ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಡಿಸೆಂಬರ್ 19, 2020

ಜಗನ್ನಾಥ ವಿಠ್ಠಲ ದಾಸ - ಹರಿ ಕಥಾಮೃತ ಸಾರ

ಹರಿ ಕಥಾಮೃತ ಸಾರ

ಜಗನ್ನಾಥ ವಿಠ್ಠಲ ದಾಸ


ಕರ್ತೃವಿನ ಹೆಸರು ಜಗನ್ನಾಥದಾಸರು.  ಹುಟ್ಟಿದ ಸ್ಥಳ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಟ್ಟಿ . ತಂದೆ ನರಸಿಂಹ ದಾಸ. ತಾಯಿ ಲಕ್ಷ್ಮೀಬಾಯಿ. ಪ್ರತಿ ವರ್ಷ ತಿಮ್ಮಪ್ಪನ ಜಾತ್ರೆಗೆ ಹೋಗಿಬರುತ್ತಿದ್ದರು. ಮುಂದೆ ಶ್ರೀ ತಿಮ್ಮಪ್ಪನ ದಯೆಯಿಂದಲೇ ಅವರಿಗೊಬ್ಬ ಪುತ್ರ ಜನಿಸಿದನು. ಆ ಮಗುವಿಗೆ ಶ್ರೀನಿವಾಸನೆಂದೇ ನಾಮಕರಣ ಮಾಡಿದರು.  ಮಗು ಬಾಲ್ಯ ಕಳೆದು ತಿಳುವಳಿಕೆ ಬಂದಾಗ ಮಂತ್ರಾಲಯದ ಶ್ರೀ ಬಲರಾಮಾಚಾರ್ಯರಲ್ಲಿ ಸಂಸ್ಕೃತ ಅಭ್ಯಾಸಕ್ಕೆ ಸೇರಿಸಿದರು. ಬಲರಾಮಾಚಾರ್ಯರೆಂದರೆ ಶ್ರೀ ಗುರುರಾಘವೇಂದ್ರರ ಮೊಮ್ಮಕ್ಕಳು.  ಮುಂದೆ ಶ್ರೀನಿವಾಸಾಚಾಯರ್ಯರು ಪಂಡರಪುರಕ್ಕೆ ಹೋಗಿ ಅನೇಕ ಭಜನಾವಕ್ಷಿಗಳನ್ನು ಬರೆದರು.  ಅಲ್ಲಿ ಅವರಿಗೆ ಪಂಡಿತೋತ್ತಮರೆಲ್ಲಾ ಸೇರಿ ಜಗನ್ನಾಥ ವಿಠ್ಠವನೆಂಬ ಬಿರುದು ನಕಡಿದರು. ಒಂದು ಸಲ ಶ್ರೀ ವ್ಯಾಸರಾಯರು ಸ್ವಪ್ನದಲ್ಲಿ ಕಾಣೀಸಿಕೋಂಡು ಶ್ರೀ ಹರಿಕಥಾಮೃತ ಸಾರವನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕೆಂದು ಆಜ್ಞೆಮಾಡಿದರು. ಅಂತೆಯೇ ಹರಿಕಥಾಮೃತ ಸಾರ ಎಂಬ ಮಹಾಕಾವ್ಯವನ್ನು ನಿರೃಪಿಸಿದರು. 


ಸಂಧಿ - ೧ 

ಮಂಗಲಾಚರಣೆ 


ಹರಿಕಥಾಮೃತ ಸಾರ ಗುರುಗಳ 

ಕರುಣದಿಂದಾಪನಿತು ಹೇಳುವೆ

ಪರಮ ಭಗವದ್ಭಕ್ತರಿದನಾದರದಿ ಕೇಳುವುದು॥ 


ಹರಿಕಥೆ ಎಂದರೆ ಹರಿಯ ಬಗ್ಗೆ ಹೇಳುವುದು. ಇದು ಅಮೃತಕ್ಕೆ ಸಮಾನವಾದುದು. ಇದು ದೊರಕುವುದು ಗುರು ಕೃಪೆಯಿಂದ ಮಾತ್ರ ಸಾಧ್ಯ.  ಇದನ್ನು ನನಾನ ಸಾಮರ್ಥ್ಯಕ್ಕೆ ಅನುಸಾರವಾಗಿ ಹೇಳುತ್ತೇನೆ. ಭಗವಂತನಲ್ಲಿ ನಂಬಿಕೆ, ಹಾಗೂ ಆದರವುಳ್ಳವರಿಗೆ ಮಾತ್ರ ಹೇಳುತ್ತಿದ್ದೇನೆ.  


ಶ್ರೀ ರಮಣಿ ಕಲಕಮಲ ಪೂಜಿತ | 

ಚಾರುಚರಣ ಸರೋಜ ಬ್ರಹಾಮಸ 

ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವೀನುತ | 

ನೀರಜಭವಾಂಡೋದಯ ಸ್ತಿತಿ | 

ಕಾರಣನೇ ಕೈವಲ್ಯದಾಯಕ | 

ನಾರಸಿಂಹ ನಮಿಪೆ ಕರುಣಿಪುದೆಮಗೆ ಮಂಗಳವಾ॥೧॥


ಚಾರು=ಸುಂದರ, ಸಮೀರ = ವಾಯು. ನೀಲಜ= ಸೂರ್ಯ. 


ಶ್ರೀ ಲಕ್ಷ್ಮೀದೇವಿಯ ಕರಕಮಲಗಳಿಂದ ಪೂಜಿತನೂ, ಬ್ರಹ್ಮ, ವಾಯು, ಗರುಡ, ರುದ್ರ, ಇಂದ್ರಾದಿಗಳಿಂದ ಸ್ತುತಿಸಲ್ಪಡುವವನೂ, ಬ್ರಹ್ಮಾಂಡದ ಸೃಷ್ಟಿ, ಸ್ತಿತಿ, ಲಯ ಕಾರಣನೂ, ಮೋಕ್ಷದಾಯಕನೂ ಆದ ನರಸಿಂಹನಿಗೆ ನಮಸ್ಕರಿಸುವೆ. ನಮಗೆ ಮಂಗಳವನ್ನುಂಟು ಮಾಡು. 


ಚತುರವದನನ ರಾಣಿ ಅತಿರೋ | 

ಹಿತ ವಿಮಲ ವಿಜ್ಞಾನಿ ನಿಗಮ | 

ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ॥

 ನುತಿಸಿ ಬೇಡುವೆ ಜನನಿ ಲಕ್ಷ್ಮೀ |

ಪತಿಯ ಗುಣಗಳ ನುತಿಪುದಕೆ ಸ |

ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ॥೫॥ 


ಬ್ರಹ್ಮನ ರಾಣಿ, ನಿರ್ದುಷ್ಟ ಬ್ರಹ್ಮಸಾಕ್ಷಾತ್ಕಾರವೆಂಬ ವಿಜ್ಞಾನವುಳ್ಳ, ವೀಣಾಪಾಣಿ, ವೇದಾಭಿಮಾನಿ, ಬ್ರಹ್ಮಾಣಿ ನಿನಗೆ ನಮಸ್ಕರಿಸಿ ಬೇಡುತ್ತೇನೆ. ಶ್ರೀ ಲಕ್ಷ್ಮಿಯ ಗುಣಗಳನ್ನು ಹೊಗಳಿ ಹಾಡಲುನನ್ನ ನಾಲಿಗೆಯಲೂಲೆ ನೆಲಸಿ. ಸನ್ಮತಿಯನು ಕೊಡು. 


ವೇದಪೀಠ ವಿರಿಂಚಿ ಭವ ಶ | 

ಕ್ರಾದಿ ಸುರ ವಿಜ್ಞಾನದಾಯಕ | 

ಮೋದ ಚಿನ್ಮಯಗಾತ್ರ ಲೋಕ ಪವಿತ್ರ ಸುಚರಿತ್ರ ॥ 

ಛೇದ ಛೇದ ವಿಷಾದ ಕುಟಿಲಾಂ | 

ತಾದಿ ಮಧ್ಯ ವಿದೂರ ಆದಾ | 

ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ॥ ೭॥


ವೇದಗಳಿಗೆ ಆಧಾರವಾದ ಬ್ರಹ್ಮ, ರುದ್ರ,  ಇಂದ್ರಾದಿ ದೇವತೆಗಳಿಗೆ ವಿಜ್ಞಾನವೆಂಬ ಪರಮ ಭಕ್ತಿಯೋಗವನ್ನು ನೀಡುವವನೂ, ಆನಂದ ಜ್ಞಾನಸ್ವರೂಪನೂ, ಲೋಕಪಾವನಕರ ಸುಚರಿತನೂ, ಸಕಲ ವ್ಯಸನ ವಿಕಾರ ಹಾಗೂ ರೋಗಗಳಿಂದ ವರ್ಜಿತನೂ, ಸಜ್ಜನರಿಗೆ ಆಶ್ರಯದಾತನೂ ಆದ ಬಾದರಾಯಣನೆಂದು ಖ್ಯಾತನಾದ ವ್ಯಾಸನೇ ನಮ್ಮನ್ನು ರಕ್ಷಿಸು. 


ವಾಮದೇವ ವಿರಿಂಚಿತನಯ ಉ |

ಮಾ ಮನೋಹರ ಉಗ್ರ ಧೂರ್ಜಟಿ|

ಸಾಮಜಾಜಿನವಸನ ಭೂಷಣ ಸುಮನೋತ್ತಂಸ ॥ 

ಕಾಮ ಹರ ಕೈಲಾಸ ಮಂದಿರ | 

ಸೋಮ ಸೂರ್ಯಾನಲ ವಿಲೋಚನ| 

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ॥ ೧೦॥


ಬ್ರಹ್ಮ ಪುತ್ರ ವಾಯುದೇವನೇ, ಉಮಾಪತಿಯೇ, ಶತ್ರುಗಳಿಗೆ ಉಗ್ರನೇ,ಗಜಚರ್ಮಾಂಬರ ಭೂಷಣನೇ, ದೇವೋತ್ತಮನೇ, ಕಾಮನನ್ನು ಸುಟ್ಟವನೇ, ಕೈಲಾಸವನ್ನೇ ವಾಸಸ್ಥಾನವಾಗಿವುಳ್ಳವನೇ, ಚಂದ್ರ, ಸೂರ್ಯ ಅಗ್ನಿಗಳನ್ನು ಕಣ್ಣಾಗಿ ಉಳ್ಳವನೇ, ನಾವು ಇಚ್ಛಿಸಿದ್ದನ್ನು ಕೊಡುವ ಮಹಾದೇವನೇ ನಮಗೆ ಸದಾಕಾಲಕ್ಕೂ ಸುಮಂಗಳವನ್ನು ನೀಡು. 


ಸಂಧಿ ೨


ಶ್ರುತಿ ತತಿಗಳಿಗಭಿಮಾನಿ ಲಕ್ಷ್ಮೀ | 

ಸ್ತುತಿಗಳಿಗೆ ಗೋಚರಿಸದ ಪ್ರತಿ| 

ಹತ ಮಹೈಶ್ವರ್ಯಾದ್ಯಖಿಲ ಸದ್ಗುಣಗಳಾಂಭೋಧಿ ॥

ಪ್ರತಿ ದಿವಸ ತನ್ನಂಘ್ರಿ ಸೇವಾ | 

ರತ ಮಹಾತ್ಮರು ಮಾಡುತಿಹ ಸಂ | 

ಸ್ತುತಿಗೆ ವಶವಾಗುವನಿವನ ಕಾರುಣ್ಯಕೇನೆಂಬೆ॥ ೩॥


ವೇದಾದಿ ಶೃತಿ ಸಮೂಹಕ್ಕೆ ಅಭಿಮಾನಿ ಲಕ್ಷ್ಮೀದೇವಿ. ಆಕೆಗೂ ಗೊಚರೆಸದ ಶಾಶ್ವತವಾದ ಮಹದೈಶ್ವರ್ಯ ಮೊದಲಾದ ಅಖಿಳ ಸದ್ಗುಣಗಳಿಗೆ ಸಮುದ್ರನು ಶ್ರೀಹರಿಯು.  ನಿರಂತರ ಅವನ ಪಾದ ಮಹಿಮಾ ಶ್ರವಣದಲ್ಲಿ ಆಸಕ್ತರಾದ ಮಹಾತ್ಮರ ಸ್ತುತಿಗೆ ವಶನಾಗುತ್ತಾನೆ. 


ಮಲಲಗಿ ಪರಮಾದರದಿ ಪಾಡಲು | 

ಕುಳಿತು ಕೇಳುವ ಕುಳಿತು ಹಾಡಲು | 

ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ॥ 

ಸೈಲಭನೋ ಹರಿ ತನ್ನವರ ನರ | 

ಘಳಿಗೆ ಬಿಟ್ಟಗಲನು ರಮಾಧವ| 

ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ॥೫॥


ಭೀಷ್ಮನು ಶರಶಯ್ಯೆಯಲ್ಲಿ ಮಲಗಿ ಪ್ರಾರ್ಥಿಸಿದ .ಶ್ರೀ ಕೃಷ್ಣನು ಅವನೊಳಗೆ ಬಂದು ಕುಳಿತು ಕೇಳಿಸಿಕೊಂಡ. ಶುಕ ಮೊದಲಾದ ದೇವತೆಗಳು ಕುಳಿತು ಹಾಡಿದಾಗ ನಿಂತು ಕೇಳಿದ. ನಾರದಾದಿಗಳಂತೆ ನರ್ತನ ಮಾಡುತ್ತಾ ಸ್ತುತಿಸಿದಾಗಲೂ ಸುಲಭವಾಗಿ ಒಲಿಯುತ್ತಾನೆ. ಶ್ರೀಹರಿಯು ತನ್ನ ಭಕ್ತರನ್ನು ಕ್ಷಣಕಾಲ ಕೂಡ ಬಿಡಲಾರ. ಇಂಥಾ ಸುಲಭನಾದ ಹರಿಯನ್ನು ಒಲಿಸಲು ತಿಳಿಯದ ಮೂರ್ಖ ಜನರು ಜನನ-ಮರಣ ಚಕ್ರಕ್ಕೆ ಸಿಲುಕಿ ವ್ಯರ್ಥವಾಗಿ ಬಳಲುತ್ತಾರೆ. 


ಪರಮ ಸತ್ಪುರುಷಾರ್ಥ ರೂಪನು| 

ಹರಿಯು ಲೋಕಕೆ ಎಂದು ಪರಮಾ|

ದರದಿ ಸದುಪಾಸನೆಯ ಗೈದವರಿಗಿತ್ತಪನು ತನ್ನ॥ 

ಮರೆದು ಧರ್ಮಾರ್ಥಗಳ ಕಾಮಿಸು | 

ವರಿಗೆ ನಗುತತಿ ಶೀಘ್ರದಿಂದಲಿ | 

ಸುರಪತನಯ ಸುಯೋಧನರಿಗಿತ್ತಂತೆ ಕೊಡುತಿಪ್ಪ॥ ೭॥


ಶ್ರೀ ಹರಿಯು ಕೊಡುಗೈ ದಾನಿ.  ಪರಮ ಸತ್ಪುರುಷಾರ್ಥ ರೂಪನು. ನಂಬಿ ಪರಮಾದರದಿಂದ ಸದುಪಾಸನೆ ಮಾಡಿದವರಿಗೆ ತನ್ನನ್ನೇ ಅರ್ಪಿಸಿಕೊಳ್ಳುವನು. ಇದಕ್ಕೆ ಅರ್ಜುನನೇ ಉದಾಹರಣೆ. ಶ್ರೀ ಕೃಷ್ಣನಲ್ಲಿ ಬೇಡಲು ಹೋದಾಗ ಅವನ ಪಾದದ ಬಳಿಯಲ್ಲಿ ಕುಳಿತದ್ದಲ್ಲದೆ ಅವನನ್ನೇ ಬೇಡಿಕೊಂಡದ್ದಕ್ಕೆ ಅವನಿಗೆ ಎಲ್ಲವೂ ದೊರೆಯಿತು. 


ಒಬ್ಬನಲಿ ನಿಂತಾಡುವನು ಮ| 

ತ್ತೊಬ್ಬನಲಿ ನೋಡುವನು ಬೇಡುವ| 

ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ॥ 

ಅಬ್ಬರದ ಹೆದ್ದೈವನಿವ ಮ | 

ತ್ತೊಬ್ಬರನು ಲೆಕ್ಕಿಸನು ಲೋಕದೊ | 

ಳೊಬ್ಬನೇ ತಾಬಾದ್ಯ ಬಾಧಕನಾಹ ನಿರ್ಭೀತ॥೯॥ 


ಶ್ರೀ ಹರಿಯು ಕರ್ತೃವೂ ಹೌದು, ಕ್ರಿಯೆಯೂ ಹೌದು, ದೃಷ್ಟಾರನೂ ಹೌದು, ಭೋಗಿಸುವವನೂ ಹೌದು, ನಾಟಕವಾಡಿಸುವವನು, ನಟನು ಅವನೇ, ಅಂದರೆ ಸಕಲ ಕ್ರಿಯೆಗಳಲ್ಲಿಯೂ ಅವನೇ ವ್ಯಾಪಿಸಿದ್ದಾನೆ. ಅದನ್ನು ಕುರಿತು ಆಶ್ಚರ್ಯ ವ್ಯಕ್ತಪಡಿಸುವವನೂ ಅವನೇ, ಹೀಗೆ ಶ್ರೀ ಹರಿಯು ಹೆದ್ದೈವನಾಗಿ ಲೋಕವನ್ನು ತಾನೇ ತಾನಾಗಿ ವ್ಯಾಪಿಸಿಕೊಂಡಿದ್ದಾನೆ. ಅವನೇ ಹೊಣೆಯುಳ್ಳವ, ಹೀಗೆ ಸರ್ವವ್ಯಾಪಿಯಾಗಿ ವ್ಯಾಪಿಸಿಕೊಂಡಿದ್ದರೂ ಅದಕ್ಕೆ ಅಂಟಿಕೊಂಡಿರದ ಸರ್ವ ಸ್ವತಂತ್ರನು. ಹೀಗಾಗಿ ಭಯ-ದುಃಖಗಳಿಂದ ದೂರನಾಗಿದ್ದು ನಿರ್ಭೀತನು. 


ಜನನಿಯನು ಕಾಣದಿಹ ಬಾಲಕ| 

ನೆನೆನೆನೆದು ಹಲುಬುತಿರೆ ಕತ್ತಲೆ| 

ಮನೆಯೊಳಗಡಗಿದ್ದವನ ನೋಡುತ ನಗುತ ಹರುಷದಲಿ॥

ತನಯನಂ ಬಿಗಿದಪ್ಪಿ ರಂಬಿಸಿ| 

ಕನಲಿಕೆಯ ಕಳೆವಂತೆ ಮಧುಸೂ| 

ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು॥ ೧೧॥ 


ಕತ್ತಲೆಯ ಕೋಣೆಯೊಳಗೊಂದು ಮಗು, ತಾಯಿ ಕಾಣುತ್ತಿಲ್ಲ,ಮಗು ತಾಯಿಯನ್ನು ಕಾಣದೆ ಅವಳನ್ನು ನೆನೆದು ಅಳುತ್ತಿದೆ. ಆ ಕತ್ತಲ ಕೋಣೆಯ ಒಂದು ಮೂಲೆಯಲ್ಲಿ ಅಡಗಿ ಕುಳಿತ ತಾಯಿ ಮಗುವಿನ ಶಿಶು ಸಹಜ ಅಸಹಾಯಕತೆಯನ್ನು ಕಂಡು ನಗುತ್ತಾಳೆ.  ಓಡಿ ಬಂದು ಮಗುವನ್ನು ಅಪ್ಪಿಕೊಂಡು ರಮಿಸುತ್ತಾಳೆ.  ಅದರ ಕೋಪವನ್ನು ಬಿಡಿಸಲು ಸಮಾಧಾನ ಹೇಳುತ್ತಾ ಸಂತೋಷಪಡುತ್ತಾಳೆ. ಶ್ರೀ ಹರಿ ಹಾಗೂ ಭಕ್ತನ ಸಂಬಂಧ ಇಂತಹುದೇ. ಸಂಕಷ್ಟದಲ್ಲಿ ಸಿಲುಕಿ ದಾರಿ ಕಾಣದೆ ಕಳವಳಪಡುತ್ತಿರುವ ಭಕ್ತನ ಅಸಹಾಯಕತೆಯನ್ನು ಕಂಡು ಮಧುಸೂದನನು ಅವನನ್ನು ಉದ್ಧರೆಸಲು ಧಾವಿಸಿ ಬರುತ್ತಾನೆ.  


ಕಾಮಧೇನು ಸುಕಲ್ಪತರು ಚಿಂ| 

ತಾಮಣಿಗಳಮರೇಂದ್ರ ಲೋಕದಿ | 

ಕಾಮಿತಾರ್ಥಗಳೀವುವಲ್ಲದೆ ಸೇವೆ ಮಾಳ್ಪರಿಗೆ ॥ 

ಶ್ರೀ ಮುಕುಂದನ ಪರಮಮಂಗಳ | 

ನಾಮ ನರಕಸ್ತರನು ಸಲಹಿತು|

ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹನು॥೨೧॥ 


ದೇವೇಂದ್ರನ ಬಳಿಯಿರುವ ಕಾಮಧೇನು , ಕಲ್ಪತರು, ಹಾಗೂ ಚಿಂತಾಮಣಿಯು ಸುರಲೋಕದವರಷ್ಟೇ ಬೇಡಿದರೆ ಭೋಗಗಳನ್ನು ನೀಡುವವು. ಶ್ರೀ ಮುಕುಂದನ ನಾಮಸ್ಮರಣೆ ಮಾತ್ರದಿಂದ ನರಕಭಾಗಿಗಳೂ ಉದ್ಧಾರಗೊಂಡರು. ಪಾಮರರು ಪಂಡಿತರಾದರು. ಶ್ರೀ ಹರಿಯ ಕೃಪೆ ಹೀಗೆ ಸಕಲರಿಗೂ ಪುರುಷಾರ್ಥಗಳನ್ನು ನೀಡುವುದು. 


ಕಣ್ಣಿಗೆವೆಯಂದದಲಿ ಕೈ ಮೈ | 

ತಿಣ್ಣಿಗೊದಗುವ ತೆರದಿ ಪಲ್ಗಳು |

ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ ॥ 

ಪುಣ್ಯ ಫಲಗಳನೀವುದಕೆ ನುಡಿ | 

ವೆಣ್ಣಿನಾಣ್ಮಾಂಡದೊಳು ಲಕ್ಷಣ| 

ನಣ್ಣನೊದಗುವ ಭಕ್ತರವಸರಕಮರಗಣ ಸಹಿತ॥೨೭॥ 


ರೆಪ್ಪೆಯು  ಕಣ್ಣನ್ನು ಸಂರಕ್ಷಿಸುವ ಹಾಗೆ, ದೇಹದ ಯಾವ ಭಾಗದಲ್ಲಿ ನವೆ ಉಂಟಾದರೆ ಕೈ ಅದನ್ನು ನಿವಾರಿಸಲು ಮುಂದಾಗುವಂತೆ, ಹಲ್ಲುಗಳು ಫಲಾದಿ ಆಹಾರ ವಸ್ತುಗಳನ್ನು ಅಗಿದು ನಾಲಿಗೆಗೆ ರಸವನ್ನು ಕೊಡುವ ಹಾಗೆ, ನಾವು ಮಾಡಿದ ಪುಣ್ಯ ಕಾರ್ಯಗಳು ನಮಗೆ ಉತ್ತಮ ಫಲವನ್ನು ನೀಡುವ ಹಾಗೆ, ಶ್ರೀ ರಾಮನು ರಾವಣನ ಕಾಟದಿಂದ ದೇವತೆಗಳನ್ನು ಕಾಪಾಡಿದ ಹಾಗೆ ಶ್ರೀ ಹರಿಯು ಭಕ್ತರನ್ನು ಕರೈಣಿಸಿ ಕಾಪಾಡುತ್ತಾನೆ. 


ಸಂಧಿ - ೩


ಪಾದಪಗಳಡಿಗೆರೆಯೆ ಸಲಿಲವು| 

ತೋದು ಕೊಂಬೆಗಳುಬ್ಬಿ ಪುಷ್ಪ | 

ಸ್ವಾದು ಫಲ ವೀವಂದದಲಿ ಸರ್ವೇಶ್ವರನು ಜನರಾ ॥ 

ರಾಧನೆಯ ಕೈಕೊಂಡು ಬ್ರಹ್ಮ ಭ | 

ವಾದಿಗಳ ನಾಮದಲಿ ಫಲವಿ| 

ತ್ತಾದರಿಸುವನು ತನ್ನ ಮಹಿಮೆಯ ತೋರಗೊಡ ಜಗಕೆ॥೧೩॥ 


ಗಿಡಗಳ ಕೆಳಭಾಗಕ್ಕೆ ನೀರೆರೆದರೂ ಅದು ವೃಕ್ಷಕ್ಕೆ ತಲುಪಿ ಕೊಂಬೆಗಳು ಬೆಳೆದು ಹೂ, ಹಣ್ಣು ಬಿಡೈವಂತೆ, ಜನರು ಮಾಡುವ ಪೂಜೆಯನ್ನು ಸರ್ವೇಶ್ವರನು ಒಪ್ಪಿಸಿಕೊಂಡು ಫಲಗಳನ್ನು ಕೊಡುತ್ತಾನೆ.  ಆದರೆ ಅವನು ಕೊಡುವ ಫಲವು ಅವನೇ ಕೊಟ್ಟಿದ್ದೆಂದು ಪ್ರತ್ಯಕ್ಷವಾಗಿ ಕಾಣಿಸುವುದಿಲ್ಲ. ಆದರೆ ಅವುಗಳಲ್ಲಿ ಅವನದೇ ವ್ಯಾಪ್ತಿ. 


ತೋದಕನು ತಾನಾಗಿ ತನುಮೊದ | 

ಲಾದ ಕರಣದೊಳಿದ್ದು ವಿಷಯವ | 

ನೈದುವನು ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು॥ 

ವೇದ ವೇದ್ಯನು ತಿಳಿಯದವನೋ | 

ಪಾದ ಭುಂಜಿಸುತೆಲ್ಲರೊಳಗಾ| 

ಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ॥೧೬॥ 


ಶ್ರೀ ಹರಿಯು ಜೀವಿಗಳ ಮನಸ್ಸು ಮೊದಲಾದ ಇಂದ್ರಿಯಗಳಲ್ಲಿ ಸ್ವತಃ ಪ್ರೇರಿಸುವವನಾಗಿ ಲೌಕಿಕ ಸುಖಗಳನ್ನು ಹೊಂದುವನು. ವೇದ ವೇದ್ಯನಾದರೂ ಏನನ್ನೂ ಅರಿಯದೇ ಅಜ್ಞನಂತೆ ನೀಡುವವನು ತಾನಾಗಿ ಸ್ವೀಕರಿಸುವವನು ತಾನೇ ಆಗಿ ಭಕ್ಯವತ್ಸಲನೂ ಭಾಗ್ಯ ಸಂಪನ್ನನೂ ಜೀವರಂತೆ ಎಲ್ಲರೊಳಗಿದ್ದು ಆಹ್ಲಾದ ಹೊಂದುವನು. 


ಅಣುಮಹತ್ತಿನೊಳಿಪ್ಪ ಘನ ಪರ | 

ಮಾಣುವಿನೊಳಗಡಗಿಸುವ ಸೂಕ್ಷ್ಮವ | 

ಮುಣುಗಿಸುವ ತೇಲಿಸುವ ಸ್ಥೂಲಗಳನವ ಮಾಯವಿದು॥ 

ದನುಜ ರಕ್ಕಸರೆಲ್ಲರಿವನೊಳು | 

ಮುನಿದು ಮೃಡುವುದೇನುಲೂಖಲ| 

ವನಿಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ॥ ೧೯॥


ಶ್ರೀ ಹರಿಯು ಅಣುವಿನಲ್ಲಿದ್ದಾನೆ. ಅತಿ ದೊಡ್ಡದರಲ್ಲಿಯೂ ಇದ್ದಾನೆ. ಅವನು ದೊಡ್ಡ ವಸ್ತುವನ್ನು ಸಣ್ಣದರಲ್ಲಿಡುವನು. ಸೂಕ್ಷ್ಮ ಮನಸ್ಸಿನಲ್ಲಿ ಬೃಹದ್ ವಿಚಾರಗಳು ನೆಲೆಗೊಳ್ಳುವಂತೆ, ಸೂಕ್ಷ್ಮವಾದ ಕಲೂಲುಚೂರನ್ನು ನೀರಿನಲ್ಲಿ ಮುಳುಗಿಸುವನು. ಬಲು ದೊಡ್ಡದಾದ ಮರದ ತೊಲೆಗಳನ್ನು ನೀರಿನಲ್ಲಿ ತೇಲಿಸುವನು. ಇದು ಅವನ ಮಾಯೆಯೂ ಹೌದು. ಇಂಥವನನ್ನು ದಾನವರು ಮತ್ತು ರಾಕ್ಷಸರು ದ್ವೇಷಿಸಿದರೆ ಅವರಿಗೇನು ಬಂತು. ಒರಳಲ್ಲಿ ಹಾಕಿರುವ ಧಾನ್ಯವನ್ನು ಒನಕೆಯು ಕುಟ್ಟಿ ಹೊಟ್ಟನ್ನು ಬೇರ್ಪಡಿಸುವಂತೆ ಶ್ರೀ ಹರಿಯು ದುಷ್ಟರನ್ನು ದೂರ ಮಾಡಿ ಶಿಷ್ಟರನ್ನು ರಕ್ಷಿಸುತ್ತಾನೆ. 


ವಾರಿದನು ಮಳೆಗರೆಯ ಬೆಳೆದಿಹ | 

ಬೂರುಹರಗಳ ಚಿತ್ರ ಫಲರಸ |

ಬೇರೆ ಬೇರಿಪ್ಪಂತೆ ಬಹುವಿಧ ಜೀವರೊಳಗಿದ್ದು ॥ 

ಮಾರಮಣನವರವರ ಯೋಗ್ಯತೆ| 

ಮೀರದಲೆ ಗುಣಕರ್ಮಗಳನು| 

ಸಾರ ನಡೆಸುವ ದೇವನಿಗೆವೈಷಮ್ಯವೆಲ್ಲಿಹುದೋ॥೨೩॥


ಮರಗಳ ಮೇಲೆ ಸುರಿವ ಮಳೆ ಒಂದೆ. ಆದರೆ ಬೇವು. ಮಾವು, ಹುಣಿಸೆ ಇವುಗಳ ರಸ ಬೇರೆಯಾಗುತ್ತದಲ್ಲ. ಅದರದರ ಗುಣಕ್ಕನುಸಾರ ಅದರದರ ರುಚಿ, ರಸ, ಗಂಧ ಹಾಗೆಯೇ ತ್ರಿಗುಣಾತ್ಮಕ ಜೀವರುಗಳಲ್ಲಿ ತ್ರಿವಿಧ ಭೇದ ಅವರವರ ಕರ್ಮ ಯೋಗ್ಯತೆಗಳಿಗನುಸಾರ ಅವರವರಿಗೆ ಫಲ. ಶ್ರೀ ಹರಿಗೆ 

ಯಾರಲ್ಲೂ ಭೇದ -ಭಾವವಿಲ್ಲ. 


ಕಾದ ಕಬ್ಬಿಣ ಹಿಡಿದು ಬಡಿಯಲು |

ವೇದನವು ಲೋಹಗಳಿಗಲ್ಲದೆ| 

ಆದುದೇನೈ ಅನಲಗಾವ್ಯಥೆಯೇನು ಮಾಡಿದರೂ॥ 

ಆದಿದೇವನು ಸರ್ವಜೀವರ | 

ಕಾದು ಕೊಂಡಹ ಒಳ ಹೊರಗೆ ದುಃ|

ಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ॥ ೨೭॥


ಕಾದ ಕಬ್ಬಿಣವನ್ನು ಬಡಿದಾಗ ಪೆಟ್ಟು ಕಬ್ಬಿಣಕ್ಕೆ ಹೊರತು ಅದನ್ನು ಕಾಯಿಸಿದ ಅಗ್ನಿಗಲ್ಲ. ಅದೇ ಪ್ರಕಾರ ಶ್ರೀ ಹರಿಯು ಸರ್ವರ ಒಳಗಿದ್ದು ಊವರನ್ನು ಕಾಯುತ್ತಿರುವಾಗಲೂ ಜೀವಿಗಳಿಗೆ ಒದಗಿ ಬರುವ ಸುಖ-ದುಃಖಗಳ ಲೇಪ ಆ ಚಿನ್ಮಯನಿಗಿಲ್ಲ. 


ಮಳಲ ಮನೆಗಳ ಮಾಡಿ ಮಕ್ಕಳು | 

ಕೆಲವು ಕಾಲದಲಾಡಿ ಮೋದದಿ| 

ತುಳಿದು ಕೆಡಿಸುವ ತೆರದಿ ಲಕುಮೀರಮಣ ಲೋಕಗಳ ॥ 

ಹಲವು ಬಗೆಯಲಿ ನಿರ್ಮಿಸುವ ನಿ | 

ಶ್ಚಲನು ತಾನಾಗಿದ್ದು ಸಲಹುವ | 

ಯಲರೈಣಿವೋಲ್ ನುಂಗುವವಗೆಲ್ಲಿಹುದೊ ಸುಖ ದುಃಖ॥೨೮॥ 


ಮಕ್ಕಳು ಮರಳಲ್ಲಿ ಮನೆ ಕಟ್ಟಿ ಸ್ವಲ್ಪ ಕಾಲ ಆಟವಾಡಿ ಅನಂತರ ಅದನ್ನು ಕೆಡಿಸಿಬಿಡುತ್ತಾರೆ.ಹಾಗೆಯೇ ಶ್ರೀ ಹರಿಯು ಹಲವು ತೆರನಾಗಿ ಲೋಕಗಳನ್ನು ನಿರ್ಮಿಸುತ್ತಾನೆ. ತಾನು ನಿಶ್ಚಲನಾಗಿದ್ದುಅವನ್ನು ರಕ್ಷಿಸುತ್ತಾನೆ.  ಸರೂಪವು ತಾನಿಟ್ಟ ಮೊಟ್ಟೆಗಳನ್ನು ತಾನೇ ನುಂಗುವಂತೆ, ಅವನ್ನು ಕೆಡಿಸುತ್ತಾನೆ. ಇಂಥಾ ಲೀಲಾ ಪುರುಷನಿಗೆ ಸುಖ ದುಃಖದ ವ್ಯಾಪ್ತಿಯೆಲ್ಲಿದೆ?


ಸಂಧಿ -೪ ಭೋಜನ ರಸವಿಭಾಗ


ಕ್ಷೀರಗತ ರಸರೂಪಗಳು ಮು | 

ನ್ನೂರು ಮೇಲೈವತ್ತು ನಾಲ್ಕು | 

ಚಾರು ಘೃತಗತ ರೂಪಗಳು ಇಪ್ಪತ್ತರೊಂಬತ್ತು॥ 

ಸಾರಗುಡದೊಳಗೈದು ಸಾವಿರ| 

ನೂರು ಒಂದು ಸುರೂಪ ದ್ವಿಸಹ| 

ಸ್ರಾರೆರಡು ಶತಪಂಚ ವಿಂಶತಿ ರೂಪಫಲಗಳಲಿ॥೫॥


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲಿನ ರಸದಲ್ಲಿ ೩೫೪, ತುಪ್ಪದಲ್ಲಿ ೨೯, ರುಚಿಕರವಾದ ಬೆಲ್ಲದಲ್ಲಿ ೫೧೦೧ ಮತ್ತು ಹಣ್ಣುಗಳಲ್ಲಿ ೫೮೨೫ ಭಗವದ್ರೂಪಗಳಿರುವುದೆಂದು ಹೇಳಿರುವ ಕಾರನ ಒಟ್ಟು ೮೩೦೯ ಭಗವದ್ರೂಪಗಳಾಗುವದೆಂದು ತಿಳಿದು ಧ್ಯಾನಿಸಬೇಕು. 


ಕಪಿಲನರಹರಿ ಭಾರ್ಗವತ್ರಯ | 

ವಪುಷ ನೇತ್ರದಿ ನಾಸಿಕಾಸ್ಯದಿ 

ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯಾ॥ 

ತ್ರಿಪದಿ ಪಾದ್ಯ ಹಯಾಸ್ಯ ವಾಚ್ಯದೊ | 

ಳಪರಿಮಿತ ಸುಖಪೂರ್ಣ ಸಂತತ| 

ಕೃಪಣದೊಳಿದ್ದವರವರ ರಸ ಸ್ವೀಕರಿಸಿ ಕೊಡುವಾ॥೭॥ 


ಶ್ರೀ ಹರಿಯು  ಕಣ್ಣಿನಲ್ಲಿ ಕಪಿಲರೊಪನಾಗಿಯೂ , ಮೂಗಿನ ತುದಿಯಲ್ಲಿ ಪರಶುರಾಮನಾಗಿಯೂ, ಬಾಯಲ್ಲಿ ನರಸಿಂಹನಾಗಿಯೂ, ನಾಲಿಗೆಯಲ್ಲಿ ಮತ್ಸ್ಯಮೂರ್ತಿಯಾಗಿಯೂ, ಹಲ್ಲುಗಳಲ್ಲಿ ಹಂಸನಾಗಿಯೂ, ವಾಕ್ಕಿನಲ್ಲಿತ್ರಿಪದಿ ಪಾದ್ಯನೆಂಬ ಗಾಯತ್ರಿ, ಪ್ರತಿಪಾದ್ಯ , ಹಯಗ್ರೀವರೂಪನಾಗಿಯೂ ನೆಲಸಿ, ನಿಸ್ಸೀಮನಿರಂತರನಾದ, ಪೂರ್ಣನಾದ ಪರಮಾತ್ಮನು ಕೃಪಣರಾದ ಮಾನವ ಜೀವಿಗಳಲ್ಲಿ ಆಯಾ ಜೀವದ ಯೋಗ್ಯ ರಸಗಳನ್ನು ತಾನು ಸ್ವೀಕರಿಸಿ ಜೀವರಿಗೆ ಕೊಡುವನು. 


ವಾಸುದೇವನು ಅನ್ನದೊಳು ನಾ | 

ನಾ ಸುಭಕ್ಷ್ಯದಿ ಸಂಕರುಷಣ ಕೃ| 

ತೀಶ ಪರಮಾನ್ನದೊಳು ಘೃತದೊಳಗಿಪ್ಪನಿರುದ್ಧ॥ 

ಆ ಸುಪರ್ಣಾಂಸಗನು ಸೂಪದಿ | 

ವಾಸವಾನುಜ ಶಾಕದೊಳು ಮೂ| 

ಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು॥೧೦॥ 


ಅನ್ನದಲ್ಲಿ ವಾಸುದೇವನು, ಉತ್ತಮವಾದ ನಾನಾ ಭಕ್ಷ್ಯಗಳಲ್ಲಿ ಸಂಕರ್ಷಣನು,ಪಾಯಸದಲ್ಲಿ ಪ್ರದ್ಯುಮ್ನನು, ತುಪ್ಪದಲ್ಲಿ ಅನಿರುದ್ಧನು ಇರುವರು. ಗರುಡಧ್ವಜ ವಿಷ್ಣುವು ತೊವ್ವೆಯಲ್ಲಿ, ಉಪೇಂದ್ರನಾಗಿ ಶಾಕದಲ್ಲಿ ಮೂಲ ರೂಪನಾದ ನಾರಾಯಣನು ಎಲ್ಲದರಲ್ಲೂ ಇರುವನು. 


ಕಲುಷ ಜಿಹ್ವೆಗೆ ಸುಷ್ಟುಭೋಜನ | 

ಜಲ ಮೊದಲು ವೆಷದೋರುವುದು ನಿ| 

ಷ್ಕಲುಷ ಜಿಹ್ವೆಗೆ ಸುರಸ ತೋರುವುದೆಲ್ಲ ಕಾಲದಲಿ॥ 

ಸುಲಲಿತಾಂಗಗೆ ಸಕಲ ರಸ ಮಂ | 

ಗಳ ವೆನಿಸುತಿಹವನ್ನಮಯ ಕೈ| 

ಕೊಳದೆ ಬಿಡುವನೆ ಪೂತನಿಯ ವೆಷಮೊಲೆಯನುಂಡವನು॥೨೭॥ 


ರೋಗಿಷ್ಟವಾದ ನಾಲಿಗೆಗೆ ಎಲ್ಲಾ ಆಹಾರ ಪಾನೀಯಗಳೂ ಕಹಿಯಾಗಿಯೇ ತೋರುವವು. ಅದೇ ನಿಷ್ಕಲ್ಮಸವಾದ ನಾಲಿಗೆಗೆ ಆಹಾರಪದಾರ್ಥಗಳು ಸದಾಕಾಲಕ್ಕೂ ರುಚಿಕರವೆನಿಸುವವು. ಅಂತೆಯೇ ನಿತ್ಯ ಮುಕ್ತನಾದ ಶ್ರೀಹರಿ ಶುಭಾಶುಭಗತ ಸರ್ವಸ್ವರೂಪ ರಸಮಾನಂದ ಪ್ರದವೇ ಹೌದು. ಎಂತಲೇ ದ್ವೇಷದಿಂದ ವಿಷಪೂರಿತ ಮೊಲೆಯನ್ನುಣಿಸಿದ ಪೂತನಿಯ ವೆಷದ ಪರಿಣಾಮ ಶ್ರೀಹರಿಯ ಮೇಲೆ ಉಂಟಾಗಲಿಲ್ಲ. 


ಐದು ಲಕ್ಷ ಎಂಭತ್ತರೊಂಭ|

ತ್ತಾದ ಸಾವಿರದೇಳನೂರರ| 

ಐದು ರೂಪವ ಧರಿಸಿ ಭೋಕ್ತೃಗಭೋಜ್ಯನೆಂದೆನಿಸಿ॥ 

ಶ್ರೀ ಧರಾದುರ್ಗರಮಣ ಪಾ| 

ದಾದಿ ಶಿರ ಪರ್ಯಂತ ವ್ಯಾಪಿಸಿ| 

ಕಾದು ಕೊಂಡಿಹ ಸತತ ಜಗನ್ನಾಥ ವಿಠ್ಠಲನು॥೩೦॥ 


ಪಾದಾದಿಶಿರ ಪರ್ಯಂತ = ಆಪಾದಮಸ್ತಕ


ಈ ಪದ್ಯದಲ್ಲಿ ಭಗವತ್ಸ್ವರೂಪದ ಒಟ್ಟು ಲೆಕ್ಕವನ್ನು ನಿರೂಪಿಸಿದೆ. ಅನ್ನಮಯ ೮೨೫೧, ಪ್ರಾಣಮಯ ೫೫೪೩, ಮನೋಮಯ ೫,೬೨,೧೦೬, ವಿಜ್ಞಾನಮಯ ೪,೩೭೪, ಆನಂದಮಯ ೫,೧೨೫, ಅನ್ನ ೧೦೧, ಪ್ರಾಣ ೫೧೩, ಮನ ೫೫, ವಿಜ್ನಾನ ೫೮೪, ಆನಂದ ೩,೦೫೨, ಹೀಗೆ ಶ್ರೀ ಹರಿಯು ಒಟ್ಟು ೫,೮೯,೭೦೫. ರೂಪಗಳಲ್ಲಿ ಭೋಜನ ಪದಾರ್ಥಗಳಲ್ಲೂ, ಭೋಜನಗಳಲ್ಲೂ, ಮಾಡುವವರಲ್ಲೂ, ಶ್ರೀ ಹರಿ ದುರ್ಗಾರಮಣನು ಜಗನ್ನಾಥ ವೆಠ್ಠಲನಾಗಿ ಪಾಪ ಪರಿಹಾರಕನಾಗಿ ಆಪಾದಮಸ್ತಕ ವ್ಯಾಪ್ತನಾಗಿ ಜೀವರನ್ನು ರಕ್ಷಿಸುತ್ತಿರುವನು. 


ಜಲಜನಾಭನ ಮೂರ್ತಿ ಮನದಲಿ | 

ನೆಲೆಗೊಳಿಸಿ ನಿಶ್ಚಲ ಸುಭಕುತಿಯಲಿ|

ಛಳಿ, ಬಿಸಿಲು, ಮಳೆ, ಗಾಳಿಗಳ ನಿಂದಿಸದೆ ನಿತ್ಯದಲಿ॥

ನೆಲದಲಿಹ ಗಂಧವೆ ಸುಗಂಧವು| 

ಜಲವೇ ರಸ ರೂಪವೆ ಸುದೀಪವು |

ಎಲರುಚಾಮರ ಶಬ್ಧ ವಾದ್ಯಗಳರ್ಪಿಸಲು ಒಲಿವ॥೧೩॥ 


ಕಮಲನಾಭನ ಮೂರ್ತಿಯನ್ನು ಮನದಲ್ಲಿ ನೆಲೆಗೊಳಿಸಿ ನಿಶ್ಚಲವಾದ ಭಕ್ತಿಯಿಂದ ಕೂಡಿ ಮಳೆ, ಗಾಳಿ, ಬಿಸಿಲು, ಛಳಿ ಮೊದಲಾದ ಪ್ರಾಕೃತಿಕ ಅಡೆತಡೆಗಳನ್ನು ಗಣನೆಗೆ ತಾರದೆ ಭೂಮಿಯ ವಾಸನೆಯನ್ನೇ ಗಂಧವೆಂದು, ನೀರಿನಲ್ಲಿನ ರಸವನ್ನು ಷಡ್ರಸವೆಂದೂ, ಶಬ್ಧಗಳನ್ನು ವಾದ್ಯವೆಂದೂ ತಿಳಿದು ಅವುಗಳನ್ನು ಶ್ರೀ ಹರಿಗೆ ಅರ್ಪಿಸಿದರೆ ಅವನು ಒಲಿಯುವನು.


ಗೋಳಕಗಳೆ ರಮಾರಮಣ ನಿ| 

ಜಾಲಯಗಳನುದಿನದಿ ಸಂಪ್ರ| 

ಕ್ಷಾಲನೆಯ ಸಮ್ಮಾರ್ಜನವು ಕರಣಗಳೆ ದೀಪಗಳ ॥ 

ಸಾಲು ತತ್ತದ್ವಿಷಯಗಳ ಸಂ| 

ಮೇಳನವೆ ಪರಿಯಂಕ ತತ್ಸುಖ| 

ದೇಳಿಗೆಯ ಸುಪ್ಪತ್ತಿಗಾತ್ಮನೀವೇದನವೆ ವಸನ॥೧೪॥


ದೇಹದ ಅವಯವಗಳೇ ಗೋಲಕಗಳು. ಇವನ್ನೇ ನಾವು ದೇವಾಲಯವೆಂದು ಮಾಡಿಕೊಳ್ಳುವ ದೇಹಶುದ್ಧಿ ಮೊದಲಾದ ಸಮ್ಮಾರ್ಜನಗಳೆ ದೇವರ ಗುಡಿ ಮಾರ್ಜನವೆಂದೂ, ಕಣ್ಣು ಮೊದಲಾದ ಕರಣಗಳೇ ದೀಪಮಾಲೆಯೆಂದೂ, ಕಣ್ಣಿಗೆ ಸಿಗುವ ರೂಪದರ್ಶನ, ಕಿವಿ ಆಲಿಸುವ ಶಬ್ಧ ಮೊದಲಾದುವುಗಳಿಂದ ಮನಸ್ಸಿಗೆ ಸಿಗುವ ಸುಖ ದೇವರಿಗೆ ಪರ್ಯಂತ ಸುಖ ಅಂದರೆ ಸುಪ್ಪತ್ತಿಗೆಯ ಶಯನವೆಂದೂ" ನಾನು ಸದಾ ನಿನ್ನ ದಾಸ" ಎಂಬ ನಿವೇದನೆಯೇ ದೇವರಿಗೆ ಉಡುಗೊರೆ. 


ಪಾಪಕರ್ಮವು ಪಾದುಕೆಗಳನು |

 ಲೇಪನವು ಸತ್ಪುಣ್ಯ ಶಾಸ್ತ್ರಾ |

ಲಾಪನೆ ಶ್ರೀ ತುಳಸಿ ಸುಮನೋವೃತ್ತಿಗಳು ಸುಮನ॥ 

ಕೋಪ ಧೂಪವು ಭಕ್ತಿ ಭೂಷಣ| 

ವ್ಯಾಪಿಸಿದ ಸುಬುದ್ಧಿ ಛತ್ರವು| 

ದೀಪವೇ ಸುಜ್ಞಾನ ಅರಾರ್ತಿಗಳ ಗುಣ ಕಥನ॥ ೧೫॥ 


ನಾವು ಮಾಡುವ ಪಾಪಗಳೇ ಅವನಿಗೆ ಪಾದುಕೆಗಳು. ನಾವು ಮಾಡುವ ಪುಣ್ಯ ಶಾಸ್ತ್ರಾಲಾಪಗಳೇ ಸುಗಂಧವು, ಒಳ್ಳೆಯ ಮನಸ್ಸೇ ಶ್ರೀ ತುಳಸಿ, ನಮ್ಮ ವೃತ್ತಿಗಳೇ ಹೂಗಳು, ದುಷ್ಟರಲ್ಲಿ ನಾವು ತೋರುವ ಕೋಪವೇ ಧೂಪವು, ಭಕ್ತಿಯೇ ಭೂಷಣ, ಬುದ್ಧಿಯೇ ಛತ್ರವು, ಸುಜ್ಞಾನವೇ ಬೆಳಕು, ಹರಿಕಥಾ ಶ್ರವಣವೇ ಮಂಗಳಾರತಿ ಎಂದು ನಾವು ತಿಳಿಯಬೇಕು. 


ಮನವಚನ ಕಾಯಕ ಪ್ರದಕ್ಷಿಣೆ | 

ಯನುದಿನದಿ ಸರ್ವತ್ರ ವ್ಯಾಪಕ| 

ವನರುಹೇಕ್ಷಣಗರ್ಪಿಸುತ ಮೋದಿಸುತಲಿರು ಸತತ॥ 

ಅನೈಭವಕೆ ತಂದುಕೋ ಸಕಲ ಸಾ| 

ಧನಗಳೊಳಗಿದು ಮುಖ್ಯ ಪಾಮರ | 

ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗಲ್ಲದಲೆ॥೧೬॥ 

ಶ್ರೀ ಹರಿಯು ಸರ್ವವ್ಯಾಪಿಯಾಗಿರುವಾಗ ಅವನ ಪೂಜೆ ಬಹು ಸುಲಭ, ನಾವು ಕಾಯಾ, ವಾಚಾ, ಮನಸಾ ಮಾಡುವ ಅನುದಿನದ ಕರ್ಮಗಳನ್ನೇ ಪ್ರದಕ್ಷಿಣೆಯೆಂದು ಶ್ರೀ ಹರಿಗೆ ಅರ್ಪಿಸುತ್ತಾ ಸುಖಿಸಬೇಕು. ಇದನ್ನು ಅನುಭವಕ್ಕೆ ತಂದುಕೊಂಡು

ಸರ್ವ ಸಾಧನೆಗಳಲ್ಲಿ ಅದನ್ನೇ ಶ್ರೇಷ್ಠವೆಂದು ತಿಳಿದು ಅನುಷ್ಠನಕ್ಕ್ಕೆ ತರಬೇಕು. 


ಚತುರವಿಧ ಪುರುಷಾರ್ಥ ಪಡೆವರೆ|

 ಚತುರದಶಲೋಕಗಳ ಮಧ್ಯದೊ|

ಳಿತರುಪಾಯಗಳಿಲ್ಲ ನೋಡಲು ಸಕಲ ಶಾಸ್ತ್ರದಲಿ॥ 

ಸತತ ವಿಷಯೇಂದ್ರಿಯಗಳಲಿ ಪ್ರವಿ| 

ತತನೆನಿಸಿ ರಾಜಿಸುವ ಲಕುಮೀ | 

ಪತಿಗೆ ಸರ್ವಸಮರ್ಪಣೆಯ ಮಹಾಪೂಜೆ ಸದುಪಾಯ ॥೧೭॥ 


ಚತುರ್ವಿಧ ಪುರುಷಾರ್ಥಗಳು ಜೀವರಿಗೆ ದೊರಕಬೇಕಾದರೆ ಬೇರೆ ಯಾವ ಉಪಾಯವೂ ಇಲ್ಲ. ಸಕಲೇಂದ್ರಿಯಗಳಲ್ಲಿ ವ್ಯಾಪ್ತವಾಗಿರುವ ಶ್ರೀ ಹರಿಯಲ್ಲಿ ಸರ್ವ ಸಮರ್ಪಣಾ ಭಾವ ಹೊಂದುವದೇ ಶ್ರೇಷ್ಠವಾದ ಪೂಜೆ.  ಸಕಲ ಶಾಸ್ತ್ರಗಳನ್ನು ಅವಲೋಕಿಸುವಾಗ ನಮಗೆ ದೊರಕುವ ಶೃತಿ ವಾಕ್ಯವಿದೊಂದೇ. 


ಮಧು ವಿರೋಧಿಯ ಪಟ್ಟಣಕೆ ಪೂ | 

ರ್ವದ ಕವಾಟಗಳಕ್ಷಿ ನಾಸಿಕ| 

ವದನ ಶ್ರೋತ್ರಗಳೆರಡು ದಕ್ಷಿಣ ಉತ್ತರ ದ್ವಾರ॥ 

ಗುದ ಉಪಸ್ಥಗಳೆರಡು ಪಶ್ಚಿಮ|

 ಕದಗಳೆನಿಪವು ಷಟ್ ಸರೋಜವೆ |

ಸದನ ಹೃದಯವೆ ಮಂಟಪಂಗಳು ತ್ರಿಗುಣವೇ ಕಲಶ॥ 


ದೇಹವನ್ನು ದೇವರ ನಗರವೆಂದು ಭಾವಿಸಿ ಪೂಜಿಸಿದಾಗ ಈ ಪಟ್ಟಣವೆಂಬ ದೇಹಕ್ಕೆ ಕಣ್ಣು, ಕಿವಿ, ಮೂಗುಗಳೇ ಪೂರ್ವದ ಬಾಗಿಲುಗಳು. ಬಾಯಿ, ಕಿವಿ ಎರಡು ಉತ್ತರ ದಕ್ಷಿಣದ ಬಾಗಿಲುಗಳು, ಜಲ, ಮಲಗಳನ್ನು ವಿಸರ್ಜಿಸುವ ಅಪಾನ ದ್ವಾರಗಳು ಪಶ್ಚಿಮ ಕಡೆಯವು. ಹೃದಯ ಕಮಲವೇ ಪರಮಾತ್ಮನ ಮನೆ, ಹೃದಯ ಮಂಟಪ ಸತ್ತ್ವ, ತಮ, ರಜ, ಈ ಮೂರು ಗುಣಗಳೇ ಕಲಶಗಳು. 


ವಾರಿಜಭವಾಂಡವೆ ಸುಮಂಟಪ| 

ಮೇರುಗಿರಿ ಸಿಂಹಾಸನವು ಭಾ | 

ಗೀರಥಿಯೇ ಮಜ್ಜನವು ದಿಗ್ವಸ್ತ್ರಗಳು ನುಡಿಮಂತ್ರ|

ಭೂರುಹಜ ಫಲಪುಷ್ಪಗಂಧ ಸ| 

ಮೀರ ಶಶಿರವಿದೀಪ ಭೂಷಣ| 

ತಾರಕಗಳೆಂದರ್ಪಿಸಲು ಕೈಕೊಂಡು ಮನ್ನಿಸುವ॥ ೨೮॥


ಬ್ರಹ್ಮಾಂಡವೇ ದೇವರಿಗೆ ಮಂಟಪ, ಮೇರು ಪರ್ವತವೇ ಸಿಂಹಾಸನ, ಆ ಮೇರುವಿನ ಮೇಲೆ ಸುರಿಯುವ ಗಂಗೆಯೇ ಅಭಿಷೇಕ, ದಶದಿಕ್ಕುಗಳೇ ಉಡುಗೆ-ತೊಡುಗೆ, ಮಾತೇ ಮಂತ್ರ, ಗಿಡ ವೃಕ್ಷಗಳಲ್ಲಿ ಬಿಡುವ ಫಲಪುಷ್ಪಗಳೇ ದೇವರಿಗೆ ನೈವೇದ್ಯ.  ಗಾಳಿಯೇ ಸುಗಂಧ, ಸೂರ್ಯ ಚಂದ್ರರು ದೀಪಗಳು, ಆಕಾಶದಲ್ಲಿ ಮಿನುಗುವ ನಕ್ಷತ್ರಗಳೇ ಭೂಷಣಗಳೆಂದು ಶ್ರೀ ಹರಿಗೆ ಅರ್ಪಿಸಿದರೆ ಅವನು ಅದನ್ನು ಸ್ವೀಕರಿಸಿ ನಮ್ಮನ್ನು ಆಶೀರ್ವದೆಸುವನು. 


ನದಿಯ ಜಲ ನದಿಗೆರೆವ ತೆರದಂ| 

ದದಲಿ ಭಗವದ್ಧತ್ತ ಧರ್ಮಗ| 

ಳುದಧಿಶಯನನಿಗರ್ಪಿಸುತ ವ್ಯಾವರ್ತ ನೀನಾಗಿ॥ 

ವಿಧಿ ನಿಷೇಧಾದಿಗಳಿಗೊಳಗಾ| 

ಗದಲೆ ಮಾಡುತ ದರ್ವಿಯಂದದಿ|

ಪದುಮನಾಭನ ಸಕಲ ಕರ್ಮಗಳಲ್ಲಿ ನೆನೆವುತಿರು॥ 


ನದಿಯ ನೀರನ್ನು ನದಿಗೆ ಅರ್ಪಿಸುವ ಹಾಗೆ, ಭಗವಂತನಿಂದ ಕೊಡಮಾಡಲ್ಪಟ್ಟ ವಸ್ತಿಗಳನ್ನು ಶ್ರೀ ಹರಿಗರ್ಪಿಸಿ "ಸೌಟಿನಂತೆ"

ನಿರ್ಲಿಪ್ತನಾಗಿ, ವಿಧಿ ನಿಷೇಧಗಳಿಗೆ ಅಂಟಿಕೊಳ್ಳದೇ ಶ್ರೀ ಹರಿಯೇ ಎಲ್ಲವನ್ನೂ ಮಾಡಿಸಿದನೆಂದು ತಿಳಿದು ಪದುಮನಾಭನನ್ನು ನೆನೆಯುತ್ತಿರಬೇಕು. 


ಸಂಧಿ - ೬  ಪಂಚ ಮಹಾ ಯಜ್ಞ 


ಪುರುಷ ಶಿಖಿ ವಾಕ್ ಸಮಿಧೆ ಧೂಮವು| 

ಕರಣವರ್ಚಿಯು ಜಿಹ್ವೆ ಶ್ರೋತ್ರ ಗ | 

ಳೆರಡು ಕಿಡಿಗಳು ಲೋಚನಗಳಂಗಾರಗಳೆನಿಸುವವು॥ 

ನಿರುತ ಭುಂಜಿಸುವನ್ನ ಯದುಕುಲ| 

ವರನಿಗವದಾನಗಳು ಎಂದೀ | 

ಪರಿಸಮರ್ಪಣೆಗೈಯೆ ಕೈಕೊಂಡನುದಿನದಿ ಪೊರೆವ॥ ೫॥ 


ಪುರುಷನೇ ಅಗ್ನಿ, ನಮ್ಮ ಮಾತುಗಳೇ ಕಾಷ್ಠ, ಪಂಚೇಂದ್ರಿಯಗಳೇ ಹೊಗೆ, ನಾಲಿಗೆ ಜ್ವಾಲೆ, ಎರಡು ಕಿವಿಗಳೇ ಕಿಡಿಗಳು, ಕಣ್ಣುಗಳು ಕೆಂಡಗಳು, ಎಂದು ಚಿಂತಿಸಿ ನಿತ್ಯದಲ್ಲಿ ಉಣ್ಣುವ ಅನ್ನವನ್ನು ಶ್ರೀ ಕೃಷ್ಣನಿಗೆ ಆಹುತಿ ಎಂದು ಅರ್ಪಿಸಿದರೆ ಅದನ್ನು ಒಪ್ಪಿಕೊಂಡು ಶ್ರೀ ಹರಿಯು ಸದಾಕಾಲ ನಮ್ಮನ್ನು ರಕ್ಷಿಸುವನು. 


ತಲೆಯೊಳಿಹ ನಾರಾಯಣನ ಗಂ| 

ಟಲೆಡೆ ಒಡಲೊಳು ವಾಸುದೇವನು| 

ಬಲದಲೆಹ ಪ್ರದ್ಯುಮ್ನ ಎಡಬಾಗದಲಿ ಅನಿರುದ್ಧ॥ 

ಕೆಳಗಿನಂಗದಲಿ ಸಂಕರುಷಣ | 

ತಿಳಿದು ಈ ಪರಿ ಸಕಲ ದೇಹಗ |

ಳೊಳಗೆ ಪಂಚಾತ್ಮಕ ರೂಪವನೋಡು ಕೊಂಡಾಡು॥ 


ತಲೆಯಲ್ಲಿ ನಾರಾಯಣ, ಗಂಟಲಿನ ಕೆಳಭಾಗದಲ್ಲಿ ವಾಸುದೇವ, ಶರೀರದ ಬಲಭಾಗದಲ್ಲಿ ಪ್ರದ್ಯುಮ್ನ,  ಎಡದಲ್ಲಿ ಅನಿರುದ್ಧ,  ಹೀಗೆ ಸರ್ವ ಶರೀರದಲ್ಲಿ ಪಂಚರೃಪಗಳಿಂದ ಇರುವನೆಂದು ತಿಳಿದು ಆ ಶ್ರೀಹರಿಯನ್ನು ಸ್ತುತಿಸು. 


ಪದುಮನಾಭನು ಪಾಣಿಯೊಳಗಿಹ | 

ವದನದಲಿ ಹೃಷಿಕೇಶ ನಾಸಿಕ | 

ಸದನದಲಿ ಶ್ರೀ ಧರನು ಜಿಹ್ವೆಯೊಳಿಪ್ಪ ವಾಮನನು॥ 

ಮೃದುಳತ್ವಗ್ದೇಶದಿ ತ್ರಿವಿಕ್ರಮ | 

ಮಧು ವಿರೋಧಿಯು ಲೋಚನದಿ ಕರ| 

ಣದಲಿ ಇಪ್ಪನು ವಿಷ್ಣು ನಾಮಕ ಶ್ರವಣನೆಂದೆನಿಸಿ॥೧೮॥ 


ಪದ್ಮನಾಭನು ಹಸ್ತದಲ್ಲಿ., ಹೃಷಿಕೇಶನು ವದನದಲ್ಲಿ, ಮೂಗಿ ಹೊಳ್ಳೆಗಳಲ್ಲಿ ಶ್ರೀಧರನು, ನಾಲಿಗೆಯಲ್ಲಿ ವೃಮನನು, ಮೃದುವಾದ ಚರ್ಮದಲ್ಲಿ ತ್ರಿವಿಕ್ರಮನು, ಕಣ್ಣಿನಲ್ಲಿ ಮಧುಸೂಧನನು,ಕಿವಿಯಲ್ಲಿ ಶ್ರವಣ ಶಬ್ಧವಾಚ್ಯ ರೂಪದಲ್ಲಿ ವೆಷ್ಣುವು ಇರುವನೆಂದು ತಿಳಿಯಬೇಕು. 


ವಾಸುದೇವಾನಿರುದ್ಧ ರೂಪದಿ| 

ಪುಂಶರೀರದೊಳಿಹನು ಸರ್ವದ | 

ಸ್ರೀ ಶರೀರದೊಳಿಹನು ಸಂಕರೈಷಣನು ಪ್ರದ್ಯುಮ್ನ ॥ 

ದ್ವಾಸುಪರ್ಣ ಶ್ರುತಿವಿನುತ ಸ| 

ರ್ವಾ ಸುನಿಲಯ ನಾರಾಯಣನ ಸದು | 

ಪಾಸನೆಯ ಗೈವವರು ಜೀವನ್ಮುಕ್ತರೆನಿಸುವರು ॥೩೦॥ 


ವಾಸುದೇವಾನಿರುದ್ಧ ರೂಪಗಳಿಂದ ಪುರುಷರ ಶರೀರದಲ್ಲೂ , ಸಂಕರ್ಷಣ ಪ್ರದ್ಯುಮ್ನನೆಂಬ ಎರಡು ರೂಪಗಳಿಂದ ಸದಾ ಸ್ತ್ರೀಯರ ಶರೀರಗಳಲ್ಲಿರುವನು. ಸರ್ವ ಪ್ರಾಣಿನಿವಾಸಿಯಾದ ನಾರಾಯಣನ ಸದ್ಗುಣ ರೂಪಗಳನ್ನು ಅರಿತು ಉಪಾಸನೆ ಮಾಡುವವರು, ಸದೇಹಿಗಳಾದರೂ, ನಿರಭಿಮಾನಿಗಳಾಗಿರುವ ಕಾರಣ ಜೇವನ್ಮುಕ್ತರೆಂದು ಕರೆಸಿಕೊಳ್ಳುವರು. 


ಕೃತಜ್ಞತೆಗಳು: 

ಮೂಲ ಲೇಖಕರು:ಜಗನ್ನಾಥ ವಿಠ್ಠಲ 

ಸರಳಗನ್ನಡ ಲೇಖಕರು:ಎನ್. ಎಸ್. ಜೋಶಿ

ಪ್ರಕಾಶಕರು:ಮೆ ॥ ಪಿ. ಸಿ. ಶಾಬಾದಿಮಠ ಬುಕ್ ಡಿಪೋ, 

ಸ್ಟೇಷನ್ ರೋಡ್, ಗದಗ- ೫೮೨೧೦ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ