ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜೂನ್ 18, 2023

ತಿಮ್ಮಕವಿ ವಿರಚಿತ ಹರಿವಿಲಾಸ ಸಾಂಗತ್ಯ

 ತಿಮ್ಮಕವಿ ವಿರಚಿತ ಹರಿವಿಲಾಸ ಸಾಂಗತ್ಯ 


ಹರಿವಿಲಾಸ ಕರ್ತೃ ಮುದ್ದು ತಿಮ್ಮ ಅಥವಾ ತಿಮ್ಮಕವಿ. ಕೃಷ್ಣನ ಬಾಲಲೀಲೆಯನ್ನು ಮಾತ್ರ ತನ್ನ ಕೃತಿಯಲ್ಲಿ ವರ್ಣಿಸಿದ್ದಾ ನೆ. ಬಲರಾಮ ಕೃಷ್ಣರ ಕಥೆಯನ್ನು ತಿಳಿಸುವ ಪುಣ್ಯ ಕೃತಿ ಈ ಹರಿವಿಲಾಸ. ಆದರೆ ಕೃಷ್ಣನದೇ ಪ್ರಮುಖ ಪಾತ್ರ. ಲೋಕ -ಕಲ್ಯಾಣಕ್ಕಾಗಿ ವಿಷ್ಣುವು ಅವತರಿಸಿದ ಹತ್ತನೆಯ ಅವತಾರದ್ದೆಂದು ಕವಿ ಹೇಳುತ್ತಾನೆ. 


ಕಾವ್ಯದ ಆರಂಭದಲ್ಲಿ ಕವಿಯು ಮನುಮುನಿಗಳಿಂದ ವಂದಿತನಾದ ವಿಷ್ಣುವನ್ನು ಸ್ತುತಿಸಿ, ಶಿವನನ್ನು ಪ್ರಾರ್ಥಿಸಿ ಲೋಕದಲ್ಲಾಗುವ ಹೇಯೋಪಾದನೆಗಳನ್ನು ತಿಳಿಸುವ ಬ್ರಹ್ಮನಿಗೆ ನಮಸ್ಕರಿಸುವನು. ನರಸಿಂಹಭಾರತಿಯವರಿಗೂ ಕೃತಜ್ಞತೆ ಸಲ್ಲಿಸಿ ಏಳು ದಿನಗಳಲ್ಲಿ ಈ ಭಾಗವತ ಕಥೆಯನ್ನು ಪರೀಕ್ಷಿತರಾಜನಿಗೆ ವಿವರೆಸಿದ ಶುಕಮಹರ್ಷಿಗೂ ನಮನವನ್ನು ಅರ್ಪಿಸುವನು.ವರರುಚಿ, ಭವಭೂತಿ, ಬಾಣ,ಮಯೂರ, ಕಾಳಿದಾಸ, ರುದ್ರಭಟ್ಟಾದಿ ಕವಿಗಳನ್ನು ಸ್ಮರಿಸುವನು.


ಧರಣಿ ದೈತ್ಯರ ಭಾರಕೆ ಬಸವಳಿದು ಪಂ

ಕರುಹನಾಭಗೆ ಬಿನ್ನೈಸಿದಳು ॥ ಪಲ್ಲವಿ॥ 


ಶ್ರೀ ವನಿತಾನಯನೋತ್ಪಲ ಹಿಮಕರ 

ದೇವ ನರೋರಗ ವಂದ್ಯ 

ಭಾವಜಪಿತಭವ ಮನುಮುನಿವಿನುತ ಕೃ 

ಪಾವಾರ್ಧಿ ಹರಿ ಶರಣೆನಗೆ॥೧॥ 


ಕಡು ಭಕ್ತರೆಡರೆನಿಪಡವಿಯ ಬುಡದಿಂದ 

ಕಡಿದು ಕಾರುಣ್ಯದಿನೊಗೆವ 

ಕೊಡಲಿಗಯ್ಯನ ಮೆಲ್ಲಡಿಗಳ್ಗೆರಗುವೆನು 

ನುಡಿಯಿಸಲಿಂದೆನ್ನ ಕೃತಿಯ ॥೫॥ 


ಉರುವ ಜಂಗಮ ಕಲೂಪತರುವ ಕಾರುಣ್ಯದ 

ಕರುವ ಪರಬ್ರಹ್ಮದಿರವ 

ನರಸಿಂಹಭಾರತಿರಾಯನ ಪದಯುಗ 

ಸರಸಿಜಕವನತನಪ್ಪೆ  ॥೬॥ 


ಏಳು ದಿನದೊಳಗೆ ಪುಣ್ಯಕಥೆಯ ಭೂಮಿ 

ಪಾಲತಿಲಕ ಪರೀಕ್ಷಿತಗೆ 

ಹೇಳಿ ಮುಕ್ತಿಯ ಕರುಣಿಸಿದ ಶುಕ ಮುನಿ

ಜಾಲನುತಗೆ ನಮೋಯೆಂಬೆ ॥೮॥ 


ಭೂಮಿಯೊಳತಿ ಪುಣ್ಯಕಥೆಯೆನಿಸುವ ಸಿರಿ 

ರಾಮಕೃಷ್ಣರ ಚರಿತವನು 

ರ್ಮಣೀಯಕವೆನೆ ಪೇಳೆಂದೆನಗೆ ನಿ 

ಯಾಮಿಸೆ ಬುಧರು ಪೇಳಿದೆನು ॥೧೦॥ 


ಶ್ರುತಿಫಣಿಪತಿ ಭಾರತಿ ಮನು ಮುನಿಗಳ 

ಮತಿಗಳವಡದ ಶ್ರೀಹರೆಯ 

ಕಥೆಯ ಬಣ್ಣಿಸಲಳವಲ್ಲವೆಂಬಂತೆ ಭ

ಕುತಿಯಿಂದಾನೊರೆವೆ ಜಾನಿಪುದು ॥೧೧॥ 


ಸಾಸಿರಲಿಂಗವೆನ್ನಂತರದೊಳಿರ್ದು 

ಲೇಸಿನಿಂ ನುಡಿಗಳನಿತ್ತು 

ವಾಸುದೇವನ ಚರಿತವ ಪೇಳಿಸಲು ಪೇಳ್ದೆ 

ನೈ ಸಲ್ಲದಿಹವೆನ್ನ ಪವಣೆ ॥೧೨॥


ನಾರು ಹೂವಿನ ಸಂಗದಿಂದುತ್ತಮಾಂಗಕ್ಕೆ

ಸೇರುವಂದದೊಳೆನ್ನ ವಚನ 

ಮಾರನಯ್ಯನ ಗುಣಗಣದೊಳೊಂದಿರೆ ಶ್ರುತಿ 

ಸಾರವಹುದು ಬಲ್ಲರಿಗೆ॥೧೩॥ 


ಕಬ್ಬು ಡೊಂಕಾದರೆ ಸವಿ ಡೊಂಕನಲ್ಲೆಂದು 

ಸಬ್ಬರು ಪೇಳುವಂದದಲಿ 

ತಬ್ಬಬ್ಬಿಯಾದೊಡೆನ್ನಯ ಮಾತು ಕಿವಿಗಳ್ಗೆ 

ಹಬ್ಬವಲ್ಲವೆ ಹರಿಚರಿತೆ ॥೧೪॥ 


ಗಂಗೆಯನುಂಗುಟದಿಂದ ಪೆತ್ತವನ ಪ್ರ

ಸಂಗ ಪುಣ್ಯದ ಕಥೆಯೆಂದು 

ಅಂಗನೆಯರು ಬಾಲಕರು ಬಲ್ಲರಿಳೆಯೊಳು 

ಮುಂಗೈ ಕಂಕಣಕೆ ಕನ್ನಡಿಯೆ ॥೧೬॥ 


ಗೂಗೆಗೆ ದಿವ ತುಂಬಿಗೆ ಚಂಪಕ ಹಾಲು 

ಕೋಗಿಲೆ ಸೊಗಸಾಗದಂತೆ 

ನಾಗಶಯನ ಸತ್ಯಕಥೆಯಿದು ವಿಷಯನು 

ರಾಗಿಗಳಿಗೆ ಸೊಗಸಿರವು ॥೧೭॥ 


ದುಷ್ಟರನೆಷ್ಟೆಷ್ಟ ಜರೆಯಲೆಂತದು ಬಾಯ 

ಕಷ್ಟವಲ್ಲದೆ ತಮ್ಮ ದೇಹ 

ನಷ್ಟವಾದರು ನಿಜಗುಣವನೆ ಮಾಣರೆಂ 

ಬಿಷ್ಟನೆ ನುಡಿವೆ ನಿಂದಿಸೆನು ॥೧೮॥ 


ಮಚ್ಚರವಿಲ್ಲದವರು ಮದವಳಿದರು 

ನಿಚ್ಚಳಮತಿಗಳಾದವರು 

ಅಚ್ಚುತ ಕಥೆಯ ಲಾಲಿಸಿ ಭಕ್ತಿಯಿಂ ನಿಮ

ಗೊಚ್ಚತವಹುದು ವೈಕುಂಠ ॥೧೯॥ 


ಹರಿವಿಲಾಸವೆನಿಪ್ಪ ಈ ಕಥೆಯಿದು ಪರಿ 

ಹರಿಸುವುದಖಿಳ ಪಾತಕವ 

ಹರಿಭಕ್ತರಾದವರಿಂದಾಲಿಸಿ ಮೋಕ್ಷ 

ಪುರವರನೀವನು ನರಸಿಂಹ ॥೨೧॥ 


ವಸ್ತುಕ ಲಕ್ಷಣದಿಂ ಕೃತಿವೇಳ್ವೆ ಸ 

ಮಸ್ತರಿಗದನು ತಿಳಿಯಲು 

ದುಸ್ತರವಾದುದೆಂದು ವರ್ಣಕದಿಂದ 

ವಿಸ್ತರಿಸಿದೆನೆಲ್ಲರರಿಯೆ॥೨೩॥ 


ಹೃದಯದೊಳಿರ್ದವಮೃತ ವಾರ್ಧಿಯೆ 

ವದನದಿ ಪೊಣ್ಮಿತೆಂಬಂತೆ 

ಕದನದ ಕಾಂತಿ ಸೂಸಲು ಮೇದಿನಿಯೊಳು 

ಪದುಮಸಂಭವನಿಂತೆಂದ ॥೩೭॥ 


ಕಂದಿದೆ ಮೋರೆ ಕುಂದಿದೆ ಮೂರ್ತಿ ಗದ್ಗದ 

ಮೊಂದಿದ ನುಡಿಯೊಳೀ ದುಃಖ 

ಬಂದುದೇತರ ದೆಸೆಯಿಂದೆನೆ ಬಿಸುಸುಯ್ಯು 

ತ್ತೆಂದಳು ಧರಣಿಯಬ್ಜಜನಿಗೆ ॥೩೮॥ 


ಒಡೆದುದು ಬೆನ್ನು ಕೂರ್ಮನ ಫಣಿಪನ ಪೆಡೆ 

ಯುಡುಗಿದುದು ಕುಲಶೈಲಗಳು

ಪುಡಿಯಾದವು ಕೆಡೆದವು ದಿಗ್ಗಜಗಳು

ಪಡೆಯ ತಿಣ್ಣಕೆ ದುಷ್ಟನೃಪರ ॥೩೯॥ 


ತಾಳುವೆನೆಂತು ದಾನವರ ಭಾರವ ಮುಂದೆ 

ಬಾಳುವೆನೆಂತಿದ ಧರಿಸಿ 

ಹೇಳುವೆನೆಂತೆನ್ನ ಬೇಸರವೆಲೆ ಕರು

ಣಾಳು ಚಿತ್ತೈಸುವುದೆನಲು ॥೪೦॥ 


ಎಮ್ಮಿಂದ ಹರುವಪ್ಪ ಕಾರ್ಯವಿದಲ್ಲೆಂದು 

ಬೊಮ್ಮ ಸುರರೊಳು ನಿಶ್ಚಯಿಸಿ 

ಸುಮ್ಮಾನದಿಂದ ನಂದಿಯನೇರಿ ಶಿವ ಬರೆ 

ಗಮ್ಮನಂಚೆಯನಜನಡರ್ದು ॥೪೧॥ 


ಕರಿ ಮೇಷ ಮಹಿಷ ಮಾನವ ನಕ್ರ ಸಾರಂಗ 

ತುರಗ ನಂದಿಯನೇರಿ ಬಳಸಿ 

ಹರಿಶಿಖಿಯರು ದೈತ್ಯ ಪಾಶಿಮಾರುತಿ ಯಕ್ಷೇ 

ಶ್ವರರೆಯ್ದಬರೆ ಗಮಿಸಿದರು ॥೪೨॥ 


ಭೂರಮಣಿಯ ಬೇಸರ ನೆನೆದಳವುತ್ತ 

ಮಾರಪಿತನ ಭಾವಿಸುತ 

ತಾರಾಬ್ಜದೊಳು ಸುರರೈದೆ ಕ್ಷೀರಾಬ್ಧಿಯ 

ಕ್ಷೀರವನೈದಿದರಂದು ॥೪೩॥ 


ಅಮರಸಮಿತಿಗೂಡಿ ನಮಿಸಿ ಕೈಮುಗಿದೆದ್ದು 

ನಮೊ ನಮೊ ಸರ್ವಜ್ಞಯೆನುತ

ಅಮಿತ ಮಹಿಮನ ಸಂಸ್ತುತಿಗೈದನಂದು 

ಕಮಲಜನತಿಭಕ್ತಿಯಿಂದ ॥೪೪॥ 


ಜಯ ಜಯ ಜಲಜಾಕ್ಷ ಜಯ ಜಯಾಮರ ರಕ್ಷ 

ಜಯ ಜಯ ದಾನವ ಶಿಕ್ಷ 

ಜಯ ಜಯ ಶ್ರೀವಕ್ಷ ಜಯ ಜಯ ನಿರಪೇಕ್ಷ 

ಜಯ ಜಯ ನಿಗಮವಿಲಕ್ಷ ॥೪೫॥ 


ಕಂಜನಯನ ಕುಂಜರಾಜ ವರದ ಮೃ

ತ್ಯುಂಜಯ ಸುಜ್ಞಾನಪುಂಜ 

ಮಂಜುಳಮೂರ್ತಿ ಪರಂಜ್ಯೋತಿನುತ ಪವಿ 

ಪಂಜರ ರಕ್ಷಿಪುದೆನ್ನ ॥೪೬॥ 


ಸೃಷ್ಟಿಗೆ ಸ್ಥಿತಿಗೆ ಸಂಹಾರಕ್ಕೆ ಸಲೆ ಪರ 

ಮೇಷಾಠಿಯ ಹರಿಯ ಶಂಕರನ 

ಸೃಷ್ಠಿಸಿದಧಿಪರ ಬ್ರಹ್ಮ ನಿತ್ಯ ಸಂ 

ತುಷ್ಟ ಮೂಲೋಕ ವಿಶಿಷ್ಟ ॥೪೭॥ 


ಓಂಕಾರಮಯರೂಪ ಪಂಕಜನೇತ್ರ ಶ 

ಶಾಂಕಾರ್ಕಕೋಟಿ ಸಂಕಾಶ 

ಕಿಂಕರ ವೃಂದ ಸುಖಾಕರ ದುರಿತ ಭ 

ಯಂಕರ ನಮೊ ನಿಃಕಲಂಕ ॥೪೮॥ 


ಸರ್ವೇಶ ಸಚ್ಚಿದಾನಂದೈಕವಿಗ್ರಹ 

ಪೂರ್ವದೇವಾಂಬೋಧಿ ವಡಬ 

ನಿರ್ವಾಣ ಮನುಮುನಿವಂದಿತ ಚರಣಾಬ್ಜ 

ನಿರೂವಾಣಲಕ್ಷ್ಮೀನಾಥ ॥೪೯॥ 


ಸರ್ವ ವಿಷ್ಣುಮಯಂ ಜಗತ್ತೆನಲಿನ್ನು 

ಸಾರ್ವೆವಿನ್ನಾರ ಮರೆಯನು 

ಉರ್ವಿಯ ಭಾರವ ಹರಿಸಲು ನೀ ನೊರ್ವ 

ನಲ್ಲದೆ ಮತ್ತಾರುಂಟು ॥೫೦॥ 


ನಿನ್ನನುಳಿದು ಜಪಿಸುವುದೀ ಜಗವೆಂಬ

ಶೂನ್ಯವಾದಿಗಳ ದುರ್ಮತಿಗೆ 

ಇನ್ನೇನನೆಂಬೆನು ಸೂತ್ರಧಾರನನುಳಿ

ದೆನ್ನನರಸುವವೆ ಬೊಂಬೆಗಳು ॥೫೧॥ 


ಅಂಬುಜನಾಭ ಪೀತಾಂಬರಧರ ಕರು 

ಣಾಂಬೋಧಿ ವಿಶ್ವಕುಟುಂಬಿ 

ಹೆಬ್ಬುಯ್ಯಲನು ಕೇಳಿ ಸುಮ್ಮನಿರಲು ಮುಂದೆ 

ನಂಬಬೇಡವೆ ಲೋಕ ನಿನ್ನ ॥೫೨॥ 


ಹೇರನೊಪ್ಪಿಸಿದಂಗೆ ಸುಂಕಬೇರಿಲ್ಲೆಂದು 

ಸಾರುವ ಗಾದೆಯಂದದಲಿ 

ದೂರ ನಿನಗೆ ಬಿನ್ನೈಸಿದ ಮೇಲೆ 

ಹಾರೆಮಗಿಲ್ಲ ಚಿತ್ತೈಸು ॥೫೩॥ 


ಇಂತು ಬಿನ್ನೈಸಿದೆ ಬಿದಿಯ ಬಿನ್ನಪವೇನೋ 

ರಂತೆ ಆಲಿಸು ಶ್ರೀಕಾಂತ 

ಅಂತರಿಕ್ಷದೊಳಿರ್ದು ಘನ ಘೋಷದಿಂದಾಗ 

ಳಿಂತೆಂದನಜಭವಾದ್ಯರಿಗೆ ॥೫೪॥ 


ಧರೆಯ ಬೇಸರ ಕೇಳಿದೆನಂಜದಿರಿ ಫಣೀ 

ಶ್ವರಸಹಿತಿಂದಿರೆ ಸಹಿತ 

ಇರದೆ ಬಂದಿಳೆಯೊಳಾನುದಿಸಿ ಸಂಹರಿಪೆ ದು

ಷ್ಟರನೆಂದಡಗಿತಾ ನಿನದ ॥೫೫॥ 


ವಸುದೇವನಗ್ರ ತನುಜನಾಗಿ ಶೇಷನು 

ದಿಸುವೆನಾತನ ತಮ್ಮನೆನಿಸಿ 

ಅಸಮ ಬೊಮ್ಮನೆ ಕೃಷ್ಣವೆಸರಿಂದ ಜನಿಸುವು 

ದೆಸೆವ ಮಾಯೆಯ ಚಿತ್ತೀರ್ಷೆಯಲಿ ॥೫೬॥ 


ಯದುವಂಶದೊಳಗುದಿಸಿದನಚ್ಚುತ ತ 

ತ್ಪದಸೇವೆಗಾಗಿ ನೀವೆಲ್ಲ 

ಸುದತಿಯರ್ವೆರಸು ತತ್ಕುಲದೊಳು ಜನಿಸು 

ವುದು ಬೇಗದಿಂದ ನೀವೆಂದ ॥೫೭॥ 


ಲೋಕಸೃಷ್ಟಿಗೆ ಬೀಜವೆನಿಪ ಮಾಯೆಯ ಮೋಹ 

ನಾಕೃತಿಯನು ತಾಳ್ದಂತೆ 

ಭೂಕಾಂತೆಯ ಬಳಲಿಕೆ ಬಯಲಹುದು ನಿ 

ರಾಕುಲ ನಿಮ್ಮನಿಂತೆಂದ ॥೫೮॥ 


ಭೂವನಿತೆಯ ದೇವತೆಗಳ ಭಾವದ 

ನೋವನೆಲ್ಲವ ಪರಿಹರಿಸಿ 

ನೀವೆಲ್ಲ ಪೋಪುದೆಂದವರ ಕಳುಪಿ ತನ್ನ 

ಠಾವಿಗೈದಿದನು ಲೋಕೇಶ ॥೫೯॥ 


ಯದುಕುಲತಿಲಕ ಕೇಳೈ ಶೂರಸೇನನು 

ಮಧುರೆಯೊಳಿರಲಂದವಗೆ 

ಅಧಿಕ ಸದ್ಗುಣನಿಧಿ ಶೂರನುದ್ಭವಿಸಿದ 

ಬುಧಜನರೈದೆ ಕೊಂಡಾಡೆ ॥೬೦॥ 


ಉಗ್ರಸೇನಗೆ ಸಹಜಾತನೆಂದೆನಿಸುವ 

ವಿಗ್ರಹ ದಕ್ಷ ದೇವತೆಗೆ 

ಅಗ್ರಗಣ್ಯನು ಮೂರ್ಖಜನರೊಳೆಂದೆಂಬದು 

ರಾಗ್ರಹಿ ಕಂಸ ಪುಟ್ಟಿದನು ॥೬೨॥ 


ಆ ದೇವತನಾತ್ಮಜಾತೆ ತ್ರಿಭುವನ ಪು 

ಣ್ಯೋದಯ ಮಾತೆ ವಿಖ್ಯಾತೆ

ಮೇದಿನಿಯೊಳಗಂದು ಬುಧರು ಬಣ್ಣಿಸುತಿರ 

ಲಾ ದೇವಕಿಯರಂ ರಾಜಿಪಳು ॥೬೩॥ 


ಇಂದಿರಾರಮಣ ಸುರೇಂದ್ರವಂದಿತ ಪಾದ 

ನಂದನಂದಾ ನಿತ್ಯನಂದ

ಕಂದರ್ಪಜನಕ ಮಂದರಧರದೇವ ಮು 

ಕುಂದ ರಕ್ಷಿಸು ನೀನೆಂದೆಂದು ॥೬೫॥ 


ಮತ್ತಗೆ ದುರ್ಮಾರ್ಗವತ್ತಗೆ ನಿಂದೆಯ 

ಪೊತ್ತಗೆ ಪರವೆಣ್ಗೆ ಮನವ 

ಇತ್ತಗೆ ನಿರ್ದಯ ಚಿತ್ತಗೆ ಪ್ರಾಯ 

ಶ್ಚಿತ್ತವಲ್ಲದೆ ಹರಿನಾಮ ॥೬೬॥ 


ಹರಿವಿಲಾಸದೊಳೊಂದು ಪದನೊರೆವದ ನೊಂದು 

ಚರಣವನೊಂದಕ್ಷರವ 

ಪರಮ ಭಕ್ತಿಯೊಳಾದರಿಸಿದ ನರರಿಗೆ 

ದೊರೆಕೊಳ್ವುದಿಹಪರಸೌಖ್ಯ ॥೬೭॥ 


ಎರಡನೆಯ ಸಂಧಿ: 


ನಿರ್ಗುಣ ನಿರುಪಮ ನಿತ್ಯನಿರ್ಮಯ ನಿ 

ಸರ್ಗ ಪ್ರಕಾಶ ಸರ್ವೇಶ

ಭರ್ಗ ವಿನುತ ಭವ ಭಯಹರ ಸಲಹು ಪ್ರ 

ವರ್ಗ ಲಕ್ಷ್ಮೀ ಪ್ರಾಣಕಾಂತ ॥ 


ವಸುದೇವ ದೇವಕಿಯರ ವರ ವೈವಾಹ 

ದೊಸಗೆಯಾದುದು ಮಧುರೆಯೊಳು॥ ಪ॥ 


ದೇವಕಿಯುತ್ತಮ ನಾಯಕಿಯ ವಸು

ದೇವನೀ ವಸುಧೆಗೆ ಜೀವ 

ಆ ವಧು ವರರ ವೈವಾಹದುತ್ಸಾಹ ಶೋ 

ಭಾವಹವಹುದಚ್ಚರಿಯೆ ॥೧॥ 


ಸಿಂಗರಿಸಿತು ಪಟ್ಟಣ ಸಂತಸದಿಂದ 

ಸಂಗಡಿಸಿದರು ಬಾಂಧವರು

ಮಂಗಲವಾದ ವಸ್ತುನಿಕರವೈದೇ 

ಕಾಂಗದೊಳಾಯತವಾಯ್ತು ॥೨॥ 


ಶುಭತಿಥಿ ಶುಭವಾರ ಶುಭನಕ್ಷತ್ರ 

ಶುಭಯೋಗ ಶುಭಲಗ್ನದಲಿ 

ತ್ರಿಭುವನದೊಳಗೇನು ವಿಭವ ಮುನ್ನಿಲ್ಲೆನ

 ಲಭಿರುಚಿಸಿದುದು ವೈವಾಹ ॥೩॥ 


ಸ್ಯಂದನವನು ದಂಪತಿಗಳು ಏರಿರ್ದಾ 

ನಂದನದೊಳಿರಲಾ ಸಮಯದಿ 

ದುಂದುಭಿ ಶಂಖ ಮುರಜ ಕಹಳಾರವ 

ವಂದು ತುಂಬಿದುದಂಬರವ ॥೫॥ 


ನಿಬ್ಬಣಿಗರ ಕಳುಹಲು ಕಂಸ ಸಂತಸ 

ದುಬ್ಬಿನೊಳಿರೆ ರಥವನು 

ಬೊಬ್ಬೆಯೊಳಬ್ಬರಿಸಿತು ವಾದ್ಯ ಕಂಗಳ 

ಹಬ್ಬವಾದುದು ಮಂದಿಗೆಲ್ಲ ॥೬॥ 


ಸೂತತನವನೆಸಗುವ ಕಂಸ ತನ್ನನು 

ಜಾತೆಯ ಕಳುಹುತ ಬರಲು 

ಮಾತು ತಾರಾಪಥದೊಳಗೊಗೆದುದು ಮೇಘ 

ವ್ರಾತ ಮೊಳಗುವಂದದಲಿ ॥೮॥ 


ತಂಗಿಯಲ್ಲೀತಳೆನ್ನ ನುಂಗಿ ನೀರ್ಗುಡಿವವು 

ತಂಗಿಯೆಂದೆನುತ ಕಡಂಗಿ 

ಕಂಗಳಿಂಗಳದಂದವಾಗಲು ಬಾಳಿತ್ತು 

ಹೆಂಗೊಲೆಗಂದೆಳಸಿದನು॥೧೦॥ 


ಮದುವೆ ಮಾಡಿದೆ ನಾನೆನ್ನ ಕೂಡೆ ಪು

ಟ್ಟಿದ ತಂಗಿಯೆಂದೆಂಬ ಮರುಕ 

ಎದೆಯೊಳಿನಿತು ದಯವಿಲ್ಲದೆ ಕೆರಳಿ ಕೊಲ್ಲು

ವುದಕುಜ್ಜುಗಿಸಬೇಡ ॥೧೨॥ 


ಆವನಿಂದಾವನಳಿದನಳಿದವನಿಂದ 

ಸಾವುಶತಪ್ಪದು ಕೊಂದನೆಂದು 

ಈ ವಚನವಿದಾಗಮಸಿದ್ಧವದರಿಂದ 

ಜೀವಹಿಂಸೆಯು ತರವಲ್ಲ॥೧೪॥ 


ಮಾಡಿದ ಪುಣ್ಯ ಪಾಪಗಳಲ್ಲಿದೆನಾಡು 

ಬೀಡು ಪೆಂಡಿರು ಮಕ್ಕಳೆಲ್ಲ 

ಕೂಡೆ ಬಾರವು ಮರುಭವಕದಲಿನ್ನುರ 

ಮೂಢರನ್ಯರಿಗೆ ಬಲ್ಲವರು॥೧೬॥ 


ನನಸಿನೊಳಾದನುಭವಗಳೆಲ್ಲವು ತನ್ನ 

ಕನಸಿನೊಳಗನುಭವಿಪಂತೆ 

ಮನುಜನೈಹಿಕದೊಳು ಮಾಡಿದ ಕರ್ಮವ 

ನನುಭವಿಪನು ಪರತ್ರದೊಳು ॥೧೮॥ 


ಮನವಯ್ದಿದ್ದೆಡೆಗಂತಃಕರಣೇಂದ್ರಿಯಗಳು 

ಬೆನ್ನನೆ ಬಿಡದೈದುವಂದದಲಿ 

ಘನಮಾಯೆಯಿಂದಾದ ತನುವ ಧರಿಸಿ ಸಂ 

ಜನಿಸುವನಾತ್ಮನೊಡನೆಂದ ॥೨೦॥ 


ಹಿಂದೆ ನೀನರಿಯದನ್ಯರ ಕೊಂದ ಕತದಿಂದ 

ವಿಂದೀ ಭಯ ನಿನಗಾಯ್ತು 

ಇಂದು ನೀನರಿದರಿದೀ ಹೆಂಗೊಲೆಗೆ ಮನ 

ದಂದರಲೇನೆ ಹೇಳೆಂದ ॥೨೨॥ 


ನಿಲ್ಲೆಲೊ ಬಲ್ಲೆನು ಬೊಮ್ಮದ ಹಳೆಮಾತು 

ಸೊಲ್ಲೆನು ನಿನ್ನ ವಲ್ಲಭೆಗೆ 

ಕೊಲ್ಲುವರಾರು ಕೊಲಿಸಿಕೊಂಬವರಾರೆನ

ನೀಲವಾತಕವಿದಕೆಂದ ॥೨೪॥ 


ಭಾವ ಕೊಲ್ಲದಿರು ಭಾವೆಯ ಬಿಡು ತನ್ನಯ 

ಜೀವವನೀವೆನೆಂದೆನಲು 

ಹಾವನಿರಿಸಿ ಹುತ್ತವ ಬಡಿದರೆ ಫಲ 

ವಾವುದು ಬಿಡೆ ಹೋಗೆಂದ ॥೨೫॥ 


ಎಂದ ನುಡಿಯ ಕೇಳುತೆದೆಯೊಳಲಗು ಮುರಿ 

ದಂದದೊಳತಿಭಯವಟ್ಟು 

ಮುಂದರಿಯದೆ ಖಳನಿವನ ಕೀಳುವಂದ 

ವಿಂದಾವುದೆಂದು ಚಿಂತಿಸಿದ ॥೨೬॥ 


ಕೊಡುವೆನು ಹೆತ್ತ ಮಕ್ಕಳುಗಳನೀತಗೆ 

ಬಿಡಿಸುವೆನಬಲೆಯ ಕೊಲೆಯ 

ಅಡಸಿದಾಯಸವನಿಂದಿನೊಳಿತು ಕಳೆವೆನು

ಕಡೆಯಾದುದಾಗಲಿ ಎಂದ ॥೨೭॥ 


ಸಾರ ಸಜ್ಜನರು ಕೃತಾಂತನ ಭಯವ ನಿ 

ವಾರಿಸುವರು ಬುದ್ಧಿಯಿಂದ 

ಕ್ರೂರದುರ್ಮತಿ ಮಾಡಿದ ವಿಚಾರಕೊಂದು ವಿ 

ಚಾರವ ಕಾಣೆ ನಾನೆಂದ॥೨೮॥ 


ಆವಾಗ ಜನನ ಮತ್ತಾವಾಗ ಮರಣವೆಂ 

ದಾವಂಗೆ ತಿಳಿವುದೀ ನಮ್ಮ 

ಮೂವರೊಳಗೆ ಸಾವು ಮೊದಲಾರಿಗೆಂಬುದ 

ದೇವ ಸರ್ವೇಶನೆ ಬಲ್ಲ ॥೨೯॥ 


ಇಂತು ತತ್ಕಾಲದ ಕಾರ್ಯವ ನಿಶ್ಚಯಿಸಿ 

ಸಂತವಿಡುತ ತನ್ನ ಮನವ 

ಅಂತಕಸನ್ನಿಭ ಕಂಸನೊಡನೆ ನಗು 

ತಿಂತೆಂದನಾ ವಸುದೇವ ॥೩೦॥ 


ಠಕ್ಕಿನ ವಚನವಿದಲ್ಲ ಕಾರ್ಯಾರ್ಥದ 

ಕಕ್ಕುಲತೆಯ ಮಾತಿದಲ್ಲ 

ಮಕ್ಕಳುಗಳೊ ನಿನ್ನ ತಂಗಿಯೊ ಹಗೆಯಾ 

ರಕ್ಕಟಯೆನಲಿಂತೆಂದ ॥೩೧॥ 


ಅವಳಾಗಿ ಅಷ್ಟೆ ಮತ್ತಷ್ಟ ಪುತ್ರರುಗಳೆಂ 

ಬವನಿಯ ಮಾತ ನೀನರಿಯ 

ಇವಳ ಕೊರಳನಿಂದರಿದೆನಾದರೆ ಮಕ್ಕ 

ಳವತರಿಸುವವೃರಿಗೆಂದ ॥೩೨॥ 


ಕಂಟಕತರವೇಳುಮಕ್ಕಳ ಬಾಲರೆ 

ಕಂಟಕಿಯಲ್ಲ ಕೇಳಿವಳ 

ಎಂಟನೆಯಣುಗನ ಕೊಲಲಂದಿವಳ ನೀ 

ಗಂಟಲ ಕೊಯ್ವುದೇಕೆಂದ ॥೩೩॥ 


ನೆಟ್ಟನೆ ನಿಂದೆ ನಿನಗೆ ಬೇಡ ಮಕ್ಕಳು 

ಪುಟ್ಟಿದಾಗಲೆ ನಾ ತಂದು 

ಕೊಟ್ಟಪೆನನುಜೆಯ ಕೊಲ್ಲಬೇಡೆನೆ ನಂಬಿ 

ಬಿಟ್ಟನನುಜೆಯ ಮುಂದಲೆಯ ॥ ೩೪॥ 


ಮತ್ತೆ ನಿಬ್ಬಣಿಗರ ಕಳುಹಿಸಿ ನಿಜಪುರ 

ದತ್ತ ತಿರುಗೆ ಖಳತಿಲಕ 

ಇತ್ತಲಾ ವಸುದೇವ ದೇವಕಿಯರು ತಮ್ಮ 

ಪತ್ತನವನು ಪೊಕ್ಕರಂದು ॥೩೫॥


ಪತ್ತುಗೆಗುಂದದಿರಲು ದಂಪತಿಗಳು 

ಮತ್ತಾ ದೇವಕಿದೇವಿ 

ಪೆತ್ತಳು ಕೀರ್ತಿವಾನೆಂಬ ಕುಮಾರನ 

ತುತ್ತ ಮಿತ್ತುಗೆ ಪಡೆವಂತೆ ॥೩೬॥ 


ಪಡೆದ ಕುಮಾರನ ಕೊಡದಿರ್ದಡೆನ್ನಯ 

ನುಡಿಗೆ ಬೇಸರವಹುದೆಂದ 

ಪಿಡಿದು ಶಿಶುವ ನಡೆತಂದು ಕಂಸನ ಕೈ 

ಯೆಡೆಯೊಳಿಟ್ಟನು ವಸುದೇವ ॥೩೭॥ 


ಕಂಡು ಶಿಶುವನತ್ಯಂತ ವಿಸ್ಮಿತನಾಗಿ 

ಮಂಡೆಯನಡಿಗಡಿಗೊಲದು 

ಕೊಂಡಾಡಿದನು ವಸುದೇವನ ಸತ್ಯದು 

ದ್ದಂಡತನಕೆ ಮನ ಮೆಚ್ಚಿ ॥೩೮॥ 


ಕಂದನ ಕೊಲ್ಲೆಂದಳುಕದೆ ಕೈಯಾರೆ 

ತಂದುಕೊಡುವರಾರೂರ್ವಿಯೊಳು

ಹಿಂದಿಲ್ಲ ಮುಂದಿಲ್ಲ ಇಂದಿಲ್ಲ ನಿನ್ನವೋ 

ಲ್ಚಂದದ ಸತ್ಯಾತ್ಮರೆಂದ ॥೩೯॥ 


ನಿನ್ನ ನನ್ನಿಗೆ ನಿನ್ನ ತತ್ವವಿಚಾರಕೆ 

ನಿನ್ನ ಧೈರ್ಯಕೆ ನಿನ್ನ ನಡೆಗೆ 

ನೆನ್ನ ಶಾಂತಿಗೆ ನಿನ್ನ ಘನಮಹಿಮೆಗೆ ನಾ 

ನಿನ್ನಾರನೆಣೆಗಾಣೆನೆಂದ ॥೪೦॥ 


ಬರಿದೆ ಮೊದಲವೇಳು ಮಕ್ಕಳ ನಾ ಕೊಂದು

ಮರುಗಿಸಲೇಕೆ ತಂಗಿಯನು 

ಅರಿದೆ ನಾ ನಿನ್ನ ಸತ್ಯವ ಕೊಂಡುಪೋಗೆಂದು 

ನೆರೆ ನಂಬಿ ಕೊಟ್ಟನಾ ಶಿಶುವ ॥೪೧॥ 


ಎಂದ ನುಡಿಗೆ ಹೈಯೆಂದವ ಮಗುಳಿತ್ತ 

ಕಂದನ ಧರಿಸಿ ಚಿತ್ತದೊಳು 

ಸಂದೆಗವುಡುತ ಸಜ್ಜನ ಶಿರೋಮಣಿ ತನ್ನ 

ಮಂದಿರಕೈದಿದನಂದು ॥೪೨॥ 


ಇರಲು ಸಂತಸದಿಂದ ಮತ್ತಾ ವಸುದೇವ 

ನರಸಿದೇವಕಿಯುದರದೊಳು 

ಪರಮವಿಕ್ರಮರೈವರುದಿಸಿದರಿಂತರು 

ವರು ಕುಮಾರಕರೊಪ್ಪುತಿರಲು ॥೪೩॥ 


ಒಂದು ದಿನದಿ ಕಂಸ ತನ್ನಾಪ್ತ ಬಾಂಧವ 

ವೃಂದದಾಮಾತ್ಯ ಸಂದೋಹ 

ವಂದಿ ಮಾಗಧ ಕೋಟಿ ರಂಜಿಸುವಾಸ್ಥಾನ 

ಮಂದಿರದೊಳಗೊಪ್ಪುತಿರಲು ॥೪೪॥


ಶಾರದನೀರದಾಕಾರದೊಳೆಸೆವ ಶ 

ರೀರದ ನಾರದನಾಗ 

ಸೇರದ ಮಾತ ಕಂಸಗೆ ಪೇಳ್ವೆನೆಂಬ ವಿ 

ಚಾರದೊಳಲ್ಲಿಗೈತಂದ ॥೪೫॥ 


ಬರವ ಕಂಡಿದಿರೆದ್ದು ಪೋಗಿ ವಂದಿಸಿ ಉಪ 

ಚರಿಸಿ ಪೀಠದೊಳು ಕುಳ್ಳಿರಿಸಿ 

ಪೊರೆಯೊಳು ಕಂಸನಿರಲು ಮುನಿ ನುಡಿದನು 

ಸುರರ ಮಂತ್ರದ ಗುಪ್ದಿರವ ॥೪೬॥ 


ಕ್ಷೇಮವೆ ನಿನಗೆ ಬಾಂಧವವರ್ಗಕೆ ಪರಿ 

ಣಾಮವೆ ಪ್ರಜೆಗೆ ಸಂತಸವೆ 

ಪ್ರೇಮವೆ ಸಜ್ಜನ ಜನಕೆ ನಿನ್ನೊಳು ನಿ 

ರ್ಣಾಮವೆ ವೈರಿಗಳಿಗೆಂದ ॥೪೭॥ 


ಬಲ್ಲಿದರಿಗೆ ಭಾಗ್ಯವಂತರಗೀ ಭೂಮಿ 

ಯಲ್ಲಿ ಕಂಟಕ ಪಿರಿದುಂಟು 

ನಿಲ್ಲದೆನ್ನಯ ಚಿತ್ತ ನಿನಗೊಂದು ಭಯವುಂಟು 

ಸೊಲ್ಲಿಸುವೆನು ಕೇಳೆಂದ॥೪೮॥ 


ಮೊದಲೊಳು ರಕ್ಕಸ ಕಾಲನೇಮಿಯನೀ 

ನುದಿಸಿದೆ ಬಂದು ಮತ್ತೀಗ 

ಯದುವಂಶದೊಳು ಕಂಸನಾಗಿ ಯಾದವನಲ್ಲ

ವಿದಕೆ ಸಂಶಯವಿಲ್ಲೆಂದ ॥೪೯॥ 


ಯಾದವರಿವರು ಪೂರೂವದೊಳು ಸುರರು ಪಗೆ 

ಯಾದವರಂದು ನಿನ್ನೊಡನೆ 

ಈ ದೇವಕಿಯ ಬಸುರೊಳಗುದಿಸುವನು ಮ

ತ್ತಾ ದೈತ್ಯ ರಿಪು ಕೇಳೆಂದ ॥೫೦॥ 


ನಂದನಾದಿಯ ಗೋಪಾಲರು ಸುಮನಸ 

ರೆಂದರೀ ನಿನ್ನ ಚಿತ್ತದೊಳು 

ಇಂದೆ ನಾನಿವರು ಬಾಂಧವರೆಂದು ಕೃಷ್ಣನ 

ನಂಬದಿರೆಂದು ತಾ ನುಡಿದ ॥೫೧॥ 


ಧರೆಯ ಭಾರವನಿಳುಹಲು ದುಷ್ಟನೃಪರ ಸಂ 

ಹರಿಸಲು ಹರಿ ತಾನೆಬಂದು 

ನರರೂಪ ಧರಿಸಿ ಸಂಜನಿಸುವನಮರರ 

ಪರಮ ಮಂತ್ರವಿದು ಕೇಳೆಂದ ॥೫೨॥ 


ಮೇದಿನಿಯೊಳಗೆ ತಾ ಸಲ್ಲದೀ ಕಾರ್ಯದ 

ಹಾದಿಯ ಬಲ್ಲರಿಲ್ಲೆಂದ 

ಆದಿಮಧ್ಯಾಂತವನರುಹಿ ಕಂಸಗೆ ಮುನಿ 

ಪೋದನಂಬರಗತಿಯಿಂದ॥೫೩॥


ಅಸುರನಸಮ ಕೊಪದಿಂದೆದ್ದು ಘರ್ಜಿಸಿ 

ಹಸಿದ ಕಾಳೋರಗನಂತೆ 

ಉಸಿರೊಳು ಕರ್ಬೊಗೆ ಸೂಸೆ ತಾ ದುರ್ಮತಿ 

ಎಸಕದಿ ಚರನಿಂತೆಂದ ॥೫೪॥ 


ದುರುಳನೆನಿಪ ವಸುದೇವನ ಮಕ್ಕಳು 

ವೆರಸು ದೇವಕಿ ಸಹವಾಗಿ 

ಭರದಿಂದಲೆಳದುತಾರೆನುತಾಗಲೆ ಹಿಡಿ 

ತರಿಸಿ ದಾನವರೆಲ್ಲರನು ॥೫೫॥ 


ನೆರೆ ದಯಗೇಡಿ ರಕ್ಕಸನಂದುವಬಾಲಕ 

ರರುವರು ಕಾಲ್ಗಳ ಪಿಡಿದು 

ಅರೆಯೊಳಪ್ಪಳಿಸಿದನಯ್ಯಯ್ಯೊಯೆಂದು 

ಮೊರೆಯಿಡುತಿರೆ ಜನರೆಲ್ಲ ॥೫೬॥ 


ಕಕ್ಕಸ ಹೃದಯದ ರಕ್ಕಸನರುವರು

ಮಕ್ಕಳ ಕೊಂದು ತಣಿಯದೆ 

ತೆಕ್ಕನೆ ವಸುದೇವ ದೇವಕಿಯರಿಗಾಗ 

ಳಿಕ್ಕಿಸಿದನು ಸಂಕಲೆಯ ॥೫೭॥ 


ಸಂದೆಗವಿಲ್ಲರ ಮೇಲೆ ಬಿದ್ದುದು ಖಳ 

ಮುಂದರಿಯದೆ ತನ್ನ ಪೆತ್ತ 

ತಂದೆಯನುಗ್ರಸೇನನ ಬಂಧುವರ್ಗವ 

ಬಂದಿಖಾನದೊಳಿಟ್ಟನಾಗ ೫೮॥ 


ಕಟ್ಟುಗೆ ಕಟ್ಟುಗೆ ಬಿಟ್ಟುಗೆ ದಂಡದ 

ಕಟ್ಟುಬ್ಬಸಕ್ಕೆ ಕಂಗೆಟ್ಟು 

ನೆಟ್ಟನೆ ಸೈರಿಸಲರಿಯದೆ ತೊಟ್ಟನೆ 

ಬಿಟ್ಟುವೋದರೆಲ್ಲ ಜನರು ॥೫೯॥ 


ದುಷ್ಟ ತೃಣಾವರ್ತ ಧೇನುಕ ಚಾಣೂರ

ಮುಷ್ಟಿಕ ಬಕ ಕೇಶಿ ವತ್ಸ 

ಕಷ್ಟ ಕರೋಕ್ಷಿ ಪ್ರಲಂಬ ಪೂತನಿಯ ಅ 

ರಿಷ್ಟರ ಕೆಳೆಗೊಂಡನಾಗ ॥೬೦॥ 


ಮುರಚೈದ್ಯ ಮಾಗಧ ಭೂಪುತ್ರ ಬಾಣಾ 

ಸುರ ಮೊದಲಾದ ದಾನವರ 

ನೆರಹಿಕೊಂಡನು ತನ್ನ ನೆರವಿಗೆ ಸುರರನಿ

ನ್ನುರುಹಿ ಹಾರಿಸುವೆನೆಂದೆನುತ ॥೬೧॥ 


ತೆತ್ತು ಧನವ ನಡೆದರು ಕೆಲಬರು ಬೆನ್ನ 

ನಿತ್ತು ಪೋದರು ಕಂಡ ಕಡೆಗೆ 

ಸುತ್ತಣ ಭೂಪರೊಳಾರೆನಗೆಣೆಯೆಂದು 

ಮತ್ತನಾಗಿರ್ದನಾ ಕಂಸ ॥೬೨॥ 


ಇಂತಿರೆ ಭೂಪ ಕೇಳಿತ್ತ ಶಶಾಂಕವ 

ನಂತನಜ್ಞಾಪಿಸೆ ಬಂದು 

ಕಾಂತೆ ದೇವಕಿಯ ಗರ್ಭದೊಳು ನಿಂ ಕೊಡು 

ವಂತೆ ಸಂತಸ ಚಿಂತೆಗಳ ॥೬೩॥ 


ದೇವರ ದೇವ ಸರ್ವಾತ್ಮನು ಮಾಯಾ 

ದೇವಿಯ ಕರೆದು ಗುಪ್ತದಲಿ 

ದೇವಕಿಯುದರದ ಶಿಶುವೊಯ್ದು ರೋಹಿಣಿ 

ದೇವಿಯ ಪೊಡೆಯೊಳಿಡೆಂದ॥೬೪॥ 


ಅಸುರ ಕಂಸಗೆ ಬೆಚ್ಚಿ ವಸುದೇವ ಸತಿಯರು 

ದೆಸೆದೆಸೆಗೋಡಿದರಲ್ಲಿ 

ವಸುಧೆ ಪಾವನೆ ರೋಹಿಣಿ ನಂದೆ ಗೇಹದೊ 

ಳೆಸೆದಿಪ್ಪಳಾ ಗೋಕುಲದೊಳು॥೬೫॥ 


ಅವನಿಯ ಭಾರವನಿಳುಹಲೋಸುಗ ಮಾ 

ನವ ರೂಪ ತಾಳ್ದು ನಾನಿಂದು 

ಯುವತಿ ದೇವಕಿಯ ಗರ್ಭದೊಳು ಬಂದಾನಿಳೆ 

ಗವತರಿಸುವೆನು ಕೇಳೆಂದ ॥೬೬॥ 


ನಂದಗೋಪನ ಸತಿಯುದರದೊಳಗೆ ನಲ 

ವಿಂದ ಜನಿಸು ನೀ ಬೇಗದೊಳು 

ಇಂದೆನ್ನ ತಂಗಿಯಾಗಮರಸುರೋರಗ 

ವೃಂದ ವಂದಿತೆಯಾಗೆಂದ ॥೬೭॥ 


ಪೂಜಿಸಲೆಲ್ಲರು ನಿನ್ನನೀನವರಿಗೆ

 ಮಾಜದೆ ಕೊಡು ಮನೋರಥವ

ರಾಜಿಸು ಬಹುನಾಮವನಾಂತು ಭಕ್ತ ಸ 

ಮಾಜವ ಸಲಹನವರತ ॥೬೮॥ 


ಉರಗಪತಿಯೆ ರೋಹಿಣಿಯ ಗರ್ಭದೊಳು ನೀ 

ನುದಿಸು ಸಂಕರುಷಣನಹನು 

ಗುರುಬಲದಿಂ ಬರಲಾ ರಾಮವೆಸರು ಮನೋ 

ಹರತೆಯಿಂದವಗಹುದೆಂದ ॥೬೯॥ 


ಅದು ಕಾರಣ ನೀ ಪೋಪುದೆಂದೆನಲಾ 

ಪದುಮನಾಭನ ಪದಯುಗಕೆ 

ಮುದದಿಂದ ನಮಿಸಿ ಬೀಳಕೊಂಡಳು ಮಾಯೆ ಹ

ಡೆದ ಮಹಿಮೆಯ ನೀ ಕೇಳೆಂದ ॥೭೦॥ 


ದೇವಕಿಯುದರದೊಳಿರ್ದನಂತನನಾ 

ದೇವಕಿಯರಿಯದಂದದಲಿ 

ಭಾವೆ ರೋಹಿಣಿಯುದರದೊಳು ತಂದಿಟ್ಟಳಂ 

ದಾ ವಿಭವೆನಿಸುವ ಭಕ್ತಿ ॥೭೨॥ 


ಬಲಿಯಿಲ್ಲ ಬಾಯಿನವಿಲ್ಲ ಹೋಮಗಳಿಲ್ಲ 

ಕುಲದೈವದ ನೋಂಪಿಲ್ಲ 

ಲಲನೆಗೆ ಕಟ್ಟಿದ ರಕ್ಷೆಯಿಲ್ಲ ಗರ್ಭ 

ನಿಲುವುದೆಂತೆಂದರರೆಬರು ॥೭೩॥ 


ಅಂತಾ ವಸುದೇವ ದೇವಕಿಯರುಗಳ 

ನಂತ ಚಿಂತೆಯೊಳಿರುತಿರಲು 

ಮುಂತಣ ಪುಣ್ಯದ ಫಲದಿಂದವರಿಗಂದು 

ಸಂತಸದುದಯ ಸಂಧಿಸಿತು॥೭೪॥ 


ದಿವಿಜರು ನಲೆಯೆ ಧಾರುಣಿಗೆ ಸಂತಸಮಾಗೆ 

ಭುವನದ ಸತ್ಕರ್ಮ ಪೆರ್ಚೆ 

ಅವನಿಪಾವನೆ ದೇವಕಿಯ ಬಸುರೊಳು ಹರಿ 

ಯವತರಿಸಲು ಬಗೆದಂದ ॥೭೫॥ 


ವಸುದೇವ ದೇವಕಿಯರವರ ವೈವಾಹ 

ದೊಸಗೆಯ ಕೇಳಿದ ಜನಕೆ 

ಜಸವಪ್ಪುದಧಿಕ ಮಂಗಲವಪ್ಪುದಾಯು ವ 

ರೂಧಿಸುವುದಚ್ಚುತ ರಕ್ಷಿಸುವನು॥೭೬॥ 


ಹರಿವಿಲಾಸದೊಳೊಂದು ಪದನೊರೆವದನೊಂದು

ಚರಣವನೊಂದಕ್ಷರವ 

ಪರಮಭಕ್ತಿಯೊಳು ಧರಿಸಿದ ನರರಿಗೆ 

ದೊರೆಕೊಳ್ವುದಿಹಪರ ಸೌಖ್ಯ ॥೭೭॥ 


ನೆನಕೆ: 

ಕರ್ತೃ: ತಿಮ್ಮ ಕವಿ, 

ಸಂಪಾದಕರು: 

ಡಾ. ಮೈಲಹಳ್ಳಿ ರೇವಣ್ಣ 

ಕೆ. ಆರ್. ಶೇಷಗಿರಿ,


ಪ್ರಕಾಶನ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ 

ಮೈಸೂರು ವಿಶ್ವವಿದ್ಯಾಲಯ, 

ಮೈಸೂರು. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ