ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಡಿಸೆಂಬರ್ 19, 2020

ಮ್ಯಾಸಬೇಡರ ಕಥನಗಳು

 ಮ್ಯಾಸಬೇಡರ ಕಥನಗಳು


ಮಧ್ಯ ಕರ್ನಾಟಕದ ಬಯಲುಸೀಮೆಯ ಬಹು ಪಾಲನ್ ಕಾಡುಗೊಲ್ಲರು ಮತ್ತು ಮ್ಯಾಸಬೇಡರು ಆವರಿಸಿಕೊಂಡಿದ್ದಾರೆ. ಕರ್ನಾಟಕದ ಈ ಹೃದಯ ಭಾಗವನ್ನು ತಮ್ಮ ವಿಶಿಷ್ಟ ಜೀವನ ಕ್ರಮದಿಂದ ಈ ಎರಡೂ ಬುಡಕಟ್ಟುಗಳು ಜೀವಂತವಾಗಿರಿಸಿವೆ. ಸಂಪದ್ಭರಿತ ಸಾಂಸ್ಕೃತಿಕ ಸ್ಮೃತಿಗಳನ್ನು ಈ ಎರಡೂ ಬುಡಕಟ್ಟುಗಳು ಜತನದಿಂದ ಕಾಪಾಡಿಕೊಂಡು ಬಂದಿವೆ. ಮ್ಯಾಸಬೇಡರ ಸಾಂಸ್ಕೃತಿಕ ಬದುಕಿನ ಸ್ಥಿತಿ ಮಧ್ಯಕಾಲೀನ ಸಾಮ್ರಾಜ್ಯಗಳ ಚರಿತ್ರೆಯನ್ನು ಪರಿಚಯಿಸುತ್ತದೆ. 


ಒಂದು ದೇಶಕ್ಕೆ ಒಂದೇ ಸಂಸ್ಕೃತಿ ಎಂಬುದಿರುವುದಿಲ್ಲ. ಅದರಲ್ಲೂ ನಮ್ಮ ಭಾರತ ಬಹುಮುಖೀ ಸಂಸ್ಕೃತಿಯನ್ನು ಪ್ರತೆನಿಧಿಸುವ ಒಂದು ಸಂಕೀರ್ಣ ಭೂಪ್ರದೇಶವಾಗಿದ್ದು ಕೆಲವರು ಊಹಿಸುವಂಥ ಒಂದೇ ಸಂಸ್ಕೃತಿ ಇರಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಗಟ್ಟಿಗೊಳ್ಳುತ್ತಿದೆ. ಪ್ರತಿಯೊಂದು ನೆಲದ ವಿವಿಧ ಭಾಷೆಗಳು, ಅಲ್ಲಿನ ಜನ, ಅವರ ಆಚಾರ ವಿಚಾರಗಳು,  ರೂಢಿಸಿಕೊಂಡ ಮೌಲ್ಯ, ಅವರ ಲೋಕದೃಷ್ಟಿ ಇತ್ಯಾದಿಗಳನ್ನು ಅವಲೋಕಿಸಿದಾಗ ನೂರಾರು ಸಂಸ್ಕೃತಿ ವಿಶೇಷಗಳು ನಮ್ಮ ಕಣ್ಣ ಮುಂದೆ ಮೂಡುತ್ತವೆ. ನೆಲದ ಗುಣ ಪಡೆದ ಆಯಾ ವರ್ಗಗಳ ಉಸಿರಿನೊಡನೆ ಬೆಳೆದು ಬಂದ ಸಾಂಸ್ಕೃತಿಕ ವಿಶೇಷಗಳ ಹಲವು ಘಟಕಗಳೇ ಭಾರತೀಯ ಸಂಸ್ಕೃತಿಯ ಜೀವಕೋಶಗಳು. ರಾಮ, ಕೃಷ್ಣ,  ಶಿವ ಮುಂತಾದ ಅಖಿರಭಾರತ ಮಟ್ಟದ ದೈವಗಳಂತೆಯೇ ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಕುಮಾರರಾಮ, ಗಾದ್ರಾಪಾಲ, ಸೇವಾಲಾಲ ಇವರಂಥ ಸ್ಥಳೀಯ ಸಾಂಸ್ಕೃತಿಕ ವೀರರೂ ಮುಖ್ಯರಾಗುತ್ತಾರೆ. ಇವರ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಒಳಪದರನ್ನು ಹಾಗೂ ನಿರ್ಲಕ್ಷಿತರ ಇತಿಹಾಸವನ್ನು ನಿರೂಪಿಸಬಲ್ಲಂಥ ಶಕ್ತಿಪಡೆದಂಥವು. ರಾಜಮಹಾರಾಜರ ಆಳ್ವಿಕೆಯ ವಿಧಾನಗಳೇ ನಮ್ಮ ಭವ್ಯ ಇತಿಹಾಸ ಎಂದು ಸಾರುತ್ತ ಬಂದಿರುವ ನಮ್ಮ ಬಹುಪಾಲು ಇತಿಹಾಸಕಾರರ ಕಣ್ಣು ತೆರೆಸಿ, ಜನಸಾಮಾನ್ಯರ ಇತಿಹಾಸಕ್ಕಾಗೆ ಒತ್ತಾಯಿಸಬಲ್ಲಂಥ ಅರಿವು ಮೂಡಿಸಬಲ್ಲ ಶಕ್ತಿ ಈ ಕಥನ ಕಾವ್ಯಗಳಿಗಿದೆ. ಪರಂಪರಾಗತವಾದ ಶಿಷ್ಟ ಮನಸ್ಸಿನ ನಂಬಿಕೆಗಳಿಗೆ ತದ್ವಿರುದ್ಧವಾದ ಈ ಕಥನಗಳು ತಮ್ಮದೇ ಮೌಲ್ಯಗಳನ್ನು, ಜೀವನದೃಷ್ಟಿಯನ್ನು, ಒಂದು ನಿರ್ದಿಷ್ಟ ನೆಲದ ಲೋಕದೋಷ್ಟಿಯನ್ನು ಹಾಗೂ ಆ ಮೂಲಕ ಆಯಾ ಜನವರ್ಗಗಳ ವಿವೇಕವನ್ನು ಹೇಳುತ್ತವೆ. 


ಬುಡಕಟ್ಟು ಸಮಾಜಗಳ ಕಾವ್ಯಗಳಂತೂ ಆದಿಮ ಸಂಸ್ಕೃತಿಯ ಹಲವು ಮಜಲುಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಪ್ರಾಚೀನ ಮಾನವನ ಆಹಾರ ಸಂಗ್ರಹಣೆ, ನಂತರದ ಬೇಟೆ, ಅನಂತರದ ಪಶುಸಂಗೋಪನೆ, ತದನಂತರದ ಕೃಷಿ, ಮುಂತಾಗಿ ಮನುಷ್ಯನ ಅನ್ವೇಷಣೆ ಹಾಗೂ ಅವಸ್ಥಾಂತರ ಮತ್ತು ಆ ಸಂಬಂಧದಲ್ಲಿ ನಡೆದ ಆರ್ಥಿಕ ಮತ್ತು ಸಾಂಸ್ಕೃತಿಕ ಘರ್ಷಣೆಗಳು ಈ ಕಾವ್ಯಗಳಲ್ಲಿ ಕಂಡು ಬರುವ ಮುಖ್ಯ ವಸ್ತು.  


ಈ ಮ್ಯಾಸಮಂಡಲ ಪ್ರಾರಂಭ ಆಗಿದ್ದೇ ದ್ವಾಪರಯುಗದ ಕೊನೆಯಲ್ಲಿ ಶ್ರೀ ಕೃಷ್ಣ ಮೂಗನಾಯಕ ಅಂತಕ್ಕಂತವನಿಗೆ ಗೋವುಗಳನ್ನೆಲ್ಲ ಪಾಲನೆ ಮಾಡುವ ಜವಾಬ್ದಾರಿ ಕೊಟ್ಟು ಆತ ವೈಕುಂಠ ಸೇರಿದ ಅಂತ ಪ್ರತೀತಿ. ಮೂಗನಾಯಕನೇ ಮ್ಯಾಸಮಂಡಲದ ಪೂರ್ವಜ. ಅವನಿಗೆ ಮಂದಲಮೂರ್ತಿ ಮಹದೇವನಾಯಕ ಅಂತ ಒಬ್ಬ ಮಗ. ಆತನಿಗೆ ಮೂರು ಜನ ಗಂಡು ಮಕ್ಕಳು.  ದಾನಸಾಲಮ್ಮ ಅಂತ ಒಬ್ಬ ಹೆಣ್ಣು ಮಗಳು.  ಈಕೆ ಬೆಳೆದು ದೊಡ್ಡವಳಾದ ಮೇಲೆ ಈಶ್ವರನನ್ನು ಮದುವೆಯಾಗಬೇಕೆಂದು ಹಠ ಹಿಡಿತಾಳೆ. ಮುಂದೆ ಕಥೆ ಬೆಳೆಯುತ್ತೆ. 


ಗಾದ್ರಿಪಾಲನಾಯಕನ ಕಥೆ 


ಎಲ್ಲಾಗಿನ್ನ ಮೊದಲೇ ಬಲ್ಲೋಳೆ ಬಲಾಗಂಬೆ 

ಎಳ್ಳು ಜೀರಿಗೆಯಾ ಬೆಳಾವೋಳೇ | ಗುಮ್ಮಾಮ್ಮಾ ನಾ 

ಬಲ್ಲೋಳೇ ಮೊದಲೇ ಬಲಾಗಂಬೆ॥ ಸೋಬಾನವೇ॥ 


ಆಕೆಗಿನ್ನಾ ಮೊದಲೇ ಆಕರಿ ಬಲಾಗಂಬೆ 

ಕತ್ತಿ ಜೀರಿಗಿ ಬೆಳಾವೋಳೇ॥ಗುಮ್ಮಾಮ್ಮಾ ನಾ ॥

ಆಕಿಯಾ ಮೊದಲೇ ಬಲಾಗಂಬೆ ॥ ಸೋಬಾನವೇ॥ 


ವಾಲಿ ತೊಡಿಯ ಮ್ಯಾಲೆ ಗ್ಯಾನ ನಿಮ್ಮ ಮ್ಯಾಲೆ 

ಮ್ಯಾಲೊಂದು ಸೊಲ್ಲ ಮೊದಲರಿಯೇ | ಪಾಲಯ್ಯ 

ಬಾರದಾ ಪದುನಾ ಬರಕೊಡು॥ ಸೋಬಾನವೇ॥


ಬಾರದಾ ಪದುಗಾಳು ವಾಲಿಮ್ಯಾಲೇ ಐದಾವೇ 

ವಾಲಿತತ್ತಾರೋ ಬೆನಾವಣ್ಣಾ | ಗ್ಯಾನಾರುಳ್ಳ |

ನಾರಿಗೆ ಪದುನಾ ಬರಾಕೊಡೋ॥ ಸೋಬಾನವೇ॥


ಒತ್ತಿಗೆ ತೊಡಿಯಾ ಮ್ಯಾಲೇ ಸಿತ್ತಾ ನಿಮ್ಮಾ ಮ್ಯಾಲೆ

ಮತ್ತೊಂದೆ ಸೊಲ್ಲ ಮೊದಲರಿಯೆ ॥ ಪಾಲಯ್ಯ ॥ 

ತಪ್ಪಿದಾ ಪದುನಾ ಬರಾಕೊಡೋ॥ಸೋಬಾನವೇ॥


ತಪ್ಪಿದಾ ಪದೂಗಾಳೂ ಒತ್ತಿಗೆ ಮ್ಯಾಲೈದಾವೇ 

ವತ್ತಿಗಿ ತತ್ತಾರೋ ಬೆನಾವಣ್ಣಾ॥ಗ್ಯಾನಾರುಳ್ಳ 

ನಿಸ್ತ್ರರರಿಗೆ ಪದುನಾ ಬರಾಕೊಡೋ ॥ಸೋಬಾನವೇ॥ 


ಅಲ್ಲಲ್ಲಿ ನೋಡದಾ ಗ್ಯಾನ ಯರುಡಾಗದ ಜೋಡಿ 

ನಾವಿಬ್ಬರೂ ಅಗುಲದಾಂಗಾಡಿವೇ |ವಾಲಿಗೊಜ್ಜುರುವಾ॥ 

ಬಿಗುದಾಂಗೇ ॥ ಸೋಬಾನವೇ॥ 


ಅತ್ತಿತ್ತ ನೋಡದಾ ಚಿತ್ತಾ ಎರೈಡಾಗದಾ ಜೋತೆ 

ನಾವಿಬ್ಬರೂ ಅಗುಲದಂಗಾಡೀವೀ | ಕಟ್ಟಿಗೊಜ್ಜುರುವಾ॥ 

ಬಿಗುದಂಗೇ॥ ಸೋಬಾನವೇ॥


ಬೆಂಕಿಯ ಹಡೂದಾಳೇ ಎಂಟೂಗುಂಡೈ ಗುರುವಾ 

ಗಂಟಾಲ ಗಲುಗಾ ತಿರುವೋರೇ| ಪಾಲಯ್ಯನ॥ 

ಬಂಟೆ ಮಲ್ಲಮ್ಮ ಹಡುದಾಳೆ ॥ಸೋಬಾನವೇ ॥ 


ಜಾಣಿಯ ಹಡೂದಾಳೆ ಏಳುಗುಂಡಿ ಗುರುನಾ 

ನಾಲಿಗೆ ಲಲುಗ ತಿರುವೂರೇ | ಪಾಲಯ್ಯನ॥ 

ಜಾಣಿ ಮಲ್ಲಮ್ಮ ಪಡುದಾಳೇ॥ ಸೋಬಾನವೇ॥ 


ಕಬ್ಬಿಣದ ಉಯ್ಯಾಲೆ ಜೋಗ್ಗೋಲ ಕೆಯ್ದಾರೇ 

ಇಬ್ಬರೂ ತೂಗಿದುರೇ ಅಸುನಲ್ಲೆ | ಮಲ್ಲಮ್ಮ 

ಹೆಬ್ಬುಲಿ ಮಗುನಾ ಹಡುದಾಳೇ ॥ಸೋಬಾನವೇ॥ 


ಮಾಣಿಕ್ಯದಾ ಉಯ್ಯಾಲೇ ಮಾಡಲ ಕೈದರೇ ನಾಲರು 

ತೂಗಿದರೇ ಅಸುನಲ್ಲೆ| ಮಲ್ಲಮ್ಮ| 

ಮಾಗಾಯಿ ಮಗುನಾ ಪಡುದಾಳೇ॥ ಸೋಬಾನವೇ॥


ಎತ್ತುನಾ ಗೂಡಾಗೆ ಹುಟ್ಟ್ಯಾನೇ ಪಾಲಯ್ಯ 

ಹುಟ್ಟೇಳು ದಿನಕೇ ಶಿವಪೂಜಿ | ನನ್ನಿವಾಳ 

ಶೆಟ್ಟುರಂದುಲವಾ ಕಳುವ್ಯಾರೋ | ಸೋಬಾನವೇ ॥ 


ಆವಾನೂ ಗೂಡಾಗೇ ಆಡ್ಯಾನೇ ಪಾಲಯ್ಯ 

ಆಡೇಳು ದಿನಕೇ ಶಿವಪೂಜೆ | ನನ್ನಿವಾಳ

ದೊರೆಗಳಂದುಲುವಾ ಕಳೀವ್ಯಾರೇ॥ ಸೋಬಾನವೇ ॥ 


ಕಾರೀ ಕಳ್ಳೀ ಕಡುದೂ ಕರೀಯನ ಗೂಡಾ ಕಟ್ಟಿ 

ಕಿರುಬಳ್ಳಿಲಾಲು ಕರಾವೊರೇ | ಪಾಲಯ್ಯ

ಮ್ಯಾಸ ಮಾನ್ಯರಿಗೆ ತಿಳಿಯಾವೇ॥ಸೋಬಾನವೇ ॥ 


ಗುಬ್ಬಿಸಿಕಳ್ಳೀ ಕಡುದೂ ಬಗ್ಗಿಸಿ ಗೂಡು ಕಟ್ಟೀ 

ಹೆಬ್ಬಟ್ಟಿಲಾಲು ಕರಾವೊರೇ ॥ ಪಾಲಯ್ಯನ 

 ಬುದ್ಧಿ ಮಾನ್ಯರಿಗೇ ತಿಳಿಯಾವೇ ॥ಸೋಬಾನವೇ ॥


ದುಡ್ಡೀನಾ ದೂಪಾ ಒಯ್ದು ದೊಡ್ಡೋರೇ ಬಲಾಗಂಬೆ

ದೊಡ್ಡೆಬ್ಬೆನಾಗೇ ಇರಾವೋರೇ ॥ ಪಾಲಯ್ಯನ 

ದೊಡ್ಡೊರೇ ಮೊದಲೇ ಬಲೃಗಂಬೇ॥ಸೋಬಾನವೇ ॥ 


ವಾಸನಿ ದೂಪಾ ಒಯ್ದು ಆಕ್ಯಾನೇ ಬಲಾಗಂಬೆ 

ಸಾಲೊಬ್ಬಿನಾಗೇ ಇರಾವೋರೇ | ಪಾಲಯ್ಯನ ಸ್ವಾಮಿಯಾ 

ಮೊದೈಲೇ ಬಲಿಗಂಬೇ॥ಸೋಬಾನವೇ ॥ 


ಅಣ್ಣಾನ ದಿನಾ ಬಂತು ಹೊನ್ನು ಎತ್ತಾನು ಬನ್ನಿ 

ಅಣ್ಣಾ ತಮ್ಮಗಳು ಒಡಾಗೂಡೀ| ಗಾದಾನೂರೂ 

ಹೊನ್ನಿಗಿ ತಮ್ಮಯ್ಯ ಹೊಣಿಯಾದಾ ॥ಸೋಬಾನವೇ ॥


ಅಪ್ಪನಾ ದಿನಾ ಬಂತು ರೊಕ್ಕಾ ಎತ್ತಾನು ಬನ್ನಿ 

ಅಪ್ಪಾ ಮಕ್ಕಳೂ ಒಡಗೊಡಿ | ಗಾದಾನೂರೂ 

ರೊಕ್ಕುಕ ತಮ್ಮಯ್ಯ ಹೊಣಿಯಾದ॥ಸೋಬಾನವೇ ॥


ಅಲ್ಲಿ ಇಲ್ಲಿ ಉರಿಮೆ ವಲ್ಲಾನೇ ಪಾಲಯ್ಯ  

ಎಲ್ಲಾ ಜೆಲ್ಲೆಗಳೂ ಹೊಳುದಾವೇ |ಗಾದಾನೂರೂ 

ಕಂಚೀನ ಉರುಮೆ ಬರಾಲೊಂದೇ॥ಸೋಬಾನವೇ ॥ 


ಅತ್ತಲಿತ್ತಾ ಉರಿಮೆ ಒಪ್ಪಾನೇ ಪಾಲಯ್ಯ  

ಎತ್ತಾ ಜೆಲ್ಲೆಗಳು ಹೊಳುದಾವೇ |ನನ್ನಿವಾಳ 

ಒಕ್ಕಲ ಉರಿಮೆ ಬರಾಲೊಂದೇ॥ಸೋಬಾನವೇ ॥ 


ಆರುವಾರಾ ಕೊಟ್ಟು ನೀಲಿಯ ಸತ್ತರಿಕೆ ಮ್ಯಾಲೆ 

ದುರುಗುದಲೆ ಅಣುದಾರೇ |ಸತ್ತರಿಕೆ 

ಸ್ವಾಮಿಗ್ವಾಲಾಲೀ ಇಡೂದಾರೇ॥ಸೋಬಾನವೇ ॥ 


ಅತ್ತುವಾರಾ ಕೊಟ್ಟು ಮುತ್ತಿನಾ ಸತ್ತುರಿಕೆ ಮತ್ತೆ 

ದುರುಗುದಲೆ ಅಣುದಾರೇ |ಸತ್ತುರಿಕೆ 

ಅಪ್ಪಾಗ್ವಾಲಾಲೀ ಇಡುದಾರೇ ॥ಸೋಬಾನವೇ ॥ 


ಹಲಗೆಯನ್ನಾ ಮ್ಯಾಲೇ ಆರೂ ನಿಂಬೆಹಣ್ಣು 

ಅಣ್ಣಾನ ಹೊರಡೂಸ ಹಿರಿಯರೇ |ನನ್ನಿವಾಳ  

ಸಣ್ಣಗೋಸೀಕ್ಯಾರಿ ವಳೀ ತಂಕಾ॥ಸೋಬಾನವೇ ॥ 


ಪೆಟ್ಟಿಗನ್ನಾ ಮೇಲೆ ಹತ್ತೂ ನಿಂಬೆ ಹಣ್ಣು 

ಅಪ್ಪಾನ್ನೊರಡೂಸ ಹಿರಿಯೋರೇ | ನನ್ನಿವಾಳ  

ಸಿಕ್ಕಗೋಸಿಕ್ಯಾರೆ ವಾಳೀ ತಂಕಾ ॥ಸೋಬಾನವೇ ॥ 


ಆರುರುಮೆ ಇಲ್ಲದಲೆ ಅಣ್ಣಯ್ಯ ಹೊರೂಡಾನೇ 

ಸಣ್ಣ ನನ್ನಿವಾಳ ಹೊರಾಪ್ಯಾಟಿ| ಬಾಡಿಗೆ 

ಇನ್ನೊಂದೇ ಆಳು ಬಿಡಿರಣ್ಣಾ॥ಸೋಬಾನವೇ ॥ 


ಹತ್ತುರಮೆ ಈವುದಲೆ ಅಪ್ಪಯ್ಯ ವರೂಡನೇ 

ಸಿಕ್ಕ ನನ್ನಿವಾಳ  ಹೊರೂಪ್ಯಾಟಿ| ಬಾಡಿಗೆ 

ಮತ್ತೊಂದು ಆಳು ಬಿಡೀರಣ್ಣಾ॥ಸೋಬಾನವೇ ॥


ಅಣ್ಣಾನವರಾ ಊರೂ ಹೆಣ್ಣುಳ್ಳ ಮೈಯ್ಯೋರು 

ಸಣ್ಣಾ ರುದ್ರಾಕ್ಷಿ ಕೊರಳೋರೇ |ಪಾಪಯ್ಯ 

ಅಣ್ಣಯ್ಯಗೆಗಲು ಕೊಡುಬಾರೋ॥ಸೋಬಾನವೇ ॥ 


ಅಪ್ಪಾನವರೋ ಊರು ತುಪ್ಪುಳ್ಳಾ ಮೈಯ್ಯೋರು 

ಸಿಕ್ಕ ರುದ್ರಾಕ್ಷಿ ಕೊರಳೋರೇ | ಪಾಪಯ್ಯ 

ಅಪ್ಪಯ್ಯಗೆಗಲಾ ಕೊಡುಬಾರೋ॥ಸೋಬಾನವೇ ॥ 


ಪೆಟ್ಟಿಗೊರುವಣ್ಣಾಗೆ ಬಟ್ಟ ಮತ್ತು ಬಾಬೂಲೆ 

ಪಟ್ಟೇದುಟ್ಟಾರೆ ನಡಾವೀಗೆ| ಓಬಯ್ಯ 

ಪೆಟ್ಪಿಗೆ ಹೊರೈವ ಮಗಾನೀಗೇ ॥ಸೋಬಾನವೇ ॥ 


ಕಂಬಿಗರುವಣ್ಣಾಗೆ ಮುಂಗೈಯಲೆ ಮೂರರಿವೆ 

ಕೆಂದಾಗಾಯವರ ನಡಾವೀಗೆ| ಪಾಪಯ್ಯ  

ಕಂಬಿಯ ಹೊರುವಾ ಮಗಾನಿಗೇ॥ಸೋಬಾನವೇ ॥ 


ಅಣ್ಣಾ ಹೊರಟಾನೊಂದೂ ಅಂದವಿಲ್ಲೂರಾಗೇ

ಅಂಬಾರುಕ ಮಟ್ಟಿದಕುನವೇ | ದಗ್ಗುಂಬಾವು 

ನೀಲಿಯ ಗುಡುಗು ಹಿಡಿಸ್ಯಾರೇ॥ಸೋಬಾನವೇ ॥ 


ಅಪ್ಪಾ ಹೊರಟಾನಂದೂ ಒಪ್ಪವಿಲ್ಲೂರಾಗೇ 

ಭೂಲೋಕು ಮುಟ್ಟಿದಗುನಾವೇ | ದಗ್ಗುಂಬವೂ

ಭೂಸೊಕ್ಕುರುಗುಡುಗು ಹಿಡಿಸ್ಯಾರೇ॥ಸೋಬಾನವೇ ॥ 


ಆವಾನೂ ಕರಕೊಂಡು ದೇವಾರೊರಿಸಿಕೊಂಡು 

ಎಲ್ಲೇಗೆ ಪಾಲಯ್ಯನಿಮ ಪಯಣ| ಗೋಸೀ ಕ್ಯಾರಿ 

ನೆಲ್ಲಿಯ ಮರುನ ತ್ರನವೀಗೆ ॥ಸೋಬಾನವೇ ॥ 


ಎತ್ತನಾ ಕರಾಕೊಂಡು ಪೆಟ್ಟೀಗೊರಸೀಕೊಂಡು ಎತ್ತ 

ಪಾಲಯ್ಯ ನಿಮ ಪಯಣ|ಗೋಸೀ  ಕ್ಯಾರಿ 

ಉತ್ತತ್ತಿ ಮರನಾ ತ್ರನವೀಗೇ॥ಸೋಬಾನವೇ ॥ 


ಎದ್ದನು ಎದ್ದಂಗೆ ಎದ್ದಲ್ಲೊ ಪಾಲಯ್ಯ 

ಇದ್ದನಾಲರುನಾ ಕರಾಕೊಂಡೂ | ಗೋಸೀಕ್ಯಾರೇ 

ಎದ್ದೆಲ್ಲ ಅರೈವಾ ಜಲಾಧೀಗೇ॥ಸೋಬಾನವೇ ॥ 


ಹೋದೋನು ಹೋದಂಗೇ ಹೋದಲ್ಲೋ ಪಾಲಯ್ಯ 

ಆದ ನಾಲರನಾ ಕರಾಕೊಂಡು ॥ಗೋಸೀಕ್ಯಾರೇ 

ಹೋದೆಲ್ಲೊ ಅರುವಾ ಜಲಾಧಿಗೇ॥ಸೋಬಾನವೇ ॥ 


ಅರಿವೆ ಹೊದ್ದೂಕೊಂಡು ಸೀರಿಯ ಒಲಸುತಾ 

ಅರವತ್ತು ಜಡಿಯ ಕೊಡವೂತ ಜಲಜಲದಾ 

ಬೆವತನಲ್ಲೇ॥


ಜಲಜಲದೀ ಬೆವತನಲ್ಲೇ ಪಾಲಯ್ಯ ಜಲದಿ ಬಿಟ್ಟೇಳನಲ್ಲೇ 

ಅರವತ್ತಾ ಜಡಿಯೂ ಕೊಡವೂತ ಗೋಸೀಕೆರೆಯಾ 

ಸರವತ್ತೂಗಿಳಿದಾ ಜಾಲದೀಗೇ॥ಸೋಬಾನವೇ ॥ 


ಅಂಚೆ ಹೊದ್ದುಕೊಂಡು ಸಿಂತೆ ವಾಲಿಸುತಾ 

ಪಂಜುಳ್ಳ ಜಡೆಯ ಕೊಡವೂತಾ | ಗೋಸೀಕ್ಯಾರೀ 

ಸಂಪತ್ತಿಲಳಿದಾ ಜಾಲದೀಗೇ॥ ಜಲ ಜಲದೆ ॥ 


ಆಕಾಸಿಲೇ ಮಳೆಬಂದು ಮಾಚಲಗಡ್ಡೇ ಗಂಗೇ 

ಈಚಲಗಡ್ಡಿಗೆ ಬಾರೀ ಆಕಾಶದ ಗಂಗೇ ತೆರಿ ಹೊಯ್ಯೋ ॥ ಜಲ ಜಲದೆ॥ 


ಜಲಜಲದಿ ಬೆವತನಲ್ಲೇ ಪಾಲಯ್ಯ ಜಲದಿ ಬಿಟ್ಟು ಏಳನಲ್ಲೇ 

ಆಕಾಶದ ಗಂಗೇ ತೆರೆಹೊಯ್ಯೋ ಪಾಲಯ್ಯ  

ಆವಿನ ಹಿಂಡಾ ಕಾಡಿಯಾಸೇ ॥ ಜಲ ಜಲದೆ॥ 


ಹಿಂದಲಗಡ್ಡೀಗಂಗೀ ಮುಂದಲಗಡ್ಡೀಗೆ ಬಾರೇ 

ಅಂಬಾರದ ಗಂಗೇ ತೆರೆಹೊಯ್ಯೋ| ಪಾಲಯ್ಯ  

ಎತ್ತಿನಾ ಹಿಂಡೆ ತೆರಿಯಾಸೆ॥ ಜಲ ಜಲದೆ॥ 


ಬಾಳೀಹಣ್ಣಿನಂಗೇ ಬಾಗಿರುವೋ ಗಂಗಮ್ಮ 

ತಾವೆ ಕೊಡು ನಮ್ಮ ಒಡಿಯಾ| ಪಾಲಯ್ಯಗೇ 

ಬೆಳ್ಳಿಯ ಹಾದಿ ತೂಳುದಾರೇ॥ ಜಲ ಜಲದೆ॥ 


ನಿಂಬೇ ಹಣ್ಣಿನಂಗೇ ತುಂಬಿರುವ ಗಂಗಮ್ಮ 

ಇಂಬೆಕೊಡು ನಮ್ಮ ಒಡಿಯಾ| ಪಾಲಯ್ಯಾಗೇ 

ಬಂಗಾರದ ಹಾದಿ ತೂಳುದಾರೇ ॥ ಜಲ ಜಲದೆ॥ 


ಬಾವಿಯ ದಡುದಲ್ಲಿ ಬಾಳಿಯ ಮರನುಟ್ಟೀ 

ಆಕಳುಸುತಾವೇ ಹುಲಿ ಕರಡೀ| ಪಾಲಯ್ಯ 

ತೂಕಡಿಸಿ ಹೊಳಿಯಾ ಈಳುದಾನೇ॥ಜಲ ಜಲದೆ॥ 


ಗಂಗೀಯ ದಡುದಲ್ಲಿ ನಿಂಬಿಯ ಮರನುಟ್ಟೀ  

ರಂಗುಳುಸುತಾವೇ ಹುಲಿ ಕರಡೀ | ಪಾಲಯ್ಯ 

ವಂದಿಸೀ ಹೊಳಿ ಈಳುದಾನೇ॥ಜಲ ಜಲದೆ॥ 


ಅಂಬಾರದಾ ಮಳಿ ಬಂದು ಮುಂಬಾರದ ಕೆರೆ 

ತುಂಬೀ ಕೊಂಬಿಲಚ್ಚ್ಯಾಡಾ ತೆರೀಕಟ್ಟೇ| ಗೋಸೀಕ್ಯಾರೀ 

ಹಿಂದಲ ಗೂಡಾಗೇ ಶಿವಪೂಜೀ| ಜಲ ಜಲದೇ ॥ 


ಆಕಾಸದಾ ಮಳೀ ಬಂದೊ ಭೂಪಾಲನ ಕ್ಯರಿತುಂಬೀ 

ತೋಪೆನಚ್ಚಾಡ ತ್ಯಾರಿಕಟ್ಟೀ |ಗೊಸೀಕ್ಯಾರೀ 

ಅಸನ ಕೂಡಾಗೇ ಶೆವಪೂಜೇ॥ಜಲ ಜಲದೆ॥ 

ಆರೈಸಾವಿರ ಲಿಂಗ ಹೋಗಿ ಮೈತೊಳೀವಾಗ 

ಬಾವಿಯ ಕ್ವಲ್ಲೇ ಕಾದಿಲಾವೇ |ಪಾಲಯ್ಯ 

ಹೋಗಿ ಮೈತೊಳವೋ ರಾವಸೀಗೇ॥ ಜಲ ಜಲದೆ॥ 


ಹತ್ತು ಸಾವಿರಲಿಂಗ ವಕ್ಕಿ ಮೈತೊಳಿವಾಗ 

ಕಟ್ಟೀಯ ಕ್ವಲ್ಲೆ ಕೃದಿಲಾವೇ | ಪಾಲಯ್ಯ 

ವಕ್ಕಿ ಮೈ ತೊಳೆವೋ ರಾವಸೀಗೇ॥ಜಲ ಜಲದೆ॥ 


ಆರೂ ಕಂಬೀ ಹಾಲೂ ಎಳ್ಳುಕ್ಕೆ ಬಂದೃವೇ 

ಸ್ವಾಮಿ ಪಾಲಯ್ಯ ಶೃವಪೂಜೆ॥ ಕುಡವತ್ತೀಗೇ

ಗೌಡಾ ಪಾಪಣ್ಣ ಕಾಳಿವ್ಯಾನೇ॥ ಜಲ ಜಲದೆ॥ 


ಅತ್ತ ಕಂಬೀ ಹಾಲು ಗೊತ್ತಿಗ್ಗೆ ಬಂದಾವೇ

ಅಪ್ಪ ಪಾಲಯ್ಯ ಶಿವಪೂಜೆ|ಕುಡುವತ್ತಿಗೇ 

ಗೌಡಾ ಪಾಪಣ್ಣ ಕಾಳಿವ್ಯಾನೇ ॥ ಜಲ ಜಲದೆ ॥ 


ಹುಬ್ಬಳ್ಯೀಯಲಿಂದಾ ಉಬ್ಬಿ ಬಂದಾವ ಬೆಳ್ಳೀ 

ಹೆಜ್ಜ್ಯಾಗೆ ಎತ್ತು ತೋರವೋರೇ | ಪಾಲಯ್ಯಗೆ

ಅಗ್ಗಿಲ್ಲದಪವಾ ಕೋಡಿರಣ್ಣಾ॥ಜಲ ಜಲದೆ॥ 


ಹರಿಹಾರಲಿಂದ ಅರುದು ಬಂದವ ಬೆಳ್ಳೀ 

ನಡೆಗ್ಯಾಗ ಎತ್ತೀ ತೋರವೋರೇ| ಪಾಲಯ್ಯಗೆ

ತಡವಿಲ್ಲದಡವಾ ಕೊಡಿರಣ್ಣೃ॥ ಜಲ ಜಲದೆ॥ 


ಎತ್ತು ತಂದಣ್ಣಾಗೆ ಮತ್ತಿನೋ ಉಡುಗಾರೋ 

ಪ್ರತ್ರನೋದ್ದೇರವೋ ನಲ್ಲೋಸಂದ್ರಗಾಯಿ |ಎತ್ತು ತಂದಣ್ಣಾ

ಉಡುಗೋರು ॥ ಜಲ ಜಲದೆ ॥ 


ಆವು ತಂದಣ್ಣಾಗೇ ಮ್ಯಾಲೇನ ಉಡುಗೋರಾ 

ಬಾಲನೊದ್ದಾರವೋ ದೇಸಲೇಯೇ | ಸಂದಿರಗಾಯಿ

ಆವೆ ತಂದಣ್ಣಾ ಉಡಗೋರಾ ॥ಜಲ ಜಲದಾ॥ 


ನಿಲ್ಲೋ ನಿಲ್ಲೋ ಪಾಲ ನಿಲ್ಲೋ ಸೆನ್ನಿಗ ಪಾಲ 

ಮಲ್ಲಿಗೆ ಹೂವಾ ಸಾರನೀರೇ | ಬರುತಾವೇ

ನಿಲ್ಲೋ ಪಾಲಯ್ಯ ಮುಡೀವಂತೆ॥ ಜಲ ಜಲದೆ॥ 


ತಾಳೋ ತಾಳೋ ಪಾಲ ತಾಳೋ ಸೆನ್ನಿಗಪಾಲ 

ಶಾವಂತಿಗೆ ಹೂವೇ ಸಾರನೀರೆ| ಬರುತಾವೇ 

ತಾಳೋ ಪಾಲಯ್ಯ ಮುಡೀವಂತೆ॥ಜಲ ಜಲದೌ॥ 


ಹಿಂದಲ ಪಾದದ ಮ್ಯಾಲೇ ಮುಂದಲ ಪಾದನೂರು

ಜಂಗೀಸಿ ಹೂವಾ ಮುಡಿಸೋರೇ | ಕೈಯಾಗೇ

ಉಂಗುರ ಬಂದಾವೆ ಊಡುಗೋರು॥ ಜಲ ಜಲದೆ॥ 


ಆಸಲ ಪಾದುದ ಮ್ಯಾಲೆ ಈಸಲ ಪಾದನೂರು 

ದಾಟಿಸಿ ಹೂವೇ ಮುಡಿಸೊರೇ॥ ಪಾಪಯ್ಯಗೆ 

ಅಚ್ಚಡ ಬಂದಾವೇ ಉಡುಗೋರೆ॥ ಜಲ ಜಲದೆ॥ 


ಆಕಾಸ ಕಾಡ್ಯಾವೇ ಕಾತೇನೀಲದ ಗರಡೇ 

ದಾಸನ ಕುಂಡಾರೇ ಬರಹೇಳೇ| ಆಡೋದು 

ದೂಪದೋಕುಳಿಯ ದೀನಾ ಬಂತು ॥ ಜಲ ಜಲದೆ॥ 


ಅಣ್ಣಾ ನಿಮು ದಾಸಾರು ಎಣಣೆ ಬಾನಾ ಉಂಡು 

ಸಣ್ಣ ಭೂತಾಳ ಕೈಯಲೆಡುದೆ| ಮುಡನಾಡ

ಅಣ್ಣಾಗಾಡಾರೆ ಅರಿಸಾವೆ॥ ಜಲ ಜಲದೆ ॥ 


ಎಕ್ಕಿಯ ಎಲೆ ಹಾಸಿ ಇಕ್ಕಾರೆ ಬೆಲ್ಲಾವೋ 

ಇಪ್ಪತ್ತಾಲದ ಸಸೆ ನೆಟ್ಟು | ಪಾಲಯ್ಯ 

ಸಿಕ್ಕಾ ದಾಸುರಿಗೆ ನ್ಯಾರುಳಾಗಿ ॥ ಜಲ ಜಲದೆ ॥ 


ಆಲದ ಎಲಿ ಹಾಸಿ ನೀಡ್ಯಾರೋ ಬೆಲ್ಲಾವೋ 

ಹನ್ನೊಂದಾಲಾದ ಸಸಿ ನೆಟ್ಟು | ಪಾಲಯ್ಯ 

ಸಣ್ಣ ದಾಸರಿಗೇ ನ್ಯಾರುಳಾಗಿ॥ ಜಲ ಜಲದೆ ॥ 


ಅಪ್ಪ ನಿಮು ದಾಸಾರು ತುಪ್ಪ ಬಾನಾ ಉಂಡು 

ಸಿಕ್ಕ ಭೂತಾಳ ಕೈಯಲಿಡುದೆ | ಮುಡನಾಡ

ಅಪ್ಪಗಾಡಾರೇ ಅರಿಶಾವೆ॥ ಜಲ ಜಲದೆ॥ 


ಮಾರಮ್ಮನ ಕಾವ್ಯ 


ವನುವಾ ನೋಡಿರಿ ನಮ್ಮಮ್ಮನ ತನುವಾಬೇಡಿರಿ 

ಮಟ್ಟಮದ್ಯನುದಾಗೆ ಅತ್ತ್ಯಾಳ ಬೇವಿನ ಮರ 

ಅತ್ತುತಲೇ ಕಾಯಿ ಜಡಾವುತಲೇ | ಮಾರಕ್ಕ 

ಅತ್ತ್ಯಾಳು ಬೇವಿನ ಮಾರೂದಾಗೆ ॥ ವನುವಾ ನೋಡಿರಿ॥ 


ಅಕ್ಕಾನೇ ಮಾರವ್ವ ಇಕ್ಕಿದುಂಬೋಳಲ್ಲ

ಅಚ್ಚಾಕೆಂಬಕ್ಕೆ  ಕೆನೀ ಮಸರು| ಉಂಡೇನೆಂದು 

ಅಟ್ಟೀ ಗೊಲ್ಲರುಗೆ ವಲೂದಾಳೆ॥ ವನುವಾ ನೋಡಿರಿ॥ 


ತಾಯೇನೆ ಮಾರವ್ವ ಆರಿದ್ದುಂಬೋಳಲ್ಲ 

ಆಲಗೆಂಬಕ್ಕೆ ಕ್ಯನಿ ಮಸರು | ಉಂಡೇನೆಂದು 

ಆದಿ ಗೊಲ್ಲರುಗೆ ವಲೂದಾಳೆ॥ವನುವಾ ನೋಡಿರಿ॥ 


ಕಟ್ಟೀಯ ಇಂದಾಕಿ ಹೋದಾಳೆ ಮಾರಕ್ಕ 

ನ್ಯೆಟ್ಟನ್ನಾ ಬಿದುರು ಕಡೀಸ್ಯಾಳೆ| ಮಾರಕ್ಕ 

ಸೆಟ್ಟಾರೆಂಡರಿಗೇ ವರೀಸಾಳೆ ॥ ವನುವಾ ನೋಡಿರಿ॥ 


ಏರೀಯ ಹಿಂದಾಕೆ ಹೋದಾಳೆ ಮಾರಕ್ಕ  

ನ್ಯಾರನ್ನ ಬಿದುರು ಕಡೀಸ್ಯಾಳೆ |ಮಾರಕ್ಕ 

ರಾಯರೆಂಡರೆಗೇ ವರೀಸಾಳೇ॥ವನುವಾ ನೋಡಿರಿ॥ 


ಏರೀ ಮ್ಯಾಲೇ ಮಾರಕ್ಕ ವಾರಿಲಿ ಶೃನೈಬೋಗ 

ಏರಿಂದ ಕ್ಯಳುಗೇ ತಳೂವಾರ| ಬಾರಿಕರಣ್ಣ 

ವಾಲಿಸಿ ಸಿಂತಾಕೋ ಜತಾನಾವೇ॥ ವನವಾ ನೋಡಿರಿ॥ 


ಗಂಡ ಇಲ್ಲದೋಳ ಗಂಬೀರ ನೋಡೀರೇ 

ಗಂಧಾದಾ ರಾಶೀ ಗುಡೀ ಮುಂದೆ | ಗೌರೂಸಂದ್ರ 

ಗಂಡಿಲ್ಲದ ಪರಿಸಿ ನ್ಯರೀಸ್ಯಾಳೆ॥ ವನುವಾ ನೋಡಿರಿ॥ 


ಮೋಸಾ ಎಲ್ಲದವಳ ಸರಸಾವಾ ನೋಡೀರೆ 

ಅರೆಷಿಣದ ರಾಶಿ ಗುಡೀ ಮುಂದೇ | ಗೌರೂಸಂದ್ರ

ಪೈರುಸಿಲ್ಲದ ಪರಿಸೇ ನ್ಯರೀಸ್ಯಾಳ॥ವನುವ ನೋಡಿರಿ॥ 


ಮಂಗುಳಾರ ದೀನಾ ಅಂಗೂಳ ಸಾರೀಸೀ 

ಬಂಡಾರುದ ಬರಣಿ ವರಾಗಿಟ್ಟೆ|ಗೌರೂಸಂದ್ರ 

ದಂಡೀಗೋಗದೇ ಸಡಾಗಾರ॥ ವನುವಾ ನೋಡಿರಿ॥ 


ಸುಕ್ಕುರವಾರದ ದೀನಾ ವಸ್ತೂಲಿ ಸಾರೂಸಿ 

ಬಟ್ಟೀನ ಬರುಣೀ ವರಾಗಿಟ್ಟೆ | ಗೌರೂಸಂದ್ರ

ದಂಡೀಗೋಗದೇ ಸಡಾಗಾರ॥ ವನವಾ ನೋಡಿರಿ॥ 


ತಾಯಮ್ಮ ಬರುತಾಳೆ ತಾಳಿ ಸಾಮನುದೋಳು 

ಬಗುತಾರು ಬಾಜು ಬಿಡಿರಣ್ಣಾ | ಕ್ವಾಟೇಗುಡ್ಡ 

ತಾಯಮ್ಮನೆಂಬ ಶಾರಣೀಗೆ॥ ಇಂಪು ನೋಡೇ॥ 


ಅಕ್ಕಯ್ಯಾ ಬರುತಾಳೆ ಪಟ್ಟೆ ಸಾಮಾನುದೋಳು 

ಸಂಪನ್ನರು ಬಾಜೂ ಬಿಡಿರಣ್ಣಾ | ಕ್ವಾಟೇಗುಡ್ಡ

ತಾಯಮ್ಮೇರಾಳೇ ಕೂದರೀಯ ॥ಇಂಪು ನೋಡೇ॥ 


ಜೀರಿಗೆ ವಲುದಾಗೆ ಆದಾವ ಅಮ್ಮನ ಸೇವೆ 

ಮಾಲೆ ಕಟ್ಟೋರೇ ಬಾರಲಿಲ್ಲಾ| ಬರಮಾಗಿರೆ 

ರೇವಣ್ಣ ಗ್ವಾಲೀ ಬಾರುದಾರೆ ॥ ಇಂಪು ನೋಡೇ॥ 


ಮೆಂತೀಯ ವಲುದಾಗೆ ನಿಂತಾವ ಅಮ್ಮನ ಸೇವೆ 

ಕುಂಚ ಕಟ್ಟೋರೇ ಬಾರಲಿಲ್ಲಾ | ಬರಮಾಗಿರೆ 

ಕೆಂಚಣ್ಣ ಗ್ವಾಲಿ ಬಾರೂದಾರೆ ॥ ಇಂಪು ನೋಡೇ॥


ಆರು ಕೋಳೀ ನಿನಗೆ ಸೂಡು ಬೆಲ್ಲಾ ನಿನಗೆ

ದಾವಣಿ ಕುರಿ ಕ್ವಾಣ ನೀಮಿಗವ್ವ | ಕ್ವಾಟೇಗುಡ್ಡ 

ಗ್ರಾಮದಗಿರುವೋ ಗಾರತೀಗೆ॥ ಇಂಪೈ ನೋಡೇ॥ 


ಅಚ್ಚಾ ಕೋಳೀ ನಿನಗೆ ಅಚ್ಚ ಬೆಲ್ಲಾ ನಿನಗೆ 

ಪಟ್ಟದ ಕುರಿ ಕ್ವಾಣ ನೀನಿಗವ್ವಾ | ಕ್ವಾಟೇಗುಡ್ಡ

ಪಟ್ಟಾದಗಿರುವಾ ಗಾರತೀಗೆ॥ಇಂಪು ನೋಡೇ॥ 


ಹತ್ತೇನೆ ವರುಸಾದ ತುಪ್ಪುಂಡ ಕ್ವಾಣಾನ 

ಜತ್ತೇ ಮಿಣಿ ಹಾಕೀ ಈಡತನ್ನಿ | ಕ್ವಾಣಾನ 

ನೆತ್ತೀಲಿ ನ್ಯಣುವಾ ತಾಗುದಾರೆ॥ ಇಂಪು ಶೋಡೆ॥ 


ಆರೋನೇ ವರುಸಾದ ಆಲುಂಡ ಕ್ವಾಣಾನ

ಜೋಡೇ ಮಿಣಿ ಹಾಕಿ ಈಡತನ್ನಿ | ಕ್ವಾಣನಾ

ನಾಲಿಗೆ ನ್ಯಣವಾ ತಾಗಿಸೇನೆ ॥ ಇಂಪು ನೋಡೇ॥ 


ಅಕ್ಕಾ ನಿನ ಪರಿಸಿ ಮಟ್ಟ ಮದ್ಯನಾದಾಗೆ 

ಹನಿ ಬಂದರೆಲ್ಲಿ ಈರತೀರಿ | ಗೌರುಸೆಂದ್ರ

ಸಾಲೆ ಬೇವೀನ ಮಾರುದಾಗೆ ॥ ಇಂಪು ನೋಡೇ॥ 


ಎದ್ದು ನೀರು ಒಯ್ಯ್ಕಂಡು ಎದ್ದು ಬಾರೋ ಪೂಜಾರಿ 

ಗಾದ್ದಾಟ ಬ್ಯಾಡ ಮಾನಿಯಾಗೆ॥ ಪೂಜಾರಿ 

ದೊಡ್ಡೋಳ ಪೂಜೇ ತಾಡುದಾವೆ ॥ ಇಂಪು ನೋಡೇ॥ 


ಆದ ನೀರು ಒಯ್ಯ್ಕಂಡು ವಡುಬಾರೊ ಪೂಜಾರಿ 

ಕಾದಾಟ ಬ್ಯಾಡಾ ಮಾನಿಯಾಗೆ | ಪೂಜಾರಿ 

ತಾಯವ್ವನ ಪೂಜೇ ತಾಡುದಾವೆ ॥ ಇಂಪು ನೋಡೇ॥


ಅಕ್ಕಯ್ಯ ವುಡುವೋದು ನಲುವತ್ತು ಮೊಳುದಾಸೀರಿ

 ಬೇಗನೆ ಪೂಜಾರಿ ನ್ಯಾರಿಗೊಯ್ಯೋ | ಮಾರವ್ವಗೆ

ವಾಲಿ ಮ್ಯಾಲೆ ಬರಲೋ ಕೊನೀ ಮುಸುಗು ॥ ಇಂಪು ನೋಡೇ॥ 


ತಾಯವ್ವ ವುಡುವೋದು ಇಪ್ಪತ್ತು ಮೊಳುದಾಸೀರಿ 

ಗಕ್ಕನೆ ಪೂಜಾರಿ ನ್ಯರಿಗೊಯ್ಯ | ಮಾರವ್ವಗೆ 

ವಾಲಿ ಮ್ಯಾಲೆ ಬರಲೋ ಕೋನೀ ಮುಸುಗ॥ 


ಇಂಪು ನೋಡೇ ತಾಯೆ ಕೆಂಪು ನೋಡೇ 

ಕೆಂಪೆ ಸ್ಯಾವಂತೀಗೆ ಹೂವ ಶೋಡೆ 

ಜಾಲತಾಳೇ ಜಂಬ ಮಾಡುತಾಳೇ

ಕಟ್ಟೆ ಮ್ಯಾಲೆ ಮಾರಕ್ಚ ತೂಗುತಾಳೆ ದ್ಯಾನ ಮಾಡುತಾಳೆ ॥ 


ಕಂಚೀನ ಬಟ್ಲಾಗೆ ಮಿಂಚೆಣ್ಣಿ ಒಯ್ಯ್ಕಂಡು 

ಕೆಂಚಿ ಮಾರವ್ವನ ತ್ಯಾಲೀ ಬಾಸೊ| ಪೂಜಾರಿ 

ಸಂಪೀಗೆ ಮುಡಿಸೋ ತೂರಬೀಗೆ॥ ಜಾಲುತಾಳೇ ಜಂಬ॥ 


ಬೆಳ್ಳೀದು ಬಟ್ಲಾಗೆ ಒಳ್ಳೆಣ್ಣೆ ಒಯ್ಯ್ಕಂಡು 

ನಲ್ಲೆ ಮಾರವ್ವನ ತ್ಯಾಲಿ ಬಾಸೋ | ಪೂಜಾರಿ 

ಮಲ್ಲೀಗೆ ಮುಡುಸೋ ತೂರಬೀಗೆ॥ ಜಾಲುತಾಳೇ ಜಂಬ॥ 


ಎದ್ದಾಳೇ ಮಾರಕ್ಕ ಗೆಜ್ಜೆ ಗಲ್ಲೆಂಬೂತ 

ಗಗ್ಗುರುದ ಕೀಲು ಸಡೀಲಾವೆ| ಮಾರಕ್ಕ 

ಎದ್ದಾಳೆ ಬಟ್ಟ ಬಯಲಾಗೆ ॥ ಜಾಲುತಾಳೇ ಜಂಬ॥


 ನ್ಯಡುದಾಳೆ ಮಾರಕ್ಕ ಕಡುಗ ಗಲ್ಲೆಂಬೂತ 

ಕಡುಗಾದ ಕೀಲು ಸಡೀಲಾವೆ | ಮಾರಕ್ಕ 

ನ್ಯಡುದಾಳೆ ಬಟ್ಪಾ ಬಯಲೀಗೆ ॥ ಜಾಲುತಾಳೇ  ಜಂಬ॥ 


ಬೇವಿನ ಸೀರೇದೋರು ಬಾಯ ಬೀಗಾದೋರು 

ಮ್ಯಾಲೆ ಅಂತುರುಲೇ ಸೀಡಿಯೋರು| ಬರುತಾರೆ 

ಮಾರಕ್ಕ ಕದುವಾ ತಾಗಿಯಂದಾ॥ ಜಾಲುತಾಳೇ ಜಂಬ॥ 


ಕದುವೇನೆ ತಗಿಯೋಕೆ ನಿನಗಿನ್ನ ಸಿಕ್ಕೋಳು 

ಸುತ್ತಿ ಬಾರಮ್ಮ ಪಾಗಳೀಯ | ಬಾಗಲ ಮುಂದೆ 

ಸುತ್ತಿರುವ ಬೀಗ ತಾಗಿಸೇನೆ ॥ ಜಾಲುತಾಳೇ ಜಂಬ॥


 ನೀಲು ಆದ ಕುದರಿ ಏರ್ಯಾಳೆ ಮಾರಕ್ಕ 

ನೀರಾಗಿ ಸಾರಿ ವೊರುಟಾಳೆ | ಮಾರಕ್ಕ 

ಮೇರಿದರಿಗೆ ಗಟುವಾ ವೋರಿಸಾಳೆ ॥ ಜಾಲುತಾಳೇ ಜಂಬ॥ 


ಕೆಂದು ಆದ ಕುದರಿ ಏರ್ಯಾಳೆ ಮಾರಕ್ಕ 

ಕೆಂಡುದಾಗೆ ಸಾರಿ ವೊರುಟಾಳೆ |ಮಾರಕ್ಕ 

ಲಿಂಗದರಿಗೆ ಗಮವಾ ವೋರಿಸಾಳೆ ॥ಜಾಲುತಾಳೇ ಜಂಬ॥ 


ಮುತ್ತಿನೆರುಡಾರುತಿ ಮುತ್ತಿನೆರುಡಾರುತಿ 

ಮುತ್ತೈದರಿಡಕೊಂಡು ಮುತ್ತೈದರಿಡಕೊಂಡು 

ಮಂದಾಗಮಾನಿ ಆರುತಿಗಾಳು ಬೆಳುಗಾವೆ 

ಸ್ವಾಮಿ ನಿಮಗೆ | 


ಹಾಡಿದವರು:- ಪಾಲವ್ವ ಮತ್ತು ಸಂಗಡಿಗರು

ಸಂಪಾದಕರು:- ಪ್ರಭಾಕರ ಎ. ಎಸ್. 

ಪ್ರಕಾಶಕರು:- ಪ್ರೊ. ಎ .ವಿ. ನಾವಡ 

ನಿರ್ದೇಶಕರು,  ಪ್ರಸಾರಾಂಗ 

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ, ೫೮೩ ೨೭೬. 















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ