ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶುಕ್ರವಾರ, ಜೂನ್ 9, 2023

ಓದುವ ಗಿರಿಯ ವಿರಚಿತ ಸಾನಂದ ಗಣೇಶ ಸಾಂಗತ್ಯ

ಓದುವ ಗಿರಿಯ ವಿರಚಿತ ಸಾನಂದ ಗಣೇಶ ಸಾಂಗತ್ಯ 


ಈ ಕೃತಿಯ ಕರ್ತೃ ಓದುವ ಗಿರಿಯ.ಈತನ ಕಾಲ ಸು. ಕ್ರಿ. ಶ. ೧೫೨೫ .ಇದು ಸಾಂಗತ್ಯ ಛಂದಸ್ಸಿನಲ್ಲಿ ರಚಿತವಾಗಿದೆ. ಈ ಕಾವ್ಯದಲ್ಲಿ ೬ ಸಂಧಿಗಳೂ, ೪೪೦ ಪದ್ಯಗಳೂ ಇವೆ.ಸಾನಂದ ಗಣೇಶ ಸಾಂಗತ್ಯದ ಕಥೆ ಸುಪ್ರಸಿದ್ಧವಾದುದು. ಇದನ್ನು ನಂದಿ ಸನತ್ಕುಮಾರಂಗೆ ಹೇಳಿದುದಾಗಿದೆ. ಪೂರ್ಣವಿತ್ತಋಷಿಯ ಮಗನಾದ ಸಾನಂದನು ನರಕವಾಸಿಗಳನ್ನು ಪಂಚಾಕ್ಷರಿ ಮಹಿಮೆಯಿಂದ ಐದ್ಧರಿಸಿ ಸದ್ಗತಿಯನ್ನು ಉಂಟುಮಾಡಿದುದೇ ಇದರ ಕಥಾವಸ್ತು.  ಈತ ಹರಿಶ್ಚಂದ್ರ ಸಾಂಗತ್ಯ ಎಂಬ ಮತ್ತೊಂದು ಕೃತಿಯನ್ನು ಬರೆದಿದ್ದಾನೆ. ಧಾರ್ಮಿಕ ಕಥಾವಸ್ತುಗಳನ್ನು ಆಧರಿಸಿ ಜನಸಾಮಾನ್ಯರನ್ನುದೃಷ್ಟಿಯಲ್ಲಿಟ್ಟುಕೊಂಡು ಆಡುಭಾಷೆಯಲ್ಲೇ ಈ ಕೃತಿಗಳನ್ನು ರಚಿಸಿರುವುದರಿಂದ ಇವು ಜನಮನವನ್ನು ನೇರವಾಗಿ ಮುಟ್ಟುತ್ತವೆ. ಈ ದೃಷ್ಟಿಯಿಂದ ಈತನ ಕಾವ್ಯ ಸಾರ್ಥಕವಾಗಿದೆ ಎನ್ನಬಹುದು. 


ಒಂದನೆಯ ಸಂಧಿ: 


ಶ್ರೀಮದಮರಗಣ ಮಕುಟಸುರಂಜಿತ 

ತಾಮರಸಾಂಘ್ರಿಯುಗಳಕೆ

ಪ್ರೇಮದಿಶನಾನೆಱಗುವೆ ಗಿರಿಜಾವರ 

ಸ್ವಾಮಿ ಸಲಹು ಶಶಿಧರನೆ॥೧॥ 


ಭುವನಕುನ್ನತಬಲ ಮೇರುವೆಲ್ಲಿಗೆಯಾ

ಸವಡಿಸಾಸಿರಜಿಹ್ವೆಯವನ 

ತವೆ ಹೆದೆಗಟ್ಟಿ ದಾನವರೂರ ನೆಱೆಗೆಲ್ದ 

ಶೆವ ಕೊಡು ಮತಿಗೆ ಮಂಗಳವ॥೨॥ 


ರಾಜರಾಜೀವಸುಮಿತ್ರಾಗ್ನಿಲೋಚನ 

ರಾಜಿಪ ಪಂಚವದನನೆ 

ರಾಜಕೋಮಲಕಲ್ಲ ಮಗಳ ವಾಮದೊಳಿಟ್ಟ 

ರಾಜಶೇಖರ ಜಯಜಯತು॥೩॥ 


ನರರೊಳಾವನಾಗಲಿಯಱಿತಱಿಯದೆ

ವರಶಿಖರವ ಕಾಣಲೊಡನೆ 

ದುರಿತದಾರಿದ್ರವ ಕೆಡಿಸುವ ಶ್ರೀಗಿರಿ 

ಯೆಱೆಯ ಮಲ್ಲೇಶ ರಕ್ಷಿಪುದು॥೪॥


ನೀರನೋಗರು ಮಾಡಿದ ಮನೆಯೊಳಗೆ ಸ 

ಮೀರವನುಂಡು ಬಾಳುವನ 

ನಾರಿಯ ಬಸುಱ ಬಂಧಿಸಿ ಕಟ್ಟಿದ ಚೆಲ್ವ 

ಹೇರಂಬ ಕೊಡುಗೆ ಸನ್ಮತಿಯ॥೫॥ 


ಹೊದ್ದಿದ ಕರ್ಮಕತ್ತಲೆಯೊಳು ದೆಸೆಗಾಣ 

ದಿರ್ದವನನು ಕೈವಿಡಿದು 

ಬುದ್ಧಿಯೆನಿಪ ಬಟ್ಟೆಯ ತೋಱಿ ನಡಸುವ 

ವಿದ್ಯಗುರುವಿಗೆಱಗುವೆನು॥೬॥ 


ಗುರುವಂಕಪತಿ ಪುರಾಣದ ವಿರೂಪಾಕ್ಷನ 

ವರಗರ್ಭಶರಧಿ ಚಂದ್ರಮನ 

ಪರಮಪಾವನಮೂರ್ತಿ ಕಂಥೆಯ ದೇವರ 

ಚರಣವ ನಾ ಬಲಗೊಂಬೆ॥೭॥ 


ಛಂದವಲಂಕಾರವೊಂದಿದ ವಡಿ ಪ್ರಾಸು 

ಬಿಂದುವೆಂಬೀ ಗಣನೇಮ 

ಒಂದುವನಱಿತವನಲ್ಲ ಬಲ್ಲರು ನಿಮ್ಮ 

ಕಂದನೆಂದಱಿದು ತಿದ್ದುವುದು॥೮॥ 


ಮಲುಹಣ ಮಯೂರನ ಉದುಬಟದೇವನ 

ಹಲಯುಧ ಕವಿ ಕಾಳಿದಾಸ

ಸುಲಭ ಹಂಪೆಯ ಹರೀಶ್ವರ ರಾಘವಾಂಕನ 

ಬಲಗೊಂಡು ಪೇಳ್ದೆನೀ ಕೃತಿಯನು॥೯॥ 


ಕೃತಿನಾಮವೆಂತೆನೆ ಪೇಳ್ವೆನು ನೆರಯಾಧಿ 

ಪತಿಯ ಪಟ್ಟಣವ ಕೋಳ್ಗೊಂಡು 

ಶಿತಿಕಂಠನಿಪ್ಪ ಕೈಲಾಸಕ್ಕೆ ಕೊಂಡೊಯ್ದ 

ಯತಿ ಸಾನಂದೇಶನ ಚರಿತೆಯ॥೧೦॥ 


ಬಣ್ಣಿಸಲಳವೆ ಜೊನ್ನೊಡಲ ನಗದ ಸಿರಿ 

ವೆಣ್ಣೊಗೆದೊಡೆ ನೋಳ್ಪವರ 

ಕಣ್ಣು ಮನಕೆ ಗೋಚರಿಸುವ ಶರದಭ್ರ 

ವಣ್ಣದಿಂದೆಸೆವ ವಾರುಧಿಯ॥೧೧॥ 


ತೆರೆನೊರೆ ಬುದ್ಬುದ ಭರತ ಘೋಷಣ ಗುಂಪು 

ತಿರುಗುವ ಸಳಿ ಜಲಚರವು 

ವರ ರತ್ನ ಕಂಬುಪ್ರವಾಳಭೈತ್ರಗಳಿಂದ 

ಶರಧಿಯೊಪ್ಪಿಹುದದನೇನೆಂಬೆ॥೧೨ 


ಮೇರು ಮಂದರ ಗೋವರ್ಧನ ಮೈನಾಕ

ಚಾರುಹೇಮಾದ್ರಿ ವಿಂಧ್ಯಾಚಲವು 

ತೋಱುವ ರಜತಾದ್ರಿ ಕೈಲಾಸಗಿರಿಯದ 

ನಾರು ಬಣ್ಣಿಸಲಳವಲ್ಲ ॥೧೩॥ 


ಊದಱ ಮಧ್ಯದೊಳೊಪ್ಪುತಿಹುದು ಶ್ರೀಕೈಲಾಸ 

ಭುವನವೀರೇಳಱ ವಾಸ॥ 

ಶಿವಶರಣರ ಸುಕೃತದ ನೆಲೆ ಕೋಶವ 

ಕವಿ ವರ್ಣಿಸಲಳವಲ್ಲ ॥೧೪॥ 


ಇಂತಪ್ಪ ಗಿರಿಯ ವಿಸ್ತೀರ್ಣವಪೊಗಳ್ವೊಡೆ 

ನಂತಕವಿಗಳಿಗಸಾಧ್ಯ

ಚಿಂತಾಮಣಿ ಮೃಗಧರಶಿಲೆ ಸೂರ್ಯ 

ಕಾಂತದ ಶಿಲೆಗಳಲ್ಲಿಹವು॥೧೫॥ 


ಕುಲಿಶದ ಕೋಡ್ಗಲ್ಲು ಬಲುನೀಲದ ಗವಿ 

ಹಲವು ರತ್ನದ ಹೃಸಱೆಯು 

ಸಲೆ ಪಚ್ಚ ಪವಳದ ಜರಿಗಳಿಂದಲಿ ನಗ 

ಚೆಲುವಾಗಿಹುದನೇನೆಂಬೆ॥೧೬॥ 


ಸಂಪಗೆ ಸುರಹೊನ್ನೆ ಕೆಂಪಿನ ಪಾದರಿ 

ಇಂಪಿನಶೋಕೆ ಮಾಮರನು 

ತಂಪಿನ ತಣ್ಣೆಳಲೆಸೆವ ನಾನಾವೃಕ್ಷ

ಗುಂಪೆಸೆದಿಹವಾ ವನದಿ॥೧೭॥ 


ನಿಂಬೆ ಕಿತ್ತಳೆ ಹೆರಳೆ ದ್ರಾಕ್ಷಿ ಕರ್ಜೂರ

ಜಂಬುನೇಱಳೆ ಮಾದಲವು 

ಅಂಬಟೆ ಅರನೆಲ್ಲಿ ತೆಂಗು ಪಲಸು ಬಾಳೆ 

ಇಂಬಿನ ವನವೆಸೆದಿಹುದು॥೧೮॥ 


ಸೇವಂತಿಗೆ ಮೊಲ್ಲೆ ಮಲ್ಲಿಗೆ ಜಾಜಿಯು

ಸಾವಿರೆಸಳಿನ ಕಮಲವು 

ತಾವರೆ ಕುಮುದ ಚೆಂಗಣಿಗಿಲೆ ತಂಗೊಳ 

ಪೂವಿನ ಗಿಡು ಎಸೆದಿಹುದು ॥೧೯॥ 


ಗಂಡಭೇರುಂಡ ಶರಭ ನಾಗರ ಪಕ್ಷಿ 

ತಂಡತಂಡದಲಿರುತಿಹವು 

ಕೊಂಡಾಡಲರಿದು ಭೂಮಂಡಲದೊಳಗುಳ್ಳ

ಅಂಡಜತತಿಗಳಲ್ಲಿಹವು॥೨೦॥


ಹೊನ್ನ ಹೇರಳೆಯು ಪುರೈಷಾಮೃಗ ಕೇಸರೆ 

ಉನ್ನತ ಕಾಮಧಂನುಗಳು 

ಭಿನ್ನವಿಲ್ಲದೆ  ವನದೊಳಗಿಪ್ಪು ಮೃಗಗಳ 

ವರ್ಣಿಸುವರಿಗಳವಲ್ಲ॥೨೧॥ 


ಅಲ್ಲಲ್ಲಿ ಎಸೆದಿಹ ಭಿಲ್ಲರ ಪಳ್ಳಿಗ 

ಳಲ್ಲಲ್ಲಿ ತುಱುವಟ್ಟಿಗಳು 

ಅಲ್ಲಲ್ಲಿ ತಪಸಿಗಳಿಹ ವಾಸಗಳಿಪ್ಪ 

ಅಲ್ಲಿ ಋಶ್ಚರ್ಯವೇನೆಂಬೆ॥೨೨॥ 


ಹರಿಣ ಹುಲಿ ಕೇಸರಿ ಕರಿ ಮಯೂರ 

ಉರಗ ಸಂಕುಳಗಳೊಂದಾಗಿ 

ಪರಮಶಾಂತಿಯೊಳಾಡುತಿಹವು ವೈರವ ಬಿಟ್ಟು 

ವರಮುನಿಗಳ ಸುಕ್ಷೇತ್ರದಲಿ॥೨೩॥ 


ಬಿಱುಗಾಳಿ ಬೀಸಲಮ್ಮವು ಕಾರ ಹೆಮ್ಮಳೆ

ಗಱೆಯಲಮ್ಮವು ಸೂರ್ಯನು 

ಎಱಗಲಮ್ಮನು ಉಷ್ಮಕರಮಾಗಿ ಮನ್ಮಥ 

ನಱಿಯನಾ ಮಂಡಲದಿರವ॥೨೪॥ 


ಕ್ಷಮೆ ದಮೆ ಶಾಂತಿಯು ನೀತಿ ನಿರ್ಮಳ 

ತಮಗವು ನಿಜವಾಸವಾಗಿ 

ಕ್ರಮಗತಿಯಿಂದಲಷ್ಟಾಂಗಯೋಗದೊಳಿರ್ದ 

ಉಮೆಯವರನ ಭಜಿಸುವರು॥೨೫॥ 

 

ಒಡಲೊಳು ಧರಿಸಿದ ರುದ್ರಾಕ್ಷಿ ಭಸಿತದಿಂದೆ 

ತೊಡಿಗೆಯ ಫಣಿಕುಂಡಲದ

ನಿಡುಜಡೆಗಳ ಸುಲಿಪಲ್ಲನುಮಿಷ ದೃಷ್ಟಿ 

ವಡೆದ ತಪಸಿಗಳಲ್ಲಿಹರು॥೨೬॥


ಕಲ್ಲಱೆಗಳ ಮೇಲೆ ಬೇಸಿಗೆಯೊಳು ತರು 

ವೆಲ್ಲೆಡೆಯೊಳು ಮಳೆಯೊಳಗೆ 

ತಲ್ಲಣಿಸುವ ಚಳಿಯೊಳು ನದಿಗಳ ಮಧ್ಯ

ದಲ್ಲಿ ತಪವ ಮಾಡುವರು॥೨೭॥ 


ಕಿಱುಡಡೆಗಳ ಲತೆ ಪದನಖಂಗಳು ಬೇರು 

ವರಿದು ಕಣ್ಣೆವೆ ಗಡ್ಡದೊಳಗೆ 

ಮಱಿಮಾಡುವವು ಗೀಜಗ ವರವದನದೊ

ಳೊರಲೆ ಪುತ್ತಿಕ್ಕಿರುತಿಹವು॥೨೮॥ 


ಛಲವಿದ್ದ ಕಾಡ್ಕೋಣ ಬಲುಸೊಕ್ಕಿದೆಕ್ಕಲ 

ನಲವಿಂದ ಹರಿಣನೈತಂದು 

ತಲೆಯೆತ್ತಿ ಹರುಷದಿ ಕೋಡುಕೋಡಾಡಲು 

ಚಲೆಸದೆ ತಪವ ಮಾಡುವರು॥೨೯॥ 


ಯುಗದಾಗುಹೋಗಲೆಕ್ಕಿಸರಜಹರಿಗಳು 

ಮಿಗೆ ಬಂದ ಭವ ಲೆಕ್ಕಿಸದೆ 

ಅಜಹರಧ್ಯಾನದೊಳಿಹಬ್ರಹ್ಮ ಋಷಿಗಳ 

ಹೊಗಳುವರಾರಳವಲ್ಲ॥೩೦॥ 


ಉತುಪತಿ ಸ್ಥಿತಿಲಯಪತಿಗಳೊಳ್ ಮುನಿದರೆ 

ಪತಿಯ ಲೋಕವನೊಂದುಕ್ಷಣದಿ 

ಕ್ರಮದಿಂದ ಘಟಿಸಲುಬಲ್ಲ ಸೃಮರ್ಥ್ಯದ 

ಯತಿರಾಜ ಋಷಿಗಳಲ್ಲಿಹರು ॥೩೧॥ 


ಹಗಲಿರುಳೆನ್ನದೆ ಹೊಗದು ಹೊತ್ತು ಶಿಖಿ 

ನೆಗೆದು ತೋಱುವುದಲ್ಲಲ್ಲಿ 

ಮಿಗೆ ಪೂತಾಳ್ದ ಕಂಬಕಫಲಸರವೋಲು 

ಬಗೆಗರಿದಾಶ್ರಮದಲ್ಲಿ ॥೩೨॥ 


ಭೂಮಿಯಾಕಾಶಕ್ಕೆ ನೀಲ ಮಂಟಪವನು 

ತಾಮರಸೋದ್ಭವನೊಲಿದು 

ಪ್ರೇಮದಿಂದಲಿ ರಚಿಸಿದನೆಂಬಂದದಿ

ಹೋಮದ ಶಿಖಿಯೆಸೆದಿಹುದು॥೩೩॥ 


ದೇವಋಷಿ ಬ್ರಹ್ಮಋಷಿ ರಾಜಋಷಿಯರು 

ತೀವಿಪ್ಪ ರಮ್ಯಾಶ್ರಮದಿ 

ಆವಾಗ ವೇದ ಪುರಾಣ ಶಾಸ್ತ್ರವ ಕೇಳ್ವ 

ದೇವರ್ಕಳೆಡೆಯಾಡುತಿಹರು ॥೩೪॥ 


ಭಕ್ತಿಸಂಚದ ಪೂರ್ಣ ತರುವಿತ್ತನೆನಿಸುವ 

ಮತ್ತೊರ್ವ ಋಷಿಯಲ್ಲಿಹನು 

ವಿಸ್ತರಿಸುವರಳವಲ್ಲವಾತನ ಸತಿ 

ಮುಕ್ತ್ಯಾಂಗನೆಯೊಪ್ಪುತಿಹಳು॥೩೫॥ 


ಹರನಿತ್ತನರ್ಧಾಂಗವ ಮುರಹರನೊಲ್ದು 

ಉರಿವಿತ್ತ ಸರಸಿಜೋದ್ಭವನು 

ವರನಾಲಗೆಯಿತ್ತನೆಂದು ಜಱೆದು ಮುನಿ 

ಶರೀರವನಿತ್ತನಂಗನೆಗೆ॥೩೬॥ 


ಇಂತೊಪ್ಪುತಿಹರು ದಂಪತಿಗಳು ಸುಖದಿಂದ 

ನಂತ ಮುನಿಗಳ ಮಧ್ಯದಲಿ 

ಚಿಂತಿರತ್ನವಿಪ್ಪಂತಹ ಮಹಿಮರ 

ನಂತ ಯುಗವು ಪರ್ಯಂತ॥೩೭॥ 


ಆ ಮಹಾದಂಪತಿಗಳು ರಾಜಋಷಿಕುಲ 

ಪ್ರೇಮದೊಳೇಕಚಿತ್ತದೊಳು

ಪ್ರೇಮದಿಂ ಪಂಚಾಕ್ಷರಿಯ ಜಪಿಸುವ ನಿ 

ಸ್ಸೀಮ ನಿಷ್ಕಾಮಿಗಳಿಹರು॥೩೮॥ 


ಪಂಚಾಕ್ಷರಿ ಮತಿ ಪಂಚಾಕ್ಷರಿ ಗತಿ 

ಪಂಚಾಕ್ಷರಿ ಕಾಮಿತಾರ್ಥ 

ಪಂಚಾಕ್ಷರಿ ಪರಮನ ಕಾಣುತ ನಿತ್ಯ 

ಪಂಚಾಕ್ಷರಿ ವಿಡಿದಿಹರು॥೩೯॥ 


ಬಳಸಿ ಬ್ರಹ್ಮಚಾರಿಗಳೆಂಬ ನಾಣ್ಣುಡಿ 

ಗೊಳಗಾಗಿ ತನುತ್ರಯ ಗುಣವ 

ಕಳೆ ಜೂಟನೊಳು ಬೆರಸಿರೆ ಪುರಹರ ಮೆಚ್ಚೆ 

ಸುಳಿಹುದೋಱಿದ ನಿಜರೂಪ॥೪೦॥ 


ಪರಬ್ರಹ್ಮನ ರೂಪಿನ ಇರವ ಕಾಣುತ 

ವರಸತಿ ಸಹಿತಂಘ್ರಿಗೆಱಗಿ 

ಚರಣವ ತೊಳೆದು ಚಂದಳಿರ ಗದ್ದುಗೆಯಿಕ್ಕಿ 

ಪುರಹರ ಮಂಡಿಸಲಾಗ॥೪೧॥ 


ಕಂದ ಮೂಲಾದಿ ಫಲಂಗಳ ಬೇಗದಿ 

ಇಂದುಧರಗೆಯೆಡೆಮಾಡೆ

ಚಂದದೊಳಾರೋಗಿಸಿ ಪ್ರಸಾದವನಿತ್ತ 

ಚಂದ್ರಶೇಖರ ತೃಪ್ತಿಯಿಂದ ॥೪೨॥ 


ಭಕ್ತಿಸಂಚದ ಪೂರ್ಣವಿತ್ತರುಷಿಗೆ ಶಿವ 

ವಿಸ್ತರೆಸಿದ ವೆನಯದಲಿ

ಮುಕ್ತ್ಯಾಂಗನೆಯ ಗರ್ಭದಲೊರ್ವ ಪುತ್ರನ 

ಇತ್ತಪೆನೆಂದ ಕರುಣದಲಿ॥೪೩॥ 


ಹರಸಿ ಭಸಿತವಿತ್ತು ಹರನದೃಶವನವೈದೆ 

ಅರವಿಂದಮುಖಿ ಭಕ್ತಿಯಲಿ 

ಪುರುಷನಿಗೆಡೆಮಾಡಿ ಅಭಯಪ್ರಸಾದವ 

ಹರುಷದಿಂದುಂಡಿರುತಿಹರು ॥೪೪॥


ಮೃಡಕೊಟ್ಟ ದೃಢವರದಿಂದ ಮುಕ್ತ್ಯಾಂಗನೆ 

ಪಡೆದಳು ಶುಭಲಗ್ನದಲಿ

ಪೊಡವಿಗಚ್ಚರಿಯಾದ ಪುತ್ರನ ಋಷಿಕುಲ 

ಮಡದಿಯರುಪಚರಿಸುವರು॥೪೫॥  


ಮೊರೆದವು ದುಂದುಭಿ ಹರಗಿರಿಜಾತೆ ಹೊರೆ 

ಯೇಱಿ ಶರಣರು ಉಗ್ಘಡಿಸಿ 

ವರನಂದಿ ಭೃಂಗಿ ವೀರೇಶರುತ್ಸವವೇಱಿ 

ನಿರಯದಲ್ಲಣನುದ್ಭವಕೆ॥೪೬॥


ಲೆಕ್ಕವಿಲ್ಲದೆ ವೈತರಣಿ ಗೋಳಿಟ್ಟವು 

ಎಕ್ಕಲನರಕ ತಲೂಲಣಿಸಿ

ಉಕ್ಕಿ ಹರಿದವೆಮಲೋಕದ ಕೊಳಕೂಪ 

ಜಕ್ಕನೆ ಜರಿದನಂತಕನು॥೪೭॥ 


ಯಮಲೋಕದೊಳಗೆ ಉತ್ಪಾತ ಹುಟ್ಟಿದವಾಗ

ಪ್ರಮಥರು ಜಯ ಜಯವೆನಲು 

ಸುಮನಸರೊಲಿದು ಹೂ ಮಳೆ ಕಱೆದರು

ದ್ಯುಮಣಿ ತೇಜಾಂಗನುದ್ಭವಕೆ॥೪೮॥ 


ಹನ್ನೆರಡನೆಯ ದಿನದಿ  ಜಾತಕರ್ಮವ 

ಚನ್ನಿಗಿ ರಚಿಸಿ ಲಿಂಗವನು 

ಸನ್ನುತದಿಂದುಪನಯನ ಪಂಚಾಕ್ಷರಿ 

ನನ್ನಿಯಾದುದು ಮುನಿಸುತಗೆ॥೪೯॥ 


ಆನಂದರಸದೊಳುದ್ಭವಿಸಲಾಕ್ಷಣದೊಳು 

ನಾನಾ ಋಷಿಕುಲ ಬಂದು 

ಜ್ಞಾನದೃಷ್ಟಿಯೊಳೀಕ್ಷಿಸಿ ಪೆಸರಿಟ್ಟರು 

ಸೃನಂದ ಗಣನಾಥನೆಂದು ॥೫೦॥ 


ತಿಂಗಳ ಶಶಿ ಬೆಳೆವಂದದಿ ವರಮುನಿ 

ಪುಂಗವ ಬೆಳೆದನರ್ಥಿಯಲಿ 

ಪಿಂಗದೆ ಬರೆದೋದಿ ಪಠಿಸಿದ ವೇದ ಶಾ 

ಸ್ತ್ರಂಗಳನೊಂದವುಳಿಯದೆ॥೫೧॥ 


ತತ್ವ ಸಾಮರ್ಥ್ಯ ಸೃಹಸ ಶಾಂತಿ ಕ್ಷಮೆದಮೆ 

ಮುಕ್ತಿ ಆಚಾರಯೋಗವನು 

ಭಕ್ತಿಸಂಚದ ಪೂರ್ಣವಿತ್ತಋಷಿಯ ತನು 

ಜೋತ್ತಮ ಸುಖದೊಳಗಿರಲು॥೫೨॥ 


ತನ್ನಾಶ್ರಮದಿಂದ ಕೈಲಾಸಕೈದುವ 

ಅಂಗಜಾರಿಯ ಕೃಪೆಯಿಂದ 

ಮನ್ನಣೆ ತೇಜ ಸೃನಂದ ಮುನಿಗೆ ಬೇಗ 

ಪನ್ನಗಧರ ಕೊಟ್ಟನೊಲಿದು೫೩॥ 


ಅವಿರಳಾತ್ಮಕ ಮುನೀಶನ ಸುತ ಸಾನಂದ 

ಗಣನಾಥನತಿಹರುಷದಲಿ 

ತವೆನಂದಿ ಭೃಂಗಿ ವೀರೇಶಗಣಪ ಗುಹ 

ರವರೊಳಗೊರ್ವನಾಗಿಹನು॥೫೪॥ 


ಸರ್ವಜೀವರ ಮೇಲೆ ದಯಭರಿತನು ಯಮ 

ಗರ್ವದಲ್ಲಣ ತಾನೆಂದು 

ಗೀರ್ವಾಣವಾಯಿತು ವೃಷಭ ಸಿಂಧುವ ಕೊಟ್ಟ 

ಶರ್ವಾಣಿಧವ ಕೃಪೆಯಿಂದ ॥೫೫॥ 


ಎನಿತು ವಡೆದು ಮುನಿಜನಕಗ್ರಜಣ್ಯನೆಂ 

ದೆನಿಸಿ ಸಾನಂದನಂತಿರಲು 

ಘನತಪೋಧರರಿಪ್ಪ ನೈಮಿಶಾರಣ್ಯಕೆ 

ಮುನಿಸುತ ಬರಲೇಕಸಂಧಿ ॥೫೬॥


ನಾಲ್ಕನೆಯ ಸಂಧಿ,


ಸಿರಿತಾರಕ ಗೋಪತಿಧರ ಸಿರಿಹರಿ

ಶಿರದಿ ಶಿಖಿಯುಳ್ಳವನೆ 

ಶೆರದಹಿ ಶಿರಭಕ್ತಿ ಶಿರವೈದುಳ್ಳನ 

ಚರಣವನಾ ಬಲಗೊಂಬೆ॥೧॥ 


ಒಳಹೊಕ್ಕು ಯಮನ ಪಟ್ಟಣದೊಳು ನಿರೆಯದ 

ಕುಳಿಯೊಳಗಿಪ್ಪ ಪ್ರಾಣಿಗಳ 

ಬಳಸಿ ನೋಡುವೆನೆನುತಲಿ ಸಾನಂದೇಶ 

ಘಳೆಲನೆದ್ದನು ಸಂಭ್ರಮದಿ॥೨॥ 


ಸುತ್ತಲು ಕುಳ್ಳಿರ್ದ ಋಷಿಗಳೆಲ್ಲರು ನೋಡಿ 

ಎತ್ತಣ ಪಯಣವೆಂದೆನಲು 

ಪ್ರೇತಪತಿಯ ಪಟ್ಟಣವ ನೋಡುವೆನೆಂ 

ದಾ ತಪೋಧನರೊಳು ನುಡಿದ॥೩॥ 


ಪಂಚಾಕ್ಷರಿಯ ಮೂರ್ತಿಯೊ ಪರಬ್ರಹ್ಮವೊ 

ಮಿಂಚುವ ಪ್ರಣವ ಸ್ವರೂಪೋ 

ಲಾಂಛನವೆತ್ತ ರುದ್ರನೋ ಸಾನಂದೇಶ 

ಸಂಚನು ತಿಳಿವರಿಗರಿದು॥೪॥ 


ಅಪ್ರತಿಮನು ಪೈಷೂಪಕವನೇಱಿ ಸಂಜದೊ 

ಳಿಪ್ಪ ಮುನಿಗಳೊಗ್ಗಿನಲಿ 

ಬಪ್ಪ ಸಂಭ್ರಮವೇನೆಂಬೆನು ತ್ರಿಪುರಕ್ಕೆ 

ಕಪ್ಪುಗೊರಳ ನಡೆದಂತೆ॥೫॥ 


ಮೊರೆವ ನಾನಾವಾದ್ಯ ರವ ಬಿರಿದೆತ್ತಿ

ಕರವ ಕಹಳೆ ರಭಸದಲಿ 

ನಿರೆಯದಲ್ಲಣ ಬಹ ಬರವಿಗೆ ಉತ್ಪಾತ 

ವಿರದೆ ತೋಱಿದವೆಮಪುರದಿ॥೬॥ 


ಸೋಮ ಸೂರ್ಯರ ವೀಧಿ ಹೊಗೆದವು ಮನೆಯೊಳು 

ಹೋಮದ ಶಿಖಿಯಾಱಿದವು 

ಧೂಮಕೇತುಗಳೆದ್ದು ಹಗಲು ಕತ್ತಲೆಯಾಗೆ 

ಭೂಮಿ ಚಂಪಿಸೆ ಕಂಡ ಯಮನು॥೭॥ 


ಹಿರೆಯರ ಕರೆದು ಕೇಳಿದ ಉತ್ಪಾತದ 

ಪರಿಯಾವುದೆಂದೆನಲವರು 

ಒರೆದರು ನಿರೌಯ ನಿರಸವಹ ಕಂಟಕ 

ಬರುತದೆ ನಿಮಗೆಂದರವರು॥೮॥


ಬಂದುದನು ಕಂಡು ಕಾಬೆನು ಎಂದು ಭಾನು 

ನಂದನ ಮನವ ಸಂತೈಸಿ 

ಎಂದಿನಂದದಿ ವಾಲಗವಿತ್ತುಯಿರಲಾಗಿ 

ಬಂದ ಬೇಗದೊಳೋರೂವ ಚರನು॥೯॥ 


ಕರವ ಮುಗಿದು ಬಿನ್ನೈಸಿದ ನಮ್ಮಯ 

ಪುರದ ನಂದನದ ವನದೊಳಗೆ 

ವರಮುನಿಗಳು ಸಹಿತ ಬಂದರು ನಿಮ 

ಗಱುಪಲೋಸುಗ ಬಂದೆ ಜೀಯ ॥೧೦॥ 


ಮದದಾನೆ ಮಱಿಸಿಂಹದ ಧ್ವನಿಗೇಳ್ದಂತೆ 

ಹೃದಯ ಕಂಪಿಸುತಾತ ಬಂದ 

ಹದನನು ಪೇಳು ಪೇಳೆನಲು ಹಮ್ ಮೈಸಲು 

ಅದನಾವ ಕವಿ ವರ್ಣಿಸುವ॥೧೧॥ 


ಹಸಿದ ಹುಲಿಯ ಕಯ್ಯೊಳೊಸವಾದ ಪಸುವಂತೆ ಗರೈಡ 

ಗೊಶವಾದ ಹೊಸಹಾವಿನಂತೆ 

ಮಸೆಯೇರಿ ಮನದೊಳು ಚಿಂತಿಸಿ ಮುನಿ ಬಹ 

ದೆಸೆಗಾದುದುತ್ಪಾತವೆಂದ॥೧೨॥ 


ಇದಿರ್ಗೊಂಡು ಕರೆಯದಿರ್ದಡೆ ಕೋಪಿಸುವನೋ 

ಇದಿರ್ಗೊಂಡು ಕರೆದಡೆಂತಹುದೊ 

ಹದುಳದೊಳಿರ್ದ ಮೃತ್ಯುವ ಕರಕೊಂಡರೆ 

ಅದು ಮನೆಯೊಳು ಸುಮ್ಮನಿಹುದೆ॥೧೩॥ 


ಇನಿತು ಚಿಂತಿಸಿ ಮನ ಬಂದು ಬಾರದ ಹಾಗೆ 

ಅನಿತಱೊಳಗೆ ವಾದ್ಯನಿನದ 

ಧ್ವನಿಗೇಳಿ ಹೊಳಲ ಸಿಂಗರವ ಮಾಳ್ಪುದು ಎಂದು 

ವಿನಯದಿ ಸಾಱಿ ಡಂಗುರವ॥೧೪॥ 


ಬಲದಾಯಿ ಬಲಮಕ್ಕಳ ಸಾಕುವವೊಲು 

ಕುಲಟೆ ಗಂಡನ ಮೋಹಿಪಂತೆ 

ಸಲೆ ಸಂದ ಸೂಳೆ ಠಕ್ಕಿಗೆ ಸಿಕ್ಕಿ ನಡೆದಂತೆ

ಪೊಳಲ ಸಿಂಗರಿಸಿದ ಬೇಗ॥೧೫॥ 


ಗುಡಿ ತೋರಣ ಕಟ್ಟಿ ನಡೆಮುಡಿಯನು ಹಾಸಿ

ಮಡದಿಯರಾರತಿವಿಡಿದು 

ಪೊಡೆವ ನಾನಾ ವಾದ್ಯವೆರಸಿ ಕಾಲನು ಬೇಗ 

ನಡೆತಂದ ಮುನಿಗಿದಿರಾಗಿ॥೧೬॥ 


ಕರಿಗೊಂಡ ಕವಳದ ಕಳಿತ ಬೇಲದ ಹಣ್ಣ 

ಪರಿಯಂತೆ ಯಮನಂತರಂಗ 

ವರಮುನಿಯನು ಕಂಡು ಹರುಷದಿಂದಲಿ ಯಮ 

ಎಱಗಿದ ಮುನಿಯ ಚರಣಕೆ ॥೧೭॥ 


ಕಾಣಿಕೆಯಿಕ್ಕಿ ವಿಭೂತಿ ವೀಳೆಯವಿತ್ತು 

ಕ್ಷೋಣಿಯೊಳ್ ಬಿದ್ದು ಮೈಯಿಕ್ಕೆ

ಮಾಣದೆ ಮಸ್ತಕವಿಡಿದೆತ್ತಿವಮುನಿನಾಥ 

ಜಾಣ್ಮೆಯಿಂದುಪಚರಿಸಿದನು॥೧೮॥ 


ಬಿರಿದೆತ್ತಿ ಸಾಱುವ ಕಹಳೆ ಮೊರೆವ ವಾದ್ಯ 

ತರತರದಲ್ಲಿ ಪಾಠಕರು 

ಧರೆಯಾಕಾಶ ಘೀಳಿಡುವಂತೆ ಕಾಲನ 

ಅರಮನೆಯನು ಹೊಕ್ಕು ಮುನಿಪ ॥೧೯॥ 


ಕಾಲನ ಮಂದಿರಕೈದಲು ಹರುಷದಿ 

ಬಾಲೆ ಪಾದಾರ್ಚನೆ ಮಾಡಿ 

ಮೇಲು ಗದ್ದುಗೆಯಿಕ್ಕಿ ಮೂರ್ತಿಗೊಳಿಸಿ ಯಮ 

ನೋಲಗಗೊಟ್ಟು ನಿಂದಿರ್ದ॥೨೦॥ 


ಪರಮಭಕ್ತಿಯಲಿ ಬಿನ್ನೈಸಿದ ಮುನಿಗಾಗ

ಕರವ ಮುಗಿದು ತಾ ಮಾಳ್ಪ 

ಚರಣ ಸೇವೆ ಯಾವುದು ಯೆಂದು ಹರುಷದಿ 

ಒರೆದನತ್ಯಂತ ಬೋಧೆಯಲಿ॥೨೧॥ 


ಹರುಷವಾಯಿತು ನಿನ್ನ ನಿರೆಯದಾದ್ಯಂತವ

ಧರೆಯೊಳು ನಾವು ಕೇಳಿದೆವು 

ನಿರೆಯನಾಯಕತನದಾಜ್ಞೆಗಳನು ನಮ್ಮ 

ಕರದೊಯ್ದು ತೋಱಬೇಕೆಂದ॥೨೨॥


ಎಂದ ಮಾತಿಗೆ ಹಂದೆಯ ಹಾವಡರ್ದಂತೆ 

ಚಂದ್ರನ ರಾಹುಗೊಂಡಂತೆ 

ಸಿಂಧೂರ ಸಿಂಹದ ಕನಸ ಕಂಡಂದದಿ 

ನಿಂದಿರ್ದನೊಂದುಜಾವದಲಿ॥೨೩॥ 


ತೃವರೆಯೆಲೆಯೊಳಿರ್ದುದಕವೊ ಸಂಪಗೆ 

ಹೂವಿಗೆ ಯೆಱಗಿದಾಱಡಿಯೊ 

ಜೀವ ವಱತು ದೇಹ ನಡುಗುತಿರ್ದುದುವೊಂದು 

ಜಾವ ಮೈ ಮಱೆದುಯೆಚ್ಚೆತ್ತ೨೪॥ 


ಮೆಲ್ಲನೆ ಧೈರ್ಯವಿಡಿದು ಯಮ ಮುನಿಯೊಳು 

ಸೊಲ್ಲಿಸುತತಿ ವಿನಯದಲಿ 

ಕೊಲ್ಲಿರೂಪವ ತಾಳಿ ಮುನಿದರೆ ಮುನಿ ತೋರ 

ಸಲ್ಲದು ನಿಮಗೆನ್ನ ಮಣಿಹ॥೨೫॥ 


ಆಡಿದ ಮಾತು ಚನ್ನಾಯಿತು ದಿನಕೊಮ್ಮೆ 

ಮೂಡಿ ಮುಳುಗುವನಾತ್ಮಜನೆ 

ಬೇಡ ನಮ್ಮೊಡನೇಕಿನಿತು ಪರಾಕ್ರಮ 

ನೋಡಿದಲ್ಲದೆ ಮಾಣೆನೆಂದ॥೨೬॥ 


ನಕ್ಕನಾ ಮಾತಿಗೆ ಬೆಳುನಗೆಯನು ಮೈ 

ಯಿಕ್ಕಿ ಮುನಿಯ ಚರಣದಲಿ 

ದಿಕ್ಕನೆ ಕೈಲಾಗಗೊಟ್ಟು ತೋಱುತ ಬಂದ 

ಇಕ್ಕೆಲದಧಮರ ಕೊಲೆಯ॥೨೭॥ 


ಶೆವಶಿವಯೆನುತ ತಲೆದೂಗಿ ಕರ್ಮವ 

ಇವರೇನ ಮಾಡಿದರೆಂದು 

ವಿವರಿಸಿ ಪೇಳು ಪೇಳೆನುತಲಿ ಬಂದನು 

ಭವರೋಗವೈದ್ಯನಂದದಲಿ॥೨೮॥ 


ಕಾದ ಕಂಚಿನ ಕಾವಲಿಯ ಮೇಲೆ ಕುಳಿತೇಳ್ವ 

ಬಾಧೆಯಿವರಿಗೇಕಂತಕನೆ 

ಸಾಧುಸಜ್ಜನ ಸತ್ಪುರುಷರ ಗದ್ದುಗೆ 

ಗೈದಿ ಕುಳ್ಳಿರ್ದರು ಸ್ವಾಮಿ ॥೨೯॥ 


ಸೀಸವ ಕಾಸಿ ಬಾಯೊಳು ಹೊಯ್ವರವರೀಗ

ಯೇಸುಕರ್ಮವ ಮಾಡಿದರಿವರು 

ದೂಷಿಸುವರು ಪರರನು ಬಳಿಕೆಲ್ಲರ 

ದೋಷವನು ನುಡಿವರು ಸ್ವಾಮಿ॥೩೦॥ 


ಉಕ್ಕಿನ ಪುತ್ತಳಿಯನು ಕಾಸಿ ಬಲುಹಿಂದ 

ತಕ್ಕೈಸಲೇಕೆ ಪೇಳಿವರ 

ಲೆಕ್ಕಿಸದಷ್ಟ ಮದದಿ ಪರಸತಿಯರ 

ತಕ್ಕೆಯೊಳಿರ್ದ ಪಾತಕನು॥೩೧॥ 


ಸಣ್ಣ ಮಳಲು ಸುಣ್ಣ ಎಣ್ಣೆ ಎಕ್ಕದ ಹಾಲ 

ಕಣ್ಣೊಳು ಹೊಯ್ವರಿದೇಕೆ 

ಪುಣ್ಯಸ್ತ್ರೀಯರ ಮೆಯ್ಯ ಬಣ್ಣಕೆ ಮನಸೋತು 

ಕಣ್ಣಿಟ್ಟ ಪಾತಕನಿವನು॥೩೨॥ 


ಸೀಸವ ಹೊಯ್ವ ಸಾಸುವೆಯ ನಿಂಬೆಯವಣ್ಣ 

ಯಾತಕಿವರ ಮೆಯ್ಯೊಳ್ ಪೂಸಿ 

ಪತಿವ್ರತೆಯವರ ಪರಸತಿಯರ ಬಲುಹಿಂದ 

ರತಿಸಿದರು ಕೇಳ್ ಮುನಿಪ॥೩೩॥ 


ಬಲುಗುಂಡ ಕಾಸಿ ಕಯ್ಯೊಳಗಿಕ್ಕಿ ಹಿಡಿಸುವ 

ಕೊಲೆಯವರ್ಗೇತಕಂತಕನೆ

ಬಲಹಿಂದ ಪರವಧುವಿನ ತೋರಕುಚಗಳ 

ಬಲುಹಿಂದ ಹಿಡಿದ ಪಾತಕನು॥೩೪॥ 


ಕಾಸಿ ಕರಗಿದ ಬಿಸಿಯ ಹೊನ್ನ ರಾಸಿಯ 

ಈಸೀಸಿ ತಿನಿಸುವರೇಕೆ 

ಮೋಸವ ಮಾಡಿ ಪರಧನಕಳುಪಿದ 

ಭಾಷೆಹೀನನು ಕೇಳ್ ಮುನಿಪ॥೩೫॥ 


ಕುಸುರಿದಱಿದು ಕಲ್ಲ ಗಾಣದೊಳಗೆ ಹಾಕಿ 

ಅಸುವ ಹಿಂಡುವರೇಕೆ ಇವನ 

ಹುಸಿ ಕೊಲೆ ಕಳವು ದುರ್ವ್ಯಸನಿ ದುರ್ನೀತಿಯ 

ದುರ್ಜನನಿವನು ಕೇಳ್ ಮುನಿಪ॥೩೬॥ 


ತಲೆ ಹೊಯ್ದು ಚಂಡನಾಡಿ ಹತ್ತಿಸಿ ಕೊಲ್ವ 

ಕೊಲೆಯವರ್ಗೇತಕಂತಕನೆ

ಬಲುರೋಗ ತಮಗಾಗೆ ಕುಱಿ ಕೋಳಿ ಕೋಣನ 

ಕೊಲುವರಿಗಿದೇ ಕೊಲೆ ಸ್ವಾಮಿ॥೩೭॥  


ಇನ್ನಿವರ್ ಮಾಡಿದ ಪಾತಕವೇನು 

ಬೆನ್ನಟ್ಟಿ ತಿವಿದು ಕೊಲ್ಲುವರು 

ಅನ್ಯಪ್ರಾಣಿಗಳ ಕಂಡರೆ ದಯವಿಲ್ಲದೆ 

ಬನ್ನ ಬಡಿಸಿಕೊಂದರಿವರು॥೩೮॥ 


ಎಲು ಮಾಂಸ ಚರ್ಮವ ಖಂಡವ ಕೊಯ್ದು ತಿನಿಸುವ 

ಕೊಲೆಯವರ್ಗೇತಕಂತಕನೆ 

ಹಲವು ಪ್ರಾಣಿಯ ಕೊಂದು ತಿನ್ನುವ ಮಾನಸ 

ಗುಲದ ರಾಕ್ಷಸರೆತಿರಾಜ॥೩೯॥ 


ಉರಿಯ ಹೊದಕೆ ಅರಗಿನ ಗೋಡೆ ಮನೆಯೊಳು 

ಇರುವ ಜೀವಿಗಳಾರು ಪೇಳು 

ದೊರೆಯ ಮುಖದಿ ಬಡವರ ಬಗೆಯಱಿತವ 

ರಿವರು ಮನೆಯ ತೆಗೆದವರು॥೪೦॥


ಉಂಡುದ ಮರಳಿಸಿ ಮಗುಳ್ದುಣಿಸುವಿರೇಕೆ ಮಾ

ರ್ತಾಂಡನಾತ್ಮಜನೆ ನಿನ್ನವರು 

ಚಂಡಾಲರು ಧರ್ಮಕೀವ ವಸ್ತುವನು ಮುಂ 

ಕೊಂಡು ಕೊಡದ ಲೋಭಿಗಳು॥೪೧॥ 


ಕಡೆಮೊದಲಿಲ್ಲ ಡೆಂಕಣಿಗಳನೇಱಿಸಿ 

ಇಡುವುದಿದೇಕೆ ಪೇಳಿವರ

ಬಡಿದು ಹೊಡೆದು ಭಂಗಿಸಿ ಶಿವಭಕ್ತರ 

ಕೆಡೆನುಡಿದನ್ಯಪಾತಕನು॥೪೨॥  


ಚಿತ್ರವಧೆಯ ಮಾಡಿ ಕೊಲುವರೇಕಿವರನು

ಚಿತ್ರಭಾನುವಿನಾತ್ಮಜನೆ 

ನೇತ್ರತ್ರಯನ ಜಱೆದನ್ಯ ದೈವಗಳ ಚ 

ರಿತ್ರವ ಕೊಂಡಾಡಿದರಿವರು॥೪೩॥ 


ಕಲ್ಲುಗಾಣದ ಸಾಲೊಳಗಾಡಿ ಮೊಱೆಯಿಡೆ 

ಕಲ್ಲುಮುಳ್ಳುಗಳೊಳಗೆಳೆದು 

ಹುಲ್ಲ ದೊಂದೆಯ ಸುತ್ತಿ ಸುಡುವರನು ಕಂಡು 

ದಳ್ಳುರಿಯೊಳುನೂಕುವರು ॥೪೪॥  


ಇರಿವರೀಟಿಗಳೊಳು ತಱಿವರು ಖಡ್ಗದಿ 

ಕೊಱೆವರು ಗರಗಸದೊಳಗೆ 

ಉರಿದುರಿಸುವಘಾಯದಿ ಹುಳಿಲವೊಣದ 

ಉರವಣಿಸುತ ತೊಡೆದುದಕೆ॥೪೫॥ 


ಬಂಡಿಯನೇಱಿಸಿ ಚಿನ್ನಿ ಪಾತ್ರವ ಮಾಡಿ 

ಖಂಡವ ಕೊಯ್ದು ತಿನ್ನಿಸುತ

 ಗುಂಡಿಗೆಯನು ಸೀಳಿ ಕರುಳನುಗಿದವರನು

ಕಂಡ ಸಾನಂದ ಮುನಿಪ ॥೪೬॥ 


ಸಾಲು ಶೂಲವನೇಱಿಸಿ ಪಾಪಾತ್ಮರ 

ಸಾಲುಗಾಣದವೊಳಗರೆದು 

ಕಾಲನ ಭಟರು ಸಿಡಿಯನೆತ್ತಿಮೆಱೆಸುವ 

ಜಾಲವ ಕಂಡನಾ ಮುನಿಪ ॥೪೭॥ 


ನಡಸುತ ಅಱಿವರು ಒಡನೆ ಕೈಕಾಲ್ಗಳ 

ಅಡಗಿಕ್ಕಿ ತಱೆದೊಟ್ಟುತಿಹರು 

ತಡೆಯದವರ ಕಂಡು ಸಾನಂದಗಣನಾಥ 

ಬೆಡಗಿಂದ ಕೇಳಲಂತಕನ ॥೪೮॥ 


ಗುರುವ ನಿಂದಿಸಿ ಮಾತೆಪಿತರ ಧಿಕ್ಕರಿಸೆಯೆ 

ಬಂದ ಸತಿಯನಳಲಿಸಿದ 

ಪರಸ್ತ್ರೀಯರ ಕೊಂಡೊಯ್ದ ನೆಱೆದ್ರೋಹಿ ಅವನೆಂದು 

ಹರಶರಣನೆಗಱುಪಿದನು॥೪೯॥ 


ಕಾದ ಕಾವಲಿಯನು ಮೇಲೆತ್ತಿ ಸುಡುತಲಿ 

ಬಾಧಿಸುತಿಹರೇಕೆನಲು 

ಆದರಿಸುವ ಧರ್ಮವಿನಿತಿಲ್ಲವಿವರೊಳು

ಕ್ರೋಧಿಕುಹಕರಿವರಯ್ಯಾ ॥೫೦॥


ಅಂತಕನಿಂತು ತೋಱುತ ಬರೆಬರೆ ಕಂಡು

ಮುಂತಿರ್ಪುದೊಂದಚ್ಚರಿಯನು 

ನಿಂತಿಡಿಯಿಂದ ಮುಂದಕ್ಕೆ ಗಮಿಸದೆ ತ್ರಿಪು

ರಾಂತಕನಂತಿರೂದ ಮುನಿಪ॥೧೦೬॥ 


ಏಳು ಸುತ್ತಿನ ಕೋಟೆ ಏಳು ಅಂತರ ಬೀಗ

 ಕಾಳರಕ್ಕಸರು ಕಾದಿಹರು 

ಘೋಳಿಡುತಲಿ ಈ ನರಕದೊಳಿಪ್ಪರ 

ಪೇಳೆಂದು ಮತ್ತೆ ಕೇಳಿದನು॥೧೦೭॥ 


ವಿಸ್ತರಿಸಲು ಬಾರದು ಸ್ವಾಮಿಯವರೀಗ 

ಹತ್ತುಭವದಿ ಬಂದರಿವರು 

ಅತ್ತ ಮೊದಲೆಮಾಡಿದ ಬೀಗಮುದ್ರೆಯ 

ಕಿತ್ತು ತೋಱಿಸಲಂಜುವೆನು॥೧೦೮॥ 


ಆಗಳುಯಿಂತಪ್ಪ ನರಕಿಗಳನು ತಂದು 

ಹೇಗಲ್ಲಿಗೊಯ್ವರಂತಕನೆ 

ಆಗಸಕೊಯ್ದು ಬಿಡುವರುಕ್ಕಿನ ಮೂಗ 

ಕಾಗೆಗಳುಂಟು ಕೇಳ್ ಮುನಿಪ॥೧೦೯॥ 


ಶಿವನಾಣೆ ನೋಡಿದಲ್ಲದೆ ಪೋಗೆ ನಾನೊಮ್ಮೆ 

ಯವೆಪಳಚುವ ಹೊತ್ತಿನೊಳಗೆ 

ಹವಣಕಂಡಱಿದು ಬಪ್ಪೆನು ಕದದೆಗೆಯೆನೆ 

ಜವ ಬೆಱಗಾಗಿ ಬಿನ್ನೈಸಿ ॥೧೧೦॥ 


ಬೇಡಿಕೊಂಬೆನು ಜೀಯ ನೋಡಲಾಗದು ನಿಮ್ಮ 

ಕೂಡೆ ಮಾತಾಡಲಱಿಯೆವು 

ಆಡಿದ ಲೇಸನಂತಕ ನೆನಗಿದಱಿಂ 

ಖೋಡಿಬಂದರೆ ಬರಲೆಂದ॥೧೧೧॥ 


ಆದುದಾಗಲಿ ಮುನಿಯೊಳು ಮೂರ್ಖತನದಿಂದ 

ವಾದಿಸಿದರೆ ಕೇಡುಯೆಂದು 

ಪಾದಕೆಱಗಿ ಕದ ತೆಗೆಸುವ ಸಮಯಕ್ಕೆ 

ಆದುದಲ್ಲಿಗೆ ನಾಲ್ಕು ಸಂಧಿ॥೧೧೨॥


ಐದನೆಯ ಸಂಧಿ, 


ಕುಸುಮಬಾಣನ ಸುಟ್ಟು ಅಸುರನ ನೆಱೆಗೆದ್ದು 

ವಿಷವ ಕಂಠದಿ ನೆಱೆ ತಾಳ್ದು 

ಬಿಸಿಗಣ್ಣು ನೊಸಲೊಳಗೆಸೆವ ಶ್ರೀಶೈಲದ 

ಪಶುಪತಿ ಸಲಹು ಮಲ್ಲೇಶ॥೧॥ 


ತೆಗೆಸಿದ ಮಹಾನರಕದ ಬೀಗಮುದ್ರೆಯ 

ಪಗಲಾಳ್ಮನ ವರಸುತನು 

ಬಗೆಗುಂದಿ ಬಯಲುಪಚಾರಕೆ ಕೈಗೊಟ್ಟು 

ಮಿಗೆ ಪೊಕ್ಕು ತೋಱಿಸುತಿರ್ದ॥೨॥ 


ಹೊತ್ತೆತ್ತುವ ಕೀವಿನ ಕೊಂಡದೊಳಗೆ ಮೈ 

ಮುತ್ತಿ ಮುಸುಕಿ ಬಾಲಹುಳುವು 

ನೆತ್ತಿಯ ಕುಕ್ಕಿ ಉಕ್ಕಿನ ಮೂಗಿನ ಕಾಗೆ 

ಮತ್ತೆ ಪಾತಾಳಕೊತ್ತುವೊಲು॥೩॥ 


ಉರಿಯ ಮನೌಯೊಳಿರಬಹುದು ಕೇಂಜೇಳಿನ 

ಸರವರದೊಳಗಿರಬಹುದು

ಸರಸವನಾಡಬಹುದು ಕ್ರೂರಮೃಗದೊಳು

ನರಕ ಸಾಕೆಂದೊಱಲುವರು॥೪॥ 


ನವನಾಳುವನು ಪೊಕ್ಕು ತವೆ ತಿನ್ನುತವೆ ಹುಳು

ಅವಯವಂಗಳ ಕೆಡಿಸಿದವು

ಇವರ ಬಾಧೆಯನು ಮಾಣಿಸುವರ ಕಾಣೆ ನಮಗೀ

ಭವವು ಸಾಕೆಂದೊಱಲುವರು॥೫॥ 


ಕಾಣೆನು ಕಾವವರಿಲ್ಲ ಈ ನರಕದೊಳ್

ಪೂಣಿದವರ ಕೈವೆಡಿದು 

ಪ್ರಾಣೋಪಕಾರಿಗಳಿಲ್ಲೆನೆ ಮುನಿ ಕೇಳಿ 

ಆಣಿಟ್ಟು ಬೆಸಗೊಂಡನೆಮನ॥೬॥ 


ಮಾಜದೆ ಪೇಳುಪೇಳಿವರ ವೃತ್ತಾಂತವ 

ಸೋಜಿಗವಾಗಿದೆ ನಮಗೆ

ರಾಜಶೇಖರನಾಣೆ ಉಸುರೆಂದು ನವಕಲ್ಪ 

ಭೂಜದಂತೆಸೆದ ಮುನೀಂದ್ರ॥೭॥ 


ಬೇಡಿಕೊಂಬೆನು ಚರಣವ ಮುನಿನಾಥ 

ಗೂಢಾರ್ಥವಿದರಂಗವಣೆಯು

ಬೇಡ ವಿಸ್ತರೆಸಲಂಜುವೆವಿಲ್ಲಿ ಹೊಱವಂಟು

ಮಾಡುವೆನಯ್ಯ ಬಿನ್ನಪವ॥೮॥ 


ಕೂಗಿ ಕರೆಯಲು ಬಾರದವನು ಕೈ ಸನ್ನೆಗೆ 

ಬೇಗಬಹೆಯ ಯಮ ನಿನ್ನ 

ಹೀಗೆ ಜಡಿದು ಕೇಳ್ದರೆ ಪೇಳದವನತ್ತ 

ಹೋಗಿ ಪೇಳುವೆಯಾ ಕೇಳ್ ನೀನು॥೯॥ 


ಬೇಡವಕ್ಕಟಾ ಬಯಲುಪಚಾರ ಮದುವೆಯ 

ಮಾಡಿನ್ನು ನಾಗವಾಲಿಯಲಿ 

ಆಡುವ ನಿಷ್ಠೂರವನೆಂಬ ನಾಣ್ಣುಡಿ 

ಗೀಡಾಗದೆ ಪೇಳುಪೇಳೆನಲು॥೧೦॥ 


ಕರೆದು ಏಕಾಂತದಿ ಅರೆಮುಚ್ಚಿ ವದನವ 

ನೊರೆದ ಮುನಿಯ ಕರ್ಣದೊಳಗೆ

ಪರಮಪಂಚಾಕ್ಷರಿ ಮಂತ್ರವ ಸ್ತುತಿಸಿದೆ

ನರಕಕ್ಕೆ ಗುಱಿಯಾದರೆಂದ॥೧೧॥ 


ತಾಯ ಗರೂಭದಲಿ ಬಂದಂದಿಂದ ಓಂ ನಮೋ

 ಶಿವಾಯ ಎಂಬ ಮಂತ್ರವನು

ಕಾಯ ಬಿಡುವನ್ನ ಒಮ್ಮೆ ಉಚ್ಚರೆಸದೆ

ನಾಯಕ ನರಕದೊಳಿಹರು ॥೧೨॥ 


ಓಂಕಾರದಿಂದ ಉತ್ಪತ್ತಿಯೀರೇಳ್ಲೋಕ

ಶಂಕರ ಹರಿಹರಬ್ರಹ್ಮಾದಿಗಳು

ಮಂತ್ರಾಗಮದಯಿರವನಱಿಯದೆ ನಮ್ಮ 

ಅಂಕೆಯೊಳಗೆ ನೋವುತಿಹರು॥೧೩॥ 


 ನೃನಾಶತಕರೂಮವ ಮಾಡಿದವರಿವರು

ಓಂ ನಮೋಶಿವಶರಣೆನ್ನದೆ 

ಭಾನೈನಂದನನಾಜ್ಞೆಗೆ ಸಿಕ್ಕಿದರೆಂದು 

ಸಾನಂದಮುನಿ ಮಱುಗುತಲಿ॥೧೪॥ 


ನಮಃಶೆವಯೆಂದು ಮುನಿತಲೆದೂಗಲಾ

ಸಮಯದೆ ಸಮಿರ ಮೇಲ್ವಾಯ್ದು 

ಕ್ರಿಮಿಗೊಂಡದೊಳಗಿಪ್ಪರೊಬ್ಬರೊಬ್ಬರ ಸೋಂಕೆ 

ಸುಮನಸರಾದರಾಕ್ಷಣದಿ॥ ೧೫॥ 


ಮುನಿಪನ ಮೂಲಮಂತ್ರದ ನುಡಿಗೇಳುತ 

ಘನತವಕದಿ ನರಕದಲಿ 

ಮನದಲೂಲಿ ಶಿವಧ್ಯಾನ ನೆಲೆಗೊಂಡು ಪ್ರಮಥರ 

ಜನವು ತುಂಬಿತು ಜವಪುರದಿ॥೧೬॥ 


ಯಮರಾಜ ಚೋದ್ಯವೀ ಸುಮನಸರಾಗಿಹ 

ಕ್ರಮವೇನು ಪೇಳುಪೇಳೆನಲು 

ನಮಃಶಿವಾಯೆಂಬ ವಾಕ್ಯದ ವಾಯು ಸೋಂಕಲು 

ಸುಮನಸರಾದರು ಮುನಿಪ ॥೧೭॥ 


ಇನಿತನುಚ್ಚರಿಸಲು ಎನಿತಾಯ್ತು ಮಂತ್ರದ 

ಘನರವಗೇಳ್ದಡಿನ್ನೆಂತೊ

ನೆನೆದನು ಮನದೊಳೊಂದನುವ ಮುನೀಶನು 

ಇನಸುತನೊಡನೆಯಿಂತೆಂದ ॥॥೮॥ 


ಪೇಳುಪೇಳಿನ್ನೊಮ್ಮೊ ಪಂಚಾಕ್ಷರಿಯ ಧ್ವನಿ

ಕೇಳಲವರ ಪಾಪಹರವು 

ಧಾಳಿಯಿಡುವರುಯೆಂದೆಮ ಪೇಳ್ದ

ಸೂಳ್ನುಡಿಗೇಳ್ದು ಬೇಗ ॥೧೯॥ 


ಓಂನಮೋಶಿವ ಎನ್ನಿ ಓಂನಮೋಶಿವ ಎನ್ನಿ 

ಓಂನಮೋಶಿವ ಎನ್ನಿರಣ್ಣ 

ಓಂನಮೋಶಿವ ಎನ್ನಿ ಓಂ ನಮೋಶಿವ ಎನ್ನಿ 

ಓಂ ನಮೋಶಿವ ಎನ್ನುತೊಱಲ್ದ॥೨೦॥ 


ಚಲ್ಲವರಿದು  ಬೀದಿಯೊಳು ನಮಃಶಿವಯೆಂಬ 

ಸೊಲೂಲೆನ ಡಂಗುರ ಹೊಯ್ದು 

ನಿಲ್ಲದೆ ಕೇರಿಕೇರಿಯೊಳೋಣಿಯೊ

ಳೆಲ್ಲೆಡೆಯೊಳು ಸಾಱಿಸಿದರು॥೨೧॥ 


ಅಬ್ಬರಮಿಗೆ ಸಾಱುವ ಧ್ವನಿಗಳೆಲ್ಲ 

ಒಬ್ಬರೊಬ್ಬರ ಕಂಡರಾಗ 

ಬೊಬ್ಬಿರಿದರು ನಮಃಶೆವಯಂಬ ಧ್ವನಿಮಿಗೆ 

ಪರ್ಬಿತು ಕೈಲೃಸಪುರಕೆ॥೨೨॥


 ನಿರಯಲೊಬ್ಬರುಳಿಯದಂತೆ ಬಂದೆಲ್ಲ 

ರೆಱಗೆದರಾ ಮುನಿಪದಕೆ 

ಉಱುವ ನರಕದೊಳಗಿರುವ ಬಾಧೆಯ ಸುಟ್ಟು 

ಪರಮಪದವಿಗೈದಿದರು॥೨೩॥


ಈ ಶಿವಕೃತಿಯ ಲಾಲಿಸಿ ಕೇಳ್ದರ ಪಾಪ 

ನಾಶನವಹುದು ನಿಮಿಷದಲಿ 

ಲೇಸಕೊಡುವ ಶ್ರೀಗಿರಿಜೆಯರಮಣ ಕೈ 

ಲೃಸದ ಸಂಧೆಪೂರಾಯ॥೭೬॥  (ಆರನೆ ಸಂಧಿಯ ಮುಕ್ತಾಯ ಪದ್ಯ)


ನೆನಕೆ: 

ಕರ್ತೃ: ಓದುವ ಗಿರಿಯ, 

ಸಂಪಾದಕರು: 

ಡಿ. ವಿಜಯ

ಆರ್. ಎನ್. ವಿಜಯಲಕ್ಷ್ಮ

ಪ್ರಕೃಶಕರು: ಕನ್ನಡ ಅಧ್ಯಯನ ಸಂಸ್ಥೆ

ಮೈಸೂರು ವಿಶ್ವವಿದ್ಯನಿಲಯ 









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ