ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ನವೆಂಬರ್ 25, 2018

ಜನ್ನ ಕವಿ ವಿರಚಿತ ಅನಂತನಾಥ ಪುರಾಣ - ಚಂಡಶಾಸನನ ಕಥೆ

ಜನ್ನ ಕವಿ ವಿರಚಿತ ಅನಂತನಾಥ ಪುರಾಣ
ಚಂಡಶಾಸನನ ಕಥೆ ( ಸಂಗ್ರಹ)

ಮೇರುವಿನರ್ಧಮಂ ಜನನಿಧಾನಮನಗ್ಗದ ಜಂಬುದೀವಮಂ
ವಾರಿಧಿಸರ್ಪನಪ್ಪಿದುದು ವಾರಿಧಿವೇಷ್ಟಿತ ಭೂಮಿಭಾಗದೊಳ್
ಭಾರತವರ್ಷಮೊಪ್ಪಿದುದು ಭಾರತವರೂಷದ ತೆಂಕವಕ್ಕದೊಳ್
ಧಾರಿಣಿಗುಜ್ಜ್ವಲಶ್ರವಣಮಂಡನಮಾಯ್ತು ಸುರಮ್ಯಮಂಡಳಂ॥೧॥

ಪರಬ್ರಹ್ಮನ ನಂದನಂ ಭರತಚಕ್ರಾಧೀಶ ದರ್ಪಾಪಹಂ
ಚರಮಾಂಗಂ ಕುಸುಮೇಷು ಬಾಹುಬಲಿದೇವಂ ಶ್ರೀ ಮಹಾಮಂಡಳೇ
ಶ್ವರನಾಳ್ದಿರ್ದುದುದಾರ ವೀರ ವಿಭವ ಶ್ರೀಪಾದನಂ ಪೌದನಂ
ಪುರಮುಂಟಾ ಪುರಮಾ ಸುರಮ್ಯವಿಷಯಶ್ರೀ ವಕ್ತ್ರಬಿಂಬೋಪಮಂ ॥೨॥

ಅನಿತೊಳ್ಪೆಸೆವ ಸುರಮ್ಯಾ
ವನಿಗಂ ಪೌದನಪುರಕ್ಕಮಧಿಪತಿ ವೀರಾ
ರಿನೃಪಾಲ ಶಿರಃಖರಶಾ
ಣಿ ನಿಘೃಷ್ಟಭುಜ ಕೃಪಾಣಕಂ ವಸುಷೇಣಂ॥೩॥

ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯೆಂಬರ ಹಾವಭಾವಮುಂ
ಪುರ್ವಿನ ಕೊಂಕು ಕಣ್ ಮಲರ ಕಾಂತಿ ಕದಂಪಿನ ತೆಳ್ಪು ಸಾಲ್ವುದಾ
ರೊರ್ವರೆ ಗೆಲ್ವುದಕ್ಕೆನಿಪ ರಾಣಿಯ ವಾಸದ ದೇಸೆಯಾಸೆಯ
ಯ್ನೂರ್ವರೊಳಂ ಸುನಂದೆ ಪಿರಿಯಳ್ ವಸುಷೇಣನ ಚಿತ್ತವೃತ್ತಿಯಿಂ॥೪॥

ಜಯವಧು ಬಾಹುಪೂರಕದ ಮೇಲೆ ಮಲಂಗಿದ ತೋಳ್ಗಳಂ ಮನಃ
ಪ್ರಿಯ ದರಹಾಸದೊಳ್ ನಲಿವ ವಕ್ತ್ರಮನೂರ್ಜಿತಲಕ್ಷ್ಮಿ ಹಾರಯ
ಷ್ಟಿಯೊಳೊಲೆದುಯ್ಯಲಾಡೆ ಪಿರಿದಾದುರಮಂ ನಡೆ ನೋಡುವಂ ಸುನಂ
ದೆಯ ಮುಖಬಿಂಬಮೆಂಬ ಮಣಿದರ್ಪಣದೊಳ್ ವಸುಷೇಣಭೂಭುಜಂ॥೫॥

ಅಂತು ಸಕಲರಾಜ್ಯಾಂಗ ಲಕ್ಷ್ಮಿಯೊಳಂ  ವಿನೋದವಿಳಾಸಂ ದೇಸೆವಡೆವಿನಮಿಷ್ಟ ಸುಖಾನುಭವ ವಿಭೂತಿಯಿಂದಮಿರ್ದೊಂದು ದಿವಸಂ ವಾಹಳೀ ವಿನೋದಾವಸರದೊಳೊರ್ವಂ ಪೂರ್ವ ಪರಿಚಿತ ಪ್ರಸನ್ನಾಕಾರಂ ಸುದರ್ಶನನೆಂಬೊಂ ಬಂದು ಮಹಾರಾಜಂಗೆ ದರ್ಶನೋಪಾಯನಮನಿತ್ತು ಪೊಡವಟ್ಟುನಿಂದು ದೇವರದೇವನ ಸಹೋದರಂ ಸಹಪಾಂಸುಕ್ರೀಡಾನುಬಂಧಸಂಗತ ಬಂಧು ಮಕರಗ್ರಾಹಪುರವರಾಧೀಶ್ವರಂ ಚಂಡಶಾಸನದೇವಂ ದೇವರ ಪಲದೆವಸಮಗಲ್ದಿರ್ದು ನೆನೆದು ನೋಡಲ್ ಬರುತ್ತುಮವಸರಮನಱಿಯಲೆನ್ನನಟ್ಟಿದಂನೆಂಬುದಮತಿಪ್ರೀತಿಯಿಂ ವಿಸ್ತಾರಿ-
ತವಿಲೋಚನನಾಗಿ ಬೇಗಮೀಗಳೆ ಬರವೇೞೆಂದಾತ್ಮನರ್ಮಸಚಿವಂ ಬೆರಸಾತನಂ ಕೞಿಪಿ ಬಳಸಿ ನಿಂದ ಗಂಧಸಿಂಧೂರ
ಘಟಾ ಪಟಲಮನಿಕ್ಕೆಲಕ್ಕೆದೆಗೆದ ಪಸಾಯತರತುಳುಂಗಬಳನುಮಾಸ್ಥಾನೀ ಕೃತರಾಜಸುತ ಸಮಾಜನುಮಾಗಿ ನಿಂದಾಗಳ್

ಕ್ಷಿತಿರಂಗಂ ಭಟಕೋಟಿಪಾದ ತುರಗಶ್ರೇಣೀಖುರವ್ರಾತ ಸಾ
ತ್ಕೃತಮಾಶಾಳಿ ಭೂಷಣಾಂಶು ಮೃಗನಾಭೀಸಾರ ಸೌರಭ್ಯ ಸಾ
ತ್ಕೃತಮಭ್ರಂ ಚಮರೀಜ ಕೇತುಪಟಲ ಶ್ವೇತಾತಪತ್ರೌಘ ಸಾ
ತ್ಕೃತಮೆಂಬಂತಿರೆ ಚಂಡಶಾಸನ ನೃಪಂ ಬಂದಂ ಮಹೋತ್ಸಾಹದಿಂ ॥೬॥

ಅಂತು ಬರಲೊಡಮಿರ್ವರುಂ ವಾಹನಂಗಳನಿೞಿದು ರೋಮಾಂಚ ಸಂಚಯಂ ತೊಟ್ಟಂಗಿಗಳ ತಟ್ಟುರ್ಚಿ ಪೆರ್ಚಿದ ಮುಯ್ವಿನೆಡೆ ಪೊಟ್ಟೆನೊಡೆಯೆ ಪರಸ್ಪರಾಲಿಂಗನಂಗೆಯ್ದು ತತ್ಸಮಯ ಸಮುಚಿತ ಭಾಷಣ ಸಂಭಾವನಾನಂತರಂ ವಸುಷೇಣ ಮಹಾರಾಜಂ ತನ್ನ ಪಟ್ಟದ ಮದವೇದಂಡಮಂ ಚಂಡಶಾಸನನೇಱಿಸಿ ಬೇಱೊಂದು ಭದ್ರಗಜಮಂ ತಾನೇಱಿ ಮಹಾವಿಭೂತಿವೆರಸೊಡಗೊಂಡು ಬಂದು

ಪುರಲಕ್ಷ್ಮೀ ಲಲನಾಷ್ಟಶೋಭೆ ವರನಾರೀ ಮಂಗಳಾಚಾರ ಚಾ
ರುರವಂ ಪೌರಜನಾವಲೋಕನ ವಚಃ ಕೌತೂಹಲಂ ಪೆರ್ಚೆ ಮಂ
ದಿರಮಂ ಪೊಕ್ಕು ಸಮಸ್ತ ವಸ್ತು ಸುಖ ಸನ್ಮಾನಂಗಳಿಂದಂ ಮನಂ
ಬೊರೆದ ಭೂಪತಿ ಬಿದ್ದು ಪಲ್ಲಟಿಸಿತೆಂಬಂತಾ ಮನೋಮಿತ್ರನಂ॥೭॥

ಸರಸ ಕಾವ್ಯ ವಿನೋದ ಗೋಷ್ಠಿಯಿನೊರ್ಮೆ ನಾಟಕ ನಾಟಕಾ
ಪರಿನಟದ್ ರಸ ಭಾವ ಭಂಗಿಯಿನೊರ್ಮೆ ಗೀತದ ವಾದ್ಯದ
ಚ್ಚರಿಯ ನೃತ್ಯದ ಕೇಳವೆಯಿಂ ಮುದದೊರ್ಮೆ ಜಟ್ಟಿಗರಪ್ಪ ಮ
ಲ್ಲರ ಪೊಣರ್ಕೆಯಿನೊರ್ಮೆ ಪೊತ್ತುಮನೊರ್ಮೆ ಮೇಷವಿಶೇಷದಿಂ॥೮॥

ಒರ್ಮೆ ವಾಹ ವಿಳಾಸ ಕಂದುಕ ಕೇಳಿಯಿಂ ಗಜಯುದ್ಧದಿಂ
ದೊರ್ಮೆ ವಾರುವದಂಕದಗ್ಗದ ಕಾಳೆಗಂಗಳಿನೊರ್ಮೆ ಮ
ತ್ತೊರ್ಮೆ ಚಿತ್ರವಿಚಿತ್ರ ಕೌತುಕದಿಂದಮಿಂತು ನೆಗೞ್ಚಿದಂ
ಕೂರ್ಮೆಯಿಂ ವಸುಷೇಣಭುಪತಿ ಚಂಡಶಾಸನಭೂಪನೊಳ್॥೯॥

ಅಂತು ನಿರ್ವಕಲ್ಪಮುಂ ನಿರಂತರಿತಮುಮಾದ ಸೌಹಾರ್ದದೊಳಪ್ಪೈಕ ಸದನದ ಸಹಪಂಕ್ತಿಭೋಜನ ಸಹವಿಳಾಸಕ್ರೀಡಿತದಸಮಯಂಗಳೊಳಗೆ ವಸುಷೇಣನಂಗನೆ ಸುನಂದಾದೇವಿಯ ಏಱುಂಜವ್ವನಕ್ಕಳಂಕಾರಮಾಗಿ ಕೈಮಾಡಿ ಮೆಱೆವ ಕಾಮದೇವನ ಕರವಾಳಂತೆ ಕಣ್ಣೊಳ್ ಪೊಳೆದೆರ್ದೆಯೊಳುಳ್ಕಿ ಕೊಳ್ಕುಬೆಳ್ಕುಗೊಳಿಸುವ ವಿಳಾಸದೊಳಂ ಸಮ್ಮೋಹನಶಕ್ತಿಯಂತೆ ಭಾವಕರ ಬಗೆಯ ಬಯ್ಕೆಯನಗೆಯೆತ್ತಿ ಸೂಱೆಗೊಳ್ವ ಕಳಕಳಾ ಪ್ರೌಢಿಯೊಳಂ ದುರಾತ್ಮಕನಪ್ಪ ಚಂಡಶಾಸನನ ಕಣ್ಮಲರ್ ಕವಿದು ಕವ್ವರೆಗೊಂಡು ಮಂಡಳಿಸಿ ಬಳಸಿ ಸೋಲಕ್ಕಾಲಂಬವಂ ಪಡೆವೆರ್ದೆಗಾದಮದವೞಲುಂ ತನುವಿಂಗೆ ತಾಪಮುಮೊಡನೆ ಬಳೆಯೆವಳೆಯೆ

ಕೆಳೆಯನ ಪಂಕ್ತಿಭೋಜನದೊಳೊರ್ಮೆ ವಿಳಾಸದೆ ಬಡ್ಡಿಸುತ್ತುಮಿ
ರ್ಪೆಳೆಯಳ ತೋಳಮೂಲದ ಪೊಗರ್ ಮಣಿಬಂಧದ ಚೆಲ್ವು ಕೋಮಲಾಂ
ಗುಳಿಗಳ ಕೊಂಕು ಕಣ್ಗೆ ಕುಡೆ ಕೌತುಕಮಂ ಭ್ರಮೆಗೊಂಡು ಕಾಮುಕಂ
ವಳಿಗೆಯನ್ನೆತ್ತಿ ಬೊಟ್ಟಿಡಲೊಡರ್ಚಿ ಬೞಿಕ್ಕೆ ಪೊಗೞ್ತೆಗಿಕ್ಕಿದಂ॥೧೦॥

ನಗಿಗಣ್ ನಲ್ಲಳ ಕೂಟಮಂ ಪಡೆದುವಿಂಪಂ ಶ್ರೋತ್ರಮೀಂಟಿತ್ತು  ಮಾ
ತುಗಳಂ ನಾಸಿಕೆಗಾಯ್ತವಳ್ ಸುೞಿದ ಸೂೞೊಳ್ ಸೌರಭಂ ಸ್ವಾದು ನಾ
ಲಗೆಗಾಯ್ತಾಕೆಯ ಹಸ್ತಪಲ್ಲವ ರಸಾನ್ನಾದ್ಯಂಗಳಿಂ ಸೋಂಕುವಾ
ಸೆಗೆ ಪಕ್ಕಾಗದೆ ನಿಂದ ಪಲ್ಲವಕನಂಗಕ್ಕಾಯ್ತನಂಗಜ್ವರಂ॥೧೧॥

ಅಂತು ಕಂತುಸಂತಾಪಕ್ಕೆ ಪಕ್ಕಾಗಿ ಕುಕ್ಕುೞಗುದಿದುರ್ಕದೊಳಗೊಳಗೆ ಬೇವ ಹೃದಯಮಂ ಪದವಡಿಸಲಾದೆ ತನಗೆ ಬೀಡುಂದಾಣಮಾದ ಮಾಡದ ಪೆಱಗಣ ನಂದನವನದ ಮಾಕಂದಭೂರುಹದ ಮಂದಚ್ಛಾಯೆಯೊಳ್ ಬೀಸುವ ಕುಱುವೆಯ ಬಿಜ್ಜಣಿಗೆಯೊಳಂ ಪಾಸುವ ಬಾಳಪ್ರವಾಳ ತಳ್ಪತಳದೊಳಂ ಸೂಸುವಾಲಿನೀರ್ತಂತುಱೊಳಂ ಪೂಸುವ ಚಂದನಸ್ಥಾಸಕದೊಳಂ ವಸಂತ ಸಮಯಾನುರೂಪ ಛದ್ಮಶಿಶಿರೋಪಚಾರ ಚಾರುಚಾತುರತ್ವಂ ಮೆಱೆಯೆ ಮಮ್ಮಲಮರುಗುತ್ತುಮಿರ್ದ ತನ್ನವಸ್ಥಾಂತರಮನಱಿದುಮಱಿಯದಂತೆ ಬೆಸಗೊಂಡ ಸುದರ್ಶನನೆಂಬ ಕೆಳೆಯಂಗಿಂತೆಂದಂ

ನುಡಿಯಲ್ ಬಾರದು ತೀರದು
ನುಡಿಯದೊಡೆಲೆ ಕೆಳೆಯ ನಿನಗೆ ಬೆಂದ ಮನಂ ಸಂ
ದೆಡೆಯೆನ್ನದೆ ಪೇೞ್ದಪೆನೀ
ಕಡುನಂಟನ ಸತಿಯ ರೂಪು ಸೋಲಿಸಿತೆನ್ನಂ ॥೧೨॥

ಭ್ರಮೆ ಪತ್ತಿತ್ತು ಮನಕ್ಕೆ ಕಣ್ತಿರಿಪಿ ಬಿಟ್ಟಂತೇನುಮಂ ಕಾಣವಂ
ಗಮನಂಗೋದ್ಭವ ವಹ್ನಿ ಸುಟ್ಟಪುದು ಕಾಣೆಂ ಪ್ರಾಣಸಂಧಾರಣೋ
ದ್ಯಮಮಂ ಪೇೞ್ ಸಖ ಬಾೞ್ವುಪಾಯಮೆನಗಿನ್ನೆಂತೊರ್ಮೆ ಕಾರುಣ್ಯದಿಂ
ರಮಣೀ ಲೋಚನ ಚುಂಬನಂ ಕಳೆಗುಮೇ ನಟ್ಟಿರ್ದ ಹೃತ್ ಶಲ್ಯಮಂ॥೧೩॥

ಆಹ ತಳೋದರಿಯನ್ ಸಂಭೋಗಿಪ ಪುಣ್ಯಮೆನಗಮಾದೊಡೆ ಸಲ್ಲದೆ ಗಂಡನಿರ್ದೊಡೇನೆಂದು ತನ್ನ ಹೃದಯಕವಾಟಮಂ ತೆಟ್ಟಂದೆಱೆದತ್ತಳಗಮಾದುತ್ತಂಡವೇಟಂ ಬಯಲೊಳಿಕ್ಕಿ ಬಾಯೞಿದ ನಿಜಪತಿಯ ನುಡಿಗೆ ಸುದರ್ಶನನೆಂದಂ ಮೇರೆಗೞಿದ ಬೞಿಕಾರ ಸೈರಣೆಯುಮೋರೆವೋಗದಿರವು ಪರಿವ ಮನಕ್ಕೆ ಪಗ್ಗಮಿಲ್ಲಂ ನೋಡುವ ಕಣ್ಗಳ್ಗೆಡೆಗಟ್ಟಿಲ್ಲಮದಲ್ಲದೆಯುಂ

ಒಡೆಯನ ಕಾಪು ಕಟ್ಟಣಕಮೆಂದೊಡೆ ಬಂಧುಗಳಾಪ್ತರಾಗದೆಂ
ದೊಡೆ ಮನಮಿತ್ತುಮೀಯಳವಳೆಂ ದೊಡಸಾಧ್ಯಮಿದೆಂದೊಡೊಲ್ಲಳೆಂ
ದೊಡೆ ಮೊಱೆಯಾಗದೆಂದೊಡೆ ಪರಾಂಗನೆಯೆಂದೊಡೆ ಸಾಮ್ಯಮಲ್ಲಮೆಂ
ದೊಡೆ ತಲೆಹೋಗಿಯುಂ ಬಸಿದು ಬೀೞದೆ ಸೈರಿಸರಲ್ತೆ ಕಾಮುಕರ್॥೧೪॥

ಆದೊಡೇನಾದುದಾ ನಿತಂಬಿನಿಯೊಳ್ ನಮ್ಮ ಮನೋರಥಸಿದ್ಧಿಗವಕಾಶಮುಂಟದೆಂತಪ್ಪೊಡೆ

ನಯದಿಂ ಕೋಕಿಳನಾದೆ ನಿಮ್ಮರಸರಿಂತೇಕಾರಣಂ ಬಂದರಿ
ಲ್ಲಿಯ ಕಾರ್ಯಾಷಂತರಮೇಂ ಪ್ರಯಾಣದಿನಮಿನ್ನೆಂದೆಂದು ತಾಂ ಪೆತ್ತ ತಂ
ದೆಯ ಮಿತ್ರಂಗೊಡವುಟ್ಟಿದಣ್ಣನ ಸಹಾಯಂಗಾಡುವಂತೀಗಳೆ
ನ್ನಯ ಕೂಡಾಡಿದಳಿಂತಿದೇನಳಿಪೋ ಮೇಣ್ ನಿರ್ಮೋಹಮೋ ಭಾವಿಸಾ॥೧೫॥

ಎಂಬುದುಮರಸನಾ ಕೃತ್ಯೋಪಚಾರಮನೊಲವೆಂದೆಂತು ಕೈಕೊಳಲ್ ಬಂದಪುದು

ಆ ಮದಿರಾಕ್ಷಿ ತನ್ನಿನಿಯನಿರ್ದವೊಲೆನ್ನೊಡನಾಸೆಗೆಯ್ಯಳಾ
ಕೋಮಳಗಾತ್ರಮಂ ಸವಿದ ಕಣ್ಮಲರ್ಗೆನ್ನಯ ಗಂಡಗಾಡಿ ಶೋ
ಭಾವಹಮಾಗದೆಂದೊಡೆ ಸಖಂ ನೃಪ ನೀಂ ಬರೆ ಮಾಣ್ಬ ಜೋಡೆಯರ್
ಕಾಮನ ತೋಳೊಳಿರ್ದ ರತಿ ಶಂಭುಕುಮಾರನುಮಂ ಬರುಂಟಳೇ॥೧೬॥

ಅದಲ್ಲದೆಯುಮಿಂದು ದೇವ ನೀನುಮಾತನುಮಾರೋಗಿಸಿ ಕೈಘಟ್ಟಿಗೊಳುತುಮೇಕ ಮರಾಳತೂಳ ತಳ್ಪಾಸನದೊಳ್ ಪರಸ್ಪರಂ ಸುಖಸಂಭಾಷಣಾ ವಿಶೇಷದಿನಿರ್ದಲ್ಲಿ ನಿನ್ನ ಪೆಱಗೆ ಕುಳ್ಳಿರ್ದೆನ್ನ ಕಣ್ಗೆ ತೆಱಪಾದುದಾ ಸರೋಜ ನಯನೆ ವಿನೋದವಿಳಾಸಾಭಿನಯದೊಳಿರ್ದು

ಮನಮಂ ಮುಂದಿಟ್ಟು ಮಾತಂ ಮನದೆಕೊಳಿಸಿ ಕಂಡೂತಿಯಾದಂತಿರಾಲಿಂ
ಗನದಿಂಪಂ ಚುಂಬನಾಸ್ವಾದನಸುಖಮುಮನಂತಃಪ್ರಷ್ಟಾಂಗಸಂಪಾ
ದನಮಂ ಮೇಲ್ವಾಯ್ದು ಮಾಡಲ್ ತವಕಿಪ ನವಭಾವಾತಿರೇಕಂಗಳಿಂ ಕಾ
ಮಿನಿ ನಿನ್ನಂ ನೋಡಿದಳ್ ಗಂಡನ ನೆವದಿನದಂ ಕಂಡರಿಲ್ಲಕ್ಕುಮಾಗಳ್ ॥೧೭॥

ಎಂದಾಕೆ ತನ್ನ ವಲ್ಲಭಂಗಭಿನವ ಪುರುಷ ಸಂಗೋಷ್ಠಿ ಸಮನಿಸಿ ನಿಜಾತ್ಮವಲ್ಲಭನ ಸುಖಾನುಭವಕ್ರೀಡೆಗೆಡೆವಡೆಯದೆ ಸಿಡಿಮಿಡಿಗೊಳುತಿರ್ದ ಭಾವಮನಾ ವಿನಯದಾಳಿಯಂ ಮತಿಗೆ ಪತ್ತಿಸುವಂತೆ ನುಡಿದು ಮನದ ಪಿಶಾಚಕ್ಕೆ ವಚನರಚ-
ನಾಧೂಪಮಂ ತೋಱಿ ವಿರಹವಿಕಾರಮಂ ಕೆಳರ್ಚಿ ನಿನ್ನೊಳಾಕೆಯಂ ಕೂಡುವುಪಾಯಮನೀಗಳೆ ಮಾಡಿದಪೆನೆಂದು ಪೋಗಿ ಬೞಿಕಮಾ ಧೂರ್ತನಾಡುತ್ತುಮಿರ್ದನಿತ್ತಂ ವಿರಹಾರ್ಥಂ ಬಾಡುತ್ತುಮಿರ್ದಂ [ ಒರ್ಮೆ ದೀವರ ಬೇಂಟೆಯಂ ನೋಡಲ್ ಬಯಸಿ ಪೊಱವಟ್ಟು ವಸುಷೇಣಂ ]

ಪರಿಮಿತ ವಾಜಿ ವಾರಣ ಪದಾತಿ ವರೂಥ ಕದಂಬ ಕಾಮಿನೀ
ಪರಿಚಿತ ರಾಜಪುತ್ರ ನಿಚಯಂ ಧರಣೀಪತಿ ಚಂಡಶಾಸನಂ
ಬೆರಸು ವನಾಂತದೊಳ್ ತೆರೆಯ ತೋಪಿನ ಸೋಹಿನ ನೀರ ಬೇಂಟೆಯು
ರ್ವರೆಗಳನೀಕ್ಷಿಸುತ್ತೆ ಬರೆ ಮುಂತಣ ಚೂತವನಾಂತರಾಳದೊಳ್ ॥೧೮॥

ಬಿರಿದೆರ್ದೆ ಬಿಟ್ಟ ಬಾಯ್ ಅಲರ್ವ ನಾಸಿಕೆ ಪತ್ತಿದ ಗೋಣು ಸುತ್ತಿ ಕ
ವ್ವರಿಸುವ ದಿಟ್ಟಿ ಕೆತ್ತುವೊಡಲೆತ್ತಿದ ಕಂಠಮೆೞಲ್ವಕರ್ಣಮು
ಬ್ಬರಿಸುವ ಮೆಯ್ ನವಿರ್ ಪನಿವ ಮುಂಬದನೊಪ್ಪಿರೆ ದೀವದೊಳ್ ಮರ
ಲ್ದೆರಲೆಯ ಭಾವಮಚ್ಚರಿಯನಚ್ಚಿಗೊಡರ್ಚಿದುದಾ ನೃಪೇಂದ್ರನಾ॥೧೯॥

ಅದಂ ಕಂಡು ಚಂಡಶಾಸನನಂತರ್ಗತದೊಳಿಂತೆಂದಂ

ಹರಿಣೀಲೋಚನೆ ದೀವಮಾಂ ಹರಿಣನೆಂ ಪೆರ್ಗಾಡಿದೀ ಬೀಡು ಬಿ
ಣ್ಬರಿಗಳ್ ನೇಣ್ಬರಿ ಶಂಬರಾರ ಇ ಶಂಬರಂ ಪುಲ್ಲಂಬು ಕೆಲ್ಲಂಬು ಮದ್
ವಿರಹಾವಸ್ಥಿತಿ ಗೋರಿಗೋರಗೆಯೆನಿಪ್ಪಂತಾದುದೆಂತಾಗಿಯುಂ
ನೆರೆಯಲ್ ತೀರದು ಗೋರಿ ಸಾಯದೆನವೇಡೀನೋವೆ ಸಾವಲ್ಲವೇ ॥೨೦॥

ಆ ವಿನೋದಮಂ ನೀಡುಂ ನೋಡಿ ಪೊಗೞ್ದು ಪೋಪುದುಮರಸನರಸಿವೆರಸು ಬೋನಮನೀ  ನಂದನವನಕ್ಕೆ ಬರವೇೞೆಂದು ಸೂೞಾಯ್ತರನರಮನೆಗೆ ಕೞಿಪಿ ಕಾಪುಗಾಡಿನೊಳ್ ಸೋಹಿನ ಬೇಂಟೆಯಬಿನದದಿನಿರ್ವರ ರಥಮಂ ಬೇಱೆವೇಱಾದಲ್ಲಿ ಚಂಡಶಾಸನಂ ವಸುಷೇಣನರಸಿ ಬರ್ಪ ಬಟ್ಟೆಯತ್ತಲೆ ಸಾರ್ದುಕೊಂಡಿರ್ಪಿನಂ ಪರಿಮಿತಾಂಗರಕ್ಷಕಪರೀತೆಯುಂಪರಿಧಾವತ್ ಕತಿಪಯ  ಚೇಟಿಕಾಪುರೋಭಾಗೆಯಂ ದೋಲಾದಂಡಿಕೋಭಯಭಾಗಸಂ-
ಭಾಷಿತ ಸಹಚರೀಯುಗಳೆಯುಮಾಗಿ ನಿಜವಲ್ಲಭನಟ್ಟಿದ ಬೞಿಗೆ ಬರುತ್ತುಮಾರ್ದ ಸುನಂದಾದೇವಿಯಂ ಕಂಡು

ಕಡೆಗಣ್ಗಳ್ ಪರಿದೆಯ್ದಿ ಮತ್ತೆ ಮನಮಂಗೋಪಾಂಗಸಂಗಕ್ಕೆ ದಾ
ೞಿಡೆ ಕಾಯ್ದಳ್ಳೆರ್ದೆ ಗೂಡುವಾಯೆ ಪಿರಿದೊಂದೌತ್ಕಂಠದಿಂ ಕಂಠದೊಳ್
ಮಿಡುಕಣ್ಮುತ್ತಿರೆ ಮೇಲೆವಾಯ್ದು ಭರದಿಂದಂ ನಲ್ಲಳಾಂದೋಳದಿಂ
ಕಡುಕಯ್ಯಂ ತೆಗೆದಿಟ್ಟುಕೊಂಡು ರಥದೊಳ್ ಬಂದಂ ಮನೋವೇಗದಿಂ ॥೨೧॥

ಕರುಳ ಕತ್ತರಿ ನಂಟರ ಮಾರಿ ತುತ್ತು ಮಿಂಚಿದೊಡನುಂಡು ಮತ್ತೆ ತೊಡೆ ಮಿಂಚಿದೊಡಾ ಖಳನಂತು ಪಿಡಿದೊಯ್ವಾಗಳುರಗಂ ಪಿಡಿದಂತೆ ಬೆದಱಿ ಪಾವು ಪಿಡಿದಂತಿರೊದಱಿ ಕಡುಜರ ಪತ್ತಿದಂತು ಕಳವಳಿಸಿ ಠಕ್ಕು ಪತ್ತಿದಂತೆ ಮತಿಗೆಟ್ಟು ಸಿಡಿಲ್ ಪೊಡೆದಂತೆ ಹಮ್ಮದಂಬೋಗಿ ಸುನಂದೆಯಾಗಿಯುಮಸುನಂದೆ ಕಿಱಿದಾನು ಬೇಗದಿಂ ಬೞಿಕ್ಕೆ ಕಾಮಕಾಂಡಖಂಡಿತಹೃದಯಂ ಚಂಡಶಾಸನಂ ವಿಶ್ವಾಸಘಾತಕಂ ಕಾತರತೆಯಿಂ ತನ್ನಂ ಪಿಡಿದುದನಱಿದು

ಇನನಂ ವಂಚಿಸಿ ಚಂಡಶಾಸನನವಂ ಕಳ್ದೊಯ್ದಪಂ ನಾಥನಂ
ಗನೆಯಿಂದೆನ್ನ ಸುನಂದೆಯಂ ಸುಭಟರಣ್ಮಿಂ ವೀರರಡ್ಡೈಸಿಮೆ
ನ್ನಿನಿಯಂಗೆಯ್ದಿಸಿಮೂರ ನಾಡ ಜನಮೀ ಪೆಣ್ಬುಯ್ಯಲಂ ಹಾ ಸುಷೇ
ಣನೃಪಾ ಹಾ ನೃಪನೀಱ ಎಂದಬಲೆ ಬಾಯ್ವಿಟ್ಟೞ್ತು ಹುಯ್ಯಲ್ಚಿದಳ್॥೨೨॥

ಪರವೆಣ್ಗಾಟಿಸಿ ಕಳ್ದ ಕಾತರನನಾರುಂ ಕಾಣರಾರುಂ ಕನ
ಲ್ದರಿದಿಕ್ಕರ್ ಧರೆ ನುಂಗದೇಂ ನೊಣೆಯರೇ ದಿಗ್ದೇವಿಯರ್ ತಿನ್ನವೇ
ಗಿರಿಗಳ್ ಬೆಂದೆನನಾಥೆಯಾದೆನೆನಗಿನ್ನಾರಾಸೆಯಾರ್ ಕಾವರಾರ್
ಶರಣೆಂದಾ ಕಳಕಂಠನಾದೆ ಬಸಿಱಂ ಬಾರೇೞ್ವಿನಂ ಮೋದಿದಳ್॥೨೩॥

ಮುನಿಸುಂಟಾದೊಡೆ ಮುಟ್ಟಿ ಮೂದಲಿಸಿ ಬಲ್ಪಿಂ ನಿನ್ನ ಬಾಳ್ ಆತನಾ
ತನ ಬಾಳ್ ನಿನ್ನ ಕಪಾಲದೊಳ್ ಮುಱಿದು ಮುಂತೆೞ್ತರ್ಪುದಿನ್ನೊಪ್ಪುವಾ
ಳ್ತನಮುಂ ಗಂಡರ ಪಿಂದೆ ಕಳ್ವುದರಿದೇ ಸ್ತ್ರೀಬಾಲೆಯಂ ಬೂತೆ ಪಾೞ್
ಮನೆಯೊಳ್ ನಾಯ್ ಘೃತಭಾಂಡಮಂ ತೆಗೆವವೊಲ್ ಕಳ್ದೊಯ್ವುದಾಳ್ ಪಾೞಿಯೇ॥೨೪॥

ಮನಮಿತ್ತು ಮಾತನಾಡಿದ
ಳನುವಿಸಿದಪಳೊಲ್ದಳೆಂದೊಡಂ ಕೇಳ ಪರಾಂ
ಗನೆಗೆ …...ವಯರ್ ಗಂಡರ್
ಮನವಱಿಯದೆ ಎಳೆಯ ಮನಕೆ ಸವಱುವೆ ಪೊಲೆಯಾ॥೨೫॥

ಎಂದನೇಕಪ್ರಕಾರ ಪ್ರಳಾಪಾಕ್ರಂದನಂ ಸ್ಯಂದನಂ ವೇಗದಿಂ ದೂರಸಾರಪ್ಪ ಸಾರಂ ದೂರಮಾಗಿ ಪೋತಪ್ಪಾಗಳವಂ ಸುರಮ್ಯ ವಿಷಯದ ಕಡೆಯ ಕಾಪಿಂಗೆ ವಸುಷೇಣನಿರಿಸಿದ ಪೆಸರ ಸಾವಂತಂ ಸಿಂಹಚೂಡಂ ತನ್ನ ಪೊೞಲ ಪೊಱವೊೞಲ ನಂದನೋಪಾಂತದ ಗರುಡಿಯೊಳಗೆ ಪಲಕೆಲಂಬರ್ ಪಲಗೆ ವಿನ್ನಣಂಗಳೊಡನೆ ಕಾಮನ ಪರ್ವತದಂತೆ ಮಾರಚಿತ್ತಭಿತ್ತಿಯೊಳ್ ಪಿಡಿಯುತ್ತಮಿರ್ದ ಕಡುಗಲಿ ಕೇಳ್ದು ನರತುರಗಬಳದನೆರಮನೊಲ್ಲದೆ ಸೆರಗಿನೊಳಲ್ಲದೆ ಬೆರಗಿನೊಳ್ ಸಲ್ಲದೆ ಕಯ್ಯ ಪಲಗೆಯೊಳಂ ಕಟ್ಟಿದ ಕಠಾರದೊಳಂ ಪಿಡಿದ ಕೂರಸಿಯೊಳಮೆಯ್ದಿಸಿ ಪರಿದು ಹರಿಣಿಯಂ ಪಿಡಿದುಯ್ವ ತರಕ್ಷುವಿನಂತೆ ತರುಣಿಯಂ ಪಿಡಿದುಯ್ವ ಚಂಡಶೃಸನನಂ ದೂರದೊಳ್ ಕಂಡು ಗಜಱಿ ಗರ್ಜಿಸಿ

ಇದಿರಾಗಿತ್ತಿತ್ತಲಣ್ಮಣ್ಮಿಱಿಯಿಱಿ ರಥಮಂ ಕೈದುಗೊಳ್ ಕೈದುಗೊಳ್
ಪೋಗದಿರೆನ್ನಂ ಕಂಡು ಬೆನ್ನಂ ಕುಡುವರೆ ಸುಭಟರ್ ಸಿಂಹಚೂಡಂಗೆ
ಮಾಱೊಡ್ಡಿದ ವೀರರ್ ಮತ್ತೆ ಜೀವೇಬೆರಸುೞಿದವರಿಲ್ಲೆಂದು ಮುಟ್ಟಿರ್ದ
ಲೇಸಕ್ಕಿದೆ ಮೇಲ್ ಬಿರ್ದೆನ್ನ ಬಾಹಾಪರಿಘದ ಬಲೆಯೊಳ್ ಸತ್ತೆಯಿನ್ನೆತ್ತವೋಪೈ॥೨೬॥

ಎಂದು ಮುಟ್ಟಿ ಮೂದಲಿಸಿ ಕಟ್ಟಿದಿರ್ಗೆವಂದುಮೆಟ್ಟಿ ತಱುಂಬಿದ ಸಿಂಹಚೂಡನಂ ಸೂತದ್ವಿತಯನಾಗಿ ಪೋಗುತ್ತುಂ ಕಂಡು ತೇರಂ ನಿಲಿಸಿ ಸಾರಥಿಯಂ ವಾರಿಜವದನೆಗೆ ಕಾಪುವೇೞ್ದು ಕಿೞ್ತ ಬಾಳೊಳಂ ಅತ್ತಪರದೊಳಂ ಅವನೀತಳಕ್ಕೆ ಲಂಘಿಸಿ ಚಂಡಶಾಸನನಿಂತೆಂದಂ

ವಾನರನೇಂ ಸೆಳೆವುದೆ ಪೇ
ರಾನೆಯ ಕಯ್ವಿಡಿದ ಕರ್ಬನಾಂ ಪಿಡಿದವಳಂ
ನೀನೆ ಬಿಡಿಸುವೆಯ ಸಾಯದೆ
ಪೋ ನಿನ್ನಿಂ ನಿನ್ನ ಪತಿಗೆ ಪುಯ್ಯಲ್ಗಳದೇಂ॥ ೨೭॥

ಎಂದ ನುಡಿಗೆ ಕಳಕಳಿಸಿ ನಕ್ಕು ಸಿಂಹಚೂಡನಿಂತೆಂದಂ

ವಸುಷೇಣನೃಪನ ಮುಂದ
ಣ್ಗೆ ಸುನಂದಾದೇವಿವೆರಸು ನಿನ್ನಯ ನೆತ್ತರ್
ಬಸಿವ ತಲೆ ಕಾಣ್ಕೆಯಾಗಿರೆ
ಬಿಸುಟಲ್ಲದೆ ಸಿಂಹಚೂಡನೇಂ ಪೋದಪನೇ॥೨೮॥

ರಸೆ ಪೊಱುವುದೆ ಪರವೆಣ್ಗಾ
ಟಿಸಿದೊಡೆ ಕಳ್ದೊಯ್ದು ಕೂಡಿ ತಂದಯ್ ನಲ್ ಮಾ
ನಸನಾದ ಚಂಡಶೃಸನ
ವೆಸರಂ ಚಂಡಾಲ ನೀರೊಳಿಂತರೂದುವರೇ॥೨೯॥

ಎನಲೊಡಂ ಚಂಡಶಾಸನನಿಂತೆಂದಂ

ನೀನೆನಗೆ ಬುದ್ಧಿವೇೞಲ
ದೇನಪ್ಪಯ್ಬಾಳ ಬಾಯೆ ಪಲ್ಗಡಿಸಿಕೊಳಲ್
ನೀನಾರ್ದೆ ಬರ್ದುಂಕಿದ ಬೞಿ
ಕೇನಾದೊಡಮೆನ್ನು ಮುನ್ನಮಾಯತಮಾಗಾ॥೩೦॥

ಎಂದೊರ್ವರೊರ್ವರಂ ಮೂದಲಿಸಿ ನುಡಿಯುತ್ತಮಿರ್ವರುಂ ಭೂಮಾನದಳವಿಯೊಳ್ ಪರಿಯಲನುಗೆಯ್ವಾಗಳ್

ಬೆಳೆದಡವಿಯೆ ಕಳನಾದುದು
ನಳಿನದಳೇಕ್ಷಣೆಯ ಚಿತ್ತಮರಸಾಯ್ತಾಶಾ
ಲಳನೆಯರೆ ನೋೞ್ಪರಾದರ್
ಬಳಯುತರರಸಂಕವಾದರಂತಾ ಕ್ಷಣದೊಳ್ ॥೩೧॥

ಆಗಳೊಡವಂದು ನೋೞ್ಪ ನೋಟಕರ್ ತಮ್ಮೊಳಿಂತೆಂದರ್

ಇಳೆಯೊಳಗೆ ಸಿಂಹಚೂಡನೆ
ಫಳಕಾರಂ ಚಂಡಶಾಸನಂ ಬಗೆವೊಡೆ ಭೂ
ತಳದೊಳ್ ಕೃತಘ್ನನಿವರತಿ
ಬಳರಿರ್ವರ್ ಸೋಲ ಗೆಲ್ಲವರಸನ ಪುಣ್ಯಂ ॥೩೨॥

ಇತ್ತ ಸುನಂದೆ ನಿಜಾಂತರ್ಗತದೊಳಿಂತೆಂದಳ್

ತಲೆಗಾಯೀ ಭಟನಂ ಪೊಣರ್ಚಿ ಪೊಡೆದಿಕ್ಕೀ ದ್ರೋಹನಂ ನೇಸಱೇ
ನೆಲನೇ ವ್ಯೋಮಮೆ ವಾಯುದೇವ ಸೆಱೆಯಿಂದಂ ತಪ್ಪಿದಂದೆನ್ನನಾಂ
ಲಿಗೆಯ್ವೆಂ ನಿಮಗೆಂದು ಮೈಕೊರಗಿ ಸುಯ್ ಕಯ್ಗಣ್ಮಿ ಕಣ್ಗೆಟ್ಟು ಕೋ
ಟಲೆಗೊಂಡಳ್ಳೆರ್ದೆ ಡಕ್ಕೆವಾಯ್ದು ಸತಿ ನಿಂದೌತ್ಸುಕ್ಯಮಂ ತಾಳ್ದಿದಳ್ ॥೩೩॥

ತತ್ಸಮಯದೊಳ್ ಸಿಂಹಚೂಡಂ

ಅಂಜದೆ ನಿಂದವಧರಿಸೆಲೆ
ಕಂಜದಳಾಯತ ವಿಲೋಲ ಲೋಚನೆ ಪಗೆಯಂ
ಮುಂ ಜವನೆಡೆಗೊಪ್ಪಿಸಿ ಬೞಿ
ಯಂ ಜನಪತಿಯೆಡೆಗೆ ನಿನ್ನನೊಯ್ದೊಪ್ಪಿಸುವೆಂ॥೩೪॥

ಎಂದವಷ್ಟಂಭಮೆಸೆಯೆ
ಬಲದೊಳ್ ಪತ್ತಿದ ಮುಂಡಿ ಚಮ್ಮಟಿಗೆ ಕೈವೀಣಂ ಬೆಡಂಗಾಗೆ ಮೆಯ್
ಗಲಿ ಪೊಕ್ಕೆತ್ತಿದೊಡೊಡ್ಡಿದೊಡ್ಡಣದ ಕೈಗೊಂಬಾಳದಿಂ ಪೋದ ಮೆ
ಯ್ಯಲಗಂಬೆತ್ತಿರೆ ಬಾಹುಪೋರಗದೆ ಪೊಯ್ದಂಭೂಪನಾ ವೀರನಂ
ತಲೆಯುಂ ಮುಂಡಮುಮೊರ್ಮೆ ದಲ್ ಪಲಗೆಯೊಳ್ ಬಯ್ತಿಟ್ಟವೊಲ್ ಬೀೞ್ವಿನಂ॥೩೫॥

ಅಂತು ಪೊಯ್ದು ರಥಕ್ಕೆ ಪಾಯ್ದು ಸಾರಥಿಯ ಚೋದನಾವೇಗದಿಂ ಗಾಳಿಗೆ ಗಱಿಮೂಡಿದಂತೆ ಮನಕ್ಕೆ ಮಡವೊಗೆದಂತೆ ಮುಹೂರ್ತಮಾತ್ರದಿನೆಯ್ದಿ ತನ್ನ ದುರ್ಗಮಂ ಪೊಕ್ಕನನ್ನೆಗಮಿತ್ತಲ್

ತರವೇೞ್ದಟ್ಟಿದ ಬೋನಮಾಗಳೆ ರಸಾಳೋದ್ಯಾನಮಂ ಪೊಕ್ಕುದೇ
ಕರಸಂ ಬಾರನೊ ಚಂಡಶಾಸನನದೆತ್ತಲ್ ಪೋದನೋ ದೇವಿಯುಂ
ಬರುತುಂ ತಳ್ವಿದಳಂಗರಕ್ಕರಿದಿರ್ವೋಗಿಂ ನೀಮೆನುತ್ತುಂ ಮಹ
ತ್ತರರಿರ್ಪನ್ನೆಗಮೆಯ್ದೆವಂದನವನೀನಾಥಂ ತದುದ್ಯಾನಮಂ॥೩೬॥

ಬಂದು ವರೂಥದಿಂದಿೞಿದು ಭೋಜನಶಾಳಿನಿಕಾಯಮಾನಪ್ರತಾನ ಸಂಫುಲ್ಲಮಲ್ಲಿಕಾಮಂಡಪದ ಮುಂದೆ ನಿಂದು

ಬಂದಳೆ ದೇವಿ ಪಂಕ್ತಿಗೆಡೆಮಾಡಿದಳೆ ಚಂಡಶಾಸನಂ
ಬಂದನೆಯೆಂದು ಮಂದಿರಮಹತ್ತರರಂ ಬೆಸಗೊಳ್ವಿನಂ ನೃಪಂ
ಬಂದುದು ಚೇಟಿಕಾಸಹಚರೀಜನಮುಂಶ್ಲಥ ಕೇಶಪಾಶಮಾ
ಕ್ರಂದಿತವಕ್ತ್ರಮಾಹತಕೃಶೋದರಮಾಕಳಿತಾಶ್ರುಲೋಚನಂ॥೩೭॥

ಅಂತು ಶೋಕರಸಮೆ ರೂಪುಗೊಂಡಂತೆ ಬರ್ಪ ನಿಜಾಗ್ರ ಮಹಿಷೀಪುರ ಜನಮಂ ದೂರದೊಳ್ ಕಂಡಿದೇನೆಂದತಿಚಕಿತಚಿ-
ತ್ತನುಂ ವಿಸ್ಫುರಿತವಿಲೋಚನನುಮುದ್ ಬದ್ಧಭ್ರೂಲತಾಮೂಲನುಮುತ್ತಾನಿತ ಕರಪತಾಕನುಮಾಗುತ್ತುಮಿರೆಯಿರೆ

ಹಾ ಲತಾಂಗಿ ಹಾ ಕುಸುಮಕೋಮಳೆ ಹಾ ಕಳಹಂಸಯಾನೆ  ಹಾ
ನೀಲಸರೋಜಲೋಚನೆ ಸುನಂದೆ ನೃಪೇಂದ್ರನ ರಾಜ್ಯಲಕ್ಷ್ಮಿ ಭೂ
ಪಾಲನ ಭಾಗ್ಯಲಕ್ಷ್ಮಿ ವಸುಷೇಣನ ಮಂಗಳಲಕ್ಷ್ಮಿ ರಾಜಚಾಂ
ಡಾಲನ ಬಾಹುರಾಹುಗಿಳನಂ ನಿನಗೆತ್ತಣಿನೆತ್ತ ಬಂದುದೋ॥೩೮॥

ಎಂದು ಬಾಯೞಿದೞುತ್ತುಂ ಬಂದು ಮುನ್ನುಡಿಯೊಳ್ ಕೆಡೆದುಂ ಪುಡಿಯೊಳ್ ಪೊರಳ್ವ ವಿಳಾಸಿನೀಸಮೂಹದೊಳಗೆ ರಾರಾಜಿತರತ್ನ ಪಾದುಕಾಗ್ರಾಹಿಣಿಯಪ್ಪ ಬಾಳಕಿಯದೊರ್ವಳ್ ದೇವರಟ್ಟಿದ ಬೞಿಗೆ ದೇವಿಯರ್ ಬರುತ್ತುಮಿರೆ ಚಂಡಶಾಸನಂ ಕಂಡೆೞೆದು ಪಿಡಿದು ಕೈಸೆಱೆವಿಡಿದು ಬಂದಿಕಾರನಂತೆ ಕೊಂಡುಪೋದಂ

ಪಡಲಿಡೆ ಪೊಯ್ದಂ ದೇವಿಯ
ರ್ಗೆಡೆಗುಡದಡ್ಡೈಸಿದಂಗರಕ್ಕರನೆಮ್ಮಂ
ಪಿಡಿದುಯ್ದಂ ಕಿಱಿದೆಡೆಯಂ
ನಡೆಗೆಟ್ಟ ಬಳಿಕ್ಕೆ ಬಿಟ್ಟನಾ ನಿಸ್ತ್ರಿಂಶಂ॥೩೯॥

ಎನೆ ಕೇಳ್ದುಕ್ಕಿದ ಕೋಪವಹ್ನಿಗೆ ವಿಯೋಗೋದ್ರೇಕಶೋಕಪ್ರಭಂ
ಜನಸಂತಾಪಮಳುರ್ಕೆಯಂ ಪಡೆದು ಕಿಂಕರ್ತವ್ಯತಾಮೂಢನೊಂ
ದಿನಿಸಂ ಜೀವಿತಶಂಕೆ ಭೋಂಕನಱಿದಾಳ್ಳಾಡುತ್ತುಮಿರ್ದಾತ್ಮನಾ
ಥನನಾಪ್ತರ್ ಸಚಿವರ್ ನಿಜಾಂಕುಶತಿರೋಧಾನಾವಿಲಂ ಮಾಡಿದರ್॥೪೦॥

ಮಳಯರುಹದ ಕರ್ಪೂರದ
ಪಳಿಕಿನ ಪನಿನೀರ ಕದಲಿದಳದಿಱಿಸಿಲ ತಣ್
ಗಳಸದ ತಿಳಿನೀರ್ಗಳ ಶೀ
ತಳತೆಯಿನವನಿಪನನಾಪ್ತರುಜ್ಜೀವಿಸಿದರ್॥೪೧॥

ಅಂತು ಪರಾಮರ್ಶಿತಹೃದಯನಾದ ನೃಪಾಳನಂ ನರೂಮಸಚಿವರಿಂತೆಂದರ್

ಮದವದ್ ವೈರಿಕಳಂ ಭವದ್ ಭುಜವಿಭಾಸ್ವತ್ ಖಡ್ಗಧಾರಾನದೀ
ನದದೊಳ್ ಮುನ್ನ ಮುೞುಂಕದುದ್ಧತರ ದುರ್ಗಂ ನಿನ್ನ ಕೋಪಪ್ರತಾ
ಪದವಜ್ವಾಳೆಗಳಿಂ ಮುೞುಂಕದೆ ವೃಥಾ ಶೋಕಾಬ್ಧಿಯೊಳ್ ಭೀರುವಂ
ದದೆ ನೀನಿಂತು ಮುೞುಂಕಲಪ್ಪುದೆ ಧರಿತ್ರೀಪಾಲ ಚೂಡಾಮಣೀ॥೪೨॥

ಆ ಪ್ರತಿಬೋಧನವಚನಂ ವಲ್ಲಭಾವಿಯೋಗವೈಕ್ಲಬ್ಯ ವಲ್ಮೀಕ ಸುಪ್ತ ಕೋಪವ್ಯಾಳಪ್ರತ್ಯುತ್ಥಾಪನದಂಡಮಾಗೆ ಧರಾಧೆನಾಥನಿಂತೆಂದಂ

ಬಂಡಣದೊಳೞಿದು ಪೆಂಡಿರ್
ಭಂಡಾರಮಂ ಪೋದೊಡದು ವಿಧಾತೃವಶಂ ಬಲ್
ಗಂಡಂಗೆ ಸಂತಸೊಕಮಾ
ಪೆಂಡತಿ ಕೋಳ್ಪಟ್ಟು ಮಗುಳೆ ಪುಗುವೆನ ಪೊೞಲಂ॥೪೩॥

ಪ್ರಾಣಪ್ರಿಯಳಿಲ್ಲದೆ ನಿಃ
ಪ್ರಾಣಮದೆಂತುಣ್ಬುದೀಗಳೀ ಒಡಲಹಿತ
ಪ್ರಾಣಾನಿಲನಿಂದೆನ್ನ ಕೃ
ಪಾಣಾಹಿಯನೂಡಿ ಬೞಿಕಮಾನುಂಪ್ಪೆಂ ॥೪೪॥

ಎಂದೆತ್ತಿ ನಡೆಯಲುತ್ತವಳಿಸಿದ ಸಮಯದೊಳ್

ನೆರೆದಾಪ್ತರ್ ಸಚಿವರ್ ಚಮೂಪತಿಗಳಂದಾಳೋಚನಕ್ಕೆಂದು ಬಂ
ದಿರೆ ಕಂಡಿಂಗಿತಮಂ ನೃಪಂ ನುಡಿದನಿನ್ನೇಮಾತೊ ಕಿರ್ಚೆರ್ದೊಡಂ
ಗರನಾದಂ ಗಡ ಮಾರಿ ಹೊಕ್ಕ ಮನೆಯೊಳ್ ಪರೂವಂ ಗಡಾಳೋಚಮೇಂ
ಬೆರಗೇಂ ಬೆಂಬಲಮೇಂ ಸ್ವರಾದಿಬಲಮೇಂ ನೀಂ ಪೇೞ್ವುದೇಂ ಕೇಳ್ವುದೇಂ ॥೪೫॥

ಎಂದು ಮುಂದನಾರಯ್ಯದೆ ಪಿಂದಂ ಪಾರದೆ ಮುಂದೆ ನಿಂದ ನಿಜ
ಸ್ಯಂದನಮನೇಱಿ ಸುಟ್ಟುರೆ ಮಸಗಿಟ್ಟುರಿಗೊಂಡನಾ ವ್ಯತಿಕರದೊಳ್

ರಣರಭಸೋತ್ಕಟಂ ಧರೆ ಪೆಡಂ ಮಗುಳ್ದಂತೆ ಚತುಸ್ಸಮುದ್ರಮು
ಲ್ಬಣವಿಕಟೋತ್ಕಟಂ ಮಸಗಿ ಮೇಲ್ಗವಿದಂತೆ ದಿಶಾಚತುಷ್ಟಯಂ
ಪ್ರಣಿಹಿತಿಹೇತಿ ತಿಂತಿಣಿಸಿದಂತೋಡವಂದು ಪಣ್ಣಿದಾನೆ ಪ
ಲ್ಲಣಿಸಿದ ವಾಜಿ ಪೂಡಿದ ರಥಂ ಕವಚಂಬಿಗಿದಾಪ್ತಸೈನಿಕಂ॥೪೬॥

ಅಂತು ಬಂದ ಚತುರಂಗಪೃತನಾಸಮೂಹಸಹಿತಂ ಕೃತ ಭುಜಬಲ ಪ್ರತಾಪನಪ್ರತಿಹತಾಲೇಪನದೀಕೃತಾಭಿಷವಣಂ ವಸುಸೇಣಂ ಸಾಮಂತ ಲಕ್ಷ್ಮೀಸೀಮಂತನೆನಿಪ ಸಿಂಹಚೂಡಂಗೆ ಬೀಡುಂದಾಣಮಾದ ಮಾಣಿಕ್ಯಪುರಮನೆಯ್ದಿದಾಗಳ್ ಪೊಡೆವ ವೀರವಱೆಯ ಪಿಡಿವ ಬಿರುದಿನ ಕಾಳೆಯ ಸುತ್ತಿಱಿದ ಮುತ್ತಿನ ತೞೆಯ ತಲೆಗೆ ಮುಂದಲೆಯಾಗಿ ಲೆಂಕರ್ ಕುಡುವ ಸಿಡಿದಲೆಯ ಸಹಗಮನಸಮುತ್ಸುಕತೆಯಂ ಕೈವಿಡಿಸೆ ಕೈಗುಡುವ ಕೈದುಬರ್ಪ ಕೈವಿಡಿದ ಪೆಂಡಿರ ತಂಡದ ನಡುವೆ ಪೊತ್ತ ಪೊನ್ನ ಪರಿಯಾಣದೊಳಗೆ ಜೋಳವಾೞಿಯ ನಿರ್ವಹಣದ ನಿಬ್ಬಣಕ್ಕೆ ಬೀರಸಿರಿ ಪೊತ್ತ ಪೊಂಗಳಸದಂತೆ ತೞತೞಿಸಿ ತೋರ್ಪ ಪಂದಲೆಯಂ ಕಂಡು ನೋೞ್ಪಾಗಳ್

ಮುರಿದಣ್ಪಿಕ್ಕಿದ ಗಡ್ಡಮೀಸೆ ಮುಡಿಕಟ್ಟಂ ತಳ್ತ ಕೆಂಬಟ್ಟೆ ಕ
ತ್ತುರಿಯಂ ತೂಱುವ ಚುಂಚುಮೀಸೆ ಸುಲೆಪಲ್ ದಷ್ಟಾಧರಂ ಭ್ರೂಕುಟಿ
ಸ್ಫುರಿತ ಕೈಮಿಗೆ ಭೂತಳಕ್ಕೆ ಪರಿವೇಷಗೊಂಡು ಬೀೞ್ತಂದ ಭಾ
ಸ್ಕರನಂತಿರ್ದುದು ಸಿಂಹಚೂಡನ ಶಿರಂ ಪೊಂಬಟ್ಟಿನಾಳ್ದಟ್ಟಿನೊಳ್॥೪೭॥

ಪಗೆಯಂ ಕಂಡೞಿಯಾಸೆಗೆಯ್ದು ಪೊರೆದಾಳ್ದಂಗಾತುರಂ ಮುಟ್ಟೆ
ಮೆಯ್ ದೆಗೆದಾಸ್ಥಾನದೊಳಾರ್ದು ಪಾರ್ದು ನೆರವಂ ಸಂಗ್ರಾಮದೊಳ್
ಜೋಳವಾೞಿಗೆ ಕಯ್ಯಾಂಪಳೆ ವೇಳೆವಾೞಿಗೆನಸುಂ ಮುಯ್ಯಾಂಪ
ಸಾಮಂತರಂ ನಗುವಂತಿರ್ದುದು ಸಿಂಹಚೂಡನ ಶಿರೋಬ್ಜಂ ದಂತುರತ್ ಕೇಸರಂ॥೪೮॥

ಅಂತು ಪೊತ್ತು ಬಂದ ವೀರಂ ವೀರಪುರುಷನ ಶಿರೋಂಬುರುಹಮಂ ಧಾರಿಣೀಪತಿಗೆ ನಿವಾಳಿಸಿ ನಿಂದು ವನಿತಾಹರಣವಾರ್ತೆಯಂ ಸೂಚಿಸಿ ಬೞಿಯಮಿಂತೆಂದಂ

ಕಾದಿದ ಕಾಳೆಗಂ ಜವನ ಜತ್ತ ಕುಱಕ್ಕೆ ಸಮಾನಮಾದುದೇ
ನಾದೊಡಮೇಂ ಬರ್ದುಂಕಿ ಪಗೆ ಪೋದ ಬೞಿಕ್ಕೆ ವೃಥಾನುವಾದಮಿ
ನ್ನಾ ದಯಿತಾಜನಕ್ಕೆ ತೊಱೆದಂಕರ ಲೆಂಕರ ಗೊಂದಣಕ್ಕೆ ತ
ಳ್ವಾದಪುದುರ್ವರಾಧಿಪತಿ ಬೀೞ್ಕೊಡು ಕೂಡುಗೆ ಸಿಂಹಚೂಡನೊಳ್॥೪೯॥

ಎಂಬುದುಮರಸಂ ನಿಜಾಂತಃಕರಣಖೇದಕ್ಕಂ ವೀರಶಾಸನ ಪ್ರವಾದಕ್ಕಂ ಮೂದಲೆಯಂತಿರ್ದ ತಲೆಯಂ ನೋಡಿ ನೀಡುಮೊದವಿದೞಲಂ ಸಮುಚಿತೋಪಚಾರಂ ವಚನಕಾರುಣ್ಯಪ್ರಸಾದಪ್ರದಾನ ಪ್ರಸಂಗದಿಂ ಸಂತರ್ಜಿಸುತ್ತುಮಿರೆ

ತುೞಿಲಾಳ್ ಮದ್ ಗೋತ್ರಭವಂ
ಕೞಿದಂ ಕಲಿ ಸಿಂಹಚೂಡನೆಂದವಯವದೊಂ
ದೞಲಿಂದೆ ಕೆಂಪು ಮಿಗೆನೀರ್
ಇೞಿವಂತಿರೆ ಸೂರ್ಯನಪರಜಲನಿಧಿಗಿೞಿದಂ॥೫೦॥

ಆ ಸಂರಂಭದೊಳ್

ಪರವೆಣ್ಣಂ ತಂದನೋ ತಂದನೊ ಪೆಸರ್ಗಿಡೆ ಪೆರ್ಮಾರಿಯಂ ನಮ್ಮ
ದುರ್ಗಕ್ಕರಸಂ ಸೇನಾಸಮಗ್ರಂ ನಿಜಗಲಿ ವಸುಷೇಣಂ ವಧೂವೆಹ್ವಲಂ ದ
ಳ್ಳುರಿ ದಾೞಿಟ್ಟಂತಿದಂ ಸುಟ್ಟುರಿಪದಿರಿಸನೇಗೆಯ್ವೆವೆಂತಿರ್ಪೆವೆತ್ತಲ್
ಪರೆವೆಂ ನಾವೆಂದು ಪೌರರ್ ಕುದಿದರದಿರ್ದರಳ್ಳಾಡಿ ತಳ್ಳಂಕಗೊಂಡರ್॥೫೧॥

ನೊಣೆಯಲ್ ನುಂಗಲಿಳಾತಳಂ ಮುರಿದು ಮೂರಿಟ್ಟಂತೆ ದುರ್ಗಕ್ಕೆ ನಿ
ಚ್ಚಣಿ ಸಾರ್ಚುಂದೊಲೆ ವೀರಸೇತು ನಡೆಸಾರಂ ಬದ್ದರಂ ಗೆಗ್ಗೆ ಡೆಂ
ಕಣಿ ಗುಮ್ಮಂ ಪಡಿಗೋಂಟೆಯೆಂಬ ಬಹುಕೋಟಾಯಂತ್ರಸಾಮಗ್ರಿ ತಿಂ
ತಿಣಿಗೊಂಡಾಂತಿರೆ ಲಗ್ಗೆಗಾರ್ದು ವಸುಷೇಣಂ ಸಾರ್ದು ಸೂೞೈಸಿದಂ॥೫೨॥

ಅಂತುಸೂೞೈಸುವ ನಿಸ್ಸಾಳ ಭೇರೀ ಢಕ್ಕಾ ಮೃದಂಗ ಕೋಳಾಹಳಮೆತ್ತಿ ಪೊತ್ತು ತಂದಿೞಿಪಿದುದೆನಿಸಿ ಗುಡವಿಡಂಬಿತ-
ಪಿಪೀಲಿಕಾಜಾಲದಂತೆ ಮುತ್ತಿಮುಸುಱಿ ಪತ್ತೆ ಕಟ್ಟಾಯದ ಕಡುಗಲಿಗಳೆಲ್ಲಮಣ್ಮಣ್ಣಿನಿಂದು ಮಮ್ಮೞಿಯಾಗೆ ಪೋಯ್ತು ಪೋಯ್ತು ದುರ್ಗಮಿನ್ನೇನೆಂದೊಳಗೆಲ್ಲಮೆಯ್ದೆ ಸರಕುಗಟ್ಟಿ ಪೊಱಗೆಲ್ಲಮೆಯ್ದೆ ಗುಡಿಗಟ್ಟಿ ಸೀರೆಯಂ ಬೀಸಿ ಬೊಬ್ಬಿಱಿದಾರೆ ತೊಟ್ಟನೆ ಕಂಡು

ರಣಮಂಡಲದೊಳ್ ಪೆಱತೆಗೆ
ದಣಿಯಂ ತೆಗೆನೆಱೆದ ಬಿಲ್ಲವೋಲಿರ್ದ ಭಟಾ
ಗ್ರಣಿ ಪರಿದು ದಂಡೆಗೊಂಡ
ಡ್ಡಣದಿಂದಂ ಚಂಡಶಾಸನಂಕೈಕೊಂಡಂ ॥೫೩॥

ಅದನಿಗಳ್ ಕಂಡು ಕಣ್ಣಿಂದುರಿ ಬರೆ ಪೊಗೆ ಪುರ್ವಿಂದಮುರ್ವೇೞೆ ಭೋಂಕಲ್
ಮದಮಾತಂಗಾರಿ ಪೂರ್ವಾಸನದಿನಿೞಿದು ಮೆಯ್ವೆತ್ತ ವಜ್ರಾಂಗಿ ಕಯ್ಯೆ
ತ್ತಿದ ಕೊಂತಂ ದಂಡೆಗೊಂಡಡ್ಡಣಮಿರೆ ವಸುಷೇಣಂ ಭರಂಗೆಯ್ವುದಂ ಪೋ
ದುದು ಪೊತ್ತಿಂ ಕಾಲಿಡಲ್ ಕತ್ತಲೆ ಕದಡಿದುದೆಂದಾಪ್ತರಡ್ಡೈಸಿ ನಿಂದರ್॥೫೪॥

ಆಗಳೆರಡುಂ ಪಡೆಗಳಪಹಾರತೂರ್ಯಂ ಮೊೞಗೆ ಪೆಱತೆಗೆಯಲೊಡಂ ವಸುಷೇಣಂ ಬಂದು ನಿಜನಿವೇಶಿತಸ್ಕಂಧಾವಾರಮಂ ಪೊಕ್ಕನಿತ್ತ ಚಂಡಶಾಸನಂ ಮಂಡಳಿಸಿ ಪಿಡಿದ ಕೈದೀವಿಗೆಯ ಬೆಳಗಿನೊಳ್ ತೊಟ್ಟ ಗದ್ದಿಗೆಯ ಗರುಡವಕ್ಕದ ಕವಚದ ನವರತ್ನ ಕಿರಣಗಳ ಕಿೞ್ತ ಕರವಾಳ ಬಾಯ್ದಾರೆಯೊಳ್ ಬಳ್ಳಿಗೊಂಡು ಮಿಳ್ಳಿಸಿ ಪೊಳೆಯೆಯುಂ ಕಟ್ಟಿದ ಕಠಾರದ ಬದ್ದಿಗೆಯ ತೊಂಗಲ್ ದೆಗೆದು ಬಿಗಿದೆೞಲ್ವ ಬಾಲಗಚ್ಚೆಯ ವಿಳಸದ ಸೆಱಗಂ ಸೆಳೆದಳ್ಳಿ-
ಱಿಯೆಯುಂ ಒಂದೆ ಕಯ್ಯೊಳಿಕ್ಕಿದೆರಡು ಕಂಕಣದ ಝಣಝಣತ್ಕಾರಂ ಜಡಿವ ಬಾಳ ಕುಣಿವ ಕೊಂಕಿಂಗೆ ಕಿಂಕಿಣೀರವ-
ಮನಳಂಕೆಗೊಳಿಸಿಯುಮೋದುವ ರಾಯವಾಡದುಗ್ಘಡಿಸುವ ಮಾಂಗಳಿಕದ ಚಪ್ಪರಿಸುವ ಪಡಿಯಱರನೆಲನನುಗ್ಘಡಿಸುವ ಪಡೆವಳರ ತನ್ನ ಬೀರಮಂ ಮನ್ನಿಸಿ ಪೊಗೞ್ದ ಕೈವಾರಿಗಳಾಡಂಬರಮಳುಂಬಮಾಗೆ ಸುನಂದೆಯಂ ತಂದು ಸೆಱೆಯಿಟ್ಟ ಮಣಿಮಾಡಕ್ಕೆ ಬಂದು

ಘನನಿಶ್ವಾಸತರಂಗಿತಾಳಕಿಯನಗ್ರಪ್ರಾಂತವಾರ್ವಿಂದುಲೋ
ಚನಪಕ್ಷ್ಮಾವಳಿಯಂ ವಿಯೋಗದಹನಪ್ಲುಷ್ಟಾಧರಚ್ಛಾಯೆಯಂ
ವಿನತಪ್ರಾಹ್ಣಸುಧಾಂಶುಬಿಂಬಮುಖಿಯಂ ಚೀನೋತ್ತರೀಯಾವಗುಂ
ಠನನಿರ್ಭಿನ್ನಕಪೋಲಪಾಂಡುರುಚಿಯಂ ಸಾರ್ದಂ ತದುರ್ವೀಶ್ವರಂ॥೫೫॥

ಆಗಳ್
ಬಿದಿಯೆಂಬ ಮದಗಜಂ ನೃಪ
ಸದನ ಸರೋವರದೊಳೆೞೆದು ಸೆಳೆತಂದು ವನಾಂ
ತದೊಳಿಕ್ಕಿದ ಬಾಳಮೃಣಾ
ಳದವೊಲ್ ಸತಿ ಕೊರಗಿ ಕಣ್ಗೆ ಕರಮೆಸೆದಿರ್ದಳ್ ॥೫೬॥

ಅಂತು ಸಾರ್ದು ತನ್ನೊಡವಂದು ಬಾಗಿಲೊಳ್ ನಿಂದ ಪರಿಜನಮುಮಂ ಕೆಲಬಲದೊಳಿರ್ದ ಪಸಾಯಿತರಂ ಪರಿಹರಿಸಿ ಕೃತಕ ವಿನಯೋಪಚಾರಮೆಸೆಯೆ ಚಂಡಶೃಸನಂ ಸುನಂದಾದೇವಿಗಿಂತೆಂದಂ

ನಯದಿಂದಂ ನಿನ್ನೊಡಂಬಡಂ ಪಡೆಯದಿಂದೌತ್ಸುಕ್ಯದಿಂ ತಂದ ಸ
ಲ್ಗೆಯ ನೀಂ ಮನ್ನಿಸು ಕಾಮಿ ಕಣ್ಣಱಿವನಲ್ತಾಂ ಗಂಡುದೊೞ್ತೆನ್ನ ರಾ
ಣಿಯವೃಸಂ ಪರಿಚಾರಕಾದಿ ನಿನಗೀ ಸಾಮ್ರಾಜ್ಯಲಕ್ಷ್ಮಿಸುಖೋ
ದಯದೊಳ್ ವಲ್ಲಭೆಯಾಗಿ ನೀನಿರು ದಲನ್ನೀಲಾಬ್ಜಲೋಲೇಕ್ಷಣೇ॥೫೭॥

ನುಡಿಯಲೊಡಂ ಮಿಂ ಪೇೞ್ವಡ••
ನುಡಿಯಂ ತನ್ನಿದಿರೊಳಾ ಖಳಂ ಕಡೆಗಣ್ಣಿಂ
ಕಿಡಿಸೂಸೆ ಘೃತಾಹುತಿಯಂ
ಪೊಡೆವ ಶಿಖಿಜ್ವಾಲೆಯಂತೆ ಬಾಲೆ ಕನಲ್ದಳ್॥೫೮॥

ಅಂತು ಕನಲ್ದೊನಲ್ದು ಸೈರಿಸಲಾಱದೆ

ಸೆಱೆಸಿಕ್ಕಿಂ ಪಿಡಿತಂದ ದೇಸಿಗಿತಿಯಂ ಭೋಗೋಪಭೋಗಂಗಳಂ
ಮಱೆದು ಕಾಣದನಾಥೆಯಂ ನುಡಿವವೊಲ್ ನಿನ್ನೊಂದು ಸಂಪತ್ತಿಯಂ
ಜಱುಚುತ್ತಿರ್ದಪೆ ಪಾಣ್ಬ ನಿನ್ನ ತಲೆಯುಂ ಕಾರಾಗೃಹದ್ವಾರದೊಳ್
ಮೆಱೆವಾಗಳ್ ನುಡಿ ನಾಳೆ ನೀನೆನಗೆ ಮಾಡಲ್ವೇೞ್ಪ ಸತ್ಕಾರಮಂ ॥೫೯॥

ಎಂದು ಬೆಟ್ಟವೆಟ್ಟನೆ ಬಯ್ದು ಬೆಟ್ಟು ಬಿದಿರ್ದು ನುಡಿದ ಸುನಂದೆಯ ನುಡಿಗೆ ಚಂಡಶೃಸನನೇವೈಸಿ ಮುಳಿಯದೆ ಲಜ್ಜೆಯಿಂ ಚಳಿಯದೆ ಮತ್ತ ಮಿಂತೆಂದಂ

ಕೆಳೆಗೆಟ್ಟಾಂ ಪಗೆಯಾದೆನಾಗೆ ವಸುಷೇಣಂ ಪೋದನಿನ್ನೆನ್ನ ಕ
ಯ್ಯೊಳದಂ ನಂಬೞಿಯಾಸೆಯಿಂ ನಮೆಯದಿರ್ ಬೇಡಾಗ್ರಹಂ ಸತ್ತು ಸ
ತ್ಫಳಮಂ ತೋಱುವ ಬಾೞೆಯಾಗದಿರು ಪಾತಿವ್ರತ್ಯದಿಂ ಬತ್ತಿ ಬಾೞ್
ದಳಿರಾಗುತ್ತಿರದಾಳ್ದಿರಾತ್ಮ ಪರ ಸೌಖ್ಯ ಶ್ರೀ ವಿಳಾಸಂಗಳಂ ॥೬೦॥

ಎಂಬುದುಮೀತಂಗೆ ಮಾತಂ ತಪ್ಪಿನಮುತ್ತರಂಗುಡುತಿರಲೇಕೆಂದಾಕೆಯಿಂತೆಂದಳ್

ಮಾವಿನಕೊಂಬಿನೊಳ್ ನಲಿದು ನರ್ತಿಪ ಕೋಗಿಲೆ ಪತ್ತಿದಂಟಿನಿಂ
ಬೇವಿನ ಕೊಂಬಿನೊಳ್ ನಲಿವುದೇ ಪ್ರಿಯನಿರ್ದವೊಲಪ್ರಿಯರ್ಗೆ ಸಂ
ಭಾವನೆಗೆಯ್ವರೇ ಸತಿಯರೇಂ ಗಡ ವೀರನ ತೋಳ ಬಾಳುಮಂ
ನಾವಿದ ಬಾಳುಮಂ ಸಮನೆ ಪತ್ತಿಪ ಸಾಣೆಯೊ ಮದ್ಭುಜಸಹಸ್ರಂ ॥೬೧॥

ವಸುಷೇಣನೃಪನೇ ಕೈವಿಡಿ
ದಸುವಿಂಗೊಡೆಯಂ ಚಿತಾಗ್ನಿಗೊಡೆಯಂ ಒಡಲಿಂ
ತೆಸೆದೀ ಪಾತಿವ್ರತ್ಯದ
ಮಿಸುಗುವ ಜಸವೆಣ್ಣ ತಲೆಗೆ ತರ್ಪನೆ ಪುಲ್ಲಂ॥೬೨॥

ಎಂಬುದುಮಾ ಕುಟಿಲನಾಕೆಯೊಳ್ ತೆಱಪುಗಾಣದೆ ಮುಳಿದು ಮಾಣದೆ ಮತ್ತಮಿಂತೆಂದಂ

ಬಿಡೆನಾಂ ನೀಂ ಸಯೆ ಸಾವೆನಲ್ಲದುೞಿಯೆಂ ನೀನೊಲ್ದೊಡೇನೊಲ್ಲದಿ
ರ್ದೊಡೇನಾನೆರಡಿಲ್ಲದೊಲ್ದೆನದಱಿಂ ಬೇಱೂರ ಬೇಟಕ್ಕೆ ಬಾಯ್
ಬಿಡಲಾಱೆಂ ಸೆಱೆಯಿಂದಮೆನ್ನ ಮನೆಯೊಳ್ ನೀನಿರ್ದೆಯೆಂಬಾಸೆಯು
ಳ್ಳೊಡೆ ಸಾಲ್ಗುಂ ಬೞಿಕಪ್ಪುದಕ್ಕೆ ರಣದಿಂದಂಭೋಜಪತ್ರೇಕ್ಷಣೆ ॥೬೩॥

ಎಂದು ತನ್ನಳಿಪನಡರೆ ಚಾಳಿಸಿ ನುಡಿದು ಪೋಗುತ್ತುಂ

ಪರಿಚಿತೆ ನೀಂ ತಳೋದರಿಗೆ ಮೆಯ್ವೞಿಯಿಂ ಮನಮಂ ತೊಡಂಕೆ ನಾಂ
ತುರಿಪದಿನಿರ್ದು ನಿಂದೞಲನಾಱಿಸು ತೋಱಿಸು ಭೀತಿಯಂ ಮನಂ
ಕೊರಗದೆ ಮತ್ತೆ ಸಂತಮಿಡು ಗಂಡನ ಪಂಬಲನೊಯ್ಯನಾಗಿಯೆಂ
ದರುಣಿಕೆಯೆಂಬಳಂ ನಿಱಿಸಿ ಕಾಂತೆಯ ಕಾಪಿನೊಳಾ ನೃಪಾಳಕಂ ॥೬೪॥

ನೇಸಱ್ ಮೂಡಲೊಡಂ ಮುನ್ನೆ ಮುನ್ನೆ ಮೂಡಿರ್ದ ವರಹ ಪರಿತಾಪಂ ತೀರದೆಯುಮೇತಱೊಳಮಾ ತಳೋದರಿಯನೊಡಂಬಡಿಸಲ್ ಬಾರದೆಯುಮಾ ಕಿತವಂ ತನ್ನ ಕೈತವದೊಳ್

ಪತಿಯಿರೆ ಪಿಂಗದಾಸೆ ಮನದೊಂದೞಿಯಾಸೆಯಿನೆನ್ನನೊಲ್ಲಳೀ
ಸತಿಯಿವಳಂ ಮರುಳ್ಚಿದಪೆನೆಂದು ಬೆಸಂಗುಡೆ ಚಂಡಶಾಸನಂ
ಪ್ರತಿಬಳಮೆಯ್ದೆ ಕೆಟ್ಟುದೞಿದಂ ವಸುಷೇಣನೃಪೇಂದ್ರನೆಂಬ ಸಂ
ಗತಿಯನೊಡರ್ಚಿದಂ ಜನದ ಕಣ್ ಬೆಱಗಪ್ಪಿನಮಿಂದ್ರಜಾಲಿಗಂ ॥೬೫॥

ಆ ವ್ಯತಿಕರಮಂ ಕಂಡು ನಮ್ಮರಸನಿರುಳಿನ ಕವಿಯ ಕಾಳೆಗದೊಳ್ ಮುತ್ತಿದ ಬೀಡಂ ತೊತ್ತೞದುೞಿದು ಪಗೆಯ ಪಂದಲೆ ಕಯ್ಗೆ ವಂದುದಿನ್ನೇನಿನ್ನೇನೆಂದು ಕೋಟೆಯೊಳಗೆ ಜನಂ ಕೋಟಿ ತೆಱದಿಂ ನಾಟಕನ ನಲಿದು ಬೊಬ್ಬಿಱಿಯುತ್ತಿರೆ ಸುನಂದಾದೇವಿಯಿರ್ದ ಸೆಱೆವನೆಗೆ ತಾನೆ ವಂದು

ವಸುಷೇಣನೆ ಪತಿಯೆನಗೆಂ
ದು ಸುನಂದೆ ಸಿಡಿಲ್ವೆ ಮಾೞ್ಪ ಸೋವಡಿಯ ನೀ
ಬಸಿವ ತಲೆಗೆನುತುಮೀಡಾ
ಡಿಸಿದಂ ಮಾಯಾವಿ ಪತಿಯ ಮಾಯದ ಶಿರವಂ॥೬೬॥

ಅಂತು ತಂದಿೞಿಪಿದ ಶಿರಮುಮಂ ಕೞ್ದು ತಱಿದ ವಲ್ಲಭನ ಮಣಿ ಮಕುಟ ಕೇಯೂರಮಂಡಳಾದೀಪನಮಂಡನಮುಮಂ ಪೇರುರದೊಳೋರಂತೆ ಮೆಱೆವ ತೋಱಮುತ್ತಿನ ಹಾರಮಂ ಕಾಣಲೊಡಂ

ಹೃದಯದೊಳಿರ್ದ ವಲ್ಲಭನನಾಕ್ಷಣಭೀತಿಯಿನೀಕ್ಷಿಪಂತೆ ಮು
ಚ್ಚಿದುವಲರ್ಗಣ್ ಪೊಣರ್ ತಡವಿ ನೋಡುವವೊಲ್ ಕುಚಮಧ್ಯದಲ್ಲಿಗಾ
ದುದು ಕರಪಲ್ಲವಂ ಸರಮನಾಲಿಸುವಂತೆ ಮೊಗಂ ಮಲಂಗಿತಂ
ಗದೊಳೆರ್ದೆ ಶೂನ್ಯಮಾಗಱಸುವಂತಸು ಪೋಯ್ತಸಿತಾಬ್ಜನೇತ್ರೆಯಾ॥೬೭॥

ಬೞಿಯಟ್ಟೆ ಬಂದು ಮುನ್ನಂ
ಪುೞುವಗೆಗೊಳಗಾದಳೆಂದು ಸಾವಾಸಿಗಳಂ
ಕೞಿಪದೆ ನಲ್ಲಂ ತಲೆಯಂ
ಬೞಿಯಟ್ಟಿದನೆಂದುಪೋದುದಸು ಶಶಿಮುಖಿಯಾ॥೬೮॥

ಇನಿಯನಿರೆ ನೋಡ ಮತ್ತೊ
ರ್ಬನ ಕಣ್ಗಂ ಬಗೆಗಮೊಪ್ಪಿದಪ್ಪುದು ಸುಡಲೀ
ತನುವನಿದನೆಂದು ಜೀವಂ
ಮುನಿದಂತಿರೆ ಬಿಟ್ಟು ಪೋಯಿತಸು ॥೬೯॥

ಆಗಳಾ ವ್ಯತಿಕರಮಂ ಕಂಡತಿಚಕಿತ ಹೃದಯಾನುಮಾಕುಳಿತ ವಿಳೋಕನುಮಾಗಿ

ಸ್ಮರನೊಳ್ ದಾಯಿಗನಾಗಿ ಬೆಂದ ವಿಧಿಯೊಂದಂ ಮಾಡಿದಂ ಕೂಡುವೆಂ
ಬೆರಗಿಂದೆಂದಿದನಿಂತು ಮಾಡೆ ಮರಣಂ ಮೂಡಿತ್ತು ಹೋ ಬೆಂದೆನಾ
ನುರಿದೆಂ ನಂದಿದೆನೆಂದು ಬಂದು ಭರದಿಂ ತೞ್ಕೈಸೆ ತಳ್ತಾಂತು ತ
ತ್ತರುಣೀಗಾತ್ರದ ಸೋಂಕು ಸಮ್ಮನಿಸೆ ಮೂರೂಛಾಪನ್ನನಾದಂ ಖಳಂ॥೭೦॥

ಅವನಂ ಚಾಮರದಡಪದ
ಡವಕೆಯ ಕಿೞ್ವಾಳ ಮೇಳದಂಗನೆಯರ್ ಬೀ
ಸುವ ಬಿಜ್ಜಣಿಗೆಯ ಮಳಯಜ
ನವಜಳಕಣದೆಲರ ಸೋಂಕಿನಿಂ ನಿಲೆ ಪಿಡಿದರ್॥೭೧॥

ಅಂತು ಮೂರ್ಛೆಯಿಂ ಬೆಚ್ಚನೆ ಸುಯ್ದು ಬೆದೆಬೆದೆ ಬೆಂದು ನೊಂದು ನಿಂದಿಸಿಕೊಂಡು ಮಾಣದೆ

ನೋಡಿ ಕನಲ್ತು ಬಾಯ್ ಮುನಿದು ಮೋನದಿನೇಕೆಲೆ ದೇವಿ ನೀಂ ಮನಂ
ನೋಡುವೆ ಸಾವಿನಿಂ ಸರಸವಾಡುವರೇ ಮಱುಮೆಯ್ಯೊಳಾದೊಡಂ
ಕೂಡದೆ ಮಾಣೆನಬ್ಜದಳಲೋಚನೆ ನಿನ್ನನೊಡನಿಂದು ಮೆಯ್ಗೆ  ಮೆ
ಯ್ಗೂಡುವೆ ಧೂಮಸೌಧಗೃಹದೊಳ್ ಶಿಖಿಪಲ್ಲವರಾಗತಳ್ಪದೊಳ್॥೭೨॥

ಎಂದು ಬಾಯೞಿದು ಪೞಿಯಿಸಿ ಬಸಮೞಿದಸುವೊಱೆಯಾಗಿ ಮನಮನಱಿದು ಕಳವಳಿಸಿ

ಎನಗಿನ್ನೋಲಗಸಾಲೆಯೇಕಿದು ವಿಮಾನಂ ನಂದೆಯಂ ಲೋಲಲೋ
ಚನೆಯಂ ಕುಳ್ಳಿರಿಸಿಲ್ಲಿ ಕೂಡೆ ಬೞಿಸಲ್ವಂತಃಪುರಸ್ತ್ರೀಯರಾ
ಳ್ತನಮಂ ತೋಱುವ ಲೆಂಕರೊಳ್ ನುಡಿಯವೇೞ್ ವಿದ್ಯಾಜನಂ ಬರ್ಕೆ ಚಂ
ದನಗಂಧಾವಿಧದಿಂದಮೆನ್ನ ವಿರಹ ಜ್ವಾಲಾಗ್ನಿಯಂ ನಂದಿಪೆಂ ॥೭೩॥

ಎಂದು ತನ್ನ ಲಕ್ಷ್ಮೀಭವನಮೆನಿಸುವುಪರಿಮಂಡಪಮನೆ ಚಿತ್ತಕ್ಕೆ ಮಾಡಿ ಸುನಂದಾದೇವಿಯುಂ ತಾನುಮೇಕಾಸನದೊಳ್ ಕುಳ್ಳಿರ್ದು ರಾಣಿಯ ವಾಸದ  ಪೆಂಡವಾಸದ ಭಾಷೆಯ ಲೆಂಕರ ಭಾರತಿಕನಿಕರದೋಲಗದ ಕೇಳೀ ವಿಳಾಸಮಂ ಕೆೞಗೆ ತಗುಳ್ಚಿದ ಹುತವಹಜ್ವಾಲಾಕಲಾಪಮಂ ಮೆಚ್ಚಿದಂತೆ ಮೂರ್ಛೆಕೊಳ್ವಿನಮೊಡಲೞಿಯಲ್ ಪರಿಚಾಛೇದಿಸಿದ ಕುಲಸ್ವಾಮಿಯವಸಾನ ಸಮಯಮಾಗೆ

ನಗೆಗಂ ನಾಚದೆ ನಮ್ಮನೊಲ್ಲದೆ ಪರಸ್ತ್ರೀಗೊಲ್ದಳ್ ಸತ್ತೊಡಾ
ಕೆಗೆ ತಾಂ ಪ್ರಾಣಮನಿತ್ತಪಂ ಗಡರಸಂ ನೋಡಕ್ಕ ಮಾವಿಂಗೆ ಮ
ಲ್ಲಿಗೆಗಳ್ ಕೂರ್ತೊಡೆಶಮಾವು ಕೂರ್ತುದು ವಸಂತಶ್ರೀಗೆನಿಪ್ಪಂತೆ ಲ
ಜ್ಜೆಗೊಡಲ್ ಮಂಮೞಿವೋಪುದಿನ್ನುೞಿವಿದರ್ಕ್ಕೇಗೆಯ್ವಮಬ್ಜೇಕ್ಷಣೇ॥೭೪॥

ಆ ಮಾತಂ ಮಾರ್ಕೊಂಡು ಕುಲವತಿಯುಂ ಶೀಲವತಿಯುಮೆನಿಸಿದ ವಿದಗ್ಧೆಯೊರ್ವಳಿಂತೆಂದಳ್

ಪೞಿಗೇವಯ್ಸುವ ಪಾಪವೆಂಬ ಪೆಱವೆಣ್ಗಾಟಿಪ್ಪುದಾ ಮಾಯದೊಂ ದೞಿವೆಂಬೋಜೆಯಧೀಶವೃತ್ತಿಯಧಿಪಂಗೇನಾದುದಾದಲ್ಲಿ ಮೆಯ್ವ
ನೆೞಲಂತಪ್ಪುದು ನಮ್ಮ ವಿತ್ತ ನಮಗಿನ್ನಾ ಮಾತದೇಕೆಂದು ಪಿಂ
ದುೞಿವೊಂದಾಸೆಯನೊಲ್ಫದೆಯ್ದೆ ನೆರಪಿತ್ತಂತಃಪುರ ಸ್ತ್ರೀಜನಂ॥೭೫॥

ಕ್ರಮದಿಂ ಕೈಯೆಡೆಗೊಟ್ಟೆನೀ ಹರಿಣಿಯಂ ಕೊಂಡಾಡಿಸೀ ರಾಜಕೀ
ರಮನೋವಿ ಕಳಹಂಸನಂ ಸಲಹು ನೀನೀ ಸೋಗೆಗಾಗೆಲ್ಲಮಂ
ನಮಗಿನ್ನೆಮ್ಮ ಸಮಾನಮೆಂದು ಕೆಲದಾಳೀಜಾಲಮಂ ಬೇಡಿ ತ
ಳ್ತೆಮೆಯಿಂದಂ ಕರೆಗಣ್ಮಿ ಸೂಸಿ ಕಱೆದರ್ ಕಯ್ಯೊಡ್ಡಿ ಕಣ್ಣೀರ್ಗಳಂ ॥೭೬॥

ಅಂತು ನಿರಂತರಶೋಕರಸಾವೇಗದೊಳ್
ನೆರೆದುದು ಲೆಂಕತಂಡಮೊಡವಂದುದು ರಾಣಿಯವಾಸಮೊಲ್ದಳಂ
ತರಿಸಿದನಾ ಧರಾಧಿಪತಿಯೋಲಗಶಾಲೆಗೆ ವಂದುದಾ ತನೂ
ದರಿಯ ವಿಶೇಷಭೂಷಿತ ಶರೀರಮನೇಕ ವಿಮಾನ ಯಾನಮು
ಬ್ಬರಿಸಿದುದಾದುದಿಂತು ಕರುಣಾದ್ಭುತರೌದ್ರರಸಾಕರಂ ಪುರಂ ॥೭೭॥

ಅನ್ನೆಗಮಿತ್ತಲ್

ವಸುಷೇಣಂ ಲಗ್ಗೆಮಾಡಲ್ ಮೊಗಸಿ ಪೊಗಿಸಿ ದುರ್ಗಕ್ಕಿಭವ್ರಾತಮಂ ಪ
ಣ್ಣಿಸಿ ವಾಹವ್ಯೂಹಮಂ ಪಲ್ಲಣಿಸಿ ಸುಭಟರಂ ಕಯ್ದುಗೊಳ್ವಂತಿರಾಳೋ
ಚಿಸಿ ರಾಜಾವಾಸದಿಂ ತಾಂ ಪೊಱಮಡುತಮಿದೇಂ ಕೋಟೆಯೊಳ್ ಕಾಮಿನೀ ವೀ
ರ ಸಮೂಹೋದ್ರೇಕ ಶೋಕಾಕುಳ ಬಹಳರವಂ ತಿಣ್ಣಮಾಯ್ತೆಂದನಾಗಳ್ ॥೭೮॥

ಚರನೆಯ್ತಂದೊರ್ವನಾ ವೃತ್ತಕಮನುಸಿರ್ದೊಡುರ್ವೀಶ್ವರಂ ಪ್ರಾಣನಾಥಾ
ಮರಣೋದಂತಾಭ್ರವಹ್ನಿಸ್ಫುಟಿತಹೃದಯಚ್ಛ್ವಾಸನಿಶ್ವಾಸಮೂಢಾಂ
ತರಿತಂ ಭಾಷ್ಪಾಂಬುನಿಷ್ಪಂದಿತನಯನಯುಗಂ ಖೇದದಿಂಕೀಲಿಸಿರ್ದರ್
ಕರುವಿಟ್ಟರ್ ತಿರ್ದುವಿಟ್ಟರ್ ಬರೆದು ಕರಿಯಮೇಲಿಟ್ಟರೆಂಬಂತಿರಿರ್ದಂ॥೭೯॥

ಅಂತು ಕಿಱಿದುಬೇಗಮಿರ್ದಂತೆಂತಾನುಂ ತನ್ನ ತಾನಱಿದು ಬಾಯೞಿದಾಕಾಶವಚನವಿಂತೆಂದಂ

ಆನೞಿದೆನೆಂದು ಪುಸಿದೊಡೆ
ಮಾನಿನಿ ನೀಂ ಕೞಿದೆ ನಿನ್ನ ಸಾವನೆ ಕಂಡಿಂ
ತಾನುೞಿದೆಂ ನಿರ್ಲಜ್ಜರ್
ದೀನರ್ ಕೃಪಣರ್ ಕೃತಘ್ನರಾರೆನ್ನಿಂದಂ ॥೮೦॥

ಅನಂತರಂ ಪಾರ್ಷ್ಣಿಗ್ರಾಹಕನಾಗಿ ತನ್ನಂ ನೆಮ್ಮಿಸಿಕೊಂಡಿರ್ದ ದಯಿತಸಾಮಂತನೊಳಿಂತೆಂದಂ

ಇನಿಯಳ್ ಪೋದ ಬೞಿಕ್ಕಮೆನ್ನಿರವು ತಾರಾಮಂಡಲಂ ಪೋದ ಲೋ
ಚನಮಿರ್ಪಂತೆ ಸುಗಂಧ ಪೋದ ಕೞಿವೂವಿರ್ಪಂತೆ ತೀವಿರ್ದ ಜೀ
ವನಮೆಲ್ಲಂ ನೆಱೆಪೋದ ಹೊಟ್ಟುಗೆಱೆ ತಾನಿರ್ಪಂತೆ ದೈನ್ಯಕ್ಕೆ ಭಾ
ಜನಮಿರ್ದೇನಸು ಪೋದ ಬಾೞ್ವೆಣನಿದರ್ಕಾನಿರ್ದೊಡೇಂ ॥೮೧॥

ಅಂತುಮಲ್ಲದೆಯುಂ

ಇದಱೊಳ್ ವಲ್ಲಭೆ ಕಾದಿ ಕೊಳ್ವ ಧನಮಾ ಪ್ರಾಣೇಶ್ವರೀರತ್ನ ಮಿ
ಲ್ಲದ ಬಾಳ್ಗೋಟೆ ಗಡೇಕೆ ಕೋಟಲೆಗಳೇೞಲ್ ಶತ್ರು ಸಾಯಲ್ ಕಡಂ
ಗಿದಪಂ ತಾಂ ಗಡ ಕೊಲ್ವುದಾರನಕಟೀ ಬೇಳಂಬುಮಿನ್ನೇಕೆ ಸಾ
ಯದೊಡಂ ತೀರದೆ ಕಾಯಮಂ ತೊಱೆಯಲಿನ್ನುಂ ರಾಜ್ಯದೊಳ್ ಬಾೞ್ವುದೇಂ॥೮೨॥

ಮುನಿಸಯ್ದುಂ ತೆರದಿಂದಲಪ್ಪುದದಱೊಳ್ ಸ್ತ್ರೀಸಂಭವಂ ತಿಣ್ಣಮಾ
ಮುನಿಸಂ ತಂದನ ಕಂಠಪೀಠತಳದೊಳ್ ತಂದಿಟ್ಟು ರಕ್ತಾಂಬು ಮ
ಜ್ಜನಮಂ ಮಾಡಿಸಿ ಮಸ್ತಕಾಂಬುರುಹದಿಂದಂ ಪೂಜೆಗೆಯ್ದಾಂತೊಡಾ
ತನ ಕೂರ್ವಾಳ್ ಕರವಾಳ್ ದಲುಂತು ಮರವಾಳ್ ಪಾೞೂರ ಮೈಲಾರನಾ॥೮೩॥

ಎಂದು ಕೊಕ್ಕರಸಿ ಮಾಣದೆ

ಏಱಿ ಬರೆಗೊಂಡ ಜೂದುಂ
ಗಾಱನವೊಲ್ ಲಗ್ಗೆಮಾಡಲೊಲ್ಲದೆ ಪಡೆಯಂ
ಸಾಱಿಸಿ ಮುಂದುಂ ಪಿಂಗುವ
ನೀಱೆಯವೊಲ್ತೆಗೆಯವೇಳ್ದನಾ ವಸುಷೇಣಂ ॥೮೪॥

ಅಂತು ಪರವಿಗ್ರಹದ ಮೇಲಣ ತೋಳ್ವಲಮುಮಂ ನಿಜವಿಗ್ರಹದ ಮೇಲಣ ಬಾಳ್ವಲಮುಮೋಸರಿಸದೆ ಸುತ್ತಿಱಿದ  ಮುತ್ತಿದ ಬೀಡಂ ತೆಗೆಯಿಸಿ ಮಗುಳ್ದು ಬರ್ಪಾಗಳ್.

ಬಿರುದಿನ ಕಾಳೆ ಬಾರಿಸುವ ಬೀರದ ಡೌಡೆ ತೆರಳ್ವ ಕೇತನೋ
ತ್ಕರದ ವಿಡಂಬಮೊಲ್ಲನುಲಿತಪ್ಪ ಚತುರ್ಬಲದುರ್ವು ಕೂರ್ಪಿನಿಂ
ದುರಿವರಿವಸ್ತ್ರಶಸ್ತ್ರಕಿರಣಂ ವಸುಷೇಣನೊಳಾದುವೆಯ್ದೆ ಕೊ
ಕ್ಕರಿಕೆಗೆ ದುಃಖಿತೇ ಮನಸಿ ಸರ್ವಮಸಹ್ಯಮೆನಿಪ್ಪ ನೀತಿಯಿಂ ॥೮೫॥

ಅಂತು ನಿರ್ವೇಗಪರನಾಗಿ ಮಗುಳ್ದು ಬಂದಸ್ತಂಗತಪ್ರಭೆಯಂತೆ ನಿಜ ಮಂಡಲಮಂ ಪೊಕ್ಕು

ನಡುನಾಡ ತೀರ್ಥಮೆನಿಸಲ್
ಪಡೆದಿಂದ್ರಪ್ರಣಯಮೆಂಬ ಪರ್ವತಕಟಕಂ
ಬಿಡಿದು ನಿಜಕಟಕಮಂ ತಾಂ
ಬಿಡಿಸಿ ಮಗಂಗಿತ್ತು ಕೊಡೆಯುಮಂ ಪಟ್ಟಮುಮಂ॥೮೬॥

ಸಮಭಾಗಂ ಬರೆ ಹಸ್ತಿವಾಜಿಸಹಿತಂ ಭಂಡಾರಮಂ ಪಚ್ಚುಗೊಂ
ಡು ಮಗಂಗರ್ಧಮನಿತ್ತು ಚೈತ್ಯನಿವಹೋದ್ಯಾನಕ್ಕೆ ತಾಂ ಬಂದು ಧ
ರ್ಮಮನುದ್ಯೋಗಿಸೆ ಸಂಯಮೋಪಕರಣಕ್ಕರ್ಹತ್ಪದಾಭ್ಯರ್ಚನ
ಕ್ಕೆ ಮನೋರಾಗದಿನಿತ್ತನಿತ್ತು ಗಜ ವಾಜಿ ಸ್ತ್ರೀ ಸಮಾಜಂಗಳಂ ॥೮೭॥

ಇಭವು ಘಟಿಕಾಸ್ಥಾನಂ ಮ
ತ್ತಿವು ತೀರ್ಥಸ್ನಾನಮೆಂಬ ರೂಢಿಯ ಭಗವದ್
ಭವನಕ್ಕಲಂಘ್ಯಮೞಲುಂ
ತವೆ ಮುಕ್ಕೊಡೆಯೆತ್ತಿ ಬಿಟ್ಟನಾ ವಸುಷೇಣಂ ॥೮೮॥

ಲಲನಾ ವಿಯೋಗಹೇತು
ಚ್ಛಲಮೆರ್ದೆಯೊಳ್ ನಟ್ಟ ಶೂಲದಂತಿರೆ ತಪಪದಿಂ
ಗೆಲೆ ಜೀರ್ಣಮಾಗೆ ತನು ಕೂ
ರಲಗಿನ ಪಱಿದೊವಲೊಳಿರ್ದನಂತಾ ಮುನಿಪಂ॥೮೯॥

ಅಂತು ತಪಸ್ತಪ್ತಶರೀರನಾಗಿ ನಿಜಾಯುರವಸಾನದೊಳೊಂದು ತಿಂಗಳ್ವರಂ ಮರುಮಂಡಲದಂತಿರನಶನಕ್ಷೇತ್ರನಾಗಿ ನೋಂತು ಕಡೆಯೊಳೆನ್ನ ತಪದ ಫಲಮುಂಟಪ್ಪೊಡಾನನ್ಯಜನ್ಮದೊಳಾರ್ಗಮಜೇಯನುಮತಿ ಸುಭಗರೂಪ ಸೌಂದರ್ಯ-
ನುಮಶೇಷಧರಾವಲ್ಲಭಜ್ಯಾಯನುಮಾಗಿ ಪುಟ್ಟವನಕ್ಕೆಂದು ನಿಶ್ಚಯಿಸಿ

ತೋಱಿ ನಟಿಯಿಸುವ ಜೋಹಮ
ನೇಱಿಸಿ ಕೊಳದಿರ್ದ ಜೋಹದುದ್ದೆಸದಿಂದಂ
ಜಾಱಿಸುವಂತಿರೆ ತಪದಿಂ
ತಾಱಿದ ತನುವಂ ನಿಧಾನದಿಂ ಮುಂಬಿಟ್ಟಂ ॥೯೦॥

ಅಂತು ಮುಡುಪಿ

ಕಟ್ಟಿತನಾರ್ಗಂ ಕಳೆಯಲ್
ನೆಟ್ಟನೆ ಬಾರದವೊಲಂತು ನೆಗೞ್ದುಗ್ರತಪಂ
ಕಟ್ಟಿದ ಪುಣ್ಯದ ಫಳದಿಂ
ಪುಟ್ಟಿ ಸಹಸ್ರಾರಕಲ್ಪದೊಳ್ ಸುರನಾದಂ॥೯೧॥

ಕೃತಜ್ಞತೆಯಿಂದ ನೆನೆಯುತ್ತೇನೆ.
ಸಂಪಾದಕ.
ಕ. ವೆ. ರಾಘವಾಚಾರ್, ಎಂ. ಎ., ಬಿ. ಟಿ.
ಪ್ರಕಾಶಕರು :- ಶ್ರೀ ರಾಮಚಂದ್ರ ಬುಕ್ ಡಿಪೋ
ದೇವರಾಜ ಮಾರ್ಕೆಟ್,
ಮೈಸೂರು-
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ