ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜೂನ್ 18, 2023

ನೂರೊಂದಯ್ಯ ವಿರಚಿತ ಸೌಂದರ ಕಾವ್ಯ ಸಾಂಗತ್ಯ

ನೂರೊಂದಯ್ಯ ವಿರಚಿತ ಸೌಂದರ ಕಾವ್ಯ ಸಾಂಗತ್ಯ 


ಈ ಕಾವ್ಯದ ಕರ್ತೃ ನೂರೊಂದ. ಇವನು ಮೈಸೂರು ದೊರೆಯಾದ ಇಮ್ಮಡಿ ಕೃಷ್ಣರಾಜನ ಕಾಲದಲ್ಲಿದ್ದವನು. ಈತನ ಕಾಲ ಸು. ೧೭೪೦ ; ಇವನಿಗೆ ಆಶ್ರಯದಾತರು ಮೈಸೂರು ರಾಜರಲ್ಲಿ ದಳವಾಯಿಗಳಾಗಿದ್ದ ದೇವರಾಜ ಮತ್ತು ನಂಜರಾಜ ಸೋದರರು.ಈ ಸೋದರರ ಪರಾಕ್ರಮವನ್ನು ವಿಶೇಷವಾಗಿ ಕೊಂಡಾಡಿದ್ದಾನೆ.ದೇವರಾಜನನ್ನು ದೇವೇಂದ್ರನಿಗೂ ನಂಜರಾಜನನ್ನು ಪಾರ್ಥನಿಗೂ ಸಮೀಕರಿಸುವ ಯತ್ನ ಕಂಡುಬರುತ್ತದೆ.ಇವನು ವೀರಶೈವ ಧರ್ಮಕ್ಕೆ ಸೇರಿದವನು.

ಕಾವ್ಯಾರಂಭದಲ್ಲಿ ನಂಜುಂಡನ ಸ್ತುತಿ, ಅಂತ್ಯದಲ್ಲಿ ತೋಂಟದ ಸಿದ್ದಲಿಂಗ ಯತಿ,ಯನ್ನು ಹೊಗಳಿದ್ದಾನೆ. ದೇವರಾಜನಿಗೆ ಪ್ರಿಯವಾಗುವಂತೆ ರಂಗಧಾಮನ ಸ್ತುತಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. 


ಒಂದನೆಯ ಸಂಧಿ. 


ಶ್ರೀಗುರುರಾಯ ಶಾಂಭವ ರಾಜಶೇಖರ 

ಭಾಗೀರಥಿಯ ಪೊತ್ತು ಮೆರೆವ 

ನಾಗಭೂಷಣ ರಾಮಕಂಧರ ನಂಜುಂಡ 

ಸಾಗಿಸು ಕೃತಿಯ ನೀಂ ಮುದದಿ॥೧॥ 


ಗಿರಿಜೆ ಗೀರ್ವಾಣಿ ಶಂಕರಿ ಗೌರಿ ಪಾರ್ವತಿ 

ಪರಮೇಶ್ವರಿ ಪುಣ್ಯಲಕ್ಷ್ಮಿ

ಕರುಣಿಸು ದೇವಿ ಶಾಂಭವಿ ಚಂಡಿ ಚಾಮುಂಡಿ 

ವರವನೀ ಕೃತಿಗೆ ಮಂಗಳವ ॥೨॥ 


ಅಣಿಮೌಕ್ತಿಕದ ಸುಪ್ಪಾಣಿಯೆ ಪರಮ ಕ 

ಲ್ಯಾಣಿಯೆ ಶಂಕರಿಶಸಲಹೆ 

ಕ್ಷೋಣಿಹೊರೆವ ರುದ್ರಾಣಿಯೆ ಪಶುಪತಿ 

ರಾಣಿ ಬಾ ಮತಿಗೆ ಮಂಗಳದಿ॥೩॥ 


ಸರಸಿಜನಯನೆ ಸಾವಿತ್ರಿ ಗಾಯತ್ರಿ ಶ್ರೀ 

ಗಿರಿಜಾಪುತ್ತಿ ಕಳತ್ರಿ 

ಪರಿಭವಿಸೆನ್ನ ಹೃತ್ಕಮಲ ದೆವಾಕರೆ 

ಗಿರಿಜೆ ಗೀರ್ವಾಣಿ ಕಲ್ಯಾಣಿ॥೪॥ 


ಜಾತೆ ಜೀವನ್ಮುಕ್ತೆ ಪ್ರೀತೆ ಸುಕೃತೆ ಸಂ 

ಪ್ರೀತೆ ಸಂಗೀತೆ ಸಾವಿತ್ರೆ 

ಮಾತುಮಾತಿಗೆ ಬಂದು ಮತ್ಕೃತಿಯೊಳಗೊಂದು 

ಮಾತು ತಪ್ಪದೆ ತಿದ್ದು ತಾಯೆ॥೫॥ 


ಶಂಭು ಗೋಕರ್ಣ ಶಂಕರನಾರಾಯಣ 

ಕುಂಭಿನಿಗಳು ವಿಕಲ್ಯಾಣ 

ಬಿಂಬಗಳ ಜಿನ್ನ ಕಂಚಿ ಕೊಲ್ಲಾಪುರ 

ದಂಬಿಕೆ ಕೊಡುಯೆನಗೊರವ॥೬॥ 


ವರ ವಿನಾಯಕ ಶರಭ ಭೈರವ ಷಣ್ಮುಖ 

ತಾರಕಾರಿಯು ಶಂಕರನ 

ವರದ ಪುತ್ರರ ವರ ಚರಣವಿಡಿದು ಕೃತಿ 

ಚರಿಸು ನಿಲ್ಲಿಸದೆ ನೀಂ ಮುದದಿ॥೭॥ 


ವಾಣಿ ಕಲ್ಯಾಣಿ ಕಟ್ಟಾಣಿ ಮಾತಿನೊಳು ಸು 

ಪ್ಪಾಣಿ ತಂದಿರಿಸು ನಿಲ್ಲಿಸದೆ 

ತ್ರಾಣಿ ಕೊಂಕದೆ ಕಡುಜಾಣನುಡಿಯ ತಂದು 

ಹೂಣಿಸು ಕೃತಿಗೆ ಮಂಗಳದಿ॥೮॥ 


ಕಂಗೆ ಮಂಗಳವಾದ ಗಂಗೆ ಗೋದಾವರಿ 

ತುಂಗಭದ್ರೆ ಕೃಷ್ಣವೇಣಿ 

ರಂಗಧಾಮನ ಪುರ ಬಳಸಿಹೆ ಕಾವೇರಿ 

ಗಂಗೆ ಕೊಡೆನಗೆ ಸುಮತಿಯ॥೯॥ 


ಅಂಗಜಪಿತನಿಗರ್ಧಾಂಗವೆನಿಸಿದ ಭು

ಜಂಗಭೂಷಣ ಭಾಳನೇತ್ರ 

ತಿಂಗಳಾಧರ ಧವಳಾಂಗ ಗಂಗಾಧರ 

ಲಿಂಗ ಕೊಡೆನಗೆ ಸುಮತಿಯ॥೧೦॥ 


ರುದ್ರಗೆ ಮಲೆತಿರ್ದ ಕ್ಷುದ್ರ ದಕ್ಷನ ಗರ್ವ

ಮುದ್ರಿಸಿ ಕುರಿದಲೆವಿರಿಸಿ

ಭದ್ರಕಾಳಿಯ ಮನೋಹರ ಮೊರಡಿಯ ವೀರ 

ಭದ್ರ ಕೊಡೆನಗೆ ಸುಮತಿಯ॥೧೧॥ 


ಶೃಂಗಾರವಡೆದ ಸಿಂಹಾಸನಪತಿಯು ಶ್ರೀ

ರಂಗಧಾಮನ ರಾಜಠೀವಿ 

ಹೊಂಗಿ ಹೊಗಳುವ ಕೃತಿಗಳಿಗಿಷ್ಟಾರ್ಥವ 

ರಂಗಧಾಮನೆ ಕೊಡು ಮತಿಯ॥೧೨॥ 


ಕಾಲಾರು ತಲೆ ಮೂರು ಬ್ರಹ್ಮ ಕೈಗಳೆ ನಾಲ್ಕು 

ಬಾಲವೆರಡು ಕಣ್ಣಾರು 

ನಾಲಿಗೆ ನಾಲ್ಕು ಶ್ರೀರಂಗಧಾಮನಪುರ 

ಬಾಲವಿಘ್ನೇಶಗೊಂದಿಸುವೆ॥೧೩॥


ಶ್ರೀಶೈಲ ಹಿಮವದ್ಕೇತಾರ ಒಪ್ಪುವ ವಾರ 

ಣಾಸಿ ಪಂಪಾಕ್ಷೇತ್ರದರಸೆ

ಕಾಶಿವಿಶ್ವೇಶವಿಶಾಲಾಕ್ಷ ಏಕಾಂಬ 

ರೇಶನೆ ಕೊಡು ಕವಿಗೊರವ॥೧೪॥ 


ಛಂದಸ್ಸು ಭಾಷ್ಯ ಲಕ್ಷಣವಂತನಲ್ಲ 

ಒಂದು ಶಾಸ್ತ್ರವನೋದಲಿಲ್ಲ 

ಇಂದುಶೇಖರ ನಂಜುಂಡಲಿಂಗನ ಕೃಪೆ 

ಯಿಂದಲಿ ಪೇಳ್ವೆನೀಕೃತಿಯ॥೧೫॥ 


ನುಡಿ ತಪ್ಪಿದರೆ ತಿದ್ದುವದು ಸತ್ಕವಿಗಳು 

ವಡಿ ಪ್ರಾಸ ಗಣನೆ ಬಲ್ಲವರು 

ಇಡಿಕಿರಿದಿಹ ನೇಮ ಲಕ್ಷಣ ಉಚಿತಾರ್ಥ 

ಪ್ರಹುಡಿ ಪರೀಕ್ಷೆ ಬಲ್ಲವರು೧೬॥ 


ತಪ್ಪುಳ್ಳೊಡೆ ಸತ್ಕವಿಗಳು ಕಾವ್ಯಕ್ಕೆ 

ಒಪ್ಪುವಿಡುವದು ಬಲ್ಲವರು 

ಸರೂಪಶಯನ ರಂಗಧಾಮ ನಂಜುಂಡನ 

ಅಪ್ಪಣೆಯಿಂದ ಪೇಳಿದೆನು॥೧೭॥ 


ಛಂದಸ್ಸು ಲಕ್ಷಣ ಬಲ್ಲ ಸತ್ಕವಿಗಳ 

ನೊಂದಿಸಿ ಭಾವಾರ್ಥದಿಂದ 

ಚಂದ ಕವಿಗಳು ಆನಂದಿಪಂತೊರೆವೆನು 

ಸೌಂದರಕಾವ್ಯ ಸುಕೃತಿಯ॥೧೮॥ 


ಸುತ್ತ ಹರಿವ ಹೊಳೆ ವಿಸ್ತರಿಸಿದ ಕೋಟೆ 

ಕಸ್ತುರಿ ಸಾರಣೆಯೆಸೆವ 

ರತ್ನದ ಕಾಂತಿ ರನ್ನದ ತೆನೆ ರಂಜಿಪ 

ಚಿತ್ರಭವನಗಳಲ್ಲಿಹವು॥೧೯॥ 


ಅರಿಬಲ ಮುರಿವಂತೆ ಮೆರೆವುತಿಹುದು ಕೋಟೆ 

ಪರಬಲ ಭೈರವಂಕಣವು 

ಸಿರಿಧರನೊಲಿದ ಶ್ರೀರಂಗಪುರದ ವೀರ 

ಸಿರಿಯನಿನ್ನೆಂತು ವರ್ಣಿಪೆನು॥೨೧॥ 


ಅಷ್ಟದಿಕ್ಕಿನ ದೊರೆಗಳಿಗೆ ಭಯಂಕರ 

ಕೃಷ್ಣರಾಜೇಂದ್ರನೆಂಬರಸು 

ಪಟ್ಟಾಭಿಷೇಕವಾಂತಿಹ ಪರಂಧಾಮನ 

ಅಷ್ಟಭೋಗದೊಳಾತನಿಹನು॥೨೨॥


ಆತನಿರುವ ಅರಮನೆ ಭದ್ರಭವನದ 

ರೀತಿರತ್ನಗಳ ಕಾಂತಿಗಳ 

ಭೂತಳರೆದೆಸಿರಿವನೆಯಂತೆ ಶ್ರೀರಂಗ 

ನಾಥನೊರೆದ ಕೃಷ್ಣರಾಜ॥೨೩॥ 


ಆ ಕೃಷ್ಣರಾಜನೇರುವ ಸಿಂಹಪೀಠವ 

ನೇಕ ವರ್ಣದ ಚಂದ್ರಕಾಂತಿ 

ಭೂಕಾಂತನು ಬಂದು ಭೃಗುವಾರದೋಲಗ 

ಸಾಕು ನೋಡುವರೆ ಕಣ್ಣೆರಡು॥೨೪॥ 


ಇತ್ತರೋಲಗದ ಚಿತ್ತಜಸಭೆಯಂತೆ 

ಒತ್ತಿನಿಂದಿಹರು ಸಿಂಗರದಿ 

ಕರ್ತರು ದಳಕರ್ತ ರಾಜದೇವೇಂದ್ರನ 

ಹೊತ್ತಿಲಿ ಬರಹೇಳಿ ಕಳುಹೆ॥೨೫॥ 


ಬಂದ ಊಳಿಗಜನರೊಂದಿಸಿ ನುಡಿದರು 

ಅಂದಿನೋಲಗದ ಸಂಭ್ರಮವ 

ಇಂದು ನೀವಾಶ್ಚರ್ಯವಾದ ಭೂಷಣವ ತೊಡಿ 

ಎಂದು ಬಿನ್ನೈಸೆ ಬಂದವರು॥೨೬॥ 


ತರಿಸಿದ ಭೂಷಣವ ಧರಿಸಿದ ದಳಪತಿ 

ಸಿರಿಧರನಂತೆ ಒಪ್ಪಿದನು

ಕರಣಿಕಾಪ್ತರಂ ದೊರೆ ಮಂಡಲೀಕರು ಬಂದು 

ಹೊರವಳಯದಲಿ ಕಾದಿಹರು॥೨೭॥ 


ಬಿರುದಿನ ಪಾಠಕರು ಮೊರೆವ ನಾನಾವಾದ್ಯ 

ಧುರಧೀರ ದೊರೆ ಸಂದಣಿಯೊಳು 

ಹೊರಟರು ತಮ್ಮರಮನೆಯಿಂದ ದಳಪತಿ 

ದೊರೆ ಕೃಷ್ಣರಾಜನಾಸ್ಥಾನಕೆ ॥೨೮॥ 


ತಾರಾಬಲದಿ ಚಂದ್ರ ಬರುವಂತೆ ದಳಪತಿ 

ಸಾರಿ ಮೆರೆವ ಹಜಾರದೊಳು 

ಭೂರಮಣನ ವೀರಸಿರಿಯ ಸೌಂದರ್ಯವ 

ತೋರಿ ಮೆರೆದನಾ ಓಲಗದಿ॥೨೯॥ 


ಚಪ್ಪನ್ನ ದೇಶದ ದೊರೆ ಮಂಡಲೀಕರು 

ಕಪ್ಪ ಕಾಣಿಕೆ ತಂದು ನಿಂದು 

ಒಪ್ಪಿಸುವದಕೆ ಸಮಯವಿಲ್ಲವೆನುತ ಭೂ 

ಪೋತ್ತಮರಲ್ಲಿ ಕಾದಿಹರಂ॥೩೦॥ 


ಶಕ್ರಪೀಠದೊಳು ಶ್ರೀಕೃಷ್ಣರಾಜನು ಕುಳಿ 

ತ್ವಿಕ್ರಮ ವೀರಸಿರಿಯೊಳು 

ಆಕ್ರಮಿಸುವ ಅರಿಬಲವ ಸಂಹರಿಪ ಪ

ರಾಕ್ರಮಿ ದೇವಭೂವರನು॥೩೧॥ 


ದೊರೆ ಮಂಡಲೀಕ ಮಂತ್ರಿಗಳಲ್ಲಿ 

ಕರಣಿಕರ್ ಕಾದು ನಿಂದಿಹರು 

ಅರವತ್ತುನಾಲ್ಕು ವಿದ್ಯೆಗಳಾಡಿ ತೋರುತ್ತ 

ವರವನಿತೆಯರು ಒಪ್ಪಿದರು॥೩೨॥ 


ಚಿತ್ರದ ಪ್ರತಿಮೆಗಳಂತೆ ಶೃಂಗರದಿ ಸಾ

ಲೊತ್ತಿ ನಿಂದಿಹರೊನಿತೆಯರು 

ಕರ್ತರ ಕಣ್ಣಪುಣ್ಯದ ಸಿರಿಬೆಳೆಯಂತೆ 

ನರ್ತನವಾಡಿ ತೋರಿದರು॥೩೩॥ 


ತಾಳ ತಂಬೂರ ಮದ್ದಳೆ ವೀಣೆ ಸ್ವರದೊಳ 

ಗಾಳಿ ತೋರಿದರು ನರ್ತನವ 

ಮೇಳದಬಲೆಯರು ಪಾಡಿ ಮೆಚ್ಚಿಸುವಂತೆ 

ಆಳಿದೊಡೆಯನ ಓಲಗದಿ॥೩೪॥ 


ಕಂದರ್ಪರಾಜನೋಲಗದ ಸಂದಣಿಯು ದೇ 

ವೇಂದ್ರನ ಕೀರ್ತಿ ಪ್ರತಾಪ 

ಇಂದುಮುಖಿಯರ ವಿದ್ಯಾರಂಭ ವೀರಕ ಮು

ಕುಂದನಾಸ್ಥಾನಕಿಂ ಮಿಗಿಲು॥೩೫॥ 


ಭಟ್ಟರು ಪಾಠಕರ್ನಟುವರ್ಮಲ್ಲರಂ 

ಕಟ್ಟಿಗೆಯವರು ಕಾದಿಹರಂ 

ಶ್ರೇಷ್ಠ ಜೋಯಿಸರು ನಿಯೋಗಿ ನಿಕರಜನ 

ಕಟ್ಟಿ ಕಾದಿಹರು ಓಲಗದಿ॥೩೬॥ 


ಅರಿಬಲತಿಮಿರ ಭಾಸ್ಕರ ಮಂಡಲೇಶ್ವರ 

ಧುರಧೀರ ದೊರೆ ಸಾರ್ವಭೌಮ 

ಪರವಾದಿ ಮಸ್ತಕಾಂಕುಶ ನಂಜರಾಜೇಂದ್ರ 

ದೊರೆರಾಯ ಬಂದನಾಸ್ಥಾನಕೆ॥೩೭॥ 


ಬಿರುದಿನ ಪಾಠಕರ್ ಮೊರೆವ ನಾನಾವಾದ್ಯ 

ಪರಬಲ ಭಯಂಕರನೆಂಬ 

ಕರಿಯ ಮೇಲೇರಿ ತಾಂ ಕಳಿಸುತ್ತ ರಾಜಯ್ಯ 

ದೊರೆ ಕೃಷ್ಣರಾಜನಾಸ್ಥಾನಕೆ॥೩೮॥ 


ನಗೆನುಡಿ ಕುಂದದೆ ರಾಯಸುಮ್ಮಾನದಿ 

ಸೊಗಸೊಗುವಂತೆ ಮೈಸಿರಿಯ 

ನಗರಾಜನಂತೆ ಚಾಂಬಳ್ಳಿ ದೊಡ್ಡಯ್ಯನು 

ನಗುತ ಬಂದನು ಆಸ್ಥಾನಕೆ॥೩೯॥


ಲಲನೆಯರ್ಮಂಡೆಮಾಣಿಕವೆಂಬ ರತಿರಾಜ 

ಕಲಿಪಾರ್ಥ ಚಲದಂಕವೀರ 

ಬಲವಂತ ನಗರವನಂತಗಿರಿಯನಾಳ್ವ 

ಚೆಲುವಯ್ಯ ಬಂದನಾಸ್ಥಾನಕೆ॥೪೦॥ 


ಲೇಸೆನಿಸುವ ರಾಜಧರ್ಮವಿಚಾರದಿ 

ವಾಸೆದೋರುವ ರಾಜಕಾರ್ಯ 

ಆ ಸಮಯದೊಳು ಸಿಂಹಾಸನ ಪುರಪತಿ 

ಲೇಸಿನೊಳ್ ಬಂದನಾಸ್ಥಾನಕೆ॥೪೧॥ 


ನೆರೆಜಾಣ ರಾಯರಾಜರಗಂಡಭೇರುಂಡ 

ಧುರಧೀರ ವೀರವಿಕ್ರಮನು 

ಗುರುತಿನಪುರ ನುಗ್ಗೆಹಳ್ಳಿಯ ದೊರೆ ವೀರ 

ರಾಜಯ್ಯ ಬಂದನಾಸ್ಥಾನಕೆ ॥೪೨॥ 


ಸೊಕ್ಕಾನೆ ಮಲೆವಂತೆ ಸೊಗಸು ಮೈಸಿರಿ ಉಬ್ಬಿ 

ಉಕ್ಕುವ ಪ್ರಾಯ ಕಾತುರದಿ 

ರಕ್ಕಸಪಡೆ ಒಕ್ಕಲಿಕ್ಕುವ ಕಡವೂರ 

ಚಿಕ್ಕಯ್ಯ ಬಂದನೋಲಗಕೆ ೪೩॥ 


ಪರಬಲ ಮಸ್ತಕಾಂಕುಶ ಪ್ರಜೆಪಾಲನು 

ದೊರೆ ಮಹಾರಾಜ ದೇವೇಂದ್ರ 

ನೊರೆದ ಶ್ರೀಕಾಂತ ರಾಜೇಂದ್ರನೋಲಗದೊಳು

ಸಿರಿಧರನಂತೆ ಒಪ್ಪಿದನು॥೪೪॥ 


ಶರಕಣೆಯೊಳು ಕಲಿಕರ್ಣ ಸಾಹಸತೀರ 

ಶರಭಭೇರುಂಡ ಸಮರದಿ 

ಶರಪುರದರಸು ವಿಚಾರ ಕರ್ತನು ವೀರ 

ಸಿರಿಕೃಷ್ಣರಾಜನಾಸ್ಥಾನಕೆ ॥೪೫॥ 


ಫಣಿ ಫಣಮಣಿ ಪೊತ್ತು ಫಣಿನಾಮದೇಹದಿ 

ಫಣಿಪುರನಾಳ್ವನೊಜ್ಜೀರ 

ಫಣಿರಾಜನಂತೆ ರತ್ನಗಳ ಧರಿಸಿಕೊಂಡು 

ಫಣಿಶಯನ ಪುರಕೈದ॥೪೬॥ 


ಜಾಲದೊಳ್ ಜಗಜಾಲಿ ಜಾತಿಪ್ರೌಢನವ 

ಸೋಲನು ಸೋತರೆ ಕೊಡನಂ 

ಬೇಲೂರ ಗುರಿಕಾರ ಬಲವಂತ ಬಂದ ಶ್ರೀ 

ಲೋಲ ಕೃಷ್ಣೇಂದ್ರನೋಲಗಕೆ॥೪೭॥ 


ಕರಿಶಿರದೊಳು ಮುತ್ತು ಧರಿಸಿಕೊಂಡಂದದಿ 

ಶರಧಿ ಕಾವೇರಿ ಮಧ್ಯದೊಳು 

ನರಸಿಂಹಪುರಪತಿ ಗುರಿತಿನರಸು ಬಂದ 

ದೊರೆ ಕೃಷ್ಣರಾಜನೋಲಗಕೆ॥೪೮॥ 


ಸೊಕ್ಕಿದವರಿಗೆಲ್ಲ ತಕ್ಕ ಬುದ್ಧಿಯ ಪೇಳಿ 

ರೊಕ್ಕವ ತೆಗೆವನಕ್ಕರದಿ 

ಕಿಕ್ಕೇರಿ ಗುರಿಕಾರ ಮನಸಿಜ ಮಾತಿಗೆ 

ಸಿಕ್ಕದೆ ಬಂದನೋಲಗಕೆ॥೪೯॥ 


ಬಿಂಕ ಬೀರುತ ಭಯ ಶಂಕೆಯ ತೋರುತ 

ಕಂಕಳಿಸುತ ಗಜವೇರಿ 

ಡೆಂಕಣಿಕೋಟೆ ದೊಡ್ಡಯ್ಯನ ಮಗನು ಭೂ 

ಕಾಂತ ಕೃಷ್ಣೇಂದ್ರನೋಲಗಕೆ॥೫೦॥ 


ಅಲ್ಲ ಅಹುದು ಶಿವ ಬಲ್ಲ ಅರಿಯಬಲ 

ವೆಲ್ಲ ಗೆದ್ದವನಿವನೆಂದು 

ಫುಲ್ಲಶರನ ಪೋಲ್ವ ಶಾಲ್ಯದರಸು ಭೂ 

ವಲ್ಲಭನಿರುವ ಆಸ್ಥಾನಕೆ ॥೫೧॥ 


ಆರಿವನಿಂದ್ರನೊ ಅವತಾರಪುರುಷನೊ 

ಮಾರನೊ ಮದನಜನಕನೊ 

ಹಾರನಹಳ್ಳಿಯ ಗುರಿಕಾರನವ ಜಯ 

ಭೇರಿ ಹೊಯಿಸುತ್ತ ಓಲಗದಿ ॥೫೨॥ 


ಮಲೆನಾಡ ಮಂಡಲೀಕರ ತಲೆಶಚೆಂಡಾಡಿ 

ಕಲಿಕರ್ಣ ಕಾಮಸನ್ನಿಭನು 

ಬಲವಂತ ಅರಕಲಗೂಡನಾಳುವ ದೊರೆ 

ಗೆಲುವಿಂದ ಬಂದನೋಲಗಕೆ ॥೫೩॥ 


ವೀರ ವಿಚಾರಪರಾಯಣ ಪರಬಲ 

ತೂರಲಿರಿದು ತುಟ್ಟ ತುದಿಗೆ 

ಮಾರಾಂತ ಬಲ ಸೂರೆಯಾಡಿ ಸುಮ್ಮಾನದಿ 

ದೋರಾಂಬುಧಿಯರಸಿವನು ॥೫೪॥ 


ಸಂಗ್ರಾಮಧೀರ ಧನಂಜಯನಂಗಜ 

ತುಂಗವಿಕ್ರಮ ವೀರಶೂರ 

ಶೃಂಗಾರಹಾರ ಮೈಸೂರ ನರೇಂದ್ರ ಭು 

ಜಂಗ ಭೂಪಾಲನಾಸ್ಥಾನಕೆ ॥೫೫॥ 


ಎಡಬಲದೊಳು ಜಯಭೇರಿ ಸನ್ನೆಗಳಿಂದ 

ಗಿಡುಗನ ತಡೆಬಿಟ್ಟ ತೆರದಿ 

ಕಡುಗಲಿ ಕಡಬದ ನರಸರಾಜಯ್ಯನು 

ನಡೆದನು ರಾಯನೋಲಗಕೆ ॥೫೬॥ 


ಕರಿಗಳ ಬಲಕೆ ಕಂಠೀಲವನಂದದಿ 

ತುರುಕರ ಬಲ ಮುರಿಯೊತ್ತಿ 

ತುರುಗೆರೆಯರಸ ಸಂಗರ ಗೆದ್ದ ಭವದಿ ಸಂ

ಭ್ರಮವನಿನ್ನೆಂತು ಪೇಳುವೆನು ॥೫೭॥ 


ನವಯೌವನ ರಾಜಠೀವಿ ಸುಮ್ಮಾನದಿ 

ನವರತ್ನಂಗಳನಲಂಕರಿಸಿ 

ನವಕುಶಲನು ದೇವರಾಯ ದುರ್ಗಾಪತಿ 

ದಿವಿಜದೇವೇಂದ್ರನಾಸ್ಥಾನಕೆ ॥೫೮॥ 


ಗಬ್ಬಿತನದಿ ಘನ ಗರ್ವದಿ ಮಲೆವರ 

ಕೊಬ್ಬ ಮುರಿದು ಕೊಸರಿಡುತ 

ನಿಬ್ಬರದಲಿ ಬಂದ ನೀಲಗುದುರೆಯೇರಿ 

ಹೆಬ್ಬೂರ ಚೆಲುವರಾಜಯ್ಯ॥ ೫೯॥ 


ತಿಮಿರ ಬಲಕೆ ಶತ್ರು ದ್ಯುಮಣಿತೇಜದಂತೆ

ರಮಣಿಸುತಿಹ ರತಿರಾಜ 

ಕಮನೀಯ ತುಮಕೂರನಾಳ್ವ ನರೇಂದ್ರನು 

ಗಮಕದಿಂ ಬಂದನೋಲಗಕೆ ॥೬೦॥ 


ಇಂತೊಪ್ಪುವ ಓಲಗದೊಳು ಕೃಷ್ಣೇಂದ್ರ ಭೂ

ಕಾಂತನೊಪ್ಪಿದ ಶಕ್ರನಂತೆ 

ಅಂತರಂತರದೊಳು ಮಂತ್ರಿ ಪ್ರಧಾನರು 

ನಿಂತು ಪರಾಕ ಹೇಳುವರು ॥೮೨॥


ದೊರೆ ಕೃಷ್ಣರಾಜನೋಲಗ ಹರಿಪೀಠದಿ 

ಸಿರಿಧರನಂತೆ ಒಪ್ಪಿದನು 

ದೊರೆದೊರೆಗಳ ರಾಜಠೀವಿ ಸುಮ್ಮಾನ ಸಂ 

ದಣಿಯನಿನ್ನೇನವರ್ಣಿಪೆನು ॥೮೩॥ 


ಹರಿಯೆ ನಿಮ್ಮೊರದ ಸಂಗರದ ಸೌಂದರ ಚಥೆಯ

ಬರೆದೋದಿ ಕೇಳಿದವರಿಗೆ 

ಧರಣಿ ಚಂದ್ರಮರುಳ್ಳನಕ ಶ್ರೀಕರವಿತ್ತು 

ಪೊರೆವ ಪಶ್ಚಿಮರಂಗ ಬಿಡದೆ ॥೮೫॥ 


ಎರಡನೆಯ ಸಂಧಿ: 


ತರುವುದರನ ತಂದೆ ತನುಜೆಯನುಜೆಸಖ 

ತರಳನಮ್ಮನವರನಣುಗನ 

ಅರಸಿಯಾತ್ಮಜನ ಮೃವನ ಮಗನುರುಪಿದ 

ಗುರುವೆ ತ್ರಿಣೇಶ ಮಾಂತ್ರಾಹಿ॥೧॥ 


ತರುವುದರನ= ಚಂದ್ರನ, ತಂದೆ= ಸಮುದ್ರನ, ತನುಜೆಯ= ಲಕ್ಷ್ಮಿಯ, ಮನೆಯ= ತಾವರೆಯ, ಸಖ= ಸೂರ್ಯನ, ತರಳನ= ಕರ್ಣನ, ಅಮ್ಮನ= ಕೊಂತಿಯ, ವರನ= ಪಾಂಡುವನ, ಅಣುಗನ=ಪಾರ್ಥನ, ಅರಸಿಯ= ಸುಭದ್ರೆಯ, ಆತ್ಮಜನ= ಅಭಿಮನ್ಯುವಿನ,ಮಾವನ= ಕೃಷ್ಣನ, ಮಗನ= ಕಾಮನ,ಅಂಥ ಕಾಮನರುಪಿದ, ಶಿವಸ್ವರೂಪನಾದ, ತ್ರಿಣೇಶ್ವರಂಗೆ ನಾನು ನಮಸ್ಕರಿಸುವೆ. 


ಹರಿ ಶೌರಿವಿಷ್ಣು ಮುಕುಂದ ಮಾಧವ ಕೃಷ್ಣ 

ಪುರುಷೋತ್ತಮ ವಾಸುದೇವ 

ಮುರಹರನಚ್ಯುತ ರಾಘವ ಶ್ರೀರಂಗ 

ನೊರದಿಂದ ಪೇಳ್ವೆನೀ ಕೃತಿಯ॥೨॥ 


ಅಂಗವಿಲ್ಲದನ ನುಂಗುವ ಹಗೆಯನ 

ಹಿಂಗದೇರುವನೊರಸುತನ 

ಕಂಗಳಿಂದುರುಪಿದ ಗಂಗಾಧರ ಮಹಾ 

ಲಿಂಗ ಕೊಡೆನಗೆ ಸುಮತಿಯ ॥೩॥ 


ಶಶಿಜೂಟ ಮಾಕಾಂತ ಪಶುಪತಿ ಪರಮೇಶ 

ವಿಷಕಂಠ ನಂಜುಂಡಲಿಂಗ 

ವಶವಾಗಿ ಕೃತಿಗೆ ಮಂಗಳದಿ ಮಹಾದೇವ 

ಭಸಿತಾಂಗ ಭವಭಂಗ ಲಿಂಗ ॥೪॥ 


ಈ ಪರಿಯಲಿ ರೂಪುದೋರುತ ವರಸಿಂಹ 

ಪೀಠದಿ ಕುಳಿತು ಸಂತಸದಿ 

ಆಪರದೊರೆ ಮಂಡಲೀಕ ಮನ್ನೆಯರಲ್ಲಿ 

ರೂಪುದೋರುತ ನಿಂದಿಹರಂ ॥೫॥ 


ಕೊಂಗ ಕಳಿಂಗ ಕಾಶ್ಮೀರ ಕರಾಳ ಕಾಂ 

ಭೋಜ ಕರ್ನಾಟಕೋಸಲದ 

ಬಂಗಾಳದೇಶದರಸುಗಳು ಓಲಗ 

ಸಂಭ್ರಮದೊಳಗೆ ನಿಂದಿಹರಂ ॥೬॥ 


ಇಂತೊಪ್ಪುವ ಐವತ್ತಾರು ದೇಶದ ಭೂ 

ಕಾಂತರಂ ಬಂದು ನಿಂದಿಹರಂ 

ಸಂತೋಷದೊಳು ತಂದ ಕಪ್ಪ ಕಾಣಿಕೆ 

ನಿಂತು ಒಪ್ಪಿಸಿ ಬಿನ್ನವಿಸುತ॥೧೫॥ 


ಮಂಡಲೀಕರು ದಂಡನಾಥ ತನ್ಮಂತ್ರಿಗಳ್ 

ತಂಡತಂಡದೊಳು ನಿಂದಿಹರು 

ಪಂಡಿತ ಪ್ರಭುಗಳು ನಾನಾವಿನೋದರು 

ಚಂಡವಿಕ್ರಮನೋಲಗಿಪರು॥೧೬॥ 


ಶಕ್ರಪೀಠದೊಳು ಶ್ರೀಕೃಷ್ಣರಾಜೇಂದ್ರನು 

ವಿಕ್ರಮವೀರಸಿರಿಯೊಳು

ಶಕ್ರನಂತೋಲಗಗೊಳುತ ಸಭಾಪತಿ 

ಸುಕೃತಿ ಕೇಳಿ ಕೊಡುವನು ॥೩೭॥ 


ಕೊಡುವ ತೆಗೆವ ವಿದ್ವಾಂಸರ ವಿಧವರಿ 

ದಿಡುವ ತಾನಿಟ್ಟಾಭರಣವ 

ಗಿಡುಗನ ಚರಣಕ್ಕೆ ಬಿರಿದ ಕಟ್ಟಿದವೊಲು 

ನಡೆದರು ತೆಗೆದುಕೊಂಡವರು.॥೩೮॥ 


ದಳಪತಿ ಭುಜಬಲದಳತೆ ಕಂಡವರಿಲ್ಲ

ಇಳೆಯೊಳಾತಗೆ ಇದಿರಿಲ್ಲ

ಕಳಲೆ ಪಟ್ಣದ ಕಲಿಕರ್ಣಾವತಾರನ 

ಹೊಳಲೊಳಿರುವ ಜನ ಹೊಗಳೆ॥೪೦॥ 


ಅರರಂತರಂಗವರಿದು ಮಾತನಾಡುವ 

ಸರಸವಿನೋದಿ ಪ್ರಧಾನಿ 

ಪರಿವಾರ ಜನಕೆ ತಾ ವಿರತಿ ದೋರುವವಿಕ್ತಿ 

ನೆರೆ ಜಿಣರಾಯನಿಯೋಗಿ ॥೪೫॥ 


ಇಂತು ಪ್ರಧಾನಪಂಡಿತನ ವಿಚಾರ ಭೂ 

ಕಾಂತ ದೇವೇಂದ್ರನಾಸ್ಥಾನದಿ 

ಅಂತರಂತರದೊಳು ಅರಸಾಳುಗಳು ಬಂದು 

ನಿಂತು ಪರಾಕ ಹೇಳುವರು ॥೪೯॥ 


ನಿಂತು ಪರಾಕ ಹೊಗಳಿ ಹೇಳಿದವರಿಗೆ ಭೂ 

ಕಾಂತ ಸಪ್ತಾಂಗ ತೆಗೆವನು 

ಅಂತರಂತರದಲಿ ಕೊಡುವ ಸಮರ್ಥರಾ

ರುಂಟು ಲೋಕದೊಳು ನಿಮ್ಮಂತೆ ॥೫೪॥ 


ಹರಿ ಪರಾಕ್ರಮ ಪರಮೇಶ್ವರನೊರಕೋಪ 

ಸರಸಿಜೋದ್ಭವನ ಚರಿತ್ರೆ 

ಪರುವತರಾಜನ ಸ್ಥಿರ ಭಗೀರಥ ಯತ್ನ

ವರವೇಷ ಮುನಿಗುಂಟು ನಿಮಗೆ ॥೫೫॥ 


ವಾಲಿಯ ಬಲುಹು ಸುಗ್ರೀವಾಜ್ಞೆ ಸೂರ್ಯನ 

ಶೌರ್ಯ ಸಮುದ್ರನ ಗುಂಫು 

ಕಾಲನ ದಂಡಣೆ ಭೀಮನಗ್ಗಳಿಕೆ ಭೂ 

ಪಾಲನ ಕೀರ್ತಿ ದಿಗ್ವೆಜದಿ ॥೫೬॥


ಪಾರಾಶರನ ಪರಿಣತೆ ನಾರದರ ಗಾನ 

ಧೀರ ದಿಗ್ವಿಜೆಯರ ಸೊಕ್ಕು 

ಮಾರಾಂತರ ಗೆದ್ದ ವೀರದೇವೇಂದ್ರನ 

ಸೇರಿ ಓಲೈಸಿಕೊಂಡಿಹವು ॥೬೨॥ 


ಈ ಪರಿ ಗುಣಗಳಪರಿಮಿತದಲಿ ಸಿರಿ 

ಕಾಪುಗೊಟ್ಟರ ಸಾಕದಿಹವು 

ಆ ಪರಬಲ ದಳಪತಿ ವಾರ್ತೆ ಕೇಳಿ ಮುಂ 

ದೇವಿಸುತ್ತಿಹ ರಾಜಕಾರ್ಯ ॥೬೫॥ 


ವೀರವಿಚಾರಕರ್ತರ ವೀರಸೌಂದರ್ಯ 

ವೀರಸಿರಿಯ ವೀರಶೌರ್ಯ 

ವೀರನಾರಾಯಣನೊರದ ಶ್ರೀಕರದಿಂದ 

ಶಾರದೆ ಪೇಳ್ದಳೀ ಕೃತಿಯ ॥೬೬॥ 


ಹರಿಯೆ ನಿಮ್ಮೊರದ ಸಂಗರದ ಸೌಂದರ ಕಾವ್ಯ 

ಬರೆದೋದಿ ಕೇಳಿದವರಿಗೆ 

ಧರಣಿಚಂದ್ರಮರುಳ್ಳನಕ ಶ್ರೀಕರವಿತ್ತು 

ಪೊರೆವ ಪಶ್ಚಿಮರಂಗ ಬಿಡದೆ॥೬೭॥ 


ಮೂರನೆಯ ಸಂಧಿ: 


ನಾಸಿಕದುಂಬನ ಘಾಸಿಗೈದವನ ಛೇ 

ದಿಸಿದನಂಗನೆಯಳ ಪಿತನ 

ಸೂಸದುಂಡವನ ವಂದಿಸಿದಾತಗೆ ವಾದಿ

ವಾಸವಾಗಿಹಗೆ ಮಾಂತ್ರಾಹಿ ॥೧॥ 


ನಾಸಿಕದುಂಬನ= ಗಜೇಂದ್ರನ, ಘಾಸಿಗೈದವನ= ಮೊಸಳೆಯ ಛೇದಿಸಿದ ಕೃಷ್ಣನ, ಅಂಗನೆಯ= ಲಕ್ಷ್ಮಿಯ, ಪಿತನ= ಸಮುದ್ರನ, ಸೂಸುದುಂಡವ= ಅಗಸ್ತ್ಯನಿಗೆ, ವಂದಿಸಿದಾತಗೆ, ವಾದಿವಾಸವಾಗಿಹ= ವಿಂಧ್ಯಾಚಲಕ್ಕೆ ವಾದಿಯಾದಾತಗೆ ನಾನು ನಮಸ್ಕರಿಸುವೆನು. 


ಇತ್ತ ದೇವೇಂದ್ರನ ಅರ್ತಿಯೋಲಗದೊಳು 

ನರ್ತನ ರತಿರಾಜಠೀವಿ 

ವಿಸ್ತಾರವಾಗಿ ಪೇಳುವೆ ಕೇಳು ಚಿತ್ತದ 

ಕತ್ತಲೆ ಪರಿವ ತೆರದೆ ॥೫॥ 


ಆಡುವ ಪಾತ್ರವ ನೋಡುವರತಿಶಯ 

ರೂಢಿಗೀಶ್ವರನೋಲಗದೊಳು

ನಾಡನಾಳುವರೆಲ್ಲ ಜೋಡುಜೋಡಿಲಿ ನಿಂದು 

ನೋಡಿದರಾ ಪುರಪತಿಯ ॥೬॥ 


ಮಡದಿಯರ್ಮಂಡೆಮಾಣಿಕವೆಂಬ ಲಲನೆಯ 

ಬಡನಡು ಮೊಲೆಯ ಭಾರಗಳ 

ತಡೆಯಲಾರದೆ ಬಳುಕುವ ತೆರದೊಳು ಬಂದು

ಮಡದಿಯಾಡಿದಳು ನರ್ತನವ ॥೮॥ 


ಶಶಿಕಾಂತೆ ಸಾಹಿತ್ಯೆ ವಾಣಿ ವಿದ್ಯೆ ರತ್ನೆ 

ಕುಸುಮಾಂಗಿ ಕುಶಲೆ ಕೋಮಲೆಯು 

ಸುಗುಣೆ ಸುರತಿ ರಂಭವತಿಯಂತೆ ನರ್ತನ 

ಬಗೆಬಗೆಯೊಳಗೆ ತೋರಿದಳು ॥೧೦॥ 


ಕುಂದಣಗೆಲಸದ ಕುಶಲಾಭರಣವಿಟ್ಟು 

ಕಂದರ್ಪಸೇನೆಯೆಂಬವಳು 

ಬಂದಳು ಭರತಕೋವಿದರೆಲ್ಲಯೆನಗಡಿ 

ಎಂದು ಹೊಗಳಿಸಿಕೊಳುತಲಿ ॥೧೯॥ 


ನಿಡುಜಡೆ ಬಡನಡು ಕುಡಿಹುಬ್ಬು ಕುಣಿಸುತ 

ನಡುಪ್ರಾಯ ರಮ್ಯದೋರುತಲಿ 

ಪೊಡವಿಯೊಳೆನ್ನ ಸೋಲಿಸುವರಿಲ್ಲೆಂದುವಾ 

ಮಡದಿ ಒಪ್ಪಿದಳೋಲಗದಿ ॥೩೩॥


ತಂಡತಂಡದಲಿ ಕೋದಂಡಪಂಡಿತರು ಮಾ 

ರ್ತಂಡತೇಜದೊಳೊಪ್ಪುತಿಹರು 

ದಂಡ ಕೋದಂಡ ಕಠಾರಿ ಕೈಚೂರಿಗಶ

ಳಿಂದ ಓಲಗದಿ ನಿಂದಿಹರು ॥೧೦೮॥ 


ಅಸಿಯು ಮುಸಲ ಮುದ್ಗರ ತೋಮರ ಬಲ್ಲೆಯ

ಆಸಿಯ ಡಾಳುಗಳು ಹೇರಿಟ್ಟಿ 

ಕುಸಿಕಿರಿದಿರಿವ ಸುರಗಿಯ ಕಕ್ಕಡ ಖಂಡೆ 

ದೆಸೆವಂತರ್ಪಿಡಿದು ನಿಂದಿಹರು॥೧೦೯॥ 


ಇಂತೊಪ್ಪುವ ಬತ್ತೀಸಾಯುಧಂಗಳ ಪಿಡಿ

ದಂತರಂತರದಿ ನಿಂದಿಹರು 

ಸಂತೋಷದೊಳು ಶಕ್ರಪೀಠದಿ ಕುಳಿತು ಭೂ 

ಕಾಂತನೊಪ್ಪಿದನು ಶಕ್ರನಂತೆ ॥೧೧೩॥ 

 

ವೀರವಿಚಾರಕರ್ತರ ವೀರಸೌಂದರ್ಯ 

ವೀರಸಿರಿಯು ವೀರಶೌರ್ಯ 

ವೀರನಾರಾಯಣನೊರದ ಶ್ರೀಕರದಿಂದ 

ಶಾರದೆ ಪೇಳ್ದಳೀ ಕೃತಿಯ ॥೧೧೪॥ 


ಹರಿಯೆ ನಿಮ್ಮೊರೆದ ಸಂಗರದ ಸೌಂದರ್ಯಕಾವ್ಯ 

ಬರೆದೋದಿ ಕೇಳಿದವರಿಗೆ 

ಧರಣಿ ಚಂದ್ರಮರುಳ್ಳನಕ ಶ್ರೀಕರವಿತ್ತು 

ಪೊರೆವ ಪಶ್ಚಿಮರಂಗ ಬಿಡದೆ ॥೧೧೫॥ 


ನಾಲ್ಕನೆಯ ಸಂಧಿ:


ಸುರಪಪಗೆಯ ಸುತನಸುಗಾಯ್ದದಳಿಯನ 

ವರಕುವರನವಾಜಿಪೆಸರಾಂ 

ತಿರುವನಪ್ಪನ ತಾಯ ಪತಿಯ ನಂದನನವ್ವೆ 

ಧರಿಸಿರ್ಪ ತ್ರಿಣೇಶ ಮಾಂತ್ರಾಹಿ ॥೧॥  


ಸುರಪ= ದೇವೇಂದ್ರನ, ಪಗೆಯ= ಗಿರಿರಾಜನ,ಸುತನ= ಮೈನಾಕನ, ಅಸುವಗಾಯಿದನ=ಸಮುದ್ರನ, ಅಳಿಯನ= ವಿಷ್ಣುವಿನ, ವರ= ಶ್ರೇಷ್ಠವಾದ, ಕುಮಾರನ= ಕಾಮನ, ವಾಜಿ= ಗಿಳಿಯ, ಪೆಸರಾಂತಿರುವನ= ಶುಕಯೋಗಿಯ, ಅಪ್ಪನ= ವೇದವ್ಯಾಸನ, ತಾಯ= ಯೋಜನಗಂಧಿಯ, ಪತಿಯ=ಶಂತನು ಚಕ್ರವರ್ತಿಯ, ನಂದನನ= ಭೀಷ್ಮಾಚಾರಿಯ, ಅವ್ವೆಯ= ಗಂಗೆಯ, ಆಂತಪ್ಪ=ಧರಿಸಿದ, ಶಿವಸ್ವರೂಪವಾದ ತೃಣೇಶ್ವರನಿಗೆ ನಾನು ನಮಸ್ಕರಿಸುವೆನು. 


ಐದನೆಯ ಸಂಧಿ: 


ಉಡುವೆಣ್ಣಾಳಿದನ ತನುಜೆವರನಣುಗನ 

ಮಡದಿಯಪ್ಪನ ಭುಜಬಲವ 

ಕಡಿದನ ತುರಗಪಡೆಯ ವೈರಿಗಮನನ 

ಪಡೆದ ತ್ರಿಣೇಶ ಮಾಂತ್ರಾಹಿ ॥೧॥ 


ಉಡು= ನಕ್ಷತ್ರ, ವೆಣ್ಣಾಳಿದನ= ಚಂದ್ರನ, ತನುಜೆಯ= ರತಿದೇವಿಯ, ವರನ= ಮನ್ಮಥನ, ಅಣುಗನ=ಅನಿರುದ್ಧನ, ಮಡದಿಯ= ಉಷೆಯ, ಅಪ್ಪನ= ಬಾಣಾಸುರನ, ಭುಜಬಲವ ಕಡಿದನ= ಕೃಷ್ಣನ, ತುರಗನ=ಗರುಡನ, ಪಗೆಯ= ಸರ್ಪನ, ವೈರಿಯ= ನವಿಲ, ಗಮನವ= ಷಣ್ಮುಖದೇವರ, ಅಂಥ ಷಣ್ಮುಖನ ದೇವರ ಪಡೆದ ಶಿವಸ್ವರೂಪವಾದ ತ್ರಿಣೇಶಂಗೆ ನಾಂ ನಮಸ್ಕರಿಸುವೆನು. 


ಆರನೆಯ ಸಂಧಿ: 


ಪೊಡವಿಯೊಳ್ ನಡೆವನಿಗೊಡಲಂಬದಣುಗನಿಂ 

ಮಡಿದನಾಪ್ತನ ಕೈಯ ದಾನ 

ಹಿಡಿದನ ಮಗನವ್ವೆಯ ಸಖನಸುತನ ಕೊಂದ 

ಮೃಡನೆ ತ್ರಿಣೇಶ ಮಾಂತ್ರಾಹಿ ॥೧॥ 


ಪೊಡವಿಯೊಳ್ ನಡೆವನ= ಸರ್ಪನ, ವಡಲಿಗುಂಬನ= ವಾಯುವ, ಅಣುಗನಿಂ= ಭೀಮನಿಂದ, ಮಡಿದನ= ದುರ್ಯೋಧನನ, ಆಪ್ತ=ಕರ್ಣನ, ಕೈಯದಾನ= ಕೈಯಿಂದ ದಾನವ ಹಿಡಿದವ=ಕೃಷ್ಣನ,  ಮಗನ=ಬ್ರಹ್ಮನ, ಅವ್ಸೆಯ= ತಾವರೆಯ, ಸಖನ= ಸೂರ್ಯನ,ಸುತನ= ಯಮನ ಗೆದ್ದುಕೊಂಡ ಶಿವಸ್ವರೂಪವಾದ ತ್ರಿಣೇಶಂಗೆ ನಾನು ನಮಸ್ಕರಿಸುವೆನು. 


ಏಳನೆಯ ಸಂಧಿ: 


ಮಡಿದನಿರಿದನನುಜೆಯ ಮುಡಿವಿಡಿದನ 

ಒಡಹುಟ್ಟಿದನ ತಂಗವರನ 

ಕಡಿದನ ರಥಹಯ ಹೊಡೆದನಂಬಕಪಾದ 

ದೆಡೆಯಿಪ್ಪ ತ್ರಿಣೇಶಮಾಂತ್ರಾಹಿ॥೧॥ 


ಮಡಿದನ= ದ್ರೋಣಾಚಾರಿಯ, ಇರಿದನ= ದೃಷ್ಟದ್ಯುಮ್ನನ, ಅನುಜೆಯ= ದ್ರೌಪದಿಯ, ಮುಡಿವಿಡಿದನ= ದುಶ್ಯಾಸನನ, ಒಡಹುಟ್ಟಿದನ= ಕೌರವನ, ತಂಗಿ= ತಂಗಿಯಾದ ದುಷ್ಷಳೆಯ, ವರನ= ಸೈಂಧವನ, ಕಡಿದವನ= ಅರ್ಜುನನ, ರಥಹಯ= ರಥದ ಕುದುರೆಯ, ಹೊಡೆದವನ= ಕೃಷ್ಣನ, ಅಂಬಕ= ನಯನವ, ಅಂತಾ ಕೃಷ್ಣನ ನಯನವನು ಪಾದದಲಿ ಧರಿಸಿದ ಶಿವಸ್ವರೂಪವಾದ ತ್ರಿಣೇಶಂಗೆ ನಾನು ನಮಸ್ಕರಿಸುವೆನು. 


ಎಂಟನೆಯ ಸಂಧಿ: 


ಉರಿಯಪ್ಪಿ ಉಳಿದನಾಹಾರದಲಳಿದನವ್ವೆಯ 

ವರನ ಸಿರಿಯ ಸೆಳೆದವನ 

ಪೆಸರಪ್ಪ ಸತಿಯರ ತಂದೆಯಳಿಯನನ 

ಧರಿಸಿಪ್ಪ ತ್ರಿಣೇಶ ಮಾಂತ್ರಾಹಿ ॥೧॥ 


ಉರಿಯಪ್ಪಿ ಉಳಿದನ= ತಕ್ಷಕನೆಂಬ ಸರ್ಪನ, ಆಹಾರದಲಳಿದವನ= ಲೋಹಿತಕುಮಾರನ, ಅವ್ವೆಯ= ಚಂದ್ರಮತಿಯ,ವರನ= ಹರಿಶ್ಚಂದ್ರನ, ಸಿರಿಯ ಸೆಳೆದನ= ವಿಶ್ವಾಮಿತ್ರನ, ಶಿಷ್ಯ= ನಕ್ಷತ್ರಿಕನ, ಪೆಸರಪ್ಪ ಸತಿಯರ= ಇಪ್ಪತ್ತೇಳು ಮಳೆಯ ನಕ್ಷತ್ರಂಗಳ,ತಂದೆಯ= ದಕ್ಷನ, ಅಳಿಯನ= ಚಂದ್ರನ, ಅಂಥ ಚಂದ್ರನ ಧರಿಸಿದ ಶಿವಸ್ವರೂಪವಾದ ತ್ರಿಣೇಶಂಗೆ ನಾನು ನಮಸ್ಕರಿಸುವೆನು. 


ಒಂಬತ್ತನೆಯ ಸಂಧಿ: 

ಕಂದನಿಂದಳಿದರ ತಂದೆಯ ಪಗೆಯ ಕೈ 

ನೊಂದನ ವೈರಿಯ ಚರನ 

ಒಂದಾಗಿ ಹುಟ್ಟಿದನಯ್ಯನ ಸಖನೇತ್ರ 

ದಿಂದಿಪ್ಪ ತ್ರಿಣೇಶ ಮಾಂತ್ರಾಹಿ ॥೧॥ 


ಕಂದನಿಂ= ಅಭಿಮನ್ಯವಿನಿಂದ, ಅಳಿದರ= ಕೌರವ ಕುಮಾರರ, ತಂದೆಯ = ಕೌರವನ, ಪಗೆಯ= ಭೀಮನ, ಕೈನೊಂದನ= ಜರಾಸಂಧನ,ವೈರಿಯ= ಕೃಷ್ಣನ,  ಚರನ= ಹನುಮಂತನ, ಒಂದಾಗಿ ಹುಟ್ಟಿದನ= ಭೀಮನ, ಅಯ್ಯನ= ವಾಯುವ, ಸಖನ= ಅಗ್ನಿಯ ಅಂಥ ಅಗ್ನಿಯ ನೇತ್ರದಿದಿಪ್ಪ ತ್ರಿಣೇಶಂಗೆ ನಾನು ನಮಸ್ಕರಿಸುವೆನು.  


ಹತ್ತನೆಯ ಸಂಧಿ: 


ತಂದೆಯ ರೂಪಿನ ಸ್ಯಂದನ ಸತಿಯತ್ತೆ 

ಮಂದಿರ ಪಗೆಯ ನುಂಗುವನ 

ಬಂದೆತ್ತುವನ ಪೆಗಲೇರುವನ ಸುತನ 

ಕೊಂದ ತ್ರಿಣೇಶ ಮಾಂತ್ರಾಹಿ ॥೧॥ 


ತಂದೆಯ= ಕೃಷ್ಣನ, ರೂಪಿನ ಸ್ಯಂದನ = ಆ ಕೃಷ್ಣನ ರೂಪಿನರಥವನ್ನುಳ್ಳ ಬ್ರಹ್ಮನ, ಸತಿಯ= ಸರಸ್ವತಿಯ,ಅತ್ತೆಯ= ಲಕ್ಷ್ಮಿಯ, ಮಂದಿರ= ತಾವರೆಯ, ಪಗೆಯ= ಚಂದ್ರನ, ನುಂಗುವನ= ಮಹಾಶೇಷನ, ಬಂದೆತ್ತುವ= ಗರುಡನ, ಪೆಗಲೇರುವನ=ಕೃಷ್ಣನ, ಸುತನ=ಕಾಮನ, ಅಂಥ ಕಾಮನ ವಹ್ನಿ ನೇತ್ರದಿಂದ ಜಯಿಸಿದ ಶಿವಸ್ವರೂಪವಾದ ತ್ರಿಣೇಶಂಗೆ ನಾನು ನಮಸ್ಕರಿಸುವೆನು. 


ಹನ್ನೊಂದನೆಯ ಸಂಧಿ: 


ಕಂದನಜರಿದನ ತಂದೆಯನುಂಡವನ 

ವಂದಿಸಿದನ ವೈರಿ ವನವ 

ತಿಂದನ ಹಯಮುಖದಂದನ ಕುವರಿಯ 

ತಂದ ತ್ರಿಣೇಶ ಮಾಂತ್ರಾಹಿ ॥೧॥ 


ಕಂದನ ಜರಿದನ= ದೂರ್ವಾಸನ, ತಂದೆಯನುಂಡವನ=ಗರಿಕೆಯ ಹುಲ್ಲ ಉಂಡವನ,ಬಸವೇಶ್ವರನ, ವಂದಿಸಿದನು= ಗಿರಿರಾಜನ, ವೈರಿಯ= ದೇವೇಂದ್ರನ, ವನವ= ಖಾಂಡವ ವನವ, ತಿಂದನ= ಅಗ್ನಿಯ, ಹಯ= ತಗರ, ಮುಖದಂದನ= ದಕ್ಷನ, ಕುವರಿಯ= ದಾಕ್ಷಾಯಣಿಯ ತಂದಂಥ ಶಿವಸ್ವರೂಪವಾದತ್ರಿಣೇಶಂಗೆ ನಾನು ನಮಸ್ಕರಿಸುವೆನು. 


ಹನ್ನೆರಡನೆಯ ಸಂಧಿ: 


ದೃಷ್ಟಿಯಿಂ ಕೇಳ್ದನ ಹೊಟ್ಟೆಗುಂಬನ ಬೆನ್ನ 

ಮೆಟ್ಟಿ ಗಮಿಪನಮ್ಮನೊಡನೆ 

ಹುಟ್ಟಿದವನ ಅರೆಯಟ್ಟಿದಾತಗೆ ಭೋಗ 

ಕೊಟ್ಟ ತ್ರಿಣೇಶ ಮಾಂತ್ರಾಹಿ ॥೧॥ 


ದಿಟ್ಟಿಯಿಂ ಕೇಳ್ದನ= ಸರ್ಪನ, ಹೊಟ್ಟೆಗುಂಬನ=ನವೆಲ,ಬೆನ್ನ ಮೆಟ್ಟಿ ಗಮಿಪನ= ಷಣ್ಮುಖನ, ಅಮ್ಮನ= ಪಾರ್ವತಿಯ, ಒಡಹುಟ್ಟಿದನ = ಮೈನಾಕನ, ಅರೆಯಟ್ಟಿದಾತನ= ದೇವೇಂದ್ರಗೆ, ಐಶ್ವರ್ಯ ಭೋಗವ ಕೊಟ್ಟ ಶಿವಸ್ವರೂಪವಾದ ತ್ರಿಣೇಶಂಗೆ ನಾನು ನಮಸ್ಕರಿಸುವೆನು.  


ಹದಿಮೂರನೆಯ ಸಂಧಿ: 


ಕಡಲ ದಾಂಟಿದನ ಸಂಗಡ ಹುಟ್ಟಿದನ ತಂದೆ 

ಒಡಲಿಗುಂಬನ ವೈರಿಸತಿಯ 

ಪಡೆದನಯ್ಯನ ತಾಯ ಪತಿಯ ಮಗನ ಕೊಂದ 

ಮೃಡನೆ ತ್ರಿಣೇಶ ಮಾಂತ್ರಾಹಿ ॥೧॥ 


ಕಡಲದಾಂಟಿದನ= ಹನುಮಂತನ,ಸಂಗಡ ಹುಟ್ಟಿದನ= ಭೀಮನ, ತಂದೆಯ= ವಾಯುವ, ಒಡಲಿಗುಂಬನ= ಸರ್ಪನ, ವೈರಿಯ= ಚಂದ್ರನ,  ಸತಿಯ= ರೋಹಿಣಿ, ಪಡೆದನ ಅಯ್ಯನ= ಬ್ರಹ್ಮನ, ತಾಯ=ಲಕ್ಷ್ಮಿಯ, ಪತಿಯ= ವಿಷ್ಣುವಿನ, ಮಗನ=ಕಾಮನ, ಕೊಂದ ಶಿವಸ್ವರೂಪವಾದ ತ್ರಿಣೇಶಂಗೆ ನಾನು ನಮಸ್ಕರಿಸುವೆನು.  


ವೀರ ವಿಚಾರಕರ್ತರ ವೀರ ಸೌಂದರ್ಯ 

ವೀರಸಿರಿಯು ವೀರಶೌರ್ಯ 

ವೀರನಾರಾಯಣನೊರದ ಶ್ರೀಕರದಿಂದ 

ನೂರೊಂದ ಪೇಳ್ದನೀ ಕೃತಿಯ॥೧೬೨॥ 


ಹರಿಯೆ ನಿಮ್ಮೊರದ ಸಂಗರದ ಸೌಂದರ ಕಾವ್ಯ 

ಬರೆದೋದಿ ಕೇಳಿದವರಿಗೆ 

ಧರಣಿ ಚಂದ್ರಮರುಳ್ಳನಕ ಶ್ರೀಕರವಿತ್ತು 

ಪೊರೆವ ಪಶ್ಚಿಮರಂಗ ಬಿಡದೆ ॥೧೬೩॥ 


ನೆನೆಕೆ: 

ಕರ್ತೃ: ನೂರೊಂದಯ್ಯ, 

ಸಂಪಾದಕರು: ವೈ. ಸಿ. ಭಾನುಮತಿ,

ಪ್ರಕಾಶಕರು: 

ಕುವೆಂಪು ಅಧ್ಯಯನ ಸಂಸ್ಥೆ,ಮೈಸೂರು ವಿಶ್ವವಿದ್ಯಾಲಯ. 












ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ