ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಡಿಸೆಂಬರ್ 8, 2018

ಭಾವಾರ್ಥದೊಂದಿಗೆ ರತ್ನಾಕರ ಶತಕ

ರತ್ನಾಕರ ಶತಕ

ಈ ಶತಕದ ಕರ್ತೃ ರತ್ನಾಕರ. ಈತನ ಜನನ ಕ್ರಿ. ಶ. ಸುಮಾರು ೧೫೩೨.  ಕನ್ನಡ ಸರಸ್ವತಿಯ ಆಸ್ಥಾನದ ಮೊದಲಪಂಕ್ತಿಯಲ್ಲಿ ರಾರಾಜಿಸುವ ಕವಿ ಶ್ರೇಷ್ಠರಲ್ಲಿ ರತ್ನಾಕರ ಮಹಾಕವಿಯೂ ಒಬ್ಬ. ಈತನ ಕೃತಿಗಳು ಭರತೇಶ ವೈಭವ,
ರತ್ನಾಕರ ಶತಕ, ತ್ರಿಲೋಕಶತಕ, ಅಪರಾಜಿತೇಶ್ವರ ಶತಕ, ಆದ್ಯಾತ್ಮಗೀತದ ರಚನೆ.

ಕವಿಯು ತನ್ನ ಕಾವ್ಯಗಳಲ್ಲಿ ಸ್ವವಿಷಯವನ್ನು ಹೇಳಿಕೊಂಡಿಲ್ಲ. ರತ್ನಾಕರವರೂಣಿ, ರತ್ನಾಕರ ಅಣ್ಣ, ರತ್ನಾಕರಸಿದ್ಧ ಎಂದು ಕರೆದುಕೊಂಡಿದ್ದಾನೆ. ಈತ ಕ್ಷತ್ರಿಯ ವಂಶಕ್ಕೆ ಸೇರಿದವನು. ಈತನ ದೀಕ್ಷಾಗುರು ಚಾರುಕೀರ್ತ್ಯಾಚಾರ್ಯ. ಮೋಕ್ಷಗುರು ಹಂಸನಾಥ. ಮೋಕ್ಷಗುರುವಿನ ಆಣತಿಯಂತೆ ಭರತೇಶವೈಭವವನ್ನು ಬರೆದ.

ರತ್ನಾಕರನ ಮೂರು ಶತಕಗಳು ಜೈನಾಗಮಗಳ ಸಾರಸರೂವಸ್ವವಾಗಿದೆ. ಪೂರ್ವಾಚಾರ್ಯರ ಪ್ರಾಕೃತ, ಸಂಸ್ಕೃತ ಶಾಸ್ತ್ರಗ್ರಂಥಗಳನ್ನು ರತ್ನಾಕರ ಆಳವಾಗಿ ಅಭ್ಯಾಸಮಾಡಿ ಅವುಗಳಲ್ಲಿನ ಸಾರಸರ್ವಸ್ವವನ್ನು ರಗಿಸಿಕೊಂಡುಎಲ್ಲರಿಗೂ ಅರ್ಥವಾಗುವಂತೆ ಶತಕತ್ರಯಗಳಲ್ಲಿ ಪ್ರಸ್ತುತಪಡಿಸಿದ್ದಾನೆ. ಪ್ರತಿ ಶತಕವೂ ೧೨೮ ಪದ್ಯಗಳನ್ನು ಹೊಂದಿದೆ. ತ್ರಿಲೋಕಶತಕವು ಜೈನ ಸಿದ್ಧಾಂತದಲ್ಲಿ ಹೇಳಿರುವ ತ್ರಿಲೋಕಗಳ ವರ್ಣನೆಯಾಗಿದೆ. ಇದು ಕಂದಪದ್ಯದಲ್ಲಿದ್ದು ಉಳಿದೆರಡು ಶತಕಗಳು ವೃತ್ತರೂಪದಲ್ಲಿವೆ.

ಪರಮಪೂಜ್ಯ ಕುಂದಕುಂದಾಚಾರ್ಯರಿಂದ ರಚಿತವಾದ ಮಹಾ ಆದ್ಯಾತ್ಮಗ್ರಂಥ “ಸಮಯಸಾರ” ಗ್ರಂಥದ ಸಾರವನ್ನು ತನ್ನ ಶತಕಗಳಲ್ಲಿ ಭಟ್ಟಿಯಿಳಿಸಿ ಪಂಡಿತರಿಗೂ, ಪಾಮರರಿಗೂ ಅರ್ಥವಾಗುವಂತೆ ಮಾಡಿದ್ದಾನೆ. ರತ್ನಾಕರನ ಶತಕಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಹೊರಹೊಮ್ಮಿರುವ ಹೊಸ ಬೆಳಕು. ಈ ಶತಕಗಳನ್ನು ನಾವು ಎಷ್ಟೆಷ್ಟು ಸ್ವಾಧ್ಯಾಯಮಾಡುವೆವೋ, ಎಷ್ಟೆಷ್ಟು ಮನನ ಮಾಡುವೆವೋ ಅಷ್ಟಷ್ಟು ನಮ್ಮ ಉದ್ಧಾರವಾಗುವುದು.

ಶ್ರೀರಾಗಂ ಸಿರಿಗಂಪುಮಾಲೆ ಮಣಿಹಾರಂ ವಸ್ತ್ರಮಂಗಕ್ಕಳಂ
ಕಾರಂ ಹೇಯಮಿವಾತ್ಮತತ್ತ್ವ ರುಚಿಬೋಧೋದ್ಯಚ್ಚರಿತ್ತಂಗಳೀ
ತ್ರೈರತ್ನಂ ಮನಸಿಂಗೆ ಸಿಂಗರಮುಪಾದೇಯಂಗಳೆಂದಿತ್ತೆ ಶೃಂ
ಗಾರಶ್ರೀಕವಿಹಂಸರಾಜನೊಡೆಯಾ ರತ್ನಾಕರಾಧೀಶ್ವರಾ॥೧॥

ಭಾವಾರ್ಥ:- ಈ ಶರೀರದ ಅಲಂಕಾರಕ್ಕಾಗಿ ನಾವು ಬಳಸುವ ಸುಗಂಧದ್ರವ್ಯ, ಸುವಾಸನೃಭರಿತವೃದ ಹೂಮಾಲೆ, ರತ್ನಾಭರಣಗಳು, ವಿವಿಧತೆರನಾದ ವಸ್ತ್ರಗಳು ಇವೆಲ್ಲ ಕ್ಷಣಿಕವಾದುವು. ಇವೆಲ್ಲ ಬಿಡತಕ್ಕವು. ಈ ಬಾಹ್ಯಗಳಿಗೆ ಮನಸೋಲದೆ ಮೋಕ್ಷಸುಖಕ್ಕೆ ನೆರವಾಗುವ ಸಮ್ಯಕ್ ದರ್ಶನ,  ಸಮ್ಯಕ್ ಜ್ಞಾನ, ಮತ್ತು ಸಮ್ಯಕ್ ಚಾರಿತ್ರಗಳೆಂಬ ಮೂರು ರತ್ನಗಳನ್ನು ಯಾವಾಗಲೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ತತ್ವ, ಪ್ರೀತಿ ಮನಕ್ಕೆ ಪುಟ್ಟಲದು ಸಮ್ಯಗ್ ದರ್ಶನಂ, ಮತ್ತಮಾ
ತತ್ತ್ವಾರ್ಥಂಗಳನೊಲ್ದು ಭೇದಿಪುದು ಸಮ್ಯಗ್ಙ್ಞಾನಮಾ ಬೋಧದಿಂ
ಸತ್ತ್ವಂಗಳ್ಕಿಡದಂತುಟೋವಿ ನಡೆಯಲ್ಸಮ್ಯಕ್ಚರಿತ್ರಂ ಸುರ
ತ್ನತ್ವಂ ಮೂರಿವು ಮುಕ್ತಿಗೆಂದರುಪಿದೈ ರತ್ನಾಕರಾಧೀಶ್ವರಾ ॥೨॥

ದೇವ, ಗುರು, ಶಾಸ್ತ್ರಗಳಲ್ಲಿ ಶ್ರದ್ಧಾಭಕ್ತಿಗಳನ್ನು ತೋರುವುದೇ ಸಮ್ಯಕ್ ದರ್ಶನ, ನಂತರ ಶಾಸ್ತ್ರಗಳನ್ನು ಅವಲೋಕಿಸಿ, ಅಭ್ಯಾಸ ಮಾಡಿ, ಮನನಮಾಡಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದೇ ಸಮ್ಯಕ್ ಜ್ಞಾನ. ಈ ಉತ್ಕೃಷ್ಟವಾದ ದರ್ಶನ, ಜ್ಞಾನಗಳಿಂದ ಸಕಲ ಜೀವರಾಶಿಗಳಲ್ಲೂ ಸಮತಾಭಾವವನ್ನಿಟ್ಟು ಒಳ್ಳೆಯ ಶೀರಸಂಪನ್ನರಾಗಿ ಬಾಳುವುದೇ ಸಮ್ಯಕ್ ಚಾರಿತ್ರ. ಈ ರತ್ನತ್ರಯಗಳೇ ಮುಕ್ತಿಗೆ ಸೋಪಾನಗಳು.

ಮಿಗೆ ಷಡ್ದ್ರವ್ಯಮನಸ್ತಿಕಾಯಮೆನಿಪೈದಂ ತತ್ತ್ವವೇಳಂ ಮನಂ
ಬುಗಲೊಂಬತ್ತು ಪದಾರ್ಥಮಂ ತಿಳಿದೊಡಂ ತನ್ನಾತ್ಮನೀ ಮೆಯ್ಯ ದಂ
ದುಗದಿಂ ಬೇರೊಡಲೇನಚೇತನಮೆ ಜೀವಂ ಚೇತನಂ ಜ್ಞಾನರೂ
ಪಿ ಗಡಾಯೆಂದರಿದಿರ್ದನೇ ಸುಖಿಯಲಾ ರತ್ನಾಕರಾಧೀಶ್ವರಾ ॥೩॥

ಶಾಸ್ತ್ರಾಭ್ಯಾಸಮಾಡಿ ಷಡ್ದ್ರವ್ಯ, ಪಂಚಾಸ್ತಿಕಾಯ, ಸಪ್ತತತ್ವ, ನವಪದಾರ್ಥ,ಇವೇ ಮೊದಲಾದ ಸಿದ್ಧಾಂತಗಳನ್ನು ತಿಳಿದು ಶ್ರುತಜ್ಞಾನವನ್ನು ಹೆಚ್ಚಿಸಿಕೊಂಡಿದ್ದರೂ, ಮನುಷ್ಯ ಸುಖಿಯಾಗಲು ಭೇದವಿಜ್ಞಾನಿಯಾಗಿರಬೇಕು. ಅಂದರೆ ತನ್ನ ಆತ್ಮ ಬೇರೆ
ಶರೀರ ಬೇರೆ, ರೋಗರೈಜಿನ, ಸಾವು ನೋವುಗಳಿಗೆ ಈಡಾಗುವ ಈ ಶರೀರ ಜಡ, ಆದರೆ ಜೀವ ಚೈತನ್ಯಮಯನೂ, ಜ್ಞಾನಸ್ವರೂಪನೂ ಎಂದು ತಿಳಿಯುವುದೇ ಭೇದವಿಜ್ಞಾನ. ಅಂಥ ತಿಳುವಳಿಕೆಯುಳ್ಳವನೇ ಸುಖಿ.

ಅರಿವಿಂದೀಕ್ಷಿಸಲಕ್ಕುಮಾತ್ಮನಿರವಂ ದೇಹಂಬೊಲೀಕಣ್ಗೆ ತಾಂ
ಗುರಿಯಾಗಂ ಶಿಲೆಯೊಳ್ಸುವರ್ಣಮರಲೊಳ್ಸೌರಭ್ಯಮಾ ಕ್ಷೀರದೊಳ್
ನರು ನೆಯ್ಕಾಷ್ಠದೊಳಗ್ನಿಯಿರ್ಪತೆರದಿಂದೀ ಮೆಯ್ಯೊಳೊಂದಿರ್ಪನೆಂ
ದರಿದಭ್ಯಾಸಿಸೆ ಕಾಣ್ಗುಮೆಂದರುಪಿದೈ ! ರತ್ನಾಕರಾಧೀಶ್ವರಾ!॥೪॥

ಈ ದೇಹದಲ್ಲಿ ಆತ್ಮನು ನೆಲಸಿದ್ದಾನೆ. ಆದರೆ ಅವನನ್ನು ಈ ಸಾಧಾರಣ ಚರ್ಮಚಕ್ಷುಗಳಿಂದ ನೋಡಲು ಸಾಧ್ಯವಿಲ್ಲ. ಕಲ್ಲಿನಲ್ಲಿ ಚಿನ್ನವೂ, ಹೂವಿನಲ್ಲಿ ಪರಿಮಳವೂ, ಹಾಲಿನಲ್ಲಿ ರುಚಿಕರವಾದಂಥ ತುಪ್ಪವೊ, ಕಟ್ಟಿಗೆಯಲ್ಲಿ ಬೆಂಕಿಯೂ ಇರುವಹಾಗೆ, ಈ ಜಡಶರೀರದಲ್ಲಿ ಆತ್ಮನು ಇರುವನೆಂದು ಜ್ಞಾನದಿಂದ( ಅಂತಃಚಕ್ಷುಗಳಿಂದ) ಮಾತ್ರ ತಿಳಿಯಬಹುದು. ಅದಕ್ಕೆ ಸತತ ತಪ, ಧ್ಯಾನಾದಿಗಳು ಅಗತ್ಯ.

ಕಲ್ಲೋಳ್ತೋರ್ಪ ಪೊಗರ್ಸುವರ್ಣದ ಗುಣಂ ಕಾಷ್ಠಂಗಳೊಳ್ತೋರ್ಪ ಕೆ
ಚ್ಚೆಲ್ಲಾ ಕಿಚ್ಚಿನ ಚಿಹ್ನವಾ ಕೆನೆಯಿರಲ್ಪಾಲೊಳ್ಘೃತಚ್ಛಾಯೆಯೆಂ
ದೆಲ್ಲರ್ ಬಣ್ಣಿಪರಂತುಟೀ ತನುವಿನೊಳ್ ಚೈತನ್ಯಮುಂ ಬೋಧಮುಂ
ಸೊಲ್ಲುಂ ಜೀವಗುಣಂಗಳೆಂದರುಪಿದೈ ! ರತ್ನಾಕರಾಧೀಶ್ವರಾ! ॥೫॥

ಕಲ್ಲಿನಲ್ಲಿ ಕಾಣುವ ಹೊಳಪು ಚಿನ್ನದ ಗುಣವನ್ನೂ, ಮರಗಳಲ್ಲಿ ಗಟ್ಟಿಯಾದ ಭಾಗಗಳೆಲ್ಲ ಬೆಂಕಿಯ ಚಿಹ್ನೆಯನ್ನೂ, ಹಾಲಿನಲ್ಲಿರು ಕೆನೆ ತುಪ್ಪದ ಇರುವಿಕೆಯನ್ನೂ, ಎಲ್ಲರೂ ಬಣ್ಣಿಸುವಂತೆ ಈ ಶರೀರದಲ್ಲಿರುವ ಚೇತನ ಸ್ವಭಾವವೂ, ಜ್ಞಾನವೂ, ವಚನವೂ ಜೀವದ ಗುಣಗಳು ಎಂದು ತಿಳಿಸಿದೆ! ರತ್ನಾಕರಾಧೀಶ್ವರನೇ!

ಮತ್ತಾ ಕಲ್ಲನೆ ಸೋದಿಸಲ್ಕನಕಮಂ ಕಾಣ್ಬಂತೆ ಪಾಲಂ ಕ್ರಮಂ
ಬೆತ್ತೊಳ್ಪಿಂ ಮಥನಂ ಗೆಯ್ಯಲ್ಘೃತಮುಮಂ ಕಾಣ್ಬಂತೆ ಕಾಷ್ಠಂಗಳಂ
ಒತ್ತಂಬಂ ಪೊಸೆದಗ್ನಿ ಕಾಣ್ಬ ತೆರದಿಂ ಮೆಯ್ಬೇರೆ ಬೇರಾನೆನು
ತ್ತಿತ್ತಭ್ಯಾಸಿಸಲೆನ್ನ ಕಾಣ್ಬುದರಿದೇ ? ರತ್ನಾಕರಾಧೀಶ್ವರಾ! ॥೬॥

ಚಿನ್ನದ ಅದಿರು ಇರುವ ಕಲ್ಲನ್ನು ಶೋಧಿಸಿ ಚಿನ್ನವನ್ನು ಪಡೆಯುವ ಹಾಗೆಯೊ, ಹಾಲನ್ನು ಕ್ರಮವರಿತು ( ಸರಿಯಾಗಿ ಹೆಪ್ಪುಹಾಕಿ ) ಚೆನ್ನಾಗಿ ಕಡೆದರೆ( ಬೆಣ್ಣೆ ಬಂದು ಅದನ್ನು ಹದವಾಗಿ ಕಾಯಿಸಿ) ತುಪ್ಪವನ್ನು ಪಡೆಯುವ ಹಾಗೆಯೂ, ಮರಗಳನ್ನು ಬಲವಾಗಿ ಒಂದಕ್ಕೊಂದು ಉಜ್ಜಿದರೆ ಬೆಂಕಿಯನ್ನು ಕಾಣುವ ರೀತಿಯಲ್ಲಿಯೂ”ಶರೀರ ಬೇರೆ, ಆತ್ಮ ಬೇರೆ” ಎಂಬ ಭೇದವಿಜ್ಞಾನದ ಅಭ್ಯಾಸದಲ್ಲಿ ತೊಡಗಿದರೆ ತನ್ನನ್ನು ಕಾಣುವುದು ಅಸಾಧ್ಯವೇನಲ್ಲ. ಅಂದರೆ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಅಂಗುಷ್ಠಂ ಮೊದಲಾಗಿ ನೆತ್ತಿವರೆಗಂ ಸರ್ವಾಂಗಸಂಪೂರ್ಣನು
ತ್ತುಂಗಜ್ಞಾನಮಯಂ ಸುದರ್ಶನಮಯಂ ಚಾರಿತ್ರತೇಜೋಮಯಂ
ಮಾಂಗಲ್ಯಂ ಮಹಿಮಂ ಸ್ವಯಂಭುಸುಖಿ ನಿರ್ಬಾಧಂ ನಿರಾಪೇಕ್ಷಿ ನಿ
ಮ್ಮಂಗಂಬೊಲ್ಪರಮಾತ್ಮನೆಂದರುಪಿದೈ! ರತ್ನಾಕರಾಧೀಶ್ವರಾ! ॥೭॥

ಪ್ರತಿಯೊಂದು ದೇಹದಲ್ಲಿರುವ ಆತ್ಮನ ಸ್ವರೂಪ ಪರಮಾತ್ಮನ ಸ್ವರೂಪವೇ. ಪರಮಾತ್ಮನ ಸ್ವರೂಪ ಹೇಗಿದೆಯೆಂದರೆ, “ಕಾಲಿನ ಹೆಬ್ಬೆರಳಿನಿಂದ ನೆತ್ತಿಯವರೆಗೂ ಎಲ್ಲಾ ಅವಯವಗಳಲ್ಲೂ ಪರಿಪೂರ್ಣವಾಗಿ ತುಂಬಿದ್ದಾನೆ. ಅನಂತ ಜ್ಞಾನಸ್ವರೂಪನೂ, ಅನಂತ ದರ್ಶನಸ್ವರೂಪನೂ, ಸಮ್ಯಕ್ ಚಾರಿತ್ರವೆಂಬ ತೇಜಸ್ಸಿನಿಂದ ಬೆಳಗುವವನು. ಮಟಗಳಸ್ವರೂಪನು, ಮಹಾಮಹಿಮನು, ತನ್ನ ನಿಜಸ್ವರೊಪವನ್ನು ಹೊಂದಿರುವವನು. ಅನಂತ ಸುಖಸ್ವರೂಪನು. ಯಾವ ಬಾಧೆಯೂ ಇಲ್ಲದವನು. ವೀತರಾಗಿಯೂ ಆಗಿದ್ದಾನೆ.

ಬಿಸಿಲಿಂ ಕಂದದ ಬೆಂಕಿಯಿಂ ಸುಡದ ನೀರಿಂ ನಾಂದದುಗ್ರಾಸಿ ಭೇ
ದಿಸಲುಂ ಬಾರದ ಚಿನ್ಮಯಂ ಮರೆದು ತನ್ನೊಳ್ಪಂ ಪರಧ್ಯಾನದಿಂ
ಪಸಿವಿಂದೀ ಬಹುಬಾಧೆಯಿಂ ರುಜೆಗಳಿಂದ ಕೇಡಾಗುವೀ ಮೆಯ್ಗೆ ಸಂ
ದಿಸಿದಂ ತನ್ನನೆ ಚಿಂತಿಸಲ್ಸುಖಿಯಲಾ ! ರತ್ನಾಕರಾಧೀಶ್ವರಾ! ॥೮॥

ಬಿಸಿಲಿನಿಂದ ಬಾಡದಿರುವವನೂ, ಬೆಂಕಿಯಿಂದ ಸುಡದಿರುವವನೂ, ನೀರಿನಿಂದ ನೆನೆಯದಿರುವವನೂ, ಹರಿತವಾದ ಕತ್ತಿಯಿಂದ ಯಾವ ರೀತಿಯಲ್ಲೂಯಾವ ರೀತಿಯಲ್ಲೂ ಭೇದಿಸುವುದಕ್ಕಾಗದಿರೈವವನೂ, ಅನಂತ ಜ್ಞಾನಮಯದರ್ಶನನೂ, ಆದ ಆತ್ಮನು ತನ್ನ ನಿಜಸ್ವರೂಪವನ್ನು ಮರೆತು, ಕರ್ಮಸಂಯೋಗದಿಂದ ಪರವಸ್ತುಗಳ ಚಿಂತನೆಯನ್ನು ಮಾಡುತ್ತ ಹಸಿವಿನಿಂದಲೂ, ಅನೇಕ ಬಾಧೆಗಳಿಂದಲೂ, ರೋಗಗಳಿಂದಲೂ ನಾಶವನ್ನು ಹೊಂದಿರುವ ಈ ಜಡ ಶರೀರದಲ್ಲಿ ಕೂಡಿಕೊಂಡಿದ್ದಾನೆ. ಈ ಕರ್ಮದ ಬಂಧನದಿಂದ ಪಾರಾಗಲು ತನ್ನನ್ನೇ ಕುರಿತು ಧ್ಯಾನಮಾಡಿದರೆ ಸುಖಿಯಾಗುವುದರಲ್ಲಿ ಸಂದೇಹವೇನು.

ಒಡಲೆಂಬೀಜಡನಂ ಲಯಪ್ರಕರನಂ ನಿಶ್ಚೇಷ್ಟನಂ ದುಶ್ಚನಂ
ಪಡಿಮಾತೇಂ ಪೆಣನಂ ಮಹಾತ್ಮನಹಹಾ ತನೊಂದು ಸಾಮರ್ಥ್ಯದಿಂ
ನಡೆಯಿಪ್ಪಂ ರಥಿಕಂಬೊಲೇಂ ನುಡಿಯಿಪಂ ಮಾರ್ದಂಗಿಕಂಬೊಲ್ಬಿಸು
ಳ್ಪಿಡುವಂ ಜೋಹಟಿಗಂಬೊಲೇಂ ಕುಶಲನೋ ! ರತ್ನಾಕರಾಧೀಶ್ವರಾ! ॥೯॥

ಮಹಾತ್ನಾದ ಆತ್ಮನು ಅಚೇತನವಾದ ಈ ಶರೀರದಲ್ಲಿ ಇದ್ದುಕೊಂಡು ಅದರಿಂದ ನಾನಾ ವಿಧವಾದ ಕಾರ್ಯಗಳನ್ನು ಮಾಡಿಸುತ್ತಾನೆ. ಈ ಶರೀರ ಜಡ. ನಾಶವನ್ನು ಹೊಂದತಕ್ಕದ್ದು. ಕಲುಷಿತವಾದದ್ದು. ವ್ಯಾಪಾರರಹಿತವಾದದ್ದು. ಅಂದರೆ ತನ್ನದೇ ಆದ ಯಾವ ಸಾಮರ್ತ್ಯವೂ ಇಲ್ಲ. ಹೆಚ್ಚು ಮಾತೇಕೆ ! ಈ ಶರೀರ ಹೆಣವೇ ಸರೆ. ಇಂಥ ಶರೀರದಲ್ಲಿ ತಾನು ಸೇರಿ ತನ್ನ ಸಾಮರ್ತ್ಯದಿಂದ ಆತ್ಮನು ರಥದ ಸಾರಥಿಯಂತೆ ಶರೀರವನ್ನು ಸಂಚಾರಮಾಡಿಸುತ್ತಾನೆ. ಮದ್ದಳೆ ಬಾರಿಸುವವನಂತೆ ಶರೀರವನ್ನು ನುಡಿಸುತ್ತಾನೆ. ನಾಟಕದಲ್ಲಿ ಪಾತ್ರಧಾರಿಯು ತನ್ನ ಪಾತ್ರಮುಗಿದಮೇಲೆ ಆ ವೇಶವನ್ನು ಬದಲಾಯಿಸುವಂತೆ ಒಂದು ಶರೀರದಿಂದ ಮತ್ತೊಂದು ಶರೀರಕ್ಕೆ ಹೋಗುತ್ತಾನೆ ಏನು ಸಾಮರ್ಥ್ಯ ಈ ಆತ್ಮನದು.

ಬೀಳ್ದಿರ್ಪಂ ತನುವೆಂಬ ಪಂದೊವಲ ಕೂರ್ಪಾಸಂಗಳಂ ತೊಟ್ಟು ತಾ
ನೇಳ್ದಿರ್ಪಂ ತನುಗೂಡಿ ಸಂಚರಿಪನಾ ಮೆಯ್ಗೂಡಿತನ್ನೊಳ್ಪುಮಂ
ಕೇಳ್ದಿರ್ಪಂ ತನುಗೂಡಿ ತತ್ತನುಗೆ ಜೀವಂ ಪೇಸಿ ಸುಜ್ಞಾನದಿಂ
ಪೊಳ್ದಿರ್ಪಂ ಶಿವನಾಗಿಯೇಂ ಚದುರನೋ! ರತ್ನಾಕರಾಧೀಶ್ವರಾ! ॥೧೦॥

ಈ ಜೀವ ಹಸಿಯ ಚರ್ಮದ ಕವಚದಂತಿರುವ ದೇಹವನ್ನು ಧರಿಸಿಕೊಂಡು ತೊಳಲಾಡುತ್ತಿರುವನು. ಈ ಶರೀರವನ್ನು ಹೊತ್ತುಕೊಂಡು ಏಳುತ್ತ ಬೀಳುತ್ತ ಸುತ್ತುತ್ತಿರುವನು.ಈ ಶರೀರದಲ್ಲಿದ್ದುಕೊಂಡೇ ತನ್ನ ಸ್ವಸ್ವರೂಪವನ್ನು ತಿಳಿದುಕೊಳ್ಳುವನು. ಕೊನೆಗೆ ಈ ತೊಗಲಚೀಲಕ್ಕೆ ಹೇಸಿ ಭೇದವಿಜ್ಞಾನದಿಂದ ( ಸುಜ್ಞಾನದಿಂದ ) ಈ ಜೀವ ಪರಮೇಶ್ವರನಾಗಿ ರಾರಾಜಿಸುವನು. ಎಂಥ ಚದುರ ಈ ಆತ್ಮ. ಜಡಶರೀರದಲ್ಲಿದ್ದುಕೊಂಡೇ ಬೆಳಕನ್ನು ಕಾಣುವ ಆತ್ಮನ ಕುಶಲತೆಯನ್ನು ಎಷ್ಟೆಂದು ಕೊಂಡಾಡೋಣ.

ಬೂರಂ ವಾರಿಯೊಳಳ್ದಿ ಯೂರ್ದ್ವಗಮನಂಗೆಟ್ಟುರ್ವಿಯೊಳ್ಬಿಳ್ದು ದೂ
ಳ್ಭಾರೈಸಲ್ಸುಳಿ ಗಾಳಿಯಿಂದುರುಳ್ವವೋಲ್ಕರ್ಮಂಗಳಿಂ ನಾಂದು ಮೆ
ಯ್ಭಾರಂದಾಳ್ದುರೆ ಕರ್ಮಮೊಯ್ದೆಡೆಗೆ ಸುತ್ತುತ್ತಿರ್ಪೆ ನಂತಲ್ಲದಾ
ನಾರೀ ಸಂಸೃತಿಯಾರೊ ಮೋಕ್ಷಕನೆ ನಾಂ ರತ್ನಾಕರಾಧೀಶ್ವರಾ! ॥೧೧॥
ಬೂರಂ=ಬೂರುಗದ ಮರ
ಬೂರುಗದ ಹತ್ತಿಯು ನೀರಿನಲ್ಲಿ ಬಿದ್ದು ನೆನೆದು ತನ್ನ ಸ್ವಾಭಾವಿಕವಾದ ಮೇಲಕ್ಕೆ ಹಾರುವ ಅವಸ್ಥೆಯನ್ನು ಕೆಡಿಸಿಕೊಂಡು ಭೂಮಿಯಲ್ಲಿ ಬಿದ್ದು ಧೂಳನ್ನು ಹತ್ತಿಸಿಕೊಳ್ಳುತ್ತದೆ ಮತ್ತು ಆಗಾಗ ಬೀಸುವ ಸುಳಿಗಾಳಿಗೆ ಸಿಕ್ಕಿ ತಿರ್ರನೆ ತಿರುಗುತ್ತಿರುತ್ತದೆ. ಅಂತೆಯೆ ನಮ್ಮ ಆತ್ಮನು ಕರ್ಮವೆಂಬ ಧೂಳಿನಿಂದಾದ ಈ ಶರೀರಭಾರವನ್ನು ಹೊಂದಿ ಸಹಜವಾದ ತನ್ನ ಊರ್ಧ್ಮಗಮನವನ್ನು ನೀಗಿಕೊಂಡು ಕರ್ಮವು ಆಟವಾಡಿಸಿದ ಹಾಗೆ ಆಡುತ್ತ, ಈ ಸಂಸಾರ ಚಕ್ರದಲ್ಲಿ ತಿರ್ರನೆ ತಿರುಗುತ್ತಿದೆ.ಎಚ್ಚತ್ತುಕೊಂಡು ನಾನು ಯಾರು, ಈ ಸಂಸಾರ ಯಾವುದು ಎಂಬ ಅರಿವಾಗಿ, ನಮ್ಮ ನಿವಾಸಸ್ಥಾನ ಮೋಕ್ಷವೆಂದು ತಿಳಿಯಬೇಡವೆ ?

ತನುವೇಸ್ಫಾಟಿಕಪಾತ್ರೆ ಯಿಂದ್ರಿಯದ ಮೊತ್ತಂ ತಾನೆ ಸದ್ವರ್ತಿ ಜೀ
ವನವೇ ಜ್ಯೋತಿಯದರ್ಕೆ ಪಜ್ಜಳಿಸುವಾ ಸುಜ್ಞಾನಮೇ ರಶ್ಮಿಯಿಂ
ತಿನಿತುಂ ಕೂಡಿದೊಡೇನೊ ರಶ್ಮಿಯೊದವಿಂಗೇಂ ದೇವ ನಿನ್ನೆನ್ನ ಚಿಂ
ತನೆಗಳ್ನೋಡೆ ಘೃತಂಬೊಲೆಣ್ಣೆವೊಲಲಾ ! ರತ್ನಾಕರಾಧೀಶ್ವರಾ ॥೧೨॥

ಈ ಶರೀರವೇ ಶುಭ್ರವಾದ ಸ್ಫಟಿಕದ ಪಾತ್ರೆ. ಇಂದ್ರಿಯಗಳ ಸಮೂಹವೇ ಬತ್ತಿ. ಪ್ರಾಣವೇ ಬೆಳಕಿನ ಕುಡಿ. ಸುಜ್ಞಾನವೇ ಕಾಂತಿಯುಕ್ತವಾದಕಿರಣ.ಇಷ್ಟೆಲ್ಲ ಇದ್ದರೂ ಈ ಜ್ಯೋತಿ ನಿರಂತರ ಬೆಳಗಲು ತುಪ್ಪವಾಗಲಿ, ಎಣ್ಣೆಯಾಗಲಿ ಬೇಡವೆ? ಪರಮಾತ್ಮನ ಚಿಂತನೆಯೇ ಈ ಸುಜ್ಞಾನಪ್ರಕಾಶದ ಹೊಳೆ ಹರಿಸಲು ನೆರವಾಗುವ ತುಪ್ಪವಿದ್ದಂತೆ.

ತನುವೇಂ ತಾಮ್ರನಿವಾಸಮೋ ಮಳಲ ಬೆಟ್ಟೊಳ್ತೋಡಿ ಬೀಡಂ ಮರು
ಳ್ಮನಮೊಲ್ದಿರ್ಪವೊಲಿಂದೊ ನಾಳೆಯೊ ತೊಡಂಕೇಂ ನಾಳಿದೋ ಈಗಳೋ
ಘನದೊಡ್ಡೆಂಬವೊಲೊಡ್ಡಿ ಯೊಡ್ಡಿಳಿವ ಮೆಯ್ಯೊಳ್ಮೋಸವೇಕಿರ್ದಪೈ
ನೆನೆದಿರ್ಜೀವನೆ ಮೇಲನೆಂದರುಪಿದೈ ! ರತ್ನಾಕರಾಧೀಶ್ವರಾ!॥೧೩॥

ದೇಹ ಶಾಶ್ವತವೇ ? ತಾಮ್ರದಿಂದೇನಾದರೂ ಇದನ್ನು ಮಾಡಿದೆಯೆ? ಮರಳಿನ ರಾಶಿಯಲ್ಲಿ ಗೂಡನ್ನು ತೋಡಿ ಅದನ್ನೇ ಮನೆಯೆಂದು ಭ್ರಮಿಸಿ ಮನಸ್ಸು ಒಲಿದಿದೆ. ಆದರೆ ಆ ಮರಳಿನ ಮೋಡಗಳಗುಂಪು ಈಗ ಕಾಣಿಸಿಕೊಂಡು, ಮರುಕ್ಷಣದಲ್ಲಿ
ಚದುರಿಹೋಗುವಂತೆ, ದೇಹವು ಕೂಡ ಇಂದೋ, ತಪ್ಪಿದರೆ ನಾಳೆಯೋ, ಹೆಚ್ಚೆಂದರೆ ನಾಡಿದ್ದೋನಿರ್ನಾಮವಾಗದಿರದು. ಇಂಥ ನಶ್ವರವಾದ ಬಾಳನ್ನು ನಂಬಿ ಮೋಸಹೋದೀಯೆ ಜೀವ ! ಎಚ್ಚರಗೊಂಡು ಆತ್ಮೋನ್ನತಿಯನ್ನು ಸಾಧಿಸಿಕೋ.

ಉಂಬೂಟಂ ಮಿಗಿಲಾಗೆ ಯೇರುವ ಹಯಂಬೆಚ್ಚಲ್ಕೆ ನೀರ್ಮೂಗಿನೊ
ಳ್ತುಂಬಲ್ಪೋಗುವಂತೆ ಮುಗ್ಗಿಯುಂ ಮರಣಮಕ್ಕುಂ ಜೀವಕೀ ದೇಹವೆ
ಷ್ಟಂಬಾಳ್ದಷ್ಟದು ಲಾಭವೀ ಕಿಡುವ ಮೆಯ್ಯಂಕೊಟ್ಟು ನಿತ್ಯತ್ವವಾ
ದಿಂಬಂ ಧರ್ಮದೆ ಕೊಂಬವಂ ಚದುರನೈ ! ರತ್ನಾಕರಾಧೀಶ್ವರಾ ॥೧೪॥

ಊಟ ಸ್ವಲ್ಪ ಹೆಚ್ಚಾದರೂ ಪ್ರಾಣ ಹೋಗಬಹುದು.ಸವಾರಿ ಮಾಡುವ ಕುದುರೆ ಬೆದರಿದರೆ ಅದರ ಮೇಲಿಂದ ಬಿದ್ದು ಸಾಯಬಹುದು. ಕುಡಿಯುವಾಗ ನೀರು ಮೂಗಿನಲ್ಲಿ ಹೋದರೆ ಉಸಿರುಕಟ್ಟಿ ಪ್ರಾಣಾಪಾಯವಾಗಬಹುದು. ನಡೆಯುವಾಗ ಎಡವಿ ಸಾಯಬಹುದು. ಸಾವು ಬರುವಾಗ ಹೇಳಿ ಕೇಳಿ ಬರುತ್ತದೆಯೆ? ಆದ್ದರಿಂದ ಈ ಶರೀರವು ಎಷ್ಟು ಬದುಕಿದರೆ ಅಷ್ಟೇ ಲಾಭ. ಅನಿತ್ಯವಾದ ಶರೀರವೆಂಬ ಬೆಲೆಯನ್ನು ಕೊಟ್ಟು ನಿತ್ಯವಾದ ಮುಕ್ತಿಯೆಂಬ ಪದಾರ್ಥವನ್ನು ಧರ್ಮದಿಂದ ಕೊಳ್ಳುವವನೇ ಚದುರನು.

ಪುಲುವೀಡೊಳ್ಪೊಲವುಂ ಪಗಲ್ಪರದನಿರ್ದಾದಾಯಮಂ ಪೆತ್ತು ಬಾ
ಳ್ನೆಲೆಯುಳ್ಳೊಂದೆಡೆಗೆಯ್ದಲಾ ನೆಲೆಯವರ್ನೋವಂತೆ ಪಾಳ್ಮೆಯ್ಯೊಳಿ
ರ್ದೊಲವಿಂ ಪುಣ್ಯಮನೀ ಮನಂಗೊಳಿಸಿಕೊಂಡಾ ದೇವಲೋಕಕ್ಕೆ ಪೋ
ಗಲೊಡಂ ನೋವರವಂಗೊ ನೋವು ತವಗೋ ರತ್ನಾಕರಾಧೀಶ್ವರಾ ॥೧೫॥

ಒಬ್ಬ ವರ್ತಕನು ಒಂದು ಹುಲ್ಲಿನ ಜೋಪಡಿಯಲ್ಲಿ ಬಾಡಿಗೆಗಿದ್ದು, ವ್ಯಾಪಾರದಲ್ಲಿ ಲಾಭಗಳಿಸಿ ಬೇರೊಂದು ಚೆನ್ನಾಗಿರುವ ಮನೆಗೆ ಹೋದರೆ ಆ ಜೋಪಡಿಯ ಯಜಮಾನರು ತಮಗೆ ಸಿಗುತ್ತಿದ್ದ ಬಾಡಿಗೆ ಹೋಯಿತೆಂದು ಹೇಗೆ ದುಃಖಪಡುವರೋ ಹಾಗೆಯೇ ಜೀವಾತ್ಮನು ಈ ಕೊಳಕು ಶರೀರದಲ್ಲಿದ್ದಕೊಂಡು ಪುಣ್ಯವನ್ನು ಗಳಿಸಿಕೊಂಡು ಸತ್ತು ಸ್ವರ್ಗಕ್ಕೆ ಹೋದರೆ ಅವನ ಬಂಧುಗಳು ( ಹೆಂಡತಿ ಮಕ್ಕಳು ) ಅವನಿಂದ ತಮಗೆ ಬರುತ್ತಿದ್ದ ಹಣಕ್ಕೆ ಕೊರತೆ ಬಂದಿತೆಂದು ದಃಖಪಡುವರಲ್ಲದೆ ಆತ ಸ್ವರ್ಗಕ್ಕೆ ಹೋದ ಜೀವಾತ್ಮನಿಗೋಸ್ಕರವಲ್ಲ.

ದಾನಕ್ಕಿಲ್ಲ ತಪಕ್ಕೆ ಸಲ್ಲ ಮರಣಂಗಾಣ್ಬಂದು ನಿಮ್ಮಕ್ಷರ
ಧ್ಯಾನಕ್ಕೊಲ್ಲೆನೆನಿಪ್ಪವಂ ಮಡಿಯೆ ನೋಯಲ್ತಕ್ಕುದಿಷ್ಟಾದಿಗಳ್
ದಾನಂಗೆಯ್ದು ತಪಕ್ಕೆ ಪಾಯ್ದು ಮರಣಂಗಾಣ್ಬಂದು ನಿಮ್ಮಕ್ಷರ
ಧ್ಯಾನಂ ಗೆಯ್ದಳಿದಂಗೆ ಶೋಕಿಪರದೇಂ ? ರತ್ನಾಕರಾಧೀಶ್ವರಾ ॥೧೬॥

ತನ್ನ ಜೀವನದಲ್ಲಿ ಏನೂ ದಾನಮಾಡಲಿಲ್ಲ. ತಪಸ್ಸಿಗೆ ಯಾವತ್ತೂ ಮನಸ್ಸು ಮಾಡಲಿಲ್ಲ.  ಹೋಗಲಿ ಮರಣ ಹೊಂದುವ ಕಾಲದಲ್ಲಿ ಭಗವಂತನನ್ನು ಕುರಿತು ಧ್ಯಾನಮಾಡು ಎಂದರೆ, ಅದಕ್ಕೂ ಇಷ್ಟವಿಲ್ಲದ ಮನುಷ್ಯನು ಸತ್ತರೆ, ಅವನ ಬಂಧು ಮಿತ್ರರು, ಅಳಬೇಕಾದ್ದು ಸರಿ. ಏಕೆಂದರೆ ತನ್ನ ಆತ್ಮಕಲ್ಯಾಣವನ್ನು ಮಾಡಿಕೊಳ್ಳದೆ “ಅಯ್ಯೋ ಪಾಪಿ ಸತ್ತೆಯಲ್ಲಾ “ ಎಂದು ಮರುಗಿ ದುಃಖಪಡಬೇಕಾದ್ದೇ. ಆದರೆ ದಾನಮಾಡಿ ತಪಸ್ಸಿನಲ್ಲಿ ಮುಂದುವರಿದು ಮರಣದ ಸಮಯದಲ್ಲಿ ಭಗವಂತನ ನಾಮೋಚ್ಛಾರಣೆಯನ್ನೇ ಮಾಡುತ್ತಾ ಸಮಾಧಿ ಮರಣವನ್ನು ಹೊಂದಿದ ಭವ್ಯಾತ್ಮನಿಗೆ ದುಃಖಪಡುವುದು ಯೋಗ್ಯವಲ್ಲ. ಈ ಜೀವ ತನ್ನ ಪುರುಷಾರ್ಥದಿಂದ ಉತ್ತಮಗತಿಯನ್ನು ಸಾಧಿಸಿಕೊಂಡಿದೆ ಎಂದು ಸಮಾಧಾನಪಟ್ಟುಕೊಳ್ಳಬೇಕು.

ಸಾವಿಗಂಜಲೇಕೆ ಸಾವು ಪೆರತೇ ಮೆಯ್ದಾಳ್ದಿರ್ಗಂಜಲಾ
ಸಾವೇಂ ಮಾಣ್ಗುಮೆ ಕಾವರುಂಟೆಯಕಟಾ! ಈ ಜೀವನೇನೆಂದುವುಂ
ಸಾವಂ ಕಂಡವನಲ್ಲವೇ ಮರಣವಾಗಲ್ಮುಂದದೇಂ ಪುಟ್ಟನೇ
ನೀವೆನ್ನೊಳ್ನಿಲೆ ಸಾವುದುಂ ಸುಖವಲೈ! ರತ್ನಾಕರಾಧೀಶ್ವರಾ!॥೧೭॥

ಸಾವಿಗೆ ಏತಕ್ಕಾಗಿ ಭಯಪಡಬೇಕು? ಸಾವೇನು ನಮಗೆ ಹೊಸದೇ?
ಹುಟ್ಟಿದ ಮೇಲೆ ಸಾಯಲೇಬೇಕಲ್ಲ, ಒಂದು ಸಮಯ ಅದಕ್ಕೆ ಹೆದರಿದರೆ ಯಾರಾದರೂ ನಿವಾರಣೆಮಾಡಲು ಸಾಧ್ಯವೇ? ಹೋಗಲಿ ಸತ್ತಮೇಲೆ ಮತ್ತೆ ಹುಟ್ಟುವುದಿಲ್ಲವೇ? ಭಗವಂತ! ನೀನೊಬ್ಬ ನನ್ನ ಅಂತರಂಗದಲ್ಲಿದ್ದರೌ ಸಾಕು. ಸಾವೂ ಕೂಡ ಒಂದು ಮಹೋತ್ಸವವೆ! ಭಗವಂತನನ್ನು ಧ್ಯಾನಿಸುತ್ತಾ ಸಾವನ್ನು ಅಪ್ಪಿಕೊಳ್ಳುವುದು ಒಂದು ಸುಖಪ್ರಸಂಗವಲ್ಲವೇ!

ಪ್ರಾಣಂ ಮಾನವಜನ್ಮಮಂ ಪಡೆದ ಮೆಯ್ಯೊಳ್ನಿಚ್ಚಲುಂ ಪಂಚಕ
ಲ್ಯಾಣಂ ಪಂಚಗುರುಸ್ತವಂ ಪರಮಶಾಸ್ತ್ರಂ ಮೋಕ್ಷಸಂಧಾನ ಚ
ತ್ತ್ರಾಣಂ ಚಿತ್ತಿನ ರತ್ನ ಮೂರಿವನಲಂಪಿಂ ಚಿಂತನಂ ಗೆಯ್ವನೇ
ಜಾಣಂ ಮತ್ತಿನ ಚಿಂತಕರ್ಮರುಳರೈ! ರತ್ನಾಕರಾಧೀಶ್ವರಾ! ॥೧೮॥

ಮಾನವ ಜನ್ಮವೇ ದುರ್ಲಭ. ಅಂಥ ಅವಕಾಶ ದೊರೆತಾಗ ಪ್ರತಿನಿತ್ಯವೂ ಪಂಚಕಲ್ಯಾಣಗಳನ್ನು ನೆನೆಯಬೇಕು. ಪಂಚಪರಮೇಷ್ಠಿಗಳನ್ನು ಧ್ಯಾನೆಸುತ್ತಿರಬೇಕು.ಜಿನವಾಣಿಯನ್ನು ಸ್ವಾಧ್ಯಾಯ ಮಾಡಬೇಕು. ಮೋಕ್ಷಸಿದ್ಧಿಗೋಸ್ಕರ ಯಾವಾಗಲೂ ಹವಣಿಸುತ್ತಿರಬೇಕು. ರತ್ನತ್ರಯಗಳನ್ನು ಸಾಧಿಸಬೇಕು. ಈ ಐದೂ ಸಮ್ಯಗ್ದೃಷ್ಠಿಜೀವಿಯ ಪಂಚಪ್ರಾಣಗಳಿದ್ದಂತೆ. ಇವೇ ನಮ್ಮ ಬಾಳಿನ ಬೆಳಕೂ, ಉಸಿರೂ ಆಗಬೇಕು. ಇದನ್ನು ಮರೆತು ಅನ್ಯವಿಷಯದಲ್ಲಿ ಮಗ್ನರಾದವರು ಖಂಡಿತ ಹುಚ್ಚರಲ್ಲವೇ!

ಧನಮಂ ಧಾನ್ಯಮನೂಟಮಂ ವನಿತೆಯಂ ಬಂಗಾರಮಂ ವಸ್ತ್ರವಾ
ಹನರಾಜ್ಯಾದಿಗಳಂ ಸದಾ ಬಯಸುವೀ ಭ್ರಾಂತಾತ್ಮರಾ ಪಾಟಿಯೊಳ್
ಜಿನರಂ ಸಿದ್ಧರನಾರ್ಯವರ್ಯರನುಪಾಧ್ಯಾರ್ಕಳಂ ಸಾಧುಪಾ
ವನರಂ ಚಿಂತಿಸಿ ಮುಕ್ತಿಗೇಕೊದಗರೋ !ರತ್ನಾಕರಾಧೀಶ್ವರಾ! ॥೧೯॥

ಭ್ರಾಂತಿಯಿಂದ ಜನರಿಗೆ ಯಾವಾಗಲೂ ಹಣದ ಮೋಹ. ಧಾನ್ಯಸಂಗ್ರಹಣೆಯ ಚಿಂತೆ, ಊಟಮಾಡುವ ಬಯಕೌ, ಸ್ತ್ರೀಯನ್ನು ಹೊಂದುವ ಆಸೆ, ಚಿನ್ನವನ್ನು, ವಸ್ತ್ರವಾಹನ ರಾಜ್ಯಾದಿಗಳನ್ನು ಗಳಿಸಿ ಭೋಗಜೀವನವನ್ನು ನಡೆಸುವ ಪರದಾಟ. ಅಯ್ಯೋ ಈ ಅವಿವೇಕಿಗಳು ತಮ್ಮ ಬಾಳನ್ನೆಲ್ಲ ಈ ಕ್ಷಣಿಕವಾದ ಲೌಕಿಕ ಸುಖಕ್ಕೋಸ್ಕರ ವ್ಯರ್ಥವಾಗಿ ಸವೆಸುತ್ತಿರುವರಲ್ಲಾ! ಇದರ ಬದಲು ಪಂಚ ಪರಮೇಷ್ಠಿಗಳನ್ನಾದರೂ ಚಿಂತಿಸಿ ತಮ್ಮ ಆತ್ಮಕಲ್ಯಾಣ ಮಾಡಿಕೊಂಡು ಮುಕ್ತರಾಗಬಾರದೇ!

ಪಡೆದತ್ತಿಲ್ಲವೆ ಪೂರ್ವದೊಳ್ಧನವಧೂರಾಜ್ಯಾದಿ ಸೌಭಾಗ್ಯಮಂ
ಪಡೆದೆಂ ತನ್ಮಮಕಾರದಿಂ ಪಡೆದೆನೀ ಸಂಸಾರಸಂವೃದ್ಧಿಯಂ
ಪಡೆದತ್ತಿಲ್ಲ ನಿಜಾತ್ಮತತ್ತ್ವ ರುಚಿಯಂ ತದ್ಬೋಧಚಾರಿತ್ರಮಂ
ಪಡೆದಂದಾಗಳೆ ಮುಕ್ತಿಯಂ ಪಡೆಯೆನೇ ರತ್ನಾಕರಾಧೀಶ್ವರಾ ॥೨೦॥

ಹಿಂದಿನ ಅನೇಕ ಭವಗಳಲ್ಲಿ ಧನ, ವಧೂ, ರಾಜ್ಯಾದಿ ಸೌಭಾಗ್ಯಗಳನ್ನು ಪಡೆದೂ, ಈಗಲೂ ಈ ಜನ್ಮದಲ್ಲೂ ಸಹ ಅದೇ ವೈಭವಗಳನ್ನು ಹೊಂದಿದ್ದೇನೆ. ಆದರೆ ಅಫವುಗಳಿಂದೇನು ಪ್ರಯೋಜನ? ಈ ಭೋಗೋಪಭೋಗಗಳಲ್ಲಿ ಮುಳುಗಿ ಅಹಂಕಾರದಿಂದ,  ಮೋಹದಿಂದ ಈ ಸಂಸಾರದ ಚಕ್ರದಲ್ಲಿ ತಿರುಗುತ್ತಿದ್ದೇನೆ. ಚತುರ್ಗತಿಯಲ್ಲಿ ಭ್ರಮಣೆಮಾಡಿ ಬಳಲುತ್ತಿದ್ದೇನೆ. ಹಿಂದೆ ಯಾವಾಗಲೂ ಆತ್ಮ ತತ್ವರುಚಿಯ ಕಡೆ ಮನಗೊಡದೆ ಸಮ್ಯಗ್ದರೂಶನಜ್ಞಾನ ಚಾರಿತ್ರಗಳನ್ನು ಧರಿಸದೆ ಕೆಟ್ಟೆನು. ಈ ರತ್ನತ್ರಯಗಳನ್ನು ಹೊಂದಿದಾಗಲೆ ಮುಕ್ತಿಯಲ್ಲವೆ?

ಒರಗಿರ್ದಂ ಕನಸಿಂದೆ ದುಃಖಸುಖದೊಳ್ಬಾಳ್ವಂತೆ ತಾನೆಳ್ದು ಕ
ಣ್ದೆರೆದಾಗಳ್ಬಯಲಪ್ಪವೋಲ್ನರತಿರ್ಯಙ್ಮರ್ತ್ಯ ದೇವತ್ವದೊಳ್
ತರಿಸಂದೊಪ್ಪುವ ಬಾಳ್ಕೆಯೇ ಬಯಲಬಾಳಂ ನಚ್ಚಿ ನಿತ್ಯತ್ವಮಂ
ಮರೆವಂತೇಕೆಯೋ ನಿಮ್ಮ ನಾಂ ಮರೆದೆನೋ ! ರತ್ನಾಕರಾಧೀಶ್ವರಾ! ॥೨೧॥

ಮಲಗಿದಾಗ ಕನಸಿನಲ್ಲಿ ದುಃಖವೂ ಆಗಬಹುದು ಸುಖವೂ ಆಗಬಹುದು. ಎಚ್ಚರವಾದಾಗ ಕನಸಿನ ಲೋಕವೆಲ್ಲಾ ಬಯಲಾಗುವುದು. ಹಾಗೆಯೇ ಈ ಚತುರ್ಗತಿಗಳಲ್ಲಿ ( ದೇವ, ನರ, ನಾರಕ, ತಿರ್ಯಕ್ ಜನ್ಮಗಳಲ್ಲಿ) ಕರ್ಮವಿಪಾಕದಿಂದ ಅಲೆದಾಡಿ ಅನೇಕ ಶರೀರಗಳನ್ನು ಧರಿಸಿ, ಆ ನಶ್ವರವಾದ ಬಾಳುವಿಕೆಯನ್ನು ನಂಬಿ ಸುಖದುಃಖಗಳನ್ನುಂಡು ಬಳಲುತ್ತಿದ್ದೇನೆ. ಆತ್ಮನ ಶಾಶ್ವತವಾದ ಸ್ವರೂಪವನ್ನು ಮರೆತು, ಹಾಗೆಯೇ ದೇವ, ನಿಮ್ಮನ್ನೂ ಸಹ ಮರೆತುಬಿಟ್ಟೆ. ಎಂಥ
ಅವಿವೇಕಿ ನಾನು!
ಇಂದಾನಾದವನೇ ಸಮಂತು ಬರಿಸಂ ನೂರೊಂದಹಂ ಕೋಟಿಯಿಂ
ಹಿಂದತ್ತತ್ತಲನೇಕ ಕೋಟಿಯುಗದಿಂದತ್ತತ್ತಲಂಭೋಧಿಯಿಂ
ಬಂದತ್ತತ್ತಲನಾದಿಕಾಲದಿನನಂತಾಕಾರದಿಂ ತಿರ್ರೆನಲ್
ಬಂದೆಂ ನೊಂದೆನನಾಥಬಂಧು ! ಸಲಹೋ ರತ್ನಾಕರಾಧೀಶ್ವರಾ! ॥೨೨॥

ನಾನೇನು ಮೊನ್ನೆಮೊನ್ನೆಯವನೇ ? ನೂರಾರುವರ್ಷ ಅಲ್ಲ, ಕೋಟ್ಯನುಕೋಟಿ ಸಾಗರೋಪಮ ಕಾಲದಿಂದ ಈ ಕರ್ಮಬಂಧನಕ್ಕೆ ಸಿಲುಕಿ, ಸಂಸಾರಚಕ್ರದಲ್ಲಿ ತಿರ್ರನೆ ತಿರುಗಿ ಬಳಲುತ್ತಿದ್ದೇನೆ.  ಎಷ್ಟು ಶರೀರಗಳನ್ನು ಧರಿಸಿದೆನೋ, ಎಷ್ಟು ಆಕಾರಗಳನ್ನು ತಾಳಿದೆನೋ, ಲೆಕ್ಕವೇ ಇಲ್ಲ, ಈ ಭವಬಂಧನಸಾಕಾಗಿದೆಸ್ವಾಮಿ. ಇದರಿಂದ ಉದ್ಧರಿಸು ತಂದೆ.

ನಾನಾಗರ್ಭದಿ ಪುಟ್ಟಿ ಪುಟ್ಟಿ ಪೊರಮಟ್ಟೆಂ ರೂಪುಜೋಹಂಗಳಂ
ನಾನಾಭಾವದೆ ತೊಟ್ಟು ತೊಟ್ಟು ನಡೆದೆಂ ಮೆಯ್ಮೆಚ್ಚಿದೂಟಂಗಳಂ
ನಾನಾಭೇದದೊಳುಂಡುಮುಂಡು ತಣಿದೆಂ ಚಿಃ ಸಾಲದೇ ಕಂಡುಮಿಂ
ತೇನಯ್ಯಾ! ತಳುಮಾಳ್ಪರೇ? ಕರೈಣಿಸಾ ! ರತ್ನಾಕರಾಧೀಶ್ವರಾ! ॥೨೩॥

ನಾನಾ ಗರ್ಭಗಳಲ್ಲಿ ಹುಟ್ಟಿ ಹುಟ್ಟಿ ಬೇಸತ್ತಿದ್ದೇನೆ. ನಾನಾ ಆಕಾರಗಳನ್ನೂ, ವೇಷಗಳನ್ನೂ ತೊಟ್ಟು ತೊಟ್ಟು ರೋಸಿಹೋಗಿದ್ದೇನೆ. ಬೇಕುಬೇಕಾದ ತಿಂಡಿ ತಿನಿಸುಗಳನ್ನು ತಿಂದು ತಿಂದು ಸಾಕಾಗಿ ಹೋಗಿದೆ ಸ್ವಾಮಿ, ಈ ನನ್ನ ಪರದಾಟವನ್ನು ನೋಡಿಯೂ, ನಿನಗೆ ಕರುಣೆ ಬರಲಿಲ್ಲವೆ! ತಡವೇಕೆ ಜಿನೇಂದ್ರ, ಕೃಪೆಮಾಡು.

ಅಯ್ಯೋ! ಕುತ್ಸಿತಯೋನಿಯೊಳ್ನುಸುಳ್ವುದೆತ್ತಾನೆತ್ತ ಚಿಃ ನಾರುವೀ
ಮೆಯೈತ್ತೆನ್ನಯ ನಿರ್ಮಲಪ್ರಕೃತಿಯೆತ್ತೀ ದೇಹಜವ್ಯಾಧಿಯಿಂ
ಪುಯ್ಯಲ್ವೆತ್ತಿಹುದೆತ್ತಲೆನ್ನ ನಿಜವೆತ್ತೊಯ್ದೆನ್ನ ನಿಮ್ಮತ್ತ ದ
ಮ್ಮಯ್ಯಾ ರಕ್ಷಿಸು ರಕ್ಷಿಸಾ ತಳುವಿದೇಂ ರತ್ನಾಕರಾಧೀಶ್ವರಾ!॥೨೪॥

ಅಯ್ಯೋ! ಅಯೋನಿಜನಾದ ನಾನು, ಈ ನಿಂದ್ಯವಾದ ಯೋನಿಯಲ್ಲಿ ಹುಟ್ಟುವುದೆಂದರೇನು? ಕಲಂಕರಹಿತನಾದ ನಾನು ಈ ದುರ್ಗಂಧದಿಂದ ಕೂಡಿದ ಶರೀರವನ್ನು ಧರಿಸಿರುವೆನಲ್ಲಾ! ಸಕಲ ರೋಗಗಳಿಗೂ ತವರುಮನೆಯಾದ ಈ ಶರೀರವನ್ನು ಹೊಂದಿ ಗೋಳಾಡುತ್ತಿದ್ದೇನಲ್ಲಾ! ನನ್ನ ನಿಜ ರೂಪವನ್ನು ಮರೆತಿರುವೆನಲ್ಲಾ, ದೇವ! ನನ್ನನ್ನು ಕರುಣೆಯಿಂದ ನಿನ್ನ ಹತ್ತಿರ ಕರೆದುಕೊಂಡು ರಕ್ಷಿಸು ತಂದೆ! ತಡಮಾಡಬೇಡ.

ದಾರಿದ್ರ್ಯಂ ಕವಿದಂದು ಪಾಯ್ದು ಪಗೆಗಳ್ಮಾಸಂಕೆಗೊಂಡಂದು ದು
ರ್ವಾರವ್ಯಾಧಿಗಳೊತ್ತಿದಂದು ಮನದೊಳ್ ನಿರ್ವೇಗಮಕ್ಕುಂ ಬಳಿ
ಕ್ಕಾರೋಗಂ ಕಳೆದಂದು ವೈರಿ ಲಯವಾದಂದರ್ಥವಾದಂದಿದೇಂ
ವೈರಾಗ್ಯಂ ತಲೆದೋರಲ್ ದಂಡಿಸುವುದೋ! ರತ್ನಾಕರಾಧೀಶ್ವರಾ!॥೨೫॥

ಬಡತನದಿಂದ ಬೆಂದು ಬಳಲಿದಾಗ, ಶತ್ರುಗಳು ಮೇಲೆಬಿದ್ದು ಅಪಮಾನಮಾಡಿ ಹಿಂಸೆಕೊಟ್ಟಾಗಲೂ, ವಾಸಿಯಾಗದಂಥ ರೋಗ ಬಂದಾಗಲೂ, ಜುಗುಪ್ಸೆಯಿಂದಲೂ, ಭಯದಿಂದಲೂ ಒಂದು ರೀತಿ ವೈರಾಗ್ಯ ತಲೆದೋರುತ್ತದೆ. ಆದರೆ ಈ ವೈರಾಗ್ಯ ಎಷ್ಟು ದಿನ ಉಳಿಯುತ್ತದೆ? ರೋಗ ವಾಸಿಯಾದಮೇಲೆ, ಬಡತನ ನೀಗಿದಮೇಲೆ, ಶತ್ರುವಿನ ಭಯ ನಿವಾರಣೆಯಾದಮೇಲೆ, ಆ ವೈರಾಗ್ಯ ಹೇಳದೆ ಕೇಳದೆ ಓಡಿಹೋಗುತ್ತದೆ. ಇದೆಂಥ ವೈರಾಗ್ಯ!

ಮೆಯ್ಯೊಳ್ತೋರಿದ ರೋಗದಿಂ ಮನಕೆ ಬಂದಾಯಾಸದಿಂ ಭೀತಿವ
ಟ್ಟಯ್ಯೋ! ಎಂದೊಡೆ ಸಿದ್ಧಿಯೇಂ ಜನಕನಂ ತಾಯಂ ಪಲುಂಬಲ್ಕದೇ
ಗೆಯ್ಯಲ್ಕಾರ್ಪರೊ ತಾವು ಮುಮ್ಮಳಿಸುವರ್ಕೂಡೆಂದೊಡಾ ಜಿಹ್ವೆಯೆ
ಮ್ಮಯ್ಯಾ! ಸಿದ್ಧ ಜಿನೇಶ ಎಂದೊಡೆ ಸುಖಂ ರತ್ನಾಕರಾಧೀಶ್ವರಾ ॥೨೬॥

ಶರೀರದಲ್ಲಿ ರೋಗ ಕಾಣಿಸಿಕೊಂಡಾಗ, ಮನಸ್ಸಿಗೆ ನೆಮ್ಮದಿ ಇಲ್ಲದಿದ್ದಾಗ.ಭಯಪಟ್ಟು ಅಯ್ಯೋ ಎಂದು ಅರಚಿಕೊಂಡು ಸಂಕಟಪಟ್ಟರೆ, ಏನಾದರೂ ಪರಿಹಾರ ಸಿಗುವುದೇ! ತಂದೆತಾಯನ್ನು ಹಂಬಲಿಸಿ ಗೋಳಾಡಿದರೆ ಅವರುತಾನೇ ಏನುಮಾಡಿಯಾರು? ನಿಮ್ಮ ಜೊತೆಯಲ್ಲಿ ಗೋಳಾಡಬಹುದಷ್ಟೇ! ಈ ವ್ಯರ್ಥ ಆಲಾಪನೆಯನ್ನು ಬಿಟ್ಟು, ಅದೇ ಸಮಯದಲ್ಲಿ ಭಗವಂತನನ್ನು ಜ್ಞಾಪಿಸಿಕೊಂಡು ಸಿದ್ಧಪರಮೇಷ್ಠಿ! ಜಿನತಂದೆ! ಎಂದು ಮೊರೆಯಿಟ್ಟರೆ ಸುಖವಾಗುವುದರಲ್ಲಿ ಸಂದೇಹವೇ ಇಲ್ಲ.

ತಾಯಂ ತಂದೆಯನಾಸೆವಟ್ಟಳುತೆ ಸಾವಂಸತ್ತು ಬೇರನ್ಯರಾ
ಕಾಯಂಬೊಕ್ಕೊಗೆವಂ ಬಳಿಕ್ಕವರುಮಂ ತಾಯ್ತಂದೆಯೆಂದಪ್ಪಿಕೊಂ
ಡಾ ಯೆಂದಾಡುವನಿತ್ತಲಂದು ಪಡೆದರ್ಗಿಚ್ಛೈಸನಾತ್ಮಂಗಿದೇಂ
ಮಾಯಾಮೋಹಮೊ ಪೇಳ್ವುದೇನನಕಟಾ!ರತ್ನಾಕರಾಧೀಶ್ವರಾ ॥೨೭॥

ತಾನು ಸಾಯುವಾಗ ತಂದೆ ತಾಯನ್ನು ನೆನೆದು ಇವರನ್ನೆಲ್ಲ ಬಿಟ್ಟು ಹೇಗೆ ಹೋಗಲಿ ಎಂದು ಗೋಳಾಡಿ ಸಾಯುತ್ತಾನೆ. ಸತ್ತನಂತರ ತನ್ನ ಕರ್ಮಾನುಸಾರ ಬೇರೊಂದು ಶರೀರವನ್ನು ಹೊಕ್ಕು ಅವರ ಹೊಟ್ಟೆಯಲ್ಲಿ ಹುಟ್ಟುತ್ತಾನೆ. ಮತ್ತೆ ಅವರನ್ನೇ ತಂದೆ ತಾಯಿ ಎಂದುಪ್ರೇಮದಿಂದ ತಬ್ಬಿಕೊಂಡು ನಲಿದಾಡುತ್ತಾನೆ, ಆದರೆ ಹಿಂದಿನ ಜನ್ಮದಲ್ಲಿ ಯಾರನ್ನು ಬಿಡಲಾರದೆಗೋಳಾಡಿ ಸತ್ತನೋ ಅವರನ್ನು ಒಮ್ಮೆಯಾದರೂ ನೆನೆಯುವುದಿಲ್ಲ! ಅಕಟ! ಆತ್ನಿಗೆ ಏನು ಭ್ರಮೆ, ಎಂಥ ಮೋಹವೋ! ಏನಿದು ಮಾಯೆ.

ಸ್ತ್ರೀಯಂ ಮಕ್ಕಳನೆಂತಗಲ್ವೆ ನಿವರ್ಗಾರುಂಟೆಂದು ಗೋಳಿಟ್ಟು ಕ
ಣ್ಬಾಯಂ ಬಿಟ್ಟಳಿವಂ ಬಳಿಕ್ಕುದಯಿಪಂ ತಾನತ್ತ ಬೇರನ್ಯರೊಳ್
ಪ್ರಾಯಂದಾಳ್ದು ವಿವಾಹಮಾಗಿ ಸುತಂ ಮುದ್ದಾಡುವಂ ಮುನ್ನಿನಾ
ಸ್ತ್ರೀಯಂ ಮಕ್ಕಳನಾಗಲೇಕೆ ನೆನೆಯಂ ರತ್ನಾಕರಾಧೀಶ್ವರಾ ॥೨೮॥

ಸಾಯುವಾಗ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಹೇಗೆ ಹೋಗಲಿ, ನಾನು ಸತ್ತಮೇಲೆ ಇವರಿಗಾರುಗತಿ. ಎಂದು ಗೋಳಾಡುತ್ತಾ ಆರ್ತ ರೌದ್ರಧ್ಯಾನದಿಂದ ಕಣ್ಣು ಬಾಯಿಬಿಟ್ಟು ಪ್ರಾಣಬಿಡುತ್ತಾನೆ. ಬಳಿಕ ಮತ್ತೊಬ್ಬರ ಗರ್ಭದಲ್ಲಿ ಬೆಳೆದು ಹುಟ್ಟಿ,  ಪ್ರಾಯಕ್ಕೆ ಬಂದು ಮದುವೆಯಾ ಗಿತನಗೆ ಹುಟ್ಟಿದ ಮಕ್ಕಳನ್ನು ಮುದ್ದಾಡುತ್ತಾನೆ. ಹಿಂದೆನ ಜನ್ಮದ ಹೆಂಡತಿ ಮಕ್ಕಳನ್ನು ಈಗ ಏತಕ್ಕೆ ನೆನೆಯುವುದಿಲ್ಲ. ಸಂಪೂರ್ಣವಾಗಿ ಮರೆತುಬಿಟ್ಟಿದ್ದಾನೆ. ಏನು ಆತ್ಮನ ಈ ಭ್ರಮೆ!

ಆರಾರಲ್ಲದ ಗರ್ಭದೊಳ್ಬಳೆಯನಾರಾರೊಂದು ಮೂತ್ರಾಧ್ವದೊಳ್
ಬಾರಂ ಬಂದುರೆ ಬಂಧುಗಳ್ಪಿತೃಗಳೆಂದೆನ್ನಂಗನಾನೀಕಮೆಂ
ದಾರಾರಂಜಲನುಣ್ಣನಾತ್ಮಜರೆನುತ್ತಾರಾರ ದುರ್ಗಂಧದಿಂ
ಚಾರಿತ್ರಂಗಿಡನಾತ್ಮನೇಂ ಭ್ರಮಿತನೋ ರತ್ನಾಕರಾಧೀಶ್ವರಾ ॥೨೯॥

ಈ ಜೀವ ಯಾವಯಾವದೋ ಗರ್ಭದಲ್ಲಿ ಹುಟ್ಟಿ ಬೆಳೆಯುತ್ತಾನಲ್ಲ! ಅನೇಕಾನೇಕ ಯೋನಿಗಳಲ್ಲಿ ಜನೆಸುವನಲ್ಲ,ಇವರು ನನ್ನ ಬಂಧುಗಳು, ಇವರು ನನ್ನ ತಂದೆತಾಯಿಗಳು, ಇವರು ನನ್ನ ಪ್ರಿಯತಮೆಯರು. ಎಂದುಕೊಂಡು ಕಂಡ ಕಂಡವರ ಎಂಜಲನೆಲ್ಲ ತಿನ್ನುವನಲ್ಲ. ನನ್ನ ಮಕ್ಕಳಿವರೆಂದು ಭ್ರಮಿಸಿ ಯಾರ ಯಾರದೋ ದುರ್ಗಂಧದಲ್ಲಿ ಹೊರಳಾಡಿ ಚಾರಿತ್ತಭ್ರಷ್ಟನಾಗಿ ದಿಕ್ಕುಕಾಣದೆ ಅಲೆಯುತ್ತಿರುವ ಈ ಜೀವದ ಮರುಳುತನಕ್ಕೆ ಏನೆನ್ನೋಣ?

ಕುಲಮಂ ಗೋತ್ರಮನುರ್ವಿಯಂ ಬಿರುದುಮಂ ಪಕ್ಷೀಕರಂಗೊಂಡು ತಾ
ನೊಲಿವಂ ತನ್ನವೆನುತ್ತೆ ಲೋಗರವೆನುತ್ತಂ ನಿಂದಿಪಂ ಜೀವನಂ
ಡಲೆದೆಂಬತ್ತರ ನಾಲ್ಕು ಲಕ್ಷಭವದೊಳ್ಬಂದಲ್ಲಿ ತಾನಾವುದ
ಕ್ಕೊಲಿವಂ ನಿಂದಿಪನಾವುದಂ ನಿರವಿಸಾ ರತ್ನಾಕರಾಧೀಶ್ವರಾ ॥೩೦॥

ತನ್ನ ಕುಲ, ತನ್ನ ಗೋತ್ರ, ತನ್ನ ಭೂಮಿ, ತನ್ನ ಬಿರುದುಗಳಹೀಗೆ ಇವುಗಳಲ್ಲೇ ಮಗ್ನನಾಗಿ, ಅವುಗಳು ಶ್ರೇಷ್ಠವಾದವು ಎಂದು ಹೆಮ್ಮೆಪಟ್ಟುಕೊಳ್ಳುತ್ತಾನೆ. ಅನ್ಯರ ಕುಲಗೋತ್ರಗಳನ್ನು ತಿರಸ್ಕಾರಭಾವದಿಂದ ಕಾಣುತ್ತಾನೆ. ಆದರೆ ತಾನು ಅನಾದಿಕಾಲ-
ದಿಂದ ಎಂಬತ್ತನಾಲ್ಕು ಲಕ್ಷ ಯೋನಿಗಳಲ್ಲಿ ಅನೇಕ ಭವಗಳಲ್ಲಿ ಪರದಾಡುತ್ತಿರುವುದನ್ನು ಮರೆತಿದ್ದಾನಲ್ಲ! ಅವುಗಳಲ್ಲಿ ಯಾವ ಭವಗಳನ್ನು ಪ್ರೀತಿಸುವುದಕ್ಕೆ ಸಾಧ್ಯ? ಯಾವ ಭವಗಳನ್ನು ನಿಂದಿಸಲು ಸಾಧ್ಯ? ನಿರೂಪಿಸಲು ಸಾಧ್ಯವೇ?

ಎಲೆಲೆ ಉಳ್ಳುದನಾಡೆ ಕೊಳ್ಳಿಗೊಳುವರ್ನೋಡೆಂಬ ನಾಳ್ಮಾತಿದೇಂ
ಸಲೆಸತ್ಯಂ ಬಹುಯೋನಿಯೊಳ್ಪಲವು ತಾಯುಂ ತಂದೆಯೊಳ್ಪುಟ್ಟಿದಾ
ಮಲಶುಕ್ಲಗಳೊಳಾಳ್ದು ಬಾಳ್ದು ಮನಮನ್ಯರ್ನೊಂದು ಬೈವಲ್ಲಿ ತಾಂ
ಪಲರ್ಗಂ ಪುಟ್ಟಿ ದೆಯೆಂದೊಡೇಂ ಕುದುವರೋ ರತ್ನಾಕರಾಧೀಶ್ವರಾ ॥೩೧॥

ಕಂಡದ್ದನ್ನು ಕಂಡಂತೆ ಹೇಳಿದರೆ ಕೆಂಡದಂಥ ಕೋಪ ಎಂಬ ನಾಣ್ಣುಡಿಯುಂಟು. ಈ ಮಾತು ನಮ್ಮ ಜೀವನಕ್ಕೆ ಎಷ್ಟೊಂದು ಸತ್ಯ. ಈ ಜೀವ ನಾನಾ ಯೋನಿಗಳಲ್ಲಿ ಹಲವಾರು ತಂದೆ ತಾಯಿಗಳ ಮಲಮೂತ್ರಾದಿಗಳಲ್ಲಿ ಮುಳುಗಿ ಬಂದಿರುವಾಗ ಯಾರಾದರೂ ಅಂಥವನಿಂದ ಸಂಕಟಗೊಂಡು “ ಎಷ್ಟು ಜನಕ್ಕೆ ಹುಟ್ಟಿದೆಯೊ” ಎಂದು ಬೈದರೆ ಕೋಪದಿಂದ ಕೆರಳುವರಲ್ಲ!
ರತ್ನಾಕರಾಧೀಶ್ವರಾ!

ಬಾಹ್ಯಾಪೇಕ್ಷೆಯಿನಾದೊಡಂ ಕುಲಬಲಸ್ಥಾನಾದಿಪಕ್ಷಂ ಮನಃ
ಸಹ್ಯಂ ನಿಶ್ಚಯದಿಂದಮಾತ್ಮನಕುಲಂ ನಿರ್ಗೋತ್ರಿ ನಿರ್ನಾಮಿ ನಿ
ರ್ಗುಹ್ಯೋದ್ಭೂತನನಂಗನಚ್ಯುತನನಾದಂ ಸಿದ್ಧನೆಂದೆಂಬುದೇ
ಗ್ರಾಹ್ಯಂ ತತ್ಪರಿಭಾವಮೇ ಭವಹರಂ ರತ್ನಾಕರಾಧೀಶ್ವರಾ ॥೩೨॥

ವ್ಯವಹಾರ ದೃಷ್ಟಿಯಿಂದ ವಿಚಾರಮಾಡಿದರೆ ಆತ್ಮನಿಗೆ ಕುಲ, ಗೋತ್ರ, ಬಲ, ಪದವಿ ಮುಂತಾದವುಗಳು ಸರಿಯೆನಿಸಬಹುದು. ಆದರೆ ನಿಶ್ಚಯದೃಷ್ಟಿಯಿಂದ ವಿವೇಚಿಸಿದರೆ ಆತ್ಮನಿಗೆ ಕುಲವಿಲ್ಲ, ಗೋತ್ರವಿಲ್ಲ, ಹೆಸರಿಲ್ಲ. ಅವನು ಯಾವ ಯೋನಿಯಲ್ಲೂಹುಟ್ಟುವುದೂ ಇಲ್ಲ ಸಾಯುವುದೂ ಇಲ್ಲ. ಅವನಿಗೆ ದೇಹವಿಲ್ಲ. ಆದಿ ಅಂತ್ಯಗಳಿಲ್ಲ. ಅವನು ನಿತ್ಯಾನಂದ ಪರಮ ಪರಂಜ್ಯೋತಿ ರೂಪಿಯಾದ ಸಿದ್ಧಪರಮೇಷ್ಠಿಯೇ! ಹೀಗೆ ಚಿಂತಿಸುವುದೇ ಸರಿಯಾದ್ದು, ಯೋಗ್ಯವಾದದ್ದು. ಈ ಚಿಂತನೆಯೇ ಸಂಸಾರಸಾಗರದಿಂದ ಪಾರಾಗುವ ಉಪಾಯವಾಗಿದೆ.

ಪಕ್ಷಂಗೊಂಡೊಡೆ ಕೊಳ್ಗೆ ಜೀವಹಿತಮುಳ್ಳಾಚಾರಮುಳ್ಳಗ್ರದೊಳ್
ಮೋಕ್ಷಕ್ಕೈದಿಸಲಾರ್ಪ  ಸತ್ಕುಲಸುಧರ್ಮಶ್ರೀಯನಂತನಲ್ಲದು  
ದ್ಭಕ್ಷದ್ವೇಷದೆ ಕೊಲ್ವ ಕುತ್ಸಿತದ ಶೀಲಂ ತಳ್ತು ಸಾರ್ದಾತ್ಮರಂ
ಭಿಕ್ಷಂಗೆಯ್ವವನಾತ್ಮನೇಕೆ ಪಿಡಿವಂ ರತ್ನಾಕರಾಧೀಶ್ವರಾ ॥೩೩॥

ಜೀವನಿಗೆ ಹಿತವಾದದ್ದೂ, ಸದಾಚಾರಸಂಪನ್ನತೆಯಿಂದ ಕೂಡಿದುದೂ, ಕೊನೆಗೆ ಪರಮಪದವನ್ನು ದೊರಕಿಸಿಕೊಡಲು ಸಮರ್ಥವಾದಂತ ಸತ್ಕುಲವನ್ನೂ, ಸದ್ಧರ್ಮವನ್ನೂ, ಸಂಪತ್ತನ್ನೂ ಬೇಕಿದ್ದರೆ ಆಶ್ರಯಿಸಲಿ, ಅಂತಲ್ಲದೆ ಹೊಟ್ಟೆಪಾಡಿಗಾಗಿ, ದ್ವೇಷ ಅಸೂಯೆಗಳನ್ನು ಬಿತ್ತುವುದಕ್ಕಾಗಿ, ಹಿಂಸಾಚರಣೆಗಾಗಿ, ದುಷ್ಟ ಅಭ್ಯಾಸಗಳಿಗಾಗಿ, ಭಿಕ್ಷಾಟನೆಮಾಡುವವನು ಮೇಲೆ ಹೇಳಿದ ಸದ್ಧರ್ಮವನ್ನುಮತ್ತು ಜಾತಿಯನ್ನು ಏಕೆ ಹಿಡಿಯಬೇಕು? ಅಂದರೆ ಧರ್ಮ ಮತ್ತು ಜಾತಿಯನ್ನು ಮುಂದೆ ಮಾಡಿಕೊಂಡು ಕೃತ್ರಿಮ ಜೀವನವನ್ನೇಕೆ ಸಾಗಿಸಬೇಕು.

ಒಂದೊಂದಾತ್ಮನೆ ಶುದ್ಧದಿಂ ತ್ರಿಜಗದಾಪೂರ್ಣಾಕೃತಂಗಳ್ಜಗ
ದ್ವೃಂದೋದ್ಕಂಪಿತ ಶಕ್ತಿಗಳ್ಪರರ್ಗಶಕ್ಯಂಗಳ್ಜಗತ್ಕರ್ತೃಗಳ್
ತಂದಿಂತೆಲ್ಲವನಾರ್ದ್ರಚರ್ಮದೊಡಲೊಳ್ತಳ್ತಾನೆ ಪೆಣ್ಣಶ್ವವಾ
ಳಿಂದೇಂ ಮಾರ್ಗುಮೊ ಪಾಪಪುಣ್ಯಯುಗಳಂ ರತ್ನಾಕರಾಧೀಶ್ವರಾ ॥೩೪॥

ಶುದ್ಧ ನಿಶ್ಚಯದೃಷ್ಟಿಯಿಂದ ಆತ್ಮಸ್ವರೂಪವನ್ನು ಅವಲೋಕಿಸಿದರೆ ಒಂದೊಂದು ಆತ್ಮವೂ ಮೂರು ಲೋಕವನ್ನು ತುಂಬುವ ಸಾಮರ್ತ್ಯವುಳ್ಳದ್ದು. ಜಗತ್ತನ್ನೇ ಅಲುಗಾಡಿಸುವ ಮಹಾಶಕ್ತಿ ಆತ್ಮನಲ್ಲಿದೆ. ಯಾರೂ ಈ ಆತ್ಮನನ್ನು ಜಯಿಸಲಾಗುವುದಿಲ್ಲ. ಲೋಕದ ಕರ್ತಾರನೇ ಆತ್ಮ. ಇಂಥ ಅನಂತ ಶಕ್ತಿಸಾಮರ್ಥ್ಯಗಳುಳ್ಳ ಆತ್ಮರುಗಳು ಪಾಪ ಪುಣ್ಯಗಳೆಂಬ ಕರ್ಮಗಳ ಕಟ್ಟಿಗೆ ಸಿಕ್ಕಿಬಿದ್ದು ಹಸಿ ಚರ್ಮದ ಹೊದಿಕೆಯಿರುವ ಆನೆ, ಹೆಣ್ಣು ಕುದುರೆ,ಆಳು ಮುಂತಾದ ಅನೇಕ ಶರೀರಗಳಲ್ಲಿ ಬಂದು ತಿರ್ರನೆ ತಿರುಗುತ್ತಿವೆಯಲ್ಲಾ !

ಪಾಪಂ ನಾರಕಭೂಮಿಗೊಯ್ವುದಸುವಂ ಪುಣ್ಯಂ ದಿವಕ್ಕೊಯ್ವುದಾ
ಪಾಪಂ ಪುಣ್ಯಮಿವೊಂದುಗೂಡಿದೊಡೆ ತಿರ್ಯಙ್ಮರ್ತ್ಯ ಜನ್ಮಂಗಳೊಳ್
ರೂಪಂ ಮಾಳ್ಕುಮಿವೆಲ್ಲಮಧ್ರುವಮಿವೇ ಜನ್ಮಕ್ಕೆ ಸಾವಿಂಗೊಡಲ್
ಪಾಪಂ ಪುಣ್ಯಮಿವಾತ್ಮಬಾಹ್ಯಕವಲಾ ರತ್ನಾಕರಾಧೀಶ್ವರಾ ॥೩೫॥

ಜೀವಕ್ಕೆ ಪಾಪಕರ್ಮ ಜಾಸ್ತಿ ಅಂಟಿದರೆ ಆ ಜೀವ ನರಕಕ್ಕೆ ಹೋಗುತ್ತದೆ. ಪುಣ್ಯಸಂಚಯ ಹೆಚ್ಚಾದಾಗ ಸ್ವರ್ಗಕ್ಕೇರುವುದು. ಪಾಪಪುಣ್ಯಗಳೆರಡು ಬೆರೆತಾಗ ತಿರ್ಯಕ್ ಜನ್ಮದಲ್ಲಾಗಲಿ, ಮನುಷ್ಯ ಜನ್ಮದಲ್ಲಾಗಲಿ.ಜೀವ ತೊಳಲಾಡುತ್ತದೆ. ಈ ಚತುರ್ಗತಿಗಳೆಲ್ಲ ಅನಿತ್ಯವಾದುವು. ಈ ಪಾಪಪುಣ್ಯಗಳೇ ಜನನ ಮರಣಗಳಿಗೆ ಕಾರಣ. ಲೌಕಿಕದೃಷ್ಟಿಯಿಂದ ಪಾಪಕರ್ಮ ಕೆಟ್ಟದ್ದು. ಪುಣ್ಯ ಕರ್ಮ ಒಳ್ಳೆಯದೆನ್ನುವರು. ಆದರೆ ಆತ್ಮನ ಹಿತದೃಷ್ಟಿಯಿಂದ ಈ ಎರಡೂ ಕರ್ಮಗಳೂ ಆತ್ಮನನ್ನು ಬಂಧಿಸಿ ಚತುರ್ಗತಿಗಳಲ್ಲಿ ತಿರುಗಿಸುತ್ತದೆ. ಆದ್ದರಿಂದ ಪಾಪಪುಣ್ಯಕರ್ಮಗಳ ಸಂಪೂರ್ಣ ನಿರ್ಜರೆಯೇ ಮೋಕ್ಷಪ್ರಾಪ್ತಿ.

ಸುಕೃತಂ ದುಷ್ಕೃತಮುಂ ಸಮಾನಮದನನ್ಯರ್ಮೆಚ್ಚರೇಕೆಂದೊಡಾ
ಸುಕೃತಂ ಸ್ವರ್ಗಸುಖಕ್ಕೆ ಕಾರಣಮೆನಲ್ತತ್ಸೌಖ್ಯಮೇಂ ನಿತ್ಯಮೋ
ವಿಕೃತಂಗೊಂಡಳಿವಂದಳಲ್ಜನಿಸದೋ ಸ್ವಪ್ನಂಬೋಲೇಂ ಮಾಂಜದೋ
ಪ್ರಕೃತಿಪ್ರಾಪ್ತಿಗೆ ನೂಂಕದೋ ಪಿರಿದದೇಂ ರತ್ನಾಕರಾಧೀಶ್ವರಾ ॥೩೬॥

ಆಧ್ಯಾತ್ಮದೃಷ್ಟಿಯಲ್ಲಿ ಪಾಪಪುಣ್ಯಗಳೆರಡೂ ಒಂದೇ. ಆತ್ಮನನ್ನು ಬಂಧಿಸುವ ಕಬ್ಬಿಣದ ಸಂಕೋಲೆ ಪಾಪಕರ್ಮವಾದರೆ, ಪುಣ್ಯಕರ್ಮವು ಆತ್ಮನನ್ನು ಬಂಧಿಸುವ ಸುವರ್ಣಸಂಕೋಲೆ. ಸಾಮಾನ್ಯರು ಪುಣ್ಯಕರ್ಮವನ್ನು ಒಳ್ಳೆಯದೆಂದು ಭಾವಿಸುವರು. ಏಕೆಂದರೆ ಅದು ಸ್ವರ್ಗಸುಖವನ್ನು ಕೊಡುವುದರಿಂದ. ಆದರೆ ಸ್ವರ್ಗಸುಖವು ಶಾಶ್ವತವೇ? ಆ ಸ್ವರ್ಗದಲ್ಲಿಯೂ ಆಯುಷ್ಯಾವಸಾನ ಉಂಟು. ಸ್ವರ್ಗದಿಂದ ಚ್ಯುತನಾಗುವಾಗ ಆ ಸ್ವರೂಗದ ಭೋಗೋಪಭೋಗಗಳನ್ನು ಬಿಟ್ಟುಬರಬೇಕಲ್ಲಾ ಎಂದು ದುಃಖಿಸಿ ವಿಕಾರ ಮನಸ್ಸಿನಿಂದ ಸಾಯುತ್ತಾರೆ. ಕನಸಿನಂತೆ ಸ್ವರ್ಗಸುಖವೂ ಒಂದು ದಿನ ಬಯಲಾಗುವುದಿಲ್ಲವೇ? ಕರ್ಮಸಂಚಯ ಅಲ್ಲಿಯೂ ತಪ್ಪಿದ್ದಲ್ಲ. ಹೀಗಿರುವಾಗ ಆ ಸ್ವರ್ಗಸುಖ ಏನು ಮಹಾ.

ದುರಿತಂ ತೀರ್ದೊಡೆ ಪುಣ್ಯದೊಳ್ನಿಲುವನಾ ಪುಣ್ಯಂ ಕರಂ ತೀರ್ದೊಡಾ
ದುರಿತಂಬೊರ್ದುವನಿತ್ತಲತ್ತಲೆಡೆಯಾಟಂ ಕುಂದದಾತ್ಮಂಗಿವಂ
ಸರಿಗಂಡಾತ್ಮವಿಚಾರವೊಂದರೊಳೆ ನಿಂದಾನಂದಿಸುತ್ತಿರ್ಪನೇ
ಸ್ಥಿರನಕ್ಕುಂ ಸುಖಿಯಕ್ಕುಮಕ್ಷಯನಲಾ ರತ್ನಾಕರಾಧೀಶ್ವರಾ ॥೩೭॥

ಪಾಪಕರ್ಮದ ತೂಕ ತಗ್ಗಿದಾಗ ಪುಣ್ಯಕರ್ಮದ ಪ್ರಭಾವವು ಏರುವುದು. ಹೀಗೆಯೇ ಆ ಪುಣ್ಯಕರ್ಮದ ಗಂಟು ಪುನಃ ಪಾಪಕರ್ಮದ ಹಿಡಿತಕ್ಕೆ ಜೀವನು ಸಿಕ್ಕಿಕೊಳ್ಳುವನು. ಹೀಗೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಪಾಪಪುಣ್ಯ ಕರ್ಮಗಳ ಜಂಜಾಟದಲ್ಲಿ ಸಿಕ್ಕಿ ತೊಳಲಾಡುತ್ತಾನೆ. ಈ ಬಂಧನದಿಂದ ವಿಮೋಚನೆಯನ್ನು ಹೊಂದಬೇಕಾದರೆ ಪಾಪಪುಣ್ಯಗಳೆರಡನ್ನೂ ಅಹಿತಗಳೆಂದು ಭಾವಿಸಿ ತನ್ನ ಆತ್ಮನ ನೈಜಸ್ವಭಾವವನ್ನರಿತು, ಆತ್ಮಾನಂದಪಡುವವನೇ ನಿತ್ಯನೂ, ಅನಂತಸುಖಿಯೂ, ಅಕ್ಷಯಸುಖಕ್ಕೆ ಭಾಜನನೂ ಆಗುವುದಿಲ್ಲವೇ?

ಬಗೆಯಲ್ದುಷ್ಕೃತಮೊರ್ಮೆ ತಾಂ ಶುಭದಮಾತ್ಮಂಗೇಕೆನಲ್ಪುಣ್ಯವೃ
ದ್ಧಿಗೆ ತಾಂ ಮುಂದನುಬಂಧಮಾದ ಕತದಿಂ ಪುಣ್ಯಂ ಸುಪುಣ್ಯಾನುಬಂ
ಧಿಗೆ ಬಂದಂದದುವುಂ ಶುಭಂ ಸುಕೃತಮಂ ಪಾಪಾನುಬಂಧಕ್ಕೆ ಮುಂ
ಪುಗೆ ಪಾಪಕ್ಕನುಬಂಧಿಪಾಪಮಶುಭಂ ರತ್ನಾಕರಾಧೀಶ್ವರಾ ॥೩೮॥

ಪುಣ್ಯಕ್ಕೆ ಕಾರಣವಾಗಬಹುದಾದ ಪಾಪವೂ ಶ್ರೇಯಸ್ಕರವಾದುದು. ಪುಣ್ಯಬಂಧಕ್ಕೆ ಕಾರಣವಾಗಬಹುದಾದ ಶುಭಕರ್ಮಗಳೆಲ್ಲವೂ ಮಂಗಳಕರವು. ಪಾಪಬಂಧಕ್ಕೆ ಪ್ರೇರಕವಾಗುವ ಪುಣ್ಯಚರಿತವೂ ಅಮಂಗಳಕರವೇ. ಹೀಗೆಯೇ ಪಾಪಬಂಧಕ್ಕೆ ಕಾರಣವಾಗುವ ಪಾಪಪ್ರವೃತ್ತಿಗೆ ಅಮಂಗಳಕರವೆಂದು ಬೇರೆ ಹೇಳಬೇಕೆ.

ಅದು ತಾನೆಂತೆನೆ ಮುನ್ನಗೆಯ್ದದುರಿತಂ ದಾರಿದ್ರ್ಯದೊಳ್ತಳ್ತೊಡಂ
ಸದಯಾಮೂಲಮತಕ್ಕೆ ಸಂದು ನಡೆವಂ ಮುಂದೆಯ್ದುವಂ ಪುಣ್ಯ ಸಂ
ಪದಮಂ ತಾಂ ಸುಕೃತಾನುಬಂಧಿದುರಿತಂ ತನ್ನಿರ್ಧನಂ ಮಿಥ್ಯೆಯೊ
ಳ್ಪುದಿಯಲ್ತಾಂ ದುರಿತಾನುಬಂಧಿದುರಿತಂ ರತ್ನಾಕರಾಧೀಶ್ವರಾ ॥೩೯॥

ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ಜನ್ಮದಲ್ಲಿ ಬಡವನಾಗಿ ಹುಟ್ಟಿ ಬಡತನದ ಬೇಗೆಯನ್ನು ಅನುಭವಿಸಿದರೂ, ಅಹಿಂಸಾ ಧರ್ಮವನ್ನು ನಿಷ್ಠೆಯಿಂದ ಅನುಸರಿಸಿದರೆಅದರ ಫಲವಾಗಿ ಪುಣ್ಯಬಂಧನವಾಗುವುದು. ಇದನ್ನು “ಸುಕೃತಾನುಬಂಧಿದುರಿತ” ವೆನ್ನುವರು. ಇದು ಬಿಟ್ಟು ಹಿಂದಿನ ಜನ್ಮದಲ್ಲಿ ತಾನು ಮಾಡಿದ ಪಾಪವು ಸಾಲದೆನ್ನುವ ಹಾಗೆ ಈ ಜನ್ಮದಲ್ಲಿಯೂ ಬಡತನದಲ್ಲಿ ತೊಳಲುತ್ತಿದ್ದರೂ ದುರ್ಮಾರ್ಗಿಯಾಗಿ ಪಾಪಸಂಚಯಮಾಡಿಕೊಂಡರೆ ಅದನ್ನು
“ದುರಿತಾನುಬಂಧಿ ದುರಿತವೆನ್ನುವರು”.

ಪಡೆವಂ ಪೂರ್ವದ ಪುಣ್ಯದಿಂ ಸಿರಿಯನಾತಂ ಶ್ರೀದಯಾಮೂಲದೊ
ಳ್ನಡೆವಂ ತಾಂ ಸುಕೃತಾನುಬಂಧಿಸುಕೃತಂ ಮತ್ತಾಧನಾಢ್ಯ ಗುಣಂ
ಗಿಡೆ ಮಿಥ್ಯಾಮತದಲ್ಲಿ ವರ್ತಿಪನವಂ ಮುಂದೆಯ್ದುವಂ ದುಂಖಮಂ
ನುಡಿಯಲ್ತಾಂ ದುರಿತಾನುಬಂಧಿಸುಕೃತಂ ರತ್ನಾಕರಾಧೀಶ್ವರಾ ॥೪೦॥

ಪೂರ್ವಜನ್ಮದ ಪುಣ್ಯಪ್ರಭಾವದಿಂದ ಧನಿಕನಾಗಿದ್ದರೂ ಶ್ರೇಷ್ಠವಾದ ಅಹಿಂಸಾಧರ್ಮಾಚರಣೆಯನ್ನು ಈ ಜನ್ಮದಲ್ಲಿಯೂ ಮುಂದುವರಿಸಿಕೊಂಡು ಹೋದರೆ ಅದನ್ನು “ಸುಕೃತಾನುಬಂಧಿ ಸುಕೃತ” ವೆನ್ನುವರು. ಇದು ಬಿಟ್ಟು ಶ್ರೀಮಂತನು ಗುಣಹೀನನಾಗಿ ಮಿಥ್ಯಾದೃಷ್ಪಟಿಯಾದರೆ ಮುಂದೆ ದುಃಖಿಯಾಗದಿರನು. ಇದಕ್ಕೆ “ ದುರಿತಾನುಬಂಧಿಸುಕೃತ”ವೆನ್ನುವರು.

ಅಘಪುಣ್ಯಂಗಳನಿಷ್ಟಮೆಂದು ಬಳಿಕಂ ಲೇಸೆಂದೆನೇಕೆಂದೊಡಂ
ಗಘಟಂಬೊಕ್ಕ ಮನಂ ಸುಧರ್ಮಕೆ ಪುಗಲುನ್ಮಾದ ಪಾಪಂ ಕ್ರಮಂ
ಲಘುವಕ್ಕುಂ ಸುಕೃತಂ ಕ್ರಮಂಬಿಡಿದು ಭೋಗಪ್ರಾಪ್ತಿಯಿಂದಂ ತೀರ್ದು ಮೂ
ರ್ತಿಘನಂಬೊಲ್ಬಯಲಾಗಿ ಮುಕ್ತಿವಡೆಗುಂ ರತ್ನಾಕರಾಧೀಶ್ವರಾ ॥೪೧॥

ಪಾಪಪುಣ್ಯಗಳೆರಡೂ ಆತ್ಮವಿಶ್ವಾಸಕ್ಕೆ ಅಡ್ಡಿಯೆಂದು ಹಿಂದೆ ಹೇಳಿ ಈಗ ಅವು ಕೆಲವುಸಾರಿ ಅನಿಷ್ಟವಲ್ಲವೆಂದು ಹೇಳಿದೆನು. ಇದಕ್ಕೆ ಕಾರಣವುಂಟು. ಜೀವ ಮಡಿಕೆಯೆಂಬ ಈ ಶರೀರದಲ್ಲಿ ಬಂಧಿತವಾಗಿದ್ದರೂ, ಮನಸ್ಸು ಸುಧರ್ಮದ ಕಡೆ ತಿರುಗಿದರೆ ಹಿಂದೆ ಗಳಿಸಿದ ಪಾಪದ ಗಂಟು ತಾನಾಗಿ ಕರಗುವುದು. ಹಾಗೆಯೇ ಪುಣ್ಯಕರ್ಮವೂ ತನ್ನ ಪ್ರಭಾವವನ್ನು ಬೀರಿ ಭೋಗೋಪಭೋಗಗಳನ್ನಿತ್ತು ಆನಂತರ ಮರೆಯಾಗುವುದು. ಪಾಪಪುಣ್ಯಗಳೆರಡೂಹೀಗೆ ತಮ್ಮ ತಮ್ಮ ಫಲಗಳನ್ನಿತ್ತನಂತರ ಮಾಯವಾಗುತ್ತದೆ. ಈ ಕರ್ಮನಿರ್ಜರೆಯಾದ ಕ್ಷಣವೇ ಶರೀರ ಮೋಡದಂತೆ ಬಯಲಾಗಿ ಜೀವಾತ್ಮ ಮುಕ್ತಾತ್ಮನಾಗುವನು.

ಪಡಿಯೇಂ ಜೀವದಯಾಮತಂ ಪರಮಧರ್ಮಂ ತನ್ಮತಂಬೊರ್ದಿ ಮುಂ
ಗಡೆ ನಿರ್ಗ್ರಂಥರಥಕ್ಕೆ ಸಂದ ಯತಿ ಸೂರ್ಯಂಬೊಲ್ಭವಾಂಭೋಧಿಯಂ
ಕಡುವೇಗಂ ಪರಿಲಂಘಿಪಂ ಸುಕೃತಕೃದ್ಗಾರ್ಹಸ್ಥ್ಯನುಂ ಧರ್ಮದಾ
ಪಡಗಿಂ ಮೆಲ್ಲನೆ ದಾಂಟದೇ ಇರನಲಾ ರತ್ನಾಕರಾಧೀಶ್ವರಾ ॥೪೨॥

ಅಹಿಂಸಾಧರ್ಮಕ್ಕಿಂತ ಉತ್ಕೃಷ್ಟ ಧರ್ಮವಿದೆಯೇ? ತ್ರಿಲೋಕಗಳಲ್ಲಿ ಅತ್ಯಂತ ಶ್ರೇಷ್ಠವಾದ ಧರ್ಮವೆಂದೆ ಅಹಿಂಸಾಧರ್ಮವೊಂದೇ, ಇಂಥ ಧರ್ಮವನ್ನು ನಂಬಿ ನಡೆದು ಮುಂದೆ ನಿರ್ಗ್ರಂಥ ಪದವಿಯನ್ನು ಹೊಂದಿ, ಆ “ನಿರ್ಗ್ರಂಥ”
ವನ್ನೇರಿ ಸೂರ್ಯನಂತೆ ಪ್ರಕಾಶಿಸುವ ಮುನಿ ಪುಂಗವ, ಸಂಸಾರವೆಂಬ ಈ ಸಾಗರವನ್ನು ಬಹು ಶೀಘ್ರವಾಗಿ ದಾಟುತ್ತಾನೆ. ಉತ್ತಮ ಶ್ರಾವಕನೂ ಸಹ ಅಹಿಂಸಾ ಧರ್ಮಾಚರಣೆಯಿಂದ ಪುಣ್ಯಕರ್ಮಗಳನ್ನು ಆಚರಿಸುತ್ತ ಸದ್ಗೃಹಸ್ತನಾಗಿ ಬಾಳಿದಾಗ ಧರ್ಮದ ಹಡಗನ್ನೇರಿ ನಿಧಾನವಾಗಿಯಾದರೂ ಸಂಸಾರದಿಂದ ಪಾರಾಗದಿರನು.

ತನುವಂ ಸಂಘದ ಸೇವೆಯೊಳ್ಮನಮನಾತ್ಮಧ್ಯಾನದಭ್ಯಾಸದೊಳ್
ಧನಮಂ ದಾನಸುಪೂಜೆಯೊಳ್ದಿನಮನರ್ಹದ್ಧರ್ಮಕಾರ್ಯಪ್ರವ
ರ್ತನೆಯೊಳ್ಪರ್ವವನೊಲ್ದು ನೋಂಪಿಗಳೊಳಿರ್ದಾಯುಷ್ಯಮಂ ಮೋಕ್ಷಚಿಂ
ತನೆಯೊಳ್ತೀರ್ಚುವ ಸದ್ಗೃಹಸ್ಥನನಘಂ ರತ್ನಾಕರಾಧೀಶ್ವರಾ ॥೪೩॥

ಮುನಿ, ಆರ್ಜಿಕೆ, ಶ್ರಾವಕ, ಶ್ರಾವಿಕೆಯರ ಸೇವೆಯಲ್ಲಿ ದೇಹ ಸವೆಸಬೇಕು. ಆತ್ಮಧ್ಯಾನದಲ್ಲಿ ಮನಸ್ಸು ಲೀನವಾಗಬೇಕು. ದಾನ ಪೂಜಾದಿ ಸದ್ಧರ್ಮಕಾರ್ಯಗಳಲ್ಲಿ ಸಂಪತ್ತು ಸದ್ವಿನಿಯೋಗವಾಗಬೇಕು. ದಿನವೆಲ್ಲಜಿನಧರ್ಮದ ಪ್ರಸಾರ, ಪ್ರಭಾವನೆಯಲ್ಲಿ ಕಳೆಯಬೇಕು. ಪರೂವ ದಿನಗಳಲ್ಲಿ ಭಕ್ತಿ ಶ್ರದ್ಧೆಗಳಿಂದ ನೋಂಪಿಗಳನ್ನಾಚರಿಸಬೇಕು. ಇರು ಆಯುಷ್ಯದ ಪ್ರತಿ ಕ್ಷಣವನ್ನೂ ಮೋಕ್ಷಚಿಂತನೆಯಲ್ಲಿ ಕಳೆಯಬೇಕು. ಮೋಕ್ಷಚಿಂತನೆ ಬಾಳಿನ ಉಸಿರಾಟವಾದರೇನು ಆತ್ಮೋದ್ಧಾರ ಸಾಧ್ಯ. ಸದ್ಗೃಹಸ್ಥನು ತ್ರಿಕರಣಶುದ್ಧಿಯಿಂದ ಈ ದಿನಚರಿಯನ್ನು ಅನುಸರಿಸಿದರೆ ಅವನು ಪಾಪರಹಿತನಾಗಿ ಮೋಕ್ಷಮಾರ್ಗದಲ್ಲಿ ತೊಡಗುತ್ತಾನೆ.

ಪುತ್ರೋತ್ಸಾಹದೊಳಕ್ಷರಾದಿ ಸಕಲಪ್ರಾರಂಭದೊಳ್ವ್ಯಾಧಿಯೊಳ್
ಯಾತ್ರಾಸಂಭ್ರಮದೊಳ್ಪ್ರವೇಶದೆಡೆಯೊಳ್ವೈವಾಹದೊಳ್ನೋವಿನೊಳ್
ಛತ್ರಾದೋಳಗೃಹಾದಿಸಿದ್ಧಿಗಳೊಳರ್ಹತ್ಪೂಜೆಯಂ ಸಂಘಸ
ತ್ಪಾತ್ರಾರಾಧನೆಯುತ್ತಮೋತ್ತಮವಲಾ ರತ್ನಾಕರಾಧೀಶ್ವರಾ ॥೪೪॥

ಮಕ್ಕಳಾದಾಗ, ಅವರುಗಳಿಗೆ ಅಕ್ಷರಾಭ್ಯಾಸ ಮುಂತಾದುವನ್ನು ಪ್ರಾರಂಭಿಸುವಾಗ, ರೋಗಪೀಡಿತರಾದಾಗ, ಯಾತ್ರಾಸಂಭ್ರಮದಲ್ಲಿ, ವಿವಾಹ ಸಮಯದಲ್ಲಿ, ಸಂಕಟಬಂದಾಗ, ನೂತನ ಛತ್ರ,ತೊಟ್ಟಿಲಿಡುವುದು, ಗೃಹ ಇವುಗಳ ಪ್ರವೇಶಕಾಲದಲ್ಲಿ, ಯಾವುದಾದರೂ ಸಿದ್ಧಿಮಾಡಿಸುವಾಗ, ಅರಹಂತರ ಪೃಜೆ, ಸಂಘಸೇವೆ ಸತ್ಪಾತ್ರದಾನ
ಇವುಗಳು ಪರಮೋತ್ಕೃಷ್ಟವಾದುವು. (ಸಂಘಸೇವೆ=ಮುನಿ, ಅರ್ಜಿಕೆ, ಶ್ರಾವಕ, ಮತ್ತು ಶ್ರಾವಿಕೆಯರ ಸೇವೆ- ಶ್ರಮಣ ಸಂಘದ ಸೇವೆ.)

ಆಹಾರಾಭಯವೈದ್ಯಶಾಸ್ತ್ರಮೆನೆ ಚಾತುರ್ದಾನದಿಂ ಸೌಖ್ಯಸಂ
ದೋಹಂ ಶ್ರೀಶಿಲೆ ಲೇಪ್ಯ, ಕಾಂಸ್ಯ, ರಜತಾಷ್ಟಾಪಾದ ರತ್ನಂಗಳಿಂ
ದೇಹಾರಂ ಗೆಯಲಂಗಸೌಂದರಬಲಂತಚ್ಚೈತ್ಯಗೇಹಪ್ರತಿ
ಷ್ಠಾಹರ್ಷಂ ಗೆಯೆ ಮುಕ್ತಿ ಸಂಪದವಲಾ ರತ್ನಾಕರಾಧೀಶ್ವರಾ ॥೪೫॥

ಆಹಾರದಾನ, ಅಭಯದಾನ, ರೋಗಪೀಡಿತರಾದವರಿಗೆ ಔಷಧೋಪಚಾರಮಾಡುವುದು,ಶಾಸ್ತ್ರಾಭ್ಯಸಮಾಡು-
ವವರಿಗೆ ಉತ್ತಮ ಶಾಸ್ತ್ರಪುಸ್ತಕಗಳನ್ನು ಕೊಡುವುದು ಈ ನಾಲ್ಕು ತರಹದ ದಾನಗಳಿಂದ ಸದ್ಗೃಹಸ್ಥನು ಸೌಖ್ಯ-
ಸಂಪದವನ್ನು ಪಡೆಯುತ್ತಾನೆ. ಕಾಂತಿಯುಕ್ತವಾದ ಶಿಲೆ, ಲೆಪ್ಪ, ಕಂಚು, ಬೆಳ್ಳಿ, ಚಿನ್ನ ಮತ್ತು ರತ್ನಗಳಿಂದ ದೇವಾಲಯವನ್ನು ಕಟ್ಟೀಸಿದರೆ, ಶರೀರ ಸೌಂದರ್ಯವುಹೆಚ್ಚಿ ದೃಢಕಾಯನಾಗುವನು. ಆ ದೇಗುಲಗಳಲ್ಲಿ ಭಕ್ತಿ -
ಶ್ರದ್ಧೆಗಳಿಂದ ಜಿನಬಿಂಬವನ್ನು ಪ್ರತಿಷ್ಠಾಪಿಸಿದರೆ ಆ ಶ್ರಾವಕನಿಗೆ ಮುಂದೆ ಮೋಕ್ಷಪ್ರಾಪ್ತಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ಪಿಡಿದೊಲ್ದರ್ಚಿಸೆ ನೋನೆ ದಾನವನಲಂಪಿನಿಂ ಮಾಡೆ ತತ್ಪುಣ್ಯದಿಂ
ಕುಡುಗುಂ ನಿಮ್ಮಯ ಧರ್ಮವೊಂದೆ ನೃಪರೊಳ್ಪಂಭೋಗಭೂಲಕ್ಷ್ಮಿಯಂ
ಬಿಡುಗಣ್ಣೈಸಿರಿಯಂ ಬಳಿಕ್ಕೆ ಸುಕೃತಂ ಭೋಗಂಗಳೊಳ್ತೀರ್ದೊಡಂ
ಕುಡುಗುಂ ಮುಕ್ತಿಯನಿಂತದಾರ್ಕುಡುವರೋ ರತ್ನಾಕರಾಧೀಶ್ವರಾ ॥೪೬॥

ಜಿನೇಂದ್ರನನ್ನು ಎಡೆಬಿಡದೆ ಪ್ರೀತಿಯಿಂದ,  ಭಕ್ತಿಶ್ರದ್ಧೆಗಳಿಂದ ಪೂಜಿಸಿದರೆ, ನೋಂಪಿಗಳನ್ನಾಚರಿಸಿದರೆ, ಸಂತೋಷದಿಂದ ಸತ್ಪಾತ್ರ ದಾನಮಾಡಿದರೆ, ಅದರ ಪುಣ್ಯಪ್ರಭಾವದಿಂದ  ರಾಜಸಂಪತ್ತು, ಅತುಲೈಶ್ವರ್ಯ, ಭೋಗಭೂಮಿಯ ಸಂಪದ,
ಅಮರಲೋಕದ ಅಷ್ಟೈಶ್ವರ್ಯ ಇವೆಲ್ಲವೂ ಪ್ರಪ್ತವಾಗುವುದು. ಇವು ಜಿನಧರ್ಮವನ್ನು ನಂಬಿ ನಡೆದರೆ ಆಗುವ ಲಾಭ! ಆ ಧರ್ಮ ತನ್ನನ್ನು ನಂಬಿ ನಡೆದವರಿಗೆ ಏನನ್ನು ತಾನೆ ಕೊಡುವುದಿಲ್ಲ! ಈ ಪುಣ್ಯಸಂಪತ್ತನ್ನೆಲ್ಲ ಭೋಗಿಸಿದ ನಂತರವೂ ಈ ಜಿನಧರ್ಮ ಈ ಧರ್ಮಾನುರಾಗಿಗಳಿಗೆ ಮೋಕ್ಷಸಾಮ್ರಾಜ್ಯವನ್ನು ಕರುಣಿಸುವುದು. ಇಷ್ಟೊಂದುಕೃಪೆಯನ್ನು ಜಿನಧರ್ಮವಲ್ಲದೆ ಮತ್ತಾವಧರ್ಮ ಕೊಡಲು ಸಾಧ್ಯ.

ಪುಣ್ಯಂಗೆಯ್ಯದೆ ಪೂರ್ವದೊಳ್ಬರಿದೆ ತಾನೀಗಳ್ಮನಂ ನೋಡೆ ಲಾ
ವಣ್ಯಕ್ಕಾಭರಣಕ್ಕೆ ಭೋಗಕೆನಸುಂ ರಾಗಕ್ಕೆ ಚಾಗಕ್ಕೆ ತಾ
ರುಣ್ಯಕ್ಕಗ್ಗದ ಲಕ್ಷ್ಮಿಗಂ ಬಯಸಿಬಾಯಂ ಬಿಟ್ಟು ಕಾಂಕ್ಷೃಮಹಾ
ರಣ್ಯಂಬೊಕ್ಕಕಟೇಕೆ ಚಿಂತಿಸುವುದೋ ರತ್ನಾಕರಾಧೀಶ್ವರಾ ॥೪೭॥

ಹಿಂದಿನ ಜನ್ಮಗಳಲ್ಲಿ ಏನೂ ಪುಣ್ಯಕಾರ್ಯಗಳನ್ನು ಮಾಡದೆ, ಈ ಜನ್ಮದಲ್ಲಿ ಸೌಂದರ್ಯ ಸೊಬಗುಗಳಿಗೆ, ಆಭರಣಗಳಿಗೆ, ಭೋಗೋಪಭೋಗಗಳಿಗೆ, ಸಂತೋಷಮಯವಾದ ವಾತಾವರಣಕ್ಕೆ, ಕೊಡುಗೈ ದಾನಿಯಾಗಿ ಬಾಳುವುದಕ್ಕೆ, ಚಿರಂತನ ಯೌವನಕ್ಕೆ,  ತುಲೈಶ್ವರ್ಯಕ್ಕೆ ಬಯಸಿ ಬಯಸಿ, ಬಾಯಿ ಬಾಯಿ ಬಿಟ್ಟು, ಬಯಕೆಯ ಗೊಂಡಾರಣ್ಯದಲ್ಲಿತೊಳಲಾಡಿ ಏಕೆ ಚಿಂತಿಸುವರೋ? ಬರೇ ಚಿಂತನೆಯಿಂದ ಮನಸ್ಸಿನ ಶಾಂತಿಯನ್ನು ಇನ್ನಷ್ಟು ಕೆಡಿಸಿಕೊಳ್ಳಬಹುದೇ ವಿನಾ ಇನ್ನೇನು ಪ್ರಯೋಜನವಾಗುವುದಿಲ್ಲ. ಇದರ ಬದಲು ಮುಂದಿನ ಜನ್ಮಕ್ಕಾದರೂ ಈಗಲೇ ಪುಣ್ಯದ ಬುತ್ತಿಯನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುವುದು ಒಳ್ಳಿತು.

ಆರಿತ್ತಾರ್ಕಳೆದರ್ದರಿದ್ರಮನದಾವಂಗಾವನೇನೊಂದು ಸ
ತ್ಕಾರಂಗೆಯ್ಯದೆ ಭಾಗ್ಯಮಂ ಕಿಡಿಸಿದಂ ಪೂರ್ವಾರ್ಜಿತಪ್ರಾಪ್ತಿಯಿಂ
ದಾರಿದ್ರ್ಯಂ ಧನಮೆಂಬೆರಳ್ಸಮನಿಕುಂಮತ್ತೇಕೆ ಧೀರತ್ವಮಂ
ದೂರಂ ಮಾಡಿ ಮನಂ ಸದಾ ಕುದಿವುದೋ ! ರತ್ನಾಕರಾಧೀಶ್ವರಾ ॥೪೮॥

ಬಡತನವನ್ನು ಕೊಡುವವರೂ ಇಲ್ಲ. ಹಾಗೆಯೇ ಅದನ್ನು ನಿವಾರಿಸುವವರೂ ಯಾರೂ ಇಲ್ಲ. ಒಬ್ಬನಿಗೆ ಸತ್ಕಾರಲಭಿಸುವುದೆಂದರೇನು? ಒಬ್ಬನ ಭಾಗ್ಯವನ್ನು ಮತ್ತೊಬ್ಬ ಅಪಹರಿಸುವುದೆಂದರೇನು? ಈ ಬಡತನ, ಸಿರಿತನಗಳು ಪೂರ್ವಾರ್ಜಿತ ಪಾಪಪುಣ್ಯಗಳಿಗನುಸಾರವಾಗಿ ಯಾರನ್ನೂ ಹೇಳದೆ ಕೇಳದೆ ತಮ್ಮ ತಮ್ಮ ಫಲಗಳನ್ನು ಕೊಡುತ್ತವೆ. ಈ ವಿಷಯವನ್ನು ತಿಳಿದೂ ಸಹ ಜೀವನು ಧೈರ್ಯಗೆಟ್ಟು ತನ್ನ ಮನಸ್ಸಿನಲ್ಲಿ ಸದಾ ಸಂತಾಪಪಡುವನಲ್ಲಾ!

ಕುರುರಾಯಂ ಬಹುವಿತ್ತಮಂ ಕುಡುವನಾ ಕರ್ಣಂಗೆ ಮತ್ತಾ ಸಹೋ
ದರರ್ಗಾ ಪಾಂಡವರ್ಗೇನುಮಂ ಕುಡನದೇಂ ಪಿಂಬೊಳ್ತಿನೊಳ್ಕರ್ಣನು
ರ್ವರೆ ದಾರಿದ್ರ್ಯನೆನಲ್ಕೆ ಸಂದನರರೇ ಧರ್ಮರ್ಧರಾಧೀಶರಾ
ದರಿದೇಂ ಪಾಪಶುಭೋದಯಕ್ರಿಯೆಯಲಾ ರತ್ನಾಕರಾಧೀಶ್ವರಾ ॥೪೯॥

ದುರ್ಯೋಧನ ಕರ್ಣನಿಗೆ ಬೇಕಾದಷ್ಟು ಹಣವನ್ನು ಕೊಡುತ್ತಿದ್ದನು. ತನ್ನ ದಾಯಾದಿಗಳಾದ ಪಾಂಡವರಿಗೆ ಒಂದು ಬಿಡಿ ಕಾಸನ್ನೂ ಕೊಡುತ್ತಿರಲಿಲ್ಲ. ಮತ್ಸರದಿಂದ ಪಾಂಡುಪುತ್ರರನ್ನು ನಾಶಮಾಡಲೂ ಹವಣಿಸಿದನು. ಆದರೆ ಕೊನೆಗೆ ಆದದ್ದೇನು? ಕರ್ಣನು ತನ್ನಲ್ಲಿದ್ದ ಎಲ್ಲವನ್ನೂ ಕೇಳಿದವರಿಗೆ ಕೊಟ್ಟು ಕಡುಬಡವನೆನಿಸಿಕೊಂಡನು. ಪಾಂಡುಕುಮಾರರು ಕೌರವಾದಿಗಳನ್ನು ಜಯಿಸಿ ಸಿಂಹಾಸನವೇರಿದರು. ಆದ್ದರಿಂದ ಮತ್ತೊಬ್ಬರಿಂದ ದ್ರವ್ಯ ಪಡೆದು ಶ್ರೀಮಂತರಾಗಲು ಸಾಧ್ಯವಿಲ್ಲ. ಬಡವರನ್ನು ಬಡವರಾಗೇ ಉಳಿಸಿ ಶ್ರೀಮಂತಿಕೆಯಿಂದ ದೂರವಿಡಲೂ ಸಾಧ್ಯವಿಲ್ಲ. ಇವಕ್ಕೆಲ್ಲ “ಶುಭ ಅಶುಭ” ಕರ್ಮಗಳೇ ಕಾರಣ. ಇವು ಪುಣ್ಯ ಪಾಪಕರ್ಮಗಳ ಫಲ.

ಉಪಭೋಗಂ ಬರೆ ಭೋಗವೈತರೆ ಮನೋರಾಗಂಗಳಿಂ ಭೋಗಿಪಂ
ತುಪಸರ್ಗಂ ಬರೆ ಮೇಣ್ದರಿದ್ರವಡಸಲ್ಸಂತೋಷಮಂ ತಾಳ್ದು ನಿ
ಮ್ಮ ಪದಾಂಬೋಜಯುಗಂ ಸದಾ ಶರಣೆನುತ್ತಿಚ್ಛೈಸುವಂಗಾ ಗೃಹ
ಸ್ಥಪದಂ ತಾನೆ ಮುನೀಂದ್ರ ಪದ್ಧತಿಯಲಾ  ರತ್ನಾಕರಾಧೀಶ್ವರಾ ॥೫೦॥

ಪುಣ್ಯಕರ್ಮದ ಉದಯದಿಂದ ಭೋಗೋಪಭೋಗಗಳು ಪ್ರಾಪ್ತವಾದಾಗ ಅವುಗಳನ್ನು ಮನೋರಾಗದಿಂದ ಅನುಭವಿಸುವಂತೆ, ಸುಖಿಸುವಂತೆ, ಅಡ್ಡಿ ಅಡಚಣೆಗಳು ಬಂದಾಗಲೂ, ಬಡತನ ಬಂದೇರಿದಾಗಲೂ ಧೃತಿಗೆಡದೆ
ಸಂತೋಷಚಿತ್ತನಾಗಿ, ಸಂಯಮದಿಂದ ಜಿನಪಾದದ್ವಯಗಳನ್ನು ನಂಬಿ ಬಾಳುವ ಗೃಹಸ್ಥ ನಿಜವಾಗಲೂ ಮುನಿಯಷ್ಟೇ ದೊಡ್ಡವನು. ಸಂಸಾರದಲ್ಲಿ ಇರುವ ಜೀವನಿಗೆ ಸುಖದುಃಖಗಳ ಹೊಡೆತ ಅನಿವಾರ್ಯ. ಆದರೆ ಸುಖದಲ್ಲಿ ಹಿಗ್ಗದೆ ದುಃಖದಲ್ಲಿ ಕುಗ್ಗದೆ ಸಮಾಧಾನಚಿತ್ತದಿಂದ ಇರುವುದೇ ಮುಕ್ತಿಯ ಮಾರ್ಗ.

ಸಿಹಿಯಂ ಕಾರಮುಮಾಮ್ಲಮುಂ ತೊಗರುವುಪ್ಪುಂ ಕೈಪೆಯುಂ ಬೇರೆವೇ
ರೆ ಹಿತಂದೋರ್ಕುಮೆನುತ್ತವಕ್ಕೊಲಿವವೊಲ್ ಶ್ರೀಗಂ ದರಿದ್ರಾದುರಾ
ಗ್ರಹಕಂ ಭೋಗಕೆ ರೋಗಕಂ ಪಳಿಕೆಗಂ ಕೇಡಿಂಗೆಯುಂ ಬಾಧೆಗು
ತ್ಸಹಮಂ ಮಾಳ್ಪ ಗೃಹಸ್ಥನುಂ ಸುಖಿಯಲಾ ರತ್ನಾಕರಾಧೀಶ್ವರಾ ॥೫೧॥

ಸಿಹಿ, ಖಾರ, ಹುಳಿ, ಒಗರು, ಉಪ್ಪು, ಕಹಿ ಈ ಷಡ್ರಸಗಳಲ್ಲಿ ಪ್ರತಿಯೊಂದರಲ್ಲಿಯೂ ಒಂದೊಂದು ರುಚಿಯುಂಟು. ಮಾನವನ ನಾಲಿಗೆಗೆ ಇವೆಲ್ಲ ಬೇಕೇ ಬೇಕು. ಸಿಹಿಯನ್ನೇ ತಿಂದು ಖಾರವನ್ನು ಬಿಡುವಹಾಗಿಲ್ಲ. ಉಪ್ಪಿಲ್ಲದೆ ಬರೇ ಹುಳಿಯು ನಾಲಗೆಗೆ ರುಚಿಸದು. ಮಾನವನ ದೇಹಸಂರಕ್ಷಣೆಗೆ ಇವೆಲ್ಲ ಸೂಕ್ತಪ್ರಮಾಣದಲ್ಲಿ ಬೇಕೇ ಬೇಕು. ಇದೇ ರೀತಿ ಸಂಸಾರದಲ್ಲಿ ಬಂದ ಜೀವಿಯು ಬಾಳಿನ ಏರಿಳಿತಗಳಿಗೆ ಒಗ್ಗಿಕೊಂಡು ಬಾಳನ್ನು ಸಂಯಮದಿಂದ ನಡೆಸಬೇಕು. ಸಂಪತ್ತನ್ನೂ ದಟ್ಟದಾರಿದ್ರ್ಯವನ್ನೂ, ದುರಾಗ್ರಹವನ್ನೂ, ಭೋಗವನ್ನೂ, ರೋಗರುಜಿನಗಳನ್ನೂ, ಬಾಳಿನ ಭಿನ್ನ ಭಿನ್ನ ರುಚಿ ಬಂದುದಕ್ಕೆಲ್ಲ ಪ್ರತೀಕಾರವೌಸಗದೆ ಸಂತೋಷಚಿತ್ತದಿಂದ ಅನುಭವಿಸಿದಾಗ ಶ್ರಾವಕನ ಮನೋ ದಾರ್ಡ್ಯ ಅಚಲವಾಗುವುದು.

ಘಟಿಕಾಪಾತ್ರಕನನ್ಯರೊಳ್ಕಥೆಯನೊಂದಂ ಸೂಚಿಸುತ್ತಿರ್ದೊಡಂ
ಸ್ಫುಟದಿಂ ಚಿತ್ತಮುಮಕ್ಷಿಯುಂ ಪದಪದಕ್ಕಾಪಾತ್ರೆಯಂ ಸಾರ್ಗುಮೆಂ
ತುಟುತಾನಂತುಟು ಬಾಹ್ಯದೊಳ್ನೆಗಳ್ದೊಡಂ ಧ್ಯಾನಂ ಕ್ಷಣಕ್ಕೊರ್ಮೆ ಸಂಘಟೆಸಲೂನಮ್ಮಪದಂಗಳೊಳ್ಸುಖಿಯಲಾ ರತ್ನಾಕರಾಧೀಶ್ವರಾ ॥೫೨॥

ಸಮಯದ ಪ್ರಜ್ಞೆಯಿರುವಾತ ಬೇರೊಬ್ಬರಿಗೆ ಕಥೆಯನ್ನು ಹೇಳುತ್ತಿದ್ದರೂ ಅವನ ಮನಸ್ಸು ಕಣ್ಣುಗಳೆಲ್ಲ ಗಡಿಯಾರದ ಕಡೆಗೇ ಇರುತ್ತದೆ. ಕ್ಷಣಕ್ಷಣಕ್ಕೂ ಗಡಿಯಾರದ ಕಡೆ ನೋಡಿ ತನ್ನ ಮುಂದಿನ ಕಾರ್ಯದ ಬಗ್ಗೆ ಅಂತರಂಗದಲ್ಲಿ ಚಿಂತಿಸುತ್ತಿರುತ್ತಾನೆ. ಅದರಂತೆ ಈ ಸಂಸಾರದಲ್ಲಿ ಬಂದು ಲೋಕವ್ಯವಹಾರದ ಜಂಜಾಟದಲ್ಲಿ ಮುಳುಗಿದ್ದರೊ, ನಮ್ಮ ಗಮನ ಪ್ರತಿಕ್ಷಣದಲೂಲೂ ಜಿನೇಂದ್ರನತ್ತ ಸುಳಿದರೆ ನಿಜವಾಗಲೂ ನಾವು ಸುಖಿಗಳಲೂಲವೇ.

ಪಿಡಿದಿರ್ದಾತನ ಕೈಗೆ ಸೂತ್ರವೆನಸುಂ ಸಿಲ್ಕಿರ್ದೊಡಂ ವ್ಯೋಮದೊಳ್
ನಡೆಗುಂ ಗಾಳಿಪಟಂ ಸಮಂತದರವೊಲ್ಮೆಯ್ಯೊಳ್ಮನಂ ಜಂಜಡಂ
ಬಡೆದಿತ್ತಲ್ಸಿಲುಕಿರ್ದೊಡಂ ನೆನಹು ಲೋಕಾಗ್ರಕ್ಕೆ ಪಾಯ್ದತ್ತಲಾ
ಗಡೆ ಸಿದ್ಧಾಂಘ್ರಿಗಳೊಳ್ಪಳಂಜೆ ಸುಖಿಯೈ ರತ್ನಾಕರಾಧೀಶ್ವರಾ ॥೫೩॥

ದಾರವನ್ನು ಎಷ್ಟೇ ಬಲವಾಗಿ ಹಿಡಿದುಕೊಂಡಿದ್ದರೂ, ಗಾಳಿಪಟ ಆಕಾಶದಲ್ಲಿ ಸುಖವಾಗಿ ಚೆನ್ನಾಗಿ ಹಾರಾಡುತ್ತಿರುತ್ತದೆ. ಅದರಂತೆ ನಮ್ಮ ಮನಸ್ಸು ಈ ದೇಹದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದರೂ, ಆಗಾಗ ಸಿದ್ಧಲೋಕವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ನಮ್ಮ ಚಿತ್ತವನ್ನು ಸಿದ್ಧಪರಮೇಷ್ಠಿಗಳ ಪಾದಕಮಲಗಳಲ್ಲಿ ವಿಲೀನಗೊಳಿಸಿದರೆ ನಾವು ಸುಖಿಗಳಾಗುವುದರಲ್ಲಿ ಸಂಶಯವಿಲ್ಲ.

ನಡೆವಾಗಳ್ನಡೆ ಕೊಂಕಿದಾಗಳಿಳೆಯೊಳ್ಬೀಳ್ವಾಗಳೇಳ್ವಾಗಳುಂ
ನುಡಿವಾಗಳ್ನುಡಿದಪ್ಪಿದಾಗಳೆರ್ದೆಗೆಟ್ಟಾಗಳ್ಸುಖಾವಾಪ್ತಿಯೊಳ್
ಬಿಡದಿರ್ಹತ್ಪ್ರಭು ಸಿದ್ಧ ಶಂಕರ ಸಮುದ್ರಧೀಶ್ವರ ತ್ರಾಹಿಯೆಂ
ದೊಡನಭ್ಯಾಸಿಸುವಾತನೇ ಸುಖಿಯಲಾ ರತ್ನಾಕರಾಧೀಶ್ವರಾ ॥೫೪॥

ನಡೆವಾಗ, ಎಡವಿದಾಗ. ಬಿದ್ದಾಗ, ಎದ್ದಾಗ, ಮಾತನಾಡುವಾಗ, ನುಡಿತಪ್ಪಿ ತೊದಲಿದಾಗ, ಎಚ್ಚರತಪ್ಪಿ ಮಾತನಾಡಿದಾಗ, ಭಯವಂಕುರಿಸಿದಾಗ, ಸುಖವಾವರೆಸಿದಾಗ. ಆಗ ಈಗ ಎನ್ನದೆ ಯಾವಾಗಲೂ ಪ್ರತಿಕ್ಷಣವೂ ನಮ್ಮ ಚಿತ್ತ ಭಗವಂತನಕಡೆ ಇರಬೇಕು. ಸದಾ ಊವನನ್ನು ಧ್ಯಾನಿಸುವ ಅಭ್ಯಾಸ ಮಾಡಬೇಕು. “ ಅರಹಂತ, ಸಿದ್ಧ, ಶಂಕರ, ಸಮುದ್ರಾಧೀಶ್ವರ, ರಕ್ಷಿಸು, ರಕ್ಷಿಸು” ಎಂದು ಸದಾ ಹಂಬಲಿಸುವವನೇ ಸುಖಿಯಲ್ಲವೇ?

ಎತ್ತೆತ್ತಂ ಲಲಿತಾಂಗಿಯರ್ಸುಳಿದರತ್ತತ್ತಾಡುಗುಂ ಕಣ್ಗಳೆ
ತ್ತೆತ್ತಂ ಕಾಮಿನಿಯರ್ಮೊಗಂದೆಗೆದರತ್ತತ್ತೊಂದುಗುಂ ಜಿಹ್ವೆ ಮ
ತ್ತೆತ್ತೆತ್ತಂ ಸರಿಮಿಂಡಿಯರ್ತೆಗೆದರತ್ತತ್ತೆಯ್ದುಗುಂ ಬುದ್ಧಿ ನಿ
ಮ್ಮತ್ತಂ ಬಾರದು ಕೆಟ್ಟನೇವೆನಕಟಾ ರತ್ನಾಕರಾಧೀಶ್ವರಾ ॥೫೫॥

ಸುಂದರಾಂಗಿಯರು ಎಲ್ಲೆಲ್ಲಿ ಸುಳಿದಾಡುವರೋ ಅಲ್ಲಲ್ಲಿ ನಮ್ಮ ಕಣ್ಣುಗಳು ತಿರುಗಾಡುತ್ತವೆಯಲ್ಲಾ! ವಿಲಾಸಿನಿಯರೊಡನೆ, ಕಾಮುಕ ಸ್ತ್ರೀಯರೊಡನೆ ಮಾತನಾಡಲು ನನ್ನ ನಾಲಗೆ ತವಕಗೊಳ್ಳುವುದಲ್ಲಾ! ಕನ್ನೆಯರು ಸರಿದತ್ತ ನನ್ನ ಮನಸ್ಸು ಹರಿಯುವುದು. ಆದರೆ ಅಯ್ಯೋ! ಏನುಮಾಡಲಿ, ನನ್ನ ಕಣ್ಣು, ನಾಲಗೆಗಳ ಗಮನ ನಿನ್ನ ಕಡೆ ವಾಲುವುದಿಲ್ಲವಲ್ಲಾ; ಎಂತಹ ಮನೋದೌರ್ಬಲ್ಯ ನನ್ನದು , ನಿನ್ನಲ್ಲಿ ನನ್ನ ಚಿತ್ತ ನೆಡಬೇಕಾದರೆ ಏನುಮಾಡಲಿ ಜಿನೇಂದ್ರ.

ಮೊದಲೊಳ್ಮುಗ್ಗುವನಿಚ್ಚೆವಟ್ಟೊಡನೆ ತಾನುಚ್ಛ್ವಾಸ ನಿಃಶ್ವಾಸಪೂ
ರದೆ ಕೆಯ್ಕಾಲ್ಪಡಿಗೊಂಬನಾ ಕಡೆಯೊಳುಂ ಶಕ್ತಿಕ್ಷಯಂದೋರೆ ತ
ಬ್ಬಿದ ಪೆಣ್ಣಂ ಬಿಡುಗೆಯ್ದು ಕೂಡೆ ಕೆಲದೊಳ್ಬಿಳ್ದಳ್ಳೆವೊಯ್ವಂ ಮನ
ಕ್ಕಿದು ಲೇಸೇ? ಸುಖವೇ? ಮರುಳ್ತನವಲಾ? ರತ್ನಾಕರಾಧೀಶ್ವರಾ ॥೫೬॥

ಮಾನವ ಮೊದಲು ಆಸೆಯಿಂದ ಮುಗ್ಗರಿಸುವನು. ಮರುಕ್ಷಣದಲ್ಲಿ ಏದುಸಿರಿನಲ್ಲಿ ಕೈಕಾಲುಗಳನ್ನು ಬಡಿದುಕೊಂಡು ಒದ್ದಾಡುವನು. ಮದವು ಇಳಿದಮೇಲೆ, ಕೊಬ್ಬಿಳಿದಮೇಲೆ ತಬ್ಬಿದ ಹೆಣ್ಣನ್ನು ಬಿಟ್ಟು ಜೊತೆಯಲ್ಲೇಪಕ್ಕದಲ್ಲಿ ಬಿದ್ದುಕೊಂಡು ಒದ್ದಾಡುವುನಲ್ಲ! ಇದೇನಾದರೂ ಮನಕ್ಕೆ ಹಿತವೇ? ಇದರಿಂದ ಏನಾದರೂ ಸುಖವಿದೆಯೇ ? ಎಂಥ ಮರುಳಾಟವಿದು? ರತಿಕ್ರೀಡೆಯಿಂದ ಆಗುವ ದೈಹಿಕ, ಮಾನಸಿಕ ಪರಿಣಾಮಗಳು ಮನುಷ್ಯನ ಉನ್ಮತ್ತತೆಯನ್ನುತೋರಿಸುತ್ತದೆ ವಿನಾ ಅದರಿಂದ ಅವನಿಗೆ ಯಾವ ತರಹದ ಹಿತವಾಗಲೀ, ಸಂತೋಷವಾಗಲೀ ಉಂಟಾಗಲಾರದು.ಈ ಕ್ಷಣಿಕ ಸುಖಭ್ರಾಂತಿಗೆ ಮನುಷ್ಯ ಚಡಪಡಿಸುವನಲ್ಲ.

ತಿಳಿವಿಲ್ಲಾಗಿ ಶಿಶುತ್ವದೊಳ್ತನಗೆ ತಾಂ ತನ್ನೆಂಜಲೊಳ್ಮೂತ್ರದೊಳ್
ಮುಳುಗಿರ್ದಂ ಬಳಿಕಂ ವಿವೇಕವೆರ್ದೆಯೊಳ್ಮೆಯ್ದೋರೆಯುಂ ಪ್ರಾಯದೊಳ್
ಎಳೆವೆಣ್ಣೆಂಜಲನುಂಡು ಮೂತ್ರಬಿಲದೊಳ್ ಚಿಃ ನಾರುವೀ ಶುಕ್ಲಮಂ
ತುಳುಕಲ್ಮೋಹಿಪನಾತ್ಮನೇಂ ಭ್ರಮಿತನೋ ರತ್ನಾಕರಾಧೀಶ್ವರಾ ॥೫೭॥

ಎಳೆ ಮಗುವಾಗಿದ್ದಾಗ ತಿಳುವಳಿಕೆಯಿಲ್ಲದೆ ತನ್ನ ಎಂಜಲನ್ನೂ, ಮಲಮೂತ್ರವನ್ನೂ ಮೈಗೆಲ್ಲಾ ಬಳಿದುಕೊಂಡದ್ದಾಯಿತು. ಬೆಳೆದಹಾಗೆ ವಿವೇಕ ಬರಬಹುದೆಂದು ತಿಳಿದಿದ್ದು ತಪ್ಪಾಯಿತು. ಯೌವನ ಬಂದಾಗ ಬುದ್ಧಿಯಿದ್ದರೂ, ಪ್ರಾಯದ ಮದ ನೆತ್ತಿಗೆ ಪಿತ್ತವೇರಿ ಹೆಣ್ಣಿಗೆ ಬಾಯಿಬಿಟ್ಟು ಈ ಜೀವ ಆ ವನಿತೆಯ ಎಂಜಲನ್ನು ತಿಂದು ಮೂತ್ರಬಿಲಕ್ಕೆ ದುರ್ನಾತದ ವೀರ್ಯವನ್ನು ತುಳುಕಿಸಲು ಆತುರಪಡುವನಲ್ಲ! ಚಿಃ ಈ ಆತ್ಮನಿಗೆ ಅದೇನು ಭ್ರಾಂತಿ.

ಸುಖವೆಂಬರ್ಸುಖವೆಂತೊ ನಿರ್ಮಲಬಲಂ ಸುಜ್ಞಾನಮುಂ ಕಾಣ್ಕೆ ಸ
ಮ್ಮುಖವಾದಂದದು ಸೌಖ್ಯವಂಗನೆಯ ಸಂಭೋಗಾಂತ್ಯದೊಳ್ ಹೇಯದು
ನ್ಮುಖಮಂ ಶಕ್ತಿವಿನಾಶಮುಂ ಮರವೆಯುಂ ನಿದ್ರಾಜಡಂದೋರೆಯುಂ
ಸುಖವೆಂಬರದೇನೊ ದುರ್ಮುಖರಲಾ ರತ್ನಾಕರಾಧೀಶ್ವರಾ ॥೫೮॥

ಸ್ತ್ರೀ ಸಂಭೋಗವೇ ಸುಖವೆಂದು ಭ್ರಮಿಸಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರಲ್ಲಾ ಈ ಜನರು! ಇವರ ವಿಷಯಲಂಪಟತನಕ್ಕೆ ಏನೆಂದು ಹೇಳಲಿ? ನಿಜವಾದ ಸುಖವೆಂದರೆ ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯಗ-
ಳಲ್ಲವೇ? ಇದನ್ನು ಮರೆತು ತುಚ್ಛಕಾಮವಾಸನೆಗೆ ಮರುಳಾಗಿ, ಶಕ್ತಿಗುಂದಿದರೂ, ಮರವೆಯು ಆವರೆಸಿದರೂ, ನಿದ್ರೆಯೂ ಜಡತ್ವವೂ ತೋರಿದರೂ, ಸ್ತ್ರೀಸಂಭೋಗವೇ ಸುಖವೆಂದು ಹೇಳುವವರು ಮುಠ್ಠಾಳರಲ್ಲವೇ?

ಏನೊಂದುಗ್ರಮೊ ನೋಡ ನೋಟವರಿವೇ ಮೆಯ್ಯಾದ ಶುದ್ಧಾತ್ಮನಂ
ಮೀನಾಕ್ಷೀತನು ತನ್ನ ತಳ್ಕಿಸಲೊಡಂ ನೇತ್ರಂಗಳಂ ಕಟ್ಟಿ ಸು
ಜ್ಞಾನಂಗುಂದಿಸಿ ಮೂರ್ಛೆಗೆಯ್ಸಿ ಪೆಣನೆಂಬೊಲ್ಮಾಡುಗುಂ ಮತ್ತದ
ಕ್ಕಾನಂದಂ ಮಿಗೆ ಮುಗ್ಗುವಂ ಮರುಳಲಾ ರತ್ನಾಕರಾಧೀಶ್ವರಾ ॥೫೯॥

ದರ್ಶನ,  ಜ್ಞಾನವೇ, ಮೆಯ್ಯಾದ ಶುದ್ಧ ಆತ್ಮನೆಲ್ಲಿ ? ಇದನ್ನು ನೋಡದೆ ಹೆಣ್ಣಿನ ಕ್ಷಣಿಕಸುಖಕ್ಕೆ ಸೋತು, ಅವಳ ಆಲಿಂಗನಕ್ಕೆ ಹಾತೊರೆಯುತ್ತಾರೆ. ಸ್ತ್ರೀ ಶರೀರ ಸೋಕಿದೊಡನೆ ಕಣ್ಣಿಗೆ ಕತ್ತಲು ಕವಿದು, ಜ್ಞಾನ ಮರೆಯಾಗಿ ಮೈಮರೆತು ಹೆಣದಂತಾಗುವ ಈ ವಿಷಯಲಂಪಟತನಕ್ಕೆ ಧಿಕ್ಕಾರ! ಎಂಥ ಭಯಾನಕ ಪರಿಸ್ಥಿತಿಯಿದು. ಇಂಥ ಹೇಯಕಾರ್ಯಕ್ಕೆ ಆನಂದ ಉತ್ಸಾಹದೊಡನೆ ಮುನ್ನುಗ್ಗಿ ಮುಗ್ಗರಿಸುವರಲ್ಲ ! ಎಂಥ ಹುಚ್ಚು?
ಮದವೆದ್ದಾನೆಗೆ ಕಲ್ಲ ಪೊಯ್ವುದಿನಿದೇ? ಮೆಯ್ತೀಂಟೆಗಂ ಕಜ್ಜಿಗಂ
ಬದಿಯಂ ತೋಡುವುದೊಳ್ಳಿತಲ್ತು ಬಗೆವಂದಾತ್ಮಂಗೆ ನಾರೀರತಂ
ಮುದವಲ್ತಾದೊಡಮಂತದಂ ಬಿಡಲಶಕ್ಯಂ ಬಿಟ್ಟೋಡಿ ಯೌವನೋ
ನ್ಮದದುದ್ರೇಕವಡಂಗದೇವೆನಕಟಾ ! ರತ್ನಾಕರಾಧೀಶ್ವರಾ ॥೬೦॥

ಮದವೆದ್ದ ಆನೆಗೆ ಕಲ್ಲೆನಿಂದ ಹೊಡೆದರೆ ಹಿತವಾದೀತೇ? ಅಂಥ ಆನೆಯನ್ನು ಅಂಕೆಯಲ್ಲಿ ಇಟ್ಟುಕೊಳ್ಳಲಾದೀತೇ ; ಮೆಯ್ ನೆವೆಯಾದಾಗ, ಕಜ್ಜಿಯೆದ್ದಾಗ, ಕೆಸರುತೋಡಿ ಅದರಲ್ಲಿ ಕುಳಿತುಕೊಂಡರೆ ಒಳ್ಳೆಯದಾದೀತೇ? ಸ್ತ್ರೀಸಹವಾಸ ಜೀವಕ್ಕೆ ಹಿತವಲ್ಲವೆಂಬುದೇನೋ ನಿಜ. ಆದರೆ ಈ ಯೌವನದ ಸೊಕ್ಕನ್ನು ತಡೆಯಲು ಸಾಧ್ಯವಾಗುತ್ತಿಲ್ಲವಲ್ಲ! ಸ್ತ್ರೀ ಸಹವಾಸ ಅನಿವಾರ್ಯವಾಗಿದೆಯಲ್ಲ! ಏನು ಮಾಡಲಿ?

ತನುವೇಳ್ಕೆಂಬವನೌಷಧಕ್ಕೆಳಸನೇ? ಪಿತ್ತೋರ್ಜಿತಂ ದೇಹಶೋ
ಧನೆಯಂ ಮಾಳ್ಪವೊಲಂಗನಾಸುರತದಿಂದ ತನ್ನಿಂದ್ರಿಯಂ ಪೋಗೆ ಯೌ
ವನತಾಪಂ ನಿಲುಗುಂ ನಿಲಲ್ಚರಿತೆ ಸಲ್ಗುಂ ಸದ್ಗೃಹಸ್ಥಂಗೆ ತ
ತ್ತನುಬೇಡೆಂಬ ಮುನೀಶ್ವರಂಗುಚಿತಮೇ?ರತ್ನಾಕರಾಧೀಶ್ವರಾ॥೬೧॥

ಧರ್ಮಾನುಷ್ಠಾನನಾಗಿದೇಹವನ್ನು ಬಯಸುವವನು, ಅದರ ಸುಸ್ಥಿತಿಗಾಗಿ ರೋಗಬಂದಾಗ ಔಷಧಿ ಕುಡಿಯದಿರುತ್ತಾನೆಯೇ? ಪಿತ್ತ ಕೆರಳಿದಾಗ ಅದರ ಶಮನಕ್ಕಾಗಿ ವಾಂತಿಮಾಡಿಕೊಂಡು ದೇಹವನ್ನು ಶುದ್ಧಿಮಾಡಿಕೊಳ್ಳುವುದಿಲ್ಲವೇ? ಹಾಗೆ ಯೌವನದಲ್ಲಿ ಕಾಮವನ್ನು ತಡೆಯಲು ಸಾಧ್ಯವಿಲ್ಲದಿರುವಾಗ ಅದರ ಮದವನ್ನು ಇಳಿಸಲು ಸ್ತ್ರೀ ಸಂಭೋಗ ಅನಿವಾರ್ಯ,  ವೀರ್ಯ ತುಳುಕಿದಮೇಲೆ ಕಾಮದ ಕಾವು ಆರಿ ಸಮಾಧಾನವಾಗುವುದು, ಅನಂತರ ಸದ್ಗೃಹಸ್ಥನಿಗೆ ಸಚ್ಛಾರಿತ್ರ ಲಭಿಸುತ್ತದೆ. ಇದು ಗೃಹಸ್ಥಾಶ್ರಮದ ಒಂದು ಲಕ್ಷಣ. ಗೃಹಸ್ಥನಿಗೆ ಇದು ಸಲ್ಲುತ್ತದೆ. ಆದರೆ ಅನಿತ್ಯವಾದ ಈ ಶರೀರದ ಮೇಲಿನ ಮಮಕಾರವನ್ನು ತೊರೆದ ಮಹಾಮುನಿ ಕಾಮಕ್ರೀಡೆಗಾಶಿಸಬಹುದೇ? ಅದು ಸರಿಯಾದೀತೆ? ಗೃಹಸ್ಥ ತನ್ನ ಧರ್ಮಪತ್ನಿಯಲ್ಲಿ ತನ್ನ ಕಾಮವಾಸನೆಯನ್ನು ತೀರಿಸಿಕೊಳ್ಳಬಹುದು. ಆದರೆ ಮುನಿಯಾದವನಿಗೆ ಮನಸ್ಸಿನಲ್ಲಿಯೂ ಸಹ ಇಂಥ ಭಾವನೆ ಬರಬಾರದು.

ವಿಷಮೋದ್ರೇಕದ ಜವ್ವನಂದಳೆದೊಡಂ ತತ್ಪ್ರಾಯದಿಂ ಪೆಣ್ಗಳೊಳ್
ವಿಷಯಕ್ಕಾಟಿಸನಾವಗಂ ಪರಮತತ್ವ ಜ್ಞಾನ ಸಂತುಷ್ಟಕಂ
ರಿಸಿತಾನಕ್ಕೆಮ ಶಿಷ್ಯನಕ್ಕೆಮ ಅವಂ ಮಾನುಷ್ಯನಲ್ತಲ್ತು ನಿ
ರ್ವಿಷರೂಪಂ ನಿರಘಂ ನಿರಾವರಣನೈ ರತ್ನಾಕರಾಧೀಶ್ವರಾ॥೬೨॥

ಏರುಜವ್ವನದಲ್ಲಿ ಕಾಮದ ತೀವ್ರತೆಯಿದ್ದರೂ ಅಂತಹ ಯೌವನಾವಸ್ಥೆಯಲ್ಲಿಯೂ ಸ್ತ್ರೀಯರಲ್ಲಿ ಸಂಭೋಗಸುಖಕ್ಕೆ ಬಯಸದೆ ಇರುವುದೇ ಸಾಮಾನ್ಯದ ವಿಷಯವಲ್ಲ. ತನ್ನ ಇಂದ್ರಿಯಗಳ ಮೇಲೆ ಸಂಪೂರ್ಣ ಹತೋಟಿಯಿರುವವನಿಗೆ ಮಾತ್ರ ಇದು ಸಾಧ್ಯ.  ಅಂತಹ ಜಿತೇಂದ್ರಿಯನು ಪರಮ ತತ್ವಜ್ಞಾನಿಯಾಗಲಿ, ತಪಸ್ವಿಯಾಗಲಿ, ಶಿಷ್ಯೋತ್ತಮನಾಗಿರಲಿ ಅವನನ್ನು ಸಾಮಾನ್ಯ ಮನೈಷ್ಯರ ಗುಂಪಿಗೆ ಸೇರಿಸಲಾಗುವುದಿಲ್ಲ. ಅವನು ವಿಷಯಸುಖರಹಿತ ಸ್ವರೂಪವುಳ್ಳವನೂ, ಪಾಪರಹಿತನೂ, ಕರ್ಮನಿರ್ಜರೆಯಾದ ಮಹಾಚೇತನವೇ ಆಗಿರಲಿಕ್ಕೆ ಸಾಧ್ಯ.

ಮರ್ದುಂ ಮಾನಿನಿಯುಂ ಸಮಾನಮರಿವಂಗಂತಲ್ಲದೇಂ ಪೆಣ್ಣೊಳೊಂ
ದಿರ್ದುಂ ಶ್ರೀ ಜಿನದತ್ತನುಂ ಕಪಿಲಮಿತ್ರಂ ವಾರಿಷೇಣಾದಿಗಳ್
ಸಾರ್ದಿರ್ಪರ್ಸುಡುಗಾಡನೇಕೆ ತಪವೇಕಾ ಪರ್ವದೊಳ್ಮತ್ತೆ ಪೆ
ಣ್ಣಿರ್ದತ್ತೈದುವರೆಯ್ದಿಯುಂ ಭ್ರಮಿತರೋ ರತ್ನಾಕರಾಧೀಶ್ವರಾ ॥೬೩॥

ತಿಳಿದಂಥವರಿಗೆ ಔಷಧವೂ ಸ್ತ್ರೀಯೂ ಎರಡೂ ಒಂದೇ, ಶ್ರೀಜಿನದತ್ತ,ಕಪಿಲಮಿತ್ರ, ವಾರಿಷೇಣರೇ ಮೊದಲಾದ ಆತ್ಮಜ್ಞಾನಿಗಳು, ತಮಗೆ ನಲ್ಲೆಯರಿದ್ದರೂ ಆಗಾಗ ಸ್ಮಶಾನಕ್ಕೆ ಹೋಗಿ ತಪಸ್ಸನ್ನಾಚರಿಸಿದರು. ಪರ್ವತಿಗಳಲ್ಲಿ ಸಂಸಾರದ ಎಲ್ಲ ವ್ಯವಹಾರವನ್ನೂ ತೊರೆದು ಧ್ಯಾನಾಸಕ್ತರಾಗುತ್ತಿದ್ದರು. ಅನಂತರ ಮನೆಗೆ ಬಂದರೂ ತಮ್ಮ ಮಡದಿಯರಲ್ಲಿ ಮೋಹಗೊಳ್ಳುತ್ತಿದ್ದರೇ? ತಾವರೆ ಎಲೆಯ ಮೇಲಿನ ಹನಿಯಂತೆ ಸಂಸಾರಕ್ಕೆ ಅಂಟಿಯೂ ಅಂಟದಂತೆ ಜ್ಞಾನಿಗಳುಮೆರೆಯುತ್ತಾರೆ.

ಧಾರಾಪೂರ್ವಕಮಾದ ಪೆಣ್ಗಳೊಳವರ್ ಪ್ತ್ಯೇಕಮೇಕೈಕ ಪ
ತ್ನಿರಾಗವ್ರತಿಕರ್ ಮದಕ್ಷಯನಿಮಿತ್ತಂ ಕಾಮಮಂ ತೀರ್ಚುವರ್
ವಾರಸ್ತ್ರೀ ಬಹುಲಾಂಗನಾಪರವಧೂ ಚೇಟೀರತಕ್ಕಾಟಿಸರ್
ಸಾರಾತ್ಮರ್ಜಿನದತ್ತ ಮುಖ್ಯರಘರೇ? ರತ್ನಾಕರಾಧೀಶ್ವರಾ॥೬೪॥

ಜಿನದತ್ತರಂತಹ ಸಮ್ಯಕ್ ದೃಷ್ಟಿಗಳು ಧಾರಾಪೂರ್ವಕವಾಗಿ ಕೈಹೆಡಿದ ಧರ್ಮಪತ್ನಿಯೊಡನೆ ಮಾತ್ರ ತಮ್ಮ ಯೌವನದ, ಮದದ ಸೊಕ್ಕನ್ನಡಗಿಸಲು ಸಂಭೋಗಿಸಿದರೇ ಹೊರತು ಎಂದೂವೇಶ್ಯೆಯರಥಡನಾಗಲಿ, ಬಹುಪತ್ನಿಯರೊಡನಾಗಲಿ, ದಾಸಿಯರೊಡನಾಗಲಿ ಕೂಡಿಲ್ಲ. ಏಕಪತ್ನೀವ್ರತಸ್ಥರೂ, ಪವಿತ್ರಾತ್ಮರೂ ಆದ ಇಂತಹ ಪುಣ್ಯಾತ್ಮರುಗಳ ಬಳಿ ಪಾಪಕರ್ಮ ಎಂದಾದರೂ ಸುಳಿದೀತೆ?

ಸತ್ಯಾಧಿಷ್ಠಿತಧರ್ಮಮಂ ತಿಳಿದು ಜೀವಂ ತನ್ನನೀ ಕಾಮವ
ಪ್ರತ್ಯಾಖ್ಯಾನ ಕಷಾಯಸಂಭವದೆ ಸುತ್ತಿತ್ತೆಂದು ಪೆಣ್ಗೂಡಿಯುಂ
ರತ್ಯಂತೋದ್ಭವಹೇಯಮಂ ನೆನೆಯುತುಂ ಪೋಗಲ್ಜಯಂ ಪೆಣ್ಗೆ ತಾ
ನತ್ಯಂತ ಪ್ರಿಯಬದ್ಧನಾಗೆ ಕಿಡನೇ? ರತ್ನಾಕರಾಧೀಶ್ವರಾ॥೬೫॥

ಯಥಾರ್ಥವಾಗಿರುವ ಧರ್ಮದ ಮರ್ಮವನ್ನು ತಿಳಿದು ತನ್ನ ಆತ್ಮೋದ್ಧಾರಕ್ಕಾಗಿ ಹೆಣಗಾಡುತ್ತಿರುವ ಜೀವನು ಈ ಸಂಸಾರದಲ್ಲಿ ಸಿಕ್ಕಿದ್ದರೂ ತನ್ನ ದೃಷ್ಠಿಯನ್ನು ಯಾವಾಗಲೂ ಊರ್ದ್ವಮುಖವಾಗಿಯೇ ಇಟ್ಟಿರುವನು. ಸಂಭೋಗದ ಇಚ್ಛೆಯು ಅಪ್ರತ್ಯಾಖ್ಯಾನ ಕಷಾಯಗಳ ಸಂಭವದಿಂದ ತನಗೆ ಉಂಟಾಗುತ್ತಿದೆ ಎಂದು ತಿಳಿದು ತನ್ನ ಕಾಮದ ಕಾವನ್ನು ತನ್ನ ಧರ್ಮಪತ್ನಿಯಲ್ಲಿ ಕೂಡಿ  ಆರಿಸಿಕೊಳ್ಳುವನು. ಹೀಗೆ ಸಂಭೋಗದಲ್ಲಿ ತೊಡಗಿದ್ದರೂ ಅದರ ಹೇಯತ್ವವನ್ನು ಪರಿಭಾವಿಸುತ್ತಿರುವನು. ಇಂತಹವನಿಗೆ ಜಯಸಿದ್ಧಿ ಖಂಡಿತ. ಇದು ಬಿಟ್ಟು ಸ್ತ್ರೀ ಮೋಹದಲ್ಲೇ ಮುಳುಗಿಹೋದರೆ ಅಅವನು ಪೂರ್ಣ ಮುಳುಗಿದಂತೆಯೇ ಸರಿ.

ಮೊಲೆಯುಂ  ಮುದ್ದುಮೊಗಮಂ ಬೆಡಂಗೆಸೆಯೆ ಪೆಣ್ಣಂತಿರ್ದಳಿಂತಿರ್ದಳೆಂ
ದೊಲವಿಂ ಭಾವಿಸಿ ಕಾಣ್ಬುದೇ ನರಕಮಬ್ಧಿಪ್ರಾಂತಮಗ್ನಾದ್ರಿಯೊಳ್
ಸಲಿಲಂ ತನ್ನುಡೆ ಮುಟ್ಟಿ ತೋರ್ಪನದೆ ಪಲ್ಯಂಕಾಸನಂ ಸ್ಫಾಟಿಕೋ
ಜ್ಜ್ವಲನೆಂದಾಗಳೆ ನಿಮ್ಮ ಕಂಡೊಡೆ ಸುಖಂ ರತ್ನಾಕರಾಧೀಶ್ವರಾ॥೬೬॥

ಸುಂದರಿಯಾದ ಸ್ತ್ರೀರೂಪವನ್ನೂ, ಅಂಗಾಂಗಗಳ ಲೃವಣ್ಯವನ್ನೂ ಮನಸ್ಸಿನಲ್ಲಿ ಮತ್ತೆ ಮತ್ತೆ ಕಲ್ಪೆಸಿಕೊಂಡು ಮೆಲುಕುಹಾಕುವುದೇ ನರಕ. ಸಾಗರದ ನಡುವೆ ಮುಳುಗಿರುವ ಪರ್ವತಾಗ್ರದಲ್ಲಿ ಪರಮ ಪರಂಜ್ಞೋತಿ ಸ್ವರೂಪನಾದ ಅರಹಂತಮೂರ್ತಿ ಪದ್ಮಾಸನದಲ್ಲಿ ವಿರಾಜಮಾನನಾಗಿದ್ದಾನೆಎಂದು ಮತ್ತು ಆ ಮೂರ್ತಿಯ ಸೊಂಟದವರೆಗೆ ನೀರಿದೆಯೆಂದು ಕಲ್ಪೆಸಿಕೊಂಡು ಮತ್ತೆ ಮತ್ತೆ ಮನಸ್ಸಿನಲ್ಲಿ ಅದನ್ನೇ ಪರಿಭಾವಿಸುತ್ತಾಹೋದರೆ ಜೀವಕ್ಕೆ ತಂಪಾಗುವುದು.
ಅದೇ ನಿಜವಾದ ಸುಖ ಮತ್ತು ಪ್ರೀತಿ.

ಪೆರರಂ ಪೇಳ್ದೊಡೆ ನೋವರಾನೆನಗೆ ಪೇಳ್ವೆಂ ಕಾಮಿನೀ ಮೂತ್ರದೊ
ಜ್ವರಮೆಯ್ಯಂ ಲತೆಯೆಂದು ಮಾಂಸಕುಚಮಂ ಹೇಮಾಬ್ಜಮೆಂದೆಂದು ನೆ
ತ್ತರನುಂಡಾತುಟಿಯಂ ಸುಧಾರುಚಿಯೆನುತ್ತಾಂ ಬಿಳ್ದುದುಂ ಸಾಲದ
ನ್ಯರನೊಯ್ದೆಂ ಕವಿಯೋ? ವಲಂ ಕಪಿಯೊ ನಾಂ ? ರತ್ನಾಕರಾಧೀಶ್ವರಾ ॥೬೭॥

ಇನ್ನೊಬ್ಬರನ್ನು ಟೀಕಿಸಿದರೆ ನೊಂದುಕೊಳ್ಳುವರು. ಆದ್ದರಿಂದ ನನ್ನನ್ನು ನಾನೇ ಟೀಕಿಸಿಕೊಳ್ಳುವೆನೈ. ಕಾಮಿನಿಯರ ಮಲಮೂತ್ರಗಳ ಮನೆಯಾದ ದೇಹವನ್ನು ಲತೆಯೆಂದು ಬಣ್ಣಿಸಿದೆ. ಮಾಂಸಭರಿತವಾದಮೊಲೆಗಳನ್ನು ಬಂಗಾರದ ಕಮಲಗಳೆಂದು ಬಣ್ಣಿಸಿದೆ. ರಕ್ತರಂಜಿತವಾದ ತುಟಿಗಳನ್ನು ಸುಧಾರುಚಿಯೆನ್ನುತ್ತ ಸಾರಿರುವೆನಲ್ಲಾ! ಏನು ನನ್ನ ಅವಿವೇಕ, ಹುಚ್ಚುತನ ! ನಾನು ಕೆಟ್ಟಿದ್ದಲ್ಲದೆ, ನನ್ನ ಕಾವ್ಯವನ್ನು ಓದುವವರನ್ನು ತಪ್ಪುದಾರಿಗೆ ಎಳೆದೆನಲ್ಲಾ! ನಿಜವಾಗಿ ನಾನು ಕವಿಯೋಇಲ್ಲವೇ? ಕಪಿಯೋ? ನಾನು ಬೇರೆ ಕಾಣೆ!

ಗುರುಮಾತಾಪಿತರಂ ಪತಿವ್ರತೆಯರಂ ಸಮ್ಯಕ್ತ್ವ ಸಂಪನ್ನರಂ
ಪಿರಿದುಂ ಬಣ್ಣಿಸಿ ಪೇಳ್ಗೆ ತೀರ್ಥಕಥಾಶೃಂಗಾರಮಂ ಪೇಳ್ಗೆ ಮೇಣ್
ದುರಿತ ಸ್ತ್ರೀಯರನಾತ್ಮಬಾಹ್ಯರನದೇಂ ಪೇಳ್ವರ್ದಿನಂ ಸಗ್ಗದಂ
ತಿರೆಯಂಧಂಗೆ ತಮಿಸ್ರೆಯಂ ನುಡಿವರೇ! ರತ್ನಾಕರಾಧೀಶ್ವರಾ ॥೬೮॥

ಹಿರಿಯರನ್ನು, ತಂದೆತಾಯರನ್ನು, ಪತಿವ್ರತೆಯರನ್ನು, ಸಮ್ಯಕ್ತ್ವ ಸಂಪನ್ನರನ್ನು ಎಷ್ಟು ಬೇಕಾದರೂ ಕೊಂಡಾಡಲಿ. ತೀರ್ಥಂಕರ ಪುರಾಣಗಳಲೂಲಿ ಬರೈವ ಶೃಂಗಾರ ಪ್ರಸಂಗಗಳನ್ನು ಸೊಗಸಾಗಿ ವರ್ಣಿಸಲಿ, ಇವೆಲ್ಲವೂ ಮಾನವನ ಭಾವನೆಯನ್ನುತಿಳಿಯಾಗಿಡುತ್ತದೆ. ಇದು ಬಿಟ್ಟು ದುಷ್ಟ ಸ್ತ್ರೀಯರನ್ನು, ಆತ್ಮಧ್ಯಾನದ ಕಡೆ ಲಕ್ಷ್ಯವಿಲ್ಲದವರನ್ನು, ದುರ್ಮಾರ್ಗಿಗಳನ್ನು ಕೊಂಡಾಡಿ, ಅವರುಗಳ ಮೇಲೆ ಕಾವ್ಯ ರಚನೆಮಾಡಿ ಅದರಿಂದ ತಾನೂ ಕೆಟ್ಟು ಇತರರನ್ಕೂ
ಕೆಡಿಸುವರಲ್ಲಾ! ಸ್ವರ್ಗದಂತಿರುವ ಹಗಲನ್ನು ಬಿಟ್ಟು ಕುರುಡನ ಮುಂದೆ ಕತ್ತಲೆಯನ್ನು ವಿವರಿಸುವರಲ್ಲಾ! ಏನಿದು ಮೂರ್ಖತನ.

ಕವಿತಾಶಕ್ತಿಯೆ ಕಲ್ಪವಲ್ಲಿಯದನಾ ಸದ್ಧರ್ಮಮೆಂದೆಂಬ ಮೇ
ರುವಿನೊಳ್ಬಿತ್ತಿ ಮನೋವಿಶುದ್ಧಿ ಬಲವೀರ್ಯಂ ಬುದ್ಧಿ ಸಾಫಲ್ಯಮಾ
ಕವಿಯುಂ ಸರ್ವರುಮುಣ್ಬರಾ ಫಲಮನಿತ್ತಲ್ಮಾಣ್ದು ಮಿಥ್ಯಾತ್ವಮಾ
ರವದೊಳ್ಬಿತ್ತಿ ಬಳಲ್ವರೇಕೆಯಕಟಾ!ರತ್ನಾಕರಾಧೀಶ್ವರಾ ॥೬೯॥

ಕವಿತಾಶಕ್ತಿ ಕಲ್ಪಲತೆಯಿದ್ದಂತೆ. ಆ ನಿಸರ್ಗದತ್ತಶಕ್ತಿ ಪೂರ್ವಕೃತಪುಣ್ಯದಿಂದಾದುದು. ಅದನ್ನು ಸದೂವಿನಿಯೋಗಮಾಡಬೇಕು. ಪರರಿಗೆ ಆ ಶಕ್ತಿಯಿಂದ ಉಪಕಾರವಾಗಬೇಕು, ಹಿತವಾಗಬೇಕು. ಸದ್ಧರ್ಮವೃದ್ಧಿಗಾಗಿ ಬಳಸಬೇಕು. ಸದ್ಧರ್ಮವೆಂಬ ಮೇರುಪರ್ವತದಲ್ಲಿ ಬಿತ್ತಿದರೆ ಉತ್ತಮ ಫಲಗಳು ದೊರೆಕುತ್ತವೆ. ಮನೋನಿರ್ಮಲತೆ, ಶಾಂತಿ, ಶರೀರಶಕ್ತಿ, ಬುದ್ಧಿಶಕ್ತಿ ಇವೆಲ್ಲವನ್ನೂ ಕವಿಯೂ ಮತ್ತು ಆತನ ಕೃತಿರತೂನವನ್ನು ಮಿಥ್ಯಾತ್ವವೆಂಬ ಮರುಭೂಮಿಯಲ್ಲಿ ಬಿತ್ತಿದರೆ ಉತ್ತಮ ಫಲಗಳು ದೊರಕುತ್ತದೆಯೇ? ಕವಿ ತಾನು ಕೆಡುವುದಲ್ಲದೆ ಪರರನ್ನೂ ತಪ್ಪುದಾರಿಗೆ ಎಳೆದು ದುಃಖಿಯಾಗುತ್ತಾನೆ. ಪರರೂ ದುಃಖಪಡುವ ಹಾಗೆ ಮಾಡುತ್ತಾನೆ.

ಒಡಲಂರಕ್ಷಿಸಲನ್ಯರಂ ನುತಿಸಿದಾ ಕೊಂಡಾಟಮಂ ಪೆಣ್ಗಳೊಳ್
ಕಿಡೆಬಿಳ್ದಾಡಿದ ಲಂಪಟಭ್ರಮಣಮದಾ ಬಂಡಾಟಮಂ ಸರ್ವರೊಳ್
ನುಡಿದೇಕುರ್ಬುವರಯ್ಯ ಪುಣ್ಯಕಥೆಯೋ? ಅದ್ಯಾತ್ಮಮೋ? ಕೊಳ್ಗೆಸ
ರ್ಮಡುವಂ ಪಾಲ್ಗಡಲೆಂದು ಕಂಡರಕಟಾ!ರತ್ನಾಕರಾಧೀಶ್ವರಾ ॥೭೦॥

ಹೊಟ್ಟೆಪಾಡಿಗಾಗಿ ಕಂಡಕಂಡವರನ್ನು ಹೊಗಳಿ ಸ್ತೋತ್ರಮಾಡುವುದೂ, ಕಾಮುಕತನದಿಂದ ಮನಸ್ಸಿಗೆ ಬಂದಹಾಗೆ ವರ್ತಿಸಿ ಸ್ತ್ರೀಯರಲ್ಲಿ ಆಡಿದ ಆ ಲಂಪಟತನದಿಂದ ಭ್ರಮಣೆಯು ಬಂಡಾಟವನ್ನು ನಾಚಿಕೆಗೆಟ್ಟು ಇನ್ನೊಬ್ಬರಲ್ಲಿ ವರ್ಣಿಸುವುದು, ಇದು ಹುಚ್ಚುತನವಲ್ಲವೇ? ಇದರಿಂದ ಏನು ಪುರುಷಾರ್ಥ ಸಾಧಿಸಿದಂತಾಯಿತು? ಇದೇನು ಪುಣ್ಯಕಥೆಯೇ ಅಥವಾ ಆತ್ಮತತ್ತ್ವ ವಿಚಾರವೇ? ಕೊಳೆತು ನಾರುವ ಕೆಸರಿನ ಗುಂಡಿಯನ್ನು ಕ್ಷೀರಸಾಗರವೆಂದು ಹೇಳುವರಲ್ಲಾ ! ಈ ಮೂರ್ಖರು.

ವೀಣಾ ಕಿನ್ನರಿ ವೇಣು ತಾಳ ಮುರಜಾಳಾಪದಿ ಸಂಸಿದ್ಧಿಗೀ
ರ್ವಾಣ ಪ್ರಾಕೃತವಾಕ್ಯಸಿದ್ಧಿಸುಕವಿತ್ವಂ ಸುಸ್ವರಂ ಸತ್ಕುಲಂ
ತ್ರಾಣಂ ಶ್ರೀ ಚೆಲುವಕ್ಕೆಯಾದೊಡಮದೇನಾ ಲೀಲೆಗಂ ನಿಮ್ಮಕ
ಲ್ಯಾಣಾರಾಧನೆಯಕ್ಕೆ ಚಿತ್ತವಿಸದಂ ರತ್ನಾಕರಾಧೀಶ್ವರಾ ॥೭೧॥

ವೀಣೆ, ಕಿನ್ನರಿ, ಕೊಳಲೈ, ತಾಳ, ಮದ್ದಳೆ ಮೊದಲಾದ ವಾದ್ಯಗಳನ್ನು ನುಡಿಯಿಸುವುದರಲ್ಲಿ ಪ್ರಾವೀಣ್ಯವನ್ನು ಪಡೆದಿರಬಹುದು. ಮಧುರವಾಗಿ, ಇನಿದಾದಕಂಠದಿಂದ ಹಾಡಬಹುದು. ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದು ಉತ್ತಮ ಲೇಖಕನೂ, ವಾಗ್ಮಿಯೂ ಆಗಿರಬಹುದು. ಪ್ರತಿಭಾವಂತನಾದ ಕವಿಯಾಗಿರಬಹುದು. ಸುಕವಿಜನ ಮನೋಹರನಾಗಿರಬಹುದು. ಸತ್ಕುಲದಲ್ಲಿ  ಹುಟ್ಟಿ, ದೃಢಕಾಯನಾಗಿ, ಸುಂದರಾಂಗನಾಗಿರಬಹುದು. ಈ ಸಂಪತ್ ಸಮೃದ್ಧಿಗಳುಉಂಟಾದರೂ ಅವುಗಳಿಂದ ಅಹಂಕಾರ ಪಡದೆ, ಚಿತ್ತವಿಚಲಿತನಾಗದೆ, ಇರೈವಂತೆ ಅನುಗ್ರಹಿಸು ದೇವ! ಈ ಪುಣ್ಯಫಲಪ್ರಾಪ್ತಿಯೆಲ್ಲವೂ ನಿನ್ನನ್ನು ಸ್ತೋತ್ರಮಾಡುವುದರಲ್ಲಿ, ನಿನ್ನ ಗುಣಗಳ ಗಾನಕ್ಕಾಗಿ, ನಿನ್ನ ಆರಾಧನೆಗಾಗಿ ಮೀಸಲಾದರೆ ಮಾತ್ರ ಸಾರ್ಥಕತೆ, ಈ ಸಂಪದವೆಲ್ಲ ಭಗವಂತನ ಸೇವೆಗಾಗಿ ಮುಡಿಪಾಗಿಡದಿದ್ದರೆ, ಆ ವಿಲಾಸಗಳೆಲ್ಲ ವ್ಯರ್ಥವೇ ಸರಿ.

ಏತಕ್ಕಾಡುವರಯ್ಯ ಹಮ್ಮನಕಟಾ! ತಮ್ಮಲ್ಲಿ ವಿದ್ಯಕಳಾ
ವ್ರಾತಂ ತಳ್ತುದನಾ ಕವಿತ್ವ ಮುಸಿರ್ಗುಂ ಸುಜ್ಞಾನಮಂ ತತ್ಪರಂ
ಜ್ಯೋತಿರ್ವ್ಯಕ್ತಿಯ ಯುಕ್ತಿಯೇ ನುಡಿಗುಮಿನ್ನಂತಲ್ಲದಲ್ಲಲ್ಲಿ ಯ
ದ್ವಾತದ್ವಾಬಹುಭಾಷೆಯಿಂ ಫಲವದೇಂ?ರತ್ನಾಕರಾಧೀಶ್ವರಾ ॥೭೨॥

ಒಬ್ಬನ ಪಾಂಡಿತ್ಯ, ಕವಿತಾಸಾಮರ್ತ್ಯ, ಅವನು ರಚೆಸಿದ ಕಾವ್ಯದಿಂದಲೇ ತಿಳಿಯಬಹುದು, ಆ ಕಾವ್ಯವೇ ಅವನ ವಿದ್ವತ್ತಿನ ಅಳತೆಗೋಲಾಗುವುದು. ಬೇರೆ ಯಾರೂ ಶಿಫಾರಸುಮಾಡಬೇಕಾಗಿಲ್ಲ. ಹಾಗೆಯೇ ಆ ಕವಿ ಪರಮಪರಂಜ್ಯೋತಿ ಸ್ವರೂಪನಾದ ಭಗವಂತನನ್ನು ಹೇಗೆ ಕಂಡಿದ್ದಾನೆ, ಹೇಗೆ ಬಣ್ಣಿಸಿದ್ದಾನೆ, ಅವನ ಭಕ್ತಿಯ ಆವೇಶ ಯಾವತರದ್ದು - ಇವು ಅವನ ಸುಜ್ಞಾನವನ್ನು ಸೂಚಿಸುತ್ತದೆ. ಸುಮ್ಮನೆ ಅಹಂಕಾರದ, ಜಂಭದ, ಮಾತುಗಳನ್ನಾಡಿದ ಮಾತ್ರಕ್ಕೆ ಆ ಕವಿಯ ಮಟ್ಟ, ಶ್ರೇಷ್ಠತೆ, ಹೆಚ್ಚುತ್ತದೆಯೇ ? ಬಾಯಿಗೆ ಬಂದಹಾಗೆ ಹರಟೆಮಾತನ್ನಾಡಿ ಏನು ಪ್ರಯೋಜನ ?

ತರ್ಕಂ ಬಂದೊಡೆ ದೃಷ್ಟದಿಂ ಶ್ರುತದಿನಿಟ್ಟೂಹಾನುಮಾನಂಗಳಿಂ
ಬೇರ್ಕೆಯ್ದಾತ್ಮನನೆಲ್ಲರುಂ ನೆರೆಯೆ ಕಂಡಂತಾಗೆಯಾಸ್ಥಾನ ಪಾ
ಲರ್ಕೊಂಡಾಡೆ ಕುವಾದಿಯುಂ ತಿಳಿಯೆ ಪೇಳಲ್ಬಲ್ಲನೇ ಬೋಧಮಾ
ಲಾರ್ಕಂ ಶುಷ್ಕವಿವಾದಿ ತಾನಧಿಕನೇ? ರತ್ನಾಕರಾಧೀಶ್ವರಾ ॥೭೩॥

ತರ್ಕಶಾಸ್ತ್ರವನ್ನು ಬಲ್ಲವನು ಆತ್ಮನ ಅಸ್ತಿತ್ವನ್ನು ಪ್ರತ್ಯಕ್ಷಪ್ರಮಾಣದಿಂದಲೂ ತರ್ಕಪ್ರಮಾಣದಿಂದಲೂ, ಅನುಮಾನಪ್ರಮಾಣದಿಂದಲೂ ಸಮರ್ಥಿಸಿ ಪ್ರತಿವಾದಿಗಳನ್ನು ತೃಪ್ತಿಪಡಿಸಬೇಕು. ಈತನ ವಾದಸರಣಿಯನ್ನು ವಿಷಯ ಸಮರ್ಥನೆಯನ್ನು ಕಂಡು ರಾಜನು ಮೆಚ್ಚುವಂತಿರಬೇಕು.ಮಿಥ್ಯಾವಾದಿಯೂ ಸಹ ಇದರ ಸತ್ಯತೆಯನ್ನು ಮನಗಂಡು ಸದ್ಧರ್ಮದತ್ತ ಒಲವು ತೋರಿಸಬೇಕು. ಹೀಗೆ ಆತ್ಮತತ್ವವನ್ನು ಪ್ರತಿಪಾದಿಸುವವನೇ ನಿಜವಾದ ಜ್ಞಾನಿ. ಕೆಲಸಕ್ಕೆ ಬಾರದ ವಿಷಯಗಳನ್ನು ಸಮರ್ಥಿಸಲು ಕುಚರ್ಚೆ ಮಾಡುವ ಕುವಾದಿಗಳಿಂದ ಏನು ಪ್ರಯೋಜನ.

ಶಾಸ್ತ್ರಂ ಬಂದೊಡೆ ಶಾಂತಿ ಸೈರಣೆ ನಿಗರ್ವಂ ನೀತಿ ಮೆಲ್ವಾತು ಮು
ಕ್ತಿ ಸ್ತ್ರೀಚಿಂತೆ ನಿಜಾತ್ಮಚಿಂತೆ ನಿಲವೇಳ್ಕಂತದಾ ಶಾಸ್ತ್ರದಿಂ
ದುಸ್ತ್ರೀಚಿಂತನೆ ದುರ್ಮುಖಂ ಕಲಹಮುಂ ಗರ್ವಂ ಮನಂಗೊಂಡೊಡಾ
ಶಾಸ್ತ್ರಂ ಶಸ್ತ್ರಮೆ ಶಾಸ್ತ್ರಿ ಶಸ್ತ್ರಿಕನಲಾ ? ರತ್ನಾಕರಾಧೀಶ್ವರಾ॥೭೪॥

ಶಾಸ್ತ್ರಾಧ್ಯಯನದಿಂದ ಗಳಿಸಿದ ಪಾಂಡಿತ್ಯದಿಂದ ತನ್ನ ಇಂದ್ರಿಯಗಳ ಮೇಲೆ ಹತೋಟಿಯನ್ನು ಇಟ್ಟುಕೊಂಡರೆ ಸಾರ್ಥಕವಾದೀತು. ಅಂಥ ಪಾಂಡಿತ್ಯದಿಂದ ಮನಸ್ಸಿನಲ್ಲಿ ಯಾವಾಗಲೂ ಶಾಂತಿಯಿರಬೇಕು. ಸಹನಶೀಲತೆ, ನಿಗರ್ವ, ಉತ್ತಮ ಪಂಡಿತನ ಲಕ್ಷಣಗಳು.  ಮಾತು ಹಿತವಾಗಿಯೂ, ಮಿತವಾಗಿಯೂ, ಮೃದುವಾಗಿಯೂ ಇರಬೇಕು. ತನ್ನ ಜೀವನವನ್ನು ಪ್ರತಿಕ್ಷಣವೂ ಪರಮಾತ್ಮನ ಚಿಂತನೆ, ಆತ್ಮಧ್ಯಾನದಲ್ಲಿ ಕಳೆಯಬೇಕು. ಇದು ಸತ್ಪುರುಷರ, ವಿದ್ಯಾವಂತರ ಲಕ್ಷಣ, ಇದು ಬಿಟ್ಟು ವಿದ್ಯಾವಂತನಾದ ಮಾತ್ರಕ್ಕೆ ತಲೆತಿರುಗಿ ಎಲ್ಲರಮೇಲೂ ಉರಿದು ಬೀಳುವುದು, ಮುಖವನ್ನು ಯಾವಾಗಲೂ ಗಂಟುಹಾಕಿಕೊಳ್ಳುವುದು, ಗರ್ವಿಷ್ಟನಾಗಿ ಮೆರೆಯುವುದು, ವಾರಾಂಗನೆಯರ ಜೊತೆ ಸಹವಾಸ ಮಾಡುವುದು, ಈ ಕೆಟ್ಟ ನಡವಳಿಕೆಗಳಲ್ಲಿ ಏನು ಪ್ರಯೋಜನ? ಅವನನ್ನು ಸುಸಂಸ್ಕೃತನೆನ್ನಲಾಗುವುದೇ? ಶಾಸ್ತ್ರವನ್ನು ತಿಳಿದಿದ್ದರೂ ಅವನು ಒಬ್ಬ ಸಾಮಾನ್ಯ ಶಸ್ತ್ರಧಾರಿಗೆ ಸಮ.ವಿದ್ಯೆಗೆ ವಿನಯವೇ ಭೂಷಣ.

ಭೂನಾಥರ್ಕಳ ಬಾಳ್ವೆ ಚಿತ್ತಕೆ ಸದಾ ತಳ್ಳಂಕವೆಷ್ಟೆಷ್ಟು ಧಾ
ತ್ರೀನಾರಿಧನಸೇನೆ ಸಾರ್ದೊಡಮದುಂ ಸಾಲ್ದುಪ್ಪುದೇ? ಮತ್ತೆ ದು
ರ್ಧ್ಯಾನಾಪೇಕ್ಷೆಯೆ ಪೆರ್ಚುಗುಂ ಬಗೆಯಲಂತಾ ಚಿಂತೆಯೇ ವ್ಯಾಧಿ ಸು
ಜ್ಞಾನೈಶ್ವರ್ಯಕೆ ಸಾಟಿ ಸೌಖ್ಯಮೊಳವೇ?ರತ್ನಾಕರಾಧೀಶ್ವರಾ ॥೭೫॥

ರಾಜ್ಯ, ಕೋಶ, ಸುರಸುಂದರಿಯರಿರುವ ರಾಣೀವಾಸ, ಚತುರಂಗ ಸೇನೆ, ಇವೆಲ್ಲವನ್ನು ಹೊಂದಿದ್ದರೂ ರಾಜ ಮಹಾರಾಜರುಗಳು ನಿಶ್ಚಿಂತೆಯಿಂದ ಸುಖವಾಗಿರುವರೇ? ಅವರ ಮನಸ್ಸಿನಲ್ಲಿ ಶಾಂತಿ ಎಂಬುದು ಎಳ್ಳಷ್ಟೂ ಇಲ್ಲ. ಸದಾ ತಳಮಳಗೊಳ್ಳುತ್ತಿರುವರು. ಇಷ್ಟಿದ್ದರೂ ಮತ್ತಷ್ಟು ಬೇಕೆಂಬ ದುರಾಸೆಯ ದುರ್ಧ್ಯಾನದಲ್ಲೇ ತಮ್ಮ ಜೀವಿತವನ್ನು ಕಳೆಯುವರು. ಆಸೆಗೆ ಮಿತಿಯೆಂಬುದೊಂದಿದೆಯೇ? ಲೋಕದಲ್ಲಿ ಇರುವುದೆಲ್ಲ ತನಗೆ ಬೇಕೆಂಬ ಆಸೆಯಲ್ಲಿಯೇ ಚಿಂತನೆ ಮಾಡಿ ಮಾಡಿ ಅದೇ ಮನೋವ್ಯಾಧಿಯಲ್ಲಿ ನರಳಿ ತಮ್ಮ ಜೀವನವನ್ನೇ ದುಃಖಮಯವನ್ನಾಗಿ ಮಾಡಿಕೊಳ್ಳುತ್ತಾರೆ. ಚಿಂತೆಯೇ ಮುಪ್ಪು, ಸಂತೋಷವೇ ಯೌವನ. ಸುಜ್ಞಾನ ಸಂಪದದ ಮುಂದೆ ರಾಜಪದವಿ ತುಚ್ಛ. ಇದಕ್ಕಿಂತ ಬೇರೆ ಸೌಖ್ಯವುಂಟೆ?

ಪಡೆಯೊಳ್ಬಲ್ಲಿದನಾದೊಡಾ ಪಡೆಯಿನೇಂ ಪಾಪಾರಿಯನೇಂ ಗೆಲ್ವನೇ?
ಕಡುಪಿಂದಂ ಜವನಂ ತೆರಳ್ಚುವನೆ? ಬಲ್ಪಿಂಮೋಕ್ಫಷಮಂ ಕೊಂಬನೇ ?
ಕಡೆಗಾ ಭೂಪನ ಶಕ್ತಿನಾಲ್ ಘಳಿಗೆ ಸಲ್ಗುಂ ಮರ್ತ್ಯಕೀಟಂಗಳೊಳ್
ಬಿಡು ಯೋಗೀಂದ್ರನ ಶಕ್ತಿಗಾವುದು ಸಮಂ ರತ್ನಾಕರಾಧೀಶ್ವರಾ ॥೭೬॥

ಬಲಿಷ್ಠವಾದ ಸೈನ್ಯ ಹೊಂದಿದ್ದ ಮಾತ್ರದಿಂದಲೇ ಒಬ್ಬ ರಾಜ ಆ ಸೈನ್ಯದ ಸಹಾಯದಿಂದ ಪಾಪಕರ್ಮಗಳೆಂಬ ಶತ್ರುವನ್ನು ಗೆಲ್ಲಲು ಸಾಧ್ಯವೇ? ತನ್ನ ಪರಾಕ್ರಮದಿಂದ ಸಾವನ್ನು ಗೆಲ್ಲಲು ಸಾಧ್ಯವಿದೆಯೇ? ತನ್ನ ಶೌರ್ಯ ಅತುಲೈಶ್ವರ್ಯಗಳಿಂದ ಮೋಕ್ಷಸಾಮ್ರಾಜ್ಯವನ್ನು ಹೊಂದುವುದಕ್ಕಾಗುತ್ತದೆಯೇ? ಏನಿದು ಭ್ರಮೆ! ಅಂತಹವನಿಂದ ಏನಾಗಬಹುದು? ಈ ನರಕೀಟಗಳಲ್ಲಿ ಒಂದು ನಾಲ್ಕು ಘಳಿಗೆ ತನ್ನ ಪರಾಕ್ರಮ ಪ್ರದರ್ಶನವನ್ನು ಮಾಡಬಹುದು ಅಷ್ಟೇ? ಈ ಲೌಕಿಕ ಶಕ್ತಿ ಎಷ್ಟು ಹುಸಿ, ಮತ್ತು ಎಷ್ಟು ಕ್ಷಣಿಕ! ಯೋಗಿರಾಜನ ಆತ್ಮಶಕ್ತಿಯ ಮುಂದೆ ಈ ಯಾವ ಶಕ್ತಿತಾನೇ ನಿಲ್ಲಬಲ್ಲದು? ಯಾವುದು ತಾನೆ ಸಮಾನ.

ತಮ್ಮಂ ಕೀರ್ತಿಸೆ ನಲ್ಮೆಯೊಲ್ಮೆ ಕಡುಚಾಗಂ ಕೂಡೆ ಸಂಭಾಷಣಂ
ನಿಮ್ಮಂ ಕೀರ್ತಿಸಲಡ್ಡಮೋರೆ ಬಡಚಾಗಂ ಮೌನಮೀ ಭೂಮಿಪರ್
ತಮ್ಮಂ ಕೊಲ್ವನರೇಂದ್ರನಂ ಪೊಗಳಲಳ್ಕಿ ಮನ್ನಿಪರ್ ನಿಮ್ಮೊಳೇಂ
ಹಮ್ಮಂ ತೋರ್ಪರೊ ಕಾವನೊಳ್ಕಲಹವೇ? ರತ್ನಾಕರಾಧೀಶ್ವರಾ ॥೭೭॥

ರಾಜರು ತಮ್ಮನ್ನು ಹೊಗಳುವ ಹೊಗಳು ಭಟ್ಟರಿಗೆ ಮೆಚ್ಚಿ ಅವರ ಮೇಲೆ ತಮ್ಮ ಕೃಪಾದೃಷ್ಟಿಯನ್ನು ಬೀರಿ ಕೈತುಂಬಾ ದಾನಮಾಡುತ್ತಾರೆ. ಅವರ ಜೊತೆಯಲ್ಲಿ ಸುಮಧುರವಾಗಿ ಮಾತನಾಡುತ್ತಾರೆ. ಸಲುಗೆಯಿಂದ ಇರುತ್ತಾರೆ. ಆದರೆ ರಾಜನ ಸಮ್ಮುಖದಲ್ಲಿ ಪರಮಾತ್ಮನನ್ನು ಸ್ತುತಿಸಿದರೆ, ಅದರ ಕಡೆ ಲಕ್ಷ್ಯವೇ ಇರುವುದಿಲ್ಲ. ಮುಖ ಅಡ್ಡ ತಿರುಗಿಸಿ ದೃಷ್ಟಿ ಮತ್ತೆಲ್ಲಿಯೋ ನೆಟ್ಟಿರುತ್ತದೆ. ಏನೋ ಬೇಸರದಿಂದ ಅಷ್ಟೊ ಇಷ್ಟೊ ಕೊಟ್ಟು ಅವನನ್ನು ಕುರಿತು ಯಾರಾದರೂ ಹೊಗಳಿದರೆ ಬೇರೆ ದಾರಿಕಾಣದೆ ಭಯದಿಂದ ಅಂತಹವರನ್ನು ಗೌರವಿಸಿ ಅವರಿಗೆ ಬಹುಮಾನವನ್ನು ಕೊಡುತ್ತಾರೆ. ಏನಿದು ಇವರ ವರ್ತನೆ ವಿಚಿತ್ರವಾಗಿದೆಯಲ್ಲಾ? ಜಗತ್ರಕ್ಷಕನಲ್ಲಿಯೇ ಅಹಂಕಾರವನ್ನು ತೋರಿಸುತ್ತಾರಲ್ಲಾ? ಭಗವಂತನಲ್ಲಿ ಈ ವರ್ತನೆಯೇ?

ಆರಿಂದಾದುದೊ ರಾಜ್ಯಲಕ್ಷ್ಮಿಯದು ನಿಮ್ಮಿಂದಾದುದೆಂತೆಂದೊಡಾ
ಚಾರಂ ಮುನ್ನಣುಮಾತ್ರನಿರ್ದ ಫಲದಿಂದಾ ಜೀವಕೀ ಜನ್ಮದೊಳ್
ಸೇರಿತ್ತಾಚರಣಕ್ಕೆ ನೀನೇ ಪತಿ ನಿನ್ನಂ ಮಾಣ್ದವಂ ಕಷ್ಟ ಸಂ
ಸಾರಾಂಭೋಧಿಯ ದಾಂಟಲೇನರಿವನೇ! ರತ್ನಾಕರಾಧೀಶ್ವರಾ॥೭೮॥

ಪೂರ್ವಕೃತ ಪುಣ್ಯದಿಂದ ಈ ಜನ್ಮದಲ್ಲಿ ಸಂಪತ್ತು, ಅಧಿಕಾರ, ರಾಜ್ಯ ಕೋಶಗಳು ಲಭ್ಯವಾಗಿವೆ.  ಪರಮಾತ್ಮನ ಆರಾಧನೆಯಲ್ಲಿ ಕಿಂಚಿತ್ ತೊಡಗಿದ್ದ ಮಾತ್ರಕ್ಕೆ ಇಷ್ಟೊಂದು ಸಂಪತ್ತು ದೊರಕಿತೆಂದರೆ, ಆ ವ್ರತಾಚರಣೆಗಳಲ್ಲಿ ಮನಸ್ಸನ್ನು ದೃಢಮಾಡಿದನೆಂದರೆಅವನ ಭಾಗ್ಯಕ್ಕೆ ಎಣೆಯುಂಟೇ? ಜಿನೇಂದ್ರನ ಅನುಗ್ರಹ ಏನನ್ನು ತಾನೆ ಕೊಡಲಾರದು? ಆದರೆ ಆ ಭಗವಂತನನ್ನು ಮರೆತು ಸ್ವೇಚ್ಛಾಚಾರಿಯಾದವನು ಈ ಭವಸಾಗರದಲ್ಲೇ ಮುಳುಗಿ ಅತ್ಯಂತ ದುಃಖಿಯಾಗುತ್ತಾನೆ.  ಈ ಸಂಸಾರ ಸಮುದ್ರವನ್ನು ದಾಟಲು ಅಂತಹವನಿಗೆ ಸಾಧ್ಯವೇ? ಜಿನನನ್ನು ನೆನೆಯುತ್ತಾ, ಮುಕ್ತಿ ಸಂಪದವನ್ನು ಯಾರಾದರೂ ದೊರಕಿಸಿಕೊಳ್ಳಬಹುದೆಂದರೆ ಈ ಲೌಕಿಕ ಸಂಪತ್ತಿನ ಮಾತೇನು?

ಅಣುಮಾತ್ರಂ ವ್ರತಮಲ್ಪಕಾಲಮಿರೆ ಮುನ್ನಂ ತತ್ಫಲಪ್ರಾಪ್ತಿಯಿಂ
ಪ್ರಣುತಕ್ಷ್ಮಾಪತಿಯಾದೆ ನಿನ್ನನುದಿನಂ ಸಮ್ಯಗ್ವ್ರತಾಚಾರ ಲ
ಕ್ಷಣಮಂ ಶಾಶ್ವತವಾಂತು ದೇವಪದಮಂ ಕೈವಲ್ಯಮಂ ಕೊಂಬೆನೆಂ
ದೆಣಿಸುತ್ತುಜ್ಜುಗಿಪಾತನೇ ಸುಖಿಯಲಾ? ರತ್ನಾಕರಾಧೀಶ್ವರಾ ॥೭೯॥

ಪೂರ್ವಜನ್ಮದಲ್ಲಿ ಎಲ್ಲೋ ಸ್ವಲ್ಪಕಾಲ ಮಾಡಿದ ಕೆಲವು ವ್ರತಾಚರಣೆಗಳ ಫಲವಾಗಿ ಈ ಜನ್ಮದಲ್ಲಿ ರಾಜನಾಗಿ ಹುಟ್ಟಿ ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿರುವೆ. ಈ ವ್ರತಾಚರಣೆಗಳನ್ನೇ ಮುಂದುವರಿಸಿಕೊಂಡು ತನ್ನ ಮುಂದಿನ ಗತಿಯನ್ನು ಇನ್ನೂ ಉತ್ತಮಪಡಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿರುವವನೇ ನಿಜವಾದ ಸುಖಿ. “ಶ್ರೇಷ್ಠವಾದ ನೋಂಪಿಗಳನ್ನು
ಆಚರಿಸಿ ಸಂಯಮ ಜೀವನವನ್ನು ನಡೆಸಿ ದೇವಪದವಿಯನ್ನು ಅನಂತರ ಶಾಶ್ವತ ಸುಖದ ಆಗರವಾದ ಮೋಕ್ಷಸಾಮ್ರಾಜ್ಯವನ್ನು ಪಡೆಯುತ್ತೇನೆ” ಎಂದು ಸಂಕಲ್ಪಮಾಡಿ ನಿರಂತರ ಪ್ರಯತ್ನಿಸುವವನೇ ಭವ್ಯಾತ್ಮ-ಅವರ ಮನಸ್ಸಿನ ಶಾಂತಿ, ಸುಖ, ಸಮಾಧಾನಗಳು ಬೇರೆಯವರಿಗೆ ಬರುತ್ತದೆಯೇ?

ಭೃತ್ಯಂ ತನ್ನನದೆಂತು ಕಾಣ್ಬನವನಂತುರ್ವೀಶ್ವರಂ ನಿಮ್ಮ ಕಂ
ಡತ್ಯಾನಂದದೆ ಕಾಣ್ಕೆ ಕೆಯ್ಮುಗಿತಮಷ್ಟಾಂಗಾನತಂ ಸಮ್ಮುಖ
ಸ್ತೌತ್ಯಂ ಸೇವೆಗಳೆಂಬಿವಂ ನೆಗಳುತಂ ನಂಬಿರ್ದೊಡಾತಂಗೆ ತ
ತ್ಪ್ರತ್ಯರ್ಥಿಕ್ಷಿತಿಪಾಲರೇನೆರಗರೇ ? ರತ್ನಾಕರಾಧೀಶ್ವರಾ ॥೮೦॥

ತನ್ನ ಸೇವಕರು ತನ್ನನ್ನು ಹೇಗೆ ಅತ್ಯಂತ ಭಕ್ತಿ, ಶ್ರದ್ಧೆಗಳಿಂದ ಕಾಣುವರೋ ಅದೇರೀತಿ ಮಹಾರಾಜರೂ ಜಿನೇಂದ್ರನ ಇದಿರು ಭಯಭಕ್ತಿಯಿಂದಿದ್ದು, ದರ್ಶನಸ್ತುತಿಗೈದು, ಕೈಮುಗಿದು, ಸಾಷ್ಟಾಂಗ ನಮಸ್ಕಾರ ಮಾಡಿ, ಕೊಂಡಾಡಿ ಅವನನ್ನೇ ನಂಬಿ ಅವನಿಗೆ ಸಂಪೂರ್ಣ ಶರಣಾದರೆ, ಏನು ಫಲತಾನೇ ಸಿಗುವುದಿಲ್ಲ.  ಶತ್ರುರಾಜರು ಬಂದು ತಮಗೆ ತಾವೇ ಅವನಿಗೆ (ಅಂಥಾ ರಾಜನಿಗೆ) ಶರಣಾಗತರಾಗುವರು. ಇದರಲ್ಲಿ ಏನಾಶ್ಚರ್ಯ?

ಸುರಪಂ ತನ್ನಿಭವಿತ್ತು ಮಾವತಿಗನಪ್ಪಂ ಕಾಂತೆಯಿಂ ಪಾಡಿಪಂ
ಸುರಸೈನ್ಯಂ ಸಹವಾಗಿ ನಿಮ್ಮಭಿಷವಕ್ಕೊಲ್ದೂಳಿಗಂ ಮಾಳ್ಪನಾ
ದರದಿಂ ಛತ್ರಮನೆತ್ತುವಂ ನಟಿಸುವಂ ಪಲ್ಲಕ್ಕಿಯಂ ತಾಳ್ವನೀ
ನರಕೀಟಾದಿಗಳೇಕೆ ಗರ್ವಿಸುವರೋ! ರತ್ನಾಕರಾಧೀಶ್ವರಾ ॥೮೧॥

ಜಿನಶಿಶು ಜನಿಸಿದಾಗ ದೇವೇಂದ್ರನಿಗೆ ತಿಳಿದು ಅತ್ಯಂತ ಹರ್ಷಗೊಳ್ಳುತ್ತಾನೆ. ಆ ಮಹಾಚೇತನದ ಸೇವೆಗಾಗಿ ಕಂಕಣಬದ್ಧನಾಗಿ, ಅತ್ಯಂತ ಭಕ್ತಿಶ್ರದ್ಧೆಗಳಿಂದ ಸಿದ್ಧನಾಗುತ್ತಾನೆ. ದೇವಲೋಕದ ಐರಾವತದ ಮೇಲೆ ಜಿನಬಾಲಕನನ್ನು ವಿರಾಜಮಾನಮಾಡಿಸಿ ತಾನೇ ಮಾವಟಿಗನಾಗಿ ಜನ್ಮಾಭಿಷೇಕಕ್ಕೆ ಮೇರುಪರ್ವತಕ್ಕೆ ಕರೆದೊಯ್ಯುತ್ತಾನೆ. ಶಚೀದೇವಿಯಿಂದ ಹಾಡಿಸುತ್ತಾನೆ. ಇಡೀ ದೇವಲೋಕದ ಸಮೂಹವೇ ಈ ಮಹಾ ಉತ್ಸವದಲ್ಲಿ ಪಾಲ್ಗೊಳ್ಳುತ್ತದೆ. ದೇವ ಸೈನ್ಯ ಸಜ್ಜಾಗಿ ಈ ಮೆರವಣಿಗೆಯಲ್ಲಿ ಬರುತ್ತದೆ. ಮೇರುಪರ್ವತದಲ್ಲಿರುವ ಪಾಂಡುಕಶಿಲೆಯ ಮೇಲೆ ಆ ಜಿನಬಾಲಕನ ಜನ್ಮಾಭಿಷೇಕಕ್ಕೆ ಸಕಲ ಸಿದ್ಧತೆಗಳನ್ನು ಮಾಡಿ ತಾನು ಎಲ್ಲ ಸೇವೆಯನ್ನು ಮಾಡಲು ದೇವೇಂದ್ರ ಕಾತುರನಾಗಿದ್ದಾನೆ. ತಾನೇ ಶ್ವೇತಛತ್ರಿಯನ್ನು ಎತ್ತಿಹಿಡಿಯುತ್ತಾನೆ. ಇಷ್ಟಕ್ಕೇ ತೃಪ್ತನಾಗದೆ ತಾನೇ ಸ್ವತಃ ಆನಂದ ನೃತ್ಯ ಮಾಡುತ್ತಾನೆ, ಮುಂದೆ ತೀರ್ಥಂಕರ ಚೇತನಕ್ಕೆ ವೈರಾಗ್ಯ ಅಂಕುರಿಸಿದಾಗ ದೇವೇಂದ್ರ ಭುವಿಗಳಿದು ಆ ವಿರಕ್ತ ಚೇತನವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ತಾನೇ ಕಾಡಿನತ್ತ ಹೊರುವನು. ದೇವತೆಗಳಿಂದ ಎಂಥ ಭಕ್ತಿಯ ಪ್ರದರ್ಶನ. ಹೀಗಿರುವಾಗ ಈ ನರಕೀಟಗಳು ಎಷ್ಟೊಂದು ಗರ್ವ ಪಡುವರು. ದೇವಲೋಕದ ವೈಭವದ ಮುಂದೆ ಈ ಮಾನವರ ವೈಭವ ಅಣುಮಾತ್ರ. ಹಾಗಿದ್ದರೂ ಏನು ಅಹಂಕಾರ ಈ ಹುಲುಮಾನವರದು?

ದೊರೆಯೇನಂ ಪಿಡಿದಿರ್ಪನಂತದನೆ ಲೋಕಂ ಮೆಚ್ಚುಗುಂ ತದ್ಧರಾ
ವರನಾ ದುರ್ಮತದತ್ತ ತಾನೆಕಳಿಸಿದಂದಾ ಸಾರ್ದರಂ ತನ್ನುವಂ
ನರಕಕ್ಕಿಕ್ಕಿದನೊಲ್ದು ನಿಮ್ಮ ಮತದತ್ತಿಚ್ಛೈಸಿದಂದಾತನು
ದ್ಧರಿಸಲ್ತಾನೆ ಸಮರ್ಥನಾದನರರೇ ರತ್ನಾಕರಾಧೀಶ್ವರಾ ॥೮೨॥

ದೊರೆ ಯಾವ ಮತವನ್ನು ಅಂಗೀಕರಿಸುವನೋ ಆತನಪ್ರಜೆಗಳೂ ಅವನನ್ನೇ ಹಿಂಬಾಲಿಸುತ್ತಾರೆ.”ಯಥಾರಾಜ ತಥಾಪ್ರಜಾಃ”. ಸದ್ಧರ್ಮದತ್ತ ಅವನ ಮನ ವಾಲಿದರೆ ಅವನ ಪ್ರಜೆಗಳೂ ಸದ್ಧರ್ಮಿಗಳಾಗುವರು. ಮಿಥ್ಯಾದೋಷ್ಟಿಯಾಗಿ, ದುರ್ಮತದತ್ತ ಆ ರಾಜನು ಒಲಿದರೆ ತಾನು ಕೆಡುವೈದಲ್ಲದೆ ತನ್ನ ಪ್ರಜೆಗಳನ್ನೂ ತಪ್ಪುದಾರಿಗೆ ಎಳೆದು ಕೊನೆಗೆ ಎಲ್ಲರೂ ದುರ್ಮಾರ್ಗಿಗಳಾಗಿ ನರಕಕ್ಕೆ ಇಳಿಯುವರು.ಅಹಿಂಸಾಧರ್ಮವನ್ನು ರಾಜ ನಿಷ್ಠೆಯಿಂದ ಪಾಲಿಸಿದರೆ ಅವನು ಉದ್ಧಾರವಾಗುವುದಲ್ಲದೆ ಅವನ ಪ್ರಜೆಗಳೂ ಅಹಿಂಸಾಮಾರ್ಗದಲ್ಲಿ ನಡೆದು ತಮ್ಮ ಆತ್ಮೋದ್ಧಾರಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನರರೊಳ್ಪುಟ್ಟಿ ನರೇಂದ್ರನಾದ ದಿನದೊಳ್ಸದ್ಧರ್ಮಮಂ ಸನ್ಮುನೀ
ಶ್ವರರಂ ಭವ್ಯರನೊಲ್ದು ಮನ್ನಿಸಿಯನಾಥರ್ಗಾಶ್ರಿತರ್ಗೀವುತಂ
ಪರಿವಾರಪ್ರಜೆಗಳ್ಗೆ ತಾಯತೆರದಿಂದೋವುತ್ತಮಿರ್ಪಂ ಧರಾ
ವರನಿಂದಾ ಬರ್ದಿಲಕ್ಕೆ ನಾಳಿನವನೈ ರತ್ನಾಕರಾಧೀಶ್ವರಾ ॥೮೩॥

ಪುಣ್ಯಪ್ರಭಾವದಿಂದ ಮಾನವನಾಗಿ ಹುಟ್ಟಿ ಮತ್ತೆ ತಾನು ರಾಜಪದವಿಗೇರಿದ ದಿನದಲ್ಲೂ ಧರ್ಮಾಚರಣೆಯನ್ನು ಚಾಚೂ ತಪ್ಪದೆ ನಡೆಸುವುದು ತನ್ನ ಆದ್ಯ ಕರ್ತವ್ಯವೆಂದುತಿಯುವವನೇ ಸತ್ಪುರುಷನು. ಅಂತಹ ರಾಜೇಂದ್ರನು ಜಿನಧರ್ಮವನ್ನು ಆಶ್ರಯಿಸಿ, ಮುನಿಪುಂಗವರಿಗೆ ಉಪಚಾರವೆಸಗಿ ಭವ್ಯರನ್ನು ಆದರಿಸಿ, ದಾನಧರ್ಮಗಳನ್ನು ಮಾಡುತ್ತ ದಿಕ್ಕಿಲ್ಲದವರಿಗೆ ಆಶ್ರಯನೀಡಿ, ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಪಾಡಿದರೆ ಅವನಂತಹ ಧರ್ಮರಾಜನು ಇನ್ನಾರಿದ್ದಾರೆ? ಅಂತಹವನು ಮಾಡುವ ಈ ಸದ್ಧರ್ಮಕಾರ್ಯಗಳಿಂದ ಪುಣ್ಯದ ಹೊರೆಯನ್ನೇ ಹೊತ್ತು ಮುಂದಿನ ಗತಿಯಲ್ಲಿ ಸ್ವರ್ಗಕ್ಕೆ ಅಧಿಪತಿಯಾ-
ಗುವುದರಲ್ಲಿ ಏನು ಸಂದೇಹ?

ಎಷ್ಟೆಷ್ಟೈಸಿರಿ ಪೆರ್ಚುಗುಂ ತನಗೆ ತಾನಷ್ಟಷ್ಟು ಸದ್ಧರ್ಮಕು
ತ್ಕೃಷ್ಟಂ ಮಾಡಲೆವೇಳ್ಕು ನೋಂಪಿಗಳನಾನಿರ್ಗಂಥರಂ ನಿಚ್ಚ ಸಂ
ತುಷ್ಟಂ ಮಾಡಲೆವೇಳ್ಕು ಧಾರ್ಮಿಕಜನಕ್ಕಾಧಾರವಾಗಲ್ಕೆ ವೇ
ಳ್ಕಿಷ್ಟುಂ ತಾಂ ಸುಕೃತಾನುಬಂಧಿಸುಕೃತಂ ರತ್ನಾಕರಾಧೀಶ್ವರಾ ॥೮೪॥

ಶ್ರೀಮಂತಿಕೆ ಹೆಚ್ಚಿದಂತೆಲ್ಲ ಆ ಶ್ರೀಮಂತಿಕೆಯನ್ನು ಸದ್ಧರ್ಮವೃದ್ಧಿಗೆ ಉಪಯೋಗಮಾಡಬೇಕು. ಸತ್ಪಾತ್ರ ದಾನದಲ್ಲಿ ತನ್ನ ಧನವನ್ನು ವಿನಿಯೋಗಿಸಬೇಕು. ವ್ರತಾಚರಣೆಗಳಲ್ಲಿ ತೊಡಗಬೇಕೈ. ಭಗವಂತನ ಪೂಜೋತ್ಸವಗಳಲ್ಲಿ ಶ್ರದ್ಧಾಭಕ್ತಿಗಳಿಂದ ಪಾಲ್ಗೊಳ್ಳಬೇಕು. ದಿಗಂಬರಮುನಿಗಳ ಸೇವೆಯಲ್ಲಿ ತೊಡಗಿ ಅವರಿಗೆ ನಿರಾತಂಕವಾಗಿ ಆಹಾರದಾನ ಮಾಡುವ, ಅವರು ನಿರಂತರ ಸಂತೋಷದಲ್ಲಿರುವ ಹಾಗೆ ನೋಡಿಕೊಳ್ಳಬೇಕು. ಧರ್ಮಾತ್ಮರಿಗೆ ಮನ್ನಣೆ ನೀಡುವುದಲ್ಲದೆ ಅವರ ಧಾರ್ಮಿಕ ಕಾರ್ಯಕ್ರಮಗಳಿಗೆ ನೆರವುನೀಡಿ ಅವರಿಗೆ ಆಶ್ರಯದಾತನಾಗಿರಬೇಕು. ಈ ಧಾರ್ಮಿಕಕಾರ್ಯಗಳೆಲ್ಲವೂ ಮಾನವನನ್ನು ಸುಕೃತಾನುಬಂಧಿಸುಕೃತನಾಗುವ ಹಾಗೆ ಮಾಡುತ್ತವೆ.

ವ್ರತಮಂ  ಮಾಣ್ದೊಡೆ ಸೇವೆ ಮಾಣ್ಬುದರಿದೇ? ಶೀಲೋಪವಾಸಕ್ಕೆ ಬೆ
ಚ್ಚುತಿರಲ್ವಿಕ್ರಮಲಕ್ಷ್ಮಿ ಜಾರ್ವುದರಿದೇ ? ಸತ್ಪಾತ್ರದಾನಂ ವಿವ
ರ್ಜಿತಮಾಗಲ್ಸಿರಿಕುಂದಿವರ್ಪುದರಿದೇ ನಿಮ್ಮರ್ಚನಾಸಂಭ್ರಮಂ
ಚ್ಯುತಮಾಗಲ್ನೃಪವೈಭವಂ ಸಡಿಲದೇ? ರತ್ನಾಕರಾಧೀಶ್ವರಾ ॥೮೫॥

ಅಹಿಂಸೆಯೇ ಮೊದಲಾದ ಉತ್ತಮ ವ್ರತಾಚರಣೆಗಳಿಂದ ಭಗವಂತನ ಸೇವೆಯನ್ನು ಮಾಡುವುದನ್ನು ನಿಲ್ಲಿಸಿದರೆ, ನಮ್ಮ ಸೇವೆಯಲ್ಲಿ ನಿರತರಾಗಿದ್ದ ಭೃತ್ಯರು ನಮಗೆ ಅನಾದರಣೆ ತೋರುವುದರಲ್ಲಿ ಏನಾಶ್ಚರ್ಯ? ಸಚ್ಚಾರಿತ್ರವಂತನಾಗಿ ಬಾಳಿ, ಉಪವಾಸಾದಿ ಉತ್ತಮ ಆಚರಣೆಗಳನ್ನು ಮಾಡದಿದ್ದರೆ, ನಮ್ಮ ಪರಾಕ್ರಮ, ಸಂಪತ್ತು ಜಾರಿಹೋಗುವುದಿಲ್ಲವೇ? ನಮ್ಮ ಧನವನ್ನು ಸತ್ಪಾತ್ರದಲ್ಲಿ ದಾನ ಮಾಡದೆ ಲೋಭಿಯಾದರೆ, ನಮ್ಮ ಸಿರಿವಂತಿಕೆ ಕ್ಷೀಣವಾಗುವುದರಲ್ಲಿ ಸಂದೇಹವೇ ಇಲ್ಲ. ಅರಹಂತನ ಪೂಜಾಕೈಂಕರ್ಯಗಳಲ್ಲಿ ಉತ್ಸಾಹತೋರದೆ ಅನಾದರಣೆ ತಲೆದೋರಿದರೆ, ನಮಗೆ ದೊರೆತಿದ್ದ ರಾಜ ವೈಭವಗಳು ಕಣ್ಮರೆಯಾಗುವುದು ಅಸಾಧ್ಯವೇ?

ಭೂಕಂಪಂ ಗ್ರಹಣಂ ಬರಂ ಗ್ರಹದನಿಷ್ಟಂ ವ್ಯಂತರೋಗ್ರಂ ರುಜಾ
ಶೋಕಂ ದುಃಸ್ಥಿತಿಗವ್ಯಮರ್ತ್ಯಗಜವಾಹೋನ್ಮಾರಿದುಸ್ಸ್ವಪ್ನ ನಾ
ನಾಕಷ್ಟಕ್ಕೆ ಮಹಾಭಿಷೇಕ ಕಲಿಕುಂಡಾದ್ಯರ್ಚನಂ ಸಂಘ ಪೂ
ಜಾಕಾರ್ಯಂದೊರೆ ಮಾಳ್ಪ ಶಾಂತಿಕವಲಾ ರತ್ನಾಕರಾಧೀಶ್ವರಾ॥ ೮೬॥

ಭೂಕಂಪ, ಸೂರ್ಯಚಂದ್ರಗ್ರಹಣಂಗಳ ತಾಪ,ಕ್ಷಾಮ, ಗ್ರಹಗಳ ಪೀಡೆ, ವ್ಯಂತರ ದೇವತೆಗಳ ಭೀತಿ, ರೋಗರುಜಿನಗಳ ಭಯ, ಹೀನಸ್ಥಿತಿ, ಗೋವುಗಳಿಗೆ, ಮನುಷ್ಯರಿಗೆ, ಆನೆಗಳಿಗೆ, ಕುದುರೆಗಳಿಗೆ ಭಯಂಕರವಾದ ರೋಗಗಳು ತಾಕುವಿಕೆ, ಕೆಟ್ಟ ಸ್ವಪ್ನಗಳು ಈ ತೆರನಾದ ನಾನಾಸಂಕಷ್ಟಗಳು ಒದಗಿದಾಗರಾಜನಾದವನು ಇವುಗಳ ಶಾಂತಿಗೋಸ್ಕರ ಮಹಾಭಿಷೇಕ ಪೂಜೆ ಕಲಿಕುಂಡ ಮೊದಲಾದ ಯಂತ್ರಾರಾಧನೆಗಳನ್ನೂ ಸಂಘ, ಪೂಜಾಕಾರ್ಯಗಳನ್ನೂ ಮಾಡಿಸಿ ಪ್ರಜೆಗಳಿಗೆ ಒದಗಿಬಂದಿರುವ,ಈ ಆಪತ್ತು, ಕಷ್ಟಕಾರ್ಪಣ್ಯಗಳನ್ನು ನಿವಾರಿಸಲು ಯತ್ನಿಸುವುದು ಉಚಿತವಾದ ಮಾರ್ಗ.

ದೀಕ್ಷಾಗ್ರಾಹಿಗಳಂ ದಯಾಶ್ರುತಮನಾ ಯಕ್ಷರ್ಕಳಂ ನಿಮ್ಮ ಸ
ಲ್ಲಕ್ಷದ್ಬಿಂಬಮನಾನೆಯಂದಣಗಳೊಳ್ಪಲ್ಲಕ್ಕಿ ಯೊಳ್ತೇರೊಳಿ
ಟ್ಟಕ್ಷೂಣೋತ್ಸವದಿಂ ಪ್ರಭಾವನೆಗಳಂ ಮಾಳ್ಪಂ ನಿರಾಯಾಸದಿಂ
ಮೋಕ್ಷಶ್ರೀಗಧಿನಾಥನಪ್ಪುದರಿದೇ? ರತ್ನಾಕರಾಧೀಶ್ವರಾ ॥೮೭॥

ಮಹಾಮುನಿಗಳನ್ನೂ, ಅಹಿಂಸಾಧರ್ಮವನ್ನು ಬಿತ್ತರಿಸುವ ಶಾಸ್ತ್ರಗಳನ್ನೂ, ಜಿನಶಾಸನ ದೇವತೆಗಳನ್ನೂ, ಶ್ರೇಷ್ಠವಾದ ಸಲ್ಲಕ್ಷಣವಾದ ಜಿನಬಿಂಬವನ್ನೂ, ಭಕ್ತಿ, ಶ್ರದ್ಧೆ, ಉತ್ಸಾಹಗಳಿಂದ ಆನೆಯ ಅಂಬಾರಿಗಳಲ್ಲಿ, ಪಲ್ಲಕ್ಕಿಗಳಲ್ಲಿ ರಥದಲ್ಲಿ ಇರಿಸಿ ಉತ್ಸವಾದಿಗಳನ್ನು ಮಾಡುವ ಮೂಲಕ, ಯಾವನು ಸದ್ಧರ್ಮಪ್ರಭಾವನೆಯನ್ನು, ಮಾಡುವನೋ,ಆ ಭವ್ಯಜೀವಿ
ಮುಕ್ತಿಪಥದಲ್ಲಿರುವನೆಂದು ನಿಸ್ಸಂದೇಹವಾಗಿ ಹೇಳಬಹುದು. ಅಸನ್ನಭವ್ಯನಾದಂಥ ಆ ಜೀವನು ಖಂಡಿತವೃಗಿ ಮುಂದೆ ಕೆಲವೇ ಭವಗಳಲ್ಲಿ ಮೋಕ್ಷಸಂಪತ್ತನ್ನು ಪಡೆಯುವನು. ಇದು ಪ್ರಭಾವನಾಂಗ ಸಮ್ಯಕ್ ದೃಷ್ಟಿಯಲಕ್ಷಣವಾಗಿದೆ.

ಹೊರ ಮಿಂಚಿಂ ಹೊಲೆವೆಣ್ಗೆ ಸೋಲ್ವ ತೆರದಿಂ ಶೃಂಗಾರವೀರಕ್ಕೆ ಬಾ
ಯೊರೆದೀ ತಸ್ಕರಜೃರವೀರವಿಟವೇಶ್ಯಾ ಕಾವ್ಯಮಂ ಕೇಳ್ದು ಮೆ
ಯ್ಮರೆವರ್ಪುಣ್ಯ ಪುರಾಣದತ್ತೆಳಸರಯ್ಯೋ ಭೂಪರೂಲ್ದಾಮ್ಲಮಂ
ಸುರಿವರ್ಪಾಲ್ಗುಡಿಯೆಂದರೂ ಜಡಿವರೈ ರತ್ನಾಕರಾಧೀಶ್ವರಾ ॥೮೮॥

ಮೇಲಿನ ಬೆಡಗು ಬಿನ್ನಾಣಗಳಿಗೆ ಮರುಳಾಗಿ ಮೋಹಗೊಂಡು ರಾಜರುಗಳು ಚಂಡಾಲಸ್ತ್ರೀಯರನ್ನು ಕೂಡುವರು.ಶೃಂಗಾರ ಮತ್ತು ವೀರರಸಗಳಿಗೆ ಬಾಯ್ ಬಾಯ್ ಬಿಟ್ಟು, ದುಷ್ಟರ ಕಥೆಗಳನ್ನೂ ಕಳ್ಳರ, ಜಾರರ, ವಿಟರ, ವಾರಾಂಗನೇಯರ ವಿಪುಲ ವರ್ಣನೆಯಿರುವ ದುಷ್ಕಾವ್ಯಗಳನ್ನೂ ಕೇಳಿ ಮೆಯ್ ಮರೆಯುತ್ತಾರೆ. ಪುಣ್ಯಪುರುಷರ, ಮೋಕ್ಷಗಾಮಿಗಳ ಸತ್ಕಾವ್ಯಗಳತ್ತ ಮನಸ್ಸೇ ಹೋಗದು. ಅಯ್ಯೋ! ಏನು ಕರ್ಮಗೇಡಿಗಳು! ಬೇಕಾದಷ್ಟು ಅಮೃತದಂತಿರುವ ಹಾಲಿದ್ದರೂ ಅದನ್ನು ಸೇವಿಸದೇ, ಹುಣಿಸೇ ಹಣ್ಣಿನ ಹುಳಿಯನ್ನೇ ಸೇವಿಸಲು ಆತುರಪಡುವರಲ್ಲ! ಕಟ್ಟಕಡೆಗೇ ಅವರ ಯೋಚನೆಗಳು ಆ ಕಡೆಗೆ ಹರಿಯುವುದಲ್ಲಾ.

ಶೃಂಗಾರಂ ಕಲಿನೀತಿಗೆಂದವನಿಪರ್ದುಷ್ಕಾವ್ಯಕೇ ಕೊಲ್ವರಾ
ಶೃಂಗಾರಂ ಕಲೆನೀತಿಗಳ್ಕಡಮೆಯೇ ಸತ್ಕಾವ್ಯದೊಳ್ ?ಲೌಕಿಕಂ
ಪೊಂಗಿರ್ದಗ್ಗಳನೇಮಿರತ್ನ ಕುಮುದೇಂದು ಶ್ರೀ ಜಿನಾಚಾರ್ಯಕಾ
ವ್ಯಂಗಳ್ಮಾಡವೆ ಮೋಹಮಂ ಮುಕುತಿಯಂ? ರತ್ನಾಕರಾಧೀಶ್ವರಾ ॥೮೯॥

ಶೃಂಗಾರರಸಕ್ಕಾಗಿ, ವೀರರಸಕ್ಕಾಗಿ, ನೀತಿಗಾಗಿ ರಾಜರೈಗಳು ಸಿಕ್ಕಸಿಕ್ಕ ಕೆಟ್ಟ ಕಾವ್ಯಗಳತ್ತ ಏಕೆ ಮನಸ್ಸು ಕೊಡುತ್ತಾರೆ? ನಮ್ಮ ಹಿಂದಿನ ಆಚಾರ್ಯರು, ಕವಿಪುಂಗವರು, ಅಮೂಲ್ಯವಾದ ಸಾಹಿತ್ಯ ಭಂಡಾರವನ್ನೇ ಬಿಟ್ಟುಹೋಗಿದ್ದಾರೆ. ಅವರು ರಚಿಸಿರುವ ಸತ್ಕಾವ್ಯಗಳು ಶೃಂಗಾರಕ್ಕೆ ಕಡಿಮೆಯೇ? ಅವುಗಳಲ್ಲಿ ವೀರರಸವಿಲ್ಲವೇ? ನೀತಿಬೋಧಕಗಳಿಲ್ಲವೇ? ರಸವತ್ ಕಾವ್ಯಗಳನ್ನು ರಚಿಸಿರುವ ಅಗ್ಗಳ, ನೇಮಿ, ರನ್ನ, ಕುಮುದೇಂದು, ಶ್ರೀ ಜಿನಸೇನಾಚಾರ್ಯ ಮುಂತಾದವರು ಸಾಮಾನ್ಯ ಕವಿಗಳೇ? ಅವರ ಕಾವ್ಯಗಳಲ್ಲಿಲೌಕಿಕ ವಿಷಯಗಳ ನಿರೂಪಣೆಯಿದ್ದರೂ, ಅವುಗಳ ಅಧ್ಯಯನದಿಂದ ನಮಗೆ ಇಹಲೋಕದ ಸುಖವೂ, ಪರಲೋಕದ ಸುಖವೂ, ಕಡೆಗೆ ಮುಕ್ತಿಲಾಭವೂ ಆಗುವುದಿಲ್ಲವೇ?

ಚೇತೋರಂಗದೊಳಿಟ್ಟು ನಿಮ್ಮಡಿಗಳಂ ಬಂದೋಲಗಂಗೊಟ್ಟೊಡಂ
ಪ್ರಾತಃಕಾಲದ ರಾಗದೊಳ್ಪದದೊಳಂ ಪದ್ಯಂಗಳೊಳ್ವೀಣೆಯೊಳ್
ಶ್ರೀ ತೀರ್ಥಂಕರ ನಿಮ್ಮ ಪಾಡಿಸುತೆ ಪಾಡುತ್ತಳ್ತಿಯಂ ಮಾಡುತಿ
ರ್ಪಾತಂ ಭೂಪನೆ? ಪಾಪಲೋಪಕನಲಾ ರತ್ನಾಕರಾಧೀಶ್ವರಾ ॥೯೦॥

ರಾಜನಾದವನು ಓಲಗದಲ್ಲಿರುವಾಗಲೂ ವೀತರಾಗ, ಸರ್ವಜ್ಞ ತೀರ್ಥಂಕರ ಮಹಾಪ್ರಭುವಿನ ದಿವ್ಯಪಾದಕಮಲಗಳನ್ನು ತನ್ನ ಹೃದಯಮಂಟಪದಲ್ಲಿ ವಿರಾಜಮಾನಮಾಡಿಸಿ, ಆ ಭಗವಂತನ ಗುಣಗಾನವನ್ನ್ನು ಉದಯರಾಗವೇ ಮೊದಲಾದ ರಾಗಗಳಲ್ಲಿ ಸುಶ್ರಾವ್ಯವಾಗಿ ಹಾಡಿಸುತ್ತ, ಅನೇಕ ಸ್ತೋತ್ರಗಳನ್ನು ಹೇಳಿಸುತ್ತ, ವೀಣಾವಾದನದಲ್ಲಿ ಆ ಭಗವಂತನ ನಾಮಸಂಕೀರ್ತನೆಯನ್ನು ನುಡಿಸುತ್ತಾ ಭಕ್ತಿಪರವಶನಾಗಿ ತಾನೇ ಹಾಡುತ್ತ ಇದ್ದರೆ ಪುಣ್ಯಫಲಪ್ರಾಪ್ತಿಗೆ ಎಣೆಯುಂಟೆ ಅಂತಹ ಭವ್ಯಜೀವಿಯಾದ ಮಹಾರಾಜನು ಅಸಾಧಾರಣ ಚೇತನವೆಂದೇ ಹೇಳಬೇಕು. ಈ ಭಗವದ್ಭಕ್ತಿಯಿಂದ
ಪಾಪಕ-ರ್ಮಗಳು ತನ್ನಷ್ಟಕ್ಕೆ ತಾನೇ ಜಾರಿಹೋಗುವುದಿಲ್ಲವೇ?

ಭರತಂಗಂ ಸಭೆಗೆಯ್ದೆ ಚಿತ್ತಕಲುಷಂ ನಿಮ್ಮಾಲಯಕ್ಕೆಯ್ದೆ ಸ
ತ್ಪರಿಣಾಮಂ ಪರಿದೆಯ್ದುತಂ ಪರೆಯುತಂ ಬೆಂಕೊಂಡಿರಲ್ಕಂಡು ತ
ದ್ಭರತಂ ನಿಮ್ಮನೆ ಪೊರ್ದಿ ಸಾರ್ದನಮೃತಶ್ರೀ ಸೌಖ್ಯಮಂ ನಿಮ್ಮನೀ
ನರನಾಥರ್ಮರೆದೇಕೆ ನೋವರಕಟಾ!ರತ್ನಾಕರಾಧೀಶ್ವರಾ ॥೯೧॥

ತದ್ಭವ ಮೋಕ್ಷಗಾಮಿಯಾದ ಭರತಚಕ್ರವರ್ತಿಗೂ ತನ್ನ ಆಸ್ಥಾನಕ್ಕೆ ಬಂದರೆ ಮನಸ್ಸಿನಲ್ಲಿ ಕ್ಲೇಶವುಂಟಾಗುವುದು. ಆದರೆ ಜಿನದರ್ಶನಕ್ಕೋಸ್ಕರ ಭವ್ಯ ಚೈತ್ಯಾಲಕ್ಕೆ ಬಂದರೆ ಅಪೂರ್ವ ಮನಶ್ಶಾಂತಿ ಲಭಿಸುವುದು. ಆ ಸತ್ಪರಿಣಾಮವೇ ವೃದ್ಧಿಹೊಂದುತ್ತ ಆ ಭರತಚಕ್ರವರ್ತಿಯನ್ನು ಎಡಬಿಡದೆ ಅನುಸರಿಸುತ್ತ ಅವನನ್ನು ಅಂತರ್ಮುಖಿಯನ್ನಾಗಿ ಮಾಡಲು ಸಹಾಯಮಾಡುತ್ತಿತ್ತು. ಈ ಸಾಧನೆಯಿಂದಲೇ ಆ ಮಹಾನ್ ಚೇತನ ಚಕ್ರವರ್ತಿ ಪದವಿಯ ಭೋಗೋಪಭೋಗಗಳನ್ನು ಅನುಭವಿಸುತ್ತಿದ್ದರೂ ಕೊನೆಗೆ ಎಲ್ಲವನ್ನೂ ತ್ಯಾಗಮಾಡಿ ಎರಡು ಘಳಿಗೆಯಲ್ಲಿ ಕೇವಲಜ್ಞಾನವನ್ನು ಪಡೆದುಜಿನೇಂದ್ರನಾದನು, ಭರತೇಶನ ಈ ಆದರ್ಶವನ್ನುತಮ್ಮ ಮುಂದಿಟ್ಟುಕೊಳ್ಳದೆ ಇಂದಿನ ರಾಜ ಮಹಾರಾಜರು ಸಂಸಾರಸಾಗರದಲ್ಲಿ ಸಿಕ್ಕಿ ತೊಳಲಾಡುತ್ತಿರುವರಲ್ಲಾ!

ರಾಜಶ್ರೀಯೊಳನೇಕ ಕಾಮಿನಿಯರುಂಟಾಳಾಪ ನೃತ್ಯಂಗಳುಂ
ಟಾಜಿಹ್ವಾರುಚಿಯುಂಟು ಕಾಮಿಸಿದವೆಲ್ಲಾ ಉಂಟುವುಂಟಾದೊಡಂ
ರಾಜೀವಂ ಕೆಸರಳ್ದಿಯಳ್ದದವೊಲಿರ್ದೂರ್ದ್ವಕ್ಕೆ ಕಣ್ಣಿಟ್ಟೊಡಾ
ರಾಜಂ ರಾಜನೆ? ತಾನೆ ರಾಜಋಷಿಯೈ ರತ್ನಾಕರಾಧೀಶ್ವರಾ ॥೯೨॥

ರಾಜನಾದವನಿಗೆ ಸುಖಸಂಪತ್ತುಗಳಿಗೆ ಕಡಿಮೆಯೇ? ಅಂತಃಪುರದಲ್ಲಿ ವಿಲಾಸಿನಿಯರಿಗೆ ಕಡಿಮೆಯೇ? ಪ್ರಸಿದ್ಧರಾದ ಗಾಯಕ ಗಾಯಕಿಯರು ಅವನಿಗೋಸ್ಕರ ಸುಶ್ರಾವ್ಯವಾಗಿ ಹಾಡಲು ಸದಾ ಸಿದ್ಧವಾಗಿರುತ್ತಾರೆ. ನೃತ್ಯಗಾರ್ತಿಯರು ತಮ್ಮ ಬೆಡಗು ಬಿನ್ನಾಣಗಳಿಂದ ಅವನನ್ನು ಸಂತೋಷಪಡಿಸಲು ಹಾತೊರೆಯುತ್ತಾರೆ.  ಬೇಕುಬೇಕಾದ ಭಕ್ಷ್ಯಗಳು ಅವನಿಗಾಗಿ ಸದಾಸಿದ್ಧ. ರಾಜನ ಇಂಗಿತವನ್ನರಿತು ಅವನನ್ನು ಸಂತುಷ್ಟಗೊಳಿಸಲು ಅವನ ಸೇವಕರು ಕಾತರರಾಗಿರುತ್ತಾರೆ. ಏನು ಬೇಕು ಅವೆಲ್ಲವನ್ನೂ ಅವನಿಗಾಗಿ ಅಣಿಮಾಡುತ್ತಾರೆ. ಇಷ್ಟೆಲ್ಲ ಭೋಗೋಪಭೋಗಗಳು ಇದ್ದರೂ ಶ್ರೇಷ್ಠನಾದ ರಾಜನು ಇವೈಗಳಲ್ಲೇ ಮಗ್ನನಾಗಿರುವುದಿಲ್ಲ. ಅವುಗಳಿಗೆ ಅಂಟಿಯೂ ಅಂಟದಂತೆ ನಿರ್ಲಿಪ್ತನಾಗಿರುತ್ತಾನೆ. ಕಮಲ ಕೆಸರಿನಲ್ಲಿ ಹುಟ್ಟಿದರೂ ಕೆಸರನ್ನೆಲ್ಲಾ ತನ್ನ ಮೈಗೆ ಬಳಿದುಕೊಳ್ಳುವುದಿಲ್ಲ. ಕಮಲದ ಹೂವಿನ ದೃಷ್ಟಿಯೆಲ್ಲ ಸೂರ್ಯನ ಕಡೆ. ಹಾಗೆ ರಾಜನು ಸಹ ಈ ಇಹಲೋಕದ ಸುಖದ ಸುಪ್ಪತ್ತಿಗೆಯಲ್ಲಿ ಪವಡಿಸಿದ್ದರೂ ಅವನ ಅಂತರಂಗ ವೀತರಾಗಭಾವನೆಯಿಂದ ತುಂಬಿರಬೇಕು. ಅವನ ಅಂತರ್ದೃಷ್ಟಿ ಯಾವಾಗಲೂ ಮೋಕ್ಷದ ಕಡೆಗೇ ಇರಬೇಕು. ಅಂಥಹ ರಾಜನು ನಿಜಕ್ಕೂ ರಾಜಋಷಿಯೇ ಸರಿ.

ಅಂದೇಂ ತಂದನೆ ಗರ್ಭದಿಂ ಪರರದೇಶಂ ಲಕ್ಷ್ಮಿಸೈನ್ಯಂಗಳಂ
ಮುಂದೇನೊಯ್ವನೆ ತಳ್ತ ಪೆಣ್ಪಡೆದ ಮಕ್ಕಳ್ಪೊತ್ತ ದೇಹಂಗಳಂ
ಬಂದಿತ್ತೊಂದು ವಿನೋದಗೋಷ್ಠಿಯದು ನಿಮ್ಮಂ ಮುನ್ನಕಂಡಿರ್ದ ಸೈ
ಪಿಂದಂ ಮತ್ತಮದೇಕೆ ತಾಂ ಮರೆವನೋ ರತ್ನಾಕರಾಧೀಶ್ವರಾ ॥೯೩॥

ಹುಟ್ಟುವಾಗ ತನ್ನ ಜೊತೆಯಲ್ಲಿ ರಾಜ್ಯ, ಕೋಶ, ಚತುರಂಗಬಲ ಮುಂತಾದ ಸಂಪತ್ತು ವೈಭವಗಳನ್ನು ತಂದನೇ? ಸಾಯುವಾಗ ಏನಾದರೂ ಈ ವೈಭವಗಳನ್ನು ತನ್ನ ಜೊತೆಗೆ ತೆಗೆದುಕೊಂಡು ಹೋಗಲು ಸಾಧ್ಯವೇ? ಕೈಹಿಡಿದ ಹೆಂಡತಿ, ತನ್ನ ಮಕ್ಕಳು, ತಾನು ಧರಿಸಿದ ದೇಹ, ಇವುಗಳಾದರೂ ತನ್ನ ಹಿಂದೆ ಬರುವುದೇ? ಈ ಜೀವನ ಒಂದು ವಿನೋದಗೋಷ್ಠಿಯ ಕನಸಿದ್ದಂತೆ. ಹಿಂದೆ ಮಾಡಿದ ಪುಣ್ಯಕರ್ಮ ಈ ಜನ್ಮದಲ್ಲಿ ಫಲನೀಡಿ ಕಣ್ಮರೆಯಾಗುತ್ತದೆ. ತಾನು ಅಸು ನೀಗಿದ ಮೇಲೆ ಮುಂದಿನ ಜನ್ಮದಲ್ಲಿ ಹಿಂದಿನ ಜೀವನದ ಯಾವ ನೆನಹೂ ಉಳಿದಿರುವುದಿಲ್ಲ. ಎಲ್ಲವನ್ನೂ ಮರೆತುಬಿಡುತ್ತಾನೆ. ಈ ಇಹಲೋಕದ ಸುಖಸಂಪದಗಳು ಕ್ಷಣಭಂಗುರವೆಂದು ತಿಳಿಯದೆ ಅವಿವೇಕಿಗಳು ಇವುಗಳೊಳಗೇ ತಮ್ಮ ದೃಷ್ಟಿಯನ್ನಿಟ್ಟು ಪರಮಾರ್ಥವನ್ನು ಮರೆತುಬಿಡುವರಲ್ಲಾ.

ಭಂಡಾರಂ ಬರುವನ್ನಮಿರ್ಪನೆ ವಧೂಸಂಭೋಗದೊಳ್ಸಾಕೆನಲ್
ಕಂಡೇಂ ಪೋಪನೇ ಯಳ್ಕರಿಂ ಪಡೆದ ರಾಜ್ಯಶ್ರೀಯನೇನಂತ್ಯದೊಳ್
ಕೊಂಡೊಯ್ದಪ್ಪನೆ? ನಾಸ್ತಿ ನಾಸ್ತಿ ಗುರುದೈವಕ್ಕೊಲ್ದುಕೊಟ್ಟೈಸು ತಾ
ನುಂಡುಟ್ಟೈಸು ತನುತ್ತು ಮತ್ತೆ ಬರಿದೈ ರತ್ನಾಕರಾಧೀಶ್ವರಾ ॥೯೪॥

ರಾಜ ಮಹರಾಜರುಗಳುಈ ಭೂಮಿಯಮೇಲೆ ಸ್ಥಿರವಾಗಿ ನಿಲ್ಲುವರೇ? ಅವನ ಖಜಾನೆ ತುಂಬಿ ತುಳುಕುವವರೆಗೂ ರಾಜನು ಬದುಕಲು ಸಾಧ್ಯವೇ? ಅಂತಃಪುರದಲ್ಲಿ ಅನೇಕ ಸುಂದರ ತರುಣಿಯರು ಇದ್ದರೂ, ಅವರಲೂಲಿ ಅವನು ರತಿರಾಗದಲ್ಲಿ ಸತತ ತೊಡಗಿದ್ದರೂ, ಕಾಮಾಸಕ್ತಿಯು ಕಡಿಮೆಯಾಯಿತೇ? ಎಲ್ಲವೂ ತನಗೆ ದೊರೆಯಬೇಕು ಎನ್ನುವ ಅತ್ಯಾಸೆಯಿಂದ ಧರ್ಮಾಧರ್ಮದ ವಿಚಾರಮಾಡದೆ ಸಂಪಾದಿಸಿದ ರಾಜ್ಯಕೋಶಾದಿಗಳು ಅವನ ಅಂತ್ಯಕಾಲದಲ್ಲಿ ಅವನೊಡನೆ ಹೋಗುವುವೇ? ಖಂಡಿತಾ ಇಲ್ಲ. ಈ ಇಹಲೋಕದ ಸುಖಸಂಪತ್ತುಗಳಿಗೆ ಮಾರೈಹೋಗಿ ಪರಮಾರ್ಥವನ್ನು ಮರೆಯುವುದು ಮೂರ್ಖತನವಲ್ಲವೇ? ಪೂರ್ವಾರ್ಜಿತ ಪುಣ್ಯದಿಂದ ಬಂದ ಐಶ್ವರ್ಯವನ್ನು ಸದ್ವಿನಿಯೋಗ ಮಾಡಬೇಕು. ಗುರುಗಳ ಸೇವೆಯಲ್ಲಿಯೂ, ದೇವರ ಪೂಜಾಕಾರ್ಯಗಳಲ್ಲಿಯೂ ಉಪಯೋಗಿಸಬೇಕು. ಹೇಗೆ ಧರ್ಮಕ್ಕೆ ಕೊಟ್ಟಷ್ಟೂ ತಾನು ಅನುಭವಿಸಿದಷ್ಟು ಮಾತ್ರ ತನ್ನದು, ಲೋಭತನದಿಂದ ಕೂಡಿಟ್ಟಷ್ಟೂ ಅದು ಸ್ವಾರ್ಥವಲ್ಲವಂ?

ಆವಾವಂಗನೆಯಲ್ಲಿ ಕೂಡಿದೊಡಮಾ ಪಾಡಲ್ಲದೇಂ ಕಂಡನೇ
ಆವಾವೂಟಮನುಂಡೊಡಂ ಸವಿಗಳೊಳ್ಬೇರೊಂದನೇನುಂಡನೇ
ಆವಾವಾಭರಣಂಗಳಂ ತೊಡೆ ತೊವಲ್ಪೊನ್ನಾದುದೇ ಕಂಡುಮೀ
ಜೀವಂ ಕಾಣದು ಉಂಡುಮೇಂ ದಣಿಯದೋ? ರತ್ನಾಕರಾಧೀಶ್ವರಾ ॥೯೫॥

ಕಣ್ಣಿಗೆ ಕಂಡ ಕನ್ನೆಯರನೆಲ್ಲಾ ಬಯಸಿ ಕೂಡಿದರೂ ಹೊಸ ಅನುಭವವೇನಾದರೂ ಕಂಡೀತೇ ? ಬೇಕು ಬೇಕಾದ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ತಿಂದರೂ ರುಚಿಗಳಲ್ಲಿ ಬೇರೆ ಏನನ್ನಾದರೂ ಸವಿದನೇ! ಭಂಗಾರದ ಆಭರಣಗಳನ್ನೆಲ್ಲಾ ಮೈಗೆ ಭಾರವಾಗುವಷ್ಟುಅಲಂಕರಿಸಿಕೊಂಡರೂ ಈ ತೊಗಲು ಚಿನ್ನವಾಯಿತೇ? ಈ ಜೀವಕ್ಕೆ ಏನು ಮೋಹ! ಏನು ಭ್ರಮೆ, ಬೇಕಾದ ಹಾಗೆ ಸುಖ ಅನುಭವಿಸಿದರೂ, ತಿಂದು, ಉಟ್ಟು, ಮೆರೆದರೂ ತೃಪ್ತಿಯಿಲ್ಲದೆ ಹೋಯಿತೇ! ವಿಷಯಲಂಪಟತನಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನೇ ಮಾಡುವುದಿಲ್ಲವಲ್ಲ ಈ ಜೀವ.

ಭರತಂಬೊಲ್ಸಗರಂಬೊಲಾ ದಶರಥಂಬೊಲ್ ಶ್ರೇಣಿಕಂಬೊಲ್ಮಹೇ
ಶ್ವರನೊದ್ಧಾಯನನಂತೆ ದಾನರುಚಿಯೊಳ್ ಶಾಸ್ತ್ರಾರ್ಥಿಯೊಳ್ಸತ್ಯದೊಳ್
ವಿರತಿಕ್ಷಾಂತಿಯೊಳರ್ಚನಾವಿಭವದೊಳ್ಸಂದೊಪ್ಪೆ ಭಾಗ್ಯಂ ಸುಖಾ
ಕರಮಂತಲ್ಲದೊಡೇನೊ ದುಷ್ಕರವಲಾ ರತ್ನಾಕರಾಧೀಶ್ವರಾ ॥೯೬॥

ಭರತಚಕ್ರವರ್ತಿಯಂತೆ ಚತುರ್ವಿಧ ದಾನದಲ್ಲಿ ಆಸಕ್ತಿಯನ್ನು ಹೊಂದಿರಬೇಕು. ಸದ್ಧರ್ಮದ ತಿಳುವಳಿಕೆ, ಶಾಸ್ತ್ರ ಆಗಮಗಳ ಅಧ್ಯಯನದಲ್ಲಿ ಆಳವಾದ ಆಸಕ್ತಿಯನ್ನು ಸಗರಚಕ್ರವರ್ತಿಯಂತೆ ಬೆಳೆಸಿಕೊಳ್ಳಬೇಕು. ಸತ್ಯವ್ರತದ ನಿಷ್ಠೆಯಲ್ಲಿ ದಶರಥಮಹಾರಾಜನ ಆದರ್ಶವನ್ನು ಯಾವಾಗಲೂ ಮುಂದಿಟ್ಟುಕೊಂಡು ಜೀವನವನ್ನು ಮುಂದುವರಿಸಬೇಕು. ವ್ರತಾಚರಣೆಗಳಲ್ಲಿ, ಸಂಯಮ, ಗುಣದಲ್ಲಿ, ಕ್ಷಮಾಭಾವನೆಯಲ್ಲಿ ಶ್ರೇಣಿಕ ಮಹಾರಾಜನ ಹೆಜ್ಜೆಯಲ್ಲಿ ನಡೆಯಬೇಕು. ಜಿನೇಶ್ವರಭಕ್ತಿ ಮತ್ತು ಪೂಜಾ ಕೈಂಕರ್ಯಗಳನ್ನು ಮಾಡುವುದರಲ್ಲಿ ಮಹೇಶ್ವರ ಒದ್ದಾಯನನಂತೆ ಶ್ರದ್ಧಾಭಕ್ತಿಗಳನ್ನು ಅಳವಡಿಸಿಕೊಂಡು ತನ್ನ ಆತ್ಮಕಲ್ಯಾಣವನ್ನು ಮಾಡಿಕೊಳ್ಳಲು ಹಾತೊರೆಯಬೇಕು. ಇಂತಹ ಮಹೋನ್ನತ ಧರ್ಮಕಾರ್ಯಗಳಲ್ಲಿ ಉತ್ತಮ ಭಾವನೆಗಳನ್ನು ಇಟ್ಟುಕೊಂಡಿರುವವರ ಜೀವನ ಸುಖಮಯವಾಗುವುದಿಲ್ಲವೇ? ಹಾಗೆ ಮಾಡದೆ ಮಿಥ್ಯಾದೃಷ್ಟಿಯಾದರೆ ಅಧೋಗತಿಗಿಳಿದು ದುಃಖಾತ್ಮರಾಗುವುದಿಲ್ಲವೇ?

ಉಳಿಯಿಂ ಗೆಯ್ಯದ ಚೈತ್ಯಮಂದಿರದೊಳಿಟ್ಟೀ ಯೋಗಿಗಳ್ತಾರದಾ
ಜಳದಿಂ ತೇಯದ ಗಂಧದಿಂ ತೊಳೆಯದೇ ನಾಂದಕ್ಕಿಯಿಂದೆತ್ತದಾ
ತಳಿರ್ಪೂವಿಂದಡದನ್ನದಿಂ ಸುಡದ ದೀಪೋದ್ಧೂಪದಿಂ ಕೊಯ್ಯದಾ
ಫಳದಿಂದರ್ಘ್ಯದೆ ನಿಮ್ಮನರ್ಚಿಪರಹೋ ರತ್ನಾಕರಾಧೀಶ್ವರಾ--॥೯೭॥

ಯೋಗಿಗಳು ದ್ರವ್ಯಪೂಜೆಮಾಡುವುದಿಲ್ಲ. ದ್ರವ್ಯಪೂಜೆ ಶ್ರಾವಕರಿಗೆ ಮೀಸಲು. ಆದರೆ ಯೋಗಿಗಳು ಆ ಭಗವಜ್ಜಿನೇಂದ್ರರ
ಸ್ವರೂಪವನ್ನು ತಮ್ಮ ಹೃದಯಕಮಲದಲ್ಲಿ ಸ್ಥಾಪಿಸಿ ಅಷ್ಟವಿಧ ಅರ್ಚನೆಯನ್ನು ಭಾವನೆಯ ಮೂಲಕ ಸಲ್ಲಿಸುತ್ತಾರೆ. ಈ ಭಾವಪೂಜೆಯೇ ಸರ್ವೋತ್ಕೃಷ್ಟವಾದುದು. ಶ್ರಾವಕರೂ ಸಹ ಇದನ್ನು ಅಭ್ಯಾಸ ಮಾಡಬಹುದು. ಭಗವಂತನನ್ನು ಉಳಿಯಿಂದ ಮಾಡದಿರುವ ಆಕೃತಿಯ ಜಿನಮಂದಿರದೊಳಿಟ್ಟು, ತಾರದಿರುವ ಶುದ್ಧಜಲದಿಂದಲೂ, ತೇಯದ ಗಮಗಮಿಸುವ ಗಂಧದಿಂದಲೂ, ನೀರಿನಲ್ಲಿ ತೊಳೆಯದೆ ನೆನೆಸಿರುವ ಅಕ್ಕಿಯಿಂದಲೂ, ಬಿಡಿಸಿಕೊಂಡು ಬಾರದಿರುವವಿವಿಧ ಪುಷ್ಪಗಳಿಂದಲೂ, ಬೇಯಿಸದಿರುವ ನೈವೇದ್ಯದಿಂದಲೂ, ಸುಡದ ದೀಪ ಮತ್ತು ಉತ್ಕೃಷ್ಟವಾದ ಧೂಪದಿಂದಲೂ, ಕಿತ್ತುಕೊಂಡು ಬಾರದಿರುವ ಉತ್ತಮ ಫಲಗಳಿಂದಲೂ, ಅರ್ಘ್ಯವನ್ನು ಎತ್ತುತ್ತಲೂ ನಿಮ್ಮನ್ನು ಪೂಜಿಸುತ್ತಾರೆ. ಅವರ ಚಿತ್ತ ಏಕಾಗ್ರತೆ ಆಶ್ಚರ್ಯಕರವಲ್ಲವೇ?

ಆವಂ ಮಾಡಿದ ಭಾವಪೂಜೆಯಿನವಂಗೋರ್ವಂಗೆ ಲೇಸಲ್ಲಿಗಾ
ಸಾವದ್ಯಂ ರಹಿತಂ ಸಮಂತು ಸುಜನರ್ಸದ್ವಸ್ತುವಿಂ ಪೂಜಿಸಲ್
ಸಾವದ್ಯಂ ಕಳೆಯಲ್ಕೆ ತೀರದೊಡಮೇಂ ತತ್ಪೂಜೆಯಂ ಕಂಡು ಕೇ
ಳ್ದೇವೇಳ್ವೆಂ ಪಲರುಂ ಸುಖಂಬಡೆಯರೇ? ರತ್ನಾಕರಾಧೀಶ್ವರಾ ॥೯೮॥

ನಿರ್ದೋಷವಾದ ಭಾವಪೂಜೆಯಿಂದ ಕೇವಲ ಅದನ್ನು ಮಾಡಿದವನಿಗೊಬ್ಬನಿಗೆ ಮಾತ್ರ ಶ್ರೇಯಸ್ಸು ಉಂಟಾಗುವುದು. ಆದರೆ ಶ್ರಾವಕರು ಉತ್ಕೃಷ್ಟ ದ್ರವ್ಯಗಳಿಂದ ಭಗವಂತನಿಗೆ ಪೂಜೆಯನ್ನು ನೆರವೇರಿಸಿದರೆ, ಅದರಿಂದ ಆ ಪೂಜೆಯನ್ನು ಮಾಡಿಸುವವರಿಗೂ, ಆ ಪೂಜಾ ವೈಭವವನ್ನು ನೋಡುವವರಿಗೂ, ಕೇಳಿದವರಿಗೂ ಸುಖವುಂಟಾಗುವುದಿಲ್ಲವೇ? ದ್ರವ್ಯಪೂಜೆಯಿಂದ ಸ್ವಲ್ಪ ದೋಷವುಂಟಾಗುವುದೇನೋನಿಜ. ಆದರೆ ಅದರಿಂದ ಬಹುಜನಕ್ಕೆ ಪುಣ್ಯಾಸ್ರವವಾಗುವುದಿಲ್ಲವೇ? ದ್ರವ್ಯಪೂಜೆಮಾಡುವೈದಕ್ಕಾಗಿ ಅನಿವಾರ್ಯವಾಗಿ ಚಿಗುರು, ಹೂವು, ಮತ್ತು ಹಣ್ಣುಗಳನ್ನು ಕೀಳಬೇಕಾಗಬಹುದು. ಇದರಿಂದ ಏಕೇಂದ್ರೀಯ ಜೀವಿಗಳಿಗೆ ಹಿಂಸೆಯಾಗುವುದು. ಅಭಿಷೇಕಾದಿಗಳಿಂದ ಕ್ರಿಮಿಕೀಟಾದಿಗಳಿಗೆ ಬಾಧೆಯುಂಟಾಗಬಹುದು. ಆದರೆ ಸದ್ಧರ್ಮವೃದ್ಧಿಗೋಸ್ಕರ ಈ ಪಂಚಮಕಾಲದಲ್ಲಿ ಇಂತಹ ದ್ರವ್ಯಪೂಜೆಗಳು ಅನಿವಾರ್ಯ.  ಧರ್ಮಪ್ರಸಾರ ಮತ್ತು ಪ್ರಭಾವನೆಗಳಿಗೆ ಅಭಿಷೇಕಗಳು, ರಥೋತ್ಸವಗಳು, ಧಾರ್ಮಿಕ ಸಭೆಗಳು ಮಾಡಬೇಕಾಗುತ್ತೆ. ಈ ಧಾರ್ಮಿಕಕಾರ್ಯಗಳ ಪ್ರಭಾವ ಸಾದಾರಣ ಜನತೆಯ ಮೇಲೆ ಸಾಕಾದಷ್ಟು ಆಗುವುದರಲ್ಲಿ ಸಂದೇಹವಿಲ್ಲ.

ಮುನಿಗಳ್ಮಾಡುವ ಭಾವಪೂಜೆ ರುಚಿಯೋ? ಸದ್ಭವ್ಯಸಂತಾನವ
ರ್ಚನೆಗೆಯ್ವುತ್ತಮವಸ್ತುಪೂಜೆ ರುಚಿಯೋ? ಪೇಳಯ್ಯ ನೀನೇಕೆ ಸು
ಮ್ಮನೆಯಿರ್ಪೈಯಿದರಂದಮಂ ತಿಳಿದೆನೈ ನಿಷ್ಕಾಂಕ್ಷಕಂ ನೀನವರ್
ಮನಮಂ ನಿಮ್ಮೊಳಿಡಲ್ಕೆ ಸಾಧಿಪರಲಾ! ರತ್ನಾಕರಾಧೀಶ್ವರಾ ॥೯೯॥

ಜಿನೇಂದ್ರ ಮುನಿಗಳು ಮಾಡುವ ಭಾವಪೂಜೆ ನಿನಗೆ ಇಷ್ಟವೋ ಅಥವಾ ಭವ್ಯಾತ್ಮರು ಮಾಡುವ ದ್ರವ್ಯಪೂಜೆ ನಿನಗೆ ಹಿತವೋ, ಹೇಳಯ್ಯ? ಏತಕ್ಕೆ ಸುಮ್ಮನಿರುವೇ? ನಿನ್ನ ಈ ಮೌನ ಈಗ ನನಗೆ ಅರ್ಥವಾಯಿತು. ನೀನು ಯಾರಲ್ಲೂ, ಯಾವುದರಲ್ಲೂ ಆಸಕ್ತಿಯಿಲ್ಲ, ನೀನು ವೀತರಾಗನಲ್ಲವೇ? ಆದರೆ ಭವ್ಯಾತ್ಮರು ತಮ್ಮ ಮನವನ್ನು ನಿನ್ನಲ್ಲಿ ಸ್ಥಿರಗೊಳಿಸಲು ಈ ಸಾಧನೆಯನ್ನು ಮಾಡುತ್ತಿದ್ದಾರೆ. ಚಂಚಲವಾದ ಮನಸ್ಸನ್ನು ಹಿಡಿದು ಕಟ್ಟಿಹಾಕಲು ಈ ಪೂಜಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಭಾವಪೂಜೆಯ ಗುರಿಯೂ ಆತ್ಮಕಲ್ಯಾಣ. ದ್ರವ್ಯಪೂಜೆಯ ಗುರಿಯೂ ಆತ್ಮಕಲ್ಯಾಣ.  

ಪೂಜಾತಂತ್ರದೆ ವಸ್ತುವಂ ನೆನೆಯುತಂ ಮತ್ತಂ ಸುಮಂತ್ರಾಕ್ಷರ
ಭ್ರಾಜದ್ಧ್ವಾನಮನಾಲಿಸುತ್ತೆ ತವ ಬಿಂಬಸ್ನಾನಮಂ ನೋಡಿ ನಾ
ನಾಜೀವಂ ಸುಖಿಯಕ್ಕುಮಲ್ಲಿ ಬಹಿರಂಗಾಳೋಚನಂ ಮೋಚನಂ
ಪೂಜಾರ್ಥಂ ಪುರುಷಾರ್ಥಮಾದುದರಿಂ ರತ್ನಾಕರಾಧೀಶ್ವರಾ ॥೧೦೦॥

ಪೂಜೆಯನ್ನು ಮಾಡುವಾಗ ಪೂಜಾಕ್ರಮವನ್ನು ನೆನೆಯುತ್ತ ಮತ್ತು ಯಾವ ಯಾವ ದ್ರವ್ಯಗಳನ್ನು ಅಣಿಮಾಡಿಕೊಳ್ಳಬೇಕೆನ್ನುವುದರಲ್ಲಿ ಮನಸ್ಸು ತಲ್ಲೀನವಾಗಿರುತ್ತದೆ. ಪೂಜೆ ಪ್ರಾರಟಭವಾಯಿತೆಂದರೆ ಮಂತ್ರಘೋಷಗಳ ಗಂಭೀರ ನಿನಾದದಲ್ಲಿ ನಮ್ಮ ಚಿತ್ತ ಒಲಿದಿರುತ್ತದೆ. ಆ ಜಿನೇಂದ್ರನ ಬಿಂಬಕ್ಕೆ ಆಗುತ್ತಿರುವ ಜಲ, ಕ್ಷೀರ, ಮತ್ತು ಗಂಧದ ಅಭಿಷೇಕಗಳನ್ನು ಕಣ್ತುಂಬ ನೋಡಿ ನಲಿಯುತ್ತೇವೆ. ನಮ್ಮ ಅಂತರಂಗ ಧರ್ಮಧ್ಯಾನದತ್ತ ವಾಲಿರುತ್ತದೆ. ಆ ಸಮಯದಲ್ಲಿ ಇನ್ನಾವ ಯೋಚನೆಗಳು ನಮ್ಮನ್ನು ಮುತ್ತಿ ಕಾಡಲಾರವು.ಆದುದರಿಂದ ಇಂತಹ ದ್ರವ್ಯಪೂಜೆಯಿಂದ ಲಾಭವೇ ಆಗುವುದು. ಶ್ರಾವಕರು ತಮ್ಮ ಪುರುಷಾರ್ಥ ಸಾಧನೆಗೆ ದ್ರವ್ಯಪೂಜೆಯನ್ನು ಮಾಡಿ ಕೃತಾರ್ಥರಾಗುತ್ತಾರೆ.

ಉಪಹಾರಂ ಸ್ತವನಂ ಸುವಾದ್ಯನಿನದಂ ನೃತ್ಯಂ ಸಂಗೀತಗಳಿಂ
ತುಪಚಾರಂಗಳಿವೈಸೆ ನಿಮ್ಮ ರುಚಿಯೇ ಅಲ್ತಲ್ತು ನಿಮ್ಮಲ್ಲಿ ಮು
ಕ್ತಿ ಪದಂ ಸ್ವಲ್ಪಮೆ ವೃದ್ಧಿ ವೃದ್ಧಿ ಧನಿಕಂಗೊಂದಿತ್ತೆರಳ್ಕೊಂಬುದ
ರ್ಕುಪಮಾನರೂಮಿಗೆ ಕಾಣ್ಕೆಯೆಂದು ಕುಡರೇ?ರತ್ನಾಕರಾಧೀಶ್ವರಾ ॥೧೦೧॥

ಕಾಣಿಕೆ, ನೈವೇದ್ಯ, ಭಕ್ತರುಮಾಡುವ ಸ್ತೋತ್ರ, ನುಡಿಸುವ ವಾದ್ಯಗಳ ಇಂಪಾದ ಧ್ವನಿ, ನರ್ತನ, ಶ್ರೇಪ್ಠವಾದ ಗಾನಗಳೂ, ಇವೆಲ್ಲ ಭಗವಂತನಿಗೆ ಬೇಕೇ? ಅವನಿಗೆ ಇವುಗಳಲ್ಲಿ ಅನುರಾಗವೇ? ಖಂಡಿತಾ ಇಲ್ಲ. ಅವನಲ್ಲಿರುವ ಅನಂತದರ್ಶನ, ಅನಂತಜ್ಞಾನ, ಅನಂತಸುಖ, ಅನಂತವೀರ್ಯ ಇವುಗಳಿಗೆ ಎಣೆಯುಂಟೇ! ಶ್ರೀಮಂತನ ಸೇವೆಯನ್ನು ಮಾಡಿ ಒಂದಕ್ಕೆರಡು ಗಿಟ್ಟಿಸುವಂತೆ ಭಕ್ತರು ನಿನ್ನ ಸೇವೆಯನ್ನು ಮಾಡಿ ಬೇಕಾದಷ್ಟು ಪುಣ್ಯವನ್ನು ಗಳಿಸಿಕೊಳ್ಳುವರು. ಈ ಪುಣ್ಯಗಳಿಕೆಗೆ ನಿನ್ನ ಉಪಚಾರವನ್ನು ಅನೇಕ ರೀತಿಯಲ್ಲಿ ಮಾಡುವರು.ಅಲ್ಪಸೇವೆಯೇ ಆಗಲೆ, ನಿರ್ಮಲ ಮನಸ್ಸಿನಿಂದ ಮಾಡಿದರೆ ಅಪಾರ ಲಾಭವಾಗುವುದರಲ್ಲಿ ಸಂದೇಹವೇ ಇಲ್ಲ.

ಮೋಕ್ಷಶ್ರೀಸುಖ ವಿಶ್ವನಾಥನಿವನೆಂದಾರೋಪಿಸಲ್ಪೂಜೆಯೊಳ್
ಯಕ್ಷರ್ದಿಕ್ಪ್ರಭುಗಳ್ ಗ್ರಹರ್ತಿಥಿವರರ್ನಾಗರ್ಸುರವ್ಯಂತರರ್
ನಕ್ಷತ್ರರ್ಮುನಿಗಳ್ಸುಮಂತ್ರವಿಧಿಯಿಂದ ಸನ್ಮಾನಿಸಲ್ಪಟ್ಟರೀ
ದಾಕ್ಷಿಣ್ಯಂ ಭಜಕಂಗದೇನ ಕುಡದೋ ರತ್ನಾಕರಾಧೀಶ್ವರಾ ॥೧೦೨॥

ಮೋಕ್ಷಸಾಮ್ರಾಜ್ಯದ ಅಧಿಪತಿಯೆಂದು, ವೀತರಾಗನೆಂದು, ಭಗವಂತ ಜಿನೇಂದ್ರನನ್ನು ಭಕ್ತಿಯಿಂದ ಸ್ತೋತ್ರಮಾಡಿ, ಅವನಿಗೆ ಪೂಜಾಕೈಂಕರ್ಯಗಳನ್ನು ನೆರವೇರಿಸಿದರೆ, ಆ ಭಗವಂತನ ಪಾದಸೇವಕರಾದ ಯಕ್ಷದೇವತೆಗಳೂ, ದಿಕ್ಪಾಲಕರೂ, ನವಗ್ರಹಗಳೂ, ತಿಥಿದೇವತೆಗಳೂ, ಭವನವಾಸಿ ದೇವತೆಗಳೂ, ಕಲ್ಪವಾಸಿ ದೇವತೆಗಳೂ, ವ್ಯಂತರ ದೇವತಿಗಳೂ, ಜ್ಯೋತಿರ್ಲೋಕದ ದೇವತೆಗಳೂ, ಮುನಿಗಳೂ ಇವರೆಲ್ಲರಿಗೂ ಸಂತೋಷವುಂಟಾಗುವುದು. ತೀರ್ಥಂಕರ ಮಹಾಪ್ರಭುವನ್ನು ಪೂಜಿಸಿದರೆ, ಇವರೆಲ್ಲರನ್ನೂ ಪೂಜಿಸಿದಂತೆಯೇ. ನಮ್ಮ ಅರ್ಹಂತ ಭಕ್ತಿಗೆ ಮೆಚ್ಚಿ ಸಂತುಷ್ಟರಾಗಿ ಈ ದೇವತೆಗಳು ನಮಗೆ ಬೇಕಾದ ವರಪ್ರಸಾದಗಳನ್ನು ನೀಡುವರು. ಜಿನೇಂದ್ರ ಪೂಜೆಯ ಈ ದಾಕಷಿಣ್ಯ ಏನುತಾನೆ ನಮಗೆ ಕೊಡುವುದಿಲ್ಲ?

ಉಪಚಾರಕ್ಕಾಗಲೀವಂಗುಣವಿಡಲ್ಮತ್ತೇನ ನೊಲ್ದೀಯನೋ
ಉಪಮಾತೀತನೆ ನಿಮ್ಮ ಬಿಂಬವನಲಂಪಿಂದಚಿಸಲ್ಸಂಪದಂ
ವಿಪುಳಾನಂದದೆ ನಿಮ್ಮ ರೂಪಿನ ಮುನೀಂದ್ರರ್ಗನ್ನಮಂ ನೀಡುವಂ
ಗಪವರ್ಗಂ ನಿಜದುರ್ಗಮಪ್ಪುದರಿದೇ? ರತ್ನಾಕರಾಧೀಶ್ವರಾ ॥೧೦೩॥

ಸಾಧಾರಣ ಉಪಚಾರಕ್ಕೆ ಸಂತುಷ್ಟನಾಗಿ ಉಡಲು ಬಟ್ಟೆಬರೆಗಳನ್ನು ಕೊಡುವ ಮಹಾತ್ಮನಿಗೆ, ಪ್ರೀತಿಯಿಂದ ಊಟಕ್ಕಿಟ್ಟು, ಉಪಚರಿಸಿದರೆ ಅವನು ಇನ್ನೆಷ್ಟು ಸಂತೋಷಗೊಳ್ಳುವುದಿಲ್ಲ, ಸಂತೋಷಗೊಂಡು ಏನನ್ನು ತಾನೇ ದಯಪಾಲಿಸುವುದಿಲ್ಲ. ಜಿನೇಂದ್ರನೇ ! ನಿನ್ನನ್ನು ಯಾರಿಗೆ ತಾನೆ ಹೋಲಿಸಲಾದೀತು! ನಿನ್ನ ರೂಪ ಆತ್ಮೋಪಮ, ನಿನ್ನ ಬಿಂಬವನ್ನು ಭಕ್ತಿಯಿಂದ ಪೂಜಿಸಿದರೆ ಆ ಪೂಜಕನಿಗೆ ಅತುಳೈಶ್ವರ್ಯ ದೊರಕುವುದಿಲ್ಲವೇ? ಹೀಗಿರುವಾಗ ನಿನ್ನ ನಿನ್ನ ದಿಗಂಬರ ರೂಪವನ್ನೇ ಧರಿಸಿರುವ ನಿರ್ಗ್ರಂಥ ಮಹಾಮುನಿಗಳಿಗೆ ಭಕ್ತಿ ಶ್ರದ್ಧೆಗಳಿಂದ ಆಹಾರ ದಾನಮಾಡಿದರೆ, ಸಿಗುವ ಶ್ರೇಯಸ್ಸು ಅನುಪಮವಾದದ್ದು, ಅಂತಹ ಭವ್ಯಾತ್ಮನಿಗೆ ಆತ್ಮಸಾಕ್ಷಾತ್ಕರವಾಗುವುದರಲ್ಲಿ ಏನು ಆಶ್ಚರ್ಯ.

ವಿಜ್ಞಾನಂ ಕ್ಷಮೆ ಶಕ್ತಿ ಭಕ್ತಿದಯೆ ನಿರ್ಲೋಭಂ ದೃಢಂಗೂಡಿಯಾ
ತ್ಮಜ್ಞಾನಾನ್ವಿತ ಯೋಗಿಗನ್ನಮನಲಂಪಿಂದಿತ್ತವಂ ಕೂಡೆ ತಾಂ
ಸುಜ್ಞಾನಂಬಡೆದಂ ಸುಖಂಬಡೆದನೊಳ್ಪಂ ಪೆತ್ತನೇ ಮಾತೊ ತಾಂ
ರ್ವಜ್ಞಾ ನಿಮ್ಮನೆ ಕಂಡನಿನ್ನುಳಿದುವೇಂ ರತ್ನಾಕರಾಧೀಶ್ವರಾ ॥೧೦೪॥

ಆತ್ಮವಿಜ್ಞಾನಿಯಾಗಿ, ಕ್ಷಮಾಶೀಲನಾಗಿ. ಶಕ್ತಿಯುತನಾಗಿ, ಭಕ್ತಾಗ್ರೇಸರನಾಗಿ, ದಯಾವಂತನಾಗಿ, ನಿರ್ಲೋಭಿಯಾಗಿ ಹಂಸಕಲೋಪಾಸನೆನಿಸಿದ ಮುನಿಗೆ ಮನಸಾರೆ ಆಹಾರ ದಾನಮಾಡಿದವನು ಕ್ಷಿಪ್ರದಲ್ಲೇ ತಾನು ಸುಜ್ಞಾನಿಯಾಗುವನು, ಸುಖವನ್ನು ಅನುಭವಿಸುವನು ಮತ್ತು ಶ್ರೇಯಸ್ಸನ್ನು ಸಾಧಿಸುವನು. ಆಹಾರದಾನದ ಮಹಿಮೆ ಎಷ್ಟು ಹೇಳಿದರೂ ಕಡಿಮೆಯೇ, ಒಂದೇ ಮಾತಿನಲ್ಲಿ ಹೇಳುವುದಾದರೆ ಆ ಭಗವಂತನನ್ನೇ ಕಂಡಂತಾಗುವುದು.

ಒಡಲಂ ದಂಡಿಸುತಿಂದ್ರಿಯಂಗಳ ಪೊಡರ್ಪಂ ಕುಂದಿಸುತ್ತಂ ಗುಣಂ
ಬಿಡಿಯುತ್ತಂ ಮನದೇಳ್ಗೆಯಂ ತಡೆಯುತಂ ತನ್ನಾತ್ಮನೊಳ್ತಾನೆ ಮಾ
ರ್ನುಡಿಯುತ್ತಂ ಭಜಕರ್ಗೆ ಮುಕ್ತಿಪಥಮಂ ತೋರುತ್ತೆ ನೋವಳ್ತಿಯಿಂ
ಪಡೆಗೆಯ್ದಾಚರಿಪಾತನೇ ಶಿವನಲಾ ರತ್ನಾಕರಾಧೀಶ್ವರಾ ॥೧೦೫॥

ಶರೀರವನ್ನು ಬಹಿರಂಗ ತಪಸ್ಸಿನ ಅನೇಕ ಕಷ್ಟಗಳಿಗೆ ಒಡ್ಡುತ್ತ, ಇಂದಿರಿಯಗಳ ಸಾಮರ್ಥ್ಯವನ್ನು ಕಡಿಮೆಮಾಡುತ್ತಾ, ಅವುಗಳ ಮೇಲೆ ತನ್ನ ಹತೋಟಿಯನ್ನಿಟ್ಟುಕೊಳ್ಳುತ್ತ, ಸದ್ಗುಣಗಳನ್ನು ಪರಿಗ್ರಹಿಸುತ್ತ, ಮನಸ್ಸಿನ ಹರಿದಾಟವನ್ನು ತಡೆಯುತ್ತ, ಚಿತ್ತ ಏಕಾಗ್ರತೆಯನ್ನು ಸಾಧಿಸುತ್ತ, ಅಂತರ್ಮುಖಿಯಾಗಿ ಆತ್ಮನೊಡನೆ ಅನುಸಂಧಾನಮಾಡುತ್ತ, ಭಕ್ತರಿಗೆ, ಭಜಕರಿಗೆ ಮೋಕ್ಷಮಾರ್ಗವನ್ನು ತೋರಿಸುತ್ತ, ತನ್ನ ನೋಟವನ್ನು ಗಣನೆಗೆತಾರದೆ, ಪರರ ದುಃಖ ಮತ್ತು ನೋವುಗಳಿಗೆ ಪರಿಹಾರ ಹುಡುಕಿ ಅವುಗಳನ್ನು ಹೋಗಲಾಡಿಸಲು ಪ್ರಯತ್ನಮಾಡುವವನಾತನೇ ಶಿವಶಂಕರನಲ್ಲವೇ? ನಿರ್ಮಲಾಂತಃಕರಣನೂ, ಮಂಗಳದಾಯಕನೂ ಅಲ್ಲವೇ? ಭವಸಾಗರವನ್ನು ದಾಟಲು ಇಂತಹ ಚೇತನಗಳ ಸಹಾಯ ಅತ್ಯಗತ್ಯವಲ್ಲವೇ?

ಕಡಗಿನ್ನೆಂತೊ ಭವಾಗ್ನಿತಾಪವಕಟಾ! ಕಾಮಾಗ್ನಿಯಂ ನೋಳ್ಪೊಡಾ
ಸಿಡಿಲೇಂ ಶೇಷನ ದಾಡೆಯೇಂ ಬಡಬನೇಂ ಕಾಲಾಗ್ನಿಯೇಂ ಶೃಂಗಿಯೇಂ
ತಡೆದಾಂತಗ್ಗಳೆಯಂ ಗಡಂ ಮದನನೇಂ ಪಾಪಾರಿಯೇಂ ಕಾಲನೇಂ
ಮೃಡನೇಂ ಮೃತ್ಯುವದೇಂ ನಿಲಲೂನೆರೆಗುಮೇ ರತ್ನಾಕರಾಧೀಶ್ವರಾ ॥೧೦೬॥

ಕಾಮವೆಂಬ ಅಗ್ನಿಯ ತಾಪ ಯಾರನ್ನು ತಾನೆ ತಟ್ಟುವುದಿಲ್ಲ. ಆ ಭಯಂಕರ ಕಾಮಾಗ್ನಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಕಾಮಾಗ್ನಿಯ ಮುಂದೆ ಸಿಡಿಲೇನು? ಆದಿಶೇಷನ ಕೋರೆಹಲ್ಲೇನು? ಬಡಬಾಗ್ನಿಯೇನು? ಪ್ರಳಯಕಾಲದ ಬೆಂಕಿಯೇನು? ಹರಿತವಾದ ಕೊಂಬುಗಳ ಪ್ರಾಣಿಗಳೇನು? ಇವುಗಳು ಪ್ರತಿಭಟಿಸಿ ನಿಲ್ಲಲು ಸಾಧ್ಯವೇ? ಹಾಗೆಯೇ ಎಲ್ಲಾ ಪ್ರಾಣಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವವನೂ ಶೂರನೂ,ಆದ ಮನ್ಮಥನೇನು ಸಮರ್ಥನಾಗುವನೇ? ಪಾಪವೆಂಬ ಶತ್ರುವೇನು ಸಮರ್ಥನಾಗುವನೇ? ಯಮನೇನು ಸಮರ್ಥನಾಗುವನೇ? ರುದ್ರನೇನು ಸಮರ್ಥನಾಗುವನೇ? ಮರಣವೇನುಸಮರ್ಥನಾಗುವುದೇ? ಹೀಗಿರುವಾಗ ಕಾಮಾಗ್ನಿಗಿಂತಲೂ ಭಯಾನಕವಾದ ಭವಾಗ್ನಿ ತಾಪವನ್ನು ವಿವರಿಸಲಾದೀತೆ . ಅಕಟಾ ಈ ಸಂಸಾರವೆಂಬ ಬೆಂಕಿಯ ತಾಪದಿಂದ ಬಿಡಿಸಿಕೊಳ್ಳಲು ಏನು ಮಾಡಬೇಕು.

ಶ್ರುತಮಂನೋಳ್ಪ ತದರ್ಥಮಂ ತಿಳಿವ ತನ್ಮರ್ಯಾದೆಯೊಳ್ಪೋಪ ಸು
ವ್ರತಮಂ ಪಾಲಿಪ ಕಾಮಮಂ ತುಳಿವ ಮಾಯಾಜಾಡ್ಯಮಂ ಝಾಡಿಪು
ನ್ನತ ಕಾರುಣ್ಯದೊಳಾಳ್ವ ಜೀವಹಿತಮಂ ಪೇಳ್ವಾತನೇ ಮದ್ಗುರು
ಶ್ರುತಯೋಗೀಶ್ವರನಿಂದು ನಾಳಿನಶಿವಂ ರತ್ನಾಕರಾಧೀಶ್ವರಾ ॥೧೦೭॥

ದೇವಗುರು ಶಾಸ್ತ್ರಗಳಲ್ಲಿ ಅಚಲವಾದ ನಂಬಿಕೆಯುಳ್ಳವನೂ, (ಸಮ್ಯಗ್ ದೃಷ್ಟಿಯೂ) ಶಾಸ್ತ್ರಾದಿ ಆಗಮಗ್ರಂಥಗಳನ್ನು ಅಧ್ಯಯನಮಾಡಿ ಜ್ಞಾನಾರ್ಜನೆಯನ್ನು ಮಾಡಿಕೊಳ್ಳುವವನೂ, ( ಸಮ್ಯಗ್ ಜ್ಞಾನಿಯೂ) ಧರ್ಮಗ್ರಂಥಗಳಲ್ಲಿ ಹೇಳಿದ ರೀತಿ ತನ್ನ ಚಾರಿತ್ರ್ಯವನ್ನು ಪರಿಪಾಲಿಸಿಕೊಂಡು ಬರುವವನೂ(ಸಮ್ಯಕ್ ಚಾರಿತ್ರವಂತ) ಅಹಿಂಸಾದಿ ಶ್ರೇಷ್ಠ ವ್ರತಗಳನ್ನು ಚಾಚೂತಪ್ಪದೆ ನಡೆಸುವವನೂ, ಕಾಮವನ್ನು ಕಡೆಗಣಿಸಿದವನೂ, ಅಜ್ಞಾನ, ಅಂಧಶ್ರದ್ಧೆ, ಕುರುಡುನಂಬಿಕೆಗಳನ್ನು ತನ್ನ ಮನಸ್ಸಿನಿಂದ ಕಿತ್ತೊಗೆದವನೂ, ದಯಾಮಯನೂ, ಕ್ಷಮಾಶೀಲನೂ, ಸಕಲಜೀವರಾಶಿಗಳಿಗೆ ಲೇಸನ್ನೇ ಬಯಸಬೇಕೆಂದು ಬೋಧಿಸುವವನೂ, ಆದವನೇ ನನ್ನ ಪರಮಗುರೈ. ಇಂದು ಆಮಹಾಚೇತನವು ಶ್ರುತಯೋಗೀಶ್ವರನಾಗಿದ್ದಾನೆ. ಮುಂದೆ ಆ ಜೀವವೇ ಪರಮಾತ್ಮನಾಗುವುದು.

ಪರಸಂತೋಷಮೆಂ ಸೌಖ್ಯಮೆಂಬ ಪರದುಃಖ ತನ್ನನೋವೆಂಬ ತಾಂ
ಪರನೆಂಬಂದಮನಿಂತುಟೆಂಬ ಪರಲೋಕಂ ತನ್ನನಾಡೆಂಬ ತ
ತ್ಪರಮಜ್ಞಾನಿ ಜಗದ್ಗುರುಂ ಮಮಗುರುಂ ದೇವೇಂದ್ರಕೀರ್ತಿವತೀ
ಶ್ವರನಾತಂ ಪೆರನಲ್ತು ನೀನೇ ಪಲವೇಂ ?ರತ್ನಾಕರಾಧೀಶ್ವರಾ ॥೧೦೮॥

ಅನ್ಯರ ಸಂತೋಷವೇ ತನ್ನ ಸಂತೋಷವೆಂದು ನಲಿದಾಡುವ, ಬೇರೆಯವರ ದುಃಖಕ್ಕೆ ಅನುಕಂಪೆಯನ್ನು ತೋರುವ, ಅಶಾಶ್ವತವಾದ ಈ ಶರೀರದಿಂದ ಆತ್ಮಭಿನ್ನವಾದುದೆಂದು ತಾನು ತಿಳಿದು ಪರರಿಗೆ ತಿಳುವಳಿಕೆಕೊಟ್ಟು ಹಿತೋಪದೇಶವನ್ನು ಮಾಡುವವನೂ, ಕರ್ಮಸಂಯೋಗದಿಂದ ಈ ಚತುರ್ಗತಿಗಳಲ್ಲಿ ಅಲೆದಾಡುತ್ತಿದ್ದರೂ ತನ್ನ ನಿಜವಾದ ಸ್ಥಾನ ಮೋಕ್ಷಸಾಮ್ರಾಜ್ಯವೆಂದು ದೃಢವಾಗಿ ನಂಬಿರುವವನೂ, ಸಮ್ಯಗ್ ದೃಷ್ಟಿಯೂ, ಪರಮಜ್ಞಾನಿಯೂ ಆದವನೇ ಈ ಜಗತ್ತಿಗೆ ಗುರುವಾಗಲು ಸಾಧ್ಯ. ಇಂತಹ ಶ್ರೇಷ್ಠಗುಣಗಳನ್ನು ಅಳವಡಿಸಿಕೊಂಡಿರುವವನು ತನ್ನ ಗುರುವಾದ ದೇವೇಂದ್ರಕೀರ್ತಿ ಮುನೀಶ್ವರನು, ಹೆಚ್ಚು ಮಾತೇಕೆ- ಈ ನನ್ನ ಗುರು ಬೇರೆ ಅಲ್ಲ, ಸಾಕ್ಷಾತ್ ಜಿನೇಂದ್ರನು ಬೇರೆ ಅಲ್ಲ, ಗುರುಭಕ್ತಿಗಿಂತ ಮಿಗಿಲಾದದ್ದು ಇನ್ನುಂಟೇ?

ವ್ಯವಹಾರಂ ವ್ಯವಸಾಯಮೋಲಗಮಿವಂ ಮಾಡೆಂಬರಂ ಮಾಡೆ ಮೆ
ಚ್ಚುವರಂ ಮಾಳ್ಪರನೆಲ್ಲಿಯುಂ ಪಡೆಯಲುಂಟೂರೂರೊಳ್ನಿನ್ನಂತೆ ಮೋ
ಕ್ಷವನೊಂದಂ ನೆಗಳೆಂಬರಂ ನೆಗಳೆ ಹೋ ಲೇಸೆಂಬರ್ ನಚ್ಚಿ ಮಾ
ಳ್ಪವರಂ ನಿನ್ನವರಲ್ಲದೆಲ್ಲಿ ಪಪಡೆಯೆಂ ರತ್ನಾಕರಾಧೀಶ್ವರಾ ॥೧೦೯॥

ವ್ಯಾಪಾರ, ಉದ್ಯೋಗ ಮುಂತಾದ ಲೌಕಿಕ ಕಾರ್ಯಗಳನ್ನು, ರಾಜನಾದವನು ಓಲಗಗೊಡುವುದು ಮುಂತಾದ ಕೆಲಸಗಳನ್ನು ಮಾಡೆಂದು ಉತ್ತೇಜನ ಕೊಡುವವರೊ, ಅವರು ಹೇಳಿದ ಹಾಗೆ ಮಾಡಿದರೆ ಭೇಷ್! ಎಂದು ಬೆನ್ನು ತಟ್ಟುವವರನ್ನೂ, ಹಾಗೂ ತಾವೇ ಸ್ವತಃ ಈ ಲೌಕಿಕ ಕಾರ್ಯಗಳಲ್ಲಿ ಮಗ್ನರಾಗಿರುವವರನ್ನೂ ಎಲ್ಲಾ ಊರು ಕೇರಿಗಳಲ್ಲಿ ಕಾಣಬಹುದು. ಅಂತಹವರಿಗೆ ಏನೂ ಕೊರತೆಯಿಲ್ಲ. ಆದರೆ “ ಈ ಲೌಕಿಕವನ್ನು ಕಡೆಗಣಿಸಿ, ಪರಮಾರ್ಥದ ಕಡೆದೃಷ್ಟಿಯಿಡು, ಮೋಕ್ಷಸಾಧನೆಯತ್ತ ಸಾಗು” ಎಂದು ಹೇಳುವವರೂ, ಹಾಗೆ ಮಾಡಿದರೆ ಸಂತೋಷಪಟ್ಟು “ “ಸದ್ಧರ್ಮವೃದ್ಧಿರಸ್ತು” ಎಂದು ಹರಸಿ ಆಶೀರ್ವಾದ ಮಾಡುವವರ, ರತ್ನತ್ರಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೋಕ್ಷಪಥದಲ್ಲಿರುವವರನ್ನೂ ಕಾಣುವುದು ದುರ್ಲಭ, ಸಮ್ಯಗ್ ದೃಷ್ಟಿಗಳು ಹಾಗೂ ಜಿನೇಂದ್ರ ಭಕ್ತರು ಮಾತ್ರ ಈ ಪರಮಾತ್ಮ ಚಿಂತನೆಯಲ್ಲಿ ಮಗ್ನರಾಗಿರುತ್ತಾರೆ ವಿನಾ ಮಿಕ್ಕವರಲ್ಲ.

ವಿಂಧ್ಯಾಕುಕ್ಕುಟನೊಂದು ಸಂಕ್ರಮಣಮಂ ಪಾರ್ದಲ್ಲಿ ಮೆಯ್ವಣ್ಣಮಂ
ವಂಧ್ಯಂ ಮಾಡದೆ ಮಾಡಿಕೊಳ್ವುದು ಗಡಾ ಯೋಗೀಶ್ವರರ್ನಿಚ್ಚಲುಂ
ಸಂಧ್ಯಾಕಾಲಮನಾಸೆವಟ್ಟದರೋಳಿರ್ಯಾಶುದ್ಧಿಯಿಂ ಸ್ತೋತ್ರಜ
ಪ್ಯಂ ಧ್ಯಾನಂಗಳ ಮಾಡೆ ಸಿದ್ಧಿಯರಿದೇ?ರತ್ನಾಕರಾಧೀಶ್ವರಾ ॥೧೧೦॥

ಮಕರಸಂಕ್ರಾಂತಿ ಕಾಲಕ್ಕಾಗಿ ಕಾಡುಕೋಳಿಗಳು ಕಾದು ಕೂತಿರುತ್ತವೆ. ಏಕೆಂದರೆ ಆ ಸಂಕ್ರಮಣಕಾಲದಲ್ಲಿ, ಕಾಲವನ್ನು ವ್ಯರ್ಥಮಾಡದೆ ಅವು ತಮ್ಮ ಮೆಯ್ ಬಣ್ಣವನ್ನು ವೃದ್ಧಿಮಾಡಿಕೊಳ್ಳುವುದು. ಹಾಗೆ ಮುನೀಶ್ವರರು ದಿನನಿತ್ಯ ತಮ್ಮ ಯಾವ ಕಾಲವನ್ನು ವೃಥಾಹರಣ ಮಾಡುವುದಿಲ್ಲ. ಮೂರು ಸಂಧ್ಯಾಕಾಲಗಳಲ್ಲೂ ಈರ್ಯಾಪಥಶುದ್ಧಿಯಿಂದ ಜಿನೇಂದ್ರನ ಸ್ತೋತ್ರ,
ಪಂಚಪರಮೇಷ್ಠಿಗಳ ಜಪ ಮತ್ತು ಆತ್ಮಧ್ಯಾನವನ್ನು ಮಾಡುತ್ತಿರುತ್ತಾರೆ. ಹೀಗೆ ಮಾಡುವುದರಿಂದ ಕರ್ಮನಿರ್ಜರೆಯಾಗಿ ಆ ಮಹಾತ್ಮರು ಸಿದ್ಧಪದವಿಗೇರುವುದರಲ್ಲಿ ಏನು ಆಶ್ಚರ್ಯ?

ಅಸ್ತಾದ್ರಿಸ್ಥಳದಲ್ಲಿ ಕಂಡು ರವಿಯಂ ತಾರಾಳಿಯಂ ಕಾಣ್ಬಿನಂ
ನಿಸ್ತೇಜಕ್ಕೆಡೆಯಾದ ತಾರೆಗಳ ಕಂಡರ್ಕೋದಯಂ ಕಾಣ್ಬಿನಂ
ವಿಸ್ತಾರಂಗಿಡೆ ಮೆಯ್ನೆಳಲ್ಮುಗುಳೆ ವಿಸ್ತಾರಕ್ಕೆ ತೋರ್ಪನ್ನೆಗಂ
ಸುಸ್ತೋತ್ರಂಗೆಯೆ ನಿಮ್ಮ ಕಾಣ್ಬುದರಿದೇ?ರತ್ನಾಕರಾಧೀಶ್ವರಾ ॥೧೧೧॥

ಜಿನೇಂದ್ರನ ಸ್ತುತಿ, ಜಪ, ತಪ, ಧ್ಯಾನಗಳನ್ನು ತ್ರಿಸಂಧ್ಯಾ ಕಾಲಗಳಲ್ಲಿ ತಪ್ಪದೇ ಮಾಡಬೇಕು. ಸೂರ್ಯ ಮುಳುಗಿ ನಕ್ಷತ್ರಗಳು ಆಗಸದಲ್ಲಿ ಕಾಣುವಹೊತ್ತು ಸಾಯಂಸಂಧ್ಯಾಕಾಲ. ನಕ್ಷತ್ರಗಳ ಕಾಂತಿ ಕುಂದಿ ರವಿ ಉದಯಿಸುವ ಹೊತ್ತು ಪ್ರಾತಃ ಸಂಧ್ಯಾಕಾಲ ಮತ್ತು ಮಧ್ಯಾಹ್ನದ ಸಮಯ - ಈ ತ್ರಿಸಂಧ್ಯಾಕಾಲಗಳಲ್ಲಿ ಭಕ್ತಿಯಿಂದ ಜಿನೇಂದ್ರನ ಸ್ತುತಿಗೈದರೆ, ಆತ್ಮಸಾಕ್ಷಾತ್ಕರವಾಗದೇ! ಈ ಪುರುಷಾರ್ಥವನ್ನು ನಿಷ್ಠೆಯಿಂದ ಮಾಡಿದರೆ ಭಗವಂತನನ್ನು ಕಾಣಲು ಸುಲಭಸಾಧ್ಯವಾಗುವುದು.

ಸಿಂಹಂನಾಸ್ತಿ ಭಟಾಳಿ ಸಿಂಹರವಮಂ ಮಾಡಲ್ಗಜಂ ಬೆರ್ಚುಗುಂ
ಸಿಂಹಾಕಾರಮನಂಕಿಸಲ್ನರರ ಬೆನ್ನೊಳ್ ಹಸ್ತಿರೋಗಂ ಹರಂ
ಸಿಂಹಾರೊಢನೆ ! ನಿಮ್ಮ ಮಂತ್ರದೆ ಭವಚ್ಛ್ರೀಂಬಿಂಬದೇಂ ಪೀಡೆಗಳ್
ಸಂಹಾರಂಗಳನೆಯ್ದವೇ? ಸಕಲವೇಂ? ರತ್ನಾಕರಾಧೀಶ್ವರಾ॥೧೧೨॥

ಸಿಂಹವೇ ಬೇಕಿಲ್ಲ. ಯುದ್ಧದಲ್ಲಿ ಶೂರರಾದ ಭಟರು ಸಿಂಹನಾದವನ್ನು ಮಾಡಿದರೆ ಸಾಕು. ಆನೆಗಳು ಚಲ್ಲಾಪಿಲ್ಲಿಯಾಗಿ ಹೆದರಿ ಓಡುತ್ತವೆ. ಆನೆಕಜ್ಜಿ ಆದರೆ ರೋಗಿಯ ಬೆನ್ನಿನಮೇಲೆ ಸಿಂಹದ ಆಕಾರವನ್ನು ಬರೆದರೆ ರೋಗ ಗುಣವಾಗುತ್ತದೆ. ಸಮವಸರಣದಲ್ಲಿ ಮಣಿಮಯೂಖ ಶಿಖಾವಿಚಿತ್ರವಾದ ಸಿಂಹಾಸನದಮೇಲೆ ವಿರಾಜಮಾನನಾಗಿರುವ ಜಿನೇಂದ್ರನನ್ನು ಭಕ್ತಿಯಿಂದ ಸ್ಮರಿಸಿದರೆ ಸಾಕು. ಸಕಲರೋಗರೈಜಿನಗಳೂ, ಕಷ್ಟಕಾರ್ಪಣ್ಯಗಳೂ ಹೇಳಹೆಸರಿಲ್ಲದಂತೆ ಮಾಯವಾಗುತ್ತವೆ. ಇದು ಬಿಟ್ಟು ಇಲ್ಲಿ ವ್ಯರ್ಥವಾಗಿ ಪರಿಹಾರಕ್ಕೆ ಪರದಾಡುವುದೇಕೆ?

ಗರುಡೋಚ್ಚಾರಣಮಂತ್ರದಿಂ ವಿಷವಿನಾಶಂ ಯಕ್ಷಿಣೀ ಮಂತ್ರದಿಂ
ದೊರಕೊಳ್ಗುಂ ಬಹುವಿದ್ಯೆಗಳ್ಗರುಡಯಕ್ಷರ್ ಪೂಜ್ಯಪಾದಾಬ್ಜನಂ
ಗುರುವೇ ನಿಮ್ಮನಲಂಪಿನಿಂ ನೆನೆವವಂಗಾವಾವ ಕಷ್ಟಂಗಳ
ಲ್ಲಿರವಾವಾವ ಮನೋರಥಂ ಫಲಿಸದೋ?ರತ್ನಾಕರಾಧೀಶ್ವರಾ ॥೧೧೩॥

ಗರುಡ ಮಂತ್ರವನ್ನು ಪಠಿಸುವುದರಿಂದ ವಿಷದ ಬಾಧೆಯು ನಾಶವಾಗುತ್ತದೆ. ಯಕ್ಷಿಣೀಮಂತ್ರದಿಂದ ಅನೇಕ ವಿದ್ಯೆಗಳನ್ನು ಸಾಧಿಸಿಕೊಳ್ಳಬಹುದು. ಈ ಗರೈಡರೂ ಮತ್ತು ಯಕ್ಷದೇವತೆಗಳೂ ಭಗವಾನ್ ಜಿನೇಂದ್ರರ ಪಾದಕಮಲಗಳಲ್ಲೆ ಸದಾ ಸೇವೆಗೈಯುತ್ತಿರುವ ಭಕ್ತರೈ. ಹೀಗಿರುವಾಗ ನಾವು ಜಿನೇಂದ್ರನನ್ನು ಸದಾ ಸ್ಮರಿಸಿದರೆ ಈ ಗರೈಡರೂ ಯಕ್ಷರೂ ನಮ್ಮ ಸಹಾಯಕ್ಕೆ ಧಾವಿಸುವುದಿಲ್ಲವೇ? ಜಿನೇಂದ್ರನನ್ನು ಸ್ತೋತ್ರಮಾಡುವ, ಭಕ್ತಿಯಿಂದ ಅರ್ಚಿಸುವ ಬರುವ ಪುಣ್ಯ ನಮಗೆ ಏನನ್ನು ತಾನೆ ತಂದುಕೊಡುವುದಿಲ್ಲ! ನಮ್ಮ ಎಲ್ಲ ಸಂಕಟಗಳೂ ಪರಿಹಾರವಾಗಿ ನಮ್ಮ ಎಲ್ಲ ಮನೋರಥಗಳೂ ಈಡೇರುತ್ತವೆ.

ಗೆಡೆಗೊಂಡಾಡುವ ಲೋಕವಾರ್ತೆಗಳೊಳೆನ್ನಂಗಾಯತಂ ತುಂಬಿದಾ
ಕೊಡದಂತಿರ್ಪುದು ನಿಮ್ಮ ಮಂತ್ರಜಪಮಂ ಮಾಳ್ಪಾಗಳುಂ ಮೀರ್ದ ಕ
ಣ್ಬಿಡುನೀರ್ ಮೆಯ್ಮುರಿವಾಗುಳಿಕ್ಕೆಗಳಿವೇ ದುಷ್ಕರ್ಮಬಂಧಂ ಸಡಿ
ಲ್ದೊಡೆದೇ ಸೋರ್ದಪುದೆಂಬುದಂ ನುಡಿಯವೇ? ರತ್ನಾಕರಾಧೀಶ್ವರಾ॥೧೧೪॥

ಈ ಜಗತ್ತಿನಲ್ಲಿ ಜನಗಳು ಲೌಕಿಕ ವಿಚಾರದಲ್ಲಿ ಮಗ್ನರಾಗಿ ಆಡುವ ಮಾತುಗಳತ್ತ ನನ್ನ ಮನ ಒಲಿಯದು. ತುಂಬಿದಕೊಡ ತುಳುಕದಹಾಗೆ ನಾನು ಈ ವಿಷಯಗಳಲ್ಲಿ ತಲೆಹಾಕುವುದಿಲ್ಲ. ನಿಮ್ಮನ್ನು ಸ್ತೋತ್ರಮಾಡುವಾಗ, ಪಂಚಪರಮೇಷ್ಠಿಗಳ
ಜಪಮಾಡುವಾಗ, ಆನಂದ ಉಕ್ಕಿ ಬಂದು ಕಣ್ಣೀರ ಕೋಡಿ ಹರಿಯುವುದು. ಮೆಯ್ಮುರಿವಿಕೆಯೂ ಆಕಳಿಕೆಗಳೂ ಉಂಟಾಗುವುವು. ಮೈಮೇಲಿದ್ದ ಭಾರ ಕಡಿಮೆಯಾದಂತಾಗಿ ಹೃದಯ ಮತ್ತು ಮನಸ್ಸುಗಳು ತಂಪಾಗುವುವು.ಜಿನೇಂದ್ರನ ಸಾನಿಧ್ಯ ಪಾಪಕರ್ಮಗಳ ನಾಶಕ್ಕೆ ಕಾರಣವಾಗುತ್ತದೆ. ಈ ಕಣ್ಣೀರು ಹರಿಯುವಿಕೆಯು ಪಾಪಕರ್ಮದ ಬಂಧನ ಸಡಿಲಿ ಜಾರುತ್ತಿದೆ ಎಂಬುದನ್ನು ಸೂಚಿಸುವುದಿಲ್ಲವೇ! ಜಿನಬಿಂಬ ದರ್ಶನವಾದಕೂಡಲೆ ಕಣ್ಣೀರು ಮಿಡಿಯುವವನೇ ಸಮ್ಯಕ್ತ್ವಜೀವಿ.

ವಣಿಜಂ ಪಂಚಸರಂಗಳಂ ಪಿಡಿದು ಮುಕ್ತಾಜಾಲಮಂ ತಾಂ ಪರೀ
ಕ್ಷಣೆ ಗೆಯ್ವಂತಿರೆ ಪಂಚಮಂತ್ರದೊಳೊಡಂಬಟ್ಟಕ್ಷರವ್ರಾತಮಂ
ಪಣೆಯೊಳ್ಜಾನಿಸಿ ಚರ್ಮದೃಷ್ಟಿಮುಗಿಯಲೂಸುಜ್ಞಾನಸದ್ದೃಷ್ಟಿಯಿಂ
ದೆಣಿಸುತ್ತಾಗಳೆ ಕಾಣ್ಬನೇ ರಿಸಿಯಲಾ? ರತ್ನಾಕರಾಧೀಶ್ವರಾ ॥೧೧೫॥

ವರ್ತಕನು ಮುತ್ತಿನ ಐದು ಸರಗಳನ್ನು ಹಿಡಿದು ಅವುಗಳಲ್ಲಿರುವ ಮುತ್ತುಗಳ ಸಮೂಹವನ್ನು ಸೂಕ್ಷ್ಮವಾಗಿ ಪರೀಕ್ಷಿಸುವಂತೆ ನಾವು ಪಂಚಮಂತ್ರಾಕ್ಷರ ಮಂತ್ರಗಳನ್ನು ಭಕ್ತಿಯಿಂದ ಪಠಿಸುತ್ತ ಅವುಗಳಲ್ಲಿರುವ ಅಕ್ಷರಗಳ ಸಮೂಹವನ್ನು ಸ್ಫುಟವಾಗಿ ಉಚ್ಛರಿಸುತ್ತ ಅವುಗಳನ್ನು ಹಣೆಯಲ್ಲಿ ಧರಿಸಿ ಈ ಬಹಿರಂಗ ಚರ್ಮದ ಕಣ್ಣುಗಳಿಂದ ನೋಡುತ್ತ ಧ್ಯಾನಿಸಬೇಕು. ಇದಾದಮೇಲೆ ಆ ಪಂಚ ನಮಸ್ಕಾರದ ಅಕ್ಷರಗಳನ್ನು ಮೆಲುಕು ಹಾಕುತ್ತಾ ಮನನಮಾಡಿ ನಮ್ಮ ಜ್ಞಾನನೇತ್ರದಿಂದ ಆ ಅಕ್ಷರಗಳನ್ನು ಗಮನಿಸುತ್ತ ಅದರ ಪರಿಭಾವನೆಯನ್ನು ಮಾಡುತ್ತಿರಬೇಕು. ಹಾಗೆ ಮಾಡುವವರೇ ಸರ್ವಸಂಗಪರಿತ್ಯಾಗಿಗಳಾದ ಮುನಿಗಳಲ್ಲವೇ!

ಲಮೂವತ್ತೈದು ಶೈಭಾಕ್ಷರಂ ತುದಿಗೆ ಬಂದೋಂಕಾರವೊಂದಾದಿಗಿಂ
ತೀ ವರ್ಣೋಕ್ತದೆ ಮೂಲಮಂತ್ರವದು ತಾನೇಳಂಗವಾಯ್ತಾದೊಡೆ
ಲ್ಲಾ ವೊಂದೇ ಅಸಿ ಆ ಉಸಾಯೆನಲಿದೇ ಪಂಚಾಕ್ಷರಂ ಭಾವಿಸಲ್
ಕೈವಲ್ಯಾಂಗನೆ ಕೂಡಿ ಕೆಯ್ವಿಡಿಯಳೇ? ರತ್ನಾಕರಾಧೀಶ್ವರಾ ॥೧೧೬॥॥

ಪಂಚನಮಸ್ಕಾರಗಳಲ್ಲಿ ಒಟ್ಟು ಮೂವತ್ತೈದು ಅಕ್ಷರಗಳಿವೆ. ಈ ಅಕ್ಷರಗಳ ಮೊದಲಲ್ಲಿ ಓಂಕಾರವೆಂಬ ಒಂದು ಅಕ್ಷರವಿದೆ. ಹೀಗೆ ಒಟ್ಟು ೩೬ ಅಕ್ಷರಗಳಿರುವ ಮಂತ್ರವೇ ಮೂಲಮಂತ್ರ. ಓಂ ಣಮೋ ಅರಹಂತಾಣಂ, ಣಮೋ ಸಿದ್ಧಾಣಂ, ಣಮೋ ಆಯಿರಿಯಾಣಂ, ಣಮೋ ಉವಜ್ಝಾಯಾಣಂ, ಣಮೋ ಲೋಯೇಸವ್ವಸಾಹೂಣಂ, ಈ ಮೂಲಮಂತ್ರವನ್ನು ಸಂಕ್ಷಿಪ್ತವಾಗಿಯೂ ಉಚ್ಛರಿಸಬಹುದು. ಅದನ್ನು ಏಳು ವಿಧವಾಗಿ ಹೇಳಬಹುದು, ಅವುಗಳ ಅರ್ಥವೆಲ್ಲಾ ಒಂದೇ ಆಗಿದೆ. [ [ ೧.ಓಂ ಣಮೋ ಅರಹಂತಾಣಂ, ಣಮೋ ಸಿದ್ಧಾಣಂ, ಣಮೋ ಆಯಿರಿಯಾಣಂ, ಣಮೋಉವಜ್ಝಾಯಾಣಂ, ಣಮೋಲೋಏಸವ್ವ ಸಾಹೂಣಂ, ೨. ಅರಹಂತ ಸಿದ್ಧ ಆಇರಿಯಾ ಉವಣಜ್ಝಾಯಸಾಹು. ೩. ಅರಹಂತ ಸಿಸಾ.೪ ಅಸಿಆಉಸಾ. ೫. ಆಸಿಸಾಹು. ೬. ಆಸಾ ೭. ಓಂ ] ಒಟ್ಟಿನಲ್ಲಿ ಆಸಿಆಹುಸಾ ಎಂಬ ಐದು ಅಕ್ಷರಗಳ ಮಂತ್ರವೇ
ಪಂಚಾಕ್ಷರವು. ಇದನ್ನು ಶ್ರದ್ಧಾಭಕ್ತಿಗಳಿಂದ ಪರಿಭಾವಿಸಿದರೆ ಮುಕ್ತಿಸಾಮ್ರಾಜ್ಯವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ.

ನಳಿನೀನಾಳಕೆ ಮೂಲದಿಂ ತುದಿವರಂ ಸಂಪೂರ್ಣದಿಂ ಸ್ವಚ್ಛದಿಂ
ದೊಳಗೆಂತಿರ್ಪುದು ತಂತುವಂತೆ ನರರ್ಗಂ ಕೆಂಬಜ್ಜೆಯಿಂ ನೆತ್ತಿಮು
ಟ್ಟಳೆತಂ ತಪ್ಪದೆ ಮೂರ್ತಿ ತುಂಬಿ ಪಳುಕಿಂ ಗೆಯ್ಸಿರ್ದ ನಿಮ್ಮೊಂದು ನಿ
ರ್ಮಳ ಬಿಂಬೋಪಮನಾತ್ಮನಿರ್ದಪನಲಾ ರತ್ನಾಕರಾಧೀಶ್ವರಾ ॥೧೧೭॥

ತಾವರೆದಂಟಿನ ಸ್ವಚ್ಛವಾದ ಎಲೆಗಳು ಬುಡದಿಂದ ತುದಿಯವರೆಗೂ ಸಂಪೂರ್ವಾಗಿ ಹೊಂದಿಕೊಂಡಿರುವಂತೆ, ಮನುಷ್ಯನ ದೇಹದಲ್ಲಿ ಅಂಗುಷ್ಠದಿಂದ ನೆತ್ತಿಯವರೆಗೂ ಸರ್ವಾಂಗಸಂಪೂರ್ಣನಾಗಿ ಆತ್ಮ ತುಂಬಿರುವನು. ಪರಮಪರಂಜ್ಞೋತಿಸ್ವರೂಪನಾದ ಆತ್ಮಸ್ಫಟಿಕದ ನಿರ್ಮಲ ಜಿನಬಿಂಬದಂತೆ ಶರೀರದಲ್ಲಿ ಬೆಳಗುತ್ತಿರುವನು.ಶರೀರವು ಯಾವ ಆಕೃತಿಯಲ್ಲಿರುವುದೋ ಹಾಗೆಯೇ ಆತ್ಮಪ್ರದೇಶವೂ ಇರುವುದು.

ನರರಾತ್ಮಂ ಸ್ಫಟಿಕೋಪಮಂ ಗಡಮದೇನಾಕಾರಮುಂ ಸ್ವಚ್ಛಮಾ
ಗಿರದೆಂಬರ್ಮಿಗೆ ಕೇಳಿಮಾ ಸ್ಫಟಿಕಮೆಂತೈವಣ್ಣಮುಂ ಸೋಂಕೆಯಾ
ಪರಿಯೊಳ್ತೋರುಗುಮಂತೆ ಮೆಯ್ಯ ತೊವಲುಂ ಕರ್ಪಾಗೆ ಕೆಂಪಾಗೆ ತಾಂ
ಕರಿಯಂ ಕೆಂಪನೆನಿಪ್ಪನೆಂದರುಪಿದೈ ರತ್ನಾಕರಾಧೀಶ್ವರಾ ॥೧೧೮॥

“ ಮನುಷ್ಯನ ಶರೀರದಲ್ಲಿ ತುಂಬಿರುವ ಆತ್ಮನು ಸ್ಫಟಿಕಕ್ಕೆ ಹೋಲುತ್ತಾನೆ. ಆದರೆ ಆ ಶರೀರದ ಆಕಾರ ಮತ್ತು ಬಣ್ಣ ನಿರ್ಮಲವಾಗಿರುವುದಿಲ್ಲವಲ್ಲ.” ಎಂದು ಕೆಲವರು ಪ್ರಶ್ನೆ ಹಾಕುತ್ತಾರೆ.  ಅಂಥವರಿಗೆ ಉತ್ತರ ಹೀಗಿದೆ. ಸ್ಫಟಿಕದ ಬಿಂಬಕ್ಕೆ ಐದು ತರಹದ ಬಣ್ಣಗಳು( ಕೃಷ್ಣ, ನೀಲ, ಕಾಪೋತ, ಪೀತ, ಪದ್ಮ, ಶುಕ್ಲ) ಸಂಬಂಧಿಸಿದರೆ, ಆ ಬಿಂಬವೂ ಸಹ ಅದೇ ಬಣ್ಣದಲ್ಲಿ ಕಂಗೊಳಿಸುತ್ತದೆ,ಹಾಗೆ ಈ ಶರೀರದ ಚರ್ಮವು ಕಪ್ಪಾಗಿರಲು, ಅವನು ( ಆತ್ಮನು) ಕಪ್ಪನೆಯವನು ಎನಿಸಿಕೊಳ್ಳುತ್ತಾನೆ. ಚರ್ಮವೈ ಕೆಂಪಾಗಿರಲು ಅವನು ಕೆಂಪನೆಯವನು ಎನಿಸಿಕೊಳ್ಳುತ್ತಾನೆ ಎಂದು ಆಗಮಗಳು ತಿಳಿಸುತ್ತವೆ.

ಸ್ವಚ್ಛಾಕಾರದ ಜೀವನೀ ತನುವಿನೊಳ್ತಾನೇಕೆ ಸಿಲ್ಕಿರ್ದಪಂ
ಸ್ವೇಚ್ಛಾಮಾರ್ಗದೆ ತಾನುಪಾರ್ಜಿಸಿದ ಕರ್ಮಾಧೀನದಿಂ ಕರ್ಮಮುಂ
ತುಚ್ಛಂ ಕ್ರೋಧದೆ ಮಾನಮಾಯೆಗಳಿನಾ ಲೋಭಾರ್ಥದಿಂ ಬಂದುದೇ
ಮ್ಲೇಚ್ಛಾಕಾರಂ ಕಷಾಯಮಂ ಸುಡೆ ಸುಖಂ ರತ್ನಾಕರಾಧೀಶ್ವರಾ ॥೧೧೯॥

ನಿರ್ಮಲವಾದ ಆತ್ಮನು ಈ ಶರೀರದಲ್ಲಿ ಬಂದು ಏತಕ್ಕೆ ಸಿಕ್ಕಿ ನರಳುತ್ತಿದ್ದಾನೆ? ಏಕೆಂದರೆ ಮನಬಂದ ರೀತಿ ತಾನು ನಡೆದು ಕರ್ಮವನ್ನು ಅಂಟಿಸಿಕೊಂಡಿರುವನು. ಜನ್ಮಾಂತರಗಳಲ್ಲಿ ಈ ರೀತಿ ಸಂಪಾದಿಸಿದ ಕರ್ಮಕ್ಕೆ ಅಧೀನನಾಗಿ, ಆ ಕರ್ಮ ಆಡಿಸಿದ ರೀತಿ ಆಡುತ್ತಾನೆ. ಕರ್ಮವೆಂಬುದು ಅತ್ಯಂತ ನೀಚವಾದದ್ದು. ಆತ್ಮಕ್ಕೆ ಅಹಿತವಾದದ್ದು. ಕ್ರೋಧ, ಮಾನ, ಮಾಯ, ಲೋಭಗಳೆಂಬ ಈ ಕಷಾಯಗಳಿಂದಲೇ ಜೀವಾತ್ಮನು ಕರ್ಮಬಂಧನ ಮಾಡಿಕೊಂಡು ಚತುರ್ಗತಿಗಳಲ್ಲಿ ತಿರ್ರನೆ ತಿರುಗಿ ಬಳಲಿ ಬೇಸತ್ತು ಬೆಂಡಾಗಿ ಹೋಗಿರುವನು. ಈ ದುಷ್ಟವಾದ ಕರ್ಮವನ್ನು ಕಿತ್ತೊಗೆದು ನಿರ್ಮಲಾಂತಃಕರಣನಾದರೆ ಸುಖವಾಗುವುದಲ್ಲವೇ? ಕರ್ಮನಿರ್ಜರೆಯಿಂದಲೇ ಶಾಶ್ವತ ಸುಖಪ್ರಾಪ್ತಿ, ಮೋಕ್ಷಸಾಮ್ರಾಜ್ಯದ ಒಡೆತನವಲ್ಲವೇ?

ನೆಲದಿಂ ಮೇಲೊಗೆದೈದು ಸಾವಿರಧನುಃ ಪ್ರಾಮಾಣ್ಯದೊಳ್ಕಾಂಚನೋ
ಜ್ಜ್ವಲರತ್ನಂಗಳಿನದ ಮಂಡಪದ ಮಧ್ಯಸ್ಥಾನದೊಳ್ಸಿಂಹದಾ
ತಲೆಯೊಳ್ತೋರ್ಪರುಣಾಬ್ಜಕರ್ಣಿಕೆಗೆ ಚಾತುಷ್ಕಾಂಗುಲೋದ್ದೇಶದೊ
ಳ್ಗೆಲವಾಂತಿರ್ದೆ ರವೀಂದು ಕೋಟಿಕಿರಣಾ!ರತ್ನಾಕರಾಧೀಶ್ವರಾ ॥೧೨೦॥

ತೀರ್ಥಂಕರ ಪದವಿಗೇರುವ ಚೇತನಕ್ಕೆ ಕೇವಲಜ್ಞಾನವಾದ ಕೂಡಲೇ ಸಮವಸರಣ ಮಂಟಪದಲ್ಲಿ ಜಿನೇಂದ್ರನಾಗಿ ರಾರಾಜಿಸುವನು.  ಸಮವಸರಣದ ಸಿರಿಯನ್ನು ಬಣ್ಣಿಸಲು ಸಾಧ್ಯವೇ! ಜಿನೇಂದ್ರನ ಬಹಿರಂಗ ಸಿರಿಯದು. ಭೂಮಿಯಿಂದ ಐದುಸಾವಿರ ಬಿಲ್ಲಿನೆತ್ತರದಲ್ಲಿ ಈ ಸಮವಸರಣದ ರಚನೆಯಾಗುವುದು. ಆ ಸಮವಸರಣದ ಮಧ್ಯೆ ಬಂಗಾರ, ಮುತ್ತು, ರತ್ನಗಳಿಂದ ನಿರ್ಮಿತವಾದ ಲಕ್ಷ್ಮೀಮಂಟಪ ಕಂಗೊಳಿಸುವುದು. ಆ ಮಂಟಪದಲ್ಲಿ ದಿಕ್ಕಿಗೊಂದರಂತೆ ಕುಳಿತಿರುವ ಬಂಗಾರದ ಸಿಂಹಗಳ ತಲೆಯಮೇಲೆ ಕಾಣುವ ಕೆಂದಾವರೆಯ ಕರ್ಣಿಕೆಗೆ ಅಂಟಿಯೂ ಅಂಟದಂತೆ ನಾಲ್ಕು ಬೆರಳು ಸೋಕದೆ ಭಗವಂತ ವಿರಾಜಮಾನನಾಗಿರುತ್ತಾನೆ. ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ ಕಿರಣಸುಜ್ಞಾನ ಪ್ರಕಾಶನಾಗಿ ಭವ್ಯ ಜೀವರುಗಳಿಗೆ ದಿವ್ಯಧ್ವನಿಯಮೂಲಕ ಧರ್ಮಾಮೃತವನ್ನು ನೀಡುವನು.

ಜೊನ್ನಂಬೊಲ್ ನಯನಕ್ಕೆ ತೋರಿ ಕರದಿಂದಂ ಮುಟ್ಟಲಿಲ್ಲಾದ ಸಂ
ಪನ್ನಾಕಾರದೊಳಿರ್ದಪಂ ವಿಮಲಸಿದ್ಧಕ್ಷೇತ್ರದೊಳ್ಸಿದ್ಧನ
ಚ್ಛಿನ್ನಜ್ಞಾನಸಮೇತನಷ್ಟಗುಣಗಾಂಭೀರ್ಯಾತ್ಮನೆಂದಿಚ್ಛೆಯಿಂ
ನಿನ್ನಂ ಧ್ಯಾನಿಸುವಂಗೆ ಮುಕ್ತಿಯರಿದೇ? ರತ್ನಾಕರಾಧೀಶ್ವರಾ ॥೧೨೧॥

ಸಿದ್ಧಪರಮೇಷ್ಠಿಯ ರೂಪ, ಆಕಾರಗಳನ್ನು ಈ ಚರ್ಮಚಕ್ಷು ಗುರುತಿಸಲಾರದು. ಜ್ಞಾನನೇತ್ರದಿಂದ ಮಾತ್ರಅದು ಸಾಧ್ಯವಾಗುತ್ತದೆ. ಸಂಪೂರ್ಣಜ್ಞಾನದಿಂದ ಕೂಡಿದವನೂ, ಸರ್ವಜ್ಞನೂ ಆದ ಸಿದ್ಧಾತ್ಮನಿಗೆ ಎಂಟು ಗುಣಗಳಿವೆ. ಅವು ಯಾವುವೆಂದರೆ ಸಮ್ಯಕ್ತ್ವ, ಜ್ಞಾನ, ದರ್ಶನ, ವೀರ್ಯ, ಸೂಕ್ಷ್ಮತ್ವ, ಅವಗಾಹನತ್ವ, ಅಗುರುಲಘುತ್ವ, ಅವ್ಯಾಬಾಧತ್ವ. ಈ ಎಂಟು ಗುಣಗಳಿಂದ ಶೋಭಿತನಾಗಿ ಗಂಭೀರಭಾವದಿಂದ ಕೂಡಿದ ಸ್ವರೂಪವುಳ್ಳ ಸಿದ್ಧಪರಮೇಷ್ಠಿಯು ಬೆಳುದಿಂಗಳಂತೆ ಕಣ್ಣಿಗೆ ಕಾಣಿಸಿ ಕೈಯಿಂದ ಮುಟ್ಟುವುದಕ್ಕಾಗದಿರುವುದೂ ಜ್ಞಾನದಿ ಸಂಪತ್ತುಗಳಿಂದ ಕೂಡಿರುವುದೂ ಆದ ಆಕೃತಿಯಲ್ಲಿ ನಿರ್ಮಲವಾದ ಸಿದ್ಧಲೋಕದಲ್ಲಿರುತ್ತಾನೆ. ಎಂಬುದಾಗಿ ಪ್ರೀತಿಯಿಂದ ನಿನ್ನನ್ನು ಧ್ಯಾನೀಸುವವನಿಗೆ ಮೋಕ್ಷವು ಅಸಾಧ್ಯವೇ?

ಕ್ಷಮೆ ಮಾಳ್ಪಂತೆ ವಿರೋಧಮೇಂ ಕುಡುವುದೇ ಸಂತೋಷಮಂ ತತ್ತ್ವ ಶಾ
ಸ್ತ್ರಮೆ ಮಾಳ್ಪಂತೆ ಕುಶಾಸ್ತ್ರಮೇಂ ಕುಡುವುದೇ ಸುಜ್ಞಾನಮಂ ಮೋಕ್ಷರಾ
ಜ್ಯಮೆ ಮಾಳ್ಪಂತೆ ಚತುಃಸ್ಥಳಂ ಕುಡುವುದೇ ಸಿದ್ಧತ್ವಮಂ ನಿಮ್ಮ ಧ
ರ್ಮಮೆ ಕಾವಂತೆಗನ್ಯರೇಂ ಪೊರೆವರೇ ರತ್ನಾಕರಾಧೀಶ್ವರಾ ॥೧೨೨॥

ಕ್ಷಮಾಗುಣವು ಆತ್ಮಸಂತೋಷವನ್ನುಂಟುಮಾಡುವಹಾಗೆ, ಪ್ರತೀಕಾರಬುದ್ಧಿ ಸಂತೋಷ ಕೊಡುತ್ತದೆಯೇ? ಸದ್ಧರ್ಮಬೋ
ಧನೆಯನ್ನು ಮಾಡುವ ತತ್ಫತ್ವಶಾಸ್ತ್ರಗಳು ಸುಜ್ಞಾನವನ್ನುಂಟುಮಾಡುವ ಹಾಗೆ, ಮಿಥ್ಯಾಶಾಸ್ತ್ರಗಳು ಶ್ರೇಷ್ಠಜ್ಞಾನವನ್ನು ಕೊಡಲು ಸಾಧ್ಯವೇ! ಮೋಕ್ಷಸಾಮ್ರಾಜ್ಯದಲ್ಲಿ ಅನಂತ ಸುಖಸಿರಿಗಳಲ್ಲಿ ಓಲಾಡುವಹಾಗೆ ಚತುರ್ಗತಿಗಳಲ್ಲಿ ಭ್ರಮಣೆ ಮಾಡಿದರೆ ಆ ಶಾಶ್ವತ ಸುಖವನ್ನು ಅನುಭವಿಸಲು ಸಾಧ್ಯವೇ! ಸದ್ಧರ್ಮವನ್ನು ಆಶ್ರಯಿಸಿದರೆ, ಆ ಧರೂಮವು ನಮ್ಮನ್ನು ಎಡಬಿಡದೆ ಕಾಪಾಡುವ ಹಾಗೆ ಇನ್ಯಾರುತಾನೆ ನಮ್ಮನ್ನು ಕಾಪಾಡುವವರು.

ನಿನ್ನಂ ಚಿಂತಿಸುತಿರ್ಪವಂಗೆ ಪರದೇಶಂ ತನ್ನದೇಶಂ ಪರರ್
ತನ್ನಿಷ್ಟರ್ ಪಗೆಗಳ್ಭಟರ್ದೊರೆಗಳಾತ್ಮಸ್ನೇಹಿತರ್ಕಿಚ್ಚು ಬಾ
ವನ್ನಂ ವ್ಯಾಧಿ ಸುಖಂ ವಿಷಂ ಸುಧೆಯೆನಿಕ್ಕುಂ ನೋಡೆ ನೀನಿರ್ದುಮಾ
ನಿನ್ನೊಂದಕ್ಕೆಳಸಿರ್ಪೆನೇಯಕಟಾ ! ರತ್ನಾಕರಾಧೀಶ್ವರಾ ॥೧೨೩॥

ಪರಮಾತ್ಮಧ್ಯಾನದಲ್ಲಿ ತಲ್ಲೀನನಾಗಿರುವವನಿಗೆ ಏನು ಭಯ ? ಅವನಿಗೇನು ಕಡಿಮೆ? ಯಾವ ದೇಶದಲ್ಲಿದ್ದರೂ ತನ್ನ ದೇಶದಲ್ಲಿರುವಷ್ಟೇ ಸುಖ ಸಂತೃಪ್ತಿಗಳಿಂ ಇರುತ್ತಾನೆ . ಹೊರಗಿನವರು ತನ್ನ ಆಪ್ತರಾಗುತ್ತಾರೆ. ಶತ್ರುಗಳು ಮಿತ್ರರಾಗುತ್ತಾರೆ. ದೊರೆಗಳು ಆ ಭಗವದ್ಭಕ್ತನನ್ನು ಆದರ ಸತ್ಕಾರಗಳಿಂದ ತಣಿಸಿ ಅವನ ಆತ್ಮೀಯನಾಗುತ್ತಾನೆ. ಬೆಂಕಿಯಂಥ ತಾಪ ಶ್ರೀಗಂಧದಹಾಗೆ ತಂಪಾಗುತ್ತದೆ. ರೋಗರುಜಿನಗಳು ಅವನ ಹತ್ತಿರ ಸುಳಿಯುವುದಿಲ್ಲ. ದೃಢಕಾಯನಾಗಿ, ಆರೋಗ್ಯವಂತನಾಗಿ ಸುಖದಿಂದಿರುತ್ತಾನೆ. ವಿಷವು ಅಮೃತವಾಗುತ್ತದೆ. ಈ ವಿಚಾರವು ತಿಳಿದಿದ್ದರೂ ಏಕೋ ಏನೋ ನಾನು ಭ್ರಮೆಯಿಂದ, ಆಸೆಯಿಂದ,  ಲೋಭದಿಂದ ಪರಮಾತ್ಮಧ್ಯಾನದಿಂದ ವಿಚಲಿತನಾಗಿ ನನಗೆ ಹಿತವಲ್ಲದ ವಸ್ತುಗಳ ಕಡೆಗೆ ದೃಷ್ಟಿಹಾಯಿಸಿ ಕೈಚಾಚುತ್ತಿರುವೆನಲ್ಲಾ! ಅಯ್ಯೋ ಏನು ಹೇಳಲಿ ಈ ಮೂರ್ಖತನಕ್ಕೆ.

ನೀನಾನೆಂಬರಿವಾಗೆ ಸಾಕು ಸಿರಿಯೇಂ ದಾರಿದ್ರ್ಯಮೇಂ ಗ್ರಾಮಮೇಂ
ಕಾನೇಂ ಪಾಲುಣಿಸೇಂ ಕದನ್ನದುಣಿಸೇಂ ನಿರ್ಬಂಧಮೇಂ ರಾಜ್ಯಮೇಂ
ಈ ನಾನಾ ವಿಧಿಯೆಲ್ಲವುಂ ಕನಸಿವಂ ಕೊಂಡೇನೋ ನಿನ್ನೆನ್ನ ಸಂ
ಧಾನಂ ನಿತ್ಯಸುಖೈಕವಿನ್ನುಳಿದುವೇಂ ರತ್ನಾಕರಾಧೀಶ್ವರಾ ॥೧೨೪॥

ನಾನಾರು? ನನ್ನ ಸ್ವರೂಪವೇನು? ನನ್ನ ಗುರಿಯೇನು? ಕರ್ಮದ ಕಟ್ಟಿಗೆ ಸಿಕ್ಕಿಬಿದ್ದಿರುವ ನಾನು ಆ ಬಂಧನದಿಂದ ಬಿಡಿಸಿಕೊಂಡು ಪರಮಾತ್ಮಪದವಿಗೇರುವುದು ನನ್ನ ಪರಮ ಕರ್ತವ್ಯ ಎಂಬ ತಿಳುವಳಿಕೆ ಮೂಡಿದರೆ, ಶ್ರೀಮಂತಿಕೆಯೇನು, ದಾರಿದ್ರ್ಯವೇನು, ಊರೇನು, ಕಾಡೇನು, ಭೂರಿಭೋಜನವೇನು. ಹಳಸಿದ ಅನ್ನವೇನು, ಸೆರೆಮನೆಯಾದರೇನು, ಅರಮನೆಯಾದರೇನು, ಈ ಲೌಕಿಕ ವಿಚಾರಗಳಲ್ಲಿ ಆಸಕ್ತಿಯೇ ಮೂಡುವುದಿಲ್ಲ. ಇವೆಲ್ಲ ಕನಸಿನಂತೆಅಶಾಶ್ವತವಾದವುಗಳು
ಇವುಗಳಿಂದ ಯಾವ ಪ್ರಯೋಜನವೂ ಕಾಣೆ. ನನ್ನ ನಿನ್ನ ಸಂಯೋಗವೊಂದೇ ಶಾಶ್ವತಸುಖಕ್ಕೆ ನಾಂದಿ. ಇನ್ನುಳಿದವುಗಳಿಂ ಏನು ಪ್ರಯೋಜನ? ಅವೆಲ್ಲ ಹೇಯವಾದವುಗಳು.

ನಡೆದೆಂ ಚಿತ್ತಕೆ ಬಂದವೊಲ್ನುಡಿದೆಂ ನಾಂ ಬಾಯ್ಗಿಚ್ಛೆಬಂದಂತೆ ಸೈ
ಗೆಡೆದೆಂ ದುಃಖಸಮುದ್ರದೊಳ್ಪಡೆದೆನಂಧಂ ಕಣ್ಗಳಂ ಪೆತ್ತವೊಲ್
ಬಿಡೆ ನಿಮ್ಮಂಘ್ರಿಗಳಂ ಬಿಡೆಂ  ಬಿಡೆನುದಾರಂ ನೀನಹೋ ! ಬಲ್ಲೆನೆ
ನ್ನೊಡೆಯಾ ! ರಕ್ಷಿಸು ರಕ್ಷಿಸಾ ತಳುವಿದೇಂ ರತ್ನಾಕರಾಧೀಶ್ವರಾ ॥೧೨೫॥

ಮನಸ್ಸಿಗೆ ಬಂದಂತೆ ಅಡ್ಡಾಡಿದೆ. ನನ್ನ ನಡೆವಳಿಕೆಗೆ ಲಂಗು ಲಗಾಮುಗಳೇ ಇಲ್ಲ. ಬಾಯಿಗೆ ಬಂದಹಾಗೆ ಮಾತನಾಡಿ ಅನೇಕರ ನೋವಿಗೆ ಕಾರಣನಾದೆ. ದುಃಖಸಮುದ್ರದಲ್ಲಿ ಬಿದ್ದು ಒದ್ದಾಡುತ್ತಿರುವೆನು.ಕಣ್ಣಿದ್ದೂ ಕುರುಡನಾದೆನು. ಕುರುಡನಿಗೆ ಕಣ್ಣಿರುವುದೂ ಒಂದೇ, ನನಗೆ ಕಣ್ಣಿರುವುದೂ ಒಂದೇ. ಸುದೃಷ್ಟಿತ್ವವಿಲ್ಲದೆ ಭಂಗಹೊಂದಿದೆನು. ಈಗ ಜ್ಞಾನೋದಯವಾಗಿದೆ. ನಿನ್ನ ಪಾದದ್ವಯಗಳನ್ನು ಖಂಡಿತ ಬಿಡೆನು. ನನ್ನನ್ನು ಕಾಪಾಡು ಸ್ವಾಮಿ. ನೀನು ಕರುಣಾಕರನಲ್ಲವೇ
ಉದಾರಿಯಲ್ಲವೇ! ಪತಿತೋದ್ಧಾರನಲ್ಲವೇ! ಏತಕ್ಕಾಗಿ ತಡಮಾಡುತ್ತಿರುವೆ ಪ್ರಭು!

ತ್ರಿಜಗತ್ಸ್ವಾಮಿ ಜಿನೇಂದ್ರ ಸಿದ್ಧ ಶಿವಲೋಕಾರಾಧ್ಯ ಸರ್ವಜ್ಞಂ ಶಂ
ಭು ಜಗನ್ನಾಥ ಜಗತ್ಪಿತಾಮಹ ಹರ ಶ್ರೀಕಾಂತ ವಾಣೀಶ ವಿ
ಷ್ಣು ಜಿತಾನಂಗ ಜಿನೇಶ ಪಶ್ಚಿಮಾಸಮುದ್ರಧೀಶ್ವರಾ ಬೇಗದಿಂ
ನಿಜಮಂ ತೋರು ದಯಾಳುವೇ ತಳುವಿದೇಂ ರತ್ನಾಕರಾಧೀಶ್ವರಾ ॥೧೨೬॥

ಮೂರು ಲೋಕಕ್ಕೂ ಒಡೆಯನಾದ ಸ್ವೃಮಿಯೆ! ಸಿದ್ಧ ಲೋಕದಲ್ಲಿ ರಾರಾಜಿಸುವನೇ, ಅನಂತ ಸುಖವುಳ್ಳವನೇ, ಕರ್ಮನಿರ್ಜರೆಮಾಡಿಕೊಂಡು ಸಾಮ್ರಾಜ್ಯವನ್ನು ಹೊಂದಿದವನೆ, ಅನಂತದರ್ಶನ, ಅನಂತಜ್ಞಾನ,ಅನಂತವೀರ್ಯ, ಅನಂತಸುಖವುಳ್ಳವನೆ, ಸರಸವತಿಪ್ರಭುವೆ, ಕಾಮವನ್ನು ಜಯಿಸಿದವನೆ, ಪಶ್ಚಿಮಸಮುದ್ರಧೀಶ್ವರನೆ, ಬೇಗ ಸತ್ಯಮಾರ್ಗವನ್ನು ತೋರು, ನನ್ನ ಮೊರೆ ಕೇಳುವುದಿಲ್ಲವೇ, ತಡವೇಕೆ ಪ್ರಭು! ನೀನು ದಯಾಸಮುದ್ರನಲ್ಲವೇ? ನನ್ನ ಮೇಲೆ ಕರುಣೆಯಿಡು ಮಹಾಸ್ವಾಮಿ !

ತ್ರಾಹಿ ತ್ರೈಭುವನೇಂದ್ರ ಮಸ್ತಕಮಣಿವ್ರಾತಾರ್ಚಿತಾಂಘ್ರಿದ್ವಯಾ
ತ್ರಾಹಿ ಶ್ರೀರಮಣೀನಟನ್ನಟನರಂಗಶ್ರೀಪದಾಬುಜೋಭಯಾ
ತ್ರಾಹಿ ತ್ರಾಹಿ ಮಹೇಶ ಮಾಂ ಪುನರಪಿ ತ್ರಾಹೀತಿ ರತ್ನತ್ರಯಾ
ದೇಹಿ ತ್ವಂ ಮಮ ದೀಯತಾಂ ಜಯ ಜಯಾ!ರತ್ನಾಕರಾಧೀಶ್ವರಾ॥ ೧೨೭॥

ಊರ್ಧ್ವ ಮಧ್ಯ ಅಧೋಲೋಕಗಳ ಮಹೇಂದ್ರರು ಭಕ್ತಿಯಿಂದ ಸ್ವಾಮಿಗೆ ಎರಗಿದಾಗ, ಅವರ ಕಿರೀಟಗಳಲ್ಲಿರುವ ಅಮೂಲ್ಯ ರತ್ನಗಳ ಪ್ರಭೆಯಲ್ಲಿ ಕಂಗೊಳಿಸುವ ಪಾದದ್ವಯವುಳ್ಳ ಪರಮಾತ್ಮನೇ! ಕಾಪಾಡು!ಕಾಪಾಡು! ನನ್ನನ್ನು ಎಡೆಬಿಡದೆ ಕಾಪಾಡು! ರತ್ನತ್ರಯನೇ ! ಕಾಪಾಡು!ನನಗೂ ಆ ರತ್ನತ್ರಯವನ್ನು ದಯಪಾಲಿಸು.

ವೈರಾಗ್ಯನೀತಿಯಾತ್ಮವಿ
ಚಾರಂ ತಾಂ ಬಗೆದು ನೋಡೆ ರಾಜಿಸುಗುಂ ಶೃಂ
ಗಾರಕವಿಹಂಸರಾಜಂ
ಪೂರಿಸಿದ ಸಪಾದಶತಕ ರತ್ನಾಕರದೊಳ್ ॥೧೨೮॥

ಮಹಾಕವಿ ಶೃಂಗಾರಕವಿಹಂಸರಾಜ ರತ್ನಾಕರನಿಂದ ವಿರಚಿತವಾದ ರತ್ನಾಕರಶತಕದಲ್ಲಿ ಒಳಹೊಕ್ಕು ನೋಡಿದರೆ ವೈರಾಗ್ಯ,  ನೀತಿ, ಮತ್ತು ಆತ್ಮವಿಚಾರಗಳು ತುಂಬಿತುಳುಕಾಡುತ್ತಿವೆ.

ಶ್ರೀಮದ್ದೇವೇಂದ್ರ ಕೀರ್ತಿಯೋಗೀಶ್ವರಪಾದಾಂಭೋಜ ಭೃಂಗಾಯಮಾನ ಶೃಂಗಾರಕವಿಹಂಸರಾಜ ವಿರಚಿತಮಪ್ಪ ರತ್ನಾಕರ ಸಪಾದಶತಕಂ ಸಮಾಪ್ತಂ.

ಶ್ರೀಮದ್ದೇವೇಂದ್ರ ಕೀರ್ತಿಯೋಗೀಶ್ವರರ ಪಾದಕಮಲದಲ್ಲಿ ಭ್ರಮರದಂತಿರುವ ಶೃಂಗಾರ ಕವಿರಾಜಹಂಸನು ವಿರಚಿಸಿದ ರತ್ನಾಕರ ಸಪಾದಶತಕವು ಸಮಾಪ್ತವಾದುದು.

ಓಂ ಶಾಂತಿಃ ಶಾಂತಿಃ ಶಾಂತಿಃ

ನೆನಕೆಗಳು ಕೃತಜ್ಞತೆಯೊಂದಿಗೆ

ಸಂಪಾದಕರು :- ಎಂ. ಆರ್. ನಾಗರಾಜ್
ಪ್ರಕಾಶನ:- ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ,  
ಚಾಮರಾಜಪೇಟೆ
ಬೆಂಗಳೂರು-೫೬೦೦೧೮











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ