ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 28, 2023

ಕೃಷ್ಣಶರ್ಮ ವಿರಚಿತ ಸರಜಾ ಹನುಮೇಂದ್ರ ಯಶೋವಿಲಾಸಂ

ಕೃಷ್ಣಶರ್ಮ ವಿರಚಿತ ಸರಜಾ ಹನುಮೇಂದ್ರ ಯಶೋವಿಲಾಸಂ


ಇದು ಐತಿಹಾಸಿಕ ವಸ್ತುವಿಷಯವನ್ನೊಳಗೊಂಡ ಚಂಪೂ ಕಾವ್ಯ. ಮೂಲತಃ ಶಿವಮೊಗ್ಗ ಜಿಲ್ಲೆಯ ತರೀಕೆರೆಗೆ ಬಂದು ನೆಲಸಿದ ಪಾಳೆಯಗಾರರಿಗೆ ಈ ಕಾವ್ಯ ಸಂಬಂಧಿಸಿದೆ.ಈ ಕಾವ್ಯದ ಕರ್ತೃ ಕೃಷ್ಣಶರ್ಮ. ಈತನ ಕಾಲ  ಕ್ರಿ. ಶ. ೧೭೦೦ .ಈತನ ಪಿತಾಮಹ ಅಪ್ಪಾಜಿ. ತಂದೆ ತಿಮ್ಮಾರ್ಯ. ತಾಯಿ ತಿರುಮಲಾಂಬ. ಕವಿ ತರೀಕೆರೆ ಪಾಳೆಯಗಾರ ಸರಜಾ ಹನುಮಪ್ಪನಾಯಕನ ಆಸ್ಥಾನದಲ್ಲಿದ್ದು ತನ್ನ ಕಣ್ಣಳತೆಗೆ ಸಿಕ್ಕಿದ ಅನುಭವಗಳನ್ನು ಕಾವ್ಯದಲ್ಲಿ ದಾಖಲಿಸಿದ್ದಾನೆ.ಈ ಕಾವ್ಯದಲ್ಲಿ ಕಂದ ವೃತ್ತಗಳು ವಿರಳವಾಗಿಯೂ ಸಾಂಗತ್ಯ ಪ್ರಮುಖವಾಗಿಯೂಕಾಣಿಸಿಕೊಂಡಿದೆ. 


ಮೊದಲ ಆಶ್ವಾಸದಲ್ಲಿ ಸರಜಾ ಹನುಮಪ್ಪನಾಯಕನ ವಂಶಾವಳಿಯ ಮೂಲ, ಹಾಗೂ ಅವರ ಸಾಹಸಗಳನ್ನು ಸಂಕ್ಷಿಪ್ತವಾಗಿ ವರ್ಣಿಸಿದೆ. ಎರಡನೆ ಆಶ್ವಾಸದಲ್ಲೆ ಹನುಮಪ್ಪನಾಯಕ ಮತ್ತು ಅವನ ರಮಣಿ ಗಂಗಾಂಬಿಕೆಯ ಮೋಹಕವರ್ಣನೆಗಳಿವೆ. ಮೂರನೆ ಆಶ್ವಾಸದಲ್ಲಿ ರಾಜಪರಿವೃರವು ಬೇಟೆಗೆ ಹೋದ ನಿರೂಪಣೆಯಿದೆ. ಚತುರ್ಥಾಶ್ವಾಶದಲ್ಲಿ ಯಗಟಿ ಮಲ್ಲಿಕಾರ್ಜುನನ ಜಾತ್ರೆಗೆ ಹೋದ ವಿವರಗಳಿವೆ. ಪಂಚಮಾಶೂವಾಸವು ರಾಜ್ಯಭಾರವರ್ಣನೆಗೆ ಮೀಸಲಾಗಿದೆ. 


ಹೀಗೆ ಸರಜಾ ಹನುಮೇಂದ್ರ ಯಶೋವಿಲಾಸದಲ್ಲಿ ಆ ಕಾಲದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಗತಿಗಳು ಉಚಿತವರಿತು ದಾಖಲಾಗಿರುವುದರಿಂದ ಕನ್ನಡ ಐತಿಹಾಸಿಕ ಕಾವ್ಯಗಳ ಸಾಲಿನಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. 


ಪ್ರಥಮಾಶ್ವಾಸಂ 


ಪೀಠಿಕಾರಚನೆ: ಪದ್ಮವೃತ್ತ,


ಶ್ರೀರತಿ ಸರಸ್ವತಿ ಪಾದಪೂಜ್ಯೇ 

ಮೂರುಭುವನಂಗಳ ಕರ್ತೆ ಕೋಟೀ 

ಸೂರಿಯ ಸಮಾನ ಪ್ರಕಾಶೆ ಗೌರೀ 

ಆರುಮೊಗನವ್ವೆ ಶ್ರೀವಾಣಿ ವಂದೇ ॥೧॥ 


ಭಾಮಿನಿ ಷಟ್ಪದಿ: 

ಶ್ರೀರಮಣ ಸರಸಿಜದಳಾಕ್ಷ ಸಂ 

ಮೇರುಚಾಪನ ಗೆಣೆಯ ವರ ಬೃಂ 

ದಾರಕಾದಿ ಕಿರೀಟಸೇವಿತ ಪಾದಪದ್ಮಯುಗ 

ಭೂರಿ ದನುಜಾಂತಕ ದಶರಥಕು 

ಮಾರ ಮಾರಜನಕ ವಿಜೃಂಭಿಪ 

ಕ್ಷೀರವಾರಿಧಿಶಯನ ಭಕ್ತರ ಸಲಹು ಕೃಪೆಯಿಂದ॥೨॥ 


ಇಳೆಕುವರಿ ತಾವರೆನಿವಾಸಿನಿ 

ಜಲಜಮುಖಿ ಚತುರ್ಮುಖಜನನಿ ಕೋ 

ಮಳಶರೀರೆ ತ್ರಿಲೋಕವಂದಿತೆ ಕುಶಲವರ ಜನನಿ

ಇಳೆಯ ಭಕ್ತರ ಪೊರೆದು ಕೀರ್ತಿಯ 

ಗಳಿಸಿದಂದದಿಯೆನ್ನ ಮನದಲಿ 

ನೆಲಸಿ ಕಬ್ಬವನಂದವನುಕೊಡು ಸಲಹು ಜಾನಕಿಯೆ॥೩॥ 


ವಚನ॥ ಈ ಪ್ರಕಾರದೊಳ್ ಮುನ್ನೀರ್ಕುವರಿಯ ಪದಬಿಸಜಮಂ ನುತಿಸಿ,


ಮಾಲಿನಿ ವೃತ್ತ: 

ಕರಿಯೊಡಲನ ಮಿತ್ರಂ ಮೇರುಕೋದಂಡ ತ್ರ್ಯಕ್ಷಂ 

ಕರಿಗೊರಲನು ಶಂಭೂ ಲೋಕವಂದ್ಯಂ ಗಿರೀಶಂ 

ಕರಿವದನನ ತಾತಂ ಚಂದ್ರಚೂಡಂ ಮಹೇಶಂ 

ಕರಿಯಸುರನ ಸಿಂಗಂ ಚಕ್ರಿಭೂಷಣಂ ಸುಸಾಂಬಂ ॥೪॥ 


ವಚನ: ಈ ಪರಿಯೊಳ್ ಬಿಸುಗಣ್ಣನಂ ಜಾನಿಸಿ, 


ಕಂದ: 

ಮಧುರಪುರವಾಸಿ ವಿಟಜೇ 

ವಿಧುದಲೆಯನ ಮಡದಿ ಭಕುತಜನ ಪರಿಪಾಲೇ 

ವಿಧಿಯಿಳಬಿಳ ಬೋಳೆಯರ ನಿ 

ಜದನಿಗರೆರೆಯಳೆ ಭಾಗ್ಯವಧೂ ಶಫರಾಕ್ಷೀ॥೫॥ 


ವಚನ: ದೇವದೇವನ ಮಡದಿ ಮೀನಾಕ್ಷಿಯ ಪದಪದುಮವನಿಂತು ನುತಿಸಿ, 


ಕಂದ

ಪುಷ್ಕರಕರನೊರ್ಜಂತಂ 

ಪುಷ್ಚರಕೇಶನ ಕುಮಾರ ವಿದ್ಯಾಸಿಂಧೂ 

ನಿಷ್ಕಾಮಿ ಲಕುಮಿಕರ ಶೋ 

ಚಿಷ್ಕೇಶಾತ್ಮಜನನುಜಯೆಡರೊಡೆಯದಿರೆನ್ನ॥೬॥ 


 ವಚನ:ಈ ಪರಿಯೊಳ್ ಪೆರ್ಬೊಡೆಯನಂ ನುತಿಸಿ ಕಬ್ಬವನುಸಿರ್ವೆಂ 


ಕಂದ: 

ವಾಣಿ ವಿರಿಂಚಿಯ ರಾಣಿಯೆ 

ವೀಣೆಯ ಪಾಣಿಯೆ ಕಲ್ಯಾಣಿ ಮಿಗೆ ಶುಭದೇವಿ 

ಜಾಣೆ ಹರಿವೇಣಿ ಸರಸತಿ 

ಕ್ಷೋಣಿಯೊಳೆಶವನ್ನು ಪಡೆಯೆನಗೆ ಮತಿಯಿತ್ತೂ॥೭॥ 


ವಚನ: ಈ ದಿನಿಸಿನೊಳ್ ನುಡಿವೆಣ್ಣಂ ಜಾನಿಸಿದೆಂ, 

ಗದ್ಯ: ಇತಿ ಶ್ರೀಮಧುರಾಮೀನಾಕ್ಷೀಚರಣ ಕೋಕನದ ಮಕರಂದಾಸಕ್ತಭ್ರಮರ ಲಕ್ಷಣಕವಿ ಕೃಷ್ಣಶರ್ಮಂ ಪೇಳಿದ ಸರಜಾ ಹನುಮೇಂದ್ರ ಯಶೋವಿಳಾಸ ಕಬ್ಬದೊಳ್ ಪೀಠಿಕಾರಚನಂ. 


ದೇಶವರ್ಣನೆ: 

ಭಾಮಿನಿಷಟ್ಪದಿ; 

ಶ್ರೀಸತಿಯ ವಲ್ಲಭನ ನಿಜನಾ 

ಭೀಸರೋಜದಿ ಬೊಮ್ಮ ಪುಟ್ಟಿದ 

ನಾ ಸುರಜ್ಯೇಷ್ಠನಲಿ ಕಶ್ಯಪನಾ ಮುನೀಂದ್ರಂಗೆ 

ಸಾಸಿರಾಂಶುವು ಜನಿಸಿ ಲೋಕವ 

ವಾಸುದೇವನನುಜ್ಞೆಯಲಿ ವಾ 

ರಾಶಿ ಬೆಳಗಿದ ತರಣಿಯಲಿ ಕ್ಷತ್ರಿಯರು ಜನಿಸಿದರು॥೮॥ 


ವಚನ: ಅಂದಿನಿಂ ಸೂರ್ಯವಂಶದೊಳವತರಿಸಲು ಲೋಕದಿ ಶೂರರಾದರಿನ್ನುಮಾ ಬಿಸುಗದಿರನ ಪರಂಪರೆಯೊಳನಂತ ನೃಪವರ್ಗಮವತರಿಸಿದರವರಾ ಸುರಗಿರಿಯಂ ನಾಮಂಗಳಂ ವಿತರಣಗುಣಂಗಳಂ ಪೊಗಳಲ್ಕೆ ಎಲರುಣಿಯೆರೆಯಂಗಂ ಪೊಗಳಲಳವಲ್ಲಂ ಮತ್ತಂ ಧರೆಧೇರಗೆಣೆಯನಂತೆ ಪುಣ್ಯಜನ ಸೇವಿತರುಂ ಮೈಗಣ್ಣನಂತೆ ಸುಮನಸಯುಕ್ತರುಮಾಗಿರ್ಪರೀ ರಾಯರಂಗಳ್. 


ಭಾಮಿನೀಷಟ್ಪದಿ: 

ಪೂವಿನಾಪ್ತನ ವಂಶದೀ ವರ 

ಭೂವಿಪಾಲರಂ ಪಿಂತೆ ಜನಿಸಲು 

ಪೂವಸುಕುಲಮೆಂಬ ನಾಮವು ತೋರಿತೀ ಜಗದೊಳ್॥ 

ಆವ ನುತಿಸಲುಬಹುದು ಧರೆಯೊಳ 

ಗಾವ ಪಾಡಲುಬಹುದು ರಾಯರ 

ಠೀವಿ ವಿತರಣ ಶೌರ್ಯ ಭೋಗವ ಕಂದ ಕೇಳೆಂದ॥೯॥ 


ಅಂದು ಪೂವಲವಂಶದಲಿ ತಾ 

ನಿಂದಧರನ ಸಮಾನ ಪುಟ್ಟಿದ 

ಚಂದದಿಂ ಪೆರ್ಕುವರನನುಜನು ಕಿರಿಯ ಕುವರನನು॥ 

ಸುಂದರನು ಸಾಹಿತ್ಯ ಕೋವಿದ 

ಮಂದರೋಪಮ ಧೈರ್ಯ ಚಾಗಿ ಮು 

ಕುಂದಭಕ್ತನು ಸಂತೆಬೆನ್ಪುರವನಾಳಿದನು॥೧೦॥ 


ಆ ಕುಮಾರ ನರೇಂದರತನುಜನು 

ಪಾಕಶಾಸನ ಜೋಳಿ ಹನುಮನು 

ಲೋಕದಲಿ ವಿಖ್ಯಾತನಾಗಿಯೆಜನಿಸಿದನು ಪಿಂತೆ॥ 

ಆ ಕದನಕರ್ಕಶ ನೋಪಾಲಗೆ 

ವ್ಯಾಕರಣದಲೀ ಹನುಮಂಗೆ 

ನಾಕುಮಡಿ ಹೆಚ್ಚಿನಲಿ ಇಮ್ಮಡಿ ಹನುಮನವಪುಟ್ಟೆ॥೧೧॥ 


ಅವನ ತನುಜಂ ಸರಜ ಹನುಮಂ 

ಅವನ ಕುವರನು ಪುಲಿಯ ಮುರಿದವ 

ನವನ ತನುಜಂ ತ್ಯಾಗಿಭೋಜಂ ಹಂಸಕುಲದೀಪಂ॥ 

ಅವನ ಪುತ್ರನಂ ಲೋಕಮಿತ್ರನಂ 

ಊವನುದಾರನಂ ಬಾಹುಶೂರನು 

ಅವನು ಇಮ್ಮಡಿ ಹನುಮಭೂಪನು ತರುಣ ಕೇಳೆಂದ॥೧೨॥ 


ವಚನ: ಆ ಇಮ್ಮಡಿ ಹನುಮರಾಜೇಂದ್ರನ ಗರ್ಭಾಬ್ಧಿಚಂದ್ರಂ ಸರಜ ಹನುಮಂ ವಂಶಪುಟ ಭೇದನ ಪಾಲಕದಕ್ಷಂ ಸಂಗೀತಸಾಹಿತ್ಯವಾಂಛಿತಂ ಸಕಲಪೃಥ್ವೀಪಾಲಪೂಜ್ಯಂ ಶತ್ರುನೃಪವಕ್ಷನ್ನೇಜ್ಯಂ ವಸಂತರೂಪಂ ಗಂಭೀರಂ ಧಾರ್ಮಿಕಂ ಉಚಿತಜ್ಞಂ ನವಯುವತೀಕಾಮಂ ಅವನ ಸುಕುಮಾರಂ ಸೀತಾರಾಮಚಂದ್ರಂ. 


ಭಾಮಿನಿಷಟ್ಪದಿ: 

ಸರಜಹನುಮಂಗೆ ಪುತ್ರನಾಗಿಯೆ 

ಧರೆಯ ಬೆಳಗಿದ ಲೋಕ ಮೆಚ್ಚಿತಂ 

ಪರಿಪರಿಯೊಳೀ ದಾನಧರ್ಮಕೆ ರಾಜರದ ಕೇಳಿ॥ 

ಕರಣದಲಿ ನಾಣ್ಚುತ್ತೆ ಬಾಹ್ಯದಿ 

ಮೆರೆದು ಪೊಗಳಿದರಬ್ಧಿಘೋಷದಿ

ತರಣಿಕುಲಜಾತನನು ಸೀತಾರಾಮನರಪತಿಯಂ॥೧೩॥ 


ವಚನ: ಆ ಭೂಪಂ ದೆಸೆದೆಸೆಯ ವಸುಧೆಯೊಡೆಯರಂ ಪೊಸಮರೆಯ ಸರಳ್ಗಳಿಂ ಜಸದೆ ಗೋನಾಳಿಯಂ ತರಿದು ಆ ನೊರೆ ರುಧಿರವಡಗಂ ಕರುಳ್ಗಳಿಂ ಪೊಡವಿಯನೆಲ್ಲಮಂ ತುಂಬಿಸಿ ಉನ್ನತ ಕೀರ್ತಿಯನೆಡೆವಿಡದೆ ಪಡೆಯಲೆಣ್ದೆಸೆಯಾಣ್ಮರ್ ನೋಡಿ ವಿಸ್ಮಯಂಬಟ್ಟು ಸೀತಾರಾಮಂಗೆ ಸಮನೆಂದು ಮನದೊಳ್ ಯೋಚಿಸಿ ಸೀತಾರಾಮನೆಂಬಭಿಧಾನಮನಿತ್ತು ಭೂಲೋಕಮನಾಳ್ವ ರಾಜಕಂಠೀರವನಂ ಮೆಚ್ಚಿಸಿಯೊಪ್ಪಿಸೆ ಆ ರಾಜಕಂಠೀರವಂ ಪಾತುಷಾ ಎಂಬ ನಿಜನಾಮವನಿತ್ತು ಮತ್ತಾ ನೃಪಶ್ರೇಷ್ಠಂಗಂ ಮುಕುಂದನಂತನೇಕ ಆದಮಣಲ್ ಪುರಂಧ್ರಿಯರಾದರವರೊಳ್ ರುಕ್ಮಿಣಿಯಂತೆ ಲಕ್ಕಮಾಂಬೆ ಕುಲಯುವತಿ ಪಟ್ಟಮಹಿಷಿಯಾದಳಾ ಪುರಂಧ್ರಿ ಪೂವಲಾನ್ವಯರಿರ್ವರೊಳ್ ಕರುಣಾಕರ ಕಾರಣಪುರುಷಂ ಕಲಿಯುಗ ಮದನಂ ಶ್ರೀಹನುಮಂ ಶುಭಮುಹೂರ್ತದೊಳವತರಿಸಿದಂ. 


ಭಾಮಿನಿಷಟ್ಪದಿ: 

ಪುಟ್ಟಿದಾಗಳೆ ಪಾಪರಾಶಿಯು 

ಬಿಟ್ಟುಪೋದುದು ತುಷ್ಟಿಪುಷ್ಟಿಯು 

ಮುಟ್ಟೆವಂದುದು ಸಕಲಜನಮಂ ಕ್ಷಣದ ಮಾತ್ರದಲಿ॥ 

ಸಿಟ್ಟು ಕವತೆಯು ಕೊಲೆಯು ಚಾಡಿಯು 

ತಟ್ಟು ವೈರವು ನುಸುಳು ಪುಸಿಗಳು 

ದಿಟ್ಟ ಹನುಮನು ಆಳ್ವ ದೇಶದಿ ನುಗುಚಲಮ್ಮದದು॥೧೪॥ 


ಬಾಲತನದಲಿ ಕೈದುವಿದ್ಯಾ 

ಜಾಲವೆಲ್ಲವ ಕಲಿತಂ ಹಯ ಶುಂ

ಡಾಲದೇರಾಟವನು ಸಾಧಿಸಿ ಶತ್ರುರಾಯರನು ॥ 

ಕಾಲಿಗೆರಗಿಸಿಕೊಂಡಂ ಕದನದಿ 

ಫಾಲಲೋಚನನಂತೆ ಶಕುತಿಯ 

ಮೇಲುವಗೆಯಲಿ ಪಡೆದನೀತನು ಸೂರ್ಯಕುಲದೀಪಂ॥೧೫॥ 


ಕಂದ: 

ಹರೆವಿಷ್ಟರದೊಳ್ ಮಂಡಿಸಿ 

ನರಾಗ್ರಜನ ಪರಿಯಲಿ ಬುವಿಯಂ ಪಾಲಿಸಿದಂ ॥ 

ನರಪತಿ ಹನುಮನ ಗುಣಗಳ 

ಹರಭೂಷಣ ಪೊಗಳುವರಳವಲ್ಲಿದು ನೈಜಂ॥


ವಚನ: ದೇಶವರ್ಣನಂ 

ಆ ಬುವಿಮಂಡಲದೊಳ್ ಶುಕ ಶುಕ ಶುಕಂಗಳಿಂ ಹರಿ ಹರಿ ಹರಿಗಳಿಂ ನೀಲಕಂಠ ನೀಲಕಂಠ ನೀಲಕಂಠಂಗಳುಮಂ ಸಾರಂಗ ಸಾರಂಗ ಸಾರಂಗಂಗಳುಮಂ ಕಮಲ ಕಮಲ ಕಮಲಂಗಳುಮಂ ಸೂಕರಕರಿಗಳಿಂ ಕಂಗೊಳಿಸುತ್ತಮಿರ್ದುದು ಮತ್ತಂ ಪಿಂಜರಿವೆಟ್ಟವೊಲ್ ದುರ್ಗಾಸ್ಪದಂ ಎಲರ್ವಟ್ಟೆಯಂತೆಯುಮೆಣ್ಮೈಯ್ಯನಂತೆಯುಂ ವಿಶಾಖಸಂಯುಕ್ತಮುಂ ಮಾಗೊಂದಪತ್ರದಂತೆ ನೀಲಕಂಠಶೋಭಿಮುಂ ಬೋಳೆಯರ ಪುಲಿಯಂತೆ ಸಹಸ್ರಾಕ್ಷವಿರಾಜಿತಮುಮಾಗಿ ಮೆರೆದಿರ್ದುದಾ ನೋಳ್ಪರ ಕಣ್ಗೆ ಕೌತುಕಮಂ ಬೀರುತ್ತಿರ್ದುದು. 


ವಾರ್ಧಕಷಟ್ಪದಿ, 

ಎಲ್ಲಿ ನೋಡಿದೊಡಲ್ಲಿ ಗೋಪರಿಂ ಭೂಪರಿಂ 

ದೆಲ್ಲಿ ನೋಡಿದೊಡಲ್ಲಿ ಶೂರರಿಂ ಧೀರರಿಂ 

ದೆಲ್ಲಿ ನೋಡಿದೊಡಲ್ಲಿ ಗೋವರಿಂ ದೇವರಿಂದಾಶ್ಚರ್ಯಮಂದಾಗಲು॥ 

ಎಲ್ಲಿ ನೋಡಿದೊಡಲ್ಲಿ ಪೊರೆವರಿಂ ಮೆರೆವರಿಂ 

ದೆಲ್ಲಿ ನೋಡಿದೊಡಲ್ಲಿ ಹರದರಿಂ ವರದರಿಂ 

ದೆಲ್ಲಿ ನೋಡಿದೊಡಲ್ಲಿ ಜಾಣರಿಂ ತ್ರಾಣರಿಂದಾ ಪೊಡವಿ ಇರುತಿರ್ದುದು॥೧೭॥ 


ವಚನ: ಒಂದು ತಾಣದೊಳ್ ಶಾಳೀವನಂ ತೋರುತ್ತಮಿರ್ದುದು 


ಕಂದ: 

ಪಾಲ್ದುಂಬಿದ ಸಾಲ್ದೆನೆಯೊಳು 

ಜೋಲ್ದಿರುವುದ ನೋಡಿ ಗಿಳಿಯ ಬಳಗಮದೆರಗಲ್ ॥ 

ಕಾಲ್ದುದಿಯಲಿ ನಿಂದು ತರುಣಿ 

ಮೇಲ್ದೆಸೆಗಟ್ಟಿದಳು ಬಾಹುಯುಗಮನೆತ್ತೀ॥೧೮॥ 


ವಚನ: ಆ ಪಾಮರಿಯ ಮುಗುಳ್ಮೊಲೆಗಳಕ್ಷಿಗಂ ಕೌತುಕಮಾಗಿ ತೋರುತಿರೂದುದು. 


ಕಂದ: 

ತೋಯಜಕೋರಕದುದಿಯಲು 

ಪಾಯದಿ ಕುಳಿತಿರ್ಪ ಬವರವೋ ಎಂದೊರ್ವಂ 

ಸ್ತ್ರೀಯ ಮೊಲೆಗೊನೆಯ ನೋಡಲು 

ಕಾಯಜನಾ ಬಾಣ ನಾಂಟಿತವನಂಗದೊಳು॥೧೯॥ 


ಮತ್ತೇಭವಿಕ್ರೀಡಿತ: 

ಗಿರಿಯಿಂ ನಾಡುಗಳಿಂ ಲತಾವಳಿಗಳಿಂ ಪುಷ್ಪಾಳಿಯಿಂ ತುಂಬಿಸಾ 

ಲ್ದೊರೆಯಿಂ ಕಾಲುವೆಯಿಂ ಮರಂ ಕೆರೆ ನದ ಸ್ತಂಬೇರಮಂ ಮೇಲು ಸೂ 

ಕರಿಯಿಂ ತಾವರೆಬಾವಿಯಿಂ ಶುಕ ಪಿಕಂ ಕೇಕೀಸಮೂಹಂಗಳಿಂ 

ವರ ಶಾರ್ದೂಲಗಳಿಂದಮೊಪ್ಪಿತಂ ಸದಾ ಪೃಥ್ವೀಮಹಾರಾಯನಾ॥೨೦॥ 


ವಚನ: ಆ ಪೃಥ್ವಿಯೊಳೊಂದಂ ತಾಣದೊಳ್ ರನ್ನವೆಟ್ಟುಮನೇಡಿಸುತೆರ್ದುದೊಂದು ಗಿರಿವರಂ. 


ಭಾಮಿನಿಷಟ್ಪದಿ: 

ಏರುವರಿಗಮರಾದ್ರಿ ಮುತ್ತುವ 

ವೈರಿ ನೃಪವರ್ಗಗಳ ವಕ್ಷಕೆ 

ಭೀರುಶೂಲವು ನೋಳ್ಪ ಭಟರಿಗೆ ಸಕಲ ಕೈದುಗಳಿಂ ॥ 

ಧೀರ ಸುಭಟರ ಕಾಹು ಬಲಿದಿಹು

ದಾರಮಾಸೂನುವಿನ ಪೆಸರ್ಗಿರಿ

ತೋರುತಿರ್ದುದನೇಕ ಮೂಲಿಕೆಯಿಂದೆ ಕೇಳೆಂದ॥೨೧॥


ದ್ವಿತೀಯಾಶ್ವಾಸಂ, 


ರಮಣೀರಮಣ ಮೋಹಪ್ರಘಟಿಕೆ 

ಸಾಂಗತ್ಯ, 

ಹನುಮನರೇಂದ್ರನ ಮಹಿಷಿಯ ರೂಪನು 

ಜನಗಳು ಕೇಳಿ ಮೆಚ್ಚುವುದು॥ ಪಲ್ಲವಿ॥ 


ಆಲಿಸಾದಡೆ ಕರುಮಾಡದೊಳ್ ಹನುಮನ 

ಲೋಲಲೋಚನೆ ನೋಡಿಯಾಗ 

ಮೇಲಾದ ಮಲ್ಲರ ಮುಷ್ಟಿಯುದ್ಧಗಳನು 

ಶಾಲುಪಚ್ಚಡಗಳನಿತ್ತು॥೧॥ 


ವಚನ: ಆ ದೇವಿ ವಾತಾಯನದಿಂ ನೋಡಿ ಪ್ರತ್ಯೇಕವಾಗಿ ತನ್ನ ಕೋಶದಿಂ ಸುವಸ್ತುಗಳಂ ತರಿಸಿಯಾ ಮಲ್ಲರ್ಗಂ ಕೊಟ್ಟು ಜಸಮಂ ಪಡೆದಳಾ ಸಮಯದೊಳ್. 

ಸಾಂಗತ್ಯ: 

ತರಣಿಯು ಮೆಲ್ಲಮೆಲ್ಲನೆಪಡುಗಡಲೊಳು 

ಸರಿದನೆಂಬುದಕಂಡು ಬೇಗ 

ಸರಸಿಜ ಮುಚ್ಚಿತು ಮುಖವನು ತುಂಬಿಗಳ್ 

ಕರಣದೊಳ್ ಕಳವಳಮಾಗೆ ॥೨॥ 


ಪಡುವಲವನಿತೆಯು ಕುಂಕುಮರಸದಲ್ಲಿ 

ಬಿಡದೆ ಮಜ್ಜನವನು ಗೈದ 

ಬಿಡುನೀರೋ ಎಂಬಂತೆ ಪರ್ಬಿತು ಗಗನವ 

ಸಡಗರದಲಿ ಸಂಧ್ಯಾರಾಗ॥೩॥ 


ಅಂದಾಗ ಹನುಮನು ತನ್ನನು ಬೆದರಿಸೆ 

ಎಂದಾಗ ತರಣಿಯು ಬೇಗ 

ಬಂದು ಮುನ್ನೀರಲಿ ಮುಣುಗಿದನೀ ಹನುಮ

 ನಿಂದು ಬೆದರಿಪನೊ ಎಂದು॥೪॥ 


ತಮತಮಗೆ ತುಂಬಿತು ತಮಗಳು ಲೋಕವ 

ಭ್ರಮೆ ತೋರೆ ಜಕ್ಕವಕ್ಕಿಗಳ್ಗೆ 

ಸುಮಗೋಲನ ಸುಭಟರು ಕಾಳಗಕಾಗ 

ಸಮಯವ ನೋಡಿದರಾಗ॥೫॥ 


ಕಾರೊಡಲನೆಂಬರು ತನ್ನನು ಜನಗಳು 

ತೋರುವ ಪದ ಬಿಳುಪೆಂದು 

ತೋರುವರದರಿಂದ ಕಪ್ಪನು ಮಾಡಿದ 

ಮಾರಬೊಪ್ಪನು ಬಾಂದಳವ॥೬॥ 


ವಚನ: ಆ ತರುವಾಯದೊಳೀ ಗಂಗಾದೇವಿಯುಪ್ಪರಿಗೆಯಿಂದಂ ಸಖಿಗಳ ಕೈಲಾಗಿನೊಳ್ ಸೋಪಾನಪಥದಿಂ ಚರಣದೊಳ್ ಪೊಂಬಾಯವಟ್ಟಮಂ ಧರಿಸಿ ಮುಂದುಗಡೆಯೊಳ್ ತೋರ್ಪ ಚೇಟಿಯ ಕರಕಮಲದೊಳಿರ್ಪ ಪೊಂದೀವಟಿಗೆಯ ಬೆಳಗಿಂದಂ ಸುಗ್ಗಿಗೆಳೆಯನಧಿದೇವತೆಯಂತೆ ಮೆಲ್ಲಮೆಲ್ಲನೆ ಹಿಂದೆ ಮುಂದಿಕ್ಕೆಲದ ನಾರೀವೃಂದ ಮಧ್ಯದಿಂ ಸುಗ್ಗಿಗಮಿಪಂತೆಯ್ದಿ ಅತ್ಯಂತಃಪುರಮಂ ಮತ್ತೊಂದು ಪರಿಯೊಳ್ ಸಿಂಗರಂಬಡೆದು ರತ್ನಖಚಿತಮಾದ ನಿಲುವುಗನ್ನಡಿಯಂ ನೋಡಿ ಮನದೊಳ್ ತನ್ನ ಕಾಂತನ ಪಾದಕಮಲಮಂ ಸ್ಮರಿಸಿ ವರಿಸಿ ಶಕುನಿಪರಿಯಂಕದೊಳ್ ತೂಗಾಡುತ್ತಂ ಪೆರ್ಮೆಯೊಳಿರ್ದಳಾ ರಾಣಿಯ ರೂಪಂ ಗುಣಂಗಳಂದಮುಮಂ ಪತಿವ್ರತಾಭಕ್ತಿ ವಿರಹಮಂ ಪೇಳ್ವೆಂ. 


ಸಾಂಗತ್ಯ: 

ಆರುಮೊಗನಿಗೆ ಬೆನ್ನನಿತ್ತುದು ಕುಂದೆಂದು 

ಭರದಿ ಯೋಚನೆಗೆಯ್ದು ಕೇಕಿ 

ಸರಸದಿ ಮೆರೆದುದು ಗಂಗಾಂಬೆ ಶಿರದಲ್ಲಿ 

ತುರುಬಾಗಿ ತರುಣಿ ನೀ ಕೇಳು॥೭॥ 


ಕುರುವಿಂದ ಚಂಪಕ ಚಾಪ ಕಠಾರಿಯು 

ಹರಿನೀಲ ಮಲ್ಲಿಗೆ ಪೆರೆಯು 

ಮರಿಸಾರಂಗದ ಗಡಣದಿಂದೊಪ್ಪಿತು 

ಸುರಗಂಗೆ ವದನಾರವಿಂದ॥೮॥ 


ಜಲದಲ್ಲಿ ವಾಸವ ಮಾಡುವುದನುಚಿತ

ಕಲೆಯೊಳು ಮೆರೆವೆ ತಾನೆಂದು 

ಸಲೆ ಮನದೊಳಗಾಗ ಮತ್ಸ್ಯವು ಯೋಚಿಸಿ 

ಲಲನೆಯ ನೇತ್ರ ತಾನಾಗೆ॥೯॥ 


ಹರಿಕರದಾಯುಧವೆಂದೆನ್ನ ಪಳಿವರು

ನರರದರಿಂ ಮೃದುವಾಗಿ 

ತರುಣಿಯ ಗಳದಲ್ಲಿ ಮೆರೆದುದು ಸಿತಶಂಖ 

ತರುಣಿ ಕೇಳಾಶ್ಚರ್ಯವನ್ನು॥೧೦॥ 


ಗರುಡನ ಭಯದಲಿ ಸುರಪನು ಯೋಚಿಸಿ 

ವರ ಸುಧೆಕಳಸವ ತಂದಂ 

ಅರಗಿನ ಮುದ್ರೆಯನಿಕ್ಕಿದನೆಂಬಂತೆ 

ತರುಣಿಯ ಕುಚಯುಗ್ಮ ಮೆರೆಯೆ॥೧೧॥ 


ಹರನಿಗೆ ಭೂಷಣಮಾದೊಡಂ ತನ್ನನಂ 

ಉರಗನೆಂಬರು ಜನರಂಗಳು 

ಸುರಗಂಗಾಂಬೆಯ ಉರದೊಳಗದರಿಂದೆ 

ವರ ಬಡಬಾಸೆ ತಾನಾಗೆ॥೧೨॥ 


ಗಿರಿಜೆಗೆ ವಾಹನಂ ತಾನಾದೆನು ಎಂದು 

ಸುರಮುನಿ ದೂರುವ ಕುಂದ

ತರುಣಿಯ ತನುವಿನಲಿ ತೋರಿದುದರಿಂದೆ 

ವರ ಸಿಂಹನಡುವಾಗಿ ಜನಿಸೆ॥೧೩॥ 


ಸುರತರುಶಾಖೆಗಳಂದದಿಂ ಮೆರೆದುದು 

ತರುಣಿಯ ನಿಜಬಾಹುಯುಗ್ಮ 

ಚರಣವು ಚೂತದ ಎಳೆದಳಿರಂದದಿ 

ಉರುತರದಲಿ ತೋರಿತಾಗ॥೧೪॥ 


ಶ್ರುತಿಭೂಷಣದಿಂದೆ ಶ್ರೀಹರಿಯಂದದಿ 

ಮತಿವಂತೆ ಎಸೆದಳೊಗ್ಗಿನಲಿ 

ಅತಿಶಯಮಾದ ಹಾರಗಳಿಂದಮೊಪ್ಪುವ 

ನುತಕಂಠ ತೋರಿತು ಕಣ್ಗೆ ॥೧೫॥ 


ಮುತ್ತಿನ ತ್ರಿಸರವು ಪೂರ್ವವ ಯೋಚಿಸಿ 

ಮತ್ತಕಾಶಿನಿಕಂಬುಗಳದಿ 

ಬಿತ್ತರದಲಿ ಸ್ನೇಹವ ಮಾಡಿತೆಂಬಂತೆ 

ಚಿತ್ತಕ್ಕೆ ತೋರಿತು ಜನರ॥೧೬॥ 


ಚಂದಿರ ತನ್ನಯ ಸತಿಯನು ಕರೆದರ 

ವಿಂದವ ಕೆಳೆಮಾಡು ತನಗೆ 

ಎಂದು ಕಳುಹಿದನೊ ಎಂಬಂತೆ ಮೂಗುತಿ 

ಯಂದದ ಮೊಗದೊಳು ಮೆರೆಯೆ॥೧೭॥ 


ಕದಳಿಯ ಬಾಳೆ ಎಂಬರು ತನ್ನನು ಎಂದು 

ಮುದದಲಿ ಯೋಚಿಸಿ ಬೇಗ 

ವಿಧುವದನೆಯ ಮೇಲ್ದೊಡೆಗಳುತಾನಾಗಿ 

ಉದಿಸಿತು ಗಂಗೆಯಂಗದಲಿ॥೧೮॥ 


ಕರದಿಂದೆ ಕಂಕಣಮುರದಿಂದೆ ಪದಕವು 

ಚರಣದಿಂದಲೆ ನೇವರವು 

ವರ ಕರ್ಣದಿಂದಲೆ ತಾಟಂಕ ಮೆರೆದುದು 

ತರುಣಿ ಪೇಳುವೆನಿನ್ನು ಕೇಳು॥೧೯॥ 


ಸೊನ್ನದ ಕಾಂಚಿಯುಂ ಕಟಿಯಿಂದೆ ಪೊಳೆದುದು

ಚೆನ್ನೆಯ ಬೆರಳುಗಳಿಂದೆ 

ಮಿನ್ನಾಗಿ ತೋರಿತು ರಾಮಮುದ್ರಿಕೆಗಳಂ 

ಗನ್ನದೊಳಿದ ಬಣ್ಣಿಸಿದೆನು॥೨೦॥ 


ವಚನ: ಆ ರಾಯನ ಮೋಹಮಹಿಷಿ ವಿಷ್ಣುಕನ್ನಿಕೆಯಾದ ಜಗಜ್ಜನನಿಯಾದ ಗಂಗಾದೇವಿಯವೊಲಿರುತಿರ್ದಳದು ಕಾರಣದಿಂದಂ ಗಂಗೆ ಎಂಬಭಿದಾನಂ ಪ್ರಸಿದ್ಧಮಾದುದೀ ದಕ್ಷಿಣದೇಶದೊಳ್. 


ಸಾಂಗತ್ಯ: 

ಸುಳಿನಾಭಿ ಶೈವಾಲಕಚ ಥಳಥಳಿಸುವ 

ಗಳ ಶಂಖವೆಳಮೀನಂ ನೇತ್ರ 

ಜಳತನು ಸಂತರಂಗ ತ್ರಿವಳಿಯು ಇದರಿಂದ 

ಕಳೆವೆತ್ತಳ್ಗಂಗೆ ಗಂಗೆಯವೊಲ್॥೨೧॥ 


ಮೊಲ್ಲೆಯ ರದನೆಗೆ ಮೊಲ್ಲೆಯತಂದು ಧ 

ಮ್ಮಿಲ್ಲಕೆ ಅಂದದೊಳ್ ಮುಡಿಸೆ

ಮಲ್ಲಿಗೆನಗೆಯವಳಿಗೆ ಮಲ್ಲಿಗೆಯನು 

ಅಲ್ಲೆ ವಿಕರೂಣದೊಳ್ ತುರುಗೆ॥೨೨॥ 


ವಚನ: ಇನ್ನುಮಭಿವರ್ಣಿಪೆ, 


ಸಾಂಗತ್ಯ, 

ಜಡಧಿಯೊಳ್ ತನ್ನನು ಪುಟ್ಟಿತು ಎಂಬರು 

ಮಿಡ ಮೊದಲಾದ ದೇವತೆಯರ್ 

ಕಡುಜಾಣೆ ತುಟಿಯಾಗಿ ನೆಲಸಿತು ವಿದ್ರುಮ

ತಡವಿಲ್ಲದೆಯದರಿಂದೆ॥೨೩॥ 


ಹರಿಯಂತೆಯಂಜನ ಲಾಲಿತ ಕೈಲಾಸ 

ಗಿರಿಯಂತೆ ತಾರಕಕಾಂತಿ 

ನರಪತಿ ಹನುಮನ ಜಾಯೆಯ ನೇತ್ರವು 

ಮೆರೆದುದು ಚೋದ್ಯದಿಂ ಕೇಳು॥೨೪॥ 


ವಚನ: ಮತ್ತಮಾ ಗಂಗಾದೇವಿ ರಘುಪತಿಯಂತೆ ಸುಗ್ರೀವಮಿಶ್ರಿತೆಯುಂ ಭೂಭೃತ್ಕಟಕದಂತೆ ತಮಾಲವಿರಾಜಿತೆಯುಮಾಗಿ ತೋರಲೀಕೆಯ ರೂಪು ವಿಭವಂಗಳಂಶನೋಡಿ ಪೊಗಳುವೆವೆಂದು ಸುರರಾಜಂ ಶೇಷರಾಜಂ ಸಹಸ್ರಕಂಗಳಂ ದ್ವಿಸಹಸ್ರಜಿಹ್ವೆಗಳಂ ಧರಿಸಿ ಭೂಲೋಕದೊಳು ಪ್ರಸಿದ್ಧರಾಗಿರ್ಪರು ಬಲಿಯ ಭೈವನದೊಳ್ ನಾಗಕನ್ನಿಕೆಯರ್ಗಂ ಸುರತರುಣಿಯರ್ಗಂ ಪೇಳಿಯವರವರಂ ಪಳಿವುತ್ತಂ ಈ ಗಂಗಾದೇವಿಯಂ ಪೊಗಳುತ್ತಮಿರ್ದರ್ ಮತ್ತಂ ಗಂಭೀರಳ್ ಗಾನವಿನೋದಳ್ ಗುಣಯುಕ್ತಳ್ ಗಾಂಧರ್ವರೂಪಳ್ ಗಂಗಾಸದೃಶಳ್ ಗಂಗಾಂಬಿಕೆಯಾಕೆಯ ರೂಪಂ ಕವಿತಾ  ಚಮತ್ಕೃತಿಯಿಂದದ್ಭುತಮಾಗಿಯಭಿವರ್ಣಿಪೆಂ. 


ತೃತೀಯಾಶ್ವಾಸಂ. 


ಮೃಗಯಾವರ್ಣನೆ. 


ಸಾಂಗತ್ಯ; 

ಹನುಮಗಂಗೆಯರೀರ್ವರು ಮೃಗಬೇಂಟೆಯ 

ವನದೊಳಾಡಿದರು ಪ್ರೀತಿಯಲಿ॥ ಪಲ್ಲವಿ॥ 


ವಚನ: ಈ ಪರಿಯೊಳಿಂದ್ರ ಸಹಚರ ಬೃಂದಾರಕ ಬೃಂದಮಂ ಛಿದ್ರಿಸಿ ಸಾಂದ್ರಭೋಗದಿಂ ತೋರ್ಪ ಚಂದ್ರದ್ರೋಣಿಯನುಪೇಂದ್ರನೆಡೆಗೆ ತಂದಾಂಜನೇಯ ವರಪ್ರಸನ್ನನಾದ ಹನುಮಭೂಪಾಲಂ ಲಕ್ಷ್ಮೀನಾರಾಯಣನಂತೆ ಸತಿಪತಿಗಳಿರ್ಪ ಸಮಯದೊಳ್ ದಿಕ್ಕದಿಕ್ಕನಕ್ಕಜದಿಂ ಗಕ್ಕನೆ ಬೆಳಗಂ ತೋರಿ ರಕ್ಕಸರಂ ಬೊಕ್ಕೆಯಲಿಕ್ಕಿ ಎಕ್ಕತುಳದೊಳ್ ಜಕ್ಕವಕ್ಕಿಯ ಕಕ್ಕಸಮಂ ಕೆಡಿಸಿ ಚುಕ್ಕಿಗಳಂ ಕುಕ್ಕಿ ನೊಕ್ಕಿ ನೆಕ್ಕಿ ಮುಕ್ಕಿ ತಮಮಂ ಶತಪತ್ರಮಿತ್ರನಂದಯಂಗೈದನಂದು ಜಂಭಭೃತ್ಕಕುಭದೊಳ್,


ಸಾಂಗತ್ಯ,  

ಕುಮುದಕೆ ಕುಮುದವನುಡುಗಳ್ಗೆ ನಡುಗನಂ 

ತಮವೈರಿ ಮಾಡಿದ ಬೇಗ 

ವಿಮಲಹಂಸೆಗೆ ಹಂಸವ ಮಾಡಿ ಹಂಸನ 

ವಿಮುಖವ ಮಾಡಿದನಂದು॥೧॥ 


ರಾಜೀವಮಿತ್ರನಂ ರಾಜಿಪ ರಾಜನ 

ತೇಜವ ಸೆಳೆದನು ಮತ್ತೆ 

ರಾಜನ ದಿಕ್ಕಿನಲಿ ಜನಿಸಿದ ಹನುಮ 

ರಾಜನನೀಕ್ಷಿಪೆನೆಂದಂ॥೨॥ 


ಕಮಲದೊಳಿರ್ಪ ಕಮಲಕ್ಕೆ ನಗೆಯನು 

ಕುಮುದಪತ್ರನು ಮಾಡಿದನು 

ಅಮರೇಂದ್ರ ದಿಕ್ಕಿನಲಿ ಪುಟ್ಟಿದ ಬೇಗದಿ 

ಸುಮುಖದೊಳ್ ನೀಂ ಕೇಳು ಕುವರ॥೩॥ 


ಹನುಮನರೇಂದ್ರನೈಪ್ಪವಡಿಸಿದನುಯೆಂದು 

ಇನನುದಯದ ವೇಳೆಯಲಿ 

ವಿನುತ ಕಳಸ ಕನ್ನಡಿಯನು ನೋಡಿ ಮ 

ಜ್ಜನವನು ಮಾಡಿದನಾಗ॥೪॥ 


ವರ ವಸ್ತ್ರವನುಟ್ಟು ಊರ್ಧ್ವಪುಂಡ್ರವನುರೆ 

ಧರಿಸಿದ ಫಣೆಯೊಳು ಮುದದಿ 

ಧರಣಿಯ ದೇವರ್ಗೆ ಪಶು ಕನಕಂಗಳ 

ಕರದಿಂದಿತ್ತು ದಾನಗಳ॥೫॥ 


ವಚನ: ಆ ರಾಡ್ಗೇಹದೊಳ್ ಗುಪ್ತಮಾದ ತನ್ನಿಷ್ಟಾರ್ಥಕ್ಕಂ ಕರ್ತುವಾದ ತನ್ನ ಸೂರ್ಯಕುಲ ಪರಂಪರೆಯಿಂದಂ ಬಂದ ಶತಕೋಟಿಕಾಯನಂ ಮೋಹನಕಾಯನಂ ನುತಿಸುತಿರ್ದಂ ತನ್ನ ಸುತೆವೆರಸತ್ಯಂತಭಕ್ತಿಯಿಂದಂ,


ಸಾಂಗತ್ಯ: 

ಅಂಜನಾಪುತ್ರನ ದೇವಾಂಗಣಕೈದಿ 

ಕಂಜಪಾದಕೆ ಪೊಡಮಟ್ಟು 

ಮುಂಜೆರಗನಂ ಸಿಕ್ಕಿಸಿ ನಿಂದುರೆ ಶತ್ರು 

ಭಂಜನ ಹನುಮೇಂದ್ರ ನುತಿಸೆ॥೬॥ 


ಹರಿಹರಬೊಮ್ಮರ ರೂಪನೆ ಜೇಜೇತು 

ಪರಮಸದ್ಗುಣನೇ ಜಯತು 

ಸುರಮುನಿ ತುಂಬುರ ಗರ್ವಾಪಹಾರಿಯೆ 

ಹರಿಪುತ್ರ ಜಯಜಯದೇವ॥೭॥ 


ಭಾವಜವರ್ಜನನರ್ಕಭಯಂಕರ ಸಂ 

ಜೀವಿಯ ತಂದಂಥ ದೇವ 

ದೇವನೆ ಜಯಜಯ ವರ್ಜಿತ ವಿಗ್ರಹ ಜಯ 

ದೇವಾಂತಕಾಂತಕಜಯತು॥೮॥ 


ಅರ್ಧರೇಕು, 

ಜಲಧಿಲಂಘನ ತ್ರಿಶಿರಸಂಹಾರಿ ದೂರ್ವಾ 

ದಳಶ್ಯಾಮನ ಭೃತ್ಯ ಜಯತು॥೯॥ 


ವಚನ: ಈ ಪರಿಯಲಿ ಸ್ತುತಿಸಿ ಬಲಗೊಂಡು ದೇವನ ಪ್ರಸಾದಮಂ ಶಿರದೊಳ್ ಧರಿಸಿಯಾ ರಾಯಂ ಹರ್ಷಿತನಾಗಿ ತನ್ನಂತಃಪುರಮಂ ಸಾರಿದಂ. 


ಸಾಂಗತ್ಯ; 

ನಿಜಮಂದಿರವೈದಿ ಭೋಜನವನು ಮಾಡಿ 

ರಜತಾಂಬರವನು ಉಟ್ಟು 

ಗಜಗಲಿಸುವ ಕುಂಡಲವ ಕರ್ಣದೊಳಿಟ್ಟು 

ಭುಜಕೆ ಹಾಲಿಯನಳವಡಿಸಿ ॥೧೦॥ 


ವಚನ: ಸಿಂಗರಂಬಡೆದು ಧರಣೀಶನೊಂದು ಗದ್ದುಗೆಯೊಳ್ ಕುಳಿತಿರುವ ವೇಳೆಯೊಳೊರ್ವ ತರುಪಾಲಂ ಮೃಗಭಯದಿಂದಂ ಬಂದಾ ರಾಯಂಗೆ ಬಿನ್ನಯಿಸುತಿರ್ದಂ . 


ಸಾಂಗತ್ಯ; 

ಆ ಸಮಯದೊಳೊರ್ವ ವನಚರ ತಾ ಬಂದು 

ವಾಸವ ಸಮ ಹನುಮಂಗೆ 

ಲೇಸಾಗಿ ಪಾದಪದ್ಮಂಗಳಿಗೆರಗಿ ಶಂ 

ಸಾಸವ ಪೇಳಿದನವನು॥೧೧॥ 


ವಚನ: ಆಗಲಾ ವನಚರಂ ಮಿಗಶಾಬ ಮರಿಗಿಳಿ ಮಹಿಷಿಗಂ ಸೂರ್ಯವಕ್ಕಿ ಭೂಧಾರ ದಂಷ್ಟ್ರ ಚಿತ್ರಕಾಯನಖಂಗಳನಾ ರಾಯಂಗೆ ಕೈಗಾಣಿಕೆಯನಿತ್ತು ಬಿನ್ನಯಿಸುತಿರ್ದಂ, 


ಸಾಂಗತ್ಯ; 

ಎಲೆ ಜೀಯ ನಿರ್ಜರ ಕಟಕದೊಳ್ ಬಹುದುಷ್ಟ 

ಕಲಿಮೃಗವಿದೆ ಈಶ್ವರನ 

ಬಲುಮೆಯ ಕೊಳ್ಳದು ನೀವೆಯ್ದಿ ಬೇಂಟೆಯ 

ಚಲದೊಳು ಆಡಲುಬೇಕು॥೧೨॥ 


ಎಂದು ಬಿನ್ನೈಸಲಾ ಹನುಮೇಂದ್ರಂ ಮೆಚ್ಚಿ 

ಚಂದದ ವಸ್ತ್ರಂಗಳನಿತ್ತು 

ಇಂದು ಬರುವೆವೆಂದವನಂ ಮನ್ನಿಸಿ 

ನಿಂದನು ನಲಿವಿಲಿ ಬೇಗ॥೧೩॥ 


ಹಸಿರುಭೂಷಣ ವಸ್ತ್ರಗಳನು ತೊಟ್ಟುಟ್ಟು

ಅಸಿವಲಗೆಯ ತಾಂ ಧರಿಸಿ 

ಎಸೆವ ತೇಜಿಯನೇರಿ ಧೂವಾಳಿಸಿದನು 

ರಸಪತಿ ಹನುಮ ತಾನಂದು॥೧೪॥ 


ವಚನ: ಆ ರಾಯಂ ಸಿಂಗರಿಸಿರ್ದುದಂ ಕಂಡು ಭಿಲ್ಲರ್ ಜಾತಿರೂಪವಂ ತೋರಿಯೈದಿದರ್,


ಸಾಂಗತ್ಯ,   

ಕರದೊಳು ಬಡಿಗೋಲು ಶಿರದೊಳೆಳೆಯ ತಳಿರ್ 

ಚರಣದೊಳ್ ಮೆರೆವ ಮೊಚ್ಚೆಯವು 

ಸರಸದ ತೋಳಗುಂಜಿಯು ಕಟಿತಟದೊಳು 

ಸುರಗಿ ಸಂಕಲೆ ಶುನಕಗಳು॥೧೫॥ 


ಪರಿಪರಿ ಪತ್ರದ ಉಡಿಗೆಗಳ್ ತೊಡಿಗೆಗಳ್ 

ಕೊರಲೊಳು ಪೂಸರಂಗಳನು 

ಧರಿಸಿದ ಬೇಟೆಗಾರರು ಬರುತಿರ್ದರು 

ನರಪತಿ ಹನುಮನ ಮುಂದೆ॥೧೬॥ 


ಕೆಂಪಿನ ಕಣ್ಣುಗಳು ಜೋಲುವ ಕಿವಿಗಳ್ 

ಪೆಂಪಾಗಿ ಬಾಗಿರ್ದ ಉಗುರು 

ಸೊಂಪಾದ ನಿಡುಮೂತಿ ನಿರ್ಮಾಂಸ ಜಂಘೆಯ 

ಗುಂಪಿನ ಶ್ವಾನಗಳೈದೆ॥೧೭॥ 


ತೊಳಗುವ ನಾರಿಗೆ ಗಗನವ ನೋಡಿಯಾ 

ಕುಳಿಕೆಯ ತೀಕ್ಷ್ಣದ ದಂತ 

ತಳೆಯದ ಗಿಡವನು ಲಂಘಿಪ ನಾಯ್ಗಳು 

ಬಳಸಿತು ವನಚರರುಗಳ॥೧೮॥ 


ಕರಶತಘ್ನಿಯ ಸಬಳವ ಕೈಚಕ್ರದ 

ವರ ಗಂಡುಗೊಡಲಿಗಳ್ ಮತ್ತೆ 

ಕರದಂಬು ತ್ರಿಶೂಲವು ಪಟ್ಟಸು ಹಲವನು 

ಧರಿಸಿದ ಭಟರ್ ಬಂದರಾಗ॥೧೯॥ 


ಕೊಳಲ್ಗೊಂಬು ಹೆಗ್ಗಾಳೆ ತಂಬಟ ತಿತ್ತಿರಿ 

ಮೊಳಗುವ ಹರೆ ಢಕ್ಕೆ ಮತ್ತೆ 

ಉಳಿದ ವಾದ್ಯದ ರವಗಳಲಿಂದ ಭೂಪನು 

ಕಳೆಯೊಳು ಬೇಂಟೆಯೈದಿದನು॥೨೦॥ 


ವಚನ: ಈ ಪರಿಯೊಳ್ ತುಳುವ ತುರುಕ ಮರಾಟ ಮಲೆಯಚರ ಚೆಲುವ ಪುಳಿಂದರ ಪಡೆಯಾ ರಾಯನಂ ಬಳಸಿ ಸಮಯಗೈದುವಂ ಧರಿಸಿಯೈದುತಿರ್ದರಾ ರಾಯನ ರಾಣಿಯ ಮುಂಭಾಗದೊಳ್ ವಿಲಾಸಿನಿಯರ್ ಪಟುಭಟರ್ವೆರಸಿ ಪತಿಪುತ್ರರುಗಳೊಡನೆ ಮುಗಿಲ್ದೇರಕೀಲಕಕ್ಕಂಬುವಿದೇರಿನೊಡನೆ ಬಂದೈಕಿಲ್ವೆಟ್ಟಣುಗಿಯಂತೆ ಹನುಮರಾಯನಂ ವೆರಸಿ ಬಟುಗೈದುಗೈಯನ ತನುಜೆಯ ಪೆಸರಿನವಳೆಯ್ದುತಿರ್ದಳ್. 


ಸಾಂಗತ್ಯ; 

ಚತುರ್ಮುಖಯಾನದೊಳ್ ಮಂಡಿಸಿ ಚೆಲ್ವಾಗಿ 

ಅತಿಶಯ ತೊಡರು   ವಸ್ತ್ರಗಳ 

ವಿತರಣದಲಿ ಕೊಟ್ಟಳು ಕಣ್ಗಚ್ಚರಿಯೆನೆ 

ಮತಿವಂತೆ ಗಂಗಾಂಬೆಯಾಗ॥೨೧॥


ಚತುರ್ಥಾಶ್ವಾಸಂ,

ಮಲ್ಲೇಶ ಸೇವಾ ವರ್ಣನೆ, 


ಸಾಂಗತ್ಯ: 

ಮಲ್ಲಿಕಾರ್ಜುನನ ಜಾತ್ರೆಯನು ಹನುಮಭೂ 

ವಲ್ಲಭ ನೋಡಿದ ಮುದದೊಳ್॥ ಪಲ್ಲವಿ॥ 


ಆ ವನಪುಷ್ಪದ ಬಳ್ಳಿಯ ಸೀಗಡ 

ಲಾ ವನಕುಂಡಲಂಗಳಿಗೆ

ತೀವಿದನನಲನಾಹಾರವೆಯಾದಾ

ದೇವನ ಪಾದವ ನೆನೆವೆ॥೧॥ 


ಆ ವನಹಾರದ ಪೇಟಿಕೆ ವರ ವ್ಯೋಮ

ವಾ ವನಚಾಪಶಕ್ತಿಯೊಳು

ಭಾವಲೋಕಂಗಳಂ ಇರುವವಾ ದೇವನ 

ಭಾವದೊಳ್ ನಾಂ ಸ್ತುತಿಸುವೆ॥೨॥ 


ವಚನ: ಆ ರಾಯನೊಂದಾನೊಂದುದಿನಂ ಚಿತ್ತದೊಳ್ ಸ್ಮರಿಸಿ ಪಂದಲೆವಚ್ಚನಂ ಮನದೊಳ್ ಸ್ಮರಿಸಿ ಮುದದಿಂ ಸರೂವಾಭರಣಭೂಷಿತನಾಗಿ ಪೂಜಾಗಜದ ಪಟ್ಟವಣೆಯೊಳ್ ಮಂಡಿಸಿ ಕುಮಾರಿತಿಯೊಡನೆ ಜಸಂವಡೆದುತ್ತಮಾಶ್ವದ ಕಾಲ್ಗಾಹಿನ ಸೈಂಧವಸ್ಯಂದನ ಪಟುಭಟರ್ ಸಚಿವಕುಮಾರ ಮೊತ್ತಂಗಳಿಂ ಶುಭದಿನದೊಳ್ ತೆರಳಿದನರ್ಜುನಪೋಷಕ- 

ನರ್ಜುನವಿಗ್ರಹ ಮಲ್ಲಿಕಾರ್ಜುನನ ಜಾತ್ರೆಯಂ ನೋಳ್ಪೆನೆಂದುಜ್ಜುಗದೊಳ್ ಸಜ್ಜನಪಾಲಂ ಮನೋವಿಶಾಲಂ ಯುವತೀಲೋಲಂ ಶ್ರೀಹನುಮಭೂಪಾಲಂ. 


ಸಾಂಗತ್ಯ: 

ಇತ್ತರದಲಿ ಚೌರಿಯ ಬೀಸುತಿರ್ದರು 

ಎತ್ತಿ ವೇಳಾಯ್ತರು ನೃಪಗೆ 

ಉತ್ತಮ ಪಚ್ಚೆಯ ಸತ್ತಿಗೆ ಮೊತ್ತವ 

ಸುತ್ತಲು ಪಿಡಿದರು ಜನರು॥೩॥ 


ಬಗೆಬಗೆ ಬಿರುದು ಹಾಹೆಗಳನು ಪಿಡಿದರು 

ವಿಗಡತನದ ಮೊಳೆ ಚಬಕ 

ಸೊಗಸಿಲಿ ಪಿಡಿದು ತಂದರು ಮುಂದೆ ಭೂಪನ 

ನಗಸಮ ಧೀರರು ಮುದದಿ॥೪॥ 


ವಚನ: ಆ ರಾಯನ ರಾಣಿ ಗಿಣಿವಾಣಿ ಪಲ್ಲವಪಾಣಿ ಕಟ್ಟಾಣಿ ಬೆಂಬಳಿಯೊಳ್ ತರುಣಿಯರ ಜಂಗುಳಿವೆರಸಿ ಕಾಂಡಪಟ ನಾಲ್ಮೊಗಯಾನದೊಳೆಯ್ದಿದರು. 


ಸಾಂಗತ್ಯ: 

ಸತಿಸುತವೆರಸಿ ವಾದ್ಯದ ರವಗಳಲಿಂದ 

ಅತಿಶಯ ಬಿರುದು ಹಾಹೆಗಳಿಂ

 ಮತಿವಂತನೆಯ್ದಿದ ಕೆಂಧೂಳಿಗಳಾಗ 

ಗತಿ ತಡೆದವು ರವಿರಥದ॥೫॥ 


ಸತ್ತಿಗೆ ಮೊತ್ತಧ್ವಜದ ಸಂದಣಿಗಳು 

ಮುತ್ತಿತು ಸೂರ್ಯಕಿರಣವ 

ಬಿತ್ತರದಲಿ ಬೈದವು ಗೌರಂಗಹಳೆಯಂ 

ನ್ಮತ್ತರಾಜ್ಞರ ವರ್ಗವನು॥೬॥ 


ಕರೆಯ ಬೃಂಹಿತ ಭಟರುಗಳ ಗರ್ಜನೆಗಳು 

ಹರಿಯ ಹೇಷಾರವ ಬಳಿಕ 

ವರರಥ ಚೀತ್ಕಾರ ಸೂತರ ಬೊಬ್ಬೆಯು 

ಸುರಗಿಯ ತಳ್ಕು ಬಳ್ಕುಗಳು॥೭॥ 


ವಚನ: ಬರ್ದಿಲರಾಳ್ವ ಸಗ್ಗಿಗರಡಬಳ ಆರ್ವಳಜಕ್ಕ ಪಿಚ್ಚವಣಿಗ ನೆಗಳ್ದೇರಮಿಗಪತ್ರ ಸುಳಿಗೆರೆಯ ಜಿತಪೊಳಲ ಜಗದಿಟ್ಟಿ ಪಾವರೆಯರಡಸಗೊಟ್ಟುಂ ಬೆಚ್ಚಿಸುತ್ತಿರ್ದುದು ಇತ್ತ ರವಗೈದು ಪೋಗಲ್,


ಸಾಂಗತ್ಯ: 

ಪಯಣದೊಳೆಯ್ದಿ ಎಕ್ಕಟಿಯಪುರವನಾಗ 

ನಯನದಿಂ ಕಂಡವರ್ ಮುದದಿ 

ಭಯಭರಿತಭಕ್ತಿಯೊಳಿಳಿದಾಗ ಗಜವನು 

ಜಯಜಯಯೆನೆ ವಂದಿಜನರು॥೮॥ 


ವಚನ: ಆ ಮಂಗಳೆಯಾಳ್ವನಂ ಮನೋರಥದಿಂ ರಥೋತ್ಸವಮಂ ಮಾಡಿಸಿ ಮುದದೊಳ್ ಪೊಸಪ್ರವಾಳಮಂದಿರವನೆಯ್ದಿದಂ ಸುಧಾಸೂತಿಬಿಂಬಂ ತೋರುತಿರ್ದುದು, 


ಸುರರಿಗೆ ಕಬ್ಬು ಪಾದರಿಗಳ್ಗೆ ಮಬ್ಬು 

ಶರನೆಧಿಗುಬ್ಬು ತೋರೆ 

ಹರಿಪಾದಕೆ ಡಬ್ಬು ಚಕೋರಿಗಳ ಕೊಬ್ಬು 

ಹರಿಣಾಂಕ ಮಾಡಿದನಂದು॥೯॥ 


ಧರಾದೇವಿಗೆ ಚಕ್ರವಾದುದು ಬೊಮ್ಮೋಜ 

ಕೊರೆದು ಕಾರೂಬೊನ್ನದ ಮೊಳೆಯನ 

ನಿರತದಿಂ ಬಡಿದನೊ ಎಂಬಂತೆ ಮೆರೆದುದು 

ಹರಿಣನು ಚಂದ್ರನ ನಡುವೆ॥೧೦॥ 


ನೇಮವಚನ: ಅತಿಪುತ್ರಂ ಕುವಲಯಮಿತ್ರಂ ಕಾವನ ಮಾವಂ ನೆಯ್ದಿಲಜೀವಂ ಬೃಂದಾರಕರ ಸತ್ರಂ ಕಮಲಕ್ಕಮಿತ್ರಂ ಕೃಷ್ಣನ ಮೈದುನಂ ಕೃಷ್ಣಾಂಕಂ ಕೃಷ್ಣಕಂಠನ ಕುಸುಮಂ ಲೋಕಕ್ಕೆ ಚಂದಂ ಚಂದ್ರನಕ್ಷತ್ರರಾಜಂ ನಭದೊಳ್ ನಲವಿಂದಂ ತೋರ್ದು ಮೆರೆದಿರ್ದನಂದು, 


ವಚನ: ಬಾನೆಂಬ ತವಸಿಯ ಗಳದೊಳ್ ಮೆರೆವ ಸಂಕುಮಣಿಯಂತಿರ್ದುದು ಮುಪ್ಪೊಳಲಂ ಗೆದ್ದಂದು ಮಿಗಗೈಯನೆತ್ತಿಯೊಳ್ ಜನ್ನುಣಿಗಳೆರೆಯಂ ಕಾದಲರಂ ಸುರೆದಂತಿರ್ದುದು ಪುಷ್ಕರದೊಳ್ ವಕ್ಷೋವಿಶಾಲಂ ಹನುಮಭೂಪಾಲಂ ನೇತ್ರಾನಂದಕರಕ್ಕಮಾ ನಗರದೊಳಾಪ್ತವೇಳಾಯ್ತರ್ ನಾಲ್ವರ್ ಕರದೊಳ್ ಕಾಮನಂತೆ ಚಂಪಕಜೊಂಪಮಂ ಪಿಡಿದು ಕೊರಲೊಳ್ ಮಲ್ಲಿಗೆಯ ದಂಡೆಯಂ ಧರಿಸಿ ಸಿರದೊಳ್ ಸಿಂಗರಿಸಿ ಪಾರಿಜಾತಕುಸುಮಮಂ ಪಣೆಯೊಳ್ ಕಸ್ತುರಿಯಂ ಸಿಸ್ತುಗೊಳಿಸಿ ಬಾವನ್ನಮಂ ಬಾಹುಗಳೊಳ್ ತಿಗುರಿ ಸುರಗಿಯಂ ಬಾಹುಮೂಲದೊಳೌಂಕಿ ಪದದಿಂ ಮೊಚ್ಚೆಯಮನೂರಿ ವಸಂತನಂತಾ ವೀದಿಯೊಳ್ ತಿರುಗುತಿರ್ದನಾಗಲಲ್ಲೊರ್ವಳ್,


ಸಾಂಗತ್ಯ: 

ಲಲ್ಲೆಯ ನಲ್ಲನ ಕಾಣಲು ಜಡೆನುಡಿ

ಮೆಲ್ಲಮೆಲ್ಲನೆ ಗಡಣಿಸಿತು 

ಬಲ್ಲೆನೆನ್ನಲುಬೇಡ ಕಳ್ಳೊಲುಮೆಯೊಳೆನ್ನ 

ಉಲ್ಲಾಸವೆರಸಿ ನೀ ಕೂಡು॥೧೧॥ 


ಪುಸಿನಗೆ ಬಿಡುನುಡಿ ಗರಣಿ ಸುಜಾಣ್ಮೆಯೊಳ್ 

ನಸುಮುನಿಸೆಸಗಂ ಕೂಟದಲಿ 

ಒಸೆದು ಕೂಡಿದ ಮತ್ತೆ ವಸ್ತುವ ಕಸುಕೋ 

ಶಶಿಮುಖಿ ನೀನೆಂದು ಪೇಳೆ॥೧೨॥ 


ವಚನ: ಪೆರತೊಂದು ತಾಣದೊಳ್, 

ಸಾಂಗತ್ಯ: 

ವರಕಾಂತನ ಚಿತ್ರಪಟವನು ಲೆಕ್ಕಿಸಿ 

ಪರಿಪರಿ ಬಿನ್ನಾಣದೊಳು 

ಸರಸದ ಮೋಹವ ವಿರಚಿಸುವರ ನೀನು 

ನಿರುತವೊ ಎಂಬಂತವಗೆ ॥೧೩॥ 


ಆ ಸಮಯದೊಳು ಪಲೂಲವ ಬಂದಡೆ ಮಾಯ 

ಪಾಶದಿ ಸಿಲುಕಿಸು ಬೇಗ 

ಲೇಸಿನ ನುಡಿಯೊಳು ಸುಪ್ತಿ ಪರಿಯುತ ಸಂ 

ತೋಷದಿ ಕಳೆ ನೀನು ಪೊಳ್ತ॥೧೪॥ 


ಬೆಳಗಪ್ಪ ಜಾವದೊಳ್ ಪತಿಯೆಸಗಿದ ಮಾಡಿ 

ಕೆಯೊಳು ವಸ್ತುವ ಸೆಳೆದು 

ಚಳೆಯದಿ ಕಳುಹಿಸು ಕಾಂತನ ನೀನೆಂದು 

ನಳಿನಾಕ್ಷಿಗೆ ಬುದ್ಧಿ ಪೇಳೆ॥೧೫॥ 


ವಚನ: ಮತ್ತಮೊಂದೆಡೆಯೊಳ್, 


ಸಾಂಗತ್ಯ: 

ಜರೆದೋರಿದ ವೇಸಿ ಬಾಗಿಲೊಳ್ ನಿಂದುರೆ 

ಕರೆವಳು ಗಮಿಸುವ ವಿಟರ 

ಬರಿದೆ ಬಾ ನಿಜಗೃಹಕೆಂದು ಕರೆವುದನು 

ನರಪತಿ ಹನುಮೇಂದ್ರ ಕೇಳೆ॥೧೬॥ 


ವಚನ: ಮತ್ತಮೊರ್ವಳ್, 

ಸಾಂಗತ್ಯ: 

ಪರಿಲಂಬಕುಚಗಳ ಕೂರ್ಪಾಸದಿ ಕಟ್ಟಿಶ

ಹರಿಣಾಂಕನುದಯದೊಳ್ ಗಮಿಸಿ 

ತರುಣಿಯು ತಾ ಬೇಗ ಕಾರಣದಿಂದಲೆ 

ಪರಿಪರಿ ಗಮಕವ ತೋರೆ ॥೧೭॥ 


ವಚನ: ಮತ್ತೊಂದು ತಾಣದೊಳ್ ಕುವರಿಗೆ ಜಾರೆ ಬುದ್ಧಿಯಂ ಪೇಳುತಿರೂದಳು, 

ಸಾಂಗತ್ಯ: 

ಕುರುಡರಾಗಲಿ ಕುಂಟರಾಗಲಿ ಹೆಳವ 

ಜರೆ ತೋರಿದವನಾದಡೆಯು 

ವರಹವ ಮಿಗಿಲಾಗಿ ಕೊಟ್ಟರೆ ಕರೆಯೆಂದು 

ತರುಣಿ ಪೇಳಿದಳೊರ್ವಳಿಗೆ॥೧೮॥ 


ನೆಲ ಕಾಲು ಪೆರ್ಬೆಟ್ಟು ಪರಡುರೆ ಮೊಣಕಾಲು 

ಬಲುಜಂಘೆಜಾನುಗಳ್ ಮತ್ತೆ 

ಕಲೆಯಾದ ಕಟಿತಟ ಖುರ ನಾಭಿ ವಕ್ಷವು 

ನಲಿವ ಸುಕಂಬುಕಂಧರವು॥೧೯॥ 


ನಿಜಚುಬುಕವು ತಳಿರ್ದುಟಿಯು ಕಪೋಲವು 

ಗಜಗಲಿಸುವ ಭಾಳವನಂ 

ಗಜಗಮನೆ ನೀ ಕೇಳುಬ್ರಹ್ಮರಂದ್ರವನು 

ವಿಜಯದಿ ಚುಂಬಿಸಲ್ವೇಳ್ಕುಂ॥೨೦॥ 


ತರಳೆಯು ಮಿಂದದಿನ ಪಾಡ್ಯವು ಮೊದಲಾಗಿ 

ವರ ಪೌರ್ಣಮಾಸಿ ಪರಿಯಂತ 

ಅರಿದು ಚುಂಬನಗೈವ ರಸಿಕನಂ ಎಂದು ನೀ 

ನಿರುತದಿಂದೊಯ್ಯೆಂದು ಪೇಳೆ॥೨೧॥ 


ನಾಣು ನಿನ್ನದು ದ್ರವ್ಯ ನಿನ್ನದು ಎನ್ನಯ 

ಪ್ರಾಣ ನಿನ್ನದು ಕೇಳು ಎಂದು 

ಜಾಣವಿದೂಷಕ ನಿರ್ಬಂಧದೊಳಾಗ 

ಏಣಾಕ್ಷಿಯಡಿಗೆರಗಿದನು॥೨೨॥ 


ಪಂಚಮಾಶ್ವಾಸಂ; 

ರಾಜ್ಯಭಾರ ವರ್ಣನ 

ಸಾಂಗತ್ಯ: ರಾಮನಂದದಿ ಹನುಮೇಂದರನು ನೀತಿಯೊಳ್ 

ಭೂಮಿಯನಾಳಿದ ಮುದದಿ॥ ಪಲ್ಲವಿ॥ 


ವಚನ: ಆ ರಾಯನ ಪುರವರಕ್ಕಂ ಕವಿಗಳ ಮತದಿಂ ದಕ್ಷಿಣ ಸಾಕೇತಪುರಮೆಂದಭಿದಾನಂ ಬಂದುದು. ಒಂದು ದಿನಂ ಸಹಸ್ರಪತ್ರಮಿತ್ರಂ ತಮಮಂ ಚೆಲ್ಲಬಡಿದು ದ್ವಿಜಲೋಚನಕ್ಕಂಧಕಾರಮಂ ಮಾಡಿ ಪೂರ್ವಾದ್ರಿ ಚಾವಡಿಯೊಳುದಯಂಗೈದಂ, 


ಸಾಂಗತ್ಯ: 

ಪೂರ್ವದೊಳಾ ಹನುಮ ತನ್ನನಂಜಿಸಿದನು 

ನಿರ್ವಹಿಸಿದೆನಿಂದ್ರನಿಂದ 

ಉರ್ವಿಯೊಳ್ ಕೆಳೆಮಾಡುವೆ ಹನುಮನೊಳೆಂದು 

ಪೂರ್ವಾದ್ರಿಯನಡರಿದ ರವಿಯು॥೧॥ 


ವಚನ: ಆಗಸವಣಿಯುದಯಂಗೈದ ಸನ್ನೆಯಂ ಮಂಗಳಪಾಠಕರಿಂದಂ ಕೇಳ್ದು ವಿಯರಣಂ ಕರುಣಂ ಗಂಗಿರಮಣಂ ಶರಣಜನರಕ್ಷಂ ಗರ್ವಿಜನ ಶಿಕ್ಷಂ ಸಜ್ಜನ ಪಕ್ಷಂ ಸೀತಾರಾಮ ತನೂಜಂ ಸಾಕೇತಪುರಭೋಜಂ ಬಲಸಮಾಜಂ ಮಿಗದೇರತನೂಜಂ ಭಕ್ತರನುಪ್ಪವಡಿಸಿದಂ ಮಣಿಮಂಚದಿಂದಂ ಗೋಕುಲಸಮೂಹಂ ತರಣಿ ಗೋಕುಲಸಮಾಜಂ ಹನುಮಂ ಶತ್ರುರಾಜವೀಕ್ಷಂ ಚೆಂಗದಿರಂ ಶತ್ರುರಾಜಶಿಕ್ಷಂ ಗಂಗಾವರಂ ಪದ್ಮಿನೀವಲ್ಲಭಂ ನೇಸರಂ ಪದ್ಮಿನೀಪತಿ ಲಕ್ಕಮಾಂಬಾ ಕುವರಂ ಸವಮತಂ ಸೂರ್ಯ ಶಿವಮತಂ ಹನುಮನನ್ಯೋನ್ಯದಿಂದುದಯಂಗೈದಂ, 


ಸಾಂಗತ್ಯ: 

ನಿತ್ಯಕರ್ಮವವಿರಚಿಸಿಯೆ ಮುದದೊಳಾ 

ಗತ್ಯಂತ ಸೇನೆಗಳಿಂದ 

ಪ್ರತ್ಯುಪ್ತ ತೊಡವನು ತೊಟ್ಟು ಚಂದ್ರಸ್ವರದಿ 

ಸತ್ಯವಂತನು ತೆರಳಿದನು॥೨॥ 


ವಚನ: ಅವನದೊಂದು ಹಯಂ ಹರಿಹಯವನೇಳಿಸುತಿರ್ದುದು,

ಸಾಂಗತ್ಯ: 

ಮೊಗ ಕನ್ನಡಿ ಮೊಗರಂಬವು ತಬ್ಬಿಯು 

ಬಗೆ ಬಗೆಯಾದ ಸುಖಾಸನವು 

ಮಿಗೆ ರನ್ನಪಾವುಡ ನೆತ್ತಿಯ ತಳುಕು 

ಅಗಲದ ಕಂದದೊಳ್ ಜಡೆಯು॥೩॥ 


ಪೊಡೆಯೊಳು ಕಟ್ಟಿದ ಪಟ್ಟೆಯು ಬಳಿಕಾ 

ಬಿಡದೆ ಸುತ್ತಿದ ಝಲ್ಲಿಯಿಂದಂ 

ನಡೆದುಬಂದುದು ಧನದನ ಘೋಟಕವನು

ಕಡು ಹೀಯಾಳಿಪ ತೇಜಿ॥೪॥ 


ಹರಿಯನು ಹತ್ತಿದ ಹರಿಯ ವೇಗದೊಳಾಗ 

ಹರಿಸಿದ ಲಹರಿಯೊಳಾಗ 

ಹರಿಯ ಹಯಂಗಳು ಹೆದರಿ ಹಮ್ಮೈಸಿತು 

ಹರಿಸುತ ಭಕ್ತನವಗೆ ॥೫॥ 


ವಚನ: ಚತುರಂಗಬಲ ಸಮೇತಮಾಗಿ ಅನೇಕ ಗರ್ವರಾಜಚಿಹ್ನೆಯಿಂದಂ ಸಚಿವಕುಮಾರ ಕುಮಾರಿತಿ ಮಿತ್ರ ಮಹೀಶರಿಂ ತನ್ನ ಪುರಂಧ್ರಿಯಿಂ ವೆರಸಿ ಮುಂದೆ ದೂವಾರಿಗಳ ಗಡಣದಿಂ ಸೂತ ಮಾಗಧರಿಂ ನಾನಾ ವಾದ್ಯರವಂಗಳಿಂದಂ ತಟಾಕಮಂ ಕುರಿತು ತೆರಳಿಯಾ ದೇವನಂಗಣಮಂ ಕಂಡಂ, 


ಸಾಂಗತ್ಯ: 

ಕಂಡನು ವಾಯುಪುತ್ರನ ಮಂದಿರವ ಭೂ 

ಮಂಡಲೃಧೀಶನು ಮತ್ತೆ 

ಚಂಡರಾವಣ ಗರ್ವಭಂಜನ ಜಯಯೆಂದು 

ತಂಡತಂಡದಿ ಪೊಗಳಿದನು॥೬॥ 


ವಚನ: ಆ ದೇವನ ಗುಡಿ ಕಣ್ಗೆಸೆದಿರ್ದುದು 

ಸಾಂಗತ್ಯ: 

ರತುನದ ಕಳಸವು ಪಚ್ಚೆಯ ಕುಡ್ಯವು

ನುತಪ್ರದಕ್ಷಿಣಗಳಿಂದ 

ಜತೆಯೊಳು ತೋರುವ ಮಿಸುನಿತೆನೆಗಳಿಂ 

ದತಿಶಯ ಬೀರಿತು ಕಣ್ಗೆ॥೭॥ 


ಅರಳಿದ ಕಣ್ಣುರುಗೋಪ್ಯದಿಂದಂ ಬಂದು 

ಹರಿಜನ ಪಾದಪದುಮವ 

ಸ್ಮರಿಸಿಯೆ ಮನದಲಿ ನುತಿಸುವ ಜಿಹ್ವೆಯೊಳು 

ವಿರಚಿಸುವೆನಿನ್ನು ನಾನು॥೮॥ 


ವಚನ: ಲೋಕಪವಿತ್ರಂ ಸಜ್ಜನರಾಜ್ಯಮಿತ್ರಂ ಇಮ್ಮಡಿ ಹನುಮಭೂವರನ ಪುತ್ರಂ ಸೀತಾರಾಮನೃಪಪೌತ್ರಂ ವಜ್ರಕಾಯನಂ ಕಂಡು ಮಲ್ಲಿಕಾಕ್ಷನನಿಳಿದನು. 


ಸಾಂಗತ್ಯ: 

ಹನುಮನ ಪಾದಪ್ರಕ್ಷಾವಲಂಬನವನು

ಅನುಕರಿಸಿ ಯಾಚಮನವನು

 ದಿನಪತಿಭಯಂಕರ ಗುಡಿಯನು ಪೊಕ್ಕನು

ತನುಜೆ ಸುತನು ಸಹಿತ॥೯॥ 


ವಚನ: ಆ ಪರಬ್ರಹ್ಮಂ ದಕ್ಷಿಣಾಭಿಮುಖನಾಗಿ ಲಂಕೆಯಂ ನೋಡುತ್ತಮಗ್ರಕುಂಡಲಿಲಾಂಗುಲದಿಂ ತೋರುತಿರ್ದಂ,  


ಸಾಂಗತ್ಯ: 

ಕರದೊಳು ಚಂದೂರದ್ರೋಣಿ ಭೂಭೃತ್ತನು 

ಧರಿಸಿಯೆ ಬಲಗೈಯನೆತ್ತಿ 

ತರಣಿವಂಶಜನನು ಮನದಲಿ ಪೂಜುತ 

ಭರದಿಂದ ನೆಲಸಿದನಲ್ಲಿ॥೧೦॥ 


ವಚನ: ಆಯಾಂಜನೇಯನನೀಕ್ಷಿಸಿ ಕರಕಂಜಂಗಳಿಂದಂ ಅಂಜಲಿಯಂ ಮಾಡಿ ಭಯಭಕ್ತಿ ಯಿಂದಂ ಸಿಂಧುಲಂಘನ ದಶಸ್ಯಂದನನ  ನಂದನನ ಚಿತ್ತಪ್ರಿಯಂ ಮನೋವೇಗಂ ಬಾಲಾರ್ಕಭಯಂಕರಂ ನೆಲಸಿರ್ದ ತಾಣಕ್ಕಂ ಸ್ತುತಿಸುತ್ತಂ ಬಂದು ಗಂಗೆಯಾಳ್ವಂ ಕಂಡಂ,


ಸಾಂಗತ್ಯ: 

ಕನಕ ಕೌಪೀನದ ನಡುವಿನೊಳ್ ಮೆರೆವಾ 

ಘನಕಾಂಚಿ ಪೀತಾಂಬರವು 

ವಿನುತ ಮಕುಟ ನವಭಾಪುರಿಯಿಂದಲಿ 

ಮನಗಣ್ಗೆ ಎಸೆದಿರ್ದನಂದು॥೧೧॥ 


ಸಾಂಗತ್ಯ: 

ಜಯ ಜಯ ರಾವಣ ರಾಮಭಂಜನ ಜಯ 

ಜಯ ಜಯ ರಾಮರಾಮೇಯ 

ಭಯಪರಿಹರಿಸಿದ ದೇವನೆ ಜಯಜಯೆಂದು 

ನಯಕೋವಿದನು ನುತಿಸಿದಂ ॥೧೨॥ 


ವ್ಯಾಕರಣ ಕೋವಿದ ವೇದಪುರುಷನೆ 

ಪಾಕಶಾಸನ ವಂದಿತನೆ 

ಲೋಕಾಕ್ಷ ಭಯಂಕರ ಜಯಜಯ ಎಂದುರೆ 

ಭೂಕಾಂತ ನುತಿಸಿದನಾಗ॥೧೩॥


ವಚನ: ಈ ಪರಿಯೊಳಾ ದೇವನ ಪ್ರತಿವೆಸರಿನವಂ ನುತಿಸಿಯನೇಕ ವಸ್ತ್ರಪ್ರತತಿಯನಾಭರಣಂಗಳಂ ಸಮರ್ಪಿಸಿ ನಾನಾವಿಧ ಪೂಜೆಗಳಂ ಮಾಡಿ ದೀಪಾರಾಧನೆಯಭಿಷೇಕಂಗಳಂ ಮಾಡಿಸಿ ಸತಿಸುತಸುತೆಯರ್ವೆರಸಿಯಾ ಭೂಪಂ ಚಾಮರಾಲವಟ್ಟಾದಿ ನಾನಾ ವಿಧೋಪಚಾರಂಗಳಂ ಮಾಡಿಸಿಯಾ ದೇವಂಗಂ ಶ್ಶ್ವತಮಾದ ಕನಕಾಶ್ವಗಜವಾಹನಂಗಳನಿತ್ತು ಸಿದ್ಧಪುಷ್ಪಕದಂತೆ ಪೊಸ ಪ್ಷ್ಪಕಮಂ ಸಮರ್ಪಿಸಿ ತನ್ನಯ ಮೋಹದ ಪುತ್ರಿಗಾ ದೇವನ ಪೆಸರಿಟ್ಟು ಮತ್ತಂ ತಾರ್ಕ್ಷ್ಯನ ಗರೂವಾಪಹಾರಿಯೆಂದು ತಾರ್ಕ್ಷ್ಯಾರೋಹಣವಂ ಮಾಡಿಸಿ ಹರಿಸ್ಯಂದನನಿವನೆಂದು ಸ್ಯಂದನ ವಾಹನವಂ ಮಾಡಿಸಿ ಅಪರಹಂಸನೆಂದು ಹಂಸವಾಹನಮಂ ಮಾಡಿಸಿ ಅಂಗಜನಭೇದ್ಯನೆಂದು ಗಜವಾಹನವಂ ಮಾಡಿಸಿ ಚತುರ್ಮುಖಪತ್ರಂ ಕೋಮಳಗಾತ್ರಂ ಸಚ್ಚರಿತ್ರಂ ಲಕ್ಕಮಾಂಬಾಪುತ್ರಂ  ಅಲ್ಲಿರುವ ರಾಡ್ಗೇಹಮಂ ಸೇರಿದನಿಂತಿರಲ್ಕೊಂದು ದಿನಂ ಸೂರ್ಯನುದಯಗಿರಿಯನಡರಿದಂ. 


ಸಾಂಗತ್ಯ: 

ಸರಸಿಜ ಮುಚ್ಚಿತು ಮುಖಗಳ ನೈದಿಲು 

ಸರಸದಿ ವಿಕಸಿತಮಾಗೆ 

ನಿರುತದಿ ಚಕ್ರವಾಕದ ಕೂಟ ಸಡಿಲಿತು 

ತರಣಿ ಪುಟ್ಟಿದ ಸಮಯದಲಿ॥೧೪॥ 


ಖರಕಿರಣ ಸೇವಿಸೆ ಜೊನ್ನವಕ್ಕಿಗಳ್ 

ಮೆರೆದುದು ತಾರಗೆಯಂದಂ 

ಶರನಿಧಿ ಪೆರ್ಚಿತು ಶಶಿಕಾಂತ ಶಿಲೆಗಳು 

ಒರೆತುದು ಸೂರ್ಯನುದಯದಿ॥೧೫॥ 


ಕಡಲು ವಡಬನನು  ಸೇರಿದನು ನಿಧಿಯ 

ಬಿಡದೆಯೆ ಮರೆವೊಕ್ಕ ರವಿಯು

ನಡುಗುತೆ ಶಿವ ಗಜಚರ್ಮವಪೊತ್ತನು 

ಪೊಡವಿಯ ಕೀರ್ವುತ್ತ ಮಗೆಗೆ॥೧೬॥ 


ಹರಿ ಗುಹೆಯನು ಸೇರೆ ಬಾಂದಲೆ ಗುಣವು 

ನಿರುತದಿ ಪೊಕ್ಕ ಪಾತಳದ 

ತಿರುಗುವ ಮರೆಗಳ ಗೆಣೆಯನು ಲೋಕವ 

ಮರುಗುತ ಹಿಮದ ಹಾವಳಿಗೆ॥೧೭॥ 


ನೆನಕೆ: 

ಸಂಪಾದಕರು, 

ವೈ. ಸಿ. ಭಾನುಮತಿ, 

ಕುವೆಂಪು ಅಧ್ಯಯನ ಸಂಸ್ಥೆ,  

ಮೈಸೂರು ವೆಶ್ವವಿದ್ಯಾಲಯ,

















 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ