಂ ಪೊರೆದು ಶಚ್ಯಧಿನಾಥನ ಪುತ್ರಿಯಂ ಶುಭಾ 

ಕಾರೆಯನಂದು ಕೈವಿಡಿದ ಷಣ್ಮುಖನೀಗೆಮಗಿಷ್ಟಸಿದ್ಧಿಯಂ॥೪॥ 


ದಕ್ಷನ ಜನ್ನಮಂ ತೊಡೆದು ಪಕ್ಷದಿನೆಯ್ದಿದ ಬೋಳೆಯರ್ಕಳಂ 

ಶಿಕ್ಷಿಸಿ ಮತ್ತಮಂತಿರದೆ ಕಾಲ್ಗೆಱಗಿರ್ದರನಂದು ನೋಡುತಂ 

ರಕ್ಷಿಸಿ ಕೀರ್ತಿಯಂ ಪಡೆದು ಬಂಧುರ ಸುಂದರಕಾಯನಾದ ಭಾ 

ಳೇಕ್ಷಣ ವೀರಭದ್ರನೆಮಗೀಗೆ ಮಹೋದಯ ಶುದ್ಧಬುದ್ಧಿಯಂ॥೫॥ 


ಮಲ್ಲಿಕಾಮಾಲೆ: 

ನಂದಿ ಭೃಂಗಿ ವೃಷಂ ಮಹಾಗುರು ರೇಣುಕಂ ವರದಾರುಕಂ 

ಸುಂದರಂ ಕಲಿಕಂಬಕಂ ಗಣನಾಥನುಂ ಸಿರಿಯಾಳನುಂ 

ಚಂದಯಂ ಬಸವೇಶಂ ಮಡಿವಳ್ಳಮಾಚಯ ನಾಗಣಾ 

ನಂದರುಂ ಕೃಪೆಯಿಂದೆ ಮತ್ಕೃತಿಗೀಗೆ ಮಂಜುಳವಾಣಿಯಂ॥೬॥ 


ಕಂದ: 

ಹಂಪೆಯ ಹರಿಹರದೇವನ 

ಲಂಪಿನ ರಾಘವನನಿಂದ್ಯ ಪಾಲ್ಕುರಿಕೆಯ ಸೋ 

ಮಂ ಪರಮಪಂಡಿತಯ್ಯಂ 

ಸೊಂಪಿನ ರಸಭಾವಮುಖ್ಯಮಂ ನೀಡುಗೆ ತಾಂ॥೭॥ 


ಗುರುತೋಂಟದಾರ್ಯನಂ ಸು 

ಸ್ಥಿರಕೊಟ್ಟೂರೇಶನಂ ಭುಜಂಗೇಶ್ವರನಂ 

ಕರತಳದ ನಾಗಿದೇವನ 

ನಿರದಾಂ ನುತಿಗೆಯ್ದು ಪೇಳವೆನೀ ಸತ್ಕೃತಿಯಂ॥೮॥ 


ದೀಕ್ಷೆಯನಿರದಿತ್ತಯ್ಯನ 

ನಕ್ಷಯಶಿಕ್ಷೆಯನಳುರ್ಕೆಯಿಂದಿತ್ತವನಂ 

ಪಕ್ಷದೆ ಸುಜ್ಞಾನದನಂ 

ಲಕ್ಷಿಪೆನೀ ಕೃತಿಯ ಮೊತ್ತಮೊದಲೊಳೆ ನಯದಿಂ॥೯॥ 


ದುರ್ಜನ ಕವಿಗಳ ಮತಮಂ 

ವರ್ಜಿಸಿದೆನದೇತಕೆನೆ ಜಲದೊಳಂಗುಲಿಯಂ 

ಸರ್ಜಿಸಿನೋಡಿದೊಡೇಂ ರುಚಿ 

ಯೂರ್ಜಿತಮಾದಪುದೆ ಪೇಳಿಮಿದನೀ ಧರೆಯೊಳ್॥೧೦॥ 


ಚಂಪಕಮಾಲೆ: 

ಸಕಲಕಲಾವಿಶಾರದ ನರೇಂದ್ರಶಿರೋಮಣಿ ಲಿಂಗಜಂಗಮಾ 

ರ್ಚಕನುರು ಸೋದೆಯಪ್ರಭು ಸದಾಶಿವಭೂಪತಿಯೊಲ್ದು ಪೂರ್ವದೊಳ್ 

ಪ್ರಕಟಸುವರ್ಣವರ್ಣಕದೆ ಪೇಳ್ದುದನಾಂ ಪ್ರಮಥೋಕ್ತಿಯಿಂದೆ ವ

ಸ್ತುಕದಿನಿದಂ ನೆಗಳ್ಚಿದೆನುಮೇಶನ ಭಕ್ತರಪಾರರೊಲ್ವಿನಂ॥೧೧॥ 


ಕಂದ: 

ನೀರಸವಾಕ್ಯದ ವರ್ಣನೆ 

ಯಾರಯೆ ಶಿವಭಕ್ತ ಜನಕೆ ರಸಹೀನಮಿದೆಂ 

ದೋರಣದಿನುಳಿದೆನದನಂ 

ಬಾರಮಣನ ಲೀಲೆಗಳ್ಗೆ ತೊಡಕಪ್ಪುದರಿಂ॥೧೨॥

 

ಉತ್ಪಲಮಾಲೆ: 

ಬಂದೊಡೆ ಬಿಟ್ಟರುಂಟೆ ಕವಿತಾರಸಮಂ ಜಗದಲ್ಲಿ ನೀನದೇ

ನೆಂದಪೆ ಮಾಣೆನಲ್ ಶಿವನ ಶಂಕರನದ್ರೆಜೆಯಾಣ್ಮನಾ ಚಿದಾ 

ನಂದನ ಪಾವನಾತ್ಮನಾ ಗುಣಾಕರನಾಶ್ರಿತಕಲ್ಪಭೂಜನಾ

ಸುಂದರದೇವನುನ್ನತಚರಿತ್ರ ಸುಧಾರಸಕಂತದೆಂತೆಣೇ॥೧೩॥ 


ದ್ವಾದಶಾಶ್ವಾಸಂ 

ಕುಮಾರೋತ್ಪತ್ತಿ ಲೀಲೆ,

ಕಂದ: 

ಶ್ರೀಮನ್ಮಲಯಧ್ವಜತನ 

ಯಾಮಲಮಾನಸ ಸರೋಜಹಂಸಂ ಸದ್ಗುಣ 

ಧಾಮಂ ಧನಪತಿಮಿತ್ರ ಮ

ನಾಮಯನೊಲೂದೀಗೆ ಮುಕ್ತಿಯಂ ಶಿವಲಿಂಗಂ॥೧॥ 


ವಚನ: ಅನಂತರದೊಳ್ ಸುಂದರೇಶ್ವರನ ಕುಮಾರೋತ್ಪತ್ತಿ ಕಥೆಯಂ ಪೇಳವೆನಾಲಿಪುದೆಂದು ಮುನಿಗಳ್ಗಗಸ್ತ್ಯಂ ಪೇಳ್ದನೆಂತೆನೆ,


ಉತ್ಪಲಮಾಲೆ: 

ಆವ ಕುಮಾರನೊಳ್ ವರತಟಾತಕೆಗಂ ಪ್ರಿಯಮಾತನಂ ಮಹಾ 

ದೇವಗಣಂಗಳೆಯ್ದೆ ಪರಸೀಯೆ ವಿಭೂತಿಯನಂದದಂ ಮನೋ 

ಭಾವದಿನಾಂತು ಭಕ್ತಿ ಮಿಗೆ ತಾಳ್ದಿರಲಂಗದಚಿಹ್ನಮಂ ಧರಾ 

ಜೀವರದೆತ್ತಮಿಂಗಿತದೆ ಬಣ್ಣಿಸಲಾರ್ಪರುದಾತ್ತಲೀಲೆಯಂ॥೨॥ 


ವಚನ: ಅಂತಾದೊಡಮುಪಚಾರಕ್ಕೋಸುಗರಂ ವರ್ಣಿಪೆನದೆಂತೆಂದೊಡೆ, 


ಕಂದ: 

ಧವಳಾಂಗನರಸಿಯಂಗಮ

ದವಿರಳದಿಂ ಬಿಳ್ಪುವೆತ್ತೆರಲ್ ಕಂಡವರಾ 

ಶಿವೆ ತಾನೆ ಮೂಲಶಾರದೆ 

ಯಿವಳಲ್ಲದೊಡೀ ಶುಚಿತ್ವಮೆತ್ತಣದೆಂದರ್॥೩॥ 


ಅಮರ್ದೊಡಲಂ ತುಂಬಿರ್ದೊಡೆ 

ಅಮರ್ದುಣಿಗಳು ಸುಂದರೇಶನಂ ಪ್ರಾರ್ಥಿಸೆ ತಾ 

ನಮರ್ದ ಕಳಸಂಗಳೆರಡಱೊ

ಳಮರ್ದಂ ಸಲೆ ತೀವಿಯರಗಿನಿಂ ಮುದ್ರಿಸುತಂ॥೪॥ 


ಬಿಡದೆ ಮಡಂಗಿದನೆನೆ ಪೊಂ 

ಗೊಡಮೊಲೆಗಳ ತೊಟ್ಟುಗಳ್ ವಿರಾಜಿಸೆ ತನ್ನಯ 

ಬಡತನವನುಳಿದು ಮೃಡನಿಂ 

ಪಡೆದುದೊ ವೃದ್ಧಿಯನೆನಲ್ಕವಳ ನಡು ತೋರ್ಕುಂ॥೫॥ 


ಲಾವಣ್ಯರಸದ ಪೊಳೆಯದು 

ತೀವಿರೆ ತಾಂ ಮೇಱೆದಪ್ಪಿದೊಡೆ ಸುಳಿ ಮಸುಳಿಸಿ 

ಭಾವಿಸಲಿಲ್ಲಾದುದೊಯೆನೆ 

ದೇವಿಯ ಪೊರ್ಕುಳ ಗಭೀರಮುಡುಗಿದುದಾಗಳ್॥೬॥ 


ಚಂಪಕಮಾಲೆ: 

ಸುರುಚಿರ ನಾಭಿಯೆಂಬ ಕೊಳನುರ್ಕಿದೊಡಲ್ಲಿಯ ಪಾಂಸೆ ಬಂ 

ದೆಱಗಿಳಿತರ್ಪ ಚಂದಮೊ ಎನಲ್ ಬಡಬಾಸೆ ವಿರಾಜಿಸೈಸಱೊಳ್ 

ಪರಪಿಗೆ ಬಿಳ್ದು ತೋಱುತಿರಲಾ ವನಿತೋರುನಿತಂಬಬಿಂಬಮಂ 

ಪೊಱಲೆಳತಾಟಮಾಗೆ ನಡೆ ಮಂದಮನಾಳ್ದುದು ಚಂದ್ರವಕ್ತ್ರೆಯಾ॥೭॥ 


ವಚನ: ನಾಡಾಡಿಯ ಗರ್ಭದಂತಲ್ಲದ ಕಾರಣಮಾ ನಾಡಾಡಿ ಬಸಿಱ ಸೂಚನೆಯಂ ಪೇಳಲುಳಿದುತ್ಸವಮಂ ವರ್ಣಿಸುವೆನೆಂತೆನೆ, 


ಉತ್ಸಾಹ: 


ಅರ್ಭಕಂ ನಿಜೋದರಸ್ತಮಾದ ನೈಜವಲ್ಲಭಾ 

ಗರ್ಭವರ್ಧನಾರ್ಥಮಾಗಿ ದೇವ ಪಾಂಡ್ಯಭೂವರಂ  

ನಿರ್ಭಯಂ ದಿನೇದಿನೇಸಮಂತು ಗೆಯ್ಸಿದಂ ಬುಧಂ

ನಿರ್ಭರಾಯುರಂಕವೇದವಿತ್ತರಿಂದೆ ರಕ್ಷಯೆಂ॥೮॥ 


ಕಂದ: 

ಸೀಮಂತಕಾಧಿಕ ಕರ್ಮ

ನಾ ಮುನಿವರರಿಂದೆ ಮಾಡಿಸಿದನುರ್ವೀವರ

ನಾಮಯದೂರ ವರಾಂಗನೆ 

ಯಿ ಮಹಿಯೊಳ್ ಚೋದ್ಯಗರ್ಭಕಾಲದೊಳಾಗಳ್ ॥೯॥


ಪತ್ತನೆಯ ಮಾಸದೊಳ್ ಶುಭ 

ಚಿತ್ತದೆ ಗುರುಕೇಂದ್ರದಲ್ಲಿ ಬೆರೆದಿರೆ ಸಾಮ್ರಾ

ಜ್ಯೋತ್ತಮ ಸೂಚಕಮೆನಿಸಿದ 

ಗೊತ್ತಿನ ಶಶಿವಾರ ರುದ್ರತಾರೆಗಳೊಳಣಂ ॥೧೦॥ 


ಲಗ್ನಂ ತಾಂ ಬರೆಯದಱೊಳ್ 

ಮಗ್ನತೆಯಿಂ ತಾರಕಾರಿ ಷಣ್ಮುಖಂ ತಾ 

ನಗ್ನಿ ಜನಾದೊಡಮುಳಿಯುತೆ 

ಭಗ್ನಾಂತಕಮೇಕವಕ್ತ್ರದಿಂದವತರಿಸಲ್॥೧೧॥ 


ವಚನ: ಆಗಳಾ ಜ್ಞಾನಶಕ್ತಿಯಾದ ತಟಾತಕಾದೇವಿ ನೆನಹಿನ ಗರೂಭದತ್ತಣಿಂ ಕುಮಾರನಂ ಪೆಱಲಾ ಯೋನಿಜನಲ್ಲದ ಪುತ್ರೋದಯ ಕಾಲದೊಳಾದ ಮಹೋತ್ಸವಮೆಂತೆಂದೊಡೆ, 


ಶಾರ್ದೂಲವಿಕ್ರೀಡಿತ: 

ಮೂಲೋಕಂಗಳೊಳಿರ್ದ ಜೀವನಿಕರಂ ಸಂತೋಷಮಂ ತಾಳ್ದಿರಲ್ 

ಲೀಲಾಜಾಲದೆ ದಿಕ್ತಟಂಗಳನಿತುಂ ಸ್ವಚ್ಛಂಗಳಾಗಲ್ ಕರಂ 

ಹಾಲಾಸ್ಯಾಧೆಪನಾಜ್ಞೆಯಿಂ ಸೆರೆಯ ಮರ್ತ್ಯರ್ ಮುಕ್ತರಾಗಲ್ ವಲಂ 

ಶೈಲಾದ್ಯಾದಿಗಣಂಗಳೆಯ್ದೆ ನಲಿಯಲ್ ಬಾಲ್ಯೋದಯಾರಂಭದೊಳ್॥೧೨॥ 


ಚಂಪಕಮಾಲೆ: 

ನಿರುಪಮದೇವದುಂದುಭಿ ಧಳಂ ಧಳಮೆಂದೆನೆ ಪುಷ್ಪವೃಷ್ಟಿಗಳ್ 

ತರತರದಿಂದೆ ಸೂಸೆ ಮಲಯಾಚಲದತ್ತಣಿನೆಯ್ದೆ ಮಾರುತಂ 

ಪೊರೆದಿರೆ ಕಂಪು ತಂಪು ಮಿಗೆ ಮೆಲ್ನಡೆಯುಂ ಸುಜನಾಂತರಂಗಮುಂ 

ಸರಸಿಯುಮಾ ತಟಾಕತತಿಯುಂ ನದಿಯುಂ ತಿಳಿಯಾಗಿ ಶೋಭಿಸೇ॥೧೩॥ 


ಕಂದ: 

ಬಲವಂದು ಹವಿಯನನಲಂ 

ಗೆಲವಿಂ ತಳೆಯಲ್ ದಿಗೀಶ ಮುಖ್ಯಾಮರ ಸಂ 

ಕುಲಮುಂ ಪ್ರೀತಿಯನೆಯ್ದಲ್ 

ಸಲೆ ಮಧುರಾವಾಸಿಗಳ್ಗೆ ಸಂತಸಮೊದವಲ್॥೧೪॥ 


ಮನೆಮನೆಯೊಳ್ ಮಂಗಲಮದು 

ಘನಮಾಗಿರೆ ಪುತ್ರನೊಸಗೆವಾದ್ಯಚಯಂಗಳ್ 

ಬಿನದದೆ ಮೊಳಗುತ್ತಿರೆ ಶಿವ 

ನನಘನ ಸತ್ಪುತ್ರನುದಯಕಾಲದೊಳಾಗಳ್ ॥೧೫॥ 


ತರಳ: 

ತಮಮದಾಗಳಡಂಗೆ ರಾಜಸಮೆಯ್ದೆ ಮಾದುದು ಭೂಮಿ ತಾಂ 

ಪ್ರಮುದದಿಂ ಬೆಳೆ ಬಿತ್ತುವಂ ನೆಱೆ ತಾಳ್ದು ಶೋಭಿಸೆ ಮಂಗಳ 

ಕ್ರಮಮಹೋಕ್ತಿಗಳಲ್ಲಿಗಲ್ಲಿಗೆ ಸರ್ವಜೀವರೊಳೊಪ್ಪಿರಲ್ 

ಸಮತೆಯಿಂದುಱೆಯಪ್ಸರೋಗಣರಂದು ಕಾಣ್ಕೆಯನೆಯ್ದಿಸಲ್॥೧೬॥ 


ವಚನ: ಗರುಡ ಗಂಧರ್ವ ಕಿನ್ನರ ಕಿಂಪುರುಷ ಯಕ್ಷ ರಾಕ್ಷಸ ಸಿದ್ಧ ವಿದ್ಯಾಧರ ನರ ಸುರೋರಗಾದಿಗಳ ಮುತ್ತೈದೆಯರು 

ಶೋಭನಗಾನಂಗಳನೆಸಗೆ ಮತ್ತಂ ಋಷ್ಯಶೃಂಗ ಮರೀಚ್ಯಾದಿ ಸರ್ವಮುನೀಶ್ವರರ್ ಸಫಲಹಸ್ತಗಳಿಂದಾಶೀರ್ವಾದಮಂ 

ಮಾಡಲಾಗಳ್ ಬೃಹಸ್ಪತಿಯೆಯ್ದಿ ಜಾತಕರ್ಮಮಂ ರಚಿಯಿಸಿದ ಸಮನಂತರದೊಳ್, 


ನವನಳಿನ: 

ಸುರಗುರು ಜಾತ ಸುಕರ್ಮಮಂತದನಾಗಿಸಲ್ 

ಧರೆಯೊಳತೀತರುಣಾದಿ ಮಾನವನೆಂತು ತಾಂ 

ದೊರೆವಡೆದಿರ್ದಮನಿಂದಿತಂ ಸುತನಿನ್ನುವುಂ 

ಸರಿವಳೆಯಂತ್ಯದೊಳಂಬರಸ್ಥ ಶಶಿಯಂತು೧೭॥ 


ನಿಗಮವಿಚಕ್ಷಣಶೈವಹಸ್ತಗತಾಂಬುವಿಂ 

ಸೊಗಯಿಸೆ ಸೇಚನಮಾತ್ಮಜಂಗಭಿಶೋಭಿಸಲ್ 

ಜಗದೊಳೆಯ್ದೆ ಸುವೇಗವತ್ಯಧಿಕಂ ಕರಂ 

ಸುಗುಣನ ಸುಂದರಪಾಂಡ್ಯರಾಜನನುಜ್ಞೆಯಿಂ॥೧೮॥ 


ಸುತನ ಮಹೋತ್ಸವಕಂದು ಬಂದರನೀಶ್ವರಂ 

ವಿತತ ಧನಾದಿಗಳಿಂದೆ ತುಷ್ಟಿಯನೆಯ್ದಿಸಲ್ 

ಕ್ಷಿತಿಯೊಳವರು ನುತಿಸುತ್ತಮಿಂತಿರೆ ಭೂವರಂ 

ಸತತ ಸಮಸ್ತ ನಿಯೋಗವೃಂದದೆನೊಪ್ಪುತಂ॥೧೯॥ 


ಇರುತಿರುತಿರ್ದು ಸುತಂಗೆ ಪನ್ನೆರಡಾಗೆ ಮಾ 

ಸರಚನೆಯಂ ನೃಪರಿಂ ಶಿವಧ್ವಿಜರಿಂ ಸಹ 

ಪ್ರರುಚಿಪುರೋಹಿತ ಮಂತ್ರಿ ಮುಖ್ಯರಿನಾಗಳೇ

ಪರಿಣತನಾಗಿ ನಿಜಾಭಿಧಿನಮನೀಶ್ವರಂ ॥೨೦॥ 


ಉತ್ಸಾಹ: 

ಉಗ್ರನೆಂದು ತನ್ನ ಸೂನುಗಿತ್ತೊಡಂದು ಭೂಜನರ್ 

ಸುಗ್ರಸಂಗಳಂ ನೆಗಳ್ಚೆ ಮಾನಿತೋರುದಾನದಿಂ 

ಅಗ್ರಗಣ್ಯ ಸುಂದರೇಶ್ವರನಂದು ಬಾಲಕನೋತ್ಸವಂ 

ವ್ಯಗ್ರಮಾಗೆ ಮಾಡಿದಂ ಮಹಾಮಹೇಶ್ವರಾಜ್ಞೆಯಿಂ೨೧॥ 


ವಚನ: ಇಂತತೀವ ಶೋಭಾಸಮನ್ವಿತನಾದುಗ್ರನಾಮಕುಮಾರಂಗೆ ಜನನಿ ತಟಾತಕಾದೇವಿ ಲಕುಮಿ ಸರಸತಿಯರ್ ಮೊದಲಾದ ಸದಲಂಕಾರದ ಸುರಸತಿಯರೊಡನೆ ಕೂಡಿ ಬಾಲದೊಡಿಗೆಗಳಂ ತುಡಿಸಿ ಮೃದುತಳ್ಪದ ಮಣಿದೊಟ್ಟಿಲೊಳ್ ಮಗುವನಿಟ್ಟು ಕುಸುರಿಗೆಲಸದ ಗರ್ಗರದ ಬಿಱುಡೆಗಳ ಪೊಂಜರಪಣಿಯಂ ಪಿಡಿದು ಜೋಗುಳಮಂ ಪಾಡುತಿರ್ದಳೆಂತೆನೆ, 


ಪ್ರೋದೂದಾಮ: 

ಜೋಜೋ ಚಂದ್ರಾರ್ಧಕತನುಭವ ಜೋಜೋ ಜಗತ್ಪಾಲ ಜೋಜೋ 

ಜೋಜೋ ರಾಜೀವಾಕ್ಷತಪದ ಜೋಜೋ ಜರಾದೂರ ಜೋಜೋ 

ಜೋಜೋ ದಿವ್ಯಜ್ಞಾನಜಲನಿಧಿ ಜೋಜೋ ಸದಾನಂದ ಜೋಜೋ 

ಜೋಜೋ ಬಾಲಾರ್ಕಾಂಶುಯುತತನು ಜೋಜೋಮಹಾಲೀಲ ಜೋಜೋ॥೨೨॥ 


ಜೋಜೋ ಮಾಯಾಮೋಹವಿರಹಿತ ಜೋಜೋ ನಿರಾತಂಕ ಜೋಜೋ

ಜೋಜೋ ಗಾನೃಲೋಲ ವಿಲಸಿತ ಜೋಜೋ ದಯಾಕಾರ ಜೋಜೋ 

ಜೋಜೋ ಭಕ್ತಾಧಾರ ಶಿಖಿರಥ ಜೋಜೋ ಪ್ರಭಾರಾಶಿ ಜೋಜೋ 

ಜೋಜೋ ರಾಜೇಂದ್ರಾಧಿಪತಿ ವರ ಜೋಜೋ ಶುಭಾಕಾರ ಜೋಜೋ॥೨೩॥ 


ಕಂದ: 

ಆ ಸಮಯದೆ ದೇವತೆಗಳ 

ಭಾಸುರ ಪೆತ್ತಯ್ಯನಾದ ಸುಂದರರಾಜಂ 

ಸಾಸದಿನೊಪ್ಪಿರೆ ಕಮಲಭ 

ವಾಸುರರಿಪು ಸುರಪಗುರುಮುಖಾಮರರಾಗಳ್॥೨೭॥ 


ನಡೆತಂದು ಸುಂದರೇಂದ್ರಂ 

ಗಡಿಗಡಿಗೆಱಗುತ್ತೆ ನುತಿಸಿ ಕೈಮುಗಿದೆಂದರ್ 

ಗಡಣದೆ ದೇವರದೇವನೆ 

ಮೃಡ ನಿನ್ನಯ ಸುತನ ಸುಂದರತೆಗೆಣೆಯುಂಟೇ॥೨೮॥ 


ಏನೆಂಬೆವಮಳ ರೂಪಮ 

ದೇನೆಂಬೆವನೇಕತೇಜಮಂ ಲಕ್ಷಣಮಂ 

ತಾನೆ ಗುಹನೊಗೆದನಲೂಲದೆ 

ಮೀನಾಕ್ಷಿಯ ಮೂರ್ತಿ ವರತಟಾತಕೆಗೊಲವಿಂ॥೨೯॥ 


ಸುಂದರಶೆಶುವಾದ ನಿಮಿ 

ತ್ತಿಂದುಕಲಾರೂಪನೃದ ತನುಜಂಗೀಗಳ್ 

ಸುಂದರತೆ ಸಹಜಮಾಯ್ತೆಂ 

ದಂದು ಸುರರ್ ಪೊಗಳೆ ಸುಂದರೇಶೂವರನೆರ್ದಂ॥೩೦॥


ಚಂಪಕಮಾಲೆ: 

ವಿಳಸಿತ ಮಂಗಳಗರಹಚಯಂ ಸಮಯಂಗಳನೆಯ್ದೆ ಕಾಯ್ದುಕೊಂ 

ಡಿಳೆಯೊಳೆ ನಿಂದಿರಲ್ ಸಮೆದ ನಾಲ್ಕನೆಯೂರ್ಜಿತಮಾದ ತಿಂಗಳೊಳ್ 

ಗಳಿಲನೆ ಸುಂದರೇಶನಣುಗಂಗೆ ಮಹೋದಯಸಂಚಿತಂಗೆ ನಿ 

ರ್ಮಳಮತಿಗಂದು ಮಾಡಿಸಿದ ಶೋಭನಮಂ ಪೊಗಳಲ್ಕದಾವನೈ॥೩೧॥ 


ಶಾರೂದೂಲವಿಕ್ರೀಡಿತ: 

ಅನ್ನ ಪ್ರಾಶನಂ ನಿಮಿರ್ಚಿದನವಂ ಷಣ್ಮಾಸದೊಳ್ ಮತ್ತೆಯುಂ 

ಸನ್ನದ್ಧಾಬ್ದದೊಳೆಯ್ದಿಸಲ್ ಮಗುಗೆ ಚೂಡಾಕರ್ಮಮಂ ಪ್ರೀತಿಯಿಂ 

ಮುನ್ನಂ ಪಂಚಮಮಾಗೆ ವತ್ಸರಮದಕ್ಕಂ ಧಾರಣಂಗೆಯ್ಸಿದಂ 

ಚೆನ್ನಂ ಸುಂದರನಾಯಕಂ ನಿಜಸುತಂಗಾನಂದದುಗ್ಧಾಬ್ಧಿಗಂ ॥೩೨॥ 


ವಚನ: ವಿನಯಾದಿ ಗುಣಂಗಳಿಂ ಪಿತೃಭಕ್ತಿಯಿಂ ಮಂತ್ರಯತ ಧನುರ್ವೇದವಿದ್ಯೆಯಿಂ ಪಾಶುಪತಾಸ್ತ್ರಸಿದ್ಧಿಯಿಂ 

ವಿರಾಜಿಸುತ್ತೆಂಟುವರಿಸದೊಳ್ ಸಕಲ ಕಲಾವಿಚಕ್ಷಣತ್ವದಿಂ ತಂದೆಯಂತೆ ಸರ್ವಜ್ಞನಾಗಿರ್ದನಾ ಶಿವಕುಮಾರನಿತ್ತಲೂ,


ದ್ರಿತೀಯಕಾಂಡ, 

ದ್ವಿತೀಯಾಶ್ವಾಸಂ,

ಮೇಘ ಸಾಗರಪಾನಲೀಲೆ,


ಕಂದ: 

ಶ್ರೀ ಗೌರೀಕುಚಕುಂಕುಮ

ರಾಗಾರುಣವಕ್ಷನಭವನನುಪಮವಿಭವಂ 

ಭೋಗೀಂದ್ರಕಟಕನತಿಶಯ 

ಭೋಗಮನೀಗಖಿಳಲೋಕಕಂ ಶಿವಲಿಂಗಂ॥೧॥ 


ವಚನ: ಮತ್ತಂ ಸುಂದರೇಶ್ವರಂ ಮೇಘಂಗಳಿಂ ಸಾಗರಪಾನಮಂ ಮಾಡಿಸಿದ ಲೀಲೆಯನಗಸ್ತ್ಯಂ ಮುನಿಗಳ್ಗೆ ಪೇಳ್ದನೆಂತೆನೆ, 


ವಸಂತ ತಿಲಕ: 

ಶ್ರೀ ಸುಂದರೇಶ್ವರಪದಾಂಬುಜ ಮತ್ತಭೃಂಗಂ 

ಸಾಸಿ ಪ್ರಸಿದೂಧಗುಣಭಾಗಭಿಷೇಕಪಾಂಡ್ಯಂ 

ಕೈಸಾರ್ದ ಭಕ್ತಿರತಿಯಿಂ ಶಿವಲಿಂಗಪೂಜಾ 

ವಾಸಂ ಸಮಂತೆನಿಸಿ ರಾಜಿಸುತಿರ್ದನಾಗಳ್॥೨॥ 


ಮಣಿರಂಗ: 

ಪಂಚಗವ್ಯ ಸುಪಂಚಸುಧಾದಿ 

ಪ್ರಾಂಚಿತಾರ್ಚನ ಮುಖ್ಯವಿಧಾನಂ 

ಪಂಚವಕ್ತ್ರ ಸದಾಶಿವಲಿಂಗ 

ಕ್ಕಂ ಚಮತ್ಕೃತಿಯಾದುದದಾಗಳ್॥೩॥ 


ವಚನ: ಗಂಧ ಪುಷ್ಪ ರತ್ನೋದಕಂಗಳಿಂ ನಾನಾವಿಧಫಲರಸಾನ್ನಂಗಳಿಂ ಬಿಳಿಯಚಬ್ಬಿನ ಪಾಲ್ಗಳಿಂ ಶೋಧನಂಗೆಯ್ದಗ್ಘವಣಿಗಳಿಂ ಸ್ನಾನವಂ ಮಾಡಿಸಿ ಕುಳಿರ್ ನೀರ್ ಕರ್ಪುರಂಗೂಡಿದ ಸಿರಿಕಂಡದ ಕೆಸಱಿಂ ಸುಂದರೇಶ್ವರ-

ನನಾರಾಧಿಸಿ ಮೇಲೋಗರುಪ್ಪುಗಾಯ್ಗಳಿಂ ಕೂಡಿದೈದುತೆಱದ ಕಜ್ಜಾಯಂಗಳಿಂ ಬಕ್ಕೆ ಬಾಳೆ ಮೊದಲಾದ ಪಣ್ಗಳಿಂ ಸಕ್ಕರೆ 

ತುಪ್ಪ ಪಾಲ್ಮೊಸರ್ಕಳಿಂ ತುಷ್ಟಿವಡಿಸಿ ಬಳಿಕುಳಿದ ಮಧುರತರ ಪದಾರ್ಥಂಗಳಿಂದಂ ಸಂತೃಪ್ತಿಗೆಯ್ಸಿ ಶೋಧಿಸಿದ ಪರಿಮಳದ ಪಾನಕಂಗಳಿಂ ಬೇಱೆ ಬೇಱೆ ರುಚಿದೋಱಿಸಿಮತ್ತಂ ಹಸ್ತೋದಕಮನಿತ್ತು ಕರ್ಪುರವೀಳೆಯಮಂ ಸಮರ್ಪಣಂಗೆಯ್ದು ಕಡೆಯೊಳ್ ನೀರಾಜನಮಂ ಬೆಳಗಿ ಪುಷ್ಪಾಂಜಲಿಗೆಯ್ದು ಪೊಡಮಟ್ಟೆಳ್ದು ಕೈಮುಗಿದು ನುತಿಗೆಯ್ದು ಭಕ್ತಿಭರದಿಂದಿರ್ದಭಿಷೇಕಪಾಂಡ್ಯಚಕ್ರೇಶ್ವರನೊಂದುದಿವಸದಲ್ಲಿ,


ಚಂಪಕಮಾಲೆ: 

ಅತಿಸಿತಮಾದ ಚಾರುಘನಸಾರವಿಲೇಪಿತ ಶಂಭುಮೂರ್ತಿಯಂ 

ಕ್ಷಿತಿವರನೀಕ್ಷಿಸುತ್ತೆ ಘನಸಾರಸುಸುಂದರನೆಂಬ ನಾಮದಿಂ 

ರತಿಪತಿವೈರಿಯಂ ಕರೆದು ಪೂಜಿಸುತಿರ್ಪಿನಮೆಯ್ದೆ ಚೈತ್ರವಿ 

ಸ್ತರತರಪೌರ್ಣಮಾಸಿ ಬರೆಯಾಗಳುಮಿಷ್ಟ ವಿಶೇಷ ಪೂಜೆಯಿಂ ॥೪॥


ಕಲ್ಯಾಣ: 

ಶ್ರೀಕರ್ಪೂರಕಸುಂದರೇಶನಂ 

ಶೋಕಾರಾತಿ ಮಹೀಧವಂ  ಘನಂ 

ಏಕಾಂಗಂ ಸಲೆ ಭಾವಿಸುತ್ತಿರಲ್ 

ನಾಕಾಧೀಶ್ವರನೆಯ್ದುತಾಗಳೇ॥೫॥ 


ತಾನುಂ ಲಿಂಗಮನರ್ಚಿಸಲ್ ಸುರೇ 

ಶಾನಂ ಕಾಲಮನಂದುಕಾಣದೇ 

ಸಾನಂದಂ ಮಿಗೆ ಪಾಂಡ್ಯಸೇವೆಯಂ 

ಮಾನಾಂಕಂ ಹರಿ ನೋಡಿ ಚೋದ್ಯದಿಂ॥೬॥ 


ಇರ್ದುಂ ಭೂಪನ ಲಿಂಗಪೂಜೆಯಂ 

ಸಾರ್ದಂತರ್ಚನೆ ಪೂರ್ಣಮಾಗೆ ತಾಂ 

ಬರ್ದಿಂ ಸ್ವಾಮಿಯನೆಯ್ದೆ ಸೇವೆಸಲ್ 

ಪಾರ್ದುಂ ತೀರ್ಥದೊಳಂ ಮುಳುಂಗುತಂ॥೭॥ 


ಚಂಪಕಮಾಲೆ: 

ಭಸಿತ ಶಿವಾಕ್ಷಮಾಲೆಗಳನಾಂತು ಷಡಕ್ಷರ ದಿವ್ಯಮಂತ್ರಮಂ 

ರಸನೆಯೊಳೊಲ್ದು ತಾಂ ಜಪಿಸುತಂ ಕನಕಾಬ್ಜ ಮನೋಹರಾರ್ಚನ 

ಪ್ರಸರದಿನೀಶನಂ ಭಜಿಸಿ ನಾಕಮನಾಗಳೆ ಪೊಕ್ಕು ದೇವಪಂ 

ರಸಿಕ ಸುಧರ್ಮೆಯೊಳ್ ಮೆಱೆವ ಮಂಗಳನೂತ್ನ ಮೃಗೇಂದ್ರ ಪೀಠದೊಳ್॥೮॥ 


ಕಂದ: 

ಓಲಗಮನಿತ್ತು ಸುರಪತಿ 

ಲೀಲೆಯಿನಿರಲಾತನಂ ನಿರೀಕ್ಷಿಸಲೆಂದು ವಿ 

ಲೋಲಿತ ವರುಣಂ ಬಂದು ಸ 

ದಾಲಸಿತನ ಚರಣಕೆಱಗಿ ನುತಿಯಿಸಿ ಬಳಿಕಂ॥೯॥ 


ಸುರವರನನುಜ್ಞೆಯಿಂದಂ 

ವರುಣಂ ತತ್ಸನ್ನಿಧಾನದೊಳ್ ಕುಳ್ಳಿರುತಂ 

ಪರಿಭಾವಿಸಿ ಸುರಪತಿಮುಖ 

ಸರಸಿಜಮಂ ನೋಡುತೆಂದನಿದುಕಾರಣಮೇಂ॥೧೦॥ 


ನಿಮ್ಮಮೊಗಂ ಕುಡಿವೆವರಂ 

ದಿಮ್ಮಿತದಿಂ ತೋಱುತಿದೆಯಿದಾವ ಮಹಾಶ್ರಮ

ನುಮ್ಮಳಿಸದುಸಿರಿಮೆಂದೆನೆ 

ಗಮ್ಮನೆ ದೇವೇಂದ್ರನೆಂದನತಿಶಯದಿರವಂ॥೧೧॥ 


ಕೇಳೈ ವರುಣ ಧರಾತಳ 

ಪಾಳಿಯೊಳುರು ಪಾಂಡ್ಯಮಂಡಲದೊಳಂ ಸುಮಹಾ 

ಲೀಳಾಂಕಿತ ಹಾಲಾಸ್ಯ ಸ 

ದಾಳಸಿತಕ್ಷೇತ್ರಮಿರ್ಪುದೊಂದತಿಶುಭದಂ॥೧೨॥


ಅದಱೊಳ್ ಕಡಬದ ಬನದೊಳ್ 

ಮದನಾಂತಕ ಸುಂದರೇಶನನವರತಂ ತಾಂ 

ಮುದದಿಂ ಭಕ್ತರ ಮುಂಬಿನೊ 

ಳೊದವಿಂ ಪ್ರತ್ಯಕ್ಷನಾಗುತಿರ್ಪಂ ದಯೆಯಿಂ॥೧೩॥ 


ಮುನ್ನಂ ಕೇಳಾಂ ಕೃತಯುಗ 

ದುನ್ನತಕಾಲದೊಳೆ ನಾಕದತ್ತಣಿನೆಯ್ತಂ 

ದೆನ್ನ ಕುಲದೈವ ಸುಂದರ 

ನಂ ನಲವಿಂ ಪೂಜೆಗೆಯ್ದೆನನಘನೆ ನಿಜಮೈ॥೧೪॥ 


ಚಂಪಕಮಾಲೆ: 

ಕರಿತತಿಯೂರ್ಜದಪ್ರತಿಮಸಿಂಹಸಮೂಹಮದಾಂತ ಹರ್ಮ್ಯಮಂ 

ಪರತರ ಸುಂದರಂಗೆ ಶುಭಭಕ್ತಿಯಿನರ್ಪಿಸಿದೆಂ ಜಗತ್ತಿನೊಳ್ 

ಪರಿವಿಡಿಯಿಂದಮೀ ವಿಭುವನಾಂ ನೆಱೆನೋಡುತೆ ವೃತ್ರಹತ್ಯೆಯುಂ 

ಧರಣಿಯೊಳಾದಿಯಾಗಿ ಬಹುಪಾಪಮನೊಂದದೆ ಬಾಳ್ದೆನೀಗಳುಂ॥೧೫॥ 


ಶಾರ್ದೂಲವಿಕ್ರೀಡಿತ: 

ಪಾಂಡ್ಯೇಶಂಗೆ ಸಮಾನಮಾದ ಶಿವಭಕ್ತಂ ನಾಸ್ತಿ ಮೂಲೋಕದೊಳ್ 

ಖಂಡೇಂದ್ವಂಚಿತಸುಂದರಂಗೆ ಸದೃಶಂ ನಾಸ್ತ್ಯೇವ ತಲ್ಲಿಗಮಂ 

ಕೊಂಡಾಡುತ್ತುಱೆ ಪೂಜೆಗೆಯ್ದು ಬುವಿಯಿಂ ಬಂದೆಂ ಸಮಂತೀಗಳಾಂ 

ಚಂಡಾಂಹೋಹರ ಹೇಮಪದ್ಮಿನಿಯೊಳಂ ಸ್ನಾನಂಗಳಂ ಮಾಡುತಂ॥೧೬॥ 


ತರಳ: 

ಇರದೆ ಪುಣ್ಣವೆಯೊಳ್ ತದುದ್ಭವ ಹೇಮಪಂಕಜವೃಂದದಿಂ 

ಪರಮಸುಂದರಲಿಂಗಮಂ ಪರಿಪೂಜೆಗೆಯ್ವುತೆ ವಂದಿಸು 

ತ್ತುರುವರಂಗಳನಾಗಳಾಂ ಪಡೆಯುತ್ತಮಾತನ ಶಕ್ತಿವಾ 

ಶ್ಚರ್ಯವಿಲೋಚನೆಯಂ ಸಮರ್ಚಿಸಿ ಸರ್ವಸಿದ್ಧಿಯನಾಂತೆನಾಂ॥೧೭॥ 


ಶಾರ್ದೂಲವಿಕ್ರೀಡಿತ: 

ಮೀನಾಕ್ಷೀಸ್ಮರಣಪ್ರಭಾವದೆ ಮಹಾಸಿದ್ಧ್ಯುತ್ಕರಂಗಳ್ ಸದಾ 

ಜ್ಞಾನಾನಂದಸುಖಂಗಳಂ ಜನಿಯಿಕುಂ ಮತ್ತಂ ತದಾರ್ಯಾಗ್ರದೊಳ್ 

ಕೀನಾಶವ್ಯಥೆಯಂ ನಿವಾರಿಪ ಲಸದ್ಧೇಮೃಭ್ಜಿನೀತೀರ್ಥದೊಳ್ 

ಸ್ನಾನಂಗೆಯ್ದವರೆಲ್ಲರೆಯ್ದೆ ಗತದೋಷರ್ ನೋಡೆ ಭೂಭಾಗದೊಳ್॥೧೮॥ 


ವಚನ: ಬಳಿಕ್ಕಮಾಯುರಾರೋಗ್ಯೈಶ್ವರ್ಯಾದಿ ಸಂಪತ್ಸಮೃದ್ಧಿಗಳಪ್ಪವಾಹಾಲಾಸ್ಯ 

ಕ್ಷೇತ್ರಂ ಪ್ರವೇಶಮಾತ್ರದಿಂದಘನಾಶನಮಂ ಮಾಳ್ಪುದಾನುಂ ವೃತ್ರಹತ್ಯೆಯನತಿ 

ದೂರದೊಳ್ ನೀಗಿದೆಂ ತತ್ತೀರ್ಥಕ್ಷೇತ್ರ ಶಿವಭಕ್ತಿಮಹಿಮೆಗಳಂ ವಚಿಸಲಾ ವಾಚ 

ಸ್ಪತ್ಯಾದಿಗಳ್ಗಮಾದೊಡಮಶಕ್ಯಮೆಂದಿಂದ್ರಂ ಪೇಳಲದನಾಲಿಸುತ್ತೆ ವರುಣನಿಂತೆಂದಂ,


ಚಂಪಕಮಾಲೆ: 

ಎಡವಿ ನಿಧಾನಮಂ ಶಿವನ ಸತ್ಕೃಪೆಯಿಂದಮೆ ಕಂಡುಕೊಂಡ ಬಲ್ 

ಬಡವನ ಮಾಳ್ಕೆಯಿಂದೆ ಸಲೆ ಬಾಳ್ದೆನಲ್ಲದೆಯುಂ ಮದೋದಕದಿಂ 

ಗಡಣದೆ ಬರ್ಪವೇಳೆಯೊಳೆ ವತ್ಸ ಸಮನ್ವಿತಕಾಮಧೇನುವಂ 

ಪೊಡವಿಯೊಳಿರ್ಪ ಭವ್ಯಶಕುನಂಗಳನೀಕ್ಷಿಸಿ ತಿರ್ದುತೆಯ್ದಿದೆಂ॥೧೯॥ 


ಮಹಾಸ್ರಗ್ಧರೆ: 

ನಲವಿಂದಾಂ ಬಂದ ಸಮ್ಯಕ್ಫಲಮದಿರದೆ ಸಜ್ಜಾಯ್ತು ನಿಮ್ಮಂ ಮಹೇಂದ್ರ 

ಜ್ವಲಿತೋದ್ಯತ್ಪ್ರೀತಿಯಿಂ ನೋಡಿದುದದು ಬಹುಸಾರ್ಥಂ ದಲಾಯ್ತೀಗಳಾನುಂ 

ಜಲಕುಕ್ಷಿವ್ಯಾಧಿಯಿಂದಂ ನವೆದನದಱ ಸಂತಾಪಮಂ ದೇವವೈದ್ಯರ್ 

ಗೆಲವಿಂ ತಾವೆಯ್ದೆ ಯೋಗ್ಯರ್ ತೊಲಗಿಸಲಸಮರ್ಥತ್ವದಿಂ ಮತ್ತರಾದರ್॥೨೦॥


ಶಾರ್ದೂಲವಿಕ್ರೀಡಿತ: 

ಆರೋಗ್ಯಕ್ಕುಪಶಾಂತಿಯಂ ನಿರವಿಸಾದಿತ್ಯೇಂದ್ರ ನೀಂ ಯತ್ನದಿಂ 

ದಾರೋಗ್ಯಪ್ರದವೇಗದತ್ತಣಿನೆನಲ್ ನೀರಾಕಾರಧೀಶ್ವರಂ 

ಶ್ರೀರಾಜತ್ಸುರನಾಥನಾಲಿಸುತದಂ ತಾನೆಂದನೀ ಲೋಕದೊಳ್ 

ಜಾರರ್ ಪಾಪಿಗಳಾದೊಡಂ ವಿಗತದೋಷರ್ ಸುಂದರೇಶಾರ್ಚೆಯಿಂ॥೨೧॥ 


ಮಲ್ಲಿಕಾಮಾಲೆ: 

ಕಾಲಮೃತ್ಯಪಮೃತ್ಯುನೃಶನಮಪ್ಪುದೀಗಳೆ ಸುಂದರಂ 

ಲೀಲೆಯಿಂದಮೆ ಭುಕ್ತಿಮುಕ್ತಿಗಳಂ ದಯಾನಿಧಿ ಕೊಟ್ಟಪಂ 

ಮೇಲೆನಿಪ್ಪುರುಭಕ್ತಿಯಿಂ ಗುರುಸುಂದರೇಶನನರ್ಚಿಸೆಂ 

ದಾ ಲಸತ್ಸುರಪಂ ಪ್ರಚೇತನನಂದು ಬೀಳ್ಕೊಡಲಳ್ತಿಯಿಂ॥೨೨॥ 


ಉತ್ಪಲಮಾಲೆ:

 ಬಂದವನಾ ಜಲೋದರನಿವಾರಣಕಾರ್ಯಮದಂತರಂಗದೊಳ್ 

ಸಂದಿರೆ ಪಟ್ಟಣಂಬೊಗುತೆ ಭಾಗ್ಯಮದೋದ್ಧತಿಯಿಂದೆ ಪಾಂಡ್ಯನಾ 

ಸುಂದರಲಿಂಗನದ್ಭುತಚರಿತ್ರಮುಮಂ ಸಲೆಕೇಳ್ದು ಚಿತ್ತದೊಳ್ 

ಮಂದತೆಯಿಂದಸೂಯೆಗೊಳುತಂ ನೆನೆದಂ ಬಹು ಕಾಕುಬುದ್ಧಿಯಂ॥೨೩॥ 


ಚಂಪಕಮಾಲೆ: 

ಮಧುರೆಯಧೀಶ್ವರಂ ಗಡ ಮಹಾಶಿವಭಕ್ತಿಧೈರಂಧರಂ ಗಡ 

ಪೂರಥಿ ಗಡ ಸುಂದರಂ ಗಡ ವಿಚಿತ್ರಮಹತ್ತ್ವವಿರಾಜಿತಂ ಗಡಾ 

ವಿದಿತದೆ ನೋಳ್ಪೆನಾನವರ ವೈಭವಮಂ ಜಗದೊಳ್ ನಿತಾಂತಮೆಂ 

ದುದಧಿಯನಾಗಳೆಯ್ದಿಸಲದಾಕ್ಷಣದೊಳ್ ಪುರಮಂ ಮುಳುಂಗಿಸಲ್॥೨೪॥ 


ತರಳ: 

ತೆರೆಗಳಿಂ ಪೃಥುಬುದ್ಬುದಂಗಳಿನುಚ್ಚಳಜ್ಝಷ ವೃಂದದಿಂ 

ದುರುಗಸಂತತಿಯಿಂ ಪ್ರಭಾಸ್ಫುಟರತ್ನ ಸಂಕುಳದಿಂದೆ ತಾಂ 

ಕರಿ ತುರಂಗಸಮೂಹದಿಂ ನರರಿಂ ಮುಗಿಲ್ಗಳಿನಾವಗಂ 

ಚರಿಪ ಬಲ್ವಡಗುರ್ಬಿನಿಂದಮೆ ಭೋರೆನುತ್ತೆ ಬರುತ್ತಿರಲ್॥೨೫॥


ವಚನ : ಪುಣ್ಯಾಭಿವೃದ್ಧಿಗಳಾಶ್ರಯಿಸಿರ್ದ ನರೋರಗದೇವದಾನವಾದಿಗಳಾ ಹಾಲಾಸ್ಯ ಕ್ಷೇತ್ರದ ವೇದಘೋಷಿತಮಹಿಮೆಗಳಂ ತಿಳಿದು ಸರ್ವರುಂ ನೋಡಿ ಭಯಕಂಪಿತರಾಗಿ ನಿಂದು, 


ಮತ್ತೇಭವಿಕ್ರೀಡಿತ: 

ದುರಿತಧ್ವಂಸಿಯನಿಂದುಭೂಷಣನನಂಬಾಕಾಂತನ ಶಂಭುವಂ 

ಪರಲಿಂಗಾಕೃತಿಯಂ ಮಹೇಶ್ವರನನಂದಾನಂದಸದ್ಭಕ್ತಿಯಿಂ 

ಶರಣಂಬೊಕ್ಕು ಮದೀಶ ಸರ್ವಜನರಂ ಸಂಹಾರಮಂ ಮಾಳ್ಪ ಸಾ 

ಗರಮಂ ಮಳ್ಗಿಸಿ ಪಾಲಿಸೆಮ್ಮನೆನುತುಂ ಸಂಸ್ತೋತ್ರಮಂ ಮಾಡಿರಲ್॥೨೬॥ 


ಕಂದ: ಅನಿತಱೊಳೆ ಪಾಂಡ್ಯಭೂವರ 

ವನಧೆಯ ಬಹುಘೋರಘೋಷಮಂ ಕೇಳುತೆ ತಾಂ 

ಮನಸಿಜರಿಪು ಸುಂದರಪದ 

ವನಜಮನತಿವೇಗದಿಂದೆ ಶರಣಂಪೊಕ್ಕಂ॥೨೭॥ 


ಗರಭಕ್ಷಣ ಸುರರಕ್ಷಣ 

ಪುರಭಂಜನ ವರರಂಜನ ನೆರವಧೆಮಹಿಮಾ 

ಸ್ಫುರಿತಾಂಬಕ ಮುನಿಕುಂಭಕ 

ಭರಿತಾಂಬುಧೆಯತ್ತಣಿಂದೆ ಪೊರೆ ಪುರಮನಿದಂ॥೨೮॥ 


ಇಂತು ನುತಿಸುತ್ತೆ ದೊರೆಯಿರೆ 

ಕಂತಹರಂ ನೋಡುತವನನಾ ಪೌರರುಮಂ 

ಸಂತಸದಿನಭಯಮಂ ಕುಡು 

ತಂತೆ ಶಿರೋಭಾಗದತ್ತಣಿಂ ನಾಲ್ದೆಱನಂ॥೨೯॥ 


ಮಾಡುತೆ ಮುಗಿಲ್ಗಳಂ ಸಲೆ 

ಕೂಡೆ ಕಡಲ್ ನೀರನೆಲ್ಲಮಂ ಪೀರಿಸುತಂ 

ಜೋಡಿಸುತವರಿಷ್ಟಾರ್ಥಮ

ನಾಡಂಬರದಿಂದೆ ಸುಂದರಂ ಮೆಱೆದಿರ್ದಂ॥೩೦॥ 


ಪುಲ್ಲ ತೈದಿಯಾದೊಡಂ ಶಿವ 

ನುಲೂಲಸದಾಜ್ಞೆಯನೆ ಮೀಱಿಯಲ್ಲಾಡದು ಗಡ

ನೆಲೂಲದೆ ತೃಣಮೇಘಂಬಹು 

ಸಲೂಲಲೆತೃಂಬುಧಿಯನೀಂಟಿದೈದು ತಾನೇಗಳ್॥೩೧॥ 


ಎಂದೆಲ್ಲರ್ ಪೊಗಳುತ್ತಿರೆ

ಚಂದದೆ ಸದ್ಭಕ್ತಿಯಿಂದೆ ರಾಜಾದಿಗಳಾ

ನಂದಂಮಿಗೆ ಸುಂದರನತಿ 

ಸುಂದರನಾ ವೇಳೆಯೊಳ್ ವಿರಾಜಿಸುತಿರ್ದಂ॥೩೨॥ 


ಚಂಪಕಮಾಲೆ: 

ಸುರವರದುಂದುಭಿಧ್ವನಿ ಧಳಂಧಳಂಮೆಂದೆನೆ ಪುಷ್ಪವೃಷ್ಟಿಗಳ್ 

ಧರೆಯೊಳದೆತ್ತಲುಂಸುರಿಯೆ ಪಂಕಜನಾಭಮುಖಾಮರಾಳಿಗಳ್

ತರತರದಿಂದೆ ಸೇವಿಸೆ ಸಹಸ್ರಕರರ್ ಸಲೆಯೊಂದವೇಳೆ ತಾ 

ವಿರದುದಿಸಿರ್ದರೋಯೆನೆ ಮಹೇಶ್ವರನಾಗಳೆ ತೋರೂದಡಂಗಿದಂ॥೩೩॥ 


ಉತ್ಸಾಹ: 

ಸುಂದರೇಶನೊಲ್ದು ಮೇಘವೃಂದದಿಂ ಸಮುದ್ರಮಂ 

ಚಂದದಿಂದೆ ಪೀರಿಸುತ್ತೆ ರಕ್ಷೆಗೆಯ್ದು ಲೋಕಮಂ 

ಕುಂದದಿರ್ದ ಲೀಲೆಯಂ ಸಮಂತು ಕೇಳ್ದರಾಚಿದಾ 

ನಂದದಿಂದೆ ಜನ್ಮವಾರ್ಧಿಯಂ ಕಡಂಗಿದಾಂಟುವರ್॥೩೪॥ 


ವಚನ: ಇಂತೆಂದಗಸ್ತ್ಯಂ ಮೇಘ ಸಾಗರಪಾನಲೇಲೆಯಂ ಮುನಿಗಳ್ಗೆ ಪೇಳ್ದು ವಿರಾಜಿಸುತ್ತಿರ್ದನೆತ್ತಲ್,


ಮತ್ತೇಭವಿಕ್ರೀಡಿತ: 

ಭಜಿಪೆಂ ಭಾವಜಮರ್ದಿಯಂ ವಿಮಲ ಸಮ್ಯಜ್ಞಾನಸಾರರ್ದ್ಧಿಯಂ 

ವಿಜಯೋತ್ತುಂಗ ತರಂಗ ಗಾಂಗಜಲಭಾಸ್ವನ್ಮೌಲಿಯಂ ಶೂಲಿಯಂ 

ವೃಜಿನಾದ್ರಿಸ್ವರುವಂ ಸಮಸ್ತ ಗುರುವಂ ಜನ್ಮಾರ್ಣವೋತ್ತಾರಿಯಂ 

ಸುಜನಾನಂದ ನಿಧಾನನಂ ಸದಯನಂ ಶ್ರೀಸುಂದರಾಧೀಶನಂ॥೩೫॥ 


ಮಾಲಿನಿ: 

ಸರಸಿಜದಳನೇತ್ರೆ ಸಾನುಮದ್ರಾಜ ಗೋತ್ರೆ 

ಕರಿವರಮುಖಲಾಲ್ಯೆ ಕಾಂತಿಸಂದೋಹಮಾಲ್ಯೇ 

ಹರಿವಿಧಿನತಪಾದೆ ಹಾಲಕಂಠಾನುಮೋದೇ 

ಪರಮಶಿವೆ ಸಭೂಷೆ ಪಾಹಿ ಮಾಂ ವೇದಭಾಷೆ॥೩೬॥ 


ಗದ್ಯ: ಇದು ಸಕಲಸುರವರಾಸುರ ಪ್ರವರ ಪ್ರಕರ ಕನಕನವರತ್ನ ಖಚಿತ ಮೌಲಿಕೀಲಿತ ಪದಸರೋಹರುಚಿರಶಿವಲಿಂಗಪ್ರಸಾದಲಬ್ಧೋಭಯಕವಿತ್ವ ನಿಪುಣ ದ್ವಿತೀಯಮುರಿಗಾ ಗುರುಸಿದ್ಧ ಶಿವಯೋಗೀಂದ್ರ 

ವಿರಚಿತ ಸುಂದರೇಶ್ವರವಿಲಾಸಹಾಲಾಸ್ಯ ಪುರಾಣ ದ್ವಿತೀಯ ಕಾಂಡದೊಳ್ ಮೇಘ ಸಾಗರಪಾನಲೀಲಾಕಥನಂ ದ್ವಿತೀಯಾಸ್ವಾಸಂ ಸಂಪೂರ್ಣಂ. 


ನೆನಕೆ, 

ಸಂಪಾದಕ: ಜಿ. ಜಿ. ಮಂಜುನಾಥನ್,

ಕನ್ನಡ ಅಧ್ಯಯನ ಸಂಸ್ಥೆ, 

ಮೈಸೂರು ವಿಶ್ವವಿದ್ಯಾನಿಲಯ, 
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ