ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜೂನ್ 18, 2023

ಉದ್ದಂಡ ಕವಿ ವಿರಚಿತ ಸುಜ್ಞಾನಿದೇವರ ಕಾವ್ಯ ಸಾಂಗತ್ಯ

ಉದ್ದಂಡ ಕವಿ ವಿರಚಿತ ಸುಜ್ಞಾನಿದೇವರ ಕಾವ್ಯ ಸಾಂಗತ್ಯ 


ಈ ಕಾವ್ಯದ ಕರ್ತೃ ಉದ್ದಂಡಕವಿ. ಈ ಕಾವ್ಯದಲ್ಲಿ ಏಳು ಸಂಧಿ ೧೧೭೮ ಪದ್ಯಗಳಿವೆ. ಈತನ ಊರು ಓಡ್ರದೇಶ.ಇವನು ಮಾತಂಗತಮ್ಮನೆಂಬ ಬೇಡನಿಗೆ ಜ್ಞಾನದೀಕ್ಷೆಯನಿತ್ತು  ಶಿವಶರಣನನ್ನಾಗಿ ಪರಿವರ್ತಿಸಿದ ಕಥೆ.ಈ ಕಥೆಯನ್ನು ಬಸವಣ್ಣ ತನ್ನ ಮಹಾಮನೆಯಲ್ಲಿ ಸೇರಿದ್ದ ಪ್ರಮಥರಿಗೆ ಹೇಳಿದಂತೆ ರಚಿತವಾಗಿದೆ. ಸಾಂಗತ್ಯದಲ್ಲಿರುವ ಈ ಕಾವ್ಯದಲ್ಲಿ ನೂರಾರು ಕಥೆ, ಉಪಕಥೆಗಳು, ದೃಷ್ಟಾಂತಗಳು ಬರುತ್ತವೆ. ಪ್ರತಿಯೊಂದಕ್ಕೂ ಒಂದು ದೃಷ್ಟಾಂತವನ್ನು ಹೇಳಿ ಅದರ ನೀತಿಯ ಪರವಾಗಿ ನಡೆದುಕೊಂಡವರಿಗೆ ಒಳ್ಳೆಯದಾಯಿತೆಂದೂ ವಿರುದ್ಧವಾಗಿ ನಡೆದುಕೊಂಡವರಿಗೆ ಕೆಟ್ಟದ್ದಾಯಿತೆಂದು ಪ್ರತಿಪಾದಿಸಲಾಗಿದೆ.


ಈತ ಕೋಳೂರು ಕೊಡಗೂಸಿನ ಸಂತತಿಯವನು. ವಿಶ್ವೇಶ್ವರನಿಗೆ ಹಾಲನ್ನು ಸಲಿಸಿದಾತನ ಮಗ.


ಆದಿಯ ಸಂಧಿ: 


ಶ್ರೀ ಗುರುಲಿಂಗ ಜಂಗಮ ಶ್ರೀ ಪಾದಕ್ಕೆ 

ಶ್ರೀ ಕರವೆತ್ತಿ ವಂದಿಸುವೆ 

ಶ್ರೀ ಗೌರಿ ಗಣಪ ವೀರಭದ್ರನ 

ರಾಗದಿಂದಲಿ ಬಲಗೊಂಬೆ॥೧॥ 


ಕಂಜಸಖನೆ ಸುಕಳೆಸೊಡಿ ಕಡಲನಾಂತು 

ಕಂಜಾಕರುಣ ಪೂಜಕನೆ 

ಕಂಜಜನಕನ ಶಿರದಲ್ಲಿ ಪಿಡಿದವನೆ 

ರಂಜಿಸು ಮತಿಗೆ ಮಂಗಳವ॥೨॥ 


ಬಿಸರುಹ ಪಗೆಯಳಿಯನ ಸುಟ್ಟುರುಹಿದ 

ವಿಷವ ಕಂಠದೊಳಿಟ್ಟು ಮೆರೆವ 

ಬಿಸುರುಹ ದಳನೇತ್ರಗರೆಮಯ್ಯನಿತ್ತ

ಶಶೆಧರಗೆನಾನೆರಗುವೆನು॥೩॥ 


ರತಿದೇವಿಯ ಪಿತನ ಹೊತ್ತು ಮೆರೆದವ 

ರತಿಯ ಪತಿಯ ದಹಿಸಿದವ

ರತಿಯ ಭಾವಗೆ ವರಭಾರತಿಯನು ಇತ್ತನೆ 

ಸ್ತುತೆಸುವೆನಾ ಮುದದಿಂದ ॥೪॥ 


ಪಂಕಜನಾಭ ಪದ್ಮಜಪಾದ ಪೂಜಿತ 

ಪಂಕಜವದನನುಮೆಯರಸ 

ಪಂಕಜ ಸಖನ ಪಗೆಯಕರ್ನದೊಳಿಟ್ಟ

ಶಂಕರಗಾನೆರಗುವೆನು॥೫॥ 


ಉಡುಪತಿಯನು ಕಂಡಡಗುವ ಸಖನೆ

ಉಡುಪತಿಯ ಕರ್ಣಾಭರಣನೆ 

ಉಡುಪತಿಯಳಿಯ ಕೈಯ್ಯಾಸಿಗರೆಮೆಯ್ಯನಿತ್ತ 

ಉಡುಪತಿಯ ತೇಜಗೆ ವಂದಿಸುವೆ॥೬॥ 


ದಂತಪಗೆಯನಡುದಂತಿಗಮನವೆಡೆ

ದಂತಿಯಮುಖನ ಪಡೆದಮ್ಮ 

ದಂತಿಯ ಸೀಳಿ ಚರ್ಮವ ಹೊದ್ದುವರ್ಧಾಂಗಿ 

ದ್ದಂತೆ ಪಾಲೆಸು ತ್ರೈಜಗವ॥೭॥ 


ಹರಿ ಚರ್ಮಪುಟ್ಟವ ಉರಿಗಣ್ಣಬಿಟ್ಟವ 

ಹರಿಯ ಸುತನನು ಸುಟ್ಟುರುಹಿದವ 

ಹರಿಯ ಹಗೆಯ ವಾಹನವೇರಿದ ಸಖಪಿತನ ಪ್ರಿಯನೆ 

ಹರಭಕ್ತ ಶರಣಗೆ ವಂದಿಸುವೆ॥೮॥ 


ಶಶಿಯ ಸುಡುವಗೊಮ್ಮೆ ಬಿಸಿಗಣ್ಣಗೊಮ್ಮೆ 

ವಿಷಕಂಠ ಭಸಿತಾಂಗಗೊಮ್ಮೆ 

ಬಸವನ ಸೇರಿದವನ ಭಕ್ತರ ಪ್ರಿಯನಿಗೆ 

ಪಸರಿಸಿ ನಾನೆರಗುವೆನು೯॥ 


ಚಿಂತೆಯ ಕಳೆದು ಭ್ರಾಂತು ಭ್ರಮೆಯನಳಿದ 

ನಿಂತ ನಿರ್ಮಳ ಗುಣಭರಿತ 

ಶಾಂತಿಯಗೊಂಡ ಸಲಹುವವರ ಗುರು 

ಶಾಂತಮಲೂಲೇಶಗೆರಗುವೆನು॥೧೦॥ 


ವಿಸ್ತರೆಸುವೆ ನಾನು ಪೃಥ್ವಿಗಧಿಕವೆಂಬ 

ಚಿತ್ರಹಳ್ಳಿಯ ಮಾನ್ಯರನು 

ಸತ್ಯಪಾವನೆ ಮೂರ್ತಿ ಸಿದ್ದೇಶನ ಶಿಷ್ಯ 

ಶಾಂತಪ್ಪಗುರುವಿಗೆರಗುವೆನು॥೧೧॥ 


ಪಾಂಡ್ಯದೇಶದೊಳೆಸೆವ ಚಿನ್ನದಗಿರಿ ಭೂ 

ಮಂಡಲಕದು ಹೊನ್ನಕಳಸ 

ಖಂಡೇಂದುಧರ ಸಿದ್ದೇಶನ ಕರಣದಲಿ 

ಕೊಂಡಾಡಿ ನಾನು ವರ್ಣಿಸುವೆನು॥೧೨॥ 


ಉಟ್ಟ ಕಸೆಯ ಮೇಲೆ ಕಟ್ಟಿದವಂಕುಡಿ

ಬಿಟ್ಟ ಮಂಡೆಯು ಬಿರುಗಣ್ಣ 

ಸೃಷ್ಟಿಗಧಿಕ ಇಚ್ಛಾಘಟ್ಟದಿ ನೆಲಸಿದ 

ಖಟ್ವಾಂಗ ಸುತಗೆರಗುವೆನು ೧೩॥ 


ಕೋಳೂರು ಹೆಣ್ಣಿನ ಸಂತತಿಹಲಗನು 

ಭಾಳಾಕ್ಷ ವೀರೇಶ್ವರಗೆ 

ಮೇಳದಿಂದಲಿ ಹಾಲ ಸಲಿಸಿದಾತನ ಸುತ 

ಹೇಳಿದ ಕೃತಿಯದುದ್ದಂಡ॥೧೪॥ 


ನನ್ನ ಸ್ವತಂತ್ರ ತನುವೆನಿಂದಲಿ ಹೇಳಿದವನಲ್ಲ 

ನಿನ್ನ ಪಾದದ ಕೃಪೆಯಿಂದ 

ಇನ್ನೇನು ತಪ್ಪು ಉಳ್ಳೊಡೆ ತಿದ್ದಿಕೊಂಬುದು 

ಸನ್ಮಾನದಿಂದ ಕವಿ ಜನರು೧೫॥ 


ಕವಿಗಳ ಕರುಣದಿ ಶಿವನರೂಪದಿ 

ವಿವರಿಸಿದೆನು ಈ ಕೃತಿಯ 

ನವರಸಗಳ ಬಲ್ಲ ಕೋವಿದ ಸುಜನರು 

ಹವಣ ಕಂಡಳಿಯದಿಹುದು॥ ೧೬॥ 


ಚಂದವಲಂಕಾರ ಭಾವಲಕ್ಷಣವನು 

ಒಂದುವನರಿಯೆನು ನಾನು

ಇಂದುಧರನ ಭಕ್ತರ ಕಂದ ನುಡಿದ ನುಡಿ 

ಕುಂದುಹೆಚ್ಚುಗಳು ನಿಮ್ಮುದಯಿಸ ॥೧೭॥ 


ಮುಗ್ಧ ಹೇಳಿದಕೃತಿ ಉದ್ದರಿಪುದು ನೀವು 

ಬುದ್ಧವಂತರು ಬಲ್ಲವರು

ಹೊದ್ದಿಸಿ ಪದಪ್ರಾಸ ನೆಲೆಗೊಳ್ಳಿ ಕೃತಿಯನು 

ತಿದ್ದಿಕೊಂಬುದು ಜಾಣ್ಮೆಯಲಿ॥೧೮॥ 


ಶರಣರ ಸಂತತಿಯಹುದೆರಗುತ ಬಂದು 

ಕರುಣದಿ ಯೆನ್ನ ಜಿಹ್ವೆಯೊಳಗೆ 

ಸರಸ್ವತೀತಾನಾಗಿ ನೆಲಸಿದ ಕೃತಿಯಿದು 

ಹೊರೆಯೆನಬೇಡಿ ಬಲ್ಲವರು॥೧೯॥ 


ಮಂಡಲದೊಳಗೆಲ್ಲ ಇರಬೇಕೆನುತಲಿ 

ದಂಡನಾಯಕ ಪ್ರಮಥರಿಗೆ 

ಕೊಂಡಾಡಿ ಹೇಳಿದ ಕೃತಿಯು ಇದಲ್ಲದೆ ವು 

ದ್ದಂಡ ನುಡಿಯನಬೇಡ॥೨೦॥ 


ಗಿಡವನು ಮಡುವನು ಮೊರಡಿ ಕಾನನವನು 

ತಾಬಿಡದೆ ಬಣ್ಣಿಸಿ ಬಳಲದಲೆ 

ದೃಢಭಕ್ತರ ಪಾದವ ನೆನೆದು ಬದುಕೆಂದು 

ಪೊಡಮಟ್ಟು ಬೇಡಿದೆ ಮನವ॥೨೧॥ 


ಊರನು ದಾರಿಯನಾರಿಯ ಕೇರೆಯ 

ಪಾರೈದು ಬಣ್ಣಿಸಿ ಬಳಲದೆ 

ಮಾರಾರಿ ಭಕ್ತರ ಮೂರ್ತಿಯ ನೀ ನೆನೆದು 

ಧೀರನಾಗಿರು ಬೇಡಿಕೊಂಬೆ॥೨೨॥ 


ಆದಿಲಿ ಸುಜ್ಞಾನಿಗಳು ನನ್ನಯ್ಯನಿಗೆ 

ಬೋಧಿಸಿದ ಶಿವಕಥೆಯ 

ಭೇದಿಸಿ ಪೇಳುವೆ ಭಕ್ತ ಜನಂಗಳ 

ಪೃದವೆ ಗತಿಯೆಂದು ನಂಬಿ॥೨೩॥ 


ಆನಂದದಿಂದಲಿ ಮೆರೆವೊಡ್ಡ ದಂಶದಿ ಸ 

ನ್ಮಾನದಿಂ ಕರ್ಣಿಕಪುರವು 

ಜ್ಞಾನನಿಧಿಯು ಸುಜ್ಞಾನಿಗಳಿರುವ ಸಂ 

ಧಾನವ ಬಸವಣ್ಣ ಬಲ್ಲ॥೨೪॥ 


ಅತ್ತ ಕರ್ಣಿಕಾಪುರವೆಸೆದಿರುತಿರೆ ಮುಂದೆ 

ಇತ್ತಲು ದುರ್ಗ ದೇಶದೊಳಗೆ 

ಕತ್ತಲೆ ಕಾವಳದಂತಿಯ ತಮ್ಮನ 

ಅರ್ಥವ ಬಸವಣ್ಣ ಬಲ್ಲ॥೨೫॥ 


ಕಲ್ಯಾಣಪುರ ಸೊಂಪು ಬಸವ ಭಕ್ತಿಯ ಗುಂಪು 

ಸೊಲ್ಲಿಸಲಳವೆ ಶೇಷನಿಗೆ 

ಬಲ್ಲಷ್ಟ ಹೇಳುವೆ ಭಾವಿಸಿ ಭಕ್ತರು

ಸುಲ್ಲಲಿತ ಸುರಗುಣ ಸಂಪದವ॥೨೬॥ 


ಆರವೆ ಕೆರೆ ಕೋಟೆ ಊರಸುತ್ತಳೆ 

ನೃರಿವಾಣವು ನಾಗವಲ್ಲಿ 

ಸೇರಿದ ನಿಂಬೆ ಕಿತ್ತಳೆ ದ್ರಾಕ್ಷಿ ಪೇರಿಳೆಯು 

ಹೇರಂಬನ ಮನೆಯಂದದಲಿ ॥೨೭॥ 


ಕದಳಿಯು ಕರ್ಜೂರ ಒದವೆದ ಹೊಂಬಾಳೆ 

ಮುದವೇರಿ ಬೆಳೆದಿಕ್ಷುದಂಡ 

ಅದಯ ಅಳಿಗಳಿಲ್ಲ ಬರವೆಂದು ಸಂಪಗೆ 

ಮದನ ಮಂಟಪದಂತಿಹುದು೨೮॥ 


ಜಂಬು ನೇರಿಲ ಫಲ ಜಾತಿಕವೆಂದು ದಾ 

ಳಿಂಬ ಪಲ್ಗಿರಿದು ನಗುವಂತೆ 

ಅಂಬರಕೆ ಹೋಗಿ ತೆಂಗೊಂದೆ ಫಲವೆಂದು 

ಕೊಂಬೆ ಕೊಂಬೆಗೆ ಕಾತೆಪಲಸು॥೨೯॥ 


ಮಾವು ಮಂದಾರವು ತಾವರೆ ಪೂಗೊಳ 

ಸೇವಂತಿಗೆಯು ಮುಡಿವಾಳ 

ಆವ ಕಡೆಯಲಿ ನೆಲ್ಲಿಯಂಬಟೆಫಲ

ಭೂವನ ಬೆಸಲಾದಂತೆ॥೩೦॥ 


ಭಾಸ್ಕರ ಕಿರಣವು ಸಾಸುವೆಯೊಳಗಿರ್ದು 

ಬೀಸಲಿಲ್ಲವು ಬಿರುಗಾಳಿ 

ಈಶ್ವರ ತಾ ಬಲ್ಲಯೆನುತ ಕೇತಕಿ ತನ್ನ 

ವಾಸನೆ ತಳಕೆ ಹೊರಗಿತ್ತು॥೩೧॥ 


ಜಿಬಕ ಗುಬ್ಬಿಯು ಕಬ್ಬಕ್ಕಿ ಕೆಲವಂಚೆ 

ಸಜ್ಜಗವಸಿನಾಸಾಳುವೆನು

ಅಬ್ಬರಿಸುವನವಿಲಾಡು ಕೋಲಾಗಿಡುವನ

ಹಬ್ಬದಂತಾವನದೊಳಗೆ॥೩೨॥ 


ನುಡಿತಪ್ಪದ ಗಿಳಿ ನಡೆ ತಪ್ಪದ ಹಂಸೆ 

ಜಡಿದು ಝೇಂಕರಿಪ ತುಂಬಿಗಳು

 ಮಡುವನರಸುವ ಕೊಕ್ಕರೆ ಬೆಳ್ವಕ್ಕಿಯು 

ಪಡೆಯಾಡುವ ಪಾರಿವಾಣ॥೩೩॥ 


ಮರುಗ ಮಲ್ಲಿಗೆ ಜಾಜಿ ಸುರಗಿ ಸಂವಂತಿಗೆ 

ಇರುವಂತಿಗೆಯು ಮುಡಿವಾಳ 

ಪರಿಪರಿದು ಎತ್ತಿ ಹರ ಪೂಜೆ ಮಾಡುವ 

ಶರಣರನೆಂತು ಬಣ್ಣೆಸುವೆ॥೩೪॥ 


ವನದ ಶೃಂಗಾರದ ಒಂದಿಷ್ಟ ಹೇಳಿದೆ 

ಕನಕಾದ್ರಿಗೆಣೆ ಕಲ್ಯಾಣವನು 

ಮನುಜರು ಪೊಗಳ್ವೊಡೆ ಮಹಶೇಷಗಳವಲ್ಲ 

ಮನುಮುನಿಜನದ ಸಂಪದವ೩೫॥ 


ಪಟ್ಟಣ ಸುತ್ತಲು ಅಟ್ಟಣೆ ಅಳ್ವೇರಿ 

ಮುಟ್ಟಿತು ತೆನೆ ಮುಗಿಲನು 

ಕಟ್ಟಣೆ ಇಲ್ಲದೆ ಕೊತ್ತಳವ ಲೆಕ್ಕಿಸುವರೆ 

ಬಟ್ಟ ಡೆಂಕಣಿ ಒಂದು ಕಡೆಯ॥೩೬॥ 


ಸೂರ್ಯ ಸೋಮ ವೀಧಿ ಮಧ್ಯದಿ ಮೆರೆದಿಹ 

ಮಾರಾರಿ ಮಾನ್ಯರ ಮಠವು 

ಆರೈದು ನೋಡಿದರಲ್ಲಲ್ಲಿ ಎಸೆದಿಹ

ವೀರಶೈವರ ಮಂದಿರವು॥೩೭॥ 


ಭಕ್ತರ ಮಂದಿರದೊತ್ತಿಲಿ ಬಸವನ 

ಚಿತ್ರ ಮಂಟಪವೆಸೆದಿರಲು 

ಪೃಥ್ವೀಶನರಮನೆ ಅಂಗಡಿ ರಾಜಬೀದಿಯು 

ಮತ್ತೊಂದು ಕಡೆಯಲೊಪ್ಪಿದವು॥೩೮॥ 


ಕಲ್ಯಾಣದ ಬಿಜ್ಜಳ ರಾಯನು ತಾನು 

ಬಲ್ಲಿದನೆನಿಸಿ ಬಾಳುವನು 

ಎಲ್ಲೆಲ್ಲಿ ನೋಡಿದೊಡಲ್ಲಲ್ಲಿ ಚತುರ್ಬಲ 

ನಿಲ್ಲಗೊಡರು ಅರಿನೃಪರು॥೩೯॥ 


ಮಂಡಲಪತಿ ಬಿಜ್ಜಳರಾಯನು ಮಂತ್ರಿ 

ದಂಡನಾಯಕನ ಸಂಭ್ರಮವ 

ಕೊಂಡಾಡಿ ಹೇಳುವೆ ಕೋವಿದರು ಲಾಲಿಸಿ ಪ್ರ 

ಚಂಡ ಪ್ರಮಥರ ಸಂತತಿಯ॥೪೦॥ 


ಬಸವಣ್ಣನರಮನೆ ಬಣ್ಣ ಚಿತ್ರದ ಗೋಡೆ 

ಶಶಿ ರವಿ ಹೊಳೆವ ಹೊಂಗಳಸ 

ಮಿಸುನಿಯ ಚಿನ್ನದ ತೊಲೆಯು ಬೋದಿಗೆ ಕಂಬ 

ದೆಸೆದೆಸೆಗೆ ವಜ್ರ ಮಾಣಿಕವೆಸೆಯೆ ॥೪೧॥ 


ಮುತ್ತಿನಗೊಂಡೆದಾವತ್ತೀಲಿ ಪೂಮಾಲೆ 

ಸುತ್ತಲು ಹಳದಿ ಬಿಳಿದುಗಳು 

ಮತ್ತೊಂದು ಪರಿಯ ಝಲ್ಲಿಗಳ ಮೇಲ್ಕಟ್ಟಲ್ಲಿ 

ಮೂರ್ತವಾದನು ಚರಲಿಂಗ॥೪೨॥ 


ಚರಲಿಂಗ ಕುಳಿತಾಗ ವರಭಸಿತವಿಟ್ಟು 

ಪರಮನ ಪೂಜೆಯಲುರೆದಣಿದು 

ಗುರುವರದೇವಿ ನೀಲಮ್ಮನು ಎಡೆಮಾಡಿ 

ಹರುಷದಿ ಕರಗಳ ಮುಗಿದು॥೪೩॥ 


ನೀಲಮ್ಮನೆಡೆ ಮಾಡಿ ನಿಲೂಲಲು ಬಸವಣ್ಣ 

ಮೇಲಾದ ಕ್ರಮ ಕರ್ಪುರವ

ಮೂಲೋಕದಯ್ಯನು ಜಂಗಮಗೊಲಿದಿತ್ತು 

ಕೋಲ ಶಾಂತಯ್ಯನ ಕರೆದು॥೪೪॥ 


ಕಾರುಣ್ಯ ಶಾಂತಯ್ಯ ಬಾರದ ಶರಣರ 

ಭೋರನೆ ನೀ ಕರೆಯೆನಲು 

ಆರೈದು ನೋಡಿ ಅಲ್ಲಿದ್ದ ಶರಣರನು 

ದೂರಿ ಹೇಳಿದ ಬಸವನೊಡನೆ॥೪೫॥ 


ಕನ್ನಯ್ಯ ಬಂದನು ಚನ್ನಯ್ಯ ಬಂದನು 

ಹೊನ್ನಯ್ಯ ಬಂದು ನಿಂದಿಹನು 

ತನ್ನ ಪುರವ ನೊಯಿದ ಓಹಿಲನುದ್ಧಟ 

ಅನುಭವ ಮಂಟಪಕೆ ಬಂದಹರೆ॥೪೬॥ 


ಸುಂಕಯ್ಯ ಬಂಕಯ್ಯ ಶಂಕರದಾಸಯ್ಯ 

ಜೇಂಕರಿಸುವ ಕಿನ್ನರಯ್ಯ 

ಅಂಕವಹಿಲಿನ ಮಡಿವಾಳಯ್ಯ ಸಹವಾಗಿ 

ಓಂಕಾರದೊಳು ಕುಳಿತಿಹರು॥೪೭॥ 


ಹರಳಯ್ಯ ಮಧುವಯ್ಯ ಧೂಳಯ್ಯ ಬಂದನು 

ಬೋಳಯ್ಯ ಕಲಹ ಕೇತಯ್ಯಗಳು 

ಕಳ್ಳರಕೋಡದ ಗುಂಡು ಬ್ರಹ್ಮಯ್ಯ ಸಹ 

ಬಳ್ಳದಯ್ಯಗಳು ಬಂದಹರೆ॥೪೮॥ 


ಕೋಳೂರ ಕೊಡಗೂಸು ಹೇರೂರ ಹೆಣ್ಣು ಸಹ 

ಹೋಳಿಗೆ ಮಾರುವ ಪಿಟ್ಟಕ್ಕ 

ಚೋಳಿಯಕ್ಕನು ಸತ್ಯಕ್ಕನು ಸಹವಾಗಿ

ಮೇಳದಿ ಬಂದು ನಿಂದಿಹರು॥೪೯॥ 


ಅಮ್ಮವ್ವೆ ಬಂದಳು ರೆಮ್ಮವ್ವೆ ಬಂದಳು 

ನಮ್ಮಕ್ಕ ಮಹದೇವಿ ಬಂದು 

ಒಮ್ಮನದ ನಂಬಕ್ಕನು ಮುಂತಾಗಿ 

ನಿಮ್ಮ ಪಾದದ ದರುಶನಕೆ॥೫೦॥ 


ಆಲಸ್ಯ ಮಾಡದೆ ಅಮರಗಣಂಗಳ ನೋಡಿ 

ಕೋಲಶಾಂತಯ್ಯ ಹೇಳಿದನು

ಲೀಲೆಯಿಂದಲಿ ಬಸವಣ್ಣ ಕೌತುಕವ ಶರಣರೊಳು 

ಮೇಲೆ ಮುಂದುಸುರಿದನು ಸತ್ಕಥೆಯ ॥೫೧॥ 


ಮಾರಾರಿ ಶರಣರು ಮನ್ನಿಸಿ ಬಿನ್ನಹವ 

ಕೇರಿಕೇರಿಯನು ಶೃಂಗರಿಸಿ 

ಧಾರಿಣಿ ನಡೆವಂತೆ ಬರುವ ಶರಣರ 

ವೀರಶೈವರು ಇದಿರ್ಗೊಳ್ಳಿ॥೫೨॥ 


ಎಂದ ಮಾತನು ಕೇಳಿ ಇಂದುಧರನ ಭಕ್ತರು 

ವಂದಿಸಿ ಬಸವೇಶ್ವರಗೆ 

ಚಂದದಿ ತಮ್ಮ ಮಂದಿರವ ಶೃಂಗಾರ ಮಾಳ್ವ 

ಅಂದವ ನಾನೇನ ಬಣ್ಣಿಸುವೆ ॥೫೩॥ 


ಕಸ್ತೂರಿ ಸಾರಣೆಗೊಂಡಲ್ಲಿ ಮಗುಲಿಗೆ 

ಹೊಸ್ತಿಲು ಹೊಂಗಳಸಗಳು 

ಹಸ್ತಿನಿಯರು ಪಾಡುತ ಲಾಗ ನಡೆದರು

ಮುತ್ತಿ ಸತ್ತಿಗೆಯಡಿಯ ॥೫೪॥ 


ಕರಡೆ ಶಂಕಿನಿ ಧ್ವನಿ ನುಡಿವ ಜಾಗಟೆ ತಾಳ 

ಬಡಿವ ಮದ್ದಳೆ ಪಾತ್ರ ಭೋಗ 

ಅಡಿಗಡಿಗು ಉಗ್ಗಡಿಸುವ ಪಾಠಕರಿಂದ 

ನಡೆದರು ಶರಣ ಸಂಕುಲವು॥೫೫॥ 


ಏಳುನೂರೆಪ್ಪತ್ತು ಅಮರಗಣಂಗಳ 

ತಾಳೆಯಳಗೆ ಉಘ್ಘಡಿಸೆ 

ಮೇಳೈಸಿ ವೃಷಭನ ಧ್ವಜ ಛತ್ರಚಾಮರ 

ಢಾಳಯಿಸಿದವಲ್ಲಲ್ಲಿ ॥೫೬॥ 


ಅಕ್ಕಗಳಾರತಿ ತರಲು ಆನಂದದಿ 

ಇಕ್ಕೆಲದಲಿ ವಾದ್ಯಮೊಳಗೆ 

ದಿಕ್ಕನು ಹೊತ್ತಿರ್ದ ಸೊಕ್ಕಾನೆ ಬೆರ್ಚಿತು 

ಲೆಕ್ಕಿಸುವರಿಗಳವಲ್ಲ ॥೫೭॥ 


ವಾರಿಧಿ ತೆರೆಯಂತೆ ಒಂದೊಂದು ಪರಿಯಲಿ 

ಕೇರಿಕೇರಿಯನು ಶೃಂಗರಿಸಿ 

ಭೋರನೆಲ್ಲರು ಬಂದು ಮಾರಾರಿ ಶರಣೆಂದು 

ಊರ ಹೊರಟು ತೆರಳಿದರು ॥೫೮॥ 


ಕೆಟ್ಟೊಡವೆಯನರಸಿ ಕಂಗೆಟ್ಟ ನಿರ್ಜರರಂತೆ 

ಅಷ್ಟ ದಿಕ್ಕನು ನೋಳ್ಪ ಶರಣರಿಗೆ

ಖಟ್ಟಾಂಗಿಯ ಭಕ್ತ ಬಸವಣ್ಣ ತೋರಿದನಾಗ 

ಇಟ್ಟಿದಿರಿನಲಿ ಸುಜ್ಞಾನಿಗಳ॥೫೯॥  


ತೋರಿದ ಬಸವಣ್ಣ ದೂರದ ಶರಣರ 

ಏರಿದ ಹರುಷಾತ್ಮದಲಿ 

ಮೂರು ಮೂರ್ತಿಯ ಕಂಡು ಮುಂದೆ ಪೂಜೆಯ 

ಮೀರಿ ನಡೆದು ವಂದಿಸಿದ॥೬೦॥ 


ಶಭರಗೆ ಬೋಧಿಸಿ ಬಂದ ಶರಣರಿಗೆ 

ವಿಭೂತಿ ವೀಳೆಯವ ಕಾಣಿಕೆಯ 

ಅಭವನ ಭಕ್ತ ಬಸವಣ್ಣನು ಮುಂದಿಟ್ಟು 

ಶುಭ ಮುಹೂರ್ತದೊಳಗೆ ವಂದಿಸಿದ ॥೬೧॥ 


ಮುಂದಿಟ್ಟು ಭಸಿತವ ವಂದಿಸಿ ಬಸವಣ್ಣ 

ತಂದೆ ನಿಮ್ಮಂಥವರ ಕಾಣೆ 

ವೃಂದದೊಳಗೆ ಲುಬ್ದುವ ಬೋಧಿಸಿ ಇಲ್ಲ 

ಚಂದದಿ ಕರೆತಂದೆ ಗುರುವೆ॥೬೨॥ 


ಇಬ್ಬರು ಜ್ಞಾನಮೂರುತಿಯನು ಬಸವಣ್ಣ 

ತಬ್ಬಿಬ್ಬುಗೊಳದೆ ಶರಣೆಂದು 

ಕಬ್ಬಿನೊಳಗೆ ಜೇನಿಕ್ಕಿದ ಪರಿಯಂದದಿ 

ತಬ್ಬಿಕೊಂಡನು ನನ್ನಯ್ಯನನು॥೬೩॥ 


ನನ್ನ ಭಾಗ್ಯವ ಕಂಡೆ ನನ್ನ ಯೋಗ್ಯನ ಕಂಡೆ 

ಮನ್ಮಥನ ಗೆಲಿದ ಶಾಶ್ವತಗೆ 

ನಿನ್ನ ಪಾದ ಕಂಡೆ ನನ್ನಯ್ಯ ನಡೆಯೆಂದು 

ಸನ್ಮಾರ್ಗದಲಿ ತೆರಳಿದನು॥೬೪॥


ತೆರಳಿ ಭೋರನೆ ಬಂದು ಪುರರಾಜ ಬೀದಿಲಿ 

ಶರಣರ ಗುಂಪು ಸಂದಣಿಸೆ 

ಗುರುವು ಸುಜ್ಞಾನಿಗಳ ಇರವನೋಡಿ 

ಒರೆದರು ಅಪ್ಪಣ್ಣನೊಡನೆ ॥೬೫॥ 


ಅಯ್ಯನ ಶಿರಕಪ್ಪು ಮೈಯೆಲ್ಲ ತನುಕೆಂಪು ಮತ್ತೊ 

ಬ್ಬಯ್ಯನ ಶಿರವು ಪಲ್ಲಟವು 

ಮೈಯ್ಯಾಂತು ಅವಧೂತ ಶಿಖಿಯ ಮಾಡುವ 

ವಯ್ಯಾರವೇನು ಅಪ್ಪಣ್ಣ॥೬೬॥ 


ಜ್ಞಾನಿಯಾ ಬಸವಣ್ಣ ಸನ್ಮಾನಿಯ ಶಿವನ ಸಂ 

ಧಾನವ ಬಲ್ಲ ಪರಿಯ 

ಮೋನದಿ ಕೇಳುವ ನಡೆಯೆಂದು ಅಪ್ಪಣ್ಣ 

ಮಾನ್ಯರೊಡನೆ ಮಾರ್ನುಡಿದ॥೬೭॥ 


ಇಂತೀ ಪರಿಯಲಿ ಭ್ರಾಂತಳಿದು ಶರಣರು 

ಕಂತು ಬಸವಣ್ಣನ ಮಂದಿರವ 

ಸಂತೋಷದಿಂ ಪೊಕ್ಕು ತಿಂಥಿಣೆಯೊಳಗಿರೆ 

ಕಾಂತೆ ನೀಲಮ್ಮನೋಡಿದಳು॥೬೮॥  


ನೋಡಿ ನೀಲಮ್ಮನು ರೂಢಿಯೊಳ್ಮಯ್ಯಿಕ್ಕೆ 

ಮಾಡುತಿರ್ದಳು ಸಮ್ಮಾರ್ಜನೆಯ 

ಜೋಡಿಸಿ ನೀರಾಕಿ ಮಜ್ಜನ ಸಾವೆ ಭಸಿತವ 

ಎಡೆಮಾಡುತಿರ್ದಳು ತರಳಾಕ್ಷಿ ॥೬೯॥ 


ದೀಪಧೂಪಗಳು ಮಾಸತಿಯ ಶರಣರಿಗೆ 

ಆ ಪತಿವ್ರತೆಯೆಡೆ ಮಾಡಿ

ಗೋಪತಿ ಪ್ರಿಯನ ನೆನೆದು ಭಸಿತವಿಟ್ಟು

ಆಳಾಪಿಸಿದರು ಪ್ರಮಾಣವನು॥೭೦॥


ಲಿಂಗಮೂರ್ತಿಯ ತಮ್ಮ ಅಂಗೈಯೊಳಗೆ ಇರಿಸಿ 

ಕಂಗಳರ್ಥಿಯನು ಸಲಿಸಲ್ಕೆ 

ಭೃಂಗಕುಂತಳೆ ನೀಲಮ್ಮ ಕೈಯೆಡೆಮಾಡೆ 

ಜಂಗಮಸಹನಾಗಿ ಸವಿದು॥೭೧॥ 


ಆರೋಗಣೆಯ ಮಾಡಿ ಅಮರಗಣಂಗಳು 

ಕಾರುಣ್ಯ ಬಸವಣ್ಣನೊಡನೆ 

ಮೂರು ಮಹಾತ್ಮ ನೀನು ವಿವರಿಸಿ ಪೇಳೆಂದು

ಸಾರಿ ಬಂಕಣ್ಣ ಕೈಮುಗಿದು ॥೭೨॥ 


ಸಂಗನ ಬಸವಣ್ಣ ಪೇಳೆ ಶರಣರೆದ್ದು 

ಕಂಗಳ ಮುಚ್ಚಿ ಕರ ಮುಗಿದು 

ಅಂಗವು ಶಿರವು ಪಲ್ಲಟವಾದ ಪರಿಯನು 

ಹಿಂಗದೆಮ್ಮೊಳಗುಸುರು॥೭೩॥ 


ಶರೀರ ಪಲ್ಲಟವಾದ ಪರಿಯನು 

ಒರೆದು ಹೇಳಿದ ಶರಣರಿಗೆ 

ಧರೆಯೊಳು ಸುಜ್ಞಾನಿಗಳ ನನ್ನಪ್ಪನ 

ಚರಿತೆಯ ಪೇಳುವೆ ಕೇಳು॥೭೪॥ 


ಶರಣರು ಬೆಸಗೊಳೆ ಒರೆದನು ಬಸವಣ್ಣ 

ಹರಶರಣರ ಸಂಸ್ಕೃತಿಯ

ಪರಿಚಿತವಿಲ್ಲದೆ ಕೇಳಲು ಘನ ಪಾಪವು 

ದೊರಕೊಂಬುದಿದು ನೀವು ಕೇಳಿ॥೭೫॥ 


ಕರ್ನಿಕಪುರ ಸುತ್ತ ಕನಕದ ಕೋಟೆಯು 

ರನ್ನದ ತೆನೆಯೆತ್ತಿಹವು 

ಮನ್ಮಥನಿಡುವ ಡೆಂಕಣಿ ಹುಲಿ ಮುಖ 

ಇನ್ನಾರು ಲೆಕ್ಕಿಸಬಹುದು॥೭೬॥ 


ಅಗಳಿನಗಮ್ಯವನಾರು ಬಲ್ಲವರಿಲ್ಲ 

ನೆಗಳು ಮುಚ್ಚವು ಕೂರ್ಮಗಳು 

ಜಗಲಜ ಮಂಡೂಕ ಮೊಸಳೆ ಗುಂಡವಕ್ಕಿ 

ನಗುವ ತಾವರೆ ಪದ್ಮಸಹವು॥೭೭॥ 


ಸುತ್ತ ಬಳಸಿದ ಕೋಟೆಗಳೊತ್ತೀಲಿ ಪೂದೋಟ 

ಭಕ್ತರರವಟ್ಟಿಗೆ ಅನ್ನಛತ್ರ 

ಮೃತ್ಯು ಹೋಗಲಿಬಾರದು ಬಾಗಿಲವಾಡಕ್ಕೆ 

ಇಕ್ಕಿದ ಕದ ಕಾಪಿನಂತೆ॥೭೮॥ 


ಒಪ್ಪುವ ಪುರದೊಳು ದರ್ಪಣದಂತಿಹ 

ಸತ್ಪುರುಷರ ಮಂದಿರವು 

ಉಪ್ಪರಿಗೆಯು ಹೊಂಗಳಸ ಕಂಗಳರ್ತಿಯ 

ತಪ್ಪದೆ ಸಲಿಸುತಲಿಹರು॥೭೯॥ 


ಕಂಗೆಸೆದಿಹ ಶಶಿವೀದಿಗದಿರಾಸೆಯ ಮಠ 

ಹೊಂಗೆಲಸದ ಮಂಟಪದಿ 

ಹಿಂಗಲೀಯದೆ ದಶಶಾಸ್ತ್ರವನೋದುವ 

ಲಿಂಗಾಂಗಿಯ ನಿರ್ಮಿತವು॥೮೦॥ 


ಯಮನಿಹಯೋಗವ ಪ್ರಣಯದ ಮಂತ್ರವು 

ಸುಮನದೊಳಿಹ ಸಮಾಧಿಗಳು

ಕ್ರಮಗಳನರಿದು ಅಷ್ಠಾಷ್ಟಾಂಜಗಲಂಬಿಕೆ

ಗಮನವಮರೆದು ಕುಳಿತಿಹರು॥೮೧॥ 


ಅಂಗಲಿಂಗಾತ್ಮರು ಅಮಳೈಕಭರಿತರು

ಸಂಗಸುಖಕೆ ಸಲ್ಲದಿಹರು 

ಕಂಗಳ ತೆರೆಯದ ಕಾಯವ ಮರೆದರು 

ಹಿಂಗಿ ಹೋಗರು ಅತಿಥಿಗಳು॥೮೨॥ 


ಸಾಧಕರಲ್ಲದೆ ಪರವಾಧಿಕರಲ್ಲಲ್ಲಿ 

ಆದಿಯಲ್ಲದೆ ಅಂತ್ಯವಿಲ್ಲ 

ಬೋಧಕರಲ್ಲದೆ ಹೊರಮಾತುಗಳಿಲ್ಲ 

ನಾದ ಬಿಂದಕ್ಕೆ ಸಿಕ್ಕ ಸಿಕ್ಕಲಿಲ್ಲ॥೮೩॥ 


ಇನ್ನು ಈ ಪರಿಯೊಳುಕರ್ನಿಕಪುರದೊಳು 

ಮನ್ಮಥನ ಗೆಲಿದ ಶರಣರಿಗೆ 

ಸನ್ಮಾನನಿಧಿ ಸುಜ್ಞಾನಿ ಬೋಧಿಸುತೆ 

ಇನ್ನೊಂದು ಮಾತು ಬಂದುದಲ್ಲಿ॥೮೪॥ 


ಶಿವಜ್ಞಾನ ಮೂರುತಿಯೆಂಬ ಋಷಿಯು ಬಂದು 

ಭುವನಕಚ್ಚರಿ ಕಲ್ಯಾಣವನು 

ವಿವರಿಸಿ ಪೇಳಲು ಸುಜ್ಞಾನಿಗಳೊಳು 

ಅವರ ವಿಸ್ತರವ ಕೇಳಿದರು॥೮೫॥ 


ಬಲ್ಲಿದರಲ್ಲದೆ ಬಡವರಲ್ಲಿಲ್ಲವು 

ನೆಲ್ಲಲ್ಲದೆ ಫಲಗಳಲ್ಲಿಲೂಲ

ಸೊಲ್ಲೆಲ್ಲ ಶಿವನುಡಿ ಸಂತೋಷ ನಗರಿಗೆ 

ಕಲ್ಯಾಣವೆಂಬ ಪೆಸರಾಯ್ತು ॥೮೬॥ 


ಮುನ್ನಿನ ಕಥೆಯಿಂದ ಬಸವ ಬಿಜ್ಜಳನಿಗೆ 

ಮನ್ನಣೆಯ ಮಂತ್ರೀಶನಾಗಿ 

ಮುನ್ನೂರು ಅರವತ್ತು ನನ್ನಿ ಪವಾಡವ ಗೆಲುವನು 

ತನ್ನ ಶರಣರು ಸಹವಾಗಿ ॥೮೭॥ 


ಸುಜ್ಞಾನೇಶ್ವರ ಕೇಳು ಭರ್ಗಭೂಷಿತ 

ಅಗ್ನಿಗಣ್ಣಿನ ಭಕ್ತರನು 

ದುರ್ಗಿಯ ಕೈಯ್ಯೊಕೊಟ್ಟಣಕುಟ್ಟಿಸಿ ತಂದು 

ಹುಗ್ಗಿಯ ಶಿವ ಗುಣಿಸುವರು॥೮೮॥ 


ಚೋಳ ದೇಶದರಾಯ ಡಡೆದಲೆಯನು ಕಂಡು 

ತಾಳದೆ ಮುಡಿದಲೆಯಿತ್ತ 

ಆಳಾಗಿ ಶಿವನು ಬಂದು ನಂಬಿಗೆ ಹಡಪಿಗನಾದ 

ಕೇಳುವ ಸುಜ್ಞಾನೇಶ್ವರನೆ ॥೮೯॥ 


ಸತಿಯ ಬೇಡಲು ಸಂತೋಷದೊಳಿತ್ತರು 

ಸುತರ ಬೇಡಿದರುಣಲಿಕ್ಕುವವರ 

ಹತವಾದ ನಂದಿಯ ಪ್ರಾಣವ ಪಡೆದರ 

ಶ್ರುತ ದ್ರುಷ್ಟದಿಂದ ಹೇಳಿದನು॥೯೦॥ 


ಕದ್ದ ಕಳ್ಳರ ಕೊಡದೆ ಶೂಲಕ್ಕೆ ನಡೆದರ 

ಬಿದ್ದ ಲಿಂಗವನು ಬಿಟ್ಟವರ 

ಮುದ್ದಲಿ ಸಲಿಹಿದ ಪಿತನ ಶಿರವವರಿ 

ದಿದ್ದರ ಸ್ಥಿತಿಯ ಹೇಳಿದನು॥೯೧॥ 


ಸೂಳೆರೆಲ್ಲರು ಕೂಡಿ ಹಾಸ್ಯವನು ಮಾಡಲು 

ಬಳ್ಳದ ಲಿಂಗ ಮಾಡಿದರ 

ಹುಳ್ಳನಂಬಲಿಯನು ಶಿವನಿಗರ್ಪಿಸಿದರ 

ಒಳ್ಳೆ ವಾಕ್ಯದಲಿ ಹೇಳಿದನು॥ 

 

ಖಟ್ಟಾಂಗಧರ ಬಂದುಬಿಟ್ಟ ಬಿಟ್ಟಾಡಲು 

ಹುಟ್ಟಿ ಅರಿದ ಶರಣೆಯನು 

ರಟ್ಟೆ ತೊಗಲು ಸತಿಪುರುಷರುಮಾತಾಡದ 

ಕಟ್ಟಳೆಯನು ಹೇಳಿದನು॥೯೩॥


ಬಿತ್ತದೆ ಹೊಲದೊಳು ಬತ್ತವ ಬೆಳೆದರ 

ಕಿತ್ತಗಿಲಿ ಮೆರೆದವರ 

ಮತ್ತೊಂದು ಕಾಸಿಗೆ ಪ್ರಾಣವ ತೊರೆದವರ 

ವೃತ್ತಾಂತವನು ಹೇಳಿದನು॥೯೪॥ 


ಅಲ್ಲಿಹ ಶರಣರ ಮೆಲ್ಲನೆ ಶಿವಧ್ಯಾನ 

ಸೊಲ್ಲಿಗೆ ಸುಜ್ಞಾನಿ ಕೇಳಿ 

ಕಲ್ಯಾಣಕೆ ಬಹಹಿತಮನದೊಳು ಹುಟ್ಟಿ 

ನಿಲ್ಲದೆ ಪಯಣಿಗನಾದ ॥೯೫॥ 


ಪಯಣವ ಮುಂದಿಟ್ಟು ಭಯವ ಹಿಂದಕೆ ಬಿಟ್ಟು 

ಜಯವೆಂದು ಅವರ ಕೊಂಡಾಡಿ 

ಲಯವಿಲ್ಲಭವನ ಶರಣರೊಡನೆ ನಾನು 

ನಯವಾಗಿಯೆಂದು ಕುಳ್ಳಿಹನು॥೯೬॥ 


ಸತ್ಯಶರಣರ ನೆನೆದು ಮುಕ್ತಿಯನರಸುವ 

ಹೊತ್ತು ಹೋಕನು ನಾನೈಸೆ 

ಪೃಥ್ವಿಯ ಮೇಲಣ ಭಕ್ತರ ನೆರೆಕಂಡು 

ನಿತ್ಯನಾಗೆಂದು ಬಾಳುವೆನು॥೯೭॥ 


ಮಂಗಳವಾಡದೊಳಿಹ ಸದ್ಭಕ್ತರ 

ಅಂಗಳವೆಂದು ಮುಟ್ಟುವೆನು

ಜಂಗಮ ದಾಸೋಹಿಗಳ ದರುಶನದಿ ಪ್ರ 

ಸಂಗವನೆಂದು ಮಾಡುವೆನೊ॥೯೮॥ 


ಇಂತೆಂದ ಸುಜ್ಞಾನಿ ಚಿಂತೆಯನೀಡಾಡಿ 

ಸಂತೋಷದಿಂದವರ ಪಾದವನು 

ಅಂತರಂಗದಿ ನೆನೆದಲ್ಲಿಂದ ತೆರಳಿದ ಭೂ 

ಕಾಂತೆ ಮೆಚ್ಚುವ ತೆರನಂತೆ॥೯೯॥ 


ಸೇವಕರ್ಗೂಡಿ ಸದ್ಭಾವಿಸಿ ಬರುತಲಿರೆ 

ಭೂವಿ ಮಂಡಲ ಯೇಕಾದಂತೆ 

ಆವಕಡೆಯಲಿ ಘೀಳಿಡುವ ಕಾನನವನು 

ಊವಿಸುವೆನು ಬಲ್ಲಂತೆ॥೧೦೦॥


ಆಲ ಪಾದರಿ ಸೋವೆಬೇವು ಮುತ್ತುಗಮರ 

ಜಾಲಿಸಿದಂತೆ ಬೊಬೋಲಿಯು 

ಬೇಲ ಬಿದಿರು ಬೆತ್ತ ಬೆಳುಕಾರಿ ಚನ್ನಂಗಿ 

ವಾಲಾಡುತಿರ್ಪವು ಕಾನನದಿ॥೧೦೧॥ 


ಬಿಲ್ಲಪತ್ರೆಯ ಮರಯಲ್ಲ ವಾರದಮರ 

ನೆಲ್ಲಿ ನೇರಲು ಬಿಕ್ಕೆ ಮರವು 

ಕಲ್ಲತ್ತಿ ನೆಡೆಯಾ ಚಂದಾಳೆ ಭೂತಾಳೆಯು 

ಎಲ್ಲಿ ನೋಡಲು ಭಯಂಕರವು॥೧೦೨॥ 


ಗಿಡುತರು ಪೆರ್ಮಳೆವಡನೆ ಹಬ್ಬಿದ ಬಳ್ಳಿ 

ಕುಡುರೆ ಮೇಲ್ವರಿದು ಮುಂಚಿಹವು 

ಘುಡುಘುಡಿಸುವ ಮೃಗಪಕ್ಷಿಯಬ್ಬರವನು 

ನುಡಿದು ಹೇಳುವೆನು ಬಲ್ಲಂತೆ॥೧೦೩॥ 


ಕರಿಸಿಂಹಸಾರಂಗ ಮೆರೆವರಿದೆಕ್ಕಲಹುಲ್ಲೆ 

ಹರಿಣ ಕಾಡೆಮ್ಮೆ ಜಂಬುಕನು 

ಉರವಣಿಸುವ ವ್ಯಾಘ್ರ ನರರಭಕ್ಷಿಸುತಿರೆ 

ಧರೆಗೆ ಭೀತಿಯ ಕಾನನವು॥೧೦೪॥


ಇರುತಲೀ ಪರಿಯಲಿ ಗಿಡುತರು ಬೆಟ್ಟವು

ಆರುಗಾವುದದಾರಣ್ಯ 

ಹರ ಮೃಡಮುನಿರಾಯ ವಿಪಿನವ ಕಂಡಾಗ 

ಹರುಷವಾದನು ಮನದೊಳಗೆ ॥೧೦೫॥ 


ದುರ್ಗವನು ಸುಜ್ಞಾನೇಶ್ವರ ಕಂಡು 

ಹಿಗ್ಗುತ ಮನ ಹರುಷದಲಿ 

ಶೀಘ್ರದಿನೆಡೆಗೊಂಡು ಬರೆಯಿಬ್ಬರಿಪ್ರರು

ಕುಗ್ಗಿ ಹೇಳಿದರು ಭಕ್ತಿಯಲಿ॥೧೦೬॥ 


ಮುನಿಯ ಪಾದವ ಕಂಡು ಘನತರ ದುಃಖದಿ 

ನೆನೆದು ಭೂಸುರರು ನಿಡುಸುಯ್ದು 

ಇನ್ನು ಮುಂದಕೆ ಪೋಪ ಕಜ್ಜವು ಬೇಡ ಮನೆಗೆಂದು 

ಅನುವ ಹೇಳಿದರು ಇಂತೆಂದು॥೧೦೭॥ 


ಬೇಡರ ಮಾತಂಗ ತಮ್ಮನನಡವಿಯೊಳು 

ಯೆಡೆಯಾಡಗೊಡನುಮನುಜರನು 

ಬೇಡೊಡೆಯರೆ ನಿಮ್ಮವು ಮೀರಿ ಹೋದರೆ ನಿಮ್ಮ 

ಕೋಡಿ ಮಾಡುವನಾಪಾತಕನವನು ॥೧೦೮॥ 


ಮಾನ್ಯರ ಕಂಡರೆ ಶ್ವಾನನ ಹರಿಬಿಟ್ಟು 

ನಾನಾ ಪರಿಯಲಿ ಭಂಗಿಪನು 

ತಾನವರರ್ಥವ ಸೆಳಕೊಂಡು ತಿನುತಿಹ 

ನೀನತ್ತಲಡಿಯಿಡ ಬೇಡ॥೧೦೯॥ 


ಉಂಟಾದ ಸ್ಥಿತಿಯ ಕೇಳೆಂಟು ವಿಪ್ರರು ತಾವು 

ಬೇಂಟೆಯ ಪಥಕೆ ಸಿಲಿಕಿದರು 

ಕಂಟಕವನು ಮಾಡಿ ಆರು ವಿಪ್ರರ ಕೊಂದ 

ದಾಂಟಿ ಬಂದೆವು ಇಬ್ಬರಿಲ್ಲಿ॥೧೧೦॥ 


ನುಡಿದ ಮಾತನು ಕೇಳಿ ಒಡನಿದ್ದ ಶಿಷ್ಯರು 

ಅಡಿಯಿಡಲಮ್ಮೆವೆಂದೆನುತ 

ಗಡಗಡನೆ ನಡುಗುತ ಗಿಡದ ಮರೆಗೆ ಹೋಗೆ 

ದೃಢಮುನಿರಾಯನಿಂತೆಂದ ॥೧೧೧॥ 


ಅಳಿಯುವ ಕಾಲವು ಭೂಮಿಗಿಳಿದರೆ ನಿಲುವುದೆ

ಹೊಳಕೇಲಿ ಹಿಂದೆ ಮೆಟ್ಟುವರೆ 

ಪ್ರಳಯ ಬಂದರೆ ಜಿತೇಂದ್ರಿಗೆ ಅಳಿವುಂಟೆ

ಬಳಲ ಬೇಡವು ನೇವು ತಿರುಗಿ॥೧೧೨॥ 


ದೇವಾರ ಚಿತ್ತಕೆ ನೋವಾದರಾಗಲಿ 

ಆವಾಗ ಕಲ್ಯಾಣಪುರವ 

ಭಾವದೊಳಗೆ ನೆನೆದಿರುವುದು ಲೇಸೆನೆ 

ದೇವ ಮಾರ್ನುಡಿದನವರ್ಗೆ॥೧೧೩॥ 


ಮಾತು ಸಾವಿರವುಂಟು ಭೀತಿಯ ಜನರಿಗೆ

ನೀತಿ ಹೇಳ್ಬೇಡ ತಿರುಗೆಂದ 

ಅಂತು ಪೇಳಲಾ ಮೇಲೆ ಶಿವನೋ ಭಾಸ್ಕರನ 

ಪ್ರೀತಿಯಿಂದಲಿ ಹೊತ್ತು ನಡೆದರು೧೧೪॥ 


ಇಬ್ಬರಿಪ್ರರೀ ನುಡಿಗೇಳೊಬ್ಬರಡಿಯಿಡೆ 

ತಬ್ಬಿಬ್ಬುಗೊಂಡು ತಿರುಗಿದರು 

ಉಬ್ಬಿ ಕಾನನದೊಳು ಸುಜ್ಞಾನಿ ಬರಲು ಕಂಡು 

ಬೆಬ್ಬಳಿದವು ಮೃಗಜಾತಿ॥೧೧೫॥ 


ಹಿಂದಣ ವೈರವ ಬಿಟ್ಟು ಮೃಗಪಕ್ಷಿಗಳು 

ಒಂದಾಗಿಹುದನು ನೋಡಲ್ಕೆ 

ಸಂದೇಹವಿಲ್ಲದೆ ಋಷಿಯು ಸಂತೋಷವ ಮಾಡಿ 

ಒಂದೆರಡು ಯೋಜನವನು ನಡೆದು॥೧೧೬॥ 


ನಳಿನ ಸಖನ ತೇಜ ಕಳೆಯಿಲ್ಲ ಕಾನನ

ದೊಳು ಪೊಕ್ಕು ಬರುತಿರೆ ಮುಂದೆ 

ಪ್ರಳಯಕಾಲದ ದೂತರಿಗೆ ಬಂದಂತಿರೆ 

ಪುಳಿಂದನಿರವಮುನಿ ಕಂಡ॥೧೧೭॥ 


ಕಂಡನು ಕಡುತವಕದೊಳುರವಣಿಸುವ 

ಹಿಂಡು ನಾಯಿಗಳ ಚಪ್ಪರಿದು 

ಗಂಡು ಸಿಡಿಲ ಮರಿಸಿಂಹ ನೀ ಬಾರೆಂದು 

ಕೊಂಡಾಡಿ ಕರೆಯೆ ಲುಬ್ಧಕನು॥೧೧೮॥ 


ಅರಿದಾರೊ ಮೈಯಿಕ್ಕಿದಾವಾ ಮಾಮಸಿ ಬೋಧಿ 

ಹರುಕ ಗಡ್ಡವು ಕೆಮ್ಮೀಸೆ 

ಬೀರುವ ಬಿಲ್ಲಂಬು ದಾರಿಯ ಮಧ್ಯದೊಳಿಹ 

ಮೀರಿ ಹೋಹರೆ ಪಥವಿಲ್ಲ॥೧೧೯॥ 


ಇಟ್ಟಡೆಯಲಿ ಮಾತಂಗನ ಕಾಣುತ 

ನೆಟ್ಟನೆ ಮುನಿಯು ಕಣ್ಗೆಡದೆ 

ದಿಟ್ಟಿಸಿ ನೋಡಲಾತ್ಮದೊಳಿರ್ದ ಕೋಪವು 

ಕೆಟ್ಟು ಹೋಗಾಯಿತು ನೆಲೆಗೆಟ್ಟು॥೧೨೦॥ 


ವ್ಯಾಧ ಹಾದಿಯೊಳಿರೆ ಯತಿ ಮುನಿ ಮನದೊಳು 

ಭೇದವಿಲ್ಲದೆ ಎಳ್ಳಿನಷ್ಟು 

ಮೂದಲಿಸದೆ ಮುನಿ ಬರುತಿರೆ ಕಿರಾತನು

ತಾದಾತ್ಮ್ಯದೊಳಗೆ ಇಂತೆಂದ॥೧೨೧॥ 


ನನ್ನ ದೆಸೆಯ ಕೇಳಿ ಜನರೆಲ್ಲ ಬಲ್ಲರು 

ನನ್ನ ಲೆಕ್ಕಿಸನು ಈಕ್ಷಿಸನು 

ತನ್ನ ನೋಡುವೆನೆಂದು ಸಮ್ಮುಖದೊಳು ಬಂದು 

ಮನ್ನಿಸಿ ಕರೆದನಿಂತೆಂದು॥೧೨೨॥ 


ಅಣುಮಾತ್ರ ವಹ್ನಿಯಾರಣ್ಯವೆಲ್ಲವನೊಂದು 

ಕ್ಷಣದೊಳುರುಹಿ ಕೆಡಿಸದೆ 

ಪಣೆಯೊಳು ಭಸಿತವ ಶಬರನು ಧರಿಸಲು 

ಫಳಿಲನೆ ಕುಳಿತ ತಂಪಿನಲಿ॥೧೨೩॥


ಅಲ್ಲಮ ಇಲ್ಲಿಗೆ ಬಂದು ಕೆಲಸವೇನಿರ್ದಿತೊ 

ಹೊಲಬುದಪ್ಪಿತೊ ಸಮ್ಮಾದನಕೆ 

ಖುಲ್ಲ ವಿಧಿಯೆಳತಂತೊ ಬದುಕಿನೊಳಗೆ ನೊಂದು 

ಅಲಸಿ ಅರಣ್ಯಕೈದಿದೆಯೊ ॥ ೧೨೪॥


ಮಾತಲಿ ಜಾಣ ಮಾತಂಗ ತಮ್ಮನುಯೆಂಬ 

ಖ್ಯಾತಿಯ ಕೇಳಿ ನಾ ಬಂದೆ 

ಭೀತಿ ಬಿಟ್ಟಿತು ನಿನ್ನ ಕಾಣುತಲೆಂದು ವಿ 

ಭೂತಿಯ ಧರಿಸಿದ ನಮಗೆ॥೧೨೫॥ 


ನಗೆಯ ಮಾತನು ಆಡಿ ನನ್ನನೀ ವಂಚಿಸಿ ಹೋಹ 

ಬಗೆಯ ಬಲ್ಲೆನು ಬಳಿಕೆಲೆಮುನಿ 

ಹೆಗಲ ಮೇಲಣದೇನು ತೋರೆನಲವನಿಗೆ 

ತೆಗೆ ತೆಗೆದವಗೆ ತೋರಿದನು॥೧೨೬॥ 


ಇದು ಸುಪ್ಪತ್ತಿಗೆ ಭಸಿತದ ಭರಣಿಯು 

ಇದು ಘಂಟೆ ಚವರ ದರ್ಪಣವು 

ಇದು ಅರ್ಘ್ಯ ಆಚಮನವು ಆರತಿಯೆಂದು 

ಹದನ ಹೇಳಿದನು ಬೇಡನಿಗೆ॥೧೨೭॥ 


ಎಲ್ಲವ ಕಂಡೆನು ಜಲ್ಲಸಣೆಂಬುವ 

ಕಲ್ಲಿನ ಮಟ್ಟೆಯಿದೇನು 

ಬೆಲ್ಲಚ್ಚುಗಳೆ ಬಾಯಿ ಬೇಡಿದ ವ್ಯಾಳಾದಿ

ಮೆಲ್ಲುವುದಕ್ಕೆ ಆಹಾರವೊ ॥೧೨೮॥ 


ಎನ್ನನೀ ಕೇಳೈದು ಮನ್ಮಥ ಸ್ವರೂಪ 

ಕನ್ನಯ್ಯಗೊಲಿದಲಿಂಗಗಳ 

ಚನ್ನಾಗಿ ಪೂಜೆ ಮಾಡೆ ಪುಣ್ಯಗಳೆಂದು 

ಮನ್ನಿಸಿ ಹೇಳಿದನವಗೆ॥೧೨೯॥ 


ಎಂದರೆ ಲಿಂಗಪೂಜೆ ಮಾಡಿದವರಿಗೆ 

ಮುಂದಹ ಪದ ಫಲವೇನು

ಕುಂದದೆ ಹೇಳೆಂದು ಬಿಲ್ಲು ಬಾಣಗಳನು

ಒಂದು ಕೈಯಲಿ ಪಿಡಿಕೊಂಡ ॥೧೩೦॥ 


ದುರುಳ ಮಾತಂಗನು ಕರುಣದಿಂದಲಿ ಕೇಳೆನೆ 

ಒರೆದ ಸುಜ್ಞಾನಿ ತಾನೊಲೆದು 

ಪರಮೇಶ್ವರನ ಪೂಜೆಯ ಮಾಡೆ ಪೃಥ್ವಿಗೆ 

ಅರಸಾಗುವನು ಸಟೆಯಲ್ಲ ॥೧೩೧॥ 


ಹೊಲಬುದಪ್ಪೆತೊ ಸಮ್ಮಾದನಕೆ 

ಒಲಿದು ಸುಜ್ಞಾನಿ ತಾನೊಲಿದು 

ಪರಮೇಶ್ವರನ ಪೂಜೆಯ ಮಾಡೆ ಪೃಥ್ವಿಗೆ 

ಅರಸಾಗುವನು ಸಟೆಯಲ್ಲ॥೧೩೨॥ 


ಅಂದಳ ಛತ್ರವು ಮುಂದೆ ನುಡಿವ ವಾದ್ಯ 

ಚಂದದರಮನೆಯ ಐಶ್ವರ್ಯ 

ಇಂದಿಗೆ ಇರುತಿಹುದು ಶಿವಪೂಜೆಯ ಮಾಡಲು 

ಅಂದು ಸೃಯುಜ್ಯವನೀವ ॥೧೩೩॥ 


ಆದರೆ ಇವನೆಲ್ಲ ನಾನು ತೆಗೆದುಕೊಂಡು 

ಕಾದು ಪೂಜೆ ಮಾಡುವೆನೆನಲು 

ಕ್ರೋಧವಳಿದು ಸುಜ್ಞಾನಿ ಮಾತಂಗಗೆ 

ಓದಿ ಹೇಳಿದನಿಂತೆಂದು ॥೧೩೪॥ 


ಗುರುವಿಲ್ಲದ ಪೂಜೆ ಹರ ಮಾಡೆ ಮರಣವೆಂದು 

ಒರೆಯಲು ಮಾತಂಗತಮ್ಮ 

ದೊರೆತನವೆನಲಾಗ ಹರುಷವ ತಾಳುತ 

ಗುರುವಿಹುದೆಲ್ಲಿ ಪೇಳೆಂದ॥೧೩೫॥ 


ಇಲ್ಲಿ ತೋರುವೆ ನಿನಗೊಲ್ಲಭೆ ಸುತರುಂಟೆ 

ಗಲ್ಲನೆ ಕರಸುಯೆಂದೆನಲು 

ತಲ್ಲಣಿಸುತ ಹೋಗಿ ಕನ್ನುಗನ ಕರತಂದು 

ನಿಲ್ಲಿಸಿದನು ಯತಿಯೆದುರು॥೧೩೬॥ 


ಆಡಿ ತಪ್ಪುವನಲ್ಲ ನೋಡಿವ ಬಡವನು 

ಆಡ ಕಾಯ್ವನು ಅನ್ಯನಲ್ಲ 

ಕಾಡೊಳಗೆ ಅನ್ಯಾಯ ಹೆಸರಿಟ್ಟು ಬಾಳುವರ 

ಓಡಿಸುವನಿವನುರೆ ಬೇಗ॥೧೩೭॥ 


ನೆನ್ನ ಬಂಟನುಯಿವ ಕನ್ನುಗನೆಂಬವ 

ನನ್ನ ಮಾತನು ನಂಬುವನೆ 

ನಾನು ಹೇಳಿದ ಮಾತ ಕೇಳೆಂದು ಕನ್ನಗೆ 

ಚನ್ನಾಗಿ ನಂಬಿಕೆ ಕೊಡಲು॥೧೩೮॥ 


ಆಲಸ್ಯವಿಲ್ಲದೆ ಅಯ್ಯ ನುಡಿದ ನುಡಿ 

ನಾಲಿಗೆ ತಪ್ಪಲು ಪಾಪ 

ಮಾಲೆಯ ಕರತಂದು ಮಾಜದೆ ತೋರೆಂದು 

ಪಾಲಿಸಿದನು ನಂಬುಗೆಯ॥೧೩೯॥ 


ಕಡೆಗೆ ಕರತಂದು ಕನ್ನುಗನ ಕಾಡೊಡೆಯನು 

ನುಡಿದನು ಬೆಡಗಿನ ನುಡಿಯ

ಪೊಡವಿಯ ರಾಯರ ಕೂಡೆ ಕಾಳಗವಾಡೆ 

ಮಡಿದನು ಬಾರೆಂದು ಕರೆಯೊ॥೧೪೦॥ 


ಮನ್ನಿಸಿ ಹೇಳಲು ಕನ್ನುಗ ತಾ ಹೋಗಿ 

ಮನ್ನಣೆ ಮಾಲೆಯ ಕೂಡೆ 

ನಿನ್ನ ಗಂಡನು ಚತುರ್ಬಲದೊಳು ಕಾದುತಾ 

ತನ್ನ ಜೀವವ ನೀಗಿಕೊಂಡ ॥೧೪೧॥ 


ಸಿಕ್ಕದೆ ತಾ ಬಂದು ಲಕ್ಕಿಯ ಮೆಳೆಯೊಳು 

ಮುಕ್ಕರಿಸುತ ಬಂದು ಬಿದ್ದ 

ಅಕ್ಕಿಯ ಬಾಯೊಳಗಿಕ್ಕೆಂದು ಕರೆಯಲು 

ಅಕ್ಕರದಿಂದವ ಮನ್ನಿಸಿದೊ ॥೧೪೨॥ 


ಹೇಳಿದ ಮಾತನು ಕೇಳಿ ಮನ್ನಣೆಮಾಲೆ 

ಕೋಣೆಯ ಮನೆಯನು ಹೊಕ್ಕು 

ಬೇಳುವೆ ಬೂದಿಯ ತಳಿದು ತವಕದಿಂದ 

ಜಾಳಿಸಿ ನಡೆದಳು ನಗುತ॥೧೪೩॥ 


ಇತ್ತ ಬಾಗಿಲನಿಕ್ಕಿ ಮನ್ನಣೆಮಾಲೆಯು 

ಮುತ್ತು ರತ್ನವ ಕಟ್ಟಿಕೊಂಡು 

ಹಿತ್ತಲ ಬಾಗಿಲ ತೆಗೆದುಕೊಂಡು ತೆರಳಿದಳು 

ಮುತ್ತುಗನಿರುವ ಕಾನನಕೆ॥೧೪೪॥ 


ಹಾದೀಲಿ ಮಾಲೆಯ ವೇದಿಸಿ ನೋಡಿದೊ 

ಆದಿಯಗಂಡನಲ್ಲವಿವನು

ಹಾದು ಬಂದೆನು ಬೇಗ ಇಲ್ಲದಿದ್ದರೆ ಯೆನ್ನ 

ಬಾಧಿಸುವರು ಅರಸುಗಳು॥೧೪೫॥ 


ಇತ್ತಲವಳು ಹೋದ ಹೊತ್ತನು ಸುಜ್ಞಾನಿ 

ಚಿತ್ತದೊಳಗೆ ತಾನರಿದು 

ಅತ್ತಲೆ ಹೋದನು ತಿಳಿದು ನೀ ಬಾರೆಂದು 

ಮತ್ತೊಂದು ಮಾರ್ನುಡಿದ॥೧೪೬॥


ಬಿಟ್ಟು ಹೋದರೆಯತ್ತಲಾದರು ಹೋಗೆ 

ಅಟ್ಟಿ ಬರುವ ನಿನ್ನ  ಬೆನ್ನ 

ಸಟೆಯ ಮಾಡಿಕೊಟ್ಟರೆ ನಾನು ನಿಮ್ಮನು 

ಎಷ್ಟು ದಿನವೂ ಕಾಯ್ದಿರುವೆ॥೧೪೭॥ 


ವೃಕ್ಷವ ಬಿಟ್ಟು ನಾನತ್ತಿತ್ತ ಹೋದರೆ 

ಅಕ್ಷಿ ಮೂರುಳ್ಳವನಾಣೆ 

ಸಾಕ್ಷಿಗಳ ಒಯ್ವೆ ಸೂರ್ಯ ಚಂದ್ರನೆಂದರೆ 

ಆ ಕ್ಷಣ ಕೆಳೆಯಕೈದಿದನು॥೧೪೮॥ 


ತನ್ನ ಮನೆಯ ಹೊಕ್ಕು ಖಿನ್ನನಾಗಿರುತಿಹ 

ಕನ್ನನ ಕಂಡು ಕಂಗೆಟ್ಟು 

ಹೊನ್ನು ಹೋಗಿರೆ ಚನ್ನೆಯನರಸಿ ಕಾಣದೆ 

ಇನ್ನೊಂದು ನೆನೆದ ಮನದೊಳು॥೧೪೯॥ 


ಓಡಿ ಹೋದವಳು ಒಡೆಯರು ಹೋದರೆ 

ಮಾಡಿದ ಸತ್ಯವಲ್ಲವೆಂದು 

ಆಡನು ಕಾವ ಕನ್ನುಗನ ಕರೆದುಕೊಂಡು 

ಓಡಿಬಹನ ಕಂಡು ಮುನಿಪ ॥೧೫೦॥ 


ಅತಿ ವೇಗದಲಿ ಬಂದು ಈರ್ವರು ನಿಲ್ಲಲು 

ಸತಿಯೆಲ್ಲೆಂದು ಕೇಳಿದನು

ಶ್ರುತದೃಷ್ಟನು ಕಂಡು ಮುಖನೋಡಿ ಮಾತಂಗ 

ಯತಿ ಮುನಿಯೊಡನೆ ಇಂತೆಂದ॥೧೫೧॥ 


ನನ್ನ ಸತಿಯ ಕಾಣೆ ಕನ್ನ ಕಂಡಹನೆನುತ 

ನಿನ್ನ ಭೀತಿಗೆ ಹೇಳನೆಂದು 

ಮನ್ನಣೆ ಮಾಡಿ ಕೇಳೆ ಸುಜ್ಞಾನಿಯು 

ಮುನ್ನಿನ ಕಥೆಯ ಹೇಳಿದನು॥೧೫೨॥


ಇದ್ದುದನಾಡಿಯೆ ಗುದ್ದಿಸಿ ಕೊಂಡವನ 

ಚೋದ್ಯವ ಕೇಳು ಲುಬ್ಧಕನೆ 

ವೈದಿಕರಿಹ ಸರ್ವಜ್ಞಪುರದ ಮುಂದೆ 

ಇದ್ದನು ಒಬ್ಬ ಭೂಸುರನು॥೧೫೩॥ 


ಹಾದಿಲಿ ಬರುತವನ ಕ್ರೋಧಿಸಿ ವಿಪ್ರರು 

ಬಾಧಿಸುತಲಿ ಹಿಡಿತಂದು

ವೇದಾದ್ಯರ ಮುಂದೆ ನಿಲಿಸಲು ಇವನ 

ಭೇದವೇನೆಂದು ಕೇಳಿದರು॥೧೫೪॥ 


ಇವ ಕೃಷ್ಣಭಟ್ಟರ ಮಗಳು ದೇವಮ್ಮನ 

ವಿವರಿಸಿ ನುಡಿದ ತಪ್ಪೆನಲು 

ನೆವದಿಂದಲೇನ ಮಾಡಿದರೊ ನಾವರಿಯೆವು 

ಅವಳ ದುಃಖಕೆ ಕೊಂದೆವಿವನ ॥೧೫೫॥ 


ವೈಯ್ಯಾರದಯ್ಯ ತಾ ಕುಳಿತು ಕೇಳಿ 

ಬಯ್ಯಿಸಿಕೊಂಡವಳ ಕರೆಯೆನಲು ಕೈ 

ವಶ ಮಾಡಿ ಕನ್ನೆಯ ಕರೆತಾರೆ ಪವುರ 

ರಸನು ಹೇಳೆ ಬ್ರಾಹ್ಮಣನು॥೧೫೬॥ 


ಸೃಷ್ಟಿಯಲ್ಲವ ತಿರುಗಿ ಉತ್ಕೃಷ್ಟ ಕರೆದೆ ನಾನು 

ಕಟ್ಟೆಯ ಮೇಲೆ ಕುಳಿತಿರಲು 

ನೆಟ್ಟನಿವಳು ಬರೆ ದೃಷ್ಟವ ಕೇಳಲು 

ಇಷ್ಟಾಯಿತೆಂದ ವಿಪ್ರ ಕುಲಜ॥೧೫೭॥ 


ವಾಜೆಯುಳ್ಳವಳಿವಳೆಂದು ತೇಜದಿ ಕೇಳಿದರೆ 

ಸಾಜವಾಡುವ ನೀ ಪುರದಿ 

ರಾಜಿಸುವರೊ ಘರ್ಜಿಸುವರೊ ಈ ಪುರಜನ 

ದೋಜೆ ಹೇಗೆಂದು ಕೇಳಿದೆನು ॥೧೫೮॥ 


ನಮ್ಮ ಪುರದೊಳೆಲ್ಲ ಧರ್ಮದ ನುಡಿಯಲದ 

ಧರ್ಮದ ಮಾತಲೆಕ್ಕಿಸರು 

ಪೆರ್ಮೆಯಿಂದಲಿ ನ್ಯಾಯ ನಿಷ್ಠುರವ ಬಲ್ಲವರು 

ಗಮ್ಯರೀಶ್ವರ ಮೂರ್ತಿಪುರದಿ॥೧೫೯॥ 


ಎಲ್ಲವು ಚಂದವಾಯಿತು ಇವಳಾಡಿದ 

ಸೊಲ್ಲಿನ ಸೊಬಗ ನೋಡುವೆನು 

ಬಲ್ಲತನದ ಬಗೆಯ ನೋಡುವೆನುಯೆಂದು 

ಮೆಲ್ಲನೆಯೊಂದ ಯೋಚಿಸಿದೆ॥೧೬೦॥


ಇದ್ದ ರೂಪನು ಕಂಡು ನಿರ್ಧಾರದಿ ಕೇಳಿದೆ

ಬಿದ್ದಸ್ತನದ ಹೊರಹಲ್ಲ ಕುರುಡಿ 

ಹೊದ್ದಿದ ಗಂಡನ ನೀಗಿದ ಮುನಿ ಕನ್ಯೆ 

ಛಿದ್ರಿಸಿತೇಕೆ ಮೈರೇಖೆ॥೧೬೧॥ 


ಶರಿರದಿರವ ಹೇಳೆ ಕೆರಳಿ ಧರೆಗೆ ಬಿದ್ದು 

ಹೊರಳಿದಳು ಕೋಪದಲಿ 

ಮೊರೆದು ಶಪಿಸಿ ಕಲ್ಲು ಮರವ ಹಾಯ್ವಳ ಕಂಡು 

ಹರಿದೋಡೆ ಬಂದಿವರೆನಗೆ॥೧೬೨॥ 


ಅಡ್ಡ ಬಂದಿಬ್ಬರು ಗಂಡ ಮಂಡೇಯ ಹೊಯಿದು 

ಗೊಡ್ಡು ಗೋಟೆಯ ಕೊಂದರೆನ್ನ 

ಅಡ್ಡತನ ಮಾಡಿ ಹಿಡಿದು ತಂದರುಯೆಂದು 

ಒಡ್ಡಿದ ಸಭೆಗೆ ಹೇಳಿದನು॥೧೬೩॥ 


ಇದ್ದುದನಾಡಲು ಗುದ್ದಿಸಿದಳುಯೆಂದು 

ಬಿದ್ದರು ನಗೆಯ ಸೊಂಪಿನಲಿ 

ಹದ್ದುಗೈಯನು ಕಟ್ಟಿ ಹರಿಗೋಲೊಳು ಹಾಕೆ

ಇದ್ದುದಿಲ್ಲವು ಸುಮ್ಮನೆ ಬ್ರಹ್ಮಚಾರಿ॥೧೬೪॥ 


ಈ ಪರಿಯೊಳು ವಿಶ್ವಮೂರ್ತಿಯ ಪುರದೊಳು 

ಆ ಪುಣ್ಯ ಪುರುಷರು ಕೂಡಿ 

ಕೋಪಿಸುತವಳ ಬೈಯಲು ಬ್ರಹ್ಮಚಾರಿಗಳ 

ತಾಪ ತಗ್ಗುತಲಿ ವಿಪ್ರರಿಗೆ॥೧೬೫॥ 


ಹಿಂದಣ ಕಥೆಯೊಳು ಕೆಂದರ ಬಗೆಯಲ್ಲಿ 

ಅಂದಿನಂತಾಗೆ ಕನ್ನುಗನ 

ಸಂದೇಹ ಬಿಡಿಸಿ ನಂಬುಗೆಯ ಮಾಡೆನೆ 

ತಂದೆ ತಾಯಾಣೆ ಹೇಳೆಂದ ॥೧೬೬॥ 


ಆಣೆಯ ದೃಢದಿಂದ ಕಾಣದಂತವನೆಲ್ಲ 

ಮಾಣದೆ ತಮನುಡಿದ 

ಪ್ರಾಣದೊಲ್ಲಭ ಸತ್ತಮೇಲೆ ನೀ ಬಾರೆನೆ

ಊಣಿ ಹತ್ತಿದಳು ಮುತ್ತುಗನ॥೧೬೭॥ 


ಆ ಮಾತ ಕೇಳುತ ಮೊರೆವ ಹೆಬ್ಬುಲಿಯಂತೆ 

ಭೂಮಿಯ ಹೊಡೆದು ಬಿಲ್ದುಸುರೆ 

ರೋಮಗಳುಬ್ಬಿ ರೋಷವ ನೆರೆ ತಾಳುತ 

ತಾ ಮನದೊಳಗೆ ಇಂತೆಂದ೧೬೮॥ 


ಕೀರ್ತಿಯನು ವಾರ್ತೆಯನು ದೇಶವೆ ಬಲ್ಲದು 

ಸಾರ್ತವಾಗುವವರಾರು ಮುತ್ತುಗಗೆ 

ಧಾತ್ರಿಯೊಳಡಗಲು ಮುತ್ತುಗನ ಬಿಡೆನೆಂದು 

ಗಾತ್ರದ ಮಾತನಾಡಿದನು॥೧೬೯॥ 


ತರಿವೆನು ತಲೆಯನು ಮುರಿವೆನು ಕಾಲನು 

ಬರಿ ಮಾತಿಗೋಡಿ ಹೋದವಳ 

ಒರಲೊರಲರಿಚಲು ಚಿನಿಜಂಡವನು ಕೊಯಿದು 

ಕರಗಿಸಿ ತಿನಿಸುವೆನೆಂದ॥೧೭೦॥ 


ಅವನ ಕೋಪವ ಕಂಡು ಶಿವಮುನಿ ಇಂತೆಂದ 

ಇವನ ಮನವ ತಿಳಿದಿರೆ 

ಭುವನದೊಳಗೆ ಧರ್ಮ ಕೀರ್ತಿಗಳುಂಟೆಂದು 

ವೆವರವನರಿದು ಹೇಳಿದನು॥೧೭೧॥ 


ಮನ್ಮಥರೂಪು ಮಾತಂಗತಮ್ಮನೆ ಕೇಳು 

ಇನ್ನು ತಪ್ಪಿದ ಕಾರ್ಯವನು 

ಚನ್ನಾಗಿ ಜ್ಞಾನದಿ ತಿಳಿವುದುಚಿತವೆಂದು 

ಮನ್ನಿಸಿದನು ಮುನಿರಾಯ ॥೧೭೨॥ 


ಅರಿರಾಯರಾಗಲಿ ದುರಧೀರರಾಗಲಾ 

ಭರಣ ನಾಣ್ಯಗಳ ಕೊಟ್ಟವರ 

ಬೆರಸಿದ್ದ ತೋಳಪೊಕ್ಕು ತನ್ನದು ಕಾರ್ಯವ 

ತಿರುಹಿಕೊಂಬುದು ಕಜ್ಜವೆಂದ॥೧೭೩॥ 


ಭಂಡನಿವನುಯೆಂದು ಭೂಮಂಡಲವಳಿವುದು 

ಹೆಂಡತಿ ಹೋದರೆ ನೀನು 

ಕಂಡವರನಿಂದವರ ಕೇಳಲು ಕೀರ್ತಿಯು 

ಬಂಡವಾಗುವುದು ನಿನ್ನ ಬಾಳ್ವೆ॥೧೭೪॥  


ಕೀರ್ತಿಯ ಬಿತ್ತಿ ಸಾಮಾಜಿಕ ಬೆಳೆಯದೆ 

ಕರ್ತವ್ಯವಲ್ಲವೀ ಕಾರ್ಯ 

ಸಾರ್ಥವ ಮಾಡಿಕೊ ಸುತ್ತಣವರನೆಲ್ಲ 

ವ್ಯರ್ಥತನುವು ಬೇಡ ತಮ್ಮ॥೧೭೫॥॥ 


ಹೇಳುವರಿಗೆ ಒಂದು ಗಾಳಿಯ ಮಾತಷ್ಟೆ

ಆಳುವ ಸತಿ ಹೋಗೆ ಜವದಿ 

ಅಳುವವರುಂಟೇಯೆಂದು ಪುಳಿಂದನು ಕೇಳಲು 

ಹೇಳುತಿರ್ದನು ಸುಜ್ಞಾನಿ॥೧೭೬॥ 


ಬಲು ಬಂಟ ತಾನೆಂದು ಸುಲಿವರೆಂಬತಮ್ಮನು 

ಲಲನೆಯ ನೀಗಿದ ಮುನಿಪ

ಒಲವಿಂದ ಬಸವಣ್ಣ ಭಕ್ತರಿಗೊರೆಯಲು

ನೆಲೆಯಾದುದಿಲ್ಲೊಂದು ಸಂಧಿ॥೧೭೭॥ 


ಆದಿಹಯ ಸಂಧಿಯ ಸಂಪಾದಿಸಿ ಕೇಳಲು 

ಮಾದೇವರೊಡೆಯನವರಿಗೆ 

ಬೇಡುವ ಪದವಿಯ ಕೊಡುವ ಅವರೊಳು

ಭೇದವಿಲ್ಲದೆ ಬೇಗಲಿಹನು॥೧೭೮॥ 


ಹರಶರಣರು ಕೃತಿ ಹರುಷದಿ ಕೇಳಲು 

ದೊರಕೊಂಬುವದು ಶಿವಭಕ್ತಿ 

ಪರಮೇಶ್ವರ ಮೆಚ್ಚಿ ಭಕ್ತಿಯನೀವನು

ಸ್ಥಿರವಾಗಿ ಬಾಳುವರು ಸುಖದಿ॥೧೭೯॥


ನೆನಕೆ: 

ಕರ್ತೃ: ಉದ್ದಂಡಕವಿ 

ಪ್ರಧಾನ ಸಂಪಾದಕರು: ಕೆ. ಎನ್. ಗಂಗಾನಾಯಕ್; 

ಸಂಪಾದಕರು: ಹ. ಕ. ರಾಜೇಗೌಡ


ಪ್ರಕಾಶಕರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,  

ಮೈಸೂರು ವಿಶ್ವವಿದ್ಯಾನಿಲಯ

ಮಾನಸ ಗಂಗೋತ್ರಿ, ಮೈಸೂರು-೫೭೦೦೦೬.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ