ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 6, 2018

ಸೋಮರಾಜನ ಉದ್ಭಟಕಾವ್ಯ

ಸೋಮರಾಜನ ಉದ್ಭಟಕಾವ್ಯ

ಈ ಕಾವ್ಯದ ಕರ್ತೃ ಸೋಮರಾಜ. ಈತನಿಗೆ ಸೋಮ, ಸೋಮರಾಜ, ಸೋಮಭೂಮೀಶ್ವರ, ಸೋಮರಾಜೇಂದ್ರ ಎಂಬ ಹೆಸರುಗಳೂ ಇವೆ. ತನ್ನನ್ನು ಪರಮಜ್ಞಾನಿ, ವರವಾಣಿ ಎಂಬ ಬಿರುದುಗಳಿಂದ ಕರೆದುಕೊಂಡಿದ್ದಾನೆ. ವೀರಶೈವ ಕವಿಯಾದ ಇವನು ಪ್ರಭುವಾಗಿರಬೇಕು. ತನ್ನ ವಂಶದ ಹಿರಿಮೆಯನ್ನು - ಮುತ್ತಜ್ಜ ಚಂದ್ರವಂಶೋದ್ಭವನಾದ ತಿರುಮಲರಾಜ, ಅಜ್ಜ ರಾಯಣರಾಜ, ತಂದೆ ಇಂದುಶೇಖರ ರಾಜ; ಎಂದು ಹೇಳೀಕೊಂಡಿದ್ದಾನೆ. ಕುಂತಳದೇಶ ಹಾಗೂ ಪಂಪಾಕ್ಷೇತ್ರದ ಬಗೆಗೆ ಎಲ್ಲಿಲ್ಲದ ಅಭಿಮಾನವನ್ನು ತನ್ನ ಕೃತಿಯಲ್ಲಿ ಪ್ರಕಟಿಸಿರುವುದನ್ನು ನೋಡಿದರೆ ಕವಿಯು ತುಂಗಭದ್ರೆಯ ಆಜುಬಾಜೀನವನೇ ಇರಬೇಕೆಂದು ಊಹಿಸಬಹುದು.
ಕವಿ ಕೃತಿ ಸಮಾಪ್ತಿಯಾದ ಕಾಲವನ್ನು ಕೊನೆಯಲ್ಲಿ ಕೊಟ್ಟಿರುವನು. ಅದರ ಪ್ರಕಾರ ಶಾ. ಶ. ೧೧೪೪ ರಲ್ಲಿ ( ಕ್ರಿ. ಶ. ೧೨೨೨)  ಚಿತ್ರಭಾನು ಸಂವತ್ಸರದಲ್ಲಿ ಕೃತಿ ಪೂರ್ಣವಾಯಿತು.

ಉದ್ಭಟಕಾವ್ಯಕ್ಕೆ “ಶೃಂಗಾರಸಾರ” ವೆಂಬ ಮತ್ತೊಂದು ಹೆಸರೂ ಇದೆ. ಉದ್ಭಟ ಹಾಗೂ ಅವನ ಮನೋವಲ್ಲಭೆ ಸುಖಸಂತೋಷದಿಂದಿರಲು, ಒಂದು ದಿನ ಪತ್ನಿಯೋಡನೆ ಪಗಡೆಯಾಡುತ್ತಾ ಉದ್ಭಟದೇವನು ಅಕಾರಣವಾಗಿ ನಕ್ಕನು. ಅದಕ್ಕಾಗಿ ಮಾನಿನಿ ಮುನಿಸುಗೊಳ್ಳಲು ಅವಳನ್ನು ಸಮಾಧಾನಿಸಲು ಉದ್ಭಟನು ಪ್ರಯತ್ನಿಸುವನು. ನಗೆಗೆ ನಿನ್ನ ಕಾರಣವಲ್ಲ, ನನ್ನ ಶರಣರ ಸರಸ ಕಾರಣವೆಂದು ಹೇಳಿ, ಸೌರಾಷ್ಟ್ರದ ಓಹಿಲನು ತಾರಾದ್ರಿಗೆ ಒಬ್ಬನೇ ಹೋಗುತ್ತಿರುವುದನ್ನು ಕಂಡು ನಗು ಬಂದಿತೆಂದು ತಿಳಿಸುವನು. ನೀನು ಪುರದೊಂದಿಗೆ ಕೈಲಾಸಕ್ಕೆ ಹೋದದ್ದೇ ಆದರೆ ನನಗೆ ಒಪ್ಪುವುದು ಎಂದು ಮಾನಿನಿಯು ಕಟಕಿಯಾಡಿದಳು. ಉದ್ಭಟನು ಅದಕ್ಕೊಪ್ಪಿ ನಾಡಿದ್ದು ಸೋಮವಾರ ಪುರಸಹಿತ ಹೋಗುವುದಾಗಿ ಪತ್ನಿಯೊಡನೆ ನುಡಿದನು. ನುಡಿದಂತೆ ನಡಿದ ಉದ್ಭಟನು ಕೈಲಾಸದಲ್ಲಿ ಶಿವನ ಕೃಪೆ ಪಡೆದು ಗಣಪದವಿಯನ್ನು ಹೊಂದಿದನು. ಶಿವನ ಕರುಣೆ ಪುರಜನರಿಗೆಲ್ಲ ಪ್ರಾಪ್ತವಾಯಿತು. ಪುರವನ್ನು ಶಿವಲೋಕದಲ್ಲಿ ಶಿವನು ನೆಲೆಗೊಳಿಸಿದನು.

ಪ್ರಥಮಾಶ್ವಾಸಂ.

ಶ್ರೀನೀಹಾರಾಚಳಾಧೀಶ್ವರದುಹಿತೃಮುಖಾಂಬೋಜಸೂರ್ಯಂ ಮಹಾಸು
ಜ್ಞಾನಾನಂದಸ್ವರೂಪಂ ನಿಗಮತತಿವಿನುತಂ ಚಂದ್ರಲೇಖಾವತಂಸಂ
ಭಾನುಗ್ಲೌವಹ್ನೀನೇತ್ರಂ ತ್ರಿಪುಟಿವಿರಹಿತಂ ನಿರ್ವಿಕಲ್ಪಂ ಶಿವಂ ಸ
ನ್ಮಾನಂಬೆತ್ತೋವುಗೆನ್ನಂ ಪರಮಗುರುವಿರೂಪಾಕ್ಷಲಿಂಗಂ ಸಿತಾಂಗಾಂ||೧||

ವಿಧುಸಂಜಾತಾಂಶುಶೀತಂ ವಿಸೃಮರಶಿಶಿರಂ ವ್ಯೋಮಗಂಗಾತುಷಾರಂ
ಕುಧರವ್ರಾತೇಂದ್ರಕನ್ಯಾಮಳತರವರರೂಪಂ ವಸಂತಂ ಲಲಾಟ
ಪ್ರಧೃತಾಕ್ಷಿಗ್ರೀಷ್ಮಂ ಮಂಚತ್ಕರೈಣರಸಮೆ ವರ್ಷಂ ಶರನ್ಮೂರ್ತಿಯಾದಂ
ತಧಿಕಂಬೆತ್ತೊಪ್ಪೆಯಾರುಂಋತುವೆನಲೆಸೆವಾರ್ಯೇಶನೊಲ್ದೋವುಗೆನ್ನಂ||೨||

ನಗಿಸುತ್ತೊಳ್ಳೆರ್ದೆ ನೈದಿಲಂ ಬೆಳಗುತುಂ ಮೋಹಾತುಳಧ್ಯಾಂತಮಂ
ಮಿಗೆ ರಾಜದ್ಧ್ರುವಮಂಡಲೇಂದುಮಣಿಯಂ ತುಳ್ಕುತ್ತುಮಾನಂದವ
ರ್ದ್ಧಿಗ ಪೇರ್ಚೀಯುತುಮಾನತರ್ಕ್ಕಳ ಚಿದಾಕಾಶಾಂಗಣೋನ್ಮಧ್ಯದೊಳ್
ಭಗಣೇಶಂಬೊಲಜಸ್ರಮೊಪ್ಪುವಭವಂ ರಕ್ಷಿಕ್ಕೆ ಭಕ್ತಾಳಿಯಂ||೩||

ಹರಕಲ್ಪದ್ರುತಾಂಗಿ ನೀಲಗಳಮಾರ್ತಾಂಡಾಂಬುಜಾತಾಸ್ಯೆ ಶಂ
ಕರಪದ್ಮಾಕರಚಕ್ರವಾಕಕುಚೆ ಶರ್ವಾಂಚಚ್ಛರತ್ಕಲಬಂ
ಧುರಹಂಸೀಮೃದುಯಾನೆ ಚಂದ್ರಧರಪುಷ್ಪೇಂದಿಂದಿರೋದ್ವೇಣಿ ಯೀ
ಶ್ವರಪೂರ್ಣೇಂದುಚಕೋರನೇತ್ರೆ ಪೊರೆಗೆನ್ನಂ ಕೂರ್ತು ಪಂಪಾಂಬಿಕೆ||೪||

ಮದಧಾರಾಸಕ್ತಭೃಂಗೀಕುಳದ ರವಮೆ ಗೀತಂ ಸ್ತುತಾಮ್ನಾಯಸಂದೋ
ಹದ ನಾದಂ ವಾದ್ಯಮಂಚತ್ಕರತಳದೆಲರುಂಡೊಯ್ಯನಾಂದೋಳಿಸುತ್ತುಂ
ಪೊದೞ್ದುದ್ಯದ್ಗರ್ಭಬದ್ಧೋರಗಿಯ ಗತಿ ಲಸನ್ನರ್ತಕೀನೃತ್ಯಮಾಗಲ್
ಮುದದಿಂದಾಲೋಕಿಸುತ್ತುರ್ಬುವ ಕರಿವದನಂ ಕೂರ್ತು ರಕ್ಷಿಪುದೆನ್ನಂ||೫||

ತನುವರ್ಣಂ ಮುಗಿಲಿಂದ್ರಚಾಪಲತೆ ನಾನಾರತ್ನಭೂಷಾಂಶು ಲೋ
ಚನರುಕ್ಕೊಪ್ಪುವ ಬಳ್ಳಿ ಮಿಂಚುಲಿಯೆ ಪಾದಾಬ್ಜಾಂಕಮಾದೊಳ್ದೊಡರ್
ಘನನಾದಂ ಕರುಣಾಮೃತಂ ಮೞೆಯದಾಗಲ್ನಾಡೆ ಕಾರ್ಗಾಲಮೆಂ
ಬಿನೆಗಂ ರಂಜಿಪ ವೀರಭದ್ರನೆಮಗೀಗಿಷ್ಟಾರ್ಥಸಂಸಿದ್ಧಿಯಿಂ ||೬||

ಪ್ರಮಥಾನೀಕಕಥಾರ್ಣವೇಂದು ಹರಿದೇವಾಚಾರ್ಯನಂ ಧೈರ್ಯನಂ
ಸಮುದಂಚದ್ವೃಷಭಸ್ತವಾಮರಮಹೀಜಾರಾಮನಂ ಸೋಮನಂ
ವಿಮಲಜ್ಞಾನಸುದೀಪಿಕಾಸ್ಫುರಿತಚೇತನಸದ್ಮನಂ ಪದ್ಮನಂ
ಕ್ರಮದಿಂದಂ ಬಲಗೊಂಡು ಪೇೞ್ವೆನೊಸೆದಾನೀಕಾವ್ಯಮಂ ಸೇವ್ಯಮಂ ||೯||

ಶಿವನೆಂದುತ್ತಮಶೈವರಂಬುರುಹನೇತ್ರಂಗೆತ್ತು ತಾಂ ವೈಷ್ಣವರ್
ಹವಿರನ್ನಪ್ರಿಯನೆಂದು ಭೂಮಿದಿವಿಜರ್ಜೈನರ್ಜಿನಂಗೆತ್ತು ತ
ಮ್ಮವನೆಂದರ್ಚಿಸಲೊಲ್ದುಸರ್ವಮುಖದಿಂದಂ ಪೂಜೆಗೊಂಡಾವಗಂ
ಸುವಿಲಾಸಂಬಡೆದೊಪ್ಪುವಲ್ಲಮನೆ ಬೆಚ್ಚಿರ್ಕೆನ್ನ ಚಿತ್ತಾಬ್ಜದೊಳ್ ||೧೦||

ಶೃಂಗಾರಸಾರಮೆಂದೀ
ಮಂಗಳಕೃತಿನಾಮಮೀಕೃತಿಗೆ ವಲ್ಲಭನು
ತ್ತುಂಗವಿರೂಪಾಕ್ಷಂ ಸುಧೆ
ಯಂ ಗೆಲಲೀಕೃತಿಯನುಸುರಿದಂ ಸೋಮನೃಪಂ||೧೩||

ಬಿಸಜಾರಾತಿಕುಲೋದ್ಭವಂ ತಿರುಮಲಕ್ಷೋಣೀಧರಂ ತನ್ನರೇಂ
ದ್ರಸುಪುತ್ರಂ ನುತರಾಯಣೋರ್ವಿಪತಿ ತದ್ರಾಜನ್ಯರಾಣ್ಣಂದನಂ
ವಸುಧೇಶೋತ್ತಮನಿಂದುಶೇಖರನೃಪಂ ತಪಜಂ ಸೋಮನೊ
ಲ್ದುಸಿರ್ದೀಸತ್ಕೃತಿ ಸಜ್ಜನರ್ಕಳ ಮನಕ್ಕಂಟಿರ್ಪುದೇಂ ಚೋದ್ಯಮೇ||೧೪||

ಪಂಪಾನಗರೀಶ್ವರನೀ
ಪೆಂಪಮರ್ದಿನಿಗಬ್ಬಕಾಣ್ಮನೀಸತ್ಕೃತಿಯನ
ಲಂಪಿಂದಂ ವಿರಚಿಸಿದಾ
ತಂ ಪರಮಜ್ಞಾನಿ ಸೋಮನೆನೆ ಮೆಚ್ಚದರಾರ್||೧೫||

ಹಿಮರುಚಿಮಂಡಲಂ ನವಚಕೋರಿಗೆ ಚಾದಗೆಗಂಬುದಾಗಮಂ
ವಿಮಲವಸಂತಸಂಪದವದನ್ಯಭೃತಕ್ಕೆ ಸುಧಾಬ್ಧಿ ಹಂಸೆಗು
ದ್ಗಮವೆಳದುಂಬಿಗೊಂದಿನಿತರೋಚಕಮಪ್ಪುದೆ ಸೋಮರಾಜಚಂ
ದ್ರಮನ ವಚಸ್ಸುಧಾಲಹರಿ ಸಜ್ಜನಸಂತತಿಗೇನಸಹ್ಯಮೇ ||೧೬||

ಗುರುವಲ್ಲಮಾಂಕನಾಮ
ಸ್ಮರಣಮನೊಂದೊಂದು ನೆವದೊಳಭಿನುತಿಗೈವೆಂ
ವರವಾಣಿ ಸೋಮಭೂಮೀ
ಶ್ವರ ಭಾಪುರೆಯೆಂದು ಸುಜನತತಿ ಕೀರ್ತಿಪಿನಂ||೨೯||

ತ್ರಿಪುರಾಂತಕನಡಿಯಂ ಕೀ
ರ್ತಿಪ ನೆವದಿಂದಾನಱಿದವೊಲುಸಿರ್ದೆಂ ಸುಜನ
ರ್ವಿಪುಳಬುಧರ್ಭಾವಕರಾ
ಲಿಪುದೀ ಕಮನೀಯಕಾವ್ಯಮಂ ನವ್ಯಮುಮಂ||೩೦||

ವಿಧೃತಾಲಂಕಾರದಿಂದಂ ನವಯುವತಿಯವೋಲ್ ಲಕ್ಷಣಸ್ಫೂರ್ತಿಯಿದಂ
ವಿಧುಜೃಂಭದ್ಬಿಂಬದಂತುಜ್ವಳರಸಮಯದಿಂದಂ ಮನೋಜ್ಞೇಕ್ಷುವಂತು
ದ್ಬುಧತತ್ಯಾನಂದದಿಂದಂ ತ್ರಿದಶಕುಜದವೋಲ್ ಧಾತ್ರಿಯೊಳ್ಶೋಭಿಕುಂ
ಸನ್ಮಧುರಂಬೆತ್ತಿರ್ಪ ಕಾವ್ಯಂ ಸುಜನನಿಕರಸೇವ್ಯಂ ವಿಭಾವ್ಯಂಸುನವ್ಯಂ ||೩೧||

ಚಂದ್ರಮರೀಚಿಯಂತೆ ತನಿಮಾವಿನ ಪಣ್ಗಳ ತಂದಲಂತೆ ದೇ
ವೇಂದ್ರಮಹೀಜದಂತೆ ಮಲಯಾನಿಲನಂತೆ ವಸಂತನಂತೆ
ಸದ್ರುಂದ್ರಸುಧಾಬ್ಧಿಯಂತೆ ನವಚಂಪಕಮಂಜರಿಯಂತೆ ಸೋಮರಾ
ಜೇಂದ್ರನ ಕಬ್ಬದಿಂಪು ಬುಧರಂ ಬಗೆಗೊಳ್ವುದಿಳಾತಳಾಗ್ರದೊಳ್||೩೨||

ನಲ್ಲಳ ಬೇಟವಾತೊ ಶುಕಚಾರುನಿನಾದಮೊ ವಾಗ್ವಧೂಟಿಕಾ
ವಲ್ಲಕಿಯೊಪ್ಪುವಿಂಚರಮೊ ಚೈತ್ರಪಿಕಧ್ವನಿಯೋ ಸಮಂತು ಪೂ
ವಿಲ್ಲನ ಚಾಪಸಂಜನಿತಮೋಹನನಾದಮೊ ಸೋಮರಾಜಭೂ
ವಲ್ಲಭನಿಂಪುವೆತ್ತವಚನಾಮೃತಮೋ ವಿಬುಧಾನುರಾಗಮೋ||೩೩||

ಎಂದಿಂತು ವಿಬುಧರಾತ್ಮಾ
ನಂದಂಬಡೆದಂದು ಪೆರ್ಚಿ ಸಲೆ ಕೀರ್ತಿಸೆ ಬಾ
ಲೇಂದುಕಲಾಶೇಖರನೊಲ
ವಿಂದಂ ಬಿತ್ತರಿಸಿ ಪೇೞ್ದನೀಸತ್ಕೃತಿಯಂ||೩೪||

ಸುೞಿ ಚಕ್ರಂ ನುತಪಾಂಚಜನ್ಯಮದು ಶಂಖಂ ಕೌಸ್ತುಭಂ ಮಾಣಿಕಂ
ವಳಿ ತೋಳ್ಗಳ್ ತನುಕಾಂತಿವಾರಿ ವಿಲಸತ್ಪೀತಾಂಬರಂ ವಾರಿಜೋ
ಜ್ವಳತೇಜಂ ನಗೆ ಜತ್ತುಳಂ ಜಠರದೊಳ್ ತೋರ್ಪಬ್ಜಜಾತಾಂಡಸಂ
ಕುಳಮೇ ಬುದ್ಬುದಮಾಗೆ ವಿಷ್ಣುವೆನೆ ಕಣ್ಗೊಪ್ಪಿತ್ತು ನೀರಾಕರಂ ||೩೮||

ಅಳಕೆಯನಮರಾವತಿಯಂ
ಪೞಿಯತ್ತುಂ ತನ್ನ ಪೊಳಲಂಪಿಂದಿಂಪಿಂ
ದಿಳೆಯೊಳ್ನಿತ್ಯೋತ್ಸವಮಂ
ತಳೆದಂತಾಬಲ್ಲಕೀಪುರಂ ರಂಜಿಸುಗುಂ ||೮೧||

ಪಟುಸಂರಂಭದಿನಿಂತು
ತ್ಕಟರಮ್ಯತೆವೆತ್ತುರಂಜಿಪಾಪುರದಾಣ್ಮಂ
ನಿಟಿಳಾಕ್ಷಪದಾರ್ಚಕನು
ದ್ಭಟದೇವನೆನಿಪ್ಪ ಪೆಸರ ಧರಣೀನಾಥಂ ||೮೨||

ವೀರಂ ತ್ಯಾಗಂ ಭೋಗಂ
ಚಾರುಕಲಾಪ್ರೌಢಿ ಕೀರ್ತಿ ಲಾವಣ್ಯಂ ಗಂ
ಭೀರಂ ಸತ್ಯಂ ಶಮೆ ಸಾ
ಕಾರಂಗೊಂಡಂತಿರಾಮಹೀಧಧವನೆಸೆಗುಂ||೮೩||

ಮನದೊಳ್ಗಿರಿಶಧ್ಯಾನಂ
ತನಿನೋಟದೊಳೀಶಮೂರ್ತಿ ನಾಲಿಗೆಗೊನೆಯೊಳ್
ಮನಸಿಜಹರಪದನುತಿತತಿ
ಮಿನುಗಲ್ನೆಗೞ್ದಿರ್ಪನುದ್ಭಟಕ್ಷಿತಿಪಾಲಂ||೧೦೪||

ಇಂತೆಸೆವುದ್ಭಟೋರ್ವಿಪನ ಹೃತ್ಸರಸೀರುಹನಿರ್ಮಲಾಂಗಣಾ
ಭ್ಯಂತರಸಂಸ್ಥಿಭ್ರಮರ ಚಂದ್ರಕಲಾಂಚಿತಚಾರುಮೌಳಿ ನಿ
ಶ್ಚಿಂತ ಸಮಸ್ತಲೋಕನುತ ಪಾವನಪಾದಪಯೋಜ ಪಾರ್ವತೀ
ಕಾಂತ ಕೃಪಾಂಬುರಾಶಿ ಸಲೆ ರಕ್ಷಿಪುದೆನ್ನನೆಯಲ್ಲಮಪ್ರಿಯಾ||೧೦೫||

ಹನ್ನೆರಡನೆಯ ಆಶ್ವಾಸಂ.

ಆ ಜೃಂಭತ್ಪುರಕೀಶ್ವರಂ ಪ್ರವರಸಂನಂ ತನ್ನೃಪಾಪ್ತಂ ದ್ವಿಜಂ
ರಾಜತ್ಸೂರಿಸುವರ್ಣಭಟ್ಟನೆನಲಿರ್ಪಂ ತದ್ದ್ವಿಜಾತೋದ್ಭವಂ
ರಾಜೋತ್ತಂಸನ ಭಕ್ತನಾತಕವಿರಾಜಂ ಮಲ್ಲಣಂ ತೀಕ್ಷ್ಣರು
ಕ್ತೇಜಂ ರಾಜಿಪನಂಗಮಂ ಪಡೆದನಂಗಂಬೋಲ್ಕುರಂಗೇಕ್ಷಣಂ||೩೧||

ಕಂಜಜಾತಸದೃಗ್ವಚೋವಿಭವೋನ್ನತಂ ಕವಿಮಲ್ಲಣಂ
ಮಂಜುಯೌವನಮಂ ಕರಂ ತಳೆದುಲ್ಲಸದ್ಘನಲೀಲೆಯಿಂ
ರಂಜಿಸಲ್ನಿಜತಾತನಾದ ಸುವರ್ಣಭಟ್ಟಕನೈದಿದಂ
ತಾಂ ಜರಾಭಿಹತಾಂಗನಾಗಿ ಸುರೇಂದ್ರಲೋಕಮನಂಗನೇ||೩೨||

ಸುವರ್ಣಭಟ್ಟಂ ಸುರಲೋಕಕೈದಲು
ತ್ಸವಂ ಮಗುೞ್ದಾತನ ಕಾಯಮಂ ಚಿತಿ
ಪ್ರವಹ್ನಿಗಂದರ್ಪಿಸಿಮಲ್ಲಣೋಲ್ಲಸ
ತ್ಕವೀಂದ್ನಿರ್ದಂ ಘನಶೋಕದಿಂ ಸತೀ ||೩೩||

ಸುರವರಪುರಿಗಯ್ಯಂ ಪೋದನೋ ವೋ ಯೆನುತ್ತಿ
ರ್ದಿರಲದು ಪರಿಯಲ್ತತ್ತಾತಲೋಭಾರ್ಚಿತಾರ್ಥೋ
ತ್ಕರಕೊಡನಧಿಪತಿ ತಾನಾಗಿ ಸಲ್ಲೀಲೆಯಿಂದಂ
ಪಿರಿದಮರ್ದೆಸೆದಿರ್ದಂ ಮಲ್ಲಣಂ ಮಂಜುವಾಣೀ||೩೪||

ಕೋಟಿಮೂಱುನಿಪ್ಪಲೆಕ್ಕದರ್ಥಗಾಣ್ಮನಾಗಿ ನ
ಲ್ನೋಟಕೊಳ್ವನೀವ ಯೌವನಾತಿರೇಕಮಲ್ಲಣಂ
ಪಾಟಿಯಿಲ್ಲದುಂಚಚಾಗಿಯೊಪ್ಪಿದಂ ತುಷಾರರು
ಗ್ಜೂಟಪಾದಪಂಕಜಾತಪೂಜಿತಂ ಮೃಗೇಕ್ಷಣೇ||೩೫||

ವಾಣಿಗೆ ಜಾಣಿನೊಳುದ್ಗಮ
ಬಾಣದವಂಗಮರ್ದ ಮೂರ್ತಿಯೊಳ್ಚಂದ್ರಂಗ
ಕ್ಷೀಣಕಳೆಯೊಳ್ಬೆಗಳ್ವುಱಿ
ಕಾಣಿಸಲಾಮಲ್ಲಣಂ ಮನಂಗೊಳಿಸಿರ್ದಂ||೩೬||

ಪೂಗಣೆಯಂ ಸಾವಯವಕ
ನಾಗಿ ಶಿವಾಧವನನರ್ಚಿಸಲ್ಕೆಂದಿರದು
ದ್ಯೋಗಿಸಿ ಕೊಂಡೆೞ್ತಂದವೊ
ಲಾಗರುವಂ ಮಲ್ಲಣಂ ಮನಂಗೊಳಿಸಿರ್ದಂ||೩೭||

ಕೈರವನೇತ್ರೆಯರ್ಲಲಿತಚಂದ್ರಮನೆಂದು ಸರೋಜವಕ್ತ್ರೆಯ
ರ್ವಾರಿಜಮಿತ್ರನೆಂದು ಕಿಸಲಾಧರೆಯರ್ನವಚೈತ್ರನೆಂದು ಶೃಂ
ಗಾರಸುಯೋಗಿಯೆಂದುೞಿದಮಿಂಡಿಯರಾವಗಮೊಲ್ದು ನೋಡಲಾ
ಚಾರುವಚೋವಿಲಾಸನಿಧಿ ರಂಜೀಸುವಂ ಕವಿ ಮಲ್ಲಣಂ ಪ್ರಿಯೇ||೩೮||

ಇಂತೊಪ್ಪುವಮಲ್ಲಣನೊ
ಲ್ವಂತಾಪುರಿಗಾಣ್ಮನಾದ ವಿಜಯೇಶ್ವರನಂ
ಸಂತಸದಿಂದರ್ಚಿಸಲೋ
ರಂತಿರೆ ದೇಗುಲಕೆ ಬಂದನಂಬುಜವದನೇ||೩೯||

ಬಂದು ವಿಜಯೇಶನುರುಮಣಿ
ಮಂದಿರಮಂ ಪೊಕ್ಕು ತೊಳಪ ಲಿಂಗಮನಾ
ನಂದದಿನರ್ಚಿಸುತೋಪ್ಪಿದ
ನೊಂದುದಿನಂ ಸಕಲಸುಕವಿನಿಕರನಿಳಿಂಪಾ||೪೦||

ವಿಜಯೇಶ್ವರನಂ ರಿಪುಕವಿ
ವೀಜಿಗೀಷುವೆನಿಪ್ಪ ಸುಕವಿಮಲ್ಲಣದೇವಂ
ಭಜಿಸಲ್ಮಲ್ಲಣಿ ಗಜಕುಂ
ಭಜಿತಸ್ತನಿ ಬಂದಳಾಶಿವಾಲಯಕಾಗಳ್ ||೪೧||

ನಡೆತಂದಾವಿಜಯೇಶನಂ ಜ್ವಲಿಪರತ್ನಾಗಾರಮಂ ಪೊಕ್ಕು ಸಂ
ಘಡಿಸಿರ್ದುನ್ನತಮಾದ ಮೇಳದೆಡೆಯೊಳ್ ಶಾಂತಂಗೆ ತನ್ನೃತ್ಯಮಂ
ಬಿಡದಾನಂದದಿನಂದು ತೋಱಿಸುವ ತತ್ಪದ್ಮಾಕ್ಷಿಯಂ ಕಂಡು ತ
ನ್ನೋಡಲಂ ಮಲ್ಲಣಿಗಿತ್ತನಂಗಜಶರಕಾಕಂಭೋಜಪತ್ಲೇಕ್ಷಣೇ||೪೨||

ಪ್ರಣವಾಧೀಶನ ಪಾದಪಂಕರುಹಮಂ ಪೂಜಿಪ್ಪುದಂ ಬಿಟ್ಟು ಮ
ಲ್ಲಣದೇವಂ ಬೆಱಗಾಗಿ ನಿಟ್ಟಿಸುತಿರಲ್ ನರ್ತಿಪ್ಪ ತತ್ಕಾಂತೆ ಮ
ಲ್ಲಣಿ ಯಾನೀಱನನೊಲ್ದು ನೋಡಿ ಮನಮಿಕ್ಕಲ್ಕಂಡು ಮೇಣಿರ್ವರು
ಲ್ಬಣಭಾವಜ್ಞೆಯರೈದೆ ಕೂಡೀಸಿದರೊಲ್ದಂದಾತ್ಮಮಿತ್ರರ್ ಪ್ರಿಯೇ||೪೩||

ಓರೊರ್ವರ್ತಮಗೆಳಸಿದ
ಸಾರಸಲೋಚನೆಯನಾಸುಕವಿಮಲ್ಲಣನಂ
ಚಾರುಭವನಕ್ಕೆ ತಂದುಱು
ಸೇರಿಸಿ ಬೀೞ್ಕೊಂಡು ಪರಿದರಾಪ್ತರ್ ಸಖಿಯರ್||೪೪||

ಕೆಳೆಯರ್ಪರಿಯಲ್ ಸ್ಮರವಿ
ಹ್ವಳಮಲ್ಲಣದೇವಮಲ್ಲಣಿಯರತಿಕೌತೂ
ಹಳಕಾಮಕೇಳಿಯೊಂದ
ಗ್ಗಳಬರ್ದಂ ತಾವ್ ನೆಗೞ್ಚಿದರ್ಮುದದಿಂದಂ||೪೫||

ಅಹರ್ನಿಶಂ ತತ್ಪ್ರಿಯರಾವಗಂ ಸರೋ
ರುಹಸ್ಮಿತೇಂದಿಂದಿರಯುಗ್ಮದಂತೆವೋ
ಲ್ಮಹೋಲ್ಲನ್ಮನ್ಮಥಕೇಳಿಯಿಂದೆ ರ
ತ್ನಹರ್ಮ್ಯದೊಳ್ಶೋಭಿಸಿದರ್ಮೃಗೇಕ್ಷಣೇ||೪೬||

ಇದು ಪಗಲಿದು ನಿಶೆಯೆಂದೆಂ
ಬುದನಱಿಯದೆ ಜನಕಸಂಚಿತಾಗಣಿತಾರ್ಥಂ
ಮೊದಲಿಲ್ಲದೆ ಸವೆಯಲ್ತ
ತ್ಸುದತೀಮಣಿಗೂಡಿ ಮಲ್ಲಣಂ ರಂಜಿಸಿದಂ||೪೭||

ಧನಮೆಲ್ಲಂ ತೀರ್ದೊಡಮಾ
ಮನದೞ್ಕರ್ತೀರದಂತೆ ಮಲ್ಲಣದೇವಂ
ತನಿಸೊಬಗಿಂ ಮಲ್ಲಣಿಯೊಂ
ದಿನಿಸಾನುಂ ಪೊತ್ತು ಬಿಚ್ಚದೊಪ್ಪಿದನಬಲೇ||೪೮||

ಕಾಣ್ಕೆಯಂ ಕೊಡಲೊಲ್ಲದೇಣಶಿಶುನೇತ್ರೆಯಂ
ಮಾಣದೇ ಪತ್ತಿ ಬಿಡದೆ ಮಲ್ಲಣನಿರ
ಲ್ಜಾಣೆಯವರಬ್ಬೆ ನಡೆನೋಡಿ||೪೯||

ನಂಟು ಮಿಗೆ ಮಲ್ಲಣನ ನಂಟದೀಮಲ್ಲಣಿಯ
ನುಂಟುಮಿಗೆ ಪಿಂಗಿಸಲ್ಕೆಂದು ಮನದಲ್ಲಿ
ಕಂಟಕವನಾಂತಳವಳಂದು||೫೦||

ಮಿಗೆ ಮಲ್ಲಣ ಮಲ್ಲಣಿಯರ
ಸೊಗಯಿಸುವಿನಿದಕ್ಕೆಯೊಳ್ಪನಿಂತಿರೆ ಕಂಡೊ
ಯ್ಯಗೆ ಪದ್ಮಾವತಿ ತನ್ನಯ
ಮಗಳಂ ಸೂಚಿಸಿ ಸುಖಾರಿ ಯೆಕ್ಕಟಿಗಱಿದಳ್ ||೫೧||

ಎಕ್ಕಟಿಯಾಗಿ ಮಲ್ಲಣಿಗೆ ಕೈತವಬುದ್ಧಿಯನೈದೆ ಪೇೞ್ದು ಬೇ
ಡಕ್ಕ ಬಿಡನಾತಂ ಧನವಿಹೀನನೆಂದೆನಲೊಪ್ಪದಿರ್ಪಿನಂ
ತಕ್ಕುದೆ ನಾನೆ ಗೈದಪೆನೆನುತ್ತವಳಂ ಜಱಿದಂದು ಬಂದು ಸ
ಮ್ಯಕ್ಕವಿರಾಜಕುಂಜರನನಾಲಯದಿಂ ಕಿಸುಗಣ್ಚಿ ನೂಂಕಿದಳ್||೫೨||

ಪರಿಭವಿಸಿ ಬರ್ದ್ದೆನೂಂಕಲ್
ವಿರಹಾನಲತಪ್ತ ಕಾಯನಾಕವಿಕುಲಕುಂ
ಜರನ ತನು ಗ್ರಹಮೊಂದಲ್
ಪಿರಿದುಂ ಮರುಳಾದನಂಬುಜಾಯತನೇತ್ರಂ ||೫೩||

ಅಪ್ಪಿದಗ್ಗದ ಯಲ್ಲಕಂ ಕಡು ಪೆರ್ಚಲುತ್ಸವಮೊಂದಿರಲ್
ತಪ್ಪದವಗಮೇ ವಧೂಮಣಿ ಮಲ್ಲಣಿ ಯೆಕ್ಕಟೆನ್ನನಿಂ
ತೊಪ್ಪಿಸಲ್ ಮದನಾಸ್ತ್ರಕಾನುಱೆವಂದಮೆಂದೆನುತುಂ ಸಮಂ
ತೊಪ್ಪಿದಂ ಕವಿಮಲ್ಲಣಂ ಮರುಳಾದವೋಲ್ ತರಳೇಕ್ಷಣೇ||೫೪||

ಬಲ್ಪುಚ್ಚಾದಂ ಪೆರ್ಚಿದ
ವೊಲ್ಪೊಳೆಯಿಸುತಂದು ರಾತ್ರಿ ದರ್ಪಕಶಿಖಿ ಪೊಂ
ಗಲ್ಪದ್ಮಾವತಿ ಜುಣುಗಿರೆ
ನಲ್ಪೊಂಬಾಗಿಲ್ಗೆ ಬಂದನಾಕವಿರಾಜಂ||೫೫||

ಏ ಮಲ್ಲಣಿ ಮಲ್ಲಣಿ ಯೆನು
ತಾಮಲ್ಲಣಕವಿವರಂ ವಹಿಲದೊಳ್ನಿಲ್ತು
ದ್ದಾಮವಿಕಲತೆಯನಾಂತು ಮ
ನೋಮುದವಱಿದಿರೆ ತದೀಯಸಮಯದೊಳೊರ್ವಳ್ ||೫೬||

ಗುರುಕುಚೆ ಮಲ್ಲಣಿಯುಂಡೊ
ಳ್ವರಿವಣಮಂ ಕರ್ಚಿ ಸೂಸಿದೆಂಜಲ ನೀರ್ತ
ದ್ವರಕವಿಮಲ್ಲಣನಂಗಮ
ನಿರದಂಟಲ್ ಬೆರ್ಚುತಾಗ ಮಲ್ಲಣಿಯೆಂದಂ ||೫೭||

ವಚನ:- ಇಂತುರುತರವಿರಹವಿಹ್ವಲಂ ಬಂದವಳ ಮುಂಬಾಗಿಲೊಳ್ನಿಲ್ತು ಮರುಳಾದಂತೆ ಮಲ್ಲಣಿ
ಮಲ್ಲಣಿಯೆಂದು ಪಲಂಬುತ್ತಿರ್ಪಾಮಲ್ಣನ ಮೃದುದೈನ್ಯೋಕ್ತಿಗಳಂ ಕೇಳ್ದುತ್ಸವಂಗೆಟ್ಟಾಮಲ್ಲಿಣಿ ಚಚ್ಚರಂ
ಮನೆಯಿಂ ಪೊಱಮಟ್ಟು

ಮಿಸುಪ್ಪ ಗೇಹಂ ಪೊಱಮಟ್ಟು ಬಂ
ದೊಸರ್ವ ನೀಹಾರದೊಳಾೞ್ದು ಮಲ್ಲಣೋ
ಲ್ಲಸತ್ಕವೀಂದ್ರ ನಡುಗುತ್ತಿರಲ್ಸುವ
ರ್ಣಸಾರಸಾಭಾವನನೆ ಕಂದಿ ಕುಂದಿದಳ್||೫೮||

ಅತಿದುಃಖಿಸುತುಂ ಪದ್ಮ
ವತಿಯಾತ್ಮಜೆ ಬಂದುಱೆ ಮಲ್ಲಣನಂ ಹಿಮಸಂ
ಗತನಂ ಪರಿರಂಭಿಸಿ ತ
ತ್ಸತಿ ಪಂಕಜಪತ್ರನೇತ್ರೆ ಮಗುೞ್ದಿಂತೆಂದಳ್ ||೫೯||


ಎಲೆ ಕಾಂತನೆ ಯೆನ್ನಯ ಮೇಲಿಡುವು
ಜ್ವಲಚಿತ್ತಮನಾವಿಜಯೇಶನ ನಿ
ರ್ಮಲಪಾದದೊಳೊಲ್ದಿಡೆ ನಿನ್ನ ತಪಃ
ಫಲಸಿದ್ಧಿಯದಾಗದೆ ಪೇೞ್ಪ್ರಿಯನೇ||೬೦||

ಎಂದೆನಲ್ತದಾಯತಾಕ್ಷಿ ಯಿಂಪುವಾತು ಕೇಳುತು
ನ್ಮಂದಚೇತನಂ ಮರಲ್ದು ನೋಡಿ ಚಂದ್ರವಕ್ತ್ರೆ
ನೊಂದಿನಿತ್ತಗಲ್ದೊಡಾನದೆಂದು ತಾಳ್ವೆನೆಂದೊಡಿಂ
ತೆಂದಳಾವಧೂಟಿ ಯಾಮನಃಪ್ರಿಯಂಗೆ ಮೋದದಿಂ ||೬೧||

ಆನುಂ ಬರ್ಪೆಂ ನೀಂ ಪೊಗ
ೞ್ದಾನತಜನಕಾಮಧೇನುವಂ ಮೆಚ್ಚಿಸೆನ
ಲ್ಸಾನಂದಂ ಮಲ್ಲಣನೊಸೆ
ದಾನಲ್ಲಳ್ವೆರಸಭವಭವನಕ್ಕೆೞ್ತಂದರ್ ||೬೨||

ಕಾದಲೆವೆರಸೆೞ್ತಂದು ಮ
ಹಾದೇವಾಲಯಮನಂದು ಮಲ್ಲಣನೊಳಪೊ
ಕ್ಕಾದಿವ್ಯಲಿಂಗಮಂ ಘನ
ಮೋದಂಬಡೆದೊಲ್ದು ಪೊಗೞ್ದನಂಬುಜವದನೇ||೬೩||

ವಿಲಸತ್ಕಾಂತಾಕಚೌಘಸ್ಥಿತಕುಸುಮಸುಗಂಧಭ್ರಮಚ್ಚಂಚರೀಕೋ
ಜ್ವಲನೀಲಗ್ರೀವ ಗಂಗಾಧರ ನಿರುಪಮ ಗಂಧರ್ವಗೀರ್ವಾಣಯಕ್ಷಾ
ವಳಿಕೋಟೀರೋರುಕೋಟಿಪ್ರಘಟಿತಪದಪಂಕೇಜ ಪಂಪೇಶ ಯೆಂದೀ
ಜಲಜಾಕ್ಷಾರಾಧ್ಯನಂ ಸನ್ನುತಿಸಿದನೊಲವಿಂ ಮಲ್ಲಣಂ ಮಂಜುವಾಣೀ||೬೪||

ವಚನ :- ಇಂತತಿಭಕ್ತಿಯಿಂದ ಸ್ತಿಪ ಮಲ್ಲಣನ ಮೃದುಮಧುರಪದ ಸಂದರ್ಭಮಾಗಿ ಮನಂಗೊಳಿಪ್ಪ
ಸಂಸ್ತವಕ್ಕೆ ಮೆಚ್ಚಿ ಚೆಚ್ಚರಮಾಗಿ ವಿಜಯೇಶ್ವರಂ ಪ್ರಸನ್ನನಾಗಿ,

ಕವಿಶೇಖರ ತಾವಕಸಂ
ಸ್ತವಕಾಂ ಮೆಚ್ಚಿದೆನೊಡರ್ಚುವೆಂ ಪೇೞ್ನಿನ್ನಿ
ಷ್ಟವನೆನೆ ಮಲ್ಲಣಭವಂ
ಗೆ ವಿಲಾಸದಿ ಬಿನ್ನವಿಸಿದನಿಂತೆಂದು ಸಖೀ||೬೫||

ಮಿಗೆ ಜಾತಸ್ಮರಣತ್ವಮಂ ನಿಖಿಳಧಾತ್ರೀಶತ್ವಮಂ ಭೋಗಮಂ
ನೆಗೞ್ದುದ್ಯಚ್ಛಿವಭಕ್ತಿಯಂ ಪರಿಲಸಲ್ಲಾವಣ್ಯಮಂ ವೇದಶಾ
ಸ್ತ್ರಗಣಜ್ಞತ್ವಮನುನ್ನತಪ್ರತಿಭೆಯಂ ಕೂರ್ತಿತ್ತು ಕಾಯೆಂದೆನ
ಲ್ಕಗಜೇಶಂ ಕವಿಮಲ್ಲಣಗನಿತುಮಂ ಕೊಟ್ಟಂ ಕಲಾಕೋವಿದೇ||೬೬||

ಚೆಚ್ಚರಮಿತ್ತು ಮಲ್ಲಣಕವೀಶ್ವರನಿಷ್ಟಮನಿತ್ತಳತ್ತಳಿ
ಪ್ರೊಚ್ಚರೆಗಣ್ಣ ನೀಱೆ ವರಮಲ್ಲಣಿ ದಶಾಬ್ದಮಾಳ್ದು ನೀ
ನುಚ್ಚುವದಿಂ ಧರಾತಳಮನೈದೆಲೆ ಮಾಮಕಲೋಕಮಂ ಬೞಿ
ಕ್ಕಚ್ಚರಿಪುಟ್ಟಲೆಲ್ಲ ಜನಕೆಂದುಸಿರ್ದೀಶನದೃಶ್ಯಮೈದಿದಂ||೬೭||

ವಚನ :- ಇಂತು ಮಲ್ಲಣನಿಷ್ಟಾರ್ಥಮನೊಲ್ದಿತ್ತು ವಿಜಯೇಶ್ವರನದೃಶ್ಯಮಾಗಿ ಪೋಗಲೆಡೆವಿಡಿದ ಕಡು
ಸಂತಸಂಬಡೆದು ಮಲ್ಲಣಿವೆರಸೆಣಿಕೆಗಳವಡದ ಭೋಗಂಗಳಂ ಭೋಗಿಸುತ್ತನಂತವೈಭವದಿಂ
ಶತಸಂವತ್ಸರಮುರ್ವರೆಯಂ ಪರಿಪಾಲಿಸುತಿರ್ದಾಕವಿಕುಂಜರಂ ಮಗುೞ್ದು,

ಶತವರ್ಷಂ ಧಾತ್ರಿಯೊಳು
ನ್ನತವೈಭವದೊಳಿರ್ದು ತತ್ಕಳತ್ರಂ ಬೆರಸೂ
ರ್ಜಿತಕೈಲಾಸಕ್ಕಾಭೂ
ನುತಮಲ್ಲಣನೈದಿದಂ ಸುವರ್ಣಲತಾಂಗೀ||೬೮||

ಕಾಮುಕಮಲ್ಲಣಕವಿ ತ
ತ್ಕಾಮಿನಿವೆರಸಭವಲೋಕಕೈದನೆ ಕೇಳಿ
ನ್ನಾಮನುಚೋಳನೆನಿಪ್ಪ ಮ
ಹಾಮಹಿಮನ ಕಥೆಯನುಸುರ್ವೆನಂಬುಜವದನೇ||೬೯||

ಕಮಲಾನನೆ ಪುರಮೆಸಗುಂ
ಕಮಲಾಲಯಮೆಂಬುದೊಂದು ಚೋಳಾವನಿಯೊಳ್
ರಮಣೀಯಂ ತನ್ನಗರಿಗೆ
ರಮಣಂ ಮನುಚೋಳನಖಿಲಸಜ್ಜನಪಾಲಂ||||೭೦||

ಅಂತೆಸೆವ ಚೋಳಮಹೀಪಂ
ಗಂತುಂ ನೃಪನರಸಿ ರತ್ನಮಾಲಿಕೆಗಂ ಮೇ
ಣ್ಕಂತುಸಮರೂಪನೊಸೆದೆಸೆ
ವಂತಾಚಂಚಲನೆನಿಪ್ಪ ನಂದನನೊರ್ವಂ||೭೫||

ಚಂಚಲಾಭಿಧಾನದಾಕುಮಾರನೊಂದುವಾಸರಂ
ಮುಂಚುವೞ್ತಿಯುಣ್ಮಲೇಱಿ ಪೊನ್ನಭಂಡಿಯಂ ಸಮಂ
ತುಂಚಮಾದ ತತ್ಪುರೋಪವೀಧಿಯಲ್ಲಿ ನೂಂಕಿದಂ
ಕಾಂಚನೋಲ್ಲಸದ್ಘಟಾಭಪೀವರಸ್ತನದ್ವಯೇ||೭೬||

ಭಂಡಿಯಂ ನಲವಿಂದ ನೂಂಕೆ ತದುಲ್ಲಸತ್ಪುರವೀಧಿಯೊಳ್
ತೊಂಡುಗೊಂಡಿರಲೊಂದು ತರ್ಣಕಮಂದು ತಚ್ಛಕಟಾಂಗಕು
ಚ್ಚಂಡಲೀಲೆಯನಾಡುತುಂ ಮಿಗೆ ಪೊರ್ದಿ ಬಿರ್ದೞಿಯಲ್ವಲಂ
ಕಂಡು ತಚ್ಛಿಶುಮಾತೃ ಬಂದುದು ಚೋಳಗೇಹಕೆ ಶೋಕದಿಂ ||೭೭||

ಕಱು ಸತ್ತೞಲಂ ಚೋಳಂ
ಗಱುಪಲ್ ತದ್ಗೋಮತಲ್ಲಿ ಮುಂಬಾಗಿಲೊಳಂ
ದುಱುವಪರಂಜಿಘಂಟೆಯ
ನಿಱಿದುದು ಶೃಂಗಾಗ್ರದಿಂ ಸುಧಾಕರವಕ್ತ್ರೇ||೭೮||

ತವೆ ತಚ್ಛೃಂಗವಿಘಾತೋ
ದ್ಭವಘಂಟಾನಾದಮಂದು ಜಕ್ಕುಲಿಸಲ್ಭೂ
ಧವಚೋಳನ ಕರ್ಣಮನು
ತ್ಸವಮಱಿದಾನೃಪತಿ ನೊಂದು ಮಗುೞ್ದಿಂತೆಂದಂ ||೭೯||

ಅಕಾರಣಂ ಕಾಂಚನಘಂಟಿಕಾರವಂ
ಪ್ರಕಾಶಮಾದತ್ತೆನುತೆದ್ದು ತನ್ನೃಪಾ
ಲಕಂ ನಿಜದ್ವಾರಕೆ ಬಂದು ಕಂಡನಂ
ದು ಕಣ್ಣ ನೀರಂ ಕಱಿವಾಘಟೋಧ್ನಿಯಂ||೮೦||

ಏನಿಂತಿದು ವಿಸ್ಮಯಮೀ
ಧೇನುವಿನೞಲೇನತೀವ ಪುಣ್ಯಸಹಾಯರ್
ಭೂನಾಯಕ ಕೇಳ್ವಿಧಿಕೃತ
ಮೇನೆಂದೆನೆ ಬರ್ಕುಮೆಂದು ಮಗುೞ್ದಿಂತೆಂದಂ||೮೧||

ಅವರ ನುಡಿಯನಾಚೋಳಾವನೀವಲ್ಲಭಂ ಕೇ
ಳ್ದವಿರಳಘನಚಿಂತಾಕ್ರಾಂತನೆೞ್ತಂದು ಶೋಭಿ
ಪ್ಪವನಜಪುರವೀಧಿಮಧ್ಯದೊಳ್ಸತ್ತು ಮೇಣ್ತೋ
ಱುವ ಪಶುಶಿಶುವಂ ಕಂಡಂ ತದುರ್ವೀಶನಾಗಳ್ ||೮೨||

ಇಂದೆನಗೀಘನಪಾಪಂ
ಬಂದುದಿದಕ್ಕೇನನೊಡರ್ಚುವೆನೆನುತುಂ
ಮುಂದಿರ್ದ ಇಬುಧರಂ ಮುಱಿ
ದಂದಾಲೋಕಿಸಲವರ್ಮಗುೞ್ದಿಂತೆಂದರ್||೮೩||

ಕನಕಾಂಬರಕರಿರತ್ನಾ
ವನಿಮುಖ್ಯಾನೇಕದಾನಮಂ ರಚಿಸಿದೊಡೀ
ಘನಪಾಪಂ ಪೋದಪ್ಪುದೆಂ
ದೆನೆ ತತ್ಪಂಡಿತಜನಕ್ಕೆ ನೃಪನಿಂತೆಂದಂ||೮೪||

ಪ್ರಾಣಿಗಚೇತನಂಬಡೆದ ಭೂಮಣಿಕಾಂಚನಮುಖ್ಯವಸ್ತುಕ
ಶ್ರೇಣಿಯಿದೇಂ ಸಮಾನಮೆನಿದಕ್ಕೆಣೆಯಾಗಿ ಮದೀಯಪುತ್ರನಂ
ಮಾಣದೆ ತಂದು ಭಂಡಿಗಿರಿದಿಕ್ಕುವೆನೆಂದು ನಿಜಾತ್ಮಜಾತನಂ
ಕ್ಷೋಣಿಪನಂದು ತಚ್ಛಕಟಮಾರ್ಗಕೆ ಸಾರ್ಚಿದನಂಬುಜಾನನೆ||೮೫||

ಕಱುವೇ ತತ್ತನುಜನಂ ದಲಾಂಕುವರನೆಂದೆಲ್ಲಾಜನಂ ವೀಧಿಯೊಳ್
ತಱಿಸಂದೀಕ್ಷಿಪುದೆಂದು ತಚ್ಛಕಟಮಂ ತಾನೇಱಿ ಚೋಳೋರ್ವಿಪಂ
ನೆಱೆ ನೂಂಕಲ್ ನಿಜಪುತ್ರಗಾತ್ರಮಿರದಾದಂ ಖಂಡಿಸಲ್ಕಂಡು ನಿ
ಬ್ಬೆಱಗಂ ತಾಳ್ದತಿವಿಸ್ಮಯಂ ಬಡೆದರಾಪೌರರ್ಕಳಬ್ಜಾನನೇ||||೮೬||

ವಚನ :- ಇಂತತಿಧರ್ಮನೀತಿಯಂ ಬಲ್ಪಿಡಿದು ಸುತನಂ ತಂದೞಿದ ತರ್ಣಕಕ್ಕೆಣೆಯಾಗಿ ಭಂಡಿಗಡ್ಡಮಾಗಿ ಮಲಂಗಿಸಿ ಸಮಸ್ತಜನಂ ವಿಸ್ಮಯ ಸ್ವಾಂತರಾಗಿ ನೋಡುತ್ತಿರಲಾಪವಿತ್ರಗಾತ್ರಪುತ್ರನ ಮೇಲೆ ಶಕಟಮಂ ಕಡುಸಂತಸಂಬಡೆದು ನಡಿಸಿದ ತನ್ಮನುಚೋಳನ ಧರ್ಮದೇೞ್ಗೆಯಂ ಭರ್ಮಾಚಲಕಾರ್ಮುಕಂ ಕಂಡು ಮೆಚ್ಚಿ ಚೆಚ್ಚರಮುತ್ಸವದಿ ಪ್ರಸನ್ನನಾಗೆ,

ಮೆಚ್ಚಿದನು ಚೋಳರಾಯಂ
ಗುಚ್ಚವದಿಂದಂ ಪ್ರಸನ್ನನಾಗಲುಮೇಶಂ
ಎಚ್ಚತ್ತೆರ್ದಂಕುವರಂ
ಚೆಚ್ಚರಮಾತರ್ಣಕಕ್ಕೆ ಬಂದುದು ಜೀವಂ ||೮೭||

ವಚನ :-ಇಂತೞಿದ ತನುಜಂಗಂ ತರ್ಣಕಕ್ಕಂ ಜೀವಂ ಬರಲ್ ಪ್ರಸನ್ನನಾದಂತಾತತತೇಜೋಮಯಮಪ್ಪ ರಾಜಕಲಾವತಂಸನ ಮೂರ್ತಿಯಂ ಕಂಡಾನಂದಂಬಡೆದಭಿವಂದಿಸಿ ಮಗುೞ್ದಿೞ್ದುನಿಂತು ಕೊಂಡಾಡುವ ತನ್ಮನುಚೋಳಂಗೆ ಸಾಮೀಪ್ಯಪದಮಂ ಕೊಟ್ಟು ಗೋಮತಲ್ಲಿಕೆಯಂ ತದ್ವತ್ಸುಗೂಡಿ ಗೋಲೋಕಕ್ಕೆ ಕಳುಪಿಯಖಂಡಪರಿಪೂರ್ಣನದೃಶ್ಯಮಾಗಿ ಪೋಗೆ,

ಪ್ರಾಣಂ ಬಂದು ಮನಂಗೊಳಿಪ್ಪ ತನುಜಂಗಾರಾಜ್ಯಮಂ ಕೊಟ್ಟತತ್
ಕ್ಷೋಣೀಶಂ ಮನುಚೋಳನೈದನೆ ಲಸತ್ಕೈಲಾಸಕಿನ್ನಾಲಿಸ
ಕ್ಷೀಣದ್ಯೂತವಿನೋದಿ ಮೂರ್ಖನೈನಾರೆಂಬಾತನ ಖ್ಯಾತಿಯಂ
ಮೇಣಾಲಾಪಿಸು ಪೇೞುವೆಂ ಮುಕುರಶೋಭಾಸ್ನಿಗ್ಧಗಂಡಸ್ಥಲೀ||೮೮||

ಶೆವಪೂಜೆಯನೆಡೆವೆಡದೊ
ಪ್ಪುವ ತತ್ಪುರದಮಳಶೂದ್ರಜಾತಿಯೊಳಂದೊ
ರ್ವವಿಶಿಷ್ಟಭಕ್ತನುದರೋ
ದ್ಭವನೆಸೆದಂ ನಾಡೆ ಮೂರ್ಖನೈನಾರೆನಿಪಂ||೯೦||

ಧನಮಂ ವರಜಂಗಮಕಿತ್ತು ಲಸ
ತ್ತನುಮಂ ಗುರುಸೇವೆಗೆ ತೆತ್ತು ಕರಂ
ಮನಮಂ ಶಿವನಂಘ್ರಿಗೆ ಮಾರಿ ಬೞಿ
ಕ್ಕನಿಶಂ ಪರಿರಂಜಿಪನಾಶರಣಂ ||೯೧||

ನಿಚ್ಚಂ ಪಣ್ಣೆಯದಾಗೆ ಜೂಜುತನಗಾಜೂಜಾಟದಿಂ ಬಂದ ಭಾ
ಸ್ವಚ್ಚಾಮೀಕರದಿಂದೆ ಜಂಗಮಪದಾಬ್ಜಾರಾಧನಂ ಗೈಯುತುಂ
ಸಚ್ಚಿನ್ಮೂರ್ತಿಯೆನಿಪ್ಪ ಮೂರ್ಖನೈನಾರಿಂತೊಪ್ಪೆ ತದ್ಭಕ್ತನು
ದ್ಯಚ್ಚಾರಿತ್ರಮನೊಲ್ದು ನೋೞ್ಪೊಡುಮೆಯಾಣ್ಮಂ ಬಂದನೇಣೇಕ್ಷಣೇ||೯೨||

ಜೂಜನಾಡುವ ತನ್ಮಹಾಶಿವಭಕ್ತನೊಳ್ಪರಮೇಶ್ವರಂ
ಜೂಜುಗಾಱನ ಮಾೞ್ಕೆಯಿಂ ನಡೆತಂದು ಮೆಲ್ಲನೆ ಸಾರ್ದು ತಾಂ
ಜೂಜನಾಡಿ ಸಮಂತು ಸೋಲ್ದು ಸುವರ್ಣಮೀಯದೆ ಪೋಗಲಾ
ಜೂಜಿನರ್ಥಕೆ ಕಟ್ಟಿದಂ ಬಿಡದಾತನಂಗಜವೈರಿಯಂ||೯೩||

ಪಿಡಿದೆತ್ತಿ ತನ್ನಪಾಂಗಿಂ
ಬಿಡದಡಿಯಂ ಕಟ್ಟಿ ತೂಗಿ ವಿತ್ತಮನಿಕ್ಕೆಂ
ದಡಿಗಡಿಗೆ ಜಡಿಯುತುಂ ಬಿಡು
ನುಡಿಯಂ ನುಡಿಯುತ್ತುಮಿರ್ದನಾಶಿವಭಕ್ತಂ ||೯೪||

ಶಿವಭಕ್ತರ್ಬಂದುಱೆ ಮ
ದ್ಭವನದೊಳೊಲ್ದಿರ್ಪರವರ ಸೇವೆಗೆ ಮೇಣಾ
ದ್ರವಿಣಂ ತಪ್ಪಿದೊಡಸುವಂ
ಜವದಿಂದ ಬಿಡುವೆನೆಂದನಾಶಿವಭಕ್ತಂ||೯೫||

ಎನ್ನಸುವಿನೊಡನೆ ನಿನ್ನಸು
ತಾಂ ನಿಲ್ಲದೆ ಪೋಗವೇೞ್ಕುಮೇನಿಕ್ಕುವ ಪೊ
ನ್ನಂ ನೀಂ ಚಕ್ಕನೆ ತರಿಸೆಂ
ಬನ್ನೆಗಮೀಶಂ ಪ್ರಸನ್ನನಾದಂ ತರುಣೀ||೯೬||

ಪ್ರಸನ್ನಮಾದಂತಕವೈರಿಯಂ ನಿರೀ
ಕ್ಷಿಸುತ್ತೆ ಸಂತ್ರಾಸಮನಾಂತು ಕಟ್ಟಿದಾ
ಮಿಸುಪ್ಪಪಾಂಗಂ ಜವದಿಂದೆ ಕೋಯಲಂ
ದು ಸಂತಸಂದಾಳ್ದಿರದಾಗಳೀಶ್ವರಂ ||೯೭||

ಮೆಚ್ಚಿದನೀಮೂರ್ಖತೆಯೊಳ್
ಬೆಚ್ಚ ಮಹಾಭಕ್ತಂಗೆಂದು ತಚ್ಚರಣಮಂ ಚಂ
ಚಚ್ಚಂದ್ರಧರಂ ಕೈಲಾ
ಸೋಚ್ಚಪದಂಗೊಟ್ಟನಿಂದುಮಂಡಲವದನೇ||೯೮||

ಪರಿವರ್ತಿಸಿ ಜೂಜಿನೊಳೀ
ಶ್ವರನಂ ಮೆಚ್ಚಿಸಿ ಸಮಸ್ತಭಕ್ತರ್ ನಲಿಯಲ್
ಪಿರಿದುಂ ಮೂರ್ಖಂನೈನಾ
ರ್ವರಕೈಲಾಸಕ್ಕೆ ಪೋದನಬ್ಜದಳಾಕ್ಷೀ ||೯೯||

ನುತಕೇಳೀಪ್ರಿಯನಲ್ತೆ ಮಲ್ಲಣಕವೀಶಂ ಚೋಳರಾಜೇಂದ್ರನುಂ
ನತರಾಜಾಧಿಪನಲ್ತೆ ಮೂರ್ಖನೈನಾರ್ದ್ಯೂತಾರ್ಥಿ ತಾನಲ್ತುಮಾ
ಪತಿಸಂಸ್ತುತ್ಯನನೈದೆ ಮೆಚ್ಚಿಸಿಯವರ್ಕೈಲಾಸಮಂ ಪೋಗರೇ
ಕ್ಷಿತಿಯೊಳ್ ನಿಸ್ಪೃಹ ಭಕ್ತರೆಂತು ನಡೆಯಲ್ ಕುಂದುಂಟೆ ಚಂದ್ರಾನನೇ||೧೦೦||

ಎಂದಿಂತು ಪೂರ್ವಕಥೆಗಳ
ನಂದೊಱೆದುದ್ಭಟಮಹೀಧವಂಗಾಸಂಪೂ
ರ್ಣೇಂದುಮುಖಿ ಮಗುೞ್ದಿಂ
ತೆಂದಳ್ ಮೃದುಮಧುರವಚನರಚನೆಯಿನಾಗಳ್||೧೦೧||

ಎಲ್ಲಾ ಕಥೆಗಳನಾದಂ
ಸೊಲ್ಲಿಪುದರಿದಲ್ತು ತನುವೆರಸು ಕೈಲಾಸ
ಕ್ಕುಲ್ಲಸದೆ ಪೋಪನವನಿಯೊ
ಳಿಲ್ಲೆನಲಾಕಾಂತೆಗುರ್ವಿಪತಿ ಯಿಂತೆಂದಂ||೧೦೨||

ವನಜಾತೇಕ್ಷಣೆ ಕೇಳಿದಂ ಗಹನಮೇ ಭಕ್ತರ್ಗೆ ಕೈಲಾಸಕೊ
ರ್ವನೆ ತಾಂ ಪೋಪುದು ನೋಡು ನೀನಿರದೆ ತತ್ಪಟ್ಟಣಂಗೂಡಿಯಾಂ
ಮನಮೊಲ್ದುರ್ವರೆ ಮೆಚ್ಚಲಿಂದುಧರಲೋಕಕ್ಕಿಂದೆ ಪೋದಪ್ಪೆನೆಂ
ದೆನುತ ಸುಂದರನೀಲಕಂಠಗೃಹಕೆೞ್ತಂದಂ ಸಮಂತುದ್ಭಟಂ ||೧೦೩||

ಸೌಂದರಿಗೂಡಿ ನೃಪಾಲಕನೊಲ್ದೆ
ೞ್ತಂದು ಶಿವಾಲಯಮಂ ತವೆ ಪೊಕ್ಕಾ
ನಂದದಿನಿಂದುಕಲಾಧರನಂ ಕಂ
ಡಂದುರುಭಕ್ತಿಸುಧಾಬ್ಧಿಯೊಳಾೞ್ದಂ ೧೦೪||

ಶ್ರೀನೀಲಕಂಠನತಿನಿರ್ಮಲಮೂರ್ತಿಯಂ ಕಂ
ಡಾನಂದಮಂ ತಳೆದು ವಂದಿಸಿ ಮತ್ತೆ ನಿಲ್ತಂ
ದಾನೀಱೆಗೂಡಿ ನಡೆತಂದೊಳಪೊಕ್ಕಲಂಪಿಂ
ತಾನೊಲ್ದು ಪೂಜಿಸಿದನಾಹರನಂ ನೃಪಾಲಂ ||೧೦೫||

ಷೋಡಶೋಪಚಾರದಿಂದೆ ಪೂಜೆಗೈದು ಶೀತರು
ಕ್ಚೂಡನೀಲಕಂಠದೇವನಂ ಬೞಿಕ್ಕಮುರ್ಬಿ ಕೊಂ
ಡಾಡುತಂದು ತುಂಗಭಕ್ತಿಯೆಂಬ ವಾರ್ಧಿಯೊಳ್ಮುೞುಂ
ಗಾಡುತೊಪ್ಪಿದಂ ಲಸತ್ಕುಮಾರಪಾಲಘೂರ್ಜರಂ ||೧೦೬||

ಶ್ರೀಪಾರ್ವತೀವದನಪದ್ಮದಿವಾಕರಾಯ
ತಾಪತ್ರಯಾದಿಬಹುದುಃಖನಿವಾರಣಾಯ
ಪಾಪದ್ವಿಪಾಳಿದಳನೋಗ್ರಮೃಗಾಧಿಪಾಯ
ಸೌಪರ್ಣವಾಹವಿನುತಾಯ ನಮಃ ಶಿವಾಯ||೧೦೭||

ಪಂಚೇಸುದರ್ಪದಹನಾಯ ನಿರಂಜನಾಯ
ಚಂಚನ್ಮೃಗಾಂಕಶಕಲಾಂಚಿತಚೂಳಿಕಾಯ
ಕ್ರೌಂಚಾಚಲಾತಿಜನಕಾಯ ಜನಾರ್ದನಾಯ
ಪ್ರಾಂಚತ್ಪಿನಾಕವಿಧೃತಾಯ ನಮಃ ಶಿವಾಯ||೧೦೮||

ವಚನ :-ಎಂದಿಂತು ನೀಲಕಂಠನಂ ನಿಷ್ಪಂದಾನಂದದಿಂದುದ್ಭಟಕ್ಷಿತೀಂದ್ರಚಂದ್ರಮಂ ಸ್ತೋತ್ರಮಂಮಾಡುತ್ತುಮಿರೆ ಯಿರೆ,

ಒಂದೊಂದುಪದ್ಯಪದ್ಯ
ಕ್ಕೊಂದೊಂದುಸಹಸ್ರಯೋಜನಮನಾ ನಗರಂ
ಕುಂದದೆ ಗಗನಕ್ಕಡರ್ದ
ತ್ತಿಂದುಕಲಾಧರನ ಭಕ್ತರೇನಗ್ಗಳರೋ||೧೧೫||

ಹರನ ಶುಭಪದಾಂಭೋಜಾತಮಂ ಕೀರ್ತಿಸುತ್ತುಂ
ಧರಣಿಪನಿರದಂತಾಪಟ್ಟಣಂ ಭೂಮಿಯಂ ಬಿ
ಟ್ಟಿರದೆ ದಿನಕರೋದ್ಯದ್ಬಿಬಮಂ ಪಿಂದುಗೈದಂ
ದುರುತರಜವದಿಂದೆೞ್ದತ್ತು ಸನ್ಮಾರ್ಗಕ್ಕಾಗಳ್ ||೧೧೬||

ನಗರಂ ಕೈಲಾಸಕಂದೈದುವ ಘನತೆಯನೊಲ್ದೀಕ್ಷಿಸುತ್ತುಂ ನೃಪಾಲಂ
ನಗಕನ್ಯಾಧೀಶನಂ ಕೀರ್ತಿಸುತಿರಲನಿತಕ್ಕರ್ಕಬಿಂಬಂ ತಳಕ್ಕೊ
ಯ್ಯಗೆ ಪೋಗಲ್ಬಲ್ಬಿಸಿಲ್ಕೈಗಱಿಯಲಿರದದಂ ಕಂಡು ಸೌಧರ್ಮಿಯಿನ್ನೇ
ಳ್ಖಗನಸ್ತಂಬೊಂದಿದಂ ತಾನೆನೆತದಬಲೆಗಿಂತೆಂದನಾರಾಜಚಂದ್ರಂ ||೧೧೭||

ಪುಸಿಯುಂಟೆ ಭಕ್ತವಚನದೊ
ಳೊಸೆದೀಕ್ಷಿಸು ಬಾಲೆ ಬಾಲೆನೆ ಯೆಂದೆನಲಂತಾ
ಬಿಸಜಾಕ್ಷಿ ನೋಡಲಂದಾ
ಗಸಮಂ ತೊಳತೊಳಗಿ ಬೆಳಗಿದುದು ಕೈಲಾಸಂ||೧೧೮||

ಎಳಮಿಂಚಂ ಕಡೆಗೈದು ಕಂಡರಸಿನೀೞ್ದಿಟ್ಟಂತೆ ಪೂರ್ಣೇಂದುಮಂ
ಡಳಸಂಜಾತಮರೀಚಿಕಾನಿಚಯಮಂ ಮೇಲ್ಕೀಣಿಸಿ ಪೊಯ್ದಂತೆ ನಿ
ರ್ಮಳನಕ್ಷತ್ರಸಮಾಜಮಂ ನೆಗೞ್ದಲಂಪಿಂ ರಾಸಿಗೈದಂತೆ ಕ
ಣ್ಗಳವಟ್ಟಿಂತುರುಕಾಂತಿಯಂ ಪರಪುತುಂ ಪ್ರೋತ್ತುಂಗತಾರಾಚಳಂ||೧೧೯||

ಫಣ್ಯಧಿಪಸ್ತುತಿಗೈದದ
ಪುಣ್ಯಪ್ರಭೆವಡೆದು ತೋರ್ಪ ಮೋಕ್ಷವಧೂಲಾ
ವಣ್ಯದ ತಿರುಳೊಳ್ಪನೆ ತ
ತ್ಪುಣ್ಯರ ಕಣ್ಗೆಸೆದುದಮರ್ದ ತಾರಾಮಹೀಂದ್ರಂ||೧೨೦||

ನರಲೋಕಂ ನಡೆನೋಡಲಾತ್ಮಪುರಮಂ ಕೊಂಡೀಶಲೋಕಕ್ಕೆ ಬಂ
ಧುರಮೋದಂಬಡೆದಂದು ಬರ್ಪ ನೆಗೞ್ಪುದ್ಯದ್ಘೂರ್ಜರಾಧೀಶನಂ
ಪಿರಿದಾಲೋಕಿಸಿ ಪೊಂಗಿ ತುಂಗಗಣವೃಂದಂ ಪ್ಷ್ಪಸಂತಾನಮಂ
ಸುರಿದತ್ತೈದೆ ಸುಪರ್ವದುಂದುಭಿರವಂ ಪೊಣ್ಮಲ್ಮಹಾಲೀಲೆಯಂ||೧೨೨||

ಮಣಿದಿದಿರ್ವಪ್ಪ ಘೂರ್ಜರಮಹೀಪತಿಯಂ ಸತಿಗೂಡಿತಂದು ತ
ದ್ಗಣತತಿ ನಂದಿಕೇಶ್ವರನನುಜ್ಞೆಯನಾಂತು ಸುಧಾಮರೀಚಿಭೂ
ಷಣನ ಪದಾಬ್ಜಮಂ ಪದೆದು ಕಾಣಿಸಲೆಂದೊಡಗೂಡಿ ಬಂದು ಕ
ಣ್ಗಣಿಯರಮಾದಲಂಪುವಡೆದೀಶಸಭಾಂತಮನೈದಿತಳ್ಕರಿಂ ||೧೨೩||

ಪ್ರಮಥಗಣಂ ತರತರಲಾ
ಪ್ರಮಥಾಮಣಿಗೂಡಿ ಬಂದು ಗುರ್ಜರಧಾತ್ರೀ
ರಮಣಂ ಪೊಕ್ಕನಲಂಪಿಂ
ರಮಣೀಯಮದಾದ ಶಿವಸಭಾಮಂದಿರಮಂ ||೧೨೪||

ಕುಂದದೆ ಪೊಂಗುವ ಪರಮಾ
ನಂದಂಬಡೆದಂದು ಶೋಭಿಪಾನೃಪನಂ ಬಾ
ಲೇಂದುಧರಂ ಕೈವಿಡಿದೊಲ
ವಿಂದಂ ಮೈದಡವಿ ಮಗುೞ್ದು ಗಣಪದವಿತ್ತಂ ||೧೩೯||

ಗಣನಾಥತ್ವಮನುದ್ಭಟಂಗೆ ಪದೆದಿತ್ತಾತಂ ವಲಂ ತಂದ  ಪ
ಟ್ಟಣಮಂ ತಚ್ಛಿವಲೋಕದಲ್ಲಿ ಬೆಡದೊಲ್ದಿಂಬಿಟ್ಟು ಮೇಣ್ಕಾಮಿನೀ
ಮಣಿಸೌಧರ್ಮಿಗೆ ಕೂರ್ತು ಪಾಲಿಸಿ ಸಮುದ್ಯದ್ದ್ರುದ್ರಕನ್ಯಾತ್ವಮಂ
ಗುಣದೂರಂ ನೆಗೞ್ದೊಪ್ಪಿದಂ ಗುರುವಿರೂಪಾಕ್ಷಂ ಗುಹೇಶಪ್ರಿಯಂ||೧೪೦||

ಕೃತಜ್ಞತೆಗಳು.
ಡಾ|| ಎಸ್. ವಿದ್ಯಾಶಂಕರ
ಪ್ರಕಟಣೆ: ಕನ್ನಡ ಸಾಹಿತ್ಯ ಪರಿಷತ್ತು,
ಚಾಮರಾಜಪೇಟೆ,
ಬೆಂಗಳೂರು - ೫೬೦೦೧೮.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ