ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಡಿಸೆಂಬರ್ 23, 2018

ಹರಿಹರ ಕವಿಯ ಬಸವರಾಜ ದೇವರ ರಗಳೆ

ಹರಿಹರ ಕವಿಯ ಬಸವರಾಜ ದೇವರ ರಗಳೆ

ಇದರ ಕರ್ತೃ ಹರಿಹರ. ಈತನ ಕಾರ್ಯಕ್ಷೇತ್ರ ಹಂಪೆ.
ಹನ್ನೆರಡನೆಯ ಶತಮಾನದ ವೀರಶೈವ ವಚನಕಾರರ ಧೋರಣೆಯನ್ನು ನೋಡಿದರೆ ಅವರು ಒಂದು ಹೊಸ ಸಮಾಜವನ್ನು ನೆಲೆಗೊಳಿಸುವ ಕಾರ್ಯದಲ್ಲಿ ಉದ್ಯುಕ್ತರಾಗಿದ್ದರೆಂದು ಬೋಧೆಯಾಗುತ್ತದೆ. ವರ್ಣಾಶ್ರಮಧರ್ಮದ ಕಟ್ಟೈಪಾಡುಗಳನ್ನು ನಿರ್ಮೂಲ ಮಾಡುವಂತೆ ಕಂಡುಬಂದುದರಿಂದ, ಸಂಪ್ರದಾಯ ಸಮಾಜವು ಕೆರಳಿದ ಉರಗನಂತೆ ಪ್ರತೆಭಟಿಸಿ ನಿಂತಿತ್ತು.  ವಚನಕಾರರು ಇತ್ತಕಡೆ ಆಗತಾನೆ ಕಣ್ಣು ಬಿಡುತ್ತಿದ್ದ, ಅವ್ಯವಸ್ಥೆಯಲ್ಲಿದ್ದ ತಮ್ಮ ಹೊಸ ಸಮಾಜವನ್ನು ಶಿವಾಚಾರದ ಅಸ್ತಿವಾರದ ಮೇಲೆ ಸ್ಥಾಪಿಸಬೇಕಾಗಿತ್ತು. ಈ ಉತ್ಕಟ ಪರಿಸ್ಥಿತಿಯಲ್ಲಿ ಆ ವಚನಕಾರರಿಗೆ ಒಬ್ಬ ಧೀರನಾದ ಮುಂದಾಳು ಬೇಕಾಗಿತ್ತು. ಅವರ ಸುದೈವದಿಂದ ಅವರಿಗೆ ಒಬ್ಬ ಮುಂದಾಳು ದೊರೆತನು. ಆತನೇ ಭಕ್ತಿಭಂಡಾರಿ ಬಸವಣ್ಣ.

ಆತನು ಮೊದಲು ಬ್ರಾಹ್ಮಣನಾಗಿದ್ದು ಆಮೇಲೆ ಬ್ರಾಹ್ಮಣ್ಯವನ್ನು ತೊರೆದು ವೀರಶೈವ ಮತವನ್ನವಲಂಬಿಸಿ, ತನ್ನ ಜೀವನವನ್ನೆಲ್ಲ ಆ ಮತದ ಉದ್ಧಾರಕ್ಕಾಗಿ ಧಾರೆಯೆರೆದನು. ಬಿಜ್ಜಳರಾಯನ ಹತ್ತಿರ ಉನ್ನತ ಪದವಿಯಲ್ಲಿದ್ದು ತನ್ನ ತನು ಮನ ಧನಗಳನ್ನೆಲ್ಲ ಜಂಗಮಾರಾಧನೆಗಾಗಿಯೂ ಮತಪ್ರಚಾರಕ್ಕಾಗಿಯೂ, ಸವೆಸಿ ವೀರಶೈವಮತೋದ್ಧಾರಕರಲ್ಲಿ ಅಗ್ರಗಣ್ಯನಾದನು.

ಹರಿಹರನ “ಬಸವರಾಜದೇವರರಗಳೆ”ಯೂ, ಪಾಲ್ಕುರಿಕೆ ಸೋಮನಾಥನ ತೆಲುಗು “ ಬಸವ ಪುರಾಣವೂ” ಹೆಚ್ಚು ಆದರಣೀಯವಾಗುತ್ತವೆ. ಏಕೆಂದರೆ ಈಗ ತಿಳಿದಿರುವ ಮಟ್ಟಿಗೆ ಬಸವಣ್ಣನ ಚರಿತ್ರೆಯನ್ನು ಕುರಿತ ವೀರಶೈವ ಪುರಾಣಗಳಲ್ಲಿ ಇವೇ ಅತ್ಯಂತ ಪ್ರಾಚೀನವಾದುವು.ಹಂಪೆಯವನಾದ  ಹರಿಹರನು ಗೋದಾವರಿ ಜಿಲ್ಲೆಯ ಪಾಲ್ಕುರಿಕೆಯ ಸೋಮನಾಥನಿಗಿಂತಲೂ ಹತ್ತಿರದವನು. ಆದಕಾರಣ ಹರಿಹರನ ಕೃತಿಯೇ ಹೆಚ್ಚು ವಿಶ್ವಾಸಾರ್ಹವಾಗಬೇಕಾದುದು ನ್ಯಾಯವಾಗಿದೆ. ಹೀಗಿದ್ದರೂ ತೆಲುಗುಪುರಾಣಕ್ಕೆ ದೊರೆತ ಪುರಸ್ಕಾರ ಹರಿಹರನ ರಗಳೆಗೆ ದೊರೆಯಲಿಲ್ಲ. ಭೀಮಕವಿ ಸೋಮನಾಥನ ಗ್ರಂಥವನ್ನನುಸರಿಸಿ ೧೪ ನೆಯ ಶತಮಾನದಲ್ಲಿ ಬಸವಪುರಾಣವನ್ನು ಕನ್ನಡದಲ್ಲಿ ರಚಿಸಿದನು. ಆಮೇಲೆ ಆ ಗ್ರಂಥವೇ ಜನಪ್ರಿಯವಾಗಿ ಪರಿಣಮಿಸಿ ಅದಕ್ಕಿಂತ ಹಳೆಯದಾದ ಬಸವರಾಜ ದೇವರ ರಗಳೆಯನ್ನು ಕೇಳುವವರಿಲ್ಲದಂತಾಯಿತು. ವೀರಶೈವ ಕವಿಗಳಲ್ಲಿ ಆದಿಕವಿಯೆಂದೂ, ಅಗ್ರಗಣ್ಯನೆಂದೂ ಗೌರವ ಪಡೆದಿದ್ದರೂ ಆ ಪುರಾಣದ ಮುಂದೆ ಈ ರಗಳೆ ನಿಲ್ಲಲಾರದೆ ಹೋಯಿತು.

ಹನ್ನೊಂದನೆಯ ಸ್ಥಲ.

ಬಸವನ ಭಕ್ತಿಯಂ ಬಸವರಾಜನ ದಾನವಿನೋದವೃತ್ತಿಯಂ
ಬಸವನ ನಿಷ್ಠೆಯಂ ಬಸವಿದೇವನ ಸನ್ನುತಪುಣ್ಯಕೀರ್ತಿಯಂ
ಬಸವನ ಪೆರ್ಮೆಯಂ ನಲಿದು ಕೇಳುತೆ ಕಿನ್ನರಬೊಮ್ಮತಂದೆಗಳ್
ಬಸವನಿರೀಕ್ಷಣಾರ್ಥದೊಲವಿಂ ಬರುತಿರ್ದರನೂನಸಾತ್ವಿಕರ್॥೧॥

ಇಂತು ಬಸವಣ್ಣನಂ ನೋಡುವುದ್ಯೋಗದಿಂ
ಸಂತಸದಿ ಬರುತಿರ್ದರಂತಲ್ಲಿ ಬೇಗದಿಂ ।
ಎಸೆವ ಕಿನ್ನರಬೊಮ್ಮತಂದೆಗಳು ಬರುತಮಿರೆ
ಅಸಮನಯನನ ಗಣಾವಳಿ ನೋಡಿ ನಲಿವುತಿರೆ ।
ಮುಂತೆ ವೃಷಭಧ್ವಜಂ ಗಗನದೊಳು ಕುಣಿವುತಿರೆ
ಪಿಂತೆ ಮಾಹೇಶ್ವರರ ಕೇಳಿಕೆಗಳೊಳೊಪ್ಪುತಿರೆ ।
ನಡೆತಂದು ಪುರವೀಥಿಯಂ ಪುಗುತಿರಲಿತ್ತ
ಕಡುನೇಹಿ ಬಸವಂಗೆ ಬಲದ ಕಣ್ ಕೆತ್ತುತ್ತ ।
ವಿಮ್ಮಡಿಸಿ ಪುಳಕಂಗಳೊಮ್ಮೊಮ್ಮೆಗೆ ನೆಗೆಯೆ
ನೂರ್ಮಡಿಸಿ ಮೈವೆಚ್ಚುತಾನಂದವಂದೊಗೆಯೆ ।           ॥೧೦॥
ಪರಮ ಹರುಷಂದೋಱುತಿರೆ ಸಂತಸಂಬಡುತೆ
ಹರನ ಭಕ್ತರ್ ಬರ್ಪರಿಂದೆನ್ನ ಮನೆಗೆನುತೆ।
ಶಶಿಯ ಬರವಂ ಚಕೋರಂ ಹಯಸಿ ನಿಂದಂತೆ
ಎಸೆವ ಕಾರಂ ಬಯಸಿನಿಂದ ಚಾದಗೆಯಂತೆ ।
ಮುಂದೆ ಮಿಗೆ ಮೆಱೆವ ನಂದಿಯ ಪತಾಕೆಯ ನಡುವೆ
ಸಂದಣಿಪ ಗಣನಾಯಕರ ಸಂಭ್ರಮದ ನಡುವೆ ।
ಕಿನ್ನರಯ್ಯಂ ಬರುತ್ತಿರೆ ದೂರದಿಂ ಕಂಡು
ತನ್ನ ಮನದೊಳಗೆ ಗುಡಿಗಟ್ಟಿ ಹರುಷಂಗೊಂಡು।
ಬಸವನಿದಿರ್ಗೊಂಡು ಭಯಭಕ್ತಿಯಿಂ ಮೈಯಿಕ್ಕಿ
ಒಸೆದು ಕಿನ್ನರತಂದೆಗಿದಿರಾಗಿ ಮೈಯಿಕ್ಕಿ  । ॥೨೦॥
ಇರ್ಬರೊಂದಾಗಿ ನಲಿನಲಿದು ತಕ್ಕೈಸುತಂ
ಸರ್ಬನ ಗಣಂಗಳೊಳು ಪರಮಸುಖವೊಂದುತಂ ।
ಬಂದು ಬಸವಣ್ಣನರಮನೆಯನೊಲವಿಂ ಪೊಕ್ಕು
ತಂದುನ್ನತಾಸನದೊಳಿರಿಸುತೆ ಮನಂ ಮಿಕ್ಕು ।
ಪಾದಂಗಳಂ ತೊಳೆದು ತೀರ್ಥಜಲಮಂ ತಳೆದು
ಆದರಂ ಮಿಗೆ ಕಿಂಕರಾಕಾರದೊಳು ನೆರೆದು ।
ಪನ್ನೆರಡು ಸಾವಿರೊಡೆಯರ ನಡುವೆಯಾಡುತಂ
ಕಿನ್ನರಯ್ಯಂಗೆ ಲಿಂಗಾರ್ಚನೆಗೆ ನೀಡುತಂ ।
ಸಂಗಂಗೆ ಸಂಗಡದೊಳಾರೈಸಲಿಕ್ಕು
ಹಿಂಗದೆ ಶಿವಪ್ರಸಾದಂಗಳಿಂ ಪೆಚ್ಚುತಂ ।          ॥೩೦॥
ಕಿನ್ನರಯ್ಯಂಗೆ ಆದರದಿಂದೆ ಉಡಲಿತ್ತು
ಮನ್ನಿಸುತ್ತವರ ಪದಮಂ ನೆತ್ತಿಯೊಳು ಹೊತ್ತು ।
ಕಿನ್ನರಯ್ಯನ ಹರುಷವೇ ಹರುಷವಾಗುತಂ
ಕಿನ್ನರಯ್ಯನನೇಹವೇ ನೇಹವಾಗುತಂ ।
  ನಲಿನಲಿದು ಕೆಲದೆವಸವೀ ತೆಱದೊಳೊಪ್ಪುತಿರೆ
ಒಲವು ದಳವೇಱೆ ಇರ್ಬರ ನಡುವೆ ಬೆಳೆವುತಿರೆ ।
ಒಂದು ದೆವಸಂ ಕಿನ್ನರಯ್ಯಂಗೊಲುಮೆಯಿಂ
ಇಂದುಧರನಾರೋಗಣೆಗೆ ಚಿತ್ತದರ್ಶಿಯಿಂ ।
ತನ್ನ ಸೊಗಸೇ ಶಿವಂಗತಿಸೊಗಸು ತಾನೆಂದು
ಚಿನ್ನವಪ್ಪುಳ್ಳಿಗಳ ಮೇಲೋಗರಕ್ಕೆಂದು ।           ॥೪೦॥
ತರಿಸಿ ಸುಖಮುಖದಿಂದ ಸೋದಿಸುತಿರ್ಪಲ್ಲಿ
ಶರಣರೊಡಗೂಡಿ ಮಿಗೆ ಬಣ್ಣಿಸುತಿರ್ಪಲ್ಲಿ ।
ಹೆಂಪಿಂದೆ ಶರಣರ ನಡುವೆ ವುಳ್ಳಿ ಮೆರೆವುತಿರೆ
ಕಂಪು ಬಸವನ ನಾಸಿಕಕ್ಕೆ ತೀಡುತ್ತಮಿರೆ।
ತಂದರಾರೀಯಭೋಜ್ಯವನೆನುತ್ತುಳ್ಳಿಯಂ
ನಿಂದಿಸುತೆ ಪೋದನರಮನೆಗೆ ಅಭವಪ್ರಿಯಂ।
ಆ ನುಡಿಯನಾಲಿಸುತೆ ಕಿನ್ನರಯ್ಯಂಗಳಿರೆ
ಏನೆಂದ ಬಸವಣ್ಣನೆನುತೆ ಕಾಯ್ಪಿಡಿದಡರೆ।
ಕಂಗಳರೆ ಕೆಂಪಾಗೆ ಮೀಸೆಗಳು ಕೆತ್ತುತ್ತೆ
ಹಿಂಗದಿರ್ಪುದು ತನ್ನ ಮಂತಿದಿರದೊಳಗೆ ಮತ್ತೆ।           ॥೫೦॥
ಹರಹರ ಇದೇನೆಂದು ಕಣ್ಣ ನೀರಿಕ್ಕುತಂ
ಪಿರಿದು ನಿರೋಧದಿಂ ಶರಣನತಿ ನೋವುತಂ ।
ಬರಲಾಗದಿಲ್ಲಿಗಾಂ ಬಂದಲ್ಲಿ ಸೈರಿಪುದು
ಶರಣರಂ ದೂರದಿಂ ಕೇಳುತಾದರಿಸುವುದು ।
ಅಮೃತಮಂ ಬಿಸುಟುಮಲ್ಲಯ್ಯನಾರೋಗಿಸುವ
ಅಮೃತಮಯಶಾಕಮನಿದಂ ನೋಡಿ ನಿಂದಿಸುವ ।
ನುಡಿಗೇಳ್ದು ನಿಲಲಾಗದೆಂದು ಘುಡುಘುಡಿಸುತಂ
ಕಡುಕೋಪದಿಂದೆ ಪೊಱಮಟ್ಟು ದಡದಡಿಸುತಂ ।
ಗಾವುದಳವಿಯ ಬಟ್ಟೆಯೊಂದೂರ್ಗೆ ನಡೆತಂದು
ದೇವಾರ್ಚನೆಯ ನಿತ್ಯನೇಮಕ್ಕೆ ಮನದಂದು ।           ॥೬೦॥
ಅತ್ತಲಾ ಕಿನ್ನರಯ್ಯಂ ಹೋಗಿಯಿರಲಿತ್ತ
ನಿತ್ಯನಿಯಮಕ್ಕೆದು ಶರಣರಂ ಕೂಡುತ್ತಿರಲಿ।
   ಅಂದು ಬಸವಂ ಬಂದು ಶರಣಪಾದೋದಕದಿ
ಮಿಂದು ಮಡಿವರ್ಗಮಂ ಪೊದೆದು ಮಿಗೆ ಸಂತಸದಿ।
ಕಿನ್ನರಯ್ಯನನಱಸಿ ಕಾಣದೆ ಭಯಂಗೊಂಡು
ಎನ್ನೊಡೆಯನಲ್ಲಿರ್ದನೆಂದು ನೇಹಂಗೊಂಡು ।
ಬೆಸಗೊಳಲು ಶರಣರೆಂದರು ಬಸವರಾಜಂಗೆ
ಶಶಿಧರನ ಸದ್ಭಕ್ತಿಯಾಚಾರಧೀರಂಗೆ।
ಎಲೆ ಬಸವ ಕಿನ್ನರಯ್ಯಂ ತಮ್ಮ ದೇವಂಗೆ
ಸಲೆ ಸೊಗಸಿನುಳ್ಳಿಯಂ ತರೆ ಮಲ್ಲಿನಾಥಂಗೆ ।           ॥೭೦॥
ಕಂಡದಂ ನಿಂದಿಸಿದರೆಂದು ಘನಕೋಪದಿಂ
ಕೆಂಡವಂ ಮೆಟ್ಟಿದಂತಾಗಿ ಸಂತಾಪದಿಂ ।
ಮುಳಿದು ಪೋದರ್ ಕಿನ್ನರಯ್ಯಗಳಂತದಕೆ
ಕಳಿದು ಹೋಗದ ಮುನ್ನ ಹೋಗಿ ಬೇಳ್ಪುದು ಇದಕೆ ।
ಗುಣವಂತನಭಿಮಾನಿ ಮುಳಿದು ಹೋದಂ ದೇವ
ತ್ರಿಣಯನವತಾರ ಶರಣಂ ಪೋದನೆಲೆ ದೇವ।
ಎಂಬುದಂ ಕೇಳ್ದಂಜಿ ಬಸವಣ್ಣ ಮರವಟ್ಟು
ಹಂಬಲಿಸಿ ಹಲುಬಿ ಘನತಾಪ ಮನಮಂ ನಟ್ಟು ।
ನೊಂದು ಮನಗುಂದಿ ತನು ಕಂದಿ ಮಿಗೆ ಮಿಗೆ ಕೋಡಿ
ಬಂದ ಸುಕೃತಂ ತಿರಿಗಿ ಹೋಯ್ತೆಂದು ನೆಱೆ ಬಾಡಿ ।           ॥೮೦॥
ಇನ್ನೆಂತು ಮಾಡುವಂ ಕಿನ್ನರಯ್ಯಂ ಮುಳಿದ
ನಿನ್ನೆಂತುಟಪ್ಪುದೋ ಭಕ್ತರೇ ಬಲ್ಲರಿದ ।
ನೆಂದು ಗಣವೃಂದಕ್ಕೆ ಭಯದಿಂ ಮೈಯಿಕ್ಕಿ
ಅಂದು ಬಸವಣ್ಣನುಬ್ಬುಡುಗುತಂ ಮೈಯಿಕ್ಕಿ ।
ಅಱಿದೆನಱಿದೆಂ ನೋಡು ನುಡಿಕೆಟ್ಟ ನಾಲಗೆಗೆ
ಮಱೆದೆನುಂಟು ಅಪರಾಧವೀ ನಾಲಗೆಗೆ।
ಬಂದುದೀ ವುಳ್ಳಿಯಂ ನಿಂದಿಸಿದ ದಂಡಕ
ಇಂದು ನಾನಪರಾಧಿಯೈ ಶರಣವೃದಕ್ಕೆ।
ದೇವ ಒಂದಂ ಬೆಸಸಿರೇ ಇದಕ್ಕೆನುತಮಿರೆ
ದೇವಶರಣರ್ ನೈಡಿದರಾ ಬಸವ ನಲಿವುತಿರೆ ।           ॥೯೦॥
ಬಸವ ಕೇಳಿಂದಾದ ಸಮೆದ ಬೋನವನಿಂತೆ
ಎಸೆವ ಶರಣನ ಕೊಂಡು ಬಂದು ನಾವಿನ್ನಂತೆ ।
ಉಳ್ಳಿಯಿಂ ಕಿನ್ನರಯ್ಯಂಗಾದ ಮುಳಿಸುವಂ
ಉಳ್ಳಿಯಿಂದವೆ ತೀರ್ಚಿ ಕಳೆವುದು ನಿರೋಧವಂ।
ಎನೆ ಬಸವರಾಜಂ ಹಸಾದವೆನುತಂ ನಿಂದು
ಘನಮಹಿಮನಾಕ್ಷಣಂ ತರಿಸುತಿರ್ದಂ ನಲಿದು ।
ಒಸೆದು ತರುತಿರ್ದರಾ ಲೇಸಪ್ಪ ಉಳ್ಳಿಯಂ
ಮಸಗಿ ತರುತಿರ್ದರಾ ಶಿವಭಕ್ತರೊಲ್ಮೆಯಿಂ ।
ತೀವಿ ಬಂಡಿಯೊಳು ನಾಲ್ದೆಸೆಗಳಿಂ ಬರುತಮಿರೆ
ಏವೇಳ್ವೆನಾ ಭಕ್ತರುತ್ಸಹವನೊಪ್ಪುತಿರೆ।           ॥೧೦೦॥
ಕಹಳೆ ಮದ್ದಳೆ ಶಂಖನಾದ ವುಳ್ಳಿಯ ಮುಂದೆ
ಬಹುವಿಧದ ವಾದ್ಯಸಂತಾನ ವುಳ್ಳಿಯ ಮುಂದೆ ।
ಹಾಡುವರ್ ಪರಸುವರ್ ಕುಣಿವರುಳ್ಳಿಯ ಮುಂದೆ
ಆಡುವರ್ ನೋಡುವರ್ ನಲಿವರುಳ್ಳಿಯ ಮುಂದೆ ।
ಬಿತ್ತರಿಪ ವೃಷಭದ್ವಜಂಗಳುಳ್ಳಿಯ ಮುಂದೆ
ಒತ್ತರಿಪ ಶರಣರ ಸಮೂಹ ವುಳ್ಳಿಯ ಮುಂದೆ ।
ಇಂತು ಬರಲುಳ್ಳಿಯಂ ಬಸವಣ್ಣನಿದಿರ್ಗೊಂಡು
ಸಂತಸದೊಳಂದು ವಿಸ್ತರಿಸಿದಂ ಕೈಕೊಂಡು ।
ಆನೆಗೆ ಗುಳಂ ಕುದುರೆವಕ್ಕರಿಕೆಯುಳ್ಳಿಯಿಂ
ನಾನಾಭರಣವೆಸೆವಲಂಕರಣ ವುಳ್ಳಿಯಿಂ।           ॥೧೧೦॥
ತೊಡುವುಡುವ ಪೊದೆವ ಸುತ್ತುವವೆಲ್ಲವುಳ್ಳಿಯಿಂ
ಪಿಡಿದಿಡುವ ಮುಡಿವ ಮಾಡುವವೆಲ್ಲ ವುಳ್ಳಿಯಿಂ ।
ಇಂತು ಪಟ್ಟಣವೆಲ್ಲ ವುಳ್ಳಿಗಳ ಮಯವಾಗೆ
ಸಂತಸಂ ಮಾಡಿ ಬಸವಣ್ಣನುನ್ನತವಾಗೆ।
ಅವರಿದಿರ್ ಗಾವುದರೆದಾರಿಯೊಳಗಂದುಕ್ಕಿ
ತವಕದಿಂದೊಪ್ಪುವುಳ್ಳಿಯ ಚಪ್ಪರವನಿಕ್ಕಿ ।
ಲಕ್ಕಲಕ್ಕಕ್ಕೆ ನೆರೆದಭವಭಕ್ತರ ನಡುವೆ
ಉಕ್ಕಂದದುರವಣೆಯ ವೀರಶರಣರ ನಡುವೆ।
ನೆರೆದು ನೆಗಹಿದ ಕೋಟಿ ವೃಷಧ್ವಜದ ನಡುವೆ
ಬರುತಿರ್ದನಾ ಬಸವನೆಸೆವ ಸಿಂಧದ ನಡುವೆ ।           ॥೧೨೦॥
ಉಳ್ಳಿಗಳ ಜಂಪಂ ಶಿರೋಮಾಲೆಗಳನಿಕ್ಕಿ
ಉಳ್ಳಿಗಳ ಬಾಹುಬಳೆ ಕಂಠಮಾಲೆಯನಿಕ್ಕಿ ।
ಉಳ್ಳಿಗಳ ಮುಡಿದು ಉಳ್ಳಿಗಳ ಕೈಯೊಳ್ ಪಿಡಿದು
ಒಳ್ಳಿತೆನಿಸುವ ಮನದ ಬಸವರಾಜಂ ನಡೆದು ।
ಬರುತಮಿರೆ ಬೆಳ್ಗೊಡೆಗಳಲ್ಲಿ ದಿವಿ ಮುಸುಕಿದುವು
ನೆರೆದು ಬಹುವಿಧವಾದ್ಯವಡಸಿ ನೆಱೆ ಮೊಳಗಿದುವು।
ಧಿಮಿಧಿಮಿಕು ದುಮುಕು ತತ್ತೊಂಗೆಂಬ ಮದ್ದಳೆಯ
ಚಮಕ ತಕನಕ ತನಕವೆಂಬ ಕಹಳೆಯ ದನಿಯ ।
ನಟಟಿಹಕು ಫಣಫಣಚ್ಛಿಳಿಲೆಂಬ ಆವುಜೆಯ
ನಟವಿಕಟ ಕಟಕ ಬಿಱೆಂಬ ಕರಡೆಯ ದನಿಯ ।           ॥೧೩೦॥
ನಡುವೆ ಕೇಳಿಸುವ ಕೇಳಿಕೆಯವರ ಸಂಗಡದ
ಗಡಣ ವಿಡಿದೊಪ್ಪದಿಂ ಬರುತಿರ್ದ ಜಂಗಮದ ।
ಕೋಳಾಹಳದ ಸರೂವಸಂಭ್ರಮಂ ನೆಗಳುತಿರೆ
ಮೇಳೈಪ ಪೌರಜನವರ್ತಿಯಿಂ ಬರುತಮಿರೆ।
ಎಡಬಲದ ವೀರತತಿ ನೆಲನನುಗ್ಘಡಿಸುತಿರೆ
ಬಿಡದೆ ಪರಸಮಯಿಗಳು ನಡನಡುಗಿ ಸರಿವುತಿರೆ ।
ಭಕ್ತಜನ ಚರಣಸರಸಿರುಹಷಟ್ಪದನೆಂಬ
ಭಕ್ತಜನ ಕುಮುದವನಕಮನೀಯಶಶಿಯೆಂಬ।          ॥೧೪೦॥
ಜಂಗಮದ ವೇಳೆ ಜಂಗಮದ ಕಿಂಕರನೆಂಬ
ಜಂಗಮಪ್ರಾಣ ಜಂಗಮದ ಸಂಪದನೆಂಬ ।
ಬಿರುದೆತ್ತಿ ಕಹಳೆಗಳು ದೆಸೆದೆಸೆಗೆ ಕರೆವುತಿರೆ
ಧರೆ ನಡುಗೆ ನಿಸ್ಸಾಳನಾದ ವುಣ್ಮುತಿರೆ ।
ನಡೆದು ಬಂದುದು ರಜತಗಿರಿಯ ಹಾದಿಯ ತೆಱದಿ
ನಡೆತಂದು ದಿಂದುಮೌಳಿಯ ನಿಬ್ಬಣದ ತೆಱದಿ।
   ಇಂತು ಬರುತಿರೆ ಕಂಡು ಕಿನ್ನರಯ್ಯಂ ನಿಂದು
ಚಿಂತಿಸಿದನೆಲ್ಲಿಯದಿದೇನು ಕೌತುಕವೆಂದು।
ತನ್ನ ಮುನಿಸಂ ತಿಳುಪಪಲೆಂದು ಬಸವಂ ಬಪ್ಪ
ಉನ್ನತಿಯಿದೆಂದಱಿದು ತನ್ನ ಮನದೊಳಗಿಪ್ಪ ।           ॥೧೫೦
ಮುನಿಸು ನೇಹದೊಳಿದಿರುಗೊಂಡುದಾ ಭಕ್ತಂಗೆ
ನೆನಹು ಬಸವನ ಮೇಲೆ ಬಿದ್ದುದಾ ಭಕ್ತಂಗೆ ।
ಚಿತ್ತ ಬಸವನತ್ತ ತಿರುಗಿತ್ತು ಭಕ್ತನಂ
ಒತ್ತರಿಸಿ ಪುಳಕಂಗಳೆತ್ತಿದುವು ಶರಣನಂ ।
ಇದಿರೆದ್ದು ಬರಿಸಿದವು ಕರಣಂಗಳಾತನಂ
ಸದಮಳ ಶಿವಧ್ಯಾನ ಪರಿಪೂರ್ಣ ಹೃದಯನಂ ।
ಇಂತು ಸಾತ್ವ್ವಿಕರಸದರಸನಾಗಿ ಬರುತಿರ್ಪ
ಕಂತುಮದಹರ ಸುಖದವತಾರನೆನಿಸಿರ್ಪ।
ಕಿನ್ನರಯ್ಯನನಕ್ಕಱಿಂದೆ ನೋಡುತೆ ಬಂದು
ಎನ್ನ ಸಂಗಮನೀತನೀತನೆನುತೈತಂದು ।
ಇಳಿಪಿದಂ ಸರ್ವಾಂಗಮಂ ಕಿನ್ನರನ ಪದಕೆ
ಗಳಗಳನೆ ಸುರಿದನಾನಂದಜಳವಂ ತಳಕೆ।           ॥೧೬೦॥
ಎತ್ತಿದಂ ಕಿನ್ನರಯ್ಯಂ ಬಸವರಾಜನಂ
ಉತ್ತಮೋತ್ತಮಭಕ್ತಿಯಾಚಾರತೇಜನಂ ।
ತೆಗೆದು ತಕ್ಕೈಸುತಂ ತಣಿಯದೋರೋರ್ವರೊಳು
ಬಿಗಿಬಿಗಿದು ಪುಗಲೆಳಸುತಿರ್ದರೋರೊರ್ವರೊಳು।
ಆಲಿಕಲ್ಲಾಲಿಕಲ್ಲಂ ತಾಗಿದಂತಾಗೆ
ಹಾಲೊಳಗೆ ಹಾಲಂ ಕರಂ ಬೆರಸಿದಂತಾಗೆ ।
ಬೆಳಗು ಥಳಥಳಿಪ ಬೇಳಗಂ ಕೂಡಿದಂತಾಗೆ
ತಿಳಿದಮೃತವಮೃತವಂ ಬಿಡದಪ್ಪಿದಂತಾಗೆ ।
ಅಪ್ಪಿಕೊಂಡಿರ್ದರಿನಿತುಂ ಬೇಗವಿರ್ಬರುಂ
ಒಪ್ಪಂಬಡೆದರಭವನಾಜೆಯೊಳಗಿರ್ಬರುಂ।            ॥೧೭೦॥
ಆಗಳುಣ್ಮಿದುವುದುಂದುಭಿ ಶಂಖ ಕಹಳೆಗಳು
ಚಾಂಗು ಬೊಲ್ಲೆನುತ ನೆಗೆದವು ಭಕ್ತಹರಕೆಗಳು।
ಭೋರೆಂದು ಕೊಂಡಾಡಿದರ್ ಬಸವರಾಜನಂ
ಹಾರೈಸಿ ಕೊಂಡಾಡಿದರ್ ಕಿನ್ನರಯ್ಯನಂ ।
ಒಡಗೊಂಡು ಬಸವರಾಜನ ಮಹಮನೆಗೆ ಬರುತೆ
ಗುಡಿಗಟ್ಟಿದುಳ್ಳಿಗಳ ಗುಡಿಯಂ ನಿರೀಕ್ಷಿಸುತೆ ।
ಹಾಡುವ ಗಣಂಗಳಂ ಹರುಷದಿಂ ನೋಡುತಂ
ಆಡುವ ಗಣಂಗಳಂ ಗುರ್ಬಿನಿಂ ನೋಡುತಂ।
   ಬಂದು ಬಸವಣ್ಣನರಮನೆಯ ನಲವಿಂ ಪೊಕ್ಕು
ಸಂದಣಿಪ ಕೋಟಿಗಣ ಸಂಚಯಕೆ ಕೈಮಿಕ್ಕು ।           ॥೧೮೦॥
ಇರೆ ಸವೆದವಲ್ಲಿ ಉಳ್ಳಿಗಳ ಮೇಲೋಗರಂ
ಸರಸವೆನಿಸುವುಳ್ಳಿಗಳ ಪಕ್ವಾನ್ನದಾಗರಂ ।
ಮಲ್ಲಿಗೆಯ ಬಣ್ಣವಂ ಚಂದ್ರಿಕೆಯ ಸವಿಗಳಂ
ಅಲ್ಲಿಯಂಕುರಿಪ ತಾರಾಗಣದ ರುಚಿಗಳಂ।
ಕವರ್ದುಕೊಂಡಂತೆ ನೆಱೆ ಥಳಥಳಿಸುವುಳ್ಳಿಯಂ
ಶಿವಭಕ್ತ ಕಿನ್ನರಯ್ಯನ ಸವಿಯ ಉಳ್ಳಿಯಂ ।
ಸಕಳ ಪಕ್ವಾನ್ನದೋಗರತತಿಗಳಂ ಸವೆಯೆ
ಸಕಳ ಶರಣರ ಶಿವಾರ್ಚನೆ ಸೌಖ್ಯಮಂ ಪಡೆಯೆ।
ಆರೈಸಲಿಕ್ಕುತಂ ಸಕಳಶಿವಲಿಂಖಕ್ಕೆ
ಹಾರೈಸಿಪೊಡಮಡುತೆ ಪರಮಪ್ರಕಾಶಕ್ಕೆ।            ॥೧೯೦॥
ಕೈಕೊಂಡರಲ್ಲಲ್ಲಿ ಸತ್ಯಪ್ರಸಾದಮಂ
ಮೈ ಕೊನರೆ ತಾಳಿದರ್ ಸುಕೃತಪ್ರಸಾದಮಂ ।
ಉಳ್ಳಿಯಂ ಕಚ್ಚಿ ಪರಿದಾಡುತಿಪ್ಪರ್ ಕೆಲರು
ಉಳ್ಳಿಯಂ ಕಿನ್ನರನುಮಂ ಪರಸುವರ್ ಪಲರು।
ಇಂತು ನಲವಿಂ ಪ್ರಸಾದಂಗಳಂ ಕೈ ಕೊಂಡು
ಸಂತತಂ ಪರಸಿದರು ಬಸವನಂ ನೆಲೆಗೊಂಡು ।
ಅಮಮ ಶರಣರ ಬಂಧು ಶರಣರೊಲುಮೆಯ ಬಸವ
ಅಮಮ ಶರಣೈಕಚಿಂತಾಮಣಿಯೆ ಎಲೆ ಬಸವ ।
ಅರರೆ ಶರಣರ ಮುಖದ ರತ್ನದರ್ಪಣ ಬಸವ
ಅರರೆ ಶರಣರ ಮನೆಯ ಪರುಷಪುರುಷನೆ ಬಸವ।          ॥೨೦೦॥
ಬಸವಯ್ಯ ಬಸವಣ್ಣ ದಂಡನಾಥನೆ ಬಸವ
ಬಸವ ಗಣವಿಸರದೊಳಗೆಸೆದ ಸಂಗನ ಬಸವ।
   ಎಂದು ಸ್ತುತಿಸುವ ಶರಣರ ಸ್ತುತಿಗೆ ನಡನಡುಗಿ
ಒಂದುವಂ ಹೊಗಳದಿರಿ ಎಂದು ಚರಣದೊಳೆಱಗಿ ।
ನುಡಿದನಾ ಬಸವಣ್ಣನರರೆ ಶರಣರ ಮುಂತೆ
ಬಿಡದೆ ಮಾಡುವೆನಿಂದು ಮಾಡಿದ ತೆಱದೊಳಿಂತೆ ।
ಅತಿಶಯದೊಳೊಪ್ಪುವುಳ್ಳಿಯ ಪರ್ಬವಂ ಕರಂ
ಪ್ರತಿವತ್ಸರಂ ಮಾಡುತಿರ್ಪೆನಿಂತಿದು ಭರಂ ।
ನೇಮವೆನಗೆಂದು ನೆಱೆ ಬಸವರಾಜಂ ನುಡಿದು
ಸೋಮಧರನೆನಿಪ ಕಿನ್ನರನ ಕರುಣಂಬಡೆದು ।            ॥೨೧೦॥
ಕಿನ್ನರನ ಮುನಿಸನಾ ಪರ್ಬದಿಂದಂ ತಿಳಿಪಿ
ಮನ್ನಿಸುತಲವರ ಪದದೊಳು ಚಿತ್ತಮಂ ನಿಲುಪಿ ।
ಭಕ್ತಜನವನಧಿವರ್ಧನಸುಧಾಕರನೆನಿಪ
ಭಕ್ತ ಜನವನಜವಿಕಸಿತತರಣಿಯೆಂದೆನಿಪ ।
ಪರಸಮಯತಿಮಿರಕಮನೀಯಭಾಸ್ಕರನೆನಿಪ
ಪರಸಮಯಸುಮನಕೋದಂಡಪುರಹರನೆನಿಪ।
ಮಝರೆ ಶರಣರ ನಡುವೆ ಬಸವಣ್ಣನೊಪ್ಪಿದಂ
ಮಝ ಬಾಪು ಬಾಪು ಸಂಗನ ಬಸವನೊಪ್ಪಿದಂ।            ॥೨೧೮॥

ತುಂಬುಹೃದಯದ ಕೃತಜ್ಞತೆಗಳು
ಸಂಪಾದಕರು:- ಟಿ. ಎಸ್. ವೆಂಕಣ್ಣಯ್ಯ,  ಎಂ. ಎ.
ಪ್ರಕಾಶಕರು: ತ. ವೆಂ. ಸ್ಮಾರಕ ಗ್ರಂಥಮಾಲೆ
ಕೃಷ್ಣಮೂರ್ತಿ ಪುರಂ, ಮೈಸೂರು -೪











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ