ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಡಿಸೆಂಬರ್ 19, 2020

ಮಾಧವಾಂಕ ಚರಿತೆ

ಮಾಧವಾಂಕ ಚರಿತೆ (ವಾರ್ಧಕ ಷಟ್ಪದಿ ) 


ಕೃತಿಯ ಕರ್ತೃ ಕೋಳೂರು ಶಂಕರ ಕವಿ.ಈತನ ಕಾಲ ೧೭ ನೆಯ ಶತಮಾನದ ಉತ್ತರಾರ್ಧ. ಕೋಳೂರು ಬಳ್ಳಾರಿ ಜಿಲ್ಲೆಯಲ್ಲಿದೆ. ಕೋಳೂರು ರಾಲಿಂಗೇಶ್ವರ ಈತನ ಆರಾಧ್ಯ ದೈವ. ಈತನ ಕೃತಿಗಳು ೧) ಶರಣ ಮೋನಪ್ಪಯ್ಯನ ಚರಿತ್ರೆ, ೨) ಚೋರ ಬಸವೇಶ್ವರ ಕಾವ್ಯ,  ೩) ನವಮೋಹನ ತರಂಗಿಣೆ, ೪) ಮಾಧವಾಂಕ ಚರಿತೆ,  ೫) ಸುಜ್ಞಾನ ಸುಧಾಕರ ಪಂಚವಿಂಶತಿ, ೬) ಸ್ವರ ವಚನಗಳು. 


ಈ ಕಾವ್ಯ ೨೪ ಸಂಧಿ, ೧೫೧೧ ವಾರ್ಧಕ ಷಟ್ಪದಿಗಳನ್ನೊಳಗೊಂಡ ಒಂದು ವರ್ಣನಾತ್ಮಕ ಕಾವ್ಯ. ದ್ರಾವಿಡ ಭಾಷೆಗಳಲ್ಲೆ ಪ್ರಾಚೀನವಾದ ಮತ್ತು ಪ್ರಸಿದ್ಧವಾದ ಸತ್ಯೇಂದ್ರಚೋಳನ ಕಥೆಯನ್ನು ವಸ್ತುವಾಗಿರಿಸಿಕೊಂಡು ರಚನೆಗೊಂಡಿರುವ ಕೃತಿಯಿದು. ಈ ಕಾವ್ಯ ಶಾಲಿವಾಹನ ಶಕ ೧೬೭೯ ನೆಯ ಈಶ್ವರನಾಮ ಸಂವತ್ಸರ ಜೇಷ್ಠ ಬಹುಳ ಸಪ್ತಮಿ ಬುಧವಾರದಂದು ಸಂಪೂರ್ಣಗೊಂಡಿದೆ. 


ಸಂಧಿ  ೧ 


ಪಂಚಾಸ್ಯ ರಾಮೇಶ ಶರಣು 


ಶ್ರೀ ವಿಮಲ ಸತ್ಯದಾಗರ ಬೆಜ್ಜವಾಡಿಯೊಳು 

ಭೂವಿನುತ ಮಾಧವಾಂಕನು ಕೊಲೆಗೆ ಕೊಲೆಯಿತ್ತು 

ದೇವದೇವೇಶನಂ ಮೆಚ್ಚಿಸಿದ ಸತ್ಕಥೆಯ ಕೇಳಿ ಸುಜನರು ಒಲವಿನಿಂ॥


ಶ್ರೀ ಗಿರಿಜೆ ದೃಕ್ಚಕೋರಂಗಳಂ ಪಸರಿಸಲು 

ಯೋಗಿಜನ ಹೃದಯನೈದಲೆಗಳರಳುತಿರಲು 

ರಾಗದಿಂದಖಿಲ ಸದ್ಭಕ್ತ ಹರೈಷಾಬ್ಧಿ ಪೇರುಕ್ಕಿನಿಂ ಪೊರಸೂಸಲು॥ 

ಭೂಗಮಳಜ್ಞಾನಿಗಳು ಆನಂದರಸಭರಿತ 

ರಾಗೆ ದರಹಸಿತ ಬೆಳ್ದಿಂಗಳಿಂ ಭೋಜಿಸು 

ತ್ತಾಗಮ ಹೃದ್ಗಗನ ಮಾರ್ಗದೊಳ್ಬೆಳಗ ಶ್ರೀರಾಮೇಶ ಪೂರ್ಣಚಂದ್ರಾ ॥೧॥ 


ಬುದ್ಧಿವಂತರಿಗೆ ಬುದ್ಧಿಯನೀವರುಚಿರಪ್ರ 

ಬುದ್ಧನಿಂ ವೇದ್ಯಜನರಿಗೆ ಸುವಿದ್ಯಾರಂಭ 

ಸಿದ್ಧರಿಗೆ ವಿಮಲಸಿದ್ಧಿಯನೀವದೇವ ಪ್ರಸಿದ್ಧ ಶಂಕರ ಕುಮಾರಾ ॥ 

ಸಿದ್ಧಿವಿದ್ಯಾಬುದ್ಧಿಗಧಿಪತಿಯು ನೀನೆಂದು 

ಬುದ್ಧಿಯುತರೆಲ್ಲ ಸತ್ಕ್ರಿಯದಿ ಭಜಿಪರು ನಿಮ್ಮ 

ಮುದ್ದುಮಾತಿನೊಳೆ ತೊಡಗಿದೆ ಕೃತಿಯಮತಿಗವಿಘ್ನವನು ಕೊಡು ವಿಘ್ನನಾಥಾ ॥೭॥


ಪರಶಿವನ ಧರ್ಮಸ್ವರೂಪಮುನಿಹೃದ್ದೀಪ 

ವರಚತುಷ್ಟಾದಿಫಲ ಮೆಟ್ಟಿದ ಪದಾನ್ವಿತಂ 

ಹರಸಮಯಶರನಿಧಿಗಖಂಡಶುಭ್ರಮಯೂಖ ಜಿತಕರಣರಹಿತಮರಣಾ॥ 

ಪರಸಮಯನಿಚಯಜೀಮೂತ ಜಂಝಾವಾತ 

ಶರಣಹೃತ್ಸರಸಿರುಹದಿನಪ ಶಿವನಿಂದ್ಯಜನ 

ಧರಣಿರುಹ ಪರಶು ವೃಷಭೇಶ್ವರ ಸಲಹು ಸತ್ಕೃಪೆಯಿಂದಲೀ ಕೃತಿಯನೂ॥೯॥ 


ಬಾಣ ಮಲೈಹಣ ಮಳೆಯರಾಜನೃಪಕುಭೋಜ 

ಜಾಣಗುರ್ಜರನಾ ಮಯೂರ ಪದ್ಮರಸರಂ 

ಕ್ಷೋಣೀಶ ಕೇಶಿರಾಜಯ್ಯನುದ್ಭಟನು ಪಾಲ್ಕುರಿಕೆ ಸೋಮಾರಾಧ್ಯರು ॥ 

ಏಣಾಂಕಧರ ವಿರೂಪಾಕ್ಷ ಪ್ರಸಾದಪ್ಪ್ರ 

ವೀಣಹರಿಹರನು ರಾಘವವೀರಚಾಮರಸ 

ಮಾಣದೆ ಭೀಮರಸ ಮೊದಲಾದ ಶಿವಕವಿಪರೀಕೃತಿಯವಾಸಗೊಳಿಪುದು॥೧೪॥


ಪಾಡುವೆನೆ ನರರ ಕೊಂಡಾಡುವೆನೆ ಜಡರುಗಳ 

ಬೇಡುವೆನೆ ಅನ್ಯರನು ಕುಡೆ ಕುಜನರ ಭಜನೆ 

ಮಾಡೆ ಪರದೈವಗಳ ನೋಡೆ ಶಿವ ನೆನಹಿಲ್ಲದಾವ ವಸ್ತುಗಳೊಳೊಂದಾ ॥ 

ಪಾಡಿ ಕೊಂಡಾಡಿ ಬೇಡುವೆ ಶಿವನೆ ನಾ ನಿಮ್ಮ 

ರೂಢಿಯೊಳು ಸಂಶೃತಿಗೆ ಈಡಾದೆ ಕರುಣದಿಂ 

ನೋಡಿ ದಯಮಾಡಿ ಸಲಹದದಾರ ಪೊಂದುವೆನು ಭವ ನಿಮ್ಮ ನಂಬಿದವನೂ ॥ ೧೭॥


ಬಡವಿಯ ಕುಮಾರಕನು ಪೊಡವಿಪನ ಸುತನಶ್ವ 

ದಡಿಯ ಖುರಹತಿಯಿಂದ ಮಡಿಯೆ ಮೊರೆಯಿಡೆ ಸತ್ಯ 

ಬಿಡದೆ ಪಡಿಗೊಡೆ ಮಗನ ಪಪೊಡೆದಭಟ ತನ್ನ ಶಿರಗಡಿದುಕೊಳೆವತ್ಸನವ್ವೆ ॥

ಮುಡಿದಲೆಗೆ ಮುನಿದೈಕೊಳೆ ನಡುಗಿ ನೃಪ ಹಾಯೆಂದು 

ಕೊಡುವೆನಸುವವಳ್ಗೆನುತ ತನ್ನ ಕೊರಳರಿವುತಿರೆ 

ಮೃಡಮೆಚ್ಚಿಯಸಿವಿಡಿದು ಪಡೆದಸುವ ಕೈಲಾಸಕೊಯಿದ ಸತಾಕಥೆಯನೈಸುರ್ವ್ವೆ॥೧೮॥ 


ಸಲ್ಲಲಿತದಿಂದೊಪ್ಪುವಾ ಪುರದ ಬಾಹ್ಯದೊಳ 

ಗೆಲ್ಲಿ ನೋಡಿದಡೆ ಕಾಲುವೆಕೂಪಕೆರೆಕೊಳಗ 

ಳೆಲ್ಲಿ ನೋಡಿದೊಡರವಟಿಗೆಯನ್ನದಛತ್ರ ತಣ್ಣೆಳಲ ತಾಣಂಗಳೂ ॥ 

ಅಲ್ಲಲ್ಲಿ ನಿಂಬೆ ನೇರಿಲು ಹೇರಿಳೆಯು ಕದಳಿ 

ಅಲ್ಲಲ್ಲಿ ತಳಿತಮಾಮರಚಂದನ ಶೋಕೆ 

ಅಲ್ಲಲ್ಲಿ ನರುಗಂಪನಾಂತ ಚಂಪಕ ಮೊಲ್ಲೆ ಮಲ್ಲಿಕಾಕುಸುಮವಾಟೀ॥೩೪॥ 


ಪಸುರಿಡಿದ ಪಲ್ಲವದ ಲತೆಯು ತನೆರಸವಾಂತು 

ಯಸೆಗುದಾಡಿಮದ್ರಾಕ್ಷೆ ಖರ್ಜೂರ ನಾರಂಗ 

ರಸವೋಲಕೃಷಿಯು ಕಳಮೆಯ ಪಾಲಿಸು ಪರಿಪರಿಯ ಪುಣ್ಯಸ್ಥಲದ ಕುಲಗಳೂ॥ 

ಮಿಸುಳಿಪ ಕುಲದಬೇಟ ಬರ್ಹಿಗಳ ನಲಿದಾಟ 

ಕುಶಲ ಗಿಳಿಗಳ ನುಡಿಯು ಹಂಸನಿಕರದ ನಡೆಯು 

ಪಸರಿಸಿದ ಪರಭೃತದ ಮಾಂಗಲ್ಯಗಾನವಾ ಪುರದ ಬಾಹ್ಯದೊಳೆಸೆದುದೂ॥ ೩೫॥ 


ಇಂತು ಮಹದೈಶ್ವರ್ಯ ಸೊಬಗು ಸೌಂದರ್ಯಮುಮ 

ನಾಂತು ಮಣಿಖಚಿತ ಮಾಂಗಲ್ಯ ಪಡೆದಿಹ ವೈಜ 

ಯಂತಿ ಧವಳಾರದುಪ್ಪರಿಗೆಖದ್ಯೋತ ಶಶಿಗಲ್ಗಳಿಂದುರೆ ರಚಿಸಿದಾ ॥ 

ಸಂತತಂ ಸಕಲ ವೈಭವದೀ ರಾಜಿಪ ಸಿರಿ ನಿ 

ಶಾಂತ ಮಧ್ಯದಲಿ ಕಡುರಮ್ಯದಿಂ ಝಗಝಗಿಸಿ 

ತೆಂತು ಬಣ್ಣಿಪೆನು ಫಣಿರಾಜಂಗಶಖ್ಯ ಸಿರಿ ಅರಮನೆಯು ಒಪ್ಪುತಿಹುದೂ॥೪೦॥ 


ಕ್ಷಿತಿಗೆ ಅಮರಾವತಿಯ ಪೋಲೂವ ಶ್ರೀಬೆಜ್ಜವಾಡಿ 

ನುತ ಪಟ್ಟಣವ ಪೊಗಳಲಳವಲ್ಲವೆನ್ನ ಬಡ 

ಮತಿಗೆ ತಕ್ಕನಿತನಾಂ ಸ್ತುತಿಸಿದೆನು ಮದರಾಣ್ಮನರಿಯಮದೆಂತೆಂದಡೇ ॥ 

ಅತಿರೀತಿಧರ್ಮಸನ್ಮತ ಪುಣ್ಯಕೀರ್ತಿಯು 

ನ್ನತ ಶೈವಸಂಪನ್ನನಪ್ಪ್ರತಿಮ ಗಂಭೀರ 

ತತಶೌರ್ಯವಂತ ಹರಿಹರರಾಯನೆಂದೆಂಬ ಕ್ಷತ್ರಿಯೋತ್ತಮನಂಗನೇ ॥೪೧॥ 


ತರುಣಿಯರ ಕುಲಶಿರೋಮಣಿ ಗುಣಾಗ್ರಣಿ ನೀತಿ 

ಸರಣಿ ಸನ್ಮಾನಿ ಸೌಂದರಿಯು ಸುಕಲಾಭರಿತೆ 

ಪರಮ ಸುಜ್ಞಾನಿ ಪಾವನಚರಿತೆ ಪತಿಭಕ್ತಿಯೆಂಬ ಲಲಿತಾಂಗಿಯೆಸೆಯೇ॥ 

ಸರಸದಿಂ ಭೋಗದಿಂ ಪ್ರಾಯದಿಂ ಚೆಲ್ವಿನಿಂ 

ಪರಮ ಸುಜ್ಞಾನದಿಂ ಚಿತ್ತಸದ್ಭಕ್ತಿಯಿಂ 

ನಿರತದಿಂದೇಕ ಜೀವನಮುಭಯ ತನುವೆನಲ್ಕರ್ಧ ರತಿನೇಹದಿಂದೇ॥೫೨॥


ಅವರ ಸಂತತಿಗಧಿಕ ಮಂದಮತಿಯನಿಪೋರ್ವ 

ಕುವರ ಸಕಲಾನ್ವಿತೆಯು ಕೋವಿದೆಯು ಕೋಮಲೆಯು 

ಸವಿಗೋಲನರ್ಚಿಸುವ ಮಂತ್ರದೇವತೆಯಪ್ಪ ಮಾದಾಂಬೆಯಪ್ಪ ಸುತೆಯೊ ॥ 

ಸವನಿಸಲ್ಕವರನೀಕ್ಷಿಸುತೆ ಸೌಭಾಗ್ಯನು 

ಭವದಿಂದೆ ಸಕಲದೇಶದ ಕಪ್ಪಮಂ ಕೊಳುತೆ 

ಅವನೀಶ ಹರಿಹರ ಮಹರಾಯ ಸುಖದಿ ರಾಜ್ಯವ ಪಾಲಿಸುತಿರ್ದನು॥೪೩॥ 


ಸಂಧಿ  ೨


ಸಂತತಿಗೆಲ್ಲಪೂರ್ವ ಕುವರ ಪುಟ್ಟಿಹನು.


ಭುವನೇಶ ಹರಿಹರಂ ಪಂಡಿತನ ಬರವೇಳ್ದು 

ಶಿವಪುತ್ತ ವಿಘ್ನನಾಥನನು ಬಲಗೊಂಡು ಮ 

ತ್ಕುವರಂಗೆ ವಿದ್ಯೆಗಲಿಸಲೆಂದು ನೇಮಂಗೈದು ಕಳುಹಿದನು ಒಲವು ಮಿಗಲೂ॥ 


ಮಿಗೆ ಮಕುಟವರ್ಧನರು ಮಂತ್ರಿಮನ್ನೆಯರೊಡನೆ 

ಝಗಝಗಿಸುತಿಹ ದಿವ್ಯಮಣಿಕಿರಣ ರಮ್ಯದಿಂ 

ಸೊಗಸಿಹರಿಯಾಸನದಿ ಮಂಡಿಸಿ ಸುಗೋಷ್ಠಿಯೊಳಗಿರಲು ॥

ಮೈಗುಳುನಗೆ ಮುದ್ದುನುಡಿ ತೊಳಪಕಂಗಳು ಕದಪು 

ಬಿಗಿದ ವಜ್ರಾಂಗಿ ರತ್ನದ ಟೋಪಿಕಂಕಣಂ 

ಬಗೆಬಗೆಯ ಆಭರಣವಳವಡಲ್ಕಾಡುತಿಹ ಮಗನನಿಟ್ಟಿಸಿ ನೃಪಾಲಾ ॥೪॥ 


ಪರಮಸಂತೋಷದಿಂ ಮಂತ್ರಿಯಾಸ್ಯವನೋಡಿ 

ತರಳಂಗೆ ಓದ ಕಲಿಯಲ್ಕರಸು ವಿದ್ಯಮಂ 

ನೆರೆಬಲ್ಲ ಸಿರಿಯ ಪಂಡಿತನನೆನಲಾ ಸಚಿವ ಬರವೇಳ್ದು ಚರರನಟ್ಟಿ ॥ 

ಕರೆಯಲತಿತೋಷದಿಂ ಪಟ್ಟಿ ಧೋತ್ರಮನುಟ್ಟು 

ಪರಭಸಿತ ತ್ರೈಪುಂಡ್ರ ಭಾಳದೊಳಳೆದು 

ಹರನಕ್ಷ ಮಾಲೋಪವೀತ ಶೋಭಿತವಕ್ಷಚಂದನ ಸುಗಂಧಲೇಪಾ॥ ೫॥


ಕೊಟ್ಟ ಪರಕೆಗೆ ತುಷ್ಟಿ ಪಟ್ಟು ವಿಮಲಾಸನವಂ 

ಕೊಟ್ಟು ವಿನಯೋಪಚಾರಂಗಳಿಂದಣಿಸಿ ಮನ 

ಮುಟ್ಟಿಯಿಷ್ಟವನೀವೆನೆಲೆಯಯ್ಯ ನಮ್ಮ ಸಂತತಿಗೆಲ್ಲವೋರ್ವ ಕುವರ 

ಪುಟ್ಟಿಹನು ಒಲಿದು ವಿದ್ಯವನರುಹಬೇಕೆಂದು 

ಪಟ್ಟದರಸಂ ಪುತ್ರನಂ ಕರದು ಪದಯುಗಕೆ 

ನೆಟ್ಟನೆ ಕೆಡಹಲು ಪಿಡಿದೆತ್ತಿ ಮೊಗನೋಡಿ ಹಸ್ತವಮಸ್ತಕಾಗ್ರಕಿಳುಹಿ॥೯॥


ಮಂಡಲೇಶ್ವರನೊಲಿದು ಪಂಡಿತನ ಪೊಸಮಿಸುನಿ 

ದಂಡಿಗೆಯೊಳತಿ ಬೇಗ ಮಂಡನಗೈಸಿಪೇಂ ಪೇ 

ಣ್ತಂಡಮಂ ಬರವೇಳ್ದು ನೇತ್ರಧಾರೆಯ ನೃಪನ ಪೆಂಡತಿಯನವಸರಿಸಲೂ॥ 

ಖಂಡೆಂದು ನಿಟಿಲೆ ತನ್ನಾಳ್ದನಾಜ್ಞೆಯನು ಕೈ 

ಕೊಂಡು ಪತಿಭಕ್ತೆ ಸಿರಿಮಿಂಡಿವೆಣ್ಗಳನು ಬಳಿ 

ಗೊಂಡು ಮೋಹದಮಗನ ಪಠಿಪ ಕುವರರನೊಡಗೊಂಡು ಫಲತತಿಯಕೊಂಡೂ.॥೧೫।


ಅವನೀಶನಕ್ಷಿಗಚ್ಚರಿಯಿತ್ತು ರಾಜಿಸಿತು 

ತವೆ ಸುರಾಚಲದ ಶಿಖರಕ್ಕೆ ಸರಿಸದೊಳಿರ್ಪ 

ಧ್ರುವನಂತೆ ಸಿರಿಯ ಪೊಂಗೋಪುರಾಗ್ರದಲಿ ಮಣಿಕಲಶನೋಳ್ಪರ ವಿಲಾಸಾ॥ 

ಸವೆಯದಾನಂದದಿಂದೀಕ್ಷಿಸುತೈವಿ ತ 

ದ್ಭವನ ಪ್ರಲಕ್ಷಿಣಂಗೈದು ಸಮ್ಮೈಖದೆ ನಿಂದು 

ಭವಹರನಯಿದಿರೊಳಂ ನಿಂದು ವಂದಿಪ ಕಮಲನೇತ್ರನಂ ತಾ ಹರಿಹರಂ॥೨೦॥ 


ಕ್ಷೀರಾಬ್ಧಿ ಸೀತಾಂಶು ಪೂರ್ಣತೆಯೊಳೊಗೆಯೆ ನಲ 

ವೇರಿ ಪೆರ್ಚುತ್ತ ಪೇರ್ದೆರೆವೊಯಿದು ಪರಿವಂತೆ 

ಧಾರುಣೀಶ್ಶರ ಮುಖ್ಯನಿಖಿಲರು ಸಾಷ್ಟಾಂಗವೆರಗಿ ಕುಳಿತರು ಒಲವಿನಿಂ ॥ 

ಹೇರಂಬನರ್ಚನೆಯತೊಡಗೆ ಕರಸಿದನು ಪೂ 

ಜಾರಿಯರನೇಕ ಸುರಗಜದ ಮಸ್ತಕೆ ಸುಧಾ 

ಸಾರಮಂ ಕರೆವವೊಲ್ ಪಂಚಾಮೃತಾಭಿಷೇಕವನೆರದರ್ ವೇದೋಕ್ತದಿಂ ॥೨೧॥ 


ಕಂದಿತಾ ತರಣಿ ಕಿರಣ ಗಗನದೊಳಗೆ ಅರೆ 

ಬೆಂದು ಪರಶಿವನ ಮಕುಟದಿ ಲಲಾಟಾಗ್ನಿಯುರಿ 

ಯಿಂದ ಬೇಸತ್ತು ಶಾಂತಿಯನುಳ್ಳ ಗಣಪತಿಯ ಭಾಳದೊಳು ಶಶಿನಿಂದೊಲು ॥ 

ಅಂದಮಿಗೆ ಶ್ರೀ ಭಸಿತ ಪರಿಮಳಿಸುವಸ್ಟನವ 

ಗಂಧಮುಮನರ್ಧಚಂದ್ರಾಕೃತಿಯೊಳಂ ನೊಸಲಿ 

ಗಂ ಧರಿಸಿ ತಾಣತಾಣದಲಿ ಮಂತ್ರೋಕ್ತ ತಳೆದರಾ ವಿಘ್ನೇಶಗೆ॥೨೩॥


ಆ ಚಪಲ ಬುಧವರನ ಬಿಜಯಂಗೈಸಿ ವೇದಿಕೆಗೆ 

ಆ ಚಿನ್ನ ನೃಪಸುತನ ಸಾರ್ಚ್ಚಿ ಸನ್ನಿಧಿಗಾಗಿ 

ಆ ಚಮೂಪಂ ಮಂತ್ರಿಭೂಪ ಪತಿಭಕ್ತೆ ಸಹಿತಂ ಸಮೀಪಕ್ಕೆ ಸಾರ್ದು ॥ 

ವಾಚಿಸುವಡರಿದೆನೆ ಸರಸ್ವತಿಯ ಬಲಗೊಳ 

ಲ್ಕಾ ಚೌಕಮಾದ ಪಲಗೆಗೆ ಮುತ್ತ ತೀವಿ ಮಣಿ 

ರೋಚಿಯೊಸರ್ವಮಳ ಮಣಿಮಕುಟವನು ಪಂಡಿತಪಿಡಿದು ಬಾಲಕನ ಶ್ರೀ ಭಾಳದೀ॥ ೩೧॥ 


ಪರಿಮಳಿಪ ಪಚ್ಚೆ ಕರ್ಪೂರ ಬೆರೆದ ಗಂಧಮುಮ 

ನೊರೆದಾಗ ವೇದಘೋಷಣೆಯೊಳಂ ಒಲಿದು ಭೂ 

ಸುರರು ಮಂತ್ರಾಕ್ಷತೆಯಸುರಿಸುತಿರೆ ಮೂವೇಳೆ ಗಣಪತಿಯ ಸಮ್ಮುಖದೊಳು॥ 

ಯರಗಿಸುತ ಬಾಲಕನ ಪರಸಿ ಸಕಲಸುಮಂತ್ರ 

ವರವೇದಶಾಸ್ತ್ರಗಳಿಗಾದಿಯಾದ ಪ್ರಣಮ

ವೆರಸಿ ಓಂನಮಃಶಿವಾಯ ಸಿದ್ಧನಾಮವೆಂದಜಹರಿಯಮರ ಮುನಿಗಳೂ೩೨॥ 


ಜಾಣೆಯಂ ಪರಮಕಲ್ಯಾಣಿಯಂ ಭೃಂಗವಿಭ 

ವೇಣಿಯಂ ಪಲ್ಲವಸುಪಾಣಿಯಂ ಶುಕ ಮಂಜು 

ವಾಣಿಯು ಮನಪ್ಸರ ಶ್ರೇಣಿಯಂ ನಮಿತಗಿರ್ವಾಣಿಯಂ ಶೃತಿವಿತಾನಾ॥ 

ಜಾಣಿನಿಂ ನುತಿಪತಿ ತ್ರಾಣಿಯಂ ಸಂಪದ 

ಕ್ಷೀಣೆಯಂ ಪಾಠಕಾಗ್ರಣಿಗಳಿಗೊಲಿಪ ಸ 

ದ್ವಾಣಿಯಂ ಚತುರಾಸ್ಯರಾಣಿಯಂ ಓದುವ ಕುಮರಕಕ್ಕೀರ್ತಿಸಿದರೂ ॥೩೪॥ 


ಅಳಿಗುರುಳ ನವಿಲ್ನುಡಿಯ ಮೇಲೆ ಮಣಿಮಯದ ಶರ 

ಗೆಳೆವುತ ಸಿತಾಂಬುಜಾಂಬಕಗಳ್ ಪೊಳೆಯಲುರ 

ಸ್ಥಳದಿ ನುಣ್ಮೊಲೆವಸ್ತ್ರ ತೊಲಗೆ ಕಂಠಾಭರಣ ಪಂಕ್ತಿ ತೊಳತೊಳಗುತಿರಲೂ ॥ 

ನಳಿನಾಪ್ತನುದಯಾದ್ರಿಯಿಂದೈದಿ ಪಶ್ಚಿಮ 

ಕ್ಕಿಳಿವಂತೆ ಲಲನೆಯರು ಕರತಳದಿ ಕನಕಮಯ 

ಕಲಶಮಂ ಪಿಡಿದು ಬೆಳಗಿದರು ಗಣಪಗೆ ಮಂಗಳಾರತಿಯನುತ್ಸವದೊಳೂ॥೩೬॥ 


ಆದರದಿಂ ವಂದನಂಗೈಸಿ ಕರಮಂ ಪಿಡಿದು 

ಓದಿಸುವ ಪಂಡಿತಗೆ ಮಣಿಭೂಷಣವನಿತ್ತು 

ಮೇದಿನೀಶ್ವರ ತನ್ನ ಕುವರಂಗೆ ಬುದ್ಧಿಗಲೆಸೆಂದು ನೇಮಂಗೈವುತೇ॥ 

ಭೂಧವಂ ಗಣಪತಿಗೆ ವಂದಿಸುತ ವೆಮಲಪ್ರ 

ಸಾದಮಂ ಕೈಕೊಂಡು ಪರಿವಾರದೊಡನೆ ಸವಿ 

ನೋದದಿಂ ನಿಜಭವನಕೈದಿ ಸರೂವರ ಕಳುಹಿ ಧರೆಯರೆಯ ಸುಖದೊಳಿರ್ದಂ ॥೩೯॥ 


ಬೆಡಗಾಂತು ಕಡುಬಡವಿವಪ್ಪಿದಳುಮವಳಿಂಗೆ 

ಪೊಡವಿ ಶಿಲೆ ನೀರದಂಗಳು ಮರೆಗೊಂಡಿರ್ಪ 

ಕಡವರಂ ಲಿಂಗಸೌದಾಮಿನಿಗಳಂತೆಕ್ಕಾಪಿನೋಪವೀತ ಶಿಖಿಯೂ॥ 

ಯಡೆಯಡೆಗೆ ಭಸಿತಮಂ ಧರಿಸಿ ಜಿರ್ನಾಂಬರದಿ 

ಮೃಡಭಕ್ತ ಮಾಧವನೆನಿಪ್ಪ ಕುವರನ ಕರಂ 

ಬಿಡಿದು ಸೋಮಲೆಯೆಂಬ ಬಡವಿ ಬಂದಳು ಪಠಿಪ ನುಡಿಗಾಗಿ ಶುಭಲಗ್ನದೀ ॥೪೨॥


ಧಾತ್ರಿಸುರಂಗೆ ಬಿನ್ನವಿಸಿದಳ್ ವಲ್ಲಭ ಚ 

ರಿತ್ರಮಂ ಮುಕ್ತಿರತಿಯಿಂದೆ ವಾರಣಾಶಿ 

ಕ್ಷೇತ್ರಮಂ ಸಾರ್ದನುದಿಂದ ತನ್ನಯ ಮನೆಯ ಕರೆದರೋಯಂಬಕಮಲೆ ॥ 

ಪಾತ್ರೆಯಲ್ಲಿವಳೆಂದು ಮುನಿದೆನ್ನ ಜರಿವುತ್ತೆ 

ಗೋತ್ರಬಿದ್ಭವ ಸಖನ ಸಿರೆದಳು ಬಂದು ಸ 

ತ್ಪಾತ್ರರುಂ ಮಿತ್ರರುಂ ಮಾತಾಪಿತೃಗಳೆಲ್ಲ ಶತ್ರುಗಳಾದರುಮದರಿಂ ॥೪೩॥ 


ಪೊಡವಿ ಮುನಿವದು ಕುಳಿತಯೆಡೆಯೆ ಮೇಲೊರಗುವದು 

ನಡೆಯ ಪಥವಡವಿಗೀಡೆನಿಸುವದು ಬಾಂಧವರು 

ಯಡಹಿ ಕಾಣರು ಎನ್ನ ಸಡಗರವು ಉಳ್ಳಾಗ ಉಂಡು ವಿಶ್ವಾಸಿಗಳ್ 

ಕಡೆಗಣ್ಣಿನಿಂದ ನೋಡರು ಕನಿಷ್ಟತೆಯೆಂದು 

ಪಡೆದವರು ಪಾಪಿ ಪೌಗದಿರು ಮನೆಯನೆನುತಿಹರು 

ಅಡಸಿ ವಿಧಿ ದಾರಿದ್ರ ಬಿಡದೆ ಕಾಡುತಿರ್ಪ ಬಡತನವೆ ಬಲುಕಷ್ಟವೊ ॥೪೫॥ 


ಉರಿಯ ಪೋಗಲ್ಬಹುದು ಪೇರುರಗನ ಪಿಡಿಯಲುಬಹುದು

ಮಾರಿ ಪೊಳಲ ಪೊಗಬಹುದು ಅರಿಯಶಾರೆಲಿರಬಹುದು 

ಶರಧಿಯ ಮುಳುಗಲುಬಹುದು ಗರಳವ ಕುಡಿಯಬಹುದು ಹರಣಮಂ ಬಿಡಲಿಬಹುದು

ನೆರೆ ದರಿದ್ರತ್ವವೆಡೆಗೊಂಡಾಗ ನಂಟರೊಳು 

ತಿರಿದುಂಡು ಜೀರ್ಣವಸ್ತ್ರವನುಟ್ಟಿಹುದೆ ಕಷಾಟ 

ತರಳನಿರ್ದಪನು ನಿಮಗೊಪ್ಪಿಸಿಹೆ ಹರಣಮಂ ಬಿಡುವೆನೆಂದೊರಲ್ದತ್ತಳೂ ॥೪೮॥


ಆ ಕುಂಭಿನೀ ಸುರಂ ಅವಳ ದುಃಖವ ಕೇಳ್ದು 

ತಾ ಕರುಣದಲ್ಲಿ ಕರುಣಾನ್ವಿತನುಮಾಗುತಂ 

ಈ ಕಾಂತೆಯಳಲ ಪರಿಹರಿಪೆನೆಂದಾಗ ಮೊಗವೆತ್ತಿ ತಾನಿಂತೆಂದನು॥ 

ಯಾಕೆ ಅತ್ತಪೆ ತಾಯೆ ಮುನ್ನ ವಿಧಿ ಬರೆದಿರ್ಪ 

ವಾಕು ತಪ್ಪದು ದಾರಿಗಿದು ನಿನ್ನ ಪಾಡೇನು ಶೋಕ 

ಸೈರಿಸು ಪೇಳ್ವೆನೆಂದು ಕಂಬನಿದೊಡೆದು ಕುಳ್ಳಿರಿಸಿ ಸೋಮಲೆಯನೂ॥೪೯॥ 


ಎಲೆ ಸೋಮಲೆಯೆ ಕೇಳು ಮುನ್ನ ವಿಧಿವಶದಿಂದ 

ಲಲನೆಯರು ಬಳಲ್ದುದಂ ಪೇಳ್ವೆಂ ಹರೆಶ್ಚಂದ್ರ 

ನೊಲುಮೆಯಂಗನೆಯಪ್ಪ ಚಂದ್ರಮತಿ ತನ್ನ ನಿಡಪತಿ ಸತ್ಯವನು ಪಿಡಿದೂ॥ 

ನೆಲಸಿರಿಯ ಮುನಿಗಿತ್ತು ಋಣಗೊಡಲ್ಪೋಪ ಪಥ 

ದೊಳಗೆ ಕಾಳ್ಳಿನುರೆ ಪೊಕ್ಕ ಕಾಶಿಯಪುರದಿ 

ಬೆಲೆವಡೆದು ತೊಳ್ತುಗೆಲಸಂಗೈವುತೆಸುತಂ ಸರೂಪ ಹತಿಯಿಂದಳಿಯಲೂ ॥೫೦॥ 


ಅತಿ ದುಃಖದಿಂದ ಬಾಲನ ದಹಿಸಿ ಸುಡುಗಾಡ 

ಪತಿ ತಡೆಯೆ ಪುರಕೆ ಬಪ್ಪಾಗ ಚೋರರು ತಂದು 

ಕ್ಷಿತಿಪನಾತ್ಮಜನ ಶಿರಗೊಂಡೆ ಕಂಡು ಪಿಡೆ ಗುಡಿಯ ಕಟ್ಟಿಕೊಡಲು ಸ್ಮಶಾನದೀ ॥ 

ಸತಿಯೆಂದು ಆಂತರಿಸಿದವಳ ಶಿರಗಡಿವುತಿರೆ 

ದೃತಿಗುಂದದಿರುತಿರಲು ಮೃಡಮೆಚ್ಚಿಯಸಿವಿಡಿದು

ಅತಿಶಯದಿ ಮುನ್ನಿನಂದಧಿಕ ಭೋಗಮನಿತ್ತನೆಂದನಾ ಸದ್ಬುಧವರಂ॥೫೧॥ 


ಇಳೆಯಾತ್ಮಜಾತೆ ನಿಜಪತಿ ಸಹಿತ ವನವಾಸ 

ದೊಳಗಿರಲು ಮೃಗವೇಂಟೆಗೆಂದು ರಾಮಂ ಪೋ 

ಗಲೆಳದ್ಯೋದು ಕಾಮಲಂಪಟನಾಗೆ ದಶಕಂಠ ರತಿಗೆ ಮನವೀಯ್ಯದಿರಲೂ

ಬಲುಹುಳ್ಳ ಶಾಂಡಿಲ್ಯಮುನಿಶಾಪ ಭೇತಿಯಿಂ 

ದಳುಕಿ ಅಬಲೆಯರ ಸಂದಿಯ ನಡಸುತಿರೆಕೀಶ 

ಬಲವೆರಸಿ ಲಂಕೆಯಂ ದಹಿಸಿ ರಾವಣನ ಸದೆದವನಿಯ ರಾಮ ನೆರೆದಂ ॥೫೨॥


ನಳಚಕ್ರವರ್ತಿಯಂಗನೆಯು ದಮಯಂತಿಯ 

ಗ್ಗಳದ ದುಃಖವ ಪೇಳ್ಪರಳವಲ್ಲ ಪಾಂಡು ಭೂ 

ವಲಯಾಧಿನಾಥನರಸಿಯು ಕುಂತಿ ತತ್ಸುತರ್ವೆರಸಿ ದೇಶಾಂತರದೊಳೂ॥ 

ಬಲುಬನ್ನಬಟ್ಟು ಬಳಲ್ದುದನು ವರ್ಣಿಪರಾರು 

ನಳಿನಾಸ್ತ್ರ ಭಾಗ್ಯರತಿದೇವಿ ನಿಜಪತಿಯಳಿದ 

ಬಳಿಕವಳು ಬಿದ್ದ ಪಡಿಪಾಡುಗಳ ಶಿವ ಬಲ್ಲನವರ ಪಾಡೇನು ಮತ್ತೇ ॥೫೩॥


ಎಲೆ ತಾಯೆ ಕೇಳೆನ ಪೇಳ್ವೆ ಕುಸುಮದ ಮೊಗ್ಗೆ 

ಯೊಳಗೆ ಪರಿಮಳ ದಿವ್ಯ ಫಲದೊಳಗೆ ರುಚಿಯು ಮಂ 

ಗಳರತ್ನಮಸಿಯ ಪಾವಡದ ಮರೆಗೊಂಡಂತೆ ಪಾಪಿಯಕ್ಷಿಗೆ ಪರುಷವೂ ॥ 

ಶಿಲೆಯಾಗಿ ಕಾಣಿಸುವ ತೆರದೊಳೀ ತರಳನಿಹ 

ಪೊಲಬಿತ್ತಿ ಬೆಳೆವನಕ ಫಲದೋರದಂತಿಹುದು 

ಬಳಲದಿರು ನಿನ್ನ ನಿರ್ಮಲ ಗರ್ಭವಾರ್ಧಿವರ್ಧನ ಪೂರ್ಣಸೀತಕರನೂ ॥೫೮॥ 


ಉದಿಸಿಹನು ಪುತ್ರವೇಷದಿ ನಿನ್ನ ಬಡತನವ 

ನೊದೆವ ಚಿಂತಿಸಬೇಡಲಿವನ ಮಹಿಮೆಯನೆಲ್ಲ 

ಮದನಾರಿಯೆ ಬಲ್ಲ ಪ್ರಕಟದಿಂ ಭೃಷ್ಟಗುಪ್ತದಿ ಮುಕ್ತನೆಂಬ ನೀತೀ ॥ 

ಅದನರಿತು ಮುಂಪೇಳಲೇಕೇ ನೀಂ ಪೋಗೆಂದು 

ಬುಧವರಂ ನುಡಿಯೆ ಮೂರ್ಖಳಿಗೆ ಸಮ್ಮತವ ಪೇ 

ಳಿದಿರಿ ಈ ಸುತನೆತ್ತ ನಿಮ್ಮ ಕರುಣೋದಯದ ಮಾತೆತ್ತಲೆಂದಳಬಲೇ ॥೫೯॥ 


ಉರಗೇಂದ್ರ ನಡಿಗೆ ಅವನಿಯು ಕುಸಿಯೆ ಜಲನಿಧಿಯು 

ವರತುಕ್ಕಿ ಮೇರೆ ಮೀರಿದಡೆ ವಡಬಾಗ್ನಿ ತಾಂ 

ಉರಿದು ಪುಟ್ಟುವದೊಡಂ ಕಮಲಾಪ್ತ ಪಶ್ಚಿಮದಿ ಮೊಗದೋರಿದಡೆ ಒಮ್ಮೆಯೂ ॥ 

ಪರಮ ಶಿವಭಕ್ತರಹ ಸದ್ಬುಧರು ಪುಸಿಯರಿದ 

ನರಿದು ನಿಶ್ಚೈಸು ನಿನ್ನಯ ಪುತ್ರನೈಶ್ವರ್ಯ್ಯ 

ಕರನಹನು ನಂಬುನಿಂ ಪೆರರಿಗುಸುರಲು ಬೇಡವೆಂದು ಬೀಳ್ಕೊಟ್ಟನವಳಾ॥೬೦॥


ನೆನಹುಗಳೊಡನೆ, 


ಕರ್ತೃ :- ಕೋಳೂರು ಶಂಕರ ಕವಿ 

ಸಂಪಾದಕರು:- ಡಾ. ಎಫ್. ಟಿ. ಹಳ್ಳಿಕೇರಿ 

ಪ್ರಕಾಶಕರು:- ಪ್ರಸಾರಾಂಗ 

ಕನ್ನಡ ವಿಶ್ವವಿದ್ಯಾಲಯ ಹಂಪಿ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ