ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶುಕ್ರವಾರ, ಜೂನ್ 9, 2023

ಪರ್ವತೇಶನ ಪ್ರಭುವಿನ ಸಾಂಗತ್ಯ

ಪರ್ವತೇಶನ ಪ್ರಭುವಿನ ಸಾಂಗತ್ಯ


ಪ್ರಭುವಿನ ಸಾಂಗತ್ಯದ ಕರ್ತೃ ಪರ್ವತೇಶ ಅಥವಾ ಪರ್ವತೇಶ್ವರ. ಕನ್ನಡ ಸೃಹಿತ್ಯ ಚರಿತ್ರೆಯಲ್ಲಿ ಈ ಹೆಸರಿನ ಐದು ಜನ ಕವಿಗಳು ದೊರಕುತ್ತಾರೆ. (೧)ಪರ್ವತದೇವ-೧೫೭೮, (೨) ಸಂಪಾದನೆಯ ಪರ್ವತೇಶ್ವರ (೧೬೯೮) (೩) ಸಂಪಾದನೆಯ ಪರ್ವತಾಚಾರ್ಯ (೧೭ ನೆಯ ಶ) (೪) ಎಳಂದೂರು ಪರ್ವತ ಶಿವಯೋಗಿ (೧೭ ನೆಯಶ) (೫) ಪರ್ವತೇಶ್ವರ ( ೧೭ ನೆಯ ಶ) ಇವರೆಲ್ಲ ಬೇರೆ ಬೇರೆ ಕಾಲ, ಪ್ರದಂಶದವರೃಗಿದ್ದರು. ಬೇರೆ ಬೇರೆ ಕೃತಿಗಳನ್ನು ರಚಿಸಿದ್ದಾರೆ.  


ಈ ಕಾವ್ಯದ ವಸ್ತು ಪ್ರಭುದೇವರ ಜೀವನ-ಸಾಧನೆಗೆ ಸಂಬಂಧಿಸೆದುದು. ಇದನ್ನು ಕವೆ ನೇರವಾಗಿ ಚಾಮರಸನ ಪ್ರಭುಲಿಂಗಲೇಲೆಯಿಂದ ಎತ್ತಿಕೊಂಡಿದ್ದಾನೆ.ಅದೂ ಆರಂಭದ ಎರಡರಿಂದ ಏಳರ ವರೆಗಿನ ಆರು ಗತಿಗಳಲ್ಲಿ ಬರುವ "ಮಾಯಾ ಕೋಲಾಹಲ" ಪ್ರಸಂಗವನ್ನು ಮಾತ್ರ ಆಯ್ದುಕೊಂಡು ಸ್ವತಂತ್ರ ಕಾವ್ಯದ ಸ್ವರೂಪವನ್ನು ಕೊಟ್ಟು ನಿಲ್ಲಿಸಿದ್ದಾನೆ. ಈ ಕಾವ್ಯ ಸಾಂಗತ್ಯ ರೂಪದಲ್ಲಿದ್ದು, ೬  ಸಂಧಿ, ೮೮೫ ಪದ್ಯಗಳಲ್ಲಿ ಹಬ್ಬಿಕೊಂಡಿದೆ. ಕಥಾವಸ್ತು ತೀರ ಚಿಕ್ಕದು. ಊದನ್ನು ವರ್ಣನೆಗಳಿಂದ ವಿಸ್ತರಿಸಲು ಪ್ರಯತ್ನಿಸಿದ್ದಾನೆ. 


ಪ್ರಭುದೇವರನ್ನು ಕುರಿತು ಇದುವರೆಗೆ ಲಭ್ಯವಾಗಿರುವ ಕೃತಿಗಳು, ಹಾಗೂ ಕರ್ತೃಗಳ ಸಹಿತ. 


೧) ಪ್ರಭುದೇವರ ಸ್ತೋತ್ರದ ವಚನಗಳು- ಸಂಪಾದನೆಯ ಸಿದ್ಧವೀರಣ್ಣದೇವರು

೨) ಪ್ರಭುದೇವರ ರಗಳೆ - ಹರಿಹರ

೩) ಪ್ರಭುದೇವರ ಶೂನ್ಯ ಸಂಪಾದನೆ- ಶಿವಗಣ ಪ್ರಸಾದಿ ಮಹದೇವಯ್ಯ

೪) ಪ್ರಭುಲಿಂಗಲೀಲೆ- ಚಾಮರಸ

೫) ಪ್ರಭೈದೇವರ ಪುರಾಣ - ಎಳಂದೂರು ಹರಿಹರೇಶ್ವರ

೬)ಪ್ರಭುಲಿಂಗ ಲೀಲೆಯ ಸಾಂಗತ್ಯ- ರಾಚಯ್ಯ

೭) ಪ್ರಭುದೇವರ ಸಾಂಗತ್ಯ-  ?

೮) ಪ್ರಭುವಿನ ಸಾಂಗತ್ಯ- ಪರ್ವತೇಶ ಈಗಿನ ಕಾವ್ಯದ ಕರ್ತೃ

೯) ಪ್ರಭು ನಟನಾ ತಾರಾವಳಿ- ಮರಿರಾಚವಟ್ಟೀಶ

೧೦) ಅಲ್ಲಮಪ್ರಭು ( ಸಣ್ಣಾಟ) 

ಇವುಗಳಲ್ಲಿ: ಎರಡು ಪರಂಪರೆ ನಿರ್ಮಾಣವಾಗಿದೆ,

೧) ಹರಿಹರನ ಪರಂಪರೆ 

೨) ಚಾಮರಸನ ಪರಂಪರೆ


ಶರಣರ ಸಂಕುಲದಲ್ಲಿ ಅಲ್ಲಮಪ್ರಭುದೇವರಿಗೆ ಒಂದು ವಿಶಿಷ್ಟವಾದ ಸ್ಥಾನ ಮೀಸಲಾಗಿದೆ. ವ್ಯೋಮಮೂರುತಿ, ವೈರಾಗ್ಯ ನಿಧಿ, ಅನುಭಾವಮೇರು ಎನಿಸಿದ ಅವರು ಬಸವಣ್ಣನವರು ರಚಿಸಿದ ಅನುಭವ ಮಂಟಪದ ಅಧ್ಯಕ್ಷರಾಗಿ, ಶರಣರು ಕೈಕೊಂಡ ಮಾನವ ಚಲ್ಯಾಣದ ಮಹಾಕ್ರಾಂತಿಗೆ ಮಾರ್ಗದರ್ಶಕರಾಗಿ ನಿಂತ ಮಹಾನುಭಾವರು. ಅವರದು ಬೆಡಗಿನ ಬದುಕು.ಬೆರಗಿನ ವ್ಯಕ್ತಿ. ಬೆಳಕಿನ ಬರಹ. ಅದನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟದ ಕಾರ್ಯ. 


ಸಂಧಿ: ಒಂದು,


ಶ್ರೀಯುಮೆವದನಾಬ್ಜಭೃಂಗ ತಿಂಗಳಗಣ್ಣ 

ಶ್ರೀಪತಿಗರ್ಧಾಂಗನೆ 

ಶ್ರೀಗಿರಿವಾಸನೆ ಶ್ರೀಮಲ್ಲಿಕಾರ್ಜುನ 

ಶ್ರೇಯೆಂಬ ಪದವನಿತ್ತೆನಗೆ॥೧॥  


ನಿನ್ನ ನೆನೆವಕೃತಿಯುನ್ನತವಾಗಲಿ 

ಚಿನ್ಮಯ ಚಿದ್ರೂಪ ಶಿವನೆ 

ಪನ್ನಂಗಧರ ಚೆನ್ನಮಲ್ಲಿಕಾರ್ಜುನ ಕೊಡು 

ಇನ್ನು ಈ ಕೃತಿಗೆ ಮಂಗಳವಾ॥೨॥ 


ವಿಘ್ನವೀಕೃತಿಗೆ ಬಂದರೆ ನಿರ್ವಿಘ್ನವಮಾಡು 

ಭರ್ಗರ ವಹಿಗರ್ಭಧರನೆ

ಭರ್ಗೋದೇವನ ಕರದಲಿ ಕರಿಮುಖನಾದ 

ವಿಘ್ನೇಶ್ವರ ಕೊಡು ಮತಿಯ॥೩॥ 


ಅಕ್ಷಿಪಾವಕದುದಯಿಸಿದ ಮೋಕ್ಷಾಂಗನೆ 

ದಕ್ಷಸುರನಶೀಕ್ಷಿಸಿದಾ 

ಇಕ್ಷುಚಾಪನ ವೈರಿಯ ಸುತ ವೀರೇಶ 

ರಕ್ಷಿಸು ಮತಿಗೆ ಮಂಗಳವಾ॥೪॥ 


ರಾಜವೈರಿಯ ರಿಪು ಸಿಖಿಯ ಶಿರದಿ ಪೊತ್ತ 

ರಾಜೀವ ಗೋರಾಜಪುತ್ರಿ 

ರಾಜಮಾತೆಯ ಕುಂಡನದ ರಾಜನರ್ಧಾಂಗಿ 

ಸೋಜಿಗ ಮತಿಯೀವುದೆನಗೆ॥೫॥ (ಪಾರ್ವತಿ)


ಸಪ್ತಕಂಜದೊಳು ಸಪ್ತೆರಡು ಪಾವಕ ಗೋ 

ಸಪ್ತಮಿತ್ರರು ವಂದಿಸಿ ಗೋ 

ಸಪ್ತ ಸಪ್ತದೊಳು ತ್ರಿಗಳದ ಶತ್ರುವೆ ಗೋ 

ಗಾತ್ರ ಕಾಯನೆ ಸಲಹೆನ್ನಾ॥೬॥ ( ಶಿವ) 


ತ್ರಿಯಕಾಯನೆ  ತ್ರಿವಣ್ಣ ತ್ರಿಯಕ್ಷನೆ 

ತ್ರೀತ್ರೀತ್ರೀವಕ್ತ್ರನ ಪಿತನೆ 

ತ್ರಿಮೂರ್ತಿಯಾಗಿ ಮರ್ತ್ಯರ ಸಲಹಲಿ ಬಂದ 

ಶ್ರೀಉಮೆವರ ಸಲಹೆನ್ನಾ॥೭॥ 


ಆರಡಿಗಣ್ಣನೆ ಆರಡಿಗಣ್ಣ ಗರಳನೆ 

ಆರಡಿ ಭೋಜ್ಯದಣುಗನೆ 

ಆರಡಿ ವಂದಿತಬ್ಜದೊಳಗಿತ್ತಭವನೆ 

ರೂಢಿಗಧಿಕ ಕೊಡು ಮತಿಯ॥೮॥ 


ಕೇಸರಿಯಾಸನೆ ಕೇಸರಿಮಧ್ಯನೆ 

ಕೇಸರಿಯಕ್ಷಪಣೆಗನೆ 

ಕೇಸರಿ ಸಖನನುಂಬನ ವೈರಿಯ ಪೆತ್ತ

ಕೇಶವಪ್ರಿಯ ಕೊಡು ಮತಿಯ॥೯॥ 


ಕರಿಸುರ ಮರ್ದನ ಕರಿವದನ ಪಿತ 

ಕರಿಯಂಬರವ ಪೊದ್ದೆಯಭವಾ 

ಕರಿರಿಪು ಶಿರದಿ ಮಂಡಿತ ವಿರುಪಾಕ್ಷನೆ

ಕರುಣಿಸು ಮತಿಗೆಶಮಂಗಳವಾ॥೧೦॥


ಹರಶರಣ ಹರಣನು ವಿರುಪಾಕ್ಷನ 

ಶರಿರದೊಳಗೆ ಐಕ್ಯವಾದ 

ಹರಕವಿಗಳ ಭೃತ್ಯನಾಗಿಪ್ಪ ಹರಿದೇವ

ಕರುಣಿಸು ಕೃತಿಗೆ ಮಂಗಳವಾ॥೧೧॥ 


ಶೂಲಿಯ ಭಕ್ತರ ಬಾಲನ ತೊದಲ್ನುಡಿ 

ಸೋಲವಿದೆಂದು ಜರಿಯದೆ 

ನೀಲಕಂಧರನ ಕೃತಿಯ ಕೇಳಿ ಕವಿಗಳು 

ಸಾಲದ ಮತಿಯ ತಿದ್ದುವುದು॥೧೨॥ 


ವೇದ ಶಾಸ್ತ್ರಾಗಮಿಕರು ಕೇಳಿ ಕೃಪೆಯಿಂದ 

ವೇದಕತೀತನ ಕೃತಿಯಾ 

ಓದಿಸಿ ನೋಡಿ ತಪ್ಪಿದ್ದರೆ ಕಳವುದು 

ಮೇದಿನಿಯೊಳಗೀ ಕೃತಿಯಾ॥೧೩॥ 


ಚಂದನತರುವ ಶೇಷನು ಮಧುಕರ ಪೊದ್ದು 

ವಂದದಿ ಕವಿವ ಪಾಮರಕೆ 

ಅಂದದ ಸುಗುಣರಂತಿರೆ ಕೋವಿದರ್ಗಳ 

ಗೊಂದಣಕಾ ನಮಿಸುವೆನು॥೧೪॥ 


ಪಾವುಂಡ ವಿಷವೃಕ್ಷವೆಮ್ಮಸರಿಯೆಯೆಂದು 

ಆ ವೃಕ್ಷ ಜರಿಯಲು ಕುಂದೆ 

ಗೋರಕ್ಷಕರು ಹಳಿಯಲು ಕೃತಿ ಕೆಡುವದೆ 

ಗಾಯಕಸ್ತೋಮರಾಲಿಪುದು॥೧೫॥

 

ಧನಂಜಯ ಛಂದ ನಿಘಂಟು ವ್ಯಾಕರಣ 

ಘನರಾ ನಾಚಿರಾಜಮರುಕನಾ

ಇನಿತು ಕಕ್ಕೋಕಶಾಸ್ತ್ರವ ಕೇಳಿದವನಲ್ಲ 

ಘನಮಹಿಮನ ನೆನದುಸುರ್ದೆ॥೧೬॥ 


ಉಮೆವರ ಪಾದಸರೋಜಕೆರಗುವಳಿ 

ವಿಮಲಾಂಗ ಪರ್ವತೇಶ್ವರನು 

ತಮಜೂಟಮಿತ್ರ ವೆಶಂಷನ ಕೃತಿವೇಳ್ದ 

ಮಮಕರಿಸುವುದು ಬಲೂಲವರು॥೧೭॥ 


ಮೊದಲಿಂದ ಕೇಳ್ದ ಸ್ತೋತ್ರಗಳೆಂಬ ಕುಂಭಕೆ 

ಮಧುರ ಸಕ್ಕರೆ ಸೋನೆಗರೆವ 

ತುದಿಮೊದಲಾಗಿ ಕೇಳ್ದವರ ಪಂಚಾಮೃತ 

ನದಿಯೊಳಗದ್ದಿ ಮುಳುಗಿಪ್ಪೆ॥೧೮॥ 


ಎಲ್ಲ ಪುರಾತರ ಶ್ರೀ ಚರಣವನು ಮನ 

ದಲ್ಲಿ ನೆನೆದು ಹರುಷದಲಿ 

ಅಲ್ಲಮಪ್ರಭುರಾಯನ ಸಂಗತ್ಯವ 

ಸೊಲ್ಲಿಸುವೆನು ಬಲ್ಲಂತೆ॥೧೯॥ 


ರೊಕ್ಕವನೀಯದೆ ಮಾಣಲಿ ಗುಣಮದ 

ರಕ್ಕರಿಂದಲಿ ಕೇಳಬೇಕು 

ಬಿಕ್ಕನೆ ಬೀಗಿ ಗರ್ವದಲಿಹ ಖೂಳರ 

ಇಕ್ಕುವೆ ಕಾವ್ಯಕೆ ಬಲಿಯ॥೨೦॥ 


ಸಪ್ತವಾರುಧಿಯ ವಿಸ್ತೀರ್ಣವ ಪೊಗಳ್ವೊಡೆ 

ನೆತ್ತಿ ವಾಣಿಗೆಗಳವಲ್ಲಾ 

ಮೊತ್ತದ ಬುದ್ಭುದ ತೆರೆನೊರೆ  ತುಂತುರು 

ಒತ್ತುವಭರತದಿಂದೆಸೆಯೆ ॥೨೧॥ 


ಸುಳಿದು ಮುಳುಗಿ ಘುಳುಘುಳಿಸುವ ನಭವನ

ಪ್ಪಳಿಸಿ ಪೊಯ್ವುತ ಭೋರ್ಗರೆದು 

ಸೆಳೆದು ಹಿಂದಕೆ ಹೋಗಿ ತುಳುಕುವ ವಾರುಧಿ

ಕಳೆಯ ನಾನೇನ ವರ್ಣಿಸುವೆ॥೨೨॥ 


ನೀರಾನೆ ಮತ್ಸ್ಯ ಕೂರ್ಮಂಗಳು ಹರಿಹರಿ 

ನೀರಜ ಕುಮುದ ರತ್ನಗಳು 

ನೀರ ಮಾನವನಾನೆಗಳಿಂದ ವಾರುಧಿ 

ಭೋರೆಂಬ ಘೋಷಣವೆಸೆಯೆ॥೨೩॥ 


ಮಾಯ ಕಿರಣರಿಪು ರಾಹುಕ ಮೊದಲಾಗ

ಹೋಯೆಂದು ಕೊರ್ಬಿಯಾಗಸಕೆ 

ಬೋಯೆಂದು ಭೋಂಕರಿಸಣುಗಗೆ ಮಾರ್ಗೆಯ 

ಪಯೋಧಿಯು ತಾ ರಾಜಿಸಿತು॥೨೪॥ 


ಅತಳದಿ ವಿತಳ ಪರದು ಸುತಳ್ಕರಿದೊಡೆ 

ಮಹಿತಳ ಪೆರ್ಕಾಲ್ಕಂಬಾ 

ತಳ ತಳ ಕಟಿಲು ತೇರಸತಳ ಪಾತಾಳ 

ಸುಳಿ ಕುಕ್ಷಿ ರಜತಾದ್ರಿ ಗಿರಿಯಾ॥೨೫॥ 


ಭೂಲೋಕ ಉರಗ ಭುವರ್ಲೋಕ ಯಮಲೋಕ 

ಉರುತರವೆನಿಸುವ ಕರ್ನಾ 

ಜನರ್ಲೋಕ ಸತ್ಯಕಂಠರ್ಲೋಕ ಗಿರಿಶಿರ 

ಪರಿಕ್ಷಿಸುವರೆಯಜಗಳವೆ॥೨೬॥ 


ಅಯಿಶತಕೋಟಿ ಯೋಜನವಳಯದಲೊಂದು 

ಅಯಿಮೊಗನಿಹವಾಸ ಇಹುದು 

ಮೈವೆಳಗಿನ ಮಣಿಮಾಡವ ಪೊಗಳ್ವಡೆ 

ಅಯಿಶತನಾಲಿಗೆಗರಿದು ॥೨೭॥ 


ನಿತ್ಯವೆಂಬ ಕೋಟೆಗೆ ಸುತ್ತ ಮೆರೆದಿಹ

ತತ್ವಯೆಂಬ ಅಗಳುಗಳು 

ಸತ್ಯವೆಂಬ ಬಾಗಿಲು ಸಹಜದ ವೀದಿಯು 

ಮುಕ್ತಿಯೆಂಬ ನಿಳಯಗಳು ॥೨೮॥ 


ಚೀರಣರತ್ನದ ಬೋದಿಗೆ ಜಂತೆಯ 

ಧಾರವಟ್ಟವು ಪುಷ್ಯರಾಗ 

ಓರಣದಲಿ ವಜ್ರದ ಕದ ಮದನಂಕ 

ಚಾರು ಚಂದ್ರನ ಚಾವಡೆಯೆಸೆಯೆ ॥೨೯॥ 


ಪದ್ಮ ಭಿತ್ತಿಗೆ ಪದ್ಮ ಸೋದರ ಗಾರೆಯು 

ಪದ್ಮಮಿತ್ರನ ನೆಲೆಗಟ್ಟು 

ಪದ್ಮವೈರಿಯ ಒಡ್ಡೋಲಗದ ಭಿತ್ತಿಯ ಮೇಲೆ 

ಪದ್ಮಸೋಂಕದೆ ಪದ್ಮವಿಹುದು ॥೩೦॥ 


ಸೋಮರಾದಿತ್ಯರುಗಳು ಬೇಡೆಂದಾಗ 

ನೇಮದಿ ಕಟ್ಟಿದ ಗೃಹದಿ 

ಸಾಮಗಾನಪ್ರಿಯ ಸಮಳಾಂಗ  ಪ್ರಿಯನು 

ಪ್ರೇಮದಿ ಕುಳಿತನೋಲಗದಿ॥೩೧॥ 


ಕೋಟಿರಾಜನ ಹರಿವಣ್ಣನೆ ಹೊತ್ತಿಹ

ಕೋಟಿರಾಜನ ತೇಜದಂತೆ 

ನಾಟಕಧರನ ಠಾಣೆಯದಲಿಹ ಬೆಟ್ಟವ 

ಏಪರಿ ಪೊಗಳ್ವೆನಗರಿದು॥೩೨॥ 


ಪರಶು ಖಡ್ಗವು ಡಕ್ಕೆ ಮುರುಗ ಹರಿಹರಿ 

ಕರದಲಿ ಪಿಡಿದು ರಾಜಿಸುತಾ 

ಉರದ ಸುರರ ಶಿರಮಾಲೆ ಗರಳದಲಿ 

ದೊರೆತನವನೇನ ವರ್ಣಿಸುವೆ॥೩೩॥ 


ಗಿರಿಜವರರು ಕೋಟಿ ಅಜಕೋಟಿ ಹರಿಕೋಟಿ 

ಸುರರು ಖಚರರೊಂದು ಕೋಟಿ 

ಗರುಡ ಗಂಧರ್ವ ಕಿನ್ನರರಸಂಖ್ಯಾತರು 

ನೆರೆದುದು ಹರನೋಲಗದಿ॥೩೪॥ 


ಸಿದ್ಧರುಗಳು ಕೋಟಿ ಸಾಧ್ಯರುಗಳು ಕೋಟಿ 

ರುದ್ರರು ಕೋಟಿ ಕೋಟೆಸೆಯೆ 

ಭದ್ರರು ಕೋಟಿ ಚಿದ್ರೂಪನೋಲಗದೊಳು

ಹೊ ದ್ದಿದರಾ ನಿಮಿಷದಲಿ॥೩೫॥ 


ಗಂಗೆವಾಳರು ಕೋಟಿ ಭೃಂಗಿಪ್ರಿಯರು ಕೋಟಿ 

ಅಂಗಾಲಲೋಚನ ಕೋಟಿ 

ಕೆಂಗಿಡಿಗಣ್ಣು ಪಣೆಯಲೆಸೆವರು ಕೋಟಿ 

ತುಂಗ ಮಕುಟನೋಲಗದಿ॥೩೬॥ 


ನಂದಿವಾಹನ ಕೋಟಿ ನಂದಿಮುಖರು ಕೋಟಿ 

ಚಂದ್ರಾರ್ಕಕೋಟಿ ಕೋಟೆಸೆಯೆ 

ಕಂದರ್ಪ ಕೋಟಿ ಕಂದರ್ಪದಹನ ಕೋಟಿ 

ಬಂದುದು ಶಿವನೋಲಗಕೆ॥೩೭॥ 


ನೊಸಲ ನಯನ ದಶಭುಜ ಪಂಚವಕ್ತ್ರರು 

ವೃಷಭವಾಹನ ಕಾಮದಹನಾ 

ಭಸಿತಲೇಪನ ರುದ್ರಕೋಟಿಗಳಿರ್ದರು 

ಶಶಿಧರ ಶಿವನೋಲಗದಿ॥೩೮॥ 


ಸುರರನೊತ್ತುತ ಗರುಡರ ಶ್ರುತಿ ಯಕ್ಷರ 

ನೆರವಿಯ ಹತ್ತೆ ಸಾರಿಸುತಾ 

ಉರಗರಹೆಡೆಯೆತ್ತದಿರುಯೆಂದು ಚಂಡೇಶ 

ಮೊರೆದು ಗರ್ಜಿಸಿದನೋಲಗದಿ॥೩೯॥ 


ಉಲುಹೇಕೆ ಹರಿಯಜ ಬಲುಹೇಕೆ ಖೇಚರ 

ಸಲಿಗೇಕೆ ಕರಿಮುಖ ನಿನಗೆ 

ಗಲಭೇಕೆ ಅಮರರಲಿಯೆನುತ ಚಂಡೇಶ 

ಉಲಿದು ಗರ್ಜಿಸಿದನೋಲಗದಿ॥೪೦॥ 


ಇಂತು ಪ್ರಮಥಗಣಸ್ತೋಮ ಸಾರಿತು ನಿ 

ಶ್ಚಿಂತ ನಿರ್ಮಾಯ ನಿತ್ಯತೃಪ್ತಾ 

ಮುಂಚಿತು ಮುನಿನಿಕರವುಯೆಂದು ಚಂಡೇಶ 

ಅಂತರಾಮಿಗೆ ಬಿನ್ನೈಸಿದನು॥೪೧॥ 


ಬಾರದಿರಲು ತೇಜದಿ ಬರಹೇಳೆನೆ 

ಭೋರನೈದನು ಈಶನೆಡೆಗೆ 

ಮಾರಾಂತರಾಯಗೆ ಆಯುಷ್ಯ ಬಪ್ಪಂತೆ 

ನಾರದ ಪಿಡಿದ ವೀಣೆಯನು॥೪೨॥ 


ಮಧುರ ಮಂದರ ಕೂಡಿ ಸಪ್ತಸ್ವರದಲಿ 

ಮುದದಿ ನಾಟಿಯನಾಳಾಪಿಸುತ 

ಒದವಿದ ಪ್ರಮಥರ ರೋಮಕಂಚುಕಿಗಳು 

ಬೆದರುಬ್ಬಿನಲಿ ಒದರಿದವು॥೪೩॥ 


ಹರಿಯುರದಲಿ ಕೃಷ್ಣ ಹರಿಯೊರಗಿರಲಾಗ

 ಹರಿವಾಸ ಕಂಡು ಸೈರಿಸದೆ

ಬರಸೆಳೆಯಲು ವಿರಹದಿ ಹತ್ತೆಬಂದಂತೆ 

ಕರದಲಿಕ್ಕಿದ ವೀಣೆಯೆಸೆಯೆ॥೪೪॥ 


ಬತ್ತೀಸರಾಗ ಮೆಟ್ಟುಗಳ ನೆತ್ತಿಯ ಮೇಲೆ 

ಒತ್ತುವ ಸಾಲ್ವೆಡದಂತೆ 

ಸುತ್ತುವ ಪರಬೊಮ್ಮಪಿರಿದಾಗಿ ತಿರುಗುವ 

ವಿಸ್ತಾರವೇನ ವರ್ಣಿಸುವೆನು॥೪೫॥ 


ಅದರಿಂದ ಕೇಳ್ಮೆಟ್ಟಿ ಮುಟ್ಟಿ ರಾಮಕ್ರಿಗಳ 

ಮುದದಿ ಪಾಡಲು ತೊದಲ್ನುಡಿಯಾ 

ಹದಡಿಕ್ಕಿ ಮೆಟ್ಟಿಂದ ದೇಶಿಯ ಪಾಡಲು

ಮದಮರೆದೊರಗಿತು ಗಣರು॥೪೬॥ 


ಶಂಕರಾಭರಣವ ಪಾಡೆ ಕಂಬಳೇಶ್ವರ 

ಝೇಂಕರಿಸಿದ ಸ್ತೋತ್ರದಲಿ 

ಕುಂಕುಮಾಂಕಿತ ಚೆಂಡೆಯು ಒರಗಲಾಗ 

ಶಂಕರ ಶಂಕಿಲ್ಲದಿಹನು॥೪೭॥ 


ಗೋಪರೋಗೆ ಗೋಪತಿಸ್ತೋಮವರಗಿತು 

ಗೋಶರೀರದ ಪಕ್ಷಿಯೊರಗೆ 

ಗೋಪತಿಯೊರಗಿದಡೇವೆನೆ ನಾರಂದ 

ಗೋಪ್ರಭು ಬಂದನೋಲಗಕೆ॥೪೮॥ 


ಅಂದಣವೇರಿ ಅನೇಕ ದೇವರುಗಳ 

ಗೊಂದಣ ಸಕಲವಾದ್ಯಗಳು 

ಮುಂದೆ ಮೊಳಗಿ ಚತುರ್ವೇದ ಕೊಂಡಾಡಲು 

ಬಂದನಲ್ಲಮನೋಲಗಕೆ॥೪೯॥ (ಈಗ ಅಲ್ಲಮನ ಪ್ರವೇಶ) 


ನಿರ್ಲೇಪ ನಿರ್ದೇಹ ನಿರ್ದೋಷ ನಿರ್ಮಲ 

ನಿರ್ಲಭವಂದ್ಯ ಪಾದಪನೆ

 ಸ್ವರ್ಲೋಕಪಾಲ ಮೂಲೋಕ ರಕ್ಷಾಮಣಿ 

ದುರ್ಲಭ ಪ್ರಭುವೆ ಚಿತ್ತೈಸು॥೫೦॥ 


ಮಾಯಾಕೋಳಾಹಳ ಮಾಯಕ ಮರ್ದನ 

ಮಾಯಕ ಪೊದ್ದದಭವ 

ಮಾಯವಾದಕೆ ಸಿಲುಕದ ಅಲ್ಲಮಪ್ರಭುರಾಯ 

ಸಿಂಹಾಸನವೇರೆನಲು॥೫೧॥ 


ಚಂಡೇಶ ನಿಲ್ಲು ನಿಲ್ಲೆಲೊ ನಿನ್ನ ಗರ್ವದಿ

ಕೊಂಡಾಡಿದೆ ನಿನ್ನ ಬಿರುದಾ 

ಗಂಡುರೂಪಾದವರೆನ್ನ ಮಾಯೆಯ ಕೈಯ 

ಬಂಡಾಗದವರಾರು ಜಗದಿ॥೫೨॥ 


ಶರಿರವಿಡಿದ ನರಪಶುಗಳೆನ್ನಯ ತೊತ್ತಿರು 

ಸೆರೆವಿಡಿದರೆ ಕಾಮ ಮರುಳು 

ಹರಿಯಜಸುರರು ಮೊದಲಾಗಿ ಎನ್ನಯ 

ಚರಣಕಿಕ್ಕಿದ ತೊಡರ್ಬೊಂಬೆ॥೫೩॥ 


ಯೋನಿಜರೆಂದೆಂಬ ಪೊತ್ತ ಪಶುಗಳೆಲ್ಲ 

ನಾಘನತಾಘನವೆಂದು

ಹೀನಯೋನಿಯಲಿ ಅನಂತ ಜನ್ಮದಿ ಬೀಳ್ವ 

ಜ್ಞಾನ ಬೇಡವೋ ಚಂಡೇಶ॥೫೪॥ 


ನಾದ ಮೊದಲೊ ಬಿಂದು ಮೊದಲೆಂಬ ಬ್ರಹ್ಮದ 

ಭೇದಬಲ್ಲರೆ ಮಾತನಾಡು 

ಮೂದೇವರದೇವ ಮಾಯಗಂಡನಕೂಡೆ 

ವಾದ ಬೇಡವೆ ಗಿರಿಜಾತೆ॥೫೫॥ 


ಎಲ್ಲ ಗಣಂಗಳ ನೋಡಿಯು ಮಹದೇವಿ 

ವಲ್ಲಭನನು ಕೇಳಿದಳು 

ಬಲ್ಲಿದರಿವರೊಳಗಾರು ಎನ್ನಯ ಮಾಯೆ 

ಗಲ್ಲಿ ಸಿಕ್ಕದರು ಚಿತ್ತೈಸು॥೫೬॥ 


ಕೇಳು ಗಿರಿಜೆಯೆಮ್ಮಿಂದ ಬಲ್ಲಿದ ಮಾಯಾ 

ಕೋಳಾಹಳನೆಂಬ ಬಿರಿದು

 ಹೇಳಲರಿಯೆನಾತನ ಚಾರಿತ್ರವ 

ಕೋಳುಹೋಗನು ನಿನಗಿನ್ನು॥೫೭॥ 


ಕಂಡು ಬಲ್ಲೆನು ಆತನ ಚಾರಿತ್ರದ ಪರಿಯನು 

ಕೊಂಡಾಡುವಿರೆನ್ನ ಮುಂದೆ 

ಬಂಡುಮಾಡಿಯೆ ಸೋಲಿಸುವೆನಲ್ಲಮನ ಭೂ 

ಮಂಡಲದೊಳು ನೇವು ಮೆಚ್ಚ॥೫೮॥ 


ಏಸುಪರಿಯಲಾದರು ಪೊಗಳುವಿರಿ ಸ 

ರ್ವೇಶ ಚಿತ್ತೈಸಲ್ಲಮನಾ 

ಭಾಷೆಯ ಬಿಡಿಸಿ ಸೋಲಿಸುವೆನೆನುತ ಪರ 

ಮೇಶಗೆ ಗಿರಿಜೆ ನುಡಿದಳು॥೫೯॥ 


ಆದರೆ ಚಿತ್ತೈಸೆನುತ ಪಾರೂವತಿದೇವಿ 

ಹೋದಳು ತನ್ನರಮನೆಗೆ

ಮೇದೆನಿಯೊಳಗೆ ಅಲ್ಲಮನ ಗೆಲುವುದೊಂದು 

ಭೇದವ ಕಾಬೆನೆಂದೆನುತಾ॥೬೦॥


ಪನ್ನಂಗ ಭೂಷಣನರ್ಧಾಂಗಿ ಪಾರ್ವತಿ 

ತನ್ನ ಷೋಡಶ ಕಳೆಗಳನು 

ಬಿನ್ನಾಣದಿಂದ ಕನ್ನೆಯೋರ್ವಳ ಮಾಡಿ 

ಚೆನ್ನಾಗಿ ನಿಲಿಸಿ ನೋಡಿದಳು॥೬೧॥ 


ನಿನ್ನ ಪಾದದ ನಖಕಿರಣಕೆ ಸರಿ ದೇವ 

ಕನ್ನಿಕೆ ಸುರನಾರಿಯರು 

ನಿನ್ನ ರೂಪನು ಪೋಲಿಸಲೆಣೆಯಿಲ್ಲೆಂದು 

ಮನ್ನಿಸಿ ನಗುತ ಪೇಳಿದಳು॥೬೨॥ 


ಮಾಯಾಕೋಳಾಹಳನೆಂದು ವಾದಿಸಿ ಪ್ರಭು 

ರಾಯ ಮರ್ತ್ಯಕೆ ಹೋಗುತಹನೆ 

ಕಾಯಜನೆಂಬ ಕಂಬಿಯನಿಕ್ಕಿನಿನ್ನೊಳ

ಲಾಯದಲ್ಲಿಯೆ ಕಟ್ಟುಹೋಗು॥೬೩॥ 


ಎನಲು ಬಿನ್ನಹ ಮಾಡಿದಳು ಮಾಯಾಂಗನೆ 

ಚಿನುಮಯನರಸಿಯ ಕೂಡೆ 

ನಿನಗೆ ಮೀರಿದಾತನ ಹಿಡಿತಹೆನೆಂದು 

ಘನಪ್ರತಾಪವನಾಡಿದಳು॥೬೪॥ 



ಕುಂಭಿನಿಯೊಳು ಮಾಯೆ ಬೇಂಟೆಯನಾಡಲು 

ಬೆಂಬಲವಾಹೆ ನಾನೆನುತಾ 

ಶಂಬರವೈರಿಯಾಯತವಾಗಿ ಬನವಸೆ 

ಯೆಂಬ ಪಟ್ಟಣಕೆ ತಾ ಬಂದಾ॥೬೫॥ 


ಆ ಪಟ್ಟಣವ ಪಾಲಿಸುತಿಪ್ಪ ಮಮಕಾರ 

ಭೂಪನಾತನ ವೈಭವಕೆ 

ಕೂಪಳು ಮೋಹಿನಿದೇವಿ ಪಟ್ಟದ ರಾಣಿ 

ಕಾಪಾಲಿಯ ಭಕ್ತರೆನಿಸಿ॥೬೬॥ 


ಸತಿಪತಿಗಳ ರೂಪ ಗುಣವ ನೋಡಲು ಕಾವ 

ರತಿಗೆಣೆಯೆಂದೆನಿಸುವರು 

ಕ್ಷಿತಿಯೊಳು ಮಮಕಾರಗೆಣೆಯೆ ಭೂ 

ಪತಿಗಳಿಲ್ಲವು ಧರೆಯೊಳಗೆ॥೬೭॥ 


ಮನ್ಮಥನಿಗೆ ಸ್ನೇಹಿತರೆಂದು ಮನದಲಿ 

ಎಮ್ಮನೆ ನಚ್ಚಿಕೊಂಡಿಹನು 

ಸುಮ್ಮನೆ ನಾವಿರಬಾರದೆನುತ ಬಲ 

ಒಮ್ಮೆ ಬಂದಿತು ಬನವಸೆಗೆ॥೬೮॥ 


ವಸುಧೆ ವದನೆಗಳವಲ್ಲ ಬಹಿರ್ವನೆಶ

ಪಶುರ್ವೆಟ್ಟಯೆನೆ ರಾಜಿಸುತಾ 

ಕುಸುಮಶರನಯಿದಿರಾಗಿ ಕಾದುವವೊಲು 

ಎಸಗಿದಳಾವನದೊಳಗೆ॥೬೯॥ 


ಮಿಸುನಿವಣ್ಣದ ಸಾಕ್ಷಿ ಘನಕೋಟಿನೆತ್ತಿಯೊ

ಳೆಸೆದಿಹ ಕುಸುಮದೆನೆಗಳು 

ಮುಸುಕಿಹದರಿಕಕ್ಕುದರಿಯಂತೆ ಕಂಟಕಿ 

ಎಸಗಿತು ವನದ ಮಧ್ಯದಲಿ ॥೭೦॥


ಪಲಸಿನ ಭುಜ ಕೊತ್ತಳ ಕೊಂಬು ಡೆಂಕಣಿ 

ಪಲವೆತ್ತು ಗುಂಡುಯೆಣ್ದೆಸೆಯಾ 

ಸಲಿಲ ಪನ್ನೆಗಳ ಕಾಲುವೆಯಿಂದ ರಂಜಿಸಿ 

ಮಲತದು ಮನ್ಮಥ ದಳಕೆ॥೭೧॥ 


ಕಡ್ಡತನಕೆ ಕಾವದಳವೆನ್ನ ದುರ್ಗಕೆ 

ಅಡ್ಡಡ್ಡಲೊಡನೆ ಪ್ರವುಡಿಯೊ 

ಚಡ್ಡೆ ಮಾಡದೆ ಸಿರಿ ಚೆಂಡಿಟ್ಟು ಕೆಲಬರು 

ದೊಡ್ಡಿಗೂಡುವಳೆಂದು ವನದಿ॥೭೨॥ 


ರಸವಿಲ್ಲವೆಂದೆಂಬ ಪೆಸರುಂಟು ರೂಪಿಲ್ಲ 

ಎಸವದಿನ್ನೆಂತು ಪೂಸರದಿ 

ಹಸಗೆಡಬೇಡೆಂದು ನಸುನಗುತ್ತಿಹಬಾಲೆ 

ಎಸಗಿದಳಾ ವನದೊಳಗೆ॥೭೩॥ 


ಧರೆಯ ಮೇಲಣ ನಾರಿಯರ ಮನಸಿರಿವೆಣ್ಣ 

ಸ್ಮರರತಿ ಸುರತ ತರಂಗಿ 

ಹರೆಹರ ಬ್ರಹ್ಮಾದಿಗಳಿಗೋಗ್ಯ ರಸವೆಂದು 

ಬೆರತಿಹ ಬಾಲೆಯರೆಸೆಯೆ॥೭೪॥ 


ನಾನು ನೀನೆಮ್ಮ ಪ್ರಿಯಳು ಅಲ್ಲದನ್ನಕ್ಕ 

ನಾನಾರಿಗೋಗ್ಯಳೆ ಸಕಳೆ 

ಹೀನ ಮತಿಯು ಬೇಡವೆನುತ ತರ್ಕಯ್ಸಿದ 

ಮಾನಿನಿ ಎಸೆದಳಾ ವನದಿ॥೭೫॥ 


ಹಸಿರುವಸ್ತ್ರದ ಮುಸುಕಿಟ್ಟು ಯವ್ವನೆಯರು 

ಕುಸುವಶರನ ದಳಬರಲು 

ಮಿಸುನಿ ಚಂಡುಗಳಿಂದೆಸೆವರೆಂದು ರಂಜಿಸಿ 

ಎಸಗಿತು ವನದ ಮಧ್ಯದಲಿ॥೭೬॥ 

 

ಒಪ್ಪುವ ಪಜ್ಜೆಯುಪ್ಪರಿಗೆ ಸೇರೈವೆಯಿಂದ 

ಕರ್ಪುರ ಕರಡಿಗೆವಿಡಿದು 

ಪುಷ್ಪಗಣೆಗನನಿಡುವೆನೆಂದು ಚಿತ್ತಿನಿ 

ಇಪ್ಪಳು ವನದ ಮಧ್ಯದಲಿ॥೭೭॥ 


ನೀಲದ ಮಣಿಹಾರವನಿಟ್ಟು ರಂಜಿಸಿ 

ಶೂಲಿಯಂದದ ಶುಚಿಗಳನು 

ಮೇಲಾದ ರತ್ನಮಾಲೆಗಳನಿಡುವೆನೆಂದು 

ಸಾಲೆಸೆದವು ಹಸ್ತಿನಿಯಾ೭೮॥ 


ಚೆಂದಳಿರಂಬರವುಟ್ಟು ಶಂಕಿನಿಯರು 

ಕಂದರ್ಪನೆನಿಪನದಳನಾ 

ಗಂಧಮಾದದ ತನಿವಣ್ಣಿಂದಿಡುವೆನೆಂದು 

ನಿಂದರು ವನದ ಮಧ್ಯದಲಿ॥೭೯॥  


ಶುಚಿಯಂಗಶುಚಿಯಂಬರವನುಟ್ಟು ರಂಜಿಸಿ 

ಅಚ್ಯುತ ಸುತನನೊಲಿಸುವೆ 

ಕುಚದೊಳವನನವುಕುವೆನೆಂದು ಪದ್ಮಿನಿ 

ಸುಚಿರ್ಭೂತೆಯೆಸೆದಳಾ ವನದಿ॥೮೦॥ 


ಹರಹರಿಯಿಂದಲೊಗದು ಹರಶರಣರ

ದುರಿತ ಭವವನನೆಲ್ಲ ಪರಿದು 

ಹರಪುರಕಯಿದಿಸಿ ಸಾರೂಪ್ಯ ಪದದಲ್ಲಿ 

ತರುವೆಸದವು ವನದೊಳಗೆ॥೮೧॥ 


ತರುಣಿಯುಳಿಯೆ ಮಾತೆಯರ ಗಡಲಾಯಿತೊ 

ಸುರರುಂಡು ಡೆಂಡಣಿಸಿದರು 

ಪರಿಕಿಪೆನೆಂಬೊಲು ಅಂಬರಕಡರಿದ

ಸುರತರುವೆಸದವುವನದಿ॥೮೨॥ 


ಅರಿದಮಸ್ತಕ ನಿಟ್ಟಿಸದೆ ವಾರಿ ಸಿಖಿಯನು 

ಪರಿಕಿಪೆನೆಂದು ನಂದನದಿ 

ಶರಿರದಿಸಮಾಧಿಯೊಳಡಿ ಬೇರ್ವರಿದಿಹ 

ಹರತಪಸಿಗಳಂತೆಸೆದರು॥೮೩॥ 


ಶರಧಿ ತ್ರಾಣವ ಶಿರದಲ್ಲಿ ಹೊತ್ತು ಎಮ್ಮನು 

ಧರೆಗಿದನುಸುರ್ವೆನೆಂದೆನುತಾ 

ಪರಿದು ನೀರ್ಗಲ್ಲನಂದನ ಪೊಕ್ಕು ಪೂವಾಗಿ 

ಹರಚರಣವನು ಹಾರಯಿಸಿ॥೮೪॥ 


ಸುರಮಥನನೆನಿಸಿ ಮುನಿಯಿರದೆ ಸೇವೆಸಿದುದ 

ನೊರದು ಪರೀಕ್ಷಿಪೆನೆನುತಾ 

ಶಿರವಜಗುಳ್ದುಬಾಹ್ಯವೆನಂದನವನು 

ಮರೆಗೊಂಡಳೇನ ವರ್ಣಿಸುವೆ॥೮೫॥ 


ಹರಸತಿಯೈದಿದಳೆನುತ ಧರಣಿ ಕಾಂತೆ 

ಹರುಷವ ತಾಳ್ದು ಶರಿರದ 

ಇರದೆ ಮಂದಿರಯಿತ್ತು ಕರಮುಗಿದಂದದಿ 

ಸಿರಿಗಂಜರಿರುಗಣೆಸದರು॥೮೬॥ 


ಬಿಸಜವರಳ್ದ ತುಂಡನ ಮೊಗ್ಗೆ ನುಣ್ಮೊಲೆ 

ಶಶಿಸಿಖಿದಿಷ್ಟಿ ಪಕ್ಕೆಗಳು 

ಮುಸುಕುವಾರಡಿಗಳಳದಿಂದ ರಂಜಿಸಿ 

ನಿಸಿತಾಂಗರ್ಧಾಂಗಿಯೆಸೆಯೆ॥೮೭॥ 


ಪೊಡವಿಯಂತಿಹ ಕೃಷ್ಣ ಶೇಷಗೊರಳ ಸಾರಿ 

ಗಡಗಡಲೆಂದು ಗರ್ಜಿಸುತಾ

ಮೃಡ ಬರಹೇಳಿದರೆನುತ ಪೊಡೆಯಲರಿತು 

ಒಡಗೊಂಡು ಬಪ್ಪಂತೆಸೆದುದು॥೮೮॥ 


ಕನ್ನಯಿದಿಲ ಹಾರ ಬಕುಳ ಅಶೋಕೆಯು 

ಪನ್ನಂಗರತ್ನ ಪಂಕಜವು 

ಉನ್ನಂತ ಮರುಗ ಚಂಪಕಮಲ್ಲಿಕಾರಂಬಾ 

ತನ್ಮಯವೆಲ್ಲಿ ನೋಡಿದರೆ॥೮೯॥


ಅವನಿ ಚಂಪಕ ಅರವಿಂದ ಚೆಂಗಣಗಿಲು 

ದವನ ಪಡ್ಡಳಿ ಪಾರಿಜಾತ 

ಭುವಿಯೋಳುನವಜಾತಿಯೆಂಬ ಪಾದರಿ ಪಚ್ಚೆ 

ನವಗಂಪು ತೀವಿ ರಾಜಿಸಿತು॥೯೦॥


ಅರಸು ವಸಂತ ಕೇಳಿಕೆಗೆಂದು ನೇಮಿಸಿ 

ಮರುತ ಮೆಲ್ಲನೆ ಎಯಿತಂದು 

ಪರಿಪರಿಯಲಿ ಪಂಚಮಹಾವಾದ್ಯಗಳಿಂದ 

ತರುಗಳ ಬಾರಿಸುತಿರ್ದಾ॥೯೧॥ 


ಹೊಂಬಣ್ಣದ ಗಿಳಿಯಾಳಾಪವ ಮಾಡೆ 

ತುಂಬಿ ಶ್ರುತಿಯ ಝೇಂಕರಿಸೆ 

ಕೊಂಬಿನ ಮೇಲೆ ಕೋಗಿಲೆ ಗೀತವ ಪಾಡೆ 

ಸಂಭ್ರಮಿಸುತ ನವಿಲಾಡೆ॥೯೨॥ 


ವಿಮಲ ಹಂಸೆಯು ತನ್ನ ಮರಿಗೆ ಗುಟುಕನಿಕ್ಕಿ 

ಕಮಲದ ತೊಟ್ಟಿಲ ತೂಗಿ 

ಸುಮ್ಮಾನದಿ ಕೊಳರ್ವಕ್ಕಿ ಜೋಗುಳವಾಡಲು 

ಭ್ರಮಿಸುತಿರ್ದವು ಜಕ್ಕವಕ್ಕಿ॥೯೩॥ 


ಇಂತು ವಸಂತನ ನವಶೃಂಗ ಮಾಡಿ 

ಕಂತು ಬರವನೀಕ್ಷಿಸುತಾ 

ಮುಂತೆಸೆದವು ಬನವಸೆಯಲಿ ಸೊಬಗಿನ 

ಸಂತೋಷದೋಳೊಪ್ಪುತಿಹರು॥೯೪॥ 


ಕಳೆಗಳ ಬೀಡು ಜಾಣಿನ ಜಲ್ಮದ ಭೂಮಿ 

ನಳಿನಬಾಣದ ವೈಸಿಕದಾ 

ನಿಳಯವೆನಿಸಿ ಮೆರೆದಿಹ ಬೆಳುವಲನಾಡು 

ಕಳಸದಂತೆ ಬನವಸೆಯ॥೯೫॥ 


ದಾರಿದ್ರ್ಯ ಬರ ಬಂಧನಗಳೆಂದೆಂಬವು 

ಆರೈದು ನೋಡುವಾ ನಾಡಾ 

ನಾರಿಮಧ್ಯದಲಿ ಮೋದದಲಿ ತೊಡಿಗೆಗಳ 

ಬೇರೆ ಮತ್ತರಿದಲ್ಲವೆನಿಸಿ॥೯೬॥ 


ಪಂಚಬಾಣನ ಅಂಕದ ಕಣನೆಂದು ವಿ 

ರಿಂಚಿ ನಿರ್ಮಿಸಿದನೆಂದೆನುತಾ 

ಕಂಚಿನ ಕೋಟೆ ಕೊತ್ತಳ ಹುಲಿಮುಖಗಳು 

ಸಂಚಲಿಸುವವು ನೋಟಕರ॥೯೭॥ 


ಬುರುಗೋದ್ಭವನೊಳು ಮಥನಿಸಿ ಬುರುಗಾಕ್ಷ 

ಬುರುಗದಿಟ್ಟಿಯ ತಳಿರುಗನಾ 

ಬುರುಗುವ ಪರಿಕಿಪೆನೆನುತಲಿ ಬುರುಗಳ 

ಧರೆಗೊರೆದಂತಾಗಳೆಸೆಯೆ॥೯೮॥ 


ಪುಲಿವಕ್ತ್ರ ಪವಳದಿಂದೆಸೆವ ಪೆರ್ಬಾಗಿಲು 

ಪೊಳವ ರಜತ ಮುಚ್ಚಳ್ವಲಗೆ

ಕುಲಿಶದ ಲಾಳಮುಂಡಿಗೆ ಕುಕ್ಕುದರಿಗಳು 

ಮಲತತ್ರಿಪುರವಿರುವಂತೆ॥೯೯॥ 


ಸೃಷ್ಟಿಯೊಳೆನಗಿಂದ ಬಲ್ಲಿದರಿಲ್ಲೆಂದು 

ಕಟ್ಟಿದ ಕಳಸವೆಂಬಂತೆ 

ಅಟ್ಟಳೆಗಳು ಆಳ್ವೇರಿಯ ಮೇಲೊಪ್ಪಿ 

ಮುಟ್ಟುತಿಹವು ಗಗನವನು॥೧೦೦॥ 


ಪಂಕಜವದನೆ ಅಲ್ಲಮನ ಗೆಲುವದಕೆ 

ಶಂಕೆ ಬೇಡವುಯೆಂದೆನುತಾ 

ಶಂಕರ ವೈರಿ ಹಸ್ತವನೆತ್ತಿ ಕರೆವಂತೆ 

ಡೆಂಕಣಿಗಳು ಒಪ್ಪುತಿಹವು॥೧೦೧॥ 


ಹರಿಹರ ಬ್ರಹ್ಮಾದಿಗಳಾದರೆ ನಮ್ಮ 

ಪುರವ ಪೊಕ್ಕರೆ ಹಿಂದಮರಸಿ 

ವಿರಹ ಶರಧಿಯೊಳಗೋಲಾಡಿಸುವೆನೆಂದು

ಬಿರಿದು ಕಟ್ಟಿಹರು ಬಾಗಿಲಲಿ॥೧೦೨॥ 


ಮಿಕ್ಕಾದ ಸುರನರರೆಲ್ಲರು ನೊಣ ತಾನು 

ಸಕ್ಕರೆ ಸಾರವೆಂದೆನಿಸಿ 

ದಿಕ್ಕು ನಾಲ್ಕರಲಿ ತೆಗೆದ ಪೆರ್ಬಾಗಿಲು 

ಹೊಕ್ಕವರನು ಬಿಡದಿಹುದು॥೧೦೩॥ 


ಇಂತಪ್ಪ ಬನವಸೆಯನು ಆಳ್ವ ಭೂಪನು 

ಚಿಂತಿಸಿ ಸುತರಿಲ್ಲವೆನುತಾ

ಕಾಂತೆಯ ಕೂಡ ಹೇಳಿದ ಹರನರಸಿಯ 

ನೋಂತು ವರವ ಪಡೆಯೆನುತಾ॥೧೦೪॥ 


ಎನಲು ಹಸಾದವೆಂದೆನುತ  ಮೋಹಿನಿದೇವಿ 

ತನಗೆ ಬೇಕಾದುದ ತರಿಸಿ 

ಮನಸಿಜಹರನರಸಿಯ ನೋಂತು ಬುಧರಿಗೆ 

ಕನಕದಾನವನಿತ್ತು ದಣಿಸಿ॥೧೦೫॥ 


ಮನ್ನಿಸಿದಳು ಮೋಹಿನಿಗೆ ಮಹಾದೇವಿ 

ತನ್ನ ಕಳೆಯ ಮಾಯೆಯನು 

ನನ್ನಿಯ ಮರೆಯದಿರೆಂದು ಬುದ್ಧಿಯ ಹೇಳೆ 

ಕನ್ನೆ ಬಂದಳು ಬನಬಸೆಗೆ॥೧೦೬॥ 


ಕನಕದ ಘಟ್ಟಿಗೆ ರಸದವಾಸನೆಗಳು

ಸನುಮತದಲಿ ಸೋಂಕಿದಂತೆ 

ಘನತಪಸಿಗಳು ಕಂಗೆಟ್ಟರು ಮಾಯೆಯ 

ಜನನಕಾಲದ ಸಮಯದಲಿ॥೧೦೭॥


ಮಾಯೆ ಪುಟ್ಟಿದಳು ಮೋಹಿನಿದೇವಿ ಮಮಕಾರ 

ರಾಯಗೆ ಪುತ್ರಿಯೆಂದೆನಿಸಿಶ

ತೋಯ ಜನನ ಬಾಲ್ಯ ಲೇಲೆಯೊಳಿರ್ದಳು 

ತಾಯಿಗೆ ಸೊಗಸನೀವುತಲಿ॥೧೦೮॥ 


ಅರಮನೆಯೊಳು ವಸುಗೆಯ ಬಾರಿಸುತಿರೆ 

ಪುರದೊಳು ಗುಡಿಯ ಕಟ್ಟಿದರು 

ಪರಿದು ಸಾರಿದರು ಮುತ್ತೈದೆಯರುಗಳೊಬ್ಬ 

ಳಿರದೆ ಬಾಗಿನಕೆಂದರವರು॥೧೦೯॥ 


ಬೆಚ್ಚನನೀರನೆರೆದರು ಕಣ್ಣಿಗೆ ಕಪ್ಪ 

ನೆಚ್ಚಿ ತೊಟ್ಟಿಲ ತುಂಬಿದರು 

ಮುಚ್ಚಿ ತೆರೆಯ ಮೋಹಿನಿದೇವಿ ಮಗಳಿಗೆ 

ಇಚ್ಚಪರಿಯ ಮಾಡಿದಳು॥೧೧೦॥ 


ನಾಮಕರಣವಾಯಿತು ಮಾಯೆಯ ತಂದು 

ಹೇಮದ ತೊಟ್ಟಿಲ ತುಂಬಿ 

ಹೋಮವನಿಕ್ಕಿ ಸುವರ್ಣ ದಾನಗಳನು 

ಭೂಮಿಪಾಲಕ ಕೊಡಿಸಿದನು॥೧೧೧॥ 

 

ಪೊಡೆಮಡಿದಡೆ ಮುನಿಗಳ ಚಿತ್ತವು ಅಲ್ಲಿ 

ದೃಢ ತಲೆಕೆಳಗಾಗುತಿಹುದು 

ನುಡಿಯ ಕಲಿತರೆ ಮುನಿಜನಗಳ ಬಾಯ ಮುದ್ರೆ 

ಯೊಡದು ಕಾವನ ಭಜಿಸಿದರು॥೧೧೨॥


ಅಂಬೆಗಾಲಿಕ್ಕ ಕಲಿತರೆ ಜಿತೇಂದ್ರಿಯ 

ಶಂಭುವ ಧ್ಯಾನವ ಮರದು 

ಇಂಬುಗೊಟ್ಟರು ತಮ್ಮ ಹೃದಯವ ಮನ್ಮಥ 

ನಂಬಿನ ಮೂಡೆಯೆಂದೆನಿಸಿ॥೧೧೩॥ 


ನಿಲ್ಲಕಲಿತರೆ ಸಾಸುವೆಯಷ್ಟು ತೋರದ 

ಲೀಲೆಯಗಿರಿಯ ಶಿಖರದಲಿ 

ತಲೆಕೆಳಗಾಗಿ ತಪವ ಮಾಡುವವರಿಗೆ 

ಚಲನೆ ಹುಟ್ಟಿತು ನಿಮಿಷದಲಿ॥೧೧೪॥ 


ಎಲ್ಲ ಋಷಿಗಳು ತಮ್ಮೊಳ್ಯೋಚಿಸಿ ನಮ 

ಗೆಲ್ಲಕೆ ದುರ್ವಾಸ ಮುನಿಪ 

ಬಲ್ಲಿದನಾತನಾಶ್ರಮಕೈದಿ ವೃತ್ತಾಂತವ 

ನೆಲ್ಲವ ಪೇಳುವೆವೆನುತಾ॥೧೧೫॥ 


ಬಂದ ಋಷಿಗಳೆಲ್ಲರು ದುರ್ವಾಸನ 

ಮುಂದೆ ಬಿನ್ನಹವ ಮಾಡಿದರು 

ಎಂದು ಇಲ್ಲದ ನಮ್ಮ ಚಿತ್ತಕೆ ಚಲನೆಯು 

ಇಂದು ಪುಟ್ಟಿತುಯೆಂದೆನುತಾ॥೧೧೬॥ 


ಇಂತು ವ್ಯಾಕುಲ ನಮಗೇಕೆ ಬಂದುದು ಎಲೆ 

ಕಂತುಮರ್ದನ ಪೇಳೆನಲು 

ಸಂತೈಸುತ ದೂರ್ವಾಸ ಮುನಿಪ ವೃ 

ತ್ತಾಂತವೆಲ್ಲವ ಪೇಳಿದನು॥೧೧೭॥ 


ಸರ್ವೇಶ್ವರನ ವಾಲಗದೊಳು ವಾದಿಸಿ

ಪಾರ್ವತಿ ತನ್ನ ಮಾಯೆಯನು 

ಉರ್ವಿಗೆ ಕಳುಹಿದಳಲ್ಲಮ ಪ್ರಭುವಿನ 

ಗರ್ವವ ಬಿಡಿಸುವೆನೆನುತಾ॥೧೧೮॥ 


ಅದು ಕಾರಣದಿ ಮಾಯಾಂಗನೆ ಬಂದೀಗ 

ಉದಯಿಸಿದಳು ಮರ್ತ್ಯದಲಿ 

ಹದುಳಿಸುವರಾರಿನ್ನು ಲೋಕವನೆಲ್ಲ 

ಮದನನ ವಶವ ಮಾಡಿದಳು॥೧೧೯॥ 


ಗೂಳಿಯೆರಡು ತರೂಕವ ಮಾಡೆ ಅಲ್ಲಿರ್ದ 

ಬಾಳೆಯ ಕದಳಿಯಂದದಲಿ 

ಭಾಳಲೋಚನ ಗಿರಿಜೆಯ ವಾದದಲಿ ಲೋಕ 

ಕೋಳಾಹಳವಾಯಿತೆಂದಾ॥೧೨೦॥ 


ಇಷ್ಟರಲ್ಲಿಯೆ ಮನದಣಿಯದೆ ಮೋಹಿನಿ 

ಹೆಟ್ಟುಗೆ ಮಾಯೆಯ ಕರದು 

ಸೃಷ್ಟಿಯ ಮರಳ್ಮಾಡೆನುತಲಿ ಮೋಹವ 

ಕೊಟ್ಟಂತೆ ಮಗಳ ಶೃಂಗರಿಸಿ॥೧೨೧॥ 


ಅಂದುಗೆ ಹೊಂಗೆಜ್ಜೆ ಬಂದಿಯು ಹುಲಿನಖ 

ತಂದು ಮಾಯೆಗೆ ತೊಡಿಸಿದಳು 

ಮುಂದೆಲೆಗರಳೆಲೆ ಪಚ್ಚೆಯ ಮಾಗಾಯ 

ಚಂದ್ರಿಕೆಗಾವಿಯನುಡಿಸಿ೧೨೨॥ 


ಈ ಪರಿಯಲಿ ಬಾಲಲೇಲೆಯ ಮಮಕಾರ 

ಭೂಪನೋಡಿಯೆ ಮನಹಿಗ್ಗಿ 

ಕೂಪ ಮಗಳು ನಮಗಾದಳುಯೆನುತಲಿ 

ಆ ಪತಿ ಸತಿ ಹರುಷದಲಿ॥೧೨೩॥ 


ಎನ್ನ ಭಾಗ್ಯದ ಸಂಪನ್ನೆ ಬಾಳುಗೆಯೆಂದು 

ಕನ್ನೆ ಮಾಯೆಯ ಬಿಗಿದಪ್ಪಿ 

ನಿನ್ನ ಪೋಲುವ ಚೆಲ್ವೆಯದಾವಳೆಂದು 

ತನ್ನ ಮಗಳ ಪೊಗಳಿದನು॥೧೨೪॥ 


ಗಳಿಗೆ ಗಳಿಗೆಗೆ ಬೆಳವುತಿರ್ದಳು ಮಾಯೆ 

ಎಳಲತೆ ಕುಡಿವರಿದಂತೆ 

ತಳತಳಿಸುವ ಪೂರ್ಣಿಮೆಯ ಚಂದ್ರಮನಂತೆ 

ಕಳೆ ಹದಿನಾರ ಹೆಚ್ಚಿದಳು॥೧೨೫॥ 


ಬಡತನವಾರೆಡೆ ಕಡುತೆಳ್ಪುವಾರೆಡೆ 

ಜಡೆಯ ಭಾರವು ಆರೆಡೆಯು

ಮಡದಿಯರಿಗೆ ಉಳ್ಳ ಲಕ್ಷಣ ಪದಿನೆಂಟು 

ತಡೆಯದೆ ಮಾಯೆ ತಾಳಿದಳು॥೧೨೬॥ 


ಇರುತಿರಲೊಂದಾನೊಂದು ದಿವಸದಲ್ಲಿ ಭೂ 

ವರನ ಕುಲದ ಅನ್ವಯಕೆ 

ಗುರುವೆನಿಸುವ ಅಹಂಕಾರಾಚಾರ್ಯನು 

ಅರಮನೆಗಾಕ್ಷಣ ಬರಲು॥೧೨೭॥ 


ಸಡಗರದಿಂದ ಗದ್ದುಗೆಯಿಕ್ಕಿ ಮೋಹಿನಿ 

ಗುಡಿಯ ಕಟ್ಟುತ ಮನದೊಳಗೆ 

ಮಡದಿ ಮಾಯೆಯ ಕರತಂದಾಚಾರ್ಯಗೆ

ಪೊಡಮಡಿಸಿದಳು ಭಕ್ತಿಯಲಿ॥೧೨೮॥ 


ಪನ್ನಗಧರನೀಕೆಗೆ ಪತಿಯಹನೆಂದು 

ಎನ್ನುತಲಾಚಾರ್ಯವೇಳ್ದ 

ಕನ್ನೆಗೆ ಉಪದೇಶವ ಮಾಡಿ ಅಹಂಕಾರ 

ತನ್ನ ನಿಳಯಕೈದಿದನು॥೧೨೯॥ 


ಗುರುವಿನ ಐಪದೇಶವಿಡಿದು ಮಾಯೆಯು ದಿನ 

ಚರಿ ಮಧುಕೇಶನಾಲಯಕೆ 

ಚರಣ ಪೂಜೆಯ ಮಾಡುತಲತಿ ಹರುಷದೊ 

ಳಿರುತಿರ್ದಳು ಭಕ್ತಿಯಲಿ॥೧೩೦॥ 


ಅಕ್ಷರ ಅಭ್ಯಾಸವು ಗುಣಿತಂಗಳನು 

ತರ್ಕ ಪುರಾಣ ಭಾರತವು 

ಮಿಕ್ಕಾದ ಛಂದ ನಿಘಂಟು ವ್ಯಾಕರಣವು 

ಕುಕ್ಕೋಕಶಾಸ್ತ್ರವ ಕಲಿಸಿ॥೧೩೧॥ 


ಬತ್ತೀಸರಾಗದೊಂದೊತ್ತಿನ ಮಿಶ್ರವು 

ಅರ್ಥವು ಸುಗುಣವಿದ್ಯೆಗಳು 

ಉತ್ತಮವಾಶ್ವಶಾಸ್ತ್ರವ ಮಾಯಿಗೆ 

ಚಿತ್ತವೊಲಿದು ಕಲಿಸಿದರು॥೧೩೨॥ 


ವೀಣೆ ಗೀತೆ ತಾನ ತಾಳದ ಭೇದವು 

ಜಾಣಿನ ಕುಶಲವಿದ್ಯೆಗಳು 

ರಾಣಿಮಾಯಾದೇವಿಗೆ ಕಲಿಸುವರಿನ್ನು 

ಆಣತಿಯಿಲ್ಲದೆಲ್ಲವನು॥೧೩೩॥ 


ಉರುಪು ಗುಂಡಕ್ರಿ ತಿರುಪುರಿಕೆಯು 

ಭರತದಲುಳ್ಳವಿದ್ಯೆಗಳ 

ಸುರಪನ ಸತಿಗೆ ನೂರ್ಮಡಿಯೆನೆ ಮಾಯೆ 

ಹರನಾಲಯಕೆವಿಡಿದರು॥೧೩೪॥ 


ಗರುಡಿಯ ಮನೆಯ ಗೋಡೆಗೆ ಗಚ್ಚಿಯನಿಕ್ಕಿ

ವರದು ಗಾಜಿನ ನೆಲೆಗಟ್ಟ 

ಪೊರದು ಚಸ್ತೂರಿಯ ಧೂಮವ ಹಾಕಿ ಪುಣಗು 

ಕಾರಣೆದೊಡದು ರಚಿಸಿದರು॥೧೩೫॥ 


ಚಂದನಗಂಧಿ ಮಾಯಾಂಗನೆಶಮಧುಕೇಶ 

ಮಂದಿರ ನಾಟ್ಯಕೊಪ್ಪಿರಲು 

ಕಂದರ್ಪವೈರಿಯಲ್ಲಮರಾಯ ಬರುವಾ 

ನಂದದೆಡೆಗೆ ಒಂದು ಸಂಧಿ॥೧೩೬॥ 


ಹರಿಯನಾರ್ಚಿತ ಪಾದಯುಗಳನೆ 

ಹರೆಹರಿ ಪೂಜಿತ ವರನೆ 

ಹರಿಯಣುಗನ ಶಿರವ ಛೇದಿಸಿದನೆ ಶ್ರೀ 

ಗುರುರಾಯ ಎನ್ನ ರಕ್ಷಿಪುದು॥೧೩೭॥ 


ಅಂತು ಸಂಧಿ ೧ಕ್ಕಂ  ಪದನು ೧೩೭ ಕ್ಕಂ ಮಂಗಳ ಮಹಾ ಶ್ರೀ ಶ್ರೀ ಶ್ರೀ,


ನೆನಕೆ: 

ಕರ್ತೃ : ಪರ್ವತೇಶ,

ಸಂಪಾದಕರು: ವೀರಣ್ಣ ರಾಜೂರ; 

ಪ್ರಕಾಶಕರು: 

ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ,

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ 

ಮಾನಸಗಂಗೋತ್ರಿ,

ಮೈಸೂರು ವಿಶ್ವವಿದ್ಯಾಲಯ,ಮೈಸೂರು- ೫೭೦೦೦೬ .


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ