ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜನವರಿ 6, 2019

ಬಸವಪ್ಪಶಾಸ್ತ್ರಿ ವಿರಚಿತ ಕನ್ನಡ ಭರ್ತೃಹರಿ ಸುಭಾಷಿತ

ಬಸವಪ್ಪಶಾಸ್ತ್ರಿ ವಿರಚಿತ ಕನ್ನಡ ಭರ್ತೃಹರಿ ಸುಭಾಷಿತ

ವೃ॥ ಶ್ರೀಮದಿಳಾಧರೇಂದ್ರ ತನಯಾವದನಾಂಬುಜಚಂಚರೀಕನು
ದ್ದಾಮಗುಣಾಭಿರಾಮನಜವಿಷ್ಣು ಮುಖಾಮರನಮ್ರಮೌಳಿಮಾ
ಲಾಮಕರಂದಸಿಕ್ತಪದತಾಮರಸಂ ನತಕಲ್ಪ ಭುರುಹಂ
ಪ್ರೇಮದೆ ಚಾಮಭೂಮಿಪತಿಯಂ ಪರಿಪಾಲಿಕೆ ಸೋಮಶೇಖರಂ॥೧॥

ಕಂ॥ ನುತಗುಣಚಾಮಮಹೀಪತಿ ।
ಮತಿಸಚಿವನೃಸಿಂಹವರ್ಯನುತ್ಸಾಹಿಸೆ ಸಂ ॥
ಸ್ಕೃತಭರ್ತೃಹರಿಸುಭಾಷಿತ ।
ಕೃತಿಯಂ ಬಸವಪ್ಪಶಾಸ್ತ್ರಿ ಕನ್ನಡಿಸಿದಪಂ॥೨॥

ಕಂ॥ ಮುನ್ನಿನ ಸಂಸ್ಕೃತಿಗಿದು ।
ಕನ್ನಡಿಯೆನೆ ಕನ್ನಡಿಪ್ಪುದುಚಿತಂ ಕವಿಗಳ್॥
ಎನ್ನರೆವುಳ್ಳನಿತರಿದಾಂ।
ಕನ್ನಡಿಸಿರ್ಪೆಂ ಗುಣಜ್ಞರಭಿಮತಿಪುದಿದಂ॥೩॥

ನೀತಿಶತಕ

ಕಂ॥ ಸ್ಥಾನಾದಿಪರಿಚ್ಛೇದವ ।
ನಾನದ ಸಚ್ಛಿತ್ಸುಖಾತ್ಮಮಾಗೆಸೆಯುವ ನೈ॥
ಜಾನುಭವದಿಂದಮೇ ತಿಳಿ।
ವಾ ನಿರ್ಮಲಮಾದ ತೇಜಕಭಿನಮಿಸಿದಪೆಂ॥೧॥

ಮೂರ್ಖಪದ್ಧತಿ

ಕಂ॥ ತಿಳಿವರ್ಗ್ಗೆ ಮತ್ಸರಂ ಪಿರಿ।
ದಿಳೆಯಾಣ್ಮರಖರ್ವಗರ್ವದೂಷಿತಹೃದಯರ್॥
ತಿಳಿವಿಲ್ಲದರಿನ್ನುಳಿದರ್ ।
ಮುಳುಗಿತ್ತದರಿಂ ಸುಭಾಷಿತಂ ತಾನೊಡಲೊಳ್॥೨॥

ಕಂ॥ ತಿಳಿಯಿಸಲಕ್ಕುಂ ಸುಖದಿಂ ।
ತಿಳಿಯದನಂ ತಿಳಿದಜನವತಿಸುಖದಿಂದಂ॥
ತಿಳಿಯಿಸಲಕ್ಕುಂ ತಿಳಿದುಂ ।
ತಿಳಿಯದ ಮೂರ್ಖಂಗೆ ತಿಳಿಸೆ ವಿಧಿಯುಮಶಕ್ತಂ॥೩॥

ವೃ॥ ಬಲುಹಿಂದಂ ಕೀಳಲಕ್ಕುಂ ಮಕರದಣಲನೊಂದಿರ್ಪ ಮಾಣಿಕ್ಯಮಂ ಸಂ
ಚಲದೂರ್ಮಿವ್ರಾತದಿಂ ಭೋರ್ಗ್ಗರೆವ ಜಲಧಿಯಂ ಯತ್ನದಿಂ ದಾಂಟಲಕ್ಕುಂ ॥
ಸಲೆ ಕೋಪಂದಾಳ್ದ ಪಾವಂ ಪಿಡಿದು ಶಿರದೆ ಪೂಮಾಲೆವೋಲ್ತಾಳಲಕ್ಕುಂ ।
ಚಲದಿಂ ಬೀಗಿರ್ಪ್ಪ ಮೂರ್ಖಾವಳಿಯ ತಿಳಿಯಿಸಲ್ಕಾವನುಂ ಶಕ್ತನಲ್ಲಂ॥೪॥

ಕಂ॥ ಹಿಳಿಯಲ್ಬರ್ಕ್ಕುಂ ತೈಲವ ।
ಮಳಲೊಳಗುಂ ಮೊಲದ ಕೋಡ ಕಾಣಲುಮಕ್ಕುಂ ॥
ಪೊಳೆವ ಬಿಸಿಲ್ದೊರೆಯೊಳ್ನೀ ।
ರ್ಗ್ಗೊಳಲಕ್ಕುಂ ಮೂರ್ಖಜನವನೊಲಿಪುವುದಶಕ್ಯಂ॥೫॥

ವೃ॥ ಸವಿನುಡಿಯಿಂದೆ ಮೂರ್ಖರನೊಡಂಬಡಿಸಲ್ಬಗೆದರ್ಪ್ಪಮಾನವಂ ।
ನವಬಿಸಸೂತ್ರದೆ ನೆರೆಬಂಧಿಸಲುಜ್ಜುಗಿಪಂ ಮದೇಭಮಂ ॥
ಪವಿಮಣಿಯಂ ಶಿರೀಷಕುಸುಮಾಂಚಲದಿಂ ಕೊರೆಯಲ್ಕೊಡರ್ಚುವಂ ।
ಲವಣಸಮುದ್ರಕಿಂಪ ಮಧುಬಿಂದುವಿನಾಗಿಸಲುಂ ಪ್ರಯತ್ನಿಪಂ॥

ಕಂ॥ ಮರೆಗೊಳುವಂತಜ್ಞತೆ ಮೇ ।
ಣರಿದರಬಳಿಯಲ್ಲಿ  ತೊಡವೆನಿಪ್ಪಂತೆ ಹಿತಂ ॥
ನೆರೆ ಸಮನಿಪಂತೆಯುಂ ವಿಧಿ।
ಯರಿಯದರೊಳ್ ಮೌನವಂ ನಿಮಿರ್ಚಿದನಲ್ತೇ॥೭॥

ವೃ॥ ಇನಿಸಂ ತಾಂ ತಿಳಿದಂದು ಗರ್ವಭರಮಂ ತಾಳ್ದೆಲ್ಲಮಂ ಬಲ್ಲೆನೆಂ।
ದೆನುತಂ ಬಿರ್ರನೆ ಬೀಗುತ್ತಿರ್ರ್ದೆನಕಟಾ ಮತ್ತದ್ವಿಪಂಬೊಲ್ ವಲಂ ॥
ಜನಿಸಲ್ಕೆನ್ನೊಳೆ ಮೆಲ್ಲಮೆಲ್ಲನರಿವಾವಿದ್ವತ್ಸಹಾವಾಸದಿಂ ।
ಮನಕಂಟಿರ್ದ್ದ ಮಹಾಮುದಂ ಜ್ವರದವೋಲ್ಪೋಯ್ತೀಗಳೇನೆಂದಪೆಂ॥೮॥

ವೃ॥ ಕ್ರಿಮಿಯುತಮಾಗಿ ಮಾಂಸಮಣವಿಲ್ಲದೆ ಜೊಲ್ಲೊಳೆ ನಾಂದು ಪೂತಿಗಂ।
ಧಮನೊಳಕೊಂಡ ಕಳ್ತೆಯೆಲುವಂ ಸವಿಗೊಂಡಗಿಯುತ್ತೆ ಕುರ್ಕುರಂ॥
ಅಮರವರಂ ಸಮೀಪದೊಳಗಿರ್ದ್ದೊಡಮೀಕ್ಷಿಸಿ ಲಜ್ಜೆಯಾನದಾ।
ಕ್ರಮದೊಳಗಲ್ಪಜೀವಿಯೆಣಿಸಂ ಬಯಸಿರ್ಪ್ಪುದರಲ್ಲಿ ನೈಚ್ಯಮಂ॥೯॥

ವೃ॥ ಸುರಪದದತ್ತಣಿಂದೆ ಹರಮಸ್ತಕವಂ ಹರಮಸ್ತಕಾಗ್ರದಿಂ ।
ಧರಣಿಧರೇಂದ್ರನಂ ಧರಣಿಭೃದ್ವರನಿಂ ಧರೆಯಂ ಧರಿತ್ರಿಯಿಂ ॥
ಶರಧಿಯ ಮತ್ತಮಾ ಶರಧಿಯಿಂ ಫಣಿಲೋಕವನೈದಿದತ್ತು ಬಾಂ।
ದೊರೆವಿನಿಪಾತ ಸಂತತಿ ವಿವೇಕ ಪರಿಚ್ಯುತಿಯಿಂದೆ ಬಾರದೇ॥೧೦॥

ವೃ॥ ಬಿಸಿಲಂ ಛತ್ರದೆ ವಹ್ನಿಯಂ ಸಲಿಲದಿಂ ಮತ್ತೇಭಮಂ ಕೂರದಂ।
ಕುಸದಿಂದೌಷಧದಿಂದೆ ರೋಗತತಿಯಂ ಮಂತ್ರಪ್ರಯೋಗಂಗಳಿಂ॥
ಬಿಸಮಂ ದಂಡದೆ ಗೋವುಮಂ ಖರಮುಮಂ ತಾಂ ವಾರಿಸಲ್ಬರ್ಕ್ಯುಮೀ।
ರಸೆಯೊಳ್ಮೂರ್ಖನ ಮೌರ್ಖ್ಯಮಂ ಕಳೆವ ಮರ್ದ್ದೊಂದಿಲ್ಲ ಶಾಸ್ತ್ರಂಗಳೊಳ್॥೧೧॥

ವಿದ್ವತ್ಪದ್ಧತಿ

ವೃ॥ ಸರಸಕಲಾಪರಿಷ್ಕೃತವಚರ್ನಯಬೋಧಕಸತ್ಕವೀಂದ್ರರಾ।
ವರಸನ ನಾಡಿನೊಳ್ಬಡತನಂ ಬಡೆದಿರ್ಪರೊ ತಾನದಾಮಹೀ॥
ವರನ ಜಡತ್ವಮಲ್ಲದವರ್ಗೇಂ ಧನಮಿಲ್ಲದೊಡಂ ಧನೇಶ್ವರರ್।
ಕೊರತೆಯೆ ರತ್ನಗಳ್ಗೆ ಕುಪರೀಕ್ಷಕರಿಂ ಬೆಲೆಹೀನಮಾದೊಡಂ॥೧೨॥

ವೃ॥ ಬಳೆಗುಂ ಕೊಟ್ಟೊಡಮರ್ಥಿಗಳ್ಗೆ ಸತತಂ ಚಿತ್ತಕ್ಕೆ ಮಾಳ್ಕುಂ ನಿರ।
ರ್ಗಳ ಸಂತುಷ್ಟಯ ಗೋಚರಂ ಬಡೆಯದಿರ್ಕುಂ ತಸ್ಕರರ್ಕ್ಕಳ್ಗಣಂ ॥
ಅಳಿವಂ ಪೊರ್ದ್ದದು ಕಲ್ಪದಂತದೊಳಮೀವಿದ್ಯಾಧನಂ ತಾನಿದಂ।
ತಳೆದಿರ್ಪ್ಪಾರ್ಯರೊಳಾಂಪುದಲ್ತು ಮದಮಂ ಸತ್ಕೀರ್ತಿ ಕಾಮರ್ ನೃಪರ್॥೧೩॥

ವೃ॥ ಅವಮತಿಗೆಯ್ಯದಿರ್ ವಿಬುಧರಂ ಮುಳಿಸಾಂತೊಡೆ ತಾಮವರ್ ಮಹೀ।
ಧವ ತವ ವೈಭವಂ ತೃಣನಿಭಂ ತಡೆಯಲ್ಕದು ಶಕ್ತಮಪ್ಪುದೇಂ ॥
ನವಮದರೇಖೆಯಿಂದೆಕರಿದಿಪ್ಪವಿಶಾಲ ಕಪೋಲ ಯುಗ್ಮದಿಂ।
ತವೆ ಪರಿಶೋಭಿಪಾನೆಗಳ ವಾರೀಸಲೇಂ ಬಿಸಸೂತ್ರಮಾರ್ಪ್ಪುದೇ॥ ೧೪॥

ಕಂ॥ ಮುಳಿಯೆ ವಿಧಿ ಯಾನಹಂಸಕೆ ।
ನಳಿನೇವಿಹರಣವಿಲಾಸವಂ ॥
ಜಲದುಗ್ಧವಿಭೇದನ ಕೌ ।
ಶಲ ಕೀರ್ತಿಯ ತೊಲಗಿಸಲ್ಕೆ ತಾಂ ನೆರೆದಪನೇ॥೧೫॥

ಕಂ॥ ಕ್ಷಿತಿಯೊಳಲಂಕರಿಪುದು ಸಂ ।
ಸ್ಕೃತವಾಣಿಯದೊಂದೆಯುಡಿಗೆ ತೊಡಿಗೆಗಳಿಂದೇಂ ॥
ಕ್ಷತಿಯಾಂಪುವು ತೊಡವೆಲ್ಲಂ।
ಸತತಂ ವಾಗ್ಭೂಷಣಮೆ ಸುಭೂಷಣಮಲ್ತೇ॥೧೬॥

ವೃ॥ ವಿದ್ಯೆಯೆ ರೂಪು ವಿದ್ಯೆಯೆ ನಿಗೂಢ ಸುರಕ್ಷಿತಮಾದವಿತ್ತಮುಂ |
ವಿದ್ಯೆಯೆ ಕೀರ್ತಿಭೋಗಕರಿ ವಿದ್ಯೆಯೆ ದೇಶಿಕರ್ಗೆಲ್ಲ ದೇಶಿಕಂ॥
ವಿದ್ಯೆಯೆ ಬಂಧುವಪ್ಪುದು ವಿದೇಶದೆ ವಿದ್ಯೆಯೆರಾಜಪೂಜ್ಯಮುಂ |
ವಿದ್ಯೆಯದಿಲ್ಲದಿರ್ಪ್ಪ ಮನುಜಂ ಬಗೆಯಲ್ಪಶುವಲ್ತೆ ಧಾತ್ರಿಯೊಳ್॥೧೭॥

ವೃ॥ ಜ್ಞಾತಿಯೆ ವಹ್ನಿ ನಾಣೆ ತೊಡೆವಾಪ್ತನ ಚಿತ್ತರುಜಾಹರೌಷಧಂ|
ಖಾತಿಯೆ ಶತ್ರು ಶಾಂತಿಗುಣವೇ ಕವಚಂ ವರವಿದ್ಯೆಯೇ ಧನಂ॥
ಘಾತುಕರೇ ಮಹಾಹಿಗಳುದಾರಕವಿತ್ವವೆ ರಾಜ್ಯವೈಭವಂ |
ಭೂತಲದಲ್ಲಿ ನೋಡೆ ಮನುಜಂಗಿವರಿಂ ಪೆರವಿನ್ನುಮಿರ್ಕ್ಕುಮೇ॥೧೮॥

ವೃ॥ ದಯೆಯಂ ಸೇವಕರಲ್ಲಿ ಬಂಧುಜನದೊಳ್ ದಾಕ್ಷಿಣ್ಯಮಂ ನಾಡೆ ದು|
ರ್ನಯರೊಳ್ ಕ್ರೌರ್ಯವ ಪೂಜ್ಯರೊಳ್ ಕ್ಷಮೆಯ ಸಾಧುವ್ರಾತದೊಳ್ಪ್ರೀತಿಯಂ॥
ನಯವಂ ರಾಜರೊಳಾರ್ಯರೊಳೃಜುತೆಯಂ ಶೂರತ್ವಮಂ ಶತ್ರುಸಂ|
ಚಯದೊಳ್ ಸ್ತ್ರೀಜನದಲ್ಲಿ ಧೃಷ್ಟತೆಯನಾಂತಿರ್ಪ್ಪಾತನೇ ಬಲ್ಲವಂ॥ ೧೯॥

ಕಂ॥ ಪರಿಹರಿಪುದಘವ ವಿಮಲೀ|
ಕರಿಪುದು ಮಾನಸವ ನುಡಿಗೆ ಸತ್ಯವ ಕುಡುಗುಂ ॥
ಗುರುತೆಯನೀವುದು ಕೀರ್ತಿಯ |
ಬರಿಕುಮದೇಂ ಮಾಡದಿಳೆಗೆ ಸಜ್ಜನಸಂಗಂ॥೨೦॥

ಕಂ॥ ದೊರೆವಡೆದಿರ್ಪ್ಪರ್ ಸುಕವೀ |
ಶ್ವರರ್ಮಹಾಸುಕೃತಶಾಲಿಗಳ್ ರಸಸಿದ್ಧರ್॥
ಧರೆಯಲ್ಲಿ ಜರಾಮೃತಿಭಯ|
ವಿರಹಿತಮಾಗಿರ್ಪ್ಪ ಕೀರ್ತಿಮಯವಿಗ್ರಹದಿಂ ॥೨೧॥

ಶೌರ್ಯಪದ್ಧತಿ

ವೃ॥ ಜರೆಯಿಂ ಜೀರ್ಣಮದಾದೊಡಂ ಪಸಿವಿನಿಂದಂ ಕ್ಷೀಣಮಾಗಿರ್ದೊಡಂ |
ಪಿರಿದುಂ ಕಷ್ಟವನಾಂತೊಡಂ ಹರಣಮೊಂದುತ್ತಿರ್ದೊಡಂ ನಾಶಮಂ ॥
ಕರಿಕುಂಭಸ್ಥಲಮಾಂಸಭಕ್ಷಣವನೊಂದಂ ನಾಡೆ ವಾಂಛಿಪ್ಪ ಕೇ|
ಸರಿಯೇಂ ಮೆಲ್ಗುಮೆ ಜೀರ್ಣಮಾದ ತೃಣಮಂ ಮಾನೋನ್ನತಾಗ್ರೇಸರಂ ॥೨೨॥

ವೃ॥ ಅಣುವಸೆ ಸೋರ್ದ್ದಣಂ ಮಲಿನಮಾಗಿ ನಿರಾಮಿಷಮಾದಗೋಸ್ಥಿಯಂ |
ಪ್ರಣಯದೆ ಪೊರ್ದ್ದಿನಲ್ಮೆವಡೆಗುಂ ಶುನಕಂ ಪಸುವಿಂಗದಿರ್ದ್ದೊಡಂ ॥
ಗಣಿಸದೆ ಸಾರ್ದ್ದ ಜಂಬುಕವನಾನೆಯ ಕೊಲ್ವೊಡೆ ಪೋಪುದಲ್ತೆ ವಾ|
ರಣರಿಪು ಕಷ್ಟದೊಳ್ನಿಖಿಲರುಂ ನಿಜಶಕ್ತ್ಯನುರೂಪಕಾಂಕ್ಷಿಗಳ್॥೨೩॥

ಕಂ॥ ಬಾಲವನಾಡಿಸಿ ನೀಡುತೆ|
ಕಾಲಂ ಕೂಳೀವಗೊಡಲ ತೋರ್ಪ್ಪುದು ಶುನಕಂ॥
ಆಲಿಸಿ ಚಾಟೂಕ್ತಿಗಳಂ |
ಲೀಲೆಯೊಳೀಕ್ಷಿಸುತೆ ಭೋಜಿಕುಂ ಗಜರಾಜಂ॥೨೪॥

ಕಂ॥ ಆರೀ ಪರಿವರ್ತನ ಸಂ|
ಸಾರದೊಳಳಿದುದಿಸದಿರ್ಪ್ಪರುದಿಸಿದುದರ್ಕೀ ॥
ಧಾರಿಣಿಯೊಳ್ ನಿಜವಂಶಕೆ |
ಗೌರವಮಂ ತಂದೊಡಾತನೇ ಉದಿಸಿದವಂ॥೨೫॥

ಕಂ॥ ಬಲ್ಲಿದನ ವರ್ತನಂ ತಾಂ |
ಸೊಲ್ಲಿಸಲೆರಡಂಗಮಲ್ತೆ ಸುಮಗುಚ್ಚದವೋಲ್ ॥
ಎಲ್ಲರ ತಲೆಯೊಳ್ ಜೀರ್ಣಿಪು |
ದಲ್ಲದೊಡೆ ವನಾಂತದಲ್ಲಿಯೇ ಜೀರ್ಣಿಸುಗುಂ॥೨೬॥

ಕಂ॥ ಗುರುಮುಖ್ಯಗ್ರಹಪಂಚಕ |
ವಿರೆಯುಮದಂ ತೊರೆದು ಮೆರೆವ ದಿನಕರ ರಜನೀ ॥
ಶ್ವರರನೆ ಪರ್ವದೆ ಕಬಳಿಪ |
ನುರುಸಾಹಸರುಚಿಶಿರೋವಶಿಷ್ಟಂ ದನುಜಂ॥೨೭॥

ಕಂ॥ ಇಳೆದಳೆದಹಿಪನ ಕಮಠಂ |
ತಳೆದುದು ಬೆನ್ನಿನೊಳದಂ ನಿರಾದರದಿಂದಂ ॥
ಜಲಧಿ ವರಾಹಕ್ಕೆ ವಶಂ|
ಗೊಳಿಸಿತು ನಿಸ್ಸೀಮವಲೆ ಮಹಾತ್ಮರ ಚರಿತಂ॥೨೮॥

ಕಂ॥ ಸುರಪಕರಕುಲಿಶಹತಿಯಿಂ |
ಮರುಗುತ್ತಿರೆ ಜನಕನಕಟ ಮೈನಾಕಂ ಸಾ॥
ಗರದೊಡಲೊಳಡಗಿ ಬಾಳುವ |
ಪರಿಯಿಂದಮುಮಸುವ  ತೊರೆವುದೇ ವರಮಲ್ತೇ॥೨೯॥

ಕಂ॥ ತರಣಿಯ ಪಾದಂ ಸೋಂಕಿದೊ |
ಡುರಿಗುಮಚೇತನಮದಾದೊಡಂ ರವಿಕಾಂತಂ ॥
ಉರುತೇಜೋನಿಧಿ ಪುರುಷಂ |
ಪರರೆಸಗಿದ ಪರಿಭವಕ್ಕೆ ಸೈರಿಸಿದಪನೇ॥೩೦॥

ಕಂ॥ ಸಿಂಗದ ಮರಿಯುಂ ಮತ್ತಮ|
ತಂಗಜಕುಂಭಗಳೊಳೆರಗುವುದು ತಾಂ ಸಹಜಂ॥
ತುಂಗಬಲಶಾಲಿಯಾದ ನ|
ರಂಗೆ ವಯಂ ವಿಕ್ರಮಕ್ಕೆ ಕಾರಣಮಲ್ಲಂ ॥೩೧॥

ಅರ್ಥಪದ್ಧತಿ

ವೃ॥ ಪಣಮೆಮಗೊಂದೆ ಮುಖ್ಯಮಲೆ ಜಾತಿ ರಸಾತಲದತ್ತಪೋಕೆ ಸ |
ದ್ಗುಣಮದರಿಂದ ಮಿನ್ನಡಿಗೆ ಬೀಳ್ಗೆಕುಲಂ ಶಿಖಿಯಿಂದೆ ಬೇಗೆ ಮೇಣ್॥
ಮುಣಗುಗೆ ಶೀಲಮಬ್ಧಿಗರಿಶೌರ್ಯಕೆ ತಾಗುಗೆ ಬಲ್ ಸಿಡಿಲ್ ಜರ |
ತ್ತೃಣಕೆಣೆಯಪ್ಪುದಲ್ತೆ ಪಣಮಿಲ್ಲದೊಡೀಗುಣಮೆಲ್ಲ ಮುರ್ವಿಯೊಳ್॥೩೨॥

ಕಂ॥ ಪಣಮುಳ್ಳವನೆ ಕುಲೀನಂ |
ಗುಣಿ ರೂಪಾಢ್ಯಂ ಸಮಸ್ತ ವಿದ್ಯಾನಿಪುಣಂ॥
ಎಣಿಸಲ್ವಾಗ್ಮಿಯುಮಾತನೆ |
ಗುಣಮೆಲ್ಲಂ ಜಗದಿ ಪಣವನಾಶ್ರಯಿಸಿರ್ಕ್ಕುಂ ॥೩೩॥

ವೃ॥ ಯತಿ ಜನಸಂಗದಿಂ ನೃಪತಿ ದುರ್ನಯದಿಂದತಿಲಾಲನಂಗಳಿಂ|
ಸುತನನಪೇಕ್ಷೆಯಿಂ ಕೃಷಿಯಧರ್ಮದಿನೇಳ್ಗೆ ಧನಂ ಪ್ರಮಾದದಿಂ ॥
ಕುತನಯನಿಂ ಕುಲಂ ಮದಿರದಿಂ ಮತಿ ಶೀಲಮನಾರ್ಯ ಸೇವೆಯಿಂ|
ಶ್ರುತಿರಹಿತತ್ವದಿಂ ದ್ವಿಜನನಾದರದಿಂ ಕೆಳೆ ನಾಶಮೈದುಗುಂ॥೩೪॥

ಕಂ॥ ಗತಿಗಳ್ಮೂರೇ ವಿತ್ತಕೆ |
ವಿತರಣಮುಂ ಭೋಗಮುಂ ವಿನಾಶಮುಮೆಂದೀ ॥
ಕ್ಷಿತಿಯಲ್ಲಿ ಕುಡದ ಭೋಗಿಸ |
ದತಿಲೋಭಿಯ ಧನಕೆ ಮೂರನೆಯ ಗತಿಯಕ್ಕು॥೩೫॥

ವೃ॥ ಮದವಳಿದಾನೆ ನುಣ್ಮಳಲಳುರ್ದ್ದ ಶರನ್ನದಿ ನಾಡೆ ಸಾಣೆಯಿ|
ಕ್ಕಿದ ಮಣಿ ಕೈದುಗಾಯವಡೆದಿರ್ಪ್ಪ ಭಟಂ ನಿಜನಾಥ ಸೇವೆಯಿಂ॥
ಮೃದಿತೆಯೆನಿಪ್ಪ ಬಾಲೆ ಕಲೆಯೊಂದುಳಿದಿಂದು ಸುಪಾತ್ರ ದತ್ತ ಸಂ |
ಪದನಹ ದಾನಿಯುಂ ಬಡತನ ಬಡೆದುಂ ಪರಿಶೋಭಿಪರ್ ಕರಂ॥೩೬॥

ಕಂ॥ ಸಿರಿಪಿಂಗಿದಂದು ಧನಿಕಂ |
ಪಿರಿದೆಂದಪನೊಂದು ಸೇರೆದವಸಮುಮನವಂ ॥
ಸಿರಿಕೂಡಿದಂದು ಮದದಿಂ|
ಧರಣಿಯನೆಲ್ಲವ ತೃಣಕ್ಕೆ ಸರಿಯೆಂದೇಣಿಪಂ॥ ೩೭॥

ಕಂ॥ ಅರಸನೆ ಕೇಳ್ ಕ್ಷಿತಿ ಧೇನುವ|
ಕರೆವೊಡೆ ನೀಂ ಕರುವ ಪೊರೆವತೆರದಿಂ ಪ್ರಜೆಯಂ ॥
ಪೊರೆ ಪುಷ್ಟಮಾಗಿರಲ್ಪ್ರಜೆ |
ಕರೆದಪುದಿಳೆ ಕಾಮಧೇನುವೋಲ್ ಕಾಮಿತಮಂ॥ ೩೮॥

ವೃ॥ ಪುಸಿಯಹುದೊಮ್ಮೆ ಸತ್ಯತರಮಾದಪುದೊಮ್ಮೆ ಕಠೋರಮೊಮ್ಮೆ ಭಾ|
ವಿಸೆ ಮೃದುವಾದಿಯೊಮ್ಮೆ ಬಲುಹಿಂಸಕಮೊಮ್ಮೆ ದಯಾರ್ದ್ರಯೊಮ್ಮೆ ಮೇಣ್॥
ಅಸುವಿಗುಮರ್ಥಕುಂ ಪೆಣೆದುಕೊಂಡಿಹುದೊಮ್ಮೆ ಮಹಾವದಾನ್ಯ ಮಾ
ಗೆಸೆದಪುದೊಮ್ಮೆ ಲೋಕದೊಳನೇಕ ವಿಧಂಶನೃಪನೀತಿ ವೇಶಿವೋಲ್॥೩೯॥

ಕಂ॥ ಎಣಿಸಲ್ಕಾಜ್ಞಾದ್ವಿಜರ|
ಕ್ಷಣವಿತರಣ ಭೋಗಕೀರ್ತಿಮಿತ್ರಾವನ ಷ॥
ಡ್ಗುಣಗಳನುಳಿದಿರ್ಪ್ಪಾ ಧಾ
ರಿಣಿಯೊಡೆಯರಪಾಶ್ರಯದೊಳದೇಂ ಫಲಮಿಳೆಯೊಳ್ ॥೪೦॥

ವೃ॥ ಬರೆದನೆನಿತ್ತಮಾನವನ ಫಾಲದೊಳಾಸರಸಿರುಹೋದ್ಭವಂ|
ದೊರೆವುದನಿತ್ತೆಯೂಷರದೊಳಂ ಪಿರಿದೈದದು ಮೇರುವಲ್ಲಿಯುಂ॥
ಎರೆಯದಿರಾಢ್ಯರಂ ಬರಿದೆ ದೈನ್ಯದೆಧೈರ್ಯವ ತಾಳು ಕೂಪದೊಳ್|
ಕರಗಮೆನಿತ್ತು ನೀರನೊಳಕೊಂಬುದನಿತ್ತನೆ ವಾರ್ಧಿಯಲ್ಲಿಯುಂ ॥೪೧॥

ದುರ್ಜನಪದ್ಧತಿ

ಕಂ॥ ಪರಧನ ವನಿತಾ ಸ್ಪೃಹೆ ನಿ|
ಷ್ಕರುಣತ್ವಂ ನಿರ್ನಿಮತ್ತಕಲಹಂ ಮೇಣ್ ಸ ॥
ತ್ಪುರುಷ ಸ್ವಬಂಧುಜನರೊಳ್| |
ಪಿರಿದಸಹಿಷ್ಣುತೆ ಖಲರ್ಗ್ಗೆ ತಾಮಿವು ನೈಜಂ॥೪೨॥

ಕಂ॥ ಖಲನೆನಿತಾನುಂ ವಿದ್ಯೆಯ|
ಕಲಿತಿರ್ದ್ದೊಡಮವನನುಳಿಯವೇಳ್ಕುಂ ಬಲ್ಲರ್॥
ತಲೆಯೊಳ್ಮಣಿಯಿಹುದೆನುತುಂ|
ಮಲಗಿಪರೇಂ ಮಗ್ಗುಲಲ್ಲಿ ಕಾಳೋರಗನಂ॥೪೩॥

ವೃ॥ ವ್ರತಿಯೊಳ್ ದಂಭವ ಜಾಡ್ಯವಂ ವಿನಯಿಯೊಳ್ ತೇಜಸ್ವಿಯೊಳ್ಗರ್ವಮಂ |
ಮತಿಹೀನತ್ವವ ಮೌನಿಯಾದನೊಳೆ ವಾಚಾಲತ್ವಮಂ ವಾಗ್ಮಿಯೊಳೆ॥
ಹಿತವಂ ಪೇಳ್ವನಲ್ಲಿ ದೈನ್ಯವ ಕೃಪಾಹೀನತ್ವಮಂ ಶೂರನೊಳ್ |
ಕಿತವರ್ ಕಲ್ಪಿಪರಿನ್ನಾವ ಗುಣಮಂ ಶ್ಲಾಘಿಪ್ಪರೋ ಕಾಣೆ ನಾಂ॥೪೪॥

ವೃ॥ ಪಿರಿದಿಹ ಲೋಭದಿಂ ಪೆರತು ದುರ್ಗುಣಮುಂಟೆ ದುರಾತ್ಮಕತ್ವದಿಂ |
ಪೆರತಘಮುಂಟೆ ಗೌರವದಿನಾಭರಣಂ ಪೆರತುಂಟೆ ವಿದ್ಯೆಯಿಂ॥
ಸಿರಿ ಪೆರತುಂಟೆ ಸತ್ಯದೆ ತಪಂ ಪೆರತುಂಟೆ ವಿಶುದ್ಧಭಾವದಿಂ |
ಪೆರತಹ ತೀರ್ಥಮುಂಟೆ ಮರಣಂ ಪೆರತುಂಟೆಯಕೀರ್ತಿಯತ್ತಣಿಂ॥೪೫॥

ವೃ॥ ದಿನದೊಳ್ ಕಾಂತಿವಿಹೀನನಾದ ಹರಿಣಾಂಕಂ ಜವ್ವನಂವೋದ ಕಾ |
ಮಿನಿ ಪಂಕೇರುಹಪಂಕ್ತಿಪಿಂಗಿದ ಕೊಳಂ ವಿದ್ಯಾವಿಹೀನಾನನಂ ॥
ಧನಕಾಂಕ್ಷೈಕಪರಂ ನೃಪ ಧನವಿಹೀನಂ ಸಜ್ಜನಂ ರಾಜರಾ |
ಮನೆಯಂ ಪೊದ್ದಿರ್ದ ದುರ್ಜನಂ ಬಗೆಯಲೇಳುಂ ಕಂಟಕಂಗಳ್ ವಲಂ॥೪೬॥

ಕಂ॥ ಅತಿಕೋಪಿಯಾದ ಪೃಥ್ವೀ|
ಪತಿಗಿವನೆಂಮಾತನೆಂಬ ನೇಹಮದಿಲ್ಲಂ॥
ಹುಪತವಹನಂಟಿದೊಡಿವನಾ |
ಹುತಿಯೀವವನೆಂದು ಸುಡದೆ ಪೇಳ್ದೀಕ್ಷಿತನಂ॥೪೭॥

ವೃ॥ ಬಳಿಯಿರೆ ದಿಟ್ಟನೆಂಬರತಿದೂರದೊಳಿರ್ದ್ದೊಡೆ ಮುಗ್ಧನೆಂದಪರ್ |
ಗಳಹುವನೆಂಬರುಕ್ತಿಪಟುವಂ ಸಲೆ ಸೈರಿಸೆ ಭೀರುವೆಂದಪರ್॥
ಖಳನಿವನೆಂದಪರ್ ಸಹಿಸದಿರ್ದೊಡೆ ಸೇವಕರಂ ಮಹೀವರರ್|
ತಿಳಿವೊಡೆ ಯೋಗಿಗಳ್ಗಮರಿದಪ್ಪುದು ಸೇವೆಯದೆಂಬುದುರ್ವಿಯೊಳ್॥೪೮॥

ವೃ॥ ದುರಿತಾತ್ಮರ್ಕ್ಕಳೆನಿಪ್ಪ ಮಾನವರ್ಗಳಂ ರಾಷ್ಟ್ರಾಧಿಕಾರಂಗಳಿಂ |
ಪಿರಿದುತ್ಸಾಹಿಸಿ ಮೇರೆಮೀರಿ ನಡೆಯುತ್ತಂ ತನ್ನ ದುಷ್ಕರ್ಮಮಂ॥
ಸ್ಮರಣಂಗೈಯ್ಯದೆ ಸದ್ಗುಣಕ್ಕೆಪಗೆಯಾಗಿರ್ಪ್ಪಂಗಣಂ ವೈಭವಂ |
ದೊರೆಯಲ್ ದೈವದಿನಾತನಾಳ್ವಿಳೆಯೊಳಾವಂ ಸೌಖ್ಯದಿಂ ಬಾಳ್ದಪಂ॥೪೯॥

ವೃ॥ ಖಳರ ಸಖತ್ವಮೆಂಬುದು ಮೊದಲ್ ಪಿರಿದಾಗಿ ಬಳಿಕ್ಕೆ ಮುಂಬಗಲ್ |
ನೆಳಲಿನ ಮಾಳ್ಕೆಯಿಂದೆ ಕಿರಿದಪ್ಪುದು ಭಾವಿಸೆ ಸಜ್ಜನರ್ಕಳಾ ॥
ಕೆಳೆತನಮಾದಿಯಲ್ಲಿ ಕಿರಿದಾದೊಡಮೇಂ ಕ್ರಮದಿಂ ಮಹತ್ವಮಂ|
ತಳೆವುದು ಪಿಂಬಗಲ್ನೆಳಲಿನಂತೆವೊಲಾವಗಮೀ ಧರಿತ್ರಿಯೊಳ್ ॥೫೦॥

ಕಂ॥ ತೃಣವಂ ಮೆಲ್ವೇಣಕೆ ನೀ |
ರುಣಿಯಾಗಿಹ ಮೀಂಗೆ ಬಾಧೆಗೆಯ್ಯದೆ ಪರರಂ ॥
ತಣಿವ ಸುಜನರ್ಗ್ಗೆ ನಿಷ್ಕಾ
ರಣ ವೈರಿಗಳಲೆ ಕಿರಾತಧೀವರಪಿಶುನರ್॥೫೧॥

ಸಜ್ಜನ ಪದ್ಧತಿ

ವೃ॥ ಗುರುವೊಳ್ನಮ್ರತೆ ವಿದ್ಯೆಯಲ್ಲಿ ಕುತುಕಂ ಸತ್ಸಂಗದೊಳ್ವಾಂಛೆ ಶಂ|
ಕರನೊಳ್ಭಕ್ತಿ ಜನಾಪವಾದದೆ ಭಯಂ ಸ್ವಸ್ತ್ರೀಯೊಳಾಸಕ್ತಿ ಮೇ॥
ಣರಿಯೊಳ್ಸಾಹಸಮೊಲ್ಮೆ ಯನ್ಯಗುಣದೊಳ್ದುಸ್ಸಂಗದೊಳ್ವರ್ಜನಂ|
ತರಿಸಂದಿರ್ಪ್ಪವಿವಾರೊಳಾ ಸುಜನರಂ ಸಂಪ್ರೀತಿಯಿಂ ವಂದಿಪೆಂ॥೫೨॥

ಕಂ॥ ಸಿರಿಯೊಳ್ಸೈರಣೆ ಕಷ್ಟದೊ|
ಳುರುಧೈರ್ಯಂ ಜಸದೊಳಾಸೆ ಶಾಸ್ತ್ರದೊಳೊಲವುಂ ॥
ಧುರದೊಳ್ ಶೌರ್ಯಂ ಸಭೆಯೊಳ್ |
ಪಿರಿದಹ ವಾಕ್ಪಟುತೆ ಸಜ್ಜನರ್ಗಿವು ನೈಜಂ॥೫೩॥

ವೃ॥ ಗುರುಪದವಂದನಂ ಶಿರಕೆ ಹಸ್ತಕೆ ದಾನಗುಣಂ ಮುಖಕ್ಕೆ ಸು|
ಸ್ಥಿರಮಹ ಸತ್ಯವಾಣಿ ಹೃದಯಕ್ಕೆ ವಿಶುದ್ಧತೆ ಬಾಹುಗಳ್ಗೆ ಬಂ॥
ಧುರತರಶೌರ್ಯಮಾಗಮವಚಶ್ರ್ಶವಣಂ ಕಿವಿಗಳ್ಗೆ ನಿರ್ಮಲಾ|
ಭರಣಮೆನಿಪ್ಪುದುತ್ತಮರೆನಿಪ್ಪವರ್ಗೈಸಿರಿಯಿಲ್ಲದಿರ್ದೋಡಂ॥೫೪॥

ವೃ॥ ಪರಧನಕಾಶೆಗೆಯ್ಯದಿನಿಸುಂ ಪರಹಿಂಸೆಯ ಮಾಡದನ್ಯ ಸುಂ |
ದರಿಯರ ಸುದ್ಧಿಯಾಡದೆದುರ್ಶೆಯ ತಾಳದೆ ತನ್ನೊಳಿರ್ದುದಂ ॥
ಎರೆದವರ್ಗಿಲ್ಲಮೆನ್ನದನೃತೋಕ್ತಿಯನಾಡದೆ ಪೂಜ್ಯರಂ |
ನಿರಾಕರೀಸದೆ ಸರ್ವಭೂತದೆ ದಯಾಪರನಪ್ಪುದೆ ಸಾಧುವರ್ತನಂ॥೫೫॥

ಕಂ॥ ಸಿರಿಯೊಳ್ಸತ್ಪುರುಷರ ಮನ |
ವರಲ್ದುತ್ಪಲಕುಸುಮದಂತೆ ಕೋಮಲವೆನಿಕುಂ॥
ಪಿರಿದಾದ ಕಷ್ಟದೊಳ್ಘನ|
ಗಿರಿಯ ಶಿಲಾಕೂಟದಂತೆ ಕರ್ಕಶವೆನಿಕುಂ॥೫೬॥

ವೃ॥ ಹರಣಮೆ ಪೋದೊಡಂ ದುರಿತಕೃತ್ಯವ ಗೈಯದೆ ನೀತಿ ನಿಷ್ಠೆಗೋ|
ಸರಿಸದೆ ಬೇಡಲ್ಪಧನರೆಂದೆನಿಪಾಪ್ತರುಮಂ ದುರಾತ್ಮರಂ ॥
ಎರೆಯದೆ ಕಷ್ಟದಲ್ಲಿ ಧೃತಿಗುಂದದೆ ಸತ್ಪುರುಷಾನುಕೂಲಮಾ|
ಗಿರುವ ಸುದುಷ್ಕರವ್ರತವನಾರ್ಸ್ಸುಜನರ್ಗ್ಗುಪದೇಶವಿತ್ತರೋ॥೫೭॥

ವೃ॥ ಸದನಕ್ಕೈತಂದರಂ ಸಂತಸವಡಿಪ ಪೆರರ್ಕ್ಕಾಣದಂತೀವ ತಾಂ ಮಾ|
ಡಿದ ಸತ್ಕಾರಂಗಳಂ ಪೇಳದ ಪರರುಪಕಾರಂಗಳಂ ಸರ್ವರೊಳ್ಸಂ॥
ಮುದದಿಂದಂ ಪೇಳ್ವ ಸಂಪತ್ತಿನೊಳತಿನಯವಾಂತಿರ್ಪ್ಪಾ ಮೇಣನ್ಯರಂ ದೂ|
ರದುದಂಚತ್ಖಡ್ಗಧಾರಾವ್ರತವನಿದನದಾರ್ಸ್ಸಜ್ಜನರ್ಗೊಲ್ದು ಪೇಳ್ದರ್॥೫೯॥

ವೃ॥ ಜಲಧಿತಟಸ್ಥಶುಕ್ತಿಯೊಳುರುಳ್ದು ಜಲಂ ಪೋಸಮುತಾತೆನಿಪ್ಪುದಾ|
ಜಲಮೆ ಸರೋಜಪತ್ರದೊಡಳುರುಳ್ದೊಡೆ ಮೌಕ್ತಿಕದಂತೆ ತೋರ್ಕ್ಕುಮಾ॥
ಸಲಿಲಮೆ ಕಾದಕರ್ಬುನದ ಮೇಲುರುಳಲ್ ಪೆಸರುಂ ಮಸಳ್ಗುಮೀ |
ಯಿಳೆಯೊಳಗಿಂತುಟಾಗಿಸುವದುತ್ತಮಮಧ್ಯಮನೀಚರಾಶ್ರಯಂ॥೫೯॥

ಕಂ॥ ಪಿತನ ನಿಜಗುಣದೆ ತೋಷೀಪ |
ಸುತನೆ ಸುತಂ ಪತಿಗೆ ಹಿತವ ಬಯಸುವ ಸತಿಯೇ ॥
ಸತಿ ಸುಖದುಃಖದೊಳೆ ಸಮ |
ಸ್ಥಿತಿ ಸಖನೇ ಸಖನಿವರ್ ಸುಕೃತದಿಂದೊರೆವರ್॥೬೦॥

ವೃ॥ ಮಣಿದಪರಾರ್ಜೀಸಲ್ಕಿಳೆಯೊಳುನ್ನತಿಯಂ ನಲವಿಂದಮನ್ಯರಾ|
ಗುಣವ ಪೊಗಳ್ವರಾತ್ಮ ಗುಣಮಂ ಪ್ರಕಟೀಕರಿಸಲ್ಪರಾರ್ಥಮಂ॥
ಪ್ರಣಯದೆ ಮಾಡುವರ್ಗ್ಗಳಿಪುದರ್ಕೆ ನಿಜಾರ್ಥವ ಶಾಂತಿಯಿಂದೆ ದೂ|
ಷಣಪರದುಷ್ಟರಂ  ಮರುಗಿಪರ್ಗಡ ಚಿತ್ರಚರಿತ್ರರುತ್ತಮರ್॥೬೧॥

ಪರೋಪಕಾರ ಪದ್ಧತಿ

ತರುಗಳ್ಬಾಗುಗುಮುರುಫಲ |
ಭರದಿಂದೆ ಮುಗಿಲ್ನವಾಂಬುಭಾರದೆ ಜೋಲ್ಗುಂ॥
ಸಿರಿಯೋಳ್ನಯಯುತರಾರ್ಯರ್ |
ಪರಿಕಿಪೊಡೆ ಪರೋಪಕಾರೀಗಳ್ಗಿದು ಸಾಜಂ॥ ೬೨॥

ಕಂ॥ ಕರಮೆಸೆಗುಂ ದಾನದೆ ಕಿವಿ|
ಮೆರೆಗುಂ ಶ್ರುತದಿಂದೆ ಕಟಕಕುಂಡಲಗಳಿನೇಂ ॥
ಕರುಣಾಳು ಗಳೊಡಲೆಸೆಗುಂ |
ಪರಹಿತದಿಂ ಚಂದನಾನುಲೇಪನದಿಂದೇಂ॥೬೩॥

ಕಂ॥ ಎರೆಯದೊಡಂ ರವಿಶಶಿಗಳ್|
ಸರಸಿಜಕುಮುದಂಗಳಂ ವಿಕಾಸಿಪರಂಭೋ॥
ಧರಮಂ ಸಲಿಲಮನೀವುದು |
ಪರಹಿತಮಂ ತಾವೆ ಮಾಳ್ಪರುತ್ತಮಪುರುಷರ್॥೬೪॥

ವೃ॥ ಸ್ವಾರ್ಥವ ಬಿಟ್ಟು ಲೋಕದೆ ಪರಾರ್ಥವ ಮಾಳ್ಪವರುತ್ತಮರ್ ಕರಂ|
ಸ್ವಾರ್ಥಕೆ ಹಾನಿಗೆಯ್ಯದೆ ಪರಾರ್ಥಕೆ ಯತ್ನಿಪರಲ್ತೆ ಮಧ್ಯಮರ್॥
ಸ್ವಾರ್ಥಕೆ ತಾಂ ಪರಾರ್ಥವ ವಿಘಾತಿಸುವರ್ನರರಾಕ್ಷಸರ್ಗ್ಗಡಾ|
ಸ್ವಾರ್ಥಮುಮಿಲ್ಲದಕ್ಕಟ ಪರಾರ್ಥವ ಕೀಳ್ವರನೇನನೆಂದಪೆಂ॥೬೫॥

ವೃ॥ ದುರಿತದ ಕೃತ್ಯದಿಂ ತೊಲಗಿಸಲ್ ಹಿತಕಾರ್ಯದೆ ಯೌಜಿಸಲ್ ಗುಣೋ |
ತ್ಕರವ ವಿಕಾಸಿಸಲ್ ಮರೆಸತಕ್ಕುದ ತಾಂ ಮರೆಯಿಸಲ್ ವಿಪತ್ತಿನೊಳ್ ॥
ಪೊರೆಯಲುಮೀಯಲುಂ ಸಮಯದೊಳ್ನೆರೆದಿರ್ದಪನಾವನಾ ಮಹಾ|
ಪುರುಷನೆ ಮಿತ್ಲನೆಂದುಸಿರ್ದಪರ್ ನಯ ಶಾಸ್ತ್ರವ ಬಲ್ಲ ಸಜ್ಜನರ್॥೬೬॥

ವೃ॥ ಒಡನೊಂದಿರ್ದ್ದೊಲವಿಂಗೆ ಪಾಲಿನಳಲಂ ನೋಡುತ್ತೆ ನೀರಗ್ನಿಯೊಳ್ |
ಕಿಡೆ ತನ್ನೀರದಳಲ್ಗಣಂ ಕುದಿಯುತಂ ಪಾಲಗಾನಿಯೊಳ್ಬೀಳಲಾಂ॥
ತೊಡೆ ನೀರಂ ಕುಡೆ ಕೂಡೆ ಸೈರಣೆಯ ತಾಂ ತಾಳ್ದತ್ತು ಪಾಲಿಂತು ಸಂ|
ಗಡಿಸಿರ್ಕುಂ ಗಡ ಸಾಧುಮೈತ್ರಿ ಯೆನುತಂ ಪೇಳ್ವರ್ ನಯಜ್ಞರಾ ವಲಂ॥೬೭॥

ವೃ॥ ಒಂದೆಡೆ ಕೇಶವಂ ಪವಡಿಸಿರ್ಪನದೊಂದೆಡೆ ರಾಕ್ಷಸೋತ್ಕರಂ|
ಸಂದಣಿಸಿರ್ಪುದೊಂದೆಡೆ ಶರಣ್ಬುಗೆ ಕಾಯ್ದನಗಾಳಿ ಶೋಭಿಕುಂ॥
ಒಂದೆಡೆ ಬಾಡಬಾಗ್ನಿಯೆಸೆದಿರ್ಪ್ಪದದೊಂದೆಡೆ ಕಲ್ಪವಾರಿಭೃ|
ದ್ಬೃಂದಮದಿರ್ಪುದೆಂದೊಡೆ ಸಮುದ್ರನ ಮೈಮೆಯತರ್ಕ್ಯಮದ್ಭುತಂ॥೬೮॥

ವೃ॥ ಪುಟ್ಟಿದನೋರ್ವನೇ ಕಮಠನುರ್ವಿಯ ಭಾರವನಾಂತ ಕಾರಣಂ |
ಪುಟ್ಟಿದನೋರ್ವನೆ ಧ್ರುವನುಡುವ್ರಜವಂ ನಡೆಯಿಪ್ಪ ಕಾರಣಂ ॥
ಪುಟ್ಟಿದರೇಂ ಪರೋಪಕೃತಿಗೈಯ್ಯದೆ ಸುಂಮನೆ ಪುಟ್ಟಿ ಸತ್ತವರ್ |
ಪುಟ್ಟವೆ ಸಾಯವೇ ಜಗದೊಳತ್ತಿಯ ಪಂಣೂಳೆನಿತ್ತೊ ಜಂತುಗಳ್॥೬೯॥

ವೃ॥ ಬಿಡು ಮದನಂ ವಿವರ್ಜಿಸು ದುರಾಶೆಯ ಶಾಂತಿಯ ಪೊರ್ದ್ದು ಸತ್ಯವಂ|
ನುಡಿ ದುರಿತಕ್ಕೆ ಹೇಸು ನಡೆ ಸತ್ಪಥದೊಳ್ ಸಲೆ ಸೇವಿಸಾರ್ಯರಂ ॥
ಪಿಡಿ ನಯವಂ ಸುಕೀರ್ತಿವಡೆ ಮನ್ನಿಸು ಮಾನ್ಯರ ದುಃಖಿಯಲ್ಲಿ ನೀ|
ನಿಡು ದಯವಂ ನಯಂಗೋಳಿಸು ವೈರಿಯುಮಂ ದಲಿದಾರ್ಯವರ್ತನಂ॥೭೦॥

ಕಂ॥ಪರಗುಣ ಪರಮಾಣುವುಮಂ |
ಗಿರಿಗೈದುರ್ಬುವ ಮಹೋಪಕಾರದೆ ಜಗಮಂ ॥
ಹರಿಸಂಬಡಿಪ ಕೃಪಾಮಯ|
ಕರಣತ್ರಯರೆನೀಪ ಸುಜನರಿಳೆಯೊಳ್ಕೆಲಬರು॥೭೧॥

ಧೈರ್ಯ ಪದ್ಧತಿ

ಕಂ॥ ನಡುಗದೆ ವಿಷದಿಂ ಸಂತಸ |
ವಡೆಯದೆ ಜಲನಿಧಿಯ ಫಣಿಯಿನಮರ್ದುದಿಪನ್ನಂ॥
ಕಡೆದುದಾ ವಿಬುಧಾಳಿ ಫಲಂ|
ಬಡೆವನ್ನಂ ತೊರೆಯರಾತ್ಮ ಕೃತ್ಯವ ಧೀರರ್॥

ಕಂ॥ ಎಡರಡಸುವುದೆಂದಂಜುತೆ |
ತೊಡಗರ್ ಕಾರ್ಯವನೆ ನೀಚರೆಡರಡಸಲೊಡಂ॥
ಬಿಡುವರ್ಮ್ಮಧ್ಯಮರೆಡರೆನಿ|
ತಡಸಿದೊಡಂ ತ್ಯಜಿಸರಾಂತಕೃತ್ಯವ ಧೀರರ್॥೭೩॥

ವೃ॥ ಬುವಿಯೊಳ್ನಿದ್ರಿಪರೊರ್ಮೆಯೊರ್ಮೆ ಮಣಿಪರ್ಯಂಕಾಗ್ರದೊಳ್ನಿದ್ರಿಪರ್|
ಸವಿವರ್ ಶಾಕವನೊರ್ಮ್ಮಯೊರ್ಮ್ಮೆಸವಿವರ್ ಶಾಲ್ಯಂನವಂ ಜೀರ್ಣವ॥
ಸ್ತ್ರವನಾಚ್ಛಾದಿಪರೊರ್ಮ್ಮಯೊರ್ಮ್ಮೆಧರಿಪರ್ದ್ದೀವ್ಯದ್ದುಕೂಲಂಗಳಂ|
ತವೆ ದುಃಖಂ ಸುಖಮೆಂಬುದಂ ಗಣಪರೇಂ ಕಾರ್ಯಾರ್ಥಿಗಳ್ ಚಿತ್ತದೊಳ್॥ ೭೪॥

ಕಂ॥ ನಿಂದಿಕೆ ಮೇಣ್ನಯವಿದರಭಿ
ನಂದಿಕೆ ಸಿರಿಯೊರ್ಮ್ಮೆ ಬರ್ಕ್ಕೆ ಪೋಕೆ ಯಥೇಷ್ಟಂ॥
ಇಂದೇ ಮೃತಿಯೈದುಗೆ ಮೇಣ್ |
ಮುಂದೈದುಗೆ ನೀತಿಪಥವ ನುಳಿಯಂ ಧೀರಂ॥೭೫|

ಕಂ॥ ಕಡಿವಡೆಯದೆ ಕಾಮಿನಿಯರ |
ಕಡೆಗಂಣಂಬಿಂದೆ ತೀವ್ರಕೋಪಾನಲನಿಂ ॥
ಸುಡದೆ ಬಹುವಿಷಯಲೋಭ |
ಕ್ಕೆಡೆಯಾಗದೆ ಬಾಳ್ವನಲೆ ಜಗತ್ರಯವಿಜಯಂ॥೭೬॥

ಕಂ॥ ಕೇಡುಕರ್ಕ್ಕೆಡುಕುಗಳಂ ಗೈ
ದೊಡವೆನಿತುಂ ತೊರೆಯನಾತ್ಮಧೈರ್ಯವ ಧೀರಂ॥
ಬಿಡುವನೆ ಯಧೋಮುಖಂಗೈ
ದೊಡಮೂರ್ಧ್ವಜ್ವಲನಮಂ ಹುತಾಶನನೆಂದುಂ॥ ೭೭॥

ಕಂ॥ ಧರಣಿಧರಶಿಖರದತ್ತಣಿ|
ನುರುಳ್ದಂಗಂ ಚೂರ್ಣಮಕ್ಕೆ ಬೀಳ್ಗೆಮ ಶಿಖಿಯೊಳ್॥
ಉರಗಾಸ್ಯದೆ ಕೆಡೆಗೆ ಕರಂ |
ವರಮೆಂಬರ್ ತೊರೆಯರಾತ್ಮಶೀಲವ ಧೀರರ್॥೭೮॥

ಕಂ॥ ಪರಿಕಿಸೆ ಸುಶೀಲವುಳ್ಳಗೆ |
ಹರಿ ಹಲಿಣಂ ಶರಧಿ ಕುಲ್ಯಮನಲಂ ಸಲಿಲಂ॥
ಸುರಗಿರಿ ಮೊರಡಿ ವಿಷಂ ಸುಧೆ |
ಯುರಗಂ ತಾಂ ಕುಸುಮಮಾಲೆಯಪ್ಪುದು ಜಗದೊಳ್॥೭೯॥

ವೃ॥ ವಿನಯಂ ವಿದ್ಯೆಗೆ ಪೆರ್ಚಿದೈಸಿರಿಗೆ ಸಾಧುತ್ವಂ ಶಮಂ ಜ್ಞಾನಕಾ|
ರ್ಜನೆಗೈದರ್ಥಕೆ ಪಾತ್ರದಾನಮತಿಶೂರತ್ವಕ್ಕೆ ವಾಕ್ಸಂಯಮಂ॥
ಘನಮಾಗಿರ್ಪ್ಪತಪಕ್ಕೆ ಶಾಂತತೆ ಸಹಿಷ್ಣುತ್ವಂ ಪ್ಲಭುತ್ವಕ್ಕದೇ|
ನೆನೆ ನಿರಾವ್ಯಾಜತೆ ಧರ್ಮಕೆಲ್ಲಜನರ್ಗಂ ಶೀಲಂ ಪರಂ ಭೃಷಣಂ॥೮೦॥

ಕಂ॥ ತರು ಕಡಿವಡೆದೊಡಮೊಡನಂ|
ಕುರಿಪುದು ಶಶಿ ಕೃಶತೆಯಾಂತೊಡಂ ವರ್ಧಿಸುವಂ॥
ಧರೆಯೊಳಿದು ಸಾಜಮೆನ್ನುತೆ |
ಪರಿತಾಪಂದಾಳರುತ್ತಮರ್ಕ್ಕಷಾಟದೊಳಂ॥೮೧॥

ದೈವಪದ್ಧತಿ

ವೃ॥ ಗುರುವೇ ಮಂತ್ರಿ ನಿಜಾಯುಧಂ ಪವಿ ಬಲಂ ದೇವರ್ಕ್ಕಳೈರಾವತಂ|
ಕರಿ ಸಗ್ಗಂ ಘನದುರ್ಗಮಾಹರಿಸಹಾಯಂ ಮತಾತಮಿಂತಿರ್ದೊಡಂ॥
ಸುರಪಂ ರಾಕ್ಷಸರಿಂದೆ ಭಂಗವಡೆದಂ ಸಂಗ್ರಾಮದೊಳ್ ಮಿಕಾಕ ಜೀ|
ವರ ಮಾತೇಂ ತೆಗೆ ಪೌರುಷಂ ವಿಫಲಮಕ್ಕುಂ ದೈವಮೇ ರಕ್ಷಕಂ॥೮೨॥

ವೃ॥ ಇರುಳೊಳು ಮೂಷಕಂ ಕೊರೆದು ತಾನೆ ಮಹಾಕ್ಷುಧೆಯಿಂ ಕರಂಡದೊಳ್ |
ಸುರುಗಿದ ಸರ್ಪದಾನನದೆ ಬೀಳ್ದುದದಂ ಸಲೆ ತಿಂದು ತೃಪ್ತಿಯಾಂ॥
ತಿರದೊಡನೈದಿತಾವುರಗನಾ ಬಿಲದಿಂದಮೆ ಮರ್ತ್ಯ ಸಂತಮಿರ್ |
ಪರಿಕಿಸೆ ಹಾನಿವೃದ್ಧಿಯೊಳೆ ದೈವಮೆ ಕಾರಣಮಲ್ತೆ ಧಾತ್ರಿಯೊಳ್॥೮೩॥

ಕಂ॥ ಹತಕಂತುಕದಂತೇಳ್ವಂ |
ಮತಿವಂತಂ ದುಃಖಪತಿತನಾದೊಡಮಿಳೆಯೊಳ್॥
ಮತಿಹೀನಮನುಜನಾಪ |
ತ್ಪತನಂ ಮೃತ್ಪಿಂಡಪತನದಂತೆವೊಲಕ್ಕುಂ॥೮೪॥

ಕಂ॥ ಕಡುವಿಸಿಲ ಬೇಗೆ ಶಿರಮಂ |
ಸುಡೆ ತಾಳದ್ರುಮದ ನೆಳಲ್ಗೆ ಬರೆ ಖಲ್ವಾಟಂ ॥
ಕೆಡೆದದರ ಫಲದೆ ತಚಾಛಿರ|
ಮೊಡೆದುದು ಗಡ ದೈವಹತಕನಾವೆಡೆ ಬಾಳ್ವಂ॥೮೫॥

ಕಂ॥ ಇನಶಶಿಗಳ್ಗುಂ ಗ್ರಹಪೀ|
ಡನಮಂ ಗಜಪಕ್ಷಿಗಳ್ಗೆ ಬಂಧವ ವಿದ್ವ ॥
ಜ್ಜನರ್ಗುಂ ಬಹುದಾರಿದ್ರ್ಯವ |
ನನುಗೊಳಿಸಿದ ವಿಧಿಯೆ ಬಲ್ಲಿದಂ ಮೂಜಗದೊಳ್॥೮೬॥

ಕಂ॥ ಅಮೃತಾಂಗಂ ಮೇಣೋಷಧಿ|
ರಮಣಂ ಶತಭಿಷಗುಪೇತನೀಶಶಿರಸ್ಥಂ॥
ಹಿಮಕರನಾತನುಮಂ ಬಿಡದ|
ಮಮಾ ಕ್ಷಯಮಕಟ ವಿಧಿಯ ಮೀರುವನಾವಂ॥೮೭॥

ಕಂ॥ ಬಿದಿ ಕುಂಬರನಂತೆ ಮನೊ |
ಮೃದವಂ ಮುದ್ದೆಯ ನೊಡರ್ಚ್ಚುತದನಾಪದ್ದಂ ॥
ಡದೆ ಘಟ್ಟಿಸಿ ಚಿಂತಾಚ |
ಕ್ರದೆ ಸುತ್ತಿಪನಿನ್ನದೇನಗೈವನೋ ಕಾಣೆಂ॥ ೮೮॥

ವೃ॥ ಎಲೆ ವಿಧಿ ಸಾಕದೇತಕೆ ಬಳಲ್ವೆ ದುರಾಗ್ರಹದಿಂ ವಿಪತ್ತಿನೊಳ್|
ಕಲಿಗಳ ಧೈರ್ಯನಾಶವನಭೀಕ್ಷಿಪೆನೆಂದು ಜಡಾತ್ಮನಲ್ತೆ ನೀಂ॥
ಚಲಿಸುವುವೇಂ ಕುಲಾವನಿಧರಂಗಳಿವಾ ಪ್ರಳಯಾಂತದಲ್ಲಿಯುಂ|
ಜಲಧಿಗಳುಂ ಕರಂ ಬಲಿದ ತಮ್ಮಯ ಮೇರೆಯ ಮೀರಲಾರ್ಪಾಪುವೇ॥೮೯॥

ಕಂ॥ ಧರೆಗೆ ತೊಡವೆನಿಪ ಸುಗುಣಾ |
ಕರಪುರುಷೋತ್ತಮನ ಪುಟ್ಟಿಪಂ ವಿಧಿಯೊಡನಾ ॥
ನರನಂ ಕ್ಷಣಭಂಗುರನಂ |
ವಿರಚಿದಪನಹಹ ವಿಧಿಗುಮೇಂ ಗಾಂಪತನಂ॥೯೦॥

ಕಂ॥ ಜನಪರನಾಶ್ರಯಿಸಿದೋಡಂ |
ತನಗೆನಿತಂ ಧಾತೃನೇಮಿಸಿಹನನಿತಕ್ಕುಂ॥
ಅನಿಶಂ ವರ್ಷಿಸೆ ಮೇಘಂ|
ಪನಿಯೊಂದೆರಡಲ್ತೆ ಚಾತಕಾಸ್ಯದೆ ಬೀಳ್ಗುಂ॥೯೧॥

ಕರ್ಮಪದ್ಧತಿ

ವೃ॥ ವಿಧಿವಶರಾದ ನಿರ್ಜರರ ವಂದಿಸಲೇಂ ವಿಧಿವಂದ್ಯನೆಂಬೊಡಾ |
ವಿಧಿಯುಮಣಂವಿಚಾರಿಪೊಡೆ ಕರ್ಮಕ್ಕೆ ತಕ್ಕ ಫಲಪಭೋಗಮಂ ॥
ವಿಧಿಸುವನಾ ಫಲಂ ಜಗದೆ ಕರ್ಮದದೀನಮೆನಿಪ್ಪುದಂ ತರಿಂ |
ದಧಿಕಬಲಾಢ್ಯಮೆಂದೆನಿಪ ಕರ್ಮಮೆ ತಾನಭಿವಂದ್ಯಮುರ್ವಿಯೊಳ್॥೯೨॥

ವೃ॥ ಕುಳಿತಂ ಕುಂಬರನಂತಜಂ ಭುವನಭಾಂಢಂಗೈವುತಂತೇತರಿಂ |
ಬಳಲ್ದಂ ವಿಷ್ಣು ದಶಾವತಾರ ಘನಕಾಂತಾರಾಂತದಲ್ಲೇತರಿಂ ॥
ತಳೆದಂ ಭಿಕ್ಷುಕಲೀಲೆಯಂ ಧೃತಕಪಾಲಂ ರುದ್ರನಂತೇತರಿಂ |
ತೊಳಲ್ವಂ ಬಾನೊಳಗರ್ಕನೇತರಿನಣಂ ತತ್ಕರ್ಮಮಂ ವಂದಿಪೆಂ॥೯೩॥
  
ವೃ॥ ಖಳರ್ಗಳನಾರ್ಯರೆಂದೆನಿಪ ಮೂರ್ಖರ ಜಾಣರ ಮಾಳ್ಪ ನಾಡೆ ಕಂ|
ಗೊಳಿಸದ ವಸ್ತುವಂ ಕ್ಷಣದೆ ಕಾಣಿಪ ವೈರಿಯುಮಂ ಕ್ಷಣಾರ್ಧದೊಳ್ ॥
ಕೆಳೆಯನಮಾಳ್ಪ ಮೇಣ್ ವಿಷಮುಮಂ ಸುಧೆಗೈವ ಸುಕರ್ಮಮಂ ಮುದಂ|
ದಳೆದಭಿವಂದಿಸಿಚ್ಛೆವಡೆ ನೀಂ ಬಿಡು ಕಷ್ಟ ಗುಣಂಗಳಾಸ್ಥೆಯಂ ॥೯೪॥

ವೃ ॥ ಸಿತಸೌಧಂ ಸವಿಲಾಸಕಾಮಿನಿಯರುಂ ಶ್ವೇತಾತಪತ್ರೋಜ್ವಲಾ |
ಯತಭಾಗ್ಯಂ ದೃಢಗಾತ್ರತಾದಿಗಳುಮೆಲ್ಲಂ ಸಂಭವಿಕ್ಕುಂ ಪುರಾ॥
ಕೃತ ಸತ್ಕರ್ಮದೆ ಕಾಣ ತೀರಲದು ತಾಂ ಕೇಳೀತ್ರುಟತ್ತಂತುಸಂ |
ಗತಮುಕ್ತಾಗಣದಂತೆ ಜಾರುಗುಮವೆಲ್ಲಂ ನಾಡೆ ನೋಡಲ್ವಲಂ॥೯೫॥

ಕಂ॥ ಪರಿಣಾಮವನವಧರಿಸುತೆ |
ವಿರಚಿಪುದುಚಿತಂ ವಿವೇಕಿ ಕಾರ್ಯಂಗಳ ತಾಂ॥
ತ್ವರೆಯಿಂ ಗೈದೊಡೆ ಫಲಿಸುವ |
ವರೆಗಂ ದಹಿಸುವುದು ಮನವ ಕಾರ್ಯವಿಪಾಕಂ॥೯೬॥

ವೃ॥ ಜನಿಸಿದೊಡೇನು ಕರ್ಮಧರೆಯೊಳ್ಸಲೆ ಸತ್ಕ್ರಿಯೆಗೆಯ್ಯದಾವನಾ|
ಮನುಜನೊಡರ್ಚುವಂ ಕಡಿದು ಬಾಳೆಯ ಹಾರಕಗೈಗೆ ಬೇಲಿಯಂ॥
ಕನಕದ ನೇಗಿಲಿಂದಿಳೆಯನುಳ್ತಪನೆಕ್ಕದ ತೂಲಕಾಗಿ ಚಂ|
ದನತರುಕಾಷ್ಠದಿಂ ಪಚಿಸುವಂ ತಿಲಪಿಷ್ಟವ ರತ್ನ ಪಾತ್ರೆಯೊಳ್॥೯೭॥

ಕಂ॥ ಫಲಿಸವು ವಿದ್ಯಾಕೃತಿಗಳ್ |
ಕುಲಶೀಲನೃಪಾಶ್ರಯಂಗಳುಂ ಮುಂ ತಪದಿಂ ॥
ಗಳಿಯಿಸಿಕೊಂಡಿಹ ಭಾಗ್ಯಮೆ|
ಫಲಿಸುವುದು ಕಾಲದೆ ನರಂಗೆ ವೃಕ್ಷಂಗಳವೋಲ್॥೯೮॥

ಕಂ॥ಕಡಲಂ ಮುಳುಗುಗೆ ಮೇರುವಿ|
ನೆಡೆಗೈದುಗೆ ಕಲಿಗೆ ನಿಖಿಲ ಕಲೆಗಳ ನೃಪರಂ॥
ಎಡೆವಿಡದಾಶ್ರೈಸುಗೆ ಮೇಣ್|
ಪಡೆದನಿತಲ್ಲದೆ ನರಂಗೆ ಮಿಗಿಲೈತಹುದೇಂ॥೯೯॥

ಕಂ॥ ಜಲದೊಳ್ ಶಿಖಿಯೊಳ್ ವನದೊಳ್ |
ಜಲನಿಧಿಯೊಳ್ಪರ್ವತಾಗ್ರದೊಳ್ಕೊಳುಗುಳದೊಳ್ ॥
ಬಲುಮರವೆ ನಿದ್ದೆಗಳೊಳಂ |
ಸಲಹುವುದು ಮನುಷ್ಯನಂ ಪುರಾಕೃತಪುಣ್ಯಂ॥೧೦೦॥

ಕಂ॥ ಬನಮುಂ ಪಟ್ಟಣಮಪ್ಪುದು|
ಜನರೆಲ್ಲರ್ ಸ್ವಜನರಿಪ್ಪರೀನೆಲನೆಲ್ಲಂ॥
ಧನಕನಕವಸ್ತ್ತುಪೂರಿತ|
ಮೆನಿಪುದಣಂ ಪೂರ್ವಪುಣ್ಯವುಳ್ಳಂಗನಿಶಂ॥೧೦೧॥

ವಿಜ್ಞಾಪನೆಗಳು
ಕರ್ತೃ: ಶ್ರೀಮನ್ಮಹಾರಾಜರವರ ಆಸ್ಥಾನ ಕವಿಗಳಾಗಿದ್ದ
ಬಸವಪ್ಪಶಾಸ್ತ್ರಿಗಳಿಂದ
ರಚಿಸಲ್ಪಟ್ಟಿದ್ದು.
ಪ್ರಕಾಶಕರು : ಶ್ರೀ ಸೀತಾರಾಘವ ಪ್ರೆಸ್,
ಮೈಸೂರು, ೧೯೪೯.
ಗ್ರಂಥಕರ್ತರ ಪೌತ್ರ : ಎಂ. ಮಹದೇವಶಾಸ್ತ್ರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ