ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ನವೆಂಬರ್ 18, 2018

ದೇವಚಂದ್ರ ವಿರಚಿತ ರಾಜವಳಿ ಕಥೆ

ದೇವಚಂದ್ರ ವಿರಚಿತ ರಾಜವಳಿ ಕಥೆ.

ಪ್ರಸ್ತುತ ಕೃತಿಯ ಕರ್ತೃ ದೇವಚಂದ್ರ. ಈ ಕೃತಿಗೆ ರಾಜಾವಲಿ ಕಥಾಸಾರ, ಮತ್ತು ರಾಜಾವಲಿಕಥೆ ಎಂದೂ ಹೆಸರುಗಳಿವೆ. ಕವಿಯ ಕಾಲ ೧೭೭೦-೧೮೪೧, ಆ ಕಾಲಘಟ್ಟದ ಮುಖ್ಯ ಘಟನೆಗಳನ್ನು ಅವುಗಳ ಇತಿಹಾಸವನ್ನು ತುಂಬ ವಿವರವಾಗಿ ಬಿಂಬಿಸಿದ್ದಾನೆ. ಇದರಲ್ಲಿ ಚರಿತ್ರೆ, ಪುರಾಣ ಹಾಗೂ ದಂತಕಥೆಗಳ ಮಿಶ್ರಣವಿದೆ. ಮೌಖಿಕ ಇತಿಹಾಸದ ಸ್ವರೂಪ ಪಡೆದಿದೆ.ಜೈನಪರ ಧೋರಣೆಯ ರಾಜಕೀಯ, ಧಾರ್ಮಿಕ, ಸಾಮಾಜಿಕ ಸಂಗತಿಗಳನ್ನು ಒಳಗೊಂಡಿದೆ.

ಕರ್ತೃ “ ಹೊಸಗನ್ನಡ ವಾಕ್ಯಗಳಿಂ ವಿರಚಿಸುವೆಂ “ ಎಂದು ಹೇಳಿದ್ದಾನೆ. ಆದರೆ ಇವನ ಕೃತಿಗೆ ಹೊಸಗನ್ನಡ ಅನುವಾದವೇ ಆವಶ್ಯಕವಿದೆಯೆಂದಮೇಲೆ, ಇದು ಹೇಗೆ ಹೊಸಗನ್ನಡ ಆಗುತ್ತದೆ. ಇದನ್ನು ಹೊಸಗನ್ನಡ ಪೂರ್ವ ಅಥವೃ ಸಮೀಪಪೂರ್ವದ್ದೆಂದು ಹೇಳಬೇಕಾಗುತ್ತದೆ. ತನ್ನ ಕೃತಿಯನ್ನು “ ವೈಷಮ್ಯಮನುಳಿದು” ಕೇಳಬೇಕೆಂದು ಕವಿ ಕೇಳಿಕೊಂಡಿದ್ದಾನೆ. ತಾನು ಜೈನ ಧರ್ಮೀಯನಾಗಿರುವುದರಿಂದ, ಅನ್ಯ ಧರ್ಮೀಯರೂ ಇದನ್ನು ಯಾವುದೇ ವೈಷಮ್ಯವಿಲ್ಲದೆ ಕೇಳಬೇಕೆಂದು ಕವಿಯ ಪ್ರಾರ್ಥನೆ ಇರಬಹುದೈ.

ಕವಿ ಚಾಮರಾಜನಗರ ಜಿಲ್ಲೆಯ ಮಲೆಯೂರಿನವರೆಂದು ಕೃತಿಯ ಸಮಾಪ್ತಿ ವಾಕ್ಯದಲ್ಲಿ ಬಂದಿದೆ. ಕವಿ ತನ್ನ ಸ್ವವಿವರವನ್ನು ಹನ್ನೊಂದನೆಯ ಅಧಿಕಾರದ ಕೊನೆಯಲ್ಲಿ ಹೇಳಿಕೊಂಡಿದ್ದಾನೆ. ಕವಿಯ ತಂದೆಯ ಹೆಸರು ದೇವಯ್ಯ ತಾಯಿ ಕುಸುಮಾಜಮ್ಮ. ಈ ದಂಪತಿಗಳ ನಾಲ್ಕು ಜನ ಮಕ್ಕಳು. ಇವರಲ್ಲಿ ಎರಡನೆಯ ಮಗ ಐದನೆಯ ವರ್ಷದಲ್ಲಿ ತೀರಿಕೊಂಡಿದ್ದನು. ಉಳಿದ ಮೂವರುಗಳೆಂದರೆ ಚಂದಪಾರ್ಯ, ಪದ್ಮರಾಜ ಮತ್ತು ದೇವಚಂದ್ರ. ದೇವಚಂದ್ರ ನಾಲ್ಕನೆಯ
ಪುತ್ರನಾಗಿದ್ದು ಗಮಕಿಯೂ, ವಾಗ್ಮಿಯೂ ಆಗಿದ್ದನು. ಇವನ ವಂಶಾವಳಿಯ ಪ್ರಕಾರ ದೇವಚಂದ್ರ ಪಂಡಿತ ಮನೆತನಕ್ಕೆ ಸೇರಿದವನೆಂದು ತಿಳಿದುಬರುತ್ತದೆ.
ಇವನ ಕೃತಿಗಳು ಪೂಜ್ಯಪಾದ ಚರಿತೆ, ರಾಮಕಥಾವತಾರ, ಭಕ್ತಿಸಾರ ಶತಕತ್ರಯ, ಮತ್ತು ರಾಜಾವಳಿಕಥಾ. ಇವನ ವೈಯಕ್ತಿಕ ವಿಚಾರಗಳನ್ನು ನೋಡಿದಾಗ ಅವನ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲವೆಂದು ತಿಳಿಯುವುದು. ರಾಜಾವಳಿಕಥೆಯನ್ನು ಮಕಂಜಿಗೆ ತೋರಿಸಿ ಅವನಿಂದ ಪಡೆಯಬಹುದಾದ ಅನುಕೂಲತಪ್ಪಿದಾಗ, ಮುಮ್ಮಡಿ ಕೃಷ್ಣರಾಜ ಒಡೆಯರ ಸನ್ನಿಧಿಗೆ ಸಲ್ಲಿಸಿ ಸಹಾಯಪಡೆಯ ಬಯಸಿ ವಿಫಲನಾಗುತ್ತಾನೆ. ಕಡೆಗೆ  “ಮಹಾಮಾತುಶ್ರೀ “ ಯವರ ಪ್ರೋತ್ಸಾಹ ದೊರೆತದ್ದು ತಿಳಿದುಬರುತ್ತದೆ.

ದೇವಚಂದ್ರ ರಾಜಾವಳಿಕಥೆಯಲ್ಲಿ ಸಾಕಷ್ಟು ಜೈನವಾತಾವರಣವನ್ನು ತಂದಿದ್ದಾನೆ. ಎಲ್ಲ ಜೈನಕಥೆಗಳು ಪ್ರಾರಂಭವಾಗುವಂತೆ ಈ ಕೃತಿಯನ್ನು ಲೋಕಸ್ವರೂಪ ವರ್ಣನದಿಂದ ಆರಂಭಿಸಿದ್ದಾನೆ. ಇದನ್ನು “ಆದಿ ಬ್ರಹ್ಮಸೃಷ್ಟಿ ನಿರೂಪಣಂ “ ಎಂದು ಕರೆದಿದ್ದಾನೆ. ಆದಿನಾಥ ಮತ್ತು ಅವನ ಮಕ್ಕಳಾದ ಭರತ, ಬಾಹುಬಲಿಯರ ಕಥಾವಿನ್ಯಾಸದಿಂದ ತನ್ನ ಕೃತಿಯನ್ನು ಆರಂಭಿಸಿದ್ದಾನೆ. ಇದರಲ್ಲಿ ಸಾಧಿತ ವಿದ್ಯೆ, ಜಾತಿವಿದ್ಯೆ, ಕುಲವಿದ್ಯೆ ಎಂಬ ತ್ರಿವಿದ್ಯೆಗಳನ್ನೂ, ಜೈನಧರ್ಮದ ಕಾಲಸ್ವರೂಪವನ್ನೂ, ಅಸಿ, ಮಸಿ, ಕೃಷಿ, ವಾಣಿಜ್ಯ, ಪಶುಪಾಲ್ಯ, ಶಿಲ್ಪ ಎಂಬ ಷಟ್ಕರ್ಮಗಳನ್ನೂ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳನ್ನೂ, ಕುರುವಂಶ, ಹರಿವಂಶ ವಿಚಾರವನ್ನೂ, ಕೇವಲಜ್ಞಾನ, ಸಮವಸರಣ ಮುಂತಾದ ಜೈನ ಧಾರ್ಮಿಕ ಪರಿಕಲ್ಪನೆಯನ್ನೂ, ಸಮ್ಯಗ್ದರ್ಶನ, ಜ್ಞಾನ, ಚಾರಿತ್ರ ಎಂಬ ರತ್ನ ತ್ರಯಗಳನ್ನೂ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ್ದಾನೆ.

ಪ್ರಥಮಾಧಿಕಾರಂ.
ಆದಿಬ್ರಹ್ಮ ಸೃಷ್ಟಿ ನಿರೂಪಣಂ.

ಶ್ರೀಮತ್ ಸಮಸ್ತ ಭುವನಶಿ
ರೋಮಣಿ ಸದ್ವಿನಯ ವಿನಮಿತಾಖಿಲಜನಚಿಂ
ತಾಮಣಿಯೆನಿಪ್ಪ ಪರಮ
ಸ್ವಾಮಿಯನಭಿವಂದಿಸಿ ಪಡೆವೆ ಶಾಶ್ವತ ಸುಖಮಂ

ಇಂತು ಇಷ್ಟದೇವತಾನಮಸ್ಕಾರಮಂ ಮಾಡಿ ಭಗವದರ್ಹತ್ ಸರೂವಜ್ಞ ಶಾಸನ ಸಮುದಿತ ಪ್ರಥಮಾನುಯೋಗ ಕಥಾಸಾರಾಮೃತ ಪಾರಾವಾರದ ಕಥಾವತಾರದೊಳೊಂದು ಬಿಂದುಮಂ ತೋರೂವಂತೆ ಸ್ವಲ್ಪವಾಗಿ ಗುರುತು ಮಾತ್ರಮಂ ತೋರುವೆನಿದಂ ಮಕರಂದಗಂಧಮಂ ಮಾರುತಂ ಪ್ರಸರಿಪಂತೆ ಸತ್ಪುರುಷರೀ ಕಥೆಯಂ ಶಬ್ದದೋಷಮಂ ತಿದ್ದಿ ಬುಧರ್ಗರಿವಂತು ಪೇಳ್ವುದೆಂದವರಂ ನುತಿಸಿ ಹೊಸಗನ್ನಡ ವಾಕ್ಯಂಗಳಿಂ ವಿರಚಿಸುವೆಂ.

ಮತ್ತಂ ಕ್ಷತ್ರಿಯರೊಳು ಸೂರ್ಯವಂಶಂ, ಚಂದ್ರವಂಶಂ, ನಾಥವಂಶಂ, ಮತ್ತು ಉಗ್ರವಂಶಂ ಎಂದು ನಾಲ್ಕು ತೆರನಾಗಲಲ್ಲಿ ಇನವಂಶದೊಳಾದಿಪುರುಷನಿಕ್ಷುಕಾಂಡಂಗಳಂ ಪೇಳಿ ಗುಡ ಶರ್ಕರಾದಿಗಳಂ ಮಾಳ್ಪುಪಾಯಮಂ ತೋರಿದುದರಿಂದಿಕ್ಷ್ವಾ-
ಕುಕುಲಮೆಂದಾಯ್ತು. ಚಂದ್ರವಂಶದ ಸೋಮಪ್ರಭುಮಹಾರಾಜಂಗಂ ಕುರುರಾಜಾಭಿಧಾನಮಿಟ್ಟು ಕುರುಕುಲಾಗ್ರಗಣ್ಯನಂ ಮಾಡಿದುದರಿಂ ಕುರುವಂಶಮಾಯ್ತು. ಸೂರ್ಯವಂಶದ ಹರಿಕಾಂತಂಗೆ ಹರಿನಾಮಮನಿಟ್ಟುದರಿಂ ಹರಿವಂಶಮಾಯ್ತು. ಅಕಂಪಂಗಂ ಶ್ರೀನಾಥ ನಾಮವನಿಟ್ಟುದರಿಂ ನಾಥವಂಶಮಾಯ್ತು. ಕಾಶ್ಯಪಂಗೆ ಉಗ್ರಾಭಿಧಾನಮಿಟ್ಟುದರಿಂದುಗ್ರವಂಶ-
ಮಾಯ್ತು. ಇಂತು ನಾಲ್ಕರೊಳೈದು ಭೇದಮಾಗಿವರ್ತಿಸುತ್ತಿಪ್ಪುದುಂ ಭರತರಾಜಂಗೆ ಚಕ್ರರತ್ನಂ ಪುಟ್ಟೆ ಚತುರ್ದಶರತ್ನ ನವನಿಧಿಗಧೀಶನಾಗಿ ದಿಗ್ವಿಜಯಂಗೈದು ಷಟ್ಖಂಡಮಂ ಬಾಳಿಸಿ ಬಪ್ಪಲ್ಲಿ, ಆತನನುಜನಪ್ಪ ಬಾಹುಬಲಿರಾಜಂ ಪೌದನಪುರದೊಳಿರ್ದು ಹುಂಡಾವಸರ್ಪಿಣಿಕಾಲದೋಷದಿಂದಿಂದಿರೊಡ್ಡಿ ನಿಂದು ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಂಗಳಿಂದಣ್ಣನಂ ಗೆಲ್ದು ನಿರ್ವೇಗಂ ಪುಟ್ಟಿ ದೀಕ್ಷೆಗೊಂಡು ಮಾನಕಷಾಯದಿಂ ಭರತನ ಭೂಮಿಯೊಳ್ ತಪಂಗೆಯ್ವೆನಲ್ಲೆಂದು ತಿರುಗುತ್ತೆ ಪೋಗುತ್ತಿರೆ ಗೊಮಟನೆಂಬ ಪೆಸರಾಗಿ ಪೋಗುತ್ತಿರಲೊರ್ವ ದೇವಂ ಸರ್ಪಾಕೃತಿಯಿಂ ಪುತ್ತದಿಂ ಪೊರಮಟ್ಟೆನ್ನ ವಲ್ಮೀಕದ ಮೇಲೆ ನಿಂದು ತಪಂಗೆಯ್ವುದೀ ಭೂಮಿಯೆನ್ನದು ಭರತನದಲ್ಲವೆಂದು ಪೇಳ್ದೊಡಾ ಪುತ್ತಿನಮೇಲೆ ಕಾಯೋತ್ಸರ್ಗದಿಂ ನಿಂತು ತಪಂಗೆಯ್ಯುತ್ತಿರ್ದಂ.

ಇತ್ತ ಭರತಚಕ್ರಿಯುಮಯೋದ್ಯೆಯಂ ಪೊಕ್ಕು ಸಾಮ್ರಾಜ್ಯಾಭಿಷೇಕಮನಾಂತು ಸಮಸ್ತಕ್ಕುಂ ಭರತಗಟ್ಟಲೆಯಂ ಮಾಡಿ ಕೈಲಾಶಮನೆಯ್ದಿ ಬಂದು ಬಾಹುಬಲಿಮುನಿಯಲ್ಲಿರೆ ಬಂದೆರಗಿ ಬೋಧಿಸೆ ಮನಃಕಷಾಯಂ ಪೋಗೆ ಕೇವಲಜ್ಣಾನೋತ್ಪತ್ತಿಯಾಗಿಲೋಕಾಲೋಕಪ್ರಕೃಶನಾಗಿ ತ್ರಿಭುವನಸೇವ್ಯಂ ಕೈಲಾಸೋಪರಿಯೊಳೊಪ್ಪುತಿಪ್ಪ ಸಮವಸರಣ-
ಮನೆಯ್ದೆ ಭರತಚಕ್ರೇಶ್ವರಂ ಸಾಕೇತಮಂ ಪೊಕ್ಕು ಸುಖಮಿರ್ದಂ.

ದ್ವಿತೀಯಾಧಿಕಾರಂ
ಷಣ್ಮತೋತ್ಪತ್ತಿ ವರ್ಣನಂ

ಶ್ರೀಸುಜನಸ್ತುತರಖಿಳ ಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್
ವೈಷಮ್ಯಮನಳಿದು ಕೇಳ್ವುದೀ ಸತ್ಕೃತಿಯಂ

ಮುಂದಣ ಕಥೆಯೆಂತೆಂದೊಡೆ ಆ ಆದಿಬ್ರಹ್ಮನ ಸಂತಾನಮೈವತ್ತು ಲಕ್ಷಕೋಟಿ ಸಾಗರೋಪಮ ಕಾಲಂ ಸಲ್ವಿನಮಯೋಧ್ಯಾ ಪುರದೊಳ್ ಜಿತಶತ್ರುಮಹಾರಾಜನೆಂಬರಸಂ ರಾಜ್ಯಮಂ ಪ್ರತಿಪಾಲಿಸುತ್ತಿರಲಾ ಕಾಲದೊಳೆರಡನೆ ತೀರ್ಥಾವತಾರಮಾಗಲಲ್ಲಿ ವಿಜಯಸಾಗರನೆಂಬರಸಂಗಂ ಸಗರನೆಂಬೆರಡನೆಯ ಚಕ್ರವರ್ತಿಯಾದನಾತಂಗೆ ಭಗೀರಥಂ ಮೊದಲಾದರವತ್ತು ಸಾಸಿರ್ವರ್ ತಂದೆಯೊಳ್ ಬೆಸನಂ ಬೇಡಿಕೊಂಡು ಪೋಗಿ ಪಿಂದೆ ಭರತೇಶ್ವರಂ ಕೈಲಾಸಪರ್ವತದೊಳ್ ರತ್ನಮಯವಾಗಿರ್ದೆಪ್ಪತ್ತುರಡು ಚೈತ್ಯಾಲಯಮಂ ಅರ್ಕಕೀರ್ತಿಯು ಕೈಲಾಸಪರ್ವತವನ್ನು ಅಷ್ಟಾಪದಮಾಗಿಯುಂ ಮಾಡಿರಲದಕ್ಕೆ ಮನುಷ್ಯರ್ ಪೋಗದಂತೆ ಗಂಗಾನದಿಯಂ ತಂದು ಜಲಖಾತಿಕೆಯಂ ಮಾಡಲೆಂದು ಪೋಗಿ ಪ್ರಯತ್ನದಿಂ ಭಗೀರಥಂ ಗಂಗೆಯಂತಂದು ಕೈಲಾಸಕ್ಕೆ ಖಾತಿಕೆಯಂ ಮಾಡಿ ಬಂದು ಕಡೆಯೊಳ್ ತಪಮಂ ಕೈಕೊಂಡು ತನ್ನದೀತೀರದೊಳ್ ದೇವತೆಗಳಿಂದಭಿಷಿಕ್ತನಾಗಿ ಪೂಜಿಸಿಕೊಂಡಲ್ಲಿಂ ಬಂದು ಕಾಶೀನದಿತೀರದೊ-
ಳಿರೆಯಲೂಲಿಯು ದೇವರ್ಕಳ್ ಪೂಜಿಸಲಾ ನದಿಗೆ ಗಂಗೆಯೆಂಬ ಪೆಸರಿಟ್ಟುದರಿಂ ಪುಣ್ಯತೀರ್ಥಮಾಯ್ತು ಭಗೀರಥಂ ಗಂಗೆಯಂ ತಂದನೆಂದು ಭಾಗೀರಥಿಯೆಂಬ ಪೆಸರಾಯ್ತು. ಆ ಇಕ್ಷ್ವಾಕುವಂಶದರಸುಗಳ್ ವಿನೀತಾಪುರ ಶ್ರಾವಸ್ತಿ, ಕೌಶಾಂಬಿ, ವಾರಣಾಸಿ, ಚಂದ್ರಪುರ ಮೊದಲಾದ ಪಟ್ಟಣದೊಳಿರ್ದರ್.

ಹರಿವಂಶದರಸುಗಳ್ ಪೌದನಾಪುರ, ಕಾಕಂದಿ, ಭದ್ರಿಳಾ, ಚಂಪಾನಗರಿಮೊದಲಾದವರೊಳಿರ್ದರ್. ಕುರುವಂಶದವರ್ ಹಸ್ತಿನಾಪುರಾದಿಗಳೊಳಿರ್ದರ್. ಉಗ್ರವಂಶದವರ್ ಕಾಶೀಪಟ್ಟಣಗಳೊಳಿರ್ದರ್, ನಾಥವಂಶದವರ್ ಕುಂಡಿನಾಪುರ ಮೊದಲಾದವರೊಳಿರ್ದು ರಾಜ್ಯಮಂ ಪ್ರತಿಪಾಲಿಸುತಿರ್ದರ್. ಅಯೋಧ್ಯಾ ನಗರದೊಳ್ ಸುಪ್ರತಿಷ್ಠ, ಸುಬಾಹು, ಯಶೋಬಾಹು, ಅಜಿತಂಜಯಂ ಮೊದಲಾಗೆ ಅನೇಕ ರಾಜರೈಗಳ್ ಆಳುತ್ತಿರೆಯಾಗಳ್ ಭೀಮನೆಂಬ ರಾಕ್ಷಸಂ ವಿಜಯಾರ್ಧದಿಂ ತೋಯದ ವಾಹನನೆಂಬರಸನಂ ತನ್ನ ಲಂಕಾದ್ವೀಪಕ್ಕೊಯ್ದಿರಿಸಿದಂ. ಆತನ ವಂಶಪರಂಪರೆಯಿಂದವರ ರಾಕ್ಷಸಂ ಮೊದಲಾಗೆ ಪೌಲಸ್ತ್ಯನೆಂಬನಾದಂ. ಮತ್ತಂ ಭದ್ರಿಳಾಪುರದ ಮೇಘರಥ, ಅತ್ರಿಯಂಗೀರಾದಿ ಋಷಿಗಳೈನೂರ್ವರ್
ಕಪಿಲಸಿದ್ಧಂತಾನುಭವಿಗಳಾಗಿರ್ದರಾ ಕಾಲದೊಳ್ ಕಾಲಾದಿವಾದಂಗಳ್ ಪ್ರಕಟಮಾದುವವಾವುವೆಂದಡೆ ನೂರೆಂಬತ್ತು(೧೮೦) ಕ್ರಿಯಾವಾದಮುಂ, ಎಂಬತ್ತನಾಲ್ಕು (೮೪) ಆದಿಕ್ರಿಯಾವಾದಮುಂ, ಅಜ್ಞಾನವಾದಮರವತ್ತೇಳು(೬೭), ವೈಣಯಿಕವಾದ ಮೂವತ್ತೆರಡು(೩೨) ಕೂಡಿ ಮುನ್ನೂರರವತ್ತುಮೂರು(೩೬೩) ವಾದಂಗಳಲ್ಲಿ ಸ್ವಪರ ನಿತ್ಯಾನಿತ್ಯಂಗಳಿಂ , ಕಾಲ, ಈಶ್ವರ, ಆತ್ಮ, ನಿಯತಿ, ಸ್ವಭಾವವೆಂದೈದು ಭೇದಮಲ್ಲಿ ಲೋಕದೊಳುಳ್ಳ ಸಕಲ ಪದಾರ್ಥಂಗಳ್ ಚರಾಚರಜೀವಂಗಳುತ್ಪತ್ತಿ, ಸ್ಥಿತಿ, ಲಯ, ಲಾಭಾಲಾಭಂ ಮೊದಲಾದೆಲ್ಲಕ್ಕಂ ಪ್ರಧಾನಂ.

ಮತ್ತಮಯೋಧ್ಯಾಪುರದ ರಾಮಸ್ವಾಮಿಯ ತ್ರಿಜಗದ್ಭೂಷಣನೆಂಬ ಪಟ್ಟದ ಗಜೇಂದ್ರಂ ಮದದಿಂ ಬಪ್ಪವಸರದೊಳ್ ಭರತಂ ಬರೆ ಕಂಡು ಜಾತಿಸ್ಮರನಾಗಿ ಪೂರ್ವಭವಮಂ ತಿಳಿದಾ ಭರತನೊಡನಿರ್ದು ಪುಲ್ಲು ಕವಳಮಂ ಕೊಳ್ಳದಿರಲದರ ವೃತ್ತಾಂತಮಂ ತ್ರಿಜ್ಞಾನದರಸಂಗೆ ತಿಳಿಪೆಯದಕ್ಕೆ ವ್ರತನಿಯಮಂ ಕುಡೆ ಜ್ಞಾನಿಯಾಗಿರ್ಕೈಕೊಂಡು ಮಧ್ಯಾಹ್ನದೊಳ್ ಮನೆ ಮನೆ ಬಾಗಿಲೊಳ್ ಬಂದು ಪ್ರಾಸುಕಮಾಗಿ ಶುದ್ಧಾಹಾರಮಂ ಕೊಟ್ಟೆಡೆಯೊಳ್ ಕೊಂಡೊಡದಕ್ಕೆ ನೆನೆದಕ್ಕಿ, ಕಡಲೆ, ಚಿಗಳಿ, ತಂಬಿಟ್ಟು, ಹಣ್ಣುಕಾಯಂ ಕೊಡುತಿರ್ದೊಡದು ಕಾಲಮಂ ಕಂಡು ದೇವನಾಗೆಯದರ ಪ್ರತಿರೂಪಂ ಶಿಲೆ ಮೊದಲಾದವ-
ರೊಳ್ ಮಾಡಿ ಪೂಜಿಸಲಾದೇವಂ ಪ್ರತ್ಯಕ್ಷನಾಗಿ ಜನರ ಮನೋಭೀಷ್ಟಮಂ ಸಲಿಸುತ್ತಿರೆ ದೇವಸಮೂಕ್ಕಧೀಶನಾದುದರಿಂ
ಗಣೇಶನೆಂದು ಭಾದ್ರಪದ ಶುದ್ಧ ಚತುರ್ಥಿಯಲ್ಲಿ ಪ್ರತಿಷ್ಟೆಯಂ ಮಾಡಿದರ್.

ಮತ್ತಂ ವಜ್ರಬಾಹುವೆಂಬರಸಂ ವನವಿಹಾರಕ್ಕೆ ಪೋದಲ್ಲಿ ಒಂದು ರಮ್ಯ ಪ್ರದೇಶದೊಳ್ ವಂತೀಯವೃಕ್ಷಕ್ಕೆ ಮಲ್ಲಿಕಾಲತಾರೋಹಣಮಾಗಿರಲಲ್ಲಿಗೆಯ್ದಿ ನೋಡಲತಿಶಯಮಾಗಿರಲಲ್ಲಿ ದೇವತಾ ಮಹತ್ವಮಂ ಕಂಡೆಲ್ಲಮಂ ಕಂಡೆಲ್ಲರುಂ ಪೂಜಿಸಲವರವರ್ಗೆ ವರಮಂ ಕೊಟ್ಟುದರಿಂ ಮಲ್ಲಿಕಾರ್ಜುನನೆಂದಲ್ಲಿಂ ಬಳಿಕ ಸರ್ವರ್ ಪೂಜಿಸಿದರ್. ಆ ಕಾಲದೊಳ್ ಭಾರದ್ವಾಜ ಕಾಶ್ಯಪಾದಋಷಿಗಳ್ ಸಕಲ ಶಾಸ್ತ್ರಾದಿಗಳಂ ಕಲ್ತು ದೇವತಾ ಭೇದಂಗಳಂ ವಿಂಗಡಿಸಿ, ಬ್ರಹ್ಮ, ವಿಷ್ಣು, ಮಹೇಶ್ವರರ ಕಥಾಪ್ರಪಂಚಮಂ ಇತಿಹಾಸಂಗಳನನೇಕ ಪ್ರಕಾರವಾಗಿ ರಚಿಸಿ ಅರಸನ ಸಭೆಯೊಳ್ ಪೇಳಿಪೂಜ್ಯರಾದರ್. ಅದರೊಳ್ ಬ್ರಹ್ಮಂ ಸೃಷ್ಟಿಕರ್ತನಾತಂ ಶ್ರೇಷ್ಠನೆಂದರ್. ಕೆಲರ್ ಮಹಾವಿಷ್ಣುವೇ ಕರ್ತೃವೆಂದರ್. ಕೆಲಂಬರ್ ಈಶ್ವರಂ ಸರ್ವಶ್ರೇಷ್ಠನೆಂದರ್. ಇಂತು ಸಂವಾದಮಾಗಲೆಲ್ಲರುಂ ಸಮ್ಮತಿಸಿ ಮೂವರಂ ಸಮವೆಂದರ್.

ತೃತೀಯಾಧಿಕಾರಂ.
ನಾರಾಯಣ ವಿಭೂತಿ.

ಮತ್ತಂ ಮಿಥಿಳಾಪುರದ ಹರಿವಂಶ ಜನಕಂ ಮೊದಲಾದ ಕ್ಷತ್ರಿಯರ್ ಯಜ್ಞಾಕಾಂಕ್ಷೆಯಂ ಮಾಡಿಸುತ್ತಂ ಬಂದರ್ ಬಳಿಕಮಯೋಧ್ಯೆಯೊಳ್ ದಶರಥಮಹಾರಾಜನಾತಂಗೆ ರಾಮನುಂ ಲಕ್ಷ್ಮಣನುಂ ಭರತನುಂ ಶತ್ರುಘ್ನನುಮೆಂಬ ನಾಲ್ವರ್ ಮಕ್ಕಳ್ ಅವರೊಳ್ ರಾಮಂಗೆ ಸೀತಾದೇವಿ ಪೆಂಡತಿಯಾಗಲ್ ರಾವಣಂ ಭವಬದ್ಧಸಂಬಂಧದಿಂ ಲಂಕಾಪತಿ ಕೊಂಡೊಯ್ದಡೆ ರಾಮಂ ಸುಗ್ರೀವ,ಹನುಮಂತ, ನಳ, ನೀಳ, ಜಾಂಬವಾದಿಗಳಾದಿಯಾಗೆ ಪೋಗಿ ರಾವಣನಂ ಕೊಂದು ಸೀತಿಯಂ ತಂದು ಪ್ರಜೆಗಳ ಮಾತಿಗವಳಂ ಬಿಡೆ ಲವಾಂಕುಶರೆಂಬ ಮಕ್ಕಳ್ ಪುಟ್ಟಿ ಅತಿಶೌರ್ಯಯುತರಾಗಿ ಬಂದು ತಂದೆಗಳೊಳ್ ಜಗಳಂ ಮಾಡೆ ತಿಳಿದು ಮಕ್ಕಳು ಸಮೇತ ರಾಜ್ಯಮಂ ಪ್ರತಿಪಾಲೆಸಿ ಕಡೆಯೊಳ್ ತಪದಿಂ ಮೋಕ್ಷಲಕ್ಷ್ಮೀಪತಿಯಾಗಲ್ ಇತ್ತ ತತ್ಪುತ್ರಂ ವಿಜಯರಾಮಂ ರಾಜ್ಯಂಗೆಯ್ದು ತಪಮಂ ಕೈಕೊಂಡನಿಂತುಇಕ್ಷ್ವಾಕುವಂಶ, ಕುರುವಂಶ, ನಾಥವಂಶ, ಉಗ್ರವಂಶಮೆಂಬಿವರೊಳೆ ಚತುರ್ವಿಂಶತಿ ತೀರ್ಥಕರರುಂ ದ್ವಾದಶ ಚಕ್ರವರ್ತಿಗಳುಂ, ನವಬಲದೇವರುಂ, ವಾಸುದೇವರುಂ, ಏಕಾದಶರುದ್ರರುಂ ಮುಂತಾಗಿಯನೇಕ ಪುಣ್ಯಪುರುಷರ್ ಪುಟ್ಟಿ ಸ್ವರ್ಗಮುಕ್ತಿಯಂ ಪಡೆದರ್. ಹರಿವಂಶದೊಳ್ ಯದುವೆಂಬರಸನಿಂದಿತ್ತಲ್ ವಂಶಂ ಯದುವಂಶಮಾಗಲಲ್ಲಿ ಶೂರವೀರರೆಂಬರ್ ಪುಟ್ಟಿದೊಡಾ ಶೂರಮಹಾರಾಜಂ ಶೌರೆಪುರಮಂ ಮಾಡಿಸಿದಂ.

ಅತ್ತಲ್ ಕುರುವಂಶದವರ್ ಹಸ್ತಿನಾಪುರದೊಳ್ ಶಾಂತಿ, ಕುಂಥು, ಅರಚಕ್ರವರ್ತಿಗಳ್ ಪುಟ್ಟಿ ಶಿವಲೋಕದೊಳ್ ಶಾಶ್ವತಸುಖಪ್ರಾಪ್ತರಾದರಿತ್ತಲನೇಕವತ್ಸರಂ ಕಳೆಯಲಾ ವಂಶದೊಳ್ ಶಕ್ತಿಯೆಂಬರಸಂಗಂ ಧಾರಿಣಿಯೆಂಬರಸಿಗಂ ವಸಿಷ್ಟನೆಂಬ ಮಗನಾದೊಡಾತಂ ರಾಜ್ಯದೊಳಿರ್ದು ಪರಾಶರನುಂ ಶಂತನುಮೆಂಬಿರ್ವರ್ ಮಕ್ಕಳಾಗೆ ಶಂತನುಗೆ ಪಟ್ಟಂಗಟ್ಟಿ ಪರಾಶರಂಬೆರಸು ಪರಿವ್ರಾಜಕನಾಗಿ ಪಂಚಾಗ್ನಿ ಮಧ್ಯದೊಳ್ ತಪಂಗೆಯ್ಯುತಿರಲ

ದೇವಕಿಯು ಗರ್ಭಮಾಗೆ ಎಂತಪ್ಪ ಮಗನಂ ಪಡೆವಳೆಂದು ಕಾಡಿದೊಡಾ( ಜೀವಂಜಸೆ) ಮುನಿಗಳೆಂದರ್ನಿನ್ನ ಪತಿಯಂ ಕೊಲ್ವ ಪುರುಷಂ ಪುಟ್ಟುವನೆಂದು ಪೇಳಿ ಪೋಪುದುಂ ಚಿಂತಾಕಾಂತೆಯಾಗಿರಲರಸಂ ಕೇಳಿ ನೆಶ್ಚೈಸಿಯವಳಂ ಸಂತೈಸಿದಂ. ಮತ್ತಂ ದೇವಕಿ ಗರ್ಭಮಾಗೆ ಕಂಸಂ ತನ್ನ ಗೃಹದೊಳೆ ಪ್ರಸವವಾಗಲೆಂದು ವಸುದೇವನಂ ಬೇಡಿ ದೇವಕಿಯಂ ತನ್ನ ಮನೆ-
ಗೊಡಗೊಂಡು ಬಂದು ಆಕೆ ಮೂರು ಸೂಳ್ ಪೆತ್ತಮಳ್ಗಳಂ ನೈಗಮದೇವತೆ ತೆಗೆದುಕೊಂಡರ್ಧಾಯುಷ್ಯದ ಪೆಣ್ಗೂಸುಗಳಂ ತಂದಿರಿಸಲವನಾಗಳೆ ಕೊಲ್ಲಿಸಲ್ ಮತ್ತೆ ಗರ್ಭಮಾದೇಳು ತಿಂಗಳ್ಗೆ ಪುತ್ರನಂ ಪಡೆದೊಡಂ ವಸುದೇವ ಬಲಭದ್ರರು ಕಂಸನರಿಯದಂತು ನಾರಾಯಣನಂ ರಾತ್ರಿಯೊಳೆತ್ತಿಕೊಂಡೊಯ್ವಾಗಳಾ ಪುರದ ಬಾಗಿಲಕವಾಟಂಗಳಾ ಶಿಶುವಿನ
ಪಾದಸ್ಪರ್ಶನ ಮಾತ್ರದೊಳೆ ಕವಾಟೋದ್ಘಾಟನಾಗಲ್ ಪೊರಗೆ ಪೋಗಲತ್ಯಂಧಕಾರಮಾಗಿರಲ್, ಆ ಶಿಶುವಿನ ಪುಣ್ಯದೇವತೆ ಕೋಡುಗಳೊಳ್ ದೀಪಮಂ ಬೆಳಗುತ್ತುಂ ವೃಷಭಾಕಾರದೊಳ್ ಮುಂದೆ ಪೋಗುತ್ತುಂ ಜಗುನೆಯಂ ಪುಗೆ ಜಲಸ್ತಂಭದಿಂ ಮಾರ್ಗಮಾಗೆಯಲ್ಲಿ ಕೋಷ್ಣದೇವೀಗೃಹಾಸನ್ನರಾಗಿರೆ ತುರುಪಟ್ಟಿಯಿಂ ನಂದಗೋಪನೊಂದು ಪೆಣ್ಗೂಸನೆತ್ತಿಕೊಂಡು ಬಂದು ಎಲೆ ದೇವಿ ಪಲಸೂಳ್ ನಿನ್ನಂ ಪರಸಿ ಪುತ್ರನಂ ಪಡೆಯಲೆಂದೀಗಳುಂ ಪೆಣ್ಣಾದುದರಿಂದೀ ಶಿಶುವಂ ನೀನೆ ತೆಗೆದುಕೊಳ್ಳೆಂದು ಮುಂದಿಟ್ಟು ಪೋಗಲಾ  ಶಿಶುವಂ ಕೊಂಡು ಬಾಲಕನನಲ್ಲಿರಿಸಿ ಪುತ್ರನಂ ಕೊಂಡುಪೋಗೆಂಬ ವಚನಮನಾ ದೇವಿ ಪೇಳ್ವಂತೆ ಪೇಳಿ ಮೈಗರೆದಿರಲವಂ ಬಂದು ನೋಡಿ ಗಂಡುಗೂಸನತ್ಯಂತ ಸಂತೋಷದಿಂ ಕೊಂಡೈ ಪೋಗಿ ಮಹಾದೇವಿ ಪುತ್ರನಂ ಕೊಟ್ಟಳೆಂದು ತನ್ನ ಪೆಂಡತಿಗೆ ಕುಡೆ ಹರೈಷಂ ಮಿಗೆ ಕೃಷ್ಣನೆಂದು ಪೆಸರಿಟ್ಟು ಸಲಹುತಿರ್ದಂ.

ಇತ್ತ ಮಧುರಾಪುರದೊಳುತ್ಪಾತಂಗಳ್ ಪುಟ್ಟಿ ಕಂಸಂ ನೈಮಿತ್ತಿಕನಂ ಬೆಸಗೊಂಡಡೆ ನಿನ್ನ ವೈರಿಯೊರ್ವಂ ಬಳೆವನವನಿಂದಂ ನಿನಗೆ ವಿನಾಶಮಪ್ಪುದೆಂದು ಪೇಳೆ ಶತ್ರು ವಿನಾಶನ ಕಾರಣಂಗಳಂ ಮಾಡಿಸುತ್ತುಂ ಚಿಂತಿಸುತ್ತಿರೆ ಪೂರ್ವಜನ್ಮದೊಳ್ ತನ್ನ ತಪದಗ್ಗಳಿಕ್ಕೆಗೆ ಪ್ರಸನ್ನರಾಗಿ ಬೆಸನಂ ಬೇಡಿದೇಳುದೇವತೆಗಳುಂ ಬರಲೆನ್ನ ವೈರಿಯೆಲ್ಲಿದ್ದಾನೆ ಆತನಂ ಪರಿಹರೆಸುವುದೆಂಬು-
ದುಮಾ ದೇವತೆಗಳ್ ಪೂತಿನಿ ಮೊದಲಾದ ರೂಪಿನಿಂ ಪೋಗಿ ಪರಿಭವೆಸಲಾರದೆ ವೆಷ್ಣುವಿನಿಂ ಪರಾಜಿತಂಗಳಾಗಿ ಪೋದುವು. ಕೃಷ್ಣಂ ಬಾಲ್ಯಾರಂಭದಿಂ ತನ್ನ ಶಕ್ತಿಯೊಳೆ ಪೂತಿನಿ ಮೊದಲಾದ ದೇವತೆಗಳಂ ಗೆಲ್ದು ಗೋವರೂಧನ ಪರ್ವತಮನೆಡಗಯ್ಯೊಳೇಳು ದಿವಸಂಬರಂ ಪಿಡಿದಿರ್ದು ಕಾಳಾಹಿಯಂ ಕೊಂದು ಕಮಲಮಂ ತಂದು ವ್ಯಾಲಶಯನಮನೇರಿ ಕಾಲದಂಡೋಪಮ ಶಾರ್ಙಮೆಂಬ ಚಾಪಮನೇರಿಸಿ, ಪಾಂಚಜನ್ಯಮೆಂಬ ಪಂಚಮುಖ ಶಂಖಮನೂದಿ ಮದದಾನೆಯ ಕೊಂಬಂ ಕಿಳ್ತು ಚಾಣೂರ ಜಗಜಟ್ಟಿ ಮೊದಲಾದ ಮಲ್ಲರನಪ್ಪಳಿಸಿ ತನ್ನ ಮೇಲ್ವಾಯ್ದ ಕಂಸನ ಮಿದುಳಂ ಕಿತ್ತು ಸಮುದ್ರ ಮಧ್ಯದೊಳೇಳುದಿವಸಂ ದರೂಭಶಯನದಿನಿರ್ದು ಇಂದ್ರನಿಂ ದ್ವಾರೃವತಿಪುರಮಂ ಪಡೆದು ಬಂದು ಶಿಶುಪಾಲನಂ ಕೊಂದು ವಿಜಯಾರೂಧ ಪರೂವತಮನೆಯ್ದಿ ಜಾಂಬವನನಿಕ್ಕಿ ಹಿರಣ್ಯಕಶಿಪುವಂ ಪೊಡೆದು ಮುರನಂ ಮರಣಂ ಮಾಡಿ ಎರಡನೆ ದಿವಿಯನೆಯ್ದಿ ಶಂಖಮಂ ಪೂರಿಸಿ ದೈತ್ಯರೆಲ್ಲರಂ ಸದೆದು ಮಧುಕೈಟಭರನೊದೆದು ಜರಾಸಂಧನನಾತನ ಚಕ್ರದಿಂ ಕೊಂದು ಪಾಂಡವರಂ ಪರಿಪಾಲಿಸಿ ತ್ರಿಖಂಡಾಧಿಪತಿಯಾಗಿ ದಿಗ್ವಿಜಯದೊಳ್ ಮಾಗಧವರತ ಪ್ರಭಾಸಾಮರರೆಂಬ ದೇವರಿಂ ದಿವ್ಯ ಕಟಕ ಕಟಿಸೂತ್ರ ಕುಂಡಲ ಕೇಯೂರ ಹಾರ ಮಣಿಮುದ್ರಿಕಾದ್ಯಾಭರಣಂಗಳಂ ದಿವ್ಯ ಪೀತಾಂಬರಾದಿ ವಸ್ತ್ರಂಗಳುಮಂ ಛತ್ರ ಚಾಮರ ಧ್ವಜ ಸಿಂಹಾಸನಂಗಳುಮಂ ದಿವ್ಯಾಯುಧಂಗಳುಮಂ ಪಡೆದು ದೇವತೆಗಳಿಂ ಸಹಸ್ರ ಸುವರ್ಣ ಘಟಂಗಳಿಂದಭಿಷಿಕ್ತನಾಗಿ ಸತ್ಯಭಾಮಾ ರುಕ್ಮಿಣಿ ಲಕ್ಷ್ಮೀ ಜಾಂಬವತಿ ಪದ್ಮಾವತಿ ಗೌರಿ ಗಾಂಧಾರಿ ಸುಸೀಮಾದೇವಿಯರ್ ಮೊದಲಾಗೆ ಹದಿನಾರುಸಾಸಿರಮಂತಃಪುರಮಂ ಸಾಸಿರ ಯಕ್ಷ ರಕ್ಷಿತಂಗಳಪ್ಪ ಚಕ್ರ ಗದಾ ಶಂಖ ಖಡ್ಗ ಧನುಶಕ್ತಿ ದಂಡಂಗಳೆಂಬೇಳು ರತ್ನಂಗಳಂ ………..ಆತನ ವಂಶಂ ಪರಂಪರೆಯಿಂ ಬರೆ.

ಪ್ರಧಾನ ಸಂಪಾದಕರು
ಡಾ॥ ಸಿದ್ದಲಿಂಗಯ್ಯ
ಗೌರವ ಸಂಪಾದಕರು
ಡಾ॥ ಎಂ. ಎಂ. ಕಲಬುರ್ಗಿ
ಸಂಪಾದಕರು.  
ಡಾ ॥ ರಾಗೌ.
ಪ್ರಕಾಶನ: ಕನ್ನಡ ಪುಸ್ತಕ  ಪ್ರಾಧಿಕಾರ
ಕನ್ನಡ ಭವನ, ಬೆಂಗಳೂರು- ೫೬೦೦೦೨

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ