ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶುಕ್ರವಾರ, ಜೂನ್ 9, 2023

ಹೆಳವನಕಟ್ಟೆ ಗಿರಿಯಮ್ಮ ವಿರಚಿತ ಚಂದ್ರಹಾಸನ ಕಥೆ ~ ಸಾಂಗತ್ಯ


ಹೆಳವನಕಟ್ಟೆ ಗಿರಿಯಮ್ಮ ವಿರಚಿತ ಚಂದ್ರಹಾಸನ ಕಥೆ ~  ಸಾಂಗತ್ಯ


ಹೆಳವನಕಟ್ಟೆ ಗರಿಯಮ್ಮ


ಚಂದ್ರಹಾಸನ ಕಥೆಯನ್ನು ಹೆಳವನಕಟ್ಟೆ ಗಿರಿಯಮ್ಮ ಬರೆದಿದ್ದಾಳೆ.ಇದು ಸಾಂಗತ್ಯದಲ್ಲಿದೆ. ಕಷ್ಟದಲ್ಲಿದ್ದ ಭಕ್ತಬಾಲಕನೊಬ್ಬನ ಬಾಲಲೀಲೆಗಳನ್ನು ವಿವರಿಸಿರುವುದರಿಂದ ಮಕ್ಕಳಿಗೆ ಸುಲಭಗ್ರಾಹ್ಯವಾಗಿದೆ. ಇದರ ಸರಳಾನುವಾದ ಶ್ರೀ ಎನ್. ಬಸವಾರಾಧ್ಯರು ಮಾಡಿದ್ದಾರೆ.ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬರುವ ಕಥಾಪ್ರಸಂಗವನ್ನು ಆರಿಸಿ ಹೆಳವನಕಟ್ಟೆ ಗಿರಿಯಮ್ಮ ವಿಸ್ತಾರವಾಗಿ, ಸ್ತ್ರೀ ಸಹಜ ಸರಳತೆಯಿಂದ ಹಾಡುಗಬ್ಬವಾಗಿ ರಚಿಸಿದ್ದಾರೆ.  


ಚಂದ್ರಹಾಸನ ಕಥೆ ವಿಶ್ವವಿಖ್ಯಾತವಾದುದು.ಜಗತ್ತಿನ ಎಲ್ಲ ಸಾಹಿತ್ಯಗಳಲ್ಲೂ ಚಂದ್ರಹಾಸನ ಕಥೆಗೆ ಹೋಲಿಕೆಯುಳ್ಳ ಕಥೆಗಳು ಕಂಡುಬರುತ್ತವೆ.ಬೇರೆ ದೇಶದವರು ಈ ಕಥಾ ವಸ್ತುವನ್ನು ತಮ್ಮ ಮತಧರ್ಮಗಳಿಗೆ ಅನುಸಾರವಾಗಿ ಅಳವಡಿಸಿಕೊಂಡಿದ್ದಾರೆ. ಜರ್ಮನಿಯ " ಜೆಸ್ಟೋರೋಮನೋರಂ" ಎಂಬ ಪುರಾಣ ಕಾವ್ಯದಲ್ಲಿರುವ ಹೆನ್ರಿಯ ಕಥೆ ಚಂದ್ರಹಾಸನ ಕಥೆಯನ್ನು ಬಹುಮಟ್ಟಿಗೆ ಹೋಲುತ್ತದೆ. ಇದೇರೀತಿ ಮೆಸಿಡೋನಿಯದ " ನೈದಿಸ್" ಎಂಬ ಕಥೆಯೂ ಚಂದ್ರಹಾಸನ ಕಥೆಯನ್ನು ಹೋಲುತ್ತದೆ. ಗ್ರೀಸ್ ಮತ್ತು ದಕ್ಷಿಣ ಸ್ಲೋವಾಕಿಯ ದೇಶಗಳಲ್ಲಿಯೂ ಇದಕ್ಕೆ ಹೋಲುವ ಕಥೆಗಳಿವೆ. ಯೆಹೂದ್ಯರಲ್ಲೂ, ಕ್ರಿಶ್ಚಿಯನ್ನರ ಬೈಬಲ್ಲಿನಲ್ಲೂ ಇಂತಹ ಕಥೆಗಳು ಕಂಡುಬರುತ್ತವೆ. 


ಭಾರಥದಲ್ಲಿಯೂ ಚಂದ್ರಹಾಸನ ಕಥೆಗೆ ಹೋಲಿಕೆಯುಳ್ಳವು ಬೌದ್ಧ ಮತ್ತು ಜೈನಸಾಹಿತ್ಯಗಳಲ್ಲಿವೆ. ಮನೋರಥಪೂರಣಿ, ಧಮ್ಮಪದ ಅಟ್ಟಕಥ, ಚಂಪಕಶ್ರೇಷ್ಠಿ ಕಥಾನಕ, ಕಥಾಕೋಶ ಇವುಗಳಲ್ಲಿ ಚಂದ್ರಹಾಸೋಪಾಖ್ಯಾನದ ಪ್ರತಿಬಿಂಬಗಳಂತಿರುವ ಕಥೆಗಳಿವೆ. ಈ ಮೇಲಿನ ಎಲ್ಲ ಕಥೆಗಳಲ್ಲೂ ಚಂದ್ರಹಾಸನ ವಿವಾಹದವರೆಗೆ ಕಥಾಸರಣಿ ಒಂದೇ ವಿಧವಾಗಿದೆ. ಮುಂದೆ ಮನುಷ್ಯ ಪ್ರಯತ್ನ ಸಾಗದೆಂದು ಮನಗಂಡು ಎಲ್ಲರೂ ಸೇರಿ ಕಥಾನಾಯಕನಿಗೆ ಸಂತೋಷದಿಂದ ವೆವಾಹ ಮಾಡುತ್ತಾರೆ. ಕೆಲವು ಕಥೆಗಳಲ್ಲಿ ಕಥಾನಾಯಕನನ್ನು ಬಲಿಗೊಡಲು ಹೋಗಿ ತಾವೇ ಬಲಿಯಾಗುತ್ತಾರೆ.


ಈ ಕಥೆಯನ್ನು ರಂಗನಾಥಸ್ವಾಮಿಯ ಅಂಕಿತದಲ್ಲಿ ಬರೆದಿದ್ದಾಳೆ. ಈ ಕೆರೆ ರಂಗನಾಥಸ್ವಾಮಿಯ ದೇವಾಲಯದ ಸಮೀಪದಲ್ಲಿದೆ. ಐತಿಹಾಸಿಕ ಹೆಳವನು ಪುರಾಣದ ಅರುಣನಾಗಿದ್ದಾನೆ. ಹೆಳವನು ಕಟ್ಟಿಸಿದ ಕಟ್ಟೆಯೂ ದೇವಾಲಯವೂ ಕಾಲಾಂತರದಲ್ಲಿ ಪುಂಗನೂರರಸರಿಂದ ಜೀರೂಣೋದ್ಧಾರವಾದುವು. ಗಿರಿಯಮ್ಮ ಪ್ರತಿನಿತ್ಯವೂ ಹೆಳವನಕಟ್ಟೆಗೆ ಹೋಗಿ ಅದರ ತೀರ್ಥವನ್ನು ಪೂಜೆಗೂ ಗೃಹಕೃತ್ಯಕ್ಕೂ ತರುತ್ತಿದ್ದುಳು. ಆದ್ದರಿಂದ ಹೆಳವನಕಟ್ಟೆಗೂ ಗಿರಿಯಮ್ಮನಿಗೂ ತೀರ ನಿಕಟ ಸಂಬಂಧವಿದ್ದಿರಬೇಕು. ಗಿರಿಯಮ್ಮ ಸು. ಕ್ರಿ. ಶ. ೧೭೫೦ ರಲ್ಲಿ ಇದ್ದಿರಬಹುದೆಂದು ಕವಿಚರಿತೆಕಾರರು ಹೇಳುತ್ತಾರೆ. ಇವಳ ಜನ್ಮಸ್ಥಳ ಹರಿಹರದ ಬಳಿಯಿರುವ ರಾಣಿಬೆನ್ನೂರು. ಈಕೆಯ ತಂದೆ ಭಿಷ್ಟಪ್ಪ .ಗಿರಿಯಮ್ಮನಿಗೆ ಮಲೆಬೆನ್ನೂರಿನ ಶಾನುಭೋಗ ಕೃಷ್ಣಪ್ಪನ ಮಗ ತಿಪ್ಪರಸನೊಂದಿಗೆ ವಿವಾಹವಾಗಿತ್ತು. ಈತ ಸಂಸಾರಸುಖವನ್ನು ಪಡೆಯಲಾಗಲಿಲ್ಲ.ಅವನಿಗೆ ಗಿರಿಯಮ್ಮಳಲ್ಲಿ ದೈವಿಕ ಭಕ್ತಿಭಾವನೆಯುಂಟಾಯಿತು. ಗಿರಿಯಮ್ಮನೇ ಆತನಿಗೆ ಮತ್ತೊಂದು ಮದುವೆ ಮಾಡಿಸಿದಳು.


ಒಂದನೆಯ ಸಂಧಿ,


ಶ್ರೀರಮಣಿಯ ಮನೋಹರ ಸುಜನಮಂ 

ದಾರ ತ್ರೈಭುವನೋದ್ಧಾರ 

ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ 

ನಾರಾಯಣ ಶರಣೆಂಬೆ ॥೧॥ 


 ಶ್ರೀಮಹಾಲಕ್ಷ್ಮಿಗೆ  ಮನೋಹರನಾದವನೂ, ಸುಜನರಿಗೆ ಮಂದಾರಮಾಲೆಯಂತಿರುವವನೂ,ಮೂರುಲೋಕಗಳನ್ನು ಉದ್ಧರಿಸುವವನೂ, ಕಾರುಣ್ಯನೆಧಿಯೂ ಆದ ಹೆಳವನಕಟ್ಟೆ ರಂಗಯ್ಯನಾದ ನಾರಾಯಣ ನಿನಗೆ ನಮಸ್ಕಾರ. 


ಕಡಲಶಯನ ಕಲ್ಪತರುವೆ ಇಷ್ಟಾರ್ಥವ 

ಕೊಡುವ ಭಕ್ತರ ಭಾಗ್ಯನೆಧಿಯೆ

ನಡೆಸುವೆ ನಿಮ್ಮ ತಂತ್ರದಲಿ ಈ ಕೃತಿಯನ್ನು

ನುಡಿಸಯ್ಯ ಎನ್ನ ಜಿಹ್ವೆಯಲಿ ॥೨॥ 


ಸಮುದ್ರದಲ್ಲಿ ಪವಡಿಸಿರುವವನೆ,ಕಲ್ಪತರುವೆ, ಭಕ್ತರಿಗೆ ಬೇಡಿದುದನ್ನು ಕೊಡುವವನೆ,ನಿನ್ನ ಕೃಪೆಯಿಂದ ಈ ಕಾವ್ಯವನ್ನು ರಚಿಸುವೆನು.ನೀನು ಬಂದು ನನ್ನ ನಾಲಗೆಯಲ್ಲಿ ನೆಲಸಿ,ಈ ಕಾರ್ಯವನ್ನು ಮಾಡಿಸು. 


ಭುಜಗನ ಹಿಡಿದು ಗರ್ಭವ ಸುತ್ತಿದಾತನೆ 

ಅಜಹರಿಸುರರ ವಂದಿತನೆ 

ಭಜನೆಗಿಷ್ಟಾರ್ಥವ ಕೊಡುವ ವಿಘ್ನೇಶ್ವರ 

ನಿಜವಾಗೊ ಮತಿಗೆ ಮಂಗಳವ ॥೩॥ 


ಸರ್ಪವನ್ನು ಹೊಟ್ಟೆಗೆ ಸುತ್ತಿಕೊಂಡವನೂ, ಬ್ರಹ್ಮ, ವಿಷ್ಣು, ಮೊದಲಾದ ದೇವತೆಗಳಿಂದ ವಂದಿಸಲ್ಪಟ್ಟವನೂ, ,ಪ್ರಾರ್ಥಿಸಿದವರಿಗೆ ಇಷ್ಟಾರ್ಥವನ್ನು ನೀಡುವವನೂ, ಆದ ವಿಘ್ನೇಶ್ವರನೇ ನನ್ನ ಮತಿಗೆ ಮಂಗಳವನ್ನು ಕರುಣಿಸು.


ಶೃಂಗಪುರದ ನೆಲವಾಸನೆ ಸಜ್ಜನ ಪೋಷೆ 

ಸಂಗೀತಲೋಲೆ ಸುಶೀಲೆ 

ಮಂಗಳಗಾತ್ರೆ ಶಾರದೆ ಎನ್ನ ಜಿಹ್ವೆಯಲಿ 

ಹಿಂಗದೆ ನೆಲಸೆನ್ನ ತಾಯೆ ॥೪॥ 


ಶೃಂಗಪುರವಾಸಿಯೂ, ಸಜ್ಜನ ಪೋಷಕಳೂ, ಸಂಗೀತಲೋಲೆಯೂ, ಒಳ್ಳೆಯ ಸ್ವಭಾವವುಳ್ಳವಳೂ,ಮಂಗಳಕರವಾದ ದೇಹವುಳ್ಳವಳೂ, ಆದ ಶಾರದೆಯು ನನ್ನ ನಾಲಗೆಯಲ್ಲಿ ಸದಾ ನೆಲಸಲಿ. 


ನಿತ್ಯಾನಂದ ರಜತಾನೆಲವಾಸನೆ

ಭಕ್ತವತ್ಸಲ ಭಾಳನೇತ್ರ 

ಹೆತ್ತೋರ ಮನೆದೈವ ಶ್ರೀಮೈಲಾರಗೆ 

ಹಸ್ತವ ಮುಗಿದು ವಂದಿಸುವೆ॥೫॥ 


ನಿತ್ಯಾನಂದದಾಯಕನೂ, ಬೆಳ್ಳಿಯ ಬೆಟ್ಟದಲ್ಲಿ ವಾಸಿಸುವವನೂ, ಹಣೆಯಲ್ಲಿ ಕಣ್ಣುಳ್ಳವನೂ ಆಗಿರುವ,ಹೆತ್ತವರ ಮನೆದೈವವಾದ ಮೈಲಾರನಿಗೆವಂದಿಸುತ್ತೇನೆ.


ಪೃತುವಿ ಆಕಾಶ ಸೂರ್ಯ ಚಂದ್ರರಿಗೆರಗುವೆ 

ಪತಿಯ ಚರಣವ ನೆನೆವೆ 

ಸ್ತತಿಸುವೆ ಗುರುಹಿರಿಯರಿಗೇಕಚಿತ್ತದಿ 

ಮತಿಗೆ ಮಂಗಳವಾಗಲೆಂದು ॥೬॥ 


ಪೃಥ್ವಿ ಆಕಾಶ, ಸೂರ್ಯ,ಚಂದ್ರರನ್ನೂ, ಪತಿಯ ಚರಣವನ್ನೂ, ಗುರುಹಿರಿಯರನ್ನೂ ಒಂದೇ ಮನಸ್ಸಿನಿಂದ ಸ್ಮರಿಸಿ ಅವರೆಲ್ಲರಿಗೆ ನಮಸ್ಕರಿಸುತ್ತೇನೆ. 


ಸುರಪುರವಾಸ ಲಕ್ಷ್ಮಿಯಕಾಂತ ಭಕ್ತರ್ಗೆ 

ಒರೆದಂಥ ಜೈಮಿನಿಯೊಳಗೆ  

ಪರಮಭಕ್ತ ಚಂದ್ರಹಾಸನ ಕಥೆಯನು

ಚರಿತೆಯ ಮಾಡಿ ವರ್ಣಿಸುವೆ॥೭॥ 


ಸುರಪುರದ ಲಕ್ಷ್ಮೀಶ ಭಕ್ತರಿಗೆ ಹೇಳಿದ ಜೈಮಿನಿ ಭಾರತದಲ್ಲಿನ ಪರಮಭಕ್ತ ಚಂದ್ರಹಾಸನ ಕಥೆಯನ್ನು ವಿಸ್ತಾರಮಾಡಿ ವರ್ಣಿಸುತ್ತೇನೆ.


ಇಂದ್ರಜ ತುರಗವ ಕಾಣದೆ ಮನದಲ್ಲಿ 

ಸಂದೇಹ ಮಾಡುತಿರಲು

ಚಂದ್ರಹಾಸನ ಕಥಾಮೃತಸಾರವನು ನಾ 

ರದ ಪೇಳಿದ ಫಲುಗುಣಗೆ॥೮॥ 


ಇಂದ್ರನ ಮಗನಾದ ಅರ್ಜುನ ಅಶ್ವಮೇಧಯಾಗದ ಕುದುರೆಯನ್ನು ಕಾಣದೆ ಮನಸ್ಸಿನಲ್ಲೇ ಸಂದೇಹಿಸುತ್ತಿರಲು, ನಾರದ ಅವನಿಗೆ ಚಂದ್ರಹಾಸನ ಕಥೆಯನ್ನು ಹೇಳಿದನು.  


ಬಂದರು ಕೃಷ್ಣಾರ್ಜುನರು ತುರಂಗವ 

ಮುಂದೊತ್ತಿ ರಥವ ಬೆಂಬತ್ತಿ 

ಚಂದದಿ ದಿಗ್ದೇಶ ತಿರುಗಿದ ಹಯವ ತಾ 

ನಿಂದಿರಿಸಿದ ಚಂದ್ರಹಾಸ  ॥೯॥


ಕೃಷ್ಣ ಮತ್ತು ಅರ್ಜುನರು ಕುದುರೆಯನ್ನು ಮುಂದೆ ಬಿಟ್ಟು ರಥದಲ್ಲಿ ಕುಳಿತು ಹಿಂಬಾಲಿಸುತ್ತಾ ಬರುವಾಗ,ನಾನಾ ದಿಕ್ಕು ದೇಶಗಳಲ್ಲಿ ತಿರುಗಾಡಿ, ಬಂದ ಆ ಕುದುರೆಯನ್ನು ಚಂದ್ರಹಾಸನು ತಡೆದು ನಿಲ್ಲಿಸಿದನು.


ಕಟ್ಟಿದನೆರಡು ತುರಂಗದ ಲಿಖಿತವ 

ಬಿಟ್ಟೋದಿಕೊಂಡು ನೋಡಿದನು 

ವೈಷ್ಣವಕುಲ ಶಿರೋರನ್ನ ಪರಾಕ್ರಮ 

ದಿಟ್ಟರಿಗಿದು ನೀತವೆಂದು॥೧೦॥ 


ವೈಷ್ಣವಕುಲಶಿರೋಮಣಿಯಾದ ಚಂದ್ರಹಾಸ ಕುದುರೆಯ ಹಣೆಯಲ್ಲಿ ಕಟ್ಟಿದ್ದ ಬರಹವನ್ನು ಬಿಚ್ಚಿ ಓದಿ ನೋಡಿದ. ಪರಾಕ್ರಮಶಾಲಿಗಳಿಗೆ ಇದು ಉಚಿತವೆಂದು ಭಾವಿಸಿ ಅದನ್ನು ಕಟ್ಟಿಹಾಕಿದನು. 


ಪಿಡಿಕೊಂಡು ಬಂದರು ತುರಗವ ಚರರು ತ 

ನ್ನೊಡೆಯಗೆ ಪೇಳಿದರಾಗ 

ಪಿಡಿದು ತುರಂಗವ ಕಟ್ಟಿದರಾರೆಂದು 

ಕಡುಚಿಂತೆಯಲಿ ಪಾರ್ಥನಿದ್ದ॥೧೧॥ 


ಯಜ್ಞಾಶ್ವವನ್ನು ಕಟ್ಟಿದ ಸಂಗತಿಯನ್ನು ದೂತರಿಂದ ಕೇಳಿದ, ಅರ್ಜುನ ಅದನ್ನು ಕಟ್ಟಿದವರು ಯಾರಿರಬಹುದು ಎಂದು ಚಿಂತಿಸುತ್ತಿದ್ದನು. 


ಮನದಲಿ ಆಲೋಚನೆಯ ಮಾಡುತಲಿರೆ 

ದಿನಕರ ಪ್ರತಿಬಿಂಬದಂತೆ 

ವನಜನಾಭ ಕೃಷ್ಣ ಶರಣೆನ್ನುತ ಸುರ 

ಮುನಿಯಿಳಿದಂಬರದಿಂದ ॥೧೨॥ 


ಹೀಗೆ ಅರ್ಜುನ ಮನಸ್ಸಿನಲ್ಲೇ ಯೋಚನೆಮಾಡುತ್ತಿರುವಾಗ, ನಾರದ ಸೂರ್ಯನ ಪ್ರತಿರೂಪದಿಂದ ಕೃಷ್ಣನನ್ನು ಧ್ಯಾನಮಾಡುತ್ತ ಆಕಾಶದಿಂದ ಧರೆಗಿಳಿದು ಬಂದನು.


ಇಟ್ಟಿಹ ಕರ್ಣಕುಂಡಲವು ಕೃಷ್ಣಾಜಿನ 

ಉಟ್ಟಿಹ ಕರದಿ ವೇಣುವನು 

ಮುಟ್ಟಿ ಬಾರಿಸುತ ಶ್ರೀಹರಿನಾಮ ಸ್ಮರಿಸುತ

ಶ್ರೇಷ್ಠ ಬಂದನು ಇವರೆಡೆಗೆ॥೧೩॥ 


ಕೃಷ್ಣಾಜಿನಧಾರಿಯೂ,ಕರ್ಣಕುಂಡಲಗಳಿಂದ ಕೂಡಿದವನೂ ಆದ ನಾರದ ಕೈಯಲ್ಲಿ ಕೊಳಲು ಹಿಡಿದು ಹರಿನಾಮಸ್ಮರಣೆ ಮಾಡುತ್ತ ಅರ್ಜುನನಿದ್ದಲ್ಲಿಗೆ ಬಂದನು. 


ಏನಿದು ಬಂದ ಕಾರಣ ಎನೈತಲಿ ಇಂದ್ರ 

ಸೂನು ಕೃಷ್ಣರು ಇದಿರೆದ್ದು

ಗಾನವಿನೋದಿಯಾಗಮನವಿದೇನೆಂದು

ಆನಂದದಿಂದ ಕೇಳಿದರು.॥೧೪॥ 


ನಾರದನನ್ನು ಇದಿರುಗೊಂಡ ಕೃಷ್ಣಾರ್ಜುನರು ಸಂಗೀತ ವಿನೋದಿಯಾದ ಆತನು ಬಂದ ಕಾರಣವೇನೆಂದು ಹರ್ಷದಿಂದ ಕೇಳಿದರು. 


ಕುಳ್ಳಿರಿಸಿದರು ಗದ್ದುಗೆಯಿಟ್ಟು ಮುನಿಪಗೆ 

ಎಲ್ಲ ವೃತ್ತಾಂತವನರುಹಿ 

ಬಲ್ಲಿದ ತುರಗವ ಕಟ್ಟಿದ ಧೀರ 

ಅಲ್ಲಾರು ಎನುತ ಕೇಳಿದರು॥೧೫॥ 


ನಾರದನಿಗೆ ಗದ್ದುಗೆಯನ್ನು ಕೊಟ್ಟು ಕುಳ್ಳಿರಿಸಿದರು. ಅವನಿಗೆ ಎಲ್ಲಾ ಸಮಾಚಾರವನ್ನೂ ತಿಳಿಸಿ,ತುರಗವ ಕಟ್ಟಿದ ವೀರನಾರು? ಎಂದು ಕೇಳಿದರು.


ಗಮನವಾಗಿದ್ದ ತುರಂಗವ ಕಟ್ಟಿದ 

ಪ್ರಮುಖರಿಲ್ಲಾರು ಪೇಳೆನಲು 

ನಿಮಗಿದ ವಿವರಿಸಿ ಪೇಳುವೆನೆಂದರೆ 

ಸಮಯವಲ್ಲವು ಪೇಳೆನಲು॥೧೬॥ 


ನಿರಾತಂಕವಾಗಿ ಸುತ್ತಿಬರುತ್ತಿದ್ದ ಕುದುರೆಯನ್ನು ಕಟ್ಟಿದ ಪರಾಕ್ರಮಿ ಯಾರು ಎಂದು ಕೇಳಲು,ಅದನ್ನು ವಿವರಿಸಿ ಹೇಳಲು ಈಗ ಸಮಯವಿಲ್ಲವೆಂದು ನಾರದ ತಿಳಿಸಿದನು.


ವ್ಯಾಸಾಂಬರೀಷ ವಿಭೀಷಣಕ್ರೂರ ಪ 

ರಾಶರ ಧ್ರುವ ಪ್ರಹಲ್ಲಾದ 

ಈಸು ಮಂದಿ ಭಕ್ತರಿಗಧಿಕನು ಚಂದ್ರ 

ಹಾಸನೆಂಬ ಹರಿಭಕ್ತ॥೧೭॥ 


ವ್ಯಾಸ, ಅಂಬರೀಶ,ವಿಭೀಷಣ,ಅಕ್ರೂರ,ಪರಾಶರ,ಧ್ರುವ,ಪ್ರಹ್ಲಾದ ಈ ಎಲ್ಲ ಭಕ್ಯರಿಗಿಂತ ಮಿಗಿಲಾದವನು ಚಂದ್ರಹಾಸ. ಈತನು ಹರಿಭಕ್ತ. 


ಹೇಳಬೇಕೆನುತ ಮುನೀಶನೆಂದೆಂಬ ಕೇ 

ರಾಳದೇಶದ ರಾಜ್ಯವನು 

ಆಳುವ ಪ್ರಭು ಧಾರ್ಮಿಕನೆಂಬಾತನಾ

ಬಾಳನೆಂಬರು ಪ್ರಧಾನಿಯನು॥೧೮॥ 


ಹೀಗೆಂದುದನ್ನು ಕೇಳಿ ಅರ್ಜುನ ಆ ಕಥೆಯನ್ನು ಕೇಳಬೇಕೆನ್ನಲು,ಮುನಿ ಹೇಳತೊಡಗಿದನು. ಕೇರಳ ದೇಶದಲ್ಲಿ ಧಾರ್ಮಿಕನೆಂಬ ರಾಜ ಆಳುತ್ತಿದೂದನು. ಬಾಳ ಎಂಬುವನು ಅವನ ಪ್ರಧಾನಿಯಾಗಿದ್ದನು.


ನೀತೀಲಿ ರಾಜ್ಯವನಾಳುತಿರಲು ಕಂದ 

ಭೂತಮೂಲದಲಿ ಪುಟ್ಟಿದನು 

ಜಾತಕರ್ಮ ನಾಮಕರಣಮಾಡದೆ ಅವ 

ರ್ತಾತಕಾಲವಾಗಿ ಪೋದ॥೧೯॥ 


ಆ ರಾಜನು ನೀತಿಯಿಂದ ರಾಜ್ಯವಾಳುತ್ತಿರಲು, ಅವನಿಗೆ ಒಬ್ಬ ಮಗ ಮೂಲಾನಕ್ಷತ್ರದಲ್ಲಿ ಹುಟ್ಟಿದನು. ಅವನಿಗೆ ಜಾತಕರ್ಮ ನಾಮಕರಣಗಳನ್ನು ಮಾಡುವ ಮುಂಚೆಯೇ ರಾಜ ಕಾಲವಾದನು. 


ನಾಯಕರಿಲ್ಲದ ಕಾಯವಿದೇಕೆಂದು 

ಸಾಯಲಾದಳು ರಾಜಪತ್ನಿ 

ಮಾಯವಾಯಿತು ಸಿರಿ ಮತ್ತೆ ರಾಜ್ಯವ ಪರ 

ರಾಯರು ಬಂದು ಕಟ್ಟಿದರು॥೨೦॥ 


ಪತಿಯಿಲ್ಲದ ಮೇಲೆ ಬದುಕಿ ಪ್ರಯೋಜನವೇನೆಂದು ರಾಣಿಯು ಪ್ರಾಣವನ್ನು ಬಿಟ್ಟಳು. ಇತ್ತ ರಾಜ್ಯದ ಸಿರಿಯೆಲ್ಲ ಮಾಯವಾಯಿತು. ಪರರಾಜರು ಬಂದು ರಾಜ್ಯವನ್ನು ಆಕ್ರಮಿಸಿದರು. 


ಪೋಷಣೆ ಮಾಡುವರಿಲ್ಲದಿರಲು ಪರ 

ದೇಸಿಯಂದದಿ ಬಾಲನಿರಲು

ದಾಸಿವೊಬ್ಬಳು ಕಂಡು ಮನದಲ್ಲಿ ಮರುಗುತ 

ಆ ಶಿಶುವನೆತ್ತಿ ನಡೆದಳು॥೨೧॥ 


ತಂದೆ ತಾಯಿಗಳು ಸತ್ತುಹೋಗಿ ಅನಾಥವಾಗಿದ್ದ ರಾಜಪುತ್ರನನ್ನು ದಾಸಿಯೊಬ್ಬಳು ನೋಡಿ, ಕನಿಕರಪಟ್ಟು ಆ ಮಗುವನ್ನು ಎತ್ತಿಕೊಂಡು ಹೋದಳು. 


ಚಿಂತಿಸಿ ಹಲವು ಯೋಚನೆಯ ಮಾಡುತಲಾಗ 

ಕುಂತಳಪುರಕಾಗಿ ಬಂದು 

ಸಂತತ ನೆರೆಯಲಿ ಶಿಶುವನಿಟ್ಟುಕೊಂಡು 

ನಿಂತಳು ಆ ಗ್ರಾಮದಲ್ಲಿ ॥೨೨॥ 


ಆ ದಾಸಿ ಎಲ್ಲಿಗೆ ಹೋಗಬೇಕೆಂದು ಬಹುವಾಗಿ ಯೋಚಿಸಿ, ಕೊನೆಗೆ ಕುಂತಳಪುರಕ್ಕೆ ಬಂದು ಶಿಶುವಿನೊಡನೆ ಅಲ್ಲಿಯೇ ನಿಂತಳು.


ತೆರಿದು ಹಾಕುವಳು ಪಾಲ್ಬೆಣ್ಣೆಯ ಶಿಶುವಿಗೆ

ಎರೆದು ಪೋಷಣೆಯ ಮಾಡುವಳು 

ತರಳಗೆ ಬೇಕಾದುದಿಲ್ಲದಿರಲು ದಾಸಿ 

ಮರುಗುತಿರ್ದಳು ಮನದೊಳಗೆ॥೨೩॥ 


ಆ ದಾಸಿ ಹಾಲು, ಬೆಣ್ಣೆಗಳನ್ನು ಅವರಿವರಿಂದ ಬೇಡಿ ತಂದುಹಾಕಿ ಆ ಮಗುವನ್ನು ಸಲಹುವಳು. ಅದಕ್ಕೆ ಬೇಕಾದುದು ಇಲ್ಲದುದಕ್ಕಾಗಿ ದುಃಖಿಸುವಳು. 


ದೇಶಾಧಿಪತಿಯ ಗರ್ಭದಿ ಬಂದು ನಿನಗೀಗ 

ಹಾಸುವ ವಸ್ತ್ರಗಳಿಲ್ಲ 

ಬೀಸಿ ತೂಗುವರೆ ತೊಟ್ಟಿಲುಯಿಲ್ಲ ಎನುತಲಿ 

ಬೇಸತ್ತು ಅಳಲುವಳೊಮ್ಮೆ॥೨೪॥ 


ರಾಜಪುತ್ರನಾಗಿ ಹುಟ್ಟಿದರೂ ಹಾಸಲು ವಸ್ತ್ರಗಳಿಲ್ಲ, ಮಲಗಿಸಿ ತೂಗುವುದಕ್ಕೆ ತೊಟ್ಟಿಲಿಲ್ಲ, ಎಂದು ಆಕೆ ಬಹಳವಾಗಿ ದುಃಖಿಸುತ್ತಿದ್ದಳು. 


ಪಾಲನೆ ಮಾಡುವಳು ಪರೆಪರೆಯಲೆ ಬೃಲ 

ಲೀಲೆಯ ನೋಡಿ ಹಿಗ್ಗುವಳು 

ಶ್ರೀಲೋಲನೆ ನೀ ಗತಿಯೆಂದು ತರಳನ 

ಆಲಂಬದಲಿರುತಿಹಳು॥೨೫॥ 


ಹೀಗಿದ್ದರೂ ಹಲವು ರೀತಿಯಲ್ಲಿ ಮಗುವನ್ನು ಪಾಲಿಸುತ್ತ, ಅದರ ಬಾಲಲೀಲೆಯನ್ನು ನೋಡಿ ಸಂತೋಷದಿಂದ ಹಿಗ್ಗುತ್ತ   ಶ್ರೀಲೋಲನೆ ನೀನೆ ಗತಿಯೆಂದು ಮಗುವಿಗೆ ಆಶ್ರಯದಾತಳಾಗಿ ಬಾಳುತ್ತಿದ್ದಳು.


ತೊಂಗಲುಗುರುಳು ತೋರುತಲಿಹ ಮೊಳೆವಲ್ಲು 

ಕಂಗಳ ಕುಡಿನೋಟವೆಸೆಯೆ 

ಮಂಗಳ ಗಾತ್ತದ ಮುದ್ದು ಬಾಲಕನೆಲ್ಲ 

ರಂಗದೊಳಗಾಡುತಿಹನು॥೨೬॥ 


ಗುಂಗುರು ಕೂದಲು, ಆಗತಾನೆ ಮೊಳೆಯುತ್ತಿದ್ದ ಹಲ್ಲುಗಳು, ಕುಡಿನೋಟಗಳಿಂದ ಕೂಡಿದ ಆ ಮುದ್ದು ಬಾಲಕನು ಹೊಳೆವ ದೇಹಕಾಂತಿಯಿಂದ ಕಂಗೊಳಿಸುತ್ತಿದ್ದನು. ಅವನು ಎಲ್ಲರ ಮನೆಯ ಅಂಗಳದಲ್ಲೂ ಆಡುತ್ತಿದ್ದನು. 


ಇರುತಿರೆ ದಾಸಿ ಅಂತರಿಸಿಪೋದಳು ಬಾಲ 

ಪರಪುಟ್ಟನಾದುದ ಕಂಡು 

ನೆರೆಯನಾರಿಯರೆಲ್ಲ ತಮ್ಮ ಮಕ್ಕಳ ಕೂಡೆ

ಎರೆದು ಮಡಿಯ ಪೊದಿಸುವರು॥೨೭॥ 


ಹೀಗಿರುತ್ತಿರಲು,ಚಂದ್ರಹಾಸನನ್ನು ಸಾಕುತ್ತಿದ್ದ ದಾಸಿಯೂ ತೀರಿಹೋದಳು.ಬಾಲಕ ಪರದೇಶಿಯಾದನು. ಅಕ್ಕಪಕ್ಕದ ಹೆಂಗಸರು ತಮ್ಮ ಮಕ್ಕಳೊಂದಿಗೆ ಈ ಮಗುವಿಗೂ ಸ್ನಾನಮಾಡಿಸಿ ಬಟ್ಟೆ ತೊಡಿಸಿ ಪೋಷಿಸುತ್ತಿದ್ದರು. 


ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ 

ರೋಗರವನ್ನು ಉಣಿಸುವರು 

ತೂಗುವರು ತೊಟ್ಟಿಲೊಳಗಿಟ್ಟು ತರಳನ 

ರಾಗ ಗಾನದಲಿ ಪಾಡುವರು॥೨೮॥ 


ಅನಾಥನಾದ ಚಂದ್ರಹಾಸನಿಗೆ ಮಾಗಾಯಿ,ಮುರ, ಮೊದಲಾದ ಆಭರಣಗಳನ್ನು ಹಾಕಿ,ಕೆನೆಮೊಸರು ಅನ್ನವನ್ನು ಉಣ್ಣಿಸಿ,ತೊಟ್ಟಿಲಲ್ಲಿ ಮಲಗಿಸಿ ಹಾಡುತ್ತಿದ್ದರು. 


ಓರಗೆ ಮಕ್ಕಳು ಒಡಗೊಂಡು ಹೋಗಿ ಎ 

ಣ್ಣೂರಿಗೆಯನು ಕೊಡಿಸುವರು 

ಕೇರಿಕೇರಿಗಳೊಳು ಕೊಡವರೆಲ್ಲರ 

ಕಾರುಣ್ಯದ ಕಂದನಾಗಿ॥೨೯॥ 


ಜೊತೆ ಹುಡುಗರು ಚಂದ್ರಹಾಸನನ್ನು ತಮ್ಮತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಎಣ್ಣೆಯ ಹೂರಿಗೆಯನ್ನು ಕೊಡಿಸುತ್ತಿದ್ದರು.ಹೀಗೆ ಕೇರಿ ಕೇರಿಗಳಲ್ಲಿದ್ದವರೆಲ್ಲರ ಕಾರುಣ್ಯದ ಕಂದನಾಗಿ ಚಂದ್ರಹಾಸ ಬೆಳೆಯುತ್ತಿದ್ದನು. 


ಸೂಳೆವೆಣ್ಣುಗಳೆಲ್ಲ ಸೆಳೆದೆತ್ತಿಕೊಂಡು ತ 

ಮ್ಮಾಲಯದೊಳು ಕರೆದೊಯ್ದು 

ಕಾಲತೊಳೆದು ಕಸ್ತುರಿಯನಿಟ್ಟು ಮಲ್ಲಿಗೆ 

ಮಾಲೆಯನವಗೆ ಹಾಕುವರು॥೩೦॥


 ಆ ಊರಿನ ವೇಶ್ಯಾಸ್ತ್ರೀಯರು ಕದ್ದು ಬಾಲಕನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಕಾಲು ತೊಳೆದು ಕಸ್ತೂರಿ ತಿಲಕವನಿಟ್ಟು ಹೂಮಾಲೆ ಹಾಕಿ ಸಿಂಗರಿಸುತ್ತಿದ್ದರು. 


ಕದಳಿ ಖರ್ಜೂರಕಿತ್ತಳೆ ಜಂಬುನೇರಿಲು 

ಮಧುರ ಮಾವಿನ ಫಲಗಳನು 

ಚದುರೆಯರೆಲ್ಲರು ಕೊಟ್ಟು ಮನ್ನಿಸುವರು 

ಮದನನಯ್ಯನ ಕಿಂಕರಗೆ॥೩೧॥ 


ಬಾಳೆ, ಖರ್ಜೂರ, ಕಿತ್ತಳೆ, ಜಂಬುನೇರಳೆ, ಮಾವು ಮೊದಲಾದ ಹಣ್ಣುಗಳನ್ನು ತಿನ್ನಲು ಮನ್ಮಥನ ತಂದೆಯಾದ ವಿಷ್ಣುವಿನ ಭಕ್ತನಾದ ಚಂದ್ರಹಾಸನಿಗೆ ಆ ಊರಿನ ಚದುರೆಯರು ಕೊಡುತ್ತಿದ್ದರು. 


ಬಟ್ಟೆವಿಡಿದು ಬಾಲ ಬರುತಿರೆ ಕಂಡನು 

ಪುಟ್ಟ ಸಾಲಿಗ್ರಾಮ ಶಿಲೆಯ 

ಘಟ್ಟುಳ್ಳ ಗೇಟಿಯು ತನಗೆ ದೊರಕಿತೆಂದು

 ಅಷ್ಟು ಜನರಿಗೆ ತೋರಿಸಿದ॥೩೨॥ 


ಚಂದ್ರಹಾಸ ಒಮ್ಮೆ ದಾರಿಯಲ್ಲಿ ನಡೆದು ಬರುತ್ತಿದ್ದಾಗ ಚಿಕ್ಕದಾದ ಸಾಲಿಗ್ರಾಮ ಶಿಲೆಯೊಂದು ದೊರಕಿತು. ಅದನ್ನು ಗಟ್ಟಿಯಾದ ಗಜ್ಜುಗವೆಂದು ತನ್ನ ಸ್ನೇಹಿತರಿಗೆ ತೋರಿಸಿದನು. 


ಭಯದಿಂದಲಿದ್ದ ಬಾಲಗೆ ದೊರಕಿತು ಪುಣ್ಯೋ 

ದಯದಿ ಸಾಲಿಗ್ರಾಮ ಶಿಲೆಯು 

ಕೈಯ ದುಡುಕಿಲಿ ತೆಕ್ಕೊಂಡು ಹರುಷದಿ 

ಲಕ್ಷ್ಮೀನಾರಾಯಣ ಮೂರುತಿಯ॥೩೩॥ 


ಭಯಗ್ರಸ್ತನಾದ ಚಂದ್ರಹಾಸನಿಗೆ ಅವನ ಪುಣ್ಯದಿಂದ ಸಾಲಿಗ್ರಾಮ ಶಿಲೆಯು ದೊರಕಿತು. ಅವನು ಲಕ್ಷ್ಮೀನಾರಾಯಣ ಮೂರ್ತಿಯಾದ ಆ ಸಾಲಿಗ್ರಾಮ ಶಿಲೆಯನ್ನು ಕೈಗೆತ್ತಿಕೊಂಡನು. 


ಆಡಿ ಗೆಲ್ಲುವ ನಾಲ್ಕುಯಿಮ್ಮಡಿ ಗಜ್ಜುಗವ 

ಕೂಡಿದ ಗೆಳೆಯರ ಕೂಡೆ 

ನೋಡಿ ಬಚ್ಚಿಡುವರೆ ಮನೆಯಿಲ್ಲದಿರೆ ಬಾಲ 

ದೌಡೆಯೊಳಿಟ್ಟುಕೊಂಡಿಹನು॥೩೪॥ 


ಗೆಳೆಯರೊಡನೆ ಗಜ್ಜುಗದಾಟ ಆಡಿ, ಒಂದಕ್ಕೆ ಎಂಟರಷ್ಟು ಗಜ್ಜುಗಗಳನ್ನು ಗೆಲ್ಲುತ್ತಿದ್ದನು.ಸಾಲಿಗ್ರಾಮ ಶಿಲೆಯನ್ನು ಬಚ್ಚಿಡುವುದಕ್ಕೆ ಮನೆಯಿಲ್ಲದ್ದರಿಂದ ಅದನ್ನು ಸದಾ ದವಡೆಯೊಳಗೆ ಇಟ್ಟುಕೊಂಡಿರುತ್ತಿದ್ದನು. 


ಹಿಂಡು ಗೆಳೆಯರು ಕೂಡಿಕೊಂಡಾಡುವ ಲಗ್ಗೆ 

ಚೆಂಡು ಬುಗುರಿ ಚಿನ್ನಿಗಳನು 

ಗಂಡುಗಲಿಯು ತಾನಾಗಿ ಅವರೆಲ್ಲರ 

ಮಂಡೆಗಳನು ತಗ್ಗಿಸುವನು॥೩೫॥ 


ಗೆಳೆಯರೊಡನೆ ಲಗ್ಗೆಚಂಡು, ಬುಗುರಿ, ಚಿನ್ನಿ ಆಟಗಳನ್ನು ಆಡಿ ಅವರನ್ನೆಲ್ಲ ಸೋಲಿಸಿ ತಲೆತಗ್ಗಿಸುವಂತೆ ಮಾಡುತ್ತಿದ್ದನು. 


ಬೆಚ್ಚುವನಪಹರಿಸುವರೆನುತ ಬಹು 

ಎಚ್ಚೆತ್ತು ಪಿಡಿದಾಡುವನು 

ಬಚ್ಚಿಡುವರೆ ಮನೆಯಿಲ್ಲದಿರಲು ಬಾಲ 

ಅರ್ಚಿಸಿ  ಬಾಯೊಳಗಿಡುವನು॥೩೬॥


ಸಾಲಿಗ್ರಾಮ ಶಿಲೆಯನ್ನು ಬಚ್ಚಿಡಲು ಮನೆಯಿಲ್ಲದ್ದರಿಂದ ಯಾರಾದರೂ ಅಪಹರಿಸಿಬಿಟ್ಟಾರು ಎಂದು ಎಚ್ಚರಿಕೆಯಿಂದ ಅದನ್ನು ಪೂಜಿಸಿ ಬಾಯೊಳಗಿಟ್ಟುಕೊಂಡಿರುತ್ತಿದ್ದನು. 


ಒಂದು ದಿವಸ ಕುಂತಳೇಂದ್ರನ ಮಂತ್ರಿಯು 

ಮಂದಿರದಲಿ ವಿಪ್ರರಿಗೆ ಆ 

ನಂದದಲಿ ಭೋಜನಮಾಡಿಸುವೆನೆಂದ 

ಬಂದರು ಬಂಧುಜನರೆಲ್ಲ॥೩೭॥ 


ಒಂದು ದಿನ ಕುಂತಳೇಂದ್ರನಮಂತ್ರಿ ತನ್ನ ಮನೆಯಲೂಲಿ ಬ್ರಾಹ್ಮಣರಿಗೆಲ್ಲ ಭೋಜನಮಾಡಿಸುವೆನೆಂದು ಸಾರಿಸಿದನು.ಅವರೆಲ್ಲ ಅವನ ಅರಮನೆಯಲ್ಲಿ ಸೇರಿದರು. 


ಮೃಷ್ಟಾನ್ನವನ್ನು ಭೋಜನ ಮಾಡಿಸಿ ಸಂ 

ತುಷ್ಟಿಬಡಿಸಿದ ಬ್ರಾಹ್ಮರನು 

ಪಟ್ಟಸಾಲೆಯೊಳೆಲ್ಲಾ ಹರಡಿ ಗದ್ದುಗೆಯಿಟ್ಟು 

ಶ್ರೇಷ್ಠರೆಲ್ಲರ ಕುಳ್ಳಿರಿಸಿ ॥೩೮॥ 


ಮಂತ್ರಿ ಮೃಷ್ಟಾನ್ನಭೋಜನ ಮಾಡಿಸಿ ಬ್ರಾಹ್ಣರೆಲ್ಲರನ್ನೂ ತೃಪ್ತಿಪಡಿಸಿದನು. ಊಟವಾದ ಬಳಿಕ ಅವರನ್ನೆಲ್ಲ ಪಡಸಾಲೆಯ ಗದ್ದುಗೆಯ ಮೇಲೆ ಕುಳ್ಳಿರೆಸಿದನು.


ದಕ್ಷಿಣೆ ತಾಂಬೂಲವನು ತೆಕ್ಕೊಂಡು ಮಂ 

ತ್ರಾಕ್ಷತೆಯನು ಮಂತ್ರಿಗಿತ್ತು 

ಮಕ್ಕಳೊಡನೆ ಕೂಡಿ ಆಡುವ ತರಳನ 

ಲಕ್ಷಣವನ್ನೆ ನೋಡಿದರು॥೩೯॥ 


ದಕ್ಷಿಣೆ, ತಾಂಬೂಲಗಳನ್ನು ಸ್ವೀಕರಿಸಿದ ಮೇಲೆ ಬ್ರಾಹ್ಮಣರು ಮಂತ್ರಿಗೆ ಮಂತ್ರಾಕ್ಷತೆ ಕೊಟ್ಟರು.ಅವರ ದೃಷ್ಟಿ ಅಲ್ಲೇ ಮಕ್ಕಳೊಡನೆ ಆಡುತ್ತಿದ್ದ ಅನಾಥ ಶಿಶುವಿನ ಮೇಲೆ ಬಿದ್ದಿತು. ಆ ಮಗುವಿನ ಲಕ್ಷಣಗಳನ್ನು ನೋಡಿದರು. 


ಇವನಾರ ಮಗನೆಂದು ನೆರೆದಿರ್ದ ಸಭೆಯಲ್ಲಿ 

ದಿವಿಜನರೆಲ್ಲ ಕೇಳಿದರು 

ಮೊರೆದು ಸಂತೈಸುವರಾರಿಲ್ಲೂರೊಳಗೊಬ್ಬ 

ಪರದೇಶಿಯೆಂದು ಹೇಳಿದರು॥೪೦॥ 


ಇವನು ಯಾರ ಮಗ,ಎಂದು ಸಭೆಯಲ್ಲಿದ್ದ ಬ್ರಾಹ್ಮಣರು ಕೇಳಿದರು.ಅದಕ್ಕೆ ಇವನೊಬ್ಬ ಪರದೇಶಿ ಬಾಲಕ. ಇವನನ್ನು ಸಲಹುವವರು ಯಾರೂ ಇಲ್ಲವೆಂದು ತಿಳಿಯಿತು.


ಅತಿಲಕ್ಷಣಸಂಪನ್ನ ಸುಶೀಲನು 

ಮತಿವಂತ ಮಹಗುಣಧೀರ 

ಜತನ ಮಾಡಿರಿ ರಾಜ್ಯಕಿವನೆ ಅಧಿಶ

ಪತಿಯೆಂದು ಹೇಳಿದರವರು॥೪೧॥ 


ಈ ಹುಡುಗ ಬಹು ಲಕ್ಷಣವಂತ, ಗುಣಶಾಲಿ, ಬುದ್ಧಿವಂತ, ಪರಾಕ್ರಮಿ, ರಾಜ್ಯಕ್ಕೆ ಇವನೇ ಅಧಿಪತಿಯಾಗುವನು. ಆದ್ದರಿಂದ ಇವನನ್ನು ಚೆನ್ನಾಗಿ ರಕ್ಷಿಸಿ ಎಂದು ಅವರು ಹೇಳಿದರು.


ಆ ಮಹಸಭೆಯೊಳುತ್ತಮವೆಂದು ಮಂತ್ರಿಯು 

ನೇಮಿಸಿದನು ತನ್ನ ಮನದಿ 

ಬ್ರಾಹ್ಮರಾಡಿದ ಮಾತು ಹುಸಿಹೋಗದೆನುತಲಿ

ಗೋಮುಖವ್ಯಾಘ್ರದಂತಿರ್ದ॥೪೨॥ 


ಬ್ರಾಹ್ಮಣರಾಡಿದ ಮಾತನ್ನು ಮೆಚ್ಚಿದ ಮಂತ್ರಿ ಒಳ್ಳೆಯದು ಎಂದನು. ಅವರಾಡಿದ ಮಾತು ಸುಳ್ಳಾಗುವುದಿಲ್ಲವೆಂಬುದನ್ನು ತಿಳಿದನು.ಅವನ ವರ್ತನೆ ಗೋಮುಖವ್ಯಾಘ್ರದಂತೆ ಒಳಗೊಂದು ಹೊರಗೊಂದು ಆಗಿತ್ತು. 


ನಾನಲ್ಲದೀ ರಾಜ್ಯಕಧಿಪತಿಯಿಲ್ಲೆಂದು 

ಆನಂದಭರಿತನಾಗಿರ್ದೆ 

ತಾನೊಂದು ಕಾರ್ಯವಾಗಿದೆಯೆಂದು ಮಂತ್ರಿಯು 

ಧ್ಯಾನಿಸಿದನು ತನ್ನ ಮನದಿ॥೪೩॥ 


ಈ ರಾಜ್ಯಕ್ಕೆ ನಾನಲ್ಲದೆ ಬೇರೆ ಯಾರೂ ಒಡೆಯರಿಲ್ಲವೆಂದು ಸಂತೋಷದಿಂದಿದ್ದೆ.ಆದರೆ ಪರಿಸ್ಥಿತಿ ಈಗ ಬೇರಿಯಾಗಿದೆ ಎಂದು ಮನಸ್ಸಿನಲ್ಲಿಯೇ ಆಲೋಚಿಸಿದನು. 


ನೆರೆದಿರ್ದ ಸಭೆಯೆಲ್ಲ ಹರೆದೈಹೋದುದ ಕಂಡು 

ಕರುಣವಿಲ್ಲದೆ ದುಷ್ಟಬುದ್ಧಿ 

ಕರೆಸಿದ ಪಶುಘಾತಕರ ಕಯ್ಯೊಳಗೆ ಆ 

ತರಳನ ಕೊಟ್ಟನಾಕ್ಷಣದಿ॥೪೪॥ 


ಆ ಸಭೆಯೆಲ್ಲ ಚದುರಿದ ಮೇಲೆ ನಿಷ್ಕರುಣಿಯಾದ ಮಂತ್ರಿ ದುಷ್ಟಬುದ್ಧಿಯು ಕಟುಕರನ್ನು ಕರೆಸಿ ಬಾಲಕ ಚಂದ್ರಹಾಸನನ್ನು ಅವರ ಕೈಗೆ ಕೊಟ್ಟನು. 


ಯಾರು ಅರಿಯದಂತೆ ಇವನ ಒಯ್ದು ಘೋ 

ರಾರಣ್ಯದಲಿ ಶಿರವರಿದು 

ತೋರಿಸಿ ತನಗೆ ಗುರುತ ತಂದು ಮುಂದಕ್ಕೆ 

ಕಾರಣವುಂಟೆಂದು ನುಡಿದ॥೪೫॥ 


ಯಾರಿಗೂ ತಿಳಿಯದಂತೆ ಇವನನ್ನು ಘೋರಾರಣ್ಯಕ್ಕೆ ಕರೆದುಕೊಂಡು ಹೋಗಿ ತಲೆ ಕತ್ತರಿಸಿ, ಗುರುತನ್ನು ತನಗೆ ತೋರಿಸಿ, ಇದರಿಂದ ಮುಂದೆ ಕಾರ್ಯ ಸಾಧನೆಯಾಗಬೇಕು ಎಂದು ಅವರಿಗೆ ಹೇಳಿದನು.


ಒಡನೆ ಆಡುವ ಮಕ್ಕಳನಗಲಿಸಿ ತರಳನ 

ಹಿಡಿದು ಹೆಗಲಮೇಲೆ ಇಟ್ಟು 

ಝಡಿದು ಝಂಕಿಸಿ ಅಂತ್ಯಜರೆಳೆದೊಯ್ವಾಗ 

ನಡುಗುತಿರ್ದನು ಬಾಲಕನು॥೪೬॥ 


ಅದನ್ನು ಕೇಳಿದ ಕೂಡಲೇ ಮಕ್ಕಳೊಡನೆ ಆಡುತ್ತಿದ್ದ ಆ ಬಾಲಕನನ್ನು ಅವರಿಂದ ಬೇರ್ಪಡಿಸಿ, ಹೆಗವಮೇಲೆ ಕೂಡಿಸಿಕೊಂಡು ಆ ಕಟುಕರು ಒಯ್ದರು.ಆಗ ಆ ಬಾಲಕ ನಡುಗುತ್ತಿದ್ದನು. 


ಪಾತಕರೊಳಗಿರ್ದ ಪರಮಾತ್ಮನಂತೆಮ 

ದೂತರೆಳೆಯೆ ಅಜಾಮಿಳನ

ಕಾತರಿಸಿ ಕಂಗೆಟ್ಟು ಮರುಗುತಿರ್ದನು ಭಯ 

ಭೀತನಾಗಿರ್ದ ಬಾಲಕನು॥೪೭॥ 


ಯಮದೂತರು ಅಜಾಮಿಳನನ್ನು ಪಾತಕರೊಳಗಿದ್ದ ಪರಮಾತ್ಮನಂತೆ ಹೇಗೆ ಎಳೆದೊಯ್ದರೋ ಹಾಗೆ ಚಂದ್ರಹಾಸನನ್ನು ಎಳೆದೊಯ್ದರು .ಅದರಿಂದ ಅವನು ಭಯಭೀತಿಗಳಿಂದ ಗೋಳಾಡುತ್ತಿದ್ದನು.


ಕಾಳರಕ್ಕಸರು ಪ್ರಹ್ಲಾದನ ಪಿಡಿದಂತೆ 

ಗೋಳುವಳಿದ ಹೆಂಗಳಂತೆ 

ಗಾಳಿಗೊಡ್ಡಿದಸೊಡರಂತೆ ತಲ್ಲಣಿಸುತ 

ಗೋಳಿಟ್ಟು ಹರಿಗೆ ದೂರಿದನು ॥೪೮॥ 


ದುಷ್ಟರಾಕ್ಷಸರು ಪ್ರಹ್ಲಾದನನ್ನು ಹಿಡಿದಂತೆ ಚಂದ್ರಹಾಸನನ್ನು ಆ ರಾಕ್ಷಸರು ಹಿಡಿದರು. ಗೋಳಿಗೆ ಸಿಕ್ಕಿಕೊಂಡ ಹೆಂಗಸರಂತೆ, ಗಾಳಿಗೊಡ್ಡಿದ ದೀಪದಂತೆ, ತಲ್ಲಣಿಸುತ್ತ ಚಂದ್ರಹಾಸ ನಾರಾಯಣನಿಗೆ ಮೊರೆಯಿಟ್ಟನು.


ಕಾಗೆಯ ಕೈಯ ಕೋಗಿಲೆಯಂತೆ ನೆಗಳು ನೀ 

ರಾಗೆ ಗಜವ ಪಿಡಿದಂತೆ 

ಲಾಗಿಸಿ ಪಶುವ ವ್ಯಾಘ್ರನು ಪಿಡಿದಂದದಿ 

ಕೂಗುತಿರ್ದನು ಬಾಲಕನು॥೪೯॥ 


ಕಾಗೆಯ ಕೈಯೊಳಗೆ ಸಿಕ್ಕಿಬಿದ್ದ ಕೋಗಿಲೆಯಂತೆ, ಮೊಸಳೆ ಹಿಡಿತಕ್ಕೆ ಸಿಕ್ಕಿಕೊಂಡ ಆನೆಯಂತೆ,ಹಸುವನ್ನು ಹಿಡಿದ ಹುಲಿಯಂತೆ, ಕಟುಕರ ಕೈಗೆ ಸಿಕ್ಕಿದ  ಚಂದ್ರಹಾಸ ಕೂಗಿಕೊಳ್ಳುತ್ತಿದ್ದನು.


ರಾವು ತುಡುಕಿದ ಚಂದ್ರನಂತೆ ಅರಗಿಳಿಯನ್ನು 

ಬಾವುಗ ಪಿಡಿದೆಳೆದಂತೆ 

ತಾವರೆವೊಳಗಣ ಉದಕದಂದದಿ ಬಾಲ

ಜೀವ ತಲ್ಲಣಿಸುತಲಿಹನು॥೫೦॥ 


ಚಂದ್ರನನ್ನು ಹಿಡಿದ ರಾಹುವಿನಂತೆ, ಅರಗಿಳಿಯನ್ನು ಹಾಡಿದ ಬೆಕ್ಕಿನಂತೆ, ಬಾಲಕ ಚಂದ್ರಹಾಸ ತಾವರೆ ಮೇಲಿನ ನೀರಿನ ಬಿಂದುವಿನಂತೆ, ತಲ್ಲಣಿಸುತ್ತಿದ್ದನು, 


ನುಡಿದ ನುಡಿಗೆ ನಾರಾಯಣ ಹರಿ ಎಂಬವನ 

ಪಿಡಿದೊಯ್ದು ವೃಂದದೊಳಿಟ್ಟು 

ಅಡವಿಯೊಳಗೆ ಅಂಜಿ ಅಳುವ ಬಾಲಕನ ಕಂಡು 

ಕಡುಕರ ಮನ ಕರಗಿತು॥೫೧॥ 


ಹೆದರಿಕೆಯಿಂದ ಒಂದೇಸಮನೆ ನಾರಾಯಣ, ಹರಿ ಎನ್ನುತ್ತ ಕಾಡಿನಲ್ಲಿ ಹೆದರಿ ಅಳುತ್ತಿದ್ದ ಬಾಲಕನನ್ನು ನೋಡಿ ಕಟುಕರ ಮನಸ್ಸು ಕರಗಿತು. 


ಈ ತರಳನ ಪ್ರಾಣವನಳಿದರೆ ಬಲು 

ಪಾತಕ ಬಹುದೆಂದೆನುತ 

ಆತನಾಜ್ಞೆಯ ನೋಡಿಕೊಂಬೆವು ಎನುತಲಿ 

ಮಾತಾಡಿದರು ತಮ್ಮೊಳ್ತಾವು॥೫೨॥ 


ಈ ಬಾಲಕನ ಪ್ರಾಣವನ್ನು ತೆಗೆದರೆ ನಮಗೆ ಘೋರವಾದ ಪಾತಕ ಬರುತ್ತದೆ. ಇದರ ಮೇಲೆ ಮಂತ್ರಿಯ ಆಜ್ಞೆ ಏನಾದರೂ ಆಗಲಿ ಅದನ್ನು ನಾವು ನೋಡಿಕೊಳ್ಳೋಣ ಎಂದು ತಮ್ಮಲ್ಲೇ ತಾವು ಮಾತನಾಡಿಕೊಂಡರು.


ಚಾರುವದನ ಚಿತ್ತವನೆಡಗಾಲೊಳ 

ಗಾರುಬೆಟ್ಟಿರ್ದುದ ಕಂಡು ಉ 

ತ್ತಾರವನೆ ಮಾಡಿ ತೆಗೆದುಕೊಂಡು ಹೋಗಿ 

ತೋರಿದರಾ ಮಂತ್ರೇಶ್ವರಗೆ॥೫೩॥ 


ಮನೋಹರವಾದ ಮುಖವನ್ನುಳ್ಳ ಬಾಲಕನ ಎಡಗಾಲಿನಲ್ಲಿ ಆರು ಬೆರಳುಗಳಿರುವುದನ್ನು ನೋಡಿದರು. ಆರನೆಯ ಬೆರಳನ್ನು ಕತ್ತರಿಸಿಕೊಂಡು ಹೋಗಿ ಮಂತ್ರಿಗೆ ತೋರಿಸಿದರು. 


ರಚ್ಚೆಗಿಕ್ಕದೆ ಅವನ ರೂಪನಳಿದರೆಂದು 

ಮೆಚ್ಚುಡುಗೊರೆಯನ್ನು ಕೊಟ್ಟು 

ಮುಚ್ಚಿ ಬಂದರು ಮಾರಿಯನೆಂಬುದರಿಯದೆ 

ನೆಚ್ಚಿಕೊಂಡಿರ್ದ ಪ್ರಧಾನಿ॥೫೪॥ 


ಕಟುಕರು ಯಾವ ಗಲಾಟೆ ಗದ್ದಲವಿಲ್ಲದೆ ಚಂದ್ರಹಾಸನನ್ನು ಕೊಂದುಬಂದಿದ್ದಕ್ಕಾಗಿ ಮಂತ್ರಿ ಅವರಿಗೆ ಉಡುಗೊರೆಯನ್ನು ಕೊಟ್ಟನು.ಮಾರಿಯನ್ನು ಮುಚ್ಚಿಟ್ಟು ಬಂದಿದ್ದಾರೆ ಎಂಬುದನ್ನು ತಿಳಿಯದೆ ಮಂತ್ರಿ ಅವರ ಮಾತನ್ನೇ ನಂಬಿಕೊಂಡಿದ್ದನು. 


ಹಾಲು ಸಕ್ಕರೆ ಕುಡಿದನು ಮಂತ್ರಿಯು ಇತ್ತ

 ಶ್ರೀಲೋಲನ ಕಿಂಕರನು  

ಆಲಿ ಪರ್ವತದ ಅರಣ್ಯದಲ್ಲಿರ್ದನು

ಕಾಲುಗಾಯದ ನೋವಿನಲಿ॥೫೫॥ 


ಬಳಿಕ ಮಂತ್ರಿ ಸಂತೋಷದಿಂದ ಹಾಲುಸಕ್ಕರೆ ಸೇವಿಸಿದನು.ಇತ್ತ ಬಾಲಕ ಕಾಲುಗಾಯದ ನೋವಿನಲ್ಲಿ ನರಳುತ್ತ ಪರ್ವತದ ಕಾಡಿನಲ್ಲಿದ್ದನು. 


ಅಳುವ ಧ್ವನಿಯ ಆಲಿಸುವ ತುಂಬಿಯು ಅರ 

ಗಿಳಿ ನುಡಿಸುತ್ತಲಿಹವು

ಎಳದಳಿರನೆ ತಂದು ಹಾಸುವ ಗರಿಗಳು 

ಸುಳಿಗಾಳಿ ಬೀಸುವ ಖಗನು॥೫೬॥ 


ಚಂದ್ರಹಾಸನ ಅಳುವ ಧ್ವನಿಯನ್ನು ಕೇಳಿ ದುಂಬಿಗಳು ತಾವೂ ಅತ್ತವು. ಅರಗಿಳಿಗಳು ಅವನನ್ನು ಮಾತನಾಡಿಸಿ ಸಮಾಧಾನಪಡಿಸಿದವು. ಆಮೇಲೆ ಹಕ್ಕಿಗಳು ಎಳೆಯ ಚಿಗುರನ್ನು ಹಾಸಿ ರೆಕ್ಕೆಗಳಿಂದ ಗಾಳಿಯನ್ನು ಬೀಸುತ್ತಿದ್ದವು.


ಪಸರಿಸಿ ಗರಿಯ ಮಯೂರ ಪಕ್ಷಿಗಳೆಲ್ಲ 

ಬಿಸಿಲಿಗೆ ಮರೆಯ ಮಾಡುವವು 

ಒಸರುವ ಕಣ್ಣೀರು ಒರಸುವ ಕಪಿಗಳು 

ಬಸವಳಿದಿರ್ದ ಬಾಲಕಗೆ॥೫೭॥ 


ಚಂದ್ರಹಾಸನಿಗೆ ಬಿಸಿಲಿನ ತಾಪ ತಟ್ಟದಂತೆ ನವೆಲುಗಳು ತಮ್ಮ ಗರಿಗಳನ್ನು ಬಿಚ್ಚಿದ್ದವು. ಆಯಾಸದಿಂದ ಅಳುತ್ತಿದ್ದ ಅವನ ಕಣ್ಣೀರನ್ನು ಕಪಿಗಳು ಒರಸುತ್ತಿದ್ದವು. 


ಎಲ್ಲಿಯ ರಭಸವಿದೇನೆಂದು ವನದೇವಿ 

ಮೆಲ್ಲಡಿಯಿಡುತ ತಾ ಬಂದು 

ಗಲ್ಲವ ಪಿಡಿದು ತೊಡೆಯೊಳಿಟ್ಟು ರಂಬಿಸಿ 

ಬಲ್ಲಿದನಾಗೆಂದು ಹರಸಿ॥೫೮॥ 


ಚಂದ್ರಹಾಸನ ಅಳುವಿನ ಧ್ವನಿಯನ್ನು ಕೇಳಿ ವನದೇವಿ ಬಾಲಕನಿದ್ದಲ್ಲಿಗೆ ಬಂದು ಗಲ್ಲ ಹಿಡಿದು ಮುದ್ದಿಸುತ್ತ ತೊಡೆಯಮೇಲೆ ಮಲಗಿಸಿಕೊಂಡು ಸಮಾಧಾನ ಮಾಡಿ ನೀನು ಪರಾಕ್ರಮಶಾಲಿಯಾಗು ಎಂದು ಹರಸಿದಳು. 


ಎದೆಯಾರಿ ಬಾಯ್ತೆರೆವುತಲಿರೆ ತರಳಗೆ 

ಮಧುಬಿಂಬ ಕರೆವುತಲೆಹುದು 

ಬೆದರಬೇಡೆಂದು ಆಕಾಶವಾಣಿ ನುಡಿದಳು

ಮದನನಯ್ಯನ ಕಿಂಕರಗೆ॥೫೯॥ 


ಬಳಲಿಕೆಯಿಂದ ಬಾಯಾರಿ ಅಳುತ್ತಿದ್ದ ವಿಷ್ಣುಭಕ್ತನಾದ ಬಾಲಕನ ಬಾಯೊಳಗೆ ಅಮೃತದ ಬಿಂದುಗಳು ಬೀಳುತ್ತಿದ್ದ ವು. ಆಕಾಶವಾಣಿ ಹೆದರಬೇಡ ಎಂದು ನುಡಿಯಿತು.


ಪರಿಪರಿ ಪಕ್ಷಿ ಮೃಗಾದಿಗಳೆಲ್ಲವು

ನೆರೆದುಪಚಾರ ಮಾಡುವವು

ಧರೆಗಿಳಿದನು ಚಂದ್ರಯೆನುತಾ ಘಾಯವ ಹುಲ್ಲೆ

ಮರಿಗಳು ಜಿಹ್ವೆಯಿಂದೊರಸಿ॥೬೦॥ 


ಕಾಡಿನಲ್ಲಿ ಬಗೆಬಗೆಯ ಪಕ್ಷಿ ಮೃಗಾದಿಗಳೆಲ್ಲವು ಬಾಲಕನಿಗೆ ಉಪಚಾರಮಾಡುತ್ತಿದ್ದವು. ಚಂದ್ರನೇ ಧರೆಗಿಳಿದನೆಂದು ಜಿಂಕೆಯ ಮರಿಗಳು ಆತನ ಗಾಯವನ್ನು ನಾಲಗೆಯಿಂದ ಒರಸಿದವು. 


ಯಾರಾದರೂ ತನ್ನ ನಂಬಿದವರ ಭಾರ 

ಭಾರದೊಡೆಯ ಶ್ರೀಹರಿಯು 

ಊರಿಗಿಂತ ಕಾಡು ಲೇಸಾಯಿತು ಎಂದು ಮು 

ರಾರಿಯ ನೆನೆವ ಕಿಂಕರಗೆ ॥೬೧॥ 


ಹರಿಯನ್ನು ನಂಬಿದವರ ಭಾರ ಹರಿಯಮೇಲೆ ಎಂಬಂತೆ ಮುರಾರಿಯಾದ ಹರಿಯನ್ನು ನೆನೆಯುತ್ತಿದ್ದ ಭಕ್ತ ಬಾಲಕನಿಗೆ ಊರಿಗಿಂತ ಕಾಡೇ ಲೇಸಾಯಿತು. 


ವ್ಯಾಘ್ರ ಕೇಸರಿ ದುಷ್ಟಮೃಗದ ಬಾಧೆಯು ಬಹು 

ವೆಗ್ಗಳವೆಂದು ಹೇಳಿದರು 

ನಿಗ್ರಹ ಮಾಡಬೇಕೆನುತ ಪುಳಿಂದನು 

ಶೀಘ್ರದಿಂದಲಿ ತೆರಳಿದನು॥೬೨॥ 


ಕಾಡಿನಲ್ಲಿ ಹುಲಿ, ಸಿಂಹ ಮೊದಲಾದ ದೈಷ್ಟಮೃಗಗಳ ಬಾಧೆ ಹೆಚ್ಚಾದುದನ್ನು ಕೇಳಿದ ಪುಳಿಂದ ( ಬೇಡ) ಅವನ್ನು ನಿಗ್ರಹಿಸಬೇಕೆಂದು ಕಾಡಿಗೆ ಬೇಗ ಬಂದನು. 


ಚಿತ್ತದಿ ನೆನೆದು ಪುಳಿಂದನು ಹೊರಟನು 

ಹತ್ತು ಸಾವಿರ ಬಲಗೂಡಿ 

ಮತ್ತೊಂದು ಅದ್ಭುತವಾಯಿತು ವೃಂದಕ್ಕೆ 

ಮುತ್ತಿಗೆಯನೆ ಹಾಕಿದರು॥೬೩॥ 


ಆಲೋಚನೆ ಮಾಡಿದ ಪುಳಿಂದನು ಹತ್ತುಸಾವಿರ ಬಲದೊಡನೆ ಕಾಡಿಗೆ ಬಂದು ಮುತ್ತಿಗೆ ಹಾಕಿದನು. ಅದೇ ಒಂದು ಆಶ್ಚರ್ಯ. ತೊಪ್ಪಲುಡಿಗೆವುಟ್ಟು ತೆಳ್ವಸುರಿನ ಆದ 

ರೊಪ್ಪಾಗಿ ಕೂರ್ಗಣೆವಿಡಿದು 

ಕಪ್ಪು ಮೈಯವರೆಲ್ಲ ಕವಿದು ಮೃಗಂಗಳ 

ತಪ್ಪದೆ ಬೀಳಲೆಸೆದರು॥೬೪॥ 


ಮರದ ಎಲೆಗಳಿಂದ ಮಾಡಿದ ಬಟ್ಟೆಯನ್ನು ಉಟ್ಟುಕೊಂಡು ಹರಿತವಾದ ಬಾಣಗಳನ್ನು ಕೈಯಲ್ಲಿ ಹಿಡಿದುಕೊಂಡು ಕಪ್ಪಾಗಿ ಕನಿಯುತ್ತಿದ್ದ ಆ ಬೇಡರು ಮೃಗಗಳನ್ನು ಬೇಟೆಯಾಡುತ್ತಿದ್ದರು. 


ಹಿಡಿ ಬಿಲ್ಲು ನಡೆ ಮುಂದೆ ಮಕ್ಕಳು ಮಂದಿಯು 

ಬಿಡು ನಾಯ ದಿಕ್ಕುದಿಕ್ಕಿನಲಿ 

ತಡೆ ಬಂದ ಮೃಗವನ್ನು ಪೊಡೆ ತಟ್ಟಲೆಸೆವಂತೆ 

ಬಿಡದಿರು ಎದೆಯ ಧೈರ್ಯವನು॥೬೫॥ 


ಬಿಲ್ಲನ್ನು ಹಿಡಿ, ಮುಂದೆ ಹೋಗು,ನಾಯಿಗಳನ್ನು ದಿಕ್ಕುದಿಕ್ಕಿಗೂ ಬಿಡು,ಎದುರಾದ ಮೃಗವನ್ನು ಹಿಡಿದು ಬಡಿ, ಧೈರ್ಯವನ್ನು ಬಿಡಬೇಡ ಎಂದು ಬೇಡ ಹೇಳುತ್ತಿದ್ದನು. 


ಗಬ್ಬಿನಾಯ್ಗಳ ಸನ್ನೆಮಾಡಿ ಬಿಟ್ಟರು 

ಅಬ್ಬರದಲಿ ಹೋಗಿ ತುಡುಕಿ 

ತಬ್ಬಿಬ್ಬುಗೊಳಿಸುತತವಕದಿ ಪಿಡಿದರು 

ಹೆಬ್ಬುಲಿ ಕರಡಿ ಹಂದಿಗಳ॥೬೬॥ 


ಬೇಟೆ ನಾಯಿಗಳನ್ನು ಸನ್ನೆ ಮಾಡಿ ಬಿಟ್ಟರು. ಬೇಡರು ದೊಡ್ಡದಾಗಿ ಗದ್ದಲಮಾಡಿಕೊಂಡು ಹೋಗಿ ಹುಲಿ, ಕರಡಿ, ಹಂದಿಗಳನ್ನು ತಬ್ಬಿಬ್ಬುಗೊಳಿಸಿ ಹಿಡಿದರು. 


ಬಿಟ್ಟ ಬಾಯ್ಗಳು ನಿಡಿದು ನಾಲಗೆಯು ತೆ 

ಳ್ವಟ್ಟಸುವಿನ ಬಾವುಲಿಯು 

ಅಟ್ಟಿ ಹಿಡಿದು ಪರಿಪರಿ ಮೃಗವನು ತಂ 

ದೊಟ್ಟಿದರಾಳ್ದನ ಮುಂದೆ॥೬೭॥ 


ಬಾಯನ್ನು ಬಿಟ್ಟುಕೊಂಡು, ನಾಲಗೆಯನ್ನು ಚಾಚಿದ ಬಾವುಲಿಯೇ ಮೊದಲಾದ ಬೇಟೆಯಾಡಿದ ಪ್ರಾಣಿಗಳನ್ನು ತಂದು ತಮ್ಮ ನಾಯಕನ ಮುಂದೆ ಹಾಕಿದರು.


ಇದು ಸಿಂಹಗೆರಗಿದ ಪರಿಯ ಮಸ್ತಕದ ಮುತ್ತು 

ಉದುರಿದ ಠಾವು ನೋಡಿದಕೊ 

ಇದು ಸಾರಂಗ ಮರಿಯ ಹಾಕಿದ ಠಾವು 

ಇದು ಪಂದಿ ಕೆದರಿದ ನೆಲನು॥೬೮॥ 


ಇದು ಸಿಂಹ ಆನೆಯ ಕುಂಭಸ್ಥಳವನ್ನು ಸೀಳಿದಾಗ ಮುತ್ತುಗಳು ಉದುರಿದ ಸ್ಥಳ, ಇದು ಸಾರಂಗ ಮರಿಹಾಕಿದ ಸ್ಥಳ,ಇದು ಹಂದಿ ನೆಲವನ್ನು ಕೆದರಿದ ಸ್ಥಳ ಎಂದು ತೋರಿಸಿದನು. 


ಸೊಕ್ಕು ಜವ್ವನದ ಪುಳಿಂದಿಯರೆಲ್ಲರು 

ಅಕ್ಕರದಿಂದೊಲ್ಲಭಗೆ 

ಪೊಕ್ಕು ಕಾನನದೊಳು ಚರಿಸುತ ಪುನಗಿನ 

ಬೆಕ್ಕ ಹಿಡಿದರೊಲವಿನಲಿ॥೬೯॥ 


ತುಂಬು ಹರೆಯದ ಬೇಡತಿಯರು ತಮ್ಮ ಗಂಡಂದಿರೊಡನೆ ಪ್ರೀತಿಯಿಂದ ಅರಣ್ಯವನ್ನು ಹೊಕ್ಕು ಅಲ್ಲಲ್ಲಿ ಸುತ್ತಾಡುತ್ತಾ ಪುನುಗಿನ ಬೆಕ್ಕನ್ನು ಹಿಡಿದುಕೊಂಡರು. 


ಕಂಗಳ ಢಾಳ ಉಂಗುರ ನಡುವಿನ 

ಅಂಗನೆ ಬರುತಿರೆ ಕಂಡು 

ಸಿಂಗವಿದೆಂದು ನೋಡುತ ಮೈಮರೆದಿರ್ದ 

 ಸಿಂಗವ ಬೀಳಲೆಸೆದರು॥೭೦॥ 


ಕಣ್ಣಿನ ಕಾಂತಿಯಿಂದ ಕೂಡಿದ, ಉಂಗುರದಷ್ಟು ಸಣ್ಣನಡುವಿನ, ಬೇಡತಿ ಬರುತಿರಲು ಸಿಂಹವೆಂದು ನೋಡುತ್ತ ಮೈಮರೆತಿದ್ದ ಮತ್ತೊಂದು ಸಿಂಹದ ಮೇಲೆ ಬಾಣಪ್ರಯೋಗ ಮಾಡಿದರು.


ಹರಿತಂದು ಹರಿ ಬೆಂಬತ್ತಿ ಪುಳಿಂದನು 

ಹರವರಿಯಿಂದ ಬರುತಿರಲು

 ಹರಿಯ ಧ್ಯಾನದಲ್ಲಿ ಇರುವ ಬಾಲನ ಕಂಡು 

ಹರುಷದಿ ಹರಿಯ ನಿಲ್ಲಿಸಿದ॥೭೧॥ 


ಪುಳಿಂದನು ಸಿಂಹವನ್ನು ಬೆನ್ನಟ್ಟಿ ಬರುತ್ತಿರಲು ನಾರಾಯಣನನ್ನು ಧ್ಯಾನಿಸುತ್ತಿದ್ದ ಬಾಲಕನನ್ನು ನೋಡಿ ಕುದುರೆಯನ್ನು ನಿಲ್ಲಿಸಿದನು. 


ಏನಿದು ನೋಡಿದಾಶ್ಚರ್ಯವಾಗಿದೆ ಈ 

ಕಾನನದೊಳಗೊಂದು ಶಿಶುವು 

ದಾನವಾಂತಕನ ಧ್ಯಾನದೊಳಿರ್ದ ಕಾರಣ 

ಹಾನಿಯಿಲ್ಲದೆ ಉಳಿದಿಹುದು॥೭೨॥ 


ಈ ಕಾಡಿನಲ್ಲಿರುವ ಈ ಮಗುವು ನಾರಾಯಣ ಧ್ಯಾನದಲ್ಲಿರುವ ಕಾರಣ ಅಪಾಯಕ್ಕೆ ಒಳಗಾಗದೆ ಉಳಿದಿರುವುದು. ಇದೇನಾಶ್ಚರ್ಯ ಎಂದು ಕೊಂಡನು. 


ಪಾಪಕೆಳಸಿ ಬಂದು ಪೂರ್ವದಲಿ ಪುಣ್ಯ 

ರೂಪವ ಕಂಡಂತೆ ಮನದಿ 

ಚಾಪವನಿಳುಹಿದ ರಾಯನು ಬೇಗದಿ 

ಶ್ರೀಪತಿಗೆ ಶರಣೆಂದೆನುತೆ॥೭೩॥ 


ಪಾಪವನ್ನು ಬಯಸಿ ಬಂದವನಿಗೆ ಪುಣ್ಯರೂಪವು ಕಂಡಂತೆ ಆಗಲು, ಹರಿಗೆ ಶರಣೆಂದು ಮನದಲ್ಲಿ ನಮಿಸಿ, ಬಿಲ್ಲನ್ನು ಕೆಳಗಿಳಿಸಿದನು. 


ಇಳಿದು ಸಗ್ಗಳೆ ಉದಕದಲಿ ಗಾಯವ 

ತೊಳೆದು ಮುಂಜೆರಗಿಂದಲೊರಸಿ

ತರಳನ ಎತ್ತಿ ತೊಡೆಯಲಿಟ್ಟು ರಂಬಿಸಿ 

ಬಳಲಿದೆ ಬಾರಯ್ಯ ಎನುತ॥೭೪॥ 


ಕುದುರೆಯನ್ನು ಇಳಿದು ನೀರಿನಿಂದ ಗಾಯವನ್ನು ತೊಳೆದು ಸೆರಗಿನಿಂದ ಒರೆಸಿ, ಬಾಲಕನನ್ನು ತೊಡೆಯಮೇಲಿಟ್ಟುಕೊಂಡು ಸಂತೈಸಿದನು. 


ಬಡವಗೆ ಭಾಗ್ಯದ ಲಕ್ಷ್ಮಿ ದೊರೆತಂದದಿ 

ಎಡಹಿ ನಿಧಾನ ಕಂಡಂತೆ 

ಪಡೆದೆ ಆಯಾಸವಿಲ್ಲದೆ ಬಾಲಕನನೆಂದು 

ಕಡುಹರುಷವನು ತಾಳಿದನು॥೭೫॥ 


ಬಡವನಿಗೆ ಭಾಗ್ಯದ ನಿಧಿ ದೊರೆತಂತೆ, ಎಡಹಿ ಐಶ್ವರ್ಯವನ್ನು ಕಂಡಂತೆ, ನಿರಾಯಾಸವಾಗಿ ಬಾಲಕ ದೊರಕಿದ್ದಕ್ಕೆ ಸಂತೋಷ ಹೊಂದಿದನು. 


ದೇವರ ದೇವನ ಕೃಪೆಯಿದು ಎನುತಲಿ 

ಭಾವಿಸಿದನು ತನ್ನ ಮನದಿ 

ಜೀವಂತನಾಗಿರ್ದ ಮೃಗವನೆಲ್ಲವ ಬಿಟ್ಟು ನಿ 

ರ್ಜೀವಿಗಳವರವರ್ಗಿತ್ತು ॥೭೬॥ 


ಇದು ದೇವರ ಕೃಪೆಯೆಂದು ಮನಸ್ಸಿನಲ್ಲಿ ಭಾವಿಸಿದನು. ಜೀವಂತವಾಗಿದ್ದ ಮೃಗಗಳನ್ನು ಬಿಟ್ಟುಬಿಟ್ಟನು. ಸತ್ತುಹೋಗಿದ್ದವನ್ನು ಬೇಡರಿಗೇ ಕೊಟ್ಟುಬಿಟ್ಟನು. 


ಸರಸಿಜನಾಭನ ಕೃಪೆಯಿದು ಎನುತಲಿ 

ಕರೆಸಿದ ಕಾಲಾಳುಗಳನು

 ಅರಸಿ ಮೇಧಾವತಿಗರುಹಿ ಸುದ್ಧಿಯನೆಂದು

ಪುರಕಾಗಿ ಚರರನಟ್ಟಿದನು॥೭೭॥ 


ಇದು ಹರಿಯ ಕೃಪೆ ಎಂದುಕೊಳ್ಳುತ್ತ ಕಾಲಾಳುಗಳನ್ನು ಕರೆಸಿದನು. ಈ ಸುದ್ಧಿಯನ್ನು ತನ್ನ ಪತ್ನಿ ಮೇಧಾವತಿಗೆ ಹೇಳುವಂತೆ ಪಟ್ಟಣಕ್ಕೆ ದೂತರನ್ನು ಕಳಿಸಿದನು. 


ಪುರಕಾಗಿ ಚರರು ಬಂದರು ಈ ವಾರ್ತೆಯ 

ನರುಹಿದರಾ ಮೇಧಾವತಿಗೆ 

ಕರುಣಿ ಕೃಷ್ಣ ನಿಮಗೆ ಕುಮಾರನನಿತ್ತನು 

ಸಿರಿವಂತೆ ಕೇಳು ಬಿನ್ನಪವ॥೭೮॥ 


ಊರಿಗೆ ಬಂದು ದೂತರು ಮೇಧಾವತಿಗೆ ನಾರಾಯಣನೇ ನಿಮಗೆ ಪುತ್ರನನ್ನು ದಯಪಾಲಿಸಿದ್ದಾನೆ, ಈಗ ನೀನು ಶ್ರೀಮಂತಳು ಎಂದು ಬಿನ್ನವಿಸಿದರು.


 ಮೃಗದ ಬೇಂಟೆಯ ಪೋಗಿ ಮಗನ ಪಡೆದರೆಂಬೋ

ದಗಣಿತ ಆಶ್ಚರ್ಯ ಜಗದಿ 

ನಗೆಯ ಮಾತಲ್ಲ ನಾರಾಯಣ ಹರಿ ನಿಮ್ಮ 

ಬಗೆಯರಿದಿತ್ತ ಬಾಲಕನ॥೭೯॥ 


ಮೃಗದ ಬೇಟೆಗೆ ಹೋಗಿ ಮಗನನ್ನು ಪಡೆದರೆಂಬುದು ಜಗತ್ತಿನಲ್ಲಿ ಆಶ್ಚರ್ಯಕರವಾದುದು.ನಿಮ್ಮ ಮನಸ್ಸನ್ನು ತಿಳಿದ ನಾರಾಯಣನೇ ನಿಮಗೆ ಬಾಲಕನನ್ನು ಕರುಣಿಸಿದ್ದಾನೆಂದು ತಿಳಿಸಿದರು. 


ಲೇಸಾಯಿತು ಎನ್ನ ದೋಷ ಹಿಂಗಿತು ಎಂದು 

ಏಸು ಜನ್ಮದ ಪುಣ್ಯಫಲವೊ 

ಪೂಸಾರನಯ್ಯನ ಕೃಪೆಯಿಂದೆ ಮಗನಾದ

ವಾಸಿಯಾಯಿತು ಬಾಳ್ವೆಯೆಂದು॥೮೦॥ 


ಅದನ್ನು ಕೇಳಿ ಮೇಧಾವತಿ ನನ್ನ ಪಾಪಕಳೆದು ಪುಣ್ಯ ಲಭ್ಯವಾಯಿತು, ಹರಿಕೃಪೆಯಿಂದ ಮಗನಾದನು, ಬಾಳು ಲೇಸಾಯಿತು ಎಂದುಕೊಂಡಳು. 


ಕೇರಿ ಕೇರಿಯೊಳೆಲ್ಲ ಸಾರಿ ಡಂಗುರವ ಹೊಯ್ಸಿ 

ಬೀರಿಸಿದಳು ಸಕ್ಕರೆಯ 

ತೋರಣವ ಕಟ್ಟಿ ತವಕದಿಂದಲಿ ಪ್ರಜೆ 

ಪರಿವಾರನೆಲ್ಲ ಕರೆಸಿದಳು॥೮೧॥ 


ಬೀದಿ ಬೀದಿಗಳಲ್ಲೆಲ್ಲ ಡಂಗುರವನ್ನು ಹೊಡೆಸಿ ಸಕ್ಕರೆಯನ್ನು ಹಂಚಿಸಿದಳು. ತೋರಣವನ್ನು ಕಟ್ಟಿಸಿ ಪ್ರಜೆಗಳನ್ನೂ ಪರಿವಾರದವರನ್ನೂ ಕರೆಸಿದಳು. 


ಹಿಡಿದು ತುರಂಗವನೇರಿಸಿ ತರಳನ 

ಝಡಿವ ತಂಬಟೆ ಭೇರಿಯಿಂದ 

ಎಡಬಲದಲ್ಲಿ ಬಿಲ್ಲಾಳ್ಗಳನೊಡಗೊಂಡು 

ನಡೆತಂದರಾ ಚಂದಾವತಿಗೆ॥೮೨॥ 


ಇತ್ತ ಪುಳಿಂದನು ಕುದುರೆಯ ಮೇಲೆ ಬಾಲಕನನ್ನು ಕೂಡಿಸಿಕೊಂಡು ತಮಟೆ, ಭೇರಿ ವಾದ್ಯಗಳೊಂದಿಗೆ ಬಿಲ್ಲುಗಾರರನ್ನು ಕೂಡಿಕೊಂಡು ಚಂದಾವತಿ ಪಟ್ಟಣಕ್ಕೆ ಬಂದನು. 


ಥಳಥಳಿಸುವ ಹೊನ್ನ ಥಳಿಗೆ ಆರತಿಗಳ 

ಕಳಸಕನ್ನಡಿಗಳ ಪಿಡಿದು 

ನಳಿನಮುಖಿಯರೊಡಗೊಂಡು ಹರುಷದಿ 

ಎಳೆಯ ಬಾಲಕನಿದಿರ್ಗೊಂಡು॥೮೩॥ 


ಪಟ್ಟಣಕ್ಕೆ ಬರುತ್ತಲೇ ಸುಮಂಗಲೆಯರು ಕಳಶ ಕನ್ನಡಿಗಳನ್ನು ಹಿಡಿದು ಬಾಲಕನನ್ನು ಇದಿರುಗೊಂಡರು. ಚಿನ್ನದ ತಟ್ಟೆಯಲ್ಲಿ ಆರತಿಯನ್ನು ಎತ್ತಿದರು. 


ಬಾಳ ಪರಿಯಲಿ ಕದಳಿ ಆರತಿಯೆತ್ತಿ ನಿ 

ವಾಳಿಗಳನೆ ಹಾಕುವರು 

ಬಾಲನ ಎತ್ತಿ ತಕ್ಕೈಸಿ ಸಂತೋಷದಿ 

ಆಲಯವನೆ ಪೊಕ್ಕರಾಗ॥೮೪॥ 


ನಾನಾ ರೀತಿಯ ಆರತಿಗಳನ್ನು ಎತ್ತಿದರು.ದೃಷ್ಟಿ ತೆಗೆದು ಬಾಲಕನನ್ನು ಎತ್ತಿಕೊಂಡು ಸಂತೋಷದಿಂದ ಅರಮನೆಯನ್ನು ಹೊಕ್ಕರು. 


ತರಿಸಿದ ಹೊನ್ನ ತಟ್ಟೆಯಲಿ ತಾಂಬೂಲವ 

ಇರಿಸಿ ಎಲ್ಲರಿಗಿತ್ತು ಕಳುಹಿ 

ಸುರತರು ಕೈವಶವಾದಂತೆ ತರಳನ 

ಬೆರಸಿ ಸಂತೋಷದಲಿಹರು॥೮೫॥ 


ಬಂದವರೆಲ್ಲರಿಗೂ ಚಿನ್ನದ ತಟ್ಟೆಯಲ್ಲಿ ತಾಂಬೂಲವನಿತ್ತು ಉಪಚಾರಮಾಡಿ ಕಳಿಸಿಕೊಟ್ಟರು. ತನಗೆ ಕಲ್ಪವೃಕ್ಷವೇ ಸಿಕ್ಕಿದಂತಾಗಲು ಆ ಬಾಲಕನೊಂದಿಗೆ ಸಂತೋಷದಿಂದ ನಲಿಯುತ್ತಿದ್ದರು. 


ಕೋಮಲಾಂಗವು ಕಳಕಳಿಸುವ ನಗೆ ಮುದ್ದು 

ಸೋಮವದನ ಸಣ್ಣವಗೆ

ನಾಮಕರಣ ಮಾಡಬೇಕೆಂದು ಧ್ಯಾನಿಸಿ 

ಬ್ರಾಹ್ಮರೆಲ್ಲರ ಕರೆಸಿದನು॥೮೬॥ 


ಕೋಮಲಾಂಗನೂ ಸುಂದರಾಂಗನೂ ಆದ ಈ ಬಾಲಕನಿಗೆ ನಾಮಕರಣವ ಮಾಡಬೇಕೆಂದು ಆಲೋಚಿಸಿ ಪುಳಿಂದ, ಬ್ರಾಹ್ಮಣರನ್ನೆಲ್ಲ ಕರೆಸಿದನು.


ಕಂದರ್ಪ ಕೋಟಿ ಲಾವಣ್ಯದ ತರಳಗೆ 

ಚಂದದಾಭರಣವನಿಟ್ಟು 

ಚಂದ್ರಹಾಸನೆಂಬೊ ಪೆಸರಿಟ್ಟು ಕರೆದು ಮು 

ಕುಂದನ ಕರುಣದ ಸುತಗೆ॥೮೭॥ 


ನಾರಾಯಣನ ಕರುಣದ ಶಿಶುವಾದ ಚಂದ್ರಹಾಸ ಮನ್ಮಥನಿಗಿಂತಲೂ ಮಿಗಿಲಾದ ಲಾವಣ್ಯದಿಂದ ಕೂಡಿದ್ದನು. ಮುಕುಂದನ ಕರುಣದ ಶಿಶುವಾದ ಅವನಿಗೆ ಚಿನ್ನದ ಆಭರಣಗಳನ್ನು ತೊಡಿಸಿ ಚಂದ್ರಹಾಸನೆಂದು ಹೆಸರಿಟ್ಟರು. 


ಆಡಿಸುವಳು ಮೇಧಾವತಿ ಅಣುಗನ ಬಾಲ 

ಕ್ರೀಡೆಯ ನೋಡಿ ಹರುಷದಿ 

ರೂಢಿಯೊಳಗೆ ತನ್ನ ಸುತನ ಲಾವಣ್ಯಕ್ಕೆ 

ಜೋಡಿಲ್ಲವೆಂದು ಹಿಗ್ಗುವಳು॥೮೮॥ 


ಮೇಧಾವತಿ ಬಾಲಕನನ್ನು ಆಡಿಸುತ್ತ ಅವನ ಬಾಲಲೀಲೆಯನ್ನು ನೋಡಿ ಹಿಗ್ಗುತ್ತಿದ್ದಳು. ತನ್ನ ಮಗನ ಲೃವಣ್ಯಕ್ಕೆ ಸಮನಾದವರು ಈ ಭೂಮಿಯಲ್ಲಿ ಯಾರೂ ಇಲ್ಲವೆಂದು ಹಿಗ್ಗುತ್ತಿದ್ದಳು. 


ಕತ್ತಲ ಮನೆಗೆ ದೀವಿಗೆಯನಿತ್ತಂತೆ ದೇ 

ವೋತ್ತಮ ಕವಿಗಳಿಗೆ 

ಚಿತ್ತಕ್ಕೆ ಚದುರನುಡಿಗಳು ದೊರಕಿದ ಹಾಗೆ 

ಬತ್ತಿದ ಕೆರೆ ತುಂಬಿದಂತೆ॥ 


ಕತ್ತಲೆಯ ಮನೆಗೆ ಬೆಳಕು ಬಂದಂತೆ, ಶ್ರೇಷ್ಠರಾದ ಕವಿಗಳಿಗೆ ಚದುರು ನುಡಿಗಳು ದೊರಕಿದಂತೆ, ಬತ್ತಿದ ಕೆರೆ ನೀರಿನಿಂದ ತುಂಬಿದಂತೆ ಮೇಧಾವತಿ ಸಂತೋಷಪಡುತ್ತಿದ್ದಳು. 


ಚಂದನವತಿಯ ಪಟ್ಟಣದ ಪುಳಿಂದನು 

ಮಂದಿರದಲಿ ಸ್ಥಿರತರದಿ 

ಇಂದಿರಾಪತಿ ಹೆಳವನಕಟ್ಟೆ ರಂಗ ಗೋ 

ವಿಂದನ ಭಜಕನೊಪ್ಪಿದನು॥೯೦॥ 


ಚಂದನವತಿ ಪಟ್ಟಣದ ಪುಳಿಂದನು ತನ್ನ ಮಂದಿರದಲ್ಲಿ ನಾರಾಮಣನೆ, ಹೆಳವನಕಟ್ಟೆ ರಂಗಯ್ಯನೆ ಎಂದು ಧ್ಯಾನಿಸುತ್ತ ಸುಖವಾಗಿದ್ದನು. 


ನೆನಕೆಗಳು:

ಕರ್ತೃ : ಹೆಳವನಕಟ್ಟೆ ಗಿರಿಯಮ್ಮ,  

ಸಂಪಾದಕ ಮತ್ತು ಅನುವಾದಕ: ಎನ್. ಬಸವಾರಾಧ್ಯ;

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ