ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಆಗಸ್ಟ್ 21, 2021

ಗಂಗಾದೇವಿ ವಿರಚಿತ ಮಧುರಾ ವಿಜಯಂ ಅಥವಾ ವೀರ ಕಂಪರಾಯ ಚರಿತಂ

ಮಧುರಾ ವಿಜಯಂ ಅಥವಾ ವೀರ ಕಂಪರಾಯ ಚರಿತಂ

ಕರ್ತೃ :- ವಿಜಯನಗರದ ಗಂಗಾದೇವಿ. 

ಅನುವಾದ: ಡಾ॥ ಕೆ. ಕುಶಾಲಪ್ಪ ಗೌಡ


ಕ್ರಿ. ಶ. ೧೩೨೩ ರಲ್ಲಿ ಓರುಂಗಲ್ಲಿನಲ್ಲಿ ಕಾಕತೀಯ ಪ್ರತಾಪ ರುದ್ರ ದೆಹಲಿ ಸುಲ್ತಾನನೊಡನಾದ ಯುದ್ಧದಲ್ಲಿ ಸೋತು ಮೃತನಾದ. ಅವನ ಸೇನೆಯಲ್ಲಿದ್ದ ಹರಿಹರ ತನ್ನ ಸಹೋದರರೊಡನೆ ಬಲ್ಲಾಳನ ಸಹಾಯಾರ್ಥ ಬಂದ. ವೀರಬಲ್ಲಾಳ ತನ್ನ ರಾಜ್ಯದ ಗಡಿಯ ಉದ್ದಕ್ಕೂ ಇವರನ್ನು ದೇಶ ರಕ್ಷಣೆಗೆ ಯೋಜಿಸಿದ. ಇವರೆಲ್ಲರೂ ಅವನ ಮಾಂಡಲಿಕರಾಗಿ ನಿಂತರು. ಕ್ರಿ. ಶ. ೧೩೪೬ ರಲ್ಲಿ ಹರಿಹರನ ಶಾಸನದಲ್ಲಿ ಅವನನ್ನು ಶ್ರೀಮನ್ಮಹಾಮಂಡಲೀಶ್ವರನೆಂದು ಕರೆದಿದೆ. ಇದರಲ್ಲಿ ವಿಜಯನಗರದ ಉಲ್ಲೇಖವೂ ಇಲ್ಲ. ಕ್ರಿ. ಶ. ೧೩೫೬ ರಲ್ಲಿ ಹರಿಹರ ಕಾಲವಾಗಿ, ಅವನ ತಮ್ಮ ಬುಕ್ಕ ರಾಜನಾದ. ಕ್ರಿ.ಶ. ೧೩೬೮ ರಲ್ಲಿ ಇವನು ವಿಜಯನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ಇವನೇ ವಿಜಯನಗರದ ಸ್ತಾಪಕ. ಕ್ರಿಯಾಶಕ್ತಿ ದೇಶಿಕರು ವಿಜಯನಗರದ ಸ್ಥಾಪನೆಗೆ ಮೂಲ ಪ್ರೇರಕರು. ಇಷ್ಟಾಗಿಯೂ ಬುಕ್ಕ ಚಕ್ರವರ್ತಿಯಾಗಿರಲಿಲ್ಲ. ಅವನ ಮಗನಾದ ಇಮ್ಮಡಿ ಹರಿಹರನೇ ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ.  


ವಿಜಯನಗರದ ಪ್ರಾದುರ್ಭಾವವಾದ ತರುಣದಲ್ಲಿ, ಆ ರಾಜ್ಯ ಸಂಸ್ಥಾಪನಾ ಕಾರ್ಯ ನಡೆದ ಕೆಲವೇ ವರ್ಷಗಳಲ್ಲಿ ಆ ರಾಜ್ಯಕ್ಕೆ ಸಂಬಂಧಿಸಿದ ಚಾರಿತ್ರಿಕ ಧ್ವನಿಯುಳ್ಳ ಕಾವ್ಯವೊಂದು ರಚಿತವಾಗಿದೆ. ಅದೇ ಬುಕ್ಕರಾಯನ ಸೊಸೆ ಕಂಪಣನ ಪಟ್ಟದರಸಿ, ಗಂಗಾದೇವಿ ರಚಿಸಿದ ಮಧುರಾ ವಿಜಯವೆಂಬ ಹೆಸರಿನ ವೀರ ಕಂಪರಾಯ ಚರಿತಂ ಎಂಬ ಕಾವ್ಯ. ಮಂಡಲದ ಚಂಪನನ್ನು ( ಸಾಂಬುವರಾಯ ) ನಿರ್ಮೂಲನ ಮಾಡಿ ಸುಮಾರು ಹತ್ತು ವರೂಷಗಳ ಕಾಲ ಮರಕತನಗರದಿಂದ ( ಅಂದರೆ ಕಾಂಚೀಪುರದಿಂದ ) ಪ್ರಜಾನುರಾಗಿಯಾಗಿ ಆಳಿದನು. ಆ ಮೇಲೆ ಮಹಾಸೈನ್ಯ ಸಮೇತನಾಗಿ ಮಧುರೆಯನ್ನು ಮುತ್ತಿ ಅಲ್ಲಿಯ ಸುಲ್ತಾನನನ್ನು ಸದೆಬಡಿದು ಮತ್ತೆ ಶಾಂತಿಯಿಂದ ರಾಜ್ಯವಾಳಿದನು. ದಕ್ಷಿಣದಲ್ಲಿ ಮುಸ್ಲಿಮರ ಆಳ್ವಿಕೆ ಕೊನೆಗೊಂಡು ವಿಜಯನಗರದ ಶ್ವೇತಚ್ಛತ್ರದಡಿಯಲ್ಲಿ ಹಿಂದೂಧರ್ಮ ಪುನರುತ್ಥಾನಗೊಂಡಿತು. ಇದು ಈ ಕಾವ್ಯದ ವಸ್ತು. 


ಭಾರತೀಯರಿಗೆ ಇತಿಹಾಸ ಪ್ರಜ್ಞೆಯಿರಲಿಲ್ಲವೆಂಬ ಪಾಶ್ಚಾತ್ಯರ ಹೇಳಿಕೆಗೆ ಗಂಗಾದೇವಿಯ ಕಾವ್ಯ ಒಂದು ಅಪವಾದದಂತಿದೆ ಎಂದು ಹೇಳಬಹುದು. ಇದು ಕೇವಲ ಇತಿಹಾಸವನ್ನು  ದಾಖಲಿಸುವ ಉದ್ದೇಶದಿಂದ ರಚಿತವಾದ ಗ್ರಂಥವೆಂದು ಹೇಳುವಂತಿಲ್ಲ. ಇದು "ಇತಿಹಾಸ ಕಾವ್ಯವಾಗಿದೆ " ಕಾವ್ಯಕ್ಕೆ ಸಹಜವಾದ ಕೆಲವಂಶಗಳನ್ನು ಬಿಟ್ಟರೆ ಚಾರಿತ್ರಿಕ ವಾಸ್ತವಿಕತೆಯ ಹಿನ್ನೆಲೆ ಸ್ಥೂಲವಾಗಿರುವುದು ಗೋಚರಿಸುತ್ತದೆ. 


ಕನ್ನಡ ಕುಲದ ಮೇಲಣ ಕಟ್ಟಾಭಿಮಾನಿಯಾದ ಗಂಗಾದೇವಿ ತನ್ನ ಕಾವ್ಯವನ್ನು ಬರೆದುದು ಸಂಸ್ಕೃತದಲ್ಲಿ. ಕನ್ನಡ ವೀರನ ಶೌರ್ಯ, ಧೈರ್ಯ, ಸಾಹಸಗಳನ್ನು ವಿದ್ವಲ್ಲೋಕವರಿಯುವಂತೆ ಮಾಡಲು ಸಂಸ್ಕೃತವೇ ಆಗಿನ ಕಾಲಕ್ಕೆ ಸರಿಯಾದ ಭಾಷೆಯೆಂದು ಅವಳು ಭಾವಿಸಿರಬೇಕು. ಶೂದ್ರರೂ ಸ್ತ್ರೀಯರೂ ಸಂಸ್ಕೃತ ಭಾಷೆಯನ್ನು ಕಲಿಯಲು ಅವಕಾಶವಿರಲಿಲ್ಲ. ಅಂತಹ ಸಂಪ್ರದಾಯವನ್ನು ಮುರಿದು. ಶ್ರೇಷ್ಠ ಸಂಸ್ಕೃತ ಕಾವ್ಯ, ನಾಟಕಗಳನ್ನು ಅಧ್ಯಯನ ಮಾಡುವುದು, ಓದಿ ಆನಂದಿಸುವುದು ಮಾತ್ರವಲ್ಲದೆ ತಾನೂ ಅದರಲ್ಲಿ ಕಾವ್ಯ ರಚನೆ ಮಾಡುವ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸುವ 

ಗಂಗಾದೇವಿಯನ್ನು ಎಷ್ಟು ಹೊಗಳಿದರೂ ಸಾಲದು. 


ಈ ಕಾವ್ಯ ಕನ್ನಡದಲ್ಲಿ ರೂಪುಗೊಂಡರೆ ಕನ್ನಡದ ದೇಶ, ಭಾಷೆ ಮತ್ತು ಸಂಸ್ಕೃತಿಯ ಸದಭಿರುಚಿಯ ಸಹೃದಯರಿಗೆ, ಸಂಸ್ಕೃತದಲ್ಲಿರುವ ಕಾವ್ಯವನ್ನು ಓದಿ ಆನಂದಿಸಲು ಆಸಕ್ತಿ ಮತ್ತು ಪಾಂಡಿತ್ಯದ ಕೊರತೆಯಿರುವವರಿಗೆ ಅನುಕೂಲವಾದೀತೆಂದು ಕನ್ನಡಕ್ಕೆ ಪರಿವರ್ತಿಸಿದೆನು. 


ಗಂಗಾದೇವಿಗೆ


" ಏಳು ಸುತ್ತಿನ ಕೋಟೆ, ಒಳಗೆ ರಾಜಕುಮಾರಿ " 

ಹೆಸರು ಗಂಗಾದೇವಿ! 

ಬುಕ್ಕರಾಯನ ಸೊಸೆಯು 

ವೀರವರ ಕಂಪಣನ ಹೃದಯದರಸಿ 

ಹೆಸರು ಗಂಗಾದೇವಿ! 

ತಾಯಿ ತಂದೆಯರಾರು? ಮತ್ತೆ ಸೋದರರು ? 

ಹತ್ತರಲಿ ಹನ್ನೊಂದು ಎಂದು ಅಂತಃಪುರದ 

ಇತರ ಹೆಣ್ಣುಗಳಂತೆ ನೀನೇಕೆ ಇರಲಿಲ್ಲ? 

ಬೇಟದಾಟವಿಲಾಸ ಸಮೃದ್ಧಿ ಸಂತೋಷ

ಸುಖಸಂಕಥಾ ವಿನೋದದಿ ಕಾಲ ಕಳೆಯಲಿಲ್ಲ ? 

ಒಲಿದ ಗಂಡನ ಮಿಲನ ನಿನಗಿದ್ದಿತಲ್ಲ ? 


ಮಹಾವೀರ ಕಂಪಣ 

ಜೀವ ಪಣ 

-ವಿಟ್ಟು ಸಾಮ್ರಾಜ್ಯವನ್ನು ವಿಸ್ತರಿಪ ಕಾರ್ಯ 

ಗೈದು ಚಿರ ಸಾಮ್ರಾಜ್ಯವಾಳಬೇಕೆಂದು 

ದಿಗ್ವೆಜಯ, ಸದ್ಧರ್ಮ ಸಂಸ್ಥಾಪನ - 

ಮಾಡಿ ದಕ್ಷಿಣ ಮಧುರೆಯನು ಗೆದ್ದನು; 

ಗೆದ್ದರೇನವನ, ಅಥವಾ ನಮ್ಮ ಸಾಮ್ರಾಜ್ಯ 

ಕಣ್ಣಮರೆಯಾಯ್ತು 

ವಿಜಯನಗರದ ವೀರ ವೈಭವವು ಮಣ್ಣಾಗಿ 

ಕನೂನಡಿಗರೆದೆಯ ಗತ ವೈಭವವದಾಯ್ತು 

ವೀರ ಸಿರಿ ವಿಧವೆಯವತಾರವಾಯ್ತು

ವೀರವರ ಕಂಪಣನ ಹೃದಯದರಸಿ, 

ಅವನಂತೌ ನೀನು ಸಹ ದಿಗ್ವಿಜಯಕೆಳಸಿ, 

ಎಂದಿಗಳಿಯದ ರಾಜ್ಯ ಸಂಪಾದಿಸಿತ್ತೆ! 


ಕರ್ಣಾಟ ರತ್ನ ಸಿಂಹೃಸನದ ಬದಲಾಗಿ 

ಕಾವ್ಯಲೋಕದ ರಾಜ್ಯ ನಿರ್ಮಾಣಗೈದೆ 

ಎಂದಳಿಯದೀ ಕಾವ್ಯ ಸಿಂಹಾಸನಾರೋಹ 

ಗೈಸವನ ನಿಲಿಸಿರುವೆ ಧನ್ಯೆ ನೀ ಮಾನ್ಯೆ! 

ಅಸಮ ಸಾಹಸ ಶಕ್ತಿ, ಶಾರದಾ ರೂಪಿಣಿ, 

ಧೀರ ಕಂಪನ ಹೃದಯ ವೀರವರ ಲಕ್ಷ್ಮಿ! 


ಕಲ್ಪನೆಯ ಕಣ್ಣಿಂದ ಹುಡುಕುತಿಹೆ ನಾನು 

ನಿನ್ನ ರೂಪನುಚಿತ್ರಗೊಳಿಸಬೇಕೆಂದು ; 

ಐನೂರು ವರ್ಷಕೆ ಹಿಂದೆ ಗತಿಸಿದೆ ನೀನು 

ಐವತ್ತು ವರ್ಷಕೆ ಹಿಂದೆ ನನಗೂ ಇದ್ದ 

ನನ್ನಕ್ಕನನು ನೀನು 

ಹೋಲಬಹುದೇನು ? 


ಸವಿಸವಿಯ ತಿನಿಸೂಡಿ, ಅಗಿ ಚಡ್ಡಿಯ ತೊಡಿಸಿ

ಧೂಳು ಮೆತ್ತಿದ ಮೈಯ ತೋಡಿನಲಿ ತೊಳೆಸಿ, 

ಸಿಂಗರದ ತೇರಲ್ಲಿ ದೇವ ಮೂರ್ತಿಯನಿಟ್ಟು , 

ಬೀದಿ ಬೀದಿಯಲೆಳೆದು ಜನಕೆ ದರ್ಶನವೀವ 

ತೆರದಿ, ತಲೆ ಬಾಚಿ, ಹೂ ಮುಡಿದು, ಲಂಗವನುಟ್ಟು, 

ಚೋಟುದ್ದ ರವಕೆ, ಮೊಳದುದ್ದ ಜಡೆ ಬಿಟ್ಟಿರುವ 

ಸಿಂಗಾರಿ- ನನ್ನನೆತ್ತಿ 

ತನ್ನ ಕಿರಿ ಸೊಂಟದಲ್ಲಿರಿಸಿ, 

ಆ ಮನೆಗೆ, ಈ ಮನೆಗೆ, ತೋಟಕ್ಕೆ ಹಿತ್ತಲಿಗೆ, 

ಸುರುಳಿ ಹೂ ಕೊಯ್ಯಲಿಕೆ, ಕೇದಗೆಯ ತರಲಿಕ್ಕೆ 

ಸುಳಿದಾಡಿದೆಳೆ ಬಾಲೆ ನನ್ನಕ್ಕನಿದ್ದಂತೆ- 

ನೀನು ಇದ್ದಿರಬಹುದೆ? ನಿನಗು ನನ್ನಂತೆ , 

ತಮ್ಮನಿದ್ದಿರಬಹುದೆ? 


ಕಂಪಣನ ಮದುವೆಯಾಗೊಮ್ಮೆ ತವರನು ತ್ಯಜಿಸಿ, 

ನೀ ಹೋದ ವೇಳೆಯಲ್ಲಿ ಅವನು ನನ್ನಂತೆ 

ನನ್ನಕ್ಕ ದಿಬ್ಬಣದಿ ಹೊರಟು ನಿಂತಾಗ, 

ಯಾಕೆಂದು ತಿಳಿಯದೆ ಹೋ ಎಂದು ಅತ್ತಂತೆ, 

ಅತ್ತು ರಂಪವ ಮಾಡಿ, ದೊಡ್ಡಮ್ಮ ಅಮ್ಮಂದಿರ 

ಅಳುವ ಹೆಚ್ಚಿಸಿದಂತೆ - ಅವನು ಅತ್ತಿರುವನೆ? 


ಐನೂರು ವರ್ಷ ! ಐವತ್ತು ವರೂಷ ! ಅಂತರವು ಬಹಳ! 

ಅಂತರಂಗದಿ ಮಾತ್ರ ಅಂತರವೌ ಇಲ್ಲಿ! 

ಅಳಿದಕ್ಕೆ ಶಾಂತಮ್ಮ! ಕರೆಯೈವುದು ಸಾಂತಮ್ಮ ! 

ಹೆಸರೆ ಹೂವಿನ ಮೃದುಲ ಸೌರಭ 

ನೀನಕ್ಕ ಗಂಗಾ!- ಮಧುರ ಭಾವತರಂಗ 

ಉನ್ಮೀಲಿಸುತ್ತಿದೆ, ನಿನ್ನ " ಮಧುರಾವೆಜಯ " - 

ವನ್ನು ತಾಯ್ನುಡಿಯಲ್ಲಿ ಉಲಿದು ನಾ ತೊದಲಾಡೆ

ನೀನಕ್ಕನಾಗಿ ಬಾನಲಿ ತಾರೆ ಕಣ್ಗಳಲಿ, 

ನೋಡಿ ಮೆಚ್ಚುವೆಯೇನು ಏನಕ್ಕ? 

ನೀ ನಕ್ಕು, ಹರಸುವೆಯ ನನ್ನೊಲವಿನಕ್ಕ? 

ಶಾಂತ - ಗಂಗಾ


ಮೊದಲನೆಯ ಸರ್ಗ


 ಕಲ್ಯಾಣವೆಸಗುವನು ಸಜ್ಜನರಿಗನವರತ 

ಶರಣಾಗಿ ಬಂದವರ ಸಂಕಲ್ಪವ 

ಸಿದ್ಧಿಸುವ ಶ್ರೀ ಕಲೂಪವೃಕ್ಷವೃಗಿರುವವನು

ದೇವ ಗಜವದನನೀಗೆಮಗೆ ಶುಭವ॥ ೧-೧॥


ನರ-ನಾರಿ ನಿರ್ಮಿತಿಗೆ ಬ್ರಹ್ಮನಿಗೆ ಪ್ರಾಮಾಣ್ಯ - 

ರಾಗಿಹರು ಚತ್ಪ್ರಭಾತ್ಮಕರು ಶಿವನು ಶಿವೆಯು 

ದಯೆಗೆಯ್ಯಲವರೆನಗೆ ಪ್ರತಿಬೋಧ ಶಕ್ತಿಯನು 

ಕರುಣೆಯಿಂದೆಂದವರಿಗೆರಗಿ ಬೇಡುವೆನು ॥೧-೨॥ 


ಆ ಮಹಾಕವಿಗಳೆಂಬರ ಮುಖಾಂಭೋಜವೆಂ- 

ದೆಂಬ ಮಣಿ ಪಂಜರದಿ ನಿಂತ ಶಾರಿಕೆಯೇ 

ಚೈತನ್ಯ ಜಲನಿಧಿಯನುಕ್ಕಿಸುವ ಚಂದ್ರಿಕೆಯೆ 

ದೇವಿ ವಂದಿಪೆ ನಾನು ನಿನಗೆ ಶಾರದೆಯೇ ॥೧-೩॥


ಸರ್ವಮಂಗಳೆಯೊಡನೆ ಶೋಭಿಸುವ ಪಾವಿತ್ರ್ಯ 

ವರ್ಷಿಸೈವ ಸರ್ವೇಶ ಮೂರ್ತಿಯಂತಿರುವ 

ಸರೂವಜ್ಞ ಗುರು ಕ್ರಿಯಾಶಕ್ತಿಯಭಿನವ ಶಿವನ 

ಪಾದಕಭಿವಂದಿಸುವೆ ಭಯಭಕ್ತಿಯಿಂದ ॥೧-೪॥ 


ಕಾವ್ಯರಸಧಾರೆಯನು ಮೊದಲಿಳೆಗೆ ಕರೆದವನು 

ದಿವ್ಯ ಮುನಿ ಆದಿಕವಿ ವಾಲ್ಮೀಕಿಯು 

ಸುಹೃತ್ಸಮೂಹಕೆ ನಿರಂತರಾನಂದವನು 

ವರೂಷಿಸಲಿ ಹರ್ಷಮಯಕ್ಕೆ ಭುವಿಯು ॥೧-೫॥ 


ತನಿಗರ್ವು ತುದಿ, ಮೊದಲು, ಎಡೆಯೆಲ್ಲ ಮಧುರ ರಸ- 

ವನು ತೀವಿಕೊಂಡಿರುವುದಾವ ಪರಿಯಲ್ಲಿ 

ವ್ಯಾಸಕೃತಿಯಂತೆಯಾಹ್ಲಾದ ಸಜ್ಜನರೆದೆಗೆ 

ಹರಿಸುತಿದೆ ಕಂಗೊಳಿಪ ಪ್ರತಿ ಪರ್ವಗಳಲಿ ॥೧-೬॥ 


ಕಾಳಿದಾಸನ ಅರ್ಥದಿಂದಲುಪಜೀವಿಸಿಹ - 

ರೆಲ್ಲ ಕವಿಗಳು ಎಂದರೇನಚ್ಚರಿ ?

ಕವಿನಿಕರ ಕಾಳಿದಾಸಗೆ ದಾಸರೆಂಬುದನು 

ಮೀರಲಿಕ್ಕೆಡೆಯುಂಟೆ ಲೋಕದಲ್ಲಿ? ॥೧-೭॥ 


ಶ್ರೀವಾಣಿಪಾಣಿಯಿಂ ನಿಕ್ವಣಿತವಹ ವೀಣೆ 

ಹೃದಯವನು ಸೆರೆಗೊಂಡು ನಲಿಸುವಂತೆ 

ಹೃದಯಹಾರಿಯು ಬಾಣಬಟ್ಟನದು ವಾಙ್ಮಹಿಮೆ, 

ಅನ್ಯರಿಗೆ ಕೈಸಾರ್ದು ಬರಲಪ್ಪುದೆ?॥೧-೮॥ 


ಬಕುಳ ಕುಸುಮದ ಮಾಲೆ ಮರ್ದನದಿ ಮಾಧುರ್ಯ, 

ಸೌರಭವನೀವವೊಲು ಭಾರವಿಯ ವಾಣಿ, 

ಮನನ ಮಾಡಿದರ್ಗಿನಿಯ ಆಹ್ಲಾದವೀಯುವುದು

ತನ್ನ ಸೌಂದರ್ಯವನು ಚೆಲ್ಲಿ ಸೂಸಿ ॥೧-೯॥ 


ದಂಡಿಯಾಚಾರ್ಯ ವಿಕಸಿತ ವಚಸ್ಸಂಪತ್ತು 

ಮಧುರತೆಯ ನವುರಾಗಿ ಕಂಗೊಳಿಪುದು

ಜಗವ ಸೃಷ್ಟಿಪನ ರಮಣೀಮಣಿ ವಿಲಾಸ ಮಣಿ- 

ದರ್ಪಣದವೋಲೆಂದು ಶೋಭಿಸುವುದು ॥೧-೧೦॥ 


ಕಿವಿದೆರೆಗೆ ಬಿದ್ದ ಬಣ್ಣನೆಗಳಮರ್ದನುಂಡಂತೆ 

ಸುಖವೀಯುತಿಹವೆಂಬ ಕಾರಣದಿ ನನಗೆ 

ಭವಭೂತಿ ಕವಿವಾಣಿ ಸುರಧೇನುವೆಂಬೊಂದು 

ಶಂಕೆಯೊಡಮೂಡುತಿದೆನನ್ನ ಎದೆಗೆ ॥ ೧-೧೧॥ 


ಮಂದಾರ ಕುಸುಮ ಮಂಜರಿಯಿಂದ ತೊಟ್ಟಿಕ್ಕಿ 

ಮಕರಂದವೊಂದು ಹೆಗ್ಗಡಲಾದವೋಲೆ

ಕರ್ಣಾಮೃತದ ಕವಿಯ ರಸವಾಣಿಯರ್ಣವವು 

ಎಲ್ಲರಿಗು ತನಿಸೊಗವ ಸೇಚಿಸುವುದಲ್ತೆ ॥ ೧-೧೨॥ 


ಇಂದುವಿನ ಕಿರಣಪೀಯೂಷವನ್ನೀಂಟುತ್ತ 

ಸುಖ ತೃಪ್ತಿವಡೆಯುವ ಚಕೋರವೆಂತಂತೆ 

ತಿಕ್ಕಯ್ಯ ಕವಿ ಸೂಕ್ತಿಯೆಂಬ ಹಿಮಕರ ಕಿರಣ- 

ವೀಂಟುವುವು ಕವಿಚಕೋರಗಳೊಲವಿನಿಂದೆ  ॥೧-೧೩॥ 


ಜ್ಞಾನವಾರಿಧಿಯಗಲವೆನಿತೆಂದು ತೋರ್ಪುದಕೆ 

ಎಪ್ಪತ್ತನಾಲ್ಕು ಕೃತಿಗಳ ತಾನು ರಚಿಸಿ 

ಮೆರೆವೆನೆಂಬನಗಸ್ತ್ಯ ಕವೆಶ್ರೇಷ್ಠನನು ಕಂಡು 

ಕರುಬದಿರುವನೆ ಭುವನದಿತರ ಕವಿ ಕಿನಿಸಿ ? ॥೧-೧೪॥ 


ವ್ಯಾಸಕೃತವಹ ಮಹಾಭಾರತವ ನಾಟಕದಿ 

ಅಳವಡಿಸಿ ಕಣ್ಣೆದುರು ಕಾಣುವಂತೆ 

ಗೈದ ಗಂಗಾಧರ ಮಹಾಕವಿಯ ನವವ್ಯಾಸ - 

ನವನನತ್ಯಂತ ಗೌರವದಿ ವಂದಿಸುವೆ ॥೧-೧೫॥ 


ಯಾವನ ಪ್ರಸಾದದಿಂದೆನ್ನತರ ವ್ಯಕ್ತಿಯಲು 

ಸರ್ವಜ್ಞತೆಯ ಕಿರಣ ಬೆಳಕೆತ್ತಿತೋ 

ಆ ಕವೀಶ್ವರ ವಿಶ್ವನಾಥ ಚಿರವಿಜಯಿಯಾ - 

ಗಿರಲೆಂದು ಮನವಾರೆ ಹಾರೈಸುತಿಹೆನು ॥೧-೧೬॥ 


ಅರ್ಥ ಕೆಲವದರಲ್ಲಿ, ಭಾವ ಕೆಲವದರಲಿ, 

ರಸದೊರತೆ ಕೆಲದರಲಿ ಕಾಣಬಹುದು 

ಅಂತಿದ್ದರೆಲ್ಲವಿವನೊಂದೆ ಕೃತಿಯೊಡಲಲ್ಲಿ 

ಮೇಳಿಸಿಹ ಪರಿಯನ್ನು ಕಾಣಲರಿದು ॥೧-೧೭॥ 


ಅತ್ಯಲ್ಪವಾದರೂ ದೋಷವಿರಲದು ದೂಷ್ಯ- 

ವಾಗುವುದು ಲೋಕದಲ್ಲಿ ಕಾವ್ಯ ದಿಟದೆ

ಎಂತೆನಲು ಕ್ಷಾರಕಣ ಬೆರಕೆಯಲಿ ಕರಿಯಗರು 

ದ್ರವಭರವು ಹಾಳಾಗಿ ಹೋಗುವಂತೆ ॥೧-೧೮॥ 


ಹದಿಬದೆಯು ತಾನಾದೊಡಂ ರೂಪವಿರದಿರಲು 

ಪತಿಯೆದೆಗೆ ನಾರಿಯಾಹ್ಲಾದವನು ಕೊಡಳು 

ದೋಷವಿಲ್ಲದ ಕೃತಿಯು, ಕಾವ್ಯಗುಣವಿರದಿರಲು 

ಬಲ್ಲರಿಗೆ ರಂಜನೆಯನೊದಗಿಸಲು ಬರದು॥೧-೧೯॥ 


ಕಾವ್ಯದಲ್ಲಿ ತುಳುಕುವೊಳಿತನು ತಳ್ಳಿ ದೋಷವನು 

ದುಷ್ಟನಾದವ ಕೆದಕಿ ಹುಡುಕುತಿಹನು 

ಕಾಡಿನಲಿ ಮಧುರ ಮಾಕಂದವನು ತ್ಯಜಿಸಿ ಕಹಿ 

ಬೇವು ಹಣ್ಣನೆ ಕಾಗೆಯರಸುತಿಹುದು॥೧-೨೦॥


ದುರ್ಜನನು ಚೌರ್ಯದಿಂದಾರ್ಜಿಸಿದ ಕಾವ್ಯವದು 

ಚಿರಕಾಲ ಬಾಳಲಿಕೆ ಸಾಧ್ಯವೆಹುದೇ?

ಕೈತವದ ರತ್ನಕಿಹ ಸಹಜವಲ್ಲದ ಕಾಂತಿ 

ಚಿರವಾಗಿ ಶೋಭೆಯನ್ನೀಯಲುಬಹುದೇ?॥೧-೨೧॥ 


ತಾರ್ಕಿಕರನೇಕರಾ ಶಾಬ್ಧಿಕರು ಸಾವಿರದ 

ಸಂಖ್ಯೆಯಲ್ಲಿ ಇರುತಿರುವರಾದರೂ ಕೂಡ 

ಲೋಕದಲ್ಲಿ ಸರಳವಾದಾಲಾಪದಿಂದೆದೆಗೆ 

ಸುಖವೀವ ಕವಿಗಳಿರುವುದು ತೀರ ವಿರಳ॥೧-೨೨॥ 


ದುಷ್ಕೃತ್ಯವನ್ನಟ್ಟಿ, ಸಂಪತ್ತುಗಳನೆತ್ತಿ 

ಕೀರ್ತಿಯನು ಪ್ರಸರಿಸುವ ಕವಿಯ ಕೃತಿಯು 

ಆನಂದದೂರ್ಮಿಗಳನುನ್ಮೀಲನಂಗೊಳಿಸಿ ,

ಮೆರೆವುದೆನೆ ಅದರಿಂದ ಲಭಿಸದೇನು॥೧-೨೩॥ 


ಸತ್ಕಾವ್ಯ ತೃಷ್ಣೆಯಿಂದಿರುವ ಸಹೃದಯನನು 

ಕಾವ್ಯವನು ಕೇಳೆಂದು ಬೇಡಬೇಕೆ? 

ಮಧುರಮಕರಂದವನು ಸವಿಯು ಬಾ ನೀನೆಂದು 

ಮಧುಕರನನಾರಾದರೂ ಬೇಡುತಿಹರೆ?॥೧-೨೪॥ 


ಓ ವಿಬುಧಮಣಿಗಳೇ ಲಾಲಿಪುದು ನನ್ನದೀ 

ಕಬ್ಬ ಶ್ರೀ ಕಂಪ ಭೂಪತಿಯ ಚರಿತ 

ನಾಮದಲ್ಲಿ ಸುಪ್ರಸಿದ್ಧವು ಮಧುರಾವಿಜಯ- 

ವೆಂಬುದಿಳೆಯಲ್ಲಿಂತು ಬೆಳಗುತಿಹುದು ॥೧-೨೫॥


ಸಕಲ ಸಾಮಂತ ಮಸ್ತಕನ್ಯಸ್ತ ಶಾಸನನು 

ಹರಿಹರನ ಸೋದರನು ಬುಕ್ಕ ಮಹರಾಜ 

ನಾಗರಿಗೆ ಶೇಷ, ನಗಗಳಲಿ ಹಿಮವಂತ, ಬಿಡು 

ಗಣ್ಣರಿಗೆ ವಿಷ್ಣುವೊಲು ಭೂಭುಜರೊಳಗ್ರ ॥೧-೨೬:೨೭॥ 


ಚಂಡಕರನಿಗು ಮಿಗಿಲು ತೇಜದಲಿ, ಶೀತಲನು 

ಅಮೃತಕರನಿಗು ಅಧಿಕವೆನಿಪ ತೆರದಿ 

ಗಾಂಭೀರ್ಯದೇಳ್ಗೆಯಲಿ ಹಿರಿದಹನು ಸಾಗರಕೆ 

ಮೇರೈವನು ಮೀರುವನು ಸ್ಥೈರ್ಯದಲ್ಲಿ ॥೧-೨೭:೨೮॥ 


ಆತಗೆ ವಿವೇಕವೆಂಬುದೆ ಮಂತ್ರಿ, ಧನುವೊಂದೆ 

ಪೆಂಪುವಡೆದಂತಹ ವರೂಥಿನಿಯು, ಬಾಹು

ಸಮರ ಸಂಗಾತಿ ಸತತೋತ್ಸಾಹಕೆಂದೆನಲು

ಅನ್ಯರ ಸಹಾಯ ತಾನಿನ್ನೇಕೆ ಬೇಕು ॥೧-೨೮:೨೯॥ 


ಸತತ ವಿಜಯದಿ ಜಿಷ್ಣು, ಸಾಗರವನಾಳ್ವುದಕೆ 

ಭುವನೇಶ, ಸಿರಿಯಲ್ಲಿ ಧನಧ, ಸಮವರ್ತಿ 

ನ್ಯಾಯಪಾಲನದಲೆನೆ, ಲೋಕಪಾಲಕ ಚತುರ್ 

ದೇವತೆಗಳಂತಿಳೆಗೆ ಬುಕ್ಕ ನೃಪತಿ ॥೧-೨೯:೩೦॥ 


ಬಾಹುಮಂದರದಿನಾ ವೈರಿವಾಹಿನಿನಾಥ 

ವಿಕ್ಷುಬ್ಧತೆಯ ಗೈಯಲೊದಗಿದಮೃತಯಶ 

ಎದೆಗೆ ಚಂದನ, ಕಿವಿಗೆ ಮುತ್ತಿನಾಭರಣ ಮುಖ-

ಕಾಯ್ತು ಕಪ್ಪುರವರಲಿನಂತಿತ್ತು ಸುಖವ ॥೧-೩೦:೩೧॥


ಗುಣವೆ ತಾ ಮೂರ್ತಿವೆತ್ತಂತಿರುರ್ಪ ಅವನ ಜಸ 

ಸುಂದರದ ಶುಭ್ರ ರೇಷಿಮೆ ವಸನದಂತೆ 

ಬ್ರಹ್ಮಾಂಡವೆಂಬುವ ಕರಂಡಕವ ಮುಸುಮುಸುಕಿ 

ಹಬ್ಬಿ ಹರಡಿತು ದಿಕ್ಕು ದಿಕ್ಕುಗಳಿಗೆ ॥೧-೩೧:೩೩॥ 


ಅವನ ಕರಧೃತ ಖಡ್ಗ ವೈರಿನೃಪರುಸಿರುಂಡು 

ಭೀಕರತೆ ಮೈಗೊಂಡು ಮೆರೆಯುತಿದ್ದು 

ಭಯವನುತ್ಪಾದಿಸುವ ಬುಸುಗುಡುವ ಎಲರುಣಿಯೋ 

ಹೆರೆಗಳೆವ ಭುಜಗನೋ ಎಂದಾಯಿತು॥೧-೩೨:೩೪॥


ವೈರಿಪಕ್ಷಶ್ರೀಯ ವೇಣಿಯಾಕರ್ಷಣವ 

ನಟಿಪಂತೆ ಸರ್ವರಿಗೂ ತೋರಿಬಂತು 

ಬಲದ ಬಲ್ಗೈಯಲ್ಲಿ ಒರೆಯಿಂದ ಖಡ್ಗವನು 

ತೀವ್ರದಲಿ ಸೆಳೆವಂತೆ ಅವನ ಬೆಡಗು ॥೧:೩೩-೩೫॥ 


ಜಗವ ರಕ್ಷಿಸಲಿಕೆ ಸದಾ ಜಾಗರೂಕತೆಯೊ - 

ಳಿರ್ಪನೆಡೆಗೈತಂದ ಲಕ್ಷ್ಮಿ ದಿಟದಿ, 

ಯೋಗನಿದ್ರಾ ನಿರತನಾದ ಜಡ ವೆಷ್ಣುವನು 

ಎಂದಿಗೂ ಮರೆತು ಬಿಟ್ಟಳು ಪೂರ್ಣವಾಗಿ ॥೧: ೩೪-೩೬॥ 


ಕಲಿಕಾಲವೆಂಬುಗ್ರ ತಪನಂದುರೆ ಬೆಂದು 

ಬಾಡಿದ್ದ ಧರ್ಮವೆಂಬುವ ಮಹೀರುಹವು 

ಅವ ಗೈವ ದಾನಾಂಬು ಸೇಚನದಿ ನೀರುಂಡು 

ಆರಂಭಿಸಿತು ಹೊಸತು ತಳಿರ ಬಿಡಲು॥೧ : ೩೫-೩೭॥ 


ಪಾದಪೀಠಕೆ ತಾಗಿ ಕಲೆಗೊಂಡ ಮಕುಟಗಳ 

ಧರಿಸಿದ್ದ ಹಲವಾರು ರಿಪುವೀರನೃಪರು 

ರಾಜವಿಜಯಸ್ತಂಭ ನೆಟ್ಟು ನಿಲಿಸಿದ ತೆರನೆ

ದಿಕ್ಕು ದಿಕ್ಕುಗಳಲ್ಲು ನಿಂತಿದ್ದರು॥ ೧: ೩೬-೩೮॥


ವೈರಿಭೀಕರವಾದ ಅವನ ಪ್ರತಾಪವೆಂ

ಬನಲಜ್ವಾಲೆಯ ಮಾಲೆ ನುಂಗಿ ನೊಣೆದು 

ಬಿಟ್ಟುದಕೆ ಅನ್ಯರಾಜರ ಕೀರ್ತಿಶ್ರೀ ಕರಟಿ

ಮಸುಕಾಗಿ, ಮಂಕಾಗಿ, ಮಲಿನವಾಯ್ತು ॥೧:೩೭-೩೯॥ 


ವಿಜಯಯಾತ್ರೆಗೆ ಬಾನ ಬಾಗಿಲಲಿ ತಡೆಯಾದ 

ಮೋಡಗಳ ಶಿಕ್ಷಿಸಲು ಬಂಧಿಸಿದರೇನೋ 

ಎಂಬಂತೆ ಶೃಂಖಲಿತ ವಿಜಯ ಸಿಂಧೂರಗಳು 

ನಿಂತಿದ್ದುವವನ ಸಭೆಯಂಗಣದೊಳು ॥೧: ೩೮-೪೦॥ 


ಸೇನಾತುರಂಗ ಖುರ ಹತಿಯಿಂದ ದಟ್ಟೈಸಿ 

ಮೇಲೆದುದು ಮುಸುರಿಬಹ ಧೂಳ ಕಂಡು, 

ಏನಿದಾಕಸ್ಮಿಕವು ರಾಹುವಡ್ಡೈಸಿದನೆ ? - 

ಎಂದು ಸುಗಿದನು ಚಂಡ ಮಾರ್ತಂಡನೂ॥ ೧:೩೯-೪೧॥


ಅವನ ವೈಭವದೇಳ್ಗೆಯೆಡೆಯಲ್ಲಿ ಮಂಕಾಯ್ತು 

ಧನಪ, ಸುರಪರ ಶ್ರೀಯು ಕೂಡ ಹೀಗಿರಲು 

ಧುರ್ಯೋದನಾದಿಗಳ ವಿಭವವೈಶ್ವರ್ಯಗಳು 

ದೂರವುಳಿದವು ಹೋಲ್ಕೆಗೆಡೆಯ ಕೊಳಲು ॥೧:೪೦೪೨॥ 


ಬುಧರಿಂದ " ಸುರಪತಿಯ ನಗರವಮರಾವತಿಯೆ" 

ಎಂದು ಹೊಗಳಿಸಿಕೊಂಡ ವಿಜಯನಗರವದು 

ವಿಜಯಾರ್ಜಿತದ ಸಿರಿಗೆ ಒಡೆಯನಾದವನಿಪಗೆ 

ರಾಜಧಾನಿಯಾಗಿ ಪೆಸರ್ವೆತ್ತುದು ॥೧:೪೧-೪೩॥ 


ಸುರಲೋಕವನು ಸುತ್ತಿ ಪ್ರವಹಿಸುವ ಸ್ವರ್ಗಂಗೆ - 

ಯೊಡನೆ ಮತ್ಸರಿಪಂತೆ ತುಂಗಭದ್ರೆ 

ಈ ಪುರದ ಸುತ್ತಲೂ ಪರಿಖಾತದಂತಾಗಿ 

ಚೆಲುವಾಗಿ ಸುಳಿಸುತ್ತಿ ಹರಿಯುತ್ತಿದೆ ॥೧:೪೨೪೪॥ 


ಶ್ರೀ ಲಕ್ಷ್ಮೀ ಲತೆಗೆಸೆವ ಪಾತಿಯೋ ಭೂವಧೂ 

ಚಾರುನಾಭಿಯೊ ಎಂಬ ಶೋಭೆವೆತ್ತು 

ಚಕ್ರ ಪರ್ವತ ಶಿಖರದನಿತು ಉನ್ನತಿಯಿಂದ 

ಸುತ್ತಿರುವ ಪ್ರಾಕಾರ ತೋರುತಿತ್ತು ॥೧:೪೩೪೫॥ 


ಮಣಿಗಣಮರೀಚಿಯಿಂದಿಂದ್ರಧರನುವನು ರಚಿಸಿ 

ತೋರುತಿಹ ಹಲವು ಮಣಿ ಗೋಪುರಗಳು 

ಮೇರುಶೃಂಗಗಳೆಂಬ ಭ್ರಾಂತಿಯನು ಬರಿಸುತ್ತ 

ಆ ನಗರದೊಳಗೆ ಕಂಗೊಳಿಸಿದ್ದುವು ॥೧:೪೪-೪೬॥ 


ಉತ್ಫುಲ್ಲ ನಾಗ ಸಂಪಿಗೆಯಸುಗೆ ಕೇಸರೀ 

ವೃಕ್ಷಗಳು ತುಂಬಿರುವ ನಂದನಗಳು, 

ನೆಲೆಮನೆಯು ಆ ವಸಂತನಿಗೆಂದು ಶೋಭಿಸುತ- 

ಲಿರ್ದುವು ನಗರದಲಿ ಎಲ್ಲೆಡೆಯೊಳು॥೧:೪೫-೪೬॥ 


ಕರ್ಪೂರ ಕದಳಿಯೆಳಲತೆಯ ನೆರಳಾಶ್ರಯಿಸಿ 

ನಿಂತ ಕತ್ತುರಿಮಿಗಗಳಿಂದ ಚೆಲುವಾಗಿ 

ಮೆರೆವ ಕೇಳೀಶೈಲಗಳು ಮದನ ದುರ್ಗಗಳೆ 

ನಿಜವಾಗಿ,ಎಂಬಂತೆ ಇದ್ದುವಲ್ಲಿ ॥೧:೪೬-೪೮॥ 


ಕಮಲದಾಮೋದ ಕಳಹಂಸಕುಲ ಕಳರವವು 

ಕೈಗೆಯ್ದ ರನ್ನವಣಿ ಸೋಪಾನ ಪಂಕ್ತಿ 

ಕೂಡಿರುವ ಕ್ರೀಡಾ ಸರೋವರಗಳತಿರಮ್ಯ 

ವಾಗಿದ್ದುವು ವಿಜಯನಗರದಲ್ಲಿ ॥೧:೪೭-೪೯॥


ಒಂದುಳಿಯದಂತೆಯರಿನಗರಗಳ ಜಯಿಸಿ ಬಂ 

ದವನ ಕೀರ್ತಿಯು ಘನಿಸಿ ರೂಪುದಳೆದಿತ್ತೋ? 

ಎಂಬಂತೆ ಶರದಭ್ರ ಶುಭ್ರ ಪಾಂಡುರ ವರ್ಣ 

ಸೌಧಗಳು ಔನ್ನತ್ಯವಡೆದಿದ್ದುವೆನಿತೋ ॥೧:೪೮-೫೦॥


ಲಲಿತ ಲಲನಾಲತೆಗಳಲ್ಲಿ ವಿಕಸಿಸಲೆಂದು, 

ನಿರ್ಮಿಸಿದ ಸೊಬಗ ವನವಾಟಿಯಂತೆ 

ತೆಂಕು ದಿಸೆವೆಣ್ ಪಣೆಗೆ ಲೀಲಾವಿನೋದದಿಂ - 

ದಿಟ್ಟ ಮಣಿವಟ್ಟವೆನೆ ಪಟ್ಟಣದ ಕಾಣ್ಕೆ॥೧: ೪೯-೫೧॥


ಉಲ್ಲಸಿತ ದ್ವಿಜರಾಜ ಗೋಷ್ಠಿಯಿಂ, ಗಾಂಧರ್ವ 

ಗಾಯಕರ ಸಂದೋಹದಿಂದೆಂದು ತುಂಬಿ 

ರಾಕಾ ಶಶಾಂಕನಿಂ ಮೆರೆವ ಹುಣ್ಣಿಮೆಯಿರುಳಿ-

ನಂತೆ ಪುರವೆಸೆದಿತ್ತು ಸುಖವ ಬೀರಿ ॥೧:೫೦-೫೨॥ 


ಬೊಜಗರಿಂಗಾವಾಸವಾದುದಕ್ಕದು ಭೂತ 

ನಾಥ ಮಕುಟವೊ ಎಂದು ತೋರಿ ಬಂತು 

ಸುಮನಸರ ಸಂಚಾರಕೆಡೆಯಾದ ಕಾರಣದಿ 

ಸ್ವರ್ಣಗಿರಿ ಮೇಖಲೆಯೋ ಎಂದಾಯಿತು ॥೧:೫೧-೫೩॥ 


ಸಕಲ ಶುಭಗಳಿಗಾಡುವೊಲನು, ಸಿರಿ ಸಂಪದಕೆ 

ಸಲುವ ನೆಲೆ, ಸರುವ ರತುನಕೆ ಚೆಲುವಿನ 

ಮಾಲೆಯಿದುಯೆಂಬ ಕಾರಣದಿಂದ ಸುಕೃತಾಂಬು- 

ನಿಧಿವೇಲೆಯೆಂದೆನ್ನಿಸಿತು ಸೊಬಗಿನ ॥೧:೫೨-೫೪॥


ಅದರ ಉನ್ನತವಾದ ಪ್ರಾಸಾದ ಶೃಂಗದಲಿ 

ಸಿಲುಕಿಕೊಂಡಿರ್ದಂಥ ಮಾರ್ತಾಂಡ ಬಿಂಬ,

ನೋಳ್ಪರಿಗೆ ಭ್ರಮೆಯನುಂಟಾಗಿಸಿತ್ತಿದು ಒಂದು 

ಹೊನ್ನ ಕಳಸದ ಅಲಂಕಾರವೆಂಬಂಥ ॥೧:೫೩-೫೫॥ 


ಅದರ ಸೌಧದ ಚಂದ್ರಶಾಲೆಯಲಿ ವಿಹರಿಸುವ 

ಏಣಾಕ್ಷಿಯರು ತಮ್ಮ ಗೆಡೆಯಾಟದ 

ಮೌಕ್ತಿಕದ ಕಂದುಕವಿದೆಂದು ಕೈಯಿರಿಸಿದರು 

ಪರಿಯೈವ ಶಶಾಂಕನಿಗೆ ಶಂಕೆಯಿಂದ ॥೧:೫೪-೫೬॥ 


ಅಲ್ಲಿ ಸೌಧಂಗಳಿಂದುಗುವ ಸಂಗೀತ ಮೃ-

ದಂಗ ನಿಸ್ವನ ಕೇಳ್ದ ಮತ್ತ ಶಿಖಿ ನಿಕರ 

ಅಚ್ಚರಿಯೊಳೊಸೆದು ತಾಂಡವ ನೃತ್ಯವಾಡಿದುವು

ಕಾಲವಲ್ಲದ ಕಾಲದಲ್ಲಿ ಕೂಡ ॥೧:೫೫-೫೭॥ 


ರಾಜಿಸುವ ಸೌಧಂಗಳೆಡೆಯಾಡುತಿಹ ಮೇಘ 

ಮಾಲೆಗಳು ಪದ್ಮರಾಗದ ವರ್ಣದಿಂದ 

ಪ್ರತಿಫಲನವಂಗೊಂಡು ಸಂಜೆ ಮುಗಿಲೆಂಬವೊಲು 

ಮೆರೆಯುತ್ತಿದ್ದುವು ಸದೃ ಸೊಬಗಿನಿಂದ ॥೧:೫೬-೫೭॥


ಸಂಜೆಯಲ್ಲಿ ಮನೆಮನೆಯ ಜಾಳಾಂದ್ರದಿಂದುಗಿದು 

ಓಡುತಿಹ ಧೂಮರಾಶಿಯ ಬೆಡಗು ನೋಡೆ 

ಸೊಡರ ಬೆಳಕಿನ ಇರಿತಕಗಿದೋಡುತಿಹ ಇರುಳ 

ಸುರುಳಿಯೇ ದಿಟವೆಂದು ಕಾಣ್ಬುದಂತೆ ॥೧:೫೭-೫೯॥ 


ಅಲ್ಲಿಯ ಸರೋವರದಿ ಜಕ್ಕವಕ್ಕಿಯ ಜತೆಗೆ 

ನಟ್ಟಿರುಳ ಕಾಲದಲು ವಿರಹವಿಲ್ಲ 

ಮಾಣಿಕ್ಯಮಯವಾದ ಸೋಪಾನಪಂಕ್ತಿಗಳೆ 

ಕಾರಣವು ತಾನದಕೆ, ಬೇರೆಯೇನಿಲ್ಲ ॥೧:೫೮-೬೦॥ 


ಲಲನಾ ಮುಖಾಂಭೋಜ ಲಾವಣ್ಯಸ್ಫುರಣವನು 

ಕಂಡು ಸಿಗ್ಗಾದನಾ ಗಗನ ಚಂದ್ರಮನು 

ತನ್ನದೆಯ ಕುದಿಹವೇ ಕೆನೆಗೊಂಡಿತೆಂಬಂತೆ 

ಧರೆಸಿದನು ಒಡಲಲಿ ಕಳಂಕವನ್ನು॥೧:೫೯-೬೧॥


ಯುವಜನರ ಹೃದಯವನ್ನಿರಿದು ತೇಂಕಾಡಿಸುವ 

ನಾರೀಕಟಾಕ್ಷಗಳ ಕೂರಲಗ ಕಂಡು 

ಪುಷ್ಪಾಸ್ತ್ರ ತನ್ನೈದು ಬಾಣಗಳ ನೆರವೇಕೆ? 

ಎಂದವುಗಳನ್ನು ತೊರೆದೇ ಬಿಟ್ಟನಂದು ॥೧:೬೦-೬೨॥


ಮಂಜುಮಂಜೀರ ಮಣಿ ಕಿಂಕಿಣೀ ನಾದದಿಂ-

ದಾಕೃಷ್ಟ ಮಾನಸಂಗಳಂಚೆವಿಂಡು 

ಲಲಿತ ಪದವಿಡುವ ಗತಿ ಜಾಣ್ಮೆಯನು ಕಲಿಯಲಿಕೆ 

ಸೊಬಗೆಯರನಲ್ಲಿ ತಾವೋಲಗಿಸುತಿಹವು ॥೧:೬೧-೬೩॥ 


ಶೂನ್ಯವಾದಾಗಾಸದಿ ಆ ಪಯೋಧರವಂತು 

ದಟ್ಟೈಸಿ ನಿಂತಿರುವುದಚ್ಚರಿಯದೇನು ? 

ಶೂನ್ಯಮಧ್ಯಯರಾದ ಪುರವನಿತೆಯರು ತಾಳ್ದ  

ಆ ಪಯೋಧರದ ಸಾಧೃಶ್ಯವಿಲ್ಲೇನು?॥೧:೬೨-೬೪॥ 


ಕಠಿಣತೆಯ ಕಾಣುವುದು ಅಬಲೆಯರ ಮೊಲೆಗಳಲಿ 

ಕೊಂಕಿರುವುದವರ ಸುಳಿಗುರುಳಿನಲಿ, 

ಕೊರತೆ ಮಧ್ಯದಲ್ಲಿರುವುದಲ್ಲದೆ ಬೇರೆಯರಸಿದರು

ದೊರೆಯದಾ ನಗರದಲ್ಲಿ ಇನಿತಲ್ಲದೆ॥೧:೬೩-೬೪॥ 


ಬಹು ಧನಪರಾಶ್ರಯವು ಹಂಪೆಯಾಗಿರುವುದದರ 

ಉಪನಗರವಲ್ಲಧಿಷ್ಠಿತನಾಗಿ ಮೆರೆವ, 

ದೇವನು ವಿರೂಪಾಕ್ಷ ತನ್ನಲಕ ನಗರಿಯನು 

ಎಂದೆಂದಿಗೂ ಸ್ಮರಣೆಮಾಡಲಿಲ್ಲ॥೧:೬೪-೬೬॥


 ಅನವದ್ಯ ಪಟು, ಪರಾಕ್ರಮಿಯಾಗಿ ಆಳುವನು 

ಭೂಮಿಯನು ವಿಜಯಪಟ್ಟಣದಿಂದ ಭೂಪ 

ಅಮರಾವತೀ ನಗರದಿಂದ ಸ್ವರ್ಗವನಾಳ್ವ 

ಪುರುಹೂತನೆಂತಂತೆ ವಿಭವದಿಂದ ॥೧:೬೫-೬೭॥ 


ಮಿತ್ರಾಭ್ಯುದಯದಿಂದ ಹರ್ಷಿಸುವ ಪರಿಪೂರ್ಣ  

ದಕ್ಷತೆಯ ರಾಜಧರೂಮದ ನೃಪನ ಕಟಡು, 

ಮನುವಿನವತಾರವೀ ಭೂಪ, ದಿಟ ದಿಟವೆಂದು 

ಪ್ರಜೆಗಳತಿ ಹರ್ಷದಿಂ ಹೊಗಳುತಿಹರು॥೧:೬೬-೬೮॥ 


ಸುಜನರಾದರ್ಶವಹ ಭೂಪನಿಗೆ ಪುರೈಷಾರ್ಥ- 

ಗಳಲಿ ಸಮದೃಷ್ಟಿಯಿದ್ದರು ಧರ್ಮದಲ್ಲಿ 

ಆಸಕ್ತಿಯಿನಿತಧಿಕವಾಗಿತ್ತು ತ್ರಿಗುಣಗಳ 

ಪುರುಷೋತ್ತಮಗೆ ಪ್ರಿಯವು ಸತ್ವದಂದದಲಿ॥೧:೬೭-೬೯॥ 


ದಾನಗಳ ಕೈಯಲ್ಲಿ, ಸೂಕ್ತಿಗಳ ಕಿವಿಯಲ್ಲಿ,  

ಮುಕ್ಕಣ್ಣಪಾದಪದ್ಮವ ಮಕುಟದಲ್ಲಿ 

ನಿತ್ಯ ಧರಿಸಿದ ದಿವ್ಯ ಭೂಷಣವು ಅವನ ಶ್ರೀ-

ಶ್ರೇಯಗಳ ಪ್ರಾಪ್ತಿ ಪಾಲನೆಗಾದುವಲ್ಲಿ॥೧:೬೮-೭೦॥ 


ಮಲಯ ವಿಂಧ್ಯಾ ರೋಹಣಾಸ್ತಗಿರಿಗಳ ಮೇರೆ- 

ಯಿಂದಾಚೆಗಿದ್ದಹಿತ ನೃಪರೈ ಭಯದಿಂದ 

ನಡುಗಿದರು, ಕಪ್ಪ ಕಾಣ್ಕೆಯನಿತ್ತು ಎರಗಿದರೈ, 

ದೆಸೆದೆಸೆಯ ಅರಸುಗಳು ಭಕುತಿಯಿಂದ ॥೧:೬೯೭೧॥ 


ಕುಲಕ್ರಮಾಗತಿಯಿಂದ ಸಂಪ್ರಾಪ್ತಮಾಗಿರುವ 

ಕ್ಷೋಣೀಭರಣ ಕಾರ್ಯದಲ್ಲಿ ಜಾಗೃತನು 

ವಿಪುಲ ಭೋಗವ ಕ್ರಮದಿನನುಭವಿಸಿದರುಪ್ರಭುವು 

ಭೋಗ ವಿಷಯದಲನಾಸಕ್ತ ಮನನು॥೧:೭೦-೭೨॥ 


ಹರಿಗೆ ರಮೆ, ಹರಗೆ ಉಮೆ, ಹೃದಯಾದಿ ದೇವಿಯರು

ತಾವಾಗಿ ಮೆರೆಯುವುದು ಜಗವಿದಿಯವಲ್ತೆ

ಅಂತೆಯಾದಳು ದೇವಿ ದೇವಾಯಿಮನದನ್ನೆ 

ವಿಜಯನಗರದ ವೀರವಸುಮತೀಶನಿಗೆ ॥೧:೭೧-೭೩॥ 


ನಕ್ಷತ್ರಗಣದಲ್ಲಿ ರೋಹಿಣಿಯು ಮಾತ್ರವೇ 

ಹೃದಯಹಾರಿಣಿಯಾದ ತೆರದಿ ಚಂದ್ರಮಗೆ 

ಆ ರಾಣಿವಾಸದಿತರೆಲ್ಲ ಪತ್ನಿಯರಲ್ಲಿ 

ಇವಳೆ ಪ್ರಿಯಳಾದಳಾ ನೃಪಚಂದ್ರಗೆ ॥೧:೭೨-೭೪॥


ಕರ್ಣಾಟಲೋಕ ನಯನೋತ್ಸವ ಪೂರ್ಣಚಂದ್ರ 

ವೀರಶ್ರೀವರ, ವಲ್ಲಭೆಯ ನಲ್ಮೆಯಿಂದ, 

ಕಾಲೋಚಿತದ ಸೊಗವನುಣುತ ಮುದದಿಂದ 

ವಿಜಯನಗರದೊಳಾಳ್ದ ಮನುಜೇಂದ್ರ ಚಂದ್ರ॥೧:೭೩-೭೫॥


ಶ್ರೀ ಗಂಗಾದೇವಿ ವಿರಚಿತ ಮಧುರಾವಿಜಯವೆಂಬ ವೀರ ಕಂಪರಾಯ ಚರಿತಂ ಮೊದಲನೆಯ ಸರ್ಗ. 


ಎರಡನೆಯ ಸರ್ಗ


ಮೊತ್ತಮೊದಲಿಗೆ ಪ್ರಕೃತಿ ಮೂಲೋಕನಿರ್ಮಿತಿಗೆ 

ಬ್ರಹ್ಮನಿಂ ತೇಜವನು ಧರಿಯಿಸಿಯಿದ್ದಂತೆ 

ರಾಜನಿಂ ವಂಶಬೀಜವ ತನ್ನ ಗರ್ಭದಲಿ

ಧರಿಸಿದಳು ದೇವಿ ತಾನನುರಾಗದೆ॥೨:೧॥ 


ರಾಜೀವವನವಿರದ ರಾಕಾಶಶಾಂಕನಂ 

ಬಿಂಬಿಸುವ ಶಾರದದ ಸ್ವಚ್ಛನದಿಯಂತೆ 

ಶರಃಪಾಂಡುವರ್ಣಮುಖಿ ಮುತ್ತು ರತ್ನದ ಹಾರ- 

ವನು ತೊರೆದು ಕೃಶವಾಗಿ ಮೆರೆಯುವಳು ಪ್ರಮದೆ॥೨-೨॥ 


ತನ್ನ ಗರ್ಭದಲಿರುವ ಶಿಶುಗೆ ಭೂಭರಣವನು 

ಕಲಿಸಿಕೊಡುವಳೊ ಮೊದಲೆ ಏನೊ ಎಂದು 

ಪಾರ್ಥಿವನ ಧರ್ಮಪತ್ನಿಯು ಮೃತ್ತಿಕೆಯ ಬಯಸು- 

ತಾಸ್ವಾದಿಪುದು ಚೆಲುವನೊಡರೆಸಿದುದು ॥೨-೩॥ 


ಇತರರಿಗೆ ಸಾಮಾನ್ಯವಾದ ಬಯಕೆಯ ತೋರ- 

ದಿರುವ ಈ ಗರೂಭಿಣಿಯು ತೋರ್ವ ದೋಹಳವು

ಗರ್ಭಸ್ಥ ಶಿಶು ವೀರರಸಾನುಬಂಧನಹ- 

ನೆಂಬುದನು ಮುಂದಾಗಿ ದೃಢಪಡಿಸಿತು॥೨-೪॥ 


ಸುಖಾವಗಾಹಕ್ಕೆ ತುಂಗಭದ್ರೆಯು ಕೆಲದಿ 

ಹರಿಯುತಿದ್ದರರುಅದನು ಗಮನಿಸದೆ ಅವಳು 

ತನ್ನ ಸೇನಾಗಜಗಳಿಂದೇರ್ದ ತೆರೆಗಳಿಹ 

ತಾಮ್ರಪರ್ಣಿಯ ಕೇಳಿಗಾಶಿಸಿದಳು॥೨-೫॥ 


ಏಣಶಾಬಗಳಾಡುತಿಹ ಕ್ರೀಡೆಯಚಲಕ್ಕು 

ನಡೆಯಲಾರದ ಅವಳು ಮನಸ್ಸಿನಲ್ಲಿ 

ಅಡರಲೃಶಿಸಿದಳಾಭೀಳ ಸಿಂಹಗಳಿರುವ 

ಮಲಯಾದ್ರಿ ಶಿಖರವನು ಆತುರದಲಿ॥೨-೬॥ 


ದೈತ್ಯನಾಯಕನಿಳೆಯ ಕದ್ದೊಯ್ದುದನು ವಿಷ್ಣು

ಹಿಂದೆ ತರೆ ಗೈದ ಸಾಹಸಗಳನೆಲ್ಲ 

ಅಭಿನಯಿಸಲಿಚ್ಛಿಸಿದಳಾಕೆ ( ಯವನರ ವಶದ 

ಇಳೆಯನೆಳೆತಹ ಬಯಕೆಯನು ತೋರುತ)॥೨-೭॥ 


ಪೋಥ್ವಿಯೇ ರಥವಾಗಿ, ಬ್ರಹ್ಮ ಸಾರಥಿಯಾಗಿ, 

ಅದ್ರಿರಾಜನೆ ಬಿಲ್ಲು, ಶೇಷನೇ ನಾರಿ, 

ಮತ್ತೆ ಹರಿ ಶರವಾಗಿ , ತ್ರಿಪುರವನು ಜಯಿಸಿರ್ದ 

ಈಶನನು ಕುರಿತು ನಗೆಯಾಡಿದಳು ನಾರಿ॥೨-೮॥ 


ಕ್ರಮದಂತೆ ತನುವಿನಿಂ ಕೃಶತೆಯನು ತಾಂ ಕಳೆದು 

ಬಡನಡುವ ತ್ರಿವಳಿಗಳು ಮರೆಯಾಗಲು 

ಆ ಮನೋಹರಿಯ ಮುಗ್ಧಾಲಸ್ಯಲೋಚನದ 

ವದನವನು ಕಂಡು ನೃಪವರ ನಲಿದನು॥೨-೯॥ 


ಸೌಭಾಗ್ಯ ಗಂಧವಾರಣ ದಾನ ಲೇಪದೊಲು 

ಉದರದಲಿ ರಾಜಿಸುವ ನವರೋಮ ರಾಜಿ

ತೋರಿದುದು ಗರ್ಭತಲದಲ್ಲಿರುವ ತೇಜಸ್ವಿ- 

ಯೆಂಬ ನಿಧಿ ಕಾವ ಕಾಳೋರಗಿಯ ತೆರದಿ॥೨-೧೦॥ 


ನೀಲೋತ್ಪಲದ ಸುಮವ ಕೊಕ್ಕಿನಿಂ ಕಚ್ಚಿರುವ 

ಜಕ್ಕವಕ್ಕಿಯ ಜತೆಯು ತೋರುವಂತೆ 

ತಾಮರಸನೇತ್ರೆಯಾ ಕರ್ಪಿಡಿದ ಚೂಚುಕದ 

ಸ್ತನಯುಗಳ ಶೋಭಿಸಿತು ಸೊಬಗಿನಿಂದೆ॥೨-೧೧॥ 


ಅಂಬುಗರೂಭದ ಮೇಘ ಮಾಲೆಯೋ ಎಂಬಂತೆ 

ಇಂದುವಂತರ್ಲೀನವಿಹ ರಾತ್ರಿಯಂತೆ 

ಅಂತಸ್ಥರತ್ನದಾ ಶುಕ್ತಿಲೇಖೌಯೊಲೆಸೆದು

ಪೂರಭುವಿಗತ್ಯಾನಂದವಿತ್ತಳು ಕಾಂತೆ ॥೨-೧೨॥


ಪ್ರಜೆಗಳಲೆಲ್ಲರ ತಾಪ ಹರಿಸುವನು, ಪುರುಹೂತ 

ಸಮನಾಗಿ, ವಿಭವದೇಳ್ಗೆಯಲರಸ ತನ್ನ 

ಕುಲಪುರೋಹಿತನೊರೆದ ಕಾಲದಲ್ಲಿ ಪುಂಸವನ 

ಕ್ರಿಯೆಯನೆಸಗಿದ ತಕ್ಕ ಮರ್ಯಾದೆಯಿಂದ ॥೨-೧೩॥ 


ಮೌಹೂರ್ತಿಕರು ಗುಣಿಸಿ ಪೇಳ್ದ ಪ್ರಶಸ್ತ ದಿನ 

ಪುಣ್ಯಲಗ್ನದಿ ರಾಣಿ ಕಂದನಂ ಪಡೆದು, 

ದೇವಿ ಪಾರ್ವತಿಯಂದು ಸ್ಕಂದನನು ಪಡೆದಿಂದು 

ಮೌಳಿಗೊಪ್ಪಿಸಿದ ತೆರದಿ ಶೋಭಿಸಿದಳು ॥೨-೧೪॥ 


ಪಾಲ್ಗಡಲ ತೆರೆನೊರೆಯ ಶುಭ್ರವರ್ಣದ ತೆರದ 

ರಾಜಯಶದಿಂ ದಿಙ್ಮುಖಂಗಳನ್ನು 

ಪ್ರಕ್ಷಾಳಿಸಿದರೆಂಬ ಪರಿಯಾಯ್ತು ದಿಕ್ಕೆಲ್ಲ 

ಕಾಂತಿಯಿಂ ತುಟಬಿರುವದೊಂದು ತನಿವೆಳಗು॥೨-೧೫॥


ತನ್ನ ಭೂಮಿಯ ಒಡೆಯನಪ್ಪನೀ ಶಿಶು ಬೇಗ- 

ವೆಂದು ಭಯದಿಂ ನಡುಗುತಿರುವುದೋ ಎಂದು 

ತೋರ್ವಂತೆ ಕಲ್ಪತರು ಪುಷ್ಪದ ಪರಾಗಗಳ 

ಸುರಿಸೆ ತಂಗಾಳಿ ಮಾಂದ್ಯದಿ ಚಲೆಸಿತು ॥೨-೧೬॥ 


ತೆಂಕುನಾಡಿನಲೆಲ್ಲ ಹೋಮ ಹವನಾದಿಗಳು 

ಕ್ರಮದಂತೆ ನಡೆಯಲಿವೆಯೆಂದು ತಿಳಿದ 

ಅಗ್ನಿ ಜ್ವಾಲೆಗಳನ್ನು ಸುಪ್ರದಕ್ಷಿಣೆಯಿಂದ 

ನಲಿನಲಿದು ಸುತ್ತಿಸಿತು ಹರ್ಷದಿಂದ ॥೨-೧೭॥ 


ತ್ಯಾಗ ಯಶದಲಿ ತನ್ನ ಮೀರ್ವ ಕುವರನು ಮುನ್ನ- 

ವೆಂದು ಮೊದಲೇ ಅವನ ಸಖ್ಯಕೆಳಸುವವೊಲು 

ಕಲ್ಪವೃಕ್ಷವು ಪಯೋಧರಗಳೆಡೆಯಿಂ ಪುಷ್ಪ 

ವರೂಷವನು ಒಮ್ಮಿಗಿಲೆ ಪ್ರೇಷಿಸಿದುದು॥೨-೧೮॥ 


ತಮ್ಮ ವೈರಿಯ ನಾಶವಾಗುವುದು ಮೃಗಬೇಟೆ- 

ಗೆಳಸುವೀ ಶಿಶುವೀರನಿಂ ಮುಂದೆಯೆಂದು 

ಹರ್ಷದಲ್ಲಿ ದಾನಾಂಬು ಸುರಿವ ಗಂಡಸ್ಥಳದ 

ಕುಂಜರೇಂದ್ರಗಳು ಘೀಂಕರಿಸಿದುವು ಕೊನೆದು॥೨-೧೯॥ 


ಶಿಶುವೀತ ಬಳೆಬಳೆದು ತಮ್ಮ ಬೆನ್ನೇರುವನು 

ಎಂಬ ಹೆಮ್ಮೆಯ ಹರ್ಷದಿಂದ ಕೆನೆಕೆನೆದು 

ತಮ್ಮ ಹಿರಿಮೆಯ ಪಾತ್ರ ಶಾಸನವ ಬರೆದುವಾ 

ಅಶ್ವತತಿ ಗೊರಸಿನಿಂ ನೆಲವ ಕೆರೆಕೆರೆದು ॥೨-೨೦॥ 


ಮತ್ತೆ ಮಂಗಳ ತೂರ್ಯಸ್ವನದಿಂದ ಚಾರಣರ 

ಚಾಟೂಕ್ತಿಯಿಂ ವಾರ್ತೆ ತಿಳಿಯೆ ಮಂದಿ 

ಆ ಪುರದ ತುಂಬೆಲ್ಲ ದೊಡ್ಡ ಕೋಲಾಹಲವು 

ಆಯ್ತು ವಿಜೃಂಭಣೆಯು ಎತ್ತೆತ್ತ ತುಂಬಿ॥೨-೨೧॥ 


ತನ್ನ ಸುತ ಜನನವಾರ್ತೆಯ ಕೇಳಿ ಹರ್ಷಿಸುವ 

ಜನಕೆ ತನ್ನನೆ ತಾನು ಕೊಡಲು ಬಯಸಿದನು 

ಪುತ್ರ ಜನನಾನುರಾಗದಿ ಹೆಚ್ಚಿ ಹಿಗ್ಗಿರುವ

ಕುಂತಳದ ಭೂವಧೂ ವೀರವಲ್ಲಭನು ॥೨-೨೨॥ 


ಅರಸನಾಣತಿಯಂತೆ ತೆರೆದು ಕಾರಾಗೃಹದ 

ಬಾಗಿಲನು ಶೃಂಖಲಿತ ಬಂದಿಗಳನೆಲ್ಲ 

ಬಂಧನವ ಬಿಡಿಸಿದರು ಮುಂದೆ ತುರುಕರ ತುರೈಕೆ 

ಬಂಧನಕೆ ಸಮೆವವೋಲವರಿಗವಕಾಶ ॥೨-೨೩॥ 


ಮಜ್ಜನವ ಗೈದವನು ಧೌತವಸನವನುಟ್ಟು 

ದ್ವಿಜಸಮೂಹಕ್ಕೆ ಭೂರಿ ದಾನವನು ಕೊಟ್ಟು 

ಭೂಪ ತನ್ನಯೆ ಸುತನ ಮೈಖಾವಲೋಕಿಸಲು 

ಹೊಕ್ಕನಂತಃಪುರವನತಿ ಹರ್ಷಪಟ್ಟು ॥೨-೨೪॥ 


ಶರದಲಿ  ಕೃಶಗೊಂಡ ಶೈವಲಿನಿ ತೆರೆಯಲೋ- 

ಲಾಡುತ್ತ ಮಲಗಿರುವ ಮರಿಹಂಸದಂತೆ 

ಕೃಶವಾದ ಅಂಯಷ್ಟಿಯ ರಾಣಿಯುತ್ಸಂಗ - 

ದೆಡೆಯಲ್ಲಿ ಮಲಗಿರ್ದ ಚೆಲ್ವ ಶಿಶುವಂತೆ ॥೨-೨೫॥ 


ಸೂತಿಕಾಗೃಹದೊಳಗೆ ಪ್ರಜ್ವಲಿಸುತಿಹ ದೀಪ- 

ಮಾಲೆಗಳ ಕಾಂತಿಯನು ಮಂಕಾಗಿಸಿ 

ಕಪ್ಪುರದ ಪುಡಿಯಂತೆ ಶುಭ್ರ ಕಿರಣಗಳು 

ಸುತ್ತಿದ್ದುವಾ ಶಿಶುವಿನಂಗವನು ಬಳಸಿ ॥೨-೨೬॥ 


ವೈರಿಗಳ ಜಯಶ್ರೀಯ ಕುರುಳ ಕೈಸೆರೆ ಹಿಡಿವ 

ಗೈಮೆಯನು ಮೇಣು ಮೇಣಭಿನಯಿಸುವಂತೆ 

ಪಲ್ಲವದ ಪಾಟಲತೆಯನು ತಳೆದ ಕಿರುಗೈಯ 

ಮುಷ್ಟಿ ಹಿಡಿದಿರ್ಪ ಭಂಗಿಯು ಸೊಗಸಿತಂತೆ॥೨-೨೭॥ 


ಮುದ್ದಾದ ಪಾದದಲಿ ಶಂಖ, ಚಕ್ರವು, ಛತ್ರ

ನೀರೇಜ, ಧ್ವಜ, ಮೀನರೇಖೆಗಳು ಇರ್ದು 

ಕೊಂಡಾಟ ಬರಿಸುತ್ತಿದ್ದುವು ನೋಡಿದರಿಗೆಲ್ಲ, 

ಚಿಗುರಂತೆ ಕೆಂಪಾದ ಕಿರಿಯ ಬೆರಳುಗಳು॥೨-೨೮॥ 


ಅಸುರಾಂತಕನೆ ಧರೆಗೆ ಶಿಶುವಾಗಿ ಅವತರಿಸಿ 

ಬಂದಂತೆ ಮೇಣಖಂಡದ ಸಿರಿಗೆ ನೆಲೆಯು 

ಆದಪನು ಈತನೆಂಬಂತವನ ವಕ್ಷದಲಿ 

ಶೋಭಿಸಿತು ಚೆಲುವಾಗಿ ಶ್ರೀವತ್ಸಕಲೆಯು॥೨-೨೯॥


ಊರ್ಣೆಯಿಂ ಚೆಲುವಾದ ಹಣೆಯು ಅರಳಿದ ಪದ್ಮ 

ದಳದಂತೆ ದೀರ್ಘ ನೇತ್ರಗಳು, ತಾಮ್ರದೊಲು 

ಅಧರೋಷ್ಠ, ಸಮತುಂಗ ನಾಸಿಕವು, ಮುಗ್ಧನಗೆ - 

ಯಂಗವಿಸಿ ಮುಖ ಚೆಲುವ ಸೂಸುತಿತ್ತು ॥೨-೩೦॥ 


ಅವ್ಯಾಜ ಸೌಂದರ್ಯ ಗುಣ ಪ್ರಕಾಶಿತನಾದ 

ಶಿಶುವನಾಲೋಕಿಸಲು ಬಂದ ನೃಪನ 

ನಿಷ್ಪಂದ ದೃಷ್ಟಿಗಾಯ್ತಿನಿತು ತಡೆ, ತುಂಬಿ ಬಹ 

ಆನಂದದಶ್ರುಗಳ ತೆರೆಗಳಿಂದ ॥೨-೩೧॥ 


ತನುಜಾತನನು ನೋಟದಿಂದಲಾಲಿಂಗಿಸಿದ 

ನೃಪವರನ ಹರ್ಷ ವಿಜೃಂಭಿಸಿತ ಬಂದು 

ಪರವಶವ ಮಾಳ್ಪಂತೆ ಮೈಯೆಲ್ಲ ಪುಳಕಗಳು 

ಅಂಕುರಿಸೆ, ಮೋಹಿತನು ಆದನಂದು॥೨-೩೨॥ 


ಇಂತಿರೆ ಪುರೊಹಿತನು ಒರೆದವೋಲ್ ಶುಭದಿನದಿ 

ಸುತನಿಜೆಸಗಿದ ಜಾತಕರ್ಮವ ನರೇಂದ್ರ 

ಮಂತ್ರಪ್ರಣಿತವಹ ಮಖದಲನಲಾ ಪರಿಯೆ 

ತೇಜಸ್ವಿಯಾಗಿ ಬಳೆದನು ರಾಜಪುತ್ರ॥೨-೩೩॥ 


ಸಂಗ್ರಾಮರಂಗದಲಿ ವೈರಿಗಳ ಕಂಪಿಸುವ 

ಏಕೈಕ ವೀರನಹನೀ ಕುವರ ಮುಂದೆ 

ಇಂತು ನೆನೆದಾ ದೂರದರ್ಶಿಯರಸನು ಸುತಗೆ 

ಕಂಪಣನು ಎಂಬ ಹೆಸರಿತ್ತ ಮುದದೆ॥೨-೩೪ ॥


ಯಾಜಕನು ಹೋಮಾಗ್ನಿಯನು ಆಜ್ಯದಿಂ, ಮೇಘ 

ಸಸ್ಯವೃಂದವನು ವೃಷ್ಟಿಯನಿತ್ತು ಬೆಳೆವ 

ಪರಿಯಲ್ಲಿ ಯೋಗ್ಯ ದಾದಿಯರ ನೇಮಿಸಿ ಶಿಶುವ - 

ನಾರೈಸೆ ನೃಪ, ಕುವರ ದಿನದಿನಕು ಬಳೆದ॥೨-೩೫॥ 


ದಾದಿಯಿಂ ಮಾತು ಕಲಿತಾ ಮಗುವು ತೊದಲು ನುಡಿ 

ಯಾಡುವುದ ಕೇಳಿ, ತಳರ್ನಡೆಯ ನಡೆದು 

ಎಡೆಯಾಡುತಿಹ ಮಗನ ನೋಡಿ ನೋಡುತ ಮುದವು 

ಹೆಚ್ಚಿ ಹಿಗ್ಗಿದ ಧರಾಧೀಶ ತೃಪ್ತಿಯೊಳು॥೨-೩೬॥ 


ಹಂಸವರವಿಂದ ಮುಗುಳನು ಸೋಂಕುತಾನಂದ - 

ವನು ಮೇಲೆ ಮೇಲೆ ತಾನನುಭವೆಸುವಂತೆ 

ರಾಜ ತನ್ನಯ ಸುತನ ಕಂಪೊಗೆವ ಬಾಯ್ದೆರೆಯ - 

ನಡಿಗಡಿಗೆ ಚುಂಬಿಸುವನೊಲವಿಂದೆ ॥೨-೩೭॥ 


ಸುತನಂಗ ಸ್ಪರ್ಶಸುಖದನುಭವವ ಪಡೆದ 

ಮೇಲಿನ್ನು ಅದಕಿಂತ ಬೇರೆ ಸೈಖವಿಲ್ಲ 

ಕರ್ಪೂರ, ಮೌಕ್ತಿಕದ ಹಾರ, ಚಂದನ ಲೇಪ

ಇಂದು ಕಿರಣಗಳೆಂದು ಸರಿಸಾಟಿಯಲ್ಲ॥೨-೩೮॥ 


ಕಾಂಚನದ ಝಂಕಿಸುವ ಮಣಿಕಿಂಕಿಣೀ ರುತಿಯ 

ಕೂಡಿ ಮನೆಯಂಗಳದಿ ಹರಿವ ಮಗನ 

ಕಂಡಾಗಲಮೃತಾಂಬುನಿಧಿಯಲದ್ದಿದೊಲಾಯ್ತು 

ತಾಯ್ತಂದೆಯರ ಮನದ ಹರ್ಷೋತ್ಕರ ॥೨-೩೯॥ 


ಕ್ಷೀರವಾರಿಧಿ ಪಾರಿಜಾತ ಚಿಂತಾಮಣಿಯ 

ಪಡೆದಂತೆ ಮತ್ತೆ ಪಾರ್ಥೆವ ಧರ್ಮ ಪತ್ನಿ

ಕಂಪಣ್ಣ ಸಂಗಮೆಂಬಿಬ್ಬರು ಸುಪುತ್ರರನು 

ಇನ್ನು ಕೆಲಕಾಲದಲಿ ಹಡೆದಳನುಕ್ರಮದಿ ॥೨-೪೦


ಅರಗುವರ ತನ್ನ ಸೋದರರ ಕೂಟದಲಿ 

ಬಳೆಯುತಿದ್ದನು ದಿನವು ಶುಕ್ಲಪಕ್ಷದಲಿ 

ಬೆಳೆವ ಚಂದ್ರನೊಲೊಲ್ಮೆ ವರೂಷಿಸುತಲಿ 

ನೋಳ್ಪರಕ್ಷಿಗೆ ಸುಖವ ಸಿಂಚಿಸುತಲಿ ॥೨-೪೧॥ 


ಸೂರ್ಯ ಚಂದ್ರಾಗ್ನಿ ನೇತ್ರಗಳಿರುವ ಪಶುಪತೀ 

ನಿರಪಾಯ ಶಕ್ತಿಯುತ್ಸಾಹ ಮಂತಣದ ಪ್ರಭುಶಕ್ತಿ -

ಧರ್ಮಾರ್ಥ ಕಾಮ ಪುರುಷಾರ್ಥವಿಹ ಜೀವಶಕ್ತಿ- 

ಯಂತಿದ್ದ ತನಯತ್ರಯವೆರಸಿ ನೃಪತಿ ॥೨-೪೨॥


ಶ್ರೀ ಗಂಗಾದೇವಿ ವಿರಚಿತ ಮಧುರಾವಿಜಯವೆಂಬ ವೀರ ಕಂಪರಾಯ ಚರಿತಂ ಎರಡನೆಯ ಸರ್ಗ. 


ನೆನಕೆಗಳು: 


ಕವಿ: ಸಂಸ್ಕೃತದಲ್ಲಿ ವಿಜಯನಗರದ ಗಂಗಾದೇವಿ ವಿರಚಿತ ಮಧುರಾವಿಜಯ ಅಥವಾ ವೀರ ಕಂಪರಾಯ ಚರಿತಂ.  


ಅನುವಾದ: ಡಾ ॥ ಕೆ. ಕುಶಾಲಪ್ಪ ಗೌಡ. 


ಪ್ರಕಾಶಕರು: ಪ್ರಸಾರಾಂಗ, 

ಕನ್ನಡ ವಿಶ್ವವಿದ್ಯಾಲಯ, ಹಂಪಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ